ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಯೇಸುವಿನ ಜೀವಿತವು ಈ ಜಗತ್ತು ಹಿಂದೆಂದೂ ನೋಡಿರದಂತಹ ಅತೀ ಸುಂದರ, ಬಹಳ ಕ್ರಮಬದ್ಧ, ತುಂಬಾ ಶಾಂತಿಯುತ ಮತ್ತು ಅತೀ ಸಂತೋಷಭರಿತ ಜೀವಿತವಾಗಿತ್ತು. ಅದು ಹಾಗಿರಲು ಕಾರಣ ಆತನ ದೇವರ ವಾಕ್ಯದ ಸಂಪೂರ್ಣ ವಿಧೇಯತೆ ಆಗಿತ್ತು. ನಾವು ಆಕಾಶದ ಗ್ರಹಗಳಲ್ಲಿ ಮತ್ತು ನಕ್ಷತ್ರಗಳಲ್ಲಿ ನೋಡುವ ಹಾಗೆ ಎಲ್ಲೆಲ್ಲಿ ದೇವರಿಗೆ ಸಂಪೂರ್ಣ ವಿಧೇಯತೆ ಇರುತ್ತದೋ ಅಲ್ಲಿ ಪರಿಪೂರ್ಣತೆ ಹಾಗೂ ಸುಂದರತೆ ಉಂಟಾಗುತ್ತವೆ. "ಯೋಹೋವನ ಭಯವೇ ಜೀವದ ಬುಗ್ಗೆಯು" (ಜ್ಞಾನೋಕ್ತಿಗಳು 14:27) - ಹಾಗು ಯೇಸುವು ಈ ಆಜ್ಞೆಗೆ ವಿಧೇಯನಾದನು "ಯೋಹೋವನಲ್ಲಿ ದಿನವೆಲ್ಲಾ ಭಯಭಕ್ತಿಯುಳ್ಳವನಾಗಿರು" (ಜ್ಞಾನೋಕ್ತಿಗಳು 23:17).

ಜನರು ಯೇಸುವಿನ ಈ ಲೋಕದ ಜೀವನದಲ್ಲಿ ಪರಲೋಕದ ಜೀವನವನ್ನು ಕಂಡರು. ಆತನ ಕರುಣೆ, ಇತರರನ್ನು ಪರಿಗಣಿಸುವ ರೀತಿ, ಪರಿಶುದ್ಧತೆ, ನಿಸ್ವಾರ್ಥ ಪ್ರೀತಿ ಮತ್ತು ದೀನತೆಗಳೆಲ್ಲವೂ ದೇವರ ಜೀವನವನ್ನೇ ತೋರಿಸಿಕೊಟ್ಟವು. ಇಂದು ಪವಿತ್ರಾತ್ಮನು ಇಂತಹ ದೇವರ ಜೀವಿತ ಹಾಗೂ ಪರಲೋಕದ ಅನುಭವಗಳನ್ನು ನಮ್ಮ ಹೃದಯದೊಳಕ್ಕೆ ತರಲಿಕ್ಕಾಗಿ ಬಂದಿದ್ದಾನೆ. ಈ ಪರಲೋಕದ ಜೀವಿತ ಭೂಲೋಕದ ಪ್ರತಿಯೊಬ್ಬರಿಗೆ ತೋರಿಸಲು ನಾವು ದೇವರಿಂದ ಆರಿಸಲ್ಪಟ್ಟಿದ್ದೇವೆ.

ನಾವು ಎಫೆಸ. 2:10ರಲ್ಲಿ ಓದುವಂತೆ, ದೇವರು ನಮ್ಮ ಒಬ್ಬೊಬ್ಬರ ಜೀವಿತಕ್ಕೂ ಒಪ್ಪುವ ಒಂದು ಯೋಜನೆಯನ್ನು ಇರಿಸಿದ್ದಾನೆ. ನಾವು ಎಲ್ಲೆಲ್ಲಿ ಜೀವಿಸಬೇಕು ಹಾಗೂ ಪ್ರತಿದಿನ ಏನೇನು ಮಾಡಬೇಕೆಂದು ಆತನು ಯೋಜಿಸಿದ್ದಾನೆ. ಪ್ರತಿಯೊಂದು ಸಂಗತಿಯಲ್ಲೂ ಆತನ ಆಯ್ಕೆ ಅತ್ಯುತ್ತಮವಾದದ್ದು. ಆತನು ನಮ್ಮನ್ನು ಚೆನ್ನಾಗಿ ಅರಿತಿದ್ದಾನೆ ಮತ್ತು ಪ್ರತಿಯೊಂದು ಅಂಶವನ್ನು ಪರಿಗಣಿಸಿ ನೋಡಿದ್ದಾನೆ. ಹಾಗಾಗಿ ಪ್ರತಿಯೊಂದು ವಿಷಯದಲ್ಲಿ (ಮುಖ್ಯವಾದದ್ದಿರಲಿ ಅಥವಾ ಚಿಕ್ಕ ವಿಷಯವೇ ಆಗಿರಲಿ) ನಮ್ಮನ್ನು ಆತನ ಚಿತ್ತಕ್ಕೆ ಒಪ್ಪಿಸಿ ಕೊಡುವದು ಜಾಣತನವಾಗಿದೆ.

ದೇವರಿಗೆ ಕಿವಿಗೊಡುವವರಾಗಿರಿ
ನಾವು ಪ್ರತಿದಿನ ದೇವರ ಚಿತ್ತದಂತೆ ನಡೆಯಬೇಕಾದರೆ, ನಾವು ಪ್ರತಿದಿನ ದೇವರ ಮಾತನ್ನು ಕೇಳಿಸಿಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಯೇಸುವು ಮರಿಯಳ ಕುರಿತಾಗಿ ಹೇಳಿದಂತೆ (ಲೂಕ 10:42) , ಯಾವುದೇ ಸಂಗತಿಯನ್ನು ಮಾಡುವುದಕ್ಕಿಂತ ಹೆಚ್ಚಾಗಿ ನಾವು ಮಾಡಬೇಕಾದದ್ದು ಏನೆಂದರೆ, ಆತನ ವಾಕ್ಕಕ್ಕೆ ಕಿವಿಗೊಡುವದಾಗಿದೆ. ನಾವು ಸತ್ಯವೇದದ ಮೊದಲ ಅಧ್ಯಾಯದಲ್ಲೇ ಓದುವಂತೆ, ದೇವರು ಪ್ರತಿದಿನ ಮಾತನಾಡಿದನು ಮತ್ತು ಇದರ ಫಲಿತಾಂಶವಾಗಿ ಭೂಮಿಯು ದಿನದಿಂದ ದಿನಕ್ಕೆ ಸ್ವಲ್ಪ ಸ್ವಲ್ಪವಾಗಿ ಬದಲಾಗುತ್ತಾ ಬಂತು. ನಾವು ಈ ಹೊಸ ವರ್ಷದಲ್ಲಿ ಕ್ರಿಸ್ತನ ಸಾರೂಪ್ಯಕ್ಕೆ ಬದಲಾಗಬೇಕಾದರೆ ಒಂದು ಮುಖ್ಯವಾದ ಕೆಲಸವನ್ನು ಮಾಡಬೇಕು - ಅದು ದೇವರ ವಾಕ್ಯವನ್ನು ಅನುದಿನ ಆಲಿಸುವದು ಮತ್ತು ಆತನ ಮಾತಿಗೆ ವಿಧೇಯರಾಗುವುದು.

ನಾವು ಸ್ವಂತ ಚಿತ್ತವನ್ನು ನಿರಾಕರಿಸಿ ದಿನದಿಂದ ದಿನಕ್ಕೆ ದೇವರ ಚಿತ್ತಕ್ಕೆ ಸತತವಾಗಿ ವಿಧೇಯರಾದಾಗ ನಮ್ಮಲ್ಲಿ ನಿಜವಾದ ಆತ್ಮಿಕತೆ ವೃದ್ದಿಗೊಳ್ಳುತ್ತದೆ. ಯೇಸುವು ತನ್ನ ತಂದೆಯ ಚಿತ್ತಕ್ಕೆ ಪ್ರತಿದಿನ ಸತತವಾಗಿ ವಿಧೇಯನಾಗಿ ಇದ್ದುದರಿಂದಲೇ ಆತನು ತಂದೆಯು ಮೆಚ್ಚುವಂತವನಾದನು. ಈ ಹೊಸ ವರ್ಷದಲ್ಲಿ ನಾವು ಪ್ರತಿದಿನ ಇದೇ ಮಾರ್ಗವನ್ನು ಅನುಸರಿಸಿದರೆ, ನಾವು ಕೂಡ ದೇವರನ್ನು ಮೆಚ್ಚಿಸುವವರಾಗಬಹುದು.

ಯೇಸು ತನ್ನ ಜೀವಿತದ ಮೊದಲ ಮೂವತ್ತು ವರ್ಷಗಳ ಅವಧಿಯಲ್ಲಿ ಹೇಗೆ ಜೀವಿಸಿದನು ಎಂಬುದರ ಬಗ್ಗೆ ಎರಡು ಸಂಗತಿಗಳು ನಮೂದಿಸಲ್ಪಟ್ಟಿವೆ: "ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೇ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ" (ಇಬ್ರಿಯ. 4:15) ಮತ್ತು "ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ" (ರೋಮ. 15:3). ಯೇಸುವು ಎಲ್ಲಾ ವಿಷಯಗಳಲ್ಲಿ ಶೋಧನೆಯನ್ನು ನಂಬಿಗಸ್ಥನಾಗಿ ಎದುರಿಸಿದನು ಮತ್ತು ಯಾವುದೇ ಸಂದರ್ಭದಲ್ಲಿ ತನ್ನ ಸ್ವಂತ ಇಷ್ಟದಂತೆ ನಡೆಯಲಿಲ್ಲ. ಈ ಹೊಸ ವರ್ಷದಲ್ಲಿ ಯೇಸುವಿನಂತೆ ನಡೆಯಲು, ಪ್ರಾಥಮಿಕವಾಗಿ ಈ ಎರಡು ಕ್ಷೇತ್ರಗಳಲ್ಲಿ ನಾವು ಯೇಸುವನ್ನು ಹಿಂಬಾಲಿಸಬೇಕು.

ನಮ್ಮ ದೇಹದ ಅಂಗಾಗಗಳಲ್ಲಿ ನಾವು ಪ್ರತಿದಿನ ಬಹಳವಾಗಿ ಉಪಯೋಗಿಸುವಂತದ್ದು ನಾಲಿಗೆಯಾಗಿದೆ. ಯೇಸು ತನ್ನ ನಾಲಿಗೆಯನ್ನು ಇತರರನ್ನು ಪ್ರೋತ್ಸಾಹಿಸಲು ಉಪಯೋಗವಾಗುವಂತೆ, ದೇವರಿಗೆ ಅಧೀನವಾದ ಜೀವಂತ ಸಾಧನವನ್ನಾಗಿ ಮಾಡಿದನು. ಆತನ ಸಮಾಧಾನದ ಮಾತುಗಳು ಚಿಂತೆಗೊಂಡವರ ಭಾರವಾದ ಆತ್ಮಗಳನ್ನು ಬಲಪಡಿಸುತ್ತಿದ್ದವು. ಯೆಶಾಯ 50:4 ರಲ್ಲಿ ನಮಗೆ ತಿಳಿಸುವಂತೆ, ಯೇಸುವು ಪ್ರತಿದಿನ ತನ್ನ ತಂದೆಯ ಮಾತಿಗೆ ಕಿವಿಗೊಡುವದರ ಮೂಲಕ, ಆತನ ಬಳಿಗೆ ಬಳಲಿ ಬರುತ್ತಿದ್ದ ಪ್ರತಿಯೊಬ್ಬರಿಗೆ ನಿರ್ದಿಷ್ಟ ಮಾತನ್ನು ದೇವರಿಂದ ಪಡೆಯುತ್ತಿದ್ದನು. ನಾವು ಸಹ ಪ್ರತಿದಿನ ದೇವರಿಗೆ ಕಿವಿಗೊಡುವ ಹವ್ಯಾಸವನ್ನು ಬೆಳೆಸಿಕೊಂಡರೆ, ಈ ಹೊಸ ವರ್ಷದಲ್ಲಿ ನಮ್ಮ ಸುತ್ತುಮುತ್ತಲಿನ ಚಿಂತಿತ ಆತ್ಮಗಳಿಗೆ ಇಂತಹ ಆಶೀರ್ವದಿತ ಸೇವೆಯನ್ನು ಮಾಡಲು ಸಾಧ್ಯವಿದೆ. ನಾವು ಉಪಯೋಗಕ್ಕೆ ಬಾರದ ಎಲ್ಲಾ ಮಾತುಗಳನ್ನು ತಿರಸ್ಕರಿಸಿ, ನಮ್ಮ ಪ್ರತಿದಿನದ ಸಂಭಾಷಣೆಯಲ್ಲಿ ಪ್ರೀತಿಯಿಂದ ತುಂಬಿದ ಮಾತುಗಳನ್ನು ಮಾತ್ರ ಉಳಿಸಿಕೊಂಡರೆ, ದೇವರು ಯೆರೆಮೀಯನಿಗೆ ಮಾಡಿದ ಹಾಗೆ, ನಮಗೆ, ತನ್ನ ವಚನವನ್ನು ನೀಡಿ ತನ್ನ ಬಾಯನ್ನಾಗಿ(ಪ್ರತಿನಿಧಿ) ಮಾಡುತ್ತಾನೆ (ಯೆರೆಮೀಯ 15:19).

ದೇವರ ಆರಾಧಕರಾಗಿರಿ
ಯೇಸುವು, "ಸೈತಾನನೇ, ನೀನು ತೊಲಗಿ ಹೋಗು, ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬುದಾಗಿ ಬರೆದಿದೆ” ಎಂದು ಹೇಳಿದನು (ಮತ್ತಾಯ 4:10) . ಇಲ್ಲಿ ಗಮನಿಸಿರಿ, ಸೇವೆಗಿಂತ ಮೊದಲು ಆರಾಧನೆ ಬರುತ್ತದೆ. ಯೇಸುವು ಹೇಳಿದ ಇನ್ನೊಂದು ಮಾತು, "ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ" (ಯೋಹಾನ 4:23) .

ದೇವರನ್ನು ಆರಾಧಿಸುವಂತದ್ದು ಭಾನುವಾರ ಬೆಳಗ್ಗೆ ಆತನಿಗೆ ಹಾಡುವಂತಹ ಹಾಡಿನಿಂದ ಅಲ್ಲ, ಆದರೆ "ಇಹಲೋಕದಲ್ಲಿ ನಿನ್ನನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ," ಎಂಬ ಮನೋಭಾವವನ್ನು ಹೊಂದುವ ಮೂಲಕವಾಗಿದೆ (ಕೀರ್ತನೆಗಳು 73:25) . ನೀವು ಈ ಹೊಸ ವರ್ಷದಲ್ಲಿ ಭೂಲೋಕದ ಸಂಗತಿಗಳಲ್ಲಿ ಆಸಕ್ತಿ ಇಡುವದಿಲ್ಲ, ಆದರೆ ಪವಿತ್ರಾತ್ಮನಿಂದ ತುಂಬಿಸಲ್ಪಟ್ಟು ಪ್ರತಿದಿನ ಆತನೊಬ್ಬನಿಗಾಗಿಯೇ ಜೀವಿಸುತ್ತೀರಿ, ಎಂಬುದಾಗಿ ನೀವು ಹೃದಯದಿಂದ ಕರ್ತನಿಗೆ ಹೇಳಬೇಕು. ನೀವು ಯಥಾರ್ಥವಾಗಿ ಹೀಗೆ ಹೇಳಿದರೆ, ಕರ್ತನು ನಿಮ್ಮೊಂದಿಗೆ ಸಂಧಿಸುತ್ತಾನೆ ಮತ್ತು ಮುಂದಿನ ವರ್ಷವು ನಿಮ್ಮ ಹಿಂದಿನ ಎಲ್ಲಾ ವರ್ಷಗಳಿಗಿಂತ ಉತ್ತಮ ವರ್ಷವಾಗುತ್ತದೆ. ದೇವರು ನಿಮ್ಮ ಹತ್ತಿರವಿದ್ದು, ನಿಮ್ಮನ್ನು ಕ್ರಿಸ್ತನ ಸಾರೂಪ್ಯಕ್ಕೆ ಇನ್ನೂ ಹೆಚ್ಚು ಹೆಚ್ಚಾಗಿ ಬದಲಾಯಿಸುತ್ತಾ ಹೋಗುತ್ತಾನೆ ಮತ್ತು ನಿಮ್ಮ ಮೂಲಕ ಇತರರನ್ನು ಆಶೀರ್ವದಿಸುತ್ತಾನೆ.

ಈ ಲೋಕದ ಆದಿಯಿಂದ ಜಗತ್ತಿನಲ್ಲಿ ಜೀವಿಸಿದ ಅತ್ಯಂತ ಹರ್ಷಭರಿತ ವ್ಯಕ್ತಿಯು ಯೇಸುವಾಗಿದ್ದನು. ಆತನ ಸಂತೋಷವು ತನ್ನ ತಂದೆಯ ಚಿತ್ತವನ್ನು ಪಾಲಿಸುವ ಮೂಲಕ ಬಂತು ಮತ್ತು ಜೀವನದಲ್ಲಿ ಸುಖಸೌಕರ್ಯದ ಮಾರ್ಗದಲ್ಲಿ ನಡೆಯುವ ಮೂಲಕವಲ್ಲ. ತಂದೆಯು ತನ್ನನ್ನು ಸಂಪೂರ್ಣವಾಗಿ ಪ್ರೀತಿಸುವನೆಂದು ಆತನು ಅರಿತಿದ್ದನು. ಹಾಗಾಗಿ ಆತನು ತಂದೆಯು ಅನುಮತಿಸಿದ ಪ್ರತಿಯೊಂದು ಸನ್ನಿವೇಶಕ್ಕೆ ಸಂತೋಷವಾಗಿ ಅಧೀನನಾದನು. ಅದು ಆತನ ಜೀವನದ ರಹಸ್ಯವಾಗಿತ್ತು. ’ನಂಬಿಕೆ’ ಎಂಬ ಪದದ ಅರ್ಥ, ದೇವರ ಪ್ರೀತಿ ಪರಿಪೂರ್ಣವಾದದ್ದು ಮತ್ತು ಆತನ ಎಲ್ಲಾ ಆಜ್ಞೆಗಳೂ ನಮ್ಮ ಒಳಿತಿಗಾಗಿ ಇವೆ, ಎಂಬ ಭರವಸೆಯನ್ನು ಹೊಂದುವದು ಆಗಿದೆ.

ಕೀರ್ತನೆ. 16:8ರಲ್ಲಿ ಹೀಗೆ ಬರೆಯಲಾಗಿದೆ - "ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ." ಯೇಸುವಿನ ಜೀವನ ಹೀಗೆಯೇ ಇತ್ತು (ಅ. ಕೃ. 2:25) . ಆತನು ಎಂದಿಗೂ ಕದಲಲಿಲ್ಲ, ಏಕೆಂದರೆ ಆತನು ತನ್ನ ತಂದೆಯ ಸಮ್ಮುಖದಲ್ಲಿಯೇ ಯಾವಾಗಲೂ ಜೀವಿಸಿದನು. ಹಾಗಾಗಿ ಆತನು ಯಾವಾಗಲೂ ಪರಿಪೂರ್ಣ ಸಂತೋಷದಲ್ಲಿದ್ದನು (ಕೀರ್ತನೆ. 16:11). ಅದೇ ರೀತಿ ನಾವು ಕೂಡ ಜೀವಿಸಬೇಕೆಂದು ದೇವರು ಬಯಸುತ್ತಾರೆ.

ತಂದೆಗೆ ಕೊಡಬೇಕಾದ ಕನಿಷ್ಟ ಭಾಗ ಎಷ್ಟೆಂದು ಯೇಸುವು ಯೋಚಿಸಲಿಲ್ಲ, ಬದಲಿಗೆ ತನ್ನ ತಂದೆಗೆ ಅತೀ ಹೆಚ್ಚಾಗಿ ಎಷ್ಟನ್ನು ಕೊಡಬಹುದು ಎನ್ನುವದೊಂದೇ ಆತನ ಗಮನವಾಗಿತ್ತು. ನಮ್ಮ ಮನೋಭಾವವೂ ಹೀಗೆಯೇ ಇರಬೇಕು: "ಈ ಲೋಕದಲ್ಲಿ ನನಗಿರುವ ಏಕೈಕ ಜೀವಿತದಲ್ಲಿ, ಈ ಹೊಸ ವರ್ಷದಲ್ಲಿ ಕರ್ತನು ನನ್ನಿಂದ ಅತೀ ಹೆಚ್ಚಾಗಿ ಏನನ್ನು ಪಡೆದುಕೊಳ್ಳಬಹುದು?"

ಹಾಗಾಗಿ ಈ ಹೊಸ ವರ್ಷದಲ್ಲಿ ದೇವರಿಗೆ ಕಿವಿಗೊಡುವವರಾಗಿರಿ ಮತ್ತು ದೇವರ ಆರಾಧಕರಾಗಿರಿ.

ಆಗ ನೀವು ಖಂಡಿತವಾಗಿ ಆಶೀರ್ವದಿತ ಹೊಸ ವರ್ಷವನ್ನು ಹೊಂದುವಿರಿ!! ಆಮೆನ್.