ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಕ್ರಿಸ್ತನಲ್ಲಿ ಭಕ್ತಿ
WFTW Body: 

ಎಫೆಸದ ಸಭೆಯ ಇತಿಹಾಸವನ್ನು ಗಮನಿಸಿ. ಪೌಲನು ಅಲ್ಲಿ ಮೂರು ವರ್ಷಗಳ ಕಾಲ ಉಳಿದುಕೊಂಡು, ಹಗಲೂ ರಾತ್ರಿಯೂ ಬೋಧಿಸಿದನು (ಅ.ಕೃ. 20:31). ಇದರ ಅರ್ಥವೇನೆಂದರೆ, ಎಫೆಸದ ಕ್ರೈಸ್ತರು ಪೌಲನಿಂದ ಸಾವಿರಾರು ಬೋಧನೆಗಳನ್ನು ಕೇಳಿಸಿಕೊಂಡರು. ಎಫೆಸದ ಕ್ರೈಸ್ತರ ಮಧ್ಯದಲ್ಲಿ ದೇವರು ಪೌಲನ ಕೈಯಿಂದ ಅತ್ಯದ್ಭುತವಾದ ಮಹತ್ಕಾರ್ಯಗಳನ್ನು ಮಾಡಿಸಿದನು (ಅ.ಕೃ. 19:11). ಅವರ ಮಧ್ಯದೊಳಗಿಂದ, ಕೇವಲ ಎರಡು ವರ್ಷಗಳ ಕಡಿಮೆ ಅವಧಿಯಲ್ಲಿಯೇ ದೇವರ ವಾಕ್ಯವು ಆಸ್ಯ ಸೀಮೆಯ ಸುತ್ತಮುತ್ತಲಿನ ಎಲ್ಲಾ ಭಾಗಗಳಲ್ಲಿ ಸಾರಲ್ಪಟ್ಟಿತ್ತು. ಅವರು ಉಜ್ಜೀವನವನ್ನು ಅನುಭವಿಸಿದರು (ಅ.ಕೃ. 19:10,19). ಅಪೊಸ್ತಲರ ಸಮಯದಲ್ಲಿ ಎಲ್ಲಾ ಸಭೆಗಳಿಗಿಂತ ಎಫೆಸದ ಸಭೆಯ ಕ್ರೈಸ್ತರು ಹೆಚ್ಚು ಭಾಗ್ಯಶಾಲಿಯಾಗಿದ್ದರು. ಆ ಕಾಲದಲ್ಲಿ ಆಸ್ಯ ಸೀಮೆಯಲ್ಲಿಯೇ ಈ ಸಭೆಯು ಹೆಚ್ಚು ಆತ್ಮಿಕವಾಗಿತ್ತೆಂಬುದರಲ್ಲಿ ಸಂದೇಹವೇ ಇಲ್ಲ. (ಪೌಲನು ಎಫೆಸದವರಿಗೆ ಬರೆದ ಪತ್ರದಲ್ಲಿ ನಾವು ನೋಡುವಂತೆ, ಅವನು ಅವರಲ್ಲಿನ ಯಾವುದೇ ತಪ್ಪನ್ನು ತಿದ್ದಬೇಕಾಗಿರಲಿಲ್ಲ. ಆದರೆ, ಬೇರೆ ಸಭೆಗಳನ್ನು ಆತನು ತಿದ್ದಬೇಕಾಗಿತ್ತು ಎಂಬುದು ಆತನು ಬರೆದ ಇತರ ಪತ್ರಗಳಿಂದ ಸ್ಪಷ್ಟವಾಗುತ್ತದೆ.)

ಆದರೆ, ಪೌಲನು ಎಫೆಸವನ್ನು ಬಿಡುವಾಗ, ಮುಂದಿನ ಜನಾಂಗದ ಸಭೆಯು ಹೊಸ ನಾಯಕತ್ವದಲ್ಲಿ ಕ್ರೈಸ್ತ ಮಾರ್ಗವನ್ನು ಬಿಟ್ಟು, ದುಸ್ಥಿತಿಗೆ ಬಂದೀತು ಎಂಬುದಾಗಿ ಆತನು ಅಲ್ಲಿನ ಸಭೆಯ ಹಿರಿಯರಿಗೆ ಎಚ್ಚರಿಸಿದನು. ಪೌಲನು ಸಭೆಯ ಹಿರಿಯರಿಗೆ ಹೇಳಿದ್ದೇನೆಂದರೆ - ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವದಲ್ಲದೆ ನಿಮ್ಮಲ್ಲಿಯೂ ಕೆಲವರು ವಕ್ರ ಸಂಗತಿಗಳನ್ನು ಬೋಧಿಸಿ, ಜನರನ್ನು ಯೇಸುವಿನ ಬಳಿಗೆ ಹೋಗಗೂಡಿಸುವ ಬದಲು, ತಮ್ಮೆಡೆಗೆ ಸೆಳೆದುಕೊಳ್ಳುವರು (ಅ.ಕೃ. 20:29,30).

ಅಲ್ಲಿ ಪೌಲನು ಇದ್ದಷ್ಟು ದಿನ, ಯಾವುದೇ ತೋಳವು ಎಫೆಸದಲ್ಲಿನ ಹಿಂಡನ್ನು(ಕ್ರೈಸ್ತ ಸಭೆ) ಪ್ರವೇಶಿಸಲು ಧೈರ್ಯ ಮಾಡಿರಲಿಲ್ಲ. ಏಕೆಂದರೆ ಪೌಲನು ಕರ್ತನಿಂದ ಆತ್ಮಿಕ ಅಧಿಕಾರವನ್ನು ಹೊಂದಿದ್ದ ನಂಬಿಗಸ್ಥ ದ್ವಾರಪಾಲಕನಾಗಿದ್ದನು (ಮಾರ್ಕ 13:34 ನೋಡಿ). ಆತನು ಅಭಿಷೇಕಿಸಲ್ಪಟ್ಟವನಾಗಿದ್ದುದರಿಂದ, ದೇವರಿಗೆ ಭಯ ಪಡುವವನಾಗಿದ್ದು ಮತ್ತು ಆತನು ತನ್ನ ಸ್ವಾರ್ಥವನ್ನು ಕಂಡುಕೊಳ್ಳದೆ, ಕರ್ತನ ಆಸಕ್ತಿಯನ್ನು ಹುಡುಕಿದನು. ಅದೂ ಅಲ್ಲದೆ, ಆತನು ಆತ್ಮಿಕ ದೂರದೃಷ್ಟಿಯನ್ನು ಹೊಂದಿದವನಾಗಿದ್ದು, ಎಫೆಸದಲ್ಲಿನ ಸಭೆಯ ಹಿರಿಯರ ಆತ್ಮಿಕ ಸ್ಥಿತಿಯು ಕೆಟ್ಟದ್ದಾಗಿರುವುದು ಮತ್ತು ಅವರು ಸಭೆಯು ನಾಯಕತ್ವವನ್ನು ಪಡೆದುಕೊಂಡ ನಂತರ, ಸಭೆಯು ದುಸ್ಥಿತಿಗೆ ಹೋಗುವುದನ್ನು ತಿಳಿದಿದ್ದಂತಹ ಆತ್ಮಿಕ ವಿವೇಚನೆಯನ್ನು ಆತನು ಹೊಂದಿದ್ದನು.

ಎಫೆಸದಲ್ಲಿ ಖಂಡಿತವಾಗಿ ಏನಾಗುತ್ತದೆ ಎಂಬುದರ ಬಗ್ಗೆ, ಅಲ್ಲಿನ ಸಭೆಯ ಹಿರಿಯರಿಗೆ ಪೌಲನು ಪ್ರವಾದನೆಯನ್ನು ಕೊಡಲಿಲ್ಲ. ಅದು ಕೇವಲ ಎಚ್ಚರಿಕೆಯಾಗಿತ್ತು. ಒಂದು ವೇಳೆ ಸಭೆಯ ಹಿರಿಯರು ತಮ್ಮನ್ನು ತಾವು ತೀರ್ಪು ಮಾಡಿಕೊಂಡು ಮಾನಸಾಂತರ ಪಟ್ಟಿದ್ದರೆ, ಪೌಲನು ಮುಂತಿಳಿಸಿದ ಪ್ರಕಾರ ಆಗುತ್ತಿರಲಿಲ್ಲ.

ನಿನೆವೆ ಪಟ್ಟಣದ ಮೇಲೆ ವಿನಾಶ ಸಂಭವಿಸುತ್ತದೆ ಎಂದು ಯೋನನು ಒಂದು ಬಾರಿ ಪ್ರವಾದಿಸಿದನು. ಆದರೆ ಆತನು ಭವಿಷ್ಯ ನುಡಿದ ಪ್ರಕಾರ ಅದು ಸಂಭವಿಸಲಿಲ್ಲ. ಏಕೆಂದರೆ ನಿನೆವೆಯ ಜನರು ಮಾನಸಾಂತರಪಟ್ಟಿದ್ದರು. ಅದೇ ರೀತಿ ಎಫೆಸ ಪಟ್ಟಣದ ಸಭೆಯು ಸಹ, ಪೌಲನು ಭವಿಷ್ಯ ನುಡಿದಂತೆ ಆಗುವ ಕೇಡಿನಿಂದ ತಪ್ಪಿಸಿಕೊಳ್ಳಬಹುದಾಗಿತ್ತು.

ಆದರೆ ಅಯ್ಯೋ!, ಎಫೆಸದಲ್ಲಿನ ಹೊಸ ಜನಾಂಗದ ನಾಯಕರು ಪೌಲನ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದುದರಿಂದ, ಕರ್ತನಿಂದ ದೂರಹೋದರು.

ಮೊದಲನೇ ಶತಮಾನವು ಮುಗಿಯುವುದರೊಳಗೆ, ಮೂರನೇ ಜನಾಂಗವು ಅಧಿಕಾರಕ್ಕೆ ಬಂದಿತ್ತು ಮತ್ತು ನಂತರದ ಸಂಗತಿಗಳು ಮತ್ತಷ್ಟು ಕೆಟ್ಟದಾದವು. ಅವರ ಸಿದ್ಧಾಂತಗಳು ಸರಿಯಾಗಿದ್ದವು ಮತ್ತು ಅವರು ಕ್ರೈಸ್ತ ಚಟುವಟಿಕೆಗಳಲ್ಲಿ ಶ್ರದ್ಧೆಯುಳ್ಳವರಾಗಿದ್ದರು. ಬಹುಶ: ಅವರು ಇಡೀ-ರಾತ್ರಿ ಪ್ರಾರ್ಥನಾ ಕೂಟಗಳನ್ನು ಮತ್ತು ವಿಶೇಷವಾದ ಕೂಟಗಳನ್ನು ಸಹ ನಡೆಸುತ್ತಿದ್ದಿರಬಹುದು. ಆದರೆ ಅವರ ಆತ್ಮಿಕ ಸ್ಥಿತಿಯು ಎಷ್ಟು ಕೆಟ್ಟದಾಗಿತ್ತೆಂದರೆ, ಅವರು ತನ್ನ ಸಭೆಯೆಂಬ ಗುರುತನ್ನು ದೇವರು ಕಿತ್ತು ಹಾಕಬೇಕೆಂದಿದ್ದನು. ಹಾಗಾದರೆ ಅವರ ಅಪರಾಧವೇನಾಗಿತ್ತು? ಅವರು ಕರ್ತನಿಗಾಗಿ ಇಟ್ಟಿದ್ದ ತಮ್ಮ ಭಕ್ತಿಯನ್ನು ಕಳೆದುಕೊಂಡಿದ್ದರು (ಪ್ರಕ. 2:4,5).

ಎಫೆಸದ ಸಭೆಯ ಇತಿಹಾಸ ನಮಗೇನನ್ನು ತಿಳಿಸುತ್ತದೆ? ಇಷ್ಟೆ - ಕ್ತಿಸ್ತನ ಮೇಲೆ ನಮಗಿರುವ ಉತ್ಸುಕವಾದ ಭಕ್ತಿಯಷ್ಟು ಯಾವುದೇ ಸಿದ್ಧಾಂತವು ಪ್ರಮುಖವಾದುದಲ್ಲ. ಆತ್ಮಿಕತೆಯ ಒಂದೇ ಹಾಗೂ ಕೇವಲ ಒಂದೇ ಒಂದು ಗುರುತೇನೆಂದರೆ - ಯೇಸುವಿನ ಜೀವಿತವು ನಮ್ಮ ನಡವಳಿಕೆಯಲ್ಲಿ ಹೆಚ್ಚೆಚ್ಚಾಗಿ ಪ್ರಕಟಗೊಳ್ಳುತ್ತಾ ಹೋಗುತ್ತಿರುತ್ತದೆ ಮತ್ತು ಇದು ಯೇಸುವಿನ ಮೇಲೆ ನಮಗಿರುವ ವೈಯುಕ್ತಿಕ ಭಕ್ತಿ ಹೆಚ್ಚೆಚ್ಚಾಗಿ ಹೋಗುವುದರಿಂದ ಮಾತ್ರ ಸಾಧ್ಯವಾಗುತ್ತದೆ.

ದೈವಿಕ ಮನುಷ್ಯನಾಗಿದ್ದ ಪೌಲನು, ತನ್ನ ಜೀವಿತದ ಕೊನೆಯ ತನಕ ಉತ್ಸುಕನಾಗಿದ್ದ ಮತ್ತು ನಂಬಿಗಸ್ಥನಾದ ದೈವಿಕ ಮನುಷ್ಯನಾಗಿದ್ದನು. "ಕ್ರಿಸ್ತನ ಮೇಲಿನ ಪಾವಿತ್ರ್ಯತೆ ಮತ್ತು ಯಥಾರ್ಥತ್ವದಿಂದ (ಸರಳವಾದ ಪ್ರೀತಿಯಿಂದ) ನಿಮ್ಮನ್ನು ಬೇರೆ ಕಡೆ ಸೆಳೆಯಲು ಸೈತಾನನು ಎಲ್ಲಾ ರೀತಿಯ ಕ್ರಮಗಳನ್ನು ಉಪಯೋಗಿಸುವನು ಎಂದು ಪೌಲನು ಎಲ್ಲಾ ಕಡೆಯ ವಿಶ್ವಾಸಿಗಳಿಗೆ ಎಚ್ಚರಿಸಿದನು (2 ಕೊರಿಂಥ.11:3).

"ನೀರಿನ ದೀಕ್ಷಾಸ್ನಾನ" ಮತ್ತು "ಪವಿತ್ರಾತ್ಮನ ಅಭಿಷೇಕ" ಮುಂತಾದ ಸಿದ್ಧಾಂತಗಳಲ್ಲಿ ತಪ್ಪು ತಿಳುವಳಿಕೆಗಳನ್ನು ಹೊಂದಿರುವುದು ಒಬ್ಬನು ಕ್ರಿಸ್ತನ ಮೇಲಿನ ವೈಯಕ್ತಿಕ ಭಕ್ತಿಯನ್ನು ಕಳೆದುಕೊಳ್ಳುವಷ್ಟು ಅಪಾಯಕಾರಿಯಲ್ಲ. ಹೀಗಿದ್ದರೂ ಸಹ ಅನೇಕ ವಿಶ್ವಾಸಿಗಳು ಇದನ್ನು ಸರಿಯಾಗಿ ಗ್ರಹಿಸಿಕೊಂಡಿರುವಂತೆ ಕಾಣುತ್ತಿಲ್ಲ.