ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಯೆಶಾಯ 33:14,15 ರಲ್ಲಿ ಹೀಗೆ ಬರೆದಿದೆ. "ಚಿಯೋನಿನ ಪಾಪಿಗಳು ಹೆದರುತ್ತಾರೆ, ಆ ಭ್ರಷ್ಟರು ನಡುಕಕ್ಕೆ ಒಳಗಾಗಿ - ನಮ್ಮಲ್ಲಿ ಯಾರು ನುಂಗುವ ಕಿಚ್ಚಿನ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿ ಯಾರು ಅಂದುಕೊಳ್ಳುತ್ತಾರೆ? (ಕೇಳಿರಿ), ಸನ್ಮಾರ್ಗದಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚ ಮುಟ್ಟದಂತೆ ಕೈ ಒದರಿ ಕೊಲೆಯ ಮಾತಿಗೆ ಕಿವಿಗೊಡದೆ ಕೆಟ್ಟದ್ದನ್ನು ನೋಡದಂತೆ ಕಣ್ಣು ಮುಚ್ಚಿಕೊಳ್ಳುವವನೇ ಉನ್ನತ ಸನ್ನಿಧಾನದಲ್ಲಿ ವಾಸಿಸುವನು”.

ಈ ಉರಿಯುವ ಬೆಂಕಿಯೊಡನೆ ವಾಸಿಸುವುದಕ್ಕೆ ಮೊದಲ ಅರ್ಹತೆಯು ಇಲ್ಲಿ ಹೇಳಲ್ಪಟ್ಟಿದೆ - "ಸನ್ಮಾರ್ಗದಲ್ಲಿ ನಡೆದು ಯಥಾರ್ಥವಾಗಿ ನುಡಿಯಬೇಕು”(ಯೆಶಾಯ 33:15). ಯಾರು ತಮಗಿರುವಂತಹ ಬೆಳಕಿನ ಪ್ರಕಾರ ನಡೆದು, ಅವರ ಖಾಸಗಿ ಜೀವಿತದಲ್ಲಿ ಪ್ರಾಮಾಣಿಕರಾಗಿರುತ್ತಾರೋ, ಅವರಿಗೆ ಈ ವಾಕ್ಯವು ಹೇಳಲ್ಪಟ್ಟಿದೆ. ಅವರು ಪರಿಪೂರ್ಣರಲ್ಲದೇ ಇರಬಹುದು, ಆದರೆ ಅವರು ಯಥಾರ್ಥರು (ಪ್ರಾಮಾಣಿಕರು). ಅವರು ಕಪಟಿಗಳಲ್ಲ. ಸಭೆಯಲ್ಲಿ ನಾವು ಎಲ್ಲದಕ್ಕಿಂತ ಹೆಚ್ಚಾಗಿ ಒಂದು ಸಂಗತಿಗೆ ಭಯಪಡಬೇಕು. ನಮ್ಮಲ್ಲಿ ನಿಜವಲ್ಲದ ನಮ್ಮ ಆತ್ಮಿಕತೆಯ ಬಗ್ಗೆ ಜನರಿಗೆ ಬಿಂಬಿಸುವುದು. ನೀವು ಪ್ರಾರ್ಥನೆಯನ್ನೇ ಮಾಡದೇ, ಮತ್ತೊಬ್ಬರೆದುರಿಗೆ ನೀವು ಪ್ರಾರ್ಥನೆಯನ್ನು ಮಾಡುತ್ತೇನೆ ಎಂದು ನೀವು ಬಿಂಬಿಸಿಕೊಳ್ಳುತ್ತೀರಾ? ನೀವು ಉಪವಾಸವನ್ನೇ ಮಾಡದೇ, ತುಂಬಾ ಉಪವಾಸ ಮಾಡುವುದಾಗಿ ಮತ್ತೊಬ್ಬರೆದುರಿಗೆ ಬಿಂಬಿಸಿಕೊಳ್ಳುತ್ತೀರಾ? ನೀವು ಹೃದಯಪೂರ್ವಕರಲ್ಲದೇ, ಮತ್ತೊಬ್ಬರು ನಿಮ್ಮನ್ನು ಹೃದಯಪೂರ್ವಕವಾದಂತವನು ಎಂದು ಪರಿಗಣಿಸಬೇಕಾ? ಹಾಗಾದರೆ, ನೀವು ಬಿದ್ದುಹೋಗುವ (ದೇವರಿಂದ ದೂರ ಹೋಗುವ) ಅಪಾಯದಲ್ಲಿದ್ದೀರಿ? ಇದರ ಕಾರಣ ನೀವು ಅಪೂರ್ಣರಾಗಿರುವುದರಿಂದಲ್ಲ. ಬದಲಾಗಿ, ನೀವು ಅಪ್ರಾಮಾಣಿಕರಾಗಿರುವುದರಿಂದ. ನಮ್ಮ ಆಂತರಿಕ (ಒಳಗಿನ ಭಾಗದಲ್ಲಿರುವ) ಸತ್ಯವನ್ನು ದೇವರು ಬಯಸುತ್ತಾರೆ. ಚಿಯೋನಿನಲ್ಲಿ ಕಪಟಿಗಳು ನಡುಗುತ್ತಾರೆ. ಏಕೆಂದರೆ ಅವರು ತಮ್ಮ ಜೀವನ ಪ್ರಕಟವಾಗಬಹುದೆಂಬ (ತಮ್ಮ ಕಪಟತನ ರಟ್ಟಾಗಬಹುದೆಂಬ) ಭಯದಲ್ಲಿದ್ದಾರೆ.

ಈ ಉರಿಯುವ ಬೆಂಕಿಯೊಡನೆ ಜೀವಿಸುವುದಕ್ಕೆ ಬೇಕಾದ ಎರಡನೇ ಅರ್ಹತೆಯೇನೆಂದರೆ, "ದೋಚಿಕೊಂಡ ಲಾಭವನ್ನು ಬೇಡವೆನ್ನುವುದು” (ಯೆಶಾಯ 33:15). ಇನ್ನೊಂದು ಮಾತಿನಲ್ಲಿ, ಹಣದ ವಿಷಯದಲ್ಲಿ ನೀತಿವುಳ್ಳವರಾಗಿಯೂ ಮತ್ತು ನಂಬಿಗಸ್ಥರಾಗಿರುವುದು. ಸೈತಾನನು ದೇವರಿಗೆ ಪರ್ಯಾಯ ಯಜಮಾನನೆಂದು ನಾವು ಯೋಚಿಸಬಹುದು. ಆದರೆ ಯೇಸುವು ಲೂಕ 16:13ರಲ್ಲಿ ಉಲ್ಲೇಖಿಸಿದ ಪ್ರಕಾರ, ಧನ (ಹಣ ಮತ್ತು ಭೌತಿಕ ಐಶ್ವರ್ಯಗಳು) ದೇವರಿಗೆ ಪರ್ಯಾಯ ಯಜಮಾನನಾಗಿದ್ದಾನೆ. ಒಂದೇ ಸಮಯದಲ್ಲಿ (ಏಕಕಾಲದಲ್ಲಿ) ದೇವರನ್ನು ಮತ್ತು ಸೈತಾನನನ್ನು ಪ್ರೀತಿಸುತ್ತೇವೆಂದು ಯಾವುದೇ ವಿಶ್ವಾಸಿಯು ಕಲ್ಪಿಸಿಕೊಳ್ಳುವುದಿಲ್ಲ. ಆದರೆ ದೇವರನ್ನು ಮತ್ತು ಹಣವನ್ನು ಏಕಕಾಲಕ್ಕೆ ಪ್ರೀತಿಸುವವರು ಅನೇಕರಿದ್ದಾರೆ. ಯಾವ ವಿಶ್ವಾಸಿಯೂ ಸೈತಾನನಿಗೆ ಅಡ್ಡಬಿದ್ದು, ಆರಾಧಿಸುವುದಿಲ್ಲ. ಆದರೆ ಲಕ್ಷಾಂತರ ವಿಶ್ವಾಸಿಗಳು ಇಂದು ಸಂಪತ್ತನ ಜೊತೆ ದೇವರನ್ನೂ ಸಹ ಆರಾಧಿಸುತ್ತೇವೆಂದು ಕಲ್ಪಿಸಿಕೊಳ್ಳುತ್ತಾರೆ. ಅವರು ಹಣದಲ್ಲಿ ನಂಬಿಗಸ್ಥರಾಗಿರದಿರುವವರು, ದೇವರನ್ನು ಆರಾಧಿಸುವುದಕ್ಕಾಗುವುದಿಲ್ಲ. ಹಣವು ಒಬ್ಬನನ್ನು ನಿಜವಾದ ಮತ್ತು ಜೀವಿಸುವ ದೇವರಿಂದ ದೂರ ಸೆಳೆಯುತ್ತದೆ ಎಂದು ಅನೇಕರು ಗ್ರಹಿಸಿಕೊಳ್ಳುವುದಿಲ್ಲ.

ಉರಿಯುವ ಬೆಂಕಿಯೊಂದಿಗೆ ಜೀವಿಸುವುದಕ್ಕೆ ಬೇಕಾದ ಮೂರನೇ ಅರ್ಹತೆಯೇನೆಂದರೆ, "ಕೊಲೆಯ ಮಾತಿಗೆ ಕಿವಿಗೊಡದಿರುವುದು” (ಯೆಶಾಯ 33:15). ಇದು ಮತ್ತೊಬ್ಬರ ಬಗ್ಗೆ (ಸುದ್ದಿ) ಮಾತಾಡುವುದಕ್ಕಿಂತಲೂ ಮಿಗಿಲಾದುದು. ಅಂದರೆ ಇನ್ನೊಬ್ಬರ ಬಗ್ಗೆ ಇತರರು ಮಾತಾಡುವುದನ್ನೂ ಕೇಳದೆ ಇರುವುದು. ದೇವರಿಗೆ ಭಯಪಡುವ ಮನುಷ್ಯನು, ಕೇವಲ ಸಹೋದರರನ್ನು ದೂರುವವನಿಗೆ ಕಿವಿಗೊಡದಿರುವುದು ಮಾತ್ರವಲ್ಲದೆ (ಪ್ರಕ. 12:10), ಆತನ ಪ್ರತಿನಿಧಿಗಳಿಗೆ ಕೂಡ ಕಿವಿಗೊಡದಿರುತ್ತಾನೆ.

ಉರಿಯುವ ಬೆಂಕಿಯೊಂದಿಗೆ ಜೀವಿಸಲು ಬೇಕಾದ ನಾಲ್ಕನೇ ಅರ್ಹತೆಯು ಈ ವಾಕ್ಯದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ - ಕೆಟ್ಟದ್ದನ್ನು ನೋಡದಂತೆ ನಮ್ಮ ಕಣ್ಣನ್ನು ಮುಚ್ಚಿಕೊಳ್ಳುವುದು. ಕೇಳುವುದು ಮತ್ತು ನೋಡುವುದು, ಈ ಎರಡು ಪ್ರಮುಖ ಜ್ಞಾನೇಂದ್ರಿಯಗಳ ಮುಖಾಂತರವೇ ಒಳ್ಳೆಯದು ಮತ್ತು ಕೆಟ್ಟದ್ದು ನಮ್ಮ ಮನಸ್ಸನ್ನು ಪ್ರವೇಶಿಸುತ್ತವೆ. ನಮ್ಮೊಳಗೆ ಏನು ಪ್ರವೇಶಿಸಬಹುದು ಎಂಬುದನ್ನು ನಾವೇ ತೀರ್ಮಾನಿಸಬೇಕು. ಉರಿಯುವ ಬೆಂಕಿಯೊಡನೆ ಜೀವಿಸುವಂತವನು, ತನ್ನ ಆತ್ಮವನ್ನು ಮಲಿನ ಮಾಡುವಂತದ್ದರ ಕಡೆ ನೋಡದೆ ಇರುತ್ತಾನೆ.