WFTW Body: 

ಪರಮ ಗೀತ 1:4ರಲ್ಲಿ ನಾವು ನೋಡುವಂತೆ, ವಧುವು ತನ್ನ ಪ್ರಿಯನನ್ನು "ನನ್ನ ರಾಜನು" ಎಂದು ಕರೆಯುತ್ತಾಳೆ. ನಾವು ಯೇಸುವನ್ನು ನಮ್ಮ ವರನಾಗಿ ಅರಿತುಕೊಳ್ಳುವದಕ್ಕೆ ಮೊದಲು, ಆತನನ್ನು ನಮ್ಮ ರಾಜನಾಗಿ ಅರಿಯಬೇಕು. ಅನೇಕ ಕ್ರೈಸ್ತರು ಕರ್ತನೊಂದಿಗೆ ಪ್ರೇಮದ ಸಂಬಂಧವನ್ನು ಹೊಂದಲು ಸಂಪೂರ್ಣವಾಗಿ ವಿಫಲರಾಗುವದಕ್ಕೆ ಕಾರಣ, ಅವರು ಆತನನ್ನು ತಮ್ಮ ಇಡೀ ಬಾಳಿನ ಕರ್ತನಾಗಿ ಮತ್ತು ರಾಜನಾಗಿ ಅರಿತಿರುವದಿಲ್ಲ. ಅವರ ಜೀವನದ ಕೆಲವು ಅಂಶಗಳು ಇನ್ನೂ ದೇವರ ವಶಕ್ಕೆ ಒಪ್ಪಿಸಲ್ಪಟ್ಟಿಲ್ಲ.

ಪರಮ ಗೀತ 1:5ರಲ್ಲಿ "ಯೆರೂಸಲೇಮಿನ ನಾರಿಯರು" ಅಥವಾ "ಯೆರೂಸಲೇಮಿನ ಸ್ತ್ರೀಯರ" ಬಗ್ಗೆ ನಾವು ಓದಿಕೊಳ್ಳುತ್ತೇವೆ. ಈ ವಿವರಣೆಯು ಕರ್ತನನ್ನು ಮನ:ಪೂರ್ವಕವಾಗಿ ಪ್ರೀತಿಸದ, ಅರೆಹೃದಯದ ವಿಶ್ವಾಸಿಗಳನ್ನು ಸೂಚಿಸುತ್ತದೆ. ಅವರಿಗೆ "ಕ್ರೈಸ್ತ" ಸೇವೆ ಅಂದರೆ - ಬೋಧನೆ, ಕಲಿಸುವುದು, ಸತ್ಯವೇದದ ಅಭ್ಯಾಸ, ಇತ್ಯಾದಿಗಳಲ್ಲಿ - ಹೆಚ್ಚಿನ ಆಸಕ್ತಿ ಇರುತ್ತದೆಯೇ ಹೊರತು, ವೈಯಕ್ತಿಕವಾಗಿ ಯೇಸುವಿನಲ್ಲಿ ಭಯಭಕ್ತಿ ಇರುವದಿಲ್ಲ. ಅವರು ಪಾಪದ ಜೀವಿತವನ್ನು ಜೀವಿಸುವದಿಲ್ಲವಾದರೂ ಕರ್ತನಿಗಾಗಿ ಪೂರ್ಣ ಹೃದಯದ ಪ್ರೀತಿಯೂ ಅವರಲ್ಲಿ ಇರುವದಿಲ್ಲ. ಕರ್ತನಿಗೆ ಬೇಕಾಗಿರುವವರು ವಧುವಿನ ಹೃದಯ ಇರುವವರು, ತಮ್ಮನ್ನು ಆತನಿಗೆ ಮುಡಿಪಾಗಿರಿಸಿ, ಪ್ರೀತಿಯುಳ್ಳ ಹೃದಯದಿಂದ ಸೇವೆ ಮಾಡುವಂಥವರು.

ವಧುವು ಈ ಸ್ತೀಯರಿಗೆ ಹೀಗೆನ್ನುತ್ತಾಳೆ, "ನಾನು ಗುಡಾರಗಳಂತೆ ಕಪ್ಪಾಗಿದ್ದರೂ ಚಂದವುಳ್ಳವಳು," (ಪರಮಗೀತೆ 1:5). ಇವಳ ಮಾತಿನ ಅರ್ಥ, ತನ್ನಲ್ಲಿ ಆಕರ್ಷಣೆ ಇರದಿದ್ದರೂ, ವರನು ತನ್ನನ್ನು ಆರಿಸಿಕೊಂಡಿದ್ದಾನೆ, ಎಂದು. ಸತ್ಯವೇದವು ತಿಳಿಸುವದು ಏನೆಂದರೆ, ದೇವರು ಪ್ರಾಥಮಿಕವಾಗಿ ಬಲಿಷ್ಠರು, ಕುಲೀನರು ಮತ್ತು ಜ್ಞಾನಿಗಳನ್ನು ಅರಿಸಲಿಲ್ಲ, ಬದಲಾಗಿ ಬಡವರನ್ನೂ, ಬುದ್ಧಿಹೀನರನ್ನೂ ಆರಿಸಿಕೊಂಡಿದ್ದಾನೆ (1 ಕೊರಿಂಥ 1:26-29). ನಮ್ಮಲ್ಲಿ ಕೆಲವರು ಬಹುಶಃ, "ನಾನು ಇತರರಂತೆ ಸಮರ್ಥನಲ್ಲ. ನಾನು ಜಾಣನಲ್ಲ. ನನ್ನಲ್ಲಿ ಇತರರಂತೆ ವಾಕ್ಚಾತುರ್ಯವಿಲ್ಲ. ನಾನು ಬಹಳ ಅಸಮರ್ಥನು," ಎಂದು ಭಾವಿಸಬಹುದು. ಹೀಗಿದ್ದರೂ ಕರ್ತನು ನಮ್ಮನ್ನು ಆರಿಸಿಕೊಂಡಿದ್ದಾನೆ!

ಯೆರೂಸಲೇಮಿನಲ್ಲಿ ಈಕೆಗಿಂತ ಸುಂದರಿಯರಾದ ಸ್ತ್ರೀಯರು ಇದ್ದರು. ಆದರೆ ವರನು ಈ ಕಪ್ಪಾದ ಸ್ತ್ರೀಯನ್ನು ಆರಿಸಿಕೊಂಡನು. ಯೇಸುವಿನ ಆಯ್ಕೆ, ಹೃದಯದ ಗುಣಮಟ್ಟವನ್ನು ಆಧರಿಸುತ್ತದೆಯೇ ಹೊರತು, ಅಂದಚಂದ, ವರಗಳು ಅಥವಾ ಸಾಮರ್ಥ್ಯಗಳನ್ನು ಅಲ್ಲ. ಇಲ್ಲಿ ನಾವು ಕಲಿಯಬೇಕಾದ ಒಂದು ಅಂಶವಿದೆ. ದೇವರ ದೃಷ್ಟಿಯಲ್ಲಿ ನಮ್ಮ ಪ್ರಾಕೃತಿಕ (ದೈಹಿಕ)ಸಾಮರ್ಥ್ಯ, ಕುಟುಂಬದ ಹಿನ್ನಲೆ ಮತ್ತು ಸಾಧನೆಗಳಿಗೆ ಯಾವ ಮಹತ್ವವೂ ಇರುವದಿಲ್ಲ. ಕರ್ತನು ಬಯಸುವದು ಭಯಭಕ್ತಿಯುಳ್ಳ ಹೃದಯವನ್ನು. ಕರ್ತನಿಗೆ ಬೇಕಾಗಿರುವದು ಇಂತಹ ಸೇವಕರು.

ವಧುವಿಗೆ ತಿಳಿದಿತ್ತು, ತಾನು ಕಪ್ಪಾಗಿದ್ದರೂ, ತನ್ನ ವರನ ದೃಷ್ಟಿಯಲ್ಲಿ ಸುಂದರಿಯಾಗಿದ್ದೇನೆ ಎಂದು. ಅನೇಕ ವಿವಾಹಿತ ಸ್ತ್ರೀಯರು, ತಮ್ಮ ಗಂಡಂದಿರು ತಮ್ಮನ್ನು ಸ್ವೀಕರಿಸುವದಿಲ್ಲ ಮತ್ತು ತಮ್ಮಲ್ಲಿ ಸಂತೋಷಿಸುವದಿಲ್ಲವೆಂದು ಚಿಂತಿಸಿ ಕೊರಗುತ್ತಾರೆ. ನಾನು ನನ್ನ ಹೆಂಡತಿಯಲ್ಲಿ ಸಂತೋಷಿಸುತ್ತೇನೆ. ಗಂಡಂದಿರಾದ ನೀವೆಲ್ಲರೂ ಇದನ್ನೇ ಮಾಡುತ್ತೀರಿ ಎಂದು ನಾನು ಹಾರೈಸುತ್ತೇನೆ. ನೀವು ನಿಮ್ಮ ಪತ್ನಿಯಲ್ಲಿ ಸಂತೋಷಿಸುತ್ತೀರಿ ಎನ್ನುವದನ್ನು ಆಕೆ ಅರ್ಥ ಮಾಡಿಕೊಳ್ಳುವದು ಬಹಳ ಅವಶ್ಯ. ಅದೇ ರೀತಿಯಾಗಿ, ಅನೇಕ ವಿಶ್ವಾಸಿಗಳು ಕರ್ತನು ತಮ್ಮಲ್ಲಿ ಸಂತೋಷಿಸುತ್ತಾನೆ ಎನ್ನುವದನ್ನು ಗ್ರಹಿಸಿಕೊಳ್ಳುವದಿಲ್ಲ. ಚೆಫನ್ಯ 3:17ರಲ್ಲಿ ಹೇಳಿರುವಂತೆ, "ನಿನ್ನ ದೇವರಾದ ಯೆಹೋವನು ನಿನ್ನ ಮಧ್ಯದಲ್ಲಿ ಶೂರನಾಗಿದ್ದಾನೆ. ನಿನ್ನಲ್ಲಿ ಆನಂದಿಸಿ ಹರ್ಷಧ್ವನಿ ಗೈಯುವನು." ನಾವು ಆತನ ಮಕ್ಕಳಾಗಿರುವದು ದೇವರಿಗೆ ಬಹಳ ಹರ್ಷ ನೀಡುತ್ತದೆ, ಎಂದು ನಿಮಗೆ ತಿಳಿದಿದೆಯೇ? ನಾವು ಮನುಷ್ಯರ ದೃಷ್ಟಿಯಲ್ಲಿ ಕುರೂಪಿಗಳಾಗಿ ಇರಬಹುದು, ಆದರೆ ದೇವರ ದೃಷ್ಟಿಯಲ್ಲಿ ಸುಂದರವಾಗಿ ಕಾಣುತ್ತೇವೆ. ಇದನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವದು ಬಹಳ ಮುಖ್ಯವಾದದ್ದು.

ಸುಂದರಿಯರಾದ ಯೆರೂಸಲೇಮಿನ ಮಹಿಳೆಯರೇ, ನಾನು""ಕಪ್ಪಾಗಿರುವುದರಿಂದ ನನ್ನನ್ನು ದಿಟ್ಟಿಸಿ ನೋಡಬೇಡಿರಿ, (ಪರಮಗೀತೆ 1:6). ಹಳ್ಳಿಯ ಒಬ್ಬ ಅಸಂಸ್ಕೃತೆ ಹುಡುಗಿಯಾಗಿದ್ದ ಆಕೆಯನ್ನು, ಯೆರೂಸಲೇಮಿನ ಪಟ್ಟಣದ ಚಮಕಿನ ಹುಡುಗಿಯರು ಕೀಳಾಗಿ ಕಾಣುತ್ತಿದ್ದರು. ಆದರೆ ವರನು ಪಟ್ಟಣದ ಚಲುವೆಯರಾದ ಎಲ್ಲಾ ಆಕರ್ಷಕ ಹುಡುಗಿಯರ ಬಳಿಗೆ ಹೋಗದೆ, ಆ ಹಳ್ಳಿಯ ಹುಡುಗಿಯನ್ನು ಆರಿಸಿಕೊಂಡನು. ಕರ್ತನು ನಮ್ಮನ್ನು ಆರಿಸಿಕೊಂಡಿರುವದು ಅದೇ ರೀತಿಯಾಗಿ. ಅದಕ್ಕಾಗಿ ದೇವರಿಗೆ ಸ್ತೋತ್ರವಾಗಲಿ! ಇತರ ವಿಶ್ವಾಸಿಗಳು ನಿಮ್ಮನ್ನು ಕೀಳಾಗಿ ನೋಡುತ್ತಿದ್ದಾರಾ? ನಿರುತ್ಸಾಹಗೊಳ್ಳದಿರಿ, ಕರ್ತನಿಗೆ ನೀವು ಅಮೂಲ್ಯರು! ನಾವು ಅಸಡ್ಡೆಗೆ ಒಳಗಾಗಿ, ಹೇಸಿಗೆಯ ಹೊಲೆಯಾಗಿ, ಅಸಹಾಯಕರಾಗಿ ಬೈಲಬಳಿಯಲ್ಲಿ ಬಿಸಾಕಲ್ಪಟ್ಟಿದ್ದಾಗ, ದೇವರು ಹೇಗೆ ನಮ್ಮನ್ನು ಕೈಗೆತ್ತಿಕೊಂಡರು ಎಂದು ವಿವರಿಸುವ ಒಂದು ವಿಸ್ಮಯಕರ ಭಾಗ ಯೆಹೆಜ್ಕೇಲ 16ನೇ ಅಧ್ಯಾಯವಾಗಿದೆ.

ಪರಮ ಗೀತ 2:1ರಲ್ಲಿ ಮದುಮಗಳು ಹೀಗೆನ್ನುತ್ತಾಳೆ, "ನಾನು ಬೈಲಿನ ನೆಲಸಂಪಿಗೆ, ತಗ್ಗಿನ ತಾವರೆ." ಇಲ್ಲಿರುವ ಉಲ್ಲೇಖ ವರನ ಕುರಿತಾದುದಲ್ಲ, ಆದರೆ ವಧುವಿಗೆ ಕುರಿತಾದ ಮಾತು.

ಅನೇಕ ಸಂಗೀತಗಳಲ್ಲಿ ಯೇಸುವನ್ನು "ಬೈಲಿನ ನೆಲಸಂಪಿಗೆ" ಮತ್ತು "ತಗ್ಗಿನ ತಾವರೆ" ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಆದರೆ ಅದು ದೇವರ ವಾಕ್ಯಕ್ಕೆ ಸರಿಹೊಂದುವದಿಲ್ಲ.

ವಧುವು ವರನಿಗೆ, "ನಾನು ಕೇವಲ ಬೈಲಿನ ನೆಲಸಂಪಿಗೆಯು. ಬೈಲಿನಲ್ಲಿ ಸಾವಿರಾರು ನೆಲಸಂಪಿಗೆಗಳಿವೆ ಮತ್ತು ನಾನು ಅದರಲ್ಲೊಂದು, ಅಷ್ಟೇ. ನಾನು ಸಾಧಾರಣ ತಗ್ಗಿನ ತಾವರೆಯಾಗಿದ್ದೇನೆ, ಅಷ್ಟೇ," ಎಂದು ಹೇಳುತ್ತಾಳೆ. ಆದರೆ ವರನು ಹೇಳುವುದೇನೆಂದರೆ, "ಹೌದು, ಹಾಗಿರಬಹುದು. ಆದರೆ ನೀನು ಮುಳ್ಳುಗಳ ಮಧ್ಯದಲ್ಲಿನ ತಾವರೆಯಂತಿರುವೆ" (ಪರಮ ಗೀತ 2:2). ಯೆರೂಸಲೇಮಿನ ಆ ಆಕರ್ಷಕ ಚೆಲುವೆಯರು ಹೊರನೋಟಕ್ಕೆ ಅಂದವಾಗಿದ್ದರು, ಆದರೆ ಅವರು "ಚಿನ್ನದ ಮೂಗುತಿ ಧರಿಸಿದ ಹಂದಿಗಳಂತೆ" ಇದ್ದರು (ಜ್ಞಾನೋಕ್ತಿಗಳು 11:22) - ಅಂದಗಾತಿಯರು, ಆದರೆ ಕರ್ತನಲ್ಲಿ ಭಯಭಕ್ತಿ ಇಲ್ಲದವರು. ಹಾಗಾಗಿ ಮದಲಿಂಗನು ಅವರನ್ನು ಮುಳ್ಳಿನ ಗಿಡಗಳಿಗೆ ಹೋಲಿಸುತ್ತಾನೆ. ಈ ಮುಳ್ಳುಗಳ ನಡುವೆ, ಆತನ ವಧುವು ಒಂದು ತಾವರೆಯ ಹಾಗಿದ್ದಳು.

ಪರಮ ಗೀತ 5:16ರಲ್ಲಿ ವಧುವು ಆಕೆಯ ವರನನ್ನು ಹೀಗೆ ವಿವರಿಸುತ್ತಾಳೆ, "ಅವನು ಸರ್ವಾಂಗದಲ್ಲಿಯೂ ಮನೋಹರನು; ಇವನೇ ಎನ್ನ ಇನಿಯನು; ಇವನೇ ನನ್ನ ಪ್ರಿಯನು." ಯೇಸುವು ನಿಮ್ಮ ರಕ್ಷಕನು ಮಾತ್ರವೇ ಅಲ್ಲ, ನಿಮ್ಮ ಸ್ನೇಹಿತನೂ ಸಹ, ಎಂಬುದಾಗಿ ನೀವು ಹೇಳಬಲ್ಲಿರಾ? ಯೇಸುವು ನಿಮಗೆ ಆಪ್ತನಾದ ಪ್ರಿಯ ಮಿತ್ರನಾಗಿರಲಿ.