ದೇವರಲ್ಲಿ ಕೇಂದ್ರೀಕರಿಸಿದ ಪ್ರಾರ್ಥನೆ

    Download Formats:

ಅಧ್ಯಾಯ 1
ಹೇಗೆ ಪ್ರಾರ್ಥಿಸಬಾರದು

"ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕೆ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ನೀನು ಪ್ರಾರ್ಥನೆ ಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಲನ್ನು ಮುಚ್ಚಿಕೊಂಡು, ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು. ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು''.

"ಆದರೆ ಪ್ರಾರ್ಥನೆ ಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ. ಅವರು ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ನೆನಸುತ್ತಾರೆ. ಆದ್ದರಿಂದ ನೀವು ಅವರ ಹಾಗೆ ಆಗಬೇಡಿರಿ. ನೀವು ನಮ್ಮ ತಂದೆಯನ್ನು ಬೇಡಿಕೊಳ್ಳುವದಕ್ಕಿಂತ ಮುಂಚೆಯೇ ನಿಮಗೆ ಏನೇನು ಅಗತ್ಯವೆಂಬದು ಆತನಿಗೆ ತಿಳಿದದೆ.

"ಆದರಿಂದ ನೀವು ಹೀಗೆ ಪ್ರಾರ್ಥನೆ ಮಾಡತಕ್ಕದ್ದು: ಪರಲೋಕದಲ್ಲಿರುವ ನಮ್ಮ ತಂದೆಯೇ. ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪಗಳನ್ನು ಕ್ಷಮಿಸು. ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು. ಯಾಕಂದರೆ, ರಾಜ್ಯವೂ ಬಲವೂ ಮಹಿಮೆಯೂ ಸದಾಕಾಲ ನಿನ್ನವೇ. ಆಮೆನ್''.

"ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆ ಹೋದರೆ, ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ" (ಮತ್ತಾ 6:5-15).

ಇದು ಯೇಸುವು ತನ್ನ ಶಿಷ್ಯರಿಗೆ ಕಲಿಸಿದ ಏಕಮಾತ್ರ ಪ್ರಾರ್ಥನೆಯಾಗಿದೆ. ಹಾಗಾಗಿ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವದು ನಮಗೆ ಖಂಡಿತವಾಗಿ ಉಪಯೋಗಕರವಾಗಬೇಕು.

ನಮ್ಮ ಪ್ರತಿಯೊಂದು ಪ್ರಾರ್ಥನೆಯನ್ನೂ ಈ ರೀತಿಯಾಗಿ ಮಾಡಲು ಯೇಸುವು ತಿಳಿಸಿದರು (ವಚನ 9). ನಾವು ಪ್ರತೀ ಬಾರಿ ಪ್ರಾರ್ಥಿಸುವಾಗ ಈ ಪ್ರಾರ್ಥನೆಯನ್ನು ಪುನರಾವರ್ತಿಸಬೇಕೆಂದು ಅದರ ಅರ್ಥವಲ್ಲ. ಆದರೆ ಈ ಮಾದರಿಯನ್ನು ನಮ್ಮೆಲ್ಲರ ಪ್ರಾರ್ಥನೆಗಳು ಅನುಸರಿಸಲಿ, ಎಂದು ಇದರ ಅರ್ಥ.

ನಾವು ಈ ಪ್ರಾರ್ಥನೆಯ ಪ್ರತಿಯೊಂದು ವಾಕ್ಯವನ್ನು ಅರ್ಥಮಾಡಿಕೊಂಡು ಇದನ್ನು ಪುನರಾವರ್ತಿಸಿದರೆ ಹಾನಿಯೇನೂ ಇಲ್ಲ. ಆದರೆ ನಾವು ಮುಂದೆ ನೋಡುವಂತೆ, ಅದು ಸುಲಭವಲ್ಲ.

ಯೇಸುವು ತನ್ನ ಶಿಷ್ಯರಿಗೆ ಹೇಗೆ ಪ್ರಾರ್ಥಿಸಬೇಕೆಂದು ಕಲಿಸುವ ಮೊದಲು, ಹೇಗೆ ಪ್ರಾರ್ಥಿಸಕೂಡದು ಎಂದು ಕಲಿಸಿದರು.

ಕಪಟಿಗಳಂತೆ ಅಲ್ಲ

ಹೇಗೆ ಪ್ರಾರ್ಥಿಸಬಾರದು ಎಂಬುದಕ್ಕೆ ಸಂಬಂಧಿಸಿ ಯೇಸುವು ತಿಳಿಸಿದ ಮೊದಲನೇ ವಿಷಯ, "ನಾವು ಕಪಟಿಗಳಂತೆ ಪ್ರಾರ್ಥಿಸಬಾರದು," (ವಚನ 5,6) ಎಂದು.

ನೀವು ಸುವಾರ್ತೆಗಳನ್ನು ಓದುವಾಗ, ಕಪಟತನದ ಬಗ್ಗೆ ಯೇಸುವು ಬಹಳಷ್ಟು ಹೇಳಿರುವುದನ್ನು ಕಾಣುವಿರಿ. ಫರಿಸಾಯರು ಕಪಟಿಗಳಾಗಿದ್ದರಿಂದ ಅವರನ್ನು ಯೇಸುವು ಕಠಿಣವಾಗಿ ಖಂಡಿಸಿದರು. ಫರಿಸಾಯರಲ್ಲಿ ಅನೇಕ ಒಳ್ಳೆ ಅಂಶಗಳೂ ಇದ್ದವು. ಅವರು ದಿನನಿತ್ಯವೂ ಪ್ರಾರ್ಥಿಸುತ್ತಿದ್ದರು. ವಾರಕ್ಕೆ ಎರಡು ಬಾರಿ ಉಪವಾಸ ಮಾಡುತ್ತಿದ್ದರು. ತಮ್ಮ ಹಣದ ದಶಮಾಂಶವನ್ನು ಮಾತ್ರವಲ್ಲ, ತಮ್ಮ ತೋಟದಲ್ಲಿ ಬೆಳೆದ ಜೀರಿಗೆ ಮರುಗ ಸೋಪುಗಳ ಹತ್ತರಲ್ಲೊಂದು ಪಾಲನ್ನು ಸಹ ಅವರು ಕೊಡುಗೆ ಮಾಡುತ್ತಿದ್ದರು. ದೇವರ ಆಜ್ಞೆಗಳೆಂದು ಅವರು ಅರ್ಥ ಮಾಡಿಕೊಂಡ ಸಣ್ಣ ವಿವರಗಳನ್ನು ಸೂಕ್ಷ್ಮವಾಗಿ ಪಾಲಿಸುವದರಲ್ಲಿ ಎಚ್ಚರಿಕೆ ವಹಿಸುತ್ತಿದ್ದರು. ಅವರು ಬಾಹ್ಯ ವಿಷಯಗಳಲ್ಲಿ ನೈತಿಕವಾಗಿ ಮತ್ತು ನೇರವಾಗಿ ನಡೆಯುತ್ತಿದ್ದರು. ಸಭಾಮಂದಿರದ ಸಬ್ಬತ್ ಕೂಟಕ್ಕೆ ಅವರು ತಪ್ಪದೆ ಹಾಜರಾಗುತ್ತಿದ್ದರು. ಅವರು ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸಿಸಿದ್ದರು.

ಆದಾಗ್ಯೂ ಯೇಸುವು ಅವರನ್ನು ಖಂಡಿಸಿದ್ದು ಏಕೆಂದರೆ, ಮೂಲತಃ ಅವರು ಪ್ರತಿಯೊಂದನ್ನು ಜೊತೆಯವರ ಮೆಚ್ಚುಗೆ ಪಡೆಯಲಿಕ್ಕಾಗಿ ಮಾಡುತ್ತಿದ್ದರು. "ದೇವರಿಂದ ಬರುವ ಮಾನಕ್ಕಿಂತ ಮನುಷ್ಯರಿಂದ ಬರುವ ಮಾನವೇ ಅವರಿಗೆ ಇಷ್ಟವಾಗಿತ್ತು" (ಯೋಹಾ 12:43).

ಫರಿಸಾಯರ ಸಂತತಿಯವರು - ದೇವರ ಹೊಗಳಿಕೆಗಿಂತ ಹೆಚ್ಚಾಗಿ, ತಮ್ಮ ನಾಯಕರು ಮತ್ತು ಇತರ ಮನುಷ್ಯರ ಹೊಗಳಿಕೆಯನ್ನು ಪ್ರೀತಿಸುವವರು - ಇಂದು ಲೋಕದ ಎಲ್ಲಾ ಸಭೆಗಳ ಮತ್ತು ಅನೋನ್ಯತೆಗಳ ನಡುವೆ ಬೆರೆತು ಜೀವಿಸುತ್ತಿದ್ದಾರೆ.

"ಕಪಟಿ" ಎಂಬ ಪದವು "ನಟ" ಎಂಬ ಅರ್ಥದ ಗ್ರೀಕ್ ಪದದಿಂದ ಮೂಡಿಬಂದಿದೆ. ಒಂದು ಚಲನಚಿತ್ರದಲ್ಲಿ ಸ್ನಾನಿಕನಾದ ಯೋಹಾನನ ಪಾತ್ರವನ್ನು ವಹಿಸುವ ಒಬ್ಬ ನಟನ ಬಗ್ಗೆ ಯೋಚಿಸಿರಿ. ಅವನು ನಿಜ ಜೀವನದಲ್ಲಿ ಒಬ್ಬ ಕುಡುಕ ಮತ್ತು ಮೋಜುಗಾರನಾಗಿರಬಹುದು; ಮತ್ತು ಇಬ್ಬರೋ ಅಥವಾ ಮೂವರೋ ಪತ್ನಿಯರನ್ನು ಹೊಂದಿರಬಹುದು. ಆದರೆ ಚಲನಚಿತ್ರದಲ್ಲಿ ದೇವರ ಒಬ್ಬ ಪವಿತ್ರ ಪ್ರವಾದಿಯ ಪಾತ್ರವನ್ನು ಅವನು ವಹಿಸುತ್ತಾನೆ. ಕಪಟಿ ಎಂದರೆ ಅಂಥವನು - ನಿಜ ಜೀವನದಲ್ಲಿ ಸಂಪೂರ್ಣ ವ್ಯತ್ಯಾಸವಾಗಿದ್ದು, ಮನುಷ್ಯರ ಮುಂದೆ ಬೇರೊಂದು ಪಾತ್ರವನ್ನು ನಟಿಸುವವನು.

ಒಬ್ಬ ಕಪಟಿಯು ಇತರ ವಿಶ್ವಾಸಿಗಳ ಎದುರು ಪೂರ್ಣ ಹೃದಯದ ಕ್ರೈಸ್ತನಂತೆ ವರ್ತಿಸಬಹುದು. ಆದರೆ ಅವನು ಮನೆಯಲ್ಲಿ ತನ್ನ ಪತ್ನಿಯೊಂದಿಗೆ ನಡೆದುಕೊಳ್ಳುವ ರೀತಿ ಅಥವಾ ತನ್ನ ಕಛೇರಿಯಲ್ಲಿ ಜನರೊಂದಿಗೆ ವ್ಯವಹರಿಸುವದನ್ನು ನೋಡಿದರೆ, ಅವನು ಸಂಪೂರ್ಣವಾಗಿ ಬೇರೆಯೇ ಮನುಷ್ಯನು ಎಂಬುದನ್ನು ನೀವು ಕಾಣುವಿರಿ. ಹಾಗೇಕೆ? ಆ ಸಂದರ್ಭಗಳಲ್ಲಿ ಅವನು ನಟಿಸುವದಿಲ್ಲ. ಆತನು ತನ್ನ ಮನೆಯಲ್ಲಿ ಮತ್ತು ಕಛೇರಿಯಲ್ಲಿ ಯಥಾರ್ಥವಾಗಿರುವನು. ಅವನು ಒಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದಾನೆ, ಒಬ್ಬ ಆತ್ಮಿಕ ಮನುಷ್ಯನಲ್ಲ.

ಒಬ್ಬ ನಟನು ತನ್ನ ನಟನೆಯನ್ನು ಪ್ರೇಕ್ಷಕರು ಹೊಗಳಬೇಕೆಂದು ಬಯಸುತ್ತಾನೆ. ಪ್ರತೀ ಕಪಟಿಯೂ ಸಹ ಹಾಗೆಯೇ. ಮೊದಲನೆಯ ಶತಮಾನದ ಫರಿಸಾಯರು ಇದನ್ನೇ ಮಾಡಿದರು; ಮತ್ತು 21ನೇ ಶತಮಾನದಲ್ಲಿ ಫರಿಸಾಯರು ಹಾಗೆಯೇ ಮಾಡುವರು. ಅವರು ಏನೇ ಮಾಡಲಿ, ಅದು ಪ್ರಾರ್ಥನೆಯಂತಹ ಒಂದು ಪವಿತ್ರ ಚಟುವಟಿಕೆಯೇ ಆಗಿರಲಿ, ಅವರು ಜನರ ಹೊಗಳಿಕೆಯನ್ನು ಬಯಸುತ್ತಾರೆ. ಅವರು ಸುಂದರವಾಗಿ ಪ್ರಾರ್ಥಿಸಬಹುದು - ಆದರೆ ಅದನ್ನು ಮಾಡುವದು ಜನರ ಗಮನವನ್ನು ಸೆಳೆಯಲಿಕ್ಕಾಗಿ.

ನಾವು ಯಥಾರ್ಥರಾಗಿದ್ದಲ್ಲಿ, ನಾವೆಲ್ಲರೂ ಹಲವಾರು ಬಾರಿ ಕಪಟಿಗಳಂತೆ ಪ್ರಾರ್ಥಿಸಿರುವದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ - ನಾವು ದೇವರಿಗಿಂತ ಹೆಚ್ಚಾಗಿ, ಪ್ರಾರ್ಥನೆಯನ್ನು ಕೇಳುತ್ತಿರುವ ಇತರರ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ, ಎಂದು. ನಾವು ಏಕಾಂತದಲ್ಲಿ ಮಾಡುವ ಪ್ರಾರ್ಥನೆಯಂತೆಯೇ ಬಹಿರಂಗವಾಗಿ ಪ್ರಾರ್ಥಿಸುವದಿಲ್ಲವೆಂದು ಬಹುಶಃ ನಾವು ದೇವರಿಗೆ ಅರಿಕೆ ಮಾಡಬೇಕಾಗಿದೆ. ಬಹಿರಂಗ ಪ್ರಾರ್ಥನೆಯಲ್ಲಿ ನಾವು ಒಂದು ವೇಳೆ ಜನರನ್ನು ಆಕರ್ಷಿಸಲು ಅಂದವಾದ ಭಾಷೆಯನ್ನು, ಉತ್ಸಾಹಪೂರ್ಣ ಶೈಲಿಯನ್ನು ಉಪಯೋಗಿಸಬಹುದು. ಹಾಗೆ ಪ್ರಾರ್ಥಿಸುವುದರ ಕುರಿತು ಯೇಸುವು ಎಚ್ಚರಿಕೆ ನೀಡಿರುವದಕ್ಕೆ ಕಾರಣ, ಅಂತಹ ಪ್ರಾರ್ಥನೆ ದೇವರನ್ನು ಸೇರುವದೇ ಇಲ್ಲ.

ನಾವು ನಮ್ಮ ಬೋಧನೆ, ನಮ್ಮ ಜೀವನ, ಅಥವಾ ನಮ್ಮ ಪ್ರಾರ್ಥನೆಯಲ್ಲಿ ಕಪಟತನದಿಂದ ಬಿಡುಗಡೆಯನ್ನು ಬಯಸುವದಾದರೆ, ಮನುಷ್ಯರ ಹೊಗಳಿಕೆಗಿಂತ ಹೆಚ್ಚಾಗಿ ದೇವರ ಹೊಗಳಿಕೆಯನ್ನು ಬಯಸುವಂತಹ ದೇವಭಯವನ್ನು ನಾವು ದೇವರಿಂದ ಕೇಳಿ ಪಡೆಯಬೇಕು. ನಾವು ಸರಿಯಾದ ದೇವರ ಭಯವನ್ನು ಕಲಿಯುವ ವರೆಗೆ, ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಾವು ಜನರ ಮುಂದೆ ನಟಿಸುವ ಪಾತ್ರಗಳಾಗಿ ಮುಂದುವರಿಯುತ್ತೇವೆ.

ಯೇಸುವು ಬೇರೆ ಯಾವುದೇ ಪಾಪಕ್ಕಿಂತ ಹೆಚ್ಚಾಗಿ ಕಪಟತನವನ್ನು ಖಂಡಿಸಿದರು.

ಸತ್ಯಕ್ಕೆ ದೂರವಾದ ಹೊರತೋರಿಕೆಯಿಂದ ದೂರವಿರುವದು

ಆದಿಸಭೆಯಲ್ಲಿ ಕಂಡುಬಂದ ಮೊದಲ ಪಾಪ ಕಪಟತನವಾಗಿತ್ತು, ಎಂದು ನಾವು ಓದುತ್ತೇವೆ. ಅ.ಕೃ. 5ನೇ ಅಧ್ಯಾಯದಲ್ಲಿ, ಅನನೀಯ ಮತ್ತು ಸಪ್ಫೈರಳ ಬಗ್ಗೆ ನೀವು ಓದುತ್ತೀರಿ.

ಅವರ ಪಾಪ ಏನಾಗಿತ್ತು?

ಆಸ್ತಿಯ ಮಾರಾಟದಿಂದ ಬಂದ ಎಲ್ಲಾ ಹಣವನ್ನು ಅವರು ದೇವರಿಗೆ ಕೊಡದೇ ಇದ್ದುದು ಅವರ ಪಾಪವಾಗಿತ್ತೇ? ಇಲ್ಲ, ಅದು ಅವರ ಪಾಪ ಆಗಿರಲಿಲ್ಲ. ನೀವು ನಿಮ್ಮ ಆಸ್ತಿಯನ್ನು ಒಂದು ಲಕ್ಷ ರೂಪಾಯಿಗೆ ಮಾರಾಟಮಾಡಿ, ಕೇವಲ 50,000 ರೂಪಾಯಿಯನ್ನು ದೇವರಿಗೆ ಕೊಡಲು ತೀರ್ಮಾನಿಸಿದರೆ ಅದು ಪಾಪವಲ್ಲ. ನೀವು ದೇವರಿಗೆ ಏನನ್ನೂ ಕೊಡದೇ ಇದ್ದರೂ ಅದೂ ಸಹ ಪಾಪವಲ್ಲ. ನೀವು ದೇವರಿಗೆ ಎಷ್ಟು ಕೊಡಬೇಕು ಎಂಬುದು ನಿಮ್ಮ ವೈಯಕ್ತಿಕ ವಿಚಾರವಾಗಿದೆ. ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು ಮತ್ತು ನಿಮಗೆ ಕೊಡುವದರಲ್ಲಿ ಸಂತೋಷ ಇಲ್ಲದಿದ್ದರೆ, ನೀವು ಏನೂ ಕೊಡದೇ ಇರುವದು ಒಳ್ಳೆಯದು. ನಿಮ್ಮ ಹಣ ಅವರಿಗೆ ಬೇಕಿಲ್ಲ. ಅವರಲ್ಲಿ ಬೆಳ್ಳಿ ಬಂಗಾರಗಳು ಹೇರಳವಾಗಿ ಇವೆ.

ಹಾಗಾದರೆ ಅನನೀಯ ಸಪ್ಫೈರರು ಸಾಯಲು ಕಾರಣವೇನು? ಕಾರಣ ಹೀಗಿತ್ತು: ಅನನೀಯನು ತನ್ನ ಆಸ್ತಿಯ ಮಾರಾಟದ ಸಂಪೂರ್ಣ ಮೊತ್ತವನ್ನು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಡುವ ಹಾಗೆ ನಟಿಸಿದನು. ಇತರ ಪವಿತ್ರ ಜನರ ಸಾಲಿನಲ್ಲಿ ಸೇರಿಕೊಂಡ ಅನನೀಯನು, ಅವರಂತೆಯೇ ಪವಿತ್ರ, ಸಾಧುವಾದ ಮುಖಭಾವವನ್ನು ಇರಿಸಿಕೊಂಡನು. ಅವನು ಒಬ್ಬ ಕಪಟಿ ಮತ್ತು ನಟನಾಗಿದ್ದನು.

ಆದರೆ ಒಬ್ಬ ದೈವಿಕ ಮನುಷ್ಯನಾಗಿದ್ದ ಪೇತ್ರನು ಇದರಿಂದ ಮೋಸಹೋಗಲಿಲ್ಲ. ಅನನೀಯನ ತೋರಿಕೆಯ ಸಾಧುತ್ವದ ಸೋಗನ್ನು ಗ್ರಹಿಸುವ ವಿವೇಚನೆಯನ್ನು ದೇವರು ಅವನಿಗೆ ಕೊಟ್ಟರು. ಹಾಗಾಗಿ ಅವನು, "ಅನನೀಯ, ಸೈತಾನನು ನಿನ್ನ ಹೃದಯವನ್ನು ತುಂಬಿದ್ದಾನೆಯೇ? ಪವಿತ್ರಾತ್ಮನನ್ನು ವಂಚಿಸಬೇಕು ಎಂದುಕೊಂಡಿದ್ದೀಯ?" ಎಂದು ಕೇಳಿದನು (ಅ.ಕೃ. 5:3, ಸ್ವ. ಅನು.).

ಅನನೀಯನು ನುಡಿದ ಸುಳ್ಳು ಯಾವದು? ಅವನು ತನ್ನ ಬಾಯನ್ನು ತೆರೆದೇ ಇರಲಿಲ್ಲ.

ಸುಳ್ಳಾಡುವದು ಎಂದರೇನು? ಅದರ ಅರ್ಥ ತಪ್ಪಾದ ಅಭಿಪ್ರಾಯವನ್ನು ಕೊಡುವದು ಎಂದು; ಅದಲ್ಲದೆ, ನೀವು ಬಾಯಿ ತೆರೆಯದೆಯೇ ಒಂದು ತಪ್ಪು ಅಭಿಪ್ರಾಯವನ್ನು ನೀಡಬಹುದು.

ಅನನೀಯನು ಅದನ್ನೇ ಮಾಡಿದನು. ಒಬ್ಬ ಪೂರ್ಣಹೃದಯದ ಶಿಷ್ಯನೆಂಬ ಹೊಗಳಿಕೆಯನ್ನು ಇತರರಿಂದ ಪಡೆಯಲು ಅವನು ಹಂಬಲಿಸಿದನು. ಮಾರಾಟದ ಹಣದ ಒಂದು ಭಾಗವನ್ನು ಅವನು ತನಗಾಗಿ ಇಟ್ಟುಕೊಂಡನು. ನಾನು ಈಗಾಗಲೇ ಹೇಳಿರುವಂತೆ, ಅದೊಂದು ಪಾಪವಲ್ಲ. ಅವನು ಹೀಗೆ ಹೇಳಬಹುದಿತ್ತು, "ಸಹೋದರ ಪೇತ್ರನೇ, ನಾನು ನನ್ನ ಜಮೀನನ್ನು ಮಾರಾಟ ಮಾಡಿದ್ದೇನೆ. ಆದರೆ ಇತರರು ಮಾಡಿರುವ ಹಾಗೆ, ಮಾರಾಟದ ಇಡೀ ಭಾಗವನ್ನು ದೇವರಿಗೆ ಕೊಡಬೇಕೆಂದು ನನಗೆ ಅನಿಸುತ್ತಿಲ್ಲ. ಈಗ ನಾನು ಅದರ ಒಂದು ಅಂಶವನ್ನು ನೀಡುತ್ತಿರುವೆನು," - ಇಷ್ಟನ್ನು ಮಾತ್ರ ಹೇಳಿದ್ದರೆ, ಅವನು ಸಾಯುವದಕ್ಕೆ ಕಾರಣ ಇರಲಿಲ್ಲ. ಅದು ಪ್ರಾಮಾಣಿಕ ನಡತೆ ಆಗಿರುತ್ತಿತ್ತು, ಮತ್ತು ಅದನ್ನು ದೇವರು ಮೆಚ್ಚುತ್ತಿದ್ದರು.

ಅದರೆ ಅವನು ಸೋಗು ಹಾಕಿದನು. ಈ ಪಾಪ ಅವನ ಸಾವಿಗೆ ಕಾರಣವಾಯಿತು. ಸ್ವಲ್ಪ ಸಮಯದ ನಂತರ ಅವನ ಪತ್ನಿಯು ಬಂದಳು ಮತ್ತು ಅವಳೂ ಸಹ ತನ್ನ ಪಾತ್ರವನ್ನು ಬಹಳ ಸೊಗಸಾಗಿ ಅಭಿನಯಿಸಿದಳು! ಅವಳೂ ಸಹ ತಾನು ಎಲ್ಲವನ್ನು ಕೊಡುತ್ತಿರುವಂತೆ ತೋರಿಸಿಕೊಂಡಳು. ಹಾಗಾಗಿ ಅವಳೂ ಸಹ ಸತ್ತಳು.

ಆ ಕಪಟತನವು ಆದಿ ಸಭೆಯೊಳಗೆ ಸೇರಿದ್ದ ಒಂದು ಚಿಟಿಕೆ ಹುಳಿ ಹಿಟ್ಟಿನಂತಿತ್ತು; ಮತ್ತು ಅದನ್ನು ಕೂಡಲೇ ತೆಗೆದುಹಾಕದೇ ಇದ್ದಲ್ಲಿ, ಶೀಘ್ರವೇ ಇಡೀ ಸಭೆಯು ಭ್ರಷ್ಟವಾಗಿ ಹೋಗುವದೆಂದು ದೇವರಿಗೆ ತಿಳಿದಿತ್ತು. ಆದಕಾರಣ ದೇವರು ಕೂಡಲೇ ಅವರಿಬ್ಬರನ್ನು ಕೊಂದರು.

ಕಪಟತನದ ಬಗ್ಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ನೀನು ಎಚ್ಚರ ವಹಿಸದೇ ಇದ್ದರೆ, ಪ್ರಾರ್ಥನೆಯ ಜೀವನದಲ್ಲಿ ನಿನಗೆ ನಿನ್ನ ಕಪಟತನವನ್ನು ಜಯಿಸಲು ಎಂದಿಗೂ ಸಾಧ್ಯವಾಗದು. ನೀನು ಜನರ ಮೆಚ್ಚುಗೆಗಾಗಿ ಪ್ರಾರ್ಥಿಸುವದಾದರೆ, ಯೇಸುವು ಹೇಳುವಂತೆ, "ಸಿಗಬೇಕಾದ ಪ್ರತಿಫಲ ಈಗಾಗಲೇ ನಿನಗೆ ಸಿಕ್ಕಿದೆ" (ಮತ್ತಾ 6:2). ನೀನು ಪ್ರಾರ್ಥನೆಯ ಮೂಲಕ ಅಪೇಕ್ಷಿಸುವದು ದೇವರ ಮಹಿಮೆಯಲ್ಲ, ಆದರೆ ನೀನು ಎಷ್ಟು ಚೆನ್ನಾಗಿ ಪ್ರಾರ್ಥಿಸುವೆ ಎಂದು ಇತರರು ತಿಳಿಯಲಿ, ಎಂದು. ಹಾಗಾಗಿ ನಿನಗೆ ಸಿಗುವ ಪ್ರತಿಫಲ ಅದೇ ಆಗಿದೆ. ಆದರೆ ನಿನಗೆ ಅಷ್ಟು ಮಾತ್ರ ಸಿಗುವದು. ನಿನಗೆ ಬೇಕಾದುದು ಅದು, ಮತ್ತು ನಿನಗೆ ಅದೇ ಸಿಗುವದು.

ಕ್ರೈಸ್ತ ಜೀವನದ ಒಂದು ಸಿದ್ಧಾಂತ ಏನೆಂದರೆ, ನಮಗೆ ನಮ್ಮ ಹೃದಯ ಅಂತರಾಳದ ಹಾರೈಕೆಯು ಸಿಗುವದೇ ಹೊರತು, ಮತ್ತು ನಾವು ನಮ್ಮ ತುಟಿಗಳಿಂದ ಬೇಡುವ ಕೋರಿಕೆಗಳಲ್ಲ. ಹುಡುಕಿರಿ, ನೀವು ನಿಜವಾಗಿ ಹುಡುಕುವಂಥದ್ದನ್ನು ಕಂಡುಕೊಳ್ಳುವಿರಿ!

ನಾವು ಕ್ರಿಸ್ತನ ನ್ಯಾಯಪೀಠದ ಎದುರು ನಿಂತಾಗ, ನಮ್ಮ ಅಂದವಾದ ಹೊರಕವಚಗಳೆಲ್ಲವೂ ಕಳಚಲ್ಪಡುವವು. ಅಲ್ಲಿಗೆ ನಮ್ಮ ನಟನೆ ಅಂತ್ಯಗೊಳ್ಳುವದು, ಮತ್ತು ನಮ್ಮ ನಿಜಸ್ವರೂಪ ಪ್ರಕಟವಾಗುವದು. ಆದುದರಿಂದ ಈ ದಿನ ನಾವು ಹೇಗೆ ನಡೆಯುತ್ತಿದ್ದೇವೆ ಎನ್ನುವದನ್ನು ಗಮನಿಸುವಂತೆ ಸತ್ಯವೇದ ಎಚ್ಚರಿಸುತ್ತದೆ, ಇಲ್ಲವಾದರೆ ಒಂದು ದಿನ ನಾವು ಬಟ್ಟೆ ಕಳಚಲ್ಪಟ್ಟು, ಬೆತ್ತಲೆಯಾಗಿ, ಅವಮಾನದಿಂದ ತಲೆ ತಗ್ಗಿಸ ಬೇಕಾಗುವದು.

1 ಯೋಹಾ 2:28 ಹೀಗೆನ್ನುತ್ತದೆ, "ಪ್ರಿಯರಾದ ಮಕ್ಕಳೇ, ಆತನು ಪ್ರತ್ಯಕ್ಷನಾಗುವಾಗ, ನಾವು ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚದೆ ಧೈರ್ಯದಿಂದ ಇರುವಂತೆ ಆತನಲ್ಲಿ ನೆಲೆಗೊಂಡಿರೋಣ." ಆ ದಿನದಲ್ಲಿ ನಾಚಿಗೆಗೆ ಒಳಗಾಗುವವರು ಯಾರೆಂದರೆ ತಮ್ಮ ಲೋಕದ ಜೀವನವನ್ನು ನಟನೆಯಲ್ಲಿ ಕಳೆದಿರುವವರು.

ನಾನು ಈಗ ವಿಶ್ವಾಸಿಗಳನ್ನು ಸಂಬೋಧಿಸಿ ನುಡಿಯುತ್ತಿದ್ದೇನೆ. "ಪರ್ವತ ಪ್ರಸಂಗ"ವು ಯಾರಿಗೆ ಸಾರಲ್ಪಟ್ಟಿತು? ನೀವು ಮತ್ತಾ 5:1,2ನ್ನು ಗಮನಿಸಿದರೆ, ಆ ವಿಷಯಗಳನ್ನು ಯೇಸುವು ತನ್ನ ಶಿಷ್ಯರಿಗೆ ಬೋಧಿಸಿದರೆಂದು ತಿಳಿಯುವದು. ಅವರು ತನ್ನ ಶಿಷ್ಯರಿಗೆ, "ನಿಮ್ಮ ಧರ್ಮಕಾರ್ಯಗಳನ್ನು ಜನರು ನೋಡಲಿ ಎಂದು ಅವರ ಮುಂದೆ ಮಾಡಬಾರದು," ಎಂದು ಎಚ್ಚರಿಕೆ ನೀಡಿದರು (ಮತ್ತಾ 6:1). ಅವರು ತನ್ನ ಶಿಷ್ಯರಿಗೆ, "ಫರಿಸಾಯರ ಕಪಟವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ," ಎಂದು ಹೇಳಿದರು (ಲೂಕ 12:1).

ಬೆಳೆಕಿನಲ್ಲಿ ನಡೆಯುವದು

ಸತ್ಯವೇದವು 1 ಯೋಹಾ 1:7ರಲ್ಲಿ, ನಾವು ಬೆಳಕಿನಲ್ಲಿ ನಡೆಯದಿದ್ದರೆ ದೇವರೊಂದಿಗೆ ಅನ್ಯೋನ್ಯತೆಯಿಂದ ಇರಲು ಆಗುವದಿಲ್ಲವೆಂದು ಹೇಳುತ್ತದೆ. ನಾವು ಬೆಳಕಿನಲ್ಲಿ ನಡೆದರೆ ಖಚಿತವಾಗಿ ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ, ಏಕೆಂದರೆ ಬೆಳಕು ಎಲ್ಲವನ್ನೂ ಪ್ರಕಟಗೊಳಿಸುತ್ತದೆ. ಕತ್ತಲಲ್ಲಿ ನಡೆಯುತ್ತಿರುವ ಮನುಷ್ಯನ ಜೀವನದಲ್ಲಿ ಬಚ್ಚಿಡಬೇಕಾದ ಯವುದೋ ವಿಷಯವಿದೆ. ನಾವು ಬೆಳಕಿನಲ್ಲಿ ನಡೆಯುವದು, ನಮ್ಮ ಬಾಳು ಒಂದು ತೆರೆದ ಪುಸ್ತಕ ಎನ್ನುವದರ ಸೂಚನೆಯಾಗಿದೆ. ಆಗ ನಾವು ನಮ್ಮ ಖಾಸಗಿ ಜೀವನ, ನಮ್ಮ ಲೆಕ್ಕಪತ್ರಗಳು ಮತ್ತು ಪ್ರತಿಯೊಂದನ್ನೂ ಪರೀಕ್ಷಿಸಲು ಜನರನ್ನು ಆಹ್ವಾನಿಸಬಹುದು. ನಾವು ಮುಚ್ಚಿಡಲು ಬಯಸುವಂಥದ್ದು ಯಾವುದೂ ಇರುವದಿಲ್ಲ. ನಾವು ಪರಿಪೂರ್ಣರೆಂದು ಇದರ ಅರ್ಥವಲ್ಲ. ನಾವು ಯಥಾರ್ಥರಾಗಿದ್ದೇವೆಂದು ಇದರ ಅರ್ಥ, ಅಷ್ಟೇ.

ದೇವರು ನಮ್ಮೆಲ್ಲರಿಂದ ಅಪೇಕ್ಷಿಸುವ ಮೊದಲನೆಯ ವಿಷಯ ಯಥಾರ್ಥತೆ - ಸಂಪೂರ್ಣ ಯಥಾರ್ಥತೆ. ನಾವು ಮೊದಲು ಯಥಾರ್ಥರಾಗಿರಲು ನಿಶ್ಚಯಿಸಿದರೆ, ನಮ್ಮ ಇತರ ಅನೇಕ ಸಮಸ್ಯೆಗಳು ಬಹು ಬೇಗನೆ ಪರಿಹಾರವಾಗುವವು. ದೇವರ ಮುಂದೆ ಮತ್ತು ಜನರ ಮುಂದೆ ಪ್ರಾಮಾಣಿಕತೆ ಎಂಬ ಈ ಮೂಲಭೂತ ನಿಯಮವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಹಿಂದೆಂದೂ ಅನುಭವಿಸದ ಅದ್ಭುತ ಮುನ್ನಡೆಯನ್ನು ನಾವು ಸಾಧಿಸುವೆವು.

ಆದರೆ ಇದೊಂದು ಕಾಳಗವೆಂದು ನಿಮಗೆ ತೋರಬಹುದು. "ಆ ಪ್ರೋತ್ಸಾಹಕರ ಮಾತುಗಳನ್ನು ನಾನು ಬಹಳ ಶ್ರದ್ಧೆಯಿಂದ ಸ್ವೀಕರಿಸುತ್ತೇನೆ. ಇಂದಿನಿಂದ ನಾನು ಯಥಾರ್ಥನಾಗಿರುತ್ತೇನೆ," ಎಂದು ನೀವು ಹೇಳಬಹುದು. ಆದರೆ ಒಂದು ವಾರದೊಳಗೆ ಮತ್ತೊಮ್ಮೆ ನೀವು ತೋರಿಕೆಯ ಜೀವನಕ್ಕೆ ಸೆಳೆಯಲ್ಪಟ್ಟು, ನಿಮ್ಮಲ್ಲಿ ದೇವರ ಮೆಚ್ಚುಗೆಗಿಂತ ಹೆಚ್ಚಾಗಿ ಮನುಷ್ಯರ ಹೊಗಳಿಕೆಯ ಹಂಬಲ ಉಂಟಾಗುವದನ್ನು ಕಾಣುವಿರಿ. ಆದುದರಿಂದ ನೀವು ಈ ಕದನವನ್ನು ಹೋರಾಡಿ ಜಯಿಸುವ ದೃಢನಿರ್ಧಾರವನ್ನು ಕೈಗೊಳ್ಳಬೇಕು.

ಇಂದು ದೇವರಿಗೆ ತುಂಬಾ ನೋವು ಕೊಡುವ ಮಾತು ಏನೆಂದರೆ ಇಪ್ಪತ್ತು, ಮೂವತ್ತು ಅಥವಾ ನಲ್ವತ್ತು ವರ್ಷಗಳಿಂದ ಮರುಜನ್ಮ ಪಡೆದಿರುವ ಅನೇಕ ಕ್ರೈಸ್ತರು ಯಥಾರ್ಥತೆಯ ಪ್ರಮುಖ ಪಾಠವನ್ನು ಕಲಿಯದೆ ಇರುವದರಿಂದ, ತಮ್ಮ ಆತ್ಮೀಕ ಜೀವಿತದಲ್ಲಿ ಪ್ರಗತಿಯನ್ನು ಕಾಣದೆ ಉಳಿದಿದ್ದಾರೆ. ನಮ್ಮ ಬಾಳಿನಲ್ಲಿ ಕಪಟತನ ಇದ್ದರೆ ನಾವು ಪ್ರಗತಿ ಹೊಂದಲು ಸಾಧ್ಯವಿಲ್ಲ. ನಮ್ಮ ಪ್ರಾರ್ಥನೆಗಳು ಕೇಳಲ್ಪಡುವದಿಲ್ಲ. ನಾವು ಅಹೋರಾತ್ರಿ ಪ್ರಾರ್ಥನಾಕೂಟಗಳನ್ನು ನಡೆಸಬಹುದು, ಆದರೆ ಇವು ಕೆಲಸಕ್ಕೆ ಬಾರವು. ಮೊದಲು ನಾವು ನಮ್ಮ ಕಪಟತನವನ್ನು ಬಿಡದಿದ್ದರೆ ನಮ್ಮ ಪ್ರಾರ್ಥನೆಗಳು ಕೇಳಲ್ಪಡುವದಿಲ್ಲ.

ನಮ್ಮ ನಿಜವಾದ ಅತ್ಮಿಕ ಯೋಗ್ಯತೆ, ನಾವು ದೇವರ ಮುಂದೆ ಏನಾಗಿದ್ದೇವೆ ಎನ್ನುವದೇ ಹೊರತು ಇನ್ಯಾವುದೂ ಅಲ್ಲವೆಂದು ನಾವು ತಿಳಿಯಬೇಕು. ನಮ್ಮ ಸತ್ಯವೇದ ಜ್ಞಾನ, ಅಥವಾ ನಮ್ಮ ಪ್ರಾರ್ಥನೆಯ ಪ್ರಮಾಣ, ಇಲ್ಲವೇ ಕೂಟಗಳಲ್ಲಿ ನಮ್ಮ ಹಾಜರಿ ಎಷ್ಟಿದೆ ಎನ್ನುವದು, ಅಥವಾ ಸಭೆಯ ಹಿರಿಯರು ಅಥವಾ ಇತರರು ನಮ್ಮ ಕುರಿತಾಗಿ ಇರಿಸಿರುವ ಅಭಿಪ್ರಾಯ ಇವೆಲ್ಲವನ್ನು ಆಧರಿಸಿ ನಮ್ಮ ಆತ್ಮಿಕ ಮಟ್ಟವು ನಿರ್ಧರಿಸಲ್ಪಡುವದಿಲ್ಲ. ಇದಕ್ಕೆ ಬದಲಾಗಿ ನೀವು, "ನನ್ನ ಬಾಳಿನ ಎಲ್ಲಾ ಕ್ಷೇತ್ರಗಳನ್ನು ನೋಡಬಲ್ಲ ದೇವರು ನನ್ನ ಬಗ್ಗೆ ಏನು ಯೋಚಿಸುತ್ತಿದ್ದಾರೆ?" ಎಂದು ನಿಮ್ಮನ್ನೇ ಪ್ರಶ್ನಿಸಿರಿ. ಇದಕ್ಕೆ ಸಿಗುವ ಉತ್ತರ ನೀವು ಎಷ್ಟು ಅತ್ಮಿಕರಾಗಿದ್ದೀರಿ ಎಂಬುದರ ನಿಜವಾದ ಅಳತೆಯಾಗಿದೆ. ನಾವು ಇದನ್ನು ದಿನಾಲೂ ನೆನಪಿಸಿಕೊಳ್ಳಬೇಕು, ಇಲ್ಲವಾದರೆ ನಾವು ತಿರುಗಿ ನಟರಾಗುವ ಸಾಧ್ಯತೆಯಿದೆ.

ಯೇಸುವು ನತಾನಯೇಲನ ಬಗ್ಗೆ, "ಇಗೋ ಇವನು ನಿಜವಾದ ಇಸ್ರಾಯೇಲ್ಯನು; ಇವನಲ್ಲಿ ಕಪಟವಿಲ್ಲ," ಎಂಬುದಾಗಿ ಹೇಳಿದ ಆ ಮಾತು ನನಗೆ ಬಹಳ ಇಷ್ಟವಾದದ್ದು (ಯೋಹಾ 1:47). ನಿನ್ನ ಮತ್ತು ನನ್ನ ಬಗ್ಗೆ ಯೇಸುವು ಇದನ್ನು ಹೇಳಬಹುದಾದರೆ, ಅದು ಬೇರೆ ಎಲ್ಲಾ ಶ್ಲಾಘನೆಗಳಿಗಿಂತ ಶ್ರೇಷ್ಠವಾದದು. ನತಾನಯೇಲನು ಪರಿಪೂರ್ಣನಾಗಿರಲಿಲ್ಲ. ಅವನು ಅಪರಿಪೂರ್ಣನಾಗಿದ್ದನು. ಆದರೆ ಅವನು ತನ್ನ ಅಪರಿಪೂರ್ಣತೆಯನ್ನು ಮರೆಮಾಚಲಿಲ್ಲ. ಅವನು ತನ್ನ ನಿಜಸ್ಥಿತಿಯನ್ನು ಮರೆಮಾಚಿ ನಟನೆ ಮಾಡಲಿಲ್ಲ. ಅಲ್ಲಿಯೇ ಅವನು ಅನನೀಯ ಸಪ್ಫೈರಳಿಗಿಂತ ವ್ಯತ್ಯಾಸವಾಗಿದ್ದನು.

ಅರ್ಥವಿಲ್ಲದೆ ಪದೇ ಪದೇ ಪ್ರಾರ್ಥಿಸುವದು ಅಲ್ಲ

ಯೇಸುವು ಮಾಡಬೇಡಿರೆಂದು ನಮ್ಮನ್ನು ಎಚ್ಚರಿಸಿದ ಎರಡನೆಯ ವಿಷಯ, ಪ್ರಾರ್ಥಿಸುವಾಗ ಅನ್ಯಜನರು ಮಾಡುವಂತೆ ಹೇಳಿದ್ದನ್ನೇ ಪದೇ ಪದೇ ಹೇಳುವದು.

ಪ್ರಾರ್ಥನೆಯಲ್ಲಿ ದೇವರು ನೋಡುವದು ಅದು ಎಷ್ಟು ದೀರ್ಘವಾಗಿದೆ ಎಂದಲ್ಲ, ನಮ್ಮ ಹೃದಯದ ಹಂಬಲವೇನು ಎನ್ನುವದನ್ನು. ನಿಜವಾದ ಪ್ರಾರ್ಥನೆ ಹೃದಯದ ಹಂಬಲವಾಗಿದೆ. ಅಂತಹ ಹಾರೈಕೆಯು ದೇವರ ಬಳಿಗೆ ಏರಿಹೋಗಿ ಒಂದು ಉತ್ತರವನ್ನು ಹೊಂದುವದು.

ಮನಸ್ಸಿನಲ್ಲಿ ಇರುವಂಥದ್ದನ್ನು ನೀವು ನಿಜವಾಗಿ ಹೇಳುವದಾದರೆ, ಅದನ್ನು ಪದೇ ಪದೇ ಹೇಳುವದರಲ್ಲಿ ತಪ್ಪೇನಿಲ್ಲ. ಗೆತ್ಸೇಮನೆ ತೋಟದಲ್ಲಿ ಯೇಸುವು ಮೂರು ಸಾರಿ ಅವೇ ಶಬ್ದಗಳನ್ನು ಒಳಗೊಂಡ ಪ್ರಾರ್ಥನೆಯನ್ನು ಮಾಡಿದರು (ಮತ್ತಾ 26:44). ಆದರೆ ಅವರ ಮಾತುಗಳು ಬರೀ ಪುನರಾವರ್ತನೆ ಆಗಿರಲಿಲ್ಲ. ಅವರು ಪ್ರತಿ ಸಾರಿ ಪ್ರಾರ್ಥಿಸಿದಾಗ, ಶಬ್ದಗಳು ಹೃದಯದ ಒತ್ತಡದಿಂದ ಹೊರಬಂದವು. ನೀವು ಯಥಾರ್ಥವಾಗಿ ನಿಮ್ಮ ಹೃದಯದಿಂದ ಪ್ರಾರ್ಥಿಸಿದರೆ, ದಿನದಲ್ಲಿ ಹತ್ತು ಬಾರಿ ಅದೇ ಮಾತುಗಳಿಂದ ಪ್ರಾರ್ಥಿಸಬಹುದು, ಮತ್ತು ದೇವರು ಅದನ್ನು ಕೇಳುವರು.

ಕ್ರೈಸ್ತರು ದೇವರಿಗೆ ಭಾನುವಾರದಂದು ಇತರ ದಿನಗಳಿಂತ ಹೆಚ್ಚಾಗಿ ಸುಳ್ಳು ಹೇಳುವ ತಪ್ಪನ್ನು ಮಾಡುತ್ತಾರೆ. ಏಕೆಂದು ನಿಮಗೆ ಗೊತ್ತಿದೆಯೇ? ಏಕೆಂದರೆ ಭಾನುವಾರ ಅವರು ಅನೇಕ ಕೀರ್ತನೆಗಳನ್ನು - "ಯೇಸು ಕರ್ತ, ನಿಂಗೆ ನಾನು ಎಲ್ಲವನ್ನೂ ಕೊಡ್ವೆನು," "ನನ್ನ ಬೆಳ್ಳಿ ಚಿನ್ನವ ತಕ್ಕೋ, ಸಮಸ್ತವೂ ನಿನ್ನವೇ," ಇತ್ಯಾದಿ - ಇವನ್ನು ಹೇಳಿ ಹಾಡುವರು.

ಆ ಹಾಡುಗಳು ಹಾಡಿನ ಪುಸ್ತಕದಲ್ಲಿ ಇರುವದರಿಂದ ನೀವು ಅವನ್ನು ಹಾಡಬಹುದು. ಆದರೆ ಅವುಗಳ ಅರ್ಥವನ್ನು ನೀವು ಗಮನಿಸುವದಿಲ್ಲ. ನೀವು ಅಂತಹ ಹಾಡುಗಳನ್ನು ಹಾಡುವಾಗ ದೇವರೊಂದಿಗೆ ನೇರವಾಗಿ ಮಾತಾಡುತ್ತಿದ್ದೀರೆಂದು ನೀವು ಅರಿತುಕೊಳ್ಳುವದಿಲ್ಲ. ಶಬ್ದಗಳಿಗಿಂತ ಹೆಚ್ಚಾಗಿ ನಿಮ್ಮ ಧ್ಯಾನ ರಾಗದ ಕಡೆಗೆ ಇರಬಹುದು. ನೀವು ದೇವರೊಂದಿಗೆ ಸುಳ್ಳು ಹೇಳುವದು ಇದರಲ್ಲೇ.

ಮನುಷ್ಯರು ಸುಮ್ಮನೆ ಆಡುವ ಪ್ರತಿಯೊಂದು ಮಾತಿಗೂ ನ್ಯಾಯ ವಿಚಾರಣೆಯ ದಿನದಲ್ಲಿ ದೇವರಿಗೆ ಉತ್ತರಕೊಡಬೇಕು ಎಂದು ಯೇಸುವು ಹೇಳಿದರು (ಮತ್ತಾ 12:36). ನಾವು ದೇವ ಭಯವಿಲ್ಲದ ಕ್ರೈಸ್ತರ ನಡುವೆ ಜೀವಿಸುವುದರಿಂದ, ನಮ್ಮ ಕರ್ತನ ಎಚ್ಚರಿಕೆಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.

ಅನ್ಯ ಜನಾಂಗದವರ ಗುರುತು ಏನೆಂದರೆ, ದೇವರ ಸನ್ನಿಧಾನಕ್ಕೆ ಬರುವಾಗ ಸರಿಯಾಗಿ ಯೋಚಿಸದೆ, ಮಾಡಲು ಮನಸ್ಸಿಲ್ಲದ ಸಂಗತಿಗಳನ್ನು ಪದೇ ಪದೇ ಹೇಳುವದಾಗಿದೆ. ಇದು ನಮ್ಮ ಪ್ರಾರ್ಥನೆಯಲ್ಲಾಗಲೀ ಅಥವಾ ನಮ್ಮ ಹಾಡುಗಳಲ್ಲಾಗಲೀ ಯಾವತ್ತೂ ನಡೆಯಬಾರದು.

ಉದ್ದವಾದ ಪ್ರಾರ್ಥನೆಯಲ್ಲಿ ಭರವಸೆಯಿಡುವದು ಅಲ್ಲ

ಅನ್ಯಜನರು ತಮ್ಮ ಪ್ರಾರ್ಥನೆಯು ವಿಸ್ತಾರವಾಗಿದ್ದಾಗ ಕೇಳಲ್ಪಡುವದು ಎಂದು ತಿಳಿದಿದ್ದರೆಂದೂ ಸಹ ಯೇಸುವು ತಿಳಿಸಿದರು.

ಕೆಲವು ವಿಶ್ವಾಸಿಗಳ ಭಾವನೆ ಏನೆಂದರೆ, ಇಡೀ ರಾತ್ರಿ ಪ್ರಾರ್ಥನಾ ಕೂಟ ನಡೆಸಿದರೆ, ದೇವರು ಅವರ ಉದ್ದವಾದ ಪ್ರಾರ್ಥನೆಯನ್ನು ಕಡೆಗಣಿಸಲಾರದೆ ಅವರಿಗೆ ಉತ್ತರ ನೀಡುವರು ಎಂದು. ಅಂತಹ ಪ್ರಾರ್ಥನೆ ಅನ್ಯಜನರ ಪದ್ಧತಿಯಾಗಿದೆ.

ಯಾರು ನಿಜವಾದ ದೇವರು ಎಂದು ನಿಶ್ಚಯಿಸಲಿಕ್ಕಾಗಿ ಕರ್ಮೆಲ್ ಬೆಟ್ಟದ ಮೇಲೆ ಎಲೀಯ ಒಂದೆಡೆ, ಇನ್ನೊಂದೆಡೆ ಅನ್ಯ ಜನಾಂಗದ ದೇವರು ಎನಿಸಿದ್ದ ಬಾಳನ 450 ಪ್ರವಾದಿಗಳು ನಿಂತು, ಆಕಾಶದಿಂದ ಬೆಂಕಿಯನ್ನು ಕೆಳಗೆ ತರಲು ಪ್ರಯತ್ನಿಸಿದ್ದನ್ನು ನೀವು ನೆನಪಿಸಿಕೊಳ್ಳಿರಿ. ಬಾಳನ ಪ್ರವಾದಿಗಳು ಒಂದು ದೊಡ್ಡ ಪ್ರಾರ್ಥನಾ ಸಭೆಯನ್ನು ನಡೆಸಿದರು. ಅವರು ಮೇಲಿಂದ ಮೇಲೆ ಪ್ರಾರ್ಥಿಸಿದರು; ಜೊತೆಗೆ ಜಿಗಿದರು, ನಾಟ್ಯವಾಡಿದರು ಮತ್ತು ಕೂಗಾಡಿದರು. ಆದರೆ ಬೆಂಕಿ ಬರಲಿಲ್ಲ. ಅವರ ಹೃದಯಗಳನ್ನು ಅರಿತಿದ್ದ ದೇವರು, ಅವರ ಉದ್ವೇಗದ ಪ್ರದರ್ಶನಗಳಿಂದ ಮತ್ತು ಏರುಧ್ವನಿಯ ಚೀರಾಟದಿಂದ ಪ್ರಭಾವಿತರಾಗಲಿಲ್ಲ (1 ಅರಸು 18:20-29).

ಇದೇ ರೀತಿಯಾಗಿ ಪ್ರಾರ್ಥಿಸುವ ಕ್ರೈಸ್ತರೂ ಸಹ ಇದ್ದಾರೆ! ಅವರು ತಮ್ಮ ಉದ್ವೇಗದ ಮತ್ತು ಕಿರಿಚಾಟದ ಪ್ರಾರ್ಥನೆಯನ್ನು ದೇವರು ಕೇಳುವರು ಎಂದು ಯೋಚಿಸುತ್ತಾರೆ.

ಇದರ ನಂತರ ಎಲೀಯನು ಪ್ರಾರ್ಥಿಸಿದನು. ಆತನ ಪ್ರಾರ್ಥನೆಯು ಒಂದು ನಿಮಿಷದಲ್ಲೇ ಕೊನೆಗೊಂಡಿತು, ಹಾಗಿದ್ದರೂ ಅದು ಬೆಂಕಿಯನ್ನು ತಂದಿತು. ಇದೇ ನಿಜವಾದ ಪರೀಕ್ಷೆ - ನಿಮ್ಮ ಪ್ರಾರ್ಥನೆ ಒಂದು ನಿಮಿಷವೋ ಅಥವಾ ಇಡೀ ರಾತ್ರಿಯೋ ಎಂದಲ್ಲ, ಆದರೆ ದೇವರಿಂದ ಅದಕ್ಕೆ ಉತ್ತರ ಸಿಗುವದೋ ಇಲ್ಲವೋ ಎನ್ನುವದು!

"ಕರ್ತನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ" (1 ಸಮು 16:7).

"ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ" (ಯಾಕೋಬ 5:16). ಎಲೀಯನ ಉದಾಹರಣೆಯನ್ನು ಅಲ್ಲಿ ಯಾಕೋಬನು ಉಲ್ಲೇಖಿಸುತ್ತಾನೆ. ಎಲೀಯನಿಗೆ ಉತ್ತರ ಸಿಕ್ಕಿದ್ದು, ಅವನು ಅನೇಕ ತಾಸುಗಳ ವರೆಗೆ ಕೂಗಾಡಿದ್ದಕ್ಕಾಗಿ ಅಲ್ಲ, ಆದರೆ ಅವನು ನೀತಿವಂತನಾಗಿದ್ದರಿಂದ. ಪ್ರಾರ್ಥನೆಯನ್ನು ಪರಿಣಾಮಕಾರಿಯಾಗಿ ಮಾಡುವಂಥದ್ದು ಪ್ರಾರ್ಥನೆಯ ಹಿಂದೆ ಇರುವ ಜೀವಿತ. ನಾವು ಇದನ್ನು ಎಂದಿಗೂ ಮರೆಯುವದು ಬೇಡ.

ಯೇಸುವು ಪ್ರಾರ್ಥಿಸುವ ವಿಧಾನವನ್ನು ತನ್ನ ಶಿಷ್ಯರಿಗೆ ಕಲಿಸುವ ಮೊದಲು, ಅವರಿಗೆ ಕಲಿಸಿದ ಕೆಲವು ಪ್ರಾಥಮಿಕ ಪಾಠಗಳು ಇವು. ನಾವು ಹೇಗೆ ಪ್ರಾರ್ಥಿಸಬಾರದು ಎನ್ನುವದನ್ನು ಮೊದಲು ಕಲಿಯದಿದ್ದರೆ, ಸರಿಯಾಗಿ ಪ್ರಾರ್ಥಿಸುವದನ್ನು ಕಲಿಯಲು ನಮಗೆ ಎಂದಿಗೂ ಸಾಧ್ಯವಾಗದು.

ನಾನು ಹೇಳಿರುವದನ್ನು ಅಪಾರ್ಥ ಮಾಡಿಕೊಳ್ಳದಂತೆ, ನಾನು ಇಲ್ಲಿ ಒಂದು ಕೊನೆಯ ಮಾತನ್ನು ಸೇರಿಸಿದ್ದೇನೆ.

ಇಡೀ ರಾತ್ರಿಯ ಪ್ರಾರ್ಥನಾಕೂಟ ಇಟ್ಟುಕೊಳ್ಳುವದು ಖಂಡಿತವಾಗಿ ತಪ್ಪಲ್ಲ. ಸ್ವತಃ ಯೇಸುವು ಒಂದು ಸಂದರ್ಭದಲ್ಲಿ ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿ ಕಳೆದರು (ಲೂಕ 6:12). ಯೇಸುವು ಖಂಡಿಸಿದ್ದು ದೀರ್ಘವಾದ ಪ್ರಾರ್ಥನೆಯನ್ನು ಅಲ್ಲ, ಆದರೆ ಹೆಚ್ಚು ಹೆಚ್ಚು ಪದಗಳಲ್ಲಿ ನಂಬಿಕೆ ಇರಿಸುವದನ್ನು. ಯಥೇಚ್ಛ ಪದಗಳು ಮತ್ತು ನಿರಂತರ ಪ್ರಾರ್ಥನೆ, ಇವುಗಳ ನಡುವೆ ಬಹಳ ವ್ಯತ್ಯಾಸವಿದೆ. ನಮ್ಮ ಪ್ರಾರ್ಥನೆ ಬಹಳ ಪದಗಳಿಂದಷ್ಟೇ ತುಂಬಿದ್ದರೆ, ಅದು ಸಮಯ ವ್ಯರ್ಥ ಮಾಡಿದ ಹಾಗಾಯಿತು. ಯೇಸುವು ಇಡೀ ರಾತ್ರಿಯನ್ನು ಪರಿಣಾಮಕಾರಿಯಾಗಿ ಪ್ರಾರ್ಥನೆಯಲ್ಲಿ ಕಳೆಯಲು ಸಾಧ್ಯವಾಗಲು ಕಾರಣ, ಅವರ ಹೃದಯ ಸರಿಯಾಗಿತ್ತು ಮತ್ತು ಅವರಲ್ಲಿ ದೇವರು ಕೊಟ್ಟ ಭಾರವಿತ್ತು.

ಹಾಗಿದ್ದರೂ, ದೇವರು ಪ್ರಾರ್ಥನೆಗೆ ಕೊಡುವ ಉತ್ತರ ಪ್ರಾರ್ಥನೆಯ ಅವಧಿಯನ್ನು ಹೊಂದಿಕೊಂಡು ಇರುವದಿಲ್ಲ. ಇದನ್ನು ನಿರ್ಧರಿಸುವದು ಪ್ರಾರ್ಥಸುವವನ ಜೀವನ.

ಅಧ್ಯಾಯ 2
ದೇವರು ನಮ್ಮ ತಂದೆಯಾಗಿದ್ದಾನೆ

"ಪರಲೋಕದಲ್ಲಿರುವ ನಮ್ಮ ತಂದೆಯೇ".

ಸಾಮಾನ್ಯವಾಗಿ ಮಕ್ಕಳು ಕರ್ತನಾದ ಯೇಸುವಿಗೆ ಪ್ರಾರ್ಥಿಸುತ್ತಾರೆ, ಮತ್ತು ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಯೇಸುವು ತನ್ನ ಶಿಷ್ಯರಿಗೆ ಕಲಿಸಿದ ಒಂದೇ ಒಂದು ಪ್ರಾರ್ಥನೆಯಲ್ಲಿ ತಂದೆಯಾದ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕೆಂದು ಕಲಿಸಿದರು. ನಾವು ಆತ್ಮನಲ್ಲಿ ಇದ್ದುಕೊಂಡು ಮಗನ ಮೂಲಕವಾಗಿ ತಂದೆಗೆ ಪ್ರಾರ್ಥನೆ ಮಾಡುತ್ತೇವೆ.

ಆದರೆ ದೇವರನ್ನು ತಂದೆಯೆಂದು ಎಲ್ಲರೂ ಕರೆಯಲಾಗದು. ಜಗತ್ತಿನಲ್ಲಿ ನೀವು ಯಾವ ವ್ಯಕ್ತಿಗೆ ಜನಿಸಿದಿರೋ, ಅವರನ್ನು ಮಾತ್ರ ತಂದೆ ಎಂದು ಕರೆಯಬಹುದು. ನಾವು ದೇವರಲ್ಲಿ ಪ್ರಾರ್ಥಿಸುವಾಗಲೂ ಇದನ್ನು ಮನಸ್ಸಿನಲ್ಲಿ ಇರಿಸಬೇಕು. ಒಬ್ಬ ಮನುಷ್ಯನು ದೇವರ ಮಗುವಾಗಿ ಮರುಜನ್ಮ ಹೊಂದುವದು ಅವನು ತನ್ನ ಪಾಪದಿಂದ ತಿರುಗಿಕೊಂಡು, ಕರ್ತನಾದ ಯೇಸುಕ್ರಿಸ್ತನನ್ನು ತನ್ನ ಜೀವನದ ಒಡೆಯನಾಗಿ ಅಂಗೀಕರಿಸಿ, ಅವರಿಗೆ ವಿಧೇಯನಾದಾಗ ಮಾತ್ರ. ಆಗ ಮಾತ್ರ ಅವನು ದೇವರನ್ನು "ತಂದೆ" ಎಂದು ಕರೆಯಬಹುದು.

ನಮಗೆ ಹೊಸ ಒಡಂಬಡಿಕೆಯ ವಿಶೇಷ ಸೌಲಭ್ಯ

ಇಸ್ರಾಯೇಲ್ಯರು ದೇವರನ್ನು ತಮ್ಮ ತಂದೆಯೆಂದು ಕರೆಯಲು ಸಾಧ್ಯವೇ ಇರಲಿಲ್ಲ. ಯೇಸುವು ಆ ನಾಮಾಂಕಿತವನ್ನು ಮೊದಲ ಬಾರಿಗೆ ಪರಿಚಯಿಸಿದರು. ಸ್ವತಃ ಯೇಸುವು ತನ್ನ ಪರಲೋಕದ ತಂದೆಯೊಂದಿಗೆ ಮಾತಾಡುವಾಗ ಪ್ರತೀ ಬಾರಿ ಈ ಬಿರುದನ್ನು ಉಪಯೋಗಿಸಿದರು. ದೇವರನ್ನು ತಂದೆ ಎಂದು ಕರೆಯುವಂಥದ್ದು ಎಂತಹ ಸದವಕಾಶ ಎಂಬುದನ್ನು ನಾವು ಗ್ರಹಿಸುವದಿಲ್ಲ.

ದೇವರು ಹಳೆಯ ಒಡಂಬಡಿಕೆಯಲ್ಲಿ, ದೇವಾಲಯದಲ್ಲಿ ಒಂದು ತೆರೆಯನ್ನು ಇರಿಸಿ ಮತ್ತು ಅದರ ಹಿಂಭಾಗದ ಮಹಾಪವಿತ್ರಸ್ಥಾನವನ್ನು ತನ್ನ ನಿವಾಸವಾಗಿಸಿ, ತನ್ನ ಸಮೀಪಿಸಲಾಗದ ಪವಿತ್ರತೆಯನ್ನು ಯೆಹೂದ್ಯರಿಗೆ ತೋರಿಸಿದರು. ವರ್ಷಕ್ಕೆ ಒಂದು ಸಾರಿ ಮಹಾಯಾಜಕನ ಹೊರತಾಗಿ, ಯಾರಿಗೂ ಆ ಜಾಗಕ್ಕೆ ಹೋಗಲು ಅನುಮತಿ ಇರಲಿಲ್ಲ. ದೇವರು ಒಂದು ದಿನ ತನ್ನ ಸನ್ನಿಧಿಗೆ ಒಂದು ದಾರಿಯನ್ನು ತೆರೆದು, ಅಲ್ಲಿಗೆ ಯಾರೇ ಆದರೂ ನಿರಾತಂಕವಾಗಿ ಪ್ರವೇಶಿಸುವ ಅವಕಾಶವನ್ನು ನೀಡಲಿರುವರು ಎಂದು 2500 ವರ್ಷಗಳ ಹಿಂದೆ ನೀವು ಆ ಯೆಹೂದ್ಯರಿಗೆ ತಿಳಿಸಿದ್ದರೆ, ಅವರಿಗೆ ಅದು ಅಸಾಧ್ಯವೆಂದು ಅನ್ನಿಸುತ್ತಿತ್ತು.

ಆದಾಗ್ಯೂ ಹೊಸ ಒಡಂಬಡಿಕೆಯಲ್ಲಿ ಇಂದು ನಮಗೆ ಅನುಗ್ರಹಿಸಲ್ಪಟ್ಟಿರುವ ಭಾಗ್ಯ ಇದಾಗಿದೆ. ತಂದೆಯ ನಿಕಟ ಸಾನ್ನಿಧ್ಯಕ್ಕೆ ಹೋಗುವ ಅಧಿಕಾರ ನಮಗೆ ಸಿಗುವಂತೆ, ಆ ತೆರೆಯು ಈಗ ಹರಿಯಲ್ಪಟ್ಟಿದೆ; ಮತ್ತು ನಾವು ಅವರನ್ನು "ತಂದೆ" ಎಂದು ಕರೆಯಬಹುದು. ನಾವು ನಮ್ಮ ಹೊಸ ಒಡಂಬಡಿಕೆಯ ವಿಶೇಷ ಹಕ್ಕುಗಳ ಅಮೂಲ್ಯತೆಯನ್ನು ಸರಿಯಾಗಿ ತಿಳಿಯಬೇಕಾದರೆ ಹಳೆಯ ಒಡಂಬಡಿಕೆಯನ್ನು ಓದುವದು ಅವಶ್ಯ.

ತಪ್ಪಿಹೋದ ಮಗನ ಸಾಮ್ಯದಲ್ಲಿ ದೇವರಲ್ಲಿರುವ ತಂದೆಯ ಹೃದಯ ಎಷ್ಟು ಅದ್ಭುತವಾದದ್ದೆಂದು ತಿಳಿಯುತ್ತದೆ. ಅಲ್ಲಿ ಮಗನು ತಂದೆಯಿಂದ ಪ್ರಾಪ್ತವಾದ ಆಸ್ತಿಯನ್ನು ವ್ಯರ್ಥಮಾಡಿ, ಜೊತೆಗೆ ತಂದೆಯ ಹೆಸರನ್ನೂ ಹಾಳುಮಾಡಿ ಹಿಂದಿರುಗುತ್ತಾನೆ. ತಂದೆಯು ಅವನನ್ನು ನೋಡಿದ ತಕ್ಷಣ, ಅವನನ್ನು ತಬ್ಬಿಕೊಳ್ಳಲು ಓಡುತ್ತಾನೆ. ಅಲ್ಲಿ ನಾವು ತಂದೆಯಾದ ದೇವರ ಒಂದು ಚಿತ್ರಣವನ್ನು ನೋಡುತ್ತೇವೆ. ಸತ್ಯವೇದದಲ್ಲಿ ದೇವರು ಓಡುತ್ತಿರುವದಾಗಿ ತೋರಿಸುವ ಏಕೈಕ ದೃಶ್ಯ ಇದಾಗಿದೆ - ಅದೂ ಸಹ ಮಾನಸಾಂತರ ಹೊಂದಿದ ಒಬ್ಬ ಪಾಪಿಯನ್ನು ಅಪ್ಪಿಕೊಳ್ಳಲಿಕ್ಕಾಗಿ (ಲೂಕ 15:20)!

ಯೇಸುವು ಈ ರೀತಿಯಾಗಿ ಜನರಿಗೆ ದೇವರನ್ನು ತೋರಿಸಿಕೊಟ್ಟರು. ಫರಿಸಾಯರು ಮತ್ತು ಶಾಸ್ತ್ರಿಗಳು ಜನರಿಗೆ ದೇವರ ಕುರಿತಾಗಿ ನೀಡಿದ್ದ ತಪ್ಪು ಅಭಿಪ್ರಾಯಗಳನ್ನು ಅವರ ಮನಸ್ಸಿನಿಂದ ಬೇರು ಸಹಿತವಾಗಿ ಕಿತ್ತು ತೆಗೆಯಲು ಅವರು ಬಯಸಿದರು.

ಪುನರುತ್ಥಾನದ ನಂತರ, ಮಗ್ದಲದ ಮರಿಯಳು ಯೇಸುವನ್ನು ಸಮಾಧಿಯ ಹೊರಗೆ ಭೇಟಿಯಾದಾಗ, ಯೇಸುವು ಆಕೆಗೆ, "ನಾನು ನನ್ನ ತಂದೆಯೂ ನಿಮ್ಮ ತಂದೆಯೂ ಆಗಿರುವಾತನ ಬಳಿಗೆ ಏರಿಹೋಗುತ್ತೇನೆ," ಎಂದು ಹೇಳಿದರು (ಯೋಹಾ. 20:17). ಯೇಸುವಿನ ಮರಣ ಹಾಗೂ ಪುನರುತ್ಥಾನದ ಮೂಲಕ, ಅವರ ಶಿಷ್ಯರು ದೇವರೊಂದಿಗೆ ಹಿಂದೆಂದೂ ಇರದಂತಹ ನಿಕಟ ಸಂಬಂಧವನ್ನು ಹೊಂದಿದರು. ಈಗ ಅವರು ದೇವರನ್ನು ತಮ್ಮ ಸ್ವಂತ ತಂದೆ ಎಂದು ಕರೆಯಲು ಸಾಧ್ಯವಾಯಿತು. ಒಂದು ಮಗುವು ತನ್ನ ತಂದೆಯ ಮಡಿಲಲ್ಲಿ ಕುಳಿತುಕೊಳ್ಳಬಹುದು, ಅದರಂತೆಯೇ ಮಾನವನು ದೇವರೊಂದಿಗೆ ಅತಿ ಆಪ್ತನಾಗಿ ಇರುವದು ಈಗ ಸಾಧ್ಯವಾಯಿತು.

ಪ್ರೀತಿಸುವ ತಂದೆ

ಅನೇಕರಲ್ಲಿ ಇರುವ ತಪ್ಪು ಅಭಿಪ್ರಾಯ ಏನೆಂದರೆ, ತಂದೆಯಾದ ದೇವರು ತುಂಬಾ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದಾರೆ ಮತ್ತು ಯೇಸುವು ಮಾತ್ರ ನಮ್ಮನ್ನು ಪ್ರೀತಿಸುವರು, ಎಂದು. ಇದು ಸೈತಾನನಿಂದ ಸತ್ಯವು ಅಪಾರ್ಥಗೊಳ್ಳುವದಕ್ಕೆ ಒಂದು ನಿದರ್ಶನವಾಗಿದೆ. ತಂದೆಯಲ್ಲಿ ಇರುವ ಪ್ರೀತಿಯೇ ನಮ್ಮನ್ನು ನಮ್ಮ ಪಾಪಗಳಿಂದ ರಕ್ಷಿಸಲು ಯೇಸುವನ್ನು ಕಳುಹಿಸಿಕೊಟ್ಟಿತು. ಯೇಸುವು ತನ್ನ ಶಿಷ್ಯರಿಗೆ, "ತಂದೆಯು ತಾನೇ ನಿಮ್ಮ ಮೇಲೆ ಮಮತೆ ಇಡುತ್ತಾನೆ," ಎಂದು ಹೇಳಿದರು (ಯೋಹಾ. 16:27). ಹಕ್ಕಿಗಳನ್ನು ಸಾಕಿ ಸಲಹಿ, ಹೂವುಗಳನ್ನು ಅಲಂಕರಿಸುವ ಅವರ ಪರಲೋಕದ ತಂದೆಯು, ಅವರ ಬಗ್ಗೆಯೂ ಖಂಡಿತವಾಗಿ ಚಿಂತಿಸುವರು. ಪರಲೋಕದಲ್ಲಿರುವ ಅವರ ತಂದೆಗೆ ಅವರ ಎಲ್ಲಾ ಅವಶ್ಯಕತೆಗಳು ತಿಳಿದಿವೆ, ಹಾಗಾಗಿ ಅವರು ಯಾವುದೇ ವಿಷಯದಲ್ಲಿ ಚಿಂತಿತರಾಗುವದು ಅನಾವಶ್ಯಕ, ಎಂದೂ ಸಹ ವಿವರಿಸಿದರು (ಮತ್ತಾ. 6:26-34).

ಇಹಲೋಕದ ತಂದೆಯಂದಿರು ತಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ಅವರ ತಂದೆಯು ಖಂಡಿತವಾಗಿ ತನ್ನ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡುವರು, ಎಂದೂ ಸಹ ಅವರು ಅವರಿಗೆ ಹೇಳಿದರು (ಮತ್ತಾ. 7:11).

ಇವೆಲ್ಲವು ಬಹಳ ಪ್ರಾಥಮಿಕವಾದವು ಎಂದು ನೀವು ಹೇಳಬಹುದು. ಆದಾಗ್ಯೂ, ಅನೇಕ ಬಾರಿ ನಾವು ದೇವರ ಬಳಿಗೆ ಪ್ರಾರ್ಥನೆಗಾಗಿ ಬಂದಾಗ, ದೇವರು ನಮ್ಮ ಬೇಡಿಕೆಯನ್ನು ಅನುಗ್ರಹಿಸುವರು ಎಂಬುದಾಗಿ ನಂಬುವದಿಲ್ಲ, ಏಕೆಂದರೆ ಅವರಲ್ಲಿ ನಮಗೋಸ್ಕರ ಮೃದುವಾದ, ಪ್ರೀತಿಯ, ತಂದೆಯ ಕಾಳಜಿ ಇದೆ ಎನ್ನುವ ಭರವಸೆ ನಮಗಿಲ್ಲ. ಹೀಗೆ ನಾವು ನಮ್ಮ ಅಪನಂಬಿಕೆಯ ಮೂಲಕ ದೇವರನ್ನು ಸೀಮಿತಗೊಳಿಸುತ್ತೇವೆ. ನೀನು ಪ್ರಾರ್ಥಿಸುವಾಗ ಅದನ್ನು ಕೇಳಿ ಪ್ರಿಯ ತಂದೆಯು ಹರ್ಷಿಸುವರೆಂದೂ, ಅವರಿಗೆ ನಿನ್ನ ಬಗ್ಗೆ ಕಾಳಜಿ ಇದೆಯೆಂದೂ ನೀನು ನಿಜವಾಗಿಯೂ ನಂಬುತ್ತಿಯೋ?

ಕೆಲವರು ತಾವು ಶ್ರೇಷ್ಠ ದೇವಜನರಾಗಿದ್ದರೆ ಮಾತ್ರ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುವರು ಎಂದು ಯೋಚಿಸಬಹುದು. ಇಹಲೋಕದ ಒಬ್ಬ ತಂದೆಯು ಏನು ಮಾಡುತ್ತಾನೆ? ಒಂದು ವೇಳೆ ಅವನಿಗೆ ಅನೇಕ ಮಕ್ಕಳಿದ್ದರೆ, ಅವನು ತನ್ನ 3 ವರ್ಷದ ಮಗಳಿಗಿಂತ ಹೆಚ್ಚಾಗಿ 20 ವರ್ಷದ ಮಗನಿಗೆ ಕಿವಿಗೊಡುವನೋ? ತನ್ನ ಚಿಕ್ಕ ಮಗಳಿಗೆ, "ನೀನು ನನ್ನೊಂದಿಗೆ ಮಾತಾಡಲು ತುಂಬಾ ಚಿಕ್ಕವಳಾಗಿದ್ದೀ, ನಾನು ನಿನ್ನ ಮಾತನ್ನು ಕೇಳಲು ಆಗುವದಿಲ್ಲ," ಎಂದು ಹೇಳುವನೋ? ಖಂಡಿತವಾಗಿಯೂ ಇಲ್ಲ. ನಿಜ ಹೇಳಬೇಕೆಂದರೆ, ಆ ತಂದೆಯು ದೊಡ್ಡ ಮಕ್ಕಳಿಗಿಂತ ಹೆಚ್ಚಾಗಿ ತನ್ನ ಕೊನೆಯ ಮಗುವಿನ ಮಾತನ್ನು ಕೇಳಲು ಇಷ್ಟಪಡುವನು. ಇದು ದೇವರಿಗೂ ಹೀಗೆಯೇ.

ಹೀಗೆನ್ನುತ್ತಾರೆ, ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನನ್ನು ತಿಳಿಯುವರು (ತಂದೆಯೆಂದು ಗುರುತಿಸುವರು) (ಇಬ್ರಿ. 8:11). ಚಿಕ್ಕವರ ಸರದಿ ಮೊದಲು ಎಂದು ಹೇಳಿರುವದನ್ನು ಗಮನಿಸಿರಿ!

ನೀನು ಮರುಜನ್ಮವನ್ನು ನಿನ್ನೆಯ ದಿನ ಪಡೆದಿದ್ದರೂ ಸರಿ, ದೇವರ ಬಳಿಗೆ ಧೈರ್ಯವಾಗಿ ಬಂದು, "ಓ ದೇವರೇ, ನೀವೇ ನನ್ನ ತಂದೆ, ನಾನು ನಿಮ್ಮ ಮಗುವಾಗಿದ್ದೇನೆ. ಆದಕಾರಣ ನಿಮ್ಮೊಡನೆ ಮಾತನಾಡುವ ಹಕ್ಕು ನನಗಿದೆ", ಎಂದು ಹೇಳಬಹುದು. ಯೇಸುವು ತನ್ನ ಶಿಷ್ಯರು ಇಂತಹ ಪ್ರಾರ್ಥನೆಯೊಡನೆ ದೇವರ ಬಳಿಗೆ ಬರಲು ಪ್ರೋತ್ಸಾಹಿಸಿದರು.

ನಾವು ಪ್ರತೀಸಾರಿ ದೇವರನ್ನು ಪ್ರಾರ್ಥಿಸುವಾಗ, ಅವರು ಪ್ರೀತಿಯಿಂದ ಸಲಹುವ ಒಬ್ಬ ತಂದೆ, ನಮ್ಮ ಬಗ್ಗೆ ಆಸಕ್ತಿ ಉಳ್ಳವರು ಎಂದು ಅವರನ್ನು ಸಮೀಪಿಸಬೇಕು. ಹೀಗೆ ಮಾಡಿದರೆ ಮಾತ್ರ ನಂಬಿಕೆ ಉಂಟಾಗುವದು; ಅಷ್ಟೇ ಅಲ್ಲ, ನಂಬಿಕೆಯಿಲ್ಲದೆ ಪ್ರಾರ್ಥಿಸುವದು ಸಂಪೂರ್ಣ ವ್ಯರ್ಥ.

ದೇವರು ಒಳ್ಳೆಯ ದೇವರು. ಅವರು ತನ್ನ ಮಕ್ಕಳಿಗೆ ಒಳ್ಳೆಯ ವರಗಳನ್ನು ನೀಡುವದರಲ್ಲಿ ಹರ್ಷಿಸುತ್ತಾರೆ. ಸತ್ಯವೇದವು ಕೀರ್ತ. 84:11 ರಲ್ಲಿ, "ಆತನು ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?" ಎನ್ನುತ್ತದೆ. ಕೀರ್ತ 37:4 ರಲ್ಲಿ, "ಯೆಹೋವನಲ್ಲಿ ಸಂತೋಷಿಸು; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು," ಎಂದು ಹೇಳುತ್ತದೆ. ಯೇಸುವಿನ ಮೂಲಕ ಹಳೆಯ ಒಡಂಬಡಿಕೆಯ ಈ ವಾಗ್ದಾನಗಳು ಹೊಸ ಒಡಂಬಡಿಕೆಯ ಇನ್ನೂ ಅನೇಕ ವಾಗ್ದಾನಗಳ ಜೊತೆಯಲ್ಲಿ ದೃಢೀಕರಿಸಲ್ಪಟ್ಟಿವೆ, ಮತ್ತು ವಿಸ್ತರಿಸಲ್ಪಟ್ಟು ಸ್ಥಾಪಿಸಲ್ಪಟ್ಟಿವೆ.

ನಮ್ಮನ್ನು ಪ್ರೀತಿಸುವ ತಂದೆಯಾಗಿರುವ ದೇವರನ್ನು ಗುರುತಿಸಿ ಅರಿತುಕೊಳ್ಳುವದು - ನಮ್ಮ ನಂಬಿಕೆಯ ಅಸ್ತಿವಾರ ಇದಾಗಿದೆ.

ಪವಿತ್ರ ತಂದೆ

ನಾವು ದೇವರನ್ನು ಪರಲೋಕದಲ್ಲಿ ಇರುವ ನಮ್ಮ ತಂದೆಯೆಂದು ಸಂಬೋಧಿಸಬೇಕು. ಅವರು ನಮ್ಮ ತಂದೆ ಅಷ್ಟೇ ಅಲ್ಲದೆ, ಸರ್ವಶಕ್ತ ದೇವರೂ ಸಹ ಆಗಿರುವರು. ಅವರ ಬಳಿಗೆ ಪ್ರಾರ್ಥಿಸಲು ಬಂದಾಗ ನಾವು ಈ ಎರಡೂ ನಿಜಾಂಶಗಳನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು.

ನಾವು ಅವರ ಬಳಿಗೆ ಭಯಭಕ್ತಿಯೊಂದಿಗೆ ಬರುವದಕ್ಕೆ ಕಾರಣ, ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ

(ಇಬ್ರಿ. 12:29).

ಅನೇಕ ಕ್ರೈಸ್ತರು ದೇವರನ್ನು ಒಬ್ಬ ತಾತನೆಂಬಂತೆ ಯೋಚಿಸುತ್ತಾರೆ!! ನಿಮಗೆ ತಾತಂದಿರ ಸ್ವಭಾವ ಗೊತ್ತಿದೆ - ಯಾವಾಗಲೂ ಮೊಮ್ಮಕ್ಕಳನ್ನು ಸಡಿಲವಾಗಿ ಬಿಟ್ಟು, ಅವರ ಕೆಟ್ಟ ನಡತೆಯನ್ನು ನಿರ್ಲಕ್ಷಿಸುವದು. ಅನೇಕ ಕ್ರೈಸ್ತರ ಭಾವನೆ ಏನೆಂದರೆ, ತಾತಂದಿರಂತೆಯೇ ದೇವರೂ ಸಹ ತಮ್ಮ ಪಾಪವನ್ನು ಗಂಭೀರವಾಗಿ ಪರಿಗಣಿಸುವದಿಲ್ಲವೆಂದು. ಅದು ಸಂಪೂರ್ಣ ತಪ್ಪು ಅಭಿಪ್ರಾಯ. ದೇವರು ಒಬ್ಬ ತಂದೆಯಾಗಿದ್ದಾರೆ.

ಆದರೆ ಅವರು ದೇವರೂ ಸಹ ಆಗಿದ್ದಾರೆ. ಅವರ ಮುಂದೆ ಪರಲೋಕದ ಸೆರಾಫಿಯರು, "ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು" ಎಂದು ಕೂಗುತ್ತಾ ತಮ್ಮ ಮುಖವನ್ನು ಮುಚ್ಚಿಕೊಳ್ಳುವರು (ಯೆಶಾ. 6:3). ಆ ಸೆರಾಫಿಯರು ಯಾವತ್ತೂ ಪಾಪವನ್ನು ಮಾಡಿಲ್ಲ. ಆದಾಗ್ಯೂ ಅವರು ದೇವರ ಬಳಿಗೆ ಬಂದಾಗ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು, ಏಕೆಂದರೆ ದೇವರ ಪವಿತ್ರತೆಯು ಅವರನ್ನು ದಿಗ್ಭ್ರಮೆಗೊಳಿಸುತ್ತದೆ. ನಮ್ಮ ಸೀಮಿತ ಮನಸ್ಸಿಗೆ ಗ್ರಹಿಸಲು ಎಂದಿಗೂ ಸಾಧ್ಯವಾಗದ, ದೇವರ ಅಪರಿಮಿತ ಪವಿತ್ರತೆಯನ್ನು ಇದು ನಮಗೆ ತೋರಿಸುತ್ತದೆ.

ಸತ್ಯವೇದದಲ್ಲಿ ಇರುವ ಕೆಲವು ಶ್ರೇಷ್ಠ ಜನರಲ್ಲಿ ದೇವದರ್ಶನದಿಂದ ಉಂಟಾದ ಪರಿಣಾಮವನ್ನು ಗಮನಿಸಿರಿ. ಯೆಶಾಯನು ದೇವರ ಮಹಿಮೆಯನ್ನು ನೋಡಿ, ತಾನು ಎಂತಹ ಘೋರ ಪಾಪಿಯೆಂದು ಅರಿತನು (ಯೆಶಾ. 6:5). ಮೋಶೆಯು ತನ್ನ ಮೋರೆಯನ್ನು ಮುಚ್ಚಿಕೊಂಡನು, ಏಕೆಂದರೆ ಅವನು ದೇವರನ್ನು ದೃಷ್ಟಿಸಲು ಹೆದರಿದನು (ವಿಮೋ. 3:6). ದಾನಿಯೇಲನಿಗೆ ತನ್ನ ಶಕ್ತಿಯೆಲ್ಲಾ ಕುಂದಿಹೋದಂತೆ ಅನಿಸಿತು (ದಾನಿ. 10:8), ಮತ್ತು ಅಪೋಸ್ತಲನಾದ ಯೋಹಾನನು ಒಂದು ಶವದಂತೆ ಬಿದ್ದುಬಿಟ್ಟನು (ಪ್ರಕ. 1:17).

ಅಧಿಕಾಂಶ ಕ್ರೈಸ್ತರು ದೇವರನ್ನು ಈ ರೀತಿಯಾಗಿ ತಿಳಿಯದೇ ಇರುವ ಕಾರಣ, ಅವರ ಜೀವಿತ ಆಳವಿಲ್ಲದ ಮತ್ತು ಹೊರತೋರಿಕೆಯ ಜೀವಿತವಾಗಿ ಉಳಿಯುತ್ತದೆ.

ದೇವರ ಸನ್ನಿಧಿಗೆ ಜನರು ಎರಡು ವಿಪರೀತ ರೀತಿಯಲ್ಲಿ ಬರುತ್ತಾರೆ. ಕೆಲವರ ಭಾವನೆ ದೇವರನ್ನು ಸಮೀಪಿಸಲು ಸಾಧ್ಯವಿಲ್ಲವೆಂದು; ದೇವರ ಪ್ರೀತಿಯನ್ನು ಸ್ವಲ್ಪವೂ ಅರಿಯದ ಇವರು, ಸದಾ ದೇವರ ವಿಪರೀತ ಭಯದಲ್ಲಿ ಜೀವಿಸುತ್ತಾ, ಅವರನ್ನು ಸಮಾಧಾನಪಡಿಸಲು ಅನೇಕ ರೀತಿಯಲ್ಲಿ ಪ್ರಯತ್ನಿಸುವರು. ಇನ್ನೊಂದೆಡೆ ಕೆಲವು ಕ್ರೈಸ್ತರು, ದೇವರೊಂದಿಗೆ ಅಪವಿತ್ರ ಸಲಿಗೆಯ ಮನೋಭಾವನೆಯನ್ನು ಇರಿಸಿಕೊಂಡು, ಅವರು ಒಬ್ಬ ದಹಿಸುವ ಅಗ್ನಿ ಎನ್ನುವ ಭಯವಿಲ್ಲದೆ ಇರುವರು.

ಪೂಜ್ಯಭಾವವಿಲ್ಲದೆ ದೇವರ ಬಳಿಗೆ ಬರುವವರು ದೇವರನ್ನು ತಿಳಿದೇ ಇಲ್ಲ. ನಾವು ಅವರನ್ನು ಹೆಚ್ಚು ಹೆಚ್ಚಾಗಿ ತಿಳಿದು ಪ್ರಾರ್ಥಿಸಲು ಅವರ ಬಳಿಗೆ ಬರುವಾಗ, ಹೆಚ್ಚು ಹೆಚ್ಚಾಗಿ ಭಯಪಟ್ಟು ಅವರನ್ನು ಫನಪಡಿಸುತ್ತೇವೆ. ಅವರು ನಮ್ಮ ತಂದೆಯಾಗಿದ್ದಾರೆ, ಹಾಗಾಗಿ ನಾವು ಅವರ ಬಳಿಗೆ ಧೈರ್ಯವಾಗಿ ಬರುತ್ತೇವೆ. ಆದರೆ ಪೂಜ್ಯಭಾವದೊಡನೆಯೂ ಬರುತ್ತೇವೆ, ಏಕೆಂದರೆ ಅವರು ದೇವರಾಗಿದ್ದಾರೆ.

ಪೌಲನು ಬರೆದ ಹದಿಮೂರು ಪತ್ರಿಕೆಗಳಲ್ಲಿ (ರೋಮಾ ಪತ್ರಿಕೆಯಿಂದ ಫಿಲೆಮೋನನ ಪತ್ರಿಕೆಯ ವರೆಗೆ), ಅವನು ಯಾವಾಗಲೂ "ನಮ್ಮ ತಂದೆಯಾದ ದೇವರಿಂದ ಕೃಪೆಯೂ ಶಾಂತಿಯೂ ಆಗಲಿ" ಎಂಬ ಶುಭಾಶಯದೊಡನೆ ಪ್ರಾರಂಭಿಸುವದನ್ನು ಗಮನಿಸಿದ್ದೀರಾ? ಅವರನ್ನು ದೇವರಾಗಿಯೂ ತಂದೆಯಾಗಿಯೂ ತಿಳಿದುಕೊಂಡಿದ್ದ ಪೌಲನು, ಬೇರೆಯವರೂ ಸಹ ಅವರನ್ನು ಇದೇ ರೀತಿಯಾಗಿ ತಿಳಿಯಬೇಕೆಂದು ಬಯಸಿದನು.

ಪರಮಾಧಿಕಾರಿ

"ಪರಲೋಕದಲ್ಲಿರುವ" ಎಂಬ ಪದ, ನಾವು ಪ್ರಾರ್ಥನೆಯನ್ನು ಮಾಡುತ್ತಿರುವದು ಪರಲೋಕದಿಂದ ಸಾರ್ವಭೌಮನಾಗಿ ಮತ್ತು ಸರ್ವಶಕ್ತನಾಗಿ ಆಳುತ್ತಿರುವವರಿಗೆ ಎನ್ನುವದನ್ನು ನೆನಪಿಸುತ್ತದೆ.

ಹಳೇ ಒಡಂಬಡಿಕೆಯಲ್ಲಿಯೂ ಸಹ, ದೇವರು ತನ್ನ ಪರಮಾಧಿಕಾರವನ್ನು ಜನರಿಗೆ ಮನದಟ್ಟು ಮಾಡಲು ಬಯಸಿದರು. ಅವರು ಜನರಿಗೆ ಹೀಗೆಂದರು, "ಬಿಡಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿದುಕೊಳ್ಳಿರಿ. ನಾನೇ ಭೂಲೋಕದ ಸರ್ವಾಧಿಕಾರಿ ಆಗಿರುವೆನು" (ಕೀರ್ತ. 46:10 - NASB margin). ಅವರು ಇಡೀ ಲೋಕಕ್ಕೆ ಶ್ರೇಷ್ಠ ಪರಮಾಧಿಕಾರಿಯಾಗಿದ್ದಾರೆ, ಆದಕಾರಣ ನಾವು ನಿಶ್ಚಿಂತರಾಗಿ ಇರಬಹುದು.

ಬಹುಶಃ ಈ ದಿನ ದೇವಸಭೆಯು ಗುರುತಿಸಬೇಕಾದ ಬಹುದೊಡ್ಡ ನಿಜಾಂಶ ಏನೆಂದರೆ, ರಾಷ್ಟ್ರಗಳ ಮೇಲೆಯೂ ಅಧಿಕಾರಗಳ ಮೇಲೆಯೂ ದೇವರ ಸಾರ್ವಭೌಮತ್ವ ಇದೆ ಮತ್ತು ಯೇಸುವಿನ ಪರಿಪೂರ್ಣ ಅಧಿಕಾರವಿದೆಯೆಂಬ ಸತ್ಯವನ್ನು.

ನಮ್ಮಲ್ಲಿ ಅನೇಕರ ಜೀವಿತ ಕಾಲದಲ್ಲಿ ನಡೆದಿರುವ ಒಂದು ಘಟನೆಯನ್ನು ಪರಿಶೀಲಿಸಿರಿ. ನಮಗೆಲ್ಲ ಗೊತ್ತಿರುವ ಪ್ರಕಾರ ಇಂದು ರಷ್ಯ ದೇಶವು ಇಸ್ರಾಯೇಲ್ ದೇಶದ ಒಂದು ದೊಡ್ಡ ವೈರಿಯಾಗಿದೆ. ಇಸ್ರಾಯೇಲ್ನರ ಸಂಪೂರ್ಣ ವಿನಾಶ ರಷ್ಯಕ್ಕೆ ಬಹಳ ಸಂತೋಷ ಉಂಟುಮಾಡುವದು. ಆದಾಗ್ಯೂ 1948 ಮೇ ತಿಂಗಳಲ್ಲಿ, ಗ್ರೇಟ್ ಬ್ರಿಟನ್ ಯೆಹೂದ್ಯರಿಗೆ ಪ್ಯಾಲಸ್ತೀನನ್ನು ಕೊಡುವದಾಗಿ ನೀಡಿದ್ದ ತನ್ನ ವಾಗ್ದಾನವನ್ನು ಪೂರೈಸಲು ವಿಫಲವಾದಾಗ, ರಷ್ಯಾವು ಇಸ್ರಾಯೇಲ್ನೇ ಪರವಾಗಿ ತನ್ನ ಮತವನ್ನು ಚಲಾಯಿಸಿ, ಸಂಯುಕ್ತ ರಾಷ್ಟ್ರಸಂಘವು ಇಸ್ರಾಯೇಲ್ ದೇಶದ ಮರುಸ್ಥಾಪನೆಯನ್ನು ಅಂಗೀಕರಿಸುವಂತೆ ಮಾಡಿತು. ನಿಜ, ರಷ್ಯಾದ ಗುರಿ ಬ್ರಿಟಿಷರನ್ನು ಪ್ಯಾಲಸ್ತೀನಿನಿಂದ ಹೊರತಳ್ಳುವದು ಆಗಿತ್ತು. ಹಾಗಿದ್ದರೂ, ಒಂದು ’ಕ್ರಿಸ್ತೀಯ’ ರಾಷ್ಟ್ರ ಎನ್ನಿಸಿಕೊಳ್ಳುವ ದೇಶವು ತನ್ನ ವಾಗ್ದಾನವನ್ನು ಮುರಿದಾಗ, ದೇವರು ತನ್ನ ಪರಮಾಧಿಕಾರದಲ್ಲಿ, ಒಂದು ನಾಸ್ತಿಕ ರಾಷ್ಟ್ರದ ಮೂಲಕ ಯೆಹೂದ್ಯರು ಸ್ವದೇಶಕ್ಕೆ ಮರಳುವಂತೆ ಮಾಡಲು ಹೇಗೆ ಶಕ್ತನಾದರೆಂದು ಇದು ತೋರಿಸುತ್ತದೆ.

ದೇವರು ತಮ್ಮ ಸಿಂಹಾಸನದ ಮೇಲೆ ಇದ್ದಾರೆ ಮತ್ತು ಭೂಲೋಕದ ಎಲ್ಲಾ ಕಾರ್ಯಕಲಾಪಗಳ ಮೇಲೆ ಅವರ ಸಂಪೂರ್ಣ ಹತೋಟಿ ಇದೆ. ಈ ಸತ್ಯತೆಯಲ್ಲಿ ನಮ್ಮ ನಂಬಿಕೆಯು ಆಳವಾಗಿ ಬೇರೂರಿದ್ದಲ್ಲಿ ಮಾತ್ರ, ಮುಂದಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲು ಏನೇ ನಡೆದರೂ, ನಮ್ಮ ಹೃದಯವು ಶಾಂತವಾಗಿ ಇರುವದು.

ನಾವು ಸರ್ಕಾರಕೋಸ್ಕರ ಪ್ರಾರ್ಥಿಸಬೇಕೆಂದು ಸತ್ಯವೇದ ತಿಳಿಸುತ್ತದೆ (1 ತಿಮೊ. 2:1,2). ವರ್ತಮಾನ ಕಾಲದ ಸನ್ನಿವೇಶಗಳನ್ನು ನಮ್ಮ ಪ್ರಾರ್ಥನೆಯು ಬದಲಾಯಿಸುವದಾಗಿ ನಾವು ನಂಬದೇ ಇದ್ದರೆ ಇದನ್ನು ಮಾಡುವದು ವ್ಯರ್ಥ. ನನ್ನ ಸ್ವಂತ ಜೀವಿತದಲ್ಲಿ, ಸಾರ್ವಭೌಮ ದೇವರ ಶಕ್ತಿಯು ಪ್ರಾರ್ಥನೆಗೆ ಉತ್ತರವಾಗಿ ಸರಕಾರದ ತೀರ್ಮಾನಗಳನ್ನು, ಜೊತೆಗೆ ಚುನಾವಣೆಯ ಸಮಯದಲ್ಲಿ ಮತದಾರರ ನಿರ್ಣಯಗಳನ್ನೂ ಸಹ ಪ್ರಭಾವಿತಗೊಳಿಸುವದು ಎಂದು ನಾನು ನಂಬದಿದ್ದರೆ, ನಾನು ನನ್ನ ಪ್ರಾರ್ಥನೆಯ ಸಮಯದ ದುಂದು ವೆಚ್ಚ ಮಾಡೆನು. ಹಿಂದಿನ ದಿನಗಳಲ್ಲಿ ನಾವು ನಮ್ಮ ದೇಶಕ್ಕಾಗಿ ಪ್ರಾರ್ಥಿಸಿದ್ದೇವೆ ಮತ್ತು ನಮ್ಮ ಪ್ರಾರ್ಥನೆಯು - ದೇವರ ಯೋಜನೆಗಳು ನಮ್ಮ ನಾಡಿನಲ್ಲಿ ಮುಂದುವರಿಯಲಿಕ್ಕಾಗಿ - ಅದ್ಭುತವಾದ ಉತ್ತರವನ್ನು ಒದಗಿಸಿದ್ದನ್ನು ನೋಡಿದ್ದೇವೆ!

"ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲುವೆಗಳಂತೆ ಇವೆ. ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ" (ಜ್ಞಾ. 21:1). ನಾವು ಪ್ರಾರ್ಥಿಸಿದರೆ, ಈ ಲೋಕದ ಅತಿ ದೊಡ್ಡ ರಾಜನು ತನ್ನ ತೀರ್ಮಾನಗಳನ್ನು ಬದಲಾಯಿಸುವಂತೆ ದೇವರು ಮಾಡಬಲ್ಲರು.

ಭಾರತದ ಪ್ರಧಾನಮಂತ್ರಿಯು ನಿಮ್ಮ ತಂದೆಯಾಗಿದ್ದರೆ, ನಿಮ್ಮ ಜೀವನದಲ್ಲಿ ನೀವು ಎದುರಿಸುವ ತೊಂದರೆ ಕಷ್ಟಗಳ ಕುರಿತು ನಿಮ್ಮ ಮನೋಭಾವ ಎಷ್ಟು ಬದಲಾಗುವದು! ನಿಮ್ಮ ಮನೆಯ ಮಾಲಿಕನು ನಿಮ್ಮನ್ನು ಬೆದರಿಸಿದರೆ, ಅಥವಾ ನಿಮ್ಮ ಆಫೀಸಿನ ಮೇಲಧಿಕಾರಿ ನಿಮಗೆ ತೊಂದರೆ ಕೊಟ್ಟರೆ, ಅಥವಾ ನಿಮಗೆ ಯಾರೋ ಅನ್ಯಾಯ ಮಾಡಿದರೆ, ಅಥವಾ ಯಾವುದನ್ನೋ ತುರ್ತಾಗಿ ಮಾಡಬೇಕಿದ್ದರೆ, ನೀವು ಚಿಂತಿಸುತ್ತಿದ್ದಿರೋ? ಇಲ್ಲ. ನೀವು ನಿಮ್ಮ ತಂದೆಗೆ ಒಂದು ಸಂದೇಶ ಕಳುಹಿಸಿ, ನಿಮ್ಮ ತೊಂದರೆಯನ್ನು ನಿವಾರಿಸಲು ಕೇಳಿಕೊಳ್ಳುತ್ತಿದ್ದೀರಿ.

ಕರ್ತನು ಭಾರತದ ಪ್ರಧಾನಮಂತ್ರಿಗಿಂತಲೂ ಶ್ರೇಷ್ಠನಲ್ಲವೇ?

ನಮ್ಮ ಜೀವನದಲ್ಲಿ ಯಾವುದೋ ಸಮಸ್ಯೆ ಎದುರಾದಾಗ ನಾವು ಏನು ಮಾಡುತ್ತೇವೆ? "ಸರಿ, ನಾನು ಇದನ್ನು ನನ್ನ ಪರಲೋಕದ ತಂದೆಗೆ ತಿಳಿಸಿ ಬಿಡುವೆನು. ಇಡೀ ಜಗತ್ತನ್ನು ಆಳುವ ಅವರಿಗೆ ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ," ಎಂದು ಹೇಳುವೆವೋ? ಅಥವಾ, "ನನಗೆ ಸಹಾಯಕ್ಕಾಗಿ ಮಂತ್ರಿ ಮಂಡಲದ ಒಬ್ಬ ಮಂತ್ರಿ ಅಥವಾ ಒಬ್ಬ ಪೋಲಿಸ್ ಅಧಿಕಾರಿಯ ಪರಿಚಯವಿದ್ದರೆ ಎಷ್ಟು ಚೆನ್ನಾಗಿತ್ತು," ಎಂದು ಹೇಳುವೆವೋ? ಇವೆರಡರಲ್ಲಿ ನಮ್ಮ ಮೊದಲ ಪ್ರತಿಕ್ರಿಯೆ ಯಾವುದು?

ಅನೇಕ ಕ್ರೈಸ್ತರು ತಮ್ಮ ಅನುದಿನದ ವ್ಯವಹಾರಗಳಲ್ಲಿ ನಾಸ್ತಿಕರಾಗಿದ್ದಾರೆ. ಅವರು ಸಭಾಕೂಟಗಳಲ್ಲಿ ಮತ್ತು ತಮ್ಮ ಮನೆಗಳಲ್ಲಿ ದೇವರಲ್ಲಿ ನಂಬಿಕೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಲೌಕಿಕ ವಿಷಯಗಳಲ್ಲಿ, ಅವರು ಒಬ್ಬ ನಾಸ್ತಿಕನಂತೆ ಭಯಭೀತರೂ ಚಿಂತಿತರೂ ಆಗಿರುತ್ತಾರೆ.

ಇಂದಿನ ದಿನಗಳಲ್ಲಿ ಇರುವಷ್ಟು ಭಯ ಹಿಂದೆಂದೂ ಇರಲಿಲ್ಲ. ಕಡೆಯ ದಿನಗಳಲ್ಲಿ ಜನರು ಮುಂದೆ ಏನು ನಡೆಯಲಿದೆಯೋ ಎಂಬ ಭಯ ಮತ್ತು ವಿಸ್ಮಯದಿಂದ ಬಳಲಿ ಎದೆಗುಂದುವರು ಎಂದು ಯೇಸುವು ಹೇಳಿದರು (ಲೂಕ. 21:26). ಆದರೆ ಇಂತಹ ಸಮಯದಲ್ಲಿ ನಾವು, ಭಯವಿಲ್ಲದೆ ತಲೆ ಎತ್ತಿ, ಕ್ರಿಸ್ತನ ಬರೋಣವನ್ನು ಎದುರು ನೋಡಲು ಉತ್ತೇಜಿಸಲ್ಪಟ್ಟಿದ್ದೇವೆ (ಲೂಕ. 21:28).

ಪರಿಪೂರ್ಣ ಭದ್ರತೆ

ನಮ್ಮ ತಂದೆ ಸರ್ವಶಕ್ತರಾಗಿರುವಾಗ, ನಾವು ಖಂಡಿತವಾಗಿ ಅನಾಥರಲ್ಲ. ಹಾಗಾಗಿ ನಾವು ಅನಾಥರಂತೆ ವರ್ತಿಸುವದು ಬೇಡ. ನೀವು ಕಳವಳಗೊಳ್ಳುವದು ಅಥವಾ ಚಿಂತಿಸುವದು, ನೀವು ನಿಮ್ಮ ಪರಲೋಕದ ತಂದೆಯನ್ನು ಅವಮಾನ ಪಡಿಸಿದಂತೆ - ಒಂದೋ ದೇವರು ಬಲಹೀನರು, ಅಥವಾ ಅವರಿಗೆ ನಿಮ್ಮ ಬಗ್ಗೆ ಆಸಕ್ತಿಯಿಲ್ಲ, ಹಾಗಾಗಿ ನಿಮಗೆ ಅವರಲ್ಲಿ ಭರವಸೆ ಇಲ್ಲ, ಮತ್ತು ದೇವರಲ್ಲಿ ನಿಮ್ಮ ಕಷ್ಟಕರ ಸನ್ನಿವೇಷಕ್ಕೆ ಪರಿಹಾರ ಇಲ್ಲ ಎನ್ನುವದನ್ನು ತೋರಿಸುತ್ತಿದ್ದೀರಿ! ಇದು ಅಪನಂಬಿಕೆಯ ಹೃದಯ ನೀಡುವ ಸಾಕ್ಷಿ.

ದೇವರು ನಿಮ್ಮನ್ನು ಪ್ರೀತಿಸುತ್ತಾರೆಂದು ಮತ್ತು ನಿಮ್ಮ ಬಗ್ಗೆ ಕಾಳಜಿ ಹೊಂದಿದ್ದಾರೆಂದು ಮತ್ತು ಅವರು ಸರ್ವಶಕ್ತರೆಂದು ನೀವು ನಿಜವಾಗಿ ನಂಬುವದಾದರೆ, ನಿಮ್ಮ ಹೃದಯ ಕಳವಳಗೊಳ್ಳಲು ಏನು ಕಾರಣ? ನನಗೆ ಆಗಾಗ ಸವಾಲು ಒಡ್ಡುವ ಎರಡು ಪಕ್ಷಿಗಳ ಕುರಿತಾದ ಒಂದು ಹಾಡು ಹೀಗಿದೆ:

ರಾಬಿನ್ ಹಕ್ಕಿಯು ಗುಬ್ಬಿಯನ್ನು ಕೇಳಿತು, "ಈ ಮಾನವರು ಏಕೆ ಕಳವಳದಿಂದ ಅತ್ತಿತ್ತ ಓಡುತ್ತಾ ಪೇಚಾಡುವರೆಂದು ನಾನು ತಿಳಿಯ ಬಯಸುತ್ತೇನೆ." ಗುಬ್ಬಿಯ ಉತ್ತರ ಹೀಗಿತ್ತು, "ಗೆಳೆಯನೇ, ಬಹುಶಃ ನಿನ್ನನ್ನೂ ನನ್ನನ್ನೂ ಸಲಹುವ ಪರಲೋಕದ ತಂದೆ ಅವರಿಗೆ ಇಲ್ಲವೆಂದು ನನಗೆ ಅನ್ನಿಸುತ್ತದೆ."

"ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು," ಎಂದು ಯೇಸುವು ಹೇಳಿದರು (ಮತ್ತಾ. 10:31). ಯೇಸುವು ನಮ್ಮ ಜೀವನದಲ್ಲಿ ಒಡೆಯ ಎಂದಾದರೆ, ಮತ್ತು ಈ ಲೋಕದಲ್ಲಿ ನಮಗೆ ದೇವರ ಚಿತ್ತದಂತೆ ನಡೆಯುವದಲ್ಲದೆ ಇನ್ನ್ಯಾವ ಗುರಿಯೂ ಇಲ್ಲವಾದರೆ, ನಮ್ಮ ಬಾಳಲ್ಲಿ ಅಥವಾ ಸುತ್ತಮುತ್ತಲು ಏನೇ ನಡೆದರೂ ಸರಿ, "ಎಲ್ಲಾ ಕಾರ್ಯಗಳು ನಮ್ಮ ಹಿತಕ್ಕಾಗಿಯೇ ನಡೆಯುವವು" (ರೋಮಾ. 8:28).

ದೇವರು ಬಯಸುದು ಏನೆಂದರೆ, ನಾವು ಸಂಪೂರ್ಣ ನಿಶ್ಚಿಂತರಾಗಿ ಅವರ ತಂದೆಯ ಪ್ರೀತಿ-ಪೋಷಣೆಗಳಲ್ಲಿ ಜೀವಿಸಬೇಕು, ಎಂಬುದಾಗಿ. ಅವರು ನಮ್ಮ ಪರಿಪಾಲನೆಯನ್ನು ನಮ್ಮ ಜನನದ ಮೊದಲು ವಹಿಸಿಕೊಂಡರು ಎಂದು ನಮಗೆ ಮನವರಿಕೆಯಾಗಬೇಕು. ನಮ್ಮ ತಂದೆತಾಯಿಗಳು ಯಾರು, ನಮ್ಮ ವೈಯಕ್ತಿಕ ಸ್ವಭಾವ ಹೇಗಿರಬೇಕು, ನಾವು ಎಷ್ಟು ಓದಬೇಕು, ಎಲ್ಲಿ ವಾಸಿಸಬೇಕು ಮುಂತಾಗಿ ಎಲ್ಲವನ್ನೂ ಅವರೇ ತೀರ್ಮಾನಿಸಿರುವರು. ಇದು ನಮಗೆ ಮನವರಿಕೆ ಆದಾಗ, ನಮ್ಮ ಸನ್ನಿವೇಶಗಳು, ಅಥವಾ ನಮ್ಮ ತಂದೆ-ತಾಯಂದಿರು ಅಥವಾ ಬೇರೆ ಯಾರ ಬಗ್ಗೆಯೂ ಯಾವುದೇ ಆತಂಕವಿಲ್ಲದೆ, ಸಂಪೂರ್ಣ ಮನಃಶಾಂತಿಯ ಜೀವನವನ್ನು ನಾವು ಕಂಡುಕೊಳ್ಳುತ್ತೇವೆ (ಕೀರ್ತ. 139:16).

ಮನುಷ್ಯನ ಕೋಪವೂ ಕೂಡ ತನ್ನನ್ನು ಘನಪಡಿಸುವಂತೆ ದೇವರು ಮಾಡಬಲ್ಲರು (ಕೀರ್ತ. 76:10). ಇದಕ್ಕೆ ಒಂದು ಬಹಳ ಸ್ಪಷ್ಟ ಉದಾಹರಣೆ ಯೋಸೇಫನ ಜೀವನದಲ್ಲಿ ಕಂಡುಬರುತ್ತದೆ. ನೀವು ಆದಿಕಾಂಡ 37ರಿಂದ 50 ಅಧ್ಯಾಯಗಳನ್ನು ಓದಿದಾಗ, ಯೋಸೇಫನು ತನ್ನ ದೇವರಿಗೆ ನಂಬಿಗಸ್ತನಾಗಿದ್ದ ಕಾರಣ, ಅವನಿಗೆ ಬೇರೆ ಬೇರೆ ವ್ಯಕ್ತಿಗಳು ಮಾಡಿದ ಎಲ್ಲಾ ಕೇಡುಗಳ ಮೂಲಕ ದೇವರ ಅತ್ಯುನ್ನತ ಪ್ರಭಾವವು ಹೇಗೆ ಅವನ ಹಿತವನ್ನು ಸಾಧಿಸಿತು, ಎಂದು ನೋಡುವಿರಿ.

ತಂದೆ ತಾಯಿಗಳನ್ನು ಸನ್ಮಾನಿಸಿದವರು ಭೂಮಿಯ ಮೇಲೆ ಬಹು ಕಾಲ ಬದುಕುವರು, ಎಂದು ಇಸ್ರಾಯೇಲ್ಯರಿಗೆ ದೇವರು ವಾಗ್ದಾನ ಮಾಡಿದರು (ಎಫೆ. 6:2,3). ದೇವರು ಅಂತಹ ಪ್ರತಿಯೊಬ್ಬ ವ್ಯಕ್ತಿಯನ್ನು ಶತ್ರುವಿನಿಂದ ಕೊಲೆಯಾಗದಂತೆ ಮತ್ತು ಕ್ಯಾನ್ಸರ್‌ನಿಂದ ಅಥವಾ ಅಪಘಾತ ಮುಂತಾದುವುಗಳಿಂದ ಸಾಯದಂತೆ ಕಾಪಾಡಲು ಶಕ್ತರಲ್ಲದಿದ್ದರೆ, ಈ ವಾಗ್ದಾನವನ್ನು ಹೇಗೆ ಮಾಡಬಲ್ಲರು? ದೇವರು ಅದನ್ನು - ಈ ದಿನವೂ ಸಹ - ಧಾರಾಳವಾಗಿ ಮಾಡಬಲ್ಲರು. ನಮ್ಮ ಅಪನಂಬಿಕೆಯೊಂದು ಮಾತ್ರವೇ ನಮ್ಮನ್ನು ಸಾರ್ವಭೌಮ ದೇವರ ಶಕ್ತಿಯ ಲಾಭವನ್ನು ಅನುಭವಿಸದೇ ಇರುವಂತೆ ತಡೆಯುತ್ತದೆ.

ಒಂದು ಕುಟುಂಬದ ತಂದೆ

ಕೊನೆಯದಾಗಿ, ಯೇಸುವು ಹೇಳಿರುವಂತೆ, ನಾವು ದೇವರನ್ನು ಕರೆಯಬೇಕಾದ್ದು "ನಮ್ಮ ತಂದೆ" ಎಂದು, ಆದರೆ "ನನ್ನ ತಂದೆ" ಎಂದಲ್ಲ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಇದೊಂದು ಮುಖ್ಯ ಅಂಶವಾಗಿದೆ. ಇದು ಕುಟುಂಬದ ಪ್ರಾರ್ಥನೆಯಾಗಿದೆ. ನಾನು ನನ್ನ ಪರಲೋಕದ ತಂದೆಯ ಬಳಿಗೆ ಬಂದಾಗ, ಅವರಿಗೆ ಅನೇಕ ಮಕ್ಕಳಿದ್ದಾರೆ ಎನ್ನುವದನ್ನು ಅಂಗೀಕರಿಸಬೇಕು. ಅವರ ಅನೇಕ ಮಕ್ಕಳಲ್ಲಿ ನಾನು ಒಬ್ಬ ಮಾತ್ರನು. ಈ ಕುಟುಂಬದಲ್ಲಿ ಒಬ್ಬನು ಇನ್ನೊಬ್ಬನಿಗಿಂತ ಹೆಚ್ಚು ಹಕ್ಕನ್ನು ಹೊಂದಿಲ್ಲ. ಎಲ್ಲರೂ ಸಮಾನರು. ಅವರು ನಮ್ಮೆಲ್ಲರಿಗೂ ತಂದೆ.

ನನಗೆ ನನ್ನ ಕುಟುಂಬದ ಸಹ-ವಿಶ್ವಾಸಗಳೊಂದಿಗೆ ಉತ್ತಮ ತಲಮಟ್ಟದ ಸಂಬಂಧ ಇರದಿದ್ದಾಗ, ನಾನು ದೇವರೊಂದಿಗೆ ಸರಿಯಾದ ಉನ್ನತಮಟ್ಟದ ಸಂಬಂಧವನ್ನು ಇರಿಸಿಕೊಳ್ಳಲು ಆಗುವದಿಲ್ಲ. ಶಿಲುಬೆಗೆ ಎರಡು ಬಾಹುಗಳು ಇವೆ - ಒಂದು ನೀಟವಾದ ಬಾಹು ಮತ್ತು ಒಂದು ಅಡ್ಡವಾದ ಬಾಹು. ಅದೇ ರೀತಿಯಾಗಿ, ಅನ್ಯೋನ್ಯತೆಗೂ ಮೇಲಕ್ಕೆ ಚಾಚಿದ ಒಂದು ಬಾಹು ಮತ್ತು ಅಡ್ಡಕ್ಕೆ ಚಾಚಿದ ಒಂದು ಬಾಹು ಇರುತ್ತವೆ. ಬೇರೆ ಮಾತುಗಳಲ್ಲಿ ಹೇಳುವದಾದರೆ, ದೇವರ ಕುಟುಂಬದ ಸಹೋದರ ಸಹೋದರಿಯರೊಂದಿಗೆ ನನ್ನ ಅನ್ಯೋನ್ಯತೆ ಸರಿಯಾಗಿ ಇಲ್ಲದಿದ್ದರೆ, ಅವರಲ್ಲಿ ಕೆಲವರೊಂದಿಗೆ ನಾನು ಮಾತಾಡುವದನ್ನು ನಿಲ್ಲಿಸಿದ್ದರೆ, ಅವರಲ್ಲಿ ಒಬ್ಬನ ಮೇಲೆ ನನಗೆ ಅಸಮಾಧಾನವಿದ್ದರೆ ಅಥವಾ ಒಬ್ಬನ ಮೇಲೆ ನಾನು ಕೋಪಗೊಂಡಿದ್ದರೆ ಅಥವಾ ಒಬ್ಬನನ್ನು ಕ್ಷಮಿಸದಿದ್ದರೆ, ಆಗ ನಾನು ದೇವರನ್ನು "ನಮ್ಮ ತಂದೆ" ಎಂದು ಕರೆಯಲು ಆಗುವದಿಲ್ಲ. ಅವರು ನಾನು ಕ್ಷಮಿಸದಿರುವ ವ್ಯಕ್ತಿಗೂ ಸಹ ತಂದೆಯಲ್ಲವೇ?

ನಾವು ಕ್ರಿಸ್ತನ ದೇಹದಲ್ಲಿ ಯಾರನ್ನಾದರೂ ತಿರಸ್ಕರಿಸುವದಾದರೆ ದೇವರನ್ನು ಸಮೀಪಿಸಲು ಸಾಧ್ಯವಿಲ್ಲ. "ದೇವರೇ, ಉಳಿದ ಜನರಂತೆ ನಾನಲ್ಲ. ಈ ಸುಂಕದವನಂತೆಯೂ ಅಲ್ಲ; ಆದದರಿಂದ ನಿನಗೆ ಸ್ತೋತ್ರ ಮಾಡುತ್ತೇನೆ," ಎಂದು ಫರಿಸಾಯನು ಪ್ರಾರ್ಥಿಸಿದ್ದನ್ನು ನೆನಪು ಮಾಡಿಕೊಳ್ಳಿ (ಲೂಕ. 18:11). ಇಂತಹ ಮನೋಭಾವವನ್ನು ಇರಿಸಿಕೊಂಡು ನಾವು ಪ್ರಾರ್ಥನೆಗಾಗಿ ದೇವರನ್ನು ಸಮೀಪಿಸಲು ಸಾಧ್ಯವೇ ಇಲ್ಲ. ದೇವರ ದೃಷ್ಟಿಯಲ್ಲಿ ನಿಮ್ಮ ಅಂತಸ್ತು, ವಿದ್ಯಾಭ್ಯಾಸ ಮತ್ತು ನಿಮ್ಮ ಆತ್ಮಿಕತೆಯೂ ಸಹ ಯಾವುದೇ ರೀತಿಯಲ್ಲಿ ನಿಮ್ಮನ್ನು ನಿಮ್ಮ ಸಹ ವಿಶ್ವಾಸಿಗಿಂತ ಮೇಲಿನ ಮಟ್ಟಕ್ಕೆ ಏರಿಸದು ಎನ್ನುವದನ್ನು ಅರಿತುಕೊಂಡು, ನೀವು ಎಲ್ಲಾ ಸಹ-ವಿಶ್ವಾಸಿಗಳ ಮಟ್ಟಕ್ಕೆ ಇಳಿದು ಬರುವ ಪ್ರಯತ್ನ ಮಾಡದಿದ್ದರೆ, ನೀವು ದೇವರಿಗೆ ಈ ಪ್ರಾರ್ಥನೆಯನ್ನು ಮಾಡಲು ಆಗುವದಿಲ್ಲ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಾಗಿದ್ದೇವೆ.

ದೇವರ ಉದ್ದೇಶ, ಪ್ರತೀ ಸ್ಥಳೀಯ ಸಭೆ ಒಂದು ಮನೆಯ ಅನ್ಯೋನ್ಯ ವಾತಾವರಣ ಹೊಂದಿದ್ದು, ಅಲ್ಲಿ ಸಹೋದರ ಸಹೋದರಿಯರು ಕುಟುಂಬದ ಸದಸ್ಯರಂತಿದ್ದು, ಅಲ್ಲಿಗೆ ಬರುವ ಅಪರಿಚಿತರಿಗೆ ಒಂದು ಮನೆಗೆ ಬಂದಂತೆ ಅನುಭವ ಆಗಬೇಕು ಎಂದು. ವಾತಾವರಣ ಹೀಗೆ ಇಲ್ಲವಾದರೆ, ಅದಕ್ಕೆ ಕಾರಣ ಅಲ್ಲಿರುವ ದೇವರ ಮಕ್ಕಳು ಯೇಸುವು ಈ ಪ್ರಾರ್ಥನೆಯಲ್ಲಿ ಕಲಿಸಿದ್ದನ್ನು ಸರಿಯಾಗಿ ಅರಿತಿಲ್ಲ.

ಆದ್ದರಿಂದ ನಾವು ಪ್ರತೀ ಸಾರಿ ಪ್ರಾರ್ಥಿಸುವಾಗ, ದೇವರ ಬಳಿಗೆ ಈ ಕೆಳಗಿನ ವಾಕ್ಯಗಳ ಆಧಾರದ ಮೇಲೆ ಬರಬೇಕು: - ಅವರಲ್ಲಿರುವ ಪಿತೃತ್ವ ಮತ್ತು ಪ್ರೀತಿಯ ಕಾಳಜಿಯನ್ನು ಗುರುತಿಸಿ, ಅವರ ಬಳಿಗೆ ಧೈರ್ಯವಾಗಿ ಬರಬೇಕು; - ಅವರು ಪವಿತ್ರ ದೇವರು ಎಂದು ತಿಳಕೊಂಡು, ಅವರ ಬಳಿಗೆ ಭಯಭಕ್ತಿಯಿಂದ ಬರಬೇಕು; - ಅವರು ಪರಲೋಕದ ಸಾರ್ವಭೌಮ ಅಧಿಪತಿಯೆಂದು ತಿಳಕೊಂಡು, ಅವರ ಬಳಿಗೆ ನಂಬಿಕೆಯಿಂದ ಬರಬೇಕು; ಮತ್ತು - ಅವರು ಒಂದು ದೊಡ್ಡ ಕುಟುಂಬದ ತಂದೆ ಎನ್ನುವದನ್ನು ಅರಿತು, ಆ ಕುಟುಂಬದ ಸದಸ್ಯನಾಗಿ ಅವರ ಬಳಿಗೆ ಬರಬೇಕು.

ಅಧ್ಯಾಯ 3
ದೇವರ ಹೆಸರಿನ ಮಹಿಮೆ

"ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ"

ನಮ್ಮ ಜೀವನಕ್ಕೂ ಪ್ರಾರ್ಥನೆಗೂ ಮುಖ್ಯವಾದ ಸಂಬಂಧ ಇರುವದರಿಂದ, ಯಾವಾಗಲೂ ಪ್ರಾರ್ಥಿಸುತ್ತಿರಲು ಯೇಸುವು ನಮಗೆ ತಿಳಿಸಿದರು (ಲೂಕ 18:1). ಇದರ ಅರ್ಥ ನಾವು ಎಲ್ಲಾ ಸಮಯದಲ್ಲೂ ಮೊಣಕಾಲು ಊರಿ ಇರಬೇಕೆಂದು ಅಲ್ಲ. ನಿಜ, ನಾವು ಮೊಣಕಾಲು ಊರುವ ಸೂಕ್ತ ಸಮಯವೂ ಬರುತ್ತದೆ. ಆದರೆ ನಾವು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯ ಆತ್ಮವನ್ನು ಹೊಂದಿರಬೇಕು. ಅದು ನಮ್ಮ ಇಡೀ ಜೀವಿತವನ್ನು ಬದಲಾಯಿಸಬೇಕು.

ಪ್ರಾರ್ಥನೆಯಲ್ಲಿ ಸರಿಯಾದ ಆದ್ಯತೆಗಳು

ನಮ್ಮ ಜೀವನದಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು ಮತ್ತು ನಮ್ಮ ಪ್ರಮುಖ ಹಂಬಲ ಏನಾಗಿರಬೇಕು ಎನ್ನುವದನ್ನು ಯೇಸುವು ತನ್ನ ಶಿಷ್ಯರಿಗೆ ಕಲಿಸಿದ ಪ್ರಾರ್ಥನೆಯು ತೋರಿಸುತ್ತದೆ. ಅದರಲ್ಲಿ ಆರು ಬೇಡಿಕೆಗಳಿವೆ. ಮೊದಲ ಮೂರು ದೇವರ ಕುರಿತಾಗಿವೆ: "ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ." ಮುಂದಿನ ಮೂರು ಬೇಡಿಕೆಗಳು ನಮ್ಮ ಕುರಿತಾಗಿವೆ: "ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು. ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು."

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಒಂದು ವಿಷಯವಿದೆ. ನಮ್ಮ ಪ್ರಾರ್ಥನೆ ಮುಖ್ಯವಾಗಿ ನಮ್ಮ ಸ್ವಂತದ ಸಮಸ್ಯೆಗಳ ಕುರಿತು ಆಗಿರಬಾರದು. ಅನೇಕ ಸಮಸ್ಯೆಗಳು ಇರಬಹುದು, ಒಂದು ವೇಳೆ ಆತ್ಮಿಕ ಸಮಸ್ಯೆಗಳು ಸಹ ಇರಬಹುದು, ಆದರೆ ನಾವು ಅವುಗಳ ಮೂಲಕ ಪ್ರಾರ್ಥನೆಯನ್ನು ಆರಂಭಿಸಬಾರದು. ಮೊದಲ ಸ್ಥಾನ ದೇವರ ಮಹಿಮೆಗೆ ಸಲ್ಲಬೇಕು.

ನಾವು ನಮ್ಮ ಜೀವನವನ್ನು ಪರೀಕ್ಷಿಸಿ, ನಾವು ದೇವರ ಮುಂದೆ ಇರಿಸುವ ಹಂಬಲದಲ್ಲಿ ನಮ್ಮ ಹೃದಯ ಏನನ್ನು ಒತ್ತಿ ಹೇಳುತ್ತದೆ ಎಂದು ಗಮನಿಸಿದರೆ, ನಾವು ಈ ಕ್ರಮಕ್ಕೆ ಸ್ವಲ್ಪವೂ ಪ್ರಾಶಸ್ತ್ಯ ನೀಡದಿರುವದು ಸ್ಪಷ್ಟವಾಗಬಹುದು. ಇದು ನಾವು ಯೇಸುವಿನ ಬೋಧನೆಯನ್ನು ಗಂಭೀರವಾಗಿ ಸ್ವೀಕರಿಸದೆ ಇರುವದನ್ನು ತೋರಿಸುತ್ತದೆ. ನಾವು ದೇವರ ವಾಕ್ಯವನ್ನು ಎಚ್ಚರಿಕೆಯಿಂದ, ವಿವರವಾಗಿ ಓದಿದ್ದರೆ, ಯೇಸುವು ನಮಗೆ ಕೇವಲ ಒಂದು ರೀತಿಯ ಪ್ರಾರ್ಥನೆಯನ್ನು ಕಲಿಸಿದರೆಂದು ಗ್ರಹಿಸುತ್ತಿದ್ದೆವು - ದೇವರಿಗೆ ಮತ್ತು ಅವರ ಮಹಿಮೆಗೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡುವಂಥದ್ದು.

ದೇವರಿಗೆ ಪ್ರಾಧಾನ್ಯತೆ

ದೇವರು ಮಾನವನನ್ನು ಈ ರೀತಿಯಾಗಿ ಸೃಷ್ಟಿಸಿದರು. ದೇವರು ಸ್ವತಃ ಶಿರಸ್ಸಾಗಿಯೂ, ಮಾನವನು ಆ ತಲೆಗೆ ಅಧೀನವಾದ ದೇಹದಂತೆಯೂ ಇರಬೇಕಿತ್ತು. ನಮ್ಮ ದೇಹದಲ್ಲಿ ತಲೆಯ ಸ್ಥಾನ ಮೇಲೆ ಇದೆ - ದೈಹಿಕವಾಗಿ ಅಷ್ಟೇ ಅಲ್ಲ, ದೇಹದ ನಿಯಂತ್ರಣವೂ ಅದಕ್ಕೆ ಸೇರಿದೆ. ನಮ್ಮ ತಲೆಯು ದೈಹಿಕ ಕಾರ್ಯಗಳನ್ನು ನಿರ್ವಹಿಸುತ್ತಾ ಇದ್ದಲ್ಲಿ, ನಾವು ಸರಿಯಾಗಿ ಇರುತ್ತೇವೆ. ಯಾವಾಗ ಒಬ್ಬ ವ್ಯಕ್ತಿಯ ತಲೆ (ಮೆದುಳು) ಸರಿಯಾಗಿ ಕಾರ್ಯ ನಿರ್ವಹಿಸುವದಿಲ್ಲವೋ, ಅದಕ್ಕೆ ಅವನ ದೇಹದ ಮೇಲೆ ನಿಯಂತ್ರಣ ಇರುವದಿಲ್ಲ ಮತ್ತು ನಾವು ಆ ವ್ಯಕ್ತಿಯನ್ನು ತಲೆ ಕೆಟ್ಟಿರುವವನು ಅಥವಾ ಹುಚ್ಚನೆಂದು ಕರೆಯಬಹುದು. ಮಾನವನು ಹಾಗೆ ಇರುವದು ಖಂಡಿತವಾಗಿ ದೇವರ ಉದ್ದೇಶವಾಗಿರಲಿಲ್ಲ.

ದೇವರು ಆಶಿಸುವದು ನಾವು ಆತ್ಮಿಕವಾಗಿ ’ನೆಟ್ಟಗೆ ನಡೆಯಬೇಕು’ ಎಂದು (ಯಾಜ 26:13). ಅನೇಕ ವಿಶ್ವಾಸಿಗಳ ಸಮಸ್ಯೆ ಏನೆಂದರೆ, ಅವರ ತಲೆ ಇರಬೇಕಾದ ಜಾಗದಲ್ಲಿಲ್ಲ. ಅವರು ತಮ್ಮ ಬಾಳಿನಲ್ಲಿ ದೇವರಿಗೆ ಅವರ ನ್ಯಾಯಬದ್ಧ ಸ್ಥಳವನ್ನು ನೀಡುತ್ತಿಲ್ಲ. ನಮ್ಮ ಜೀವನದ ಹಾರೈಕೆ, ಇಚ್ಛೆ ಮತ್ತು ಧ್ಯೇಯಗಳಲ್ಲಿ ದೇವರಿಗೆ ಮೊದಲ ಸ್ಥಾನ ಮೀಸಲಾಗಿದ್ದರೆ, ಮತ್ತು ನಮ್ಮ ಬಾಳಿನ ಉಜ್ವಲ ಧ್ಯೇಯ ದೇವರು ಹಾಗೂ ಅವರ ಮಹಿಮೆಯಾಗಿದ್ದರೆ, ನಾವು ಪ್ರತೀ ಸಲ ಪ್ರಾರ್ಥನೆಯಲ್ಲಿ ದೇವರ ಬಳಿ ಬಂದಾಗ ಅದು ಸ್ಪಷ್ಟವಾಗಿ ಪ್ರಕಟವಾಗುತ್ತಿತ್ತು.

ನಮ್ಮ ಜೀವನದಲ್ಲಿ ಅನೇಕ ಸಂಗತಿಗಳು ಸರಿಯಾಗಿ ನಡೆಯದೆ, ಅಲ್ಲಿ ಗಲಿಬಿಲಿ ಹಾಗೂ ಸಂಪೂರ್ಣ ಅವ್ಯವಸ್ಥೆ ಇರುವದಕ್ಕೆ ಕಾರಣ, ದೇವರಿಗೆ ಮೊದಲ ಸ್ಥಾನ ಸಲ್ಲುತ್ತಿಲ್ಲ. ಅದಲ್ಲದೆ, ನಾವು ಪ್ರಾರ್ಥನೆ ಮಾಡುವಾಗಲೂ ವರದಾತನಿಗಿಂತ ಹೆಚ್ಚಾಗಿ ವರಗಳನ್ನು ಅಪೇಕ್ಷಿಸುತ್ತೇವೆ. ಒಬ್ಬ ಆತ್ಮಿಕ ಮನುಷ್ಯನ ಗುರುತು ಏನೆಂದರೆ, ಅವನು ವರಗಳಿಗಿಂತ ಹೆಚ್ಚಾಗಿ ವರದಾತನನ್ನು ಬಯಸುತ್ತಾನೆ; ಮತ್ತು ಅವನು ಯಾವ ವರಗಳನ್ನೂ ಹೊಂದದೇ ಇದ್ದಾಗಲೂ ತನ್ನ ವರದಾತನನ್ನು ಪ್ರೀತಿಸುತ್ತಾನೆ.

ನಮ್ಮಲ್ಲಿ ಆತ್ಮಿಕ ಮನೋಭಾವ ಇದೆಯೋ ಇಲ್ಲವೋ ಎಂದು ನಿರ್ಧರಿಸುವ ಪರೀಕ್ಷೆಗಳಲ್ಲಿ ಒಂದು ಇದು: ದೇವರು ನಮ್ಮ ಪ್ರಾರ್ಥನೆಗಳಿಗೆ ನಾವು ನಿರೀಕ್ಷಿಸಿದ ಉತ್ತರ ನೀಡದಿದ್ದಾಗಲೂ ನಾವು ಸಂತುಷ್ಟರೂ, ಸಂತೃಪ್ತರೂ ಆಗಿರುತ್ತೇವೋ?

ಎಷ್ಟೋ ಮಂದಿ ವಿಶ್ವಾಸಿಗಳು ದೇವರು ತಮ್ಮ ಪ್ರಾರ್ಥನೆಗೆ ಉತ್ತರ ನೀಡದಿದ್ದಾಗ ಗೊಣಗುಟ್ಟುವದು ಮತ್ತು ಆಕ್ಷೇಪಿಸುವದು ಏಕೆ? ಏಕೆಂದರೆ ಅವರಿಗೆ ಬೇಕಾದದ್ದು ದೇವರ ವರಗಳು ಮಾತ್ರ. ಅವರಲ್ಲಿ ವರಗಳನ್ನು ನೀಡುವವರ ಬಗ್ಗೆ ಯಾವ ಉತ್ಸುಕತೆಯೂ ಇಲ್ಲ. ಅವರ ಸ್ವಭಾವ ಸತ್ಯವೇದದ ಸಾಮ್ಯದಲ್ಲಿ ದುಂದುವೆಚ್ಚ ಮಾಡಿದ ಮಗನ ಹಾಗಿನದ್ದು - ಅವನು ಬಯಸಿದ್ದ ಸಂಪತ್ತು ತಂದೆಯಿಂದ ಬಂದಾಗ, ಎಲ್ಲವನ್ನು ತಾನೊಬ್ಬನೇ ಭೋಗಿಸಲಿಕ್ಕಾಗಿ ಅವನು ಮನೆ ಬಿಟ್ಟು ಹೊರಟನು. ಅವನು ತನ್ನ ತಂದೆಯ ಸ್ವತ್ತನ್ನು ಮಾತ್ರ ಬಯಸಿದನು. ಎಲ್ಲ ಸಿರಿ ಸಂಪತ್ತು ಸಂಪೂರ್ಣವಾಗಿ ಮುಗಿದಾಗ, ಇನ್ನೂ ಸಿಗುವದೇನೋ ಎಂಬ ಅಪೇಕ್ಷೆಯಿಂದ ಅವನು ತನ್ನ ತಂದೆಯ ಬಳಿಗೆ ಹಿಂದಿರುಗಿದನು (ಲೂಕ 15:11-24).

ಈ ಪ್ರಾರ್ಥನೆಯ ಶೇಕಡ 50ರಷ್ಟು ಭಾಗ ದೇವರು ಮತ್ತು ಅವರ ಮಹಿಮೆಗೆ ಸಂಬಂಧಿಸಿರುವದನ್ನು ಗಮನಿಸಿರಿ. "ಕರ್ತನೇ, ಮೊದಲನೆಯದಾಗಿ ನಿನ್ನ ನಾಮಕ್ಕೆ ಮಹಿಮೆ ಉಂಟಾಗಬೇಕೆಂದು ನಾನು ಬಯಸುತ್ತೇನೆ," ಎಂದು ರೂಢಿಯಾಗಿ ನುಡಿದು, ಆ ಮೇಲೆ ಮುಂದಿನ ಒಂದು ತಾಸು ನಮ್ಮ ಉದ್ದವಾದ ಖರೀದಿ ಪಟ್ಟಿಯನ್ನು ಅವರ ಮುಂದೆ ಇರಿಸುವದು ಅಲ್ಲ. ನಾವು ಇಲ್ಲಿ ವಿವರಿಸುತ್ತಿರುವದು ಪ್ರಾರ್ಥನೆಯ ಒಂದು ಕ್ರಮವನ್ನಲ್ಲ, ಬದಲಾಗಿ ದೇವರು ಮತ್ತು ಅವರ ಮಹಿಮೆಗೆ ಪ್ರಥಮ ಆದ್ಯತೆ ನೀಡುವ ಒಂದು ಹೊಸ ಚಿಂತನೆ ಮತ್ತು ಒಂದು ನೂತನ ಮನೋಭಾವವನ್ನು ನಮ್ಮಲ್ಲಿ ಬೆಳೆಸಿಕೊಳ್ಳುವದನ್ನು ಕಲಿಯುತ್ತಿದ್ದೇವೆ.

ಎಲ್ಲಾ ಪಾಪದ ಮೂಲ - ಸ್ವಾರ್ಥತೆ

ದೇವರು ಈ ವಿಶ್ವದ ಸಕಲವನ್ನೂ ತನ್ನಲ್ಲಿ ಕೇಂದ್ರಿತವಾಗಿ ಇರುವಂತೆ ಸೃಷ್ಟಿಸಿದರು.

ಸೂರ್ಯ, ಚಂದ್ರ, ಗ್ರಹಗಳು ಮತ್ತು ನಕ್ಷತ್ರಗಳನ್ನು ಗಮನಿಸಿರಿ. ಅವಕ್ಕೆ ಸ್ವಚಿತ್ತವೆಂಬುದು ಇಲ್ಲ. ಅವು ತಮ್ಮ ಸೃಷ್ಟಿಕರ್ತನಿಗೆ ಸಂಪೂರ್ಣವಾಗಿ ವಿಧೇಯವಾಗಿವೆ. ಭೂಮಿಯು ಸೂರ್ಯನ ಸುತ್ತಲು ಯಾವುದೇ ಶಂಕೆಯಿಲ್ಲದೆ ಸುತ್ತುತ್ತದೆ. ಮತ್ತು ನಕ್ಷತ್ರಗಳು ತಮಗೆ ನೇಮಕವಾದ ಪಥದಲ್ಲಿ ಸಾವಿರಾರು ವರ್ಷಗಳಿಂದ ಸುತ್ತುತ್ತಲೇ ಇವೆ. ದೇವರು ಅವುಗಳಿಗಾಗಿ ನೇಮಿಸಿದ ಪಥದಲ್ಲಿ ಅವು ಸ್ಥಿರವಾಗಿ ಉಳಿದಿವೆ. ಆದರೆ ದೇವರು ಈ ರೀತಿಯಾದ ನಿರ್ಜೀವ ವಸ್ತುಗಳನ್ನು ನೋಡಿ ಸಂತೋಷಿಸುವದಿಲ್ಲ. ಅವರು ಅಪೇಕ್ಷಿಸುವದು ಮಕ್ಕಳನ್ನು.

ದೇವರು ಆದಿಯಲ್ಲಿ ಸ್ವಚಿತ್ತವನ್ನು ಹೊಂದಿದ್ದ ದೇವದೂತರನ್ನು ಸೃಷ್ಟಿಸಿದರು. ದೇವದೂತರ ನಾಯಕನಾಗಿದ್ದ ಲೂಸಿಫರನಿಗೆ ದೇವರಲ್ಲಿ ಕೇಂದ್ರಿತವಾಗಿ ಇರಲು ಇಷ್ಟವಿರಲಿಲ್ಲ, ಹಾಗಾಗಿ ಅವನು ದೇವರಿಗೆ ತಿರುಗಿಬಿದ್ದನು. ಒಬ್ಬ ಸೃಷ್ಟಿಸಲ್ಪಟ್ಟ ಜೀವಿಯು ತನ್ನಲ್ಲೇ ಕೇಂದ್ರಿತವಾದ ಜೀವನವನ್ನು ಬಯಸಿದಾಗ ಪಾಪ ಹುಟ್ಟಿತು (ಯೆಶಾ 14:12-15).

ನಾವು ಇದರ ಅರ್ಥವನ್ನು ತಿಳಕೊಳ್ಳುವದು ಬಹಳ ಅವಶ್ಯ. ನಾವು ಪಾಪ ಏನೆಂದು ಅರಿಯಬೇಕಾದರೆ, ಅದು ಹೇಗೆ ಆರಂಭವಾಯಿತೆಂದು ನೋಡಬೇಕು. ಆಗ ನಮಗೆ ಪಾಪವು ವ್ಯಭಿಚಾರ, ಕೊಲೆ, ಕೋಪ ಅಥವಾ ಹೊಟ್ಟೆಕಿಚ್ಚು, ಇತ್ಯಾದಿ, ಇವಷ್ಟೇ ಅಲ್ಲವೆಂದು ತಿಳಿಯುತ್ತದೆ. ಪಾಪದ ಮೂಲ ಸ್ವಾರ್ಥತೆಯಾಗಿದೆ.

ಸ್ವಾರ್ಥತೆಯೇ ಒಬ್ಬ ದೇವದೂತನನ್ನು ಕ್ಷಣಮಾತ್ರದಲ್ಲಿ ಒಬ್ಬ ಸೈತಾನನನ್ನಾಗಿ ಮಾಡಿತು; ಇಂದೂ ಸಹ ಸ್ವಾರ್ಥತೆ ಜನರನ್ನು ದುರಾತ್ಮರನ್ನಾಗಿ ಬದಲಾಯಿಸುತ್ತದೆ.

ಸ್ವಾರ್ಥತೆಯೇ ಆದಾಮನನ್ನು ಪಾಪಕ್ಕೆ ಸಿಲುಕಿಸಿ, ಒಬ್ಬ ಬಿದ್ದುಹೋದ ಮನುಷ್ಯನನ್ನಾಗಿ ಪರಿವರ್ತಿಸಿತು. ಏದೆನ್ ತೋಟದಲ್ಲಿದ್ದ ಎರಡು ಮರಗಳು - ಜೀವವೃಕ್ಷ ಮತ್ತು ಒಳ್ಳೇದರ ಹಾಗೂ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರ - ಇವು ಆದಾಮನು ಅನುಸರಿಸಬಹುದಾಗಿದ್ದ ಎರಡು ಜೀವನ ಪದ್ಧತಿಗಳ ಸೂಚಕಗಳಾಗಿದ್ದವು - ಒಂದು ದೇವರಲ್ಲಿ ಕೇಂದ್ರಿತ ಜೀವನ ಮತ್ತು ಇನ್ನೊಂದು ತನ್ನಲ್ಲೇ ಕೇಂದ್ರಿತ ಜೀವನ. ನಿಷೇಧಿತ ಮರದ ಫಲವನ್ನು ತಿನ್ನಲು ಹವ್ವಳನ್ನು ಪ್ರೇರೇಪಿಸಲಿಕ್ಕಾಗಿ ಸೈತಾನನು ಅವಳಿಗೆ ಹೀಗೆಂದನು, "ನಿಮ್ಮ ಕಣ್ಣುಗಳು ತೆರೆಯುವವು ಮತ್ತು ನೀವು ಸ್ವತಃ ದೇವರಂತೆ ಆಗುವಿರಿ. ಆ ಮೇಲೆ ನೀವು ದೇವರಿಂದ ಸ್ವತಂತ್ರರಾಗಿ ಜೀವಿಸಬಲ್ಲಿರಿ." ಆದಾಮ ಮತ್ತು ಹವ್ವರು ಆ ಜೀವನವನ್ನು ಆರಿಸಿಕೊಂಡರು - ತಮ್ಮಲ್ಲೇ ಕೇಂದ್ರಿತವಾದ ಮತ್ತು ದೇವರಿಂದ ಸ್ವತಂತ್ರವಾದ ಜೀವನ.

ದೇವರು ನಮ್ಮನ್ನು ಅವರಲ್ಲಿ ಕೇಂದ್ರಿತರಾಗಿರಲು ಹೇಳುವದು ಅವರ ಸ್ವಂತದ ಉಪಯೋಗಕ್ಕಾಗಿ ಅಲ್ಲ. ಅವರು ನಮ್ಮ ಹಿತಕ್ಕಾಗಿ ತನಗೆ ಪ್ರಥಮ ಸ್ಥಾನ ನೀಡಲು ಹೇಳುತ್ತಾರೆ. ನಾವು ದೇವರನ್ನು ಆರಾಧಿಸದಿದ್ದರೆ, ಕೊನೆಗೆ ಇನ್ಯಾವುದನ್ನೋ ಆರಾಧಿಸುವದು ನಿಶ್ಚಿತ - ಸ್ವತಃ ನಮ್ಮನ್ನು, ಅಥವಾ ಸೈತಾನನನ್ನು, ಇಲ್ಲವಾದರೆ ಲೋಕವನ್ನು. ಆದ್ದರಿಂದ ತಪ್ಪಾದ ಆರಾಧನೆಯ ಮೂಲಕ ನಾವು ನಮ್ಮನ್ನೇ ನಾಶಪಡಿಸಿಕೊಳ್ಳುವದನ್ನು ತಪ್ಪಿಸಲಿಕ್ಕಾಗಿ, ನಮ್ಮ ರಕ್ಷಣೆ ಮತ್ತು ನಮ್ಮ ಸ್ವ-ಹಿತಕ್ಕಾಗಿ ದೇವರು ಹೀಗೆನ್ನುತ್ತಾರೆ, "ನನ್ನನ್ನು ಆರಾಧಿಸಲು ಕಲಿಯಿರಿ, ನನ್ನಲ್ಲಿ ಕೇಂದ್ರಿತವಾಗಿ ಇರುವದನ್ನು ಕಲಿಯಿರಿ."

ದೇವರು ಭೂಮಿಯನ್ನು ಸೂರ್ಯನ ಸುತ್ತಲು ತಿರುಗುವಂತೆ ಸೃಷ್ಟಿಸಿದರು. ಒಂದು ದಿನ ಭೂಮಿಯು ತಾನು ಸೂರ್ಯನನ್ನು ಸಾಕಷ್ಟು ಬಾರಿ ಸುತ್ತಿರುವದಾಗಿ ನಿರ್ಧರಿಸಿ, ಈಗ ಸೂರ್ಯನು ತನ್ನನ್ನು ಸುತ್ತಲಿ ಎಂದು ಬಯಸಿದರೆ ಏನಾಗುತ್ತದೆ? ಆಗ ಭೂಮಿಯು ದೇವರ ಒಂದು ನಿಯಮವನ್ನು ಪಾಲಿಸದೇ ಇದ್ದಂತಾಗಿ, ಮುಂದೆ ಋತುಗಳು ಬದಲಾಗದೆ, ಇನ್ನು ಸ್ವಲ್ಪ ಸಮಯದಲ್ಲಿ ಭೂಮಿಯ ಎಲ್ಲಾ ಜೀವರಾಶಿಗಳು ನಾಶವಾಗುತ್ತಿದ್ದವು. ದೇವರ ಆಜ್ಞೆಗಳ ಉಲ್ಲಂಘನೆ ಯಾವಾಗಲೂ ಮರಣಕ್ಕೆ ನಡೆಸುತ್ತದೆ.

ಲೋಕಕ್ಕೆ ಆತ್ಮಿಕ ಮರಣವೂ ಸಹ ಇದೇ ರೀತಿಯಾಗಿ ಬಂದಿತು. ದೇವರು ಮನುಷ್ಯನನ್ನು ತನ್ನಲ್ಲಿ ಕೇಂದ್ರಿತವಾಗಿ ಇರುವಂತೆ ಸೃಷ್ಟಿಸಿದರು. ಮನುಷ್ಯನು ದೇವರನ್ನು ತನ್ನ ಕೇಂದ್ರವಾಗಿ ಅಂಗೀಕರಿಸಲಿಲ್ಲ; ಮತ್ತು ಅವನು ಆ ದಿನ ಸತ್ತುಹೋದನು. ನಾವು ಇದನ್ನು ಯಾವಾಗ ತಿಳಕೊಳ್ಳುವೆವೋ ಆಗ, ರಕ್ಷಣೆಯೆಂದರೆ ಸ್ವಾರ್ಥತೆಯಿಂದ ಬಿಡುಗಡೆ ಹೊಂದುವದು ಎಂಬುದಾಗಿ ಅರಿಯುತ್ತೇವೆ.

ಒಬ್ಬ ಮನುಷ್ಯನು ರಕ್ಷಣೆ ಹೊಂದಬೇಕಾದರೆ, ಅವನು ಮೊದಲು ಮಾನಸಾಂತರ ಹೊಂದಬೇಕೆಂದು ಹೊಸ ಒಡಂಬಡಿಕೆಯು ಬೋಧಿಸುತ್ತದೆ. ಮಾನಸಾಂತರದ ಅರ್ಥ ನಮ್ಮ ಹಳೆಯ ಜೀವನ ಪದ್ಧತಿಯಿಂದ ತಿರುಗಿಕೊಳ್ಳುವದು. ಇದು ಕೆಲವು ಕೆಟ್ಟ ಅಭ್ಯಾಸಗಳನ್ನು, ಅಂದರೆ ಮಧ್ಯಪಾನ, ಜೂಜಾಟ, ಇತ್ಯಾದಿಗಳನ್ನು ತ್ಯಜಿಸುವದು ಮಾತ್ರವಲ್ಲ, ಅದಕ್ಕಿಂತ ಬಹಳ ಹೆಚ್ಚಿನದ್ದಾಗಿದೆ. ನಮ್ಮ ಹಳೆಯ ಜೀವಿತವು ಒಂದು ಸ್ವ-ಕೇಂದ್ರಿತ ಜೀವನ ಶೈಲಿಯಾಗಿದೆ; ಮತ್ತು ಮಾನಸಾಂತರವೆಂದರೆ, "ಕರ್ತನೇ, ನಾನು ನನ್ನನ್ನೇ ಕೇಂದ್ರವಾಗಿ ಇರಿಸಿಕೊಂಡು ಜೀವಿಸಿ ದಣಿದಿರುವೆ ಮತ್ತು ಈಗ ನಿಮ್ಮ ಕಡೆಗೆ ತಿರುಗಿಕೊಂಡು ನಿಮ್ಮಲ್ಲಿ ಕೇಂದ್ರಿತವಾಗಿ ಇರಲು ಬಯಸುತ್ತೇನೆ," ಎಂದು ಹೇಳುವದೇ ಆಗಿದೆ.

ಸ್ವಾರ್ಥತೆಯಿಂದ ರಕ್ಷಣೆ

ಯೇಸುವು ನಮ್ಮನ್ನು ಪಾಪದಿಂದ ರಕ್ಷಿಸಲಿಕ್ಕಾಗಿ ಬಂದರು. ಬೇರೆ ಮಾತುಗಳಲ್ಲಿ ಹೇಳುವದಾದರೆ, ಅವರು ಸ್ವಾರ್ಥತೆಯಿಂದ ನಮ್ಮನ್ನು ಬಿಡಿಸಲಿಕ್ಕಾಗಿ ಬಂದರು.

ಹೊಸ ಒಡಂಬಡಿಕೆಯಲ್ಲಿ "ಪಾಪ" ಎಂಬ ಪದದ ಜಾಗದಲ್ಲಿ "ಸ್ವಾರ್ಥ" ಎಂಬ ಪದವನ್ನು ಹಾಕಿದಾಗ, ಅನೇಕ ವಾಕ್ಯಗಳು ನಿಮಗೆ ಹೊಸ ಅರ್ಥವನ್ನು ನೀಡುತ್ತವೆ. "ಪಾಪವು ನಿಮ್ಮ ಮೇಲೆ ಅಧಿಕಾರ ನಡಿಸದು" ಎನ್ನುವದು, "ಸ್ವಾರ್ಥತೆಯು ನಿಮ್ಮ ಮೇಲೆ ಅಧಿಕಾರ ನಡಿಸದು" ಎಂದು ಬದಲಾಗುತ್ತದೆ (ರೋಮ 6:14). ಅದು ತನ್ನ ಮಕ್ಕಳ ವಿಷಯದಲ್ಲಿ ದೇವರ ಅಪೇಕ್ಷೆಯಾಗಿದೆ.

ಅದಾಗ್ಯೂ ನಾವು ನಮ್ಮ ಜೀವನವನ್ನು ಪರೀಕ್ಷಿಸಿದರೆ, ನಮ್ಮ ಅತೀ ಪವಿತ್ರ ಹಂಬಲಗಳಲ್ಲೂ ಸ್ವಾರ್ಥತೆ ಕಂಡುಬರುತ್ತದೆ. ನಾವು ದೇವರನ್ನು ಪವಿತ್ರಾತ್ಮನ ತುಂಬಿಸುವಿಕೆಗಾಗಿ ಕೇಳುವದು ಈ ಶಕ್ತಿಯ ಮೂಲಕ ನಾವು ಒಬ್ಬ ಮಹಾ ಬೋಧಕ, ಅಥವಾ ಶ್ರೇಷ್ಠ ರೋಗ-ಪರಿಹಾರಕ, ಇತ್ಯಾದಿ, ಆಗಲಿಕ್ಕಾಗಿ ಎಂದಾದರೆ, ಅದು ಒಂದು ಸ್ವಾರ್ಥದ ಹಂಬಲವೇ ಆಗಿದೆ. ಅದು ಈ ಲೋಕದಲ್ಲಿ ಒಬ್ಬ ಪ್ರಸಿದ್ಧ ವ್ಯಕ್ತಿಯಾಗುವ ಆಸೆಯಷ್ಟೇ ಸ್ವಾರ್ಥವುಳ್ಳದ್ದಾಗಿದೆ. ಪಾಪವು ಹೇಗೆ ಅತೀ ಪರಿಶುದ್ಧ ಸ್ಥಳವನ್ನೂ ಸಹ ಪ್ರವೇಶಿಸುವದು ಎಂದು ನೋಡಿದಿರಾ?

ಆದುದರಿಂದಲೇ ಪ್ರಾರ್ಥನೆಯಲ್ಲಿ ನಮ್ಮ ಮೊದಲ ಬೇಡಿಕೆ, ನಮ್ಮಲ್ಲಿ ಪವಿತ್ರಾತ್ಮನ ತುಂಬುವಿಕೆಯೂ ಸಹ ಅಲ್ಲ, ಆದರೆ ದೇವರ ನಾಮಕ್ಕೆ ಗೌರವ ಸಲ್ಲುವಂತಾಗಲಿ ಎಂದಿರಲಿ, ಎಂದು ಯೇಸುವು ನಮಗೆ ಕಲಿಸಿದರು.

ಈ ಯಥಾರ್ಥವಾದ ಪ್ರಾರ್ಥನೆಯನ್ನು ಒಬ್ಬ ನಿಜವಾದ ಆತ್ಮಿಕ ವ್ಯಕ್ತಿಯು ಮಾತ್ರ ಮಾಡಬಹುದು. ಹೌದು, ಯಾರು ಬೇಕಾದರೂ ಈ ಪ್ರಾರ್ಥನೆಯನ್ನು ಪದೇ ಪದೇ ಹೇಳಬಹುದು. ಒಂದು ಗಿಳಿಯೂ ಸಹ ಅದನ್ನು ಮಾಡಬಲ್ಲದು. ಆದರೆ ನಮ್ಮ ಜೀವನದಲ್ಲಿ ದೇವರಿಗೆ ಪ್ರಥಮ ಸ್ಥಾನ ನೀಡಿ, ಅವರಲ್ಲಿ ಕೇಂದ್ರಿತವಾಗಿದ್ದು, ಅವರ ಅಶೀರ್ವಾದಕ್ಕಿಂತ ಹೆಚ್ಚಾಗಿ ನಮಗೆ ಅವರೇ ಬೇಕು ಎನ್ನುವ ಸಂಪೂರ್ಣ ಸಮರ್ಪಣೆ ನಮ್ಮಲ್ಲಿ ಇದ್ದಾಗ, ನಮ್ಮ ಅಂತರಾಳದ ಪ್ರಾರ್ಥನೆ ಸಂಪೂರ್ಣ ಯಥಾರ್ಥವಾಗುತ್ತದೆ. ಅವರು ತಮ್ಮ ವರಗಳನ್ನು ನಮಗೆ ಕೊಟ್ಟರೆ ಒಳ್ಳೆಯದು, ಸಂತೋಷ; ಮತ್ತು ಯಾವ ವರಗಳನ್ನು ಕೂಡದೇ ಹೋದರೂ ಚಿಂತೆಯಿಲ್ಲ, ಏಕೆಂದರೆ ನಮಗೆ ಬೇಕಾಗಿರುವದು ಸ್ವತಃ ದೇವರು, ಅವರ ವರಗಳಲ್ಲ.

ಇಸ್ರಾಯೇಲ್ಯರಿಗೆ ದೇವರು ತನ್ನನ್ನು ಪೂರ್ಣ ಹೃದಯದಿಂದ ಪ್ರೀತಿಸಲು ಮತ್ತು ನೆರೆಯವರನ್ನು ತಮ್ಮಂತೆಯೇ ಪ್ರೀತಿಸಲು ಕಲಿಸಿದ ಉದ್ದೇಶವೇನು? ಒಂದೇ ಉದ್ದೇಶ - ಅವರನ್ನು ಅವರ ಸ್ವಾರ್ಥತೆಯಿಂದ ಬಿಡಿಸುವದು.

’ಆನಂದ’ ಎಂಬ ಪದಕ್ಕೆ (ಇಂಗ್ಲಿಷ್ನವಲ್ಲಿ Joy) ಒಂದು ಗಾದೆ ಇದೆ. ಅದೇನೆಂದರೆ, "ಮೊದಲು ಯೇಸುವು (J- Jesus), ನಂತರ ಬೇರೆಯವರು (O -Others), ಕೊನೆಗೆ ನೀನು (Y -You). ಆಗ ನಿನಗೆ ಆನಂದ ಸಿಗುವದು!"

ದೇವರಲ್ಲಿ ಸದಾ ಆನಂದ ತುಂಬಿರುತ್ತದೆ. ಪರಲೋಕದಲ್ಲಿ ದುಃಖ ಅಥವಾ ಕಳವಳವಿಲ್ಲ, ಏಕೆಂದರೆ ಅಲ್ಲಿ ಪ್ರತಿಯೊಂದೂ ದೇವರಲ್ಲಿ ಕೇಂದ್ರಿತವಾಗಿದೆ. ದೇವದೂತರಲ್ಲಿ ಯಾವಾಗಲೂ ಉಲ್ಲಾಸ ಇರುತ್ತದೆ, ಏಕೆಂದರೆ ಅವರು ದೇವರಲ್ಲಿ ಕೇಂದ್ರಿತರಾಗಿ ಇರುತ್ತಾರೆ.

ನಮ್ಮಲ್ಲಿ ಆನಂದ, ಸಮಾಧಾನ ಮತ್ತು ಇನ್ನೂ ಅನೇಕ ಆತ್ಮಿಕ ಗುಣಗಳ ಕೊರತೆ ಇರಲು ಕಾರಣ, ನಾವು ನಮ್ಮ ಸರಿಯಾದ ಕೇಂದ್ರವನ್ನು ಕಂಡುಕೊಂಡಿಲ್ಲ. ನಮ್ಮ ಸ್ವಂತಕ್ಕಾಗಿ ದೇವರನ್ನು ಉಪಯೋಗಿಸುವ ಪರಿಪಾಠ ನಮ್ಮಲ್ಲಿದೆ. ಹಾಗಾಗಿ ಪ್ರಾರ್ಥನೆಯೂ ಸಹ ಈ ರೀತಿ ಇರುತ್ತದೆ: "ಕರ್ತನೇ ದಯಮಾಡಿ ನನ್ನ ವ್ಯವಹಾರವನ್ನು ವೃದ್ಧಿಸಿ... ನನ್ನ ಕೆಲಸದಲ್ಲಿ ಬಡತಿಯನ್ನು ಪಡೆಯಲು ಸಹಾಯಿಸಿ. ನಾನು ಒಳ್ಳೆಯ ಮನೆಯನ್ನು ಪಡೆಯಲು ದಯಮಾಡಿ ಸಹಾಯಿಸಿ...", ಇತ್ಯಾದಿ. ದೇವರು ಇಹಲೋಕದ ಜೀವನವನ್ನು ಹೆಚ್ಚು ಅನುಕೂಲ ಪಡಿಸುವ ನಮ್ಮ ನೌಕರನಾಗಲಿ, ಎಂದು ನಾವು ಬಯಸುತ್ತೇವೆ - ಅಲ್ಲಾದ್ದೀನ ಹಾಗೂ ಆತನ ದೀಪ ಎಂಬ ಕಥೆಯಲ್ಲಿ ಭೂತ ಇದ್ದಂತೆ.

ಅನೇಕ ವಿಶ್ವಾಸಿಗಳು ಇಂತಹ ದೇವರಿಗೆ ಪ್ರಾರ್ಥಿಸುತ್ತಾರೆ - ತಮಗೆ ಲೌಕಿಕ ಉನ್ನತಿ ಮತ್ತು ಅನುಕೂಲಗಳನ್ನು ಒದಗಿಸುವ ದೇವರಿಗೆ. ಆದರೆ, ನೀನು 100 ಮೀಟರ್ ಒಲಿಂಪಿಕ್ ಸ್ಪರ್ಧೆಯಲ್ಲಿ ಗೆಲ್ಲುವಂತೆ, ಅಥವಾ ಯಾವುದೋ ವ್ಯವಹಾರದಲ್ಲಿ ನಿನ್ನ ಪ್ರತಿಸ್ಪರ್ಧಿಯನ್ನು ಮೀರಿಸುವಂತೆ ಸಹಾಯ ಮಾಡುವ ದೇವರು ಹೊಸ ಒಡಂಬಡಿಕೆಯ ದೇವರಲ್ಲ.

ನಮ್ಮ ಪ್ರಾರ್ಥನೆ ನಾವು ಎಷ್ಟು ಸ್ವಾರ್ಥಿಗಳೆಂದು ತೋರಿಸುತ್ತದೆ

.

"ಕರ್ತನಲ್ಲಿ ಸಂತೋಷಿಸು ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು (ಕೀರ್ತನೆ 37:4)," ಎಂದು ಸತ್ಯವೇದ ಹೇಳುತ್ತದೆ. ನಾವು ಕರ್ತನಲ್ಲಿ ಸಂತೋಷಿಸುವದು ಎಂದರೆ, ದೇವರನ್ನು ನಮ್ಮ ಜೀವನದ ಕೇಂದ್ರವಾಗಿ ಇರಿಸುವದು. ಹಾಗಾದರೆ, ದೇವರಲ್ಲಿ ಕೇಂದ್ರಿತವಾಗಿ ಇರುವ ವ್ಯಕ್ತಿಗೆ ಮಾತ್ರ ಹೃದಯದ ಎಲ್ಲಾ ಆಸೆಗಳನ್ನು ಹೊಂದಲು ಸಾಧ್ಯವಾಗುವದು.

"ಆತನು ’ದೇವಭಯದಲ್ಲಿ ನಡೆಯುವವರಿಗೆ (ಸ್ವ.ಅನು.)’ (ಅಂದರೆ, ಶಿರಸ್ಸಿಗೆ ಎಲ್ಲಕ್ಕಿಂತ ಉನ್ನತ ಸ್ಥಾನವನ್ನು ನೀಡಿ ನಡೆಯುವವರಿಗೆ - ತಮ್ಮ ಜೀವನವನ್ನು ದೇವರ ನಿಯಂತ್ರಣಕ್ಕೆ ಒಪ್ಪಿಸುವವರಿಗೆ) ಯಾವ ಶುಭವನ್ನು ದಯಪಾಲಿಸದೇ ಇದ್ದಾನು?" (ಕೀರ್ತನೆ 84:11).

"ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ" - ಇಲ್ಲಿ ನೀತಿವಂತನೆಂದರೆ, ದೇವರಲ್ಲಿ ಕೇಂದ್ರಿತವಾಗಿ ಇರುವವನು (ಯಾಕೋಬ 5:16). ಇನ್ನೊಂದೆಡೆ, ಸ್ವ-ಕೇಂದ್ರಿತ ಮನುಷ್ಯನ ಅತ್ಯಾಸಕ್ತಿಯ ಪ್ರಾರ್ಥನೆ, ಅವನು ಇಡೀ ರಾತ್ರಿ ಪ್ರಾರ್ಥಿಸಿದರೂ, ಏನನ್ನೂ ಸಾಧಿಸುವದಿಲ್ಲ. ನಮ್ಮ ಪ್ರಾರ್ಥನೆಗೆ ಬೆಲೆ ನೀಡುವದು ನಮ್ಮ ಜೀವನ ವಿಧಾನ.

ಆದಕಾರಣ ನಮ್ಮ ಜೀವನದ ಮೊದಲ ಮೂರು ಹಂಬಲಗಳು ಹೀಗಿರಬೇಕು: "ತಂದೆಯೇ ನಿಮ್ಮ ನಾಮವು ಪರಿಶುದ್ಧವೆಂದು ಎಣಿಸಲ್ಪಡಬೇಕು. ನಿಮ್ಮ ರಾಜ್ಯ ಬರಬೇಕು. ನಿಮ್ಮ ಚಿತ್ತವು ನೆರವೇರಬೇಕು."

ನಮ್ಮಲ್ಲಿ ಇನ್ನೂ ಅನೇಕ ಬೇಡಿಕೆಗಳು ಇರಬಹುದು: "ನನ್ನ ಬೆನ್ನು ನೋವನ್ನು ವಾಸಿಮಾಡಿ, ನಾನು ಇರುವುದಕ್ಕೆ ಒಂದು ಒಳ್ಳೆಯ ಮನೆಯನ್ನು ಹುಡುಕಲು ಸಹಾಯ ಮಾಡಿ, ನನ್ನ ಮಗನಿಗೆ ಒಂದು ಕೆಲಸ ಕೊಡಿಸಿ," ಇತ್ಯಾದಿ.. ಇವೆಲ್ಲವೂ ಒಳ್ಳೆಯ ಬೇಡಿಕೆಗಳು. ಆದರೆ ನೀನು ಒಬ್ಬ ಆತ್ಮಿಕ ಮನುಷ್ಯನಾಗಿದ್ದರೆ, ಆಗ ನೀನು ಹೀಗೆನ್ನುವೆ, "ತಂದೆಯೇ, ನೀವು ಈ ಬೇಡಿಕೆಗಳನ್ನು ಅನುಗ್ರಹಿಸದೇ ಹೋದರೂ, ನಾನು ಮೊದಲು ಆಶಿಸುವದು ನಿಮ್ಮ ನಾಮವು ಮಹಿಮೆ ಹೊಂದಲಿ ಎಂದು."

ದೇವರ ನಾಮಕ್ಕೆ ಮನ್ನಣೆ

"ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ" ಎಂಬ ಮೊದಲನೆಯ ಮನವಿಯ ಅರ್ಥವೇನು? "ಪರಿಶುದ್ಧ"ವೆಂಬ ಹೊಸ ಒಡಂಬಡಿಕೆಯ ಪದವು ನಮಗೆ ಬಂದಿರುವ ಮೂಲದಿಂದ ಇನ್ನೂ ಅನೇಕ ಪದಗಳು ಬಂದಿವೆ, ಉದಾ.: "ಶುದ್ಧೀಕರಣ", "ಪವಿತ್ರ", "ಸಜ್ಜನ", ಇತ್ಯಾದಿ. ಅದರ ಅರ್ಥ "ಬೇರ್ಪಡಿಸುವದು"- ಅಂದರೆ, "ಕೆಟ್ಟತನದಿಂದ ಹಾಗೂ ಅಶುದ್ಧತೆಯಿಂದ ಬೇರ್ಪಡಿಸುವದು" ಎಂದಾಗಿದೆ.

ಹಾಗಾಗಿ ನಮ್ಮ ಬೇಡಿಕೆ, "ತಂದೆಯೇ, ನಿಮ್ಮ ನಾಮಕ್ಕೆ ಭಯಭಕ್ತಿಯೂ, ಮಾನ್ಯತೆಯೂ, ಆದರವೂ ಮತ್ತು ಮಹಿಮೆಯೂ ಉಂಟಾಗಲಿ," ಎಂದಾಗಿದೆ. ಬೇರೆ ಮಾತುಗಳಲ್ಲಿ, ಈ ಲೋಕದಲ್ಲಿ ದೇವರ ಭಯಭಕ್ತಿ ಕಂಡುಬರಲಿ ಎನ್ನುವದು ನಮ್ಮ ಮೊದಲ ಬೇಡಿಕೆಯಾಗಿದ್ದು, ನಮ್ಮ ಹೃದಯದ ಪ್ರಮುಖ ಹಂಬಲ ಅದಾಗಿದೆ ಎಂದು ಅದು ಪ್ರಕಟಿಸುತ್ತದೆ. ನಿಜವಾಗಿ ಅದು ನಮ್ಮ ಪ್ರಮುಖ ಹಂಬಲ ಆಗಿದೆಯೇ?

ಮಾನವನ ಅಪರಾಧದ ಒಂದು ವಾಕ್ಯದ ಸಾರಾಂಶ ಹೀಗಿದೆ: "ಅವರ ಕಣ್ಣೆದುರಿಗೆ ದೇವರ ಭಯವೇ ಇಲ್ಲ" (ರೋಮ. 3:18). "ದೇವರ ಭಯವೇ ತಿಳುವಳಿಕೆಗೆ ಮೂಲವು" (ಜ್ಞಾ 1:7). ಬೇರೆ ಮಾತುಗಳಲ್ಲಿ, ದೇವರ ಭಯವೇ ಕ್ರಿಸ್ತೀಯ ಜೀವನದ ಅಕ್ಷರಮಾಲೆಯಾಗಿದೆ. ನೀವು ಕಾಗುಣಿತವನ್ನು ಕಲಿಯದಿದ್ದರೆ ರೇಖಾಗಣಿತ, ರಸಾಯನಶಾಸ್ತ್ರ, ಭೌತಶಾಸ್ತ್ರ ಅಥವಾ ಬೇರೊಂದನ್ನು ಕಲಿಯಲು ಆಗುವದಿಲ್ಲ. ಅದೇ ರೀತಿಯಾಗಿ ನೀವು ಕ್ರಿಸ್ತೀಯ ಜೀವಿತದ ’ಕಾಗುಣಿತ’ವಾದ ದೇವರ ಭಯವನ್ನು ಕಲಿಯದಿದ್ದರೆ, ನಿಮ್ಮ ಆತ್ಮಿಕ ಜೀವನದಲ್ಲಿ ಪ್ರಗತಿಯನ್ನು ಹೊಂದಲು ಆಗುವದಿಲ್ಲ.

ನಮ್ಮ ಆತ್ಮಿಕತೆಯ ಉತ್ತಮವಾದ ಒಂದು ಪರೀಕ್ಷೆ ಏನೆಂದರೆ, ನಮಗೆ ನಮ್ಮ ಹೆಸರಿಗಿಂತ ದೇವರ ಹೆಸರಿನ ಬಗ್ಗೆ ಹೆಚ್ಚಿನ ಕಾಳಜಿ ಇದೆಯೇ, ಎನ್ನುವದು. ನಿಮಗೆ ನಿಮ್ಮ ಹೆಸರನ್ನು ಯಾರಾದರೂ ಕೆಡಿಸುತ್ತಿರುವದು ಗೊತ್ತಾದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಒಂದು ವೇಳೆ ಆವೇಶಗೊಳ್ಳುವಿರೋ? ಯೇಸುವಿನ ನಾಮವು ಅಪಕೀರ್ತಿಗೆ ಒಳಗಾಗುವದನ್ನು ನೀವು ಗ್ರಹಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಇಂದು ದೇವರ ಹೆಸರು ದೇವಜನರ ನಡತೆಯಿಂದ ಅನ್ಯರ ನಡುವೆ ದೂಷಣೆಗೆ ಗುರಿಯಾಗಿದೆ (ರೋಮ. 2:24). ಅದು ನಮ್ಮನ್ನು ತೀವ್ರವಾಗಿ ನೋಯಿಸುತ್ತದೆಯೇ?

ನೀವು ಭಾರತದಲ್ಲಿ ಯೇಸು ಕ್ರಿಸ್ತನ ಹೆಸರು ಅಗೌರವಕ್ಕೆ ಒಳಗಾಗುವದನ್ನು ನೋಡಿದಾಗ, ನಿಮಗೆ ನೋವಾಗುವದೇ? ಎಂದಾದರೂ ನೀವು ಭಾರವಾದ ಹೃದಯದಿಂದ ದೇವರ ಮುಂದೆ ಮೊಣಕಾಲೂರಿ, ನಮ್ಮ ನಾಡಿನಲ್ಲಿ ಕರ್ತನ ಹೆಸರಿಗೆ ಗೌರವ ಸಿಗಲಿ ಎಂದು ಬೇಡಿದ್ದೀರಾ? ಅದು ನಮ್ಮ ಆತ್ಮಿಕತೆಯ ಒಂದು ಪರೀಕ್ಷೆಯಾಗಿದೆ.

ಅ.ಕೃ 17:16ರಲ್ಲಿ ನಾವು ಏನು ಓದುತ್ತೇವೆಂದರೆ, ಅಥೇನೆದವರು ಪೂಜಿಸುತ್ತಿದ್ದ ಅನೇಕ ವಿಗ್ರಹಗಳನ್ನು ನೋಡಿದ ಪೌಲನ ಮನಸ್ಸು ಅವನೊಳಗೆ ಕುದಿಯಿತು. ಅವನು ಸೈತಾನನ ಮೇಲೆ ಕೋಪದಿಂದ ಕೆರಳಿದನು. ನಾವು ಪವಿತ್ರಾತ್ಮನಿಂದ ತುಂಬಲ್ಪಟ್ಟಿದ್ದರೆ, ನಾವೂ ಸಹ ನಮ್ಮ ದೇಶದಲ್ಲಿ ವಿಗ್ರಹಾರಾಧನೆಯನ್ನು ನೋಡಿ ಸೈತಾನನ ಮೇಲೆ ಸಿಟ್ಟಿನಿಂದ ಕೆರಳುತ್ತೇವೆ.

ದೇವಾಲಯದಲ್ಲಿ ಜನ ದೇವರ ಹೆಸರಿನಲ್ಲಿ ಹಣ ಗಳಿಸುವದನ್ನು ಯೇಸುವು ನೋಡಿ ಅವರ ಆತ್ಮ ಸಿಟ್ಟಿನಿಂದ ಕೆರಳಿತು. ದೇವರೊಂದಿಗೆ ನಮ್ಮ ಸಂಪರ್ಕ ನಿಕಟವಾದಾಗ, ನಾವೂ ಸಹ ನಮ್ಮ ದೇಶದಲ್ಲಿ ಕ್ರಿಸ್ತನ ಹೆಸರಿನಲ್ಲಿ ಹಣ ಜಮಾಯಿಸುವ ಜನ ಕರ್ತನ ನಾಮಕ್ಕೆ ಅಪಕೀರ್ತಿ ತರುವದನ್ನು ನೋಡಿ ಸಿಟ್ಟಾಗುತ್ತೇವೆ.

ಎಲ್ಲವೂ ದೇವರ ಮಹಿಮೆಗಾಗಿ

2 ಅರಸು 17:33 ಏನು ತೋರಿಸುವದು ಎಂದು ಗಮನಿಸಿ: "ಅವರು ದೇವರಿಗೆ ಭಯಪಟ್ಟರು ಮತ್ತು ತಮ್ಮ ಕುಲ ದೇವತೆಗಳನ್ನು ಆರಾಧಿಸಿದರು." ಇದು ನಮಗೆ ಹೇಗೆ ಅನ್ವಯಿಸುತ್ತದೆ ಎಂದರೆ, ನಾವು ಭಾನುವಾರ ದೇವರನ್ನು ಸಾಂಕೇತಿಕವಾಗಿ ಆರಾಧಿಸಿ, ವಾಸ್ತವವಾಗಿ ಎಲ್ಲಾ ವೇಳೆ ಸ್ವಂತ ವಿಗ್ರಹಗಳನ್ನು ಆರಾಧಿಸುವದು.

ನಾವೆಲ್ಲರೂ ಚಿಕ್ಕಂದಿನಿಂದ ಕೆಲವು ಚಟುವಟಿಕೆಗಳನ್ನು ಪರಿಶುದ್ಧವೆಂದು ತಿಳಿದಿದ್ದೇವೆ - ಯಾವುವೆಂದರೆ, ಸತ್ಯವೇದವನ್ನು ಓದುವದು, ಪ್ರಾರ್ಥನೆ, ಕರಪತ್ರಗಳ ವಿತರಣೆ, ವಾಕ್ಯದ ಬೋಧನೆ, ಇತ್ಯಾದಿ. ಇತರ ಚಟುವಟಿಕೆಗಳಾದ ಆಹಾರ ತಿನ್ನುವದು ಮತ್ತು ಕುಡಿಯುವದು, ನಿದ್ರಿಸುವದು, ಮಾತುಕತೆ ಮತ್ತು ಮಾರುಕಟ್ಟೆಯಲ್ಲಿ ಸಾಮಾನುಗಳನ್ನು ಖರೀದಿಸುವದು, ಇತ್ಯಾದಿಗಳನ್ನು ನಾವು ಪ್ರಾಪಂಚಿಕ ಚಟುವಟಿಕೆಗಳೆಂದು ಭಾವಿಸುತ್ತೇವೆ.

ಈ ರೀತಿ ಯೋಚಿಸುವದರ ಪರಿಣಾಮ ಏನೆಂದರೆ, ನಿಮ್ಮ ಧಾರ್ಮಿಕ ಚಟುವಟಿಕೆಗಳು ದೇವರ ಮಹಿಮೆಗಾಗಿ ಅವಶ್ಯವೆಂದು ನೀವು ಭಾವಿಸಬಹುದು. ಹಾಗಾಗಿ ನೀವು ಇವನ್ನು ಪೂರೈಸಿ, ಅನಂತರ ನಿಮ್ಮ ಮನೆಯೊಳಗೆ ಮತ್ತು ಹೊರಗೆ ಬೇರೊಂದು ರೀತಿಯ ಜೀವನವನ್ನು ನಡೆಸಬಹುದು - ಚಾಡಿ ಹೇಳುವದು, ಹರಟೆ ಹೊಡೆಯುವದು, ಜನರೊಂದಿಗೆ ಜಗಳಾಟ, ಇತ್ಯಾದಿ. ನೀವು ಕೆಲವು ದಿನಗಳ ನಂತರ ಕೂಟಗಳಿಗೆ ಹೋದಾಗ, ಮತ್ತೊಮ್ಮೆ ನೀವು ಪವಿತ್ರರು ಎಂಬ ಭಾವನೆ ನಿಮ್ಮಲ್ಲಿ ಉಂಟಾಗುತ್ತದೆ. ಅದು ಕಪಟ ಹೊರತೋರಿಕೆ. ಪೌಲನು 1 ಕೋರಿ 10:31ರಲ್ಲಿ, "ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ, ಎಲ್ಲವನ್ನೂ ದೇವರ ಫನತೆಗಾಗಿ ಮಾಡಿರಿ," ಎನ್ನುತ್ತಾನೆ. ನಮ್ಮ ಜೀವನದ ಒಂದೊಂದು ಚಟುವಟಿಕೆಯೂ ದೇವರ ಘನತೆಗಾಗಿ ಮಾಡಲ್ಪಡಬೇಕು.

ಅನೇಕ ವರ್ಷಗಳ ಹಿಂದೆ, ನಿಕೊಲಾಸ್ ಹರ್ಮನ್ ಎಂಬವರು (ಸಾಧಾರಣವಾಗಿ ಸಹೋದರ ಲಾರೆನ್ಸ್ ಎಂದು ಪರಿಚಿತರು) ಒಂದು ಕ್ರೈಸ್ತ ಮಠದಲ್ಲಿ ಅಡುಗೆಯವರು ಆಗಿದ್ದರು. ಅವರ ಆಲೋಚನೆ ಹೀಗಿತ್ತು, "ತಟ್ಟೆಗಳ ಲಟಪಟ ಶಬ್ದದ ನಡುವೆ ನಾನು ಪಾತ್ರೆಗಳನ್ನು ತೊಳೆಯುವಾಗ ಅಥವಾ ಅಡುಗೆ ಮಾಡುವಾಗ, ದೇವರ ಸಾನ್ನಿಧ್ಯದಲ್ಲಿ ಮೊಣಕಾಲೂರಿ ರೊಟ್ಟಿ ಹಾಗೂ ದ್ರಾಕ್ಷಾರಸವನ್ನು ಸೇವಿಸುವ ವೇಳೆಯ ಪ್ರಶಾಂತತೆಯನ್ನು ನಾನು ನನ್ನ ಪ್ರಾಣದಲ್ಲಿ ಕಾಪಾಡಬಲ್ಲೆ." ಎಲ್ಲಾ ಸಮಯದಲ್ಲಿ ದೇವರ ಸನ್ನಿಧಿಯಲ್ಲಿ ಜೀವಿಸುವದೆಂದರೆ ಇದೇ - ನಮ್ಮ ಪ್ರತಿಯೊಂದು ಕಾರ್ಯವೂ ಪವಿತ್ರವೆಂದು ಅರಿಯುವದು.

ಪ್ರಾರ್ಥನೆಯ ಸರಿಯಾದ ಉದ್ದೇಶಗಳು

ಈ ಪ್ರಾರ್ಥನೆಯ ಮೊದಲ ಬೇಡಿಕೆಯ ಅರ್ಥವನ್ನು ಸರಿಯಾಗಿ ತಿಳಿದಾಗ, ನಮ್ಮ ಪ್ರಾರ್ಥನೆಯ ಉದ್ದೇಶಗಳೂ ಸಹ ಬದಲಾಗುವವು. ಅನೇಕ ವೇಳೆ ನಮ್ಮ ಪ್ರಾರ್ಥನೆಗಳು ತಪ್ಪಾದ ಉದ್ದೇಶಗಳನ್ನು ಹೊಂದಿರುತ್ತವೆ, ಹಾಗಾಗಿ ಅವುಗಳಿಗೆ ಉತ್ತರ ಸಿಗುವದಿಲ್ಲ. ಆದರೆ ಒಬ್ಬ ವ್ಯಕ್ತಿ ಯಥಾರ್ಥನಾಗಿ "ನಿಮ್ಮ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ" ಎಂದು ಮೊದಲನೆಯದಾಗಿ ಪ್ರಾರ್ಥಿಸಿದರೆ - ಅವನ ಪ್ರಾರ್ಥನೆಯಲ್ಲಿ ಯಾವ ತಪ್ಪಾದ ಉದ್ದೇಶವೂ ಇರಲಾರದು. ಅವನ ಪ್ರಾರ್ಥನೆ, "ಕರ್ತನೇ, ನನ್ನ ಸನ್ನಿವೇಶಗಳು ಏನೇ ಆಗಿರಲಿ, ನೀವು ನನ್ನ ಬೇಡಿಕೆಯನ್ನು ಅನುಗ್ರಹಿಸುವಿರೋ ಇಲ್ಲವೋ, ನಿಮ್ಮ ನಾಮವು ಮಹಿಮೆಹೊಂದಲಿ," ಎಂದು ಆಗಿರುತ್ತದೆ.

ಒಮ್ಮೆ ದಾವೀದನಿಗೆ ದೇವರಿಗೆ ಒಂದು ಆಲಯವನ್ನು ಕಟ್ಟಿಸುವ ದೊಡ್ಡ ಹಂಬಲವಿತ್ತು. ಅದು ಒಂದು ಒಳ್ಳೆಯ ಹಂಬಲವಾಗಿತ್ತು. ಆದರೆ ದೇವರು 2 ಸಮು 7:12-13ರಲ್ಲಿ, "ಇಲ್ಲ, ನಾನು ಆಲಯವನ್ನು ಕಟ್ಟಲು ನಿನ್ನನ್ನು ಉಪಯೋಗಿಸುವದಿಲ್ಲ. ನಾನು ಸೊಲೊಮೋನನನ್ನು ಉಪಯೋಗಿಸುವೆನು," ಎಂದು ಹೇಳಿದ್ದನ್ನು ನಾವು ಓದುತ್ತೇವೆ. ದಾವೀದನು ಅದನ್ನು ಕೇಳಿದಾಗ ಸಿಡುಕಲಿಲ್ಲ. ಅವನು ಗೊಣಗುಟ್ಟಲಿಲ್ಲ. ಅವನು ದೇವರಿಗೆ, "ಸದಾಕಾಲವೂ ನಿನ್ನ ನಾಮಕ್ಕೆ ಮಹಿಮೆಯುಂಟಾಗಲಿ," ಎಂದಷ್ಟೇ ಹೇಳಿದನು (2 ಸಮು 7:26). ದಾವೀದನು ದೇವರ ನಾಮದ ಮಹಿಮೆಗಾಗಿ ಒಂದು ಪಕ್ಕಕ್ಕೆ ಸರಿಯಲು ಸದಾ ಸಿದ್ಧನಿದ್ದನು. ಅದು ನಾವು ಅನುಸರಿಸಲು ಯೋಗ್ಯವಾದ ಒಂದು ಉತ್ತಮ ಮಾದರಿಯಾಗಿದೆ.

ಈ ಮುಂದಿನ ಪ್ರಾರ್ಥನೆಯನ್ನು ಮಾಡಲು ನಾವು ಸಿದ್ಧರಿದ್ದೇವೆಯೇ? "ತಂದೆಯೇ, ನಮ್ಮ ದೇಶಕ್ಕೆ ಪವಿತ್ರತೆಯ ಒಂದು ಭಕ್ತಿ ಸಂಜೀವನವನ್ನು ಕಳುಹಿಸಿ, ಮತ್ತು ಈ ಭಕ್ತಿ ಸಂಜೀವನವನ್ನು ನೀವು ಬೇರೆ ಯಾವುದೇ ಸಭೆಯ ಮೂಲಕ ಪ್ರಾರಂಭಿಸುವದಾದರೆ, ಅದಕ್ಕೆ ನನ್ನ ಪೂರ್ಣ ಒಪ್ಪಿಗೆಯಿದೆ. ಎನೇ ಆಗಲಿ, ಅದನ್ನು ಕಳುಹಿಸಿ. ಮತ್ತು ನನ್ನನ್ನು ಉಪಯೋಗಿಸದೆ ಬೇರೆ ಯಾರನ್ನಾದರೂ ಉಪಯೋಗಿಸಲು ನೀವು ತೀರ್ಮಾನಿಸಿದರೆ, ಅದು ಕೂಡ ಒಳ್ಳೆಯದು. ನಿಮ್ಮ ಹೆಸರು ಮಾತ್ರ ಮಹಿಮೆಹೊಂದಲಿ."

ನಾವು ಯಥಾರ್ಥರಾಗಿ, "ತಂದೆಯೇ, ಎನೇ ಆಗಲಿ, ನಿಮ್ಮ ನಾಮ ಪರಿಶುದ್ಧವೆಂದು ಎಣಿಸಲ್ಪಡಲಿ," ಎಂದು ಪ್ರಾರ್ಥಿಸಲು ಸಿದ್ಧವಾದರೆ, ಅನೇಕ ಸ್ವಾರ್ಥದ ಉದ್ದೇಶಗಳು ನಿರ್ಮೂಲವಾಗುತ್ತವೆ.

ತಂದೆಯ ಹೆಸರನ್ನು ಘನಪಡಿಸುವದು

ಯೇಸುವಿನ ಮಾತನ್ನು ಜ್ಞಾಪಿಸಿಕೊಳ್ಳಿರಿ, "ಮನುಷ್ಯಕುಮಾರನು ಗೋಧಿಯ ಕಾಳಿನಂತೆ ಭೂಮಿಯಲ್ಲಿ ಬಿದ್ದು, ಮನುಷ್ಯರಿಂದ ತುಳಿಯಲ್ಪಟ್ಟು ಸಾಯುವ ಸಮಯ ಬಂದದೆ. ನಾನೇನು ಹೇಳಲಿ? ತಂದೆಯೇ, ಈ ಕಾಲದೊಳಗಿಂದ ನನ್ನನ್ನು ತಪ್ಪಿಸು ಎಂದು ಹೇಳಲೇ? ಇಲ್ಲ. ತಂದೆಯೇ, ಏನೇ ಆಗಲಿ, ನನ್ನ ಮರಣವಾದರೂ ಸರಿ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ" (ಯೋಹಾ 12:24,27,28- ಭಾವಾನುವಾದ).

ಯೇಸುವು ಸ್ವತಃ ತನ್ನ ಉಪದೇಶವನ್ನು ಪಾಲಿಸಿದರು. ತಂದೆಯ ಹೆಸರು ಮಹಿಮೆ ಹೊಂದುಬೇಕೆಂದು ಅವರು ಬಯಸಿದರು, ಅದಕ್ಕಾಗಿ ಮರಣವನ್ನು ಅನುಭವಿಸಲೂ ಅವರು ಹಿಂಜರಿಯಲಿಲ್ಲ. ಆದಕಾರಣ ಅವರು ತನ್ನ ಭೂಲೋಕದ ಬಾಳಿನ ಕೊನೆಯಲ್ಲಿ, "ನಾನು ನಿನ್ನನ್ನು ಭೂಲೋಕದಲ್ಲಿ ಮಹಿಮೆ ಪಡಿಸಿದ್ದೇನೆ," ಎಂದು ತಂದೆಗೆ ಹೇಳಲು ಸಾಧ್ಯವಾಯಿತು (ಯೋಹಾ 17:4).

ಹೆಚ್ಚಿನ ವಿಶ್ವಾಸಿಗಳು ತಮ್ಮ ಇಡೀ ಜೀವಿತದಲ್ಲಿ ಈ ಮಟ್ಟಕ್ಕೆ ಏರುವದೇ ಇಲ್ಲ. ದೇವರಲ್ಲಿ ಕೇಂದ್ರಿತವಾದ ಈ ಅದ್ಭುತ ಜೀವಿತ ಅವರಿಗೆ ಸ್ವಲ್ಪವೂ ಪರಿಚಯವಿಲ್ಲ; ಹಾಗಾಗಿ ನಿಜವಾದ ಆತ್ಮಿಕತೆ ಏನೆಂದು ಅವರಿಗೆ ತಿಳಿದೇ ಇಲ್ಲ. ಪರಲೋಕದ ಆತ್ಮದೊಂದಿಗೆ ಅವರ ಆತ್ಮಕ್ಕೆ ಸ್ವಲ್ಪವೂ ಹೊಂದಾಣಿಕೆ ಇಲ್ಲ.

ಪರಲೋಕದಲ್ಲಿ ಎಲ್ಲರೂ, "ಕರ್ತನೇ, ನಿಮ್ಮ ನಾಮವು ಮಹಿಮೆಹೊಂದಲಿ," ಎಂದು ಪ್ರಾರ್ಥಿಸುತ್ತಾರೆ. ಆ ಮನೋಭಾವವನ್ನು ನಾವು ಈಗ ಅಳವಡಿಸಿಕೊಳ್ಳದೇ ಹೋದರೆ, ಪರಲೋಕದಲ್ಲಿ ನಾವು ಹೇಗೆ ನಿತ್ಯತ್ವವಿಡೀ ವಾಸಿಸುವೆವು? ನಾವು ಈಗಲೇ, ಭೂಲೋಕದಲ್ಲಿ, ಪರಲೋಕದ ಆತ್ಮವನ್ನು ಹೊಂದಬೇಕೆಂದು ದೇವರ ಇಚ್ಛೆಯಾಗಿದೆ. ಅದಕ್ಕಾಗಿ ಅವರು ತನ್ನ ಪವಿತ್ರಾತ್ಮನನ್ನು ನಮಗೆ ಕೊಟ್ಟಿದ್ದಾರೆ. "ಪರಲೋಕವು ಕೆಳಗೆ ಇಳಿದು ಬಂದಿತು ಮತ್ತು ದೇವರ ಮಹಿಮೆ ನನ್ನ ಮನವನ್ನು ತುಂಬಿತು," (ಇಂಗ್ಲಿಷ್ನನಲ್ಲಿ, 'Heaven came down and glory filled my soul') ಎಂದು ನಾವು ಹಾಡುವದರ ಅರ್ಥ, ಪರಲೋಕದ ನಿವಾಸಿಗಳ ಹಂಬಲ ಈಗ ನಮ್ಮ ಇಷ್ಟಾರ್ಥವೂ ಆಗಿದೆ, ಎಂದು.

ಕೊನೆಗೆ, ನಾವು ಮಲಾ 3:16ನ್ನು ನೋಡೋಣ: "ಇಂಥ ಮಾತುಗಳನ್ನು ಕೇಳಿ ಕರ್ತನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು, ಕರ್ತನು ಕಿವಿಗೊಟ್ಟು ಆಲಿಸಿ, ಭಯಭಕ್ತಿಯಿಂದ ತನ್ನ ನಾಮಸ್ಮರಣೆ ಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು."

ದೇವರು ಒಂದು ಹೆಸರಿನ ಪಟ್ಟಿಯನ್ನು ಇರಿಸಿಕೊಂಡಿದ್ದಾರೆ - ಅದು ಅವರಲ್ಲಿ ಭಯ-ಭಕ್ತಿ ಹೊಂದಿರುವವರು ಮತ್ತು ಅವರ ಹೆಸರಿನ ಮಹಿಮೆಗಾಗಿ ಕಾಳಜಿ ಇರುವವರ ಪಟ್ಟಿ. ದೇವರು ಅವರನ್ನು ತನ್ನ ಸ್ವಾಸ್ಥ್ಯವೂ, ತನ್ನ ಮುಖ್ಯವಾದ ನಿಕ್ಷೇಪವೂ, ತನ್ನ ಆಭರಣವೂ ಎಂದು ಕರೆಯುತ್ತಾರೆ (17ನೇ ವಚನ). ದೇವರ ಮನೆಯಲ್ಲಿ ಅನೇಕ ಮಣ್ಣಿನ ಮಡಿಕೆಗಳು ಇವೆ, ಆದರೆ ಅವರು ಕೆಲವು ಬಂಗಾರ ಮತ್ತು ಬೆಳ್ಳಿಯ ಪಾತ್ರೆಗಳನ್ನೂ ಸಹ ಹೊಂದಿದ್ದಾರೆ (2 ತಿಮೊ 2:20,21)!

ನಾನು ಇಷ್ಟು ಮಾತ್ರ ಹೇಳಬಲ್ಲೆ, "ಏಷ್ಟೇ ಖರ್ಚಾದರೂ ಆಗಲಿ, ನಾನು ನನ್ನ ಹೆಸರು ಖಂಡಿತವಾಗಿ ದೇವರಿಗೆ ಭಯಪಡುವವರು, ಅವರ ಹೆಸರಿನ ಹೆಚ್ಚಳ ಬಯಸುವವರು ಮತ್ತು ದೇವರ ನಾಮ ಮಹಿಮೆ ಹೊಂದಬೇಕು ಎನ್ನುವ ಮಹತ್ವಾಕಾಂಕ್ಷೆ ಇರಿಸಿಕೊಂಡಿರುವವರ ದೇವರ ಜ್ಞಾಪಕದ ಪುಸ್ತಕದ ಪಟ್ಟಿಗೆ ಸೇರಬೇಕೆಂದು ಬಯಸುತ್ತೇನೆ."

ಮೂರನೇ ಬೇಡಿಕೆಯ ಕೊನೆಯಲ್ಲಿ ಬರುವ ಪದಗಳು - "ಪರಲೋಕದಲ್ಲಿ ನೆರವೇರುವ ಪ್ರಕಾರ, ಭೂಲೋಕದಲ್ಲಿಯೂ" - ಮೊದಲ ಮೂರು ಬೇಡಿಕೆಗಳಿಗೂ ಅನ್ವಯಿಸುತ್ತವೆ.

ಆದ್ದರಿಂದ ನಮ್ಮ ಪ್ರಾರ್ಥನೆ ಹೀಗಿದೆ, "ತಂದೆಯೇ, ನಿಮ್ಮ ನಾಮವು ಪರಲೋಕದಲ್ಲಿ ಪರಿಶುದ್ಧವೆಂದು ಎಣಿಸಲ್ಪಡುವ ಪ್ರಕಾರ ಭೂಲೋಕದಲ್ಲೂ ಪರಿಶುದ್ಧವೆಂದು ಎಣಿಸಲ್ಪಡಲಿ. ದೇವದೂತರು ನಿಮಗೆ ಭಯಪಡುವಂತೆ ಮತ್ತು ತಮ್ಮ ಮುಖಗಳನ್ನು ಮುಚ್ಚಿಕೊಂಡು, ’ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು’ ಎಂದು ಹೇಳುತ್ತಾ ನಿಮ್ಮನ್ನು ಆರಾಧಿಸುವಂತೆ, ನನ್ನ ಸಹ-ವಿಶ್ವಾಸಿಗಳು ಮತ್ತು ನಾನು ಯಾವಾಗಲೂ ನಿಮಗೆ ಭಯಪಟ್ಟು ಮತ್ತು ನಿಮ್ಮನ್ನು ಘನಪಡಿಸಬೇಕೆಂದು ನಾನು ಹೃತ್ಪೂರ್ವಕವಾಗಿ ಆಶಿಸುತ್ತೇನೆ. ಆಮೆನ್".

ಅಧ್ಯಾಯ 4
ದೇವರ ರಾಜ್ಯ

"ನಿನ್ನ ರಾಜ್ಯವು ಬರಲಿ".

ನಿಜವಾದ ರಕ್ಷಣೆಯು ಸ್ವಾರ್ಥತೆಯಿಂದ ಬಿಡುಗಡೆಗಾಗಿ ತೀವ್ರ ಆಸಕ್ತಿಯನ್ನು ನಮ್ಮಲ್ಲಿ ಉಂಟುಮಾಡಬೇಕು, ಮತ್ತು ಆಗ ದೇವರು ನಮ್ಮ ಜೀವನ ಮತ್ತು ಪ್ರಾರ್ಥನೆಯ ಕೇಂದ್ರಬಿಂದು ಆಗುತ್ತಾರೆ. ಕರ್ತನು ನಮ್ಮನ್ನು ಹಿಂದಿನ ಕೆಟ್ಟತನದಿಂದ ಸರಿಯಾದ ಮಾರ್ಗಕ್ಕೆ ನಡೆಸಿದಾಗ, ನಾವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ದೇವರಿಗೆ ಪ್ರಥಮ ಸ್ಥಾನವನ್ನು ನೀಡಲು ಹಾತೊರೆಯುತ್ತೇವೆ.

ಆತ್ಮಿಕತೆಯ ಒಂದು ಎದ್ದುಕಾಣುವ ಫಲ ಯಾವುದೆಂದರೆ, ಒಬ್ಬ ವ್ಯಕ್ತಿ ತನ್ನ ಸ್ವಾರ್ಥತೆಯನ್ನು ದ್ವೇಷಿಸಿ, ದೇವರಲ್ಲಿ ಪೂರ್ತಿಯಾಗಿ ಕೇಂದ್ರಿತನಾಗಲು ಬಯಸುತ್ತಾನೆ.

ದೇವರಲ್ಲಿ ಕೇಂದ್ರಿತನಾಗಲು ಬಯಸಿ ಅವರ ಬಳಿಗೆ ಬರುವ ವ್ಯಕ್ತಿ ಹೀಗೆನ್ನುತ್ತಾನೆ, "ಪರಲೋಕದಲ್ಲಿ ಇರುವ ನಮ್ಮ ತಂದೆಯೇ, ನನ್ನ ಹೃದಯದ ಅತಿದೊಡ್ಡ ಆಕಾಂಕ್ಷೆ ನಿಮ್ಮ ಹೆಸರು ಲೋಕದ ಎಲ್ಲೆಡೆ ಘನ-ಗೌರವವನ್ನು ಹೊಂದಲಿ ಎಂಬುದಾಗಿದೆ." ಆಗ ಅವನು ಲೋಕದಲ್ಲಿ ದೇವರ ನಾಮಕ್ಕೆ ಗೌರವ ಸಿಗದಿರುವದನ್ನು ಗ್ರಹಿಸುತ್ತಾನೆ, ಹಾಗಾಗಿ ಅವನ ಮುಂದಿನ ಬೇಡಿಕೆ ಹೀಗಿರುತ್ತದೆ, "ತಂದೆಯೇ, ನೀವು ಬಂದು ನಿಮ್ಮ ರಾಜ್ಯವನ್ನು ಸ್ಥಾಪಿಸಿ, ಇಡೀ ಲೋಕವು ನಿಮ್ಮ ಹೆಸರಿಗೆ ಭಯ-ಭಕ್ತಿ ಸಲ್ಲಿಸುವದನ್ನು ನೋಡಲು ನಾನು ಅತ್ಯಾಸಕ್ತನಾಗಿದ್ದೇನೆ."

ಅದು 1900 ವರ್ಷಗಳಿಗೂ ಹೆಚ್ಚು ಸಮಯದಿಂದ ದೇವರ ಎಲ್ಲಾ ಸ್ತ್ರೀ-ಪುರುಷರ ನಿರಂತರ ಪ್ರಾರ್ಥನೆಯಾಗಿದೆ. ಇದಕ್ಕೆ ಜವಾಬು ಸಿಗುವ ಸಮಯ ಈಗ ಸಮೀಪಿಸಿದೆ.

ನೀತಿಯ ರಾಜ್ಯ

ಈ ಲೋಕದ ದುಷ್ಟತನವನ್ನು ನೋಡಿ ಅಸಹ್ಯಗೊಂಡಿರುವವನು ಮಾತ್ರ ಈ ಪ್ರಾರ್ಥನೆ ಮಾಡಬಹುದು. "ನಾವು ನೂತನ ಆಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು," ಎಂದು ಪೇತ್ರನು ಹೇಳುತ್ತಾನೆ (2 ಪೇತ್ರ 3:13).

ಇಂದು ಲೋಕದಲ್ಲಿ ಎಷ್ಟು ದುಷ್ಟತನ ಹಾಗೂ ಅನೈತಿಕತೆ ಇದೆಯೆಂದು ನೋಡಿರಿ. ನಾವು ದಿನಪತ್ರಿಕೆಗಳನ್ನು ಓದುವಾಗ, ನಮ್ಮ ಹೃದಯದಿಂದ ಒಂದು ಮುಖ್ಯವಾದ ಪ್ರಾರ್ಥನೆ ಮೇಲೇರಬೇಕು, "ತಂದೆಯೇ, ನಿಮ್ಮ ರಾಜ್ಯ ಬರುವದಕ್ಕಾಗಿ ನಾನು ಹಾತೊರೆಯುತ್ತೇನೆ. ನಾನು ಇದನ್ನು ನನ್ನ ವೈಯಕ್ತಿಕ ಅನುಕೂಲಕ್ಕಾಗಿ ಕೇಳುತ್ತಿಲ್ಲ. ನಿಮ್ಮ ನೀತಿಯ ಆಳ್ವಿಕೆ ಬೇಗನೆ ಬರಲಿ ಎಂದು ನಾನು ಹಾರೈಸುತ್ತೇನೆ, ಏಕೆಂದರೆ ನಿಮ್ಮ ಮಹಿಮೆಗಾಗಿ ಸೃಷ್ಟಿಸಲ್ಪಟ್ಟಿರುವ ಈ ಲೋಕದಲ್ಲಿ ನಿಮ್ಮ ನಾಮವು ಮಹಿಮೆ ಹೊಂದಬೇಕು."

ಕೊನೆಯ ದಿನಗಳು ನೋಹನ ದಿನಗಳಂತೆ ಇರುವವೆಂದು ಯೇಸುವು ತಿಳಿಸಿದರು. ದುಷ್ಟ ಹಾಗೂ ಭ್ರಷ್ಟತನದ ಲೋಕದಲ್ಲಿ ಇದ್ದ ಒಬ್ಬ ನೀತಿವಂತ ನೋಹನಾಗಿದ್ದನು. ಸುನೀತಿಯ ಬೋಧಕನಾಗಿದ್ದ ಅವನು, ತನ್ನ ಸುತ್ತಮುತ್ತದ ಸಂಗತಿಗಳ ಬಗ್ಗೆ ಅಸಹ್ಯಗೊಂಡಿರಬೇಕು (2 ಪೇತ್ರ 2:5). ಆತನು ನೀತಿಗಾಗಿ ತನ್ನ ಹೃದಯದ ಆಳದಿಂದ ತವಕಿಸಿ, ಅದನ್ನು ಮುಚ್ಚುಮರೆಯಿಲ್ಲದೆ ಸಾರಿದನು. ಆತನ ಪ್ರಾರ್ಥನೆಯೂ ಸಹ "ನಿನ್ನ ರಾಜ್ಯವು ಬರಲಿ" ಎಂದೇ ಆಗಿರಬೇಕು.

ಎಲ್ಲಾ ವಿಶ್ವಾಸಿಗಳು ಕ್ರಿಸ್ತನು ಈ ಲೋಕದಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸಲು ಬೇಗನೇ ಬರಲಿರುವದನ್ನು ಒಪ್ಪುತ್ತಾರೆ. ಆದರೆ ನಾವು ಇದನ್ನು ನಿಜವಾಗಿ ನಂಬಿರುವದರ ರುಜುವಾತು ಏನು? ಯೋಹಾನ 3:3ರಲ್ಲಿ, "ಆತನ ಮೇಲೆ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು, ಕ್ರಿಸ್ತನು ಶುದ್ಧನಾಗಿರುವಂತೆಯೇ ತನ್ನನ್ನು ಶುದ್ಧ ಮಾಡಿಕೊಳ್ಳುತ್ತಾನೆ," ಎಂದು ತಿಳಿಸಲಾಗಿದೆ.

ನಾವು ಕ್ರಿಸ್ತನ ಬರುವಿಕೆಯನ್ನು ನಿಜವಾಗಿ ನಂಬುವದರ ಪುರಾವೆ ಏನೆಂದರೆ, ಮದಲಗಿತ್ತಿಯು ಮದಲಿಂಗನಿಗಾಗಿ ಸಿದ್ಧಳಾಗುವಂತೆ, ನಾವು ನಮ್ಮನ್ನು ಸಿದ್ಧ ಮಾಡಿಕೊಳ್ಳುತ್ತೇವೆ. ಇದರ ಅರ್ಥ - ಸಾವಕಾಶ ಮಾಡದೆ - ಶುದ್ಧ ಜೀವನ, ಸಾಲಗಳನ್ನು ತೀರಿಸುವದು, ಮನಸ್ಥಾಪಗಳನ್ನು ಬಗೆಹರಿಸುವುದು, ಇವುಗಳಲ್ಲಿ ತೊಡಗಿರುವದು, ಏಕೆಂದರೆ ನಾವು ಶುದ್ಧಿಯಾಗಿ ಅವರ ಪರಿಶುದ್ಧತೆಯ ಮಟ್ಟವನ್ನು ಸಮೀಪಿಸಲು ಬಯಸುತ್ತೇವೆ. "ನಿನ್ನ ರಾಜ್ಯ ಬರಲಿ" ಎಂದು ಪ್ರಾರ್ಥಿಸಲು ಇಂತಹ ವ್ಯಕ್ತಿಯು ಮಾತ್ರ ಅರ್ಹನು.

ನಾವು ಕ್ರಿಸ್ತನ ಬರುವಿಕೆಗೆ ನಮ್ಮನ್ನು ಶುದ್ಧೀಕರಿಸಿಕೊಂಡು ಸಿದ್ಧರಾಗದೆ, ಈ ಪ್ರಾರ್ಥನೆಯನ್ನು ಮಾಡುತ್ತಾ ಹೋಗುವದು, ಪ್ರಾರ್ಥನೆಯನ್ನು ರೂಢಿಯ ಆಚರಣೆಯ ಮಟ್ಟಕ್ಕೆ ಇಳಿಸಿದಂತೆ ಆಗುತ್ತದೆ.

ಅವರ ಬರುವಿಕೆಗಾಗಿ ಸದಾ ಸಿದ್ಧರಾಗಿ ಇರುವದು

ಕ್ರೈಸ್ತರ ಕೆಲವು ಪಂಗಡಗಳ ಪೂಜಾ ಪದ್ಧತಿಯಲ್ಲಿ, "ಕರ್ತನೇ, ನನ್ನನ್ನು ಹಠಾತ್ ಸಾವಿನಿಂದ ತಪ್ಪಿಸಿರಿ," ಎಂಬ ಪ್ರಾರ್ಥನೆ ಇದೆ. ಆ ಪ್ರಾರ್ಥನೆಯನ್ನು ರಕ್ಷಣೆ ಹೊಂದದೇ ಇರುವ ಒಬ್ಬ ವ್ಯಕ್ತಿಯು ರಕ್ಷಣೆ ಹೊಂದದೇ ಇರುವ ಜನರಿಗಾಗಿ ಬರೆದಿರುವದು ಸ್ಪಷ್ಟವಾಗಿದೆ. ಸ್ವಾರ್ಥಿಗಳು ಮರಣಹೊಂದಿ ತಮ್ಮ ಸೃಷ್ಟಿಕರ್ತನ ಮುಂದೆ ನಿಲ್ಲುವ ಮೊದಲು, ತಮ್ಮ ವಿವಾದಗಳನ್ನು ಬಗೆಹರಿಸುವದು, ಸಾಲಗಳನ್ನು ಹಿಂದಿರುಗಿಸುವದು, ಇತ್ಯಾದಿಯನ್ನು ಮಾಡಲು ಅವರಿಗೆ ಸ್ವಾಭಾವಿಕವಾಗಿ ಸ್ವಲ್ಪ ಸಮಯ ಬೇಕಾಗುತ್ತದೆ. ಆರೋಗ್ಯ ಚೆನ್ನಾಗಿ ಇದ್ದಾಗ ಇವನ್ನು ಮಾಡುವ ಉದ್ದೇಶ ಅವರಿಗೆ ಇಲ್ಲ. ದೇವಭಯವಿಲ್ಲದ ಇಂತಹ ಜನ, ತಮ್ಮ ಸ್ವಾರ್ಥತೆಯ ಬಗ್ಗೆ ಪಶ್ಚಾತ್ತಾಪ ಪಡುವವರೆಗೆ, ರಕ್ಷಣೆ ಹೊಂದುವದು ಅಸಾಧ್ಯವೇ.

ಇಂತಹ ಪ್ರಾರ್ಥನೆ ಒಬ್ಬ ಯಥಾರ್ಥನಾದ ಕ್ರೈಸ್ತನಿಗೆ ಎಂದಿಗೂ ಅವಶ್ಯವಿಲ್ಲ, ಏಕಂದರೆ ಅವನು ಸದಾ ಸಿದ್ಧನಾಗಿರುತ್ತಾನೆ. ಅವನ ವ್ಯವಹಾರಗಳು ಯಾವಾಗಲೂ ಅಚ್ಚುಕಟ್ಟಾಗಿ ಇರುತ್ತವೆ. ಹಾಗಾಗಿ ಅವನು "ನಿನ್ನ ರಾಜ್ಯವು ಬರಲಿ" ಎಂದು ಯಾವಾಗಲೂ ಪ್ರಾರ್ಥಿಸಬಹುದು.

ನಮ್ಮಲ್ಲಿ ದೇವರ ರಾಜ್ಯದ ಬರುವಿಕೆಗಾಗಿ ಸಾಕಷ್ಟು ಆಸಕ್ತಿ ಇದೆಯೇ ಎಂದು ಹೇಗೆ ತಿಳಿಯಬಹುದು? ನಾವು ಕೇವಲ ಒಂದು ವಿಷಯ - ನಮ್ಮ ಸಂಸಾರಿಕ ಜೀವನವನ್ನು - ನೋಡೋಣ.

ಒಂದು ದಿನ ಬೆಳಗ್ಗೆ ನೀವು ಕಿಟಕಿಯಿಂದ ನೋಡುತ್ತಿದ್ದಂತೆ, ಸ್ವತಃ ಕರ್ತರಾದ ಯೇಸುವು ನಿಮ್ಮ ಮನೆಯ ಕಡೆಗೆ ಬರುವುದನ್ನು ನೋಡಿದಿರೆಂದು ತಿಳಿಯೋಣ. ಆಗ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ದೇವರ ರಾಜ್ಯದ ಬರುವಿಕೆಗೆ ನೀವು ಸಿದ್ಧರಾಗಿ ಇದ್ದೀರೋ ಇಲ್ಲವೋ ಎಂಬುದಕ್ಕೆ ಇದೊಂದು ಬಹಳ ಸೂಕ್ತವಾದ ಪರೀಕ್ಷೆಯಾಗಿದೆ.

ನೀವು ಓಡಿಹೋಗಿ ನಿಮ್ಮ ಪುಸ್ತಕದ ಕಪಾಟಿನ ಕೆಲವು ಪುಸ್ತಕಗಳು ಯೇಸುವಿಗೆ ಕಾಣದಿರುವಂತೆ ಬಚ್ಚಿಡಬೇಕಾಗುವದೇ? ನಿಮ್ಮಲ್ಲಿ ಟಿ.ವಿ. ಇದ್ದಲ್ಲಿ, ಬಹುಶಃ ಅದನ್ನು ಸಹ ನೀವು ಮರೆಮಾಡಬಹುದು.

ಯೇಸುವು ನಿಮ್ಮಲ್ಲಿ ತಂಗಿರುವಷ್ಟು ದಿನ, ನಿಮ್ಮ ಊಟದ ಮೇಜಿನ ಸಂಭಾಷಣೆ ಬೇರೆ ದಿನಗಳಂತೆ ಹರಟೆ ಮಾತು ಆಗಿರುವದಿಲ್ಲ.

ಆ ಅವಧಿಯಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರು ಮತ್ತು ನೌಕರರೊಂದಿಗೆ ಮಾಮೂಲಿನ ಒರಟು ಮಾತುಗಳನ್ನು ಬಳಸದೆ, ಬಹಳ ನಮ್ರ ಮತ್ತು ದಯಾಶೀಲ ಮಾತುಗಳನ್ನು ನುಡಿಯುವ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುವದೇ?

ನಿಮ್ಮ ಎಲ್ಲಾ ಗೆಳೆಯರನ್ನು ಕರ್ತರು ಭೇಟಿಯಾಗುವದನ್ನು ನೀವು ಇಷ್ಟಪಡುವಿರೋ, ಅಥವಾ ಯೇಸುವು ನಿಮ್ಮ ಜೊತೆಯಲ್ಲಿ ಇರುವಾಗ ಅವರಲ್ಲಿ ಕೆಲವರು ನಿಮ್ಮಲ್ಲಿಗೆ ಬರದಿರಲಿ ಎಂದು ಹಾರೈಸುತ್ತೀರೋ?

ಯೇಸುವು ಈ ರೀತಿಯಾಗಿ ನಿಮ್ಮೊಂದಿಗೆ ನಿತ್ಯಕಾಲವೂ ಇರಲಿ ಎಂದು ನೀವು ಸಂತೋಷದಿಂದ ಸ್ವಾಗತಿಸುತ್ತೀರೋ? ಅಥವಾ ಅವರು ನಿಮ್ಮಲ್ಲಿಂದ ಹೊರಟಾಗ, ಅಂತೂ ಇಂತೂ ಅವರ ಭೇಟಿ ಕೊನೆಗೊಂಡಿತಲ್ಲಾ, ಎಂದು ನೀವು ನಿಟ್ಟುಸಿರು ಬಿಡುತ್ತೀರೋ?

ನೀವು ಪ್ರಾಮಾಣಿಕವಾಗಿ ನಿಮ್ಮನ್ನು ಪ್ರಶ್ನಿಸಿಕೊಳ್ಳಿ.

ಆ ಪ್ರಶ್ನೆಗೆ ಉತ್ತರ ತಿಳಿಯುವ ಒಂದು ವಿಧಾನ, ನಮ್ಮಲ್ಲಿಗೆ ನಾವು ಮೆಚ್ಚಿಸಬೇಕೆಂದು ಬಯಸುವ ಅತಿಥಿಗಳು ಬಂದಾಗ, ಅವರ ಮುಂದೆ ನಮ್ಮ ನಡತೆ ಬದಲಾಗುವದೇ ಎಂದು ನಮ್ಮನ್ನು ಪ್ರಶ್ನಿಸಿಕೊಳ್ಳುವದು. ಒಂದು ವೇಳೆ ಹಾಗಿದ್ದರೆ, ಸ್ವತಃ ಯೇಸುವು ಕೆಲವು ದಿನ ನಮ್ಮಲ್ಲಿ ತಂಗಲು ಬಂದರೆ, ನಮ್ಮ ನಡತೆ ಇನ್ನೆಷ್ಟು ಬದಲಾಗಬಹುದು!

ನಮ್ಮೊಂದಿಗೆ ಯೇಸುವು ಸದಾ ಜೀವಿಸಿ, ನಮ್ಮ ಮನೆಗಳಲ್ಲಿ ಮೇಲಧಿಕಾರಿಯಾಗಿ ಇರುವದು ನಮಗೆ ಇಷ್ಟವಿಲ್ಲದಿದ್ದರೆ, "ನಿನ್ನ ರಾಜ್ಯವು ಬರಲಿ" ಎಂದು ಪ್ರಾರ್ಥಿಸುವದರಲ್ಲಿ ಅರ್ಥವಿಲ್ಲ. ಅಂತಿಮವಾಗಿ, ದೇವರ ರಾಜ್ಯದಲ್ಲಿ ಯೇಸುವು ಶಾಶ್ವತವಾಗಿ - ಕೆಲವು ದಿನಗಳು ಅಷ್ಟೇ ಅಲ್ಲ - ಎಲ್ಲದಕ್ಕೂ ಒಡೆಯರಾಗಿ ಹಾಜರಿರುತ್ತಾರೆ. ನಮಗೆ ನಮ್ಮ ಮನೆಯಲ್ಲಿ ಅವರನ್ನು ಕೆಲವು ದಿನಗಳು ಇರಿಸಿಕೊಳ್ಳಲು ಕಷ್ಟವಾದರೆ, ನಾವು ಅವರೊಡನೆ ನಿತ್ಯತ್ವವನ್ನು ಹೇಗೆ ಕಳೆಯುತ್ತೇವೆ?

ಪರಲೋಕದಲ್ಲಿ ನಿಕ್ಷೇಪ

"ನಿನ್ನ ರಾಜ್ಯವು ಬರಲಿ," ಎಂದು ಪ್ರಾರ್ಥಿಸುವ ಮನುಷ್ಯನು ತನ್ನ ಮನಸ್ಸು, ತನ್ನ ಪ್ರೀತಿ ಮತ್ತು ತನ್ನ ಅಪೇಕ್ಷೆಗಳನ್ನು ಪರಲೋಕದ ಸಂಗತಿಗಳಲ್ಲಿ ಇರಿಸಿದ್ದಾನೆ. ಆತನು ಕ್ರೈಸ್ತತ್ವ ಹಾಗೂ ಪವಿತ್ರತೆಗಳನ್ನು ಒಂದು ಉಡುಪಾಗಿ ಧರಿಸುವ ವ್ಯಕ್ತಿಯಲ್ಲ. ಆತನ ಆತ್ಮಿಕತೆ ಕೇವಲ ಹೊರತೋರಿಕೆಯಲ್ಲ. ಅದು ಆತನ ನರನಾಡಿಗಳಲ್ಲೂ ಹರಿಯುತ್ತದೆ. ಅವನು ಭೂಲೋಕಕ್ಕಿಂತ ಹೆಚ್ಚಾಗಿ ಪರಲೋಕದಲ್ಲಿ ನಿಕ್ಷೇಪಗಳನ್ನು ಸಂಗ್ರಹಿಸಲು ಆಸಕ್ತನಾಗಿದ್ದಾನೆ.

ಹಣದ ವಿಷಯದಲ್ಲಿ ಒಬ್ಬ ಕ್ರೈಸ್ತನ ಮನೋಭಾವವು ಅವನ ಆತ್ಮಿಕ ಮಟ್ಟವನ್ನು ಮತ್ತು ಅವನಲ್ಲಿ ದೇವರ ರಾಜ್ಯದ ಬರುವಿಕೆಗಾಗಿ ನಿಜವಾದ ಹಂಬಲ ಇದೆಯೋ ಇಲ್ಲವೋ ಎನ್ನುವದನ್ನು ಪರೀಕ್ಷಿಸುವ ಒಂದು ಉತ್ತಮ ಸಾಧನವಾಗಿದೆ.

ನಾನು ಕೇಳಿರುವ ಒಬ್ಬ ರೈತನ ಕಥೆ ನೆನಪಿಗೆ ಬರುತ್ತದೆ. ಅವನು ಒಂದು ದಿನ ತನ್ನ ಹೆಂಡತಿಗೆ, "ನಮ್ಮ ಹಸುವಿಗೆ ಎರಡು ಕರುಗಳು ಹುಟ್ಟಿವೆ, ಒಂದು ಬಿಳಿಯದು, ಇನ್ನೊಂದು ಕಂದು ಬಣ್ಣದ್ದು. ಅವು ಬೆಳೆದಾಗ ನಾವು ಅವುಗಳಲ್ಲಿ ಒಂದನ್ನು ಕರ್ತನಿಗೆ ಕೊಡಬೇಕು ಎಂದು ಯೋಚಿಸಿದ್ದೇನೆ," ಎಂದು ಹೇಳಿದನು. ಅವನ ಪತ್ನಿಯು, "ಯಾವುದನ್ನು ಕರ್ತನಿಗೆ ಕೊಡುತ್ತೀ, ಬಿಳಿಯದಾ ಅಥವಾ ಕಂದು ಬಣ್ಣದ್ದಾ?" ಎಂದು ಕೇಳಿದಳು. ಅದಕ್ಕೆ ಅವನು, "ನಾವು ಅದನ್ನು ಅವುಗಳು ಬೆಳೆದ ಮೇಲೆ ತೀರ್ಮಾನಿಸಬಹುದು," ಎಂದನು.

ಕರುಗಳು ಬಹಳ ಚೆನ್ನಾಗಿ ಬೆಳೆದವು. ಒಂದು ದಿನ ರೈತನು ಸಪ್ಪಗೆ ಮುಖದೊಡನೆ ತನ್ನ ಪತ್ನಿಗೆ, "ನಾನು ನಿನಗೊಂದು ದುಃಖದ ಸಂಗತಿಯನ್ನು ತಿಳಿಸಬೇಕು. ಈಗ ತಾನೇ ಕರ್ತನ ಕರುವು ಸತ್ತುಹೋಯಿತು," ಎಂದನು. ಆಕೆಯು, "ಆದರೆ ನಿನಗೆ ಕರ್ತನ ಕರು ಯಾವುದೆಂದು ಹೇಗೆ ಗೊತ್ತಾಯಿತು? ನೀನು ಅದರ ಬಗ್ಗೆ ತೀರ್ಮಾನಿಸಿರಲಿಲ್ಲ, ಅಲ್ಲವೇ?" ಎಂದು ಕೇಳಿದಳು. ಅದಕ್ಕೆ ಉತ್ತರವಾಗಿ ಅವನು, "ಅದು ಸರಿ, ಅಂದಿನಿಂದಲೂ ನನ್ನ ಮನಸ್ಸಿನಲ್ಲಿ ಕಂದು ಬಣ್ಣದ ಕರುವನ್ನು ಕರ್ತನಿಗೆ ಕೊಡಬೇಕು ಅಂದುಕೊಂಡಿದ್ದೆ; ಮತ್ತು ಅದು ಈ ಬೆಳಗ್ಗೆ ಸತ್ತುಹೋಯಿತು," ಎಂದನು.

ಹೆಚ್ಚಿನ ವಿಶ್ವಾಸಿಗಳ ಜೀವನದಲ್ಲಿ ಇದು ಹೀಗೆಯೇ ಆಗುತ್ತದೆ - ಯಾವಾಗಲೂ ಸಾಯುವದು ಕರ್ತನ ಕರುವೇ! ಅವರು ತಮ್ಮ ಸ್ವಂತದ ಎಲ್ಲಾ ಅವಶ್ಯಕತೆಗಳು ಪೂರೈಸಿದ ನಂತರ ಉಳಿದದ್ದನ್ನು ದೇವರಿಗೆ ಕೊಡುತ್ತಾರೆ. ಅವರು "ದೇವರ ವಿಷಯಗಳಲ್ಲಿ ಐಶ್ವರ್ಯವಂತರಾಗದೇ ಇರುವದರಿಂದ," ತಮ್ಮ ಇಡೀ ಜೀವಿತವನ್ನು ಆತ್ಮಿಕ ಬಡತನದಲ್ಲಿ ಕಳೆಯುತ್ತಾರೆ (ಲೂಕ 12:21.)

ಹಳೆಯ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ಯರಿಗೆ ತಮ್ಮ "ಬೆಳೆಯ ಪ್ರಥಮಫಲದಲ್ಲಿ ಉತ್ಕೃಷ್ಟವಾದದ್ದನ್ನು" ದೇವರಿಗೆ ಕೊಡಬೇಕೆಂಬ ಕಟ್ಟಳೆ ಮಾಡಿದ್ದರು (ವಿಮೋ. 23:19). ಅವರು ಈ ರೀತಿಯಾಗಿ ಮಾತ್ರ "ದೇವರನ್ನು ಸನ್ಮಾನಿಸಬಹುದಾಗಿತ್ತು" (ಜ್ಞಾನೋಕ್ತಿ 3:9). ಅದು ಈ ದಿನವೂ ಅದೇ ರೀತಿಯಾಗಿದೆ. ನಾವು ಕರ್ತನಿಗೆ ನಮ್ಮ ಅತ್ಯುತ್ತಮವಾದದ್ದನ್ನು ಕೊಡದೇ ಅವರನ್ನು ಸನ್ಮಾನಿಸಲು ಸಾಧ್ಯವಿಲ್ಲ.

ನಮ್ಮ ಜೀವನದಲ್ಲಿ ಇದು ಹೇಗಿದೇ? ನಾವು ದೇವರಿಗೆ ಅತ್ಯುತ್ತಮವಾದುದನ್ನು ಕೊಡದಿರುವದಕ್ಕೆ ಯಾವಾಗಲೂ ಒಂದು ನೆಪ ಇರುತ್ತದೆಯೇ? ಹಾಗಿದ್ದರೆ, ಅದು ನಮ್ಮ ಹೃದಯದ ನಿಜವಾದ ಸ್ಥಿತಿಯನ್ನು ತೋರಿಸುತ್ತದೆ. ಒಬ್ಬ ಮನುಷ್ಯನ ನಿಕ್ಷೇಪ ಎಲ್ಲಿ ಇದೆಯೋ, ಅವನ ಹೃದಯವೂ ಅಲ್ಲಿ ಇರುತ್ತದೆ.

ಆದರೆ "ನಿನ್ನ ರಾಜ್ಯವು ಬರಲಿ" ಎಂದು ಪ್ರಾರ್ಥಿಸುವ ವ್ಯಕ್ತಿ, ಹಣದ ವ್ಯಾಮೋಹ ಹಾಗೂ ಭೌತಿಕ ಸಂಗತಿಗಳಿಂದ ಬಿಡುಗಡೆ ಹೊಂದಿರುವ ಮನುಷ್ಯನು. ಈಗ ಅವನು ದೇವರಿಗಾಗಿಯೂ ಮತ್ತು ನಿತ್ಯತ್ವಕ್ಕಾಗಿಯೂ ಜೀವಿಸುತ್ತಾನೆ.

ದೇವರ ಸಂಪೂರ್ಣ ದೊರೆತನ

ದೇವರ ರಾಜ್ಯ ಎನ್ನುವದರ ಅರ್ಥ, ದೇವರ ಸರ್ಕಾರ ಮತ್ತು ದೇವರ ಸಂಪೂರ್ಣ ದೊರೆತನ ಎಂದು. ನಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯೇಸುಕ್ರಿಸ್ತನನ್ನು ಸರ್ವಾಧಿಕಾರಿಯನ್ನಾಗಿ ಮಾಡುವದು ಎಂದು ಅದರ ಅರ್ಥ.

ದೇವರ ರಾಜ್ಯವು ಬರಬೇಕು ಎನ್ನುವದು ನಮ್ಮ ಆಕಾಂಕ್ಷೆ ಆಗಿದ್ದರೆ, ಅದು ಮೊದಲು ನಮ್ಮ ಹೃದಯ, ನಮ್ಮ ಮನೆ ಮತ್ತು ನಮ್ಮ ಸಭೆಗಳಿಗೆ ಬರಬೇಕು. ನಾವು ಈ ಕ್ಷೇತ್ರಗಳಲ್ಲಿ ಸೈತಾನನಿಗೆ ಅಥವಾ ಮಾಂಸಕ್ಕೆ ಸ್ವಲ್ಪವೂ ಜಾಗ ಕೊಡಕೂಡದು. ದೇವರ ರಾಜ್ಯವು ನಮ್ಮ ಹೃದಯಗಳು, ಮನೆಗಳು ಮತ್ತು ಸಭೆಗಳನ್ನು ತುಂಬಿ, ಅಲ್ಲಿ ಇನ್ಯಾವುದಕ್ಕೂ ಸ್ವಲ್ಪವೂ ಜಾಗ ಇರದಂತಾಗಲಿ, ಎಂಬ ಹಾರೈಕೆ ನಮ್ಮದಾಗಬೇಕು.

ಪವಿತ್ರಾತ್ಮನು ಈ ಲೋಕಕ್ಕೆ "ದೇವರ ರಾಜ್ಯವನ್ನು ಪ್ರಬಲವಾಗಿ" ತರುವದಕ್ಕಾಗಿ ಬಂದನು (ಮಾರ್ಕ 9:1). ಈ ದಿನಗಳಲ್ಲಿ, ನಮ್ಮ ಸ್ಥಳೀಯ ಸಭೆಗಳು ದೇವರ ರಾಜ್ಯ ಹೇಗಿರುವದು ಎನ್ನುವದನ್ನು ಲೋಕಕ್ಕೆ ಪ್ರದರ್ಶಿಸಬೇಕು - ಆ ರಾಜ್ಯವು ಒಂದು ದಿನ ಇಡೀ ಲೋಕವನ್ನು ಆವರಿಸಲಿದೆ. ಕರ್ತನ ಈ ಇಚ್ಛೆಯನ್ನು ನಾವು ಪೂರೈಸದೇ ಉಳಿಸಿದ್ದೇವೆ.

ಮೊದಲು ದೇವರ ರಾಜ್ಯಕ್ಕಾಗಿ ತವಕಿಸಿರಿ ಮತ್ತು ಇಹಲೋಕದ ಯಾವ ವಿಷಯಕ್ಕಾಗಿಯೂ ಚಿಂತಿಸದಿರಿ ಎಂದು ಯೇಸುವು ನಮಗೆ ಹೇಳಿದ್ದರ ಅರ್ಥ, ನಾವು ನಿಜವಾಗಿ ಯಾವುದಕ್ಕಾದರೂ ತವಕಿಸುವದಾದರೆ, ಪರಲೋಕದಲ್ಲಿ ಇರುವ ದೇವರ ರಾಜ್ಯವು ಈ ಲೋಕಕ್ಕೂ ಬರಲಿ ಎಂದು ತವಕಿಸಬೇಕು ಎಂದು (ಮತ್ತಾಯ 6:33). ನಮ್ಮಲ್ಲಿ ಎಷ್ಟು ಜನರಲ್ಲಿ ಸಭೆಯ ಪವಿತ್ರತೆ ಮತ್ತು ದೇವರ ರಾಜ್ಯದ ಬರುವಿಕೆಗಾಗಿ ಅಂತಹ ಚಿಂತೆಯ ಭಾರವಿದೆ?

ನಮ್ಮ ನಡುವೆ ದೇವರ ರಾಜ್ಯಕ್ಕಾಗಿ ಅತೀ ಹೆಚ್ಚಿನ ಕಾಳಜಿಯನ್ನು ಹೊಂದಿರುವ ಅನೇಕರನ್ನು ದೇವರು ಕಾಣುವಂತಾಗಲಿ.

ಅಧ್ಯಾಯ 5
ದೇವರ ಚಿತ್ತ

"ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ".

ನಾವು ಯೇಸುವನ್ನು ’ಕರ್ತ’ನೆಂದು ಕರೆಯಲು ಸಾಧ್ಯವಾಗುವದು ನಾವು ನಮ್ಮ ನಿತ್ಯಜೀವನದಲ್ಲಿ ಯೇಸುವಿನ ಚಿತ್ತಕ್ಕೆ ವಿಧೇಯವಾಗಲು ಒಪ್ಪಿದಾಗ ಮಾತ್ರ. ಒಬ್ಬ ವ್ಯಕ್ತಿಯ ಬುದ್ಧಿಶಕ್ತಿ ಮತ್ತು ಭಾವನೆಗಳು ಎಚ್ಚರಗೊಂಡಾಗ ನಿಜವಾದ ಮಾನಸಾಂತರ ಆಗುವದಿಲ್ಲ, ಆದರೆ ಅದು ಅವನು ತನ್ನ ಚಿತ್ತವನ್ನು ಕರ್ತನಿಗೆ ಒಪ್ಪಿಸಿ, "ಕರ್ತನೇ, ನನ್ನ ಜೀವನದಲ್ಲಿ ನನ್ನ ಚಿತ್ತವಲ್ಲ, ಆದರೆ ನಿಮ್ಮ ಚಿತ್ತ ನೆರವೇರಲಿ," ಎಂದು ಹೇಳಿದಾಗ ಆಗುತ್ತದೆ. ನಾವು ದೇವರ ಮುಂದೆ ಈ ಮನೋಭಾವವನ್ನು ಸದಾ ಇರಿಸಿಕೊಂಡರೆ, ಕ್ರಮೇಣವಾಗಿ ನಾವು ಹೆಚ್ಚು ಹೆಚ್ಚಾಗಿ ಶುದ್ಧೀಕರಿಸಲ್ಪಡುವೆವು.

ಪವಿತ್ರತೆಯ ರಹಸ್ಯ

ಸ್ವತಃ ಯೇಸುವು ತನ್ನ ಈ ಲೋಕದ ಜೀವಿತದ ಉದ್ದಕ್ಕೂ, "ನನ್ನ ಚಿತ್ತವಲ್ಲ, ನಿಮ್ಮ ಚಿತ್ತ" ಎಂದು ತನ್ನ ತಂದೆಗೆ ಪ್ರಾರ್ಥಿಸಿದರು (ಯೋಹಾನ 6:38). ತಂದೆಯನ್ನು ಮೆಚ್ಚಿಸಲು ಯೇಸುವು ಸಹ ಹೀಗೆ ಜೀವಿಸಬೇಕಾಗಿದ್ದಾಗ, ನಮಗೆ ತಂದೆಯನ್ನು ಮೆಚ್ಚಿಸಲು ಬೇರೆ ಯಾವ ದಾರಿಯೂ ಇಲ್ಲವೆನ್ನುವದು ಖಚಿತ. ಈ ಮನೋಭಾವವನ್ನು ನಾವು ನಮ್ಮ ಜೀವನದಲ್ಲಿ ಯಾವಾಗಲೂ ಇರಿಸಿಕೊಳ್ಳದೇ ಇದ್ದರೆ, ನಾವು ಕರ್ತನೊಂದಿಗೆ ನಡೆಯಲು ಸಾಧ್ಯವಿಲ್ಲ.

ನಾವು ಹಲವಾರು ಘಂಟೆಗಳನ್ನು ಪ್ರಾರ್ಥನೆ, ದೇವರ ವಾಕ್ಯದ ಅಭ್ಯಾಸ ಮತ್ತು ನೂರಾರು ಕೂಟಗಳಲ್ಲಿ ಕಳೆಯಬಹುದು. ಆದರೆ ಇವೆಲ್ಲವೂ ನಮ್ಮನ್ನು "ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಮಿಯ ಮೇಲೆ (ಎಲ್ಲಕ್ಕೂ ಮೊದಲು ನಮ್ಮ ಸ್ವಂತ ಜೀವನದಲ್ಲಿ) ನೆರವೇರಲಿ," ಎಂದು ಹೇಳುವಂತೆ ಮಾಡದಿದ್ದರೆ, ನಾವು ಸಮಯದ ಪೋಲುಮಾಡಿದ್ದೇವೆ. ನಮ್ಮ ಹೃದಯವು "ತಂದೆಯೇ ನನ್ನ ಚಿತ್ತವಲ್ಲ, ನಿಮ್ಮ ಚಿತ್ತವೇ ನೆರವೇರಲಿ,"

ನಿಜವಾದ ಪವಿತ್ರತೆಯ ರಹಸ್ಯ ಇಲ್ಲಿ ಅಡಗಿದೆ.

ಪೌಲನು ಗಲಾತ್ಯರಿಗೆ ಮಾಂಸ ಹಾಗೂ ಆತ್ಮದ ನಡುವಿನ ಹೋರಾಟದ ಬಗ್ಗೆ ಬರೆದಾಗ, ಅವನು ವಿವರಿಸಿದ್ದು ಈ ಮಾನವ ಚಿತ್ತ ಹಾಗೂ ದೇವರ ಚಿತ್ತದ ನಡುವಿನ ಹೋರಾಟವೇ ಆಗಿತ್ತು.

’ಸ್ವಚಿತ್ತ’ ಎನ್ನುವದು ಶರೀರಭಾವ ಮತ್ತು ಅದರ ಕಾಮನೆಗಳ ಒಂದು ಚುಟುಕಾದ ವಿವರಣೆಯಾಗಿದೆ. ನೀವು ಹೊಸ ಒಡಂಬಡಿಕೆಯಲ್ಲಿ "ಮಾಂಸದ ಇಚ್ಛೆಗಳು" ಎಂದು ಎಲ್ಲೆಲ್ಲಿ ಓದುತ್ತಿರೋ, ಅದನ್ನು "ಸ್ವಚಿತ್ತ ಮತ್ತು ಸ್ವಾರ್ಥದ ಆಶೆಗಳು" ಎಂದು ಬದಲಾಯಿಸಬಹುದು. ಆಗ ನೀವು ಆ ವಚನದ ಅರ್ಥವನ್ನು ತಿಳಕೊಳ್ಳುವಿರಿ.

ಉದಾಹರಣೆಗಾಗಿ, ಶರೀರಭಾವದ ಅಭಿಲಾಷೆ ಆತ್ಮನಿಗೆ ವಿರುದ್ಧವಾಗಿದೆ, ಎಂದು ನಮಗೆ ಹೇಳಲಾಗಿದೆ (ಗಲಾತ್ಯ 5:17). ಇದರ ಅರ್ಥ, ಪವಿತ್ರಾತ್ಮನು ಯಾವಾಗಲೂ ನಮ್ಮ ಸ್ವಚಿತ್ತ ಮತ್ತು ಸ್ವಾರ್ಥದ ಆಸೆಗಳ ವಿರೋಧವಾಗಿ ಹೋರಾಡುವನು, ಎಂದು. ಮೊದಲು ನಮ್ಮ ಸ್ವಚಿತ್ತ ಮತ್ತು ಸ್ವಾರ್ಥಪರ ಆಸೆಗಳನ್ನು ಸಾಯಿಸದೆ, ನಮ್ಮನ್ನು ಪರಲೋಕಕ್ಕೆ ಯೋಗ್ಯರು ಅಥವಾ ಪವಿತ್ರರು ಮತ್ತು ಕ್ರಿಸ್ತನ ಸ್ವಾರೂಪ್ಯ ಹೊಂದಿರುವವರನ್ನಾಗಿ ಮಾಡಲು ಸಾಧ್ಯವಿಲ್ಲವೆಂದು ಪವಿತ್ರಾತ್ಮನಿಗೆ ತಿಳಿದಿದೆ.

ಪವಿತ್ರತೆ ಮತ್ತು ಶುದ್ಧೀಕರಣದ ಮಾರ್ಗ ಯಾವುದೆಂದರೆ, ಸ್ವಾರ್ಥತೆಯ ಮರಣ - ನನಗೆ ’ಇಲ್ಲ’ ಎಂದು ಹೇಳಿ, ದೇವರಿಗೆ ’ಒಪ್ಪುತ್ತೇನೆ’ ಎಂದು ಹೇಳುವದು. ಬೇರೆ ಶಬ್ದಗಳಲ್ಲಿ, "ತಂದೆಯೇ, ನನಗೆ ಜೀವನದಲ್ಲಿ ನಿಮ್ಮ ಚಿತ್ತದ ಹೊರತಾಗಿ ಯಾವುದೇ ಆಸೆ, ಯೋಜನೆ ಅಥವಾ ಹೆಬ್ಬಯಕೆಯೂ ಇಲ್ಲ. ನಾನು ನಿಮ್ಮ ಪರಿಪೂರ್ಣ ಚಿತ್ತವನ್ನು ಮೀರುವ ಯಾವುದನ್ನೂ ಆಶಿಸುವದಿಲ್ಲ," ಎನ್ನುವದು.

ನಿತ್ಯ ಜೀವನದಲ್ಲಿ ಶಿಲುಬೆ

"ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲು ಹೊತ್ತುಕೊಂಡು ನನ್ನ ಹಿಂದೆ ಬರಲಿ," ಎಂದು ಯೇಸುವು ಹೇಳಿದರು (ಲೂಕ 9:23). ನಮ್ಮ ನಿತ್ಯಜೀವನದಲ್ಲಿ ನಾವು ನಮ್ಮ ಶಿಲುಬೆಯನ್ನು, ನಮ್ಮ ಚಿತ್ತ ಮತ್ತು ದೇವರ ಚಿತ್ತ ಸಂಧಿಸುವ ಸ್ಥಳದಲ್ಲಿ ಪಡೆಯುತ್ತೇವೆ. "ತಂದೆಯೇ ನನ್ನ ಚಿತ್ತವಲ್ಲ, ನಿಮ್ಮ ಚಿತ್ತವೇ ಆಗಲಿ," ಎಂದು ಹೇಳುವದೇ ಶಿಲುಬೆಯನ್ನು ಎತ್ತಿಕೊಳ್ಳುವದಾಗಿದೆ.

ಯಾರು ತನ್ನ ಸ್ವಚಿತ್ತ, ಸ್ವಂತ ಯೋಜನೆಗಳು, ಸ್ವಂತ ಆಸೆಗಳು ಮತ್ತು ಹೆಬ್ಬಯಕೆಗಳನ್ನು ನಿರಾಕರಿಸಿದ್ದಾನೋ, ಮತ್ತು ಯಾರು "ಕರ್ತನೇ, ನಾನು ನನ್ನ ಶಿಲುಬೆಯನ್ನು ಹೊತ್ತುಕೊಂಡು, ನನ್ನ ಸ್ವಂತ ಆಸೆಗಳಿಗೆ ಸತ್ತು, ನಿಮ್ಮನ್ನು ಹಿಂಬಾಲಿಸಿ, ನಿಮ್ಮ ಚಿತ್ತವನ್ನು ಮಾತ್ರ ಪಾಲಿಸುತ್ತೇನೆ" ಎಂದು ಹೇಳಿದ್ದಾನೋ, ಅವನು ಮಾತ್ರ "ಪರಲೋಕದಲ್ಲಿ ನಿಮ್ಮ ಚಿತ್ತವು ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ," ಎಂಬ ಈ ಪ್ರಾರ್ಥನೆಯನ್ನು ಯಥಾರ್ಥನಾಗಿ ಪ್ರಾರ್ಥಿಸಲು ಸಾಧ್ಯವಿದೆ.

"ಎಲೈ ಕಷ್ಟಪಡುವವರೇ, ಹೊರೆ ಹೊತ್ತವರೇ ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ. ನಾನು ನಿಮಗೆ ವಿಶ್ರಾಂತಿ ಕೊಡುವೆನು," ಎಂದು ಯೇಸುವು ಹೇಳಿದರು (ಮತ್ತಾಯ 11:28). ಆದರೆ ಅವರು ಅಷ್ಟಕ್ಕೇ ನಿಲ್ಲಿಸಲಿಲ್ಲ. ಅವರು ಮುಂದುವರಿದು, ಆ ವಿಶ್ರಾಂತಿಯನ್ನು ನಮಗೆ ಹೇಗೆ ಕೊಡುವರು ಎಂದು ತಿಳಿಸಿದರು.

ಅವರು ಹೀಗೆ ವಿವರಿಸಿದರು: "ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು" (ಮತ್ತಾಯ 11:29). ಬೇರೆ ಮಾತುಗಳಲ್ಲಿ, ನೀವು ಶಿಲುಬೆಯನ್ನು ಹೊತ್ತುಕೊಂಡು ನಿಮ್ಮ ಸ್ವಂತ ಚಿತ್ತಕ್ಕೆ ’ಇಲ್ಲ’ ಎನ್ನುವ ವರೆಗೆ ಆ ವಿಶ್ರಾಂತಿಯನ್ನು ನೀವು ಅರಿಯುವದು ಅಸಾಧ್ಯ. ನಾವು ಸ್ವಚಿತ್ತವನ್ನು ಮಾಡುವದರಿಂದ ಎಲ್ಲಾ ಅವಿಶ್ರಾಂತಿ ಉಂಟಾಗುತ್ತದೆ. ನಿಮಗೆ ಶಿಲುಬೆಯನ್ನು ಎತ್ತಿಕೊಳ್ಳಲು ಇಷ್ಟವಿಲ್ಲವಾದರೆ, ಕರ್ತರ ಬಳಿಗೆ ನೀವು ಬರಲಾರಿರಿ.

ಒಬ್ಬ ನಿಜವಾದ ಶಿಷ್ಯನು ಮಾತ್ರವೇ, "ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ," ಎಂದು ಪ್ರಾರ್ಥಿಸಬಲ್ಲನು. ಸ್ವತಃ ಯೇಸುವು ತಮ್ಮ ಜೀವಿತವಿಡೀ ಈ ಪ್ರಾರ್ಥನೆಯನ್ನು ಮಾಡಿದರು. ಅವರು ತನ್ನ ಬೋಧನೆಯಂತೆ ನಡೆದರು. ಒಬ್ಬ ಸಾಮಾನ್ಯ ಮನುಷ್ಯನಾಗಿ ಅವರು ಜೀವಿಸಿದರು ಮತ್ತು ಅವರ ಅತಿ ದೊಡ್ಡ ಹಂಬಲ ತನ್ನ ತಂದೆಯ ಚಿತ್ತದಂತೆ ನಡೆಯುವದೇ ಆಗಿತ್ತು.

ಯೇಸುವು ಭೂಲೋಕಕ್ಕೆ ಬಂದದ್ದು ಯಾಕೆ? ಅದಕ್ಕೆ ಉತ್ತರ, ತಂದೆಯ ಚಿತ್ತದಂತೆ ನಡೆಯಲು, ಎಂದಾಗಿದೆ. ಅವರು ಅದನ್ನೇ ಯೋಹಾನ 6:38ರಲ್ಲಿ, "ನಾನು ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸಲಿಕ್ಕಾಗಿ ಪರಲೋಕದಿಂದ ಬಂದಿದ್ದೇನೆ, ಆದರೆ ನನ್ನ ಚಿತ್ತದಂತೆ ನಡೆಯಲಿಕ್ಕಾಗಿ ಅಲ್ಲ," ಎಂದು ವಿವರಿಸಿದರು. ಅವರು ಬಂದುದು ಪ್ರಾಥಮಿಕವಾಗಿ ಲೋಕದ ಪಾಪಗಳಿಗಾಗಿ ಸಾಯಲಿಕ್ಕಾಗಿ ಅಲ್ಲ. ಇಲ್ಲ. ಅವರು ತನ್ನ ತಂದೆಯ ಚಿತ್ತವನ್ನು ನೆರವೇರಿಸಲು ಬಂದರು. ಅವರು ಕಲ್ವಾರಿಗೆ ಹೋಗಿ ಸಾಯಲು ಕಾರಣ, ಅದು ಅವರಿಗಾಗಿದ್ದ ತಂದೆಯ ಚಿತ್ತದ ಒಂದು ಅಂಶ ಆಗಿದ್ದರಿಂದಲೇ.

"ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರ," ಎಂದು ಯೇಸುವು ಯೋಹಾನ 4:34ರಲ್ಲಿ ಹೇಳಿದರು. ಹೇಗೆ ಒಬ್ಬ ಹಸಿದ ಮನುಷ್ಯನು ಅಹಾರವನ್ನು ಬೇಡುವನೋ, ಹಾಗೆಯೇ ಯೇಸುವಿನ ಇಡೀ ಅಂತರಾಳವು ತಂದೆಯ ಚಿತ್ತವನ್ನು ಮಾಡಲು ಹಾತೊರೆಯಿತು. ಯೇಸುವನ್ನು ಹಿಂಬಾಲಿಸುವದು ಎಂದರೆ, ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ತಂದೆಯ ಚಿತ್ತವನ್ನು ಮಾಡಲು ಅದೇ ರೀತಿಯ ಹಂಬಲ ಹೊಂದಿರುವದು.

ಪರಲೋಕದಲ್ಲಿ ಅಷ್ಟೊಂದು ಸಂತೋಷವಿದ್ದು, ದುಃಖವೆಂಬುದೇ ಇಲ್ಲದಿರಲು ಕಾರಣ ಏನೆಂದರೆ, ಅಲ್ಲಿ ದೇವರ ಚಿತ್ತವು ಸಂಪೂರ್ಣವಾಗಿ ನೆರವೇರುತ್ತದೆ. ದೇವರ ಚಿತ್ತವೇ ಜನರಿಗೆ ಪರಮ ಸಂತೋಷ ಮತ್ತು ಸಂಪೂರ್ಣ ಹರ್ಷವನ್ನು ನೀಡುವ ವಿಷಯವಾಗಿದೆ.

"ಕ್ರಿಸ್ತನು ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಆತನಿಗಿದ್ದ ಭಾವವನ್ನೇ ಹಿಡಿದುಕೊಳ್ಳಿರಿ. ಯಾಕಂದರೆ ಶರೀರದಲ್ಲಿ ಬಾಧೆ ಪಟ್ಟವನು ಪಾಪದ ವಶದಿಂದ ತಪ್ಪಿಸಿಕೊಂಡವನಾಗಿ, ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ, ದೇವರ ಚಿತ್ತದ ಪ್ರಕಾರ ಬದುಕುವದಕ್ಕೆ ಪ್ರಯತ್ನಮಾಡುವನು" ಎಂದು ಪೇತ್ರನು ಹೇಳುತ್ತಾನೆ (1 ಪೇತ್ರ 4:1,2).

ಅಪೋಸ್ತಲನಾದ ಯೋಹಾನನು, "ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು," ಎಂದು ಬರೆಯುತ್ತಾನೆ (1 ಯೋಹಾನ 2:17).

ವಿಶ್ವಾಸಿಗಳಿಗಾಗಿ ಅಪೋಸ್ತಲರಿಗೆ ಇದ್ದ ಪ್ರಾರ್ಥನೆಯ ಭಾರ, "ಅವರು ಪ್ರವೀಣರಾಗಿಯೂ, ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಕುರಿತು ಪೂರ್ಣ ನಿಶ್ಚಯವುಳ್ಳವರಾಗಿಯೂ ನಿಂತಿರಬೇಕು," ಎಂಬುದೇ ಆಗಿತ್ತು (ಕೊಲೊಸ್ಸೆ 4:12). ಒಬ್ಬ ಮನುಷ್ಯನು ತನ್ನ ಉಳಿದಿರುವ ಜೀವಿತದಲ್ಲಿ ದೇವರ ಚಿತ್ತವನ್ನು ಮಾಡಲು ತನ್ನನು ಸಮರ್ಪಿಸಿಕೊಳ್ಳದೆ, ಕೇವಲ ಪಾಪ ಕ್ಷಮೆಯನ್ನು ಹೊಂದುವ ರಕ್ಷಣೆಯು ಒಂದು ತಪ್ಪಾದ ರಕ್ಷಣೆ, ಎಂದು ಆ ಅಪೊಸ್ತಲರು ತಿಳಿದಿದ್ದರು. ಪಾಪ ಕ್ಷಮಾಪಣೆ ಕೇವಲ ಒಂದು ಪ್ರವೇಶದ್ವಾರದಂತೆ ಇದೆ, ನಾವು ಅದನ್ನು ಪ್ರವೇಶಿಸಿದಾಗ ದೇವರ ಚಿತ್ತವನ್ನು ಸಂಪೂರ್ಣವಾಗಿ ಪಾಲಿಸಿ ನಡೆಯುವ ಇಕ್ಕಟ್ಟಾದ ದಾರಿಗೆ ಬರುತ್ತೇವೆ.

ಪರಲೋಕದಲ್ಲಿ ದೇವರ ಚಿತ್ತ ಹೇಗೆ ನೆರವೇರುತ್ತದೆ?

"ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ," ಎಂದು ನಾವು ಪ್ರಾರ್ಥಿಸತಕ್ಕದ್ದು. ಪರಲೋಕದಲ್ಲಿ ದೇವರ ಚಿತ್ತ ಹೇಗೆ ನೆರವೇರುವದು? ನಾನು ನಾಲ್ಕು ವಿಷಯಗಳನ್ನು ಹೇಳಲು ಬಯಸುತ್ತೇನೆ.

ಮೊದಲನೆದಾಗಿ, ದೇವದೂತರು ದೇವರ ಆಜ್ಞೆಗಳಿಗಾಗಿ ಅವರ ಸಮ್ಮುಖದಲ್ಲಿ ಸದಾ ಸಿದ್ಧರಾಗಿ ಕಾದಿರುತ್ತಾರೆ. ಅವರು ತಮ್ಮ ಸ್ವಂತ ಅಭಿಪ್ರಾಯದ ಪ್ರಕಾರ ’ದೇವರಿಗಾಗಿ ಏನಾದರೂ’ ಮಾಡಲು ಪರಲೋಕದಲ್ಲಿ ಅಲ್ಲಿಲ್ಲಿ ಓಡಾಡುವದಿಲ್ಲ. ಇಲ್ಲ, ಅವರು ಮೊದಲು ದೇವರ ಆದೇಶಕ್ಕಾಗಿ ಕಾಯುತ್ತಾರೆ - ಮತ್ತು ಅದರ ನಂತರ ಅದನ್ನು ನಿರ್ವಹಿಸುತ್ತಾರೆ.

ದೇವರು ಹೀಗೆ ಹೇಳುತ್ತಾರೆ, "ನನ್ನ ಕೈಸನ್ನೆಗಾಗಿ, ನನ್ನ ಕಣ್ಣಿನ ಆದೇಶಕ್ಕಾಗಿ ಕಾದಿರುವವನನ್ನು - ನಾನು ಕೊಡುವ ಕೆಲಸವನ್ನು ನನ್ನ ವೈಖರಿಯಲ್ಲಿ ಮಾಡಿ, ನಾನು ಕೊಡದಿರುವ ಕೆಲಸವನ್ನು ತಿರಸ್ಕರಿಸುವವನನ್ನು - ನಾನು ಎದುರು ನೋಡುತ್ತಿದ್ದೇನೆ. ನನ್ನ ಸಂಪೂರ್ಣ ಚಿತ್ತವನ್ನು ಪಾಲಿಸಿ, ತನ್ನ ಒಡೆಯನ ಮನಸ್ಸನ್ನು ಅರಿಯಲು ಬದ್ಧನಾಗಿರುವವನು - ಆಹಾ, ಇಂಥ ಒಬ್ಬನನ್ನು ನಾನು ಕಂಡಾಗ ಎಂತಹ ಪರಮಾನಂದ ನನ್ನದಾಗುವದು!"

ಆದ್ದರಿಂದ, ನಾವು "ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ," ಎಂದು ಪ್ರಾರ್ಥಿಸುವಾಗ, ಎಲ್ಲಕ್ಕೂ ಮೊದಲು ದೇವರು ನಮಗೆ ಏನು ಹೇಳುತ್ತಿದ್ದಾರೆ ಎಂದು ತಿಳಿಯಲು ನಾವು ಇಷ್ಟಪಡುತ್ತೇವೆ, ಎಂದು ಇದರ ಅರ್ಥ.

ಎರಡನೆಯದಾಗಿ, ದೇವರು ಹೇಳಿದ್ದನ್ನು ದೇವದೂತರು ಕೂಡಲೇ ಪಾಲಿಸುತ್ತಾರೆ. ಅವರ ಪ್ರತಿಕ್ರಿಯೆ ಹೀಗೆ ಇರುವದಿಲ್ಲ: "ಕರ್ತನೇ, ನಾನು ಇದರ ಬಗ್ಗೆ ಕೆಲವು ದಿನ ಯೋಚಿಸುತ್ತೇನೆ. ನನ್ನ ಜೊತೆಯ ದೇವದೂತರು ಈ ವಿಷಯವಾಗಿ ಏನು ಹೇಳುತ್ತಾರೆಂದು ತಿಳಿಯಲು ಬಯಸುತ್ತೇನೆ." ಪರಲೋಕದಲ್ಲಿ ಹಾಗೆ ಆಗುವದಿಲ್ಲ. ದೇವರು ನುಡಿದ ಮಾತು ಅಂತಿಮವಾದದು. ಅದಕ್ಕೆ ಥಟ್ಟನೆ ವಿಧೇಯತೆ ಸಲ್ಲುತ್ತದೆ.

ಹಾಗಾಗಿ ನಮ್ಮ ಪ್ರಾರ್ಥನೆ ಹೀಗಿರಬೇಕು: "ತಂದೆಯೇ, ನಿಮ್ಮ ಮಾತು ಕೇಳಿದೊಡನೆ ನಾನು ಕಾಲಹರಣ ಮಾಡದಂತೆ ನನಗೆ ಸಹಾಯ ಮಾಡಿ. ನಾನು ನಿಮ್ಮ ಸಮಯಕ್ಕೆ ಮೊದಲು ಮುನ್ನುಗ್ಗಲು ಬಯಸುವದಿಲ್ಲ, ಆದರೆ ನೀವು ನುಡಿದೊಡನೆ ಅದನ್ನು ಪಾಲಿಸಲು ಬಯಸುತ್ತೇನೆ."

ಮೂರನೆಯದಾಗಿ, ದೇವರು ಪರಲೋಕದಲ್ಲಿ ಏನೇ ಆಜ್ಞಾಪಿಸಿದರೂ, ಅದನ್ನು ಸಂಪೂರ್ಣವಾಗಿ ಮಾಡಲಾಗುವದು. ಆ ದೇವದೂತರು ಹೊರಟು ದೇವರನ್ನು ಭಾಗಶಃ ಪಾಲಿಸುವದಿಲ್ಲ. ಆದ್ದರಿಂದ ನಮ್ಮ ಪ್ರಾರ್ಥನೆ, "ತಂದೆಯೇ, ನನ್ನ ಜೀವನದಲ್ಲಿ ನಿಮ್ಮ ಚಿತ್ತವನ್ನು ಸಂಪೂರ್ಣವಾಗಿ ಪೂರೈಸಲು - ಪ್ರತಿಯೊಂದು ಆಜ್ಞೆಯನ್ನು ಪೂರ್ತಿಯಾಗಿ ಪಾಲಿಸಲು, ಅದಕ್ಕೆ ಎಷ್ಟು ಶ್ರಮವಾದರೂ ಸರಿ - ನನಗೆ ಸಹಾಯ ಮಾಡಿ," ಎಂದು ಆಗಿರಬೇಕು.

ಆ ಮೇಲೆ ಕೊನೆಯದಾಗಿ, ದೇವದೂತರ ವಿಧೇಯತೆ ಹರ್ಷಭರಿತವಾದದ್ದು. ಅವರ ವಿಧೇಯತೆಯಲ್ಲಿ ಅಸಮಾಧಾನ ಮತ್ತು ಗೊಣಗುಟ್ಟುವದು ಇಲ್ಲ. ಯಾವ ದೇವದೂತನೂ ತನ್ನ ಕರ್ತವ್ಯವನ್ನು ಇನ್ನೊಬ್ಬನ ಕೆಲಸದೊಂದಿಗೆ ಹೋಲಿಸಿ, "ಕರ್ತನೇ, ಆ ದೇವದೂತನಿಗಿಂತ ಹೆಚ್ಚು ಕಷ್ಟಕರವಾದ ಕೆಲಸವನ್ನು ನನಗೆ ಏಕೆ ಕೊಟ್ಟಿದ್ದೀರಿ?" ಇತ್ಯಾದಿಯಾಗಿ ಕೇಳುವದಿಲ್ಲ.

ವಿಶ್ವಾಸಿಗಳ ನಡುವೆಯೂ ಸಹ ನಮಗೆ ಅಂತಹ ದೂರುಗಳು ಕೇಳಿಬರುತ್ತವೆ - "ನಾನೊಬ್ಬನೇ ಏಕೆ ಎಲ್ಲಾ ಶ್ರಮ ಪಡಬೇಕು? ಅವನಿಗೆ/ಅವಳಿಗೆ ಏಕೆ ಹಾಗಿಲ್ಲ?" ಇತ್ಯಾದಿಯಾಗಿ. ಆದರೆ ಪರಲೋಕದಲ್ಲಿ ದೇವದೂತರಿಂದ ಇಂತಹ ಮಾತುಗಳು ಎಂದಿಗೂ ಹೊರಡುವದಿಲ್ಲ. ಅವರು ದೇವರಿಗೋಸ್ಕರ ಏನನ್ನಾದರೂ ಮಾಡುವದು ಒಂದು ಸುಸಂದರ್ಭ ಎಂದು ಎಣಿಸುತ್ತಾರೆ ಮತ್ತು ಪ್ರತಿ ಸಂದರ್ಭದಲ್ಲಿ ಅವರಿಗೆ ವಿಧೇಯರಾಗಲು ಸಂತೋಷ ಪಡುತ್ತಾರೆ.

ಆದ್ದರಿಂದ ನಾವು ಈ ಪ್ರಾರ್ಥನೆ ಮಾಡುವಾಗ ದೇವರ ಚಿತ್ತವು ನಮ್ಮ ಜೀವನದಲ್ಲಿ ಈ ರೀತಿಯಾಗಿ - ಸಂತೋಷದಿಂದ ಮತ್ತು ಯಾವ ದೂರುಗಳೂ ಇಲ್ಲದೆ ಮತ್ತು ಇತರರೊಂದಿಗೆ ಹೋಲಿಕೆ ಮಾಡದೆ - ನೆರವೇರಲಿ ಎಂದು ಕೇಳಿಕೊಳ್ಳುತ್ತೇವೆ.

ನಿತ್ಯತ್ವದಲ್ಲಿ ವಿಷಾದವಿಲ್ಲ

ನೀವು ದೇವರ ಚಿತ್ತವನ್ನು ಈ ರೀತಿಯಾಗಿ ಭೂಲೋಕದಲ್ಲಿ ಪಾಲಿಸಿದರೆ, ನೀವು ಪರಲೋಕಕ್ಕೆ ಹೋದಾಗ ನಿಮಗೆ ಯಾವ ವಿಷಾದವೂ ಇರುವದಿಲ್ಲ.

ನಾವು ಇನ್ನು ಸ್ವಲ್ಪ ಸಮಯದಲ್ಲಿ ಕರ್ತರನ್ನು ಮುಖಾಮುಖಿಯಾಗಿ ನೋಡುವಾಗ, ಆವರಿಗೆ ನಾವು ನಮ್ಮ ಜೀವನದ ಎಲ್ಲಾ ಭಾಗಗಳನ್ನು ಕೊಡಬೇಕಾಗಿತ್ತು ಮತ್ತು ಸಂಪೂರ್ಣವಾಗಿ ವಿಧೇಯರಾಗಬೇಕಿತ್ತು ಎಂದು ಆಶಿಸುತ್ತೇವೆ. ಈ ಲೋಕದಲ್ಲಿ ನೀವು ದೇವರ ಎಲ್ಲಾ ಆಜ್ಞೆಗಳನ್ನು ತಡಮಾಡದೆ, ಸಂತೋಷದಿಂದ ಮತ್ತು ಸಂಪೂರ್ಣವಾಗಿ ಪಾಲಿಸದೆ ಪರಲೋಕಕ್ಕೆ ಹೋದಲ್ಲಿ, ನಿಮ್ಮ ಅನುಭವದ ಮಾಧುರ್ಯವು ಸ್ವಲ್ಪ ಕುಗ್ಗುವದು.

ಸಾಧು ಸುಂದರ್ ಸಿಂಗ್ ರವರು ಹೇಳುತ್ತಿದ್ದ ಮಾತು, "ನೀವು ಒಂದು ಸಾರಿ ಈ ಲೋಕವನ್ನು ಬಿಟ್ಟ ಮೇಲೆ, ನಿಮಗೆ ಕ್ರಿಸ್ತನಿಗಾಗಿ ಶಿಲುಬೆಯನ್ನು ಹೊರುವ ಇನ್ನೊಂದು ಅವಕಾಶ ಸಿಗಲಾರದು," ಎಂದು. ನೀವು ಕರ್ತನಿಗೋಸ್ಕರ ನಿಮ್ಮ ಪ್ರೀತಿಯನ್ನು ಸಾಬೀತು ಪಡಿಸಲು ಬಯಸುವದಾದರೆ, ಅದನ್ನು ಮಾಡುವ ಸಮಯ ಈಗಲೇ - ನೀವು ಪರಲೋಕಕ್ಕೆ ಹೋದ ಮೇಲೆ ಅಲ್ಲ.

ನಾವು ನೋಡಿರುವ ಮೂರು ಬೇಡಿಕೆಗಳ ಬಗ್ಗೆ ಯೋಚಿಸಿ.

"ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ, ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ." ನಾವು ಬಹಳ ಅವಶ್ಯವಾದ ಪಾಪ ಕ್ಷಮಾಪಣೆಯನ್ನು ಯಾಚಿಸುವದಕ್ಕೂ ಮುನ್ನ, ತಂದೆಯ ನಾಮವು ಪರಿಶುದ್ಧವೆಂದು ಎಣಿಸಲ್ಪಡುವದು, ಅವರ ರಾಜ್ಯದ ಬರುವಿಕೆ ಮತ್ತು ನಮ್ಮ ಜೀವನದಲ್ಲಿ ಅವರ ಚಿತ್ತವು ನೆರವೇರುವದು, ಇವನ್ನು ಮೊದಲು ಬಯಸಬೇಕೆಂದು ಕರ್ತರು ನಮಗೆ ಕಲಿಸಿದರು.

ಕರ್ತರು ನಮಗೆ ಕಲಿಸಲು ಪ್ರಯತ್ನಿಸುತ್ತಿರುವದನ್ನು ನಾವು ಕಲಿಯೋಣ.

ಅಧ್ಯಾಯ 6
ನಮ್ಮ ದೈಹಿಕ ಅವಶ್ಯಕತೆಗಳು

"ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು."

ದೇವರು ನಮ್ಮ ಎಲ್ಲಾ ಶಾರೀರಿಕ ಅವಶ್ಯಕತೆಗಳನ್ನು ಪೂರೈಸಲು ಆಸಕ್ತರಾಗಿದ್ದಾರೆ. ಆದರೆ ಈ ಅವಶ್ಯಕತೆಗಳು ನಮಗೆ ಹಾನಿಯಾಗದಂತೆ ಪೂರೈಸಲ್ಪಡಬೇಕು. ಜೀವನದಲ್ಲಿ ದೇವರಿಗೆ ಪ್ರಥಮ ಸ್ಥಾನ ಹೇಗೆ ನೀಡುವದೆಂದು ತಿಳಿಯದಿದ್ದಾಗ, ಆರ್ಥಿಕ ಉನ್ನತಿ ಹಾಗೂ ಭೌತಿಕ ಆಶೀರ್ವಾದಗಳ ಮೂಲಕ ಜನರು ಆತ್ಮಿಕವಾಗಿ ಹಾಳಾಗುವದೂ ಇದೆ.

ಪರಿಪಕ್ವನಾದ ಆತ್ಮಿಕ ಮನುಷ್ಯನು ಹತ್ತು ಸಾವಿರ ರೂಪಾಯಿಗಳನ್ನು ಬಹಳ ಲಾಭದಾಯಕವಾಗಿ ಬಳಸಬಹುದು; ಆದರೆ ಅದೇ ಹಣವು ಒಬ್ಬ ಹಟಮಾರಿ, ಬೇಜವಾಬ್ದಾರಿ ಹುಡುಗನನ್ನು ಕೆಡಿಸಿಬಿಡಬಹುದು.

ಆದಕಾರಣ ದೇವರು ಭೌತಿಕವಾಗಿ, ಪ್ರಾಪಂಚಿಕವಾಗಿ ನಮ್ಮನ್ನು ಆಶೀರ್ವದಿಸುವ ಮೊದಲು, ನಾವು ಅವರಲ್ಲಿ ಕೇಂದ್ರಿತರಾಗುವಂತೆ ಮಾಡಲು ಬಯಸುತ್ತಾರೆ.

ಮೊದಲು ನಮ್ಮ ಶಾರೀರಿಕ ಅವಶ್ಯಕತೆಗಳು

ಈ ಪ್ರಾರ್ಥನೆಯಲ್ಲಿ ನಮ್ಮ ವೈಯಕ್ತಿಕ ಅವಶ್ಯಕತೆಗಳಿಗೆ ಸಂಬಂಧಿಸಿದ ಮೂರು ಬೇಡಿಕೆಗಳಿವೆ. ಆಶ್ಚರ್ಯಕರವೆಂದರೆ, ಮೊದಲನೆಯದು ನಮ್ಮ ಆತ್ಮಿಕ ಬೆಳವಣಿಗೆಗಾಗಿ ಅಲ್ಲ! ಇದು ಗಮನಾರ್ಹವಾಗಿದೆ ಅಲ್ಲವೆ? ಎಲ್ಲಕ್ಕೂ ಮೊದಲು, "ನಮ್ಮನ್ನು ಕೇಡಿನಿಂದ ತಪ್ಪಿಸಿ," ಎಂದಾಗಲೀ ಅಥವಾ, "ನಮಗೆ ಪಾಪದ ಮೇಲೆ ಜಯವನ್ನು ನೀಡಿ," ಎಂದಾಗಲೀ ಅಥವಾ ಕನಿಷ್ಟ ಪಕ್ಷ, "ನಮ್ಮನ್ನು ಪವಿತ್ರಾತ್ಮನಿಂದ ತುಂಬಿಸಿ," ಎಂಬ ಬೇಡಿಕೆಯೂ ಇಲ್ಲ. ಮೊದಲ ಬೇಡಿಕೆ, "ಕರ್ತನೇ, ನನ್ನ ಶಾರೀರಿಕ ಅವಶ್ಯಕತೆಗಳನ್ನು ಪೂರೈಸಿ," ಎಂದು ಆಗಿದೆ.

ಮಾನವನು ಮೂರು-ಪದರುಗಳ ಜೀವಿಯೆಂದು ಸತ್ಯವೇದ ತಿಳಿಸುತ್ತದೆ. ದೇವರೊಂದಿಗೆ ಸಂಪರ್ಕವನ್ನು ಹೊಂದಲಿಕ್ಕಾಗಿ ಒಂದು ಆತ್ಮ, ವ್ಯಕ್ತಿತ್ವವಾದ ಪ್ರಾಣ (ಅವನ ಬುದ್ಧಿ, ಭಾವನೆ ಮತ್ತು ಮನಸ್ಸು) ಹಾಗೂ ಶರೀರ, ಇವುಗಳನ್ನು ಅವನು ಹೊಂದಿದ್ದಾನೆ (1 ಥೆಸಲೊ. 5:23)

.

ಇಲ್ಲಿನ ಮೂರು ಬೇಡಿಕೆಗಳು ಮೇಲಿನ ಮೂರು ಭಾಗಗಳಿಗೆ ಸಂಬಂಧಿಸಿವೆ. ಮೊದಲ ಬೇಡಿಕೆ ನಮ್ಮ ದೈಹಿಕ ಅವಶ್ಯಕತೆಗಳ ಕುರಿತಾಗಿದೆ; ಎರಡನೆಯದು ನಮ್ಮ ಮನಸ್ಸನ್ನು (ಪ್ರಾಣ) ಪೀಡಿಸಬಹುದಾದ ಪಾಪ ದೂಷಣೆಯ ಕುರಿತಾಗಿದೆ; ಹಾಗೂ ಮೂರನೆಯ ಬೇಡಿಕೆ, ಆತ್ಮಿಕ ಕೇಡಿನಿಂದ ನಮ್ಮ ಆತ್ಮದ ಬಿಡುಗಡೆಗೆ ಸಂಬಂಧಿಸಿದೆ. ಆತ್ಮವು ನಮ್ಮ ಜೀವದ ಅತಿ ಮುಖ್ಯ ಭಾಗವಾಗಿದೆ. ಆದರೂ ಇಲ್ಲಿ, ನಮ್ಮ ದೈಹಿಕ ಅವಶ್ಯಕತೆಗಳಿಗಾಗಿ ಮೊದಲು ಪ್ರಾರ್ಥಿಸಲು ಕರ್ತರು ನಮಗೆ ಕಲಿಸಿದರು.

ದೇಹದ ವಿಷಯವಾಗಿ ಕ್ರೈಸ್ತ ಪ್ರಪಂಚದಲ್ಲಿ ಎರಡು ಅತಿರೇಕದ ಅಭಿಪ್ರಾಯಗಳು ಇರುತ್ತವೆ.

ಕೆಲವರು ದೇಹಕ್ಕೆ ಎಲ್ಲಾ ವಿಧವಾದ ಸುಖವೂ ನಿರಾಕರಿಸಲ್ಪಟ್ಟು, ಅದು ತಗ್ಗಿಸಲ್ಪಡದ ಹೊರತು ನಾವು ಪವಿತ್ರರಾಗೆವು, ಎಂದು ಬೋಧಿಸುವ ವೈರಾಗ್ಯ ದೃಷ್ಟಿಯನ್ನು ಹೊಂದಿದ್ದಾರೆ. ಆದರೆ ದೇಹವು ಪಾಪಕ್ಕೆ ಕಾರಣವಾಗಲು ಸಾಧ್ಯವಿಲ್ಲ - ಏಕೆಂದರೆ ದೇಹವೇ ಇಲ್ಲದಿರುವ ಸೈತಾನನು ಪಾಪದಿಂದ ತುಂಬಿದ್ದಾನೆ, ಹಾಗೂ ದೇಹವನ್ನು ಹೊಂದಿರುವ ಯೇಸುವು ಪಾಪ ಮಾಡಲೇ ಇಲ್ಲ.

ಈ ವೈರಾಗ್ಯ ದೃಷ್ಟಿಯು ವೈವಾಹಿಕ ಸಂಬಂಧವನ್ನೂ ಸಹ ಪಾಪಯುಕ್ತವೆಂದು ಹೇಳುತ್ತದೆ. ಆದರೆ ಮಾನವನಲ್ಲಿ ಇರುವ ಲೈಂಗಿಕ ಹಂಬಲವು ದೇವರ ಸೃಷ್ಟಿಯೆಂದು ನೆನಪಿಸಿಕೊಳ್ಳಿ, ಮತ್ತು ಅವರು ಅದನ್ನು "ಬಹಳ ಒಳ್ಳೆಯದು" ಎಂದು ವಿವರಿಸಿದರು (ಆದಿ. 1:31). ಆಹಾರ, ವಿಶ್ರಾಂತಿ ಮತ್ತು ಲೈಂಗಿಕತೆ, ಈ ಹಂಬಲಗಳು ದೇವರಿಂದ ಉಂಟುಮಾಡಲ್ಪಟ್ಟ ಉತ್ತಮ, ಸಹಜ ದೈಹಿಕ ಬಯಕೆಗಳು. ನಾವು ಅವುಗಳಲ್ಲಿ ಯಾವುದರ ಬಗ್ಗೆಯೂ ನಾಚಿಕೊಳ್ಳಬೇಕಿಲ್ಲ. ಆದರೆ ನಾವು ಅವುಗಳಲ್ಲಿ ಯಾವುದನ್ನೂ ದೇವರು ನೀಷೇಧಿಸಿದ ರೀತಿಯಲ್ಲಿ ತೃಪ್ತಿಪಡಿಸುತ್ತಿಲ್ಲ ಎಂದು ಮಾತ್ರ ಎಚ್ಚರ ವಹಿಸಬೇಕು.

ಕೆಲವು ಕ್ರೈಸ್ತರಲ್ಲಿ ಕಂಡುಬರುವ ಇನ್ನೊಂದು ಅತಿರೇಕದ ದೃಷ್ಟಿ, ನಾವು ಅನುಕೂಲವಾಗಿ ಇರುವದನ್ನು ದೇವರು ಬಯಸುತ್ತಾರೆ ಎನ್ನುವದು. ಇದರ ಪರಿಣಾಮವಾಗಿ ದೇಹ ಅತಿಯಾಗಿ ಮುದ್ದು ಮಾಡಲ್ಪಡುತ್ತದೆ.

ಆದರೆ ಯೇಸುವಿನ ಬೋಧನೆ ವೈರಾಗ್ಯವೆಂಬ ಅತಿರೇಕ, ಅಥವಾ ವಿಪರೀತ ಭೋಗಾಭಿಲಾಷೆ ಮತ್ತು ವಸ್ತುಗಳ ಆಕರ್ಷಣೆಯ ಅತಿರೇಕ, ಇವೆರಡೂ ಆಗಿರಲಿಲ್ಲ. ಅವರ ಬೋಧನೆ ಏನೆಂದರೆ, ದೇಹವು ಯಾವಾಗಲೂ ದೇವರ ಸೇವೆಗೆ ಸಿದ್ಧವಾಗಿ ಇರುವಂತೆ, ಅದರ ನ್ಯಾಯಸಮ್ಮತ ಅವಶ್ಯಕತೆಗಳನ್ನು ಪೂರೈಸುವದು.

ನಮ್ಮ ದೇಹಗಳ ಬಗ್ಗೆ ದೇವರ ಆಸಕ್ತಿ

ನಮ್ಮ ಶರೀರಗಳ ಬಗ್ಗೆ ದೇವರಿಗೆ ಆಸಕ್ತಿಯಿಲ್ಲ ಎಂಬ ತಪ್ಪು ಭಾವನೆ ಅನೇಕ ವಿಶ್ವಾಸಿಗಳಲ್ಲಿ ಇರುವದರಿಂದ, ಅವರ ಖಾಯಿಲೆಗಳನ್ನು ಗುಣಪಡಿಸಲು ಅವರು ದೇವರನ್ನು ಕೇಳುವ ಬಗ್ಗೆ ಯೋಚಿಸುವದಿಲ್ಲ. ಇಸ್ರಾಯೇಲ್ ರಾಜ ಆಸನು ಮಾಡಿದಂತೆ, ಅವರು ವೈದ್ಯರುಗಳಲ್ಲಿ ನಂಬಿಕೆ ಇಟ್ಟಿದ್ದಾರೆ, ಆದರೆ ಕರ್ತನಲ್ಲಿ ಅಲ್ಲ (2 ಪೂರ್ವ 16:12).

ದೇವರು ನಮ್ಮನ್ನು ಗುಣಪಡಿಸಲು ವೈದ್ಯರನ್ನು, ಔಷಧಗಳನ್ನು ಮತ್ತು ಶಸ್ತ್ರ ಚಿಕಿತ್ಸೆಯನ್ನು ಸಹ ಉಪಯೋಗಿಸಬಹುದು. ನಾವು ನಮ್ಮ ಪ್ರಾರ್ಥನೆಗೆ ದೇವರು ಹೇಗೆ ಜವಾಬು ಕೊಡಬೇಕೆಂದು ಅವರಿಗೆ ಹೇಳಬೇಕಿಲ್ಲ. ಆದರೆ ಅವರ ಚಿತ್ತ ತನ್ನ ಮಕ್ಕಳು ಮನುಷ್ಯರಲ್ಲಿ ಭರವಸೆ ಇಡುವದು ಖಂಡಿತವಾಗಿ ಅಲ್ಲ. ದೇವರಿಗೆ ನಮ್ಮ ದೇಹಗಳ ಬಗ್ಗೆ - ಅವು ಆರೋಗ್ಯವಾಗಿ ಇದ್ದು, ಅವರ ಮಹಿಮೆಗಾಗಿ ಉಪಯೋಗ ಆಗಬೇಕೆಂಬ - ವಿಶೇಷ ಆಸಕ್ತಿಯಿದೆ.

ಸತ್ಯವೇದವು ನಮ್ಮ ದೇಹಗಳ ವಿಷಯವಾಗಿ ಬೋಧಿಸುವ ಮೂರು ದಿವ್ಯ ಸತ್ಯಗಳು ಇಲ್ಲಿವೆ:

  • (i) "ದೇಹವು ಕರ್ತನಿಗೋಸ್ಕರ ಇದ್ದರೆ, ಕರ್ತನು ದೇಹಕ್ಕೋಸ್ಕರ ಇದ್ದಾನೆ";
  • (ii) ನಮ್ಮ "ದೇಹಗಳು ಕಿಸ್ತನ ಅಂಗಗಳಾಗಿವೆ"; ಮತ್ತು
  • (iii) ನಮ್ಮ "ದೇಹವು ಪವಿತ್ರಾತ್ಮನಿಗೆ ಗರ್ಭಗುಡಿಯಾಗಿದೆ" (1 ಕೊರಿ 6:13-19).
  • ಆದುದರಿಂದ ನಾವು ನಮ್ಮ ದೇಹಕ್ಕಾಗಿ ದೇವರ ಬಲವನ್ನು ಖಂಡಿತವಾಗಿ ಕೇಳಿ ಪಡೆಯಬಹುದು.

    ಆತ್ಮಕ್ಕಿಂತ ದೇಹವು ಹೆಚ್ಚು ಪ್ರಾಮುಖ್ಯ ಅಲ್ಲ ಎನ್ನುವದು ಖಚಿತ. ನಾವು ಈಗಾಗಲೇ ನೋಡಿರುವಂತೆ, ನಮ್ಮ ಜೀವನದಲ್ಲಿ ಮೊದಲ ಸ್ಥಾನ ದೇವರದ್ದು, ಅದರ ನಂತರ ಬೇರೆ ಎಲ್ಲವೂ ಇರಬೇಕು. ಆದರೆ ನಾವು ಯಥಾರ್ಥವಾಗಿ, "ನಿನ್ನ ನಾಮ ಪರಿಶುದ್ದವೆಂದು ಎಣಿಸಲ್ಪಡಲಿ, ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ನೆರವೇರಲಿ," ಎಂದು ಪ್ರಾರ್ಥನೆಯನ್ನು ಆರಂಭಿಸಿ, ಅದರ ನಂತರ "ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ದಯಪಾಲಿಸು," ಎಂದು ಕೇಳುವದು ಸರಿ - ಏಕೆಂದರೆ ದೇವರ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿ ನೆರವೇರಿಸಿ, ಅವರನ್ನು ಮಹಿಮೆ ಪಡಿಸಲಿಕ್ಕಾಗಿ ನಾವು ಆಹಾರವನ್ನು ಕೇಳುತ್ತಿದ್ದೇವೆ.

    ನಮ್ಮ ಆತ್ಮಿಕ ಸ್ಥಿತಿಯು ನಮ್ಮ ಶಾರೀರಿಕ ಸ್ಥಿತಿಯ ಮೇಲೆಯೂ ಸ್ವಲ್ಪ ಮಟ್ಟಿಗೆ ಆತುಕೊಂಡಿದೆ. ಎಲೀಯನು ಪರಲೋಕದಿಂದ ಬೆಂಕಿಯನ್ನೂ, ಮಳೆಯನ್ನೂ ತರಿಸಿದ ನಂತರ ನಿರಾಶೆಗೊಂಡನು ಮತ್ತು ತನ್ನ ಜೀವವನ್ನು ತೆಗೆದು ಬಿಡಲು ದೇವರನ್ನು ಕೇಳಿಕೊಂಡನು, ಎಂದು ನಾವು ಓದುತ್ತೇವೆ. 850 ಸುಳ್ಳು ಪ್ರವಾದಿಗಳ ವಿರುದ್ಧವಾಗಿ ಎದ್ದುನಿಂತ ಈ ಧೈರ್ಯಶಾಲಿ ಮನುಷ್ಯ, ಈಜೆಬೆಲಳು ಎಂಬ ಒಬ್ಬ ಹೆಂಗಸಿನ ಬೆದರಿಕೆಗೆ ಹೆದರಿ ಓಡಿಹೋದನು (1 ಅರಸು 18,19).

    ಹಾಗೆ ಆಗಲು ಏನು ಕಾರಣ? ಎಲೀಯನು ಮೂರು ವರ್ಷಗಳಿಗೂ ಹೆಚ್ಚಿನ ಸಮಯ ಪೂರ್ತಿ ಒಂಟಿಯಾಗಿ ಜೀವಿಸಿದ್ದನು. ಮತ್ತು ಈಗ ಕರ್ಮೆಲ್ಬೆಹಟ್ಟದ ಮೇಲೆ ಆ ಒಂದು ಕಠಿಣವಾದ ದಿನದ ನಂತರ ಅವನ ಶರೀರ ನಿತ್ರಾಣವಾಗಿತ್ತು. ಹೀಗೆ ಅವನು ನಿರಾಶನಾಗಿ ಒಂದು ಜಾಲೀಗಿಡದ ಕೆಳಗೆ ಕುಳಿತಾಗ, ದೇವರು ಅವನಿಗೆ ದೀರ್ಘ ಬೋಧನೆಯನ್ನು ಕೊಡಲಿಲ್ಲ! ಇಲ್ಲ. ದೇವರು ಅವನಿಗೆ ಒಬ್ಬ ದೇವದೂತನ ಮೂಲಕ ಆಹಾರ ಮತ್ತು ನೀರನ್ನು ಒದಗಿಸಿದರು. ಎಲೀಯನು ಅದನ್ನು ತಿಂದು ಕುಡಿದು ಮಲಗಿದನು. ಮತ್ತು ಅವನು ನಿದ್ದೆಯಿಂದ ಎದ್ದಾಗ, ದೇವರು ಅವನಿಗೆ ಇನ್ನಷ್ಟು ಆಹಾರ ಮತ್ತು ನೀರನ್ನು ಕೊಟ್ಟರು (1 ಅರಸು 19:1-8).

    ಎಲೀಯನು ಶ್ರಮಿಸಿ ಬಹಳ ದಣಿದಿದ್ದನು, ಮತ್ತು ಅವನಿಗೆ ಅವಶ್ಯವಿದ್ದುದು ಪೋಷಣೆಯೇ ಹೊರತು ಬುದ್ಧಿವಾದ ಅಲ್ಲವೆಂದು ದೇವರಿಗೆ ತಿಳಿದಿತ್ತು. ಕೆಲವೊಮ್ಮೆ ನಮಗೂ ಅದೇ ಬೇಕಾಗುತ್ತದೆ - ಬೇಕಾಗಿರುವದು ಸ್ವಲ್ಪ ಉತ್ತಮ ಆಹಾರ ಮತ್ತು ವಿಶ್ರಾಂತಿಯೇ ಹೊರತು, ದೊಡ್ಡ ಬೋಧನೆಯಲ್ಲ.

    ಕೆಲವು ಕ್ರೈಸ್ತರು ತಮ್ಮ ದೇಹಗಳ ವಿಷಯವಾಗಿ ಅತಿಯಾದ ಆತ್ಮಿಕ ಮನೋಭಾವವನ್ನು ಹೊಂದಿದ್ದು, "ನಾನು ದೇವರಿಗಾಗಿ ಉರಿದುಹೋಗಲು ಬಯಸುತ್ತೇನೆ," ಎಂದು ಹೇಳುತ್ತಾರೆ. ಅದನ್ನು ಪೂರೈಸಲಿಕ್ಕಾಗಿ, ಅವರು ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ, ವಾರದ ಏಳು ದಿನಗಳೂ - ಬಹಳ ಸಮಯವನ್ನು - ದೇವರ ’ಸೇವೆಯಲ್ಲಿ’ ಕಳೆಯುತ್ತಾರೆ. ಅದರಿಂದಾಗಿ ಅವರು ಅತಿಯಾಗಿ ದಣಿದು, ನಂತರ ವ್ಯಸನಗೊಳ್ಳುತ್ತಾರೆ! ಅವರು ಮಾಡಿದ್ದು ಒಂದು ಮಾನಸಿಕ ಕಾರ್ಯ. ಅವರ ವ್ಯಸನ ಒಂದು ಆತ್ಮಿಕ ಕಾರಣದಿಂದ ಉಂಟಾಗಿಲ್ಲ, ಅದು ಒಂದು ಶಾರೀರಿಕ ಕಾರಣದಿಂದ ಉಂಟಾಗಿದೆ. ಯೇಸುವು ಅಂಥವರಿಗೆ, "ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ," (ಮಾರ್ಕ 6:31) ಎಂದು ಹೇಳಬೇಕಾಗುತ್ತದೆ.

    ಒಮ್ಮೆ ಯೇಸುವು ಒಂದು ದೋಣಿಯಲ್ಲಿ ಹೊಗುತ್ತಿದ್ದಾಗ ನಿದ್ರಿಸಿದ್ದಾಗಿ ನಾವು ಓದುತ್ತೇವೆ. ಅವರಿಗೆ ಆಯಾಸವಾಗಿತ್ತು ಎನ್ನುವದು ಇದರಿಂದ ಸ್ಪಷ್ಟವಾಗುತ್ತದೆ, ಮತ್ತು ಅವರು ತಾನು ನಿದ್ರಿಸುವದನ್ನು ಇತರರು ನೋಡುವದು ಅವಮಾನವೆಂದು ಎಣಿಸಲ್ಲಿಲ್ಲ. ಅವರು ಕೆಲವೊಮ್ಮೆ ಬಾಯಾರಿ ಹಸಿದಿದ್ದರು, ಮತ್ತು ಅವರು ಅದನ್ನು ಒಪ್ಪಿಕೊಂಡರು. ಅವರಿಗೆ ತನ್ನ ದೈಹಿಕ ಅವಶ್ಯಕತೆಗಳ ಬಗ್ಗೆ ಸಂಕೋಚ ಇರಲಿಲ್ಲ. ನಮ್ಮ ದೇಹವು ಪವಿತ್ರಾತ್ಮನ ಗರ್ಭಗುಡಿಯಾಗಿದೆ ಮತ್ತು ನಾವು ಅದನ್ನು ಚೆನ್ನಾಗಿ ಪೋಷಿಸಬೇಕು.

    ದೇವರಿಗೆ ನಮ್ಮ ಎಲ್ಲಾ ದೈಹಿಕ ಅವಶ್ಯಕತೆಗಳನ್ನು ಪೂರೈಸುವ ಆಸಕ್ತಿ ಇದೆ. ನಮಗೆ ಈ ಲೋಕದಲ್ಲಿ ಆಹಾರ, ಬಟ್ಟೆ ಮತ್ತು ವಸತಿ ಅವಶ್ಯವೆಂದು ಅವರಿಗೆ ಗೊತ್ತಿದೆ. ನೀವು ಸ್ವಂತ ಮನೆಯ ಮಾಲಿಕರಾಗುವದು ಸೂಕ್ತವಲ್ಲವೆಂದು ಅವರಿಗೆ ಅನಿಸಿದರೆ, ಅವರು ನಿಮಗೆ ಒಂದು ಮನೆ ಬಾಡಿಗೆದೆ ದೊರಕುವಂತೆ ಮಾಡುವರು ಎಂದು ನೀವು ಖಚಿತವಾಗಿ ತಿಳಿಯಬಹುದು. ಇಸ್ರಾಯೇಲ್ಯರಿಗೆ ಅರಣ್ಯದಲ್ಲಿ ಒಂದು "ಇಳುಕೊಳ್ಳತಕ್ಕ ಸ್ಥಳವನ್ನು" ನೋಡಿದ ದೇವರು, ಖಂಡಿತವಾಗಿ ನಿಮಗೂ ಒಂದು ನೆಲೆಯನ್ನು ಒದಗಿಸಲು ಶಕ್ತರು (ಅರಣ್ಯ 10:33). ನಾವು ಈ ವಿಷಯಗಳು ಆತ್ಮಿಕವಲ್ಲವೆಂದೂ, ಯಾವತ್ತೂ ಅವುಗಳಿಗಾಗಿ ದೇವರನ್ನು ಕೇಳಬಾರದೆಂದೂ ತಿಳಿಯುವದು ಸರಿಯಲ್ಲ.

    ದೇವರ ಬಗ್ಗೆ ಜನರಲ್ಲಿ ಇರುವ ತಪ್ಪು ಅಭಿಪ್ರಾಯಗಳನ್ನು ಸರಿಪಡಿಸಲಿಕ್ಕಾಗಿಯೇ, ಯೇಸುವು ಈ ಪ್ರಾರ್ಥನೆಯ ಮೂರು ಅಂತಿಮ ಬಿನ್ನಹಗಳಲ್ಲಿ ಶಾರೀರಿಕ ಅವಶ್ಯಕತೆಗಳನ್ನು ಮೊದಲು ಇರಿಸಿದರು.

    ನಮ್ಮ ಈ ಲೋಕದ ಅವಶ್ಯಕತೆಗಳಿಗಾಗಿ ದೇವರ ಆಸಕ್ತಿ

    "ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸಿ," ಎನ್ನುವ ಕೋರಿಕೆಯಲ್ಲಿ ನಮ್ಮ ಲೌಕಿಕ ಜೀವನದ ಎಲ್ಲಾ ಅವಶ್ಯಕತೆಗಳೂ ಸೇರಿವೆ.

    ಇಲ್ಲಿ ನಿಜವಾದ ಕೋರಿಕೆ, "ನನಗೆ ಒಂದು ಕೆಲಸವನ್ನು ಕೊಡಿಸಿ. ನನಗೆ ವಾಸಕ್ಕಾಗಿ ಒಂದು ಮನೆ ಬೇಕಾಗಿದೆ. ನನಗೂ ಮತ್ತು ನನ್ನ ಕುಟುಂಬಕ್ಕೂ ಧರಿಸಲು ಉಡುಪುಗಳನ್ನು ಕೊಡಿರಿ. ನನ್ನ ಮಕ್ಕಳಿಗೆ ಶಿಕ್ಷಣ ಒದಗಿಸಿ, ಅವರೂ ಸಹ ಮುಂದೆ ಒಂದು ದಿನ ತಮ್ಮ ಅನುದಿನದ ಆಹಾರವನ್ನು ಪಡೆಯುವಂತೆ ಮಾಡಿರಿ," ಎಂದಾಗಿದೆ. ದೇವರಿಗೆ ಇವೆಲ್ಲಾ ವಿಷಯಗಳಲ್ಲಿ ಆಸಕ್ತಿ ಇದೆ. ಹಾಗಾಗಿ ನಾವು ಮೊದಲು ದೇವರ ರಾಜ್ಯಕ್ಕಾಗಿ ಶ್ರಮಿಸುವದನ್ನು ಕಲಿತರೆ, ಈ ಸಂಗತಿಗಳೂ ಅದರ ಜೊತೆಗೆ ಸೇರಿಸಲ್ಪಡುವವು.

    ಲೌಕಿಕ ವಿಷಯಗಳಾದ ಆಹಾರ, ಉಡುಪು, ಉದ್ಯೋಗ, ಮನೆ, ಮಕ್ಕಳ ವಿದ್ಯಾಭ್ಯಾಸ, ಮುಂತಾದವುಗಳ ಬಗ್ಗೆ ನಾವು ಏಕೆ ಇಷ್ಟು ಚಿಂತಿಸುತ್ತೇವೆಂದು ನಿಮಗೆ ತಿಳಿದಿದೆಯೇ? ಏಕೆಂದರೆ ನಮ್ಮ ಹೃದಯದ ಅಂತರಾಳದಲ್ಲಿ, ದೇವರಿಗೆ ಈ ಲೌಕಿಕ ವಿಷಯಗಳಲ್ಲಿ ನಮಗೆ ಸಹಾಯ ಒದಗಿಸುವ ನಿಜವಾದ ಆಸಕ್ತಿಯಿಲ್ಲ, ಎಂಬ ಭಾವನೆ ಇದೆ. ದೇವರು ನಮ್ಮ ಆತ್ಮಿಕ ಆರೋಗ್ಯದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದಾರೆ, ಎನ್ನುವ ಭಾವನೆ ನಮ್ಮದು.

    ದೇವರು ನಮ್ಮ ಜೀವನದ ಪ್ರತಿಯೊಂದು ವಿಭಾಗದ ಕುರಿತು - ಆತ್ಮ, ಪ್ರಾಣ, ಶರೀರಗಳ ಬಗ್ಗೆ - ಆಸಕ್ತರಾಗಿದ್ದಾರೆ ಎಂದು ಪವಿತ್ರಾತ್ಮನು ನಮಗೆ ಸ್ಪಷ್ಟವಾಗಿ ತೋರಿಸಲು ಸಾಧ್ಯವಾದರೆ ಎಷ್ಟು ಚೆನ್ನ! ನಾವು ನಮ್ಮ ಲೌಕಿಕ ಅವಶ್ಯಕತೆಗಳಿಗಾಗಿ ಅವರನ್ನು ಪ್ರಾರ್ಥಿಸುವದನ್ನು ದೇವರು ಬಯಸುತ್ತಾರೆ - ಮತ್ತು ನಮ್ಮಲ್ಲಿ ಸ್ವಲ್ಪವೂ ಚಿಂತೆ ಇರಬಾರದು ಎನ್ನುವದು ಅವರ ಇಚ್ಛೆಯಾಗಿದೆ. ಅದಕ್ಕಾಗಿಯೇ ಸತ್ಯವೇದ ಹೀಗೆ ತಿಳಿಸುತ್ತದೆ, "ಯಾವ ಸಂಬಂಧವಾಗಿಯೂ ಚಿಂತೆಮಾಡದೆ, ಸರ್ವ ವಿಷಯದಲ್ಲಿ ದೇವರ ಮುಂದೆ ಕೃತಜ್ಞತಾ ಸ್ತುತಿಯನ್ನೂ, ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ, ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ" (ಪಿಲಿಪ್ಪಿ 4:6).

    ಒಬ್ಬ ಲೌಕಿಕ ತಂದೆಗೆ ತನ್ನ ಸಮಾಜದ ಎಲ್ಲರ ಅವಶ್ಯಕತೆಗಳನ್ನು ಪೂರೈಸುವ ಹಂಗು ಇರುವದಿಲ್ಲ. ಆದರೆ ತನ್ನ ಸ್ವಂತ ಕುಟುಂಬದ ಅವಶ್ಯಕತೆಗಳನ್ನು ಪೂರೈಸುವ ಹೊಣೆ ಖಂಡಿತವಾಗಿ ಆತನದು. ದೇವರು ಎಷ್ಟು ಒಳ್ಳೆಯವರೆಂದರೆ, ಅವರು ಪಕ್ಷಿಗಳಿಗೂ ಆಹಾರ ಒದಗಿಸುತ್ತಾರೆ. ಹಾಗಿದ್ದರೆ ಅವರು ತನ್ನ ಸ್ವಂತ ಮಕ್ಕಳ ಅವಶ್ಯಕತೆಗಳನ್ನು ಇನ್ನೂ ಎಷ್ಟು ಹೆಚ್ಚಾಗಿ ಪೂರೈಸುವರು!

    ಒಮ್ಮೆ ಒಬ್ಬ ಕಾನಾನ್ಯ ಸ್ತ್ರೀಯು ತನ್ನ ಮಗಳನ್ನು ಗುಣಪಡಿಸಲು ಯೇಸುವನ್ನು ಬೇಡಿಕೊಂಡಾಗ, ಯೇಸುವು ಆಕೆಗೆ, "ಮಕ್ಕಳಿಗೆ ಮೊದಲು ತೃಪ್ತಿಯಾಗಲಿ," ಎಂದು ಹೇಳಿದರು (ಮಾರ್ಕ 7:27). ಆಕೆ ಅದಕ್ಕೆ ಉತ್ತರವಾಗಿ ತನಗೆ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳಲ್ಲೇ ಸಂತೋಷವೆಂದು ಹೇಳಿದಳು. ಆಗ ದೆವ್ವವು ಆಕೆಯ ಮಗಳನ್ನು ಸಂಪೂರ್ಣವಾಗಿ ಬಿಟ್ಟುಹೋಯಿತು.

    ಅದನ್ನು ಯೋಚಿಸಿ ನೋಡಿರಿ. ದೆವ್ವದ ಹಿಡಿತವನ್ನು ಬಿಡಿಸಲು ರೊಟ್ಟಿಯ ತುಂಡುಗಳು ಸಾಕಾದವು. ಹಾಗಾದರೆ ಒಂದು ಇಡೀ ರೊಟ್ಟಿಯು ದೇವರ ಮಕ್ಕಳಾದ ನಮಗೆ ಏನು ಮಾಡಲು ಸಾಧ್ಯವಿದೆಯೆಂದು ಊಹಿಸಿರಿ! ಅದಲ್ಲದೆ ಯೇಸುವು "ಮೊದಲು ಮಕ್ಕಳಿಗೆ ತೃಪ್ತಿಯಾಗಲಿ," ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಿ. ಹಾಗಾಗಿ ನಾವು ಧೈರ್ಯವಾಗಿ, "ನಮ್ಮ ತಂದೆಯೇ, ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸಿ," ಎಂದು ಪ್ರಾರ್ಥಿಸುತ್ತೇವೆ.

    ದೇವರ ಪೂರೈಕೆಯಲ್ಲಿ ತೃಪ್ತಿ

    ಇಲ್ಲಿ ಗಮನಿಸಿ ನೋಡಿರಿ, ಯೇಸುವು ಸುಖ-ಸೌಲಭ್ಯಗಳಿಗಾಗಿ ಪ್ರಾರ್ಥಿಸುವದನ್ನು ನಮಗೆ ಕಲಿಸಲಿಲ್ಲ. ನಮ್ಮ ಪ್ರಾರ್ಥನೆ "ತಂದೆಯೇ, ಅನುದಿನದ ಐಸ್ಕ್ರೀಮನ್ನು ಈ ದಿನ ನಮಗೆ ಒದಗಿಸಿ" ಎಂದಲ್ಲ, ಆದರೆ "ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸಿ," ಎಂದು!

    ದೇವರ ವಾಗ್ದಾನ ಹೀಗಿದೆ, "ನನ್ನ ದೇವರು ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು" (ಫಿಲಿಪ್ಪ 4:19) - ನಮ್ಮ ಎಲ್ಲಾ ಅಪೇಕ್ಷೆಗಳಲ್ಲ, ಆದರೆ ಎಲ್ಲಾ ಕೊರತೆಗಳು. ನಮ್ಮ ಬಯಕೆ ಮತ್ತು ನಮ್ಮ ಅವಶ್ಯಕತೆಗಳ ನಡುವೆ ದೊಡ್ಡ ಅಂತರವಿದೆ. ನೀವು ಒಂದು ಕಾರನ್ನು ಬಯಸಬಹುದು, ಆದರೆ ನಿಮಗೆ ಅದರ ಅವಶ್ಯಕತೆ ಇಲ್ಲವೆಂದು ತಿಳಿದ ದೇವರು, ನಿಮಗೆ ಅದನ್ನು ಕೊಡುವದಿಲ್ಲ. ಬೇರೊಬ್ಬನಿಗೆ ಅದರ ಅವಶ್ಯಕತೆ ಇರಬಹುದು ಮತ್ತು ದೇವರು ಅದನ್ನು ನೋಡಿ ಅವನಿಗೆ ಒಂದು ಕಾರನ್ನು ಕೊಡಬಹುದು. ನೀವು ಆತನನ್ನು ನೋಡಿ ಅಸೂಯೆ ಪಡುವದಾಗಲೀ ಅಥವಾ ದೇವರ ವಿರುದ್ಧ ಗುಣಗುಟ್ಟುವದಾಗಲೀ ಬೇಡ. ನೀವು ಪಡೆದಿರುವದರಲ್ಲಿ ತೃಪ್ತರಾಗಿರಿ. ಸುಖಭೋಗಗಳನ್ನು ಕೇಳಬೇಡಿರಿ. ದೇವರು ನಮಗೆ ಕೆಲವು ಸುಖಭೋಗಗಳನ್ನು ಅನುಗ್ರಹಿಸಿದರೆ, ನಾವು ಅವುಗಳನ್ನು ಸ್ವೀಕರಿಸಿ, ಅವನ್ನು ದೇವರ ಮಹಿಮೆಗಾಗಿ ಉಪಯೋಗಿಸಬಹುದು. ಆದರೆ ಅವರು ನಮಗೆ ಏನನ್ನೂ ಕೊಡದಿದ್ದರೆ, ಆಗಲೂ ಕರ್ತನನ್ನು ಸ್ತುತಿಸುತ್ತೇವೆ.

    ನಾವು ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವದು ಬೇಡ. ನಮ್ಮ ಅವಶ್ಯಕತೆಗೆ ಯಾವುದು ಅತ್ಯುತ್ತಮವೆಂದು ದೇವರಿಗೆ ತಿಳಿದಿದೆ. ಒಂದು ವೇಳೆ ನಾವು ರೊಟ್ಟಿಯನ್ನು ಕೇಳಿದಾಗ ಅವರು ನಮಗೆ ಒಂದು ಕಲ್ಲನ್ನು ನೀಡರು; ಮತ್ತು ನಾವು ಕಲ್ಲನ್ನೇ ಕೇಳಿದಾಗಲೂ ಅವರು ಕಲ್ಲನ್ನು ಕೊಡುವದಿಲ್ಲ. ಬದಲಾಗಿ ರೊಟ್ಟಿಯನ್ನು ಕೊಡುತ್ತಾರೆ!

    ಅವರು ಕೊಟ್ಟಿರುವದರಲ್ಲಿ ತೃಪ್ತಿಹೊಂದಿರಿ. ಪೌಲನ ಜೀವನದ ಒಂದು ರಹಸ್ಯ ಏನಾಗಿತ್ತೆಂದರೆ, ಅವನು ಸಂಪೂರ್ಣವಾಗಿ ತೃಪ್ತನಾಗಿದ್ದನು. ಅವನು ಫಿಲಿಪ್ಪಿ 4:11ರಲ್ಲಿ ಹೀಗೆನ್ನುತ್ತಾನೆ, "ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿ ಇರುವದನ್ನು ಕಲಿತುಕೊಂಡಿದ್ದೇನೆ."

    ಅನುದಿನದ ಪೂರೈಕೆ

    ಪ್ರಾರ್ಥನೆ "ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸಿ," ಎಂದಾಗಿದೆ. ದೇವರು ನಮಗೆ ಅನೇಕ ದಿನಗಳ ಆಹಾರವನ್ನು ಒಮ್ಮೆಗೇ ಒದಗಿಸಲೂ ಬಹುದು, ಆದರೆ ಇಲ್ಲಿ ವಿನಂತಿ ಒಂದು ದಿನದ ಲೌಕಿಕ ಅವಶ್ಯಕತೆಗಳಿಗಾಗಿ ಮಾತ್ರವಾಗಿದೆ. ನಾಳಿನ ವಿಷಯವಾಗಿಯೂ ಸಹ ಚಿಂತೆ ಮಾಡಬೇಡಿರಿ ಎಂದು ಯೇಸುವು ಹೇಳಿದರು. ಭವಿಷ್ಯತ್ತಿನ ಕುರಿತು ನಾವು ಚಿಂತೆಗೆ ಒಳಗಾಗುವದು ದೇವರಿಗೆ ಇಷ್ಟವಿಲ್ಲ. ನಾವು ದಿನದಿಂದ ದಿನಕ್ಕೆ ಅವರನ್ನು ಆಶ್ರಯಿಸಬೇಕು.

    ಅರಣ್ಯದಲ್ಲಿ ಕರ್ತನು ಇಸ್ರಾಯೇಲ್ಯರಿಗೆ ಈ ಪಾಠವನ್ನು ಅದ್ಭುತವಾಗಿ ಕಲಿಸಿಕೊಟ್ಟನು. ಅವರು ಪ್ರತಿ ಮುಂಜಾನೆ ಹೊರಗೆ ಹೋಗಿ ’ಮನ್ನ’ವನ್ನು ಸಂಗ್ರಹಿಸಬೇಕಿತ್ತು. ಅವರು ಒಮ್ಮೆಗೇ ಹಲವು ದಿನಗಳ ಮನ್ನವನ್ನು ಸಂಗ್ರಹಿಸಬಾರದಾಗಿತ್ತು. ಅವರು ದಿನದಿಂದ ದಿನಕ್ಕೆ ದೇವರನ್ನು ಆಶ್ರಯಿಸಬೇಕಿತ್ತು. ಅವರು ಆ ರೀತಿಯಾಗಿ ನಲ್ವತ್ತು ವರ್ಷಗಳು ಜೀವಿಸಬೇಕಿತ್ತು. ಅದು ಕಷ್ಟಕರ ಆಗಿತ್ತೆಂದು ಎಣಿಸುತ್ತೀರಾ? ಇಲ್ಲ. ನನಗೆ ಚೆನ್ನಾಗಿ ತಿಳಿದಿದೆ, ಅದು ಹಾಗೆ ಆಗಿರಲಿಲ್ಲ. ಅದು ರೋಮಾಂಚಕವಾಗಿ ಇದ್ದಿರಬೇಕು!

    ದೇವರು ನಮಗೆ ಒಂದೇ ಸಲ ಮಿತಿ ಮೀರಿ ಕೊಟ್ಟರೆ, ನಮ್ಮ ಹೃದಯಗಳು ಅವರಿಂದ ದೂರ ಸರಿಯಬಹುದು. ಹಾಗಾಗಿ ದೇವರು ಸನ್ನಿವೇಶಗಳನ್ನು ಹೇಗೆ ನಿಯಂತ್ರಿಸುತ್ತಾರೆ ಎಂದರೆ, ನಮ್ಮ ಭೌತಿಕ ಜೀವನದಲ್ಲಿ ಒಂದಲ್ಲ ಒಂದು ಅವಶ್ಯಕತೆಯು ಎದುರಾಗುತ್ತಲೇ ಇರುತ್ತದೆ - ಏಕೆಂದರೆ, ಆತ್ಮಿಕಕ್ಕಿಂತ ಭೌತಿಕವು ನಮ್ಮನ್ನು ಚೆನ್ನಾಗಿ ತಟ್ಟುತ್ತದೆ. ನಾವು ದೇವರ ಬಳಿಗೆ ಪದೇ ಪದೇ ಹೋಗಲಿಕ್ಕಾಗಿ ಅವರು ಈ ಕೊರತೆಗಳಿಗೆ ಆಸ್ಪದ ನೀಡುವರು. ನಾವು ಅವರನ್ನು ನಿರಂತರವಾಗಿ ಆಶ್ರಯಿಸುವ ಪಾಠವನ್ನು ಅವುಗಳ ಮೂಲಕ ಕಲಿಯುತ್ತೇವೆ.

    ಮನ್ನವು ಪರಲೋಕದಿಂದ ಬಂದಿತು, ಆದರೆ ದೇವರು ಅದನ್ನು ನೇರವಾಗಿ ಇಸ್ರಾಯೇಲ್ಯರ ಬಾಯಿಗೆ ಬೀಳಿಸಲಿಲ್ಲ! ಇಸ್ರಾಯೇಲ್ಯರು ಮುಂಜಾನೆಯೇ ಎದ್ದು ಹೊರಕ್ಕೆ ಬಂದು ಅದನ್ನು ಶೇಖರಿಸಬೇಕಿತ್ತು. ಒಬ್ಬ ಸೋಮಾರಿಗೆ ಏನೂ ಸಿಗುತ್ತಿರಲಿಲ್ಲ.

    ಆದ್ದರಿಂದ ನಾವು "ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸಿ" ಎಂಬ ಪ್ರಾರ್ಥಿಸುವಾಗ, ನಾವು ಕೇಳುವದು ದೇವರು ನಮ್ಮ ಅವಶ್ಯಕತೆಗಳನ್ನು ನಮಗೆ ಸ್ವಲ್ಪವೂ ಶ್ರಮವಿಲ್ಲದಂತೆ ಅದ್ಭುತವಾಗಿ ಪೂರೈಸಲಿ ಎಂದಲ್ಲ. ಇಲ್ಲ. "ಕೆಲಸ ಮಾಡಲೊಲ್ಲದವನು ಊಟ ಮಾಡಬಾರದು," ಎಂದು ಸತ್ಯವೇದ ಹೇಳುತ್ತದೆ (2 ಥೆಸ 3:10). ದೇವರು ಹಾರಾಡುವ ಹಕ್ಕಿಗಳನ್ನು ಸಾಕಿ ಸಲಹುವರೆಂದು ಯೇಸು ಹೇಳಿದರು. ಆದರೆ ದೇವರು ಆಹಾರವನ್ನು ತಂದು ಅವುಗಳ ಬಾಯಿಗೆ ಬೀಳಿಸುವದಿಲ್ಲ. ಅವು ಹೊರಕ್ಕೆ ಹೋಗಿ ತಮ್ಮ ಆಹಾರವನ್ನು ಹುಡುಕಬೇಕು. ಹಾಗೆಯೇ ನಾವು ಸಹ - ದೇವರಲ್ಲಿ ಭರವಸೆ ಇರಿಸುವದರ ಜೊತೆಗೆ - ಕಷ್ಟಪಟ್ಟು ದುಡಿಯಬೇಕೆಂದು ದೇವರು ಬಯಸುತ್ತಾರೆ. ಪರಿಶ್ರಮದ ಬದಲು ನಂಬಿಕೆ ಎನ್ನುವದು ತಪ್ಪು.

    ದೇವರ ಚಿತ್ತದ ಪೂರೈಕೆಗಾಗಿ ಆರೋಗ್ಯ

    "ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲೂ ನೆರವೇರಲಿ," ಎಂಬ ಹಿಂದಿನ ಮನವಿಯೊಂದಿಗೆ ಈ ಪ್ರಾರ್ಥನೆಯೂ ಸಂಬಂಧವನ್ನು ಹೊಂದಿದೆ. ಇಲ್ಲಿ ನಾವು ಅವರ ಚಿತ್ತವನ್ನು ಪೂರೈಸುವದಕ್ಕಾಗಿ ಆರೋಗ್ಯ ಮತ್ತು ಬಲವನ್ನು ಕೋರುತ್ತೇವೆ.

    ರೋಗಿಗಳು ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಲು ನನ್ನನ್ನು ಕೇಳಿದಾಗ, ನಾನು ಹಲವು ಬಾರಿ ಹೀಗೆ ಯೋಚಿಸಿದ್ದೇನೆ, "ದೇವರ ಸೇವೆಗೆ ಬೇಕಾಗುವ ಬಲ ಹೊಂದಲಿಕ್ಕಾಗಿ ಇವನು ಆರೋಗ್ಯವನ್ನು ಬಯಸುತ್ತಿದ್ದಾನೆಯೇ? ಅಥವಾ ತನಗಾಗಿ ಜೀವಿಸಲಿಕ್ಕಾಗಿ ಅದನ್ನು ಕೇಳುತ್ತಿರುವನೇ? ಲೌಕಿಕವಾಗಿ ಜೀವಿಸುವದಕ್ಕಾಗಿ ಇವನನ್ನು ಗುಣಪಡಿಸಿ, ಎಂದು ನಾವು ದೇವರನ್ನು ಪ್ರಾರ್ಥಿಸುವದು ಸರಿಯೇ?" ನಮ್ಮ ಸ್ವಚಿತ್ತವನ್ನಲ್ಲ, ದೇವರ ಚಿತ್ತವನ್ನು ಪೂರೈಸಲು ಸಾಧ್ಯವಾಗುವಂತೆ ನಮ್ಮ ಲೌಕಿಕ ಕೊರತೆಗಳ ಬಗ್ಗೆ ಪ್ರಾರ್ಥಿಸುವದನ್ನು ಯೇಸುವು ಕಲಿಸಿದರು.

    ಒಂದು ಕೌಟುಂಬಿಕ ಪ್ರಾರ್ಥನೆ

    ಇಲ್ಲಿರುವ ಬೇಡಿಕೆ "ನಮಗೆ ದಯಪಾಲಿಸಿ" ಎಂದು ಆಗಿದೆ, "ನನಗೆ ದಯಪಾಲಿಸಿ" ಎಂದಲ್ಲ ಎಂಬುದನ್ನು ಗಮನಿಸಿ.

    ದೇವರಿಗೆ ಜೀವನದಲ್ಲಿ ಪ್ರಥಮ ಸ್ಥಾನವನ್ನು ನೀಡುವ ವ್ಯಕ್ತಿಯು, ತನ್ನನ್ನೇ ಎರಡನೆಯ ಸ್ಥಾನದಲ್ಲಿ ಇರಿಸಿಕೊಳ್ಳುವದು ಸರಿಯಲ್ಲವೆಂದು ಕಂಡುಕೊಳ್ಳುವನು. ನಾವು ನಮ್ಮ ತಂದೆಯಾದ ದೇವರ ಊಟದ ಮೇಜಿನ ಸುತ್ತಲು ಕುಳಿತಿರುವ ಒಂದು ಕುಟುಂಬದ ಸದಸ್ಯರು; ಮೇಜಿನಲ್ಲಿ ಬೇರೆಯವರಿಗೆ ಸಾಕಷ್ಟು ಆಹಾರ ಇದೆಯೇ ಎಂದು ವಿವೇಚಿಸದೆ, ಎಲ್ಲವನ್ನೂ ಬಾಚಿ ತಿನ್ನುವ ಸ್ವಾರ್ಥಿಗಳಾದ ಮಕ್ಕಳನ್ನು ತಂದೆಯು ತನ್ನ ಮೇಜಿಗೆ ಸೇರಿಸುವದಿಲ್ಲ. ಅಂತಹ ಸ್ವಾರ್ಥ ನಡತೆ ಕೆಟ್ಟದೆಂದು ಅವಿಶ್ವಾಸಿ ಅನ್ಯಜನರಿಗೂ ತಿಳಿದಿದೆ. ಒಬ್ಬ ಕ್ರೈಸ್ತನು ಇದಕ್ಕಿಂತ ಎಷ್ಟು ವಿಭಿನ್ನನಾಗಿ ಇರಬೇಕು!

    ನ್ಯಾಯತೀರ್ಪಿನ ದಿನದ ಬಗ್ಗೆ ಯೇಸುವು ಹೇಳಿದ ಮಾತನ್ನು ನೆನಪಿಸಿಕೊಳ್ಳಿ. ಅವನು ನ್ಯಾಯತೀರ್ಪಿನ ಸಿಂಹಾಸನದ ಮೇಲೆ ಕುಳಿತು ಜನರನ್ನು ವಿಚಾರಣೆ ಮಾಡುವಾಗ, ಹಲವರಿಗೆ ಹೀಗೆ ಹೇಳುವನು, "ನಾನು ಹಸಿದಿದ್ದನ್ನು ನೀವು ನೋಡಿದಿರಿ, ಆದರೆ ನೀವು ನನಗೆ ಊಟ ಹಾಕಲಿಲ್ಲ. ನಾನು ಬೆತ್ತಲೆಯಾಗಿದ್ದುದನ್ನು ನೋಡಿದಿರಿ. ಆದರೆ ನೀವು ನನಗೆ ಬಟ್ಟೆ ಹೊದಿಸಲಿಲ್ಲ. ನನ್ನ ಅನಾರೋಗ್ಯದ ಬಗ್ಗೆ ತಿಳಿದಿದ್ದರೂ ನೀವು ನನ್ನನ್ನು ಗಮನಿಸಲಿಲ್ಲ." ಅದಕ್ಕೆ ಉತ್ತರವಾಗಿ ಅವರು, "ಸ್ವಾಮೀ, ಯಾವಾಗ ಹೀಗಾಯಿತು? ನೀನು ಬೆತ್ತಲೆಯಾಗಿ ಇದ್ದುದು, ಹಸಿದಿದ್ದುದು ನಮಗೆ ಗೊತ್ತೇ ಇರಲಿಲ್ಲ," ಎನ್ನುವರು. ಅದಕ್ಕೆ ಪ್ರತಿಯಾಗಿ ಕರ್ತನು, "ನಾನು ಮರುಜನ್ಮ ಹೊಂದಿರುವವರಲ್ಲಿ ವಾಸಿಸುತ್ತೇನೆ; ಮತ್ತು ನೀವು ನನ್ನ ಸಹೋದರನ ಕೊರತೆಯನ್ನು ನೋಡಿದಾಗ, ನಾನೇ ಕೊರತೆಯಲ್ಲಿ ಇರುವೆನೆಂದು ತಿಳಕೊಳ್ಳಲಿಲ್ಲ. ಅಲ್ಲಿ ಹಸಿದು ಬಾಯಾರಿದ್ದವನು ನಾನೇ" (ಮತ್ತಾಯ 25:31-46, ಮುಕ್ತ ಅನುವಾದ).

    ಪರಲೋಕ ನರಕಗಳ ನಡುವಿನ ಮೂಲ ವ್ಯತ್ಯಾಸಗಳಲ್ಲಿ ಇದು ಒಂದು. ನರಕವು ಪಾಪ ಮತ್ತು ಸ್ವಾರ್ಥಗಳಿಂದ ತುಂಬಿದೆ. ಅಲ್ಲಿ ಪ್ರತಿಯೊಬ್ಬನೂ ತನ್ನ ಸ್ವಂತಕ್ಕಾಗಿ ಜೀವಿಸಿ, ದೇವರಿಗೆ ಅಥವಾ ಬೇರೆಯವರಿಗೆ ಅವಕಾಶ ನೀಡುವದಿಲ್ಲ. ಆದರೆ ಪರಲೋಕ ಇದಕ್ಕೆ ತದ್ವಿರುದ್ಧವಾಗಿದೆ. ಅಲ್ಲಿ ದೇವರು ಮೊದಲು, ಅನಂತರ ಇತರರು ಇರುತ್ತಾರೆ.

    ನಾನು ಒಂದು ಕಥೆಯನ್ನು ಕೇಳಿದ್ದೇನೆ, ಅದರಲ್ಲಿ ಒಬ್ಬ ಮನುಷ್ಯನು ತನ್ನ ಕನಸಿನಲ್ಲಿ ನರಕ ಮತ್ತು ಸ್ವರ್ಗದ ಒಂದು ಸಾಮ್ಯವನ್ನು ಕಾಣುತ್ತಾನೆ.

    ಆತನು ಮೊದಲು ನರಕಕ್ಕೆ ಹೋದನು; ಅಲ್ಲಿ ಪ್ರತಿಯೊಬ್ಬರೂ ರುಚಿರುಚಿಯಾದ ಆಹಾರವಿದ್ದ ಒಂದು ಮೇಜಿನ ಸುತ್ತಲು ಕುಳಿತಿದ್ದುದನ್ನು ಕಂಡನು. ಆದರೆ ಅವರೆಲ್ಲರೂ ಸಣಕಲಾಗಿದ್ದು, ಅಸ್ವಸ್ಥರೂ, ದುಃಖಗ್ರಸ್ಥರೂ ಆಗಿದ್ದರು. ಅದಕ್ಕೆ ಕಾರಣ ಅವರ ಕೈಗಳಿಗೆ ನಾಲ್ಕು ಅಡಿ ಉದ್ದದ ಚಮಚಗಳು ಕಟ್ಟಲ್ಪಟ್ಟಿದ್ದು, ಅವರು ತಮ್ಮ ಮುಂದೆ ಇಟ್ಟಿದ್ದ ಆಹಾರವನ್ನು ತಿನ್ನಲು ಆಗುತ್ತಿರಲಿಲ್ಲ ಎಂದು ಅವನು ಗಮನಿಸಿದನು. ನಿಮ್ಮ ಕೈಗೆ ನಾಲ್ಕು ಅಡಿ ಉದ್ದದ ಚಮಚ ಕಟ್ಟಲ್ಪಟ್ಟಿದರೆ, ನಿಮ್ಮ ಮುಂದೆ ಇರುವ ತಟ್ಟೆಯಿಂದ ತಿನ್ನಲು ಅಸಾಧ್ಯವೇ!

    ಇದರ ನಂತರ ಆ ಮನುಷ್ಯನು ತನ್ನ ಕನಸಿನಲ್ಲಿ ಪರಲೋಕಕ್ಕೆ ಹೋಗಿ, ಅಲ್ಲಿಯೂ ಮೇಜಿನ ಮೇಲೆ ಅದೇ ರೀತಿಯ ರುಚಿ ರುಚಿಯಾದ ಆಹಾರವನ್ನು ಕಾಣುತ್ತಾನೆ; ಪರಲೋಕದ ಮೇಜಿನ ಸುತ್ತಲು ಕುಳಿತಿದ್ದ ಜನರ ಕೈಗಳಿಗೂ ನಾಲ್ಕು ಅಡಿಯ ಚಮಚಗಳು ಕಟ್ಟಲ್ಪಟ್ಟಿದ್ದುದು ಕಂಡಿತು. ಆದರೆ ಅವರೆಲ್ಲರೂ ಆರೊಗ್ಯವಾಗಿ ಮತ್ತು ಶಕ್ತಿಯುತರಾಗಿ ಇದ್ದರು. ಅದನ್ನು ನೋಡಿ ಅವನು ಅಲ್ಲಿದ್ದ ಒಬ್ಬನನ್ನು, "ನೀವೆಲ್ಲರೂ ಇಷ್ಟು ಆರೋಗ್ಯವಂತರಾಗಿ, ಶಕ್ತಿಯುತರಾಗಿ ಹೇಗೆ ಇದ್ದೀರಿ?" ಎಂದು ಕೇಳಿದಾಗ ಅವನ ಉತ್ತರ ಹೀಗಿತ್ತು, "ನೋಡು, ನಾನಾಗಿಯೇ ಆಹಾರ ಸೇವಿಸಲು ಸಾಧ್ಯವಿಲ್ಲವೆಂದು ನನಗೆ ತಿಳಿದಿದೆ, ಆದುದರಿಂದ ನಾನು ಕೈಚಾಚಿ ಮೇಜಿನ ಇನ್ನೊಂದು ಪಕ್ಕದಲ್ಲಿ ಕುಳಿತವನಿಗೆ ಉಣ್ಣಿಸುತ್ತೇನೆ ಮತ್ತು ಆ ಪಕ್ಕದಲ್ಲಿ ಕುಳಿತವನು ತನ್ನ ಚಮಚದಿಂದ ನನಗೆ ಉಣ್ಣಿಸುತ್ತಾನೆ. ಮತ್ತು ಹೀಗೆ ನಮ್ಮಗೆಲ್ಲರಿಗೂ ಸಾಕಷ್ಟು ಆಹಾರ ಸಿಗುತ್ತದೆ."

    ಆ ಮೇಲೆ ಈ ಮನುಷ್ಯ ತನ್ನ ಕನಸಿನಲ್ಲಿ ಮತ್ತೊಮ್ಮೆ ನರಕಕ್ಕೆ ಹೋಗಿ ಅಲ್ಲಿನ ಜನರಿಗೆ, "ನೋಡಿ, ನಿಮಗೆಲ್ಲರಿಗೂ ಆಹಾರ ಸಿಗಬೇಕಾದರೆ ಈ ರೀತಿ ಮಾಡಿರಿ. ನೀವು ನಿಮ್ಮ ತಟ್ಟೆಗಳಿಂದ ಬೇರೆಯವರು ತಿನ್ನುವದಕ್ಕೆ ಒಪ್ಪಬೇಕು ಮತ್ತು ಮೇಜಿನಲ್ಲಿ ನಿಮ್ಮೆದುರು ಇರುವವರಿಗೆ ನೀವು ಉಣಿಸಬೇಕು," ಎಂದನು. ಆದರೆ ಅವರೆಲ್ಲರೂ ಅವನಿಗೆ ಒಂದೇ ಉತ್ತರ ನೀಡಿದರು. "ನನ್ನ ತಟ್ಟೆಯಿಂದ ಇನ್ಯಾರೂ ತಿನ್ನುವದನ್ನು ನಾನು ಒಪ್ಪುವದಿಲ್ಲ. ಏಕೆಂದರೆ ನಾನು ಬೇರೆಯವರ ತಟ್ಟೆಯಿಂದ ತಿನ್ನಲು ಅವರು ಒಪ್ಪುವರೋ ಇಲ್ಲವೋ, ನನಗೆ ಹೇಗೆ ಗೊತ್ತಾಗುತ್ತದೆ?!"

    "ಗೋದಲಿಯಲ್ಲಿ (ಊಟದ ತೊಟ್ಟಿ) ನಾಯಿ" ಎಂಬ ಗಾದೆ ತೋರಿಸುವ ಈ ಸ್ವಾರ್ಥತೆ, ನರಕ ಮತ್ತು ಅಂತಿಮವಾಗಿ ಅಲ್ಲಿಗೆ ಸೇರುವ ಎಲ್ಲರ ಒಂದು ಗುಣವಾಗಿದೆ. ಇವರ ಗಮನ ತಮ್ಮ ಸ್ವಂತದ ಅನುದಿನದ ಆಹಾರದ ಕಡೆಗೆ ಮಾತ್ರ ಇರುತ್ತದೆ.

    ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರ ಬಗ್ಗೆ ನಿಮಗೆ ಕಾಳಜಿ ಇಲ್ಲವಾದರೆ, ನೀವು ನಿಮ್ಮ ಅನುದಿನದ ಆಹಾರಕ್ಕಾಗಿ ಈ ಪ್ರಾರ್ಥನೆಯನ್ನು ಮಾಡಲು ಸಾಧ್ಯವಿಲ್ಲ.

    ಅಬ್ರಹಾಮನ ಜೀವನದ ಒಂದು ಅವಧಿಯಲ್ಲಿ, ಅವನು ಇಪ್ಪತೈದು ವರ್ಷಗಳ ಕಾಲ ಸಾರಳ ಮೂಲಕ ಒಬ್ಬ ಮಗನನ್ನು ನಿರೀಕ್ಷಿಸಿದರೂ ಅವನಿಗೆ ಮಕ್ಕಳಾಗಿರಲಿಲ್ಲ. ಅವನು ಎಡೆಬಿಡದೆ ಪ್ರಾರ್ಥಿಸುತ್ತಲೇ ಇದ್ದನು. ಯಾವ ಉತ್ತರವೂ ಸಿಕ್ಕಿರಲಿಲ್ಲ. ನಂತರ ಅವನು ಗೆರಾರಿನಲ್ಲಿ ಇದ್ದಾಗ, ದೇವರ ನ್ಯಾಯತೀರ್ಪಿನ ಫಲವಾಗಿ ಅಲ್ಲಿನವರ ಪತ್ನಿಯರು ಬಂಜೆಯರಾಗಿದ್ದನ್ನು ಗಮನಿಸಿದನು. ಒಡನೆಯೇ ಅಬ್ರಹಾಮನು ಅವರಿಗೆ ಮಕ್ಕಳನ್ನು ಕೊಡುವಂತೆ ದೇವರನ್ನು ಪ್ರಾರ್ಥಿಸಿದನು (ಆದಿ. 20:17). ಅಬ್ರಹಾಮನು ತನ್ನ ಸ್ವಂತ ಪತ್ನಿಗಾಗಿ ಪ್ರಾರ್ಥಿಸಿದ್ದಕ್ಕೆ ಇನ್ನೂ ಉತ್ತರ ಸಿಕ್ಕಿರಲಿಲ್ಲ, ಎಂಬುದನ್ನು ನೆನಪಿಸಿಕೊಳ್ಳಿರಿ. ದೇವರು ಅಬ್ರಹಾಮನ ಪ್ರಾರ್ಥನೆಯನ್ನು ಕೇಳಿ, ಬಂಜೆಯರಾದ ಆ ಸ್ತ್ರೀಯರಿಗೆ ಮಕ್ಕಳನ್ನು ಅನುಗ್ರಹಿಸಿದರು. ಆದರೆ ದೇವರು ಅಲ್ಲಿಗೇ ನಿಲ್ಲಿಸಿದರೋ? ಇಲ್ಲ. ಅವರು ಅದೇ ಸಮಯದಲ್ಲಿ ಸಾರಳಿಗೂ ವಾಗ್ದಾನದ ಮಗನನ್ನು ನೀಡಿದರು (ಆದಿ. 21:1). ಅಬ್ರಹಾಮನು ಇತರರಿಗಾಗಿ ಪ್ರಾರ್ಥಿಸಿದಾಗ ದೇವರು ಅವನ ಸ್ವಂತ ಅವಶ್ಯಕತೆಯನ್ನು ಸಹ ಪೂರೈಸಿದರು!

    ಯಾರು ಮೊದಲು ದೇವರ ಬಗ್ಗೆ, ಅನಂತರ ಇತರರ ಬಗ್ಗೆ ಯೋಚಿಸುತ್ತಾರೋ, ಅಂಥವರು ದೇವರಿಂದ ಅತ್ಯುತ್ತಮವಾದುದನ್ನು ಹೊಂದುತ್ತಾರೆ. "ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಬಳಿಕ ಯೆಹೋವನು ಅವನ ದುಸ್ಥಿತಿಯನ್ನು ಹೋಗಲಾಡಿಸಿ, ಅವನ ಸೊತ್ತನ್ನು ಮೊದಲಿಗಿಂತ ಎರಡರಷ್ಟಾಗಿ ಹೆಚ್ಚಿಸಿದನು" (ಯೋಬ 42:10). ಇದೇ ದೇವರ ರೀತಿಯಾಗಿದೆ.

    ನಮ್ಮ ಶಾರೀರಿಕ ಅವಶ್ಯಕತೆಗಳ ಕುರಿತಾದ ಈ ಬೇಡಿಕೆಯು ಇತರ ಎರಡು ಬೇಡಿಕೆಗಳ ನಡುವೆ ಇದೆ. ಒಂದೆಡೆ, "ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ" ಎಂದೂ, ಮತ್ತೊಂದೆಡೆ "ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು" ಎಂದೂ ಇದೆ. ದೇವರ ಚಿತ್ತವನ್ನು ಪೂರೈಸಲು ಮತ್ತು ನಿಮಗೆ ತೊಂದರೆ ಮಾಡಿದವರನ್ನು ಕ್ಷಮಿಸಲು ಹೆಚ್ಚಿನ ತವಕ ನಿಮಗಿದೆಯೇ? ಅಥವಾ, ಒಂದು ಮಗು ಕ್ರೀಮ್ ಬಿಸ್ಕೆತ್ತಿನಲ್ಲಿ ಎರಡು ಬಿಸ್ಕೆತ್ತುಗಳ ನಡುವಿನ ಕ್ರೀಮನ್ನು ಮಾತ್ರ ತಿನ್ನಲು ಬಯಸುವಂತೆ ನೀವು ಸಹ ಮಾಡುತ್ತಿರಾ? ನೀವು "ನಮ್ಮ ಅನುದಿನದ ಆಹಾರವನ್ನು ದಯಪಾಲಿಸು," ಎಂಬ ನಿಮ್ಮ ಪ್ರಾಪಂಚಿಕ, ಶಾರೀರಿಕ ಬೇಡಿಕೆಗಳು ನೆರವೇರುವುದರಲ್ಲಿ ಮಾತ್ರ ಆಸಕ್ತರಾಗಿದ್ದು, ಆ ಬೇಡಿಕೆಯ ಹಿಂದೆ ಮತ್ತು ಮುಂದೆ ಬರುವ ಇತರ ಬೇಡಿಕೆಗಳನ್ನು ತಾತ್ಸಾರ ಮಾಡುತ್ತೀರಾ?

    ಹೀಗೆ ಕ್ರೈಸ್ತರು ಎರಡು ಅತಿರೇಕ ಮೂಲೆಗಳಲ್ಲಿ ಇದ್ದಾರೆಂದು ನಾವು ನೋಡುತ್ತೇವೆ. ಕೆಲವರು ಅತಿಶಯವಾದ ಆತ್ಮಿಕ ದೃಷ್ಟಿಕೋನವನ್ನು ಹೊಂದಿದ್ದು, ಭೌತಿಕ ವಿಷಯಗಳಿಗಾಗಿ ಪ್ರಾರ್ಥಿಸುವುದು ತಪ್ಪೆಂದು ತಿಳಿಯುತ್ತಾರೆ. ಇತರರು ತಮ್ಮ ಭೌತಿಕ ಮತ್ತು ಲೌಕಿಕ ಅವಶ್ಯಕತೆಗಳ ಕುರಿತು ಮಾತ್ರ ಪ್ರಾರ್ಥಿಸುತ್ತಾರೆ.

    ಯೇಸುವು ಕಲಿಸಿದ ಸಮತೋಲನವನ್ನು ತಿಳಿದುಕೊಂಡವರು ಧನ್ಯರು.

    ಅಧ್ಯಾಯ 7
    ಪಾಪ ಕ್ಷಮಾಪಣೆ

    "ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸಿದಂತೆ ನಮ್ಮ ತಪ್ಪುಗಳನ್ನು ಕ್ಷಮಿಸು."

    ಪಾಪವು ದೇವರಿಗೆ ತೀರಿಸಬೇಕಾದ ಒಂದು ಸಾಲವಾಗಿದೆ - ಆ ಪಾಪ ದೇವರ ಗುಣಮಟ್ಟಕ್ಕಾಗಿ ಶ್ರಮಿಸದೇ ಇರುವದು ಆಗಿರಬಹುದು, ಅಥವಾ ದೇವರು ನಿಯಮಿಸಿದ ಮೇರೆಯನ್ನು ಮೀರುವದು ಆಗಿರಬಹುದು.

    ಮನಃಸಾಕ್ಷಿಯ ಮಹತ್ವ

    ಭೂಮಿಯ ಮೇಲೆ ಸೃಷ್ಟಿಸಲಾದ ಸಕಲ ಜೀವಿಗಳಲ್ಲಿ, ಮನುಷ್ಯನಿಗೆ ಮಾತ್ರವೇ ತನ್ನ ತಪ್ಪಿನ ಅಪರಾಧ ಪ್ರಜ್ಞೆ ಅನುಭವವಾಗುತ್ತದೆ. ಇದು ಅವನನ್ನು ಪ್ರಾಣಿಗಳಿಂದ ಪ್ರತ್ಯೇಕಿಸುವ ಒಂದು ಗುಣಲಕ್ಷಣವಾಗಿದೆ.

    ಒಂದು ನಾಯಿಯು ಏನೋ ತಪ್ಪು ಮಾಡಿದರೆ, ಅದು ತನ್ನ ಯಜಮಾನನಿಂದ ಸರಿ-ತಪ್ಪಿನ ತರಬೇತಿ ಪಡೆದಿರದಿದ್ದಲ್ಲಿ, ಅದಕ್ಕೆ ಅಪರಾಧ ಪ್ರಜ್ಞೆ ಇರುವದಿಲ್ಲ. ಆದರೆ ಮಾನವರು - ಅರಣ್ಯವಾಸಿಗಳು, ಯಾವುದೇ ಧರ್ಮ-ನೀತಿಯನ್ನೂ ಅರಿಯದವರು, ಅಶಿಕ್ಷಿತರು, ಸತ್ಯವೇದದ ಹೆಸರನ್ನೂ ಅರಿಯದ ಕಾಡುಮಾನವರೇ ಆಗಿರಲಿ - ಅವರಲ್ಲಿ ಅಪರಾಧ ಪ್ರಜ್ಞೆ ಇರುವದನ್ನು ನೀವು ಕಾಣುವಿರಿ. ಅವರ ಮನಃಸಾಕ್ಷಿಯು ಅವರು ಸೃಷ್ಟಿಕರ್ತನನ್ನು ವ್ಯಸನಗೊಳಿಸಿದ್ದಾಗಿ ತಿಳಿಸುತ್ತದೆ, ಆಗ ಅವರು ದೇವರನ್ನು ಹೇಗಾದರೂ ಸಮಾಧಾನಪಡಿಸಲು ಪ್ರಯಾಸ ಪಡುತ್ತಾರೆ. ಆದರೆ ಒಂದು ಧಾರ್ಮಿಕ ಕೋತಿ ಅಥವಾ ಒಂದು ಧಾರ್ಮಿಕ ನಾಯಿ ಎಲ್ಲೂ ಕಾಣಬರುವದಿಲ್ಲ!

    ನಮ್ಮ ಮನಃಸಾಕ್ಷಿ ದೇವರು ನಮಗೆ ನೀಡಿರುವ ಅತಿ ಶ್ರೇಷ್ಠ ವರಗಳಲ್ಲಿ ಒಂದಾಗಿದೆ. ಅದು ದೇವರೊಂದಿಗೆ ನಮ್ಮ ಸಂಬಂಧವು ಯಾವುದೇ ರೀತಿಯಲ್ಲಿ ತಪ್ಪಿಹೋದಾಗ ನಮ್ಮನ್ನು ಎಚ್ಚರಗೊಳಿಸುತ್ತದೆ - ದೇಹದ ನೋವು ನಮ್ಮ ಶರೀರದಲ್ಲಿ ಯಾವದೋ ತೊಂದರೆ ಇರುವದನ್ನು ಸೂಚಿಸುವ ಹಾಗೆ. ಆದ್ದರಿಂದ ನಾವು ಯಾವಾಗಲೂ ಮನಃಸಾಕ್ಷಿಯನ್ನು ಸೂಕ್ಷ್ಮವಾಗಿ ಇರಿಸುವ ಬಗ್ಗೆ ಎಚ್ಚರ ವಹಿಸಬೇಕು.

    ಯಥಾರ್ಥವಾದ ಪಾಪದ ಅರಿಕೆ

    ಅನೇಕ ಜನರು, "ತಂದೆಯೇ ನಮ್ಮ ಪಾಪಗಳನ್ನು ಕ್ಷಮಿಸಿ," ಎಂದು ಪ್ರಾರ್ಥಿಸುತ್ತಾರೆ, ಆದರೆ ನಾವು ನಮ್ಮ ಪಾಪಗಳನ್ನು ಮೊದಲು ದೇವರಿಗೆ ಅರಿಕೆ ಮಾಡದಿದ್ದರೆ, ಅವರಿಂದ ಕ್ಷಮಾಪಣೆ ಕೇಳಲು ಸಾಧ್ಯವಿಲ್ಲ ಎಂಬ ವಿಷಯ ಅವರಿಗೆ ತಿಳಿದಿಲ್ಲ. ನಾವು ನಮ್ಮ ಪಾಪಗಳನ್ನು ಸಂಪೂರ್ಣ ಯಥಾರ್ಥತೆಯಿಂದ ಒಪ್ಪಿಕೊಳ್ಳಬೇಕು.

    "ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು," (ಜ್ಞಾನೊ 28:13) ಎಂದು ದೇವರ ವಾಕ್ಯ ತಿಳಿಸುತ್ತದೆ. ಪಾಪಗಳನ್ನು ಮರೆಮಾಚುವವನು, "ನನ್ನನ್ನು ಕ್ಷಮಿಸಿ, ನನ್ನನ್ನು ಕ್ಷಮಿಸಿ," ಎಂದು ಪ್ರಾರ್ಥಿಸಬಹುದು. ಆದರೆ ಅವನು ಕ್ಷಮಿಸಲ್ಪಡುವದಿಲ್ಲ. ದೇವರ ವಾಕ್ಯ ಮುಂದೆ ಹೀಗೆ ಹೇಳುತ್ತದೆ, "... ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು." ಇನ್ನೊಂದೆಡೆ ಸತ್ಯವೇದ ಹೀಗೆ ಹೇಳುತ್ತದೆ, ನಾವು "ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ (ಇದು ನಾವು ಮಾಡಬೇಕಾದದ್ದು), ಆತನು (ದೇವರು) ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿ ಮಾಡುವನು" (ಅದು ದೇವರು ಮಾಡುವ ಭಾಗ) (1 ಯೊಹಾ 1:9). ನಾವು ನಮ್ಮ ಭಾಗವನ್ನು ಪೂರೈಸಿದರೆ, ನಂಬಿಗಸ್ತರಾದ ದೇವರು ತಮ್ಮ ಭಾಗವನ್ನು ಪೂರೈಸುವದು ಖಂಡಿತವೆಂದು ನಾವು ನಂಬಬಹುದು!

    ಆದಾಮನ ಪಾಪದಿಂದ ಮೊದಲುಗೊಂಡು, ಮಾನವನು ತನ್ನ ಪಾಪದ ಅರಿಕೆ ಮಾಡುವುದರ ಬದಲು ಅದನ್ನು ಮುಚ್ಚಿಡುವ ಪ್ರವೃತ್ತಿಯನ್ನು ಹೊಂದಿದ್ದಾನೆ. ಆದಾಮ ಮತ್ತು ಹವ್ವರು ಪಾಪ ಮಾಡಿದಾಗ ಅವರ ಮೊದಲ ಪ್ರತಿಕ್ರಿಯೆ ಏನಾಗಿತ್ತು? ಅದು, ದೇವರ ಬಳಿಗೆ ಧಾವಿಸಿ, "ಅಯ್ಯೋ ದೇವರೇ, ನಾವು ಪಾಪ ಮಾಡಿದ್ದೇವೆ, ನೀನು ಮಾಡಬಾರದೆಂದು ಹೇಳಿದ್ದನ್ನೇ ನಾವು ಮಾಡಿದ್ದೇವೆ," ಎಂಬುದಾಗಿತ್ತೇ? ಇಲ್ಲ. ಅವರು ಅದನ್ನು ಮಾಡಲಿಲ್ಲ. ಅವರು ದೇವರಿಂದ ದೂರ ಓಡಿಹೋಗಿ, ಅವರಿಂದ ಅಡಗಿಕೊಳ್ಳಲು ಪ್ರಯತ್ನಿಸಿದರು. ಎಂಥಾ ಮೂರ್ಖತನ! ಸರ್ವಶಕ್ತರಾದ ದೇವರಿಂದ ಆದಾಮ ಮತ್ತು ಹವ್ವರು ಮರದ ಹಿಂದೆ ಬಚ್ಚಿಕೊಳ್ಳಲು ಸಾಧ್ಯವಿತ್ತೇ? ಪಾಪವು ಖಂಡಿತವಾಗಿ ಒಬ್ಬ ಮನುಷ್ಯನನ್ನು ಮೂರ್ಖನಾಗಿಸುತ್ತದೆ.

    ಮನುಷ್ಯನ ಎರಡನೆಯ ಪ್ರವೃತ್ತಿ, ತನ್ನ ಪಾಪಗಳಿಗಾಗಿ ಇತರರನ್ನು ದೂರುವದು. ದೇವರು ಆದಾಮನ ಪಾಪವನ್ನು ಬಹಿರಂಗಪಡಿಸಿ, "ನೀನು ಈ ಮರದ ಹಣ್ಣನ್ನು ತಿಂದಿಯಾ?" ಎಂದು ಆತನನ್ನು ಕೇಳಿದರು. ಅದಕ್ಕೆ ಆದಾಮನು ನೀಡಿದ ಉತ್ತರವೇನು? ಆದಾಮನು ತನ್ನ ಪತ್ನಿಯನ್ನು ದೂಷಿಸಿದನು. ಮತ್ತು ಆತನ ಪತ್ನಿಯು ಸರ್ಪವನ್ನು ದೂಷಿಸಿದಳು!

    ಆ ಸ್ವಭಾವವು ಆದಾಮ ಹವ್ವರಿಂದ ಬಂದು ನಮ್ಮೆಲ್ಲರನ್ನು ಸೇರಿದೆ. ನಾವು ಯಾವಾಗಲೂ ನಮ್ಮನ್ನು ನೀತಿವಂತರೆಂದು ಸಾಧಿಸಿ, ನಾವು ನಮ್ಮ ತಪ್ಪುಗಳಿಗೆ ಜವಾಬ್ದಾರರಲ್ಲ ಎಂದು ಸಾಬೀತು ಪಡಿಸಲು ಪ್ರಯತ್ನಿಸುತ್ತೇವೆ. ಮತ್ತು ನಮ್ಮ ಪಾಪ ಬಯಲಾದಾಗ, ಕ್ಷಣಿಕ ಬಲಹೀನತೆ ಹಾಗೂ ಒತ್ತಡಗಳಿಂದ ಹಾಗೆ ಮಾಡಿದೆವು ಎನ್ನುತ್ತೇವೆ. ನಮ್ಮ ಪಾಪಗಳನ್ನು ಅರಿಕೆ ಮಾಡುವುದರ ಬದಲಾಗಿ, ನಾವು ಅವನ್ನು ಮುಚ್ಚಿಡಲು ಪ್ರಯತ್ನಿಸುತ್ತೇವೆ. ನಾವು ದೇವರ ಕ್ಷಮಾಪಣೆಯನ್ನು ಹೊಂದದೇ ಇರುವದಕ್ಕೆ ಇದೇ ಕಾರಣ.

    ಬೆಳಕಿನಲ್ಲಿ ನಡೆಯುವದು

    ಬೆಳಕಿಗೆ ಬರುವದರ ಬಗ್ಗೆ ಯೇಸುವು ಪ್ರಸ್ತಾಪಿಸಿ, "ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿ ಇರುವದರಿಂದ, ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು. ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ. ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ಬೆಳಕಿಗೆ ಬರುತ್ತಾನೆ," ಎಂದು ಹೇಳಿದರು (ಯೋಹಾ 3:19-21).

    ಅಲ್ಲಿರುವ ವ್ಯತ್ಯಾಸವನ್ನು ಗಮನಿಸಿ! ಒಂದೆಡೆ, ಕೆಟ್ಟದ್ದನ್ನು ಮಾಡುವವರೆಲ್ಲರೂ ಬೆಳಕನ್ನು ದ್ವೇಷಿಸುವರು, ಎಂದು ಯೇಸುವು ಹೇಳಿದರು. ಮತ್ತು ’ಕೆಟ್ಟದರ’ ವಿರುದ್ಧ ’ಒಳ್ಳೆಯದು’, ಹಾಗಾಗಿ ಒಳ್ಳೆಯದನ್ನು ಮಾಡುವವರೆಲ್ಲರೂ ಬೆಳಕಿಗೆ ಬರುವರೆಂದು ಯೇಸು ತಿಳಿಸುವರು ಎಂದು ನಾವು ಯೋಚಿಸಬಹುದು. ಆದರೆ ಅವರು ಹಾಗೆ ಹೇಳಲಿಲ್ಲ. ಅವರು ’ಸತ್ಯ’ದಲ್ಲಿ ನಡೆಯುವ ಪ್ರತಿಯೊಬ್ಬನೂ ಬೆಳಕಿಗೆ ಬರುವನೆಂದು ಹೇಳಿದರು.

    ವ್ಯತ್ಯಾಸವನ್ನು ಗಮನಿಸಿದಿರಾ? ದೇವರು ನಮ್ಮಿಂದ ಮೊದಲು ಅಪೇಕ್ಷಿಸುವದು ಒಳ್ಳೆಯತನವನ್ನಲ್ಲ, ಆದರೆ ಸತ್ಯವನ್ನು - ಇದ್ದುದನ್ನು ಇದ್ದಂತೆ ಒಪ್ಪಿಕೊಳ್ಳುವದು ಮತ್ತು ಪ್ರಾಮಾಣಿಕತೆ. ಯೇಸುವಿನ ಮಾತನ್ನು ಇನ್ನೊಂದು ರೀತಿಯಲ್ಲಿ ಹೇಳುವದಾದರೆ, "ದುಷ್ಟನು ಅಪ್ರಾಮಾಣಿಕನು. ಆದರೆ ಬೆಳಕಿಗೆ ಬರುವ ವ್ಯಕ್ತಿ ಪರಿಪೂರ್ಣನು ಅಲ್ಲದಿದ್ದರೂ, ಅವನೊಬ್ಬ ಪ್ರಾಮಾಣಿಕ ಮನುಷ್ಯನು." ನಾವು ಸಂಪೂರ್ಣ ಉತ್ತಮರಾದಾಗಲೇ ಬೆಳಕಿಗೆ ಬರಬಹುದು ಎಂದು ಹೇಳಿದ್ದರೆ, ನಮ್ಮಲ್ಲಿ ಒಬ್ಬನೂ ಅಲ್ಲಿಗೆ ತಲುಪುತ್ತಿರಲಿಲ್ಲ. ಆದರೆ ದೇವರು ಎಲ್ಲಾ ಪ್ರಾಮಾಣಿಕ ಜನರನ್ನು ತನ್ನ ಬಳಿಗೆ ಆಹ್ವಾನಿಸುತ್ತಾರೆ. ಮುಂದೆ ಹಂತ ಹಂತವಾಗಿ ಈ ’ಪ್ರಾಮಾಣಿಕ ಜನ’ ’ಒಳ್ಳೆಯವರು’ ಆಗುತ್ತಾರೆ.

    ನಾವು ಪ್ರಾಮಾಣಿಕರಾಗಿ ಇರಲು ಇಷ್ಟಪಟ್ಟಲ್ಲಿ ಮಾತ್ರ "ನಮ್ಮ ಪಾಪಗಳನ್ನು ಕ್ಷಮಿಸಿ," ಎಂಬ ಈ ಪ್ರಾರ್ಥನೆಯನ್ನು ಮಾಡಬಹುದು. ನೀವು ಪರಿಪೂರ್ಣರು ಆಗಿರದಿದ್ದರೂ ನಿಮ್ಮ ದೋಷಗಳ ಬಗ್ಗೆ ಪ್ರಾಮಾಣಿಕರಾಗಿದ್ದಲ್ಲಿ ದೇವರ ಬೆಳಕಿಗೆ ಬರಬಹುದು. ಸತ್ಯವನ್ನು ಪಾಲಿಸುವ, ಯಥಾರ್ಥನಾದ ಪ್ರತಿಯೊಬ್ಬನೂ, ಬೆಳಕಿನೊಳಗೆ ಬಂದು ತನ್ನ ಪಾಪವನ್ನು ಒಪ್ಪಿಕೊಳ್ಳಬಹುದು, ಮತ್ತು ಆ ಪಾಪವು ಆಗ ಅಳಿಸಲ್ಪಡುವದು.

    "ಆತನು ಬೆಳಕಿನಲ್ಲಿ ಇರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ, ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿದ್ದೇವೆ, ಮತ್ತು ಆತನ ಮಗನಾದ ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣಮಾಡಿ ನಮ್ಮನ್ನು ಶುದ್ಧಿ ಮಾಡುತ್ತದೆ" (1 ಯೋಹಾ. 1:7).

    ಈ ವಚನದ ಕೊನೆಯ ಭಾಗವಾದ, "ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣಮಾಡಿ ನಮ್ಮನ್ನು ಶುದ್ಧಿ ಮಾಡುತ್ತದೆ," ಎನ್ನುವ ವಾಗ್ದಾನವನ್ನು ತಾವು ಹೊಂದಿರುವದಾಗಿ ತೋರಿಸಿಕೊಳ್ಳುವ ಅನೇಕರು ಇದ್ದಾರೆ. ಆದರೆ ಹೀಗೆ ವಾಕ್ಯದ ಮೊದಲ ಭಾಗವನ್ನು ಲೆಕ್ಕಿಸದೆ ಇದನ್ನು ಹೇಳಿಕೊಳ್ಳುವದು ಸರಿಯಲ್ಲ. ಯೇಸುವಿನ ರಕ್ತವು ಆ ವಾಕ್ಯದ ಮೊದಲ ಭಾಗದಲ್ಲಿರುವ ಷರತ್ತನ್ನು ಪಾಲಿಸುವವರನ್ನು ಮಾತ್ರ ಶುದ್ಧೀಕರಿಸುವದು - ಅಂದರೆ ಬೆಳಕಿನಲ್ಲಿ ನಡೆಯುವವರನ್ನು.

    ನಾನು ಇದಕ್ಕೆ ಒಂದು ಉದಾಹರಣೆಯನ್ನು ಕೊಡುತ್ತೇನೆ. ನನ್ನ ಸುತ್ತಲು ಕತ್ತಲು ಆವರಿಸಿದೆಯೆಂದು ಭಾವಿಸೋಣ. ಬೆಳಕಿಗೆ ಬರುವದು ಎಂದರೆ, ನಾನು ಇತರರ ಎದುರಿಗೆ ಬರುವದು. ಒಂದು ವೇಳೆ ನನ್ನ ಬಟ್ಟೆ ಹೊಲಸಾಗಿದ್ದರೆ, ಅದು ಕಂಡುಬರುತ್ತದೆ. ಬೆಳಕು ನನ್ನ ಉಡುಪನ್ನು ಸ್ವಚ್ಛಗೊಳಿಸುವದಿಲ್ಲ. ಅದು ನನ್ನ ಬಟ್ಟೆ ಹೊಲಸಾಗಿದೆ ಎಂಬ ಸತ್ಯವನ್ನು ಬಹಿರಂಗ ಪಡಿಸುತ್ತದೆ ಅಷ್ಟೇ. ಇದೇ ರೀತಿಯಾಗಿ ನನಗೆ ನನ್ನೊಳಗೆ ಕಾಣಿಸುವದನ್ನು ಮುಚ್ಚಿಡದೆ, ಅದರ ಬಗ್ಗೆ ಯಥಾರ್ಥವಾಗಿ ಇರುವದು. ಇದು ಬೆಳಕಿಗೆ ಬರುವುದು ಎನ್ನುವದರ ಮೂಲ ಅರ್ಥ.

    ನಾವು ಇದನ್ನು ಸ್ಪಷ್ಟವಾಗಿ ತಿಳಕೊಳ್ಳುವದು ಅವಶ್ಯ, ಏಕೆಂದರೆ ಇದು ದೇವರೊಂದಿಗೆ ನಮ್ಮ ಸಂಬಂಧಕ್ಕೆ ಮಾತ್ರವಲ್ಲ, ನಮ್ಮ ಸಂಗಡಿಗರೊಂದಿಗೆ ಇರುವ ಸಂಬಂಧಕ್ಕೂ ಸಹ ಅನ್ವಯಿಸುತ್ತದೆ.

    ಕ್ರೈಸ್ತತ್ವದಲ್ಲಿ ದೇವರೊಂದಿಗೆ ಒಂದು ಮೇಲ್ಮುಖ ಸಂಬಂಧದ ಮತ್ತು ನಮ್ಮ ಸಹ-ವಿಶ್ವಾಸಿಗಳೊಂದಿಗೆ ಒಂದು ಸಮತಲ ಸಂಬಂಧ ಇರುತ್ತದೆ. ನೀವು ಒಂದನ್ನು ಆರಿಸಿಕೊಂಡು ಇನ್ನೊಂದನ್ನು ಬಿಟ್ಟುಬಿಡಲು ಆಗುವದಿಲ್ಲ. ನಿಮಗೆ ಸಹ-ವಿಶ್ವಾಸಿಗಳೊಂದಿಗೆ ಅನ್ಯೋನ್ಯತೆ ಇಲ್ಲದೆ, ದೇವರೊಂದಿಗೆ ಅನ್ಯೊನ್ಯತೆಯನ್ನು ಹೊಂದಲು ಸಾಧ್ಯವಿಲ್ಲ.

    "ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ" (1 ಯೋಹಾನ 4:20). ನೀವು ನಿಜವಾಗಿ ದೇವರನ್ನು ಪ್ರೀತಿಸುವದಾದರೆ, ನಿಮ್ಮ ಸಹೋದರನನ್ನೂ ಪ್ರೀತಿಸುವಿರಿ.

    ಸರಿಯಾದ ಸಮತಲ ಸಂಬಂಧ

    ನಾವು ದೇವರ ವಿರುದ್ಧವಾಗಿ ಮಾಡಿರುವ ತಪ್ಪುಗಳನ್ನು ಅವರ ಮುಂದೆ ಒಪ್ಪಿಕೊಳ್ಳಬೇಕಾದಂತೆಯೇ, ನಮ್ಮ ಸಂಗಡಿಗರ ಮುಂದೆಯೂ ಅವರ ವಿರುದ್ಧವಾಗಿ ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳಬೇಕು. ಹಾಗೆ ಮಾಡದೇ ಹೋದರೆ ಪಾಪ ಕ್ಷಮಾಪಣೆ ಸಿಗುವದಿಲ್ಲ.

    ನಾವು ಯಾರನ್ನಾದರೂ ವಂಚಿಸಿ ಹಣ ಸಂಪಾದಿಸಿದ್ದರೆ, ಅವಶ್ಯವಾಗಿ ಅದನ್ನು ವಾಪಾಸು ಮಾಡಬೇಕು. ಇಲ್ಲವಾದರೆ ದೇವರು ನಮ್ಮನ್ನು ಕ್ಷಮಿಸಲಾರರು. ನಮ್ಮ ಮಾನಸಾಂತರವನ್ನು ಪ್ರಕಟಿಸುವ ಒಂದೇ ಒಂದು ಮಾರ್ಗವೆಂದರೆ, ನಾವು ಯಾರ ವಿರುದ್ಧ ತಪ್ಪು ಮಾಡಿದ್ದೇವೋ ಅವರ ಬಳಿಗೆ ಹೋಗಿ ತಪ್ಪು ಒಪ್ಪಿಕೊಳ್ಳುವದು ಮತ್ತು ನಾವು ಏನನ್ನು ತಪ್ಪಾಗಿ ತೆಗೆದುಕೊಂಡೆದ್ದೆವೋ ಅದನ್ನು ಹಿಂದಿರುಗಿಸುವದು.

    ಒಂದು ವೇಳೆ ನೀವು ಟಿಕೆಟ್ ಪಡೆಯದೆ ರೈಲು ಪ್ರಯಾಣಗಳನ್ನು ಮಾಡಿದ್ದರೆ, ನೀವು ದೇವರ ಬಳಿ ಹೋಗಿ, "ನಾನು ರೈಲ್ವೇ ಇಲಾಖೆಗೆ ಮೋಸ ಮಾಡಿದ್ದೇನೆ, ನನ್ನನ್ನು ಕ್ಷಮಿಸಿ" ಎಂದು ಒಪ್ಪಿಕೊಳ್ಳುವದು ಸುಲಭ. ಆದರೆ ದುಬಾರಿ ಮಾರ್ಗ - ನಿಮ್ಮ ನಿಜವಾದ ಮಾನಸಾಂತರವನ್ನು ತೋರಿಸುವ ವಿಧಾನ - ರೈಲ್ವೇ ಟಿಕೇಟ್ ಕೊಡುವ ಸ್ಥಳಕ್ಕೆ ಹೋಗಿ, ಒಂದು ಪ್ರಯಾಣದ ಟಿಕೇಟನ್ನು ಕೊಂಡುಕೊಳ್ಳುವದು ಮತ್ತು ಅದನ್ನು ಹರಿದು ಹಾಕುವದು. ಇಲ್ಲವಾದರೆ ನಿಮ್ಮ ಮಾನಸಾಂತರ ಬರೀ ಹೊರತೋರಿಕೆ ಅಷ್ಟೇ.

    ಅನೇಕ ಜನ ದೇವರೊಂದಿಗೆ ಆಳವಾದ ಅನ್ಯೋನ್ಯತೆಯನ್ನು ಪಡೆಯದೇ ಇರುವದಕ್ಕೆ ಇದೇ ಕಾರಣ. ಅವರ ಮಾನಸಾಂತರ ಮಾತಿನಲ್ಲಷ್ಟೇ ಇರುತ್ತದೆ, ಅವರ ಹೃದಯದೊಳಗೆ ಇರುವದಿಲ್ಲ. ಅವರು ತಮ್ಮ ಪಾಪಗಳನ್ನು ದೇವರ ಮುಂದೆ ಅರಿಕೆ ಮಾಡುತ್ತಾರೆ. ಆದರೆ ಸಂಗಡಿಗರ ವಿರುದ್ಧ ಪಾಪ ಮಾಡಿದಾಗ, ಅವರು ಅದನ್ನು ಅವರ ಮುಂದೆ ಒಪ್ಪಿಕೊಳ್ಳುವದಿಲ್ಲ.

    ಯಾರೋ ಒಬ್ಬರಿಗೆ "ನಾನು ತಪ್ಪು ಮಾಡಿದೆ, ದಯವಿಟ್ಟು ನನ್ನನ್ನು ಕ್ಷಮಿಸಿ," ಎಂದು ಹೇಳುವುದು ಅತೀ ಕಷ್ಟಕರವಾದ ಒಂದು ವಿಷಯ. ಏಕೆ? ಏಕೆಂದರೆ ಅದು ನಮ್ಮ ’ಅಹಂ’ ಅನ್ನು ಸಾಯಿಸುತ್ತದೆ. ನಾವೆಲ್ಲರೂ ಮೂಲತಃ ಗರ್ವಿಷ್ಟರು, ಮತ್ತು ನಾವು ನಮ್ಮನ್ನು ತಗ್ಗಿಸಿಕೊಂಡು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳಲು ಇಷ್ಟಪಡುವದಿಲ್ಲ!

    ನಮಗೆ ಪರಿಶುದ್ಧ ದೇವರ ಎದುರು ನಮ್ಮ ಪಾಪಗಳನ್ನು ಒಪ್ಪಿಕೊಳ್ಳುವುದು ಬಹಳ ಸುಲಭ ಎನಿಸುತ್ತದೆ; ಆದರೆ ಒಬ್ಬ ದೋಷಯುಕ್ತ ಸಹೋದರನ ಮುಂದೆ ನಮ್ಮ ಪಾಪಗಳನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗುತ್ತದೆ, ಇದು ಏಕೆ? ಕಾರಣ ಏನೆಂದರೆ, ನಾವು ನಮ್ಮ ಕೊಠಡಿಯಲ್ಲಿ ಪಾಪಗಳನ್ನು ದೇವರಿಗೆ ಅರಿಕೆ ಮಾಡುವಾಗ, ನಿಜವಾಗಿ ನಾವು ನಮ್ಮಷ್ಟಕ್ಕೇ ಆ ಅರಿಕೆ ಮಾಡುತ್ತಿರಬಹುದು! ನಾವು ಅರಿಕೆಯನ್ನು ದೇವರಿಗೆ ಮಾಡುತ್ತಿಲ್ಲ. ನಾವು ನಮ್ಮನ್ನೇ ವಂಚಿಸುತ್ತಿದ್ದೇವೆ. ನೀವು ದೇವರ ಮುಂದೆ ನಿಜವಾಗಿ ತಗ್ಗಿಸಿಕೊಂಡಿರುವದರ ಪರೀಕ್ಷೆ ಏನೆಂದರೆ, ನೀವು ನೋಯಿಸಿರುವ ಯಾವ ವ್ಯಕ್ತಿಯಿಂದಲೇ ಆದರೂ ಕ್ಷಮೆ ಕೇಳಲು ಒಪ್ಪುವಿರಾ ಎನ್ನುವದು.

    ಭಾರತೀಯ ಸಂಸ್ಕೃತಿಯಲ್ಲಿ, ಹೆಂಡಂದಿರು ತಮ್ಮ ಗಂಡಂದಿರಲ್ಲಿ ಕ್ಷಮೆ ಕೇಳಬೇಕು, ಆದರೆ ಗಂಡಂದಿರು ಮಾತ್ರ ಹೆಂಡಂದಿರಿಂದ ಕ್ಷಮೆ ಕೇಳುವ ಅಗತ್ಯವಿಲ್ಲ ಎಂಬ ಅಭಿಪ್ರಾಯವಿದೆ. ಪುರುಷ ಜಾತಿ ಯಾವುದೋ ಶ್ರೇಷ್ಠ ಜಾತಿ ಎನ್ನುವಂತಿದೆ ಇದು!!

    ಈ ರೀತಿಯ ಮೇಲು ಕೀಳು ಎನ್ನುವ ವ್ಯತ್ಯಾಸ ಕ್ಷಮೆ ಕೇಳುವ ವಿಷಯದಲ್ಲಿ ಖಂಡಿತವಾಗಿ ಇಲ್ಲ. ಒಂದು ವೇಳೆ ನೀವು ಒಂದು ಕಛೇರಿಯ ನಿರ್ದೇಶಕರೇ ಆಗಿದ್ದರೂ, ನಿಮಗಿಂತ ಬಹಳ ಕೆಳಮಟ್ಟದ ಒಬ್ಬ ವ್ಯಕ್ತಿಯ ವಿರುದ್ಧವಾಗಿ ನೀವು ತಪ್ಪು ಮಾಡಿದ್ದರೆ, ನೀವು ನಿಮ್ಮನ್ನು ತಗ್ಗಿಸಿಕೊಂಡು ಅವರ ಬಳಿ ಹೋಗಿ, "ನನ್ನಿಂದ ತಪ್ಪಾಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ," ಎಂದು ಕೇಳಬೇಕು. ಇದನ್ನು ಮಾಡದೇ ಹೋದರೆ ಅದು ನಿಜವಾದ ಕ್ರೈಸ್ತತ್ವವಲ್ಲ.

    ಅನೇಕ ಕ್ರೈಸ್ತ ಸಭೆಗಳಲ್ಲಿ ಜನರು ಮುರಿದುಹೋಗಿರುವ ಸಂಬಂಧಗಳನ್ನು ಒಬ್ಬರನ್ನೊಬ್ಬರು ಸಂಧಿಸಿ ಸರಿಪಡಿಸುವದಿಲ್ಲ. ಅವರಿಬ್ಬರ ನಡುವೆ ಅಸಮಾಧಾನ ಇರುತ್ತದೆ ಮತ್ತು ಅವರು ಒಬ್ಬರನ್ನೊಬ್ಬರು ಭೇಟಿ ಮಾಡುವದಿಲ್ಲ. ಹಾಗಿದ್ದೂ ಅವರು ತಮ್ಮನ್ನು ಕ್ರೈಸ್ತರೆಂದು ಹೇಳಿಕೊಳ್ಳುತ್ತಾರೆ! ಅವರು ಕ್ರೈಸ್ತರು ಅಲ್ಲವೇ ಅಲ್ಲ. ಅಂಥವರು ತಾವು ದೇವರ ರಾಜ್ಯಕ್ಕೆ ಸೇರಿರುವದಾಗಿ ಭಾವಿಸಿದರೆ ಅದು ಆತ್ಮವಂಚನೆ, ಅಷ್ಟೇ.

    ಸಭೆಯ ಒಬ್ಬ ಸಹೋದರನನ್ನು ಮಾತನಾಡಿಸಲು ಅಥವಾ ಭೇಟಿಮಾಡಲು ನೀವು ಒಪ್ಪದಿದ್ದರೆ, ರೊಟ್ಟಿ ಮುರಿಯುವುದರಲ್ಲಿ ಪಾಲ್ಗೊಳ್ಳುವದು ದೇವದೂಷಣೆಗೆ ಸಮಾನ. ಅಂತಹ ಪರಿಸ್ಥಿತಿಯಲ್ಲಿ ದೇವರೊಂದಿಗೆ ನಮ್ಮ ಅನ್ಯೋನ್ಯತೆ ಸಾಧ್ಯವಿಲ್ಲ! ನೀವು ಸಹ-ವಿಶ್ವಾಸಿಗಳೊಂದಿಗೆ ಸರಿಯಾದ ಸಮತಲ ಸಂಬಂಧ ಇರಿಸಿಕೊಳ್ಳದೆ, ದೇವರೊಂದಿಗೆ ಮೇಲ್ಮುಖ ಸಂಬಂಧ ಹೊಂದಲು ಆಗುವದಿಲ್ಲ.

    ಆದರೆ ನಾವು ದೇವರ ಮುಂದೆಯೂ ಮತ್ತು ಮನುಷ್ಯರ ಮುಂದೆಯೂ ಪಾಪ-ದೋಷಗಳನ್ನು ನಿಜವಾಗಿ ಒಪ್ಪಿಕೊಂಡರೆ, ಆಗ ದೇವರು ನಮ್ಮನ್ನು ಎಷ್ಟು ಸಂಪೂರ್ಣವಾಗಿ ಶುದ್ಧ ಮಾಡುವರೆಂದರೆ, ಆ ಮೇಲೆ ಅವರಿಗೆ ನಮ್ಮ ಹಳೆಯ ಜೀವನದ ನೆನಪೂ ಸಹ ಇರುವದಿಲ್ಲ. ಅದಲ್ಲದೆ ಅವರು ನಮ್ಮ ಹಿಂದಿನ ಪಾಪಗಳನ್ನು ಮುಂದೆಂದೂ ಜ್ಞಾಪಿಸದಿರುವಾಗ, ನಾವೇಕೆ ಅವುಗಳ ಬಗ್ಗೆ ಯೋಚಿಸಬೇಕು (ಇಬ್ರಿಯ 8:12)?

    ಪರಿಪೂರ್ಣ ಕ್ಷಮಾಪಣೆ

    ನಾವು ಯೇಸು ಕ್ರಿಸ್ತನ ರಕ್ತದ ಮೂಲಕ ನೀತಿವಂತರಾಗಿದ್ದೇವೆ ಎಂದು ಸತ್ಯವೇದ ತಿಳಿಸುತ್ತದೆ (ರೋಮಾ. 5:9). ನಮ್ಮನ್ನು ದೇವರು ಶುದ್ಧೀಕರಿಸುವದು ಅಷ್ಟೇ ಅಲ್ಲ, ನೀತಿವಂತರನ್ನಾಗಿಯೂ ಮಾಡುತ್ತಾರೆ. "ನೀತಿವಂತ" ಎಂಬ ಪದದ ಅರ್ಥ, "ನಾನು ಇಡೀ ಜೀವಿತದಲ್ಲಿ ಪಾಪ ಮಾಡದವನಂತೆ ಮತ್ತು ಈಗ ಸಂಪೂರ್ಣ ನೀತಿವಂತನು ಎಂಬಂತೆ." ಎಷ್ಟು ಅದ್ಭುತವಾಗಿದೆ!

    ನಾವು ನಮ್ಮ ಪಾಪಗಳನ್ನು ಕರಿಹಲಗೆಯ ಮೇಲೆ ಬರೆಯಲ್ಪಟ್ಟ ಅನೇಕ ಪದಗಳು ಎಂದು ಭಾವಿಸಬಹುದು. ಈಗ ಆ ಹಲಗೆ ಒಂದು ನೆನೆದ ಬಟ್ಟೆಯಿಂದ ಪೂರ್ತಿಯಾಗಿ ಅಳಿಸಲ್ಪಟ್ಟಿದೆ. ಈಗ ನೀವು ಆ ಕರಿಹಲಗೆಯನ್ನು ನೋಡಿದರೆ ಅಲ್ಲಿ ಏನು ಕಾಣುತ್ತೀರಿ? ಏನೂ ಇಲ್ಲ. ಅದರ ಮೇಲೆ ಯಾವತ್ತೂ ಏನೂ ಬರೆದಿಲ್ಲ ಎನ್ನುವಂತೆ ಇದೆ. ಯೇಸುವಿನ ರಕ್ತವು ನಮ್ಮನ್ನು ಅದೇ ರೀತಿ ಶುದ್ಧೀಕರಿಸುತ್ತದೆ - ಪೂರ್ತಿಯಾಗಿ ಮತ್ತು ಸ್ವಲ್ಪವೂ ಮಿಗದಂತೆ.

    ನಾವು ನಮ್ಮ ಪಾಪಗಳನ್ನು ದೇವರಿಗೆ ಯಥಾರ್ಥವಾಗಿ ಅರಿಕೆ ಮಾಡಿದರೆ, ಆಗ ಒಂದು ಸಲ ಅರಿಕೆ ಮಾಡಿದರೆ ಸಾಕು. ಒಡನೆಯೇ ದೇವರು ಅವುಗಳನ್ನು ಅಳಿಸಿಬಿಡುತ್ತಾರೆ. ಮತ್ತು "ಅವರ ಪಾಪಗಳನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ," (ಇಬ್ರಿಯ 8:12) ಎಂದು ಅವರು ವಾಗ್ದಾನ ಮಾಡಿದ್ದಾರೆ. ನಮಗೆ ನಿಜವಾದ ಕ್ಷಮಾಪಣೆ ಸಿಕ್ಕಿದೆ ಎನ್ನುವದು ಮತ್ತು ನಮ್ಮ ಪಾಪಗಳನ್ನು ಕರ್ತರಿಗೆ ಪದೇ ಪದೇ ಒಪ್ಪಿಸ ಬೇಕಿಲ್ಲ ಎನ್ನುವದು ನಮಗೆ ಸ್ಪಷ್ಟವಾದಾಗ ನಮ್ಮ ಹೃದಯಕ್ಕೆ ಎಂತಹ ಸಮಾಧಾನ ಸಿಗುವದು!

    ಇನ್ನೊಂದು ವಿಷಯ, ನಾವು "ನಮ್ಮ ಪಾಪಗಳನ್ನು ಕ್ಷಮಿಸಿ" ಎನ್ನುವಾಗ ಪಾಪಗಳನ್ನು ಖಚಿತವಾಗಿ ಹೆಸರಿಸಿ ಪ್ರಾರ್ಥಿಸುವದು ಅತ್ಯುತ್ತಮವೆಂದು ಹೇಳಲು ನಾನು ಬಯಸುತ್ತೇನೆ. "ಕರ್ತನೇ, ನಾನು ಅನೇಕ ಪಾಪಗಳನ್ನು ಮಾಡಿರಲೂ ಬಹುದು," ಎಂದು ಅನೇಕರು ಅಸ್ಪಷ್ಟವಾಗಿ ಪ್ರಾರ್ಥಿಸುವರು. ಅದರ ಬಗ್ಗೆ ಅವರು ಖಚಿತವಿಲ್ಲವೆಂದು ಅದರ ಅರ್ಥ. ಹಾಗೆ ಅರಿಕೆ ಮಾಡುವದು ವ್ಯರ್ಥ; ಏಕೆಂದರೆ ಬಹುಶಃ ನೀವು ಪಾಪ ಮಾಡಿಯೇ ಇಲ್ಲವೆಂದು ನೀವು ಸೂಚಿಸುತ್ತಿದ್ದೀರಿ!

    ವಿವರವಾದ, ಖಚಿತವಾದ ಒಂದು ಅತ್ಯುತ್ತಮ ಅರಿಕೆಯೆಂದರೆ, "ಕರ್ತನೇ, ಇಗೋ ನನ್ನ ಪಾಪ. ನನಗೆ ಆ ವ್ಯಕ್ತಿಯ ಬಗ್ಗೆ ಅಸಮಾಧಾನವಿದೆ. ಈತನನ್ನು ನಾನು ಕ್ಷಮಿಸಿಲ್ಲ. ನಾನು ಇವನ ಬಗ್ಗೆ ಅಸೂಯೆ ಪಟ್ಟಿರುವೆನು. ನಾನು ಮಿತಿಮೀರಿದ ಸ್ವಾರ್ಥತೆಯಿಂದ ಹಾಗೆ ಮಾಡಿದೆ. ನಾನು ಇದನ್ನು ನನ್ನ ಸ್ವಂತ ಹೆಚ್ಚಳಕ್ಕಾಗಿ ಮಾಡಿದೆ, ಇತ್ಯಾದಿ." ನೀವು ಪ್ರಾಮಾಣಿಕರು ಆಗಿರಬೇಕು.

    ನಾವು ನಮಗೆ ತಿಳಿದಿರುವ ಎಲ್ಲಾ ಪಾಪಗಳನ್ನು ಒಪ್ಪಿಕೊಂಡ ನಂತರವೂ, ದಾವೀದನಂತೆ, "ನನ್ನನ್ನು ಮರೆಯಾದ ಪಾಪಗಳಿಂದ ಬಿಡಿಸಿ," ಎಂದು ಪ್ರಾರ್ಥಿಸಬೇಕು - ಏಕೆಂದರೆ, ನಾವೆಲ್ಲರೂ ನಮಗೆ ತಿಳಿಯದಿರುವ ಅನೇಕ ಪಾಪಗಳನ್ನು ಮಾಡಿದ್ದೇವೆ (ಕೀರ್ತನೆ 19:12).

    ಇತರರನ್ನು ಕ್ಷಮಿಸುವದು

    ಕ್ಷಮಾ ಯಾಚನೆ ಈ ಪ್ರಾರ್ಥನೆಯ ಬಹಳ ಹೆಚ್ಚಿನ ಮಹತ್ವದ ಒಂದು ಬೇಡಿಕೆಯಾಗಿದೆ, ಏಕೆಂದರೆ ಯೇಸುವು ಪ್ರಾರ್ಥನೆಯ ಕೊನೆಯಲ್ಲಿ ಕೇವಲ ಈ ಬೇಡಿಕೆಯನ್ನು ಮತ್ತೊಮ್ಮೆ ವಿವರಿಸಿದರು.

    ನೀವು ಅದನ್ನು ಗಮನಿಸಿರುವಿರಾ?

    ಈ ಪ್ರಾರ್ಥನೆಯ ಆರು ಬೇಡಿಕೆಗಳಲ್ಲಿ, ಯೇಸುವು ಒಂದನ್ನು ಮಾತ್ರ ಕೊನೆಯಲ್ಲಿ ವಿಶೇಷವಾಗಿ ಒತ್ತಿ ಹೇಳಿದರು. "ನೀವು ಜನರ ತಪ್ಪುಗಳನ್ನು ಕ್ಷಮಿಸಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮ ತಪ್ಪುಗಳನ್ನೂ ಕ್ಷಮಿಸುವನು. ಆದರೆ ನೀವು ಜನರ ತಪ್ಪುಗಳನ್ನು ಕ್ಷಮಿಸದೆಹೋದರೆ, ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವದಿಲ್ಲ," (ಮತ್ತಾಯ 6:14,15) ಎಂದು ಅವರು ತಿಳಿಸಿದರು.

    ಈ ಬೇಡಿಕೆಯನ್ನು ಗಂಭೀರವಾಗಿ ಸ್ವೀಕರಿಸದಿರುವ ಅನೇಕ ಕ್ರೈಸ್ತರಿಗೆ ದೇವರೊಂದಿಗೆ ಅಡಚಣೆಯಿಲ್ಲದ, ಸಂಪೂರ್ಣ ಅನ್ಯೋನ್ಯತೆಯ ಆನಂದ ಸಿಗುವದಿಲ್ಲ.

    ಯೇಸುವು ಕಲಿಸಿದ ಒಂದು ನೀತಿಕಥೆಯಲ್ಲಿ, ಒಂದು ದಿನ ಒಬ್ಬ ರಾಜನು ತನ್ನ ಸೇವಕರ ಲೆಕ್ಕಗಳನ್ನು ಪರೀಕ್ಷಿಸಿದಾಗ, ಒಬ್ಬ ಸೇವಕನು ತನಗೆ 4 ಕೋಟಿ ರೂಪಾಯಿಯ ಸಾಲ ತೀರಿಸಬೇಕಿದೆ ಎನ್ನುವದು ತಿಳಿಯಿತು. ಆ ಸೇವಕನು ಅವನ ಬಳಿಗೆ ಬಂದು, "ಯಜಮಾನನೇ, ನನ್ನಲ್ಲಿ ಹಣವಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸು" ಎಂದಾಗ, ರಾಜನು ಅವನನ್ನು ಸಂಪೂರ್ಣವಾಗಿ ಕ್ಷಮಿಸಿದನು. ಆ ಮನುಷ್ಯ ಹೊರಬಂದು, ತನಗೆ ಕೇವಲ 40 ರೂಪಾಯಿ ಕೊಡಬೇಕಿದ್ದ ಇನ್ನೊಬ್ಬ ಸೇವಕನನ್ನು ಕಂಡನು; ಅವನು ಆತನ ಕತ್ತು ಹಿಡಿದು, ಆತನನ್ನು ಕಾನೂನಿಗೆ ಒಪ್ಪಿಸಿ, ಸೆರೆಹಾಕಿದನು. ಇದನ್ನು ಕೇಳಿದ ರಾಜನು, ಆ ಕರುಣೆಯಿಲ್ಲದ ಸೇವಕನಿಗೆ, "ನಾನು ನಿನ್ನ 4 ಕೋಟಿಯ ಸಾಲವನ್ನು ಉಚಿತವಾಗಿ ಮನ್ನಿಸಿದೆನು. ನೀನು ಅವನ 40 ರೂಪಾಯಿಗಳ ಸಾಲ ಮನ್ನಿಸಲಿಲ್ಲವೇ?" ಎಂದು, ಅವನನ್ನು ಪೀಡಿಸುವವರ ಕೈಗೆ ಒಪ್ಪಿಸಿದನು.

    ಇದರ ನಂತರ ಯೇಸುವು ಹೀಗೆಂದರು, "ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನನ್ನು ಮನಃಪೂರ್ವಕವಾಗಿ ಕ್ಷಮಿಸದೆಹೋದರೆ, ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು" (ಮತ್ತಾ. 18:35). ಪೀಡಿಸುವವರು ಯಾರೆಂದರೆ, ನಾವು ಇತರರಿಗೆ ಕರುಣೆ ತೋರಿಸುವದನ್ನು ಕಲಿಯುವವರೆಗೆ ನಮಗೆ ಕಿರುಕುಳ ಕೊಡಲು ಅನುಮತಿ ಹೊಂದಿರುವ ದುರಾತ್ಮಗಳು.

    ಯೇಸುವು ಈ ಸಾಮ್ಯವನ್ನು, ದೇವರು ನಮ್ಮ ಎಷ್ಟು ದೊಡ್ಡ ಸಾಲವನ್ನು ಮನ್ನಿಸಿದ್ದಾರೆ ಎನ್ನುವದನ್ನು ಮತ್ತು ನಾವು ನಮಗೆ ಹಾನಿ ಮಾಡಿರುವ ಯಾರನ್ನಾದರೂ ಕ್ಷಮಿಸದೇ ಇರುವದು ಎಂತಹ ನಿರ್ದಯ ಕ್ರೂರತೆ ಎನ್ನುವದನ್ನು ತೋರಿಸಿಕೊಡಲು ಉಪಯೋಗಿಸಿದರು.

    ನಿಮಗೆ ಯಾರೋ ಏನೋ ಕೇಡು ಮಾಡಿದ್ದಾರೆಯೇ? ಯಾರೋ ನಿಮ್ಮ ಕುರಿತು ಕಟ್ಟುಕಥೆ ಹರಡಿಸಿದ್ದಾರೆಯೇ? ಅಥವಾ ನಿಮ್ಮ ನೆರೆಯವರು, ನಿಮ್ಮ ಹೆಂಡತಿ, ನಿಮ್ಮ ತಂದೆ ಅಥವಾ ನಿಮ್ಮ ಅತ್ತೆ, ನಿಮಗೆ ಏನೋ ಹಾನಿ ಉಂಟುಮಾಡಿರಬಹುದು. ಒಂದು ವೇಳೆ ಅವರು ನಿಮ್ಮ ಜೀವನವನ್ನು ಹೇಗೋ ಕೆಡಿಸಿರಬಹುದು. ನಿಮಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯನ ತಪ್ಪಿನಿಂದ ನಿಮಗೆ ಅಸಾಧ್ಯ ವೇದನೆ ಉಂಟಾಗಿರಬಹುದು. ಆದರೆ ಕರ್ತರು ಹೇಳುವದು ಏನೆಂದರೆ, ಆ ಎಲ್ಲಾ ಪಾಪಗಳ ಮೊತ್ತ, ನೀವು ದೇವರಿಗೆ ತೀರಿಸಬೇಕಿದ್ದ ಮತ್ತು ದೇವರಿಂದ ಮನ್ನಿಸಲ್ಪಟ್ಟ ಸಾಲಕ್ಕೆ ಹೋಲಿಸಿದಾಗ, ಬಹಳ ಚಿಕ್ಕದು. ಆದಕಾರಣ ನೀವು ಅವರೆಲ್ಲರನ್ನು ನಿರಾತಂಕವಾಗಿ, ಹೃತ್ಪೂರ್ವಕವಾಗಿ ಕ್ಷಮಿಸದಿರಲು ಯಾವ ಕಾರಣವೂ ಇಲ್ಲ.

    ಮತ್ತಾಯ 18:35ರಲ್ಲಿ, "ಮನಃಪೂರ್ವಕವಾಗಿ" ಎನ್ನುವ ಪದ ಮುಖ್ಯವಾದದು. ನಿಮಗೆ ನಿಮ್ಮ ಸಂಗಡಿಗರನ್ನು ಹೃತ್ಪೂರ್ವಕವಾಗಿ ಕ್ಷಮಿಸಲು ಇಷ್ಟವಿಲ್ಲದಿದ್ದರೆ, ಸುಮ್ಮನೆ ದೇವರ ಮುಂದೆ "ನಮ್ಮ ತಪ್ಪುಗಳನ್ನು ಕ್ಷಮಿಸಿ," ಎಂದು ಹೇಳಿ ಸಮಯ ವ್ಯರ್ಥ ಮಾಡಬೇಡಿ, ಏಕೆಂದರೆ ದೇವರು ನಿಮ್ಮ ಪ್ರಾರ್ಥನೆಯನ್ನು ಆಲಿಸುವದಿಲ್ಲ. ಇಡೀ ಪ್ರಪಂಚದಲ್ಲಿ ನೀವು ಕ್ಷಮಿಸದೇ ಇರುವ ಒಬ್ಬ ವ್ಯಕ್ತಿ ಇದ್ದರೂ ಸಹ, ನೀವೂ ಸಹ ಕ್ಷಮೆ ಹೊಂದಲು ಆಗದು; ಮತ್ತು ನೀವು ನಿತ್ಯತ್ವನ್ನು ಕಳೆದುಕೊಳ್ಳುವಿರಿ - ಏಕೆಂದರೆ, ಕ್ಷಮಿಸಲ್ಪಡದ ಒಂದೇ ಒಂದು ಆತ್ಮವೂ ದೇವರ ಸಾನ್ನಿಧ್ಯವನ್ನು ಪ್ರವೇಶಿಸದು. ನಾವು ಯೋಚಿಸಿದಕ್ಕಿಂತ ಬಹಳ ಹೆಚ್ಚು ಗಂಭೀರ ವಿಷಯ ಇದಾಗಿದೆ.

    ಇಲ್ಲಿ ಪ್ರಾರ್ಥನೆ, "ನಾವು ಇತರರನ್ನು ಕ್ಷಮಿಸಿರುವಂತೆಯೇ ನಮ್ಮನ್ನು ಕ್ಷಮಿಸಿ," ಎಂದಾಗಿದೆ. ನಾವು ಇತರರನ್ನು ಹೇಗೆ ಕ್ಷಮಿಸಿದ್ದೇವೆ ಎನ್ನುವದನ್ನು ದೇವರು ಸೂಕ್ಷ್ಮವಾಗಿ ನೋಡುತ್ತಾರೆ. ನಾವು ಇತರರಿಗೆ ಕೊಡುವ ಅಳತೆಯಲ್ಲೇ ದೇವರು ನಮಗೆ ಕೊಡುತ್ತಾರೆಂದು ಯೇಸುವು ಬೋಧಿಸಿದರು. "ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರಚೆಲ್ಲವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು," ಎಂದು ಅವರು ಹೇಳಿದರು (ಲೂಕ. 6:38).

    ಹಾಗಾದರೆ ನೀವು ಇತರರಿಗೆ ಕೊಡುವದು ಒಂದು ಚಿಕ್ಕ ಚಮಚದಿಂದ ಆಗಿದ್ದರೆ, ದೇವರು ಅದೇ ಚಮಚದಿಂದ ನಿಮ್ಮ ಪ್ರಾರ್ಥನೆಯನ್ನು ಉತ್ತರಿಸುವರು. ನಾವು ದೇವರಿಂದ ಒಂದು ಭಾರೀ ದೊಡ್ಡದ್ದನ್ನು ಕೇಳಿದಾಗ, ಅವರು ನಮಗೆ ಒಂದು ಪುಟ್ಟ ಚಮಚದಿಂದ ಅತ್ಯಲ್ಪವನ್ನು ಮಾತ್ರ ಕೊಟ್ಟರೆ, ಬಹುಶಃ ಅದಕ್ಕೆ ಕಾರಣ ನಾವು ಇತರರಿಗೆ ಅದೇ ಚಮಚದಿಂದ ಕೊಟ್ಟಿದ್ದೇವೆ. ನಾವು ಇತರರಿಗೆ ಕೊಡಲು ಹೆಚ್ಚು ದೊಡ್ಡ ಚಮಚವನ್ನು ಬಳಸಿದಷ್ಟೂ, ದೇವರು ಹೆಚ್ಚು ದೊಡ್ಡ ಚಮಚದಿಂದ ನಮಗೂ ನೀಡುವರು. ನಮ್ಮೊಡನೆ ದೇವರ ವ್ಯವಹಾರದ ಒಂದು ಶಾಶ್ವತ ನಿಯಮ ಇದಾಗಿದೆ.

    "ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು" (ಮತ್ತಾ 5:7). ನೀವು ಇತರರಿಗೆ ಹೆಚ್ಚು ಕರುಣೆ ತೋರಿಸಿದಷ್ಟು, ನ್ಯಾಯ ತೀರ್ಪಿನ ದಿನದಲ್ಲಿ ದೇವರು ನಿಮಗೆ ಹೆಚ್ಚು ಕರುಣೆ ತೋರಿಸುವರು. ಆದರೆ "ಕರುಣೆ ತೋರಿಸದೆ ಇರುವವನಿಗೆ ನ್ಯಾಯ ತೀರ್ಮಾನದಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ" (ಯಾಕೋ 2:13).

    ಆದ್ದರಿಂದ ನೀವು ಇತರರನ್ನು ತಿರಸ್ಕಾರ ಮತ್ತು ಜಿಪುಣತನದಿಂದ ಕ್ಷಮಿಸಿದರೆ, ದೇವರು ನಿಮ್ಮನ್ನು ಅದೇ ರೀತಿ ಕ್ಷಮಿಸುವರು. ಆದರೆ ನೀವು ನಿಮಗೆ ಕೇಡು ಮಾಡಿದವರನ್ನು ಸ್ನೇಹಪರ, ಕ್ಷಮಾಪೂರ್ಣ ದೃಷ್ಟಿಯಿಂದ ನೋಡಿದರೆ, ದೇವರೂ ಸಹ ನಿಮ್ಮನ್ನು ಸ್ನೇಹಪರ, ಕ್ಷಮಾಪೂರ್ಣ ದೃಷ್ಟಿಯಿಂದ ನೋಡುತ್ತಾರೆ. ನೀವು ಇತರರೊಂದಿಗೆ ಹೇಗೆ ವರ್ತಿಸುವಿರೋ, ದೇವರು ನಿಮ್ಮೊಂದಿಗೆ ಅದೇ ರೀತಿ ವರ್ತಿಸುತ್ತಾರೆ.

    ಸಂಬಂಧಗಳನ್ನು ಸರಿಪಡಿಸುವದು

    ನೀವು ನಿಮ್ಮ ಕಾಣಿಕೆಗಳನ್ನು ಯಜ್ಞವೇದಿಗೆ ತಂದಾಗ, ನೀವು ದೇವರ ಬಳಿಗೆ ಪ್ರಾರ್ಥಿಸಲು ಬಂದಾಗ ಅಥವಾ ಕಾಣಿಕೆ ಡಬ್ಬಿಗೆ ಹಣವನ್ನು ಹಾಕುವಾಗ, ಅಲ್ಲಿ ನೀವು ನಿಮ್ಮ ಸಹೋದರನನ್ನು ನೋಯಿಸಿರುವದು ನೆನಪಾದರೆ, "ಮೊದಲು ನಿನ್ನ ಸಹೋದರನ ಸಂಗಡ ಒಂದಾಗು; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು," (ಮತ್ತಾ 5:22-24) ಎಂದು ಯೇಸುವು ತಿಳಿಸಿದರು. ಇಲ್ಲವಾದರೆ ದೇವರು ನಿಮ್ಮ ಪ್ರಾರ್ಥನೆಯನ್ನು ಅಥವಾ ನಿಮ್ಮ ಹಣವನ್ನು ಸ್ವೀಕರಿಸುವದಿಲ್ಲ.

    ಹಳೇ ಒಡಂಬಡಿಕೆಯ ಆದರ್ಶ, "ನೀವು ನಿಮ್ಮ ನೆರೆಯವರ ವಿಷಯವಾಗಿ ಮನಸ್ಸಿನಲ್ಲಿ ಮತ್ಸರವನ್ನು ಇಟ್ಟುಕೊಳ್ಳಬಾರದು," (ಯಾಜಕ. 19:18) ಎಂದು ಮಾತ್ರವಾಗಿತ್ತು. ಅದನ್ನು ಅನುಸರಿಸುವದು ಬಹಳ ಸುಲಭವಾಗಿತ್ತು.

    ಆದರೆ ಹೊಸ ಒಡಂಬಡಿಕೆಯ ಗುಣಮಟ್ಟ ಇದಕ್ಕಿಂತ ಉನ್ನತವಾದದ್ದು. "ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವಿದ್ದರೆ, ನೀನು ಹೋಗಿ ಅದನ್ನು ಸರಿಪಡಿಸಿಕೋ," ಎಂದು ಯೇಸು ಹೇಳಿದರು. ನಾವು ತಪ್ಪು ಮಾಡಿರದಿದ್ದರೂ ಯಾವುದೋ ಕಾರಣಕ್ಕಾಗಿ ನಮ್ಮನ್ನು ದ್ವೇಷಿಸುವ ಸಹೋದರರು ಖಂಡಿತವಾಗಿ ಇರುತ್ತಾರೆ. ಯೇಸು ಮತ್ತು ಅಪೋಸ್ತಲರು ಸತ್ಯವನ್ನು ಬೆಂಬಲಿಸಿದ್ದರಿಂದ ಅನೇಕ ಶತ್ರುಗಳನ್ನು ಹೊಂದಿದ್ದರು. ಆದರೆ ಇಲ್ಲಿ ಯೇಸುವು ನಾವು ನುಡಿದ ಒರಟು ಮಾತಿನಿಂದಾಗಿ ನಮ್ಮನ್ನು ದ್ವೇಷಿಸುವ ಸಹೋದರನ ಬಗ್ಗೆ ಹೇಳುತ್ತಿದ್ದಾರೆ (ಮತ್ತಾ. 5:22). ನಾವು ಮಾಡಿದ ಯಾವುದೋ ಪಾಪದಿಂದ ಉಂಟಾದ ದ್ವೇಷ ಇದು. ಇಂತಹ ಸಂದರ್ಭಗಳಲ್ಲಿ, ನಾವು ಮೊದಲು ಆತನ ಬಳಿಗೆ ಹೋಗಿ ನಮ್ಮ ಪಾಪವನ್ನು ಒಪ್ಪಿಕೊಂಡು, ಆತನಲ್ಲಿ ಕ್ಷಮಾಪಣೆ ಕೇಳಬೇಕು. ಆ ಮೇಲೆ ನಾವು ನಮ್ಮ ಕಾಣಿಕೆಗಳನ್ನು ದೇವರಿಗೆ ಒಪ್ಪಿಸಬಹುದು.

    ಒಂದು ವೇಳೆ ನಾವು, "ಕರ್ತನೇ, ನನ್ನ ಜೀವನದಲ್ಲಿ ಹೊಸ ಒಡಂಬಡಿಕೆಯ ಸಂಪೂರ್ಣ ಪ್ರಭಾವ ಬೇಕು," ಎಂದು ದೇವರನ್ನು ಕೇಳಿಕೊಂಡರೆ, ಕರ್ತರು ನಮಗೆ, "ನಾನು ಹೊಸ ಒಡಂಬಡಿಕೆಯ ಬಲವನ್ನು ನಿಮಗೆ ಕೊಡುವಾಗ, ಅದರೊಂದಿಗೆ ಹೊಸ ಒಡಂಬಡಿಕೆಯ ಕರ್ತವ್ಯಗಳೂ ಬರುತ್ತವೆ," ಎನ್ನುತ್ತಾರೆ.

    ಅನೇಕ ಕ್ರೈಸ್ತರಿಗೆ ಹೊಸ ಒಡಂಬಡಿಕೆಯ ಬಲದ ಪ್ರಭಾವದ ಅನುಭವ ಆಗದಿರಲು ಕಾರಣ, ಅವರು ಹಳೇ ಒಡಂಬಡಿಕೆಯ ನಿಯಮಗಳ ಪ್ರಕಾರ ಜೀವಿಸುತ್ತಿದ್ದಾರೆ. ಅವರಿಗೆ ಯಾರೋ ಒಬ್ಬನ ಬಳಿಗೆ ಹೋಗಿ ಕ್ಷಮಾಪಣೆ ಕೇಳಲು ಮನಸ್ಸಿಲ್ಲ, ಹಾಗಾಗಿ ಅವರು ಬಲಹೀನರಾಗಿಯೇ ಇರುತ್ತಾರೆ.

    ಕರುಣೆ ಹೊಂದಿರುವದು

    ನಮ್ಮೆಲ್ಲರಲ್ಲಿ ಶರೀರಭಾವವಿದೆ ಮತ್ತು ನಾವು ಶರೀರಭಾವ ಹೊಂದಿರುವ ಇತರರ ನಡುವೆ ವಾಸಿಸುತ್ತಿದ್ದೇವೆ. ಹಾಗಾಗಿ ತಿಳಿದೋ ತಿಳಿಯದೆಯೋ ನಾವು ಒಬ್ಬರನ್ನೊಬ್ಬರು ನೋಯಿಸುವ ಸಾಧ್ಯತೆ ಯಾವಾಗಲೂ ಇದೆ. ಯಾರೂ ನಮ್ಮನ್ನು ನೋಯಿಸದೆ ಇರಲು ಸಾಧ್ಯವಿರುವದು ಪರಲೋಕದಲ್ಲಿ ಮಾತ್ರ. ಆದುದರಿಂದ ನಾವು ಈ ಭೂಮಿಯಲ್ಲಿ ಜೀವಿಸುವಷ್ಟು ದಿನ ಒಬ್ಬರನ್ನೊಬ್ಬರು ಕ್ಷಮಿಸುವದು ಅವಶ್ಯ. ತಪ್ಪು ಮಾನವೀಯ, ಕ್ಷಮಿಸುವದು ದೈವಿಕ!

    ನರಕದ ಒಂದು ಲಕ್ಷಣ, ಅಲ್ಲಿ ಕರುಣೆ ಇಲ್ಲ. ಎಷ್ಟರ ಮಟ್ಟಿಗೆ ನಿಮ್ಮ ಹೃದಯಗಳಲ್ಲಿ ಇತರರಿಗಾಗಿ ಕರುಣೆ ಇಲ್ಲವೋ, ಅಷ್ಟರ ಮಟ್ಟಿಗೆ ನರಕದ ಒಂದು ಅಂಶ ನಿಮ್ಮ ಹೃದಯದ ಒಳಗಿದೆ. ನೀವು ಯಾರನ್ನಾದರೂ ಕ್ಷಮಿಸಲು ಒಪ್ಪದಿದ್ದರೆ, ನಿಮ್ಮೊಳಗೆ ನರಕದ ಒಂದು ಅಂಶವಿದೆ. ನಿಮ್ಮ ಅನೇಕ ಧಾರ್ಮಿಕ ಚಟುವಟಿಕೆಗಳಿಂದಾಗಿ ಇತರರು ನಿಮ್ಮನ್ನು ಬಹು ಧಾರ್ಮಿಕ ಭಕ್ತನೆಂದು ಅಂದುಕೊಳ್ಳಬಹುದು. ಹಾಗಿದ್ದರೂ ನೀವು ನಿಮ್ಮೊಳಗೆ ಸತತವಾಗಿ ನರಕದ ಸ್ವಲ್ಪ ಅಂಶವನ್ನು ಹೊಂದಿರುವಿರಿ. ಮತ್ತು ನೀವು ಆ ಸ್ಥಿತಿಯಲ್ಲಿ ಪರಲೋಕಕ್ಕೆ ಹೋಗಲಾರಿರಿ - ಏಕೆಂದರೆ ನೀವು ನರಕವನ್ನು ಪರಲೋಕಕ್ಕೆ ಒಯ್ಯಲಾರಿರಿ. ನೀವು ಭೂಲೋಕವನ್ನು ಬಿಡುವ ಮೊದಲು ಇದನ್ನು ತೆಗೆದುಹಾಕಬೇಕು.

    ಆದುದರಿಂದ ಕರ್ತರು, "ನಾವು ಇತರರನ್ನು ಕ್ಷಮಿಸಿದಂತೆ ನಮ್ಮನ್ನು ಕ್ಷಮಿಸಿ," ಎಂದು ಪ್ರಾರ್ಥಿಸಲು ನಮಗೆ ಕಲಿಸಿದರು.

    ನಾವು ಇತರರನ್ನು ಕ್ಷಮಿಸದಿದ್ದಾಗ, ನಮ್ಮ ದೇಹಗಳ ಮೇಲೂ ಅದರ ಪರಿಣಾಮ ಉಂಟಾಗಬಹುದು. ಅನೇಕ ವೇಳೆ ದೇವರ ನಿಯಮಗಳ ಉಲ್ಲಂಘನೆ ಶರೀರದ ನೋವಿಗೆ ಕಾರಣವಾಗುತ್ತದೆ.

    ಒಂದು ವೇಳೆ ನಿಮ್ಮಲ್ಲಿ ಯಾರ ವಿರುದ್ಧವಾದರೂ ದ್ವೇಷ ಅಥವಾ ಹೊಟ್ಟೆಕಿಚ್ಚು ಇದ್ದರೆ, ಮತ್ತು ಆ ಮೂಲಕ ದೇವರ ಪ್ರೀತಿಯ ನಿಯಮವನ್ನು ಉಲ್ಲಂಘಿಸಿದರೆ, ಕೊನೆಯಲ್ಲಿ ನಿಮ್ಮ ದೇಹದ ಮೇಲೆ ಅದರ ಪರಿಣಾಮ ಉಂಟಾಗಬಹುದು. ಇಂದು ಅನೇಕ ಕ್ರೈಸ್ತರು ಸಂಧಿವಾತ, ತೀವ್ರ ತಲೆಸಿಡಿತ, ಕೀಲುನೋವು ಮತ್ತು ಉಬ್ಬಸ, ಇಂತಹ ಅನೇಕ ಕಾಯಿಲೆಗಳಿಂದ ವಾಸಿಯಾಗದೆ ನರಳುತ್ತಿದ್ದಾರೆ - ಇದಕ್ಕೆ ಕಾರಣ ಅವರು ಯಾರನ್ನೋ ದ್ವೇಷಿಸುತ್ತಿರುವದು. ಅವರು ಲೆಕ್ಕವಿಲ್ಲದಷ್ಟು ಮಾತ್ರೆಗಳನ್ನು ನುಂಗಬಹುದು, ಆದರೆ ಅವರು ಕ್ಷಮಿಸುವುದನ್ನು ಕಲಿಯುವವರೆಗೂ ಗುಣ ಹೊಂದಲಾರರು. ಈ ಕಾಯಿಲೆಗಳ ಮೂಲಕಾರಣ ಜೈವಿಕವಲ್ಲ. ಅವುಗಳ ಕಾರಣ ಅವರ ದೇಹದಲ್ಲಿಲ್ಲ. ಅದು ಅವರ ಆತ್ಮದಲ್ಲಿ ಇದೆ.

    ಒಂದು ವೇಳೆ ನೀವು ನಿಮ್ಮ ಸಹೋದರ-ಸಹೋದರಿಯರನ್ನು ಕ್ಷಮಿಸದೇ ಇದ್ದರೆ, ದೇವರು ನಿಮ್ಮ ಪ್ರಾರ್ಥನೆಯನ್ನು ಕೇಳುವದಿಲ್ಲ. ಕೀರ್ತನೆ 66:18 ರಲ್ಲಿ ಸತ್ಯವೇದ ಹೀಗೆ ಹೇಳುತ್ತದೆ: "ನಾನು ಕೆಟ್ಟತನದ ಮೇಲೆ ಮನಸ್ಸಿಟ್ಟಿದ್ದರೆ ಕರ್ತನು ನನ್ನ ವಿಜ್ಞಾಪನೆಯನ್ನು ಕೇಳುತ್ತಿದ್ದಿಲ್ಲ." ಅವರು ಪ್ರಾರ್ಥನೆಗೆ ಉತ್ತರ ಕೊಡದಿರುವದು ಅಷ್ಟೇ ಅಲ್ಲ, ಅದನ್ನು ಕೇಳುವದೂ ಸಹ ಇಲ್ಲ.

    ನಾವು ನಮ್ಮನ್ನೇ ಮೋಸಗೊಳಿಸುವದು ಬೇಡ. ನಿಜವಾದ ಕ್ಷಮಾಪಣೆ ದೊರೆಯುವದು ಮುರಿಯಲ್ಪಟ್ಟು ಮತ್ತು ತಪ್ಪೊಪ್ಪಿಕೊಂಡ ಬಳಿಕ, ಮತ್ತು ನಮ್ಮ ಮಾಂಸಭಾವದ ದುರ್ವಾಸನೆಯನ್ನು ಗುರುತಿಸಿ, ನಮ್ಮಿಂದ ಉಂಟಾದ ಯಾವುದೇ ನಷ್ಟವನ್ನು ಭರ್ತಿಮಾಡಲು ಒಪ್ಪಿಕೊಂಡು, ಜೊತೆಗೆ ಅವಶ್ಯವಿದ್ದರೆ ಯಾರಲ್ಲೇ ಆದರೂ ಕ್ಷಮೆ ಕೇಳುವದು - ಅಂದರೆ ದೇವರೊಂದಿಗೆ ನಮ್ಮ ಸಂಬಂಧವನ್ನು ಸರಿಪಡಿಸಲಿಕ್ಕಾಗಿ ಏನೇ ಬೇಕಾದರೂ ಮಾಡುವದು - ಅದರಲ್ಲಿ ಸೇರಿವೆ.

    ಕೊನೆಯದಾಗಿ, ನಮ್ಮ ಬೇಡಿಕೆ "ನಮ್ಮನ್ನು ಕ್ಷಮಿಸಿ," ಎಂದಾಗಿದೆ ಎಂದು ಜ್ಞಾಪಿಸಿಕೊಳ್ಳಿ. ನಮ್ಮ ಸಹೋದರರೂ ಕ್ಷಮಿಸಲ್ಪಡಬೇಕು, ಎನ್ನುವ ಬಯಕೆ ನಮ್ಮದು. ಕೆಲವೊಮ್ಮೆ, ನಮ್ಮೊಡನೆ ಒಬ್ಬ ಸಹೋದರನು ವ್ಯವಹರಿಸಿದ ರೀತಿಗಾಗಿ ಅವನು ದೇವರ ತೀರ್ಪಿಗೆ ಒಳಗಾಗಲಿ ಎನ್ನುವ ರಹಸ್ಯ ನಿರೀಕ್ಷೆ ನಮ್ಮಲ್ಲಿ ಇರಬಹುದು. ಅದೊಂದು ಪೈಶಾಚಿಕ ಮನೋಭಾವ - ಏಕೆಂದರೆ ಜನ ದೇವರ ಶಿಕ್ಷೆಗೆ ಗುರಿಯಾಗಲಿ ಎಂದು ಬಯಸುವವನು ಸೈತಾನನೊಬ್ಬನೇ.

    "ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ, ನೀವು ಸಹ ಒಬ್ಬರ ಕಾಲುಗಳನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ," (ಯೋಹಾ 13:14) ಎಂದು ಯೇಸು ತೋರಿಸಿಕೊಟ್ಟರು. ಅಂದರೆ (ಆತ್ಮಿಕವಾಗಿ) ನೀವು ನಿಮ್ಮ ಸಹೋದರನ ಕಾಲಿನಲ್ಲಿ ಹೊಲಸು ಕಂಡಾಗ, ಆತನು ಸಹ ಶುದ್ಧಿಗೊಳ್ಳಲಿ ಎನ್ನುವ ಹಂಬಲ ನಿಮ್ಮಲ್ಲಿ ಇರಬೇಕು.

    "ನಮ್ಮನ್ನು ಕ್ಷಮಿಸಿ," ಎಂದರೆ, "ತಂದೆಯೇ, ನೀವು ನನ್ನ ಪಾಪಗಳನ್ನು ಮಾತ್ರ ಕ್ಷಮಿಸಿದರೆ ಸಾಲದು. ನನ್ನ ಸುತ್ತಮುತ್ತ ಇತರ ಸಹೋದರ, ಸಹೋದರಿಯರು ಇದ್ದಾರೆ. ನೀವು ಅವರ ಪಾಪಗಳನ್ನೂ ಕ್ಷಮಿಸಬೇಕೆಂಬುದು ನಾನು ಬಯಸುತ್ತೇನೆ. ಆಮೆನ್."

    ಅಧ್ಯಾಯ 8
    ದುಷ್ಟತನದಿಂದ ಬಿಡುಗಡೆ

    "ನಮ್ಮನ್ನು ಶೋಧನೆಯೊಳಗೆ ಸೇರಿಸದೆ, ಕೇಡಿನಿಂದ ನಮ್ಮನ್ನು ತಪ್ಪಿಸು."

    ಈ ಮನವಿಯಲ್ಲಿ ಎರಡು ಭಾಗಗಳಿವೆ - ಒಂದು, ನಮಗೆ ರಕ್ಷಣೆ ಒದಗಿಸಲು ದೇವರನ್ನು ಕೇಳುವದು, ಮತ್ತೊಂದು, ನಮ್ಮ ಬಿಡುಗಡೆಗಾಗಿ ಅವರಲ್ಲಿ ಪ್ರಾರ್ಥಿಸುವದು.

    ಹಿಂದಿನ ಮನವಿಯಲ್ಲಿ ನಾವು ಇದರ ಪಾಪದ ತಪ್ಪಿತಸ್ಥ ಮನೋಭಾವದಿಂದ ಬಿಡುಗಡೆಯನ್ನು ಕೇಳಿಕೊಂಡಿದ್ದು, ಈಗ ಪಾಪದ ಹಿಡಿತದಿಂದ ಬಿಡುಗಡೆಯನ್ನು ಕೋರುತ್ತೇವೆ. ಒಂದು ವೇಳೆ ನಾವು ಬಯಸುವದು ಪಾಪದ ಕ್ಷಮಾಪಣೆ ಮಾತ್ರ, ಆದರೆ ಪಾಪದಿಂದ ಬಿಡುಗಡೆಯಲ್ಲ ಎಂದಾದರೆ, ನಮ್ಮದು ಯಥಾರ್ಥವಾದ ಮಾನಸಾಂತರವಲ್ಲ ಎಂದು ಅದು ಸೂಚಿಸುತ್ತದೆ. ಪಾಪ ಕ್ಷಮಾಪಣೆ ಒಂದು ಪ್ರವೇಶದ್ವಾರದಂತಿದ್ದು, ಅದು ನಮ್ಮನ್ನು ಪರಿಶುದ್ಧ ಜೀವನಕ್ಕೆ ನಡೆಸಬೇಕೇ ಹೊರತು, ದೇವರ ಕೃಪೆಯನ್ನು ದುರುಪಯೋಗ ಮಾಡುವ ಜೀವನಕ್ಕೆ ಅಲ್ಲ.

    ಸುಖ ಮತ್ತು ಬಲ

    ಪ್ರತಿಯೊಬ್ಬ ಕ್ರೈಸ್ತನು ಸಂತೋಷವನ್ನು ಬಯಸುತ್ತಾನೆ. ಆದರೆ "ನಿರ್ಮಲಚಿತ್ತರು ಧನ್ಯರು," (ಮತ್ತಾ. 5:8) ಎಂದು ಯೇಸು ಹೇಳಿದರು. "ಧನ್ಯ" ಎಂಬ ಪದಕ್ಕೆ ’ಸಂತೋಷ’ವೆಂಬ ಅರ್ಥವೂ ಇದೆ. ಹಾಗಾಗಿ ಯೇಸುವು ತಿಳಿಸಿದ್ದರ ಅರ್ಥ, ನಿಜವಾದ ಸಂತೋಷ ಉಂಟಾಗುವದು ನಿಜವಾದ ಪರಿಶುದ್ಧತೆಯಿಂದ, ಎಂದು. ಪರಲೋಕವು ಸಂಪೂರ್ಣ ಪವಿತ್ರತೆಯ ನೆಲೆಯಾಗಿದೆ, ಆದುದರಿಂದ ಅಲ್ಲಿ ಅಪಾರ ಸಂತೋಷವೂ ಇದೆ.

    ಪರಿಶುದ್ಧತೆ ಇಲ್ಲದ ಸಂತೋಷ ನಕಲಿ ಸಂತೋಷ. ನಮ್ಮಲ್ಲಿ ಅಪರಿಶುದ್ಧತೆ ಇದ್ದಾಗ ದೇವರು ನಮ್ಮಲ್ಲಿ ಅಸಂತೋಷವನ್ನು ಉಂಟುಮಾಡಲಿ ಎಂದು ನಾವು ವಾಸ್ತವವಾಗಿ ಪ್ರಾರ್ಥಿಸಬೇಕು! ಏಕೆಂದರೆ, ಹಾಗೆ ಆಗದಿದ್ದಾಗ ನಾವು ನಮ್ಮ ಆತ್ಮಿಕ ಸ್ಥಿತಿಯ ಬಗ್ಗೆ ಮೋಸಹೋಗುವ ಸಾಧ್ಯತೆಯಿದೆ.

    ಅನೇಕ ಕ್ರೈಸ್ತರು ತಮ್ಮ ಜೀವನದಲ್ಲಿ ಬಲ ಬೇಕೆಂದು ದೇವರನ್ನು ಕೇಳುವರು. ಇದರ ಜೊತೆಗೆ ಆ ಪ್ರಾರ್ಥನೆಯಲ್ಲಿ ಪರಿಶುದ್ಧತೆಯನ್ನೂ ಅಷ್ಟೇ ಅತ್ಯಾಸಕ್ತಿಯಿಂದ ಕೇಳಬೇಕು. ಇಲ್ಲವಾದರೆ ಇದು ಅಪಾಯಕರ ಆಗಬಹುದು. ದೇವರು ಒಬ್ಬ ಅಶುದ್ಧ ವ್ಯಕ್ತಿಯ ಕೈಯನ್ನು ಬಲಪಡಿಸುವದು, ಒಬ್ಬ ಶಸ್ತ್ರವೈದ್ಯನು ಕ್ರಿಮಿಗಳಿಂದ ಶುದ್ಧೀಕರಿಸದ ಉಪಕರಣದಿಂದ ಶಸ್ತ್ರಚಿಕಿತ್ಸೆ ಮಾಡುವದಕ್ಕಿಂತ ಹೆಚ್ಚು ಅಪಾಯಕಾರಿ ಆಗಬಹುದು. ಅದು ಜೀವ ಕೊಡುವ ಬದಲು ಮರಣವನ್ನು ತರಬಹುದು.

    ದೇವರು ಅನೇಕ ಕ್ರೈಸ್ತರಿಗೆ ತನ್ನ ಬಲವನ್ನು ಅಧಿಕ ಪ್ರಮಾಣದಲ್ಲಿ ಕೊಡಲು ಸಾಧ್ಯವಾಗದಿರಲು ಇದೇ ಕಾರಣ. ಅದು ಅವರನ್ನು ಕೆಡಿಸಿ ನಾಶ ಮಾಡಬಹುದು. ನಾವು ಬೇಡಿದ ಎಲ್ಲಾ ದೈವಿಕ ವರಗಳನ್ನು ನಮಗೆ ಕೊಡದೇ ಇರುವುದಕ್ಕಾಗಿ ನಾವು ದೇವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ! ವರಗಳನ್ನು ಸರಿಯಾಗಿ ಉಪಯೋಗಿಸಲು ಬೇಕಾದ ದೀನತೆ ಮತ್ತು ಪರಿಶುದ್ಧತೆಯನ್ನು ಹೊಂದಿರದ ವಿಶ್ವಾಸಿಗಳು, ಅವುಗಳ ಮೂಲಕ ನಾಶವಾಗಿರುವ ಅನೇಕ ಘಟನೆಗಳಿವೆ. ನಾವು ಪರಿಶುದ್ಧತೆ ಮತ್ತು ಬಲವನ್ನು ಸಮ ಪ್ರಮಾಣದಲ್ಲಿ ಬಯಸಬೇಕು. ಆಗ ಮಾತ್ರ ನಾವು ಸುರಕ್ಷಿತರಾಗಿ ಇರುತ್ತೇವೆ.

    ದೇವರು ಸೈತಾನನನ್ನು ಬಳಸುವ ರೀತಿ

    ನಿಜವಾದ ಪರಿಶುದ್ಧತೆಯು ಒಂದು ಹೋರಾಟದ ಫಲವಾಗಿದೆ. ಅದು ಸುಖದ ಸುಪ್ಪತ್ತಿಗೆಯಲ್ಲಿ ಕುಳಿತು ’ಸುಂದರ ಕನಸುಗಳನ್ನು ಕಾಣುತ್ತಾ ಆಕಾಶದಲ್ಲಿ ಹಾರಾಡಲು’ ಬಯಸುವ ಕ್ರೈಸ್ತನಿಗೆ ದೊರಕುವದಿಲ್ಲ. ನಮ್ಮ ದುರಾಸೆಗಳನ್ನು ಮತ್ತು ಸೈತಾನನನ್ನು ಎದುರಿಸಿ ಹೋರಾಡುತ್ತಾ ನಡೆದಾಗ ಮಾತ್ರ ನಾವು ಪರಿಶುದ್ಧರಾಗುತ್ತೇವೆ.

    ಹಾಗಿರುವಾಗ ನಮ್ಮೊಳಗೆ ಒಂದು ಪ್ರಶ್ನೆ ಉಂಟಾಗಬಹುದು, "ಸೈತಾನನು ನಮ್ಮ ಪರಿಶುದ್ಧತೆಗೆ ಅಂತಹ ಅಡ್ಡಿಯಾಗಿರುವಾಗ, ದೇವರು ಅವನನ್ನು ಏಕೆ ನಾಶ ಮಾಡುವದಿಲ್ಲ?"

    ಅದಕ್ಕೆ ಉತ್ತರ, ಚಿನ್ನವನ್ನು ಶುದ್ಧೀಕರಿಸಲು ಒಂದು ಕುಲುಮೆ ಬೇಕಾಗುವಂತೆ, ನಮ್ಮ ಆತ್ಮಿಕ ಬೆಳವಣಿಗೆಗೆ ಒಂದು ರೀತಿಯಲ್ಲಿ ಸೈತಾನನು ಬೇಕು. ನಮ್ಮ ಮಾಂಸಖಂಡಗಳು ಎದುರಾಳಿಯ ವಿರುದ್ಧ ಹೋರಾಡುತ್ತಿರುವಾಗ ಅವು ಬಲಗೊಳ್ಳುತ್ತವೆ. ಇಲ್ಲವಾದರೆ ನಮ್ಮ ದೇಹ ಗುಂಡಾಗಿ, ಬೊಜ್ಜಾಗಿ ಇರುತ್ತದೆ. ಆತ್ಮಿಕ ಕ್ಷೇತ್ರದಲ್ಲಿಯೂ ಇದು ನೂರಕ್ಕೆ ನೂರರಷ್ಟು ವಾಸ್ತವವಾಗಿದೆ. ನಾವು ಅತ್ಮಿಕ ಬಲ ಪಡೆಯಲು ನಮಗೆ ಪ್ರತಿರೋಧ ಅವಶ್ಯ. ಹಾಗಾಗಿ ಸೈತಾನನು ನಮ್ಮನ್ನು ಶೋಧಿಸುವದನ್ನು ದೇವರು ಸಮ್ಮತಿಸುತ್ತಾರೆ.

    ಅಡಚಣೆಗಳಿಲ್ಲದ ಬದುಕನ್ನು ಜೀವಿಸುವ ಮನುಷ್ಯ ಆತ್ಮಿಕವಾಗಿ ಬಲಹೀನನು, ಬೊಜ್ಜು ಬೆಳೆದವನು ಮತ್ತು ದರಿದ್ರನು ಆಗುತ್ತಾನೆ. ದೇವರು ಅವನಿಂದ ಅಪೇಕ್ಷಿಸುವ ಸಕಲ ಕಾರ್ಯಗಳನ್ನು ಮಾಡಲು ಅವನಿಂದ ಆಗುವದಿಲ್ಲ. ಆದರೆ ಕಷ್ಟ, ಶೋಧನೆಗಳನ್ನು ಸಫಲವಾಗಿ ದಾಟಿದವನು ಬಲಶಾಲಿಯಾಗಿ, ದೇವರ ಸಂಪೂರ್ಣ ಚಿತ್ತವನ್ನು ಪೂರೈಸಲು ಶಕ್ತನಾಗುತ್ತಾನೆ.

    ದೇವರು ಸೈತಾನನನ್ನು ನಾಶಮಾಡದೇ ಬಿಟ್ಟಿರುವದಕ್ಕೆ ಇದೂ ಒಂದು ಕಾರಣ.

    ಏದೆನ್ ತೋಟದಲ್ಲಿ ದೇವರು ಒಂದು ನಿಷೇಧಿತ ಮರವನ್ನು ಏಕೆ ಇರಿಸಿದರು? ಅವರು ಆ ಮರವನ್ನು ಅಲ್ಲಿ ಇರಿಸಿರದಿದ್ದರೆ, ಆದಾಮನು ಪಾಪ ಮಾಡುವ ಅವಕಾಶವೇ ಬರುತ್ತಿರಲಿಲ್ಲ ಎಂದು ಕೆಲವರು ಭಾವಿಸಬಹುದು. ಆದರೆ ಆದಾಮನು ಪರಿಶುದ್ಧನಾಗಲು ಆ ಮರ ಅವಶ್ಯವಾಗಿತ್ತು. ಶೋಧನೆಯಿಲ್ಲದೆ ಮನುಷ್ಯನು ಯಾವ ಪರಿಶುದ್ಧತೆಯನ್ನೂ ಪಡೆಯಲಾರನು. ಅದಕ್ಕಾಗಿಯೇ ದೇವರು ಸೈತಾನನು ಏದೆನ್ ತೋಟಕ್ಕೆ ಬರುವದನ್ನು ಸಮ್ಮತಿಸಿದರು.

    ಆದಾಮನು ಏನೂ ಅರಿಯದವನು ಆಗಿದ್ದನು - ಆದರೆ ಮುಗ್ಧತೆ ಪರಿಶುದ್ಧತೆಯಲ್ಲ. ಒಂದು ವೇಳೆ ಆದಾಮನು ಶೋಧನೆಗೆ ಒಳಗಾಗದೇ ಇದ್ದಿದ್ದರೆ, ತನ್ನ ಜೀವಿತವೆಲ್ಲಾ ಮುಗ್ಧನಾಗಿ ಇದ್ದರೂ, ಆತನು ಪರಿಶುದ್ಧತೆಯನ್ನು ಮಾತ್ರ ಹೊಂದುತ್ತಿರಲಿಲ್ಲ. ಮುಗ್ಧತೆ ಒಂದು ತಟಸ್ಥ ಸ್ಥಿತಿಯಾಗಿದೆ; ಮತ್ತು ಆ ತಟಸ್ಥ ಸ್ಥಿತಿಯಿಂದ ಆದಾಮನು ಖಚಿತವಾದ ಪರಿಶುದ್ಧತೆಗೆ ಬರಲು ಒಂದು ಆಯ್ಕೆಯನ್ನು ಮಾಡಬೇಕಾಗಿತ್ತು. ಆತನು ಶೋಧನೆಗೆ ’ಇಲ್ಲ’ ಎಂದೂ, ದೇವರಿಗೆ ’ಸರಿ’ ಎಂದೂ ಹೇಳಬೇಕಿತ್ತು. ಆಗ ಮಾತ್ರ ಅವನು ಪರಿಶುದ್ಧನು ಆಗಬಹುದಾಗಿತ್ತು. ಅದಕ್ಕಾಗಿ ಅವನು ಶೋಧನೆಗೆ ಒಳಗಾಗಬೇಕಿತ್ತು. ದುರದೃಷ್ಟವಶಾತ್ ಅವನು ಶೋಧನೆಗೆ ಒಳಗಾದಾಗ, ದೇವರಿಗೆ ’ಇಲ್ಲ’ ಎಂದು ಹೇಳಿ ಆ ಮೂಲಕ ಪಾಪ ಮಾಡಿದನು.

    ಶೋಧನೆ ಮತ್ತು ಪಾಪ

    ಯೇಸುವೂ ಸಹ ನಮ್ಮಂತೆ ಸರ್ವ ವಿಷಯಗಳಲ್ಲಿ ಶೋಧನೆಗೆ ಗುರಿಯಾದರು (ಇಬ್ರಿಯ 4:15). ಆದರೆ ಯೇಸು ಮತ್ತು ಆದಾಮನ ನಡುವಿನ ವ್ಯತ್ಯಾಸ ಏನೆಂದರೆ, ಯೇಸುವು ದೇವರಿಗೆ ಯಾವಾಗಲೂ ’ಆಗಲಿ,’ ಎಂದರು. ಯೇಸುವು ದೇವರಿಗೆ ಬೇಕಾಗಿದ್ದ ಒಬ್ಬ ಪರಿಪೂರ್ಣ ಮನುಷ್ಯನೂ, ಎಲ್ಲಾ ಮಾನವರ ಅನುಕರಣೆಗೆ ಯೋಗ್ಯ ಮಾದರಿಯೂ ಆಗಲು, ತಾನು ಅನುಭವಿಸಿದ ಬಾಧೆಗಳ ಮೂಲಕ ವಿಧೇಯತೆಯನ್ನು ಕಲಿಯುವದು ಅವಶ್ಯವಾಗಿತ್ತು. ಅವರು ಬಾಧೆಗಳನ್ನು ಅನುಭವಿಸಿ ಜಯಿಸುವದರ ಮೂಲಕ ಪರಿಪೂರ್ಣರಾಗಿ ಮಾಡಲ್ಪಟ್ಟರು (ಇಬ್ರಿಯ 5:8,9).

    ಯೇಸುವು ಅದೇ ಕಾರಣಕ್ಕಾಗಿ ಶಿಷ್ಯರ ಬಗ್ಗೆ, "ತಂದೆಯೇ, ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ," (ಯೋಹಾ 17:15) ಎಂದು ಪ್ರಾರ್ಥಿಸಿದರು. ತನ್ನ ಶಿಷ್ಯರು ಈ ಲೋಕದಲ್ಲಿ ಎದುರಾಗುವ ಒತ್ತಡ, ಕಷ್ಟ ಮತ್ತು ಶೋಧನೆಗಳಿಂದ ದೂರ ಇರಿಸಲ್ಪಟ್ಟರೆ ಅವರು ಪರಿಶುದ್ಧರಾಗುವದು ಅಸಾಧ್ಯವೆಂದು ಯೇಸು ತಿಳಿದಿದ್ದರು.

    ನಾವು ಶೋಧನೆ ಮತ್ತು ಪಾಪದ ನಡುವಿನ ವ್ಯತ್ಯಾಸವನ್ನು ಗುರುತಿಸುವದು ಅವಶ್ಯ. ಒಂದು ವೇಳೆ ನಾವು ಆಕಸ್ಮಿಕವಾಗಿ ಏನನ್ನೋ ನೋಡಿ ಶೋಧನೆಗೆ ಒಳಗಾದರೆ, ಅದು ಪಾಪವಲ್ಲ. ಆದರೆ ನಾವು ಒಡನೆಯೇ ಆ ದುರಾಕರ್ಷಣೆಯನ್ನು ನೋಡುವದನ್ನು, ಅಥವಾ ಅದರ ಬಗ್ಗೆ ಯೋಚಿಸುವದನ್ನು ನಿಲ್ಲಿಸದಿದ್ದಲ್ಲಿ, ಅದು ಪಾಪ. ನಾವು ಶೋಧಿಸಲ್ಪಡುವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ನಾವು ಆ ಶೋಧಿಸುವ ಸಂಗತಿಯಿಂದ ನಮ್ಮ ಕಣ್ಣು ಮತ್ತು ಮನಸ್ಸುಗಳನ್ನು ದೂರ ಸರಿಸಲು ಖಂಡಿತವಾಗಿ ನಿರ್ಧರಿಸಬಹುದು. ನಾವು ನಮ್ಮ ಸ್ವೇಚ್ಛೆಯನ್ನು ಬಳಸುವ ರೀತಿಯು ನಾವು ಪರಿಶುದ್ಧರೋ ಅಥವಾ ಪಾಪಿಗಳೋ ಎನ್ನುವದನ್ನು ನಿರ್ಧರಿಸುತ್ತದೆ.

    ಶೋಧನೆಗೆ ಒಳಗಾದುದಕ್ಕಾಗಿ ದೇವರು ನಮ್ಮನ್ನು ದೋಷಿಗಳೆಂದು ಪರಿಗಣಿಸುವದಿಲ್ಲ. ಆದರೆ ನಾವು ಶೋಧನೆಯನ್ನು ಎದುರಿಸಬೇಕೆಂದು ಅವರು ಖಂಡಿತವಾಗಿ ಬಯಸುತ್ತಾರೆ. ಯಾರೋ ಹೇಳಿರುವಂತೆ, "ನನ್ನ ತಲೆಯ ಮೇಲ್ಗಡೆ ಪಕ್ಷಿಗಳು ಹಾರಾಡುವುದನ್ನು ನಾನು ತಡೆಯಲು ಆಗದು, ಆದರೆ ಅವು ನನ್ನ ತಲೆಯ ಮೇಲೆ ಗೂಡು ಕಟ್ಟುವುದನ್ನು ನಾನು ತಡೆಯಬಲ್ಲೆ!" ನೀವು ಶೋಧನೆ ಬರುವದನ್ನು ತಡೆಯಲಾರಿರಿ, ಆದರೆ ಅದು ನಿಮ್ಮ ಮನಸ್ಸಿನಲ್ಲಿ ನೆಲೆಗೊಳ್ಳುವದನ್ನು ನೀವು ತಡೆಯಬಲ್ಲಿರಿ!

    ನಾವು ಸಾಧ್ಯವಾದಷ್ಟು ಹೆಚ್ಚು ಶೋಧನೆಗಳನ್ನು ಎದುರಿಸಿ ನಮ್ಮ ಸಾಮರ್ಥ್ಯವನ್ನು ತೋರಿಸಬೇಕೆಂದು ದೇವರ ವಾಕ್ಯ ತಿಳಿಸುವದಿಲ್ಲ. ಇಲ್ಲ. ನಾವು ಶೋಧನೆಯಿಂದ ದೂರ ಓಡಬೇಕು. ಪೌಲನು ತಿಮೊಥೆಯನಿಗೆ, ಶೋಧನೆಗಳಿಂದ ತಡಮಾಡದೆ ಓಡಲು ಹೇಳುತ್ತಾನೆ (2 ತಿಮೊ 2:22). ನಾವು ಹಣದ ವ್ಯಾಮೋಹ, ಒಯ್ಯಾರದ ಸ್ತ್ರೀಯರು ಮತ್ತು ದೇವರಿಂದ ನಮ್ಮನ್ನು ದೂರ ಸರಿಸುವ ಯಾವುದೇ ಸಂಗತಿ, ಇವೆಲ್ಲವುಗಳಿಂದ ತಡವಿಲ್ಲದೆ ಓಡಿ ಹೋಗಬೇಕು.

    ಶೋಧನೆಯ ವಿಷಯದಲ್ಲಿ ನಮ್ಮ ಮನೋಭಾವ, "ನಾನು ಅದರಿಂದ ಸಾಧ್ಯವಾದಷ್ಟು ದೂರ ಸರಿಯುವೆನು," ಎಂದು ಆಗಿರಬೇಕು. ನಾವು ಚಿಕ್ಕ ಮಕ್ಕಳಂತೆ ಬೆಟ್ಟದ ಮೇಲಿಂದ ಜಾರಿ ಬೀಳದೆಯೂ ಬಂಡೆಯ ಅಂಚಿಗೆ ಎಷ್ಟು ಮುಂದೆ ಹೋಗಬಹುದು ಎಂದು, ಅಥವಾ ಬರುತ್ತಿರುವ ರೈಲುಗಾಡಿ ಹೊಡೆದು ಬೀಳಿಸದಂತೆ ಪ್ಲಾಟ್ ಫಾರಂ‍ನ ಅಂಚಿಗೆ ಎಷ್ಟು ಮುಂದೆ ಹೋಗಬಹುದು ಎಂದು ಕಂಡುಹಿಡಿಯಲು ಪ್ರಯತ್ನಿಸುವದು ಸರಿಯಲ್ಲ. ತಿಳುವಳಿಕೆ ಇರುವ ಪ್ರತಿಯೊಬ್ಬ ತಂದೆ-ತಾಯಂದಿರು ತಮ್ಮ ಮಗುವಿಗೆ ಅಂಥಹ ಅಪಾಯಗಳಿಂದ ದೂರವಿರಲು ಕಲಿಸುತ್ತಾರೆ. ದೇವರೂ ಸಹ ನಮಗೆ ಅದನ್ನೇ ಹೇಳುತ್ತಾರೆ.

    ಈ ಬೇಡಿಕೆಯ ನಿಜವಾದ ಅರ್ಥ, "ತಂದೆಯೇ, ನನ್ನ ಶಕ್ತಿಯನ್ನು ಮೀರುವ ಶೋಧನೆಯನ್ನು ನನಗೆ ಬರಗೊಡಿಸಬೇಡಿ," ಎಂದಾಗಿದೆ. ಈ ಪ್ರಾರ್ಥನೆಯನ್ನು ಮಾಡುವವನು ತನ್ನ ದೇಹವು ಬಲಹೀನವಾಗಿದೆ ಎಂದು ಮತ್ತು ತಾನು ಸುಲಭವಾಗಿ ಬೀಳಬಹುದು ಎಂದು ಚೆನ್ನಾಗಿ ತಿಳಿದಿರವನು.

    ಶೋಧನೆಯನ್ನು ಎದುರಿಸಲು ಸಿದ್ಧತೆ

    ಗೆತ್ಸೇಮನೆ ತೋಟದಲ್ಲಿ ಯೇಸುವು ಪೇತ್ರ, ಯಾಕೋಬ ಮತ್ತು ಯೋಹಾನರಿಗೆ, "ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ," ಎಂದು ಹೇಳಿದರು (ಮತ್ತಾ.26:41). ಶಿಷ್ಯರು ಎದುರಿಸಲಿದ್ದ ಶೋಧನೆಯ ಬಗ್ಗೆ ತಿಳಿದಿದ್ದ ಯೇಸು, ಅದಕ್ಕಾಗಿ ಅವರನ್ನು ಸಿದ್ಧಗೊಳಿಸಲು ಬಯಸಿದರು. ಆದರೆ ಪ್ರಾರ್ಥಿಸುವ ಬದಲು ಶಿಷ್ಯರು ನಿದ್ರಿಸಿದರು. ಹಾಗಾಗಿ ಶೋಧನೆ ಬಂದಾಗ, ಪೇತ್ರನು ಒಬ್ಬ ಸೈನಿಕನ ಕಿವಿಯನ್ನು ಕಡಿದುಹಾಕಿದನು. ಆತನು ಎಚ್ಚರವಾಗಿದ್ದು ಪ್ರಾರ್ಥಿಸದ ನಿಮಿತ್ತ ಪಾಪದಲ್ಲಿ ಬಿದ್ದನು. ಆದರೆ ಯೇಸುವು ಪರಿಶುದ್ಧ ಪ್ರೀತಿಯಿಂದ ನಡೆಯಲು ಸಾಧ್ಯವಾಯಿತು, ಏಕೆಂದರೆ ಅವರು ಮೊದಲೇ ಪ್ರಾರ್ಥಿಸಿ ಸಿದ್ಧರಾಗಿದ್ದರು.

    ನಂಬಿಗಸ್ಥರಾದ ದೇವರು ನಮ್ಮನ್ನು ಯಾವಾಗಲೂ ಮುಂಚಿತವಾಗಿ ಎಚ್ಚರಿಸುತ್ತಾರೆ. ಒಂದಲ್ಲ ಒಂದು ಸಮಯದಲ್ಲಿ ನಮ್ಮ ಹೃದಯದಲ್ಲಿ, "ಈಗ ಕೆಲವು ಗಳಿಗೆ ಪ್ರಾರ್ಥನೆ ಮಾಡು," ಎನ್ನುವ ಪವಿತ್ರಾತ್ಮನ ಧ್ವನಿ ಕೇಳಿಸಿದೆ. ಮುಂದೆ ಬರಲಿದ್ದ ಯಾವುದೋ ಶೋಧನೆಯನ್ನು ಎದುರಿಸಲು ನಿಮ್ಮನ್ನು ಸಿದ್ಧಗೊಳಿಸಲು ಬಯಸುವ ದೇವರ ಧ್ವನಿ ಅದು ಆಗಿತ್ತೆಂದು ನಿಮಗೆ ತಿಳಿದಿತ್ತೇ?

    ಸಾಧಾರಣವಾಗಿ ನೀವು ಇಂತಹ ಸಮಯದಲ್ಲಿ ಏನು ಮಾಡಿರುವಿರಿ? ನೀವು ಆ ಶಿಷ್ಯರಂತೆ ಆ ಧ್ವನಿಯನ್ನು ನಿರ್ಲಕ್ಷಿಸಿರಬಹುದು. ಮುಂದೆ ಶೋಧನೆ ಬಂದಾಗ ನೀವು ಬಿದ್ದುಹೋದಿರಿ. ದೇವರು ನಿಮ್ಮನ್ನು ಆ ಶೋಧನೆಗಾಗಿ ಸಿದ್ಧಪಡಿಸಲು ಪ್ರಯತ್ನಿಸಿದ್ದರು. ಆದರೆ ನೀವು ಅವರ ಮಾತನ್ನು ಆಲಿಸಲಿಲ್ಲ.

    ಪ್ರತಿಯೊಂದು ಶೋಧನೆಯನ್ನು ಜಯಿಸಬಹುದು

    ದೇವರು ತಮ್ಮ ವಾಕ್ಯದಲ್ಲಿ ನಮಗೆ ಕೊಟ್ಟಿರುವ ಒಂದು ಅದ್ಭುತವಾದ ವಾಗ್ದಾನ, ನಾವು ಸಹಿಸಲು ಅಥವಾ ಜಯಿಸಲು ಅಸಾಧ್ಯವಾದ ಸಂಕಟ ಅಥವಾ ಶೋಧನೆ ನಮಗೆ ಬರುವದನ್ನು ಅವರು ಎಂದಿಗೂ ಅನುಮತಿಸುವದಿಲ್ಲ, ಎನ್ನುವದು (1 ಕೊರಿ 10:13). ಇನ್ನೊಂದು ರೀತಿಯಲ್ಲಿ ಹೇಳುವದಾದರೆ, ಅವರು ಪ್ರತೀ ಸಂಕಟ ಮತ್ತು ಶೋಧನೆಯನ್ನು ಪರೀಕ್ಷಿಸಿ, ನಾವು ಅದನ್ನು ಜಯಿಸಲು ಶಕ್ತರೋ ಇಲ್ಲವೋ ಎಂದು ನೋಡುತ್ತಾರೆ. ಅದರ ನಂತರವೇ ಅದು ನಮ್ಮನ್ನು ಎದುರಿಸಲು ಅವರು ಅವಕಾಶ ನೀಡುತ್ತಾರೆ. ಒಬ್ಬ ಒಳ್ಳೆಯ ಶಿಕ್ಷಕನು 2ನೇ ತರಗತಿಯ ವಿದ್ಯಾರ್ಥಿಗೆ 9ನೇ ತರಗತಿಯ ಪ್ರಶ್ನೆಪತ್ರಿಕೆಯನ್ನು ಎಂದಿಗೂ ನೀಡನು. ಅವನು ಆ ವಿದ್ಯಾರ್ಥಿಯ ಮಟ್ಟಕ್ಕೆ ಸರಿಹೊಂದುವ ಪ್ರಶ್ನಪತ್ರಿಕೆಯನ್ನೇ ಕೊಡುವನು. ದೇವರು ಹಾಗೆಯೇ ಮಾಡುತ್ತಾರೆ.

    ದೇವರ ವಾಕ್ಯವು ಈ ರೀತಿಯಾಗಿ ತಿಳಿಸಿರುವಾಗ, ನಿಮ್ಮನ್ನು ಎದುರಿಸುತ್ತಿರುವ ಯಾವುದೇ ಕಷ್ಟ ಅಥವಾ ಶೋಧನೆ ನಿಮ್ಮ ಶಕ್ತಿ ಮೀರಿದ್ದು ಎಂದು ಭಾವಿಸುವದು ಸರಿಯೇ? ಇಲ್ಲ. ದೇವರು ಹಾಗೆ ಯೋಚಿಸುವದಿಲ್ಲ ಎನ್ನುವದು ಸ್ಪಷ್ಟವಾಗಿದೆ. ಇಲ್ಲವಾದರೆ ಅದು ನಿಮ್ಮ ಬಳಿಗೆ ಬರಲು ಅವರು ಬಿಡುತ್ತಿರಲಿಲ್ಲ. ಯಾವುದೇ ಶೋಧನೆ ನಿಮ್ಮನ್ನು ಎದುರಿಸಲು ದೇವರು ಅನುಮತಿ ನೀಡಿರುವದು, ಅದನ್ನು ಜಯಿಸುವ ಸಾಮರ್ಥ್ಯ ನಿಮ್ಮಲ್ಲಿದೆ ಎನ್ನುವದರ ರುಜುವಾತು ಆಗಿದೆ.

    ಆದುದರಿಂದ ನಾವು ಶೋಧನೆಯನ್ನು ಈ ರೀತಿಯಾಗಿ ನೋಡಬೇಕು: "ನನಗೆ ಈ ಶೋಧನೆ ಬರುವುದನ್ನು ದೇವರು ಸಮ್ಮತಿಸಿದ್ದಾರೆ. ದೇವರಿಗೆ ನನ್ನಲ್ಲಿ ಭರವಸೆ ಇರುವದನ್ನು ಅದು ಸೂಚಿಸುತ್ತದೆ. ನಾನು ಇದನ್ನೂ ಸಹ ಜಯಿಸಬಲ್ಲೆ ಎಂದು ಅವರು ಬಲ್ಲರು; ಮತ್ತು ಇದನ್ನು ಜಯಿಸಲು ಅವರು ನನಗೆ ಅವರ ಆತ್ಮನ ಬಲವನ್ನು ಖಂಡಿತವಾಗಿ ನೀಡುತ್ತಾರೆ." ನಾವು ಶೋಧನೆ ಮತ್ತು ಸಂಕಟವನ್ನು ಹೀಗೆ ನೋಡಿದರೆ, ನಮ್ಮನ್ನು ಎದುರಾಗುವ ಪ್ರತಿಯೊಂದನ್ನೂ ನಾವು ಜಯಿಸಬಹುದು.

    ದೇವರು ತಮ್ಮ ಆಜ್ಞೆಗಳನ್ನು ನಮ್ಮ ಮನಸ್ಸಿನಲ್ಲಿ ಇರಿಸಿ, ಅವುಗಳನ್ನು ನಮ್ಮ ಹೃದಯದ ಮೇಲೆ ಬರೆಯುವ ವಾಗ್ದಾನವನ್ನು ಸಹ ಮಾಡಿದ್ದಾರೆ (ಇಬ್ರಿಯ 8:10). ಅವರು ನಮ್ಮಲ್ಲಿ ಅವರ ಸುಚಿತ್ತವನ್ನು ಪೂರೈಸುವ ಉದ್ದೇಶವನ್ನು ಇರಿಸಿ, ಅದಕ್ಕೆ ಬೇಕಾದ ಪ್ರಯತ್ನವನ್ನು ನಾವು ಮಾಡುವಂತೆ ಪವಿತ್ರಾತ್ಮನ ಮೂಲಕ ನಮ್ಮಲ್ಲಿ ಕಾರ್ಯ ಮಾಡುವರು (ಫಿಲಿಪ್ಪಿ 2:13). ಹಾಗಾಗಿ ನಾವು ಯಾವತ್ತೂ ಸೋಲಬೇಕಿಲ್ಲ.

    ಪಾಪದ ಶಕ್ತಿಯಿಂದ ಬಿಡುಗಡೆ

    "ನಮ್ಮನ್ನು (ನಮ್ಮ ಶಕ್ತಿ ಮೀರುವ) ಶೋಧನೆಗಳಿಗೆ ಸೇರಿಸಬೇಡಿ," ಎಂಬ ಈ ಮನವಿ ಮುಂದುವರಿದು, "ಕೇಡಿನಿಂದ ನಮ್ಮನ್ನು ತಪ್ಪಿಸಿ," ಎನ್ನುವ ಅರಿಕೆಗೆ ಬರುತ್ತದೆ.

    "ತಪ್ಪಿಸಿ" ಎಂಬ ಪದದ ವಿವರಣೆ, "ನಮ್ಮನ್ನು ನಿಮ್ಮ ಹತ್ತಿರಕ್ಕೆ ಎಳೆಯಿರಿ," ಎಂದೆನ್ನಬಹುದು. ಹಾಗಾಗಿ ಈ ಪ್ರಾರ್ಥನೆ, "ನಮ್ಮನ್ನು ಕೇಡಿನಿಂದ ನಿಮ್ಮ ಹತ್ತಿರಕ್ಕೆ ಎಳೆದುಕೊಳ್ಳಿ," ಎಂದಾಗಿದೆ. ದೇವರು ಮತ್ತು ಕೆಡುಕು ಇವು ಎರಡು ವಿಭಿನ್ನ ದಿಕ್ಕುಗಳಿಗೆ ಎಳೆಯುವ ಶಕ್ತಿಗಳಾಗಿವೆ. ಮತ್ತು ನಾವು ಹೀಗೆ ಪ್ರಾರ್ಥಿಸುತ್ತಿದ್ದೇವೆ, "ತಂದೆಯೇ, ನನ್ನ ಮಾಂಸದಲ್ಲಿ ಕೇಡಿನ ಕಡೆಗೆ ಸೆಳೆತ ಅನುಭವವಾಗುತ್ತಿದೆ. ಆದರೆ ನನ್ನನ್ನು ಆ ದಾರಿಯಲ್ಲಿ ಹೋಗಲು ಬಿಡಬೇಡಿ. ನನಗೆ ಅದಕ್ಕೆ ಶರಣಾಗಲು ಇಷ್ಟವಿಲ್ಲ. ದಯವಿಟ್ಟು ನನ್ನನ್ನು ನಿಮ್ಮೆಡೆಗೆ ಎಳೆಯಿರಿ." ದೇವರ ಸಮೀಪ ಇರಬೇಕು ಎನ್ನುವ ಈ ತೀವ್ರ ಆಸಕ್ತಿ ಮತ್ತು ಹಂಬಲವು ಪಾಪದ ಮೇಲೆ ಜಯದ ಜೀವನಕ್ಕೆ ಅತೀ ಅವಶ್ಯವಾದದ್ದು.

    ಅನೇಕ ಕ್ರೈಸ್ತರ ಜೀವಿತದಲ್ಲಿ "ಪಾಪವು ನಿಮ್ಮ ಮೇಲೆ ಅಧಿಕಾರ ನಡಿಸದು," ಎಂಬ ರೋಮಾ. 6:14ರ ವಾಗ್ದಾನ ನೆರವೇರದೆ ಇರಲು ಒಂದು ಕಾರಣ, ಅವರ ಒಳಹೃದಯದಲ್ಲಿ ಪಾಪದಿಂದ ಬಿಡುಗಡೆಗಾಗಿ ತೀವ್ರ ಹಸಿವೆ ಇಲ್ಲವಾಗಿದೆ. "ಓ ದೇವರೇ, ಅದು ಎಷ್ಟೇ ದುಬಾರಿಯಾದರೂ ನನ್ನನ್ನು ಪಾಪದಿಂದ ಬಿಡಿಸಿ," ಎಂದು ಅವರು ಕೂಗುವದಿಲ್ಲ. ಅವರಲ್ಲಿ ಅದಕ್ಕಾಗಿ ದಾಹ ಇಲ್ಲ. ಅವರು ತೀವ್ರ ಅನಾರೋಗ್ಯವಿದ್ದರೆ ಕೂಗಿಕೊಳ್ಳುತ್ತಿದ್ದರು. ಆದರೆ ಪಾಪ ಮಾಡುವದು ರೋಗದಷ್ಟು ಕೆಟ್ಟದ್ದು ಎಂದು ಅವರು ಭಾವಿಸುವದಿಲ್ಲ! ಅವರು ಸೋಲಿನಿಂದ ಬಿಡುಗಡೆ ಪಡೆಯದಿರುವದು ಆಶ್ಚರ್ಯಕರವೇನೂ ಅಲ್ಲ.

    ವಿಮೋಚನಕಾಂಡ 2:23-25, "ಇಸ್ರಾಯೇಲ್ಯರು ತಾವು ಮಾಡಬೇಕಾದ ಬಿಟ್ಟೀ ಕೆಲಸಕ್ಕಾಗಿ ನಿಟ್ಟುಸುರು ಬಿಟ್ಟು ಗೋಳಾಡುತ್ತಾ ಇದ್ದರು. ಆ ಗೋಳು ದೇವರಿಗೆ ಮುಟ್ಟಿತು. ದೇವರು ಅವರ ನರಳಾಟವನ್ನು ಕೇಳಿ ಅವರಲ್ಲಿ ಲಕ್ಷ್ಯವಿಟ್ಟನು," ಎಂದು ತಿಳಿಸುತ್ತದೆ. ದೇವರು ನಮ್ಮನ್ನು ಗಮನಿಸುವದು ಸಹ ಆಗಲೇ - ನಾವು ಕಂಗಾಲಾಗಿ ಬಿಡುಗಡೆಗಾಗಿ ನರಳಾಡಲು ಆರಂಭಿಸಿದಾಗ. "ನೀವು ನನ್ನನ್ನು ಹುಡುಕುವಿರಿ; ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ," ಎಂದು ದೇವರು ಹೇಳುತ್ತಾರೆ (ಯೆರೆಮೀಯ 29:13).

    ದೇವ ವಚನದ ಒಂದು ನಿಯಮ, ನಾವು ದೇವರಿಂದ ಒಂದು ಅಮೂಲ್ಯ ವಸ್ತುವನ್ನು ಸ್ವೀಕರಿಸ ಬೇಕಾದರೆ, ಮೊದಲು ನಾವು ಅದಕ್ಕಾಗಿ ಹಸಿದು, ಬಾಯಾರಬೇಕು. ಆಗಲೇ ಅದು ಎಷ್ಟು ಅಮೂಲ್ಯವೆಂದು ನಮಗೆ ಗೊತ್ತಾಗುತ್ತದೆ. ಹಾಗಾಗಿ ನಾವು ಹಸಿದು ಬಾಯಾರುವ ವರೆಗೆ ದೇವರು ಕಾಯುತ್ತಾರೆ; ಆ ಮೇಲೆ ದೇವರು ನಾವು ಯಾವುದಕ್ಕಾಗಿ ತೀವ್ರವಾಗಿ ಹಂಬಲಿಸುತ್ತೇವೋ, ಅದನ್ನು ನಮಗೆ ಕೊಡುತ್ತಾರೆ.

    ಕ್ರಿಸ್ತೀಯ ಜೀವನವೆಂದರೆ ಸೈತಾನನ ವಿರುದ್ಧ ಒಂದು ಹೋರಾಟ. ಮತ್ತು ಈ ಹೋರಾಟದಲ್ಲಿ, ಸೈತಾನನ ಒಬ್ಬ ಏಜೆಂಟನು ನಮ್ಮ ಒಳಗಡೆ ಇದ್ದಾನೆ - ನಮ್ಮ ಮಾಂಸ (ಅಥವಾ ಶರೀರಭಾವ). ವೈರಿಯ ಪರವಾಗಿ ಇರುವ ನಮ್ಮ ಶರೀರಭಾವವು, ಸೈತಾನನ ವಿರುದ್ಧವಾದ ನಮ್ಮ ಹೋರಾಟ ಅಸಫಲವಾಗುವಂತೆ ಸಕಲ ಪ್ರಯತ್ನ ಮಾಡುತ್ತದೆ. ಯಾವಾಗಲೂ ಇದನ್ನು ನೆನಪಿರಿಸಿರಿ. ಆದ್ದರಿಂದ ನಾವು ಸೈತಾನನನ್ನು ಸೊಲಿಸ ಬೇಕಾದರೆ, ಶರೀರಭಾವದಿಂದ ಸಂಪೂರ್ಣ ಬಿಡುಗಡೆಯ ದಾಹ ನಮ್ಮಲ್ಲಿ ಇರುವದು ಅವಶ್ಯ.

    ಎಲ್ಲಾ ಕೇಡಿನಿಂದ ಬಿಡುಗಡೆ

    "ಓ ದೇವರೇ, ಸೈತಾನ ಮತ್ತು ಜನರು ನನಗೆ ಮಾಡಲು ಬಯಸುವ ಎಲ್ಲಾ ಕೇಡಿನಿಂದ ನನ್ನನ್ನು ರಕ್ಷಿಸಿ," ಎಂದು ಪ್ರಾರ್ಥಿಸುವ ಅನೇಕ ವಿಶ್ವಾಸಿಗಳು ಇದ್ದಾರೆ. ಆದರೆ ಹೀಗೆ ಪ್ರಾರ್ಥಿಸಿಯೂ, ಅವರು ತಮ್ಮ ಶರೀರಭಾವಕ್ಕೆ (ಶತ್ರುವಿನ ಏಜೆಂಟ್) ಬೇಕಾದ ಎಲ್ಲವನ್ನೂ ಒದಗಿಸುತ್ತಲೇ ಇರುತ್ತಾರೆ. ಹಾಗಾಗಿ ದೇವರು ಅವರನ್ನು ಎಲ್ಲಾ ಕೇಡಿನಿಂದ ಬಿಡಿಸಲು ಸಾಧ್ಯವಾಗುವದಿಲ್ಲ.

    ನಾವು ಮೊದಲು ನಮ್ಮ ಶರೀರಭಾವದ ದುರಾಸೆಗಳಿಂದ ಬಿಡುಗಡೆಗಾಗಿ ಹಾರೈಸೋಣ. ಆಗ ಸೈತಾನನನ್ನು ಸೋಲಿಸುವದು ನಮಗೆ ಒಂದು ಸುಲಭ ಕಾರ್ಯ ಆಗುತ್ತದೆ. ಇದರ ನಂತರ ನಮ್ಮ ಬಳಿಗೆ ಮನುಷ್ಯರಿಂದ ಅಥವಾ ದೆವ್ವಗಳಿಂದ ಯಾವ ಕೇಡೂ ಬರಲು ಸಾಧ್ಯವಿಲ್ಲವೆಂದು ನಾವು ತಿಳಿಯುತ್ತೇವೆ.

    ರೋಮಾ. 7:14-25ರಲ್ಲಿ, ಪೌಲನು ತನ್ನ ಶರೀರಭಾವದ ದುರಾಸೆಗಳಿಂದ ಸಂಪೂರ್ಣ ಬಿಡುಗಡೆಗಾಗಿ ಹಾತೊರೆಯುವದನ್ನು ನಾವು ನೋಡುತ್ತೇವೆ. ಆ ಮೇಲೆ, ’ದೇವರ ಮೂಲಕ ಎಲ್ಲಾ ಕಾರ್ಯಗಳು ನಮ್ಮ ಅನುಕೂಲವಾಗುತ್ತವೆ,’ ಎಂದು ರೋಮಾ. 8:28ರಲ್ಲಿ ನಾವು ನೋಡುತ್ತೇವೆ. ಇಲ್ಲಿರುವ ಕ್ರಮವನ್ನು ಗಮನಿಸಿರಿ. ಒಂದರ ಫಲವಾಗಿ ಇನ್ನೊಂದು ಕೈಗೂಡುತ್ತದೆ. ನಮ್ಮ ಜೀವಿತದಲ್ಲಿ ರೋಮಾ. 8:28 ನಿಜವಾಗುವದು ನಾವು ಮೊದಲು ವೈರಿಯ ಏಜೆಂಟನಿಂದ - ಮಾಂಸ ಅಥವಾ ಶರೀರಭಾವದಿಂದ - ಬಿಡುಗಡೆಗಾಗಿ ಹಾತೊರೆದಾಗ ಮಾತ್ರ.

    ನಮ್ಮ ಜೀವನದಲ್ಲಿ ಎಂದಿಗೂ ಯಾವ ಕೇಡೂ ಬಾರದು, ಎಂಬ ರೋಮಾ. 8:28ರ ವಾಗ್ದಾನ ಎಷ್ಟು ಅದ್ಭುತವಾಗಿದೆ! ಎಲ್ಲಾ ಕಾರ್ಯಗಳು (ಸನ್ನಿವೇಷಗಳು) - ಕೆಲವು ಕಾರ್ಯಗಳು ಅಲ್ಲ, ಅಥವಾ ಅನೇಕ ಕಾರ್ಯಗಳು ಅಲ್ಲ, ಅಥವಾ ಬಹುತೇಕ ಕಾರ್ಯಗಳು ಅಲ್ಲ, ಅಥವಾ ಕಾರ್ಯಗಳಲ್ಲಿ 99% ಅಂಶವೂ ಅಲ್ಲ, ಆದರೆ ಎಲ್ಲಾ ಕಾರ್ಯಗಳು - ಎಲ್ಲವೂ ಒಟ್ಟಾಗಿ ನಿಮಗೆ ಅನುಕೂಲವಾಗುತ್ತವೆ ಎಂದು ನೀವು ನಿಜವಾಗಿ ನಂಬುತ್ತೀರಾ?

    ನೀವು ಈ "ಸನ್ನಿವೇಷ"ಗಳನ್ನು ಪ್ರತ್ಯೇಕವಾಗಿ ನೋಡಿದರೆ ಅವು ಬಹಳ ಭಯಂಕರವಾಗಿ ಕಾಣಬಹುದು. ಆದರೆ ನೀವು ದೇವರನ್ನು ಪ್ರೀತಿಸುವದಾದರೆ, ಹಾಗೂ ಅವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟಿದ್ದರೆ, ಎಲ್ಲಾ ಸನ್ನಿವೇಷಗಳ ಸಮಗ್ರ ಫಲ ಉತ್ತಮವಾಗಿಯೇ ಪರಿಣಮಿಸುತ್ತದೆ. ಮತ್ತು ಅವರ ಉದ್ದೇಶ, ಇದರ ಮಗ್ಗುಲಿನ ಮುಂದಿನ ವಚನ (ರೋಮಾ. 8:29) ತಿಳಿಸುವಂತೆ, ನೀವು ಪಾಪದಿಂದ ಸಂಪೂರ್ಣ ಬಿಡುಗಡೆ ಹೊಂದಿ, ಕ್ರಿಸ್ತನ ಸಾರೂಪ್ಯಕ್ಕೆ ಬರುವದು. ಹಾಗಾಗಿ ನೀವು ಪಾಪದಿಂದ ಬಿಡುಗಡೆಗಾಗಿ ತವಕಿಸುತ್ತಿದ್ದರೆ, ನೀವು ಎದುರಿಸುವ ಒಂದೊಂದು ಸಂಗತಿಯೂ ನಿಮ್ಮ ಒಳ್ಳೆಯದಕ್ಕಾಗಿಯೇ ನಡೆಯುವದು ಎಂಬ ವಾಗ್ದಾನ ದೇವರದ್ದು. ಹಲ್ಲೆಲೂಯ!

    ಯೋಸೇಫನ ಬಗ್ಗೆ ಯೋಚಿಸಿರಿ. ಅವನು ಒಂದು ಪರಿಶುದ್ಧ ಜೀವನವನ್ನು ಜೀವಿಸಲು ಪ್ರಯತ್ನಿಸಿದನು, ಮತ್ತು ತನಗೆ ಸಿಕ್ಕಿದ್ದ ಬೆಳಕಿನ ಅನುಸಾರವಾಗಿ ಕೇಡಿನಿಂದ ಬಿಡುಗಡೆಗಾಗಿ ತವಕಿಸಿದನು. ಅವನ ಇಚ್ಛೆ ದೇವರನ್ನು ಮೆಚ್ಚಿಸುವದು ಆಗಿತ್ತು, ಹಾಗಾಗಿ ದೇವರು ಅವನನ್ನು ಆಶೀರ್ವದಿಸಿದರು. ಆದರೆ ಇತರರು ಅವನೊಂದಿಗೆ ಹೇಗೆ ವರ್ತಿಸಿದರು? ಅವನ ಹತ್ತು ಅಣ್ಣಂದಿರಲ್ಲಿ ಎಷ್ಟು ಹೊಟ್ಟೆಕಿಚ್ಚು ಇತ್ತೆಂದರೆ, ಅವರು ಅವನನ್ನು ಐಗುಪ್ತ ದೇಶಕ್ಕೆ ಮಾರಿಬಿಟ್ಟರು. ಹೊರನೋಟಕ್ಕೆ ಅದು ದುಷ್ಟತನವಾಗಿತ್ತು. ಆದರೆ ಯೋಸೆಫನು ಐಗುಪ್ತದ ಎರಡನೆಯ ಶಾಸಕನಾಗುವದು ದೇವರ ಯೋಜನೆ ಆಗಿತ್ತೆಂದು ನಮಗೆ ಕೊನೆಯಲ್ಲಿ ಗೊತ್ತಾಗುತ್ತದೆ. ಅವನಿಗೆ ಅಣ್ಣಂದಿರು ಮಾಡಿದ ಕೇಡು ಒಳ್ಳೆಯದನ್ನೇ ಮಾಡಿತು.

    ಅವನು ಐಗುಪ್ತಕ್ಕೆ ಬಂದಾಗ, ಪೋಟೀಫರನ ಮನೆಯ ಆಳಾಗಿ ಮಾರಲ್ಪಟ್ಟನು. ಅಲ್ಲಿ ಪೋಟೀಫರನ ಹೆಂಡತಿಯು ಅವನನ್ನು ಬಾಧಿಸಿದಳು, ಆದರೆ ಅವನು ಆಕೆಯ ದುಷ್ಪ್ರೇರಣೆಗೆ ಮಣಿಯಲಿಲ್ಲ. ಅವನು ಶೋಧನೆಯ ಸ್ಥಳದಿಂದ ದೂರ ಓಡಿಹೋದನು. ಆಕೆಯ ಸುಳ್ಳು ಆಪಾದನೆಯಿಂದಾಗಿ ಅವನು ಸೆರೆಮನೆಗೆ ಹಾಕಲ್ಪಟ್ಟನು. ಹೊರನೋಟಕ್ಕೆ ಅದೂ ಸಹ ದುಷ್ಟತನವಾಗಿತ್ತು. ಆದರೆ ಆ ಸೆರೆಮನೆಯ ಮೂಲಕ ಯೋಸೇಫನನ್ನು ಸಿಂಹಾಸನಕ್ಕೆ ಒಯ್ಯಲು ದೇವರೇ ಯೋಜಿಸಿದ್ದರು - ಅವನಿಗೆ ಅದೇ ಸೆರೆಮನೆಯಲ್ಲಿ ಫರೋಹನ ಪಾನದಾಯಕನ ಭೇಟಿಯಾಗಿ, ಅವನ ಮೂಲಕ ಮುಂದೆ ಫರೋಹನ ಪರಿಚಯವಾಯಿತು (ಆದಿಕಾಂಡ 39ರಿಂದ 41).

    ದುರುದ್ದೇಶ ಮತ್ತು ಅಸೂಯೆಗಳಿಂದಾಗಿ ಇತರರು ಯೊಸೇಫನಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅವುಗಳ ಮೂಲಕವೇ ಪರಮಾಧಿಕಾರಿಯಾದ ದೇವರು ಯೋಸೇಫನ ಜೀವನದಲ್ಲಿ ತನ್ನ ಯೋಜನೆಯನ್ನು ನೆರವೇರಿಸಿದರು.

    ನಮಗೂ ಹೀಗೆಯೇ ಆಗಲು ಸಾಧ್ಯವಿದೆ - ಎಲ್ಲಾ ಘಟನೆಗಳೂ ಒಟ್ಟಾಗಿ ನಮ್ಮ ಜೀವನಕ್ಕಾಗಿ ದೇವರು ತಯಾರಿಸಿರುವ ಯೋಜನೆಯನ್ನು ಸಾಧಿಸುವವು - ಅಂದರೆ, ನಾವು ಕ್ರಿಸ್ತನ ಸಾರೂಪ್ಯಕ್ಕೆ ಸರಿಹೊಂದುವಂತೆ ಮಾಡುವವು. ಆದರೆ ನಾವು ಇದನ್ನು ನಂಬಬೇಕು - ಏಕೆಂದರೆ, ನಾವು ದೇವರ ವಾಗ್ದಾನವನ್ನು ನಮ್ಮ ನಂಬಿಕೆಯ ಪ್ರಮಾಣಕ್ಕೆ ತಕ್ಕಂತೆ ಮಾತ್ರ ಹೊಂದಬಹುದು.

    ನಾವು ಎಸ್ತೇರಳ ಪುಸ್ತಕದಲ್ಲಿ ನೋಡುವಂತೆ, ಹಾಮಾನನು ಮೊರ್ದೆಕೈಯನ್ನು ನೇತುಹಾಕಲು ಒಂದು ಗಲ್ಲು ಮರವನ್ನು ಸಿದ್ಧಮಾಡಿದ್ದನು. ಆದರೆ ಕೊನೆಯಲ್ಲಿ, ಹಾಮಾನನೇ ಆ ನೇಣುಗಂಬಕ್ಕೆ ತೂಗುಹಾಕಲ್ಪಟ್ಟನು (ಎಸ್ತೇ 7:10). ಅಲ್ಲಿ ದೇವರು ಸಂದರ್ಭವನ್ನು ತನ್ನ ಮಕ್ಕಳ ವೈರಿಗಳ ಮೇಲೆ ತಿರುಗಿಸಿದರು. ದೇವರು ಸೈತಾನನಿಗೂ ಸಹ ಹಾಗೆಯೇ ಮಾಡುವರು. ಅವರು ಪರಿಸ್ಥಿತಿಯನ್ನು ತಿರುವು ಮುರುವು ಮಾಡಿ, ನಾವು ಗಲ್ಲು ಮರದ ಮೇಲೆ ನೇಲುವ ಬದಲಾಗಿ, ಅವನು ನಮಗಾಗಿ ಸಿದ್ಧಪಡಿಸಿದ ಅದೇ ಮರದ ಮೇಲೆ ಪಿಶಾಚನು ನೇಲಬೇಕಾಗುವದು! ಹಲ್ಲೆಲೂಯ!

    ಒಬ್ಬರಿಗೆ ಒಬ್ಬರ ಅವಶ್ಯಕತೆ ನಮಗಿದೆ

    ಇನ್ನೊಂದು ವಿಷಯ, ಈ ಬಿನ್ನಹದಲ್ಲಿ ನಾವು ಮಾಡುವ ಪ್ರಾರ್ಥನೆ "ನನ್ನನ್ನು ಬಿಡಿಸು" ಎಂದಲ್ಲ, ಆದರೆ "ನಮ್ಮನ್ನು ಬಿಡಿಸು," ಎಂದಾಗಿದೆ. ಅದು, "ನನ್ನ ಸಹೋದರನನ್ನು ಮತ್ತು ನನ್ನನ್ನು ಕೇಡಿನಿಂದ ಬಿಡಿಸಿ. ನನ್ನ ಸಹೋದರಿಯನ್ನು ಮತ್ತು ನನ್ನನ್ನು ಕೇಡಿನಿಂದ ಬಿಡಿಸಿ. ತಂದೆಯೇ, ನಮ್ಮನ್ನು ಬಿಡಿಸಿ," ಎಂದಾಗಿದೆ.

    ನಮಗೆ ಒಬ್ಬರಿಗೊಬ್ಬರ ಅವಶ್ಯಕತೆಯಿದೆ. ಕೇಡಿನಿಂದ ಬಿಡುಗಡೆ ಹೊಂದಲು ನಮ್ಮಲ್ಲಿ ಅನ್ಯೋನ್ಯತೆ ಅವಶ್ಯ. "ಒಬ್ಬನಿಗಿಂತ ಇಬ್ಬರು ಲೇಸು; ... ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಬಿದ್ದಾಗ ಎತ್ತುವವನು ಇನ್ನೊಬ್ಬನು ಇಲ್ಲದಿದ್ದರೆ ಅವನ ಗತಿ ದುರ್ಗತಿಯೇ" (ಪ್ರಸಂಗಿ 4:9,10).

    ಈ ಕಾರಣಕ್ಕಾಗಿ ಸೈತಾನನು ವಿಶ್ವಾಸಿಗಳನ್ನು ಪರಸ್ಪರ ದೂರ ಸರಿಸಿ, ಅವರ ನಡುವೆ ಒಡಕು ಉಂಟುಮಾಡಲು ಪ್ರಯತ್ನಿಸುವನು. ಹಾಗೆಯೇ ಅವನು ಗಂಡ-ಹೆಂಡಿರ ನಡುವೆಯೂ ಮತಭೇದವನ್ನು ತರುವನು. ಸಣ್ಣ ಪುಟ್ಟ ಮನಸ್ತಾಪವನ್ನು ಸೈತಾನನೇ ತರುವದು. ಆತನು ಒಬ್ಬನು ಏನನ್ನೋ ನಂಬುವಂತೆ ಮಾಡಿ, ಇನ್ನೊಬ್ಬನು ಬೇರೊಂದನ್ನು ನಂಬುವಂತೆ ಮಾಡುವನು; ಮತ್ತು ಯಾವುದೇ ಗಂಭೀರ ಸಮಸ್ಯೆ ಇಲ್ಲದಿದ್ದರೂ, ಪಿಶಾಚನು ಅವರನ್ನು ಬೇರ್ಪಡಿಸುವನು.

    ಸೈತಾನನಿಗೆ ಗೊತ್ತಿದೆ, ಒಮ್ಮೆ ಒಬ್ಬ ವಿಶ್ವಾಸಿಯನ್ನು ಇನ್ನೊಬ್ಬನಿಂದ ದೂರ ಮಾಡಿದರೆ, ಒಬ್ಬೊಬ್ಬರಾಗಿ ಅವರನ್ನು ತಾನು ಹೊಡೆದು ಬೀಳಿಸುವದು ಮೊದಲಿಗಿಂತ ಸುಲಭ, ಎಂದು. ಅವರಲ್ಲಿ ಒಗ್ಗಟ್ಟು ಇರುವವರೆಗೆ ಅವನಿಗೆ ಹಾಗೆ ಮಾಡಲು ಸಾಧ್ಯವಿಲ್ಲ. ಆದಕಾರಣ ಅವನು ಅವರನ್ನು ವಿಭಜಿಸುತ್ತಾನೆ. ಪ್ರತಿ ವಿಶ್ವಾಸಿಯೂ ಮತ್ತೊಬ್ಬನ ಹಿತವನ್ನು ನೋಡುವುದನ್ನು ಬಿಟ್ಟು, ತನಗಾಗಿಯೇ ಜೀವಿಸುವಂತೆ ಮಾಡುವ ಅವನ ಪ್ರಯತ್ನ ಒಮ್ಮೆ ಕೈಗೂಡಿದರೆ, ಅವರೆಲ್ಲರೂ ದೇವರಿಗಾಗಿ ತಮ್ಮ ಉಪಯುಕ್ತತೆಯನ್ನು ಕಳಕೊಳ್ಳುವದಕ್ಕೆ ಹೆಚ್ಚು ಸಮಯ ಬೇಕಿಲ್ಲ.

    ನಾವು ಗ್ರಹಿಸಬೇಕಾದದು ಏನೆಂದರೆ, ನಮಗೆ ಇರುವದು ಒಬ್ಬ ವೈರಿ ಮಾತ್ರ - ಅವನು ಸೈತಾನ. ಹಾಗಾಗಿ ನಮ್ಮಲ್ಲಿ ಪರಸ್ಪರ ಜಗಳ ಬೇಡ. ನಾವು ಒಬ್ಬರು ಒಬ್ಬರಿಗಾಗಿ ಪ್ರಾರ್ಥಿಸೋಣ.

    ಬಿದ್ದಿರುವ ಒಬ್ಬ ಸೋದರನಿಗಾಗಿ ಕಾಳಜಿ

    "ನಮ್ಮನ್ನು ಬಿಡಿಸು" ಎನ್ನುವದರ ಇನ್ನೊಂದು ಅರ್ಥ, ನಾನು ನನ್ನ ಸೋದರನು ಪಾಪದಲ್ಲಿ ಬೀಳುವದನ್ನು ನೋಡಿದಾಗ, ಅದಕ್ಕಾಗಿ ನಾನು ಹರ್ಷಿಸದೇ ಇರುವದು. ನಾನು ಅವನನ್ನು ಇತರರ ಮುಂದೆ ಅವಮಾನ ಮಾಡುವದಿಲ್ಲ. ಪ್ರತಿಯಾಗಿ ನಾನು ಅವನಿಗಾಗಿ ದುಃಖಿಸಿ ಪ್ರಾರ್ಥಿಸುವೆನು, ಮತ್ತು ಅವನನ್ನು ಆತ್ಮಿಕವಾಗಿ ಹಿಂದಿನ ಸ್ಥಿತಿಗೆ ತರಲು ಪ್ರಯತ್ನಿಸುವೆನು.

    ಒಳ್ಳೇ ಸಮಾರ್ಯದವನ ಸಾಮ್ಯದಲ್ಲಿ, ಯಾಜಕ ಮತ್ತು ಸಮಾರ್ಯದವನ ದೃಷ್ಟಿಕೋನಗಳು ಒಂದಕ್ಕೊಂದು ಸಂಪೂರ್ಣ ತದ್ವಿರುದ್ಧವಾಗಿದ್ದವು. ಬಿದ್ದಿದ್ದ ಮನುಷ್ಯನನ್ನು ನೋಡಿದ ಯಾಜಕನು ಬಹುಶಃ, "ನಾನು ಅವನಂತೆ ಬೀಳಲಿಲ್ಲ, ದೇವರಿಗೆ ಸ್ತೋತ್ರವಾಗಲಿ," ಎಂದು ತನ್ನೊಳಗೇ ಹೇಳಿಕೊಂಡು ಅಲ್ಲಿಂದ ಮುಂದೆ ಹೋಗಿರಬಹುದು (ಲೂಕ 10:30-37). ಕೆಲವು ಕ್ರೈಸ್ತ ವಿಶ್ವಾಸಿಗಳು ಇನ್ನೊಬ್ಬ ವಿಶ್ವಾಸಿ ಪಾಪದಲ್ಲಿ ಬಿದ್ದಾಗ ಹೀಗೆಯೇ ಮಾಡುವರು. ಅವರು ಇತರರಿಗೆ, "ನೋಡಿ, ಅವನು ಹೇಗೆ ಬಿದ್ದಿದ್ದಾನೆ," ಎಂದು ಹೇಳುವಾಗ, ಪರೋಕ್ಷವಾಗಿ ಸೂಚಿಸುವದು ಏನೆಂದರೆ, "ನೋಡಿ, ನಾನು ಆ ರೀತಿಯಾಗಿ ಬೀಳಲಿಲ್ಲ," ಎಂದು!

    ಆದರೆ ಆ ಒಳ್ಳೇ ಸಮಾರ್ಯದವನು ಏನು ಮಾಡಿದನು? ಅವನು ತನ್ನ ಸ್ವಂತ ಸುಯೋಗಕ್ಕಾಗಿ ದೇವರನ್ನು ಸ್ತೋತ್ರ ಮಾಡಲಿಲ್ಲ. ಅವನು ಬಿದ್ದಿದ್ದ ಆ ವ್ಯಕ್ತಿಯ ಬಳಿಗೆ ಹೋಗಿ, ಅವನನ್ನು ಮೇಲಕ್ಕೆತ್ತಿ, ಅವನು ಗುಣಹೊಂದಲು ನೆರವಾಗುವ ಜಾಗಕ್ಕೆ ಅವನನ್ನು ಕರೆದೊಯ್ದನು. ಯೇಸುವು ನಮಗೆ, "ಹೋಗು, ನೀನೂ ಅದರಂತೆ ಮಾಡು," ಎನ್ನುತ್ತಾರೆ (ಲೂಕ 10:37).

    ನೀವು ಒಬ್ಬ ಕ್ರೈಸ್ತ ಸಹೋದರನಲ್ಲಿ ಇರುವ ಒಂದು ಬಲಹೀನತೆಯನ್ನು ಅಥವಾ ಅವನು ಯಾವುದೋ ವಿಷಯದಲ್ಲಿ ಬಿದ್ದಿರುವದನ್ನು ನೋಡಿ ಹೀಗೆ ಮಾಡಿದ್ದೀರಾ? ನೀವು ಪ್ರಾರ್ಥನೆಯ ಮೂಲಕ ಅವನನ್ನು ಮೇಲಕ್ಕೆ ಎತ್ತಿ, ಗುಣಹೊಂದಲಿಕ್ಕಾಗಿ ಅವನನ್ನು ಯೇಸುವಿನ ಬಳಿಗೆ ತಂದಿರುವಿರಾ? ನೀವು ದೇವರಲ್ಲಿ ಕೇಂದ್ರಿಕರಿಸಲ್ಪಟ್ಟಿರುವಿರೋ, ಇಲ್ಲವೋ, ಎನ್ನುವುದಕ್ಕೆ ಒಂದು ಉತ್ತಮ ಪರೀಕ್ಷೆ ಇದು.

    ನಾವು ಇತರರಿಗಿಂತ ಹೆಚ್ಚು ಆತ್ಮಿಕರಾಗಿ ಕಾಣಿಸಬೇಕು ಎನ್ನುವ ಸ್ವಾರ್ಥದ ಹಂಬಲದಿಂದಾಗಿ, ಬೇರೊಬ್ಬನು ಪಾಪಕ್ಕೆ ಸಿಲುಕಿದಾಗ ನಮಗೆ ಅವನ ಬಗ್ಗೆ ಕಾಳಜಿ ಇರುವದಿಲ್ಲ. ಒಂದು ದುಷ್ಟ, ಪೈಶಾಚಿಕ ಆತ್ಮವು ನಾವು ಇತರರಿಗಿಂತ ಶ್ರೇಷ್ಠರೆಂದು ತೋರಿಸಿಕೊಳ್ಳಲು ನಮ್ಮನ್ನು ಉತ್ತೇಜಿಸುತ್ತದೆ. ನಾವು, "ತಂದೆಯೇ, ನಮ್ಮನ್ನು ಕೇಡಿನಿಂದ ಬಿಡಿಸಿ," ಎಂದು ಪ್ರಾರ್ಥಿಸಿದ ನಂತರ, ಆತ್ಮಿಕವಾಗಿ ಬೇರೆಯವರಿಗಿಂತ ನಾವು ಶ್ರೇಷ್ಠರೆಂದು ತೋರಿಸಿಕೊಳ್ಳುವ ಆಸೆ ಇರಲಾರದು.

    ನಾವು ಕ್ರಿಸ್ತನಲ್ಲಿ ಒಂದು ದೇಹವಾಗಿದ್ದೇವೆ. ನನ್ನ ಎಡಗೈಗೆ ಗಾಯವಾದರೆ, ಆ ಗಾಯವನ್ನು ಗುಣಪಡಿಸಲು ನನ್ನ ಬಲಗೈಯು ಒಡನೆಯೇ ಸಹಾಯ ಮಾಡಲು ಸಿದ್ಧವಾಗುತ್ತದೆ. ನನ್ನ ಬಲಗೈ ಮಾತ್ರವೇ ಅಲ್ಲ, ನನ್ನ ದೇಹದ ಎಲ್ಲಾ ಅಂಗಗಳೂ ಕೂಡಲೇ ಎಚ್ಚತ್ತು, ಆ ಗಾಯಕ್ಕೆ ಉಪಶಮನವನ್ನು ನೀಡುವವು. ಕ್ರಿಸ್ತನ ದೇಹದಲ್ಲಿಯೂ ಹಾಗೆಯೇ ಆಗಬೇಕು.

    ಎರಡು ಅತಿ ಶ್ರೇಷ್ಠ ಆಜ್ಞೆಗಳು

    ಮೋಶೆಯು ಸೀನಾಯಿ ಬೆಟ್ಟದಿಂದ ಆಜ್ಞಾಶಾಸನಗಳ ಎರಡು ಕಲ್ಲಿನ ಫಲಕಗಳೊಂದಿಗೆ ಇಳಿದು ಬಂದನು. ಒಂದರಲ್ಲಿ ದೇವರೊಂದಿಗೆ ಮನುಷ್ಯನ ಸಂಬಂಧದ ಕುರಿತಾದ ದಶಾಜ್ಞೆಗಳಲ್ಲಿ ಮೊದಲ ನಾಲ್ಕು ಬರೆಯಲ್ಪಟ್ಟಿದ್ದವು. ಇನ್ನೊಂದರಲ್ಲಿ ಮನುಷ್ಯನ ಸಂಗಡಿಗರೊಂದಿಗೆ ಅವನ ಸಂಬಂಧದ ಕುರಿತಾದ ಉಳಿದ ಆರು ಆಜ್ಞೆಗಳು ಬರೆಯಲ್ಪಟ್ಟಿದ್ದವು.

    ಇವೆರಡು ಫಲಕಗಳ ಸಾರಾಂಶವನ್ನು ಎರಡು ಆಜ್ಞೆಗಳು ವಿವರಿಸುತ್ತವೆ ಎಂದು ಕರ್ತನಾದ ಯೇಸುವು ಹೇಳಿದರು. ಮೊದಲನೆಯದಾಗಿ, "ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ, ನಿನ್ನ ಪೂರ್ಣ ಪ್ರಾಣದಿಂದಲೂ, ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು;" ಮತ್ತು ಎರಡನೆಯದಾಗಿ, "ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು" (ಮತ್ತಾಯ 22:37-39).

    ಯೇಸುವು ತಾನು ಕಲಿಸಿದ ಪ್ರಾರ್ಥನೆಯಲ್ಲೂ ಸಹ ಇವೆರಡು ಸಂಗತಿಗಳನ್ನು ಒತ್ತಿಹೇಳಿದರು. ಅಲ್ಲಿನ ಮೊದಲ ಮೂರು ಕೋರಿಕೆಗಳು ಮೊದಲ ಆಜ್ಞೆಗೆ ಸಂಬಂಧಿಸಿದವು. ಹಾಗೆಯೇ ಮುಂದಿನ ಮೂರು ಕೋರಿಕೆಗಳು ಎರಡನೆಯ ಆಜ್ಞೆಗೆ ಸಂಬಂಧಪಟ್ಟಿದ್ದು, ಯೇಸುವು ಅವುಗಳನ್ನು ತನ್ನ ಶಿಷ್ಯರಿಗೆ ಹೊಸ ಆಜ್ಞೆಯ ರೂಪದಲ್ಲಿ ಹೀಗೆ ವಿವರಿಸಿದರು, "ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸ ಬೇಕು," (ಯೋಹಾ 13:34)

    .

    ಯೇಸುವಿನ ಒಬ್ಬ ನಿಜವಾದ ಶಿಷ್ಯನು ಎಲ್ಲಾ ವೇಳೆಯಲ್ಲೂ, ಅಂದರೆ ತಾನು ಎಚ್ಚರವಾಗಿ ಇರುವ ಸ್ಥಿತಿಯಲ್ಲಿ ಮತ್ತು ಗಮನ ಕೊಡದಿರುವ ಸ್ಥಿತಿಯಲ್ಲಿಯೂ ಸಹಾ, ದೇವರನ್ನು ತನ್ನ ಜೀವಿತದ ನಿಜವಾದ ಕೇಂದ್ರವನ್ನಾಗಿ - ತನ್ನ ಪ್ರತೀ ಆಸೆ ದೇವರ ಇಚ್ಛೆಗೆ ಸಂಪೂರ್ಣವಾಗಿ ಹೊಂದಿರುವಂತೆ; ಮತ್ತು ಯಾವುದೇ ಆಸೆ, ಗುರಿ, ಭಾವನೆಗಳು ತನಗಾಗಿರುವ ದೇವರ ಚಿತ್ತವನ್ನು ಮೀರದಂತೆ - ಇರಿಸಲು ಪ್ರಯತ್ನಿಸುವನು. ಅದರ ಜೊತೆಗೆ, ಯೇಸುವು ತನ್ನನ್ನು ಪ್ರೀತಿಸಿದಂತೆ, ತನ್ನ ಸಹೋದರರನ್ನು ಸಂಪೂರ್ಣವಾಗಿ ಪ್ರೀತಿಸಲು ಪ್ರಯತ್ನಿಸುವನು.

    ಹಾಗಿದ್ದರೂ, ಅವನು ಈ ಎರಡು ದೆಸೆಗಳಲ್ಲಿ ತನ್ನ ಮನೋಭಾವವು ಸಾಕಷ್ಟು ಪರಿಪೂರ್ಣವಾಗಿಲ್ಲ ಎನ್ನುವದನ್ನು ಒಂದು ಕ್ಷಣವೂ ಮರೆಯುವದಿಲ್ಲ. ಆದರೆ ಅವನು ನಿರಂತರವಾಗಿ ಆ ಗುರಿಯ ಕಡೆಗೆ ಸಾಗುತ್ತಾ, ಅದಕ್ಕಾಗಿ ಎಷ್ಟೇ ಕಷ್ಟ-ನಷ್ಟಗಳನ್ನಾದರೂ ಸಹಿಸಲು ಸದಾ ಸಿದ್ಧನಿರುತ್ತಾನೆ.

    ನಮ್ಮ ಸಹೋದರರನ್ನು ಪ್ರೀತಿಸುವದು ಎಂದರೆ ಅವರ ಬಗ್ಗೆ ಚಿಂತಿಸುವುದು. ಈ ಲೋಕದ ಎಲ್ಲರ ಬಗ್ಗೆ ಚಿಂತಿಸಲು ನಮ್ಮಿಂದ ಆಗದು. ದೇವರೊಬ್ಬರೇ ಆ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ನಾವು ನಮ್ಮ ಸಹ-ವಿಶ್ವಾಸಿಗಳಿಗಾಗಿ ಆದಷ್ಟು ಹೆಚ್ಚಿನ ಕಾಳಜಿಯನ್ನು ಹೊಂದಿರಬೇಕು; ಅದಲ್ಲದೆ ಈ ಕಾಳಜಿ ಬೆಳೆಯುತ್ತಾ ಹೋಗಬೇಕು.

    ನಾವು ಆರಂಭದಲ್ಲಿ ಹೀಗೆ ಇರುವದಿಲ್ಲ. ನಮ್ಮ ಮೊದಲ ಹೆಜ್ಜೆ, ನಮ್ಮನ್ನು ಯೇಸುವು ಪ್ರೀತಿಸಿದ ಮೇರೆಗೆ ಮನೆಯಲ್ಲಿ ನಮ್ಮ ಕುಟುಂಬದವರನ್ನು ಪ್ರೀತಿಸುವದು. ಆದರೆ ನಾವು ಅಷ್ಟಕ್ಕೇ ನಿಲ್ಲಿಸುವದಿಲ್ಲ. ನಾವು ಮುಂದುವರಿದು, ಯೇಸುವು ನಮ್ಮನ್ನು ಪ್ರೀತಿಸಿದ ಮೇರೆಗೆ ದೇವರ ಕುಟುಂಬದ ನಮ್ಮ ಸಹೋದರ ಸಹೋದರಿಯರನ್ನೂ ಸಹ ಪ್ರೀತಿಸಲು ಪ್ರಯತ್ನಿಸುತ್ತೇವೆ.

    ಪರಿಪೂರ್ಣತೆಯೇ ಈ ಸಾಧನೆಯ ಗುರಿ. ಆದರೆ ನಮ್ಮಲ್ಲಿ ಅದನ್ನು ಸಾಧಿಸುವ ದೃಢಚಿತ್ತ ಇರಬೇಕು. ಆ ಹಾದಿಯಲ್ಲಿ ಸಾಗುತ್ತಿದ್ದ ಪೌಲನು ಹೀಗೆ ಹೇಳಿದನು, "ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆ ಬೊಗ್ಗಿದವನಾಗಿ, ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ" (ಪಿಲಿಪ್ಪಿ 3:13,14).

    ದೇವರ ಮೇಲಣ ಕರೆ ಎಂದರೆ, ದೇವರಲ್ಲಿ ಸಂಪೂರ್ಣವಾಗಿ ಕೇಂದ್ರಿಕರಿಸಲ್ಪಟ್ಟು, ಎಲ್ಲಕ್ಕಿಂತ ಹೆಚ್ಚಾಗಿ ದೇವರನ್ನು ಪ್ರೀತಿಸುವದು ಮತ್ತು ಯೇಸುವು ನಮ್ಮನ್ನು ಪ್ರೀತಿಸಿದಂತೆ ಸಹ-ವಿಶ್ವಾಸಿಗಳನ್ನು ಪ್ರೀತಿಸಿ, ನಮ್ಮ ನೆರೆಯವರನ್ನು ನಮ್ಮಂತೆಯೇ ಪ್ರೀತಿಸುವದು.

    ಅಧ್ಯಾಯ 9
    ದೇವರಿಗೆ ಮಹಿಮೆ ಉಂಟಾಗಲಿ

    "ಯಾಕಂದರೆ, ರಾಜ್ಯವೂ ಬಲವೂ ಮಹಿಮೆಯೂ ಸದಾಕಾಲ ನಿನ್ನವೇ. ಆಮೆನ್."

    ಈ ಪ್ರಾರ್ಥನೆ ದೇವರಿಂದ ಆರಂಭವಾಗುತ್ತದೆ, "ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ, ನಿನ್ನ ರಾಜ್ಯವು ಬರಲಿ, ನಿನ್ನ ಚಿತ್ತವು ನೆರವೇರಲಿ," ಮತ್ತು ಇದು ದೇವರಿಂದ ಕೊನೆಗೊಳ್ಳುತ್ತದೆ, "ರಾಜ್ಯವೂ, ಬಲವೂ, ಮಹಿಮೆಯೂ ನಿನ್ನವೇ."

    "ನಾನು ಆದಿಯೂ ಅಂತವೂ ಆಗಿದ್ದೇನೆ," ಎಂದು ದೇವರು ತಮ್ಮ ವಾಕ್ಯದಲ್ಲಿ ತಿಳಿಸಿದ್ದಾರೆ (ಪ್ರಕ 1:8). ಯೇಸುವಿನ ಪ್ರತಿಯೊಬ್ಬ ಶಿಷ್ಯನ ಜೀವನದಲ್ಲಿ ದೇವರೇ ಎಲ್ಲಕ್ಕಿಂತ ಮೊದಲಿನ ಆಲೋಚನೆ ಮತ್ತು ಕಟ್ಟಕಡೆಯ ಆಲೋಚನೆ ಆಗಿರಬೇಕು. ದೇವರು ನಮ್ಮ ಬಾಳಿನ ಕೇಂದ್ರಬಿಂದುವೂ ಪರಿಧಿಯೂ ಆಗಿರಬೇಕು. ನಾವು ಅವರು ನಿಷ್ಕರ್ಷಿಸಿದ ಮೇರೆಯ ಒಳಗೆ ಇದ್ದುಕೊಂಡು, ಅವರಲ್ಲಿಯೇ ಜೀವಿಸುತ್ತೇವೆ, ಚಲಿಸುತ್ತೇವೆ. ಮತ್ತು ಆ ವೃತ್ತದೊಳಗೆ ಅವರನ್ನು ಯಾವಾಗಲೂ ಕಂಡುಕೊಳ್ಳುತ್ತೇವೆ (ಅ.ಕೃ. 17:26-28).

    ಈ ಪ್ರಾರ್ಥನೆಯ ಮೂರು ಅಂತಿಮ ಹೇಳಿಕೆಗಳನ್ನು, ಅರಣ್ಯದಲ್ಲಿ ನಮ್ಮ ಕರ್ತನಿಗೆ ಎದುರಾದ ಕೊನೆಯ ಮೂರು ಶೋಧನೆಗಳಿಗೆ ಹೋಲಿಸಬಹುದು.

    ರಾಜ್ಯ ದೇವರದು

    ಎಲ್ಲಕ್ಕಿಂತ ಮೊದಲು, "ರಾಜ್ಯವು ನಿನ್ನದೇ," ಎನ್ನುವ ಹೇಳಿಕೆ.

    ಇದನ್ನು ಮೂರನೆಯ ಶೋಧನೆಗೆ ಹೋಲಿಸಿದಲ್ಲಿ, ಅಲ್ಲಿ ಸೈತಾನನು ಯೇಸುವಿಗೆ ಲೋಕದ ಎಲ್ಲಾ ರಾಜ್ಯಗಳನ್ನು ತೋರಿಸಿ, "ನೀನು ನನಗೆ ಸಾಷ್ಟಾಂಗ ನಮಸ್ಕಾರ ಮಾಡಿ ಇವುಗಳನ್ನೆಲ್ಲಾ ತೆಗೆದುಕೋ," ಎಂದು ಹೇಳಿದನು. ಆದರೆ ಯೇಸುವು, "ಇಲ್ಲ, ರಾಜ್ಯ ತಂದೆಗೆ ಸೇರಿದ್ದು. ಅವರೇ ರಾಜರು," ಎಂದು ಹೇಳಿದನು. ಹೀಗೆ ಯೇಸುವು ಸೈತಾನನ ಕೈಯಿಂದ ರಾಜ್ಯವನ್ನು ಸ್ವೀಕರಿಸಲು ಒಪ್ಪಲಿಲ್ಲ.

    ಇದೇ ಕಾರಣಕ್ಕಾಗಿ ಯೇಸುವು ತಾನು ಮಾಂಸಧಾರಿಯಾಗಿದ್ದ ದಿನಗಳಲ್ಲಿ ರಾಜನಾಗಲು ಬಯಸಲಿಲ್ಲ. ಜನರು ಅವರನ್ನು ಅರಸನನ್ನಾಗಿ ಮಾಡಲು ಯೋಚಿಸಿದಾಗ, ಅವರು ಅಲ್ಲಿಂದ ಓಡಿಹೋದರು (ಯೋಹಾ 6:15). ಅವರು ಜನಸಾಮಾನ್ಯರ ಸೇವಕನಾಗಿ ಜೀವಿಸಿದರು.

    ನಾವು ಸಹ ರಾಜರಂತೆ ಇತರರ ಮೇಲೆ ಅಧಿಕಾರ ಚಲಾಯಿಸುವದನ್ನು ಅಪೇಕ್ಷಿಸಬಾರದೆಂದು ಇದು ನಮಗೆ ಕಲಿಸುತ್ತದೆ. ಒಬ್ಬ ನಾಯಕ ಅಥವಾ ಕ್ರೈಸ್ತ ಮುಖಂಡನಾಗಲು, ಅಥವಾ ಯಾವುದೋ ರೀತಿಯಲ್ಲಿ ತನ್ನ ಸಹ-ವಿಶ್ವಾಸಿಗಳಿಗಿಂತ ಮೇಲಿನ ಮಟ್ಟವನ್ನು ಬಯಸುವ ವ್ಯಕ್ತಿಯು, "ತಂದೆಯೇ, ರಾಜನಾಗಲು ನೀವೊಬ್ಬರೇ ಯೋಗ್ಯರು," ಎಂದು ಪ್ರಾರ್ಥಿಸಲು ಅಯೋಗ್ಯನು.

    ದೇವಸಭೆಯಲ್ಲಿ, ದೇವರೊಬ್ಬರೇ ರಾಜರಾಗಿರಬೇಕು. ನಾವು ಸೇವಕರಾಗಿರಬೇಕು, ರಾಜರುಗಳಲ್ಲ.

    ಬಲ ದೇವರದು

    ಮುಂದಿನ ಹೇಳಿಕೆ, "ಬಲವು ನಿನ್ನದೇ."

    ಸರ್ವಧಿಕಾರವು ದೇವರದೇ (ಕೀರ್ತ 62:11). ಅವರು ನಮಗೆ ಬಲವನ್ನು ತನ್ನ ಮಹಿಮೆಗಾಗಿ ಬಳಸಲು ಒಂದು ತಾತ್ಕಾಲಿಕ ಸಾಲದಂತೆ ಕೊಡುತ್ತಾರೆ; ಆದರೆ ಅದು ಅವರ ಸ್ವತ್ತು. ದೇವರು ನಮಗೆ ನಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಲು ಬಲವನ್ನು ಕೊಡುವದಿಲ್ಲ.

    ಇದನ್ನು ಯೇಸುವಿನ ಮೊದಲನೆಯ ಶೋಧನೆಗೆ ಹೋಲಿಸಿ ನೋಡಿ. ಸೈತಾನನು ಕರ್ತನಿಗೆ, "ಕಲ್ಲುಗಳನ್ನು ರೊಟ್ಟಿಯಾಗಿ ಬದಲಾಯಿಸಿ ನಿನ್ನ ಹಸಿವೆಯನ್ನು ತೀರಿಸುವ ಅಧಿಕಾರ ನಿನಗೆ ಇದೆ. ಈಗ ಅದನ್ನು ಉಪಯೋಗಿಸು," ಎಂದು ಹೇಳಿದನು. ಅದಕ್ಕೆ ಯೇಸುವು, "ಅದು ಸರಿಯಲ್ಲ. ಎಲ್ಲಾ ಬಲವು ತಂದೆಗೆ ಸೇರಿದೆ. ಮತ್ತು ಅವರು ನನಗೆ ತಿಳಿಸುವ ತನಕ ನಾನು ಅದನ್ನು ಬಳಸೆನು," ಎಂದು ಹೇಳಿದರು.

    ಈ ವಿಷಯದಲ್ಲಿ ಅನೇಕ ವಿಶ್ವಾಸಿಗಳು ನಿಷ್ಠಾವಂತರಾಗಿಲ್ಲ. ದೇವರು ಅವರಿಗೆ ಒಂದು ಆತ್ಮಿಕ ವರವನ್ನು ನೀಡಿದಾಗ, ಅವರು ಅದನ್ನು ತಮ್ಮ ಸ್ವಂತ ಉದ್ದೇಶಗಳಿಗಾಗಿ ಉಪಯೋಗಿಸಲು ಪ್ರಾರಂಭಿಸುವರು.

    ನಿಮ್ಮಲ್ಲಿ ಯಾವುದೋ ಒಂದು ಆತ್ಮಿಕ ಅಥವಾ ಸಹಜ ವರವಿದ್ದರೆ - ಪ್ರವಾದನೆಯ ವರ, ರೋಗಗಳನ್ನು ಗುಣಪಡಿಸುವ ವರ ಅಥವಾ ಸಂಗೀತದಲ್ಲಿ ಚಾತುರ್ಯ - ಸಾಮರ್ಥ್ಯ ದೇವರ ಸ್ವತ್ತು ಎಂಬುದನ್ನು ಮರೆಯದಿರಿ. ಅವರು ಯಾವತ್ತೂ ನಮ್ಮ ಹಿರಿಮೆಗಾಗಿ ನಮಗೆ ಯಾವುದೇ ವರದ ಬಲವನ್ನು ನೀಡುವದಿಲ್ಲ.

    ನಾವು ದೇವರ ವರಗಳನ್ನು ಸ್ವಾರ್ಥತೆಯಿಂದ ನಮ್ಮ ಸ್ವಂತ ಲಾಭಕ್ಕಾಗಿ ಬಳಸಿದರೆ, ಕೊನೆಯಲ್ಲಿ ದೇವಾಲಯದಿಂದ ಯೇಸುವು ವ್ಯಾಪಾರಿಗಳನ್ನು ಹೊರಕ್ಕೆ ಹಾಕಬೇಕಾಗಿ ಬಂದಂತೆ ನಮಗೂ ಸಹ ಆಗುವದು. ಅಲ್ಲಿ ಅವರು ಏನು ಮಾಡುತ್ತಿದ್ದರು? ಧರ್ಮದ ಹೆಸರಿನಲ್ಲಿ ಸ್ವಂತದ ಲಾಭ ಗಳಿಸುತ್ತಿದ್ದರು. "ನಾವು ದೇವರ ಸೇವೆ ಮಾಡುತ್ತಿದ್ದೇವೆ," ಎಂದು ಅವರು ಹೇಳುತ್ತಿದ್ದರು, ಆದರೆ ವಾಸ್ತವಿಕವಾಗಿ ಅವರು ತಮ್ಮ ಸ್ವಂತದ ಉದ್ದೇಶವನ್ನು ಸಾಧಿಸುತ್ತಿದ್ದರು.

    ಹೀಗೆಯೇ ಇಂದಿನ ದಿನದಲ್ಲಿ, ಯೇಸುವಿನ ಹೆಸರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುವ ಜನ - ಯೇಸು ಕ್ರಿಸ್ತನ ಹೆಸರಿನಲ್ಲಿ ಪ್ರಖ್ಯಾತಿ ಗಳಿಸುವವರು, ತಾವು ಹಾಗೂ ತಮ್ಮ ಪರಿವಾರದ ಸದಸ್ಯರಿಗಾಗಿ ಹಣ ಸಂಪಾದಿಸುವವರು ಇದ್ದಾರೆ.

    ಇದು ಒಂದು ಮಹಾ ದುಷ್ಟತನ, ನಾವು ಯೇಸು ಕ್ರಿಸ್ತನ ಹೆಸರಿನಲ್ಲಿ ಏನಾದರೂ ಮಾಡುವದು ಮತ್ತು ಅದರ ಮೂಲಕ ಸ್ವಲ್ಪ ಲಾಭವನ್ನು - ಅದು ಹಣ, ಕೀರ್ತಿ, ಗೌರವ, ಪದವಿ, ಸೌಕರ್ಯ ಅಥವಾ ಬೇರೇನಾದರೂ ಇರಬಹುದು - ನಮಗಾಗಿ ಗಳಿಸುವದು. ದೇವ ಭಕ್ತಿ ನಮ್ಮ ಲಾಭಸಾಧನ ಎಂದಿಗೂ ಆಗಬಾರದು (1 ತಿಮೊಥೆ 6:5). ಈ ದಿನಗಳಲ್ಲೂ, ಕ್ರಿಸ್ತ ಸಭೆಯ ದೇವ ಪ್ರವಾದಿಗಳು ಈ ವ್ಯಾಪಾರಿಗಳನ್ನು ದೇವಾಲಯದಿಂದ ಹೊರಕ್ಕೆ ತಳ್ಳುವದು ಅಗತ್ಯವಾಗಿದೆ.

    ಮಹಿಮೆಯು ದೇವರದು

    ಮೂರನೆಯದಾಗಿ, "ಮಹಿಮೆಯು ನಿನ್ನದೇ," ಎನ್ನುವ ಹೇಳಿಕೆ.

    ನಾವು ಈ ಆತ್ಮಿಕ ಪ್ರಾರ್ಥನೆಯನ್ನು ಯಥಾರ್ಥವಾಗಿ ಮಾಡಿ, ಮುಂದೆ ಈ ಆತ್ಮಿಕ ಜೀವನವನ್ನು ಸಾಧಿಸಿಕೊಂಡು, ಕರ್ತನಿಗಾಗಿ ಒಂದು ಅದ್ಭುತ ಸೇವೆಯನ್ನು ಪೂರೈಸಿದ ಮೇಲೆ, ಕೊನೆಯಲ್ಲಿ ಒಂದು ಮಾತನ್ನು ಮಾತ್ರ ಹೇಳಬಹುದು, "ನಾವು ಪ್ರಯೋಜನವಿಲ್ಲದ ಆಳುಗಳು, ಮಾಡಬೇಕಾದದ್ದನ್ನೇ ಮಾಡಿದ್ದೇವೆ," (ಲೂಕ 17:10).

    ನಾವು ಹೀಗೆ ಹೇಳುವದು ಹೊರತೋರಿಕೆಗಾಗಿ ಅಲ್ಲ. ಕೆಲವರು "ನನಗೆ ದೇವರು ಸಹಾಯ ಮಾಡಿದರು," ಎಂದು ಹೇಳಿಯೂ, ತಮ್ಮ ಹೃದಯಗಳಲ್ಲಿ ತಾವೇ ಪ್ರಶಂಸೆಯನ್ನು ಸ್ವೀಕರಿಸುವರು; ಆದರೆ ನಾವು ತೋರಿಕೆಯ ದೀನತೆಯಿಂದ ಹೀಗೆ ಹೇಳುವದಿಲ್ಲ.

    ’ಮಹಿಮೆಯು ನಿನ್ನದೇ’ ಎಂಬ ಈ ಹೇಳಿಕೆಯನ್ನು ಅಡವಿಯಲ್ಲಿ ಯೇಸುವು ಎದುರಿಸಿದ ಎರಡನೆಯ ಶೋಧನೆಗೆ ಹೋಲಿಸಿರಿ. ಸೈತಾನನು ಯೇಸುವಿಗೆ ದೇವಾಲಯದ ಶಿಖರದ ಮೇಲಿನಿಂದ ಹಾರಿ, ದೇವರ ಸುರಕ್ಷೆಯನ್ನು ಪಡೆದು, ಯಾವ ಹಾನಿಯೂ ಇಲ್ಲದೆ ಕೆಳಗೆ ತಲುಪಿ, ಜನರ ರಕ್ಷಕನೆಂಬ ಮಾನ್ಯತೆ ಮತ್ತು ಹೊಗಳಿಕೆಯನ್ನು ಪಡೆಯುವ ದುಷ್ಪ್ರೇರಣೆಯನ್ನು ಒಡ್ಡಿದನು. ಆದರೆ ಯೇಸುವು, "ಆಗದು. ಎಲ್ಲಾ ಮಹಿಮೆ ತಂದೆಯೊಬ್ಬರಿಗೇ ಸೇರಬೇಕು," ಎಂದು ಉತ್ತರಿಸಿದನು.

    ದೇವರು ತನ್ನ ಮಹಿಮೆಯನ್ನು ನಮ್ಮೊಂದಿಗೆ ಹಂಚಿಕೊಳ್ಳದ ಒಬ್ಬ ಅಸೂಯಾಪರ ದೇವನೇ (ಯೆಶಾ 42:8). ಪರಲೋಕದಲ್ಲಿ ನಿತ್ಯತ್ವದ ಉದ್ದಕ್ಕೂ, ಯಾವುದರಲ್ಲೂ ಮಾನವನಿಗೆ ಮಹಿಮೆ ಸಲ್ಲುವದಿಲ್ಲ. ಎಲ್ಲಾ ಮಹಿಮೆಯೂ ದೇವರದೇ ಆಗಿರುತ್ತದೆ.

    ಪರಲೋಕದ ಆತ್ಮವನ್ನು ಹೃದಯದಲ್ಲಿ ಹೊಂದಿರುವ ಮನುಷ್ಯನಲ್ಲಿ, ಈಗ ಇಂತಹ ಮನೋಭಾವ ಇರುತ್ತದೆ. ಅವನು ಹಿನ್ನೆಲೆಯಲ್ಲಿ ಅಗೋಚರ, ಅಜ್ಞಾತನಾಗಿದ್ದು, ಜನರ ಲಕ್ಷ್ಯ ತನ್ನೆಡೆಗೆ ಅಥವಾ ತನ್ನ ಸಾಧನೆಯ ಕಡೆಗೆ ಹೋಗದೆ, ದೇವರ ಕಡೆಗೆ ಸೆಳೆಯಲ್ಪಡಲಿ ಎಂದು ಬಯಸುತ್ತಾನೆ. ಹೀಗೆ ಎಲ್ಲಾ ಮಹಿಮೆ ದೇವರಿಗೇ ಸಲ್ಲುವದು.

    ಅಂತಹ ಮನುಷ್ಯನಿಗೆ ತಾನು ದೇವರಿಗಾಗಿ ಏನು ಮಾಡಿದ್ದೇನೆ, ಅಥವಾ ಆತ್ಮಿಕವಾಗಿ ತಾನು ಏನಾಗಿದ್ದೇನೆ, ಎನ್ನುವದರ ಪ್ರಜ್ಞೆ ಇರುವದಿಲ್ಲ. ಅವನಲ್ಲಿ ಇರುವ ಪ್ರತಿಯೊಂದು ಸಂಗತಿಯೂ ದೇವರಿಂದ ಬಂದಿರುವದು ಆಗಿದೆ; ಆದಕಾರಣ, ಅವನು ಯಾವುದರ ಬಗ್ಗೆಯೂ ಹಿಗ್ಗಿಕೊಳ್ಳುವದಕ್ಕೆ ಆಸ್ಪದವಿಲ್ಲ (1 ಕೊರಿ 4:7). ಮತ್ತು ಅವನು ಪೌಲನೊಂದಿಗೆ, "ನನಗಾದರೋ, ನಮ್ಮ ಕರ್ತನಾದ ಯೇಸುಕ್ರಿಸ್ತನ ಶಿಲುಬೆಯ ವಿಷಯದಲ್ಲಿ ಹೊರತು, ಹೆಚ್ಚಳ ಪಡುವದು ಬೇಡವೇ ಬೇಡ," (ಗಲಾ 6:14) ಎಂದು ಹೇಳುವನು.

    ಫಿಲಿ 3:13ರಲ್ಲಿ ಪೌಲನು, "ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ..." ಎಂದು ಹೇಳುತ್ತಾನೆ. ಪೌಲನ ಹಿಂದೆ ಯಾವ ಸಂಗತಿಗಳು ಇದ್ದವು? ಜಯಕರವಾದ ಒಂದು ಜೀವಿತ ಹಾಗೂ ಕರ್ತನಿಗಾಗಿ ಒಂದು ಮಹತ್ತರವಾದ ಸೇವೆಯೇ. ಅವನು ತನ್ನ ನೆನಪಿನಿಂದ ಇವನ್ನು ಅಳಿಸಿಬಿಟ್ಟಿದ್ದನು, ಏಕೆಂದರೆ ಅವನು ತನ್ನ ಜೀವಿತ ಮತ್ತು ಸೇವೆಗಾಗಿ ಎಲ್ಲಾ ಮಹಿಮೆಯನ್ನು ದೇವರಿಗೆ ಅರ್ಪಿಸಿದ್ದನು.

    ನ್ಯಾಯತೀರ್ಪಿನ ದಿನದಲ್ಲಿ ತನ್ನ ಮುಂದೆ ನಿಲ್ಲಲಿರುವ ಎರಡು ಪಂಗಡಗಳ ಜನರ ಬಗ್ಗೆ ಯೇಸು ಪ್ರಸ್ತಾಪಿಸಿದರು.

    ಒಂದು ಪಂಗಡದವರು, "ಕರ್ತನೇ ನಾವು ನಿನ್ನ ಹೆಸರಿನಲ್ಲಿ ಬೋಧಿಸಿದೆವು, ದೆವ್ವಗಳನ್ನು ಬಿಡಿಸಿದೆವು ಮತ್ತು ಅನೇಕ ಮಹತ್ಕಾರ್ಯಗಳನ್ನು ಮಾಡಿದೆವು," ಎಂದು ಹೇಳುವರು. ಅವರು ಕರ್ತನಿಗಾಗಿ ತಾವು ಮಾಡಿದ ಒಂದು ಕಾರ್ಯವನ್ನೂ ಮರೆತಿಲ್ಲ. ಮತ್ತು ಕರ್ತನು ಅವರಿಗೆ, "ಧರ್ಮವನ್ನು ಮೀರಿ ನಡೆಯುವವರೇ, ನನ್ನಿಂದ ತೊಲಗಿ ಹೋಗಿರಿ," ಎಂದು ಹೇಳುತ್ತಾನೆ (ಮತ್ತಾ 7:22,23).

    ಮತ್ತೊಂದು ಪಂಗಡಕ್ಕೆ ಕರ್ತನು, "ನಾನು ಹಸಿದಿದ್ದೆನು, ನನಗೆ ಊಟಕ್ಕೆ ಕೊಟ್ಟಿರಿ; ಬಟ್ಟೆಯಿಲ್ಲದವನಾಗಿ ಇದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನು ಮತ್ತು ಸೆರೆಮನೆಯಲ್ಲಿದ್ದೆನು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ," ಎನ್ನುವನು. ಆದರೆ ಅವರಿಗೆ ಇವೆಲ್ಲವನ್ನು ಮಾಡಿದ ನೆನಪಿಲ್ಲ! ಅವರ ಜವಾಬು, "ಕರ್ತನೇ, ನಾವು ಯಾವಾಗ ಹೀಗೆ ಮಾಡಿದೆವು? ನಮಗೆ ಅದರ ನೆನಪೇ ಆಗುತ್ತಿಲ್ಲ." ಇದು ಒಂದು ಅದ್ಭುತವಲ್ಲವೇ? ಕರ್ತನು ಅವರಿಗೆ, "ನೀವು ಧನ್ಯರು, ನಿಮಗೋಸ್ಕರ ಸಿದ್ಧಮಾಡಿದ ನನ್ನ ರಾಜ್ಯಕ್ಕೆ ಬಾಧ್ಯರಾಗಿರಿ," ಎಂದು ಹೇಳುವನು (ಮತ್ತಾ 25:31-40).

    ನೀತಿವಂತರು ಒಳ್ಳೆಯದನ್ನು ಮಾಡುತ್ತಾರೆ ಮತ್ತು ತಾವು ಅದನ್ನು ಮಾಡಿದೆವು ಎನ್ನುವದನ್ನು ಮರೆತು ಬಿಡುತ್ತಾರೆ! ಅನೀತಿವಂತರು ಹಾಗಲ್ಲ, ತಾವು ಮಾಡಿರುವ ಎಲ್ಲಾ ಒಳ್ಳೆಯ ಕಾರ್ಯಗಳ ಪಟ್ಟಿಯನ್ನು ಮನಸ್ಸಿನಲ್ಲಿ ಮೆಲುಕು ಹಾಕುತ್ತಾ ಇರುತ್ತಾರೆ.

    ನಾವು ಕರ್ತರಿಗಾಗಿ ಮತ್ತು ಇತರರಿಗಾಗಿ ಮಾಡಿರುವ ಎಲ್ಲಾ ಒಳ್ಳೆಯ ಕಾರ್ಯಗಳ ನೆನಪು ನಮಗೆ ಇದೆಯೇ? ಒಂದು ವೇಳೆ ಹಾಗಿದ್ದಲ್ಲಿ, ನಾವು ತಪ್ಪಾದ ಪಂಗಡಕ್ಕೆ ಸೇರಿದ್ದೇವೆ!

    ಇಡೀ ನಿತ್ಯತ್ವದಲ್ಲಿ

    ಇದರ ನಂತರ ಪ್ರಾರ್ಥನೆ ಹೀಗೆ ಹೇಳುತ್ತದೆ, "ಎಂದೆಂದಿಗೂ" - ಕೆಲವು ವರ್ಷಗಳಲ್ಲ, ಆದರೆ ಸದಾಕಾಲ.

    ನಾವು ನಿತ್ಯತ್ವದಲ್ಲಿ ಇದನ್ನೇ ಮಾಡುವದು - ದೇವರಿಗೆ ಸ್ತೋತ್ರ ಸಲ್ಲಿಸುವದು ಮತ್ತು ಅವರ ಹೆಸರಿಗೆ ಸಲ್ಲಬೇಕಾದ ಮಹಿಮೆಯನ್ನು ಸಲ್ಲಿಸುವದು. ಹಾಗಾಗಿ ನಮ್ಮ ಪ್ರತಿಯೊಂದು ಪ್ರಾರ್ಥನೆಯನ್ನು ಕೊನೆಗೊಳಿಸಲು ಒಂದು ಅದ್ಭುತ ವಿಧಾನ ಇದಾಗಿದೆ - ಯಾವುದೇ ಮನ್ನಣೆ ನಮಗೆ ಸೇರದಂತೆ, ದೇವರಿಗೆ ಎಲ್ಲಾ ಸ್ತೋತ್ರ, ಗೌರವ ಮತ್ತು ಮಹಿಮೆಯನ್ನು ಸಲ್ಲಿಸುವದು.

    ನಾವು ಜನರ ಗಮನವನ್ನು ಯಾವಾಗಲೂ ನಮ್ಮಿಂದ ದೂರ, ದೇವರ ಕಡೆಗೆ ತಿರುಗಿಸಲು ಪ್ರಯತ್ನಿಸಬೇಕು. ನಾವು ಎಲ್ಲಾ ಸನ್ನಿವೇಷಗಳಲ್ಲಿ ಹಿನ್ನೆಲೆಯಲ್ಲಿ ಮರೆಯಾಗಿ ಇರುವ ಉದ್ದೇಶವನ್ನು ಇಟ್ಟುಕೊಳ್ಳಬೇಕು. ಆಗ ದೇವರು ತನ್ನ ಚಿತ್ತವನ್ನು ಇನ್ನೂ ಹೆಚ್ಚು ಫಲಪ್ರದವಾಗಿ - ನಮಗಾಗಿ, ನಮ್ಮೊಳಗೆ, ನಮ್ಮ ಮೂಲಕ - ಪೂರೈಸಲು ಸಾಧ್ಯವಾಗುತ್ತದೆ.

    ಹಾಗೆಯೇ ಆಗುವದು

    ಕೊನೆಯ ಮಾತು "ಆಮೆನ್" ಎಂದಾಗಿದೆ.

    ನಾವು ಈ ಅದ್ಭುತವಾದ ಪ್ರಾರ್ಥನೆಯ ಒಂದು ಪದವನ್ನೂ ಕಡೆಗಣಿಸಲು ಬಯಸುವದಿಲ್ಲ ಮತ್ತು ಅಂತ್ಯದಲ್ಲಿ "ಆಮೆನ್"ಅನ್ನು ಖಂಡಿತವಾಗಿ ಬಿಡುವದಿಲ್ಲ.

    "ಆಮೆನ್" ಎಂಬುದರ ಅರ್ಥವೇನು? ಇದು ಕ್ರೈಸ್ತರ ಧಾರ್ಮಿಕ ಶಬ್ದಗಳ ಪಟ್ಟಿಗೆ ಸೇರಿ, ಗಮನಕೊಡದೆ ಉಪಯೋಗಿಸಲ್ಪಡುವ ಒಂದು ಪದವಾಗಿದೆ ಎನ್ನುವದು ದೌರ್ಭಾಗ್ಯಕರ.

    ಆದರೆ ನೀವು ಪ್ರತೀ ಬಾರಿ "ಆಮೆನ್" ಎನ್ನುವಾಗ, ಅದರ ಅರ್ಥ ಏನೆಂದು ಯಾವಾಗಲಾದರೂ ಯೋಚಿಸಿದ್ದೀರಾ?

    ಆಮೆನ್ ಎಂದರೆ, "ಹಾಗೆಯೇ ಆಗುವದು." ಇದು ಆದಿ 15:6 ರಲ್ಲಿ "ಅಬ್ರಾಮನು ಯೆಹೋವನನ್ನು ನಂಬಿದನು," ಎನ್ನುವಾಗ ’ನಂಬು’ ಎನ್ನಲು ಬಳಸಲಾದ ಇಬ್ರಿಯ ಪದ. ಮಕ್ಕಳಿರದ ಅಬ್ರಾಮನಿಗೆ, ಲೆಕ್ಕಮಾಡಲು ಅಸಾಧ್ಯವಾದ ಆಕಾಶದ ನಕ್ಷತ್ರಗಳಷ್ಟು ಸಂತಾನ ಆಗುವದಾಗಿ ದೇವರು ಹೇಳಿದರು. ಮತ್ತು ಆ ಅಸಾಧ್ಯವಾದ ಮಾತಿಗೆ ಅಬ್ರಾಮನು, "ಆಮೆನ್. ಕರ್ತನೇ, ಹಾಗೆಯೇ ಆಗುವದು, ಏಕೆಂದರೆ ನೀವು ಹೇಳಿದ್ದೀರಿ," ಎಂದನು.

    ಅದೇ ’ಆಮೆನ್’ ಎಂಬುದರ ಅರ್ಥ. ಅದು ನಂಬಿಕೆಯನ್ನು ಭರವಸೆಯ ಮೂಲಕ ಸಾರುವದೇ ಆಗಿದೆ.

    ಬೇರೆ ಮಾತುಗಳಲ್ಲಿ, ನಮ್ಮ ಪ್ರಾರ್ಥನೆಯನ್ನು ನಾವು ಹೀಗೆ ಮುಕ್ತಾಯಗೊಳಿಸುತ್ತೇವೆ:

    "ತಂದೆಯೇ, ನನ್ನ ಎಲ್ಲಾ ಬೇಡಿಕೆಗಳು ಪೂರೈಸಲ್ಪಡುವವು ಎಂದು ನಾನು ನಂಬುತ್ತೇನೆ.

    ನಿಮ್ಮ ನಾಮವು ಪರಲೋಕದಲ್ಲಿ ಪರಿಶುದ್ಧವೆಂದು ಎಣಿಸಲ್ಪಡುವ ಪ್ರಕಾರ ಭೂಲೋಕದಲ್ಲಿಯೂ ಎಣಿಸಲ್ಪಡುವದು.

    ಪರಲೋಕದ ನಿಮ್ಮ ರಾಜ್ಯವು ಭೂಲೋಕಕ್ಕೆ ಬರುತ್ತದೆ. ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಲೋಕದಲ್ಲಿಯೂ ನೆರವೇರುವದು. ನೀವು ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸುವಿರಿ. ನೀವು ನಮ್ಮ ಪಾಪಗಳನ್ನು ಕ್ಷಮಿಸುವಿರಿ. ನೀವು ನಮ್ಮನ್ನು ಕ್ಷಮಿಸಿದಂತೆಯೇ ನಾವು ಇತರರನ್ನು ಕ್ಷಮಿಸುವಂತೆ ಮಾಡುವಿರಿ. ನೀವು ನಮಗೆ ಬಹಳ ಕಷ್ಟಕರವಾಗುವ ಶೋಧನೆಯೊಳಗೆ ನಮ್ಮನ್ನು ಸೇರಿಸುವದಿಲ್ಲ. ನೀವು ನಮ್ಮನ್ನು ಕೆಡುಕನಿಂದ ತಪ್ಪಿಸುವಿರಿ. ರಾಜ್ಯವೂ, ಬಲವೂ ಮತ್ತು ಮಹಿಮೆಯೂ ಸದಾಕಾಲ ನಿಮಗೇ ಸೇರುತ್ತವೆ. ಹಾಗೆಯೇ ಆಗಲಿ ತಂದೆಯೇ. ನನ್ನ ಪೂರ್ಣ ಹೃದಯದಿಂದ ಇದನ್ನು ನಂಬುವೆ." ಆಮೆನ್ ಮತ್ತು ಆಮೆನ್! *******************