WFTW Body: 

ಎಫೆಸ. 1:3ರಲ್ಲಿ ಹೀಗೆ ಹೇಳುತ್ತದೆ - "ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ವರಗಳನ್ನು ನಮಗೆ ಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದಾನೆ." ಈ ವಾಕ್ಯದಲ್ಲಿ ತಿಳಿಸಿರುವಂತೆ, ಈ ಎಲ್ಲಾ ವರಗಳು (ಆಶೀರ್ವಾದಗಳು) ಆತ್ಮಿಕವಾಗಿದ್ದು, ಭೌತಿಕ(ಲೌಕಿಕ)ವಾದವಲ್ಲ ಎಂಬುದಾಗಿ ತಿಳಿದು ಬರುತ್ತದೆ. ಲೌಕಿಕ ಆಶೀರ್ವಾದಗಳೇನೆಂಬುದಾಗಿ ನೋಡುವುದಾದರೆ, ಇಸ್ರಾಯೇಲ್ಯರು ಹಳೆ ಒಡಂಬಡಿಕೆಯಲ್ಲಿ ಪಡೆದ ವಾಗ್ದಾನಗಳು. ಇವನ್ನು ನಾವು ಧರ್ಮೋಪದೇಶಕಾಂಡ 28ರಲ್ಲಿ ನೋಡಬಹುದು. ಮೋಶೆಯ ಧರ್ಮಶಾಸ್ತ್ರಕ್ಕಿಂತ ಕ್ರಿಸ್ತನು ತಂದಿರುವಂತ ಕೃಪೆಯು ಭಿನ್ನವಾಗಿರುವುದು (ಬೇರೆಯಾಗಿರುವುದು) ಇದರಲ್ಲೇ. ಹಳೆ ಒಡಂಬಡಿಕೆಯಲ್ಲಿ ಇಂಥಹ ಒಂದು ವಚನವಿದ್ದಿದ್ದರೆ, ಅದನ್ನು ನಾವು ಹೀಗೆ ಓದಬಹುದಾಗಿದೆ: "ಸರ್ವಶಕ್ತನಾದ ಕರ್ತನಿಗೆ (ನಮ್ಮ ತಂದೆಗಲ್ಲ) ಸ್ತೋತ್ರ. ಆತನು ಭೂಲೋಕದಲ್ಲಿನ ಲೌಕಿಕ ಆಶೀರ್ವಾದಗಳನ್ನು ನಮಗೆ ಮೋಶೆಯಲ್ಲಿ ಅನುಗ್ರಹಿಸಿದ್ದಾನೆ." ಹಾಗಾಗಿ ಹಳೆ ಒಡಂಬಡಿಕೆಯ ವಿಶ್ವಾಸಿಗಳು ಪ್ರಾಥಮಿಕವಾಗಿ ದೈಹಿಕವಾಗಿ ಗುಣ ಹೊಂದುವುದನ್ನು ಮತ್ತು ಭೌತಿಕ ಆಶಿರ್ವಾದಗಳನ್ನು ಪಡೆದುಕೊಳ್ಳುವುದನ್ನು ಬಯಸುತ್ತಿದ್ದರು. ಈ ರೀತಿಯ ಬಯಕೆಗಳು ನಿಜವಾಗಿಯೂ ಹಳೆ ಒಡಂಬಡಿಕೆಗೆ ಹಿಂತಿರುಗಿ ಹೋಗುವಂತವುಗಳಾಗಿವೆ. ಇಂತಹ "ವಿಶ್ವಾಸಿಗಳು" ನಿಜವಾಗಿಯೂ ಇಸ್ರಾಯೇಲ್ಯರಾಗಿದ್ದು, ಕ್ರೈಸ್ತರಲ್ಲ. ಅವರು ಮೋಶೆಯ ಹಿಂಬಾಲಕರಾಗಿದ್ದು, ಯೇಸುವನ್ನು ಹಿಂಬಾಲಿಸುವವರಲ್ಲ. ಇದರ ಅರ್ಥ ದೇವರು ಇಂದು ವಿಶ್ವಾಸಿಗಳನ್ನು ಭೌತಿಕವಾಗಿ ಆಶೀರ್ವದಿಸುವುದಿಲ್ಲವೆಂದೇ? ಅಲ್ಲ. ಆತನು ಆಶೀರ್ವದಿಸುತ್ತಾನೆ, ಆದರೆ ವಿಭಿನ್ನ ಮಾರ್ಗದಲ್ಲಿ. ಅವರು ಆತನ ರಾಜ್ಯವನ್ನು ಮತ್ತು ನೀತಿಯನ್ನು ಮೊದಲು ಹುಡುಕುವುದಾದರೆ, ಅವರ ಭೂಲೋಕದ ಎಲ್ಲಾ ಅಗತ್ಯತೆಗಳು ಪೂರೈಸಲ್ಪಡುತ್ತವೆ. ಹಳೆಯ ಒಡಂಬಡಿಕೆಯಲ್ಲಿ ಜನರು ಈ ಲೌಖಿಕ ಸಂಗತಿಗಳನ್ನು ಮಾತ್ರ - ಅನೇಕ ಮಕ್ಕಳನ್ನು, ಸಾಕಷ್ಟು ಆಸ್ತಿ, ತುಂಬಾ ಹಣ, ಶತ್ರುಗಳ ಮೇಲೆ ಜಯ, ಲೋಕದಲ್ಲಿ ಸ್ಥಾನ-ಮಾನ ಮತ್ತು ಗೌರವ ಇವೇ ಮುಂತಾದವುಗಳನ್ನು ಹುಡುಕುತ್ತಿದ್ದರು. ಹೀಗೆ ಅವರು ಇವೆಲ್ಲವನ್ನು ಬಹಳವಾಗಿ ಪಡೆದುಕೊಂಡರು. ಆದರೆ ಹೊಸ ಒಡಂಬಡಿಕೆಯಲ್ಲಿ ನಾವು ಆತ್ಮಿಕ ಆಶೀರ್ವಾದಗಳನ್ನು ಹುಡುಕುತ್ತೇವೆ - ಆತ್ಮಿಕ ಮಕ್ಕಳು, ಆತ್ಮಿಕ ಐಶ್ವರ್ಯ, ಆತ್ಮಿಕ ಗೌರವ, ಆತ್ಮೀಕ ಜಯ (ಸೈತಾನನ ಮೇಲೆ, ಮಾಂಸದ ಮೇಲೆ. ಫಿಲಿಸ್ಟಿಯರ ಅಥವಾ ಮನುಷ್ಯರ ಮೇಲೆ ಅಲ್ಲ). ನಮ್ಮ ಭೂಲೋಕದ ಅಗತ್ಯತೆಗಳು, ಆರೋಗ್ಯ ಮತ್ತು ಹಣ, ಇವೆಲ್ಲವು ನಾವು ದೇವರ ಚಿತ್ತವನ್ನು ಮಾಡಲು ನಮಗೆ ಅವಶ್ಯವಾಗಿವೆ. ಅವೆಲ್ಲ ನಮಗೆ ಸಿಗುತ್ತವೆ. ನಮಗೆ ಎಷ್ಟು ಬೇಕೋ ಅಷ್ಟು ಹಣವನ್ನು ಕೊಡಬೇಕು ಎಂದು ದೇವರಿಗೆ ಗೊತ್ತು. ನಮಗೆಷ್ಟು ಹಣ ಕೊಟ್ಟರೆ ನಾವು ಅದರಿಂದಾಗಿ ನಾಶ ಹೊಂದರೆ ಇರುತ್ತೇವೋ, ಅಷ್ಟು ಹಣವನ್ನು ಅವನು ನಮಗೆ ಕೊಡುತ್ತಾನೆ. ಹಳೆ ಒಡಂಬಡಿಕೆಯಲ್ಲಿ, ದೇವರು ಕೆಲವು ಜನರನ್ನು ಶತಕೋಟ್ಯಾದಿಪತಿಗಳನ್ನಾಗಿ ಮಾಡಿರಬಹುದು. ದೇವರು ನಮ್ಮನ್ನು ಈ ರೀತಿಯಾಗಿ ಮಾಡಿದರೆ, ಇದು ಮೇಲಿನ (ಪರಲೋಕದ)ಸಂಗತಿಗಳನ್ನು ಹುಡುಕುವುದಕ್ಕೆ ಅಡ್ಡಿಯಾಗಬಹುದೆಂದು ಮತ್ತು ನಮ್ಮನ್ನು ನಾಶಮಾಡಬಹುದೆಂದು ಆತನು ಇಂದು ನಮಗೆ ಆ ರೀತಿಯಾಗಿ ಆಶೀರ್ವದಿಸುವುದಿಲ್ಲ.

ನಾವು 70 ವರ್ಷಗಳ ಕಾಲ ನಂಬಿಗಸ್ಥರಾಗಿ ಬಾಳಿದ್ದರೂ, ಕರ್ತನ ಮುಂದೆ ಬರುವಾಗ, ಹೊಸದಾಗಿ ಮಾನಸಾಂತರ ಹೊಂದಿದ ಆಧಾರದಲ್ಲಿ ಮಾತ್ರ ಯೇಸುವಿನ ಹೆಸರಿನಲ್ಲಿ ನಾವು ಬರಬಹುದು. ಅನೇಕ ವಿಶ್ವಾಸಿಗಳು ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಂಡಿಲ್ಲ. ಅದಕ್ಕಾಗಿಯೇ, ಅವರು ಈಗಲೂ ಸಹ ಹಳೆ ಒಡಂಬಡಿಕೆಯಲ್ಲಿ ದೇವರು ಜನರಿಗೆ ವಾಗ್ದಾನ ಮಾಡಿದಂಥ ಸಂಗತಿಗಳ ಹಿಂದೆ ಹೋಗುತ್ತಾರೆ. ಸತ್ಯವೇದದಿಂದ ಸಿಗುವ ಆಶೀರ್ವಾದಗಳ ಬಗ್ಗೆ ಬೋಧಿಸುವವರು, ಕೆಲವು ಆಯ್ದ ವಿಷಯಗಳ ಬಗ್ಗೆ ಮಾತ್ರ ಬೋಧಿಸುತ್ತಾರೆ. ಉದಾಹರಣೆಗೆ, ಹಳೆ ಒಡಂಬಡಿಕೆಯಿಂದ ಉಂಟಾಗುವ ಸಮೃದ್ಧಿಯ (ಆಶೀರ್ವಾದಗಳ) ಬಗ್ಗೆ ಧರ್ಮೋಪದೇಶಕಾಂಡ 28:11ರಲ್ಲಿ ನಾವು ಓದುವಂತೆ, ದೇವರು ಇಸ್ರಾಯೇಲ್ಯರೊಗೆ ಬಹಳಷ್ಟು ಹಣ ಮತ್ತು ಅನೇಕ ಮಕ್ಕಳ ಭಾಗ್ಯದ ಬಗ್ಗೆ ವಾಗ್ದಾನ ಮಾಡಿದ್ದಾರೆ. ಆದರೆ ಈ ಬೋಧಕರು ಎರಡನೇ ಭಾಗವನ್ನು - ಅಂದರೆ ಮಕ್ಕಳ ಭಾಗ್ಯದ ಬಗ್ಗೆ ಬೋಧಿಸುವುದಿಲ್ಲ. ಇದರಿಂದಾಗಿ, ಅವರು ಪ್ರಾಮಾಣಿಕರಲ್ಲ ಎಂಬುದು ಸಾಬೀತಾಗುತ್ತದೆ. ದೇವರು ನಿಮಗೆ ಅನೇಕ ಮಕ್ಕಳ ಆಶೀರ್ವಾದವನ್ನು ಕೊಡುತ್ತಾನೆ ಎಂದು ಈ ಬೋಧಕರು ಬೋಧಿಸುವುದನ್ನು ನಾನೆಂದೂ ಕೇಳಿಲ್ಲ. ಈ ಬೋಧಕರು ಬಹಳ ಮೋಸಗಾರರು ಎಂಬುದಾಗಿ ಸಾಬೀತುಪಡಿಸಲು ಇದೊಂದೇ ಸಂಗತಿ ಸಾಕು. ಅವರು ಭೌತಿಕ ಅಭಿವೃದ್ದಿಗಳನ್ನು ಬೋಧಿಸುತ್ತಾರೆ. ಏಕೆಂದರೆ ಅವರು ಹಳೆ ಒಡಂಬಡಿಕೆಯ ವಾಕ್ಯದಲ್ಲಿ ಸಂಬಂಧವಿಲ್ಲದ್ದನ್ನು ಉಲ್ಲೇಖಿಸುವ ಮೂಲಕ, ತಮ್ಮ ಅಗಾಧವಾದ ಐಶ್ವರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ (ಅವರು ಅನೇಕ ಬಡ ವಿಶ್ವಾಸಿಗಳ ಹಣವನ್ನು ಪಡೆದುಕೊಳ್ಳುವುದರ ಮೂಲಕ ಅವರು ಶ್ರೀಮಂತರಾಗಿರುತ್ತಾರೆ). ಇಂತಹ ಬೋಧಕರಿಂದ ಮೋಸ ಹೋಗಬೇಡಿರಿ.

ವಚನ 1:3ರಲ್ಲಿ "ಆತ್ಮಿಕ ವರಗಳು" ಎಂಬ ಪದವನ್ನು "ಪವಿತ್ರಾತ್ಮನ ಆಶೀರ್ವಾದ" ಎಂಬುದಾಗಿ ಅನುವಾದಿಸಬಹುದು. ದೇವರು ಈಗಾಗಲೇ ಕ್ರಿಸ್ತನಲ್ಲಿ ಪವಿತ್ರಾತ್ಮನ ಪ್ರತಿಯೊಂದು ವರವನ್ನು ನಮಗೆ ಕೊಟ್ಟಿದ್ದಾರೆ. ನಾವು ಅವುಗಳನ್ನು ಯೇಸುವಿನ ನಾಮದಲ್ಲಿ ಮಾತ್ರ ಪಡೆದುಕೊಳ್ಳಬೇಕು. ಈ ರೀತಿಯಾಗಿ ಕಲ್ಪಿಸಿಕೊಳ್ಳಿ. ರಸ್ತೆ ಬದಿಯಲ್ಲಿ ಒಬ್ಬ ಹುಡುಗಿ ಭಿಕ್ಷೆ ಬೇಡುತ್ತಿದ್ದಾಳೆ. ಅಲ್ಲಿಗೆ ಒಬ್ಬ ಶ್ರೀಮಂತ ರಾಜ ಬಂದು ಆಕೆಯನ್ನು ಮದುವೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ ಮತ್ತು ಆಕೆಯ ಬ್ಯಾಂಕ್ ಖಾತೆಗೆ ಮಿಲಿಯಗಟ್ಟಲೆ ರೂಪಾಯಿಗಳನ್ನು ಜಮಾ ಮಾಡುತ್ತಾನೆ. ಆಕೆ ಯಾವುದೇ ಸಮಯದಲ್ಲಿಯೂ ಆ ಹಣವನ್ನು ಪಡೆಯಬಹುದು. ಅವಳೆಂಥ ಅದೃಷ್ಠವಂತ ಹುಡುಗಿ! ಒಂದೊಮ್ಮೆ ಆಕೆಯ ಬಳಿ ಏನೂ ಇರಲಿಲ್ಲ. ಸಣ್ಣ ಡಬ್ಬಿಯಲ್ಲಿ ಕೆಲವು ನಾಣ್ಯಗಳು ಮಾತ್ರ ಇದ್ದವು. ಆದರೆ ಈಗ ಆಕೆಯು ಅದ್ದೂರಿತನದಿಂದ ಚೆನ್ನಾಗಿರುವ ಬಟ್ಟೆಗಳನ್ನು ಹಾಕುತ್ತಾಳೆ. ಆಕೆಯು ಬ್ಯಾಂಕ್‌ನಿಂದ ಎಷ್ಟೇ ಮೊತ್ತದ ಹಣವನ್ನಾದರೂ ತೆಗೆದುಕೊಳ್ಳಬಹುದು, ಏಕೆಂದರೆ ರಾಜನು ಸಹಿ ಹಾಕಿದ ಅನೇಕ ಖಾಲಿ ಚೆಕ್‌ಗಳು ಆಕೆಯ ಬಳಿ ಇವೆ. ನಮ್ಮ ಚಿತ್ರಣವು (ಸ್ಥಿತಿಯೂ) ಇದೇ ರೀತಿಯದ್ದಾಗಿದೆ. ಆತ್ಮಿಕವಾಗಿ ಮಾತನಾಡುವುದಾದರೆ, ಈಗ ನಾವು ಪರಲೋಕದ ಬ್ಯಾಂಕ್‌ಗೆ ಹೋಗುವವರಾಗಿದ್ದೇವೆ ಮತ್ತು ಪವಿತ್ರಾತ್ಮನ ಪ್ರತಿಯೊಂದು ವರಗಳನ್ನು ಪಡೆದುಕೊಳ್ಳುವವರಾಗಿದ್ದೇವೆ. ಏಕೆಂದರೆ ಕ್ರಿಸ್ತನ ನಾಮದಲ್ಲಿ ಅವುಗಳೆಲ್ಲವೂ ನಮ್ಮವುಗಳಾಗಿವೆ. ಕ್ರಿಸ್ತನಲ್ಲಿ ಪರಲೋಕದಲ್ಲಿನ ಎಲ್ಲವುಗಳು ನಮ್ಮವುಗಳಾಗಿವೆ. ನಾವು ಆತನೊಡನೆ ಮದುವಣಗಿತ್ತಿಯ ಸಂಬಂಧದಲ್ಲಿ ಉಳಿದರೆ, ನಾವು ಈ ರೀತಿಯಾಗಿ ಹೇಳಬಹುದು, "ಕರ್ತನೇ, ಭೂಲೋಕದಲ್ಲಿ ನಿನ್ನ ವಧುವಾಗಿ ಎಲ್ಲಾ ದಿನವು ನಿನಗೆ ಪ್ರಾಮಾಣಿಕವಾಗಿರುತ್ತೇನೆ." ಆಗ ಪವಿತ್ರಾತ್ಮನ ಪ್ರತಿಯೊಂದು ವರಗಳು ನಮ್ಮದಾಗುತ್ತವೆ. ಆ ವರಗಳನ್ನು ಪಡೆಯಲು ನಾವು ಅರ್ಹರು ಎಂದು ದೇವರಿಗೆ ನಾವು ಮನವರಿಕೆ ಮಾಡಬೇಕಾಗಿಲ್ಲ. ಏಕೆಂದರೆ ಆ ಯಾವುದೇ ವರಗಳನ್ನು ಪಡೆಯಲು ನಾವು ಅರ್ಹರಲ್ಲ. ಭಿಕ್ಷೆ ಬೇಡುವ ಹುಡುಗಿಯು ಎಲ್ಲಾ ಆಸ್ತಿಯನ್ನು ತಾನು ಉಚಿತವಾಗಿ ಪಡೆದುಕೊಳ್ಳುತ್ತೇನೆಂದು ಆಕೆ ಭಾವಿಸಿದ್ದಳೆಂದು ನೀವು ಊಹಿಸಿಕೊಳ್ಳುತ್ತೀರಾ? ಇಲ್ಲ. ನಾವು ಪಡೆದುಕೊಳ್ಳುವಂತಹ ಎಲ್ಲವೂ ದೇವರ ಕರುಣೆ (ದಯೆ) ಮತ್ತು ಕೃಪೆಯಾಗಿದೆ. ಪರಲೋಕದ ಎಲ್ಲಾ ಆಶೀರ್ವಾದಗಳನ್ನು ನಾವು ಪಡೆದುಕೊಳ್ಳಬಹುದು. ಏಕೆಂದರೆ ಕ್ರಿಸ್ತನಲ್ಲಿ ನಮಗೆ ಅವೆಲ್ಲವು ಉಚಿತವಾಗಿ ಕೊಡಲ್ಪಟ್ಟಿವೆ. ನಾವು ಅವುಗಳನ್ನು ಉಪವಾಸ ಮಾಡುವ ಮುಖಾಂತರವಾಗಲಿ ಅಥವಾ ನಮ್ಮ ಪ್ರಾರ್ಥನೆಗಳಿಂದಾಗಲಿ ಗಳಿಸುವುದಕ್ಕಾಗುವುದಿಲ್ಲ. ಅನೇಕರು ಪವಿತ್ರಾತ್ಮನ ವರಗಳನ್ನು ಪಡೆದುಕೊಳ್ಳುವುದಿಲ್ಲ. ಏಕೆಂದರೆ ಅವರು ಈ ರೀತಿಯಾಗಿ ಅವನ್ನು ಗಳಿಸಲು ಯತ್ನಿಸುತ್ತಾರೆ! ನಾವು ಅವುಗಳನ್ನು ಈ ರೀತಿಯಲ್ಲಿ ಪಡೆದುಕೊಳ್ಳಲಾಗುವುದಿಲ್ಲ. ಕ್ರಿಸ್ತನ ಅರ್ಹತೆಯ ಮೂಲಕವೇ ನಾವು ಅವನ್ನು ಸ್ವೀಕರಿಸಬೇಕು.

ಕರ್ತನು ಹೇಗೆ ಈ ಪಾಠವನ್ನು ನನಗೆ ಕಲಿಸಿಕೊಟ್ಟನು ಎಂಬುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾನು ನನ್ನ ಇಹಲೋಕದ ಒಂದು ಅಗತ್ಯತೆಗಾಗಿ ಒಂದು ಸಲ ಪ್ರಾರ್ಥಿಸುವಾಗ, "ದೇವರೇ, ಅನೇಕ ವರ್ಷಗಳ ಕಾಲ ನಾನು ನಿನಗೆ ಸೇವೆ ಸಲ್ಲಿಸಿದ್ದೇನೆ. ಹಾಗಾಗಿ ಈ ಆಶೀರ್ವಾದವನ್ನು ನೀನು ನನಗೆ ಕೊಡು" ಎಂಬುದಾಗಿ ಹೇಳಿದೆ. ಆಗ ಕರ್ತನು "ಇಲ್ಲ, ನೀನು ನಿನ್ನ ಸ್ವಂತ ನಾಮದಲ್ಲಿ ಬರುವುದಾದರೆ, ನಾನು ಇದನ್ನು ಮಾಡುವುದಿಲ್ಲ” ಎಂಬುದಾಗಿ ಹೇಳಿದನು. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವುದೆಂದರೆ ಏನು ಎಂದು ಆ ದಿನ ನಾನು ಅರ್ಥಮಾಡಿಕೊಂಡೆ. ಆ ದಿನ ನಾನು ಅರ್ಥಮಾಡಿಕೊಂಡದ್ದೇನೆಂದರೆ, ಹೊಸದಾಗಿ ಈಗ ತಾನೇ ಮಾನಸಾಂತರ ಹೊಂದಿದ ವಿಶ್ವಾಸಿಯೂ ಮತ್ತು 1959 ರಲ್ಲಿ ಮಾನಸಾಂತರ ಹೊಂದಿದ ನಾನೂ - ನಾವಿಬ್ಬರೂ ದೇವರ ಬಳಿಗೆ ಒಂದೇ ಆಧಾರದಲ್ಲಿ ಅಂದರೆ, ಯೇಸು ಕ್ರಿಸ್ತನ ಅರ್ಹತೆಯಲ್ಲಿ ಮಾತ್ರ ಬರಬೇಕು ಎಂಬುದಾಗಿ. ಆ ಹೊಸ ವಿಶ್ವಾಸಿಯು ಪರಲೋಕದ ಬ್ಯಾಂಕ್‌ಗೆ ಯೇಸು ಕ್ರಿಸ್ತನು ಸಹಿ ಹಾಕಿದ ಚೆಕ್‌ನೊಂದಿಗೆ ಬರುತ್ತಾನೆ. ನಾನು ಸಹ ಯೇಸು ಕ್ರಿಸ್ತನು ಸಹಿ ಹಾಕಿದ ಚೆಕ್‌ನೊಂದಿಗೆ ಅಲ್ಲಿಗೆ ಬರುತ್ತೇನೆ. ಒಂದು ವೇಳೆ ನಾನು ದೇವರ ಬಳಿ ಬಂದು, ನಾನು ಅನೇಕ ವರ್ಷಗಳು ನಿನಗೆ ನಂಬಿಗಸ್ಥನಾಗಿದ್ದೆನೆ ಎಂದು ಹೇಳಿದ ನಂತರ ನಾನು ಪರಲೋಕದ ಬ್ಯಾಂಕ್‌ಗೆ ನನ್ನ ಸಹಿಯೊಂದಿಗೆ ಬಂದರೆ. ಪರಲೋಕದ ಬ್ಯಾಂಕ್ ಇದನ್ನು ತಿರಸ್ಕರಿಸುತ್ತದೆ. ಇದೇ ಕಾರಣಕ್ಕಾಗಿ ನಮ್ಮ ಅನೇಕರ ಪ್ರಾರ್ಥನೆಗಳಿಗೆ ಉತ್ತರ ದೊರಕಿರುವುದಿಲ್ಲ. ಏಕೆಂದರೆ ನಾವು ಯೇಸುವಿನ ನಾಮದಲ್ಲಿ ಹೋಗದೆ, ನಮ್ಮ ಹೆಸರಿನಲ್ಲಿ ಹೋಗುತ್ತಿದ್ದೇವೆ. ನಾವು ದೇವರಿಗಾಗಿ ತುಂಬಾ ತ್ಯಾಗ ಮಾಡಿದ್ದೇವೆ, ಆತನು ನಮ್ಮ ಪ್ರಾರ್ಥನೆಗೆ ಉತ್ತರಿಸಲೇಬೇಕು ಎಂದು ನಾವು ಯೋಚಿಸುತ್ತೇವೆ. ನಾವು ಆತನಿಗೆ 70 ವರ್ಷಗಳ ಕಾಲ ನಂಬಿಗಸ್ಥರಾಗಿದ್ದರೂ, ನಾವು ದೇವರ ಮುಂದೆ ಬಂದಾಗ, ನಾವು ಹೊಸದಾಗಿ ಮಾನಸಾಂತರ ಹೊಂದಿದವನ ಹಾಗೆ - "ಯೇಸುವಿನ ಹೆಸರಿನಲ್ಲಿ" ಮಾತ್ರ ಬರಬಹುದು. ಈ ಪ್ರಕಟಣೆಗಾಗಿ ದೇವರಿಗೆ ಸ್ತೋತ್ರ. ಏಕೆಂದರೆ, ಆ ನಂತರ ನಾನು ದೇವರ ಬಳಿಗೆ ನನ್ನ ಹೆಸರಿನ ಚೆಕ್ ತೆಗೆದುಕೊಂಡು ಹೋಗುತ್ತಿರಲಿಲ್ಲ! ಆ ರೀತಿಯಲ್ಲಿ ನಡೆಯಲು ನಾನು ಶೋಧಿಸಲ್ಪಟ್ಟಾಗ, "ಈ ಚೆಕ್ಕಿ‌ನಿಂದ ನಾನೆಂದಿಗೂ ಹಣ ಪಡೆಯಲಾಗುವುದಿಲ್ಲ ’ಯೇಸುವಿನ’ ಹೆಸರಿನಲ್ಲಿ ಹೋಗಲು ನನ್ನನ್ನು ಬಿಡು ಮತ್ತು ಆತನ ಅರ್ಹತೆಯಿಂದ ಮಾತ್ರ ನಾನು ಹಣವನ್ನು ಪಡೆದುಕೊಳ್ಳಲು ಸಾಧ್ಯ" ಎಂಬುದಾಗಿ ನಾನು ಹೇಳುತ್ತೇನೆ. ಆದ್ದರಿಂದ ಕ್ರಿಸ್ತನಲ್ಲಿನ ಸ್ವರ್ಗೀಯ ಸ್ಥಳಗಳಲ್ಲಿ ಪವಿತ್ರಾತ್ಮನ ಪ್ರತಿಯೊಂದು ವರವೂ ನಮ್ಮದಾಗಿವೆ.