ತಾಯಂದಿರಿಗೆ ಪ್ರೋತ್ಸಾಹ

ಬರೆದಿರುವವರು :   ಡಾ!! ಅನ್ನಿ ಪೂನೆನ್ ಭಾಗಗಳು :   ಮಹಿಳೆಯರಿಗೆ ಮನೆ
    Download Formats:

ಅಧ್ಯಾಯ 1
ದೇವರಿಗಾಗಿ ಒಂದು ಪರಿಶುದ್ಧವಾದ ಮಂದಿರವನ್ನು ಕಟ್ಟುವುದು

ಬಹಳ ವರ್ಷಗಳ ಹಿಂದೆ, ನನ್ನ ಮಕ್ಕಳು ಚಿಕ್ಕವರಾಗಿದ್ದಾಗ, ನಾನು ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ಹೃದಯದಾಳದಲ್ಲಿ ನಾನೊಬ್ಬ ಉತ್ತಮ ಹೆಂಡತಿ, ಉತ್ತಮ ತಾಯಿ, ಮತ್ತು ಉತ್ತಮ ವ್ಯಕ್ತಿಯಾಗಿರಬೇಕೆಂಬ ಹಂಬಲವಿತ್ತು. ಆ ಸಮಯದಲ್ಲಿ ನಾನು ಒಂದು ಸುಂದರವಾದ ಕಥೆಯನ್ನು ಕೇಳಿದೆ. ಅದು ನನಗೆ ಬಹಳ ಸಹಾಯ ಮಾಡಿತು.

ಯಾರೋ ಒಬ್ಬನು, ಒಂದು ದೊಡ್ಡ ಕಟ್ಟಡದ ಕೆಲಸ ನಡೆಯುವ ಸ್ಥಳದ ಕಡೆಯಿಂದ ಹಾದು ಹೋಗುತ್ತಿರುವಾಗ, ಅಲ್ಲಿ ಅನೇಕ ಜನರು ಕೆಲಸ ಮಾಡುತ್ತಿರುವುದನ್ನು ಕಂಡನು. ಕಟ್ಟುತ್ತಿರುವ ಕಟ್ಟಡವು ಬೃಹತ್ತಾದ ಕಟ್ಟಡ ಇರಬಹುದು ಎಂದು ಅವನಿಗೆ ಅನಿಸಿತು. ಕೆಲವರು ನೆಲವನ್ನು ಅಗೆಯುತ್ತಿದ್ದರು, ಕೆಲವರು ಮರದ ದಿಮ್ಮಿಗಳನ್ನು ಮತ್ತು ಇಟ್ಟಿಗೆಗಳನ್ನು ಹೊರುತ್ತಿದ್ದರು ಇನ್ನು ಕೆಲವರು ಮರಳು ಮತ್ತು ಸಿಮೆಂಟನ್ನು ಸಾಗಿಸುತ್ತಿದ್ದರು. ಹೀಗೆ ಪ್ರತಿಯೊಬ್ಬರು ಯಾವುದಾದರೊಂದು ಕೆಲಸದಲ್ಲಿ ನಿರತರಾಗಿದ್ದರು. ಅವನು, "ನೀವು ಇಲ್ಲಿ ಏನು ಮಾಡುತ್ತಿದ್ದೀರಿ?" ಎಂದು ಆ ಕೆಲಸಗಾರರನ್ನು ಕೇಳಲು, ಒಬ್ಬನು, "ನಾನು ಇಟ್ಟಿಗೆಗಳನ್ನು ಹೊರುತ್ತಿದ್ದೇನೆ" ಎಂದನು; ಮತ್ತೊಬ್ಬನು "ನಾನು ಬಡಗಿಯ ಕೆಲಸವನ್ನು ಮಡುತ್ತಿದ್ದೇನೆ" ಎಂದನು; ಇನ್ನೊಬ್ಬನು, "ನಾನು ಸಿಮೆಂಟು ಮತ್ತು ಮರಳನ್ನು ಸಾಗಿಸುತ್ತಿದ್ದೇನೆ." ಎಂದನು. ಕೊನೆಗೆ, ಇನ್ನೂ ಒಬ್ಬನು ಬಂದು "ನಾನು ಈ ಕಟ್ಟಡವನ್ನು ಕಟ್ಟಿಸುತ್ತಿರುವ ಇಂಜಿನಿಯರ್. ಇಲ್ಲಿ ನಾವು ಒಂದು ಕಥೆಡ್ರಿಲನ್ನು (ಮುಖ್ಯ ಚರ್ಚ್) ಕಟ್ಟುತ್ತಿದ್ದೇವೆ." ಎಂದು ಹೇಳಿದನು.

ನಾವು ಹೆಂಡತಿಯರಾಗಿ ಹಾಗೂ ತಾಯಂದಿರಾಗಿ ಮಾಡುವ ನಾನಾ ಪ್ರಕಾರವಾದ ವಿಷಯಗಳ ಬಗ್ಗೆ ಯೋಚಿಸಿದಾಗ, ನಾವು ಇದೇ ರೀತಿಯಾಗಿ ಹೇಳಬಹುದು. "ನಾನು ಕೇವಲ ಡಯಪರ್ಸ್ ಬದಲಾಯಿಸುತ್ತಿದ್ದೇನೆ". ಅಥವಾ "ನಾನು ಕೇವಲ ಮನೆಯನ್ನು ಸ್ವಚ್ಛ ಮಾಡುತ್ತಿದ್ದೇನೆ". ಅಥವಾ "ನಾನು ಕೇವಲ ಅಡುಗೆ ಮಾಡಿ ಪಾತ್ರೆಗಳನ್ನು ತೊಳೆಯುತ್ತಿದ್ದೇನೆ" ಎಂದು. ಆದರೆ ದೇವರು ತನ್ನ ಪರಿಶುದ್ಧವಾದ ಮಂದಿರವನ್ನು ನಮ್ಮೊಳಗೆ ಕಟ್ಟುತ್ತಿದ್ದಾನೆ. ಇದು ನಮ್ಮೊಳಗೆ ದೇವರು ಮಾಡುತ್ತಿರುವ ಒಂದು ಅದ್ಭುತ ಕೆಲಸವಾಗಿದೆ. ನಾವು ಆತನಿಗಾಗಿ ಆತನ ಸಹಾಯದಿಂದಲೇ ನಮ್ಮ ಮಕ್ಕಳನ್ನು ಬೆಳೆಸುವುದು. ಅಷ್ಟೇ ಅಲ್ಲದೆ ಅದೇ ಸಮಯದಲ್ಲಿ ಆತನು ನಮ್ಮೊಳಗೆ ತನ್ನ ಮಂದಿರವನ್ನು ಕೂಡ ಕಟ್ಟುತ್ತಿದ್ದಾನೆ. ನಮ್ಮ ಮನೆಯ ಜೀವಿತ ಹಾಗೂ ನಮ್ಮ ಕುಟುಂಬ ಜೀವಿತ ಎರಡೂ ಯೇಸುವಿನ ಮಹಿಮೆಗೋಸ್ಕರ ಕಟ್ಟಲ್ಪಡುತ್ತಿವೆ. ದೇವರ ಮಹಿಮಾಭರಿತ ಕೆಲಸಗಳನ್ನು ನಮ್ಮ ಮಕ್ಕಳೂ ಅನುಭವಿಸುವಂತೆ, ನಾವು ಅವರನ್ನು ದೇವರಿಗೆ ಸಮರ್ಪಿಸಿ ಕೊಡಬಹುದು. ಆಗ ನಮ್ಮ ಕುಟುಂಬವು ದೇವರ ಮಹಿಮೆಗಾಗಿ ಒಂದು ಸುಂದರವಾದ ಮಂದಿರವಾಗುತ್ತದೆ, ಮತ್ತು ನಮ್ಮ ಮಕ್ಕಳು ಅದರ ಒಂದು ಭಾಗವಾಗುತ್ತಾರೆ.

ಹೀಗೆ ನಾನು ಮನೆಯಲ್ಲಿ ಮಾಡುವ ಚಿಕ್ಕ ಚಿಕ್ಕ ವಿಷಯಗಳಲ್ಲಿ ನಂಬಿಗಸ್ತಳಾಗಿ ಇರುವಂತೆ, ಮತ್ತು ನನ್ನ ಜೀವನದಲ್ಲಿ ತೃಪ್ತಳಾಗಿರುವಂತೆ ಹಾಗೂ ವೃತ್ತಿ ಮಾಡುವ ಸ್ತ್ರೀಯ ಹಾಗೆ ಲೋಕದ ದೃಷ್ಟಿಯಲ್ಲಿ ನಾನೇನೋ ಒಂದು ಉನ್ನತ ಕೆಲಸ ಮಾಡಬೇಕೆಂದು ಬಯಸದೆ ಇರುವಂತೆ (ಏಕೆಂದರೆ ನಾನು ವೃತ್ತಿಯಲ್ಲಿ ವೈದ್ಯಳಾಗಿದ್ದೆ) ದೇವರು ನನಗೆ ಪ್ರೋತ್ಸಾಹಿಸಿದರು. ದೇವರು ನನ್ನ ಜೀವಿತದ ಪ್ರತಿಯೊಂದು ಸಂಗತಿಯನ್ನು ಯೋಜಿಸಿದನು, ಮತ್ತು ಅತನು ನನ್ನನ್ನು ಬಲ್ಲನು ಹಾಗೂ ನಾನು ಆತನಿಗಾಗಿ ಮಾಡಿದ ಎಲ್ಲವನ್ನು ಆತನು ಗ್ರಹಿಸುವನು ಎಂದು ನಾನು ತಿಳಿದುಕೊಂಡಾಗ, ನಾನು ಮನೆಯಲ್ಲಿ ಮಾಡುವ ಸಾಧಾರಣ ಕೆಲಸಗಳಲ್ಲಿ ನನಗೆ ಆನಂದ ದೊರಕಿತು.

ಕೆಲವೊಮ್ಮೆ ತಾಯಂದಿರಾಗಿ ನಾವು ಸಾಕಾದಷ್ಟು ನಿದ್ರೆ ಮಾಡದಿದ್ದಾಗ ಅಥವಾ ಸುಸ್ತಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ನಾವು ಬಳಲಿದಾಗ ನಾವು ಈ ದರ್ಶನವನ್ನು (ತಿಳುವಳಿಕೆಯನ್ನು) ಕಳೆದುಕೊಳ್ಳಬಹುದು. ಆಗ ನಾವು ನಮ್ಮ ಆತ್ಮೀಯ ಕನ್ನಡಕಗಳನ್ನು ಕೇಂದ್ರೀಕರಿಸಿ ಮತ್ತೊಮ್ಮೆ ಈ ದರ್ಶನವನ್ನು ಸ್ಪಷ್ಟವಾಗಿ ನೋಡಬೇಕು. ಆಗ ದೇವರು ನಮ್ಮ ಜೀವನದಲ್ಲಿ ಒಂದು ಸುಂದರವಾದ ಕೆಲಸವನ್ನು ಮಾಡುತ್ತಿದ್ದಾನೆ ಹಾಗೂ ಅದು ಒಂದು ದಿನ ಪರಿಪೂರ್ಣವಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ.

ನೀವು ಕಸೂತಿ ಮಾಡುವಾಗ, ಕಸೂತಿಯ ಕೆಳ ಭಾಗವನ್ನು ತಿರುಗಿಸಿ ನೋಡಿದರೆ ಅದು ಯಾವುದೂ ಸುಂದರವಾಗಿ ಕಾಣುವುದಿಲ್ಲ. ಅಲ್ಲಿ ಕಾಣುವುದೆಲ್ಲಾ ಬರಿ ಗಂಟುಗಳು ಮತ್ತು ಹೊಲಿಗೆಗಳು ಮಾತ್ರ. ನಮ್ಮ ಜೀವಿತಗಳಲ್ಲಿಯೂ ಹೀಗೆಯೇ ನಮಗೆ ಅರ್ಥವಾಗದಂತಹ ಅನೇಕ ಸಂಗತಿಗಳನ್ನು ನಾವು ಪದೇ ಪದೇ ನೋಡಬಹುದು. ಆದರೆ ಒಂದು ದಿನ ದೇವರು ನಮಗೆ ಮತ್ತು ಎಲ್ಲಾ ಲೋಕಕ್ಕೆ, ಆತನು ನಮ್ಮ ಜೀವನದಲ್ಲಿ ಹೆಣೆದಿರುವ ಆ ಮೇಲಿನ ಭಾಗದಲ್ಲಿನ ಸುಂದರವಾದ ’ಕಸೂತಿ’ ಯನ್ನು ತೋರಿಸುವನು, ಈ ಭೂಮಿಯ ಮೇಲೆ ನಾವು ಅನುಭವಿಸಿದ ಎಲ್ಲದರ ಮೂಲಕ ನಮ್ಮನ್ನು ಮತ್ತು ನಮ್ಮ ಮಕ್ಕಳನ್ನು ತಾನು ರೂಪಾಂತರಗೊಳಿಸಿರುವುದನ್ನು ಆತನು ತೋರಿಸುವನು. ಇದೆಲ್ಲವೂ ಆತನ ಕೈಕೆಲಸವಾದುದರಿಂದ ಇವೆಲ್ಲವೂ ಕೇವಲ ಆತನ ಮಹಿಮೆಗೋಸ್ಕರವೇ ಆಗಿರುತ್ತದೆ.

ಈಗ ನಾವು ನಮ್ಮ ಮಕ್ಕಳೊಟ್ಟಿಗೆ ಹೋರಾಡುತ್ತಿದ್ದರೂ, ಕೊನೆಗೆ ಅವರು ಒಳ್ಳೆಯವರಾಗಿಯೇ ಬದಲಾಗುತ್ತಾರೆ, ಅವರು ದೇವರ ಮಕ್ಕಳಾಗುತ್ತಾರೆ ಎಂಬ ನಂಬಿಕೆ ನಮ್ಮಲ್ಲಿರಲಿ. ಅವರ ಚಿಕ್ಕ ಚಿಕ್ಕ ಅವಿಧೇಯತೆಗಳ ಲೆಕ್ಕವನ್ನು ದೇವರು ಇಡುತ್ತಾ ಇಲ್ಲ. ನಾವು ಯಾರೂ ಪರಿಪೂರ್ಣರಲ್ಲ. ದೇವರು ನಮಗೆ ಸಹಾಯ ಮಾಡುತ್ತಾನೆ, ಅವರಿಗೂ ಸಹಾಯ ಮಾಡುತ್ತಾನೆ. ನಮ್ಮಲ್ಲಿ ಕೆಲಸ ಮಾಡುವುದು ಆ ದೇವರೇ ಎಂದು ಯಾವಾಗ ನಾವು ಅರಿತುಕೊಳ್ಳುತ್ತೇವೋ, ಆವಾಗ ನಮ್ಮನ್ನು ನಾವು ನಾವೇನೋ ಅದ್ಭುತವಾದ ತಾಯಂದಿರೆಂದು ಅಥವಾ ನಾವೇನೋ ಎಲ್ಲಾ ಪರಿಪೂರ್ಣವಾಗಿ ಮಾಡಿದ್ದೇವೆ ಎಂದು ಊಹಿಸಿಕೊಳ್ಳುವುದಿಲ್ಲ. ಅದೇ ರೀತಿಯಾಗಿ ನಾವು ಇನ್ನೊಬ್ಬರಿಗೆ ಕಲಿಸಬಹುದೆಂದು ಕೂಡಾ ಊಹಿಸಿಕೊಳ್ಳುವುದಿಲ್ಲ. ಎಲ್ಲವೂ ಇರುವುದು ಕೇವಲ ದೇವರ ಮಹಿಮೆಗಾಗಿಯೇ. ಆತನು ತನ್ನ ಬಲಿಷ್ಟವಾದ ಶಕ್ತಿಯನ್ನು ಆ ಕೊನೆಯ ದಿನದಂದು ಪ್ರಕಟಿಸಿ ತೋರಿಸುವನು. ಅದೇನೆಂದರೆ ನಮ್ಮಲ್ಲಿ ಬಲಹೀನತೆಗಳು, ಸೋಲುಗಳು ಮತ್ತು ನ್ಯೂನ್ಯತೆಗಳು ಇದ್ದರು ಕೂಡಾ, ನಾವು ಕ್ರಿಸ್ತನ ಸ್ವಭಾವದಲ್ಲಿ ಪಾಲುಗೊಂಡೆವು ಎಂದು.

ಇನ್ನೊಂದು ಉದಾಹರಣೆ ನನಗೆ ನೆನಪಾಗುತ್ತದೆ. ಯಾರೋ ಒಬ್ಬರು ಹೇಳಿದ್ದೇನೆಂದರೆ. ಏನಾದರೂ ನೀವು ಒಂದು ರೂಪಾಯಿ ನಾಣ್ಯವನ್ನು ನಿಮ್ಮ ಕಣ್ಣಿಗೆ ಸಾಧ್ಯವಾದಷ್ಟು ಹತ್ತಿರದಲ್ಲಿ ಇಟ್ಟುಕೊಂಡು ನೋಡುವುದಾದರೆ, ನಿಮಗೆ ಸೂರ್ಯನನ್ನು ನೋಡಲು ಸಾಧ್ಯವಾಗುವುದಿಲ್ಲ. ಅದೇ ರೀತಿಯಾಗಿ ಲೋಕದ ವಿಷಯಗಳಿಗೆ ಸಂಬಂಧಿಸಿದ ಕೆಲವು ಚಿಂತೆಗಳಾದ - ಹಣ ಗಳಿಸುವಿಕೆ ಮತ್ತು ಉಳಿತಾಯ ಮಾಡುವಿಕೆ ಇತ್ಯಾದಿಗಳು, ನಮ್ಮ ಆತ್ಮಿಕ ದರ್ಶನಕ್ಕೆ ಒಂದು ಮೋಡವಾಗಿದ್ದು, ದೇವರ ಬೆಳಕನ್ನು ನಾವು ನೋಡದಂತೆ ಮಾಡಬಹುದು.

ಬೆಂಗಳೂರಿನಲ್ಲಿ ನಮಗೆ ಪದೇ ಪದೇ ನೀರಿನ ಕೊರತೆ ಇರುತ್ತಿತ್ತು. ಆದ್ದರಿಂದ ನಾವು ನೀರನ್ನು ಉಪಯೋಗಿಸುವುದರಲ್ಲಿ ಎಚ್ಚರಿಕೆವಹಿಸಬೇಕಾಗುತ್ತಿತ್ತು. ನಾನು ಅನೇಕ ಸಲ ನೀರನ್ನು ಸಂಗ್ರಹಿಸಿ ಇಡುವುದರಲ್ಲಿಯೇ ನಿರತಳಾಗಿರುತ್ತಿದ್ದೆ. ಅದೇ ರೀತಿಯಾಗಿ ಮನೆಯ ಚಿಕ್ಕ-ಪುಟ್ಟ ಸಂಗತಿಗಳಲ್ಲಿ ನನ್ನನ್ನೇ ನಾನು ತೊಡಗಿಸಿಕೊಳ್ಳುತ್ತಿದ್ದೆ. ಆದರೆ, ಯೇಸು ಹೀಗೆ ಹೇಳಿರುವುದು ನನಗೆ ತಿಳಿದಿತ್ತು. "ನಮಗೆ ಅವಶ್ಯವಾದ ಒಂದು ವಿಷಯವಿದೆ, ಮರಿಯಳ ಹಾಗೆ ನಾವು ಆತನ ಪಾದಸನ್ನಿಧಿಯಲ್ಲಿ ಕುಳಿತು ಆತನನ್ನು ಕೇಳುವುದು"(ಲೂಕ 10:42). ಆದರೆ ನನ್ನ ಈ ಪ್ರತಿನಿತ್ಯದ ಬಿಡುವೇ ಇಲ್ಲದ ಮನೆಗೆಲಸದ ಮಧ್ಯದಲ್ಲಿ ನನಗೆ ಎಲ್ಲಿ ಸಮಯವಿದೆ ಎಂದು ನಾನು ಅಂದುಕೊಂಡೆ. ನಾನು ನನ್ನ ಪ್ರತಿ ನಿತ್ಯದ ಕೆಲಸದ ಮಧ್ಯದಲ್ಲಿಯೂ ಕೂಡಾ, ನನ್ನ ಮನಸ್ಸನ್ನು ದೇವರ ಮೇಲೆ ಇಡಬಹುದೆಂದು ಅನಂತರ ನಾನು ಕಂಡುಕೊಂಡೆ. ನಾನು ಮಾರ್ಥಳ ಕೈಗಳ ಜೊತೆ ಜೊತೆಗೆ ಮರಿಯಳ ಮನಸ್ಸನ್ನೂ ಇಟ್ಟುಕೊಳ್ಳಬಹುದು. ನಾವು ನಮ್ಮ ದಿನನಿತ್ಯದ ಕೆಲಸಗಳನ್ನು ಮಾಡುತ್ತಾ, ನಮ್ಮ ಹೃದಯಗಳನ್ನು ಯಾವಾಗಲೂ ದೇವರ ಸ್ವರವನ್ನು ಕೇಳಲು ನಮ್ಮನ್ನೇ ಅಳವಡಿಸಿಕೊಳ್ಳಬಹುದು.

ತಾಯಿಯಾಗಿ ನನ್ನ ಉನ್ನತವಾದ ಆಸೆ ಏನಾಗಿತ್ತೆಂದರೆ, ನನ್ನ ಮಕ್ಕಳನ್ನು ದೈವಿಕ ಹಾದಿಯಲ್ಲಿ ಬೆಳಸಬೇಕೆಂಬುದೆ. ಎಲ್ಲಾ ಮಕ್ಕಳು ವಿಭಿನ್ನವಾಗಿದ್ದಾರೆ. ಅವರ ಪಾಲನೆ-ಪೋಷಣೆ ವಿಷಯದಲ್ಲಿ ಒಳ್ಳೆಯ ವಿಚಾರಗಳು ನಮಗೆ ಕ್ರೈಸ್ತ ಪುಸ್ತಕಗಳಿಂದ ಸಿಗಬಹುದು. ಆದರೆ ಅಂತಿಮವಾಗಿ, ನಮ್ಮ ಮಕ್ಕಳನ್ನು ದೇವರ ದಾರಿಯಲ್ಲಿ ಬೆಳೆಸಲು ದೇವರೊಬ್ಬರೇ ನಮಗೆ ಸಹಾಯ ಮಾಡುತ್ತಾರೆ.

ಒಂದು ಸಲ, ನಾನು ಭೇಟಿಯಾದ ಅಥವಾ ನಾನು ಓದಿದ ಕೆಲವು ದೈವಿಕ ತಾಯಂದಿರು ತಮ್ಮ ಮಕ್ಕಳನ್ನು ಬೇರೆ ಬೇರೆ ವಿಧದಲ್ಲಿ ಶಿಕ್ಷಿಸಿದ ರೀತಿಯನ್ನು ಓದಿದಾಗ ನಾನು ಅಂಥವರನ್ನು ಅನುಕರಿಸಬೇಕೆಂದು ಶೋಧಿಸಲ್ಪಡುತ್ತಿದ್ದೆ. ಆದರೆ ಅವೆಲ್ಲಾ ಕೇವಲ ಬೇರೆ ಬೇರೆ ವಿಧಾನಗಳೆಂದು ನಾನು ಅರಿತುಕೊಂಡೆ. ನನ್ನ ಮಕ್ಕಳನ್ನು ಸತ್ಯವಾದ ದೈವಿಕತ್ವದ ಕಡೆಗೆ ನಡೆಸುವುದೇ ನನ್ನ ಗುರಿಯಾಗಿತ್ತು. ಆ ಗುರಿಯನ್ನು ಮುಟ್ಟಲು ಅನೇಕ ದಾರಿಗಳು ಇವೆಯೆಂದು ನಾನು ಅರಿತುಕೊಂಡೆ. ಆದುದರಿಂದ, ಇನ್ನೊಬ್ಬರು ಉಪಯೋಗಿಸುವಂತಹ ವಿಧಾನಗಳನ್ನು ನೋಡಿ ಕುರುಡರಂತೆ ಅನುಕರಣೆ ಮಾಡಬೇಕಾಗಿರಲಿಲ್ಲ. ಅಷ್ಟೇ ಅಲ್ಲದೆ ಆ ವಿಧಾನವನ್ನು ನಾನು ಅನುಸರಿಸಲಿಲ್ಲವೆಂದು ನಾನು ನಿರುತ್ಸಾಹಪಡಲಿಲ್ಲ. ನಮ್ಮ ಕೆಲವು ಮಕ್ಕಳು ಶಾಂತತೆಯ ಮಾತಿಗೆ ವಿಧೇಯರಾಗಬಹುದು. ಇಂಥವರಿಗೆ ನಾವು ನಮ್ಮ ಧ್ವನಿಯನ್ನು ಏರಿಸುವ ಅವಶ್ಯಕತೆಯೇ ಇಲ್ಲ. ಆದರೆ ನಮ್ಮ ಇತರ ಮಕ್ಕಳು ಭಿನ್ನವಾಗಿರಬಹುದು. ಪ್ರಾಮುಖ್ಯವಾದದ್ದು ಏನೆಂದರೆ, ನಾವು ದೇವರ ಸ್ವರವನ್ನು ಕೇಳಬೇಕು. ನಮ್ಮ ಮಕ್ಕಳ ವಿಷಯವಾಗಿ ಸಹಾಯ ಮಾಡೆಂದು ಆತನ ಕಡೆಗೆ ನೋಡಿದಾಗ ಆತನು ನಮಗೆ ಮಾರ್ಗದರ್ಶನ ನೀಡುವನು.

ನನ್ನ ಸ್ವಂತ ವಿಷಯದಲ್ಲಿ, ಕೆಲವು ಇತರ ಅಂಶಗಳಿದ್ದವು. ಸಭೆಯ ಕೂಟಗಳು 6 ವರ್ಷಗಳವರೆಗೆ ನಮ್ಮ ಮನೆಯಲ್ಲಿಯೇ ನಡೆಸಲ್ಪಡುತ್ತಿದ್ದವು. ಪ್ರತಿ ಭಾನುವಾರ ಬೆಳಿಗ್ಗೆ ಮತ್ತೆ ವಾರದಲ್ಲಿ ಮೂರು ಸಾಂಯಕಾಲಗಳಲ್ಲಿ ನಡೆಸಲ್ಪಡುತ್ತಿದ್ದವು. ಇದರ ಜೊತೆಗೆ, ಸಭೆಯ ಜನರು ಆಗಾಗ್ಗೆ ನಮ್ಮ ಮನೆಯಲ್ಲಿಯೇ ಉಳಿಯುತ್ತಿದ್ದರು, ಯಾವುದೊ ಒಂದು ಕೆಲಸ ಅಥವಾ ವೈದ್ಯಕೀಯ ಸಹಾಯ ಅಥವಾ ಪ್ರಾರ್ಥನೆಗಾಗಿಯೋ ಉಳಿಯುತ್ತಿದ್ದರು. ಕೆಲವೊಂದು ಸಮಯಗಳಲ್ಲಿ ದೂರದ ಪ್ರದೇಶಗಳಿಂದ ಬಂದಂತಹ ಜನರಿಗೆ ರಾತ್ರಿಯಲ್ಲಿ ತಂಗಲು ಸ್ಥಳವನ್ನು ಒದಗಿಸಬೇಕಾಗುತ್ತಿತ್ತು.

ಇನ್ನೊಂದು ಅಂಶವೇನೆಂದರೆ, ನನ್ನ ಗಂಡ ಸೇವೆಯ ನಿಮಿತ್ತವಾಗಿ ಪ್ರಯಾಣಿಸುತ್ತಿದ್ದು, ಪದೇ ಪದೇ ಮನೆಯಿಂದ ದೂರವಿರುತ್ತಿದ್ದರು. ಆದ್ದರಿಂದ ಇಂತಹ ಸಮಯಗಳಲ್ಲಿ ನನಗೆ ಅವರ ಸಹಾಯ ಸಿಗುತ್ತಿರಲಿಲ್ಲ. ಅವಾಗ ನಾನು ಈ ರೀತಿಯಾಗಿ ಅಂದುಕೊಳ್ಳುತ್ತಿದ್ದೆ, ತಮ್ಮ ಗಂಡಂದಿರು ಪ್ರತಿ ದಿನ ಮನೆಯಲ್ಲಿಯೇ ಇರುವಂತಹ ಇತರ ಸ್ತ್ರೀಯರಿಗೆ ಎಷ್ಟು ಸುಲಭ ಅಲ್ಲವೇ ಎಂದು. ಆ ದಿನಗಳಲ್ಲಿ ನಾನು ಒಂದು ಪಾಠವನ್ನು ಕಲಿತೆ: "ನಿನ್ನ ಭಾರವನ್ನು ಇತರರ ಭಾರಕ್ಕೆ ಹೋಲಿಸಬೇಡ, ನಿನ್ನ ಭಾರವನ್ನು ನಿನ್ನ ಭಾರಕ್ಕಿಂತ ಕಡಿಮೆ ಇರುವವರ ಜೊತೆಗೆ ಅಲ್ಲ, ನಿನಗಿಂತ ಹೆಚ್ಚು ಭಾರವುಳ್ಳವರ ಜೊತೆಗೆ ಹೋಲಿಸಿಕೋ". ಹೀಗೆ ಮಾಡಿದರೆ, ನಾವು ದೇವರಿಗೆ ಯಾವಾಗಲೂ ಮತ್ತು ಪ್ರತಿಯೊಂದರಲ್ಲೂ ಕೃತಜ್ಞರಾಗಿರುತ್ತೇವೆ.

ಕರ್ತನು ನನ್ನ ಗಂಡನನ್ನು ಸುವಾರ್ತೆಯನ್ನು ಬೋಧಿಸಲು ಕರೆದಿದ್ದಾನೆ, ಆದ್ದರಿಂದ ಅವರು ಮನೆಯಲ್ಲಿ ನನಗಾಗಿ ಅನೇಕ ವಿಷಯಗಳನ್ನು ಮಾಡುವದಕ್ಕಾಗಿ ಬಂಧಿಸಲ್ಪಟ್ಟಿರುವುದು ನನಗೆ ಬೇಕಾಗಿರಲಿಲ್ಲ. ಏಕೆಂದರೆ, ಇದಕ್ಕಾಗಿ ಅವರು ತಮ್ಮ ಸೇವೆಯನ್ನು ಮಿತಗೊಳಿಸಬೇಕಾಗುತ್ತಿತ್ತು, ಬೇರೆ ಬೇರೆ ಸಭೆಗಳಿಗೆ ಪ್ರಯಾಣಿಸುವುದನ್ನು ನಿಲ್ಲಿಸಬೇಕಾಗುತ್ತಿತ್ತು, ಸಹಾಯ ಬಯಸುವ ಜನರಿಗೆ ಲಭ್ಯವಿರದೆ ಇರಬೇಕಾಗುತ್ತಿತ್ತು. ನನ್ನ ಮತ್ತು ನನ್ನ ಕುಟುಂಬಕ್ಕಾಗಿ ದೇವರು ಯೋಜಿಸಿದ ಯೋಜನೆಗಳು, ಇತರರ ಯೋಜನೆಗಳಿಗಿಂತ ವಿಭಿನ್ನವಾಗಿವೆ ಎಂದು ನಾನು ಅರಿತುಕೊಂಡೆ. ಕರ್ತನು ನನಗಾಗಿ ಯೋಜಿಸಿದಂತ ಆ ಸ್ಥಿತಿಯನ್ನು ನಾನು ಅಂಗೀಕರಿಸುವುದಕ್ಕೆ ಆತನೇ ನನಗೆ ಸಹಾಯ ಮಾಡಿದನು. ನನ್ನ ಜೀವನಕ್ಕೆ ಆತನ ಯೋಜನೆಯು ಪರಿಪೂರ್ಣವಾಗಿತ್ತು ಎಂದು ನಾನು ಈಗ ಅದನ್ನು ನೋಡಬಲ್ಲೆ.

ಕೆಲವೊಂದು ಸಮಯಗಳಲ್ಲಿ ನನ್ನ ಗಂಡ ಮನೆಯಿಂದ ದೂರವಿರುವಾಗ, ನನ್ನ ಮಕ್ಕಳು ಅಸ್ವಸ್ಥರಾಗಿರುತ್ತಿದ್ದರು. ಅಂತಹ ಸಮಯದಲ್ಲಿ ನನ್ನ ಮಕ್ಕಳಿಗೆ ನಾನು ಏನು ಮಾಡಬೇಕೆಂದು ತಿಳುದುಕೊಳ್ಳಲು ದೇವರು ನನಗೆ ಸಾಕಾದಷ್ಟು ವೈದ್ಯಕೀಯ ಜ್ಞಾನವನ್ನು ಕೊಟ್ಟಿದ್ದಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದೆ. ಅವರು ಅನಾರೋಗ್ಯವಾಗಿ ಇರುವಾಗಲೆಲ್ಲ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿರುತ್ತಿರಲಿಲ್ಲ. ಅವರ ಚಿಕ್ಕ ಚಿಕ್ಕ ಕಾಯಿಲೆಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಕರ್ತನು ಯಾವಾಗಲೂ ನನ್ನೊಟ್ಟಿಗೆ ಇದ್ದುಕೊಂಡು ಅಂತಹ ಸಂದರ್ಭಗಳನ್ನು ಸರಳ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡಿದನು. ರಾತ್ರಿಯಲ್ಲಿ ನಿದ್ರೆ ಇಲ್ಲದ ದಿನಗಳಲ್ಲಿ, ಹಗಲಿನಲ್ಲಿ ಅಲ್ಪವಾಗಿ ನಿದ್ರೆ ಮಾಡಲು ದೇವರು ನನಗೆ ಅವಕಾಶವನ್ನು ಕಲ್ಪಿಸುತ್ತಿದ್ದನು.

ನನ್ನ ಮಕ್ಕಳ ಅವಶ್ಯಕತೆಗಳಂತಹ ಪ್ರಾಮುಖ್ಯ ಸಂಗತಿಗಳ ಮೇಲೆ ನನ್ನ ಗಮನವಹಿಸಲು ನನಗೆ ಸಮಯ ಬೇಕಾದರೆ, ನಾನು ನನ್ನ ಕೆಲವು ಅನಾವಶ್ಯಕವಾದ ಚಟುವಟಿಕೆಗಳನ್ನು ಮತ್ತು ನನ್ನ ಕೆಲವು ಸ್ವಂತ ಸಾಮಾಜಿಕ ಜೀವನ ಮತ್ತು ಮನೋರಂಜನೆಗಳನ್ನು ಸ್ಥಗಿತಗೊಳಿಸಬೇಕೆಂದು ನಾನು ಅರಿತುಕೊಂಡೆ. ನನ್ನ ಮಕ್ಕಳು ಬೆಳೆದು ದೊಡ್ಡವರಾಗಿ ಮನೆಯನ್ನು ಬಿಟ್ಟು ತಮ್ಮ ಸ್ವಂತ ಕಾಲಿನ ಮೇಲೆ ತಾವು ನಿಂತ ನಂತರ ನಾನು ನನ್ನ ವೈಯಕ್ತಿಕ ಆಶೆಗಳನ್ನು ಪೂರೈಸಿಕೊಳ್ಳಬಹುದು. ಆದರೆ ಆ ಸಮಯದಲ್ಲಿ ಅವರ ಓದು ಮತ್ತು ಇತರೆ ವಿಷಯಗಳಲ್ಲಿ ಅವರಿಗೆ ನನ್ನ ಸಹಾಯದ ಅವಶ್ಯಕತೆ ಇತ್ತು. ನಾನು ಅವರಿಗೆ ಒಂದು ಸ್ನೇಹಿತೆಯಾಗಿ ಇರಬೇಕಾಯಿತು, ಮತ್ತು ಅವರಿಗೆ ಯವಾಗಲೂ ನಾನು ಲಭ್ಯವಾಗಿರಬೇಕಾಗಿತ್ತು.

ಕರ್ತನ ಸೇವೆಯಲ್ಲಿ ನನ್ನ ಪಾತ್ರ ಏನೆಂಬುದನ್ನು ನಾನು ತಿಳಿದುಕೊಂಡೆ. ’ನಾನು ನನ್ನ ಮನೆ ಮತ್ತು ನನ್ನ ಕುಟುಂಬವನ್ನು ನೋಡಿಕೊಂಡು ನನ್ನ ಗಂಡನಿಗೆ ಸಹಕಾರ ಕೊಡುವುದೇ’ ಎಂದು. ಇದರಿಂದ ಅವರು ಯಾವ ಅಡಚಣೆ ಇಲ್ಲದೆ ಸ್ವತಂತ್ರವಾಗಿ ಪ್ರಯಾಣಿಸಿ ಬೋಧಿಸಬಹುದು. ಹೋದ ಕಡೆ ಅವರು ಸರಳವಾಗಿ ಬೋಧಿಸಬೇಕು ಎಂಬ ಕಾರಣದಿಂದ, ಮನೆಯಲ್ಲಿ ಎಲ್ಲಾ ಸಮಯಗಳಲ್ಲಿ ಶಾಂತಿಯುತವಾದ ಮತ್ತು ಸಾಮರಸ್ಯವಾದ ವಾತಾವರಣವನ್ನು ಇಡಲು ಮತ್ತು ಕಾಪಾಡಲು ನಾನು ಯವಾಗಲೂ ಬಯಸುತ್ತಿದ್ದೆ. ಮನೆಯಲ್ಲಿ ನಡೆಯುವ ಯಾವ ವಿಷಯವಾದರೂ, ವಿಶೇಷವಾಗಿ ಮಕ್ಕಳಿಂದಾಗುವ ವಿಷಯಗಳಿಂದ ಅವರು ಎಂದಿಗೂ ಅವಿಶ್ರಾಂತಿಯಲ್ಲಿ ಇರಬಾರದು. ಅವರ ಮೂಲಕ ಆಗುತ್ತಿರುವ ದೇವರ ಕೆಲಸಕ್ಕೆ, ನನ್ನ ಮನೆಯಲ್ಲಿ ನಡೆಯುವ ಯಾವ ಸಂಗತಿಯೂ ಅಡ್ಡಿಯಾಗಬಾರದೆಂದು ನಾನು ಬಯಸುತ್ತಿದ್ದೆ.

ಸತ್ಯವೇದದಲ್ಲಿ ಮೂರು ಸತ್ಯಗಳು ನನ್ನ ವೈವಾಹಿಕ ಜೀವನದಲ್ಲಿ ಸಹಾಯವಾದವು. ಹಿಂದಿನ ವರ್ಷಗಳಲ್ಲಿ ಆ ಸತ್ಯಗಳೇ ನನಗೆ ಹೆಚ್ಚು ಹೆಚ್ಚಾಗಿ ಪ್ರಾಮುಖ್ಯವಾದವು. ಈ ಸತ್ಯಗಳನ್ನು ನಾನು ಇನ್ನೂ ಸ್ಪಷ್ಟವಾಗಿ ಅರಿತುಕೊಂಡಿದ್ದು ಯಾವಾಗ ಅಂದರೆ ನಾನು ಹೊಸ ಒಡಂಬಡಿಕೆಯಿಂದ ಧೃಡವಾಗಿ ಹಿಡಿಯಲ್ಪಟ್ಟ ನಂತರವೇ. ಅದೇ ತಾನೆ ಹೊಸದಾಗಿ ಹೊಸದಾಗಿ ಹುಟ್ಟಿದ ಕ್ರೈಸ್ತಳಾಗಿ, ನನ್ನ ಎಲ್ಲ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ನಾನು ತಿಳಿದುಕೊಂಡೆ. ನಾನು ಜಾರಿ ಪಾಪದಲ್ಲಿ ಬಿದ್ದ ಪ್ರತಿ ಸಮಯದಲ್ಲಿ, ಇತರೆ ವಿಶ್ವಾಸಿಗಳ ಹಾಗೆ, ನಾನೂ ಕ್ಷಮಾಪಣೆಗಾಗಿ ಸತತವಾಗಿ ಕೇಳುವವಳಾಗಿದ್ದೆ. ಕೆಲವೊಂದು ಸಮಯಗಳಲ್ಲಿ ನನ್ನ ಆತ್ಮಿಕ ಜೀವಿತವು ಬತ್ತಿದಂತೆ ಇರುತಿತ್ತು, ಆದರೆ ನಾನು ಯಾವಾಗ ಪಾಪದ ಜೀವಿತದ ಮೇಲೆ ಜಯಕ್ಕಾಗಿ ತವಕಪಡಲು ಪ್ರಾರಂಭಿಸಿದನೋ, ಆವಾಗ ನನಗೆ ಪ್ರತಿನಿತ್ಯ ಪವಿತ್ರಾತ್ಮನ ಬಲ ಎಷ್ಟು ಅವಶ್ಯವಿದೆ ಎಂಬುದು ನನಗೆ ಅರಿವಾಯಿತು.

ಕರ್ತನಾದ ಯೇಸು ನನಗೆ ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಮಾಡಿಸಿದರು. ಆದರೆ ನಾನು ಕಂಡುಕೊಂಡಿದ್ದು ಏನೆಂದರೆ, ನಾನು ಪ್ರತಿ ದಿನ ಆತ್ಮದಿಂದ ತುಂಬಿಸಲ್ಪಟ್ಟವಳಾಗಿರಬೇಕು ಎಂದು. ಇದರಿಂದ ಮಾತ್ರ ನನ್ನ ಜೀವನದಲ್ಲಿ ಸದಾ ಆತನ ಬಲ, ಶಕ್ತಿ ಮತ್ತು ತಾಜಾತನವು ಇರಲು ಸಾಧ್ಯ. ಪರಲೋಕದಲ್ಲಿರುವ ನಮ್ಮ ತಂದೆ ನಮ್ಮೆಲ್ಲರಿಗೆ ಕೊಟ್ಟಂತಹ ವಾಗ್ದಾನ ಇದೇ. ನಮ್ಮಲ್ಲಿ ಯಾರೂ ಇದನ್ನು ಕಳೆದುಕೊಳ್ಳಬಾರದು.

ನನಗೆ ಪ್ರಾಮುಖ್ಯವಾದ ಮೂರು ಸತ್ಯಗಳು ಯಾವುವೆಂದರೆ:

ನಾನು ದೇವರನ್ನು ನನ್ನ ತಂದೆಯಾಗಿ ತಿಳಿದುಕೊಳ್ಳಬಹುದು. ನನ್ನ ಗಂಡನೊಟ್ಟಿಗೆ ನಾನು ಅನ್ನೊನ್ಯತೆಯಲ್ಲಿರುವ ಮಹತ್ವ. ನನ್ನ ಗಂಡನಿಗೆ ನಾನು ಅಧೀನಳಾಗಿ ಇರುವುದರಲ್ಲಿನ ಮಹಿಮೆ.

ಈ ಮೂರು ಕ್ಷೇತ್ರಗಳಲ್ಲಿ, ಯೇಸು ಕ್ರಿಸ್ತನೇ ನಮಗೆ ಮಾದರಿ ಎಂದು ನಾನು ಕಂಡುಕೊಂಡೆ. ಹೊಸ ಒಡಂಬಡಿಕೆಯು ನನಗೆ ಜೀವಂತವಾಯಿತು. ಅದು ನನಗೆ ಒಂದು ಪಠ್ಯಪುಸ್ತಕದ ಹಾಗೆ ಇರದೆ, ಕ್ರಿಸ್ತನ ಸಜೀವವಾದ ಮಾತುಗಳಾದವು.

ಅಧ್ಯಾಯ 2
ದೇವರನ್ನು ನನ್ನ ತಂದೆಯಾಗಿ ತಿಳಿದುಕೊಳ್ಳುವುದು

"ದೇವರನ್ನು ನನ್ನ ತಂದೆಯನ್ನಾಗಿ ತಿಳಿದುಕೊಳ್ಳುವುದು" ಎಂಬ ಪ್ರಥಮ ಸತ್ಯವೇ ನನಗೆ ನಿಜವಾಗಿ ಪ್ರಾಮುಖ್ಯವಾಯಿತು. ಅನೇಕ ಹೆಂಡತಿಯರು, ತಾವು ಅಸುರಕ್ಷಿತರಾಗಿರುವ ಕಾರಣದಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ತಮ್ಮ ಸಮಸ್ಯೆಗಳನ್ನು ಒಬ್ಬ ಸ್ನೇಹಿತಳಿಗೋ ಅಥವಾ ಯಾರಾದರೊಬ್ಬರ ಹತ್ತಿರ ಹೋಗಿ ಹೇಳಿಕೊಳ್ಳಲು ಬಯಸುತ್ತಾರೆ. ವಿಶೇಷವಾಗಿ ಮದುವೆಯಾದ ನಂತರ ಸ್ತ್ರೀಯರು ಅನೇಕ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ. ಕೆಲವೊಂದು ಸಮಯದಲ್ಲಿ ಅವರ ಸಮಸ್ಯೆಗಳನ್ನು ಕಿವಿಗೊಟ್ಟು ಕೇಳುವವರು, ಕೇಳಿ ಅರ್ಥಮಾಡಿಕೊಳ್ಳುವವರು, ತಮ್ಮ ಹೃದಯವನ್ನು ಯಾರ ಹತ್ತಿರ ನಂಬಿಕೆಯಿಂದ ಬಿಚ್ಚಿ ಹೇಳಿಕೊಳ್ಳಬಹುದೋ - ತಮ್ಮ ಒಬ್ಬ ಗೆಳತಿ, ಸಹೋದರಿ ಅಥವಾ ತಂದೆ-ತಾಯಿಯರು -ಇಂಥವರನ್ನು ಬಯಸುತ್ತಾರೆ . ಆದರೆ ಇವರೆಲ್ಲರಿಗೂ ನಮಗೆ ಸಹಾಯ ಮಾಡಲು ತಮ್ಮದೇ ಆದ ಸಾಮರ್ಥ್ಯದ ಮಿತಿಗಳು ಇರುತ್ತವೆ. ನಾವು ನಮ್ಮ ತಂದೆ-ತಾಯಿಯರಿಗೆ ಮತ್ತು ಸಂಬಂಧಿಕರಿಗೆ ತುಂಬಾ ಭಾರವಾಗಿ ಇರಬಾರದು. ಏಕೆಂದರೆ, ಅವರಿಗೆ ಅವರದ್ದೇ ಅದ ಸಮಸ್ಯೆಗಳು ಇರುತ್ತವೆ. ಅದೇ ರೀತಿಯಾಗಿ ನಮ್ಮ ಸಮಸ್ಯೆಗಳನ್ನು ಕೇಳುವಷ್ಟು ಸಮಾಧಾನ ಗೆಳತಿಯರಿಗೂ ಇರುವುದಿಲ್ಲ. ಅದ್ದರಿಂದ ನಾವು ಮನುಷ್ಯರ ಕಡೆಗೆ ಹೋಗದೆ, ಪರಲೋಕದಲ್ಲಿರುವ ನಮ್ಮ ತಂದೆಯ ಕಡೆಗೆ ಹೋಗಬೇಕು.

ಯೆರೆಮಿಯಾ 17:5-8 ಹೀಗೆ ಹೇಳುತ್ತದೆ- "ಮಾನವಮಾತ್ರದವರಲ್ಲಿ ಭರವಸವಿಟ್ಟು...ಶಾಪಗ್ರಸ್ತನು; ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ, ಅವನು ನೀರಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ ಧಗೆಗೆ ಭಯಪಡದೆ ಹಸುರೆಲೆಯನ್ನು ಬಿಡುತ್ತಾ ಕ್ಷಾಮ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು."

ಯಾವಾಗ ನಾವು ಮನುಷ್ಯನನ್ನು ಅವಲಂಬಿಸದೆ, ದೇವರು ನಮ್ಮ ತಂದೆಯೆಂದು ಆತನನ್ನು ಅವಲಂಬಿಸುತ್ತೇವೋ, ಆವಾಗ ಅದು ಧನ್ಯಕರವಾದ ಜೀವಿತವಾಗಿರುತ್ತದೆ. ನಾವು ಬತ್ತಿದವರಾಗಿ ಇರದೆ ಸಂಪೂರ್ಣವಾಗಿ ಸುರಕ್ಷಿತರಾಗಿ ಇರುತ್ತೇವೆ.

ಯೋಹಾನ 14:17,18 ರಲ್ಲಿ ಯೇಸು ಹೇಳಿದನು _ "ಆತನು ತನ್ನ ಪವಿತ್ರಾತ್ಮನನ್ನು ನಮ್ಮೊಳಗೆ ವಾಸ ಮಾಡಲು ಕಳಿಸಿದ್ದರಿಂದ, ನಾವು ಇನ್ನು ಮುಂದೆ ಅನಾಥರಾಗಿ ಇರುವುದಿಲ್ಲ, ಏಕೆಂದರೆ ದೇವರು ಈಗ ನಮ್ಮ ತಂದೆಯಾಗಿರುವನು".

ನಾವು ಪ್ರಾರ್ಥಿಸುವಾಗಲೆಲ್ಲ ದೇವರನ್ನು ’ತಂದೆಯೇ’ ಎಂದು ಉದ್ದೇಶಿಸಿ ಪ್ರಾರ್ಥಿಸಬೇಕೆಂದು ಯೇಸು ಸ್ವಾಮಿ ಹೇಳಿಕೊಟ್ಟರು. ನನಗೆ ಪರಲೋಕದಲ್ಲಿ ಪ್ರೀತಿಸುವ ಒಬ್ಬ ತಂದೆ ಇದ್ದಾನೆ ಎಂಬ ಸತ್ಯದಿಂದ ಯಾವಾಗ ನಾನು ದೃಢವಾಗಿ ಹಿಡಿಯಲ್ಪಟ್ಟೆನೋ, ಆವಾಗ ನನ್ನಲ್ಲಿಯ ಅಸುರಕ್ಷಿತತೆಗಳೆಲ್ಲ ಅದೃಶ್ಯವಾಗಲು ಪ್ರಾರಂಭವಾದವು.

ಹಳೆ ಒಡಂಬಡಿಕೆಯಲ್ಲಿ ದೇವರನ್ನು ’ಯೊಹೋವ’ ಎಂದು ಜನರು ತಿಳಿದಿದ್ದರು. ಅವರು ಆತನ ಮುಂದೆ ಭಯದಿಂದ ನಡುಗುತ್ತಿದ್ದರು. ಆದರೆ ಈಗ, ಆತನು ನಮ್ಮ ತಂದೆಯಾಗಿದ್ದಾನೆ. ನಾವು ನಮ್ಮ ಪಾಪಗಳಿಂದ ತಿರುಗಿಕೊಂಡು ಯೇಸು ಕ್ರಿಸ್ತನನ್ನು ನಮ್ಮ ಜೀವನದ ಯಜಮಾನನನ್ನಾಗಿ ಮಾಡಿಕೊಂಡರೆ ಮಾತ್ರ ಇದು ಸಾಧ್ಯ.

ನಾವು ದೇವರ ಮಕ್ಕಳಾದಾಗ ನಮಗೆ ವಿಶೇಷವಾದ ಹಕ್ಕುಗಳು ಮತ್ತು ಕರ್ತವ್ಯಗಳು ಎರಡೂ ಇವೆ. ಆತನನ್ನು ನಮ್ಮ ತಂದೆಯಾಗಿ ತಿಳಿದುಕೊಳ್ಳುವ ವಿಶೇಷ ಹಕ್ಕು ನಮಗೆ ಇದೆ. ಅದೇ ರೀತಿಯಾಗಿ ನಮ್ಮ ಜೀವನದ ಮೇಲೆ ಆತನಿಗೆ ಸಂಪೂರ್ಣವಾದ ಅಧಿಕಾರವನ್ನು ಕೊಡುವುದು ನಮ್ಮ ಕರ್ತವ್ಯವಾಗಿದೆ.

ನಮಗೆ ತಂದೆಯಿಂದ ಅನೇಕ ವಿಷಯಗಳನ್ನು ಕಲಿಯುವಂತ ಅವಶ್ಯಕತೆ ಇದೆ.

ಯೆಶಾಯ 30:30 ರಲ್ಲಿ ಹೀಗೆ ಓದುತ್ತೇವೆ. ಆಗ ಯೊಹೋವನು ತನ್ನ ಗಂಭೀರವಾದ ಧ್ವನಿಯನ್ನು ಕೇಳಮಾಡಿದನು’. ಇದನ್ನು ನಮ್ಮ ಜೀವನದಲ್ಲಿ ನಾವು ಅನ್ವಯಿಸಿಕೊಳ್ಳಬೇಕು. ತಂದೆ-ತಾಯಿಯರಾಗಿ ಪ್ರೀತಿಯ ನಮ್ಮ ಅಧಿಕಾರವನ್ನು ನಮ್ಮ ಮಕ್ಕಳು ಗುರುತಿಸಬೇಕು.

ಪರಲೋಕದಲ್ಲಿರುವ ನಮ್ಮ ತಂದೆಯು ನಮ್ಮನ್ನು ಮುನ್ನಡೆಸುತ್ತಾನೆ. ಕೀರ್ತನೆ 32:8 ರಲ್ಲಿ, ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು” ಮತ್ತು ಯೆಶಾಯ 30:21ರಲ್ಲಿ ಹೀಗೆ ಹೇಳುತ್ತಾನೆ. "ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರಿಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವುದು". ಇದನ್ನು ನಮ್ಮ ಜೀವನದಲ್ಲಿ ಅನ್ವಯಿಸಿಕೊಳ್ಳುವಾಗ, ನಾವು ಕೂಡಾ ನಮ್ಮ ಮಕ್ಕಳನ್ನು ಒಳ್ಳೆಯ ದಾರಿಯಲ್ಲಿ ನಡೆಸಬೇಕಾದ ಅವಶ್ಯಕತೆ ಇದೆ ಎಂಬುದನ್ನು ನೋಡುತ್ತೇವೆ.

ನಾವು ಸೋತು ಹೋದಾಗಲೆಲ್ಲ ತಂದೆ ನಮ್ಮನ್ನು ಕ್ಷಮಿಸುತ್ತಾನೆ. ಅದೇ ರೀತಿಯಾಗಿ ನಾವೂ ನಮ್ಮ ಮಕ್ಕಳನ್ನು ಮತ್ತು ಸೋತು ಹೋದ ಇತರರನ್ನು ಬೇಗನೆ ಕ್ಷಮಿಸುವವರಾಗಬೇಕು.

ನಮ್ಮ ತಂದೆಗೆ ನಮ್ಮ ಮೇಲೆ ಕನಿಕರವಿದೆ. ಕೀರ್ತನೆ 103:13 ರಲ್ಲಿ ಹೀಗೆ ಓದುತ್ತೇವೆ, ”ತಂದೆಯು ಮಕ್ಕಳನ್ನು ಕನಿಕರಿಸುವಂತೆ, ಯೊಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಸ್ವಭಾವವನ್ನು ಬಲ್ಲನು; ನಾವು ಧೂಳಾಗಿದ್ದೇವೆ ಎಂಬುದನ್ನು ನೆನಪಿಸುತ್ತಾನೆ." ನಾವು ಕೂಡಾ ನಮ್ಮ ಮಕ್ಕಳ ವಿಷಯದಲ್ಲಿ ಕಠಿಣರಾಗಿ ಇರದೆ ಕನಿಕರದಿಂದಿರುವ ಅವಶ್ಯಕತೆ ಇದೆ.

ತಂದೆಯಾದ ದೇವರು ತನ್ನ ವಾಕ್ಯದ ಮೂಲಕ ಮತ್ತು ನಾವು ಎದುರಿಸುವ ಸನ್ನಿವೇಶಗಳ ಮೂಲಕ ನಮ್ಮೊಟ್ಟಿಗೆ ಮಾತನಾಡುತ್ತಾನೆ. ಈ ರೀತಿಯಾಗಿ, ನಮ್ಮನ್ನು ತಿದ್ದಿ ಶಿಸ್ತಿಗೊಳಪಡಿಸುವುದು ನಮ್ಮ ಒಳ್ಳೆಯದಕ್ಕೆ ಎಂದು ಇಬ್ರಿಯ 12:7-10 ರಲ್ಲಿ ಓದುತ್ತೇವೆ. ನಮ್ಮ ತಂದೆ ಎಷ್ಟು ಪ್ರೀತಿಯುಳ್ಳವನೋ ಅಷ್ಟೇ ಕಠಿಣನೂ ಆಗಿದ್ದಾನೆ. ನಾವು ನಮ್ಮ ಮಕ್ಕಳಿಗೆ ಉಪದೇಶಗಳ ಮೂಲಕ ಮತ್ತು ಅವರು ಎದುರಿಸುವ ಸನ್ನಿವೇಶಗಳ ಮೂಲಕ ಅವರಿಗೆ ಕಲಿಸುವ ಅವಶ್ಯಕತೆ ಇದೆ. ಅವರೊಟ್ಟಿಗೆ ವ್ಯವಹರಿಸುವಾಗ ಪ್ರೀತಿಯಿಂದಲೂ ಹಾಗು ನಿಷ್ಠುರರಾಗಿಯೂ ಇರಬೇಕು.

ನಮ್ಮ ತಂದೆಯಾದ ದೇವರು ಯಾವಾಗಲೂ ಒಂದೇ ರೀತಿಯಲ್ಲೇ ಇದ್ದು ತನ್ನ ವಾಗ್ದಾನಗಳನ್ನು ಪೂರೈಸುತ್ತಾನೆ. ಇದು ತಂದೆಯಿಂದ ನಾವು ಕಲಿಯಬೇಕಾದ ಇನ್ನೊಂದು ವಿಷಯವಾಗಿದೆ. ಮಕ್ಕಳಿಗೆ ಕೊಟ್ಟ ಮಾತನ್ನು ನಾವು ಪೂರೈಸಬೇಕು.

ನಾವು ನಮ್ಮ ಪರಲೋಕದ ತಂದೆಯೊಟ್ಟಿಗೆ ಮಾತಾಡಿ ನಮ್ಮನ್ನು ಕಾಡಿಸುತ್ತಿರುವ ಎಲ್ಲಾ ವಿಷಯಗಳನ್ನು ಆತನಿಗೆ ಹೇಳಬಹುದು - ಅವು ನಮ್ಮ ಭಯಗಳು, ಬಲಹೀನತೆಗಳು, ಸೋಲುಗಳು ಮತ್ತು ಬಯಕೆಗಳಾಗಿರಬಹುದು. ಈ ಲೋಕದಲ್ಲಿ ನಾವು ಯಾವ ವಿಷಯಕ್ಕೂ ಭಯಪಡಬಾರದು. ಸ್ವಾಮಿ ತನ್ನ ಶಿಷ್ಯರಿಗೆ ಅನೇಕ ಸಲ ಹೇಳಿದರು - "ಭಯಪಡಬೇಡಿ, ಪರಲೋಕದಲ್ಲಿರುವ ನಿಮ್ಮ ತಂದೆ ನಿಮ್ಮ ವಿಷಯವಾಗಿ ಚಿಂತಿಸುವವನಾಗಿದ್ದಾನೆ!" ಎಂದು. ಅದೇ ರೀತಿಯಾಗಿ ನಮ್ಮ ಮಕ್ಕಳು ತಮ್ಮ ತಮ್ಮ ಭಯಗಳನ್ನು ಮತ್ತು ಸಮಸ್ಯೆಗಳನ್ನು ನಮ್ಮ ಮುಂದೆ ಹೇಳಿಕೊಳ್ಳಲು ಭಯವಿಲ್ಲದವರಾಗುವಂತೆ ನಾವು ಇರಬೇಕು.

ಇಂತಹ ಪ್ರೀತಿಯುಳ್ಳ ಮತ್ತು ಸರ್ವ ಶಕ್ತಿಯುಳ್ಳ ತಂದೆ ನಮಗಿರುವುದು ಎಷ್ಟು ಧನ್ಯಕರವಾದದ್ದು. ಆದ್ದರಿಂದ ನಾವು ಆತನನ್ನು ಗೌರವಿಸಿ, ಪ್ರೀತಿಸಿ, ವಿಧೇಯರಾಗಿ ಮತ್ತು ಆತನನ್ನು ಮಾತ್ರ ಮೆಚ್ಚಿಸಲು ಜೀವಿಸಬೇಕು.

ಯೋಹಾನ 17:3 ರಲ್ಲಿ - "ಯೇಸು ಕ್ರಿಸ್ತನನ್ನು ವೈಯಕ್ತಿಕವಾಗಿ ತಿಳಿಯುವುದೇ ನಿತ್ಯಜೀವವು." ಎಂದು ಒದುತ್ತೇವೆ. ಇಲ್ಲಿ ವಿಶೇಷವಾಗಿ ತಿಳಿಯುವುದೇನೆಂದರೆ- ತಂದೆಯು ಕ್ರಿಸ್ತನನ್ನು ಪ್ರೀತಿಸಿದ ಹಾಗೆಯೇ ನಮ್ಮನ್ನೂ ಪ್ರೀತಿಸುತ್ತಾನೆ ಎಂದು (ಯೋಹಾನ17:23). ಇದೊಂದು ಅದ್ಭುತವಾದ ಸತ್ಯ. ನಮ್ಮ ಪರಲೋಕದ ತಂದೆ ಪಕ್ಷಪಾತಿ ಅಲ್ಲ. ಆತನು ಕ್ರಿಸ್ತನಿಗೆ ಮಾಡಿದ ಎಲ್ಲವನ್ನು ನಮಗೂ ಮಾಡುತ್ತಾನೆ. ಕ್ರಿಸ್ತನನ್ನು ಎಷ್ಟು ಕಾಳಜಿಯಿಂದ ನೋಡಿಕೊಂಡನೋ, ಅಷ್ಟೇ ಕಾಳಜಿಯಿಂದ ನಮ್ಮನ್ನೂ ನೋಡಿಕೊಳ್ಳುತ್ತಾನೆ. ಆದರಿಂದ ತಂದೆ-ತಾಯಿಯರಾದ ನಾವು ನಮ್ಮ ಮಕ್ಕಳೊಟ್ಟಿಗೆ ವ್ಯವಹರಿಸುವಾಗ ಪಕ್ಷಪಾತಿಗಳಾಗದೆ ಇರಬೇಕು.

"ತಂದೆಯು ಕ್ರಿಸ್ತನನ್ನು ಎಷ್ಟು ಪ್ರೀತಿಸಿದನೋ ನಮ್ಮನ್ನೂ ಅಷ್ಟೇ ಪ್ರೀತಿಸುತ್ತಾನೆ" ಎಂಬ ಈ ಸತ್ಯವನ್ನು ನಾವು ಯಾವಾಗ ನಂಬುತ್ತೇವೋ, ಆವಾಗ ನಾವು ನಮ್ಮೆಲ್ಲ ಅಸುರಕ್ಷತೆಗಳಿಂದ ವಿಮುಕ್ತರಾಗುತ್ತೇವೆ ಮತ್ತು ಜೀವನದ ಎಲ್ಲಾ ಶೋಧನೆಗಳನ್ನು ಎದುರಿಸಲು ಶಕ್ತಿವಂತರಾಗುತ್ತೇವೆ. ಸಮಯ ಕಳೆದಂತೆ ತಂದೆಯಾದ ದೇವರನ್ನು ಇನ್ನೂ ಹೆಚ್ಚು ವೈಯಕ್ತಿಕವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಆತನ ಮೇಲೆ ಇನ್ನೂ ಅವಲಂಬಿತರಾಗಲು ಕಲಿಯುತ್ತೇವೆ. ಕೆಲವೊಮ್ಮೆ ವಿಷಯಗಳು ಬೇರೆ ರೀತಿಯಲ್ಲಿ ನಡೆಯುತ್ತವೆ ಎಂದು ಅರ್ಥವಾಗದೆ ಇರುವ ಸಮಯಗಳಲ್ಲಿ ನಾವು ಆತನ ಜ್ಞಾನವನ್ನು ನಂಬಬೇಕು. ಆಗ ಆತನು ನಮ್ಮ ಜೀವನದಲ್ಲಿ ಅನುಮತಿಸುವ ಎಲ್ಲವೂ ನಮ್ಮ ಒಳ್ಳೆಯದಕ್ಕೆ ಎಂದು ನಮಗೆ ಸಂಪೂರ್ಣವಾಗಿ ಭರವಸೆ ಇರುತ್ತದೆ. ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲಿದ್ದಾನೆ ಎಂದು ನಾವು ಆತನನ್ನು ನಂಬಬಹುದು. ನಮ್ಮನ್ನು ಶಿಕ್ಷಿಸುವಂತ ದೇವರಾಗಿ ನಾವು ಆತನನ್ನು ಕಾಣುವುದಿಲ್ಲ, ಆದರೆ ನಮಗೆ ಸಹಾಯ ಮಾಡಲು ಆಸಕ್ತಿಯುಳ್ಳ ಪ್ರೀತಿಯ ತಂದೆಯ ಹಾಗೆ ಕಾಣುತ್ತೇವೆ.

ನಮ್ಮ ಪರಲೋಕದ ತಂದೆಯು ನಾವು ನಮ್ಮ ಮಕ್ಕಳಿಗೆ ಉತ್ತಮ ತಂದೆ ತಾಯಿಯರಾಗಲು ಸಹಾಯ ಮಾಡಬಲ್ಲನು.

ಅಧ್ಯಾಯ 3
ನನ್ನ ಗಂಡನೊಟ್ಟಿಗೆ ಐಕ್ಯತೆ

ನನ್ನ ಗಂಡನೊಟ್ಟಿಗೆ ಐಕ್ಯತೆಯ ಪ್ರಾಮುಖ್ಯತೆಯು ಎರಡನೆಯ ಸತ್ಯವಾಗಿದೆ. ನನ್ನ ದಾಂಪತ್ಯ ಜೀವನಕ್ಕೆ ಇದು ಮಾರ್ಗದರ್ಶನ ನೀಡಿತು. ಯೋಹಾನನ ಸುವಾರ್ತೆಯಲ್ಲಿ ತಂದೆಯು ಮತ್ತು ಯೇಸು ಕ್ರಿಸ್ತನು ಒಂದಾಗಿದ್ದಾರೆ ಎಂದು ಹೇಳುವಂತ ಅನೇಕ ವಚನಗಳು ಇವೆ.

ಯೋಹಾನ 17:21 ರಲ್ಲಿ ತಂದೆ ಮತ್ತು ಮಗನು ಒಂದಾಗಿರುವ ಹಾಗೆ ನಾವೆಲ್ಲರು ಕೂಡಾ ಒಂದಾಗಿಬೇಕೆಂದು ಯೇಸು ಬಯಸುತ್ತಿದ್ದಾನೆ.

ಅದನ್ನು ನಾವು ನಮ್ಮ ವೈವಾಹಿಕ ಜೀವನಕ್ಕೆ ಅನ್ವಯಿಸುವುದಾದರೆ, ನಮ್ಮ ಗಂಡಂದಿರೊಟ್ಟಿಗೆ ಬಲವಾದ ಬಾಂಧವ್ಯವುಳ್ಳ ಐಕ್ಯತೆಯನ್ನು ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ ಸೈತಾನನು ಕುಟುಂಬಗಳಲ್ಲಿರುವ ಐಕ್ಯತೆಯನ್ನು ನಾಶಮಾಡುತ್ತಿದ್ದಾನೆ. ಕುಟುಂಬಗಳು ಭಾಗಗಳಾಗುತ್ತಿವೆ, ಆದ್ದರಿಂದ ನಾವು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರಬೇಕು.

ಅನೇಕ ಹೆಂಡತಿಯರು ತಮ್ಮ ಗಂಡನಿಗಿಂತ ಹೆಚ್ಚಾಗಿ ತಂದೆ-ತಾಯಿಗಳಿಗೆ ಅಥವಾ ಒಡಹುಟ್ಟಿದವರಿಗೆ ಅಂಟಿಕೊಂಡಿರುತ್ತಾರೆ. ಅವರು ತಮ್ಮ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವುದಕ್ಕೆ ಇದು ಒಂದು ಕಾರಣವಾಗಿದೆ. ನಮ್ಮ ಗಂಡಂದಿರೊಟ್ಟಿಗೆ ನಾವು ಬಲವಾದ ಬಾಂಧವ್ಯದಿಂದ ಇರದೆ ಹೋದರೆ ಸೈತಾನನು ಸರಳವಾಗಿ ನಮ್ಮ ಕುಟುಂಬಗಳನ್ನು ಪ್ರವೇಶಿಸುತ್ತಾನೆ. ತಂದೆ-ತಾಯಿ ಐಕ್ಯವಾಗಿ ಇರದಿದ್ದರೆ ಮಕ್ಕಳು ಅಸುರಕ್ಷತೆಯನ್ನು ಅನುಭವಿಸುತ್ತಾರೆ. ಇದು ಅವರ ತಿನ್ನುವ ವಿಧಾನದಲ್ಲಿ ವ್ಯತ್ಯಾಸ, ಕೆಟ್ಟ ನಡತೆ, ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು, ಇತ್ಯಾದಿಗಳ ಮೂಲಕ ಅವರಲ್ಲಿ ಕಾಣಿಸಿಕೊಳ್ಳುತ್ತದೆ.

ಯೋಹಾನ 1:1 ರಲ್ಲಿ ಒದುತ್ತೇವೆ -"ಯೇಸು ಆದಿಯಲ್ಲಿ ದೇವರೊಟ್ಟಿಗೆ ಇದ್ದನು, ಮತ್ತು ಆತನು ದೇವರಾಗಿದ್ದನು" ಎಂದು. ಇದು ನಮ್ಮ ಮಿತಿಯುಳ್ಳ ಬುದ್ದಿಗೆ ಅರ್ಥ ಆಗದಂಥ ವಿಷಯವಾಗಿದೆ. ದೇವರ-ನಾಯಕತ್ವದ ಈ ಮೂರು ವ್ಯಕ್ತಿಗಳ ನಡುವೆ ಒಂದು ಆಳವಾದ ಮತ್ತು ಶಕ್ತಿಯುಳ್ಳ ’ಐಕ್ಯತೆ’ ಇದೆ. ಅದನ್ನು ನಾವು ಸಂಪೂರ್ಣವಾಗಿ ತಿಳಿಯುವುದು ಯಾವಾಗ ಅಂದರೆ- ದೇವರನ್ನು ನೋಡಿದಾಗ ಮಾತ್ರ. ಇದು ಬಹಳ ಅಮೂಲ್ಯವಾದ ’ಐಕ್ಯತೆ’. ನಾವು ಕೂಡಾ ಅಂಥ ಐಕ್ಯತೆಯನ್ನು ಹೊಂದಿರಲೆಂದು ಹಾಗೂ ತಂದೆಯಾದ ದೇವರು ಆ ಐಕ್ಯತೆಯ ಸ್ವಲ್ಪ ಭಾಗವನ್ನು ನಮಗೆ ತೋರಿಸಲಿ ಎಂದು ಯೇಸು ಸ್ವಾಮಿ ಯೋಹಾನ 17 ರಲ್ಲಿ ಪ್ರಾರ್ಥಿಸಿದನು.

ದೇವರು ಗಂಡ ಮತ್ತು ಹೆಂಡತಿಯನ್ನು ಮದುವೆಯಲ್ಲಿ ಒಂದು ಮಾಡಿದಾಗ, ಅವರಿಬ್ಬರು ಒಂದಾಗಿ ಇರುವುದು ದೇವರ ಚಿತ್ತವಾಗಿದೆ. ದೇವರು ಜೊತೆಗೂಡಿಸಿದ್ದನ್ನು ಯಾರೂ ಅಗಲಿಸಬಾರದು.

ಆಮೋಸ 3:3 ರಲ್ಲಿ ಹೀಗೆ ಓದುತ್ತೇವೆ. "ಒಬ್ಬರನೊಬ್ಬರು ಸಮ್ಮತಿಸದೆಯೇ ಒಟ್ಟಿಗೆ ನಡೆಯಬಹುದೆ?".

ಮತ್ತಾಯ 18:18,19 ರಲ್ಲಿ ಓದುತ್ತೆವೆ- "ಯಾವಾಗ ಇಬ್ಬರು ವಿಶ್ವಾಸಿಗಳು ಒಂದೇ ಮನಸ್ಸುಳ್ಳವರಾಗಿರುತ್ತಾರೋ ಅವರು ಸೈತಾನನ ಚಟುವಟಿಕೆಗಳನ್ನು ಬಂಧಿಸಿ, ಸೈತಾನನು ಬಂಧಿಸಿದ್ದನ್ನು ಬಿಡಿಸಬಲ್ಲರು" ಎಂದು. ತಮ್ಮ ಕುಟುಂಬದ ಸಮಸ್ಯೆಗಳಿಗಾಗಿ ಪ್ರಾರ್ಥಿಸುತ್ತಿರುವ ಗಂಡ-ಹೆಂಡತಿಯರಿಗೆ ಇದು ಅನ್ವಯಿಸುತ್ತದೆ. ಗಂಡ-ಹೆಂಡತಿ ಒಂದಾಗಿದ್ದಾಗ ಅಲ್ಲಿ ಶಕ್ತಿ ಇರುತ್ತದೆ, ಮತ್ತು ದೇವರು ಅವರ ಮಧ್ಯದಲ್ಲಿದ್ದಾನೆ ಎಂದು ಸೈತಾನನಿಗೆ ಗೊತ್ತು (ಮತ್ತಾಯ18:19,20). ಆದ್ದರಿಂದ ಆ ಐಕ್ಯತೆಯನ್ನು ಮುರಿಯಲು ಆತನು ಶತಪ್ರಯತ್ನ ಮಾಡುತ್ತಾನೆ.

ಗಂಡ-ಹೆಂಡತಿಯರಾಗಿ, ಕ್ರಿಸ್ತನ ಮತ್ತು ತಂದೆಯ ಮಧ್ಯದಲ್ಲಿರುವ ಆ ಐಕ್ಯತೆಯ ಸ್ವಲ್ಪ ಭಾಗದ ರುಚಿಯನ್ನು ಅನುಭವಿಸುವುದು ಎಂಥಹ ಸೌಭಾಗ್ಯ. ಇಂಥಹ ಐಕ್ಯತೆಯನ್ನು ಕೊಡುವುದಕ್ಕಾಗಿಯೇ ಕ್ರಿಸ್ತನು ಭೂಮಿಗೆ ಇಳಿದು ಬಂದಿದ್ದು. ಇದು ನಮ್ಮ ಜನ್ಮ-ಸಿದ್ಧ ಹಕ್ಕಾಗಿದೆ. ನಮ್ಮ ಅಲ್ಪ ಬುದ್ದಿಗೆ ಅದನ್ನು ಅಳಿಯಲು ಆಗುವುದಿಲ್ಲ- ಆದರೆ ಇದು ಸಾಧ್ಯ.

ಕುಟುಂಬದಲ್ಲಿ ಐಕ್ಯತೆ ಇಲ್ಲದೆ ಇರಲು ಕೆಲವು ಕಾರಣಗಳೇನು? ಒಬ್ಬ ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಇರಬಹುದು, ಇದಕ್ಕೆ ಕಾರಣಗಳು ಅನೇಕವಿರಬಹುದು - ಅವರ ಹಿನ್ನಲೆ, ಅವರ ಸಂಸ್ಕೃತಿ, ಅವರ ಪೋಷಕರು ಅವರನ್ನು ಬೆಳೆಸಿದ ರೀತಿ ಮತ್ತು ಅನೇಕ ವಿಷಯಗಳನ್ನು ವಿಭಿನ್ನವಾಗಿ ನೋಡುವುದು, ಇವೇ ಮುಂತಾದವುಗಳು. ಆದರೆ ಇಂಥ ಭಿನ್ನಾಭಿಪ್ರಾಯಗಳು ಐಕ್ಯತೆಗೆ ಅಡ್ಡಿ ಆಗಬಾರದು. ಏಕೆಂದರೆ ಅವರು ವಿಭಿನ್ನವಾಗಿದ್ದರೂ ದೇವರ ಕೃಪೆಯು ಅವರಿಬ್ಬರನ್ನು ಒಂದು ಮಾಡಬಲ್ಲದು.

ನನ್ನ ವೈವಾಹಿಕ ಜೀವನದಲ್ಲಿ ಇದು ನಿಜವಾಗಬೇಕೆಂದು ದೇವರನ್ನು ಬೇಡಿಕೊಂಡೆ. ನನ್ನ ಮತ್ತು ನನ್ನ ಗಂಡನ ನಡುವೆ ಬರುವಂತಹ ಅಂತರಕ್ಕೆ ಕಾರಣವಾದ ಜಗಳಗಳು, ಅಸಂತೋಷ ಮತ್ತು ಏಕಾಂಗಿತನದಿಂದ ತುಂಬಿದ ಜೀವನ ನನಗೆ ಬೇಡವಾಗಿತ್ತು. ಆದ್ದರಿಂದ ನಮ್ಮಿಬ್ಬರ ಭಿನ್ನಾಭಿಪ್ರಾಯಗಳು ನನ್ನನ್ನು ಪೀಡಿಸದೆ ಇರುವಷ್ಟು ನಾನು ನನ್ನ ಗಂಡನ ಜೊತೆಗೆ ಐಕ್ಯತೆಯಲ್ಲಿ ಇರುವ ಹಾಗೆ ನನಗೆ ಸಹಾಯ ಮಾಡಲು ದೇವರನ್ನು ಕೇಳಿಕೊಂಡೆ. ಆ ಐಕ್ಯತೆಯು ನನ್ನ ವೈವಾಹಿಕ ಜೀವನದಲ್ಲಿ ಆಗುವಂತೆ ನನ್ನಿಂದ ಸಾಧ್ಯವಾದ ಎಲ್ಲವನ್ನೂ ಮಾಡಲು ನಾನು ಬಯಸುತ್ತಿದ್ದೆ. ಅದೇ ನನ್ನ ಗುರಿ ಆಗಿತ್ತು.

ಮನುಷ್ಯರಾದ ನಾವು ಒಂದು ಪ್ರವೃತ್ತಿಯನ್ನು ಹೊಂದಿರುತ್ತೇವೆ, ಅದೇನೆಂದರೆ- ನಾವು ಮಾಡಿದ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸುವುದು. ವೈವಾಹಿಕ ಜೀವಿತದಲ್ಲಿ ಕೂಡಾ ಇದು ಆಗಬಹುದು. ಆವಾಗ ನಾವು ಏನು ನೆನೆಸಬೇಕೆಂದರೆ- ದೇವರು ಒಂದುಗೂಡಿಸಿದ್ದನ್ನು ನಾವು ಅಗಲಿಸುತ್ತಿದ್ದೇವೆ ಎಂದು. ನಾವು ಐಕ್ಯತೆಯಲ್ಲಿ ಇರುವುದು ದೇವರ ಚಿತ್ತವಾಗಿದೆ, ಆದ್ದರಿಂದ ಆ ಐಕ್ಯತೆಯನ್ನು ಸಂರಕ್ಷಿಸಲು ನಮಗೆ ಸಾಧ್ಯವಾದ ಎಲ್ಲವನ್ನು ನಾವು ಮಾಡಬೇಕು.

ದೇವರು ನಮ್ಮನ್ನು ಸಹಿಸಿಕೊಂಡು ಕ್ರಿಸ್ತನಲ್ಲಿ ನಮ್ಮನ್ನು ಕ್ಷಮಿಸಿದ ಹಾಗೆ (ಎಫೆಸದವರಿಗೆ 4:2,32) ನಾವು ಕೂಡಾ ಒಬ್ಬರನ್ನೊಬ್ಬರು ಸಹಿಸಿಕೊಂಡು ಕ್ಷಮಿಸುವ ಹಾಗೆ ನಮಗೆ ಸಹಾಯ ಮಾಡಲು ನಾವು ದೇವರಲ್ಲಿ ಬೇಡಿಕೊಳ್ಳಬೇಕು.

ನಮ್ಮ ಐಕ್ಯತೆಯನ್ನು ಒಡೆಯುವ ಇನ್ನೊಂದು ಸಂಗತಿ ಯಾವುದೆಂದರೆ- "ಸಂಶಯಪಡುವುದು". ಆದ್ದರಿಂದ ಇದರ ವಿಷಯವಾಗಿ ನಾವು ಎಚ್ಚರದಿಂದಿರಬೇಕು. ನಾವು ನೆನಪಿಟ್ಟುಕೊಳ್ಳಬೇಕಾದುದೇನೆಂದರೆ ಬಹಳಷ್ಟು ಸಂಶಯಗಳು ಕೊನೆಗೆ ನಿರಾಧಾರವಾಗಿ ಕಂಡುಬರುತ್ತವೆ.

ಕಳೆದು ಹೋದ ಜೀವನದಲ್ಲಿ ನಿನಗೆ ಬೇರೆ ಪುರುಷರ ಜೊತೆ ಸ್ನೇಹ ಏನಾದರೂ ಇದ್ದಿದ್ದರೆ, ಆ ಘಟನೆಗಳ ಎಲ್ಲಾ ನೆನಪುಗಳನ್ನು ಹೂಳಿಟ್ಟು ಅವುಗಳನ್ನು ಎಂದಿಗೂ ನೆನಪಿಸಿಕೊಳ್ಳಬಾರದು. ಫೇಸ್-ಬುಕ್ ಮೂಲಕ ಹಳೆಯ ಸಂಪರ್ಕಗಳನ್ನು ಎಂದಿಗೂ ಮತ್ತೆ ಪ್ರಾರಂಭಿಸಬಾರದು. ಪ್ರಾರಂಭದಲ್ಲಿ ಇದು ಹಾನಿ ಇಲ್ಲದ ಹಾಗೆ ಕಂಡುಬರಬಹುದು. ಆದರೆ ನಿನ್ನನ್ನು ನೀನೇ ಅನಾವಶ್ಯಕವಾದ ಶೋಧನೆಗೆ ತೆರೆದಿಟ್ಟುಕೊಳ್ಳುವಿ.

ನೆನಪಿಟ್ಟುಕೊ, ನಿನ್ನ ಸಂಬಂಧಿಕರು ನಿನ್ನಿಂದ ದೂರವಿದ್ದರೂ ನಿನ್ನನ್ನು ನಿಯಂತ್ರಿಸಲು ಪ್ರಯತ್ನಿಸಿ ನಿನ್ನನ್ನು ಆಳಬಹುದು. ಅದು ನಿನ್ನ ಮತ್ತು ನಿನ್ನ ಗಂಡನ ನಡುವೆ ಅಂತರವನ್ನು ಉಂಟು ಮಾಡುತ್ತದೆ. ಇಂಥದ್ದನ್ನು ಎಂದಿಗೂ ಅನುಮತಿಸಬೇಡ.

ಕೆಲವೊಮ್ಮೆ ಹಣ, ಭೌತಿಕ ವಸ್ತುಗಳು ಮತ್ತು ಪ್ರಾಪಂಚಿಕ ಗುರಿಗಳು ಗಂಡ-ಹೆಂಡತಿಯರ ನಡುವೆ ವಿಭಜನೆಯನ್ನು ಉಂಟು ಮಾಡುತ್ತವೆ. ಅದ್ದರಿಂದ ನಿಮ್ಮ ಪ್ರಾಮುಖ್ಯತೆಗಳನ್ನು ಸರಿಪಡಿಸಿಕೊಳ್ಳಿರಿ.

ನಮ್ಮ ಗಂಡಂದಿರ ಜೊತೆಗೆ ಐಕ್ಯತೆಯಲ್ಲಿರುವುದು ಒಂದು ದೊಡ್ಡ ಗುರಿಯಾಗಿರಬಹುದು. ಆದರೂ ನಾವದನ್ನು ಸಾಧಿಸಲು ಸಾಧ್ಯವಿದೆ. ಆದರೆ ನಾವು ಅದನ್ನು ಬಲವಾಗಿ ಅಪೇಕ್ಷಿಸಿದರೆ ಮಾತ್ರ ಅದು ಸಾಧ್ಯ. ಏಕೆಂದರೆ ನಮಗೆ ಸಹಾಯಮಾಡಲು ದೇವರು ನಮ್ಮ ಪಕ್ಷದಲ್ಲಿದ್ದಾನೆ.

ನಿನ್ನ ಮತ್ತು ನಿನ್ನ ಗಂಡನ ಮಧ್ಯೆ ಒಂದು ಚಿಕ್ಕ ಸಮಸ್ಯೆ ಉದ್ಭವಿಸಿದಾಗ, ಅದನ್ನು ಕೈಯಲ್ಲಿ ಚುಚ್ಚಿಕೊಂಡಿರುವ ಮುಳ್ಳು ಎಂದು ಭಾವಿಸಬೇಕು. ಅದನ್ನು ಅಲ್ಲೇ ಬಿಟ್ಟರೆ, ಅದೊಂದು ಹುಣ್ಣಾಗುತ್ತದೆ. ಆಗ ನೀನು ದೇವರ ಕಡೆಗೆ ಬೇಗನೆ ತಿರುಗಿ ಕೊಂಡು ತಕ್ಷಣ ಕ್ಷಮಾಪಣೆಯನ್ನು ಕೇಳಬೇಕು. ಮತ್ತೊಮೆ ನಿನ್ನ ಗಂಡನೊಟ್ಟಿಗೆ ಆ ಐಕ್ಯತೆಯನ್ನು ಕಾಪಾಡಿಕೊಳ್ಳಲು ನಿನ್ನ ದೃಷ್ಟಿಯನ್ನು ಕೇಂದ್ರೀಕರಿಸಿಕೋ. ನಿನ್ನ ತಪ್ಪನ್ನು ಒಪ್ಪಿಕೋ, ನಿನ್ನ ಗಂಡನಲ್ಲಿ ಕ್ಷಮಾಪಣೆ ಕೇಳು, ಪಶ್ಚಾತಾಪ ಪಟ್ಟು ಐಕ್ಯತೆಯಲ್ಲಿ ಉಳಿಯಲು ಪೂರ್ಣ ಹೃದಯದಿಂದ ನಿರ್ಧರಿಸು. "ನಿನ್ನನ್ನು ನೀನೇ ತೀರ್ಪು ಮಾಡಿಕೋ ಮತ್ತು ಶುದ್ಧೀಕರಿಸಿಕೋ" ಎಂಬುದರ ಅರ್ಥ ಇದೇ ಆಗಿದೆ. ಒಂದು ಚಿಕ್ಕ "ತಪ್ಪಾರ್ಥವು", ನಿನ್ನ ಮತ್ತು ನಿನ್ನ ಗಂಡನ ಮಧ್ಯದಲ್ಲಿ ವಿಭಜನೆಯನ್ನು ತರಲು ಸೈತಾನನು ಉಪಯೋಗಿಸುವ ಒಂದು ಮಾಂತ್ರಿಕ ಕೋಲು ಇದ್ದ ಹಾಗೆ. ನಾವು ನಮ್ಮ ಗಂಡಂದಿರ ಜೊತೆಗೆ ಈ ಐಕ್ಯತೆಯನ್ನು ಸಂರಕ್ಷಿಸಬೇಕಾದರೆ ಕಷ್ಟಪಟ್ಟು ಎಲ್ಲಾ ಸಮಯದಲ್ಲಿ ಎಚ್ಚರವಾಗಿ ಇರಬೇಕು. ಆಗ ಜೀವನದ ಅಂತ್ಯದಲ್ಲಿ ನಿನ್ನ ಈ ಪರಿಶ್ರಮಗಳ ವಿಷಯವಾಗಿ ನೀನು ವ್ಯಥೆಪಡುವುದಿಲ್ಲ.

ಕುಟುಂಬದ ಒಂದು ವಿಷಯವನ್ನು ಚರ್ಚಿಸುವಾಗ ಅದರ ಕುರಿತಾಗಿ ನಿನಗೆ ಮತ್ತು ನಿನ್ನ ಗಂಡನಿಗೆ ಭಿನ್ನಾಭಿಪ್ರಾಯಗಳಿವೆ ಎಂದು ನಿನಗೆ ಅನಿಸಿದಾಗ, ಒಟ್ಟಿಗೆ ಕೂತು ಇಬ್ಬರು ಪರಿಪಕ್ವತೆಯಿಂದ ಮಾತಾಡಿರಿ. ತಮ್ಮದೇ ಸರಿಯೆಂದು ಅವರು ಹಟಹಿಡಿದರೆ, ಮನಸ್ಸನ್ನು ಬದಲಾಯಿಸಿಕೊಳ್ಳಲು ನೀನು ಸಿದ್ದಳಿರು. ಆದರೆ ಇದು ಕೂಡ ಸಾಧ್ಯ- ನೀವಿಬ್ಬರೂ ಒಟ್ಟಿಗೆ ಮಾತನಾಡಿದ ನಂತರ, ಆತನು ತನ್ನ ಮನಸ್ಸನ್ನು ಬದಲಾಯಿಸಿಕೊಳ್ಳಬಹುದು, ಅಥವಾ ಸಮಸ್ಯೆಯನ್ನು ಬಗೆಹರಿಸಲು ಒಂದು ಹೊಸ ದಾರಿಯನ್ನು ಕಂಡುಕೊಂಡಿರಬಹುದು. ಆದರೆ ನಾವು ಜಗಳ ಮಾಡದೆ, ಜ್ಞಾನದಿಂದ ಭಿನ್ನಾಭಿಪ್ರಾಯಗಳನ್ನು ಸರಳವಾಗಿ ವ್ಯವಹರಿಸಲು ಪ್ರಯತ್ನ ಮಾಡಬೇಕು. ವಿವಿಧ ಸನ್ನಿವೇಶಗಳ ಮೂಲಕ ನಮ್ಮ ಉದ್ದೇಶಗಳನ್ನು ಬಗೆಹರಿಸಲು, ದೇವರು ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಕೂಡಾ ಉಪಯೋಗಿಸಿಕೊಳ್ಳಬಹುದು.

ಸಭೆಯ ವಿಷಯಗಳು ಸಭೆಯ ಹಿರಿಯರ ಕಾರ್ಯಕ್ಷೇತ್ರಗಳಾಗಿವೆ. ಹೆಂಡತಿಯರಾಗಿ ನಾವು ಅಂತಹ ವಿಷಯಗಳಲ್ಲಿ ತಲೆಹಾಕಬಾರದು. ಯಾವಾಗಲೂ ನಮ್ಮ ಅಭಿಪ್ರಾಯಗಳನ್ನು ನಮ್ಮ ಗಂಡಂದಿರಿಗೆ, ಒಬ್ಬ ಸ್ತ್ರೀಯ ದೃಷ್ಟಿಕೋನದಲ್ಲಿ ತಿಳಿಸಬಹುದು. ಆದರೆ ಸಭೆಯಲ್ಲಿ ನೀನು ಒಬ್ಬ "ಸಹಾಯಕ ನಾಯಕಿ" ಆಗಲು ಪ್ರಯತ್ನಿಸದೆ ಇರಲು ಎಚ್ಚರಿಕೆ ವಹಿಸು. ಪ್ರಕಟನೆ 2:20 ರಲ್ಲಿ-ಸಭೆಯ ನಾಯಕನ ಹೆಂಡತಿಯನ್ನು ದೇವರು "ಯೆಜಬೇಲ್" ಎಂದು ಕರೆದಿದ್ದನ್ನು ಓದುತ್ತೇವೆ. ಅವಳು ಒಬ್ಬ ಸುಳ್ಳು ಪ್ರವಾದಿನಿ, ಮತ್ತು ಸಭೆಯನ್ನು ಹಿಂಸಿಸುವವಳಗಿದ್ದಳು.

ಎಲ್ಲಿ ಒಂದು ಸಭೆಯಲ್ಲಿ ಬಲವಾದ ಕುಟುಂಬಗಳು ಇರುತ್ತವೆಯೋ ಅಂಥ ಸಭೆಯು ಬಲವಾದ ಸಭೆಯಾಗಿರುತ್ತದೆ. ಇಂಥ ಸಭೆಯನ್ನು ಪಾತಾಳ ಲೋಕದ ಬಲವು ಸೋಲಿಸಲಾರದು. ಏಕೆಂದರೆ ಅದರಲ್ಲಿರುವ ಕುಟುಂಬಗಳು ಐಕ್ಯತೆಯಲ್ಲಿರುತ್ತವೆ. ಆದ್ದರಿಂದ ನಮಗೆ ಎಷ್ಟು ಸಾಧ್ಯವೋ ಅಷ್ಟು ನಮ್ಮ ಸಭೆಯ ಐಕ್ಯತೆಯನ್ನು ಸಂರಕ್ಷಿಕೊಳ್ಳಬೇಕು. ಇಂಥ ಐಕ್ಯತೆಯನ್ನು ಕಟ್ಟಲು ಎಷ್ಟೋ ವರ್ಷಗಳು ಹಿಡಿಯುತ್ತದೆ. ಆದರೆ ಆ ಮಾರ್ಗದಲ್ಲಿ ದಿನದಿಂದ ದಿನಕ್ಕೆ ನಾವು ಪ್ರಯಾಸಪಡುತ್ತಲೇ ಇರಬೇಕು. ಅದನ್ನು ಪಡೆದುಕೊಳ್ಳಲು ದೇವರು ಪವಿತ್ರಾತ್ಮನ ಮೂಲಕ ನಮಗೆ ಸಹಾಯ ಮಾಡುತ್ತಾನೆ. ಮುಖ್ಯ ಚರ್ಚು ಕಟ್ಟುವ ಕಥೆಯನ್ನು ನೆನಪಿಸಿಕೊಳ್ಳಿ. ಅದು ಸಂಪೂರ್ಣವಾಗಲು ವರ್ಷಗಳು ಆಗಬಹುದು, ಆದರೆ ಅದು ಸಂಪೂರ್ಣವಾಗುತ್ತದೆ.

ಯವಾಗಲೂ ನಾವು ಕೆಲವು ವಿಷಯಗಳನ್ನು ನಮ್ಮ ಗಂಡಂದಿರು ನೋಡುವ ದೃಷ್ಟಿಯಿಂದ ನೋಡುವುದಿಲ್ಲ ಮತ್ತು ನಾವು ಒಪ್ಪುವುದಿಲ್ಲ. ಆವಾಗ ನಾವು ಖಚಿತ ಮಾಡಿಕೊಳ್ಳಬೇಕುದುದೇನೆಂದರೆ- ನಮ್ಮ ಭಿನ್ನಾಭಿಪ್ರಾಯಗಳ್ಳನ್ನು ನಾವು ಖಾಸಗಿಯಾಗಿ ಚರ್ಚಿಸಬೇಕೇ ಹೊರತು ನಮ್ಮ ಮಕ್ಕಳ ಅಥವಾ ಇತರರ ಸಮಕ್ಷಮದಲ್ಲಿ ಅಲ್ಲ ಎಂಬುದನ್ನು. ಮಕ್ಕಳು ನಿದ್ರಿಸುತ್ತಿರುವಾಗ ಅಥವಾ ಯಾರು ನಮ್ಮ ಸುತ್ತ-ಮುತ್ತಲು ಇಲ್ಲದೆ ಇರುವಾಗ ಇಂಥ ವಿಷಯಗಳನ್ನು ಚರ್ಚಿಸುವುದು ಬಹಳ ಉತ್ತಮ. ನಾವು ಗುಟ್ಟಾಗಿ ನಮ್ಮ ಭಿನ್ನಾಭಿಪ್ರಾಯಗಳನ್ನು ಚರ್ಚಿಸುತ್ತಿದ್ದರೂ ಅದನ್ನು ಜ್ಞಾನಾನುಸಾರವಾಗಿ ಮಾಡೋಣ.

ಗಂಡ-ಹೆಂಡತಿಯರ ನಡುವೆ ಅಶಾಂತಿ ಇರುವಾಗ ಮಕ್ಕಳು ಅದನ್ನು ಗ್ರಹಿಸಿಕೊಂಡು ಅಸುರಕ್ಷಿತರಾಗುತ್ತಾರೆ. ಆಗ ಬಹಳವಾಗಿ ನಮ್ಮ ಗಮನವನ್ನು ಹಕ್ಕಿನಿಂದ ಕೇಳುತ್ತಾರೆ ಮತ್ತು ಅನೇಕ ಇತರ ಸಂದರ್ಭಗಳಲ್ಲಿ ಕೂಡಾ ಅವರು ಹಟ ಮಾಡಬಹುದು.

ನೀವು ತೊಂದರೆಗೆ ಒಳಗಾದಾಗ ಒಂದು ಉತ್ತಮವಾದ ನಿಯಮವೇನೆಂದರೆ ಮೌನವಾಗಿ ಇರಲು ಪ್ರಯತ್ನಿಸುವುದು. ಮೌನವಾಗಿ ಇದ್ದು ಮಾತನಾಡುವುದಕ್ಕಿಂತ ಮುಂಚೆ ನಿನ್ನ ಹೃದಯದಲ್ಲಿರುವ ಉದ್ರೇಕವನ್ನು ಜಯಿಸಲು ದೇವರ ಸಹಾಯವನ್ನು ಕೇಳು. ನಿಮ್ಮ ಮಕ್ಕಳ ಮದುವೆ ಆದ ನಂತರ ಸತತವಾಗಿ ನಿಮ್ಮ ಸಲಹೆಗಳನ್ನು ಕೊಡದೆ, ತಮ್ಮ-ತಮ್ಮ ಇಷ್ಟದ ಹಾಗೆ ತಮ್ಮ ಕುಟುಂಬಗಳನ್ನು ನಡೆಸಿಕೊಳ್ಳಲು ಬಿಡುವುದು ಅತ್ಯುತ್ತಮವಾದದ್ದು. ಆ ರೀತಿಯಲ್ಲಿ ಅವರು ನಿಮ್ಮನ್ನು ಗೌರವಿಸುತ್ತಾರೆ. ಅವರ ಮಕ್ಕಳೊಟ್ಟಿಗೆ ನಡೆದುಕೊಳ್ಳಲು ನಿಮಗೆ ಬಹಳಷ್ಟು ಜ್ಞಾನ ಕೂಡ ಬೇಕಾಗುತ್ತದೆ. ಅವರು ನಿಮ್ಮ ಮೊಮ್ಮಕ್ಕಳು ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮ್ಮದೇ ಆದ ಕ್ರಮದಲ್ಲಿ ನಿಮ್ಮ ಮಕ್ಕಳನ್ನು ಬೆಳೆಸುವ ಸರತಿಯನ್ನು ನೀವು ಈಗಾಗಲೇ ಮುಗಿಸಿದ್ದೀರಿ. ಈಗ ಅವರಿಗೆ ನಿಮ್ಮಿಂದ ಯಾವ ಅಡ್ಡಿಯೂ ಇರಬಾರದು. ತಮ್ಮ ಮಕ್ಕಳನ್ನು ತಮ್ಮದೇ ಆದ ರೀತಿಯಲ್ಲಿ ಬೆಳೆಸುವ ಸರತಿ ಅವರದಾಗಿದೆ. ಇದರಿಂದ ನಿನಗೆ ಅವರೊಟ್ಟಿಗೆ ಇರುವ ಪ್ರೀತಿ ಮತ್ತು ಐಕ್ಯತೆಯನ್ನು ಕಾಪಾಡಿಕೊಳ್ಳುತ್ತಿ. ಆದರೆ ಅವರಿಗೆ ನಿನ್ನ ಸಹಾಯದ ಅವಶ್ಯಕತೆ ಇರುವಾಗಲೆಲ್ಲ ಅವರಿಗೆ ಲಭ್ಯವಾಗಿರು. ಅವರು ನಿನ್ನನ್ನು ಕೇಳಿದಾಗ ಮಾತ್ರ ಸಲಹೆಯನ್ನು ಕೊಡು.

ಅಧ್ಯಾಯ 4
ಅಧೀನತ್ವದ ಮಹಿಮೆ

"ನನ್ನ ಗಂಡನಿಗೆ ನಾನು ಅಧೀನಳಾಗಿ ಇರುವುದು" , ಈ ಮೂರನೆಯ ಮುಖ್ಯ ತತ್ವವನ್ನು ನೋಡುವಂತೆ ದೇವರು ನನ್ನ ಕಣ್ಣುಗಳನ್ನು ತೆರೆದನು. ಜನರು "ಅಧೀನತ್ವ" ಎಂಬ ಪದವನ್ನು ಕೇಳಲು ಇಷ್ಟಪಡುವುದಿಲ್ಲ. ಏಕೆಂದರೆ ಇದರ ಅರ್ಥವನ್ನು ಅವರು ಹೀಗೆ ತಿಳಿದಿದ್ದಾರೆ - ಗಂಡನಿಗೆ ಯಾವಾಗಲೂ ಬಿಟ್ಟು ಕೊಡುವುದು, ಮತ್ತು ಯಾವಾಗಲೂ ಆತನು ಹೇಳಿದ ಹಾಗೆಯೇ ಮಾಡುವುದು ಎಂದು. ಆದರೆ ಅದರ ಅರ್ಥ ಅದಲ್ಲ. ಅಧೀನತ್ವ ಅಂದರೆ ಯೇಸು ತನ್ನ ಜೀವನಪರ್ಯಂತ ಮಾಡಿದ್ದು - ತನ್ನ ತಂದೆಗೆ ಮತ್ತು ತನ್ನ ತಂದೆ ಮಾಡಬೇಕೆಂದು ಹೇಳಿದ ಎಲ್ಲಕ್ಕೆ ಅಧೀನನಾಗಿ ಇದ್ದುದು. ಅಪರಿಪೂರ್ಣರಾದ ಯೋಸೇಫ ಮತ್ತು ಮರಿಯಳಿಗೆ 30 ವರ್ಷಗಳವರೆಗೆ ಆತನು ಅಧೀನನಾಗಿದ್ದನು; ಏಕೆಂದರೆ ತನ್ನ ತಂದೆಯು ಆತನಿಗೆ ಅಧೀನನಾಗಲು ಹೇಳಿದ್ದನು. ಆತನು ತಂದೆಯ ಚಿತ್ತಕ್ಕೆ ಅಧೀನನಾದನು, ಏಕೆಂದರೆ ತನ್ನ ತಂದೆಯನ್ನು ಅಷ್ಟು ಉನ್ನತವಾಗಿ ಪ್ರೀತಿಸಿದನು. ನಾವು ಕೂಡ ಕ್ರಿಸ್ತನ ಈ ಮನೋಭಾವವನ್ನು ಹೊಂದಿದವರಾಗಿರಬೇಕು .

ಫಿಲಿಪ್ಪಿಯವರಿಗೆ 2:5-11 ರಲ್ಲಿ ಹೀಗೆ ಓದುತ್ತೇವೆ- "ದೇವರಿಗೆ ತಾನು ಸರಿಸಮಾನನು ಎಂಬುದಾಗಿ ಕ್ರಿಸ್ತನು ಎಂದೂ ಆಲೋಚಿಸಲೇ ಇಲ್ಲ. ಆ ಯೋಚನೆಯನ್ನು ಅವನು ಪೂರ್ಣ ಮನಸ್ಸಿನಿಂದ ಬಿಟ್ಟುಕೊಟ್ಟನು. ಆತನು ದೇವರಿಂದ ಕೇವಲ ಒಂದೇ ಹಂತ ಕೆಳಗೆ ಬಂದು ದೂತನಾಗಲಿಲ್ಲ.ಆದರೆ ಇನ್ನೂ ಕೆಳಗೆ ಬಂದು ಮನುಷ್ಯನಾದನು ಮತ್ತು ಇನ್ನಷ್ಟು ಕೆಳಗೆ ಬಂದು ದಾಸನಾದನು. ದಾಸನಿಗೆ ಯಾವ ಹಕ್ಕುಗಳೂ ಇರುವುದಿಲ್ಲ ಮತ್ತು ಅವನಿಗೆ ಸಂಭವಿಸುವ ಯಾವುದೇ ವಿಷಯಗಳ ಬಗ್ಗೆ ಅವನು ಯಾರನ್ನೂ ಕೇಳುವಂತಿಲ್ಲ. ಒಂದನೆಯ ಶತಮಾನದಲ್ಲಿ ದಾಸರಿಗೆ ಸರಿಯಾಗಿ ಆಹಾರ ಕೊಡದೆ ಅವರನ್ನು ಸಾಯಿಸುತ್ತಿದ್ದರು. ಅವರನ್ನು ರಕ್ಷಿಸಲು ಯಾವ ಕಾನೂನೂ ಇರಲಿಲ್ಲ. ನಂತರ ಕ್ರಿಸ್ತನು ಇನ್ನೂ ಕೆಳಗೆ ಹೋಗಿ ಒಬ್ಬ ಅಪರಾಧಿಯೆಂದು ಎಣಿಸಲ್ಪಟ್ಟು ನಮಗಾಗಿ ಶಿಲುಬೆಯ ಮೇಲೆ ಸತ್ತನು. ಬಿದ್ದು ಹೋದಂಥ ಮನುಷ್ಯರಾದ ನಮಗಾಗಿ ಆತನ ಅಮೋಘವಾದ ಪ್ರೀತಿಯನ್ನು ನಾವು ಅಲ್ಲಿ ನೋಡಬಹುದು.

ನಮ್ಮ ಸ್ವಾಮಿ ಇಷ್ಟು ಕೆಳಗೆ ಬರಲು ಆರಿಸಿಕೊಂಡಾಗ, ನಾವು ಕೂಡ ನಮ್ಮ ಉನ್ನತ ಸ್ಥಾನಗಳಿಂದ ಕೆಳಗೆ ಬರಲು ಮನಸ್ಸನ್ನು ಮಾಡಬೇಕು. ಕ್ರಿಸ್ತನ ಉದಾಹರಣೆಯಿಂದ "ಅಧೀನತ್ವವನ್ನು" ಮತ್ತು "ದೀನತೆಯನ್ನು" ನಾವು ಕಲಿಯುತ್ತೇವೆ.

ಸೈತಾನನು ಪರಲೋಕದಿಂದ ದೊಬ್ಬಲ್ಪಟ್ಟನು. ಏಕೆಂದರೆ ಅವನಲ್ಲಿ ಗರ್ವ ಮತ್ತು ಅಧೀನನಾಗಿ ಇರದೆ ಇರುವ ಸ್ವಭಾವವಿತ್ತು. ಆದರೆ ಕ್ರಿಸ್ತನು ನಮ್ಮನ್ನು ರಕ್ಷಿಸಿದ್ದು ಹೇಗೆಂದರೆ ತನ್ನ ಭೂಲೋಕದ ಜೀವಿತವೆಲ್ಲ ತನ್ನ ತಂದೆಗೆ ಅಧೀನನಾಗಿ ಇರುವುದರ ಮೂಲಕ. ಕೊನೆಗೆ ಶಿಲುಬೆಯ ಮೇಲೆ ಸಾವಿನ ತನಕವೂ ಆತನು ಅಧೀನನಾಗಿದ್ದನು. ಹೀಗೆ ತಂದೆಯೊಟ್ಟಿಗೆ ನಾವು ನಿತ್ಯವೂ ಅನ್ಯೋನ್ಯತೆಯಿಂದಿರಲು ನಮಗೆ ಅವನು ಒಂದು ದಾರಿಯನ್ನು ಮಾಡಿದನು. ಅಧೀನತ್ವದ ಶಕ್ತಿ ಹೀಗೆ ಇರುತ್ತದೆ.

1ಪೇತ್ರ 3:1-4 ರಲ್ಲಿ ಸತ್ಯವೇದ ಹೀಗೆ ಹೇಳುತ್ತದೆ- ಯಾವ ಹೆಂಡತಿಯು ಸಾತ್ವಿಕವಾದ ಮತ್ತು ಶಾಂತ ಮನಸ್ಸನ್ನು ಹೊಂದಿರುವಳೋ ಅಂಥವಳು ತನ್ನ ಅವಿಶ್ವಾಸಿಯಾದ ಗಂಡನನ್ನು ಒಂದು ಮಾತು ಮಾತಾಡದೆಯೇ ದೇವರ ಮಾರ್ಗಕ್ಕೆ ಬರುವಂತೆ ಜಯಿಸಬಹುದು. ಒಬ್ಬ ಅಧೀನಳಾದ ಹೆಂಡತಿಯಿಂದ ದೇವರು ಅಮೋಘವಾದ ಅದ್ಭುತಗಳನ್ನು ಮಾಡಬಲ್ಲನು.

ದೇವರು ನಿನಗೆ ಒಳ್ಳೆಯ ಗಂಡನನ್ನು ಕೊಟ್ಟಿದ್ದರೆ ಸಂತೋಷವಾಗಿ ಆತನಿಗೆ ಅಧೀನಳಾಗು. ಆತನಿಗೆ ಆನಂದದಿಂದ ಅಧೀನಳಾಗಿರುವುದು ನಿನಗೆ ಪ್ರಪಂಚದಲ್ಲಿ ಅತೀ ಸರಳವಾದುದ್ದಾಗಿರಬೇಕು.

"ಅಧೀನತ್ವವು" ಹೆಂಡತಿಯರಾದ ನಮಗೆ ದೇವರಿಂದ ಬಂದಿರುವ ಒಂದು ಆಜ್ಞೆಯೆಂದು ಕೂಡ ನಾವು ಕಾಣಬೇಕು (ಎಫೆಸದವರಿಗೆ 5:22). ದೇವರ ವಾಕ್ಯದಲ್ಲಿ ಆ ಆಜ್ಞೆಯನ್ನು ನಾವು ನೋಡಿದಾಗ, ದೇವರ-ಭಯವುಳ್ಳವರಾಗಿ ನಾವು ಇದ್ದರೆ, ದೇವರನ್ನು ಪ್ರಶ್ನಿಸದೆ ಆ ಆಜ್ಞೆಯನ್ನು ಪಾಲಿಸುತ್ತೇವೆ. ಸತ್ಯವೇದದಲ್ಲಿರುವ ಪ್ರತಿಯೊಂದು ಆಜ್ಞೆಯು ಸಹಾಯಭರಿತವಾದ ವಾಗ್ದಾನದೊಂದಿಗೆ ಬರುತ್ತದೆ. ಆದ್ದರಿಂದ ಈ ಕ್ಷೇತ್ರದಲ್ಲಿಯೂ ದೇವರು ನಮಗೆ ಸಹಾಯ ಮಾಡುತ್ತಾನೆ. ಆಗ "ಅಧೀನತ್ವವು" ಒಂದು ಕಠಿಣವಾದ ವಿಷಯವಲ್ಲವೆಂದು ನಾವು ಕಂಡುಕೊಳ್ಳುತ್ತೇವೆ.

ಕೆಲವರು ನಮಗಾಗಿ ದುಃಖಪಟ್ಟು ಹೀಗೆ ಹೇಳುತ್ತಾರೆ - "ಓ ದರಿದ್ರ ಕ್ರೈಸ್ತರು ನೀವು! ನಿಮ್ಮ ಗಂಡಂದಿರಿಗೆ ಅಧೀನರಾಗಿ ಇರಬೇಕಾದದ್ದು ಎಷ್ಟು ದುಃಖಕರ! ನೀವು ಅದನ್ನು ಹೇಗೆ ಮಾಡುತ್ತೀರಿ? ನೀವೇಕೆ ಅದನ್ನು ವಿರೋಧಿಸಿ, ನಿಮ್ಮ ಹಕ್ಕುಗಳಿಗಾಗಿ ನಿಮ್ಮ ಧ್ವನಿ ಏರಿಸಬಾರದು?" ಎಂದು.

ಆದರೆ ಅವರು ಗ್ರಹಿಸುವುದಿಲ್ಲವೇನೆಂಂದರೆ, ಈ ಪ್ರಪಂಚದಲ್ಲಿ ಅತಿ ಸಂತೋಷಕರವಾದ ಸಂಗತಿಯೆಂದರೆ ವಿಧೇಯರಾಗಿರುವುದು ಎಂದು. ಈ ಭೂಮಿ ಮೇಲೆ ಕ್ರಿಸ್ತನು ಜೀವಿಸಿದ ಹಾಗೆ ಜೀವಿಸುವುದರಿಂದಲೇ ಹೊರತು ಬೇರೆ ಯಾವುದೂ ನಮಗೆ ಆ ಉನ್ನತವಾದ ಸಂತೋಷವನ್ನು ಕೊಡಲಾರದು. " ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವದಕ್ಕೆ ಬದ್ದನಾಗಿದ್ದಾನೆ."(1ಯೋಹಾನ 2:6)

.

ಹೆಂಡತಿಯರಾದ ನಮಗೆ ಇದು ಎಂಥಹ ಅದ್ಭುತವಾದ ಅವಕಾಶವಾಗಿದೆ. ಕ್ರಿಸ್ತನು ತನ್ನ ಭೂಲೋಕದ ಜೀವಿತದಲ್ಲೆಲ್ಲಾ ಮಾಡಿರುವುದರಲ್ಲಿ ನಾವು ಒಂದಿಷ್ಟು ಮಾಡಬಹುದು - ದೇವರ ಚಿತ್ತಕ್ಕೆ ಸಂಪೂರ್ಣವಾದ ಅಧೀನತ್ವದ ಜೀವಿತವನ್ನು ಜೀವಿಸುವುದು.

ಲೋಕವು ಕೊಡಲಾರದಂಥ ಶಾಂತಿ ಮತ್ತು ಸಂತೋಷವನ್ನು ದೇವರು ನಮಗೆ ಕೊಡುವುದು ಯಾವಾಗ ಅಂದರೆ, ನಾವು ಆತನನ್ನು ಮೆಚ್ಚಿಸುವಂಥ ಜೀವಿತವನ್ನು ಜೀವಿಸಲು ಬಯಸಿದಾಗ. ನಾನು ಹೀಗೆ ಜೀವಿಸಲು ಬಯಸಿದಾಗ ಇದನ್ನು ಹೆಚ್ಚೆಚ್ಚಾಗಿ ಅನುಭವಿಸಿದೆ.

ನಾನು ಮದುವೆಯಾಗಿ ಈಗ ೪೬ ವರ್ಷಗಳು ಆಗಿದೆ(2014), ದೇವರ ಆಜ್ಞೆಗಳಿಗೂ, ಜೊತೆಗೆ ನನ್ನ ಗಂಡನಿಗೆ ನಾನು ಅಧೀನಳಾಗಿರಬೇಕಾದ ಆಜ್ಞೆಗೂ ವಿಧೇಯತೆಯ ಜೀವಿತವನ್ನು ಜೀವಿಸುವುದರ ಮೂಲಕ ನಾನು ಸಂತೋಷಕರವಾದ ಜೀವಿತವನ್ನು ಜೀವಿಸಬಹುದು ಎಂದು ಒಬ್ಬ ಮದುವೆಯಾದ ಸ್ತ್ರೀಯಾಗಿ ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ. ನನ್ನ ಒಂದೆ ಒಂದು ವ್ಯಥೆ ಏನೆಂದರೆ, ಕೆಲವೊಂದು ಸಮಯಗಳಲ್ಲಿ ಅಧೀನಳಾಗಬೇಕಾದ ರೀತಿಯಲ್ಲಿ ಆಗದೆ ಸೋತುಹೋಗಿದ್ದೇನೆ. ಅಂಥಹ ಜೀವಿತವನ್ನು ಜೀವಿಸಲು ನಮ್ಮನ್ನು ಸಮರ್ಥಗೊಳಿಸಿದ ಪವಿತ್ರಾತ್ಮನ ಬಲಕ್ಕಾಗಿ ದೇವರಿಗೆ ಸ್ತೋತ್ರ. ನಾವು ಜಾರಿ ಬಿದ್ದು ಅತನನ್ನು ಸೋಲಿಸಿದಾಗಲೆಲ್ಲ, ಸಿದ್ದವಾಗಿ ಕೊಡುವ ಕ್ಷಮಾಪಣೆಗಾಗಿಯೂ ದೇವರಿಗೆ ಸ್ತೋತ್ರ.

1 ಪೇತ್ರ 3:1-6 ರಲ್ಲಿ ಪವಿತ್ರಾತ್ಮನು ತನ್ನ ಗಂಡನಾದ ಅಬ್ರಹಾಮನನ್ನು ಮುನ್ನಡೆಸುವಂತೆ ದೇವರ ಮೇಲೆ ನಂಬಿಕೆ ಇಟ್ಟ ’ಸಾರಳ’ ಉದಾಹರಣೆಯನ್ನು ನಮಗೆ ಕೊಡುತ್ತಾನೆ. ಆದ್ದರಿಂದ ಅವಳು ಆತನನ್ನು ಹಿಂಬಾಲಿಸಿದಳು. ಅನೇಕ ಸಲ ಅದು ಅವಳಿಗೆ ಕಷ್ಟಕರ ಎಂದು ಅನ್ನಿಸಿರಬಹುದು. ಉದಾಹರಣೆಗೆ, ಅಬ್ರಹಾಮನು ಒಬ್ಬ ಅನ್ಯ ರಾಜನ ಮುಂದೆ ಸಾರಳು ತನ್ನ ತಂಗಿ ಎಂದು ಹೇಳಿಕೊಂಡು, ಅವಳ ಜೀವನವನ್ನು ಅಪಾಯಕ್ಕೆ ಗುರಿಮಾಡಿದಾಗ. ಆದರೆ ದೇವರು ಅವಳನ್ನು ಕಾಪಾಡಿದನು. ಅದೇ ದೇವರು ನಮ್ಮನ್ನೂ ಕಾಪಾಡುತ್ತಾನೆ. ದೇವರು ಅಬ್ರಹಾಮನಿಗೆ, ತನ್ನ ಮಗನನ್ನು ಬಲಿಪೀಠದ ಮೇಲೆ ಅರ್ಪಿಸಲು ಕೇಳಿದನು ಎಂದು ಸಾರಳಿಗೆ ಗೊತ್ತಾದಾಗ, ಅವಳು ದೇವರನ್ನು ನಂಬದೇ ಇದ್ದಿದ್ದರೆ, ಅದು ಅವಳಿಗೆ ತುಂಬಾ ಕಷ್ಟಕರವಾಗುತ್ತಿತ್ತು. ದೇವರ ಆಜ್ಞೆಗೆ ವಿಧೇಯನಾಗಲು ಅಬ್ರಹಾಮನಿಗೆ ಅವಳು ಅಡಚಣೆಯನ್ನುಂಟು ಮಾಡುತ್ತಿದ್ದಳು.

ನಾವು ನಮ್ಮ ಗಂಡಂದಿರಿಗೆ ಅಧೀನರಾದಾಗ, ನಮ್ಮ ಗಂಡನ ನಾಯಕತ್ವದ ಮೂಲಕ ದೇವರು ನಮ್ಮ ಕುಟುಂಬವನ್ನು ನಡೆಸಲಿ ಎಂದು ದೇವರ ಮೇಲೆ ನಮ್ಮ ನಂಬಿಕೆಯನ್ನು ನಾವು ನಿಜವಾಗಿಯೂ ವ್ಯಕ್ತಪಡಿಸುತ್ತೇವೆ.

ದೇವರ ಪ್ರಕಾರ ಅಧಿಕಾರದ ಕ್ರಮವನ್ನು 1 ಕೊರಿಂಥದವರಿಗೆ 1:3ರಲ್ಲಿ ಹೀಗೆ ವರ್ಣಿಸಲಾಗಿದೆ: ’ಪ್ರತಿ ಪುರುಷನಿಗೂ ಕ್ರಿಸ್ತನು ಶಿರಸ್ಸು, ಸ್ತ್ರೀಯರಿಗೆ ಪುರುಷನು ಶಿರಸ್ಸು, ಮತ್ತು ದೇವರು ಕ್ರಿಸ್ತನಿಗೆ ಶಿರಸ್ಸಾಗಿದ್ದಾನೆ". ದೇವರು ಮತ್ತು ಕ್ರಿಸ್ತನು ಒಬ್ಬರಿಗೊಬ್ಬರು ಸಮಾನರಾಗಿದ್ದರೂ, ಕ್ರಿಸ್ತನು ಮಾತ್ರ ತಂದೆಗೆ ದಾಸನಾಗಿರುವದನ್ನು ಆರಿಸಿಕೊಂಡನು. ಅದೇ ರೀತಿಯಲ್ಲಿ ಹೆಂಡತಿಯರಾದ ನಾವು ಕೂಡಾ ನಮ್ಮ ಗಂಡಂದಿರಿಗೆ ಸಮಾನರಾದರೂ, ನಾವು ಅವರ ಅಧಿಕಾರದ ಅಡಿಯಲ್ಲಿ ಇರುವುದನ್ನು ಆರಿಸಿಕೊಳ್ಳುತ್ತೇವೆ. ಏಕೆಂದರೆ ಇದು ದೇವರ ಆಜ್ಞೆಯಾಗಿದೆ. ದೇವರ ಆಜ್ಞೆಯ ಪ್ರಕಾರ ನಾವು ನಡೆದಾಗ, ಆತನ ಆಶೀರ್ವಾದಗಳನ್ನು ನಮ್ಮ ಕುಟುಂಬಗಳಲ್ಲಿ ನಾವು ಬಯಸಬಹುದು.

ನಮ್ಮ ವಿಚಾರಗಳನ್ನು ನಾವು ಖಂಡಿತವಾಗಿ ನಮ್ಮ ಗಂಡಂದಿರ ಹತ್ತಿರ ನೇರವಾಗಿ ವ್ಯಕ್ತಪಡಿಸಬಹುದು. ಆದರೆ ಕೊನೆಯ ನಿರ್ಧಾರ ಮಾಡುವುದು ಬಂದಾಗ, ನಮ್ಮನ್ನು ನಾವು ಬಿಟ್ಟುಕೊಟ್ಟು ನಮ್ಮ ಗಂಡಂದಿರು ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ದೇವರನ್ನು ನಾವು ನಂಬಬೇಕು. ನನ್ನ ವಿಚಾರವು ವಿಭಿನ್ನವಾಗಿದ್ದರೂ, ಕೊನೆಯ ನಿರ್ಧಾರವನ್ನು ನನ್ನ ಗಂಡನೇ ತೆಗೆದುಕೊಳ್ಳಲು ನಾನು ಬಿಡುತ್ತೇನೆ. ನನ್ನ ಮನೆಯಲ್ಲಿ ನಾನು ದೇವರ ಆಜ್ಞೆಯನ್ನು ಗೌರವಿಸುವುದನ್ನು ನನ್ನ ಮಕ್ಕಳು ನೋಡಿದರೆ ಅದು ಅವರಿಗೆ ಒಳ್ಳೆಯದು.

ಎಫೆಸದವರಿಗೆ 5:22,32ರಲ್ಲಿ ಒಬ್ಬ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು, ಕ್ರಿಸ್ತನು ಮತ್ತು ಸಭೆಯ ಸಂಬಂಧದಂತೆ ಇದೆ ಎಂದು ನಮಗೆ ಹೇಳಲ್ಪಟ್ಟಿದೆ. ಅಲ್ಲಿ ಇದೊಂದು ಬಹು ಗಂಭೀರವಾದ ಗುಪ್ತವಾಗಿದ್ದ ಸತ್ಯಾರ್ಥವೆಂದು ಕರೆಯಲ್ಪಟ್ಟಿದೆ, ಒಬ್ಬ ಹೆಂಡತಿಯು ತನ್ನ ಗಂಡನಿಗೆ ಅಧೀನಳಾಗಿದ್ದಾಗ, ಸಭೆಯು ಕ್ರಿಸ್ತನಿಗೆ ಅಧೀನವಾಗಿರುವ ಸತ್ಯವನ್ನು ಅವಳು ಲೋಕಕ್ಕೆ ತೋರಿಸಿಕೊಡುತ್ತಿದ್ದಾಳೆ. ಆದ್ದರಿಂದ ಒಂದು ದೈವಿಕವಾದ ಮನೆಯು(ಕುಟುಂಬವು) ನಿಜವಾಗಿಯೂ ಒಂದು ಪುಟ್ಟ ಸಭೆಯಾಗಿದೆ. ’ತಾಜ್ ಮಹಲ್ ’ ಅಥವಾ ’ಸ್ಟಾಚ್ಯೂ ಆಫ್ ಲಿಬರ್ಟಿ’ ಇಂಥಹ ಬೃಹತ ಪ್ರತಿಮೆಗಳ ಚಿಕ್ಕ ಮಾದರಿಗಳನ್ನು ನೋಡಿಯೇ, ಆ ಬೃಹತ್ ಪ್ರತಿಮೆಗಳು ಹೇಗೆ ಕಾಣುತ್ತವೆ ಎನ್ನುವುದನ್ನು ನಾವು ಊಹಿಸಿಕೊಳ್ಳುತ್ತೇವೆ. ಹಾಗೆಯೇ ಅವುಗಳನ್ನು ಹೋಗಿ ನೋಡುವಂಥಹ ಬಯಕೆ ನಮ್ಮಲ್ಲಿ ಉಂಟಾಗುತ್ತದೆ. ಅದೇ ರೀತಿಯಾಗಿ ನಮ್ಮ ಮನೆಯ ಜೀವಿತವು ಕೂಡ ಅನೇಕ ಜನರನ್ನು ನಮ್ಮ ಸಭೆಯ ಕಡೆಗೆ ಸೆಳೆಯಬೇಕು.

1 ಪೇತ್ರ 3:4 ರಲ್ಲಿ ಹೆಂಡತಿಯರು ಸಾತ್ವಿಕ ಮತ್ತು ಶಾಂತ ಮನಸುಳ್ಳವರಾಗಿ ಇರಬೇಕೆಂದು ಉಪದೇಶಿಸಲ್ಪಟ್ಟಿದ್ದಾರೆ. ಏಕೆಂದರೆ ದೇವರ ದೃಷ್ಟಿಯಲ್ಲಿ ಅದು ಬಹಳ ಅಮೂಲ್ಯವಾದದ್ದು. ದೀನತೆ ಮತ್ತು ಸಾತ್ವಿಕತ್ವವನ್ನು ಆತನಿಂದ ನಾವು ಕಲಿಯಬೇಕೆಂದು ಸ್ವಾಮಿ ನಮಗೆ ಹೇಳಿದ್ದಾನೆ(ಮತ್ತಾಯ 11:28,29). "ಜ್ಞಾನವಂತಳು ಬುದ್ದಿಯನ್ನು ಪ್ರೀತಿಪೂರ್ವಕವಾಗಿ ಹೇಳುವಳು" ಎಂದು ಜ್ಞಾನೋಕ್ತಿ 3:26 ರಲ್ಲಿ ಓದುತ್ತೇವೆ. ಹೆಂಡತಿಯರಾಗಿ ನಾವು ನಮ್ಮ ಗಂಡಂದಿರೊಟ್ಟಿಗೆ ಗೌರವದಿಂದ ಮಾತನಾಡುವ ರೂಢಿಯನ್ನು ಬೆಳೆಸಿಕೊಳ್ಳಬೇಕು. ಯಾವಾಗಲಾದರೂ ನಾವು ಏನಾದರೂ ತಪ್ಪಿ ಬಿರುಸಾಗಿ ಅಥವಾ ಕ್ರಿಸ್ತನಂತಿರದೆ ಮಾತನಾಡಿದರೆ, ತಕ್ಷಣ ನಾವು ಕ್ಷಮಾಪಣೆಯನ್ನು ಕೇಳಬೇಕು. ಹಲವು ಸಲ ತಾಯಂದಿರಿಂದಲೇ ಬಹಳಷ್ಟು ಮಕ್ಕಳು ಒರಟಾಗಿ ಮಾತನಾಡುವದನ್ನು ಕಲಿಯುತ್ತಾರೆ.

ಅಧ್ಯಾಯ 5
ಮಕ್ಕಳಿಗೆ ಕಲಿಸುವುದು ಮತ್ತು ಶಿಸ್ತಿಗೊಳಪಡಿಸುವುದು.

ನಮ್ಮ ಮಕ್ಕಳಿಗೆ ನಾವು ಕಲಿಸಬೇಕಾದ ಪ್ರಾಮುಖ್ಯವಾದ ಸಂಗತಿ ಏನೆಂದರೆ ತಂದೆ-ತಾಯಿಯರಿಗೆ ವಿಧೇಯರಾಗುವದು (ಎಫೆಸದವರಿಗೆ 6:1). ನಮ್ಮ ಗಂಡಂದಿರ ಕಡೆ ನಮ್ಮ ನಡವಳಿಕೆಯನ್ನು ಮಕ್ಕಳು ಗಮನಿಸುವುದರ ಮೂಲಕ ತಾಯಂದಿರಾಗಿ, ನಾವು ಅವರಿಗೆ ವಿಧೇಯತೆಯನ್ನು ಕಲಿಸಬಹುದು. ಉದಾ: ತಂದೆಯು ಮನೆಯಲ್ಲಿ ಇಲ್ಲದಿರುವಾಗ, ಮನೆಗೋಸ್ಕರ ಆತನು ಹಾಕಿದ ನಿಯಮಗಳ ವಿರುದ್ಧವಾಗಿ ನಾವು ಹೋಗುವುದನ್ನು ಮಕ್ಕಳು ಕಂಡರೆ, ಅದು ಒಂದು ದಿನ ಮಕ್ಕಳೂ ನಮ್ಮ ವಿರುದ್ಧ ತಿರುಗಿಬೀಳುವಂತೆ ಮಾಡುತ್ತದೆ. ಆದರೆ ನಾವು ಗಂಡಂದಿರಿಗೆ ಪೂರ್ಣಗೌರವವುಳ್ಳವರಾಗಿ ನಡೆದುಕೊಂಡರೆ, ನಮ್ಮ ಮಕ್ಕಳು ನಮ್ಮನ್ನು ಹಾಗೂ ಇತರರನ್ನು ಗೌರವಿಸಲು ಕಲಿಯುತ್ತಾರೆ.

ನಮ್ಮ ಮಕ್ಕಳು ಎಲ್ಲಾ ಸಮಯದಲ್ಲಿ ಸತ್ಯವಂತರಾಗಿ ಇರಲು ಅವರಿಗೆ ನಾವು ಕಲಿಸಬೇಕಾದ ಅವಶ್ಯವಿದೆ. ನಾವು ಯಾವ ಸಮಯದಲ್ಲಿಯಾದರೂ ಸತ್ಯವನ್ನು ಮಾತನಾಡದೆ ಇರುವಾಗ, ನಮ್ಮ ಮಕ್ಕಳು ಅದನ್ನು ಸರಳವಾಗಿ ತಿಳಿದುಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಕೂಡಾ ಅಪ್ರಾಮಾಣಿಕತೆಯನ್ನು ಗ್ರಹಿಸಲು ಸಮರ್ಥರಾಗಿರುತ್ತಾರೆ.

ನಮ್ಮ ಮಕ್ಕಳಿಗೆ ಅಚ್ಚುಕಟ್ಟಾಗಿ ಮತ್ತು ಸುವ್ಯವಸ್ಥಿತವಾಗಿ ಇರುವುದನ್ನು ಕೂಡಾ ಕಲಿಸೋಣ. ನಾವು ಅಚ್ಚುಕಟ್ಟಾಗಿದ್ದು ಮತ್ತು ನಮ್ಮ ಮನೆಗಳನ್ನು ಕೂಡಾ ಅಚ್ಚುಕಟ್ಟಾಗಿ ಇಟ್ಟುಕೊಂಡರೆ, ಅವಾಗ ನಮ್ಮ ಮಕ್ಕಳು ಅಚ್ಚುಕಟ್ಟನ್ನು ಕಲಿಯುತ್ತಾರೆ. ಅವರು ತಮ್ಮ ಆಟಿಕೆ ಸಾಮಾನುಗಳ ಜೊತೆಗೆ ಆಡುವುದನ್ನು ಮುಗಿಸಿದಾಗ, ಅವುಗಳನ್ನು ತೆಗೆದು ಇಡುವುದನ್ನು ಅವರಿಗೆ ಕಲಿಸಬೇಕಾಗಿದೆ.

ಅವರು ವ್ಯರ್ಥ ಮಾಡುವವರಾಗಿ ಇರಬಾರದೆಂದು ನಾವು ನಮ್ಮ ಮಕ್ಕಳಿಗೆ ಕಲಿಸಲೇಬೇಕು. ಊಟದ ಸಮಯದಲ್ಲಿ, ಪ್ರಾರಂಭದಲ್ಲಿ ಅವರಿಗೆ ಸ್ವಲ್ಪ ಬಡಿಸುವುದು ತುಂಬ ಉತ್ತಮ. ಅದನ್ನು ಅವರು ಮುಗಿಸಿದ ನಂತರವೇ, ಎರಡನೇ ಸಲ ಬಡಿಸಿ ಸಹಾಯ ಮಾಡಬೇಕು. ಈ ರೀತಿಯಾಗಿ ಅವರ ತಟ್ಟೆಯಲ್ಲಿದ್ದ ಎಲ್ಲವನ್ನು ಮುಗಿಸಿ, ಆಹಾರವನ್ನು ವ್ಯರ್ಥ ಮಾಡದೇ ಇರುವುದನ್ನು ನಾವು ಅವರಿಗೆ ಕಲಿಸಬಹುದು.

ಸಮಯ, ನುಡಿ, ಅಚ್ಚುಕಟ್ಟು, ತಿನ್ನುವ ಅಭ್ಯಾಸಗಳು ಈ ಎಲ್ಲಾ ವಿಷಯಗಳಲ್ಲಿ ನಾವೇ ಶಿಸ್ತುಬದ್ಧರಾಗಿ ಇದ್ದರೆ, ಆಗ ನಮ್ಮ ಮಕ್ಕಳು ಕೂಡಾ ಶಿಸ್ತನ್ನು ಕಲಿಯುತ್ತಾರೆ.

ಸ್ವಾರ್ಥಿಗಳಾಗಿರದೇ, ತಮ್ಮ ವಸ್ತುಗಳನ್ನು ಇತರರೊಟ್ಟಿಗೆ ಹಂಚಿಕೊಳ್ಳುವುದನ್ನು ಕೂಡಾ ನಾವು ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ನಾವೇ ಇತರರ ಬಗ್ಗೆ ಆಲೋಚಿಸುವವರಾದಾಗ ಅವರು ಕೂಡಾ ಪರಾಸಕ್ತರಾಗಿರಲು ಕಲಿಯುತ್ತಾರೆ.

’ಸಂತೃಪ್ತಿ’ ಇದು ಕಲಿಸಬಹುದಾದ ಇನ್ನೊಂದು ಅಮೂಲ್ಯವಾದ ಸದ್ಗುಣವಾಗಿದೆ. ಬಹಳಷ್ಟು ಮಕ್ಕಳು ತಮಗಿರುವ ಬಟ್ಟೆ ಮತ್ತು ಆಟಿಕೆಗಳ ವಿಷಯವಾಗಿ ಅತೃಪ್ತರಾಗಿರುತ್ತಾರೆ, ಏಕೆಂದರೆ ಅವರು ತಮ್ಮನ್ನು ತಾವು ಐಶ್ವರ್ಯವಂತ ಮನೆಗಳ ಮಕ್ಕಳೊಟ್ಟಿಗೆ ಹೋಲಿಸಿಕೊಳ್ಳುತ್ತಾರೆ. ಅವರಿಗೆ ತೃಪ್ತಿ ಎಂಬ ಮೌಲ್ಯವನ್ನು ನೀನು ಜೀವಿಸುವುದರ ಮೂಲಕ ಕಲಿಸು. ತದನಂತರ ಅವರು ಯವಾಗಲೂ ನಿನ್ನ ಮಾದರಿಯನ್ನು ನೆನಪಿಟ್ಟುಕೊಳ್ಳುತ್ತಾರೆ.

ಮಕ್ಕಳನ್ನು ಬೆಳೆಸುವ ವಿಷಯದ ಬಗ್ಗೆ ಮಾತಾಡಿದಾಗಲೆಲ್ಲ, ಬಹಳಷ್ಟು ಜನರ ಮನಸ್ಸಿನಲ್ಲಿ ಬರುವಂತ ಮೊದಲನೆಯ ವಿಷಯವೇನೆಂದರೆ ಶಿಸ್ತು. ನಮ್ಮ ಮಕ್ಕಳನ್ನು ನಾವು ತಿದ್ದುವುದು ಹೇಗೆ?

ನೀವು ಸಕಾರಾತ್ಮಕ ವಿಷಯಗಳನ್ನು ಮಾಡಿದರೆ, ಅಂದರೆ - ಅವರೊಟ್ಟಿಗೆ ಸಮಯ ಕಳೆಯುವುದು, ಅವರೊಟ್ಟಿಗೆ ಮಾತನಾಡುವುದು, ಸತ್ಯವೇದದಿಂದ ಮತ್ತು ಇತರೆ ಒಳ್ಳೆಯ ಪುಸ್ತಕಗಳಿಂದ ಕಥೆಗಳನ್ನು ಹೇಳುವುದು, ಒಮ್ಮೊಮ್ಮೆ ಅವರ ಪುಸ್ತಕಗಳನ್ನು ಬದಿಗಿಟ್ಟು ಮನೆ ಕೆಲಸದಲ್ಲಿ ನಿಮಗೆ ಸಹಾಯ ಮಾಡಲು ಕಲಿಸುವುದು, ಹೀಗೆ ಅವರನ್ನು ನೀವು ಸಕಾರಾತ್ಮಕವಾಗಿ ಬೆಳೆಸಬಹುದು. ಆವಾಗ ನೀವು ಅವರನ್ನು ಬಹಳ ಬಾರಿ ತಿದ್ದುವ ಅವಶ್ಯವಿರುವುದಿಲ್ಲ. ಆದರೆ ನೀವು ಯಾವಾಗಲೂ ನಿಮ್ಮ ಸ್ವಂತ ಕೆಲಸಗಳನ್ನು ಮಾಡುವುದರಲ್ಲಿ ಕಾರ್ಯನಿರತರಾಗಿದ್ದು ಮಕ್ಕಳನ್ನು ಪದೇ ಪದೇ ಒಬ್ಬಂಟಿಗರಾಗಿರಲು ಬಿಟ್ಟರೆ, ಅವರು ಸರಳವಾಗಿ ತೊಂದರೆಗೆ ಒಳಗಾಗಿ ಕೊನೆಗೆ ಬಹಳಷ್ಟು ತಪ್ಪುಗಳನ್ನು ಮಾಡುವುದನ್ನು ನೀವು ಕಂಡುಕೊಳ್ಳುತ್ತೀರ. ಆವಾಗ ಅವರನ್ನು ನೀವು ಶಿಸ್ತಿಗೊಳಪಡಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳೊಟ್ಟಿಗೆ ನೀವು ಸಮಯವನ್ನು ಕಳೆಯಿರಿ, ವಿಶೇಷವಾಗಿ ಅವರು ಚಿಕ್ಕವರಿದ್ದಾಗ. ನಿಮ್ಮ ಮಕ್ಕಳೇ ನಿಮಗೆ ಪ್ರಾಮುಖ್ಯವಾದರೆ, ಪದೇ ಪದೇ ತಿದ್ದುವಿಕೆಯ ಅವಶ್ಯಕತೆಯೇ ಇರುವುದಿಲ್ಲ. ಅವರು ತಮ್ಮ ತರುಣಾವಸ್ಥೆಯಲ್ಲಿ ಎದುರಾಗುವ ಒತ್ತಡಗಳನ್ನು ನಿರ್ವಹಿಸಿ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿರುವುದನ್ನು ನೀವು ಕಂಡುಕೊಳ್ಳುವಿರಿ. ಏಕೆಂದರೆ ಅವರ ಬಾಲ್ಯದಲ್ಲಿ ಒಂದು ಉತ್ತಮವಾದ ಬುನಾದಿಯನ್ನು ಹಾಕಲು ನೀವು ಪ್ರಯಾಸಪಟ್ಟಿರುವಿರಿ.

ತಿದ್ದುವಿಕೆಯ ಬಗ್ಗೆ ಇರುವ ಸುವರ್ಣ ನಿಯಮವೇನೆಂದರೆ: ಎಂದೆಂದಿಗೂ ನಿಮ್ಮ ಮಕ್ಕಳನ್ನು ಸಿಟ್ಟಿನಿಂದ ತಿದ್ದಬೇಡಿರಿ. ನೀವು ಅವರನ್ನು ಸಿಟ್ಟಿನಿಂದ ಹೊಡೆದರೆ, ಅವರು ಪಡೆಯತಕ್ಕ ಹೊಡೆತಕ್ಕಿಂತ ಕಠಿಣವಾಗಿ ನೀವು ಅವರನ್ನು ಹೊಡೆಯುತ್ತೀರಿ. ನಿಮ್ಮ ಮಗುವಿನ ದೇಹದ ಮೇಲೆ ಗಾಯಗಳಾದರೆ, ಅದರ ಅರ್ಥವೇನೆಂದರೆ ನಿಮ್ಮ ಹೊಡೆತ ಜೋರಾಗಿತ್ತು ಎಂದು. ಸಿಟ್ಟನ್ನು ಜಯಿಸುವುದು ಮಾತನಾಡುವಷ್ಟು ಸುಲಭವಲ್ಲ ಎಂದು ನನಗೆ ಗೊತ್ತು. ಆದರೆ ಸಿಟ್ಟನ್ನು ಜಯಿಸಲು ಮತ್ತು ನಮ್ಮ ಮಕ್ಕಳನ್ನು ದೈವಿಕವಾಗಿ ಶಿಸ್ತಿಗೊಳಪಡಿಸಲು ನಾವು ದೇವರ ಸಹಾಯವನ್ನು ಕೇಳಬಹುದು.

ಮಕ್ಕಳನ್ನು ಶಿಸ್ತಿಗೊಳಪಡಿಸುವಾಗ ಬೇರೆ ಯಾವ ವಿಧಾನವೂ ಕೆಲಸ ಮಾಡದೆ ಇದ್ದಾಗ, ಬೆತ್ತದಿಂದ ಹೊಡೆಯುವುದನ್ನು ಅಂತಿಮ ಬಗೆಯ ಶಿಕ್ಷೆಯಾಗಿ ಕಾಯ್ದಿರಿಸಬೇಕು. ಅವರಿಂದ ಸೌಕರ್ಯಗಳನ್ನು ತಡೆಹಿಡಿಯುವುದು ಕೂಡಾ ಶಿಕ್ಷಿಸುವ ಒಂದು ಉತ್ತಮ ಮಾರ್ಗವಾಗಿದೆ. ಉದಾಹರಣೆಗೆ, ಒಂದು ನಿರ್ದಿಷ್ಟವಾದ ಸಮಯವನ್ನು ಕೊಟ್ಟು ಆ ಸಮಯ ಮುಗಿಯುವರೆಗೂ ಅವರು ಒಂದು ಸ್ಥಳದಲ್ಲಿ ಮೌನವಾಗಿ ಕೂಡಲು ಹೇಳುವುದು, ಅಥವಾ ಅವರ ಹಾಸಿಗೆಯಲ್ಲಿ 10 ರಿಂದ 15 ನಿಮಿಷಗಳವರೆಗೆ ಮಲಗಲು ಹೇಳುವುದು. ಆ ಅವಧಿ ಮುಗಿದು ಅವರು ಸಮಾಧಾನ ಪಡೆದ ನಂತರ ನೀವು ಏಕೆ ಅವರಿಗೆ ಆ ನಿರ್ಧಿಷ್ಟ ಸಮಯವನ್ನು ಕೊಟ್ಟಿರಿ ಎಂದು ಅವರಿಗೆ ವಿವರಿಸಬಹುದು.

ಮಕ್ಕಳು ಬೇಗನೇ ಆದೇಶಗಳನ್ನು ಮರೆತುಬಿಡುತ್ತಾರೆ ಎನ್ನುವುದನ್ನು ಕೂಡಾ ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಲೇಬೇಕು. ಆದ್ದರಿಂದ ನಾವು ಅವರಿಗೆ ಜ್ಞಾಪಕ ಮಾಡುತ್ತಲೇ ಇರಬೇಕು. ಅವರು ಹಿರಿಯರ (ಬೆಳೆದವರ) ಮನಸ್ಸುಳ್ಳವರೆಂದು ಊಹಿಸಿಕೊಂಡು ಅನಾವಶ್ಯಕವಾಗಿ ಅವರನ್ನು ಬಯ್ಯುವುದನ್ನು ಅಥವಾ ನಿಂದಿಸುವುದನ್ನು ಮಾಡಬೇಡಿ.

ನಾವು ಸ್ಥಿರ-ಚಿತ್ತರಾಗಿಯೂ ಇರಬೇಕು. ಉದಾಹರಣೆಗೆ ನೀವು ಅವರಿಗೆ ಏನೋ ಒಂದು ಮಾಡಬಾರದು ಎಂದು ಹೇಳಿದಕ್ಕೆ, ಅವರು ಅವಿಧೇಯರಾದಾಗ, ಆ ಅವಿಧೇಯತೆಯನ್ನು ನೀವು ಗಮನಿಸದಿರುವುದನ್ನು ಅವರು ಕಂಡುಕೊಂಡರೆ, ಆವಾಗ ನೀವು ಸ್ಥಿರಚಿತ್ತವಿಲ್ಲದವರು ಆಗಿರುತ್ತೀರಿ. ಆಗ ಅವರು ಇಂತಹ ತಪ್ಪುಗಳನ್ನು ಮಾಡುವುದನ್ನು ಮುಂದುವರಿಸುತ್ತಾರೆ. ನೀವು ಅವರ ಅವಿಧೇಯತೆಯನ್ನು ಗಮನಿಸಿದ್ದೀರಿ ಮತ್ತು ಅದನ್ನು ಗಂಭೀರವಾಗಿ ತೆಗೆದುಕೊಂಡಿದ್ದೀರಿ ಎಂದು ಅವರಿಗೆ ಗೊತ್ತಾಗಬೇಕು. ಮನೆಗೆ ಅತಿಥಿಗಳು ಬಂದಾಗ ಅಂತಹ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳಲು ಮಕ್ಕಳು ಪ್ರಯತ್ನಿಸುತ್ತಾರೆ. ಅಂತಹ ಸಮಯದಲ್ಲಿ ಮಕ್ಕಳನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಅವರೊಡನೆ ವೈಯಕ್ತಿಕವಾಗಿ ಮಾತನಾಡಬೇಕು.

ನಾವು ನಮ್ಮ ಮಕ್ಕಳಿಗೆ ಅವರ ಹಿಂದಿನ ತಪ್ಪುಗಳನ್ನು ನೆನಪಿಸುತ್ತಾ ಇರಬಾರದು. ದೇವರ ಕನಿಕರವು ಪ್ರತಿ ಮುಂಜಾನೆ ಹೊಸದಾಗಿದೆ. ನಮ್ಮ ಕನಿಕರವು ಅದೇ ರೀತಿಯಾಗಿ ಇರಬೇಕು.

ಯಾವಾಗಲೂ ವಿಧಿ-ನಿಯಮಗಳಿಗೆ ಅಂಟಿಕೊಂಡವರಾಗಿ ಇರಬೇಡಿರಿ. ಕೆಲವು ಸಂದರ್ಭಗಳಲ್ಲಿ ನೀನು ಈ ರೀತಿಯಾಗಿಯೂ ಹೇಳಬಹುದು, "ಈ ಸಲ ನಾನು ನಿನ್ನನ್ನು ಬಿಟ್ಟು ಬಿಡುವೆ. ನಿನಗೆ ಇನ್ನೊಂದು ಅವಕಾಶ ಕೊಡುವೆ".

ನನ್ನ ಗಂಡ ಮನೆಯಿಂದ ದೂರವಿದ್ದಾಗ (ಕೆಲವೊಮ್ಮೆ ಐದು ವಾರಗಳವರೆಗೆ) ನನ್ನ ಮಕ್ಕಳೊಡನೆ ನಾನೇ ವ್ಯವಹರಿಸಬೇಕಾದ ಅನೇಕ ವಿಧವಾದ ಸಂಗತಿಗಳಿದ್ದವು. ಅವರ ಕೆಲವು ಅವಿಧೇಯತೆಗಳು ಅಷ್ಟು ಗಂಭೀರವಾಗಿ ಇಲ್ಲವಾದುದರಿಂದ ಅವರೊಡನೆ ಮಾತನಾಡಿ ನಾನೇ ಅವನ್ನು ಬಗೆಹರಿಸುತ್ತಿದ್ದೆ. ಆದರೆ ಇನ್ನು ಕೆಲವು ವಿಷಯಗಳು ಬಹಳ ಗಂಭೀರವಾಗಿದ್ದವು. ಯಾವ ಅವಿಧೇಯತೆಗಳ ಬಗ್ಗೆ ನಾನು ಅವರೊಟ್ಟಿಗೆ ಇನ್ನು ಸ್ವಲ್ಪ ಹೆಚ್ಚು ಮಾತನಾಡಬೇಕು ಎಂದು ನನಗೆ ಅನಿಸುತ್ತಿತ್ತೋ ಅಂತಹ ವಿಷಯಗಳನ್ನು ನಾನು ಒಂದು ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಅವರ ತಂದೆಯವರು ಮರಳಿ ಬಂದಾಗ ಅವರಿಗೆ ಆ ವಿಷಯಗಳನ್ನು ತಿಳಿಸಬೇಕಾಗಿದೆ ಎಂದು ನನ್ನ ಮಕ್ಕಳಿಗೆ ನಾನು ಹೇಳುತ್ತಿದ್ದೆ. ಆದರೆ ಏನೋ ಒಬ್ಬ ಪೋಲೀಸ್ ಪೇದೆ ಅವರೊಟ್ಟಿಗೆ ವ್ಯವಹರಿಸಲು ಬರುವ ಹಾಗೆ ಅವರು ತಮ್ಮ ತಂದೆಯ ಬರುವಿಕೆಯನ್ನು ಅಂಜಿಕೆಯಿಂದ ಎದುರು ನೋಡುವುದನ್ನು ನಾನು ಬಯಸುತ್ತಿರಲಿಲ್ಲ. ಅವರು ಮರಳಿ ಬರುವಾಗ ಮಕ್ಕಳಿಗಾಗಿ ಚಾಕ್ಲೇಟ್ ಮತ್ತು ಉಡುಗೊರೆಗಳನ್ನು ತರುವ ಸಂಗತಿ ನನಗೆ ಗೊತ್ತಿದ್ದುದರಿಂದ ಅವರು ಅವರ ತಂದೆಯ ಬರುವಿಕೆಯನ್ನು ಉಲ್ಲಾಸದಿಂದ ಎದುರು ನೋಡಲಿ ಎಂದು ನಾನು ಬಯಸುತ್ತಿದ್ದೆ. ಆದ್ದರಿಂದ ಆ ಪುಸ್ತಕವನ್ನು ನನ್ನ ಗಂಡ ಮರಳಿ ಬರಲಿರುವ ಕೆಲವು ದಿನಗಳ ಮುಂಚೆಯೇ ತೆಗೆದು ಮಕ್ಕಳೊಟ್ಟಿಗೆ ವೈಯಕ್ತಿಕವಾಗಿ ಮಾತನಾಡಿ, ಅವರವರ ಎಲ್ಲಾ ಅವಿಧೇಯತೆಗಳನ್ನು ಅವರಿಗೆ ವರ್ಣಿಸುತ್ತಿದ್ದೆ. ಅನಂತರ ಅವರಿಗೆ ತಮ್ಮ ಪ್ರತಿಯೊಂದು ತಪ್ಪಿನ ಗಂಭೀರತೆಯನ್ನು ವಿವರಿಸುತ್ತಿದ್ದೆ. ಅವರ ಪ್ರತಿಯೊಂದು ಅವಿಧೇಯತೆಯ ವಿಷಯವಾಗಿ ಅವರು ಯಾವಾಗಲೂ ’ಕ್ಷಮೆ’ ಕೇಳುತ್ತಿದ್ದರು. ಆದ್ದರಿಂದ ಅವುಗಳನ್ನು ಒಂದೊಂದಾಗಿ ಅಳಿಸಿ ಬಿಡುತ್ತಿದ್ದೆ. ಕೊನೆಗೆ ಪುಸ್ತಕದಲ್ಲಿ ಏನೂ ಉಳಿಯುತ್ತಿರಲಿಲ್ಲ! ಅವರ ಆ ಅವಿಧೇಯತೆಗಳು ಅಷ್ಟು ಪ್ರಾಮುಖ್ಯ ವಿಷಯಗಳಾಗಿರದಿದ್ದರೂ, ನಾನು ನನ್ನ ಮಕ್ಕಳೊಟ್ಟಿಗೆ ಅವುಗಳನ್ನು ಒಂದೊಂದಾಗಿ ವ್ಯವಹರಿಸುತ್ತಿದ್ದೆ. ಏಕೆಂದರೆ ಇನ್ನು ಮುಂದೆ ಅವರು ವಿಧೆಯತೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂಬ ಕಾರಣದಿಂದ.

ಅವರು ಬರೆಯುವುದನ್ನು ಕಲಿತ ನಂತರ, ಅವಿಧೇಯರಾಗಿದ್ದಾಗಲ್ಲೆಲ್ಲ, ಕೆಲವೊಮ್ಮೆ ಅವರು ಏನಾದರೊಂದನ್ನು 20 ಸಲ (ಅಥವಾ 100 ಸಲ) ಬರೆಯಲು ಹೇಳುತ್ತಿದ್ದೆ. ಇದರಿಂದ ಅವರು ಆ ಪ್ರತ್ಯೇಕವಾದ ಅವಿಧೇಯತೆಯ ಕಾರ್ಯವನ್ನು ಮತ್ತೆ ಮಾಡಬಾರದೆಂದು ಮತ್ತು ನಾನು ಅವರ ಅವಿಧೇಯತೆಯ ಕಾರ್ಯಗಳನ್ನು ಅಲಕ್ಷ ಮಾಡುವುದಿಲ್ಲವೆಂದು ಅವರು ಗ್ರಹಿಸಲಿ ಎನ್ನುವುದೆ ನನ್ನ ಅಪೇಕ್ಷೆಯಾಗಿತ್ತು. ಇದರ ಜೊತೆ-ಜೊತೆಗೆ ಅವರ ಬರವಣಿಗೆಯೂ ಸುಧಾರಿಸಿರಬಹುದು ಎಂದು ನಾನು ಅಂದುಕೊಂಡಿದ್ದೆ.

ಮಕ್ಕಳ ಯಾವುದಾದರೂ ಒಂದು ಅವಿಧೇಯತೆಯ ಬಗ್ಗೆ ನನ್ನ ಗಂಡನಿಗೆ ತಿಳಿಸುವುದು ಪ್ರಾಮುಖ್ಯವೆಂದು ನನಗೆ ಅನಿಸಿದಾಗ, ನಾವೆಲ್ಲರೂ ರಾತ್ರಿ ಮೇಜಿನ ಸುತ್ತಲು ಊಟಕ್ಕೆ ಕುಳಿತಾಗ ಆ ವಿಷಯವನ್ನು ಎತ್ತಿ ಅದನ್ನು ಮಾಡಿದವರ ಹೆಸರನ್ನು ಹೇಳದೆ ಅದನ್ನು ವಿವರಿಸುತ್ತಿದ್ದೆ. ಆವಾಗ ನನ್ನ ಗಂಡ ತಿದ್ದುವಿಕೆಯ ಮಾತುಗಳನ್ನು ಆಡಿ, ನಾನು ಮುಂಚೆ ಮಕ್ಕಳಿಗೆ ಹೇಳಿದ ಮಾತುಗಳಿಂದಲೇ ಬಲಪಡಿಸುತ್ತಿದ್ದರು. ಅದು ನನ್ನ ಮಕ್ಕಳಿಗೆ ಬಹಳ ಸಹಾಯವಾಗುತ್ತಿತ್ತು. ನಾನು ನನ್ನ ಮನೆಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದನ್ನು ಬಯಸುತ್ತಿದ್ದೆ ಹಾಗೂ ನನ್ನ ಮಕ್ಕಳು ಅವಿಧೇಯತೆಯನ್ನು ಒಂದು ಗಂಭೀರವಾದ ವಿಷಯವೆಂದು ತಿಳಿಯಬೇಕೆಂದು ನಾನು ಆಶಿಸುತ್ತಿದ್ದೆ. ಆದರೆ ಒಬ್ಬ ಕಟ್ಟು-ನಿಟ್ಟಾಗಿ ಇರುವ ಶಾಲಾ ಶಿಕ್ಷಕಿ ಅಥವ ನ್ಯಾಯಾಧೀಶನ ಹಾಗೆ ಇರಲು ಬಯಸುತ್ತಿರಲಿಲ್ಲ. ಹೇಗೆ ದೇವರು ನಮ್ಮನ್ನು ಕ್ಷಮಿಸಿದನೋ ಅದೇ ರೀತಿಯಾಗಿ ಅವರು ಕೂಡಾ ಕ್ಷಮಾಪಣೆಯನ್ನು ಅನುಭವಿಸಬೇಕೆಂದು ನಾನು ಬಯಸುತ್ತಿದ್ದೆ.

ಕೆಲವೊಂದು ಸಮಯಗಳಲ್ಲಿ, ನನ್ನ ಗಂಡ ಮಕ್ಕಳನ್ನು ಶಿಕ್ಷಿಸಲು ಒಂದು ದಿನದವರೆಗೆ ಕ್ರಿಕೆಟ್ ಆಡುವುದನ್ನು ಅವರು ನಿರ್ಬಂಧಿಸುತ್ತಿದ್ದರು. ಕ್ರಿಕೆಟ್ ನನ್ನ ಮಕ್ಕಳ ಅಚ್ಚುಮೆಚ್ಚಿನ ಆಟವಾಗಿತ್ತು.

ಮಕ್ಕಳು ಧರ್ಮಶಾಸ್ತ್ರಕ್ಕೆ ಅಧೀನರಾಗಿದ್ದಾರೆ. ಆದರೆ ನಮ್ಮಿಂದ ಅವರು ಕೃಪೆಯ ರುಚಿ ಕೂಡಾ ನೋಡಬೇಕು. ನಾವೇನಾದರೂ ಅವರನ್ನು ಕೇವಲ ಧರ್ಮಶಾಸ್ತ್ರದ ನಿಯಮಗಳ ಪ್ರಕಾರವೇ ನಡೆಸಿದರೆ, ದೊಡ್ಡವರಾದಾಗ ಅವರು ನಮಗೆ ವಿರುದ್ಧವಾಗಿ ನಡೆಯುವ ಸಾಧ್ಯತೆಯಿದೆ. ಅವರು ಮನೆ ಬಿಟ್ಟು ಹೋಗಲು ಕಾಯುತ್ತಾರೆ. ಸ್ವೇಚ್ಛೆಯಾಗಿದ್ದು ತಮಗೆ ಇಷ್ಟವಾದುದ್ದನ್ನು ಮಾಡುತ್ತಾರೆ. ನನ್ನ ಮಕ್ಕಳು ನಮ್ಮ ಮನೆಯನ್ನು ಪ್ರೀತಿಸಬೇಕೆಂದು ನಾನು ಬಯಸುತ್ತಿದ್ದೆ ಮತ್ತು ಈ ಕ್ರೂರವಾದ ಲೋಕದಲ್ಲಿ ಮನೆಯನ್ನು ಒಂದು ಆಶ್ರಯ ಸ್ಥಳವನ್ನಾಗಿ ಅವರು ಕಾಣಬೇಕೆಂದು ಬಯಸುತ್ತಿದ್ದೆ, ಮತ್ತು ನಮ್ಮ ಮಕ್ಕಳು ತಂದೆ-ತಾಯಿಯರಾದ ನಮ್ಮ ಜೊತೆಯಲ್ಲಿ ಇರಲು ಯಾವಾಗಲೂ ಮನೆಗೆ ಬರುವುದನ್ನು ಉತ್ಸಾಹದಿಂದ ಎದುರು ನೋಡುವಂತವರಾಗಬೇಕೆಂದು ಆಶಿಸುತ್ತಿದ್ದೆ.

ತಂದೆ-ತಾಯಿಯರಾಗಿ ನಮ್ಮ ಬಹು ಮುಖ್ಯ ಅವಶ್ಯಕತೆಯೆಂದರೆ ಜ್ಞಾನ. ಮಕ್ಕಳೊಟ್ಟಿಗೆ ನಾವು ಎಲ್ಲಿ ಕಠಿಣವಾಗಿದ್ದೇವೆ ಮತ್ತು ಎಲ್ಲಿ ದಯಾಪರರಾಗಿ ಇದ್ದೇವೆ ಎಂದು ನಾವು ದೇವರನ್ನು ಕೇಳಬೇಕು. ಹಾಗೆಯೇ ಅವರ ಹದಿಹರೆಯದ ವರ್ಷಗಳಲ್ಲಿ ವಿಶೇಷವಾಗಿ ಅವರೊಟ್ಟಿಗೆ ನಾವು ಯಾವಾಗಲೂ ಬಹಳ ಜ್ಞಾನದಿಂದ, ಸಹನೆಯಿಂದ ಮತ್ತು ಪ್ರೀತಿಯಿಂದ ವ್ಯವಹರಿಸಬೇಕು.

ಒಂದು ದೈವಿಕವಾದ ಮನೆಯನ್ನು ಕಟ್ಟಲು ಪ್ರಾಮುಖ್ಯವಾದ ಅಗತ್ಯವೇನೆಂದರೆ, ಗಂಡ-ಹೆಂಡತಿಯರು ವೈಯಕ್ತಿಕವಾಗಿ ಮತ್ತು ಒಟ್ಟಿಗೆ ಪ್ರಾರ್ಥಿಸಿ ಎಲ್ಲದರಲ್ಲಿಯೂ ದೇವರ ಸಹಾಯವನ್ನು ಹುಡುಕುವವರಾಗಿರಬೇಕು. ನಮಗೆ ಸಾಧ್ಯವಾದಾಗಲೆಲ್ಲ ನಾವು ಪ್ರಾರ್ಥಿಸಬೇಕು. ಈ ರೀತಿಯಾಗಿ ನಮ್ಮ ಹೃದಯಗಳಲ್ಲಿ ನಿಶ್ಯಬ್ಧದಿಂದ ನಾವು ದಿನದ ಎಲ್ಲಾ ಸಮಯದಲ್ಲಿಯೂ ಮಾಡಬಹುದು. ವಿಶೇಷವಾಗಿ ನಮ್ಮ ಮಕ್ಕಳು ಸಮಸ್ಯೆಗಳನ್ನು ಎದುರಿಸುತ್ತಿರುವಾಗ ನಾವು ಪ್ರಾರ್ಥಿಸಬೇಕಾಗಿದೆ. ನಾವು ನಮ್ಮ ಗಂಡಂದಿರೊಟ್ಟಿಗೆ ಐಕ್ಯತೆಯಿಂದಿರುವಾಗ ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುವವು. ನಾನು ಮತ್ತು ನನ್ನ ಗಂಡ ನಮ್ಮ ಪ್ರಾರ್ಥನೆಗಳಿಗೆ ಅದ್ಭುತವಾದ ಉತ್ತರಗಳನ್ನು ಪಡೆದಿದ್ದೇವೆ.

ಕುಟುಂಬ ಪ್ರಾರ್ಥನೆಯು ನಮ್ಮ ಮಕ್ಕಳು ಪತೀ ದಿನ ಕ್ರಮವಾಗಿ ಮಾಡುವಂತ ಒಂದು ಆಚರಣೆಯಾಗಿರಬಾರದು. ಅದು ಅವರಿಗೆ ಬೇಸರವನ್ನು ತರಬಹುದು. ತಂದೆ-ತಾಯಿಯರಾದ ನಮ್ಮೊಟ್ಟಿಗೆ ಮಾತನಾಡುವ ಹಾಗೆಯೇ, ಪ್ರಾರ್ಥನೆಯು ಪರಲೋಕದ ತಂದೆಯೊಟ್ಟಿಗೆ ಸ್ವತಂತ್ರವಾಗಿ ಮತ್ತು ಆನಂದ ಭರಿತರಾಗಿ ಮಾತನಾಡುವುದು ಎಂದು ಅವರು ತಿಳಿಯಬೇಕು.

ಅಂತ್ಯದಲ್ಲಿ, ಯಾವಾಗಲಾದರೂ ಯಾವುದೋ ಒಂದು ಕಾರಣಕ್ಕಾಗಿ ನಿನ್ನ ಹೃದಯದಲ್ಲಿ ಅಸಮಾಧಾನ ಇರುವಾಗ. (ಅದು ಆಗಾಗ್ಗೆ ಇರುತ್ತದೆ.) ಅದನ್ನು ಬಹು ಬೇಗನೆ ಜಯಿಸಿ ವಿಶ್ರಾಂತಿಯಲ್ಲಿರುವಂತೆ ದೇವರ ಸಹಾಯವನ್ನು ಕೇಳಬೇಕು. ಅದನ್ನು ನೀನು ಬೇಗನೆ ವ್ಯವಹರಿಸಲಿಲ್ಲವೆಂದರೆ, ಅನೈಕ್ಯತೆ ಮತ್ತು ಹೊಂದಾಣಿಕೆ ಇಲ್ಲದಿರುವಿಕೆ ನಮ್ಮ ಮನೆಯನ್ನು ಪ್ರವೇಶಿಸುತ್ತವೆ. ಅದು ಸೈತಾನನು ನಮ್ಮ ಮನೆಯೋಳಗೆ ಬಂದು ಗಲಿಬಿಲಿಯನ್ನು ಉಂಟು ಮಾಡಲು ದ್ವಾರವನ್ನು ತೆಗೆದಂತೆ ಆಗುತ್ತದೆ. ಆಗ ಎಲ್ಲರಿಗಿಂತ ನಿನ್ನ ಮಕ್ಕಳೇ ಹೆಚ್ಚು ಕಷ್ಟಕ್ಕೊಳಗಾಗುತ್ತಾರೆ. ಆದ್ದರಿಂದ, ನಿಮ್ಮ ಮಕ್ಕಳನ್ನು ನೀವು ಪ್ರೀತಿಸುವುದಾದರೆ, ಅನೈಕ್ಯತೆಯನ್ನು ನೀನು ಅತಿ ಬೇಗನೇ ವ್ಯವಹರಿಸುವವಳಾಗಿರಬೇಕು.

ದೇವರೊಬ್ಬನು ಮಾತ್ರ ದೈವಿಕ ಮನೆಗಳನ್ನು - ಸ್ವರ್ಗದ ಸುರುಚಿಯಾಗಿರುವಂತ ಮನೆಗಳನ್ನು ಕಟ್ಟಲು ನಮಗೆ ಸಹಾಯ ಮಾಡಬಲ್ಲನು. ಇಂತಹ ಮನೆಗಳನ್ನು ಕಟ್ಟಲು ಆತನು ಸಹಾಯ ಮಾಡಲು ಎಂದೆಂದಿಗೂ ಸಿದ್ಧನಾಗಿ ನಿಂತಿದ್ದಾನೆ.

ನಮ್ಮೆಲ್ಲರಿಗೂ ಅದು ಅದೆ ರೀತಿಯಾಗಿ ಇರಲಿ.

ಎಲ್ಲ ಸ್ತುತಿಯು ಮತ್ತು ಮಹಿಮೆಯು ಆತನಿಗೊಬ್ಬನಿಗೆ ಸಲ್ಲಲಿ.