WFTW Body: 

ಯೆರೆಮೀಯನು 15:16-21 ರಲ್ಲಿ ದೇವರ ವಕ್ತಾರ(ಬಾಯಂತಿರಲು) ಅಥವಾ ಪ್ರತಿನಿಧಿಯಾಗಲು ಪಾಲಿಸಬೇಕಾಗಿರುವ ಮೂರು ಷರತ್ತುಗಳನ್ನು ನಾವು ಕಾಣುತ್ತೇವೆ.

ಎಲ್ಲಕ್ಕಿಂತ ಮೊದಲನೆಯದು: "ಪ್ರಭುವೇ, ನಿಮ್ಮ ಮಾತುಗಳನ್ನು ಆಲಿಸಿದೆನು, ನಿಮ್ಮ ನುಡಿಯು ನನಗೆ ಆಹ್ಲಾದಕರವೂ, ಹೃದಯಕ್ಕೆ ಉಲ್ಲಾಸದಾಯಕವೂ ಆಗಿದೆ" (ಯೆರೆಮೀಯನು 15:16). ದೇವರ ವಾಕ್ಯವು ನಿಮ್ಮ ನೆಚ್ಚಿನದೂ, ನಿಮ್ಮ ಹೃದಯದ ಆನಂದವೂ ಆಗಿರಬೇಕು. ಒಬ್ಬ ವ್ಯಾಪಾರಿ ಅಥವಾ ಉದ್ಯಮಿಗೆ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಸಿಗುವ ಆನಂದವು ನಿಮಗೆ ದೇವರ ವಾಕ್ಯದಿಂದ ದೊರೆಯುತ್ತಿರಬೇಕು. ಇಂದು ಅನೇಕರು ಬೋಧಕರೆಂದು ಕರೆಸಿಕೊಳ್ಳ ಬಯಸಿದರೂ, ದೇವರ ವಾಕ್ಯದ ಆಳವಾದ ಅಭ್ಯಾಸ ಮಾಡುವುದಾಗಲೀ, ಆ ವಾಕ್ಯವನ್ನು ಹೃದಯದಿಂದ ಇಚ್ಛಿಸಿ, ಸಂತೋಷದಿಂದ ಸ್ವೀಕರಿಸುವುದಾಗಲೀ ಅವರಲ್ಲಿ ಕಂಡುಬರುವುದಿಲ್ಲ.

ಎರಡನೆಯದಾಗಿ, "ಮೋಜುಗಾರರ ಕೂಟಕ್ಕೆ ನಾನು ಸೇರಲಿಲ್ಲ" (ಯೆರೆಮೀಯನು 15:17). ಯೂದಾಯದ ಇತರರು ಹಾಸ್ಯಗೋಷ್ಠಿಗಳಲ್ಲೂ, ಹುಡುಗಾಟದ ಚಟುವಟಿಕೆಗಳಲ್ಲೂ ತೊಡಗಿದ್ದಾಗ, ಯೆರೆಮೀಯನು ದೇವರೊಡನೆ ಏಕಾಂತವನ್ನು ಬಯಸಿ ಎಲ್ಲೋ ದೂರಸರಿದಿರುತ್ತಿದ್ದನು. ಶಿಸ್ತಿನಿಂದ ಈ ಲೋಕದ ಹಾಸ್ಯಗಾರರಿಂದ ದೂರ ಸರಿಯದೆ, ನೀವು ದೇವರ ವಕ್ತಾರ ಅಥವಾ ಪ್ರತಿನಿಧಿಯಾಗುವುದು ಅಸಾಧ್ಯವೇ ಸರಿ. ವ್ಯಂಗ್ಯ ಹಾಗೂ ಚೊಕ್ಕವಾದ ಹಾಸ್ಯ ತಪ್ಪೆಂದು ನನ್ನ ಮಾತಿನ ಅರ್ಥವಲ್ಲ. ಆದರೆ ಅಂಥಹ ವಿಷಯಗಳನ್ನು ಯಾವಾಗ ಅಂತ್ಯಗೊಳಿಸಬೇಕೆಂದೇ ಅನೇಕ ಕ್ರಿಸ್ತ ವಿಶ್ವಾಸಿಗಳಿಗೆ ತಿಳಿದಿಲ್ಲ - ಅವರು ಕೊನೆ ಮೊದಲಿಲ್ಲದ ಹಾಸ್ಯಗಾರರು. ಅಂಥವರ ಒಡನಾಟದಿಂದ ದೂರವಿರುವುದನ್ನು ಯೆರೆಮೀಯನು ಖಚಿತಪಡಿಸಿಕೊಂಡಿದ್ದನು.

ಮೂರನೆಯದಾಗಿ, 18ನೇ ವಚನದಲ್ಲಿ ಯೆರೆಮೀಯನು, "ಪ್ರಭುವೇ, ಏಕೆ ನನ್ನ ಕೈ ಬಿಟ್ಟಿದ್ದೀ? ನೀನು ನನಗೆ ಹುಸಿ ತೊರೆಯಂತೆಯೂ, ದಾಹ ನೀಗಿಸದ ನೀರಿನಂತೆಯೂ ಆಗಿರುವೆ. ನೀರಿಗಾಗಿ ತೊರೆಗೆ ಬಂದರೆ, ಅದು ಬತ್ತಿ ಹೋಗಿದೆ. ನೀನು ನನ್ನನ್ನು ನಿರಾಶೆಗೊಳಿಸಿದೆ," ಎಂದು ದೇವರನ್ನು ಆರೋಪಿಸಿದನು. ಈ ಅಪನಂಬಿಕೆಗಾಗಿ ದೇವರು ಯರೆಮೀಯನನ್ನು, "ನನ್ನೊಡನೆ ಅಂಥಹ ಮಾತನ್ನು ಎಂದಿಗೂ ಆಡದಿರು," (ವ.19) ಎಂದು ಕಟುವಾಗಿ ತಿದ್ದಿದರು. ದೇವರು ಎಂದೂ ನಮ್ಮ ಕೈಬಿಡರು. ಅವರು ಬೇಜವಾಬ್ದಾರಿಯ ತೊರೆಯಂತಲ್ಲ. ತನ್ನ ಪರಿಸ್ಥಿತಿಗಳನ್ನು ದೃಷ್ಟಿಸಿ ಮತ್ತು ತನ್ನ ಅನಿಸಿಕೆಗಳನ್ನು ಯೆರೆಮೀಯನು ಅವಲಂಬಿಸಿದ್ದನು. ಆತನಿಗೆ ದೇವರು ನೀಡಿದ ವಾಕ್ಯ ಇದು, "(ಈಗ ತಾನೇ ನೀನು ನುಡಿದ ಪೊಳ್ಳು, ಅನುಪಯುಕ್ತ ಹಾಗೂ ಅಪನಂಬಿಕೆಯ ನುಡಿಯಂತಹ) ಹಾಳು ಮಾತುಗಳನ್ನಾಡುವ ಅಭ್ಯಾಸವನ್ನು ಬಿಟ್ಟು, ನನ್ನೆಡೆಗೆ ಹಿಂದಿರುಗಿ, ಬೆಲೆಯುಳ್ಳ (ವಿಶ್ವಾಸದ, ಉತ್ತಮ) ಮಾತನ್ನಷ್ಟೇ ನುಡಿಯುವೆಯಾದರೆ, ನೀನು ನನ್ನ ಬಾಯಂತಿರುವಿ."

ನಿಮ್ಮಲ್ಲೆಷ್ಟು ಜನರು ದೇವರ ವಕ್ತಾರರಾಗ ಬಯಸುವಿರಿ? ಯಾವುದೋ ಪುಸ್ತಕದಲ್ಲಿ ಓದಿರುವದನ್ನು ಆಧರಿಸಿದ ಪೊಳ್ಳು ಪ್ರವಚನದ ಬೋಧಕನಾಗುವ ವಿಷಯ ನಾನು ಹೇಳುತ್ತಿಲ್ಲ, ದೇವರ ಬಾಯಂತಾಗುವ ಬಗ್ಗೆ ಹೇಳುತ್ತಿದ್ದೇನೆ. ಇದು ನಿಮ್ಮ ಬಯಕೆಯಾದಲ್ಲಿ, ಸಮಯವನ್ನು ಅನುಪಯುಕ್ತ ಸಹವಾಸದಲ್ಲಿ ಪೋಲುಮಾಡದೆ, ಅದನ್ನು ಜಾಗರೂಕರಾಗಿ ಉಪಯೋಗಿಸಿ, ದೇವರ ವಾಕ್ಯವನ್ನು ಆಳವಾಗಿ ಅಭ್ಯಸಿಸಿರಿ. ನಿಮ್ಮ ಮನದಾಸೆ ಅದೇ ಆಗಿರಲಿ. ಹುಚ್ಚು ಮಾತುಗಳನ್ನು ಬಿಟ್ಟು, ವಿಶ್ವಾಸ ಭರಿತ ಮಾತುಗಳನ್ನು ಯಾವಾಗಲೂ ನುಡಿಯಿರಿ, ನಿಮ್ಮ ಪ್ರತೀ ಸಂಭಾಷಣೆಯೂ ಉತ್ತಮ ಮಾತುಗಳನ್ನೇ ಹೊಂದಿರಲಿ. ಹೀಗಿದ್ದಲ್ಲಿ ನಿಮ್ಮನ್ನು ತನ್ನ ವಕ್ತಾರನನ್ನಾಗಿ ದೇವರು ನಿಯಮಿಸುವರು. ದೇವರಲ್ಲಿ ಪಕ್ಷಪಾತವಿಲ್ಲ. ದೇವರು ಯೆರೆಮೀಯನಿಗೆ ಹೀಗೆ ಹೇಳುತ್ತಾರೆ – ‘’ನೀನು ಖಂಡಿತವಾಗಿ ಅವರ ಬಳಿ ಹೋಗಬಾರದು. ನೀನು ಅವರ ಮೇಲೆ ಪ್ರಭಾವ ಬೀರಬೇಕೆ ಹೊರತು, ಅವರು ನಿನ್ನ ಮೆಲೆ ಪ್ರಭಾವ ಬೀರಬಾರದು” (ಯೆರೆಮೀಯ 15:19 – Living ಭಾಷಾಂತರ).

ಲೋಕವು ನಿಮ್ಮ ಮೇಲೆ ಪ್ರಭಾವ ಬೀರಲು ಬಿಡಬೇಡಿರಿ ಮತ್ತು ಭ್ರಷ್ಟ ಕ್ರೈಸ್ತತ್ವ ಸಹ ನಿಮ್ಮ ಮೇಲೆ ಪ್ರಭಾವ ಬೀರದಿರಲಿ. ಹಿಂಜಾರಿರುವ ಪಾಸ್ಟರ್ ಗಳು ಮತ್ತು ಹಣವನ್ನು ಪ್ರೀತಿಸುವ ಬೋಧಕರುಗಳು ನಿಮ್ಮ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ದೇವರು ನಿಮ್ಮ ಮೇಲೆ ಪ್ರಭಾವ ಬೀರಲಿ. ಮತ್ತು ಇತರರನ್ನು ದೈವಿಕರಾಗುವಂತೆ ಅವರ ಮೇಲೆ ನೀವು ಪ್ರಭಾವ ಬೀರಿರಿ. ದೇವರ ವಾಗ್ದಾನವೇನೆಂದರೆ, ನಾನು ನಿನ್ನನ್ನು "ದುರ್ಗಮವಾದ ತಾಮ್ರದ ಪೌಳಿ ಗೋಡೆಯನ್ನಾಗಿ ಮಾಡುವೆನು. ಅವರು ನಿನಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ" (ಯೆರೆ. 15:20). ಹಲೆಲ್ಲೂಯ! ದೇವರ ಸೇವಕನಾಗಬೇಕಾದರೆ ಬಹುದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ಯೆರೆಮೀಯನ ಪ್ರಕರಣದಲ್ಲಿ, ಆತನು ತೆರಬೇಕಾದ ಬೆಲೆಯಲ್ಲಿ ಒಂದು ಭಾಗವೇನಾಗಿತ್ತೆಂದರೆ, ಆತನು ತನ್ನ ಜೀವನವಿಡೀ ಮದುವೆಯಾಗದೇ ಇರಬೇಕಾಗಿತ್ತು.

ದೇವರು ಆತನಿಗೆ ಹೇಳಿದ್ದೇನೆಂದರೆ, ನೀನು ಮದುವೆಯಾಗಬೇಡ, ಗಂಡು ಹೆಣ್ಣು ಮಕ್ಕಳು ಈ ಸ್ಥಳದಲ್ಲಿ ನಿನಗೆ ಹುಟ್ಟದಿರಲಿ (ಯೆರೆ.16:2). ಪೌಲ ಮತ್ತು ಯೆರೆಮೀಯನ ರೀತಿಯಲ್ಲಿ ಕೆಲವರು ಏಕಾಂಗಿತನದ ಜೀವಿತವನ್ನು ಜೀವಿಸಲು ದೇವರಿಂದ ಕರೆಯಲ್ಪಟ್ಟಿದ್ದಾರೆ. ಅವರು ಆ ಕರೆಯನ್ನು ಸ್ವೀಕರಿಸಲು ಮನಸ್ಸುಳ್ಳವರಾಗಿರಬೇಕು. ಪ್ರಲಾಪಿಸುವ ಮನೆಗೆ ಹೋಗಲೂ ಅಥವಾ ಔತಣಕೂಟಕ್ಕೆ ಹೋಗಲೂ, ದೇವರು ಯರೆಮಿಯನಿಗೆ ಅನುಮತಿ ನೀಡಲಿಲ್ಲ (ಯೆರೆಮೀಯ:16:5,8). ದೇವರ ಸೇವೆ ಮಾಡಬೇಕಾದರೆ ಪ್ರವಾದಿಗಳು ತಮ್ಮ ತಿನ್ನುವ ಅಭ್ಯಾಸಗಳಲ್ಲಿ ಶಿಸ್ತನ್ನು ಪಾಲಿಸಬೇಕಾಗಿತ್ತು. ಜನರು ಯೆರೆಮೀಯನ ಬಗ್ಗೆ ಏನು ಮಾತಾಡಿಕೊಂಡರು ಎಂದು ನೀವು ಕಲ್ಪಿಸಿಕೊಳ್ಳಬಲ್ಲಿರಾ? ಯೆರೆಮಿಯನು ಅಸಾಮಾಜಿಕ (ಯಾರೊಂದಿಗೂ ಬೆರೆಯದ) ವ್ಯಕ್ತಿ ಎಂದು ಜನರು ಆತನನ್ನು ಟೀಕಿಸಿದ್ದಿರಬಹುದು. ಆತನು ಇತರರೊಂದಿಗೆ ಸಮಯ ಕಳೆಯದೆ ಇದ್ದುದರಿಂದ, ಆತನು ಸಮಾಜದಿಂದ ಬಹಿಷ್ಕರಿಸಲ್ಪಟ್ಟ ವ್ಯಕ್ತಿಯಾಗಿದ್ದನು. ದೇವರ ಸಂದೇಶವನ್ನು ಪಡೆದುಕೊಳ್ಳಲು ಆತನು ದೇವರ ಮುಂದೆ ಕಾಯಬೇಕಾಗಿತ್ತು. ಅನೇಕ ಜನರು ಈ ರೀತಿಯ ಬೆಲೆಯನ್ನು ತೆರಲು ಬಯಸುವುದಿಲ್ಲವಾದರೂ, ದೇವರ ವಕ್ತಾರನಾಗಲು ಇಚ್ಛಿಸುತ್ತಾರೆ. ಇಂತಹ ಬೋಧಕರು ದೇವ ಜನರಿಗೆ ಏನೂ ಒಳ್ಳೆಯದನ್ನು ಮಾಡುವುದಿಲ್ಲ, ಬದಲಾಗಿ ತುಂಬಾ ಕೆಡುಕನ್ನು ಮಾಡುತ್ತಾರೆ.