ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   Struggling
WFTW Body: 

ದೇವರು ಎಲೀಷನನ್ನು ಎಲೀಯನಗಿಂತ ಎರಡುಪಾಲು ಹೆಚ್ಚು ಅಭಿಷೇಕಿಸಿದರು. ಇದು ಎಲೀಷನ ಜೀವನದ ಮೇಲೆ ದೇವರು ಹಾಕಿದ ಅಂಗೀಕಾರದ ಮುದ್ರೆ. ಆದರೆ ಇಂತಹ ಅಭಿಷೇಕ ಪ್ರಾಪ್ತವಾಗುವ ಮೊದಲು ಆತನು ಪರೀಕ್ಷಿಸಲ್ಪಟ್ಟಿದ್ದನು.

ಪ್ರತಿಯೊಬ್ಬ ದೇವರ ಸೇವಕನ ಅನುಭವದಂತೆ, ಎಲೀಷನು ಕೂಡಾ ದೇವರ ಸೇವೆಗೆ ಕರೆಯಲ್ಪಡುವಾಗ ತನ್ನ ಲೌಕಿಕ ಉದ್ಯೋಗದಲ್ಲಿ ಪ್ರಾಮಾಣಿಕನಾಗಿ ದುಡಿಯುತ್ತಿದ್ದನು.

"ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು." (1 ಅರಸು. 19:19).

ಮುಂದೆ ಅನೇಕ ವರ್ಷಗಳ ಕಾಲ ಎಲೀಷನು ಪ್ರವಾದಿಯಾದ ಎಲೀಯನ ಸೇವಕನಾಗಿ ಚಾಕರಿ ಮಾಡಿದನು. "ಎಲೀಯನ ಕೈಗೆ ನೀರು ಕೊಡುತ್ತಿದ್ದವನು" ಎಂಬ ಬಿರುದು ಎಲೀಷನದಾಗಿತ್ತು (2 ಅರಸು. 3:11 b).

ಆತನು ತನಗಾಗಿ ದೊಡ್ಡ ಯೋಜನೆಗಳನ್ನು ತಯಾರಿಸಲಿಲ್ಲ, ಆದರೆ ದೇವರು ಈ ಯೌವನಸ್ಥನಿಗಾಗಿ ವಿಶೇಷ ಯೋಜನೆಗಳನ್ನು ಸಿದ್ಧಪಡಿಸಿದ್ದರು.

ಎಲೀಯನು ಪರಲೋಕಕ್ಕೆ ಹೋಗುವ ಮುನ್ನ ಎಲೀಷನ ಪರೀಕ್ಷೆ ಆಗಬೇಕಿತ್ತು. ಹೀಗಾಗಿ ಎಲೀಯನು ಎಲೀಷನಿಗೆ ಗಿಲ್ಗಾಲಲ್ಲಿ ಇರಲು ಹೇಳಿ ತಾನು ಬೇತೇಲಿಗೆ ಹೊಗುತ್ತೇನೆಂದು ಹೇಳಿದನು. ಎಲೀಷನು, ತಾನು ಗಿಲ್ಗಾಲಿನಲ್ಲಿ ಉಳಿಯಲಾರೆ, ಎಲೀಯನ್ನು ಹಿಂಬಾಲಿಸುವೆನು, ಎಂಬ ತನ್ನ ನಿರ್ಧಾರವನ್ನು ಬಿಡಲಿಲ್ಲ. ಬೇತೇಲಿನಲ್ಲಿ ಎಲೀಯನು ಮತ್ತೊಮ್ಮೆ ಎಲೀಷನನ್ನು ತಡೆಹಿಡಿದು ತಾನು ಯೆರಿಕೋವಿಗೆ ಹೋಗಲು ಪ್ರಯತ್ನಿಸಿದನು. ಆದರೆ ಎಲೀಷನು ಜಿಗಣೆಯಂತೆ ಆತನಿಗೆ ಅಂಟಿಕೊಂಡಿದ್ದನು. ತಿರಿಗಿ ಯೆರಿಕೋವಿನಲ್ಲಿ ಎಲೀಷನು ಇನ್ನೊಮ್ಮೆ ಪರೀಕ್ಷಿಸಲ್ಪಟ್ಟನು. ಅಲ್ಲಿಯೂ ಎಲೀಷನು ಹಿಡಿದ ಪಟ್ಟನ್ನು ಬಿಡದೆ, ಎಲೀಯನನ್ನು ಹಿಂಬಾಲಿಸಿ ಯೋರ್ದನಿಗೆ ಬಂದನು. ಹೀಗಾಗಿ ಆತನಿಗೆ ದೇವರ ಹೇರಳವಾದ ಅಶೀರ್ವಾದ - ಎರಡು ಪಾಲಿನಷ್ಟು ಆತ್ಮ - ಅನುಗ್ರಹವಾಯಿತು (2 ಅರಸು. 2:1-14).

ಇದರಲ್ಲಿ ನಮಗಿರುವ ದೇವರ ಸಂದೇಶವೇನು? ನಮ್ಮ ಆತ್ಮಿಕ ಬೆಳವಣಿಗೆಯ ವಿವಿಧ ಘಟ್ಟಗಳಲ್ಲಿ ನಾವು ಹೊಂದಿರುವದರಲ್ಲೇ ತೃಪ್ತಿಯಾಗಿದ್ದೇವೋ, ಅಥವಾ ದೇವರ ಅತ್ಯುನ್ನತ ಮಟ್ಟಕ್ಕಾಗಿ ಕಾತುರರಾಗಿದ್ದೇವೋ ಎಂದು ದೇವರು ನಮ್ಮನ್ನು ಪರೀಕ್ಷಿಸುತ್ತಾರೆ.

ಗಿಲ್ಗಾಲು ನಮ್ಮ ಪಾಪಗಳು ಕ್ಷಮಿಸಲ್ಪಟ್ಟಿರುವ ಸ್ಥಳದ ಸಂಕೇತ.

"ನಾನು ಐಗುಪ್ತ್ಯರ ನಿಂದೆಯನ್ನು ಈ ಹೊತ್ತು ನಿಮ್ಮಿಂದ ನಿವಾರಿಸಿಬಿಟ್ಟಿದ್ದೇನೆಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನ ವರೆಗೂ ಗಿಲ್ಗಾಲೆಂಬ ಹೆಸರಿರುತ್ತದೆ." (ಯೆಹೋಶುವನು 5:8-9).

ಅನೇಕ ಕ್ರೈಸ್ತರು ಇಲ್ಲಿಯ ವರೆಗೆ ಬಂದ ಮೇಲೆ ಚಲಿಸದೆ ನಿಂತುಬಿಡುತ್ತಾರೆ.

ಇನ್ನು ಕೆಲವರು ಬೇತೇಲಿನ ವರೆಗೆ (‘ದೇವರ ಮನೆ’ ಎಂಬ ಅರ್ಥ) ಮುನ್ನಡೆಯುವರು - ಇದು ದೇವರ ಆಲಯದಲ್ಲಿ ವಿಶ್ವಾಸಿಗಳ ಅನ್ಯೋನ್ಯತೆಯನ್ನು ಸೂಚಿಸುತ್ತದೆ.

"ಯಾಕೋಬನು ಆ ಸ್ಥಳಕ್ಕೆ ಬೇತೇಲ್ ಎಂದು ಹೆಸರಿಟ್ಟನು. ಯಾಕೋಬನು ಅಲ್ಲಿ, ನಾನು ಕಂಬವಾಗಿ ನಿಲ್ಲಿಸಿರುವ ಈ ಕಲ್ಲು ದೇವರ ಮನೆಯಾಗುವದು, ಎಂದನು." (ಆದಿಕಾಂಡ 28:19,22).

ಕೆಲವರು ಇಲ್ಲಿ ನಿಲ್ಲುವರು.

ಇನ್ನೂ ಕೆಲವರು ಯೆರಿಕೋದ ವರೆಗೂ ಸಾಗುವರು - ಇದು ದೇವರ ಅದ್ಬುತ ಪ್ರಭಾವವು ಪ್ರಕಟವಾಗುವುದನ್ನು ಸೂಚಿಸುವುದು.

"ಜನರು ಮಹತ್ತರವಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು .... (ಯೆರಿಕೋ ಪಟ್ಟಣ) ಅವರಿಗೆ ಸ್ವಾಧೀನವಾಯಿತು." (ಯೆಹೋಶುವನು 6:20).

ಹೆಚ್ಚಿನ ಕ್ರೈಸ್ತರು ತಲಪುವ ಕೊನೆಯ ಹಂತ ಇದು.

ಅತಿ ವಿರಳವಾಗಿ ಕೆಲವರು ಮಾತ್ರವೇ ಯೋರ್ದನಿನ ವರೆಗೆ ಹೋಗುವರು - ಇದು ದೀಕ್ಷಾಸ್ನಾನವು ಸಂಕೇತಿಸುವ, ಯೇಸುವಿನೊಡನೆ ಆತನ ಮರಣಕ್ಕೆ ನಮ್ಮನ್ನು ಒಪ್ಪಿಸಿಕೊಳ್ಳುವುದನ್ನು ತೋರಿಸುತ್ತದೆ.

"ಆ ಕಾಲದಲ್ಲಿ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೋರ್ದನ್ ಹೊಳೆಗೆ ಬಂದನು." (ಮತ್ತಾಯ 3:13).

ಶಿಲುಬೆಯ ದಾರಿಯಲ್ಲಿ ಸಾಗುಲು ಒಪ್ಪುವವರು ಬಹಳ ಕೆಲವರು ಮಾತ್ರವೇ - "ಯೇಸು ನಮಗೋಸ್ಕರ ಆತನ ಶರೀರದ ಮುಖಾಂತರ ಪ್ರತಿಷ್ಠಿಸಿದ ಜೀವವುಳ್ಳ ಹೊಸ ದಾರಿ." (ಇಬ್ರಿಯರಿಗೆ 10:20).

ಪೂರ್ಣ ಹೃದಯದವರಾಗಿ, ಸ್ವಾರ್ಥ ಜೀವಿತವನ್ನು ಅಂತಿಮವಾಗಿ ಮರಣಕ್ಕೆ ಒಪ್ಪಿಸಲು ಸಿದ್ಧರಿರುವಂತಹ ಈ ಕೆಲವರು ಮಾತ್ರ ಎರಡು ಪಾಲು ಪವಿತ್ರಾತ್ಮನ ಆಶೀರ್ವಾದವನ್ನು - ದೇವರ ಶ್ರೇಷ್ಠ ವರನ್ನು - ಹೊಂದುವರು.

ನಾವೆಲ್ಲರೂ ಯಾವ ಹಂತದಲ್ಲಿ ನಿಲ್ಲುವೆವು, ಎಂಬುದಾಗಿ ಈ ದಿನ ಪರೀಕ್ಷಿಸಲ್ಪಡುತ್ತಿದ್ದೇವೆ.