ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಕ್ರಿಸ್ತನಲ್ಲಿ ಭಕ್ತಿ
WFTW Body: 

ಪವಿತ್ರಾತ್ಮ-ಭರಿತವಾದ ಬದುಕು ಎನ್ನುವದು, ಪರಿಶುದ್ಧತೆಯಲ್ಲಿ ಗುಣವೃದ್ಧಿ ಹೊಂದುತ್ತಿರುವ ಒಂದು ಜೀವಿತ. ಒಬ್ಬ ಮನುಷ್ಯನ ಬಾಳಿನಲ್ಲಿ ಪವಿತ್ರತ್ವವು ಹೆಚ್ಚುತ್ತಿದ್ದಂತೆಯೇ, ಆತನು ದೇವರ ಮಿತಿಯಿಲ್ಲದ ಪವಿತ್ರತೆಯನ್ನು ಹೆಚ್ಚು ಹೆಚ್ಚಾಗಿ ಮನಗಾಣುತ್ತಾನೆ. ತಾನು ಯೋಚಿಸುವ ವಿಧಾನದಲ್ಲಿ ಒಬ್ಬನು ಕಂಡುಕೊಂಡಿರುವ ಅಂತಹ ಬದಲಾವಣೆಯೇ ಆತನ ಪವಿತ್ರತ್ವವನ್ನು ಅಳೆಯುವ ಒಂದು ನಿಜವಾದ ವಿಧಾನವಾಗಿದೆ.

ತಾನು ಮಾನಸಾಂತರ ಹೊಂದಿದ 25 ವರ್ಷಗಳ ನಂತರ ಪೌಲನು, "ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ," ಎನ್ನುತ್ತಾನೆ (1 ಕೊರಿ. 15:9). ಇನ್ನೂ 5 ವರ್ಷಗಳ ತರುವಾಯ ಅವನು, "ದೇವಜನರೊಳಗೆ ಅತ್ಯಲ್ಪನಾದ ನಾನು," ಎಂದೆನ್ನುವನು (ಎಫೆ. 3:8). ಇನ್ನೊಂದು ವರ್ಷದ ನಂತರ, "ಪಾಪಿಗಳಲ್ಲಿ ನಾನೇ ಮುಖ್ಯನಾಗಿದ್ದೇನೆ (ಆಗಿದ್ದೆನು ಎಂದಲ್ಲ, ಆಗಿದ್ದೇನೆ ಎಂದು)," ಎಂದು ಅವನು ನುಡಿಯುತ್ತಾನೆ (1 ತಿಮೊ. 1:15).

ನೀವು ಆ ಹೇಳಿಕೆಗಳಲ್ಲಿ ಅವನಲ್ಲಿ ಬೆಳೆಯುತ್ತಿರುವ ಪವಿತ್ರತೆಯನ್ನು ಕಾಣಬಹುದಲ್ಲವೇ?

ದೇವರೊಡನೆ ತಾನು ಹೆಚ್ಚು ನಿಕಟವಾಗಿ ನಡೆಯುತ್ತಾ ಹೋದಂತೆ, ಪೌಲನಿಗೆ ತನ್ನ ಮಾಂಸಭಾವದಲ್ಲಿದ್ದ ಅಪ್ರಾಮಾಣಿಕತೆ ಮತ್ತು ದುಷ್ಟತನಗಳ ಅರಿವು ಹೆಚ್ಚಿತು. ತನ್ನಲ್ಲಿ, ಅಂದರೆ ತನ್ನ ಶರೀರಾಧೀನ ಸ್ವಭಾವದಲ್ಲಿ ಒಳ್ಳೇದೇನೂ ಇಲ್ಲವೆಂಬ ತಿಳಿವಳಿಕೆ ಅವನಿಗೆ ಉಂಟಾಯಿತು (ರೋಮಾ. 7:18).ಯೆಹೆಜ್ಕೇಲನು 36:26,27,31 ವಚನಗಳಲ್ಲಿ ದೇವರು ಹೀಗೆ ನುಡಿಯುತ್ತಾರೆ, "ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿದಾಗ .... ನಿಮ್ಮ ಅಸಹ್ಯಕಾರ್ಯಗಳ ನಿಮಿತ್ತ ನಿಮ್ಮನ್ನು ನೀವೇ ಹೇಸಿಕೊಳ್ಳುವಿರಿ." ನಮಗೆ ದೇವರಿಂದ ದೊರೆತಿರುವ ಹೊಸ ಹೃದಯದ ಒಂದು ರುಜುವಾತನ್ನು ಅಲ್ಲಿ, ನಮ್ಮನ್ನು ನಾವೇ ಹೇಸಿಕೊಳ್ಳುವುದರಲ್ಲಿ ಕಾಣುವೆವು. ತನ್ನ ಮಾಂಸಭಾವವನ್ನು ದ್ವೇಷಿಸಿ ಅಸಹ್ಯಗೊಳ್ಳುವವನು ಮಾತ್ರವೇ ಫಿಲಿಪ್ಪಿಯವರಿಗೆ 2:3 ರ ಆಜ್ಞೆಯಾದ "ಮತ್ತೊಬ್ಬರನ್ನು ತನಗಿಂತಲೂ ಹೆಚ್ಚು ಪ್ರಧಾನರೆಂದು ಎಣಿಸಲಿ," ಎಂಬುದನ್ನು ನೆರವೇರಿಸಬಲ್ಲನು. ತನ್ನೊಳಗಿರುವ ಕೆಟ್ಟತನವನ್ನು ನೋಡಿರುವ ಅವನು, ಇನ್ನು ಮೇಲೆ ಇತರ ಯಾರನ್ನೇ ಆಗಲೀ ಕೀಳಾಗಿ ಕಾಣನು.

ತಾನು ಮಾಡಿದ ತಪ್ಪಿಗಾಗಿ ತಕ್ಷಣವೇ ತಪ್ಪೊಪ್ಪಿಕೊಳ್ಳಲು ಸಹ ಅವನು ಸಿದ್ಧನಾಗುವನು ಮತ್ತು ಪಾಪವನ್ನು ಪಾಪವೆಂದೇ ಹೆಸರಿಸಲು ಅವನಿಗೆ ಸಂಕೋಚವಿರುವುದಿಲ್ಲ. ಆತ್ಮಭರಿತ ವ್ಯಕ್ತಿಯು ಇತರರಿಗೆ ತಾನು ಪವಿತ್ರತೆಯಲ್ಲಿ ಬೆಳೆಯುತ್ತಿರುವ ತೋರಿಕೆಯನ್ನು ಮಾತ್ರ ನೀಡುವುದಲ್ಲಿ ಆಸಕ್ತನಾಗಿರದೆ, ಅದನ್ನು ಸಾಂಗತವಾಗಿ ಮಾಡಬಯಸುವನು. ತನ್ನನ್ನು ಪವಿತ್ರಗೊಳಿಸಿದ ಯಾವುವೇ ಅನುಭವಗಳ ಬಗ್ಗೆ ಸಾಕ್ಷಿ ನೀಡುವುದಾಗಲೀ, ಅಥವಾ ತನ್ನ ಪವಿತ್ರತ್ವದ ತತ್ವಗಳನ್ನು ಇತರರಿಗೆ ಬೋಧಿಸುವುದಾಗಲೀ ಅವನಿಗೆ ಇಷ್ಟವಿಲ್ಲದ ಸಂಗತಿಗಳು. ಅವನ ಜೀವಿತದ ಪರಿಶುದ್ಧತೆಯು, ಇತರರು ತಾವಾಗಿಯೇ ಬಂದು, ’ನಿನ್ನ ಪವಿತ್ರ ಬಾಳಿನ ಸತ್ಯಗಳನ್ನು ನಮಗೂ ತೋರಿಸು,’ ಎಂದು ಕೇಳುವಂತೆ ಮಾಡುವದು. ಅವನಲ್ಲಿರುವದು, J.B.Phillips ರವರ ಭಾಷಾಂತದಲ್ಲಿ ಹೇಳಿರುವ, "ಅಪ್ಪಟವಾದ ಪವಿತ್ರತೆ" (ಎಫೆ. 4:24).

ನಮ್ಮ ಪರಿಶುದ್ಧತೆಯ ಸಿದ್ಧಾಂತವು ಯಾವುದಾಗಿದ್ದರೂ ಸರಿ. ನಿಜವಾದ ಪರಿಶುದ್ಧತೆ ಅಥವಾ ಪವಿತ್ರತ್ವವು ಅದಕ್ಕಾಗಿ ಯಾವನು ಪೂರ್ಣ ಹೃದಯದಿಂದ ಹಾತೊರೆಯುವನೋ ಅವನಿಗೆ ದೊರಕುವದೇ ಹೊರತು, ಬರೀ ಸರಿಯಾದ ಸಿದ್ದಾಂತಗಳನ್ನು ತಲೆಯೊಳಗೆ ಇರಿಸಿಕೊಂಡಾತನಿಗೆ ದೊರಕದು.

ಹಿಂದಿನ ಶತಮಾನಗಳಲ್ಲಿ ಇದ್ದ ದೇವಜನರಲ್ಲಿ ಕೆಲವರು (ಜಾನ್ ಫ್ಲೆಚರ್‌ರವರಂತೆ) ತಮ್ಮ ಪವಿತ್ರತೆಯ ಸಿದ್ಧಾಂತಗಳ ಪರಿಣಾಮವಾಗಿ ತಾವು ಪರಿಪೂರ್ಣ ನೀತಿವಂತರಾಗಿರುವುದಾಗಿ ನಂಬಿದ್ದರು ಮತ್ತು ತಾವು ಅರಿಯದೇ ಗೈದ ಪಾಪಗಳನ್ನು ಅವರು ’ತಪ್ಪುಗಳು’ ಎಂದು ಕರೆದರು. ಹಾಗೆಯೇ ಇನ್ನು ಕೆಲವು ದೇವಜನರು (ಡೇವಿಡ್ ಬ್ರೈನರ್ಡ್‍ರವರಂತೆ) ತಾವು ಅರಿವಿಲ್ಲದೇ ಮಾಡಿದ ಪಾಪಗಳನ್ನು ’ಪಾಪಗಳೆಂದೇ’ ಕರೆದರು, ಹಾಗೂ ಜೀವನದಾದ್ಯಂತ ತಮ್ಮ ಪಾಪಗಳು ತಮ್ಮನ್ನು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಿಕೊಳ್ಳಲು ಆಗದಂತೆ ಮಾಡಿರುವುದಾಗಿ ದುಃಖಿಸಿದರು. ಈ ಎರಡು ಗುಂಪುಗಳು ತಮ್ಮ ಸ್ವಂತಜೀವಿತದ ಯೋಗ್ಯತೆಯನ್ನು ನಿರ್ಧರಿಸುವದರಲ್ಲಿ ತೀವ್ರವಾದ ವ್ಯತ್ಯಾಸವಿದ್ದರೂ, ದೇವರ ದೃಷ್ಟಿಯಲ್ಲಿ ಇವೆರಡು ಪಂಗಡಗಳ ಜನರೂ ಒಂದೇ ಸಮನಾದ ಪವಿತ್ರರಾಗಿರಬಹುದು. ಬೇರೆ ಬೇರೆಯಾಗಿದ್ದ ಅವರ ಮನೋಸ್ಥಿತಿಗಳು ಮತ್ತು ನೀತಿವಂತಿಕೆಯ ಬಗ್ಗೆ ಅವರ ತಿಳಿವಳಿಕೆಯಲ್ಲಿದ್ದ ವ್ಯತ್ಯಾಸಗಳು ಅವರು ತಮ್ಮ ಹೃದಯಸ್ಥಿತಿಗಳನ್ನು ವಿಭಿನ್ನವಾಗಿ ತಿಳಿಯುವಂತೆ ಮಾಡಿದವು.

ಗ್ರೀಕ್ ಪದಗಳನ್ನು ಅಭ್ಯಸಿಸಿ ಅಥವಾ ಹೊಸ ಒಡಂಬಡಿಕೆಯ ವಾಕ್ಯಗಳ ವಿಶ್ಲೇಷಣೆಯ ಮೂಲಕ ಪವಿತ್ರತೆಯ ಗುಟ್ಟನ್ನು ಕಂಡುಹಿಡಿಯಲು ಸಾಧವಿಲ್ಲ, ಆದರೆ ಪೂರ್ಣ ಹೃದಯದಿಂದ ಮತ್ತು ಯಥಾರ್ಥತೆಯಿಂದ ದೇವರ ಮೆಚ್ಚುಗೆಯನ್ನು ಹುಡುಕಿದಾಗ ಅದು ದೊರಕುವದು. ದೇವರು ನಮ್ಮ ಹೃದಯವನ್ನು ನೋಡುವರು, ನಮ್ಮ ಚತುರತೆಯನ್ನಲ್ಲ!

ಹಾಗಿದ್ದರೂ, ಯಾವುದೇ ಹೆಚ್ಚುತ್ತಿರುವ ಪರಿಶುದ್ದತೆಯು ಯಾವಾಗಲೂ, ಪೌಲನಿಗೆ ಆದಂತೆ, ದೇವರ ದೃಷ್ಟಿಯಲ್ಲಿ ನಮ್ಮ ಸ್ವಂತ ಪಾಪಗಳ ಬಗ್ಗೆ ಹೆಚ್ಚಿದ ತಿಳಿವಳಿಕೆಯೊಡನೆ ಪ್ರಾಪ್ತವಾಗುವದು.