WFTW Body: 

ಈ ಭೂಮಿಯಲ್ಲಿ ನಡೆದ ಮಹಾ ಯುದ್ಧದ ಬಗ್ಗೆ ಜಗತ್ತಿನ ಯಾವುದೇ ಚರಿತ್ರೆಯ ಪುಸ್ತಕಗಳಲ್ಲಿ ಬರೆದಿಲ್ಲ. ಈ ಪ್ರಪಂಚದ ರಾಜಕುಮಾರನಾದ ಸೈತಾನನನ್ನು ತನ್ನ ಮರಣದ ಮೂಲಕ ಯೇಸುವು ಸೋಲಿಸಿದಾಗ ಕಲ್ವಾರಿಯಲ್ಲಿ ಅದು ಬರೆಯಲ್ಪಟ್ಟಿತು. ನಮ್ಮ ಜೀವನದಲ್ಲಿ ಎಂದಿಗೂ ನಾವು ಮರೆಯಬಾರದ ಒಂದು ವಚನವೆಂದರೆ, ಇಬ್ರಿಯ. 2:14,15. ಸೈತಾನನು ಈ ವಚನವನ್ನು ಕೇಳಬಯಸುವುದಿಲ್ಲವೆಂದು ನನಗೆ ಖಚಿತವಾಗಿದೆ.

ಯಾವನೂ ತನ್ನ ಸೋಲು ಅಥವಾ ಪರಾಭವದ ಬಗ್ಗೆ ಕೇಳಲು ಬಯಸುವುದಿಲ್ಲ. ಅದಕ್ಕೆ ಸೈತಾನನೂ ಹೊರತಾಗಿಲ್ಲ. ಆ ವಚನ ಇಲ್ಲಿದೆ. "ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳಾಗಿರುವುದರಿಂದ ಆತನೂ (ಯೇಸುವು) ಅವರಂತೆಯೇ ಆದನು. ತನ್ನ (ಯೇಸುವಿನ) ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡುವುದಕ್ಕೂ, ಮರಣ ಭಯದ ದೆಸೆಯಿಂದ, ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ಮಾಂಸಧಾರಿಯಾದನು"

ಯೇಸು ಸತ್ತಾಗ ಅವನು ಸೈತಾನನನ್ನು ಬಲಹೀನನಾಗಿ ಮಾಡಿದನು. ಯಾಕೆ? ನಾವು ಎಂದೆಂದಿಗೂ ಸೈತಾನನಿಂದ ಮತ್ತು ಅವನು ನಮ್ಮಲ್ಲಿ ಹಾಕಿದ ಭಯದ ದಾಸತ್ವದಿಂದ, ನಮ್ಮ ಜೀವನವಿಡೀ ನಾವು ಮುಕ್ತವಾಗಿರುವ ಸಲುವಾಗಿ. ಈ ಜಗತ್ತಿನಲ್ಲಿ ಜನರಿಗೆ ಅನೇಕ ರೀತಿಯ ಭಯಗಳಿವೆ - ಕಾಯಿಲೆಯ ಭಯ, ಬಡತನದ ಭಯ, ಸೋಲಿನ ಭಯ, ಜನರ ಭಯ, ಭವಿಷ್ಯದ ಭಯ ಇತ್ಯಾದಿ. ಎಲ್ಲಾ ಭಯಗಳಲ್ಲಿ ಅತಿಯಾದ ಭಯವೆಂದರೆ, ಸಾವಿನ ಭಯ. ಬೇರೆ ಎಲ್ಲ ಭಯವು ಸಾವಿನ ಭಯಕ್ಕೆ ಕೀಳಾದುದು. ಸಾವಿನ ಭಯವು, ಸಾವಿನ ನಂತರ ಏನಾಗುತ್ತದೆ ಎಂಬ ಭಯಕ್ಕೆ ಮುನ್ನಡೆಸುತ್ತದೆ. ಪಾಪದಲ್ಲಿ ಜೀವಿಸುವವರು ನರಕಕ್ಕೆ - ಮಾನಸಾಂತರ ಹೊಂದದವರಿಗೆ ದೇವರು ಮೀಸಲಾಗಿಟ್ಟಿರುವ ಜಾಗಕ್ಕೆ ಹೋಗುವರೆಂದು ಸತ್ಯವೇದವು ನಮಗೆ ಬೋಧಿಸುತ್ತದೆ. ಸೈತಾನನು, ತಾನು ಮೋಸಗೊಳಿಸಿದವರೊಡನೆ ಮತ್ತು ತಾನು ಈ ಭೂಮಿಯಲ್ಲಿ ಪಾಪಕ್ಕೆ ಮುನ್ನಡೆಸಿದವರೊಡನೆ, ನಿತ್ಯತ್ವವನ್ನು ಬೆಂಕಿಯ ಕೆರೆಯಲ್ಲಿ ಕಳೆಯುವನು.

ನಮ್ಮ ಪಾಪಗಳ ಶಿಕ್ಷೆಯನ್ನು ತಾನೇ ತೆಗೆದುಕೊಂಡು ನಿತ್ಯನಿರಂತರದ ನರಕದಿಂದ ನಮ್ಮನ್ನು ರಕ್ಷಿಸಲು ಯೇಸುವು ಭೂಮಿಗೆ ಬಂದನು. ನಮಗೆ ಮತ್ತೆ ತೊಂದರೆ ಮಾಡದಂತೆ, ಅವನು ನಮ್ಮ ಮೇಲೆ ಸೈತಾನನ ಬಲವನ್ನು ನಾಶಪಡಿಸಿದನು. ಈ ಒಂದು ಸತ್ಯವನ್ನು ನಿಮ್ಮ ಜೀವನದುದ್ದಕ್ಕೂ ನೆನಪಿಡಿ: ಸೈತಾನನ ವಿರುದ್ಧವಾಗಿ, ಎಂದಿಗೂ ದೇವರು ನಿಮ್ಮೊಡನಿರುವನು. ನನಗೆ ಸಾಂತ್ವನ ಹಾಗೂ ಉತ್ತೇಜನ ಮತ್ತು ಜಯವನ್ನು ತಂದಿರುವ ಮಹಿಮಾಭರಿತ ಸತ್ಯ ಇದಾಗಿದೆ. ನಾನಿದನ್ನು ಜಗತ್ತಿನ ಪ್ರತಿಯೊಬ್ಬ ವಿಶ್ವಾಸಿಗೂ ಹೇಳಬಹುದಾಗಿದ್ದರೆ ಬಹಳ ಚೆನ್ನಾಗಿತ್ತು ಎಂದು ನನ್ನ ಆಸೆ. ಸತ್ಯವೇದ ಹೇಳುವುದೇನೆಂದರೆ, "ಸೈತಾನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು" (ಯಾಕೋ. 4:7)ಎಂದು. ಯೇಸುವಿನ ನಾಮವೇ ಸೈತಾನನು ಹೆದರಿ ಓಡಿಹೋಗುವಂತೆ ಮಾಡುವ ನಾಮ. ಅನೇಕ ವಿಶ್ವಾಸಿಗಳ ಮನದಲ್ಲಿರುವ ಚಿತ್ರವೆಂದರೆ, ಸೈತಾನನು ತಮ್ಮನ್ನು ಅಟ್ಟಿಸುವುದು ಮತ್ತು ಅವರು ಅವನಿಂದ ತಮ್ಮ ಜೀವಕ್ಕಾಗಿ ಓಡಿಹೋಗುವುದು. ಆದರೆ ಅದರ ವಿರುದ್ಧವಾದುದ್ದನ್ನೇ ಸತ್ಯವೇದ ಬೋಧಿಸುತ್ತದೆ. ನೀನೇನು ಯೋಚಿಸುತ್ತಿ? ಸೈತಾನನು ಯೇಸುವಿಗೆ ಹೆದರಿದನೋ ಇಲ್ಲವೋ? ನಮ್ಮ ರಕ್ಷಕನ ಮುಂದೆ ನಿಲ್ಲಲು ಸೈತಾನನು ಹೆದರಿದನೆಂದು ನಮಗೆಲ್ಲರಿಗೂ ತಿಳಿದಿದೆ. ಯೇಸುವು ಈ ಜಗತ್ತಿನ ಬೆಳಕು ಹಾಗೂ ಕತ್ತಲೆಯ ರಾಜಕುಮಾರನು ಅವನಿಂದ ನಾಪತ್ತೆಯಾಗಬೇಕಿತ್ತು.

ಸ್ವರ್ಗದಿಂದ ಸೈತಾನನ ಬೀಳುವಿಕೆಯನ್ನು ಯೇಸುವು ಹೇಗೆ ನೋಡಿದನೆಂಬುದನ್ನು ತನ್ನ ಶಿಷ್ಯರಿಗೆ ಹೇಳಿದನು. ದೇವರು ಸೈತಾನನನ್ನು ಹೊರದಬ್ಬಿದಾಗ, ಸೈತಾನನ ಬೀಳುವಿಕೆಯು "ಸಿಡಿಲಿನಂತೆ" ಇತ್ತು (ಲೂಕ. 10:18) ಎಂಬುದಾಗಿ ಯೇಸುವು ಅಲ್ಲಿ ಹೇಳಿದನು. ಅರಣ್ಯದಲ್ಲಿ ಯೇಸುವು ಸೈತಾನನಿಗೆ, "ನನ್ನಿಂದ ತೊಲಗು" ಎಂದು ಹೇಳಿದಾಗ, ಅವನು ಸಿಡಿಲಿನ ವೇಗದಿಂದ ಯೇಸುವಿನ ಸಮ್ಮುಖದಿಂದ ನಾಪತ್ತೆಯಾದನು. ಇಂದು ಯೇಸುವಿನ ನಾಮದಲ್ಲಿ ನಾವು ಸೈತಾನನನ್ನು ವಿರೋಧಿಸುವಾಗ, ಅವನು ಬೆಳಕಿನ ವೇಗದಲ್ಲಿಯೇ ನಮ್ಮಿಂದ ಪಲಾಯನಗೊಳ್ಳುವನು. ಕತ್ತಲೆಯು ಬೆಳಕಿನ ಮುಂದೆ ಪಲಾಯನಗೊಳ್ಳುವುದು.

ಸೈತಾನನು ಯೇಸುವಿನ ಹೆಸರಿಗೆ ಹೆದರುತ್ತಾನೆ. ಯೇಸುವು ಕರ್ತನೆಂಬುದನ್ನು ನೆನಪಿಸುವುದನ್ನು ಅವನು ಹೆದರುತ್ತಾನೆ. ಸೈತಾನನು ಶಿಲುಬೆಯ ಮೇಲೆ ಸೋಲಿಸಲ್ಪಟ್ಟನೆಂಬುದನ್ನು ಮತ್ತು ಕ್ರಿಸ್ತಯೇಸುವು ಕರ್ತನೆಂಬುದನ್ನು ದೆವ್ವಪೀಡಿತರು ಹೇಳುವುದಿಲ್ಲ. ಮಿಂಚಿನ/ಸಿಡಿಲಿನ ವೇಗದಲ್ಲಿ ದೆವ್ವವನ್ನು ಬಿಡಿಸಲು ಅಥವಾ ಸೈತಾನನನ್ನು ಓಡಿಸಲು ಯೇಸುಕ್ರಿಸ್ತನ ಹೆಸರಿನಲ್ಲಿ ಬಲವಿದೆ. ಅದನ್ನೆಂದಿಗೂ ನೀನು ಮರೆಯಬೇಡ.

ನಿನ್ನ ಜೀವನದ ಯಾವುದೇ ಸಮಯದಲ್ಲಿ, ನೀನು ಎಂಥದೇ ಕಷ್ಟದಲ್ಲಿದ್ದರೆ, ಅಥವಾ ಜಯಿಸಲಸಾಧ್ಯವಾದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀನು ಎದುರಿಸುತ್ತಿರುವುದಕ್ಕೆ ಮಾನವೀಯವಾಗಿ ಉತ್ತರವಿಲ್ಲವೆಂದು ನಿನಗನಿಸುತ್ತಿದ್ದರೆ, ಕರ್ತನ ಹೆಸರನ್ನು ಕರೆದು ಪ್ರಾರ್ಥಿಸು. ಅವನಿಗೆ ನೀನು ಹೇಳುವವನಂತನಾಗು, "ಕರ್ತನಾದ ಯೇಸುವೇ, ಸೈತಾನನ ವಿರುದ್ಧವಾಗಿ ನೀನು ನನ್ನೊಡನಿರುವೆ. ನನಗೀಗ ನೆರವಾಗು" ಹಾಗೂ ಸೈತಾನನೆಡೆಗೆ ತಿರುಗಿ ಹೇಳುವವನಂತನಾಗು, " ಸೈತಾನನೇ, ಕರ್ತನ ಹೆಸರಿನಲ್ಲಿ ನಾನು ನಿನ್ನನ್ನು ವಿರೋಧಿಸುತ್ತೇನೆ". ಸೈತಾನನು ತಕ್ಷಣವೇ ನಿನ್ನಿಂದ ಪಲಾಯನಗೊಳ್ಳುವನೆಂದು ನಾನು ನಿಮಗೆ ಹೇಳುತ್ತೇನೆ. ಯಾಕೆಂದರೆ, ಯೇಸುವು ಶಿಲುಬೆಯ ಮೇಲೆ ಅವನನ್ನು ಸೋಲಿಸಿದನು. ನೀನು ದೇವರ ಬೆಳಕಿನಲ್ಲಿ ನಡೆಯುವಾಗ, ಮತ್ತು ಯೇಸುವಿನ ಹೆಸರಿನಲ್ಲಿ ಅವನನ್ನು ವಿರೋಧಿಸುವಾಗ, ಸೈತಾನನು ನಿನ್ನ ಎದುರು ಬಲಹೀನನು.

ಅವನ ಸೋಲಿನ ಬಗ್ಗೆ ನೀನು ತಿಳಿದುಕೊಂಡಿರುವುದು ಸೈತಾನನಿಗೆ ಇಷ್ಟವಿಲ್ಲ ಹಾಗೂ ಅದಕ್ಕಾಗಿಯೇ ಈ ತನಕ ನೀನು ಅದನ್ನು ಕೇಳುವುದನ್ನು ಅವನು ತಡೆದಿದ್ದಾನೆ. ಆದಕ್ಕಾಗಿಯೇ ಆನೇಕ ಬೋಧಕರು ಕೂಡ ಅದನ್ನು ಬೋಧಿಸುವುದನ್ನು ಅವನು ತಡೆಹಿಡಿದಿದ್ದಾನೆ. ಸೈತಾನನನ್ನು ಒಂದೇ ಸಲ ನಮ್ಮ ಕರ್ತನಾದ ಯೇಸುಕ್ರಿಸ್ತನು ಶಿಲುಬೆಯ ಮೇಲೆ ಸೋಲಿಸದನೆಂಬುದನ್ನು ನೀನು ಸ್ಪಷ್ಟವಾಗಿ ತಿಳಿಯಬೇಕು. ಇನ್ನೆಂದಿಗೂ ನೀನು ಸೈತಾನನ ಬಗ್ಗೆ ಹೆದರಬೇಕಾಗಿಲ್ಲ. ಅವನು ನಿನಗೆ ಯಾವುದೇ ತೊಂದರೆ ಮಾಡಲಾಗುವುದಿಲ್ಲ. ಅವನು ನಿನಗೆ ಯಾವುದೇ ಹಾನಿ ಮಾಡಲಾರನು.

ಅವನು ನಿನ್ನನ್ನು ಶೋಧಿಸಬಹುದು. ಅವನು ನಿನ್ನ ಮೇಲೆ ದಾಳಿ ಮಾಡಬಹುದು. ಆದರೆ, ನೀನು ನಿನ್ನನ್ನೇ ದೀನನಾಗಿಸಿ ದೇವರಿಗೆ ಒಪ್ಪಿಸಿಕೊಟ್ಟರೆ (ದೇವರ ವಶಕ್ಕೆ ಕೊಟ್ಟರೆ) ಹಾಗೂ ಎಲ್ಲಾ ಕಾಲದಲ್ಲೂ ಅವನ ಬೆಳಕಿನಲ್ಲಿ ನಡೆದರೆ, ಕ್ರಿಸ್ತನಲ್ಲಿ ದೇವರ ಕೃಪೆಯು ಸೈತಾನನ ಮೇಲೆ ನಿನ್ನನ್ನು ಸದಾ ಜಯಶಾಲಿಯನ್ನಾಗಿ ಮಾಡುವುದು. ಬೆಳಕಿನಲ್ಲಿ ಮಹತ್ತರವಾದ ಬಲವಿದೆ. ಕತ್ತಲೆಯ ರಾಜಕುಮಾರನಾದ ಸೈತಾನನು ಎಂದಿಗೂ ಬೆಳಕಿನ ಸ್ತರವನ್ನು ಪ್ರವೇಶಿಸಲಾರನು. ಸೈತಾನನಿಗೆ ಅನೇಕ ವಿಶ್ವಾಸಿಗಳ ಮೇಲೆ ಬಲವಿದೆಯೆಂದರೆ, ಅವರು ಕತ್ತಲೆಯಲ್ಲಿ -ಯಾವುದೋ ಒಂದು ಗುಟ್ಟಾದ ಪಾಪದಲ್ಲಿದ್ದು - ಇತರರನ್ನು ಕ್ಷಮಿಸದಿರುವುದು ಅಥವಾ ಇತರರ ಬಗ್ಗೆ ಹೊಟ್ಟೆಕಿಚ್ಚಿನಿಂದಿರುವುದು, ಯಾವುದೇ ಒಂದು ಸ್ವಾರ್ಥ ಆಕಾಂಕ್ಷೆಯಿಂದಿರುವುದು ಇತ್ಯಾದಿ ಪಾಪಗಳಲ್ಲಿ ಅವರು ನಡೆಯುತ್ತಿದ್ದಾರೆ. ಆಗ ಸೈತಾನನಿಗೆ ಅವರ ಮೇಲೆ ಬಲ ಸಿಗುತ್ತದೆ. ಇಲ್ಲದಿದ್ದರೆ ಅವನು ಅವರನ್ನು ಮುಟ್ಟಲಾಗುವುದಿಲ್ಲ.