WFTW Body: 

"ಹೀಗಿರುವಲ್ಲಿ ಆತನು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನೂ ಸೀಮೋನನ ತಮ್ಮನಾದ ಅಂದ್ರೆಯನೂ ಸಮುದ್ರದಲ್ಲಿ ಬಲೆ ಬೀಸುವದನ್ನು ಕಂಡನು. ಅವರು ಬೆಸ್ತರು. ಯೇಸು ಅವರಿಗೆ - ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು"(ಮಾರ್ಕ 1:16,17) ಎಂದನು. ಗಲಿಲಾಯದ ತೀರದಲ್ಲಿ ನೂರಾರು ಬೆಸ್ತರಿದ್ದರು. ಆದರೆ ಯೇಸುವು ಅವರನ್ನೆಲ್ಲ ಕರೆಯಲಿಲ್ಲ. ಆತನು ಕರೆದದ್ದು ನಾಲ್ಕು ಬೆಸ್ತರಾದ -ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರನ್ನು ಮಾತ್ರ. ನಾವೆಲ್ಲರು ಕ್ರಿಸ್ತನಿಗಾಗಿ ಸಾಕ್ಷಿಯಾಗಿರಲು ಕರೆಯಲ್ಪಟ್ಟಿದ್ದೇವೆ. ಆದರೆ ಪೂರ್ಣಕಾಲಿಕ ಸೇವೆಯಲ್ಲಿ ತೊಡಗಬೇಕಾದರೆ ನಾವು ಅದಕ್ಕಾಗಿ ದೇವರಿಂದ ಪ್ರತ್ತೇಕವಾಗಿ ಕರೆಯಲ್ಪಡಬೇಕು. ಸತ್ಯವೇದ ಶಿಕ್ಷಕರಾಗುತ್ತೇವೆ ಅಥವಾ ಸುವಾರ್ತಾ ಪ್ರಚಾರಕರಾಗುತ್ತೇವೆ ಎಂದು ನೀವು ನಿಮ್ಮಿಷ್ಟಕ್ಕೆ ನಿರ್ಧರಿಸಲಾಗುವದಿಲ್ಲ. ದೇವರು ನಿಮ್ಮನ್ನು ಕರೆಯಬೇಕು ಮತ್ತು ನಿಮ್ಮನ್ನು ಸಿದ್ಧಗೊಳಿಸಬೇಕು. ದೇವರು ತನ್ನ ಸಾರ್ವಭೌಮತ್ವದಲ್ಲಿ ಇಂದೂ ತನ್ನ ಸೇವಕರನ್ನು ಕರೆಯುತ್ತಿದ್ದಾನೆ. ಯಾವ ರೀತಿಯಲ್ಲಿ ದೇಹದ ಪ್ರತಿಯೊಂದು ಅಂಗಗಳು ಮುಖ್ಯವೋ, ಅದೇ ರೀತಿಯಲ್ಲಿ ಕರ್ತನ ದೇಹವೆಂಬ ಸಭೆಯಲ್ಲಿ ಪ್ರತಿಯೊಂದು ಸೇವೆಯು ಮುಖ್ಯವಾದದ್ದಾಗಿದೆ. ಮುಖವು ಎಲ್ಲರಿಗೂ ಕಾಣಿಸುತ್ತದೆ ಆದರೆ ದೇಹದ ಒಳಭಾಗದಲ್ಲಿರುವ ಮೂತ್ರಪಿಂಡ(ಕಿಡ್ನಿ) ಮತ್ತು ಪಿತ್ತಜನಕಾಂಗ(ಲಿವರ್) ಇವು ಕಾಣಿಸುವದಿಲ್ಲ. ಕರ್ತನ ದೇಹದಲ್ಲಿಯೂ ಕೂಡ ಕೆಲವು ಸೇವೆಗಳು ಇತರ ಕೆಲವು ಸೇವೆಗಳಿಗಿಂತ ಹೆಚ್ಚಾಗಿ ಕಾಣಲ್ಪಡುತ್ತವೆ.

"ಒಬ್ಬ ಶಿಷ್ಯನು ವಿಧ್ಯಾರ್ಥಿ (ಕಲಿಯುವವನು) ಮತ್ತು ಹಿಂಬಾಲಕ. ತನ್ನ ಜೀವನವಿಡೀ ಅವನು ಯೇಸುವಿನಿಂದ ಕಲಿಯಬೇಕು ಮತ್ತು ಆತನನ್ನು ಹಿಂಬಾಲಿಸಬೇಕು."

ಮತ್ತಾಯ 11:29ರಲ್ಲಿ ಯೇಸು ಹೀಗೆ ಹೇಳಿದನು - "ನನ್ನಿಂದ ಕಲಿತುಕೊಳ್ಳಿರಿ". ಅದರ ಜೊತೆಗೆ "ನನ್ನನ್ನು ಹಿಂಬಾಲಿಸಿ" ಎಂದೂ ಅವನು ಅಂದನು. ಇವೆರಡನ್ನೂ ಕೂಡ ಒಬ್ಬ ಶಿಷ್ಯನು ಅಳವಡಿಸಿಕೊಳ್ಳಬೇಕು. ಶಿಷ್ಯನು ವಿದ್ಯಾರ್ಥಿಯೂ ಆಗಿದ್ದಾನೆ ಮತ್ತು ಹಿಂಬಾಲಕನೂ ಆಗಿದ್ದಾನೆ. ಆತನು ತನ್ನ ಜೀವನವಿಡೀ ಯೇಸುವಿನಿಂದ ಕಲಿಯಬೇಕು ಮತ್ತು ಆತನನ್ನು ಹಿಂಬಾಲಿಸಬೇಕು. ಸೇನೆಯಲ್ಲಿ "ಲೆಫ್ಟ್ ಮತ್ತು ರೈಟ್" ( ಎಡ ಮತ್ತು, ಬಲ) ಎಂದು ಹೇಳುವ ಹಾಗೆ ನಾವೂ ಕೂಡ ಕ್ರಿಸ್ತೇಸುವು ಬರುವ ತನಕ "ಕಲಿ, ಹಿಂಬಾಲಿಸು, ಕಲಿ, ಹಿಂಬಾಲಿಸು", ಎಂದು ಹೇಳುತ್ತಾ ಮುಂದೆ ಸಾಗಬೇಕು. ನೀವು ಕೇವಲ ಕಲಿಯುವದರಲ್ಲಿ ಆಸಕ್ತರಾಗಿದ್ದು ಆತನನ್ನು ಹಿಂಬಾಲಿಸದೇ ಹೋದರೆ, ಇದು ಒಬ್ಬ ಮನುಷ್ಯನು ಲೆಫ್ಟ್, ರೈಟ್ ಆದೇಶಕ್ಕೆ ತನ್ನ ಎಡಗಾಲನಿಂದ ಮಾತ್ರ ಲೆಫ್ಟ್, ಲೆಫ್ಟ್ ಲೆಫ್ಟ್ (ಎಡ, ಎಡ, ಎಡ) ಎಂದು ನಡೆಯಲು ಪ್ರಯತ್ನಿಸಿದಂತಾಗುತ್ತದೆ. ಆದರೆ, ಯೇಸುವಿನ ನಿಜವಾದ ಶಿಷ್ಯನು ಮೊದಲು ಕಲಿಯುತ್ತಾನೆ. ನಂತರ, ಅದನ್ನು ತನ್ನ ಜೀವನದಲ್ಲಿ ಅಳವಡಿಸುತ್ತಾನೆ. ಕಲಿಯುವದನ್ನು ನಿಮ್ಮ ಜೀವನದಲ್ಲಿ ನೀವು ಅಳವಡಿಸಿಕೊಳ್ಳದಿದ್ದರೆ, ನೀವೂ ನಿಮ್ಮ ಹಾಗೆಯೇ ಕೇವಲ ಒಂದೇ ಕಾಲಿನಲ್ಲಿ ನಡೆಯುವಂತಹವರನ್ನೇ ಉತ್ಪಾದಿಸುತ್ತೀರಿ. ಎಂದಿಗೂ ನಾವು ಸಾಕಷ್ಟು ಕಲಿತಿದ್ದೇವೆಂದು ಹೇಳಲಿಕ್ಕಾಗದು. ಏಕೆಂದರೆ ನಮ್ಮ ಜೀವನದ ಅಂತ್ಯಕಾಲದ ತನಕ ನಾವು ಆತನಿಂದ ಕಲಿಯುತ್ತಾ ಇರಬೇಕು.

ಈ ಮೇಲಿನ ವಾಕ್ಯದ ಇನ್ನೊಂದು ಭಾಗದಲ್ಲಿ ದೇವರ ವಾಗ್ದಾನವಿದೆ. "ನೀವು ನನ್ನನ್ನು ಹಿಂಬಾಲಿಸಿದರೆ ನಾನು ನಿಮ್ಮನ್ನು ಮಾಡುತ್ತೇನೆ". "ನಾನು ನಿಮ್ಮನ್ನು ಮಾಡುತ್ತೇನೆ" ಎಂಬ ಮಾತಿಗೆ ಸ್ವಲ್ಪ ಗಮನ ಕೊಡಿ. ಇದು ಒಬ್ಬ ಕುಂಬಾರನು ಮಡಿಕೆ ಮಾಡುವ ಹಾಗಿದೆ. ಕುಂಬಾರನು ಮಡಿಕೆಗಳನ್ನು ಒಂದೇ ಆಕಾರದಲ್ಲಿ ಮಾಡುವದಿಲ್ಲ. ಇದರಂತೆ ದೇವರೂ ಕೂಡ ನಮ್ಮನ್ನು ಬೇರೆ ಬೇರೆ ರೀತಿಯಲ್ಲಿ ಸೃಷ್ಟಿಸಿದ್ದಾನೆ. ಹೀಗಿರುವಾಗ ಇನ್ನೊಬ್ಬ ಸಹೋದರನ ಸೇವೆಯ ರೂಪದ (ಆಕಾರ) ಹಾಗೆ ನಿಮ್ಮ ಸೇವೆಯನ್ನೂ ಮಾಡಲಿಕ್ಕೆ ದೇವರಲ್ಲಿ ಎಂದಿಗೂ ಬೇಡಿಕೊಳ್ಳಬೇಡಿರಿ. ದೇವರು ಇಂಥದ್ದನ್ನು ಎಂದಿಗೂ ಅನುಗ್ರಹಿಸುವದಿಲ್ಲ. ಏಕೆಂದರೆ ಆತನು ಪ್ರತಿಯೊಂದು ಮಡಿಕೆಯನ್ನು ಒಂದೊಂದು ವಿಶಿಷ್ಟವಾದ ಆಕಾರದಲ್ಲಿ ಮಾಡುತ್ತಾನೆ. ನೀವು ಇನ್ನೊಬ್ಬರ ಸೇವೆಯನ್ನು ಆಶಿಸುವದಾದರೆ, ದೇವರು ನಿಮ್ಮನ್ನು ಯಾವ ರೀತಿಯಲ್ಲಿ ರೂಪಿಸಬೇಕೆಂದು ನಿರ್ಧರಿಸಿದ್ದಾನೋ, ಅದನ್ನು ಆತನು ಪೂರೈಸಲು ನೀವು ಆತನಿಗೆ ಅಡ್ಡಿಪಡಿಸುತ್ತೀರಿ.

ನಾನು ನನ್ನ ಸಭೆಯಲ್ಲಿಯ ಜನರಿಗೆ "ನನ್ನ ಸೇವೆಯನ್ನು ಯಾರೂ ಕೂಡ ನಕಲು ಮಾಡಲು ಹೋಗಬೇಡಿರಿ" ಎಂದು ಪದೇ ಪದೇ ಹೇಳಿದ್ದೇನೆ. ಏಕೆಂದರೆ ದೇವರು ನಿಮ್ಮನ್ನು ವಿಭಿನ್ನವಾಗಿ(ವಿಶೇಷವಾಗಿ) ರೂಪಿಸಬೇಕೆಂದು ಇಚ್ಚಿಸುತ್ತಾನೆ. ನನ್ನಂತಹ ಒಬ್ಬನನ್ನೇ ದೇವರು ತನ್ನ ಸಭೆಯಲ್ಲಿ ಹೊಂದಿರಲು ಬಯಸುತ್ತಾನೆ. ಮತ್ತು ನಿನ್ನಂತಹನೊಬ್ಬನೇ ಸಭೆಯಲ್ಲಿರಬೇಕೆಂದು ಆತನು ಬಯಸುತ್ತಾನೆ.

ಕರ್ತನನ್ನು ನೀವು ಹಿಂಬಾಲಿಸುವುದೇ ಆದರೆ, ನೀವು ಮುಂದೆ ಏನಾಗಬೇಕೆಂದು ಆತನು ಅಲೋಚಿಸಿದ್ದಾನೋ ಅದನ್ನು ನಿಮ್ಮ ಜೀವಿತದಲ್ಲಿ ಆತನು ಮಾಡುತ್ತಾನೆ. ಇದು ಕರ್ತನಾದ ಯೇಸುವಿನ ಜವಾಬ್ದಾರಿಯಾಗಿದೆ. ಈ ಮೇಲಿನ ವಾಕ್ಯದಲ್ಲಿ ದೇವರು ಇವರನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದನು. ನಿಮ್ಮ ಬಗ್ಗೆ ಆತನ ಯೋಚನೆ ಬೇರೆಯೇ ಆಗಿರಬಹುದು - ಅದು ಬಹುಶ: ಒಂದು ವೇಳೆ ಸಭೆಯಲ್ಲಿ ಸಹಾಯ ಮಾಡುವದಾಗಿರಬಹುದು. ಕೆಲವರು ಅಪೋಸ್ತಲರಾಗಿಯೂ, ಪ್ರವಾದಿಗಳಾಗಿಯೂ, ಮತ್ತು ಕೆಲವರು ಸುವಾರ್ತಾ ಪ್ರಚಾರಕರಾಗಿಯೂ ಕರೆಯಲ್ಪಡಬಹುದು. ಸುವಾರ್ತಾ ಪ್ರಚಾರಕರು ಮನುಷ್ಯರನ್ನು ಹಿಡಿಯುವ ಬೆಸ್ತರಾಗಿದ್ದಾರೆ. ಕೆಲವರು ಪೌಲನಂತೆ-ಅಪೋಸ್ತಲ, ಪ್ರವಾದಿ, ಬೋಧಕ, ಕುರುಬ (ಸಭೆಯ ಹಿರಿಯ), ಮತ್ತು ಸುವಾರ್ತಾಪ್ರಚಾರಕರಾಗಿರುತ್ತಾರೆ. ಆದರೆ ದೇವರು ಈ ರೀತಿಯಾಗಿ ಒಬ್ಬರಿಗೆ ಮಾತ್ರ ವಿಶೇಷವಾದ ಎಲ್ಲ ವರಗಳನ್ನು ಕೊಡುವದು ತುಂಬಾ ವಿರಳವಾಗಿದೆ (ಅಪರೂಪ). ಸಾಮಾನ್ಯವಾಗಿ ನಮ್ಮಲ್ಲಿ ಹೆಚ್ಚಿನವರಿಗೆ ಒಂದೇ ವರವು ಕೊಡಲ್ಪಟ್ಟಿರುತ್ತದೆ. ಸಭೆಯ ಆರಂಭದ ದಿನಗಳಲ್ಲಿ ವರಗಳನ್ನು ಹೊಂದಿದ ಕ್ರೈಸ್ತರು ತುಂಬಾ ಕಡಿಮೆಯಾಗಿದ್ದ ಕಾರಣ ಅಪೋಸ್ತಲರು ಎಲ್ಲಾ ತರಹದ ವರಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಇಂದು ಸಭೆಯು ವಿಶಾಲವಾಗಿ ಬೆಳೆದಿರುವ ಕಾರಣದಿಂದ ದೇವರು ವರಗಳನ್ನೂ ವಿಸ್ತಾರವಾಗಿ (ಬಹಳಷ್ಟು ಜನರಿಗೆ) ಹಂಚಿದ್ದಾನೆ. ನಿಮಗೆ ಎಂತಹದೇ ವರವು ದೊರೆತಿದ್ದರೂ ಅದರ ಮೂಲ ಸಿದ್ಧಾಂತವೇನೆಂದರೆ- "ನಾನು ನಿನ್ನನ್ನು ಮಾಡುವೆನು (ರೂಪಿಸುವೆನು)." ಕರ್ತನು ತನ್ನ ಚಿತ್ತಕ್ಕನುಸಾರವಾಗಿ ನಮ್ಮನ್ನು ರೂಪಿಸುವಂತೆ ನಾವು ಕರ್ತನಿಗೆ ನಮ್ಮನ್ನೇ ಸಮರ್ಪಿಸಬೇಕು.