ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ
WFTW Body: 

ಪರಸ್ಪರ ಪ್ರೀತಿಸುವುದರ ಬಗ್ಗೆ ನಾನು ಮೂರು ವಿಷಯಗಳನ್ನು ಹೇಳಲು ಬಯಸುತ್ತೇನೆ.

1. ಪ್ರೀತಿಯು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ: ವೈವಾಹಿಕ ಪ್ರೀತಿಯ ಬಗ್ಗೆ ದೇವರು ಒಂದು ಇಡೀ ಪುಸ್ತಕವನ್ನೇ ಸೇರಿಸಿದ್ದಾರೆ. ಅದೇ ಪರಮಗೀತ. ಎಲ್ಲಾ ದಂಪತಿಗಳು ಆ ಪುಸ್ತಕವನ್ನು ಪರಸ್ಪರ ಒಬ್ಬರಿಗೊಬ್ಬರು ಓದಬೇಕು. ಪತಿ ಪತ್ನಿಯರು ಒಬ್ಬರಿಗೊಬ್ಬರು ಮಾತನಾಡಬೇಕೆಂದು ಸರ್ವಶಕ್ತ ದೇವರು ನಿರೀಕ್ಷಿಸುವುದನ್ನು ಅಲ್ಲಿ ನೋಡಿದರೆ ಆಶ್ಚರ್ಯವಾಗುತ್ತದೆ. ಬೈಬಲಿನ ಇತರ ಪುಸ್ತಕಗಳಂತೆ, ಆ ಪುಸ್ತಕವೂ ಪವಿತ್ರಾತ್ಮ ಪ್ರೇರೇಪಿತ ಪುಸ್ತಕವಾಗಿದೆ.

ನಾವು ಪತಿ ಪತ್ನಿಯರಂತೆ, ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುವುದನ್ನು ಕಲಿಯುವ ಸಲುವಾಗಿ, ಈ ಪುಸ್ತಕದ ಕೆಲವು ಆಯ್ದ ಭಾಗಗಳನ್ನು ನಾನು ಓದುತ್ತೇನೆ. ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ನಾವೆಲ್ಲರು ಜಿಪುಣರು. ಟೀಕಿಸುವುದರಲ್ಲಿ ನಾವು ಬಹಳ ಮುಂದು. ಆದರೆ, ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ನಾವು ಬಹಳ ಹಿಂದೆ. ನಾವು ಜನರನ್ನು ನೋಡಿದಾಗ ಅವರಲ್ಲಿ ಅನೇಕ ತಪ್ಪುಗಳನ್ನು/ಲೋಪಗಳನ್ನು ಕಾಣುತ್ತೇವೆ. ಅದು ಮನುಷ್ಯ ಸ್ವಭಾವ. ಈ ರೀತಿಯಾಗಿ, ದೂರುಗಾರನಾದ ಸೈತಾನನು ನಮ್ಮೊಳಗೆ ನೆಲೆಯೂರುತ್ತಾನೆ. ನಾವು ಇತರರನ್ನು ನೋಡಿ ಅವರಲ್ಲಿ ಏನಾದರೂ ಕಂಡು, ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಾಗ, ದೇವರು ನಮ್ಮಲ್ಲಿ ನೆಲೆಯೂರುತ್ತಾನೆ. ನಾವು ಪ್ರತಿಯೊಬ್ಬರೂ ನಮ್ಮ ಗುಣನಡತೆಯನ್ನು ಇಲ್ಲಿ ಪರೀಕ್ಷಿಸಬಹುದು.

ಪರಮಗೀತ 4:7 ರಲ್ಲಿ ಪತಿಯು, ಪತ್ನಿಗೆ ಏನು ಹೇಳುತ್ತಾನೆಂಬುದನ್ನು ನೋಡಿರಿ.
"ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ. ನೀನು ತಲೆಯಿಂದ ಪಾದದ ತನಕ ಹೋಲಿಸಲಾಗದಷ್ಟು ಸುಂದರಿ, ನಿನ್ನಲ್ಲಿ ಯಾವ ದೋಷವೂ ಇಲ್ಲ. ನೀನು ನಿಜವಾಗಿಯೂ ಅಪರಂಜಿ. ನೀನು ಆನಂದ ಪರವಶಗೊಳಿಸುವ ಮೋಹಕ ಚೆಲುವಿ. ನಿನ್ನ ಸ್ವರವು ಕೋಮಲ ಹಾಗೂ ನಿನ್ನ ಮುಖ ನಿನ್ನ ಆಂತರಿಕ ಹಾಗು ಬಾಹ್ಯ ಚೆಲುವು, ನನ್ನ ನಲ್ಮೆಯ ಗೆಳತಿಯೇ, ನಿನ್ನ ಚೆಲುವು ಸಂಪೂರ್ಣವಾದುದು. ನೀನು ಒಂದು ಪರದೈಸು. ನೀನು ನನ್ನ ಹೃದಯವನ್ನು ಸೆರೆಹಿಡಿದಿದ್ದೀಯ. ನೀನು ನನ್ನನ್ನು ನೋಡಿದೆ ಹಾಗೂ ನಾನು ನಿನ್ನನ್ನು ಪ್ರೀತಿಸಿದೆ. ನನ್ನೆಡೆಗೆ ನಿನ್ನ ಒಂದು ನೋಟ - ನಾನು ನಿನ್ನನ್ನು ಪ್ರೀತಿಸಿದೆ. ನನ್ನ ಹೃದಯವು ಆನಂದಪರವಶಗೊಂಡಿದೆ. ಓ, ನಿನ್ನನ್ನು ನೋಡಿದಾಗ ನನ್ನಲ್ಲಿ ಉಂಟಾಗುವ ಭಾವನೆಗಳೇ ಹಾಗೂ ನನ್ನ ಆಸೆಗಳೇ. ನಿನ್ನಂತೆ ಜಗತ್ತಿನಲ್ಲಿ ಯಾರೂ ಇಲ್ಲ, ಎಂದೂ ಇದ್ದಿಲ್ಲ, ಎಂದೂ ಇರುವುದಿಲ್ಲ. ನೀನು ಹೋಲಿಸಲಾಗದ ಸ್ತ್ರೀ.

ಈಗ ಪತ್ನಿಯು ಏನು ಹೇಳುತ್ತಾಳೆಂಬುದನ್ನು ಕೇಳಿ. ಇದು ಅವಳ ಉತ್ತರ: ನೀನು ನನ್ನ ಪ್ರಿಯಕರನೇ ತುಂಬಾ ಸುಂದರವಾಗಿದ್ದೀಯ. ನೀನು ಮಿಲಿಯ ಜನರಲ್ಲಿ ಒಬ್ಬನು. ನಿನ್ನಂತೆ ಬೇರೆ ಯಾರೂ ಇಲ್ಲ! ನೀನು ಬಂಗಾರದಂತೆ. ನೀನು ಗುಡ್ಡಗಾಡಿನ ಪುರುಷನಂತೆ. ನಿನ್ನ ಮಾತುಗಳು ಮಧುರ ಹಾಗೂ ಭರವಸೆಯನ್ನು ಕೊಡುವಂಥವು. ನಿನ್ನ ಮಾತುಗಳು ಮುತ್ತುಗಳಂತೆ ಹಾಗೂ ನಿನ್ನ ಮುತ್ತುಗಳೆಲ್ಲವೂ ಮಾತುಗಳಂತೆ. ನಿನ್ನ ಎಲ್ಲವೂ ನನ್ನನ್ನು ಹರ್ಷಗೊಳಿಸುತ್ತದೆ. ನೀನು ನನ್ನನ್ನು ಸಂಪೂರ್ಣವಾಗಿ ಪುಳಕಿತಗೊಳಿಸುತ್ತೀಯ. ನಾನು ನಿನಗಾಗಿ ಹಂಬಲಿಸುತ್ತಿದ್ದೇನೆ. ನಾನು ನಿನ್ನನ್ನು ಕಂಡಾಗ ನನ್ನ ತೋಳುಗಳಿಂದ ನಿನ್ನನ್ನು ಬಿಗಿದಪ್ಪಿ ಹಿಡಿಯಬಯಸುತ್ತೇನೆ ಹಾಗೂ ನಾನು ನಿನ್ನನ್ನು ಹೋಗಲು ಬಿಡುವುದಿಲ್ಲ. ನಾನು ನಿನ್ನವಳೇ ಹಾಗೂ ನೀನು ನನ್ನ ಒಬ್ಬನೇ ಪ್ರಿಯಕರನು ಹಾಗೂ ನೀನೇ ನನ್ನ ಏಕೈಕ ಪುರುಷನು.

2. ಪ್ರೀತಿಯು ಕ್ಷಮಿಸಲು ಮುಂದು. ಪ್ರೀತಿಯು ಅರೋಪಿಸಲು ನಿಧಾನ, ಆದರೆ ಕ್ಷಮಿಸಲು ಮುಂದು. ಪ್ರತಿಯೊಂದು ವಿವಾಹ ಜೀವಿತದಲ್ಲೂ ಪತಿ-ಪತ್ನಿಯರ ಮಧ್ಯೆ ಸಮಸ್ಯೆಗಳಿರುತ್ತವೆ. ಆದರೆ ನೀವು ಆ ಸಮಸ್ಯೆಗಳನ್ನು ಮುಚ್ಚಿಡಲು ಪ್ರಯತ್ನಿಸಿದರೆ, ಅವು ಖಂಡಿತವಾಗಿಯೂ ಮತ್ತೆ ತೋರ್ಪಡಿಸಿಕೊಳ್ಳುತ್ತವೆ. (ಅಂದರೆ, ನೀವು ಆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದೆ ಅವಕ್ಕೆ ಪ್ರಾಮುಖ್ಯತೆ ಕೊಡದಿದ್ದರೆ, ಆ ಸಮಸ್ಯೆಗಳು ಉಲ್ಭಣಗೊಳ್ಳುತ್ತವೆ.) ಆದುದರಿಂದ ಕ್ಷಮೆ ಕೇಳಲು ಹಾಗೂ ಕ್ಷಮಿಸಲು ತ್ವರಿತವಾಗಿರಿ. ಅದನ್ನು ಮಾಡಲು ಅಂದಿನ ದಿನದ ಸಾಯಂಕಾಲದವರೆಗೆ ಕಾಯಬೇಡಿ. ಬೆಳಿಗ್ಗೆ ನಿನ್ನ ಪಾದಕ್ಕೆ ಮುಳ್ಳು ಚುಚ್ಚಿದರೆ, ನೀನು ಅದನ್ನು ಕೂಡಲೇ ತೆಗೆಯುತ್ತೀಯೇ ಹೊರತು ಸಂಜೆಯವರೆಗೆ ಕಾಯುವುದಿಲ್ಲ. ನೀನು ನಿನ್ನ ಸಂಗಾತಿಗೆ ಬೇಸರಪಡಿಸಿದ್ದರೆ, ನೀನು ಅವನು/ಅವಳಿಗೆ ಮುಳ್ಳಿನಿಂದ ಚುಚ್ಚಿದ್ದೀಯೆ ಎಂದು ಅರ್ಥ, ಅದನ್ನು ಕೂಡಲೇ ತೆಗೆದುಬಿಡು. ತಕ್ಷಣವೇ ಕ್ಷಮೆ ಕೇಳು ಹಾಗೂ ಕೂಡಲೇ ಕ್ಷಮಿಸಲು ತ್ವರಿತನಾಗು.

3. ಪ್ರೀತಿಯು ತನ್ನ ಸಂಗಾತಿಯೊಡಗೂಡಿ ಕೆಲಸ ಮಾಡಲು ಕಾತರಿಸುತ್ತದೆ, ಒಂಟಿಯಾಗಿ ಅಲ್ಲ. ಏದೇನಿನ ತೋಟದಲ್ಲಿ ಹವ್ವಳು, "ನಾನು ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನ ಗಂಡನೊಡನೆ ಮೊದಲು ಚರ್ಚಿಸುತ್ತೇನೆ" ಎಂದು, ಸೈತಾನನು ಶೋಧಿಸಲು ಬಂದಾಗ ಹೇಳಿದ್ದರೆ, ಮನುಷ್ಯನ ಚರಿತ್ರೆಯು ಎಷ್ಟು ವಿಭಿನ್ನವಾಗುತ್ತಿತ್ತು? ಪ್ರಪಂಚದಲ್ಲಿನ ಎಲ್ಲಾ ಸಮಸ್ಯೆಗಳು ಬಂದುದರ ಕಾರಣವೇನೆಂದರೆ, ಒಬ್ಬ ಹೆಂಗಸು, ತಾನು ನಿರ್ಧಾರ ತೆಗೆದುಕೊಳ್ಳುವ ಮುನ್ನ ಚರ್ಚಿಸಲು ಒಬ್ಬ ಸಂಗಾತಿಯನ್ನು ದೇವರು ಕೊಟ್ಟಿದ್ದರೂ ಸಹ ಅದನ್ನು ಕಡೆಗಣಿಸಿ, ತಾನೇ ಸ್ವತ: ನಿರ್ಧಾರ ತೆಗೆದುಕೊಂಡದ್ದರಿಂದ ಎಂಬುದನ್ನು ನೆನಪಿಡಿ. ನಿಜವಾದ ಪ್ರೀತಿ ಯಾವತ್ತೂ ಜೊತೆಯಾಗಿ ಕೆಲಸಮಾಡುತ್ತದೆ. ಯಾವಾಗಲೂ ಇಬ್ಬರು, ಒಬ್ಬನಿಗಿಂತ ಉತ್ತಮ.