ಸಮೂಹ, ಸಂಘ ಮತ್ತು ಸಭೆ

ಬರೆದಿರುವವರು :   Santosh Poonen ಭಾಗಗಳು :   ಸಭೆ ಧಾರ್ಮಿಕತೆಯೋ? ಆತ್ಮಿಕತೆಯೋ!
    Download Formats:

ಅಧ್ಯಾಯ 1
ಹೊಸ ದ್ರಾಕ್ಷಾರಸಕ್ಕೆ ಹೊಸ ಬುದ್ದಲಿ ಅವಶ್ಯವಿದೆ

ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಯಲ್ಲಿ ಹಾಕಬೇಕು"(ಲೂಕ 5:38).

ಈ ಚಿಕ್ಕ ಪುಸ್ತಕದ ಮೂಲಕ ಹಿಂದಿನ ಹಲವಾರು ವರ್ಷಗಳಲ್ಲಿ ನನ್ನ ಜೀವಿತದಲ್ಲಿ ಕರ್ತನು ಮಾಡುತ್ತಿರುವ ಕಾರ್ಯದ ಬಗ್ಗೆ ನಾನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನನಗೆ ಈ ಜೀವನ ಶೈಲಿಯು ಬಹಳ ಅಮೂಲ್ಯವಾಗಿ ಪರಿಣಮಿಸಿದೆ, ಏಕೆಂದರೆ ನಿತ್ಯತ್ವದಲ್ಲಿ ಬೆಲೆ ಬಾಳುವ ಪ್ರತಿಯೊಂದು ಸಂಗತಿಯ ಹಾಗೆ, ನನ್ನ ಈ ಅನುಭವವೂ ತ್ಯಾಗದ ಮೂಲಕ ಉಂಟಾಗಿದೆ.

ನಾವು ಕ್ರಿಸ್ತನ ಬೋಧನೆ ಮತ್ತು ಜೀವನವನ್ನು ತಿಳಿಯಲು ಯಥಾರ್ಥವಾಗಿ ಪ್ರಯತ್ನ ಮಾಡಿದಾಗ, ಇದು ನಮ್ಮನ್ನು ಒಂದು ಶಿಲುಬೆಯ ಬಳಿ ನಡೆಸುತ್ತದೆ - ಈ ಶಿಲುಬೆಯು ನಮಗೆ ಬಹು ಅಮೂಲ್ಯವಾದ ಕೆಲವು ಸಂಗತಿಗಳನ್ನು ನಾವು ಕೈಬಿಡುವಂತೆಯೂ ಮತ್ತು ಹಲವಾರು ಕ್ಷೇತ್ರಗಳಲ್ಲಿ ತ್ಯಾಗ ಮಾಡುವಂತೆಯೂ ನಮ್ಮನ್ನು ನಡೆಸುವಂಥದ್ದಾಗಿದೆ. ನಾವು ಹಾಗೆ ಮಾಡಿದಾಗ, ಕರ್ತನು ನಮಗೆ ಏನನ್ನು ಕಲಿಸಲು ಇಚ್ಛಿಸುತ್ತಾನೋ, ಆ ಕಾರ್ಯಗಳು ನಮ್ಮ ಜೀವನದಲ್ಲಿ ಕೈಗೂಡುತ್ತವೆ - ಮತ್ತು ನಮ್ಮ ಜೀವಿತಕ್ಕಾಗಿ ದೇವರು ಸಂಕಲ್ಪಿಸಿರುವ ಸಂಪೂರ್ಣ ಯೋಜನೆಯನ್ನು ನಾವು ಪೂರೈಸುತ್ತೇವೆ.

ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುವುದನ್ನು ದೇವರು ನನಗೆ ಅತ್ಯಮೂಲ್ಯ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಆದರೆ, ಇದಕ್ಕಿರುವ ಹಾದಿಯು ಬಹಳ, ಬಹಳ ಇಕ್ಕಟ್ಟಾದದ್ದು.

ಒಂದೇ ಒಂದು ಸಂಗತಿ ಅವಶ್ಯವಾಗಿದೆ

ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲೇ ಹಾಕಿಡುವಂತೆ ಯೇಸು ಹೇಳಿದರು. ಆ ಹೊಸ ದ್ರಾಕ್ಷಾರಸವೇನೆಂದರೆ ಆತನ ಜೀವವಾಗಿದ್ದು, ಆತನು ನಮಗೆ ಪವಿತ್ರಾತ್ಮನ ಮೂಲಕವಾಗಿ ಆ ಜೀವವನ್ನು ಕೊಡಲು ಬಯಸುತ್ತಾನೆ. ಹೊಸ ಬುದ್ದಲಿಯು ಆತನು ನಮ್ಮ ಮೂಲಕ ಕಟ್ಟಲು ಬಯಸುವ ಹೊಸ ಒಡಂಬಡಿಕೆಯ ಸಭೆಯಾಗಿದ್ದು, ಆತನ ಜೀವವು ಇದರಲ್ಲೇ ತೋರಿಬರಬೇಕಾಗಿದೆ.

(ಬುದ್ದಲಿ - ದ್ರಾಕ್ಷಾರಸವನ್ನು ಹಾಕಿಡುವ ಚೀಲ)

ನಾವು ಯಥಾರ್ಥವಾಗಿ ಈ ಹೊಸ ಒಡಂಬಡಿಕೆಯ ಜೀವಿತವನ್ನು ಜೀವಿಸಲು ಬಯಸುವುದಾದರೆ, ನಮ್ಮ ಜೀವನದಲ್ಲಿ ಸ್ವಾರ್ಥದ ಅನೇಕ ಪದರಗಳನ್ನು (ಈರುಳ್ಳಿಯ ಪದರಗಳಂತೆ) ಸುಲಿಯಬೇಕಾದ ಅವಶ್ಯಕತೆಯನ್ನು ನಾವು ಕಂಡುಕೊಳ್ಳುತ್ತೇವೆ, ಮತ್ತು ದೇವರು ಅವುಗಳನ್ನು ನಮಗೆ ಸ್ವಲ್ಪ ಸ್ವಲ್ಪವಾಗಿ ಗೋಚರ ಪಡಿಸುತ್ತಾನೆ. ನಾವು ಹೊಸ ಒಡಂಬಡಿಕೆಯ ಒಂದು ಸಭೆಯನ್ನು ಕಟ್ಟಲು ಪ್ರಯತ್ನಿಸುವಾಗಲೂ, ಇದೇ ತರಹದ ಅನುಭವವನ್ನು ಕಾಣುತ್ತೇವೆ.

ಹಳೆ ಬುದ್ದಲಿಯು , ದೇವರ ವಾಕ್ಯದ ಮೇಲೆ ಕಟ್ಟಲ್ಪಡದೆ, ಮಾನವ ಸಂಪ್ರದಾಯಗಳ ಮೇಲೆ ಕಟ್ಟಲ್ಪಟ್ಟಂತಹ ಒಂದು ಸಭೆಯಾಗಿದೆ. ಇದು ಕೂಡ ಅನೇಕ ಪದರಗಳನ್ನು ಹೊಂದಿದೆ. ಕರ್ತನು ನಮಗೆ ಆ ಪದರಗಳನ್ನು ಒಂದೊಂದಾಗಿ ತೋರಿಸಿದಂತೆ, ನಾವು ಅವುಗಳನ್ನು ಸುಲಿದು ಹಾಕಬೇಕು. ದುರಾದೃಷ್ಟವಶಾತ್‍, ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟಲು ಬಯಸುವ ಅನೇಕ ಕ್ರೈಳಸ್ತರು ಹಳೇ ಬುದ್ದಲಿಯ ಅನೇಕ ಪದರಗಳನ್ನು ಇನ್ನೂ ಸುಲಿಯಬೇಕಾದ ಅವಶ್ಯವಿದ್ದರೂ, ಅದನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಡುತ್ತಾರೆ. ಅವರು ತಮಗೆ ಸ್ಪಷ್ಟವಾಗಿ ತೋರುವ, ಮತ್ತು ತಾವು ಬಾಲ್ಯದಿಂದ ನೋಡಿರುವ ಕೆಲವು ಮಾನವ ಆಚರಣೆಗಳು ಹಾಗೂ ಧಾರ್ಮಿಕ ಪಂಗಡಗಳ ಆಚರಣೆಗಳನ್ನು ಮಾತ್ರ ಕಳಚಿಹಾಕಿದ್ದಾರೆ. ಆದರೆ ನಾವು ಆ ಹಳೆಯ ಬುದ್ದಲಿಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕೆಂದು ಕರ್ತನು ಬಯಸುತ್ತಾನೆ. ಆತನು ತನ್ನ ಹೊಸ ದ್ರಾಕ್ಷಾರಸವು ಸಂಪೂರ್ಣವಾಗಿ ಹೊಸದಾದ ಒಂದು ಬುದ್ದಲಿಯಲ್ಲೇ ಇರಬೇಕೆಂದು ಬಯಸುತ್ತಾನೆ.

ನಾನು ಹಲವಾರು ವರ್ಷಗಳ ವರೆಗೆ, ಹೊಸ ದ್ರಾಕ್ಷಾರಸ ಮತ್ತು ಹೊಸ ಬುದ್ದಲಿಯ ಬಗ್ಗೆ ಬೋಧನೆಯನ್ನು ಕೇಳಿ ತಿಳಿದಿದ್ದೆ ಮತ್ತು - ತಾತ್ವಿಕವಾಗಿ - ಹೇಗೆ ಕ್ರಿಸ್ತನ ದೇಹವಾದ ಸಭೆಯನ್ನು ಕಟ್ಟುವುದು ಎಂಬುದರ ಬಗ್ಗೆಯೂ ತಿಳುವಳಿಕೆಯನ್ನು ಹೊಂದಿದ್ದೆ. ಆದರೆ ಇವೆಲ್ಲವೂ ಕೇವಲ ತಲೆಯಲ್ಲಿ ತುಂಬಲ್ಪಟ್ಟ ಜ್ಞಾನವಾಗಿತ್ತಷ್ಟೇ; ನಾನು ಈ ವಿಷಯದ ಬಗ್ಗೆ ಇತರರಿಗಿಂತ ಹೆಚ್ಚಾಗಿ ಅನೇಕ ಪ್ರಸಂಗಗಳನ್ನು ಕೇಳಿ ತಿಳಿದಿದ್ದೆ, ಅಷ್ಟೇ. ನಾನು ಬೆಳೆಯುತ್ತಿದ್ದಾಗ, ಪ್ರತಿ ಭಾನುವಾರವೂ ಹೊಸ ಒಡಂಬಡಿಕೆಯ ಬಗ್ಗೆ ನನ್ನ ತಂದೆಯವರು ಕೊಡುತ್ತಿದ್ದ ಪ್ರಸಂಗಗಳನ್ನು ಕೇಳಿಸಿಕೊಂಡೆ. ಅದಲ್ಲದೆ ಸೋಮವಾರದಿಂದ ಶನಿವಾರದ ವರೆಗೆ, ಮನೆಯಲ್ಲೂ ನಾನು ಈ ವಿಷಯದ ಬಗ್ಗೆ ನನ್ನ ತಂದೆಯಿಂದ ಕೇಳಿಸಿಕೊಂಡೆ. ಆದಾಗ್ಯೂ ಇವೆಲ್ಲವೂ ನನ್ನ ತಲೆಯಲ್ಲಿ ಮಾತ್ರ ಇದ್ದವು. ಆ ಸತ್ಯಗಳು ನನ್ನ ತಲೆಯಿಂದ ಹೃದಯಕ್ಕೆ ಇಳಿಯಲು ಅನೇಕ ವರ್ಷಗಳೇ ಬೇಕಾದವು. ಅದು ಯಾವಾಗ ನಡೆಯಿತು ಎಂದರೆ, ಕರ್ತನ ಸೇವೆ ಮಾಡಲು ನನಗಿರುವ ಮಾರ್ಗ ಇದೊಂದೇ ಎಂಬ ಸತ್ಯವನ್ನು ಕೊನೆಗೆ ನಾನು ಅರಿತುಕೊಂಡಾಗ.

ಈಗ ಯೇಸುವು ನನ್ನ ಜೀವನದಲ್ಲಿ ಇರುವ ಒಬ್ಬನೇ ವ್ಯಕ್ತಿಯಾಗಿದ್ದಾನೆ. ಕರ್ತನೊಂದಿಗೆ ನನಗಿರುವ ಸಂಬಂಧದ ಮೂಲಕ ಇತರ ಎಲ್ಲಾ ಸಂಬಂಧಗಳೂ ಬರುತ್ತವೆ. ಹಾಗಾಗಿ ಈಗ, ಸಭೆಯನ್ನು ’ಕ್ರಿಸ್ತನ ದೇಹ’ವಾಗಿ ಕಟ್ಟುವುದೇ ನಾನು ಕರ್ತನ ಸೇವೆಯಲ್ಲಿ ಮಾಡುವ ಏಕೈಕ ಕಾರ್ಯವಾಗಿದೆ.

ಕರ್ತನಾದ ಯೇಸುವು ತನ್ನ ಇಹಲೋಕ ಜೀವಿತದ ಪ್ರತಿಯೊಂದು ದಿನವೂ ಶಿಲುಬೆಯ ಮಾರ್ಗವನ್ನು ಏಕೆ ಆರಿಸಿಕೊಂಡರು? ಅದು ಏಕೆಂದರೆ, " ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ," ಎಂಬುದಾಗಿ ಸತ್ಯವೇದ ತಿಳಿಸುತ್ತದೆ (ಇಬ್ರಿಯ 12:2).

ಆತನ ಮುಂದೆ ಯಾವ ಸಂತೋಷ ಇಡಲ್ಪಟ್ಟಿತ್ತು?

ಯೋಹಾನ 14 ರಲ್ಲಿ , ಯೇಸುವು ಶಿಲುಬೆಗೆ ಹೋಗುವ ಮುಂಚೆ ತನ್ನ ಶಿಷ್ಯರಿಗೆ ಹೇಳಿದ ಕೊನೆಯ ಮಾತುಗಳನ್ನು ನಾವು ಓದುತ್ತೇವೆ. ಯೇಸುವಿನ ಕೊನೆಯ ಊಟದ ಸಂದರ್ಭದಲ್ಲಿ, ಆತನ ಈ ಕೊನೆಯ ಮಾತುಗಳನ್ನು ನಮಗೆ ತಿಳಿಸಲಿಕ್ಕಾಗಿ ಅಪೊಸ್ತಲನಾದ ಯೋಹಾನನು ಐದು ಅಧ್ಯಾಯಗಳನ್ನು ತೆಗೆದುಕೊಂಡದ್ದಕ್ಕಾಗಿ ನಾನು ಅವನನ್ನು ಬಹಳವಾಗಿ ಪ್ರಶಂಸಿಸುತ್ತೇನೆ. ಅಲ್ಲಿ ಯೇಸು ಹೇಳಿದ್ದು, " ಏಳಿರಿ, ಇಲ್ಲಿಂದ ಹೋಗೋಣ" (ಯೋಹಾನ 14:31). ಆತನು ತನ್ನ ಶಿಲುಬೆಗೆ ಏರಿಸಲ್ಪಡಲು ಹೋಗುತ್ತಿದ್ದನು. ಆದರೆ ಹೀಗೆ ಹೇಳುವದಕ್ಕೆ ಮೊದಲು ಆತನು, "ಇದರಿಂದ, ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆಂದೂ, ಆತನು ನನಗೆ ಆಜ್ಞಾಪಿಸಿದ್ದನ್ನೇ ನಾನು ಮಾಡುವೆನೆಂದೂ ಲೋಕವು ತಿಳಿಯುವುದು ," ಎಂದನು. (ಯೋಹಾನ 14:31). ಅದೇ ಆತನ ಸಂತೋಷವಾಗಿತ್ತು - ಆತನ ಉಲ್ಲಾಸಕ್ಕೆ ಕಾರಣವೇನೆಂದರೆ, ತನ್ನ ತಂದೆಗೆ ಯಾವಾಗಲೂ ಅಧೀನನಾಗಿದ್ದು, ಅದರ ನಿಮಿತ್ತವಾಗಿ ತಾನು ನಿತ್ಯತ್ವದಿಂದಲೂ ತನ್ನ ತಂದೆಯೊಂದಿಗೆ ಹೊಂದಿದ್ದ ಅನ್ಯೋನ್ಯತೆಯಲ್ಲಿ ಮುಂದುವರಿಯುವುದು. ಹೀಗೆ ಯೇಸುವು ಶಿಲುಬೆಯನ್ನು ಏರಿದ್ದು, ಮೊಟ್ಟ ಮೊದಲನೆಯದಾಗಿ ತನ್ನ ತಂದೆಗಾಗಿ ತನ್ನ ಪ್ರೀತಿಯ ನಿಮಿತ್ತವಾಗಿ ಮತ್ತು ತನ್ನ ತಂದೆಯ ಆಜ್ಞೆಗೆ ವಿಧೇಯನಾಗುವ ಉದ್ದೇಶದಿಂದ - ಅದರ ನಂತರ ನಮ್ಮ ಮೇಲಿನ ಪ್ರೀತಿಯ ನಿಮಿತ್ತವಾಗಿಯೂ ಸಹ.

ನಾನು ಇಲ್ಲಿ ಈ ಅಂಶಕ್ಕೆ ಇಷ್ಟು ಹೆಚ್ಚು ಒತ್ತು ಕೊಟ್ಟು ಹೇಳುತ್ತಿರುವದು ಏಕೆಂದರೆ, ಆತನ ಸಭೆಯನ್ನು ಕಟ್ಟುವದಕ್ಕೂ ಸಹ ಇದೊಂದೇ ಮಾರ್ಗವಾಗಿದೆ. ನಾವು ಪಾಪದ ಮೇಲೆ ಜಯ ಹೊಂದಬೇಕು ಮತ್ತು ಕರ್ತನ ಕಾರ್ಯವನ್ನು ಮಾಡಬೇಕೆಂಬ ನಮ್ಮ ಆಸೆಗಳಿಗೆ ಮೂಲಕಾರಣ, ಮೊಟ್ಟ ಮೊದಲನೆಯದಾಗಿ, ನಮಗೆ ತಂದೆಯ ಮೇಲಿರುವ ಪ್ರೀತಿಯ ನಿಮಿತ್ತವಾಗಿ ಮತ್ತು ಈ ಪ್ರೀತಿಯ ಪರಿಣಾಮವಾಗಿ ಆತನ ಆಜ್ಞೆಗಳನ್ನು ಕೈಕೊಳ್ಳುವುದರಿಂದ - ಹಾಗೂ ಎರಡನೆಯದಾಗಿ, ನಮಗೆ ಜನರ ಮೇಲೆ ಇರುವ ಪ್ರೀತಿಯ ನಿಮಿತ್ತವಾಗಿ. ನಾವು ಸಭೆಯನ್ನು ಕಟ್ಟಬೇಕಾದರೆ, ನಮಗೆ ಜನರ ಮೇಲೆ ಅನುಕಂಪ ಇರಬೇಕು. ಆದರೆ ಆ ಅನುಕಂಪಕ್ಕಿಂತ ಮೊದಲು, ನಮ್ಮಲ್ಲಿ ನಮ್ಮ ಪರಲೋಕದ ತಂದೆಯ ಮೇಲೆ ಪ್ರೀತಿಯಿರಬೇಕು - ಎಂಥಾ ಹೃದಯದಾಳದ ಪ್ರೀತಿಯೆಂದರೆ, ಆತನ ಆಜ್ಞೆಗಳಿಗೆ ವಿಧೇಯನಾಗಲು ಬಯಸುವಂಥ ಪ್ರೀತಿ.

ಇವು ಹೊಸ ಒಡಂಬಡಿಕೆಯ ಒಂದು ಸಭೆಯನ್ನು ಕಟ್ಟಲು ಅವಶ್ಯವಿರುವ ಅತಿ ಮಹತ್ವದ ಎರಡು ಅಂಶಗಳು:ತಂದೆಗಾಗಿ ನಮಗಿರುವ ಪ್ರೀತಿ ಮತ್ತು ಇತರರಿಗಾಗಿ ನಮಗಿರುವ ಪ್ರೀತಿ. ನಾವು ಇವೆರಡನ್ನು ಶಿಲುಬೆಯ ಎರಡು ಮರದ ಹಲಗೆಗಳೆಂದು ಸೂಚಿಸಬಹುದು - ನೀಟಾದ (ಲಂಬನೆಯ) ಹಲಗೆಯು ಮತ್ತು ಸಮತಲವಾಗಿರುವ (ಅಡ್ಡವಾದ) ಹಲಗೆಯು. ಇವೆರಡು ಹಲಗೆಯ ತುಂಡುಗಳಲ್ಲಿ ಕೇವಲ ಒಂದು ತುಂಡಿನಿಂದ - ನೀಟಾದದ್ದು ಅಥವಾ ಅಡ್ಡವಾದದ್ದು ಮಾತ್ರ - ನೀವು ಶಿಲುಬೆಯನ್ನು ಪಡೆಯಲು ಸಾಧ್ಯವಿಲ್ಲ.

ಹೀಗೆ ಶಿಲುಬೆಯಲ್ಲಿ, ಎರಡು ರೀತಿಯ ಸಂಬಂಧಗಳ ಒಂದು ಸುಂದರ ಚಿತ್ರಣವನ್ನು ನಾವು ನೋಡಬಹುದು. ಅದು ನಮ್ಮ ಜೀವಿತದಲ್ಲಿ ಪ್ರತಿದಿನವೂ ನಾವು ಶಿಲುಬೆಯನ್ನು ಹೊತ್ತುಕೊಂಡು ಹೇಗೆ ಸಾಗಬೇಕು ಎಂಬುದನ್ನು ತೋರಿಸಿಕೊಡುತ್ತದೆ.

ಮುಂಬರುವ ಅಧ್ಯಾಯಗಳಲ್ಲಿ, ನಮ್ಮ ಜೀವಿತದಲ್ಲಿ ಶಿಲುಬೆಯ ಈ ಎರಡೂ ತುಂಡುಗಳನ್ನು ಹೊಂದಿರುವುದು ಎಂದರೇನು ಎಂಬುದನ್ನು ಮತ್ತು ಇವೆರಡೂ ಒಂದುಗೂಡಿ ನಾವು ಹೊಸ ಒಡಂಬಡಿಕೆಯ ಸಭೆಗಳನ್ನು ಕಟ್ಟಲು ಹೇಗೆ ನೆರವಾಗುತ್ತವೆ ಎಂಬುದನ್ನು ತೋರಿಸಲು ನಾನು ಬಯಸುತ್ತೇನೆ.