WFTW Body: 

ನಾವು 2 ಕೊರಿಂಥ. 5:20ರಲ್ಲಿ, ”ನಾವು ಕ್ರಿಸ್ತನ ರಾಯಭಾರಿಗಳಾಗಿದ್ದೇವೆ ಮತ್ತು ನಿಮ್ಮನ್ನು ಬೇಡಿಕೊಳ್ಳುತ್ತೇವೆ,” ಎಂಬುದಾಗಿ ಓದುತ್ತೇವೆ. ಯೇಸು ಕ್ರಿಸ್ತನ ರಾಯಭಾರಿಯಾಗಲು ನೀಡಲಾದ ಕರೆ ಒಂದು ಅತಿ ಉನ್ನತವಾದದ್ದು. ದೇವರ ನಿಜವಾದ ಮಗುವಿನಲ್ಲಿ ಒಂದು ಘನತೆ ಇರುತ್ತದೆ. ಒಂದು ಬಡ ರಾಷ್ಟ್ರದ ರಾಯಭಾರಿಯಲ್ಲಿಯೂ ಒಂದು ಘನತೆ ಇರುತ್ತದೆ; ರಾಷ್ಟ್ರವು ಹೆಚ್ಚು ಗಾತ್ರ ಮತ್ತು ಬಲವನ್ನು ಹೊಂದಿದ್ದರೆ, ಅದರ ರಾಯಭಾರಿಯು ಇನ್ನಷ್ಟು ಹೆಚ್ಚಿನ ಘನತೆಯನ್ನು ಹೊಂದಿರುತ್ತಾನೆ. ಭಾರತದಲ್ಲಿ ಅಮೇರಿಕದ ರಾಯಭಾರಿಯ ಬಗ್ಗೆ ಯೋಚಿಸಿರಿ. ತಾನು ಪ್ರಪಂಚದಲ್ಲೇ ಅತಿ ಬಲಶಾಲಿಯಾದ ದೇಶವನ್ನು ಪ್ರತಿನಿಧಿಸುತ್ತಿರುವದಾಗಿ ಆತನು ತಿಳಿದಿದ್ದಾನೆ, ಹಾಗಾಗಿ ಆತನ ನಡತೆ ಎಷ್ಟು ಗೌರವಾನ್ವಿತನಾಗಿ ಇರುವದೆಂದು ನೀವು ಕಲ್ಪಿಸಿರಿ. ಆತನು ಯಾವುದೇ ಕಳಪೆಯಾದುದನ್ನಾಗಲೀ ಅಥವಾ ಘನತೆ ಇಲ್ಲದ್ದನ್ನಾಗಲೀ ಮಾಡುವದಿಲ್ಲ. ಆತನು ಜನರ ಬಳಿ ಹೋಗಿ ಹಣಕ್ಕಾಗಿ ಕೈಚಾಚುವದಿಲ್ಲ, ಮತ್ತು ತನ್ನ ದೇಶದ ಹೆಸರಿಗೆ ಅಗೌರವ ತರುವಂತಹ ಯಾವುದೇ ಕಾರ್ಯವನ್ನು ಮಾಡುವದಿಲ್ಲ. ಅಮೇರಿಕದ ರಾಯಭಾರಿಯು ನಿಮ್ಮ ಮನೆಗೆ ಬಂದು, ತನ್ನ ದೇಶದ ಸಹಾಯಕ್ಕಾಗಿ ನಿಮ್ಮಿಂದ ಸ್ವಲ್ಪ ಹಣವನ್ನು ಕೇಳುವದನ್ನು ನೀವು ಕಲ್ಪಿಸಿಕೊಳ್ಳಲು ಸಾಧ್ಯವಿದೆಯೇ?

ಒಂದು ವೇಳೆ ಸ್ಯೂಟ್ ಧರಿಸಿದ ಒಬ್ಬ ಮನುಷ್ಯ ನಿಮ್ಮ ಮನೆಬಾಗಿಲಿಗೆ (ಅಥವಾ ದೂರದರ್ಶನದಲ್ಲಿ) ಬಂದು, ”ನಾನು ಅಮೇರಿಕದ ರಾಯಭಾರಿಯಾಗಿದ್ದೇನೆ. ನಮ್ಮ ದೇಶದಲ್ಲಿ ಹಣದ ಬಿಕ್ಕಟ್ಟಿನ ಸ್ಥಿತಿ ಉಂಟಾಗಿದೆ. ನಮ್ಮ ಕಾರ್ಯಕ್ಕಾಗಿ ನೂರು ರೂಪಾಯಿಯನ್ನು ಕೊಡುವಿರಾ?” ಎಂಬುದಾಗಿ ಕೇಳುತ್ತಾನೆ. ಇದಕ್ಕೆ ನೀವು ಏನು ಉತ್ತರಿಸುವಿರಿ? ”ನೀನು ಒಬ್ಬ ಮೋಸಗಾರ. ನೀನು ಅಮೇರಿಕದ ರಾಯಭಾರಿಯಲ್ಲ. ಅಮೇರಿಕದ ರಾಯಭಾರಿಯು ಹಣಕ್ಕಾಗಿ ಎಂದಿಗೂ ಈ ರೀತಿಯಾಗಿ ಭಿಕ್ಷೆ ಬೇಡಲಾರನು," ಎಂಬುದಾಗಿ ಹೇಳುವಿರಿ.

ಈಗ ಇದನ್ನು ಯೋಚಿಸಿರಿ, ಇನ್ನೊಬ್ಬ ಮನುಷ್ಯನು ನಿಮ್ಮ ಮನೆಬಾಗಿಲಿಗೆ (ಅಥವಾ ದೂರದರ್ಶನದಲ್ಲಿ) ಬಂದು, ”ನಾನು ಕರ್ತನಾದ ಯೇಸು ಕ್ರಿಸ್ತನ ರಾಯಭಾರಿಯಾಗಿದ್ದೇನೆ. ನಮ್ಮ ಸೇವೆಯಲ್ಲಿ ಹಣದ ಬಿಕ್ಕಟ್ಟು ಉಂಟಾಗಿದೆ. ನಮ್ಮ ಕಾರ್ಯಕ್ಕಾಗಿ ನೂರು ರೂಪಾಯಿಯನ್ನು ದಾನ ಮಾಡುವಿರಾ?" ಎಂಬುದಾಗಿ ಕೇಳುತ್ತಾನೆ. ನೀವು ಆತನನ್ನು ನಂಬಿ, ಹಣವನ್ನು ಕೊಡುತ್ತೀರಿ. ಏಕೆ? ಏಕೆಂದರೆ ನಿಮ್ಮ ನಂಬಿಕೆಯ ಪ್ರಕಾರ, ಅಮೇರಿಕದ ರಾಯಭಾರಿಯು ಒಬ್ಬ ಗೌರವಾನ್ವಿತ ಮನುಷ್ಯನು, ಆದರೆ ಯೇಸು ಕ್ರಿಸ್ತನ ರಾಯಭಾರಿಯು ಒಬ್ಬ ಭಿಕ್ಷುಕನಾಗಿದ್ದಾನೆ.

ಇಡೀ ಬ್ರಂಹಾಂಡಲ್ಲಿ ಕೇವಲ ಒಂದು ಮಹಾಶಕ್ತಿ ಇದೆ - ಅದು ಸರ್ವಶಕ್ತನಾದ ದೇವರ ರಾಜ್ಯವು. ಅಮೇರಿಕ ದೇಶದ ರಾಯಭಾರಿಯು ಭೂಲೋಕದ ಅತಿ ದೊಡ್ಡ ಮಹಾಶಕ್ತಿಯ ಪ್ರತಿನಿಧಿ ಆಗಿರಬಹುದು. ಆದರೆ ನಾನು ಸಂಪೂರ್ಣ ನಮ್ರತೆಯಿಂದ ಹೀಗೆ ಹೇಳಬಹುದು, ನಾನು ಇಡೀ ಸೃಷ್ಟಿಯಲ್ಲಿ ಅತಿ ದೊಡ್ಡ ಮಹಾಶಕ್ತಿಯ ರಾಯಭಾರಿಯಾಗಿದ್ದೇನೆ. ಯೇಸುವಿನ ಒಬ್ಬ ನಿಜವಾದ ಶಿಷ್ಯನ ವಿವರಣೆ ಇದೇ ಆಗಿದೆ. ಹಾಗಿರುವಾಗ, ನಿಮ್ಮ ನಡತೆಯಲ್ಲಿ ಇಂತಹ ಒಬ್ಬ ರಾಯಭಾರಿಯ ಘನತೆ-ಗೌರವ ಕಾಣಿಸುತ್ತದೆಯೇ? ಕ್ರೈಸ್ತ ಸೇವಕರು ಯೇಸು ಕ್ರಿಸ್ತನ ಹೆಸರನ್ನು ಅವಮಾನಪಡಿಸಿ, ದೂರದರ್ಶನದ ಮೂಲಕ, ತಮ್ಮ ಸಭಾ ಕೂಟಗಳಲ್ಲಿ ಹಾಗೂ ಪ್ರಾರ್ಥನಾ-ಪತ್ರಗಳಲ್ಲಿ, ಘನತೆಯಿಲ್ಲದ ಕಳಪೆಯಾದ ರೀತಿಯಲ್ಲಿ ಹಣಕ್ಕಾಗಿ ಭಿಕ್ಷೆ ಬೇಡುವದನ್ನು ನಾನು ನೋಡಿದಾಗ, ಅದು ನನ್ನ ಹೃದಯವನ್ನು ದು:ಖ ಪಡಿಸುತ್ತದೆ. ಕೀರ್ತನೆ 50:12 ರಲ್ಲಿ ದೇವರು ಹೀಗೆನ್ನುತ್ತಾನೆ - ”ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವದಿಲ್ಲ; ಲೋಕವೂ ಅದರಲ್ಲಿರುವದೆಲ್ಲವೂ ನನ್ನದಲ್ಲವೇ.” ದೇವರ ಒಬ್ಬ ನಿಜವಾದ ಸೇವಕನು ಸಹ ಇದನ್ನೇ ಹೇಳುತ್ತಾನೆ: ”ಒಂದು ವೇಳೆ ನಾನು ಹಸಿದಿದ್ದರೆ ಅಥವಾ ಅಗತ್ಯತೆಯಲ್ಲಿದ್ದರೆ, ನಾನು ನಿಮಗೆ ಹೇಳುವದಿಲ್ಲ. ಪರಲೋಕದಲ್ಲಿರುವ ನನ್ನ ಯಜಮಾನನು ಇಡೀ ಭೂಲೋಕದ ಒಡೆಯನು, ಅವನಿಗೆ ತಿಳಿಸುವೆನು.”

ಒಬ್ಬ ರಾಯಭಾರಿಯು ಯಾವಾಗಲೂ ತನ್ನ ಸ್ವದೇಶದೊಂದಿಗೆ ಸಂಪರ್ಕ ಇರಿಸಿಕೊಳ್ಳಬೇಕು. ಅವನು ಒಂದು ದಿನವೂ ಸಹ ಸ್ವದೇಶದೊಂದಿಗೆ ತನ್ನ ಸಂಪರ್ಕ ಕಡಿದುಹೋಗಲು ಬಿಡುವಂತಿಲ್ಲ. ನಮ್ಮನ್ನು ಸಹ ಅದೇ ರೀತಿಯಾಗಿ ಜೀವಿಸಲು ಕರೆಯಲಾಗಿದೆ. ಸಮಸ್ತ ಸೃಷ್ಟಿಯಲ್ಲಿ ಬಹುದೊಡ್ಡ ಮಹಾಶಕ್ತಿಯ ಒಬ್ಬ ರಾಯಭಾರಿಯ ಘನತೆ ಭಾರತದ ದೇವಸೇವಕರಲ್ಲಿ ಕಾಣಿಸುವ ದಿನ ಬರುವದಕ್ಕಾಗಿ ನಾನು ಕಾದಿದ್ದೇನೆ - ಒಂದು ವೇಳೆ ಅವರು ಬಡವರಾಗಿದ್ದು, ಸೈಕಲ್‌ಗಳಲ್ಲಿ ಓಡಾಡಿದರೂ ಪರವಾಗಿಲ್ಲ. ಆದರೆ ನೀವು ಇಂತಹ ಎಷ್ಟು ಕ್ರೈಸ್ತ ಸೇವಕರನ್ನು ಭೇಟಿಯಾಗಿದ್ದೀರಿ? ಹೆಚ್ಚಿನ ಕ್ರೈಸ್ತ ಸೇವಕರು ಕೇವಲ ಘನತೆಯುಳ್ಳ ಭಿಕ್ಷುಕರಾಗಿದ್ದು, ಯಾವಾಗಲೂ ಜನರಲ್ಲಿ ಹಣವನ್ನು ಕೇಳುತ್ತಾರೆ ಮತ್ತು ಶ್ರೀಮಂತರ ಹಿಂದೆ ಓಡುತ್ತಾರೆ. ಅದೊಂದು ದುರಂತವಾಗಿದೆ.

ನೀವು ಎಲ್ಲಿದ್ದರೂ ನೀವು ಯೇಸು ಕ್ರಿಸ್ತನ ಒಬ್ಬ ರಾಯಭಾರಿ ಆಗಿದ್ದೀರಿ ಎನ್ನುವದನ್ನು ಯಾವಾಗಲೂ ನೆನಪಿಡಿ - ಬಸ್ಸು-ರೈಲುಗಳಲ್ಲಿ ಪ್ರಯಾಣಿಸುವಾಗ ಅಥವಾ ಬೇರೆ ವೇಳೆಯಲ್ಲಿ.

2 ಕೊರಿಂಥ. 6:3-10 ರಲ್ಲಿ ಪೌಲನು ತಾನು ಹೇಗೆ ಕ್ರಿಸ್ತನ ರಾಯಭಾರಿಯಾಗಿ ತೋರಿಸಿಕೊಂಡನು ಎಂಬುದಾಗಿ ತಿಳಿಸುತ್ತಾನೆ: ”ಪ್ರತಿಯೊಂದು ಸಂಗತಿಯಲ್ಲಿ ಯಾರಿಂದಲೂ ನಿಂದೆಗೆ ಅವಕಾಶ ಕೊಡದೆ, ದೇವರ ಸೇವೆಗೆ ಅಪಕೀರ್ತಿ ಬರದಂತೆ ನಡೆದುಕೊಳ್ಳುತ್ತೇವೆ. ನಾನು ಎಲ್ಲಾ ಸಮಯದಲ್ಲಿ ಶುದ್ಧ ಮನಸ್ಸು, ದೀರ್ಘಶಾಂತಿ ಮತ್ತು ದಯೆಯಿಂದ ನಡೆದುಕೊಂಡು, ಬಾಧೆ-ಸಂಕಟಗಳು, ಇಕ್ಕಟ್ಟುಗಳು, ಪೆಟ್ಟುಗಳು, ಸೆರೆಮನೆಗಳು, ಕಷ್ಟವಾದ ಕೆಲಸಗಳು, ನಿದ್ದೆಗೇಡುಗಳು ಮತ್ತು ಹಸಿವೆಯಲ್ಲಿ ಬಹು ತಾಳ್ಮೆಯಿಂದ ಮೆಚ್ಚುಗೆಯನ್ನು ಗಳಿಸಿದ್ದೇನೆ. ನಾವು ಕೆಲವು ಬಾರಿ ಬೇರೆಯವರಿಂದ ಪ್ರಶಂಸೆಯನ್ನು ಗಳಿಸಿದರೆ, ಕೆಲವೊಮ್ಮೆ ಅವಮಾನಿತರಾಗಿದ್ದೇವೆ. ಕೆಲವು ಮಂದಿ ನಮ್ಮನ್ನು ಹೊಗಳಿದರೆ, ಕೆಲವರು ನಮ್ಮನ್ನು ಖಂಡಿಸುತ್ತಾರೆ. ಕೆಲವರು ನಮ್ಮ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಾರೆ ಮತ್ತು ಕೆಲವರು ನಮ್ಮ ಬಗ್ಗೆ ಕೆಟ್ಟ ಮಾತನ್ನಾಡುತ್ತಾರೆ. ಆದರೆ ಎಲ್ಲದರಲ್ಲಿಯೂ ನಾವು ನಮ್ಮನ್ನು ಯೇಸು ಕ್ರಿಸ್ತನ ರಾಯಭಾರಿಗಳಾಗಿ ತೋರಿಸಿಕೊಳ್ಳುತ್ತೇವೆ. ಕೆಲವರು ನಮ್ಮನ್ನು ಮೋಸಗಾರರು ಎಂದು ಕರೆಯುತ್ತಾರೆ, ಹಾಗೆಯೇ ಕೆಲವರು ನಮ್ಮನ್ನು ನಿಜವಾದ ದೇವಸೇವಕರೆಂದು ಕರೆಯುತ್ತಾರೆ.

"ನಾವು ಲೋಕದೊಳಗೆ ಅಪರಿಚಿತರಾಗಿದ್ದರೂ, ದೇವ ಜನರಿಗೆ ಚೆನ್ನಾಗಿ ಪರಿಚಿತರಾಗಿದ್ದೇವೆ. ನಾವು ಸಾಯುವಂತಿದ್ದು ಬದುಕಿದ್ದೇವೆ. ಹಲವಾರು ಹಿಂಸೆಗಳ ಮೂಲಕ ಹಾದು ಹೋದರೂ, ದೇವರು ನಿಯಮಿಸಿದ ಸಮಯ ಬರುವವರೆಗೆ ನಾವು ಸಾಯುವದಿಲ್ಲವೆಂದು ನಮಗೆ ತಿಳಿದಿದೆ. ನಾವು ದೇವರಿಂದ ಶಿಕ್ಷಿಸಲ್ಪಟ್ಟಿದ್ದೇವೆ, ಆದರೆ ಇನ್ನೂ ಸತ್ತಿಲ್ಲ. ನಮ್ಮಲ್ಲಿ ಬಹಳ ದು:ಖವಿದೆ, ಅದು ಜನರಿಂದ ಉಂಟಾದ ನೋವಿನಿಂದ ಅಲ್ಲ, ಆದರೆ ಪಾಪದಲ್ಲಿ ಸಿಲುಕಿರುವ ಜನ ಮತ್ತು ಲೌಕಿಕತೆಯ ಗುಲಾಮರಾಗಿರುವ ಹಲವಾರು ವಿಶ್ವಾಸಿಗಳ ಬಗ್ಗೆ ನಮಲ್ಲಿ ಇರುವ ಕಾಳಜಿಯಿಂದಾಗಿ. ಹಾಗಿದ್ದರೂ ನಾವು ಸದಾ ಸಂತೋಷಿಸುವದು ಏಕೆಂದರೆ ಕರ್ತನ ಆನಂದ ನಮ್ಮದಾಗಿದೆ. ನಾವು ಲೋಕದಲ್ಲಿ ಬಡವರಾಗಿದ್ದೇವೆ, ಆದರೆ ಅನೇಕರಿಗೆ ಆತ್ಮಿಕ ಐಶ್ವರ್ಯವನ್ನು ಒದಗಿಸಿದ್ದೇವೆ. ಒಂದು ರೀತಿಯಲ್ಲಿ ಏನೂ ಇಲ್ಲದವರಾಗಿದ್ದರೂ, ಬೇರೊಂದು ರೀತಿಯಲ್ಲಿ ಪರಲೋಕ ಮತ್ತು ಭೂಲೋಕಗಳೆಲ್ಲವೂ ನಮ್ಮವೇ ಆಗಿದ್ದು, ನಾವು ಎಲ್ಲವನ್ನೂ ಹೊಂದಿದ್ದೇವೆ. ಎಲ್ಲವೂ ನಮ್ಮ ಹಿಡಿತದಲ್ಲಿದೆ. ದೇವರು ನಮಗೆ ಅಗತ್ಯವಾದುದನ್ನೆಲ್ಲಾ ಒದಗಿಸಿದ್ದಾರೆ. ನಮ್ಮ ಬ್ಯಾಂಕ್ ಖಾತೆಯಲ್ಲಿ ಹೆಚ್ಚೇನೂ ಇಲ್ಲದಿರಬಹುದು. ನಾವು ದಿನದಿಂದ ದಿನಕ್ಕೆ ಮಾತ್ರ ಜೀವಿಸುವವರಾಗಿದ್ದೇವೆ. ಆದರೆ ದೇವರು ನಮ್ಮನ್ನು ನೋಡಿಕೊಳ್ಳುತ್ತಾರೆ” (ಭಾವಾನುವಾದ).

ಪೌಲನು ಈ ರೀತಿಯಾಗಿ ಜೀವಿಸಿದನು. ಆತನು ”ಉನ್ನತಿಯ ಸುವಾರ್ತೆ”ಯಲ್ಲಿ ಸ್ವಲ್ಪವೂ ನಂಬಿಕೆ ಇಟ್ಟಿರಲಿಲ್ಲ.