ದೇವರ ಮೆಚ್ಚುಗೆಯನ್ನು ಸಂಪಾದಿಸಿಕೊಳ್ಳುವುದು

ಬರೆದಿರುವವರು :   ಝ್ಯಾಕ್ ಪೂನನ್
    Download Formats:

ಅಧ್ಯಾಯ 1
ಕರ್ತನೇ, ನನಗೆ ಬೆಳಕು ಕೊಡು

1. ನಾನೆಲ್ಲವನ್ನೂ ತ್ಯಜಿಸಿಲ್ಲದಿದ್ದರೆ ನಿನ್ನ ಪ್ರೀತಿಯ ಧ್ವನಿಗೆ ಪ್ರತ್ಯುತ್ತರವಾಗಿ ನಿನ್ನಿಂದ ಏನಾದರೂ ಮರೆ ಮಾಡಿದ್ದರೆ, ಕರ್ತನೇ, ಅದನ್ನು ನೋಡಲು ಬೆಳಕು ಕೊಡು.

||ಪಲ್ಲವಿ||

ಕರ್ತನೇ, ಪ್ರತಿದಿನ ನನ್ನನ್ನು ನಾನು ತೀರ್ಪುಮಾಡಿಕೊಳ್ಳಲು ಸಹಾಯಿಸು, ಈ ಹೊಸದಾದ ಜೀವವುಳ್ಳ ಹಾದಿಯಲ್ಲಿ ನಡೆಯಲು ಪೂರ್ಣ ಹೃದಯದಿಂದ ನಿನ್ನ ಕೃಪೆಯನ್ನು ಹುಡುಕುವೆ ನಿನ್ನ ಹಾಗೆ ಪವಿತ್ರವಾಗಿರಲು||

2. ಇಹಲೋಕದಲ್ಲಿ ಏನಾದರೂ ನನ್ನನ್ನು ಮೋಹಗೊಳಿಸುವಂಥದಿದ್ದರೆ ಹಣದ ಹಿಡಿತ ನನ್ನ ಮೇಲಿದ್ದರೆ, ಕರ್ತನೇ, ಅದನ್ನು ನೋಡಲು ಬೆಳಕು ಕೊಡು

3. ನನ್ನ ಜೀವಿತದಲ್ಲಿ ಯೋಚನೆಗಳು ನನ್ನ ಮತ್ತು ನನ್ನ ಕುಟುಂಬವನ್ನೇ ಸುತ್ತುತ್ತಿದ್ದರೆ ನಾನು ಸ್ವಾರ್ಥಿಯಾಗಿ ಜೀವಿಸುತ್ತಿದ್ದರೆ ಕರ್ತನೇ, ಅದನ್ನು ನೋಡಲು ಬೆಳಕು ಕೊಡು

4. ನಾನೇದರೂ ಒಳ್ಳೆ ಕಾರ್ಯ ಮಾಡಬೇಕಿತ್ತೇ? ಯಾವ ಆತ್ಮವನ್ನಾದರೂ ಗೆಲ್ಲಬೇಕಿತ್ತೆ? ತಿಳಿಯದೇ ಯಾರ ಮನಸ್ಸನ್ನಾದರೂ ನಾನು ನೋಯಿಸಿದ್ದರೆ ಕರ್ತನೇ, ಅದನ್ನು ನೋಡಲು ಬೆಳಕು ಕೊಡು

5. ಇತರರ ಬೀಳುವಿಕೆ, ನನ್ನಲ್ಲಿ ಕಾಳಜಿ, ಕಳವಳವನ್ನುಂಟು ಮಾಡಿಲ್ಲವಾದರೆ ಅಂತರಂಗದಲ್ಲಿ ಇತರರನ್ನು ತೀರ್ಪು ಮಾಡಿದ್ದರೆ ಕರ್ತನೇ, ಅದನ್ನು ನೋಡಲು ಬೆಳಕು ಕೊಡು.

6. ನಾನು ಮಾನವನ ಪ್ರಶಂಸೆಯನ್ನು ಹಂಬಲಿಸಿದ್ದರೆ ಕ್ರೂಜೆಯನ್ನು ತ್ಯಜಿಸಿ ಸ್ವಾರ್ಥವನ್ನು ಬೆನ್ನಟ್ಟಿದ್ದರೆ ಮಾನವನ ನಿಂದೆಗೆ ನಾನು ಭಯ ಪಟ್ಟಿದ್ದರೆ, ಕರ್ತನೇ, ಅದನ್ನು ನೋಡಲು ಬೆಳಕು ಕೊಡು

7. ಪ್ರಾರ್ಥನೆಯಲ್ಲಿ ನಿನ್ನ ಬಲವನ್ನು ಬೇಡಿಕೊಳ್ಳದೆ ಇಹಲೋಕದ ಚಿಂತೆ, ಭಾರದಲ್ಲಿ ಮುಳುಗಿ ನಿನ್ನನ್ನು ಹಂಬಲಿಸದಿದ್ದರೆ ಕರ್ತನೇ, ಅದನ್ನು ನೋಡಲು ಬೆಳಕು ಕೊಡು

- ಝ್ಯಾಕ್ ಪೂನನ್

ಅಧ್ಯಾಯ 2
ಕರೆಯಲ್ಪಟ್ಟವರೂ, ಆಯಲ್ಪಟ್ಟವರೂ ಮತ್ತು ನಂಬಿಗಸ್ತರು

ದೇವರಿಂದ ಸ್ವೀಕರಿಸಲ್ಪಡುವುದು ಒಂದು ವಿಷಯವಾದರೆ ಆತನಿಂದ ಸಮ್ಮತಿಸಲ್ಪಡುವುದು ಮತ್ತೊಂದು ವಿಷಯವಾಗಿದೆ.

ನಂಬಿಗಸ್ತರಾದ ಕೆಲವರು

ದೇವರ ಯಜ್ಞದ ಕುರಿಮರಿಯಾದಾತನ ಜಯದ ವಿಷಯವಾಗಿ ಪ್ರಕಟಣೆಯ ಪುಸ್ತಕವು ಹೇಳುತ್ತದೆ. ಆದರೆ ಯಜ್ಞದ ಕುರಿಯಾದಾತನು ತನ್ನ ಶಿಷ್ಯರ ಒಂದು ಸೇನೆಯ ಮೂಲಕವಾಗಿ ತನ್ನ ಯುದ್ಧಗಳನ್ನು ಮಾಡಿ ಜಯಿಸುತ್ತಾನೆಂದು ನಾವು ಓದುತ್ತೇವೆ. ಈ ಶಿಷ್ಯರನ್ನು

‘ದೇವರಿಂದ ಕರೆಯಲ್ಪಟ್ಟವರೂ, ಆಯಲ್ಪಟ್ಟವರೂ ಮತ್ತು ನಂಬಿಗಸ್ತರು’

ಎಂದು ಕರೆಯಲಾಗಿದೆ.

)“ಯಜ್ಞದ ಕುರಿಯಾದಾತನು, ಕರ್ತರ ಕರ್ತನೂ ರಾಜರ ರಾಜನೂ ಆಗಿರುವದರಿಂದ ಅವರನ್ನು ಜಯಿಸುವನು ಮತ್ತು ದೇವರು ಕರೆದವರೂ, ದೇವರಾದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನ ಕಡೆಯವರು ಆ ಜಯದಲ್ಲಿ ಪಾಲುಗಾರರಾಗುವರು (ಪ್ರಕ. 17:14).

ಅನೇಕರು ಕರೆಯಲ್ಪಟ್ಟಿದ್ದಾರೆ, ಕೆಲವರು ಆಯಲ್ಪಟ್ಟಿದ್ದಾರೆ, ಆದರೆ ಇನ್ನು ಕೆಲವರು ಮಾತ್ರ ನಂಬಿಗಸ್ತರಾಗಿದ್ದಾರೆ. ಈ ಜಯಶಾಲಿಗಳ ವಿಷಯವಾಗಿ ಪ್ರಕಟಣೆಯ ಪುಸ್ತಕದಲ್ಲಿ ಹತ್ತು ಸಾರಿ ಬರೆಯಲ್ಪಟ್ಟಿದೆ. ಇವರು ಯೇಸುವಿನ ಶಿಷ್ಯರೂ ದೇವರಿಂದ ಅಂಗೀಕರಿಸಲ್ಪಟ್ಟವರೂ ಮಾತ್ರವಲ್ಲದೆ ಅವರು ಆತನಿಂದ ಅನೇಕ ಸನ್ನಿವೇಶಗಳಲ್ಲಿ ಪರೀಕ್ಷಿಸಲ್ಪಟ್ಟು ಆತನ ಮೆಚ್ಚುಗೆಯನ್ನು ಪಡೆದವರಾಗಿದ್ದಾರೆ.

ಯೇಸು ಈ ಲೋಕದಲ್ಲಿದ್ದಾಗ ಅನೇಕರು ಆತನ ಮೇಲೆ ನಂಬಿಕೆ ಇಟ್ಟರು, ಆದರೆ ಆತನು ಅವರಲ್ಲಿ ಯಾರಿಗೂ ವಶವಾಗಲಿಲ್ಲ.

“ಯೇಸು ಯೆರೂಸಲೇಮಿನಲ್ಲಿದ್ದಾಗ ಅನೇಕರು ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರು. ಆದರೆ ಯೇಸು ಎಲ್ಲರನ್ನೂ ಬಲ್ಲವನಾಗಿದ್ದದರಿಂದ ಅವರಲ್ಲಿ ಯಾರಿಗೂ ವಶವಾಗಲಿಲ್ಲ(ಯೋಹಾನ. 2:23, 24).

ಆತನ ಮೇಲೆ ನಂಬಿಕೆ ಇಟ್ಟವರಲ್ಲಿ ಬಹು ಜನರು ಸ್ವಾರ್ಥಿಗಳಾಗಿದ್ದು ತಮಗಾಗಿ ಆಶೀರ್ವಾದಗಳನ್ನು ಹುಡುಕುವವರಾಗಿ ಆತನ ಬಳಿಗೆ ಬಂದವರೆಂದು ಯೇಸುವಿಗೆ ಗೊತ್ತಿತ್ತು. ಅವರ ಪಾಪಗಳು ಕ್ಷಮಿಸಲ್ಪಟ್ಟಿದ್ದವು; ಆದರೆ ಜಯಶಾಲಿಗಳಾಗುವ ಹಂಬಲ ಅವರಿಗಿರಲಿಲ್ಲ. ಜಯಶಾಲಿಯಾಗಬೇಕೆಂದಿರುವವನು ತನ್ನ ಸ್ವಾರ್ಥವನ್ನು ಹುಡುಕುವುದರಿಂದ ಬಿಡುಗಡೆ ಹೊಂದಲು ಹಾತೊರೆಯುವವನಾಗಿರಬೇಕು.

ಇಸ್ರಾಯೇಲ್ಯರ ವಿರೋಧಿಗಳೊಂದಿಗೆ ಹೋರಾಡಲು ಗಿದ್ಯೋನನು ಸೈನ್ಯವನ್ನು ಕೂಡಿಸಿದಾಗ, ಅವನೊಂದಿಗೆ ಆ ಸೈನ್ಯದಲ್ಲಿ 32,000 ಜನರಿದ್ದರು. ಆದರೆ ಅವರೆಲ್ಲರೂ ಪೂರ್ಣಮನಸ್ಸಿನಿಂದ ಯುದ್ಧಕ್ಕೆ ಬಂದಿಲ್ಲವೆಂದು ದೇವರಿಗೆ ಗೊತ್ತಿತ್ತು. ಆದ್ದರಿಂದ ದೇವರು ಅವರ ಸಂಖ್ಯೆಯನ್ನು ಕಡಿಮೆಗೊಳಿಸಿದನು. ಅಂಜುಬುರುಕರನ್ನು ಮೊದಲು ಮನೆಗೆ ಕಳುಹಿಸಲಾಯಿತು. ಆದರೆ ಇನ್ನೂ 10,000ಜನ ಉಳಿದರು. ಇವರನ್ನು ನೀರಿನ ಹಳ್ಳದ ಬಳಿಗೆ ಕರೆದುಕೊಂಡು ಹೋಗಿ ಅಲ್ಲಿ ಅವರನ್ನು ಪರೀಕ್ಷಿಸಲಾಯಿತು. ಇವರಲ್ಲಿ 300 ಜನರು ಮಾತ್ರ ಪರೀಕ್ಷೆಯಲ್ಲಿ ಪಾಸಾಗಿ ದೇವರ ಮೆಚ್ಚುಗೆಯನ್ನು ಗಳಿಸಿದರು (ನ್ಯಾಯ. 7:1-8).

ಈ 10,000 ಜನರು ತಮ್ಮ ದಾಹವನ್ನು ನೀಗಿಸಿಕೊಳ್ಳಲು ನದಿಯ ನೀರನ್ನು ಯಾವ ರೀತಿ ಕುಡಿದರು ಎಂದು ನೋಡಿ ಅದರ ಮೂಲಕ ಅವರು ಗಿದ್ಯೋನನ ಸೈನ್ಯಕ್ಕೆ ಸೇರಲು ಅರ್ಹರೆಂದು ದೇವರು ನಿರ್ಣಯಿಸಿದನು. ತಾವು ಪರೀಕ್ಷಿಸಲ್ಪಡುತ್ತಿದ್ದಾರೆಂದು ಅವರಿಗೆ ತಿಳಿದಿರಲಿಲ್ಲ. ಅವರಲ್ಲಿ9,700 ಜನರು ತಮ್ಮ ದಾಹವನ್ನು ತೀರಿಸಿಕೊಳ್ಳಲೆಂದು ಮೊಣಕಾಲೂರಿಕೊಂಡು ನೀರು ಕುಡಿಯುತ್ತಾ ತಮ್ಮ ಶತ್ರುಗಳ ಬಗ್ಗೆ ಸಂಪೂರ್ಣವಾಗಿ ಮರೆತುಬಿಟ್ಟರು. ಕೇವಲ 300 ಜನರು ಮಾತ್ರ ತಮ್ಮ ಕಾಲುಗಳ ಮೇಲೆ ನಿಂತು, ತಮ್ಮ ಬೊಗಸೆಗೈಗಳಲ್ಲಿ ನೀರನ್ನು ತಗೆದುಕೊಂಡು ಕುಡಿಯುತ್ತಾ ಎಚ್ಚರವಾಗಿದ್ದರು.

ಅನುದಿನದ ಜೀವಿತದಲ್ಲಿ ಪರೀಕ್ಷೆ

ನಮ್ಮ ಜೀವಿತದ ಪ್ರತಿದಿನದ ಸಾಮಾನ್ಯ ವಿಷಯಗಳಲ್ಲಿ ದೇವರು ನಮ್ಮನ್ನು ಪರೀಕ್ಷಿಸುವರು - ಹಣದ ವಿಷಯದಲ್ಲಿ, ಈ ಲೋಕದ ಸ್ಥಾನ-ಮಾನ, ಸುಖ-ಸೌಕರ್ಯಗಳ ವಿಷಯದಲ್ಲಿ ಮತ್ತು ಇತ್ಯಾದಿಯಲ್ಲಿ ನಮ್ಮ ಮನೋಭಾವನೆ ಹೇಗಿದೆಯೆಂದು ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾರೆಂದು, ಗಿದ್ಯೋನನ ಸೈನಿಕರ ಹಾಗೆ ನಾವು ಕೂಡ ಅನೇಕ ಬಾರಿ ಅರಿಯದೆ ಹೋಗುತ್ತೇವೆ.

ಪ್ರಪಂಚದ ಚಿಂತೆಗಳಿಂದ ತುಂಬಿ ನಮ್ಮ ಹೃದಯಗಳು ಭಾರವಾಗಿರಬಾರದೆಂದು ಯೇಸು ಎಚ್ಚರಿಸಿದನು. ಆತನು ಹೇಳಿದ್ದೇನೆಂದರೆ, “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು! (ಲೂಕ. 21:34).

ಪೌಲನು ಕೊರಿಂಥದ ಕ್ರೈಸ್ತರನ್ನು ಎಚ್ಚರಿಸಿ ಹೇಳಿದ್ದೇನೆಂದರೆ, “ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ, ಅಳುವವರು ಅಳದವರಂತೆಯೂ, ಸಂತೋಷಿಸುವವರು (ಈ ಲೋಕದ ವಸ್ತುಗಳಲ್ಲಿ) ಸಂತೋಷಪಡದವರಂತೆಯೂ, ಕೊಂಡುಕೊಳ್ಳುವವರು ಕೊಂಡದ್ದು ತಮ್ಮದೇ ಎಂದು ಹೇಳದವರಂತೆಯೂ, ಈ ಲೋಕವನ್ನು ಅನುಭೋಗಿಸುವವರು ಪರಿಪೂರ್ಣವಾಗಿ ಈ ಲೋಕವನ್ನು ಅನುಭೋಗಿಸದವರಂತೆಯೂ ಇರಬೇಕು. ಯಾಕೆಂದರೆ, ಈ ಪ್ರಪಂಚದ ತೋರಿಕೆಯು ಗತಿಸಿ ಹೋಗುತ್ತಾ ಇದೆ. ನೀವು ಸಜ್ಜನರಿಗೆ ತಕ್ಕ ಹಾಗೆ ನಡೆದು ಯಾವುದೇ ಭಿನ್ನಭಾವವಿಲ್ಲದೆ ಕರ್ತನಿಗೆ ಪಾದ ಸೇವೆಯನ್ನು ಮಾಡುವವರಾಗಬೇಕೆಂದು ನಿಮ್ಮ ಹಿತಕ್ಕೋಸ್ಕರವೇ ಹೇಳುತ್ತೇನೆ (1 ಕೊರಿಂಥ. 2:29-35).

ಈ ಲೋಕದ ಯಾವ ವಿಷಯವೂ ನಮ್ಮನ್ನು ನಮ್ಮ ಕರ್ತನ ಮೇಲಿನ ಪೂರ್ಣ ಭಕ್ತಿಯಿಂದ ಅಗಲಿಸಲು ಅನುಮತಿಸಬಾರದು. ಈ ಲೋಕದ ನ್ಯಾಯ ಸಮ್ಮತವಾದ ವಿಷಯಗಳು ಪಾಪಮಯ ಸಂಗತಿಗಳಿಗಿಂತ ದೊಡ್ಡ ಉರ್ಲಾಗಿದೆ (ಬಲೆ); ಯಾಕೆಂದರೆ, ನ್ಯಾಯ ಸಮ್ಮತವಾದ ವಿಷಯಗಳು ಬಹಳ ಮುಗ್ಧವಾಗಿಯೂ ಅಪಾಯಕರವಲ್ಲದ್ದಾಗಿಯೂ ಕಾಣಿಸುತ್ತದೆ!!

ನಮ್ಮ ದಾಹವನ್ನು ತೀರಿಸಿಕೊಳ್ಳಬೇಕು ನಿಜ- ಆದರೆ ನಮ್ಮ ಕೈಗಳಿಂದ ನಮಗೆ ಅವಶ್ಯವಿರುವಷ್ಟು ಮಾತ್ರ ಕುಡಿಯಬೇಕು. ನಮ್ಮ ಮನಸ್ಸುಮೇಲಿನವುಗಳ ಮೇಲೆ (ಪರಲೋಕದವುಗಳ ಮೇಲೆ) ಇರಬೇಕೇ ಹೊರತು ಈ ಲೋಕದವುಗಳ ಮೇಲಲ್ಲ. ಯೇಸುವಿನ ಶಿಷ್ಯರಾಗಿರಬೇಕಾಗಿದ್ದರೆ, ನಾವು ಎಲ್ಲವನ್ನೂ ತ್ಯಜಿಸಬೇಕು.

ಒಂದು ಉದ್ದಕ್ಕೆ ಎಳೆಯಬಹುದಾದ ರಬ್ಬರ್-ಬ್ಯಾಂಡಿನಂತೆ, ನಮ್ಮ ಮನಸ್ಸು ಸಹ ಈ ಲೋಕದ ಅವಶ್ಯಕ ವಿಷಯಗಳ ಕಡೆಗೆ ಹೋಗಬಹುದು. ಆದರೆ ಆ ವಿಷಯಗಳನ್ನು ಮಾಡಿ ಮುಗಿಸಿದ ಕೂಡಲೇ ರಬ್ಬರ್-ಬ್ಯಾಂಡು ಎಳೆಯಲ್ಪಟ್ಟ ಸ್ಥಿತಿಯಿಂದ ಅದರ ಯಥಾರ್ಥ ಸ್ಥಿತಿಗೆ ತಿರುಗಿ ಕೂಡಲೇ ಬರುವಂತೆ, ನಮ್ಮ ಮನಸ್ಸು ಕೂಡ ಕರ್ತನ ವಿಷಯಗಳಿಗೂ ನಿತ್ಯತ್ವದ ಕಡೆಗೂ ಒಮ್ಮೆಲೇ ಪುಟಿದು ಮರಳಿ ಬರಬೇಕು. ಇದೇ “ಮೇಲಿನವುಗಳ ಮೇಲೆ ಮನಸ್ಸಿಡಿರಿ, ಭೂ ಸಂಭಂದವಾದವುಗಳ ಮೇಲೆ ನಿಮ್ಮ ಮನಸ್ಸನ್ನು ಇಡಬೇಡಿರಿ ಎಂಬುದರ ಅರ್ಥವಾಗಿದೆ (ಕೊಲೊ. 3:2).

ಆದರೆ ಅನೇಕ ವಿಶ್ವಾಸಿಗಳಲ್ಲಿ ಈ ರಬ್ಬರ್-ಬ್ಯಾಂಡ್ ಬೇರೆ ರೀತಿಯಾಗಿಯೇ ಕೆಲಸಮಾಡುತ್ತದೆ. ಅವರ ಮನಸ್ಸು ಆಗಾಗ ಎಳೆಯಲ್ಪಟ್ಟು ನಿತ್ಯತ್ವದ ವಿಷಯಗಳ ಬಗ್ಗೆ ಯೋಚಿಸುತ್ತದೆ; ಮತ್ತು ಅದನ್ನು (ಎಳೆಯುವುದನ್ನು) ಬಿಟ್ಟು ಬಿಟ್ಟಾಗ ಅದು ಕೂಡಲೇ ಅದರ ಯಥಾಸ್ಥಿತಿಗೆ ಅಂದರೆ ಈ ಲೋಕದ ವಿಷಯಗಳಿಂದ ತುಂಬಲ್ಪಟ್ಟ ಸ್ಥಿತಿಗೆ ಮರಳುತ್ತದೆ!

ದೇವರಿಂದ ಮೆಚ್ಚಲ್ಪಡುವುದು

“ಯುದ್ಧಕ್ಕೆ ಹೋಗುವ ಸೈನಿಕನು ಲೋಕದ ಪ್ರತಿದಿನದ ವ್ಯವಹಾರದಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನ್ಯದಲ್ಲಿ ಸೇರಿಸಿಕೊಂಡವನನ್ನು ಮೆಚ್ಚಿಸುವುದಕ್ಕೆ ಪ್ರಯಾಸಪಡುವನು ಎಂದು ಪೌಲನು ತಿಮೊಥೆಯನಿಗೆ ಎಚ್ಚರಿಸಿದನು (2 ತಿಮೊ. 2:4).

ಇಲ್ಲಿ ಹೇಗೆ ರಕ್ಷಣೆ ಹೊಂದಬೇಕೆಂದು ಪೌಲನು ತಿಮೊಥೆಯನಿಗೆ ಹೇಳುತ್ತಿಲ್ಲ, ಬದಲಿಗೆ ಹೇಗೆ ಆತನು ಕ್ರಿಸ್ತನ ಫಲದಾಯಕ ಸೈನಿಕನಾಗಿರಬಹುದು ಎಂದು ಹೇಳುತ್ತಿದ್ದಾನೆ.

“ದೇವರ ದೃಷ್ಟಿಗೆ ಯೋಗ್ಯವಾಗಿ ಕಾಣಿಸಿಕೊಳ್ಳಲು ಪ್ರಯಾಸಪಡು ಎಂದು ಪೌಲನು ಅವನಿಗೆ ಹೇಳಿದನು (2 ತಿಮೊ. 2 15). ತಿಮೊಥೆಯನು ಆಗಾಗಲೇ ದೇವರಿಂದ ಅಂಗೀಕರಿಸಲ್ಪಟ್ಟಿದ್ದನು. ಆದರೆ ಈಗ ಆತನು ದೇವರ ಮೆಚ್ಚುಗೆಯನ್ನು ಗಳಿಸಲು ಪ್ರಯಾಸಪಡಬೇಕಾಗಿತ್ತು.

ಪೌಲನು ತಾನೇ ಕ್ರಿಸ್ತನಿಂದ ಕ್ರೈಸ್ತ ಸೇವೆಯಲ್ಲಿಡಲ್ಪಟ್ಟಿದ್ದನು. ಯಾಕೆಂದರೆ, ಆತನು ದೇವರ ಮೆಚ್ಚುಗೆಯನ್ನು ಗಳಿಸಿದ್ದನು.

ಆತನು ಹೇಳುತ್ತಾನೆ, “ನನಗೆ ಬಲವನ್ನು ದಯಪಾಲಿಸಿ, ನನ್ನನ್ನು ನಂಬಿಗಸ್ತನೆಂದೆಣಿಸಿ, ತನ್ನ ಸೇವೆಗೆ ನನ್ನನ್ನು ನೇಮಿಸಿದ ನನ್ನ ಕರ್ತನಾದ ಕ್ರಿಸ್ತ ಯೇಸುವಿಗೆ ನಾನು ಸ್ತೋತ್ರ ಸಲ್ಲಿಸುತ್ತೇನೆ ( 1 ತಿಮೊ. 1:12).

ಪೌಲನು ಆ ಕರೆಯಲ್ಪಟ್ಟ, ಆಯಲ್ಪಟ್ಟ ಮತ್ತು ನಂಬಿಗಸ್ತರೊಳಗೆ ಒಬ್ಬನಾಗಿದ್ದು, ತಿಮೋಥೆಯನು ಸಹ ಅವರೊಳಗೆ ಒಬ್ಬನಾಗಿ ಎಣಿಸಲ್ಪಡಬೇಕೆಂದು ಅವನು ಹಂಬಲಿಸಿದನು.

ಆದರೆ ಪೌಲನು ಮೆಚ್ಚುಗೆಗಳಿಸುವ ಮೊದಲು ಪರೀಕ್ಷಿಸಲ್ಪಟ್ಟಿದ್ದ್ಟನು.

ನಾವು ಸಹ ಪರೀಕ್ಷಿಸಲ್ಪಡುತ್ತಿದ್ದೇವೆ.

ದೇವರು ಯಾರನ್ನೇ ಪರೀಕ್ಷಿಸುವ ಮೊದಲು ತನ್ನನ್ನು ಅವರಿಗೆ ಒಪ್ಪಿಸಿಕೊಡುವುದಿಲ್ಲ.

ದೇವರ ವಾಕ್ಯದಲ್ಲಿ ಅನೇಕ ಜನರ ಪರೀಕ್ಷೆಯ ವಿವರಗಳು ಬರೆಯಲ್ಪಟ್ಟಿವೆ. ಅವುಗಳಲ್ಲಿ ಕೆಲವರು ಪರೀಕ್ಷೆಯಲ್ಲಿ ದೇವರ ಮೆಚ್ಚುಗೆಗಳಿಸಿದರು; ಕೆಲವರು ನಿರಾಕರಿಸಲ್ಪಟ್ಟರು. ಆದ್ದರಿಂದ ಈ ಉಧಾಹರಣೆಗಳು ನಮಗೆ ಬಹಳ ಬೆಲೆಯುಳ್ಳವುಗಳಾಗಿವೆ. ಯಾಕೆಂದರೆ, ಅವೆಲ್ಲವೂ ನಮ್ಮ ಎಚ್ಚರಿಕೆಗಾಗಿ ಬರೆಯಲ್ಪಟ್ಟಿವೆ.

.

]]

ಅಧ್ಯಾಯ 3
ತಂದೆಯು ಮೆಚ್ಚುವಂಥವರಾಗಿರುವುದು

ಹೊಸ ಒಡಂಬಡಿಕೆಯಲ್ಲಿ ಒಬ್ಬನ ವಿಷಯದಲ್ಲಿ ತಂದೆಯು ಮೆಚ್ಚಿದನೆಂದೂ ಇನ್ನೊಂದು ಗುಂಪಿನ ಜನರ ವಿಷಯದಲ್ಲಿ ದೇವರು ಸಂತೋಷಿಸಲಿಲ್ಲವೆಂದೂ ನಾವು ಓದುತ್ತೇವೆ. ಈ ತಾರತಮ್ಯದ ವಿಷಯದ ಅಭ್ಯಾಸವು ಬಹಳ ಕುತೂಹಲಕಾರಿಯಾಗಿದೆ.

ದೇವರು ಇವರ ವಿಷಯದಲ್ಲಿ ಸಂತೋಷಿಸಲಿಲ್ಲ

6,00,000 ಇಸ್ರಾಯೇಲ್ಯರು ಅಪನಂಬಿಕೆಯಿಂದ ಅರಣ್ಯದಲ್ಲಿ ನಾಶಮಾಡಲ್ಪಟ್ಟರು. ಅವರ ವಿಷಯದಲ್ಲಿ ದೇವರು ಸಂತೋಷಿಸಲಿಲ್ಲವೆಂದು ಬರೆಯಲ್ಪಟ್ಟಿದೆ (1 ಕೊರಿಂಥ. 10:5).

ಯಜ್ಞದ ಕುರಿಮರಿಯ ರಕ್ತದಿಂದ ಆ ಇಸ್ರಾಯೇಲ್ಯರು ಐಗುಪ್ತದಿಂದ ವಿಮೋಚಿಸಲ್ಪಟ್ಟಿದ್ದರು (ನಾವು ಕ್ರಿಸ್ತನ ರಕ್ತದಿಂದ ಬಿಡುಗಡೆ ಹೊಂದಿದಂತೆ). ಅವರು ಕೆಂಪು ಸಮುದ್ರದಲ್ಲಿಯೂ ಮತ್ತು ಮೇಘದಲ್ಲಿಯೂ ದೀಕ್ಷಾಸ್ನಾನ ಹೊಂದಿದ್ದರು (ಇದು ನೀರಿನ ಮತ್ತು ಆತ್ಮನ ದೀಕ್ಷಾಸ್ನಾನದ ಗುರುತು) ()1 ಕೊರಿಂಥ. 10:2). ಆದರೂ ದೇವರು ಅವರ ವಿಷಯದಲ್ಲಿ ಸಂತೋಷಿಸಲಿಲ್ಲ.

ಆದಾಗ್ಯೂ ದೇವರು ಅವರಿಗೆ ಬಹಳ ಒಳ್ಳೆಯವನಾಗಿದ್ದನು. ಅಲ್ಲಿ ಅವರ ದೈಹಿಕ, ಭೌತಿಕ ಕೊರತೆಗಳನ್ನೆಲ್ಲಾ ಆತನು ಅಧ್ಬುತವಾಗಿ ನೀಗಿಸಿದನು. ಈ ನಾಲ್ವತ್ತು ವರುಷ ನಿಮ್ಮ ಮೈಮೇಲಿದ್ದ ಉಡುಪು ಜೀರ್ಣವಾಗಲಿಲ್ಲ; ನಿಮ್ಮ ಕಾಲುಗಳು ಬಾತುಹೋಗಲಿಲ್ಲ(ಧರ್ಮೋ. 8:4). ಇದನ್ನು ಮೋಶೆಯು ಇಸ್ರಾಯೇಲ್ಯರಿಗೆ ನಾಲ್ವತ್ತು ವರುಷಗಳು ಅಲೆದಾಡಿದ ನಂತರ ಹೇಳಿದನು.

ಅವರ ಎಲ್ಲಾ ವ್ಯಾಧಿಗಳನ್ನು ವಾಸಿಮಾಡಿದನು. ಅವರಲ್ಲಿ ಯಾವ ರೋಗಿಯಾಗಲಿ, ಅಶಕ್ತನಾಗಲಿ ಇರಲಿಲ್ಲವೆಂದು ಸತ್ಯವೇದವು ಹೇಳುತ್ತದೆ (ಕೀರ್ತನೆ. 105:37).

ದೇವರು ಅವರಿಗಾಗಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದನು. ನಿಜ ಹೇಳಬೇಕೆಂದರೆ, ಈ ಲೋಕದ ಇತಿಹಾಸದಲ್ಲಿ ಆ ಅಪನಂಬಿಗಸ್ತರಾದ ಇಸ್ರಾಯೇಲ್ಯರಿಗೆ ಸಂಭವಿಸಿದ ಆದ್ಭುತಗಳು ಬೇರೆ ಯಾವ ಗುಂಪಿನ ಜನಾಂಗಕ್ಕೂ ಸಂಭವಿಸಲಿಲ್ಲ. ಆದರೂ ನಾಲ್ವತ್ತು ವರ್ಷ ದೇವರು ಅವರ ಮೇಲೆ ಕೋಪಿಸಿಕೊಂಡನೆಂದು ಇಬ್ರಿಯ 3:17 ರಲ್ಲಿ ಹೇಳುತ್ತದೆ.

ಇದು ನಮಗೆ ಕಲಿಸುವುದೇನೆಂದರೆ, ದೇವರು ಲೌಕಿಕ ವಿಶ್ವಾಸಿಗಳ ಪ್ರಾರ್ಥನೆಯನ್ನು ಸಹ ಕೇಳುತ್ತಾನೆ; ಅಗತ್ಯವಿದ್ದರೆ ಅದ್ಭುತವಾಗಿ ಅವರ ಲೌಕಿಕ ಕೊರತೆಗಳನ್ನು ನೀಗಿಸುತ್ತಾನೆ. ದೇವರು ನಮಗೋಸ್ಕರ ಅದ್ಭುತಗಳನ್ನು ಮಾಡುವುದು ನಮ್ಮ ಆತ್ಮಿಕತೆಯನ್ನು ತೋರಿಸುವುದಿಲ್ಲ. ದೇವರು ಒಳ್ಳೆಯವನು; ತನ್ನ ಸೂರ್ಯನು ನೀತಿವಂತರ ಮೇಲೂ ಅನೀತಿವಂತರ ಮೇಲೂ ಪ್ರಕಾಶಿಸುವಂತೆ ಮಾಡುತ್ತಾನೆಂದೇ ಇದು ರುಜುಪಡಿಸುತ್ತದೆ!

ನ್ಯಾಯ ತೀರ್ಪಿನ ಅಂತಿಮ ದಿನದಲ್ಲಿ, ಆತನ ನಾಮದಲ್ಲಿ ಅದ್ಭುತಗಳನ್ನು ಮಾಡಿದ ಅನೇಕರು ಸಹ ಅನರ್ಹರೆಂದು ತಳ್ಳಲ್ಪಡುವರೆಂದು ಯೇಸು ಎಚ್ಚರಿಸಿದನು. ಏಕೆಂದರೆ, ಅವರು ಪಾಪದಲ್ಲಿ ಜೀವಿಸಿದರು. ಯೇಸು ಹೇಳಿದ್ದೇನೆಂದರೆ ಸ್ವಾಮಿ, ಸ್ವಾಮಿ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ1 ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ1 ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ತೊಲಗಿ ಹೋಗಿರಿ (ಮತ್ತಾ-7:22,23) .

ತನ್ನ ಹೆಸರಿನಲ್ಲಿ ನಿಜವಾದ ಅದ್ಭುತಕಾರ್ಯಗಳನ್ನು ಮಾಡಿದ ಭೋದಕರ ಬಗ್ಗೆ ಯೇಸು ಹೇಳುತ್ತಿರುವುದು ಇಲ್ಲಿ ಸ್ಪಷ್ಟವಾಗಿದೆ. ಕೆಲವರು ಮಾತ್ರವಲ್ಲ, ಎಲ್ಲರೂ ಅಲ್ಲ, ಆದರೆ ಅನೇಕರು, ಇಂತಹ ಅದ್ಭುತಗಳನ್ನು ಮಾಡುವ ಭೋದಕರು ತಮ್ಮ ಗುಪ್ತ ಜೀವಿತದಲ್ಲಿ, ಯೋಚನೆಯ ಕ್ಷೇತ್ರದಲ್ಲಿ ಪಾಪದಲ್ಲಿ ಜೀವಿಸುತ್ತಿದ್ದರು. ಈ ಪಾಪಗಳು ಯೇಸುವಿನ ನ್ಯಾಯಾಸನದ ಮುಂದೆ ಬೈಲಿಗೆ ಬರುತ್ತವೆ.

ಅದ್ಭುತಗಳನ್ನು ನಡಿಸುವ ಮನುಷ್ಯರೆಲ್ಲರೂ ದೇವರ ಮೆಚ್ಚುಗೆಗೆ ಪಾತ್ರರಲ್ಲವೆಂದು ಇದು ನಮಗೆ ಸ್ಪಷ್ಟವಾಗಿ ಕಲಿಸುತ್ತದೆ. ಇದನ್ನು ಪೂರ್ಣವಾಗಿ ನಾವು ಅರಿತುಕೊಂಡಿದ್ದೇವೋ1 ಇಲ್ಲವಾದಲ್ಲಿ ನಾವು ವಂಚಿಸಲ್ಪಡುತ್ತೇವೆ.

ದೇವರು ಈತನನ್ನು ಮೆಚ್ಚಿದನು

ಹಳೆಯ ಒಡಂಬಡಿಕೆಯಲ್ಲಿ ದೇವರಿಂದ ಮೆಚ್ಚಲ್ಪಡದ ಇಸ್ರಾಯೇಲ್ಯರಿಗೆ ವ್ಯತಿರಿಕ್ತವಾಗಿ, ಹೊಸ ಒಡಂಬಡಿಕೆಯಲ್ಲಿ ಯೇಸುವಿನ ಬಗ್ಗೆ ಓದುತ್ತೇವೆ- ‘ತಂದೆಯು ಆತನನ್ನು ಬಹಳವಾಗಿ ಮೆಚ್ಚಿದನೆಂದು’.

ತನ್ನ ಮೂವತ್ತನೇ ವರ್ಷದಲ್ಲಿ ಯೇಸುವು ತಂದೆಯಿಂದ ಬಹಿರಂಗವಾಗಿ ಈ ಮಾತುಗಳಿಂದ ಮೆಚ್ಚುಗೆ ಪಡೆದನು, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ (ಮತ್ತಾಯ. 3:17) . ಇಲ್ಲಿಯವರೆಗೆ ಆತನು ಒಂದು ಅದ್ಭುತಕಾರ್ಯವನ್ನಾಗಲೀ, ಒಂದು ಪ್ರಸಂಗವನ್ನಾಗಲೀ ಮಾಡಿರಲಿಲ್ಲ!

ದೇವರಿಂದ ಮೆಚ್ಚುಗೆ ಸಂಪಾದಿಸಿದ ಈತನ ರಹಸ್ಯವೇನಾಗಿತ್ತು1 ಖಂಡಿತವಾಗಿ ಆತನ ಸೇವೆಯಲ್ಲ. ಆತನು ತನ್ನ ಬಹಿರಂಗವಾದ ಸೇವೆಯನ್ನು ಇನ್ನೂ ಪ್ರಾರಂಬಿಸಿರಲಿಲ್ಲ. ಬದಲಿಗೆ ಮೂವತ್ತು ವರ್ಷಗಳವರೆಗೆ ಆತನು ಜೀವಿಸಿದ ರೀತಿಯೇ ಇದರ ರಹಸ್ಯವಾಗಿತ್ತು.

ನಮ್ಮ ಸೇವೆಯ ಯಶಸ್ಸಿನ ಮೇಲೆ ದೇವರ ಮೆಚ್ಚುಗೆ ಅವಲಂಬಿಸಿಲ್ಲ. ಆದರೆ ಅನುದಿನ ನಾವು ಎದುರಿಸುವ ಶೋದನೆಗಳಲ್ಲಿ ನಾವು ನಂಬಿಗಸ್ತರಾಗಿರುವುದರ ಮೇಲೆ ಇದು ಅವಲಂಬಿಸಿದೆ.

ಆತನ ಮರೆಯಾದ ಮೂವತ್ತು ವರ್ಷಗಳ ಜೀವಿತದ ಬಗ್ಗೆ (12ನೇ ವರ್ಷದಲ್ಲಿ ಆತನು ದೇವಾಲಯದಲ್ಲಿದ್ದ ಘಟನೆಯ ಹೊರತುಪಡಿಸಿ) ಕೇವಲ ಎರಡು ಸಂಗತಿಗಳು ಬರೆಯಲ್ಪಟ್ಟಿವೆ; ಅವುಗಳೆಂದರೆ, “ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು; ಆದರೂ ಆತನು ಯಾವ ಪಾಪವನ್ನೂ ಮಾಡಲಿಲ್ಲ (ಇಬ್ರಿ. 4:15) ಎಂದು; ಮತ್ತು “ಕ್ರಿಸ್ತನು ತನ್ನ ಸುಖವನ್ನು ನೋಡಿಕೊಳ್ಳಲಿಲ್ಲವೆಂದು (ರೋಮಾ. 15:3).

ಆತನು ನಂಬಿಗಸ್ತನಾಗಿ ಎಲ್ಲಾ ಶೋಧನೆಯನ್ನು ಎದುರಿಸಿ ಜಯಿಸಿದನು ಮತ್ತು ಯಾವ ವಿಷಯದಲ್ಲಿಯೂ ಆತನು ತನ್ನ ಸ್ವಾರ್ಥವನ್ನು ಹುಡುಕಲಿಲ್ಲ್ಲ. ಇದೇ ತಂದೆಗೆ ಆನಂದ ತಂದಿತು.

ನಮ್ಮ ಬಾಹಿರ ಸಾಧನೆಗಳು ಲೋಕದ ಲೌಕಿಕ ವಿಶ್ವಾಸಿಗಳ ಮೇಲೆ ಪ್ರಭಾವ ಬೀರಬಹುದು. ಆದರೆ ನಮ್ಮ ಗುಣ ನಡತೆ ಮಾತ್ರ ದೇವರಿಗೆ ಮೆಚ್ಚಿಕೆಯಾಗಿರುತ್ತದೆ, ಆದ್ದರಿಂದ ನಮ್ಮ ಗುಣವು ಮಾತ್ರ ನಮ್ಮನ್ನು ದೇವರ ಮೆಚ್ಚುಗೆ ಪಾತ್ರರನ್ನಾಗಿಸುತ್ತದೆ. ನಮ್ಮಬಗ್ಗೆ ದೇವರ ಅಭಿಪ್ರಾಯವೇನೆಂದು ತಿಳಿಯಬೇಕಿದ್ದರೆ ನಾವು ನಮ್ಮ ಸೇವೆಯಲ್ಲಿ ಸಾಧಿಸಿದವುಗಳನ್ನು ಉದ್ದೇಶಪೂರ್ವಕವಾಗಿ ನಮ್ಮ ಮನಸ್ಸಿನಿಂದ ಅಳಿಸಿ, ಪಾಪದ ಕಡೆಗೆ, ಸ್ವಾರ್ಥದ ಕಡೆಗೆ ನಮ್ಮ ಮನೋಭಾವವೇನೆಂದು ಪರೀಕ್ಷಿಸಿಕೊಳ್ಳಬೇಕು. ಇದು, ಇದು ಮಾತ್ರವೇ ನಮ್ಮ ಆತ್ಮಿಕ ಸ್ಥಿತಿಯ ತಪ್ಪಿಹೋಗದ ಅಳತೆಗೋಲಾಗಿದೆ.

ಹೀಗೆ ಲೋಕವಿಡೀ ಸುತ್ತಾಡುವ ರೋಗವಾಸಿ ಮಾಡುವವನಿಗೆ, ಭೋಧಿಸುವವನಿಗೆ ಹಾಗೂ ತನ್ನ ಮನೆ ಬಿಟ್ಟು ಹೊರಗೆ ಬರಲಾರದ ಕಾರ್ಯಮಗ್ನಳಾಗಿರುವ ತಾಯಿಗೆ ಎಲ್ಲರಿಗೂ ದೇವರ ಮೆಚ್ಚುಗೆಗಳಿಸಲು ಸರಿಸಮಾನವಾದ ಅವಕಾಶವಿದೆ.

ಆದ್ದರಿಂದಲೇ ಕ್ರೈಸ್ತಲೋಕದಲ್ಲಿ ಇಲ್ಲಿ ಮೊದಲಾಗಿದ್ದವರು ಕ್ರಿಸ್ತನ ನ್ಯಾಯಾಸನದ ಮುಂದೆ ಕೊನೆಯವರಾಗುವರು; ಮತ್ತು ಈ ಲೋಕದಲ್ಲಿ ಕೊನೆಯವರೆಂದೆಣಿಸಲ್ಪಟ್ಟವರು ಕ್ರಿಸ್ತನ ನ್ಯಾಯಾಸನದ ಮುಂದೆ ಮೊದಲಿನವರಾಗುವರು!

ಮನೆಯಲ್ಲಿ, ಕೆಲಸದಲ್ಲಿ ನಂಬಿಗಸ್ತಿಕೆ

ಎಲ್ಲಾ ವಿಷಯಗಳಲ್ಲಿ ಯೇಸು ನಮಗೆ ಮಾದರಿಯಾಗಿದ್ದಾನೆ. ತಂದೆಯು, ಯೇಸುವಿನ ಮೊದಲ ಮೂವತ್ತು ವರ್ಷಗಳನ್ನು ಎರಡು ಸ್ಥಳಗಳಲ್ಲಿ ಕಳೆಯಬೇಕೆಂದು ತೀರ್ಮಾನಿಸಿದ್ದನು. ಅದು ಆತನ ಮನೆಯಲ್ಲಿ ಮತ್ತು ಕೆಲಸದ ಸ್ಥಳ(ಮರಗೆಲಸದ ಅಂಗಡಿ)ದಲ್ಲಿ. ಈ ಎರಡು ಸ್ಥಳಗಳಲ್ಲಿ ಯೇಸುವಿನ ನಂಬಿಗಸ್ತಿಕೆಯು ತಂದೆಯ ಮೆಚ್ಚುಗೆಯನ್ನು ಗಳಿಸಿತು. ಇದು ನಮಗೆ ಬಹಳ ಪ್ರೋತ್ರಾಹ ಕೊಡುತ್ತದೆ. ಯಾಕೆಂದರೆ ನಾವು ಕೂಡ ಈ ಎರಡು ಸ್ಥಳಗಳಲ್ಲಿ ನಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ: ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ. ಮುಖ್ಯವಾಗಿ ಈ ಎರಡು ಸ್ಥಳಗಳಲ್ಲಿ ದೇವರು ನಮ್ಮನ್ನು ಪರೀಕ್ಷಿಸುತ್ತಾರೆ.

ಯೇಸುವಿನ ಮನೆ ಬಡತನದಲ್ಲಿತ್ತು. ಯೋಸೇಫ ಮತ್ತು ಮರಿಯಳಿಗೆ ಯಜ್ಞಾರ್ಪಣೆಗೆ ಒಂದು ಕುರಿಮರಿಯನ್ನು ಕೊಡಲಿಕ್ಕೂ ಆಗಲಿಲ್ಲ. ಧರ್ಮಶಾಸ್ತ್ರವು ಕುರಿಮರಿಯನ್ನರ್ಪಿಸುವುದಕ್ಕೆ ಆಗದಿದ್ದರೆ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತರಬೇಕು ಎಂದು ಆಜ್ಞಾಪಿಸುತ್ತದೆ (ಯಾಜಕ. 12:8). ಯೋಸೇಫ, ಮರಿಯರು ಧರ್ಮಶಾಸ್ತ್ರದಲ್ಲಿ ಹೇಳಿದ ಹಾಗೆ ಒಂದು ಜೋಡಿ ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿಕೊಟ್ಟರು ಎಂದು ಲೂಕ 2:24 ಹೇಳುತ್ತದೆ.

ಯೇಸುವಿಗೆ ಕಡೇಪಕ್ಷ ಚಿಕ್ಕವರಾದ ನಾಲ್ಕು ಸಹೋದರರೂ, ಇಬ್ಬರು ಸಹೋದರಿಯರೂ ಇದ್ದು, ಅವರೂ ಅದೇ ಮನೆಯಲ್ಲಿ ವಾಸಿಸುತ್ತಿದ್ದರು. ಮಾರ್ಕ 6:3 ರಲ್ಲಿ ಆತನ ಊರಿನ ಜನ “ಇವನು ಆ ಬಡಗಿಯಲ್ಲವೇ1 ಇವನು ಮರಿಯಳ ಮಗನಲ್ಲವೇ1 ಯಾಕೋಬ, ಯೋಸೆ, ಯೂದ, ಸೀಮೋನ ಇವರ ಅಣ್ಣನಲ್ಲವೇ1 ಇವನ ತಂಗಿಯರು ನಮ್ಮಲ್ಲಿದ್ದಾರಲ್ಲವೇ1 ಎಂದು ಹೇಳಿದರೆಂದು ಬರೆದದೆ.

ಆತನು ಆ ಬಡ ಮನೆಯಲ್ಲಿ ಬೆಳೆಯುವ ಸಮಯದಲ್ಲಿ ಆತನಿಗಾದ ಒತ್ತಡಗಳು, ಹೋರಾಟಗಳನ್ನು ನಾವು ಊಹಿಸಬಹುದು.

ಅದಕ್ಕೆ ಮೇಲಾಗಿ, ಆತನ ತಮ್ಮಂದಿರೆಲ್ಲರೂ ಅವಿಶ್ವಾಸಿಗಳಾಗಿದ್ದರು. ಆತನ ಸ್ವಂತ ಸಹೋದರರೇ ಆತನಲ್ಲಿ ನಂಬಿಕೆಯಿಡಲಿಲ್ಲ ಎಂದು ಯೋಹಾನ 7:5 ರಲ್ಲಿ ಓದುತ್ತೇವೆ.

ಅನೇಕ ವಿಷಯಗಳಲ್ಲಿ ಅವರು ಆತನನ್ನು ನಿಂದಿಸುತ್ತಿದ್ದಿರಬಹುದು. ಆತನು ಪ್ರತ್ಯೇಕವಾಗಿ ಹೋಗಲು ಆತನಿಗೆ ಪ್ರತ್ಯೇಕ ಕೋಣೆ ಇರಲಿಲ್ಲ. ಎಲ್ಲಾ ಮನೆಯಲ್ಲಿ ಸಾಮಾನ್ಯವಾಗಿ ಇರುವಂತೆ ಜಗಳ, ಬೈಗುಳ, ವಾಗ್ವಾದ, ಸ್ವಾರ್ಥತೆಯು ಆ ಮನೆಯಲ್ಲಿಯೂ ಇದ್ದಿರಬಹುದು. ಅವುಗಳ ಮಧ್ಯೆ ಆತನು ನಮ್ಮ ಹಾಗೆ ಸರ್ವ ವಿಷಯಗಳಲ್ಲಿ ಶೋಧನೆಗೆ ಗುರಿಯಾದನು. ಆದರೂ ಒಂದು ಸಾರಿಯಾದರೂ ಕೃತ್ಯದಲ್ಲಿಯಾಗಲಿ, ಮಾತಿನಲ್ಲಾಗಲಿ, ಉದ್ದೇಶದಲ್ಲಾಗಲಿ ಅಥವಾ ಬೇರೆ ಯಾವ ರೀತಿಯಿಂದಾಗಲಿ ಆತನು ಪಾಪಮಾಡಲಿಲ್ಲ.

ಯೇಸುವು ನಮಗಿಂತ ಭಿನ್ನವಾದ ರೂಪದಲ್ಲಿ, ಶೋಧಿಸಲ್ಪಡಲಾಗದ ಮಾಂಸದಲ್ಲಿ ಬಂದು ಪವಿತ್ರ ಜೀವಿತ ನಡೆಸಿದ್ದರೆ ಅದು ಅತಿಶಯವಾದ ವಿಷಯವಲ್ಲ. ಆದರೆ ಆತನು ಎಲ್ಲಾ ವಿಷಯಗಳಲ್ಲಿ ನಮ್ಮ ಹಾಗೆ ಮಾಡಲ್ಪಟ್ಟನು.

ಇಬ್ರಿಯ 2:17 ರಲ್ಲಿ “ಆತನು ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು....... ಅದರಿಂದ ದೇವರ ಕಾರ್ಯಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾಯಾಜಕನಾದನು ಎಂದು ದೇವರ ವಾಕ್ಯವು ಹೇಳುತ್ತದೆ.

ನಾವು ಎಂದಾದರೂ ಎದುರಿಸಲಿರುವ ಎಲ್ಲಾ ತರಹದ ಶೋಧನೆಗಳನ್ನು ಆತನೂ ಎದುರಿಸಿದನು. ನಾವು ಶೋಧಿಸಲ್ಪಡುವಾಗ ಇದೇ ನಮಗೆ ಮಹತ್ತರವಾದ ಪ್ರೋತ್ಸಾಹವನ್ನು ಕೊಡುವುದು. ನಾವು ಸಹ ಆತನ ಹಾಗೆ ಜಯಿಸಬಹುದು. ಕ್ರಿಸ್ತನು ನಮ್ಮ ಹಾಗೆ ಮಾಂಸಧಾರಿಯಾದನು ಮತ್ತು ನಮ್ಮಂತೆ ಶೋಧಿಸಲ್ಪಟ್ಟನು ಎಂಬ ಮಹಿಮಾತಿಶಯವಾದ ಸತ್ಯವನ್ನು ನಮ್ಮಿಂದ ಮರೆಮಾಡಿ ಸೈತಾನನು ನಮ್ಮ ನಿರೀಕ್ಷೆಯನ್ನು ಕದ್ದುಕೊಳ್ಳಲು ಪ್ರಯತ್ನಿಸುತ್ತಾನೆ.

ನಜರೇತಿನಲ್ಲಿ ಬಡಗಿಯಾಗಿದ್ದು ವ್ಯಾಪಾರದಲ್ಲಿ ತೊಡಗಿರುವವರಿಗೆ ಬರುವ ಎಲ್ಲಾ ಶೋಧನೆಗಳನ್ನೂ ಆತನು ಎದುರಿಸಿರಬಹುದು. ಆತನು ಯಾರಿಗೆ ತನ್ನ ಸರಕುಗಳನ್ನು ಮಾರಿದನೋ ಅವರಲ್ಲಿ ಒಬ್ಬರಿಗೂ ಆತನು ಮೋಸ ಮಾಡಲಿಲ್ಲ. ಆತನು ಅವರಿಂದ ಜಾಸ್ತಿ ಹಣ ಕೇಳಿರಲಿಲ್ಲ. ನೀತಿಯ ವಿಷಯಕ್ಕೆ ಬರುವಾಗ ಯಾವ ವಿಷಯದಲ್ಲೂ ರಾಜಿಮಾಡಲಿಲ್ಲ. ಆತನಿಗೆ ಹಾನಿಯಾದರೂ ಸಹ ನಜರೇತಿನಲ್ಲಿರುವ ಇತರ ಬಡಗಿಗಳೊಂದಿಗೆ ಆತನು ಸ್ಪರ್ಧಿಸಲಿಲ್ಲ. ತನ್ನ ಜೀವನೋಪಾಯಕ್ಕಾಗಿ ಮಾತ್ರ ಆತನು ಕೆಲಸ ಮಾಡಿದನು. ನಾವು ಶೋಧಿಸಲ್ಪಡುವ ಹಾಗೆ ಮಾರುವ, ಕೊಳ್ಳುವ ವಿಷಯದಲ್ಲಿ (ಬಡಗಿಯಾಗಿ), ಆತನು ಹಣದ ವಿಷಯದಲ್ಲಿ ನಮ್ಮಂತೆ ಶೋಧಿಸಲ್ಪಟ್ಟು ಜಯಿಸಿದನು.

ಅನೇಕ ವರ್ಷಗಳವರೆಗೆ ಯೇಸುವು ಅಪೂರ್ಣರಾದ ತನ್ನ ಪೋಷಕರಿಗೆ ಅಧೀನನಾಗಿದ್ದನು. ಯೋಸೇಫ ಮರಿಯರು ಇನ್ನೂ ಹಳೇ ಒಡಂಬಡಿಕೆಯಲ್ಲಿ ಜೀವಿಸಿದ್ದರು, ಆದ್ದರಿಂದ ಅವರಿಗೆ ಖಂಡಿತವಾಗಿ ಪಾಪದ ಮೇಲೆ ಜಯವಿರಲಿಲ್ಲ. ಜಯವಿಲ್ಲದ ಮದುವೆಯಾದ ದಂಪತಿಗಳು ಹೇಗೆ ಸಾಮಾನ್ಯವಾಗಿ ವಾಗ್ವಾದಮಾಡುತ್ತಾರೋ ಹಾಗೆಯೇ ಅವರೂ ಸಹ ಮಾಡಿರಬಹುದು. ಇದು ಆತನನ್ನು ಆಂತರ್ಯದ ಮನೋಭಾವನೆಯಲ್ಲಿ ಶೋಧಿಸಿರಬಹುದು. ಆದರೆ ಯೇಸು ಸಂಪೂರ್ಣ ಜಯದಲ್ಲಿ ಜೀವಿಸುತ್ತಿದ್ದನು, ಆದರೂ ಆತನು ಅವರನ್ನು ಹೀನೈಸಲಿಲ್ಲ. ಆತನು ಹೀನೈಸಿದ್ದರೆ ಪಾಪ ಮಾಡುತ್ತಿದ್ದನು. ಅವರಿಗಿಂತ ಆತನು ಎಷ್ಟೋ ಹೆಚ್ಚು ಪವಿತ್ರನಾಗಿದ್ದರೂ ಅವರನ್ನು ಗೌರವಿಸಿದನು. ಅಲ್ಲಿ ನಾವು ಆತನ ದೀನತೆಯ ಸೌಂದರ್ಯವನ್ನು ಕಾಣುತ್ತೇವೆ.

ಹೀಗೆ ಯೇಸುವು ಮೊದಲ ಮೂವತ್ತು ವರ್ಷಗಳಲ್ಲಿ, ನಜರೇತಿನಲ್ಲಿ ಘಟನಾತ್ಮಕ ಜೀವಿತ ಜೀವಿಸದಿದ್ದರೂ ಯಾವಾಗಲೂ ಶೋಧನೆಗೆ ವಿರುದ್ಧವಾಗಿ ಹೋರಾಡುತ್ತಿದ್ದನು. ಈ ಹೋರಾಟವು ವರ್ಷದಿಂದ ವರ್ಷಕ್ಕೆ ತೀಕ್ಷ್ಣವಾಗುತ್ತಿತ್ತು. ಆತನು ನಮ್ಮ ರಕ್ಷಕನೂ ಮಹಾಯಾಜಕನೂ ಆಗುವ ಪೂರ್ವದಲ್ಲಿ ತಂದೆಯು ನಮ್ಮ ನಾಯಕನನ್ನು ಮಾನವನಿಗೆ ಒದಗುವ ಎಲ್ಲಾ ಶೋಧನೆಗಳ ಮೂಲಕ ಕೊಂಡೊಯ್ಯಬೇಕಾಗಿತ್ತು.

ಇಬ್ರಿಯ 2:10 ರಲ್ಲಿ “ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ ಆತನು ಬಹುಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ಕರ್ತನನ್ನು ಭಾಧೆಗಳ ಮೂಲಕ ಸಿದ್ಧಿಗೆ ತರುವುದು ಆತನಿಗೆ ಯುಕ್ತವಾಗಿತ್ತು ಎಂದು ದೇವರ ವಾಕ್ಯವು ಹೇಳುತ್ತದೆ.

ತನ್ನ ಕೊನೆಯ ಮೂರೂವರೆ ವರ್ಷದಲ್ಲಿ ಆತನು ಇನ್ನೂ ಕೆಲವು (ರಾಷ್ಟ್ರದ ಕೀರ್ತಿಗೆ ಪಾತ್ರರಾದವರು ಎದುರಿಸುವ) ಶೋಧನೆಗಳನ್ನು ಎದುರಿಸಬೇಕಾಯಿತು. ಆದರೆ ನಾವೆಲ್ಲರೂ ಸಾಮಾನ್ಯವಾಗಿ ಮನೆಯಲ್ಲಿ, ಕೆಲಸದಲ್ಲಿ ಎದುರಿಸುವ ಶೋಧನೆಗಳನ್ನು ಆತನು ತನ್ನ ಮೊದಲ 30 ವರ್ಷಗಳಲ್ಲಿ ಜಯಿಸಿದ್ದನು. ಮತ್ತು ಆತನ ದೀಕ್ಷಾಸ್ನಾನದ ಸಮಯದಲ್ಲಿ ತಂದೆಯು ಆತನಿಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ಕೊಟ್ಟರು.

ದೇವರು ನಮ್ಮನ್ನು ಮೆಚ್ಚುವ ಮೂಲ ಏನೆಂದು ನಮ್ಮ ಕಣ್ಣುಗಳು ಈ ವಿಷಯಗಳಿಗೆ ತೆರೆಯಲ್ಪಟ್ಟರೆ, ನಮ್ಮ ಇಡೀ ಜೀವಿತವು ಸಂಪೂರ್ಣ ಬದಲಾಗುತ್ತದೆ. ಆಗ ನಾವು ರಾಷ್ಟ್ರ ಸೇವೆಯ ಕೀರ್ತಿಗೆ ಪಾತ್ರರಾಗುವ ಸೇವೆಯ ಆಶೆ ಬಿಟ್ಟು ನಮ್ಮ ಪ್ರತಿದಿನದ ಜೀವಿತದಲ್ಲಿ ಬರುವ ಶೋಧನೆಯ ಸಮಯದಲ್ಲಿ ನಂಬಿಗಸ್ತರಾಗಲು ಬಯಸುತ್ತೇವೆ. ನಾವು ಭೌತಿಕ ಅದ್ಭುತಗಳ ಬದಲು ಪರಿವರ್ತಿಸಲ್ಪಟ್ಟ ಜೀವಿತವನ್ನು ಹೊಗಳುತ್ತೇವೆ. ಆಗ ನಮ್ಮ ಆದ್ಯತೆಗಳನ್ನು ಸರಿಯಾಗಿಟ್ಟುಕೊಳ್ಳುವಂತೆ ನಮ್ಮ ಮನಸ್ಸುಗಳು ನೂತನವಾಗುತ್ತವೆ.

ದೇವರ ಅತೀ ಉನ್ನತವಾದ ಬಹುಮಾನ, ಹೊಗಳಿಕೆಯು ಯೇಸುವಿನ ಹಾಗೆ (ಆತನ ಮನೋಭಾವನೆಯನ್ನು ಹೊಂದಿ) ಶೋದನೆಯನ್ನು ಜಯಿಸಿದವರಿಗೆ ಮೀಸಲಾಗಿದೆ ಎನ್ನುವ ಸತ್ಯವು ನಮಗೆ ಪ್ರಚಂಡವಾದ ಪ್ರೋತಾಹವನ್ನುಂಟು ಮಾಡುತ್ತದೆ. ನಾನು ತಂದೆಗೆ ಅವಿದೇಯನಾಗಿ ಒಂದು ವಿಷಯದಲ್ಲಾದರೂ ಪಾಪ ಮಾಡುವದಕ್ಕಿಂತಲೂ ಸಾಯುವುದೇ ಲೇಸು ಎನ್ನುವುದು ಯೇಸುವಿನ ಮನೋಭಾವನೆಯಾಗಿತ್ತು.

ಪಿಲಿಪ್ಪಿ 2:5-8 ರಲ್ಲಿ ಹೇಳಿರುವ ವಾಕ್ಯದ ಅರ್ಥವು ಇದೇ, ಕ್ರಿಸ್ತ ಯೇಸುವಿನಲ್ಲಿದ್ದಂತ ಮನಸ್ಸು ನಿಮ್ಮಲ್ಲಿಯೂ ಇರಲಿ... ಆತನು ಮರಣದವರೆಗೆ ವಿದೇಯನಾದನು.

ನಮ್ಮ ವರ, ಸೇವೆ ಏನೇ ಆಗಿದ್ದರೂ, ನಾವು ಗಂಡು ಹೆಣ್ಣು ಏನೇ ಆಗಿದ್ದರೂ, ನಮ್ಮ ವಯಸ್ಸೆಷ್ಟೇ ಆಗಿದ್ದರೂ- ನಾವೆಲ್ಲರೂ ಜಯಶಾಲಿಗಳಾಗಿರಲು ಮತ್ತು ಕರೆಯಲ್ಪಟ್ಟ, ಆಯಲ್ಪಟ್ಟ ಮತ್ತು ನಂಬಿಗಸ್ತರಾದವರೊಂದಿಗೆ ಇರಲು ನಮ್ಮೆಲ್ಲರಿಗೂ ಅದೇ ಅವಕಾಶವಿದೆ.

ಅಧ್ಯಾಯ 4
ಆದಾಮ ಹವ್ವರ ಪರೀಕ್ಷೆ

ಆದಾಮ ಹವ್ವರನ್ನು ದೇವರು ಸೃಷ್ಟಿಮಾಡಿದಾಗ ಅವರ ವಿಷಯದಲ್ಲಿ ದೇವರಿಗೆ ದೊಡ್ಡ ಯೋಜನೆಗಳಿದ್ದವು. ಆದರೆ ಅವರು ಪರೀಕ್ಷಿಸಲ್ಪಡದೆ, ಈ ಯೋಜನೆಗಳು ನೆರವೇರುವದಕ್ಕೆ ಸಾದ್ಯವಿರಲಿಲ್ಲ. ಆದಕಾರಣ ದೇವರು ರುಚಿಕರವಾದ ಹಣ್ಣುಗಳುಳ್ಳ ಆಕರ್ಷಕವಾದ ಮರವನ್ನು ಏದೇನ್ ತೋಟದಲ್ಲಿರಿಸಿದನು - ಅದು ಒಳ್ಳೇದರ ಮತ್ತು ಕೆಟ್ಟದ್ದರ ಅರಿವನ್ನುಂಟು ಮಾಡುವ ಮರವಾಗಿತ್ತು. ಆದಾಮ ಹವ್ವರು ಅದರ ಹಣ್ಣನ್ನು ತಿನ್ನಬಾರದೆಂದು ದೇವರು ಆಜ್ಞಾಪಿಸಿದ್ದನು.

ಏದೇನಿನಲ್ಲಿ ಆದಾಮ ಹವ್ವರ ಸೋಲು ಪ್ರಾಥಮಿಕವಾಗಿ ನಂಬಿಕೆಯ ಸೋಲಾಗಿತ್ತು.

ಮಾನವ ವ್ಯಕ್ತಿತ್ವವು ದೇವರ ಮೇಲೆ ಸಂಪೂರ್ಣವಾಗಿ ಆತುಕೊಂಡು, ಆತನ ಪೂರ್ಣ ಜ್ಞಾನ, ಪ್ರೀತಿ, ಬಲಗಳಲ್ಲಿ ಸಂಪೂರ್ಣ ಭರವಸದಿಂದಿರುವುದೇ ನಂಬಿಕೆಯಾಗಿದೆ.

ದೇವರಲ್ಲಿ ಅಂಥಹ ಭರವಸೆ ಹವ್ವಳಿಗೆ ಇಲ್ಲದ ಕಾರಣ ಸೈತಾನನಿಂದ ಶೋಧಿಸಲ್ಪಟ್ಟು ದೇವರ ಆಜ್ಞೆಗೆ ಅವಿದೇಯಳಾದಳು.

ದೇವರ ಜ್ಞಾನದಲ್ಲಿ ಭರವಸೆ

ಆ ಮರದ ಹಣ್ಣನ್ನು ತಿನ್ನಬೇಡವೆಂದು ದೇವರು ಆಜ್ಞಾಪಿಸಿದ ದೇವರ ಜ್ಞಾನದಲ್ಲಿ ದೋಷವಿದೆ ಎಂದು ಸೈತಾನನು ಹವ್ವಳಿಗೆ ಸಲಹೆ ಮಾಡಿದನು.

ಯಾಕೆ ಆ ಮರವು ನಿಷೇಧಿಸಲ್ಪಟ್ಟಿದೆಯೆಂದು ದೇವರು ಆದಾಮನಿಗೆ ಯಾವ ಕಾರಣವನ್ನೂ ಕೊಟ್ಟಿರಲಿಲ್ಲ. ದೇವರಿಗೆ ವಿಧೇಯರಾಗಲು, ನಂಬಿಕೆಗೆ ಬುದ್ದಿ ಅಥವಾ ಕಾರಣ ಬೇಕಾಗಿಲ್ಲ. ನಮ್ಮ ಬುದ್ದಿವಂತಿಕೆಯು ಮೊದಲು ಕಾರಣ ತಿಳಿದುಕೊಳ್ಳಲು ಅಪೇಕ್ಷಿಸುತ್ತದೆ. ಯಾವಾಗಲೂ ದೇವರಿಗೆ ನಮ್ಮ ವಿಧೇಯತೆಯು ನಂಬಿಕೆಯ ವಿಧೇಯತೆಯಾಗಿರಬೇಕೇ ವಿನಃ ಬುದ್ದಿಯ(ಕಾರಣದ) ವಿಧೇಯತೆಯಲ್ಲ.

ರೋಮಾ 1:5 ರಲ್ಲಿ ಎಲ್ಲಾ ಅನ್ಯ ಜನಗಳಲ್ಲಿ ನಂಬಿಕೆಯೆಂಬ ವಿಧೇಯತ್ವವು ಉಂಟಾಗುವುದಕ್ಕೋಸ್ಕರ ತಾನು ಕರೆಯಲ್ಪಟ್ಟನೆಂದು ಪೌಲನು ಹೇಳುತ್ತಾನೆ. ರೋಮಾ 16:25,26 ರಲ್ಲಿ ಮತ್ತೆ ಪೌಲನು, ಅನ್ಯ ಜನರೆಲ್ಲರಿಗೆ (ಎಲ್ಲಾ ದೇಶದವರಿಗೆ) ನಂಬಿಕೆಯೆಂಬ ವಿಧೇಯತ್ವವನ್ನು ಉಂಟು ಮಾಡುವುದಕ್ಕೋಸ್ಕರ ಯೇಸು ಕ್ರಿಸ್ತನ ಸುವಾರ್ತೆ ಸಾರಲ್ಪಟ್ಟಿತು ಎಂದು ಹೇಳುತ್ತಾನೆ.

ನಮ್ಮ ಸ್ವಬುದ್ದಿಯು ನಂಬಿಕೆಗೆ ವೈರಿಯಾಗಿದೆಯೆಂದು ಜ್ಞಾನೋಕ್ತಿ 3:5 ರಿಂದ ಸ್ಪಷ್ಟವಾಗಿ ತಿಳಿಯುತ್ತದೆ; “ಸ್ವಬುದ್ಧಿಯನ್ನೇ ಆಧಾರ ಮಾಡಿಕೊಳ್ಳದೇ (ಆತುಕೊಳ್ಳದೇ) ನಿನ್ನ ಪೂರ್ಣ ಹೃದಯದಿಂದ (ತಲೆಯಿಂದಲ್ಲ) ಯೆಹೋವನಲ್ಲಿ ಭರವಸೆಯಿಡು.

ಯಾರು ಎಳೆ ಹಸುಳೆಗಳಂತೆ (ಚಿಕ್ಕ ಮಕ್ಕಳಂತೆ) ಕೇವಲ ನಂಬುತ್ತಾರೋ ಅಂತಹವರಿಗೆ ದೇವರಾತ್ಮನು ದೇವರ ಜ್ಞಾನವನ್ನು ಪ್ರಕಟಿಸಿ, ಜ್ಞಾನಿಗಳಿಗೂ ಬುದ್ಧಿವಂತರಿಗೂ ಅದನ್ನು ಮರೆಮಾಡುತ್ತಾನೆ. ಮತ್ತಾಯ-11:25 ರಲ್ಲಿ ಯೇಸು, “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ದಿವಂತರಿಗೂ ಈ ಮಾತುಗಳನ್ನು ಮರೆಮಾಡಿ, ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ ಎಂದು ಹೇಳಿದನು.

ಬುದ್ದಿವಂತಿಕೆಯು ಒಳ್ಳೇ ಸೇವಕ ಆದರೆ ಕೆಟ್ಟ ನಾಯಕ; ಆದ್ದರಿಂದ ಅದಕ್ಕೆ ಸರಿಯಾದ, (ಅಂದರೆ) ದೇವರು ನೇಮಿಸಿದ ಸ್ಥಳವೆಂದರೆ - ಮಾನವನ ಆತ್ಮದ ಸೇವಕನಾಗಿರುವುದು. ಆ ಆತ್ಮವು ತಾನೇ ಪವಿತ್ರಾತ್ಮನಿಗೆ ಒಳಪಟ್ಟಿದೆ.

ದೇವರು ಆದಾಮನಿಗೆ ಯಾಕೆ ಆ ಮರದ ಹಣ್ಣನ್ನು ತಿನ್ನಬಾರದ್ದಕ್ಕೆ ಕಾರಣ ಕೊಡಲಿಲ್ಲ, ಏಕೆಂದರೆ, ದೇವರಲ್ಲಿ ಆದಾಮನ ನಂಬಿಕೆಯು ಅಭಿವೃದ್ಧಿಯಾಗಬೇಕೆಂದೇ ಆಗಿದೆ. ಈ ಮೊದಲನೇ ಕ್ಷೇತ್ರದಲ್ಲಿಯೇ ದೇವರು ನಮ್ಮನ್ನೂ ಸಹ ಪರೀಕ್ಷಿಸುತ್ತಾನೆ. ಒಂದು ಕಾರ್ಯವನ್ನು ಮಾಡಲು ದೇವರು ನಮ್ಮನ್ನು ಕರೆದಾಗ ಅದು ಯಾಕೆ ಎಂದು ನಮಗೆ ಅರ್ಥವಾಗದಿದ್ದರೂ ನಾವು ಆತನಿಗೆ ವಿಧೇಯರಾಗಬಲ್ಲೆವೋ1 ದೇವರು ಒಂದು ನಿರ್ದಿಷ್ಟ ಕಾರ್ಯಕ್ಕೆ ಕರೆದಾಗ, ನಮ್ಮ ಬುದ್ದಿಯು ‘ಅದು ಅನವಶ್ಯಕ’ ಎಂದು ಹೇಳಿದರೆ ಏನು ಮಾಡುವಿರಿ1

ಯೇಸುವು ಪೇತ್ರನಿಗೆ ದೋಣೀ ಬಿಟ್ಟು ನೀರಿನ ಮೇಲೆ ನಡೆಯಲು ಹೇಳಿದಾಗ ಆ ಆಜ್ಞೆಯು ಪೇತ್ರನ ಬುದ್ಧಿಗೆ ವಿರೋಧವಾಗಿತ್ತು. ಆದರೆ ಅವನು ಬುದ್ಧಿ(ಕಾರಣ)ಯನ್ನೇ ಹಿಂಬಾಲಿಸಿದ್ದಿದ್ದರೆ, ಆ ಅದ್ಭುತವನ್ನು ಅವನೆಂದೂ ಅನುಭವಿಸುತ್ತಿರಲಿಲ್ಲ.

ಇಂಥಹ ಅನೇಕ ಉಧಾಹರಣೆಗಳು ಸತ್ಯವೇದದಲ್ಲಿ ನೋಡಬಹುದಾಗಿದೆ. ಅನೇಕ ಕ್ರೈಸ್ತರ ಬಲಹೀನತೆಗೆ ಕಾರಣ ಇದೇ ಆಗಿದೆ. ಅವರು ನಂಬಿಕೆಯಿಂದ ಜೀವಿಸದೇ ಬುದ್ಧಿಯಿಂದ ಜೀವಿಸುವುದರಿಂದಲೇ ತಮ್ಮ ಜೀವಿತದಲ್ಲಿ ದೇವರ ಅಸಹಜವಾದ ಅದ್ಭುತವನ್ನೂ ಆತನ ಅತ್ಯದ್ಭುತವಾದ ಕಾರ್ಯಗಳನ್ನೂ ತಮ್ಮ ಜೀವಿತದಲ್ಲಿ ಅನುಭವಿಸರು.

ದೇವರ ಪ್ರೀತಿಯಲ್ಲಿ ಭರವಸೆ

ದೇವರ ಪ್ರೀತಿಯಲ್ಲಿ ಸಂಪೂರ್ಣ ಭರವಸೆಯಿರುವುದೇ ‘ನಂಬಿಕೆ’ಯಾಗಿದೆ. ದೇವರು ತಮ್ಮನ್ನು ಸಂಪೂರ್ಣವಾಗಿ ಪ್ರೀತಿಸದೇ ಹೋದದ್ದರಿಂದಲೇ ಆತನು ಅವರಿಗೆ ಆ ಸುಂದರವಾದ ಹಣ್ಣನ್ನು ತಿನ್ನಬಾರದೆಂದು ಹೇಳಿದನು ಎಂದು ಸೈತಾನನು ಹವ್ವಳಿಗೆ ಸಲಹೆ ಮಾಡಿದನು.

ಹವ್ವಳು ಕಾರಣ(ಬುದ್ದಿ)ವನ್ನು ಹಿಂಬಾಲಿಸಿ ನಡೆಯದೇ, ನಂಬಿಕೆಯಿಂದ ಜೀವಿಸಿದ್ದರೆ, ಆಕೆಯು ಸೈತಾನನಿಗೆ ಹೀಗೆ ಉತ್ತರಿಸುತ್ತಿದ್ದಳು: “ಸೈತಾನನೇ, ನಾವು ಯಾಕೆ ಆ ಮರದ ಹಣ್ಣನ್ನು ತಿನ್ನಬಾರದೆಂದು ದೇವರು ಹೇಳಿದನೆಂದು ನನಗೆ ಗೊತ್ತಿಲ್ಲ. ಆದರೆ ದೇವರು ನಮ್ಮನ್ನು ಅತಿಶಯವಾಗಿ ಪ್ರೀತಿಸುತ್ತಾನೆ, ಆದ್ದರಿಂದ ಒಳ್ಳೆಯದನ್ನು ನಮ್ಮಿಂದ ಆತನು ಎಂದಿಗೂ ತಡೆಹಿಡಿಯುವುದಿಲ್ಲ ಎಂದು ನನಗೆ ಖಚಿತವಾಗಿ ತಿಳಿದದೆ. ನಮ್ಮ ಒಳ್ಳೆಯದಕ್ಕಾಗಿ ಮತ್ತು ಯಾವುದೋ ಒಂದು ಒಳ್ಳೇ ಕಾರಣದಿಂದಲೇ ಆತನು ನಮಗೆ ಆ ಹಣ್ಣನ್ನು ತಿನ್ನಲು ಅನುಮತಿಸಲಿಲ್ಲ.

ಇದು ನಂಬಿಕೆಯ ಉತ್ತರವಾಗಿರುತ್ತಿತ್ತು. ಆದರೆ ಅದರ ಬದಲಾಗಿ ಅವಳು ಸೈತಾನನ ಸುಳ್ಳಿನ ಬಲೆಗೆ ಬಿದ್ದಳು. ನಮಗಾಗಿ ಇರುವ ದೇವರ ಪರಿಪೂರ್ಣ ಪ್ರೀತಿಯಲ್ಲಿನ ನಂಬಿಕೆಯೆಂಬ ಗುರಾಣಿಯೇ “ಕೆಡುಕನ ಪ್ರತಿಯೊಂದು ಅಗ್ನಿ ಬಾಣಗಳನ್ನು ನಂದಿಸುತ್ತದೆ.(ಎಫೆಸ. 6:16)

ನಂಬಿಕೆಯಿಂದ ಜೀವಿಸದೇ ಬುದ್ದಿಯಿಂದ ಜೀವಿಸುವ ಪರಿಣಾಮವೇ ಎಲ್ಲಾ ನಿರುತ್ಸಾಹ ಮತ್ತು ಮನಸ್ಸಿನ ಖಿನ್ನತೆಗೆ ಕಾರಣ. ಎಲ್ಲಾ ಭಯ, ಚಿಂತೆಗಳೂ ಇದರಲ್ಲೇ ಬೇರೂರಿವೆ. ನಾವು ದೇವರ ಪ್ರೀತಿಯನ್ನು ಶಂಕಿಸುವ ಹಾಗೆ ದೇವರು ನಮ್ಮನ್ನು ಶೋಧನೆಗೆ ಅನುಮತಿಸುತ್ತಾನೆ ಮತ್ತು ಪರೀಕ್ಷಿಸುತ್ತಾನೆ. ಅದರ ಮೂಲಕ ಹೀಗೆ ಆತನ ಪ್ರಸನ್ನತೆಯ ಭಾವನೆಗಳು ನಮ್ಮಿಂದ ದೂರ ಹೋದಾಗ, ಭಾವನೆಗಳ ಮೇಲೆ ಅವಲಂಬಿಸದೇ ನಂಬಿಕೆಯ ಮೇಲೆ ಅವಲಂಬಿಸಿ, ಬಲಹೊಂದಿ ಅದರಲ್ಲಿ ಪರಿಪಕ್ವತೆಗೆ ಬಂದಾಗ, ಅಲ್ಲಿ ನಮ್ಮ ಮೂಲಕ ಆತನು ತನ್ನ ಉದ್ದೇಶಗಳನ್ನು ನೆರವೇರಿಸುತ್ತಾನೆ.

ಆ ಒಳ್ಳೆಯದರ ಕೆಟ್ಟದ್ದರ ಅರಿವನ್ನುಂಟುಮಾಡುವ ಮರವನ್ನು ದೇವರು ಆಕರ್ಷಣೀಯವಾಗಿ ಮಾಡಿದರು. ಯಾಕೆಂದರೆ ಇದರ ಮೂಲಕವಾಗಿಯೇ ಆದಾಮ ಹವ್ವರು ಪರೀಕ್ಷಿಸಲ್ಪಡಬೇಕಾಗಿತ್ತು. ದೇವರಿಗೋಸ್ಕರ ಅವರು ಆಕರ್ಷಣೀಯವಾದದ್ದನ್ನು ತಿರಸ್ಕರಿಸುತ್ತಾರೋ ಅಥವಾ ತಮಗೆ ಮನಸ್ಸಿಗೆ ಮೆಚ್ಚಿದ್ದನ್ನು ಆಯ್ದುಕೊಂಡು ದೇವರನ್ನು ತಿರಸ್ಕರಿಸುವರೋ1 ಎಂದು.

ಶೋಧನೆಯ ಸಮಯದಲ್ಲಿ ನಾವೆಲ್ಲರೂ ಈ ಆಯ್ಕೆಯನ್ನೇ ಎದುರಿಸುತ್ತೇವೆ. ಆದ್ದರಿಂದಲೇ ದೇವರು ಶೋಧನೆಯನ್ನು ಬಹು ರಮಣೀಯವಾಗಿರುವಂತೆ ಮಾಡಿದ್ದಾರೆ. ನಿಷೇದಿಸಲ್ಪಟ್ಟಂಥದ್ದು ಅತೀ ರಮಣೀಯವಾಗಿದ್ದು ನಮ್ಮನ್ನು ಸೆಳೆಯುವಂತದ್ದಾಗಿ ನಮಗೆ ಸುಖಕೊಡುವಂತದ್ದಾಗಿರುವಾಗ ನಾವು ಅದನ್ನು ತಿರಸ್ಕರಿಸುವುದಾದರೆ, ನಿಜವಾಗಿ ನಾವು ಹೃದಯಪೂರ್ವಕವಾಗಿ ದೇವರನ್ನು ಪ್ರೀತಿಸುವವರಾಗಿದ್ದೇವೆಂದು ರುಜುಪಡಿಸುತ್ತೇವೆ.

ಹೀಗೆ ದೇವರು ನಿಷೇದಿಸಿರುವುದು ನಮ್ಮ ಒಳ್ಳೆಯದಕ್ಕಾಗಿಯೇ ಎಂದು ಆತನ ಪರಿಪೂರ್ಣವಾದ ಪ್ರೀತಿಯಲ್ಲಿ ನಂಬಿಕೆಯಿಡುವದರಿಂದಲೇ ನಾವು ಆತನಿಗೆ ಅವಿದೇಯರಾಗಲಿಕ್ಕೆ ಬರುವ ಎಲ್ಲಾ ಶೋದನೆಗಳನ್ನು ಜಯಿಸುತ್ತೇವೆ. ಈ ರೀತಿ ಪಾಪ ಮಾಡಲು ಮತ್ತು ದೇವರಿಗೆ ಅವಿದೇಯರಾಗಲು ಬರುವ ಎಲ್ಲಾ ಶೋದನೆಗಳೂ ನಮ್ಮ ನಂಬಿಕೆಗೆ ಒಂದು ಪರೀಕ್ಷೆಯಾಗಿ ಬರುತ್ತದೆ. ನಂಬಿಕೆಯಿಂದ ಜೀವಿಸುವುದೆಂದರೆ, ದೇವರ ಎಲ್ಲಾ ಆಜ್ಞೆಗಳೂ ಆತನ ಸಂಪೂರ್ಣವಾದ ಪ್ರೀತಿಯ ಹೃದಯದಿಂದ ಬಂದಿದೆ ಮತ್ತು ಅವು ನಮ್ಮ ಒಳ್ಳೆಯದನ್ನೇ ಬಯಸುವಂಥದ್ದಾಗಿವೆ ಎಂದು ನಂಬುವುದೇ ಆಗಿದೆ.

ದೇವರು ದಶಾಜ್ಞೆಗಳನ್ನು ಇಸ್ರಾಯೇಲ್ಯರಿಗೆ ಕೊಟ್ಟಾಗ ಮೋಶೆಯು ಅವರಿಗೆ, “ದೇವರು ನಿಮ್ಮನ್ನು ಪರೀಕ್ಷಿಸಲು ಬಂದಿದ್ದಾನೆ ಎಂದು ಹೇಳಿದನು. (ವಿಮೋ. 20:20). ವಿಮೋ. 33:2,3 ರಲ್ಲಿ ಹೀಗೆ ಹೇಳುತ್ತದೆ “ಆತನ ಬಲಗೈಯಲ್ಲಿ ಅಗ್ನಿ ಸದೃಶ್ಯವಾದ ಧರ್ಮಶಾಸ್ತ್ರವಿತ್ತು. ಆತನು ತನ್ನ ಜನರನ್ನು ನಿಜವಾಗಿಯೂ ಪ್ರೀತಿಸುತ್ತಾನೆ ಎಂದು (ಇದು ರುಜುಪಡಿಸುತ್ತದೆ).

ಈ ಅಗ್ನಿಮಯವಾದ ಧರ್ಮಶಾಸ್ತ್ರವು ದೇವರು ಅವರನ್ನು ಪ್ರೀತಿಸುತ್ತಾನೆಂಬ ಗುರುತ್ತಾಗಿತ್ತೆಂದು ಅವರು ನಂಬಿದ್ದರೋ1 ಇದು ಪರೀಕ್ಷೆಯಾಗಿತ್ತು.

ಹವ್ವಳು ದೇವರನ್ನು ನಂಬದೇ ಹೇಗೆ ಬಿದ್ದುಹೋದಳೋ ಹಾಗೆಯೇ ಇಸ್ರಾಯೇಲ್ಯರೂ ಸಹ ಆತನ ಆಜ್ಞೆಗಳಿಗೆ ಅವಿಧೇಯರಾಗಿ ಬಿದ್ದುಹೋದರು.

ಆದರೆ ಯೇಸು ಜಯಿಸಿದ್ದು ಇಲ್ಲಿಯೇ. ಆತನು ನಂಬಿಕೆಯಿಂದ ಜೀವಿಸಿದನು. ಅರಣ್ಯದಲ್ಲಿ ಸೈತಾನನು ಆತನಿಗೆ ಒಡ್ಡಿದ ಎಲ್ಲಾ ಶೋಧನೆಗಳನ್ನು ಆತನು “ಹೀಗೆಂದು ಬರೆದಿದೆ ಎಂಬ ಪ್ರತ್ಯುತ್ತರದಿಂದ ಜಯಿಸಿದನು. ಯೇಸು ದೇವರ ಪ್ರತಿಯೊಂದು ವಾಕ್ಯಕ್ಕೂ ವಿದೇಯನಾಗಿ ಜೀವಿಸಿದನು.

ಮನುಷ್ಯನನ್ನು ಸಂಪೂರ್ಣವಾಗಿ ಪ್ರೀತಿಸಿ ದೇವರು ತನ್ನ ವಾಕ್ಯವನ್ನು ಮಾನವನಿಗೆ ಅನುಗ್ರಹಿಸಿದ್ದಾನೆ, ಯೇಸು ಅದಕ್ಕೆ ನಂಬಿಕೆಯಿಂದ ವಿಧೇಯನಾದನು. ಹೀಗೆ ಆತನು ನಮಗೆ ಮುಂದಾಳಾಗಿದ್ದಾನೆ. ನಾವು ದೇವರ ಮಕ್ಕಳಿಗೆ ಪರಿಣಾಮಕಾರಿಯಾಗಿ ಸೇವೆ ಮಾಡಬೇಕಾಗಿದ್ದರೆ ನಾವೂ ಸಹ ನಂಬಿಕೆಯಿಂದ ಜೀವಿಸಿ ದೇವರ ಆಜ್ಞೆಗಳಿಗೆ ಸಂಪೂರ್ಣ ವಿಧೇಯರಾಗಿರುವ ಮೂಲಕ ನಮ್ಮ ನಂಬಿಕೆಯನ್ನು ಪ್ರಕಟಿಸಬೇಕು. ಹೀಗೆ ಮಾತ್ರವೇ ನಾವು ಇತರರಿಗೆ ಮಾದರಿಯಾಗಿರಲು ಸಾಧ್ಯ.

ದೇವರ ಬಲದಲ್ಲಿ ಭರವಸೆ

ನಂಬಿಕೆಯು ದೇವರ ಬಲದಲ್ಲಿ ಸಂಪೂರ್ಣವಾಗಿ ಭರವಸೆಯಿಂದಿರುವುದೇ ಆಗಿದೆ. ಹವ್ವಳಿಗೆ ಶೋಧನೆಯ ಸೆಳೆತವನ್ನು ಎದುರಿಸಲಾಗದಿದ್ದರೆ ಕರ್ತನಿಂದ ಸಹಾಯಕ್ಕೋಸ್ಕರ ಕೂಗಿಕೊಳ್ಳಬಹುದಾಗಿತ್ತು ಮತ್ತು ಆತನಿಂದ ಸಹಾಯ ಪಡೆಯಬಹುದಾಗಿತ್ತು. ದೇವರ ಬಲವು ಪ್ರತಿಯೊಂದು ಶೋಧನೆಯ ಎಳೆತವನ್ನು ಜಯಿಸಲಿಕ್ಕೆ ಲಭ್ಯವಿದೆ.

ಯೇಸು ತಾನು ಭೂಲೋಕದಲ್ಲಿದ್ದಾಗ ಈ ಬಲಕ್ಕಾಗಿ ಕೂಗಿಕೊಂಡನು, ಮತ್ತು ಬಲವನ್ನು ಪಡೆದಿದ್ದರಿಂದ ಆತನು ಪಾಪ ಮಾಡಲಿಲ್ಲ.

ಯೇಸುವಿನ ವಿಷಯವಾಗಿ ನಾವು ಇಬ್ರಿಯ 5;7,8 ರಲ್ಲಿ “ಕ್ರಿಸ್ತನು ತಾನು ಭೂಲೋಕದಲ್ಲಿದ್ದಾಗ (ಮಾಂಸ/ಶರೀರದಲ್ಲಿದ್ದ ದಿನಗಳಲ್ಲಿ) ಮರಣಕ್ಕೆ ತಪ್ಪಿಸಿ ಕಾಪಾಡಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು. ಹೀಗೆ ಆತನು ಮಗನಾಗಿದ್ದರೂ ಅನುಭವಿಸಿದ ಭಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು ಎಂದು ನಾವು ಓದುತ್ತೇವೆ.

ಈಗ ನಾವು ಭರವಸೆಯಿಂದ ಕೃಪಾಸನಕ್ಕೆ ಬಂದು ನಮ್ಮ ಶೋಧನೆಯ ಸಮಯದಲ್ಲಿ ಸಹಾಯಕ್ಕಾಗಿ (ಕೃಪೆಗಾಗಿ) ಕೇಳಿಕೊಳ್ಳಬೇಕೆಂದು ಆಜ್ಞಾಪಿಸಲ್ಪಟ್ಟಿದ್ದೇವೆ.

ಆದುದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ (ಇಬ್ರಿಯ. 4:16).

ದೇವರು ತನ್ನ ಪರಿಪೂರ್ಣ ಜ್ಞಾನ, ಪ್ರೀತಿ ಮತ್ತು ಬಲಕ್ಕೆ ನಿಜವಾಗಿ ಸಾಕ್ಷಿಯಾದವರನ್ನು ಅಂದರೆ ಸಾಕ್ಷಿಗಳಿಗಾಗಿ ಈ ಭೂಮಿಯ ಮೇಲೆ ಹುಡುಕುತ್ತಿದ್ದಾನೆ.

ಕ್ರೈಸ್ತರು ಹೊಸ ಒಡಂಬಡಿಕೆಯ ಆಜ್ಞೆಗಳನ್ನು ತಿದ್ದಿ ಬದಲಿಸುವುದರ ಮೂಲಕ ಅವರು ದೇವರ ಜ್ಞಾನದಲ್ಲಿ ತಮ್ಮ ಅಪನಂಬಿಕೆಯನ್ನು ತೋರಿಸುತ್ತಿದ್ದಾರೆ. 20ನೇ ಶತಮಾನದಲ್ಲಿ ತಾವು ಎದುರಿಸುವ ಒತ್ತಡಗಳನ್ನು ಸರ್ವಜ್ಞಾನಿಯಾಗಿರುವ ದೇವರು ಗಣನೆಗೆ ತೆಗೆದುಕೊಂಡಿಲ್ಲವೆಂದು ಇದರಿಂದ ವ್ಯಕ್ತಪಡಿಸುತ್ತಾರೆ.

ಮತ್ತಾಯ. 5:16 ರಲ್ಲಿ ಯೇಸು ಹೇಳಿದ್ದು, “ಈ ಸಣ್ಣ ಸಣ್ಣ ಆಜ್ಞೆಗಳಲ್ಲಿ ಒಂದನ್ನು ಮೀರಿ ಜನರಿಗೂ ಹಾಗೇ ಮೀರುವುದಕ್ಕೆ ಭೋಧಿಸುವವನು ಪರಲೋಕ ರಾಜ್ಯದಲ್ಲಿ ಬಹಳ ಚಿಕ್ಕವನೆನಸಿಕೊಳ್ಳುವನು; ಆದರೆ ತಾನೇ ಆ ಆಜ್ಞೆಗಳಂತೆ ನಡೆದುಕೊಂಡು ಜನರಿಗೂ ಹಾಗೆ ನಡೆಯಬೇಕೆಂದು ಭೋದಿಸುವವನು ಪರಲೋಕ ರಾಜ್ಯದಲ್ಲಿ ದೊಡ್ಡವನೆನಸಿಕೊಳ್ಳುವನು.

ತನ್ನ ವಾಕ್ಯದಲ್ಲಿರುವ ಚಿಕ್ಕ ಆಜ್ಞೆಗಳಿಗೆ ನಮ್ಮಮನೋಭಾವನೆ ಹೇಗಿದೆ ಎಂಬುದರ ಮೇಲೆ ದೇವರು ನಮ್ಮ ನಂಬಿಕೆಯನ್ನೂ ವಿಧೇಯತೆಯನ್ನೂ ಪರೀಕ್ಷಿಸುತ್ತಾರೆ. ದೊಡ್ಡ ಆಜ್ಞೆಗಳನ್ನು ಅಂದರೆ “ನರಹತ್ಯೆ ಮಾಡಬಾರದು ವ್ಯಭಿಚಾರ ಮಾಡಬಾರದು ಎಂಬೀ ಆಜ್ಞೆಗಳನ್ನು ಕ್ರೈಸ್ತರು ಮತ್ತು ಅಕ್ರೈಸ್ತರೂ ಸಹ ಕೈಕೊಂಡು ನಡೆಯುತ್ತಾರೆ. ಆದರೆ ಚಿಕ್ಕ ಆಜ್ಞೆಗಳ ವಿಷಯದಲ್ಲಿ ನಮಗಿರುವ ಮನೋಭಾವನೆಯಿಂದ, ದೇವರು ನಮ್ಮನ್ನು ಮೆಚ್ಚಿದ್ದಾರೋ ಇಲ್ಲವೋ ಎಂದು ತೀರ್ಮಾನವಾಗುತ್ತದೆ.

ಯೇಸು ಹೇಳಿದ್ದು -“ಯಾವನಾದರೂ ತನ್ನ ಹೆಂಡತಿಯನ್ನು ತ್ಯಜಿಸಿ...ಬೇರೊಬ್ಬಳನ್ನು ಮದುವೆಯಾದಲ್ಲಿ ಅವನು ಅವಳಿಗೆ ವಿರುದ್ಧವಾಗಿ ವ್ಯಭಿಚಾರಮಾಡುವವನಾಗಿದ್ದಾನೆ (ಮಾರ್ಕ-10:11) ಎಂದು. ಆ ಆಜ್ಞೆಗೆ ನೇರವಾದ ಅವಿಧೇಯತೆಯು ಮತ್ತು ಸಡಿಲಾದ ಲೌಕಿಕ ಮನೋಭಾವನೆಯು (ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ) ಅನೇಕ ಕ್ರೈಸ್ತರಲ್ಲಿದ್ದು , ಅವರು ಯೇಸುವಿನ ಆಜ್ಞೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದರಲ್ಲಿ ಸೈತಾನನು ಎಷ್ಟು ಯಶಸ್ಸನ್ನು ಗಳಿಸಿದ್ದಾನೆಂದು ಸೂಚಿಸುತ್ತದೆ.

“ತಲೆಯ ಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ, ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ.....ಸ್ತ್ರೀಯು ಮುಸುಕು ಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗೆಸಿಬಿಡಬೇಕಷ್ಟೆ(1 ಕೊರಿ-11:5,6). ಇದು ಚಿಕ್ಕ ಸಂಗತಿ. ಆದರೆ ತಲೆ ಮುಚ್ಚಿಕೊಳ್ಳುವುದು ಪಾಶ್ಚಾತ್ಯ ದೇಶಗಳಲ್ಲಿರುವ ಕ್ರೈಸ್ತ ಮಹಿಳೆಯರಲ್ಲಿ ಮಾಯವಾಗಿರುವುದು ಇಂದಿನ ಕ್ರೈಸ್ತರು ದೇವರ ವಾಕ್ಯಕ್ಕೆ ಭಯ, ಗೌರವ ಕೊಡದಿರುವುದನ್ನು ತೋರಿಸುತ್ತದೆ.

ಯೇಸುವೂ, ಅಪೋಸ್ತಲರೂ ಒತ್ತಿ ಹೇಳಿದ ನೀರಿನ ದೀಕ್ಷಾಸ್ನಾನವು ಇಂದು ಅಂತರ ಪಂಗಡ ಸಭೆಗಳಲ್ಲಿ ಯಾರಿಗೂ ಬೇಜಾರಾಗಬಾರದೆಂದು (ಇವುಗಳು) ಸಾರಲ್ಪಡುವುದಿಲ್ಲ. ಇಂದಿನ ಕ್ರೈಸ್ತರು ದೇವರನ್ನು ಮೆಚ್ಚಿಸುವುದಕ್ಕಿಂತ ಜನರನ್ನು ಮೆಚ್ಚಿಸುವವರಾಗಿರುತ್ತಾರೆ.

“ದೇವರು ನಿಜವಾಗಿ ಹೇಳಿದ್ದಾನೋ1..... ಎಂದು ಸೈತಾನನು ಹವ್ವಳಿಗೆ ಪ್ರಶ್ನಿಸಿದನು. ಇಂದು ಕ್ರೈಸ್ತತ್ವದಲ್ಲಿ ಅದೇ ಪ್ರಶ್ನೆಯಿಂದ ಆತನು ದೇವರ ಸ್ಪಷ್ಟವಾದ ಆಜ್ಞೆಗಳಿಗೆ ಅವಿಧೇಯರಾಗಲು ಪ್ರೇರೇಪಿಸುತ್ತಾನೆ.

ದೇವರು ಆದಾಮ ಹವ್ವಳನ್ನು ಪರೀಕ್ಷಿಸಿದಾಗ ಅವರು ಸೋತು ಬಿದ್ದು ಹೋದರು.

ಇಂದು ನೀವು ಮತ್ತು ನಾನೂ ಪರೀಕ್ಷಿಸಲ್ಪಡುತ್ತಿದ್ದೇವೆ.

ಅಧ್ಯಾಯ 5
ಯೋಬನ ಪರೀಕ್ಷೆ

ದೇವರನ್ನು ನಿರಾಶೆಗೊಳಿಸಿದ ದೇವ-ಜನರ ಜೀವನ ಚರಿತ್ರೆಗಳು ನಮ್ಮನ್ನು ಉಪದೇಶಿಸಿ ಎಚ್ಚರಿಸುವುದಕ್ಕೋಸ್ಕರ ಬೈಬಲಿನಲ್ಲಿ ಬರೆಯಲ್ಪಟ್ಟಿವೆ. ಪವ್ರಿತಾತ್ಮನ ಧ್ವನಿಗೆ (ಸ್ವರಕ್ಕೆ) ನಮ್ಮ ಕಿವಿಗಳನ್ನು ಶ್ರುತಿಗೊಳಿಸಿ (ಅನುಗೊಳಿಸಿ) ಅವುಗಳನ್ನು (ಆ ಜೀವನ ಚರಿತ್ರೆಗಳನ್ನು) ನಾವು ಧ್ಯಾನಿಸುವುದಾದರೆ, ನಾವು ಅವುಗಳಿಂದ ಬಹಳವಾಗಿ ಕಲಿಯಬಹುದು.

ಹಳೆಯ ಒಡಂಬಡಿಕೆಯಲ್ಲಿನ ಜನರ ಬಗ್ಗೆ ಓದುವಾಗ ಯೇಸು ಕ್ರಿಸ್ತನ ಮುಖಾಂತರ ಬಂದಿರುವ ಕೃಪೆಗಿಂತ ಪೂರ್ವದಲ್ಲಿ ಇವರೆಲ್ಲರೂ ಜೀವಿಸಿದರೆಂದು ನಾವು ನೆನಪಿಡಬೇಕು.

(ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು. ಕೃಪೆಯೂ, ಸತ್ಯವೂ ಯೇಸು ಕ್ರಿಸ್ತರ ಮುಖಾಂತರ ಬಂದವು(ಯೋಹಾ. 1:17).

ಆದ್ದರಿಂದ ಅವರು ಹೊಸ ಒಡಂಬಡಿಕೆಯ ಮಟ್ಟಕ್ಕೆ ಬರಬೇಕೆಂದು ದೇವರು ಸಹ ಅಪೇಕ್ಷಿಸಲಿಲ್ಲ.

ಮತ್ತಾಯ 19:8, 9 ರಲ್ಲಿ, ಇದರ ಉದಾಹರಣೆಯನ್ನು ಕೊಡಲಾಗಿದೆ. ಹಳೆಯ ಒಡಂಬಡಿಕೆಯಲ್ಲಿ ಮೋಶೆಯು ಯಾಕೆ ವಿವಾಹ ವಿಚ್ಚೇದನಕ್ಕೆ ಸಮ್ಮತಿಸಿದ್ದಾನೆಂದು ಯೇಸು ಫರಿಸಾಯರಿಗೆ ಈ ರೀತಿಯಾಗಿ ವಿವರಿಸುತ್ತಾನೆ: ನಿಮ್ಮ ಮೊಂಡುತನ (ಹೃದಯ ಕಾಠಿಣ್ಯ)ವನ್ನು ನೋಡಿ ನಿಮ್ಮ ಹೆಂಡರನ್ನು ಬಿಟ್ಟುಬಿಡುವುದಕ್ಕೆ ಅಪ್ಪಣೆ ಕೊಟ್ಟನು. ಆದರೆ ಹೊಸ ಒಡಂಬಡಿಕೆಯಲ್ಲಿ ನಮ್ಮ ಕಲ್ಲಿನಂತಹ ಹೃದಯವನ್ನು ತಗೆದು ಹಾಕಿ ಮೃದುವಾದ ಹೃದಯವನ್ನು ದೇವರು ನಮಗೆ ಕೊಡುತ್ತಾನೆ. ಆದ್ದರಿಂದ ವಿವಾಹ ವಿಚ್ಚೇದನವು ಈಗ ಸಮ್ಮತಿಸಿಲ್ಲ.

ಶಿಷ್ಟರನ್ನು ಪರೀಕ್ಷಿಸುವ ದೇವರು ಎಂದು ದೇವರು ಕರೆಯಲ್ಪಟ್ಟಿದ್ದಾನೆ(ಯೆರೆ 20:12).

ಯಾವ ಮನುಷ್ಯನೂ ಪಾಪ ಮಾಡಬೇಕೆಂದು ದೇವರು ಶೋಧಿಸುವುದಿಲ್ಲ. ಕೆಟ್ಟದ್ದರಿಂದ ದೇವರು ಶೋಧಿಸಲ್ಪಡುವುದಿಲ್ಲ ಮತ್ತು ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವವನಲ್ಲ(ಯಾಕೋಬ 1:13).

ಆದರೆ ಆತನು ಶಿಷ್ಟನನ್ನು (ನೀತಿವಂತನನ್ನು) ಪರೀಕ್ಷಿಸುತ್ತಾನೆ.

ಮಾದರಿಯ ವ್ಯಕ್ತಿ

ಶ್ರೇಷ್ಟವಾದ ದೇವರ ಸೇವಕರಲ್ಲಿ ಯೋಬನು ಒಬ್ಬನಾಗಿದ್ದನು. ಆತನು ಭೂಲೋಕದಲ್ಲಿ ಎಲ್ಲಾ ವಿಷಯಗಳಲ್ಲಿ ದೇವರಿಗೆ ಭಯಪಡುವವನಾಗಿದ್ದನು ಎಂದು ದೇವರು ಅವನ ವಿಷಯವಾಗಿ ಸೈತಾನನಿಗೆ ಹೇಳುತ್ತಾನೆ.

ಆಗ ಕರ್ತನು ಸೈತಾನನಿಗೆ - ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ1 ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ ಎಂದು ಹೇಳಿದನು(ಯೋಬ. 1:8).

ಯೋಬನ ಬುದ್ಧಿವಂತಿಕೆ, ಪ್ರತಿಭೆ, ಐಶ್ವರ್ಯದ ವಿಷಯವಾಗಿ ದೇವರು ಮಾತಾಡಲಿಲ್ಲ. ಏಕೆಂದರೆ, ದೇವರಿಗೆ ಅವು ಪ್ರಮುಖವಲ್ಲ. ಆತನ ಪವಿತ್ರತೆ ಮತ್ತು ಯಥಾರ್ಥ ಚಿತ್ತದ ವಿಷಯವಾಗಿ ದೇವರು ಮಾತಾಡುತ್ತಾನೆ. ಯೋಬನ ಸಾಧನೆಗಳಾಗಲೀ, ಅಥವಾ ಅವನ ಸೇವೆಯಾಗಲೀ ದೇವರನ್ನು ಸಂತೋಷಪಡಿಸಲಿಲ್ಲ. ಯೇಸುವಿನ ವಿಷಯದಲ್ಲಿದ್ದಂತೆ ಆತನ ಗುಣ ದೇವರಿಗೆ ಮೆಚ್ಚುಗೆಯಾಯಿತು.

ಸೈತಾನನಿಗೂ ಸಹ ಅಧ್ಬುತವಾದ ವರಗಳೂ, ಬುದ್ಧಿವಂತಿಕೆಯೂ ಇವೆ. ಅವನಿಗೆ ಬೈಬಲ್ ತಿಳುವಳಿಕೆಯೂ ಸಹ ಇದೆ! ಆದರೆ, ದೇವರು ಅಪೇಕ್ಷಿಸುವುದು ಗುಣ-ನಡತೆಯನ್ನು. ದೇವರು ನಮ್ಮನ್ನು ಪರೀಕ್ಷಿಸುವಾಗ, ಪರೀಕ್ಷಿಸುವುದು ನಮ್ಮ ತಿಳುವಿಳಿಕೆಯನ್ನಲ್ಲ ಆದರೆ ನಮ್ಮ ಗುಣ ನಡತೆ.

ಯಾವನ ವಿಷಯದಲ್ಲಾದರೂ ದೇವರು ಹೆಚ್ಚಳಪಟ್ಟು ಆತನನ್ನು ಸೈತಾನನಿಗೆ ತೋರಿಸಬೇಕಿದ್ದರೆ ಆತನು ನಿಷ್ಕಳಂಕನೂ, ಯಥಾರ್ಥಚಿತ್ತವುಳ್ಳವನಾಗಿರುವ, ದೇವರಿಗೆ ಭಯಪಟ್ಟು ಕೆಟ್ಟದ್ದನ್ನು ಹಗೆಮಾಡುವ ಗುಣವಿರುವವನನ್ನು ತೋರಿಸುತ್ತಾನೆ.

ಇತರ ವಿಶ್ವಾಸಿಗಳ ಮಧ್ಯದಲ್ಲಿ ನಮ್ಮ ಆತ್ಮಿಕತನವು ಪ್ರಸಿದ್ಧಿಯಾಗಿರಬಹುದು. ಆದರೆ, ನಮ್ಮನ್ನು ಸಂಪೂರ್ಣವಾಗಿ ಅರಿತ ದೇವರು ನಮ್ಮನ್ನು ಸೈತಾನನಿಗೆ ತೋರಿಸುತ್ತಾನೋ1 ಭೂಲೋಕದಲ್ಲಿ ದೊರೆಯುವ ಯಾವುದೇ ಮಾನಕ್ಕಿಂತಲೂ ದೇವರಿಂದ ದೊರೆಯುವ ಈ ಯೋಗ್ಯತಾ ಪತ್ರವು ಶ್ರೇಷ್ಟವಾಗಿದೆ. ಅದಕ್ಕೆ ಹೋಲಿಸಿದರೆ, ಇಡೀ ಕ್ರೈಸ್ತ ಪ್ರಪಂಚದ ಪೊಳ್ಳು ಮಾನವು ಕಸಕ್ಕೆ ಸಮಾನವಾಗಿದೆ.

ಆದ್ದರಿಂದ ನನ್ನ ಆತ್ಮಿಕತ್ವದ ಬಗ್ಗೆ ಇತರರ ಅಭಿಪ್ರಾಯವೇನು1 ಎನ್ನುವುದು ಪ್ರಮುಖವಾದ ಪ್ರಶ್ನೆಯಲ್ಲ. ಬದಲಾಗಿ, ನನ್ನಲ್ಲಿ ಸಂತೋಷಪಟ್ಟು ನನ್ನನ್ನು ದೇವರು ಸೈತಾನನಿಗೆ ತೋರಿಸುತ್ತಾನೋ1 ಎನ್ನುವುದೇ ಅತ್ಯಂತ ಪ್ರಾಮುಖ್ಯವಾಗಿದೆ.

ಸೈತಾನನ ಮೊದಲ ಹೆಜ್ಜೆ

ದೇವರು ಸೈತಾನನಿಗೆ ಯೋಬನ ವಿಷಯವಾಗಿ ಹೇಳಿದಾಗ, ಯೋಬನು ತನ್ನ ಲಾಭಕ್ಕೋಸ್ಕರ ದೇವರ ಸೇವೆ ಮಾಡುತ್ತಾನೆಂದು ಸೈತಾನನು ಹೇಳಿದನು.

ಸೈತಾನನು ದೇವರಿಗೆ, ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ1 ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ಥ್ಯಕ್ಕೂ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈ ಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈ ನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಾಗಿ ನಿನ್ನನ್ನು ದೂಷಿಸಲೇ ದೂಷಿಸುವನು ಅಂದನು (ಯೋಬ 1:9-11).

ದೇವರು ಯೋಬನನ್ನು ಪರೀಕ್ಷಿಸಲು ಸೈತಾನನಿಗೆ ಸಮ್ಮತಿಸಿ ಅವನ ದೂರು ಸುಳ್ಳೆಂದು ರುಜುಪಡಿಸಲು ಅವಕಾಶ ಮಾಡಿಕೊಟ್ಟನು. ಏಕೆಂದರೆ ಯೋಬನ ಯಥಾರ್ಥಥೆಯು ದೇವರಿಗೆ ಗೊತ್ತಿತ್ತು.

ನಮ್ಮ ಬಗ್ಗೆ ಏನೆಂದು ಹೇಳೋಣ1 ನಾವು ನಮ್ಮ ಲಾಭಕ್ಕೋಸ್ಕರ ದೇವರ ಸೇವೆ ಮಾಡುತ್ತೇವೆಯೇ1 ನಮ್ಮ ಬಗ್ಗೆ ಸೈತಾನನು ನಾವು ಸ್ವಲಾಭಕ್ಕೋಸ್ಕರ ಆತನ ಸೇವೆ ಮಾಡುತ್ತೇವೆಂದು ದೂರು ಹೇಳಿದರೆ, ದೇವರು ಆತನ ದೂರು ನಿಜವೆಂದು ಒಪ್ಪಿಕೊಳ್ಳುತ್ತಾನೋ1

ಭಾರತ ದೇಶವು ಸ್ವಲಾಭಕ್ಕಾಗಿ ದೇವರ ಸೇವೆ ಮಾಡುವ ಕ್ರೈಸ್ತ ಸೇವಕರಿಂದ ತುಂಬಿರುವುದು ದು:ಖಕರವಾಗಿದೆ. ಕೆಲವರು ಸಂಬಳಕ್ಕಾಗಿ ಅಥವಾ ಸ್ಥಾನ-ಮಾನಕ್ಕಾಗಿ, ಇನ್ನೂ ಕೆಲವರು ಪಾಶ್ಚಾತ್ಯ ದೇಶಗಳನ್ನು ಉಚಿತವಾಗಿ ನೋಡಿಬರುವ ಉದ್ದೇಶದಿಂದ ದೇವರ ಸೇವೆ ಮಾಡುವವರಾಗಿದ್ದಾರೆ. ಕ್ರೈಸ್ತ ಸೇವೆ ಮಾಡುವ ಯಾರೊಬ್ಬನೂ ತನ್ನ ಸ್ವಂತ ಲಾಭಕ್ಕಾಗಿ ಮಾಡಿದರೆ, ಆತನು ದೇವರನ್ನಲ್ಲ, ಧನದ ಸೇವೆ ಮಾಡುವವನಾಗಿದ್ದಾನೆ. ನಿಜವಾದ ದೇವರ ಸೇವೆ ಮಾಡಲು ನಾವು ಬೆಲೆ ತೆರಬೇಕಾಗುತ್ತದೆ.

ದೇವರಿಗೆ ಯಜ್ಞವನ್ನರ್ಪಿಸುವಾಗ ದಾವೀದನು ಹೇಳಿದ ಮಾತನ್ನು ಗಮನಿಸಿರಿ. ನಾನು ನಿನ್ನಿಂದ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ದೇವರಾದ ಯೆಹೋವನಿಗೆ ಸುಮ್ಮನೆ ಸಿಕ್ಕಿದ್ದನ್ನು ಯಜ್ಞವಾಗಿ ಅರ್ಪಿಸಲೊಲ್ಲೆನು (2 ಸಮು 24:24).

ಇಂಥಹ ಮನೋಭಾವವುಳ್ಳವರು ಎಷ್ಟು ವಿರಳ!

ನಿಜವಾದ ದೇವರ ಸೇವೆಯು ನಮಗೆ ಪ್ರಾಪಂಚಿಕ ಲಾಭದ ಬದಲು ನಷ್ಟವನ್ನುಂಟುಮಾಡುತ್ತದೆ. ಲಾಭವು ಆತ್ಮಿಕವಾಗಿ ಮಾತ್ರ. ಪ್ರಾಪಂಚಿಕವಾದ ಲಾಭವನ್ನು ತರುವುದು ಪರಲೋಕದ ಯೆರೂಸಲೇಮಿಗೆ ಸಂಬಂಧಪಟ್ಟದ್ದಲ್ಲ. ಅದು ಬಾಬೇಲಿಗೆ ಸಂಬಂಧಿಸಿದ್ದು.

ಆತ್ಮಿಕ ಬಾಬೇಲಿನ ವಿಷಯದಲ್ಲಿ ಬೈಬಲ್ ಹೀಗೆ ಹೇಳುತ್ತದೆ. ಆ ಸರಕುಗಳನ್ನು ಮಾರಿ ಅವಳಿಂದ ಐಶ್ವರ್ಯವಂತರಾದ ವರ್ತಕರು (ಪ್ರಕ 18:15).

ಸ್ವ-ಹಿತವನ್ನೇ ನೋಡಿಕೊಳ್ಳುವ ಕ್ರೈಸ್ತ ಸೇವಕರ ಮಧ್ಯದಲ್ಲಿ ಪೌಲನು ತಿಮೋಥೆಯನೊಬ್ಬನೇ ಭಿನ್ನವಾಗಿದ್ದಾನೆಂದು ತೋರಿಸುತ್ತಾನೆ. ಅವನ ವಿಷಯದಲ್ಲಿ ಅವನು ಹೀಗೆ ಬರೆಯುತ್ತಾನೆ. ತಿಮೊಥೇಯನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುತ್ತಿರುವವರು ನನ್ನ ಬಳಿಯಲ್ಲಿ ಬೇರೆ ಯೂರೂ ಇಲ್ಲ. ಎಲ್ಲರೂ ಸ್ವ-ಕಾರ್ಯಗಳ ಮೇಲೆ ಮನಸ್ಸಿಡುತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವುದಿಲ್ಲ(ಫಿಲಿಪ್ಪಿ 2:20-21).

ಪೌಲನು ಮೋಸ ಹೋಗಿರಲಿಲ್ಲ. ತನ್ನ ಸಂಗಾತಿ ಸೇವಕರ ಆತ್ಮಿಕ ಸ್ಥಿತಿಗತಿಯ ಬಗ್ಗೆ ಆತನಿಗೆ ಚೆನ್ನಾಗಿ ತಿಳಿದಿತ್ತು. ನಮ್ಮ ಬಗ್ಗೆಯೂ ದೇವರು ಮೋಸಹೋಗಿಲ್ಲ.

ಸೈತಾನನು ಯೋಬನನ್ನು ಪರೀಕ್ಷಿಸಲು ಸಮ್ಮತಿಸುವಷ್ಟು ದೇವರಿಗೆ ಯೋಬನಲ್ಲಿ ಭರವಸೆ ಇತ್ತು.

ಒಂದೇ ದಿನದಲ್ಲಿ ಯೋಬನು ತನ್ನ ಎಲ್ಲಾ ಮಕ್ಕಳನ್ನೂ, ಆಸ್ತಿಯನ್ನೂ ಕಳೆದುಕೊಂಡರೂ ಅವನು ದೇವರನ್ನು ಆರಾಧಿಸಿ ಅತನ ಸೇವೆಯನ್ನು ಮುಂದುವರಿಸಿದನು. ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು. ಏನೂ ಇಲ್ಲದವನಾಗಿಯೇ ಗತಿಸಿ ಹೋಗುವೆನು; ಯೆಹೋವನೇ ಕೊಟ್ಟನು. ಯೆಹೋವನೇ ತೆಗೆದುಕೊಂಡನು. ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ ಎಂದು ಹೇಳಿದನು. ಇವೆಲ್ಲದರಲ್ಲಿಯೂ ಯೋಬನು ಪಾಪ ಮಾಡಲಿಲ್ಲ. ದೇವರ ಮೇಲೆ ತಪ್ಪು ಹೊರಿಸಲಿಲ್ಲ(ಯೋಬ 1:20-22).

ಯೋಬನಿಗೆ ತನಗಿರುವುದೆಲ್ಲವೂ ಅಂದರೆ - ಮಕ್ಕಳು, ಆಸ್ತಿ, ಆರೋಗ್ಯ, ಎಲ್ಲವೂ ಸಹ ದೇವರಿಂದ ಬಂದ ಉಚಿತ ವರಗಳೆಂದೂ ಮತ್ತು ದೇವರಿಗೆ ಬೇಕಾದಾಗ ಇವೆಲ್ಲವುಗಳನ್ನು ಆತನು ತೆಗೆದುಕೊಳ್ಳಲು ಆತನಿಗೆ ಹಕ್ಕಿದೆಯೆಂದು ಗೊತ್ತಿತ್ತು. ಯಾವನೇ ಆದರೂ ತನಗಿರುವುದೆಲ್ಲವನ್ನೂ ತ್ಯಜಿಸದ ಹೊರತು ದೇವರನ್ನು ನಿಜವಾಗಿ ಆರಾಧಿಸಲಾರನು.

ಸೈತಾನನ ಎರಡನೆಯ ಹೆಜ್ಜೆ

ಯೋಬನನ್ನು ತಲೆಯಿಂದ ಪಾದದವರೆಗೆ ಹುಣ್ಣುಗಳಿಂದ ಬಾಧಿಸುವುದರ ಮೂಲಕ ಇನ್ನೊಂದು ಹೆಜ್ಜೆ ಮುಂದುವರಿಯುವಂತೆ ಸೈತಾನನಿಗೆ ದೇವರು ಅನುಮತಿ ಕೊಟ್ಟನು.

ಖಾಯಿಲೆಯು ಸೈತಾನನಿಂದ ಬರುವಂಥದ್ದು. ಆದರೆ ಇದೂ ಸಹ ದೇವರ ಸೇವಕರನ್ನು ಶುದ್ಧೀಕರಿಸಿ, ಅವರನ್ನು ಸಿದ್ಧಿಗೆ ತರಲು ದೇವರು ಉಪಯೋಗಿಸುತ್ತಾನೆ.

ಪೌಲನು ತನ್ನ ಶರೀರದಲ್ಲಿರುವ ಶೂಲದ ಮೂಲಕವಾಗಿ ಬಾಧಿಸಲ್ಪಟ್ಟನು. ಅದು ಸೈತಾನನಿಂದಲೇ ಬಂದಿತ್ತೆಂದು ಆತನು ಸ್ಪಷ್ಟವಾಗಿ ಹೇಳುತ್ತಾನೆ. ಅದು ದೇವರ ದೂತನಲ್ಲ, ಬದಲಾಗಿ ಸೈತಾನನ ದೂತನು. ಪೌಲನು ಪದೇ ಪದೇ ಪ್ರಾರ್ಥಿಸಿದರೂ ದೇವರು ಅದನ್ನು ಅವನಿಂದ ತೊಲಗಿಸಲಿಲ್ಲ. ಏಕೆಂದರೆ, ಪೌಲನನ್ನು ದೀನನಾಗಿಡುವುದಕ್ಕೆ ಅದು ನೆರವಾಯಿತು.

ಪೌಲನು ಹೇಳುವುದೇನೆಂದರೆ, ನನಗೆ ತಿಳಿಸಲ್ಪಟ್ಟ ರಹಸ್ಯಗಳು ಬಹು ವಿಶೇಷವಾಗಿರುವುದರಿಂದಲೂ ನಾನು ಹೊಗಳಿಕೊಳ್ಳದೆ ಸುಮ್ಮನಿರುತ್ತೇನೆ. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲ ನನ್ನ ಶರೀರದಲ್ಲಿ ನಾಟಿದೆಯೋ ಎಂಬಂತೆ ನನ್ನನ್ನು ಗುದ್ದುವುದಕ್ಕೆ ಸೈತಾನನ ದೂತರಲ್ಲಿ ಒಬ್ಬನು ನನ್ನ ಬಳಿಗೆ ಕಳುಹಿಸಲ್ಪಟ್ಟನು. ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂತಲೇ ಇದಾಯಿತು. ಈ ಪೀಡೆಯ ವಿಷಯದಲ್ಲಿ ಅದು ನನ್ನನ್ನು ಬಿಟ್ಟು ಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು. ಅದಕ್ಕಾತನು, ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ಬಲವು ಪೂರ್ಣ ಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ (2 ಕೊರಿ 12:7-9).

ಸೈತಾನನ ಮೂರನೆಯ ಹೆಜ್ಜೆ

ಯೋಬನನ್ನು ಆತನ ಪತ್ನಿಯಿಂದ ಬಾಧಿಸುವುದು ಸೈತಾನನ ಮೂರನೆಯ ಹೆಜ್ಜೆಯಾಗಿತ್ತು.

ಹೀಗಿರುವಲ್ಲಿ ಅವನ ಹೆಂಡತಿ ಅವನಿಗೆ, ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ1 ದೇವರನ್ನು ದೂಷಿಸಿ ಸಾಯಿ ಎಂದಳು (ಯೋಬ. 2:9).

ನಿನ್ನ ಪತ್ನಿಯು ನಿನಗೆ ವಿರೋಧವಾಗಿ ದೂರುವಾಗ ಅದು ನಿನ್ನ ಶುದ್ಧೀರಕರಣಕ್ಕೆ ಒಳ್ಳೆಯ ಪರೀಕ್ಷೆಯಾಗಬಹುದು.

ಪುರುಷರೇ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಅವರಿಗೆ ನಿಷ್ಟುರವಾಗಿರಬೇಡಿರಿ...ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಟೆಪಡಿಸುವುದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು (ಕೊಲೊ. 3:19, ಎಫೆ. 5:25) ಎಂದು ದೇವರ ವಾಕ್ಯವು ಆಜ್ಞಾಪಿಸುತ್ತದೆ.

ಗಂಡನು ಯಾವ ಸಂದರ್ಭದಲ್ಲೂ ತನ್ನ ಪತ್ನಿಯನ್ನು ಪ್ರೀತಿಸುವವನಾಗಿದ್ದು, ಎಂದಿಗೂ ಅವಳ ಬಗ್ಗೆ ಕಹಿ ಭಾವನೆ ಇಲ್ಲದವನಾಗಿರಬೇಕು.

ದೇವರಿಗೆ ಭಯಭಕ್ತಿಯುಳ್ಳವನಾಗಿ ನಡೆಯುವ ಇತರರಂತೆ, ನಿನ್ನ ಹೆಂಡತಿ ಇಲ್ಲದಿದ್ದಾಗ್ಯೂ ಅವಳ ಬಗ್ಗೆ ಗುಣಗುಟ್ಟದೇ ಇದ್ದು ನಿನ್ನ ಶುದ್ಧೀಕರಣವನ್ನು ನೀನು ಎದುರು ನೋಡು. ಇಂಥಹ ಸನ್ನಿವೇಶಗಳಲ್ಲಿ ದೇವರು, ಆತನ ಮೆಚ್ಚುಗೆಯೆಂಬ ಪ್ರಮಾಣ ಪತ್ರವನ್ನು ಪಡೆಯಲು ನೀನು ಅರ್ಹನೋ ಎಂದು ನಿನ್ನನ್ನು ಪರೀಕ್ಷಿಸುವನು. ನಿನ್ನ ಪತ್ನಿಯು ನಿನ್ನ ಮೇಲೆ ಕೋಪಿಸಿಕೊಂಡು ನಿನ್ನನ್ನು ಟೀಕಿಸುವಾಗ ನೀನು ಯೇಸುವಿನ ಪ್ರತಿನಿಧಿಯಾಗಲು ಯೋಗ್ಯನೋ ಎಂದು ದೇವರು ನಿನ್ನನ್ನು ಪರೀಕ್ಷಿಸುವನು. ಯೇಸುವನ್ನು ಆತನ ಸಂಬಂಧಿಕರೇ ಹುಚ್ಚನೆಂದು ಕರೆದರು.

ಸುವಾರ್ತೆಯಲ್ಲಿ ಆತನ ಬಂಧುಗಳು ಅವನಿಗೆ ಹುಚ್ಚು ಹಿಡಿದಿದೆ ಎಂದು ಹೇಳಿ ಆತನನ್ನು ಹಿಡಿಯುವುದಕ್ಕೆ ಹೊರಟರು(ಮಾರ್ಕ 3:21) ಎಂದು ನಾವು ಓದುತ್ತೇವೆ.

ಯೇಸುವು ಈ ಅವಮಾನವನ್ನು ತಾಳ್ಮೆಯಿಂದ ಸಹಿಸಿಕೊಂಡನು. ನಾವು ಆತನನ್ನು ಹಿಂಬಾಲಿಸಲು ಹಾಗೂ ಪ್ರತಿನಿಧಿಸಲು ಕರೆಯಲ್ಪಟ್ಟಿದ್ದೇವೆ.

ಸೈತಾನನ ನಾಲ್ಕನೆಯ ಹೆಜ್ಜೆ

ಯೋಬನ ಬೋಧಕ ಸ್ನೇಹಿತರ ಮೂಲಕ ಯೋಬನನ್ನು ದೂರುವುದು ಸೈತಾನನ ನಾಲ್ಕನೆಯ ಹೆಜ್ಜೆಯಾಗಿತ್ತು (ಯೋಬ 4 ರಿಂದ 25 ಅಧ್ಯಾಯಗಳು).

ಯೋಬನಿಗೆ ಇದು ಬಹಳ ಬಲವಾದ ಪೆಟ್ಟಾಗಿತ್ತು (ಏಟಾಗಿತ್ತು). ಏಕೆಂದರೆ, ಇವರು ದೇವರ ಪ್ರವಾದಿಗಳಂತೆ ನಟಿಸಿ ಯೋಬನ ರೋಗವು ಆತನ ಗುಪ್ತ ಪಾಪಗಳಿಂದಲೇ ಬಂದಿದೆ ಎಂದು ಹೇಳುತ್ತಿದ್ದರು. ತಾವು ಸಹೋದರರನ್ನು ದೂರುವವನ (ಪ್ರಕ 12:10) ಪ್ರತಿನಿಧಿಗಳಾಗಿ ವರ್ತಿಸುತ್ತಿದ್ದೇವೆಂದು ಅವರಿಗೆ ತಿಳಿದಿರಲಿಲ್ಲ.

ಆದರೆ ಯೋಬನನ್ನು ಶುದ್ಧೀಕರಿಸುವುದಕ್ಕಾಗಿ ದೇವರು ಇದನ್ನು ಅನುಮತಿಸಿದ್ದನು.

ಕೃಪೆಯಿಂದ ಜಯಿಸುವುದು

ಯೋಬನು ಕ್ರೃಪೆಯ ಪೂರ್ವದ ಅವಧಿಯಲ್ಲಿ ಜೀವಿಸಿದ್ದನು. ಈಗಿನ ಹಾಗೆ ನಿರಂತರವಾದ ಜಯದ ಜೀವಿತವನ್ನು ಜೀವಿಸಲು ಅವನಿಗಾಗಲಿಲ್ಲ.

ಪಾಪವು ನಿಮ್ಮ ಮೇಲೆ ದೊರೆತನ ನಡೆಸದು. ನೀವು ಧರ್ಮಶಾಸ್ತ್ರಕ್ಕೆ ಅಲ್ಲ, ಕೃಪೆಗೆ ಅಧೀನರಾಗಿದ್ದೀರಿ(ರೋಮಾ. 6:14) ಎಂಬುದಾಗಿ ದೇವರ ವಾಗ್ದಾನವಾಗಿದೆ. ಆದರೆ ಪಾಪದ ಮೇಲೆ ಜಯ ಸಾಧ್ಯವಾಗದಿದ್ದ ಕಾಲದಲ್ಲಿ ಯೋಬನು ಜೀವಿಸಿದ್ದನು. ಆದ್ದರಿಂದ, ಆತನು ಸ್ವ-ಕರುಣೆ, ಸ್ವ-ನೀತಿ, ಖಿನ್ನತೆ ಹಾಗೂ ದು:ಖಕ್ಕೆ ಕೊನೆಗೆ ಬಲಿಯಾದನು. ಆತನ ಕತ್ತಲಿನಿಂದ ನಂಬಿಕೆಯು ಕೆಲವೊಮ್ಮೆ ಬೆಳಕಿನಂತೆ ಪ್ರಜ್ವಲಿಸುತ್ತಿತ್ತು. ಆದರೆ ಅದು ತಾತ್ಕಾಲಿಕ ಅನುಭವವಾಗಿತ್ತು.

ಈಗಲಾದರೋ, ಯೇಸು ಕ್ರಿಸ್ತನ ಮೂಲಕವಾಗಿ, ಕೃಪೆಯು ನಮಗಿರುವುದರಿಂದ, ನಾವು ಯೋಬನ ಹಾಗೆ ಶೋಧಿಸಲ್ಪಟ್ಟರೆ, ಒಂದು ಕ್ಷಣವೂ ಖಿನ್ನತೆಯಲ್ಲಿರಬೇಕಾಗಿಲ್ಲ. ಹೊಸ ಒಡಂಬಡಿಕೆಯ ಆಜ್ಞೆಗಳೇನೆಂದರೆ, ಯಾವ ವಿಷಯವಾಗಿಯೂ ಚಿಂತೆ ಮಾಡಬೇಡಿರಿ...ಕರ್ತನಲ್ಲಿ ಯಾವಾಗಲೂ ಹರ್ಷಿಸಿರಿ...ಎಲ್ಲದರಲ್ಲೂ ಕೃತಜ್ಞತಾ ಸ್ತುತಿ ಮಾಡಿರಿ..... ಇತ್ಯಾದಿ(ಫಿಲಿಪ್ಪಿ 4:6,4).

ಇಂಥಹ ಆಜ್ಞೆಗಳು ಹಳೆಯ ಒಡಂಬಡಿಕೆಯಲ್ಲಿ ಕೊಡಲ್ಪಟ್ಟಿರಲಿಲ್ಲ. ಏಕೆಂದರೆ, ಕೃಪೆಯು ಇನ್ನೂ ಬಂದಿರಲಿಲ್ಲ. ಆದರೆ, ಈಗ ನಾವು ಎಲ್ಲದರಲ್ಲೂ ದೇವರ ಹಸ್ತವನ್ನು ಕಾಣುವವರಾಗಿದ್ದೇವೆ ಮತ್ತು ನಮ್ಮನ್ನು ನಿರಂತರವಾದ ಜಯದಲ್ಲಿಡಲು ಪ್ರತಿಕ್ಷಣಕ್ಕೂ ಕೃಪೆಯು ಲಭ್ಯವಾಗಿದೆ.

ಜಯೋತ್ಸವದಲ್ಲಿ ನಮ್ಮನ್ನು ಯಾವಾಗಲೂ ನಡೆಸುವ ದೇವರಿಗೆ ಸ್ತೋತ್ರವಾಗಲಿ (2 ಕೊರಿ 2:14) ಎಂಬುದು ಪೌಲನ ಜಯೋತ್ಸವದ ಧ್ವನಿಯಾಗಿದೆ.

ನಮ್ಮ ಆಸ್ತಿ ನಾಶವಾದರೂ, ನಾವು ಮಕ್ಕಳನ್ನು ಕಳೆದುಕೊಂಡರೂ ನಮ್ಮ ಗಂಡ ಅಥವಾ ಹೆಂಡತಿ ನಮ್ಮನ್ನು ನಿಂದಿಸಿದರೂ, ಜೊತೆ ವಿಶ್ವಾಸಿಗಳು ನಮ್ಮನ್ನು ತಪ್ಪಾಗಿ ತಿಳಿದುಕೊಂಡು ನಮ್ಮನ್ನು ಟೀಕಿಸಿದರೂ, ಅಥವಾ ತಮಗೆ ಯೋಗ್ಯ ಎಂದೆಣಿಸುವ ಯಾವುದನ್ನೇ ಆದರೂ ದೇವರು ನಮ್ಮ ಜೀವಿತದಲ್ಲಿ ಕಳಿಸಿದರೂ ನಾವೀಗ ಜಯಶಾಲಿಗಳಾಗಿರಬಹುದು.

ಈ ರೀತಿಯಾಗಿ, ಭೂಮಿಯ ಮೇಲಿರುವ ತನ್ನ ಜನರು ದೇವರಿಗೆ ಅಧೀನರಾಗುವುದಷ್ಟೇ ಅಲ್ಲದೆ, ಪ್ರತಿಯೊಂದು ಶೋಧನೆಯನ್ನೂ ಸಂತೋಷದಿಂದ ಸ್ವೀಕರಿಸಿ ಇವು, ನಿತ್ಯವಾದ ಮಹಿಮೆಯನ್ನುಂಟು ಮಾಡುತ್ತವೆಂಬ ಮನವರಿಕೆಯುಳ್ಳಾವರಾಗಿದ್ದಾರೆಂದು ದೇವರು ಇಂಥವರನ್ನು ಸೈತಾನನಿಗೆ ತೋರಿಸುತ್ತಾರೆ.

2 ಕೊರಿ 4:17-18 ರಲ್ಲಿ ನಾವು ಈ ರೀತಿ ಓದುತ್ತೇವೆ. ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಸ್ವಭಾವವನ್ನು ದೊರಕಿಸುತ್ತದೆ. ನಾವು ಕಾಣುವಂಥದ್ಧನ್ನು ಲಕ್ಷಿಸದೆ, ಕಾಣದಿರುವಂಥದ್ದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದ್ದು ಸ್ವಲ್ಪ ಕಾಲ ಮಾತ್ರ ಇರುವುದು. ಕಾಣದಿರುವಂಥದ್ದು ಸದಾಕಾಲವು ಇರುವುದು.

ಸೈತಾನನಿಗೂ ಆತನ ದೂತರಿಗೂ ಒಂದು ಸಾಕ್ಷಿ

ದೇವರು ತನ್ನ ಜ್ಞಾನವನ್ನು ಆಕಾಶಮಂಡಲದಲ್ಲಿರುವ ಅಧಿಪತಿಗಳಿಗೂ, ಅಧಿಕಾರಿಗಳಿಗೂ ತನ್ನ ಸಭೆಯ ಮೂಲಕವಾಗಿ ತೋರಿಸುತ್ತಾನೆಂದು ಹೊಸ ಒಡಂಬಡಿಕೆಯಲ್ಲಿ ಹೇಳಲ್ಪಟ್ಟಿದೆ.

ಎಫೆಸ 3:10 ರಲ್ಲಿ ನಾವು ಓದುವುದೇನೆಂದರೆ ತನ್ನ ನಾನಾ ವಿಧವಾದ ಜ್ಞಾನವು ಆಕಾಶಮಂಡಲದಲ್ಲಿರುವ ರಾಜತ್ವಗಳಿಗೂ ಅಧಿಕಾರಗಳಿಗೂ ಈಗ ಕ್ರೈಸ್ತ ಸಭೆಯ ಮೂಲಕ ಗೊತ್ತಾಗಬೇಕೆಂಬುದನ್ನು ಉದ್ದೇಶಿಸಿದನು.

ಈ ಅಧಿಕಾರಗಳು ಆಕಾಶಮಂಡಲದಲ್ಲಿರುವ ದುರಾತ್ಮಗಳು ಎಂದು 6:12 ರಲ್ಲಿ ಹೇಳಲ್ಪಟ್ಟಿವೆ.

ನಮಗೆ ಸಂಭವಿಸುವ ಸಂಗತಿಗಳು ಆಕಸ್ಮಿಕವಲ್ಲ. ಆದರೆ, ನಮಗೋಸ್ಕರ ಸ್ಪಷ್ಟವಾಗಿ ಅಳತೆಮಾಡಲ್ಪಟ್ಟಂತೆಯೋ ಎಂಬಂತೆ (ನಾವು ಸಹಿಸಿಕೊಳ್ಳುವ ಹಾಗೆ) ದೇವರ ಪೂರ್ವ ಸಂಕಲ್ಪದಂತೆ (ಅ.ಕೃ. 2:23) ನಾವು ಕ್ರಿಸ್ತನ ಸಾರೂಪ್ಯ ಉಳ್ಳವರಾಗಿರುವಂತೆಯೂ ಮತ್ತು ಈ ಭೂಲೋಕದಲ್ಲಿ ದೇವರನ್ನು ಪ್ರೀತಿಸಿ ವಿಧೇಯರಾಗಿ ಆತನನ್ನು ಎಲ್ಲಾ ಸನ್ನಿವೇಶಗಳಲ್ಲಿ ನಂಬಿಕೆಯಿಂದ ಸ್ತೋತ್ರ ಮಾಡುವ ಜನರಿದ್ದಾರೆಂದು ಆಕಾಶಮಂಡಲದಲ್ಲಿರುವ ದುರಾತ್ಮ ಸೇನೆಗಳಿಗೆ ಪ್ರಕಟಿಸುವುದು ದೇವರ ಉದ್ದೇಶವಾಗಿದೆ.

ನಾವು ಅನುಭವಿಸುವ ಪ್ರತಿಯೊಂದು ಶೋಧನೆಯೂ ನಮ್ಮ ನಂಬಿಕೆಯ ಪರೀಕ್ಷೆಯಾಗಿದೆ. ಯೋಬನೂ ಸಹ ಹೀಗೆಂದನು: ನನಗೆ ಸಂಭವಿಸುವ ಪ್ರತಿಯೊಂದು ವಿಷಯವೂ ದೇವರಿಗೆ ಗೊತ್ತುಂಟು (ಯೋಬ 23:10-living ).

ಇಂದು ನಾವು ಒಂದು ಹೆಜ್ಜೆ ಮುಂದೆ ಹೋಗಿ ರೋಮಾ 8:28 ರ ಆಧಾರದ ಮೇಲೆ ಈ ರೀತಿ ಹೇಳಬಹುದು: ನನ್ನ ಬಗ್ಗೆ ಪ್ರತಿಯೊಂದು ವಿಷಯವು ಸಹ ದೇವರ ಯೋಜನೆಯಾಗಿದೆ.

ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದೂ ದೇವರ ಸಂಪೂರ್ಣ ಜ್ಞಾನ ಮತ್ತು ಪ್ರೀತಿಯಿಂದ ಯೋಜಿಸಲ್ಪಟ್ಟಿದೆ ಮತ್ತು ತಕ್ಕ ವೇಳೆಯಲ್ಲಿ ದೇವರ ಬಲವು ಶೋಧನೆಯಿಂದ ನಮ್ಮನ್ನು ಬಿಡಿಸುತ್ತದೆ ಎಂದು ನಾವು ನಿಜವಾಗಿ ನಂಬುತ್ತೇವೋ1

ನಾವು ಎಂದಿಗೂ ಯಾವ ಸನ್ನಿವೇಶದಲ್ಲಿಯೂ ಗುಣುಗುಟ್ಟದೇ ಯಾವಾಗಲೂ ಎಲ್ಲಾ ವಿಷಯಗಳಲ್ಲಿಯೂ ಕೃತಜ್ಞತೆಯುಳ್ಳವರಾಗಿರುವವರೆಂದು ನಮ್ಮನ್ನು ದೇವರು ಧೈರ್ಯವಾಗಿ (ಭರವಸೆಯಿಂದ) ಸೈತಾನನಿಗೆ ನಮ್ಮನ್ನು ತೋರಿಸುವರೋ1

ಅಧ್ಯಾಯ 6
ಅಬ್ರಹಾಮನ ಪರೀಕ್ಷೆ

ದೇವರು ಅಬ್ರಹಾಮನನ್ನು ಕರೆದು 50 ವರ್ಷಗಳ ನಂತರ ಒಂದು ದಿನ ಅಬ್ರಹಾಮನ ಜೀವಿತದಲ್ಲಿ ಈ ಯೋಗ್ಯತಾ ಪತ್ರವನ್ನು ಕೊಟ್ಟರು: ನೀನು ದೇವರಿಗೆ ಭಯಪಡುವವನೆಂದು ಈಗ ನನಗೆ ಗೊತ್ತಾಯಿತು (ಆದಿ 22:12).

ಇದು ಅಗ್ಗವಾದ ಬೈಬಲ್ ಕಾಲೇಜಿನ ಪದವಿಯಾಗಲೀ ಅಥವಾ ಡಾಕ್ಟರೇಟ್ ಪದವಿಯಾಗಲೀ ಆಗಿರಲಿಲ್ಲ ! ಇಂದಿನ ಅನೇಕ ಕ್ರೈಸ್ತರು ಇಂಥಹ ಅಗ್ಗವಾದ ಪತ್ರಗಳಿಗೆ ಹಂಬಲಿಸುವಂತೆ ಅಬ್ರಹಾಮನು ಇವುಗಳಿಗಾಗಿ ಕಿಂಚಿತ್ತಾದರೂ ಅಪೇಕ್ಷಿಸಲಿಲ್ಲ. ಅವನಿಗೆ ನೈಜವಾದುದು ಬೇಕಾಗಿತ್ತು. ಅದೇನೆಂದರೆ, ತನ್ನ ಜೀವಿತದಲ್ಲಿ ದೇವರ ಮೆಚ್ಚುಗೆಯ ಪತ್ರ. ಅದು ಆತನಿಗೆ ದೊರಕಿತು.

ಮೋರಿಯ ಬೆಟ್ಟದ ಮೇಲಿನ ಪದವಿಯ ದಿನವು ಅಬ್ರಹಾಮನಿಗೆ ಸರಳವಾಗಿ ದೊರಕಲಿಲ್ಲ! ಆದರೆ ದೇವರ ಆ ಮಾತುಗಳನ್ನು ಕೇಳುವುದಕ್ಕೆ ಅಬ್ರಹಾಮನು ಪಟ್ಟ ಪ್ರಯಾಸವೆಲ್ಲವೂ ಪ್ರಯೋಜನಕರವಾದದ್ದೇ.

ದೇವರು ತನ್ನ ಯೋಗ್ಯತಾ ಪತ್ರಗಳನ್ನು ಸುಲಭವಾಗಿ ಕೊಡುವುದಿಲ್ಲ. ಅಬ್ರಹಾಮನನ್ನು 50 ವರ್ಷಗಳವರೆಗೆ ಪರೀಕ್ಷಿಸಿದ ನಂತರ ದೇವರು ಅದನ್ನು ಅವರಿಗೆ ಕೊಟ್ಟರು.

ನಜರೇತಿನಲ್ಲಿ ಯೇಸುವನ್ನು 30 ವರ್ಷಗಳ ಪರೀಕ್ಷಿಸಿದ ನಂತರ ತಂದೆಯು (ಪಿತ ದೇವರು) ಬಹಿರಂಗವಾಗಿ ತನ್ನ ಮೆಚ್ಚುಗೆಯನ್ನು ತೋರ್ಪಡಿಸಿದರು.

ಮೊದಲನೆಯ ಪರೀಕ್ಷೆ

ಅಬ್ರಹಾಮನು ೭೫ ವರ್ಷದವನಾಗಿರುವಾಗ ದೇವರು ಅವನ ಸ್ವಂತ ಸ್ಥಳವಾದ ಕಲ್ದೀಯರ ಊರ್ ಎಂಬ ಪಟ್ಟಣವನ್ನು ಬಿಟ್ಟು ದೇವರಲ್ಲಿ ಭರವಸೆಯಿಟ್ಟು ಅವನು ಗೊತ್ತಿಲ್ಲದ ಸ್ಥಳಕ್ಕೆ ಮುನ್ನಡೆಯಲು ಕರೆದರು. ಹೀಗೆ ಅವನ ಮೊದಲನೆಯ ಪರೀಕ್ಷೆಯಲ್ಲಿ ಅವನು ಉತ್ತೀರ್ಣನಾದನು. ತಂದೆ, ತಾಯಿ, ಸಹೋದರ ಮತ್ತು ಸಹೋದರಿಯರ ಸಂಬಂಧವನ್ನು ಕಡಿಯುವುದು ಸುಲಭವಲ್ಲ. ಆದರೆ ನಮ್ಮನ್ನು ಇವರಿಗೆ ಕಟ್ಟಿರುವ ಹೊಕ್ಕಳು ಹುರಿಯನ್ನು ಕತ್ತರಿಸುವವರೆಗೆ ನಾವು ಯೇಸುವಿನ ಶಿಷ್ಯರಾಗಲಾರೆವು.

ಯೇಸು ಲೂಕ 14:26 ರಲ್ಲಿ ಹೇಳಿದ್ದು. ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು - ಇವರೆಲ್ಲವನ್ನೂ, ತನ್ನ ಪ್ರಾಣವನ್ನೂ ದ್ವೇಷಿಸದಿದ್ದರೆ, ಅವನ ನನ್ನ ಶಿಷ್ಯನಾಗಲಾರನು.

ಅಬ್ರಹಾಮನು ದೇವರಿಗೆ ತಕ್ಷಣ ವಿಧೇಯನಾದನು.

ದೇವರ ಕರೆಯನ್ನು ಅಬ್ರಹಾಮನು ಅಲಕ್ಷಿಸಿದ್ದರೆ, ಏನಾಗುತ್ತಿತ್ತೆಂದು ನಾನು ಕೆಲವು ಸಲ ಯೋಚಿಸಿದ್ದೇನೆ. ದೇವರು ಖಂಡಿತ ಅವನನ್ನು ಒತ್ತಾಯಿಸುತ್ತಿರಲಿಲ್ಲ. ದೇವರು ಬೇರೆ ವ್ಯಕ್ತಿಯೊಬ್ಬನನ್ನು ಆರಿಸಿಕೊಳ್ಳುತ್ತಿದ್ದರು. ನಾವು ಅಬ್ರಹಾಮನ ಬಗ್ಗೆ ಮತ್ತೆ ಕೇಳುತ್ತಿರಲೇ ಇಲ್ಲ. ದೇವರ ಕರೆಗೆ ಕಿವಿಗೊಡುವ ಮತ್ತೊಬ್ಬ ವ್ಯಕ್ತಿಯು ನಂಬಿಕೆಯ ಪಿತ ಹಾಗೂ ಮೆಸ್ಸೀಯನ ಪೂರ್ವಿಕನಾಗಿರುತ್ತಿದ್ದನು! ಆ ಮೊದಲನೆಯ ಪರೀಕ್ಷೆಯಲ್ಲಿ ಅಬ್ರಹಾಮನು ಅನುತ್ತೀರ್ಣನಾಗುತ್ತಿದ್ದರೆ, ಆತನು ಎಷ್ಟೊಂದು ನಷ್ಟ ಪಡುತ್ತಿದ್ದನು! ಊರ್ ದೇಶವನ್ನು ಬಿಟ್ಟು ತನ್ನ ಬಂಧುಗಳ ಬೇಡಿಕೆಗಳಿಗೆ ಕಿವಿಗೊಡದೆ ಅವನು ಹೊರಟಾಗ ದೇವರು ಎಂಥಹ ಅದ್ಭುತವಾದ ಭವಿಷ್ಯವನ್ನು ಅವನಿಗೋಸ್ಕರ ಯೋಜಿಸಿದ್ದನೆಂದು ಅವನಿಗೆ ತಿಳಿದಿರಲಿಲ್ಲ.

ಅಬ್ರಹಾಮನನ್ನು ಕರೆದಂತೆಯೇ ಇಂದೂ ದೇವರು ಜನರನ್ನು ಕರೆಯುತ್ತಾನೆ. ಕರೆಯಲ್ಪಡುವ ಆ ಜನರು, ದೇವರು ಅವರಿಗೋಸ್ಕರ ಇಟ್ಟಿರುವುವುಗಳನ್ನು ಅರಿಯದವರಾಗಿದ್ದಾರೆ. ಈ 20 ಶತಮಾನಗಳ ಸಭೆಯ ಇತಿಹಾಸದಲ್ಲಿ ದೇವರ ಕರೆಗೆ ತಕ್ಷಣ, ಸಂತೋಷದಿಂದ ಹೃತ್ಪೂರ್ವಕವಾಗಿ ಅಬ್ರಹಾಮನಂತೆ ವಿಧೇಯರಾಗಿ ದೇವರ ಉದ್ದೇಶಗಳನ್ನು ನೆರವೇರಿಸಿದವರ ವಿಸ್ಮಯಕರವಾದ ಕಥೆಗಳಿವೆ.

ಇನ್ನು ಅನೇಕರು ದೇವರ ಕರೆಯನ್ನು ಅಲಕ್ಷಿಸಿ ತಮ್ಮ ಜೀವನವನ್ನು ವ್ಯರ್ಥಮಾಡಿಕೊಂಡಿರುವುದು ನಿತ್ಯತ್ವದಲ್ಲಿ ನಮಗೆ ಗೋಚರವಾಗುವುದು. ಕರೆಯಲ್ಪಟ್ಟವರಲ್ಲಿ ತಪ್ಪಾದ ಆಯ್ಕೆಯನ್ನು ಮಾಡಿಕೊಂಡವರಲ್ಲಿ ಯೇಸುವಿನಿಂದ ದೂರವಾಗಿ, ತನ್ನ ಸಂಪತ್ತನ್ನು ಭದ್ರವಾಗಿ ಅಪ್ಪಿಕೊಂಡ ಶ್ರೀಮಂತ ಯುವ ಅಧಿಕಾರಿಯು ಒಬ್ಬನು.

ದೇವರಿಂದ ಕರೆಯಲ್ಪಟ್ಟವರು ಸಾಮಾನ್ಯವಾಗಿ ಕಂಡುಕೊಳ್ಳುವುದೇನೆಂದರೆ, ದೇವರ ಕರೆಗೆ ಓಗೊಡಲು ಮೊದಲ ಹಾಗೂ ದೊಡ್ಡ ತಡೆಯು ತಮ್ಮ ಪ್ರಾಪಂಚಿಕವಾದ ಮತ್ತು ರಕ್ಷಣೆ ಹೊಂದಿರದ ತಮ್ಮ ಬಂಧುಗಳಿಂದ ಬರುತ್ತದೆ ಎಂಬುದಾಗಿ. ಆದ್ದರಿಂದಲೇ ಯೇಸುವು ಶಿಷ್ಯತ್ವದ ಮೊದಲನೇ ನಿಭಂದನೆ ತಂದೆ-ತಾಯಿಯವರನ್ನು ದ್ವೇಷಿಸುವುದು ಎಂದು ಹೇಳಿದನು.

ಅಬ್ರಹಾಮನು ಈ ಪರೀಕ್ಷೆಯನ್ನು - ಮೊದಲನೆಯ ಹೆಜ್ಜೆಯಲ್ಲಲ್ಲದಿದ್ದರೂ ನಂತರ ಪಾಸಾದನು. ಊರ್ ದೇಶದಿಂದ ಹೊರಬರುವಾಗ ಅಬ್ರಹಾಮನ ತಂದೆಯು ಅವನೊಂದಿಗೆ ಬಂದನು. ಅವನು ಮಧ್ಯ ದಾರಿಯಲ್ಲಿ ಖಾರಾನಿನಲ್ಲಿ ತಂಗುವಂತೆ ಅಬ್ರಹಾಮನಿಗೆ ಮನ ಒಲಿಸಿದನು.

ತೆರಹನು ತನ್ನ ಮಗನಾದ ಅಬ್ರಹಾಮನನ್ನು, ತನಗೆ ಮೊಮ್ಮಗ್ನೂ ಹಾರಾನನಿಗೆ ಮಗನೂ ಆಗಿರುವ ಲೋಟನನ್ನೂ, ತನಗೆ ಸೊಸೆಯೂ ಅಬ್ರಹಾಮನಿಗೆ ಹೆಂಡತಿಯೂ ಆಗಿರುವ ಸಾರಯಳನ್ನು ಕರಕೊಂಡು ಕಾನಾನ್ ದೇಶಕ್ಕೆ ಹೋಗಬೇಕೆಂದು ಕಲ್ದೀಯರ ಊರ್ ಎಂಬ ಪಟ್ಟಣವನ್ನು ಬಿಟ್ಟನು. ಅವರು ಖಾರಾನ್ ಪಟ್ಟಣಕ್ಕೆ ಬಂದು ಅಲ್ಲೇ ವಾಸ ಮಾಡಿದರು(ಆದಿ11:31).

ದೇವರು ಕರುಣೆಯಿಂದ ಅಬ್ರಹಾಮನ ತಂದೆಯನ್ನು ಮರಣದ ಮೂಲಕ ತೆಗೆದುಕೊಂಡನು. ಇದರ ಮೂಲಕ ಅದರ ನಂತರ ಅಬ್ರಹಾಮನಿಗೆ ಯಾವ ಅಡೆತಡೆಗಳೂ ಬರಲಿಲ್ಲ. ನಂತರ ಅಬ್ರಹಾಮನು ಕಾನಾನಿಗೆ ಹೊರಟನು.

ನಮ್ಮ ಬಂಧುಗಳ ಮೇಲೆ ನಮಗೆ ಇರುವ ಪ್ರೀತಿಯು ನಮಗೆ ಪ್ರಮುಖವಾದ ಸಂಗತಿಯಾಗಿರುವ ದೇವರ ಉದ್ದೇಶವನ್ನು ತಡೆಗಟ್ಟಲು ಎಂದಿಗೂ ಬಿಡಬಾರದು.

400 ವರ್ಷಗಳ ನಂತರ ಇಸ್ರಾಯೇಲರು ಬಂಗಾರದ ಬಸವನನ್ನು ಆರಾಧಿಸಲು ತೊಡಗಿದಾಗ ಲೇವಿಯ ಮಕ್ಕಳು ತಮ್ಮ ಬಂಧುಗಳ ವಿರೋಧವಾಗಿ ಇದೇ ನಿಲುವನ್ನು ತೆಗೆದುಕೊಳ್ಳಬೇಕಾಯಿತು.

ಮೋಶೆಯು ಬೆಟ್ಟದ ಮೇಲಿಂದ ಕೆಳಗೆ ಬಂದು, ಯೆಹೋವನ ಪಕ್ಷದವರೆಲ್ಲರೂ ನನ್ನ ಬಳಿಗೆ ಬರಬೇಕು (ವಿಮೋ 32:26) ಎಂದು ಹೇಳಿದಾಗ ಲೇವಿಯ ಕುಲದವರೆಲ್ಲರೂ ತಕ್ಷಣ ಅವನ ಬಳಿಗೆ ಬಂದರು. ಅವರು ಪಾಳೆಯದೊಳಕ್ಕೆ ಹೋಗಿ ಎಲ್ಲ ವಿಗ್ರಹಾರಾಧಕರನ್ನು, ತಮ್ಮ ಬಂಧುಗಳನ್ನೂ ಸಹ ಲೆಕ್ಕಿಸದೆ, ಎಲ್ಲರನ್ನೂ ಕತ್ತಿಯಿಂದ ಸಂಹರಿಸಬೇಕೆಂದು ಆಜ್ಞಾಪಿಸಲ್ಪಟ್ಟರು. ಲೇವಿಯ ಕುಲದವರು ಇದನ್ನು ಯಾವುದೇ ಹಿಂಜರಿಕೆಯಿಲ್ಲದೆ ನೆರವೇರಿಸಿದರು.

ನಂತರ ಅವರ ಕೃತ್ಯದ ವಿಷಯದಲ್ಲಿ ಮೋಶೆಯು ಹೀಗೆ ಹೇಳುತ್ತಾನೆ. (ಲೇವಿಯ ಕುಲದವರು) ನಿನ್ನ ಆಜ್ಞೆಯನ್ನು ಅನುಸರಿಸುತ್ತಾ ನಿನ್ನ ನಿಭಂದನೆಯನ್ನು ಕೈಗೊಳ್ಳುವವರಾಗಿ ತಾಯಿ-ತಂದೆಯವರನ್ನು ಪರಿಚಯವಿಲ್ಲವೆಂದೂ, ಅಣ್ಣ-ತಮ್ಮಂದಿರನ್ನು ಅರಿಯದಿರುವೆವೆಂದೂ, ಸ್ವಂತ ಮಕ್ಕಳನ್ನು ಗುರುತಿಲ್ಲವೆಂದೂ ಹೇಳಿಬಿಟ್ಟರಲ್ಲಾ. (ಆದ್ದರಿಂದ) ಅವರು ಯಾಕೋಬ್ ವಂಶದವರಿಗೆ ನಿನ್ನ ನಿರ್ಣಯಗಳನ್ನು ತಿಳಿಸುವರು(ಧರ್ಮೋ. 33:9-10).

ಆ ದಿನದಲ್ಲಿ ದೇವರು ತನ್ನ ಯಾಜಕರಾಗಲು ಯಾರು ಯೋಗ್ಯರೆಂದು ಪರೀಕ್ಷಿಸುತ್ತಿದ್ದಾನೆಂದು ಇಸ್ರಾಯೇಲರಿಗೆ ತಿಳಿದಿರಲಿಲ್ಲ. ಆದರೆ ಲೇವಿಯವರು ಅರ್ಹರಾದರು. ಆದ್ದರಿಂದ ದೇವರು ಅವರನ್ನು ತನ್ನ ಯಾಜಕರನ್ನಾಗಿ ಮಾಡಿದನು. ಇದು ಪಕ್ಷಪಾತವಲ್ಲ. ಇಸ್ರಾಯೇಲಿನ ಎಲ್ಲಾ ಹನ್ನೆರಡು ಕುಲದವರನ್ನೂ ದೇವರು ಪರೀಕ್ಷಿಸಿದರು. ಆದರೆ ಲೇವಿಯ ಕುಲದವರು ಮಾತ್ರ ಆ ಪರೀಕ್ಷೆಯಲ್ಲಿ ಪಾಸಾದರು.

ಎರಡನೇ ಪರೀಕ್ಷೆ

ಅಬ್ರಹಾಮನು ತನ್ನ ಬಂಧುಗಳಿಂದ ಬಿಡುಗಡೆಯಾದ ಮೇಲೆ ದೇವರು ಅವನನ್ನು ಪ್ರಾಪಂಚಿಕ ವಸ್ತುಗಳ ಮೂಲಕ ಪರೀಕ್ಷಿಸಬೇಕಾಯಿತು. ಶಿಷ್ಯತ್ವಕ್ಕೆ ಇದೂ ಸಹ ಅತ್ಯವಶ್ಯವಾಗಿದೆ.

ಯೇಸುವು ಹೇಳಿದ್ದೇನೆಂದರೆ, ಯಾವನೇ ಆಗಲಿ, ತನಗಿರುವುದನ್ನೆಲ್ಲಾ ಬಿಟ್ಟುಬಿಡದೆ ಹೋದರೆ, ಅವನು ನನ್ನ ಶಿಷ್ಯನಾಗಲಾರನು (ಲೂಕ 14:33).

ಆದಿಕಾಂಡ 13 ಮತ್ತು 14 ನೇ ಅಧ್ಯಾಯಗಳಲ್ಲಿನ ಎರಡು ಘಟನೆಗಳಲ್ಲಿ ಅಬ್ರಹಾಮನು ಹಣದ ವಿಷಯದಲ್ಲಿ ಪರೀಕ್ಷಿಸಲ್ಪಟ್ಟಿದ್ದನ್ನು ನಾವು ಓದುತ್ತೇವೆ. ಮೊದಲನೆಯ ಸಾರಿ, ಲೋಟನೂ ಅಬ್ರಹಾಮನೂ ತಮ್ಮ ಆಸ್ತಿ (ಜಮೀನು) ವಿಸ್ತರಿಸಿ ಒಟ್ಟಿಗೆ ಇರಲಾರದೇ ಬೇರ್ಪಡಬೇಕಾದ ಸಮಯ ಬಂದಿತು. ಹಿರಿಯನೂ ಮತ್ತು ದೇವರಿಂದ ಕರೆಯಲ್ಪಟ್ಟವನೂ ಆಗಿದ್ದುದರಿಂದ ಅಬ್ರಹಾಮನು ಮೊದಲು ಜಮೀನನ್ನು ಆಯ್ದುಕೊಳ್ಳುವುದು ಸುಲಭವೂ ಮತ್ತು ಅವನ ಹಕ್ಕೂ ಆಗಿತ್ತು. ಆದರೆ ನಿಜವಾದ ನಿಸ್ವಾರ್ಥ ಮನೋಭಾವದಿಂದ ಮತ್ತು ವಿಶಾಲ ಹೃದಯದವನಾಗಿ ಆತನು ಲೋಟನಿಗೆ ಮೊದಲು ಜಮೀನನ್ನು ಆರಿಸಲು ಬಿಟ್ಟನು. ಲೋಟನು ಮನುಷ್ಯನ ದೃಷ್ಟಿಯಲ್ಲಿ ಅತ್ಯುತ್ತಮವಾದುದನ್ನು - ಸೊದೋಮ ಪ್ರದೇಶವನ್ನು ಆರಿಸಿಕೊಂಡನು.

ಆದರೆ, ದೇವರು ಇದಕ್ಕೆ ಮೌನವಾಗಿ ಸಾಕ್ಷಿಯಾಗಿದ್ದನೆಂದು ಅಬ್ರಹಾಮನಿಗಾಗಲೀ ಅಥವಾ ಲೋಟನಿಗಾಗಲೀ ಗೊತ್ತಿರಲಿಲ್ಲ. ದೇವರು ನಮ್ಮ ಹಣಕಾಸಿನ ವಿಷಯದಲ್ಲಿಯೂ ನಮ್ಮ ಸಾಕ್ಷಿಯಾಗಿದ್ದಾರೆ. ಅಬ್ರಹಾಮನ ನಿಸ್ವಾರ್ಥತೆಯನ್ನು ದೇವರು ಬಹಳವಾಗಿ ಮೆಚ್ಚಿ ತಕ್ಷಣವೇ ಆತನೊಂದಿಗೆ ಮಾತನಾಡಿ, ಆತನ ಸಂತತಿಗೆ ಅಬ್ರಹಾಮನು ನಾಲ್ಕೂ ದಿಕ್ಕುಗಳಲ್ಲಿ ನೋಡುವ ದೇಶಗಳನ್ನೆಲ್ಲಾ ಕೊಡುತ್ತೇನೆಂದು ಹೇಳಿದನು. ಇದರಲ್ಲಿ ಲೋಟನು ಆರಿಸಿಕೊಂಡ ಪ್ರದೇಶವೂ ಸೇರಿತ್ತು.

ಲೋಟನು ಅಬ್ರಾಮನನ್ನು ಬಿಟ್ಟು ಬೇರೆಯಾದ ನಂತರ ಯೆಹೋವನು ಅಬ್ರಾಮನಿಗೆ - ನೀನಿರುವ ದಕ್ಷಿಣೋತ್ತರ ಪೂರ್ವ ಪಶ್ಚಿಮಗಳಿಗೆ ಕಣ್ಣೆತ್ತಿ ನೋಡು. ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು (ಆದಿ 14:14, 15).

ಇಂದು 4000 ವರ್ಷಗಳ ನಂತರ, ದೇವರು ತನ್ನ ಮಾತನ್ನು ನೆರವೇರಿಸಿದ್ದನ್ನು ನಾವು ನೋಡುತ್ತೇವೆ. ಅಬ್ರಹಾಮನಿಗೆ ದೇವರು ಕೊಟ್ಟ ಆ ದೇಶದಲ್ಲಿ ಅಬ್ರಹಾಮನ ಸಂತತಿಯವರು (ಯೆಹೂದ್ಯರು) ಜೀವಿಸುತ್ತಿದ್ದಾರೆ. ಲೋಟನ ಸಂತತಿಯವರು (ಕೆಲ ಅರಬ್ಬರು) ಅವರ ಪಿತೃವಾದ ಲೋಟನು ಕಸಿದುಕೊಂಡ ದೇಶವನ್ನು ಕಳೆದುಕೊಂಡಿದ್ದಾರೆ. ಇವು ದೇವರ ಮಾರ್ಗಗಳು. ದೀನರು ಭೂಮಿಗೆ ಬಾಧ್ಯರಾಗುವರು.

ಆದಿಕಾಂಡ 14 ರಲ್ಲಿ ದೇವರ ನಿಜವಾದ ಸೇವಕನು ಯಾವ ಘನತೆಯಿಂದ ವರ್ತಿಸಬೇಕೋ, ಆ ರೀತಿಯಲ್ಲಿ ಪ್ರಾಪಂಚಿಕ ವಸ್ತುಗಳ ವಿಷಯದಲ್ಲಿಯೂ ಅಬ್ರಹಾಮನು ವರ್ತಿಸುವುದನ್ನು ನಾವು ನೋಡುತ್ತೇವೆ. ಸೊದೋಮಿನ ಅರಸನ ಆಸ್ತಿಯನ್ನೂ, ಜನರನ್ನೂ ಅವರ ವೈರಿಗಳಿಂದ ಅಬ್ರಹಾಮನು ಬಿಡುಗಡೆಗೊಳಿಸಿದನು. ಅದಕ್ಕೆ ಬಹುಮಾನವಾಗಿ ಸೊದೋಮಿನ ಅರಸನು ಅಬ್ರಹಾಮನಿಗೆ ಎಲ್ಲಾ ಆಸ್ತಿಯನ್ನು ಇಟ್ಟುಕೊಳ್ಳಲು ಹೇಳಿದಾಗ, ಅಬ್ರಹಾಮನು ಯಾವುದನ್ನೂ ಇಟ್ಟುಕೊಳ್ಳಲು ನಿರಾಕರಿಸಿದನು.

ಒಂದು ದಾರವನ್ನಾಗಲಿ, ಕೆರದಬಾರನ್ನಾಗಲಿ, ನಿನ್ನದರಲ್ಲಿ ಯಾವುದನ್ನೂ ತೆಗೆದುಕೊಳ್ಳುವುದಿಲ್ಲವೆಂದು ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರ ದೇವರಾಗಿರುವ ಯೆಹೋವನ ಕಡೆಗೆ ಕೈಯೆತ್ತಿ ಪ್ರಮಾಣ ಮಾಡುತ್ತೇನೆ. ಅಬ್ರಹಾಮನು ನನ್ನ ಸೊತ್ತಿನಿಂದಲೇ ಐಶ್ವರ್ಯವಂತನಾದನೆಂದು ಹೇಳಿಕೊಳ್ಳುವುದಕ್ಕೆ ನಿನಗೆ ಆಸ್ಪದವಾಗಬಾರದು (ಆದಿ. 14:22,23).

ಅಬ್ರಹಾಮನ ಮಾತಿನ ತಾತ್ಪರ್ಯವೇನಾಗಿತ್ತೆಂದರೆ, ನನ್ನ ದೇವರು ಭೂಮಿ-ಆಕಾಶಗಳ ಒಡೆಯನಾಗಿರುವುದರಿಂದ ನಿನ್ನಿಂದ ನನಗೇನೂ ಬೇಕಿಲ್ಲ.

ದೇವರು ಮೌನವಾಗಿ ಈ ಸಂಭಾಷಣೆಯನ್ನು ಕೇಳುತ್ತಿದ್ದರು. ತಕ್ಷಣವೇ ದೇವರು ಅಬ್ರಹಾಮನಿಗೆ ಕಾಣಿಸಿಕೊಂಡು ತಾನೇ ಸ್ವತ: ಅವನಿಗೆ ಬಹುಮಾನ ಕೊಡುತ್ತೇನೆಂದು ಹೇಳಿದನು.

ಈ ಸಂಗತಿಗಳು ನಡೆದ ಮೇಲೆ ಅಬ್ರಹಾಮನಿಗೆ ದರ್ಶನದಲ್ಲಿ ಯೆಹೋವನ ವಾಕ್ಯವುಂಟಾಯಿತು. ಅದೇನೆಂದರೆ, ಅಬ್ರಹಾಮನೇ ಭಯಪಡಬೇಡ. ನಾನು ನಿನಗೆ ಗುರಾಣಿಯಾಗಿದ್ದೇನೆ; ನಿನಗೋಸ್ಕರ ಅತ್ಯಧಿಕ ಬಹುಮಾನವು ಇಟ್ಟಿದೆ (ಆದಿ 15:1).

ನಾವು ದೇವರನ್ನು ಗೌರವಿಸಿದರೆ, ಆತನು ನಮ್ಮನ್ನು ಗೌರವಿಸುವನು.

ಆದಾಮನ ಮಕ್ಕಳು ಕಸಿದುಕೊಳ್ಳುವುದರಲ್ಲಿ ನಿಪುಣರು. ಬಲಾತ್ಕಾರದಿಂದಲ್ಲದಿಂದರೂ, ಇಂತಹ ವಸ್ತುಗಳು ಉಚಿತವಾಗಿ ಅರ್ಪಿಸಲ್ಪಟ್ಟಾಗ, ಹಣಕಾಸಿನ ವಿಷಯಗಳಲ್ಲಿಯೂ ಅವುಗಳ ಬಗೆಗಿನ ಸಂಭಾಷಣೆಗಳಲ್ಲಿಯೂ ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾನೆಂದು ನಾವು ಅನೇಕ ಸಲ ತಿಳಿದುಕೊಳ್ಳುವುದಿಲ್ಲ. ಇಂಥಹ ವಿಷಯಗಳಲ್ಲಿ ನಾವು ಹೇಗೆ ನಡೆದುಕೊಳ್ಳುತ್ತೇವೋ, ಅದರೆ ಮೇಲೆ ದೇವರು ತನ್ನ ರಾಜ್ಯದಲ್ಲಿಯೂ, ಮತ್ತು ಭೂಮಿಯಲ್ಲಿ ಉಳಿದಿರುವ ಆತನ ಸೈನ್ಯದಲ್ಲಿಯೂ ನಮಗೆ ಸ್ಥಳವನ್ನು ನಿಶ್ಚಯಿಸುತ್ತಾನೆ.

ಮೂರನೆಯ ಪರೀಕ್ಷೆ

ಅಬ್ರಹಾಮನು ತನ್ನ ಕುಟುಂಬದ (ಹೆತ್ತವರ) ಹಾಗೂ ಆಸ್ತಿಯ ವಿಷಯಗಳಲ್ಲಿ ಪರೀಕ್ಷಿಸಲ್ಪಟ್ಟಿದ್ದನು. ಈಗ ಆತನ ಮಗನ ವಿಷಯದಲ್ಲಿ ಆತನು ಪರೀಕ್ಷಿಸಲ್ಪಡಬೇಕಾಯಿತು.

ದೇವರ ಮೆಚ್ಚುಗೆಯ ಅರ್ಹತಾ ಪತ್ರವನ್ನು ಪಡೆಯುವ ಮುನ್ನ ಇದು ಅವನ ಕೊನೆಯ ಪರೀಕ್ಷೆಯಾಗಿತ್ತು.

ಇಸಾಕನನ್ನು ಯಜ್ಞವಾಗಿ ಅರ್ಪಿಸು ಎಂದು ದೇವರು ಅಬ್ರಹಾಮನಿಗೆ ಹೇಳಿದಾಗ ಅವನಿಗೆ 125 ವರ್ಷ ವಯಸ್ಸಾಗಿತ್ತು. ಆಗಲೇ ಅವನು ದೇವರ ಮನುಷ್ಯನೆಂದು ಜನರ ಮಧ್ಯೆ ಪರಿಚಿತನಾಗಿದ್ದನು. ಆದಿಕಾಂಡ 21:22 ರಲ್ಲಿ ಆ ಕಾಲದಲ್ಲಿ, ಅಬಿಮಲೇಕನು ತನ್ನ ಸೇನಾಪತಿಯಾದ ಫಿಕೋಲನ ಸಮೇತ ಅಬ್ರಹಾಮನಿಗೆ ನೀನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾನೆ ಎಂದು ಹೇಳಿದ್ದನ್ನು ಓದುತ್ತೇವೆ.

ಆದರೆ ನಮ್ಮ ಬಗ್ಗೆ ಇತರಿರುಕೊಂಡಿರುವ ಒಳ್ಳೆಯ ಅಭಿಪ್ರಾಯವನ್ನು ದೇವರು ಪರಿಗಣಿಸುವುದಿಲ್ಲ. ದೇವರು ತಾನೇ, ಸ್ವತ: ಅಬ್ರಹಾಮನನ್ನು ಪರೀಕ್ಷಿಸಲು ಬಯಸಿದರು. ಆದ್ದರಿಂದ ಆ ರಾತ್ರಿ ದೇವರು ಅಬ್ರಹಾಮನೊಂದಿಗೆ ಮೌನವಾಗಿ ಮಾತಾಡಿದನು. ದೇವರು ಅವನೊಂದಿಗೆ ಮಾತಾಡಿದ್ದನ್ನು ಬೇರೆ ಯಾರೂ ಕೇಳಲಿಲ್ಲ. ಆದಿಕಾಂಡ 22:1 ರಲ್ಲಿ ನಾವು ಈ ರೀತಿ ಓದುತ್ತೇವೆ: ಈ ಸಂಗತಿಗಳಾದ ಮೇಲೆ (ಅಂದರೆ ಅಬಿಮಲೇಕನು ಅಬ್ರಹಾಮನು ದೈವಿಕ ಮನುಷ್ಯನೆಂದು ಪ್ರಮಾಣ ಪತ್ರವನ್ನು ಕೊಟ್ಟ ಮೇಲೆ) ದೇವರು ಅಬ್ರಹಾಮನನ್ನು ಪರಿಶೋಧಿಸಿದನು. ಹೇಗೆಂದರೆ, ಅತನು ಅವನನ್ನು, ಅಬ್ರಹಾಮನೇ, ಎಂದು ಕರೆಯಲು, ಅವನು, ಇಗೋ ಇದ್ದೇನೆ ಅಂದನು.

ಆ ರಾತ್ರಿ, ದೇವರು ಅವನಿಂದ, ಬಹಳ ಬೆಲೆಯುಳ್ಳದ್ದನ್ನು ಕೇಳಿದನು. ಮರುದಿನ ಅಬ್ರಹಾಮನು ಅದನ್ನು ಅಲಕ್ಷಿಸಿ ತನ್ನ ದೈನಂದಿನದ ಕಾರ್ಯಗಳಲ್ಲಿ ನಿರತನಾಗಿದ್ದರೆ, ಅವನು ದೇವರಿಗೆ ಅವಿಧೇಯನಾಗಿ ನಡೆದುಕೊಂಡದ್ದನ್ನು ಯಾರೂ ಕಂಡುಕೊಳ್ಳುತ್ತಿರಲಿಲ್ಲ. ಆ ರೀತಿಯಲ್ಲಿ, ಅಬ್ರಹಾಮನು ತನಗೆ ಭಯಪಡುತ್ತಾನೋ ಇಲ್ಲವೋ ಎಂದು ದೇವರು ಪರೀಕ್ಷಿಸಿದನು.

ಅದೇ ರೀತಿಯಾಗಿ ದೇವರು ನಮ್ಮನ್ನೂ ಪರೀಕ್ಷಿಸುವನು. ಆತನು ಗುಪ್ತವಾಗಿ ನಮ್ಮ ಹೃದಯದಲ್ಲಿ ಮಾತಾಡುತ್ತಾನೆ. ಎಷ್ಟು ಗುಪ್ತವಾಗಿ ಎಂದರೆ, ನಮ್ಮ ನಮ್ಮ ಜೊತೆಯಲ್ಲಿರುವ ಯಾರಿಗೂ ಅದು ತಿಳಿಯುವುದಿಲ್ಲ. ನಾವು ಆತನಿಗೆ ಭಯಪಡುತ್ತೆವೋ ಇಲ್ಲವೋ ಎಂಬುದನ್ನು ಪರೀಕ್ಷಿಸುವುದಕ್ಕೋಸ್ಕರ ದೇವರು ನಮ್ಮನ್ನು ಪ್ರತಿಯೊಬ್ಬನಿಗೆ ಏಕಾಂತವಾದ - ನಮ್ಮ ಯೋಚನಾ-ಕ್ಷೇತ್ರವನ್ನು ಕೊಟ್ಟಿದ್ದಾನೆ.

ಅಶುದ್ಧವಾದ, ದ್ವೇಷದ ಯೋಚನೆಗಳನ್ನು ನಾವು ನಮ್ಮಲ್ಲಿಟ್ಟುಕೊಂಡು ಇತರರಿಗೆ ಅವು ಗೋಚರವಾಗಬಾರದೆಂದು ನಾವು ವರ್ತಿಸುವುದಾದರೆ, ನಾವು ದೇವರಿಗೆ ಭಯಪಡದೇ ಮನುಷ್ಯನಿಗೆ ಭಯಪಡುತ್ತೇವೆನ್ನುವುದು ಸ್ಪಷ್ಟವಾಗಿ ರುಜುವಾಗುತ್ತದೆ. ದುರದೃಷ್ಟವಶಾತ್, ಇಂದು ಬಹಳಷ್ಟು ವಿಶ್ವಾಸಿಗಳ ಸ್ಥಿತಿಯು ಇಂಥದ್ದಾಗಿದೆ. ದೇವರು ಅವರನ್ನು ಪರೀಕ್ಷಿಸಿದಾಗ ಅವರು ನಾಪಾಸಾಗಿದ್ದಾರೆ.

ಯೋಸೇಫ಼ನ ಹಾಗೆ, ಗುಪ್ತವಾಗಿ ಲೈಂಗಿಕ ಕ್ಷೇತ್ರದಲ್ಲಿ ಪರೀಕ್ಷಿಸಲ್ಪಟ್ಟಾಗ, ನಾನು ಇಂಥಹ ಮಹಾ ದುಷ್ಕೃತ್ಯವನ್ನು ಮಾಡಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪ ಮಾಡಲಿ (ಆದಿ 39:9) ಎನ್ನುವವರು ಇಂದು ಎಷ್ಟು ವಿರಳವಾಗಿದ್ದಾರೆ. ಯೋಸೇಫ಼ನಂತಹ ಯುವಜನರೇ ದೇವರಿಂದ ಮೆಚ್ಚುಗೆಯ ಪ್ರಮಾಣ ಪತ್ರವನ್ನು ಪಡೆಯುವರು.

ತಮ್ಮ ಯೋಚನಾ-ಕ್ಷೇತ್ರದಲ್ಲಿ ಅಶುದ್ಧ ಲೈಂಗಿಕ ಯೋಚನೆಗಳಿಂದ ಪೂರ್ಣವಾಗಿ ಮುಕ್ತವಾಗಿರುವವರು ತುಂಬಾ ವಿರಳ. ಈ ಕೆಲವರ ಮೂಲಕ ದೇವರು ಸೈತಾನನಿಗೆ ತನ್ನ ಮಕ್ಕಳು ಇನ್ನೂ ಭೂಮಿಯಲ್ಲಿದ್ದು ತಮ್ಮ ಕಣ್ಣುಗಳಿಂದ ಪಾಪಮಾಡುವ ಬದಲು ಅವುಗಳನ್ನು ಕಿತ್ತು ಹಾಕುವವರೂ, ಕಾಮದ ಯೋಚನೆಗಳಲ್ಲಿ ಕಾಲ ಕಳೆಯುವ ಬದಲು, ಸಾಯುವುದಕ್ಕೆ ತಯಾರಿರುವವರೂ ಇದ್ದಾರೆಂದು ತೋರಿಸಬಲ್ಲನು. ಜೀವಕ್ಕೆ ಮಾರ್ಗವು ಇಕ್ಕಟ್ಟಾಗಿದ್ದು ಅದನ್ನು ಕಂಡುಕೊಳ್ಳುವವರು ಕೆಲವರು ಮಾತ್ರ. ಆದರೆ ಆಶ್ಚರ್ಯಕರವಾದ ವಿಷಯವೇನೆಂದರೆ, ಅಂಥಹ ಕೆಲವರು ಇನ್ನೂ ಈ ಭೂಮಿಯಲ್ಲಿ ಇದ್ದಾರೆ!

ಅಬ್ರಹಾಮನು ಪರೀಕ್ಷೆಯಲ್ಲಿ ಉತ್ತೀರ್ಣನಾದನು. ಆತನು ಜನರ ದೃಷ್ಟಿಯಲ್ಲಿ ಒಳ್ಳೆಯ ವ್ಯಕ್ತಿಯಾಗಲು ಅಪೇಕ್ಷಿಸಲಿಲ್ಲ. ತನ್ನ ಜೀವನದ ರಹಸ್ಯ ಕ್ಷೇತ್ರದಲ್ಲ್ಲೂ ಆತನು ದೇವರಿಗೆ ವಿಧೇಯನಾಗಲು ಬಯಸಿದನು. ಆದ್ದರಿಂದ ಮರುದಿನ ಬೆಳಿಗ್ಗೆ ಅವನು ಇಸಾಕನನ್ನು ಮೋರಿಯ ಬೆಟ್ಟಕ್ಕೆ ಕರಕೊಂಡು ಹೊರಟನು. ಅಲ್ಲಿ ತನ್ನ ಮುದ್ದು ಮಗನನ್ನು ದೇವರಿಗೆ ಅರ್ಪಿಸುವುತ್ತಿರುವುದರ ತಾತ್ಪರ್ಯವೇನಾಗಿತ್ತೆಂದರೆ, ಕರ್ತನೇ, ಭೂಮಿಯ ಮೇಲಿರುವ ಎಲ್ಲರಿಗಿಂತಲೂ, ಎಲ್ಲಾ ವಸ್ತುಗಳಿಗಿಂತಲೂ, ನಿನ್ನನ್ನು ನಾನು ಹೆಚ್ಚಾಗಿ ಪ್ರೀತಿಸುತ್ತೇನೆ.

ಆಗ ದೇವರು ಅವನನ್ನು ಮೆಚ್ಚಿ, ಅವನಿಗೆ ಹಿಡಿದಿಟ್ಟುಕೊಳ್ಳಲಾರದಷ್ಟು ಆಶೀರ್ವಾದಗಳನ್ನು ವಾಗ್ದಾನ ಮಾಡಿದನು. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯದೆ ಹೋದುದರಿಂದ, ನಾನು ನಿನ್ನನ್ನು ಅಶೀರ್ವದಿಸೇ ಅಶೀರ್ವದಿಸುವೆನು...ನಿನ್ನ ಸಂತತಿಯವರು ಶತ್ರುಗಳ ಪಟ್ಟಣಗಳನ್ನು ಸಾಧೀನ ಮಾಡಿಕೊಳ್ಳುವರು. ನೀನು ನನ್ನ ಮಾತುಗಳನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು (ಆದಿ 22:16-18).

ತ್ಯಾಗದಿಂದ ಕೂಡಿದ ವಿಧೇಯತೆಯಂತೆ ಬೇರಾವುದೂ ದೇವರನ್ನು ಅಷ್ಟಾಗಿ ಮೆಚ್ಚಿಸಲಾರದು.

ಶುದ್ಧ ಹೃದಯದಿಂದಿರುವುದು ಶುದ್ಧ ಯೋಚನೆಗಳಿಂದ ತುಂಬಿರುವುದಕ್ಕಿಂತಲೂ ಶ್ರೇಷ್ಟವಾದುದು (ಮತ್ತಾಯ 5:8). ದೇವರ ಹೊರತಾಗಿ ಬೇರೇನೂ ನಮ್ಮ ಹೃದಯದಲ್ಲಿ ಇಲ್ಲದಿರುವುದೇ ಶುದ್ಧ ಹೃದಯದಿಂದಿರುವುದಾಗಿದೆ. ಶುದ್ಧವಾದ, ಯಥಾರ್ಥ ಮನಸ್ಸಿನಿಂದ ಜೀವಿಸುವ ಅನೇಕರು ವಿಗ್ರಹಗಳಿಗಂಟಿಕೊಂಡಂತೆ ತಮ್ಮ ಕೆಲಸಕ್ಕೋ ಅಥವಾ ದೇವರ ಸೇವಾಕಾರ್ಯಕ್ಕೋ ಅಂಟಿಕೊಂಡಿರುತ್ತಾರೆ. ದೇವರು ಕೊಟ್ಟ ಇಸಾಕರನ್ನು ದೇವರಿಗೆ ಬಲಿಯನ್ನಾಗಿ ಅರ್ಪಿಸಲು ಅವರು ಕಲಿತಿಲ್ಲ.

ನಿನಗೆ ದೇವರು ಮತ್ತು ದೇವರ ವರ, ಸೇವಕಾರ್ಯ, ನಿನ್ನ ಬಗ್ಗೆ ಇತರರ ಒಳ್ಳೆಯ ಅಭಿಪ್ರಾಯ, ಆರೋಗ್ಯ ಅಥವಾ ಇನಾವುದಾದರೂ ಬೇಕೋ1 ನಿನಗೆ ದೇವರು ಮತ್ತು ಕೆಲ ಇಸಾಕರೂ ಜೊತೆಯಾಗಿ ಬೇಕೋ1 ಅಥವಾ ದೇವರು ಮಾತ್ರ ನಿನಗೆ ಸಾಕೋ1

ಈ ಪರೀಕ್ಷೆಯಲ್ಲಿ ಪಾಸಾಗದೇ ಇರುವ ಯಾರೊಬ್ಬನೂ ದೇವರಿಂದ ಮೆಚ್ಚುಗೆ ಪಡೆಯಲಾರನು. ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ1 ಇಹಲೋಕದಲ್ಲಿ ನಿನ್ನನ್ನಲ್ಲದೇ ಇನ್ನಾರನ್ನೂ ನಾನು ಬಯಸುವುದಿಲ್ಲ (ಕೀರ್ತನೆ 75:25). ಹೀಗೆ ಕೀರ್ತನೆಗಾರನು ಹೇಳಿದಂತೆ ಅಂಥಹ ಜೀವಿತವನ್ನು ಪಡೆದರೆ ಮಾತ್ರ, ನಾವು ದೇವರ ದೃಷ್ಟಿಯಲ್ಲಿ ಯೋಗ್ಯರಾದವರಾಗುತ್ತೇವೆ.

ಇದೇ ನಾವೆಲ್ಲರೂ ಹತ್ತಬೇಕಾದ ಮೋರಿಯ ಬೆಟ್ಟ. ಅಲ್ಲಿ ನಾವು ನಮಗೆ ಪ್ರಿಯವಾದದ್ದೆಲ್ಲವನ್ನು ಯಜ್ಞ ಪೀಠದ ಮೇಲೆ ಆತನಿಗರ್ಪಿಸುತ್ತೇವೆ. ಆಗ ದೇವರೇ ನಮಗೆ ಸರ್ವಸ್ವವಾಗಿರುವನು.

ನಮಗೆ ನಮ್ಮ ಕೆಲಸದಲ್ಲಿ ಸಂಬಳ ಹೆಚ್ಚಳ ಆದಾಗ, ಅಥವ ನಮಗೆ ಬಡ್ತಿ ಸಿಕ್ಕಾಗ ನಮ್ಮ ಆನಂದವು ಹೆಚ್ಚುವುದಾದರೆ, ಅಥವಾ ನಾವು ನಿರೀಕ್ಷಿಸಿದ ಬಡ್ತಿ ಅಥವಾ ಬಹುಮಾನ ನಮಗೆ ಸಿಗದೇ ಹೋದಾಗ, ನಮ್ಮ ಆನಂದವು ಕಡಿಮೆಯಾಗುವುದಾದರೆ, ನಮ್ಮ ಸಂತೋಷವು ದೇವರಲ್ಲಿಯೂ ಮತ್ತು ಇಹಲೋಕದ ವಸ್ತುಗಳ ಮೇಲೆಯೂ ಇದೆ ಎಂದು ಸ್ಪಷ್ಟವಾಗುತ್ತದೆ. ಆಗ ನಮ್ಮ ಆನಂದವನ್ನು ಖಂಡಿತವಾಗಿ ಶುದ್ಧೀಕರಿಸಿ ನಂತರ ಕರ್ತನಲ್ಲಿ ಮಾತ್ರ ಸಂತೋಷ ಪಡುವುದಕ್ಕೆ ನಾವು ಕಲಿಯುತ್ತೇವೆ. ನಮ್ಮ ಆನಂದವು ದೇವರಿಂದ ಮಾತ್ರ ಬರುವುದಾದರೆ, ಇಹಲೋಕದ ವಸ್ತುಗಳು ನಮಗೆ ದೊರಕಿದಾಗ, ಅದು ಹೆಚ್ಚಾಗುವುದಿಲ್ಲ ಅಥವಾ, ನಾವು ಇಹಲೋಕದ ವಸ್ತುಗಳನ್ನು ಕಳೆದುಕೊಂಡಾಗ ಅದು ಕಡಿಮೆಯಾಗುವುದಿಲ್ಲ.

ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ ಎಂದು ಫಿಲಿಪ್ಪಿ. 4:4 ನಮಗೆ ಆಜ್ಞಾಪಿಸುತ್ತದೆ.

ಅನೇಕ ವಿಶ್ವಾಸಿಗಳು ಯಾವಾಗಲೂ ಸಂತೋಷದಿಂದಿರದೆ ಇರುವುದಕ್ಕೆ ಕಾರಣ - ಬಹುಷ: ಅವರ ಆನಂದವು ದೇವರಲ್ಲಿ ಮಾತ್ರ ಕಂಡುಬಂದಿಲ್ಲ. ಅವರ ಆನಂದವು ದೇವರಲ್ಲಿ ಮತ್ತು ಬೇರೆ ಯಾವುದರಲ್ಲಿಯೋ ಇದೆ. ನಮ್ಮ ಹೃದಯವು ಶುದ್ಧವಾಗಿರುವಾಗ - ದೇವರಿಗೆ ಮಾತ್ರ ನಮ್ಮ ಹೃದಯದಲ್ಲಿ ಸ್ಥಳವಿರುವಾಗ, ನಮ್ಮ ಆನಂದವೂ ಶುಧ್ಧವಾಗಿರುತ್ತದೆ.

ದೇವರು ಅಬ್ರಹಾಮನನ್ನು ಸಂಪೂರ್ಣ ಸಮರ್ಪಣೆ ಎಂಬ ಸ್ಥಳಕ್ಕೆ ಹಂತ ಹಂತವಾಗಿ ನಡೆಸಿದರು. ದೇವರು ಆತನ ಮೂಲಕವಾಗಿ ಈ ಲೋಕದ ಎಲ್ಲಾ ಕುಲದವರನ್ನು ಅಶೀರ್ವದಿಸಲಿದ್ದನು. ಆತನು ಮೋರಿಯ ಬೆಟ್ಟದಿಂದಿಳಿದು ಬಂದ ನಂತರ ಆಶೀರ್ವಾದದ ಹೊಳೆಗಳು ಅಬ್ರಹಾಮನ ಜೀವಿತದಿಂದ ಹರಿಯಲಾರಂಬಿಸಿದವು. ಅಬ್ರಹಾಮನ ಅಶೀರ್ವಾದವು ನಮ್ಮದೂ ಆಗಬೇಕೆಂದು ದೇವರ ಉದ್ದೇಶವಾಗಿದೆ.

ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಕ್ರಿಸ್ತ ಯೇಸುವಿನಲ್ಲಿ ಅನ್ಯ ಜನರಿಗೆ ಉಂಟಾಗುವಂತೆಯೂ ದೇವರು ವಾಗ್ದಾನ ಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆ ... ಎಂದು ಗಲಾತ್ಯ ೩:೧೪ ಹೇಳುತ್ತದೆ.

ಈಗ ನಮ್ಮ ಮೂಲಕವಾಗಿ ಪವಿತ್ರಾತ್ಮನ ಆಶೀರ್ವಾದವಾಗಿರುವ ಜೀವಕರ ಹೊಳೆಗಳು ಇತರರಿಗೆ ಹರಿಯಬೇಕೆನ್ನುವುದೇ ದೇವರ ಆಶೆಯಾಗಿದೆ.

ಆದರೆ ನಮ್ಮಲ್ಲಿ ಅದಕ್ಕೆ ಬೆಲೆ ತೆರಬೇಕಾಗುವವರು ಎಷ್ಟು ಜನರಿದ್ದಾರೆ1

ದೇವರು ಪರೀಕ್ಷಿಸುವಾಗ ಎಷ್ಟು ಜನ ಪಾಸಾಗಿ ದೇವರಿಗೆ ಯೋಗ್ಯರಾಗುತ್ತಾರೆ?

ಅಧ್ಯಾಯ 7
ಮೋಶೆಯ ಪರೀಕ್ಷೆ

ದೇವರಿಂದ ಮೆಚ್ಚುಗೆಯ ಪ್ರಮಾಣ ಪತ್ರವನ್ನು ಪಡೆದುಕೊಂಡ ಇನ್ನೊಬ್ಬ ವ್ಯಕ್ತಿ ಮೋಶೆಯಾಗಿದ್ದನು. ಅವನ ವಿಷಯವಾಗಿ ದೇವರು ಹೀಗೆಂದರು: (ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನು (ಆರಣ್ಯಕಾಂಡ 12:7).

ಮೋಶೆಯ ಮರಣವಾದಾಗ ಹೀಗೆಂದು ಬರೆಯಲಾಗಿದೆ: (ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಬಳಿಕೆಯಾಗಿದ್ದನು (ಅವನನ್ನು ಅರಿತಿದ್ದನು) ...... ಇಂಥವನಿಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಈಚೆಗೆ ಇಸ್ರಾಯೇಲ್ಯರಲ್ಲಿ ಹುಟ್ಟಲೇ ಇಲ್ಲ(ಧರ್ಮೋಪದೇಶಕಾಂಡ 34:10-12).

ಮಾನವೀಯ ಜ್ಞಾನವನ್ನು ಗದ್ದುಗೆಯಿಂದ ಕೆಳಗಿಳಿಸುವುದು

ಮೋಶೆಯು ಓರ್ವ ಆತ್ಮಿಕ ನಾಯಕನಾದುದು ಆತನ ಮೊದಲ ನಲ್ವತ್ತು ವರ್ಷಗಳಲ್ಲಿ ಐಗುಪ್ತದ ಅರಮನೆಯಲ್ಲಿ ಕಲಿತ ವಿದ್ಯೆ ಅಥವಾ ಸೈನಿಕ ತರಬೇತಿಯ ಫಲವಾಗಿ ಅಲ್ಲ. ಅದು - ಮುಂದಿನ ನಲ್ವತ್ತು ವರ್ಷಗಳನ್ನು ಮೋಶೆಯು ಜನರಿಂದ ದೂರವಾಗಿ ಅರಣ್ಯದಲ್ಲಿ ಕುರಿ ಕಾಯುತ್ತಾ, ದೇವರಿಂದ ಮುರಿಯಲ್ಪಟ್ಟು, ತನ್ನ ’ಸ್ವಾವಲಂಬನೆ’, ’ಸ್ವಪ್ರತಿಷ್ಠೆ’ ಗಳನ್ನು ಬರಿದು ಮಾಡಿಕೊಂಡಾಗಲೇ ಆದುದು.

ಮೋಶೆಯ ಎಂಭತ್ತನೇ ವಯಸ್ಸಿನಲ್ಲಿ, ಸ್ವಪ್ರಯತ್ನದಿಂದ ಯಶಸ್ಸನ್ನು ಗಳಿಸುವ ಆತನ ಛಲವು ನುಚ್ಚುನೂರಾಗಿ, ದೇವರನ್ನು ಆತುಕೊಳ್ಳಲು ಆತನಿಗೆ ಸಾಧ್ಯವಾದಾಗಲೇ, ಆತನು ದೇವ ಜನರನ್ನು ಬಿಡುಗಡೆ ಮಾಡುವವನಾದನು.

ವಿಮೋಚನಾಕಾಂಡ 39 ನೇ ಮತ್ತು 40ನೇ ಅಧ್ಯಾಯಗಳಲ್ಲಿ, ಅರಣ್ಯದಲ್ಲಿ ದೇವದರ್ಶನದ ಗುಡಾರವನ್ನು ಕಟ್ಟುವ ಸಂದರ್ಭದಲ್ಲಿ, ನಾವು ಒಂದು ವಾಕ್ಯವನ್ನು ಪದೇ ಪದೇ 18 ಸಾರಿ ಬರೆದಿದ್ದನ್ನು ನೋಡುತ್ತೇವೆ, ಅದೆಂದರೆ ಯೆಹೋವನು ಆಜ್ಞಾಪಿಸಿದಂತೆ ಮೋಶೆ ಮಾಡಿದನು. ದೇವರು ಮೋಶೆಗೆ ಕೊಟ್ಟ ದೇವದರ್ಶನದ ಗುಡಾರದ ಮಾದರಿ ಬಹಳ ಸರಳ ಮತ್ತು ಆಡಂಬರವಿಲ್ಲದ್ದಾಗಿತ್ತು. ಅದು ಐಗುಪ್ತದಲ್ಲಿ ಮೋಶೆಯು ನೋಡಿದ್ದ ಅಂದವಾಗಿ ಕಟ್ಟಲ್ಪಟ್ಟಿದ್ದ ಅದ್ಭುತ ಪಿರಮಿಡ್‌ಗಳಂತೆ ಇರಲಿಲ್ಲ.

ಆ ಗುಡಾರದ ಮಾದರಿಯು ಮೋಶೆಗೆ ಆತನ 40ನೇಯ ವಯಸ್ಸಿನಲ್ಲಿ, ಆತನ ಬಲ ಮತ್ತು ಸ್ವ-ಸಾಧನೆಗಳು ಅರಳಿ ಶೋಭಿಸುತ್ತಿದ್ದಾಗ ಕೊಡಲ್ಪಟ್ಟಿದ್ದರೆ, ಆತನು ಅದನ್ನು ಖಂಡಿತವಾಗಿ ತಿದ್ದಿ ಇನ್ನೂ ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತಿದ್ದನು. ಆದರೆ ಆತನ 80ನೇ ವಯಸ್ಸಿನಲ್ಲಿ ’ಆತ್ಮಾಭಿಮಾನ’ ವು ಸಂಪೂರ್ಣವಾಗಿ ಸತ್ತು ಹೋಗಿದ್ದರಿಂದ, ಆತನು ಯೆಹೋವನು ಆಜ್ಞಾಪಿಸಿದಂತೆಯೇ ಎಲ್ಲವನ್ನೂ ಮಾಡಿದನು. ಕರ್ತನ ಮಹಿಮೆಯನ್ನು ಗುಡಾರದೊಳಗೆ ಬರಗೊಳಿಸಿದ್ದು ಅದೇ.

ದೈವೀಕ ಜ್ಞಾನವನ್ನು ಪಡೆಯಬೇಕಾದರೆ ನಮ್ಮ ಮಾನವೀಯ ಜ್ಞಾನವನ್ನು ಗದ್ದುಗೆಯಿಂದ ಕೆಳಗಿಳಿಸಬೇಕು.

ಬೈಬಲ್ ಹೀಗೆ ಹೇಳುತ್ತದೆ, ತಾನು ನಿಮ್ಮಲ್ಲಿ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವವನು ಜ್ಞಾನಿಯಾಗುವಂತೆ ಹುಚ್ಚನಾಗಲಿ (1 ಕೊರಿಂಥ 3:18).

ಐಗುಪ್ತದ ಜ್ಞಾನವೆಂಬ ಹೊಟ್ಟಿನಿಂದ ಮೋಶೆಯ ಬಿಡುಗಡೆಯಾದಾಗಲೇ ದೇವರು ಅವನನ್ನು ಮೆಚ್ಚಲು ಸಾಧ್ಯವಾಯಿತು.

ಅಪೋಸ್ತಲ ಪೌಲನು ಯೆರೂಸಲೇಮಿನ ಬೈಬಲ್ ಸ್ಕೂಲಿನ ಶ್ರೇಷ್ಠ ಪ್ರಾಧ್ಯಾಪಕನಾದ ಗಮಾಲಿಯೇಲನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಮೂರು ವರ್ಷ ಅಭ್ಯಾಸ ಮಾಡಿದ್ದನು. ಹೀಗಾಗಿ ತನ್ನ ರಕ್ಷಣಾನುಭವದ ನಂತರ, ತನ್ನೊಳಗಿನಿಂದ ಗಮಾಲಿಯೇಲನ ಜ್ಞಾನವು ಅಳಿಸಿ ಹಾಕಲ್ಪಟ್ಟು ಅದಕ್ಕೆ ಬದಲಾಗಿ ದೈವ ಜ್ಞಾನವನ್ನು ಹೊಂದಲು, ಜನರಿಂದ ದೂರ ಅರಬಸ್ಥಾನದಲ್ಲಿ ಮೂರು ವರ್ಷಗಳನ್ನು ಆತನು ಕಳೆಯಬೇಕಾಯಿತು. ಇದರ ಕುರಿತು ಪೌಲನು, ನಾನು... ಅರಬಸ್ಥಾನಕ್ಕೆ ಹೋಗಿ ... ಮೂರು ವರ್ಷಗಳಾದ ಮೇಲೆ ಯೆರೂಸಲೇಮಿಗೆ ಹೋದೆನು, ಎನ್ನುತ್ತಾನೆ (ಗಲಾತ್ಯ 1:17,18).

ಆಗ ಮಾತ್ರವೇ ಪೌಲನು ಕರ್ತನ ಸೇವಕನಾಗಲು ಸಾಧ್ಯವಾಯಿತು.

ಮಾನವೀಯ ಜಾಣತನವನ್ನು ಪಟ್ಟದಿಂದ ಇಳಿಸುವುದೇ ಕರ್ತರ ಸೇವೆ ಮಾಡ ಬಯಸುವ ಪ್ರತಿಯೊಬ್ಬನ ಮೊದಲ ಹೆಜ್ಜೆಯಾಗಿದೆ. ಆದರೂ ಈ ಪಾಠವನ್ನು ಪೂರ್ತಿಯಾಗಿ ಕಲಿಯುವವರು ವಿರಳ.

ದೇವದರ್ಶನದ ಗುಡಾರವನ್ನು ಬೆಟ್ಟದ ಮೇಲೆ ಕೊಡಲ್ಪಟ್ಟಿದ್ದ ಮಾದರಿಯ ಪ್ರಕಾರವೇ ಮೋಶೆಯು ಮಾಡುತ್ತಾನೋ ಇಲ್ಲವೋ ಎಂದು ದೇವರು ಅವನನ್ನು ಪರೀಕ್ಷಿಸಿದರು. ಆ ಗುಡಾರದ ಮೇಲೆ ದೇವರ ಮಹಿಮೆಯು ಇಳಿದು ಬಂದದ್ದು ಮೋಶೆಯ ಕೆಲಸವನ್ನು ದೇವರು ಮೆಚ್ಚಿದ ವ್ಯಕ್ತವಾದ ಸೂಚನೆಯಾಗಿತ್ತು.

ದೇವರಿಗೋಸ್ಕರ ನಾವು ಮಾಡುವದು ಅಥವಾ ಕಟ್ಟುವಂಥದು ಹೇಗಿದೆ1 ಅದು ದೇವರ ವಾಕ್ಯದಲ್ಲಿರುವ ಮಾದರಿಗೆ ಅನುಗುಣವಾಗಿರುವುದೇ1 ಅಥವಾ ಅದನ್ನು ಈ ಲೋಕದ ಜ್ಞಾನಕ್ಕನುಸಾರ ಬದಲಾಯಿಸಿದ್ದೇವೋ1 ಹಾಗಿದ್ದಲ್ಲಿ, ಖಂಡಿತವಾಗಿ ಅದು ನಮ್ಮ ಜೀವಿತದಲ್ಲಿ ಕರ್ತರ ಮಹಿಮೆಯು ಕಾಣದಿರುವುದಕ್ಕೆ ಒಂದು ಕಾರಣವಾಗಿರಬೇಕು.

ತನ್ನ ಸ್ವಾರ್ಥವನ್ನು ಹುಡುಕದಿರುವದು

ಇದರ ನಂತರ ಮೋಶೆಯನ್ನು ದೇವರು ಇನ್ನೊಂದು ಕ್ಷೇತ್ರದಲ್ಲಿ ಪರೀಕ್ಷಿಸಿದರು. ಇಸ್ರಾಯೇಲ್ಯರಿಗೆ ನಷ್ಟವಾದರೂ ತನಗೆ ಮಾನ್ಯತೆ ದೊರಕಲಿ, ಎಂಬ ಸ್ವೇಛ್ಛೆಯನ್ನು ಮೋಶೆಯು ಹೊಂದಿರುವನೇ ಎಂದು ನೋಡಲು, ಆತನನ್ನು ದೇವರು ಎರಡು ಬಾರಿ ಪರೀಕ್ಷಿಸಿದರು. ಎರಡು ಸಾರಿಯೂ ಅವನು ಅಪೇಕ್ಷಿತ ಮಟ್ಟವನ್ನು ಅದ್ಭುತವಾಗಿ ತಲುಪಿದನು.

ಮೊದಲನೇ ಘಟನೆಯು ಇಸ್ರಾಯೇಲ್ಯರು ಚಿನ್ನದ ಬಸವನನ್ನು ಮಾಡಿ, ದೇವರಿಗೆ ವಿರೋಧವಾಗಿ ನಿಂತಾಗ ನಡೆಯಿತು. ಆಗ ದೇವರು ಮೋಶೆಗೆ, ನೀನು ನನ್ನನ್ನು ತಡೆಯಬೇಡ; ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮ ಮಾಡುವೆನು. ತರುವಾಯ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗವುಂಟಾಗುವಂತೆ ಮಾಡುವೆನು ಎಂದು ಹೇಳಿದರು (ವಿಮೋ. 32:10).

ಎರಡನೇ ಸಂದರ್ಭದಲ್ಲಿ, ಇಸ್ರಾಯೇಲ್ಯರು ಕಾನಾನ್ ದೇಶವನ್ನು ಪ್ರವೇಶಿಸಲು ಒಪ್ಪದಿದ್ದಾಗ, ದೇವರು ಮೋಶೆಗೆ, ನಾನು ಇವರಿಗೆ ವ್ಯಾಧಿಯನ್ನುಂಟುಮಾಡಿ ಇವರನ್ನು ನಿರ್ಮೂಲಮಾಡಿ, ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು, ಎಂದು ಹೇಳಿದರು (ಅರಣ್ಯ. 14:12).

ಈ ಎರಡೂ ಸಂದರ್ಭಗಳಲ್ಲಿ, ದೇವರು ಮೋಶೆಗೆ ತಾನು ಇಸ್ರಾಯೇಲ್ಯರನ್ನು ನಾಶಮಾಡುವುದಾಗಿಯೂ, ಮೋಶೆ ಹಾಗೂ ಆತನ ಸಂತತಿಯವರನ್ನು ದೊಡ್ಡ ಜನಾಂಗವಾಗಿ ಮಾಡುವುದಾಗಿಯೂ ಹೇಳಿದರು. ಆಗ ಅಬ್ರಹಾಮನಿಗೂ ಇಸ್ರಾಯೇಲ್ಯರ ಹನ್ನೆರಡು ಕುಲದವರಿಗೂ ಮಾಡಿದ್ದ ವಾಗ್ದಾನಗಳಿಗೆ ಬಾಧ್ಯನಾಗುವ ಅವಕಾಶ ಮೋಶೆಗೆ ದೊರೆತಿತ್ತು.

ಆ ಪರೀಕ್ಷೆಯಲ್ಲಿ ಕೆಳ ಮಟ್ಟದ ಮನುಷ್ಯರು ಬೀಳುತ್ತಿದ್ದರು, ಆದರೆ ಮೋಶೆಯಲ್ಲ. ಈ ಎರಡು ಸಂದರ್ಭಗಳಲ್ಲೂ ಮೋಶೆಯು ಇಸ್ರಾಯೇಲ್ಯರನ್ನು ಉಳಿಸಲು ದೇವರಿಗೆ ಮೊರೆಯಿಟ್ಟನು. ಒಂದು ಸಂದರ್ಭದಲ್ಲಿ ಇಸ್ರಾಯೇಲ್ಯರ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಕೊಟ್ಟು ನಿತ್ಯ ನರಕಯಾತನೆಯನ್ನು ಅನುಭವಿಸಲು ಅವನು ಸಿದ್ಧನಿದ್ದನು.

ಆಗ ಮೋಶೆ ಯೆಹೋವನ ಬಳಿಗೆ ಹೋಗಿ ಹೀಗೆಂದು ಪ್ರಾರ್ಥಿಸಿದನು, ಅಯ್ಯೋ ಅಯ್ಯೋ, ಈ ಜನರು ಮಹಾಪಾಪವನ್ನು ಮಾಡಿದ್ದಾರೆ; ಚಿನ್ನದ ದೇವರನ್ನು ಮಾಡಿಕೊಂಡಿದ್ದಾರೆ. ಆದರೂ ನೀನು ಕರುಣೆಯಿಟ್ಟು ಅವರ ಪಾಪವನ್ನು ಕ್ಷಮಿಸಬೇಕು. ಇಲ್ಲವಾದರೆ ನೀನು ಬರೆದಿರುವ [ಜೀವಿತರ] ಪಟ್ಟಿಯಿಂದ ನನ್ನ ಹೆಸರನ್ನು ಅಳಿಸಿಬಿಡಬೇಕೆಂದು ಕೇಳಿಕೊಳ್ಳುತ್ತೇನೆ (ವಿಮೋಚನ 32:31-32).

ನಮ್ಮ ರಕ್ಷಣೆಯ ಸಲುವಾಗಿ ಕ್ರೂಜೆಯ ಮೇಲೆ ತಂದೆಯಿಂದ ತ್ಯಜಿಸಲ್ಪಡಲು ಸಿದ್ಧನಿದ್ದ ಸ್ವತಃ ಕ್ರಿಸ್ತನ ಆತ್ಮವನ್ನೇ ಮೋಶೆಯು ನಿಜವಾಗಿ ಹೊಂದಿದ್ದನು.

ಮೋಶೆಯ ನಿಸ್ವಾರ್ಥತೆಯಿಂದ ದೇವರು ಅತಿ ಹರ್ಷಗೊಂಡು, ಆಗಿನಿಂದ ಮೋಶೆಯೊಂದಿಗೆ ಬಹಳ ಆತ್ಮೀಯತೆಯಿಂದ ಮಾತಾಡಲು ಆರಂಭಿಸಿದರು. ಮನುಷ್ಯರೊಳಗೆ ಒಬ್ಬನು ತನ್ನ ಸ್ನೇಹಿತನೊಡನೆ ಹೇಗೆ ಮಾತಾಡುವನೋ ಹಾಗೆಯೇ ಯೆಹೋವನು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದನು (ವಿಮೋಚನ 33:11).

ತನ್ನ ಮಹಿಮೆಯನ್ನು ಕಾಣುವ ಹೇಳಲಶಕ್ಯವಾದ ಭಾಗ್ಯವನ್ನು ದೇವರು ಮೋಶೆಗೆ ನೀಡಿದರು.

ಮೋಶೆಯು, ನಿನ್ನ ಮಹಿಮೆಯನ್ನು ದಯಮಾಡಿ ನನಗೆ ತೋರಿಸು ಎಂದು ಪ್ರಾರ್ಥಿಸಲು, ಕರ್ತನು ಅವನಿಗೆ, ಇಲ್ಲಿ ನನ್ನ ಸಮೀಪದಲ್ಲೇ ಒಂದು ಸ್ಥಳವಿದೆ; ನೀನು ಈ ಬಂಡೆಯ ಮೇಲೆಯೇ ನಿಂತಿರಬೇಕು. ನನ್ನ ಪ್ರಭಾವವು ನಿನ್ನೆದುರಾಗಿ ದಾಟಿಹೋಗುವ ಕಾಲದಲ್ಲಿ ನಾನು ಈ ಬಂಡೆಯ ಸಂದಿನಲ್ಲಿ ನಿನ್ನನ್ನು ಇರಿಸಿ ನಿನ್ನ ಮುಂದೆ ದಾಟಿಹೋಗುವ ತನಕ ನಿನ್ನ ಮೇಲೆ ಕೈ ಮುಚ್ಚುವೆನು; ತರುವಾಯ ನಾನು ಕೈ ತೆಗೆದಾಗ ನೀನು ನನ್ನ ಹಿಂಭಾಗವನ್ನು ನೋಡುವಿಯೇ ಹೊರತು ನನ್ನ ಮುಖವು ನಿನಗೆ ಕಾಣಿಸುವದಿಲ್ಲ, ಎಂದು ಹೇಳಿದನು (ವಿಮೋಚನ 33:18-23).

ದೇವರ ಸೇವಕನೊಬ್ಬನ ಅತೀ ಮುಖ್ಯವಾದ ಅರ್ಹತೆಯು ಆತನು ತನ್ನ ಸ್ವಾರ್ಥವನ್ನು ಬಯಸದಿರುವುದಾಗಿದೆ.

ಸ್ವಂತ ಲಾಭದ ಅಥವಾ ಖ್ಯಾತಿಯ ಬೆನ್ನುಹತ್ತುವುದು ನಮ್ಮಲ್ಲಿ ಬಹು ಆಳವಾಗಿ ಬೇರೂರಿರುವ ಸ್ವಭಾವವಾಗಿದ್ದು, ಅದನ್ನು ನಮ್ಮಿಂದ ದೂರಮಾಡುವುದು ದೇವರಿಗೆ ಒಂದು ಕಷ್ಟದ ಕೆಲಸವಾಗಿದೆ. ನಾವು ನಮ್ಮನ್ನು ಪರೀಕ್ಷಿಸಿಕೊಂಡು, ಸ್ವಾರ್ಥದ ಆತ್ಮವನ್ನು ನಮ್ಮಲ್ಲಿ ಕಂಡುಕೊಂಡು, ಅದರಿಂದ ಶುದ್ಧೀಕರಿಸಿಕೊಳ್ಳುವಂತೆ ಅನೇಕ ಸನ್ನಿವೇಶಗಳನ್ನು ದೇವರು ಬರಮಾಡುವರು. ತನ್ನ ವಾಕ್ಯದ ಮೂಲಕ ಹಾಗೂ ತನ್ನ ಆತ್ಮನ ಮೂಲಕವಾಗಿ ದೇವರು ಸತತವಾಗಿ ನಮ್ಮೊಂದಿಗೆ (ಕೇಳುವ ಕಿವಿಗಳು ನಮ್ಮಲ್ಲಿದ್ದರೆ) ಮಾತಾಡುತ್ತಲೇ ಇರುವರು, ಮತ್ತು ಈ ಸ್ವಾರ್ಥಿಯಾದ ಆತ್ಮನಿಂದ ಶುದ್ಧೀಕರಿಸಿಕೊಳ್ಳುವಂತೆ ನಮ್ಮನ್ನು ಒತ್ತಾಯಿಸುವರು.

ಇಷ್ಟೆಲ್ಲಾ ಇದ್ದಾಗ್ಯೂ, ಆ ಮಟ್ಟಕ್ಕೆ ಏರಿ ದೇವರ ಮೆಚ್ಚುಗೆಗೆ ಯೋಗ್ಯರಾಗುವವರು ಕೇವಲ ಕೆಲವರಷ್ಟೇ. ಮೋಶೆಯು ಅಂಥವರಲ್ಲಿ ಒಬ್ಬನು. ಪೌಲ, ತಿಮೊಥೆಯರು ಇನ್ನಿಬ್ಬರಾಗಿದ್ದರು.

ಅನೇಕರು ಇಲ್ಲದಿದ್ದರೂ, ಇಂಥಹ ಜನರು ಕೇವಲ ಮಾತ್ರ.

ಹಳೇ ಒಡಂಬಡಿಕೆಯ ಮೋಶೆಯಲ್ಲಿ ಕಾಣಬರುವ, ಪರರಿಗಾಗಿ ಪ್ರಾರ್ಥಿಸುವ ಆತ್ಮದ ಭಾರೀ ಕೊರತೆಗೆ ಮುಖ್ಯ ಕಾರಣವೊಂದಿದೆ, ಏನೆಂದರೆ ಬಹುಮಟ್ಟಿಗೆ ಪ್ರತಿಯೊಬ್ಬನೂ ಹೃದಯಾಂತರಾಳದಲ್ಲಿ, ತನ್ನ ಸ್ವಾರ್ಥವನ್ನೇ ಹುಡುಕುವನು. ನಾವು ಇತರರಿಗೋಸ್ಕರ ರಹಸ್ಯವಾಗಿ ಪ್ರಾರ್ಥಿಸುವಾಗ ನಮಗೆ ಯಾವ ಖ್ಯಾತಿಯೂ ಬರದು. ಇದೇ ಕಾರಣ, ಇದನ್ನು ವಿರಳವಾಗಿ ಕೆಲ ವಿಶ್ವಾಸಿಗಳಷ್ಟೇ ಮಾಡುವರು.

ನಾವು ದೇವರಿಂದ ಪರೀಕ್ಷಿಸಲ್ಪಡುವದು ಇಲ್ಲಿಯೇ - ಏಕೆಂದರೆ ಸ್ವಾರ್ಥಿಗಳಿಗೆ ದೇವರು ತನ್ನನು ಒಪ್ಪಿಸಿಕೊಡುವುದಿಲ್ಲ.

ಟೀಕೆ ಮತ್ತು ವಿರೋಧಗಳಿಗೆ ಪ್ರತಿಕ್ರಿಯೆ

ಮೋಶೆಯಲ್ಲಿ ನಾವು ಕಾಣುವ ಇನ್ನೊಂದು ಸುಂದರವಾದ ವಿಷಯವೇನೆಂದರೆ, ಟೀಕಿಸಲ್ಪಟ್ಟಾಗ ಅಥವಾ ವಿರೋಧಿಸಲ್ಪಟ್ಟಾಗ ಆತನ ಪ್ರತಿಕ್ರಿಯೆ. ಇನ್ನೊಬ್ಬ ನಾಯಕನನ್ನು ನೇಮಿಸುವಾ, ಎಂದು ಜನರು ದಂಗೆ ಎದ್ದಾಗ ಮೋಶೆಯು ಸಮೂಹದವರ ಮುಂದೆ ಬೋರಲು ಬಿದ್ದು ಮೌನವಾಗಿದ್ದನು.

ನಾವು ಹೀಗೆ ಓದುತ್ತೇವೆ: ಆಗ ಮೋಶೆ ಆರೋನರು ಇಸ್ರಾಯೇಲ್ಯರ ಸರ್ವ ಸಮೂಹದವರ ಮುಂದೆ ಬೋರಲಬಿದ್ದರು (ಅರಣ್ಯ 14:5).

ತಾನು ದೋಷಮುಕ್ತನೆಂದು ಸಮರ್ಥಿಸಿಕೊಳ್ಳಲು ಆತನು ನಿರಾಕರಿಸಿದನು.

ಕೋರಹನೂ ಆತನ ಜೊತೆಯಲ್ಲಿದ್ದ 250 ಇತರ ನಾಯಕರೂ ಮೋಶೆಯ ನಾಯಕತ್ವಕ್ಕೆ ಎದುರುಬಿದ್ದಾಗ ಮತ್ತೊಮ್ಮೆ, ಮೋಶೆ ಆ ಮಾತನ್ನು ಕೇಳಿ ಅಡ್ಡಬಿದ್ದನು, ಎಂದು ನಾವು ಓದುತ್ತೇವೆ (ಅರಣ್ಯ 16:4).

ಆತನು ಸ್ವರಕ್ಷಣೆಯನ್ನಾಗಲೀ, ಅಥವಾ ತನ್ನ ಸ್ಥಾನವನ್ನು ರಕ್ಷಿಸುವುದನ್ನಾಗಲೀ, ಇಲ್ಲವೇ ತನ್ನ ಅಧಿಕಾರವನ್ನು ಚಲಾಯಿಸುವುದನ್ನಾಗಲೀ ಮಾಡಲಿಲ್ಲ.

ಮೋಶೆಯ ಸ್ವಂತ ಅಕ್ಕ ಮತ್ತು ಅಣ್ಣನು ಆತನ ಬೆನ್ನ ಹಿಂದೆ ಆತನನ್ನು ಟೀಕಿಸಿದಾಗ ಮತ್ತು ಅದಕ್ಕಾಗಿ ಅವರನ್ನು ದೇವರು ದಂಡಿಸಿದಾಗ, ಮೋಶೆಯು ಮತ್ತೊಮ್ಮೆ ಅಡ್ಡಬಿದ್ದು, ಅವರಿಗೆ ಕರುಣೆ ತೋರಿಸಿರೆಂದು ದೇವರಿಗೆ ಮೊರೆಯಿಟ್ಟನು.

ಆಗ ಮೋಶೆಯು ಯೆಹೋವನಿಗೆ, ’ದೇವಾ, ಆಕೆಯನ್ನು ವಾಸಿಮಾಡಬೇಕೆಂದು ಬೇಡುತ್ತೇನೆ,’ ಎಂದು ಮೊರೆಯಿಟ್ಟನು (ಅರಣ್ಯ 12:13).

ತನ್ನ ಜೀವಿತಕಾಲದಲ್ಲಿ ನಿಜವಾಗಿಯೂ ಆತನು ಲೋಕದಲ್ಲೆಲ್ಲಾ ಅತೀ ದೀನನಾಗಿದ್ದನು. ಸತ್ಯವೇದವು ಹೀಗೆ ಹೇಳುವುದು,ಮೋಶೆಯು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು (ದೀನನಾಗಿದ್ದನು) (ಅರಣ್ಯ 12:3).

ಅಂಥಹ ಮನುಷ್ಯರಿಗೆ ಮಾತ್ರವೇ ದೇವರು ತನ್ನನ್ನು ಒಪ್ಪಿಸಿಕೊಡುವರು.

ತಾವು ಇತರರ ಮೇಲೆ ಹೊಂದಿರುವ ಶಕ್ತಿ, ಅಧಿಕಾರಗಳು ಜನರನ್ನು ಕಲುಷಿತಗೊಳಿಸುವ ಸಾಧ್ಯತೆ ಉಂಟು. ಬಲವು ಕೆಡಿಸುತ್ತದೆ, ಮತ್ತು ಪೂರ್ಣ ಬಲವು ಪೂರ್ಣವಾಗಿ ಕೆಡಿಸುತ್ತದೆ!ಎಂಬ ಈ ಲೋಕದ ಗಾದೆಯುಂಟು!

ಆದರೆ ಅಪರಿಮಿತ ಬಲವು ಮೋಶೆಯನ್ನು ಸ್ವಲ್ಪವೂ ಕೆಡಿಸಲಿಲ್ಲ. ಆತನ ಹಿಂಡಿನ ದಂಗೆಯ ಮೂಲಕ ಮೋಶೆಯನ್ನು ದೇವರು ಮೇಲಿಂದ ಮೇಲೆ ಪರೀಕ್ಷಿಸಿದರು. ಪ್ರತೀ ಪರೀಕ್ಷೆಯಲ್ಲೂ ಮೋಶೆಯು ಪಾಸಾದನು.

ಆತ್ಮಿಕ ನಾಯಕತ್ವದೊಂದಿಗೆ ದೊಡ್ಡ ಗಂಡಾಂತರಗಳೂ ಸೇರಿ ಬರುತ್ತವೆ. ಆದರೆ ತಾವು ನೀತಿವಂತರೆಂದೂ, ತಾವೇ ಸರಿಯೆಂದೂ ಪ್ರತಿಪಾದಿಸದೆ, ನಾಲಿಗೆಯನ್ನು ಹೇಗೆ ಬಿಗಿ ಹಿಡಿಯಬೇಕೆಂದು ಅರಿತಿದ್ದು, ಪದೇ ಪದೇ ತಮ್ಮ ತಲೆಯನ್ನು ತಗ್ಗಿಸಿ ಮುಖವನ್ನು ಧೂಳಿನಲ್ಲಿ ಇರಿಸಲು ತಿಳಿದಿರುವವರು ಧನ್ಯರು.

ತನ್ನ ಸೇವಕರ ಪರವಾಗಿ ಮುಯ್ಯಿತೀರಿಸುತ್ತೇನೆಂದು ದೇವರು ವಚನ ನೀಡಿದ್ದಾರೆ. ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು, ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ಥ್ಯವೂ, ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ ಎಂದು ಯೆಹೋವನು ಅನ್ನುತ್ತಾನೆ (ಯೆಶಾಯ 54:17).

ಇಂಥಹ ವಿಷಯಗಳನ್ನು ನಮ್ಮ ಕೈಯಲ್ಲಿ ತೆಗೆದುಕೊಳ್ಳುವ ಬದಲು ದೇವರಿಗೆ ಒಪ್ಪಿಸಿಕೊಡುವದು ಅತ್ಯುತ್ತಮವಾಗಿದೆ. ನಾವು ಮಾಡತಕ್ಕದ್ದು ಏನೆಂದರೆ, ಯೇಸುವು ಮಾಡಿದಂತೆ, ನಮ್ಮ ವ್ಯಾಜ್ಯವನ್ನು ನ್ಯಾಯವಾಗಿ ತೀರ್ಪುಮಾಡುವಾತನಿಗೆ ಒಪ್ಪಿಸುವುದು ಮಾತ್ರ.

ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ. ಆತನು ಬಾಧೆಯನ್ನು ಅನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು (1 ಪೇತ್ರ 2:23).

ಯೆಶಾಯ 53:7ರಲ್ಲಿ ಯೇಸುವು ಮೌನವಾಗಿದ್ದನೆಂದು ಮೂರು ಸಾರಿ ಹೇಳುತ್ತದೆ - ಬಾಧಿಸಲ್ಪಟ್ಟಾಗ, ಉಣ್ಣೆ ಕತ್ತರಿಸುವಾಗ ಮತ್ತು ವಧ್ಯಸ್ಥಾನಕ್ಕೆ ಒಯ್ಯಲ್ಪಡುವಾಗ.

ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ (ಯೆಶಾಯ 53:7).

ಅಂಥಹ ಸನ್ನಿವೇಶಗಳಲ್ಲಿ ಮೌನವಾಗಿರಲು ಗೊತ್ತಿಲ್ಲದವನು ಆತ್ಮಿಕ ನಾಯಕನಾಗಲು ಎಂದಿಗೂ ಅಪೇಕ್ಷಿಸಬಾರದು.

ನಾವು ಎದುರಿಸುವ ವಿರೋಧವು, ಪರಿಸ್ಥಿತಿಯನ್ನು ನಿರ್ವಹಿಸಲು ದೇವರನ್ನು ನಂಬುವೆವೋ ಇಲ್ಲವೋ, ಎಂಬುದಾಗಿ ದೇವರು ನಮ್ಮನ್ನು ಪರೀಕ್ಷಿಸುವ ಒಂದು ವಿಧಾನವಾಗಿದೆ.

ದೇವರ ಸೇವಕನ ತಪ್ಪು ದೋಷಗಳು

ಬೈಬಲ್‌ನಲ್ಲಿರುವ ದೇವ ಮನುಷ್ಯರ ಜೀವನ ಚರಿತ್ರೆಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ, ಏಕೆಂದರೆ ಅವುಗಳು ಆಧುನಿಕ ಜೀವನ ಚರಿತ್ರೆಗಳಿಗಿಂತ ವಿಭಿನ್ನವಾಗಿದ್ದು, ಆ ಮನುಷ್ಯರ ಬಲಹೀನತೆಗಳನ್ನೂ ಸಹ ತೋರಿಸುವವು. ಒಂದು ತಪ್ಪನ್ನೂ ಮಾಡದಂಥವನ ಜೀವನ, ಅನೇಕ ತಪ್ಪುಗಳನ್ನು ಮಾಡುವ ನಮಗೆ ಪ್ರೋತ್ಸಾಹ ನೀಡದು.

ಬೈಬಲ್‌ನಲ್ಲಿ ದೇವ ಮನುಷ್ಯರ ತಪ್ಪು ದೋಷಗಳು ನಮ್ಮ ಉತ್ತೇಜನಕ್ಕಾಗಿ ಮಾತ್ರವಲ್ಲ, ಎಚ್ಚರಿಕೆಗಾಗಿಯೂ ಬರೆಯಲ್ಪಟ್ಟಿವೆ.

ತನ್ನ ಅಭಿಷಿಕ್ತ ಸೇವಕರಿಂದ ದೇವರು ಕಡ್ಡಾಯವಾಗಿ ಆಪೇಕ್ಷಿಸುವ ಗುಣಮಟ್ಟವು, ಬೇರೆ ವಿಶ್ವಾಸಿಗಳಲ್ಲಿ ಅವರ ನಿರೀಕ್ಷೆಗಿಂತ ಬಹಳ ಉನ್ನತ ಮಟ್ಟದ್ದು. ಯಾರ‍್ಯಾರಿಗೆ ಹೆಚ್ಚಾಗಿ ಕೊಡಲ್ಪಟ್ಟಿದೆಯೋ, ಅವರಿಂದ ಹೆಚ್ಚಾಗಿ ಕೇಳಲ್ಪಡುವದು.

ದೇವರು ಅಪನಂಬಿಗಸ್ತರಾದ ಇಸ್ರಾಯೇಲ್ಯರಿಗೆ ಕಾನಾನ್‌ದೇಶಕ್ಕೆ ಪ್ರವೇಶವನ್ನು ನಿರಾಕರಿಸುವ ಮುನ್ನ ಹತ್ತು ಅವಕಾಶಗಳನ್ನು ಕೊಟ್ಟಿದ್ದರು. ಅವರ ಬಗ್ಗೆ ದೇವರು, ಹತ್ತುಸಾರಿ ನನ್ನನ್ನು ಪರೀಕ್ಷಿಸಿದುದರಿಂದ, ’ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವದಿಲ್ಲ’,(ಅರಣ್ಯ 14:22, 23) ಎಂದು ಹೇಳಿದರು.

ಆದರೆ ಅವರು ಮೋಶೆಗೆ ಒಂದು ಅವಕಾಶವನ್ನಷ್ಟೇ ಕೊಟ್ಟರು. ಮೋಶೆಯು ಒಂದೇ ಒಂದು ಸಂದರ್ಭದಲ್ಲಿ ಅವಿಶ್ವಾಸ ಮತ್ತು ಅವಿಧೇಯತೆಯಿಂದ ನಡೆದಾಗ - ಅದೂ ಸಹ ಒಂದು ಸಣ್ಣ ರೀತಿಯಲ್ಲಿ - ದೇವರು ಒಡನೆಯೇ ವಾಗ್ದಾನ ಮಾಡಿದ ದೇಶಕ್ಕೆ ಆತನ ಪ್ರವೇಶವನ್ನು ನಿಷೇಧಿಸಿದರು. ಅರಣ್ಯಕಾಂಡ 20:7-12ರಲ್ಲಿ ಈ ಘಟನೆಯು ನಮಗೆ ಮುನ್ನೆಚ್ಚರಿಕೆಯಾಗಿ ಬರೆಯಲ್ಪಟ್ಟಿದೆ:

ಆಗ ಯೆಹೋವನು ಮೋಶೆಗೆ - ನೀನು ಕೋಲನ್ನು ಕೈಯಲ್ಲಿ ಹಿಡಿದು ನಿನ್ನ ಅಣ್ಣನಾದ ಆರೋನನ ಜೊತೆಯಲ್ಲಿ ಸಮೂಹದವರನ್ನು ಕೂಡಿಸಿಕೊಂಡು ಅವರ ಎದುರಿನಲ್ಲೇ ಆ ಕಡಿದಾದ ಬಂಡೆಗೆ ನೀರು ಕೊಡಬೇಕೆಂದು ಆಜ್ಞಾಪಿಸು. ಅದರೊಳಗಿಂದ ನೀರು ಹೊರಟು ಬರುವದು; ನೀನು ಸಮೂಹದವರಿಗೂ ಅವರ ಪಶುಗಳಿಗೂ ನೀರನ್ನು ಕುಡಿಯ ಕೊಡಬಹುದು, ಎಂದು ಹೇಳಿದನು.

ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಆ ಕೋಲನ್ನು ಆತನ ಸನ್ನಿಧಿಯಿಂದ ತೆಗೆದುಕೊಂಡುಹೋಗಿ ಆರೋನನ ಜೊತೆಯಲ್ಲಿ ಸಮೂಹದವರನ್ನು ಆ ಕಡಿದಾದ ಬಂಡೆಗೆದುರಾಗಿ ಕೂಡಿ ಅವರಿಗೆ - ದ್ರೋಹಿಗಳೇ ಕೇಳಿರಿ; ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ, ಎಂದು ಹೇಳಿ ಕೈಯೆತ್ತಿ ತನ್ನ ಕೈಯಲ್ಲಿರುವ ಕೋಲಿನಿಂದ ಆ ಬಂಡೆಯನ್ನು ಎರಡು ಸಾರೆ ಹೊಡೆದನು. ಆಗ ನೀರು ಪ್ರವಾಹವಾಗಿ ಹೊರಟಿತು; ಸಮೂಹದವರೂ ಅವರ ಪಶುಗಳೂ ಕುಡಿದರು.

ಆಗ ಯೆಹೋವನು ಮೋಶೆ ಆರೋನರಿಗೆ - ನೀವು ನನ್ನನ್ನು ನಂಬದವರಾಗಿ ಇಸ್ರಾಯೇಲ್ಯರ ಎದುರಿನಲ್ಲಿ ನನ್ನ ಗೌರವವನ್ನು ಕಾಪಾಡದೆ ಹೋದದ್ದರಿಂದ ಈ ಸಮೂಹದವರನ್ನು ನಾನು ಅವರಿಗೆ ವಾಗ್ದಾನಮಾಡಿದ ದೇಶದೊಳಕ್ಕೆ ನೀವು ಕರಕೊಂಡು ಹೋಗಕೂಡದು, ಎಂದು ಹೇಳಿದನು.

ಈ ಸಲ ನೀರು ಬರಲು ಬಂಡೆಗೆ ಆಜ್ಞಾಪಿಸಲು ದೇವರು ಮೋಶೆಗೆ ತಿಳಿಸಿದ್ದರು. ನಾವು ವಿಮೋಚನ ಕಾಂಡ 17:6 ರಲ್ಲಿ ಓದುವಂತೆ, ಈಗಾಗಲೇ ನಲ್ವತ್ತು ವರ್ಷಗಳ ಹಿಂದೆ ಆ ಬಂಡೆ ಒಮ್ಮೆ ಹೊಡೆಯಲ್ಪಟ್ಟಿತ್ತು: ಯೆಹೋವನು, ’ಅಲ್ಲಿ ಹೋರೇಬಿನಲ್ಲಿರುವ ಬಂಡೆಯ ಮೇಲೆ ನಾನೇ ನಿನ್ನೆದುರಾಗಿ ನಿಲ್ಲುವೆನು. ನೀನು ಆ ಬಂಡೆಯನ್ನು ಹೊಡೆದಾಗ ಅದರಿಂದ ನೀರು ಹೊರಡುವದು, ಜನರು ಕುಡಿಯುವರು,’ಎಂದು ಮೋಶೆಗೆ ಅಪ್ಪಣೆ ಕೊಡಲಾಗಿ, ಮೋಶೆ ಇಸ್ರಾಯೇಲ್ಯರ ಹಿರಿಯರ ಎದುರಿನಲ್ಲಿ ಹಾಗೆಯೇ ಮಾಡಿದನು.

ಇದು ಕ್ರಿಸ್ತನು ಒಂದೇ ಒಂದು ಸಾರಿ ಕ್ರೂಜಿಸಲ್ಪಟ್ಟದ್ದನ್ನು ಸೂಚಿಸುತ್ತದೆ. ಎರಡನೇ ಬಾರಿ ಆ ಬಂಡೆಯನ್ನು ಹೊಡೆಯುವ ಅವಶ್ಯಕತೆಯಿರಲಿಲ್ಲ.

ಆದರೆ ಮೋಶೆಯು ಕೋಪಿಸಿಕೊಂಡು ಬಂಡೆಯನ್ನು ಹೊಡೆದನು (ಅರಣ್ಯಕಾಂಡ 20: 10). ಹಾಗಿದ್ದರೂ - ದೇವರ ಸೇವಕನು ಅವಿಧೇಯನಾಗಿದ್ದಾಗ್ಯೂ - ನೀರು ಬಂದಿತು. ಇಲ್ಲಿ ನೀರು ಬಂದದ್ದು ದೇವರು ದಾಹವುಳ್ಳ ಜನರನ್ನು ಪ್ರೀತಿಸಿದನು, ಎಂದು ಮಾತ್ರ ರುಜುಪಡಿಸುತ್ತದೆ. ದೇವರ ಸೇವಕನ ಅವಿಧೇಯತೆಯನ್ನು ಅದು ಮಂಜೂರು ಮಾಡಲಿಲ್ಲ.

ತಮ್ಮ ವೈಯಕ್ತಿಕ ಜೀವನದಲ್ಲಿ ದೇವರ ಆಜ್ಞೆಗಳಿಗೆ ಅವಿಧೇಯರಾಗಿರುವ ಸ್ತ್ರೀ-ಪುರುಷರ ಸೇವೆಯು ಆಶೀರ್ವದಿಸಲ್ಪಡುವುದರ ಕಾರಣವನ್ನು ಇದು ತೋರಿಸುತ್ತದೆ.

ನೀರು ಬಂದರೂ, ತನ್ನ ಅವಿಧೇಯತೆಯ ಪರಿಣಾಮದಿಂದ ಮೋಶೆಯು ಪಾರಾಗಲಿಲ್ಲ. ಅವನನ್ನು ದೇವರು ಕಠಿಣವಾಗಿ ಶಿಕ್ಷಿಸಿದರು. ಹಾಗೆಯೇ ಅವರು ತನ್ನ ಎಲ್ಲಾ ಅವಿಧೇಯ ಸೇವಕರನ್ನು ಒಂದು ದಿನ ಶಿಕ್ಷಿಸುವರು.

ಮೋಶೆಯು ನಲ್ವತ್ತು ವರ್ಷಗಳಿಂದ ತಾನು ಕಾನಾನ್‌ದೇಶವನ್ನು ಪ್ರವೇಶಿಸುವುದನ್ನು ಎದುರುನೋಡುತ್ತಿದ್ದನು; ಈಗ, ಆ ಕಾನಾನ್‌ದೇಶದ ಅಂಚಿನಲ್ಲಿ, ಅವನು ಒಳಪ್ರವೇಶಿಸಲು ಅನರ್ಹನಾದನು. ಇತರರಿಗೆ ಬೋಧನೆ ಮಾಡಿ ತಾನೇ ಅನರ್ಹನಾಗುವ ಸಾಧ್ಯತೆ - ಜೀವಿತದ ಅಂತ್ಯದವರೆಗೂ ಸಹ ಇದೆ.

ಇದನ್ನು ಅರಿತಿದ್ದ ಪೌಲನು, 1 ಕೊರಿಂಥ 9:27ರಲ್ಲಿ, ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನು ಎನಿಸಿಕೊಂಡೇನೋ, ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ, ಎಂದು ಹೇಳುತ್ತಾನೆ.

ಕೀರ್ತನೆ 103:7ರಲ್ಲಿ, ಆತನು(ದೇವರು) ಮೋಶೆಗೆ ತನ್ನ ಮಾರ್ಗವನ್ನೂ, ಇಸ್ರಾಯೇಲ್ಯರಿಗೆ ತನ್ನ ಕೃತ್ಯಗಳನ್ನೂ ಪ್ರಕಟಿಸಿದನು, ಎಂದು ಬೈಬಲ್ ತಿಳಿಸುತ್ತದೆ.

ದೇವರ ಬಾಹ್ಯ ಕಾರ್ಯಗಳನ್ನು ಇಸ್ರಾಯೇಲ್ಯರು ನೋಡಿದ್ದರು, ಆದರೆ ದೇವರ ಮಾರ್ಗಗಳನ್ನು ತಿಳಿಯುವ ಭಾಗ್ಯವು ಮೋಶೆಯದಾಗಿತ್ತು. ಆದ್ದರಿಂದ ಮೋಶೆಯಿಂದ ಇಸ್ರಾಯೇಲ್ಯರಿಗಿಂತ ಅಧಿಕವನ್ನು ಅಪೇಕ್ಷಿಸಲಾಗಿತ್ತು.

ದೇವರ ಸೇವಕರಿಗೆ ಅನೇಕ ಭಾಗ್ಯಗಳಿವೆ, ಆದರೆ ಅದಕ್ಕೆ ಸರಿಯಾಗಿ, ಅವರು ಇತರರಿಗಿಂತಲೂ ಹೆಚ್ಚಾಗಿ ಲೆಕ್ಕ ನೀಡಬೇಕಾಗುತ್ತದೆ.

ಮೆರಿಬಾದಲ್ಲಿ ತನ್ನನ್ನು ದೇವರು ಪರೀಕ್ಷಿಸುತ್ತಿದ್ದನೆಂದು ಮೋಶೆಗೆ ತಿಳಿದಿರಲಿಲ್ಲ. ತಿಳಿದಿದ್ದರೆ, ಬಹುಶಃ ಅವನು ಬಹಳ ಜಾಗರೂಕನಾಗಿರುತ್ತಿದ್ದನು. ನಮ್ಮ ಅನುದಿನದ ಜೀವಿತದಲ್ಲಿಯೂ ಸಹ ದೇವರು ನಮ್ಮ ಕೃತ್ಯಗಳನ್ನೂ, ಉದ್ದೇಶಗಳನ್ನೂ ಪರೀಕ್ಷಿಸುತ್ತಿದ್ದಾರೆಂದು ನಾವು ಅರಿಯುವುದಿಲ್ಲ. ನಮ್ಮ ಸೇವೆಯ ಮೂಲಕವಾಗಿ ಇತರರು ಆಶೀರ್ವದಿಸಲ್ಪಟ್ಟರೂ ಸಹ, ನಮ್ಮ ವೈಯಕ್ತಿಕ ಜೀವಿತದ ವಿಷಯವಾಗಿ ಒಂದು ದಿನ ನಾವು ಕ್ರಿಸ್ತನ ನ್ಯಾಯಾಸನದ ಮುಂದೆ ಉತ್ತರ ಕೊಡಬೇಕು.

ದೇವರು ಮೋಶೆಯ ಜೀವನದಲ್ಲಿ ಇದಕ್ಕಿಂತ ಹಿಂದೊಮ್ಮೆ, ತನ್ನ ಸೇವಕರಿಂದ ತಾನು ಕಠಿಣ ಶಿಸ್ತನ್ನು ನಿರೀಕ್ಷಿಸುವ ಬಗ್ಗೆ ಸೂಚನೆ ನೀಡಿದ್ದರು.

ಇಸ್ರಾಯೇಲ್ಯರ ವಿಮೋಚಕನಾಗಿ ಮೋಶೆಯನ್ನು ಕರೆದೊಡನೆಯೇ, ತನ್ನ ಮಗನಿಗೆ ಸುನ್ನತಿ ಮಾಡದಿದ್ದ ಅವನ ಅವಿಧೇಯತೆಗಾಗಿ ಅವನ ಪ್ರಾಣವನ್ನು ತೆಗೆದುಬಿಡುವುದಕ್ಕೆ ಬಂದಿದ್ದರು. ಅನ್ಯಜನಾಂಗದ ತನ್ನ ಪತ್ನಿ ಚಿಪ್ಪೋರಳನ್ನು ಮೆಚ್ಚಿಸಲಿಕ್ಕೆ ಆತನು ತನ್ನ ಮಗನಿಗೆ ಸುನ್ನತಿಮಾಡಿಸಿರಲಿಲ್ಲ. ಆದರೆ ಏನೇ ಆದರೂ, ಮೋಶೆಯಲ್ಲಿ ಅವಿಧೇಯತೆಯನ್ನು ಸಹಿಸಲು ದೇವರು ಸಿದ್ಧವಿರಲಿಲ್ಲ.

ಈ ಘಟನೆಯು ನಮ್ಮ ಎಚ್ಚರಿಕೆಗಾಗಿ ವಿಮೋಚನಕಾಂಡ 4:24-26ರಲ್ಲಿ ಬರೆಯಲ್ಪಟ್ಟಿದೆ: ಹೋಗುವ ದಾರಿಯಲ್ಲಿ ಮೋಶೆ ಛತ್ರದಲ್ಲಿದ್ದಾಗ ಯೆಹೋವನು ಅವನೆದುರಿಗೆ ಬಂದು ಅವನ ಪ್ರಾಣವನ್ನು ತೆಗೆಯಬೇಕೆಂದಿದ್ದನು. ಹೀಗಿರುವಾಗ ಚಿಪ್ಪೋರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿಮಾಡಿ ಮೋಶೆಗೆ, ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನಾದಿ, ಎಂದು ಹೇಳಿ ಕತ್ತರಿಸಿದ್ದನ್ನು ಅವನ ಪಾದಗಳಿಗೆ ಮುಟ್ಟಿಸಲು, ಯೆಹೋವನು ಅವನನ್ನು ಉಳಿಸಿದನು ...

ದೇವರ ಉದ್ದೇಶಗಳನ್ನು ಪೂರೈಸಲು, ಆ ಕ್ಷಣದಲ್ಲಿ, ಇಡೀ ಜಗತ್ತಿನಲ್ಲೇ ಮೋಶೆಯು ಅತಿ ಪ್ರಮುಖ ವ್ಯಕ್ತಿಯಾಗಿದ್ದರೂ, ಅದು ದೇವರಿಗೆ ಯಾವ ವ್ಯತ್ಯಾಸವನ್ನೂ ಮಾಡಲಿಲ್ಲ. ಒಬ್ಬನಲ್ಲಿ ಅವಿಧೇಯತೆಯು ಕಂಡುಬಂದರೆ, ಆ ವ್ಯಕ್ತಿ ಮೋಶೆಯೇ ಆಗಿರಲಿ, ಅವರು ಅವನ ಪ್ರಾಣವನ್ನೇ ತೆಗೆಯುತ್ತಿದ್ದರು. ದೇವರಲ್ಲಿ ಪಕ್ಷಪಾತವಿಲ್ಲ.

ದೇವರು ಮೋಶೆಗೆ ಇಸ್ರಾಯೇಲ್ಯರನ್ನು ಕಾನಾನ್‌ದೇಶಕ್ಕೆ ನಡೆಸುವ ಭಾಗ್ಯವನ್ನು ನಿರಾಕರಿಸಿದ್ದು ನಿಜವೇ, ಆದರೂ, ಎಲ್ಲಾ ಸಮಯದಲ್ಲೂ ದೇವರ ಅತಿ ನಂಬಿಗಸ್ತ ಸೇವಕನಾಗಿದ್ದ ಆತನಿಗೆ, 1500 ವರ್ಷಗಳ ತರುವಾಯ, ವಾಗ್ದಾನ ಮಾಡಿದ ದೇಶವನ್ನು ದೇವರ ಕೃಪೆಯಿಂದ ಪ್ರವೇಶಿಸಿ, ರೂಪಾಂತರ ಬೆಟ್ಟದ ಮೇಲೆ ಯೇಸುವಿನೊಂದಿಗೆ ನಿಲ್ಲುವ ಅವಕಾಶವನ್ನು ದೇವರು ನೀಡಿದರೆಂದು ನಾವು ಮತ್ತಾಯ 17:2,3ರಲ್ಲಿ ನೋಡುತ್ತೇವೆ - ಅಲ್ಲಿ ಅವರ (ಪೇತ್ರ, ಯಾಕೋಬ, ಯೋಹಾನರ) ಕಣ್ಣಮುಂದೆ ಆತನ ರೂಪ ಬೇರೆಯಾಯಿತು ..... ಇದಲ್ಲದೆ, ಮೋಶೆಯೂ ಎಲೀಯನೂ ಆತನ ಸಂಗಡ ಮಾತಾಡುತ್ತಾ ಕಾಣಿಸಿಕೊಂಡರು.

ದೇವರು ದೀರ್ಘಶಾಂತನು, ಕನಿಕರ ಉಳ್ಳವನು ಮತ್ತು ಯಾರೇ ಆಗಲೀ ಮಾಡಿರುವ ತ್ಯಾಗ-ಶ್ರಮೆಗಳ ಪ್ರೀತಿಯ ಸೇವೆಯನ್ನು ಮರೆಯುವ ಅನೀತಿವಂತನು ಆತನಲ್ಲ.

ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ, ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ (ಇಬ್ರಿಯ 6:10).

ಆದರೆ ದೇವರು ಹೆಚ್ಚಿನ ಕಟ್ಟು-ನಿಟ್ಟಳೆಯುಳ್ಳವರು ಆಗಿದ್ದಾರೆ.

ಆದ್ದರಿಂದ ದೇವರ ದಯೆಯನ್ನೂ, ಕಾಠಿಣ್ಯವನ್ನೂ ನೋಡು (ರೋಮಾ 11:22).

ದೇವರಿಗೆ ಮೆಚ್ಚುಗೆಯಾಗುವ ಸೇವೆಯನ್ನು ನಾವು ಅರ್ಪಿಸಬೇಕಾಗಿದ್ದರೆ, ನಾವು ದೇವರ ಭಯದಿಂದ ನಡೆಯಬೇಕು.

ಯಾರೂ ಕದಲಿಸಲಾರದ ರಾಜ್ಯವನ್ನು ಹೊಂದುವವರಾದ ನಾವು, ಕೃತಜ್ಞತೆಯುಳ್ಳವರಾಗಿದ್ದು, ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ, ಭಯದಿಂದಲೂ ಮಾಡೋಣ; ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ (ಇಬ್ರಿಯ 12:28,29).

ತಿಮೊಥೆಯನ ಹಾಗೆ ನಾವೂ ದೇವರ ದೃಷ್ಟಿಗೆ ಯೋಗ್ಯರಾಗಿ ಇರಲು ಪ್ರಯಾಸಪಡೋಣ (2ತಿಮೊಥೆ 2:15).

ಅಧ್ಯಾಯ 8
ದಾವೀದನ ಪರೀಕ್ಷೆ

ದಾವೀದನ ವಿಷಯವಾಗಿ ದೇವರ ಸಾಕ್ಷಿ ಹೀಗಿದೆ, ದಾವೀದನು ನನಗೆ ಸಿಕ್ಕಿದನು, ಅವನು ನನಗೆ ಒಪ್ಪುವ ಮನುಷ್ಯನು, ಅವನು ನನ್ನ ಇಷ್ಟವನ್ನೆಲ್ಲಾ ನೆರವೇರಿಸುವನು (ಅ. ಕೃ. 13:22).

ಇಸ್ರಾಯೇಲ್ಯರ ಅರಸನಾಗಿ ದೇವರ ಮೊದಲ ಆಯ್ಕೆಯಾಗಿದ್ದವನು ಸೌಲನು. ಆದರೆ ಸೌಲನು ದೇವರು ಒದಗಿಸಿದ ಎರಡು ಪರೀಕ್ಷೆಗಳಲ್ಲೂ - ತಾಳ್ಮೆ ಇಲ್ಲದೆ (1 ಸಮುವೇಲ 13) ಮತ್ತು ಅವಿಧೇಯತೆಯಿಂದ (1 ಸಮುವೇಲ 15) - ಬಿದ್ದುಹೋದನು. ಆದುದರಿಂದ ದೇವರು ಅವನಿಂದ ರಾಜ್ಯವನ್ನು ಕಿತ್ತುಕೊಂಡು, ಅದನ್ನು ದಾವೀದನಿಗೆ ಕೊಟ್ಟರು.

ತಾನು ಅರಸನಾಗಿ ಅಭಿಷೇಕಿಸಲ್ಪಟ್ಟಂದಿನಿಂದ, ಆ ಇಸ್ರಾಯೇಲ್ ಸಿಂಹಾಸನದ ಮೇಲೆ ವಾಸ್ತವಿಕವಾಗಿ ಕುಳಿತುಕೊಳ್ಳುವವರೆಗೆ, ದಾವೀದನು ದೀರ್ಘವಾದ ಮತ್ತು ಕಷ್ಟಕರವಾದ ಮಾರ್ಗವನ್ನು ತುಳಿಯಬೇಕಾಯಿತು. ಆ ಅವಧಿಯ ಉದ್ದಕ್ಕೂ ಆತನು ದೇವರಿಂದ ನಾನಾ ರೀತಿಯಲ್ಲಿ ಪರೀಕ್ಷಿಸಲ್ಪಟ್ಟನು - ಹಾಗೂ ಅರ್ಹತೆಯನ್ನು ಆತನು ಪಡೆದನು.

ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ನಂಬಿಗಸ್ತಿಕೆ

ದಾವೀದನಲ್ಲಿ ನಾವು ಕಾಣುವ ಮೊದಲನೆಯ ವಿಷಯವೆಂದರೆ, ತನ್ನ ದೈನಂದಿನದ ಕೆಲಸಗಳಲ್ಲಿ - ಮನೆಗೆಲಸದಲ್ಲಿ ಮತ್ತು ಕುರುಬ ಹುಡುಗನಾಗಿ ಕುರಿಮೇಯಿಸುವ ಕೆಲಸದಲ್ಲಿ - ಆತನು ನಿಷ್ಠಾವಂತನಾಗಿದ್ದಾಗ ಆತನನ್ನು ದೇವರು ಕರೆದರು.

ದೇವರ ಆಜ್ಞೆಯಂತೆ,ಸಮುವೇಲನು ಇಷಯನ ಮಕ್ಕಳಲ್ಲೊಬ್ಬನನ್ನು ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಲು ಬಂದಾಗ, ಸಮುವೇಲನು ಇಷಯನನ್ನು - ’ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ1’ ಎಂದು ಕೇಳಲು, ಅವನು - ’ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿರುತ್ತಾನೆ. ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ,’ ಎಂದು ಉತ್ತರಕೊಟ್ಟನು (1 ಸಮುವೇಲ 16:11).

ನಮ್ಮ ಜೀವಿತವನ್ನು ದೇವರು ಮೆಚ್ಚಬೇಕಿದ್ದರೆ, ಮನೆಯಲ್ಲೂ ಮತ್ತು ನಮ್ಮ ಕೆಲಸದ ಸ್ಥಳದಲ್ಲೂ ನಾವು ನಂಬಿಗಸ್ತರಾಗಿ ಇರುವುದು ಮುಖ್ಯವಾಗಿದೆ.

ಯೇಸುವು ಹೇಗೆ ದೇವರ ಮೆಚ್ಚುಗೆಯನ್ನು ಸಂಪಾದಿಸಿದರನು, ಎಂದು ನಾವು ಆಲೋಚಿಸಿದಾಗ ನಾವು ಇದನ್ನು ನೋಡಿದ್ದೆವು. ಇದು ಬಹಳ ಮುಖ್ಯವಾದ ವಿಷಯವಾಗಿದ್ದು, ಮತ್ತೊಮ್ಮೆ ಇದನ್ನು ಪರಿಶೀಲಿಸುವುದು ಒಳ್ಳೆಯದು.

ನಿರುದ್ಯೋಗಿಯಾದ ಯಾರನ್ನೂ ಯೇಸುವು ದೇವರ ವಾಕ್ಯದ ಸೇವೆಗೆ ಎಂದೂ ಕರೆಯಲಿಲ್ಲ. ಸುವಾರ್ತೆಗಳಲ್ಲಿ ವಿವರಿಸಲಾಗಿರುವ ಪ್ರತಿಯೊಬ್ಬ ಅಪೋಸ್ತಲನ ದೇವರ ಸೇವೆಯ ಕರೆಯೂ ಬಂದಿದ್ದು ಆತನ ಕಾರ್ಯಸ್ಥಾನದಲ್ಲೇ.

ಇಂದಿನ ಭಾರತದೇಶದಲ್ಲಿ ಕ್ರೈಸ್ತ ಸೇವೆಯ ದುರಂತವೇನೆಂದರೆ, ಪೂರ್ಣಾವಧಿ ಕ್ರಿಸ್ತೀಯ ಸೇವೆಯಲ್ಲಿರುವವರಲ್ಲಿ ಬಹುತೇಕ ಜನರು ಯಾವತ್ತೂ ಪ್ರಾಪಂಚಿಕ ನೌಕರಿ ಮಾಡಿದವರಲ್ಲ. ದೇವರು ಅವರನ್ನು ತನ್ನ ಸೇವೆಗೆ ಕರೆದಿರುವುದನ್ನೇ ಈ ಒಂದು ನಿಜಾಂಶವು ಸಂದೇಹಾಸ್ಪದವನ್ನಾಗಿಸಿದೆ. ನಮ್ಮ ಲೌಕಿಕ ಜೀವನದ ಸಾಮಾನ್ಯ ಕೆಲಸಗಳಲ್ಲಿ ನಿಷ್ಠಾವಂತಿಕೆಯನ್ನು ದೇವರು ಬಹಳ ಪ್ರಾಮುಖ್ಯವೆಂದು ಪರಿಗಣಿಸುತ್ತಾರೆ. ಅವರ ಸೇವೆಗೆ ನಮ್ಮನ್ನು ಅರ್ಹರನ್ನಾಗಿ ಮಾಡುವುದು ಇದೇ ಆಗಿದೆ.

ದೇವರ ನಾಮದ ಮಹಿಮೆಯ ಬಗ್ಗೆ ಚಿಂತೆ

ದಾವೀದನಲ್ಲಿ ನಾವು ಕಾಣುವ ಎರಡನೇ ವಿಷಯವೆಂದರೆ, ದೇವರ ನಾಮದ ಮಹಿಮೆಯ ಬಗ್ಗೆ ಅವನಲ್ಲಿದ್ದ ಕಾಳಜಿ. ಗೊಲ್ಯಾತನು ಇಸ್ರಾಯೇಲ್ಯರ ಸೈನ್ಯವನ್ನು ಹೀಯಾಳಿಸುತ್ತಿರುವಾಗ, ಆ ದೈತ್ಯನಿಗೆ ಸವಾಲನ್ನು ನೀಡಿ ಎದುರಿಸಲು ದಾವೀದನನ್ನು ಪ್ರಚೋದಿಸಿದ್ದು ಕಳಪೆ ಸಾಹಸದ ಹಂಬಲವಲ್ಲ - ಅದು ದೇವರ ನಾಮದ ಮಹಿಮೆಯ ಬಗ್ಗೆ ಅವನಿಗಿದ್ದ ಅಭಿಮಾನವಾಗಿತ್ತು.

ನಾವು ಹೀಗೆಂದು ಓದುತ್ತೇವೆ: ದಾವೀದನು, ’ಜೀವ ಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು1 ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದು ಹಾಕುವವನಿಗೆ ಸಿಕ್ಕುವದೇನೆಂದು ಹೇಳಿದಿರಿ1’ ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಿದನು (1 ಸಮುವೇಲ 17:26).

ಪ್ರತಿಯೊಬ್ಬ ನಿಜವಾದ ದೇವರ ಸೇವಕನ ಅತೀ ಮಹತ್ವದ ಗುರುತೇನೆಂದರೆ, ಆತನ ಹೃದಯದ ಮುಖ್ಯ ಆಸಕ್ತಿ ದೇವರ ಮಹಿಮೆಯಾಗಿರುತ್ತದೆ. ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ, ಎನ್ನುವದು ಆತನ ಪ್ರಾರ್ಥನೆಯಲ್ಲಿ ಹೊಮ್ಮುವ ಪ್ರಥಮ ಬೇಡಿಕೆಯಾಗಿದೆ (ಮತ್ತಾಯ 6:9).

ವೈಯಕ್ತಿಕ ಸೌಕರ್ಯ ಮತ್ತು ಸುರಕ್ಷತೆ - ಇವು ಅವನಿಗೆ ಮುಖ್ಯವಲ್ಲ. ದೇವರು ನಮ್ಮೆಲ್ಲರನ್ನು ಪರೀಕ್ಷೆ ಮಾಡುವದು ಇದೇ ಕ್ಷೇತ್ರದಲ್ಲಿ ಎದುರಾಗುವ ವಿವಿಧ ಸನ್ನಿವೇಶಗಳಲ್ಲಿ. ಪರೀಕ್ಷೆಯಲ್ಲಿ ಯಶಸ್ವಿಯಾಗುವವರು ಕೆಲವರು ಮಾತ್ರ. ದಾವೀದನು ಅವರಲ್ಲೊಬ್ಬನಾಗಿದ್ದನು.

ದಾವೀದನಲ್ಲಿ ದೇವರ ನಾಮವನ್ನು ಘನಪಡಿಸುವ ಆಸಕ್ತಿ ಎಷ್ಟು ಗಾಢವಾಗಿತ್ತೆಂದರೆ, ಅದರ ಮೂಲಕ ತನಗೆ ದೇವರು ಗೊಲ್ಯಾತನನ್ನು ಸೋಲಿಸಲು ಖಂಡಿತವಾಗಿ ಸಹಾಯ ಮಾಡುವರೆಂಬ ದೃಢವಾದ ನಂಬಿಕೆಯು ಅವನಲ್ಲಿ ಬೇರೂರಿತ್ತು. ಈ ನಂಬಿಕೆಯು ಅವನಲ್ಲಿದ್ದ ಎಲ್ಲಾ ಭಯವನ್ನು ಓಡಿಸಿತು. ಆ ನಂಬಿಕೆಯಿಂದ ಕೂಡಿದವನಾಗಿ ಆತನು ಹೊರಟು ಆ ದೈತ್ಯನನ್ನು ಸಂಹರಿಸಿದನು ಮತ್ತು ಇಸ್ರಾಯೇಲ್ಯರ ವೈರಿಗಳನ್ನು ಹೊಡೆದೋಡಿಸಿದನು.

ನಾವು ದೇವರ ನಾಮದ ಮಹಿಮೆಯ ಬಗ್ಗೆ ದಾವೀದನಷ್ಟೇ ಚಿಂತೆಯುಳ್ಳವರಾಗಿದ್ದರೆ, ದೇವರ ಮೇಲಿನ ನಂಬಿಕೆಯು ಹೃದಯದಿಂದ ಎಲ್ಲಾ ಭಯವನ್ನು ಓಡಿಸುವುದನ್ನು, ಮತ್ತು ಎಲ್ಲಾ ಗೊಲ್ಯಾತರು ಕೊಲ್ಲಲ್ಪಡುವುದನ್ನು ನಾವು ಕೂಡ ಕಾಣುವೆವು. ಅನೇಕ ಬಾರಿ ದೇವರ ನಾಮದ ಬಗ್ಗೆ ನಮ್ಮ ಕಾಳಜಿಯು ಅತಿ ಕ್ಷೀಣವಾಗಿದ್ದು, ನಾವು ಧೈರ್ಯವಾಗಿ ನಂಬಿಕೆಯೊಡನೆ ಮುಂದೆ ಸಾಗುವ ಬದಲು ಹೇಡಿತನದಲ್ಲೇ ಉಳಿಯುತ್ತೇವೆ.

ಪ್ರತೀಕಾರ ಮಾಡಲು ನಿರಾಕರಿಸುವುದು

ದಾವೀದನ ಶೋಧನೆಗಳು ಗೊಲ್ಯಾತನ ಸಂಹಾರದೊಂದಿಗೆ ಕೊನೆಗೊಳ್ಳಲಿಲ್ಲ. ಅವುಗಳು ಆರಂಭವಾಗಿದ್ದವು, ಅಷ್ಟೇ. ದಾವೀದನ ಜನಪ್ರಿಯತೆಯನ್ನು ಕಂಡು ಸೌಲನಲ್ಲಿ ಉಂಟಾದ ಅಸೂಯೆಯು, ಆತನು ದಾವೀದನನ್ನು ಕೊಲ್ಲುವುದಕ್ಕಾಗಿ ಇಸ್ರಾಯೇಲಿನ ಉದ್ದಗಲಕ್ಕೂ ಅವನನ್ನು ಅಟ್ಟಿಸಿಕೊಂಡು ಹೋಗುವಂತೆ ಮಾಡಿತು. ಇದರಿಂದ ದಾವೀದನು ಊರಿಂದ ಊರಿಗೆ, ಗವಿಯಿಂದ ಗವಿಗೆ ಓಡಬೇಕಾಯಿತು.

ಎರಡು ಸಂದರ್ಭಗಳಲ್ಲಿ, ಸೌಲನು ಒಂಟಿಯಾಗಿದ್ದಾಗ ದಾವೀದನ ಕೈಗೆ ಸಿಕ್ಕಿಬಿದ್ದು, ಆತನನ್ನು ದಾವೀದನು ಸುಲಭವಾಗಿ ಕೊಲ್ಲಬಹುದಾಗಿತ್ತು. ದಾವೀದನ ಸಂಗಡಿಗರು ಹಾಗೆಯೇ ಮಾಡಲು ಹೇಳಿದರು. ಆದರೆ ದಾವೀದನು ನಿರಾಕರಿಸಿದನು. ಅವನು ದೇವರ ಅಭಿಷಕ್ತನಾದ ಅರಸನಿಗೆ - ಆ ಅರಸನು ನೀತಿಮಾರ್ಗದಿಂದ ಹಿಂಜರಿದು ಹೋಗಿದ್ದರೂ - ಕೇಡು ಮಾಡಲು ಒಪ್ಪಲಿಲ್ಲ. ಸೌಲನಿಂದ ಸಿಂಹಾಸನವನ್ನು ಕಸಿದುಕೊಳ್ಳಲು ದಾವೀದನು ಇಷ್ಟಪಡಲಿಲ್ಲ. ದೇವರು ಅವರ ಸತ್ಕಾಲದಲ್ಲಿ ತನ್ನನ್ನು ಸಿಂಹಾಸನಕ್ಕೇರಿಸಲು ಶಕ್ತರೆಂದು ಅವನು ನಂಬಿದ್ದನು.

ಗೊಲಾತ್ಯನನ್ನು ಕೊಲ್ಲಲು ದೇವರು ತನ್ನನ್ನು ಬೆಂಬಲಿಸುವರೆಂಬ ದಾವೀದನ ನಂಬಿಕೆಗಿಂತ ಹೆಚ್ಚು ವಿಸ್ಮಯಕಾರಿಯಾದುದೆಂದರೆ, ಅವನಿಗೆ ದೇವರ ಸಾರ್ವಭೌಮತೆಯಲ್ಲಿದ್ದ ನಂಬಿಕೆಯು.

ದಾವೀದನ ಕೈಗೆ ಸೌಲನು ಸಿಕ್ಕಿಬಿದ್ದಾಗ - ಒಮ್ಮೆ ಮಾತ್ರವಲ್ಲ, ಎರಡುಸಾರಿ - ದಾವೀದನು ದೇವರಿಂದ ಪರೀಕ್ಷೆಗೆ ಒಳಗಾಗಿದ್ದನು. ಮೊದಲ ಘಟನೆಯನ್ನು 1 ಸಮುವೇಲ 24:3-7ರಲ್ಲಿ ದಾಖಲಿಸಲಾಗಿದೆ:

ಸೌಲನು ಮಾರ್ಗದಲ್ಲಿ ಕುರಿ ಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕೋಸ್ಕರ ಅದರೊಳಗೆ ಪ್ರವೇಶಿಸಿದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂದುಗಡೆಯಲ್ಲಿ ಅಡಗಿಕೊಂಡಿದ್ದರು. ಜನರು ದಾವೀದನಿಗೆ, ’ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಆಗ ನೀನು ಅವನನ್ನು ಮನಸ್ಸಿಗೆ ಬಂದಂತೆ ನಡೆಸಬಹುದು ಎಂದು ಯೆಹೋವನು ನಿನಗೆ ಹೇಳಿದ ಮಾತು ನೆರವೇರುವ ದಿವಸ ಇದೇ’ ಅಂದಾಗ, ಅವನೆದ್ದು ಮೆಲ್ಲಗೆ ಹೋಗಿ, ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡನು. ಅನಂತರದಲ್ಲಿ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿದಕ್ಕಾಗಿ ಅವನ ಮನಸಾಕ್ಷಿಯು ಅವನನ್ನು ಹಂಗಿಸ ತೊಡಗಿತು. ಅವನು ಜನರಿಗೆ, ’ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ, ನನ್ನ ಒಡೆಯನೂ ಆಗಿದ್ದಾನೆ; ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿ ಮಾಡಲಿ’ ಎಂದು ಹೇಳಿದನು. ಈ ಮಾತುಗಳಿಂದ ಸೌಲನಿಗೆ ವಿರೋಧವಾಗಿ ಏಳದಂತೆ ತನ್ನ ಜನರನ್ನು ತಡೆದನು. ಸೌಲನು ಗವಿಯಿಂದ ಹೊರಗೆ ಬಂದು ಮುಂದೆ ಹೋದನು.

ಎರಡನೇ ಘಟನೆಯನ್ನು 1 ಸಮುವೇಲ 26:7-12ರಲ್ಲಿ ದಾಖಲಿಸಲಾಗಿದೆ:

ದಾವೀದನೂ ಅಬೀಷೈಯೂ ರಾತ್ರಿಯಲ್ಲಿ ಆ ಪಾಳೆಯಕ್ಕೆ ಹೋದಾಗ ಸೌಲನು ಬಂಡಿಗಳ ಗುಂಪಿನ ಮಧ್ಯದಲ್ಲಿ ಮಲಗಿಕೊಂಡು ನಿದ್ರೆ ಮಾಡುತ್ತಿದ್ದನು. ಅವನ ಭರ್ಜಿಯು ಅವನ ತಲೆಯ ಹತ್ತಿರ ನೆಲದಲ್ಲಿ ನೆಡಲ್ಪಟ್ಟಿತ್ತು. ಅಬ್ನೇರನೂ ಸೈನಿಕರೂ ಅವನ ಸುತ್ತಲೂ ಮಲಗಿದ್ದರು. ಅಬೀಷೈಯು ದಾವೀದನಿಗೆ, ’ದೇವರು ಈ ಹೊತ್ತು ನಿನ್ನ ವೈರಿಯನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾನೆ; ಅಪ್ಪಣೆಯಾಗಲಿ, ನಾನು ಭರ್ಜಿಯಿಂದ ಒಂದೇ ಪೆಟ್ಟಿನಲ್ಲಿ ಅವನನ್ನು ನೆಲಕ್ಕೆ ಹತ್ತಿಕೊಳ್ಳುವಂತೆ ತಿವಿಯುವೆನು; ಎರಡನೆಯ ಸಾರಿ ಹೊಡೆಯುವದು ಅವಶ್ಯವಿಲ್ಲ’ ಎಂದು ಹೇಳಿದನು. ಆದರೆ ದಾವೀದನು, ’ ಅವನನ್ನು ಕೊಲ್ಲಬೇಡ; ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನಾದರೂ ನಿರಪರಾಧಿಯೆಂದು ಎಣಿಸಲ್ಪಡುವನೋ1’ ಅಂದನು. ಇದಲ್ಲದೆ ದಾವೀದನು, ’ಯೆಹೋವನಾಣೆ, ಅವನು ಯೆಹೋವನಿಂದ ಸಾಯುವನು; ಇಲ್ಲವೆ ಕಾಲ ತುಂಬಿ ಮೃತಿಹೊಂದುವನು; ಅಥವಾ ಯುದ್ಧದಲ್ಲಿ ಮಡಿಯುವನು. ತನ್ನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನ್ನನ್ನು ತಡೆಯಲಿ. ಈಗ ಅವನ ತಲೆಯ ಬಳಿಯಲ್ಲಿರುವ ಭರ್ಜಿಯನ್ನೂ ತಂಬಿಗೆಯನ್ನೂ ತೆಗೆದುಕೊಂಡು ಹೋಗೋಣ,’ ಎಂದು ಹೇಳಿ, ಸೌಲನ ತಲೆದಿಂಬಿನ ಬಳಿಯಲ್ಲಿದ್ದ ಭರ್ಜಿ ತಂಬಿಗೆಗಳನ್ನು ತೆಗೆದುಕೊಂಡು ಹೋದನು. ಯಾರೂ ಕಾಣಲಿಲ್ಲ, ಯಾರಿಗೂ ಗೊತ್ತಾಗಲಿಲ್ಲ; ಯಾರೂ ಎಚ್ಚರವಾಗಲಿಲ್ಲ, ಯಾಕಂದರೆ ಯೆಹೋವನು ಅವರಿಗೆ ಗಾಢವಾದ ನಿದ್ರೆಯನ್ನು ಬರಮಾಡಿದ್ದನು; ಒಬ್ಬರಿಗೂ ಎಚ್ಚರವಿಲ್ಲದೆ ಎಲ್ಲರೂ ನಿದ್ರೆಮಾಡುತ್ತಿದ್ದರು.

ಪ್ರತೀಸಲವೂ ದಾವೀದನು ಪರೀಕ್ಷೆಯಲ್ಲಿ ಪಾಸಾದನು. ಅವನು ಪ್ರತೀಕಾರ ಮಾಡಲಿಲ್ಲ - ಮುಯ್ಯಿ ತೀರಿಸುವುದು ದೇವರ ಕೆಲಸವೆಂದು ಅವನಿಗೆ ಗೊತ್ತಿತ್ತು. ಕೆಟ್ಟತನವನ್ನು ಒಳ್ಳೇತನದಿಂದ ಸೋಲಿಸಲು ಅವನು ನಿರ್ಣಯಿಸಿದ್ದನು.

ವೇದವಾಕ್ಯವು ಹೀಗೆನ್ನುತ್ತದೆ, ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ, ’ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು,’ ಎಂದು ಕರ್ತನು ಹೇಳುತ್ತಾನೆಂಬುದಾಗಿ ಬರೆದಿದೆ. ಹಾಗಾದರೆ, ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು. ಕೆಟ್ಟತನಕ್ಕೆ ಸೋತು ಹೋಗದೆ, ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು(ರೋಮಾ 12:19-21).

ದೇವರ ಸಾರ್ವಭೌಮತ್ವದಲ್ಲಿ ನಂಬಿಕೆ

ದೇವರು ದಾವೀದನಿಗೆ ರಾಜಪೀಠದ ವಾಗ್ದಾನವನ್ನು ಮಾಡಿದ್ದರು. ದೇವರು ಅದನ್ನು ತನಗೆ ಕೊಡುವವರೆಗೆ ಕಾದಿರಲು ದಾವೀದನು ಸಿದ್ಧನಾಗಿದ್ದನು.

ದೇವರು ಈಗಾಗಲೇ ನಮಗೆ ಮಾಡಿರುವ ವಾಗ್ದಾನಕ್ಕಾಗಿ ನಾವು ಕಾಯಬೇಕಾದಾಗ, ಅದು ನಮ್ಮ ನಂಬಿಕೆ ಮತ್ತು ತಾಳ್ಮೆಗಳ ಒಂದು ದೊಡ್ಡ ಪರೀಕ್ಷೆಯೇ.

ದೇವರಲ್ಲಿ ನಂಬಿಕೆಯಿಟ್ಟು ಕಾಯುವುದರಿಂದ ದಾವೀದನು ಏನನ್ನೂ ಕಳೆದುಕೊಳ್ಳಲಿಲ್ಲ. ದಾವೀದನು ತನ್ನ ಮೂವತ್ತನೇ ಜನ್ಮದಿನವನ್ನು ಪೂರೈಸಿದ ಮೇಲೆ ಅರಸನಾಗಬೇಕೆಂದು ದೇವರು ಯೋಜಿಸಿದ್ದರು; ಮತ್ತು ದೇವರ ಯೋಜನೆಯಂತೆಯೇ ಸಂದರ್ಭಗಳು ಒದಗಿಬಂದವು.

ದಾವೀದನು ಮೂವತ್ತು ವರುಷದವನಾದಾಗ ಅರಸನಾದನು (2 ಸಮುವೇಲ 5:4).

ತಾನು ನೇಮಿಸಿದ ಸಮಯದಲ್ಲಿ ಒಬ್ಬನನ್ನು ಸಿಂಹಾಸನಕ್ಕೆ ಏರಿಸಲು ದೇವರು ಸಾಮರ್ಥ್ಯವುಳ್ಳವರು, ಎಂಬುದನ್ನು ದಾವೀದನು ಯೋಸೇಫನ ಜೀವನಚರಿತ್ರೆಯಿಂದ ಕಲಿತಿದ್ದನು, ಎಂಬುದರಲ್ಲಿ ಸಂದೇಹವಿಲ್ಲ.

ಅನೇಕ ವರ್ಷಗಳ ಹಿಂದೆ, ಯೋಸೇಫನನ್ನೂ ಕರ್ತನ ವಾಕ್ಯವು ಕಠಿಣ ಸನ್ನಿವೇಶಗಳಲ್ಲಿ ಶೋಧಿಸಿತ್ತು.

ಅವನ ಕಾಲುಗಳು ಕೋಳದಲ್ಲಿ ನೊಂದವು; ಕಬ್ಬಿಣದ ಬೇಡಿಗಳಿಂದ ಅವನು ಬಂಧಿತನಾದನು. ಅವನು ತನ್ನ ಮಾತು ನೆರವೇರುವ ತನಕ ಯೆಹೋವನ ವಾಕ್ಯದಿಂದ ಶೋಧಿತನಾದನು(ಕೀರ್ತನೆ 105:18,19).

ಆದರೆ ತನ್ನ ಮೂವತ್ತನೇ ಜನ್ಮದಿನವನ್ನು ದಾಟಿದೊಡನೆಯೇ, ದೇವರ ಸಮಯವು ಬಂದು, ಯೋಸೇಫನು ಐಗುಪ್ತದಲ್ಲಿ ಎರಡನೇ ಅಧಿಕಾರಿಯಾದನು.

ಯೋಸೇಫನು ಐಗುಪ್ತದೇಶದ ಅರಸನಾದ ಫರೋಹನ ಸನ್ನಿಧಿಯಲ್ಲಿ ನಿಂತಾಗ ಮೂವತ್ತು ವರುಷದವನಾಗಿದ್ದನು (ಆದಿ. 41:46).

ಅವನ ಸಹೋದರರ ಮತ್ಸರವಾಗಲೀ, ಪೋಟಿಫರನ ಹೆಂಡತಿಯ ಸುಳ್ಳು ಆರೋಪವಾಗಲೀ, ಯೋಸೇಫನಿಗಾಗಿದ್ದ ದೇವರ ಯೋಜನೆಯು ನೆರವೇರುವುದಕ್ಕೆ ಅಡ್ಡಿಯಾಗಲಿಲ್ಲ. ನಿಜ ಹೇಳಬೇಕೆಂದರೆ, ದೇವರ ಚಿತ್ತ ಪೂರೈಸುವುದಕ್ಕೆ ಇವೆಲ್ಲವುಗಳಿಂದ ಒಂದು ದಿನವಾದರೂ ತಡವಾಗಲಿಲ್ಲ.

ಆ ಕಥೆಯನ್ನು ಓದಿದ್ದ ದಾವೀದನು ಈಗ ದೇವರ ನಂಬಿಗಸ್ಥಿಕೆ ಮತ್ತು ಪರಮಾಧಿಕಾರಗಳನ್ನು ತನ್ನ ಜೀವಿತದಲ್ಲಿ ರುಜುಪಡಿಸಲು ನಿರ್ಣಯಿಸಿದ್ದನು. ಮತ್ತು ದೇವರು ಯೋಸೇಫನಿಗೆ ಮಾಡಿದ್ದನ್ನು ತನಗೂ ಮಾಡುವರೆಂದು ಕಂಡುಕೊಂಡನು.

ಈಗ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ಯೋಸೇಫನಿಗೂ, ದಾವೀದನಿಗೂ ಮತ್ತು ಇನ್ನೂ ಅನೇಕರ ದೊಡ್ಡ ಗುಂಪಿಗೆ ದೇವರು ಮಾಡಿದ್ದನ್ನು ನಮಗೂ ಮಾಡುವರೆಂಬ ವಿಶ್ವಾಸವು ನಮ್ಮಲ್ಲಿದೆಯೇ, ಎನ್ನುವದು. ಇಲ್ಲಿಯೇ ನಮ್ಮ ನಂಬಿಕೆಯು ಪರೀಕ್ಷಿಸಲ್ಪಡುವದು.

ಉದಾಹರಣೆಗೆ - ನಿನಗೋಸ್ಕರವಾಗಿ ದೇವರು ಇಟ್ಟಿರುವ ಜೀವನಸಂಗಾತಿಯನ್ನು, ನೀನು ಕಿತ್ತುಕೊಳ್ಳದೇ ಅಥವಾ ಲೌಕಿಕ ರೀತಿಯಲ್ಲಿ ವರ್ತಿಸದೇ, ದೇವರು ನಿನಗೆ ಒದಗಿಸುವರೆಂದು ನೀನು ನಂಬುತ್ತೀಯೋ1 ಹಾಗೆಯೇ, ನಿನಗೋಸ್ಕರವಾಗಿ ದೇವರು ಯೋಜಿಸಿರುವ ಆ ಕೆಲಸ ಮತ್ತು ಆ ಮನೆ - ಜೊತೆಗೆ ಈ ಲೋಕದಲ್ಲಿ ಜೀವಿಸಲು ಬೇಕಾಗಿರುವ ಎಲ್ಲವೂ - ಇವೆಲ್ಲಾ ನಿನಗೆ ದೇವರ ಸಮಯದಲ್ಲಿ ಬಂದು ಸೇರುವವೆ1 ಇಂತಹ ಅವಶ್ಯಕತೆಗಳನ್ನು ಎದುರಿಸುವಾಗಲೇ ನಮ್ಮ ನಂಬಿಕೆಯು ಪರೀಕ್ಷಿಸಲ್ಪಡುತ್ತದೆ.

ನನ್ನನ್ನು (ತಮ್ಮ ಪರವಾಗಿ ಕಾರ್ಯಪೂರೈಸಲು) ನಿರೀಕ್ಷಿಸಿಕೊಂಡವರು ಆಶಾಭಂಗಪಡರು (ಯೇಶಾಯ 49:23).

ನಮ್ಮ ದೇವನೊಬ್ಬನಲ್ಲದೆ, ನಿರೀಕ್ಷಿಸುವವನಿಗಾಗಿ ಕಾರ್ಯಕರ್ತನಾದ ಯಾವ ದೇವರನ್ನೂ ಜಗದ ಆದಿಯಿಂದ ಯಾರೂ ಕಂಡಿಲ್ಲ, ಕೇಳಿಲ್ಲ (ಯೇಶಾಯ. 64:4 ಲಿವಿಂಗ್).

ನಂಬಿಕೆಯುಳ್ಳ ಮನುಷ್ಯರು ಅತ್ಯುತ್ತಮವಾದ್ದನ್ನು - ಕಿತ್ತುಕೊಳ್ಳದೆಯೇ ಪಡೆಯುತ್ತಾರೆ.

ಜನ್ಮಸಿದ್ಧ ಹಕ್ಕನ್ನು ಹೊಂದಲು ತನ್ನ ತಂದೆಯನ್ನು ವಂಚಿಸಿದ ಯಾಕೋಬನ ಜೀವಿತವು ಎಷ್ಟು ಭಿನ್ನವಾಗಿತ್ತು! ಒಂದು ವೇಳೆ ಯಾಕೋಬನು ಈ ವಿಷಯವನ್ನು ದೇವರಿಗೆ ಒಪ್ಪಿಸಿ ನಂಬಿಕೆಯಿಂದ ಇದ್ದಿದ್ದರೆ, ಅವನು ಸುಳ್ಳನ್ನು ಹೇಳದೆಯೇ ಆಶೀರ್ವಾದವನ್ನು ಹೊಂದಬಹುದಾಗಿತ್ತು (ಆದಿಕಾಂಡ - 27). ಆದರೆ ಅವನು ಅದನ್ನು ತಪ್ಪಾದ ರೀತಿಯಲ್ಲಿ ಪಡೆದ ಕಾರಣ, ಮನೆ ಬಿಟ್ಟು ಓಡಿ, ಮುಂದಿನ ಇಪ್ಪತ್ತು ವರ್ಷಗಳ ಕಾಲ ಬಹಳ ನೋವನ್ನು ಅನುಭವಿಸ ಬೇಕಾಯಿತು.

ದೇವರ ವಾಕ್ಯದಲ್ಲಿ ಇವೆಲ್ಲಾ ಘಟನೆಗಳು ಬರೆಯಲ್ಪಟ್ಟಿರುವುದು, ನಾವು ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ಹಾಗೂ ದುಡುಕುತನಗಳಿಂದ ವರ್ತಿಸದಂತೆ, ನಮ್ಮ ಬೋಧನೆ ಮತ್ತು ಎಚ್ಚರಿಕೆಗಾಗಿ.

ಕಛೇರಿಯ ಒಂದು ಸಂಧಿಗ್ಧ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುವ ದುಷ್ಪ್ರೇರಣೆಯಾದಾಗ, ಆ ಶೋಧನೆಯ ಸೆಳೆತಕ್ಕೆ ನಾವು ಬಗ್ಗದೆ ದೇವರನ್ನು ಮಹಿಮೆಗೊಳಿಸಬಹುದು, ಮತ್ತು ನಮ್ಮನ್ನು ಅವರು ನೋಡಿಕೊಳ್ಳುವರೆಂದು ನಂಬಬಹುದು. ನಿಜವನ್ನು ನುಡಿದು ದೇವರನ್ನು ಮಹಿಮೆಪಡಿಸುವುದರಿಂದ ನೀವು ಎಂದಿಗೂ ನಷ್ಟ ಹೊಂದಲಾರಿರಿ. ಯಾವ ಸುಳ್ಳಿಗಿಂತಲೂ ದೇವರು ಹೆಚ್ಚು ಬಲಶಾಲಿಯಾಗಿದ್ದಾರೆ. ಸುಳ್ಳು ನಿಮ್ಮನ್ನು ಬಿಡುಗಡೆ ಮಾಡುವುದಾದರೆ, ದೇವರು ನಿಮ್ಮನ್ನು ಇನ್ನೂ ಎಷ್ಟೋ ಹೆಚ್ಚಾಗಿ ಬಿಡಿಸಬಲ್ಲರು!!

ಯಾಕಂದರೆ ಉದ್ಧಾರವು ಮೂಡಲಿಂದಾಗಲೀ, ಪಡುವಲಿಂದಾಗಲೀ, ಅರಣ್ಯದಿಂದಾಗಲೀ (ಅಂದರೆ, ಆಕಸ್ಮಿಕವಾಗಿ) ಬರುವದಿಲ್ಲ; ದೇವರೇ (ಯಾವ ಮನುಷ್ಯನೂ ಅಲ್ಲ) ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ (ಕೀರ್ತನೆ 75:6,7).

ಯಾರೂ ಅರಿತಿರದ ಒಬ್ಬ ಯೋಸೇಫ ಮತ್ತು ಒಬ್ಬ ದಾವೀದರ ನಂಬಿಗಸ್ಥಿಕೆಯನ್ನು ಪರೀಕ್ಷಿಸಿ, ಅವರನ್ನು ಮೇಲೇರಿಸಿ, ಒಂದು ಪ್ರಮುಖ ಸೇವೆಗಾಗಿ ಅವರನ್ನು ಉಪಯೋಗಿಸಲು ದೇವರಿಂದ ಮಾತ್ರವೇ ಸಾಧ್ಯ.

ಶೋಧನೆಗಳ ಮೂಲಕ ಸಮೃದ್ಧಿಗೆ

ದಾವೀದನು ತನ್ನ ಅನುಭವಗಳನ್ನು ನೆನಸಿಕೊಳ್ಳುತ್ತಾ ಹೀಗೆನ್ನುತ್ತಾನೆ, ಓ ದೇವರೇ, ನೀನು ನನ್ನನ್ನು ಪರೀಕ್ಷಿಸಿದ್ದೀ; ಬೆಳ್ಳಿಯನ್ನು ಶೋಧಿಸಿದಂತೆ ನನ್ನನ್ನು ಪುಟಕ್ಕೆ ಹಾಕಿದಿ. ನೀನು ನನ್ನನ್ನು ಬಲೆಗೆ ಬೀಳುವಂತೆ ಮಾಡಿದಿ; ನನ್ನ ಬೆನ್ನಿಗೆ ಬಹು ಭಾರವನ್ನು ಹಾಕಿದಿ. ನನ್ನ ಮೇಲೆ ಜನರನ್ನು ಇರಿಸಿ ಅವರು ನನ್ನ ತಲೆಯ ಮೇಲೆ ಹಾದು ಹೋಗುವಂತೆ ಮಾಡಿದಿ. ನಾನು ಬೆಂಕಿಯೊಳಕ್ಕೂ ನೀರಿನೊಳಕ್ಕೂ ಹಾದು ಹೋಗುವಂತೆ ಮಾಡಿದಿ. ಆದರೆ ಅವೆಲ್ಲವುಗಳ ಮೂಲಕ ನನ್ನನ್ನು ಕೊನೆಗೆ ಬಿಡುಗಡೆಗೂ ಮತ್ತು ಹೊರಸೂಸುವ ಸಮೃದ್ಧಿಗೂ ಬರಮಾಡಿದಿ(ಕೀರ್ತನೆ 66:10-12, ವಿವಿಧ ಅನುವಾದಗಳು).

ದಾವೀದನ ಪಾತ್ರೆ ತುಂಬಿತುಳುಕಿ ಸುತ್ತಲೂ ಹರಿಯಲು ಪ್ರಾರಂಭಿಸಿದ್ದು ಹೀಗೆಯೇ. (ಕೀರ್ತನೆ 66:10-12ರಲ್ಲಿ ಹೊರಸೂಸುವ ಸಮೃದ್ಧಿ ಎನ್ನುವುದಕ್ಕೆ ದಾವೀದನು ಉಪಯೋಗಿಸಿದ ಇಬ್ರಿಯ ಪದವನ್ನೇ ಕೀರ್ತನೆ 23:5ರಲ್ಲಿ ಹರಿದು ಓಡುತ್ತದೆ ಎಂಬ ಅರ್ಥದೊಡನೆ ಅವನು ಉಪಯೋಗಿಸಿರುವನು).

ದೇವರ ಅಂತಿಮ ಉದ್ದೇಶವೇನೆಂದರೆ, ನಾವು ಮಹಿಮೆಯಿಂದ ತುಂಬಿರುವ ಬಿಡುಗಡೆಯನ್ನು ಪಡೆದು, ನಮ್ಮ ಮೂಲಕ ಜೀವಕರವಾದ ಹೊಳೆಗಳು ಸತತವಾಗಿ ಹರಿಯುವಂತೆ ಆಗಬೇಕೆಂದು. ಆದರೆ ಮೊದಲು ನಮ್ಮನ್ನು ಪರೀಕ್ಷಿಸದೆ ದೇವರು ನಮ್ಮನ್ನು ಅಲ್ಲಿಗೆ ನಡೆಸಲಾರರು.

ದೇವರು ನಮ್ಮನ್ನು ಬೆಂಕಿಯ ಮತ್ತು ನೀರಿನ ಮೂಲಕ ಒಯ್ಯುವರು. ಜನರು ನಮ್ಮನ್ನು ನಿಂದಿಸಿ, ನಮ್ಮಿಂದ ದುರ್ಲಾಭವನ್ನು ಪಡೆಯಲು ಅವರು ಅನುಮತಿಸುತ್ತಾರೆ. ಬಲೆಯೊಳಗೆ - ಚಲನವಲನವನ್ನು ಮತ್ತು ಸೇವೆಯನ್ನು ಸೀಮಿತಗೊಳಿಸುವಂತಹ ಪರಿಸ್ಥಿತಿಯಲ್ಲಿ - ನಮ್ಮನ್ನು ಇರಿಸುತ್ತಾರೆ. ಇವೆಲ್ಲಾ ಸನ್ನಿವೇಶಗಳಲ್ಲಿ ನಮ್ಮ ಪ್ರತಿಕ್ರಿಯೆಗಳನ್ನು ಅವರು ವೀಕ್ಷಿಸುತ್ತಾರೆ. ನಮ್ಮ ಬಾಳಲ್ಲಿ ಅವರು ನಿಯಮಿಸಿರುವ ಎಲ್ಲವನ್ನೂ ನಾವು ದೀನತೆ, ಸಂತೋಷಗಳಿಂದ ತಲೆಬಾಗಿ ಸ್ವೀಕರಿಸಿದಲ್ಲಿ, ಕೊನೆಗೆ ತುಂಬಿ ಹರಿಯುವ ಸಮೃದ್ಧಿಗೆ ಅವರು ನಮ್ಮನ್ನು ಖಂಡಿತವಾಗಿ ತರುತ್ತಾರೆ.

ಪ್ರಾಮಾಣಿಕತೆಯಿಂದ ಪಾಪವನ್ನು ಒಪ್ಪಿಕೊಳ್ಳುವುದು

ದಾವೀದನ ಸ್ವಭಾವದಲ್ಲಿ ಕೊನೆಯದಾಗಿ ನಾವು ಗಮನಿಸಬಹುದಾದ ಒಂದು ವಿಷಯವೆಂದರೆ, ಅರಸನಾದ ನಂತರವೂ ತನ್ನನ್ನು ತಾನೇ ತೀರ್ಪುಮಾಡಿಕೊಳ್ಳಲು ಅವನಲ್ಲಿದ್ದ ಮನಸ್ಸು. ಅವನು ಬತ್ಷೆಬೆಯೊಂದಿಗೆ ಪಾಪಮಾಡಿದಾಗ, ಆ ಪಾಪದ ಗಂಭೀರತೆಯನ್ನು ಅವನು ಬೇಗನೇ ತಿಳಿಯಲಿಲ್ಲ. ಆಮೇಲೆ, ಪ್ರವಾದಿಯಾದ ನಾತಾನನು ಬಂದು ಆ ಪಾಪಕ್ಕಾಗಿ ಅವನನ್ನು ಆಪಾದಿಸಿದಾಗ, ದಾವೀದನು ದೀನನಾಗಿ ತನ್ನ ಪಾಪವನ್ನು ಒಪ್ಪಿಕೊಳ್ಳುವದನ್ನು ನಾವು ಕಾಣುತ್ತೇವೆ. ನಾನು ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡಿದ್ದೇನೆ, ಎಂದು ನಾತಾನನಿಗೆ ಅವನು ಅರಿಕೆಮಾಡಿಕೊಂಡನು (2 ಸಮುವೇಲ 12:13).

ಕೆಳಜಾರಿ ವ್ಯಭಿಚಾರಕ್ಕೆ ಬಿದ್ದ ದಾವೀದನೊಂದಿಗೆ ನಮ್ಮನ್ನು ನಾವು ಹೋಲಿಸಿಕೊಳ್ಳುವದು ಸರಿಯಲ್ಲ, ಏಕೆಂದರೆ ಅವನು ಹಳೆಯ ಒಡಂಬಡಿಕೆಯ ಸಮಯದಲ್ಲಿ ಇದ್ದಾತನು. ಅವನು ಕೃಪೆಗೆ ಒಳಗಾದವನಲ್ಲ. ಇಂದು ದೇವರು ನಮ್ಮಿಂದ ಅಪೇಕ್ಷಿಸುವ ಗುಣಮಟ್ಟವು ಬಹು ಉನ್ನತವಾದುದು.

ಈ ನಿಟ್ಟಿನಲ್ಲಿ ಈಗ ಯೇಸುವು ನಮಗಾಗಿ ಗೊತ್ತುಮಾಡಿರುವ ಮಟ್ಟವು ಮತ್ತಾಯ 5:28,29 ರಲ್ಲಿ ವಿವರಿಸಲ್ಪಟ್ಟಿದೆ: ಆದರೆ ನಾನು ನಿಮಗೆ ಹೇಳುವದೇನೆಂದರೆ - ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು. ನಿನ್ನ ಬಲಗಣ್ಣು ನಿನ್ನನ್ನು ಪಾಪಕ್ಕೆ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಡಿಬಿಡು; ನಿನ್ನ ದೇಹವೆಲ್ಲಾ ನರಕದಲ್ಲಿ ಬೀಳುವದಕ್ಕಿಂತ ಅವಯವಗಳಲ್ಲಿ ಒಂದು ಹೋಗುವದು ನಿನಗೆ ಹಿತವಲ್ಲವೇ1

ಆದರೆ ಪಾಪದ ಮನವರಿಕೆಯಾದಾಗ ದಾವೀದನು ತೋರಿದ ಪ್ರತಿಕ್ರಿಯೆಯಿಂದ ನಾವು ಕಲಿಯಬಹುದಾದ ಒಂದು ಲಾಭದಾಯಕ ಪಾಠವಿದೆ.

ಮಾನವ ದೃಷ್ಟಿಯಲ್ಲಿ ಒಂದು ಅತ್ಯಲ್ಪವಾದ ಅಪರಾಧಕ್ಕಾಗಿ, ಸೌಲನಿಂದ ದೇವರು ರಾಜ್ಯವನ್ನೇಕೆ ಹಿಂತೆಗೆದುಕೊಂಡರು1 ಅದಲ್ಲದೆ, ಇದಕ್ಕಿಂತ ಬಹಳ ದೊಡ್ಡ ಅಪರಾಧವನ್ನು - ವ್ಯಭಿಚಾರದ ಜೊತೆಗೆ ಕೊಲೆಯನ್ನು - ಮಾಡಿದ್ದ ದಾವೀದನನ್ನು ಅರಸನಾಗಿ ಮುಂದುವರಿಯಲು ದೇವರು ಹೇಗೆ ಸಮ್ಮತಿಸಿದರು1 ಇದರ ಉತ್ತರ ಅವರಿಬ್ಬರೂ ತಮ್ಮ ಪಾಪವನ್ನು ಮುಖಾಮುಖಿಯಾಗಿ ಕಂಡಾಗ ತೋರಿದ ಪ್ರತಿಕ್ರಿಯೆಯಲ್ಲಿದೆ. ಸೌಲನು ಸಮುವೇಲನ ಮುಂದೆ ಗುಪ್ತವಾಗಿ ತನ್ನ ಪಾಪವನ್ನು ಒಪ್ಪಿಕೊಂಡರೂ, ಜನರ ಮುಂದೆ ಗೌರವವನ್ನು ಅಪೇಕ್ಷಿಸಿದನು.

ಸೌಲನು (ಸಮುವೇಲನಿಗೆ) - ನಾನು ಪಾಪ ಮಾಡಿದ್ದೇನೆ; ದಯವಿಟ್ಟು ಇಸ್ರಾಯೇಲ್ಯರ ಮುಂದೆಯೂ ಜನರ ಹಿರಿಯರ ಮುಂದೆಯೂ ನನ್ನ ಮಾನವನ್ನುಳಿಸು, ಎಂದನು (1 ಸಮುವೇಲ 15:30).

ಅವನು ಪಾಪಮಾಡಿದ್ದಾಗ್ಯೂ, ಜನರ ಗೌರವವನ್ನು ಅಪೇಕ್ಷಿಸಿದನು. ಇನ್ನೊಂದೆಡೆ ದಾವೀದನು, ತನ್ನ ಪಾಪವನ್ನು ಮುಚ್ಚಿಡದೇ, ಕೀರ್ತನೆ 51 ನ್ನು ಬರೆದು ಅದನ್ನು ಬಹಿರಂಗವಾಗಿ ಒಪ್ಪಿಕೊಂಡನು.

ಇವರಿಬ್ಬರಿಂದ ನಾವು ಕಲಿಯಬಹುದಾದುದು ಏನೆಂದರೆ, ಕೊಲೆ ಅಥವಾ ವ್ಯಭಿಚಾರಗಳನ್ನು ಮಾಡಿರುವವರಿಗಿಂತಲೂ ಹೆಚ್ಚಾಗಿ, ಜನರಿಂದ ಗೌರವವನ್ನು ಬಯಸುವವರಿಗೆ ಮುರಿದ ಮನಸ್ಸಿನಿಂದ ದೇವರೆಡೆಗೆ ತಿರುಗಿ ಪ್ರಾಮಾಣಿಕವಾದ ಪಶ್ಚಾತ್ತಾಪವನ್ನು ಹೊಂದುವುದು ಬಹಳ ಹೆಚ್ಚು ಕಷ್ಟವೆನಿಸುತ್ತದೆ. ಶಿಲುಬೆಯ ಮೇಲಿದ್ದ ಕೊಲೆಗಾರ ಮತ್ತು ವ್ಯಭಿಚಾರದಲ್ಲಿ ಹಿಡಿಯಲ್ಪಟ್ಟ ಮಹಿಳೆ, ಇವರಿಬ್ಬರೂ ಪಶ್ಚಾತ್ತಾಪಪಟ್ಟದ್ದರಿಂದ, ಯೇಸುವು ಅವರನ್ನು ಮನ್ನಿಸಿದರು. ಆದರೆ ಜನರ ಮನ್ನಣೆಗಾಗಿ ಹಾತೊರೆಯುತ್ತಿದ್ದ ಫರಿಸಾಯರಿಗೆ ಪಶ್ಚಾತ್ತಾಪಪಡುವುದು ಕಷ್ಟವಾಗಿತ್ತು. ಹಾಗಾಗಿ ಅವರನ್ನು ಕ್ಷಮಿಸಲು ಸಾಧ್ಯವಾಗಲಿಲ್ಲ.

ಜನರಿಂದ ಮನ್ನಣೆಯನ್ನು ಅಪೇಕ್ಷಿಸುವುದು ವಿಗ್ರಹಾರಾಧನೆಯ ಒಂದು ರೂಪವಾಗಿದೆ. ನಮ್ಮೆಲ್ಲರನ್ನು ಕರ್ತರಾದ ಯೇಸುವು ಅತಿ ಹೆಚ್ಚಾಗಿ ಪರೀಕ್ಷಿಸುವುದು ಇದೇ ಕ್ಷೇತ್ರದಲ್ಲಿ.

ದಾವೀದನಂತೆ, ಆ ಪರೀಕ್ಷೆಯಲ್ಲಿ ಉತ್ತೀರ್ಣರಾದವರೇ ಧನ್ಯರು.

ಹಿಂದಿನ ಸೋಲುಗಳಿಂದಾಗಿ ನಮ್ಮಲ್ಲಿ ದೇವರ ಉದ್ದೇಶಗಳು ನೆರವೇರದೇ ಇರುವಂಥ ಪರಿಸ್ಥಿತಿ ಬರದಿರಲು, ತಪ್ಪೊಪ್ಪಿಕೊಳ್ಳುವ ದೀನತೆಯ ಮನಸ್ಸು ನಮ್ಮಲ್ಲಿರಬೇಕು - ಏಕೆಂದರೆ, ದೀನರಿಗೆ ದೇವರು ಕೃಪೆಯನ್ನು ಅನುಗ್ರಹಿಸುತ್ತಾರೆ.

ಅಧ್ಯಾಯ 9
ಎಲೀಷ ಮತ್ತು ಗೆಹಜಿಯ ಪರೀಕ್ಷೆ

ಇಸ್ರಾಯೇಲ್ ದೇಶದ ಇತಿಹಾಸದ ಕಷ್ಟದ ಸಮಯದಲ್ಲಿ ದೇವರು ಪ್ರವಾದಿಯಾದ ಎಲೀಯನನ್ನು ಆ ದೇಶಕ್ಕೆ ಸಾಕ್ಷಿಯಾಗಿ ಎಬ್ಬಿಸಿದನು. ಎಲೀಯನಿಗೆ ಎಲೀಷನೆಂಬ ಸೇವಕನಿದ್ದನು. ಆತನನ್ನು ದೇವರು ಆ ದೇಶಕ್ಕೆ ಮುಂದಿನ ಪ್ರವಾದಿಯನ್ನಾಗಿ ಆರಿಸಿಕೊಂಡನು.

ಎಲೀಷನಿಗೆ ಗೆಹಜಿ ಎಂಬ ಒಬ್ಬ ಸೇವಕನಿದ್ದನು.

ಇವರಿಬ್ಬರ ಮಧ್ಯದಲ್ಲಿದ್ದ ತಾರತಮ್ಯವನ್ನು ಅಭ್ಯಸಿಸುವುದು ಬಹಳ ಕುತೂಹಲಕಾರಿಯಾಗಿದೆ.

ಎಲೀಷನ ನಂಬಿಗಸ್ತಿಕೆ

ಎಲೀಯನ ಆತ್ಮದ ಎರಡು ಪಾಲು ಆತ್ಮವನ್ನು ದೇವರು ಎಲೀಷನಿಗೆ ಕೊಟ್ಟು ಅಭಿಷೇಕಿಸಿದನು. ಇದು ಎಲೀಷನ ಜೀವನವನ್ನು ದೇವರು ಮೆಚ್ಚಿದನೆನ್ನುವುದಕ್ಕೆ ಸಾಕ್ಷಿ. ಆದರೆ ಹೀಗೆ ಅಭಿಷೇಕಿಸಲ್ಪಡುವ ಮೊದಲು ದೇವರು ಅವನನ್ನು ಪರೀಕ್ಷಿಸಿದ್ದನು.

ದೇವರ ನಿಜ ಸೇವಕರೆಲ್ಲಾ ಕೆಲಸ ಮಗ್ನರಾಗಿರುವಾಗ ದೇವರು ಹೇಗೆ ಕರೆದನೋ ಅದೇ ರೀತಿಯಾಗಿ ಎಲೀಷನೂ ತನ್ನ ಲೌಕಿಕ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡುತ್ತಿರುವಾಗ ದೇವರು ಅವನನ್ನು ಸೇವೆಗೆ ಕರೆದನು.

“ಎಲೀಯನು ಅಲ್ಲಿಂದ ಹೊರಟು ಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದು ಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು. (1 ಅರಸು 19: 19)

ನಂತರ, ಎಲೀಷನು ಪ್ರವಾದಿಯಾದ ಎಲೀಯನಿಗೋಸ್ಕರ ಚಿಕ್ಕ ಪುಟ್ಟಕಾರ್ಯಗಳನ್ನು ಮಾಡುವುದರಲ್ಲಿ ಅನೇಕ ವರ್ಷಗಳನ್ನು ಕಳೆದನು. “ಎಲೀಯನ ಕೈ ಮೇಲೆ ನೀರು ಹೊಯ್ಯುವವನು ಎಂದು ಅವನು ಕರೆಯಲ್ಪಟ್ಟಿದ್ದನು(2 ಅರಸು 3:11).

ಅವನು ತನಗೋಸ್ಕರ ದೊಡ್ಡ ಸ್ಥಾನವನ್ನು ಅಪೇಕ್ಷಿಸಲಿಲ್ಲ. ಆದರೆ ದೇವರು ಈ ಯೌವನಸ್ತನಿಗೆ ದೊಡ್ಡ ಯೋಜನೆಗಳನ್ನು ಇಟ್ಟಿದ್ದನು.

ಎಲೀಯನು ಪರಲೋಕಕ್ಕೆ ಹೋಗುವ ಪೂರ್ವದಲ್ಲಿ ಎಲೀಷನು ಪರೀಕ್ಷಿಸಲ್ಪಡಬೇಕಾಗಿತ್ತು. ಆದ್ದರಿಂದ ಎಲೀಯನು ಎಲೀಷನಿಗೆ ಗಿಲ್ಗಾಲಿನಲ್ಲಿರಲು ಹೇಳಿ ತಾನು ಬೇತೇಲಿಗೆ ಹೋಗಬೇಕೆಂದಿದ್ದನು. ಆದರೆ ಎಲೀಷನು ಎಲೀಯನೊಂದಿಗೇ ಇರಲು ತೀರ‍್ಮಾನಿಸಿ ಅಲ್ಲೇ ನಿಲ್ಲಲು ನಿರಾಕರಿಸಿದನು. ಬೇತೇಲಿನಲ್ಲಿ ಎಲೀಯನು ಮತ್ತೆ ಎಲೀಷನಿಗೆ ನಾನು ಎರಿಕೋವಿಗೆ ಹೋಗಬೇಕಾದ್ದರಿಂದ ಇಲ್ಲಿಯೇ ಇರು ಎಂದನು. ಆದರೆ ಎಲೀಷನು ಜಿಗಣೆಯ ಹಾಗೆ ಎಲೀಯನೊಂದಿಗೆ ಹತ್ತಿಕೊಂಡಿದ್ದನು. ಕೊನೆಗೆ ಎರಿಕೋವಿನಲ್ಲಿ ಅದೇ ರೀತಿಯಾಗಿ ಎಲೀಷನು ಮತ್ತೊಮ್ಮೆ ಪರೀಕ್ಷಿಸಲ್ಪಟ್ಟನು. ಈ ಸಾರೆಯೂ ಎಲೀಷನು ಎಲೀಯನನ್ನು ಬಿಡದೇ ಅವನೊಂದಿಗೆ ಯೋರ್ದನಿಗೆ ಹೋದನು. ಆತನ ಸೈರಣೆಯ ಮೂಲಕ ಪರೀಕ್ಷೆಯಲ್ಲಿ ಪಾಸಾದನು. ಹೀಗೆ ಆತನು ಎರಡು ಪಾಲು ಅಭಿಷೇಕವನ್ನು ಹೊಂದಿಕೊಂಡನು - ತನ್ನ ಜೀವನದಲ್ಲಿ ದೇವರಿಂದ ಅತ್ಯುತ್ತಮವಾದದ್ದನ್ನು ಹೊಂದಿಕೊಂಡನು. (2 ಅರಸು 2:1-14).

ನಮಗೆ ಇದರಲ್ಲಿರುವ ಸಂದೇಶವೇನು1 ನಮ್ಮ ಆತ್ಮೀಕ ಬೆಳವಣಿಗೆಯ ನಾನಾವಿಧವಾದ ಹಂತಗಳಲ್ಲಿ ನಮಗೆ ಈಗಾಗಲೇ ದೊರಕಿರುವವುಗಳಲ್ಲಿ ನಾವು ತೃಪ್ತರಾಗಿದ್ದೇವೋ ಅಥವಾ ದೇವರ ಶ್ರೇಷ್ಟವಾದ, ಅತ್ಯುತ್ತಮವಾದದ್ದನ್ನು ಹೊಂದಿಕೊಳ್ಳಲು ಹಂಬಲಿಸುತ್ತೇವೋ ಎಂದು ದೇವರು ನಮ್ಮನ್ನು ಪರೀಕ್ಷಿಸುವನು.

ಗಿಲ್ಗಾಲ್ ಸ್ಥಳವು ನಮ್ಮ ಪಾಪಕ್ಷಮಾಪಣೆಯನ್ನು ಸೂಚಿಸುತ್ತದೆ.

“ಯೆಹೋವನು ಯೆಹೋಶುವನಿಗೆ - ನಾನು ಐಗುಪ್ತರ ನಿಂದೆಯನ್ನು ಈ ಹೊತ್ತು ನಿಮ್ಮಿಂದ ನಿವಾರಿಸಿ ಬಿಟ್ಟೀದ್ದೇನೆಂದು ಹೇಳಿದ್ದರಿಂದ ಆ ಸ್ಥಳಕ್ಕೆ ಇಂದಿನವರೆಗೂ ಗಿಲ್ಗಾಲ್ ಎಂಬ ಹೆಸರಿರುತ್ತದೆ. (ಯೆಹೋಶುವ 5:8,9).

ಅನೇಕರು ಇಲ್ಲಿಯವರೆಗೆ ಬಂದು ನಿಂತು ಬಿಡುತ್ತಾರೆ.

ಇನ್ನು ಕೆಲವರು ಬೇತೇಲಿನವರೆಗೆ (ಅಂದರೆ ’ದೇವರ ಮನೆ’ಗೆ) ಬರುತ್ತಾರೆ. ಇದು ದೇವರ ಕುಟುಂಬದಲ್ಲಿರುವ ಇತರ ವಿಶ್ವಾಸಿಗಳೊಂದಿಗಿರುವ ಅನ್ಯೋನ್ಯತೆಯಾಗಿರುತ್ತದೆ.

“ಯಾಕೋಬನು ಆ ಸ್ಥಳಕ್ಕೆ ಬೇತೇಲ್ ಎಂದು ಹೆಸರಿಟ್ಟನು......ಮತ್ತು ನಾನು ಕಂಬವಾಗಿ ನಿಲ್ಲಿಸಿರುವ ಈ ಕಲ್ಲು ದೇವರ ಮನೆಯಾಗುವುದು. (ಆದಿ 28: 19,22).

ಕೆಲವರು ಇಲ್ಲಿಯೇ ನಿಂತು ಬಿಡುತ್ತಾರೆ.

ಆದರೆ ಕೆಲವರು ಇನ್ನು ಸ್ವಲ್ಪ ಮೊಂದೆ ಯೆರಿಕೋವಿನವರೆಗೆ ಸಾಗುತ್ತಾರೆ. ಅಲ್ಲಿ ದೇವರ ಅದ್ಭುತ ಕಾರ್ಯಗಳನ್ನು ಕಾಣುತ್ತಾರೆ.

“ಜನರು ಮಹತ್ತರವಾಗಿ ಆರ್ಭಟಿಸಲು ಪಟ್ಟಣದ ಗೋಡೆಯು ತಾನೇ ಬಿದ್ದುಹೋಯಿತು........ಅದು ಅವರಿಗೆ ಸ್ವಾಧೀನವಾಯಿತು. (ಯೆರಿಕೋ ಪಟ್ಟಣ) (ಯೆಹೋ 6:20).

ಅನೇಕ ಕ್ರೈಸ್ತರು ಇಲ್ಲಿಯವರೆಗೆ ಸಾಗುತ್ತಾರೆ.

ಆದರೆ ಅತಿವಿರಳವಾಗಿ ಇನ್ನು ಕೆಲವರು ಮಾತ್ರ ಯೋರ್ದನ್ ವರೆಗೆ- ಅಂದರೆ ಕ್ರಿಸ್ತನೊಂದಿಗೆ ಆತನ ಮರಣವನ್ನು ಸೂಚಿಸುವ ದೀಕ್ಷಾಸ್ನಾನದವರೆಗೂ ಹೋಗುತ್ತಾರೆ.

“ಆಗ ಯೇಸು ಯೋಹಾನನಿಂದ ಸ್ನಾನ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೋರ್ದನ್ ಹೊಳೆಗೆ ಬಂದನು. (ಮತ್ತಾ 3:13).

ಕೇವಲ ಕೆಲವು ಜನ ಮಾತ್ರ ಶಿಲುಬೆಯ ಮಾರ್ಗದಲ್ಲಿ ನಡೆಯಲು ಇಷ್ಟವುಳ್ಳವರಾಗಿದ್ದಾರೆ. “ಯೇಸು ನಮಗೋಸ್ಕರ ಪ್ರತಿಷ್ಟಿಸಿದ ಜೀವವುಳ್ಳ ಹೊಸದಾರಿಯಲ್ಲಿ ....... (ಇಬ್ರಿ 10:20).

ಆದರೆ ಈ ಕೆಲವು ಜನ ಮಾತ್ರ -ಹೃತ್ಪೂರ್ವಕವಾಗಿ ಸ್ವಾರ್ಥತೆಗೆ ಸಂಪೂರ್ಣವಾಗಿ ಸಾಯುವ ಇವರೇ ದೇವರ ಅತ್ಯುನ್ನತವಾದ ಆತ್ಮನ ಎರಡು ಪಾಲನ್ನು ಹೊಂದುವರು.

ಇಂದು ನಾವೆಲ್ಲರೂ ಯಾವ ಹಂತದಲ್ಲಿ ನಿಲ್ಲುವವರಾಗಿದ್ದೇವೆಂದು ಪರಿಕ್ಷಿಸಲ್ಪಡುತ್ತಾ ಇದ್ದೇವೆ.

ಗೆಹಜಿಯ ಅಪನಂಬಿಗಸ್ಥಿಕೆ

ಎಲೀಷನು ಹೇಗೆ ಎಲೀಯನ ಸ್ಥಳದಲ್ಲಿ ಪ್ರವಾದಿಯಾಗಿ ಮುಂದುವರಿದನೋ ಹಾಗೆಯೇ ಗೆಹಜಿಯೂ ಸಹ ನಂಬಿಗಸ್ಥನಾಗಿದ್ದರೆ ಎಲೀಷನ ನಂತರ ಪ್ರವಾದಿಯಾಗಬಹುದಿತ್ತು. ಆದರೆ ಗೆಹಜಿಯು ಮೊದಲು ಪರೀಕ್ಷಿಸಲ್ಪಡಬೇಕಾಗಿತ್ತು.

ಸಿರಿಯಾದ ಸೇನಾಪತಿ ನಾಮಾನನು ತನ್ನ ಕುಷ್ಠ ರೋಗದಿಂದ ವಾಸಿಯಾದ ಮೇಲೆ ಎಲೀಷನ ಬಳಿಗೆ ಬಂದಾಗ ಈ ಪರೀಕ್ಷೆಯು ಸಂಭವಿಸಿತು. ರೋಗವಾಸಿಯಾಗಿದ್ದರ ಬಗ್ಗೆ ಕೃತಜ್ಞತೆ ತೋರಿಸುವುದಕ್ಕಾಗಿ ನಾಮಾನನು ಎಲೀಷನಿಗೆ ಸುಮಾರು ಹತ್ತು ಲಕ್ಷ ರೂಪಾಯಿ ಬೆಲೆಯ ಬೆಳ್ಳಿ ಬಂಗಾರವನ್ನೂ ಮತ್ತು ಬಟ್ಟೆಯನ್ನೂ ಅರ್ಪಿಸಿದನು. ಎಲೀಷನಿಗಿಂತ ಚಿಕ್ಕವನಾದವನಿಗೆ ಎಂತಹ ಶೋಧನೆ! ಕ್ಷಣಮಾತ್ರ ಹಿಂದೆಮುಂದೆ ನೋಡದೇ ಎಲೀಷನು ಅದನ್ನು ತಿರಸ್ಕರಿದನು. ನಾಮಾನನು ಅವಿಶ್ವಾಸಿಯೂ, ರಾಜಿಮಾಡಿಕೊಳ್ಳುವ ಸ್ವಭಾವದವನೂ ಆಗಿದ್ದನು. ಎಲೀಷನು ಅವನಿಂದ ಏನನ್ನೂ ಸ್ವೀಕರಿಸಲು ತಯಾರಿರಲಿಲ್ಲ.

ತಾನು ವಾಸಿಯಾದ ಮೇಲೆ ಎಲೀಷನಿಗೆ ಹೇಳಿದ ಮಾತಿನಿಂದ ನಾಮಾನನು ರಾಜಿಮಾಡಿಕೊಳ್ಳುವವನೆಂದು ಸ್ಪಷ್ಟವಾಗಿ ತೋರುತ್ತದೆ. ತನ್ನ ಅಧಿಕಾರದ ಸ್ಥಾನದ ಮೂಲಕವಾಗಿ ವಿಗ್ರಹಾರಾಧನೆ ಮಾಡುವುದಕ್ಕೆ ಅವನಿಗೆ ಒತ್ತಾಯವಿದೆಯೆಂದು ಅವನು ಹೇಳುತ್ತಾನೆ. ವಿಗ್ರಹಾರಾಧನೆ ತಪ್ಪೆಂದು ನಾಮಾನನಿಗೆ ಗೊತ್ತಿತ್ತು. ಈಗಿನ ಅನೇಕ ಜನರಂತೆ ಸತ್ಯಕ್ಕೋಸ್ಕರ ತನ್ನ ಕೆಲಸವನ್ನು ತ್ಯಾಗಮಾಡುವುದಕ್ಕೆ ಅವನಿಗೆ ಮನಸ್ಸಿರಲಿಲ್ಲ.

ನಾಮಾನನು ಎಲೀಷನಿಗೆ ಹೀಗೆಂದನು “....ನನ್ನ ಒಡೆಯನು ಆರಾಧನೆಗೋಸ್ಕರ ರಿಮ್ಮೋನಿನ ದೇವಸ್ಥಾನಕ್ಕೆ ಹೋಗಿ ನನ್ನ ಕೈ ಹಿಡಿದು ಆ ದೇವತೆಗೆ ನಮಸ್ಕಾರ ಮಾಡುವಾಗ ನಾನೂ ನಮಸ್ಕಾರ ಮಾಡಾಬೇಕಾಗುವುದು. ಈ ಒಂದು ವಿಷಯದಲ್ಲಿ ಮಾತ್ರ ಯೆಹೋವನು ನನಗೆ ಕ್ಷಮೆಯನ್ನು ಅನುಗ್ರಹಿಸಬೇಕು ಅಂದನು (2 ಅರಸು 5:18).

ಎಲೀಷನು ಇಂಥಹ ಮನುಷ್ಯನಿಂದ ಏನಾದರೂ ಸ್ವೀಕರಿಸುವುದಕ್ಕೆ ಇಷ್ಟವುಳ್ಳವನಾಗಿರಲಿಲ್ಲ.

ಆದಿ ಅಪೊಸ್ತಲರೂ ಸಹ ಇದೇ ಮಾದರಿಯನ್ನು ಅನುಸರಿಸಿದರು. “ಅವರು ಕ್ರಿಸ್ತನ ಹೆಸರನ್ನು ಪ್ರಸಿದ್ಧಿಪಡಿಸುವುದಕ್ಕೋಸ್ಕರ ಹೊರಟುಹೋಗಿದ್ದಾರೆ ಮತ್ತು ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ (3 ಯೋಹಾನ 7).

ಗೆಹಜಿಯು ನಾಮಾನನ ಹಣದ ಬಗ್ಗೆ ಎಲೀಷನಿಗಿದ್ದ ಮನೋಭಾವನೆಯನ್ನು ವೀಕ್ಷಿಸಿದ್ದನು. ಆದರೆ ಉಚಿತವಾಗಿ ನಾಮಾನನು ಅರ್ಪಿಸುವುದನ್ನು ಬೇಡವೆನ್ನುವುದು ಎಲೀಷನ ಮೂರ್ಖತನವೆಂದು ಅವನು ಭಾವಿಸಿದನು. ಆದ್ದರಿಂದ (ಇಂದಿನ ಭಾರತೀಯರು ಪಾಶ್ಚಾತ್ಯ ಕ್ರೈಸ್ತರ ಹಿಂದೆ ಓಡುವಂತೆ ) ಗೆಹಜಿಯು ನಾಮಾನನ ಹಿಂದೆ ಓಡಿ ಸುಳ್ಳು ಹೇಳಿ ನಲ್ವತ್ತು ಸಾವಿರ ರೂಪಾಯಿಯ ಬೆಲೆಯ ಬೆಳ್ಳಿಯನ್ನೂ ಮತ್ತು ಎರಡು ಜೊತೆ ಸಿರಿಯಾ ದೇಶದ ಬಟ್ಟೆಯನ್ನೂ ತೆಗೆದುಕೊಂಡನು.

ವಕ್ರ ಮನುಷ್ಯರನ್ನು ಸುಲಭವಾಗಿ ಗುರುತಿಸುವ ಎಲೀಷನು ತಕ್ಷಣ ಗೆಹಜಿಯ ಲೋಭವನ್ನು ಬಹಿರಂಗ ಪಡಿಸಿದನು. ನಾಮಾನನ ಹಣವನ್ನು ಕಸಿದುಕೊಂಡಿದ್ದರಿಂದ ನಾಮಾನನ ಕುಷ್ಟವೂ ಸಹ ಅವನಿಗೆ ಕೊಡಲ್ಪಡುವುದೆಂದು, ಆತನು ಗೆಹೆಜಿಗೆ ಹೇಳಿದನು.

“ನಾಮಾನನ ಕುಷ್ಟವು ನಿನ್ನನ್ನೂ ನಿನ್ನ ಸಂತಾನದವರನ್ನೂ ಸದಾಕಾಲ ಹಿಡಿದಿರುವುದು ಅಂದನು. ಕೂಡಲೇ ಅವನಿಗೆ ಕುಷ್ಟಹತ್ತಿತು. ಅವನು ಹಿಮದಂತೆ ಬಿಳುಪಾಗಿ ಅವನ ಸನ್ನಿಧಿಯಿಂದ ಹೊರಟುಹೋದನು. (2 ಅರಸು 5:27).

ಎಲೀಷನ ಆತ್ಮನ ಎರಡು ಪಾಲನ್ನು ಹೊಂದಿಕೊಳ್ಳುವ ಬದಲು ಗೆಹಜಿಗೆ ಕುಷ್ಟರೋಗವು ಹತ್ತಿತು.

ಆದಿನ ದೇವರು ತನ್ನನ್ನು ಪರೀಕ್ಷಿಸುತ್ತಿದ್ದಾನೆಂದು ಗೆಹಜಿಗೆ ತಿಳಿದಿರಲಿಲ್ಲ. ಇದು ಅವನಿಗೆ ಗೊತ್ತಿದ್ದರೆ ಅವನು ಜಾಗರೂಕನಾಗಿರುತ್ತಿದ್ದನು.

ಆದರೆ ನಾವು ಪದೇ ಪದೇ ನೋಡಿದಂತೆ- ಮುಖ್ಯವಾಗಿ ಹಣದ ವಿಷಯದಲ್ಲಿ ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾನೆಂದು ನಾವು ಸಾಮಾನ್ಯವಾಗಿ ಅರಿತುಕೊಳ್ಳುವುದಿಲ್ಲ.

ಒಂದು ಸಮಯದಲ್ಲಿ “ ದೇವರು ಆತನ ಹೃದಯದಲ್ಲಿ ಏನಿದೆ ಎಂದು ಅವನು ಕಂಡುಕೊಳ್ಳುವಂತೆ ಅರಸನಾದ ಹಿಜ್ಕೀಯನನ್ನು ಏಕಾಂತವಾಗಿ ಬಿಟ್ಟನು ಎಂದು 2 ಪೂರ್ವ 32:31 ರಲ್ಲಿ ಬರೆಯಲ್ಪಟ್ಟಿದೆ.

ಗೆಹಜಿಯ ವಿಷಯದಲ್ಲಿಯೂ ಇದು ಸತ್ಯವಾಗಿತ್ತು. ಈ ಸಂಧರ್ಭದಲ್ಲಿ ಯಾರೂ ಆತನನ್ನು ನೋಡದ ಸಮಯದಲ್ಲಿ ದೇವರು ಪರೀಕ್ಷೆಯನ್ನು ಅನುಮತಿಸಿದನು. ಅತನು ಹೀಗೆಯೇ ಪರೀಕ್ಷಿಸಲ್ಪಡಬೇಕಾಗಿತ್ತು.

ಲೋಭದ ಪರಿಣಾಮ

ಅನೇಕ ವರ್ಷಗಳ ಪೂರ್ವದಲ್ಲಿ ಯೆರಿಕೋವಿನಲ್ಲಿ ಆಕಾನನೂ ಇದೇ ರೀತಿಯಾಗಿ ಪರೀಕ್ಷಿಸಲ್ಪಟ್ಟನು. ದೇವರು ನಿಷೇಧಿಸಿದ್ದನ್ನು ಅವನು ತೆಗೆದುಕೊಳ್ಳುತ್ತಾನೋ ಇಲ್ಲವೋ ಎಂದು ಅವನನ್ನು ಯಾರೂ ನೋಡದಂತೆ ಒಂಟಿಯಾಗಿ ಒಂದು ಮನೆಯಲ್ಲಿ ಇರುವ ಹಾಗೆ ದೇವರು ಅನುಮತಿಸಿದನು. ಆಕಾನನು ಬಿದ್ದು ಹೋದನು.

ಆಕಾನನು ತನ್ನ ಬೀಳುವಿಕೆಯನ್ನು ಹೀಗೆ ವಿವರಿಸುತ್ತಾನೆ: “ನಾನು ನೋಡಿದೆನು........... ನಾನು ಆಶಿಸಿದೆನು.......... ನಾನು ತೆಗೆದುಕೊಂಡೆನು.............. ನಾನು ಬಚ್ಚಿಟ್ಟೆನು................. (ಯೆಹೋ 7:21).

ಇವೇ ಹಂತಗಳು ಗೆಹಜಿಯ ವಿಷಯದಲ್ಲಿಯೂ ಪುನರಾವರ್ತನೆಯಾದವು.

ಆಕಾನನೂ ಮತ್ತು ಆತನ ಕುಟುಂಬವೂ ಕಾನಾನಿನಲ್ಲಿರುವ ತಮ್ಮ ಬಾಧ್ಯತೆಯನ್ನು ಕಳಕೊಂಡರು. ಗೆಹಜಿಯೂ ತನಗಿದ್ದ ದೇವರ ಕರೆಯನ್ನು ತಪ್ಪಿಸಿಕೊಂಡನು.

ಆಕಾನನೂ, ಗೆಹಜಿಯೂ, ಒಂದೇ ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನು ಮಾರಿದ (ಇಬ್ರಿ 12:13) ಏಸಾವನ ಹೆಜ್ಜೆಯನ್ನು ಅನುಸರಿಸಿದರು.

ಎಲೀಷನ ಮತ್ತು ಗೆಹಜಿಯ ಮಧ್ಯದಲ್ಲಿರುವ ವ್ಯತ್ಯಾಸ ಬಹಳ ಪ್ರಾಮುಖ್ಯವಾಗಿದೆ. ಎಲೀಷನು ಎಲೀಯನ ಆತ್ಮದ ಎರಡು ಪಾಲನ್ನು ಹೊಂದುವುದಕ್ಕೋಸ್ಕರ ಎಲೀಯನ ಹಿಂದೆ ಓಡಿದನು. ಆದರೆ ಗೆಹಜಿಯು ಸ್ವಲ್ಪ ಧನಕ್ಕೋಸ್ಕರ ನಾಮಾನನ ಹಿಂದೆ ಓಡಿದನು. ಇಂದಿನ ಕ್ರೈಸ್ತಸೇವಕರನ್ನು ಇದು ಹೀಗೆ ವಿಂಗಡಿಸುತ್ತದೆ. ಹೀಗೆ ನಾವು ಯಾವ ಪಂಗಡದಲ್ಲಿದ್ದೇವೆಂದು ನಮಗೆ ತಿಳಿಯುತ್ತದೆ!!

ನಿಸ್ಸ್ಂಶಯವಾಗಿ ಗೆಹಜಿಗೆ ಬೀಳಾಮನ ಕಥೆ ಗೊತ್ತಿತ್ತು. ಆದರೂ ಬೀಳಾಮನ ಗತಿಯೇ ತನ್ನ ಗತಿಯಾಗುತ್ತದೆಂದು ಅವನೆಂದೂ ಯೋಚಿಸಿರಲಿಲ್ಲ. ಒಂದಾನೊಂದು ಸಮಯದಲ್ಲಿ ದೇವರ ಆತ್ಮನು ಬೀಳಾಮನ ಮೇಲೆ ಇದ್ದನು.

ಒಂದು ಬಾರಿ ಹೀಗೆ ಓದುತ್ತೇವೆ “ಬೀಳಾಮನು ಕಣ್ಣೆತ್ತಿ ನೋಡಲಾಗಿ ಕುಲಗಳ ಪ್ರಕಾರ ಡೇರೆಗಳನ್ನು ಹಾಕಿಕೊಂಡಿದ್ದ ಇಸ್ರಾಯೇಲ್ಯಾರು ಅವನಿಗೆ ಕಾಣಿಸಿದರು. ಆಗ ದೇವರ ಆತ್ಮನು ಅವನ ಮೇಲೆ ಇಳಿದನು..... (ಅರಣ್ಯ 24:2).

ಬೀಳಾಮನು ಹಣದ ವಿಷಯದಲ್ಲಿ ಅಪನಂಬಿಗಸ್ತನಾಗಿದ್ದರಿಂದಲ್ಲ, ಆದರೆ ಹಣವನ್ನು ಪ್ರೀತಿಸಿದ್ದರಿಂದ ದುರ್ಮಾಗ ಹಿಡಿದನು. ಹಣದಾಶೆ ಮತ್ತು ಭೂಲೋಕದ ಅರಸನ ಮಾನ ಬೀಳಾಮನ ಕಣ್ಣನ್ನು ಎಷ್ಟಾಗಿ ಕುರುಡು ಮಾಡಿತೆಂದರೆ ಅವನು ದೇವರ ಚಿತ್ತಕ್ಕೆ ವಿರುದ್ಧವಾಗಿ ಹೋಗುತ್ತಿರುವುದನ್ನು ಕಾಣದಾದನು. ಅವನ ಹೃದಯದಲ್ಲೇನಿದೆ ಎಂದು ತಿಳಿಯುವದಕ್ಕಾಗಿ ದೇವರು ಅವನನ್ನು ಪರೀಕ್ಷಿಸಿದನು.

ಮೊದಲ ಬಾರಿಗೆ ಬಾಲಾಕನ ದೂತರೊಂದಿಗೆ ಹೋಗಬೇಕೋ ಬೇಡವೋ ಎಂದು ದೇವರ ಚಿತ್ತವನ್ನು ಹುಡುಕಲು, ದೇವರು ಸ್ಪಷ್ಟವಾಗಿ “ಅವರೊಂದಿಗೆ ಹೋಗಬೇಡ ಎಂದು ಉತ್ತರಿಸಿದ್ದನು. (ಅರಣ್ಯ 22:12). ಈ ಉತ್ತರ ಬಹಳ ಸ್ಪಷ್ಟವಾಗಿದ್ದಿತು.

ಆದರೆ ಬಾಲಾಕನು ಇನ್ನೂ ಹೆಚ್ಚಿನ ಹಣ ಮತ್ತು ಹೆಚ್ಚಿನ ಮಾನವನ್ನು ಕೊಡಲು ಇಚ್ಚಿದಾಗ ಮತ್ತೊಮ್ಮೆ ಪರವಾನಿಗೆಯನ್ನು ಕೇಳಲು ಶೋದಿಸಲ್ಪಟ್ಟನು. ಬೀಳಾಮನು ಹೋಗಲಿಕ್ಕೆ ಮನಸ್ಸುಳ್ಳವನಾಗಿದ್ದನೆಂದು ದೇವರು ನೋಡಿದಾಗ ಹೋಗಲು ಅನುಮತಿ ಕೊಟ್ಟನು. ಆದರೆ ಬೀಳಾಮನು ಅದರ ಪರಿಣಾಮವಾಗಿ ಕಷ್ಟವನ್ನನುಭವಿಸಿದನು.

ದೇವರು ಕೆಲವು ಬಾರಿ ನಾವು ಬಹಳವಾಗಿ ಇಷ್ಟಪಡುವುದನ್ನು ಆತನ ಚಿತ್ತವಿಲ್ಲದಿದ್ದರೂ ನಮಗೆ ಕೊಡಬಹುದು. ಆದರೆ ಆತ್ಮಿಕವಾಗಿ ನಾವೂ ಸಹ ಇಸ್ರಾಯೇಲ್ಯರು ಅನುಭವಿಸಿದ್ದನ್ನು ಅನುಭವಿಸಬೇಕಾಗುತ್ತದೆ. “ಆತನು ಅವರ ಆಶೆಯನ್ನು ಪೂರೈಸಿದರೂ ಅವರ ಪ್ರಾಣಕ್ಕೆ ಕ್ಷಯವನ್ನು ಬರಮಾಡಿದನು. (ಕೀರ್ತನೆ 106:15).

ಹಣದ ವಿಷಯದಲ್ಲಿ ತಾನು ಪರೀಕ್ಷಿಸಲ್ಪಟ್ಟು ದಾರಿಬಿಟ್ಟು ಹೋಗುತ್ತಿದ್ದೇನೆಂದು ಬೀಳಾಮನು ತಿಳಿದಿರಲಿಲ್ಲ. ಆತನು ಪ್ರವಾದಿಸುತ್ತಾ ಇದ್ದನು. ಆದರೆ ಮಾನವನ್ನು ಅಪೇಕ್ಷಿಸುವ ಮೊದಲನೇ ಇಳಿಜಾರಿನ ಕೆಳಹೆಜ್ಜೆಯನ್ನು ತೆಗೆದುಕೊಂಡು ಕೂಡಲೇ ತಳವನ್ನು ಮುಟ್ಟಿದನು. ದೇವರೊಂದಿಗೆ ಒಂದು ಕಾಲದಲ್ಲಿ ಅತೀ ಆತ್ಮೀಂii ಅನ್ಯೋನ್ಯತೆಯಲ್ಲಿದ್ದ ಇವನು ಕೊನೆಗೆ ಮಾಟಗಾರನಾಗಿ ಇಸ್ರಾಯೇಲ್ಯರಿಂದ ಹತನಾದನು.

ಯೆಹೋಶುವ 13:22 ರಲ್ಲಿ “ಇಸ್ರಾಯೇಲ್ಯರು ಕತ್ತಿಯಿಂದ ಸಂಹರಿಸಿದವರಲ್ಲಿ.......ಶಕುನ ನೋಡುವವನಾಗಿದ್ದ ಬೀಳಾಮನು ಇದ್ದನು. ಎಂದು ಬರೆದಿದೆ.

ಈ ಎಚ್ಚರಿಕೆಯನ್ನು ತನಗೆ ತೆಗೆದುಕೊಳ್ಳಲು ಗೆಹಜಿಯು ಮರೆತನು.

ಬೀಳಾಮನ ಮತ್ತು ಗೆಹಜಿಯ ಉದಾಹರಣೆ ತಮ್ಮ ಎಚ್ಚರಿಕೆಗಾಗಿರುವುದನ್ನು ಅರಿಯದೇ ದಾರಿತಪ್ಪಿರುವ ಅನೇಕ ಕ್ರೈಸ್ತರ ಬಗ್ಗೆ ನಾವು ಏನು ಹೇಳೋಣ1

ಹಣದಾಶೆಯು ಎಲ್ಲಾ ವಿಧವಾದ ಕೆಟ್ಟತನಕ್ಕೆ ಮೂಲ ಕಾರಣವಾಗಿದೆ. ಭೌತಿಕ ವಸ್ತುಗಳಿಂದ ನಾವು ಆಕರ್ಷಿಸಲ್ಪಟ್ಟು ನಮ್ಮ ನಂಬಿಗಸ್ತಿಕೆಯನ್ನು ಪರೀಕ್ಷಿಸಲು ದೇವರು ಅಪೇಕ್ಷಿಸುತ್ತಾನೆ.

ಯೇಸುವು ತನ್ನ ಶಿಷ್ಯರಲ್ಲಿ ಯಾರಾದರೂ ಈ ಲೋಕದ ವಸ್ತುಗಳನ್ನು ಹಿಂಬಾಲಿಸಿ ಸಂಪಾದಿಸಿಕೊಳ್ಳಬೇಕೆಂದು ಇಚ್ಚಿಸಲಿಲ್ಲ. ನಾವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಮೊದಲು ಹುಡುಕಬೇಕೆಂದು ಕರೆಯಲ್ಪಟ್ಟಿದ್ದೇವೆ. ನಮಗೆ ಅವಶ್ಯವಾಗಿರುವ ಪ್ರಾಪಂಚಿಕ ವಸ್ತುಗಳು ಆಗ ನಮ್ಮ ಉಡಿಯಲ್ಲಿ ಬೀಳುತ್ತವೆ.

ತಮ್ಮ ಅವಶ್ಯಕತೆಗಿಂತಲೂ ಹೆಚ್ಚಾಗಿ ತನ್ನ ಮಕ್ಕಳು ಪ್ರಾಪಂಚಿಕ ವಸ್ತುಗಳನ್ನು ಕೂಡಿಸಿಕೊಳ್ಳಬಾರದೆಂದೂ ಹಾಗೂ ನಮ್ಮಲ್ಲಿ ಯಾರೂ ಸಂಪತ್ತನ್ನು ಹಿಂಬಾಲಿಸಿ ಓಡಬಾರದೆನ್ನುವುದು ದೇವರ ಚಿತ್ತವಾಗಿದೆ. ನಾವು ದೇವರಲ್ಲಿ ಭರವಸವಿಟ್ಟರೆ ನಮಗೆ ಅವಶ್ಯವಿರುವದೆಲ್ಲವನ್ನೂ ದೇವರು ನಮಗೆ ಕೊಟ್ಟು ನಾವು ಹಣದಾಶೆಯಿಂದ ಹಾಳಾಗದಂತೆ ಕಾಪಾಡುವನು.

ದೇವರು ನಮ್ಮನ್ನು ಆಶೀರ್ವದಿಸುವಾಗ ನಮಗೆ ಬೇಕಾದದ್ದೆಲ್ಲವನ್ನೂ ಒದಗಿಸಿ ಅವುಗಳೊಂದಿಗೆ ಯಾವ ವ್ಯಸನವನ್ನೂ(ದುಖಃವನ್ನೂ) ಸೇರಿಸನು.

ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು. (ಜ್ಞಾನೋಕ್ತಿ 10:22).

ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು. (ಪಿಲಿಪ್ಪಿ 4:19)

ಆದರೆ ಐಶ್ವರ್ಯವನ್ನು ಹಿಂಬಾಲಿಸಿ ಅದನ್ನು ಸಂಪಾದಿಸಿಕೊಳ್ಳಲು ಓಡುವಾಗ ಅದರೊಂದಿಗೆ ಅನೇಕ ವ್ಯಸನಗಳೂ ಸಹ ಬರುತ್ತವೆ.

ಈ ಗಂಡಾತರದ ಬಗ್ಗೆ ಪೌಲನು ತಿಮೋಥಿಯನಿಗೆ ಹೀಗೆ ಬರೆಯುತ್ತಾನೆ: ಹಣದಾಸೆಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತ ನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ (1 ತಿಮೋಥೆ 6:10).

ನಾವು ದೇವರನ್ನೂ ಹಣವನ್ನೂ (ಪ್ರಾಪಂಚಿಕ ವಸ್ತುಗಳನ್ನು) ಒಟ್ಟಿಗೆ ಸೇವಿಸಲಾರೆವು. ನಾವು ಒಬ್ಬನನ್ನು ದ್ವೇಷಿಸಿ ಮತ್ತೋಬ್ಬನನ್ನು ಪ್ರೀತಿಸಬೇಕು, ಇಲ್ಲವೇ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರ ಮಾಡಬೇಕು (ಲೂಕ 16:13).

ಕಿವಿಯುಳ್ಳವನು ಕೇಳಲಿ.

ಅಧ್ಯಾಯ 10
ಪೇತ್ರನ ಮತ್ತು ಯೂದನ ಪರೀಕ್ಷೆ

ಯೇಸು ಆರಿಸಿಕೊಂಡ ಹನ್ನೆರಡು ಅಪೋಸ್ತಲರಲ್ಲಿ ಬಹುಶಃ ಪೇತ್ರ ಮತ್ತು ಇಸ್ಕರಿಯೋತ ಯೂದನ ವ್ಯಕ್ತಿತ್ವದಲ್ಲಿ ಅತಿಯಾದ ವ್ಯತ್ಯಾಸವನ್ನು ಕಾಣುತ್ತೇವೆ. ಪೇತ್ರನು ಸರಳವಾದ, ಹೆಚ್ಚು ವಿದ್ಯಾಬ್ಯಾಸವಿಲ್ಲದ, ಮಮತೆಯುಳ್ಳವನಾಗಿದ್ದನು. ಯೂದನು ಬುದ್ದಿವಂತನೂ, ವ್ಯವಹಾರ ನಿಪುಣನೂ, ಮಹತ್ವಾಕಾಂಕ್ಷೆಯುಳ್ಳವನೂ ಆಗಿದ್ದನು.

ಹಣದ ವಿಷಯದಲ್ಲಿ ಪೇತ್ರನ ಮನೋಭಾವನೆ

ಸೀಮೋನ್ ಪೇತ್ರನಿಗೆ ದೇವರಿಂದ ದೊಡ್ಡ ಕರೆಯಿತ್ತು. ಆದರೆ ಆತನು ಪರೀಕ್ಷಿಸಲ್ಪಟ್ಟು ಸ್ವೀಕೃತವಾಗುವವರೆಗೆ ಅದು ನೆರವೇರಲಾಗಲಿಲ್ಲ.

ಯೇಸು ಅವನನ್ನು ಕರೆದಾಗ ದೇವರ ಅದ್ಭುತವಾದ ಯೋಜನೆಯ ಬಗ್ಗೆ ಅವನಿಗೆ ಸ್ವಲ್ಪವೂ ಅರಿವಿರಲಿಲ್ಲ. ದೇವರು ನಮಗೆ ತನ್ನ ಯೋಜನೆಯನ್ನು ಹೆಜ್ಜೆ ಹೆಜ್ಜೆಯಾಗಿ ತೋರಿಸುತ್ತಾನೆ.

ಒಂದು ದಿನ ಯೇಸುವು ಪೇತ್ರನ ದೋಣಿಯಲ್ಲಿ ಬಂದು ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನು ಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ ಎಂದು ಹೇಳಿದನು. ಪೇತ್ರನು ಅದಕ್ಕೆ ವಿಧೇಯನಾಗಿದ್ದರಿಂದ ತನ್ನ ಜೀವಿತದಲ್ಲಿ ಎಂದೂ ಹಿಡಿಯದಷ್ಟು ಮೀನುಗಳನ್ನು ಆ ದಿನ ಹಿಡಿದನು. (ಲೂಕ 5:1-11)

ಪೇತ್ರನು ಇಂದಿನ ಹಲವು ಕ್ರೈಸ್ತ ವ್ಯಾಪಾರಸ್ತರಂತೆ ಇದ್ದಿದ್ದರೆ ಒಂದು ವೇಳೆ ಯೇಸುವಿಗೆ ಹೀಗೆ ಹೇಳುತ್ತಿದ್ದನು - ಕರ್ತನೇ ಇದು ಅದ್ಭುತವಾಗಿದೆ. ನೀನು ಮತ್ತು ನಾನು ಪಾಲುಗಾರರಾಗಿರೋಣ. ನೀನು ಭೋದಿಸುತ್ತಿರು ನಾನು ಆರ್ಥಿಕವಾಗಿ ನಿನಗೆ ಬೆಂಬಲ ನೀಡುತ್ತೇನೆ. ಈ ರೀತಿಯಾಗಿ ನನ್ನ ಮೀನಿನ ವ್ಯಾಪಾರ ಸಾಗುತ್ತಿದ್ದರೆ ಇಸ್ರಾಯೇಲ್ ದೇಶದಲ್ಲಿ ನಾನು ಬಹು ಬೇಗನೆ ಅತೀ ಶ್ರೀಮಂತನಾಗಿ ನಿನಗೆ ಮಾತ್ರವಲ್ಲ, ಈ ದೇಶದ ಮತ್ತು ಪರದೇಶದಲ್ಲಿರುವ ಅನೇಕ ಕ್ರೈಸ್ತ ಸೇವಕರಿಗೆ ಬೆಂಬಲಿಸುವೆನು!

ಆಗ ಪೇತ್ರನು ಲೋಕವೆಲ್ಲಾ ಸುತ್ತಾಡಿ ವ್ಯಾಪಾರಸ್ತರ ದೊಡ್ಡ ದೊಡ್ಡ ಕೂಟಗಳಲ್ಲಿ ಕ್ರಿಸ್ತನು ಹೇಗೆ ತಮ್ಮ ವ್ಯಾಪಾರವನ್ನು ಅಭಿವೃದ್ದಿ ಮಾಡುವನೆಂದು ಸಾಕ್ಷಿ ಕೊಡುತ್ತಿದ್ದನು.

ಪ್ರಾಪಂಚಿಕ ಮನುಷ್ಯನ ಆಲೋಚನೆಗಳು ಹೀಗಿರುತ್ತವೆ.

ಆದರೆ ಪೇತ್ರನು ಹಾಗೆ ಮಾಡಲಿಲ್ಲ. ಯೇಸುವು ಆತನನ್ನು ಕರೆದಾಗ ಅವನು ತನ್ನ ಬಲೆಯನ್ನು ಮತ್ತು ಮೀನಿನ ವ್ಯಾಪಾರವನ್ನು ತಕ್ಷಣ ಬಿಟ್ಟು ಯೇಸುವನ್ನು ಹಿಂಬಾಲಿಸಿದನು. ಪೇತ್ರನು ಪರೀಕ್ಷೆಯಲ್ಲಿ ಪಾಸಾದನು.

ದೇವರು ತಮ್ಮನ್ನು ಅಭಿವೃದ್ದಿಪಡಿಸಿ ಹೆಚ್ಚಿನ ಹಣವನ್ನು ಸಂಪಾದಿಸುವಾಗ ತಾವು ಪರೀಕ್ಷಿಸಲ್ಪಡುತ್ತಿದ್ದಾರೆಂದು ಕ್ರೈಸ್ತರು ಅರಿತುಕೊಳ್ಳುವುದಿಲ್ಲ. ಅನೇಕ ಕ್ರೈಸ್ತರು ಇಲ್ಲಿ ತಮ್ಮ ಪರೀಕ್ಷೆಯಲ್ಲಿ ಫೇಲ್ ಆಗುತ್ತಾರೆ. ಅವರು ಅಪೋಸ್ತಲರಾಗುವ ಬದಲು ಬರಿದಾದ ಲಕ್ಷಾಧಿಪತಿಗಳಾಗುತ್ತಾರೆ.

ಅನೇಕ ವರ್ಷಗಳ ನಂತರ, ಐಶ್ವರ್ಯವಂತನಾದ ವ್ಯಾಪಾರಸ್ತನಾಗುವ ಬದಲು, ಪೇತ್ರನು ಬೆಳ್ಳಿ ಬಂಗಾರವು ನನ್ನಲ್ಲಿಲ್ಲ ಎಂದು ಹೇಳುತ್ತಾನೆ(ಅ.ಕೃ. 3:6). ಆದರೆ ಬೆಳ್ಳಿ ಬಂಗಾರಕ್ಕಿಂತಲೂ ಬಹು ಅಮೂಲ್ಯವಾದದ್ದು ಅವನಲ್ಲಿತ್ತು. ಕ್ರಿಸ್ತನ ರಾಜ್ಯದ ನಿತ್ಯತ್ವದ ಐಶ್ವರ್ಯಕ್ಕೋಸ್ಕರ ಇಹಲೋಕದ ಐಶ್ವರ್ಯವೆಂಬ ಕಸವನ್ನು ಕೊಟ್ಟುಬಿಟ್ಟನು.

ಕ್ರಿಸ್ತನು ನಮ್ಮ ಜೀವಿತದಲ್ಲಿ ಪಾಲುಗಾರನಾಗಿರುವದರಿಂದ ನಾವು ಹೇಗೆ ಹಣಸಂಪಾದಿಸಿ ಐಶ್ವರ್ಯವಂತರಾಗಬಹುದೆಂದು ಕ್ರೈಸ್ತರಿಗೆ ಕಲಿಸುವ ಪುಸ್ತಕಗಳು ಕ್ರೈಸ್ತರಿಗೆ ಕಲಿಸುವ ಪುಸ್ತಕಗಳು ಕ್ರೈಸ್ತ ಪುಸ್ತಕ ಅಂಗಡಿಗಳಲ್ಲಿ ಪ್ರವಾಹವಾಗಿ ಹರಿಯುತ್ತಿವೆ! ಕ್ರೈಸ್ತರು ಬಹು ಬೆಲೆಬಾಳುವ ಕಾರುಗಳನ್ನು ಮನೆ ಮತ್ತು ಭೂಮಿಯನ್ನು ನಂಬಿಕೆಯ ಮೂಲಕವಾಗಿ ತಮ್ಮದನ್ನಾಗಿ ಮಾಡಿಕೊಳ್ಳಲು ಈ ಪುಸ್ತಕಗಳು ಕಲಿಸುತ್ತವೆ.

ಚಿಕ್ಕ ಮಗುವೂ ಸಹ ಇಂತಹ ಪುಸ್ತಕಗಳನ್ನು ಬರೆಯುವವರು ಲೌಕಿಕ ಮನಸ್ಸಿನವರೆಂದು ಕಾಣುವಲ್ಲಿ ಅನೇಕ ವಿಶ್ವಾಸಿಗಳು ಇದನ್ನು ಕಾಣದೇ ಮೋಸಹೋಗುತ್ತಾರೆ. ಈ ಪುಸ್ತಕಗಳಲ್ಲಿರುವ ಸಾಕ್ಷಿಗಳು ಸತ್ಯವಾಗಿರಬಹುದು. ಆದರೆ ಅವರಿಗೆ ಇವುಗಳನ್ನೆಲ್ಲಾ ಕೊಡುವಾಗ ದೇವರು ಅವರನ್ನು ಪರೀಕ್ಷಿಸುತ್ತಿದ್ದಾನೆಂದು ಎಷ್ಟು ಜನರಿಗೆ ಗೊತ್ತಾಗುತ್ತದೆ1 ಅವರು ಶ್ರೀಮಂತರಾದಾಗ ತಮ್ಮ ಐಶ್ವರ್ಯವನ್ನು ಇತರರಿಗೆ ಹಂಚಿಕೊಟ್ಟು ದೇವರ ಕಡೆಗೆ ಐಶ್ವರ್ಯವಂತರಾಗುತ್ತಾರೋ ಇಲ್ಲವೋ ಎಂದು ದೇವರು ಅವರನ್ನು ಪರೀಕ್ಷಿಸುತ್ತಾನೆ. (ಲೂಕ 12:21). ಆದರೆ ಅವರೆಲ್ಲರೂ ಪರೀಕ್ಷೆಯಲ್ಲಿ ಬಿದ್ದುಹೋದರು, ಆದರೆ ಪೇತ್ರನು ಬೀಳಲಿಲ್ಲ.

ಆದಾಮನ ಮಕ್ಕಳೆಲ್ಲರಲ್ಲಿ ಸ್ವಾರ್ಥವು ಕೇಂದ್ರೀಕೃತವಾಗಿದೆ. ನಾವು ರಕ್ಷಿಸಲ್ಪಟ್ಟಾಗ ಸ್ವಾರ್ಥವು ಸಾಯುವುದಿಲ್ಲ; ಆದರೆ ಬೇರೆಬೇರೆಯಾಗಿ ತನ್ನನ್ನು ತೋರಿಸಲು ಪ್ರಯತ್ನಿಸುತ್ತದೆ. ಪ್ರಾಪಂಚಿಕವಾದ ಕ್ರೈಸ್ತತ್ವದ ಮೂಲವು ಇದಾಗಿದೆ. ಲೌಕಿಕವಾದ ಮತ್ತು ದೈಹಿಕವಾದ ಆಶೀರ್ವಾದಗಳನ್ನು ದೇವರಿಂದ ಹೊಂದಲು ‘ನಂಬಿಕೆ’ ಎಂಬ ವೇಷದಲ್ಲಿ ಈ ಪುಸ್ತಕಗಳು ಈ ದಿನದಲ್ಲಿ ನಮಗೆ ಬರುತ್ತವೆ.

ಈ ಪುಸ್ತಕಗಳು ಓದುವವರು ಲೌಕಿಕ ಮನಸ್ಸಿನವರೋ ಅಥವಾ ಪರಲೋಕಭಾವದವರಾಗಿದ್ದಾರೋ ಎಂದು ತೋರಿಸಲು ಸಹಾಯವಾಗುತ್ತದೆ. ಹೀಗೆ ಕ್ರೈಸ್ತತ್ವದಲ್ಲಿ ಗೋಧಿಯು ಹೊಟ್ಟಿನಿಂದ ಬೇರ್ಪಡುತ್ತದೆ!

ತಿದ್ದುವಿಕೆಗೆ ಪೇತ್ರನ ಮನೋಭಾವ

ಯೇಸುವು ಪೇತ್ರನನ್ನು ಇನ್ನೊಂದು ರೀತಿಯಲ್ಲಿ ಪರೀಕ್ಷಿಸಿದನು. ಅದೇನೆಂದರೆ, ಬಹಿರಂಗವಾಗಿ ಯಾವ ಮನುಷ್ಯನಿಗೂ ಎಂದಿಗೂ ದೊರೆಯದಂತಹ ಗದರಿಕೆಯನ್ನು ಪೇತ್ರನಿಗೆ ಕೊಟ್ಟನು.

ತನ್ನ ಶಿಷ್ಯರಿಗೆ ತಾನು ಜನರಿಂದ ತಿರಸ್ಕರಿಸಲ್ಪಟ್ಟು ಕ್ರೂಜಿಸಲ್ಪಡುವದನ್ನು ಹೇಳಿದಾಗ ಪೇತ್ರನು ಅತೀಯಾದ ಮಾನವೀಯ ಪ್ರೀತಿಯಿಂದ ಕರ್ತನನ್ನು ಪಕ್ಕಕ್ಕೆ ಕರಕೊಂಡು “ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು (ಮತ್ತಾ. 16:22) ಎಂದು ಆತನನ್ನು ಗದರಿಸುವುದಕ್ಕೆ ಪ್ರಾರಂಭಿಸಲು,

ಯೇಸುವು ತಿರುಗಿ, ಬಹಿರಂಗವಾಗಿ ಪೇತ್ರನಿಗೆ (ಇತರ ಅಪೊಸ್ತಲರು ಕೇಳುವ ಹಾಗೆ) “ಸೈತಾನನೇ, ನನ್ನಿಂದ ತೊಲಗು! ನನಗೆ ನೀನು ವಿಘ್ನವಾಗಿದ್ದೀ ಎಂದು ಹೇಳಿದನು. (ಮತ್ತಾ. 16:23).

ನಾವು ಬಹಿರಂಗವಾಗಿ ಗದರಿಸಲ್ಪಡುವದು ನಮ್ಮ ಸ್ವಾಭಿಮಾನಕ್ಕೆ ಅವಮಾನಕರ. ಅದರಲ್ಲೂ “ಸೈತಾನ ನೆಂದು ಕರೆಯಲ್ಪಡುವುದು ಇನ್ನೂ ಕೆಟ್ಟದ್ದು.

ಆದರೂ ಪೇತ್ರನು ಬೇಸರಮಾಡಿಕೊಳ್ಳಲಿಲ್ಲ.

ಸ್ವಾರ್ಥವು ಸಾಯಬೇಕೆಂದು ಯೇಸುವು ಬೋಧಿಸಿದಾಗ ಆತನ ಶಿಷ್ಯರಲ್ಲಿ ಅನೇಕರು ಬೇಸರಗೊಂಡು ಅವನನ್ನು ಹಿಂಬಾಲಿಸುವದನ್ನು ಬಿಟ್ಟುಬಿಟ್ಟರು. ಯೇಸುವು ತನ್ನ ಹನ್ನೆರಡು ಶಿಷ್ಯರಿಗೆ ಅವರೂ ಸಹ ಬಿಟ್ಟು ಹೋಗುವರೋ ಎಂದು ಕೇಳಿದಾಗ ಪೇತ್ರನು ಈ ರೀತಿಯಾಗಿ ಉತ್ತರಿಸುತ್ತಾನೆ, “ಕರ್ತನೇ, ನಾವೆಲ್ಲಿಗೆ ಹೋಗೋಣ1 ನಿನ್ನಲ್ಲಿ ಜೀವಕರ ವಾಕ್ಯಗಳುಂಟು” ಎಂದು (ಯೋಹಾ. 6:68).

ಯೇಸುವಿನಿಂದ ಕಠಿಣವಾದ ಗದರಿಕೆಯನ್ನು ಕೇಳಿದ ನಂತರ ಪೇತ್ರನ ಬಾಯಿಯಿಂದ ಹೊರಬಂದ ಮಾತುಗಳಿವು. ಯೇಸುವಿನ ಬಾಯಿಂದ ಬರುವ ಯಾವುದೇ ಗದರಿಕೆಯ ಮಾತುಗಳು ಜೀವಕರವಾದ ಮಾತುಗಳೆಂದು ಪೇತ್ರನಿಗೆ ಗೊತ್ತಿತ್ತು.

ಹಿರಿಯ ಸಹೋದರನಿಂದ ಬರುವ ಗದರಿಕೆಯನ್ನು ಸ್ವೀಕಾರ ಮಾಡುವುದು ನಮ್ಮ ದೀನತೆಯ ಪರೀಕ್ಷೆಯಾಗಿದೆ.

ಪೇತ್ರನು ಈ ಪರೀಕ್ಷೆಯಲ್ಲಿ ಅಪೂರ್ವ ಯಶಸ್ಸನ್ನು ಗಳಿಸಿದನು.

ಹಣದ ವಿಷಯದಲ್ಲಿ ಯೂದನಿಗಿದ್ದ ಮನೋಭಾವ

ಯೇಸುವು ಆರಿಸಿಕೊಂಡ ಹನ್ನೆರಡು ಮಂದಿ ಅಪೊಸ್ತಲರಿಗೆ ದೇವರ ಮೆಚ್ಚುಗೆ ಪಡೆದವರು ಎಂಬ ಪ್ರಮಾಣ ಪತ್ರ ದೊರಕುವ ಭಾಗ್ಯ ಯೂದನಿಗೂ ಇದ್ದಿತು.

ಆದರೆ ಇತರರಂತೆ ಅವನೂ ಕೂಡ ಪರೀಕ್ಷಿಸಲ್ಪಡಬೇಕಾಯಿತು.

ಸುವಾರ್ತೆಯಲ್ಲಿ ಯೂದನು ಯೇಸುವನ್ನು ಹಿಡುಕೊಡುವವನಾದನು ಎಂದು ಬರೆದದೆ. (ಲೂಕ 6:16). ಇದರ ಅರ್ಥವೇನೆಂಡರೆ ಯೇಸುವು ಇತರ ಹನ್ನೊಂದು ಜನರನ್ನು ಆರಿಸಿಕೊಂಡಾಗ ಅವನೂ ಸಹ ಇತರರಂತೆ ಯಥಾರ್ಥನಾಗಿದ್ದನು. ಆದರೆ ತನ್ನ ಸ್ವಾರ್ಥಾಭಿಲಾಷೆಯಿಂದ ಅವನು ಭ್ರಷ್ಟನಾದನು ಎಂದು.

ಯಾಕೋಬ 3:16 ರಲ್ಲಿ ಮತ್ಸರವೂ, ಪಕ್ಷಭೇದವೂ ಇರುವ ಕಡೆ ಗಲಿಬಿಲಿಯೂ ಸಕಲ ವಿಧವಾದ ನೀಚಕೃತ್ಯಗಳೂ ಇರುವವು ಎಂದು ಬೈಬಲ್ (ಸತ್ಯವೇದವು) ಎಚ್ಚರಿಸುತ್ತದೆ.

ನಾವು ಎಚ್ಚರವಾಗಿಲ್ಲದಿದ್ದರೆ ನಮ್ಮಲ್ಲಿ ಯಾರೇ ಆಗಲಿ ಯೂದನಂತೆ ಆಗಲು ಸಾಧ್ಯವಿದೆ ಎನ್ನುವುದು ಇದರಿಂದ ವ್ಯಕ್ತವಾಗುತ್ತದೆ.

ಯೇಸುವಿನ ಗುಂಪಿಗೆ ಇವನು ಖಜಾಂಚಿಯಾಗಿದ್ದು, ಹಣದ ವಿಷಯದಲ್ಲಿ ತನ್ನ ನಂಬಿಗಸ್ತಿಕೆಯನ್ನು ತೋರಿಸಲು ಅಪಾರವಾದ ಅವಕಾಶ ಅವನಿಗಿತ್ತು. ಆತನು ನಂಬಿಗಸ್ತನಾಗಿದ್ದರೆ ಹೊಸ ಒಡಂಬಡಿಕೆಯಲ್ಲಿ ಅವನು ಸಹ ಬರೆಯಬಹುದಾಗಿತ್ತು. ಹೊಸ ಯೇರೂಸಲೇಮಿನ ಗೋಡೆಯ ಅಸ್ತಿವಾರದ ಕಲ್ಲಿನ ಮೇಲೆ ಅವನ ಹೆಸರೂ ಕೂಡ ಇರಬಹುದಾಗಿತ್ತು.

ಬೈಬಲಿನಲ್ಲಿ ಪ್ರಕಟನೆ 21:14 ರಲ್ಲಿ - “ಪಟ್ಟಣದ ಪ್ರಾಕಾರಕ್ಕೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಯಜ್ಞದ ಕುರಿಯಾದಾತನ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳಿದ್ದವು. ಎಂದು ಬರೆದದೆ.

ಆದರೆ ಪರೀಕ್ಷಿಸಲ್ಪಟ್ಟಾಗ ಯೂದನು ಬಿದ್ದುಹೋದನು.

ಹಣದ ಚೀಲದ ಉಪಯೋಗವು ಬಡವರಿಗೂ ಕೊರತೆಯಲ್ಲಿರುವವರಿಗೂ ಕೊಡುವದಾಗಿತ್ತು. ಯೋಹಾನ 13:29 ರಲ್ಲಿ “ಬಡವರಿಗೆ ಏನಾದರೂ ಕೊಡು..... ಎಂದು ಬರೆದಿದೆ.

ಈ ಕೃತ್ಯದಲ್ಲಿ ಇಷ್ಟವಿದ್ದಂತೆ ನಟಿಸಿ ಬಡವರಿಗೆಂದು ಕೊಡಲ್ಪಟ್ಟ ಹಣವನ್ನೆಲ್ಲಾ ಯೂದನು ಕದ್ದುಕೊಂಡನು. ಯೋಹಾನ 12:4-6 ರಲ್ಲಿ “......ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತೆಗೆಯುವವನಾಗಿದ್ದದರಿಂದಲೇ ಹೀಗೆ ಹೇಳಿದನು. ಎಂದು ಬರೆದದೆ.

“ಯೇಸುವು ಯೂದನನ್ನು ಯಾಕೆ ಬಹಿರಂಗ ಪಡಿಸಲಿಲ್ಲ1 ಎಂದು ನಾವು ಕೇಳಬಹುದು.

ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ನಾವು ಇನ್ನೊಂದು ಪ್ರಶ್ನೆಯನ್ನು ಕೇಳಬಹುದು. “ಇಂದು ಕ್ರೈಸ್ತತ್ವದ ಹೆಸರಿನಲ್ಲಿ ಹಣಮಾಡಿಕೊಳ್ಳುತ್ತಿರುವ ಜನರನ್ನೆಲ್ಲಾ ಯೇಸುವು ಯಾಕೆ ಬಯಲಿಗೆ ತರುವುದಿಲ್ಲ1 ಇಂದು ಸಹ ಸಾವಿರಾರು ಜನರು ಹಣಕ್ಕೋಸ್ಕರ ದೇವರ ಸೇವೆಯನ್ನು ಮಾಡುತ್ತಾರೆ ಮತ್ತು ದೇವರ ಸೇವೆಗೆಂದು ಕೊಟ್ಟ ಹಣವನ್ನು ಪ್ರತಿಶತಃ ಪ್ರಾಮಾಣಿಕವಾಗಿ ಉಪಯೋಗಿಸುವುದಿಲ್ಲ.

ಆದರೆ ದೇವರು ದೀರ್ಘಶಾಂತನು. ಪ್ರತಿಯೊಬ್ಬನೂ ಪರೀಕ್ಷಿಸಲ್ಪಡುವದಕ್ಕೋಸ್ಕರ ಆತನು ಸಮಯಕೊಡುತ್ತಾನೆ.

ಹಣವನ್ನು ಆಯ್ದುಕೊಳ್ಳುವಾಗ ಯೂದನು ತಾನು ಏನನ್ನು ಕಳಕೊಳ್ಳುತ್ತಿದ್ದೇನೆಂದು ಅರಿತುಕೊಂಡಿದ್ದರೆ ಆತನು ಬಹುಶಃ ಬೇರೆಯಾಗಿ ವರ್ತಿಸುತ್ತಿದ್ದನು! ಇಂದಿನ ಕ್ರೈಸ್ತ ಕೆಲಸಗಾರರೂ ಸಹ ಹಣವನ್ನಾಯ್ದುಕೊಳ್ಳುವದರಲ್ಲಿ ತಾವು ತಮಗೇ ಹಾನಿಮಾಡಿಕೊಳ್ಳುತ್ತೇವೆಂದು ತಿಳಿದಿದ್ದರೆ ಹಣದ ವಿಷಯದಲ್ಲಿ ಅವರು ಬೇರೆಯಾಗಿ ವರ್ತಿಸುತ್ತಿದ್ದರು!!

ಪಡಕೊಳ್ಳುವುದನ್ನು ಪ್ರೀತಿಸಿ ಕೊಡುವುದನ್ನು ದ್ವೇಷಿಸಿದುದೇ ಯೂದನ ಸಮಸ್ಯೆಯಾಗಿತ್ತು.

ಕೊಡುವುದರ ಭಾಗ್ಯವನ್ನು ಯೇಸುವು ತನ್ನ ಶಿಷ್ಯರಿಗೆ ಕಲಿಸಿದ್ದನು. “ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವೆಂಬುದಾಗಿ ಕರ್ತನಾದ ಯೇಸು ತಾನೇ ಹೇಳಿದ ಮಾತುಗಳನ್ನು ನೆನೆಪಿನಲ್ಲಿಟ್ಟುಕೊಂಡಿರಬೇಕು ಅಂದನು (ಅ.ಕೃ. 20:35).

ಪೇತ್ರನು ಇದನ್ನು ತಿಳುಕೊಂಡನು. ಆದರೆ ಯೂದನು ತಿಳುಕೊಳ್ಳಲಿಲ್ಲ. ಹೆಚ್ಚೆಚ್ಚಾಗಿ ಪಡಕೊಳ್ಳುವುದರಿಂದ ಸಂತೋಷವುಂಟಾಗುತ್ತದೆಂದು ಯೂದನು ಯೋಚಿಸಿದ್ದನು.

ಪ್ರತಿ ಕ್ರೈಸ್ತನೂ ಈ ಎರಡು ಗುಂಪಿನಲ್ಲಿ ಒಂದಕ್ಕೆ ಸೇರುತ್ತಾನೆ: ಪೇತ್ರನ ಹಾಗೆ ಎಲ್ಲವನ್ನು ತ್ಯಜಿಸಿ ಪ್ರೀತಿಯಿಂದ ದೇವರಿಗೂ ಮತ್ತು ಕೊರತೆಯಲ್ಲಿರುವವರಿಗೂ ಕೊಡುವುದು; ಮತ್ತು ಯೂದನ ಹಾಗೆ ಪಡಕೊಳ್ಳುವುದನ್ನು ಪ್ರೀತಿಸಿ ತಮಗೋಸ್ಕರ ಕೂಡಿಸಿಕೊಳ್ಳುವುದು. ಇಂಥಹ ಯೂದರು ಎಂದಾದರೂ ಇತರರಿಗೆ ಕೊಟ್ಟರೆ ಅದೂ ಬಹು ಕಷ್ಟದಿಂದ ತಮ್ಮ ಮನಸ್ಸಾಕ್ಷಿಯನ್ನು ತೃಪ್ತಿಗೊಳಿಸಲು ಜಿಪುಣರಾಗಿ ಕೊಡುತ್ತಾರೆ! ಆದರೆ ಪಡಕೊಳ್ಳುವಾಗ ಅವರಿಗೆ ಯಾವ ಸಂಕೋಚವಿರುವುದಿಲ್ಲಾ!!

ಕೊಡುವ ಹಾಗು ತೆಗೆದುಕೊಳ್ಳುವ ವಿಷಯದಲ್ಲಿ ನಾವು ಪರಲೋಕ ರಾಜ್ಯದ ನಿಯಮಕ್ಕನುಗುಣವಾಗಿ ಜೀವಿಸುತ್ತೇವೋ ಇಲ್ಲವೋ ಎಂದು ದೇವರು ಪರೀಕ್ಷಿಸುತ್ತಾನೆ.

ನಾವು ದೇವರಿಂದ ಮೆಚ್ಚುಗೆ ಸಂಪಾದಿಸಿಕೊಳ್ಳಬೇಕಾದರೆ ಹಣವನ್ನಾಗಲೀ ಉಡುಗೊರೆಯನ್ನಾಗಲೀ ಪಡಕೊಳ್ಳಲು ಬಯಸುವ ನಮ್ಮಲ್ಲಿ ನೆಲೆಗೊಂಡಿರುವ ಈ ಬಯಕೆಯನ್ನು ಬೇರಿನ ಸಮೇತವಾಗಿ ಶಿಲುಬೆಗೆ ಹಾಕಬೇಕು. ಹಳೆಯ ಸ್ವಭಾವಗಳ ಬದಲಾಗಿ ಹೊಸ ಸ್ವಭಾವಗಳನ್ನು ಕಲಿತುಕೊಳ್ಳಬೇಕು. ಹಿಂದಿನ ದಿನಗಳಲ್ಲಿ ಪಡೆದುಕೊಳ್ಳುವದನ್ನೆಷ್ಟಾಗಿ ಬಯಸಿದೆವೋ ಅಷ್ಟೇ ಕೊಡುವುದರಲ್ಲಿ ನಿಪುಣರಾಗಬೇಕು.

ನಾವು ರಾತ್ರಿ ಬೆಳಗಾಗುವುದರಲ್ಲಿ ಯಾವುದರಲ್ಲಿಯೂ ನಿಪುಣರಾಗಲಾರೆವು. ಆದರೆ ನಿರಂತರವಾಗಿ ಅಭ್ಯಾಸಿಸುವುದರ ಮೂಲಕವಾಗಿ ನಾವು ಯಾವುದೇ ಕ್ಷೇತ್ರದಲ್ಲಿ ನಿಪುಣರಾಗುತ್ತೇವೆ. ನಾವು ಕೊಡುವುದಕ್ಕೆ ಪ್ರಾರಂಭಿಸಿ ಅದು ನಮ್ಮ ಸ್ವಭಾವವಾಗುವವರೆಗೂ ಅದರಲ್ಲಿ ನಿರತರಾದರೆ, ದೇವರೇ ಕೊನೆಗೆ ನಾವು ತೆಗೆದುಕೊಳ್ಳುವುದಕ್ಕಿಂತ ಕೊಡೂವುದರಲ್ಲಿ ಆಸಕ್ತಿಯುಳ್ಳವರೆಂದು ಸಾಕ್ಷಿಹೇಳುತ್ತಾನೆ.

ಯೇಸುವಿನ ನಿಜ ಶಿಷ್ಯನು ದೇವರ ಕಡೆಗೆ ಐಶ್ವರ್ಯವಂತನಾಗುವುದು, ಬಡವರಿಗೆ ಕೊಡುವುದು ಹೇಗೆ ಎಂದು ಕಲಿತವನಾಗಿರುವನು. ಇಂಥಹ ಮನುಷ್ಯನು ಕೊರತೆಯಲ್ಲಿರುವಾಗ ತಾನು ಹೇಗೆ ಕೊಟ್ಟನೋ ಹಾಗೆಯೇ ದೇವರೂ ಸಹ ಕೊಡುವನೆಂದು ಇವನಿಗೆ ಕಂಡುಬರುವದು.

ಯೇಸು ಲೂಕ 6:38 ರಲ್ಲಿ ಹೇಳಿದ್ದು - ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರ ಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು ಎಂದು.

ಯೇಸುವು ನಮಗೆ ಕಲಿಸಿದ್ದೇನೆಂದರೆ, ನಾವು ಈ ಲೌಕಿಕ ವಿಷಯಗಳಲ್ಲಿ ಅಪನಂಬಿಗಸ್ತರಾಗಿದ್ದರೆ ದೇವರಿಂದ ಆತ್ಮೀಕ ಐಶ್ವರ್ಯವನ್ನು ಹೊಂದಿಕೊಳ್ಳಲು ಅಸಾಧ್ಯವೆಂದು. ಲೂಕ 16:11 ರಲ್ಲಿ ಹೀಗಿರುವುದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಕೊಟ್ಟಾರು1 ಎಂದು ಬರೆದದೆ.

ಹಣದ ಚೀಲದೊಂದಿಗೆ ದೇವರು ಯೂದನನ್ನುಪರೀಕ್ಷಣೆಯಲ್ಲಿ (ಪ್ರೊಬೇಷನ್) ಇಟ್ಟಿದ್ದಾಗ ಅವನು ಬಿದ್ದುಹೋದನು. ಅವನ ನಷ್ಟವು ನಿತ್ಯವಾದದ್ದು.

ಇಂದು ನಾನು ಮತ್ತು ನೀವು ಹಣದ ಚೀಲದೊಂದಿಗೆ ಪರೀಕ್ಷಣೆ ಮೇಲಿದ್ದೇವೆ.

ತಿದ್ದುವಿಕೆಗೆ ಯೂದನ ಮನೋಭಾವ

ಬಹಿರಂಗವಾಗಿ ಯೇಸುವಿನಿಂದ ತಿದ್ದಲ್ಪಟ್ಟಾಗ ಪೇತ್ರನ ಪ್ರತಿಕ್ರಿಯೆಯನ್ನು ನಾವು ನೋಡಿದೆವು. ಯೂದನು ಸಹ ಈ ಕ್ಷೇತ್ರದಲ್ಲಿ ಪರೀಕ್ಷಿಸಲ್ಪಟ್ಟನು. ಆದರೆ ಅವನು ಪೇತ್ರನಂತೆ ಪಾಸಾಗಲಿಲ್ಲ. ಬಿದ್ದುಹೋದನು.

ತನ್ನ ಕೃತಜ್ಞತೆಯನ್ನು ತೋರಿಸಲು ಒಬ್ಬ ಸ್ತ್ರೀಯು ಸುಗಂಧ ತೈಲದ ಭರಣಿಯನ್ನು ಯೇಸುವಿನ ಪಾದಗಳಲ್ಲಿ ಸುರಿದಾಗ, ಯೂದನು ಅದು ಹಣವನ್ನು ವ್ಯರ್ಥ ಮಾಡುವುದು ಎಂಬ ಅಭಿಪ್ರಾಯ ಪಟ್ಟನು. ಆದರೆ ಯೇಸು ಆ ಸ್ತ್ರೀಯ ಪಕ್ಷ ವಹಿಸಿ “ಈಕೆಯನ್ನು ಬಿಡು; ನನ್ನನ್ನು ಹೂಣೀಡುವ ದಿವಸಕ್ಕಾಗಿ ಅದನ್ನು ಇಟ್ಟುಕೊಳ್ಳಲಿ. ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ ಅಂದನು. (ಯೋಹಾನ ೧೨:೭,೮).

ಇಲ್ಲಿ ಇಸ್ಕರಿಯೋತ ಯೂದನನ್ನು ಯೇಸುವು ಗದರಿಸಿದನೆಂದು ಯಾರೂ ಹೇಳಲಾಗದು. ಯೇಸು ಪೇತ್ರನನ್ನು ಗದರಿಸಿದ್ದನ್ನು ಇದಕ್ಕೆ ಹೋಲಿಸಿದರೆ ಇದು ಏನೂ ಅಲ್ಲ!

ಆದರೂ ಇಸ್ಕರಿಯೋತ ಯೂದನು ಬೇಸರ ಪಟ್ಟುಕೊಂಡನು.

ಇದಾದ ನಂತರ ಯೂದನು ಕೂಡಲೇ ಏನು ಮಾಡಿದನೆಂದು ಮತ್ತಾಯನ ಸುವಾರ್ತೆ 26:14,15 ರಲ್ಲಿ ನಾವು ಹೀಗೆ ಓದುತ್ತೇವೆ - “ಆಮೇಲೆ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನೆಂಬವನು ಮಹಾಯಾಜಕರ ಬಳಿಗೆ ಹೋಗಿ- “ನಾನು ಅವನನ್ನು ನಿಮಗೆ ಹಿಡುಕೊಟ್ಟರೆ ನನಗೆ ಏನು ಕೊಡುತ್ತೀರಿ1 ಅಂದನು.

‘ಆಮೇಲೆ’ ಎನ್ನುವ ಪದವು ಇಲ್ಲಿ ಪ್ರಾಮುಖ್ಯವಾದದ್ದು. ಕರ್ತನು ಅವನನ್ನು ತಿದ್ದಿದ್ದೇ, ತಕ್ಷಣ ಅವನನ್ನು ರೇಗಿಸಿ ಯಾಜಕರ ಬಳಿಗೆ ಹೋಗಿ ಯೇಸುವನ್ನು ಹಿಡುಕೊಡುವದಕ್ಕೆ ಪ್ರೇರೇಪಿಸಿತು.

ಪೇತ್ರನು ಜಯಶಾಲಿಯಾದನು. ಆದರೆ ಯೂದನು ಅವಮಾನಕರವಾದ ರೀತಿಯಲ್ಲಿ ಬಿದ್ದುಹೋದನು.

ದೇವರು ನಮ್ಮ ಮೇಲೆ ಇಟ್ಟಿರುವ ಅಧಿಕಾರಿಗಳಿಂದ ನಾವು ಇಂದು ತಿದ್ದಲ್ಪಟ್ಟು ಪರೀಕ್ಷಿಸಲ್ಪಡುತ್ತಿದ್ದೇವೆ.

ಮಕ್ಕಳು ಪಾಲಕರಿಂದ, ಹೆಂಡತಿಯರು ಗಂಡಂದಿರ ಮೂಲಕ, ಕೆಲಸಗಾರರು ಅವರ ಮಾಲೀಕರ ಮೂಲಕ ತಿದ್ದುಪಾಠನ್ನು ಪಡೆಯುವುದರ ಮೂಲಕವಾಗಿ ಪರೀಕ್ಷಿಸಲ್ಪಡುತ್ತಿದ್ದಾರೆ. ಸಭೆಯಲ್ಲಿ ಹಿರಿಯರು ನಮ್ಮನ್ನು ತಿದ್ದುವಾಗ ನಾವೆಲ್ಲರೂ ಪರೀಕ್ಷಿಸಲ್ಪಡುತ್ತಿದ್ದೇವೆ.

ತಿದ್ದುಪಾಠಿಗೆ ಇರುವ ನಮ್ಮ ಪ್ರತಿಕ್ರಿಯೆಯು ನಮ್ಮ ದೀನತೆಯ ಸ್ಪಷ್ಟವಾದ ಪರೀಕ್ಷೆಯಾಗಿದೆ. ನಾವು ಬೇಸರಿಸಿಕೊಳ್ಳುವಾಗ ನಾವು ಇಸ್ಕರಿಯೋತ ಯೂದನ ಗುಂಪಿನಲ್ಲಿದ್ದೇವೆ.

ತಿದ್ದಲ್ಪಟ್ಟಾಗ ನಾವು ಬೇಸರಗೊಂಡರೆ ನಮ್ಮಲ್ಲಿನ ಸ್ವಾರ್ಥ ಸಾಯುವ ಹಾಗೆ ದೇವರಿಗೆ ಕೂಗಿಕೊಂಡು ನಿತ್ಯತ್ವದ ಪ್ರತಿಫಲ ತಪ್ಪಿಸಿಕೊಳ್ಳದೇ ಇರೋಣ.

ಪೇತ್ರನ ಮತ್ತು ಯೂದನ ಪ್ರತಿಕ್ರಿಯೆಗಳ ಮೇಲೆ ನಿತ್ಯತ್ವದ ಸಂಗತಿಗಳು ಅವಲಂಬಿಸಿದ್ದವು. ಅವರು ಪರೀಕ್ಷಣೆಯಲ್ಲಿದ್ದಾರೆಂದು ಅವರಿಗೆ ಗೊತ್ತಿರಲಿಲ್ಲ.

ದೇವರು ತಿದ್ದು ಪಾಠಿಗೆ ಇರುವ ನಮ್ಮ ಪ್ರತಿಕ್ರಿಯೆಯನ್ನು ವೀಕ್ಷಿಸುತ್ತಿದ್ದಾನೆಂದು ನಮ್ಮಲ್ಲಿ ಅನೇಕರು ಅರಿಯುವುದಿಲ್ಲ.

ನೀನು ತಿದ್ದುವಿಕೆಯನ್ನು ಅಲಕ್ಷಿಸಿದರೆ ಅಥವಾ ತಿದ್ದಲ್ಪಟ್ಟಾಗ ಬೇಸರಗೊಂಡರೆ ದೇವರ ಮೆಚ್ಚುಗೆಗೆ ಪಾತ್ರನಾಗಲಾರಿ.

ಅಧ್ಯಾಯ 11
ದೇವರ ಮೆಚ್ಚುಗೆಗೆ ಪಾತ್ರರಾದವರ ಸಮೂಹ

ಪ್ರಕಟನೆ 14:1-5 ರಲ್ಲಿ ತಮ್ಮ ಭೂಲೋಕದ ಜೀವಿತದಲ್ಲಿ ಕರ್ತನನ್ನು ಹೃತ್ಪೂರ್ವಕವಾಗಿ ಹಿಂಬಾಲಿಸಿದ ಶಿಷ್ಯರ ಒಂದು ಚಿಕ್ಕ ಗುಂಪನ್ನು ಕುರಿತು ಓದುತ್ತೇವೆ. ಅಂತ್ಯದ ದಿನದಲ್ಲಿ ಅವರು ಜಯಶಾಲಿಗಳಾಗಿ ಯೇಸುವಿನೊಂದಿಗೆ ನಿಲ್ಲುತ್ತಾರೆ. ಯಾಕೆಂದರೆ, ಅವರ ಜೀವಿತದಲ್ಲಿ ದೇವರು ತನ್ನ ಪೂರ್ಣ ಯೋಜನೆಯನ್ನು ಸಾಧಿಸಲು ಸಾಧ್ಯವಾಗಿತ್ತು.

ಪ್ರಕಟನೆ 7:9,10 ರಲ್ಲಿ ಪಾಪಕ್ಷಮೆ ಹೊಂದಿದ ಜನರ ಸಮೂಹವು ಯಾರೂ ಎಣಿಸಲಾರದಷ್ಟು ದೊಡ್ಡದಿತ್ತೆಂದು ನೋಡುತ್ತೇವೆ.

ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು. ಅವರು “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ”, ಎಂದು ಮಹಾ ಶಬ್ಧದಿಂದ ಕೂಗಿದರು.

ಆದರೆ 14ನೇ ಅಧ್ಯಾಯದಲ್ಲಿರುವ ಶಿಷ್ಯರ ಗುಂಪು ಎಣಿಸಬಹುದಾದಷ್ಟು ಚಿಕ್ಕದಾಗಿದೆ. ಅದು 1,44,000 ಜನರು. ಈ ಸಂಖ್ಯೆಯು ಅಕ್ಷರಾರ್ಥ ಅಥವಾ ಉಪಮೆಯಾಗಿದೆಯೋ ಅದು ಪ್ರಾಮುಖ್ಯವಲ್ಲ. ಪ್ರಕಟನೆಯಲ್ಲಿರುವ ಅನೇಕ ಸಂಗತಿಗಳು ಈ ರೀತಿಯಾಗಿವೆ. ಆದರೆ ಮುಖ್ಯವಾದ ವಿಷಯವೇನೆಂದರೆ ದೊಡ್ಡ ಜನಸಮೂಹಕ್ಕೆ ಹೋಲಿಸಿದರೆ ಇದು ಬಹು ಸಣ್ಣದಾದ ಸಂಖ್ಯೆಯಾಗಿದೆ.

ಈ ಶೇಷವು (ಅಲ್ಪ ಸಂಖ್ಯಾತರು) ಭೂಲೋಕದಲ್ಲಿ ದೇವರಿಗೆ ನಂಬಿಗಸ್ತರಾಗಿದ್ದರು. ಅವರು ಪರೀಕ್ಷಿಸಲ್ಪಟ್ಟು ದೇವರ ಮೆಚ್ಚುಗೆ ಗಳಿಸಿದರು. ದೇವರು ತಾನೇ ಅವರ ವಿಷಯದಲ್ಲಿ ವಚನ 4, 5 ರಲ್ಲಿ ಹೀಗೆ ಹೇಳುತ್ತಾನೆ..... “ಮಲೀನರಾಗದವರು........ನಿಷ್ಕಳಂಕರು.......ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು........ಇವರ ಬಾಯಲ್ಲಿ ಸುಳ್ಳು (ಕಪಟ) ಸಿಕ್ಕಲಿಲ್ಲ; ಇವರು ನಿರ್ದೋಷಿಗಳಾಗಿದ್ದಾರೆ.

ಇವರು ದೇವರಿಗೆ ಪ್ರಥಮ ಫಲದಂತಾದರು. ಇವರು ಕ್ರಿಸ್ತನ ಮದಲಗಿತ್ತಿಯಾಗಿದ್ದಾರೆ. ಯಜ್ಞದ ಕುರಿಯಾದಾತನ ವಿವಾಹದ ದಿನದಲ್ಲಿ ಚಿಕ್ಕ ಮತ್ತು ದೊಡ್ಡ ವಿಷಯಗಳಲ್ಲಿ ಸಂಪೂರ್ಣ ಸತ್ಯವಂತರೂ ನಂಬಿಗಸ್ತರೂ ಆಗಿರುವದು ಎಲ್ಲಕ್ಕಿಂತಲೂ ಪ್ರಾಮುಖ್ಯವಾದದ್ದೆಂದು ಎಲ್ಲರಿಗೂ ಸ್ಪಷ್ಟವಾಗುವುದು.

ಆದಿನದಲ್ಲಿ ಪರಲೋಕದಲ್ಲಿನ ಗಟ್ಟಿಯಾದ ಗುಡುಗಿನ ಶಬ್ದವು - “ಯಜ್ಞದ ಕುರಿಯಾದಾತನ ವಿವಾಹ ಕಾಲವು ಬಂತು; ಆತನಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ; ಸಂತೋಷ ಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ ಎಂದು ಹೇಳಿತು. (ಪ್ರಕ ೧೯:೭).

ಭೂಲೋಕದಲ್ಲಿ ತಮ್ಮ ಸ್ವಂತ ಲಾಭ ಮತ್ತು ಮಾನವನ್ನು ಹುಡುಕಿದವರು ಆ ದಿನದಲ್ಲಿ ತಮ್ಮ ಅಪಾರ ನಷ್ಟವು ಎಷ್ಟೆಂದು ತಿಳುಕೊಳ್ಳುತ್ತಾರೆ. ಕರ್ತನಿಗಿಂತಲೂ ತಮ್ಮ ತಂದೆ, ತಾಯಿ, ಹೆಂಡತಿ ಮಕ್ಕಳು, ಸಹೋದರ ಸಹೋದರಿಯರು ಅಥವಾ ತಮ್ಮ ಸ್ವ-ಪ್ರಾಣವನ್ನು ಅಥವಾ ಇಹಲೋಕದ ವಸ್ತುಗಳನ್ನು ಹೆಚ್ಚಾಗಿ ಪ್ರೀತಿಸಿದವರು ತಮ್ಮ ನಿತ್ಯತ್ವದ ನಷ್ಟವನ್ನು ಆ ದಿನದಲ್ಲಿ ಕಂಡುಕೊಳ್ಳುವರು.

ಆಗ ಭೂಮಿಯ ಮೇಲಿದ್ದ ಅತ್ಯಂತ ಜ್ಞಾನಿಗಳು ಯೇಸುವಿನ ಆಜ್ಞೆಗಳಿಗೆ ಸಂಪೂರ್ಣವಾಗಿ ವಿಧೇಯರಾಗಲು ಆತನು ನಡೆದಂತೆಯೇ ನಡೆಯಲು ಹೃತ್ಪೂರ್ವಕವಾಗಿ ಪ್ರಯತ್ನಿಸಿದವರೆಂದು ಕಂಡುಬರುತ್ತದೆ. ಆ ದಿನದಲ್ಲಿ ಕ್ರೈಸ್ತ ಪ್ರಪಂಚದ ಮಾನವು ನಿಜವಾದ ಕಸವೆಂದು ಕಾಣುವುದು. ಹಣ ಮತ್ತು ಇಹಲೋಕದ ವಸ್ತುಗಳ ಮೂಲಕವಾಗಿ ದೇವರು ನಾವು ಕ್ರಿಸ್ತನ ಮದಲಗಿತ್ತಿಯಾಗಲು ಅರ್ಹರೋ, ಇಲ್ಲವೋ ಎಂದು ಪರೀಕ್ಷಿಸಿದನೆಂದು ಕಂಡುಕೊಳ್ಳುತ್ತೇವೆ.

ಆದಿನದಲ್ಲಿ ನೋಡಲಿಕ್ಕಿರುವ ಸತ್ಯಗಳಲ್ಲಿ ಸ್ವಲ್ಪವಾದರೂ ನಾವು ಈಗಲಾದರೂ ನೋಡುವ ಹಾಗೆ ನಮ್ಮ ಕಣ್ಣುಗಳು ತೆರೆಯಲ್ಪಡಲಿ!

ದೇವರಿಂದ ಮಾತ್ರವೇ ಪರೀಕ್ಷಿಸಲ್ಪಟ್ಟು ಮೆಚ್ಚುಗೆ ಹೊಂದಿ ಕ್ರಿಸ್ತನ ಮದಲಗಿತ್ತಿಯಲ್ಲಿ ಸ್ಥಳ ಕಂಡುಕೊಳ್ಳುವುದೇ ಯಾವುದೇ ಮನುಷ್ಯನ ಅತ್ಯಂತ ದೊಡ್ಡ ಸನ್ಮಾನವಾಗಿದೆ!

ಕಿವಿಯುಳ್ಳವನು ಕೇಳಲಿ. ಆಮೆನ್.

ಅಧ್ಯಾಯ 12
ಈ ಪುಸ್ತಕ ಮತ್ತು ನೀವು

ಇಂದಿನ ಕ್ರೈಸ್ತ ರಾಜ್ಯವು ದೇವರಿಂದ ಲೌಕಿಕ ಆಶಿರ್ವಾದಗಳನ್ನು ಹುಡುಕುವ ವಿಶ್ವಾಸಿಗಳಿಂದ ತುಂಬಿಕೊಂಡಿದೆ. ಬಹಳ ಕಡಿಮೆ ಜನರು ತಮ್ಮ ಜೀವಿತದಲ್ಲಿ ದೇವರ ಮೆಚ್ಚುಗೆಯನ್ನು ಹುಡುಕುವವರಾಗಿದ್ದಾರೆ. ಆದರೆ ನಾವು ಕೊನೆಯ ನ್ಯಾಯ ತೀರ್ಪಿನ ದಿನದಂದು ಕರ್ತನು ಮುಂದೆ ನಿಂತಾಗ, ಈ ಭೂಮಿಯಲ್ಲಿ ನಿಜವಾದ ಜ್ಞಾನಿಗಳು ಯಾರೆಂದರೆ ದೇವರ ಆಶಿರ್ವಾದಗಳಿಗಿಂತ, ಆತನ ಮೆಚ್ಚುಗೆಯನ್ನು ಪಡೆಯಲು ಜೀವಿಸಿದವರೆಂದು ನಮಗೆ ತಿಳಿಯುತ್ತದೆ.

ಅಂದು ಕ್ರೈಸ್ತರ ಮಧ್ಯದಲ್ಲಿ ಸಿಕ್ಕುವ ಒಣ ಗೌರವವು ಬರೀ ಕಸವೆಂದು ಸ್ಪಷ್ಟವಾಗಿ ತಿಳಿಯುತ್ತದೆ. ಹಣ ಮತ್ತು ಲೌಕಿಕ ವಸ್ತುಗಳು ಕೇವಲ ನಾವು ದೇವರ ನಿತ್ಯ ರಾಜ್ಯಕ್ಕೆ ಪಾಲುದಾರರಾಗಲು ಯೋಗ್ಯರೇ ಅಥವಾ ಇಲ್ಲವೇ ಎಂಬುದನ್ನು ಖಚಿತ ಪಡಿಸಲು ಬಳಸಿದ ಸಾಧನವೆಂದು ಆಗ ನಮಗೆ ತಿಳಿಯುತ್ತದೆ. ಯಾರೆಲ್ಲಾ ಲೋಕದ ಜನರನ್ನು, ವಸ್ತುಗಳನ್ನು ಕರ್ತನಾದ ಯೇಸುವಿಗಿಂತ ಹೆಚ್ಚಾಗಿ ಪ್ರೀತಿಸಿದರೋ ಅಂತಹವರು ನಿತ್ಯತ್ವದಲ್ಲಿ ಎಂಥಹ ನಷ್ಟವನ್ನು ತಾವು ಹೊಂದುವರೆಂದು ಕಂಡುಕೊಳ್ಳುತ್ತಾರೆ.

ಒಬ್ಬ ಮನುಷ್ಯನು ಪಡೆಯುವ ಅತ್ಯಂತ ಹೆಚ್ಚಿನ ಗೌರವವೆಂದರೆ, ಕರ್ತ ಯೇಸುವಿನಿಂದ ”ಬಲೇ, ಒಳ್ಳೆಯ ನಂಬಿಗಸ್ತ ಸೇವಕನೇ, ನಿನ್ನ ಕರ್ತನ ಸಂತೋಷದಲ್ಲಿ ಪ್ರವೇಶಿಸು” ಎಂದು ಹೇಳಿಸಿಕೊಳ್ಳುವುದಾಗಿದೆ.

ದೇವರು ಪರೀಕ್ಷಿಸುವಂತಹ ಸಮಯವು ಇಂದೇ ಆಗಿದೆ. ಆ ಕಡೆಯ ದಿನದ ಕೆಲ ಸತ್ಯಗಳನ್ನು ಸ್ಪಷ್ಟವಾಗಿ ನೋಡಲು ನಿಮ್ಮ ಕಣ್ಣುಗಳು ತೆರೆಯಲ್ಪಡಬೇಕಾದಲ್ಲಿ ಈ ಪುಸ್ತಕವನ್ನು ಪೂರ್ಣ ದಾಹದಿಂದ ಓದಿರಿ.........