ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಪುರುಷರಿಗೆ
WFTW Body: 

ಇಬ್ರಿಯ 2:17 ರಲ್ಲಿ “ಆದುದರಿಂದ ಆತನು ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು” ಎಂಬುದಾಗಿ ಬರೆಯಲ್ಪಟ್ಟಿದೆ. ಹೀಗೆ ಆತನು ಜನರ ಪಾಪಗಳನ್ನು ನಿವಾರಣೆ ಮಾಡುವುದಕ್ಕಾಗಿ ದೇವರ ಕಾರ್ಯಗಳಲ್ಲಿ ಕರುಣೆಯೂ, ನಂಬಿಕೆಯೂ ಉಳ್ಳ ಮಹಾ ಯಾಜಕನಾದನು. ನಾವು ಎದುರಿಸುವ ಎಲ್ಲಾ ಶೋಧನೆಯನ್ನು ಆತನು ಎದುರಿಸಿದನು. ನಾವು ಶೋಧಿಸಲ್ಪಡುವಾಗ ಈ ವಿಷಯವು ನಮಗೆ ಎಷ್ಟೋ  ಪ್ರೋತ್ಸಾಹದಾಯಕವಾಗಿರುವುರಿಂದ, ನಾವು ಕೂಡ ಜಯಿಸುವವರಾಗುತ್ತೇವೆ. ಕ್ರಿಸ್ತನು ನಮಗಾಗಿ ರಕ್ತ ಮಾಂಸವುಳ್ಳ ಶರೀರಾಧಾರಿಯಾದನು ಮತ್ತು ನಮ್ಮ ಹಾಗೇ ಶೋಧಿಸಲ್ಪಟ್ಟನು ಎಂಬ ನಿರೀಕ್ಷೆಯನ್ನು ಹಾಗೂ ಮಹಿಮೆಯಳ್ಳ ಸತ್ಯವನ್ನು ನಾವು ಗ್ರಹಿಸದೇ ಇರುವಂತೆ ಮಾಡಲು ಸೈತಾನನು ಪ್ರಯತ್ನಿಸುತ್ತಿದ್ದಾನೆ.

ವ್ಯಾಪಾರಸ್ಥರು ಎದುರಿಸುವ ಶೋಧನೆಗಳನ್ನೆಲ್ಲಾ ನಜರೇತಿನಲ್ಲಿ ಬಡಗಿಯಾಗಿ (ಕಾರ್ಪೆಂಟರ್) ಯೇಸು ಕೂಡ ಎದುರಿಸಿದನು. ಆದರೆ ಆತನು ಯಾರಿಗೂ ಮೋಸ ಮಾಡಲಿಲ್ಲ, ಯಾವ ವಸ್ತುವಿಗಾದರೂ ಆತನು ಒಂದು ಸಾರಿ ಕೂಡ ಹೆಚ್ಚಿನ ಬೆಲೆ ಹೇಳಲಿಲ್ಲ ಮತ್ತು ನಷ್ಟ ಬಂದರೂ ಆತನು ನೀತಿಯ ವಿಷಯದಲ್ಲಿ ರಾಜಿಯಾಗಲಿಲ್ಲ ಮತ್ತು ನಜರೇತಿನ ಅನೇಕ ಬಡಗಿಯರೊಂದಿಗೆ ಈತನಿಗೆ ಪೈಪೋಟಿ ಇರಲಿಲ್ಲ. ತನ್ನ ಅವಶ್ಯಕತೆಗಾಗಿ ಮಾತ್ರ ಆತನು ಕೆಲಸ ಮಾಡಿದನು. ಆತನು ಬಡಗಿಯಾಗಿದ್ದು, ಕೊಡುವ ಮತ್ತು ಕೊಳ್ಳುವ ವಿಷಯದಲ್ಲಿ ಮತ್ತು ಹಣದ ವ್ಯವಹಾರದಲ್ಲಿ ಯೇಸುವು ನಮ್ಮ ಹಾಗೇ ಶೋಧಿಸಲ್ಪಟ್ಟವನಾಗಿ, ಸಂಪೂರ್ಣವಾಗಿ ಜಯಿಸಿದನು.

ಯೇಸುವು ಪರಿಪೂರ್ಣರಲ್ಲದ ತಂದೆ-ತಾಯಿಯ ಅಧೀನತೆಯಲ್ಲಿ ಅನೇಕ ವರ್ಷಗಳ ಕಾಲ ಜೀವಿಸಿದರು. ಇದು, ಆತನನ್ನು ಅನೇಕ ಬಾರಿ ಆಂತರ್ಯದ ಶೋಧನೆಗೆ ಒಳಪಡಿಸಿರಬೇಕು. ಆದರೂ ಆತನು ಒಂದು ಪಾಪವನ್ನೂ ಮಾಡಲಿಲ್ಲ. ಯೋಸೇಫ ಮತ್ತು ಮರಿಯಳು ಇನ್ನೂ ಹಳೆ ಒಡಂಬಡಿಕೆಯ ಕೆಳಗೆ ಇದ್ದದ್ದರಿಂದ ಅವರಿಗೆ ನಿಶ್ಚಯವಾಗಿ ಪಾಪದ ಮೇಲೆ ಜಯವು ಇದ್ದಿಲ್ಲದಿರಬಹುದು. ಜಯವಿಲ್ಲದೆ ಅನೇಕ ಗಂಡ-ಹೆಂಡತಿಯರ ಹಾಗೇ ಇವರೂ ಅನೇಕ ಸಾರಿ ಧ್ವನಿ ಎತ್ತಿ ಅರಚಿರಬಹುದು ಮತ್ತು ವಿವಾದ ಮಾಡಿರಬಹುದು. ಈ ಕಡೆ ಯೇಸುವು ಸಂಪೂರ್ಣ ಜಯದಲ್ಲಿ ಜೀವಿಸಿದನು. ಆದರೂ ಆತನು ಅವರನ್ನು ಕಡೆಗಣಿಸಲಿಲ್ಲ. ಆತನು ಮಾಡಿದ್ದರೆ, ಆತನೂ ಪಾಪ ಮಾಡುತ್ತಿದ್ದನು. ಆತನು ಅವರಿಗಿಂತ ಎಷ್ಟೋ ಪವಿತ್ರನಾಗಿದ್ದರೂ ಸಹ ಅವರನ್ನು ಗೌರವಿಸಿದನು. ಅಲ್ಲಿ ನಾವು ಆತನ ದೀನತ್ವದಲ್ಲಿ ಇರುವಂತ ಸೌಂದರ್ಯವನ್ನು ನೋಡುತ್ತೇವೆ. ನಮ್ಮ ರಕ್ಷಣೆಗೆಲ್ಲಾ ಕಾರಣನಾದ ಕರ್ತ ಯೇಸುವಿಗೆ, ನಮಗೆ ಬರುವ ಎಲ್ಲಾ ವಿಧವಾದ ಶೋಧನೆನ್ನೂ ಆ ಮೂವತ್ತು ವರ್ಷಗಳ ಕಾಲ ತಂದೆಯಾದ ದೇವರು ಆತನಿಗೆ ಅನುಮತಿಸಿದರು. ಆತನು ನಮಗೆ ರಕ್ಷಕನು ಮತ್ತು ಒಳ್ಳೆ ಮಹಾಯಾಜಕನಾಗಿರಲೆಂದು ಮುಂಚೆಯೇ ಇವುಗಳನ್ನು ದೇವರು ಆತನಿಗೆ ಅನುಮತಿಸಿದನರು.

ಇಬ್ರಿಯ 2:10 ರಲ್ಲಿ ದೇವರ ವಾಕ್ಯವು “ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ ಆತನು ಬಹು ಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವುದಕ್ಕಾಗಿ ಅವರ ರಕ್ಷಣಾ ಕರ್ತನನ್ನು ಬಾಧೆಗಳ ಮೂಲಕ ಸಿದ್ದಿಗೆ ತರುವುದು ಆತನಿಗೆ ಯುಕ್ತವಾಗಿತ್ತು’’ ಎಂಬುದಾಗಿ ಹೇಳುತ್ತದೆ. ಕಡೆಯ ಮೂರುವರೆ ವರುಷಗಳಲ್ಲಿ ಸಹ ಯೇಸುವು ದೇಶದ ಜನಪ್ರಿಯತೆಯ ಕೆಲವು ಶೋಧನೆಗಳನ್ನು ಎದುರಿಸಿದನು. ಸಾಧಾರಣಾವಾಗಿ ನಮಗೆ ಮನೆಗಳಲ್ಲಿ ಅಥವಾ ಕೆಲಸದ ಸ್ಥಳಗಳಲ್ಲಿ ಬರುವ ಶೋಧನೆಗಳೆಲ್ಲವನ್ನು ಆತನು ಮೊದಲ ಮೂವತ್ತು ವರ್ಷದಲ್ಲಿ ಜಯಿಸಿದನು. ಆದುದರಿಂದ ದೀಕ್ಷಾಸ್ನಾನ ತೆಗೆದುಕೊಳ್ಳುವ ಸಮಯದಲ್ಲಿ ತಂದೆಯು ಯೇಸುವಿಗೆ ಮೆಚ್ಚುಗೆಯ ಪತ್ರವನ್ನು ಕೊಟ್ಟನು.

ದೇವರು ಯಾವುದನ್ನು ಕುರಿತು ತನ್ನ ಮೆಚ್ಚಿಗೆಯನ್ನು ಕೊಡುತ್ತಾನೆ ಎಂಬುವ ವಿಷಯದಲ್ಲಿ ನಮ್ಮ ಕಣ್ಣುಗಳು ತೆರೆಯುವುದಾದರೆ, ನಮ್ಮ ಜೀವಿತದಲ್ಲಿ ಸಂಪೂರ್ಣ ಬದಲಾವಣೆ ಕಾಣುತ್ತೇವೆ. ವಿಶ್ವಾದ್ಯಾಂತ ಸೇವೆಯನ್ನು ಬಯಸುವುದಕ್ಕಿಂತ, ನಮ್ಮ ಜೀವಿತದಲ್ಲಿ ಬರುವ ಶೋಧನೆಯಲ್ಲಿ ನಂಬಿಗಸ್ಥರಾಗಿರಬೇಕು. ನಮ್ಮ ಶಾರೀರಿಕ ಅದ್ಭುತಗಳನ್ನು ಬಿಟ್ಟು ಜೀವಿತದಲ್ಲಿ ರೂಪಾಂತರವನ್ನು ಹೊಂದುವುದರಲ್ಲಿ ಸಂತೋಷಿಸೋಣ. ಆದ್ದರಿಂದ ನಮ್ಮ ಮನಸ್ಸು ಸರಿಯಾದ ಆಧ್ಯತೆಗಳಿಗಾಗಿ ಬದಲಾವಣೆ ಹೊಂದಿರಬೇಕು.

ಯೇಸು ಕ್ರಿಸ್ತನ ಹಾಗೆ ‘’ಶೋಧನೆಯಲ್ಲಿ ನನ್ನ ತಂದೆಗೆ ಅವಿಧೇಯನಾಗಿ ಅಥವಾ ಪಾಪ ಮಾಡುವುದಕ್ಕಿಂತ ಸಾಯುವುದು ಮೇಲು” ಎಂಬ ಮನೋಭಾವನೆ ಯಾರೂ ಹೊಂದಿರುತ್ತಾರೋ, ಅಂತಹವರಿಗೆ ಅತಿಶ್ರೇಷ್ಠವಾದ ಬಹುಮಾನವು ಅಥವಾ ಹೊಗಳಿಕೆಯೂ, ಘನತೆಯೂ ಸಲ್ಲುವವು ಎಂಬ ವಿಷಯವು ನಮಗೆ ಎಷ್ಟೋ ಪ್ರೋತ್ಸಾಹದಯಕವಾಗಿದೆ. ಫಿಲಿಪ್ಪಿ. 2:5-8 ರಲ್ಲಿ ಈ ವಿಷಯ ಹೇಳಲ್ಪಟ್ಟಿದೆ ‘’ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ, ಆತನು ದೇವಸ್ವರೂಪನಾಗಿದ್ದರೂ, ದೇವರಿಗೆ ಸರಿಸಮಾನನಾಗಿರುವುದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ, ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯನಿಗೆ ಸದೃಶನಾದನು. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.” ಆದ್ದರಿಂದ ಯಾವ ವರವೂ, ಸೇವೆಯೂ ಇಲ್ಲದಿದ್ದರೂ; ಮತ್ತು ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಕರೆಯಲ್ಪಟ್ಟವರೂ, ಆದುಕೊಂಡವರು, ನಂಬಿಗಸ್ಥರಾಗಿದ್ದು ಜಯಿಸುವವರಾಗಿ ಇರುವ ನಮ್ಮೆಲ್ಲರಿಗೆ ಸಮಾನ ಅವಕಾಶವಿದೆ.