ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಅಪೊಸ್ತಲರ ಕೃತ್ಯಗಳು 13ರಲ್ಲಿ, ಅಂತಿಯೋಕ್ಯದ ಹೊರಗೆ ನಡೆದ ಬಹುದೊಡ್ಡ ಸುವಾರ್ತಾ ಪ್ರಚಾರ ಚಳುವಳಿಯ ಬಗ್ಗೆ ನಾವು ಓದುತ್ತೇವೆ. ಅಂತಿಯೋಕ್ಯದಿಂದ ಯೆರುಸಲೇಮಿಗೆ ಹಣ ತೆಗೆದುಕೊಂಡು ಹೋದ ಬಾರ್ನಬನು ಮತ್ತು ಸೌಲನು, ಪೇತ್ರನು ವಿಸ್ಮಯಕರವಾಗಿ ಬಿಡುಗಡೆ ಹೊಂದಿದ್ದನ್ನು ನೋಡಿ ಅವರು ತಮಗೆ ಸವಾಲನ್ನು (ಪಂಥಾಹ್ವಾನವನ್ನು) ಹೊಂದಿದವರಾದರು. ಅವರು ಯೆರುಸಲೇಮಿಗೆ ಜನರನ್ನು ಭೌತಿಕವಾಗಿ ಆಶೀರ್ವದಿಸಲು ಹೋಗಿದ್ದರು. ಆದರೆ ಪ್ರಾರ್ಥನೆ ಏನು ಮಾಡಬಹುದೆಂಬುದನ್ನು ನೋಡಿದ್ದರಿಂದ, ಹಿಂತಿರುಗಿ ಬರುವಾಗ ಅವರು ಆತ್ಮಿಕ ಆಶೀರ್ವಾದವನ್ನು ಪಡೆದುಕೊಂಡರು. "ಉದಾರಿಯು ಪುಷ್ಠನಾಗುವನು, ನೀರು ಹಾಯಿಸುವವನಿಗೆ ನೀರು ಸಿಕ್ಕುವುದು" (ಜ್ಞಾನೋಕ್ತಿ.11:25). ಅವರು ಅಂತಿಯೋಕ್ಯಕ್ಕೆ ಹಿಂದಿರುಗಿದಾಗ, ಪ್ರಾರ್ಥನೆಯ ಬಗ್ಗೆ ಅವರು ಕಲಿತಿದ್ದನ್ನು, ಸಭೆಯ ಹಿರಿಯರಿಗೆ ತಿಳಿಸಿಕೊಟ್ಟರು (ಅ. ಕೃ. 13:1,2). ಮತ್ತು ಅವರೆಲ್ಲರೂ ಉಪವಾಸ ಮಾಡಿ, ದೇವರನ್ನು ಆರಾಧಿಸಲು ನಿರ್ಧರಿಸಿದರು. ಅವರು ದೇವರಲ್ಲಿ ಏನನ್ನೂ ಕೇಳದೆ, ಕೇವಲ ದೇವರನ್ನು ಆರಾಧಿಸುತ್ತಿದ್ದರು. ಉಪವಾಸ ಮಾಡಿ, ಕೇವಲ ದೇವರನ್ನು ಆರಾಧಿಸುವಂತದ್ದು ನಿಜಕ್ಕೂ ಅದ್ಭುತಕರವಾದ ಸಂಗತಿಯಾಗಿದೆ. ದೇವರು ಅವರೊಡನೆ ಮಾತನಾಡುತ್ತಾ, "ನಾನು ಬಾರ್ನಬ, ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ" ಎಂದು ಹೇಳಿದರು (ಅ. ಕೃ. 13:2). ದೇವರು ಅವರೊಡನೆ ಹೇಗೆ ಮಾತನಾಡಿದನು ಎಂದು ಇಲ್ಲಿ ಹೇಳಿಲ್ಲ. ಇದು ಅವರು ತಮ್ಮ ಆತ್ಮದಾಳದಲ್ಲಿ ಅವರಿಗಾದ ದೃಢವಾದ ನಿಶ್ಚಯದಿಂದ ತಮಗೆ ದೇವರೇನು ಹೇಳುತ್ತಿದ್ದಾರೆ ಎಂಬುದನ್ನು ಅವರನ್ನು ಅರ್ಥೈಸಿಕೊಂಡಿರಬಹುದು.

ದೇವರು ಸೌಲನನ್ನು ಮತ್ತು ಬಾರ್ನಬನನ್ನು ಕರೆದಂತ ಸಮಯವು ಇದಾಗಿರಲಿಲ್ಲ. ಮುಂಚಿತವಾಗಿಯೇ ಆತನು ಅವರನ್ನು ಕರೆದಿದ್ದನು. ಯಾವಾಗಲಾದರೂ ದೇವರು ಯಾರನ್ನಾದರೂ ಕರೆದಾಗ, ಇದು ಯಾವಾಗಲೂ ವೈಯುಕ್ತಿಕವಾಗಿಯೂ ಮತ್ತು ಖಾಸಗಿಯಾಗಿಯೂ ಇರುತ್ತದೆ. ನಂತರ ಇದು ಸಾರ್ವಜನಿಕವಾಗಿ ದೃಢೀಕರಿಸಲ್ಪಡಬಹುದು. ಆದರೆ ಕೆಲವರು - "ದೇವರು ಹೀಗೆ ಹೇಳುತ್ತಿದ್ದಾರೆ, ’ಅಲ್ಲಿಗೆ ಹೋಗು’," ಅಥವಾ ’ಈ ವ್ಯಕ್ತಿಯನ್ನು ಮದುವೆಯಾಗು’, ಎಂದು ಹೇಳುವಾಗ ದೇವರು ಮಾತನಾಡುತ್ತಿದ್ದಾರೆ ಎಂದು ಯೋಚಿಸಬೇಡಿ. ನೀವು ಇಂತಹ ಮಾತುಗಳನ್ನು ಕಸದ ಬುಟ್ಟಿಗೆ ಹಾಕಬೇಕು. ಅವು ಕಸದ ಬುಟ್ಟಿಗೆ ಸೇರಿದ್ದರಿಂದ ಅವನ್ನು ಅಲ್ಲೇ ಹಾಕಬೇಕು. ಒಂದು ವೇಳೆ ದೇವರು ನಿಮಗೆ ಏನನ್ನೋ ಮಾಡಲು ಹೇಳಿದರೆ, ಆತನು ನಿನ್ನೊಡನೆ ಖಾಸಗಿಯಾಗಿ ಮಾತನಾಡುತ್ತಾನೆ. ಆತನು ನಂತರ ಸಾರ್ವಜನಿಕವಾಗಿ ಬೇರೆ ಹಿರಿಯರ ಮುಖಾಂತರ ದೃಢೀಕರಿಸಬಹುದು. ಆದರೆ ಯಾವಾಗಲೂ ಅದನ್ನು ದೇವರು ನಿನಗೆ ಮುಂಚಿತವಾಗಿಯೇ ಹೇಳಿದ್ದಾಗಿರುತ್ತದೆ. ಸೌಲನು ಮತ್ತು ಬಾರ್ನಬನು ದೇವರ ಕರೆಯನ್ನು ಆಗಲೇ ಕೇಳಿದ್ದರು. ಅವರು ಅದರ ಬಗ್ಗೆ ಯೋಚಿಸುತ್ತಿದ್ದರು, ಅದೇ ಸಮಯದಲ್ಲಿ, ಅಂದರೆ, ಪ್ರಾರ್ಥನಾ ಕೂಟದ ಸಮಯದಲ್ಲಿ, ದೇವರು ಹೇಳುವಂತದ್ದನ್ನು ಹಿರಿಯರು ಈ ರೀತಿಯಾಗಿ ಕೇಳಿಸಿಕೊಂಡರು - "ಬಾರ್ನಬ ಮತ್ತು ಸೌಲನನ್ನು ಪ್ರತ್ಯೇಕಿಸಿರಿ, ನಾನು (ಈಗಾಗಲೇ) ಅವರನ್ನು ನನ್ನ ಸೇವೆಗಾಗಿ ಕರೆದಿರುತ್ತೇನೆ." ತಮ್ಮ ಜೊತೆ ಹಿರಿಯರು ಸಹ ದೇವರ ಸ್ವರವನ್ನು ಕೇಳಿಸಿಕೊಳ್ಳುವವರೆಗೂ ಸೌಲ ಮತ್ತು ಬಾರ್ನಬರು ತಾಳ್ಮೆಯಿಂದ ಕಾದಿದ್ದರು. ಆ ಹಿರಿಯರು ದೇವರ ಸ್ವರವನ್ನು ಕೇಳಿಸಿಕೊಂಡ ನಂತರ, ಜೊತೆ ಹಿರಿಯರಿಂದ ಕಳಿಸಲ್ಪಟ್ಟವರಾಗಿ, ಅವರಿಬ್ಬರೂ (ಸುವಾರ್ತಾಪ್ರಚಾರಕ್ಕಾಗಿ, ಅಂತಿಯೋಕ್ಯದಿಂದ) ಹೊರಗೆ ಹೋದರು. ಇದು ಹೊಸ ಒಡಂಬಡಿಕೆಯಲ್ಲಿ ಕ್ರಿಸ್ತನ ದೇಹದಲ್ಲಿನ ಸೇವೆಯಾಗಿದೆ. ಈ ಸೇವೆಯು ಹಳೆ ಒಡಂಬಡಿಕೆಯ ರೀತಿಯಲ್ಲಿ ಪ್ರವಾದಿಗಳು ತಮ್ಮ ಸ್ವಯಂ ನಿರ್ಧಾರದಿಂದ, ಎಲ್ಲಿಗಾದರೂ ಅವರನ್ನು ದೇವರು ಕಳುಹಿಸುತ್ತಿದ್ದಾನೆ ಎಂದು ಭಾವಿಸಿ, ಹೊರಗೆ ಹೋಗುವ ರೀತಿಯದ್ದಾಗಿರುವುದಿಲ್ಲ.

ದೇವರು ನನ್ನನ್ನು ಪೂರ್ಣ-ಕಾಲಿಕ ಕ್ರೈಸ್ತ ಸೇವೆಗಾಗಿ 1964, ಮೇ 6 ರಂದು ಕರೆದರು. ಆಗ ನಾನು ನೌಕಾದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ವಿರಾಮದ ಸಮಯದಲ್ಲಿ, ಸುವಾರ್ತಿಕರ ತಂಡದ ಜೊತೆ ಕೂಟಗಳಲ್ಲಿರುತ್ತಿದ್ದೆ. ಆ ಸಂದರ್ಭದಲ್ಲಿ ನಾನು ಸತ್ಯವೇದವನ್ನು ಓದುವಾಗ, ಯೆಶಾಯ 49ರ ಮೂಲಕ, ದೇವರು ನನ್ನನ್ನು ಸ್ಪಷ್ಟವಾಗಿ ಕರೆದರು. ಆದರೆ ಆಗ ನನ್ನ ಪಕ್ಕದಲ್ಲಿ ಯಾರೂ ಕೂತಿರಲಿಲ್ಲ ಮತ್ತು ದೇವರು ನನ್ನೊಡನೆ ಏನು ಮಾತನಾಡಿದರೆಂದು ಯಾರೂ ಕೇಳಿಸಿಕೊಂಡಿರಲಿಲ್ಲ. ಇದು ಖಾಸಗಿ ಮತ್ತು ವೈಯುಕ್ತಿಕ ಕರೆಯಾಗಿತ್ತು. ಸುಮಾರು ಒಂದು ತಾಸಿನ ನಂತರ, ನಾನು ದೇವರ ಕರೆಯ ಬಗ್ಗೆ ಧ್ಯಾನಿಸುವಾಗ ಮತ್ತು ನೌಕಾದಳಕ್ಕೆ ರಾಜಿನಾಮೆಯನ್ನು ಕೊಡುವುದರ ಬಗ್ಗೆ ಅಲೋಚಿಸುತ್ತಿದ್ದ ಸಂದರ್ಭದಲ್ಲಿ ಒಬ್ಬ ದೈವಿಕ ಮನುಷ್ಯನು, ನಮ್ಮೊಟ್ಟಿಗೆ ಪ್ರಯಾಣಿಸುತ್ತಿದ್ದನು. (ಇವರನ್ನು ನಾನು ಭಾರತದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಗೌರವಿಸುತ್ತಿದ್ದೆ). ಅವನು ನನ್ನ ಬಳಿಗೆ ಬಂದು - "ನೌಕಾದಳವನ್ನು ಯಾವಾಗ ಬಿಡಬೇಕೆಂದು ಯೋಚಿಸುತ್ತಿದ್ದೀಯಾ?" ಎಂದು ಕೇಳಿದನು. ಇದೊಂದು ಪ್ರವಾದನಾ ಮಾತಾಗಿತ್ತು. ಅದು ನನ್ನನ್ನು ವಿಸ್ಮಯಗೊಳಿಸಿತು. ದೇವರು ನನ್ನೊಳಗೆ ಹೇಳಿದ್ದರ ಬಗ್ಗೆ ಇದು ಹೊರಗಿನ ಧೃಢೀಕರಣವಾಗಿತ್ತು. ಒಂದು ವೇಳೆ ದೇವರು ನಿಮ್ಮನ್ನು ಕರೆದರೆ, ಆತನು ನಿಮ್ಮನ್ನು ಮೊದಲು ವೈಯುಕ್ತಿಕವಾಗಿ ಕೆರೆಯುತ್ತಾನೆ. ಧೃಢೀಕರಣವು ನಿಮಗೆ ಮತ್ತೊಬ್ಬ ದೈವಿಕ ಮನುಷ್ಯನಿಂದ ಬರುತ್ತದೆ. ಆದರೆ ಮೊದಲು ನೀವು ಆ ಕರೆಯನ್ನು ಕೇಳಿಸಿಕೊಳ್ಳಬೇಕು. ಇದೇ ಮಾರ್ಗವನ್ನು ನಾವು ಹೊಸ ಒಡಂಬಡಿಕೆಯಲ್ಲಿ ನೋಡುತ್ತೇವೆ.

ಅಪೊಸ್ತಲರ ಕೃತ್ಯಗಳು 13:36 ರಲ್ಲಿ, ನಾವು ಹೀಗೆ ಓದುತ್ತೇವೆ. "ದಾವೀದನಾದರೋ ತನ್ನ ಸಕಾಲದವರಿಗೆ ಸೇವೆ ಮಾಡಿದ ನಂತರ ದೈವ ಸಂಕಲ್ಪದಿಂದ ನಿದ್ದೆ ಹೋದನು." ನಾವೆಲ್ಲರೂ ದೇವರ ಚಿತ್ತವನ್ನು ಮಾಡುವುದರಿಂದ, ನಮ್ಮ ಸ್ವಂತ ಸಕಾಲದವರಿಗೆ ಸೇವೆ ಮಾಡಲು ಕರೆಯಲ್ಪಟ್ಟಿದ್ದೇವೆ. ಹಾಗಾಗಿ ಈ ಲೋಕವನ್ನು ಬಿಡುವುದರೊಳಗೆ ನಾನು ದೇವರ ಚಿತ್ತವನ್ನು ಪೂರ್ಣಗೊಳಿಸುತ್ತೇನೆಂದು ಧೃಡ ಸಂಕಲ್ಪ ಮಾಡಿರಿ. ಅದನ್ನು ಮಾಡಲು, "ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟವನ್ನೆಲ್ಲಾ ನೇರವೇರಿಸುವವನು” ಎಂಬುದಾಗಿ ದಾವೀದನ ವಿಷಯದಲ್ಲಿ ದೇವರು ಸಾಕ್ಷಿ ಹೇಳಿದಂತೆ ನೀನು ದಾವೀದನಂತಹ ಮನುಷ್ಯನಾಗಬೇಕು.(ಅ. ಕೃ. 13:22).