ಲೈಂಗಿಕ ಅನುಭವ, ಪ್ರೀತಿ ಮತ್ತು ವಿವಾಹ! ಎಂತಹ ಮಹತ್ವಪೂರ್ಣ ವಿಷಯಗಳು! ಇವುಗಳಿಂದ ಪ್ರಭಾವಿತರಾಗದವರು ಯಾರೂ ಇಲ್ಲ. ಹಾಗಿದ್ದರೂ ಮಾನವಕುಲಕ್ಕೆ ದೇವರ ವರದಾನಗಳಾದ ಈ ಸಂಗತಿಗಳ ನಿಜವಾದ ಉದ್ದೇಶದ ಬಗ್ಗೆ ಎಷ್ಟೊಂದು ಅಜ್ಞಾನ ಎಲ್ಲೆಡೆ ಹರಡಿದೆ.
ಭಾರತ ದೇಶದಲ್ಲಿ, ಸಾಮಾನ್ಯವಾಗಿ ಈ ವಿಷಯಗಳ ಕುರಿತಾದ ತಿಳುವಳಿಕೆಯನ್ನು ಮತ್ತು ಬೋಧನೆಯನ್ನು ಪೋಷಕರು ತಮ್ಮ ಮಕ್ಕಳೊಂದಿಗೆ ಅಥವಾ ಸಭಾ-ಹಿರಿಯರು ತಾವು ನೋಡಿಕೊಳ್ಳುವ ಯುವಕ-ಯುವತಿಯರೊಂದಿಗೆ ಹಂಚಿಕೊಳ್ಳುವುದಿಲ್ಲ. ಇದರ ಪರಿಣಾಮವಾಗಿ, ಮಾಹಿತಿಯಿಲ್ಲದ ಯುವ ಜನರು "ಚರಂಡಿ"ಯಿಂದ ಇದರ ಬಗ್ಗೆ ವಿಕೃತವಾದ ಮಾಹಿತಿಯನ್ನು ಪಡೆಯುತ್ತಾರೆ. ಕ್ರೈಸ್ತಸಭೆಯು ಮೊದಲೇ ಈ ಯುವಜನರಿಗೆ ಒಂದು ಶುದ್ಧವಾದ ರೀತಿಯಲ್ಲಿ ಕಲಿಸಬೇಕಾಗಿದ್ದ ವಿಷಯವನ್ನು, ಲೋಕ ಮತ್ತು ಸೈತಾನನು ತಮಗೆ ಬೇಕಾದ ರೀತಿಯಲ್ಲಿ ಕಲಿಸಲು ಸದಾ ಸಿದ್ಧರಾಗಿದ್ದಾರೆ. ಈ ವಿಷಯಗಳಲ್ಲಿ ದೇವರ ವಾಕ್ಯದ ಬೋಧನೆಯನ್ನು ತಿಳಿಯದಿರುವ ಬಹಳಷ್ಟು ಯುವಜನರು, ಸೈತಾನನು ಈ ಕ್ಷೇತ್ರದಲ್ಲಿ ಮಾಡುವ ಚುರುಕಿನ ದಾಳಿಯನ್ನು ಎದುರಿಸುವುದು ಹೇಗೆಂದು ತಿಳಿಯದೆ ನಿಸ್ಸಹಾಯಕರಾಗಿದ್ದಾರೆ. ಈ ಪುಸ್ತಕವು ಈ ಕೊರತೆಯನ್ನು ನೀಗಿಸುವ ಒಂದು ಪ್ರಯತ್ನವಾಗಿದೆ. ಇದರಲ್ಲಿ ಲೈಂಗಿಕ ಅನುಭವ, ಪ್ರೀತಿ ಮತ್ತು ವಿವಾಹದ ಬಗ್ಗೆ ದೇವರ ದೃಷ್ಟಿಕೋನ ಏನೆಂದು ತೋರಿಸಿಕೊಡಲಾಗಿದೆ.
ದೇವರು ಸಂಪೂರ್ಣ ಯಥಾರ್ಥ ಪ್ರೀತಿಯನ್ನು ತನ್ನಲ್ಲಿ ಹೊಂದಿದ್ದಾರೆ ಮತ್ತು ಲೈಂಗಿಕತೆಯನ್ನು ಸೃಷ್ಟಿಸಿದವರು ಹಾಗೂ ವಿವಾಹವನ್ನು ಪ್ರತಿಷ್ಠಾಪಿಸಿದವರು ಅವರೇ ಆಗಿದ್ದಾರೆ. ಹಾಗಾಗಿ ಅವರು ಮಾತ್ರ ನಮಗೆ ಪ್ರೀತಿಯ ನಿಜವಾದ ಅರ್ಥವನ್ನು ವಿವರಿಸಬಲ್ಲರು, ಮತ್ತು ಲೈಂಗಿಕ ಅನುಭವ ಹಾಗೂ ವಿವಾಹದ ಅತ್ಯಂತ ಉತ್ತಮ ಉಪಯೋಗ ಮಾಡುವುದು ಹೇಗೆಂದು ತೋರಿಸಬಲ್ಲರು. ಈ ವಿಷಯದ ಬಗ್ಗೆ ದೇವರು ತನ್ನ ವಾಕ್ಯದಲ್ಲಿ ತಿಳಿಸುವಂತ ಸಂಗತಿಗಳು, ಈ ಲೋಕದ ಬೋಧನೆಗಳಿಗೆ ಹೆಚ್ಚಾಗಿ ವಿರುದ್ಧವಾಗಿ ಇರುವುದನ್ನು ನಾವು ಕಂಡುಕೊಳ್ಳುತ್ತೇವೆ. ಆದರೆ ದೇವರ ವಾಕ್ಯದ ಬೋಧನೆಯು ಒಂದು ದೊಡ್ಡ ಬಂಡೆಯಂತಿದೆ. ಇದರ ಮೇಲೆ ತನ್ನ ಜೀವನವನ್ನು ಕಟ್ಟುವವನು ಎಂದಿಗೂ ಬೀಳಲಾರನು. ಯಾವ ಬಿರುಗಾಳಿಯೂ ಅಥವಾ ಯಾವ ಭೂಕಂಪವೂ ಎಂದಿಗೂ ಆತನನ್ನು ಅಲುಗಾಡಿಸುವುದಿಲ್ಲ.
ಒಬ್ಬನು ಕೆಲವು ವಿಷಯಗಳ ಬಗ್ಗೆ ಸೈದ್ಧಾಂತಿಕವಾಗಿರಲು ಸಾಧ್ಯವಿಲ್ಲ. ನಾನು ಸೈದ್ಧಾಂತಿಕವಾಗಿ ಇರದೆ ಇರಲು ಬಯಸಿದ್ದೇನೆ. ಆದರೆ ಇನ್ನು ಕೆಲವು ಸಂಗತಿಗಳ ಬಗ್ಗೆ ನಾವು ದೃಢವಾಗಿ ನಿಲ್ಲಲೇಬೇಕಾಗುತ್ತದೆ. ಇಂತಹ ವಿಷಯಗಳ ಬಗ್ಗೆ ನಾನು ಸ್ಪಷ್ಟವಾಗಿ ಮಾತಾಡಿದ್ದೇನೆ.
ಈ ಪುಸ್ತಕದಲ್ಲಿ ಹಲವು ಸಂಗತಿಗಳ ಬಗ್ಗೆ ನೇರವಾಗಿ ಮಾತಾಡಿದ್ದೇನೆ. ಇದರಲ್ಲಿ ಕೆಲವು ಕಠಿಣವಾದ ಹೇಳಿಕೆಗಳು ಕೂಡ ಇವೆ. ಭಾರತದಲ್ಲಿ ಹೆಚ್ಚಿನ ಸೌವಾರ್ತಿಕ ಕ್ರೈಸ್ತರು, ಈ ವಿಷಯಗಳನ್ನು ಬಹಳಷ್ಟು ಸಮಯದಿಂದ ಕಡೆಗಣಿಸಿ ಮೌನವಾಗಿ ಇರುವುದನ್ನು ನಾನು ನೋಡಿದ್ದೇನೆ. ಕ್ರೈಸ್ತ ಮುಖಂಡರು ಈ ವಿಷಯಗಳ ಕುರಿತಾಗಿ ಧ್ವನಿಯೆತ್ತಿ ಮಾತಾಡಿದ್ದಿದ್ದರೆ, ಅನೇಕ ಜೀವಗಳು ಕೆಟ್ಟುಹೋಗಿ ನಾಶವಾಗುವುದನ್ನು ತಪ್ಪಿಸಬಹುದಾಗಿತ್ತು. ಈ ಕಾರಣಕ್ಕಾಗಿ, ಕೆಲವು ವಿಷಯಗಳ ಬಗ್ಗೆ ಕಠಿಣವಾಗಿ ಮಾತನಾಡಿರುವುದಕ್ಕಾಗಿ ನಾನು ಬೇಸರಿಸುವುದಿಲ್ಲ. ಲೈಂಗಿಕ ಕ್ಷೇತ್ರದಲ್ಲಿ ಅನೇಕ ಕ್ರೈಸ್ತರು ಸೈತಾನನ ಬಲೆಗೆ ಬೀಳುವುದನ್ನು ನಾನು ಕಂಡಿದ್ದೇನೆ. ಅನೇಕ ’ಕ್ರೈಸ್ತ" ವಿವಾಹಗಳು ದೇವರ ಯೋಜನೆಯನ್ನು ಪೂರೈಸದೆ, ಸೈತಾನನ ಯೋಜನೆಯನ್ನು ಪೂರೈಸಿದ್ದನ್ನು ಸಹ ನಾನು ಕಂಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ನಾನು ದೇವರ ಶಸ್ತ್ರಗಾರದಿಂದ ಮಾರಣಾಂತಿಕ (ಭಯಂಕರ) ಶಸ್ತ್ರಗಳನ್ನು ಆಯ್ದುಕೊಂಡು ಅವುಗಳನ್ನು ಪ್ರಯೋಗಿಸಲೇಬೇಕಾಗಿದೆ.
"ಹುಡುಗಿಯರಿಗಾಗಿ ಮಾತ್ರ" ಎಂಬ ಶಿರೋನಾಮೆಯನ್ನು ಹೊಂದಿರುವ ಆರನೇ ಅಧ್ಯಾಯವನ್ನು ನನ್ನ ಪತ್ನಿಯು ಬರೆದು ಕೊಟ್ಟದ್ದಕ್ಕಾಗಿ ನಾನು ಆಕೆಗೆ ಆಭಾರಿಯಾಗಿದ್ದೇನೆ.
ಈ ಪುಸ್ತಕವನ್ನು ಯುವಜನರು ಗಂಭೀರವಾಗಿ ಓದಿಕೊಳ್ಳಬೇಕೆಂದು ನಾನು ಅವರನ್ನು ಒತ್ತಾಯಿಸುತ್ತೇನೆ. ಪೂರ್ವಸಿದ್ಧತೆಯು ಅತ್ಯುತ್ತಮ ಸಿದ್ಧತೆಯಾಗಿದೆ. ರೋಗವನ್ನು ತಡೆಗಟ್ಟುವುದು ರೋಗ ನಿವಾರಣೆಗಿಂತ ಶ್ರೇಷ್ಠವಾದದ್ದು. ಈ ಪುಸ್ತಕದಲ್ಲಿ ತೋರಿಸಲಾಗಿರುವ ಸಂಗತಿಗಳನ್ನು ಗಮನವಿಟ್ಟು ಪಾಲಿಸುವುದರ ಮೂಲಕ, ಮುಂದೆ ಬರಲಿರುವ ಅನೇಕ ಮನೋವ್ಯಥೆಗಳಿಂದ ಮತ್ತು ವಿನಾಶದಿಂದ ನೀವು ಪಾರಾಗಲು ಸಾಧ್ಯವಿದೆ.
ನಾನು "ಅವನು" ಮತ್ತು "ಅವನ" ಎಂಬ ಸರ್ವನಾಮಗಳನ್ನು ಬಳಸಿರುವ ಅನೇಕ ಜಾಗಗಳಲ್ಲಿ, ನಾನು ಕೇವಲ ಪುರುಷರ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ನಾನು ಈ ಪದಗಳನ್ನು ಸಾಮಾನ್ಯ ಬಳಕೆಯ ಪ್ರಕಾರ ಮಾನವಕುಲಕ್ಕೆ ಅನ್ವಯಿಸುವಂತೆ ಬಳಸಿದ್ದೇನೆ - ಹಾಗಾಗಿ ಇದು ಸ್ತ್ರೀಯರಿಗೂ ಸಹ ಅನ್ವಯಿಸುತ್ತದೆ. ಈ ವಿಷಯವು ಓದುಗರಿಗೆ ಆಯಾ ಸಂದರ್ಭದಲ್ಲಿ ಸ್ಪಷ್ಟವಾಗುತ್ತದೆ.
ಈ ಪುಸ್ತಕವು ಅನೇಕರಿಗೆ ಲೈಂಗಿಕತೆ, ಪ್ರೀತಿ ಮತ್ತು ವಿವಾಹದ ಕುರಿತಾಗಿ ದೇವರ ಪರಿಪೂರ್ಣ ಚಿತ್ತವನ್ನು ಕಂಡುಕೊಳ್ಳಲು ಸಹಾಯ ಮಾಡಿ, ಅವರಿಗೆ ಆಶೀರ್ವಾದವನ್ನು ತರುತ್ತದೆಂದು ನಾನು ಪ್ರಾರ್ಥಿಸುತ್ತೇನೆ.
ಲೈಂಗಿಕತೆಯು ಸೃಷ್ಟಿಸಲಾದ ಎಲ್ಲಾ ಸಹಜ ಪ್ರವೃತ್ತಿಗಳಲ್ಲಿ ಅತ್ಯಂತ ಬಲವಾದುದಾಗಿದ್ದು ನಿಜವಾಗಿಯೂ ಸಿಡಿಮದ್ದಿನಂತಿದೆ! ದೇವರು ನೀಡಿದ ಈ ಅದ್ಭುತವಾದ ವರದಲ್ಲಿ ಎಷ್ಟೊಂದು ಆಶೀರ್ವಾದದ ಸಾಧ್ಯತೆ ಇದ್ದಾಗ್ಯೂ, ಅದರ ದುರುಪಯೋಗದಿಂದ ಎಷ್ಟೊಂದು ವಿನಾಶವಾಗಿದೆ.
ಪ್ರತಿಯೊಬ್ಬ ಪುರುಷನಲ್ಲಿ ಮತ್ತು ಸ್ತ್ರೀಯಲ್ಲಿ ಹುಟ್ಟಿನಿಂದ ಲೈಂಗಿಕ-ಪ್ರವೃತ್ತಿ ಮತ್ತು ಅದರ ಬಯಕೆಗಳು ಇರುತ್ತವೆ. ಈ ಸಹಜ ಪ್ರವೃತ್ತಿಗಳ ಬಲವು ಎಲ್ಲರಲ್ಲೂ ಒಂದೇ ಸಮನಾಗಿ ಇಲ್ಲದೇ ಇರಬಹುದು, ಆದರೆ ಇವುಗಳು ಎಲ್ಲಾ ಸಾಮಾನ್ಯ ಮನುಷ್ಯರ ಮೇಲೆ, ಅವರ ಹದಿಹರೆಯದ ಸಮಯದಿಂದ ಕಡಿಮೆ ಪಕ್ಷ 30 ವರ್ಷಗಳ ವರೆಗೆ ಬಲವಾದ ಹಿಡಿತವನ್ನು ಇರಿಸಿಕೊಳ್ಳುತ್ತವೆ. ಸಿಡಿಮದ್ದು ಒಳ್ಳೆಯ ಕಾರ್ಯಕ್ಕಾಗಿ ಮತ್ತು ಹಾನಿ ಮಾಡುವುದಕ್ಕಾಗಿ ಬಳಸುವಂತೆ, ಲೈಂಗಿಕತೆಯನ್ನು ಉತ್ತಮವಾಗಿ ಮತ್ತು ಹಾನಿಕಾರಕವಾಗಿ - ದೇವರ ಮಹಿಮೆಗಾಗಿ ಮತ್ತು ಪಿಶಾಚನ ಸೇವೆಗಾಗಿ - ಉಪಯೋಗಿಸಬಹುದು. ಸಿಡಿಮದ್ದಿನ ಒಳಗೆ ಯಾವುದೇ ಪಾಪಕರವಾದ ವಸ್ತು ಇರುವುದಿಲ್ಲ, ಆದರೆ ಅದು ಯಾವ ರೀತಿಯಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ಉಪಯೋಗವಾಯಿತು ಎನ್ನುವದರ ಮೇಲೆ ಅದರ ಪರಿಣಾಮವು ನಿರ್ಧರಿತವಾಗುತ್ತದೆ: ಲೈಂಗಿಕತೆಯೂ ಹಾಗೆಯೇ. ಇದನ್ನು ದೇವರ ವರವೆಂದು ಸ್ವೀಕರಿಸಿ, ದೇವರ ನಿರ್ದೇಶನದ ಪ್ರಕಾರ ಎಚ್ಚರಿಕೆಯಿಂದ ಉಪಯೋಗಿಸಿದರೆ, ಅದು ಮನುಷ್ಯನಿಗೆ ಅತ್ಯಂತ ಹೆಚ್ಚು ತೃಪ್ತಿಯನ್ನು ಒದಗಿಸುವ ಸಾಧನವಾಗಬಹುದು. ದುರುಪಯೋಗ ಮಾಡಿದರೆ, ಅದು ಆತನನ್ನು ನೀಚತನದ ಅತ್ಯಂತ ಕೆಳಮಟ್ಟಕ್ಕೆ ಒಯ್ಯಬಹುದು. ಒಬ್ಬರು ಹೇಳಿರುವಂತೆ, ಇದನ್ನು ನಿಜವಾಗಿ, "ಒಬ್ಬ ಅದ್ಭುತ ಸೇವಕ, ಆದರೆ ಭಯಂಕರವಾದ ಯಜಮಾನ" ಎಂದು ವರ್ಣಿಸಬಹುದು.
ಆಹಾರ ಮತ್ತು ವಿಶ್ರಾಂತಿಯ ಹಂಬಲದಂತೆ, ಲೈಂಗಿಕ ಇಚ್ಛೆಯು ಒಂದು ಸಾಮಾನ್ಯವಾದ ಬಯಕೆಯಾಗಿದೆ. ಆದರೆ ಈ ಬಯಕೆಗಳನ್ನು ಸೃಷ್ಟಿಸಿರುವ ದೇವರು, ಇವುಗಳನ್ನು ನ್ಯಾಯಬದ್ಧವಾಗಿ ತೃಪ್ತಿಗೊಳಿಸುವ ವಿಧಾನವನ್ನು ಸಹ ನಿಯಮಿಸಿದ್ದಾರೆ.
ವಿಕೃತವಾದ ದೃಷ್ಟಿಕೋನಗಳುದೇವರಿಂದ ಉಂಟುಮಾಡಲ್ಪಟ್ಟ ಸ್ವರೂಪದಲ್ಲಿ, ಲೈಂಗಿಕತೆಯು ಪವಿತ್ರವೂ ಮತ್ತು ಪರಿಶುದ್ಧವೂ ಆಗಿದೆ. ಈ ಮಾತಿನ ಸತ್ಯತೆಯನ್ನು ಯಾವುದು ರುಜುವಾತುಪಡಿಸುತ್ತದೆ ಎಂದರೆ, ಲೈಂಗಿಕತೆಯು ಮಾನವನು ಪಾಪದಲ್ಲಿ ಬೀಳುವುದಕ್ಕಿಂತ ಮೊದಲು ಸೃಷ್ಟಿಸಲ್ಪಟ್ಟಿತು ಮತ್ತು ಅದು ಸ್ವತಃ ದೇವರು "ಬಹು ಒಳ್ಳೆಯದು" ಎಂದು ಪರಿಗಣಿಸಿದ್ದ ಲೋಕದಲ್ಲಿ ಅಸ್ತಿತ್ವದಲ್ಲಿ ಇತ್ತು ಎಂಬುದು. ಆದರೆ ಮಾನವನು ಪಾಪದಲ್ಲಿ ಬಿದ್ದಾಗಿನಿಂದ, ಆತನ ಲೈಂಗಿಕ ದೃಷ್ಟಿಕೋನವು ವಿಕೃತಗೊಂಡಿದೆ ಮತ್ತು ಅವನು ಸ್ವತಃ ಲೈಂಗಿಕ ಆಸೆಗಳ ಗುಲಾಮನಾಗಿದ್ದಾನೆ. ಆದಾಮ ಮತ್ತು ಹವ್ವಳು ಪಾಪ ಮಾಡಿದ ಒಡನೆಯೇ, ಅವರಿಬ್ಬರಲ್ಲಿ ಲೈಂಗಿಕತೆಯ ಅರಿವು ಉಂಟಾಯಿತು ಮತ್ತು ಅವರು ತಮ್ಮ ಬೆತ್ತಲೆತನಕ್ಕಾಗಿ ನಾಚಿಕೊಂಡರು ಮತ್ತು ತಕ್ಷಣವೇ ತಮ್ಮ ದೇಹಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದರು. ನಾವು ಆ ಬೀಳುವಿಕೆಯ ದುರಂತ ಪರಿಣಾಮಗಳನ್ನು ಇನ್ನೂ ಕಟಾವು ಮಾಡುತ್ತಿರುವ ಲೋಕದಲ್ಲಿ ಜೀವಿಸುತ್ತಿದ್ದೇವೆ. ಇದರ ಫಲಿತಾಂಶವಾಗಿ, ಮನುಷ್ಯನ ಆಶೀರ್ವಾದಕ್ಕಾಗಿ ಇರಿಸಲ್ಪಟ್ಟಿದ್ದ ಲೈಂಗಿಕತೆಯು ಒಂದು ಹೊರೆಯಾಗಿ ಬದಲಾಗಿದೆ.
ಇಂದು "ಲೈಂಗಿಕತೆ" ಎಂಬ ಪದವು ಹೆಚ್ಚಿನ ಜನರ ಮನಸ್ಸಿನಲ್ಲಿ ಅಶುದ್ಧತೆಯೆಂಬ ಅರ್ಥವನ್ನು ಪಡೆದಿರುವುದಕ್ಕೆ ಕಾರಣ, ಮನುಷ್ಯನು ದೇವರಿಂದ ಕೊಡಲ್ಪಟ್ಟ ಈ ಕ್ರಿಯೆಯನ್ನು ಪದೇ ಪದೇ ದುರುಪಯೋಗಪಡಿಸಿರುವುದು. ದೇವರು ಯಾವುದನ್ನು ಶುದ್ಧವಾಗಿ, ಸುಂದರವಾಗಿ ಮತ್ತು ಪವಿತ್ರವಾಗಿ ಇರಿಸಲು ಉದ್ದೇಶಿಸಿದ್ದರೋ, ಆ ಲೈಂಗಿಕತೆಯ ಕುರಿತಾಗಿ ಇಂದು ಚಲನಚಿತ್ರಗಳು, ಜಾಹೀರಾತು ಲೋಕ ಮತ್ತು ಪುಸ್ತಕ-ಮಳಿಗೆಗಳಲ್ಲಿ ಮಾರಾಟವಾಗುವ ಬಹುತೇಕ ಕಳಪೆ ಸಾಹಿತ್ಯ ಹಾಗೂ ಪುಸ್ತಕಗಳು ಒಂದು ಸೊಟ್ಟಗಿನ ಮತ್ತು ಅಶ್ಲೀಲವಾದ ಪರಿಕಲ್ಪನೆಯನ್ನು ಮೂಡಿಸಿವೆ.
ಲೈಂಗಿಕತೆಯ ವಿಚಾರವಾಗಿ ನಮ್ಮ ಆಲೋಚನೆಗಳು ವಿಕೃತವಾಗಿವೆಯೆಂದು ಸಾಬೀತುಪಡಿಸಲು ಹೇರಳವಾದ ಸಾಕ್ಷ್ಯಾಧಾರಗಳಿವೆ. ಸಿ. ಎಸ್. ಲೂಯಿಸ್ ಎಂಬ ಆಂಗ್ಲ ಬರಹಗಾರರು ’ಕ್ರಿಸ್ಚಿಯನ್ ಬಿಹೇವಿಯರ್’ ('Christian Behaviour') ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ:
"ಅರೆ-ಬೆತ್ತಲೆ ದೇಹದ ಪ್ರದರ್ಶನವನ್ನು ನೋಡುವುದಕ್ಕೆ - ಅಂದರೆ, ಒಬ್ಬಳು ಹುಡುಗಿಯು ರಂಗಮಂಚದ ಮೇಲೆ ಬಂದು ತಾನು ಧರಿಸಿದ ಉಡುಪನ್ನು ಕಳಚುವುದನ್ನು ವೀಕ್ಷಿಸುವುದಕ್ಕೆ ('strip-tease') - ಹೆಚ್ಚಿನ ಸಂಖ್ಯೆಯ ಸಭಿಕರನ್ನು ನೀವು ಸುಲಭವಾಗಿ ಒಟ್ಟುಗೂಡಿಸಬಹುದು. ಈಗ ಈ ರೀತಿಯಾಗಿ ಕಲ್ಪಿಸಿಕೊಳ್ಳಿರಿ: ನೀವು ಯಾವುದೋ ಒಂದು ವಿದೇಶಕ್ಕೆ ಪ್ರವಾಸಕ್ಕಾಗಿ ಹೋದಾಗ, ಅಲ್ಲಿ ಜನರಿಂದ ತುಂಬಿರುವ ಒಂದು ಸಭಾಗೃಹದ ರಂಗಮಂಚದ ಮೇಲೆ, ಮುಚ್ಚಿಡಲಾದ ಒಂದು ತಟ್ಟೆಯನ್ನು ಮಾತ್ರ ಇಟ್ಟಿರುವುದು ಕಾಣಿಸುತ್ತದೆ. ಆ ತಟ್ಟೆಯ ಮುಚ್ಚಳವನ್ನು ನಿಧಾನವಾಗಿ ಎತ್ತುವಾಗ, ಮತ್ತು ಆ ತಟ್ಟೆಯಲ್ಲಿ ಒಂದು "ಕುರಿ ಮಾಂಸದ ಅಥವಾ ಬೇರೆ ಯಾವುದೇ ಮಾಂಸದ ತುಂಡು" ನಿಮ್ಮ ಕಣ್ಣಿಗೆ ಬೀಳುತ್ತಿದ್ದಂತೆ, ರಂಗಮಂಚದ ದೀಪಗಳನ್ನು ಆರಿಸಲಾಗುತ್ತದೆ. ಇದನ್ನು ನೀವು ನೋಡಿದರೆ, ಆ ದೇಶದ ಜನರ ಊಟದ ರುಚಿ ಯಾಕೋ ಸರಿಯಿಲ್ಲವೆಂದು ನಿಮಗೆ ಅನ್ನಿಸುವುದಿಲ್ಲವೇ? ಹೀಗೆಯೇ ಬೇರೊಂದು ಲೋಕದಲ್ಲಿ ಬೆಳೆದಿರುವಂತ ಯಾರಾದರೂ ನಮ್ಮನ್ನು ನೋಡಿ, ನಮ್ಮ ಲೈಂಗಿಕ ಮನೋಭಾವವು ವಕ್ರ ಮತ್ತು ವಿಲಕ್ಷಣವಾಗಿದೆಯೆಂದು ಯೋಚಿಸುವುದಿಲ್ಲವೇ?"
ಒಬ್ಬ ಕ್ರೈಸ್ತನು ಈ ವಿಕೃತವಾದ ಲೋಕದಲ್ಲಿ ದೇವರ ಬೆಳಕಾಗಿ ಪ್ರಜ್ವಲಿಸುವುದಕ್ಕಾಗಿ ಕರೆಯಲ್ಪಟ್ಟಿದ್ದಾನೆ. ಹಾಗಾಗಿ ಲೋಕದ ಕೀಳಾದ ದೃಷ್ಟಿಕೋನವು ಲೈಂಗಿಕತೆಯನ್ನು ಕೇವಲ ಒಂದು ದೈಹಿಕ ಕ್ರಿಯೆಯಾಗಿ ಮತ್ತು ಭೋಗದ ಸ್ವರೂಪವಾಗಿ ಪರಿಗಣಿಸುವುದನ್ನು ವಿರೋಧಿಸಿ ಅವನು ದೃಢವಾಗಿ ನಿಲ್ಲಬೇಕು. ಆತನು ತನ್ನ ಮನಸ್ಸನ್ನು ನವೀಕರಿಸುವುದಕ್ಕಾಗಿ ದೇವರಾತ್ಮನೊಂದಿಗೆ ಸಹಕರಿಸಿ, ಲೈಂಗಿಕತೆಯನ್ನು - ನಾಚಿಕೆಪಡಿಸುವ ಒಂದು ಪಾಪಕರ ಸಂಗತಿಯಂತೆ ಅಲ್ಲ, ಬದಲಾಗಿ, ದೇವರ ದೃಷ್ಟಿಯಿಂದ - ಪವಿತ್ರ ಮತ್ತು ವಾಸ್ತವಿಕವಾಗಿ ಬಹಳ ಸುಂದರವಾದ ಒಂದು ಸಂಗತಿಯಂತೆ ನೋಡಲು ಆರಂಭಿಸಬೇಕು.
ಅನೇಕ ಧರ್ಮಗಳು ಮತ್ತು ತತ್ವಶಾಸ್ತ್ರಗಳು ಲೈಂಗಿಕತೆಯ ವಿಚಾರವಾಗಿ ವಿಕೃತವಾದ ದೃಷ್ಟಿಕೋನಗಳನ್ನು ಇರಿಸಿಕೊಳ್ಳಲು ಕಾರಣವೇನೆಂದರೆ, ಆ ಧರ್ಮಗಳು ಮಾನವ ಶರೀರವನ್ನು ಆದಷ್ಟು ಬೇಗನೆ ತ್ಯಜಿಸಬೇಕಾದ ಒಂದು ಪೀಡೆ ಎಂಬುದಾಗಿ ದೃಷ್ಟಿಸುವುದರಿಂದ, ಅಥವಾ ಶರೀರವನ್ನು ಆರಾಧಿಸಿ, ಅದರ ಪ್ರತಿಯೊಂದು ಬಯಕೆಯನ್ನು ಸಂಕೋಚವಿಲ್ಲದೆ ಪೂರೈಸಬೇಕು ಎಂಬ ಇನ್ನೊಂದು ವಿಪರೀತ ಪರಿಮಿತಿಗೆ ಹೋಗಿರುವುದರಿಂದ.
ಕ್ರಿಸ್ತೀಯ ದೃಷ್ಟಿಕೋನ ಏನೆಂದರೆ, ದೇವರ ಸೃಷ್ಟಿಯಲ್ಲಿ ದೇಹಕ್ಕೆ ಆತ್ಮ ಮತ್ತು ಪ್ರಾಣಗಳಿಗಿಂತ ಕಡಿಮೆ ಪ್ರಾಮುಖ್ಯತೆ ಇದ್ದರೂ, ದೇಹವು ಅವುಗಳಂತೆ ಆ ಒಳ್ಳೆಯ ಸೃಷ್ಟಿಯ ಒಂದು ಭಾಗವಾಗಿದೆ. ಹಾಗಾಗಿ ದೇಹವು ದೇವರ ಯೋಜನೆಯಲ್ಲಿ ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿದೆ. ದೇಹವು ಪವಿತ್ರಾತ್ಮನ ಗರ್ಭಗುಡಿ ಆಗಿರುವುದರಿಂದ, ಒಬ್ಬ ಕ್ರೈಸ್ತನು ತನ್ನ ದೇಹದಲ್ಲಿ ದೇವರನ್ನು ಮಹಿಮೆಪಡಿಸಬೇಕೆಂದು ಸತ್ಯವೇದವು ಬೋಧಿಸುತ್ತದೆ (1 ಕೊರಿ. 6:13-20). ಆದುದರಿಂದ ನಾವು ನಮ್ಮ ದೇಹಗಳನ್ನು ದೇವರಿಗೆ ಒಂದು ಸಜೀವ ಯಜ್ಞವಾಗಿ ಅರ್ಪಿಸುವುದರ ಮೂಲಕ ದೇವರನ್ನು ಆರಾಧಿಸಬೇಕೆಂದು ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ (ರೋಮಾ. 12:1).
ದೇಹವು ಪಾಪಕ್ಕೆ ಮೂಲಕಾರಣವೆಂದು ಭಾವಿಸುವ ಜನರಿಗೆ, ಮಾರ್ಟಿನ್ ಲೂಥರ್‌ರವರು ನೆನಪಿಸಿದ್ದು ಏನೆಂದರೆ, ಕರ್ತನಾದ ಯೇಸುವು ಈ ಲೋಕಕ್ಕೆ ಶರೀರಧಾರಿಯಾಗಿ ಬಂದರು, ಆದರೆ ಪಾಪವನ್ನು ಮಾಡಲಿಲ್ಲ, ಹಾಗಿರುವಾಗ ಪಿಶಾಚನು ದೇಹವನ್ನು ಹೊಂದಿಲ್ಲ, ಆದರೆ ಆತನಲ್ಲಿ ಎಲ್ಲಾ ಪಾಪವು ತುಂಬಿದೆ. ಪಾಪದ ಮೂಲವು ದೇಹದಲ್ಲಿ ಇಲ್ಲ, ಆದರೆ ಮನುಷ್ಯನ ಹೃದಯದಲ್ಲಿದೆ. ದೇಹ ಮತ್ತು ಅದರ ಆಸೆಗಳನ್ನು ಕಿತ್ತು ಹಾಕುವುದರಿಂದ ಪಾಪದಿಂದ ಬಿಡುಗಡೆ ಸಿಗುವುದಿಲ್ಲ, ಆದರೆ ಹೃದಯದ ಬದಲಾವಣೆಯಿಂದ ಸಿಗುತ್ತದೆ. ದೇವರು ನಮ್ಮ ಲೈಂಗಿಕ ಬಯಕೆಗಳನ್ನು ತೆಗೆದುಹಾಕಲಿ ಎಂದು ಕೆಲವರು ಪ್ರಾರ್ಥಿಸುವ ಹಾಗೆ, ನಾವು ಪ್ರಾರ್ಥನೆ ಮಾಡಬಾರದು. ಹಾಗೆ ಮಾಡಿದರೆ ನಮ್ಮ ಪೌರುಷತ್ವವನ್ನು ಊನಗೊಳಿಸಿ, ದೇವರ ಆಲಯದ ಒಂದು ಭಾಗವನ್ನು ನಾಶಪಡಿಸಿದಂತೆ ಆಗುತ್ತದೆ. ನಾವು ಪರಿಪೂರ್ಣ ಮನುಷ್ಯರಾಗಿ, ಜಯದಲ್ಲಿ ಜೀವಿಸಬೇಕೆಂದು ದೇವರು ಬಯಸುತ್ತಾರೆ. ನಾವು ಒಲೆಯ ಬೆಂಕಿಯನ್ನು ಆರಿಸಬೇಕಿಲ್ಲ. ಆದರೆ ಆ ಒಲೆಯ ಬೆಂಕಿಯು ಇಡೀ ಮನೆಯನ್ನು ಸುಟ್ಟು ನಾಶಗೊಳಿಸದಂತೆ ಎಚ್ಚರಿಕೆ ವಹಿಸಬೇಕು.
ಲೈಂಗಿಕ ಕ್ಷೇತ್ರದಲ್ಲೂ ಸಹ ನಾವು ಶೋಧನೆಗೆ ಒಳಗಾಗುವುದನ್ನು ದೇವರು ಅನುಮತಿಸುವುದಕ್ಕೆ ಒಂದು ಕಾರಣವಿದೆ. ಅದೇ ಕಾರಣಕ್ಕಾಗಿ ಅವರು ಆದಾಮನು ಏದನ್ ತೋಟದಲ್ಲಿ ಶೋಧನೆಗೆ ಒಳಗಾಗುವುದನ್ನು ಅನುಮತಿಸಿದರು. ಆದಾಮನು ಮುಗ್ಧನಾಗಿದ್ದನು, ಆದರೆ ಅವನು ಪವಿತ್ರನಾಗಬೇಕೆಂದು ದೇವರು ಬಯಸಿದರು. ಪವಿತ್ರತೆಯು ಮುಗ್ಧತೆಗಿಂತ ಹೆಚ್ಚಿನದನ್ನು ಒಳಗೊಂಡಿದೆ. ಆದಾಮನು ಶೋಧನೆಯ ವಿರುದ್ಧ ನೈತಿಕ ಆಯ್ಕೆಯನ್ನು ಮಾಡಿ ಜಯಿಸಿದ್ದರೆ ಮಾತ್ರ ಪವಿತ್ರನಾಗುತ್ತಿದ್ದನು: ನಾವೂ ಸಹ ಹಾಗೆಯೇ.
ಅಶುದ್ಧವಾದ ಯೋಚನೆಗಳುಪ್ರತಿಯೊಬ್ಬ ಯೌವನಸ್ಥನು ಒಂದಲ್ಲ ಒಂದು ಸಮಯದಲ್ಲಿ ಅಶುದ್ಧವಾದ ಯೋಚನೆಗಳಿಂದ ಶೋಧಿಸಲ್ಪಡುತ್ತಾನೆ. ಲೈಂಗಿಕ ಬಯಕೆಯು ಪುರುಷರಲ್ಲಿ ಸ್ತ್ರೀಯರಿಗಿಂತ ಹೆಚ್ಚು ಪ್ರಬಲ ಮತ್ತು ಉದ್ರೇಕಕಾರಿ ಆಗಿರುವುದರಿಂದ, ಅವರು ಸ್ತ್ರೀಯರಿಗಿಂತ ಬಹಳ ಹೆಚ್ಚಾಗಿ ಈ ಸಮಸ್ಯೆಯನ್ನು ಎದುರಿಸುತ್ತಾರೆ.
ಮನುಷ್ಯನ ಹೃದಯದಿಂದ ಹೊರಡುವ ಸಂಗತಿಗಳನ್ನು ಯೇಸುವು ’ಮಾರ್ಕನು 7:21-22'ರಲ್ಲಿ ಪಟ್ಟಿ ಮಾಡಿದಾಗ, ಅವುಗಳಲ್ಲಿ ದುಷ್ಟ ಆಲೋಚನೆಯು ಮೊದಲನೆಯದಾಗಿತ್ತು. ಮನ-ಪರಿವರ್ತನೆ ಹೊಂದದಿರುವ ಎಲ್ಲಾ ಮನುಷ್ಯರ ಹೃದಯಗಳು ಸರಿಸಮನಾಗಿ ಕೆಟ್ಟದಾಗಿವೆ ಮತ್ತು ಅವರೆಲ್ಲರಲ್ಲಿ ಯೇಸುವು ಕೊಟ್ಟಂತ ಈ ವಿವರಣೆಯು ನಿಜವಾಗಿದೆ. ಪ್ರಾಮಾಣಿಕನಾದ ಮನುಷ್ಯ ಮತ್ತು ವ್ಯಭಿಚಾರಿ ಮನುಷ್ಯ ಇಬ್ಬರನ್ನೂ ಮನಸ್ಸಿನ ದುರಾಲೋಚನೆಗಳು ಒಂದೇ ರೀತಿ ಕಾಡುತ್ತವೆ - ಆದರೆ ಸೂಕ್ತ ಅವಕಾಶದ ಕೊರತೆ ಮತ್ತು ಸಮಾಜದ ಭಯ ಪ್ರಾಮಾಣಿಕ ವ್ಯಕ್ತಿಯನ್ನು ಶಾರೀರಿಕವಾಗಿ ವ್ಯಭಿಚಾರ ಮಾಡುವುದರಿಂದ ದೂರವಿಟ್ಟಿರಬಹುದು, ಅಷ್ಟೇ.
ಹೀಗಿರುವಾಗ, ನಾವು ಶೋಧನೆ ಮತ್ತು ಪಾಪದ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಅವಶ್ಯವಾಗಿದೆ. ಯೇಸುವೂ ಸಹ "ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು" (ಇಬ್ರಿ. 4:15). ಆದರೆ ಆತನು ಒಂದು ಸಲವಾದರೂ (ತನ್ನ ಮನಸ್ಸಿನಲ್ಲೂ ಸಹ) ಶೋಧನೆಗೆ ಶರಣಾಗಲಿಲ್ಲ ಮತ್ತು ಹಾಗಾಗಿ ಪಾಪ ಮಾಡಲಿಲ್ಲ. ನಾವು ಸಹ ನಮ್ಮ ಇಹಲೋಕದ ಜೀವಿತದ ಕೊನೆಯ ದಿನದವರೆಗೂ ಶೋಧಿಸಲ್ಪಡುತ್ತೇವೆ. ಆದರೆ ನಾವು ಪಾಪ ಮಾಡಬೇಕಿಲ್ಲ. ನಾವು ನಮ್ಮ ಮನಸ್ಸಿನಲ್ಲಿ ಕೆಟ್ಟ ದುರಾಶೆಗೆ ಜಾಗ ಕೊಟ್ಟಾಗ - ಅಂದರೆ ಮನಸ್ಸಿನಲ್ಲಿ ಹೊಳೆದ ಮೋಹದ ಆಲೋಚನೆಯನ್ನು ಸ್ವೀಕರಿಸಿದಾಗ ಮಾತ್ರ, ನಾವು ಪಾಪ ಮಾಡುತ್ತೇವೆ (ಯಾಕೋಬ. 1:15). ಮನಸ್ಸಿನಲ್ಲಿ ಹೊಳೆದ ಸಲಹೆಯನ್ನು ನಾವು ತಕ್ಷಣವೇ ತಿರಸ್ಕರಿಸಿದರೆ, ನಾವು ಪಾಪ ಮಾಡುವುದಿಲ್ಲ. ಹಳೆಯ ಧರ್ಮನಿಷ್ಠನು ಹೇಳಿದ ಮಾತು, "ನನ್ನ ತಲೆಯ ಮೇಲಿಂದ ಪಕ್ಷಿಯು ಹಾರಾಡುವುದನ್ನು ನಾನು ತಪ್ಪಿಸಲು ಆಗುವುದಿಲ್ಲ, ಆದರೆ ಅದು ನನ್ನ ತಲೆ ಕೂದಲಿನಲ್ಲಿ ಗೂಡು ಕಟ್ಟದಂತೆ ನಾನು ತಡೆಯಬಲ್ಲೆ". ಒಂದು ಕೆಟ್ಟ ಆಲೋಚನೆಯು ನಮ್ಮ ಬಳಿ ಬಂದಾಗ, ನಮ್ಮ ಮನಸ್ಸಿನಲ್ಲಿ ಅದನ್ನು ಒಂದು ಕ್ಷಣವಾದರೂ ರುಚಿಸಿ ನೋಡಿದರೆ, ನಾವು ಅದಕ್ಕೆ "ಗೂಡು ಕಟ್ಟಲು" ಅವಕಾಶ ಮಾಡಿಕೊಡುತ್ತೇವೆ ಮತ್ತು ಹೀಗೆ ಪಾಪ ಮಾಡುತ್ತೇವೆ.
ಮೋಹದ ಆಲೋಚನೆಗೆ ಒಂದು ಸಲ ಅವಕಾಶ ಸಿಕ್ಕಿದರೆ, ಅದು ಆ ವ್ಯಕ್ತಿಯನ್ನು ಹೆಚ್ಚು ಹೆಚ್ಚಾಗಿ ಗುಲಾಮನಾಗಿ ಮಾಡಿಕೊಳ್ಳುತ್ತದೆ. ಸಮಯ ಕಳೆದಂತೆ ಅದರಿಂದ ಬಿಡುಗಡೆ ಹೆಚ್ಚು ಹೆಚ್ಚು ಕಠಿಣವಾಗುತ್ತದೆ. ನಾವು ಎಷ್ಟು ಬೇಗನೆ ಬಿಡುಗಡೆಗಾಗಿ ಪ್ರಯತ್ನಿಸುತ್ತೇವೋ, ಅದು ಪ್ರಾಪ್ತವಾಗುವುದು ಅಷ್ಟೇ ಸುಲಭವಾಗುತ್ತದೆ. ದುಷ್ಟ ಆಲೋಚನೆಗಳ ಮೇಲೆ ಜಯವು (ಇತರ ಪಾಪಗಳ ಮೇಲಿನ ಜಯದ ಹಾಗೆ), ಯಥಾರ್ಥವಾಗಿ ಸೋಲಿನ ಅರಿಕೆ ಮಾಡಿ, ಬಿಡುಗಡೆಯನ್ನು ಬಹಳ ತೀವ್ರವಾಗಿ ಬಯಸಿ, ಕ್ರಿಸ್ತನೊಂದಿಗೆ ನಾವು ಸಾಯಬೇಕೆಂಬ ಸತ್ಯಾಂಶವನ್ನು ಒಪ್ಪಿಕೊಂಡು, ನಮ್ಮ ದೇಹ ಮತ್ತು ಮನಸ್ಸನ್ನು ಸಂಪೂರ್ಣವಾಗಿ ಕರ್ತನಾದ ಯೇಸುವಿಗೆ ಮೀಸಲಾಗಿ ಇಡುವುದರ ಮೂಲಕ ಸಿಗುತ್ತದೆ (ರೋಮಾ. 6:1-14).
ಇದಲ್ಲದೆ ನಾವು "ಪವಿತ್ರಾತ್ಮನಲ್ಲಿ ನಡೆದು," ಆತನೊಂದಿಗೆ ಸಹಕರಿಸಿ ನಮ್ಮ ಜೀವನವನ್ನು ಶಿಸ್ತಿಗೆ ಒಳಪಡಿಸುವುದಾದರೆ, ಆಗ ನಾವು ಸತತವಾಗಿ ಜಯವನ್ನು ಸವಿಯಬಹುದು (ಗಲಾ. 5:16-18). ನಾವು ನಮ್ಮ ಕಣ್ಣುಗಳನ್ನು ಮತ್ತು ಕಿವಿಗಳನ್ನು ಶಿಸ್ತಿಗೆ ಒಳಪಡಿಸದೇ ಹೋದರೆ (ಮೋಹದ ಯೋಚನೆಯ ವಿಷಯಗಳನ್ನು ಓದುವುದು ಮತ್ತು ನೋಡುವುದು ಮತ್ತು ಕೇಳುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು), ಆಗ ನಮ್ಮ ಆಲೋಚನೆಗಳನ್ನು ಹತೋಟಿಗೆ ತರಲು ಸಾಧ್ಯವಾಗುವುದಿಲ್ಲ (ಇದು ಮತ್ತಾ. 5:28-30ರ ನಿಜವಾದ ಅರ್ಥ). ಕಾಮದ ಆಲೋಚನೆಗಳಿಂದ ಬಿಡುಗಡೆ ಪಡೆಯಲು ದೈಹಿಕ ಶಿಸ್ತು ಅವಶ್ಯವಾಗಿದೆ. ಅತಿ ದೊಡ್ಡ ದೇವಭಕ್ತರೂ ಸಹ ತಮ್ಮ ಮನಸ್ಸಿನಲ್ಲಿ ಲೈಂಗಿಕ ಶೋಧನೆಗಳ ವಿರುದ್ಧ ಹೋರಾಡಬೇಕಾಗುತ್ತದೆಂದು ಒಪ್ಪಿಕೊಂಡಿದ್ದಾರೆ. ಅವರು ಜಯ ಗಳಿಸಲಿಕ್ಕಾಗಿ ತಮ್ಮ ದೇಹವನ್ನು "ಜಜ್ಜಿ ಸ್ವಾಧೀನಪಡಿಸಿಕೊಳ್ಳಬೇಕಾಯಿತು".
ಯೋಬನು ವಿವಾಹಿತನಾಗಿ ಹತ್ತು ಮಕ್ಕಳ ತಂದೆಯಾಗಿದ್ದರೂ ಸಹ, ತನ್ನ ಕಣ್ಣುಗಳನ್ನು ಹತೋಟಿಯಲ್ಲಿ ಇರಿಸಿಕೊಂಡರೆ ಮಾತ್ರ ಕಾಮುಕತೆಯ ಆಲೋಚನೆಗಳಿಂದ ದೂರ ಇರಬಹುದೆಂದು ಅರಿತಿದ್ದನು. ಅವನು "ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ. ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?" ಎಂದು ಹೇಳಿದನು (ಯೋಬ. 31:1). ಪುರುಷರಿಗೆ ಅತಿ ದೊಡ್ಡ ದುಷ್ಪ್ರೇರಣೆಗಳು ಕಣ್ಣುಗಳ ಮೂಲಕ ಬರುತ್ತವೆ. ಈ ವಿಷಯದಲ್ಲಿ ಅಜಾಗರೂಕತೆ ಮಾಡಿದರೆ ಮತ್ತು ಕಣ್ಣುಗಳ ಮೂಲಕ ಒಂದು ಅಶುದ್ಧ ಆಲೋಚನೆ ಅಥವಾ ಚಿತ್ರವು ಮನಸ್ಸನ್ನು ಪ್ರವೇಶಿಸಲು ಅವಕಾಶ ಕೊಟ್ಟರೆ, ಆಗ ಅಲ್ಲಿಂದ ಅದನ್ನು ಕಿತ್ತುಹಾಕಲು ಹೆಚ್ಚು ಕಡಿಮೆ ಅಸಾಧ್ಯವಾಗಿ ಪರಿಣಮಿಸುತ್ತದೆ.
ನಮ್ಮ ಜೀವಿತವನ್ನು ಶಿಸ್ತಿಗೆ ಒಳಪಡಿಸುವ ಒಂದು ವಿಧಾನವೇನೆಂದರೆ, ನಾವು ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೆ ಮತ್ತು ರಾತ್ರಿ ಮಲಗುವುದಕ್ಕೆ ಮೊದಲು, ನಮ್ಮನ್ನು ದೇವರಿಗೆ ಒಪ್ಪಿಸಿಕೊಳ್ಳುವ ನಿತ್ಯದ ಪ್ರತ್ಯೇಕ ಸಮಯವನ್ನು ಮೀಸಲಿಡುವ ಅಭ್ಯಾಸ ಬೆಳೆಸಿಕೊಳ್ಳುವುದು. ಇದಕ್ಕೆ ಬದಲಾಗಿ, ಬೆಳಗ್ಗೆ ಎಚ್ಚರವಾದರೂ ನಾವು ಹಾಸಿಗೆಯಲ್ಲಿ ಹೊರಳಾಡುತ್ತಿದ್ದರೆ, ಕೆಟ್ಟ ಯೋಚನೆಗಳು ನಮ್ಮ ಮನಸ್ಸಿನೊಳಗೆ ಪ್ರವಾಹದಂತೆ ಹರಿದು ಬರಲು ಬಾಗಿಲು ತೆರೆಯುತ್ತೇವೆ. ನಾವು ಪ್ರತಿ ದಿನ ನಮ್ಮ ಮನಸ್ಸನ್ನು ದೇವರ ವಾಕ್ಯದಿಂದ ತುಂಬಿಸಬೇಕು - ಏಕೆಂದರೆ ಮನಸ್ಸನ್ನು ದೇವರ ವಾಕ್ಯದಿಂದ ತುಂಬುವುದು ಕೆಟ್ಟ ಯೋಚನೆಗಳನ್ನು ವಿರೋಧಿಸುವ ಅತ್ಯುತ್ತಮ ರಕ್ಷಣಾ ಕವಚಗಳಲ್ಲಿ ಒಂದಾಗಿದೆ. ದಾವೀದನು ಹೀಗೆ ಹೇಳಿದನು, "ನಿನಗೆ ವಿರುದ್ಧವಾಗಿ ಪಾಪ ಮಾಡದಂತೆ ನನ್ನನ್ನು ತಡೆಯುವುದಕ್ಕಾಗಿ, ನಾನು ನಿನ್ನ ನುಡಿಗಳನ್ನು ಹೆಚ್ಚಾಗಿ ಧ್ಯಾನಿಸುತ್ತಾ, ಅವುಗಳನ್ನು ನನ್ನ ಹೃದಯದಲ್ಲಿ ಇರಿಸಿಕೊಂಡಿದ್ದೇನೆ"(ಕೀರ್ತ. 119:11 - Living Bible ಭಾಷಾಂತರ).
ಸತ್ಯವೇದವು ತಿಳಿಸುವ ಇನ್ನೊಂದು ಮಾತು,"ನಿಮಗೆ ದೇವರ ಮೆಚ್ಚುಗೆಯು ಅಮೂಲ್ಯವಾಗಿದ್ದರೆ, ಯಾವುದು ಪವಿತ್ರವಾದದ್ದು ಮತ್ತು ಸರಿಯಾದದ್ದು ಮತ್ತು ಪರಿಶುದ್ಧವಾದದ್ದು ಮತ್ತು ಮನೋಹರವಾದದ್ದು ಮತ್ತು ಒಳ್ಳೆಯದು, ಅವುಗಳ ಮೇಲೆ ನಿಮ್ಮ ಲಕ್ಷ್ಯವನ್ನು ಇರಿಸಿರಿ" (ಫಿಲಿ. 4:8 - JB Phillips ಭಾಷಾಂತರ).
ಭಾರತಕ್ಕೆ ಧರ್ಮಪ್ರಚಾರಕನಾಗಿ ಬಂದ ಶ್ರೇಷ್ಠ ಸೇವಕರಲ್ಲಿ ಒಬ್ಬನಾಗಿದ್ದ ’ಹೆನ್ರಿ ಮಾರ್ಟಿನ್’ ಎಂಬಾತನು, ದೇವವಾಕ್ಯದ ಈ ಆಜ್ಞೆಯ ಮೂಲಕ ತನಗೆ ಅಶುದ್ಧ ಆಲೋಚನೆಗಳ ವಿರುದ್ಧ ಹೋರಾಡುವುದರಲ್ಲಿ ಹೆಚ್ಚಿನ ಸಹಾಯ ಒದಗಿದ್ದು ಹೇಗೆಂದು ತನ್ನ ದಿನಚರಿಯಲ್ಲಿ ವಿವರಿಸಿದ್ದಾನೆ. ಯಾವಾಗಲಾದರೂ ಒಬ್ಬ ಯುವತಿಯ ಕುರಿತಾಗಿ ಕಾಮುಕತೆಯ ಆಲೋಚನೆ ಆತನ ಮನಸ್ಸನ್ನು ಪ್ರವೇಶಿಸಿದೊಡನೆ, "ಆಕೆಯ ಹೃದಯ ಮತ್ತು ಮನಸ್ಸು ಪರಿಶುದ್ಧಗೊಂಡು, ಆಕೆ ದೇವರ ಸೇವೆ ಮತ್ತು ಮಹಿಮೆಗಾಗಿ ಮೀಸಲಾಗಿಟ್ಟ ಒಂದು ಪವಿತ್ರಾತ್ಮ ಆಲಯವಾಗಲಿ", ಎಂದು ಆಕೆಗಾಗಿ ಆತನು ಪ್ರಾರ್ಥಿಸುತ್ತಿದ್ದನು. ಹೀಗೆ ಪ್ರಾರ್ಥಿಸಿದ ನಂತರ, ಆಕೆಯ ವಿಷಯವಾಗಿ ಯಾವುದೇ ಅಶುದ್ಧ ಆಲೋಚನೆಯನ್ನು ತನ್ನ ಮನಸ್ಸಿನಲ್ಲಿ ಇರಿಸಿಕೊಳ್ಳುವ ಧೈರ್ಯ ಆತನಿಗೆ ಇರುತ್ತಿರಲಿಲ್ಲ. ಮನಸ್ಸಿನ ಆಲೋಚನೆಗಳನ್ನು ಶುದ್ಧಗೊಳಿಸಲು ನಿಜವಾಗಿಯೂ ಒಂದು ಶ್ರೇಷ್ಠ ವಿಧಾನ ಇದಾಗಿದೆ.
ನಮ್ಮ ಸುತ್ತಮುತ್ತಲಿನ ಲೋಕದ ನೈತಿಕತೆಯು ಬಹಳ ಕೆಳಮಟ್ಟದಲ್ಲಿ ಇರುವಾಗ, ನಾವು ಹೊಲಸು ಆಲೋಚನೆಗಳಿಂದ ಸಂಪೂರ್ಣ ಬಿಡುಗಡೆ ಹೊಂದುವದು ಹೆಚ್ಚು ಕಡಿಮೆ ಅಸಾಧ್ಯವಾದ ಮಾತು, ಎಂದು ಕೆಲವರು ಭಾವಿಸಬಹುದು. ಆದರೆ ಈ ಪರಿಸ್ಥಿತಿ ಕೇವಲ ಇಪ್ಪತ್ತೊಂದನೇ ಶತಮಾನದ ವಿಶೇಷತೆಯಲ್ಲ. ಮೊದಲನೇ ಶತಮಾನದ ಕೊರಿಂಥ ಪಟ್ಟಣವು ಜಾರತ್ವ ಹಾಗೂ ಅನೀತಿಯ ಕೇಂದ್ರವಾಗಿತ್ತು, ಹಾಗಿದ್ದರೂ ದೇವರಾತ್ಮನು ಆ ಪಟ್ಟಣದ ಕ್ರೈಸ್ತರು ತಮ್ಮ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿಯುವಂತೆ ಒತ್ತಾಯಿಸಿದನು (2 ಕೊರಿ. 10:5). ಈ ದಿನವೂ ಸಹ ಆತನು ನಮಗೆ ಇದನ್ನೇ ಹೇಳುತ್ತಾನೆ. ನಿತ್ಯಜೀವದ ದಾರಿಯು ಇಕ್ಕಟ್ಟಾಗಿರಬಹುದು ಮತ್ತು ಬಿಕ್ಕಟ್ಟುಗಳಿಂದ ಕೂಡಿರಬಹುದು. ಆದರೆ ಪವಿತ್ರಾತ್ಮನು ನಮಗೆ ಆ ದಾರಿಯಲ್ಲಿ ನಡೆಯಲು ಬೇಕಾಗುವ ಬಲವನ್ನು ಕೊಡಬಲ್ಲನು.
ನಮ್ಮ ಜೀವನವನ್ನು ಈ ರೀತಿಯ ಶಿಸ್ತಿಗೆ ಒಳಪಡಿಸುವುದಕ್ಕೆ, ನಾವು ವಿರುದ್ಧ ಲಿಂಗದವರ ಬಗ್ಗೆ ಜಿಗುಪ್ಸೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿಲ್ಲ. ಎಂದಿಗೂ ಹಾಗೆ ಮಾಡಕೂಡದು! ವಿರುದ್ಧ ಲಿಂಗವು ನಮಗೆ ಆಕರ್ಷಕವಾಗಿ ಕಾಣಿಸುವಂತದ್ದು ತಾನಾಗಿಯೇ ಪಾಪವೆನಿಸುವದಿಲ್ಲ. ಇದು ಸಂಪೂರ್ಣವಾಗಿ ಸ್ವಾಭಾವಿಕವಾಗಿದೆ. ದೇವರ ಸೃಷ್ಟಿಯ ಅಂಶವಾಗಿರುವ ಒಂದು ಅಂದದ ಮುಖವನ್ನು ಮೆಚ್ಚುವುದು ತಪ್ಪಲ್ಲ. ಆದರೆ ಬಿದ್ದುಹೋಗಿರುವ ಜೀವಿಗಳಾದ ನಾವು, ಎಚ್ಚರ ವಹಿಸದೇ ಹೋದರೆ, ಶೀಘ್ರವೇ ಅಲ್ಲಿಂದ ಮುಂದುವರಿದು ಆ ಸುಂದರವಾದ ರೂಪವನ್ನು ಗಮನಿಸಿ, ಅನಂತರ ಮೋಹಿಸಲು ಆರಂಭಿಸುತ್ತೇವೆ. ಹಾಗಾಗಿ ವಿರುದ್ಧ ಲಿಂಗದ ಆಕರ್ಷಣೆಯು ತಾನಾಗಿಯೇ ಸ್ವಚ್ಛವಾಗಿದ್ದರೂ, ನಮಗೆ ಅದು ಅಶುದ್ಧ ಯೋಚನೆಗೆ ದಾರಿ ಮಾಡಿಕೊಡಬಹುದು.
’ಕೀತ್ ಮಿಲ್ಲರ್’ ಎಂಬ ಆಂಗ್ಲ ಬರಹಗಾರರು, ’ದ ಸೆಕಂಡ್ ಟಚ್’ ಎಂಬ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ, "ಒಬ್ಬ ಕ್ರೈಸ್ತನು ಆಳವಾಗಿ ನಿಷ್ಠಾವಂತನಾಗಿದ್ದರೆ, ಆತನು ವಿರುದ್ಧ ಲಿಂಗದವರ ಸೌಂದರ್ಯದ ಸಂಪೂರ್ಣ ಅರಿವಿಲ್ಲದವನು ಆಗಿರಲಾರನೆಂದು ನಾನು ಕಂಡುಕೊಂಡಿದ್ದೇನೆ. ಮತ್ತು ನನಗೆ ತಿಳಿದಂತೆ, ಈ ರೀತಿಯಾಗಿ ಅಂದವನ್ನು ಗುರುತಿಸುವಂತದ್ದು ಯಾವುದೇ ವಿಧದಲ್ಲಿಯೂ ಪಾಪವಲ್ಲ ಮತ್ತು ಇದು ಆ ವ್ಯಕ್ತಿಗೆ ಆತ್ಮಿಕ ತಪಾಸಣೆಯ ಅವಶ್ಯಕತೆಯಿದೆ ಎಂಬುದರ ಸೂಚನೆಯಲ್ಲ. ನಿಜ ಹೇಳಬೇಕೆಂದರೆ, ನಿಮಗೆ ವಿರುದ್ಧ ಲಿಂಗದವರ ದೈಹಿಕ ಸೌಂದರ್ಯವನ್ನು ಗ್ರಹಿಸಿಕೊಳ್ಳಲು ಆಗದಿದ್ದರೆ, ಮತ್ತು ನೀವು ನನ್ನ ವಯಸ್ಸಿನವರು ಆಗಿದ್ದರೆ, ಬಹುಶಃ ನೀವು ದೈಹಿಕ ತಪಾಸಣೆಯನ್ನು ಮಾಡಿಸಿಕೊಳ್ಳಬೇಕಾಗಿದೆ. ನಾನು ಈ ಮಾತನ್ನು ಗಂಭೀರವಾಗಿ ಹೇಳುತ್ತಿದ್ದೇನೆ. ನನ್ನ ಅಭಿಪ್ರಾಯದ ಪ್ರಕಾರ, ’ಗುರುತಿಸುವುದು’ ಯಾವತ್ತೂ ಪಾಪವಲ್ಲ. ವಾಸ್ತವಾಂಶವೇನೆಂದರೆ, ಪಾಪದ ಸನ್ನಿವೇಶವನ್ನು ಗುರುತಿಸುವ ಸಾಮರ್ಥ್ಯವು ಕ್ರೈಸ್ತ ಮನೋಭಾವವನ್ನು ಬೆಳೆಸಿಕೊಳ್ಳಲು ಬೇಕಾಗುವ ಪೂರ್ವಾಪೇಕ್ಷಿತ ಅವಶ್ಯಕತೆಗಳಲ್ಲಿ ಒಂದಾಗಿದೆ. ಒಂದು ದೃಷ್ಟಾಂತವನ್ನು ಕೊಡುವುದಾದರೆ, ಒಬ್ಬ ಕುರುಡ ಮನುಷ್ಯನು ಮೇಜಿನ ಮೇಲೆ ಇಟ್ಟಿರುವ ಬಂಗಾರವನ್ನು ಕದಿಯದೇ ಇದ್ದರೆ, ಅವನನ್ನು ಪ್ರಾಮಾಣಿಕನೆಂದು ಪರಿಗಣಿಸಲು ಆಗುವುದಿಲ್ಲ - ಆದರೆ ಒಬ್ಬ ಮನುಷ್ಯನು ಆ ಬಂಗಾರವನ್ನು ನೋಡಿ, ಅದರ ಕಡೆಗೆ ಬಹಳ ಸೆಳೆಯಲ್ಪಟ್ಟರೂ, ಅದನ್ನು ಕದಿಯದಿದ್ದಲ್ಲಿ ಮಾತ್ರ ಆತನು ಪ್ರಾಮಾಣಿಕನಾಗಿದ್ದಾನೆ ... ಒಬ್ಬನು ಒಂದು ಸಂಗತಿಯನ್ನು ಗಮನಿಸಿದ ನಂತರ ಅದನ್ನು ಮೋಹಿಸಿದರೆ, ಆಗ ಸಮಸ್ಯೆಗಳು ಹುಟ್ಟುತ್ತವೆ."
ಇಂತಹ ಸಂದರ್ಭಗಳಲ್ಲಿ ನಾವು ಮಾಡುತ್ತಿರುವುದನ್ನು ನಮ್ಮೊಳಗಿರುವ ಪವಿತ್ರಾತ್ಮನು ಗಮನಿಸಿ, ಆ ಆಕರ್ಷಕ ಸಂಗತಿಯಿಂದ ನಮ್ಮ ಕಣ್ಣುಗಳನ್ನು ಮತ್ತು ನಮ್ಮ ಯೋಚನೆಗಳನ್ನು ಇನ್ನೊಂದು ದಿಕ್ಕಿಗೆ ತಿರುಗಿಸುವಂತೆ ಹೇಳುವಾಗ, ಒಡನೆಯೇ ಆ ಧ್ವನಿಗೆ ವಿಧೇಯರಾಗುವುದರಲ್ಲಿ ನಮ್ಮ ಸುರಕ್ಷತೆಯು ಅಡಗಿದೆ.
ಇದಲ್ಲದೆ ನಾವು ಅಗಾಗ ಈ ರೀತಿ ಪ್ರಾರ್ಥಿಸಬೇಕು, "ಕರ್ತನೇ, ನಾನು ಜಯಿಸಲು ಆಗದಿರುವಂತ ಶೋಧನೆಗಳನ್ನು ನನಗೆ (ಈ ಕ್ಷೇತ್ರದಲ್ಲಿ) ಒದಗಿಸಬೇಡ."
ಅನೇಕ ಯೌವನಸ್ಥರು ಪ್ರಾಮಾಣಿಕವಾಗಿ ಹೀಗೆ ಪ್ರಾರ್ಥಿಸುವುದರ ಮೂಲಕ ಜಯ ಗಳಿಸಿದ್ದಾರೆ.
ಸ್ವ-ಲೈಂಗಿಕ ಭೋಗ ('Masturbation')ಹಿಡಿತವಿಲ್ಲದ ಯೋಚನೆಗಳಿಂದ ಅಶಿಸ್ತು ಮತ್ತು ಚಪಲತೆ ಉಂಟಾಗಿ, ದೇಹದ ಲೈಂಗಿಕ ಬಯಕೆಗಳನ್ನು ತೃಪ್ತಿಪಡಿಸುವಂತೆ ಅದು ನಮ್ಮನ್ನು ನಡೆಸುತ್ತದೆ. ಒಬ್ಬ ಕ್ರೈಸ್ತನು ಎಂದಿಗೂ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಅಪೊಸ್ತಲ ಪೌಲನು ಹೀಗೆ ಹೇಳಿದನು, "ಪಂದ್ಯಾಟಗಳಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಕ್ರೀಡಾಪಟುವು ಶ್ರದ್ಧೆಯಿಂದ ತರಬೇತಿ ಹೊಂದುತ್ತಾನೆ. ಕ್ರೀಡಾಪಟುಗಳು ಬಹಳ ಪರಿಶ್ರಮದಿಂದ ತಯಾರಿ ಮಾಡುತ್ತಾರೆ - ಅದು ಬಾಡಿಹೋಗುವ ಜಯಮಾಲೆಯನ್ನು ಹೊಂದುವುದಕ್ಕೆ. ಆದರೆ ನಾವಾದರೋ ಬಾಡಿಹೋಗದ ನಿತ್ಯತ್ವದ ಕಿರೀಟಕ್ಕಾಗಿ ಸಾಧನೆ ಮಾಡುವವರಾಗಿದ್ದೇವೆ. ಹಾಗಿರುವಾಗ, ನಾನು ಗೆಲ್ಲಬೇಕೆಂಬ ದೃಢ ನಿಶ್ಚಯದಿಂದ ಓಟವನ್ನು ಓಡುತ್ತೇನೆ. ನಾನು ಗಾಳಿಯನ್ನು ಗುದ್ದುವವನು ಆಗಿರದೆ, ಗೆಲ್ಲಬೇಕೆಂದು ಗುದ್ದಾಡುತ್ತೇನೆ! ನಾನು ನನ್ನ ಮೈಯನ್ನು ಒಬ್ಬ ಬಹಳ ಕಠಿಣ ತರಬೇತುದಾರನಂತೆ ನೋಡಿಕೊಳ್ಳುತ್ತೇನೆ, ಏಕೆಂದರೆ ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನು ಎನಿಸಿಕೊಂಡೇನೋ ಎಂಬ ಭಯ ನನ್ನಲ್ಲಿದೆ." (1 ಕೊರಿ. 9:25-27 - JB Phillips ಭಾಷಾಂತರ).
ಪೌಲನು ಮತ್ತೆ ಹೀಗೆ ಹೇಳುತ್ತಾನೆ: "ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ದೇಹವನ್ನು ನಿಯಂತ್ರಿಸುವುದು ಹೇಗೆಂದು ಕಲಿತುಕೊಂಡು, ಅದನ್ನು ಶ್ರದ್ಧೆಯಿಂದ ಪರಿಶುದ್ಧವಾಗಿ ಇರಿಸಿಕೊಳ್ಳಬೇಕು, ಮತ್ತು ಎಂದಿಗೂ ಅದು ಕಾಮಾಭಿಲಾಷೆಯನ್ನು ಪೂರೈಸುವಂತ ಸಾಧನವೆಂದು ತಿಳಿಯಬಾರದು; ದೇವರನ್ನು ಅರಿಯದ ಅನ್ಯಜನರು ಹಾಗೆ ಮಾಡುತ್ತಾರೆ." (1 ಥೆಸ. 4:4,5 - JB Phillips ಭಾಷಾಂತರ).
ಈ ವಚನಗಳ ಕುರಿತಾಗಿ, ’ಸಿ.ಜಿ.ಸ್ಕೋರರ್’ರವರು ಬರೆದಿರುವ "ದ ಬೈಬಲ್ ಎಂಡ್ ಸೆಕ್ಸ್ ಎತಿಕ್ಸ್ ಟುಡೆ" ಎಂಬ ಆಂಗ್ಲ ಗ್ರಂಥದಲ್ಲಿ ಈ ರೀತಿಯಾಗಿ ಹೇಳುತ್ತಾರೆ:"ಈ ವಚನಗಳಿಂದ (ಅಪೊಸ್ತಲ ಪೌಲನು ಬರೆದಿರುವಂತದ್ದು) ಸತ್ಯವೇದವು ಉಲ್ಲೇಖಿಸದೇ ಇರುವ ಬೇರೊಂದು ವಿಷಯದ ಬಗ್ಗೆ ಮಾರ್ಗದರ್ಶನವನ್ನು ಪಡಕೊಳ್ಳಬಹುದು - ಗುಪ್ತವಾಗಿ ಮತ್ತು ಒಂಟಿಯಾಗಿ ಮಾಡುವ ಲೈಂಗಿಕ ಭೋಗ, ಅಥವಾ ಸ್ವ-ಲೈಂಗಿಕ ಭೋಗ ('masturbation'). ಹೊಸ ಒಡಂಬಡಿಕೆಯು ಒಬ್ಬ ಮನುಷ್ಯನ ಜೀವನದ ಗುಪ್ತ ಸಂಗತಿಗಳನ್ನು ಪರಿಶೀಲಿಸಲು ಪ್ರಯತ್ನಿಸುವುದಿಲ್ಲ. ಆಧುನಿಕ ಮನೋವಿಜ್ಞಾನ ಇದನ್ನು ಮಾಡಲು ಪ್ರಯತ್ನಿಸಬಹುದು; ಕ್ರಿಸ್ತನು ಮತ್ತು ಆತನ ಅಪೊಸ್ತಲರು ಹಾಗೆ ಮಾಡುವುದಿಲ್ಲ. ಇಂತಹ ಸ್ವೇಚ್ಛಾ ಭೋಗದ ಮನೋಭಾವದ ಜೊತೆಯಲ್ಲಿ, ದೇವರು ನಮ್ಮ ದೇಹಗಳ ಮೇಲೆ ಇರಿಸಿಕೊಂಡಿರುವ ಅಧಿಕಾರದ ವಿರುದ್ಧ ತಿರುಗಿ ಬೀಳುವ ಇಚ್ಛೆ ಇರುವುದು ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಇದರ ಲಕ್ಷಣ ಏನೆಂದರೆ, ಲೈಂಗಿಕ ಅನುಭವವನ್ನು ಆಶಿಸಿ, ಅದನ್ನು ಹಿಂಬಾಲಿಸುವುದನ್ನೇ ಒಂದು ಗುರಿಯಾಗಿ ಮಾಡಿಕೊಳ್ಳುವುದು. ಇದರ ಪರಿಣಾಮವಾಗಿ, ಒಬ್ಬ ಪುರುಷ ಅಥವಾ ಸ್ತ್ರೀಯು ತಮ್ಮ ಸ್ವಂತ ಬಯಕೆಗಳನ್ನು ನಿಯಂತ್ರಿಸುವುದರ ಬದಲಾಗಿ, ಅವುಗಳಿಗೆ ಗುಲಾಮರಾಗುತ್ತಾರೆ. ಸಾಮಾನ್ಯವಾಗಿ ಅನ್ವಯಿಸುವ ಒಂದು ಮೂಲತತ್ವ ಏನೆಂದರೆ, ಲೈಂಗಿಕ ಯೋಚನೆಗಳು ಆತ್ಮಿಕ ಜ್ಞಾನ ಮತ್ತು ಆತ್ಮಿಕ ಬಲದ ವಿರುದ್ಧವಾಗಿ ಕೆಲಸ ಮಾಡುತ್ತವೆ; ದೈಹಿಕ ಉದ್ವೇಗಗಳು ನಮ್ಮ ಜೀವಿತವನ್ನು ನಿಯಂತ್ರಿಸುವಾಗ, ಅಲ್ಲಿ ಪವಿತ್ರಾತ್ಮನು ಕಾರ್ಯ ನಿರ್ವಹಿಸಲಾರನು. ಮನೋಶಾಸ್ತ್ರದ ಪ್ರಕಾರ, ಇಂತಹ ಪಾಪಗಳು ವಿಕೃತ ಸ್ವಭಾವದಿಂದ ಅಥವಾ ಸ್ವಚಿಂತನೆ ಮತ್ತು ಸ್ವಾರ್ಥ ಮನೋಭಾವದ ಪರಿಣಾಮವಾಗಿ ಹುಟ್ಟಿಕೊಳ್ಳುತ್ತವೆ, ಮತ್ತು ಇವುಗಳನ್ನು ತಡೆಗಟ್ಟುವ ಅವಶ್ಯಕತೆಯಿದೆ. ಹೌದು, ಇದು ಜಾರತ್ವದಷ್ಟು ಗಂಭೀರವಾದದ್ದೆಂದು ಹೇಳಲು ಬರುವುದಿಲ್ಲ, ಏಕೆಂದರೆ ಇದರಲ್ಲಿ ಬೇರೊಬ್ಬ ವ್ಯಕ್ತಿಯು ಒಳಗೊಂಡಿರುವುದಿಲ್ಲ ... (ಆದರೆ) ಇದು ಒಬ್ಬ ಮನುಷ್ಯನು ತನ್ನೊಂದಿಗೇ ಅಸಮಾಧಾನಗೊಳ್ಳುವಂತೆ ಮಾಡುತ್ತದೆ, ಏಕೆಂದರೆ ತನ್ನಲ್ಲಿ ಎದ್ದೇಳುವ ಉದ್ವೇಗವನ್ನು ಸರಿಯಾಗಿ ನಿಯಂತ್ರಿಸಲು ತನ್ನಿಂದ ಆಗುತ್ತಿಲ್ಲವೆಂದು ಅವನು ಒಪ್ಪಿಕೊಳ್ಳಬೇಕಾಗುತ್ತದೆ. ಇದು ಅವನನ್ನು ಅವಮಾನಗೊಳಿಸುತ್ತದೆ ಮತ್ತು ಆತನ ಆತ್ಮ-ಗೌರವವನ್ನು ದುರ್ಬಲಗೊಳಿಸುತ್ತದೆ; ಇದರಿಂದಾಗಿ ಅವನ ಕ್ರೈಸ್ತ ಸಾಕ್ಷಿಯು ಊನಗೊಳ್ಳಬಹುದು.
"ಇದರಿಂದ ಹೊರಬರುವುದಕ್ಕೆ, ಇಚ್ಛಾ ಶಕ್ತಿಯನ್ನು ಹಿಡಿತದಲ್ಲಿ ಇರಿಸಿಕೊಳ್ಳುವುದರ ಜೊತೆಗೆ, ಆರಂಭದಲ್ಲೇ ಲೈಂಗಿಕ ಪ್ರಚೋದನೆಯನ್ನು ತಪ್ಪಿಸಿದರೆ ಅದನ್ನು ತಡೆಗಟ್ಟಬಹುದು, ಎಂಬ ಸರ್ವೇಸಾಮಾನ್ಯ ಪ್ರಚಲಿತ ವಿಧಾನವನ್ನು ಬಳಸಿಕೊಳ್ಳಬೇಕು."
ಸ್ವ-ಲೈಂಗಿಕ ಭೋಗವು ಯಾವುದೇ ಕಾಯಿಲೆಗೆ ಕಾರಣವಾಗದೇ ಇರಬಹುದು, ಆದರೆ ಇದರಿಂದ ಮನಸ್ಸಿನ ಖಿನ್ನತೆ ಹಾಗೂ ತಪ್ಪಿತಸ್ಥ ಮನೋಭಾವ ತಲೆದೋರುತ್ತದೆ ಮತ್ತು ಮನೋಬಲವು ದುರ್ಬಲವಾಗುತ್ತದೆ. ಅಂತಿಮವಾಗಿ ಇವೆಲ್ಲವುಗಳಿಂದ ಒಬ್ಬ ವ್ಯಕ್ತಿಯು ದೇವರೊಂದಿಗೆ ತನ್ನ ಅನ್ಯೋನ್ಯತೆಯನ್ನು ಮತ್ತು ತನ್ನ ಆತ್ಮಿಕ ಹುರುಪನ್ನು ಕಳಕೊಳ್ಳುತ್ತಾನೆ. ಒಂದು ವೇಳೆ ಇದರಲ್ಲಿ ಬಹಳ ಹೆಚ್ಚಾಗಿ ತೊಡಗಿದರೆ, ಅದರಿಂದ ಮದುವೆಯ ನಂತರದ ಲೈಂಗಿಕ ಸಂಬಂಧಕ್ಕೆ ತೊಂದರೆ ಉಂಟಾಗಬಹುದು. ಸ್ವ-ಲೈಂಗಿಕ ಭೋಗವು ಒಂದು ಪಾಪವಾಗಿದೆ, ಏಕೆಂದರೆ ಇದು ದೇವರ ವರವಾದ ಲೈಂಗಿಕತೆಯನ್ನು ದುರುಪಯೋಗಪಡಿಸುತ್ತದೆ. ಇದರ ವಿಷಯವಾಗಿ ಪಶ್ಚಾತ್ತಾಪಪಟ್ಟು ಇದನ್ನು ಬಿಟ್ಟುಬಿಡಬೇಕು.
ಯೌವನಸ್ಥರು ತಮ್ಮ ಲೌಕಿಕ ಸ್ನೇಹಿತರಿಂದ ಲೈಂಗಿಕತೆಯ ನಿಜಾಂಶವನ್ನು ವಿಕೃತ ರೂಪದಲ್ಲಿ ಕಲಿತದ್ದರಿಂದ, ಈ ಕೆಟ್ಟ ಹವ್ಯಾಸಕ್ಕೆ ಸಿಕ್ಕಿಬೀಳುತ್ತಾರೆ. ಒಮ್ಮೆ ಶುರುಮಾಡಿದರೆ, ಈ ಹವ್ಯಾಸವು ಆ ವ್ಯಕ್ತಿಯನ್ನು ಎಷ್ಟು ಬಲವಾಗಿ ಹಿಡಿದುಕೊಳ್ಳುತ್ತದೆ ಎಂದರೆ, ಆತನು ಪದೇ ಪದೇ ಇದಕ್ಕೆ ಶರಣಾಗಬೇಕಾಗುತ್ತದೆ. ಆದರೆ ಕ್ರಿಸ್ತನು ಆತನನ್ನು ಬಿಡಿಸಬಲ್ಲನು.
ಅನೇಕ ಯೌವನಸ್ಥರು ತಮ್ಮ ಸ್ನೇಹಿತರಿಂದ ಸ್ವ-ಲೈಂಗಿಕ ಭೋಗದ ವಿಷಯವಾಗಿ ಕಲಿತಿರುವುದು ಏನೆಂದರೆ, ದೇಹದ ಒಂದು ಸ್ನಾಯುವನ್ನು ಅನೇಕ ವರ್ಷಗಳ ಕಾಲ ಉಪಯೋಗಿಸದೇ ಇದ್ದಾಗ ಅದು ಬಲಹೀನವಾಗಿ ಉಪಯೋಗವಿಲ್ಲದ್ದು ಆಗುವ ಹಾಗೆ, ಅವರ ಲೈಂಗಿಕ ಅಂಗಗಳು ಉಪಯೋಗವಿಲ್ಲದವು ಆಗದೇ ಇರುವುದಕ್ಕಾಗಿ ಅವರು ಸ್ವ-ಲೈಂಗಿಕ ಭೋಗವನ್ನು ಅಭ್ಯಾಸ ಮಾಡಬೇಕು, ಎಂಬುದಾಗಿ. ಆದರೆ ಈ ಅಭಿಪ್ರಾಯವು ಸಂಪೂರ್ಣ ತಪ್ಪಾಗಿದೆ. ಲೈಂಗಿಕ ಅಂಗಗಳು ಉಪಯೋಗಿಸಲ್ಪಡದೇ ಇದ್ದಾಗ ಎಂದಿಗೂ ಶಕ್ತಿಗುಂದಲಾರವು ಅಥವಾ ಹಾನಿಗೊಳ್ಳಲಾರವು ಎಂಬ ವಾಸ್ತವಾಂಶವನ್ನು ವೈದ್ಯಕೀಯ ಶಾಸ್ತ್ರಜ್ಞರು ಅಂಗೀಕರಿಸುತ್ತಾರೆ. ಲೈಂಗಿಕ ಲಾಲಸೆಗಳನ್ನು ನಿಯಂತ್ರಿಸುವುದರಿಂದ ಯಾವುದೇ ಮಾನಸಿಕ ಹಾನಿಯೂ ಸಹ ಉಂಟಾಗುವುದಿಲ್ಲ. ವಾಸ್ತವವಾಗಿ, ಲೈಂಗಿಕ ಬಯಕೆಗಳನ್ನು ಹತೋಟಿಯಲ್ಲಿ ಇರಿಸುವುದರಿಂದ ನಿಶ್ಚಯವಾಗಿ ಯಾವ ಅಪಾಯವೂ ಇಲ್ಲ. ತದ್ವಿರುದ್ಧವಾಗಿ, ಒಬ್ಬ ವ್ಯಕ್ತಿಯು ತನ್ನನ್ನು ಈ ರೀತಿಯಾಗಿ ಶಿಸ್ತುಪಡಿಸಿದಾಗ, ಆತನ ಮನೋಬಲವು ಹೆಚ್ಚುತ್ತದೆ ಮತ್ತು ಆತನ ಬುದ್ಧಿಯು ಚುರುಕಾಗುತ್ತದೆ. ಒಬ್ಬ ಮನುಷ್ಯನು ತನ್ನ ಇಡೀ ಜೀವಿತದಲ್ಲಿ ಲೈಂಗಿಕ ಅಂಗಗಳನ್ನು ಒಂದು ಬಾರಿಯೂ ಉಪಯೋಗಿಸದೆ ಜೀವಿಸಲು ಸಾಧ್ಯವಿದೆ ಮತ್ತು ಹಾಗಿದ್ದರೂ ಆತನು ಮನಸ್ಸು ಮತ್ತು ದೇಹದಲ್ಲಿ ಸಂಪೂರ್ಣ ಆರೋಗ್ಯವಂತನೂ, ಬಲಶಾಲಿಯೂ ಆಗಿರುತ್ತಾನೆ.
ಕೆಲವು ಯೌವನಸ್ಥರು ತಾವು ನಿದ್ರಿಸಿದಾಗ ವೀರ್ಯರಸವು ಹೊರಸೂಸುವುದರ ಬಗ್ಗೆ ಕಳವಳಗೊಳ್ಳಬಹುದು. ಇದು ಅವರ ದೇಹದ ಸಹಜ ಕಾರ್ಯವಿಧಾನವಾಗಿದೆ, ಮತ್ತು ಹೆಚ್ಚುವರಿ ಪದಾರ್ಥವು ದೇಹದಿಂದ ಹೊರಸೂಸುತ್ತದೆ, ಅಷ್ಟೇ. ಇದು ಅಸಾಮಾನ್ಯವಲ್ಲ ಮತ್ತು ಇದರ ಬಗ್ಗೆ ಚಿಂತಿಸಬೇಕಿಲ್ಲ.
ಪ್ರತಿಯೊಬ್ಬ ವ್ಯಕ್ತಿಯು ಮದುವೆ ಆಗುವುದಕ್ಕೆ ಮೊದಲು ತನ್ನ ಲೈಂಗಿಕ ಅಭಿಲಾಷೆಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಲು ಕಲಿತುಕೊಳ್ಳಬೇಕು, ಏಕೆಂದರೆ ವಿವಾಹದ ನಂತರ ಆತ್ಮಸಂಯಮದ ಹೆಚ್ಚಿನ ಅವಶ್ಯಕತೆ ಇದೆ. ಮದುವೆಯ ನಂತರವೂ ಲೈಂಗಿಕ ಸಂಬಂಧಗಳಲ್ಲಿ ಸ್ವ-ನಿಯಂತ್ರಣವು ಇರಬೇಕು, ಏಕೆಂದರೆ ಮದುವೆಯು ಮಿತಿಮೀರಿದ ಲೈಂಗಿಕ ಸಂಭೋಗಕ್ಕೆ ಒಂದು ಅನುಮತಿ ಪತ್ರವೆಂದು ಎಣಿಸಬಾರದು. ಮದುವೆಯ ಮೊದಲೇ ಆತ್ಮಸಂಯಮವನ್ನು ಅಭ್ಯಾಸ ಮಾಡದವರು, ಮದುವೆಯ ನಂತರ ಅದನ್ನು ಕಲಿಯುವ ಸಾಧ್ಯತೆ ಕಡಿಮೆಯಾಗಿರುತ್ತದೆ.
ಈಗಾಗಲೇ ಈ ಕೆಟ್ಟ ಹವ್ಯಾಸದ ಹಿಡಿತದಲ್ಲಿ ಇರುವವರು ಬಹುಶಃ ಇದರಿಂದ ಬಿಡುಗಡೆಯನ್ನು ಕಾಣುವುದು ಹೇಗೆಂದು ಕಂಗೆಟ್ಟಿರಬಹುದು. ಕ್ರಿಸ್ತನ ಮರಣ ಮತ್ತು ಪುನರುತ್ಥಾನದಲ್ಲಿ ನಾವು ಆತನೊಂದಿಗೆ ಸಹಭಾಗಿಗಳಾದಾಗ, ನಮ್ಮ ಮೇಲೆ ಪಾಪದ ಹಿಡಿತವು ಕಡಿದು ಹಾಕಲ್ಪಡುತ್ತದೆ, ಎಂಬ ಅಂಶವನ್ನು ತಿಳಿದುಕೊಳ್ಳುವುದು ಬಿಡುಗಡೆಯ ದಾರಿಯಾಗಿದೆ. ನಾವು ಪವಿತ್ರಾತ್ಮನಿಂದ ತುಂಬಿಸಲ್ಪಡುವಂತೆ ಕರ್ತನಿಗೆ ನಮ್ಮನ್ನು ಒಪ್ಪಿಸಿಕೊಟ್ಟಾಗ, ನಮ್ಮ ಜೀವನದಲ್ಲಿ ನಿಜವಾದ ಜಯವು ಕಾಣಿಸಿಕೊಳ್ಳುತ್ತದೆ (ರೋಮಾ. 8:2).
ಇದಲ್ಲದೆ ನಾವು ನಮ್ಮ ಜೀವಿತದ ಪ್ರತಿದಿನ ಚಟುವಟಿಕೆಯಿಂದ ಕೂಡಿರುವ ಒಂದು ಕಾರ್ಯಕ್ರಮವನ್ನು ಹಾಕಿಕೊಳ್ಳಬೇಕು. ನಮ್ಮ ಮನಸ್ಸುಗಳನ್ನು ಮತ್ತು ವಿಶೇಷವಾಗಿ ನಮ್ಮ ದೇಹಗಳನ್ನು ದಿನವಿಡೀ ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಆಲಸ್ಯದ, ದೈಹಿಕ ಪರಿಶ್ರಮವಿಲ್ಲದ ದೇಹವು ಲೈಂಗಿಕ ಇಚ್ಛೆಗಳಿಗೆ ಸುಲಭವಾಗಿ ತುತ್ತಾಗುತ್ತದೆ. ಶ್ರಮಿಸಿ ದುಡಿಯುವ ವ್ಯಕ್ತಿಯು ಈ ನಿಟ್ಟಿನಲ್ಲಿ ಯಾವ ದೊಡ್ಡ ತೊಂದರೆಯನ್ನೂ ಎದುರಿಸುವುದಿಲ್ಲ. ಆದಾಮನು ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕಿತ್ತು (ಆದಿ. 3:19). ವಿಜ್ಞಾನದ ಸಂಶೋಧನೆಗಳು ನಮಗೆ ಸಮಯ ಉಳಿತಾಯ ಮಾಡುವ ಹಲವಾರು ಸಾಧನಗಳನ್ನು ನೀಡಿರುವಾಗ, ಆಧುನಿಕ ಯುಗದ ಯೌವನಸ್ಥನ ಬಳಿ ವ್ಯರ್ಥ ಮಾಡುವುದಕ್ಕಾಗಿ ಬಹಳಷ್ಟು ಸಮಯ ಬಾಕಿ ಉಳಿಯುತ್ತದೆ ಮತ್ತು ಪಿಶಾಚನು ಈ ಅವಕಾಶವನ್ನು ಆತುರದಿಂದ ಹಿಡಿದುಕೊಳ್ಳುತ್ತಾನೆ. ಇಲ್ಲಿ ನಾನು ಹೇಳುತ್ತಿರುವುದರ ಅರ್ಥ ಸಮಯ ಉಳಿತಾಯದ ಸಾಧನಗಳನ್ನು ಬಳಸಬಾರದು ಎಂದಲ್ಲ. ಅವಶ್ಯವಾಗಿ ಅವನ್ನು ಉಪಯೋಗಿಸಿರಿ. ಆದರೆ ನಾವು ನಮ್ಮ ಬಿಡುವಿನ ಸಮಯವನ್ನು ಲಾಭಕರವಾಗಿ ಯಾವುದೋ ರಚನಾತ್ಮಕ ಚಟುವಟಿಕೆಯಲ್ಲಿ ಬಳಸಲು ಪ್ರಯತ್ನಿಸಬೇಕು.
ದೇಹದ ಬಲ ಅಥವಾ ಉತ್ಸುಕತೆಯನ್ನು ನಾಲ್ಕು ರೀತಿಯಲ್ಲಿ ಬಳಸಬಹುದು - ದೈಹಿಕ ಕಾರ್ಯದಲ್ಲಿ, ಮಾನಸಿಕ ಚಟುವಟಿಕೆಯಲ್ಲಿ, ಭಾವಾವೇಶದ ಅನುಭವಗಳಲ್ಲಿ ಅಥವಾ ಲೈಂಗಿಕ ಚಪಲ ತೀರಿಸಿಕೊಳ್ಳುವುದರಲ್ಲಿ. ಅದನ್ನು ಮೊದಲ ಮೂರು ರೀತಿಗಳಲ್ಲಿ ಬಳಸದಿದ್ದಾಗ, ನಾಲ್ಕನೇ ರೀತಿಯಲ್ಲಿ ಅದನ್ನು ಬಳಸುವುದಕ್ಕೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಆದರೆ ಇಂತಹ ಲೈಂಗಿಕ ಸೆಳೆತದ ಚಟುವಟಿಕೆಗಳು ಇತರ ಚಟುವಟಿಕೆಗಳಿಗಿಂತ ಹೆಚ್ಚಾಗಿ ದೇಹದ ತಾಕತ್ತನ್ನು ಹಾಗೂ ಶರೀರದ ಸಾಮರ್ಥ್ಯವನ್ನು ಕುಗ್ಗಿಸಿ, ಚೈತನ್ಯವನ್ನು ಕಳೆಗುಂದಿಸುತ್ತವೆ.
ಕೆಲವು ಪುರುಷರಲ್ಲಿ ಲೈಂಗಿಕ ಬಯಕೆಯು ಕ್ಷೀಣವಾಗಿರುತ್ತದೆ ಮತ್ತು ಅವರು ಲೈಂಗಿಕ ಆಸೆಯ ಒತ್ತಡದಿಂದ ಹೆಚ್ಚು ತೊಂದರೆಯನ್ನು ಅನುಭವಿಸುವುದಿಲ್ಲ. ವಿಪರೀತವಾದ ಲೈಂಗಿಕ ಬಯಕೆಯ ಒತ್ತಡವನ್ನು ಅನುಭವಿಸುವವರು ತಮ್ಮ ಪ್ರವೃತ್ತಿಯು ಅಸಹಜವಾದದ್ದೆಂದು ಭಾವಿಸಬೇಕಿಲ್ಲ. ಅವರಲ್ಲಿ ಬಹಳ ಲಾಭಕರವಾಗಿ ಬಳಸಿಕೊಳ್ಳಬಹುದಾದ ಅಧಿಕ ಉಪಯೋಗಕರ ಉತ್ಸುಕತೆಯಿದೆ ಎಂಬುದನ್ನು ಅದು ಸೂಚಿಸುತ್ತದೆ. ನಾವು ಕಾಮನೆಗಳ ವಿರುದ್ಧ ಸತತ ಹೋರಾಟದಲ್ಲೇ ತೊಡಗಿರುವುದು ದೇವರ ಚಿತ್ತವಲ್ಲ. ನಾವು ನಮ್ಮ ದೈಹಿಕ ಉತ್ಸುಕತೆಯನ್ನು (ಲೈಂಗಿಕ ಚಪಲ ಕಾರ್ಯಕ್ಕೆ ಅಥವಾ ಯೋಚನೆಗೆ ಸೆಳೆಯುವಂಥದ್ದು) ಬೇರೆ ಕಡೆಗೆ ತಿರುಗಿಸಿ, ಅದರಿಂದ ದೇವರಿಗೆ ಮಹಿಮೆ ಮತ್ತು ಇತರ ಜನರಿಗೆ ಸಹಾಯ ಒದಗುವಂತೆ ಆಗಲೆಂದು ಅವರು ಇಚ್ಛಿಸುತ್ತಾರೆ.
ಇದಕ್ಕಾಗಿ ಪ್ರತಿಯೊಬ್ಬ ಕ್ರೈಸ್ತ ಯೌವನಸ್ಥನು ಪ್ರತಿದಿನ ತನ್ನ ದೇಹವನ್ನು ದೈಹಿಕ ಚಟುವಟಿಕೆಯ ಮೂಲಕ ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಲಿ. ಇದರ ಜೊತೆಗೆ ಆತನು ತನ್ನ ಬಿಡುವಿನ ವೇಳೆಯನ್ನು ಹರಟೆ ಮಾತಿನಲ್ಲಿ ಕಳೆಯುವುದರ ಬದಲಾಗಿ, ಶ್ರದ್ಧೆಯಿಂದ ಸತ್ಯವೇದ ಅಧ್ಯಯನ ಮತ್ತು ಪ್ರಾರ್ಥನೆಗಾಗಿ ಬಳಸಲಿ (ಇದು ಅವನ ಮನಸ್ಸಿಗೆ ವ್ಯಾಯಾಮವಾಗಿರುತ್ತದೆ). ಹಾಗೆ ಮಾಡಿದಾಗ ದಿನದ ಕೊನೆಯಲ್ಲಿ ಅವನು ಬಹಳಷ್ಟನ್ನು ಸಾಧಿಸಿರುವುದು ಮಾತ್ರವಲ್ಲದೆ, ಆತನು ಬಳಲಿರುವುದರಿಂದ ಹಾಸಿಗೆಯ ಮೇಲೆ ಮಲಗಿದ ತಕ್ಷಣ ನಿದ್ರೆ ಹೋಗುತ್ತಾನೆ. ರಾತ್ರಿ ಹಾಸಿಗೆಯಲ್ಲಿ ಮಲಗಿರುವಾಗ ಕಾಮುಕ ಆಲೋಚನೆಗಳ ಕಿರುಕುಳಕ್ಕೆ ಒಳಗಾಗಿ ಸ್ವ-ಲೈಂಗಿಕ ಭೋಗಕ್ಕೆ ಶರಣಾಗುವುದರ ಬದಲಾಗಿ, ತಾನು ಹಾಯಾಗಿ ಸುಖ ನಿದ್ರೆಗೆ ಮರೆಹೋಗುವುದನ್ನು ಆತನು ಕಂಡುಕೊಳ್ಳುತ್ತಾನೆ. "ಶ್ರಮಿಸಿ ದುಡಿಯುವವನು ಹಾಯಾಗಿ ನಿದ್ರಿಸುತ್ತಾನೆ," ಎಂದು ಸತ್ಯವೇದವು ನಮಗೆ ಹೇಳುತ್ತದೆ (ಪ್ರಸಂಗಿ 5:12 - The Living Bible).
ನಾವು ಊಟ ಮತ್ತು ನಿದ್ರೆಯಂತ ಸರಳ ವಿಷಯಗಳಲ್ಲಿ ನಮ್ಮನ್ನು ಶಿಸ್ತಿಗೆ ಒಳಪಡಿಸಿಕೊಂಡರೆ, ಲೈಂಗಿಕ ಅಭಿಲಾಷೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಕಾರ್ಯವು ಸುಲಭವಾಗುತ್ತದೆ. ಅನೇಕರು ಈ ಕ್ಷೇತ್ರಗಳಲ್ಲಿ ತಮ್ಮನ್ನು ಶಿಸ್ತುಪಡಿಸಿಕೊಳ್ಳದಿರುವ ಕಾರಣ, ಅವರು ಲೈಂಗಿಕ ಕ್ಷೇತ್ರದಲ್ಲಿ ಸೋತಿದ್ದಾರೆ. ಅತಿಯಾಗಿ ಊಟ ಮಾಡುವುದು ಹಾಗೂ ಲೈಂಗಿಕ ಬಯಕೆಯ ಪ್ರೇರೇಪಣೆಯ ನಡುವೆ ನೇರವಾದ ಸಂಬಂಧವಿದೆ. ಪ್ರಾಚೀನ ಸೋದೋಮ್ ಪಟ್ಟಣವು ಲೈಂಗಿಕ ಪಾಪಗಳಿಂದ ತುಂಬಿಹೋಗಲು ಕಾರಣ, ಅಲ್ಲಿನ ಜನರು "ಅತಿಯಾದ ಭೋಜನ ಪ್ರಿಯರಾಗಿದ್ದರು, ಸ್ವ-ಸುಖದಲ್ಲಿ ಮಗ್ನರಾಗಿದ್ದು, ಸೋಮಾರಿಗಳಾಗಿದ್ದರು" (ಯೆಹೆ. 16:49 - ಸ್ವ. ಅನುವಾದ). ಲೈಂಗಿಕ ಕಾಮನೆಗಳ ಗುಲಾಮರಾಗಿರುವವರು ತಮ್ಮ ಊಟ-ತಿಂಡಿಯ ಪರಿಪಾಠದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಲಿ, ಮತ್ತು ಉಪವಾಸ ಪ್ರಾರ್ಥನೆಯೊಂದಿಗೆ ಕರ್ತನ ಮುಖವನ್ನು ಹುಡುಕಲಿ; ಆಗ ಬಿಡುಗಡೆಯು ಅವರಿಗೆ ಬಹಳ ಬೇಗನೆ ಪ್ರಾಪ್ತವಾಗುವುದು.
ಎಲ್ಲಕ್ಕಿಂತ ಹೆಚ್ಚಾಗಿ, ನಾವು ಎಲ್ಲಾ ವೇಳೆಯಲ್ಲಿ ಕರ್ತನ ಸಾನ್ನಿಧ್ಯದಲ್ಲಿ ಇರುವುದನ್ನು ಅಭ್ಯಾಸ ಮಾಡಬೇಕು - ಕರ್ತನು ಯಾವಾಗಲೂ ನಮ್ಮೊಟ್ಟಿಗೆ ಇದ್ದಾನೆ ಮತ್ತು ನಮ್ಮನ್ನು ಗಮನಿಸುತ್ತಿದ್ದಾನೆ, ಎಂಬ ಜ್ಞಾನ ನಮಲ್ಲಿರಬೇಕು. ಮತ್ತೊಬ್ಬ ವಿಶ್ವಾಸಿಯು ನಮ್ಮನ್ನು ಗಮನಿಸುತ್ತಿರುವಾಗ ನಾವು ನಿಶ್ಚಯವಾಗಿ ಸ್ವ-ಲೈಂಗಿಕ ಭೋಗಕ್ಕೆ ಕೈಹಾಕುವುದಿಲ್ಲ. ಹಾಗಿರುವಾಗ, ನಾವು ದೇವರಿಗೆ ಇನ್ನೂ ಎಷ್ಟೋ ಹೆಚ್ಚಾಗಿ ಭಯಪಡಬೇಕಲ್ಲವೇ!
ನೀವು ಬಹಳ ಪ್ರಯತ್ನಪಟ್ಟರೂ ಈ ಶೋಧನೆ ಇನ್ನೂ ನಿಮ್ಮನ್ನು ಕಾಡಿಸುತ್ತಿದ್ದರೆ, ನೀವು ಅಂತಹ ಸಂದರ್ಭದಲ್ಲಿ ಮಾಡಬಹುದಾದ ಬಹಳ ಉತ್ತಮ ಕಾರ್ಯವೆಂದರೆ, ಇನ್ನೊಬ್ಬ ಮಿತ್ರನ ಜೊತೆಯಲ್ಲಿ ಸಮಯ ಕಳೆಯುವುದು (ಆತನು ಒಬ್ಬ ವಿಶ್ವಾಸಿಯಾಗಿದ್ದರೆ ಮೇಲು). ಇದರಿಂದ ನಿಮಗೆ ಜಯ ಗಳಿಸುವ ಸಾಮರ್ಥ್ಯವನ್ನು ಪಡೆಯುತ್ತೀರಿ.
ವ್ಯಭಿಚಾರಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯ ಲೈಂಗಿಕ ಸಂಭೋಗವು ಇಬ್ಬರನ್ನು "ಒಂದೇ ದೇಹ"ವಾಗಿ ಮಾಡುತ್ತದೆ. ಸತ್ಯವೇದವು ಹೇಳುವಂತೆ, "ಸೂಳೆಯ ಸಂಸರ್ಗ ಮಾಡುವವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬದು ನಿಮಗೆ ತಿಳಿಯದೋ? ಅವರಿಬ್ಬರು ಒಂದೇ ಶರೀರವಾಗಿರುವರೆಂದು ದೇವರು ಹೇಳುತ್ತಾನಲ್ಲಾ." (1 ಕೊರಿ. 6:16).
ಹಳೆಯ ಒಡಂಬಡಿಕೆಯಲ್ಲಿ, ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯ ನಡುವಿನ ಲೈಂಗಿಕ ಸಂಸರ್ಗವು (ಸಂಗಮ) "ತಿಳಿದಿರುವುದು" ಎಂದು ಕರೆಯಲ್ಪಡುತ್ತಿತ್ತು. ಲೈಂಗಿಕ ಸಂಗಮವು ಕೇವಲ ಶಾರೀರಿಕ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಅದನ್ನು ಸುಲಭವಾಗಿ ಮರೆತು ಬಿಡಲು ಸಹ ಆಗುವುದಿಲ್ಲ. ಅದು ಇಬ್ಬರು ವ್ಯಕ್ತಿಗಳನ್ನು "ಒಂದೇ ಶರೀರ"ವನ್ನಾಗಿ ಮಾಡುತ್ತದೆ. ಈ ಕಾರಣಕ್ಕಾಗಿ ದೇವರು ಅಕ್ರಮ ಲೈಂಗಿಕ ನಡತೆಗೆ ಅಡ್ಡಿಮಾಡುವಂತ ಹಲವು ತಡೆಗಳನ್ನು ಇರಿಸಿದ್ದಾರೆ - ಕೇವಲ ಎರಡನ್ನು ಹೆಸರಿಸುವುದಾದರೆ, ಭಯಾನಕ ಕಾಯಿಲೆಗಳಾದ ’ಏಡ್ಸ್’ ('AIDS') ಮತ್ತು ಸಿಫಿಲಿಸ್ ('syphilis').
ಸತ್ಯವೇದವು ಹೀಗೆ ಹೇಳುತ್ತದೆ, "ಇತರರ ದೇಹಗಳನ್ನು ಅಕ್ರಮವಾಗಿ ಬಳಸುವವರನ್ನು ಸ್ವತಃ ದೇವರು ನ್ಯಾಯತೀರ್ಪು ಮಾಡುವರು" (ಇಬ್ರಿ. 13:4 - JBP ಭಾಷಾಂತರ).ಯುವಕರು ಸಾಮಾನ್ಯವಾಗಿ ಸುಖಭೋಗ ಮತ್ತು ಆನಂದಕ್ಕಾಗಿ ಹಾತೊರೆಯುತ್ತಾರೆ. ಆದರೆ ಅದಕ್ಕೆ ಸಂಬಂಧಿಸಿದ ಹೊಣೆಗಾರಿಕೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅವರು ಮದುವೆಯ ಜವಾಬ್ದಾರಿ ಇಲ್ಲದೆ ಲೈಂಗಿಕ ದಾಹವನ್ನು ತೀರಿಸುವ ದುಷ್ಪ್ರೇರಣೆ ಅವರಲ್ಲಿ ಇರುತ್ತದೆ. ಈ ರೀತಿಯಾಗಿ ಸ್ತ್ರೀಯರನ್ನು ಕೀಳುಭಾವದಿಂದ ಕಾಣುವ ಪುರುಷರು ತಮ್ಮ ಜೀವಿತಗಳಲ್ಲಿ ದೇವರ ನ್ಯಾಯತೀರ್ಪಿನ ಹೊರತಾಗಿ ಬೇರೆ ಏನನ್ನೂ ಗಳಿಸುವುದಿಲ್ಲ.
ಕೆಲವೊಮ್ಮೆ ಯುವಕರು ಭ್ರಷ್ಟರಾದ ತಮ್ಮ ಲೌಕಿಕ ಸ್ನೇಹಿತರ ಪ್ರಭಾವದಿಂದ, ಲೈಂಗಿಕ ಸಂಭೋಗದ ಮೂಲಕ ತಮ್ಮ ಪುರುಷತ್ವವನ್ನು ರುಜುವಾತು ಪಡಿಸುವ ಸವಾಲಿಗೆ ಒಳಗಾಗುತ್ತಾರೆ. ಅವರು ಒಬ್ಬ ಹುಡುಗಿಯೊಟ್ಟಿಗೆ ಸ್ನೇಹ ಸಂಬಂಧ ಬೆಳೆಸಿಕೊಳ್ಳದಿದ್ದರೆ ಅಥವಾ ಯಾವುದೇ ಲೈಂಗಿಕ ಸಾಹಸ ಮಾಡಿದ್ದೇವೆಂದು ಹೇಳಿಕೊಳ್ಳದಿದ್ದರೆ, ಸ್ನೇಹಿತರ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಆದರೂ ನಿಜವಾದ ಗಂಡಸುತನವು ಲೈಂಗಿಕ ಸ್ವಚ್ಛಂದತೆಯ ಮೂಲಕ ಸಿದ್ಧಪಡುವುದಿಲ್ಲ, ಸ್ವ-ನಿಯಂತ್ರಣವೇ ಅದರ ರುಜುವಾತು ಆಗಿರುತ್ತದೆ.
ಮಿತಿಮೀರಿದ ಮೋಹದಿಂದಾಗಿ ಆಶೀರ್ವಾದದ ಒಂದು ಭಾಗವನ್ನು "ಕಳೆದುಕೊಂಡ" ದಾವೀದನ ಉದಾಹರಣೆಯನ್ನು ನಮಗೆ ಸತ್ಯವೇದವು ಕೊಟ್ಟಿದೆ. ಆತನು ಬಿದ್ದುಹೋದ ಸಂದರ್ಭವನ್ನು ಗಮನಿಸಿರಿ. 2 ಸಮುವೇಲ 11:1,2 ನಮಗೆ ತಿಳಿಸುವಂತೆ, ದಾವೀದನು ಯುದ್ಧಕ್ಕೆ ಹೋಗಬೇಕಾಗಿದ್ದ ಸಮಯದಲ್ಲಿ ಸೋಮಾರಿತನದಿಂದ ತನ್ನ ಅರಮನೆಯಲ್ಲೇ ಉಳಕೊಂಡಿದ್ದನು. ಆತನು ತನ್ನ ಕರ್ತವ್ಯವನ್ನು ಗಮನಿಸದೆ ಸೋಮಾರಿಯಾಗಿ ಕಾಲ ಕಳೆಯುತ್ತಿದ್ದನು. ಆ ವೇಳೆಯಲ್ಲಿ ಬತ್ಷೆಬೆಯು ಆತನ ಕಣ್ಣಿಗೆ ಬಿದ್ದಳು. ಆತನು ಆಕೆಯನ್ನು ನೋಡದೆ ಪಕ್ಕಕ್ಕೆ ತಿರುಗಿಕೊಳ್ಳುವುದರ ಬದಲಾಗಿ, ಆಕೆಯನ್ನೇ ನೋಡುತ್ತಾ ಪಾಪದಲ್ಲಿ ಬಿದ್ದನು.
ಇದೇ ರೀತಿ ಸಂಸೋನನು ಹತೋಟಿಯಿಲ್ಲದ ಕಾಮಾಭಿಲಾಷೆಗಳ ಫಲವಾಗಿ ಆಶೀರ್ವಾದವನ್ನು ಸಂಪೂರ್ಣವಾಗಿ "ಕಳೆದುಕೊಂಡನು" ಎಂದು ನಾವು ಸತ್ಯವೇದದಲ್ಲಿ ನೋಡುತ್ತೇವೆ. ಆತನು ಸುಂದರ ಸ್ತ್ರೀಯರನ್ನು ನೋಡಿದಾಗ, ದೇವರ ಒಬ್ಬ ಸೇವಕನಾಗಿ ತನ್ನ ಕರೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟನು ಮತ್ತು ಹೀಗೆ ತನ್ನ ಸೇವೆಯ ಅವಕಾಶವನ್ನು ಕಳಕೊಂಡನು. ಇದೇ ರೀತಿಯಲ್ಲಿ ಆಗಿನಿಂದ ಈಗಿನವರೆಗೆ ಅನೇಕರು ಬಿದ್ದುಹೋಗಿದ್ದಾರೆ ಮತ್ತು ಸೇವೆಯ ಅವಕಾಶವನ್ನು ಸಹ ಕಳಕೊಂಡಿದ್ದಾರೆ.
ಇನ್ನೊಂದು ಕಡೆಯಲ್ಲಿ ನೋಡಿದರೆ, ನಾವು ಯೋಸೇಫನ ಕುರಿತಾಗಿ ಓದುತ್ತೇವೆ. ಆತನಿಗೆ ದಾವೀದನಿಗೆ ಇದ್ದಂತ ಸುಖ-ಸೌಲಭ್ಯಗಳು ಅಥವಾ ಉನ್ನತ ಸ್ಥಾನ ಇರಲಿಲ್ಲ ಮತ್ತು ಸಂಸೋನನಿಗೆ ಇದ್ದಂತ ದೇವರ ಸೇವೆಯ ಶ್ರೇಷ್ಠ ಕರೆಯೂ ಇರಲಿಲ್ಲ, ಆದಾಗ್ಯೂ ಆತನು ಮೋಹದ ಆಕರ್ಷಣೆಯ ಮೇಲೆ ಸಂಪೂರ್ಣ ಜಯವನ್ನು ಗಳಿಸಿದನು. ’ಆದಿಕಾಂಡ 39ನೇ ಅಧ್ಯಾಯ’ವನ್ನು ಪ್ರತಿಯೊಬ್ಬ ಯೌವನಸ್ಥನೂ ಓದಿ ಅಭ್ಯಾಸಿಸಬೇಕು. ಅದರ ’7ನೇ ವಚನ’ದಲ್ಲಿ, ಒಂದು ದಿನ ಹಠಾತ್ತಾಗಿ, ಯಾವ ಮುನ್ಸೂಚನೆಯೂ ಇಲ್ಲದೆ, ಯೋಸೇಫನಿಗೆ ಶೋಧನೆಯು ಎದುರಾಯಿತೆಂದು ನಾವು ನೋಡುತ್ತೇವೆ (ಆದಿ. 39:7). ಇದು ಹೀಗೆಯೇ ನಮ್ಮ ಬಳಿಗೆ ಬರುತ್ತದೆ. ನಾವು ಇದಕ್ಕಾಗಿ ಯಾವ ಪೂರ್ವ ಸಿದ್ಧತೆಯನ್ನು ಮಾಡದಿದ್ದರೆ, ನಾವು ನಿಶ್ಚಯವಾಗಿ ಬಿದ್ದು ಹೋಗುತ್ತೇವೆ. ಒಂದು ವೇಳೆ ಯೋಸೇಫನು ತನ್ನ ಮನಸ್ಸಿನಲ್ಲಿ ಕಾಮುಕ ಯೋಚನೆಗಳಲ್ಲಿ ತೊಡಗಿಸಿದ್ದಿದ್ದರೆ, ಅವನು ಸುಲಭವಾಗಿ ಆ ಶೋಧನೆಯಲ್ಲಿ ಬಿದ್ದು ಹೋಗುತ್ತಿದ್ದನು. ಆದರೆ ಯೋಸೇಫನು ದೇವರ ಸಾನ್ನಿಧ್ಯದಲ್ಲಿ ಇರುವುದನ್ನು ಅಭ್ಯಾಸ ಮಾಡಿದ್ದನು. ಆತನಿಗೆ ದೇವರಿಂದ ಕನಸುಗಳು ಕಾಣುತ್ತಿದ್ದನು. ಹಾಗಾಗಿ ಶೋಧನೆಯು ಎದುರಾದಾಗ, ಆತನ ದೃಷ್ಟಿ ಮುಂದೆ ನಿಂತಿದ್ದ ವ್ಯಕ್ತಿಯನ್ನು ನೋಡುವುದರ ಬದಲ್ಲಗೆ ದೇವರ ಮುಖವನ್ನು ನೋಡುತ್ತಿತ್ತು. ಒಂದು ವೇಳೆ ಯೋಸೇಫನು ಇತರರು ನೋಡುವುದಕ್ಕಾಗಿ ದೇವಭಕ್ತಿಯನ್ನು ತೋರಿಸುತ್ತ ಇದ್ದಿದ್ದರೆ ಮತ್ತು ಆತನ ಅಂತರಂಗದಲ್ಲಿ ಆ ಭಕ್ತಿಯು ಇರದೆ ಇದ್ದಿದ್ದರೆ, ಅವನು ಆ ದೊಡ್ಡ ಶೋಧನೆಗೆ ನಿಶ್ಚಯವಾಗಿ ಮಣಿಯುತ್ತಿದ್ದನು.
ಯೋಸೇಫನು ಪಾಪಕ್ಕೆ ಬೀಳದಂತೆ ತಡೆದದ್ದು ದೇವಭಯವಾಗಿತ್ತು, ಮತ್ತು ಅದು ತಪ್ಪು ಮಾಡಿ ಸಿಕ್ಕಿ ಬೀಳುವ ಭಯ ಅಥವಾ ದಂಡನೆಯ ಭಯವಾಗಿರಲಿಲ್ಲ (ಆದಿ. 39:9). ಅಯ್ಯೋ, ಈ ದಿನ ಅನೇಕ ಜನರನ್ನು ಪಾಪ ಮಾಡದಂತೆ ತಡೆಯುತ್ತಿರುವಂಥದ್ದು ಮೇಲೆ ಹೇಳಿರುವ ಎರಡನೆಯ ವಿಧವಾದ ಭಯವಾಗಿದೆ. ಆದರೆ ಯೋಸೇಫನು ದೇವರೊಂದಿಗೆ ಇರಿಸಿಕೊಂಡಿದ್ದ ಸಂಬಂಧ ನಾವು ಇಂದಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ನೋಡುವಂತ ತೋರಿಕೆಯ ಸಂಬಂಧಕ್ಕಿಂತ ಬಹಳ ಆಳವಾದದ್ದಾಗಿತ್ತು.
ನಾವು ಓದುವುದು ಏನೆಂದರೆ, ಯೋಸೇಫನು ಪೋಟೀಫರನ ಹೆಂಡತಿ ತನ್ನನ್ನು ಪಾಪಕ್ಕೆ ಸೆಳೆಯಲು ಪದೇ ಪದೇ ಮಾಡಿದ ಪ್ರಯತ್ನಗಳನ್ನು ವಿರೋಧಿಸಿದನು (ಆದಿ. 39:10). ಆತನು ಮೊದಲನೇ ಬಾರಿ "ಇಲ್ಲ" ಎಂದು ಹೇಳಿದನು, ಹಾಗಾಗಿ ಎರಡನೆಯ ಬಾರಿ "ಇಲ್ಲ" ಎಂದು ನಿರಾಕರಿಸುವದು ಇನ್ನೂ ಸುಲಭವಾಯಿತು ಮತ್ತು ಮೂರನೆಯ ಬಾರಿ ಅದು ಮತ್ತಷ್ಟು ಸುಲಭವಾಯಿತು. ನಾವು ಒಂದು ಕೀರ್ತನೆಯಲ್ಲಿ ಹಾಡುವಂತೆ,
"ಶೋಧನೆಗೆ ಮಣಿಯದಿರು, ಏಕೆಂದರೆ ಅದಕ್ಕೆ ತಲೆಬಾಗುವುದು ಪಾಪವು; ನಿನ್ನ ಪ್ರತಿಯೊಂದು ಜಯವು ಮುಂದೆ ಮತ್ತೊಂದು ಜಯಕ್ಕೆ ನಡೆಸುತ್ತದೆ".ಆದಿಕಾಂಡ 39:10 ನಮಗೆ ತೋರಿಸಿಕೊಡುವುದು ಏನೆಂದರೆ, ಯೋಸೇಫನು ಆ ಸ್ತ್ರೀಯ ಬಳಿಯಲ್ಲಿ ಇರುವುದಕ್ಕೂ ಸಿದ್ಧನಿರಲಿಲ್ಲ. ಯಾವಾಗಲೂ ಹಿಂಬಾಲಿಸುವುದಕ್ಕೆ ಯೋಗ್ಯವಾದ ಅತ್ಯಂತ ಸುರಕ್ಷಿತ ಮಾರ್ಗ ಇದಾಗಿದೆ. ಶೋಧನೆಯ ಪರಿಸರದಿಂದ ಸಾಧ್ಯವಾದಷ್ಟು ದೂರ ಓಡಿಹೋಗುವುದು.
ಯೋಸೇಫನ ದೃಷ್ಟಾಂತವು ನಮಗೆ ನೀಡುವ ಎಚ್ಚರಿಕೆ ಏನೆಂದರೆ, ನಾವು ವಿರುದ್ಧ ಲಿಂಗದವರೊಂದಿಗೆ ನಮ್ಮ ಸಂಬಂಧದಲ್ಲಿ ಎಚ್ಚರಿಕೆ ವಹಿಸಬೇಕು. ಅದಲ್ಲದೆ ಈ ಎಚ್ಚರಿಕೆ ನಾವು ವಹಿಸಬೇಕಾದದ್ದು ಆಕರ್ಷಕ ಹುಡುಗಿಯರ ವಿಷಯದಲ್ಲಿ ಮಾತ್ರವಲ್ಲ, ಏಕೆಂದರೆ ಅಷ್ಟೊಂದು ಅಂದವಿಲ್ಲದ ಹುಡುಗಿಯರಿಂದಲೂ ಶೋಧನೆ ಉಂಟಾಗಬಹುದು. ಇಂತಹ ಕೆಲವು ಹುಡುಗಿಯರು, ತಮ್ಮಲ್ಲಿ ಆಕರ್ಷಣೆ ಕಡಿಮೆ ಇದೆಯೆಂದು ಅರಿತುಕೊಂಡು, ಅದಕ್ಕೆ ಬದಲಾಗಿ ಹುಡುಗರಿಗೆ ತಮ್ಮ ದೇಹದ ಸಂಪರ್ಕ ಮಾಡುವುದಕ್ಕೂ ಅವಕಾಶ ಕೊಡಬಹುದು.
ಸತ್ಯವೇದವು ಈ ರೀತಿಯಾಗಿ ನಮಗೆ ಮುನ್ನೆಚ್ಚರಿಕೆ ನೀಡುತ್ತದೆ "ಜಾರತ್ವವನ್ನು ಮಹಾಮಾರಿ ರೋಗದಂತೆ ತಿಳಿದು ದೂರವಿರಿಸು! ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹಕ್ಕೆ ಹೊರಗಾಗಿವೆ, ಆದರೆ ಜಾರತ್ವ ಮಾಡುವವನು ತನ್ನ ದೇಹಕ್ಕೆ ಹಾನಿಕರವಾದ ವಾಪವನ್ನು ಮಾಡುತ್ತಾನೆ. ನಿಮ್ಮೊಳಗೆ ನೆಲೆಗೊಂಡಿರುವ ದೇವರ ವರವಾದ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯಾಗಿದೆ ಎಂಬುದನ್ನು ನೀನು ಮರೆತುಬಿಟ್ಟಿದ್ದೀಯೋ? ಎಷ್ಟು ಅಪಾರ ಬೆಲೆಯನ್ನು ಕೊಟ್ಟು ನೀವು ಕ್ರಯಕ್ಕೆ ಕೊಳ್ಳಲ್ಪಟ್ಟಿದ್ದೀರಿ! ಆದ ಕಾರಣ ನಿಮ್ಮ ದೇಹದ ಮೂಲಕ ದೇವರ ಪ್ರಭಾವವನ್ನು ಪ್ರಕಾಶಪಡಿಸಿರಿ" (1 ಕೊರಿ. 6:18-20 - JBP).
ಹಾಗೆಯೇ ಇನ್ನೊಂದು ಕಡೆ, "ಯೌವನಸ್ಥರು ಹೆಚ್ಚಾಗಿ ಮಾಡುವ ದುರಾಲೋಚನೆಗಳನ್ನು ನಿನ್ನಲ್ಲಿ ಹುಟ್ಟಿಸುವ ಪ್ರತಿಯೊಂದು ಸನ್ನಿವೇಶದಿಂದ ದೂರ ಓಡಿಹೋಗು" (2 ತಿಮೊ. 2:22 - TLB).
ಯೋಸೇಫನು ಇದನ್ನೇ ಮಾಡಿದನು. ಅವನು ಅಪನಿಂದೆಗೆ ಅಥವಾ ಕಾರಾಗ್ರಹವಾಸಕ್ಕೂ ಹೆದರಲಿಲ್ಲ, ಆದರೆ ಆತನು ಕಾಮುಕತೆಗೆ ತಲೆಬಾಗಲಿಲ್ಲ. ದೇವರು ಅವನನ್ನು ಸನ್ಮಾನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ದಿನ ಅನೇಕ ಯುವ ಜನರು ಈ ವಿಷಯದಲ್ಲಿ ಸೋತಿರುವುದರಿಂದ ದೇವರು ಬಹುಶಃ ಅವರನ್ನು ಸನ್ಮಾನಿಸುತ್ತಿಲ್ಲ.
ಸ್ವಲಿಂಗ ಕಾಮಗಂಡಸರಿಗೆ ಗಂಡಸರೊಂದಿಗೆ ಮತ್ತು ಹೆಂಗಸರಿಗೆ ಹೆಂಗಸರೊಂದಿಗೆ ಕಾಮಾಭಿಲಾಷೆ ಇದ್ದಾಗ ಅದನ್ನು "ಸ್ವಲಿಂಗ ಕಾಮ" ಎಂದು ಉಲ್ಲೇಖಿಸಲಾಗುತ್ತದೆ. ಲೋಟನ ಕಾಲದಲ್ಲಿ ಈ ಪಾಪದ ಕಾರಣದಿಂದಾಗಿ ದೇವರು ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ನ್ಯಾಯತೀರ್ಪಿಗೆ ಒಳಪಡಿಸಿ ನಾಶಪಡಿಸಿದರು. ಈ ಪಾಪವನ್ನು ಯಾಜಕಕಾಂಡ 18:22 ಮತ್ತು 1ಕೊರಿಂಥದವರಿಗೆ 6:9,10ರಲ್ಲಿ ಸ್ಪಷ್ಟ ಪದಗಳಲ್ಲಿ ಖಂಡಿಸಲಾಗಿದೆ. ಸತ್ಯವೇದವು ಸ್ವಲಿಂಗ ಕಾಮದಲ್ಲಿ ತೊಡಗಿರುವ ದುರಾಚಾರಿಗಳನ್ನು ಖಂಡಿಸುತ್ತಾ ನೀಡಿರುವ ಎಚ್ಚರಿಕೆ ಏನೆಂದರೆ, ಅಂಥವರು "ತಮ್ಮ ವಕ್ರ ನಡತೆಯ ಫಲವಾಗಿ ತಮ್ಮ ಸ್ವಂತ ವ್ಯಕ್ತಿತ್ವದಲ್ಲಿ ಮಾರ್ಪಾಟು ಉಂಟಾಗುವುದನ್ನು ಕಾಣುವರು" (ರೋಮಾ. 1:26,27 - JB Phillips ಭಾಷಾಂತರ). ಹಳೆಯ ಒಡಂಬಡಿಕೆಯ ನಿಯಮದ ಪ್ರಕಾರ, ’ಯಾವನಾದರೂ ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಿದರೆ ಅವರಿಬ್ಬರಿಗೂ ಈ ಅಸಹ್ಯ ಕಾರ್ಯಕ್ಕಾಗಿ ಮರಣಶಿಕ್ಷೆಯಾಗಬೇಕು’ (ಯಾಜ. 20:13).
ಒಬ್ಬ ವಿಶ್ವಾಸಿಯು ಇಂತಹ ಸ್ವಲಿಂಗಕಾಮದಿಂದ ದೂರವಿರಬೇಕು; ಇದು ಮಾತ್ರವಲ್ಲದೆ ಆತನು ಸ್ವಲಿಂಗದ ಯಾವ ವ್ಯಕ್ತಿಯ ಬಗ್ಗೆಯೂ ಯಾವುದೇ ವಿಧವಾದ ಅಸ್ವಾಭಾವಿಕ ಅನುರಾಗವನ್ನು ಇರಿಸಿಕೊಳ್ಳಬಾರದು. ಇದರ ಜೊತೆಗೆ ಆತನು ಸ್ವಲಿಂಗಕಾಮದ ಪ್ರವೃತ್ತಿಯುಳ್ಳ ಜನರಿಂದ ಬರುವ ಗುಪ್ತ ಸೂಚನೆಗಳನ್ನು ವಿರೋಧಿಸಬೇಕು. ನೀವು ಈಗಾಗಲೇ ಈ ದುರಾಭ್ಯಾಸದ ಹಿಡಿತದಲ್ಲಿದ್ದರೆ, ಅದರಿಂದ ಬಿಡುಗಡೆಗಾಗಿ ಕರ್ತನ ಬಳಿ ಮೊರೆಯಿಟ್ಟು ಪ್ರಾರ್ಥಿಸಬೇಕು ಮತ್ತು ವಿರುದ್ಧ ಲಿಂಗದ ಜನರೊಂದಿಗೆ ಆರೋಗ್ಯಕರ ಸಾಮಾನ್ಯ ಸಂಬಂಧಗಳನ್ನು ಇರಿಸಿಕೊಳ್ಳಬೇಕು. ಇದರ ಜೊತೆಗೆ ವಯಸ್ಸಿನಲ್ಲಿ ಹಿರಿಯನಾದ ಒಬ್ಬ ವಿಶ್ವಾಸಿಯ ಸಲಹೆಯನ್ನು ಮತ್ತು ಪ್ರಾರ್ಥನಾ ಬೆಂಬಲವನ್ನು ಪಡೆದುಕೊಂಡರೆ, ಅದು ಉಪಯೋಗಕರವಾಗುತ್ತದೆ.
ವೈರಿಯನ್ನು ಸೋಲಿಸುವುದುಇಂದಿನ ದಿನ ನಮಗೆ ಲೈಂಗಿಕ ಆಕರ್ಷಣೆಯ ಕ್ಷೇತ್ರದಲ್ಲಿ ಅನೇಕ ಶೋಧನೆಗಳು ಎದುರಾಗುತ್ತವೆ. ಸತ್ಯವೇದದಲ್ಲಿ ಸೈತಾನನನ್ನು, "ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಿರುವ ಗರ್ಜಿಸುವ ಸಿಂಹ" ಎಂಬುದಾಗಿ ಮತ್ತು "ಜನರನ್ನು ಕುಯುಕ್ತಿಗೆ ಒಳಪಡಿಸಿ ಮೋಸಗೊಳಿಸುವ ಸರ್ಪ" ಎಂಬುದಾಗಿ ವರ್ಣಿಸಲಾಗಿದೆ. ಯುವ ಜನರನ್ನು ಕಾಮುಕತೆಯಲ್ಲಿ ಸಿಲುಕಿಸಿ, ಅವರ ಜೀವನವನ್ನು ನಷ್ಟಗೊಳಿಸುವುದು ಸುಲಭವಾದ ಕಾರ್ಯವೆಂದು ಆತನಿಗೆ ತಿಳಿದಿದೆ. ನಮ್ಮ ಮನಸ್ಸಿನ ಮೇಲೆ ಹತೋಟಿ ಇರಿಸಿ, ನಾವು ಯಾವಾಗಲೂ ಎಚ್ಚರಿಕೆಯಿಂದ ಇರುವುದರಲ್ಲಿ ನಮ್ಮ ಸುರಕ್ಷತೆಯಿದೆ, ಏಕೆಂದರೆ "ನಿರಂತರ ಎಚ್ಚರಿಕೆಯೇ ಬಿಡುಗಡೆಗಾಗಿ ಕೊಡಬೇಕಾದ ಬೆಲೆಯಾಗಿದೆ" ಎಂಬ ಹೇಳಿಕೆಯು ಈ ಕ್ಷೇತ್ರದಲ್ಲೂ ಸಹ ನಿಜವಾಗಿದೆ.
ದೇವರ ವಾಕ್ಯದಲ್ಲಿ ಕಂಡುಬರುವ ನಿಷೇಧಾಜ್ಞೆಗಳು ನಮ್ಮನ್ನು ಶತ್ರುವಿನ ಬಲೆಯಿಂದ ರಕ್ಷಿಸಲಿಕ್ಕಾಗಿ ಕೊಡಲ್ಪಟ್ಟಿವೆ. ದೇವರು ನಮಗೆ ತನ್ನ ವಾಕ್ಯದಲ್ಲಿ ವಿಶೇಷವಾಗಿ ’ಜ್ಞಾನೋಕ್ತಿಗಳ ಪುಸ್ತಕ’ದಲ್ಲಿ ಅನೇಕ ಎಚ್ಚರಿಕೆಗಳನ್ನು ನೀಡಿದ್ದಾರೆ. ಪ್ರತಿಯೊಬ್ಬ ಯುವಕ ಮತ್ತು ಯುವತಿಯು ಈ ಪುಸ್ತಕವನ್ನು ಪದೇ ಪದೇ ಓದಿಕೊಳ್ಳಬೇಕು. ಕೆಲವು ವಿಶ್ವಾಸಿಗಳು ’ಜ್ಞಾನೋಕ್ತಿಗಳ ಪುಸ್ತಕ’ವನ್ನು ತಿಂಗಳಿಗೆ ಒಂದು ಸಲ - ದಿನಕ್ಕೊಂದು ಅಧ್ಯಾಯದಂತೆ ಓದಿಕೊಳ್ಳುವ ಉತ್ತಮ ಅಭ್ಯಾಸವನ್ನು ಇಟ್ಟುಕೊಂಡಿದ್ದಾರೆ. ಆ ಪುಸ್ತಕವು ಶತ್ರುವು ಬಳಸುವ ಒಳದಾರಿಗಳ ಬಗ್ಗೆ ನಮಗೆ ಮುನ್ನೆಚ್ಚರಿಕೆ ನೀಡುತ್ತದೆ.
ನಾವು ಜಯಶಾಲಿಗಳಾಗುವ ದೃಢನಿರ್ಧಾರವನ್ನು ಕೈಗೊಂಡರೆ, ನಾವು ಒಂದು ಯುದ್ಧಕ್ಕೆ ಇಳಿಯಲೇಬೇಕಾಗುತ್ತದೆ. ಆದರೆ ಇದರಲ್ಲಿ ನಾವು ಸೋಲನ್ನು ಒಪ್ಪಿಕೊಳ್ಳಬಾರದು. ನಾವು ಈಗಾಗಲೇ ಬಿದ್ದುಹೋಗಿದ್ದರೆ, ನಾವು ನಮ್ಮ ಪಾಪಗಳನ್ನು ದೇವರ ಮುಂದೆ ಅರಿಕೆ ಮಾಡಿಕೊಳ್ಳೋಣ. ಅವರು ನಮ್ಮನ್ನು ಕ್ಷಮಿಸುವುದಕ್ಕೆ ಮತ್ತು ನಮ್ಮ ಹಿಂದಿನ ದುರಾಚಾರಗಳಿಂದ ಹಾಗೂ ಅಶುದ್ಧ ಆಲೋಚನೆಗಳಿಂದ ನಮ್ಮನ್ನು ಶುದ್ಧೀಕರಿಸುವುದಕ್ಕೆ ಉತ್ಸುಕರಾಗಿದ್ದಾರೆ. ಬಹಳ ಗಾಢವಾದ ಪಾಪಗಳಲ್ಲಿ ತೊಡಗಿದ್ದ ಕೆಲವರು, ಪಾಪ ಕ್ಷಮಾಪಣೆಯನ್ನು ಹೊಂದಿದ್ದರೂ, ತಮ್ಮ ಪಾಪದ ಪರಿಣಾಮವನ್ನು ಅನುಭವಿಸಬೇಕಾಗಬಹುದು. ಆದರೆ ನಾವು ಅಷ್ಟು ಗಂಭೀರವಾದ ಪಾಪ ಮಾಡಿರದಿದ್ದರೆ, ನಾವು ಎಚ್ಚರಿಕೆ ವಹಿಸೋಣ. ಏಕೆಂದರೆ ಸತ್ಯವೇದವು ತಿಳಿಸುವಂತೆ, ’ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರವಾಗಿರಲಿ, ಆತನು ಬೀಳುವ ಹೆಚ್ಚಿನ ಸಾಧ್ಯತೆ ಇದೆ’ (1 ಕೊರಿ. 10:12).
ದೇವರು ಎಲ್ಲಾ ವೇಳೆಯಲ್ಲಿ ನಮ್ಮನ್ನು ಜಯಶಾಲಿಗಳಾಗಿಸಲು ಬಯಸುತ್ತಾರೆ (2 ಕೊರಿ. 2:14). ಅವರು ನಮ್ಮ ಬಾಳಿನಲ್ಲಿ ಇದನ್ನು ಮಾಡುವುದಕ್ಕಾಗಿ, ನಾವು ಅವರಲ್ಲಿ ನಂಬಿಕೆ ಇಡಬೇಕು.
ನಮ್ಮೆಲ್ಲರಲ್ಲಿ ವಿರುದ್ಧ ಲಿಂಗದ ಒಡನಾಟ, ಸ್ನೇಹ ಮತ್ತು ಮೆಚ್ಚುಗೆಗಳಿಗಾಗಿ ಹಾತೊರೆಯುವ ಪ್ರವೃತ್ತಿ ಇರುತ್ತದೆ. ನಾವು ಸ್ವ-ಲಿಂಗದವರ ಒಳ್ಳೆಯ ಅಭಿಪ್ರಾಯಕ್ಕಿಂತ ಹೆಚ್ಚಾಗಿ, ವಿರುದ್ಧ ಲಿಂಗದವರ ಮೆಚ್ಚುಗೆಯನ್ನು ಅಪೇಕ್ಷಿಸುತ್ತೇವೆ. ನಾವು ಸ್ವ-ಲಿಂಗದವರ ಅವಮಾನವನ್ನಾದರೂ ಸಹಿಸಿಕೊಳ್ಳಬಹುದು, ಆದರೆ ವಿರುದ್ಧ ಲಿಂಗದವರು ನಮ್ಮನ್ನು ನಿರ್ಲಕ್ಷಿಸಿದಾಗ ನಾವು ಬಹಳ ನಿರಾಶೆಗೊಳ್ಳುತ್ತೇವೆ. ಒಬ್ಬ ವ್ಯಕ್ತಿಯು ತನ್ನಲ್ಲಿ ಇಂತಹ ಭಾವನೆ ಇಲ್ಲವೆಂದು ಹೇಳಿಕೊಂಡರೆ, ಆತನು ಬಹುಶಃ ಒಬ್ಬ ಸಲಿಂಗ ಕಾಮಿಯಾಗಿರಬೇಕು, ಅಥವಾ ಸುಳ್ಳುಗಾರನಾಗಿರಬೇಕು!
ಎಲ್ಲಾ ಸಾಮಾನ್ಯ ಮಾನವರಲ್ಲಿ, ಯೌವನ ಪ್ರಾಯದ ಆರಂಭದಿಂದ (12ರಿಂದ 14ರ ವಯಸ್ಸಿನಲ್ಲಿ) ವಿರುದ್ಧ ಲಿಂಗದ ಕುರಿತಾದ ಮನೋಭಾವದಲ್ಲಿ ಮಾರ್ಪಾಡು ಶುರುವಾಗುತ್ತದೆ. ಈ ವಯಸ್ಸಿಗಿಂತ ಮುಂಚೆ, ಹುಡುಗರು ಸಾಮಾನ್ಯವಾಗಿ ಹುಡುಗರ ಜೊತೆಗಿರಲು, ಹುಡುಗಿಯರು ಹುಡುಗಿಯರ ಜೊತೆಗಿರಲು ಬಯಸುತ್ತಾರೆ. ಆದರೆ ಯೌವನದ ಆರಂಭದಿಂದ, ಹುಡುಗರಲ್ಲಿ ಮತ್ತು ಹುಡುಗಿಯರಲ್ಲಿ, ವಿರುದ್ಧ ಲಿಂಗದ ಬಗ್ಗೆ ಒಂದು ಆಕರ್ಷಣೆ ಹುಟ್ಟುತ್ತದೆ - ಆದರೆ ಅವರು ಇದನ್ನು ಒಪ್ಪಿಕೊಳ್ಳಲು ಸಿದ್ಧರಾಗಿರುವುದಿಲ್ಲ. ಈ ಆಕರ್ಷಣೆ ಕೆಲವೊಮ್ಮೆ ಕೇವಲ ತಮ್ಮ ಉಡಿಗೆ-ತೊಡಿಗೆಯ ಬಗ್ಗೆ ಮತ್ತು ಹಾವ-ಭಾವಗಳ ಬಗ್ಗೆ ಹೆಚ್ಚಿನ ಕಾಳಜಿಯ ಮೂಲಕ ಅಥವಾ ವಿರುದ್ಧ ಲಿಂಗದವರ ಹಾಜರಿದ್ದಾಗ ಹೆಚ್ಚಿನ ಸ್ನೇಹಪರ ನಡವಳಿಕೆಯ ಮೂಲಕ ಪ್ರಕಟವಾಗಬಹುದು. ಇಂತಹ ಆಕರ್ಷಣೆಯು ಸ್ವಾಭಾವಿಕವಾದದ್ದು ಮತ್ತು ಅನಿವಾರ್ಯವಾದದ್ದು, ಮತ್ತು ತಾನಾಗಿಯೇ ಇದು ಪಾಪಕರವಲ್ಲ.
ದೇವರು ಸ್ವತಃ ತಾನೇ ನಮ್ಮನ್ನು ಸ್ತ್ರೀ-ಪುರುಷರಾಗಿ ಸೃಷ್ಟಿ ಮಾಡಿರುವಾಗ, ನಾವು ವಿರುದ್ಧ ಲಿಂಗದ ಸದಸ್ಯರೊಂದಿಗೆ ಸ್ವಾಭಾವಿಕ ಸ್ನೇಹಭಾವದಿಂದ ಇರುವುದನ್ನು ಅವರು ಖಂಡಿತವಾಗಿ ನಿರೀಕ್ಷಿಸುತ್ತಾರೆ. ಇಂತಹ ಸ್ನೇಹಭಾವದ ಪ್ರವೃತ್ತಿಯನ್ನು ನಾವು ಅಸ್ವಾಭಾವಿಕವಾಗಿ ಅದುಮಿ ಇಡಬೇಕೆಂದು ದೇವರು ನಿರೀಕ್ಷಿಸುವುದಿಲ್ಲ. ಆದರೆ ಇಂತಹ ಪ್ರವೃತ್ತಿಯು ಎಲ್ಲೆ ಮೀರಿ ಹೋಗದಂತೆ ಅಥವಾ ವಿಪರೀತ ಸ್ಥಿತಿಗೆ ತಲುಪದಂತೆ ಅದನ್ನು ಹತೋಟಿಯಲ್ಲಿ ಇರಿಸಿಕೊಳ್ಳಬೇಕೆಂದು ಅವರು ನಮಗೆ ತಿಳಿಸಿದ್ದಾರೆ. ನಿಶ್ಚಯವಾಗಿ, ವಿರುದ್ಧ ಲಿಂಗದ ಸದಸ್ಯರೊಂದಿಗೆ ಅತಿಯಾದ ಗೆಳೆತನವು ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡಬಹುದು - ವಿಶೇಷವಾಗಿ ಇಂತಹ ಗೆಳೆತನವು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿ ಬೆಳೆದಾಗ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ವಿರುದ್ಧ ಲಿಂಗದ ಸದಸ್ಯರೊಂದಿಗೆ ಸಂಬಂಧವನ್ನು ಸಂಪೂರ್ಣವಾಗಿ ಕಡಿದು ಹಾಕುವುದರಲ್ಲೂ ಸಹ ಇಷ್ಟೇ ದೊಡ್ಡ ಅಪಾಯಗಳು ಅಡಗಿವೆ.
ಕೆಲವು ಜನರು ತಾವು ಶ್ರೇಷ್ಠ ಆತ್ಮಿಕರೆಂದು ಭಾವಿಸುತ್ತಾರೆ ಮತ್ತು ವಿರುದ್ಧ ಲಿಂಗದ ಸದಸ್ಯರೊಂದಿಗೆ ಸಂಭಾಷಣೆ ಮಾಡುವುದನ್ನು ಸಹ ಬಿಟ್ಟುಬಿಡುತ್ತಾರೆ. ಆದರೆ ಇದು ಅವರ ಆತ್ಮಿಕ ಶ್ರೇಷ್ಠತೆಯನ್ನು ಸೂಚಿಸುವುದಿಲ್ಲ, ಆದರೆ ಅವರು ಅಸ್ವಾಭಾವಿಕವಾಗಿ ನಡೆಯುತ್ತಿದ್ದಾರೆ ಎಂದು ತೋರಿಸುತ್ತದೆ, ಅಷ್ಟೇ. ವಿರುದ್ಧ ಲಿಂಗದವರೊಂದಿಗೆ ಸ್ನೇಹಪರ ವರ್ತನೆಯು ಆತ್ಮಿಕವಾದದ್ದಲ್ಲ ಎನ್ನುವ ಅಭಿಪ್ರಾಯವು, ವಿವಾಹಿತ ಸ್ಥಿತಿಗಿಂತ ಅವಿವಾಹಿತ ಸ್ಥಿತಿಯು ಹೆಚ್ಚು ಆಶೀರ್ವಾದಕರ ಎಂದು ಬೋಧಿಸುವ ಸಿದ್ಧಾಂತಕ್ಕೆ ಸೇರಿದ್ದಾಗಿದೆ. ದೇವಪ್ರೇರಿತವಲ್ಲದ ಇಂತಹ ಬೋಧನೆಗಳು ಮರೆಯಾದ ಪಾಪಗಳನ್ನು ಹೆಚ್ಚಿಸುತ್ತವೆ, ಅಷ್ಟೇ. ಇದನ್ನು ಪುಷ್ಟೀಕರಿಸುವ ರುಜುವಾತು ಏನೆಂದರೆ, ವಿವಾಹ ಮಾಡಿಕೊಳ್ಳದಿರುವ ಧಾರ್ಮಿಕ ಮಾರ್ಗವನ್ನು ಆರಿಸಿಕೊಂಡ ಅನೇಕರು ಜೀವಿಸುತ್ತಿರುವ ಭ್ರಷ್ಟ ಜೀವನ. ಇದೇ ರೀತಿಯಾಗಿ, ಸ್ವಲಿಂಗದ ಜನರೊಟ್ಟಿಗೆ ಮಾತ್ರ ಬೆರೆಯುವ ಜನರ ಪ್ರವೃತ್ತಿ ಮತ್ತು ಖಾಸಗಿ ಹವ್ಯಾಸಗಳು, ಎಲ್ಲಾ ಸ್ತ್ರೀ-ಪುರುಷರ ಜೊತೆಗೆ ಸಹಜವಾಗಿ ಸೇರಿಕೊಳ್ಳುವ ಜನರೊಂದಿಗೆ ಹೋಲಿಸಿದಾಗ, ಯಾವಾಗಲೂ ಹೆಚ್ಚು ಹಾನಿಕಾರಕವಾಗಿ ಕಂಡುಬರುತ್ತವೆ.
ಮೇಲೆ ಹೇಳಲಾಗಿರುವ ವಿಷಯವು ವಿರುದ್ಧ ಲಿಂಗದೊಂದಿಗೆ ಯಾವುದೇ ಶಿಸ್ತು ನಿಯಮವಿಲ್ಲದ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತಿಲ್ಲ. ಏಕೆಂದರೆ ಅಂತಹ ಸ್ವಾತಂತ್ರ್ಯವು ಒಬ್ಬ ವ್ಯಕ್ತಿಯನ್ನು ಸ್ವೇಚ್ಛಾಚಾರದ ಇನ್ನೊಂದು ವಿಪರೀತ ಸ್ಥಿತಿಗೆ ಕರೆದೊಯ್ಯುತ್ತದೆ. ನಾವು ಆರೋಗ್ಯಕರವಾದ ಮಧ್ಯಮಾರ್ಗವನ್ನು ಸಮರ್ಥಿಸುತ್ತೇವೆ, ಅಷ್ಟೇ.
’ಡಾ. ಹರ್ಬರ್ಟ್ ಗ್ರೇ’ಯವರು ಬರೆದಿರುವ "Men, Women and God" ಎಂಬ ಗ್ರಂಥದಲ್ಲಿ ಹೇಳಿರುವಂತೆ, "ಪುರುಷರು ಮತ್ತು ಸ್ತ್ರೀಯರ ನಡುವಿನ ಪರಸ್ಪರ ಸಂಬಂಧವು ಒಡನಾಡಿಗಳ ಸಂಬಂಧವಾಗಿದೆ ಮತ್ತು ವಿವಾಹದಲ್ಲಿ ಮಾತ್ರವಲ್ಲದೆ ಇತರ ಸಂಪರ್ಕಗಳಲ್ಲಿಯೂ ಅದು ಸಂತೋಷ ಮತ್ತು ಅಭಿವೃದ್ಧಿಗೆ ಕಾರಣವಾಗಬಹುದು. ಇದು ಎಷ್ಟೋ ಉಲ್ಲಾಸಕರ ಮತ್ತು ಸ್ಪೂರ್ತಿದಾಯಕವಾಗಿದೆ. ದೇವರು ಮಾನವ ಕುಲವನ್ನು ಇಂತಹ ಎರಡು ಭಾಗಗಳಾಗಿ ವಿಭಜಿಸಿ ಸೃಷ್ಟಿಸಿದ್ದು, "ಅತಿ ಸೊಗಸಾದ ದೈವಿಕ ಯೋಜನೆಗಳಲ್ಲೊಂದು," ಎಂದು ನಾವು ಪೂಜ್ಯಭಾವದಿಂದ ಹೇಳಬಹುದು. ಜೀವನದ ವಿವಿಧ ಕ್ಷೇತ್ರಗಳಲ್ಲಿ, ಕೆಲವು ಸ್ಪಷ್ಟವಾದ ಸಂದರ್ಭಗಳನ್ನು ಹೊರತುಪಡಿಸಿ, ಸ್ತ್ರೀ-ಪುರುಷರು ಒಬ್ಬರಿಗೊಬ್ಬರು ಪೂರಕವಾಗಿ ಮತ್ತು ಪ್ರಚೋದಕರಾಗಿ ಇರುತ್ತಾರೆ ಮತ್ತು ತಮ್ಮ ಈ ರೀತಿಯ ಸಹಭಾಗಿತ್ವದ ಮೂಲಕ, ವೈವಿಧ್ಯತೆಯಿಲ್ಲದ ಜೀವನವನ್ನು ಪರಿವರ್ತಿಸಿ ಬಹಳ ದೊಡ್ಡದೂ ಶ್ರೇಷ್ಠವಾದದ್ದೂ ಆದ ಜೀವನವನ್ನು ಪ್ರಾಪ್ತವಾಗಿಸುತ್ತಾರೆ".
ಗೆಳೆತನಗಳುಯುವಕರು ಯುವತಿಯರನ್ನು ತಮ್ಮ ಅಕ್ಕತಂಗಿಯರೆಂದು ಎಣಿಸಿ, ಶುದ್ಧಭಾವದಿಂದ ನಡೆಯುವಂತೆ ಸತ್ಯವೇದವು ಬೋಧಿಸುತ್ತದೆ (1 ತಿಮೊ. 5:2). ಬೇರೊಂದು ರೀತಿಯಲ್ಲಿ ಹೇಳುವುದಾದರೆ, ನೀವು ನಿಮ್ಮ ಸ್ವಂತ ತಂಗಿಯನ್ನು ಇತರ ಪುರುಷರು ಹೇಗೆ ನೋಡಬೇಕೆಂದು ಬಯಸುತ್ತೀರೋ, ಅದೇ ರೀತಿಯಾಗಿ ನೀವು ಒಬ್ಬ ಯುವತಿಯನ್ನು ನೋಡಬೇಕು. ಇದು ಎಲ್ಲಾ ವೇಳೆಯಲ್ಲಿ ಅನುಸರಿಸಲು ಯೋಗ್ಯವಾದ ನಿಯಮವಾಗಿದೆ.
ಸ್ತ್ರೀ-ಪುರುಷರು ಗೌರವ ಮತ್ತು ಸನ್ಮಾನ ಮನೋಭಾವದಿಂದ, ಮತ್ತು ಆತ್ಮಸಂಯಮದಿಂದ ಹಾಗೂ ಹತೋಟಿ ಇಟ್ಟುಕೊಂಡು ಒಬ್ಬರೊಂದಿಗೊಬ್ಬರು ವ್ಯವಹರಿಸಬೇಕು. ವಿರುದ್ಧ ಲಿಂಗದ ಸದಸ್ಯರೊಂದಿಗೆ ನಾವು ಅತಿ ವೈಯಕ್ತಿಕವಾಗಿ ಅಥವಾ ಬಹಳ ಕೌತುಕ ಉಳ್ಳವರಾಗಿ ಅಥವಾ ಹುಡುಗಾಟಿಕೆಯಿಂದ ನಡೆದುಕೊಳ್ಳಬಾರದು. ನಮ್ಮ ನಡವಳಿಕೆಯಲ್ಲಿ ಯಾವಾಗಲೂ ಸ್ವಲ್ಪ ನಿಯಂತ್ರಣ ಅಥವಾ ಒಂದಿಷ್ಟು ಗಂಭೀರತೆ ಉಳಿಸಿಕೊಳ್ಳುವುದು ಯೋಗ್ಯವಾಗಿರುತ್ತದೆ. ಹಾಗಿದ್ದರೂ, ಇಲ್ಲಿ ವಿನೋದಭಾವಕ್ಕೆ ಆಸ್ಪದವಿಲ್ಲವೆಂದು ಇದರ ಅರ್ಥವಲ್ಲ. ಆದರೆ ಗಮನಿಸಬೇಕಾದ ಅಂಶವೆಂದರೆ, ವಿರುದ್ಧ ಲಿಂಗದ ಸದಸ್ಯರ ಎದುರು, ನಾವು ಬೇರೆ ವೇಳೆಯಲ್ಲಿ ಮಾಡುವುದಕ್ಕಿಂತ ಹೆಚ್ಚಾಗಿ ಹುಡುಗಾಟಿಕೆಯ ಪ್ರದರ್ಶನ ಮಾಡುವಂತೆ ನಮ್ಮ ಮನಸ್ಸು ನಮ್ಮನ್ನು ಸೆಳೆಯುತ್ತದೆ ಮತ್ತು ಇದರಿಂದ ಅಪಾಯಕರ ಪರಿಣಾಮ ಉಂಟಾಗಬಹುದು.
ಸ್ತ್ರೀ-ಪುರುಷರ ನಡುವಿನ ಗೆಳೆತನವು ಹಠಾತ್ತಾಗಿ ಮತ್ತು ಹೆಚ್ಚು ಕಡಿಮೆ ಯಾವುದೇ ಮುನ್ಸೂಚನೆ ಇಲ್ಲದೆ ಬೆಳೆದು ಬಿಡುತ್ತದೆ. ಏಕೆಂದರೆ ಯಾವಾಗಲೂ ಹುಡುಗನು ತನ್ನ ಜಾಣ್ಮೆಯನ್ನು ಮತ್ತು ಹುಡುಗಿಯು ತನ್ನ ಆಕರ್ಷಣೆಯನ್ನು ಪ್ರದರ್ಶಿಸಲು ಬಯಸುತ್ತಾರೆ. ಅನೇಕರು ಬೆಳೆಸುವ ಗೆಳೆತನದಲ್ಲಿ ದುರುದ್ದೇಶ ಇರುವುದರಿಂದ, ಗೆಳೆತನಗಳ ಬಗ್ಗೆ ಜಾಗರೂಕತೆ ಅವಶ್ಯವಾಗಿದೆ. ಒಬ್ಬ ಕ್ರೈಸ್ತ ಯುವಕನು ವಿರುದ್ಧ ಲಿಂಗದವರ ಬಲಹೀನತೆಯನ್ನು ದುರುಪಯೋಗ ಮಾಡಿಕೊಂಡು, ತನಗೆ ಒಬ್ಬ ಯುವತಿಯಲ್ಲಿ ಆಸಕ್ತಿ ಇರದಿದ್ದರೂ, ತಾನು ಆಕೆಯಲ್ಲಿ ಆಸಕ್ತನಾಗಿದ್ದೇನೆ ಎಂಬ ಸುಳ್ಳು ಅಭಿಪ್ರಾಯವನ್ನು ನೀಡಬಾರದು. ಹುಡುಗಿಯರು ಕೆಲವೊಮ್ಮೆ ಅಪಾರ್ಥ ಮಾಡಿಕೊಂಡು, ಇಲ್ಲದ್ದನ್ನು ಒಡನೆಯೇ ಕಲ್ಪನೆ ಮಾಡುತ್ತಾರೆ. ಈ ಮಾತನ್ನು ಪ್ರತಿಯೊಬ್ಬ ಯುವಕನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಈ ಕಾರಣಕ್ಕಾಗಿ ಅವರು ಯಾವುದೇ ಯುವತಿಗೆ ಪತ್ರಗಳನ್ನು ಬರೆಯುವುದು ಅಥವಾ ಅರ್ಥವಿಲ್ಲದ ಆಹ್ವಾನಗಳನ್ನು ಅಥವಾ ಉಡುಗೊರೆಗಳನ್ನು ನೀಡುವುದು, ಇತ್ಯಾದಿಗಳ ಮೂಲಕ ಆಕೆ ಅಪಾರ್ಥ ಮಾಡಿಕೊಳ್ಳುವ ಸಾದ್ಯತೆ ಇದ್ದರೆ, ಅವುಗಳನ್ನು ಮಾಡಬಾರದು. ಇಂತಹ ಸಂದರ್ಭಗಳಲ್ಲಿ, ಆತ್ಮಿಕ ವಿಷಯಗಳ ಕುರಿತಾದ ಪತ್ರ ವ್ಯವಹಾರವೂ ಸಹ ಉಚಿತವಲ್ಲ. ಅದೇ ರೀತಿ, ವಿರುದ್ಧ ಲಿಂಗದ ಒಬ್ಬ ಅವಿವಾಹಿತ ವ್ಯಕ್ತಿಯಿಂದ, ವೈಯಕ್ತಿಕ ವಿಚಾರಗಳು ಅಥವಾ ಆತ್ಮಿಕ ವಿಷಯಗಳಲ್ಲಿಯೂ ಸಹ ಸಲಹೆ-ಸಹಾಯಗಳನ್ನು ಪಡೆಯುವುದು ಉಚಿತವಲ್ಲ.
ನಾವು ಒಬ್ಬ ವಿರುದ್ಧ ಲಿಂಗದ ವ್ಯಕ್ತಿಯು ನಮ್ಮ ಜೀವನ-ಸಂಗಾತಿಯಾಗುವ ಸಾಧ್ಯತೆಯನ್ನು ಪರಿಗಣಿಸುವುದು ತಪ್ಪೆಂದು ಇದರ ಅರ್ಥವಲ್ಲ. ಆದರೆ ಒಬ್ಬ ವಿಶ್ವಾಸಿಯು ವಿದ್ಯಾರ್ಥಿಯಾಗಿ ಇರುವಾಗ, ವಿರುದ್ಧ ಲಿಂಗದವರೊಂದಿಗೆ ಯಾವುದೇ ರೀತಿಯ ’ಖಾಸಾ’ ಗೆಳೆತನವನ್ನು ಬೆಳೆಸಿಕೊಳ್ಳುವುದು ನಿಶ್ಚಯವಾಗಿ ಅವಿವೇಕತನವಾಗಿದೆ. ಒಬ್ಬ ವಿದ್ಯಾರ್ಥಿಯು ತನ್ನ ಭಾವನೆಗಳನ್ನು ತಣಿಸಿಕೊಂಡು, ವಿದ್ಯಾಭ್ಯಾಸದ ಕಡೆಗೆ ತನ್ನ ಪೂರ್ಣ ಗಮನವನ್ನು ಹರಿಸಬೇಕು. ಒಬ್ಬ ಯುವಕನು ಸಾಮಾನ್ಯವಾಗಿ ತನ್ನ ವಿದ್ಯಾಭ್ಯಾಸವನ್ನು ಪೂರೈಸುವ ತನಕ, ಮತ್ತು ನಿಶ್ಚಯವಾಗಿ ತನ್ನ 25ನೇ ವಯಸ್ಸಿನ ವರೆಗೆ, ವಿವಾಹದ ಯೋಚನೆಯನ್ನು ತಳ್ಳಿಹಾಕಬೇಕು; ಹಾಗೆಯೇ ಒಬ್ಬ ಯುವತಿಯು ಕಡಿಮೆ ಪಕ್ಷ ತನ್ನ 20ನೇ ವಯಸ್ಸಿನವರೆಗೆ ಹೀಗೆ ಮಾಡಬೇಕು. ಆಲ್ಲಿಯವರೆಗೆ ಅವರು ತಮ್ಮ ಬಿಡುವಿನ ಸಮಯವನ್ನು ಯಾವುದೇ ಅಡೆ ತಡೆಗಳಿಲ್ಲದೆ, ವಿಚಲಿತರಾಗದೆ, ಕರ್ತ ಯೇಸುವಿನ ಕಾರ್ಯದಲ್ಲಿ ಪಾಲ್ಗೊಳ್ಳಲು ಮೀಸಲಾಗಿ ಇರಿಸಬೇಕು.
ವಿವಾಹದ ಜೊತೆಗೆ ಕೆಲವು ಅನಿವಾರ್ಯ ಹೊಣೆಗಾರಿಕೆಗಳು ಬರುತ್ತವೆ ಮತ್ತು ವಿವಾಹಿತ ವ್ಯಕ್ತಿಗೆ ಮೊದಲಿನ ಹಾಗೆ (ಸಮಯಕ್ಕೆ ಸಂಬಂಧಪಟ್ಟಂತೆ) ಎಲ್ಲಾ ವೇಳೆ ಕರ್ತನ ಸೇವೆ ಮಾಡುವ ಸ್ವಾತಂತ್ರ್ಯ ಇರುವುದಿಲ್ಲ. ಆದಾಗ್ಯೂ, ಹೆಂಡತಿಯ ಹುಡುಕಾಟ (ಅಥವಾ ಗಂಡನ ಹುಡುಕಾಟ) ಮತ್ತು ವಿರುದ್ಧ ಲಿಂಗದವರೊಂದಿಗೆ ಖಾಸಗಿ ಸ್ನೇಹ ಸಂಬಂಧಗಳು ವಿವಾಹಿತ ಜೀವಿತಕ್ಕಿಂತಲೂ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುತ್ತವೆ!
ವಿವಾಹ ಮಾಡಿಕೊಳ್ಳುವುದರಲ್ಲಿ ವಿಳಂಬಿಸುವದಕ್ಕೆ ಇನ್ನೊಂದು ಕಾರಣ (ಮೇಲೆ ಹೇಳಿದಂತೆ), ಯುವ ಜನರು ಸರಿಯಾದ ಆಯ್ಕೆ ಮಾಡುವುದಕ್ಕೆ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಬೆಳೆಯಬೇಕು, ಮತ್ತು ಇದಕ್ಕೆ ಸಮಯ ಬೇಕಾಗುತ್ತದೆ. ನಾವು ಇದನ್ನು ಮುಂದೆ (ಐದನೇ ಅಧ್ಯಾಯದಲ್ಲಿ) ಪರಿಗಣಿಸಲಿದ್ದೇವೆ.
ಈ ಕಾರಣಕ್ಕಾಗಿ, ವಿವಾಹದ ಸಮಯ ಪ್ರಾಪ್ತವಾಗುವ ವರೆಗೆ ವಿರುದ್ಧ ಲಿಂಗದ ವ್ಯಕ್ತಿಯ ಸ್ನೇಹ ಹೆಚ್ಚು ನಿಕಟವಾಗದಂತೆ ನೋಡಿಕೊಳ್ಳುವುದು ಬಹಳ ಅವಶ್ಯವಾಗಿದೆ. ಯುವಕ-ಯುವತಿಯರು (ಮುಖ್ಯವಾಗಿ ಯುವಕರು) ತಮ್ಮ ಪರಸ್ಪರ ಸಂಬಂಧಗಳನ್ನು ಗೌರವಾನ್ವಿತವಾಗಿ ನಡೆಸುವ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಎಲ್ಲಾ ವೇಳೆಯಲ್ಲಿ, ಎರಡೂ ಪಕ್ಷಗಳು ತಮ್ಮ ಉದ್ದೇಶಗಳ ಬಗ್ಗೆ ಸಂಪೂರ್ಣ ಪ್ರಾಮಾಣಿಕರಾಗಿರಬೇಕು. ಈ ನಿಯಮದ ಉಲ್ಲಂಘನೆ ಅನೇಕ ಜೀವಿತಗಳಲ್ಲಿ ಉದ್ವೇಗ, ಗೊಂದಲಗಳು ಮತ್ತು ನಿರಾಶೆಯನ್ನು ಉಂಟುಮಾಡಿದೆ. ಇದು ಅನೇಕ ಸಲ ಪರೀಕ್ಷೆಗಳಲ್ಲಿ ಅಸಫಲತೆಗೆ ಕಾರಣವಾಗುತ್ತದೆ ಮತ್ತು ಕ್ರೈಸ್ತ ಸಾಕ್ಷಿಯನ್ನೂ ಕೆಡಿಸುತ್ತದೆ. ಇದರಲ್ಲಿ ಪುರುಷನು ನಾಯಕತ್ವವನ್ನು ಮತ್ತು ಸ್ತ್ರೀಯು ಆಕರ್ಷಣೆಯನ್ನು ಹೊಂದಿರುತ್ತಾರೆ. ಹಾಗಾಗಿ ಇಬ್ಬರೂ ಜಾಗರೂಕರಾಗಿ ಇರಬೇಕು.
ಯುವಕರು ತಿಳಿದಿರಬೇಕಾದ ಅಂಶವೆಂದರೆ, ಅವರಲ್ಲಿ ವಿವಾಹದ ಉದ್ದೇಶ ಇಲ್ಲದೆಯೂ ಒಬ್ಬ ಹೆಣ್ಣಿನೊಂದಿಗೆ ಅತಿಯಾದ ಸಲಿಗೆ-ಸ್ನೇಹಗಳನ್ನು ಬೆಳೆಸಿ ವಿವಾಹದ ತೋರಿಕೆ ಮಾಡುವುದರ ಮೂಲಕ, ಅವರು ಆ ಹೆಣ್ಣಿನ ಮುಂದಿನ ವಿವಾಹ ನಿರೀಕ್ಷೆಗೆ ಹಾನಿಯನ್ನು ಉಂಟುಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ, ಪುರುಷನಿಗೆ ತನ್ನ ಮುಂದಿನ ವಿವಾಹ ನಿರೀಕ್ಷೆಗೆ ಹೆಚ್ಚು ಅಡ್ಡಿಯಾಗುವುದಿಲ್ಲ ಮತ್ತು ಆತನ ಸಾಕ್ಷಿಗೂ ವಿಶೇಷ ಹಾನಿಯಾಗುವುದಿಲ್ಲ; ಆದರೆ ಇದರ ನಂತರ ಯಾವ ತಪ್ಪೂ ಮಾಡಿರದ ಆ ಹೆಣ್ಣು ದೂಷಣೆಗೆ ಒಳಗಾಗಬಹುದು ಮತ್ತು ಕೀಳಾಗಿ ಕಾಣಲ್ಪಡಬಹುದು. ಇಂತಹ ನಡತೆ ಯಾವ ಕ್ರೈಸ್ತ ಯುವಕನಿಗೂ ಅನುಚಿತವಾದದ್ದು ಆಗಿದೆ. ಪುರುಷನು ನಾಯಕತ್ವಕ್ಕೆ ಹೊಣೆಗಾರನಾಗಿ ಇರುವುದರಿಂದ, ಇಂತಹ ಅನಾಹುತಕ್ಕೆ ಕಾರಣನಾಗದಿರುವ ಜವಾಬ್ದಾರಿ ಆತನದ್ದು ಆಗಿರುತ್ತದೆ. ನಾವು ಇತರರ ವ್ಯಕ್ತಿತ್ವಕ್ಕೆ ಧಕ್ಕೆಯನ್ನು ಉಂಟುಮಾಡಬಾರದು. ಹಾಗೆ ಮಾಡುವವರನ್ನು ದೇವರು ತೀವ್ರ ಶಿಕ್ಷೆಗೆ ಗುರಿಮಾಡುತ್ತಾರೆ.
ಹಲವು ಬಾರಿ ಯುವಜನರು ವಿರುದ್ಧ ಲಿಂಗದ ಒಬ್ಬರ ಬಗ್ಗೆ ’ಗುಪ್ತ ಪ್ರೇಮ’ವನ್ನು ಇರಿಸಿಕೊಂಡು, ಅದನ್ನು ಯಾರಿಗೂ ತೋರಿಸಿಕೊಳ್ಳುವುದಿಲ್ಲ. ಇವರಲ್ಲಿ ಇಂತಹ ಅಗೋಚರ ಪ್ರೇಮವು ಬೆಳೆಯುತ್ತಾ ಹೋಗಬಹುದು. ಆದರೆ ಆ "ಮೆಚ್ಚಿಕೊಂಡ ಪ್ರೇಮಿಯು" ಬೇರೊಬ್ಬರನ್ನು ವಿವಾಹವಾದರೆ, ಇಂತಹ ಮರೆಯಾಗಿ ಪ್ರೀತಿಸಿದ ವ್ಯಕ್ತಿಯು ನಿರಾಶೆ ಮತ್ತು ಆಶಾಭಂಗಕ್ಕೆ ಈಡಾಗಬಹುದು. ಹೀಗೆ ಆಗುವುದಕ್ಕೆ ಮೊದಲು, ಆದಷ್ಟು ಬೇಗೆ ನಿಮ್ಮ ಭಾವನೆಗಳನ್ನು ಧೈರ್ಯವಾಗಿ ನಿಮ್ಮ ತಂದೆ-ತಾಯಿಯರೊಂದಿಗೆ ಅಥವಾ ಯಾರಾದರೂ ಹಿರಿಯ ವಿವಾಹಿತ ವಿಶ್ವಾಸಿಯೊಂದಿಗೆ ಹಂಚಿಕೊಂಡು, ಅವರ ಸಲಹೆ ಮತ್ತು ಸಹಾಯವನ್ನು ಪಡೆಯುವುದು ಜಾಣತನವಾಗಿದೆ.
ಭೇಟಿಯಾಗುವುದು ಮತ್ತು ನಿಕಟ ದೈಹಿಕ ಸಂಬಂಧಇಲ್ಲಿ "ಭೇಟಿಯಾಗುವುದು" ಮತ್ತು "ನಿಕಟ ದೈಹಿಕ ಸಂಬಂಧ"ದ ಬಗ್ಗೆ ('Dating' and 'Petting') ಕೆಲವು ಮಾತುಗಳು ಸೂಕ್ತವಾಗಿವೆ, ಏಕೆಂದರೆ ಭಾರತದಲ್ಲಿ ಇವು ಹೆಚ್ಚು ಹೆಚ್ಚಾಗಿ ಆಚರಣೆಗೆ ಬರುತ್ತಿವೆ. "ಭೇಟಿಯಾಗುವುದು" ಎಂಬ ಪದವನ್ನು ಒಬ್ಬ ಹುಡುಗ ಮತ್ತು ಹುಡುಗಿ ಖಾಸಗಿಯಾಗಿ ಸಂಧಿಸುವುದು ಮತ್ತು ತಾವಿಬ್ಬರೇ ಹೊರಗೆ ಹೋಗುವುದಕ್ಕೆ ನಾನು ಬಳಸಿದ್ದೇನೆ; ಮತ್ತು "ನಿಕಟ ದೈಹಿಕ ಸಂಬಂಧ" ಎಂಬುದನ್ನು (ಲೈಂಗಿಕ ಸಂಭೋಗವಿಲ್ಲದೆ) ದೈಹಿಕವಾಗಿ ನಿಕಟ ಪರಿಚಯ ಬೆಳೆಸಿಕೊಳ್ಳುವ ವಿಷಯದ ಕುರಿತಾಗಿ ಬಳಸಿಕೊಂಡಿದ್ದೇನೆ.
ಇಲ್ಲಿ ಭಾರತದ ವಿಚಾರವಾಗಿ ಸ್ಪಷ್ಟವಾಗಿ ಹೇಳಬಹುದಾದ ಒಂದು ಮಾತು - ಒಬ್ಬ ವಿಶ್ವಾಸಿಯು ತನ್ನ ಸಾಕ್ಷಿಯನ್ನು ಉಳಿಸಿಕೊಂಡು ದೇವರಿಗೆ ಉಪಯೋಗಿಯಾಗಿ ಇರಲು ಬಯಸಿದರೆ, ವಿವಾಹದ ಉದ್ದೇಶ ಇದ್ದಾಗಲೂ, ಆತನು ವಿರುದ್ಧ ಲಿಂಗದ ವ್ಯಕ್ತಿಯನ್ನು ಖಾಸಗಿಯಾಗಿ ಭೇಟಿ ಮಾಡಬಾರದು. ಇದಲ್ಲದೆ, ಆತನು ಸಾಧ್ಯವಾದಷ್ಟು ಮಟ್ಟಿಗೆ ತನ್ನ ವಿರುದ್ಧ ಲಿಂಗದ ಸದಸ್ಯೆಯೊಂದಿಗೆ ಒಂಟಿಯಾಗಿ - ವಿಶೇಷವಾಗಿ ಸಂಜೆ ಅಥವಾ ರಾತ್ರಿಯ ಸಮಯದಲ್ಲಿಹೊರಗೆ ಹೋಗುವುದನ್ನು ತಪ್ಪಿಸಬೇಕು. ಭಾರತೀಯ ಸಂಸ್ಕೃತಿಯ ಪರಿಚಯವಿರುವ ಯಾರಾದರೂ ಇದರ ಕಾರಣವನ್ನು ಒಡನೆಯೇ ಗ್ರಹಿಸಿಕೊಳ್ಳುತ್ತಾರೆ. ವಿಶ್ವಾಸಿಗಳ ಚಟುವಟಿಕೆಗಳು ಯಾವುದೇ ಅಪನಿಂದೆಗೆ ಕಾರಣವಾಗದಂತೆ ಎಚ್ಚರ ವಹಿಸಬೇಕು.
ಕ್ರಿಸ್ತನು ನಮ್ಮನ್ನು ನಮ್ಮ ಸುತ್ತಮುತ್ತಲಿನ ಜನರ ಸಂಪ್ರದಾಯಗಳು ಮತ್ತು ಸಂಸ್ಕೃತಿಯಿಂದ ಸ್ವತಂತ್ರಗೊಳಿಸಿದ್ದಾನೆಂದು ಕೆಲವು ವಿಶ್ವಾಸಿಗಳು ಹೇಳಬಹುದು. ಹೌದು, ಅದು ನಿಜ! ಆದರೆ ನಾವು ನೆನಪಿರಿಸಿಕೊಳ್ಳಬೇಕಾದದ್ದು ಏನೆಂದರೆ, ಕ್ರಿಸ್ತನು ನಮ್ಮನ್ನು ಸ್ವತಂತ್ರಗೊಳಿಸಿದ್ದು ನಾವು ದೇವರ ವಾಕ್ಯಕ್ಕೆ ವಿಧೇಯರಾಗುವುದಕ್ಕಾಗಿ ಮತ್ತು ಸತ್ಯವೇದವು ಹುಡುಗ-ಹುಡುಗಿಯರು ಖಾಸಗಿಯಾಗಿ ಸಂಧಿಸುವುದನ್ನು ಪ್ರೋತ್ಸಾಹಿಸುವುದಿಲ್ಲ. ಈ ವಿಷಯದ ಕುರಿತಾಗಿ ಸತ್ಯವೇದವು ಸಂಪೂರ್ಣವಾಗಿ ಮೌನವಾಗಿದೆ. ದೇವರ ವಚನ ಹಾಗೂ ಮಾನವ ಕಟ್ಟು-ಪಾಡುಗಳು ಒಂದಕ್ಕೊಂದು ವಿರೋಧವಾಗಿ ಇದ್ದಾಗ, ನಾವು ದೇವರ ವಚನವನ್ನು ತಪ್ಪದೆ ಪಾಲಿಸಬೇಕು. ಆದರೆ ಬೇರೆಲ್ಲಾ ವಿಷಯಗಳಲ್ಲಿ, ನಾವು ನಮ್ಮ ಸ್ವಾತಂತ್ರ್ಯವನ್ನು "ಶರೀರಾಧೀನ ಹೀನಭಾವಕ್ಕೆ ಆಸ್ಪದವಾಗದಂತೆ ಬಳಸಬೇಕು" (ಗಲಾ. 5:13 J.B.Phillips ಅನುವಾದ). ಅಂಥಹ ಸಂದರ್ಭಗಳಲ್ಲಿ ನಾವು ’ರೋಮಾ. 14:16'ರಲ್ಲಿ ಕೊಟ್ಟಿರುವ ನಿಯಮದಂತೆ ನಡೆಯಬೇಕು. ಈ ವಚನದ ಎರಡು ಭಾಷಾಂತರಗಳು ಹೀಗಿವೆ: "ನಿಮ್ಮ ದೃಷ್ಟಿಯಲ್ಲಿ ಉತ್ತಮವಾದದ್ದು ಬೇರೊಬ್ಬರ ದೃಷ್ಟಿಗೆ ದುರ್ನಡತೆಯಂತೆ ಕಾಣಿಸದ ಹಾಗೆ ನಡೆಯಿರಿ" (JBP); "ನೀವು ಮಾಡುವ ಕಾರ್ಯವು ಸರಿಯಾದದ್ದೆಂದು ನಿಮಗೆ ತಿಳಿದಿದ್ದರೂ, ಅದು ಇತರರ ದೂಷಣೆಗೆ ಕಾರಣವಾಗುವುದಾದರೆ, ಅದನ್ನು ಮಾಡಬೇಡಿರಿ" (The Living Bible ಅನುವಾದ).
'1 ಕೊರಿ. 8'ನೇ ಅಧ್ಯಾಯವೂ ಈ ಪರಿಸ್ಥಿತಿಗೆ ಅನ್ವಯಿಸುತ್ತದೆ; ಅದನ್ನು "ಸ್ತ್ರೀ-ಪುರುಷರು ಒಂಟಿಯಾಗಿ ಭೇಟಿಯಾಗುವದಕ್ಕೆ" ಅಳವಡಿಸಿಕೊಂಡು ಭಾವಾನುವಾದ ಮಾಡಿದಾಗ, ನಮಗೆ ಈ ರೀತಿಯಾಗಿ ಮಾರ್ಗದರ್ಶನ ಸಿಗುತ್ತದೆ: "ಈಗ ಒಬ್ಬ ಹುಡುಗಿ ಮತ್ತು ಒಬ್ಬ ಹುಡುಗ ಒಂಟಿಯಾಗಿ ಸಂಧಿಸುವ ವಿಷಯವನ್ನು ನೋಡೋಣ. ಸರಿಯಾದ ಉತ್ತರ ನಮಗೆ ಮಾತ್ರ ತಿಳಿದಿದೆಯೆಂದು ಅಂದುಕೊಳ್ಳುವುದು ಸುಲಭ. ಆದರೆ ನೆನಪಿರಿಸಿಕೊಳ್ಳಿರಿ. ಜ್ಞಾನವು ಒಬ್ಬನನ್ನು ಉಬ್ಬಿಸುವುದಾದರೆ, ಪ್ರೀತಿಯು ಅವನನ್ನು ದೇವರ ಸ್ವರೂಪಕ್ಕೆ ಬದಲಾಯಿಸುತ್ತದೆ. ಎಲ್ಲವನ್ನೂ ತಿಳಕೊಂಡಿದ್ದೇನೆಂದು ಅಂದುಕೊಳ್ಳುವಾತನು ತನ್ನ ಮೂಢತನವನ್ನು ತೋರಿಸುತ್ತಾನೆ. ಆದರೆ ದೇವರನ್ನು ನಿಜವಾಗಿ ಪ್ರೀತಿಸುವಾತನು - ಆತನೇ ದೇವರ ಸ್ನೇಹಿತನಾಗಲು ಯೋಗ್ಯನು.
"ಹಾಗಾದರೆ ನಾವು ಏನು ಮಾಡಬೇಕು? ಹುಡುಗ ಮತ್ತು ಹುಡುಗಿ ಒಂಟಿಯಾಗಿ ಸಂಧಿಸುವುದು ಸರಿಯೋ, ತಪ್ಪೋ? ವಿರುದ್ಧ ಲಿಂಗದ ಇನ್ನೊಬ್ಬ ವ್ಯಕ್ತಿಯೊಂದಿಗೆ ಪ್ರತ್ಯೇಕವಾಗಿ ಅಲ್ಲಿಲ್ಲಿ ಅಡ್ಡಾಡುವುದು, ಅಥವಾ ಒಂದು ಭೋಜನ ಗೃಹಕ್ಕೆ ಹೋಗಿ ಊಟ ಮಾಡುವುದು ಉದ್ದೇಶಗಳಲ್ಲಿ ಸಂಪೂರ್ಣ ಪರಿಶುದ್ಧತೆ ಇದ್ದಾಗ ಪಾಪಕರವೇನೂ ಅಲ್ಲವೆಂದು ನಮಗೆ ಗೊತ್ತಿದೆ. ಆದರೆ ಇದನ್ನು ಎಲ್ಲರೂ (ಭಾರತ ದೇಶದಲ್ಲಿ) ಒಪ್ಪಿಕೊಳ್ಳುವುದಿಲ್ಲ. ಇಲ್ಲಿರುವ ಅಧಿಕಾಂಶ ಜನರು ತಮ್ಮ ಬಾಲ್ಯದಿಂದಲೂ ಬೆಳೆಸಿಕೊಂಡಿರುವ ಭಾವನೆ, ಹುಡುಗ ಮತ್ತು ಹುಡುಗಿ ಒಂಟಿಯಾಗಿ ಸಂಧಿಸುವುದು ತಪ್ಪು ಎಂದಾಗಿದೆ. ನಾವು ನೆನಪಿನಲ್ಲಿ ಇರಿಸಿಕೊಳ್ಳ ಬೇಕಾದದ್ದು ಏನೆಂದರೆ, ನಾವು ವಿರುದ್ಧ ಲಿಂಗದ ವ್ಯಕ್ತಿಯನ್ನು ಒಂಟಿಯಾಗಿ ಭೇಟಿ ಮಾಡಿದ್ದೇವೋ ಇಲ್ಲವೋ, ಎಂಬುದರ ಆಧಾರದ ಮೇಲೆ ದೇವರು ನಮ್ಮನ್ನು ಸ್ವೀಕರಿಸುವುದಿಲ್ಲ. ಅಂತಹ ಭೇಟಿಯು ನಮ್ಮನ್ನು ಒಳ್ಳೆಯ ಮನುಷ್ಯರಾಗಿ ಮಾಡುವುದಿಲ್ಲ ಮತ್ತು ಭೇಟಿಯಾಗದೇ ಇರುವಂಥದ್ದು ನಮ್ಮನ್ನು ಕೆಟ್ಟ ಮನುಷ್ಯರಾಗಿ ಬದಲಾಯಿಸುವುದೂ ಇಲ್ಲ. ಆದರೂ ನಿಮ್ಮ ಈ ಸ್ವಾತಂತ್ರ್ಯವು (ಹುಡುಗ-ಹುಡುಗಿಯರು ಪ್ರತ್ಯೇಕವಾಗಿ ಭೇಟಿಯಾಗುವ ವಿಚಾರದಲ್ಲಿ) ಇನ್ನೊಬ್ಬ ಕ್ರೈಸ್ತನು (ಅಥವಾ ಸತ್ಯವನ್ನು ಹುಡುಕುತ್ತಿರುವ ಒಬ್ಬ ಅವಿಶ್ವಾಸಿ ಇರಬಹುದು) ಎಡವಿ ಬೀಳುವಂತೆ ಮಾಡಬಾರದು.
"ಉದಾಹರಣೆಗೆ, ಒಂದು ವೇಳೆ ಇನ್ನೊಬ್ಬ ವ್ಯಕ್ತಿ (ಒಂಟಿಯಾಗಿ ಭೇಟಿಯಾಗುವುದು ತಪ್ಪೆಂದು ಭಾವಿಸುವವರು) ನೀವು ಒಬ್ಬ ಹುಡುಗಿಯೊಂದಿಗೆ (ಅಥವಾ ಹುಡುಗನೊಂದಿಗೆ, ಸಂದರ್ಭಕ್ಕೆ ತಕ್ಕಂತೆ) ಹೋಗುವುದನ್ನು ನೋಡಬಹುದು, ಮತ್ತು ಅವರು ನಿಮ್ಮ ಕ್ರೈಸ್ತ ಸಾಕ್ಷಿಯ ಬಗ್ಗೆ ಹೊಂದಿರುವ ಗೌರವವನ್ನು ಕಳೆದುಕೊಳ್ಳಬಹುದು. ಇನ್ನೂ ಮುಂದುವರಿದು, ಅವರು ಸಹ ವಿರುದ್ಧ ಲಿಂಗದ ವ್ಯಕ್ತಿಯನ್ನು ಒಂಟಿಯಾಗಿ ಭೇಟಿಮಾಡಲು ಆರಂಭಿಸಬಹುದು; ಮತ್ತು ಅವರಲ್ಲಿ ನಿಮ್ಮಷ್ಟು ಆತ್ಮಿಕ ಬಲ ಇಲ್ಲದೇ ಇರುವುದರಿಂದ, ಅವರು ಪಾಪದಲ್ಲಿ ಬೀಳಬಹುದು. ಹೀಗೆ ನೀವು ನಿಮ್ಮ ಸಹೋದರನ ಆತ್ಮಿಕ ಬೀಳುವಿಕೆಗೆ ಜವಾಬ್ದಾರರಾಗುತ್ತೀರಿ. ನಿಮ್ಮ ಉದಾಹರಣೆಯು ಪರೋಕ್ಷವಾಗಿ ನೀಡಿದ ಉತ್ತೇಜನದ ಮೂಲಕ ಇನ್ನೊಬ್ಬ ವ್ಯಕ್ತಿ ಪಾಪದಲ್ಲಿ ಬಿದ್ದಾಗ, ಅದು ನಿಜವಾಗಿ ಕ್ರಿಸ್ತನ ವಿರುದ್ಧ ನೀವು ಮಾಡಿದ ಪಾಪವಾಗಿರುತ್ತದೆ.
ಆದುದರಿಂದ, ನಾನು ಒಬ್ಬ ಹುಡುಗಿಯನ್ನು ಖಾಸಗಿಯಾಗಿ ಸಂಧಿಸುವುದರ ಮೂಲಕ ನನ್ನ ಸಹೋದರನಿಗೆ ಹಾನಿಯಾಗುವ ಸಾಧ್ಯತೆ ಇದ್ದರೆ ಅಥವಾ ಇತರರು ಪಾಪದಲ್ಲಿ ಎಡವಿ ಬೀಳುವ ಯಾವುದೇ ಸಾಧ್ಯತೆ ಇದ್ದರೆ, ನಾನು ಎಂದಿಗೂ ಒಬ್ಬ ಹುಡುಗಿಯನ್ನು ಖಾಸಗಿಯಾಗಿ ಸಂಧಿಸುವುದಿಲ್ಲ ('Dating'), ಮತ್ತು ಇತರರಿಗೆ ವಿಘ್ನವಾಗದಂತೆ ನೋಡಿಕೊಳ್ಳುತ್ತೇನೆ".
ಖಾಸಗಿಯಾಗಿ ಭೇಟಿಯಾಗುವುದನ್ನು ಮುಂದುವರಿಸುತ್ತಾ ಹೋಗುವ ವ್ಯಕ್ತಿಗಳಿಗೆ, ದೈಹಿಕ ಸಂಪರ್ಕದಿಂದ ('Petting') ದೂರವಿರುವುದು ಬಹಳ ಕಷ್ಟಕರವಾಗುತ್ತದೆ. ಇದು ಕೈಗಳನ್ನು ಹಿಡಿಯುವುದರಿಂದ ಆರಂಭವಾಗಿ, ಮುಂದೆ ಚುಂಬಿಸುವುದು ಮತ್ತು ಒಬ್ಬರನ್ನೊಬ್ಬರು ಮೈದಡವಿ ಮುದ್ದಾಡುವುದಕ್ಕೆ ತಲುಪುತ್ತದೆ. ಇಂತಹ ದೈಹಿಕ ಸಂಪರ್ಕಕ್ಕೆ ಹುಡುಗನು ಹುಡುಗಿಗಿಂತ ಹೆಚ್ಚು ಬಲವಾಗಿ ಸೆಳೆಯಲ್ಪಡುತ್ತಾನೆ, ಏಕೆಂದರೆ ಯಾವಾಗಲೂ ಪುರುಷರ ಲೈಂಗಿಕ ಉದ್ವೇಗವು ಹೆಚ್ಚು ಬಲವುಳ್ಳದ್ದು ಆಗಿರುತ್ತದೆ. ಪುರುಷರಲ್ಲಿ ಲೈಂಗಿಕ ಕಾಮನೆಯು ಸುಲಭವಾಗಿ ಎಚ್ಚರಗೊಳ್ಳುತ್ತದೆ ಮತ್ತು ಪ್ರಚೋದಿಸಲ್ಪಟ್ಟ ಕಾಮನೆಯನ್ನು ಹತೋಟಿಯಲ್ಲಿ ಇರಿಸುವುದು ಅತ್ಯಂತ ಕಷ್ಟಕರ ಕಾರ್ಯವಾಗಿದೆ.
ಒಂದು ಜೋಡಿಯು ದೈಹಿಕ ಸಂಪರ್ಕದಲ್ಲಿ ತೊಡಗಿದ ನಂತರ, ಅದನ್ನು ನಿಲ್ಲಿಸುವುದು ಹೆಚ್ಚು ಕಡಿಮೆ ಅಸಾಧ್ಯವಾದ ಮಾತಾಗಿದೆ. ಪರಿಸ್ಥಿತಿಯು ಒಂದು ಹಂತದಿಂದ ಇನ್ನೊಂದು ಹಂತವನ್ನು ತಲುಪುತ್ತದೆ, ಮತ್ತು ಪ್ರತೀ ಸಲ ನೀವು ಜೊತೆ ಸೇರಿದಾಗ, ನಿಮಗೆ ಹಿಂದಿನ ಅನುಭವಕ್ಕಿಂತ ಹೆಚ್ಚಿನ ಪ್ರಚೋದನೆಯ ಆಸೆ ಹುಟ್ಟುತ್ತದೆ. ಅದೇ ವೇಳೆ, ಪ್ರತಿಯೊಂದು ಅನುಭವದಿಂದ ನಿಮಗೆ ಸಿಗುವ ತೃಪ್ತಿ ಕಡಿಮೆಯಾಗುತ್ತಾ ಹೋಗುತ್ತದೆ.
ದೈಹಿಕ ಸಂಪರ್ಕದಂತಹ ಲೈಂಗಿಕ ಅನುಭವಗಳು ಒಬ್ಬ ವ್ಯಕ್ತಿಯ ಅಂತರಾಳದವರೆಗೆ ಪ್ರಭಾವವನ್ನು ಬೀರುತ್ತವೆ. ಅದಕ್ಕೆ ಕೈಹಾಕುವುದರ ಗಂಭೀರ ಪರಿಣಾಮಗಳನ್ನು ತಡೆಯಲು ಆಗುವುದಿಲ್ಲ. ದೈಹಿಕ ಸಂಪರ್ಕವು ವೈವಾಹಿಕ ಜೀವನದ ನಿಕಟ ಸಂಬಂಧದ ಸ್ವಾಭಾವಿಕ ಮೊದಲ ಹೆಜ್ಜೆಯಾಗಿದೆ ಮತ್ತು ವಿವಾಹಕ್ಕೆ ಮೊದಲು ಇದರಲ್ಲಿ ತೊಡಗುವುದು ಪಾಪಕರವಾಗಿದೆ ಹಾಗೂ ಮೂಢತನವಾಗಿದೆ. ದೈಹಿಕ ಸಂಪರ್ಕವು ಲೈಂಗಿಕ ಅನುಭವದ ಮೌಲ್ಯವನ್ನು ಕುಗ್ಗಿಸುತ್ತದೆ ಮತ್ತು ಇದರಿಂದ ಮಾನಸಿಕ ಅಸಮಾಧಾನ, ನಿರಾಶೆ ಮತ್ತು ಮಾನಸಿಕ ಏರುಪೇರುಗಳು ಉಂಟಾಗುವ ಸಾಧ್ಯತೆ ಇದೆ; ಇದು ಹಾಗೆಯೇ ಮುಂದುವರಿದು, ಹಿಂದೆ ಇದ್ದ ಪ್ರೀತಿಗೆ ಬದಲಾಗಿ ಕೋಪ ಮತ್ತು ದ್ವೇಷವನ್ನು ತರಬಹುದು.
ಈ ಅನುಭವವು ಮುಂದುವರಿದು ನೇರವಾಗಿ ಲೈಂಗಿಕ ಸಂಭೋಗಕ್ಕೂ ನಡೆಸಬಹುದು ಇಂತಹ ದುಡುಕುತನದ ಅಂತಿಮ ಪರಿಣಾಮ ಇದೇ ಆಗಿದೆ. ಒಂದು ಜೋಡಿಯು ಈ ಸಂಪೂರ್ಣ ಅನುಭವಕ್ಕೆ ಹೋಗದೆ ತಡೆಹಿಡಿದಾಗ, ಅದಕ್ಕೆ ಬದಲಾಗಿ (ಉದ್ವೇಗವನ್ನು ತಗ್ಗಿಸಲು) ಸ್ವ-ಲೈಂಗಿಕ ಕ್ರಿಯೆಗೆ ('Masturbation') ದಾರಿ ಮಾಡಿಕೊಡಬಹುದು ಮತ್ತು ವಿವಾಹದ ನಂತರದ ಲೈಂಗಿಕ ಸಂಬಂಧದಲ್ಲಿ ಅಡ್ಡಿ ಉಂಟುಮಾಡಬಹುದು. ವಿವಾಹ ಪೂರ್ವದ ದೈಹಿಕ ಸಂಪರ್ಕದ ಪರಿಣಾಮವಾಗಿ, ಅಂತರಾಳದಲ್ಲಿ ತಪ್ಪಿತಸ್ಥ ಮನೋಭಾವ ಮತ್ತು ಅದರ ಜೊತೆಗೆ ಬೇಸರಿಕೆಯು ದೀರ್ಘಕಾಲದವರೆಗೆ ಉಳಕೊಳ್ಳಬಹುದು.
ಹಲವು ಬಾರಿ ಹುಡುಗ-ಹುಡುಗಿಯರ ಗೆಳೆತನಗಳು ಕಾಲಕ್ರಮೇಣ ಮುರಿದು ಹೋಗುತ್ತವೆ, ಮತ್ತು ಗೆಳೆತನದಲ್ಲಿ ದೈಹಿಕ ಸಂಪರ್ಕವೂ ಸೇರಿದ್ದರೆ, ಆ ಹುಡುಗಿಯಲ್ಲಿ ತಾನು ಉಪಯೋಗಿಸಲ್ಪಟ್ಟ ಮತ್ತು ಕಲುಷಿತಗೊಂಡ ಭಾವನೆ ಇರಬಹುದು. ಹಾಗಾಗಿ ಪುರುಷನು ದೈಹಿಕ ಸಂಪರ್ಕವನ್ನು ಬಯಸುತ್ತಾನೆಂದು ಮಹಿಳೆಗೆ ಸುಳಿವು ಸಿಕ್ಕಿದೊಡನೆ, ಆಕೆಯು ಅದಕ್ಕೆ ಸಂಪೂರ್ಣ ತಡೆ ಹಾಕಬೇಕು.
ಮೇಲಿನ ವಿವರಣೆಯಿಂದ ಸ್ಪಷ್ಟವಾಗಿ ತಿಳಿಯುವುದು ಏನೆಂದರೆ, ಹುಡುಗ ಮತ್ತು ಹುಡುಗಿ ಮಾಡುವ ಪ್ರತ್ಯೇಕವಾದ ಭೇಟಿಯು ಮುಂದುವರಿದು ನಿಶ್ಚಿತವಾಗಿ ದೈಹಿಕ ಸಂಪರ್ಕಕ್ಕೆ ತಲುಪುತ್ತದೆ ಮತ್ತು ದೈಹಿಕ ಸಂಪರ್ಕದ ಪರಿಣಾಮವಾಗಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ತನ್ನ ಜೀವನದಲ್ಲಿ ದೇವರನ್ನು ಮಹಿಮೆಪಡಿಸುವ ಇಚ್ಛೆಯನ್ನು ಇರಿಸಿಕೊಂಡಿರುವ ಒಬ್ಬ ವ್ಯಕ್ತಿಯು, ವಿವಾಹಕ್ಕೆ ಮೊದಲು ವಿರುದ್ಧ ಲಿಂಗದ ವ್ಯಕ್ತಿಯೊಂದಿಗೆ ಪ್ರತ್ಯೇಕ ಭೇಟಿಮಾಡುವುದು ಸಂಪೂರ್ಣವಾಗಿ ಅನುಚಿತವಾಗಿದೆ. ನಿಮ್ಮ ಅಕ್ಕಪಕ್ಕದಲ್ಲಿರುವ ವಿಶ್ವಾಸಿಗಳು ಅದರಲ್ಲಿ ತೊಡಗಿರಬಹುದು, ಆದರೆ ಅವರ ಮಾದರಿಯು ನಿಮ್ಮ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿರಿ. ಅವರನ್ನು ನೋಡಿ ಮತ್ಸರ ಪಡುವುದೂ ಸಹ ಬೇಡ, ಏಕೆಂದರೆ ಅವರು ಕೊನೆಯಲ್ಲಿ ತಪ್ಪದೆ ವ್ಯಸನ ಮತ್ತು ನಿರಾಶೆಗೆ ಒಳಗಾಗುತ್ತಾರೆ. ನೀವು ದೇವರನ್ನು ಗೌರವಿಸಿ, ಅವರ ವಾಕ್ಯವು ತೋರಿಸುವ ದಾರಿಯಲ್ಲಿ ನಡೆದರೆ, ನಿಮಗೆ ನಿಶ್ಚಯವಾಗಿ ವ್ಯಸನವಿಲ್ಲದ ಜೀವನವೂ, ನಿತ್ಯತ್ವವೂ ಪ್ರಾಪ್ತವಾಗುತ್ತವೆ.
ಇಡೀ ಸತ್ಯವೇದದಲ್ಲಿ "ಪ್ರೀತಿ" ಎಂಬ ಪದವು ಬಹುಶಃ ಅತ್ಯಂತ ಸುಂದರವಾದ ಪದವಾಗಿದೆ. ಹಾಗಿದ್ದರೂ, ಇದರ ನಿಜವಾದ ಅರ್ಥವನ್ನು ಗ್ರಹಿಸದಿರುವ ಅನೇಕರು, ಇದರ ಬಹುಮುಖ ಭವ್ಯತೆಯ ಆನಂದವನ್ನು ಎಂದೂ ಅನುಭವಿಸಿಲ್ಲ. ಪ್ರೀತಿಯ ಬಗ್ಗೆ ಅನೇಕ ದಂಪತಿಗಳ ಪರಿಕಲ್ಪನೆಯು, ಸತ್ಯವೇದದ ಬೋಧನೆಗಿಂತ ಹೆಚ್ಚಾಗಿ, 21ನೇ ಶತಮಾನದ ಮನೋರಂಜನಾ ಲೋಕದಿಂದ ಹಾಗೂ ಪ್ರಣಯ-ಸಾಹಿತ್ಯದಿಂದ (TV ಸೀರಿಯಲ್ಗ ಳ ಕಥೆಗಳಿಂದ) ಪ್ರಭಾವಿತವಾಗಿರುವುದರಿಂದ, ನಿಜವಾದ ಪ್ರೀತಿಯ ಆರೋಗ್ಯಕರ, ಆಹ್ಲಾದಕರ ಅನುಭವದಿಂದ ಅವರು ವಂಚಿತರಾಗಿದ್ದಾರೆ.
ಪ್ರೀತಿಯ ನಿಜವಾದ ಅರ್ಥವನ್ನು ಗ್ರಹಿಸಿಕೊಳ್ಳದ ಕಾರಣದಿಂದಾಗಿ, ಅನೇಕ ವಿವಾಹಗಳು ವಿಪರೀತ ಹಾನಿಗೆ ಈಡಾಗಿವೆ. ವಿರುದ್ಧ ಲಿಂಗದ ಯಾರೋ ಒಬ್ಬರು ಹತ್ತಿರವಿದ್ದಾಗ ಉಂಟಾಗುವ ರೋಮಾಂಚಕ ಭಾವನೆಯನ್ನು, ಹಲವು ಬಾರಿ ನಿಜವಾದ ಪ್ರೀತಿಯೆಂದು ತಪ್ಪಾಗಿ ಗ್ರಹಿಸಲಾಗಿದೆ. ಇದರ ಆಧಾರದ ಮೇಲೆ ಮುಂದುವರಿದು ಮದುವೆ ಮಾಡಿಕೊಂಡಿರುವ ಅನೇಕರು, ತಾವು ಪ್ರೀತಿಯೆಂದು ತಪ್ಪಾಗಿ ತಿಳಿದದ್ದು ಬೇರೊಂದು ಭಾವನೆಯಾಗಿತ್ತು - ಅದು ಕೇವಲ ಪ್ರಣಯದ ವ್ಯಾಮೋಹವಾಗಿತ್ತು ಎಂದು ಸ್ವಲ್ಪ ಸಮಯದ ನಂತರ ಕಂಡುಕೊಳ್ಳುತ್ತಾರೆ.
ಎಷ್ಟೊಂದು ದೃಷ್ಟಾಂತಗಳಲ್ಲಿ ಒಬ್ಬ ಯುವಕನು ಯಾರೋ ಒಬ್ಬ ಹುಡುಗಿಯನ್ನು ನೋಡಿ "ಪ್ರೀತಿಯಲ್ಲಿ ಮರುಳಾಗುತ್ತಾನೆ," ಮತ್ತು ತಾನು ಇತ್ತೀಚೆಗೆ ನೋಡಿದ್ದ ಚಲನಚಿತ್ರದ (ಅಥವಾ ಪುಸ್ತಕದಲ್ಲಿ ಓದಿದ್ದ ಕಥೆಯ) ನಾಯಕನ ಹಾಗೆ ತನ್ನನ್ನು ಕಲ್ಪಿಸಿಕೊಂಡು, ಒಂದು ವೇಳೆ ತಾನು ಆಕೆಯನ್ನು ಮದುವೆಯಾದರೆ, ತಾವಿಬ್ಬರೂ "ಎಂದೆಂದಿಗೂ ಸಂತೋಷವಾಗಿ ಬಾಳಬಹುದು" ಎಂದುಕೊಳ್ಳಲು ಆರಂಭಿಸುತ್ತಾನೆ. ಆದರೆ ಪ್ರಣಯದ ಒಂದು ಜೋಡಿಯು ಪ್ರಣಯದ ಮತ್ತು ನಿಶ್ಚಿತಾರ್ಥದ ದಿನಗಳಲ್ಲಿ ಜೀವಿಸುತ್ತಿದ್ದ ಸ್ವಪ್ನಲೋಕವನ್ನು ವಿವಾಹವು ಸೂಕ್ತವಾದ ರೀತಿಯಲ್ಲಿ ಛಿಧ್ರಗೊಳಿಸುತ್ತದೆ. ಅದು ಅವರನ್ನು ಜಾಗೃತಗೊಳಿಸುತ್ತದೆ ಹಾಗೂ ಅವರನ್ನು ವಾಸ್ತವಿಕ ಜಗತ್ತಿಗೆ ತಂದು ಭದ್ರವಾಗಿ ನಿಲ್ಲಿಸುತ್ತದೆ. ವ್ಯಾಮೋಹವು ಕುರುಡಾಗಿದ್ದರೆ, ವಿವಾಹವು ನಿಶ್ಚಯವಾಗಿ ಕಣ್ಣು ಬಿಡಿಸುವಂಥದ್ದಾಗಿದೆ!
ನಿಜವಾದ ಪ್ರೀತಿಸತ್ಯವೇದದಲ್ಲಿ "ಪ್ರೀತಿ" ಎಂಬ ಪದವು ಯಾವ ಅರ್ಥದಲ್ಲಿ ಬಳಸಲ್ಪಟ್ಟಿದೆಯೆಂದು ನಾವು ತಿಳಕೊಳ್ಳಬೇಕು; ಇಲ್ಲವಾದರೆ ಈ ದಿನ ಲಕ್ಷಾಂತರ ಯುವಜನರು ಮತ್ತು ವಿವಾಹಿತ ದಂಪತಿಗಳು ಸಾಗುತ್ತಿರುವ ಸೋಲಿನ ಮಾರ್ಗಕ್ಕೆ ನಾವೂ ಸೇರಿಕೊಳ್ಳುತ್ತೇವೆ.
ಹೊಸ ಒಡಂಬಡಿಕೆಯು ಮೂಲತಃ ’ಗ್ರೀಕ್’ ಭಾಷೆಯಲ್ಲಿ ಬರೆಯಲ್ಪಟ್ಟಿತು ಮತ್ತು ಗ್ರೀಕ್ ಭಾಷೆಯಲ್ಲಿ "ಪ್ರೀತಿ" ಎಂಬ ಪದಕ್ಕೆ ನಾಲ್ಕು ರೂಪಗಳಿವೆ - ’ಅಗಾಪೆ’ (agape), ’ಫಿಲಿಯ’ (philia), ’ಸ್ಟಾರ್ಗೆ’ (storge) ಮತ್ತು ’ಎರೋಸ್’ (eros). ಇವುಗಳಲ್ಲಿ ’ಸ್ಟಾರ್ಗೆ’ ಎಂಬ ಪದವು ತಂದೆತಾಯಂದಿರು ಮಕ್ಕಳಿಗೆ ಮತ್ತು ಮಕ್ಕಳು ತಂದೆತಾಯಂದಿರಿಗೆ ತೋರಿಸುವ ಪ್ರೀತಿಗೆ ಸಂಬಂಧಿಸಿದೆ. ಇಲ್ಲಿ ನಾವು ವಿರುದ್ಧ ಲಿಂಗಗಳ ನಡುವಿನ ಪ್ರೀತಿಯನ್ನು ಪರಿಗಣಿಸುತ್ತಿರುವುದರಿಂದ, ’ಸ್ಟಾರ್ಗೆ’ ಪದವನ್ನು ಬದಿಗಿರಿಸಿ, ಮಿಕ್ಕದ ಮೂರು ಪದಗಳನ್ನು ಮಾತ್ರ ಗಮನಿಸೋಣ.
’ಅಗಾಪೆ’, ’ಫಿಲಿಯ’ ಮತ್ತು ’ಎರೋಸ್’ ಎಂಬ ಗ್ರೀಕ್ ಪದಗಳು ಪ್ರೀತಿಯ ಮೂರು ಮಟ್ಟಗಳಿಗೆ ಸಂಬಂಧಿಸಿವೆ - ಇವನ್ನು ಮಾನವನ ಆತ್ಮ, ಪ್ರಾಣ ಮತ್ತು ಶರೀರಕ್ಕೆ ಹೋಲಿಸಬಹುದು.
ಕನಿಷ್ಠ (ಅತಿ ಕೆಳಗಿನ) ಮಟ್ಟದಿಂದ ಆರಂಭಿಸುವುದಾದರೆ, ’ಎರೋಸ್’ ಎಂಬ ಪದವು ದೈಹಿಕ ಉದ್ರೇಕದ ಕಾಮನೆಯನ್ನು ಸೂಚಿಸುತ್ತದೆ. ಇದನ್ನು "ಸುಡುವಂತ ಮತ್ತು ಸಹಿಸಲು ಕಷ್ಟಕರವಾದ ಬಯಕೆ" ಎಂದು ವರ್ಣಿಸಲಾಗಿದೆ ಮತ್ತು ಇದು ಮುಖ್ಯವಾಗಿ ಒಂದು ಶರೀರವು ಮತ್ತೊಂದು ಶರೀರದೊಂದಿಗೆ ಸಂಗಮವಾಗುವ ವಿಚಾರವನ್ನು ಉಲ್ಲೇಖಿಸುತ್ತದೆ. ಒಬ್ಬ ವ್ಯಕ್ತಿಯ ಕಾಮನೆಯನ್ನು ಇನ್ನೊಬ್ಬ ವ್ಯಕ್ತಿಯಲ್ಲಿರುವ ಶಾರೀರಿಕವಾದುದನ್ನು ತೃಪ್ತಿಪಡಿಸುವುದರಲ್ಲಿ ಆಧಾರಿತವಾದ ಪ್ರೀತಿ ಇದಾಗಿದೆ. ಈ ಪ್ರೀತಿಯು ಯಾವಾಗಲೂ ’ಪಡೆದುಕೊಳ್ಳುವ’ ಮನೋಭಾವವನ್ನು ಹೊಂದಿರುತ್ತದೆ.
ಎರಡನೆಯ ಪದ ’ಫಿಲಿಯ’ ಎಂಬುದು. ಇದು ಗ್ರೀಕ್ ಭಾಷೆಯಲ್ಲಿ ಬಹಳ ಸಾಮಾನ್ಯವಾಗಿ "ಪ್ರೀತಿ" ಎಂಬುದಕ್ಕೆ ಉಪಯೋಗಿಸಲಾಗುವ ಪದವಾಗಿದೆ, ಮತ್ತು ಅಕ್ಕರೆಯ ಸಂಬಂಧ ಹಾಗೂ ಗೆಳೆತನದ ಪ್ರೀತಿಯನ್ನು ನಿರೂಪಿಸುತ್ತದೆ. ಇದರಲ್ಲಿ ಮೆಚ್ಚುಗೆಯ ಭಾವನೆ ಸೇರಿದೆ. ವಿವಾಹಿತ ಜೀವನದಲ್ಲಿ ಮುಖ್ಯವಾಗಿ ಒಬ್ಬರ ಮನಸ್ಸು ಇನ್ನೊಬ್ಬರ ಮನಸ್ಸಿನೊಂದಿಗೆ ಸೇರಿದಾಗ ಇದು ಪ್ರಕಟವಾಗುತ್ತದೆ. ಇಂತಹ ಪ್ರೀತಿಯು ಹೆಚ್ಚಾಗಿ ಇಬ್ಬರಲ್ಲಿ ಪರಸ್ಪರ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಒಂದೇ ರೀತಿಯ ದೃಷ್ಟಿಕೋನಗಳು ಇದ್ದಾಗ ಕಂಡುಬರುತ್ತದೆ. ಇದು ದೈಹಿಕ ಸೆಳೆತದ ’ಎರೋಸ್’ ಪ್ರೀತಿಗಿಂತ ಉನ್ನತ ಮಟ್ಟದ್ದಾಗಿದ್ದರೂ, ಇದರಲ್ಲೂ ಸ್ವಾರ್ಥದೃಷ್ಟಿ ಇರಬಹುದು ಏಕೆಂದರೆ ಅನೇಕ ವೇಳೆ ಇದರಿಂದ ದೊರಕುವ ತೃಪ್ತಿಯು, ತಾನು ಇತರರಿಗೆ ಬೇಕಾದವನು, ಅಥವಾ ಕೊರತೆಯಲ್ಲಿ ಇದ್ದವರ ಅಗತ್ಯತೆಯನ್ನು ತಾನು ಪೂರೈಸುವವನು ಅಥವಾ ಅವರಿಗೆ ತಾನು ರಕ್ಷಣೆ ಒದಗಿಸುವವನು, ಎಂಬ ಭಾವನೆಯ ಮೂಲಕ ಬರುವಂಥದ್ದಾಗಿದೆ.
ಮೂರನೆಯದು - ಇದು ಅತ್ಯುನ್ನತವಾದ ಪ್ರೀತಿಯನ್ನು ಸೂಚಿಸುತ್ತದೆ - ’ಅಗಾಪೆ’ ಎಂಬ ಪದ. ಇದು ದೇವರು ಪವಿತ್ರಾತ್ಮನ ಮೂಲಕ ನಮ್ಮಲ್ಲಿ ಸುರಿಯುವ ಪ್ರೀತಿಯಾಗಿದೆ (ರೋಮಾ. 5:5). ಇದು ವಿವಾಹಿತ ಜೀವನದಲ್ಲಿ ಮೂಲತಃ ಒಬ್ಬರ ಆತ್ಮವು ಇನ್ನೊಬ್ಬರ ಆತ್ಮದೊಂದಿಗೆ ಸೇರುವುದಕ್ಕೆ ಸಂಬಂಧಿಸಿದೆ. ಇದು ಕಲ್ವಾರಿ ಶಿಲುಬೆಯಲ್ಲಿ ಕಂಡುಬಂದ ಪ್ರೀತಿ - ತನ್ನನ್ನೇ ಧಾರೆ ಎರೆಯುವ ಪ್ರೀತಿ.
ವಿಲಿಯಮ್ ಬಾರ್ಕ್ಲೇಯವರು"ಮೋರ್ ನ್ಯೂ ಟೆಸ್ಟಮೆಂಟ್ ವರ್ಡ್ಸ್" ಎಂಬ ಪುಸ್ತಕದಲ್ಲಿ ಹೇಳಿರುವಂತೆ, "’ಅಗಾಪೆ’ ಪ್ರೀತಿಯು ಜಯಿಸಲಾಗದ ಔದಾರ್ಯತೆ, ಅಜೇಯ ಸದ್ಭಾವನೆಯಾಗಿದೆ. ಇದು ಏರಿಳಿಯುವ ಭಾವನೆಯ ಅಲೆಯಲ್ಲ; ಅದು ದೃಢ ನಿಶ್ಚಯವಾದ ಮನಸ್ಸಿನ ಉದ್ದೇಶಪೂರ್ವಕವಾದ ಜೀವನ ವಿಧಾನ; ಇದು ಒಬ್ಬನು ತನ್ನ ಇಚ್ಚೆಯ ಮೇಲೆ ಉದ್ದೇಶಪೂರ್ವಕವಾಗಿ ಪಡೆಯುವ ಸಾಧನೆ ಹಾಗೂ ಜಯವಾಗಿದೆ; ಈ ಪ್ರೀತಿಯನ್ನು ಸಾಧಿಸಲು ಒಬ್ಬ ಮನುಷ್ಯನು ತನ್ನ ಬದುಕನ್ನೆಲ್ಲಾ ಕೊಡುತ್ತಾನೆ; ಇದಕ್ಕಾಗಿ ಆತನ ಹೃದಯವನ್ನು ಮಾತ್ರವಲ್ಲದೆ, ಆತನ ಮನಸ್ಸನ್ನೂ ಹಾಗೂ ಚಿತ್ತವನ್ನೂ ಸಮರ್ಪಿಸಬೇಕಾಗುತ್ತದೆ. ಒಬ್ಬ ಮನುಷ್ಯನನ್ನು ಪವಿತ್ರಾತ್ಮನು ತನ್ನ ವಶಪಡಿಸಿಕೊಂಡಾಗ ಮತ್ತು ಆತನ ಹೃದಯದಲ್ಲಿ ದೇವರ ಪ್ರೀತಿರಸವನ್ನು ಧಾರಾಳವಾಗಿ ಸುರಿದಾಗ ಮಾತ್ರ, ಮನುಷ್ಯನು ಇಂತಹ ಪ್ರೀತಿಯನ್ನು ಹೊಂದಲು ಸಾಧ್ಯವಾಗುತ್ತದೆ."
ಗ್ರೀಕ್ ಭಾಷೆಯ ಒಂದು ಶಬ್ದಕೋಶವು ’ಅಗಾಪೆ’ ಎಂಬ ಪದದ ಅರ್ಥವನ್ನು ಹೀಗೆ ವಿವರಿಸುತ್ತದೆ, "ಅದು ತನ್ನ ಉದ್ದೇಶಿತ ವ್ಯಕ್ತಿಯನ್ನು ದೃಢ ನಿರ್ಧಾರದಿಂದ ಮತ್ತು ನಿಸ್ವಾರ್ಥ ಅನುಕಂಪದಿಂದ ಆರಿಸಿಕೊಳ್ಳುತ್ತದೆ. ಇದು ಪ್ರೀತಿಯ ಪೂರ್ಣ ವಿಕಸಿತ ಮತ್ತು ಅತ್ಯುನ್ನತ ರೂಪವಾಗಿದೆ. ಇದು ದೇವರಿಂದ ಬರುತ್ತದೆ. ಇದರ ಕ್ರಿಯಾಪದ ರೂಪವು ’ಉದ್ದೇಶಿತ ವ್ಯಕ್ತಿಯ ಬಗ್ಗೆ ದಯೆ’ ಎಂಬ ಅರ್ಥವನ್ನು ಹೊಂದಿದೆ ಮತ್ತು ಇದು ಉದ್ದೇಶಪೂರ್ವಕವಾಗಿ ಮಾಡುವ ಕಾರ್ಯವಾಗಿದೆ."
’ಅಗಾಪನ್’ (’ಅಗಾಪೆ’ ಪದದ ಕ್ರಿಯಾಪದ ರೂಪ) ಪದದ ಅರ್ಥ, "ಪ್ರಾಮುಖ್ಯತೆ ನೀಡುವುದು, ಕಾಳಜಿ ವಹಿಸುವುದು, ಮೆಚ್ಚುವುದು ಮತ್ತು ನಿಷ್ಠಾವಂತಿಕೆ ತೋರಿಸುವುದು," ಎಂದಾಗಿದೆ. ಪತಿ-ಪತ್ನಿಯರ ನಡುವೆ ಇರಬೇಕಾದ ಪ್ರೀತಿಯ ಬಗ್ಗೆ ಹೇಳುವುದಾದರೆ, ಇದರ ಅರ್ಥ ಇಬ್ಬರೂ ಸಂಗಾತಿಗಳು ಒಬ್ಬರನ್ನೊಬ್ಬರು ಅತ್ಯಂತ ಅಮೂಲ್ಯ ವ್ಯಕ್ತಿಗಳೆಂದು ಎಣಿಸಬೇಕು; ಒಬ್ಬರಿಗೊಬ್ಬರು ಕಾಳಜಿ ವಹಿಸಬೇಕು; ಅವರು ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳಬೇಕು ಮತ್ತು ಅವರನ್ನು ನೋಡಿ ಹರ್ಷಿಸಬೆಕು; ಮತ್ತು ಅವರು ಒಬ್ಬರಿಗೊಬ್ಬರು ನಿಷ್ಠಾವಂತರಾಗಿರಬೇಕು.
ಸತ್ಯವೇದವು ’ಅಗಾಪೆ’ಯನ್ನು ಈ ರೀತಿಯಾಗಿ ವಿವರಿಸುತ್ತದೆ: "ಅದು ಸುಲಭವಾಗಿ ತಾಳ್ಮೆಯನ್ನು ಕಳಕೊಳ್ಳುವುದಿಲ್ಲ - ಅದು ರಚನಾತ್ಮಕ ಮನೋಭಾವವನ್ನು ಇರಿಸಿಕೊಳ್ಳುತ್ತದೆ. ಅದು ಇತರರ ಮೇಲೆ ಬಿಗಿಹಿಡಿತ ಇರಿಸುವುದಿಲ್ಲ; ಅದು ಇತರರ ಒಳ್ಳೆಯ ಅಭಿಪ್ರಾಯಕ್ಕಾಗಿ ಹಾತೊರೆಯುವುದಿಲ್ಲ ಅಥವಾ ತನ್ನ ಪ್ರಾಮುಖ್ಯತೆಯ ಬಗ್ಗೆ ದೊಡ್ಡಸ್ತಿಕೆ ಮಾಡುವುದಿಲ್ಲ. ಅದು ಸಭ್ಯವಾಗಿ ನಡೆಯುತ್ತದೆ ಮತ್ತು ಸ್ವ-ಪ್ರಯೋಜನಕ್ಕಾಗಿ ಹೆಣಗುವುದಿಲ್ಲ. ಅದು ಥಟ್ಟನೆ ಸಿಟ್ಟಾಗುವುದಿಲ್ಲ. ಅದು ಇತರರ ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಅಥವಾ ಇತರರು ಮಾಡುವ ಅನ್ಯಾಯವನ್ನು ನೋಡಿ ಸಂತೋಷಿಸುವುದಿಲ್ಲ. ಇದಕ್ಕೆ ಪ್ರತಿಯಾಗಿ, ಸತ್ಯಕ್ಕೆ ಜಯವಾದಾಗ, ಅದು ಒಳ್ಳೆಯ ಜನರೊಂದಿಗೆ ಸೇರಿ ಸಂತೋಷಿಸುತ್ತದೆ. ಎಲ್ಲವನ್ನೂ ಮಿತಿಮೀರಿ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ನಿರೀಕ್ಷೆಯನ್ನು ಕಳಕೊಳ್ಳುವುದಿಲ್ಲ; ಅದು ಎಂದಿಗೂ ಬಿದ್ದುಹೋಗುವುದಿಲ್ಲ. ಕೊನೆಯವರೆಗೂ ಗಮನಿಸಿ ನೋಡಿದರೆ, ಬೇರೆಲ್ಲವೂ ಕದಲಿ ಬೀಳುವಾಗ, ಪ್ರೀತಿಯೊಂದೇ ಭದ್ರವಾಗಿ ನಿಂತಿರುವದು ಕಂಡುಬರುತ್ತದೆ" (1 ಕೊರಿ. 13:4-8, - J.B.Phillips ಭಾಷಾಂತರ).
’ಅಗಾಪೆ’ ಎಂಬ ಪದದ ಇನ್ನೊಂದು ವಿವರಣೆ ಹೀಗಿದೆ: "ಅದು ಸುಲಭವಾಗಿ ಸಂಶಯಪಡುವುದಿಲ್ಲ ಮತ್ತು ಬಹಳ ಬೇಗನೆ ನಂಬುತ್ತದೆ; ಬೇಗನೆ ತಪ್ಪು ಹೊರಿಸುವುದಿಲ್ಲ, ಆದರೆ ಬೇಗನೆ ನೀತಿವಂತರೆಂದು ನಿರ್ಣಯಿಸುತ್ತದೆ; ಮನಸ್ಸು ನೋಯಿಸುವುದರಲ್ಲಿ ಅದು ನಿಧಾನ, ಆದರೆ ಒಬ್ಬರನ್ನು ಸಮರ್ಥಿಸಲು ತ್ವರೆಮಾಡುತ್ತದೆ; ಗುಟ್ಟು ರಟ್ಟುಮಾಡುವುದನ್ನು ನಿಧಾನಿಸುತ್ತದೆ, ಆದರೆ ಬೇಗನೆ ಸಂರಕ್ಷಿಸುತ್ತದೆ; ಗದರಿಸುವದರಲ್ಲಿ ನಿಧಾನ, ಆದರೆ ತಾಳ್ಮೆಯಲ್ಲಿ ಚುರುಕು; ಹೀನೈಸುವುದರಲ್ಲಿ ನಿಧಾನ, ಆದರೆ ಶ್ಲಾಘಿಸುವುದರಲ್ಲಿ ಚುರುಕುತನ; ಕೋರಿಕೆ ಇರಿಸುವುದರಲ್ಲಿ ನಿಧಾನ, ಆದರೆ ಕೈಚಾಚಿ ಕೊಡುಗೆ ನೀಡುತ್ತದೆ; ಕೆರಳಿಸುವುದರಲ್ಲಿ ನಿಧಾನ, ಆದರೆ ಸಂಧಾನ ಮಾಡುವುದರಲ್ಲಿ ತೀವ್ರತೆ; ತಡೆಯುವುದರಲ್ಲಿ ನಿಧಾನ, ಆದರೆ ಸಹಾಯ ನೀಡುವುದರಲ್ಲಿ ಶೀಘ್ರತೆ; ಮತ್ತು ಮುನಿಸಿಕೊಳ್ಳುವುದರಲ್ಲಿ ನಿಧಾನ, ಆದರೆ ಕ್ಷಮಿಸುವುದರಲ್ಲಿ ತ್ವರಿತ".
ಒಬ್ಬ ವಿಶ್ವಾಸಿಯ ವೈವಾಹಿಕ ಜೀವನದಲ್ಲಿ, ಮೇಲಿನ ಎಲ್ಲಾ ತರಹದ ಪ್ರೀತಿಗಳು ಕಂಡುಬರಬೇಕು - ಆದರೆ ಸರಿಯಾದ ಕ್ರಮದಲ್ಲಿ - ಮೊದಲು ’ಅಗಾಪೆ’, ಎರಡನೆಯದಾಗಿ ’ಫಿಲಿಯ’ ಮತ್ತು ಮೂರನೆಯದಾಗಿ ’ಎರೋಸ್’. ಇದು '1 ಥೆಸ. 5:23'ರ ಬೋಧನೆಗೆ ಅನುಸಾರವಾಗಿದೆ, ಏಕೆಂದರೆ ಅಲ್ಲಿ ಆತ್ಮಕ್ಕೆ ಮೊದಲ ಸ್ಥಾನ, ಪ್ರಾಣಕ್ಕೆ ಎರಡನೆಯ ಸ್ಥಾನ ಮತ್ತು ಶರೀರಕ್ಕೆ ಮೂರನೆಯ ಸ್ಥಾನ ನೀಡಲಾಗಿದೆ. ದೇವರು ಮಾನವನನ್ನು ಸೃಷ್ಟಿಸಿದಾಗ, ಇದೇ ಸುವ್ಯವಸ್ಥೆ ಆತನಲ್ಲಿ ಇರಬೇಕೆಂದು ಉದ್ದೇಶಿಸಿದರು.
ಆದಾಗ್ಯೂ, ಬಿದ್ದುಹೋಗಿರುವ ಮಾನವನಲ್ಲಿ ಈ ವ್ಯವಸ್ಥೆಯು ಹಿಂದುಮುಂದಾಗಿದೆ, ಮತ್ತು ಈ ಕಾರಣಕ್ಕಾಗಿ ಆತನ ಪ್ರೀತಿಯ ಪರಿಕಲ್ಪನೆಯೂ ಸಹ ವಿರೂಪಗೊಂಡಿದೆ. ಲೋಕವು ಶರೀರಭಾವದ ಒಂದು ಮನಸ್ಸು ಹಾಗೂ ಶರೀರ, ಮತ್ತೊಂದು ಶರೀರಭಾವದ ಮನಸ್ಸು ಹಾಗೂ ಶರೀರದ ಕಡೆಗೆ ಆಕರ್ಷಿಸಲ್ಪಡುವುದನ್ನು "ಪ್ರೀತಿ" ಎಂದು ಹೆಸರಿಸುತ್ತದೆ. ಈ ಪ್ರೀತಿಯಲ್ಲಿ ’ಫಿಲಿಯ’ ಮತ್ತು ’ಎರೋಸ್’ ಮಾತ್ರ ಇರುತ್ತವೆ - ಮತ್ತು ಅಯ್ಯೋ, ಕೆಲವೊಮ್ಮೆ ’ಎರೋಸ್’ ಒಂದೇ ಇರುತ್ತದೆ. ಆದಾಗ್ಯೂ, ದೇವರ ದೃಷ್ಟಿಯಲ್ಲಿ ’ಅಗಾಪೆ’ ಇಲ್ಲದಿರುವ ಯಾವುದೇ ಭಾವನೆಯನ್ನು "ಪ್ರೀತಿ" ಎಂದು ಕರೆಯುವುದು ಯೋಗ್ಯವಲ್ಲ.
ಪ್ರೀತಿಯಲ್ಲಿ ಬೀಳುವುದುಒಬ್ಬ ವಿಶ್ವಾಸಿಯು ’ಪ್ರೀತಿಯಲ್ಲಿ ಬೀಳುವುದು’ ಸರಿಯೇ? "ಪ್ರೀತಿಯಲ್ಲಿ ಬೀಳುವುದು" ಎಂದು ಯಾವ ಅರ್ಥದಲ್ಲಿ ಹೇಳಲಾಗಿದೆ, ಎಂಬುದರ ಮೇಲೆ ಇದು ಅವಲಂಬಿಸಿದೆ. ಲೋಕದ ದೃಷ್ಟಿಯಲ್ಲಿ, ಪ್ರೀತಿಯೆಂಬ ಮಹಾಶಕ್ತಿಯು ಒಬ್ಬ ಮನುಷ್ಯನನ್ನು ಹಠಾತ್ತಾಗಿ ಸ್ವಾಧೀನ ಮಾಡಿಕೊಂಡು, ಆತನನ್ನು ಆಳಲು ಪ್ರಾರಂಭಿಸುತ್ತದೆ. ಒಂದು ವೇಳೆ "ಪ್ರೀತಿಯಲ್ಲಿ ಬಿದ್ದಿರುವ" ಆ ವ್ಯಕ್ತಿಯು ಯಾವುದೋ ಕಾರಣಕ್ಕಾಗಿ ತನ್ನ ಪ್ರೇಯಸಿಯನ್ನು ವಿವಾಹವಾಗಲು ಆಗದಿದ್ದರೆ, ಆತನು ತನ್ನ ಇಡೀ ಜೀವಿತವನ್ನು ಅಥವಾ ಕಡಿಮೆ ಪಕ್ಷ, ಮತ್ತೊಮ್ಮೆ "ಪ್ರೀತಿಯಲ್ಲಿ ಬೀಳುವ" ತನಕ ಕೊರಗುತ್ತಾ ಕಳೆಯಬೇಕು. ನಿರಾಶೆಗೊಂಡ ಪ್ರೇಮಿಯ ಅನುಭವವನ್ನು ಆಧರಿಸಿದ ಅನೇಕ ಜನಪ್ರಿಯ ಸಂಗೀತ (pop songs) ಮತ್ತು ಚಲನ ಚಿತ್ರಗಳು ತಯಾರಿಸಲ್ಪಟ್ಟಿವೆ. ಈ ಅವಸ್ಥೆಗೆ ಕಾರಣ, ಲೋಕದ ಕಲ್ಪನೆಯಲ್ಲಿ ಪ್ರೀತಿಯು ’ಫಿಲಿಯ’ ಮತ್ತು ’ಎರೋಸ್’ ಭಾವನೆಗಳನ್ನು ಮಾತ್ರ ಒಳಗೊಂಡಿರುತ್ತದೆ. ಒಬ್ಬ ವಿಶ್ವಾಸಿಯು ಈ ರೀತಿಯಾಗಿ "ಪ್ರೀತಿಯಲ್ಲಿ ಬೀಳುವುದು" ಉಚಿತವಲ್ಲ, ಎಂಬುದು ಸ್ಪಷ್ಟವಾದ ವಿಷಯ.
ದೇವರ ಮಗುವಿಗೆ, ಪ್ರೀತಿಯು, ’ಅಗಾಪೆ’ಯ ಮಟ್ಟದಲ್ಲಿ ಶುರುವಾಗಬೇಕು ಮತ್ತು ಪ್ರಾಥಮಿಕವಾಗಿ ಅದು ಆತ್ಮಿಕ ಆಕರ್ಷಣೆಯ ಮೇಲೆ ಆಧಾರಿತವಾಗಿರಬೇಕು. ಆತನು "ಪ್ರೀತಿಯಲ್ಲಿ ಬೀಳುವುದಾದರೆ," ಹೀಗೆ ಮಾತ್ರ ಬೀಳಬೇಕು. ಆತನ ಸಂಪೂರ್ಣ ಜೀವಿತವು ಯಾವ ರೀತಿ ಪವಿತ್ರಾತ್ಮನ ನಿಯಂತ್ರಣದಲ್ಲಿ ಇರಬೇಕೆಂದರೆ, ಆತನು ತನ್ನ ಭಾವನೆಗಳನ್ನು ಹಿಡಿತದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಬೇಕು, ಮತ್ತು ಅವುಗಳು ಚಂಚಲವಾಗಿ ಆತನನ್ನು ಅಲ್ಲಿ ಇಲ್ಲಿ ಎಳೆಯಬಾರದು. ಪ್ರೀತಿಸುವ ವಿಷಯದಲ್ಲಿ ಒಬ್ಬ ಕ್ರೈಸ್ತನು, ಜೀವನದ ಇತರ ಎಲ್ಲಾ ವಿಷಯಗಳಲ್ಲಿ ಇದ್ದಂತೆ, ದೇವರ ಆತ್ಮನಿಂದ ನಡೆಸಲ್ಪಡಬೇಕು. ಪವಿತ್ರಾತ್ಮನು ಮಾತ್ರವೇ ನಿಮ್ಮನ್ನು ದೇವರು ನಿಮಗಾಗಿ ಆರಿಸಿರುವ ಜೀವನ-ಸಂಗಾತಿಯ ಬಳಿಗೆ ಕರೆದೊಯ್ಯಲು ಸಮರ್ಥನು ಮತ್ತು ಕೇವಲ ಆ ವ್ಯಕ್ತಿಯೊಂದಿಗೆ ನೀವು ’ಪ್ರೀತಿಯಲ್ಲಿ ಬೀಳಬೇಕು’.
ಹಾಗಿದ್ದಲ್ಲಿ, ನಾವು ಎಷ್ಟು ಎಚ್ಚರ ವಹಿಸಬೇಕು! ಒಬ್ಬ ಅವಿಶ್ವಾಸಿಯು ಒಬ್ಬರೊಡನೆ ಪ್ರೀತಿಯಲ್ಲಿ ಬಿದ್ದು, ಕೆಲವು ತಿಂಗಳುಗಳು ಅಥವಾ ಕೆಲವು ವರ್ಷಗಳ ನಂತರ ಮನಸ್ಸು ಬದಲಾಯಿಸಿ, ಬೇರೊಬ್ಬರೊಡನೆ ಪ್ರೀತಿಯಲ್ಲಿ ಬೀಳುವಂತೆ, ನಾವು ಮಾಡಲು ಸಾಧ್ಯವಿಲ್ಲ. ಒಬ್ಬ ವಿಶ್ವಾಸಿಯು ತನ್ನ ’ಭಾವನೆಗಳಿಗೆ’ ತನ್ನೊಡನೆ ಚೆಲ್ಲಾಟ ಆಡುವ ಅವಕಾಶವನ್ನು ಎಂದಿಗೂ ನೀಡಬಾರದು. ಆತನ ಪ್ರೀತಿಯು ಆತನ ಭಾವನೆಗಳಲ್ಲಿ ಅಲ್ಲ, ಆತನ ’ಚಿತ್ತದಲ್ಲಿ’ ಆರಂಭವಾಗಬೇಕು. ಏಕೆಂದರೆ ಭಾವನೆಗಳು ನಮ್ಮನ್ನು ಸುಲಭವಾಗಿ ಮಂಕುಮಾಡಬಹುದು. ಪ್ರೀತಿಯ ’ಭಾವನೆಗಳು’ ಇರಬಾರದು ಎಂದಲ್ಲ, ಆದರೆ ಚಿತ್ತವು ಪ್ರೀತಿಯನ್ನು ಅನುಮತಿಸಿದ ನಂತರ ಭಾವನೆಗಳಿಗೆ ಅವಕಾಶ ಸಿಗಬೇಕು. ಆದರೆ ನಮ್ಮ ಜೀವನದಲ್ಲಿ ಶಿಲುಬೆಯು ನಿರಂತರವಾಗಿ ಕಾರ್ಯ ನಿರ್ವಹಿಸಿ, ನಾವು ನಮ್ಮ ಸ್ವಂತ ಚಿತ್ತದ ಆಸೆಗಳನ್ನು ಸಾಯಿಸುವುದರ ಮೂಲಕ ದೇವರ ಚಿತ್ತವನ್ನು ಮಾತ್ರ ಸ್ವೀಕರಿಸಲು ಒಪ್ಪಿಕೊಂಡಾಗ ಇದು ಸಾಧ್ಯವಾಗುತ್ತದೆ.
ನೀವು ಪ್ರತೀ ಸಲ ನಿಮ್ಮನ್ನು ಆಕರ್ಷಿಸುವ ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ, ಶಿಲುಬೆಯು ನಿಮ್ಮ ಸ್ವಾಭಾವಿಕ ಮಮತೆಯನ್ನು ನಿಷ್ಕರುಣೆಯಿಂದ ತೆಗೆದುಹಾಕಲು ನೀವು ಅನುಮತಿಸಬೇಕು, ಮತ್ತು ಆ ಮೂಲಕ ಆಕೆಯೊಂದಿಗೆ/ಆತನೊಂದಿಗೆ ಯಾವುದೇ ಭಾವನಾತ್ಮಕ ಮೈತ್ರಿಯನ್ನು (ಮನಸ್ಸಿನೊಳಗೂ ಸಹ) ಬೆಳೆಸಿಕೊಳ್ಳದಂತೆ ಎಚ್ಚರ ವಹಿಸಬೇಕು. ನೀವು ಹೀಗೆ ಮಾಡಿದಾಗ ಮಾತ್ರ ದೇವರ ಚಿತ್ತವನ್ನು ಖಾತ್ರಿ ಪಡಿಸಿಕೊಳ್ಳಲು ಅವಶ್ಯವಾದ ಚುರುಕುತನ ನಿಮ್ಮಲ್ಲಿರುತ್ತದೆ. ಈ ವಿಷಯದಲ್ಲಿ ನೀವು ದೇವರ ಚಿತ್ತವನ್ನು ಕಂಡುಕೊಳ್ಳುವವರೆಗೆ, ಯಾವುದೇ ಭಾವನಾತ್ಮಕ ಅಸಕ್ತಿ ಹುಟ್ಟಿ ಬೆಳೆಯದಂತೆ ಹಿಡಿತ ಇರಿಸಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಭಾವನೆಗಳು ನಿಮ್ಮ ವಿವೇಚನಾ ಶಕ್ತಿಯನ್ನು ಮಂಕಾಗಿಸುವುದನ್ನು ಮತ್ತು ಅಂತ್ಯದಲ್ಲಿ ನೀವು ತಪ್ಪು ದಾರಿಗೆ ಎಳೆಯಲ್ಪಡುವುದನ್ನು ನೀವು ಕಾಣುತ್ತೀರಿ.
ನೀವು ವಹಿಸಬೇಕಾದ ಎಚ್ಚರಿಕೆ ಏನೆಂದರೆ, ಮುಂದೆ ನಿಮಗೆ ವಿಷಾದ ತರುವಂತ ಪರಿಸ್ಥಿತಿಗೆ ನಿಮ್ಮ ಭಾವನೆಗಳು ನಿಮ್ಮನ್ನು ಕರೆದೊಯ್ಯಲು ಬಿಡಬಾರದು. ನೀವು ನಿಮ್ಮ ಮನಸ್ಸನ್ನು ಯಾರಿಗೋ ಒಪ್ಪಿಸಿದ ನಂತರ (ಗುಟ್ಟಾಗಿ ಹೀಗೆ ಮಾಡಿರಬಹುದು), ಆ ವ್ಯಕ್ತಿಯು ದೇವರು ನಿಮಗಾಗಿ ಮಾಡಿದ ಆಯ್ಕೆಯಲ್ಲವೆಂದು ಕಂಡುಕೊಳ್ಳುವುದು ಬಹಳ ನೋವನ್ನು ಉಂಟುಮಾಡುತ್ತದೆ. ಹೀಗೆ ಮಾಡಿದ ಮೇಲೆ ಆತನನ್ನು/ಆಕೆಯನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕುವುದು ಅತ್ಯಂತ ಕಠಿಣ ಕಾರ್ಯವಾಗಿದೆ. ಈ ರೀತಿಯ ಅನುಭವವು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಅದನ್ನು ಮನಸ್ಸಿನಿಂದ ಸುಲಭವಾಗಿ ಅಳಿಸಲು ಆಗುವುದಿಲ್ಲ. ನೀವು ಬೇರೊಬ್ಬರನ್ನು ಮದುವೆಯಾದ ನಂತರವೂ ಹಳೆಯ ನೆನಪುಗಳು ಮತ್ತೆ ಮತ್ತೆ ಮನಸ್ಸಿಗೆ ಬರುತ್ತವೆ. ತಪ್ಪಿತಸ್ಥ ಮತ್ತು ವಿಷಾದದ ಮನೋಭಾವವು ಒಳಗಿನಿಂದ ನಿಮ್ಮ ಮನಸ್ಸನ್ನು ಪೀಡಿಸಬಹುದು ಮತ್ತು ಇದು ನಿಮ್ಮ ವ್ಯಕ್ತಿತ್ವವನ್ನು ಕೆಡಿಸಬಹುದು ಮತ್ತು ನಿಮ್ಮ ವಿವಾಹಿತ ಜೀವನಕ್ಕೂ ಕೇಡು ಉಂಟುಮಾಡಬಹುದು.
ವಿಶೇಷವಾಗಿ ಯುವಕರು ಕಾಳಜಿ ವಹಿಸಬೇಕಾದ ಸಂಗತಿ ಏನೆಂದರೆ, ತಾವು ಕೇವಲ ಶಾರೀರಿಕ ಸೊಬಗು ಅಥವಾ ಲಾವಣ್ಯಕ್ಕೆ ಮರುಳಾಗದಂತೆ ನೋಡಿಕೊಳ್ಳಬೇಕು. ನಿಜವಾದ ಪ್ರೀತಿ ಇಲ್ಲದಿರುವಾಗ, ಶಾರೀರಿಕ ಆಕರ್ಷಣೆಯನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು. ನಿಜವಾದ ಪ್ರೀತಿ ಇರುವಾಗ, ಹೇಗಿದ್ದರೂ ಶಾರೀರಿಕ ಆಕರ್ಷಣೆಯು ಪ್ರಮುಖ ಅಂಶವಾಗಿರುವುದಿಲ್ಲ.
ಪ್ರೀತಿಯ ವಿಷಯದಲ್ಲಿ, ಬೇರೆ ವಿಷಯಗಳಲ್ಲಿ ಇದ್ದಂತೆ, ದೇವರ ವಾಕ್ಯ ಈ ರೀತಿಯಾಗಿ ಆಜ್ಞಾಪಿಸುತ್ತದೆ: "ಇಹಲೋಕದ ನಡವಳಿಕೆಯನ್ನು ಅನುಸರಿಸದೆ ... ಮನಸ್ಸು ನೂತನವಾಗುವಂತೆ ರೂಪಾಂತರ (ಸಂಪೂರ್ಣ ಬದಲಾವಣೆ) ಹೊಂದಿರಿ. ಮನಸ್ಸು ಹೊಸ ಧ್ಯೇಯವನ್ನು ಮತ್ತು ಹೊಸ ಮನೋಭಾವವನ್ನು ಪಡೆಯಲಿ. ಹೀಗೆ ದೇವರ ಚಿತ್ತಾನುಸಾರವಾಗಿ ಯಾವುದು ಉತ್ತಮವಾದದ್ದು ಮತ್ತು ಮೆಚ್ಚಿಕೆಯಾದದ್ದು ಮತ್ತು ದೋಷರಹಿತವಾದದ್ದು ಎಂದು (ನಿಮ್ಮೊಳಗೆ) ಖಚಿತಪಡಿಸಿಕೊಳ್ಳಿರಿ" (ರೋಮಾ. 12:2).
ಮೋಹ ಮತ್ತು ಪ್ರೀತಿಪ್ರಣಯ-ವ್ಯಾಮೋಹ ಮತ್ತು ’ಅಗಾಪೆ-ಪ್ರೀತಿಯ’ ನಡುವೆ ಸಾಕಷ್ಟು ಅಂತರವಿದೆ. ಕೆಲವರು ಹೀಗೆ ಪ್ರಶ್ನಿಸಬಹುದು, "ನಾನು ಒಬ್ಬ ಹುಡುಗನನ್ನು/ಹುಡುಗಿಯನ್ನು ಯಥಾರ್ಥವಾಗಿ ಪ್ರೀತಿಸುತ್ತಿದ್ದೇನೋ ಅಥವಾ ನನ್ನಲ್ಲಿ ಇರುವಂಥದ್ದು ಬರೀ ಕಾಮನೆಯೋ ಎಂದು ಹೇಗೆ ತಿಳಕೊಳ್ಳಲಿ?" ವೆಬ್ಸ್ಟುರ್ ಪದಕೋಶವು "ವ್ಯಾಮೋಹ"ದ ಅರ್ಥವನ್ನು ಈ ರೀತಿಯಾಗಿ ವಿವರಿಸುತ್ತದೆ, "ವಿಪರೀತವಾದ ಅಥವಾ ಮೂರ್ಖತನದ ಕಾಮನೆಯಿಂದ ಉತ್ತೇಜಿತವಾದ ಸ್ಥಿತಿ, ಮತ್ತು ವಿವೇಚನೆಯ ಹತೋಟಿಗೆ ಸಿಗದಿರುವ ಮೊಂಡುತನದ ಸ್ಥಿತಿ".
ಪ್ರಣಯ-ವ್ಯಾಮೋಹ ಮತ್ತು ’ಅಗಾಪೆ-ಪ್ರೀತಿಯ’ ನಡುವಿನ ವ್ಯತ್ಯಾಸವನ್ನು ಸ್ಪಷ್ಟ ಪಡಿಸುವುದಕ್ಕಾಗಿ, ನಾವು ಇಬ್ಬರು ಕ್ರೈಸ್ತ ಯುವಕರ ಅನುಭವವನ್ನು ನೋಡೋಣ - ಪ್ರಕಾಶನು ಒಬ್ಬಳು ಹುಡುಗಿಯನ್ನು ಮೋಹಿಸಿ ಪ್ರಣಯದಲ್ಲಿ ತೊಡಗಿದ್ದನು, ಮತ್ತು ಸುರೇಶನು ಒಬ್ಬಳು ಹುಡುಗಿಯನ್ನು ನಿಜವಾಗಿ ಪ್ರೀತಿಸಿದನು (ಅಂದರೆ ’ಅಗಾಪೆ’-ಪ್ರೀತಿ). ಕೆಳಗೆ ಕೊಟ್ಟಿರುವ ನಿದರ್ಶನವು ಹುಡುಗಿಯರಿಗೂ ಇದೇ ರೀತಿಯಾಗಿ ಅನ್ವಯಿಸುತ್ತದೆ. (ಇದರಲ್ಲಿ ಕಂಡುಬರುವ ಮೋಹ ಮತ್ತು ಅಗಾಪೆ-ಪ್ರೀತಿಯ ನಡುವಿನ ವ್ಯತ್ಯಾಸವನ್ನು ತೋರಿಸುವಂತ ಅನೇಕ ಸಂಗತಿಗಳು, ’ಡ್ವೈಟ್ ಹರ್ವೀ ಸ್ಮಾಲ್’ ಎಂಬ ಲೇಖಕರ "ಡೆಸೈನ್ ಫ಼ೊರ್ ಕ್ರಿಸ್ಟಿಯನ್ ಮ್ಯಾರೇಜ್" ಎಂಬ ಪುಸ್ತಕದಲ್ಲಿ ನಮೂದಿಸಲಾಗಿದ್ದು, ನಾನು ಅವರ ಈ ಪುಸ್ತಕಕ್ಕೆ ಆಭಾರಿಯಾಗಿದ್ದೇನೆ).
ಪ್ರಣಯ-ವ್ಯಾಮೋಹದ ಒಂದು ಉದಾಹರಣೆಪ್ರಕಾಶನು ಈ ಹುಡುಗಿಯನ್ನು ಕಾಲೇಜಿನಲ್ಲಿ ಭೇಟಿಯಾದನು. ಆಕೆಯು ಆತನನ್ನು ಆಕರ್ಷಿಸಿದ ಮತ್ತು ಆತನ ಆಸಕ್ತಿಗೆ ಪ್ರತಿಕ್ರಿಯೆ ತೋರಿಸಿದ ಮೊದಲ ಹುಡುಗಿಯಾಗಿದ್ದಳು. ಆತನಿಗೆ ಆಕೆಯ ಪರಿಚಯ ಸರಿಯಾಗಿ ಆಗಿರಲಿಲ್ಲ, ಆದರೆ (ಆತನ ವಿವರಣೆಯ ಪ್ರಕಾರ) ಆತನಿಗೆ ಹಠಾತ್ತಾಗಿ ಆಕೆಯೊಂದಿಗೆ "ಪ್ರೀತಿಯಲ್ಲಿ ಬಿದ್ದಿರುವ" ಅನುಭವವಾಯಿತು. ಅದು ಮೊದಲ ನೋಟದ ಪ್ರೇಮವಾಗಿತ್ತು. ಸಹಜವಾಗಿ, ಆ ಹುಡುಗಿಯ ದೈಹಿಕ ಸೌಂದರ್ಯ ಮತ್ತು ಲಾವಣ್ಯದಲ್ಲಿ ಆಕರ್ಷಣೆಯಿತ್ತು ಮತ್ತು ಆಕೆಯಲ್ಲಿ ಆತನ ಅಭಿರುಚಿಗೆ ಹೋಲುವಂತ ಕೆಲವು ಅಭಿರುಚಿಗಳೂ ಇದ್ದವು, ಇಷ್ಟು ಅಂಶಗಳು ಮಾತ್ರ ಆತನನ್ನು ಆಕೆಯ ಪ್ರೀತಿಯಲ್ಲಿ ಬೀಳಿಸಿದವು. ದೈಹಿಕ ಸೌಂದಯವೇ ನಿಸ್ಸಂಶಯವಾಗಿ ಪ್ರಮುಖ ಅಂಶವಾಗಿತ್ತು. ಆತನಿಗೆ ಆಕೆಯ ಬಗ್ಗೆ ಬಹಳ ಕಡಿಮೆ ತಿಳುವಳಿಕೆ ಇದ್ದರೂ, ಆಕೆಯಲ್ಲಿ ಮೆಚ್ಚಿಕೊಳ್ಳುವಂತ ಕೆಲವು ಅಂಶಗಳನ್ನು ತಾನು ಗುರುತಿಸಿದ್ದಾಗಿ ಆತನು ಅಂದುಕೊಂಡಿದ್ದನು. ಆತನು ಈ ಕೆಲವು ಅಂಶಗಳನ್ನು ಬಹಳ ದೊಡ್ಡದಾಗಿ ಬೆಳೆಸಿ, ಆಕೆಯ ಬಗ್ಗೆ ತನ್ನ ಮನಸ್ಸಿನಲ್ಲಿ ಒಂದು ಆದರ್ಶ ಚಿತ್ರಣವನ್ನು ಮಾಡಿಕೊಂಡಿದ್ದನು. ಆಕೆಯು ಪರಿಪೂರ್ಣಳು ಎಂದು ಆತನಿಗೆ ಅನಿಸಿತ್ತು (ಇಡೀ ಜಗತ್ತಿನಲ್ಲಿ ಅಷ್ಟು ಪರಿಪೂರ್ಣಳಾದ ಬೇರೊಬ್ಬಳು ಇರಲಾರಳೋ ಎಂಬಂತೆ) ಮತ್ತು ಆಕೆಯಲ್ಲಿ ಯಾವುದೇ ದೋಷವನ್ನು ಗುರುತಿಸಲು ಆತನು ಸಿದ್ಧನಾಗಿರಲಿಲ್ಲ (ಆಕೆಯ ದೋಷಗಳು ಇತರರಿಗೆ ಎದ್ದು ಕಾಣಿಸಿದರೂ ಸಹ).
ಆತನು ತಾನು ನಿರ್ಮಿಸಿದ ಒಂದು ಸ್ವಪ್ನಲೋಕದಲ್ಲಿ ಸಂಚರಿಸುತ್ತಿದ್ದನು ಮತ್ತು ಅನೇಕ ಬಾರಿ ತಾನು ಆಕಾಶದಲ್ಲಿ ವಿಹರಿಸುತ್ತಿದ್ದೇನೆಂದು ಆತನಿಗೆ ಅನಿಸುತ್ತಿತ್ತು. ಆತನು ಪರಿಪೂರ್ಣ ಹುಡುಗಿಯನ್ನು ಆರಿಸಿಕೊಂಡಿದ್ದರಿಂದ, ತಾನು ಎಲ್ಲರಿಗಿಂತ ಮೇಲೆ ಉನ್ನತ ಶಿಖರದಲ್ಲಿ ಇರುವುದಾಗಿ ಆತನಿಗೆ ಭಾಸವಾಗುತ್ತಿತ್ತು (ಅಂಧ ವ್ಯಾಮೋಹವು ಕುರುಡಾಗಿಸುತ್ತದೆ!). ಆತನು ಆಕೆಯ ಕಡೆಗೆ ಪ್ರಬಲವಾಗಿ ಸೆಳೆಯಲ್ಪಡುವ ಆಕರ್ಷಣೆಯನ್ನು ಅನುಭವಿಸಿದನು ಮತ್ತು ಯಾವಾಗಲೂ ಆಕೆಯ ಸಮೀಪ ಅಥವಾ ಆಕೆಯೊಂದಿಗೆ ಇರಲು ಒಂದಲ್ಲ ಒಂದು ನೆಪವನ್ನು ಹುಡುಕುತ್ತಿದ್ದನು. ಆತನಿಗೆ ಆಕೆಯಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಆತನು ತಮ್ಮಿಬ್ಬರ ನಡುವೆ ಇದ್ದ ವ್ಯತ್ಯಾಸ ಮತ್ತು ಅಸಂಬದ್ಧತೆಯನ್ನು ತೋರಿಸಿಕೊಡುವ ಯಾವುದೇ ಪ್ರಸ್ತಾಪವನ್ನು ತಳ್ಳಿಹಾಕುತ್ತಿದ್ದನು.
ಅತನ ಪ್ರಕಾರ ಆಕೆಯು ಪರಿಪೂರ್ಣೆಯಾಗಿದ್ದ ಕಾರಣ, ಪ್ರಕಾಶನು ಸಹ ಆಕೆಗೆ ತನ್ನ ಪರಿಪೂರ್ಣ ವ್ಯಕ್ತಿತ್ವವನ್ನು ಪರಿಚಯಿಸಲು ಬಯಸಿದನು. ಇದು ಆತನ ನಡವಳಿಕೆಯನ್ನು ಅಸ್ವಾಭಾವಿಕವಾಗಿ ಮಾಡಿತು, ಏಕೆಂದರೆ ಆತನು ತನ್ನ ಒಳ್ಳೆಯತನವನ್ನು ಮಾತ್ರ ಪ್ರದರ್ಶಿಸಲು ಪ್ರಯತ್ನಿಸಿದನು. ಆತನು ತನ್ನ ನಿಸ್ವಾರ್ಥತೆ ಮತ್ತು ದೀನತೆಯನ್ನು ತೋರಿಸಿಕೊಳ್ಳಲು ಪ್ರಯತ್ನಿಸಿದನು. ಆದರೆ ಒಳಗಿನಿಂದ ಆತನ ಉದ್ದೇಶ ಸ್ವಾರ್ಥವಾಗಿತ್ತು, ಏಕೆಂದರೆ ಆತನು ಒಬ್ಬ ಸ್ವಾರ್ಥಿಯಾಗಿದ್ದನು. ಆತನ ಹೃದಯದಲ್ಲಿದ್ದ ಒಂದು ತೀವ್ರ ಹಂಬಲವನ್ನು ಈ ಹುಡುಗಿಯು ಪೂರೈಸುತ್ತಿದ್ದಳು ಮತ್ತು ನಿಜವಾಗಿ ಅವನು ಆಕೆಯನ್ನು ಬಯಸಿದ್ದು ತನ್ನ ಸಂತೋಷಕ್ಕಾಗಿ ಮಾತ್ರವಾಗಿತ್ತು. ಆಕೆಯು ಆತನ ಹಂಬಲದ ಪೂರೈಕೆಯ ಒಂದು ವಸ್ತುವಿನಂತೆ ಇದ್ದಳು.
ಕೆಲವೊಮ್ಮೆ ಆಕೆಯನ್ನು ಸಂತೋಷಪಡಿಸುವ ಆಲೋಚನೆ ಆತನಲ್ಲಿ ಉಂಟಾಗುತ್ತಿತ್ತು. ಆದರೆ ಬೇರೆ ಯಾರನ್ನೂ ಸಂತೋಷಪಡಿಸುವ ಯೋಚನೆ ಅವನಲ್ಲಿ ಇರಲಿಲ್ಲ. ಆಕೆ ಕಾಲೇಜಿನಲ್ಲಿ ಬೇರೆ ಯಾರೋ ಹುಡುಗನೊಂದಿಗೆ ಮಾತಾಡುವುದನ್ನು ನೋಡಿದಾಗ, ಆತನಲ್ಲಿ ತುಂಬಾ ಹೊಟ್ಟೆಕಿಚ್ಚು ಉಂಟಾಗುತ್ತಿತ್ತು ಮತ್ತು ಆಕೆಯ ಬಗ್ಗೆ ಸಂಶಯ ಬರುತ್ತಿತ್ತು. ಆತನ ಯೋಚನೆ ಕಾರಣವಿಲ್ಲದ್ದಾಗಿತ್ತು ಮತ್ತು ಆಕೆ ತನ್ನೊಂದಿಗೆ ಮಾತ್ರ ಮಾತಾಡಬೇಕು, ಬೇರೆ ಹುಡುಗಿಯರೊಂದಿಗೂ ಮಾತಾಡಬಾರದು ಎಂದು ಆತನ ಭಾವನೆಯಾಗಿತ್ತು. ಹೀಗೆ ಆಗುವದಕ್ಕೆ ಕಾರಣ - ಪ್ರಕಾಶನ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳಿಂದ ತನ್ನನ್ನು ಯಾರೂ ಇಷ್ಟಪಡುವುದಿಲ್ಲ ಮತ್ತು ಪ್ರೀತಿಸುವುದಿಲ್ಲ ಎಂಬುದಾಗಿ ಆತನಲ್ಲಿ ಬೇರೂರಿದ್ದ ಅಸ್ಥಿರತೆಯ ಭಾವನೆಯಾಗಿತ್ತು. ಈ ಕಾರಣದಿಂದಾಗಿ, ಒಬ್ಬ ಹುಡುಗಿಯ ಪ್ರೀತಿಯನ್ನು ಸಂಪಾದಿಸುವ ಮತ್ತು ಅದನ್ನು ಉಳಿಸಿಕೊಳ್ಳುವ ವಿಶ್ವಾಸ ಆತನಲ್ಲಿ ಇರಲಿಲ್ಲ. ಬೇರೊಬ್ಬರ ನಿಷ್ಠಾವಂತಿಕೆಯನ್ನು ಗಳಿಸಲು ತಾನು ಅನರ್ಹನು ಎಂಬ ಆತನ ಭಾವನೆಯಿಂದಾಗಿ, ಆತನು ಆ ಹುಡುಗಿಯಿಂದ ಅಸಾಮಾನ್ಯ ನಿಷ್ಠೆಯನ್ನು ನಿರೀಕ್ಷಿಸಿದನು.
ಪ್ರಕಾಶನು ಅವಸರವಾಗಿ ಮದುವೆಯಾಗಲು ಬಯಸಿದನು, ಮತ್ತು ಕಾಮುಕತೆಯ ಸೆಳೆತದಿಂದಾಗಿ, ಮದುವೆಯ ಬಗ್ಗೆ ನಿಧಾನವಾಗಿ ಮುಂದುವರಿಯಲು ಆತನಿಗೆ ಸಾಧ್ಯವಾಗಲಿಲ್ಲ. ಹಣಕಾಸಿನ ತೊಂದರೆ, ತಂದೆತಾಯಿಗಳ ವಿರೋಧಗಳು ಮತ್ತು ತೀಕ್ಷ್ಣವಾದ ಸಾಂಸೃತಿಕ ವ್ಯತ್ಯಾಸಗಳು ಅವರ ಮದುವೆಗೆ ಅಡ್ಡಬಂದವು; ಆದರೆ ಎಲ್ಲವನ್ನು ಪ್ರೀತಿಯು ಗೆಲ್ಲುತ್ತದೆಂದು ಅಂದುಕೊಂಡಿದ್ದ ಪ್ರಕಾಶನು, ಇವೆಲ್ಲಾ ಅಭ್ಯಂತರಗಳನ್ನು ಕಡೆಗಣಿಸಿದನು ("ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು" - ಜ್ಞಾ. 22:3). ಆತನು ಇತರರ ಸಲಹೆಗಳನ್ನು ಕೇಳಲಿಲ್ಲ. ಏಕೆಂದರೆ ಆತನು ಪ್ರಣಯ ವ್ಯಾಮೋಹದಿಂದ ಪ್ರಭಾವಿತನಾಗಿದ್ದನು. (ಈ ರೀತಿಯಾಗಿ ಒಬ್ಬ ವ್ಯಕ್ತಿ ಪ್ರಣಯದ ಆಕರ್ಷಣೆಗೆ ಸಿಲುಕಿದ ಮೇಲೆ, ಆತನಿಗೆ ಅರ್ಥವಾಗುವಂತೆ ತಿಳುವಳಿಕೆ ಹೇಳುವುದು ಹೆಚ್ಚು ಕಡಿಮೆ ಅಸಾಧ್ಯವಾದ ಮಾತಾಗಿದೆ).
ಹೀಗಿರುವಾಗ, ಪ್ರಕಾಶ ಮತ್ತು ಆ ಹುಡುಗಿಯ ನಡುವೆ ಯಾವುದೋ ಒಂದು ತಪ್ಪು ತಿಳುವಳಿಕೆಯಿಂದಾಗಿ, ಇದ್ದಕ್ಕಿದ್ದಂತೆ ಮನಸ್ತಾಪ ಉಂಟಾಯಿತು. ಇದರಿಂದ ಕೋಪಗೊಂಡ ಆತನು, ಮೊದಲು ಆಕೆಯಲ್ಲಿ ಎಂದೂ ಗಮನಿಸಿರದ ಬಲಹೀನತೆಗಳನ್ನು ಒಂದರ ಮೇಲೆ ಒಂದರಂತೆ ಕಾಣಲು ಆರಂಭಿಸಿದನು. ಮತ್ತು ಆತನು ಇದನ್ನು ಆಕೆಗೆ ತಿಳಿಸಿದನು. ಆತನ ಸ್ವಾಭಿಮಾನವು ನೋಯಿಸಲ್ಪಟ್ಟಿತ್ತು ಮತ್ತು ಇದರ ಫಲವಾಗಿ ಆತನು ಇದ್ದಕ್ಕಿದ್ದಂತೆ ವಾಸ್ತವಿಕ ಜಗತ್ತಿಗೆ ಬಂದಿಳಿದನು. ಆತನು ಆ ಹುಡುಗಿಯ ಬಗ್ಗೆ ಜಿಗುಪ್ಸೆ ಹೊಂದಿದನು ಮತ್ತು ಬಹಳ ಬೇಗನೆ ಅವಳನ್ನು ದ್ವೇಷಿಸಲೂ ಸಹ ಶುರುಮಾಡಿದನು. ಇದು ದಾವೀದನ ಮಗನಾದ ಅಮ್ನೋನನು ತಾಮಾರಳನ್ನು ದ್ವೇಷಿದ ಹಾಗಿತ್ತು (2 ಸಮು. 13:1-17). ಆದರೆ ಪ್ರಕಾಶನು ಈ ಘಟನೆಯಿಂದ ಹೆಚ್ಚೇನೂ ನಿರಾಶೆಗೊಳ್ಳಲಿಲ್ಲ, ಏಕೆಂದರೆ ಆತನಿಗೆ ಆ ಹುಡುಗಿಯ ಭಾವನೆಗಳು ಹೆಚ್ಚು ಮುಖ್ಯವಾಗಿರಲಿಲ್ಲ. ಅದಲ್ಲದೆ, ಆತನು ಇತ್ತೀಚಿಗೆ ಬೇರೊಬ್ಬ ಹುಡುಗಿಯ ಮೇಲೆ ಗುಪ್ತವಾಗಿ ಕಣ್ಣಿಟ್ಟಿದ್ದನು ಮತ್ತು ಈಗ ಆತನಿಗೆ ಆಕೆಯು ಬಹಳ ಹೆಚ್ಚು ಆಕರ್ಷಕವಾಗಿ ಮತ್ತು "ಪರಿಪೂರ್ಣೆ’ಯಾಗಿ ಕಾಣುತ್ತಿದ್ದಳು.
’ಅಗಾಪೆ-ಪ್ರೀತಿಯ’ ಒಂದು ಉದಾಹರಣೆಸುರೇಶನ ಪ್ರಕರಣದಲ್ಲಿ, ಆತನಿಗೆ ಮೊದಲಿನಿಂದ ಒಬ್ಬ ಹುಡುಗಿಯು ಸಾಮಾನ್ಯವಾಗಿ ಪರಿಚಿತಳಾಗಿದ್ದಳು; ಆ ಹುಡುಗಿ ನಿಜವಾಗಿ ತನಗಾಗಿ ದೇವರ ಆಯ್ಕೆಯಾಗಿದ್ದಾಳೆ, ಎಂಬ ಭಾವನೆ ಆತನಲ್ಲಿ ಬಹಳ ಸಮಯದ ನಂತರ ಉಂಟಾಯಿತು. ಆಕೆಯು ಆತನಂತೆಯೇ ಕರ್ತನನ್ನು ಪ್ರೀತಿಸುತ್ತಿದ್ದಳು ಮತ್ತು ಅವರಿಬ್ಬರ ದೃಷ್ಟಿಕೋನಗಳೂ, ಆಸಕ್ತಿಗಳೂ ಹೆಚ್ಚಾಗಿ ಒಂದೇ ಸಮನಾಗಿದ್ದವು. ಆತನು ಸ್ವಲ್ಪ ಸಮಯದಿಂದ ಆಕೆಗೆ ಗೋಚರವಾಗದಂತೆ ಆಕೆಯ ವಿವಿಧ ಚಟುವಟಿಕೆಗಳನ್ನು ಗಮನಿಸಿದ್ದನು ಮತ್ತು ಆಕೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದನು. ನಿಧಾನವಾಗಿ ಸುರೇಶನ ಹೃದಯದಲ್ಲಿ ಆಕೆಯ ಮೇಲಿನ ಪ್ರೀತಿ ಚಿಗುರಿ ಬೆಳೆದಿತ್ತು. ಆತನಿಗೆ ಹಠಾತ್ತಾಗಿ, ಆಕಸ್ಮಿಕವಾಗಿ ಅಥವಾ ತಡೆಯಲಾರದಂತೆ ’ಪ್ರೀತಿಯಲ್ಲಿ ಜಾರಿ ಬೀಳುವ’ ಅನುಭವ ಆಗಲಿಲ್ಲ.
ಅವರಿಬ್ಬರ ಸಂಬಂಧವು ಸಾಮಾನ್ಯ ಪರಿಚಯದಿಂದ ನಿರಾತಂಕವಾಗಿ ಮತ್ತು ಸುಗಮವಾಗಿ ಅಗಾಪೆ-ಪ್ರೀತಿಗೆ ಬದಲಾಗಿತ್ತು. ಆತನು ಆಕೆಯಲ್ಲಿ ಕಂಡ ಆಕರ್ಷಣೆ ಮುಖ್ಯವಾಗಿ ಆಕೆಯ ಆತ್ಮಿಕತೆ ಮತ್ತು ಆಕೆಯ ನಡತೆಯಾಗಿತ್ತು. ದೈಹಿಕ ಸೌಂದರ್ಯವೂ ಅದರಲ್ಲಿ ಪಾತ್ರ ವಹಿಸಿತ್ತು. ಆದರೆ ಅದರ ಭಾಗ ಚಿಕ್ಕದಾಗಿತ್ತು. ಏಕೆಂದರೆ ಆಕೆ ಒಂದು ಸೌಂದರ್ಯ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸುವಂತ ಸುಂದರಿಯಾಗಿರಲಿಲ್ಲ. ಸುರೇಶನ ದೃಷ್ಟಿಯಲ್ಲಿ ಆಕೆ ಸುಂದರಿಯಾಗಿದ್ದಳು. ಆದರೆ ಇತರರ ಅಭಿಪ್ರಾಯ ಹಾಗೆ ಬೇರೆಯಾಗಿದ್ದಿರಬಹುದು. ಆತನು ಆಕೆಯ ಬಗ್ಗೆ ಒಂದು ವಾಸ್ತವಿಕವಾದ ಚಿತ್ರವನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದನು, ಮತ್ತು ಕೇವಲ ಒಳ್ಳೆಯ ಅಂಶಗಳನ್ನು ಮಾತ್ರ ನೋಡಲಿಲ್ಲ. ಸ್ವಲ್ಪ ಮಟ್ಟಿಗೆ ಆತನು ಆಕೆಯನ್ನು ಪರಿಪೂರ್ಣಳೆಂದು ಭಾವಿಸಿದ್ದನು. ಅದು ಅನಿವಾರ್ಯವೆಂದು ಹೇಳಬಹುದಾಗಿದೆ. ಆದರೆ ಆತನು ನಿಜಸ್ಥಿತಿಯನ್ನು ಯಾವುದೇ ಭಯದಿಂದ ಅಥವಾ ಆತ್ಮವಂಚನೆಯಿಂದ ಪ್ರಭಾವಿತವಾಗದೆ ನೋಡಿದನು (’ಅಗಾಪೆ-ಪ್ರೀತಿ’ಯು ಪ್ರಣಯ ವ್ಯಾಮೋಹದ ಹಾಗೆ ಕುರುಡಲ್ಲ, ಎಂಬುದನ್ನು ಗಮನಿಸಿ).
ಸುರೇಶನ ಉದ್ದೇಶಗಳಲ್ಲಿ ಸ್ವಾರ್ಥತೆ ಇರಲಿಲ್ಲ. ಆತನು ಆಕೆಯನ್ನು ಪರಿಶುದ್ಧ ಭಾವನೆಯಿಂದ ಇಷ್ಟಪಟ್ಟನು. ಆತನಿಗೆ ಆಕೆಯ ಬಗ್ಗೆ ಕಾಳಜಿಯಿತ್ತು ಮತ್ತು ಆತನು ತನ್ನ ಸ್ವಂತ ಅವಶ್ಯಕತೆಗಿಂತ ಮೊದಲು ಆಕೆಯ ಅವಶ್ಯಕತೆ ಮತ್ತು ಆಕೆಯ ಹಿತದ ಬಗ್ಗೆ ಚಿಂತಿಸುತ್ತಿದ್ದನು. ಆತನು ಆಕೆಯನ್ನು ತನ್ನ ವೈಯಕ್ತಿಕ ಸಂತೋಷಕ್ಕಾಗಿ ಇಷ್ಟಪಡಲಿಲ್ಲ. ಆತನ ಇಚ್ಛೆ ಮೊದಲನೆಯದಾಗಿ ಅವರು ಜೊತೆಯಾಗಿ ಕರ್ತನನ್ನು ಮೆಚ್ಚಿಸುವುದು ಮತ್ತು ಎರಡನೆಯದಾಗಿ ಆಕೆಯನ್ನು ಸಂತೋಷವಾಗಿ ಇರಿಸುವುದು ("ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯವು," ಅ.ಕೃ. 20:35). ಆತನು ಆಕೆಯ ಒಳಿತಿಗಾಗಿ ತನ್ನ ಸ್ವಂತದ ಯಾವುದನ್ನಾದರೂ ತ್ಯಾಗಮಾಡಲು ಸಿದ್ಧನಿದ್ದನು. ಆತನು ಆಕೆಗೆ ಮೀಸಲಾಗಿದ್ದನು ಮತ್ತು ಆಕೆಯ ಒಳಗಿದ್ದ ಆತ್ಮಿಕ ನಿಕ್ಷೇಪವನ್ನು ಬೆಳೆಸಿ ಆಕೆಯನ್ನು ಪರಿಪೂರ್ಣತೆಗೆ ತರಲು ಬಯಸಿದನು. ಅವನಿಗೆ ಆಕೆಯನ್ನು ತನ್ನ ಸ್ವಂತ ಹಿತಾಸಕ್ತಿಗಾಗಿ ದುರುಪಯೋಗ ಮಾಡುವ ಇಚ್ಛೆ ಇರಲಿಲ್ಲ.
ಸುರೇಶನು ಆ ಹುಡುಗಿಯ ಸಮಕ್ಷಮದಲ್ಲಿ ಇದ್ದಾಗಲೂ ಸಹಜವಾಗಿ ಮತ್ತು ಸ್ವಾಭಾವಿಕವಾಗಿ ವರ್ತಿಸುತ್ತಿದ್ದನು. ಆತನಲ್ಲಿ ಅಸ್ವಾಭಾವಿಕತೆ ಇರಲಿಲ್ಲ. ಆತನ ನಡತೆ ಮುಚ್ಚುಮರೆ ಇಲ್ಲದ್ದೂ, ಯಥಾರ್ಥವೂ, ನಿಷ್ಕಪಟವಾದದ್ದೂ ಆಗಿತ್ತು.
ಆತನು ದಿನವಿಡೀ ಆಕೆಯ ಬಗ್ಗೆ ಮಾತ್ರವೇ ಯೋಚನೆ ಮಾಡುತ್ತಿರಲಿಲ್ಲ. ಸುತ್ತಮುತ್ತಲಿನ ಜನರ ಆತ್ಮಿಕ ಮತ್ತು ವಾಸ್ತವಿಕ ಅವಶ್ಯಕತೆಗಳನ್ನು ಪೂರೈಸಲು ತಾನು (ಮತ್ತು ಮುಂದೆ, ಅವಳ ಜೊತೆಯಾಗಿ) ಏನು ಮಾಡಬಹುದು, ಎಂಬುದು ಹಲವು ಬಾರಿ ಆತನ ಯೋಚನೆಯಾಗಿತ್ತು. ಸುರೇಶನು ಎಲ್ಲಾ ಸಮಯದಲ್ಲಿ ಕರ್ತನಾದ ಯೇಸುವಿಗೆ ತನ್ನ ಮನಸ್ಸಿನ ಯೋಚನೆಗಳಲ್ಲಿ ಅತ್ಯಂತ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದನು; ಎರಡನೆಯ ಸ್ಥಾನ ಆ ಹುಡುಗಿಯದಾಗಿತ್ತು. ಆತನ ಜೀವಿತದಲ್ಲಿ ಕರ್ತನ ಕಾರ್ಯವೇ ಮೊದಲ ಆದ್ಯತೆಯಾಗಿತ್ತು. ಆಕೆಯನ್ನು ಭೇಟಿಮಾಡಲಿಕ್ಕಾಗಿ ಆತನು ಯಾವತ್ತೂ ಆ ಕಾರ್ಯವನ್ನು ಕಡೆಗಣಿಸಲಿಲ್ಲ. ಅದೇ ರೀತಿಯಾಗಿ ಆಕೆಯೂ ಸಹ ಆಕೆಯ ಸ್ವಂತ ಜೀವಿತದಲ್ಲಿ ಕರ್ತನಿಗೆ ಮೊದಲ ಆದ್ಯತೆ ನೀಡಬೇಕೆಂದು ಆತನು ಬಯಸಿದ್ದನು.
ಸುರೇಶನಿಗೆ ಆಕೆಯ ಮೇಲೆ ಸಂಪೂರ್ಣ ವಿಶ್ವಾಸವಿತ್ತು ಮತ್ತು ಆತನಲ್ಲಿ ಅಸುರಕ್ಷತೆ ಇರಲಿಲ್ಲ. ಅವನು ಯಾವತ್ತೂ ಆಕೆಯ ಮೇಲೆ ಹಕ್ಕು ಸಾಧನೆ, ಬಿಗಿಹಿಡಿತ ಇರಿಸುವುದು ಮತ್ತು ಅಯೋಗ್ಯ ರೀತಿಯ ನಡತೆಯನ್ನು ತೋರಿಸಲಿಲ್ಲ. ಅಲ್ಲಿ ಯಾವುದೇ ರೀತಿಯ ಅಸೂಯೆ ಅಥವಾ ಅನುಮಾನ ಇರಲಿಲ್ಲ. ಆತನ ಪ್ರೀತಿಯ ದೊಡ್ಡ ಪುರಾವೆ ಏನೆಂದರೆ, ಅದು ಆಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿಲ್ಲ. ಅವನು ಆಕೆಗೆ "ಬೇಡ" ಎಂದು ಹೇಳಿ ನಿರಾಕರಿಸುವ ಸ್ವಾತಂತ್ರ್ಯವನ್ನು ನೀಡಿದ್ದನು.
ಅವರು ಪರಿಸ್ಥಿತಿಗಳಿಂದಾಗಿ ಬಹಳ ಸಮಯ ಅಗಲಿ ದೂರ ಇರಬೇಕಾದಾಗ, ಆಕೆಗಾಗಿ ಆತನಲ್ಲಿದ್ದ ಪ್ರೀತಿಯು ಕುಗ್ಗಲಿಲ್ಲ. ಬದಲಾಗಿ ಅದು ಬೆಳೆಯಿತು. ಅವರು ಹಣಕಾಸಿನ ತೊಂದರೆ ಮತ್ತು ಇತರ ಸಮಸ್ಯೆಗಳನ್ನೂ ಸಹ ಎದುರಿಸಿದರು. ಈ ಕಾರಣಗಳಿಂದಾಗಿ ಅವರು ತಮ್ಮ ವಿವಾಹವನ್ನು ಬಹಳಷ್ಟು ಸಮಯ ಮುಂದೆ ಹಾಕಬೇಕಾಯಿತು. ಇದರಿಂದಾಗಿ ಅವನಿಗೆ ಸ್ವಲ್ಪ ನಿರಾಶೆಯಾದರೂ, ಇದು ದೇವರಿಂದ ಯಾವುದೋ ಒಳ್ಳೆಯ ಕಾರಣಕ್ಕಾಗಿ ಉಂಟಾಗಿದೆ ಎಂದು ಅವನು ಅದನ್ನು ಸ್ವೀಕರಿಸಿದನು. ಈ ವಿಳಂಬದ ಸಮಯದಲ್ಲಿ ಅವನು ತಾಳ್ಮೆಯಿಂದ ಕಾದು, ಮದುವೆಗಾಗಿ ತನ್ನನ್ನು ಸಿದ್ಧಮಾಡಿಕೊಂಡನು. ಅವನು ಖರ್ಚು ವೆಚ್ಚಗಳನ್ನು ಲೆಕ್ಕಹಾಕಿ, ತಮ್ಮಿಬ್ಬರ ಭವಿಷ್ಯದ ಜೀವನಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿದನು. ಸ್ವಲ್ಪ ವಿಳಂಬವಾದಾಗ ಅದು ಆಕೆಗಾಗಿ ಆತನ ಆಳವಾದ ಪ್ರೀತಿಯನ್ನು ಖಚಿತಪಡಿಸಿತು ಮತ್ತು ಆಕೆಯು ದೇವರು ತನಗಾಗಿ ಖುದ್ದಾಗಿ ಆರಿಸಿದ ಹೆಣ್ಣು, ಎಂಬುದನ್ನು ಸಹ ಸಾಬೀತು ಪಡಿಸಿತು.
ಆತನಿಗೆ ಆಕೆಯೊಂದಿಗೆ ಎಲ್ಲಾ ವಿಷಯಗಳಲ್ಲಿ ಸಹಮತ ಇರಲಿಲ್ಲ. ಆದರೆ ಅಷ್ಟೊಂದು ಮುಖ್ಯವಲ್ಲದ ವಿಚಾರಗಳಲ್ಲಿ ಇದ್ದ ಭಿನ್ನಾಭಿಪ್ರಾಯಗಳನ್ನು ಆತನು ತನ್ನ ಅಳಿಸಲಾರದ ಪ್ರೀತಿಯ ಜ್ವಾಲೆಯ ಬಲದಿಂದ ಒಪ್ಪಿಕೊಂಡನು. ಏಕೆಂದರೆ ತಾವಿಬ್ಬರೂ ತಮ್ಮ ವೈಯಕ್ತಿಕ ವ್ಯಕ್ತಿತ್ವವನ್ನು ಪ್ರಕಟಪಡಿಸಲು ಈ ಭೇದಗಳು ಸಹಾಯವಾಗುತ್ತವೆ ಎಂದು ಆತನು ಎಣಿಸಿದನು.
ಆ ಹುಡುಗಿಗಾಗಿ ಸುರೇಶನ ಪ್ರೀತಿಯು ಶಾಶ್ವತವಾಗಿತ್ತು. ಆತನು ಬೇರೆ ಯಾರನ್ನೂ ಪ್ರೀತಿಸುವ ಯೋಚನೆಯನ್ನು ಮಾಡುವುದು ಅಸಾಧ್ಯವಾಗಿತ್ತು.
ವಿಭಿನ್ನತೆಪ್ರಣಯದ ವ್ಯಾಮೋಹ (ಹಲವು ಬಾರಿ ಇದನ್ನು ಪ್ರೀತಿಯೆಂದು ತಪ್ಪಾಗಿ ತಿಳಿಯಲಾಗುತ್ತದೆ) ಮತ್ತು ಸತ್ಯವೇದದ ಮಾದರಿಯ ನಿಜವಾದ ಪ್ರೀತಿಯ ನಡುವೆ ಇರುವ ತೀವ್ರ ವ್ಯತ್ಯಾಸವನ್ನು ನಾವು ಇವೆರಡು ದೃಷ್ಟಾಂತಗಳಲ್ಲಿ ನೋಡುತ್ತೇವೆ. ವ್ಯಾಮೋಹಕ್ಕೆ ಒಳಗಾಗಿರುವವರು, ಪ್ರಕಾಶನು ಪ್ರದರ್ಶಿಸಿದ ಲಕ್ಷಣಗಳಲ್ಲಿ ಕೆಲವನ್ನಷ್ಟೇ ತೋರಿಸಬಹುದು. ಹಾಗಿದ್ದರೂ ಇದು ವ್ಯಾಮೋಹವೇ ಆಗಿದೆ. ಸುರೇಶನ ಉದಾಹರಣೆಯು ಒಬ್ಬ ಪರಿಪೂರ್ಣ ಪ್ರೇಮಿಯ ಚಿತ್ರಣವಾಗಿದೆ. ಯಾರೂ ಅವನಂತೆಯೇ ಆಗಿರಲಿಕ್ಕಿಲ್ಲ. ಆದರೆ ನಮ್ಮ ಅಂತಿಮ ಗುರಿ ಇದೇ ಆಗಿದೆ. ನಾವು ಯಾವತ್ತೂ ಇದಕ್ಕಿಂತ ಕೆಳಮಟ್ಟದ ಪ್ರೀತಿಯನ್ನು ನಮ್ಮ ಧ್ಯೇಯವಾಗಿ ಇರಿಸಿಕೊಳ್ಳಬಾರದು.
ಕಾಲಕ್ರಮೇಣ ಪ್ರಣಯ-ವ್ಯಾಮೋಹವು ನಿಜವಾದ ಪ್ರೀತಿಗೆ ಬದಲಾಗುವ ಸಾಧ್ಯತೆಯಿದೆ, ಆದರೆ ಅದು ’ಅಗಾಪೆ’-ಪ್ರೀತಿಯ ಕೆಲವು ಮುಖ್ಯ ಗುಣಲಕ್ಷಣಗಳನ್ನಾದರೂ ಪ್ರದರ್ಶಿಸಲು ಆರಂಭಿಸುವ ತನಕ ಆ ಹೆಸರು ಅದಕ್ಕೆ ಅನ್ವಯಿಸಲಾರದು.
ತಪ್ಪುದಾರಿಯಿಂದ ದೂರವಿರುವುದಕ್ಕಾಗಿ, ಯುವಕ ಯುವತಿಯರು ವ್ಯಾಮೋಹ ಮತ್ತು ಪ್ರೀತಿಯ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ವ್ಯಾಮೋಹವು ಸ್ವಲ್ಪ ಸಮಯದಲ್ಲಿ ಕ್ಷೀಣಿಸುತ್ತದೆ. ’ಅಗಾಪೆ’-ಪ್ರೀತಿಯು ವಿವಾಹಿತ ಜೀವನದ ಉದ್ದಕ್ಕೂ ಇರುತ್ತದೆ ಮತ್ತು ಪ್ರತಿಯೊಂದು ಕರ್ತವ್ಯದಲ್ಲಿ ಆನಂದವನ್ನು ತರುತ್ತದೆ ಹಾಗೂ ಪ್ರತಿಯೊಂದು ಜವಾಬ್ದಾರಿಯಲ್ಲಿ ಉಲ್ಲಾಸ ತುಂಬುತ್ತದೆ.
ಎಚ್ಚರಿಕೆ ಅವಶ್ಯವಾಗಿದೆಸೊಲೊಮೋನನು ಬರೆದಿರುವ ’ಪರಮಗೀತ’ದಲ್ಲಿ ಮೂರು ಬಾರಿ ಪುನರಾವರ್ತಿತವಾಗಿರುವ ಈ ಎಚ್ಚರಿಕೆಯನ್ನು ನಾವು ಹೃದಯದಲ್ಲಿ ಇರಿಸಿಕೊಳ್ಳಬೇಕು, "ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಸಬಾರದು" (ಪ್ರಸಂಗಿ. 2:7; 3:5; 8:4). ಈ ವಚನವು ಆಂಗ್ಲಭಾಷೆಯ 'Berkeley ಭಾಷಾಂತರ’ದಲ್ಲಿ ಹೀಗಿದೆ: "ಪ್ರೀತಿಯು ತಾನಾಗಿಯೇ ಮೇಲೇಳುವ ಮೊದಲು ಅದನ್ನು ಎಬ್ಬಿಸಬೇಡಿರಿ ಅಥವಾ ಕೆದಕಬೇಡಿರಿ". ಬೇರೆ ಮಾತುಗಳಲ್ಲಿ ಹೇಳುವುದಾದರೆ, ನೀವಾಗಿಯೇ ಯಾವುದೋ ಹುಚ್ಚು ವ್ಯಾಮೋಹಕ್ಕೆ ಮುನ್ನುಗ್ಗದೆ, ಪ್ರೀತಿಗೆ ಸೂಕ್ತಕಾಲವನ್ನು ದೇವರು ನಿರ್ಧರಿಸುವುದಕ್ಕಾಗಿ ಕಾದಿರಿ.
"ಎಲ್ಲಕ್ಕೂ ಮೇಲಾಗಿ, ನಿನ್ನ ಹೃದಯದ ಅನುರಾಗವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರಿಂದ ಹೊರಡುವ ಜೀವಧಾರೆಗಳು ನಿನ್ನ ಇಡೀ ಜೀವನದ ಮೇಲೆ ಪ್ರಭಾವ ಬೀರುತ್ತವೆ" (ಜ್ಞಾ. 4:23 - The Living Bible).
ಒಂದು ಕ್ರೈಸ್ತ ಪತಿ-ಪತ್ನಿಯರ ಮಧ್ಯೆ ಅನೇಕ ಭಿನ್ನತೆಗಳಿದ್ದಾಗ್ಯೂ ಅವರು ಅನ್ಯೋನ್ಯವಾಗಿ ಬೆರೆತು ಮಧುರ ಐಕ್ಯತೆಯ ಸಂಬಂಧವನ್ನು ಬೆಳೆಸಿಕೊಳ್ಳುವ ದೃಶ್ಯಕ್ಕಿಂತ ಹೆಚ್ಚು ಅಂದವಾದದ್ದು ಪರಲೋಕದಿಂದ ಈಚೆಗೆ ಕಂಡುಬರುವ ದೃಶ್ಯಗಳಲ್ಲಿ, ಯಾವುದೂ ಇರಲಾರದೆಂದು ನನಗೆ ಅನಿಸುತ್ತದೆ. ಹೀಗೆ ಸಾಮರಸ್ಯದಿಂದಿರುವ ಪತಿ-ಪತ್ನಿಯರಲ್ಲಿ ವಿಭಿನ್ನತೆಯಲ್ಲೂ ನಿಜವಾದ ಐಕ್ಯತೆಯನ್ನು ಕಾಣಸಿಗುತ್ತದೆ ಮತ್ತು ದೇವರು ಇದಕ್ಕಾಗಿಯೇ ವಿವಾಹವನ್ನು ನಿಯೋಜಿಸಿದರು. ಇಂತಹ ಐಕ್ಯತೆಯ ಗುಟ್ಟೇನು?
ಇನ್ನೊಂದು ಕಡೆ ನೋಡುವಾಗ, ಸಾವಿರಾರು ದಂಪತಿಗಳು ಮದುವೆ ಮಾಡಿಕೊಂಡ ಹಲವಾರು ವರ್ಷಗಳ ನಂತರವೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳದೆ, ಐಕ್ಯತೆಯಿಲ್ಲದೆ ಜೀವಿಸುತ್ತಿದ್ದಾರೆ. ಇವರಲ್ಲಿ ಅನೇಕರು ಹಿಂದಿನ ಒಂಟಿ ಜೀವಿತಕ್ಕೆ ಹಿಂದಿರುಗಲು ಸಾಧ್ಯವಿದ್ದರೆ, ಸಂತೋಷವಾಗಿ ಹಾಗೆ ಮಾಡಲು ಒಪ್ಪಿಕೊಳ್ಳುತ್ತಾರೆ. ಇವರ ಅನುಭವದಲ್ಲಿ, ದೇವರು ಮಾನವನ ಸಂತೋಷಕ್ಕಾಗಿ ಪ್ರತಿಷ್ಠಿಸಿದ ವಿವಾಹವು ಭೂಮಿಯ ಮೇಲೆ ನರಕದಂತೆ - ಒಂದು ದುರವಸ್ಥೆಯಾಗಿದೆ. ಅವರಿಬ್ಬರೂ ಒಂದೇ ಮನೆಯಲ್ಲಿ ವಾಸವಾಗಿರುತ್ತಾರೆ, ಆದರೆ ಒಬ್ಬರಿಗೊಬ್ಬರು ಸಂಬಂಧವಿಲ್ಲದ ಏಕಾಂಗಿಗಳು ಆಗಿರುತ್ತಾರೆ. ಕೇವಲ ತಮ್ಮ ಮಕ್ಕಳ ನಿಮಿತ್ತವಾಗಿ, ಅಥವಾ ವಿವಾಹ ಮುರಿದು ಬೀಳುವುದರಿಂದ ಸುತ್ತಮುತ್ತಲಿನ ಸಮಾಜವು ತಮ್ಮನ್ನು ನಿಂದಿಸಬಹುದೆಂಬ ಕಾರಣದಿಂದಾಗಿ, ಅವರು ಒಟ್ಟಾಗಿ ಜೀವಿಸುತ್ತಾರೆ. ಅವರ ನೀರಸವಾದ ಜೀವನ ತಿರುಳಿಲ್ಲದ ಹಣ್ಣಿನಂತಿದೆ. ಹಾಗಿದ್ದರೂ ಇಂತಹ ಎಲ್ಲಾ ದಂಪತಿಗಳು ಸಾಮಾನ್ಯವಾಗಿ ಅವರ ವೈವಾಹಿಕ ಜೀವನದ ಆರಂಭದಲ್ಲಿ, ಹೊರತೋರಿಕೆಗೆ ಐಕ್ಯತೆ ಹಾಗೂ ಪ್ರೀತಿಯಿಂದ ತುಂಬಿದಂತೆ ತೋರುತ್ತಿದ್ದರು. ಅವರು ಎಡವಿ ಬೀಳಲು ಕಾರಣವೇನು?
ವೈವಾಹಿಕ ಜೀವನಕ್ಕೆ ಕುರಿತಾದ ದೇವರ ಬೋಧನೆಯ ಪಾಲನೆಯು, ಒಂದು ಯಶಸ್ವಿ ವಿವಾಹ ಮತ್ತು ಖುಷಿಯಿಲ್ಲದ ವಿವಾಹದ ನಡುವಿನ ವ್ಯತ್ಯಾಸಕ್ಕೆ ಮುಖ್ಯ ಕಾರಣವಾಗಿದೆ. ವಿವಾಹವನ್ನು ದೇವರ ದೃಷ್ಟಿಯಿಂದ ದೃಷ್ಟಿಸಲು ಮನಸ್ಸು ಸಿದ್ಧವಾಗುವ ತನಕ ಯಾವ ಕ್ರೈಸ್ತನೂ ಜೀವನ ಸಂಗಾತಿಯನ್ನು ಹುಡುಕುವದಕ್ಕೆ ಆರಂಭಿಸಬಾರದು.
ದೇವರು ವಿವಾಹವನ್ನು ಪ್ರತಿಷ್ಠಿಸಿದಾಗ ಅವರ ಆಲೋಚನೆ ಮತ್ತು ಉದ್ದೇಶ ಏನಾಗಿತ್ತು? ಸತ್ಯವೇದದ ಮೊದಲ ವಿವಾಹದ ವಿವರಣೆಯಿಂದ ನಾವು ಇದನ್ನು ತಿಳಿದುಕೊಳ್ಳೋಣ.
ಆದಿ ವೃತ್ತಾಂತಆದಿಕಾಂಡ 2:18-25ರಲ್ಲಿ, ಮಾನವ ಇತಿಹಾಸದ ಮೊದಲನೇ ವಿವಾಹದ ವಿವರಣೆಯನ್ನು ನಾವು ನೋಡುತ್ತೇವೆ. ಈ ವಿವಾಹವನ್ನು ಸ್ವತಃ ದೇವರು ನಡೆಸಿಕೊಟ್ಟರು. ಆದಿಕಾಂಡ 1:27 ರಲ್ಲಿ ಸಂಕ್ಷಿಪ್ತವಾಗಿ ನಮೂದಿಸಲಾದ ಸಂಗತಿಯನ್ನು ಮೇಲಿನ ವಚನಗಳು ವಿಸ್ತಾರವಾಗಿ ವಿವರಿಸುತ್ತವೆ.
ಆದಿಯಲ್ಲಿ ದೇವರು ಪುರುಷನನ್ನು ಮಾತ್ರ ಉಂಟುಮಾಡಿದರು; ಇಲ್ಲಿ ಗಮನಿಸಬೇಕಾದ ಒಂದು ವಿಷಯ, ಸೃಷ್ಟಿಕಾರ್ಯದ ಆರನೆಯ ದಿನದ ಮೊದಲ ಅರ್ಧಭಾಗದವರೆಗೆ, ತಾನು ಸೃಷ್ಟಿಸಿದ ಪ್ರತಿಯೊಂದನ್ನು ನೋಡಿ ’ಒಳ್ಳೆಯದು’ ಎಂದು ಹೇಳಿದ ದೇವರು ("ದೇವರು ಅದನ್ನು ’ಒಳ್ಳೆಯದು’ ಎಂದು ಹೇಳಿದರು," ಎಂಬ ಮಾತು ಆದಿಕಾಂಡ 1:4-26ರಲ್ಲಿ ಆರು ಸಲ ಪುನರಾವರ್ತಿಸಿದ್ದನ್ನು ಗಮನಿಸಿರಿ), ಕೊನೆಯಲ್ಲಿ, ಮನುಷ್ಯನು ಒಂಟಿಗನಾಗಿ ಇರುವುದು ’ಒಳ್ಳೆಯದಲ್ಲ’ ಎಂದು ಹೇಳುತ್ತಾರೆ (ಆದಿ. 2:18). "ಮಿಲ್ಟನ್" ಎಂಬ ಆಂಗ್ಲ ಕವಿಯು ಹೀಗೆ ಹೇಳಿದ್ದಾನೆ:
"ಒಂಟಿತನವು, ದೇವರ ಕಣ್ಣು ’ಒಳ್ಳೆಯದಲ್ಲ’ ಎಂದು ಗುರುತಿಸಿದ ಮೊದಲ ಸಂಗತಿಯಾಗಿತ್ತು".ಆ ಮೇಲೆ ದೇವರು ಮುಂದುವರಿದು, ಆದಾಮನ ಹೆಂಡತಿ ಮತ್ತು ಸಹಾಯಕಿಯಾಗಿ ಸ್ತ್ರೀಯನ್ನು ಸೃಷ್ಟಿಸುತ್ತಾರೆ. ಅನಂತರ ತನ್ನ ಸೃಷ್ಟಿಯನ್ನು ನೋಡಿದ ದೇವರು, ಅದನ್ನು "ಬಹು ಒಳ್ಳೆಯದು" ಎಂಬ ಅತಿಶಯೋಕ್ತಿಯಿಂದ ವರ್ಣಿಸುತ್ತಾರೆ (ಆದಿ. 1:31). ವಿವಾಹಿತ ದಂಪತಿಗಳು ದೇವರ ಸೃಷ್ಟಿಗೆ ಎಂಥಹ ಬದಲಾವಣೆಯನ್ನು ತಂದರು!
ನಿಸ್ಸಂಶಯವಾಗಿ ವಿವಾಹದ ಮೂಲ ಉದ್ದೇಶ ಅನ್ಯೋನ್ಯತೆ ಮತ್ತು ಸಂಗಾತಿತನ, ಎಂದು ಆದಿ. 2:18 ಸ್ಪಷ್ಟಪಡಿಸಿದೆ. ಹವ್ವಳು ಸೃಷ್ಟಿಸಲ್ಪಟ್ಟದ್ದು ಸದಾ ಆದಾಮನ ಸಂಗಾತಿಯಾಗಿ ಇರಲಿಕ್ಕಾಗಿ. ಆತನಲ್ಲಿ ’ಬರಿದಾಗಿದ್ದ ಪ್ರತಿಯೊಂದನ್ನು ತುಂಬುವುದು’ ಆಕೆಯ ಕಾರ್ಯವಾಗಿತ್ತು. "ಆತನಿಗೆ ಒಪ್ಪುವ, ಸರಿಹೊಂದುವ, ಹೋಲುವ ಮತ್ತು ಯೋಗ್ಯವಾದ ಒಬ್ಬ ಸಹಾಯಕಿ ಆಗಿರುವುದು".
ಆದಾಮ ಮತ್ತು ಹವ್ವರು ತಾವು ಒಬ್ಬರಿಗೊಬ್ಬರು ಅವಶ್ಯವಾದವರು ಮತ್ತು ತಾವಿಬ್ಬರೂ ದೇವರಲ್ಲಿ ಅವಲಂಬಿತರು, ಎಂಬುದನ್ನು ಯಾವಾಗಲೂ ಅರ್ಥಮಾಡಿಕೊಂಡು ಜೀವಿಸಬೇಕೆಂದು ದೇವರು ಬಯಸಿದರು. ಒಬ್ಬರು ಇನ್ನೊಬ್ಬರಿಗಾಗಿ, ಮತ್ತು ಇಬ್ಬರೂ ದೇವರಿಗಾಗಿ ಜೀವಿಸಬೇಕಿತ್ತು. ಆದಾಮನ ಬಲವಿಲ್ಲದೆ ಹವ್ವಳು ಅಶಕ್ತಳಾಗಿದ್ದಳು ಮತ್ತು ಹವ್ವಳ ಕೋಮಲತೆಯಿಲ್ಲದೆ ಆದಾಮನು ಅಪೂರ್ಣನಾಗಿದ್ದನು, ಮತ್ತು ದೇವರಿಲ್ಲದೆ ಅವರಿಬ್ಬರೂ ಏನೂ ಮಾಡಲು ಆಗುತ್ತಿರಲಿಲ್ಲ.
ಅವರು ಇಂತಹ ಅನ್ಯೋನ್ಯತೆಯಿಂದ ಆತ್ಮಿಕವಾಗಿ ಬಲಗೊಳ್ಳುವುದು ದೇವರ ಉದ್ದೇಶವಾಗಿತ್ತು. ಸತ್ಯವೇದವು ನಮಗೆ ನೆನಪಿಸುವಂತೆ, "ಒಬ್ಬನಿಗಿಂತ ಇಬ್ಬರು ಲೇಸು; ಅವರು ಜೊತೆಯಾಗಿ ಎರಡು ಪಟ್ಟಿಗೂ ಬಹಳ ಹೆಚ್ಚನ್ನು ಸಾಧಿಸುತ್ತಾರೆ, ಏಕೆಂದರೆ ಅವರು ಜೊತೆಯಾದಾಗ ಶ್ರೇಷ್ಠ ಫಲವು ಪ್ರಾಪ್ತವಾಗುತ್ತದೆ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಒಂಟಿಗನು ಬಿದ್ದಾಗ ಎತ್ತುವಾತನು ಇಲ್ಲದೆ ಅವನ ಗತಿ ದುರ್ಗತಿಯೇ ... ಶತ್ರುವು ಒಬ್ಬಂಟಿಗನ ಮೇಲೆ ದಾಳಿ ಮಾಡಿ ಜಯಿಸಬಲ್ಲನು, ಆದರೆ ಜೊತೆಯಾಗಿ ನಿಂತಿರುವ ಇಬ್ಬರು ಆತನನ್ನು ತಡೆಯಬಹುದು ಮತ್ತು ಸೋಲಿಸಬಹುದು" (ಪ್ರಸಂಗಿ. 4:9-12 - The Living Bible ಭಾಷಾಂತರ).
ಮೇಲಿನ ವಚನದ ಸತ್ಯತೆಯು ಸೈತಾನನು ಹವ್ವಳನ್ನು ಶೋಧಿಸಿದ್ದು ಆಕೆ ಆದಾಮನೊಡನೆ ಇದ್ದಾಗ ಅಲ್ಲ, ಆದರೆ ಒಂಟಿಯಾಗಿ ಇದ್ದಾಗ, ಎಂಬ ಸಂಗತಿಯಿಂದ ಸ್ಪಷ್ಟವಾಗುತ್ತದೆ. ಆದಾಮ ಮತ್ತು ಹವ್ವರು ಜೊತೆಯಾಗಿ ಸೈತಾನನ ದಾಳಿಯನ್ನು ಹಿಮ್ಮೆಟ್ಟಿಸಲು ಆಗುತ್ತಿತ್ತು. ಅವರಿಬ್ಬರೂ ಅಗಲಿ ಪ್ರತ್ಯೇಕವಾದಾಗ ನಿಶ್ಯಕ್ತರಾಗಿದ್ದರು. ಆದರೆ ಜೊತೆ ಸೇರಿದಾಗ, ಅವರ ಬಲವು (ಈ ವಚನವು ತಿಳಿಸುವಂತೆ) ಅವರಿಬ್ಬರ ಬಲಗಳ ಮೊತ್ತದಷ್ಟು ಅಲ್ಲ, ಅದಕ್ಕಿಂತ ಬಹಳ ಪಾಲು ಅಧಿಕವಾಗುತ್ತಿತ್ತು. ಪ್ರತಿಯೊಂದು ಕ್ರೈಸ್ತ ದಂಪತಿಯು ಹೀಗೆ ಹೆಚ್ಚಿಸಲ್ಪಟ್ಟ ಆತ್ಮಿಕ ಶಕ್ತಿಯನ್ನು ತೋರಿಸಬೇಕೆಂದು ದೇವರು ಬಯಸುತ್ತಾರೆ.
ಆದರೆ ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಸಂಬಂಧದಲ್ಲಿ ದೇವರು ತಮಗೆ ನೀಡಿದ ಸ್ಥಾನವನ್ನು ಅರಿತಾಗ ಮಾತ್ರ ಇಂತಹ ಶಕ್ತಿಯ ಅನುಭವವಾಗುತ್ತದೆ. ಸಂಗಾತಿಗಳು ಮತ್ತು "ಜೀವ-ವರದ ಸಹಬಾಧ್ಯರುಗಳಾಗಿ" ವಿವಾಹಿತ ದಂಪತಿಗಳು ಜೀವಿಸದಿದ್ದರೆ (1 ಪೇತ್ರ. 3:7), ಅವರು ತಮ್ಮ ವಿವಾಹದ ಮುಖ್ಯ ಉದ್ದೇಶವನ್ನು ನಿಷ್ಫಲಗೊಳಿಸುವುದು ಅಷ್ಟೇ ಅಲ್ಲದೆ, ಸೈತಾನನು ಅವರ ಮನೆಯನ್ನು ಪ್ರವೇಶಿಸಲಿಕ್ಕೆ ಬಾಗಿಲನ್ನು ಅಗಲವಾಗಿ ತೆರೆದಿಡುತ್ತಾರೆ.
ನೀವು ಬಹುಶಃ ಈ ಹೇಳಿಕೆಯನ್ನು ಕೇಳಿರಬಹುದು, ದೇವರು ಹವ್ವಳನ್ನು ಆದಾಮನ ತಲೆಯ ಭಾಗದಿಂದ ತೆಗೆದುಕೊಳ್ಳಲಿಲ್ಲ, ಏಕೆಂದರೆ ಆಕೆಯು ಪುರುಷನ ಮೇಲೆ ಆಳ್ವಿಕೆ ನಡೆಸುವುದನ್ನು ದೇವರು ಬಯಸಲಿಲ್ಲ. ಅವರು ಆಕೆಯನ್ನು ಆದಾಮನ ಕಾಲಿನ ಭಾಗದಿಂದಲೂ ಸಹ ತೆಗೆದುಕೊಳ್ಳಲಿಲ್ಲ, ಏಕೆಂದರೆ ಆಕೆ ಪುರುಷನ ದಾಸಿಯಾಗಿರುವುದನ್ನು ದೇವರು ಬಯಸಲಿಲ್ಲ. ಆದರೆ ಅವರು ಪುರುಷನ ಪಕ್ಕೆಯ ಎಲುಬನ್ನು ತೆಗೆದುಕೊಂಡು ಸ್ತ್ರೀಯನ್ನು ಉಂಟುಮಾಡಿದರು, ಏಕೆಂದರೆ ಆಕೆ ಪುರುಷನ ಸಂಗಾತಿ ಮತ್ತು ಸಹಾಯಕಿ ಆಗಿರಬೇಕೆಂದು ಅವರು ಬಯಸಿದರು. ಆದಾಮನು ಹವ್ವಳನ್ನು ಯಾವಾಗಲೂ ತನ್ನ ಪಕ್ಕದಲ್ಲಿ (ಆಕೆಯ ರಕ್ಷಣೆಗಾಗಿ) ಮತ್ತು ಹೃದಯದ ಬಳಿಯಲ್ಲಿ (ಆಕೆಯನ್ನು ಪ್ರೀತಿ ಮತ್ತು ಮಮತೆಯಿಂದ ಕೋಮಲವಾಗಿ ಪೋಷಿಸಲಿಕ್ಕಾಗಿ) ಇರಿಸಿಕೊಳ್ಳಲು ಮರೆಯಬಾರದು ಎಂಬ ಉದ್ದೇಶದಿಂದ, ಹವ್ವಳು ಆದಾಮನ ಪಕ್ಕೆಯಿಂದ, ಅಂದರೆ ಹೃದಯದ ಸಮೀಪದಿಂದ ತೆಗೆದು ಮಾಡಲ್ಪಟ್ಟಳು. ಇದು ಬಹಳ ಅರ್ಥಗರ್ಭಿತವಾದ ಒಂದು ಸಂಕೇತವಾಗಿದೆ.
ಆದಿ. 2:21ರಲ್ಲಿ ತಿಳಿಸಿರುವಂತೆ, ದೇವರು ಆದಾಮನ ಪಕ್ಕೆಯಿಂದ ಒಂದು ಎಲುಬನ್ನು ತೆಗೆದುಕೊಂಡ ನಂತರ, ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು. ಇದರಲ್ಲೂ ಒಂದು ಸಾಂಕೇತಿಕ ಬೋಧನೆ ಇದೆ. ಪಕ್ಕೆಯಿಂದ ಒಂದು ಎಲುಬು ತೆಗೆಯಲ್ಪಟ್ಟಾಗ, ಆದಾಮನೊಳಗೆ ಏನೋ ಒಂದು ಕಡಿಮೆಯಾಯಿತು. ಆದರೆ ಆ ಸ್ಥಳವು ಮಾಂಸದಿಂದ ಮುಚ್ಚಲ್ಪಟ್ಟದ್ದರಿಂದ, ಒಳಗಿನ ಅಭಾವವು ಹೊರನೋಟಕ್ಕೆ ಕಾಣುತ್ತಿರಲಿಲ್ಲ. ಇದು ಸಾಂಕೇತಿಕವಾಗಿ ಸೂಚಿಸುವುದು ಏನೆಂದರೆ, ಅವನ ಒಳಜೀವಿತದಲ್ಲಿ ಹವ್ವಳು ಮಾತ್ರ ತುಂಬಿಸಬಹುದಾದ ಒಂದು ಖಾಲಿ ಜಾಗವಿತ್ತು. ಏಕೆಂದರೆ ಆಕೆಯು ಆ ಪಕ್ಕೆಯ ಎಲುಬಿನಿಂದ ಮಾಡಲ್ಪಟ್ಟಿದ್ದಳು. ಯೆಹೂದ್ಯರ ’ರಬ್ಬಿಗಳು’ (ಗುರುಗಳು) ಒಂದು ಮಾತನ್ನು ಹೇಳುತ್ತಾರೆ, "ತನ್ನ ಪಕ್ಕೆಯ ಎಲುಬನ್ನು ತೆಗೆದುದರಿಂದ ಪುರುಷನು ಅವಿಶ್ರಾಂತನಾಗಿದ್ದಾನೆ ಮತ್ತು ಪುರುಷನ ತೋಳಿನ ಅಡಿಯಲ್ಲಿ ಬರುವ ತನಕ ಸ್ತ್ರೀಯು ಅವಿಶ್ರಾಂತಳಾಗಿರುತ್ತಾಳೆ, ಏಕೆಂದರೆ, ಅವಳು ಅಲ್ಲಿಂದಲೇ ತೆಗೆಯಲ್ಪಟ್ಟವಳಾಗಿದ್ದಾಳೆ".
ಇಂತಹ ಮೈತ್ರಿಯನ್ನು ದೇವರು ಪತಿ-ಪತ್ನಿಯರ ನಡುವೆ ಕಾಣಬಯಸುತ್ತಾರೆ, ಮತ್ತು ಇಂತಹ ಸಂಯೋಗ ಇದ್ದಾಗ ಮಾತ್ರ ದೇವರ ಶಕ್ತಿಯು ತೋರಿಬರುತ್ತದೆ ಮತ್ತು ದೇವರ ಉದ್ದೇಶಗಳು ಫಲಿಸುತ್ತವೆ.
ಹೊಸ ಒಡಂಬಡಿಕೆಯಲ್ಲಿ, ಪತಿ-ಪತ್ನಿಯ ಸಂಬಂಧದ ವಿಚಾರವಾಗಿ, ಮೇಲೆ ಪ್ರಸ್ತಾಪಿಸಿದ ಆದಿ. 2ರ ವಚನಗಳನ್ನು ಕರ್ತನಾದ ಯೇಸು ಮತ್ತು ಅಪೊಸ್ತಲ ಪೌಲ ಇಬ್ಬರೂ (ಪವಿತ್ರಾತ್ಮನ ಪ್ರೇರಣೆಯಿಂದ) ಉಲ್ಲೇಖಿಸಿದ್ದನ್ನು ನಾವು ನೋಡುತ್ತೇವೆ (ಮತ್ತಾ. 19:3-9; ಎಫೆ. 5:22-33). ಹಾಗಾಗಿ ಕ್ರೈಸ್ತ ವೈವಾಹಿಕ ಜೀವನದ ಸರಿಯಾದ ಕಾರ್ಯಪದ್ಧತಿಯನ್ನು ಅರಿತುಕೊಳ್ಳುವುದಕ್ಕೆ, ಆದಿಕಾಂಡದ ಈ ವಚನಗಳ ಬೋಧನೆಯು ಬಹಳ ಮಹತ್ವಪೂರ್ಣದ್ದಾಗಿದೆ.
ಆದಿ. 1:28ರಲ್ಲಿ ದೇವರು ನವದಂಪತಿಗಳಿಗೆ ಹೇಳಿದ ಮೊದಲ ಮಾತುಗಳಲ್ಲಿ, ಮದುವೆಯ ಎರಡನೇ ಉದ್ದೇಶವನ್ನು ನಾವು ನೋಡುತ್ತೇವೆ. ಅವರು ಸಂತಾನವನ್ನು ವೃದ್ಧಿಪಡಿಸಬೇಕಾಗಿತ್ತು. ಮಕ್ಕಳಿಗೆ ಜನ್ಮ ಕೊಡುವುದು ಮತ್ತು ಒಂದು ಕುಟುಂಬವನ್ನು ಪ್ರಾರಂಭಿಸುವುದು ದೇವರು ವಿವಾಹವನ್ನು ಪ್ರತಿಷ್ಠಿಸಿದ ಇನ್ನೊಂದು ಕಾರಣವಾಗಿತ್ತು. ಲೈಂಗಿಕ ಕ್ರಿಯೆಯು ಪ್ರಾಥಮಿಕವಾಗಿ ಈ ಉದ್ದೇಶಕ್ಕಾಗಿ ದೇವರಿಂದ ಸೃಷ್ಟಿಸಲ್ಪಟ್ಟಿತು.
ಕುಟುಂಬವು ದೇವರ ಆರಾಧನೆ ಮತ್ತು ಸೇವೆಯ ಕೇಂದ್ರಸ್ಥಾನವಾಗಿ ಇರಬೇಕೆಂದು ಸತ್ಯವೇದವು ಬಹಳ ಒತ್ತಿ ಹೇಳುತ್ತದೆ. ದೇವರ ನೇತೃತ್ವದಲ್ಲಿ ನಡೆಸಲ್ಪಡುವ ಒಂದು ಮನೆಯು, ಅವರಿಗೆ ಹೆಚ್ಚಿನ ಮಹಿಮೆಯನ್ನು ತರುತ್ತದೆ. ಮಕ್ಕಳು ನಮ್ಮ ಹೃದಯಗಳನ್ನು ಸಂತೋಷ ಪಡಿಸುವುದು ಅಷ್ಟೇ ದೇವರ ಉದ್ದೇಶವಾಗಿಲ್ಲ; ಮಕ್ಕಳು ಬೆಳೆಯುವಾಗ ಅವರ ಮನಸ್ಸಿನಲ್ಲಿ ದೇವರ ಭಯ ಬೇರೂರುವಂತೆ ನಾವು ಅವರನ್ನು ಬೆಳೆಸಿ, ಮುಂದೆ ಅವರು ತಮ್ಮ ಸಂತತಿಯಲ್ಲಿ ನಂಬಿಗಸ್ತ ಸಾಕ್ಷಿಗಳಾಗಿ ಇರುವುದು ದೇವರು ಮಕ್ಕಳನ್ನು ದಯಪಾಲಿಸುವ ಉದ್ದೇಶವಾಗಿದೆ. ದೇವರ ವಾಕ್ಯವು ಇದನ್ನು ಪದೇ ಪದೇ ಒತ್ತಿ ಹೇಳುತ್ತದೆ ಕೀರ್ತ. 78:5-7).
ಎಲ್ಲಾ ಕ್ರೈಸ್ತ ದಂಪತಿಗಳಿಗೆ ಕೊಡಲಾಗಿರುವ ಕರೆ ಯಾವುದೆಂದರೆ, ದೇವರನ್ನು ಮಹಿಮೆಪಡಿಸಿ, ದೇವರ ನಂಬಿಗಸ್ತಿಕೆ ಮತ್ತು ಅವರು ನೀಡುವ ಸಂರಕ್ಷಣೆಯನ್ನು ಎತ್ತಿ ತೋರಿಸುವ ಒಂದು ಕುಟುಂಬವನ್ನು ಕಟ್ಟುವುದೇ ಆಗಿದೆ. ಕರ್ತನ ಮಾರ್ಗವನ್ನು ಅನುಸರಿಸಿ ನಡೆಯುವ ಮಕ್ಕಳು, ಒಬ್ಬ ಮನುಷ್ಯನು ಸಾರಬಹುದಾದ ಒಂದು ಅತ್ಯಂತ ಪರಿಣಾಮಕಾರಿ ಕ್ರೈಸ್ತ ಸಂದೇಶವಾಗಿದ್ದಾರೆ. ದೇವರು ಇದಕ್ಕೆ ಎಷ್ಟು ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ ಎನ್ನುವದು, ಅವರು ಅಬ್ರಹಾಮನು ತನ್ನ ಮಕ್ಕಳಿಗೆ ನ್ಯಾಯನೀತಿಯ ಮಾರ್ಗವನ್ನು ಅನುಸರಿಸುವಂತೆ ಶಿಕ್ಷಣ ನೀಡಿದ್ದಕ್ಕಾಗಿ ಅವನನ್ನು ಆಶೀರ್ವದಿಸಿದ್ದರಲ್ಲಿ, ಮತ್ತು ಯಾಜಕನಾದ ಏಲಿಯು ತನ್ನ ಮಕ್ಕಳು ದುರ್ಮಾರ್ಗದಲ್ಲಿ ನಡೆಯುವುದನ್ನು ಬಹಿಷ್ಕರಿಸದೇ ಇದ್ದುದಕ್ಕಾಗಿ ಅವನನ್ನು ಶಪಿಸಿದ್ದರಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ (ಆದಿ. 18:19; 1 ಸಮು. 3:13,14).
ಹೊಸ ಒಡಂಬಡಿಕೆಯೂ ಸಹ ಇದರ ಪ್ರಾಮುಖ್ಯತೆಯನ್ನು ಬೋಧಿಸುತ್ತದೆ. ಎಫೆಸದ ಪತ್ರಿಕೆಯಲ್ಲಿ, "ದೇವಸಭೆ"ಯು ಕ್ರಿಸ್ತನ ದೇಹವಾಗಿದೆ ಎಂಬ ಮಾರ್ಮಿಕ ಸತ್ಯಾಂಶವನ್ನು ವಿವರಿಸಿದ ನಂತರ (ಎಫೆಸ ಅಧ್ಯಾಯ 1ರಿಂದ 3), ಕ್ರೈಸ್ತ ಕುಟುಂಬದ ಸಂಬಂಧಗಳಲ್ಲಿ ಈ ಸತ್ಯಾಂಶದ ಪ್ರಾಯೋಗಿಕ ಪರಿಣಾಮವು ಪ್ರಕಟವಾಗಬೇಕೆಂದು ಪೌಲನು ಹೇಳುತ್ತಾನೆ. ಗಂಡ ಮತ್ತು ಹೆಂಡತಿಯ ನಡುವೆ, ತಂದೆತಾಯಿಯರು ಮತ್ತು ಮಕ್ಕಳ ನಡುವೆ, ಯಜಮಾನ ಮತ್ತು ನೌಕರನ ನಡುವೆ (ಎಫೆ. 5:22-6:9). ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಪೌಲನು ಮುಖ್ಯವಾಗಿ ಮನೆಯ ಕುರಿತಾಗಿ ಮಾತನಾಡುತ್ತಾನೆ, ಮತ್ತು ಸ್ಥಳೀಯ ಸಭೆಯ ಕುರಿತಾಗಿ ಅಲ್ಲ. ದೇವರ ದೃಷ್ಟಿಯಲ್ಲಿ ಕ್ರೈಸ್ತ ಕುಟುಂಬಗಳ ಸಾಕ್ಷಿಯು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ, ಎಂಬುದನ್ನು ಇದು ತೋರಿಸುತ್ತದೆ. ಒಂದು ಸ್ಥಳೀಯ ಕ್ರೈಸ್ತ ಸಭೆಯ ಬಲವು, ಅದರಲ್ಲಿರುವ ಕುಟುಂಬಗಳು ಎಷ್ಟು ಬಲಿಷ್ಟವಾಗಿವೆ, ಎಂಬುದರ ಮೇಲೆ ಅವಲಂಬಿಸಿದೆ. ಸಭೆಯ ಕುಟುಂಬಗಳಲ್ಲಿ ಆತ್ಮಿಕ ವಾತಾವರಣದ ಕೊರತೆ ಉಂಟಾದಾಗ, ಅದು ಸ್ಥಳೀಯ ಸಭೆಯ ವಿನಾಶದ ಸೂಚನೆಯಾಗಿದೆ.
ಹಾಗಾಗಿ ಸೈತಾನನ ಅತ್ಯಂತ ತೀಕ್ಷ್ಣವಾದ ಧಾಳಿಗಳ ಲಕ್ಷ್ಯ ಈ ಭಾಗದ ಮೇಲೆ ಕೇಂದ್ರಿತವಾಗಿ ಇರುತ್ತದೆ, ಎಂದು ಸ್ವಾಭಾವಿಕವಾಗಿ ನಿರೀಕ್ಷಿಸಬಹುದು. ಸೈತಾನನು ದೇವರು ಪ್ರಾರಂಭಿಸಿದ ಮೊದಲ ಕುಟುಂಬದಲ್ಲಿ ದೂಷಣೆ, ಹೊಟ್ಟೆಕಿಚ್ಚು, ಹಗೆತನ ಮತ್ತು ಕೊಲೆ, ಇವೆಲ್ಲವನ್ನು ತಂದನು (ಆದಿ. 3:12-4:8). ಆಗಿನಿಂದ ಈಗಿನವರೆಗೆ, ಆತನು ಒಂದೇ ಒಂದು ದೈವಿಕ ಕುಟುಂಬವನ್ನು ಸುಮ್ಮನೆ ಬಿಟ್ಟಿಲ್ಲ. ಈ ಕಾರಣಕ್ಕಾಗಿ, ಎಫೆಸದ ಪತ್ರಿಕೆಯಲ್ಲಿ ಕ್ರೈಸ್ತ ಕುಟುಂಬಕ್ಕೆ ಸಂಬಂಧಿಸಿದ ವಚನಗಳ ಒಡನೆಯೇ ಆತ್ಮಿಕ ಹೋರಾಟಕ್ಕೆ ಸಂಬಂಧಿಸಿದ ವಚನಗಳು ಕಂಡುಬರುತ್ತವೆ (ಎಫೆ. 6:10-18). ಒಂದು ದೈವಿಕ ಕುಟುಂಬವನ್ನು ಕಟ್ಟುವ ಎಲ್ಲಾ ಪ್ರಯತ್ನವನ್ನು ಸೈತಾನನು ವಿರೋಧಿಸುತ್ತಾನೆ ಎಂಬ ಎಚ್ಚರಿಕೆ ನಮಗೆ ಇಲ್ಲಿ ಸಿಗುತ್ತದೆ, ಆದರೆ ದೇವರು ಶತ್ರುವಿನ ಪ್ರತಿಯೊಂದು ದಾಳಿಯನ್ನು ಹಿಮ್ಮೆಟ್ಟಿಸಲು ಸಮರ್ಥವಾದ ರಕ್ಷಾಕವಚ ಮತ್ತು ಯುದ್ಧೋಪಕರಣಗಳನ್ನು ನಮಗೆ ಕೊಟ್ಟಿದ್ದಾರೆ, ಎಂಬ ಮಾಹಿತಿಯೂ ಸಹ ನಮಗೆ ಇಲ್ಲಿ ಸಿಗುತ್ತದೆ.
ದೇವರನ್ನು ಮಹಿಮೆಪಡಿಸುವ ಒಂದು ಕುಟುಂಬವನ್ನು ಆರಂಭಿಸುವುದು ನಿಶ್ಚಯವಾಗಿ ವಿವಾಹದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.
ಫಲಭರಿತರಾಗಿರಿ ಎಂಬ ಆಜ್ಞೆಯ (ಆದಿ. 1:28) ಹಿನ್ನೆಲೆಯಲ್ಲಿ, ಆದಾಮ ಮತ್ತು ಹವ್ವಳ ನಡುವೆ ಲೈಂಗಿಕ ಸಂಯೋಗವು ಅವಶ್ಯವಾದದ್ದು, ಎಂಬ ಒಳಾರ್ಥವಿದೆ. ಪುರುಷ ಮತ್ತು ಸ್ತ್ರೀಯು ಅವರವರ ಲೈಂಗಿಕ ಇಚ್ಛೆಗಳನ್ನು ಸಂಪೂರ್ಣವಾಗಿ ತೃಪ್ತಿಗೊಳಿಸುವುದಕ್ಕೆ ದೇವರು ಸಂಕಲ್ಪಿಸಿರುವ ವಿಧಾನ ವಿವಾಹವಾಗಿದೆ. ಇದು ವಿವಾಹದ ಮೂರನೆಯ ಉದ್ದೇಶವಾಗಿದೆ.
ವೈವಾಹಿಕ ಜೀವನದ ಲೈಂಗಿಕ ಸಂತೃಪ್ತಿಯು, ಶಾರೀರಿಕ ತೃಪ್ತಿ ಮತ್ತು ಭೋಗವಿಹಾರಕ್ಕಿಂತ ಬಹಳ ಉನ್ನತವಾದ ಅರ್ಥವನ್ನು ಹೊಂದಿದೆ. ಇದರ ಉದ್ದೇಶ ಇವೆರಡು ಸಂಗತಿಗಳು ಮಾತ್ರವಾಗಿದ್ದರೆ, ಆಗ ಮನುಷ್ಯನು ಒಂದು ಪ್ರಾಣಿಗಿಂತ ಶ್ರೇಷ್ಠನಾಗಿರಲಾರನು. ಲೈಂಗಿಕ ಕ್ರಿಯೆಯ ಶಾರೀರಿಕ ಅಂಶವನ್ನು ಸತ್ಯವೇದವು ತುಚ್ಛವಾಗಿ ನೋಡುವುದಿಲ್ಲ. ಈ ಪುಸ್ತಕದಲ್ಲಿ (ಮೊದಲನೇ ಅಧ್ಯಾಯದಲ್ಲಿ) ನಾವು ಈಗಾಗಲೇ ನೋಡಿರುವಂತೆ, ದೇವರು ಉಂಟುಮಾಡಿದ ಲೈಂಗಿಕತೆಯು ದಿವ್ಯವೂ, ಪರಿಶುದ್ಧವೂ ಆಗಿದೆ. ಆದರೆ ಯಾವಾಗಲೂ ’ಲೈಂಗಿಕ ಕ್ರಿಯೆಯು’ ಗಂಡ ಮತ್ತು ಹೆಂಡತಿಯ ಒಳಜೀವಿತದಲ್ಲಿ ಮೊದಲೇ ಅರಳಿರುವ ’ಉಜ್ವಲ ಅನ್ಯೋನ್ಯತೆಯೆಂಬ’ ಸುಂದರ ಉದ್ಯಾನವನದ ನಡುವೆ, ಒಂದು ಅಂದವಾದ ಶಿಖರದಂತೆ ಇರಬೇಕು. ಇದು ಅವರಿಬ್ಬರ ನಡುವಿನ ’ಅಗಾಪೆ-ಪ್ರೀತಿ’ಯ ಶಾರೀರಿಕ ಪ್ರತಿಬಿಂಬವಾಗಿರಬೇಕು. ವಿವಾಹದ ಮಂಚವು, ಪತಿ ಮತ್ತು ಪತ್ನಿಯು ತಮ್ಮ ಜೊತೆಯಾದ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಒಬ್ಬರಿಗೊಬ್ಬರು ಸೇವಾಭಾವನೆಯಿಂದ ತಮ್ಮನ್ನೇ ಅರ್ಪಿಸಿಕೊಳ್ಳುವ ಉದ್ದೇಶವನ್ನು ಲೈಂಗಿಕ ಮಿಲನದ ಮೂಲಕ ತೋರಿಸಲಿಕ್ಕಾಗಿ, ಒಂದು ಪವಿತ್ರ ಯಜ್ಞವೇದಿಕೆ ಆಗಿರಬೇಕು.
ಸತ್ಯವೇದವು ವೈವಾಹಿಕ ಜೀವನದ ಲೈಂಗಿಕ ಪ್ರೀತಿಯನ್ನು ಉಜ್ವಲವಾಗಿ ಚಿತ್ರಿಸುತ್ತದೆ. ಸತ್ಯವೇದದ ಒಂದು ಸಂಪೂರ್ಣ ಪುಸ್ತಕ - "ಪರಮಗೀತ" ("The Song of Solomon") - ಇಬ್ಬರು ಪ್ರೇಮಿಗಳ ಕಥೆಯನ್ನು ಹೇಳುತ್ತದೆ. ದೇವರ ವಾಕ್ಯವು ವರನು ತನ್ನ ವಧುವಿನಲ್ಲಿ ಆನಂದಿಸುವುದನ್ನು ವಿವರಿಸುತ್ತದೆ (ಯೆಶಾ. 62:5), ಮತ್ತು ಗಂಡಂದಿರು ತಮ್ಮತಮ್ಮ ಪತ್ನಿಯರೊಂದಿಗೆ ಲೈಂಗಿಕ ತೃಪ್ತಿಯನ್ನು ಪಡೆದು ಸದಾ ಆನಂದಿಸುವಂತೆ ಪ್ರೋತ್ಸಾಹಿಸಿ, ಅವರ ಪ್ರೀತಿಯಲ್ಲಿ ಹರ್ಷೋನ್ಮತ್ತರಾಗುವಂತೆ ಆಹ್ವಾನಿಸುತ್ತದೆ (ಜ್ಞಾನೋ. 5:18,19 ಹಾಗೂ 1 ಕೊರಿ. 7:5ರಲ್ಲಿ ನೋಡಿರಿ). ಇದು ಪಾಪಕರವಲ್ಲ, ಇದು ನ್ಯಾಯೋಚಿತವಾದದ್ದು ಮತ್ತು ಸರಿಯಾದದ್ದು ಆಗಿದೆ.
ಅನೇಕ ಜನರ ಮನಸ್ಸಿನಲ್ಲಿ ಲೈಂಗಿಕತೆಯು ಹೊಲಸಾದದ್ದು ಎಂಬ ಭಾವನೆ ಇರುವುದರಿಂದ, ದೇವರು ಇವೆಲ್ಲವನ್ನು ಸತ್ಯವೇದದಲ್ಲಿ ಹೇಗೆ ಬರೆಸಿದರೆಂದು ಅವರಿಗೆ ಅರ್ಥವಾಗುವುದಿಲ್ಲ. "ಶುದ್ಧರಿಗೆ ಎಲ್ಲವೂ ಶುದ್ಧವೇ (ಹೃದಯದಲ್ಲಿ ಮತ್ತು ಮನಃಸಾಕ್ಷಿಯಲ್ಲಿ); ಆದರೆ ಮಲಿನವಾದವರಿಗೂ, ನೀತಿಭ್ರಷ್ಟರಿಗೂ ಮತ್ತು ನಂಬಿಕೆ ಇಲ್ಲದವರಿಗೂ, ಯಾವುದೂ ಶುದ್ಧವಲ್ಲ; ಅವರ ಬುದ್ಧಿ ಮತ್ತು ಮನಃಸಾಕ್ಷಿ ಎರಡೂ ಮಲಿನವಾಗಿವೆ" (ತೀತ. 1:15). ನಮ್ಮ ಮನಸ್ಸು ಇನ್ನೂ ಶರೀರಭಾವವನ್ನು ಹೊಂದಿದ್ದರೆ, ಅಶುದ್ಧತೆ ಇಲ್ಲದಿರುವಾಗಲೂ ನಾವು ಹೊಲಸನ್ನು ಕಾಣುತ್ತೇವೆ. ಆಗ ನಾವು ದೇವರು ತನ್ನ ವಚನದಲ್ಲಿ ಬರೆದಿರುವಂತದ್ದನ್ನೂ ಹೊಲಸು ಎಂದು ಭಾವಿಸುತ್ತೇವೆ! ಆದರೆ ನಾವು ಪವಿತ್ರಾತ್ಮನಿಂದ ನೂತನ ಮನಸ್ಸುಗಳನ್ನು ಪಡೆಯುತ್ತಿರುವಾಗ, ಲೈಂಗಿಕತೆಯನ್ನು ದೇವರ ದೃಷ್ಟಿಯಿಂದ ನೋಡಲು ಆರಂಭಿಸುತ್ತೇವೆ. ಆಗ ವೈವಾಹಿಕ ಜೀವನದಲ್ಲಿ ಲೈಂಗಿಕ ಸಂತೃಪ್ತಿಯು ಪವಿತ್ರವಾದದ್ದು ಮತ್ತು ಒಳ್ಳೆಯದು ಎಂದು ನಾವು ತಿಳಿದುಕೊಳ್ಳುತ್ತೇವೆ.
ಏದೇ್ನಿನ ಉದ್ಯಾನವನದಲ್ಲಿ, ಪಾಪವು ಲೋಕವನ್ನು ಪ್ರವೇಶಿಸುವುದಕ್ಕೆ ಮೊದಲು, ಆದಾಮ ಮತ್ತು ಹವ್ವಳು ಲೈಂಗಿಕ ಸಂತುಷ್ಟಿಯನ್ನು ಒಬ್ಬರು ಇನ್ನೊಬ್ಬರಲ್ಲಿ ಪಡೆಯಬೇಕಾಗಿತ್ತು. ಪಾಪವು ಒಳಗೆ ಪ್ರವೇಶ ಮಾಡಿದ ನಂತರ, ಮದುವೆ ಮಾಡಿಕೊಳ್ಳದ ಮನುಷ್ಯನು ಸುಲಭವಾಗಿ ಲೈಂಗಿಕ ಪಾಪಕ್ಕೆ ಇಳಿಯುವ ಸಾಧ್ಯತೆ ಇರುವುದರಿಂದ (ಇದು ಬಹುಶಃ ಪುರುಷರಿಗೆ ಹೆಚ್ಚಾಗಿ ಅನ್ವಯಿಸುತ್ತದೆ), ಈಗ ಮದುವೆಯು ಇನ್ನೂ ಹೆಚ್ಚು ಅವಶ್ಯವಾಗಿದೆ, ಎಂದು ಸತ್ಯವೇದವು ನಮಗೆ ತಿಳಿಸುತ್ತದೆ (1 ಕೊರಿ. 7:2). ಮನುಷ್ಯನು ತೃಪ್ತಿಗೊಳ್ಳದ ಕಾಮತಾಪದಿಂದ ಹಗಲಿರುಳು ಬಳಲುವುದಕ್ಕಿಂತ ಮದುವೆ ಮಾಡಿಕೊಳ್ಳುವುದು ಉತ್ತಮವೆಂದು ಸತ್ಯವೇದ ಸಲಹೆ ನೀಡುತ್ತದೆ, ಏಕೆಂದರೆ ಪುರುಷರು ಮತ್ತು ಸ್ತ್ರೀಯರು ತಮ್ಮ ಲೈಂಗಿಕ ಆಸೆಗಳನ್ನು ಪೂರೈಸಲು ದೇವರು ಪ್ರತಿಷ್ಠಿಸಿದ ಒಂದೇ ವಿಧಾನ ಮದುವೆಯಾಗಿದೆ (1 ಕೊರಿ. 7:9).
ದೇವರ ವಾಕ್ಯದಲ್ಲಿ ಕಂಡುಬರುವ ಅತ್ಯಂತ ಮಹಿಮಾನ್ವಿತ ಪ್ರಕಟನೆಗಳಲ್ಲಿ ಒಂದು ಯಾವುದೆಂದರೆ, ಪತಿ-ಪತ್ನಿಯ ನಡುವಿನ ಸಂಬಂಧವು ಕ್ರಿಸ್ತ ಹಾಗೂ ಕ್ರೈಸ್ತ ಸಭೆಯ ನಡುವಿನ ಸಂಬಂಧವನ್ನು ನಿರೂಪಿಸುತ್ತದೆ (ಎಫೆ. 5:22-23), ಎಂಬುದು.
ಎಫೆಸ ಪತ್ರಿಕೆಯ ಈ ವಚನಗಳು ನಮಗೆ ತಿಳಿಸುವ ಹಾಗೆ, ಹೆಂಡಂದಿರು ತಮ್ಮತಮ್ಮ ಗಂಡಂದಿರಿಗೆ ವಿಧೇಯರಾಗಬೇಕು, ಏಕೆಂದರೆ ಗಂಡನು ಹೆಂಡತಿಗೆ ದೇವರಿಂದ ನೇಮಿಸಲ್ಪಟ್ಟ ಮುಖ್ಯಸ್ಥನಾಗಿದ್ದಾನೆ. ಇಲ್ಲಿ ನೀಡಲಾಗಿರುವ ಆಜ್ಞೆಯ ಪ್ರಕಾರ, ಹೆಂಡತಿಯು ಎಲ್ಲಾ ವಿಷಯಗಳಲ್ಲಿ ತನ್ನ ಗಂಡನಿಗೆ ಒಳಪಡಬೇಕು (ಸಭೆಯು ಕ್ರಿಸ್ತನಿಗೆ ಅಧೀನವಾಗಿರಬೇಕಾದ ಹಾಗೆಯೇ) ಮತ್ತು ಆತನನ್ನು ಭಯಭಕ್ತಿಯಿಂದ ನೋಡಬೇಕು. ಇಂತಹ ವಿಧೇಯತೆಯನ್ನು ನಮ್ಮ ಈ ದಿನದ ಸಂಪ್ರದಾಯವು ಅಂಗೀಕರಿಸದೇ ಇರಬಹುದು, ಆದಾಗ್ಯೂ ಇದು ದೇವರ ಆಜ್ಞೆಯಾಗಿದೆ. ಒಂದು ಕುಟುಂಬವು ಈ ಆಜ್ಞೆಯನ್ನು ತಿರಸ್ಕರಿಸಿದರೆ, ಅಲ್ಲಿ ಈ ಅವಿಧೇಯತೆಯ ಪರಿಣಾಮವು ನಿಶ್ಚಯವಾಗಿ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸುತ್ತದೆ. ಒಬ್ಬ ಕ್ರೈಸ್ತ ಕನ್ಯೆಯು ದೇವರ ಈ ಆಜ್ಞೆಗಳನ್ನು ತನ್ನ ವಿವಾಹಿತ ಜೀವನದಲ್ಲಿ ಪಾಲಿಸಲು ಇಚ್ಛಿಸದಿದ್ದರೆ, ಆಕೆ ಮದುವೆಯಾಗದೇ ಇರುವುದು ಒಳ್ಳೆಯದು. ಇಂತಹ ಕನ್ಯೆಯು ಮದುವೆಯಾದ ಮೇಲೆ ದೇವರ ಆಜ್ಞೆಗಳಿಗೆ ನಿರಂತರವಾಗಿ ಅವಿಧೇಯಳಾಗಿ ಇರುವುದಕ್ಕಿಂತ, ಮದುವೆಯಾಗದೇ ಇರುವುದು ಎಷ್ಟೋ ಉತ್ತಮ.
"ಕ್ರೈಸ್ತ ವಿಶ್ವಾಸಿಗಳಾದ ಎಲ್ಲಾ ದಂಪತಿಗಳು ಯೇಸು ಕ್ರಿಸ್ತ ಮತ್ತು ಕ್ರೈಸ್ತಸಭೆಯ ನಡುವಿನ ಸಂಬಂಧವನ್ನು ನಿರೂಪಿಸುವ ಒಂದು ಚಿಕ್ಕ ಭಾವಚಿತ್ರದಂತೆ ಇರಬೇಕು"ದೇವರ ಆದೇಶದ ಮೂಲಕ ಗಂಡನು ತನ್ನ ನ್ಯಾಯಸಮ್ಮತವಲ್ಲದ ಅಪೇಕ್ಷೆಗಳನ್ನು ಪೂರೈಸಲು ಹೆಂಡತಿಯನ್ನು ಒತ್ತಾಯಿಸಬಹುದೆಂದು ಯೋಚಿಸುವುದಕ್ಕೆ ಅವಕಾಶ ಇರುವುದಿಲ್ಲ; ಏಕೆಂದರೆ ಎಫೆಸ ಪತ್ರಿಕೆಯ ಈ ವಚನವು ಮುಂದುವರಿದು, ಕ್ರಿಸ್ತನು ಸಭೆಯನ್ನು ಪ್ರೀತಿಸಿ ಅದಕ್ಕೆ ತನ್ನನ್ನೇ ಒಪ್ಪಿಸಿಕೊಟ್ಟ ಹಾಗೆಯೇ, ಗಂಡಂದಿರು ತಮ್ಮ ಹೆಂಡಂದಿರನ್ನು ಪ್ರೀತಿಸಬೇಕೆಂದು ಹೇಳುತ್ತದೆ. ಇದರ ತಾತ್ಪರ್ಯ ಏನೆಂದರೆ, ಗಂಡಂದಿರು ತಮ್ಮ ಹೆಂಡಂದಿರನ್ನು ಪ್ರೀತಿಸಲಿಕ್ಕೆ ತಮ್ಮನ್ನೇ ತ್ಯಾಗಮಾಡಬೇಕು, ಹೆಂಡತಿಯ ಸುಖ-ಸಂತೋಷಕ್ಕಾಗಿ ಉಡುಗೊರೆಗಳನ್ನು ಕೊಡುವುದು ಮಾತ್ರವಲ್ಲದೇ, ಗಂಡನು ತನ್ನನ್ನೇ - ತನ್ನ ಸಂಪೂರ್ಣ ಜೀವಿತವನ್ನು - ಹೆಂಡತಿಗೆ ಒಪ್ಪಿಸಿ ಕೊಡಬೇಕು. ಕ್ರಿಸ್ತನು ನಿರಂತರವಾಗಿ ಸಭೆಯನ್ನು ಪ್ರೀತಿಸುವ ಹಾಗೆಯೇ, ಗಂಡನಿಗೆ ಹೆಂಡತಿಯ ಪ್ರೀತಿಯು ಸಿಕ್ಕಿದರೂ ಅಥವಾ ಸಿಗದೇ ಹೋದರೂ, ಹೆಂಡತಿಯನ್ನು ಯಾವಾಗಲೂ ಪ್ರೀತಿಸುವುದು ಆತನ ಕರ್ತವ್ಯವಾಗಿದೆ. ಅಷ್ಟೇ ಅಲ್ಲದೆ, ಕ್ರಿಸ್ತನ ಪ್ರೀತಿಯು ಶಿಷ್ಯರ ಕಾಲುಗಳನ್ನು ತೊಳೆಯುವುದಕ್ಕೂ ಸಹ ಆತನನ್ನು ನಡೆಸಿತು, ಎಂಬುದನ್ನು ನೆನಪಿಟ್ಟುಕೊಳ್ಳಿರಿ (ಯೋಹಾನನು 13:1,5). ಎಫೆಸದ ಪತ್ರಿಕೆಯ ಇದೇ ಗ್ರಂಥಭಾಗದಲ್ಲಿ ನೀಡಲಾಗಿರುವ ಇನ್ನೊಂದು ಆಜ್ಞೆ, ಗಂಡನು ತನ್ನ ಸ್ವಂತ ಶರೀರವನ್ನು ಪ್ರೀತಿಸುವ ಹಾಗೆ ತನ್ನ ಹೆಂಡತಿಯನ್ನು ಪ್ರೀತಿಸಬೇಕು. ಆತನು ಹೇಗೆ ತನ್ನ ಸ್ವಂತ ಶರೀರಕ್ಕೆ ನೋವು ಉಂಟುಮಾಡುವುದಿಲ್ಲ ಅಥವಾ ಅದನ್ನು ಗಾಯಗೊಳಿಸುವುದಿಲ್ಲವೋ, ಹಾಗೆಯೇ ಆತನು ಉದ್ದೇಶಪೂರ್ವಕವಾಗಿ ತನ್ನ ಪತ್ನಿಗೆ ಹಾನಿ ಅಥವಾ ಆಕೆಯ ಮನಸ್ಸಿಗೆ ನೋವನ್ನು ಉಂಟುಮಾಡಬಾರದು. ಆತನು ತನ್ನ ಶರೀರವನ್ನು ಪೋಷಿಸಿ ಸಂರಕ್ಷಿಸುವ ಹಾಗೆಯೇ, ತನ್ನ ಹೆಂಡತಿಯನ್ನು ಪೋಷಿಸಬೇಕು ಮತ್ತು ಹಾನಿ, ಅಪಾಯಗಳಿಂದ ಆಕೆಯನ್ನು ಸಂರಕ್ಷಿಸಬೇಕು. ದೇವರ ವಾಕ್ಯದ ಈ ಬೋಧನೆಯನ್ನು ಪಾಲಿಸಲು ಇಚ್ಛಿಸದ ಒಬ್ಬ ಪುರುಷನು ಮದುವೆ ಮಾಡಿಕೊಳ್ಳದೇ ಇರುವುದು ಒಳ್ಳೆಯದು.
ಎಫೆಸದ ಪತ್ರಿಕೆಯ ಈ ಗ್ರಂಥಭಾಗದಲ್ಲಿ ಪ್ರಕಟವಾಗಿರುವ ದೇವರ ಉದ್ದೇಶ ಇದು: ಕ್ರೈಸ್ತ ವಿಶ್ವಾಸಿಗಳಾದ ಎಲ್ಲಾ ದಂಪತಿಗಳು ಯೇಸು ಕ್ರಿಸ್ತ ಮತ್ತು ಕ್ರೈಸ್ತಸಭೆಯ ನಡುವಿನ ಸಂಬಂಧವನ್ನು ನಿರೂಪಿಸುವ ಒಂದು ಚಿಕ್ಕ ಭಾವಚಿತ್ರದಂತೆ ಇರಬೇಕು.ಅವರ ಕುಟುಂಬ ಜೀವಿತವು ಈ ಮನೋಹರ ದೈವಿಕ ಸಂಬಂಧವನ್ನು ತೋರಿಸಿಕೊಡಬೇಕು.
ಎಫೆಸದ ಪತ್ರಿಕೆಯಲ್ಲಿ ಪತಿ-ಪತ್ನಿಯ ಸಂಬಂಧವನ್ನು ವಿವರಿಸುವ ವಚನಗಳನ್ನು ಬರೆಯುವುದಕ್ಕೆ ಮುಂಚೆ ಪೂರ್ವಭಾವಿಯಾಗಿ "ಪವಿತ್ರಾತ್ಮಭರಿತರಾಗಿರಿ"(ಎಫೆ. 5:19) ಎಂಬ ಆದೇಶವು ಬರೆಯಲ್ಪಟ್ಟಿರುವುದಕ್ಕೆ ಕಾರಣ, ಪವಿತ್ರಾತ್ಮನ ತುಂಬುವಿಕೆಯು ಪ್ರಾಥಮಿಕವಾಗಿ ಕುಟುಂಬ ಜೀವನದಲ್ಲಿ ಕ್ರಿಸ್ತನನ್ನು ಹೋಲುವ ನಡವಳಿಕೆಯನ್ನು ತರುತ್ತದೆ, ಎಂದು ಸೂಚಿಸುವುದಕ್ಕಾಗಿ ಇರಬೇಕು. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ವೈವಾಹಿಕ ಜೀವನದಲ್ಲಿ ನಾವು ದೇವರನ್ನು ಮಹಿಮೆ ಪಡಿಸುವುದಕ್ಕೆ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಅತ್ಯಾವಶ್ಯಕವಾಗಿದೆ, ಎಂಬ ಅರ್ಥವೂ ಇದರಲ್ಲಿದೆ ಎನ್ನಬಹುದು.
ಪ್ರತಿಯೊಬ್ಬ ಕ್ರೈಸ್ತನು ಜೀವನ ಸಂಗಾತಿಯನ್ನು ಹುಡುಕುವುದಕ್ಕೆ ಮೊದಲು, ಮೇಲೆ ವಿವರಿಸಲಾದ ಕುಟುಂಬದಂತಹ ಕುಟುಂಬವನ್ನು ತಾನು ನಿಜವಾಗಿ ಬಯಸುತ್ತೇನೋ, ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳಬೇಕು. ಇಂತಹ ಹಂಬಲ ಇಲ್ಲದಿರುವ ಒಬ್ಬ ವ್ಯಕ್ತಿಯು ವಿವಾಹದಲ್ಲಿ ದೇವರ ಮಾರ್ಗದರ್ಶನವನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಆದರೆ ಇದು ನಿಮ್ಮ ಜೀವನದ ನಿಜವಾದ ಹಂಬಲವಾಗಿದ್ದರೆ, ದೇವರು ನಿಮ್ಮನ್ನು ತನ್ನ ಪರಿಪೂರ್ಣ ಚಿತ್ತಾನುಸಾರವಾದ ವಿವಾಹಕ್ಕೆ ನಡೆಸುತ್ತಾರೆ ಮತ್ತು ಒಂದು ದೈವಿಕ ಕುಟುಂಬವನ್ನು ಕಟ್ಟುವಂತೆಯೂ ಸಹ ನಿಮ್ಮನ್ನು ಬಲಪಡಿಸುತ್ತಾರೆ, ಎಂಬ ಸಂಪೂರ್ಣ ವಿಶ್ವಾಸವನ್ನು ನೀವು ಇರಿಸಿಕೊಳ್ಳಬಹುದು.
ಸತ್ಯವೇದವು ವಿವಾಹಿತ ಜೀವನದ ವೈಭವದ ಕುರಿತಾಗಿ ಹೇಳುವುದರ ಜೊತೆಗೆ, ಅವಿವಾಹಿತ ಜೀವನವು ಉಪಯುಕ್ತವಾದದ್ದು ಎಂದೂ ಸಹ ತಿಳಿಸುತ್ತದೆ. ಮತ್ತು ಈ ಅಧ್ಯಾಯವನ್ನು ಮುಕ್ತಾಯಗೊಳಿಸುವ ಮೊದಲು, ಈ ಸ್ಥಿತಿಯ ಕುರಿತಾಗಿ ಒಂದು ಮಾತನ್ನು ಹೇಳುವುದು ಅವಶ್ಯವಾಗಿದೆ (ಇಲ್ಲವಾದಲ್ಲಿ ನಾವು ಸಮತೋಲನ ಇಲ್ಲದವರೆಂದು ಪರಿಗಣಿಸುವ ಸಾಧ್ಯತೆ ಇದೆ!).
1 ಕೊರಿ. 7ನೇ ಅಧ್ಯಾಯದಲ್ಲಿ ಅಪೊಸ್ತಲ ಪೌಲನು ಅವಿವಾಹಿತ ಜೀವನದ ಕುರಿತಾಗಿ ಹೇಳಿದ್ದಾನೆ. ಕೆಲವರು ಈ ಅಧ್ಯಾಯ ಮತ್ತು ಮತ್ತಾ. 19:12ರ ಕರ್ತನ ಹೇಳಿಕೆಯ ಅಧಾರದ ಮೇಲೆ, ಅವಿವಾಹಿತ ಸ್ಥಿತಿಯು ಹೆಚ್ಚು ಅಪೇಕ್ಷಣೀಯವಾದದ್ದು ಮತ್ತು ಅದು ವಿವಾಹಿತ ಜೀವನಕ್ಕಿಂತ ಹೆಚ್ಚು ಆತ್ಮಿಕವಾದ ಜೀವನ ವಿಧಾನವು, ಎಂದು ತೀರ್ಮಾನಿಸಿದ್ದಾರೆ. ಆದರೆ ಸತ್ಯವೇದವು ನಿಜವಾಗಿ ಹೀಗೆ ಬೋಧಿಸುತ್ತದೆಯೇ?
ನಾವು 1 ಕೊರಿ. 7ನೇ ಅಧ್ಯಾಯವನ್ನು ನೋಡಿಕೊಳ್ಳುವಾಗ, ಪೌಲನು ಈ ಅಧ್ಯಾಯದಲ್ಲಿ ನಾಲ್ಕು ಬಾರಿ ತಾನು ತನ್ನ ಸ್ವಂತ ಅಭಿಪ್ರಾಯವನ್ನು ನೀಡುತ್ತಿರುವುದಾಗಿಯೂ, ಮತ್ತು ಇಲ್ಲಿ ಉಲ್ಲೇಖಿಸಲಾದ ಕೆಲವು ಸಂಗತಿಗಳ ಕುರಿತಾಗಿ ಕರ್ತನ ಚಿತ್ತವೇನೆಂದು ತನಗೆ ನೇರವಾದ ಪ್ರಕಟನೆ ಇಲ್ಲವೆಂದೂ ಹೇಳುತ್ತಾನೆ (1 ಕೊರಿ. 7:6,12,25,40 ನೋಡಿರಿ). ಅದಲ್ಲದೆ ಇಲ್ಲಿ ಪೌಲನು, ಎಲ್ಲಾ ಮನುಷ್ಯರು ತನ್ನಂತೆಯೇ ಮದುವೆ ಮಾಡಿಕೊಳ್ಳದೇ ಇರಲೆಂದು ತಾನು ಇಷ್ಟಪಟ್ಟರೂ, ಪ್ರತಿಯೊಬ್ಬನು ದೇವರಿಂದ ವೈಯಕ್ತಿಕವಾದ ವರವನ್ನು ಹೊಂದುತ್ತಾನೆಂದು ತಾನು ತಿಳಿದಿದ್ದೇನೆ, ಎಂಬುದಾಗಿ ಸ್ಪಷ್ಟ ಪಡಿಸಿದ್ದಾನೆ (1 ಕೊರಿ. 7:7). ಒಂದು ಗಮನಾರ್ಹ ವಿಷಯವೆಂದರೆ, ಆತನು ಇಲ್ಲಿ "ವರ", ಎಂಬ ಪದವನ್ನು ಉಪಯೋಗಿಸುತ್ತಾನೆ, ಅದರ ಅರ್ಥವೇನೆಂದರೆ ಮದುವೆ ಮಾಡಿಕೊಳ್ಳದೇ ಇರುವುದರಲ್ಲಿ ಯಾವುದೇ ಉತ್ಕೃಷ್ಟತೆ ಅಥವಾ ಶ್ರೇಷ್ಠತೆಯಿಲ್ಲ. ಮದುವೆಯಿಲ್ಲದೆ ಇರುವುದು ಒಂದು ಸಾಧನೆ ಅಥವಾ ಪುರಸ್ಕಾರವಲ್ಲ, ಆದರೆ ಒಂದು ವರವಾಗಿದೆ. ಯೇಸುವು ಮತ್ತಾ. 19:11ರಲ್ಲಿ ಇದೇ ಪದವನ್ನು ಉಪಯೋಗಿಸಿಕೊಂಡು, ಕೆಲವರು ಮದುವೆ ಮಾಡಿಕೊಳ್ಳದೆ ಜೀವಿಸುವ "ವರವನ್ನು" ಹೊಂದುತ್ತಾರೆ ಎಂದು ಹೇಳಿದರು. ದೇವರಿಂದ ಈ ಸಾಮರ್ಥ್ಯವನ್ನು ಪಡಕೊಂಡವರು ಮಾತ್ರ ಇಂತಹ ಜೀವನವನ್ನು ಜೀವಿಸಬೇಕು, ಎಂದು ಅವರು ಇಲ್ಲಿ ಬಹಳ ಸ್ಪಷ್ಟವಾಗಿ ಹೇಳಿದರು (ಮತ್ತಾ. 19:12).
ಮದುವೆ ಮಾಡಿಕೊಳ್ಳದೆ ಇರುವುದು ಒಂದು ವಿಶೇಷ ಸದ್ಗುಣವಲ್ಲ. ಇದು ದೇವರು ಕೆಲವರಿಗೆ ಕೊಡುವಂತ ಜೀವನ ವಿಧಾನವಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಜನರಲ್ಲಿ ಬಹುತೇಕ ಮಂದಿ ಮದುವೆ ಮಾಡಿಕೊಳ್ಳಬೇಕೆಂದು ದೇವರ ಯೋಜನೆಯಾಗಿದೆ. ನೀವು ಮದುವೆ ಮಾಡಿಕೊಳ್ಳದೆ ಜೀವಿಸುವುದನ್ನು ದೇವರು ಬಯಸಿದರೆ, ಅದನ್ನು ಅವರು ನಿಮಗೆ ತಿಳಿಸುತ್ತಾರೆ. ದೇವರಿಂದ ಇಂತಹ ನಿಶ್ಚಿತ ಆದೇಶವು ವೈಯಕ್ತಿಕವಾಗಿ ನಿಮ್ಮ ಹೃದಯಕ್ಕೆ ಸಿಗದಿದ್ದಾಗ, ನೀವು ಮದುವೆ ಮಾಡಿಕೊಳ್ಳುವುದನ್ನು ದೇವರು ಬಯಸುತ್ತಾರೆಂದು ನೀವು ಅಂದುಕೊಳ್ಳಬೇಕು.
ಅವಿವಾಹಿತರಾಗಿ ಉಳಿಯಬೇಕು ಎಂಬ ಭಾವನೆಯನ್ನು ಹೊಂದಿರುವವರು, ತಾವು ಇಂತಹ ಜೀವನವನ್ನು ಆರಿಸಿಕೊಳ್ಳಲು ಕಾರಣವೇನೆಂದು ಪರೀಕ್ಷಿಸಿಕೊಳ್ಳಬೇಕು. ಮದುವೆ ಮಾಡಿಕೊಳ್ಳದ ಜೀವನವನ್ನು ಆರಿಸಿಕೊಳ್ಳುವುದಕ್ಕೆ ಕಾರಣ ಒಂಟಿಯಾಗಿ ಇರುವ ಸ್ವಾರ್ಥಪ್ರೇರಿತ ಇಚ್ಛೆ, ಅಥವಾ ತನ್ನ ಬಗ್ಗೆ ಮೇಲರಿಮೆ ಮತ್ತು ವಿರುದ್ಧ ಲಿಂಗದ ಬಗ್ಗೆ ಅಸಹ್ಯ ಭಾವನೆ, ಅಥವಾ "ಇಷ್ಟವಾದದ್ದು ಸಿಗಲಿಲ್ಲ ಮತ್ತು ಸಿಕ್ಕಿದ್ದು ಇಷ್ಟವಾಗಲಿಲ್ಲ" ಇವುಗಳಾಗಿದ್ದರೆ, ನಿಶ್ಚಯವಾಗಿ ಅದು ತಪ್ಪಾದ ಆಯ್ಕೆಯಾಗಿದೆ. ಇನ್ನೊಂದು ಪಕ್ಕದಲ್ಲಿ, ಒಬ್ಬ ವ್ಯಕ್ತಿ ಮದುವೆ ಮಾಡಿಕೊಳ್ಳದಿರಲು ಬಯಸುವುದು ಅಡೆತಡೆಗಳಿಲ್ಲದೆ ಸ್ವತಂತ್ರವಾಗಿ ಕರ್ತನ ಸೇವೆ ಮಾಡುವುದಕ್ಕಾಗಿ ಆಗಿದ್ದರೆ, ಆಗ ಕಡಿಮೆ ಪಕ್ಷ ಆ ಉದ್ದೇಶವು ಪರಿಶುದ್ಧವಾಗಿದೆ. ಹಾಗಿದ್ದರೂ ಇಂತಹ ಜೀವನಕ್ಕೆ ದೇವರಿಂದ ಕರೆ ಸಿಗಬೇಕು. ಅಪೊಸ್ತಲ ಪೌಲನ ಜೀವನದಲ್ಲಿ ಹಾಗೆ ಆಯಿತು (1 ಕೊರಿ. 7:32,33 ಮತ್ತು 1 ಕೊರಿ. 9:5ನ್ನು ಹೋಲಿಸಿ ನೋಡಿ).
ಮದುವೆ ಮಾಡಿಕೊಳ್ಳದಿರುವುದು ಪರಿಶುದ್ಧ ಜೀವನಕ್ಕೆ ಹೆಚ್ಚು ಅನುಕೂಲಕರ, ಎಂಬುದು ಒಂದು ಸಂಪೂರ್ಣ ತಪ್ಪಾದ ತಿಳುವಳಿಕೆಯಾಗಿದೆ. ಒಬ್ಬ ಅವಿವಾಹಿತ ವ್ಯಕ್ತಿಯ ಬಳಿ ಧಾರ್ಮಿಕ ಚಟುವಟಿಕೆಗೆ ಮದುವೆಯಾದವರಿಗಿಂತ ಹೆಚ್ಚು ಸಮಯ ಇರಬಹುದು, ಆದರೆ ಇಂತಹ ಚಟುವಟಿಕೆ ಪರಿಶುದ್ಧ ಜೀವನಕ್ಕೆ ಅವಶ್ಯವಾಗಿಲ್ಲ. "ಹನೋಕನು ದೇವರೊಂದಿಗೆ ಮುನ್ನೂರು ವರ್ಷ ನಡೆದನು (ಅನುದಿನದ ಅನ್ಯೋನ್ಯತೆಯನ್ನು ಹೊಂದಿದ್ದನು) ಮತ್ತು ಗಂಡು ಹೆಣ್ಣು ಮಕ್ಕಳನ್ನು ಪಡೆದನು" (ಆದಿ. 5:22). ಹನೋಕನಿಗೆ ಮದುವೆಯಾಗಿ ಮೊದಲ ಮಗನು ಹುಟ್ಟಿದ ನಂತರವೇ ಆತನು ದೇವರೊಂದಿಗೆ ನಡೆಯಲು ಆರಂಭಿಸಿದನು. ಅವನ ಸಾಮಾನ್ಯ ವೈವಾಹಿಕ ಜೀವನ ಮತ್ತು ಮಕ್ಕಳ ಜನನದಿಂದ ದೇವರೊಂದಿಗೆ ನಡೆಯುವುದಕ್ಕೆ ಅವನಿಗೆ ಅಡ್ಡಿಯಾಗಲಿಲ್ಲ. ಕೌಟುಂಬಿಕ ಜೀವನ ಮತ್ತು ಅದರ ಜವಾಬ್ದಾರಿಗಳು ಅವನು ದೇವರೊಂದಿಗೆ ನಡೆಯುವುದನ್ನು ತಡೆಯಲಿಲ್ಲ.
ಹಾಗಾಗಿ ಯಾವ ವಿಶ್ವಾಸಿಯೂ ಮದುವೆ ಮಾಡಿಕೊಳ್ಳಬಾರದು, ಎಂಬುದು ಅಪೊಸ್ತಲ ಪೌಲನ ಅಭಿಪ್ರಾಯ ಆಗಿದ್ದಿರಲಾರದು. ಸ್ವತಃ ಆತನೇ ಇನ್ನೊಂದು ಕಡೆ, ಮದುವೆಯಾಗಬಾರದು ಎಂಬ ನಿಯಮವನ್ನು ಸಾಮಾನ್ಯವಾಗಿ ಎಲ್ಲರಿಗೂ ಬೋಧಿಸುವ ಜನರು ನಿಜವಾಗಿ ದೆವ್ವಗಳ ಬೋಧನೆಯನ್ನು ಸಾರುತ್ತಿದ್ದಾರೆ, ಎಂದು ಹೇಳಿದ್ದಾನೆ (1 ತಿಮೊ. 4:1-3). ಹಾಗಾಗಿ ಪೌಲನು 1 ಕೊರಿ. 7:25-28ರಲ್ಲಿ ಹೇಳಿರುವ ಮಾತನ್ನು, ಆಗಿನ ಪರಿಸ್ಥಿತಿ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ಅದಕ್ಕೆ ಅನುಸಾರವಾಗಿ ನೋಡಬೇಕು.
ಎ.ಎನ್. ಟ್ರೈಟನ್ (A.N. Triton) ಎಂಬ ಆಂಗ್ಲ ಬರಹಗಾರರು ಕೊರಿಂಥದ ಪತ್ರಿಕೆಯ ಮೇಲಿನ ವಚನಗಳನ್ನು ಹೀಗೆ ಭಾವಾನುವಾದ ಮಾಡಿದ್ದಾರೆ: "ನಾನು ಇದನ್ನು ಒಂದು ನಿಯಮವನ್ನಾಗಿ ಗೊತ್ತು ಮಾಡುವುದಿಲ್ಲ, ಆದರೆ ಈ ಅಂಶಗಳನ್ನು ಗಮನಿಸಬೇಕು. ಈಗಿನ ಕಾಲಾವಧಿಯಲ್ಲಿ (ಕ್ರಿ. ಶ. 55ನೇ ಇಸವಿ) ನಾವು ಕಷ್ಟಕಾಲವನ್ನು ಹಾದು ಹೋಗುತ್ತಿದ್ದೇವೆ ಮತ್ತು ಮುಂದೆ ಹಿಂಸೆಯ ಸಮಯ ಬರಲಿದೆ. ಒಬ್ಬ ಗಂಡಸು ಅಥವಾ ಹೆಂಗಸನ್ನು ನೇರವಾಗಿ ಪೀಡಿಸಲು ಆಗದಿದ್ದರೆ, ಅವನನ್ನು ಅವನ ಕುಟುಂಬದ ಮೂಲಕ ಹಿಡಿಯಲು ಸಾಧ್ಯವಿದೆ, ಎಂಬುದು ಪ್ರತಿಯೊಬ್ಬ ಹಿಂಸಕನಿಗೂ ಗೊತ್ತಿದೆ. ಹಾಗಾಗಿ, ಮದುವೆಯಾಗಿರುವ ಜನರು ಅತಿ ಹೆಚ್ಚಿನ ಕಳವಳ ಮತ್ತು ಪೀಡೆಗೆ ಒಳಗಾಗಲಿದ್ದಾರೆ... ನಿಮಗೆ ಹೀಗಾಗದಿರಲಿ ಎಂದು ನನ್ನ ಹಾರೈಕೆಯಾಗಿದೆ, ಮತ್ತು ಆ ಕಾರಣದಿಂದಾಗಿ ಮದುವೆ ಮಾಡಿಕೊಳ್ಳದೆ ಇರುವುದು ಒಳ್ಳೆಯದೆಂದು ನಾನು ಸಲಹೆ ಮಾಡುತ್ತೇನೆ; ಆದರೆ ದಯವಿಟ್ಟು ಗಮನಿಸಿರಿ, ಮದುವೆಯು ಪಾಪಕರವೆಂದು ನಾನು ಹೇಳುತ್ತಿಲ್ಲ. ನಾನು ಇಷ್ಟು ಮಾತ್ರ ಹೇಳುತ್ತೇನೆ, ಈಗಿನ ಕಷ್ಟಕಾಲದ ನಿಮಿತ್ತ ಮದುವೆ ಮಾಡಿಕೊಂಡರೆ ತೊಂದರೆಯನ್ನು ಆಹ್ವಾನಿಸಿದಂತೆ ಆಗುತ್ತದೆ ಮತ್ತು ನಿಮಗೆ ಇದು ಆಗದಿರಲಿ, ಎಂದು ನನ್ನ ಅಪೇಕ್ಷೆಯಾಗಿದೆ".
ಇಂದಿನ ದಿನದಲ್ಲೂ, ತೀವ್ರವಾದ ಧಾರ್ಮಿಕ ಹಿಂಸಾಚಾರ, ಯುದ್ಧ ಅಥವಾ ಬೇರೆ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶಗಳಲ್ಲಿ ವಾಸಿಸುವ ವಿಶ್ವಾಸಿಗಳಿಗೆ ಮೇಲಿನ ಸಲಹೆಯು ಅನ್ವಯಿಸುತ್ತದೆ.
ಹೇಗಿದ್ದರೂ, ದೇವರು ನಮಗಾಗಿ ಉದ್ದೇಶಿಸದೇ ಇರುವಂತ ಸ್ಥಿತಿಗೆ ಹೋಗಲು ನಾವು ಪ್ರಯತ್ನಿಸುವುದು ಸರಿಯಲ್ಲ. ಅವರು ಮೊದಲೇ ನಮ್ಮಲ್ಲಿ ಪ್ರತಿಯೊಬ್ಬರಿಗೆ ಒಂದು ಜೀವನವನ್ನು ನಿಗದಿತ ಪಡಿಸಿದ್ದಾರೆ. ಅವಿವಾಹಿತರಾಗಿ ಇರುವುದು ಅಥವಾ ಮದುವೆಯಾಗುವುದು. ದೇವರ ಪರಿಪೂರ್ಣ ಚಿತ್ತವನ್ನು ಕಂಡುಕೊಳ್ಳುವುದು ಮತ್ತು ಅದರಂತೆ ನಡೆಯುವುದು ನಮ್ಮ ಕರ್ತವ್ಯವಾಗಿದೆ.
ದೇವರ ಪರಿಪೂರ್ಣ ಚಿತ್ತವನ್ನು ತಿಳಿದುಕೊಳ್ಳಲು ಪ್ರಯತ್ನಿಸುವಾಗ, ನಾವು ಒಂಟಿತನದ ಜೀವನದ ಕರೆಯನ್ನು - ಒಂದು ವೇಳೆ ದೇವರು ಅಂತಹ ಜೀವನಕ್ಕೆ ನಮ್ಮನ್ನು ಸ್ಪಷ್ಟವಾಗಿ ಕರೆದರೆ, ಅದನ್ನು ಸ್ವೀಕರಿಸಲು ಸಿದ್ಧರಾಗಿರುವುದು ಅವಶ್ಯವಾಗಿದೆ. ಅಂತಹ ಇಚ್ಛೆಯು ಇಲ್ಲದಿರುವುದು, ಯಾವುದೋ ವಿಷಯದಲ್ಲಿ ಕರ್ತನ ಚಿತ್ತವನ್ನು ಒಪ್ಪಿಕೊಳ್ಳದಿರುವ ಮನೋಭಾವವನ್ನು ತೋರಿಸುತ್ತದೆ, ಮತ್ತು ಇದರಿಂದಾಗಿ ನಾವು ನಮ್ಮ ಜೀವನಕ್ಕಾಗಿ ದೇವರ ಚಿತ್ತವನ್ನು ತಿಳಿಯಲು ಸಾಧ್ಯವಾಗುವುದಿಲ್ಲ.
ಅಪೊಸ್ತಲ ಪೌಲನು 1 ಕೊರಿ. 7:29-36ರಲ್ಲಿ ಹೇಳಿರುವ ಮಾತನ್ನು ಗಮನಿಸಿರಿ. ಈ ವಿಭಾಗವನ್ನು ಎ.ಎನ್. ಟ್ರೈಟನ್‌ರವರು ಮಾಡಿರುವ ಭಾವಾನುವಾದದಲ್ಲಿ ಓದಿಕೊಳ್ಳೋಣ:
"ಹೇಗಿದ್ದರೂ ಕ್ರೈಸ್ತ ಸೇವೆ ಮತ್ತು ಸುವಾರ್ತಾ ಪ್ರಸಾರಕ್ಕೆ ಸಿಗುವ ಕಾಲಾವಕಾಶವು ಚಿಕ್ಕದು ಮತ್ತು ಸೀಮಿತವಾದದ್ದು ಆಗಿದೆ. ನಾವು ಲೋಕದ ... ಮತ್ತು ಕುಟುಂಬದ ಹಿಡಿತವನ್ನು ಸಾಧ್ಯವಾದಷ್ಟು ಸಡಿಲಗೊಳಿಸಬೇಕು. ಇವೆಲ್ಲವೂ ತಾತ್ಕಾಲಿಕ ಮತ್ತು ಗತಿಸಿ ಹೋಗುವಂತವುಗಳು, ಅದಲ್ಲದೆ ನಿತ್ಯತ್ವಕ್ಕೂ ಅಮೂಲ್ಯವಾದ ಕೆಲಸ ಬಾಕಿ ಉಳಿದಿದೆ. ಆದರೆ ಮದುವೆಯಾದ ಜನರು ಅವರ ಮನೆಯ ಕರ್ತವ್ಯಗಳನ್ನು ಬದಿಗಿರಿಸಲು ಆಗುವುದಿಲ್ಲ ಮತ್ತು ಅವುಗಳಿಂದ ಎಷ್ಟು ತಡೆಯಾಗುತ್ತದೆಂದು ಮದುವೆ ಮಾಡಿಕೊಳ್ಳದವರಿಗೆ ಹೆಚ್ಚಾಗಿ ತಿಳಿಯುವುದಿಲ್ಲ. ನೀವು ಮದುವೆಯಾಗಿದ್ದರೆ ನಿಮಗೆ ಮನೆಯಲ್ಲಿ ಮಾಡಬೇಕಾದ ಮುಖ್ಯ ಕೆಲಸಗಳು ಇರುತ್ತವೆ ಮತ್ತು ಅವುಗಳನ್ನು ಮಾಡಲೇಬೇಕಾಗುತ್ತದೆ, ಹಾಗಾಗಿ ಕರ್ತನ ಕಾರ್ಯಗಳ ಕಡೆಗೆ ಮಾತ್ರ ಧ್ಯಾನ ಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ.
"ನೀವು ಇನ್ನೂ ಚಿಕ್ಕ ವಯಸ್ಸಿನವರು ಆಗಿರುವಾಗ, ಮದುವೆ ಮಾಡಿಕೊಳ್ಳದೇ ಇರುವುದಕ್ಕೆ ಇವು ಪ್ರಬಲ ಕಾರಣಗಳಾಗಿವೆ (ವಚನ 36). ಮದುವೆ ಮಾಡಿಕೊಳ್ಳದವರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭಿಸುವ ಕ್ರೈಸ್ತ ಸೇವಾಕಾರ್ಯದ ದೊಡ್ಡ ಸುಯೋಗದ ಬಗ್ಗೆ ಆಲೋಚಿಸಿರಿ. ನೀವು ಅತಿಯಾಗಿ ಕಾಲ ಮೀರಿ ಹೋಗದಂತೆ ಎಚ್ಚರವಾಗಿದ್ದು, ಸಾಧ್ಯವಾದಷ್ಟು ದಿನ ಮದುವೆಯನ್ನು ಮುಂದೆ ಹಾಕಿದರೆ (ವ. 36), ಆಗ ನಿಮಗೆ ಸೇವೆಯ ಕ್ಷೇತ್ರದಲ್ಲಿ ಬಹಳ ದೊಡ್ಡ ಅವಕಾಶಗಳು ತೆರೆದುಕೊಳ್ಳುತ್ತವೆ ...
"ಈಗ ದಯವಿಟ್ಟು ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿರಿ: ನಾನು ಇದೆಲ್ಲವನ್ನು ಹೇಳುತ್ತಿರುವುದು ನಿಮ್ಮ ಸ್ವಾತಂತ್ರ್ಯವನ್ನು ಮೊಟಕು ಮಾಡುವ ಉದ್ದೇಶದಿಂದ ಅಲ್ಲ (ವ. 35), ಆದರೆ ನಿಮಗೆ ನಿಮ್ಮ ಹಿತಕ್ಕೋಸ್ಕರ ಮಾರ್ಗದರ್ಶನ ಕೊಡುವುದಕ್ಕೆ; ಅದಲ್ಲದೆ ನಿಮ್ಮ ಪರಿಸ್ಥಿತಿ ಮತ್ತು ಮಾನಸಿಕ ಪ್ರವೃತ್ತಿ ನಿಮ್ಮನ್ನು ಇನ್ನೊಂದು ದಿಕ್ಕಿನಲ್ಲಿ ನಡೆಸಿದರೆ, ಮದುವೆ ಮಾಡಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಅದು ದೇವರು ಕೊಡುವ ಒಂದು ಉತ್ತಮ ವರವಾಗಿದೆ" (ವ. 36).
ಈ ರೀತಿಯಾಗಿ ಮದುವೆ ಮಾಡಿಕೊಳ್ಳದೇ ಇರುವುದು ದೇವರ ಒಂದು ವರವೆಂದು ಆರಂಭಿಸಿದ ಪೌಲನು, ಮದುವೆಯೂ ಸಹ ಒಂದು ದೈವಿಕ ವರವಾಗಿದೆ ಎಂದು ಕೊನೆಗೊಳಿಸುತ್ತಾನೆ. ಅವನು ಈ ಸಂಗತಿಗಳಲ್ಲಿ ಸಮತೋಲನವನ್ನು ಹೊಂದಿದ್ದನು.
ಇನ್ನೊಂದು ಗಮನಾರ್ಹ ವಿಷಯವೇನೆಂದರೆ, ಒಂಟಿತನದ ಬದುಕಿನ ವಿಷಯವಾಗಿ ಮಾತನಾಡಿದ ಕರ್ತರು, ಮಾತು ಮುಗಿಸಿದ ಕೂಡಲೆ ಚಿಕ್ಕ ಮಕ್ಕಳನ್ನು ಎತ್ತಿಕೊಂಡು, ಅವರ ಮೇಲೆ ಕೈಯಿಟ್ಟು ಅವರನ್ನು ಆಶೀರ್ವದಿಸಿದರು, ಮತ್ತು ಈ ರೀತಿಯಾಗಿ ವಿವಾಹಕ್ಕೆ ತಮ್ಮ ಒಪ್ಪಿಗೆಯನ್ನು ಸೂಚಿಸಿದರು(ಮತ್ತಾ. 19:10-15). ಇದು ದೇವರ ವಾಕ್ಯದಲ್ಲಿರುವ ಸಮತೋಲನವಾಗಿದೆ. ನಾವು ಇದೇ ಸಮತೋಲನದೊಂದಿಗೆ ಸತ್ಯವನ್ನು ನಿಭಾಯಿಸಬೇಕು.
ದೇವರು ನಿಜವಾಗಿ ಬಹಳ ಅಪರೂಪವಾಗಿ ಯಾರೋ ಒಬ್ಬ ಮನುಷ್ಯನಿಗೆ ಒಂಟಿಗನಾಗಿ ಇರುವ ಕರೆ ನೀಡುತ್ತಾರೆ. ಸ್ವತಃ ದೇವರೇ ಹೇಳಿರುವಂತೆ, ಒಂದು ರೀತಿಯಲ್ಲಿ, ಒಬ್ಬ ಮದುವೆಯಾದ ಮನುಷ್ಯನು ಮಾತ್ರವೇ ಸಂಪೂರ್ಣನಾಗುತ್ತಾನೆ. ಆದಿ. 2:18ವು ("ಬಾರ್ಕ್ಲೇ ಅನುವಾದ") ಈ ರೀತಿಯಾಗಿದೆ: "ದೇವರು ಹೀಗೆ ಹೇಳಿದರು, ’ಮನುಷ್ಯನು ಒಂಟಿಗನಾಗಿ ಇರುವುದು ಒಳ್ಳೇದಲ್ಲ; ನಾನು ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು ಮತ್ತು ಅವನನ್ನು ಸಂಪೂರ್ಣ ಗೊಳಿಸುವೆನು’".
ಇನ್ನೊಂದು ಮಹತ್ವದ ವಿಷಯವೆಂದರೆ, ಸತ್ಯವೇದವು ಮದುವೆಯೊಂದಿಗೆ ಆರಂಭವಾಗುತ್ತದೆ (ಆದಿ. 2:18-25) ಮತ್ತು ಮದುವೆಯೊಂದಿಗೆ ಅಂತ್ಯವಾಗುತ್ತದೆ (ಪ್ರಕ. 19:7-9;22:2-10), ಮತ್ತು ಯೇಸುವು ಮಾಡಿದ ಮೊದಲನೆಯ ಸೂಚಕಕಾರ್ಯವು ಒಂದು ಮದುವೆಯ ಸಂದರ್ಭದಲ್ಲಿ ಆಗಿತ್ತು (ಯೋಹಾ. 2:1-11).
ಹಾಗಾದರೆ, "ಮದುವೆಯ ಸಂಬಂಧವು ನಿಷ್ಕಳಂಕವಾಗಿರಲಿ - ಪ್ರಶಂಸಾರ್ಹ, ಅಮೂಲ್ಯ ಹಾಗೂ ಗೌರವಾನ್ವಿತ; ಅಂದರೆ, ಬಹಳ ಬೆಲೆಬಾಳುವಂಥದ್ದು ಮತ್ತು ಅತಿ ಪ್ರಿಯವಾದದ್ದು" (ಇಬ್ರಿ. 13:4).
ನಿಮಗೆ ಸರಿಹೊಂದುವ ಉತ್ತಮ ಜೀವನ-ಸಂಗಾತಿಯ ಬಳಿಗೆ ನಿಮ್ಮನ್ನು ನಡೆಸಲು ದೇವರಿಗೆ ಮಾತ್ರ ಸಾಧ್ಯವಿದೆ. ವಾಸ್ತವವಾಗಿ, ನೀವು ದೇವರ ಮಾತನ್ನು ಕೇಳುವಿರಾದರೆ ನಿಮ್ಮನ್ನು ನಡೆಸಲು ಅವರು ಉತ್ಸುಕರಾಗಿದ್ದಾರೆ.
ಸತ್ಯವೇದವು ನಮಗೆ ಬೋಧಿಸುವ ಹಾಗೆ, ದೇವರು ತಮ್ಮ ಎಲ್ಲಾ ಮಕ್ಕಳಿಗೂ ಒಂದು ನಿರ್ದಿಷ್ಟವಾದ ಯೋಜನೆಯನ್ನು ಇಟ್ಟಿದ್ದಾರೆ (ಎಫೆಸದವರಿಗೆ 2:10). ಇದು ನಿಜವಾದಲ್ಲಿ, ನೀವು ಕುಟುಂಬಸ್ಥರಾಗಿರಬೇಕೋ ಅಥವಾ ಅವಿವಾಹಿತರಾಗಿರಬೇಕೋ ಎಂಬುದನ್ನು ಅವರು ಈಗಾಗಲೇ ಯೋಜಿಸಿದ್ದಾರೆಂದು ನೀವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅವರು ನಿಮ್ಮ ವಿವಾಹವನ್ನು ಯೋಜಿಸಿದ್ದರೆ, ನೀವು ಯಾರನ್ನು ವಿವಾಹವಾಗತಕ್ಕದ್ದು ಎಂಬುದನ್ನು ಸಹ ಅವರು ಯೋಜಿಸಿದ್ದಾರೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೂ ದೇವರು ಯಾರನ್ನೂ ತನಗೆ ವಿಧೇಯರಾಗಬೇಕೆಂದು ಒತ್ತಾಯಿಸುವುದಿಲ್ಲ. ಹಾಗಾಗಿ ಒಬ್ಬ ವ್ಯಕ್ತಿಯು ಅವರ ಯೋಜನೆಯನ್ನು ತಿರಸ್ಕರಿಸಿ ಅಥವಾ ನಿರ್ಲಕ್ಷಿಸಿ, ದೇವರ ಚಿತ್ತಕ್ಕೆ ಹೊರತಾದ ವಿವಾಹ ಮಾಡಿಕೊಳ್ಳಬಹುದು.
ನಿಮ್ಮ ಆತ್ಮ ರಕ್ಷಣೆಯು ನಿಮ್ಮ ಜೀವನದ ಅತ್ಯಂತ ಪ್ರಮುಖ ವಿಷಯವಾಗಿದೆ. ಅದರ ನಂತರ ನೀವು ಜೀವನದಲ್ಲಿ ಮಾಡಬೇಕಾದ ಅತಿ ಮುಖ್ಯ ನಿರ್ಧಾರ - ನಿಮ್ಮ ಜೀವನ-ಸಂಗಾತಿಯ ಆಯ್ಕೆಯಾಗಿದೆ. ಈ ವಿಷಯದಲ್ಲಿ ನೀವು ತಪ್ಪು ಮಾಡಲು ಸಾಧ್ಯವಿಲ್ಲ-ಏಕೆಂದರೆ ಜೀವನದಲ್ಲಿ ಈ ವಿಷಯದಲ್ಲಿ ಮಾಡುವ ನಿರ್ಧಾರ ಮುಂದೆ ಎಂದಿಗೂ ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಉದ್ಯೋಗ ಅಥವಾ ವೃತ್ತಿಯ ಆಯ್ಕೆಯಲ್ಲಿ ನೀವು ತಪ್ಪು ಮಾಡಿದ್ದರೂ, ಅದನ್ನು ಸರಿಪಡಿಸುವ ಅವಕಾಶ ನಿಮಗೆ ಮುಂದೆ ಒದಗಬಹುದು; ಅದೇ ರೀತಿ ನೀವು ನಿಮ್ಮ ಜೀವನದ ಇತರ ಅನೇಕ ನಿರ್ಧಾರಗಳನ್ನು ಸರಿಪಡಿಸಲು ಸಾಧ್ಯವಾಗಬಹುದು. ಆದರೆ ನೀವು ದೇವರ ಚಿತ್ತಕ್ಕೆ ಹೊರತಾಗಿ ವಿವಾಹ ಮಾಡಿಕೊಂಡದ್ದಾದರೆ, ಆ ತಪ್ಪನ್ನು ನೀವು ತಿದ್ದಲು ಸಾಧ್ಯವೇ ಇಲ್ಲ; ಒಂದು ವೇಳೆ ಆ ತಪ್ಪಾದ ಆಯ್ಕೆಯನ್ನು ಸಾಧ್ಯವಾದಷ್ಟು ಉತ್ತಮ ಪಡಿಸಲು ಪ್ರಯತ್ನಿಸಬಹುದು. ದೇವರ ಚಿತ್ತವನ್ನು ತೊರೆದು ಮಾಡಿಕೊಂಡ ವಿವಾಹವು ಒಂದು ದುರಂತವೇ ಸರಿ.
ದೇವರ ಸಮಯಕ್ಕಾಗಿ ಕಾಯದೇ ಅಥವಾ ಅವರ ಚಿತ್ತವನ್ನು ತಿಳಿಯಲು ಪ್ರಯತ್ನಿಸದೇ ದುಡುಕುತನದಿಂದ ವಿವಾಹವಾದಂತ ಅನೇಕರು ಈಗ ಪುರುಸೊತ್ತಿನಲ್ಲಿ ವಿಷಾದ ಪಡುತ್ತಿದ್ದಾರೆ! ನಿಶ್ಚಯವಾಗಿ ಇಂತಹ ಉದಾಹರಣೆಗಳು ಯುವ ಜನಾಂಗಕ್ಕೆ ಈ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುನ್ನಡೆಯುವ ಮುನ್ಸೂಚನೆಯಾಗಿದೆ.
ದೇವರ ಚಿತ್ತಕ್ಕೆ ಹೊರತಾಗಿ ವಿವಾಹವಾಗುವುದಕ್ಕಿಂತ ಮದುವೆ ಮಾಡಿಕೊಳ್ಳದೆ ಇರುವುದು ಎಷ್ಟೋ ಉತ್ತಮವಾಗಿದೆ. ದೇವರ ಚಿತ್ತಕ್ಕೆ ಹೊರತಾಗಿ ವಿವಾಹವಾಗಿ, ಅನಂತರ ವಿಷಾದಿಸುವವರನ್ನು ದೇವರು ತನ್ನ ಕರುಣೆಯಿಂದ ಆಶೀರ್ವದಿಸುವುದಾದರೂ, ನಿಜವಾದ ಸಂತೋಷ ಹಾಗೂ ಆಶೀರ್ವಾದ ಅವರ ಪರಿಪೂರ್ಣ ಚಿತ್ತದ ಕೇಂದ್ರದಲ್ಲಿ ಇರುವುದರ ಪ್ರತಿಫಲವಾಗಿದೆ.
ದೇವರ ಮಹಿಮೆಗಾಗಿ ಮತ್ತು ನಮ್ಮ ಶ್ರೇಷ್ಠ ಒಳಿತಿಗಾಗಿ, ದೇವರು ನಮಗೋಸ್ಕರ ಆಯ್ಕೆಮಾಡಿರುವ ವ್ಯಕ್ತಿಯನ್ನು ನಾವು ಕಂಡುಕೊಂಡು ಅವನನ್ನೇ/ ಅವಳನ್ನೇ ವಿವಾಹವಾಗುವುದು ಅವಶ್ಯವಾಗಿದೆ. ದೇವರು ಆದಾಮನಿಗೆ ಒಬ್ಬ ಸಂಗಾತಿಯನ್ನು ಒದಗಿಸಲು ಬಯಸಿದಾಗ, ಅವರು ಹತ್ತು ಮಂದಿ ಸ್ತ್ರೀಯರನ್ನು ಉಂಟುಮಾಡಿ, ಆದಾಮನು ಹೆಚ್ಚು ಇಷ್ಟಪಟ್ಟ ಸ್ತ್ರೀಯನ್ನು ಆರಿಸಿಕೊಳ್ಳುವಂತೆ ಅವನಿಗೆ ಹೇಳಲಿಲ್ಲ. ದೇವರು ಒಬ್ಬ ಸ್ತ್ರೀಯನ್ನು ಮಾತ್ರ ಉಂಟುಮಾಡಿದರು ಮತ್ತು ಅವಳನ್ನು ಆದಾಮನಿಗೆ ಕೊಟ್ಟರು. ಈ ವಿಷಯದಲ್ಲಿ ಆದಾಮನಿಗೆ ಯಾವುದೇ ಆಯ್ಕೆಗೆ ಅವಕಾಶ ಇರಲಿಲ್ಲ. ಇದೇ ದೇವರು ತನ್ನ ವಿಧೇಯ ಮಕ್ಕಳಲ್ಲಿ ಪ್ರತಿಯೊಬ್ಬರಿಗೆ ಏಕೈಕ ವ್ಯಕ್ತಿಯನ್ನು ಮಾತ್ರ ಯೋಜಿಸಿದ್ದಾರೆ. ಈ ರೀತಿಯಾದ ಬೋಧನೆಯ ಇಂಗಿತವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು - ಇದು ಹೇಗೆಂದರೆ, ದೇವರ ಸಂಪೂರ್ಣ ಸಾರ್ವಭೌಮತ್ವದ ಸಿದ್ಧಾಂತಕ್ಕೆ ಮನುಷ್ಯನ ಆತ್ಮನಿರ್ಧಾರದ ಸಿದ್ಧಾಂತವನ್ನು ಜೊತೆಗೂಡಿಸುವುದು ಕೆಲವೊಮ್ಮೆ ಕಷ್ಟವಾಗುವ ಹಾಗೆ - ಆದರೂ ಇದು ಸತ್ಯವೇದದ ಬೋಧನೆಗೆ ಅನುಸಾರವಾಗಿದೆ. ದೇವರ ಯೋಜನೆಯನ್ನು ಅಂಗೀಕರಿಸಿದಾಗ ನಾವು ಕಂಡುಕೊಳ್ಳುವುದು ಏನೆಂದರೆ, ದೇವರು ನಮಗೋಸ್ಕರ ಆರಿಸಿರುವ ವ್ಯಕ್ತಿಯು - ಆದಾಮನಿಗೆ ಹವ್ವಳು ಹೇಗೋ ಹಾಗೆ - ನಿಜವಾಗಿಯೂ ಶ್ರೇಷ್ಠ ಆಯ್ಕೆಯಾಗಿರುತ್ತಾರೆ, ಮತ್ತು ಪ್ರತಿಯೊಂದು ವಿಷಯದಲ್ಲೂ ನಮಗೆ ಪೂರಕವಾಗಿ ಇರುವಂತೆ ದೇವರು ಅವಳನ್ನು/ ಅವನನ್ನು ಸಿದ್ಧ ಮಾಡಿರುತ್ತಾರೆ.
ಆದಾಮನ ಸೇವಕನು ಇಸಾಕನಿಗೆ ವಧುವನ್ನು ಹುಡುಕುವುದಕ್ಕೆ ಹೊರಟಾಗ ಈ ಸತ್ಯಾರ್ಥವನ್ನು ಅಂಗೀಕರಿಸಿದನು. ಹಾಗಾಗಿ ಆತನು, "ಕರ್ತನೇ, ಇಲ್ಲಿರುವಂತ ಕೆಲವು ಉತ್ತಮ ಹುಡುಗಿಯರ ಕಡೆಗೆ ನನ್ನನ್ನು ನಡೆಸಿ, ಅವರಲ್ಲಿ ಸೂಕ್ತವಾದವಳನ್ನು ಆಯ್ಕೆ ಮಾಡಿಕೊಳ್ಳಲು ನನಗೆ ಸಹಾಯ ಮಾಡಿ," ಎಂದು ಪ್ರಾರ್ಥಿಸಲಿಲ್ಲ. ಬದಲಾಗಿ, "ಕರ್ತನೇ, ನೀವು ಈಗಾಗಲೇ ಆಯ್ಕೆಮಾಡಿ ಇಸಾಕನ ಪತ್ನಿಯಾಗುವುದಕ್ಕೆ ನೇಮಿಸಿರುವ ಹುಡುಗಿಯ ಬಳಿಗೆ ನನ್ನನ್ನು ನಡೆಸು," ಎಂದು ಪ್ರಾರ್ಥಿಸಿದನು (ಆದಿಕಾಂಡ 24:14,44). ದೇವರು ಆತನ ಪ್ರಾರ್ಥನೆಗೆ ಉತ್ತರ ಕೊಟ್ಟಾಗ, ಆತನು ಯಥಾರ್ಥವಾಗಿ, "ಕರ್ತನು ನನ್ನನ್ನು ನಡೆಸಿದನು," ಎಂದು ಹೇಳಲು ಸಾಧ್ಯವಾಯಿತು (ಆದಿಕಾಂಡ 24:27). ಈ ಹೇಳಿಕೆ ಇತ್ತೀಚಿನ ದಿನಗಳಲ್ಲಿ ಕೆಲವರು ಸರಾಗವಾಗಿ ಉಪಯೋಗಿಸುವ ನುಡಿಗಟ್ಟಿನಂತೆ ಇರಲಿಲ್ಲ. ಇದು ನೂರಕ್ಕೆ ನೂರು ಶೇಕಡಾ ನಿಜವಾಗಿತ್ತು. ಪ್ರತಿಯೊಂದು ಕ್ರೈಸ್ತ ವಿವಾಹವು ಕರ್ತರಿಂದ ನಡೆಸಲ್ಪಟ್ಟದ್ದು - ಮತ್ತು ಕರ್ತರಿಂದ ಮಾತ್ರ - ಎಂಬ ನಿಶ್ಚಯದೊಂದಿಗೆ ನೆರವೇರಿದರೆ ಎಷ್ಟು ಚೆನ್ನ.
ದೇವರು ತಾನು ನಿಮಗಾಗಿ ಆರಿಸಿಕೊಂಡಿರುವ ವ್ಯಕ್ತಿಯ ಬಳಿಗೆ, ನಿಮ್ಮನ್ನು ನೇರವಾಗಿ ಅಥವಾ ಪೋಷಕರು ಮತ್ತು ಸ್ನೇಹಿತರ ಮೂಲಕ ಪರೋಕ್ಷವಾಗಿ ನಡೆಸಬಹುದು.
ಸತ್ಯವೇದದಲ್ಲಿ ನೋಡುವುದಾದರೆ, ದೇವರ ಸ್ಪಷ್ಟವಾದ ಮಾರ್ಗದರ್ಶನದಲ್ಲಿ ನಡೆದ ವಿವಾಹದ ಏಕೈಕ ನಿದರ್ಶನವನ್ನು ನಾವು ಅದರಲ್ಲಿ ಕಾಣುತ್ತೇವೆ - ನಾವು ಈಗಾಗಲೇ ನೋಡಿರುವಂತ ಇಸಾಕ ಮತ್ತು ರೆಬೆಕ್ಕಳ ವಿವಾಹದ ಪ್ರಸಂಗ. ಈ ವಿವಾಹವು ನೇರವಾಗಿ ಪೋಷಕರಿಂದ ನೆರವೇರಲಿಲ್ಲ - ಏಕೆಂದರೆ ಅಬ್ರಹಾಮನು ರೆಬೆಕ್ಕಳನ್ನು ನೋಡಿರಲೇ ಇಲ್ಲ, ಮತ್ತು ಆಕೆಯ ಬಗ್ಗೆ ಆತನ ಸೇವಕನಿಗೂ ಏನೂ ತಿಳಿದಿರಲಿಲ್ಲ. ಅದು ಹುಡುಗ ಮತ್ತು ಹುಡುಗಿ ತಾವಾಗಿಯೇ ಮಾಡಿಕೊಂಡಂತ ವಿವಾಹವೂ ಆಗಿರಲಿಲ್ಲ - ಏಕೆಂದರೆ ಇಸಾಕ ಮತ್ತು ರೆಬೆಕ್ಕರು ಹಿಂದೆಂದೂ ಒಬ್ಬರನ್ನೊಬ್ಬರು ಭೇಟಿಯಾಗಿರಲಿಲ್ಲ. ಅದು ದೇವರು ನಡೆಸಿದ ವಿವಾಹವಾಗಿತ್ತು.
ಈ ನಿರೂಪಣೆಯು ನಮಗೆ ಕಲಿಸುವ ಮಹತ್ವದ ಪಾಠವೇನೆಂದರೆ, ದೇವರು ತನ್ನ ಇಬ್ಬರು ಮಕ್ಕಳನ್ನು ಪರಸ್ಪರ ಕೂಡಿಸುವ ವಿಧಾನ ಏನೆಂಬುದು ಮುಖ್ಯವಲ್ಲ, ಆದರೆ ಮುಖ್ಯವಾದದ್ದು ಅವರಿಬ್ಬರನ್ನು ಕೂಡಿಸುವಾತನು ಆತನೇ ಆಗಿದ್ದಾನೆ ಎಂಬುದು. ನಾವು ಒಬ್ಬ ವ್ಯಕ್ತಿಯ ಬಳಿಗೆ ನಮ್ಮ ಪೋಷಕರ ಮೂಲಕವೋ ಅಥವಾ ನಮ್ಮ ಸ್ನೇಹಿತರ ಮೂಲಕವೋ ಅಥವಾ ನಾವು ನಾವಾಗಿಯೇ ಬಂದಿರಬಹುದು; ಇಲ್ಲಿ ಮುಖ್ಯವಾದ ಅಂಶವೇನೆಂದರೆ, ಆ ವ್ಯಕ್ತಿಯು ನಿಜವಾಗಿ ದೇವರು ನಮಗಾಗಿ ಆರಿಸಿದಂತವರು ಆಗಿದ್ದಾರೆಂದು ದೃಢಪಡಿಸಿಕೊಳ್ಳುವುದೇ ಆಗಿದೆ.
ಅನೇಕ ಯೌವನಸ್ಥರಿಗೆ ಇರುವ ಚಿಂತೆ ಏನೆಂದರೆ, ಸಂಸ್ಕೃತಿ ಹಾಗೂ ಇತರ ಸಂಪ್ರದಾಯಗಳಿಂದ ಅನೇಕ ತರದ ಅಡೆತಡೆಗಳು ಬರುತ್ತವೆ (ಇದರಿಂದ ತಾವು ಜೀವನ-ಸಂಗಾತಿಯನ್ನು ಕಂಡುಕೊಳ್ಳುವುದಕ್ಕೆ ತಡೆಯಾಗಿದೆ, ಎಂಬುದು ಅವರ ಭಾವನೆಯಾಗಿದೆ) ಮತ್ತು ಅವರು ಈ ಯೋಚನೆಯಲ್ಲಿ ಎಷ್ಟು ಮಗ್ನರಾಗಿದ್ದಾರೆ ಎಂದರೆ, ಇವೆಲ್ಲಾ ಸವಾಲುಗಳಿಗಿಂತ ದೇವರು ದೊಡ್ಡವರು, ಎಂಬುದನ್ನು ಅವರು ಮರೆತು ಬಿಡುತ್ತಾರೆ. ಬೇರೆ ಕೆಲವರಲ್ಲಿ, ತಮ್ಮ ಸಮಸ್ಯೆಗಳ ಬಗ್ಗೆ ದೇವರಿಗೆ ಕಾಳಜಿಯೇ ಇಲ್ಲವೆಂಬ ಗುಪ್ತವಾದ ಭಯವಿದೆ. ಬಹುಶಃ ಅವರು ಇದನ್ನು ಈ ಪದಗಳಲ್ಲಿ ವ್ಯಕ್ತಪಡಿಸದೇ ಇರಬಹುದು, ಆದರೆ ಅವರ ವರ್ತನೆಯು ಇದನ್ನು ಬಹಿರಂಗಪಡಿಸುತ್ತದೆ.
ಹೀಗೆ ಚಿಂತೆಗೆ ಒಳಗಾಗಿರುವ ಎಲ್ಲರಿಗೂ ಪ್ರೋತ್ಸಾಹಿಸುವಂತಹ ಒಂದು ಸಂದೇಶವನ್ನು ನಾನು ತಂದಿದ್ದೇನೆ - "ಆತನು ನಿಮಗೋಸ್ಕರ ಚಿಂತಿಸುತ್ತಾನೆ ... ನಿಮ್ಮ ಅವಶ್ಯಕತೆಗಳ ಕುರಿತಾಗಿ ಅವರಿಗೆ ಕಾಳಜಿ ಇದೆ" (1 ಪೇತ್ರ 5:7).
ಇದನ್ನು ನೆನಪಿಟ್ಟುಕೊಳ್ಳಿರಿ. ದೇವರು ಆದಾಮನಿಗೆ ಒಬ್ಬ ಹೆಂಡತಿ ಅಗತ್ಯವೆಂದು ನೋಡಿ ತಾನೇ ಆಕೆಯನ್ನು ಆತನಿಗೆ ಒದಗಿಸಿಕೊಟ್ಟರು (ಆದಿಕಾಂಡ 2:18). ಆದಾಮನು ದೇವರ ಬಳಿಗೆ ಹೋಗಿ ತನಗೆ ಒಬ್ಬ ಹೆಂಡತಿ ಬೇಕೆಂದು ಬೇಡಲಿಲ್ಲ. ದೇವರು ಆದಾಮನ ಅವಶ್ಯಕತೆಯ ಬಗ್ಗೆ ಕಾಳಜಿಯನ್ನು ಹೊಂದಿದ್ದರು, ಮತ್ತು ಅವರು ನಿಮ್ಮ ಅವಶ್ಯಕತೆಯ ಬಗ್ಗೆಯೂ ಕಾಳಜಿ ಹೊಂದಿದ್ದಾರೆ.
ಹಾಗಾಗಿ ದೇವರಲ್ಲಿ ಭರವಸವಿಟ್ಟು ಅವರು ನಿನ್ನನ್ನು ಮುನ್ನಡೆಸಲು ಶಾಂತಚಿತ್ತದಿಂದ ಕಾದಿರು. ತಳಮಳಗೊಳ್ಳುವುದು ಮತ್ತು ಕಂಗೆಡುವುದರಿಂದ ಏನೂ ಸಾಧಿಸಲಾಗದು. ದೇವರು ಆದಾಮನಿಗೆ ಗಾಢನಿದ್ರೆ ಬರಮಾಡಿ ಅವನ ಬಳಿಗೆ ಹವ್ವಳನ್ನು ಕರೆತಂದು, ಅನಂತರ ಅವನನ್ನು ನಿದ್ರೆಯಿಂದ ಎಬ್ಬಿಸಿದ್ದರಲ್ಲಿ ಒಂದು ಸುಂದರವಾದ ಚಿತ್ರಣವಿದೆ (ಆದಿಕಾಂಡ 2:21,22). ನಿದ್ರೆಯು ವಿಶ್ರಾಂತಿಯನ್ನು ಸೂಚಿಸುತ್ತದೆ; ನಾವು ವಿಶ್ರಾಂತಿಯಲ್ಲಿ ಇದ್ದುಕೊಂಡು - ದೇವರಲ್ಲಿ ವಿಶ್ರಮಿಸುತ್ತಾ - ಅವರು ಖುದ್ದಾಗಿ ಆರಿಸಿದ ಸಂಗಾತಿಯನ್ನು ನಮ್ಮ ಬಳಿಗೆ ಕರೆತರುವ ಸಮಯಕ್ಕಾಗಿ ಕಾಯಬೇಕೆಂದು ದೇವರು ಬಯಸುತ್ತಾರೆ. ಇದರ ಅರ್ಥ ನಾವು ಏನನ್ನೂ ಮಾಡದೇ ತಟಸ್ಥರಾಗಿ ಇರಬೇಕೆಂದು ಅಲ್ಲ, ಏಕೆಂದರೆ ನಾನು ಇಲ್ಲಿ ಪ್ರಸ್ತಾಪಿಸುತ್ತಿರುವ ವಿಶ್ರಾಂತಿಯು ಮೇಲ್ನೋಟಕ್ಕೆ ಕಾಣಿಸುವ ದೈಹಿಕವಾದದ್ದು ಅಲ್ಲ, ಆದರೆ ಅಂತರಂಗದ ಆತ್ಮಿಕ ವಿಶ್ರಾಂತಿಯಾಗಿದೆ.
ನಾವು ಈ ವಿಶ್ರಾಂತಿಯನ್ನು ಹೇಗೆ ಹೊಂದಬಹುದು? ಅದು ದೇವರ ಚಿತ್ತವನ್ನು ಮಾಡುವುದರ ಮೂಲಕ ಮಾತ್ರವೇ. ಯೇಸುವು ಹೇಳಿದರು, "ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ - ಅಂದರೆ, ನಿಮ್ಮ ಜೀವನದಲ್ಲಿ ನನ್ನ ಚಿತ್ತವನ್ನು ಮಾಡಿರಿ - ಹಾಗೆ ಮಾಡಿದಾಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು" (ಮತ್ತಾಯನು 11:29).
ಓಕಸ್ ಎಂಬ ಊರಿಗೆ ಸೇವೆಗಾಗಿ ಹೋಗಿದ್ದ (ಓಕಸ್ ಎಂಬುದು ದಕ್ಷಿಣ ಅಮೇರಿಕದ ಇಕ್ವೆಡೋರ್ ದೇಶದಲ್ಲಿದೆ) ಜಿಮ್ ಎಲಿಯಟ್ ಎಂಬ ಧರ್ಮ ಪ್ರಚಾರಕನು ಹೇಳಿದಂತೆ, ನಾವು "ದೇವರ ಚಿತ್ತದಲ್ಲಿ ನಿದ್ರಿಸುವುದು" ಹೇಗೆಂಬುದನ್ನು ಕಲಿಯಬೇಕು. ನಾವು ಅದನ್ನು ಕಲಿತರೆ, ದೇವರು ತನ್ನ ಸೂಕ್ತ ಸಮಯದಲ್ಲಿ ನಮಗೆ ಸರಿಹೊಂದುವ ವ್ಯಕ್ತಿಯ ಬಳಿಗೆ ನಮ್ಮನ್ನು ಖಂಡಿತವಾಗಿ ನಡೆಸುತ್ತಾರೆ. ನಾವು ಜೀವನದ ಇತರ ಎಲ್ಲಾ ಕ್ಷೇತ್ರಗಳಲ್ಲಿ ದೇವರ ಚಿತ್ತವನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ, ಸಂಗಾತಿಯ ಆಯ್ಕೆಯ ವಿಷಯದಲ್ಲಿ ಅವರ ಚಿತ್ತವನ್ನು ಕಳೆದುಕೊಳ್ಳುವ ಬಗ್ಗೆ ಆತಂಕ ಪಡಬೇಕಿಲ್ಲ ಅಥವಾ ಚಿಂತಿಸಬೇಕಿಲ್ಲ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲಾ ಯೌವನಸ್ಥರು ಓದಲೇ ಬೇಕಾದ ಮೂರು ಅತ್ಯುತ್ತಮ ಪುಸ್ತಕಗಳು ಯಾವುವೆಂದರೆ, ಶ್ರೀಮತಿ ಹೋವರ್ಡ್ ಟೈಲರ್‌ರವರು ಬರೆದಿರುವ 'The Triumph of John & Betty Stam', ಎಲಿಸಬೆತ್ ಎಲಿಯೆಟ್ರರವರು ಬರೆದಿರುವ 'Shadow of the Almighty', ಮತ್ತು ಜೆ.ಸಿ. ಪೊಲ್ಲಾಕ್ರTವರು ಬರೆದಿರುವ 'Hudson Taylor and Maria'.
ನಾವು ದೇವರನ್ನು ನಂಬಲು ಸಿದ್ಧರಿರಬೇಕು. ಸತ್ಯವೇದವು ಹೀಗೆ ಹೇಳುತ್ತದೆ, "ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ; ದೇವರ ಬಳಿಗೆ ಬರುವವನು (ಅವಶ್ಯವಾಗಿ) ... ಅವರು ತನ್ನನ್ನು ಮನಃಪೂರ್ವಕವಾಗಿ ಮತ್ತು ಪರಿಶ್ರಮದಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾರೆಂದು ನಂಬಬೇಕು"
(ಇಬ್ರಿಯರಿಗೆ 11:6)''.ಅವರ ಸಂಪೂರ್ಣ ಚಿತ್ತವನ್ನು ಪೂರೈಸಲು ಮನಃಪೂರ್ವಕವಾಗಿ ನೀವು ಬಯಸುವುದಾದರೆ, ಅವರು ನಿಸ್ಸಂದೇಹವಾಗಿ ತಾನು ಆರಿಸಿರುವಂತ ವ್ಯಕ್ತಿಯನ್ನು ನಿಮ್ಮ ಬಳಿಗೆ ಕರೆತರುತ್ತಾರೆ. ಅದು ಯಾವುದೇ ರೀತಿಯಲ್ಲಿ ಈಡೇರಬಹುದು - ಪೋಷಕರ ಮೂಲಕ, ಸ್ನೇಹಿತರ ಮೂಲಕ ಅಥವಾ ನೇರವಾಗಿ. ಯಾವ ವಿಧಾನ ಎಂಬುದನ್ನು ಅವರಿಗೆ ಬಿಟ್ಟುಬಿಡಿ. ಅವರು ತಾನು ನೇಮಿಸಿರುವ ಸಮಯದಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುವರು (ಕೀರ್ತನೆಗಳು 37:4).
ದೇವರು ನಿಮ್ಮನ್ನು ಆ ಸೂಕ್ತ ವ್ಯಕ್ತಿಯ ಬಳಿಗೆ ನಿಮ್ಮ ಸ್ಥಳೀಯ ಸಭೆಯಲ್ಲಿ ಇಲ್ಲವೇ ನಿಮ್ಮ ಕ್ರೈಸ್ತ ಅನ್ಯೋನ್ಯತಾ ಕೂಟದಲ್ಲಿ ನಡೆಸಬಹುದು, ಅಥವಾ ಇಂತಹ ಮತ್ತೊಂದು ಐಕ್ಯತಾ ಕೂಟದಲ್ಲಿ ನಡೆಸಬಹುದು. ಒಂದು ಕ್ರೈಸ್ತ ಅನ್ಯೋನ್ಯತಾ ಕೂಟದಲ್ಲಿ ನೀವು ಭೇಟಿಯಾದ ಒಬ್ಬ ಹುಡುಗ/ ಹುಡುಗಿಯ ಕಡೆಗೆ ನೀವು ಆಕರ್ಷಿತರಾದರೆ, ಅವರನ್ನು ನಿಮ್ಮ ಸಂಭವನೀಯ ಜೀವನ ಸಂಗಾತಿಯಾಗಿ ಪರಿಗಣಿಸಿ ನೋಡುವುದರಲ್ಲಿ ತಪ್ಪೇನಿಲ್ಲ. ನೀವಿಬ್ಬರು ಹಾಗೆ ಭೇಟಿಯಾಗುವ ಸನ್ನಿವೇಶವನ್ನು ದೇವರೇ ವ್ಯವಸ್ಥೆ ಮಾಡಿರಬಹುದು. ಅನೇಕರಿಗೆ ಪ್ರೇಮ ಮತ್ತು ಲೈಂಗಿಕತೆಯ ಬಗ್ಗೆ ವಿಕೃತ ಮನೋಭಾವ ಇರುವುದರಿಂದ, ಅವರ ಪ್ರಕಾರ ಜೀವನ ಸಂಗಾತಿಯನ್ನು ಕಂಡುಕೊಳ್ಳುವಂತ "ಅಪವಿತ್ರ" ಕಾರ್ಯವು ಒಂದು ಪವಿತ್ರ ಸಭೆಯಾಗಿ ಕೂಡಿಬರುವಾಗ ನಡೆಯುವುದು ಹೇಗೆ ಸಾಧ್ಯ! ಆದರೆ ನಿಶ್ಚಯವಾಗಿ ನಿಮ್ಮ ಜೀವನ ಸಂಗಾತಿಯನ್ನು ಕಂಡುಕೊಳ್ಳುವುದರಲ್ಲಿ ಅಪವಿತ್ರತೆ ಎಂಬುದು ಏನೂ ಇಲ್ಲ. ಇದು ದೇವರ ಮುಂದೆ ಒಂದು ಪವಿತ್ರವಾದ ಕಾರ್ಯವಾಗಿದೆ. ನಿಮ್ಮ ಹೃದಯವು ಶುದ್ಧವಾಗಿದ್ದು, ನಿಮ್ಮ ನಡೆ-ನುಡಿಗಳು ಒಬ್ಬ ನೈಜ ಕ್ರೈಸ್ತನಿಗೆ ಸರಿಹೊಂದುವಂಥದ್ದು ಆಗಿದ್ದರೆ, ನೀವು ಇತರರ ಹೇಳಿಕೆಗಳಿಗೆ ಭಯಪಡಬೇಕಾಗಿಲ್ಲ.
ನಾನು ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೆ ಕಾರಣ, ನಾನು ನೋಡಿರುವ ಕೆಲವು ಪ್ರಕರಣಗಳಲ್ಲಿ, ಕೆಲವು ವಿಶ್ವಾಸಿಗಳು ತಾವು ಸಂಪರ್ಕದಲ್ಲಿದ್ದ ಸಭೆಯಲ್ಲೇ ತಮ್ಮ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ಇಚ್ಛಿಸದೇ (ಇತರರು ಏನು ಹೇಳುತ್ತಾರೋ ಎಂಬ ಭಯದಿಂದ), ಹೆಸರಿಗೆ ಮಾತ್ರ ಕ್ರೈಸ್ತರಾಗಿದ್ದ ಅವರ ಪೋಷಕರು ಪಕ್ಕಾ ಅವಿಶ್ವಾಸಿಗಳೊಂದಿಗೆ ಮದುವೆಯ ಪ್ರಸ್ತಾಪವನ್ನು ತಂದಾಗ, ಅದಕ್ಕೆ ಒಪ್ಪಿಕೊಂಡು ದುರಂತದ ಅಂತ್ಯವನ್ನು ಕಂಡಿದ್ದಾರೆ. ಮನುಷ್ಯರ ಭಯವು ಸೈತಾನನು ಗುಪ್ತವಾಗಿ ಅಡಗಿಸಿಟ್ಟ ಬಲೆಗೆ ಅವರು ಬೀಳಲು ಕಾರಣವಾಯಿತು (ಜ್ಞಾನೋಕ್ತಿಗಳು 29:25), ಮತ್ತು ಅದರ ಫಲವಾಗಿ, ದೇವರು ಮತ್ತು ಕ್ರೈಸ್ತಸಭೆಯು ಹೊಂದಬಹುದಾಗಿದ್ದ ಅನೇಕ ಕ್ರೈಸ್ತ ಕುಟುಂಬಗಳು ಕಳೆದುಹೋಗಿವೆ.
ಕೆಲ ವಿಶ್ವಾಸಿಗಳು ಇರುವಂತ ಪರಿಸ್ಥಿತಿಗಳಲ್ಲಿ ಅವರಿಗೆ ಬೇರೆ ಹೊಸದಾಗಿ ಹುಟ್ಟಿರುವ ವಿಶ್ವಾಸಿಗಳೊಡನೆ ಬೆರೆಯಲು ಕಡಿಮೆ ಅವಕಾಶ (ಅಥವಾ ಅವಕಾಶ ಇಲ್ಲದೆಯೂ) ಇರಬಹುದು, ಅಥವಾ ಅವರ ಅನ್ಯೋನ್ಯತೆಯು ಚಿಕ್ಕದಾಗಿರಬಹುದು. ಇತರ ಕೆಲವರಿಗೆ ಆರೋಗ್ಯದ ಸಮಸ್ಯೆ, ಕುಟುಂಬದ ಹಿನ್ನೆಲೆ, ಕುಟುಂಬದಲ್ಲಿನ ದುರದೃಷ್ಟಕರ ಪರಿಸ್ಥಿತಿ ಅಥವಾ ಸಂಪ್ರದಾಯದ ಕಟ್ಟುಪಾಡುಗಳು ಇಂತಹ ಸಂಗತಿಗಳಿಂದ ಸಮಸ್ಯೆ ಉಂಟಾಗಬಹುದು. ಅವರು ಬಹುಶಃ ತಾನು ಸೂಕ್ತ ಸಂಗಾತಿಯನ್ನು ಕಂಡುಕೊಳ್ಳಲು ಹೇಗೆ ಸಾಧ್ಯವೆಂದು ಸಂದೇಹ ಪಡಬಹುದು. ಈಗಾಗಲೇ ಅನೇಕರು ಎಲ್ಲಾ ನಿರೀಕ್ಷೆಯನ್ನು ಬಿಟ್ಟು ಕೈ ಚೆಲ್ಲಿ ಕುಳಿತು, ತಮ್ಮ ಪೋಷಕರು ತೋರಿಸಿದ ಅವಿಶ್ವಾಸಿಗಳನ್ನು ವಿವಾಹವಾಗಿದ್ದಾರೆ. ಯಾವುದೇ ವಿಶ್ವಾಸಿಯ ಜೀವಿತದಲ್ಲಿ ಈ ರೀತಿಯ ಎಲ್ಲಾ ಆಲೋಚನೆಗಳಿಗೆ ಸಮಗ್ರ ಕಾರಣ ಅವರಲ್ಲಿ ನಂಬಿಕೆಯ ಕೊರತೆಯೇ ಆಗಿದೆ. ದೇವರಿಗೆ ಅಸಾಧ್ಯವಾದಂತ ಕಾರ್ಯ ಯಾವುದಾದರೂ ಇದೆಯೇ? ಆತನಿಗೆ ನಮ್ಮ ಪ್ರತಿಯೊಬ್ಬರ ವಿಷಯದಲ್ಲಿ ಕಾಳಜಿ ಇದೆಯಲ್ಲವೇ? ನಿಮ್ಮ ಪರಿಸ್ಥಿತಿ ನಿಮಗೆ ಅಸಾಧ್ಯವೆಂದು ತೋರಬಹುದು, ಆದರೆ ಮನುಷ್ಯರಿಗೆ ಅಸಾಧ್ಯವಾದದ್ದನ್ನು ಸಾಧಿಸುವುದರಲ್ಲಿ ದೇವರು ಪರಿಣತರೆಂದು ಮರೆಯಬೇಡಿ. ಆತನಲ್ಲಿ ವಿಶ್ವಾಸವಿಡಿ, ಆಗ "ನೀವು ನಂಬಿದಂತೆ ನಿಮಗೆ ಆಗುತ್ತದೆ," ಎಂದು ನೀವು ಕಂಡುಕೊಳ್ಳುತ್ತೀರಿ (ಮತ್ತಾಯನು 9:29). ನಿಮ್ಮ ಹೃದಯದಲ್ಲಿ ನೀವು ಅವರಿಗೆ ಯಥಾರ್ಥರಾಗಿದ್ದು, ದೇವರ ವಾಕ್ಯದಲ್ಲಿನ ಮೂಲತತ್ವಗಳನ್ನು ನೀವು ಪಾಲಿಸುವುದಾದರೆ, ನಿಮ್ಮ ಪರವಾಗಿ ದೇವರ ಕಣ್ಣುಗಳು "ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ಪ್ರಸರಿಸುತ್ತವೆ," ಎಂದು ನೀವು ಕಂಡುಕೊಳ್ಳುತ್ತೀರಿ (2ಪೂರ್ವಕಾಲವೃತ್ತಾಂತ 16:9).
ಸಂಪ್ರದಾಯಗಳ ನಿಮಿತ್ತವಾದ ಅಡೆತಡೆಗಳು, ಪೋಷಕರ ಆಕ್ಷೇಪಗಳು, ಸನ್ನಿವೇಶಗಳಿಂದಾದ ತೊಡಕುಗಳು ಮತ್ತು ಈ ರೀತಿಯ ಇತರ ಸಾವಿರಾರು ಅಡಚಣೆಗಳು ನಮ್ಮ ಅದ್ಭುತ-ಸ್ವರೂಪನಾದ ದೇವರಿಗೆ ಸಮಸ್ಯೆಯೇ ಅಲ್ಲ. ನನಗೆ ಪರಿಚಯವಿರುವ ಒಬ್ಬ ಹುಡುಗಿ ರಕ್ಷಣೆ ಹೊಂದಿದ ಮೇಲೆ ತನ್ನ ತಂದೆ-ತಾಯಿಯರಿಂದ ಸಂಬಂಧವನ್ನು ಕಳೆದುಕೊಂಡಿದ್ದಳು, ಮತ್ತು ಆಕೆಗಾಗಿ ವಿವಾಹ ಪ್ರಸ್ತಾಪ ಹಾಗೂ ಮಾತುಕತೆ ಮಾಡಲು ಯಾರೂ ಇರಲಿಲ್ಲ. ಹೀಗಿದ್ದರೂ ದೇವರು ಆಕೆಗೆ ಆಶ್ಚರ್ಯಕರವಾಗಿ ಒಬ್ಬ ವಿಶ್ವಾಸಿಯನ್ನು ಸಂಗಾತಿಯಾಗಿ ಒದಗಿಸಿದರು ಮತ್ತು ಹುಡುಗನ ತಂದೆ-ತಾಯಿಯರು ಸಹ ಆಕೆಯ ಸನ್ನಿವೇಶಗಳ ಬಗ್ಗೆ ತಿಳಿದಿದ್ದರೂ ಯಾವುದೇ ಹಿಂಜರಿಕೆಯಿಲ್ಲದೆ ಆ ವಿವಾಹವನ್ನು ಒಪ್ಪಿಕೊಂಡರು. ಎಲ್ಲಾ ರೀತಿಯ ಸನ್ನಿವೇಶಗಳು ದೇವರ ಹತೋಟಿಯಲ್ಲಿವೆ ಮತ್ತು ಅವರೇ ನಮ್ಮ ತಂದೆಯಾಗಿದ್ದರೆ, ನಾವು ಅವರನ್ನು ರೊಟ್ಟಿ ಬೇಕೆಂದು ಕೇಳಿದಾಗ ಅವರು ಕಲ್ಲನ್ನು ಕೊಡುವುದಿಲ್ಲವೆಂದು ಖಚಿತವಾಗಿ ಹೇಳಬಹುದು. ಕೆಟ್ಟ ತಂದೆ-ತಾಯಿಯರೂ ಸಹ ತಮ್ಮ ಮಕ್ಕಳಿಗೆ ಉತ್ತಮ ಉಡುಗೊರೆಗಳನ್ನು ಕೊಡಲು ಅರಿತಿರುವಾಗ, ನಮ್ಮ ಪರಲೋಕದ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಒಳ್ಳೆಯ ವರಗಳನ್ನು ಕೊಡುತ್ತಾರೆ ಅಲ್ಲವೇ (ಮತ್ತಾಯನು 7:11)? - ಮತ್ತು ಸತ್ಯವೇದವು ಪ್ರಸ್ತಾಪಿಸಿರುವ ’ಒಳ್ಳೆಯವು’ಗಳಲ್ಲಿ ಜೀವನ ಸಂಗಾತಿಯೂ ಸೇರಿದ್ದಾರೆ (ಜ್ಞಾನೋಕ್ತಿಗಳು 18:22).
ದೇವರ ನಂಬಿಗಸ್ಥಿಕೆಯನ್ನು ಅವರ ಮಕ್ಕಳು ಸಾಬೀತುಪಡಿಸುವುದನ್ನು ನೋಡಲು ದೇವರು ಕಾಯುತ್ತಾರೆ. ಆದರೆ ನಮಗೆ ತಾಳ್ಮೆ ಬೇಕು. ನೀವು ಅಸಹನೆಯಿಂದ ಅವಸರಪಟ್ಟು ದೇವರು ನಿಮಗಾಗಿ ಇಟ್ಟಿರುವ ಅತ್ಯುತ್ತಮವಾದುದನ್ನು ಕಳೆದುಕೊಳ್ಳಬೇಡಿ. ಅನೇಕರು ಆ ತಪ್ಪು ಮಾಡಿದ್ದಾರೆ. ನಿಮ್ಮ ಪೂರ್ಣ ಹೃದಯದಿಂದ ಅವರನ್ನು ನಂಬಿರಿ. ಅವರನ್ನು ಸಂಪೂರ್ಣವಾಗಿ ನಂಬುವವರು ಅವರ ಪರಿಪೂರ್ಣ ಸತ್ಯತೆಯನ್ನು ಕಂಡುಕೊಳ್ಳುವರು. ಯಾರೊಬ್ಬರೂ ಕೂಡ ತಮ್ಮ ನಿರ್ದಿಷ್ಟ ಪರಿಸ್ಥಿತಿ ಅಥವಾ ಸನ್ನಿವೇಶ ವಿಶೇಷವಾದದ್ದೆಂದು ಹೇಳಲಾಗದು. ನಮ್ಮ ದೇವರಾದ ಕರ್ತರು ಎಲ್ಲವುಗಳ ಮೇಲೆ ಆಳ್ವಿಕೆ ಮಾಡುವವರಾಗಿದ್ದಾರೆ.
ದೇವರ ಚಿತ್ತವನ್ನು ಕಂಡುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಾನು ಇಲ್ಲಿ ವಿವರಿಸುವುದಿಲ್ಲ, ಯಾಕೆಂದರೆ "ದೇವರ ಚಿತ್ತವನ್ನು ಕಂಡುಕೊಳ್ಳುವುದು" ("Finding God's Will") ಎಂಬ ಆಂಗ್ಲ ಪುಸ್ತಕದಲ್ಲಿ ಈಗಾಗಲೇ ನಾನು ಈ ವಿಷಯವನ್ನು ವಿವರಿಸಿದ್ದೇನೆ. ದೇವರು ನಮ್ಮ ನೂತನ ಮನಸ್ಸಿನ ಮೂಲಕ ನಮಗೆ ಮಾರ್ಗದರ್ಶನ ನೀಡುತ್ತಾರೆ, ಆದುದರಿಂದ ನಾವು ಒಬ್ಬ ವ್ಯಕ್ತಿಯನ್ನು ದೇವರು ನಮಗಾಗಿ ಮಾಡಿರುವ ಆಯ್ಕೆ ಈತನೇ/ ಈಕೆಯೇ ಎಂದು ಪರಿಗಣಿಸುವಾಗ, ನಾವು ಆತನಲ್ಲಿ/ ಆಕೆಯಲ್ಲಿ ಕಾಣಬೇಕಾದ ಕೆಲವು ವಿಷಯಗಳನ್ನು ಮಾತ್ರ ನಾನು ಇಲ್ಲಿ ಉಲ್ಲೇಖಿಸುತ್ತೇನೆ.
ದೇವರು ಹವ್ವಳನ್ನು ಆದಾಮನಿಗೆ ಸೂಕ್ತವಾದ ಸಹಾಯಕಿಯಾಗಿ ಉಂಟುಮಾಡಿದರು. ಆದುದರಿಂದ ಅವಳು ಅನೇಕ ವಿಧದಲ್ಲಿ ಆದಾಮನೊಂದಿಗೆ ಹೊಂದಿಕೆಯಾಗುವುದು ಅವಶ್ಯವಾಗಿತ್ತು. ನಿಮ್ಮ ವಿಷಯದಲ್ಲೂ ಸಹ ನೀವು ವಿವಾಹವಾಗುವಂತ ವ್ಯಕ್ತಿಯು ಬಹಳಷ್ಟು ವಿಧಗಳಲ್ಲಿ ನಿಮ್ಮೊಂದಿಗೆ ಒಮ್ಮನಸ್ಸುಳ್ಳವರಾಗಬೇಕು. ವಿವಾಹದಲ್ಲಿ, ಇಬ್ಬರು ಒಂದಾಗಬೇಕು. ಸತ್ಯವೇದವು ನಮಗೆ ತಿಳಿಸಿಕೊಡುವ ಪ್ರಕಾರ, ಪರಸ್ಪರ ಸಮ್ಮತಿಸದೆ ಇಬ್ಬರು ಜೊತೆಯಾಗಿ ನಡೆಯಲು ಸಾಧ್ಯವಿಲ್ಲ (ಆಮೋಸನು 3:3). ಹಾಗಾಗಿ ಒಂದು ವಿವಾಹವು ಯಶಸ್ವಿಯಾಗುವುದಕ್ಕೆ ಅವರಿಬ್ಬರ ನಡುವೆ ವ್ಯಾಪಕವಾದ ಐಕ್ಯತೆ, ಹೋಲಿಕೆ ಮತ್ತು ಪರಸ್ಪರ ಒಪ್ಪಂದ ಇರುವುದು ಅತ್ಯವಶ್ಯವಾಗಿದೆ. ಒಂದಾಗಬೇಕಾಗಿರುವ ಆ ಇಬ್ಬರು ಪ್ರತ್ಯೇಕವಾದ ಆತ್ಮ, ಪ್ರಾಣ ಮತ್ತು ಶರೀರಗಳನ್ನು ಹೊಂದಿರುವುದರಿಂದ, ಈ ಮೂರು ಕ್ಷೇತ್ರಗಳಲ್ಲಿ ಅವರಲ್ಲಿ ಬಹಳಷ್ಟು ಮಟ್ಟಿಗೆ ಹೊಂದಿಕೆ ಮತ್ತು ಐಕ್ಯತೆ ಇರುವುದು ಅವಶ್ಯವಾಗಿದೆ. ಗಂಡು ಮತ್ತು ಹೆಣ್ಣಿನ ಮಿಲನವು - ಅವರ ಆತ್ಮಗಳ, ಪ್ರಾಣಗಳ ಮತ್ತು ಶರೀರಗಳ ಮಿಲನವಾದಾಗ, ಅವರಿಬ್ಬರ ವಿವಾಹವು, ದೇವರ ಹೃದಯದ ಪ್ರಕಾರ ಆಗುವ ವಿವಾಹವಾಗುತ್ತದೆ. ಈ ರೀತಿಯಾಗಿ ಆದಂತ ಒಗ್ಗೂಡುವಿಕೆಯು ಮೂರು ಹುರಿಯ ಹಗ್ಗವಾಗಿ ಮಾರ್ಪಟ್ಟು, ’ಪ್ರಸಂಗಿ 4:12'ರ ವಚನವು ನೆನಪಿಸುವಂತೆ, ಅದು ಬೇಗನೆ ಕಿತ್ತು ಹೋಗುವುದಿಲ್ಲ - ಇಲ್ಲಿ "ಕಿತ್ತು ಹೋಗುವುದು" ಎಂದರೆ ಬರೀ ವಿವಾಹ ವಿಚ್ಛೇದನವೆಂಬ ಅರ್ಥ ಮಾತ್ರವಲ್ಲ, ಜೊತೆಗೆ ಗಂಡ ಮತ್ತು ಹೆಂಡತಿಯ ನಡುವಿನ ಐಕ್ಯತೆಯಲ್ಲಿನ ಕೊರತೆಯನ್ನು ಸೂಚಿಸುತ್ತದೆ.
ವಿವಾಹದ ವಿಷಯದಲ್ಲಿ ದೇವರ ಚಿತ್ತವನ್ನು ತಿಳಿದುಕೊಳ್ಳಲು ಪ್ರಯತ್ನಿಸುವಾಗ, ನೀವು ಆ ವ್ಯಕ್ತಿಯನ್ನು ಈ ಮೂರು ಕ್ಷೇತ್ರಗಳಲ್ಲಿ ಪರಿಗಣಿಸಬೇಕಾಗುತ್ತದೆ. ಅವುಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ (ಈ ಕೆಳಕಂಡ ವಿವರಣೆಯಲ್ಲಿ ನಾನು ಸರ್ವನಾಮಪದವನ್ನು ಪುಲ್ಲಿಂಗದಲ್ಲಿ ಉಪಯೋಗಿಸಿದ್ದರೂ, ನಾನು ಹೇಳಿರುವ ಪ್ರತಿಯೊಂದು ವಿಷಯ ಹುಡುಗಿಯರಿಗೂ ಸಮನಾಗಿ ಅನ್ವಯಿಸುತ್ತದೆ).
ನಾವು ಆತ್ಮದ ವಿಷಯದೊಂದಿಗೆ ಪ್ರಾರಂಭಿಸಬೇಕು, ಯಾಕೆಂದರೆ ಇದು ಮನುಷ್ಯನ ಅತ್ಯುನ್ನತ ಭಾಗವಾಗಿದೆ. ಈ ಕ್ಷೇತ್ರದಲ್ಲಿ ಒಮ್ಮತ ಇಲ್ಲದಿರುವಾಗ, ಬೇರೆ ವಿಷಯಗಳಲ್ಲಿ ಐಕ್ಯಮತ್ಯವನ್ನು ಹುಡುಕುವುದು ನಿಷ್ಪ್ರಯೋಜಕವಾಗಿದೆ. ಮಾನವನ ಅಂಗಗಳಲ್ಲಿ ಆತನ ಆತ್ಮ ಮಾತ್ರವೇ ದೇವರೊಂದಿಗೆ ಅನ್ಯೋನ್ಯತೆಯನ್ನು ಹೊಂದುವ ಸಾಮರ್ಥ್ಯವುಳ್ಳ ಭಾಗವಾಗಿದೆ. ಒಬ್ಬ ಅವಿಶ್ವಾಸಿಯಲ್ಲಿ - ಅಂದರೆ ತನ್ನ ಜೀವನದಲ್ಲಿ ಪಶ್ಚಾತಾಪಪಟ್ಟು ಕ್ರಿಸ್ತನನ್ನು ಅಂಗೀಕರಿಸುವ ಮೂಲಕ ಹೊಸದಾಗಿ ಹುಟ್ಟುವ ಅನುಭವವನ್ನು ಪಡೆಯದೇ ಇರುವ ಮನುಷ್ಯನಲ್ಲಿ - ಒಂದು ವೇಳೆ ಆತನು ಧಾರ್ಮಿಕ ಮನಸ್ಸುಳ್ಳ ನಾಮಧೇಯ ಕ್ರೈಸ್ತನಾಗಿದ್ದು, ತನ್ನ ಸಭೆಯ ಸೇವೆಯಲ್ಲಿ ಸಕ್ರಿಯನಾಗಿದ್ದರೂ, ಆತನ ಆತ್ಮವು ಸತ್ತಿರುತ್ತದೆ.
ಜೀವಿಸುವವರು ಸತ್ತವರೊಂದಿಗೆ ಸೇರಿ ಒಂದಾಗುವುದು ಹೇಗೆ ಅಸಾಧ್ಯವೋ, ಹಾಗೆಯೇ ಒಬ್ಬ ವಿಶ್ವಾಸಿಯು ಒಬ್ಬ ಅವಿಶ್ವಾಸಿಯೊಂದಿಗೆ ವಿವಾಹವನ್ನು ಪರಿಗಣಿಸುವುದರ ಯಾವುದೇ ಪ್ರಶ್ನೆಯು ಅಸಂಬದ್ಧವಾಗಿದೆ. ನೀವು ಕರ್ತನೊಂದಿಗೆ ಒಂದಾಗಿದ್ದರೆ, ಈಗ ನಿಮ್ಮ ಆತ್ಮವು ಆತನ ಆತ್ಮದೊಂದಿಗೆ ಒಂದಾಗಿದೆ (1ಕೊರಿಂಥದವರಿಗೆ 6:16), ಆದ್ದರಿಂದ ನಿಮ್ಮ ಹಾಗೆಯೇ ಕರ್ತನೊಂದಿಗೆ ಒಂದಾಗಿರುವವರೊಂದಿಗೆ ಮಾತ್ರ ನೀವು ವಿವಾಹವನ್ನು ಪರಿಗಣಿಸಬಹುದು. ಒಂದು ನಿಜವಾದ ಕ್ರೈಸ್ತ ವಿವಾಹವು ಏರ್ಪಡುವುದು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯು ಕರ್ತನೊಂದಿಗೆ ಐಕ್ಯವಾದಾಗ ಮಾತ್ರ. ಈ ರೀತಿಯಲ್ಲಿ ನೆರವೇರದೇ ಇರುವ ಯಾವುದೇ ವಿವಾಹವು ಒಂದು ಕ್ರೈಸ್ತ ವಿವಾಹವೆಂದು ಕರೆಯಲ್ಪಡಲು ಸಾಧ್ಯವೇ ಇಲ್ಲ.
ನಮಗೆ ಸತ್ಯವೇದವು ಆಜ್ಞಾಪಿಸುವುದು ಏನೆಂದರೆ: "ನೀವು ಕ್ರಿಸ್ತನಂಬಿಕೆ ಇಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ - ಹೊಂದಾಣಿಕೆಯಾಗದ ನೆಂಟಸ್ತಿಕೆಯನ್ನು ಅವರೊಂದಿಗೆ ಮಾಡಬೇಡಿರಿ" (2ಕೊರಿಂಥದವರಿಗೆ 6:14).
ನೊಗವು ವೈವಾಹಿಕ ಜೀವನದ ಒಂದು ಸ್ಪಷ್ಟ ಚಿತ್ರಣವಾಗಿದೆ. ಎರಡು ಎತ್ತುಗಳು ಜೊತೆಯಾಗಿ ನೊಗವನ್ನು ಎಳೆಯುತ್ತಾ ಉಳುವ ಚಿತ್ರ ಇದಾಗಿದೆ - ಗಂಡ ಮತ್ತು ಹೆಂಡತಿಯು ಐಕ್ಯತೆಯಿಂದ ಸೇರಿಕೊಂಡು ಕರ್ತನಿಗೋಸ್ಕರ ದುಡಿಯುತ್ತಿರುವುದನ್ನು ಇದು ಸೂಚಿಸುತ್ತದೆ. ಹಳೆಯ ಒಡಂಬಡಿಕೆಯ ಕಾಲದಲ್ಲಿ ದೇವರ ಜನರು ಒಂದು ಎತ್ತು ಮತ್ತು ಒಂದು ಕತ್ತೆಯನ್ನು ಜೊತೆಗೂಡಿಸಿ ನೇಗಿಲಿಗೆ ಕಟ್ಟುವುದನ್ನು ನಿಷೇಧಿಸಲಾಗಿತ್ತು (ಧರ್ಮೋಪದೇಶಕಾಂಡ 22:10), ಯಾಕೆಂದರೆ ಇವೆರಡು ಪ್ರಾಣಿಗಳು ವಿಭಿನ್ನ ಸ್ವಭಾವಗಳನ್ನು ಹೊಂದಿವೆ. ಒಬ್ಬ ವಿಶ್ವಾಸಿಯೂ ಸಹ ಒಬ್ಬ ಅವಿಶ್ವಾಸಿಯ ಸ್ವಭಾವಕ್ಕಿಂತ ವಿಭಿನ್ನವಾದ ಸ್ವಭಾವವನ್ನು ಹೊಂದಿದ್ದಾನೆ. ಹಾಗಾಗಿ ಸತ್ಯವೇದವು ಹೀಗೆ ಹೇಳುತ್ತದೆ: "ಬೆಳಕು ಮತ್ತು ಕತ್ತಲೆಯು ಒಂದುಗೂಡಿ ಜೀವಿಸಬಹುದೇ? ಕ್ರಿಸ್ತ ಮತ್ತು ಸೈತಾನನ ನಡುವೆ ಸೌಹಾರ್ದವು ಹೇಗೆ ಸಾಧ್ಯ? ಕ್ರಿಸ್ತನಂಬಿಕೆ ಇಲ್ಲದವನೊಂದಿಗೆ ಒಬ್ಬ ವಿಶ್ವಾಸಿ ಎಂತಹ ಪಾಲುಗಾರಿಕೆಯನ್ನು ಇರಿಸಿಕೊಳ್ಳಬಹುದು?"(2ಕೊರಿಂಥದವರಿಗೆ 6:14,15 - JBP ಅನುವಾದ)
ಇಲ್ಲಿ ಸ್ಪಷ್ಟವಾಗಿ ಕಾಣುವಂತ ವಿಷಯವೇನೆಂದರೆ, ನೀನು ದೇವರ ಮಗುವಾಗಿದ್ದು, ಒಬ್ಬ ಅವಿಶ್ವಾಸಿಯನ್ನು (ಆತನು ಸೈತಾನನ ಮಗುವಾಗಿದ್ದಾನೆ - ಯೋಹಾನನು 8:44; 1ಯೋಹಾನನು 3:10), ವಿವಾಹವಾದರೆ, ಸ್ವತಃ ಸೈತಾನನೇ ನಿನ್ನ ಮಾವನಾಗುವನು! ಈ ಮಾವನಿಂದಾಗುವ ಕೇಡುಗಳು ನಿನ್ನ ಜೀವಮಾನದ ಕೊನೆಯವರೆಗೂ ತಪ್ಪಿದ್ದಲ್ಲ, ಎಂಬುದು ಸ್ಪಷ್ಟವಾಗಿದೆ!
ಕೆಲ ವಿಶ್ವಾಸಿಗಳು ಹೀಗೂ ಪ್ರತಿಪಾದಿಸಬಹುದು. ಒಬ್ಬನು ಒಬ್ಬ ಅವಿಶ್ವಾಸಿಯನ್ನು ವಿವಾಹವಾಗುವುದರ ಮೂಲಕ, ಒಂದು ಆತ್ಮವನ್ನು ಅವನು ನರಕದಿಂದ ರಕ್ಷಿಸಿದಂತೆ ಆಯಿತು, ಎಂಬುದಾಗಿ. ಆದರೆ ಈ ವಾದವು ಸಮಂಜಸವಾಗಿದ್ದರೆ, ಸರ್ವಜ್ಞಾನಿಯಾದ ದೇವರು ಖಂಡಿತವಾಗಿ ಎಲ್ಲಾ ವಿಶ್ವಾಸಿಗಳು ಅವಿಶ್ವಾಸಿಗಳನ್ನು ವಿವಾಹವಾಗಲು ಒತ್ತಾಯಿಸುತ್ತಿದ್ದರು! ಆದರೆ ದೇವರ ವಾಕ್ಯವು ಯಾಕೆ ಈ ರೀತಿಯಾಗಿ ಹೇಳಿಲ್ಲ? ಯಾಕೆಂದರೆ ಮದುವೆಯ ಮೂಲಕ ಆತ್ಮಗಳನ್ನು ರಕ್ಷಿಸುವ ಇಂತಹ ವಿಧಾನವು ಆತನ ಸಂಕಲ್ಪದಲ್ಲಿ ಎಂದಿಗೂ ಸೇರಿರಲಿಲ್ಲ. ಮತ್ತು ಈ ಕಾರಣಕ್ಕಾಗಿ, ಯಾರಾದರೂ ದೇವರ ವಾಕ್ಯದ ಆಧಾರವಿಲ್ಲದ ಇಂತಹ ಆತ್ಮ-ರಕ್ಷಣೆಯ ಯೋಜನೆಯನ್ನು ಹಮ್ಮಿಕೊಂಡು, ಅದಕ್ಕೆ ಕರ್ತನ ಬೆಂಬಲ ಸಿಗುತ್ತದೆಂದು ನಿರೀಕ್ಷಿಸುವುದು ತಪ್ಪು! ನಿಮ್ಮ ಸಂಗಾತಿಯು ವಿವಾಹದ ಪೂರ್ವದಲ್ಲಿ ರಕ್ಷಣೆ ಹೊಂದಿರದಿದ್ದರೆ, ವಿವಾಹದ ನಂತರ ಅವಳು/ ಅವನು ರಕ್ಷಿಸಲ್ಪಡುವ ಸಂಭವ ಅತಿ ವಿರಳವಾಗಿದೆ.
ಅದೇನೇ ಇರಲಿ, ಒಬ್ಬ ಅವಿಶ್ವಾಸಿಯನ್ನು ವಿವಾಹ ಮಾಡಿಕೊಳ್ಳುವ ಒಬ್ಬ ವಿಶ್ವಾಸಿಯು ಸ್ಪಷ್ಟವಾಗಿ ದೇವರ ವಾಕ್ಯದ ಆಜ್ಞೆಯನ್ನು ಉಲ್ಲಂಘಿಸಿ, ಕರ್ತನಿಗೆ ತಿರುಗಿಬಿದ್ದು ಅವಿಧೇಯನಾಗುತ್ತಾನೆ. ಹೀಗಿರುವಾಗ ತನ್ನ ವಿವಾಹವನ್ನು ದೇವರು ಆಶೀರ್ವದಿಸಬೇಕೆಂದು ಕೇಳಿಕೊಳ್ಳುವುದು ದುರಹಂಕಾರದ ಮಾತೇ ಆಗಿದೆ.
ಕರ್ತರು ಯಾವುದೇ ಸಂದರ್ಭದಲ್ಲೂ ತನ್ನ ಒಂದು ಮಗುವು ಒಬ್ಬ ಅವಿಶ್ವಾಸಿಯನ್ನು ವಿವಾಹವಾಗುವುದಕ್ಕೆ ಮಂಜೂರಾತಿ ನೀಡಲಾರರು. (ನಾನು ಇಲ್ಲಿ ಮತ್ತೊಂದು ಸಾರಿ ನಿಮಗೆ ನೆನಪಿಸಲು ಬಯಸುವ ವಿಷಯ, ಒಬ್ಬ ಕ್ರಿಸ್ತನಂಬಿಕೆ ಇಲ್ಲದವನು ಅಥವಾ ಒಬ್ಬ ನಾಸ್ತಿಕನ ಹಾಗೆಯೇ ಒಬ್ಬ ನಾಮಧೇಯ ಕ್ರೈಸ್ತನೂ ಸಹ ಒಬ್ಬ ಅವಿಶ್ವಾಸಿಯಾಗಿದ್ದಾನೆ.) ಯಾರೋ ಒಬ್ಬ ವಿಶ್ವಾಸಿಯು ಮಾನಸಾಂತರವಾಗದ ಸಂಗಾತಿಯನ್ನು ವಿವಾಹ ಮಾಡಿಕೊಂಡ ನಂತರ ಆ ಸಂಗಾತಿಯು ಮಾನಸಾಂತರ ಹೊಂದಿದ ಉದಾಹರಣೆಯನ್ನು ಉಲ್ಲೇಖಿಸುವುದು ಅರ್ಥಹೀನವಾದ ಮಾತಾಗಿದೆ, ಯಾಕೆಂದರೆ ನೀವು ದೇವರ ವಾಕ್ಯಕ್ಕೆ ಬದ್ಧರಾಗಿದ್ದೀರೇ ಹೊರತು ಇತರರ ಉದಾಹರಣೆಗಳಿಗೆ ಅಲ್ಲ. ಯಾರು ದೇವರ ಅತ್ಯುತ್ತಮವಾದುದನ್ನು ಬಯಸುತ್ತಾರೋ ಅವರು ಅವಿಶ್ವಾಸಿಯನ್ನು ವಿವಾಹವಾಗುವುದಕ್ಕಿಂತ ಒಂಟಿಯಾಗಿ ಇರುತ್ತೇನೆಂದು ತೀರ್ಮಾನಿಸಿಕೊಳ್ಳಬೇಕು.
ಯಾರಿಗಾದರೂ ತಮ್ಮ ಪೋಷಕರಿಂದ ಅಥವಾ ಬೇರೆ ಯಾರಿಂದಲೋ ಬರುವ ವಿವಾಹ ಪ್ರಸ್ತಾಪವು ಹೊಸದಾಗಿ ಹುಟ್ಟದಿರುವಂತ ಸಂಗಾತಿಯೊಂದಿಗೆ ವಿವಾಹ ಮಾಡಿಕೊಳ್ಳುವುದಕ್ಕಾಗಿ ಆಗಿದ್ದರೆ, ಇಂತಹ ಬಲವಂತಕ್ಕೆ ಅವರು ವಿಧೇಯರಾಗಬೇಕೆಂಬ ಯಾವುದೇ ಬದ್ಧತೆ ಇರುವುದಿಲ್ಲ. ನಾವು ನಮ್ಮ ತಂದೆತಾಯಿಯರಿಗೆ "ಕರ್ತನಲ್ಲಿ ಇರುವವರಾಗಿ" ವಿಧೇಯರಾಗಬೇಕು (ಎಫೆಸದವರಿಗೆ 6:1) - ಅಂದರೆ, ನಿಮ್ಮ ಮನಸ್ಸಾಕ್ಷಿಗೆ ವಿರೋಧವಾಗಿ ಅಥವಾ ದೇವರ ವಾಕ್ಯದ ಬೋಧನೆಗೆ ವಿರೋಧವಾಗಿ ನಡೆಯುವ ಅವಶ್ಯಕತೆ ಇಲ್ಲದ ಸಂದರ್ಭಗಳಲ್ಲಿ ಮಾತ್ರ. ಒಬ್ಬ ವಿಶ್ವಾಸಿಯ ಮೂಲ ನಿಷ್ಠಾವಂತಿಕೆ ಆತನ ಕರ್ತನಿಗೆ ಆಗಿರುತ್ತದೆ ಮತ್ತು ಇದಕ್ಕಾಗಿ ಕೆಲ ಸಂದರ್ಭಗಳಲ್ಲಿ ಸ್ವಂತ ಪೋಷಕರ ವಿರೋಧವಾಗಿ ನಿಲ್ಲುವ ಅವಶ್ಯಕತೆ ಬರಬಹುದು. ಸ್ವತಃ ಕರ್ತರು ’ಮತ್ತಾಯನು 10:32-39'ರಲ್ಲಿ ಹೇಳಿದ ಮಾತು ಇದೇ ಆಗಿತ್ತು. ವಿಶೇಷವಾಗಿ ’ವಚನ 37'ನ್ನು ಗಮನಿಸಿರಿ:"ತಂದೆಯ ಮೇಲಾಗಲೀ ತಾಯಿಯ ಮೇಲಾಗಲೀ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನು ಇಡುವವನು ನನಗೆ ಯೋಗ್ಯನಲ್ಲ."
"ಒಬ್ಬ ತಂದೆಯು ಆತನ ಮಕ್ಕಳಿಗೆ ಮನೆಮಾರನ್ನೂ, ಆಸ್ತಿಪಾಸ್ತಿಯನ್ನೂ ಕೊಡಬಹುದು, ಆದರೆ ಕರ್ತನ ಅನುಗ್ರಹದಿಂದಲೇ ಅವರಿಗೆ ವಿವೇಕವುಳ್ಳ ಹೆಂಡತಿಯರು ಸಿಗುತ್ತಾರೆ" (ಜ್ಞಾನೋಕ್ತಿಗಳು 19:14 - JBP ಅನುವಾದ)
ಕೆಲವೊಮ್ಮೆ ನಿಮಗೆ ಒಬ್ಬ ಹುಡುಗಿಯ ಕಡೆಗೆ ಸೆಳೆತದ ಅನುಭವ ಉಂಟಾಗಬಹುದು ಮತ್ತು ಸ್ವಲ್ಪ ಸಮಯದ ನಂತರ ಆಕೆಯು ನಿಜವಾಗಿ ಮಾನಸಾಂತರ ಪಡೆದಿಲ್ಲವೆಂದು ಗೊತ್ತಾಗಬಹುದು. ಅಥವಾ ಬೇರೊಂದು ಸಂದರ್ಭದಲ್ಲಿ ನಿಮ್ಮ ಸ್ವಂತ ಮಾನಸಾಂತರಕ್ಕೆ ಮೊದಲು ನೀವು ಮಾನಸಾಂತರ ಹೊಂದಿರದ ಒಬ್ಬ ಹುಡುಗಿಯನ್ನು ಪ್ರೀತಿಸಿರಬಹುದು. ಇಂತಹ ಸಂದರ್ಭಗಳಲ್ಲಿ ಆ ಹುಡುಗಿ ನಿಜವಾಗಿ ಹೊಸದಾಗಿ ಹುಟ್ಟಿದ್ದಾಳೆಂದು (ಇದಕ್ಕೆ ತದ್ವಿರುದ್ಧವಾದ ಪುರಾವೆಗಳು ಸ್ಪಷ್ಟವಾಗಿ ಗೋಚರವಾದರೂ) ನಿಮ್ಮನ್ನೇ (ಮತ್ತು ಇತರರನ್ನು) ಆತ್ಮ ವಂಚನೆಗೆ ಒಳಪಡಿಸುವ ಬಲವಾದ ಪ್ರಚೋದನೆ ಉಂಟಾಗುತ್ತದೆ.
ಈ ವಿಷಯವನ್ನು ನೀವು ಸ್ವಲ್ಪ ಹೆಚ್ಚು ಪ್ರಾಮಾಣಿಕತೆಯಿಂದ ಮತ್ತು ವಾಸ್ತವಿಕ ದೃಷ್ಟಿಯಿಂದ ನೋಡಿದರೆ, ಇಂತಹ ಆತ್ಮ-ವಂಚನೆಯನ್ನು ನಿರಾಕರಿಸಿ, ಆಕೆಗೆ ಆತ್ಮರಕ್ಷಣೆಯ ಅವಶ್ಯಕತೆ ಇದೆಯೆಂದು ಮನವರಿಕೆ ಮಾಡಿಕೊಂಡು, ನೀವು ಆಕೆಗೆ ಸುವಾರ್ತೆಯನ್ನು ಸಾರುತ್ತೀರಿ. ಆದರೆ ಇಲ್ಲಿ ಆಕೆಯ ಪ್ರತಿಕ್ರಿಯೆಯ ಬಗ್ಗೆ ಎಚ್ಚರಿಕೆಯಿಂದ ಖಾತ್ರಿ ಪಡಿಸಿಕೊಳ್ಳಬೇಕಾದದ್ದು ಏನೆಂದರೆ, ಅದು ಅಸಲಿಯೇ ಎಂಬುದನ್ನು. ಯಾಕೆಂದರೆ ಪರಸ್ಪರ ಆಕರ್ಷಣೆಯಿಂದಾಗಿ ಆಕೆಯ ಪ್ರತಿಕ್ರಿಯೆಯನ್ನು "ಮಾನಸಾಂತರ" ಎಂದು ನೀವು ವರ್ಣಿಸಬಹುದು. ಆದರೆ ಅಂತಹ "ಮಾನಸಾಂತರ"ವು ನಿಜವಾದ ಪಾಪದ ಅರಿವಿನ ಭಾವನೆಯಿಂದ ಉಂಟಾಗದೇ ಇದ್ದಲ್ಲಿ, ಅದು ನಕಲಿ ತೋರಿಕೆಯಾಗಿರುತ್ತದೆ. ನನ್ನ ಮಾತಿನ ಅರ್ಥ, ನೀವು ಆಕೆಗೆ ಸುವಾರ್ತೆ ಸಾರಬಾರದೆಂದು ಅಲ್ಲ. ನಾನು ಹೇಳುವುದು ಏನೆಂದರೆ, ಆಕೆಯ ಬಾಹ್ಯಾಚಾರಗಳಲ್ಲಿ ಮಾತ್ರ ಬದಲಾವಣೆ ಉಂಟಾಗುವ ಸಾಧ್ಯತೆ ಇದೆಯೆಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.
ನನಗೆ ಪರಿಚಿತನಾಗಿದ್ದ ಒಬ್ಬ ವಿಶ್ವಾಸಿಯು ಕರ್ತನ ಸೇವೆಯಲ್ಲಿ ಸಕ್ರಿಯನಾಗಿದ್ದುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆತನ ಪೋಷಕರೇ ಅವನಿಗೆ ವಿವಾಹವನ್ನು ನಿಶ್ಚಯಪಡಿಸಿದರು. ಆ ಹುಡುಗಿ ಒಬ್ಬ ನಾಮಧೇಯ ಕ್ರೈಸ್ತಳಾಗಿದ್ದಳು, ಮತ್ತು ಆ ಸಮಯದಲ್ಲಿ ಇನ್ನೂ ರಕ್ಷಿಸಲ್ಪಟ್ಟಿರಲಿಲ್ಲ, ಆದರೂ ವಿವಾಹದ ಮೊದಲು ಆ ಹುಡುಗ ಆಕೆಗೆ ಸುವಾರ್ತೆಯನ್ನು ಸಾರಿದಾಗ, ತಾನು ರಕ್ಷಣೆ ಹೊಂದಿದ್ದಾಗಿ ಆಕೆ ಸಮರ್ಥಿಸಿಕೊಂಡಳು. ಆದರೆ ಆ ಹುಡುಗಿಯ ನೈಜ ಸ್ವಭಾವವು ವಿವಾಹವಾದ ಕೆಲವೇ ತಿಂಗಳುಗಳಲ್ಲಿ ಸ್ಪಷ್ಟವಾಗಿ ಗೋಚರವಾಯಿತು. ಕೆಲ ಸಮಯದಲ್ಲೇ ಆಕೆಗೆ ನಿಜವಾದ ರಕ್ಷಣೆಯ ಅನುಭವ ಆಗಲೇ ಇಲ್ಲವೆಂದು ಇತರರಿಗೆ ಮಾತ್ರವಲ್ಲದೇ ಆಕೆಯ ಪತಿಗೂ ಸ್ಪಷ್ಟವಾಯಿತು. ಆಕೆಯು ತನ್ನ ಪತಿಗೆ ಆತ್ಮಿಕ ವಿಷಯಗಳಲ್ಲಿ ಅಡ್ಡಿಯಾದಳು ಮತ್ತು ಸ್ವಲ್ಪ ಸಮಯದ ನಂತರ ಆತನು ತನ್ನ ಸಾಕ್ಷಿಯನ್ನೂ ಆತ್ಮಿಕ ಶ್ರದ್ಧೆಯನ್ನೂ ಕಳೆದುಕೊಂಡನು.
ಸೈತಾನನು ಮಾನಸಾಂತರ ಪಡೆಯದ ವ್ಯಕ್ತಿಯಲ್ಲಿ ಅನೇಕ ಒಳ್ಳೆಯ ಗುಣಗಳನ್ನು ನಿಮಗೆ ತೋರಿಸಬಹುದು. ಅನೇಕ ವಿಧಗಳಲ್ಲಿ ಆಕೆ ಬಹಳ ಅಪೇಕ್ಷಣೀಯ ಹುಡುಗಿಯೆಂದು ಆತನು ನಿಮಗೆ ತೋರಿಸಬಹುದು. "ಆಕೆ ಎಷ್ಟು ಮುದ್ದಾಗಿದ್ದಾಳೆ ಮತ್ತು ಎಂತಹ ತೆರೆದ ಮನಸ್ಸನ್ನು ಹೊಂದಿದ್ದಾಳೆ," ಎಂದು ಆತನು ನಿಮ್ಮ ಕಿವಿಯಲ್ಲಿ ಪಿಸುಗುಟ್ಟುತ್ತಾನೆ. ಆದರೆ ಆತನ ಮಾತಿಗೆ ನೀನು ಕಿವಿಗೊಡಬೇಡ. ಆತನು ಸುಳ್ಳಿಗೆ ಮೂಲಪುರುಷನಾಗಿದ್ದಾನೆ. ಸೈತಾನನು ನಮ್ಮ ಮೊದಲ ತಂದೆ-ತಾಯಿಯರನ್ನು (ಆದಾಮ ಮತ್ತು ಹವ್ವರನ್ನು) ಕುಯುಕ್ತಿಯಿಂದ ಮೋಸಗೊಳಿಸಿದಾಗ, ಹೊರನೋಟಕ್ಕೆ ಬಹಳ ಉತ್ತಮವೂ, ರಮ್ಯವೂ ಆಗಿದ್ದ ವಸ್ತುವನ್ನು ಉಪಯೋಗಿಸಿಕೊಂಡನು (ಆದಿಕಾಂಡ 3:6). ಆದರೆ ಅದನ್ನು ದೇವರು ನಿಷೇಧಿಸಿದ್ದರು. ಅದೇ ರೀತಿಯಾಗಿ ದೇವರು ಅಸಮಾನವಾದ ನೊಗವನ್ನು ನಿಷೇಧಿಸಿದ್ದಾರೆ (2ಕೊರಿಂಥದವರಿಗೆ 6:14). ದೇವರು ನಿಷೇಧಿಸಿರುವ ವಿಷಯದಲ್ಲಿ ಪಾಲ್ಗೊಳ್ಳುವುದು ನಮಗೆ ಎಷ್ಟೇ ಒಳ್ಳೆಯದಾಗಿ ಕಂಡರೂ, ಅದು ವಿಪತ್ತನ್ನು ತರದೇ ಇರುವುದಿಲ್ಲ.
ಈ ಸಂಬಂಧದಲ್ಲಿ, ದೇವರ ವಾಕ್ಯದ ಬೋಧನೆಯನ್ನು ತಿರಸ್ಕರಿಸಿದ ಕಾರಣದಿಂದಾಗಿ ಬೇಸರಗೊಳಿಸುವಂತ ವಿವಾಹ ಮತ್ತು ಪತಿ-ಪತ್ನಿಯರ ನಡುವೆ ನಿರಂತರ ಸಮಸ್ಯೆಗಳಲ್ಲಿ ಕೊನೆಗೊಂಡ ಒಂದಕ್ಕಿಂತ ಹೆಚ್ಚಿನ ಪ್ರಕರಣಗಳ ಬಗ್ಗೆ ನನಗೆ ಗೊತ್ತಿದೆ. ವಿವಾಹದ ನಂತರ ಆ ಪುರುಷನನ್ನು ಮಾನಸಾಂತರಕ್ಕೆ ನಡೆಸಬಹುದೆಂದು ಭಾವಿಸಿದ್ದ ಸ್ತ್ರೀಯು ತನ್ನ ಎಲ್ಲಾ ಕನಸುಗಳು ಛಿದ್ರವಾಗುವುದನ್ನು ಕಂಡಿದ್ದಾಳೆ ಮತ್ತು ಈಗ ಆಕೆಗೆ ತನ್ನ ಮನೆಯನ್ನು ಕರ್ತನ ಸೇವೆಗಾಗಿ ತೆರೆಯಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಪ್ರಕರಣದಲ್ಲಿ, ಪುರುಷನು ತನ್ನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಸಂಗಾತಿಯನ್ನು ವಿವಾಹದ ನಂತರ ಕರ್ತನ ಬಳಿಗೆ ನಡೆಸುವುದಕ್ಕೆ ಯಾವುದೇ ತಡೆ ಇರುವುದಿಲ್ಲವೆಂದು ಭಾವಿಸಿದ್ದನು, ಆದರೆ ಈಗ ಆಕೆಯು ತನಗೆ ನಿರಂತರ ಪ್ರತಿರೋಧವನ್ನು ಒಡ್ಡುತ್ತಿರುವುದನ್ನು ಆತನು ಕಾಣುತ್ತಿದ್ದಾನೆ.
ಅತ್ಯಂತ ಸುರಕ್ಷಿತವಾದ ಮಾರ್ಗ ಯಾವುದೆಂದರೆ, ಮಾನಸಾಂತರ ಹೊಂದಿರದ ಯಾವುದೇ ವ್ಯಕ್ತಿಯೊಂದಿಗೆ ಯಾವುದೇ ಸನ್ನಿವೇಷದಲ್ಲಿ ಭಾವನಾತ್ಮಕವಾಗಿ ಬೆರೆಯಲು ನಿರಾಕರಿಸುವುದೇ ಆಗಿದೆ. ಒಂದು ವೇಳೆ ಅಂತಹ ವ್ಯಕ್ತಿಯ ಕಡೆಗೆ ನಿನ್ನ ಮನಸ್ಸಿನಲ್ಲಿ ಸೆಳೆತದ ಅನುಭವವಾದರೆ, ಒಡನೆಯೇ ನಿನ್ನನ್ನು ತಡೆಹಿಡಿದುಕೋ. ಆಕೆ ನಿಜವಾಗಿ ಮತ್ತು ಸಂಪೂರ್ಣವಾಗಿ ಮಾನಸಾಂತರ ಹೊಂದಿದ ನಂತರವೇ ಆಕೆಯನ್ನು ಸಂಭವನೀಯ ಸಂಗಾತಿಯೆಂದು ಪರಿಗಣಿಸು.
ನೀನು ರಕ್ಷಿಸಲ್ಪಡುವುದಕ್ಕಿಂತ ಮೊದಲೇ ಆಕೆಯನ್ನು ಪ್ರೀತಿಸಿದ್ದಾದರೆ, ಈಗ ನೀನು ನಿನ್ನ ಆತ್ಮಿಕ ಸ್ಥಿತಿಯನ್ನು ಆಕೆಗೆ ಸ್ಪಷ್ಟಪಡಿಸಲೇಬೇಕು. ನಿನ್ನ ಮೊದಲ ಪ್ರೀತಿ ಈಗ ಕರ್ತನಾದ ಯೇಸು ಕ್ರಿಸ್ತನಿಗೆ ಸಲ್ಲುತ್ತದೆಂದು, ಮತ್ತು ಆಕೆ ತನ್ನ ಜೀವನದಲ್ಲಿ ಇದೇ ರೀತಿಯ ಪರಿವರ್ತನೆಯ ಅನುಭವವನ್ನು ಹೊಂದುವ ತನಕ ವಿವಾಹವನ್ನು ಪರಿಗಣಿಸುವುದು ಸಹ ಅಸಾಧ್ಯವೆಂದು ಆಕೆಗೆ ಮನದಟ್ಟಾಗುವಂತೆ ತಿಳಿಸಬೇಕು. ನಿಮ್ಮಿಬ್ಬರ ಜೀವನದಲ್ಲೂ ವೈಯಕ್ತಿಕವಾಗಿ ಅತಿ ಪ್ರಧಾನ ಸ್ಥಾನವು ಕ್ರಿಸ್ತನಿಗೆ ಸಲ್ಲದೇ ಇದ್ದಲ್ಲಿ, ನಿಮ್ಮ ಮನೆ ನಿಜವಾದ ಕ್ರೈಸ್ತ ಮನೆಯಾಗುವುದಿಲ್ಲ. ದೇವರನ್ನು ಈ ರೀತಿಯಾಗಿ ಸನ್ಮಾನಿಸುವವರು ಕಂಡುಕೊಳ್ಳುವುದು ಏನೆಂದರೆ, ದೇವರೂ ಸಹ ಅವರನ್ನು ಸನ್ಮಾನಿಸುತ್ತಾರೆ (1ಸಮುವೇಲನು 2:30). ದೇವರನ್ನು ಸನ್ಮಾನಿಸುವುದರಲ್ಲಿ ಒಳಗೊಂಡಿರುವ ಒಂದು ಅಂಶವೆಂದರೆ, ನೀನು ನಿನ್ನ ಮತ್ತು ಆ ಹುಡುಗಿಯ ನಡುವಿನ ಸಂಬಂಧವನ್ನು ಯಜ್ಞವೇದಿಯ ಮೇಲೆ ದೇವರಿಗೆ ಸಮರ್ಪಿಸಿ, ಅವರು ಅದನ್ನು ತಮ್ಮ ಇಷ್ಟದ ಪ್ರಕಾರ ನಿರ್ವಹಿಸಲಿ ಎಂದು ಬಿಟ್ಟುಕೊಡುವುದು. ಆ ಹುಡುಗಿ ದೇವರು ನಿನಗಾಗಿ ಆರಿಸಿಕೊಂಡಿರುವವಳು ಆಗಿದ್ದರೆ, ದೇವರು ಅವಳನ್ನು ಕ್ರಿಸ್ತನಿಗೆ ಶರಣಾಗುವ ಜಾಗಕ್ಕೆ ನಡೆಸಿ, ಅನಂತರ ಅವರು ಅಬ್ರಹಾಮನಿಗೆ ಇಸಾಕನನ್ನು ಹಿಂದಿರುಗಿಸಿದ ಹಾಗೆ (ಆದಿಕಾಂಡ 22), ಆಕೆಯನ್ನು ನಿನಗೆ ಹಿಂದಿರುಗಿಸುತ್ತಾರೆ. ಆಕೆ ನಿನಗಾಗಿ ದೇವರ ಆಯ್ಕೆ ಅಲ್ಲವಾದರೆ, ಇಷ್ಮಾಯೇಲನು ಅಬ್ರಹಾಮನನ್ನು ಬಿಟ್ಟು ಅವನ ಜೀವನದಿಂದ ದೂರ ಅಲೆದು ಹೋದ ಹಾಗೆ (ಆದಿಕಾಂಡ 21), ಆಕೆಯು ನಿನ್ನ ಜೀವನದಿಂದ ದೂರ ಸರಿಯುವದಕ್ಕೆ ಅವರು ಅವಕಾಶ ನೀಡುತ್ತಾರೆ. ನೀನು ಇವೆರಡು ಸಂಗತಿಗಳಿಗೂ ಸಿದ್ಧನಾಗಿರಬೇಕು. ದೇವರು ಯಾವುದೇ ಮನುಷ್ಯನ ಸಾಲಗಾರರಲ್ಲ ಮತ್ತು ನೀನು ನಿನ್ನ ಜೀವನದಲ್ಲಿ ಅವರಿಗೆ ಮೊದಲನೆಯ ಸ್ಥಾನವನ್ನು ಕೊಟ್ಟರೆ, ದೇವರ ಅತ್ಯುತ್ತಮ ಕೊಡುಗೆಯು ನಿನ್ನ ಕೈಯಿಂದ ತಪ್ಪಿಹೋಗುವುದಿಲ್ಲ.
ಒಂದು ವಿವಾಹದಲ್ಲಿ ಇಬ್ಬರು ಸಂಗಾತಿಗಳು ರಕ್ಷಣೆಯ ನಿಜವಾದ ಅನುಭವವನ್ನು ಪಡೆದಿದ್ದರೆ, ಅವರಿಬ್ಬರಿಗೂ ವ್ಯಕ್ತಿಗತವಾಗಿ ದೇವರ ಕ್ಷಮಾಪಣೆಯ ಉಲ್ಲಾಸದ ಅನುಭವ ಪ್ರಾಪ್ತವಾಗುತ್ತದೆ. ಇದು ಅವರ ಪರಸ್ಪರ ಸಂಬಂಧದಲ್ಲಿ ಒಬ್ಬರನ್ನೊಬ್ಬರು ತ್ವರಿತವಾಗಿ ಕ್ಷಮಿಸುವ ಮತ್ತು ಕ್ಷಮಾಪಣೆ ಕೇಳುವ ಇಚ್ಛೆಯ ಮೂಲಕ ಪದೇ ಪದೇ ಪ್ರಕಟವಾಗುತ್ತದೆ. ಸಂಗಾತಿಗಳಲ್ಲಿ ಒಬ್ಬನಲ್ಲಿ ಅಥವಾ ಇಬ್ಬರಲ್ಲಿಯೂ ಈ ಅಂಶವು ಇಲ್ಲದಿರುವ ಕಾರಣದಿಂದಾಗಿ ಹಲವು ವಿವಾಹಗಳು ಒಡೆದುಹೋಗಿವೆ.
ಆದರೆ ಕೇವಲ ಮಾನಸಾಂತರ ಒಂದೇ ಸಾಲದು. ಆತ್ಮಿಕ ಐಕ್ಯತೆಗೆ ಒಂದೇ ರೀತಿಯ ಆತ್ಮಿಕ ದೃಷ್ಟಿಕೋನವೂ ಅವಶ್ಯವಾಗಿದೆ. ಕರ್ತನಿಗಾಗಿ ಹುರುಪು ಮತ್ತು ಭಯಭಕ್ತಿಯ ವಿಚಾರಗಳಲ್ಲಿ ವಿಶ್ವಾಸಿಗಳ ನಡುವೆ ಅಜಗಜಾಂತರ ವ್ಯತ್ಯಾಸಗಳು ಇರುತ್ತವೆ. ಒಬ್ಬ "ಬಿಸಿಯಾದ" ಕ್ರೈಸ್ತನು ಒಬ್ಬ "ಉಗುರು ಬೆಚ್ಚನೆಯ" ಕ್ರೈಸ್ತಳನ್ನು ವಿವಾಹವಾದರೆ, ಅದರ ಅಂತಿಮ ಫಲವೇನೆಂದರೆ, ಇಬ್ಬರು ಉರುಗು ಬೆಚ್ಚನೆಯ ಕ್ರೈಸ್ತರಾಗುವುದು. "ಬಿಸಿ" ಕ್ರೈಸ್ತನ ಉಷ್ಣತೆಯು "ಉಗುರು ಬೆಚ್ಚನೆಯ" ಕ್ರೈಸ್ತಳ ಮಟ್ಟಕ್ಕೆ ಇಳಿದುಬಿಡುತ್ತದೆ. ಹಾಗಾಗಿ ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿದ್ದಾಳೋ ಎಂಬುದನ್ನು ಮಾತ್ರವಲ್ಲದೆ, ಆಕೆಯು ನಿನ್ನ ಬಾಳಿನಲ್ಲಿ ತಡೆ ಒಡ್ಡುವಂತವಳೋ ಅಥವಾ ಪ್ರೋತ್ಸಾಹಿಸುವವಳೋ ಎಂಬುದನ್ನೂ ಸಹ ಪರಿಗಣಿಸಬೇಕಾಗುತ್ತದೆ. ನಿನ್ನಲ್ಲಿ ಇರುವಷ್ಟೇ ಆತ್ಮಿಕ ಬೆಳವಣಿಗೆ ಮತ್ತು ದೇವರಿಗಾಗಿ ಹಸಿವೆ ಆಕೆಯಲ್ಲಿ ಇರಬೇಕು ಮತ್ತು ಆಕೆಯ ಆತ್ಮಿಕ ಮಟ್ಟವು ನಿನ್ನಲ್ಲಿ ಗೌರವ ಭಾವವನ್ನು ಉಂಟುಮಾಡಬೇಕು. ಇಬ್ಬರು ಸಂಗಾತಿಗಳಲ್ಲೂ ಯಥಾರ್ಥವಾದ ಆತ್ಮಿಕತೆ ಇದ್ದಾಗ, ಅವರ ನಡುವೆ ಪರಸ್ಪರ ಗೌರವ ಇರುತ್ತದೆ ಮತ್ತು ಅವರಿಬ್ಬರೂ ತಮ್ಮ ಜೊತೆಯ ವ್ಯಕ್ತಿ ತನಗಿಂತಲೂ ಶ್ರೇಷ್ಠನು/ ಶ್ರೇಷ್ಠಳು ಎಂದು ಎಣಿಸುತ್ತಾರೆ (ಫಿಲಿಪ್ಪಿಯವರಿಗೆ 2:3).
ಆದರೆ ನಾವು ಆತ್ಮಿಕ ಮಟ್ಟವನ್ನು ಹೇಗೆ ಅಳೆಯಬಹುದು? ಅದು ಧಾರ್ಮಿಕ ಚಟುವಟಿಕೆಗಳ ಮೂಲಕವೇ? ಸತ್ಯವೇದ ಅಧ್ಯಯನ ಕೂಟಗಳನ್ನು ಏರ್ಪಡಿಸುವುದು ಮತ್ತು ಮನೆಮನೆಗಳಿಗೆ ಹೋಗಿ ಸುವಾರ್ತೆಯನ್ನು ಸಾರುವುದರಲ್ಲಿ ಯಾವಾಗಲೂ ತೊಡಗಿರುವ ಒಬ್ಬ ಹುಡುಗಿಯು ಸ್ವತಃ ಆತ್ಮಿಕಳು ಆಗಿದ್ದರೂ, ಕೆಲವೊಮ್ಮೆ ಬಹಳ ಸಾಧಾರಣ ಮಟ್ಟದ ಪತ್ನಿ ಮತ್ತು ತಾಯಿಯಾಗಬಹುದು. ಗಮನದಲ್ಲಿ ಇರಿಸಿಕೊಳ್ಳಬೇಕಾದ ಇನ್ನೊಂದು ವಿಷಯ ಏನೆಂದರೆ, ಒಬ್ಬ ಸಕ್ರಿಯ ಧಾರ್ಮಿಕ ಕಾರ್ಯಕರ್ತನಲ್ಲಿ ಹೆಚ್ಚಿನ ಆತ್ಮಿಕ ಆಳ ಇದೆಯೆಂದು ನಿಶ್ಚಯವಾಗಿ ಹೇಳಲು ಬರುವುದಿಲ್ಲ. ಯಾಕೆಂದರೆ ಆತ್ಮಿಕತೆ ಮತ್ತು ಧಾರ್ಮಿಕ ಶ್ರದ್ಧೆ ಇವೆರಡು ವಿಭಿನ್ನ ಸಂಗತಿಗಳಾಗಿವೆ. ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಇನ್ನೊಂದು ವಿಷಯವೆಂದರೆ, ಮದುವೆಯಾದ ಆರಂಭದ ವರ್ಷಗಳಲ್ಲಿ ನೀನು ಮತ್ತು ನಿನ್ನ ಪತ್ನಿ ನಿರಂತರವಾಗಿ ಸತ್ಯವೇದ ಅಧ್ಯಯನ, ಪ್ರಾರ್ಥನೆ ಮತ್ತು ಕ್ರಿಸ್ತೀಯ ಸೇವೆಯಲ್ಲಿ ತೊಡಗಿರುವುದಿಲ್ಲ. ಆದರೆ ಕಿರಿಚಾಡುವ ಮಕ್ಕಳನ್ನು ಸುಧಾರಿಸುವುದರಲ್ಲಿ ನಿನ್ನ ಪತ್ನಿಯ ದಿನದ ಹೆಚ್ಚಿನ ಭಾಗ ಕಳೆದು ಹೋಗುತ್ತದೆ ಮತ್ತು ಅಡ್ಡಿ ಅಡಚಣೆಗಳಲ್ಲೇ ನಿಮ್ಮಿಬ್ಬರ ರಾತ್ರಿಯೂ ಕಳೆದು ಹೋಗುತ್ತದೆ. ಕೇವಲ ಧಾರ್ಮಿಕ ಚಟುವಟಿಕೆ ಮತ್ತು ಸತ್ಯವೇದ ಅಧ್ಯಯನವೇ ಆತ್ಮಿಕತೆಯೆಂಬ ಗ್ರಹಿಕೆಯಿರುವ ಹುಡುಗಿಯು, ಈ ಪರಿಸ್ಥಿತಿಯನ್ನು ನೋಡಿ ಸಿಡಿಮಿಡಿಗೊಳ್ಳುತ್ತಾಳೆ ಮತ್ತು ಅಸಮಾಧಾನಗೊಳ್ಳುತ್ತಾಳೆ. ಏಕೆಂದರೆ ಅವಳ ದೃಷ್ಟಿಯಲ್ಲಿ ಈ ಸಂಗತಿಗಳು "ಕರ್ತನೊಂದಿಗೆ ಆಕೆಯ ಅನ್ಯೋನ್ಯತೆಯ ಅವಕಾಶಕ್ಕೆ" ಅಡ್ಡಿಯಾಗಿರುತ್ತವೆ.
ಆತ್ಮಿಕತೆಯನ್ನು ನಿರ್ಣಯಿಸುವುದು ಹಾಗೂ ಹೊಸದಾಗಿ ಹುಟ್ಟಿರುವುದನ್ನು ಗುರುತಿಸುವ ಕಾರ್ಯ ಸುಲಭವಾದದ್ದಲ್ಲ. ಇದನ್ನು ಮತ್ತಷ್ಟು ಜಟಿಲಗೊಳಿಸುವ ಅಂಶವೆಂದರೆ, ಇಂದಿನ ಜಗತ್ತಿನಲ್ಲಿ ಅಧಿಕಾಂಶ ಜನರು ತೋರಿಕೆಯ ವಾತಾವರಣದಲ್ಲಿ ಜೀವಿಸುತ್ತಾರೆ. ಸ್ವಲ್ಪವೂ ತೋರಿಕೆ ಇಲ್ಲದಿರುವಂತ ಜನರು ಬಹಳ ಕಡಿಮೆಯಾಗಿದ್ದಾರೆ. ಹೆಚ್ಚಿನ ವಿಶ್ವಾಸಿಗಳು ತಮ್ಮ ನಿಜವಾದ ಆತ್ಮಿಕತೆಯ ಮಟ್ಟಕ್ಕಿಂತ ಉನ್ನತ ಮಟ್ಟದಲ್ಲಿ ತಾವು ಇರುವುದಾಗಿ ಇತರರಿಗೆ ತೋರಿಸಿಕೊಳ್ಳಲು ಬಯಸುತ್ತಾರೆ. ಯುವಜನರಲ್ಲಿ ಈ ಪ್ರವೃತ್ತಿಯು ಅಧಿಕವಾಗಿರುತ್ತದೆ - ಅದರಲ್ಲೂ ಅನ್ಯೋನ್ಯತಾ ಕೂಟಗಳಲ್ಲಿ ಸಾಮಾನ್ಯವಾಗಿ ಪಾಲ್ಗೊಳ್ಳುವವರಲ್ಲಿ ಇದು ಇನ್ನೂ ಹೆಚ್ಚಾಗಿರುತ್ತದೆ. ನಾವು ಇದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು ಮತ್ತು ಒಬ್ಬ ವ್ಯಕ್ತಿಯ ಹಾವ-ಭಾವಗಳಿಂದ ವಂಚನೆಗೆ ಒಳಗಾಗಬಾರದು. ನಿಜ ಮನೋವೃತ್ತಿಯನ್ನು ನಿರ್ಧರಿಸುವ ಕಾರ್ಯವು ಅತ್ಯಂತ ಕಠಿಣವಾದದ್ದು ಆಗಿದ್ದರೂ, ವಿವಾಹವನ್ನು ಪರಿಗಣಿಸುವಾಗ ಇದನ್ನು ಮಾಡಲೇಬೇಕಾಗುತ್ತದೆ. ಇನ್ನೊಬ್ಬ ವ್ಯಕ್ತಿಯು ತನ್ನ ರಕ್ಷಣೆಯ ಅನುಭವದ ಬಗ್ಗೆ ಹೇಳುವ ಸಾಕ್ಷಿಯನ್ನು ಕೇಳಿ ತೃಪ್ತಿ ಹೊಂದಬಾರದು. ನಾನು ಈಗಾಗಲೇ ಹೇಳಿರುವ ಹಾಗೆ, ಒಬ್ಬ ವ್ಯಕ್ತಿಯು ಹೊಸ ಜನ್ಮದ ಅನುಭವವನ್ನು ಹೊಂದದೇ ಅದರ ಬಗ್ಗೆ ಸಾಕ್ಷಿ ನೀಡುವ ಸಾಧ್ಯತೆ ಇದೆ. ಕರ್ತರು ನಮಗೆ ಹೇಳಿರುವಂತೆ, ಜನರನ್ನು ಅವರ ಫಲಗಳಿಂದ ತಿಳಿದುಕೊಳ್ಳಬಹುದು (ಮತ್ತಾಯನು 7:16); ಮತ್ತು ನಾವು ಪ್ರತಿದಿನ ಕರ್ತನೊಂದಿಗೆ ನಡೆದರೆ, ಸಮಯ ಪ್ರಾಪ್ತವಾದಾಗ, ನಾವು ಸರಿಯಾಗಿ ನಿರ್ಣಯಿಸುವಂತೆ ಆತನು ಸಹಾಯ ಮಾಡುವನು.
ದೇವರಾತ್ಮನಿಂದ ಉಂಟಾಗುವ ಫಲ - "ಪ್ರೀತಿ, ಸಂತೋಷ, ಸಮಾಧಾನ, ತಾಳ್ಮೆ (ಸಂತುಲಿತ ಮನೋಭಾವ, ಸಿಡುಕಿಲ್ಲದ ಸ್ವಭಾವ), ದಯೆ, ಉಪಕಾರ (ಔದಾರ್ಯ), ನಿಷ್ಠೆ, ಸಾಧುತ್ವ (ಸೌಮ್ಯತೆ, ನಮ್ರತೆ), ಆತ್ಮಸಂಯಮ (ಇಂದ್ರಿಯ ನಿಗ್ರಹ)" (ಗಲಾತ್ಯದವರಿಗೆ 5:22,23) - ನಾವು ಮುಖ್ಯವಾಗಿ ಇವುಗಳು ಇವೆಯೋ ಎಂದು ನೋಡಬೇಕು. ನಾವು ಪರಿಶೀಲಿಸಿ ನೋಡುತ್ತಿರುವ ವ್ಯಕ್ತಿಯು ಕ್ರೈಸ್ತ ಅನ್ಯೋನ್ಯತೆಯಲ್ಲಿ ಹಾಗೂ ಕರ್ತನ ಕಾರ್ಯದಲ್ಲಿ ತೀವ್ರ ಆಸಕ್ತಿ ಉಳ್ಳವನು/ ಉಳ್ಳವಳು ಆಗಿರಬೇಕು.
ಒಬ್ಬ ಹುಡುಗಿಯು, "ಸಾತ್ವಿಕವಾದ ಶಾಂತಮನಸ್ಸನ್ನು ಹೊಂದಿರಬೇಕು; ಈ ಒಳಗಣ ಭೂಷಣವು ಸುಂದರವಾದ ಅಲಂಕಾರವಾಗಿದೆ" (1ಪೇತ್ರನು 3:5).
ಆಕೆಯಲ್ಲಿ 20ನೇ ಶತಮಾನದ ಕೆಲವು ಹುಡುಗಿಯರಲ್ಲಿ ಕಂಡುಬರುವ ದಿಟ್ಟತನ ಅಥವಾ ಒರಟು ಸ್ವಭಾವ ಇರಬಾರದು - ಆ ಹುಡುಗಿಯರು ಸ್ತ್ರೀಯರಾಗಿ ತಮ್ಮನ್ನು ಸೃಷ್ಟಿಸಿದ ದೇವರ ನಿರ್ಧಾರವು ತಪ್ಪೆಂದು ವಾದಿಸುತ್ತಾರೆ!
’ಜ್ಞಾನೋಕ್ತಿಗಳು 31:10-31'ರಲ್ಲಿ ಸತ್ಯವೇದವು ಗುಣವಂತೆಯಾದ ಸ್ತ್ರೀಯು ಹೇಗಿರುತ್ತಾಳೆಂಬ ಒಂದು ವಿವರಣೆಯನ್ನು ನಮಗೆ ನೀಡುತ್ತದೆ. ಪ್ರತಿಯೊಬ್ಬ ಯೌವನಸ್ಥನು ವಿವಾಹಕ್ಕಾಗಿ ಯಾವುದೇ ಒಬ್ಬ ಹುಡುಗಿಯನ್ನು ಪರಿಗಣಿಸುವಾಗ, ಇಲ್ಲಿ ತೋರಿಸಲ್ಪಟ್ಟಿರುವ ಗುಣಗಳು ಅವಳಲ್ಲಿ ಇವೆಯೇ ಎಂದು ನೋಡಬೇಕು. ದೈಹಿಕ ಸೌಂದರ್ಯ ಮತ್ತು ಲಾವಣ್ಯವು ಕೆಲಸಕ್ಕೆ ಬಾರದ್ದು ಮತ್ತು ಹುರುಳಿಲ್ಲದ್ದೆಂದು ಇಲ್ಲಿ ತಿರಸ್ಕರಿಸಲ್ಪಟ್ಟಿವೆ. "ಕರ್ತರಲ್ಲಿ ಭಯಭಕ್ತಿಗೆ (ಪವಿತ್ರತೆಗೆ)" ಪ್ರಾಮುಖ್ಯತೆ ನೀಡಲಾಗಿದೆ (ಜ್ಞಾನೋಕ್ತಿಗಳು 31:30). ಕರ್ತರ ದೃಷ್ಟಿಯಲ್ಲಿ, ಒಬ್ಬ ಹುಡುಗಿಯಲ್ಲಿ ಎಷ್ಟು ದೇವಭಕ್ತಿ (ಪವಿತ್ರತೆ) ಇದೆಯೋ, ಆಕೆ ಅಷ್ಟೇ ಸುಂದರಿಯಾಗಿದ್ದಾಳೆ. ನಾವು ದೇವರ ಚಿತ್ತವನ್ನು ಕಂಡುಕೊಳ್ಳಲು ಬಯಸಿದರೆ, ದೇವರು ಜನರನ್ನು ನೋಡುವ ದೃಷ್ಟಿಯಿಂದ ನಾವು ಜನರನ್ನು ನೋಡಲು ಕಲಿಯಬೇಕು. ’ರೋಮಾಪುರದವರಿಗೆ 12:2'ರಲ್ಲಿ ನಮಗೆ ತಿಳಿಸಿರುವಂತೆ, ದೇವರ ಚಿತ್ತಕ್ಕೆ ಅನುಸಾರವಾದದ್ದು ಯಾವುದೆಂದು ತಿಳಕೊಳ್ಳುವಂತ "ನೂತನ ಮನಸ್ಸನ್ನು" ಪಡೆಯುವುದಕ್ಕೆ ಅವಶ್ಯವಾದ ಒಂದು ಷರತ್ತು ಇದೇ ಆಗಿದೆ. "ದೇವರು ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವರಾಗಿದ್ದಾರೆ," ಎಂಬುದನ್ನು ತಿಳಿದೂ (1ಸಮುವೇಲನು 16:7), ನಾವು ನಮ್ಮ ಆಯ್ಕೆಯನ್ನು ದೈಹಿಕ ಸೌಂದರ್ಯದ ಆಧಾರದ ಮೇಲೆ ಮಾಡುವುದಾದರೆ, ನಾವು ದೇವರ ಮಾರ್ಗದರ್ಶನವನ್ನು ನಿರೀಕ್ಷಿಸಲು ಆಗುವುದಿಲ್ಲ. ಆಗ ನಾವು ಸೈತಾನನು ನಮ್ಮನ್ನು ವಂಚಿಸಿ ತಪ್ಪು ಹಾದಿಯಲ್ಲಿ ನಡೆಸುವುದಕ್ಕೆ ಬಾಗಿಲನ್ನು ಅಗಲವಾಗಿ ತೆರೆದಂತಾಗುತ್ತದೆ.
’ಜ್ಞಾನೋಕ್ತಿಗಳು 31:10-31'ರಲ್ಲಿ ಪ್ರಸ್ತಾಪಿಸಿರುವ ಒಬ್ಬ ಆದರ್ಶ ಪತ್ನಿಯ ಎಲ್ಲಾ ಗುಣಗಳು ಆಂತರಿಕ ಸ್ವಭಾವಕ್ಕೆ ಸಂಬಂಧಿಸಿದವುಗಳಾಗಿವೆ. ಆಕೆಯ ಪತಿಯು ಆಕೆಯಲ್ಲಿ ಭರವಸೆ ಇಡುತ್ತಾನೆ. ಆಕೆ (ತನ್ನ ಸ್ವಂತದ ಹಿತಕ್ಕೆ ಬದಲಾಗಿ) ತನ್ನ ಗಂಡನ ಹಿತವನ್ನು ಬಯಸುತ್ತಾಳೆ. ಆಕೆ ಉಲ್ಲಾಸದಿಂದ ಕೆಲಸ ಮಾಡುತ್ತಾಳೆ ಮತ್ತು ಶ್ರಮಿಸಿ ದುಡಿಯಲು ಹಿಂಜರಿಯುವುದಿಲ್ಲ. ಆಕೆ ತನ್ನ ಕುಟುಂಬದ ಹಿತಕ್ಕಾಗಿ ಮುಂದಾಲೋಚನೆಯಿಂದ ಯೋಜಿಸುತ್ತಾಳೆ. ಮನೆಯಲ್ಲಿ ಸ್ವಂತ ಕೈಗಳಿಂದ ದುಡಿದು ಎಲ್ಲಾ ರೀತಿಯ ಚಾಕರಿ ಮಾಡುವುದಕ್ಕೆ ಆಕೆ ಸಿದ್ಧಳಾಗಿದ್ದಾಳೆ. ಆಕೆ ಹಣವನ್ನು ದುಂದುವೆಚ್ಚ ಮಾಡುವುದಿಲ್ಲ; ಆದರೆ ಆಕೆ ಜಿಪುಣೆಯಲ್ಲ - ಏಕೆಂದರೆ ಬಡವರು ಮತ್ತು ದಿಕ್ಕಿಲ್ಲದವರಿಗೆ ಆಕೆಯು ದಯೆ ತೋರಿಸಿ ಕೈ ಚಾಚಿ ಸಹಾಯ ಮಾಡುತ್ತಾಳೆ. ಆಕೆಯು ಹಿತ ಮಿತವಾಗಿ ಮಾತಾಡುವುದನ್ನು ಕಲಿತಿದ್ದಾಳೆ ಮತ್ತು ಮಾತಿನಲ್ಲಿ ಜ್ಞಾನಿಯಾಗಿದ್ದಾಳೆ (ಇದು ಎಷ್ಟು ಮಹತ್ವಪೂರ್ಣವಾದ ವಿಷಯ!). ಸೋಮಾರಿತನವನ್ನು ಆಕೆ ದೂರವಿರಿಸುತ್ತಾಳೆ ಮತ್ತು ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಆಕೆಯ ಪತಿ, ಮಕ್ಕಳು ಮತ್ತು ದೇವರು ಸಹ ಆಕೆಯ ಪ್ರಶಂಸೆ ಮಾಡುವುದರಲ್ಲಿ ಅಶ್ಚರ್ಯವೇನಿಲ್ಲ.
ಒಬ್ಬ ಹುಡುಗಿಯಲ್ಲಿ ಇವೆಲ್ಲಾ ಗುಣಗಳು ಇವೆಯೋ ಎಂದು ನಾವು ಖಾತರಿಯಾಗಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಆದರೆ ದೇವರ ಚಿತ್ತವನ್ನು ನಾವು ತಿಳಕೊಳ್ಳಲು ಬಯಸಿದರೆ, ನಾವು ಈ ಅಂಶಗಳನ್ನು ಗಮನಿಸಿ ನೋಡಬೇಕು ಮತ್ತು ಇವುಗಳ ಆಧಾರದ ಮೇಲೆ ನಾವು ಯಾವುದೇ ನಿರ್ಣಯವನ್ನು ಮಾಡುವುದು ಉಚಿತವಾಗಿದೆ.
ನಾವು ಎಚ್ಚರಿಕೆ ವಹಿಸಬೇಕಾಗಿರುವ ಸೈತಾನನ ಇನ್ನೊಂದು ಸಲಹೆ ಯಾವುದೆಂದರೆ, ನೀವು ಪರಿಗಣಿಸುತ್ತಿರುವ ವ್ಯಕ್ತಿಯು ಈಗ ಸಾಕಷ್ಟು ಆತ್ಮಿಕ ಬೆಳವಣಿಗೆಯನ್ನು ಹೊಂದಿರದಿದ್ದರೂ, ಆಕೆಯನ್ನು ವಿವಾಹದ ನಂತರ ಅಭಿವೃದ್ಧಿಪಡಿಸಬಹುದು ಮತ್ತು ಮೇಲಕ್ಕೆ ಎತ್ತಬಹುದು, ಎಂಬುದಾಗಿ. ಇದು ನಿಜಾಂಶಕ್ಕೆ ದೂರವಾಗಿದೆ. ಈಗ ಆಕೆಯಲ್ಲಿ ದೇವರ ಭಯಭಕ್ತಿ ಇಲ್ಲದಿದ್ದರೆ, ಮುಂದೆ ಅದು ಉಂಟಾಗುತ್ತದೆಯೆಂಬ ಯಾವುದೇ ಖಚಿತತೆ ಇರುವುದಿಲ್ಲ. ಒಂದು ಮೇಜಿನ ಮೇಲೆ ನಿಂತುಕೊಂಡು ಕೆಳಗೆ ನೆಲದ ಮೇಲೆ ನಿಂತಿರುವ ಇನ್ನೊಬ್ಬ ವ್ಯಕ್ತಿಯನ್ನು ಮೇಲಕ್ಕೆ ಎಳೆದುಕೊಳ್ಳುವದು ಅತ್ಯಂತ ಕಠಿಣ ಕಾರ್ಯವಾಗಿದೆ. ಕೆಳಗೆ ನಿಂತಿರುವ ಆ ಇನ್ನೊಬ್ಬ ವ್ಯಕ್ತಿಯು ನಿಮ್ಮನ್ನು ಕೆಳಕ್ಕೆ ಎಳೆಯುವುದು ಇದಕ್ಕಿಂತ ಸುಲಭವಾಗಿರುತ್ತದೆ: ಇದೇ ಮೂಲತತ್ವವು ಆತ್ಮಿಕವಾಗಿ ಹೊಂದಾಣಿಕೆ ಇಲ್ಲದ ವಿವಾಹಕ್ಕೆ ಅನ್ವಯಿಸುತ್ತದೆ.
ಒಂದು ನಿಜವಾದ ಆತ್ಮಿಕ ವಿವಾಹಕ್ಕೆ, ನಿಮ್ಮ ಪ್ರಮುಖ ಆಕರ್ಷಣೆಯು ಮುಖ್ಯವಾಗಿ ಆ ವ್ಯಕ್ತಿಯ ಆತ್ಮಿಕ ಗುಣಗಳು ಆಗಿರಬೇಕು. ನೀವು ಇವುಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ, ದೇವರು ನಿಮಗಾಗಿ ಆಯ್ಕೆ ಮಾಡಿರುವ ಆ ವ್ಯಕ್ತಿಯಲ್ಲಿ ಅವಶ್ಯವಾಗಿ ಇರಬೇಕಾದ ಇತರ ಮುಖ್ಯ ಸಂಗತಿಗಳು ಸಹ ಪೂರೈಸಲ್ಪಟ್ಟಿರುವುದನ್ನು ನೀವು ಕಾಣುವಿರಿ. ಮತ್ತಾಯನು 6:33 - (JBP) ವಚನದಲ್ಲಿರುವ ಮೂಲತತ್ವವು ಇಲ್ಲೂ ಸಹ ಅನ್ವಯಿಸುತ್ತದೆ: "ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ಅವರ ನೀತಿಗಾಗಿಯೂ ತವಕಪಟ್ಟರೆ, ಬೇರೆಲ್ಲಾ ಸಂಗತಿಗಳು ಕೂಡ ಸೂಕ್ತ ಸಮಯದಲ್ಲಿ ನಿಮಗೆ ನಿಶ್ಚಯವಾಗಿ ಸಿಗುತ್ತವೆ"
ಯಾರು ಆತ್ಮಿಕ ಸಂಗತಿಗಳನ್ನು ಕಡೆಗಣಿಸುತ್ತಾರೋ ಇಲ್ಲವೇ ನಿರ್ಣಯದಲ್ಲಿ ಅದಕ್ಕೆ ಕಡಿಮೆ ಮಹತ್ವವನ್ನು ಕೊಡುವುದಾದರೂ ಸಹ, ದೇವರಿಂದ ಸಿಗುವ ಅತ್ಯುತ್ತಮ ಕೊಡುಗೆಯನ್ನು ಅವರು ನಿರಾಕರಿಸಿದಂತೆ ಆಗುತ್ತದೆ.
ಒಬ್ಬ ಮನುಷ್ಯನ ’ಪ್ರಾಣ’ ಅಥವಾ ’ಜೀವ’ ದಲ್ಲಿ ಆತನ ಮನಸ್ಸು, ಭಾವನೆಗಳು ಮತ್ತು ಆತನ ಇಚ್ಛಾಶಕ್ತಿಯು ಒಳಗೊಂಡಿರುತ್ತದೆ. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರುವುದಕ್ಕೆ, ಈ ಮೂರು ಕ್ಷೇತ್ರಗಳಲ್ಲಿ ಸ್ವಲ್ಪ ಪ್ರಮಾಣದ ಸಮಾನತೆ ಇರುವುದು ಅವಶ್ಯವಾಗಿದೆ. ಈ ವಿಷಯಗಳಲ್ಲಿ ನಾವು ಪಟ್ಟುಬಿಡದೆ ಒಂದೇ ನಿಲುವು ಇರಿಸಿಕೊಳ್ಳಲು ಆಗುವುದಿಲ್ಲ (ಆತ್ಮಿಕ ಐಕ್ಯತೆಯ ವಿಷಯದಲ್ಲಿ ಇರುವ ಹಾಗೆ), ಯಾಕೆಂದರೆ ಕೆಲವು ಸಾರಿ ಇಂತಹ ಕ್ಷೇತ್ರಗಳಲ್ಲಿ ಹೊಂದಾಣಿಕೆ ಇಲ್ಲದಿದ್ದರೂ, ದೇವರು ಸಾಮಾನ್ಯ ನಿಯಮಕ್ಕೆ ಅಪವಾದವಾಗಿ ಇಬ್ಬರನ್ನು ವಿವಾಹದ ನಿರ್ಣಯಕ್ಕೆ ನಡೆಸಬಹುದೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ನಾವು ಇಲ್ಲಿ ಸಾಮಾನ್ಯ ಸಂದರ್ಭಗಳ ವಿಚಾರವಾಗಿ ಮಾತನಾಡುತ್ತಿದ್ದೇವೆ.
ಆತ್ಮಕ್ಕೆ ಹೋಲಿಸಿದಾಗ ಪ್ರಾಣದ ಪ್ರಾಮುಖ್ಯತೆಯು ಕೆಳಗಣ ಮಟ್ಟದ್ದಾಗಿದ್ದರೂ, ಪ್ರಾಣವು ಶರೀರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗಾಗಿ ಆತ್ಮಿಕ ಅಂಶವನ್ನು ಪರಿಗಣಿಸಿದ ನಂತರ, ಒಬ್ಬ ಯುವಕನ ಮುಂದಿನ ಪ್ರಶ್ನೆ "ಅವಳು ನೋಡುವುದಕ್ಕೆ ಹೇಗಿದ್ದಾಳೆ?" ಎಂದಲ್ಲ, ಆದರೆ "ಆಕೆ ಬುದ್ಧಿಶಕ್ತಿಯಲ್ಲಿ ಮತ್ತು ಭಾವನೆಗಳಲ್ಲಿ ನನಗೆ ಒಪ್ಪುವಂತವಳಾ?" ಎಂದು ಆಗಿರಬೇಕು. ಹೆಚ್ಚಿನ ಸಂದರ್ಭಗಳಲ್ಲಿ, ಒಬ್ಬ ವ್ಯಕ್ತಿಗಾಗಿ ದೇವರು ಆರಿಸುವ ಸಂಗಾತಿಯು ಅವನ ಮಾನಸಿಕ ವಯಸ್ಸಿಗೆ ಹೊಂದುವವಳು ಆಗಿರುತ್ತಾಳೆ. ಮಾನಸಿಕ ವಯಸ್ಸು ದೈಹಿಕ ವಯಸ್ಸಿಗಿಂತ ಭಿನ್ನವಾಗಿ ಇರಬಹುದು. ಕೆಲವು 25 ವರ್ಷ ವಯಸ್ಸಿನವರು 15 ವರ್ಷ ವಯಸ್ಸಿನವರಂತೆ ವರ್ತಿಸುತ್ತಾರೆ. ಅವರ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯು ಅವರ ದೈಹಿಕ ಬೆಳವಣಿಗೆಗೆ ಹೊಂದಿಕೆಯಾಗಿರುವುದಿಲ್ಲ - ಇದಕ್ಕೆ ಕಾರಣ ಯಾವುದೋ ಕಾಯಿಲೆ ಅಥವಾ ಮಾನಸಿಕ ನ್ಯೂನ್ಯತೆ ಎಂದೇ ಹೇಳುವಂತಿಲ್ಲ, ಆದರೆ ಬಹುಶಃ ಅವರು ತಮ್ಮ ಪೋಷಕರ ಮೇಲೆ ಅತಿಯಾಗಿ ಅವಲಂಬಿಸಿ ಬೆಳೆದಿರಬಹುದು ಅಥವಾ ಬೇರೆ ಯಾವುದೋ ಪರಿಸರದ ಅಂಶಗಳಿಂದಾಗಿ ಇರಬಹುದು.
ನಾವು ಮಾನಸಿಕ ವಯಸ್ಸಿನ ಬಗ್ಗೆ ಏಕೆ ವಿಚಾರ ಮಾಡಬೇಕು ಎಂಬುದಕ್ಕೆ ಅನೇಕ ಕಾರಣಗಳಿವೆ. ದಾಂಪತ್ಯ ಜೀವನದಲ್ಲಿ ಸಂಭಾಷಣೆಗೆ ಬಹಳ ಪ್ರಮುಖ ಪಾತ್ರವಿದೆ, ಮತ್ತು ಇಬ್ಬರು ಸಂಗಾತಿಗಳ ನಡುವೆ ಸಾಮಾನ್ಯ ಅಭಿರುಚಿಗಳು ಬಹಳ ಕಡಿಮೆಯಾಗಿದ್ದಾಗ ಅಥವಾ ಇಲ್ಲದಿದ್ದರೆ, ಇದರಿಂದಾಗಿ ಹಲವು ರೀತಿಯ ಒತ್ತಡಗಳು ಮತ್ತು ಆಶಾಭಂಗಗಳು ಉಂಟಾಗಬಹುದು. ಹಾಗಾಗಿ ಸಾಧಾರಣವಾಗಿ ಇಬ್ಬರ ನಡುವೆ ವಿವಿಧ ಸಮಾನವಾದ ಅಭಿರುಚಿಗಳು ಇರುವುದು ಅವಶ್ಯವಾಗಿದೆ - ಏಕೆಂದರೆ ವೈವಾಹಿಕ ಜೀವನವು ಕೇವಲ ಕೆಲವು ತಿಂಗಳುಗಳಲ್ಲ, ಆದರೆ ಹಲವು ದಶಕಗಳ ಕಾಲ ಇರುವಂಥ್ಥದಾಗಿದೆ. ಅದೇ ರೀತಿ, ಒಬ್ಬರ ಮಾನಸಿಕ ಸಾಮರ್ಥ್ಯವು ಅವರ ಸಂಗಾತಿಗಿಂತ ಬಹಳ ಕೆಳಮಟ್ಟದಲ್ಲಿದ್ದರೆ, ಅದು ಅಸ್ವಾಭಾವಿಕ ದಾಂಪತ್ಯ ಜೀವನಕ್ಕೆ ಕಾರಣವಾಗಬಹುದು. ಹೆಂಡತಿಯು ಒಂದು ವೇಳೆ ಬೌದ್ಧಿಕವಾಗಿ ದೈತ್ಯಳಾಗಿದ್ದರೆ ಅವಳ ಗಂಡನ ಗತಿ ಕಷ್ಟಕರವಾಗುತ್ತದೆ. ಯಾಕೆಂದರೆ ಅವನು ಆಕೆಯ ಕೈಗೊಂಬೆಗಿಂತ ಹೆಚ್ಚೇನೂ ಆಗಿರುವುದಿಲ್ಲ! ಪತಿಯು ಬೌದ್ಧಿಕವಾಗಿ ಬಹಳ ಶ್ರೇಷ್ಠನಾಗಿದ್ದರೆ, ಆಗ ಹೆಂಡತಿಯು ಲೆಕ್ಕಕ್ಕೆ ಬಾರದವಳಂತೆ ಜೀವಿಸಬೇಕಾಗುತ್ತದೆ. ಆ ಸಂದರ್ಭದಲ್ಲಿ ಅವಳು ಮನೆಯ ಒಬ್ಬ ಸೇವಕಿಗಿಂತ ಹೆಚ್ಚೇನೂ ಆಗಿರುವುದಿಲ್ಲ. ಈ ನಿಯಮಕ್ಕೆ ಅಪವಾದಗಳು ಇಲ್ಲವೆಂದು ನಾನು ಹೇಳುತ್ತಿಲ್ಲ, ಅದಲ್ಲದೆ ಇಬ್ಬರ ಬೌದ್ಧಿಕ ಸಾಮರ್ಥ್ಯವು ನಿಖರವಾಗಿ ಒಂದೇ ಸಮನಾಗಿ ಇರಬೇಕೆಂದು ನಾನು ಸೂಚಿಸುತ್ತಿಲ್ಲ. ಇಲ್ಲಿ ನಾನು ಹೇಳುತ್ತಿರುವುದು ಏನೆಂದರೆ, ನೀವು ತತ್ವಶಾಸ್ತ್ರದ ಒಬ್ಬ ಶ್ರೇಷ್ಠ ಪಂಡಿತರಾಗಿದ್ದರೆ, ಒಬ್ಬ ಅನಕ್ಷರಸ್ಥೆ ಹಳ್ಳಿಯ ಹುಡುಗಿಯು ಆತ್ಮಿಕವಾಗಿ ಬಹಳ ಶ್ರೇಷ್ಠಳಾಗಿದ್ದರೂ, ದೇವರು ಆಕೆಯನ್ನು ಮದುವೆಯಾಗುವಂತೆ ನಿಮ್ಮನ್ನು ನಡೆಸುವ ಸಾಧ್ಯತೆ ಇರುವುದಿಲ್ಲ. ಹೆಂಡತಿಯು ತನ್ನ ಪತಿಗೆ ಸೂಕ್ತಳಾದ ಸಹಾಯಕಿ ಆಗಿರಬೇಕು - ಆದ್ದರಿಂದ ಅವಳು ಸ್ವಲ್ಪ ಮಟ್ಟಿಗಾದರೂ ತನ್ನ ಪತಿಯ ಜೀವನ ಮತ್ತು ಕೆಲಸದಲ್ಲಿ ಸಹಕರಿಸಲು ಶಕ್ತಳಾಗಿರಬೇಕು.
ಏ.ಎಸ್. ಟ್ರೈಟನ್ ಎಂಬ ಲೇಖಕರು "ಯಾರ ಪ್ರಪಂಚ" ("Whose World?") ಎಂಬ ಅವರ ಪುಸ್ತಕದಲ್ಲಿ, ಈ ಸಂಗತಿಯನ್ನು ಸೂಕ್ತವಾಗಿ ತೋರಿಸಿಕೊಡುವ ಒಂದು ಘಟನೆಯನ್ನು ವಿವರಿಸಿದ್ದಾರೆ. ಅವರು ಅಲ್ಲಿ ಹೇಳಿರುವಂತೆ, "ಒಬ್ಬ ಅತ್ಯಂತ ಸುಸಂಸ್ಕೃತ ವ್ಯಕ್ತಿ ತನ್ನ ಇಪ್ಪತ್ತರ ವಯಸ್ಸಿನ ನಂತರ ಮಾನಸಾಂತರ ಹೊಂದಿದಾಗ, ತಾನು ಮದುವೆ ಮಾಡಿಕೊಳ್ಳುವ ಹುಡುಗಿ ಒಬ್ಬ ಕ್ರೈಸ್ತ ವಿಶ್ವಾಸಿಯಾಗಿರುವುದು ಮಾತ್ರ ಪ್ರಮುಖ ವಿಷಯವೆಂದು ಭಾವಿಸಿ, ನಂತರ ಬಹಳ ದುಃಖಕ್ಕೆ ಈಡಾದದ್ದನ್ನು ಈ ಲೇಖಕನು ಚೆನ್ನಾಗಿ ನೆನಪಿಸಿಕೊಳ್ಳುತ್ತಾನೆ. ಆತನು ಹೆಚ್ಚು ಕಡಿಮೆ ಅನಕ್ಷರಸ್ಥೆಯಾಗಿದ್ದ ಒಬ್ಬ ಹುಡುಗಿಯನ್ನು ತನ್ನನ್ನು ಮದುವೆಯಾಗಲು ಕೇಳಿಕೊಳ್ಳುತ್ತಾನೆ ಮತ್ತು ಇಷ್ಟು ಮನೋಹರ ಕ್ರೈಸ್ತ ಯುವಕನ ಆಕರ್ಷಣೆಯನ್ನು ನಿರಾಕರಿಸಲು ಆಕೆಗೆ ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ, ಇವರಿಬ್ಬರು ತಮ್ಮ ನಡುವೆ ತೊಂದರೆಗಳು ಮತ್ತು ಘರ್ಷಣೆಗಳು ಉಂಟಾಗುತ್ತಿರುವುದನ್ನು ನೋಡಿದರು. ಆಕೆಗೆ ಓದುವ ಹವ್ಯಾಸವೇ ಇರಲಿಲ್ಲ, ಮತ್ತು ಆತನು ಪುಸ್ತಕಗಳಲ್ಲೇ ಮಗ್ನನಾಗಿ ಇರುತ್ತಿದ್ದನು. ಅವನು ಒಬ್ಬ ಜ್ಞಾನಿಯೂ, ವಿಶ್ಲೇಷಣಾತಜ್ಞನೂ ಆಗಿದ್ದನು, ಆಕೆ ಸಹಜ ಚುರುಕುತನ ಮತ್ತು ವಿವೇಚನೆಯುಳ್ಳ ಹುಡುಗಿಯಾಗಿದ್ದಳು. ಅವರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಮತ್ತು ಇಬ್ಬರೂ ನಿಜವಾದ ಕ್ರೈಸ್ತರಾಗಿದ್ದರು, ಆದರೆ ಅವರು ಸಮನಾಗಿ ಸೇರಿಕೊಂಡು ಮಾಡಬಹುದಾದ ಸಂಗತಿಗಳು ಬಹಳ ಕಡಿಮೆಯಾಗಿದ್ದವು. ಇದರ ಫಲಿತಾಂಶವಾದ ಬಹಳ ಕಾಲದ ಕಷ್ಟದಿಂದಾಗಿ ಇಬ್ಬರು ಅವಿಶ್ವಾಸಿಗಳ ವಿವಾಹ ಇದಾಗಿದ್ದಿದ್ದರೆ ಅದು ಖಂಡಿತವಾಗಿ ಒಡೆದು ಹೋಗುತ್ತಿತ್ತು. ಈ ಸಂಕಟದ ಸಮಯದಲ್ಲಿ ಆ ಮನುಷ್ಯನನ್ನು ಬಹಳ ಅಸಮಾಧಾನಗೊಳಿಸಿದ ಸಂಗತಿ ಏನೆಂದರೆ ಪ್ರಾರ್ಥನೆಯಿಂದಲೂ ಯಾವುದೇ ಸಮಾಧಾನ ಸಿಗಲಿಲ್ಲ. ಆದರೆ ಪ್ರಾರ್ಥನೆಯು ನಮ್ಮ ಎಲ್ಲಾ ತೊಂದರೆಗಳನ್ನು, ವಿಶೇಷವಾಗಿ ನಾವೇ ಸೃಷ್ಟಿಸಿಕೊಂಡಿರುವ ತೊಂದರೆಗಳನ್ನು, ಪರಿಹರಿಸುವ ವಿಧಾನವಲ್ಲ. ಕೊನೆಗೆ ಒಬ್ಬ ಹೆಚ್ಚಿನ ಅನುಭವಿ ದೇವಸೇವಕರು ಆತನಿಗೆ ಸಹಾಯ ಮಾಡಿದರು ಮತ್ತು ಆತನ ಸಮಸ್ಯೆಗಳಿಗೆ ಆತನೇ ಸಂಪೂರ್ಣ ಹೊಣೆಗಾರನು ಎಂದು ತಿಳಿಸಿದರು ಮತ್ತು ಅವರಿಬ್ಬರ ನಡುವಿನ ಮಾನವ ಅಂತರವನ್ನು ನಿವಾರಿಸಲು ಆತನು ಒಂದು ದೀರ್ಘಾವಧಿಯ ಕಾರ್ಯಕ್ರಮವನ್ನು ಕೈಗೊಳ್ಳಬೇಕೆಂದು ತಿಳಿಸಿದರು. ಇದನ್ನು ಸಫಲಗೊಳಿಸುವುದಕ್ಕೆ ಎರಡೂ ಪಕ್ಷಗಳಲ್ಲಿ ಹೆಚ್ಚಿನ ಪ್ರಾರ್ಥನೆ ಮತ್ತು ಪವಿತ್ರಾತ್ಮ-ಪ್ರೇರಿತ ಕೃಪೆಯ ಅಗತ್ಯತೆಯಿತ್ತು, ಆದರೆ ಅದರ ಜೊತೆಗೆ ಅವರಿಬ್ಬರೂ ತಮ್ಮ ಸ್ವಾಭಾವಿಕ ಪ್ರತಿಭೆಗಳು ಮತ್ತು ಕೌಶಲ್ಯಗಳು ಮತ್ತು ತಮ್ಮ ತಮ್ಮಲ್ಲಿ ಹುದುಗಿದ್ದ ಶಕ್ತಿಯನ್ನು ಉಪಯೋಗಿಸುವುದು ಸಹ ಅವಶ್ಯವಾಗಿತ್ತು. ಆಕೆಯು ಪುಸ್ತಕಗಳನ್ನು ಓದಿ ಆನಂದಿಸುವ ಅಭಿರುಚಿಯನ್ನು ಬೆಳೆಸಿಕೊಂಡಳು, ಆತನು ಆಕೆಯ ಆಸಕ್ತಿಗಳನ್ನು ಗಮನಿಸಿ ಪ್ರೋತ್ಸಾಹಿಸಲು ಕಲಿತುಕೊಂಡನು. ದುರದೃಷ್ಟವಶಾತ್, ಹಲವು ಕ್ರೈಸ್ತ ವಿವಾಹಗಳು ಇಂತಹ ಸಂದರ್ಭಗಳಲ್ಲಿ ತೊಡಕು, ಅಡಚಣೆಗಳಿಗೆ ಈಡಾಗುತ್ತವೆ, ಏಕೆಂದರೆ ಅವರು ದೇವರ ಯೋಜನೆಯಲ್ಲಿ ವಿವಾಹದ ಮೂಲೋದ್ದೇಶವನ್ನು ಅರಿತುಕೊಳ್ಳುವುದಿಲ್ಲ (ಅಥವಾ ಅದರ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತಾರೆ)."
ಈ ಮೇಲಿನ ಪ್ರಕರಣದ ಮೂಲಕ ಸ್ಪಷ್ಟವಾಗಿ ಕಂಡುಬರುವುದು ಏನೆಂದರೆ, ಮಾನಸಿಕ ಮಟ್ಟದ ಹೊಂದಾಣಿಕೆಯನ್ನು ಕಡೆಗಣಿಸುವುದು ಇಬ್ಬರು ಸಂಗಾತಿಗಳಿಗೂ ಅನಾವಶ್ಯಕವಾಗಿ ಕಷ್ಟಗಳನ್ನು ಹಾಗೂ ಸಂಕಟಗಳನ್ನು ಆಹ್ವಾನಿಸಿದಂತೆ ಆಗುತ್ತದೆ. ಈ ಅಂಶವನ್ನು ನಿರ್ಲಕ್ಷಿಸುವುದು ಆತ್ಮಿಕತೆಯ ಲಕ್ಷಣವಲ್ಲ, ಏಕೆಂದರೆ ದೇವರ ಉದ್ದೇಶ ಒಬ್ಬ ಜೊತೆಗಾರನು/ ಜೊತೆಗಾರ್ತಿಯು ನಿಜವಾದ ಒಡನಾಡಿಯಾಗಿ ಇರಬೇಕು ಎಂಬುದಾಗಿದೆ.
ಒಬ್ಬ ಪುರುಷನು ತಾನು ಪರಿಗಣಿಸುತ್ತಿರುವ ಹುಡುಗಿಯ ಬಗ್ಗೆ ಬಹುಶಃ ತನ್ನನ್ನೇ ಪ್ರಶ್ನಿಸಿಕೊಳ್ಳಲು ಸೂಕ್ತವಾದ ಒಂದು ಬುದ್ಧಿವಂತಿಕೆಯ ಪ್ರಶ್ನೆ ಯಾವುದೆಂದರೆ, "ನನ್ನ ಮಕ್ಕಳಿಗೆ ತಾಯಿ ಆಗಬೇಕೆಂದು ನಾನು ಬಯಸುವವಳು ಮತ್ತು ನನ್ನೊಂದಿಗೆ ಪ್ರಾರ್ಥಿಸಿ ಹಾಗೂ ಚರ್ಚಿಸಿ, ಜೀವನದ ಸಮಸ್ಯೆಗಳನ್ನು ಪರಿಹರಿಸಬಹುದಾದಂತ ವ್ಯಕ್ತಿ ಇವಳು ಆಗಿದ್ದಾಳಾ?"
ಈಗ ಭಾವನಾತ್ಮಕ ಕ್ಷೇತ್ರಕ್ಕೆ ಬರೋಣ. ಸಂತೋಷವಾಗಿ ಬಾಳುವುದಕ್ಕೆ ಮತ್ತು ವಿವಾಹದಲ್ಲಿ ಅನ್ಯೋನ್ಯತೆಯನ್ನು ಹೊಂದುವುದಕ್ಕೆ ಇಲ್ಲಿಯೂ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಅವಶ್ಯವಾಗಿದೆ. ಉದಾಹರಣೆಗೆ, ಒಬ್ಬ ಪ್ರಶಾಂತ ಮತ್ತು ಗಂಭೀರ ಸ್ವಭಾವದ ಯುವಕನಿಗೆ ತಟ್ಟನೆ ಆವೇಶಕ್ಕೆ ಒಳಗಾಗುವ ಒಬ್ಬ ಹುಡುಗಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಅವರಿಬ್ಬರೂ ಸಮನಾಗಿ ಆತ್ಮಿಕರಾಗಿರಬಹುದು, ಆದರೆ ಅವರಿಬ್ಬರು ವಿವಾಹವಾದರೆ ಅವರ ಮಾನಸಿಕ ಪ್ರವೃತ್ತಿಯಲ್ಲಿರುವ ವ್ಯತ್ಯಾಸದಿಂದಾಗಿ ಅನೇಕ ಸಮಸ್ಯೆಗಳು ಉದ್ಭವಿಸಬಹುದು.
ಭಾವನೆಗಳಿಂದ ಬಹಳ ಬೇಗನೆ ಪ್ರಭಾವಿತರಾಗುವವರು ಅದೇ ರೀತಿಯ ಮನೋಭಾವ ಹೊಂದಿರುವವರನ್ನು ಮಾತ್ರ ಮದುವೆ ಮಾಡಿಕೊಳ್ಳಬೇಕೆಂದು ನನ್ನ ಮಾತಿನ ಅರ್ಥವಲ್ಲ - ಹಾಗೆ ಮಾಡಿದರೆ ಅವರ ಜೀವನ ಬಹಳ ಅಸ್ವಾಭಾವಿಕ ಆಗಿರುತ್ತದೆ. ಹಾಗೆಯೇ ಪ್ರಶಾಂತ ಹಾಗೂ ಗಂಭೀರ ಸ್ವಭಾವವನ್ನು ಹೊಂದಿರುವವರು ತಮ್ಮಷ್ಟೇ ಪ್ರಶಾಂತ ಮತ್ತು ಗಂಭೀರವಾದವರನ್ನು ಮಾತ್ರ ವಿವಾಹವಾದರೆ, ಅವರ ಮನೆ ಒಂದು ಸ್ಮಶಾನಭೂಮಿಯಂತೆ ಆಗಬಹುದು! ಆದಾಗ್ಯೂ, ಮಾನಸಿಕ ಪ್ರವೃತ್ತಿಯಲ್ಲಿ ಇಬ್ಬರ ನಡುವೆ ವಿಪರೀತ ವ್ಯತ್ಯಾಸ ಇರದಂತೆ ನೋಡಿಕೊಳ್ಳುವದು ಒಂದು ಮುಖ್ಯವಾದ ಅಂಶವಾಗಿದೆ.
ಖಂಡಿತವಾಗಿ, ನೀವು ಮದುವೆಯಾಗಲು ಪರಿಗಣಿಸುತ್ತಿರುವ ವ್ಯಕ್ತಿಯಲ್ಲಿ ಹಾಸ್ಯಪ್ರಜ್ಞೆ ಇದೆಯೇ ಎಂದು ನೋಡುವದು ಒಳ್ಳೆಯದೆಂದು ನಾನು ಸಲಹೆ ಮಾಡುತ್ತೇನೆ. ಆತನು ಒಬ್ಬ ಹಾಸ್ಯಗಾರನಾಗಿರಬೇಕಿಲ್ಲ (ಹಾಗೆ ಇಲ್ಲದಿರುವುದು ಒಳ್ಳೆಯದು), ಆದರೆ ಆತನು ತನ್ನ ಕುರಿತಾದ ಹಾಸ್ಯವನ್ನು ಆನಂದಿಸುವವನು ಆಗಿರಬೇಕು. ವೈವಾಹಿಕ ಜೀವನದಲ್ಲಿ ವಿನೋದಭಾವವು ಕನಿಷ್ಠ ಪಕ್ಷ ಎರಡು ಕಾರಣಗಳಿಗಾಗಿ ಅತ್ಯಂತ ಹೆಚ್ಚಿನ ಮಹತ್ವವನ್ನು ಹೊಂದಿದೆ. ಮೊದಲನೆಯದಾಗಿ, ಅದು ಒಂದು ಸುರಕ್ಷಾ ದ್ವಾರದಂತೆ ಕಾರ್ಯ ನಿರ್ವಹಿಸುತ್ತದೆ. ಅದು ಕೋಪೋದ್ವೇಗದ ವಿವಾದಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಎರಡನೆಯದಾಗಿ, ಅದು ಜೀವನದಲ್ಲಿ ಉತ್ಸುಕತೆಯನ್ನು ತರುತ್ತದೆ. ತಮಾಷೆ ಮಾಡುವುದು ಮತ್ತು ತಮಾಷೆಗೆ ಗುರಿಯಾಗುವುದು ಇಲ್ಲದಿರುವ ದಾಂಪತ್ಯವು ನೀರಸವಾಗಬಹುದು!
ಪ್ರಾಣಕ್ಕೆ ಸಂಬಂಧಿಸಿದ ಮೂರನೆಯ ಕ್ಷೇತ್ರ "ಮನೋಸಂಕಲ್ಪ" ಅಥವಾ "ಚಿತ್ತ"ವಾಗಿದೆ. ನಿಮ್ಮ ಪ್ರತಿಯೊಂದು ಮಾತಿಗೆ "ಹೌದು" ಎಂದು ಹೇಳುವುದು ತನ್ನ ಕರ್ತವ್ಯವೆಂದು ಭಾವಿಸುವ ಹುಡುಗಿಗಾಗಿ ನೀವು ಹುಡುಕುವುದು ಸರಿಯಲ್ಲ - ಅಂತಹ ಹುಡುಗಿ ಒಂದು ’ರೋಬೋಟ್’ಯಂತ್ರದಂತಿರುತ್ತಾಳೆ. ಒಬ್ಬ ಪುರುಷನು ತನ್ನ ಸ್ವಂತ ವ್ಯಕ್ತಿತ್ವಕ್ಕಿಂತ ಹೆಚ್ಚು ಪ್ರಬಲವಾದ ವ್ಯಕ್ತಿತ್ವದ ಸ್ತ್ರೀಯನ್ನು ಮದುವೆಯಾಗುವುದು ಅಪಾಯಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಮತ್ತೊಂದೆಡೆ, ಬಲವಾದ ನಂಬಿಕೆಗಳನ್ನು ಹೊಂದಿರುವ ಮಹಿಳೆಯು ತನ್ನ ಪತಿಗೆ ಒಂದು ದೊಡ್ಡ ಆಸ್ತಿಯಾಗಬಹುದು. ನೀವು ಪರಿಗಣಿಸುವ ಹುಡುಗಿಯು ನಿಶ್ಚಯವಾಗಿ ನಿಮಗೆ ಅಧೀನಳಾಗಲು ಸಿದ್ಧಳಿರಬೇಕು, ಆದರೆ ಕೇವಲ "ಹೌದು" ಎಂದು ತಲೆಯಾಡಿಸುವ ಹಂತಕ್ಕೆ ಅಲ್ಲ. ಅನೇಕ ಪುರುಷರು ತಮ್ಮ ಪತ್ನಿಯರ ನಿಷ್ಠಾವಂತ ಮತ್ತು ಪ್ರಾಮಾಣಿಕ ಟೀಕೆಗಳ ಮೂಲಕ ಶ್ರೇಷ್ಠ ಮನುಷ್ಯರಾಗಿದ್ದಾರೆ.
ವಾಲ್ಟರ್ ತ್ರೋಬಿಚ್ ಎಂಬ ಲೇಖಕರು ಬರೆದ "I Loved A Young Man" ಎಂಬ ಪುಸ್ತಕದಲ್ಲಿ, ಅವರ ಸ್ನೇಹಿತರಲ್ಲೊಬ್ಬನು ತನ್ನ ಭವಿಷ್ಯದ ಹೆಂಡತಿಯಿಂದ ತಾನು ಏನನ್ನು ನಿರೀಕ್ಷಿಸುತ್ತೇನೆಂದು ಬರೆದದ್ದನ್ನು ಅವರು ವಿವರಿಸಿದ್ದಾರೆ:
ಆದರೆ ನಿಮ್ಮ ಸಂಗಾತಿಯು ಒಂದು ಸ್ವಂತ ಚಿತ್ತವನ್ನು ಹೊಂದಿದ್ದು, ಅದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಲು ಸಿದ್ದರಾಗಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಒಬ್ಬ ಪುರುಷನಿಗೆ ಬೇಕಾಗಿರುವುದು ಒಬ್ಬಳು ಗುಲಾಮಳಲ್ಲ, ಆದರೆ ಒಬ್ಬ ಸಮಾನ ಸಹಭಾಗಿನಿಯು ಬೇಕಾಗಿದ್ದಾಳೆ.
ಮಾನವ ಶರೀರವು ಸಹ ದೇವರ ಸೃಷ್ಟಿಯಲ್ಲಿ ಸೇರಿದೆ ಮತ್ತು ವಿವಾಹದ ಬಗ್ಗೆ ಆಲೋಚಿಸುವ ಸಂದರ್ಭದಲ್ಲಿ ಮಾನವನ ಶಾರೀರಿಕ ವಿಷಯಗಳಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸಹ ಪರಿಗಣಿಸುವ ಅವಶ್ಯಕತೆಯಿದೆ. ಹಾಗೆ ಮಾಡುವಾಗ, ಈ ವಿಷಯದಲ್ಲಿ ಅತಿರೇಕವಾಗಿ ನಡೆದುಕೊಳ್ಳುವ ಕೆಲವು ಜನರನ್ನು ಅನುಸರಿಸುವುದು ನಮ್ಮ ಉದ್ದೇಶವಲ್ಲ, ಏಕೆಂದರೆ ಅಂತಹ ಜನರು ತಮ್ಮ ಕಾಮಾಭಿಲಾಷೆಯನ್ನು ತೃಪ್ತಿಪಡಿಸುವುದಕ್ಕಾಗಿ ವಿವಾಹವಾಗುತ್ತಾರೆ ಮತ್ತು ಅವರಿಗೆ ವಿವಾಹವು ನ್ಯಾಯಬದ್ಧವಾದ ವ್ಯಭಿಚಾರವೇ ಹೊರತು ಬೇರೇನೂ ಅಲ್ಲ. ಅದೇ ವೇಳೆಯಲ್ಲಿ, ನಾವು ಮತ್ತೊಂದು ವಿಪರೀತ ನಿಲುವನ್ನು ತೆಗೆದುಕೊಂಡು ಕೇವಲ ಆತ್ಮಿಕ ವಿಷಯಗಳು ಮಾತ್ರ ಮುಖ್ಯವಾದವು ಎಂದು ಹೇಳಿ, ಆ ಮೂಲಕ ಶಾರೀರಿಕ ವಿಷಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲು ಬಯಸುವುದಿಲ್ಲ. ಇವೆರಡು ವಿಪರೀತವಾದ ನಿಲುವುಗಳ ನಡುವೆ ದೇವರ ವಾಕ್ಯವು ತೋರಿಸುವ ಮಧ್ಯದ ಮಾರ್ಗವನ್ನು ನಾವು ಆರಿಸಿಕೊಳ್ಳಬೇಕೆಂದು ದೇವರು ನಿರೀಕ್ಷಿಸುತ್ತಾರೆ.
ನಾವು ಶರೀರ ತ್ಯಜಿಸಿರುವ ಆತ್ಮಿಕರಾಗಿಲ್ಲ ಆದರೆ ಮಾನವ ಜೀವಿಗಳಾಗಿದ್ದೇವೆ, ಹಾಗಾಗಿ ವಿವಾಹದಲ್ಲಿ ಇಬ್ಬರು ಜೀವನ ಸಂಗಾತಿಗಳ ನಡುವೆ ಸ್ವಲ್ಪ ಮಟ್ಟಿಗೆ ಶಾರೀರಿಕ ಆಕರ್ಷಣೆ ಅವಶ್ಯವಾಗಿದೆ. ಶಾರೀರಿಕ ಸೌಂದರ್ಯದಿಂದ ಆಕರ್ಷಿತರಾಗುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಅಂತಹ ಆಕರ್ಷಣೆಯು ತಕ್ಕುದಾದ(ಅದರದ್ದೇ ಆದ) ಸ್ಥಳದಲ್ಲಿ, ಅಂದರೆ ಆತ್ಮ ಮತ್ತು ಪ್ರಾಣದ ಪ್ರಾಮುಖ್ಯತೆಯ ನಂತರದ ಮೂರನೆಯ ಸ್ಥಾನದಲ್ಲಿ ಇರಬೇಕು. ಆದಾಗ್ಯೂ, ಯಾರಾದರೂ ದೈಹಿಕ ಆಕರ್ಷಣೆಗೆ ಅಥವಾ ವ್ಯಕ್ತಿಯ ಮೈಬಣ್ಣಕ್ಕೆ ಅನುಚಿತವಾದ ಮಹತ್ವವನ್ನು ಕೊಟ್ಟರೆ, ಆ ವ್ಯಕ್ತಿಯು ಅಂತ್ಯದಲ್ಲಿ ವಿವಾಹದಿಂದ ಬಹಳ ನಿರಾಶೆಗೊಳ್ಳುತ್ತಾನೆ. ನೀವು ಆರಂಭದಲ್ಲಿ ಒಬ್ಬ ಹುಡುಗಿಯ ಆತ್ಮಿಕ ದೃಢತೆಯಿಂದಲ್ಲ, ಆದರೆ ಆಕೆಯ ದೈಹಿಕ ಸೌಂದರ್ಯದಿಂದ ಆಕೆಯ ಕಡೆಗೆ ಆಕರ್ಷಿತರಾದರೆ, ಮುಂದೆ ವಿವಾಹದ ನಂತರ - ಆ ಹುಡುಗಿಯು ಒಬ್ಬ ವಿಶ್ವಾಸಿಯಾಗಿದ್ದರೂ ಸಹ - ಅನೇಕ ಸಮಸ್ಯೆಗಳು ನಿಮಗಾಗಿ ಕಾದು ನಿಂತಿವೆಯೆಂದು ನೀವು ಕಂಡುಕೊಳ್ಳುವಿರಿ. ಕೆಲವು ಅಪರೂಪದ ಅಪವಾದಗಳನ್ನು ಬಿಟ್ಟರೆ, ಸಾಮಾನ್ಯವಾಗಿ ಒಬ್ಬ ಸುಂದರಿಯಾದ ಹೆಣ್ಣಿನಲ್ಲಿ ಬಹಳ ಹೆಚ್ಚಿನ ಆತ್ಮಪ್ರತಿಷ್ಠೆ ಇರುತ್ತದೆ ಮತ್ತು ಪುರುಷರಿಂದ ಹೆಚ್ಚಿನ ಮಹತ್ವ ದೊರಕಿಸಿಕೊಳ್ಳುವುದು ಆಕೆಗೆ ವಾಡಿಕೆಯಾಗಿರುತ್ತದೆ. ಮದುವೆಯಾದ ಮೇಲೆ ಆಕೆ ಸ್ವಾಭಾವಿಕವಾಗಿ ತನ್ನ ಗಂಡನಿಂದ ಅದೇ ರೀತಿಯ ವಿಶೇಷ ಕಾಳಜಿಯನ್ನು ಅಪೇಕ್ಷಿಸುತ್ತಾಳೆ. ಹಾಗಾಗಿ ನಿಮ್ಮ "ಸುಂದರಿಯಾದ" ಪತ್ನಿಯು ನೀವು ಆಕೆಯೊಂದಿಗೆ ಕಳೆಯುವ ಸಮಯ ಮತ್ತು ಆಕೆಗೆ ತೋರಿಸುವ ಕಾಳಜಿಯ ವಿಷಯದಲ್ಲಿ ಮಿತಿಮೀರಿದ ಬೇಡಿಕೆಗಳನ್ನು ಹೊಂದಿರುವುದನ್ನು ನೀವು ನೋಡುವಿರಿ.
’ವಯಸ್ಸು’ ಗಣನೆಗೆ ತೆಗೆದುಕೊಳ್ಳಬೇಕಾದ ಒಂದು ಪ್ರಮುಖ ಅಂಶವಾಗಿದೆ. ಪತಿ-ಪತ್ನಿಯ ಸಂಬಂಧವು ಕ್ರಿಸ್ತನ ಮತ್ತು ಕ್ರೈಸ್ತಸಭೆಯ ಸಂಬಂಧವನ್ನು ಸಾಂಕೇತಿಕವಾಗಿ ತೋರಿಸುವುದರಿಂದ, ಮತ್ತು ಪುರುಷನು ಸ್ತ್ರೀಗೆ ತಲೆಯಾಗಿ ಇರಬೇಕಾದ ಕಾರಣ, ದಂಪತಿಗಳಲ್ಲಿ ಪುರುಷನು ವಯಸ್ಸಿನಲ್ಲಿ ದೊಡ್ಡವನು ಮತ್ತು ಪತ್ನಿಗಿಂತ ಹೆಚ್ಚು ಪ್ರೌಢನೂ ಆಗಿರುವುದು ಸೂಕ್ತವಾಗಿದೆ. ಒಬ್ಬ ಪುರುಷನು ಪ್ರೌಢನಾಗಲು ಹೆಚ್ಚು ಸಮಯ ಬೇಕಾಗುತ್ತದೆ, ಹಾಗಾಗಿ ಅವನು ವಯಸ್ಸಿನಲ್ಲಿ ಕಿರಿಯನಾಗಿದ್ದರೆ, ಅವನಲ್ಲಿ ಆತನ ಪತ್ನಿಗಿಂತ ಕಡಿಮೆ ಪರಿಪಕ್ವತೆ ಇರಬಹುದು. ಇದು ಒಳ್ಳೆಯದಲ್ಲ, ಏಕೆಂದರೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಗೌರವಿಸಲು ಸಾಧ್ಯವಾಗಬೇಕು. ಪುರುಷನು ವಯಸ್ಸಿನಲ್ಲಿ ಹಿರಿಯನಾಗಿದ್ದಾಗ, ಆತನಲ್ಲಿರುವ ಹೆಚ್ಚಿನ ಲೌಕಿಕ ವ್ಯವಹಾರ ಜ್ಞಾನವು ಉಪಯೋಗಕ್ಕೆ ಬರುತ್ತದೆ. ಪುರುಷನು ವಯಸ್ಸಿನಲ್ಲಿ ಹಿರಿಯನಾಗಿದ್ದರೆ ಮತ್ತೊಂದು ಒಳ್ಳೆಯ ಅಂಶವೆಂದರೆ, ಒಬ್ಬ ಸ್ತ್ರೀಯಲ್ಲಿ ದೈಹಿಕ ಶಕ್ತಿಯು ಒಬ್ಬ ಪುರುಷನಿಗಿಂತ ಬೇಗನೆ ಕ್ಷೀಣಿಸುತ್ತದೆ - ಮುಖ್ಯವಾಗಿ ಮಕ್ಕಳನ್ನು ಹೆತ್ತ ನಂತರ; ಹಾಗಾಗಿ ಆಕೆ ವಯಸ್ಸಿನಲ್ಲಿ ಹಿರಿಯಳಾಗಿದ್ದರೆ, ಮಧ್ಯ ವಯಸ್ಸಿನಲ್ಲಿ ಅವರಿಬ್ಬರ ನಡುವಿನ ದೈಹಿಕ ತಾಕತ್ತಿನಲ್ಲಿ ಹೆಚ್ಚಿನ ವ್ಯತ್ಯಾಸ ಉಂಟಾಗುತ್ತದೆ. ಇವೆಲ್ಲಾ ಕಾರಣಗಳಿಂದ, ಒಬ್ಬ ಪುರುಷನು ತನಗಿಂತ ವಯಸ್ಸಿನಲ್ಲಿ ಹಿರಿಯಳಾದ ಹುಡುಗಿಯನ್ನು ವಿವಾಹ ಮಾಡಿಕೊಳ್ಳುವುದು ಉಚಿತವಲ್ಲ.
ಆದಾಗ್ಯೂ, ವಯಸ್ಸಿನ ಅಂತರದ ಪ್ರಭಾವ ಕೆಲವು ಜನರಲ್ಲಿ ಇತರರಿಗಿಂತ ಹೆಚ್ಚಾಗಿ ಇರುವುದರಿಂದ, ಮೇಲೆ ಹೇಳಿರುವ ಮಾರ್ಗದರ್ಶನಕ್ಕೆ ಕೆಲವು ಅಪವಾದಗಳು ಇರಬಹುದು. ವಯಸ್ಸಿನಲ್ಲಿ ಹಿರಿಯಳಾದ ಹುಡುಗಿಯೊಂದಿಗೆ ಮದುವೆಯ ಪ್ರಸ್ತಾಪ ಮಾಡುವುದಾದರೆ, ವಯಸ್ಸಿನ ವ್ಯತ್ಯಾಸ ಎರಡು ಅಥವಾ ಮೂರು ವರ್ಷಗಳಿಗಿಂತ ಹೆಚ್ಚು ಇರಬಾರದು. ಇದಕ್ಕಿಂತ ಹೆಚ್ಚು ವ್ಯತ್ಯಾಸವಿದ್ದರೆ, ಸ್ತ್ರೀಯು ಆಕೆಯ ಗಂಡನಿಗೆ ಹೆಂಡತಿಗಿಂತ ಹೆಚ್ಚಾಗಿ ತಾಯಿಯಂತೆ ಇರುತ್ತಾಳೆ. ಯಾವುದೇ ಸನ್ನಿವೇಶದಲ್ಲೂ, ಒಬ್ಬ ಹುಡುಗಿ ಪರಿಪಕ್ವತೆಯಲ್ಲಿ ತನಗಿಂತ ಕಡಿಮೆ ಇರುವ ಒಬ್ಬ ಪುರುಷನನ್ನು ವಿವಾಹ ಮಾಡಿಕೊಳ್ಳಬಾರದು.
ಹಾಗೆಯೇ ಒಬ್ಬ ಹುಡುಗಿ ಆಕೆಯ ವಯಸ್ಸಿಗಿಂತ ಹತ್ತು ವರ್ಷಗಳಿಗೂ ಹೆಚ್ಚು ಹಿರಿಯನಾದ ಒಬ್ಬ ಹುಡುಗನನ್ನು ಮದುವೆ ಮಾಡಿಕೊಳ್ಳುವುದು ಅನುಚಿತವಾಗಿದೆ, ಏಕೆಂದರೆ ಅಂತಹ ಪುರುಷನು ಆಕೆಗೆ ಒಬ್ಬ ಗಂಡನಿಗಿಂತ ಹೆಚ್ಚಾಗಿ ಒಬ್ಬ ತಂದೆಯಂತಿರುತ್ತಾನೆ
.ವಿವಾಹದ ವಯಸ್ಸಿನ ವಿಚಾರದಲ್ಲಿ ನಿರ್ದಿಷ್ಟ ನಿಯಮಗಳನ್ನು ವಿಧಿಸಲು ಬರುವುದಿಲ್ಲ, ಆದರೆ ಒಬ್ಬ ಪುರುಷನು 25 ಮತ್ತು 32 ವಯಸ್ಸಿನ ನಡುವೆ ಮದುವೆ ಮಾಡಿಕೊಳ್ಳುವುದು ಯೋಗ್ಯವಾಗಿದೆ. 25ರ ಮೊದಲಿನ ಅವಧಿಯಲ್ಲಿ ಆತನು ಪರಿಪಕ್ವನಾಗಿರುವುದಿಲ್ಲ, ಅಷ್ಟೇ ಅಲ್ಲದೆ ಅದು ಆತನು ಕರ್ತನ ಕಾರ್ಯದಲ್ಲಿ ತೊಡಗಿರಬೇಕಾದ ಸಮಯವಾಗಿದೆ. 32ರ ನಂತರ, ಆತನಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಹೆಚ್ಚು ಕಷ್ಟವಾಗುತ್ತದೆ (ವಿವಾಹದಲ್ಲಿ ಹೊಂದಾಣಿಕೆ ಅನಿವಾರ್ಯವಾಗಿದೆ), ಏಕೆಂದರೆ ಆತನು ತನ್ನ ಅಭ್ಯಾಸಗಳಲ್ಲಿ ಪಳಗಿರುತ್ತಾನೆ. ಹಾಗೆಯೇ, ಒಬ್ಬ ಹುಡುಗಿ 20 ಮತ್ತು 27 ವಯಸ್ಸಿನ ನಡುವೆ ಮದುವೆ ಮಾಡಿಕೊಳ್ಳುವುದು ಯೋಗ್ಯವಾಗಿದೆ. ಇವು ಬದಲಿಸಲಾಗದ ನಿಯಮಗಳಲ್ಲ, ಏಕೆಂದರೆ ಒಬ್ಬ ವ್ಯಕ್ತಿಯು ಸಂದರ್ಭಗಳಿಗೆ ಅನುಸಾರವಾಗಿ ಅಥವಾ ಇತರ ಕಾರಣಕ್ಕಾಗಿ ಕೆಲವೊಮ್ಮೆ ಹೆಚ್ಚು ವಯಸ್ಸಾದ ಮೇಲೆ ಮದುವೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಎದುರಿಸಬಹುದು. ಆದರೆ ನಿರ್ಧಾರ ಮಾಡುವ ಅವಕಾಶ ನಿಮ್ಮ ಕೈಯಲ್ಲಿದ್ದರೆ, ಮೇಲೆ ಹೇಳಿರುವ ಪರಿಮಿತಿಯನ್ನು ಇರಿಸಿಕೊಳ್ಳುವುದು ಉತ್ತಮವಾಗಿದೆ.
ಅವಶ್ಯವಾಗಿ ಪರಿಗಣಿಸಬೇಕಾದ ಇನ್ನೂ ಕೆಲವು ವಿಷಯಗಳು ಯಾವುವೆಂದರೆ, ಆರೋಗ್ಯ, ಸಾಮಾನ್ಯ ದೇಹಸ್ಥಿತಿ ಮತ್ತು ಅನುವಂಶಿಕತೆಗೆ ಸಂಬಂಧಿಸಿದ ಅಂಶಗಳು (ಜನಿಸಲಿರುವ ಮಕ್ಕಳ ಮೇಲೆ ಇವುಗಳ ಪರಿಣಾಮ ಉಂಟಾಗಬಹುದು). ಮುಂದಿನ ಸಂತತಿಯ ಮೇಲೆ ಪರಿಣಾಮ ಬೀರಬಹುದಾದ ಅನುವಂಶಿಕ ನ್ಯೂನ್ಯತೆಗಳು, ಕಾಯಿಲೆಗಳು ಅಥವಾ ಮಾನಸಿಕ ರೋಗಗಳು (ತಮ್ಮಲ್ಲಿ ಅಥವಾ ಕುಟುಂಬದ ಹತ್ತಿರದ ಸಂಬಂಧಿಕರಲ್ಲಿ) ಇದ್ದರೆ, ಎರಡೂ ಪಕ್ಷಗಳು ಸಂಪೂರ್ಣ ಪ್ರಾಮಾಣಿಕತೆಯಿಂದ ತಮ್ಮ ಹಿನ್ನೆಲೆಯ ಬಗ್ಗೆ ಬಿಚ್ಚಿ ಮಾತಾಡುವುದು ಅವಶ್ಯವಾಗಿದೆ. ಈ ಕುರಿತಾಗಿ ಯಾವುದೇ ಸಂಶಯಗಳು ಇದ್ದಲ್ಲಿ, ಒಬ್ಬ ವೈದ್ಯರ ಸಲಹೆಯನ್ನು ಪಡೆದು ಖಾತ್ರಿ ಪಡಿಸಿಕೊಳ್ಳುವುದು ಉತ್ತಮ. ಇಂತಹ ದೋಷಗಳು ಮದುವೆಯನ್ನು ನಿಲ್ಲಿಸಬೇಕಿಲ್ಲ, ಏಕೆಂದರೆ ವಿವಾಹದ ಇನ್ನೊಬ್ಬ ಸಹಭಾಗಿಯು ಈ ವಿವಾಹವು ದೇವರ ಚಿತ್ತದ ಪ್ರಕಾರವಾಗಿದೆ ಎಂದು ಭಾವಿಸಬಹುದು ಮತ್ತು ಹಾಗಾಗಿ ದೇವರು ಎಲ್ಲಾ ದೈಹಿಕ ನ್ಯೂನ್ಯತೆಗಳನ್ನು ನಿಯಂತ್ರಿಸಲು ಅಥವಾ ಅವುಗಳನ್ನು ಗುಣಪಡಿಸಲು ಶಕ್ತರಾಗಿದ್ದಾರೆಂದು ನಂಬಬಹುದು. ಆದರೆ ಇಂತಹ ಯಾವುದೇ ಸಂಗತಿಯನ್ನು ಬಚ್ಚಿಡುವುದು ತಪ್ಪು ಮತ್ತು ಪಾಪಕರವಾಗಿದೆ. ಹೀಗೆ ಮದುವೆಗೆ ಮುಂಚೆ ಬಚ್ಚಿಡಲಾದ ಮತ್ತು ಅನಂತರ ಬಯಲಾದ ಸಂಗತಿಗಳಿಂದಾಗಿ ಹಲವು ವಿವಾಹಗಳು ಒಡೆದುಹೋಗಿವೆ. ಏನೇ ಆದರೂ, ಒಬ್ಬ ವಿಶ್ವಾಸಿಗೆ ಇಂತಹ ವಂಚನೆ ಮಾಡುವ ಅವಕಾಶ ಇರುವುದಿಲ್ಲ. ಪ್ರಾಮಾಣಿಕರಾಗಿ ಇರುವುದರಿಂದ ನೀವು ನಿಮ್ಮ ಸಂಗಾತಿಯನ್ನು ಕಳೆದುಕೊಳ್ಳುತ್ತೀರಿ ಎಂದು ಭಯಪಡುವುದು ಅನಾವಶ್ಯಕ. ಇದಕ್ಕೆ ಬದಲಾಗಿ, ನಿಮ್ಮ ಪ್ರಾಮಾಣಿಕತೆಯಿಂದಾಗಿ ನಿಮ್ಮ ಬಗ್ಗೆ ಆತನಿಗೆ/ಆಕೆಗೆ ಹೆಚ್ಚು ಗೌರವಭಾವ ಉಂಟಾಗಬಹುದು.
ನಿಮ್ಮೊಂದಿಗೆ ಹತ್ತಿರದ ಸಂಬಂಧವುಳ್ಳ ರಕ್ತ-ಸಂಬಂಧಿಕರನ್ನು ಮದುವೆ ಮಾಡಿಕೊಳ್ಳುವುದು ಅಪಾಯಕರವಾಗಿದೆ. ಇದಕ್ಕೆ ಕಾರಣವೇನೆಂದರೆ, ಒಬ್ಬ ವ್ಯಕ್ತಿಯಲ್ಲಿ ವಂಶಾನುಗುಣವಾಗಿ ಹುದುಗಿರುವ ಯಾವುದೋ ದೈಹಿಕ ವಿಪರೀತ ಸ್ಥಿತಿ ಹತ್ತಿರ ಸಂಬಧವುಳ್ಳ ವ್ಯಕ್ತಿಯಲ್ಲೂ ಇರಬಹುದು, ಮತ್ತು ಇದು ನಿಮಗೆ ಜನಿಸುವ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಹತ್ತಿರದ ಸಂಬಂಧಿಕರ ವಿವಾಹವನ್ನು ತಡೆಯುವ ಉದ್ದೇಶದಿಂದ ಸ್ವತಃ ದೇವರೇ ಮಾನವ ಸ್ವಭಾವದಲ್ಲಿ ಇಂತಹ ಪ್ರತಿರೋಧವನ್ನು ಸೃಷ್ಟಿ ಮಾಡಿದ್ದಾರೆ, ಎಂಬುದನ್ನು ನೆನಪಿರಿಸಿಕೊಳ್ಳಿರಿ. ಸತ್ಯವೇದವು ಸಹ ಇಂತಹ ವೈವಾಹಿಕ ಸಂಬಂಧವನ್ನು ನಿಷೇಧಿಸಿದೆ (ಯಾಜಕಕಾಂಡ 18:6).
ಭಾರತ ದೇಶದ ಕೆಲವು ಭಾಗಗಳಲ್ಲಿ, ಒಬ್ಬ ಯುವಕನು ತನ್ನ ಸ್ವಂತ ಅಕ್ಕನ ಮಗಳನ್ನು ಮದುವೆಯಾಗುವ ಪದ್ಧತಿ (ಆಕೆಯು ವಿವಾಹದ ವಯಸ್ಸಿನವಳಾಗಿದ್ದರೆ) ಇರುತ್ತದೆ. ಈ ಪದ್ಧತಿಯು ಅನ್ಯಜನರಿಂದ ಬಂದಿರುತ್ತದೆ ಮತ್ತು ಇದು ಎಂದಿಗೂ ಒಬ್ಬ ವಿಶ್ವಾಸಿಯ ದೃಷ್ಟಿಕೋನಕ್ಕೆ ಸೇರಿದ ಯೋಚನೆ ಆಗಿರಬಾರದು. ಹೇಗಿದ್ದರೂ ಇದು ಪ್ರಕೃತಿಗೂ, ದೇವರ ವಾಕ್ಯಕ್ಕೂ ವಿರುದ್ಧವಾದ ಪದ್ಧತಿಯಾಗಿದೆ. ನಾನು ನೋಡಿರುವ ಇಂತಹ ಒಂದು ವಿವಾಹದಲ್ಲಿ, ಆ ದಂಪತಿಗಳಿಗೆ ಹುಟ್ಟಿದ ಎಲ್ಲಾ ಮಕ್ಕಳೂ ಒಂದಲ್ಲ ಒಂದು ರೀತಿಯ ದೋಷಗಳನ್ನು ಹೊಂದಿದ್ದರು. ಸ್ವತಃ ದೇವರು ಒಂದು ವಿಷಯವನ್ನು ಪ್ರತಿಬಂಧಿಸಿರುವಾಗ, ಅದಕ್ಕೆ ಬಹಳ ವಿಶೇಷ ಕಾರಣಗಳು ಇರಬೇಕೆಂದು ನಮಗೆ ಖಾತರಿಯಾಗಬೇಕು.
ಪ್ರೀತಿ
ಕರ್ತರು ನಿಮ್ಮನ್ನು ವಿವಾಹಕ್ಕಾಗಿ ಒಬ್ಬ ವ್ಯಕ್ತಿಯ ಬಳಿಗೆ ನಡೆಸಿದರೆ, ಅವರು ನಿಮ್ಮಲ್ಲಿ ಆಕೆಗಾಗಿ ಪ್ರೀತಿಯನ್ನು ನಿಶ್ಚಯವಾಗಿ ಇರಿಸುತ್ತಾರೆ. ನಾವು ಮೂರನೇ ಅಧ್ಯಾಯದಲ್ಲಿ ಈಗಾಗಲೇ ಇಂತಹ ಪ್ರೀತಿಯ ಗುಣಲಕ್ಷಣಗಳನ್ನು ಪರಿಗಣಿಸಿದ್ದೇವೆ. ಮದುವೆಗೆ ಮುನ್ನ ಪ್ರೀತಿಯು ಸ್ವಲ್ಪ ಮಟ್ಟಿಗೆ ಬೆಳೆದಿರುತ್ತದೆಂದು ಹೇಳಲು ಬರುವುದಿಲ್ಲ. ಆದರೆ ಕಡಿಮೆ ಪಕ್ಷ ಆ ಪ್ರೀತಿಯು ನಿಮ್ಮಲ್ಲಿ ಹುಟ್ಟಿರಬೇಕು. ಇಸಾಕನು ರೆಬೆಕ್ಕಳನ್ನು ದೇವರು ಆರಿಸಿದ ಕನ್ಯೆಯೆಂದು ಸ್ವೀಕರಿಸಿ ವರಿಸಿದಾಗ (ಆತನು ಆಕೆಯನ್ನು ಹಿಂದೆಂದೂ ಭೇಟಿಯಾಗಿರಲಿಲ್ಲ), "ಅವನು ಆಕೆಯನ್ನು ಪ್ರೀತಿಸಿದನು" ಎಂದು ನಮಗೆ ತೋರಿಸಿಕೊಡಲಾಗಿದೆ (ಆದಿಕಾಂಡ 24:67). ಆತನಿಗೆ ಆಕೆಯ ಹೆಚ್ಚಿನ ಪರಿಚಯ ಇರಲಿಲ್ಲ ಆದರೆ ಈ ವಿಷಯದಲ್ಲಿ ಇದು ದೇವರ ಚಿತ್ತವಾಗಿದೆಯೆಂಬ ಅಂಶ ಆತನಿಗೆ ಸ್ಪಷ್ಟವಾಗಿ ತಿಳಿದಿತ್ತು, ಮತ್ತು ಈ ಕಾರಣದಿಂದಾಗಿ ಆತನ ಹೃದಯದಲ್ಲಿ ಆಕೆಗಾಗಿ ಪ್ರೀತಿಯು ಉಕ್ಕಿತು.
ದೇವರು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನಗೆ ಅಪರಿಚಿತಳಾದ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಳ್ಳುವಂತೆ ನಡೆಸುವುದಿಲ್ಲವೆಂದು (ಅವರು ಇಸಾಕನನ್ನು ನಡೆಸಿದ ಹಾಗೆ) ನಾನು ಒಪ್ಪಿಕೊಳ್ಳುತ್ತೇನೆ. ಅದಲ್ಲದೆ ಆ ವೃತ್ತಾಂತದಲ್ಲಿ ನಡೆದ ಹಾಗೆ, ಸಾಮಾನ್ಯವಾಗಿ ಅವರು ತನ್ನ ಚಿತ್ತವನ್ನು ಇಂತಹ ಅಧ್ಭುತವಾದ ರೀತಿಯಲ್ಲಿ ಸ್ಪಷ್ಟಪಡಿಸುವುದೂ ಇಲ್ಲ. ಈ ಪ್ರಸಂಗದಿಂದ ನಾವು ಕಲಿತುಕೊಳ್ಳಬೇಕಾದ ಪ್ರಮುಖ ಅಂಶ ಏನೆಂದರೆ, ನೀವು ವಿವಾಹವಾಗುತ್ತಿರುವ ವ್ಯಕ್ತಿ ನಿಜವಾಗಿ ನಿಮಗಾಗಿ ದೇವರ ಆಯ್ಕೆಯಾಗಿದ್ದಾರೆಂದು ಖಚಿತಪಡಿಸಿಕೊಳ್ಳುವುದು. ಹಾಗಾಗಿ ನೀವು ವಿವಾಹಕ್ಕಾಗಿ ಪರಿಗಣಿಸುತ್ತಿರುವ ವ್ಯಕ್ತಿ ನಿಜವಾಗಿ ನಿಮಗಾಗಿ ದೇವರ ಆಯ್ಕೆಯಾಗಿದ್ದರೆ, ಆಕೆಯನ್ನು ನೀವು ನೇರವಾಗಿ ಭೇಟಿಯಾಗಿದ್ದರೂ ಸರಿಯೇ ಅಥವಾ ನಿಮ್ಮ ಹೆತ್ತವರ ಮೂಲಕವಾಗಿಯಾದರೂ ಸರಿ - ಕರ್ತರು ನಿಮ್ಮ ಹೃದಯದಲ್ಲಿ ಆಕೆಗಾಗಿ ಪ್ರೀತಿಯನ್ನು ಉಂಟುಮಾಡುತ್ತಾರೆ (ಇಸಾಕನಿಗೆ ಆದಂತೆ). ಸಹಜವಾಗಿ ಈ ಪ್ರೀತಿಯು ಇಬ್ಬರಲ್ಲೂ ಪರಸ್ಪರವಾಗಿ ಹುಟ್ಟಿಕೊಳ್ಳುತ್ತದೆ.
ಆದರೆ ಈ ಪ್ರೀತಿಯನ್ನು ಆದೇಶದ ಮೂಲಕ ಬಲವಂತವಾಗಿ ಹುಟ್ಟಿಸಲು ಆಗುವುದಿಲ್ಲ! ಪ್ರೀತಿಯು ಒಳಗಿನಿಂದ ಸ್ವಯಂಪ್ರೇರಿತವಾಗಿ ಹೊರಚಿಮ್ಮದೆ ಬಲಾತ್ಕಾರದಿಂದ ಹುಟ್ಟಿಸಲ್ಪಟ್ಟಿದ್ದರೆ, ಅದು ಹೆಚ್ಚಾಗಿ ಯಥಾರ್ಥ ಪ್ರೀತಿಯಾಗಿರುವುದಿಲ್ಲ. ಒಬ್ಬ ವ್ಯಕ್ತಿಯ ಬಗ್ಗೆ ಗೌರವಭಾವದ ಮೂಲಕ ನಿಜವಾದ ಪ್ರೀತಿಯು ಉತ್ಪನ್ನವಾಗುತ್ತದೆ. ನಿಮಗೆ ಒಬ್ಬ ವ್ಯಕ್ತಿಯ ಬಗ್ಗೆ ಗೌರವ ಮತ್ತು ಪ್ರಶಂಸೆಯ ಭಾವನೆ ಇಲ್ಲವಾದರೆ, ನೀವು ಆತ/ಆಕೆಯನ್ನು ನಿಜವಾಗಿ ಪ್ರೀತಿಸಲು ಆಗುವುದಿಲ್ಲ.
ಅನುಕಂಪ ಅಥವಾ ಸಹಾನುಭೂತಿಯನ್ನು ಎಂದಿಗೂ ಪ್ರೀತಿಯೆಂದು ತಪ್ಪಾಗಿ ಭಾವಿಸಬಾರದು. ಒಬ್ಬ ಕನ್ಯೆಯ ದುರದೃಷ್ಟಕರ ಪರಿಸ್ಥಿತಿಗಳ ಕಾರಣದಿಂದಾಗಿ ನಿಮ್ಮಲ್ಲಿ ಆಕೆಯ ಬಗ್ಗೆ ಅನುಕಂಪ ಉಂಟಾಗಿದ್ದರೆ, ಕೇವಲ ಇದರ ಆಧಾರದ ಮೇಲೆ ಆಕೆಯನ್ನು ವಿವಾಹವಾಗುವುದು ಅತ್ಯಂತ ಅವಿವೇಕತನವಾಗಿದೆ. ನೀವು ಇದನ್ನು ಶೌರ್ಯ ಮತ್ತು ತ್ಯಾಗವೆಂದು ಅಂದುಕೊಳ್ಳಬಹುದು, ಆದರೆ ನಿಮ್ಮ ಹೃದಯದಲ್ಲಿ ಆಕೆಯ ಕುರಿತಾಗಿ ಯಥಾರ್ಥ ಪ್ರೀತಿಯು ಇಲ್ಲವಾದರೆ, ನಿಮ್ಮ ವಿವಾಹ ಜೀವನವು ಅಂತಿಮವಾಗಿ ಒಡೆದುಹೋಗುವ ಸಾಧ್ಯತೆಯಿದೆ. ಪ್ರೀತಿಯು ಪ್ರತಿಯೊಂದು ಕ್ರೈಸ್ತ-ವಿವಾಹದಲ್ಲಿ ಮೊದಲು ಖಚಿತಪಡಿಸಿಕೊಳ್ಳಬೇಕಾದ ಒಂದು ಅತ್ಯಂತ ಅವಶ್ಯಕ ವಿಷಯವಾಗಿದೆ. ಕೇವಲ ಅನುಕಂಪ ಮತ್ತು ಕರುಣೆ ಇದ್ದರೆ ನಿಶ್ಚಯವಾಗಿ ಅದು ಸಾಕಾಗುವುದಿಲ್ಲ.
ನೀವು ಒಬ್ಬ ಹುಡುಗಿಯನ್ನು ಆಕೆಯ ಆತ್ಮಿಕತೆ, ದೃಢವಾದ ನಂಬಿಕೆ ಮತ್ತು ಆಕೆಯ ಬುದ್ಧಿಶಕ್ತಿಗಾಗಿ ಗೌರವಿಸದಿದ್ದರೆ, ಮತ್ತು ಆಕೆಯ ಬಗ್ಗೆ ನಿಮ್ಮಲ್ಲಿ ಪ್ರಶಂಸೆಯ ಭಾವನೆ ಇಲ್ಲವಾದರೆ, ಮದುವೆಯ ಕಾರ್ಯಗಳನ್ನು ಮುಂದುವರಿಸುವುದು ಅವಿವೇಕತನವಾಗಿದೆ.
ಸತ್ಯವೇದವು ಹೇಳುವುದು ಏನೆಂದರೆ, ಲೋಕದಲ್ಲಿ ಪ್ರೀತಿಯು ಅತ್ಯಂತ ಶ್ರೇಷ್ಠ ಸಂಗತಿಯಾಗಿದೆ (1ಕೊರಿಂಥದವರಿಗೆ 13:13). ನಾವು ಈ ಪ್ರಮುಖ ಅಂಶವನ್ನು ಕಡೆಗಣಿಸಬಾರದು.
ಈಗಾಗಲೇ ಪರಿಗಣಿಸಿರುವ ಎಲ್ಲಾ ವಿಷಯಗಳ ಜೊತೆಗೆ, ನಿಮ್ಮ ಜೀವನ ಸಂಗಾತಿಯನ್ನು ಹುಡುಕುವಾಗ ಪರಿಗಣಿಸಬೇಕಾದ ಇತರ ಕೆಲವು ಅಂಶಗಳು ಸಹ ಇವೆ.
ಜನಾಂಗ ಇವುಗಳಲ್ಲಿ ಒಂದಾಗಿದೆ. ಒಬ್ಬ ವಿಶ್ವಾಸಿಯು ಬೇರೊಂದು ಜನಾಂಗಕ್ಕೆ ಸೇರಿದ ವ್ಯಕ್ತಿಯನ್ನು ವಿವಾಹ ಮಾಡಿಕೊಳ್ಳುವುದು ಸರಿಯೇ? ವಿವಿಧ ಜನಾಂಗಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಸತ್ಯವೇದವು ಏನು ಹೇಳುತ್ತದೆ? ’ಕೊಲೊಸ್ಸೆಯವರಿಗೆ 3:11' (TLB ಅನುವಾದ) ಹೀಗಿದೆ, "ನೀವು ಧರಿಸಿಕೊಂಡಿರುವ ಹೊಸ ಜೀವದಲ್ಲಿ, ನೀವು ಯಾವ ದೇಶದ ಪ್ರಜೆಗಳು, ಅಥವಾ ಯಾವ ಜನಾಂಗದವರು, ಅಥವಾ ಎಷ್ಟು ವಿದ್ಯಾಭ್ಯಾಸ ಮಾಡಿದ್ದೀರಿ, ಅಥವಾ ನಿಮ್ಮ ಸಾಮಾಜಿಕ ಮಟ್ಟ ಎಂಥದ್ದಾಗಿದೆ ಎಂಬುದು ಪ್ರಾಮುಖ್ಯವಲ್ಲ. ಅವೆಲ್ಲವು ಅರ್ಥವಿಲ್ಲದ ಅಂಶಗಳಾಗಿವೆ; ಒಬ್ಬನು ಕ್ರಿಸ್ತನಲ್ಲಿ ಜೀವಿಸುತ್ತಾನೋ ಎಂಬುದು ಮಾತ್ರ ಪ್ರಮುಖ ಸಂಗತಿಯಾಗಿದೆ."
’ಗಲಾತ್ಯದವರಿಗೆ 3:28' (TLB ಅನುವಾದದಲ್ಲಿ) ನಾವು ಹೀಗೆ ಓದಿಕೊಳ್ಳುತ್ತೇವೆ, "ನೀವೆಲ್ಲರು ಕ್ರೈಸ್ತರು, ಅಂದರೆ ಕ್ರಿಸ್ತ ಯೇಸುವಿನಲ್ಲಿ ಒಂದಾಗಿರುವವರು ಆಗಿದ್ದೀರಿ - ಹಾಗಿರುವಾಗ, ನೀವು ಯೆಹೂದ್ಯರು ಅಥವಾ ಗ್ರೀಕರು, ಅಥವಾ ಆಳುಗಳು ಅಥವಾ ಒಡೆಯರು, ಅಥವಾ ಕೇವಲ ಪುರುಷರು ಅಥವಾ ಸ್ತ್ರೀಯರು ಎಂಬ ಭೇದವನ್ನು ಹೊಂದಿರುವುದಿಲ್ಲ, ನೀವೆಲ್ಲರೂ ಒಂದೇ ಆಗಿದ್ದೀರಿ."
ಈ ವಚನಗಳು ನಮಗೆ ನಿಸ್ಸಂಶಯವಾಗಿ ಕಲಿಸುವುದು ಏನೆಂದರೆ, ದೇವರ ಸಮ್ಮುಖದಲ್ಲಿ ನಾವು ಸ್ವೀಕರಿಸಲ್ಪಡುವ ವಿಚಾರದಲ್ಲಿ, ನಾವು ಯಾವ ಜನಾಂಗಕ್ಕೆ ಸೇರಿದ್ದೇವೆ ಎಂಬುದು ಲೆಕ್ಕಿಸಲ್ಪಡುವುದಿಲ್ಲ. ಕ್ರೈಸ್ತಸಭೆಯ ಅನ್ಯೋನ್ಯತೆಯಲ್ಲಿ ನಾವು ಒಬ್ಬರನ್ನೊಬ್ಬರು ನೋಡಿಕೊಳ್ಳುವ ವಿಷಯದಲ್ಲಿ, ನಾವು ಜನಾಂಗದ ಆಧಾರದ ಮೇಲೆ ಪಕ್ಷಭೇದ ಮಾಡುವುದು ಸಂಪೂರ್ಣವಾಗಿ ಅನುಚಿತವಾಗಿದೆ. ಆದರೆ ಇದರ ಅರ್ಥ ಜನಾಂಗಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲವೆಂದಲ್ಲ. ಮೇಲೆ ಪ್ರಸ್ತಾಪಿಸಿರುವ ವಚನದಲ್ಲಿ (’ಗಲಾತ್ಯದವರಿಗೆ 3:28'), "ಕ್ರಿಸ್ತನಲ್ಲಿ" ನಮ್ಮ ಜನಾಂಗಕ್ಕೆ ಪ್ರಾಮುಖ್ಯತೆ ಇಲ್ಲವೆಂದು ಹೇಳಿರುವಂತೆಯೇ, ನಾವು ಗಂಡು ಹೆಣ್ಣು ಎಂಬ ಭೇದವೂ ಸಹ ಇಲ್ಲವೆಂದು ನಾವು ಓದುತ್ತೇವೆ. ಆದರೆ ಈ ಮಾತಿನ ಅರ್ಥ, ಪುರುಷ ಮತ್ತು ಸ್ತೀಯ ನಡುವೆ ವ್ಯತ್ಯಾಸಗಳು ಇಲ್ಲವೆಂದಲ್ಲ! ’ಗಲಾತ್ಯದವರಿಗೆ 3:28'ರ ವಚನವನ್ನು ಉಲ್ಲೇಖಿಸಿ, ಒಬ್ಬ ಪುರುಷ ಇನ್ನೊಬ್ಬ ಪುರುಷನನ್ನು ವಿವಾಹ ಮಾಡಿಕೊಳ್ಳಲು ನಿಶ್ಚಯಿಸಲಾಗದು! ಹಾಗೆಯೇ, ವಿವಾಹದ ಕುರಿತಾಗಿ ಆಲೋಚಿಸುವಾಗ, ವಿವಿಧ ಜನಾಂಗಗಳ ನಡುವೆ ಇರುವ ಅನೇಕ ವ್ಯತ್ಯಾಸಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ದೇವರ ವಾಕ್ಯಕ್ಕನುಸಾರವಾಗಿ ವಿವಿಧ ಜನಾಂಗಗಳ ನಡುವಿನ ವಿವಾಹದಲ್ಲಿ ತಪ್ಪೇನೂ ಇಲ್ಲ. ಆದರೆ ಇದನ್ನು ಪರಿಗಣಿಸುವ ವೇಳೆ ನಾವು ಕಡಿಮೆ ಪಕ್ಷ ಇತರ ಎರಡು ಅಂಶಗಳನ್ನು ಗಮನಿಸುವುದು ಅವಶ್ಯವಾಗಿದೆ. ಮೊದಲನೆಯದಾಗಿ, ಮಿಶ್ರ-ಜನಾಂಗದ ಮಕ್ಕಳು; ಪ್ರಮುಖವಾಗಿ ಭಾರತ ದೇಶದಲ್ಲಿ - ಸಾಮಾನ್ಯವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎರಡನೆಯದಾಗಿ, ಒಬ್ಬನು ಮಾಡುವ ಕರ್ತರ ಸೇವೆಗೆ (ಭಾರತ ದೇಶದಲ್ಲಿ), ಆತನ/ಆಕೆಯ ಸಂಗಾತಿಯು ಅನ್ಯದೇಶದ ಪ್ರಜೆಯಾಗಿದ್ದರೆ, ಹಲವಾರು ದೊಡ್ಡ ಅಡಚಣೆಗಳು ಎದುರಾಗುತ್ತವೆ. ಕೆಲವು ಜನರು, ತಮ್ಮ ಅಪಕ್ವತೆಯ ತಿಳುವಳಿಕೆ ಮತ್ತು ಅದಕ್ಕೂ ಹೆಚ್ಚಾಗಿ ತಮ್ಮ ಸ್ವಾರ್ಥತೆಯಿಂದಾಗಿ, ಇವೆಲ್ಲ ಅಂಶಗಳನ್ನು ನಿರ್ಲಕ್ಷಿಸಿ ಈ ರೀತಿಯ ವಿವಾಹಕ್ಕೆ ಮುನ್ನುಗ್ಗುತ್ತಾರೆ. ಅನೇಕ ವರ್ಷಗಳ ನಂತರ, ಅವರು ಇದಕ್ಕಾಗಿ ವಿಷಾದಪಡುತ್ತಾರೆ.
ಜನಾಂಗಕ್ಕೆ ನಿಕಟವಾಗಿ ಸಂಬಂಧಿಸಿದಂತ ಮತ್ತು ಪರಿಗಣಿಸಬೇಕಾದ ಇನ್ನೊಂದು ವಿಷಯ, ಸಂಸ್ಕೃತಿಯಾಗಿದೆ. ಒಬ್ಬ ವಿದೇಶದ ಪ್ರಜೆಯನ್ನು ಮದುವೆ ಮಾಡಿಕೊಳ್ಳುವ ಭಾರತೀಯ ಪ್ರಜೆಯ ಪ್ರಸಂಗದಲ್ಲಿ, ಅವರಿಬ್ಬರ ನಡುವೆ ಅನೇಕ ಸಾಂಸ್ಕೃತಿಕ ವಿಭಿನ್ನತೆಗಳು ಇರಬಹುದು ಮತ್ತು ವಿವಾಹದ ನಂತರ ಅವರು ಭಾರತದಲ್ಲಿ ವಾಸಿಸುವುದಾದರೆ, ಇವುಗಳ ಕಾರಣದಿಂದಾಗಿ ಅವರಿಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಬಹಳ ಕಷ್ಟಕರವಾಗಬಹುದು. ಸ್ವಲ್ಪ ಮಟ್ಟಿಗೆ, ಇದೇ ವಿಧವಾದ ಸನ್ನಿವೇಶ ಭಾರತದ ಒಂದು ಭಾಗದ ನಿವಾಸಿಯು, ಹಿನ್ನೆಲೆಯಲ್ಲಿ ತನಗಿಂತ ವಿಭಿನ್ನವಾಗಿರುವ ಭಾರತದ ಮತ್ತೊಂದು ಪ್ರದೇಶದ ನಿವಾಸಿಯೊಂದಿಗೆ ವಿವಾಹ ಮಾಡಿಕೊಳ್ಳುವಾಗಲೂ ತಲೆದೋರುತ್ತದೆ. ಕೆಲವು ಸಂದರ್ಭಗಳಲ್ಲಿ ಸಾಂಸ್ಕೃತಿಕ ಹಿನ್ನೆಲೆಯ ವ್ಯತ್ಯಾಸದಲ್ಲಿ ಹೊಂದಾಣಿಕೆ ಸುಲಭವಾಗಿ ಸಾಧ್ಯವಾಗಬಹುದು, ಮತ್ತು ಅಂತಹ ಪ್ರಸಂಗದಲ್ಲಿ ಭಾರತದ ವಿಭಿನ್ನ ಭಾಗಗಳ ವ್ಯಕ್ತಿಗಳು ಮತ್ತು ವಿಭಿನ್ನ ಮಾತೃಭಾಷೆಯನ್ನು ಹೊಂದಿರುವವರು ವಿವಾಹವನ್ನು ಪರಿಗಣಿಸಬಹುದು. ಸ್ಪಷ್ಟವಾಗಿ ಪ್ರಕಟವಾಗುವ ಒಂದು ವಿಷಯ ಏನೆಂದರೆ, ಅವರಿಬ್ಬರ ನಡುವೆ ಒಂದು ಸಾಮಾನ್ಯ ಭಾಷಾ ಜ್ಞಾನ ಇರಬೇಕಾಗುತ್ತದೆ. ಇಂತಹ ಒಂದು ಕುಟುಂಬದಲ್ಲಿ ತಂದೆ-ತಾಯಿಯರಿಬ್ಬರೂ ಒಂದು ಸಾಮಾನ್ಯ ಭಾಷೆಯನ್ನು ಸರಾಗವಾಗಿ ಮಾತಾಡುವವರಾಗಿದ್ದರೆ ಹೆಚ್ಚಿನ ಸಮಸ್ಯೆಯೇನೂ ಉದ್ಭವಿಸುವುದಿಲ್ಲ. ಆದರೆ ಅವರಿಬ್ಬರಲ್ಲಿ ಒಬ್ಬರು ತಮಗೆ ಅಷ್ಟೊಂದು ರೂಢಿಯಿಲ್ಲದ ಭಾಷೆಯನ್ನು ಸದಾ ಉಪಯೋಗಿಸಬೇಕಾಗಿದ್ದರೆ, ಅದು ಬಹಳ ಕಷ್ಟಕರವಾಗುತ್ತದೆ. ಖಾಯಂ ನಿವಾಸ ಸ್ಥಳವು ಸಹ ಗಮನಿಸಬೇಕಾದ ಇನ್ನೊಂದು ಅಂಶವಾಗಿದೆ. ಇದರ ಜೊತೆಗೆ ಅರಿತುಕೊಳ್ಳಬೇಕಾದ ಇನ್ನೊಂದು ವಿಷಯ ಏನೆಂದರೆ, ಅಂತಿಮವಾಗಿ ಈ ರೀತಿಯ ವಿವಾಹದಲ್ಲಿ ಒಂದು ಸಂಸ್ಕೃತಿಯು ಮತ್ತೊಂದಕ್ಕಿಂತ ಹೆಚ್ಚಾಗಿ ಪ್ರಭಾವ ಬೀರುತ್ತದೆ.
ಭಾರತ ದೇಶದ ಹಲವು ಪ್ರದೇಶಗಳಲ್ಲಿ ಜಾತಿಯು ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ. ಜಾತಿ ಪದ್ಧತಿಯು ಸರಿಯಾದ ರೀತಿಯಲ್ಲಿ ಮಾನಸಾಂತರ ಹೊಂದದಿರುವ ಕ್ರೈಸ್ತರ ಮೂಲಕ ಕ್ರೈಸ್ತತ್ವಕ್ಕೆ ಪ್ರವೇಶ ಮಾಡಿರುತ್ತದೆ. ಕ್ರಿಸ್ತನು ಜಾತಿಯೆಂಬ ವ್ಯತ್ಯಾಸವನ್ನು ಕಿತ್ತುಹಾಕಿರುವದರಿಂದ, ಒಬ್ಬ ವಿಶ್ವಾಸಿಯು ಕೇವಲ ಜಾತಿಯ ಹೆಸರಿನಲ್ಲಿ ಮದುವೆಯ ಪ್ರಸ್ತಾಪವನ್ನು ಎಂದಿಗೂ ತಳ್ಳಿಹಾಕಬಾರದು. ಮದುವೆಯ ವಿಷಯದಲ್ಲಿ ಜಾತಿಯ ಪ್ರಭಾವಕ್ಕೆ ಒಳಗಾಗುವ ವ್ಯಕ್ತಿಯು ದೇವರ ಮಕ್ಕಳು ನಡೆಯಬಾರದಾದ ರೀತಿಯಲ್ಲಿ ನಡೆಯುತ್ತಿದ್ದಾನೆ.
ಆದಾಗ್ಯೂ, ಜನಾಂಗ, ಸಂಸ್ಕೃತಿ, ಭಾಷೆ, ಅಥವಾ ಜಾತಿಯ ಅಂತರಗಳನ್ನು ಮೀರುತ್ತೇವೆಂದು ತೋರಿಸುವ ಒಂದೇ ಉದ್ದೇಶವನ್ನು ಇರಿಸಿಕೊಂಡು ಮದುವೆ ಮಾಡಿಕೊಳ್ಳುವುದು ಸರಿಯಲ್ಲ.
ವಿವಾಹದ ಪ್ರಸ್ತಾಪದಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ವಿವಾಹವಾಗುತ್ತಿರುವ ವ್ಯಕ್ತಿಯ ಕುಟುಂಬದ ಸಂಪತ್ತು ಅಥವಾ ಸಾಮಾಜಿಕ ಅಂತಸ್ತು ಯಾವುದೇ ಪ್ರಭಾವವನ್ನು ಬೀರಬಾರದು. ಕ್ರೈಸ್ತನೆಂದು ತನ್ನನ್ನು ಹೇಳಿಕೊಳ್ಳುವ ಒಬ್ಬ ವ್ಯಕ್ತಿಯು ಇಂತಹ ಅಂಶಗಳಿಂದ ಪ್ರಭಾವಿತನಾದರೆ, ಅದು ನಾಚಿಗೆಪಡಬೇಕಾದ ಮತ್ತು ಅವಮಾನಕರವಾದ ಸಂಗತಿಯಾಗಿದೆ.
ನಮ್ಮ ದೇಶದಲ್ಲಿರುವ ಇನ್ನೊಂದು ಶಾಪಗ್ರಸ್ತ ಪದ್ಧತಿ ಎಂದರೆ ವರದಕ್ಷಿಣೆ ಕೇಳುವುದು. ವರದಕ್ಷಿಣೆಯ ಪದ್ಧತಿಯು (ಭಾರತದಲ್ಲಿ ಪ್ರಚಲಿತವಿರುವಂತೆ) ಮದುವೆಯಲ್ಲಿರುವ ಅನ್ಯೋನ್ಯ ಸಂಬಂಧವನ್ನು ಅಲಕ್ಷಿಸಿ, ಅದನ್ನು ಕೇವಲ ಒಂದು ವ್ಯಾಪಾರದ ಒಪ್ಪಂದದ ಮಟ್ಟಕ್ಕೆ ಇಳಿಸುತ್ತದೆ. ಈ ಪದ್ಧತಿಯು ಕ್ರೈಸ್ತ ನಂಬಿಕೆ ಇಲ್ಲದವರಲ್ಲಿ (ಇದರಲ್ಲಿ ಹೆಸರಿಗೆ ಮಾತ್ರ ಕ್ರೈಸ್ತರಾದವರು ಕೂಡ ಸೇರಿದ್ದಾರೆ) ಇರುವುದು ಸ್ವಾಭಾವಿಕವಾಗಿದೆ, ಏಕೆಂದರೆ ಅವರು ಆತ್ಮಿಕವಾಗಿ ಕುರುಡರಾಗಿದ್ದಾರೆ, ಹಾಗಾಗಿ ಅವರ ಜೀವನದಲ್ಲಿ ದುರಾಶೆಯು ಪ್ರಬಲವಾಗಿರುತ್ತದೆ. ಆದರೆ ಅನೇಕ ವಿಶ್ವಾಸಿಗಳು ಸಹ - ಅದರಲ್ಲೂ ಲೋಕದಿಂದ ಬೇರ್ಪಟ್ಟಿದ್ದೇವೆಂದು ಮತ್ತು ಹೊಸ ಒಡಂಬಡಿಕೆಯ ಮಾದರಿಯನ್ನು ಕಂಡುಕೊಂಡಿದ್ದೇವೆಂದು ಹೇಳಿಕೊಳ್ಳುವ ವಿಶ್ವಾಸಿಗಳು ಈ ಪದ್ಧತಿಯ ಮೋಹಕ್ಕೆ ಒಳಪಟ್ಟಾಗ - ನಾವು ಏನು ಹೇಳಬೇಕು? ಖಂಡಿತವಾಗಿ ಸೈತಾನನು ಅವರನ್ನೂ ಸಹ ಕುರುಡುಗೊಳಿಸಿದ್ದಾನೆ.
ಹಲವಾರು ಸಂದರ್ಭಗಳಲ್ಲಿ, ಮದುವೆಯಾಗಲಿರುವ ವರನ ಹೆತ್ತವರ ವಿಪರೀತ ವರದಕ್ಷಿಣೆಯ ಬೇಡಿಕೆಯನ್ನು ಪೂರೈಸಲು ಹುಡುಗಿಯ ಪೋಷಕರಿಗೆ ಸಾಧ್ಯವಾಗದ ಕಾರಣ ಮದುವೆ ಮಾತುಕತೆಯು ಮುರಿದು ಬಿದ್ದಿರುತ್ತದೆ. ಇದರಿಂದ ನಮ್ಮ ನಾಡಿನ ಎಷ್ಟೋ ಹೆಣ್ಣುಮಕ್ಕಳು ಮನಸ್ಸಿನಲ್ಲಿ ಬಹಳ ನೋವನ್ನು ಅನುಭವಿಸಿದ್ದಾರೆ ಮತ್ತು ಆಶಾಭಂಗಗೊಂಡಿದ್ದಾರೆ.
ಮದುವೆಯ ಏರ್ಪಾಡಿನಲ್ಲಿ ಕೇವಲ ಸ್ವಂತ ಲಾಭದ ಲೆಕ್ಕಾಚಾರ ಮಾಡುವ ಜನರನ್ನು ದೇವರು ಖಚಿತವಾಗಿ ತೀವ್ರವಾದ ನ್ಯಾಯತೀರ್ಪಿಗೆ ಒಳಪಡಿಸುತ್ತಾರೆ. ಈ ತೀರ್ಪು ಮೊದಲು ದೇವರ ಮನೆಯಲ್ಲಿ, ಹೊಸದಾಗಿ ಹುಟ್ಟಿದ್ದೇವೆಂದು ಹೇಳುಕೊಳ್ಳುವ ಜನರ ನಡುವೆ ಪ್ರಾರಂಭವಾಗುತ್ತದೆ. ಕ್ರೈಸ್ತಸಭೆಯಲ್ಲಿ ಈ ಪದ್ಧತಿಯು ಇನ್ನೂ ನಿಷೇಧಿಸಲ್ಪಡದೇ ಇರುವುದಕ್ಕೆ ಕಾರಣ, ಇದರ ಬಗ್ಗೆ ತಿಳುವಳಿಕೆ ಹೊಂದಿರಬೇಕಾಗಿದ್ದ ಅನೇಕ ವಿಶ್ವಾಸಿಗಳು ಈ ಅನ್ಯಧರ್ಮದ ಪದ್ಧತಿಯನ್ನು ವಿರೋಧಿಸದೆ ಸುಮ್ಮನಿದ್ದಾರೆ. ಡೊಂಕಾದ ಮತ್ತು ವಂಚನೆಯಿಂದ ತುಂಬಿರುವ ಈ ಲೋಕದಲ್ಲಿ ದೇವರಿಗಾಗಿ ಯಥಾರ್ಥಚಿತ್ತರಾಗಿ ಎದ್ದು ನಿಲ್ಲಬೇಕಾದವರು, ಸ್ವತಃ ವಂಚನೆಯ ಅಡ್ಡದಾರಿಯನ್ನು ಹಿಡಿಯುವುದು ಒಂದು ಗಂಭೀರವಾದ ಮತ್ತು ಅಸಹನೀಯ ಸಂಗತಿಯಾಗಿದೆ. ದೇವರನ್ನು ಮೆಚ್ಚಿಸಲು ಬಯಸುವ ಯಾವ ಕ್ರೈಸ್ತನೂ ಸಹ ಎಂದಿಗೂ ವರದಕ್ಷಿಣೆಯನ್ನು ಕೇಳಬಾರದು ಅಥವಾ ಸ್ವೀಕರಿಸಬಾರದು.
ಕೆಲವು ಜನರು ವರದಕ್ಷಿಣೆಯನ್ನು ಕೇಳುತ್ತಿರುವುದು ತಾವಲ್ಲ, ತಮ್ಮ ಪೋಷಕರು ಎಂಬ ಕುಂಟುನೆಪದ ಹಿಂದೆ ಅಡಗಿಕೊಳ್ಳುತ್ತಾರೆ. ಆದರೆ ವರದಕ್ಷಿಣೆ ತಪ್ಪೆಂದು ಅವರಿಗೆ ಮನವರಿಕೆಯಾಗಿದ್ದರೆ, ವರದಕ್ಷಿಣೆ ಬೇಡವೆಂದು ಅವರು ಏಕೆ ತಮ್ಮ ಪೋಷಕರಿಗೆ ಹೇಳುವುದಿಲ್ಲ ಎಂಬುದು ಆಶ್ಚರ್ಯಕರವಾಗಿದೆ. ಇದಕ್ಕೆ ಕಾರಣ ಬಹುಶಃ ಅವರು ರಹಸ್ಯವಾಗಿ ವರದಕ್ಷಿಣೆಯನ್ನು ಬಯಸುತ್ತಿರಬಹುದು. ವರದಕ್ಷಿಣೆಯ ಪದ್ಧತಿ ತಪ್ಪೆಂದು ನಮಗೆ ಮನವರಿಕೆಯಾಗಿದ್ದರೆ, ನಾವು ಸತ್ಯದ ಪರವಾಗಿ ಧ್ವನಿಯೆತ್ತಬೇಕು. ಬೇರೆ ವಿಷಯಗಳಲ್ಲಿ ದೃಢವಾದ ನಿಲುವನ್ನು ಹೊಂದಿರುವ ಅನೇಕರು, ಅನೇಕ ಬಾರಿ ವರದಕ್ಷಿಣೆಯ ವಿಚಾರ ಬಂದಾಗ, ಏಕೆ ಬೆನ್ನುಮೂಳೆಯಿಲ್ಲದ ಜೆಲ್ಲಿಫಿಶ್ನಂ ತೆ ಆಗಿಬಿಡುತ್ತಾರೆ ಮತ್ತು ಏಕೆ ತಮ್ಮ ನಿಲುವನ್ನು ಸ್ಪಷ್ಟವಾಗಿ ಪ್ರಕಟಿಸುವುದಿಲ್ಲ ಎಂಬುದು ಒಂದು ಆಶ್ಚರ್ಯಕರ ಸಂಗತಿಯಾಗಿದೆ!
ಕೆಲವರು ತಮ್ಮ ಪೋಷಕರ ನಿಲುವನ್ನು ಹೀಗೆ ಸಮರ್ಥಿಸಬಹುದು: ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ಹೆಚ್ಚು ಹಣ ವ್ಯಯಿಸಿದ ತಂದೆತಾಯಿಯರು ಈಗ ಹುಡುಗಿಯ ಪೋಷಕರಿಂದ ಸ್ವಲ್ಪ ಹಣವನ್ನು ನಿರೀಕ್ಷಿಸುವುದು ಸಮಂಜಸವೆಂದು ಹೇಳಬಹುದು. ಇನ್ನು ಕೆಲವರು ವರದಕ್ಷಿಣೆಯ ಬೇಡಿಕೆಯನ್ನು ಸಮರ್ಥಿಸಿಕೊಳ್ಳಲು, ಅವರ ತಂಗಿಯಂದಿರ ಮದುವೆಯಲ್ಲಿ ವರದಕ್ಷಿಣೆ ನೀಡಲು ತಮ್ಮ ತಂದೆತಾಯಿಗೆ ಹಣದ ಅಗತ್ಯತೆಯಿದೆ, ಎಂದು ಹೇಳಬಹುದು. ಆದರೆ ವರದಕ್ಷಿಣೆಯ ಪದ್ಧತಿಯು ದೇವರಿಗೆ ಅಸಹ್ಯವಾಗಿದೆ ಎಂಬುದನ್ನು ನಾವು ಅರಿತುಕೊಂಡಾಗ, ಇವೆಲ್ಲಾ ತರ್ಕಗಳು ಹುರುಳಿಲ್ಲವೆಂದು ನಮಗೆ ತಿಳಿಯುತ್ತದೆ. ನಾವು ದೇವರಿಗೆ ವಿಧೇಯರಾದರೆ ಅವರು ನಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂದು ನಾವು ನಿಶ್ಚಯವಾಗಿ ಹೇಳಬಹುದು. ನೀವು ದೇವರನ್ನು ಸನ್ಮಾನಿಸಿದರೆ, ಅವರು ನಿಮ್ಮನ್ನು ಸನ್ಮಾನಿಸುತ್ತಾರೆ ಮತ್ತು ನಿಮ್ಮ ಕುಟುಂಬದ ಅಗತ್ಯತೆಗಳನ್ನು ಸಹ ಪೂರೈಸುತ್ತಾರೆ (1ಸಮುವೇಲನು 2:30).
ಇತರರು ಕೇಳಬಹುದು: "ಹುಡುಗಿಯ ತಂದೆ ಸಂತೋಷದಿಂದ ಉಡುಗೊರೆಯಾಗಿ ನೀಡುವ ಹಣವನ್ನು ಸ್ವೀಕರಿಸುವುದರಲ್ಲಿ ತಪ್ಪೇನು?" ಖಂಡಿತ, ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಯಾರೂ ತಮ್ಮ ದುರಾಶೆಯ ನಿಮಿತ್ತ ಈ ನೆಪವನ್ನು ಬಳಸಿಕೊಳ್ಳದಂತೆ, ಇಂತಹ ಸಂದರ್ಭಗಳಲ್ಲಿ ಎಲ್ಲಾ ಯುವಕರು ಮೊದಲು ಈ ಮೂರು ಪ್ರಶ್ನೆಗಳನ್ನು ಉತ್ತರಿಸಲಿ:
ಈ ಮೂರು ಪ್ರಶ್ನೆಗಳಲ್ಲಿ ಯಾವುದಕ್ಕಾದರೂ ನಿಮ್ಮ ಉತ್ತರ "ಹೌದು" ಎಂದಾಗಿದ್ದರೆ, ನೀವು ಖಂಡಿತವಾಗಿ ದುರಾಶೆಗೆ ಬಲಿಯಾಗಿದ್ದೀರಿ, ಆದರೆ ಅದು ಪ್ರಕಟವಾಗದಂತೆ ಅದನ್ನು ಬೇರೆ ಬೇರೆ ನೆಪಗಳಿಂದ ಮುಚ್ಚಿಟ್ಟಿದ್ದೀರಿ.
ಇಂತಹ ಸನ್ನಿವೇಶಗಳಲ್ಲಿ ಒಬ್ಬ ವಿಶ್ವಾಸಿಯ ಬೋಧನೆ ಮತ್ತು ಆಚರಣೆಯ ನಡುವೆ ಇರುವ ವ್ಯತ್ಯಾಸವು ಎಲ್ಲರಿಗೂ ಸ್ಪಷ್ಟವಾಗುತ್ತದೆ. "ಕ್ರೈಸ್ತರು ಏನೇ ಬೋಧಿಸಬಹುದು, ಆದರೆ ಹಣದ ವಿಚಾರದಲ್ಲಿ ಎಲ್ಲರೂ ಒಂದೇ ಧರ್ಮವನ್ನು ಹೊಂದಿದ್ದಾರೆ," ಎಂದು ಕ್ರೈಸ್ತ ವಿರೋಧಿಗಳು ಹೇಳುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅಯ್ಯೋ! ಕ್ರೈಸ್ತರ ವಿರುದ್ಧ ಅಂತಹ ಆರೋಪವನ್ನು ಹೊರಿಸಲು ಅವಕಾಶ ನೀಡುವ ನಡವಳಿಕೆಯುಳ್ಳ ವಿಶ್ವಾಸಿಗೆ ದುರವಸ್ಥೆಯಲ್ಲೇ ಇದ್ದಾನೆ.
ವರದಕ್ಷಿಣೆಯ ಪದ್ಧತಿಯ ಇಂತಹ ಬಲವಾದ ಖಂಡನೆಯ ಬಗ್ಗೆ ಹಲವರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಬಹುದು, ಆದರೆ ಈ ಆಚರಣೆಯು ಮಾನವನ ದುರಾಶೆಯ ಫಲವಾಗಿದೆ, ಮತ್ತು ಸತ್ಯವೇದದಲ್ಲಿ ಇದನ್ನು ವಿಗ್ರಹಾರಾಧನೆ ಎಂದು ಕರೆಯಲಾಗುತ್ತದೆ (’ಕೊಲೊಸ್ಸೆಯವರಿಗೆ 3:5'), ಎಂಬುದನ್ನು ಅವರು ನೆನಪಿಸಿಕೊಳ್ಳಲಿ. ದೇವರು ಇದರ ವಿಚಾರದಲ್ಲಿ ಹೇಗೆ ಅಸಹ್ಯಪಡುತ್ತಾರೆಂದು ಅರ್ಥಮಾಡಿಕೊಳ್ಳಲು, ಹಳೆಯ ಒಡಂಬಡಿಕೆಯಲ್ಲಿ ದೇವರು ವಿಗ್ರಹಾರಾಧನೆಯನ್ನು ಎಷ್ಟು ತೀವ್ರವಾಗಿ ಖಂಡಿಸಿದ್ದಾರೆಂದು ಓದಿ ನೋಡಿದರೆ ಸಾಕು. ಆ ಸಮಯದ ಪ್ರವಾದಿಗಳು ಅದರ ವಿರುದ್ಧ ಮಾತಾಡುವಾಗ ಕುದಿಯುತ್ತಿದ್ದರು. ದೇವರು ದ್ವೇಷಿಸುವಂಥ ವಿಷಯಗಳ ವಿರುದ್ಧ ಅವರು ಮರೆಮಾಚದೆ ಮಾತನಾಡುತ್ತಿದ್ದರು.
ಹುಡುಗ ಅಥವ ಹುಡುಗಿ ಯಾವ ಕ್ರೈಸ್ತ ಪಂಗಡದೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆ ಮತ್ತು ಯಾವ ರೀತಿಯ ಉಪದೇಶಗಳನ್ನು ಅನುಸರಿಸುತ್ತಾರೆ ಎನ್ನುವದು ಸಹ ವಿವಾಹದ ಬಗ್ಗೆ ನಿರ್ಣಯಿಸುವುದಕ್ಕೆ ಮೊದಲು ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ. ಸಭೆಯ ಅನ್ಯೋನ್ಯತೆ ಮತ್ತು ದೀಕ್ಷಾಸ್ನಾನ ಮುಂತಾದ ವಿಷಯಗಳ ಬಗ್ಗೆ ಒಮ್ಮತ ಇರಬೇಕು, ಇಲ್ಲವಾದರೆ ಮುಂದೆ ಸಮಸ್ಯೆಗಳು ತಲೆದೋರಬಹುದು. ಒಬ್ಬ ಸಂಗಾತಿಯು ಮಕ್ಕಳು ಶಿಶುಗಳಾಗಿರುವಾಗಲೇ ಅವರಿಗೆ ದೀಕ್ಷಾಸ್ನಾನ ಮಾಡಿಸಲು ಬಯಸಬಹುದು, ಆದರೆ ಮತ್ತೊಬ್ಬ ಸಂಗಾತಿಯು ಅದನ್ನು ವಿರೋಧಿಸಬಹುದು. ಮದುವೆಯ ನಂತರ ಈ ವಿಷಯಗಳ ಬಗ್ಗೆ ಜಗಳಾಡುವ ಬದಲು, ಇವುಗಳನ್ನು ಮೊದಲೇ ಚರ್ಚಿಸಿ ನಿರ್ಧಾರಕ್ಕೆ ಬರುವುದು ಉತ್ತಮ. ಇಡೀ ಕುಟುಂಬವು ಜೊತೆಯಾಗಿ ಒಂದೇ ಸಭೆಯಲ್ಲಿ ಆರಾಧನೆಯಲ್ಲಿ ಪಾಲ್ಗೊಳ್ಳುವುದು ಬಹಳ ಅಗತ್ಯವಾದ ವಿಷಯವಾಗಿದೆ. ಒಂದು ಕುಟುಂಬದ ತಂದೆ ಮತ್ತು ಕೆಲವು ಮಕ್ಕಳು ಒಂದು ಸಭಾಕೂಟದಲ್ಲಿ ಹಾಜರಾಗುವುದು, ಮತ್ತು ತಾಯಿಯು ಕೆಲವು ಮಕ್ಕಳ ಜೊತೆಯಲ್ಲಿ ಇನ್ನೊಂದು ಸಭಾಕೂಟದಲ್ಲಿ ಪಾಲ್ಗೊಳ್ಳುವಂತದ್ದು ಶಾಂತಿಯುತ ಸಹಬಾಳ್ವೆಯನ್ನು ಪ್ರದರ್ಶಿಸುವುದಿಲ್ಲ, ಬದಲಿಗೆ ಸತ್ಯವೇದದ ತತ್ವಾಂಶಗಳ ಅವಿಧೇಯತೆಯನ್ನು ತೋರಿಸುತ್ತದೆ. ಇದರಿಂದ ಕುಟುಂಬದಲ್ಲಿ ಗಂಭೀರವಾದ ಒಡಕುಗಳು ಸಹ ಉಂಟಾಗಬಹುದು. ಒಂದು ಕ್ರೈಸ್ತ ಕುಟುಂಬವು ಸಾಮೂಹಿಕ ಆರಾಧನೆಯಲ್ಲಿ ಪಾಲ್ಗೊಳ್ಳುವಾಗ ಐಕ್ಯತೆಯನ್ನು ಪ್ರದಶಿಸುವುದು ಅವಶ್ಯಕವಾಗಿದೆ.
ಇದೇ ರೀತಿ ವಿವಾಹಕ್ಕೆ ಮುಂಚಿತವಾಗಿ ಇಬ್ಬರೂ ತಮ್ಮ ತಮ್ಮ ಬಲವಾದ ಧಾರ್ಮಿಕ ನಂಬಿಕೆಗಳನ್ನು ಬಹಿರಂಗಪಡಿಸಬೇಕು ಮತ್ತು ಅವುಗಳನ್ನು ಚರ್ಚಿಸಬೇಕು.
ಅವರು ಪರಿಗಣಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ದೇವರ ಕರೆಯ ಬಗ್ಗೆ ಇಬ್ಬರ ಅಭಿಪ್ರಾಯಗಳಲ್ಲಿ ಹೊಂದಾಣಿಕೆ ಇರಬೇಕು. ನೀವು ಒಂದು ನಿರ್ದಿಷ್ಟ ಸ್ಥಳದಲ್ಲಿ ಅಥವಾ ಒಂದು ವಿಶೇಷ ರೀತಿಯಲ್ಲಿ ಸೇವೆ ಮಾಡಲು ದೇವರಿಂದ ಕರೆಯಲ್ಪಟ್ಟಿದ್ದರೆ, ನಿಮ್ಮ ಹೆಂಡತಿಯು ನಿಮ್ಮೊಂದಿಗೆ ಹೋಗಲು ಸಿದ್ಧಳಾಗಿರುವವಳು ಆಗಿರಬೇಕು. ಆಕೆಯು ಅದಕ್ಕೆ ಸಿದ್ಧಳಾಗಿರಬೇಕು ಮಾತ್ರವಲ್ಲದೆ ಆಕೆಯೂ ಸಹ ಅದೇ ಕರೆಯನ್ನು ಹೊಂದಿರಬೇಕು. ಭಾರತದಲ್ಲಿ ಹೆಂಡತಿಯರು ಸಾಂಪ್ರದಾಯಿಕವಾಗಿ ತಮ್ಮ ಗಂಡಂದಿರನ್ನು ಹಿಂಬಾಲಿಸಲು ನಿರೀಕ್ಷಿಸಲಾಗಿದ್ದರೂ, ನಿಮ್ಮ ಮತ್ತು ನಿಮ್ಮ ಹೆಂಡತಿಯ ಮನೋಸಂಕಲ್ಪ ಅಥವಾ ವಿಚಾರಧಾರೆಗಳು ವಿಭಿನ್ನವಾಗಿದ್ದರೆ, ಆಕೆಯು ನಿಮಗೆ ಒಂದು ಹೊರೆಯಾಗುತ್ತಾಳೆ ಮತ್ತು ಕೊನೆಯಲ್ಲಿ ಆಕೆಯು ನಿಮ್ಮನ್ನು ದೇವರು ಕರೆದಿರುವ ಮಾರ್ಗದಿಂದ ಬೇರೆಡೆಗೆ ಸೆಳೆಯುತ್ತಾಳೆ. ಇಂತಹ ವಿಷಯಗಳನ್ನು ಮದುವೆಯು ಜರುಗುವ ಮುನ್ನ ಪರಿಶೀಲಿಸುವುದು ಉತ್ತಮ.
ಹಣಕಾಸಿನ ಪರಿಸ್ಥಿತಿಯನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು. ಯಾವುದೇ ಯುವಕನು ಒಂದು ಕುಟುಂಬವನ್ನು ಪೋಷಿಸಲು ಸಾಕಷ್ಟು ಆದಾಯವನ್ನು ಹೊಂದುವವರೆಗೆ ಮದುವೆಯನ್ನು ಪರಿಗಣಿಸಬಾರದು. "ದೇವರು ಒದಗಿಸುತ್ತಾರೆ" ಎಂದು ಹೇಳುವುದು ದೇವರ ವಾಕ್ಯವನ್ನು ತಪ್ಪಾಗಿ ಉಲ್ಲೇಖಿಸಿದಂತೆ ಆಗಬಹುದು, ಏಕೆಂದರೆ ಕರ್ತನಾದ ಯೇಸುವು ಈಗಾಗಲೇ ನಮಗೆ ಸಾಕಷ್ಟು ವ್ಯವಹಾರ ಜ್ಞಾನವನ್ನು ಒದಗಿಸಿ, ಸೂಕ್ತವಾಗಿ ಯೋಚಿಸಿ ನಿರ್ಧರಿಸಲು ಕಲಿಸಿಕೊಟ್ಟಿದ್ದಾರೆ. ಒಬ್ಬನು ಆ ಜ್ಞಾನವನ್ನು ಬಳಸದಿದ್ದರೆ, ಅವನು ಮದುವೆಯಾದಾಗ ಕರ್ತರು ಒಂದು ಅದ್ಭುತವನ್ನು ಮಾಡುವುದರ ಮೂಲಕ ಅವನ ಅವಶ್ಯಕತೆಗಳನ್ನು ಪೂರೈಸುವ ಸಾಧ್ಯತೆ ಬಹಳ ಕಡಿಮೆಯಾಗಿದೆ. ಯಾವ ವಿಶ್ವಾಸಿಯೂ ದೇವರು ನೇಮಿಸಿದ ಸಮಯಕ್ಕಿಂತ ಮೊದಲು ಒಬ್ಬ ಹುಡುಗಿಯನ್ನು ಮದುವೆ ಮಾಡಿಕೊಂಡು ಆಕೆಯನ್ನು ಅನಗತ್ಯವಾದ ಬಾಧೆಗೆ ಒಳಪಡಿಸಬಾರದು.
ಪರಿಗಣಿಸಬೇಕಾದ ಇನ್ನೊಂದು ವಿಷಯವೆಂದರೆ, ನೀವು ಮದುವೆಯಾಗಲು ಎಷ್ಟು ಸಮಯ ಕಾಯಬೇಕು ಎನ್ನುವಂತದ್ದು. ಸಂದರ್ಭಗಳು ಅಥವಾ ಇತರ ಅಂಶಗಳಿಂದಾಗಿ ಸದ್ಯಕ್ಕೆ ನೀವು ಮದುವೆಯಾಗುವ ಸಾಧ್ಯತೆ ಇಲ್ಲದಿರಬಹುದು. ಅಂತಹ ಸಂದರ್ಭಗಳಲ್ಲಿ, ಇನ್ನು ಒಂದು ವರ್ಷದಲ್ಲಿ ಮದುವೆಯ ಸಾಧ್ಯತೆ ಇದೆ ಎಂದು ಖಾತ್ರಿಯಾಗುವುದಕ್ಕೆ ಮೊದಲು ಯಾವುದೇ ಹುಡುಗಿಯನ್ನು ಪರಿಗಣಿಸದಿರುವುದು ಬುದ್ಧಿವಂತಿಕೆಯಾಗಿದೆ.
ಸಂತುಲಿತ ನಿರ್ಧಾರವನ್ನು ಕೈಗೊಳ್ಳುವುದು
ಜಗತ್ತಿನಲ್ಲಿ ಅತ್ಯುತ್ತಮ ಮತ್ತು ಅತ್ಯಂತ ಆತ್ಮಿಕನಾದ ವ್ಯಕ್ತಿಯೂ ಸಹ ದೌರ್ಬಲ್ಯಗಳುಳ್ಳ ಒಬ್ಬ ಮನುಷ್ಯನಾಗಿರುತ್ತಾನೆ. ಆದ್ದರಿಂದ ಒಬ್ಬ "ಪರಿಪೂರ್ಣ" ಜೀವನ ಸಂಗಾತಿಯನ್ನು ಹುಡುಕುತ್ತಿರುವವನು ತನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾನೆ. ನಿಮಗೆ ಅಂಥವಳು ಎಲ್ಲಿಯೂ ಸಿಗುವುದಿಲ್ಲ. ಒಂದು ವೇಳೆ ಅಂತವಳು ಇದ್ದರೂ ಸಹ, ಆಕೆ ನಿಮ್ಮನ್ನು ಮದುವೆಯಾಗಲು ಸಿದ್ಧಳಿಲ್ಲದೇ ಇರಬಹುದು, ಏಕೆಂದರೆ ಸಹಜವಾಗಿ ಅವಳು ತನಗಾಗಿ ಒಬ್ಬ ಪರಿಪೂರ್ಣ ಸಂಗಾತಿಯನ್ನು ಬಯಸುತ್ತಾಳೆ!
ಇಲ್ಲಿಯವರೆಗೆ ಹೇಳಿರುವ ಪ್ರತಿಯೊಂದು ಸಂಗತಿಯು ಒಬ್ಬ ಪರಿಪೂರ್ಣ ಜೀವನ ಸಂಗಾತಿಯನ್ನು ಹುಡುಕಲು ನಿಮ್ಮನ್ನು ಪ್ರೋತ್ಸಾಹಿಸುವ ಮಾರ್ಗದರ್ಶನವಲ್ಲ, ಆದರೆ ನೀವು ಪರಿಗಣಿಸುವ ಯಾವುದೇ ವ್ಯಕ್ತಿಯ ಬಗ್ಗೆ ಸಂತುಲಿತ ರೀತಿಯಲ್ಲಿ ನಿರ್ಧಾರವನ್ನು ಕೈಗೊಳ್ಳುವುದಕ್ಕೆ, ಮತ್ತು ಆ ಮೂಲಕ ದೇವರ ಚಿತ್ತವನ್ನು ಕಂಡುಕೊಳ್ಳುವುದಕ್ಕೆ ಒದಗಿಸಿರುವ ಸಹಾಯಕರವಾದ ಅಂಶಗಳಾಗಿವೆ.
ದೇವರು ನಿಮಗಾಗಿ ತಾನು ಆಯ್ಕೆಮಾಡಿದ ವ್ಯಕ್ತಿಯ ಬಗ್ಗೆ ಸ್ಪಷ್ಟವಾದ ಆದೇಶವನ್ನು ನೀಡಿದರೂ ಸಹ, ಮದುವೆಯ ನಂತರ ಮಾಡಬೇಕಾದ ಅನೇಕ ಪರಸ್ಪರ ಹೊಂದಾಣಿಕೆಗಳು ಇನ್ನೂ ಇವೆಯೆಂದು ನೀವು ಕಂಡುಕೊಳ್ಳುತ್ತೀರಿ. ನೀವು ಒಬ್ಬರನ್ನೊಬ್ಬರು ಹೆಚ್ಚು ತಿಳಿದುಕೊಂಡಷ್ಟೂ ನೀವಿಬ್ಬರೂ ಎಷ್ಟು ಅಪರಿಪೂರ್ಣರು ಎಂಬುದನ್ನು ಕಂಡುಕೊಳ್ಳುವಿರಿ. ನೀವು ಪ್ರಾಮಾಣಿಕರಾಗಿದ್ದರೆ, ನಿಮ್ಮ ಸಂಗಾತಿಗಿಂತ ನಿಮ್ಮಲ್ಲಿಯೇ ಹೆಚ್ಚಿನ ಅಪರಿಪೂರ್ಣತೆಗಳನ್ನು ನೀವು ಕಂಡುಕೊಳ್ಳುವಿರಿ. ಪ್ರಪಂಚದಲ್ಲಿ ಬೇರೆಲ್ಲವುಗಳಿಗಿಂತ ಮದುವೆಯು ಒಬ್ಬ ವ್ಯಕ್ತಿಯ ಅಪರಿಪೂರ್ಣತೆಗಳನ್ನು ಹೆಚ್ಚಾಗಿ ಬಹಿರಂಗ ಪಡಿಸುತ್ತದೆ. ಒಬ್ಬ ವ್ಯಕ್ತಿಯು ಏಕಾಂಗಿಯಾಗಿದ್ದಾಗ ತನ್ನ ಸ್ವಂತ ಆತ್ಮಿಕ ಮಟ್ಟದ ಬಗ್ಗೆ ಇರಿಸಿಕೊಂಡಿದ್ದ ಅಹಂಕಾರದ ಅಭಿಪ್ರಾಯವನ್ನು ಅದು ಒಡೆದುಹಾಕುತ್ತದೆ. ಡಿ.ಹೆಚ್. ಸ್ಮಾಲ್ ಎಂಬವರು ಹೇಳಿರುವಂತೆ, "ಮದುವೆಯ ಅತ್ಯುತ್ತಮ ವರ್ಣನೆ ಏನೆಂದರೆ, ಇಬ್ಬರು ಅಪರಿಪೂರ್ಣ ವ್ಯಕ್ತಿಗಳು ಹೊಂದಿರುವ ಅಪರಿಪೂರ್ಣ ಸಂಬಂಧ"ಆದರೂ, ನಾವು ಅಪರಿಪೂರ್ಣರಾಗಿದ್ದರೂ ಸಹ, ಮದುವೆಯ ಸಂಬಂಧದಲ್ಲಿ ದೇವರಿಂದ ಸ್ಪಷ್ಟವಾಗಿ ನಡೆಸುವುದು ಮತ್ತು ಮದುವೆಯ ವಿಚಾರದಲ್ಲಿ ದೇವರ ಸ್ಪಷ್ಟ ಮಾರ್ಗದರ್ಶನವನ್ನು ಪಡೆಯುವುದು ಸಾಧ್ಯವಿದೆ ಮತ್ತು ಅದು ಅಗತ್ಯವೂ ಕೂಡ. ಇದರಿಂದ ಮಾತ್ರ ಒಂದು ನಿಜವಾದ ಕ್ರೈಸ್ತ ಕುಟುಂಬಕ್ಕೆ ಬಂಡೆಯಂತೆ ಗಟ್ಟಿಯಾದ ಅಸ್ತಿವಾರವು ಸಿಗುತ್ತದೆ. ಮದುವೆಯ ನಂತರ ಒಬ್ಬರು ಮತ್ತೊಬ್ಬರಲ್ಲಿ ಪರಸ್ಪರ ತಪ್ಪು-ದೋಷಗಳನ್ನು ಗಮನಿಸುವಾಗ, ಮತ್ತು ಅದರಿಂದಾಗಿ ಭಿನ್ನಾಭಿಪ್ರಾಯಗಳು ಉಂಟಾಗುವಾಗ, ಆ ದಂಪತಿಗಳಲ್ಲಿ ಒಬ್ಬರಿಗಾದರೂ ದೇವರು ತಮ್ಮಿಬ್ಬರನ್ನು ಒಂದುಗೂಡಿಸಿ ವಿವಾಹಕ್ಕೆ ನಡೆಸಿದ್ದಾರೆ ಎನ್ನುವಂತ ನೂರಕ್ಕೆ ನೂರರಷ್ಟು ಖಚಿತವಾದ ನಂಬಿಕೆ ಇಲ್ಲವಾದರೆ, ಅಂತಹ ದಂಪತಿಗಳಿಗೆ ಬಹಳ ಸಂಕಟವಾಗುತ್ತದೆ. ಅದಕ್ಕಾಗಿಯೇ ಇಬ್ಬರು ಸಹಭಾಗಿಗಳೂ ವಿವಾಹಕ್ಕೆ ಮುಂಚೆ ದೇವರ ಚಿತ್ತವನ್ನು ನಿಶ್ಚಯಪಡಿಸಿಕೊಳ್ಳುವುದು ಅತ್ಯಂತ ಮಹತ್ವಪೂರ್ಣವಾದ ವಿಷಯವಾಗಿದೆ. ಬಂಡೆಯ ಮೇಲೆ ಮನೆಯನ್ನು ಕಟ್ಟಿದ ಮನುಷ್ಯನು ಮರಳಿನ ಮೇಲೆ ಮನೆ ಕಟ್ಟಿದವನಿಗಿಂತ ಹೆಚ್ಚು ಶ್ರಮವಹಿಸಿದನು ಮತ್ತು ಅಸ್ತಿವಾರ ಹಾಕುವುದರಲ್ಲಿ ಹೆಚ್ಚು ಸಮಯವನ್ನು ಕಳೆದನು. ಆದರೆ ಚಂಡಮಾರುತಗಳು ಬಂದಾಗ ಈತನು ತನ್ನ ಪರಿಶ್ರಮ ಸಾರ್ಥಕವಾಯಿತೆಂದು ಅರಿತುಕೊಂಡನು; ಏಕೆಂದರೆ ಅವನ ಮನೆ ಸ್ಥಿರವಾಗಿ ನಿಂತಿತ್ತು ಆದರೆ ಮತ್ತೊಬ್ಬನ ಮನೆ ಕುಸಿದುಬಿತ್ತು (ಮತ್ತಾಯನು 7:24-27). ದೇವರ ಚಿತ್ತವೆಂಬ ಅಸ್ತಿವಾರದ ಮೇಲೆ ಸ್ಥಾಪಿತವಾದ ವಿವಾಹವು ಜೀವನದಲ್ಲಿನ ಪ್ರತಿಯೊಂದು ಚಂಡಮಾರುತವನ್ನು ಎದುರಿಸಲು ಶಕ್ತವಾಗಿದೆ. ಆದುದರಿಂದ ನೀವು ಕುಟುಂಬವನ್ನು ಕಟ್ಟುವುದಕ್ಕೆ ಪ್ರಾರಂಭಿಸುವ ಮೊದಲು, ದೇವರ ಚಿತ್ತವನ್ನು ಖಚಿತವಾಗಿ ತಿಳಕೊಳ್ಳಲು ಶ್ರಮಿಸುವುದು ಮತ್ತು ಅದಕ್ಕಾಗಿ ಕಾದು ನಿಲ್ಲುವುದು ಯೋಗ್ಯವಾಗಿದೆ.
ಆದ್ದರಿಂದ ಸಂತುಲಿತ ನಿರ್ಧಾರಕ್ಕೆ ಬರುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಈ ಅಧ್ಯಾಯದಲ್ಲಿ ಉಲ್ಲೇಖಿಸಲಾದ ಪ್ರತಿಯೊಂದು ಅಂಶಕ್ಕೆ, ಅದರ ಪ್ರಾಮುಖ್ಯತೆಗೆ ಅನುಗುಣವಾದ ಮಹತ್ವವನ್ನು ಕೊಡಬೇಕು. ಕೆಲವು ವಿಶ್ವಾಸಿಗಳು ವಿಫಲರಾಗಲು ಕಾರಣವೇನೆಂದರೆ, ಕೆಲವು ವಿಷಯಗಳನ್ನು ಅವರು ನಿರ್ಲಕ್ಷಿಸುತ್ತಾರೆ ಮತ್ತು ಬೇರೆ ವಿಚಾರಗಳಿಗೆ ಹೆಚ್ಚು ಒತ್ತು ನೀಡುತ್ತಾರೆ, ಮತ್ತು ಇದರಿಂದಾಗಿ ಸಮತೋಲನವಿಲ್ಲದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ಮನಸ್ಸು ಸೂಕ್ತವಾದ ನಿರ್ಧಾರಕ್ಕೆ ತಲುಪುವ ಮೊದಲೇ ತಮ್ಮ ಹೃದಯ ಚಂಚಲಗೊಳ್ಳಲು ಅವಕಾಶ ನೀಡಿ ತಪ್ಪು ಮಾಡುತ್ತಾರೆ. ಇದರ ಪರಿಣಾಮವಾಗಿ ಅವರ ಮಾನಸಿಕ ಒಳದೃಷ್ಟಿಯು ಚುರುಕಾಗಿರುವುದಿಲ್ಲ, ಮತ್ತು ಅವರು ಮತ್ತೊಬ್ಬ ವ್ಯಕ್ತಿಯನ್ನು ಸರಿಯಾಗಿ ಅಳೆದು ನೋಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಅನೇಕ ವೇಳೆ ಸರಿಯಾಗಿ ಯೋಚನೆ ಮಾಡದೇ ವಿವಾಹದ ಬಗ್ಗೆ ನಿರ್ಧಾರ ಕೈಗೊಂಡ ಕ್ರೈಸ್ತರ ವಿವಾಹಗಳಿಗಿಂತ, ಹುಷಾರಾಗಿ ಯೋಚಿಸಿ ಮಾಡಿಕೊಂಡ ಅವಿಶ್ವಾಸಿಗಳ ವಿವಾಹಗಳಲ್ಲಿ ಹೆಚ್ಚಿನ ಸಂತೋಷವಿರುವ ಸಾಧ್ಯತೆಯಿದೆ.
ಸ್ವತಃ ನಿಮಗೆ ದೇವರ ಚಿತ್ತವು ನೂರಕ್ಕೆ ನೂರರಷ್ಟು ಖಚಿತವಾಗಿ ತಿಳಿಯದೇ ಇರುವಾಗ, ಸ್ನೇಹಿತರು, ಸಂಬಂಧಿಕರು, ಹಿತೈಷಿಗಳು ಅಥವಾ ದೇವರ ಸೇವಕರಿಂದಲೂ ಸಹ ನೀವು ಮದುವೆ ಮಾಡಿಕೊಳ್ಳುವ ಒತ್ತಾಯಕ್ಕೆ ಎಂದಿಗೂ ತಲೆಬಾಗಬಾರದು. ಅಂತಹ ಸಂದರ್ಭಗಳಲ್ಲಿ ಯಾವಾಗಲೂ ಕಾಯುವುದು ಉತ್ತಮ. ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಅಡಚಣೆಯಿದ್ದರೆ, ಮುಂದುವರಿಯಬೇಡಿರಿ. ಕಾದುಕೊಂಡಿರಿ. ಪವಿತ್ರಾತ್ಮನಿಂದ ಉಂಟಾಗುವ ಇಂತಹ ಅಭ್ಯಂತರಗಳನ್ನು ಗಮನಿಸಿರಿ, ಮತ್ತು ಈ ರೀತಿಯಾಗಿ ಮುಂದೆ ವಿಷಾದಿಸುವುದನ್ನು ತಪ್ಪಿಸಿರಿ.
ಭಾರತೀಯ ಸಂಸ್ಕೃತಿಯು ಹುಡುಗ ಮತ್ತು ಹುಡುಗಿಯು ಖಾಸಗಿಯಾಗಿ ಭೇಟಿಮಾಡುವುದನ್ನು ("dating") ಅಥವಾ ವಿರುದ್ಧ ಲಿಂಗದವರು ಪರಸ್ಪರ ಸಂಭಾಷಿಸುವುದನ್ನು ಸಹ (ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ) ನಿಷೇಧಿಸುವಾಗ, ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯ ಬಗ್ಗೆ ಏನನ್ನಾದರೂ ತಿಳಕೊಳ್ಳುವುದು ಹೇಗೆಂದು ಕೆಲವರು ಆಶ್ಚರ್ಯಪಡಬಹುದು. ಆದರೆ ಒಬ್ಬ ಹುಡುಗನು ಒಬ್ಬ ಹುಡುಗಿಯೊಂದಿಗೆ ಮಾತನಾಡುವ ಮೂಲಕ ಅಥವಾ ಆಕೆಯನ್ನು ಖಾಸಗಿಯಾಗಿ ಭೇಟಿಯಾಗುವ ಮೂಲಕವೇ, ಅವನು ಅವಳ ಬಗ್ಗೆ ಎಲ್ಲವನ್ನೂ ತಿಳಕೊಳ್ಳಲು ಸಾಧ್ಯವಾಗುತ್ತದೆ, ಎಂಬ ಭಾವನೆಯು ದುರದೃಷ್ಟವಶಾತ್ ತಪ್ಪಾಗಿದೆ. ನಾವು ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವ ಸಾವಿರಾರು ವಿವಾಹ ವಿಚ್ಛೇದನಗಳನ್ನು ಗಮನಿಸಿದರೆ (ಅಲ್ಲಿ ಚಿಕ್ಕ ವಯಸ್ಸಿನಿಂದ ’ಡೇಟಿಂಗ್’ ಪದ್ಧತಿಯು ಸರ್ವೇಸಾಮಾನ್ಯವಾಗಿದೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಂಗಾತಿಯನ್ನು ತಾನೇ ಆರಿಸಿಕೊಳ್ಳುತ್ತಾನೆ), ಖಾಸಗಿ ಭೇಟಿಯ (’ಡೇಟಿಂಗ್’) ಪದ್ಧತಿಯು ಸೂಕ್ತ ಮಾರ್ಗವಲ್ಲವೆಂದು ಮನಗಾಣುತ್ತೇವೆ. ಹುಡುಗಿ/ ಹುಡುಗನ ನಿಜವಾದ ಸ್ವಭಾವವನ್ನು ನಿಮಗೆ ತೋರಿಸಲು ದೇವರನ್ನು ಕೇಳಿಕೊಳ್ಳುವುದು ನಿಜವಾಗಿಯೂ ಸೂಕ್ತ ಪರಿಹಾರ ಮಾರ್ಗವಾಗಿದೆ. ಆಕೆಯ/ ಆತನ ಪರಿಚಯವಿರುವ ಇತರ ವಿಶ್ವಾಸಿಗಳಿಂದ ಆ ವ್ಯಕ್ತಿಯ ಕುರಿತಾಗಿ ಸಾಧ್ಯವಾದಷ್ಟು ಮಾಹಿತಿಯನ್ನು ಪಡೆಯಲು ನೀವು ಸಕಲ ಪ್ರಯತ್ನ ಮಾಡಬೇಕು. ಏಕೆಂದರೆ ಈ ರೀತಿಯಾಗಿ ಮಾತ್ರ ನೀವು ಈ ವಿಚಾರದಲ್ಲಿ ವಿವೇಚನೆಯಿಂದ ಪ್ರಾರ್ಥಿಸಬಹುದು. ನೀವು ಸರಿಯಾದ ವ್ಯಕ್ತಿಯನ್ನು ಕಂಡುಕೊಳ್ಳುವ ವಿಷಯದಲ್ಲಿ ದೇವರು ನಿಮಗಿಂತ ಬಹಳ ಹೆಚ್ಚು ಉತ್ಸುಕರಾಗಿರುವುದರಿಂದ, ಯಾವುದೇ ರೀತಿಯ ಸಾಂಸ್ಕೃತಿಕ ಅಡಚಣೆಗಳು ಇದ್ದರೂ, ಯಾವುದೇ ವ್ಯಕ್ತಿಯ ಬಗ್ಗೆ ಅಗತ್ಯವಾದ ಎಲ್ಲಾ ಮಾಹಿತಿಗಳನ್ನು ನೀವು ಪಡೆಯಲು ಅವರು ಅವಕಾಶ ಒದಗಿಸುತ್ತಾರೆ. ಇದನ್ನು ನಿಮಗಾಗಿ ಮಾಡುವುದಕ್ಕಾಗಿ ದೇವರನ್ನು ನಂಬಿರಿ. ಆತನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ನಿಮ್ಮ ಅಪನಂಬಿಕೆಯ ಮೂಲಕ ಅವರ ಪ್ರಭಾವವನ್ನು ಸೀಮಿತಗೊಳಿಸಬೇಡಿ (ಮತ್ತಾಯನು 13:58).
ದೇವರ ಚಿತ್ತವನ್ನು ಖಚಿತಪಡಿಸಿಕೊಂಡ ನಂತರ, ಮದುವೆಯ ಪ್ರಸ್ತಾಪವನ್ನು ಹುಡುಗಿಯ ಕುಟುಂಬಕ್ಕೆ ತಲಪಿಸುವ ಕಾರ್ಯವನ್ನು (ನಮ್ಮ ದೇಶಕ್ಕೆ ಅನ್ವಯಿಸುವಂತೆ ಹೇಳುವುದಾದರೆ) ನಿಮ್ಮ ಪೋಷಕರ ಮೂಲಕ ಅಥವಾ ಸಾಮಾನ್ಯ ಸ್ನೇಹಿತರ ಮೂಲಕ ಮಾಡುವುದು ವಿವೇಕತನವಾಗಿದೆ.
ಆ ವ್ಯಕ್ತಿಯು ನಿಮ್ಮ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದರೆ ಏನು ಮಾಡಬೇಕು? ಅಂತಹ ಸಂದರ್ಭಗಳಲ್ಲಿ ಕಾಯುವುದು ಮತ್ತು ಪ್ರಾರ್ಥಿಸುವುದು ಅತ್ಯಂತ ಸೂಕ್ತವಾಗಿದೆ. ಯಾವುದೇ ರೀತಿಯ ಆತುರದ ಪ್ರತಿಕ್ರಿಯೆಗೆ ಅವಕಾಶ ನೀಡಬೇಡಿರಿ. ಸ್ವಲ್ಪ ಸಮಯ ಕಾದು ನೋಡಿದ ನಂತರ, ಆ ವ್ಯಕ್ತಿಯು ನಿಮ್ಮನ್ನು ಜೀವನ ಸಂಗಾತಿಯಾಗಿ ಪರಿಗಣಿಸಲು ನಿರಾಕರಿಸಿದರೆ, ನಿಮ್ಮ ಮೊದಲಿನ ನಿರ್ಣಯವು ತಪ್ಪಾಗಿತ್ತೆಂದು ನಿಮಗೆ ಖಚಿತವಾಗುತ್ತದೆ. ಅದು ನಿಜವಾಗಿ ದೇವರ ಚಿತ್ತವಾಗಿದ್ದಲ್ಲಿ, ಅವರು ಆ ವ್ಯಕ್ತಿಯಲ್ಲೂ ಸಹ ನಿಶ್ಚಯವಾಗಿ ಅದರ ಬಗ್ಗೆ ಮನವರಿಕೆಯನ್ನು ಉಂಟುಮಾಡುತ್ತಾರೆ. ನಿಮ್ಮ ಮನಸ್ಸಿನಲ್ಲಿ ಮಾತ್ರ ಈ ಅಭಿಪ್ರಾಯ ಉಂಟಾಗಿದ್ದರೆ, ಆಗ ಖಂಡಿತವಾಗಿ ಅದು ದೇವರಿಂದ ಬಂದ "ನಿರ್ದೇಶನ"ವಲ್ಲ. ನೀವು ದೇವರ ಸಮಯಕ್ಕಾಗಿ ಕಾಯುವುದಾದರೆ, ಅವರು ನಿಮಗಾಗಿ ಆರಿಸಿಕೊಂಡಿರುವ ಜೀವನ ಸಂಗಾತಿಯನ್ನು ನಿಮ್ಮೆದುರಿಗೆ ತರುತ್ತಾರೆ ಮತ್ತು ಅಂತಹ ಸಂದರ್ಭದಲ್ಲಿ ನಿಸ್ಸಂದೇಹವಾಗಿ, ರೆಬೆಕ್ಕಳು ಉತ್ತರಿಸಿದ ಹಾಗೆ, "ನನಗೆ ಒಪ್ಪಿಗೆ" ಎಂಬ ಜವಾಬು ಅವಳಿಂದ/ ಅವನಿಂದ ಸಿಗುತ್ತದೆ (ಆದಿಕಾಂಡ 24:58).
ನೀವು ದೇವರ ಆಯ್ಕೆಯೆಂದು ಪರಿಗಣಿಸುವ ವ್ಯಕ್ತಿಯನ್ನು ನಿಮ್ಮ ಪೋಷಕರು ನಿರಾಕರಿಸಿದರೆ, ಆಗ ಏನು ಮಾಡಬೇಕು? ಅಂತಹ ಸಂದರ್ಭದಲ್ಲಿ, ಸಹಜವಾಗಿ, ಸ್ವತಃ ದೇವರೇ ನಿಮ್ಮ ಹೆತ್ತವರಿಗೆ ಮನವರಿಕೆ ಮಾಡಿಸಬೇಕೆಂದು ಪ್ರಾರ್ಥಿಸುವುದು ನಿಮ್ಮ ಮೊದಲ ಹೆಜ್ಜೆಯಾಗಿದೆ. ಇದರ ನಂತರ ನೀವು ಅವರಿಗೆ ಈ ವಿಷಯದಲ್ಲಿ ನಿಮಗೆ ಮನವರಿಕೆ ಹೇಗೆ ಉಂಟಾಯಿತೆಂದು ವಿವರಿಸಬೇಕು. ನೀವು ಈ ವಿಷಯದಲ್ಲಿ ಅವರೊಂದಿಗೆ ಯಥಾರ್ಥರಾಗಿರಬೇಕು. ಅವರನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಅವರ ನುರಿತ ಸಲಹೆಯು ಬಹಳ ಉಪಯುಕ್ತವಾದದ್ದು. ಅವರು ಹಳೆಯ ಸಂಪ್ರದಾಯದವರೆಂದು ನೀವು ಭಾವಿಸಿದರೂ ಸಹ, ನೀವು ಅದನ್ನು ಅವರಿಗೆ ನೇರವಾಗಿ ಹೇಳುವ ಅವಶ್ಯಕತೆಯಿಲ್ಲ. ನೀವು ಅವರಿಗೆ ಯಥಾರ್ಥವಾದ ಗೌರವ ಮತ್ತು ಪ್ರೀತಿಯನ್ನು ತೋರಿಸಿರಿ. ದೇವರು ಅವರ ಮೂಲಕ ನಿಮ್ಮನ್ನು ಮದುವೆಯ ಅನೇಕ ಗಂಡಾಂತರಗಳಿಂದ ರಕ್ಷಿಸಬಹುದು.
ಸತ್ಯವೇದವು ಹೀಗೆ ಹೇಳಿದೆ: "ಹೆತ್ತತಂದೆಯ ಮಾತಿಗೆ ಕಿವಿಗೊಡು; ತಾಯಿಯ ಅನುಭವದ ಮಾತನ್ನು ಅಸಡ್ಡೆ ಮಾಡಬೇಡ ... ಒಬ್ಬ ಮೂರ್ಖನು ಮಾತ್ರ ತನ್ನ ತಂದೆಯ ಸಲಹೆಯನ್ನು ತಿರಸ್ಕರಿಸುತ್ತಾನೆ; ಜಾಣನಾದ ಮಗನು ತಂದೆಯ ಪ್ರತಿಯೊಂದು ಸಲಹೆಯನ್ನು ಪರಿಗಣಿಸುತ್ತಾನೆ ... ಅವರ ಎಲ್ಲಾ ಉಪದೇಶಗಳನ್ನು ಹೃದಯದಲ್ಲಿ ಇರಿಸಿಕೋ ... ಅವರ ತಿಳುವಳಿಕೆಯ ಮಾತುಗಳು ನಿನಗೆ ದಾರಿ ತೋರಿಸುತ್ತವೆ ಮತ್ತು ನಿನ್ನನ್ನು ಹಾನಿಯಿಂದ ರಕ್ಷಿಸುತ್ತವೆ ... ಅವರ ನಿರ್ದೇಶನವು ಬೆಳಕಿನ ಕಿರಣದಂತೆ ನಿನ್ನ ಮನಸ್ಸಿನ ಮೂಲೆಮೂಲೆಯಿಂದ ಕತ್ತಲನ್ನು ಹೋಗಲಾಡಿಸಿ, ಅಪಾಯದ ಬಗ್ಗೆ ನಿನ್ನನ್ನು ಎಚ್ಚರಿಸಿ, ನಿನ್ನ ಜೀವನವನ್ನು ಸುಗಮಗೊಳಿಸುತ್ತದೆ" (ಜ್ಞಾನೋಕ್ತಿಗಳು 23:22, 15:5, 6:21-23 - The Living Bible ಅನುವಾದ).
ಸಹಜವಾಗಿ, ಇವೆಲ್ಲವೂ ಸಂಪೂರ್ಣವಾಗಿ ನಿಜವಾಗಿರುವುದು ಹೊಸದಾಗಿ ಹುಟ್ಟಿ, ದೇವರೊಂದಿಗೆ ನಡೆಯುತ್ತಿರುವ ಹೆತ್ತವರ ವಿಚಾರದಲ್ಲಿ ಮಾತ್ರ. ಒಂದು ವೇಳೆ ಹೆತ್ತವರು ರಕ್ಷಣೆ ಹೊಂದದೇ ಇದ್ದರೂ, ಅನೇಕ ವೇಳೆ ಅವರ ಸಲಹೆಯು ಸೂಕ್ತವಾಗಿರುತ್ತದೆ.
ಹೆತ್ತವರ ಅನುಮೋದನೆಯು ಒಂದು ದೊಡ್ಡ ಆಶೀರ್ವಾದವಾಗಿದೆ ಮತ್ತು ಅದನ್ನು ಪಡೆಯಲು ಹೆಚ್ಚಿನ ಪ್ರಯತ್ನ ಮಾಡಬೇಕು. ನಿಮ್ಮ ತಂದೆತಾಯಿಯರು ವಿಶ್ವಾಸಿಗಳಾಗಿದ್ದರೆ, ಅವರ ಒಪ್ಪಿಗೆ ಪಡೆಯಲು ಕೆಲವು ವರ್ಷಗಳೇ ಕಾಯಬೇಕಾಗಿ ಬಂದರೂ, ನೀವು ಅದಕ್ಕಾಗಿ ಕಾಯಬೇಕು. ಅವರು ಒಪ್ಪಿಗೆ ಕೊಡದಿರುವ ಸಂದರ್ಭದಲ್ಲಿ, ನೀವು ನಿಮ್ಮ ಮನೋ-ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಹಾಗೆ ಮಾಡಿದ್ದಕ್ಕಾಗಿ ದೇವರು ನಿಮ್ಮನ್ನು ಸನ್ಮಾನಿಸುತ್ತಾರೆ. ದೇವರು ಸಾರ್ವಭೌಮರಾಗಿದ್ದಾರೆ ಮತ್ತು ಅವರು ತಕ್ಕ ಕಾಲದಲ್ಲಿ ನಿಮ್ಮ ಹೆತ್ತವರ ಸಂಕಲ್ಪಗಳನ್ನು ಸರಿಯಾದ ರೀತಿಯಲ್ಲಿ ಬದಲಿಸಲು ಸಮರ್ಥರಾಗಿದ್ದಾರೆ (ಜ್ಞಾನೋಕ್ತಿಗಳು 21:1). ನಾನು ಕಂಡಿರುವ ಒಂದಕ್ಕಿಂತ ಹೆಚ್ಚು ದೃಷ್ಟಾಂತಗಳಲ್ಲಿ, ದೇವರನ್ನು ಗೌರವಿಸಿ, ಅವರು ತಮ್ಮ ಪರವಾಗಿ ಕಾರ್ಯ ನಿರ್ವಹಿಸುವುದಕ್ಕಾಗಿ ಕಾದು ನಿಂತ ಜನರಿಗಾಗಿ ಅವರು ಇದನ್ನು ಮಾಡಿದ್ದಾರೆ. ಬೇರೆ ಹಲವರು ತಾಳ್ಮೆಯಿಲ್ಲದೆ ದುಡುಕಿ, ಇಂತಹ ಅಮೂಲ್ಯವಾದ ಅನುಭವವನ್ನು ಕಳೆದುಕೊಂಡಿದ್ದಾರೆ. ಹಡ್ಸನ್ ಟೈಲರ್‌ರವರು ಹೇಳಿರುವುದು ಏನೆಂದರೆ, "ಕರ್ತರ ಮೂಲಕ ಜಯಶಾಲಿಗಳಾಗಿರಿ. ಯಾವುದೇ ಬಾಗಿಲನ್ನಾಗಲೀ ತೆರೆಯಲು ಅವರು ಶಕ್ತರಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿ ಹೆತ್ತವರದ್ದು ಆಗಿರುತ್ತದೆ, ಮತ್ತು ಇದು ಬಹಳ ಗಂಭೀರವಾದ ಜವಾಬ್ದಾರಿಯಾಗಿದೆ. ಒಬ್ಬ ಮಗ ಅಥವಾ ಮಗಳು ಯಥಾರ್ಥತೆಯಿಂದ, ’ಕರ್ತನೇ, ನೀನು ಬಾಗಿಲನ್ನು ತೆರೆಯುವುದಕ್ಕಾಗಿ ನಾನು ಕಾದಿದ್ದೇನೆ,’ ಎಂದು ಹೇಳಿದರೆ, ಆಗ ಈ ಸಂಗತಿ ಕರ್ತರಿಗೆ ಸೇರಿದ್ದು ಮತ್ತು ಅವರು ಅದನ್ನು ನಿಭಾಯಿಸುತ್ತಾರೆ" (ಡಾ. ಮತ್ತು ಶ್ರೀಮತಿ ಹೋವರ್ಡ್ ಟೈಲರ್‌ರವರು ಬರೆದಿರುವ "ಹಡ್ಸನ್ ಟೈಲರ್‌ರವರ ಆತ್ಮಿಕತೆಯ ರಹಸ್ಯ" ಎಂಬ ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಲಾಗಿದೆ).
ಆದಾಗ್ಯೂ, ತಂದೆತಾಯಿಯರು ಅವಿಶ್ವಾಸಿಗಳಾಗಿದ್ದರೆ ಅಥವಾ ವಿಶ್ವಾಸಿಗಳಾಗಿದ್ದರೂ ಅವರು ವಿನಾಕಾರಣ ಲೌಕಿಕ ದೃಷ್ಟಿಯಿಂದ ಆಕ್ಷೇಪಿಸಿದರೆ, ಅಂತಹ ಸಂದರ್ಭದಲ್ಲಿ ಅವರ ಒಪ್ಪಿಗೆಗಾಗಿ ಮಿತಿಮೀರಿ ಕಾಯಬೇಕಿಲ್ಲ. ಆದರೆ ಅಂತಹ ಸನ್ನಿವೇಶದಲ್ಲೂ ಸಹ, ಸ್ವಲ್ಪ ಸಮಯವಾದರೂ ಕಾದು ನೋಡಿ, ಸಾಧ್ಯವಿದ್ದರೆ ಅವರ ಒಪ್ಪಿಗೆಯನ್ನು ಪಡೆದು, ಆ ಮೇಲೆ ಮದುವೆ ಮಾಡಿಕೊಳ್ಳಬೇಕು. ಅವರ ಒಪ್ಪಿಗೆಯಿಲ್ಲದೆ ಮುಂದುವರಿಸುವುದು ದೇವರ ಚಿತ್ತವಾಗಿದೆಯೆಂದು ನಿಮಗೆ ಅಂತಿಮವಾಗಿ ಮನವರಿಕೆಯಾದರೆ, ಆಗ ದೀನತೆ ಮತ್ತು ಪ್ರೀತಿಯಿಂದ ಅವರಿಗೆ ಈ ವಿಷಯವನ್ನು ತಿಳಿಸಿರಿ. ನೀವು ಅಹಂಕಾರದಿಂದ ಅಥವಾ ಅವಿಧೇಯತೆಯಿಂದ ಹೀಗೆ ಮಾಡುತ್ತಿದ್ದೀರಿ, ಎಂಬ ಭಾವನೆ ಅವರಲ್ಲಿ ಉಂಟಾಗದಂತೆ ನೋಡಿಕೊಳ್ಳಿರಿ.
ಮದುವೆಯನ್ನು ಪರಿಗಣಿಸುವುದಕ್ಕೆ ಇನ್ನೂ ಬಹಳ ಸಮಯ ಕಾಯಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವವರಿಗಾಗಿ ನಾನು ಇಲ್ಲಿ ಒಂದು ಮಾತನ್ನು ಹೇಳಬಯಸುತ್ತೇನೆ. ಅಬ್ರಹಾಮನು ಇಸಾಕನನ್ನು ಸಮರ್ಪಿಸಿದ ಹಾಗೆ (ಆದಿಕಾಂಡ 22), ಮದುವೆ ಮತ್ತು ಕುಟುಂಬ ಜೀವನದ ಆಸೆಯನ್ನು ದೇವರಿಗೆ ಸಮರ್ಪಿಸಬೇಕು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನೀವು ಜೀವನ ಪರ್ಯಂತ ಅವಿವಾಹಿತರಾಗಿ ಇರುವುದರಿಂದ ದೇವರಿಗೆ ಮಹಿಮೆ ಉಂಟಾಗುವುದಾದರೆ, ನೀವು ಅದಕ್ಕೆ ಸಿದ್ಧರಾಗಿರಬೇಕು. ನೀವು ಈ ಮನೋಭಾವವನ್ನು ಇರಿಸಿಕೊಂಡರೆ, ವಿರುದ್ಧ ಲಿಂಗದ ಪ್ರತಿಯೊಬ್ಬ ಆಕರ್ಷಕ ವ್ಯಕ್ತಿಯನ್ನು ಸಂಭವನೀಯ ಜೀವನ ಸಂಗಾತಿಯಾಗಿ ನೋಡದಿರುವಂತೆ ಅದು ನಿಮ್ಮನ್ನು ತಡೆಯುತ್ತದೆ. ಪ್ರತಿಯೊಂದು ಬಿಡುವಿನ ಕ್ಷಣವು ಕರ್ತರಿಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವಾಗುವಂತೆ ನೋಡಿಕೊಳ್ಳಬೇಕು. "ದೇವರ ಚಿತ್ತದಲ್ಲಿ ನಿದ್ರಿಸುವುದು" ಎಂಬ ಹೇಳಿಕೆಯ ನಿಜವಾದ ಅರ್ಥ ಇದೇ ಆಗಿದೆ. ದೇವರು ವಿವಾಹಕ್ಕಾಗಿ ನಿಶ್ಚಯಪಡಿಸಿದ ಸಮಯವು ಪ್ರಾಪ್ತವಾದಾಗ, ಅವರು ಅಬ್ರಹಾಮನಿಗೆ ಇಸಾಕನನ್ನು ವಾಪಾಸು ಕೊಟ್ಟ ಹಾಗೆ, ನೀವು ಅವರಿಗೆ ಸಮರ್ಪಿಸಿದ್ದನ್ನು ಅವರು ನಿಮಗೆ ಹಿಂದಿರುಗಿಸುತ್ತಾರೆ. ದೇವರ ಮುಂದೆ ಇಂತಹ ಮನೋಭಾವವನ್ನು ಇರಿಸಿಕೊಂಡ ಅನೇಕರು (ಮೇಲಿನ ಭಾಗದಲ್ಲಿ ವಿವರಿಸಿದ ಹಾಗೆ), ತಾವು ಸೈತಾನನ ಹಲವು ವಿಧವಾದ ಮೋಹ-ಜಾಲಗಳಿಂದ ಬಿಡುಗಡೆ ಹೊಂದಿದ್ದಾಗಿ, ಮತ್ತು ಕೊನೆಗೆ ವಿವಾಹಕ್ಕೆ ದೇವರ ಸಮಯ ಪ್ರಾಪ್ತವಾದಾಗ, ದೇವರು ತಮಗೆ ಅತ್ಯುತ್ತಮ ಆಶೀರ್ವಾದವನ್ನು ಕೊಟ್ಟದ್ದಾಗಿ ತಮ್ಮ ಅನುಭವದಿಂದ ಸಾಕ್ಷಿ ಹೇಳುತ್ತಾರೆ.
'Overseas Missionary Fellowship' ಎಂಬ ಸಂಸ್ಥೆಯ ಮಹಾ ನಿರ್ದೇಶಕರಾಗಿ ನಿವೃತ್ತರಾದ "ಜೆ. ಒಸ್ವಾಲ್ಡ್ ಸ್ಯಾನ್ಡರ್ಸ್" ಎಂಬವರು, ತಾನು ಅವಿವಾಹಿತ ಯೌವನಸ್ಥನಾಗಿದ್ದಾಗ ತನ್ನ ಜೀವನವನ್ನು ಕ್ರಿಸ್ತನಿಗೆ ಸಂಪೂರ್ಣವಾಗಿ ಒಪ್ಪಿಸಿಕೊಟ್ಟ ಸಮಯದಲ್ಲಿ, ತಾನು ಈ ಕೆಳಗಿನ ವಿಷಯಗಳನ್ನು ಖಚಿತಪಡಿಸಿಕೊಳ್ಳದೇ ಒಬ್ಬ ಹುಡುಗಿಯನ್ನು ವಿವಾಹದ ದೃಷ್ಟಿಯಿಂದ ಭೇಟಿಯಾಗುವುದಿಲ್ಲವೆಂದು ಕರ್ತರಿಗೆ ಮಾಡಿದ ವಾಗ್ದಾನವನ್ನು ವಿವರಿಸಿದ್ದಾರೆ:
ಅವರು ತಾನು ಅವಿವಾಹಿತನಾಗಿಯೇ ಉಳಕೊಳ್ಳಲು ಸಿದ್ಧನಿದ್ದೇನೆಂದು ಸಹ ಕರ್ತರಿಗೆ ತಿಳಿಸಿದರು. ತಾನೊಬ್ಬ ಕ್ರೈಸ್ತ ಧರ್ಮ-ಪ್ರಚಾರಕನಾಗುವುದನ್ನು ದೇವರು ಬಯಸುತ್ತಾರೆಂದು ಅವರು ತಿಳಿದುಕೊಂಡ 6 ವಾರಗಳ ನಂತರ, ಮುಂದೆ ತನ್ನ ಹೆಂಡತಿಯದ ಹುಡುಗಿಯನ್ನು ಅವರು ಭೇಟಿಯಾದರು. ಅವರು ಆಕೆಯ ಕಡೆಗೆ ಒಡನೆಯೇ ಆಕರ್ಷಿಸಲ್ಪಟ್ಟರು. ಆದರೆ ಆಕೆಯೊಂದಿಗೆ ವಿವಾಹದ ಪ್ರಸ್ತಾಪ ಮಾಡುವಂತೆ ಕರ್ತರು ಅವರಿಗೆ ಸೂಚಿಸಿದ್ದು ಇನ್ನೂ 6 1/2 ವರ್ಷಗಳು ಕಳೆದ ನಂತರವೇ. ಈ ರೀತಿಯಾಗಿ ದೇವರನ್ನು ಸನ್ಮಾನಿಸುವವರು, ದೇವರಿಂದ ಅತ್ಯುತ್ತಮವಾದುದನ್ನು ಪಡೆಯುತ್ತಾರೆ. ಈ ಮಾರ್ಗ ಅತ್ಯಂತ ಸುರಕ್ಷಿತವಾದದ್ದಾಗಿದೆ.
ನಾನು ಇಲ್ಲಿ ಕೊನೆಯ ಎರಡು ಎಚ್ಚರಿಕೆಗಳನ್ನು ನೀಡಲು ಬಯಸುತ್ತೇನೆ.
ಮೊದಲನೆಯದಾಗಿ, ಒಂದು ವಿವಾಹ ಪ್ರಸ್ತಾಪ ಅಥವಾ ಗೆಳೆತನ ಮುರಿದು ಬಿದ್ದೊಡನೆಯೇ, ಅಥವಾ ನೀವು ಮದುವೆ ಮಾಡಿಕೊಳ್ಳಲು ಬಹಳ ಆಸಕ್ತರಾಗಿದ್ದ ವ್ಯಕ್ತಿಯು ಬೇರೆಯವರನ್ನು ಮದುವೆ ಮಾಡಿಕೊಂಡ ಕೂಡಲೇ, ನೀವು ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾಗುವ ತೀರ್ಮಾನವನ್ನು ಎಂದಿಗೂ ಮಾಡಬೇಡಿರಿ. ಅಂತಹ ಸಂದರ್ಭದಲ್ಲಿ ನೀವು ಬಲವಾದ ಮಾನಸಿಕ ಶೋಧನೆಯನ್ನು ಅನುಭವಿಸುತ್ತೀರಿ, ಏಕೆಂದರೆ ನಿಮ್ಮ ಭಾವನೆಗಳು ಗೊಂದಲಕ್ಕೆ ಒಳಗಾಗಿರುತ್ತವೆ ಮತ್ತು ನಿಮ್ಮ ಹೃದಯದಲ್ಲಿ ಖಾಲಿಯಾದ ಆ ಜಾಗವನ್ನು ಒಡನೆಯೇ ಯಾರಾದರೂ ತುಂಬಿಸಬೇಕೆಂದು ನೀವು ಇಚ್ಛಿಸುತ್ತೀರಿ. ಇಂತಹ "ಯೋಚಿಸದೇ ಕೈಗೊಂಡ" ಎಲ್ಲಾ ನಿರ್ಧಾರಗಳನ್ನು ಮುಂದೆ ನೀವು ನಿಶ್ಚಯವಾಗಿ ವಿಷಾದಿಸುತ್ತೀರಿ. ನೀವು ಇಂತಹ ನಿರಾಶೆಯನ್ನು ಅನುಭವಿಸಿದ ನಂತರ, ಕಡಿಮೆ ಪಕ್ಷ ಆರು ತಿಂಗಳವರೆಗೆ ಯಾವುದೇ ಮದುವೆಯ ಪ್ರಸ್ತಾಪದಿಂದ ದೂರವಿರಿ. ಆಗ ನಿಮಗೆ ಸಾಮಾನ್ಯ ಪರಿಸ್ಥಿತಿಗೆ ಹಿಂದಿರುಗುವ ಅವಕಾಶ ದೊರಕುತ್ತದೆ ಮತ್ತು ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುತ್ತದೆ. ನನ್ನ ನೆನಪಿಗೆ ಬರುವಂತ ಇಂತಹ ವಿಪರೀತ ಮಾನಸಿಕ ಸ್ಥಿತಿಯಲ್ಲಿ ನಿಶ್ಚಯಿಸಲಾದ ಒಂದಕ್ಕಿಂತ ಹೆಚ್ಚು ವಿವಾಹಗಳಳು, ಅಂತಿಮವಾಗಿ ವಿಷಾದಕ್ಕೊಳಗಾಗಿದ್ದುಂಟು.
ಎರಡನೆಯದಾಗಿ, ನೀವು ವಿವಾಹಕ್ಕೆ ಒಪ್ಪದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು (ಅಥವಾ ಇಂಥದ್ದೇ ಯಾವುದೋ ವಿಪರೀತ ಕಾರ್ಯ ಮಾಡುವುದಾಗಿ) ಒಬ್ಬನು/ಒಬ್ಬಳು ಬೆದರಿಕೆ ಹಾಕಿದ್ದಕ್ಕಾಗಿ ಎಂದಿಗೂ ಮದುವೆಯಾಗಲು ಒಪ್ಪಿಕೊಳ್ಳಬೇಡಿರಿ. ನೀವು ಈ ಕಾರಣಕ್ಕಾಗಿ ಮದುವೆಯಾದರೆ, ಆಗಲೂ ಸಹ ಕೊನೆಯಲ್ಲಿ ಖಂಡಿತವಾಗಿ ವಿಷಾದಿಸುತ್ತೀರಿ.
ವಿವಾಹದ ಸಂದರ್ಭದಲ್ಲಿ, ದೇವರು ಖುದ್ದಾಗಿ ಆರಿಸಿದ ವ್ಯಕ್ತಿಯೊಂದಿಗೆ, ದೇವರ ಸಂಕಲ್ಪದ ಅನುಸಾರವಾಗಿ ಮತ್ತು ಅವರು ನಿಶ್ಚಯಿಸಿದ ಸಮಯದಲ್ಲಿ, ಸ್ವತಃ ದೇವರಿಂದ ನೀವು ಕೂಡಿಸಲ್ಪಟ್ಟಿದ್ದೀರಿ, ಎಂದು ತಿಳಿದುಕೊಳ್ಳುವುದು ಒಂದು ಅದ್ಭುತವಾದ ಅನುಭವವಾಗಿದೆ. ಇಂತಹ ಭರವಸೆಯನ್ನು ಹೊಂದಿರುವ ದಂಪತಿಗಳು ಧನ್ಯರು.
ಅವರು ನಿಜವಾಗಿ "ಎಣಿಸಲಾರದ ಸಂತೋಷದ" ಅನುಭವವನ್ನು ಹೊಂದುತ್ತಾರೆ.
"ಆಕೆಯು ಆಭರಣಗಳಿಗಿಂತ ಬಹಳ ಹೆಚ್ಚು ಅಮೂಲ್ಯಳು, ಮತ್ತು ಮುತ್ತು ರತ್ನಗಳಿಗಿಂತ ಬಹಳ ಹೆಚ್ಚು ಬೆಲೆಬಾಳುತ್ತಾಳೆ."
ಸತ್ಯವೇದವು ಗುಣವಂತೆಯಾದ ಸ್ತ್ರೀಯನ್ನು ಈ ರೀತಿಯಾಗಿ ವರ್ಣಿಸುತ್ತದೆ (ಜ್ಞಾನೋಕ್ತಿಗಳು 31:10 - Amplified Bible ಅನುವಾದ)
ಅನ್ಯ ಸಂಸ್ಕೃತಿಯ ಜನರು ಯಾವಾಗಲೂ ಸ್ತ್ರೀಯನ್ನು ಪುರುಷನಿಗಿಂತ ಕೀಳು ಮಟ್ಟದ ಸೃಷ್ಟಿಯೆಂಬಂತೆ ನೋಡುತ್ತಾ ಬಂದಿದ್ದಾರೆ. ಆದರೆ ಕರ್ತನಾದ ಯೇಸು ಕ್ರಿಸ್ತನು ತನ್ನ ಉಪದೇಶ ಹಾಗೂ ಜೀವಿತದ ಉದಾಹರಣೆಯ ಮೂಲಕ ಸ್ಪಷ್ಟವಾಗಿ ಕಲಿಸಿಕೊಟ್ಟದ್ದು ಏನೆಂದರೆ, ದೇವರ ಸಂಕಲ್ಪದ ಪ್ರಕಾರ ಸ್ತ್ರೀಯ ಸ್ಥಾನವು ಪುರುಷನ ಪಕ್ಕದಲ್ಲಿರುವುದು, ಆತನ ಪಾದಗಳ ಅಡಿಯಲ್ಲಿ ಅಲ್ಲ.
ಸ್ತ್ರೀಯು ಒಂದು ವಿಶಿಷ್ಟ ಕಾರ್ಯವನ್ನು ನಿಭಾಯಿಸಲಿಕ್ಕಾಗಿ ದೇವರಿಂದ ಸೃಷ್ಟಿಸಲ್ಪಟ್ಟಳು - ಪುರುಷನು ಅದನ್ನು ಪೂರೈಸಲು ಎಂದಿಗೂ ಸಾಧ್ಯವಿರಲಿಲ್ಲ. ಈ ಕಾರಣಕ್ಕಾಗಿ ಸೃಷ್ಟಿಯಲ್ಲಿ ಒಬ್ಬ ಸ್ತ್ರೀಯು ಒಬ್ಬ ಪುರುಷನಿಗಿಂತ ವಿಭಿನ್ನವಾಗಿ ಸೃಷ್ಟಿಸಲ್ಪಟ್ಟಿದ್ದಾಳೆ - ಕೇವಲ ದೈಹಿಕವಾಗಿ ಅಲ್ಲದೆ, ಮಾನಸಿಕವಾಗಿ ಮತ್ತು ಭಾವನೆಗಳಲ್ಲೂ ಸಹ. ಆಕೆ ಹೊಂದಿರುವ ತಾಯ್ತನದ ಜವಾಬ್ದಾರಿಯಿಂದಾಗಿ, ಆಕೆ ಪುರುಷನಿಗಿಂತ ಹೆಚ್ಚು ಸೂಕ್ಷ್ಮತೆ, ಹೆಚ್ಚು ವಿಧೇಯತೆ ಮತ್ತು ಹೆಚ್ಚು ಭಾವನಾತ್ಮಕತೆಯೊಂದಿಗೆ ಸೃಷ್ಟಿಸಲ್ಪಟ್ಟಿದ್ದಾಳೆ. ಇದರಿಂದಾಗಿ ಆಕೆಯಲ್ಲಿ ಹೆಚ್ಚಾಗಿ ಪ್ರೀತಿಸುವ ಸಾಮರ್ಥ್ಯವಿದೆ ಮತ್ತು ಅದೇ ಸಮಯದಲ್ಲಿ ಆಕೆ ಹೆಚ್ಚಿನ ಪ್ರೀತಿಯನ್ನು ಪಡೆಯಲು ಹಂಬಲಿಸುತ್ತಾಳೆ. ಇವೆಲ್ಲವೂ ಇಲ್ಲದಿದ್ದಾಗ ಸಾಮಾನ್ಯವಾಗಿ ಆಕೆಯು ಕಳೆಗುಂದುತ್ತಾಳೆ. ಆಕೆ ವಿಶಿಷ್ಟ ಕಾರ್ಯಗಳನ್ನು ಪೂರೈಸಬೇಕಾಗಿರುವುದರಿಂದ, ಆಕೆ ಪುರುಷನಿಗಿಂತ ಹೆಚ್ಚು ಬಹುಮುಖ ಸಾಮರ್ಥ್ಯವುಳ್ಳವಳಾಗಲು ಕರೆಯಲ್ಪಟ್ಟಿದ್ದಾಳೆ. ಇವೆಲ್ಲಾ ಕಾರಣಗಳಿಂದಾಗಿ ಸ್ತ್ರೀಯಲ್ಲಿ ಒಂದು ತೀಕ್ಷ್ಣವಾದ ಒಳದೃಷ್ಟಿ ಇರುತ್ತದೆ. ಆದರೆ ಇದನ್ನು ಪುರುಷರು ಸುಲಭವಾಗಿ ಒಪ್ಪಿಕೊಳ್ಳಲಾರರು!
"ಜಿ. ಕ್ಯಾಂಬೆಲ್ ಮಾರ್ಗನ್"ರವರು ತಾನು ಬರೆದ "Studies in the Prophecy of Jeremiah" ಎಂಬ ಪುಸ್ತಕದಲ್ಲಿ, ಮಹಿಳೆಯರು ನಿಭಾಯಿಸುವ ಜವಾಬ್ದಾರಿಯನ್ನು ಈ ರೀತಿಯಾಗಿ ವಿವರಿಸಿದ್ದಾರೆ:
"ಸ್ತ್ರೀಯರು ಅರಿತುಕೊಳ್ಳಬೇಕಾದದ್ದು ಏನೆದಂರೆ -ಸತ್ಯವೇದದಲ್ಲಿ ಮಾನವ ಸೃಷ್ಟಿಯನ್ನು ಕುರಿತಾಗಿ ದೇವರು, ’ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ’.... ಎಂದು ನುಡಿದ ಮಾತಿನ ವಿವರಣೆಯು, ’ದೇವರು ಮನುಷ್ಯನನ್ನು ಸೃಷ್ಟಿಸಿದಾಗ, ಅವರನ್ನು, ತನ್ನ ಸ್ವರೂಪದಲ್ಲಿ ಮತ್ತು ತನಗೆ ಹೋಲುವಂತೆ ಗಂಡುಹೆಣ್ಣಾಗಿ ನಿರ್ಮಿಸಿದರು’ ಎಂದು ಬರೆಯಲ್ಪಟ್ಟದ್ದರಿಂದ, ದೇವರ ಸ್ವರೂಪ ಮತ್ತು ಹೋಲಿಕೆಯನ್ನು ಮಾನವ ಸೃಷ್ಟಿಯಲ್ಲಿ ಸ್ತ್ರೀಯ ಮೂಲಕವೇ ’ಪರಿಪೂರ್ಣ’ವಾಗಿಸಿ, ಅದನ್ನು ಸಮಸ್ತ ಭೂಮ್ಯಾಕಾಶ ಮಂಡಲಕ್ಕೆ ತೋರಿಸಲು ಸಾಧ್ಯವಾಯಿತು, ಎಂಬುದನ್ನು ಸ್ತ್ರೀಯರು ತಿಳುಕೊಳ್ಳಬೇಕು. ನಾನು ಇನ್ನೊಂದು ಸತ್ಯಾಂಶವನ್ನು ಹೇಳಬಯಸುತ್ತೇನೆ, ಆದಾಗ್ಯೂ ಇದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದು ಸುಲಭ ಕಾರ್ಯವಲ್ಲ; ಆದರೆ ದೇವರನ್ನು ಅರ್ಥಮಾಡಿಕೊಳ್ಳಲು ಮತ್ತು ಮಾನವ ಸೃಷ್ಟಿಯನ್ನು ಅರ್ಥಮಾಡಿಕೊಳ್ಳಲು ನಾವು ಅರಿತುಕೊಳ್ಳಬೇಕಾದ ಒಂದು ಅತ್ಯಂತ ಗಾಢವಾದ ಸತ್ಯಾಂಶ ಏನೆಂದರೆ, ಸ್ತ್ರೀಯ ಸೃಷ್ಟಿಯಲ್ಲಿ ನಮಗೆ ಕಾಣಿಸುವ ದೇವರ ಒಂದು ಗುಣವು ಪುರುಷನ ಸೃಷ್ಟಿಯಲ್ಲಿ ಪ್ರಕಟವಾಗುವುದಿಲ್ಲ.... ದೇವರ ಕುರಿತಾದ ಒಂದು ಬಹಳ ಮಹತ್ವಪೂರ್ಣ ಸತ್ಯಾಂಶವನ್ನು ಪ್ರಕಟಪಡಿಸುವ ವಿಶಿಷ್ಟ ಮತ್ತು ಪವಿತ್ರ ಜವಾಬ್ದಾರಿಯನ್ನು ಮಹಿಳೆಯರಿಗೆ ನೀಡಲಾಗಿದೆ ಮತ್ತು ಪುರುಷನು ಇದರಲ್ಲಿ ಯಾವುದೇ ಪಾತ್ರವನ್ನು ವಹಿಸಲಾರನು....
"ಇದು ಯಾವ ಜವಾಬ್ದಾರಿ? ನನಗೆ ತೋಚಿದಂತೆ ಹೇಳುವುದಾದರೆ, ದೇವರು ಒಬ್ಬ ತಂದೆಯಾಗಿದ್ದಾರೆ ಎನ್ನುವುದು ನಿಜವಾಗಿದೆ, ಅದರಂತೆಯೇ ದೇವರು ಒಬ್ಬ ತಾಯಿಯಾಗಿದ್ದಾರೆ ಎನ್ನುವುದು ಸಹ ನಿಜವಾಗಿದೆ. ಸತ್ಯವೇದದಲ್ಲಿ ಕಲಿಸಲ್ಪಟ್ಟಿರುವ ಒಂದು ಶ್ರೇಷ್ಠ ಸಿದ್ಧಾಂತ ದೇವರು ತಂದೆಯಾಗಿದ್ದಾರೆ ಎಂಬುದಾದರೆ, ಅದರಷ್ಟೇ ಸ್ಪಷ್ಟವಾಗಿ, ಅಷ್ಟೇ ವಿವರವಾಗಿ, ದೇವರು ತಾಯಿಯಾಗಿದ್ದಾರೆ ಎಂಬ ಸಿದ್ಧಾಂತವನ್ನು ಸಹ ಸತ್ಯವೇದವು ಕಲಿಸಿಕೊಡುತ್ತದೆ (ಯೆಶಾಯನು 66:13; ಮತ್ತಾಯನು 23:37). ದೇವರು ನಿತ್ಯತ್ವದಿಂದ ತನ್ನ ಅಪಾರ ಬಲವನ್ನು ಅತ್ಯಂತ ವಿನಯವಾಗಿ ಬಳಸಿದ ರೀತಿಯನ್ನು ನಮ್ಮಂತ ಜನಸಾಮಾನ್ಯರಿಗೆ ತೋರಿಸಿಕೊಡಲು ಹೆಣ್ಣಿನ ಬಾಳು ಯೋಜಿಸಲ್ಪಟ್ಟಿದೆ. ಆಲೋಚನೆಯನ್ನು ಮೀರುವಂತ ಅದ್ಭುತವಾದ ಪವಿತ್ರತೆ ಹಾಗೂ ಸಮರ್ಪಣೆಯನ್ನು, ತಾಯ್ತನದ ಬಲದ ಮೂಲಕ ನಮಗೆ ತೋರಿಸಲಾಗಿದೆ.
"ನಾನು ಅಕ್ಷರಶಃ ತಾಯ್ತನವನ್ನು ಮಾತ್ರ ಪ್ರಸ್ತಾಪಿಸುತ್ತಿಲ್ಲ, ಏಕೆಂದರೆ ಕೆಲವು ಸ್ತ್ರೀಯರು ಮಕ್ಕಳನ್ನು ಹೆರುವಂತ ತಾಯ್ತನದ ಅನುಭವವನ್ನು ಹೊಂದಿರದಿದ್ದರೂ, ಒಬ್ಬ ತಾಯಿ ತನ್ನ ಮಕ್ಕಳನ್ನು ರಕ್ಷಿಸಿ, ಕಾಪಾಡಿ, ಗುಣಪಡಿಸಿ, ಕೈಹಿಡಿದು ನಡೆಸುವ ಹಾಗೆ, ತಾವೂ ಸಹ ಇಂತಹ ಎಲ್ಲಾ ಗುಣಗಳನ್ನು ಪ್ರದರ್ಶಿಸುತ್ತಾ ಇತರರನ್ನು ಸಭ್ಯತೆ ಮತ್ತು ಕಾಳಜಿ ಮತ್ತು ಬಲದೊಂದಿಗೆ ಸಲಹುತ್ತಾರೆ. ಇಂತಹ ಶ್ರೇಷ್ಠ ಗುಣವು, ಅಂದರೆ ಸಭ್ಯತೆ ಮತ್ತು ಶಾಂತತೆ ಮತ್ತು ಸೌಂದರ್ಯವು ನಾಜೂಕಾಗಿ ಬಲದೊಂದಿಗೆ ಹೊಸೆಯಲ್ಪಟ್ಟು, ಸ್ತ್ರೀಯ ಭವ್ಯ ಅಲಂಕಾರವಾಗಿದೆ. ಇಂತಹ ಅಪ್ಪಟ ನಾಜೂಕಿನ ಸೃಷ್ಟಿಯಾದ ಸ್ತ್ರೀಯನ್ನು ಯಾವುದೋ ಒರಟುತನ ಮತ್ತು ಕಳಪೆ ಸಂಗತಿಗಳು ಕೆಡಿಸಿ ನಾಶಗೊಳಿಸುವ ದಿನವು ಬರದಂತೆ ದೇವರು ಕಾಪಾಡಲಿ. ಆಕೆ ದೇವರ ಪ್ರತಿನಿಧಿಯಾಗಿ ಇವೆಲ್ಲಾ ಸಂಗತಿಗಳನ್ನು ಮಾಡಬೇಕಿದೆ. ಈ ರೀತಿಯಾಗಿ ಸ್ತ್ರೀಯರಾದ ನಾವು, ಮಾನವ ಕಲ್ಪನೆಯನ್ನು ಮೀರುವಂತ ದೇವರ ವಿಶೇಷತೆಯ ಒಂದು ಅಂಶವನ್ನು "ತಾಯ್ತನ"ವೆಂಬ ಒಂದೇ ವರ್ಣನೆಯ ಮೂಲಕ ತೋರಿಸಿಕೊಡಬೇಕಾಗಿದೆ - ಮತ್ತು ದೇವರ ಇಂತಹ ಶ್ರೇಷ್ಠತೆಯನ್ನು ತೋರಿಸಿಕೊಡುವುದು ಬಹಳ ಕಷ್ಟಕರ ಸಾಹಸವೆಂದು ತಾಯಂದಿರು ಮೊದಲೇ ಒಪ್ಪಿಕೊಳ್ಳುತ್ತಾರೆ - ಹಾಗಿದ್ದರೂ ಸ್ತ್ರೀಯ ಮೂಲಕ ದೇವರ ಪ್ರಸನ್ನತೆಯು ಕಂಡುಬರಬೇಕು."
ಇದು ಒಬ್ಬ ಸ್ತ್ರೀಯು ಹೊಂದಿರುವ ಕರೆಯಾಗಿದೆ! ಆಕೆ ತನ್ನನ್ನು ಯಥಾರ್ಥವಾಗಿ ದೇವರಿಗೆ ಒಪ್ಪಿಸಿಕೊಟ್ಟರೆ, ದೇವರು ಆಕೆಯಲ್ಲಿ ಇರಿಸಿರುವ ವಿಶೇಷ ಗುಣಗಳು ದೇವರ ಮಹಿಮೆಗಾಗಿ ಮತ್ತು ಇತರರ ಒಳ್ಳೆಯದಕ್ಕಾಗಿ ಬಹಳ ಉಪಯುಕ್ತವಾಗಬಹುದು. ಆದರೆ ಆಕೆಯು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ದೇವಭಕ್ತಿಯಿಂದ ಜೀವಿಸಲು ಶ್ರಮಿಸದೇ ಹೋದರೆ, ಈ ವಿಶೇಷ ಗುಣಗಳು ದುರುಪಯೋಗಕ್ಕೆ ಈಡಾಗಿ ಕೆಡಬಹುದು. ದೇವರು ಸ್ತ್ರೀಯರಾದ ನಮಗೆ ನೀಡಿರುವ ವಿಶೇಷ ವರಗಳಾದ ಸಭ್ಯತೆ ಮತ್ತು ಸೌಂದರ್ಯದ ಮೂಲಕ, ನಮ್ಮ ಸುತ್ತಲಿನ ಜನರ ಸಾಧಾರಣ ಜೀವನವನ್ನು ಅಂದಗೊಳಿಸಿ ನಾವು ಅವರಿಗೆ ಆಶೀರ್ವಾದವಾಗಬೇಕು, ಎಂಬುದನ್ನು ನಾವು ತಿಳುಕೊಳ್ಳುವಂತೆ ದೇವರು ನಮಗೆ ಸಹಾಯಮಾಡಲಿ.
ಒಬ್ಬ ಸ್ತ್ರೀಯಲ್ಲಿ ಲೈಂಗಿಕ ಕಾಮನೆಗಳು ಸಹ ಇವೆ. ಆಕೆಯ ಕಾಮನೆಗಳು ಪುರುಷರ ಕಾಮನೆಗಳಂತಲ್ಲ, ಅವು ಬಹಳ ಮಂದವಾಗಿರುತ್ತವೆ ಮತ್ತು ಅವನ್ನು ಸುಲಭವಾಗಿ ಹತೋಟಿಯಲ್ಲಿ ಇರಿಸಿಕೊಳ್ಳಬಹುದು. ಈ ಮಾನಸಿಕ ಪ್ರಕ್ರಿಯೆಗಳು ಸಂಪೂರ್ಣ ಸಹಜವಾದವುಗಳು, ಮತ್ತು ಇವುಗಳನ್ನು ಅನುಭವಿಸದ ಮಹಿಳೆ ಬಹಳ ಅಪರೂಪ ಎನ್ನಬಹುದು. ಒಬ್ಬ ಸ್ತ್ರೀ ತಾನು ಗಮನ ಸೆಳೆಯಬೇಕೆಂದು ಮತ್ತು ಪ್ರೀತಿಸಲ್ಪಡಬೇಕೆಂದು ಹಾತೊರೆಯುತ್ತಾಳೆ. ಯಾವುದೇ ಪುರುಷನಿಗಿಂತ ಹೆಚ್ಚಾಗಿ, ಆಕೆಯು ತನ್ನ ಸ್ವಂತದ ಒಂದು ಮನೆ ಮತ್ತು ಕುಟುಂಬಕ್ಕಾಗಿ ಹಾತೊರೆಯುತ್ತಾಳೆ. ಇಂತಹ ಕಾಮನೆಗಳು ನಿಜವಾಗಿ ತಾಯ್ತನದ ಸಿದ್ಧತೆಯಾಗಿವೆ. ಇದು ಆರೋಗ್ಯಕರವಾದದ್ದು, ಏಕೆಂದರೆ ಸ್ವತಃ ದೇವರು ಸ್ತ್ರೀಯರಾದ ನಮ್ಮನ್ನು ಈ ರೀತಿಯಾಗಿ ಸೃಷ್ಟಿಸಿದ್ದಾರೆ. ಇಂತಹ ಕಾಮನೆಗಳಿಂದಾಗಿ ಒಬ್ಬ ಹುಡುಗಿಯು ಸ್ವಾಭಾವಿಕವಾಗಿ ಒಬ್ಬ ಪುರುಷನ ಕಡೆಗೆ ವಿವಾಹದ ಉದ್ದೇಶದಿಂದ ಆಕರ್ಷಿತಳಾಗುತ್ತಾಳೆ. ಪುರುಷರು ಕೇವಲ ದೈಹಿಕ ಸಂಬಂಧಕ್ಕಾಗಿ ಹುಡುಗಿಯರ ಕಡೆಗೆ ಸೆಳೆಯಲ್ಪಡಬಹುದು. ಆದರೆ ಹುಡುಗಿಯರು ಸಾಮಾನ್ಯವಾಗಿ ಕೇವಲ ಮದುವೆಯ ಉದ್ದೇಶದಿಂದ ವಿರುದ್ಧ ಲಿಂಗದ ಕಡೆಗೆ ಆಕರ್ಷಿಸಲ್ಪಡುತ್ತಾರೆ. ಕೆಲವು ಅಪರೂಪದ ನಿದರ್ಶನಗಳಲ್ಲಿ ಹುಡುಗಿಯರು ಮಜಾ ಮಾಡಲಿಕ್ಕಾಗಿ ಹುಡುಗರೊಂದಿಗೆ ಗೆಳೆತನವನ್ನು ಬೆಳೆಸಿಕೊಳ್ಳಬಹುದು. ಆದರೆ ಇದು ಅಸಹಜವಾಗಿದೆ. ಇದಕ್ಕೆ ಅತಿರಿಕ್ತವಾದ ಇನ್ನೊಂದು ಪರಿಸ್ಥಿತಿ ಏನೆಂದರೆ, ಕೆಲವು ವಿರಳವಾದ ನಿದರ್ಶನಗಳಲ್ಲಿ ಹುಡುಗಿಯರು ವಿರುದ್ಧ ಲಿಂಗದ ಕಡೆಗೆ ಯಾವುದೇ ಆಕರ್ಷಣೆಯನ್ನು ಹೊಂದಿರದೇ, ಅದಕ್ಕೆ ಬದಲಾಗಿ ಸ್ವಲಿಂಗದ ಕಡೆಗೆ ಮಾತ್ರ ವಿಪರೀತವಾಗಿ ಆಕರ್ಷಿತರಾಗುತ್ತಾರೆ. ಇದು ಕೂಡ ಅಸಹಜವಾದದ್ದು ಮತ್ತು ಅರೋಗ್ಯಕರವಲ್ಲ, ಮತ್ತು ಇದು ಹೆಚ್ಚಾಗಿ ಸ್ವಲಿಂಗ ಕಾಮದ ಚಿಹ್ನೆಯಾಗಿದೆ.
ಸತ್ಯವೇದವು ಯುವತಿಯರನ್ನು ಹೀಗೆ ಎಚ್ಚರಿಸುತ್ತದೆ: "ಜಡೆ ಹೆಣೆದುಕೊಳ್ಳುವುದು, ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವುದು, ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಳ್ಳುವುದು, ಈ ಮೊದಲಾದ ಹೊರಗಿನ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಒಳಗಿನ ಅಲಂಕಾರವಾದ ಸಾತ್ವಿಕತೆ (ಅಂದರೆ ವಿನಯಶೀಲತೆ) ಮತ್ತು ಸಮಾಧಾನವುಳ್ಳ ಮನಸ್ಸು ಶಾಶ್ವತವಾದದ್ದೂ, ದೇವರ ದೃಷ್ಟಿಯಲ್ಲಿ ಅತ್ಯಮೂಲ್ಯವಾದದ್ದೂ ಆಗಿದೆ. ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆ ಇಟ್ಟಿದ್ದ ದೇವಭಕ್ತೆಯರಾದ ಸ್ತ್ರೀಯರಿಗೆ ಇಂತಹ ಅಲಂಕಾರವಿತ್ತು" (1ಪೇತ್ರನು 3:3-5 - TLB ಅನುವಾದ).
ಸ್ತ್ರೀಯಲ್ಲಿ ವಿರುದ್ಧಲಿಂಗದ ಜನರನ್ನು ಆಕರ್ಷಿಸುವ ಶಕ್ತಿ ಇರುತ್ತದೆ. ಈ ಶಕ್ತಿಯು ದೇವರಿಂದ ಬಂದಿದ್ದರೂ, ಇದು ಭಯಂಕರವಾದ ದುರುಪಯೋಗ ಆಗುವ ಸಾಧ್ಯತೆಯಿದೆ, ಮತ್ತು ಅನೇಕ ಸಲ ಹೀಗೆಯೇ ನಡೆಯುತ್ತದೆ. ಈ ಬಲವನ್ನು ಪವಿತ್ರಾತ್ಮನ ಮೂಲಕ ಹತೋಟಿಯಲ್ಲಿ ಇರಿಸದಿರುವ ಹುಡುಗಿಯು ಅಪಾಯಕರ ಪರಿಸ್ಥಿತಿಯನ್ನು ಉಂಟುಮಾಡುತ್ತಾಳೆ. ಹುಡುಗಿಯರು ಬೆಳೆಯುತ್ತಿರುವಾಗ, ಅವರಿಗೆ ತಮ್ಮೊಳಗಿನ ಈ ಶಕ್ತಿಯ ಅರಿವು ಮೂಡುತ್ತದೆ, ಮತ್ತು ಅದನ್ನು ಯಾವುದಾದರೂ ರೀತಿಯಲ್ಲಿ ಹೆಚ್ಚಿಸಿಕೊಳ್ಳುವ ವ್ಯಾಮೋಹ ಅವರಲ್ಲಿ ಉಂಟಾಗುತ್ತದೆ. ಇದರ ಫಲಿತಾಂಶವಾಗಿ ಅವರು ’ಮೇಕಪ್" ಹೆಚ್ಚಾಗಿ ಉಪಯೋಗಿಸಿಕೊಂಡು ಅಲಂಕರಿಸಿಕೊಳ್ಳುವುದು, ಶರೀರದ ಅಂಗಗಳನ್ನು (ಹೊಸ ಫ್ಯಾಷನಿನ ಉಡುಪುಗಳ ಮೂಲಕ) ಅಧಿಕವಾಗಿ ಪ್ರದರ್ಶಿಸುವುದು ಮತ್ತು ಕೇಷಾಲಂಕಾರದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದು, ಇವುಗಳಲ್ಲಿ ತೊಡಗುತ್ತಾರೆ. ಸತ್ಯವೇದವು ಹೇಳುವುದು ಏನೆಂದರೆ, "ಸ್ತ್ರೀಯರಲ್ಲಿ ಎದ್ದು ಕಾಣಿಸುವಂಥದ್ದು ಕರುಣೆ ಮತ್ತು ಒಳ್ಳೆಯತನ ಎಂಬ ಗುಣಗಳಾಗಿರಬೇಕು, ಅವರ ಜಡೆ, ಆಭರಣ ಮತ್ತು ಆಕರ್ಷಕ ಉಡುಗೆಗಳಲ್ಲ" (1ತಿಮೊಥೆಯನಿಗೆ 2:9-10 - TLB ಅನುವಾದ). ಮೇಲೆ ಪ್ರಸ್ತಾಪಿಸಲ್ಪಟ್ಟಿರುವ ಎರಡು ವಚನಗಳಲ್ಲಿ ನಿಜವಾದ ಸೌಂದರ್ಯ ಏನೆಂದು ದೇವರು ನಮಗೆ ತೋರಿಸಿಕೊಟ್ಟಿದ್ದಾರೆ.
ನಮ್ಮ ಶರೀರಗಳು ದೇವರು ನಮಗೆ ಕೊಟ್ಟಿರುವ ವಿಶೇಷ ವರದಾನವಾಗಿದ್ದು, ನಾವು ಇವನ್ನು ತಪ್ಪಾದ ರೀತಿಯಲ್ಲಿ ಬಳಸಬಾರದು. ನಮ್ಮ ದೇಹಗಳಲ್ಲಿ ದೇವರ ಮಹಿಮೆಯು ಪ್ರಕಟವಾಗಬೇಕೆಂಬ ಆಜ್ಞೆಯು ನಮಗೆ ಕೊಡಲ್ಪಟ್ಟಿದೆ. ಈ ಆಜ್ಞೆಯು ನಮ್ಮ ಶಾರೀರಿಕ ಅಭ್ಯಾಸಗಳಿಗೆ ಮಾತ್ರವಲ್ಲದೆ, ದೇಹದ ಮೇಲೆ ನಾವು ಧರಿಸುವ ಉಡುಪುಗಳಿಗೂ ಅನ್ವಯಿಸುತ್ತದೆ. ಹಳೆಯ ಒಡಂಬಡಿಕೆಯಲ್ಲಿ, ಚೀಯೋನಿನ ಹೆಂಗಸರು ವಿರುದ್ಧ ಲಿಂಗದವರನ್ನು ಆಕರ್ಷಿಸಲು ವಿವಿಧ ಶೃಂಗಾರ ಸಾಧನಗಳನ್ನು ಬಳಸಿಕೊಂಡದ್ದಕ್ಕಾಗಿ ದೇವರು ಅವರನ್ನು ಖಂಡಿಸಿದರು (ಯೆಶಾಯನು 3:16-24 ಓದಿಕೊಳ್ಳಿರಿ).
ಉಡುಪುಗಳು ಅನೇಕ ಸಲ ನಾವು ಒಳಗೆ ಏನಾಗಿದ್ದೇವೋ ಅದರ ಜಾಹೀರಾತಾಗಿವೆ. ಸ್ವಲ್ಪ ಮಟ್ಟಿಗೆ ಅವು ನಮ್ಮ ವ್ಯಕ್ತಿತ್ವವನ್ನು ಪ್ರಕಟಿಸುತ್ತವೆ. ನಾವು ಧರಿಸಿರುವ ಉಡುಪುಗಳನ್ನು ನೋಡಿ ಇತರರು ಸಾಮಾನ್ಯವಾಗಿ ನಮ್ಮ ಬಗ್ಗೆ ಮೊದಲ ಅಭಿಪ್ರಾಯವನ್ನು ರೂಪಿಸಿಕೊಳ್ಳುತ್ತಾರೆ. ನಾವು ಯಾವ ತರದ ಉಡುಪುಗಳನ್ನು ಧರಿಸುತ್ತೇವೆ ಎಂಬುದು ಇತರರ ಗಮನಕ್ಕೆ ಬಂದೇ ಬರುತ್ತದೆ. ಹಾಗಾಗಿ ಉಡುಪಿನ ವಿಷಯದಲ್ಲಿ ನಾವು ಲೋಕಪ್ರಿಯ ’ಫ್ಯಾಷನನ್ನು’ ಅನುಸರಿಸುವುದರಿಂದ ನಮ್ಮ ಕ್ರೈಸ್ತ ಸಾಕ್ಷಿಯು ಕೆಡಬಹುದು. ಜನರು ಒಂದು ವೇಳೆ ನಮ್ಮನ್ನು ಇವುಗಳಲ್ಲಿ ಗಮನಿಸುತ್ತಿದ್ದರೂ, ಅದರ ಕುರಿತು ನಮಗೆ ಏನೂ ಹೇಳದಿರಬಹುದು, ಆದರೆ ಕ್ರಿಸ್ತನು ನಮ್ಮನ್ನು ಈ ದುಷ್ಟಲೋಕದಿಂದ ಬಿಡುಗಡೆ ಮಾಡಿದ್ದಾನೆಂದು ನಾವು ಅವರಿಗೆ ಹೇಳುವಾಗ, ಅವರು ನಿಶ್ಚಯವಾಗಿ ತಮ್ಮೊಳಗೆ ನಗುತ್ತಾರೆ! ಆದುದರಿಂದ ನಾವು ನಮ್ಮ ಉಡುಪಿನ ಕುರಿತು ಎಚ್ಚರಿಕೆ ವಹಿಸಬೇಕು.
ನಾವು ಕಳಪೆಯಾದ ಉಡುಪನ್ನು ಧರಿಸಬೇಕೆಂದು ನಾನು ಹೇಳುತ್ತಿಲ್ಲ. ಇಲ್ಲ. ನಾವು ಸಾಧ್ಯವಾದಷ್ಟು ಮಟ್ಟಿಗೆ ಅಚ್ಚುಕಟ್ಟಾದ ಮತ್ತು ಆಕರ್ಷಕವಾದ ಉಡುಗೆ-ತೊಡುಗೆಗಳನ್ನು ಧರಿಸಬೇಕು, ಏಕೆಂದರೆ ನಾವು ಕೊಳಕಾಗಿ ಅಥವಾ ಅಸಹ್ಯಕರವಾಗಿ ಇರುವುದನ್ನು ದೇವರು ಬಯಸುವುದಿಲ್ಲ. ಎ.ಬಿ. ಸಿಂಪ್ಸನ್ರಚವರು ಹೇಳಿರುವುದು ಏನೆಂದರೆ, ಒಬ್ಬ ವಿಶ್ವಾಸಿಯು ಧರಿಸಿರುವ ಉಡುಪು ಸರಳವೂ ಸಭ್ಯವೂ ಆಗಿರಬೇಕು. ಆಗ ಇತರರು ಅದರಲ್ಲಿ ಯಾವ ವಿಶೇಷತೆಯನ್ನು ಕಾಣುವುದಿಲ್ಲ ಮತ್ತು ಆ ವಿಶ್ವಾಸಿಯಾದ ಸ್ತ್ರೀಯೂ ಸಹ ತಾನು ಯಾವ ಉಡುಪನ್ನು ಧರಿಸಿದ್ದೇನೆ ಎಂಬುದನ್ನು ಮರೆತುಬಿಡುತ್ತಾಳೆ. ಇದು ಪಾಲಿಸಲು ಯೋಗ್ಯವಾದ ಒಂದು ನಿಯಮವಾಗಿದೆ.
ಏನೇ ಆದರೂ, ಸ್ತ್ರೀಯರಾದ ನಮ್ಮ ವಸ್ತ್ರಾಲಂಕಾರವು ಪುರುಷರಲ್ಲಿ ಕಾಮೋದ್ರೇಕವನ್ನು ಪ್ರಚೋದಿಸಬಾರದು. ದೇವರು ಕಾಮುಕತೆಗಾಗಿ ಪುರುಷರನ್ನು ನ್ಯಾಯತೀರ್ಪಿಗೆ ಒಳಪಡಿಸುವುದಾದರೆ, ಅವರನ್ನು ಪ್ರಚೋದಿಸುವ ಉಡುಪನ್ನು ಧರಿಸಿದ ಹುಡುಗಿಯರನ್ನು ಸಹ ಅವರು ನ್ಯಾಯತೀರ್ಪು ಮಾಡುವುದು ತಾರ್ಕಿಕವಾದುದು ಎನ್ನಬಹುದು.
ಇನ್ನೊಂದು ವಿಷಯ, ನಾನು ಹಣೆಯ ಮೇಲೆ ತಿಲಕವನ್ನು (ಅಥವಾ ’ಬೊಟ್ಟು’) ಇಟ್ಟುಕೊಳ್ಳುವ ಅಭ್ಯಾಸದ ಕುರಿತಾಗಿ ಒಂದು ಮಾತನ್ನು ಹೇಳಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಅನೇಕ ಕ್ರೈಸ್ತ ಹುಡುಗಿಯರು ಅಕ್ರೈಸ್ತವಾದ ಈ ಅಭ್ಯಾಸವನ್ನು ಹೆಚ್ಚುಹೆಚ್ಚಾಗಿ ಪಾಲಿಸುತ್ತಿರುವುದು ಬಹಳ ದುಃಖಕರ ಸಂಗತಿಯಾಗಿದೆ. ಆ ಬೊಟ್ಟಿನಿಂದಾಗಿ ಆ ಹುಡುಗಿಯು ಕ್ರೈಸ್ತಳಲ್ಲ ಎಂಬಂತೆ ಗುರುತಿಸಲ್ಪಡುತ್ತಾಳೆ (ಆಕೆಗೆ ಈ ವಿಷಯ ತಿಳಿಯದಿರಬಹುದು), ಹಾಗಾಗಿ ಒಬ್ಬ ಕ್ರೈಸ್ತ ಹುಡುಗಿಯು ಈ ರೀತಿಯಾಗಿ ಬೊಟ್ಟನ್ನು ಇಟ್ಟುಕೊಳ್ಳುವುದು ಒಂದು ಕೆಟ್ಟ ಸಾಕ್ಷಿಯಾಗುತ್ತದೆ. ಇದು ಕೇವಲ ಒಂದು ’ಫ್ಯಾಷನ್’ ಎಂದು ಕೆಲವರು ಹೇಳಿಕೊಂಡರೂ ಸಹ, ಅದು ನಿಜವಲ್ಲ.
ನಮ್ಮ ಕ್ರೈಸ್ತ ಸಾಕ್ಷಿಗೆ ತಡೆಯೊಡ್ಡುವಂತ ಎಲ್ಲಾ ಲೌಕಿಕ ವಿನ್ಯಾಸಗಳು ಮತ್ತು ’ಫ್ಯಾಷನ್’ಗಳನ್ನು ನಿರಾಕರಿಸಲು ದೇವರು ನಮಗೆ ಧೈರ್ಯವನ್ನು ಕೊಡಲಿ.
ದೇವರು ರೆಬೆಕ್ಕಳನ್ನು ಇಸಾಕನ (ಅಬ್ರಹಾಮನಿಗೆ ಕೊಡಲ್ಪಟ್ಟಿದ್ದ ವಾಗ್ದಾನಗಳ ಬಾಧ್ಯತೆಯನ್ನು ಹೊಂದಿದ್ದಾತನ) ಹೆಂಡತಿಯಾಗುವ ಉನ್ನತ ಗೌರವವನ್ನು ಹೊಂದುವುದಕ್ಕೆ ಆಯ್ಕೆ ಮಾಡಿದ್ದೇಕೆ? ಅಥವಾ ಮರಿಯಳನ್ನು ಯೇಸುವಿನ ತಾಯಿಯಾಗುವುದಕ್ಕೆ ದೇವರು ಏಕೆ ಆಯ್ಕೆ ಮಾಡಿದರು? ಖಂಡಿತವಾಗಿ ಅವರ ಹೃದಯದ ಸೌಂದರ್ಯವು ದೇವರಿಗೆ ಮೆಚ್ಚುಗೆಯಾಗಿರಬೇಕು. ನಿಜವಾದ ಸೌಂದರ್ಯವು ಒಳಗಿನದ್ದು, ಅದು ಹೊರಗಿನದ್ದಲ್ಲ - ಮತ್ತು ಅದನ್ನು ಯಾವುದೇ ಅಲಂಕಾರದ ಅಂಗಡಿಯಿಂದ ಖರೀದಿಸಲು ಆಗುವುದಿಲ್ಲ (ಜ್ಞಾನೋಕ್ತಿಗಳು 31:30). ಒಬ್ಬ ಸುಂದರ ಸ್ತ್ರೀಗೆ ಆತ್ಮಿಕ ದೃಷ್ಟಿಯಿಲ್ಲದಿದ್ದರೆ, ಆಕೆಯನ್ನು ಮೂಗಿನ ಮೇಲೆ ಚಿನ್ನದ ಮೂಗುತಿಯನ್ನು ಹಾಕಿಸಿಕೊಂಡ ಒಂದು ಹಂದಿಗೆ ಹೋಲಿಸಬಹುದೆಂದು ಸತ್ಯವೇದವು ಹೇಳುತ್ತದೆ (ಜ್ಞಾನೋಕ್ತಿಗಳು 11:22). ಇದು ಎಂತಹ ಕಠಿಣ ಮಾತಾಗಿದೆ! ಆದರೆ ನಿಜವಾದ ಮೌಲ್ಯಗಳ ಕುರಿತು ಕಲ್ಪನೆ ಮಾಡಲು ಇದು ನಮಗೆ ಸಹಾಯ ಮಾಡುತ್ತದೆ.
ಅನೇಕ ಹೆಣ್ಣುಮಕ್ಕಳು ಈ ಲೋಕದ ಫ್ಯಾಷನ್ಗಇಳನ್ನು ಹಿಂಬಾಲಿಸಿ ದೇವರ ಪರಮ ಶ್ರೇಷ್ಠ ವರಗಳನ್ನು ಕಳೆದುಕೊಳ್ಳುತ್ತಾರೆಂದು ನಾನು ದೃಢವಾಗಿ ನಂಬುತ್ತೇನೆ.
ನಿಮಗೆ ಇಷ್ಟವಿದ್ದರೂ ಇಲ್ಲದೇ ಹೋದರೂ, ಹುಡುಗರು ಒಂದಲ್ಲ ಒಂದು ದಿನ ನಿಮ್ಮಲ್ಲಿ ಆಸಕ್ತಿ ತೋರಿಸುವುದನ್ನು ನೀವು ಗಮನಿಸುವಿರಿ. ಅವರು ನಿಮ್ಮ ಕಾಲೇಜಿನ, ನಿಮ್ಮ ಕ್ರೈಸ್ತಸಭೆಯ ಅಥವಾ ನಿಮ್ಮ ವಠಾರದ ಹುಡುಗರು ಆಗಿರಬಹುದು. ನೀವು ಇದರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಅವರೊಂದಿಗೆ ಹೇಗೆ ವರ್ತಿಸಬೇಕೆಂದು ತಿಳಿದಿರುವುದು ಬಹಳ ಅವಶ್ಯವಾಗಿದೆ.
ವಿರುದ್ಧ ಲಿಂಗದ ಸಂಬಂಧಗಳ ಕುರಿತಾಗಿ ಎರಡನೆಯ ಅಧ್ಯಾಯದಲ್ಲಿ ಈಗಾಗಲೇ ಪರಿಗಣಿಸಿರುವುದರಿಂದ, ಅಲ್ಲಿ ಹೇಳಿರುವ ವಿಷಯವನ್ನು ನಾನು ಮತ್ತೊಮ್ಮೆ ಹೇಳುವುದಿಲ್ಲ. ಆದರೆ ಹುಡುಗಿಯರು ವಿಶೇಷವಾಗಿ ಗಮನಿಸಬೇಕಾದ ಕೆಲವು ಸಂಗತಿಗಳನ್ನು ನಾನು ಪ್ರಸ್ತಾಪಿಸಲು ಬಯಸುತ್ತೇನೆ.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಹೆಚ್ಚು ಹೆಚ್ಚಾಗಿ ಉನ್ನತ ಶಿಕ್ಷಣ ಪಡೆಯುತ್ತಿರುವುದರಿಂದ, ಹುಡುಗಿಯರು ಹಿಂದೆ ತಮ್ಮ ಸಹೋದರಿಯರು ವಿವಾಹ ಮಾಡಿಕೊಳ್ಳುತ್ತಿದ್ದ ವಯಸ್ಸಿಗಿಂತ ತಡವಾಗಿ ಮದುವೆಯಾಗುತ್ತಾರೆ. ಹುಡುಗಿಯರು ಯಾವುದೋ ಶಿಕ್ಷಣ ಅಥವಾ ತರಬೇತಿಗಾಗಿ ಯುವಕರೊಂದಿಗೆ ಬೆರೆಯುವ ಇಂತಹ ಸಮಯದಲ್ಲಿ ಅನೇಕ ಶೋಧನೆಗಳಿಗೆ ಗುರಿಯಾಗುತ್ತಾರೆ. ಅವರು ವಿವಾಹದ ಯಾವುದೇ ನಿಜವಾದ ಉದ್ದೇಶ ಇಲ್ಲದೆಯೂ, ಪುರುಷರ ಗಮನವನ್ನು ಸೆಳೆಯುವುದಕ್ಕಾಗಿ ತಮ್ಮ ಆಕರ್ಷಣೆಯ ಬಲವನ್ನು ಪ್ರಯೋಗಿಸುವ ದುಷ್ಪ್ರೇರಣೆಗೆ ಒಳಗಾಗುತ್ತಾರೆ; ಮತ್ತು ಇದಕ್ಕೆ ಬಲಿಯಾದರೆ, ಅಂತಿಮವಾಗಿ ಅದು ವಿಪತ್ತಿಗೆ ಕಾರಣವಾಗಬಹುದು.
ಹುಡುಗಿಯರು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ, ಅವರ ಮೇಲೆ ಭಾವನೆಗಳು ಎಷ್ಟು ಆಳವಾಗಿ ಪ್ರಭಾವ ಬೀರುತ್ತವೋ, ಪುರುಷರ ಮೇಲೆ ಅವು ಅಷ್ಟು ಆಳವಾಗಿ ಕೆಲಸ ಮಾಡುವುದಿಲ್ಲ. ಒಬ್ಬ ಯುವಕನು ಸುಲಭವಾಗಿ ಒಬ್ಬ ಹುಡುಗಿಯನ್ನು ಪ್ರೀತಿಸಬಹುದು, ಮತ್ತು ಆತನು ಅಷ್ಟೇ ಸುಲಭವಾಗಿ ಆಕೆಯನ್ನು ಮರೆಯಲೂಬಹುದು. ಇದರ ನಂತರ ಆತನು ಮತ್ತೊಬ್ಬ ಹುಡುಗಿಯೊಂದಿಗೆ ಇದನ್ನೇ ಮಾಡಬಹುದು ಮತ್ತು ಮನಸ್ಸಿನ ಭಾವನೆಗಳಲ್ಲಿ ಹೆಚ್ಚು ಆಘಾತವನ್ನು ಅನುಭವಿಸದೆ ಆ ಸಂಬಂಧವನ್ನು ಸಹ ಕೊನೆಗೊಳಿಸಬಹುದು. ಇದಕ್ಕೆ ಕಾರಣವೇನೆಂದರೆ, ಹೆಚ್ಚಿನ ಯುವಕರ ಗುರಿ ಹುಡುಗಿಯು ಅವಕಾಶ ನೀಡಿದಷ್ಟು ಮಟ್ಟಿಗೆ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನು ಅನುಭವಿಸುವುದು ಮಾತ್ರವಾಗಿರುತ್ತದೆ. ಆತನ ಹೃದಯದಲ್ಲಿ ಪ್ರೀತಿಯ ಭಾವನೆಗಳು ಸ್ವಲ್ಪವೂ ಇಲ್ಲದಿರಬಹುದು, ಆದಾಗ್ಯೂ ಒಬ್ಬ ಹುಡುಗಿಯು ಇಂತಹ ಸಂಬಂಧವನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾಳೆ. ಒಬ್ಬ ಹುಡುಗಿಗೆ ತಾನು ಒಮ್ಮೆ ಪ್ರೀತಿಸಿದ ಒಬ್ಬ ಹುಡುಗನನ್ನು ತನ್ನ ಮನಸ್ಸಿನಿಂದ ದೂರ ಸರಿಸುವುದು ತುಂಬಾ ಕಷ್ಟಕರವೆನಿಸುತ್ತದೆ, ಮತ್ತು ಕೆಲವು ಸ್ತ್ರೀಯರಲ್ಲಿ ಮದುವೆಯ ನಂತರವೂ ಈ ಭಾವನೆಗಳು ಉಳಿದುಕೊಳ್ಳುತ್ತವೆ - ಈ ಅಂಶವು ಅವರ ವಿವಾಹ ಜೀವನದಲ್ಲೂ ಅಸಂತೋಷವನ್ನು ಉಂಟುಮಾಡುತ್ತದೆ. ಹಾಗಾಗಿ ಎಚ್ಚರಿಕೆ ವಹಿಸುವುದು ಬಹಳ ಅವಶ್ಯವಾಗಿದೆ.
ಸ್ತ್ರೀಯರಾದ ನಿಮ್ಮಲ್ಲಿ ದೈಹಿಕ ಸ್ಪರ್ಷದ ಅನುಭವದ ಮೂಲಕ ಬಹಳ ಬಲವಾದ ದುಷ್ಪ್ರೇರಣೆಗಳು ಉಂಟಾಗುತ್ತವೆ ಎಂಬುದನ್ನು ನೀವು ಮರೆಯಬಾರದು. ಹಾಗಾಗಿ ನೀವು ಒಬ್ಬ ಹುಡುಗನು ನಿಮ್ಮ ಕೈಯನ್ನು ಹಿಡಿಯುವುದನ್ನು ಅನುಮತಿಸಬಾರದು. ನಿಮ್ಮನ್ನು ಮುದ್ದಿಡುವ ಅವಕಾಶ ಉಂಟಾಗಲೇಬಾರದು. ಇವುಗಳಿಗೆ ಒಮ್ಮೆ ಅವಕಾಶ ನೀಡಿದರೆ, ಆ ಮೇಲೆ ನಿಮ್ಮ ಮನಸ್ಸಿನ ವ್ಯರ್ಥ ಆಲೋಚನೆಗಳ ಬಲವಾದ ಸೆಳೆತವನ್ನು ಹತೋಟಿಯಲ್ಲಿ ಇರಿಸಲು ನಿಮಗೆ ಬಹಳ ಕಷ್ಟವಾಗುತ್ತದೆ. ಮತ್ತು ಆ ಮೇಲೆ ಸುಲಭವಾಗಿ ಒಂದರ ನಂತರ ಇನ್ನೊಂದು ಸಂಗತಿ ನಡೆದುಬಿಡಬಹುದು.
ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಮತ್ತೊಂದು ವಿಷಯ, ನಿಮ್ಮ ಮತ್ತು ಒಬ್ಬ ಹುಡುಗನ ನಡುವಿನ ಗೆಳೆತನ ಕಡಿದುಹೋದರೆ, ಆಗ ನೀವು ಆ ಹುಡುಗನಿಗಿಂತ ಬಹಳ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ. ಆತನು ನಿಮ್ಮನ್ನು ಬಿಟ್ಟ ನಂತರ ಸುಲಭವಾಗಿ ಬೇರೊಬ್ಬಳನ್ನು ಮದುವೆ ಮಾಡಿಕೊಳ್ಳುತ್ತಾನೆ. ಆದರೆ ನಿಮಗೆ ಇದು ಅಷ್ಟೊಂದು ಸುಲಭವಾಗಿರುವುದಿಲ್ಲ. ಯಾವಾಗಲೂ ನಿಮ್ಮ ಮೇಲೆ ಒಂದು ಅಪವಾದವಿರುತ್ತದೆ, ಮತ್ತು ಅದರ ಫಲವಾಗಿ ನೀವು ಮುಂದೆ ಒಬ್ಬ ಜೀವನ ಸಂಗಾತಿಯನ್ನು ಪಡೆಯಲು ಬಹಳ ತೊಂದರೆಗಳನ್ನು ಎದುರಿಸ ಬೇಕಾಗುತ್ತದೆ. ಈ ಮಾತು ವಿಶೇಷವಾಗಿ ಭಾರತ ದೇಶಕ್ಕೆ ಅನ್ವಯಿಸುತ್ತದೆ. ಇಲ್ಲಿ ನಾನು ಒಬ್ಬ ಹುಡುಗನೊಂದಿಗೆ ಖಾಸಗಿ ಭೇಟಿ ('dating') ಮತ್ತು ದೈಹಿಕ ಸಂಪರ್ಕದ ಕುರಿತಾಗಿ ಮಾತ್ರ ಹೇಳುತ್ತಿಲ್ಲ. ಒಬ್ಬ ಹುಡುಗನನ್ನು ಸಭ್ಯವಾದ ರೀತಿಯಲ್ಲಿ ಪ್ರೀತಿಸಿದವರು (ಅದು ಪತ್ರ ವ್ಯವಹಾರ ಮಾತ್ರವೇ ಆಗಿರಬಹುದು), ಅವರ ಗೆಳೆತನವು (ಪತ್ರ ವ್ಯವಹಾರದ ಸುದ್ದಿ) ಇತರರ ಗಮನಕ್ಕೆ ಬಂದರೆ, ಅವರು ಅದರಿಂದ ತೊಂದರೆಗೆ ಈಡಾಗುತ್ತಾರೆ. ಹೀಗೆ ಹುಡುಗಿಯರು ತಾವು ಎಂತಹ ಆಪತ್ತನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಮರೆಯಬಾರದು.
ಸಾಕಷ್ಟು ಹುಡುಗಿಯರು ಈ ರೀತಿಯಾಗಿ ಆರಂಭದಲ್ಲಿ ಜಾಗರೂಕತೆ ವಹಿಸದೆ ಬಾಧೆಪಟ್ಟಿದ್ದಾರೆ ಮತ್ತು ತಮ್ಮ ಒಳ್ಳೆಯ ಹೆಸರನ್ನು ಕಳಕೊಂಡಿದ್ದಾರೆ. ಇದು ಅವರ ಸ್ವಂತ ಸಾಕ್ಷಿಯನ್ನು ಕೆಡಿಸಿದ್ದು ಮಾತ್ರವಲ್ಲದೆ, ಕರ್ತನ ನಾಮಕ್ಕೂ ಸಹ ದೊಡ್ಡ ಕಳಂಕವನ್ನು ತಂದಿದೆ. ಸತ್ಯವೇದವು ನಮ್ಮನ್ನು ಪುರುಷನಿಗಿಂತ ಬಲಹೀನರೆಂದು ಉಲ್ಲೇಖಿಸಿರುವುದು ಮಾತ್ರವಲ್ಲದೆ, ಪುರುಷನಿಗಿಂತ ’ಸುಲಭವಾಗಿ ವಂಚನೆಗೆ ಒಳಗಾಗುವವಳು’, ಎಂದು ಸಹ ಹೇಳಿರುವ ಮಾತು ಯಥಾರ್ಥವಾಗಿದೆ (1ಪೇತ್ರನು 3:7; 1ತಿಮೊಥೆಯನಿಗೆ 2:14).
ನಿಮಗೆ ಮದುವೆ ಮಾಡಿಕೊಳ್ಳುವ ಅವಕಾಶವು ಸಾಕಷ್ಟು ಸಮೀಪವಾಗುವ ತನಕ ಯಾವುದೇ ಹುಡುಗನೊಂದಿಗೆ ಆಪ್ತ ಸ್ನೇಹವನ್ನು ಏಕೆ ಬೆಳೆಸಿಕೊಳ್ಳಬಾರದು, ಎಂಬುದಕ್ಕೆ ನಾನು ನಿಮಗೆ ಇನ್ನೊಂದು ಕಾರಣವನ್ನು ತೋರಿಸಲು ಬಯಸುತ್ತೇನೆ. ನಿಮ್ಮ ಮದುವೆಗೆ ಮುಂಚಿನ ಜೀವನದ ವರ್ಷಗಳು ಮಾತ್ರ ಕರ್ತನ ಸೇವೆಯನ್ನು ಯಾವುದೇ ತಡೆಯಿಲ್ಲದೆ ಮತ್ತು ಅಡಚಣೆಯಿಲ್ಲದೆ ಮಾಡಬಹುದಾದ ವರ್ಷಗಳಾಗಿವೆ. ಮದುವೆಯ ನಂತರ ನೀವು ನಿಮ್ಮ ಸ್ವಂತ ಸಮಯದ ಸಂಪೂರ್ಣ ಹಕ್ಕುದಾರರು ಆಗಿರುವುದಿಲ್ಲ. ವಿವಾಹಕ್ಕೆ ಮುಂಚಿನ ವರ್ಷಗಳನ್ನು ನೀವು ಗಂಡು ಸ್ನೇಹಿತರ ಕುರಿತಾಗಿ ಹಗಲುಗನಸು ಕಾಣುವುದರಲ್ಲಿ ವ್ಯರ್ಥಮಾಡಿದರೆ, ದೇವರಿಗೆ ಉಪಯುಕ್ತವಾಗಿ ಕಳೆಯಬಹುದಾಗಿದ್ದ ನಿಮ್ಮ ಜೀವನದ ಒಂದು ಅಮೂಲ್ಯ ಭಾಗವು ನಷ್ಟವಾಗುತ್ತದೆ. ನಿಮ್ಮನ್ನು ತಪ್ಪುದಾರಿಗೆ ನಡೆಸಲು ಸೈತಾನನಿಗೆ ಅವಕಾಶ ಕೊಡಬೇಡಿರಿ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಎರಡು ಬುದ್ಧಿವಾದದ ಮಾತುಗಳನ್ನು ನಾನು ಹೇಳಲು ಬಯಸುತ್ತೇನೆ. ಮೊದಲನೆಯದಾಗಿ, ಆತ್ಮಿಕ ವಿಷಯಗಳ ಬಗ್ಗೆ ಬುದ್ಧಿವಾದಕ್ಕಾಗಿ ಒಬ್ಬ ಅವಿವಾಹಿತ ಮನುಷ್ಯನ ಬಳಿಗೆ ಎಂದಿಗೂ ಹೋಗಬೇಡಿರಿ. ಇದಕ್ಕೆ ಬದಲಾಗಿ ಇನ್ನೊಬ್ಬ ಸ್ತ್ರೀಯನ್ನು ಅಥವಾ ವಯಸ್ಸಿನಲ್ಲಿ ಸಾಕಷ್ಟು ಹಿರಿಯನಾದ ಒಬ್ಬ ವಿವಾಹಿತ ಮನುಷ್ಯನನ್ನು ಸಂಪರ್ಕಿಸಿರಿ. ಎರಡನೆಯದಾಗಿ, ಯಾವತ್ತೂ ಯಾವುದೇ ವಿವಾಹಿತ ಮನುಷ್ಯನ ಸ್ನೇಹವನ್ನು ಇರಿಸಿಕೊಳ್ಳುವುದು ಸರಿಯಲ್ಲ (ಕೇವಲ ಲಘು ಸ್ನೇಹವೇ ಆಗಿದ್ದರೂ); ಒಂದು ವೇಳೆ ಆ ಮನುಷ್ಯನ ಹೆಂಡತಿಯೊಂದಿಗೆ ನಿಮಗೆ ಎಷ್ಟು ಸ್ನೇಹ ಇದೆಯೋ, ಅವನೊಂದಿಗೆ ಆ ಮಟ್ಟಿನ ಸ್ನೇಹವನ್ನು ಮಾತ್ರ ಇರಿಸಿಕೊಳ್ಳಬೇಕು.
ಬಹುತೇಕ ಎಲ್ಲಾ ತಾಯಂದಿರು ತಮ್ಮ ಅವಿವಾಹಿತ ದಿನಗಳಲ್ಲಿ ಯಾವತ್ತೂ ಹೊಂದಿರದ ತೃಪ್ತಿ ಮತ್ತು ಸಂಪೂರ್ಣತೆಯ ಭಾವನೆಯನ್ನು ಮದುವೆ ಮತ್ತು ತಾಯ್ತನದಲ್ಲಿ ಅನುಭವಿಸಿದ್ದಾಗಿ ಒಪ್ಪಿಕೊಳ್ಳುತ್ತಾರೆ. ಅವಿವಾಹಿತೆಯಾಗಿ ಇರಲು ದೇವರಿಂದ ಕರೆಯಲ್ಪಟ್ಟಂತವರು ಇಂತಹ ಸಂತೃಪ್ತಿಯನ್ನು ಕಳೆದುಕೊಳ್ಳುತ್ತಾರೆಂದು ನಾನು ಹೇಳುತ್ತಿಲ್ಲ. ಒಬ್ಬ ಕ್ರೈಸ್ತ ಹುಡುಗಿಯು - ಅವಳು ವಿವಾಹಿತಳೋ ಅಥವಾ ಅವಿವಾಹಿತಳೋ - ತೃಪ್ತಿಯನ್ನು ದೇವರ ಚಿತ್ತವನ್ನು ಮಾಡುವುದರಲ್ಲೇ ಕಂಡುಕೊಳ್ಳಬೇಕು. ಮತ್ತು ಮದುವೆಯಾಗದ ಒಬ್ಬ ಹುಡುಗಿಯೂ ಕೂಡ ದೇವರಿಗೆ ಹೀಗೆ ವಿಧೇಯಳಾಗಿ ಸಂತೃಪ್ತಿಯನ್ನು ಕಂಡುಕೊಳ್ಳಬಹುದು. ಆದಾಗ್ಯೂ ಒಬ್ಬ ಮಹಿಳೆಯು ಏಕಾಂಗಿ ಜೀವನಕ್ಕೆ ಕರೆಯಲ್ಪಡುವುದು ಅಪರೂಪವೆಂದು ಹೇಳಬಹುದು. ಮಹಿಳೆಯು ಮೂಲತಃ ಒಬ್ಬ ಹೆಂಡತಿ ಮತ್ತು ತಾಯಿಯಾಗಿರಲು ದೇವರಿಂದ ಸೃಷ್ಟಿಸಲ್ಪಟ್ಟಿದ್ದಾಳೆ.
ಯಾವ ಹುಡುಗಿಯೂ ತಾನು ಮಾಡುವ ಕ್ರೈಸ್ತ ಸೇವೆಯನ್ನು ಮದುವೆಯು ಸೀಮಿತಗೊಳಿಸುತ್ತದೆಯೆಂದು ಭಾವಿಸಬೇಕಿಲ್ಲ. ಅದು ಅವಳ ಚಟುವಟಿಕೆಯನ್ನು ಸೀಮಿತಗೊಳಿಸಿದರೂ, ಅವಳ ಆತ್ಮಿಕ ಸೇವೆಗೆ ತಡೆಯಾಗಲಾರದು. ಕ್ರೈಸ್ತ ಸೇವೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಒಬ್ಬ ಹುಡುಗಿಗೆ, ವಿವಾಹದ ನಂತರ ತನ್ನ ಸ್ವತಂತ್ರ ಚಟುವಟಿಕೆ ಬಹಳಷ್ಟು ಕಡಿಮೆಯಾಗಿದೆ ಮತ್ತು ಓಡಾಡುವ ಸ್ವಾತಂತ್ರ್ಯ ಕಡಿತಗೊಂಡಿದೆ ಎಂದು ಅನ್ನಿಸಬಹುದು. ಒಬ್ಬ ಪುರುಷನಿಗೆ ಮದುವೆಯ ನಂತರ ಈ ಅನುಭವ ಉಂಟಾಗುವುದಿಲ್ಲ, ಆದರೆ ಒಬ್ಬ ಹುಡುಗಿಯು ಇದನ್ನು ಎದುರಿಸುತ್ತಾಳೆ. ಹಾಗಾಗಿ ಮದುವೆಯ ನಂತರ ದೇವರು ಅವಳಿಗೆ ಬೇರೆ ವಿಧವಾದ ಸೇವೆಯನ್ನು ನೇಮಿಸಿದ್ದಾರೆಂದು ಅವಳು ತಿಳಿದುಕೊಳ್ಳಬೇಕು. ಅವಳು ಹತಾಶೆ ಮತ್ತು ನಿರಾಶೆಯಿಂದ ಮುಕ್ತಳಾಗಬೇಕಾದರೆ, ಅವಳು ಇದನ್ನು ಒಪ್ಪಿಕೊಳ್ಳಲು ಸಿದ್ಧಳಾಗಿರಬೇಕು. ಮದುವೆಯ ನಂತರ ಕುಟುಂಬದ ಪಾಲನೆಯು ಅವಳ ಪ್ರಾಥಮಿಕ ಕರೆಯಾಗಿರುತ್ತದೆ. ಅವಳು ತನ್ನ ಮನೆಯನ್ನು ಜೀವನದ ಬಿರುಗಾಳಿಯಿಂದ ತತ್ತರಿಸುವ ಅನೇಕ ಯೌವನಸ್ಥರಿಗೆ (ಮತ್ತು ವಯಸ್ಕರಿಗೂ ಸಹ) ಆಶ್ರಯವಾಗಿರುವಂತೆ ಮಾಡಬೇಕು ಮತ್ತು ತನ್ನ ಮಕ್ಕಳನ್ನು ಕರ್ತನ ಭಯಭಕ್ತಿಯಲ್ಲಿ ಬೆಳೆಸಬೇಕು. ಈ ವಿಧವಾದ ಸೇವೆಯು ಅವಳು ತನ್ನ ಅವಿವಾಹಿತ ದಿನಗಳಲ್ಲಿ ಮಾಡಿದ ಯಾವುದೇ ಸೇವೆಯಷ್ಟೇ ಮುಖ್ಯವಾದವುಗಳಾಗಿವೆ.
ಯಾರೋ ಒಬ್ಬರು ಹೇಳಿರುವಂತೆ, "ಒಬ್ಬ ಮಹಿಳೆಯು ತನ್ನ ವಿವಾಹದಲ್ಲಿ ಸಂತೋಷವಾಗಿದ್ದಾಗ ಮತ್ತು ಅದರ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಸ್ವೀಕರಿಸಿಕೊಂಡು, ತನ್ನ ಸಮಯ ಮತ್ತು ಸಾಮರ್ಥ್ಯವನ್ನು ಅದಕ್ಕಾಗಿ ಉಪಯೋಗಿಸಿಕೊಂಡು, ಅದರಿಂದ ತನ್ನ ಸ್ವಾತಂತ್ರ್ಯವು ಮೊಟಕಾಗುವುದನ್ನು ಸ್ವೀಕರಿಸಿದಾಗ, ಇತರರಿಗೆ ಬಹಳಷ್ಟನ್ನು ನೀಡಲು ಶಕ್ತಳಾಗುತ್ತಾಳೆ. ಆಕೆಯ ಸ್ವಂತ ಕುಟುಂಬ ಜೀವನದ ಅನುಭವದಿಂದ ಮತ್ತು ಸಾಮಾನ್ಯವಾಗಿ ವೈವಾಹಿಕ ಪ್ರೀತಿಯಿಂದ ವೃದ್ಧಿಯಾಗುವ ಇತರರ ಮೇಲಿನ ಅನುಕಂಪದ ಮೂಲಕವಾಗಿ, ಆಕೆ ಸ್ವಾಭಾವಿಕವಾಗಿ ಸ್ನೇಹ ಅಭಿವೃದ್ಧಿಯಾಗುವ ವಾತಾವರಣವನ್ನು ಸೃಷ್ಟಿಸಬಲ್ಲಳು."
ಸುಸನ್ನಾ ವೆಸ್ಲಿಯು ಒಬ್ಬ ಬೋಧಕಿಯಾಗಿರಲಿಲ್ಲ, ಆದರೆ ಅವಳು ಒಬ್ಬ ದೈವಿಕ ತಾಯಿಯಾಗಿದ್ದಳು ಮತ್ತು ಆಕೆಯು ತನ್ನ ಅನೇಕ ಮಕ್ಕಳನ್ನು ದೇವರ ಭಯಭಕ್ತಿಯಲ್ಲಿ ಬೆಳೆಸಿದಳು. ಆಕೆಯ ಪುತ್ರರಲ್ಲಿ ಇಬ್ಬರು - ಜಾನ್ ಮತ್ತು ಚಾರ್ಲ್ಸ್ - ಇಂಗ್ಲೆಂಡ್ ದೇಶಕ್ಕೆ ಪುನರುಜ್ಜೀವನವನ್ನು ತರಲು ದೇವರ ಕೈಯಲ್ಲಿ ಪ್ರಬಲ ಸಾಧನಗಳಾಗಿ ಬೆಳೆದರು. ಹೀಗೆ ಆ ದೇವಭಕ್ತೆಯಾದ ತಾಯಿಯು ತನ್ನ ದೇಶಕ್ಕಾಗಿ ತಾನು ಮದುವೆಯಾಗದೆ ಇದ್ದುಕೊಂಡು ಸಾಧಿಸಬಹುದಾಗಿದ್ದ ಯಾವುದೇ ಕಾರ್ಯಕ್ಕಿಂತ ಬಹಳ ಹೆಚ್ಚಿನದ್ದನ್ನು ಸಾಧಿಸಿದಳು.
ಮದುವೆಗೆ ಸಿದ್ಧತೆಯಾಗಿ ಪ್ರತಿಯೊಬ್ಬ ಹುಡುಗಿಯು ’ಜ್ಞಾನೋಕ್ತಿಗಳು 31:10-31'ನ್ನು ಓದಬೇಕು ಮತ್ತು ಧ್ಯಾನಿಸಬೇಕು. ಅಲ್ಲಿ ನಮಗೆ ಆದರ್ಶ ಪತ್ನಿಯು ಎಂಥವಳು ಎಂಬುದನ್ನು ವಿವರಿಸಲಾಗಿದೆ. ದೇವಭಯವೇ ಅವಳ ಇಡೀ ಜೀವನದ ರಹಸ್ಯವಾಗಿದೆ (ವಚನ 30). ಆದರೆ ಅಂತಹ ಹೆಂಡತಿಯ ವ್ಯಕ್ತಿತ್ವದ ಅಸ್ತಿವಾರ ಮದುವೆಗಿಂತ ಬಹಳ ಮೊದಲೇ ಹಾಕಲ್ಪಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಕ್ರೈಸ್ತ ಹುಡುಗಿಗೆ ಇಲ್ಲಿ ಪ್ರಸ್ತಾಪಿಸಿರುವ ವಾಕ್ಯಭಾಗವು ಒಂದು ಸವಾಲಾಗಿರಬೇಕು. ಇಲ್ಲಿ ಹೇಳಿರುವ ಎಲ್ಲವೂ ಬಹಳ ಸ್ಪಷ್ಟವಾಗಿರುವುದರಿಂದ, ಅದಕ್ಕೆ ಯಾವುದೇ ವಿವರಣೆಯ ಅಗತ್ಯವಿಲ್ಲ. ಉಲ್ಲೇಖಿಸಲಾದ ಉತ್ತಮ ಗುಣಗಳಲ್ಲಿ ಒಂದು "ಮಿತವ್ಯಯ"ವಾಗಿದೆ. ಆದರ್ಶ ಪತ್ನಿಗೆ ಹಣದ ಉಪಯೋಗದಲ್ಲಿ ಹೇಗೆ ಎಚ್ಚರಿಕೆ ವಹಿಸಬೇಕೆಂದು ತಿಳಿದಿರುತ್ತದೆ. ಇದನ್ನು ಪ್ರತಿಯೊಬ್ಬ ಹುಡುಗಿಯೂ ಕಲಿಯಬೇಕಾಗಿದೆ. ಇಂದಿನ ಅನೇಕ ಕಾಲೇಜಿನ ಹುಡುಗಿಯರು ದುಂದುವೆಚ್ಚ ಮಾಡುತ್ತಾರೆ. ನೀವು ಈಗ ಮಿತವ್ಯಯದ ಅಭ್ಯಾಸವನ್ನು ಬೆಳೆಸಿಕೊಂಡರೆ, ಮುಂದೆ ನೀವು ಮದುವೆಯಾದಾಗ ಅದು ಬಹಳ ಸಹಾಯಕರವಾಗುತ್ತದೆ. ನಿಮ್ಮ ಪ್ರಸ್ತುತ ಅನುಭವವು ಆಗ ನಿಮಗೆ ಉಪಯೋಗಕ್ಕೆ ಬರುತ್ತದೆ.
ಮದುವೆಗೆ ಸಿದ್ಧತೆಯಾಗಿ ಎಲ್ಲಾ ಹುಡುಗಿಯರು ಕಲಿತುಕೊಳ್ಳಬೇಕಾದ ಮತ್ತೊಂದು ವಿಷಯವೆಂದರೆ, ತ್ಯಾಗದ ಗುಣವಾಗಿದೆ. ತ್ಯಾಗವಿಲ್ಲದೆ ಸಂತೋಷದ ದಾಂಪತ್ಯ ಜೀವಿತವನ್ನು ಜೀವಿಸಲು ಆಗುವುದಿಲ್ಲ. ಹುಡುಗಿಯ ವಿಷಯದಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ಮದುವೆಯ ನಂತರ ಆಕೆ ಪುರುಷನಿಗಿಂತ ಹೆಚ್ಚು ತ್ಯಾಗ ಮಾಡಬೇಕಾಗುತ್ತದೆ. ಹುಡುಗಿಯು ಒಂಟಿಯಾಗಿದ್ದಾಗ ಹೊಂದಿದ್ದ ಹಲವು ಹಕ್ಕುಗಳನ್ನು ಮದುವೆಯ ನಂತರ ಬಿಟ್ಟುಕೊಡಬೇಕಾಗುತ್ತದೆ. ನೀವು ತ್ಯಾಗದ ಅರ್ಥವನ್ನು ಈಗ ಮದುವೆಯಾಗುವ ಮೊದಲು ಕಲಿತುಕೊಳ್ಳದಿದ್ದರೆ, ಮುಂದೆ ನಿಮಗೆ ಬಹಳ ಕಷ್ಟವೆನಿಸುತ್ತದೆ. ಆದ್ದರಿಂದ ಇದನ್ನು ನಿಮಗೆ ಕಲಿಸಲು ದೇವರನ್ನು ಕೇಳಿಕೊಳ್ಳಿರಿ.
ಯೌವನಸ್ಥೆಯಾದ ಒಬ್ಬ ಹುಡುಗಿಯು ಮದುವೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಪ್ರಾರ್ಥನೆಯಾಗಿದೆ, ಎಂಬುದರಲ್ಲಿ ಸಂದೇಹವಿಲ್ಲ. ನನ್ನ ಸಲಹೆ ಏನೆಂದರೆ, ಪ್ರತಿಯೊಬ್ಬ ಕ್ರೈಸ್ತ ಹುಡುಗಿಯು ತಾನು ಮದುವೆಯ ನಿರ್ಣಯ ಕೈಗೊಳ್ಳುವುದಕ್ಕೆ ಮುಂಚಿನ ಎರಡು ಅಥವಾ ಮೂರು ವರ್ಷಗಳ ಸಮಯದಲ್ಲಿ ತನ್ನ ಜೀವನ ಸಂಗಾತಿಯ ಬಗ್ಗೆ ಶ್ರದ್ಧೆಯಿಂದ ಮತ್ತು ನಿಯಮಿತವಾಗಿ ಪ್ರಾರ್ಥಿಸಬೇಕು. ದೇವರು ಆಕೆಯ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿದ ಪುರುಷನನ್ನು ಮದುವೆ ಮಾಡಿಕೊಳ್ಳುವಂತೆ ತನ್ನನ್ನು ನಡೆಸಬೇಕೆಂದು ಆಕೆ ಪ್ರಾರ್ಥಿಸಬೇಕು. ಈ ಒಂದು ವಿವಾಹದ ಪ್ರಸ್ತಾಪದ ಹೊರತಾಗಿ ಬೇರೆಲ್ಲಾ ಪ್ರಸ್ತಾಪಗಳನ್ನು ವಿಫಲಗೊಳಿಸುವಂತೆ ಆಕೆ ದೇವರನ್ನು ಕೇಳಿಕೊಳ್ಳಬೇಕು. ಭಾರತದಲ್ಲಿ ಪೋಷಕರು ತಮ್ಮ ಮಕ್ಕಳ ಮದುವೆಯ ವಿಷಯದಲ್ಲಿ - ವಿಶೇಷವಾಗಿ ಹೆಣ್ಣು ಮಕ್ಕಳ ಮದುವೆಯ ವಿಷಯದಲ್ಲಿ - ದೊಡ್ಡ ಪಾತ್ರವನ್ನು ನಿರ್ವಹಿಸುವುದರಿಂದ, ಇದು ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗಾಗಿ ಒಬ್ಬ ಹುಡುಗಿಯು ತನ್ನ ಹೆತ್ತವರು ಕೈಗೊಳ್ಳುವ ನಿರ್ಣಯದಲ್ಲಿ - ಅವರು ಕ್ರೈಸ್ತ ವಿಶ್ವಾಸಿಗಳು ಆಗಿರದಿದ್ದರೂ ಸಹ - ಅವರಿಗೂ ಕೂಡ ದೇವರ ಮಾರ್ಗದರ್ಶನವು ಸಿಗುವಂತೆ ಪ್ರಾರ್ಥಿಸಬೇಕು. ದೃಢವಾದ ನಂಬಿಕೆಯಿಂದ ದೇವರನ್ನು ಪ್ರಾರ್ಥಿಸುತ್ತಾ ಇರುವವರು ತಮ್ಮ ಪ್ರಾರ್ಥನೆಗಳಿಗೆ ಅದ್ಭುತವಾದ ಉತ್ತರಗಳನ್ನು ಕಂಡುಕೊಳ್ಳುತ್ತಾರೆ.
ಮದುವೆಯ ಸಿದ್ಧತೆಯ ವಿಚಾರದಲ್ಲಿ ಇನ್ನೊಂದು ಪ್ರಾಯೋಗಿಕ ಸಲಹೆ: ನಿಮಗೆ ಬಿಡುವು ಸಿಕ್ಕಾಗಲೆಲ್ಲಾ ಸ್ವಲ್ಪ ಮಟ್ಟಿಗಾದರೂ ಅಡುಗೆ ಮಾಡುವುದನ್ನು ಕಲಿಯಿರಿ. ಇದು ನೀವು ಮುಂದೆ ಮದುವೆಯಾದಾಗ ಉಂಟಾಗುವ ಅನೇಕ ತೊಂದರೆಗಳು ಮತ್ತು ಮುಜುಗರದ ಪರಿಸ್ಥಿತಿಗಳಿಂದ ನಿಮ್ಮನ್ನು ರಕ್ಷಿಸುತ್ತದೆ!
ಒಬ್ಬ ಹುಡುಗಿಯು ತಾನು ಮುಂದೆ ಮದುವೆ ಮಾಡಿಕೊಳ್ಳಲಿರುವ ಗಂಡನಲ್ಲಿ ಏನನ್ನು ಕಾಣಬೇಕು? ಈಗಾಗಲೇ ಐದನೆಯ ಅಧ್ಯಾಯದಲ್ಲಿ ಮುಖ್ಯಾಂಶಗಳು ಪ್ರಸ್ತಾಪಿಸಲ್ಪಟ್ಟಿವೆ. ನಾನು ಇಲ್ಲಿ ಹುಡುಗಿಯರು ಗಮನ ಹರಿಸಬೇಕಾದ ಕೆಲವು ವಿಷಯಗಳನ್ನು ಮಾತ್ರ ಇನ್ನೊಂದು ಸಲ ಒತ್ತಿಹೇಳಲು ಬಯಸುತ್ತೇನೆ.
ಒಬ್ಬ ಹುಡುಗಿಗೆ ಭದ್ರತೆ ಮತ್ತು ಸುರಕ್ಷಿತತೆಯ ವಾತಾವರಣವನ್ನು ಒದಗಿಸುವ ಒಬ್ಬ ಜೊತೆಗಾರನು ಬೇಕಾಗಿದ್ದಾನೆ - ಅಂದರೆ, ಆಕೆಗೆ ಸಹಾಯನೀಡಿ ಸಂತೈಸುವವನು ಮತ್ತು ಆಕೆಯನ್ನು ಸಾಧ್ಯವಾದಷ್ಟು ಅರ್ಥಮಾಡಿಕೊಳ್ಳುವಂತ ಒಬ್ಬ ವ್ಯಕ್ತಿ. ಆತನು ಆಕೆಗೆ ಆಸರೆ ನೀಡುವಷ್ಟು ಬಲಿಷ್ಠನು ಮತ್ತು ಪರಿಪಕ್ವನು ಆಗಿದ್ದರೂ, ಆಕೆಯಲ್ಲಿ ಕೀಳರಿಮೆ ಉಂಟುಮಾಡುವ ವ್ಯಕ್ತಿತ್ವ ಆತನಲ್ಲಿ ಇರಬಾರದು. ದೇವರು ಹೆಣ್ಣನ್ನು ಪುರುಷನ ಆಸರೆಯಲ್ಲಿ ಇರುವಂತೆ ಸೃಷ್ಟಿಸಿದರು. ಹಾಗಾಗಿ ನೀವು ಪರಿಗಣಿಸುತ್ತಿರುವ ವ್ಯಕ್ತಿಯು ನಿಮ್ಮ ವಿಶ್ವಾಸಾರ್ಹನಾಗಿದ್ದು, ನೀವು ಆತನ ಮೇಲೆ ಭರವಸೆ ಇಡಬಹುದು ಎಂಬ ಭಾವನೆಯನ್ನು ನಿಮಗೆ ಕೊಡುವವನು ಆಗಿರಬೇಕು.
ಸತ್ಯವೇದವು ಈ ರೀತಿಯಾಗಿ ಹೇಳುತ್ತದೆ, "ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು - ವಿಧೇಯಳಾಗಿ, ಆತನನ್ನು ಹೊಗಳುತ್ತಾ ಮತ್ತು ಗೌರವಿಸುತ್ತಾ ಇರಬೇಕು" (ಎಫೆಸದವರಿಗೆ 5:33 - The Living Bible ಅನುವಾದ)
ಗೌರವಭಾವದಿಂದ ಪ್ರೀತಿಯು ಉತ್ಪನ್ನವಾಗುತ್ತದೆ, ಮತ್ತು ಹೆಂಡತಿಯು ತನ್ನ ಗಂಡನನ್ನು ಗೌರವಿಸದಿದ್ದರೆ, ಆಕೆಗೆ ಆತನನ್ನು ಪ್ರೀತಿಸಲು ಸಾಧ್ಯವಾಗುವುದಿಲ್ಲ - ಇಲ್ಲವಾದರೆ, ಬಹುಶಃ ಆತನ ಮೇಲಿನ ಕನಿಕರದಿಂದ ಆಕೆ ಆತನನ್ನು ಪ್ರೀತಿಸಲೂ ಬಹುದು. ಒಬ್ಬ ಪತ್ನಿಯು ತನ್ನ ಪತಿಯನ್ನು ತನಗಿಂತ ಹೆಚ್ಚು ಪರಿಪಕ್ವನೆಂದು ಗೌರವಿಸದಿದ್ದರೆ, ಆಕೆ ಆತನನ್ನು ತನ್ನ ಮುಖ್ಯಸ್ಥನಾಗಿ ಕಾಣುವುದಿಲ್ಲ. ಹಾಗಾಗಿ ನೀವು ಪರಿಗಣಿಸುತ್ತಿರುವ ವ್ಯಕ್ತಿಯನ್ನು ಸಾಕಷ್ಟು ಗೌರವಿಸಿ ಮತ್ತು ಮೆಚ್ಚಿಕೊಂಡು, ಆತನೊಂದಿಗೆ ಇಡೀ ಜೀವನವನ್ನು ಮನಸಾರೆ ಕಳೆಯಲು ಇಚ್ಛಿಸುತ್ತೀರಾ, ಎಂದು ನೀವು ನಿಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು. ಇಂತಹ ಮೆಚ್ಚುಗೆಯ ಮನೋಭಾವವು ವೈವಾಹಿಕ ಜೀವನದ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿದೆ.
ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಸೂಕ್ಷ್ಮವಾಗಿ ಎಲ್ಲಾ ವಿಷಯಗಳನ್ನು ದೃಢೀಕರಿಸಲು ಸಾಧ್ಯವಾಗುವುದಿಲ್ಲವೆಂದು ನನಗೆ ತಿಳಿದಿದೆ. ಆದರೆ ಈ ಅಧ್ಯಾಯದಲ್ಲಿ ಮತ್ತು ಐದನೇ ಅಧ್ಯಾಯದಲ್ಲಿ ಇದರ ಬಗ್ಗೆ ತಿಳಿಸಿರುವಂತ ವಿಷಯಗಳು ದೇವರು ನಿಮಗಾಗಿ ನಿಯೋಜಿಸಿರುವ ವ್ಯಕ್ತಿಯನ್ನು ಕಂಡುಕೊಳ್ಳಲು ನಿಮಗೆ ಸ್ವಲ್ಪ ಮಟ್ಟಿಗಾದರೂ ದಾರಿ ತೋರಿಸಬೇಕು. ಏನೇ ಆದರೂ, ಒಬ್ಬ ಮನುಷ್ಯನ ಕುರಿತಾಗಿ ಏನೂ ಮಾಹಿತಿಯಿಲ್ಲದೆ ಆತನನ್ನು ಎಂದಿಗೂ ಮದುವೆ ಮಾಡಿಕೊಳ್ಳಬೇಡಿರಿ - ನಮ್ಮ ದೇಶದ ಅನೇಕ ಹುಡುಗಿಯರು ಹೆಚ್ಚಾಗಿ ಇದನ್ನೇ ಮಾಡುತ್ತಾರೆ! ಮದುವೆಯು ಇಡೀ ಜೀವಮಾನಕ್ಕಾಗಿ ಆಗಿದೆ, ಮತ್ತು ಅದನ್ನು ಲಘುವಾಗಿ ನಿರ್ಧರಿಸಬಾರದು.
ನಿಮ್ಮ ಹೆತ್ತವರು ಒಬ್ಬ ಅವಿಶ್ವಾಸಿಯನ್ನು ಅಥವಾ ಯಾವುದೋ ಬೇರೆ ರೀತಿಯಲ್ಲಿ ಸೂಕ್ತನಲ್ಲದ ಹುಡುಗನನ್ನು ನಿಮಗಾಗಿ ಸೂಚಿಸಿದರೆ, ಆಗ ಏನು ಮಾಡಬೇಕೆಂದು ನೀವು ಬಹುಶಃ ಯೋಚಿಸಬಹುದು. ಇಂತಹ ಸಂದರ್ಭಗಳಲ್ಲಿ ಒಬ್ಬ ಹುಡುಗನಿಗಿಂತ ಹೆಚ್ಚಾಗಿ ಒಬ್ಬ ಹುಡುಗಿ ತನ್ನ ಹೆತ್ತವರನ್ನು ನಿರಾಕರಿಸಿ "ಬೇಡ" ಎಂದು ಹೇಳುವುದು ಕಷ್ಟಕರವೆಂದು ನಾನು ಅರಿತಿದ್ದೇನೆ. ಹಾಗಿದ್ದರೂ ನೀವು ಪ್ರೀತಿಯಿಂದ ನಡೆದುಕೊಂಡು, ನಿಮ್ಮ ಮನಸ್ಸಿನ ನಂಬಿಕೆಗೆ ತಕ್ಕಂತೆ ದೃಢವಾಗಿ ನಿಲ್ಲುವುದು ಬಹಳ ಮುಖ್ಯವಾಗಿದೆ. ನೀವು ಹೀಗೆ ಮಾಡಿದರೆ ದೇವರು ನಿಮ್ಮನ್ನು ಗೌರವಿಸುತ್ತಾರೆ. ಸೈತಾನನು ನಿಮ್ಮ ಭವಿಷ್ಯದ ಕುರಿತಾಗಿ ಅನಿಶ್ಚಿತತೆಯ ಭೀತಿಯನ್ನು ಉಂಟುಮಾಡಿ ನಿಮ್ಮನ್ನು ಶೋಧಿಸಬಹುದು ಮತ್ತು ಆತ್ಮಿಕವಾಗಿ ಸೂಕ್ತವಲ್ಲದ ಈ ಮದುವೆಯ ಪ್ರಸ್ತಾಪಕ್ಕೆ ಒಪ್ಪಿಕೊಳ್ಳುವಂತೆ ನಿಮ್ಮನ್ನು ಒತ್ತಾಯಿಸಬಹುದು. ಆದರೆ ಅವನ ಮಾತಿಗೆ ಕಿವಿಗೊಡಬೇಡಿರಿ. ಇದುವರೆಗೆ ಯಾರಾದರೂ ದೇವರಿಗೆ ವಿಧೇಯರಾದುದರಿಂದ ಎಂದಿಗೂ ನಷ್ಟಕ್ಕೆ ಈಡಾಗಿಲ್ಲ. ಹಾಗಾಗಿ ಭಯಭೀತರಾಗುವುದು ಬೇಡ. ನೀವು ಕರ್ತನನ್ನು ಗೌರವಿಸಿ ಅವರ ಮೇಲೆ ಭಾರ ಹಾಕಿದರೆ, ಅವರು ನಿಮ್ಮ ಕೈ ಬಿಡುವುದಿಲ್ಲ. ಅವರು ನಿಶ್ಚಯಿಸಿದ ಸಮಯದಲ್ಲಿ ಅವರು ನಿಮಗೆ ತನ್ನ ಅತ್ಯುತ್ತಮವಾದುದನ್ನು ಕೊಡುತ್ತಾರೆ. ನೀವು ಅದನ್ನು ಕಳಕೊಳ್ಳಲು ಬಯಸುವುದಿಲ್ಲ ತಾನೇ?
ವರದಕ್ಷಿಣೆಯ ಪ್ರಶ್ನೆಯನ್ನು ಈಗಾಗಲೇ ಚರ್ಚಿಸಲಾಗಿದೆ. ಇಲ್ಲಿ ನಾನು ಅದಕ್ಕೆ ಸೇರಿಸಿ ಹೇಳಬಯಸುವ ಒಂದು ಮಾತೆಂದರೆ, ಒಬ್ಬ ಕ್ರೈಸ್ತ ವಿಶ್ವಾಸಿಯಾದ ಹುಡುಗಿಯು ವರದಕ್ಷಿಣೆಯ ಬೇಡಿಕೆ ಇರಿಸುವ ಯಾರನ್ನಾದರೂ ಮದುವೆಯಾಗುವ ಮೊದಲು ಎರಡನೆಯ ಸಲ ಯೋಚಿಸಬೇಕು. ಆತನಿಗೆ ನಿಮಗಿಂತ ನಿಮ್ಮ ಹಣದ ಮೇಲೆ ಹೆಚ್ಚಿನ ಆಸಕ್ತಿ ಇರಬಹುದು. ಅದೇ ರೀತಿ, ಯಾರಾದರೂ ಶ್ರೀಮಂತನಾಗಿದ್ದರೆ ಅಥವಾ ಉತ್ತಮ ಹುದ್ದೆಯಲ್ಲಿದ್ದರೆ ಆತನ ಕಡೆಗೆ ಆಕರ್ಷಿಸಲ್ಪಡಬೇಡಿರಿ. ಪ್ರೀತಿಯ ಸ್ಥಳದಲ್ಲಿ ಹಣವು ಉಪಯೋಗಕ್ಕೆ ಬರುವುದಿಲ್ಲ, ಎಂದು ಸತ್ಯವೇದ ನಮಗೆ ನೆನಪಿಸುತ್ತದೆ (ಪರಮಗೀತ 8:7).
ಮದುವೆಯಾಗದೆ ಒಂಟಿಯಾಗಿ ಉಳಕೊಳ್ಳುವ ಹುಡುಗಿಯರ ಬಗ್ಗೆ ಒಂದು ಮಾತನ್ನು ಹೇಳದಿದ್ದರೆ ಈ ಅಧ್ಯಾಯ ಅಪೂರ್ಣವಾಗಿರುತ್ತದೆ.
ಭಾರತೀಯ ಸಮಾಜದಲ್ಲಿ ಒಬ್ಬ ಹುಡುಗಿ ಮದುವೆ ಮಾಡಿಕೊಳ್ಳದೆ ಒಂಟಿಯಾಗಿರಲು ಸ್ವೇಚ್ಛೆಯಿಂದ ನಿರ್ಧರಿಸುವುದು ಬಹಳ ಅಪರೂಪವಾಗಿದೆ. ಅಂತಹ ಜೀವನವನ್ನು ದೇವರ ಸ್ಪಷ್ಟ ನಿರ್ದೇಶನವಿದ್ದಾಗ ಮಾತ್ರ ಆರಿಸಿಕೊಳ್ಳಬೇಕು - ಏಕೆಂದರೆ ನೀವು ಶೋಧನೆಗಳ ಸಮಯದಲ್ಲಿ ವಿಚಲಿತರಾಗದೆ ನಿಲ್ಲಲು ಅಂತಹ ಸ್ಪಷ್ಟ ಕರೆಯ ತಿಳುವಳಿಕೆ ಅವಶ್ಯವಾಗಿರುತ್ತದೆ. ಕೆಲವರಿಗೆ ಯಾವುದೋ ವಿಶೇಷ ಸೇವೆಯ ಸಲುವಾಗಿ ಕೆಲವು ವರ್ಷಗಳ ಕಾಲ ಮಾತ್ರ ಕುಟುಂಬ ಜೀವನದ ಜಂಜಾಟದಿಂದ ದೂರವಿರುವಂತೆ ದೇವರಿಂದ ಇಂತಹ ಕರೆ ಸಿಗಬಹುದು. ಇದರ ನಂತರ ದೇವರು ವಿವಾಹ ಜೀವನದ ಬಾಗಿಲನ್ನು ತೆರೆಯಬಹುದು.
ಇದನ್ನು ಓದುತ್ತಿರುವ ಇನ್ನು ಕೆಲವರ ಮೇಲೆ ಒಂಟಿ ಜೀವನವು ಬಹುಶಃ ಅವರ ಸ್ವಂತ ಇಚ್ಛೆಗೆ ವಿರುದ್ಧವಾಗಿ ಹೊರಿಸಲ್ಪಡಬಹುದು. ನಿಮ್ಮ ಇಂತಹ ದುಸ್ಥಿತಿಗೆ ಮೂಲಕಾರಣವೆನಿಸುವ ಒಂದು ಕುಟುಂಬ, ಒಬ್ಬ ಮನುಷ್ಯ ಅಥವಾ ಯಾವುದೋ ಸಂದರ್ಭಗಳನ್ನು ದೂಷಿಸದಿರಲು ನಿಮಗೆ ಬಹಳ ಕಷ್ಟವಾಗಬಹುದು. ಪ್ರೀತಿಸಲು ಮತ್ತು ಪ್ರೀತಿಸಲ್ಪಡಲು ಸ್ವಂತ ಜನರು ಬೇಕೆಂಬ ಸ್ತ್ರೀಯ ಸ್ವಾಭಾವಿಕ ಹಂಬಲಗಳು ನಿಮ್ಮೊಳಗೆ ಧ್ವನಿಯೆತ್ತಿ ಕೂಗುತ್ತಿರುವಾಗ, ನಿಮ್ಮ ಪರಿಸ್ಥಿತಿಯ ಬಗ್ಗೆ ಬೇಸರಿಸಿ ಮರುಗದಿರುವುದು ಬಹಳ ಕಷ್ಟವೆನಿಸಲೂಬಹುದು. ಆದಾಗ್ಯೂ, ಅನ್ಯಾಯವಾಗಿ ನೀವು ಎಷ್ಟು ಬಾಧೆಗೆ ಒಳಪಟ್ಟಿದ್ದರೂ, ಕಹಿಭಾವನೆ ಮತ್ತು ಸ್ವಂತಕ್ಕಾಗಿ ಮರುಗುವುದು ಯಾವಾಗಲೂ ತಪ್ಪು ಮತ್ತು ಇದು ನಿಮ್ಮ ವ್ಯಕ್ತಿತ್ವದ ಮೇಲೆ ಅನಾರೋಗ್ಯಕರ ಪರಿಣಾಮವನ್ನು ಬೀರುತ್ತದೆ. ಇವೆಲ್ಲವನ್ನು ದೇವರಿಗೆ ಅರಿಕೆಮಾಡಿ ತ್ಯಜಿಸಬೇಕು. ಈ ಅಹಿತಕರ ಸಂಗತಿಗಳನ್ನು ಅಳಿಸಿಬಿಟ್ಟು ದೇವರೊಂದಿಗೆ ನಿಮ್ಮ ಅನ್ಯೋನ್ಯತೆಯು ಪುನಃ ಸ್ಥಾಪಿಸಲ್ಪಟ್ಟಾಗ, ನೀವು ದೀನತೆಯಿಂದ ನಿಮ್ಮ ಹಿಂದಿನ, ಈಗಿನ ಮತ್ತು ಭವಿಷ್ಯದ ವಿಷಯಗಳಲ್ಲಿ ದೇವರ ಸಾರ್ವಭೌಮತ್ವವನ್ನು ನಂಬಬೇಕು. ಮಹತ್ಕಾರ್ಯಗಳ ಮೂಲಕ ನಿಮ್ಮ ಪರಿಸ್ಥಿತಿಗಳನ್ನು ಬದಲಾಯಿಸುವಂತ ಸಂಪೂರ್ಣ ಸಾಮರ್ಥ್ಯ ಅವರಲ್ಲಿದೆ. ಆದರೆ ಅವರು ಹೀಗೆ ಮಾಡದೇ ಹೋದರೆ, ಅದು ಅವರು ನಿಮಗಾಗಿ ಇರಿಸಿಕೊಂಡಿರುವ ಸಂಕಲ್ಪದ ಯಾವುದೋ ಶ್ರೇಷ್ಠವಾದ ಉದ್ದೇಶಕ್ಕಾಗಿ, ಎಂದು ನೀವು ಖಚಿತವಾಗಿರಬಹುದು. ನಿಮ್ಮೊಂದಿಗೆ ಅವರ ಹೇರಳವಾದ ಕೃಪೆಯು ತಪ್ಪದೆ ಇರುತ್ತದೆ ಮತ್ತು ಅದು ನಿಮ್ಮ ಎಲ್ಲಾ ಕೊರತೆಗಳಿಗೆ ಯೋಗ್ಯ ಪರಿಹಾರವನ್ನು ಧಾರಾಳವಾಗಿ ಒದಗಿಸುತ್ತದೆ (2ಕೊರಿಂಥದವರಿಗೆ 12:7-10 ನೋಡಿರಿ).
ನೀವು ನಿಮ್ಮ ವಿವಾಹಿತ ಸಹೋದರಿಯನ್ನು ನೋಡಿ ಅಸೂಯೆಪಡುವ ಅವಶ್ಯಕತೆಯಿಲ್ಲ. ಆಕೆ ಹೊಂದಿರುವ ಕೆಲವು ಸ್ಥಾನಮಾನಗಳನ್ನು ನೀವು ಪಡೆಯಲಾರಿರಿ. ಆದರೆ ಆಕೆಗೆ ಸಿಗದಂತ ಕೆಲವು ಸ್ಥಾನಮಾನಗಳು ನಿಮಗೆ ಸಿಕ್ಕಿವೆಯೆಂಬುದನ್ನು ಮರೆಯದಿರಿ. 1ಕೊರಿಂಥದವರಿಗೆ 7:35 ವಚನವು ಹೇಳುವಂತೆ, ನೀವು ಅಡೆತಡೆಯಿಲ್ಲದೆ "ಕರ್ತನ ಪಾದಸೇವೆಯನ್ನು ಮಾಡುವ ಅವಕಾಶವನ್ನು" ಆಕೆಗಿಂತ ಹೆಚ್ಚಾಗಿ ಹೊಂದಿದ್ದೀರಿ. ನೀವು ಹಲವಾರು ಕ್ಷೇತ್ರಗಳಲ್ಲಿ ನಿಮ್ಮನ್ನು ಉಪಯುಕ್ತವಾಗಿ ತೊಡಗಿಸಿಕೊಳ್ಳಬಹುದು. ಉದಾಹರಣೆಗೆ, ಮಕ್ಕಳ ಮತ್ತು ಯೌವನಸ್ಥರ ಸೇವೆ. ಇದಲ್ಲದೆ ನೀವು ನಿಮ್ಮ ಸ್ವಂತ ಅನುಭವದ ಮೂಲಕ, ಇತರರಿಗೆ - ಜೀವನದ ಹೋರಾಟಗಳಲ್ಲಿ ಗಾಯಗೊಂಡು ನರಳುತ್ತಿರುವವರಿಗೆ ಸಹಾನುಭೂತಿಯುಳ್ಳ ಸ್ನೇಹದ ದೊಡ್ಡ ಕೊಡುಗೆಯನ್ನು ಸಹ ಕೊಡಲು ಸಾಧ್ಯವಾಗುತ್ತದೆ.
ಹಾಗಿದ್ದರೂ ಶೋಧನೆಯು ಒಂದಲ್ಲ ಒಂದು ರೀತಿಯಲ್ಲಿ ಬಂದೇ ಬರುತ್ತದೆ. ಇದು ಯಾರಿಗೂ ತಪ್ಪಿದ್ದಲ್ಲ. ಸ್ತ್ರೀಯ ಸೂಕ್ಷ್ಮ ಮತ್ತು ಭಾವನಾತ್ಮಕ ಸ್ವಭಾವವನ್ನು ಪರಿಗಣಿಸುವಾಗ, ಸೈತಾನನಿಗೆ ಈ ಮೂಲಕ ಆಕೆಯ ಮೇಲೆ ಧಾಳಿಮಾಡುವುದು ಬಹಳ ಸುಲಭವೆನಿಸುತ್ತದೆ.
"ಆದರೆ ದೇವರು (ಸತ್ಯವೇದದಲ್ಲಿ ಕೊಟ್ಟಿರುವ ಮಾತಿನಿಂದಾಗಿ ಮತ್ತು ಕರುಣಾಳುವಾದ ಆತನ ಸ್ವಭಾವದ ಫಲವಾಗಿ) ನಂಬಿಗಸ್ತನಾಗಿದ್ದಾನೆ, ಮತ್ತು ನಿಮ್ಮ ಶಕ್ತಿಯನ್ನೂ ಸಹನೆಯನ್ನೂ ಮೀರುವ ಶೋಧನೆಯನ್ನು ಆತನು ನಿಮಗೆ ಬರಗೊಡಿಸನು (ಎಂದು ಆತನನ್ನು ನಂಬುವುದು ಯೋಗ್ಯವಾದದ್ದು), ಆದರೆ ಶೋಧನೆಯಾಗುತ್ತಲೇ ನೀವು ಬಲಗೊಂಡು ಅದನ್ನು ದೀರ್ಘಶಾಂತಿಯಿಂದ ಸಹಿಸಲು ಸಾಕಷ್ಟು ಶಕ್ತರಾಗುವಂತೆ (ಯಾವಾಗಲೂ) ಸೂಕ್ತ ಪರಿಹಾರವನ್ನು ಸಹ ಆತನು ಸಿದ್ಧಮಾಡುವನು" (1ಕೊರಿಂಥದವರಿಗೆ 10:13 - Amplified Bible).
ದೇವರ ಪ್ರೀತಿ, ಸಾರ್ವಭೌಮತ್ವ ಮತ್ತು ನಂಬಿಗಸ್ತಿಕೆಯನ್ನು ಆಧರಿಸಿದ ಧೃಢವಾದ ನಂಬಿಕೆಯ ಗುರಾಣಿಯು, ಸೈತಾನನ ಅಗ್ನಿಬಾಣಗಳನ್ನೆಲ್ಲಾ ಆರಿಸುವುದಕ್ಕೆ ಶಕ್ತವಾಗಿದೆ (ಎಫೆಸದವರಿಗೆ 6:16).
ಕಹಿಭಾವನೆ ಮತ್ತು ತಮ್ಮನ್ನೇ ದೂಷಿಸುವ ಮನೋಭಾವಕ್ಕೆ ಅವಕಾಶ ನೀಡುವುದು ಅನಾವಶ್ಯಕವಾಗಿದೆ, ಆದಾಗ್ಯೂ ಅನೇಕ ಅವಿವಾಹಿತ ಸ್ತ್ರೀಯರು ತಮ್ಮ ನಡುವಯಸ್ಸಿನಲ್ಲಿ ಈ ಭಾವನೆಗಳಿಗೆ ಈಡಾಗುತ್ತಾರೆ. ಕರ್ತನ ಭಯಭಕ್ತಿಯನ್ನು ಹೆಚ್ಚಿಸಿಕೊಂಡು, ಸಂತೋಷದಿಂದ ಅವರ ಸಂಪೂರ್ಣ ಚಿತ್ತವನ್ನು ಸ್ವೀಕರಿಸಿ, ಜೊತೆಗೆ ದೇವರಿಂದ ಹಾಗೂ ಮನುಷ್ಯರಿಂದ ಒದಗುವ ಒಂದೊಂದು ಚಿಕ್ಕ ಕರುಣೆಗಾಗಿ ಕೃತಜ್ಞತೆ ತೋರಿಸುವ ಅಭ್ಯಾಸವನ್ನು ಬೆಳೆಸಿಕೊಂಡರೆ, ನಿಮ್ಮ ಜೀವನವು ಸದಾ ಕರ್ತನ ಆನಂದದಿಂದ ತುಂಬಿರುತ್ತದೆ, ಮತ್ತು ಅದು ನಿಮ್ಮಿಂದ ಉಕ್ಕಿ ಹರಿದು ಅನೇಕರನ್ನು ಆಶೀರ್ವದಿಸುತ್ತದೆ.
ಅವಿವಾಹಿತ ಸ್ತ್ರೀಯರು ಕ್ರೈಸ್ತಸಭೆಗೆ ಅತ್ಯಂತ ಶ್ರೇಷ್ಠ ಸೇವೆಯನ್ನು ಮಾಡಿದ ಹಲವಾರು ನಿದರ್ಶನಗಳಿವೆ. ’ಪಂಡಿತ ರಮಾಬಾಯಿ’ಯವರು (ಒಬ್ಬ ವಿಧವೆ) ಖೇಡ್‌ಗಾಂವ್ ಎಂಬಲ್ಲಿ (ಮಧ್ಯ ಭಾರತ) ಸ್ಥಾಪಿಸಿದ "ಮುಕ್ತಿ ಮಿಷನ್" ಎಂಬ ಸಂಸ್ಥೆಯು ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಭಾರತಕ್ಕೆ ಬಂದ ಅತ್ಯಂತ ಶ್ರೇಷ್ಠ ದೇವಭಕ್ತರಲ್ಲಿ ಒಬ್ಬರಾದ ದೋನವೂರ್ ಎಂಬಲ್ಲಿ ನೆಲೆಸಿದ ’ಏಮಿ ಕಾರ್ಮೈಕಲ್’ರವರು ಮತ್ತೊಬ್ಬ ಶ್ರೇಷ್ಠ ಉದಾಹರಣೆಯಾಗಿದ್ದಾರೆ. ಇವರ ಜೀವಿತದಿಂದ ಹರಿದುಬಂದ ಆಶೀರ್ವಾದದ ಧಾರೆಗಳು, ಅವರು ದೇವರ ಬಳಿಗೆ ಕರೆಸಲ್ಪಟ್ಟು ಎಷ್ಟೋ ವರ್ಷಗಳ ನಂತರ, ಈ ದಿನವೂ ಹರಿಯುತ್ತಿವೆ. ಇವರಂತ ಇನ್ನೂ ಅನೇಕರು ಇದ್ದಾರೆ.
ನಿಜವಾಗಿ ಮುಖ್ಯ ವಿಷಯ ಏನೆಂದರೆ, ನಿಮ್ಮ ಜೀವನಕ್ಕಾಗಿ ದೇವರ ಕರೆ ಏನೆಂದು ತಿಳಿದುಕೊಳ್ಳುವುದು, ಮತ್ತು ಅದು ಏನೇ ಆಗಿದ್ದರೂ, ಅದನ್ನು ಹರ್ಷಭರಿತರಾಗಿ ಕೈಗೊಂಡು ಪೂರೈಸುವುದು. ಇದರಿಂದ ಸಮಾಧಾನ ಉಂಟಾಗುತ್ತದೆ.
ಅಂತಿಮವಾಗಿ, ಸ್ತ್ರೀಯು ಪುರುಷನಿಗಿಂತ ಕಡಿಮೆ ಬಲವುಳ್ಳವಳು ಎಂಬ ತಿಳುವಳಿಕೆಯಿಂದ, "ಬಲಹೀನರಲ್ಲಿ ನನ್ನ ಬಲವು ವಿಶೇಷವಾಗಿ ಎದ್ದು ಕಾಣಿಸುತ್ತದೆ" (2ಕೊರಿಂಥದವರಿಗೆ 12:9 - TLB ಅನುವಾದ) ಎಂದು ಹೇಳಿದ ದೇವರನ್ನು ನಾವು ಬಿಗಿಯಾಗಿ ಅಪ್ಪಿಕೊಳ್ಳುವಂತೆ ಮಾಡಲಿ. ದೇವರು ಸ್ತ್ರೀಯನ್ನು ಒಂದು ನಿರ್ದಿಷ್ಟ ಕಾರ್ಯವನ್ನು ಪೂರೈಸುವುದಕ್ಕಾಗಿ ಸೃಷ್ಟಿಸಿದರೆಂದು ನೆನಪಿರಿಸಿಕೊಳ್ಳಿರಿ. ಈ ಉದ್ದೇಶವು ನಿಮ್ಮ ಜೀವನದಲ್ಲಿ ಸಂಪೂರ್ಣವಾಗಿ ಈಡೇರಲಿ.
ಹತ್ತು, ಒಂಭತ್ತು, ಎಂಟು, ಏಳು, ಆರು, ಐದು....
ಕ್ಷಣಗಳ ಎಣಿಕೆಯು ಶೂನ್ಯವನ್ನು ಸಮೀಪಿಸುತ್ತಿದ್ದಂತೆಯೇ, ಉಡಾವಣೆಯ ಸ್ಥಳದಲ್ಲಿ ಉತ್ಸಾಹವು ಹೆಚ್ಚಾಗುತ್ತದೆ. ಚಂದ್ರನ ಬಳಿಗೆ ಮತ್ತೊಂದು ಮಾನವಸಹಿತ ಹಾರಾಟವನ್ನು ಪ್ರಾರಂಭಿಸುವ ಸಮಯ ಬಂದಿದೆ. ಈ ದಿನಕ್ಕೆ ಮುಂಚಿತವಾಗಿಯೇ ಹಲವು ತಿಂಗಳುಗಳಿಂದ ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ ಮತ್ತು ಅನೇಕ ಕೊನೆಯ ನಿಮಿಷದ ತಪಾಸಣೆಗಳು ಈಗಲೂ ನಡೆಯುತ್ತಿವೆ. ಈ ತಪಾಸಣೆಗಳನ್ನು ಹಗುರವಾಗಿ ತೆಗೆದುಕೊಂಡರೆ ಜೀವಕ್ಕೆ ಅಪಾಯ ಉಂಟಾಗುತ್ತದೆ - ಏಕೆಂದರೆ ಇದರಲ್ಲಿ ಮನುಷ್ಯರ ಜೀವಗಳು ಒಳಗೊಂಡಿವೆ.
ವೈವಾಹಿಕ ಜೀವಿತವು ಅಂತರಿಕ್ಷ ಯಾನಕ್ಕಿಂತ ಹೆಚ್ಚು ಸಾಹಸಮಯ ಮತ್ತು ಹೆಚ್ಚು ಅಪಾಯಕಾರಿಯೂ ಸಹ ಆಗಿದೆ. ಇದರಲ್ಲಿ ಹಗುರ ಮನೋಭಾವ ಅಥವಾ ಅಜಾಗರೂಕತೆಯು ತಕ್ಕದ್ದಲ್ಲ. ಸಿದ್ಧತೆಯು ಅತ್ಯಗತ್ಯವಾಗಿದೆ.
ಮದುವೆಯ ದಿನಕ್ಕೆ ಕೆಲವು ತಿಂಗಳುಗಳ ಮೊದಲು, ಒಂದು ದಿನವನ್ನು ಆರಿಸಿಕೊಂಡು (ನೀವು ಇಷ್ಟಪಟ್ಟಲ್ಲಿ, ಅದನ್ನು "ನಿಶ್ಚಿತಾರ್ಥ" ಎಂದು ಕರೆದುಕೊಳ್ಳಿ, ಇಲ್ಲಿ ಹೆಸರು ಪ್ರಾಮುಖ್ಯವಲ್ಲ), ಆ ದಿನದ ನಂತರ ಮದುವೆಗೆ "ದಿನಗಳನ್ನು ಎಣಿಸುವುದನ್ನು" ಆರಂಭಿಸುವುದು ಸೂಕ್ತವಾದದ್ದು. ಇದಾದ ನಂತರ, ಈ ಹುಡುಗ ಮತ್ತು ಹುಡುಗಿ ಮದುವೆಯಾಗಲಿದ್ದಾರೆ, ಎಂದು ಎಲ್ಲಾ ನೆಂಟರಿಗೆ ಮತ್ತು ಗೆಳೆಯರಿಗೆ ಪ್ರಕಟಿಸಬೇಕು. ಈ ದಿನದಿಂದ ಮದುವೆಯ ಸಮಯ ಸಮೀಪಿಸುತ್ತಿದ್ದಂತೆ, ಇಬ್ಬರು ಸಂಗಾತಿಗಳು ಉತ್ಸಾಹಗೊಳ್ಳುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಈ ಹರ್ಷೋತ್ಸಾಹವು ಅವರು ವಿವಾಹಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುವುದಕ್ಕೆ ಅಡ್ಡಿಯಾಗಬಾರದು.
ನಿಶ್ಚಿತಾರ್ಥ ಮಾಡಿಕೊಳ್ಳುವುದರ ಪ್ರಮುಖ ಲಾಭಾಂಶ ಏನೆಂದರೆ, ವಿವಾಹವಾಗಲಿರುವ ಇಬ್ಬರಿಗೆ ಮದುವೆಗೆ ಮೊದಲು ಒಂದು ಹಂತದ ತನಕ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಅವಕಾಶ ಸಿಗುತ್ತದೆ. ಈಗ ಅವರು ಆರಾಮವಾಗಿ ಪರಸ್ಪರ ಸಂಪರ್ಕ ಇರಿಸಿಕೊಳ್ಳಬಹುದು ಮತ್ತು ಗಾಳಿ ಸುದ್ದಿಯ ಭಯವಿಲ್ಲದೇ ಭೇಟಿಯಾಗಬಹುದು. ಅದೇ ರೀತಿ ಇಬ್ಬರು ತಮ್ಮ ತಮ್ಮ ಕುಟುಂಬವನ್ನು, ಅಂದರೆ ಕುಟುಂಬದ ಸದಸ್ಯರನ್ನು ಮತ್ತು ಕುಟುಂಬದ ಹಿನ್ನೆಲೆಯನ್ನು ಸ್ವಲ್ಪ ಮಟ್ಟಿಗೆ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದು ಭಾರತದಲ್ಲಿ ಅತ್ಯಾವಶ್ಯಕ, ಏಕೆಂದರೆ ನಮ್ಮ ದೇಶದಲ್ಲಿ ಯಾವಾಗಲೂ ಮದುವೆಯಾದ ನಂತರ ಸಂಗಾತಿಯ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೆಚ್ಚುತ್ತದೆ.
ಇಬ್ಬರು ಸಂಗಾತಿಗಳಿಗೂ ನಿಶ್ಚಿತಾರ್ಥದ ಅವಧಿಯು ಹೇಗೆ ಉಪಯುಕ್ತವಾಗುತ್ತದೆ ಎಂದರೆ, ಒಂದು ವೇಳೆ ಅವರು ತಮ್ಮ ತಮ್ಮ ಪೋಷಕರೊಂದಿಗೆ ಅತಿ ಹೆಚ್ಚು ನಿಕಟವಾದ ಸಂಬಂಧವನ್ನು ಹೊಂದಿದ್ದರೆ, ಈ ಅವಧಿಯಲ್ಲಿ ಅವರು ಅದರಿಂದ ಬಿಡಿಸಿಕೊಳ್ಳಬಹುದು. ವಿವಾಹವಾದ ನಂತರವೂ ಸಹ ತಮ್ಮ ತಮ್ಮ ಪೋಷಕರನ್ನು ಪ್ರೀತಿಸುವುದು ಮತ್ತು ಅವರ ಬಗ್ಗೆ ಕಾಳಜಿ ವಹಿಸುವುದರಲ್ಲಿ ತಪ್ಪೇನೂ ಇಲ್ಲ. ನಿಜ ಹೇಳಬೇಕೆಂದರೆ, ಇದು ದೇವರ ವಾಕ್ಯದ ಆದೇಶವಾಗಿದೆ. ಆದರೆ ಅನೇಕ ವಿವಾಹಗಳು ಹಾಳಾಗುವುದಕ್ಕೆ ಕಾರಣವೇನೆಂದರೆ, ಇಬ್ಬರು ಸಂಗಾತಿಗಳು ತಮ್ಮ ನಡುವಿನ ನಿಕಟ ಸಂಬಂಧವನ್ನು ಹೆಚ್ಚಿಸಿಕೊಳ್ಳುವ ಬದಲಾಗಿ, ಅವರಿಬ್ಬರಲ್ಲಿ ಒಬ್ಬರು ಅಥವಾ ಅವರಿಬ್ಬರೂ ಸಹ ತಮ್ಮ ಪೋಷಕರನ್ನು ಹೆಚ್ಚು ಆತುಕೊಂಡಿರುವುದೇ ಆಗಿದೆ.
ಇಡೀ ಜೀವಿತವನ್ನು ತಮ್ಮ ತಂದೆತಾಯಿಯೊಂದಿಗೆ ವಾಸಿಸಿದವರು ಮತ್ತು ತಮ್ಮ ಪೋಷಕರನ್ನು ಬಿಟ್ಟು ದೂರವಿದ್ದು ಅಭ್ಯಾಸವಿಲ್ಲದವರು, ಇನ್ನಿತರರಿಗಿಂತ ಹೆಚ್ಚಾಗಿ ಇಂತಹ ನಂಟನ್ನು ಹೊಂದಿರಬಹುದು. ಆದರೆ ಸತ್ಯವೇದವು ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಳ ಸ್ಪಷ್ಟವಾಗಿ ಈ ರೀತಿ ತಿಳಿಸುತ್ತದೆ:
"ಆದುದರಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು" (ಆದಿ. 2:24).
ಇದೇ ಮೂಲನಿಯಮವು ಸ್ತ್ರೀಯರಿಗೂ ಸಹ ಅನ್ವಯಿಸುತ್ತದೆ (ಕೀರ್ತನೆಗಳು 45:10 ನೋಡಿ).
ನಿಶ್ಚಿತಾರ್ಥದ ನಂತರ, ಸಂಗಾತಿಗಳು ತಮಗೆ ಆಗಾಗ್ಗೆ ಸಿಗುವ ಭೇಟಿಯ ಅವಕಾಶಗಳಲ್ಲಿ ಪ್ರತ್ಯೇಕವಾಗಿ ಭೇಟಿಯಾಗುವುದು ಮತ್ತು ಲೈಂಗಿಕವಾಗಿ ದೇಹವನ್ನು ಮುದ್ದಿಸುವುದು ಸರಿಯೇ? ಈ ಪುಸ್ತಕದ ಎರಡನೇ ಅಧ್ಯಾಯದಲ್ಲಿ ಹೇಳಿರುವಂತ ತತ್ವಗಳನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳಬೇಕು. ನನ್ನ ಸಲಹೆ ಏನೆಂದರೆ, ಭಾರತದಲ್ಲಿ ನಿಶ್ಚಿತಾರ್ಥದ ನಂತರವೂ ಸಹ, ಅವರಿಬ್ಬರು ಒಂಟಿಯಾಗಿ ಹೊರಗೆ ಹೋಗುವುದು ಸೂಕ್ತವಾದದ್ದಲ್ಲ. ಖಂಡಿತವಾಗಿ ನೀವು ನಿಶ್ಚಿತಾರ್ಥದ ನಂತರ ಖಾಸಗಿಯಾಗಿ ಭೇಟಿ ಮಾಡುವಂತದ್ದು ಮತ್ತು ಮಾತನಾಡುವಂತದ್ದು ಸ್ವಾಭಾವಿಕವಾಗಿದೆ ಮತ್ತು ಅದು ಒಳ್ಳೆಯದೇ. ಆದರೆ ಇದು ಆ ಸಂಗಾತಿಗಳಲ್ಲಿ ಒಬ್ಬರ ಮನೆಯಲ್ಲಿ ಅಥವಾ ಇಬ್ಬರಿಗೂ ಪರಿಚಿತರಾದ ಗೆಳೆಯರ ಮನೆಯಲ್ಲಿ ನಡೆದರೆ ಉತ್ತಮ; ಅಲ್ಲಿ ಅವರಿಬ್ಬರೂ ಪ್ರತ್ಯೇಕವಾಗಿ ಕೂತುಕೊಂಡು ಮಾತನಾಡಬಹುದು. ಏಕಾಂತ ಸ್ಥಳದಲ್ಲಿ ಪ್ರತ್ಯೇಕವಾಗಿ ಭೇಟಿಯಾಗುವುದು ಗಾಳಿಸುದ್ದಿ ಹರಡುವುದಕ್ಕೆ ಅವಕಾಶ ಕೊಡುವುದು ಮಾತ್ರವಲ್ಲದೆ, ಅವರು ಲೈಂಗಿಕ ಪ್ರಲೋಭನೆಗಳಿಗೂ ದಾರಿ ಮಾಡಿದಂತೆ ಆಗುತ್ತದೆ.
ಲೈಂಗಿಕವಾಗಿ ಮುದ್ದಿಡುವುದರ ಬಗ್ಗೆ ಹೇಳುವುದಾದರೆ, ನಾನು ನಿಸ್ಸಂದೇಹವಾಗಿ ಹೇಳುವ ಮಾತು, ಅದು ತಪ್ಪು ಕಾರ್ಯವಾಗಿದೆ. ನಿಶ್ಚಿತಾರ್ಥವು, ಲೈಂಗಿಕ ಕಾರ್ಯದಲ್ಲಿ ತೊಡಗುವುದಕ್ಕೆ ಪರವಾನಗಿ ನೀಡುವ ಒಂದು ಪ್ರಮಾಣ ಪತ್ರವಲ್ಲ. ಎಲ್ಲದಕ್ಕೂ ಸರಿಯಾದ ಸಮಯ ಎನ್ನುವಂತದ್ದು ಇರುತ್ತದೆ. "ಅಪ್ಪಿಕೊಳ್ಳುವುದಕ್ಕೆ ಒಂದು ಸಮಯ, ಅಪ್ಪುವುದರಿಂದ ದೂರವಿರುವ ಸಮಯ" (ಪ್ರಸಂಗಿ 3:5). ಅಪ್ಪಿಕೊಳ್ಳುವ ಸಮಯವು ವಿವಾಹವಾದ ನಂತರ ಬರುವಂತದ್ದಾಗಿದೆ. ವಿವಾಹಕ್ಕೆ ಮೊದಲು ತಾಳ್ಮೆಯಿಂದ ಇದ್ದರೆ, ಆಗ ನಿಮ್ಮ ವಿವಾಹ ಜೀವಿತವು ಹೆಚ್ಚು ಸಂತೋಷದಿಂದ ಕೂಡಿರುತ್ತದೆ ಮತ್ತು ಅದರಲ್ಲಿ ಯಾವ ಕೊರಗುವಿಕೆಯೂ ಇರುವುದಿಲ್ಲ. ಒಂದು ಜೋಡಿಯು ವಿವಾಹಕ್ಕೆ ಮೊದಲು ಲೈಂಗಿಕ ಸ್ವಚ್ಛಂದತೆಗೆ ಮತ್ತು ದೈಹಿಕ ಮುದ್ದಾಡುವಿಕೆಗೆ ಅವಕಾಶ ನೀಡಿದರೆ, ಇದರಿಂದಾಗಿ ವೈಯಕ್ತಿಕ ಸಂಬಂಧಗಳು ಹದಗೆಡುವಂತದ್ದು, ಮಾನಸಿಕ ಒತ್ತಡಗಳು ಹೆಚ್ಚಾಗುವಂತದ್ದು, ಜೊತೆಯಾಗಿ ಮಾಡುವ ಪ್ರಾರ್ಥನೆಯು ನಿಂತುಹೋಗುವಂತದ್ದು (ಪ್ರಾರ್ಥನೆ ಬದಲಾಗಿ ಲೈಂಗಿಕ ಮುದ್ದಾಡುವಿಕೆ ಇರುತ್ತದೆ) ಮತ್ತು ವಿವಾಹಕ್ಕೆ ಮುಂಚೆಯೇ ಲೈಂಗಿಕ ಸಂಭೋಗಕ್ಕೆ ಇಳಿಯುವಂತದ್ದು, ಇವೆಲ್ಲವುಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.
ಇವೆಲ್ಲವುಗಳಿಂದ ನಿಶ್ಚಿತಾರ್ಥವು ಮುರಿದು ಬೀಳುವಂತ ಸಾಧ್ಯತೆಯೂ ಉಂಟಾಗಬಹುದು, ಎಂಬುದನ್ನು ಸಹ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಮುದ್ದಾಡುವಿಕೆಯಲ್ಲಿ ತೊಡಗಿದ್ದರೆ, ಮತ್ತು ಅದರ ನಂತರ ನಿಶ್ಚಿತಾರ್ಥವು ಮುರಿದುಹೋದರೆ, ಹುಡುಗಿಯು ಹುಡುಗನಿಗೆ ತನ್ನ ದೇಹವನ್ನು ಮುಟ್ಟಲು ಅನುಮತಿಸಿದ್ದಕ್ಕಾಗಿ ದು:ಖಿಸುತ್ತಾಳೆ. ಈ ಕಾರಣಕ್ಕಾಗಿ, ನಾನು ಎರಡನೇ ಅಧ್ಯಾಯದಲ್ಲಿ ಹೇಳಿದಂತೆ, ಒಂದು ವೇಳೆ ಹುಡುಗನು ಅನುಚಿತವಾಗಿ ಮುಂದುವರಿಯಲು ಪ್ರಯತ್ನಿಸಿದರೆ, ಹುಡುಗಿಯು ಅದಕ್ಕೆ ತಡೆ ಒಡ್ಡಬೇಕು, ಏಕೆಂದರೆ ಆಕೆಯು ಆತನಿಗಿಂತ ಹೆಚ್ಚು ನಷ್ಟ ಅನುಭವಿಸುವವಳು ಆಗಿದ್ದಾಳೆ. ಲೈಂಗಿಕ ಮುದ್ದಾಡುವಿಕೆಯನ್ನು ನಿರಾಕರಿಸಿದ್ದರ ಸಲುವಾಗಿ ಆತನನ್ನು ಕಳೆದುಕೊಳ್ಳುವ ಭಯ ಆಕೆಗೆ ಬೇಡ. ಆತನು ಮದುವೆ ಮಾಡಿಕೊಳ್ಳುವುದಕ್ಕೆ ಅರ್ಹನಾಗಿದ್ದಲ್ಲಿ, ಹೀಗೆ ತಡೆಗಟ್ಟಿದ್ದಕ್ಕಾಗಿ ಆತನು ಬೇಸರಗೊಳ್ಳುವುದಿಲ್ಲ. ಆದರೆ ಅದಕ್ಕೆ ತದ್ವಿರುದ್ಧವಾಗಿ, ಆತನು ಆಕೆಯನ್ನು ಇನ್ನೂ ಹೆಚ್ಚಾಗಿ ಗೌರವಿಸುತ್ತಾನೆ. ಆತನು ಒಂದು ವೇಳೆ ಬೇಸರ ಪಟ್ಟುಕೊಂಡರೆ, ಆತನು ಆಕೆಗೆ ಅಯೋಗ್ಯನು ಎಂಬುದಾಗಿ ಅದರಿಂದಲೇ ಪ್ರಕಟವಾಗುತ್ತದೆ.
ಕೆಲವು ನಿಶ್ಚಿತಾರ್ಥಗೊಂಡ ಜೋಡಿಗಳು, ಕೇವಲ ಸಣ್ಣ ಭಿನ್ನಾಭಿಪ್ರಾಯಗಳು ಬಂದಾಗಲೂ, ಅದು ತಮ್ಮಿಬ್ಬರ ನಡುವೆ ಹೊಂದಾಣಿಕೆ ಇಲ್ಲದಿರುವುದರ ಸೂಚನೆಯಾಗಿದೆ ಎಂದು ಯೋಚಿಸುತ್ತಾರೆ ಮತ್ತು ತಮ್ಮ ನಿಶ್ಚಿತಾರ್ಥವನ್ನು ಮುಂದುವರೆಸಬೇಕೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ; ಆದರೆ ಒಬ್ಬ ವ್ಯಕ್ತಿಯು ಬಾಳ ಸಂಗಾತಿಯೊಡನೆ ತನಗೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗುವುದಿಲ್ಲ ಎಂಬ ಯೋಚನೆಯೊಂದಿಗೆ ವಿವಾಹ ಜೀವನವನ್ನು ಪ್ರವೇಶಿಸುವುದಾದರೆ, ಆತನು ಕನಸಿನ ಲೋಕದಲ್ಲಿ ತೇಲಾಡುತ್ತಿದ್ದಾನೆ, ಮತ್ತು ವಾಸ್ತವಾಂಶಕ್ಕಿಂತ ಹೆಚ್ಚಾಗಿ ಕಟ್ಟುಕತೆಗಳನ್ನು ನಂಬಿದ್ದಾನೆ. ಒಂದು ಪರಿಪೂರ್ಣ ವೈವಾಹಿಕ ಜೀವನದಲ್ಲೂ ಕೂಡ, ಮತ್ತು ಅತ್ಯಂತ ಆತ್ಮಿಕ ದಂಪತಿಗಳಲ್ಲೂ ಸಹ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ಕೇವಲ ಇಷ್ಟನ್ನು ಹೊಂದಾಣಿಕೆ ಸರಿಯಿಲ್ಲದ ಸೂಚನೆಯೆಂದು ಹೇಳಲಾಗದು ಅಥವಾ ಅದು ಈ ವಿವಾಹ ದೇವರ ಚಿತ್ತದಲ್ಲಿ ಇಲ್ಲವೆಂಬ ಸೂಚನೆಯೂ ಸಹ ಅಲ್ಲ. ಅದು ಹಾಗಿದ್ದಲ್ಲಿ, ಎಲ್ಲಿಯೂ ಒಂದೇ ಒಂದು ವಿವಾಹವೂ ಸಹ ದೇವರ ಸಂಕಲ್ಪದಂತೆ ಇಲ್ಲವೆಂದು ಹೇಳಬಹುದು. ಸಣ್ಣ ವಿಷಯಗಳಲ್ಲೂ ಭಿನ್ನಾಭಿಪ್ರಾಯಗಳು ಇಲ್ಲದಂತ ಅಥವಾ ಯಾವಾಗಲೂ ಅಭಿಪ್ರಾಯದ ಹೊಂದಾಣಿಕೆ ಇರುವಂತ ವಿವಾಹ ಯಾವುದೆಂದರೆ, ಅದು ಸಂಗಾತಿಗಳಲ್ಲಿ ಒಬ್ಬನು/ ಒಬ್ಬಳು ಸ್ವಚಿತ್ತ ಇಲ್ಲದಿರುವ ’ರೋಬೋಟ್’ ಆಗಿದ್ದಲ್ಲಿ ಮಾತ್ರ ಸಾಧ್ಯವಿದೆ. ಹಾಗಾಗಿ ಸಣ್ಣ ಭಿನ್ನಾಭಿಪ್ರಾಯಗಳು ನಿಶ್ಚಿತಾರ್ಥವನ್ನು ಮುರಿಯುವುದಕ್ಕೆ ಕಾರಣವಾಗಲೇಬಾರದು. ಇದಕ್ಕೆ ತದ್ವಿರುದ್ಧವಾಗಿ ಇವು ಇಬ್ಬರು ವ್ಯಕ್ತಿಗಳಲ್ಲೂ ಜೀವ ಚೈತನ್ಯವಿದೆ ಎಂಬ ಒಂದು ಆರೋಗ್ಯಕರ ಸೂಚನೆಯಾಗಿದೆ; ಹಾಗಿದ್ದರೂ ಅವರಿಬ್ಬರೂ ತಮ್ಮನ್ನು ತಾವು ತಗ್ಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು ಮತ್ತು ಪರಸ್ಪರ ಕ್ಷಮಾಪಣೆಯನ್ನು ಕೇಳುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಸ್ತ್ರೀಯಂತೆಯೇ ಪುರುಷನು ಸಹ ಕ್ಷಮೆ ಕೇಳುವ ಮನಸ್ಸನ್ನು ಹೊಂದಿರಬೇಕು. ಈ ರೀತಿ ಮಾಡುವಂತದ್ದು ಪುರುಷನಿಗೆ ನಾಚಿಕೆಗೇಡೆಂದು ಭಾರತೀಯ ಸಮಾಜದಲ್ಲಿ ಪರಿಗಣಿಸಲ್ಪಟ್ಟಿದೆ - ಆದರೆ ಒಬ್ಬ ಕ್ರೈಸ್ತನಲ್ಲಿ ಇಂತಹ ಭಾವನೆ ಇರಬಾರದು. ಒಬ್ಬ ಪುರುಷನು ತನ್ನ ಹೆಂಡತಿಯ ಬಳಿ ಕ್ಷಮೆ ಕೇಳಲು ಸಿದ್ಧನಿಲ್ಲವಾದರೆ, ಆತನು ಮದುವೆಯಾಗಲೇಬಾರದು.
ನಿಶ್ಚಿತಾರ್ಥದ ಅವಧಿಯಲ್ಲಿ ಇನ್ನೂ ಇತರ ಬಾಹ್ಯ ಸಮಸ್ಯೆಗಳು ಮತ್ತು ತೊಂದರೆಗಳು ಉದ್ಭವಿಸುತ್ತವೆ; ಇವುಗಳಿಂದ ಮದುವೆಗೆ ವಿಳಂಬವಾಗಬಹುದು ಅಥವಾ ಅದು ಇಬ್ಬರು ಬಾಳಸಂಗಾತಿಗಳಲ್ಲಿ ಬಾಧೆ ಮತ್ತು ನೋವಿಗೂ ಸಹ ಕಾರಣವಾಗಬಹುದು - ಉದಾಹರಣೆಗೆ, ಪೋಷಕರು ವಿವಾಹಕ್ಕೆ ಒಪ್ಪಿಗೆ ಕೊಡಲು ನಿರಾಕರಿಸುವುದು ಅಥವಾ ಹಣಕಾಸಿನ ಸಮಸ್ಯೆಗಳು. ಇವುಗಳು ನಿರುತ್ಸಾಹಕ್ಕೆ ಮತ್ತು ಖಿನ್ನತೆಗೆ ದಾರಿ ಮಾಡಿಕೊಡಬಾರದು. ತದ್ವಿರುದ್ಧವಾಗಿ, ಅವುಗಳು ಪ್ರೀತಿಯ ಬಂಧವನ್ನು ವೃದ್ಧಿಸುತ್ತವೆ ಮತ್ತು ಭವಿಷ್ಯದ ಕುಟುಂಬದ ಅಸ್ತಿವಾರವನ್ನು ಬಲಗೊಳಿಸುತ್ತವೆ, ಎಂದು ಅರಿತುಕೊಳ್ಳಬೇಕು. ನೀವು ಎಷ್ಟು ಸಹಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ದೇವರು ಅರಿತಿರುವುದರಿಂದ, ಅವರು "ನಿಮ್ಮ ಶಕ್ತಿಯನ್ನು ಮೀರಿ ನೀವು ಬಳಲುವುದನ್ನು ಅನುಮತಿಸುವುದಿಲ್ಲ.... ಎಂದು ನಂಬಬಹುದು" (1ಕೊರಿಂಥದವರಿಗೆ 10:13 - JBP ಅನುವಾದ).
ಅವರು ತನ್ನ ಸಮಯದಲ್ಲಿ "ಕೆಂಪು ಸಮುದ್ರದ" ಮೂಲಕ (ದಾಟಲು ಅಸಾಧ್ಯವಾದ ಸಮಸ್ಯೆಗಳ ಮೂಲಕ) ಒಂದು ಮಾರ್ಗವನ್ನು ಏರ್ಪಡಿಸುತ್ತಾರೆ ಮತ್ತು ನಿಮಗಾಗಿ ಸಿದ್ದ ಮಾಡಿರುವಂತ ಸ್ಥಳಕ್ಕೆ ನಿಮ್ಮಿಬ್ಬರನ್ನು ಜಯಧ್ವನಿಯೊಂದಿಗೆ ಮುನ್ನೆಡೆಸುತ್ತಾರೆ (ವಿಮೋಚನಕಾಂಡ 14). ಹಾಗಾಗಿ ಆತನಲ್ಲಿ ಭರವಸೆ ಇಡಿರಿ ಮತ್ತು ನಿಮ್ಮ ಹೃದಯವು ಕುಂದಿಹೋಗದ ಹಾಗೆ ನೋಡಿಕೊಳ್ಳಿರಿ! ನಿಶ್ಚಿತಾರ್ಥ - ಎಷ್ಟು ಸಮಯ ಕಾಯಬೇಕು?ನಿಶ್ಚಿತಾರ್ಥದ ಅವಧಿ ಎಷ್ಟಾಗಿರಬೇಕು? ಅದಕ್ಕೆ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ, ಆದರೆ ಜೋಡಿಯು ಒಂದೇ ಊರಿನಲ್ಲಿ ಇರುವಾಗ ಮತ್ತು ಸತತವಾಗಿ ಭೇಟಿಯಾಗುತ್ತಿರುವಾಗ, ಈ ಅವಧಿ 6 ತಿಂಗಳನ್ನು ಮೀರದಿದ್ದರೆ ಒಳ್ಳೆಯದು. ಅವರು ಒಬ್ಬರನ್ನೊಬ್ಬರು ಅಗಲಿ ದೂರವಿದ್ದರೆ, ಸಾಮಾನ್ಯವಾಗಿ ಈ ಅವಧಿಯು 12 ತಿಂಗಳನ್ನು ಮೀರಬಾರದು. ಇದಕ್ಕೆ ಕಾರಣವೇನೆಂದರೆ, ನಿಶ್ಚಿತಾರ್ಥದ ನಂತರ ಇಬ್ಬರು ಸಂಗಾತಿಗಳ ಭಾವನೆಗಳು ಬಹಳ ಉತ್ತೇಜಿತವಾಗಿರುತ್ತವೆ, ಮತ್ತು ಇವುಗಳನ್ನು ಬಹಳ ಹೆಚ್ಚು ಸಮಯ ಉದ್ವಿಗ್ನ ಸ್ಥಿತಿಯಲ್ಲಿ ಇರಿಸಿದರೆ, ಅದು ಅವರನ್ನು ಉದ್ವೇಗ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿಸಬಹುದು.
ವಾಲ್ಟರ್ ಟ್ರೋಬಿಚ್ ಎಂಬ ಲೇಖಕರು ಬರೆದಿರುವ "I Loved A Young Man" ಎಂಬ ಪುಸ್ತಕದಲ್ಲಿ, ನಿಶ್ಚಿತಾರ್ಥದ ಅವಧಿಯನ್ನು ಒಂದು ಮಗುವು ತಾಯಿಯ ಗರ್ಭದಲ್ಲಿರುವ ಅವಧಿಗೆ ಹೋಲಿಸುತ್ತಾರೆ. ಅವರು ಮದುವೆಯ ದಿನವನ್ನು ಮಗುವಿನ ಜನ್ಮದಿನಕ್ಕೆ ಹೋಲಿಸುತ್ತಾರೆ ಮತ್ತು ಆಗ ಅದನ್ನು ಎಲ್ಲರೂ ನೋಡುತ್ತಾರೆ. ಆದರೆ ಮಗುವು ಜನಿಸುವುದಕ್ಕೆ ಮೊದಲು, ಅನೇಕ ತಿಂಗಳುಗಳ ಸಿದ್ಧತೆ ಮತ್ತು ಗರ್ಭದೊಳಗೆ ಬೆಳವಣಿಗೆ ಆಗುತ್ತಿರುತ್ತದೆ. ಇದು ನಿಶ್ಚಿತಾರ್ಥದ ಅವಧಿ ಹೇಗಿರಬೇಕು ಎಂಬುದಕ್ಕೆ ಒಂದು ಬಹಳ ಸುಂದರವಾದ ಚಿತ್ರಣವಾಗಿದೆ.
ಔಪಚಾರಿಕ ಅಥವಾ ಅನೌಪಚಾರಿಕ ನಿಶ್ಚಿತಾರ್ಥವು ಮದುವೆಯಾಗುವುದಕ್ಕೆ ಒಂದು ಗಂಭೀರವಾದ ಒಡಂಬಡಿಕೆಯಾಗಿದೆ ಮತ್ತು ಅದನ್ನು ಹಗುರವಾಗಿ ಪರಿಗಣಿಸಬಾರದು. ಸತ್ಯವೇದವು ಈ ರೀತಿ ಹೇಳುತ್ತದೆ, ದೇವರ ಸನ್ನಿಧಿಯಲ್ಲಿ ವಾಸಿಸುವವನು ಯಾರೆಂದರೆ, "ಅದರಿಂದ ನಷ್ಟವಾದರೂ ತಾನು ಮಾಡಿದ ಪ್ರಮಾಣದ ಮಾತನ್ನು ಉಳಿಸಿಕೊಳ್ಳುವವನು " (ಕೀರ್ತನೆಗಳು 15:4 - TLB ಭಾಷಾಂತರ).
"ತನ್ನ ವಾಗ್ದಾನಗಳನ್ನು ಕಾಪಾಡಿಕೊಳ್ಳುವವನನ್ನು ದೇವರು ಪ್ರೀತಿಸುತ್ತಾರೆ ಮತ್ತು ಕಾಪಾಡಿಕೊಳ್ಳದೇ ಇರುವವನನ್ನು ದೇವರು ದ್ವೇಷಿಸುತ್ತಾರೆ" (ಜ್ಞಾನೋಕ್ತಿಗಳು 12:22 - TLB ಭಾಷಾಂತರ).ಒಬ್ಬ ಕ್ರೈಸ್ತನ ಮಾತು ’ಹೌದು’ ಎಂದರೆ "ಹೌದು" ಮತ್ತು ’ಇಲ್ಲ’ವೆಂದರೆ "ಇಲ್ಲ"ವಾಗಿಯೂ ಇರಬೇಕು (ಮತ್ತಾಯನು 5:37; ಯಾಕೋಬನು 5:12).
ಮದುವೆಯು ಯೋಗ್ಯವಾದದ್ದೋ, ಅಲ್ಲವೋ, ಎಂಬ ಅನುಮಾನಗಳನ್ನು ಹುಟ್ಟಿಸುವಂತ ಹೊಸ ಸಂಗತಿಗಳು ಬೆಳಕಿಗೆ ಬಂದರೆ ನಿಶ್ಚಿತಾರ್ಥವನ್ನು ಮುರಿಯಬಹುದೇ? ಆ ಇನ್ನೊಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿರದಿದ್ದಲ್ಲಿ, ನೀವು ಖಂಡಿತವಾಗಿಯೂ ನಿಶ್ಚಿತಾರ್ಥವನ್ನು ತಕ್ಷಣವೇ ಮುರಿದುಕೊಳ್ಳುವುದು ಸೂಕ್ತ - ವಾಸ್ತವವಾಗಿ, ಆತ/ಆಕೆ ಹೊಸದಾಗಿ ಹುಟ್ಟಿದ ಕ್ರೈಸ್ತನು ಎಂಬುದನ್ನು ನಿಶ್ಚಿತಾರ್ಥದ ಮೊದಲೇ ಪರಿಶೀಲಿಸಬೇಕಾಗಿತ್ತು. ಒಂದು ವೇಳೆ ಇಬ್ಬರಲ್ಲಿ ಒಬ್ಬರು ಹೊಸದಾಗಿ ಹುಟ್ಟಿರದಿದ್ದಲ್ಲಿ, ಆಗ ಇಂತಹ ವಾಗ್ದಾನ ಅಥವಾ ಮಾತನ್ನು ಹಿಂತೆಗೆದುಕೊಳ್ಳುವುದರಿಂದ, ಮೇಲಿನ ವಾಕ್ಯಭಾಗದಲ್ಲಿ ತಿಳಿಸಿರುವಂತ ಆಜ್ಞೆಯನ್ನು ಮೀರಿದಂತೆ ಆಗುವುದಿಲ್ಲ, ಏಕೆಂದರೆ ಆ ಮದುವೆಯು ನಿಮಗೆ ಹಾನಿ ಮಾಡುವುದು ಮಾತ್ರವೇ ಅಲ್ಲದೆ, ಭೂಮಿಯ ಮೇಲೆ ಕರ್ತನ ಉದ್ದೇಶಕ್ಕೂ ಸಹ ಹಾನಿ ಉಂಟು ಮಾಡುತ್ತದೆ. ನಿಮಗೆ '2ಕೊರಿಂಥದವರಿಗೆ 6:14' ಈ ವಚನದಿಂದ ಮಾರ್ಗದರ್ಶನ ಸಿಗಬೇಕು.
ಒಂದು ವೇಳೆ ಆ ಇನ್ನೊಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿದ್ದಲ್ಲಿ, ಆಗ ನಿಶ್ಚಿತಾರ್ಥವನ್ನು ಮುರಿಯುವುದು ಅಥವಾ ರದ್ದುಮಾಡುವುದಕ್ಕೆ ಪರಿಗಣಿಸಬಹುದಾದ ಕೆಲವೇ ಸಂದರ್ಭಗಳು ಯಾವುವೆಂದರೆ, ಆತನು ನಿಮಗೆ ವಿಶ್ವಾಸದ್ರೋಹ ಮಾಡಿದ್ದಲ್ಲಿ, ಅಥವಾ ನಿಮ್ಮಿಬ್ಬರ ನಡುವಿನ ಹೊಂದಾಣಿಕೆಗೆ ಅಡ್ಡಿ ಮಾಡುವಂತ ಬಹಳ ಗಂಭೀರವಾದ ಮತ್ತು ಮುಂಚೆ ತಿಳಿಯದಿದ್ದಂತ ಸಂಗತಿ ತಿಳಿದುಬಂದಲ್ಲಿ ಮಾತ್ರ, ಉದಾಹರಣೆಗೆ, ಪ್ರಮುಖ ಧಾರ್ಮಿಕ ಮೂಲಸಿದ್ಧಾಂತಗಳಲ್ಲಿ ತೀವ್ರ ಭಿನ್ನಾಭಿಪ್ರಾಯಗಳು. ಒಬ್ಬ ವ್ಯಕ್ತಿಗೆ ಸುಲಭವಾಗಿ ಮಾತು ಕೊಟ್ಟು, ನಂತರ ಅಷ್ಟೇ ಬೇಗನೆ ದೇವರ ಚಿತ್ತದಲ್ಲಿ ನನಗೆ ಅನಿಶ್ಚಿತತೆ ಇದೆ ಎಂದು ಹೇಳುವಂತ ಚಪಲಚಿತ್ತದ ವಿಶ್ವಾಸಿಗಳ ನಡವಳಿಕೆಯು ದೇವರಿಗೆ ಒಪ್ಪಿಗೆಯಾಗುವುದಿಲ್ಲ. ನನಗೆ ತಿಳಿದಿರುವ ಒಂದು ನಿದರ್ಶನದಲ್ಲಿ, ಒಬ್ಬ ಯೌವನಸ್ಥನು ವಿದೇಶಕ್ಕೆ ಹೋಗುತ್ತೇನೆ ಎಂಬ ಒಂದೇ ನೆಪವನ್ನು ಮುಂದಿಟ್ಟು ನಿಶ್ಚಿತಾರ್ಥವನ್ನು ಮುರಿದನು. ಆದರೆ ಆತನು ಕೈ ಬಿಡಲ್ಪಟ್ಟಂತ ಹುಡುಗಿ ಬಹಳ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿದಳು ಮತ್ತು ಆಕೆಯನ್ನು ಬೇರೊಬ್ಬರಿಗೆ ಕೊಟ್ಟು ಮದುವೆ ಮಾಡಲು ಆಕೆಯ ಪೋಷಕರಿಗೆ ಸಾಧ್ಯವಾಗಲಿಲ್ಲ. ಇಂತಹ ನಡವಳಿಕೆ ಸ್ತ್ರಿಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಕಂಡುಬರುತ್ತದೆ. ಮಾನಸಿಕ ದೃಢತೆಯಿಲ್ಲದ ಇಂತಹ ಜನರು ಕರ್ತನಾದ ಯೇಸು ಕ್ರಿಸ್ತನ ನಾಮಕ್ಕೆ ಕಳಂಕವನ್ನು ತರುತ್ತಾರೆ. ಮಾತು ಕೊಡುವದಕ್ಕೆ ಮೊದಲು ಮನಸ್ಸಿನಲ್ಲಿ ಈ ವಿಷಯವನ್ನು ಯೋಚಿಸಿ ನೂರಕ್ಕೆ ನೂರರಷ್ಟು ನಿಶ್ಚಯಪಡಿಸಿಕೊಳ್ಳಬೇಕು. ಅನಿಶ್ಚಿತತೆ ಇದ್ದಾಗ, ಯಾವಾಗಲೂ ಕಾದಿರುವುದು ಬಹಳ ಉತ್ತಮ. ಆದರೆ ನಮ್ಮ ಚಂಚಲ ಮನಸ್ಸಿನಿಂದಾಗಿ ಮತ್ತೊಬ್ಬರ ಜೀವನ ಹಾಳಾಗಬಾರದು. "ನೀನು ಕೊಟ್ಟ ಮಾತನ್ನು ಮುರಿಯುವುದಕ್ಕಿಂತ, ಮಾತು ಕೊಡದಿರುವುದು ಎಷ್ಟೋ ಮೇಲು" (ಪ್ರಸಂಗಿ 5:5 - TLB ಅನುವಾದ)
ಮದುವೆಯಾಗಲಿರುವ ಇಬ್ಬರೂ ಪ್ರತ್ಯೇಕವಾಗಿ ತಮಗೆ ಭರವಸೆಯಿರುವ ತಮ್ಮ ಸ್ವಲಿಂಗದ ಕನಿಷ್ಟ ಒಬ್ಬ ವಿವಾಹಿತ ವಿಶ್ವಾಸಿಯಿಂದ ವಿವಾಹ ಜೀವನದ ಬಗ್ಗೆ ಸಲಹೆಯನ್ನು ಪಡೆಯುವುದು ಬಹಳ ಸೂಕ್ತವಾದದ್ದು. ಆ ಸಲಹೆಯು ಬಹಳ ಉಪಯುಕ್ತವಾದದ್ದು ಆಗಿರಬಹುದು.
ಮದುವೆಯಾಗಲಿರುವ ಇಬ್ಬರು ಸಂಗಾತಿಗಳಿಗೆ ಲೈಂಗಿಕ ಕ್ರಿಯೆ ಮತ್ತು ಸಂತಾನೋತ್ಪತ್ತಿಯ ಪ್ರಕ್ರಿಯೆಗೆ ಸಂಬಂಧಿಸಿದ ಶರೀರವಿಜ್ಞಾನದ ಸಾಮಾನ್ಯ ಮಾಹಿತಿ ಮತ್ತು ವೈವಾಹಿಕ ಜೀವನದ ಶಾರೀರಿಕ ಚಟುವಟಿಕೆಗಳ ಸಾಮಾನ್ಯ ತಿಳುವಳಿಕೆ ಇರುವುದು ಸಹ ಅವಶ್ಯವಾಗಿದೆ. ಈ ಉದ್ದೇಶದಿಂದ ಅವರಿಬ್ಬರೂ ಪ್ರತ್ಯೇಕವಾಗಿ ತಮ್ಮ ಲಿಂಗದ ಒಬ್ಬ ವಿವಾಹಿತ ವೈದ್ಯಕೀಯ ತಜ್ಞರ ಅಭಿಪ್ರಾಯವನ್ನು ಕೇಳಬೇಕು - ಈ ವೈದ್ಯರುಗಳು ಕ್ರೈಸ್ತ ವಿಶ್ವಾಸಿಗಳಾಗಿದ್ದರೆ ಉತ್ತಮ. ಕೆಲವು ವಿವಾಹಿತ ದಂಪತಿಗಳು ಲೈಂಗಿಕ ಹೊಂದಾಣಿಕೆಯಿಲ್ಲದೆ ಒದ್ದಾಡುತ್ತಾರೆ. ಸಾಮಾನ್ಯವಾಗಿ ಇದು ತಿಳುವಳಿಕೆ ಇಲ್ಲದಿರುವುದರಿಂದ ಆಗುತ್ತದೆ. ದೇಹದ ಲೈಂಗಿಕ ಪ್ರಕ್ರಿಯೆಯ ಬಗ್ಗೆ ಮತ್ತು ಶರೀರವಿಜ್ಞಾನದ ಸಾಮಾನ್ಯ ಮಾಹಿತಿಯನ್ನು ಆಂಗ್ಲಭಾಷೆಯ ಬರಹಗಾರರಾದ ಡಬ್ಲ್ಯೂ. ಮೆಲ್ವಿಲ್ ಕ್ಯಾಪ್ಪರ್ ಮತ್ತು ಹೆಚ್. ಮೋರ್ಗನ್ ವಿಲಿಯಂಸ್ (IVF) ಎಂಬವರು ಬರೆದಿರುವ ಒಂದು ಪುಸ್ತಕ, 'Towards Christian Marriage' ದಲ್ಲಿ ಕಂಡುಕೊಳ್ಳಬಹುದು.
ಇಬ್ಬರು ಸಂಗಾತಿಗಳು ತಮ್ಮ ವಿವಾಹ ಸಮಾರಂಭದ ಬಗ್ಗೆ ಒಟ್ಟಾಗಿ ಚರ್ಚಿಸಿ, ಅದರ ವಿವರಗಳನ್ನು ನಿರ್ಧರಿಸಬೇಕು. ವಿವಾಹಕ್ಕೆ ಯಾವ ರೀತಿಯ ಏರ್ಪಾಟುಗಳನ್ನು ಮಾಡಲು ತಾವು ಇಷ್ಟಪಡುತ್ತೇವೆ ಎಂದು ಅವರು ತಮ್ಮ ಪೋಷಕರಿಗೆ ಮತ್ತು ಸಭಾಪಾಲಕರಿಗೆ ತಿಳಿಸಬೇಕು. ಪ್ರತಿಯೊಬ್ಬ ವಿಶ್ವಾಸಿಯು ಒಂದು ಸರಳ ಮತ್ತು ಆಡಂಬರವಿಲ್ಲದ, ಮತ್ತು ಕ್ರಿಸ್ತನನ್ನು ಮಹಿಮೆಪಡಿಸುವಂತ ವಿವಾಹ ಸಮಾರಂಭವನ್ನು ಆರಿಸಿಕೊಳ್ಳಬೇಕು, ಮತ್ತು ಅದರಲ್ಲಿ ಯಾವುದೇ ಅನ್ಯಧರ್ಮಗಳ ಪದ್ಧತಿಗಳು ಮತ್ತು ಆಚಾರಗಳು ಇರಬಾರದು. ಆಯ್ಯೋ, ಭಾರತದಲ್ಲಿ ಅನೇಕ "ಕ್ರೈಸ್ತ ವಿವಾಹಗಳಲ್ಲಿ" ಅನ್ಯಜನರ ಅನುಚಿತ ಧಾರ್ಮಿಕ ಪದ್ಧತಿಗಳನ್ನು ನಕಲು ಮಾಡುವುದು ಕಂಡುಬರುತ್ತದೆ. ಸ್ವತಃ ಕ್ರೈಸ್ತ ವಿಶ್ವಾಸಿಗಳು ಎಷ್ಟೋ ಸಲ ಇಂತಹ ಅನುಚಿತ ಧಾರ್ಮಿಕ ಕಟ್ಟಳೆಗಳಿಗೆ ತಲೆಬಾಗುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇವೆಲ್ಲವನ್ನು ಸಮರ್ಥಿಸಿಕೊಳ್ಳಲು, ತಮ್ಮ ಪೋಷಕರನ್ನು ಮತ್ತು ಸಂಬಂಧಿಕರನ್ನು ಬೇಸರಪಡಿಸಬಾರದು, ಎಂಬ ಕುಂಟು ನೆಪವನ್ನು ಮುಂದಿರಿಸುತ್ತಾರೆ. ಅವರು ದೇವರಿಗೆ ಬೇಸರ, ದು:ಖ ಮತ್ತು ಅಗೌರವ ಉಂಟಾದರೆ ಬೇಸರಿಸುವುದಿಲ್ಲವೇನೋ, ಎಂಬಂತೆ ತೋರುತ್ತದೆ (ಅವರು ದೇವರಿಗೆ ಭಯಪಡುವುದಕ್ಕಿಂತ ಹೆಚ್ಚಾಗಿ ಸಂಬಂಧಿಕರಿಗೆ ಭಯಪಡುತ್ತಾರೆ, ಹಾಗಾಗಿ "ಸೃಷ್ಟಿಕರ್ತನಿಗಿಂತ ಹೆಚ್ಚಾಗಿ ಸೃಷ್ಟಿಯನ್ನು ಆರಾಧಿಸಿ, ಸೇವಿಸುತ್ತಾರೆ" - ’ರೋಮಾಪುರದವರಿಗೆ 1:25'). ಹೀಗೆ ಅನ್ಯ ಧಾರ್ಮಿಕ ಕಟ್ಟಳೆಗಳಿಗೆ ಅವಕಾಶ ನೀಡಿ, ಆ ಮೇಲೆ ಆ ವಿವಾಹ ಸಮಾರಂಭದಲ್ಲಿ ದೇವರು ಹಾಜರಿರುತ್ತಾರೆಂದು ನಿರೀಕ್ಷಿಸುವುದು ಹುಚ್ಚು ಕಲ್ಪನೆಯಾಗಿದೆ. ದೇವರ ವಾಕ್ಯವನ್ನು ಸೂಕ್ಷ್ಮವಾಗಿ ಪಾಲಿಸಿರಿ ಮತ್ತು ಯಾವುದೇ ಕಾರಣಕ್ಕೂ ಅದಕ್ಕೆ ವಿರುದ್ಧವಾದ ಸಂಗತಿಗಳೊಂದಿಗೆ ರಾಜಿ ಮಾಡಿಕೊಳ್ಳಬೇಡಿರಿ - ಆಗ ದೇವರು ನಿಮ್ಮನ್ನು ಸನ್ಮಾನಿಸುತ್ತಾರೆ.
ವಧೂವರರು ಒಂದು ಚಿಕ್ಕ ಸಾಕ್ಷಿಯ ಮೂಲಕ ಕ್ರಿಸ್ತನಲ್ಲಿ ತಮ್ಮ ನಂಬಿಕೆಯನ್ನು ವಿವರಿಸುವುದಕ್ಕೆ ವಿವಾಹವು ಸಮಾರಂಭವು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಈ ಅವಕಾಶವನ್ನು ಕಳಕೊಳ್ಳಬಾರದು, ಮತ್ತು ಕರ್ತನಿಗಾಗಿ ಅದರ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬೇಕು. ಇವೆಲ್ಲಾ ಸಂಗತಿಗಳನ್ನು ತಂದೆತಾಯಿಯರೊಂದಿಗೆ ಮತ್ತು ಸಭಾಪಾಲಕರೊಂದಿಗೆ ಮುಂಚಿತವಾಗಿಯೇ ಚರ್ಚಿಸಿ, ಅದರಂತೆ ವಿವಾಹದ ತಯಾರಿಯನ್ನು ಮಾಡಿಕೊಳ್ಳಬೇಕು.
ವಿವಾಹದ ನಂತರ ತಕ್ಷಣವೇ, ಅಥವಾ ಸಾಧ್ಯವಾದಷ್ಟು ಬೇಗನೆ, ದಂಪತಿಗಳು ಪ್ರತ್ಯೇಕವಾಗಿ ಕಡಿಮೆ ಪಕ್ಷ ಒಂದು ವಾರದ ಕಾಲ ಒಂದು ಪ್ರಶಾಂತ ಸ್ಥಳಕ್ಕೆ ಹೋಗುವುದು ತುಂಬಾ ಸಲಹಾರ್ಹವಾಗಿದೆ, ಏಕೆಂದರೆ ಆಗ ಅವರು ಪರಸ್ಪರ ಮತ್ತು ಕರ್ತನೊಂದಿಗೆ ಏಕಾಂತವಾಗಿ ಇರಲು ಸಾಧ್ಯವಾಗುತ್ತದೆ. ಅದನ್ನು ನೀವು "ಮಧುಚಂದ್ರ (ಹನಿಮೂನ್)" ಎಂಬುದಾಗಿ ಕರೆಯಬಹುದು ಅಥವಾ ಬೇರೆ ವಿಧವಾಗಿ ವಿವರಿಸಬಹುದು, ಆದರೆ ಇಂತಹ ಸಮಯವು ಬಹಳ ಅಮೂಲ್ಯವಾಗಿದೆ. ನಿಮ್ಮ ಪರಿಸ್ಥಿತಿಯಲ್ಲಿ ಇಂತಹ ಅವಕಾಶಕ್ಕೆ ಒಂದಲ್ಲ ಒಂದು ಅಡಚಣೆ ಉಂಟಾಗುತ್ತಿದ್ದಲ್ಲಿ, ಈ ವಿಷಯವನ್ನು ಪ್ರಾರ್ಥನೆಯ ಮೂಲಕ ಕಂಡುಕೊಳ್ಳಿರಿ, ಮತ್ತು ಆಗ ಕರ್ತನು ನಿಮಗೆ ಮಾಡುವಂತದ್ದನ್ನು ನೋಡಿ ನೀವೇ ಅಚ್ಚರಿಗೊಳ್ಳುವಿರಿ.
ಯಾವಾಗಲೂ ವಿವಾಹದ ನಂತರ ದಂಪತಿಗಳು ಪ್ರತ್ಯೇಕವಾಗಿ ಒಂದು ಮನೆಯಲ್ಲಿ ವಾಸಿಸುವುದು ಉತ್ತಮವಾದದ್ದು, ಅದು ಸಣ್ಣ ಗುಡಿಸಲು ಆಗಿದ್ದರೂ ಸರಿಯೇ. ಸಂಬಂಧಿಕರ ಜೊತೆಯಲ್ಲಿ ವಾಸಿಸುವುದರಿಂದ ಹಲವಾರು ಸಮಸ್ಯೆಗಳು ಮತ್ತು ಒತ್ತಡಗಳು ತಲೆದೋರುವ ಸಾಧ್ಯತೆಯಿದೆ. ಭಾರತದಲ್ಲಿ, ಹಣಕಾಸಿನ ಕೊರತೆಯಿಂದಾಗಿ ಅಥವಾ ಇನ್ನಿತರ ಕಾರಣಗಳಿಂದಾಗಿ, ಕೆಲವೊಮ್ಮೆ ದಂಪತಿಗಳಿಗೆ ಪ್ರತ್ಯೇಕ ಮನೆ ಮಾಡಲು ಸಾಧ್ಯವಾಗದೇ ಇರಬಹುದು. ಇಂತಹ ಜೋಡಿಗಳು ಈ ವಿಷಯವನ್ನು ಗಂಭೀರ ಪ್ರಾರ್ಥನೆಯ ವಿಷಯವಾಗಿ ಇರಿಸಿಕೊಳ್ಳಬೇಕು, ಏಕೆಂದರೆ ಪ್ರತಿಯೊಂದು ಕುಟುಂಬವು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವುದು ದೇವರ ಚಿತ್ತವಾಗಿದೆ. ಅವರಿಬ್ಬರೂ ತಮಗಾಗಿ ದೇವರು ಒಂದು ಮಾರ್ಗವನ್ನು ತೋರಿಸುತ್ತಾರೆಂದು ನಂಬಬೇಕು, ಮತ್ತು ಸಾಧ್ಯವಾದಷ್ಟು ಶೀಘ್ರವಾಗಿ ತಮ್ಮದೇ ಆದ ಮನೆಯಲ್ಲಿ ನೆಲೆಸಬೇಕು.
ಈ ಮೇಲಿನ ಭಾಗದಲ್ಲಿ ನಾವು ವಿವಾಹದ ಸಿದ್ಧತೆಯಲ್ಲಿ ಪರಿಗಣಿಸಬೇಕದ ಕೆಲವು ಮುಖ್ಯಾಂಶಗಳನ್ನು ನೋಡಿದ್ದೇವೆ. ಇವುಗಳಲ್ಲಿ ಯಾವುದನ್ನೂ ಹಗುರವಾಗಿ ಪರಿಗಣಿಸಬಾರದು. ಅಂತರಿಕ್ಷ ಯಾನದ ಒಂದು ’ರಾಕೆಟ್’ ಯಂತ್ರವು ಸಫಲವಾಗಿ ಮೇಲಕ್ಕೆ ಏರಬೇಕಾದರೆ, ಅದರ ಹಾರಾಟದ ಕ್ಷಣಕ್ಕೆ ಮೊದಲು ಸಾಕಷ್ಟು ಕಾಳಜಿ ವಹಿಸಿ ಸಿದ್ಧತೆ ಮಾಡಬೇಕಾಗುತ್ತದೆ. ಅದೇ ರೀತಿ, ಒಂದು ವಿವಾಹ ಸಮಾರಂಭವು ಸಂತೋಷಭರಿತವಾಗಿ ನಡೆಯಬೇಕಾದರೆ, ವಿವಾಹದ ದಿನಕ್ಕೆ ಬಹಳ ಮೊದಲೇ ಅದಕ್ಕೆ ಸೂಕ್ತ ಬುನಾದಿಯನ್ನು ಹಾಕಬೇಕಾಗುತ್ತದೆ.
ಲೈಂಗಿಕತೆ, ಪ್ರೀತಿ ಮತ್ತು ವಿವಾಹ - ಈ ಕ್ಷೇತ್ರಗಳಲ್ಲಿ ಒಂದು ಸಂತೋಷದ ಹೆದ್ದಾರಿಯಿದ್ದು, ನಾವು ಅದರಲ್ಲಿ ನಡೆದಾಡಬೇಕೆಂದು ದೇವರು ಬಯಸುತ್ತಾರೆ. ಆದರೆ ಅನೇಕರು ದುಃಖದ ಚರಂಡಿಯಲ್ಲಿ ನಡೆಯಲು ಇಷ್ಟಪಡುವುದು ಕಂಡುಬರುತ್ತದೆ!
ಈ ವಿಷಯಗಳಿಗೆ ಸಂಬಂಧಿಸಿದ ಅಂಶಗಳು ಈಗಾಗಲೇ ಸ್ಪಷ್ಟವಾಗಿ ತೋರಿಸಲ್ಪಟ್ಟಿವೆ. ಈಗ ನಾವು ಈ ಕುರಿತಾಗಿ ಆಯ್ಕೆಯನ್ನು ಮಾಡಿಕೊಳ್ಳಬೇಕಾಗಿದೆ. ನಮ್ಮಲ್ಲಿ ಪ್ರತಿಯೊಬ್ಬರೂ ಏಕಾಂಗಿಯಾಗಿ ಅವನ/ಅವಳ ಹೃದಯದ ರಹಸ್ಯ ಕ್ಷೇತ್ರದ ಕುರಿತು ದೇವರ ಮುಂದೆ ಮಾತ್ರ ನಿಂತುಕೊಳ್ಳಬೇಕು. ನಿಮ್ಮ ಹೃದಯದಲ್ಲಿ ಮಾಡುವ ತೀರ್ಮಾನವನ್ನು ನಿಮ್ಮನ್ನು ಮತ್ತು ದೇವರನ್ನು ಹೊರತುಪಡಿಸಿ ಯಾರೊಬ್ಬರೂ ಅರಿಯಲಾರರು. ಆದರೆ ನಿಮ್ಮ ಜೀವನದ ಸಫಲತೆ ಮತ್ತು ಅದು ಪಡೆಯುವ ಆಶೀರ್ವಾದ ಎಷ್ಟೆಂಬುದು ಆ ತೀರ್ಮಾನಗಳನ್ನು ಆತುಕೊಂಡಿದೆ. ನಾವು ದೇವರ ಈ ಹೆದ್ದಾರಿಯಲ್ಲಿ ನಡೆಯಬೇಕಾದರೆ, ಅದಕ್ಕೆ ಒಂದು ಬೆಲೆಯನ್ನು ಪಾವತಿಸಬೇಕು - ಪ್ರತಿಯೊಂದು ಹೆಜ್ಜೆಯಲ್ಲೂ ದೇವರಿಗೆ ವಿಧೇಯರಾಗುವಂಥದ್ದು - ಯಾಕೆಂದರೆ ಸಂತೋಷದ ಹೆದ್ದಾರಿಯು ಪವಿತ್ರತೆಯ ಹೆದ್ದಾರಿಯೂ ಕೂಡ ಆಗಿದೆ (ಯೆಶಾಯನು 35:8,10 ಈ ವಚನಗಳನ್ನು ಹೋಲಿಸಿ ನೋಡಿರಿ).
ಈ ಹೆದ್ದಾರಿಯ ಎರಡು ಬದಿಗಳಲ್ಲೂ ದೇವರು ಬೇಲಿಗಳನ್ನು ನಿರ್ಮಿಸಿದ್ದಾರೆ, ಮತ್ತು ಸತ್ಯವೇದವು "ಬೇಲಿಗಳನ್ನು ಮುರಿದು ಮುಂದೆ ಹೋಗುವವರನ್ನು ಹಾವು ಕಡಿಯುವುದು" ಎಂದು ಎಚ್ಚರಿಸುತ್ತದೆ (ಪ್ರಸಂಗಿ 10:8). ಏದೆನ್ ತೋಟದಲ್ಲೂ ಸಹ, ದೇವರು ಒಂದು ನಿಷೇಧಿಸಲ್ಪಟ್ಟ ಮರಕ್ಕೆ ಬೇಲಿಯನ್ನು ಹಾಕಿದ್ದರು. ಆದರೆ ಸೈತಾನನು ಹವ್ವಳಿಗೆ ಆ ಮರದ ಹಣ್ಣು ನೋಡುವುದಕ್ಕೆ ಎಷ್ಟು ರಮ್ಯವಾಗಿದೆಯೆಂದು ತೋರಿಸಿ, ಆ ಹಣ್ಣನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿ, ಅದನ್ನು ತಿನ್ನುವುದರಿಂದ ಆಕೆಗೆ ಯಾವ ದುಷ್ಪರಿಣಾಮಗಳೂ ಉಂಟಾಗುವುದಿಲ್ಲವೆಂದು ಭರವಸೆ ಕೊಟ್ಟನು. ಈ ರೀತಿಯಾಗಿ ಆಕೆಯು ಬೇಲಿಯನ್ನು ಮುರಿದು ಹೋಗುವಂತೆ ವಂಚಿಸಲ್ಪಟ್ಟಳು ಮತ್ತು ಕೂಡಲೇ ಪುರಾತನ ಸರ್ಪವಾದ ಸೈತಾನನಿಂದ ಕಚ್ಚಲ್ಪಟ್ಟಳು.
ದೇವರಿಂದ ಬೇಲಿ ಹಾಕಲ್ಪಟ್ಟು ನಿಷೇಧಿಸಲಾಗಿರುವ ಕ್ಷೇತ್ರಗಳಾದ ಲೈಂಗಿಕತೆ, ಪ್ರೀತಿ ಮತ್ತು ವಿವಾಹ, ಇವುಗಳನ್ನು ಸತ್ಯವೇದದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ - ಮತ್ತು ಈ ಪುಸ್ತಕದಲ್ಲಿ ಇದನ್ನು ಸರಳವಾಗಿ ತೋರಿಸಲಾಗಿದೆ. ಆದಾಗ್ಯೂ, ಸೈತಾನನು ಕೋಟ್ಯಾಂತರ ಯೌವನಸ್ಥರನ್ನು (ಜೊತೆಗೆ ಹಿರಿಯರನ್ನೂ ಕೂಡ) ದೇವರ ಹೆದ್ದಾರಿಯನ್ನು ಬಿಟ್ಟು, ದೇವರು ನಿರ್ಮಿಸಿರುವ ಆ ಬೇಲಿಯನ್ನು ಕೆಡವಿ, ದೇವರು ನಿಷೇಧಿಸಿದ ಸಂಗತಿಯಲ್ಲಿ ಪಾಲ್ಗೊಳ್ಳುವಂತೆ ಸೆಳೆಯುವುದರಲ್ಲಿ ಸಫಲನಾಗಿದ್ದಾನೆ. ಸೈತಾನನ ಈ ಕಚ್ಚುವಿಕೆಯು ನಮ್ಮ ಮೊದಲ ತಂದೆ-ತಾಯಿಯರ ಕಾಲದಲ್ಲಿ ಇದ್ದ ಹಾಗೆಯೇ ಈ ದಿನವೂ ಪ್ರಾಣಕ್ಕೆ ಅಪಾಯಕರವಾಗಿದೆ ಎಂಬುದನ್ನು ಈ ಜನರು ಕಂಡುಕೊಳ್ಳುವಷ್ಟರಲ್ಲಿ ಕಾಲ ಮೀರಿ ಹೋಗಿರುತ್ತದೆ.
ನಮ್ಮ ಭದ್ರತೆಯು ದೇವರ ವಾಕ್ಯವನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವುದರಲ್ಲಿದೆ - ಅಂದರೆ, ಸ್ವತಃ ದೇವರೇ ನಿರ್ಮಿಸಿದ ಬೇಲಿಗಳ ಪರಿಮಿತಿಯನ್ನು ದಾಟದೇ ಇರುವುದರಲ್ಲಿ. ಆ ಬೇಲಿಗಳನ್ನು ದಾಟಿ ಹೋಗಿ, "ನಂತರ ನೀವು ವೇದನೆಯಿಂದಲೂ ಅವಮಾನದಿಂದಲೂ ನರಳುತ್ತಾ .... ’ಅಯ್ಯೋ, ನಾನು ಮೊದಲೇ ಕಿವಿಗೊಟ್ಟು ಕೇಳಿದ್ದರೆ, ಮತ್ತು ನನ್ನ ಇಷ್ಟದಂತೆ ಮಾಡುತ್ತೇನೆಂದು ಪಟ್ಟುಹಿಡಿದಿರದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಅಯ್ಯೋ, ನಾನು ಮೊದಲೇ ಸಲಹೆಯನ್ನು ಯಾಕೆ ತೆಗೆದುಕೊಳ್ಳಲಿಲ್ಲ? ನಾನು ಯಾಕೆ ಅಷ್ಟೊಂದು ಮೂರ್ಖನಾಗಿದ್ದೆ? ಈಗ ನಾನು ಎಲ್ಲರ ಮುಂದೆ ಅವಮಾನಕ್ಕೆ ಈಡಾಗುವೆನಲ್ಲಾ!’" ಎಂದು ಹೇಳುವ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಿರಿ (ಜ್ಞಾನೋಕ್ತಿಗಳು 5:11-14 - TLB ಅನುವಾದ).
ನಾವು "ದೇವರನ್ನು ಅಲಕ್ಷ್ಯಮಾಡಿ ತಪ್ಪಿಸಿಕೊಳ್ಳಲು ಎಂದಿಗೂ ಆಗದು" (ಗಲಾತ್ಯದವರಿಗೆ 6:7 - TLB ಅನುವಾದ).
ಇನ್ನೊಂದೆಡೆ, ಕಾನಾ ಊರಿನ ಮದುವೆಯು, ದೇವರನ್ನು ಸನ್ಮಾನಿಸುವುದರ ಮೂಲಕ ಬರುವಂತ ಆಶೀರ್ವಾದದ ಒಂದು ಸಂಕ್ಷಿಪ್ತ ನೋಟವನ್ನು ನಮಗೆ ನೀಡುತ್ತದೆ (ಯೋಹಾನನು 2:1-11). ಇಲ್ಲಿ ಗಮನಾರ್ಹವಾದ ಸಂಗತಿಯೆಂದರೆ, ಯೇಸುವು ತನ್ನ ಮಹಿಮೆಯನ್ನು ಮೊದಲ ಬಾರಿಗೆ ಪ್ರಕಟಪಡಿಸಲು ನಿರ್ಧರಿಸಿದ್ದು ಒಂದು ಮದುವೆಯ ಸಂದರ್ಭದಲ್ಲಿ ಆಗಿತ್ತು. ಇಂದಿಗೂ ಸಹ, ಯೇಸುವು ತನ್ನ ಮಹಿಮೆಯನ್ನು ಪ್ರತಿಯೊಂದು ಮದುವೆಯ ಸಮಾರಂಭದಲ್ಲಿ ಮತ್ತು ಪ್ರತಿಯೊಂದು ವಿವಾಹಿತ ಜೀವನದಲ್ಲಿ ಸ್ಪಷ್ಟವಾಗಿ ತೋರಿಸಲು ಬಯಸುತ್ತಾರೆ. ಲೈಂಗಿಕತೆ, ಪ್ರೀತಿ ಮತ್ತು ಮದುವೆ ಇವುಗಳು ಆತನು ನಮಗೆ ನೀಡಿರುವ ಅತ್ಯಮೂಲ್ಯ ಕೊಡುಗೆಗಳಲ್ಲಿ ಸೇರಿವೆ ಮತ್ತು ಇವುಗಳ ಮೂಲಕ ಆತನು ತನ್ನ ಮಹಿಮೆಯನ್ನು ನಮಗೆ ತೋರಿಸುವುದಲ್ಲದೆ ನಮ್ಮ ಮೂಲಕ ಇತರರಿಗೂ ಕೂಡ ತೋರಿಸಿಕೊಡುತ್ತಾನೆ - ಆದರೆ ನಾವು ಆತನಿಗೆ ಅವಕಾಶ ಕೊಟ್ಟರೆ ಮಾತ್ರ ಇದು ಸಾಧ್ಯವಾಗುತ್ತದೆ.
ಕಾನಾ ಊರಿನ ಮದುವೆಯಲ್ಲಿ ಉಂಟಾದ ದ್ರಾಕ್ಷಾರಸದ ಕೊರತೆಯು ಸೂಚಿಸುವುದೇನೆಂದರೆ, ಪ್ರತಿಯೊಂದು ವಿವಾಹಿತ ಜೀವಿತದಲ್ಲಿ ಸಮಸ್ಯೆಗಳು ಮತ್ತು ಕೊರತೆಗಳು ಎದ್ದೇಳುತ್ತವೆ, ಎಂಬುದನ್ನು. ಅಂತಿಮವಾಗಿ ಈ ಸಮಸ್ಯೆಗಳು ಇಬ್ಬರು ದಂಪತಿಗಳನ್ನೂ ನಿರಂತರ ಹತಾಶೆ ಮತ್ತು ನಿರಾಶೆಗೆ ನಡೆಸಬಹುದು. ಆದರೆ ಒಂದು ಮದುವೆಯ ಜೀವಿತದಲ್ಲಿ ಯೇಸುವಿಗೆ ಅಗ್ರಸ್ಥಾನವನ್ನು ಕೊಟ್ಟಾಗ, ಕಾನಾ ಊರಿನಲ್ಲಿ ಆದಂತೆ, ಯೇಸುವು ಸಮಸ್ಯೆಗಳನ್ನು ಬಹು ಬೇಗನೆ ಪರಿಹರಿಸಿ, ಅವಶ್ಯಕತೆಗಳನ್ನು ಪೂರೈಸುತ್ತಾನೆ.
ಕ್ರಿಸ್ತನನ್ನು ಕುಟುಂಬಕ್ಕೆ ಒಬ್ಬ ಅತಿಥಿಯಾಗಿ ಆಹ್ವಾನಿಸಿದರೆ ಸಾಲದು; ಆತನು ಕುಟುಂಬದ ಮುಖ್ಯಸ್ಥನಾಗಿರಬೇಕು. ಗೋಡೆಯ ಮೇಲೆ, "ಈ ಮನೆಗೆ ಕ್ರಿಸ್ತನೇ ಒಡೆಯನು" ಎಂದು ಸಾರುವ ಒಂದು ಫಲಕವನ್ನು ತೂಗುಹಾಕಿದ್ದರೂ, ಅಲ್ಲಿ ವಾಸ್ತವವಾಗಿ ಗಂಡನೇ (ಅಥವಾ ಹೆಂಡತಿಯೇ!) ನಿಜವಾದ ಯಜಮಾನರಾಗಿದ್ದರೆ, ಅದು ಕೇವಲ ಒಂದು ಅಪಹಾಸ್ಯದ ಸಂಗತಿಯಾಗುತ್ತದೆ. ಆದರೆ ಕ್ರಿಸ್ತನನ್ನು ಯಥಾರ್ಥವಾಗಿ ಕುಟುಂಬದ ಶಿರಸ್ಸು ಮತ್ತು ಕರ್ತನು ಎಂದು ಒಪ್ಪಿಕೊಂಡಿರುವ ಮನೆಯಲ್ಲಿ, ಯೇಸುವು ತನ್ನ ಮಹಿಮೆಯನ್ನು ಎರಡು ಸಾವಿರ ವರ್ಷಗಳ ಹಿಂದೆ ಕಾನಾದಲ್ಲಿ ತೋರಿಸಿಕೊಟ್ಟಷ್ಟೇ ಸ್ಪಷ್ಟವಾಗಿ ತೋರಿಸುತ್ತಾನೆ (ಯೋಹಾನನು 2:11).
ಮರಿಯಳು ಕಾನಾ ಊರಿನ ಆ ಸೇವಕರಿಗೆ,"ಆತನು ನಿಮಗೆ ಏನು ಹೇಳುತ್ತಾನೋ ಹಾಗೆಯೇ ಮಾಡಿರಿ,"ಎಂದು ಸಲಹೆಯನ್ನು ಕೊಟ್ಟಳು (ವಚನ 5). ಅವರು ಆ ಸಲಹೆಯನ್ನು ಸ್ವೀಕರಿಸಿದರು ಮತ್ತು ತಕ್ಷಣವೇ ಯೇಸುವಿಗೆ ಸಂಪೂರ್ಣವಾಗಿ ವಿಧೇಯರಾದರು - ಮತ್ತು ಬಹಳ ಬೇಗನೆ ಆ ಸಮಸ್ಯೆ ಬಗೆಹರಿಯಿತು. ವಿವಾಹಿತ ದಂಪತಿಗಳು (ಮತ್ತು ಮದುವೆಗೆ ಸಿದ್ಧರಾಗುತ್ತಿರುವ ಯೌವನಸ್ಥರು) ಈ ಸಲಹೆಯನ್ನು ಇಷ್ಟೇ ಹುಮ್ಮಸ್ಸಿನಿಂದ ಸ್ವೀಕರಿಸಿ, ಕರ್ತನ ಆಜ್ಞೆಗಳಿಗೆ ಅದೇ ರೀತಿ ತಕ್ಷಣ ಸಂಪೂರ್ಣವಾಗಿ ವಿಧೇಯರಾದರೆ, ಎಷ್ಟು ಬೇಗನೆ ಅವರ ಸಮಸ್ಯೆಗಳು ಪರಿಹಾರವಾಗಬಹುದು!
ಆ ಮದುವೆಯಲ್ಲಿ ನೀರು ದ್ರಾಕ್ಷಾರಸವಾಗಿ ಮಾರ್ಪಟ್ಟಿತು. ಆ ರುಚಿಯಿಲ್ಲದ, ಬಣ್ಣವಿಲ್ಲದ ಮತ್ತು ಸಾಧಾರಣ ವಸ್ತುವು (ನೀರು), ಆ ಒಂದೇ ಕ್ಷಣದಲ್ಲಿ ಸಿಹಿಯಾದ, ಮಿನುಗುವಂತ ಮತ್ತು ಬೆಲೆಬಾಳುವ ವಸ್ತುವಾಗಿ (ದ್ರಾಕ್ಷಾರಸ) ಬದಲಾಯಿತು. ಇದು ಏನನ್ನು ಸೂಚಿಸುತ್ತದೆ ಎಂದರೆ, ನಾವು ನಮ್ಮ ಮನೆಯ ಪೂರ್ಣ ನಿಯಂತ್ರಣವನ್ನು ಕರ್ತನಿಗೆ ಒಪ್ಪಿಸಿಕೊಟ್ಟಾಗ, ನಮ್ಮ ಮದುವೆಯ ಜೀವಿತದ ಸಾಮಾನ್ಯ ಸಂಗತಿಗಳು (ನಿತ್ಯವೂ ಮಾಡಬೇಕಾಗಿರುವ ಕಠಿಣ ಹಾಗೂ ನೀರಸ ಕಾರ್ಯಗಳೂ ಸೇರಿದಂತೆ), ಆಕರ್ಷಕ ಮತ್ತು ಉಲ್ಲಾಸಭರಿತ ಸಂಗತಿಗಳಾಗಲು ಆರಂಭವಾಗುತ್ತವೆ. ರುಚಿಕರವಲ್ಲದ್ದು ಸಿಹಿಯಾಗುತ್ತದೆ, ಮತ್ತು ಹಿಂದೆ ಕೇವಲ ಸಾಧಾರಣವೆಂದು ಕಡೆಗಣಿಸಲ್ಪಟ್ಟ ವಿಷಯಗಳು ಅತ್ಯಂತ ಅಮೂಲ್ಯ ವಿಷಯಗಳಾಗಿ ಕಂಡುಬರುತ್ತವೆ.
ಆ ಒಂದು ಮಹತ್ಕಾರ್ಯದ ಫಲವಾಗಿ, ಅನೇಕ ಜನರ ಅವಶ್ಯಕತೆಗಳು ಕೂಡ ಪೂರೈಸಲ್ಪಟ್ಟವು. ಒಂದು ಕ್ರೈಸ್ತ ವಿವಾಹವು ಇಬ್ಬರು ಸಂಗಾತಿಗಳನ್ನು ಮಾತ್ರ ಸಂತೋಷಗೊಳಿಸಿದರೆ, ಅದರ ಉದ್ದೇಶವು ಪೂರೈಸಲೇ ಇಲ್ಲ. ದೇವರ ಉದ್ದೇಶವೇನೆಂದರೆ, ಮದುವೆಯಾದ ದಂಪತಿಗಳ ಪಾತ್ರೆಯು "ನಿರಂತರವಾಗಿ ತುಂಬಿ ಹೊರಸೂಸಬೇಕು", ಎಂಬುದಾಗಿದೆ (ಕೀರ್ತನೆಗಳು 23:5).ಅವರ ಮೂಲಕ ಅನೇಕರು - ವಾಸ್ತವವಾಗಿ ಅವರನ್ನು ಸಂಧಿಸುವ ಪ್ರತಿಯೊಬ್ಬರೂ - ಆಶೀರ್ವಾದಕ್ಕೆ ಪಾತ್ರರಾಗಬೇಕು. ದೇವರು ಒಮ್ಮೆ ತನ್ನ ವಿಧೇಯ ಸೇವಕನಿಗೆ ಹೀಗೆ ಹೇಳಿದರು, "ನಾನು ನಿನ್ನನ್ನು ಅಶೀರ್ವದಿಸುವೆನು .... ಮತ್ತು ನೀನು ಇತರರಿಗೆ ಒಳ್ಳೆಯದನ್ನು ಮಾಡುವುದರ ಮೂಲಕ ಆಶೀರ್ವಾದ ನಿಧಿಯಾಗುವಿ.... (ಇದಲ್ಲದೆ) ನಿನ್ನ ನಿಮಿತ್ತವಾಗಿ ಭೂಲೋಕದ ಎಲ್ಲಾ ಕುಟುಂಬಗಳೂ, ಜನಾಂಗಗಳೂ ಆಶೀರ್ವಾದವನ್ನು ಹೊಂದುವರು"(ಆದಿಕಾಂಡ 12:2,3).’ಗಲಾತ್ಯದವರಿಗೆ 3:13'ರ ಪ್ರಕಾರ, ದೇವರ ಈ ಆಶೀರ್ವಾದವು ನಮಗೂ ಸಹ ಅನ್ವಯಿಸುತ್ತದೆ. ಮದುವೆಯಲ್ಲಿ ಈ ಶ್ರೇಷ್ಠವಾದ ಉದ್ದೇಶಕ್ಕಿಂತ ಹೆಚ್ಚಿನದ್ದು ಇನ್ನೇನಾದರೂ ಇದೆಯೇ? ಆದರೆ ನಾವು ಇತರರಿಗೆ ಎಷ್ಟು ಪ್ರಮಾಣದಲ್ಲಿ ಆಶೀರ್ವಾದವಾಗುತ್ತೇವೆ ಎಂಬುದು ನಾವು ನಮ್ಮ ದೈನಂದಿನ ಜೀವಿತದಲ್ಲಿ ದೇವರಿಗೆ ಎಷ್ಟು ವಿಧೇಯರಾಗಿದ್ದೇವೆ ಎಂಬುದರ ಮೇಲೆ ಆತುಕೊಂಡಿದೆ. ಕರ್ತನು ಅಬ್ರಹಾಮನಿಗೆ ಹೇಳಿದ ಮಾತು, "ನೀನು ನನ್ನ ಮಾತನ್ನು ಕೇಳಿ ಅದಕ್ಕೆ ವಿಧೇಯನಾದದ್ದರಿಂದ, ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು"(ಆದಿಕಾಂಡ 22:18).
ಕಾನಾ ಊರಿನ ಈ ಮಹತ್ಕಾರ್ಯವು ಲೈಂಗಿಕತೆ, ಪ್ರೀತಿ ಮತ್ತು ಮದುವೆಗೆ ಸಂಬಂಧಿಸಿದ ಸಂಗತಿಗಳಲ್ಲಿ ದೊಡ್ಡ ತಪ್ಪು ಮಾಡಿ ತಮ್ಮ ಪರಿಸ್ಥಿತಿಯನ್ನು ಕೆಡಿಸಿಕೊಂಡಿರುವ ಜನರಿಗೆ ಒಂದು ನಿರೀಕ್ಷೆಯ ಸಂದೇಶವನ್ನು ಸಹ ನೀಡುತ್ತದೆ. ಕಾನಾ ಊರಿನಲ್ಲಿ ದ್ರಾಕ್ಷಾರಸದ ಕೊರತೆಯಾದಾಗ, ಅವರು ಕರ್ತನ ಕಡೆಗೆ ತಿರುಗಿಕೊಂಡರು ಮತ್ತು ಆತನು ಅವರನ್ನು ಕೈಬಿಡಲಿಲ್ಲ. ನೀವು ಸಹ ನಿಮ್ಮ ಕೊರತೆಯ ಸಮಯದಲ್ಲಿ - ನಿಮ್ಮ ತಪ್ಪುಗಳು ಎಷ್ಟೇ ದೊಡ್ಡದಾಗಿದ್ದರೂ - ಆತನ ಕಡೆಗೆ ತಿರುಗಿಕೊಂಡರೆ, ಆತನು ನಿಮ್ಮನ್ನು ಕೈಬಿಡುವುದಿಲ್ಲ. ನೀವು ನಿಮ್ಮ ಅವಶ್ಯಕತೆಯ ಬಗ್ಗೆ ಯಥಾರ್ಥರಾಗಿ ಇರಬೇಕೆಂದು (ಆ ಕಾನಾ ಊರಿನವರು ಯಥಾರ್ಥರಾಗಿದ್ದಂತೆಯೇ) ಮತ್ತು ನಿಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕೆಂದು ಮಾತ್ರ ಆತನು ನಿರೀಕ್ಷಿಸುತ್ತಾನೆ. ನೀನು ನಿನ್ನ ಮೂರ್ಖತನದಿಂದ ಆ ಹುಡುಗಿಯೊಂದಿಗೆ (ಅಥವಾ ಆ ಹುಡುಗನೊಂದಿಗೆ) ವಿಷಯಗಳು ಮಿತಿ ಮೀರುವಂತೆ ನಡೆದುಕೊಂಡಿದ್ದೀಯಾ? ಪ್ರೀತಿಯ ವಿಷಯದಲ್ಲಿ ನೀನು ದೊಡ್ಡ ತಪ್ಪನ್ನು ಮಾಡಿದ್ದೀಯಾ - ಒಂದು ವೇಳೆ ನಿನ್ನ ಅಜ್ಞಾನದಿಂದ ಹೀಗೆ ಮಾಡಿರಬಹುದು. ಇದರ ಫಲವಾಗಿ ಈಗ ನೀನು ಮುಜುಗರ ಮತ್ತು ಹತಾಶೆಗೆ ಒಳಗಾಗಿದ್ದೀಯಾ? ಇತರರು ನಿನ್ನನ್ನು ಅಪಾರ್ಥ ಮಾಡಿಕೊಂಡು ದೂಷಿಸುತ್ತಿದ್ದಾರಾ - ಅಥವಾ ಅಪನಿಂದೆಗೆ ಒಳಪಡಿಸಿದ್ದಾರಾ? ಹಾಗಿದ್ದರೆ ಕೂಡಲೇ ಕರ್ತನ ಕಡೆಗೆ ತಿರುಗಿಕೋ, ಒಂದು ಕ್ಷಣವೂ ತಡ ಮಾಡಬೇಡ. ಆತನು ಪಾಪಿಗಳ ಸ್ನೇಹಿತನಾಗಿದ್ದಾನೆ. ಆತನು ನಿನ್ನ ಪಾಪವನ್ನು ಕ್ಷಮಿಸುವುದಕ್ಕೆ ಮಾತ್ರವಲ್ಲದೆ, ಸೈತಾನನು ನಿನ್ನ ಜೀವನದಲ್ಲಿ ಉಂಟುಮಾಡಿದ ಅವ್ಯವಸ್ಥೆಯನ್ನು ಸಹ ಸರಿಪಡಿಸಿ ಶುದ್ಧೀಕರಿಸಲು ಕಾಯುತ್ತಿದ್ದಾನೆ. ಆತನು ಈ ಎರಡು ಉದ್ದೇಶಗಳನ್ನು ಸಾಧಿಸಲಿಕ್ಕಾಗಿಯೇ ಈ ಲೋಕಕ್ಕೆ ಬಂದನು (1ಯೋಹಾನನು 3:5,8).ನೀನು ನಿರಾಶೆಗೆ ಅವಕಾಶ ನೀಡಬೇಡ, ಯಾಕೆಂದರೆ ನಿನಗೂ ಕೂಡ ನಿರೀಕ್ಷೆಯಿದೆ. ಕರ್ತನು ಕಾನಾ ಊರಿನ ಆ ಮದುವೆಯಲ್ಲಿ ಕೊರತೆಯನ್ನು ನೀಗಿಸಿ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದನು, ಮತ್ತು ನಿನ್ನ ಜೀವನದಲ್ಲೂ ಆತನು ಪ್ರತಿಯೊಂದು ಕೊರತೆಯನ್ನು ನೀಗಿಸುವುದಲ್ಲದೆ, ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಲು ಶಕ್ತನಾಗಿದ್ದಾನೆ. ಕರ್ತನು ಕಾನಾದಲ್ಲಿ ತನ್ನ ಮಹಿಮೆಯನ್ನು ಪ್ರದರ್ಶಿಸಿದನು, ಮತ್ತು ಆತನು ನಿನ್ನ ವಿಷಯದಲ್ಲೂ ಇದನ್ನೇ ಮಾಡಬಲ್ಲನು.
ಒಂದು ವೇಳೆ ನೀವು ನಿರಾಶೆಗೆ ಗುರಿಯಾಗಿದ್ದರೆ, ಕ್ರೈಸ್ತ ಜೀವಿತದಲ್ಲಿ ನಿಜವಾದ ಧನ್ಯತೆ ಬರುವುದು ತ್ಯಾಗ ಮಾಡುವುದರಿಂದಲೇ ಹೊರತು ಪಡೆಯುವುದರಿಂದ ಅಲ್ಲ, ಎಂಬ ಸತ್ಯಾಂಶದಿಂದ ನೀವು ಧೈರ್ಯ ಹೊಂದಿರಿ (’ಅಪೋಸ್ತಲರ ಕೃತ್ಯಗಳು 20:35').ಎಲ್ಲಾ ಕಾರ್ಯಗಳು ನಿಮ್ಮ ಒಳ್ಳೆಯದಕ್ಕಾಗಿ ನಡೆಯುವಂತೆ ಮಾಡಲು ದೇವರು ಶಕ್ತರಾಗಿದ್ದಾರೆ ಮತ್ತು ಆಶೆಗಳು ನೆರವೇರದಿದ್ದಾಗಲೂ ಅವರು ನಿಮಗೆ ಸಹಾಯ ನೀಡಿ, ನೀವು ಹೇರಳವಾದ ಜೀವನದ ಮೂಲಕ ದೇವರನ್ನು ಮಹಿಮೆಗೊಳಿಸುವಂತೆ ಮಾಡುವರು.
ಲೈಂಗಿಕತೆ, ಪ್ರೀತಿ ಹಾಗೂ ಮದುವೆಯ ಕ್ಷೇತ್ರಗಳಲ್ಲಿ ದೇವರನ್ನು ಮಹಿಮೆಪಡಿಸುವುದನ್ನು ನಿಮ್ಮ ಗುರಿಯಾಗಿ ಇರಿಸಿಕೊಳ್ಳಿರಿ, ಮತ್ತು ಆಗ ನೀವು ಈ ಕ್ಷೇತ್ರಗಳಲ್ಲಿ ಆತನ ಪರಿಪೂರ್ಣ ಚಿತ್ತವನ್ನು ಕಳಕೊಳ್ಳುವಿರೋ, ಎಂದು ಭಯಪಡುವ ಅವಶ್ಯಕತೆ ಇರುವುದಿಲ್ಲ. ಅವರು ಖಚಿತವಾಗಿ ನಿಮ್ಮನ್ನು ಆ ಹೆದ್ದಾರಿಯ ಮೂಲಕ ನಡೆಸುತ್ತಾರೆ; ಅಲ್ಲಿ ಯಾವುದೇ ಸಿಂಹ ಅಥವಾ ಕ್ರೂರ ಮೃಗವೂ ಎದುರಾಗುವುದಿಲ್ಲ, ಆದರೆ ಇದಕ್ಕೆ ಬದಲಾಗಿ ಅಲ್ಲಿ ಹೆಚ್ಚು ಹೆಚ್ಚಿನ ದೇವರ ಮಹಿಮೆಯು ಹೊಳೆಯುತ್ತಿರುತ್ತದೆ - ಪ್ರಕಾಶಮಾನ ಮತ್ತು ಮೋಡವಿಲ್ಲದ ಶುಭ್ರ ವಾತಾವರಣ - ನೀವು ಅದರಲ್ಲಿ ಜೀವನದ ಪ್ರಯಾಣದ ಅಂತ್ಯದ ವರೆಗೂ ಸಾಗಬಹುದು. ನೀವು ಜೀವಮಾನವೆಲ್ಲಾ ಈ ಪರಲೋಕದ ಹೆದ್ದಾರಿಯಲ್ಲಿ ನಡೆದಾಡಿರಿ. ಆಮೆನ್.
('O Perfect Love' - ಈ ಹಾಡಿನ ಧ್ವನಿಯಲ್ಲಿ ಹಾಡಬಹುದು)
ಕರ್ತನಾದ ಯೇಸು ಕ್ರಿಸ್ತನೇ, ನಾವು ಪೂರ್ತಿಯಾಗಿ ಸಮರ್ಪಿಸಿಕೊಂಡು ನಿನಗೆ ತಲೆಬಾಗುತ್ತೇವೆ,
ಯಾಕೆಂದರೆ ನೀನು ನಮ್ಮನ್ನು ಕಲ್ವಾರಿಯಲ್ಲಿ ಕೊಂಡುಕೊಂಡಿದ್ದೀ;
ಈಗ ನಾವು ನಿನ್ನವರು, ಎಂದೆಂದಿಗೂ ನಿನ್ನವರು ಮಾತ್ರವೇ,
ಮತ್ತು ನೀನು ನಿತ್ಯತ್ವಕ್ಕೂ ನಮ್ಮ ಪಾಲಾಗಿರುವೀ
.ನಾವು ಕೇಳುವುದಕ್ಕಿಂತಲೂ ಮತ್ತು ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚಾಗಿ,
ನಮ್ಮ ಜೀವಿತದ ಮೇಲೆ ನಿಮ್ಮ ಆಶೀರ್ವಾದಗಳಿವೆ, ಪ್ರಿಯ ಕರ್ತನೇ;
ನಮ್ಮನ್ನು ಪ್ರೀತಿಯ ನಿತ್ಯತ್ವದ ಬಂಧದಲ್ಲಿ ಕಟ್ಟಿರುವುದಕ್ಕಾಗಿ,
ನಮ್ಮ ಹೃದಯಗಳು ಕೃತಜ್ಞತೆಯಿಂದ ಸ್ತೋತ್ರದ ಹಾಡನ್ನು ಮೊಳಗುತ್ತಿವೆ.
ನಮ್ಮ ಬಲಹೀನತೆಯ ಅರಿವು ನಮಗಿದ್ದರೂ,
ನಾವು ಬಡವರು ಮತ್ತು ದುರ್ಬಲರೆಂದು ಚೆನ್ನಾಗಿ ತಿಳಿದಿದ್ದರೂ,
ಸರ್ವಶಕ್ತನಾದ ನಿಮ್ಮ ಮಹಾ ಪರಾಕ್ರಮವು ನಮ್ಮ ಬಲವಾಗಿರುವಾಗ,
ನಾವು ಎಂದಿಗೂ ವಿಫಲರಾಗೆವು ಎಂದು ತಿಳಿದು, ನಾವು ನಿಮ್ಮನ್ನು ಸೇವಿಸುವೆವು.
ನಾವು ನಿಮ್ಮ ಸಂಕಟದಲ್ಲಿ ಪಾಲುಗಾರರಾಗಬೇಕು;
ನಿಮ್ಮ ಶಿಲುಬೆಯಲ್ಲಿ ಮಾತ್ರ ನಾವು ಹೆಮ್ಮೆಪಡುತ್ತೇವೆ;
ನಿಮ್ಮನ್ನು ತೃಪ್ತಿಪಡಿಸುವುದೊಂದೇ ನಮ್ಮ ಆಸೆಯಾಗಿದೆ;
ಇದಕ್ಕಾಗಿ ನಾವು ಎಲ್ಲಾ ಲೌಕಿಕ ಲಾಭವನ್ನೂ ನಷ್ಟವೆಂದು ಎಣಿಸುತ್ತೇವೆ.
ಈ ಲೋಕವು ನಿಂದೆ ಮತ್ತು ತಿರಸ್ಕಾರಗಳನ್ನು ನಮ್ಮ ಮೇಲೆ ಸುರಿಸಬಹುದು;
ನಮ್ಮ ಹಾದಿಯಲ್ಲಿ ದುಃಖ, ಶೋಧನೆಗಳು ಎದುರಾಗಬಹುದು;
ಆದಾಗ್ಯೂ, ನಾವು ನಿಮ್ಮ ಜೊತೆಯಲ್ಲೇ ನಡೆಯುತ್ತೇವೆ, ಕರ್ತನಾದ ಯೇಸುವೇ,
ಆಗಲೂ ನಾವು ದಿನದಿನವೂ ನಿಮ್ಮನ್ನು ಹೆಚ್ಚು ಹೆಚ್ಚಾಗಿ ಪ್ರೀತಿಸುತ್ತೇವೆ
.ಪ್ರತಿದಿನ ನಾವು ಜನರ ದುಃಖಗಳು, ಅವರ ಹೊರೆಗಳು ಮತ್ತು ಅವರ ಕಣ್ಣೀರಿನಲ್ಲಿ ಭಾಗಿಗಳಾಗಿ,
ಅವರಿಗೆ ಸಹಾಯ ಮಾಡುವ ಸಂತೋಷವನ್ನು ನಮಗೆ ಕೊಡು;
ಓ! ಕರ್ತನೇ, ಪಾಪಗಳು ಮತ್ತು ಭಯಗಳಿಂದ ಅವರು ಮುಕ್ತರಾಗುವಂತೆ,
ಅವರ ದೃಷ್ಟಿಯನ್ನು ಕಲ್ವಾರಿಯ ಕಡೆಗೆ ತಿರುಗಿಸಲು ನಮಗೆ ಸಹಾಯಿಸು.
ಕರ್ತನೇ, ನಿನ್ನ ಆತ್ಮನ ಮಹಾಶಕ್ತಿಯಿಂದ ನಮ್ಮನ್ನು ತುಂಬಿಸು;
ನಾವು ಭೇಟಿಯಾಗುವ ಪ್ರತಿಯೊಬ್ಬರನ್ನೂ ನಾವು ಆಶೀರ್ವದಿಸುವಂತೆ ಮಾಡು;
ಓ! ನಿನ್ನ ಜೀವಿತವು ನಮ್ಮಿಂದ ನದಿಯಂತೆ ಹರಿಯಲಿ,
ಮತ್ತು ಎಲ್ಲೆಡೆಯೂ ನಿನ್ನ ಸ್ವಾದಿಷ್ಟ ಸವಿರುಚಿಯನ್ನು ಹರಡಿಸಲು ನಮಗೆ ಸಹಾಯಿಸು!
ನಾವು ಎಂದೆಂದಿಗೂ ನಿನ್ನ ಚಿತ್ತವನ್ನೇ ಮಾಡಲು ಹಂಬಲಿಸುತ್ತೇವೆ,
ಕರ್ತನೇ, ಸದಾಕಾಲವೂ ನಿನಗಾಗಿಯೇ ಜೀವಿಸಬೇಕೆಂದು ನಮ್ಮ ಬಯಕೆಯಾಗಿದೆ;
ಮುಂದೆ ಒಂದು ಸಂತೋಷದ ದಿನದಂದು ನಾವು ನಿನ್ನೊಡನೆ ವೈಭವದಲ್ಲಿ ರಾಜ್ಯವಾಳುತ್ತೇವೆ,
ಮತ್ತು ನಿತ್ಯತ್ವಕ್ಕೂ ನಿನ್ನ ಮಹಿಮೆಯಲ್ಲಿ ಭಾಗಿಗಳಾಗುತ್ತೇವೆ.
- ಝ್ಯಾಕ್ ಮತ್ತು ಆನ್ನಿ ಪೂನನ್