WFTW Body: 

1 ಸಮುವೇಲ 18ರಲ್ಲಿ ಸೌಲನ ಮಗನಾದ ಯೋನಾತಾನನಲ್ಲಿ, ದಾವೀದನ ಬಗ್ಗೆ ಇದ್ದ ಶ್ರೇಷ್ಠ ಮನೋಭಾವದ ಬಗ್ಗೆ ನಾವು ಓದುತ್ತೇವೆ. ಯೋನಾತಾನನು ನಿಶ್ಚಯವಾಗಿ ವಯಸ್ಸಿನಲ್ಲಿ ದಾವೀದನಿಗಿಂತ ಹಿರಿಯನೂ ಮತ್ತು ರಾಜನಾಗಲು ಬಾಧ್ಯನೂ ಆಗಿದ್ದನು. ಇಸ್ರಾಯೇಲಿನಲ್ಲಿ ಆಗ ದಾವೀದನು ಗಳಿಸಿದ್ದ ಜನಪ್ರಿಯತೆಯಿಂದಾಗಿ ಅವನಿಂದ ತನ್ನ ರಾಜ ಪದವಿಗೆ ವಿಪತ್ತು ಉಂಟಾಗಬಹುದೆಂದು, ಯೋನಾತಾನನು ಅವನನ್ನು ದ್ವೇಷಿಸಬೇಕಿತ್ತು. ಆದರೆ ಆತನಲ್ಲಿ ದಾವೀದನಿಗಾಗಿ ಹಾರ್ದಿಕವಾದ ಪ್ರೀತಿ ಮತ್ತು ಗೌರವವನ್ನು ಇಲ್ಲಿ ನಾವು ನೋಡುತ್ತೇವೆ. ಯೋನಾತಾನನು ತನ್ನ ಸ್ವಂತ ಲಾಭಕ್ಕಿಂತ, ದೇವರ ಮಹಿಮೆ ಮತ್ತು ಇಸ್ರಾಯೇಲಿನ ಒಳಿತಿಗಾಗಿ ಕಾಳಜಿ ಹೊಂದಿದ್ದನು ಎಂದು ಇದರಿಂದ ವ್ಯಕ್ತವಾಗುತ್ತದೆ.

ಆದ್ದರಿಂದ ದಾವೀದನ ಬಗ್ಗೆ ತನ್ನ ತಂದೆ ಸೌಲನಲ್ಲಿದ್ದ ಹೊಟ್ಟೆಕಿಚ್ಚಿನ ಸ್ವಭಾವವು ಅವನನ್ನು ಕಾಡಿಸುತ್ತಿರಲಿಲ್ಲ. ಆತನ ಹೃದಯಕ್ಕೆ ದಾವೀದನು ಆಪ್ತನಾಗಿದ್ದನು. ಆತನು ತನ್ನ ನಿಲುವಂಗಿಯನ್ನೂ, ತನ್ನ ಯುದ್ಧವಸ್ತ್ರಗಳನ್ನೂ ಮತ್ತು ಕತ್ತಿ ಬಿಲ್ಲು ನಡುಕಟ್ಟನ್ನೂ ದಾವೀದನಿಗೆ ಕೊಟ್ಟನು. ಯೋನಾತಾನನು ಹೀಗೆ ಮಾಡಿದ್ದರ ಅರ್ಥ, ಆತನು ದಾವೀದನಿಗೆ -"ನೀನು ರಾಜನಾಗಲು ಬಾಧ್ಯನು (ನಿಲುವಂಗಿ) ಮತ್ತು ನಾನು ನಿನ್ನ ವಿರುದ್ಧವಾಗಿ ಎಂದಿಗೂ ಹೋರಾಡುವುದಿಲ್ಲ (ಯುದ್ಧ ವಸ್ತ್ರಗಳು, ಕತ್ತಿ ಮತ್ತು ಬಿಲ್ಲು). ನಾನು ನಿನಗೆ ನನ್ನನ್ನು ಸಮರ್ಪಿಸುತ್ತೇನೆ" ( 1 ಸಮುವೇಲ 18:4), ಎಂದು ಹೇಳಿದಂತೆ. ಯೋನಾತಾನನು ಅಷ್ಟು ಶ್ರೇಷ್ಠನಾದ ಯೌವನಸ್ಥನಾಗಿದ್ದನು. 1 ಸಮುವೇಲ 14ರಲ್ಲಿ, ಯೋನಾತಾನನು ದೇವರಲ್ಲಿ ಹೊಂದಿದ್ದ ನಂಬಿಕೆಯಿಂದ ಯಾವ ರೀತಿಯಾಗಿ ಫಿಲಿಷ್ಟಿಯರನ್ನು ಸೋಲಿಸಿದನೆಂದು ಓದುತ್ತೇವೆ. ಆತನು ಅಸೂಯೆಯಿಂದ ಸಂಪೂರ್ಣ ಮುಕ್ತನಾಗಿದ್ದು, ಆತನಲ್ಲಿ ದೇವರ ಅಭಿಷಿಕ್ತನನ್ನು ಗುರುತಿಸುವ ವಿವೇಚನೆ ಇದ್ದುದನ್ನು ನಾವು ಇಲ್ಲಿ ಕಾಣುತ್ತೇವೆ.

ಈ ರೀತಿಯಾಗಿ ಒಬ್ಬ ಹಿರಿಯ ಸಹೋದರನು, ಕಿರಿಯ ಸಹೋದರನ ಮೇಲೆ ನೆಲೆಗೊಂಡ ದೇವರ ಅಭಿಷೇಕವನ್ನು ಗುರುತಿಸಿ, ಆತನು ಕರ್ತನ ಸೇವೆಯಲ್ಲಿ ಮುನ್ನಡೆಯಲು ಆಸ್ಪದ ಮಾಡಿಕೊಡುವಂಥದ್ದು ಎಷ್ಟು ರಮ್ಯವಾಗಿದೆ

ಈ ರೀತಿಯಾಗಿ ಒಬ್ಬ ಹಿರಿಯ ಸಹೋದರನು, ಕಿರಿಯ ಸಹೋದರನ ಮೇಲೆ ನೆಲೆಗೊಂಡ ದೇವರ ಅಭಿಷೇಕವನ್ನು ಗುರುತಿಸಿ, ಆತನು ಕರ್ತನ ಸೇವೆಯಲ್ಲಿ ಮುನ್ನಡೆಯಲು ಆಸ್ಪದ ಮಾಡಿಕೊಡುವಂಥದ್ದು ಎಷ್ಟು ರಮ್ಯವಾಗಿದೆ. ಇಂತಹ ಒಂದು ಸುಂದರ ಉದಾಹರಣೆಯನ್ನು ನಾವು ಬಾರ್ನಬನಲ್ಲಿ ನೋಡುತ್ತೇವೆ. ಅಪೊಸ್ತಲರ ಕೃತ್ಯಗಳು 13:2ರಲ್ಲಿ, ದೇವರು ’ಬಾರ್ನಬ ಸೌಲರನ್ನು’ ತನ್ನ ಕೆಲಸಕ್ಕಾಗಿ ಕರೆಯುವದನ್ನು ನೋಡುತ್ತೇವೆ. ಬಾರ್ನಬನು ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಸೌಲನಿಗಿಂತ ಹಿರಿಯನಾಗಿದ್ದನು, ಹಾಗಾಗಿ ಸಹಜವಾಗಿಯೇ ಬಾರ್ನಬನ ಹೆಸರು ಮೊದಲು ಉಲ್ಲೇಖಿಸಲ್ಪಟ್ಟಿದೆ. ಆದರೆ ಶೀಘ್ರವೇ (42ನೇ ವಚನ), ಇದು ’ಪೌಲನೂ ಬಾರ್ನಬನೂ’ ಎಂದು ಬದಲಾಯಿತು. ಇದು ಹೇಗೆ ಸಾಧ್ಯವಾಯಿತು? ಕಿರಿಯ ಸಹೋದರನಾದ ಪೌಲನ ಮೇಲೆ ಹೆಚ್ಚಿನ ಅಭಿಷೇಕ ಇರುವದನ್ನು ಬಾರ್ನಬನು ಗ್ರಹಿಸಿ, ತಾನು ಹಿನ್ನೆಲೆಗೆ ಸರಿಯುತ್ತಾನೆ. ಯೋನಾತಾನ ಮತ್ತು ಬಾರ್ನಬರಂತೆ ಇನ್ನೂ ಅನೇಕ ಜನರು ತಮ್ಮ ಸ್ವಂತ ಹೆಚ್ಚಳಕ್ಕಾಗಿ ತವಕಿಸದೆ, ಸ್ವಲ್ಪವೂ ಅಸೂಯೆ ಇಲ್ಲದೆ, ಕೇವಲ ದೇವರ ಮಹಿಮೆಗಾಗಿ ತವಕಿಸಿ, ಹೆಚ್ಚಿನ ಅಭಿಷಿಕ್ತರಾದ ಕಿರಿಯ ಸಹೋದರರನ್ನು ಸಂಕೋಚವಿಲ್ಲದೆ ಪ್ರೋತ್ಸಾಹಿಸಿದ್ದರೆ, ಈ ಜಗತ್ತಿನಲ್ಲಿ ಯೇಸು ಕ್ರಿಸ್ತನ ಸಭೆಯು ಎಷ್ಟು ಪ್ರಭಾವಶಾಲಿ ಶಕ್ತಿ ಆಗುತ್ತಿತ್ತು.

1 ಸಮುವೇಲ 24:4-5 ರಲ್ಲಿ, ದಾವೀದನಿಗೆ ಸೌಲನನ್ನು ಕೊಲ್ಲುವ ಅವಕಾಶ ದೊರಕಿದರೂ, ಅವನ ಜೀವವನ್ನು ಉಳಿಸಿದ ಶ್ರೇಷ್ಠ ಮನೋಭಾವವನ್ನು ನಾವು ನೋಡುತ್ತೇವೆ. ಸೌಲನ ಜೀವ ತನ್ನ ಕೈಯಲ್ಲಿ ಇತ್ತೆಂದು ತೋರಿಸಲು ತಾನು ಆತನ ನಿಲುವಂಗಿಯ ತುಣುಕನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸಾಕ್ಷಿಯು ಅವನನ್ನು ಹಂಗಿಸುತ್ತಿತ್ತು. ಈ ವಿಷಯ ತಿಳಿದ ಸೌಲನು ಗಟ್ಟಿಯಾಗಿ ಅತ್ತು ಮನೆಗೆ ಹಿಂತಿರುಗಿದರೂ, ಮತ್ತೆ ಸ್ವಲ್ಪ ಸಮಯದ ನಂತರ ದಾವೀದನನ್ನು ಹುಡುಕಿ ನಾಶಪಡಿಸಲು ಹೊರಟನು ( 1 ಸಮುವೇಲ 26:2). ಹೊಟ್ಟೆಕಿಚ್ಚು, ಸಿಟ್ಟು ಮತ್ತು ದ್ವೇಷ ಇವುಗಳನ್ನು ಸಂಪೂರ್ಣವಾಗಿ ತೆಗೆದುಹಾಕದಿದ್ದರೆ, ಅವುಗಳು ಸಮುದ್ರದ ಅಲೆಗಳಂತೆ ಮತ್ತೆ ಮತ್ತೆ ಹಿಂದಿರುಗುತ್ತವೆ.

1 ಸಮುವೇಲ 30 ರಲ್ಲಿ, ದಾವೀದನು ಒಂದು ಕಠಿಣ ಪರಿಸ್ಥಿತಿಯನ್ನು ಎದುರಿಸಿದನು. ಅವನು ತನ್ನ ಜನರೊಂದಿಗೆ ಯುದ್ಧಕ್ಕೆ ಹೋಗಿದ್ದಾಗ, ಅಮಾಲೇಕ್ಯರು ದಂಡೆತ್ತಿ ಬಂದು ಅವರಿದ್ದ ಊರನ್ನು ಸುಟ್ಟು ಹಾಳುಮಾಡಿ, ಅಲ್ಲಿದ್ದ ಕುಟುಂಬಗಳನ್ನು ಸೆರೆ ಹಿಡಿದುಕೊಂಡು ಹೋದರು. ಆ ಪರಿಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದರೆ, ಅವನ ಜೊತೆಗಾರರೆಲ್ಲರೂ ನೊಂದು ಅಳುತ್ತಾ, ಆ ಸಮಸ್ಯೆಗೆ ದಾವೀದನನ್ನೇ ದೂಷಿಸಿದರು. ಅವರು ಅವನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು (1 ಸಮುವೇಲ 30: 6). ಆ ಸಂದರ್ಭದಲ್ಲಿ ನಾವು ಒಂದು ಸುಂದರವಾದ ವಚನವನ್ನು ಓದುತ್ತೇವೆ (1 ಸಮುವೇಲ 30: 6) - "ಆದರೂ ಅವನು ತನ್ನ ದೇವರಾದ ಯಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು (ತನ್ನನ್ನು ಧೈರ್ಯಪಡಿಸಿಕೊಂಡನು)". ನಮ್ಮ ಸ್ವಂತ ಗೆಳೆಯರೇ ನಮ್ಮ ವಿರುದ್ಧ ತಿರುಗಿದಾಗ, ನಾವೂ ಅನುಸರಿಸಬಹುದಾದ ಒಂದು ವಿಶೇಷವಾದ ಉದಾಹರಣೆ ಇದಾಗಿದೆ. ದಾವೀದನು ಮಾರ್ಗದರ್ಶನಕ್ಕಾಗಿ ಮತ್ತೊಮ್ಮೆ ದೇವರಿಗೆ ಬಿನ್ನಹ ಮಾಡಿದನು. ದೇವರು ಅವನಿಗೆ ಅಮಾಲೇಕ್ಯರನ್ನು ಹಿಂದಟ್ಟಲು ಹೇಳಿದರು ಮತ್ತು ಅವನು ಎಲ್ಲವನ್ನೂ ಹಿಂದಕ್ಕೆ ಪಡೆಯುವದಾಗಿ ತಿಳಿಸಿದರು (1 ಸಮುವೇಲ 30: 8).

ಆದರೆ ದಾವೀದನಿಗೆ ಅಮಾಲೇಕ್ಯರನ್ನು ಹುಡುಕಲು ಯಾವ ದಿಕ್ಕಿನಲ್ಲಿ ಹೋಗಬೇಕೆಂದು ತಿಳಿದಿರಲಿಲ್ಲ. ದೇವರು ಆತನನ್ನು ಅವರ ಬಳಿಗೆ ನಡೆಸಿದ ರೀತಿ ಅದ್ಭುತವಾದದ್ದು. ಅದು ಸಾಯುತ್ತಿದ್ದ ಒಬ್ಬ ಅಪರಿಚಿತ ವ್ಯಕ್ತಿಯನ್ನು ದಾವೀದನು ನೋಡಿ, ಅವನಿಗೆ ಕರುಣೆ ತೋರಿಸುವ ಸರಳ ಕಾರ್ಯದಿಂದಾಗಿ ಸಾಧ್ಯವಾಯಿತು. ಮರಳುಗಾಡಿನಲ್ಲಿ ಪ್ರಜ್ಞಾಹೀನನಾಗಿ ಸಾವಿಗೆ ಸಮೀಪನಾಗಿದ್ದ ಐಗುಪ್ತದ ಒಬ್ಬ ವ್ಯಕ್ತಿಯನ್ನು ದಾವೀದನ ಜನರು ನೋಡಿದರು. ಅವರು ಆತನಿಗೆ ಸ್ವಲ್ಪ ಆಹಾರ ಮತ್ತು ನೀರನ್ನು ಕೊಟ್ಟು ಉಪಚರಿಸಿದರು. ಆತನು ಚೇತರಿಸಿಕೊಂಡಾಗ, ಈ ಐಗುಪ್ತ್ಯನನ್ನು ಆತನ ಅಸ್ವಸ್ಥ್ಯತೆಯಿಂದಾಗಿ ಅಮಾಲೇಕ್ಯರು ತ್ಯಜಿಸಿಬಿಟ್ಟಿದ್ದಾಗಿ ಅವರಿಗೆ ತಿಳಿಸಿದನು (1 ಸಮುವೇಲ 30:11-13 ). ಈತನೇ ದಾವೀದನನ್ನು ಅಮಾಲೇಕ್ಯರು ಇದ್ದಲ್ಲಿಗೆ ಕರೆದೊಯ್ದ ವ್ಯಕ್ತಿ. ನಾವು ಅಪರಿಚಿತರಿಗೆ ಸಹಾಯ ಮಾಡಿದರೆ ದೇವರು ನಮಗೆ ಪ್ರತಿಫಲ ಕೊಡುವನೆಂದು ಇದು ನಮಗೆ ತೋರಿಸುತ್ತದೆ. ಹೀಗೆ ದಾವೀದನು ಅಮಾಲೇಕ್ಯರನ್ನು ಪತ್ತೆಹಚ್ಚಿ ಸೋಲಿಸಿದನು. ಈ ಸಂದರ್ಭದಲ್ಲಿ ಮೂರು ಬಾರಿ ಒತ್ತಿ ಹೇಳಲಾಗಿರುವ ವಿಷಯ (1 ಸಮುವೇಲ 30:18-20 ), "ದಾವೀದನು ಒಂದನ್ನೂ ಬಿಡದೆ ಅಮಾಲೇಕ್ಯರು ಅಪಹರಿಸಿದ್ದ ಪ್ರತಿಯೊಂದನ್ನೂ ಬಿಡಿಸಿಕೊಂಡನು" - ಸೈತಾನನು ನಮ್ಮಿಂದ ಕದ್ದಿರುವ ಎಲ್ಲವನ್ನೂ ಯೇಸುವು ಹಿಂತಿರುಗಿ ಪಡೆಯುವ ಸುಂದರ ಚಿತ್ರಣ ಇದಾಗಿದೆ.

ದಾವೀದನು ಯುದ್ಧವನ್ನು ಮುಗಿಸಿ ತನ್ನ ಶಿಬಿರಕ್ಕೆ ಹಿಂದಿರುಗಿದಾಗ, ಅಲ್ಲಿ ಅತೀ ಆಯಾಸದಿಂದಾಗಿ ಕದನಕ್ಕೆ ಹೋಗಲಾರದೆ, ದಾವೀದನ ಸಾಮಾನುಗಳನ್ನು ಕಾಯುತ್ತಾ ಉಳಕೊಂಡಿದ್ದ 200 ಜನರಿದ್ದರು. ಇವರು ಯುದ್ಧಕ್ಕೆ ಬಾರದೇ ಉಳಿದಿದ್ದರಿಂದ, ಇವರಿಗೆ ಯುದ್ಧದ ಕೊಳ್ಳೆಯಲ್ಲಿ ಪಾಲು ನೀಡಬಾರದೆಂದು ದಾವೀದನ ಜೊತೆಗಾರರಲ್ಲಿ ಕೆಲಸಕ್ಕೆ ಬಾರದ ಕೆಲವರು ಹೇಳಿದರು. ಆದರೆ ಆ ಸಂದರ್ಭದಲ್ಲಿ, ನಾವು ದಾವೀದನ ಹೃದಯ ವಿಶಾಲತೆಯನ್ನು ಕಾಣುತ್ತೇವೆ. ದಾವೀದನು ಹೇಳಿದ ಮಾತು, ''ಯುದ್ಧ ಮಾಡಿದವನಿಗೆ ಸಿಕ್ಕುವಷ್ಟು ಪಾಲು ಸಾಮಾನು ಕಾಯ್ದವನಿಗೂ ಸಿಗಬೇಕು. ಗೆದ್ದಿರುವ ಸಂಪತ್ತನ್ನು ಎಲ್ಲರಿಗೂ ಸಮಾನವಾಗಿ ಹಂಚಬೇಕು''. ಆ ದಿನದಿಂದ ಇಸ್ರಾಯೇಲ್ಯರಲ್ಲಿ ಇದೊಂದು ಕಟ್ಟಳೆಯಾಯಿತು (1 ಸಮುವೇಲ 30:21-25) .