ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ತಿಳಿಯುವುದು
WFTW Body: 

ಪಾಪದ ಮೇಲೆ ಜಯಗಳಿಸಿ ಪವಿತ್ರವಾದ ಜೀವಿತವನ್ನು ಜೀವಿಸುವುದು ಹೇಗೆ ಎಂದು ತಪ್ಪಾಗಿ ಅರ್ಥೈಸಿಕೊಂಡಿರುವವರ ಬಗ್ಗೆ ಪೌಲನು ರೋಮಾಪುರದವರಿಗೆ ಬರೆದ ಪತ್ರದಲ್ಲಿನ ಅಧ್ಯಾಯ 7 ರಲ್ಲಿ ಮಾತನಾಡುತ್ತಾನೆ. ಪವಿತ್ರಾತ್ಮನು ಇಲ್ಲಿ ಮದುವೆಯ ಚಿತ್ರಣವನ್ನು ಉಪಯೋಗಿಸಿದ್ದಾನೆ (ವಾಕ್ಯ 4). ನಾವು ಮಾನಸಾಂತರ ಹೊಂದದಿರುವಾಗ ಹಳೆ ಮನುಷ್ಯನನ್ನು ಮದುವೆಯಾಗಿದ್ದೆವು. ಮಾನಸಾಂತರ ಹೊಂದಿದ ನಂತರ, ನಾವು ಕ್ರಿಸ್ತನ ಜೊತೆ ಮದುವೆಯಾಗುವುದರ ಬದಲಾಗಿ, ಧರ್ಮಶಾಸ್ತ್ರವನ್ನು ಮದುವೆಯಾಗುವ ಮೂಲಕ ತಪ್ಪು ಮಾಡುತ್ತೇವೆ. ಪಾಪದ ಮೇಲೆ ಜಯ ಹೊಂದುವುದಕ್ಕೆ ಪ್ರಯತ್ನಿಸುವಾಗ, ಪ್ರತಿಯೊಬ್ಬ ವಿಶ್ವಾಸಿಯು ಈ ತಪ್ಪನ್ನು ಮಾಡುತ್ತಾನೆ. ಮೊದಲು ಆತನು ತನ್ನ ಸ್ವಂತ ಬಲದಲ್ಲಿ ಪಾಪದ ಮೇಲೆ ಜಯ ಹೊಂದಲು ಪ್ರಯತ್ನಿಸುವುದು ಧರ್ಮಶಾಸ್ತ್ರದೊಡನೆ ಮದುವೆಯಾಗುವುದಾಗಿದೆ. ಅಧ್ಯಾಯ 6 ಮತ್ತು 7ರಲ್ಲಿ, ನಾವು ಈ ಮೂರು ಆತ್ಮಿಕ "ಮದುವೆಗಳನ್ನು" ಕಾಣಬಹುದು. ಈ ಮದುವೆಗಳಾವುವೆಂದರೆ, ಮೊದಲು ಹಳೆ ಮನುಷ್ಯನೊಡನೆ, ನಂತರ ಧರ್ಮಶಾಸ್ತ್ರದೊಡನೆ ಮತ್ತು ಕೊನೆಯದಾಗಿ ಕ್ರಿಸ್ತನೊಡನೆ ಮದುವೆಯಾಗುವುದು.

ಹಳೆ ಮನುಷ್ಯನು ಕೆಟ್ಟ ಗಂಡನ ಹಾಗೆ ತನ್ನ ಹೆಂಡತಿಯನ್ನು ಹೊಡೆಯುವವನಾಗಿದ್ದು, ಆಕೆಯು ವ್ಯಭಿಚಾರಿಯಾಗುವ ಹಾಗೆ ಮಾಡುವನಾಗಿದ್ದಾನೆ. ಆಕೆಯ ಜೀವಿತವನ್ನು ನಾಶಗೊಳಿಸಿ, ಆಕೆಯ ಸಂತೋಷವನ್ನು ನಾಶ ಮಾಡುವವನಾಗಿರುತ್ತಾನೆ. ಈ ಹಲ್ಲೆಗೊಳಗಾದಂತಹ ಹೆಂಡತಿಯು, ಈ ಕೆಟ್ಟ ಗಂಡನಿಂದ ಬಿಡುಗಡೆಗೊಳ್ಳಲು ಅಪೇಕ್ಷೆಯುಳ್ಳವಳಾಗಿರುತ್ತಾಳೆ. ಒಂದು ದಿನ ಆಕೆಯ ಗಂಡ (ಹಳೆ ಮನುಷ್ಯನು) ಮರಣ ಹೊಂದುತ್ತಾನೆ. ಆಗ ಆಕೆಯು ಹೊಸದಾಗಿ ಹುಟ್ಟಿದವಳಾಗುತ್ತಾಳೆ (ಮರು ಹುಟ್ಟು)! ಈಗ ಆಕೆಯು ಮತ್ತೊಮ್ಮೆ ಮದುವೆಯಾಗಲು ಸ್ವತಂತ್ರವುಳ್ಳವಳಾಗುತ್ತಾಳೆ. ಆದರೆ ಕ್ರಿಸ್ತನನ್ನು ಮದುವೆಯಾಗುವುದರ ಬದಲಾಗಿ, ಆಕೆಯು ಕ್ರಿಸ್ತನ ರೀತಿಯಲ್ಲಿಯೇ ಕಾಣಿಸುವಂತಹ ಯಾರೋ ಇನ್ನೊಬ್ಬನನ್ನು (ಧರ್ಮಶಾಸ್ತ್ರವನ್ನು) ಮದುವೆಯಾಗಿ ತಪ್ಪು ಮಾಡುತ್ತಾಳೆ.

ಧರ್ಮಶಾಸ್ತ್ರವು ಪರಿಪೂರ್ಣವಾಗಿದೆ. ಇದರಿಂದಾಗಿ ಧರ್ಮಶಾಸ್ತ್ರವನ್ನೇ ಕ್ರಿಸ್ತನೆಂದು ತಪ್ಪಾಗಿ ತಿಳಿಯುವುದು ಸುಲಭವಾಗಿದೆ. ಏಕೆಂದರೆ ಧರ್ಮಶಾಸ್ತ್ರವು ಪರಿಪೂರ್ಣ ನೀತಿಯನ್ನು (ಪವಿತ್ರತೆಯನ್ನು) ಬಯಸುತ್ತದೆ (ಕೇಳುತ್ತದೆ). ಧರ್ಮಶಾಸ್ತ್ರವು ಹಳೆ ಮನುಷ್ಯನ ರೀತಿಯಲ್ಲ. ಆತನು ತನ್ನ ಹೆಂಡತಿಯನ್ನು ಹೊಡೆಯುವುದಿಲ್ಲ ಅಥವಾ ಆಕೆಗೆ ಯಾವುದೇ ವಿಧದಲ್ಲಿಯೂ ತೊಂದರೆ ಕೊಡುವುದಿಲ್ಲ. ಆದರೆ ಆತನು ಪರಿಪೂರ್ಣತೆಯನ್ನು ಬಯಸುತ್ತಾನೆ. ಆತನ ಕೆಲವು ಬೇಡಿಕೆಗಳೆಂದರೆ, ನೀನು ಬೆಳಗ್ಗೆ ಬೇಗನೇ, 6 ಗಂಟೆಗೆ ಎದ್ದು, ಸರಿಯಾಗಿ 8 ಗಂಟೆಯೊಳಗೆ ಮೇಜಿನ ಮೇಲೆ ಉಪಹಾರ ಸಿದ್ದಮಾಡಿಡಬೇಕು. ಇದು 8:01 ನಿಮಿಷಕ್ಕೆ ಸಹ ಆಗಿರಬಾರದು. ಆದರೆ ಸರಿಯಾಗಿ 8 ಗಂಟೆಗೆ ಎಂದು ಕೇಳುವುದೇ "ಪರಿಪೂರ್ಣತೆ". ಮನೆಯ ಪ್ರತಿಯೊಂದು ಭಾಗವು ಸಂಪೂರ್ಣವಾಗಿ ಅಚ್ಚುಕಟ್ಟಾಗಿರಲೇಬೇಕು ಮತ್ತು ಸ್ವಚ್ಛವಾಗಿಡಲೇಬೇಕು. ಶೂ (ಚಪ್ಪಲಿ)ಗಳನ್ನು ಯಾವಾಗಲೂ ಸರಿಯಾದ ಸ್ಥಳದಲ್ಲಿಯೇ ಇಟ್ಟಿರಬೇಕು. ಬಟ್ಟೆಗಳು ಯಾವುದೇ ಕಲೆಯಿಲ್ಲದೇ ಪರಿಪೂರ್ಣವಾಗಿ ಒಗೆದಿರಬೇಕು ಮತ್ತು ಪರಿಪೂರ್ಣವಾಗಿ ಇಸ್ತ್ರಿಯನ್ನು ಸಹ ಮಾಡಿಡಬೇಕು ಎಂಬುದಾಗಿ ಪರಿಪೂರ್ಣತೆ ಕೇಳುತ್ತದೆ. ಯಾವುದೇ ಕೆಟ್ಟದ್ದನ್ನು ಮಾಡುವಂಥೆ ಧರ್ಮಶಾಸ್ತ್ರವು ನಿಮಗೆ ಎಂದಿಗೂ ಹೇಳುವುದಿಲ್ಲ. ಆದರೆ ನೀವು ಎಷ್ಟು ಜನ ಹುಡುಗಿಯರು ಪ್ರತಿಯೊಂದು ಕ್ಷೇತ್ರದಲ್ಲಿ ಇಂತಹ ಪರಿಪೂರ್ಣತೆಯನ್ನು ಬಯಸುವ, ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗಲು ಇಷ್ಟಪಡುತ್ತೀರಾ? ಹಳೆಯ ಮನುಷ್ಯನನ್ನು ಮದುವೆಯಾದ ನಂತರ, ಧರ್ಮಶಾಸ್ತ್ರವನ್ನು ಮದುವೆಯಾಗುವುದೆಂದರೆ ಬಾಣಲೆಯಿಂದ ಜಿಗಿದು, ಬೆಂಕಿಯೊಳಗೆ ಬಿದ್ದ ಹಾಗೆ ಕಾಣುತ್ತದೆ. ಆತನು ಒಳ್ಳೆಯ ಮನುಷ್ಯನು, ಆದರೆ ಆತನ ಬೇಡಿಕೆಗಳು ಹಲವಾರು. ಆತನೆಂದಿಗೂ ಕೆಟ್ಟದ್ದನ್ನು ಮಾಡಲು ಹೇಳುವುದಿಲ್ಲ. ಆದರೆ ನೀವು ಆತನ ಪರಿಪೂರ್ಣತೆಯ ಮಟ್ಟಕ್ಕೆ ಜೀವಿಸಲು ನಿಮಗೆ ಅಸಾಧ್ಯ. ಏಕೆಂದರೆ ಆತನ ಪರಿಪೂರ್ಣತೆಯ ಮಟ್ಟ ತುಂಬಾ ಹೆಚ್ಚು. ಈಗ ನೀವು ತಪ್ಪಾದ ವ್ಯಕ್ತಿಯನ್ನು ಮದುವೆಯಾಗಿದ್ದೀನಿ ಎಂದು ಗ್ರಹಿಸಿಕೊಳ್ಳುತ್ತೀರಿ. ಹಾಗಾಗಿ ಈಗ ನೀವು ಏನು ಮಾಡುತ್ತೀರ? ಧರ್ಮಶಾಸ್ತ್ರವು ದೇವರ ಧರ್ಮಶಾಸ್ತ್ರವಾಗಿರುವುದರಿಂದ ಅದೆಂದಿಗೂ ಸಾಯುವುದಿಲ್ಲ! ಈ ಧರ್ಮಶಾಸ್ತ್ರವೆಂಬ ಗಂಡನು ಆರೋಗ್ಯವುಳ್ಳವನಾಗಿದ್ದು ಮತ್ತು ಬಲವುಳ್ಳವನಾಗಿದ್ದು, ಯಾವಾಗಲೂ ಜೀವಿಸುವವನಾಗಿರುತ್ತಾನೆ. "ಗಂಡನು ಜೀವದಿಂದಿರುವ ತನಕ ಹೆಂಡತಿಯು ನ್ಯಾಯದ ಪ್ರಕಾರ ಅವನಿಗೆ ಬದ್ಧಳಾಗಿರಬೇಕು; ಗಂಡನು ಸತ್ತರೆ ಗಂಡನ ಹಂಗು ಆಕೆಗೆ ತಪ್ಪುವುದು” (ರೋಮಪುರದವರಿಗೆ 7:2). ಹಾಗಾಗಿ, ಹೆಂಡತಿಯು ಸದಾ ಸಂತೋಷದಿಂದಿರುವ ಎಲ್ಲಾ ನಿರೀಕ್ಷೆಯನ್ನು ಬಿಟ್ಟು ಬಿಡುತ್ತಾಳೆ.

ಆಗ ದೇವರು ಏನೋ ಒಂದು ಅದ್ಬುತ ಮಾಡುತ್ತಾರೆ. ಆತನು ಆ ಹೆಂಗಸು (ಹೆಂಡತಿ) ಸಾಯುವಂತೆ ಮಾಡುತ್ತಾನೆ ಮತ್ತು ಆಕೆಯ ಮದುವೆಯ ವಾಗ್ದಾನವನ್ನು ಮುರಿಯುತ್ತಾನೆ. ಮೊದಲ ಸಲ ಗಂಡನು (ಹಳೆ ಮನುಷ್ಯನು) ಸಾಯುವವನಾಗಿದ್ದಾನೆ. ಈಗ ಹೆಂಡತಿಯು (ನೀವು) ಸಾಯುವವಳಾಗಿದ್ದಾಳೆ. "ಹಾಗಾದರೆ, ನನ್ನ ಸಹೋದರರೇ, ನೀವು ಸಹ ಕ್ರಿಸ್ತನ ದೇಹದ ಮೂಲಕವಾಗಿ ಧರ್ಮಶಾಸ್ತ್ರದ ಪಾಲಿಗೆ ಸತ್ತಿರುತ್ತೀರಿ. ದೇವರಿಗೆ ಫಲವಾಗುವುದಕ್ಕಾಗಿ ಮತ್ತೊಬ್ಬನನ್ನು, ಅಂದರೆ ಸತ್ತು ಜೀವಿತನಾಗಿ ಎದ್ದಾತನನ್ನು ಸೇರಿಕೊಂಡಿರಿ" (ರೋಮಪುರದವರಿಗೆ 7:4). ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದೀರಿ, ಇನ್ನೆಂದಿಗೂ ಧರ್ಮಶಾಸ್ತ್ರಕ್ಕೆ ಸೇರಿದವರಾಗಿರುವುದಿಲ್ಲ ಮತ್ತು ದೇವರು ನಿಮ್ಮನ್ನು ಸತ್ತದ್ದರಿಂದ ಎಬ್ಬಿಸಿರುತ್ತಾರೆ. ಹಾಗಾಗಿ, ನೀವು ಕ್ರಿಸ್ತನೊಡನೆ ಮದುವೆಯಾಗಿದ್ದೀರಿ. ಇದು ಮೂರನೇ ಮದುವೆ. ಇದು ಬಹಳ ವೈಭವಯುತವಾದದ್ದು! ಆದರೆ ಕ್ರಿಸ್ತನು ಸಹ ತುಂಬಾ ಬೇಡಿಕೆಗಳನ್ನು ಮುಂದಿಡುತ್ತಾನೆ. ಆತನು ಧರ್ಮಶಾಸ್ತ್ರದ ಹಾಗೇ ಪರಿಪೂರ್ಣನಾಗಿದ್ದು, ಹೀಗೆ ಹೇಳುತ್ತಾನೆ, "ಸರಿಯಾಗಿ ಎಂಟು ಗಂಟೆಗೆ ಮೇಜಿನ ಮೇಲೆ ಉಪಹಾರವಿರಬೇಕು. 8:01ಕ್ಕೆ ಅಲ್ಲ, ಎಲ್ಲವೂ ಹೊಚ್ಚ ಹೊಸತಿರಬೇಕು. ಮನೆಯು ತುಂಬಾ ಅಚ್ಚುಕಟ್ಟಾಗಿರಬೇಕು" ಎಂಬಿತ್ಯಾದಿ. ಆತನ ಜೀವನದ (ಪರಿಪೂರ್ಣತೆಯ) ಮಟ್ಟವು ಧರ್ಮಶಾಸ್ತ್ರದ ಪರಿಪೂರ್ಣತೆಯ ಮಟ್ಟಕ್ಕಿಂತ ಕಡಿಮೆಯಾದುದಲ್ಲ. ಹೇಳಬೇಕೆಂದರೆ, ಅದು ನಿಜವಾಗಿಯೂ ಇನ್ನೂ ಹೆಚ್ಚಿನ (ಎತ್ತರದ) ಮಟ್ಟದಲ್ಲಿರುತ್ತದೆ. ಧರ್ಮಶಾಸ್ತ್ರದ ಪ್ರಕಾರ "ನೀವು ವ್ಯಭಿಚಾರ ಮಾಡಬಾರದು". ಆದರೆ ಕ್ರಿಸ್ತನು ಹೀಗೆ ಹೇಳುತ್ತಾನೆ, "ನೀವು ನಿಮ್ಮ ಹೃದಯದಲ್ಲಿ ಪರಸ್ತ್ರೀಯನ್ನು ಮೋಹಿಸಲೇಬಾರದು" ಎಂಬುದಾಗಿ. ಆದರೆ ಇಲ್ಲಿ ಕ್ರಿಸ್ತನ ಮತ್ತು ಧರ್ಮಶಾಸ್ತ್ರದ ನಡುವೆ ದೊಡ್ಡದಾದ ವ್ಯತ್ಯಾಸವಿದೆ. ಅದೇನೆಂದರೆ, ಕ್ರಿಸ್ತನು ಈ ರೀತಿ ಹೇಳುತ್ತಾನೆ. "ನೀನು ಮತ್ತು ನಾನು ಒಟ್ಟಾಗಿ ಉಪಹಾರ ತಯಾರಿಸೋಣ" ಎಂದು. ನಾವು ಆತನ ಜೊತೆ ಸೇರಿ ಎಲ್ಲವನ್ನು ಮಾಡುವುದೇ ಆತನ ಇಚ್ಚೆ.

ಒಂದು ವೇಳೆ, ಮಧ್ಯಾಹ್ನ ಒಂದು ಗಂಟೆಗೆ ಉಪಹಾರವನ್ನು ಸಿದ್ದಮಾಡುವಂತಹ ಹೆಂಡತಿ ನೀನಾಗಿದ್ದರೆ, ಧರ್ಮಶಾಸ್ತ್ರ ಮಾಡುವ ರೀತಿಯಲ್ಲಿ, ಕರ್ತನು ನಿನ್ಮನ್ನು ಖಂಡಿಸುವುದಿಲ್ಲ ಮತ್ತು ತಿರಸ್ಕರಿಸುವುದಿಲ್ಲ. ಆತನು ಹೀಗೆ ಹೇಳುತ್ತಾನೆ, "ಚಿಂತಿಸಬೇಡ, ನಾವು ಒಟ್ಟಾಗಿ ಕೆಲಸ ಮಾಡೋಣ ಹಾಗೂ ನೀನು ಸುಧಾರಿಸುತ್ತಿರು". ಹಾಗಾಗಿ ಕರ್ತನು ನಿನ್ನ ಜೊತೆಗೂಡಿ ಕಾರ್ಯನಿರ್ವಹಿಸುತ್ತಾನೆ. ಮತ್ತು ಕೆಲವೇ ದಿನಗಳಲ್ಲಿ ನೀನು ಬೆಳಗ್ಗೆ ಹನ್ನೊಂದು ಗಂಟೆಯೊಳಗೆ ಉಪಹಾರವನ್ನು ಸಿದ್ದ ಮಾಡುವುದನ್ನು ಕಲಿಯುತ್ತೀಯಾ. ಆಗ ಕರ್ತನು ಹೀಗೆ ಹೇಳುತ್ತಾನೆ, "ಅದ್ಭುತ! ನಾವು ಒಂದು ಗಂಟೆಯಿಂದ ಹನ್ನೊಂದು ಗಂಟೆಗೆ ನಡೆದಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಎಂಟು ಗಂಟೆಗೆ ಉಪಹಾರ ಸಿದ್ಧ ಮಾಡುವವರಾಗಿದ್ದು, ನಾವು ಪರಿಪೂರ್ಣತೆಯೆಡೆಗೆ ಸಾಗುವವರಾಗಿದ್ದೇವೆ". ಒಂದು ವೇಳೆ ನಿನಗೆ ಚೆನ್ನಾಗಿ ಬಟ್ಟೆ ಒಗೆಯಲು ತಿಳಿಯದಿದ್ದಲ್ಲಿ ಅಥವಾ ಕಲೆಯು ಬಟ್ಟೆಯ ಮೇಲೆ ಉಳಿದಿದ್ದಲ್ಲಿ, ಕರ್ತನು ಹೀಗೆ ಹೇಳುತ್ತಾನೆ. "ಚಿಂತಿಸಬೇಡ, ನಾವು ಆ ಕ್ಷೇತ್ರದಲ್ಲಿಯೂ ಸಹ ಜೊತೆಗೂಡಿ ಕೆಲಸ ಮಾಡೋಣ". ಮುಂದಿನ ದಿನಗಳಲ್ಲಿ ನೀನು ಆತನ ಸಹಾಯದೊಂದಿಗೆ ಬಟ್ಟೆಯನ್ನು ಒಗೆಯುತ್ತೀಯಾ, ನೀನು ಬಟ್ಟೆಯ ಮೇಲೆ ಸ್ವಲ್ಪ ಮಾತ್ರ ಕಲೆ ಇರುವುದನ್ನು ಕಂಡು ಹಿಡಿಯುತ್ತೀಯ. ನೀನು ಒಗೆದಿರುವಂತಹ ಯಾವುದೇ ಬಟ್ಟೆಗಳ ಮೇಲೆ ಒಂದೇ ಒಂದು ಕಲೆಯಿರದ ಹಾಗೇ ಮಾಡುವ ತನಕ ಕರ್ತನು ನಿನ್ನ ಜೊತೆ ಕೆಲಸ ಮಾಡಲು ಧೃಢ ಮನಸ್ಸುಳ್ಳವನಾಗಿದ್ದಾನೆ. ನೀನು ಪರಿಪೂರ್ಣತೆಯನ್ನು ಕೈಗೂಡಿಸಿಕೊಳ್ಳುವವರೆಗೂ ಆತನು ನಿನ್ನ ಜೊತೆ ಕಾರ್ಯನಿರ್ವಹಿಸುತ್ತಾನೆ.

ಕರ್ತನು ಹೇಗೆ ತನ್ನ ವಧುವಿನ ಜೊತೆ ಸೇರಿ ಕಾರ್ಯ ನಿರ್ವಹಿಸುತ್ತಾನೆ ಎಂದು ನೀನು ನೋಡಿದಿಯಾ? ಧರ್ಮಶಾಸ್ತ್ರವು ಮಾಡುವ ಹಾಗೆ, ಆತನು ಕೇವಲ ಆಜ್ಞೆಗಳನ್ನು ಕೊಡುವುದಿಲ್ಲ. ಆತನು ನಮ್ಮ ಜೊತೆ ಸೇರಿ ಕೆಲಸ ನಿರ್ವಹಿಸುತ್ತಾನೆ - ನಾವು ಆತನ ಸಹ-ಕೆಲಸಗಾರರು. ಯೇಸುವು ಈ ರೀತಿಯ ಗಂಡನಾಗಿದ್ದಾನೆ.