ಕರ್ತನು ಮತ್ತು ಆತನ ಸಭೆಯು

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ
    Download Formats:

ಅಧ್ಯಾಯ 1
ಯೇಸು ಕ್ರಿಸ್ತನ ಪ್ರಕಟನೆ

ಕರ್ತರು ’ಪ್ರಕಟನೆಯ ಪುಸ್ತಕ’ದ ಮೊದಲ ಮೂರು ಅಧ್ಯಾಯಗಳಲ್ಲಿ ನಮಗೆ ಏನನ್ನು ಹೇಳ ಬಯಸುತ್ತಾರೆ ಎನ್ನುವದನ್ನು ನಾವು ಈ ಪುಸ್ತಕದಲ್ಲಿ ನೋಡುವವರಾಗಿದ್ದೇವೆ. ಸೈತಾನನು ಸತ್ಯವೇದದ ’ಪ್ರಕಟನೆಯ ಪುಸ್ತಕ’ವನ್ನು ದ್ವೇಷಿಸುತ್ತಾನೆ, ಏಕೆಂದರೆ ಅದು ಆತನ ಅಂತಿಮ ಸೋಲು ಮತ್ತು ಆತನಿಗಾಗಿ ನಿಯುಕ್ತವಾಗಿರುವ ಅಂತ್ಯವನ್ನು ವಿವರಿಸುತ್ತದೆ. ಸೈತಾನನು ಒಂದು ಪುಸ್ತಕವನ್ನು ದ್ವೇಷಿಸುವುದಾದರೆ, ನಮಗೆ ಅದರಲ್ಲಿ ಯಾವುದೋ ಅಮೂಲ್ಯವಾದ ಸಂಗತಿ ಅಡಗಿದೆಯೆಂದು ನಾವು ಖಂಡಿತವಾಗಿ ಹೇಳಬಹುದು!

ಪ್ರಕಟನೆಯ ಪುಸ್ತಕವು ವಿಶೇಷವಾಗಿ ಕೊನೆಯ ದಿನಗಳಲ್ಲಿ ಜಯಶಾಲಿಗಳಾಗಲು ಬಯಸುವ ಜನರಿಗಾಗಿ ಬರೆಯಲ್ಪಟ್ಟಿದೆ. ಅದರ ಮೊದಲನೇ ಅಧ್ಯಾಯದಲ್ಲಿ ಜೀವಿತನಾಗಿ ಎಬ್ಬಿಸಲ್ಪಟ್ಟ ಕರ್ತನ ಒಂದು ದರ್ಶನವನ್ನು ನಾವು ಕಾಣುತ್ತೇವೆ. ’ಪ್ರಕಟನೆ’ಯ ಮುಂದಿನ ಎರಡು ಅಧ್ಯಾಯಗಳಲ್ಲಿ, ಕರ್ತನು ಪಶ್ಚಿಮ ಆಸ್ಯ (Asia Minor) ಸೀಮೆಯಲ್ಲಿದ್ದ ಏಳು ಕ್ರೈಸ್ತ ಸಭೆಗಳ ಮೌಲ್ಯಮಾಪನ ಮಾಡುವುದನ್ನು ನಾವು ನೋಡುತ್ತೇವೆ. ಈ ಮೌಲ್ಯಮಾಪನದ ಮೂಲಕ - ನಾವು ಇದಕ್ಕೆ ಸಿದ್ಧರಾಗಿದ್ದರೆ - ನಾವು ನಮ್ಮನ್ನು ಮತ್ತು ನಮ್ಮ ಸಭೆಗಳನ್ನು ಅಳೆದು ನೋಡಬಹುದು!

ನಮ್ಮ ಜೀವನದ ಯೋಗ್ಯತೆಯನ್ನು ನಾವು ಅಂದಾಜು ಮಾಡಿದಾಗ ಅಥವಾ ಇನ್ನಿತರರು ಅಂದಾಜು ಮಾಡಿದಾಗ ಕಂಡುಬರುವ ಯೋಗ್ಯತೆ ಹಾಗೂ ದೇವರು ಮಾಡುವ ನಮ್ಮ ಮೌಲ್ಯಮಾಪನ, ಇವೆರಡರ ನಡುವೆ ಬಹಳ ವ್ಯತ್ಯಾಸ ಕಾಣಿಸಬಹುದು. ನಮ್ಮಲ್ಲಿ ಹೆಚ್ಚಿನವರ ಸ್ವಂತ ದೃಷ್ಟಿಯಲ್ಲಿ ಅವರ ಆತ್ಮಿಕ ಯೋಗ್ಯತೆಯು ನಿಜಮಟ್ಟಕ್ಕಿಂತ ಬಹಳ ಅಧಿಕವಾಗಿ ಕಂಡುಬರುತ್ತದೆ. ಈಗ ನಾವು ದೇವರು ಮಾಡುವ ನಮ್ಮ ಮೌಲ್ಯಮಾಪನವನ್ನು ಸ್ವೀಕರಿಸುವುದಾದರೆ, ಮತ್ತು ಯಥಾರ್ಥತೆಯಿಂದ ಅವರು ನಮ್ಮ ಮತ್ತು ನಮ್ಮ ಸಭೆಗಳ ಕುರಿತಾಗಿ ನಮಗೆ ತೋರಿಸುವ ಅಂಶಗಳನ್ನು ಒಪ್ಪಿಕೊಳ್ಳುವುದಾದರೆ, ಮುಂದೆ ನಾವು ನ್ಯಾಯತೀರ್ಪಿನ ಸಿಂಹಾಸನದ ಮುಂದೆ ನಿಲ್ಲುವ ದಿನದಲ್ಲಿ ಬರಲಿರುವ ಹೆಚ್ಚಿನ ದುಃಖ ಮತ್ತು ಅಸಂತೋಷಗಳನ್ನು ನಾವು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪೀಠಿಕೆ: ಏಳು ಹೇಳಿಕೆಗಳು

"ಯೇಸು ಕ್ರಿಸ್ತನ ಪ್ರಕಟನೆಯು. ಆತನು ಬೇಗನೆ ಸಂಭವಿಸ ಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವದಕ್ಕಾಗಿ, ದೇವರಿಂದ ಈ ಪ್ರಕಟನೆಯನ್ನು ಹೊಂದಿದನು; ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ, ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ಸೂಚಿಸಿದನು. "ಯೋಹಾನನು ತಾನು ಕಂಡದ್ದನ್ನೆಲ್ಲಾ ತಿಳಿಸುವವನಾಗಿ, ದೇವರ ವಾಕ್ಯದ ವಿಷಯವಾಗಿಯೂ ಯೇಸು ಕ್ರಿಸ್ತನು ಹೇಳಿದ ಸಾಕ್ಷಿಯ ವಿಷಯವಾಗಿಯೂ ಸಾಕ್ಷಿಕೊಟ್ಟನು. "ಈ ಪ್ರವಾದನಾ ವಾಕ್ಯಗಳನ್ನು ಓದುವಂಥವನೂ, ಕೇಳುವಂಥವರೂ, ಈ ಪ್ರವಾದನೆಯಲ್ಲಿ ಬರೆದಿರುವ ಮಾತುಗಳನ್ನು ಕೈಗೊಂಡು ನಡೆಯುವಂಥವರೂ ಧನ್ಯರು. ಅವು ನೆರವೇರುವ ಸಮಯವು ಸಮೀಪವಾಗಿದೆ." (ಪ್ರಕ. 1:1-3).

ಈ ಮೊದಲ ಮೂರು ವಚನಗಳಲ್ಲಿ, ಇಡೀ ’ಪ್ರಕಟನೆಯ ಪುಸ್ತಕ’ವನ್ನು ಪರಿಚಯಿಸುವ ಏಳು ಅಂಶಗಳನ್ನು ನಾವು ಕಾಣುತ್ತೇವೆ.

ಮೊದಲನೆಯದಾಗಿ, ಈ ಪುಸ್ತಕವನ್ನು ’ಪ್ರಕಟನೆ’ ಎಂದು ಹೆಸರಿಸಲಾಗಿದೆ. "ಪ್ರಕಟನೆ" ಎಂಬ ಪದವು ’ರಹಸ್ಯವನ್ನು ತಿಳಿಸುವುದು’ ಎಂಬ ಅರ್ಥವುಳ್ಳ ಒಂದು ಗ್ರೀಕ್ ಪದದ ಅನುವಾದವಾಗಿದೆ. ದೇವರೊಬ್ಬರೇ ತನ್ನ ಸತ್ಯವನ್ನು ನಮಗೆ ತೆರೆದು ತೋರಿಸಬಹುದು. ಮೊದಲು ನಾವು ಈ ವಿಷಯವನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು. ದೇವರು ತನ್ನ ವಾಕ್ಯದ ಮೂಲಕ ನಮಗೆ ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು, ನಮಗೆ ಪವಿತ್ರಾತ್ಮನ ಜ್ಞಾನ ಮತ್ತು ಪ್ರಕಟನೆ ಅವಶ್ಯವಾಗಿ ಬೇಕಾಗುತ್ತದೆ. ಅದನ್ನು ಮಾನವ ಜ್ಞಾನವು ನಿಶ್ಚಯವಾಗಿ ಗ್ರಹಿಸಲಾರದು.

ಎರಡನೆಯದಾಗಿ, ಈ ಪ್ರಕಟನೆಯು "ಆತನ (ಕ್ರಿಸ್ತನ) ದಾಸರಿಗೆ ತೋರಿಸಲ್ಪಡುವದಕ್ಕಾಗಿ" ಕೊಡಲ್ಪಟ್ಟಿತು, ಎಂದು ನಾವು ಓದುತ್ತೇವೆ. ಇದು ಎಲ್ಲಾ ಜನರಿಗಾಗಿ ಕೊಡಲ್ಪಟ್ಟಿಲ್ಲ. ಇದು ಕರ್ತನ ಅಧೀನ ದಾಸರಿಗಾಗಿ ಮೀಸಲಾದ ಪ್ರಕಟನೆಯಾಗಿದೆ. ಮಜೂರಿ ಪಡೆಯುವ ಒಬ್ಬ ’ಕೆಲಸಗಾರ’ ಮತ್ತು ಒಬ್ಬ ’ಗುಲಾಮನ’ ನಡುವೆ ಅಂತರವಿದೆ. ಒಬ್ಬ ಕೆಲಸಗಾರನು ಪಗಾರಕ್ಕಾಗಿ ದುಡಿಯುತ್ತಾನೆ. ಆದರೆ ಒಬ್ಬ ಜೀತದಾಳು ತನ್ನ ಯಜಮಾನನ ಒಬ್ಬ ಗುಲಾಮನಾಗಿದ್ದಾನೆ ಮತ್ತು ಆತನಿಗೆ ಯಾವ ಸ್ವಂತ ಹಕ್ಕುಗಳೂ ಇರುವುದಿಲ್ಲ.

ಹಾಗಾದರೆ ಕರ್ತರ ಗುಲಾಮರು ಯಾರು? ಇವರು ಎಲ್ಲಾ ಸ್ವಂತ ಯೋಜನೆಗಳು ಮತ್ತು ಅಭಿಲಾಷೆಗಳನ್ನು ಹಾಗೂ ಎಲ್ಲಾ ಹಕ್ಕುಗಳನ್ನು ಸಂತೋಷವಾಗಿ ಬಿಟ್ಟುಕೊಟ್ಟವವರು ಮತ್ತು ಈಗ ತಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ದೇವರ ಚಿತ್ತವನ್ನು ಮಾತ್ರ ಮಾಡಲು ಬಯಸುವಂಥವರು. ಇಂತಹ ವಿಶ್ವಾಸಿಗಳು ಮಾತ್ರ ನಿಜವಾದ ಜೀತದ ಗುಲಾಮರಾಗಿದ್ದಾರೆ.

ಕರ್ತನಿಗೆ ಹಲವಾರು ಸೇವಕರು ಇದ್ದಾರೆ, ಆದರೆ ಸ್ವೇಚ್ಛೆಯಿಂದ ಗುಲಾಮರಾದವರು ಕೆಲವರು ಮಾತ್ರ. ಇಂತಹ ಗುಲಾಮರು ಮಾತ್ರ ದೇವರ ವಾಕ್ಯದ ಅರ್ಥವನ್ನು ಸರಿಯಾಗಿ ತಿಳಕೊಳ್ಳುವರು. ಇತರರು ಅದನ್ನು ಪುಸ್ತಕದ ಪಾಠದಂತೆ ಬುದ್ಧಿಶಕ್ತಿಯಿಂದ ಅಭ್ಯಸಿಸಬಹುದು. ಆದರೆ ಅವರು ಅದರಲ್ಲಿ ಅಡಗಿರುವ ಆತ್ಮಿಕ ಸತ್ಯಗಳನ್ನು ಎಂದಿಗೂ ಗ್ರಹಿಸಲಾರರು. ದೇವರ ಚಿತ್ತದಂತೆ ನಡೆಯುವವರು ಮಾತ್ರ ಸತ್ಯವನ್ನು ಅರಿಯುತ್ತಾರೆ, ಎಂದು ಯೇಸುವು ಯೋಹಾನ 7:17ರಲ್ಲಿ ಸ್ಪಷ್ಟ ಪಡಿಸಿದರು.

ಮೂರನೆಯದಾಗಿ, ಈ ಪ್ರಕಟನೆಯು ಯೋಹಾನನಿಗೆ "ಸೂಚಿಸಲ್ಪಟ್ಟಿತು" (ಪ್ರಕ. 1:1), ಎಂಬುದಾಗಿ ನಾವು ನೋಡುತ್ತೇವೆ. ಇದರ ಅರ್ಥವೇನೆಂದರೆ, ಸಂಕೇತಗಳ ಮೂಲಕ ಸಂದೇಶವು ಕೊಡಲ್ಪಟ್ಟಿತು. ಮೊದಲ ಮೂರು ಅಧ್ಯಾಯಗಳಲ್ಲಿ ಮಾತ್ರ ದೀಪಸ್ತಂಭಗಳು ಮತ್ತು ನಕ್ಷತ್ರಗಳು, ತಾಮ್ರದ ಪಾದಗಳು ಮತ್ತು ಇಬ್ಬಾಯಿ ಕತ್ತಿ, ಬಚ್ಚಿಟ್ಟ ಮನ್ನ ಮತ್ತು ಬಿಳಿಯ ಕಲ್ಲು ಮುಂತಾದವುಗಳ ಬಗ್ಗೆ ನಾವು ಓದುತ್ತೇವೆ; ಇವು ಅಕ್ಷರಶಃ ಸಂಗತಿಗಳಲ್ಲ. ಆದರೆ ಇವು ಆತ್ಮಿಕ ಸತ್ಯಗಳ ಚಿಹ್ನೆಗಳಾಗಿವೆ. ಈ ಚಿಹ್ನೆಗಳು ಏನನ್ನು ಸೂಚಿಸುತ್ತವೆ ಎಂದು ತಿಳಿಯ ಬೇಕಾದರೆ, ನಾವು ದೇವರ ವಾಕ್ಯದ ವಚನಗಳನ್ನು ಒಂದಕ್ಕೆ ಇನ್ನೊಂದನ್ನು ಹೋಲಿಸಿ ನೋಡಬೇಕಾಗುತ್ತದೆ.

ನಾಲ್ಕನೆಯದಾಗಿ, ಇಲ್ಲಿ ತೆರೆದು ತೋರಿಸಲಾಗಿರುವ ಸಂಗತಿಗಳನ್ನು ಯೋಹಾನನು "ದೇವರ ವಾಕ್ಯ" ಎಂಬುದಾಗಿ ಕರೆಯುತ್ತಾನೆ (ಪ್ರಕ. 1:2). "ಈ ಪುಸ್ತಕದ ಪ್ರವಾದನೆಗಳಿಗೆ" ಬೇರೆ ಯಾವುದೋ ಮಾತುಗಳನ್ನು ಸೇರಿಸಲು, ಅಥವಾ ಅವುಗಳಿಂದ ಯಾವ ಮಾತನ್ನಾದರೂ ತೆಗೆಯಲು ಪ್ರಯತ್ನಿಸುವವರಿಗೆ ಕಠಿಣ ನ್ಯಾಯತೀರ್ಪು ಮತ್ತು ದಂಡನೆಯನ್ನು ಪ್ರಕಟಣೆ 22:18,19ರಲ್ಲಿ ಘೋಷಿಸಲಾಗಿದೆ. ಇಂತಹ ಗಂಭೀರ ಎಚ್ಚರಿಕೆಯನ್ನು ಸತ್ಯವೇದದ ಇನ್ಯಾವುದೇ ಪುಸ್ತಕದಲ್ಲಿ ನೀಡಲಾಗಿಲ್ಲ. ದೇವರ ವಾಕ್ಯದ ಪ್ರತಿಯೊಂದು ಅಂಶವು "ಉಪದೇಶಕ್ಕೂ, ಖಂಡನೆಗೂ, ತಿದ್ದುಪಾಟಿಗೂ, ನೀತಿಶಿಕ್ಷೆಗೂ" ನಮಗೆ ಉಪಯುಕ್ತವಾಗಿದೆ; ನಾವು ಅದರ ಮೂಲಕ "ಪ್ರವೀಣರಾಗಿ, ಸಕಲ ಸತ್ಕಾರ್ಯಕ್ಕೆ ಸನ್ನದ್ಧರಾಗಬಹುದು" (2 ತಿಮೊ. 3:16,17).

ಈ ಪುಸ್ತಕದಲ್ಲಿ ನಾವು ನೋಡಲಿರುವ ಪ್ರಕಟನೆಯ ಮೊದಲ ಮೂರು ಅಧ್ಯಾಯಗಳೂ ಸಹ ನಮ್ಮ ಕುಂದು ಕೊರತೆಗಳನ್ನು ನಿವಾರಿಸುವುದಕ್ಕಾಗಿ ಕೊಡಲ್ಪಟ್ಟಿವೆ. ಜೀವನದಲ್ಲಿ ನಿರ್ದೋಷಿಗಳಾಗಲು ಆಸಕ್ತರಾದವರು ಮಾತ್ರ ದೇವರ ವಾಕ್ಯದ ಯಾವುದೇ ಭಾಗದ ಅಧ್ಯಯನದಿಂದ ಹೆಚ್ಚಿನ ಪ್ರಯೋಜನವನ್ನು ಹೊಂದುತ್ತಾರೆ.

ಐದನೆಯದಾಗಿ, ಈ ಪ್ರಕಟಣೆಯು "ಯೇಸು ಕ್ರಿಸ್ತನ ಸಾಕ್ಷಿ"ಯಾಗಿದೆ (ಪ್ರಕ. 1:2). "ಯೇಸುವಿನ ವಿಷಯವಾದ ಸಾಕ್ಷಿಯೇ" ಪ್ರವಾದನೆಯ ಆತ್ಮವಾಗಿದೆ, ಎಂಬುದಾಗಿ ಪ್ರಕ. 19:10ರಲ್ಲಿ ನಮಗೆ ತಿಳಿಸಲಾಗಿದೆ. ಯಾವಾಗಲೂ ನಿಜವಾದ ಪ್ರವಾದನೆಯು ಕೇವಲ ಘಟನೆಗಳ ಕಡೆಗೆ ಗಮನ ಹರಿಸುವುದಿಲ್ಲ, ಆದರೆ ಕರ್ತನ ಕಡೆಗೆ ನಮ್ಮ ಗಮನವನ್ನು ಹರಿಸುತ್ತದೆ. ನಾವು ನಿಜವಾದ ಪ್ರವಾದನೆಯನ್ನು ಅರ್ಥ ಮಾಡಿಕೊಂಡರೆ, ಅದು ನಮ್ಮನ್ನು ಕರ್ತನ ಮುಂದೆ ತಗ್ಗಿಸುತ್ತದೆ ಮತ್ತು ನಾವು ಮುಂದಿನ ಸಂಗತಿಗಳನ್ನು ಅರಿತಿದ್ದೇವೆ ಎಂಬ ಅಹಂಕಾರವನ್ನು ನಮ್ಮಿಂದ ದೂರವಿರಿಸುತ್ತದೆ. ಮುಂದಿನ ದಿನಗಳಲ್ಲಿ ಯಾವ ಸಂಗತಿಗಳು ಯಾವಾಗ ನಡೆಯಲಿವೆ, ಎಂಬುದನ್ನು ನಾವು ಅನುಕ್ರಮವಾಗಿ ಅರ್ಥ ಮಾಡಿಕೊಳ್ಳದೇ ಇದ್ದರೂ ಸಹ, ನಾವು ಕರ್ತನನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ನಮಗೆ ಅಷ್ಟೇ ಸಾಕು!

ಪ್ರಕಟನೆಯ ಪುಸ್ತಕದ ಪುಟಗಳಲ್ಲಿ "ಸದ್ಯದಲ್ಲಿ ಸಂಭವಿಸಲಿರುವ ಸಂಗತಿಗಳು" ಪ್ರಕಟಗೊಂಡರೂ (ಪ್ರಕ. 1:1), ಇದು ಅದರ ಪ್ರಧಾನ ಉದ್ದೇಶವಲ್ಲ. ಇದನ್ನು "ಯೇಸು ಕ್ರಿಸ್ತನ ಸಾಕ್ಷಿ" ಎಂಬುದಾಗಿ ಕರೆಯಲಾಗಿದೆ. ಇದರ ಉದ್ದೇಶ ಮುಂದೆ ನಡೆಯಲಿರುವ ಘಟನೆಗಳ ಸಂಪೂರ್ಣ ವಿವರಣೆಯಲ್ಲ, ಆದರೆ ಕರ್ತನಾದ ಯೇಸುವು ಮುಂದಿನ ಘಟನೆಗಳನ್ನು ತನ್ನ ಹತೋಟಿಯಲ್ಲಿ ಇರಿಸಿದ್ದಾನೆ, ಎಂದು ತೋರಿಸುವುದು ಇದರ ಉದ್ದೇಶವಾಗಿದೆ. ಪ್ರಕಟಣೆಯ ಪುಸ್ತಕದಲ್ಲಿ ನಾವು ಪ್ರಧಾನವಾಗಿ ಕರ್ತನ ವಿಜಯದ ಕುರಿತಾಗಿ ಓದುತ್ತೇವೆ.

ಈ ಪುಸ್ತಕವನ್ನು ಓದುತ್ತಾ ನಾವು ಮುಂದೆ ಹೋಗುವಾಗ, "ನಾವು ನಮ್ಮ ದೃಷ್ಟಿಯನ್ನು ಯೇಸುವಿನ ಮೇಲೆ ಇರಿಸೋಣ."

ಆರನೆಯದಾಗಿ, ಈ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಕೈಗೊಂಡು ನಡೆಯುವಂಥವರು ಧನ್ಯರು (ಪ್ರಕ. 1:3). ಸತ್ಯವೇದದ ಈ ಕೊನೆಯ ಪುಸ್ತಕವು ನಮಗೆ ವಿಧೇಯತೆಗಾಗಿ ಕೊಡಲ್ಪಟ್ಟಿದೆ. ದೇವರ ವಾಕ್ಯದ ಯಾವುದೇ ಒಂದು ಭಾಗಕ್ಕೆ ವಿಧೇಯರಾದಾಗಲೂ ಆಶೀರ್ವಾದ ಉಂಟಾಗುತ್ತದೆ. ಆದರೆ ಈ ಪ್ರಕಟಣೆಯ ಪುಸ್ತಕವನ್ನು ಕೈಗೊಂಡು ನಡೆದವರಿಗೆ ಒಂದು ವಿಶೇಷವಾದ ಆಶೀರ್ವಾದವು ವಾಗ್ದಾನವಾಗಿ ಕೊಡಲ್ಪಟ್ಟಿದೆ.

ಒಂದು ವೇಳೆ ನಮಗೆ ಈ ಪುಸ್ತಕದ ಚಿಹ್ನೆಗಳು ಅಷ್ಟೇನೂ ಅರ್ಥವಾಗದೇ ಹೋದರೂ, ನಾವು ಓದಿರುವದನ್ನು ಪಾಲಿಸಿದರೆ ಸಾಕು. ಈ ಚಿಹ್ನೆಗಳನ್ನು ಅರ್ಥ ಮಾಡಿಕೊಂಡವರಿಗೆ ಅಥವಾ ಮುಂದಿನ ಘಟನೆಗಳನ್ನು ಸರಿಯಾಗಿ ಕ್ರಮಬದ್ಧವಾಗಿ ವಿವರಿಸ ಬಲ್ಲವರಿಗೆ ಆಶೀರ್ವಾದದ ವಾಗ್ದಾನ ಮಾಡಲಾಗಿಲ್ಲ. ದೇವರ ದೃಷ್ಟಿಯಲ್ಲಿ ಬೌದ್ಧಿಕ ಜ್ಞಾನಕ್ಕಿಂತ ವಾಕ್ಯದ ವಿಧೇಯತೆಯು ಬಹಳ ಮಿಗಿಲಾದದ್ದು. ಬೇಸರದ ಸಂಗತಿ ಏನೆಂದರೆ, ಹೆಚ್ಚಿನ ವಿಶ್ವಾಸಿಗಳು ವಿಧೇಯತೆಗಿಂತ ವಾಕ್ಯದ ಜ್ಞಾನಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ.

ನಾವು ತಿನ್ನುವ ಆಹಾರವು ದೇಹದಲ್ಲಿ ರಕ್ತ, ಮಾಂಸ ಮತ್ತು ಮೂಳೆಗಳಾಗಿ ಬದಲಾಗುವದಕ್ಕೆ, ಈ ಬದಲಾವಣೆಯ ವಿಧಾನವನ್ನು ನಾವು ಅರಿಯಬೇಕಿಲ್ಲ. ನಮ್ಮ ಜೀರ್ಣಾಂಗಗಳು ಆ ಕೆಲಸವನ್ನು ಪೂರೈಸುತ್ತವೆ. ಆತ್ಮಿಕ ಕ್ಷೇತ್ರದಲ್ಲೂ ಇದೇ ರೀತಿಯಾಗಿ ಆಗುತ್ತದೆ. ವಿಧೇಯತೆ ಇಲ್ಲದ ದೇವಜ್ಞಾನವು, ಜೀರ್ಣವಾಗದ ಆಹಾರವಾಗಿದೆ. ಅದು ಮರಣವನ್ನು ತರುತ್ತದೆ, ಜೀವವನ್ನಲ್ಲ. ದೇವಜ್ಞಾನದೊಂದಿಗೆ ವಿಧೇಯತೆ ಸೇರಿದಾಗ, ಅದು ಜೀವ ನೀಡುತ್ತದೆ.

ಏಳನೆಯದಾಗಿ, ಈ "ಪ್ರವಾದನೆಯ ವಾಕ್ಯಗಳನ್ನು ಓದುವವನಿಗೂ" ಸಹ ಒಂದು ಆಶೀರ್ವಾದದ ವಾಗ್ದಾನ ಕೊಡಲಾಗಿದೆ (ಪ್ರಕ. 1:3) - ಜನರು ಕೇಳುವಂತೆ ಪ್ರವಾದನೆಯನ್ನು ಓದಿ, ಇತರ ವಿಶ್ವಾಸಿಗಳಿಗೆ ಅದನ್ನು ಕಲಿಸುವವರಿಗೆ ಇದು ಅನ್ವಯಿಸುತ್ತದೆ. ನಾವು ನೆನಪಿರಿಸಬೇಕಾದ ವಿಷಯ, ಮೊದಲನೆಯ ಶತಮಾನದ ವಿಶ್ವಾಸಿಗಳಿಗೆ ಸ್ವಂತ ಉಪಯೋಗಕ್ಕೆ ಪ್ರಕಟನೆಯ ಪುಸ್ತಕದ ಪ್ರತಿಗಳು ಸಿಗುತ್ತಿರಲಿಲ್ಲ. ಸಂದೇಶವನ್ನು ಕೇಳುವ ಒಂದೇ ಒಂದು ವಿಧಾನ, ಸಭಾಕೂಟಗಳಲ್ಲಿ ಈ ಪುಸ್ತಕವನ್ನು ಓದಿದಾಗ ಅದನ್ನು ಆಲಿಸುವದು ಆಗಿತ್ತು. ಅದಕ್ಕಾಗಿ ಪೌಲನು ತಿಮೊಥೆಯನಿಗೆ, "ವೇದ ಪಾರಾಯಣವನ್ನೂ, ಪ್ರಸಂಗವನ್ನೂ, ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು," (1 ತಿಮೊ. 4:13) ಎಂದು ಉತ್ತೇಜಿಸಿದನು.

ಈ ದಿನ ನಾವು ಈ ಬೋಧನೆಯನ್ನು ಅನುಸರಿಸುವದು ಹೇಗೆಂದರೆ, ದೇವರ ವಾಕ್ಯದ ಮೂಲಕ ನಾವು ಪಡೆದದ್ದನ್ನು ಇತರರೊಂದಿಗೆ ಹಂಚಿಕೊಳ್ಳುವದು. ಹೀಗೆ ಮಾಡುವ ಪ್ರತಿಯೊಬ್ಬನಿಗೂ ಒಂದು ಆಶೀರ್ವಾದದ ವಾಗ್ದಾನ ಇಲ್ಲಿದೆ.

ದೇವರಿಂದ ಕೃಪೆ ಮತ್ತು ಸಮಾಧಾನ

"ಆಸ್ಯಸೀಮೆಯಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನಂದರೆ - ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿ ಇರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ನಂಬತಕ್ಕ ಸಾಕ್ಷಿಯೂ, ಸತ್ತವರೊಳಗಿಂದ ಮೊದಲು ಎದ್ದು ಬಂದವನೂ, ಭೂರಾಜರ ಒಡೆಯನೂ ಆಗಿರುವ ಯೇಸು ಕ್ರಿಸ್ತನಿಂದ, ನಿಮಗೆ ಕೃಪೆಯೂ ಶಾಂತಿಯೂ ಆಗಲಿ. "ನಮ್ಮನ್ನು ಪ್ರೀತಿಸುವವನೂ, ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನೂ, ನಮ್ಮನ್ನು ರಾಜ್ಯವನ್ನಾಗಿಯೂ, ತನ್ನ ತಂದೆಯಾದ ದೇವರಿಗೆ ಯಾಜಕರನ್ನಾಗಿಯೂ ಮಾಡಿದವನೂ ಆಗಿರುವಾತನಿಗೆ, ಯುಗ ಯುಗಾಂತರಗಳಲ್ಲಿಯೂ ಘನ ಮಹತ್ವಗಳಿರಲಿ, ಆಮೆನ್. "ಇಗೋ ಮೇಘಗಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು; ಭೂಮಿಯಲ್ಲಿರುವ ಎಲ್ಲಾ ಕುಲದವರು ಆತನನ್ನು ನೋಡಿ ಎದೆ ಬಡುಕೊಳ್ಳುವರು. ಹೌದು, ಹಾಗೆಯೇ ಆಗುವದು, ಆಮೆನ್. "ನಾನು ಆದಿಯೂ ಅಂತ್ಯವೂ, ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿ ಇರುವಾತನೂ, ಸರ್ವಶಕ್ತನೂ ಆಗಿದ್ದೇನೆ, ಎಂದು ದೇವರಾದ ಕರ್ತನು ಹೇಳುತ್ತಾನೆ." (ಪ್ರಕ. 1:4-8).

ದೇವರ ದಾಸರಿಗೆ ದೇವರ ಕೃಪೆಯೂ, ಸಮಾಧಾನವೂ ಉಂಟಾಗಲಿ, ಎಂಬ ಪ್ರಾರ್ಥನೆಯೊಂದಿಗೆ ಯೋಹಾನನು ಆರಂಭಿಸುತ್ತಾನೆ.

"ಕೃಪೆ" ಎಂದರೆ "ನಮ್ಮ ಪ್ರಸ್ತುತ ಕಾಲದ ಅವಶ್ಯಕತೆಗೆ ತಕ್ಕಂತೆ ಕೊಡಲ್ಪಡುವ ದೇವರ ಸಹಾಯ". ನಮಗೆ ಕ್ಷಮಾಪಣೆ ಅವಶ್ಯವಿದ್ದಾಗ, ಕೃಪೆ ನಮ್ಮನ್ನು ಕ್ಷಮಿಸಬಲ್ಲದು. ನಮಗೆ ಪಾಪವನ್ನು ಜಯಿಸಲು ಬಲವು ಬೇಕಾದಾಗ, ಕೃಪೆಯು ನಮಗೆ ಬಲವನ್ನು ಒದಗಿಸುತ್ತದೆ. ಶೋಧನೆಯ ಕಾಲದಲ್ಲಿ ನಂಬಿಗಸ್ತರಾಗಿರಲು ಸಹಾಯ ಅವಶ್ಯವಿದ್ದಾಗ, ಕೃಪೆಯು ಅವಶ್ಯವಾದ ಸಹಾಯವನ್ನು ಕೊಡಬಲ್ಲದು. ದೇವರ ಕೃಪೆಯು ಯಾವಾಗಲೂ ನಮ್ಮ ಪ್ರತಿಯೊಂದು ಅವಶ್ಯಕತೆಯನ್ನು ಪೂರೈಸುತ್ತದೆ.

"ಸಮಾಧಾನ" ದೇವರು ಕೊಡುವ ಇನ್ನೊಂದು ಅತ್ಯುತ್ತಮವಾದ ವರವಾಗಿದೆ - ನಮ್ಮ ಹೃದಯದಲ್ಲಿ, ಸಂಪೂರ್ಣ ಅಪರಾಧ ಕ್ಷಮೆಯ ಕುರಿತಾದ ಮನೋವ್ಯಥೆ ಅಥವಾ ಸ್ವ-ಖಂಡನೆ ಇಲ್ಲದಿರುವ ಸಮಾಧಾನ, ಮತ್ತು ನಮ್ಮ ಸುತ್ತಲಿನ ಜನರೊಂದಿಗೆ ಸಮಾಧಾನ, ಸಭೆಯಲ್ಲಿ ಅನ್ಯೋನ್ಯತೆಯನ್ನು ತರುವ ಸಮಾಧಾನ ಇದಾಗಿದೆ.

ಈ ಶುಭಾಶಯವನ್ನು ತ್ರಯೈಕ ದೇವರ ಹೆಸರಿನಲ್ಲಿ ಕಳುಹಿಸಲಾಗಿದೆ:

- ಸದಾಕಾಲ ’ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿ’ ಇರುವಾತನು, ಅಂದರೆ ನಮ್ಮ ಪರಲೋಕದ ತಂದೆಯಾಗಿದ್ದಾರೆ.

- ’ಏಳು ಆತ್ಮಗಳು’, ಅಂದರೆ ಪವಿತ್ರಾತ್ಮ ದೇವರು. ಸತ್ಯವೇದದಲ್ಲಿ ‘ಏಳು’ ಸಂಖ್ಯೆಯು ಪರಿಪೂರ್ಣತೆಯ ಸಂಕೇತವಾಗಿದೆ. ಮತ್ತು ‘ಏಳು ಆತ್ಮಗಳು’ ಪವಿತ್ರಾತ್ಮನು ಪರಿಪೂರ್ಣನಾದ ಆತ್ಮನು, ಎಂಬುದನ್ನು ಸೂಚಿಸುತ್ತದೆ. ಯೆಶಾ. 11:2,3ರಲ್ಲಿ ಪವಿತ್ರಾತ್ಮನನ್ನು ಈ ರೀತಿಯಾಗಿ ವರ್ಣಿಸಲಾಗಿದೆ:
  • (1) ಕರ್ತನ ಆತ್ಮನು;
  • (2) ಜ್ಞಾನದ ಆತ್ಮನು;
  • (3) ವಿವೇಕದಾಯಕ ಆತ್ಮನು;
  • (4) ಸಮಾಲೋಚನೆಯ ಆತ್ಮನು;
  • (5) ಪರಾಕ್ರಮದ ಆತ್ಮನು;
  • (6) ತಿಳುವಳಿಕೆಯ ಆತ್ಮನು ಮತ್ತು
  • (7) ಕರ್ತನ ಭಯದ ಆತ್ಮನು.
  • - ತ್ರಯೈಕ ದೇವರಲ್ಲಿ ಎರಡನೆಯ ವ್ಯಕ್ತಿಯಾದ ಯೇಸು ಕ್ರಿಸ್ತನು ಅನೇಕ ಹೆಸರುಗಳಿಂದ ಉಲ್ಲೇಖಿಸಲ್ಪಟ್ಟಿದ್ದಾನೆ; ಅವುಗಳನ್ನು ಒಂದೊಂದಾಗಿ ನೋಡೋಣ (ಪ್ರಕ. 1:5).

    ಕ್ರಿಸ್ತನ ಹೆಸರುಗಳು

    "ನಂಬತಕ್ಕ ಸಾಕ್ಷಿ" - ನಮ್ಮ ಕರ್ತನು ತನ್ನ ವಾಗ್ದಾನಗಳ ವಿಷಯದಲ್ಲಿ ಪೂರ್ಣ ಭರವಸೆಗೆ ಯೋಗ್ಯನು ಎಂಬುದನ್ನು ಇದು ಸೂಚಿಸುತ್ತದೆ.

    "ಸತ್ತವರೊಳಗಿಂದ ಮೊದಲು ಎದ್ದು ಬಂದವನು" - ಮರಣವನ್ನು ಜಯಿಸಿದ ಮೊದಲ ಮನುಷ್ಯ ಮತ್ತು ಶಾಶ್ವತವಾಗಿ ಸಮಾಧಿಯಿಂದ ಹೊರಬಂದಾತನು ಎಂಬುದನ್ನು ಇದು ಸೂಚಿಸುತ್ತದೆ. ಆತನಿಗಿಂತ ಮೊದಲು ಮರಣದಿಂದ ಎದ್ದು ಬಂದ ಕೆಲವರು, ತಿರುಗಿ ಸತ್ತು ಹೋದರು. ಈಗ ಯೇಸುವು ಮರಣವನ್ನು ಶಾಶ್ವತವಾಗಿ ಜಯಿಸಿದ್ದಾನೆ, ಹಾಗಾಗಿ ನಾವು ಮರಣಕ್ಕೆ ಅಥವಾ ರೋಗಕ್ಕೆ ಎಂದಿಗೂ ಭಯಪಡುವ ಅವಶ್ಯಕತೆ ಇಲ್ಲ.

    "ಭೂರಾಜರ ಒಡೆಯನು" ಎಂಬದಾಗಿಯೂ ಯೇಸುವು ಉಲ್ಲೇಖಿಸಲ್ಪಟ್ಟಿದಾನೆ. ನಮ್ಮ ಕರ್ತನಿಗೆ ಪರಲೋಕದಲ್ಲಿ ಮತ್ತು ಭೂಲೋಕದಲ್ಲಿ ಎಲ್ಲಾ ಅಧಿಕಾರವನ್ನು ಕೊಡಲಾಗಿದೆ. ಆತನು ಭೂಲೋಕದಲ್ಲಿ ಪ್ರಭುತ್ವ ಹೊಂದಿರುವವರ ಹೃದಯಗಳನ್ನು ಸಹ ಹತೋಟಿಯಲ್ಲಿ ಇರಿಸುತ್ತಾನೆ. "ರಾಜನ ಸಂಕಲ್ಪಗಳು ಕರ್ತನ ಕೈಯಲ್ಲಿ ನೀರಿನ ಕಾಲುವೆಗಳಂತೆ ಇವೆ; ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ" (ಜ್ಞಾನೋ. 21:1).

    ಮುಂದೆ ಕರ್ತನನ್ನು "ನಮ್ಮನ್ನು ಪ್ರೀತಿಸುವವನು ಮತ್ತು ಸದಾಕಾಲಕ್ಕೂ ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನು,"(ಪ್ರಕ. 1:5 - Amplified Bible) ಎಂಬದಾಗಿ ಪ್ರಸ್ತಾವಿಸಲಾಗಿದೆ. ನಾವು ಶಾಶ್ವತವಾಗಿ ಆತನ ಪ್ರೀತಿಯನ್ನು ಹೊಂದಿದ್ದೇವೆ. ನಮ್ಮ ಪಾಪಗಳನ್ನು ಕ್ಷಮಿಸುವುದಕ್ಕಾಗಿ ಮಾತ್ರವಲ್ಲದೆ, ನಮ್ಮನ್ನು ಎಂದೆಂದಿಗೂ ಪಾಪಗಳಿಂದ ಬಿಡುಗಡೆ ಗೊಳಿಸಲಿಕ್ಕಾಗಿ ಆತನು ತನ್ನ ರಕ್ತವನ್ನು ಸುರಿಸಿದನು. ಹೊಸ ಒಡಂಬಡಿಕೆಯ ಮೊದಲ ವಾಗ್ದಾನ, ಯೇಸುವು "ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು," (ಮತ್ತಾ. 1:21) ಎಂಬುದೇ. ಪಾಪದ ಬಲದಿಂದ ಬಿಡುಗಡೆಗೊಳ್ಳುವದೇ ಇಡೀ ಹೊಸ ಒಡಂಬಡಿಕೆಯ ಪ್ರಮುಖ ವಿಷಯವಾಗಿದೆ. ನಾವು ಕೃಪೆಗೆ ಅಧೀನರಾಗಿ ಜೀವಿಸುವಾಗ, ಯಾವ ಪಾಪವೂ ಸಹ ನಮ್ಮ ಮೇಲೆ ಅಧಿಕಾರ ನಡೆಸದು (ರೋಮಾ. 6:14).

    ನಮ್ಮ ತಂದೆಯಾದ ದೇವರ ರಾಜ್ಯವೂ, ಯಾಜಕರೂ

    ಇನ್ನೊಂದು ವಿಷಯ, ಕರ್ತನಾದ ಯೇಸವು ನಮ್ಮನ್ನು "ರಾಜ್ಯವನ್ನಾಗಿಯೂ, ತನ್ನ ತಂದೆಗೆ ಯಾಜಕರನ್ನಾಗಿಯೂ" ರೂಪಿಸಿದ್ದಾನೆ, ಎಂಬುದಾಗಿ ನಮಗೆ ತಿಳಿಸಲಾಗಿದೆ (ಪ್ರಕ. 1:6).

    ದೇವರು ತನ್ನ ಸಂಪೂರ್ಣ ಅಧಿಕಾರವನ್ನು ಪ್ರಯೋಗಿಸುವ ಒಂದು ಮಂಡಲವೇ "ದೇವರ ರಾಜ್ಯ"ವಾಗಿದೆ. ಭೂಲೋಕದಲ್ಲಿ ಕ್ರೈಸ್ತಸಭೆಯು "ದೇವರ ರಾಜ್ಯ"ವನ್ನು ಪ್ರತಿನಿಧಿಸಿ, ಅದನ್ನು ಪರಿಚಯಿಸುತ್ತದೆ - ಅದು "ಒಂದೇ ರಾಜ್ಯ"ವಾಗಿ ಸೇರಿಬಂದಿರುವ ಜನರ ಒಂದು ಗುಂಪಾಗಿದೆ; ಏಕೆಂದರೆ ಈ ಜನರು ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ದೇವರ ಅಧಿಕಾರಕ್ಕೆ ಅಧೀನರಾಗಿದ್ದಾರೆ. ಕರ್ತನು ಕಾನೂನನ್ನು ಅಲಕ್ಷಿಸುತ್ತಿದ್ದ ಒಂದು ಜನಜಂಗುಳಿಯನ್ನು ಮಾರ್ಪಡಿಸಿ, ಒಂದು ಕ್ರಮಬದ್ಧವಾದ ರಾಜ್ಯವನ್ನಾಗಿ ಮಾಡಿದ್ದಾನೆ - ಈಗ ಈ ಜನರು ದೇವರ ಆಳ್ವಿಕೆಗೆ ಅಧೀನರಾಗಿದ್ದಾರೆ.

    ಇದಲ್ಲದೆ, ನಾವು ಯಾಜಕರಾಗಿಯೂ ಮಾಡಲ್ಪಟ್ಟಿದ್ದೇವೆ. ಪ್ರತಿಯೊಬ್ಬ ವಿಶ್ವಾಸಿಯು - ಪುರುಷ ಅಥವಾ ಸ್ತ್ರೀ - ಕರ್ತನ ಒಬ್ಬ ಯಾಜಕನಾಗಿ ಮಾಡಲ್ಪಟ್ಟಿದ್ದಾನೆ. ದೇವರ ದೃಷ್ಟಿಯಲ್ಲಿ ಆತನ ಸಭೆಯಲ್ಲಿ, ಪ್ರತ್ಯೇಕಿಸಲ್ಪಟ್ಟ ’ಯಾಜಕರು’ ಎಂಬ ವಿಶೇಷ ಜನ-ಪಂಗಡವಿಲ್ಲ. ಅದು ಹಳೆ ಒಡಂಬಡಿಕೆಯ ಒಂದು ಪದ್ಧತಿಯಾಗಿದೆ. ಇಂದಿನ ದಿನ ಯಾವುದೇ ಸಭೆಯಲ್ಲಿ ಇಂತಹ ಪರಿಸ್ಥಿತಿ ಇದ್ದರೆ, ಅದು ಕ್ರಿಸ್ತಪೂರ್ವ ಶಕದ ಕಡೆಗೆ ಹೋಗುತ್ತಿದೆ!! ಆದರೆ ಈಗ ನಾವೆಲ್ಲರೂ ಯಾಜಕರು ಆಗಿದ್ದೇವೆ.

    ಯಾಜಕರಾದ ನಾವು ದೇವರಿಗೆ ಯಜ್ಞಗಳನ್ನು ಸಮರ್ಪಿಸಬೇಕು, ಎಂದು ಕರೆ ನೀಡಲಾಗಿದೆ. ಹಳೆ ಒಡಂಬಡಿಕೆಯಲ್ಲಿ ಜನರು ಪ್ರಾಣಿಗಳ ದೇಹಗಳನ್ನು ಸಮರ್ಪಿಸಿದರು, ಆದರೆ ಈ ದಿನ ನಾವು ನಮ್ಮ ಸ್ವಂತ ದೇಹಗಳನ್ನೇ ಸಜೀವ ಯಜ್ಞವಾಗಿ ದೇವರಿಗೆ ಸಮರ್ಪಿಸುತ್ತೇವೆ (ರೋಮಾ. 12:1).

    ಈ ವಚನದಲ್ಲಿ "ಆತನ ದೇವರು ಮತ್ತು ತಂದೆ" ಎಂಬ ಪದಗಳು, ಯೇಸುವಿನ ಪುನರುತ್ಥಾನದ ನಂತರ ಆತನು "ನನ್ನ ತಂದೆಯೂ ನಿಮ್ಮ ತಂದೆಯೂ, ನನ್ನ ದೇವರೂ ನಿಮ್ಮ ದೇವರೂ" (ಯೋಹಾ 20:17), ಎಂಬುದಾಗಿ ಉಪಯೋಗಿಸಿದ ಪದಗಳಿಗೆ ಹೋಲುತ್ತವೆ. ಆತನ ತಂದೆಯು ಈಗ ನಮ್ಮ ತಂದೆಯೂ ಆಗಿದ್ದಾರೆ. ಯೇಸುವು ತನ್ನ ಭದ್ರತೆಯನ್ನು ತಂದೆಯಲ್ಲಿ ಪಡೆದುಕೊಂಡಂತೆ, ಈಗ ನಾವು ನಮ್ಮ ಭದ್ರತೆಯನ್ನು ’ದೇವರು ನಮ್ಮ ತಂದೆಯಾಗಿದ್ದಾರೆ’ ಎಂಬುದರಲ್ಲಿ ಪಡೆದುಕೊಳ್ಳಬಹುದು. ಯೋಹಾನನು "ಆಮೆನ್" ಎನ್ನುತ್ತಾನೆ (ಪ್ರಕ. 1:6). ಮತ್ತು ನಾವು ಸಹ, "ಹಾಗೆಯೇ ಆಗಲಿ" ಎನ್ನುತ್ತೇವೆ. ಆತನಿಗೇ "ಯುಗ ಯುಗಾಂತರಗಳಲ್ಲಿಯೂ ಘನ ಮಹತ್ವಗಳಿರಲಿ."

    ಇದರ ನಂತರ, ಪ್ರಕಟನೆ 1:7ರಲ್ಲಿ, ಭೂಲೋಕಕ್ಕೆ ಕ್ರಿಸ್ತನ ಪುನರಾಗಮನ ಪ್ರವಾದಿಸಲ್ಪಟ್ಟಿದೆ. ಕಲ್ವಾರಿಯ ಶಿಲುಬೆಯ ಮೇಲೆ, ನಮ್ಮ ಕರ್ತನು ಅವಮಾನವನ್ನು ಅನುಭವಿಸುತ್ತಾ ತೂಗಾಡುತ್ತಿದ್ದಾಗ, ಈ ಪ್ರಪಂಚವು ಆತನನ್ನು ಕೊನೆಯ ಬಾರಿ ಕಂಡಿತು. ಆದರೆ ಮುಂದೆ ಒಂದು ದಿನ, ಆತನು ಮಹಿಮೆಯೊಂದಿಗೆ ಮೇಘಗಳಲ್ಲಿ ಬರುವುದನ್ನು ಈ ಪ್ರಪಂಚವು ಕಾಣಲಿದೆ. ಎಲ್ಲರ ಕಣ್ಣುಗಳು ಆತನನ್ನು ಕಾಣುವವು. ಆತನನ್ನು ಇರಿದವರೂ (ಇಸ್ರಾಯೇಲ್ ರಾಷ್ಟ್ರ) ಸಹ ಆತನನ್ನು ಕಾಣುವರು. ಆತನು ಬರುವಾಗ ಭೂಲೋಕದ ಎಲ್ಲಾ ಕುಲಗಳವರು ಆತನನ್ನು ನೋಡಿ ಎದೆ ಬಡಿದುಕೊಂಡು ಅಳಲಿದ್ದಾರೆ. ಆದರೆ ನಾವು ಸಂತೋಷಿಸುವೆವು. ಯೋಹಾನನು ಮತ್ತೊಮ್ಮೆ "ಆಮೆನ್" ಎನ್ನುತ್ತಾನೆ. ಜೊತೆಗೆ ನಾವು ಸಹ "ಹಾಗೆಯೇ ಆಗಲಿ," ಎನ್ನುತ್ತೇವೆ!

    ವಚನ ಪ್ರಕಟನೆ 1:8ರಲ್ಲಿ ದೇವರು ತನ್ನನ್ನೇ ಸಂಬೋಧಿಸಿ, ನಾನು ಆದಿಯೂ ಅಂತ್ಯವೂ, ವರ್ತಮಾನ ಭೂತ ಭವಿಷ್ಯತ್ ಕಾಲಗಳಲ್ಲಿ ಇರುವವನೂ, ಸರ್ವಶಕ್ತನೂ ಆಗಿದ್ದೇನೆ, ಎಂದು ಹೇಳುತ್ತಾರೆ. ಆದಿಯಲ್ಲಿ ಯಾವ ಸೃಷ್ಟಿಯೂ ಇಲ್ಲದಿದ್ದಾಗ, ಅವರು ಇದ್ದರು. ಅವರು ಸಮಯದ ಅಂತ್ಯದಲ್ಲೂ ಸಹ ಇರುತ್ತಾರೆ. ದೇವರನ್ನು ಆಶ್ಚರ್ಯಪಡಿಸುವ ಯಾವ ಸಂಗತಿಯೂ ಯಾವ ಜಾಗದಲ್ಲೂ ಯಾವುದೇ ಸಂದರ್ಭದಲ್ಲಿ ನಡೆಯಲಾರದು. ನಮ್ಮ ತಂದೆಯು ಆರಂಭದಿಂದ ಅಂತ್ಯದ ವರೆಗೆ ಎಲ್ಲವನ್ನು ಅರಿತಿರುವುದು ಮಾತ್ರವಲ್ಲ, ಸರ್ವಶಕ್ತರೂ ಆಗಿರುವುದರಿಂದ, ಅವರು ಎಲ್ಲವುಗಳನ್ನೂ ಹತೋಟಿಯಲ್ಲಿ ಇರಿಸಿದ್ದಾರೆ. ಹಾಗಾಗಿ ನಾವು ಭವಿಷ್ಯತ್ತಿನ ಬಗ್ಗೆ ಕಿಂಚಿತ್ತೂ ಭಯಪಡುವ ಅವಶ್ಯಕತೆ ಇಲ್ಲ.

    ಪ್ರಕಟನೆ ಪುಸ್ತಕದ ಅಂತ್ಯದಲ್ಲಿ ಮತ್ತೊಮ್ಮೆ, "ದೇವರು ಸರ್ವಶಕ್ತನು ಮತ್ತು ಆದಿಯೂ ಅಂತ್ಯವೂ ಆಗಿದ್ದಾನೆ," ಎಂಬದಾಗಿ ಹೇಳಲಾಗಿದೆ (ಪ್ರಕ. 19:6; 22:13). ನಮ್ಮ ದೇವರು ಮತ್ತು ತಂದೆಯು ಸರ್ವಜ್ಞಾನಿಯೂ, ಸರ್ವಶಕ್ತನೂ ಆಗಿರುವದನ್ನು ಆರಂಭ ಮತ್ತು ಅಂತ್ಯದಲ್ಲಿ ಸಾರಿಹೇಳುವ ಈ ವಚನಗಳ ನಡುವೆ, ಇಡೀ ಪ್ರಕಟನೆ ಪುಸ್ತಕವನ್ನು ಬಂದೋಬಸ್ತು ಮಾಡಿ ಇರಿಸಲಾಗಿದೆ, ಎಂದು ಹೇಳಿದರೆ ತಪ್ಪೇನೂ ಇಲ್ಲ! ಈ ಪ್ರಕಟನೆ ಪುಸ್ತಕದಲ್ಲಿ, ಕೊನೆಯ ದಿನಗಳಲ್ಲಿ ನಮ್ಮ ಸುತ್ತಲಿನ ಪ್ರಪಂಚದಲ್ಲಿ ಸಂಭವಿಸಲಿರುವ ವಿಪತ್ತುಗಳು ಮತ್ತು ದೇವಜನರಿಗೆ ಒದಗಿ ಬರಲಿರುವ ಶೋಧನೆಗಳು ಮತ್ತು ಸಂಕಟಗಳ ಬಗ್ಗೆ ನಾವು ಓದುವಾಗ, ಈ ವಿಷಯವು ನಮಗೆ ಸಂಪೂರ್ಣ ಭದ್ರತೆಯನ್ನು ಕೊಡುತ್ತದೆ.

    ಅದ್ಭುತವಾದ ಏಳು ಸತ್ಯಾಂಶಗಳು

    ನಮ್ಮ ಕರ್ತನು ಮತ್ತು ಆತನ ಜೊತೆಗಿನ ನಮ್ಮ ಸಂಬಂಧ - ಇದರ ಕುರಿತಾಗಿ ನಾವು ಈಗಾಗಲೇ ಪರಿಗಣಿಸಿರುವ ಕೆಲವು ಶ್ರೇಷ್ಠವಾದ ಸತ್ಯಗಳಲ್ಲಿ, ನಾವು ಈ ದಿನಗಳಲ್ಲಿ ಅವಶ್ಯವಾಗಿ ನೆಲೆಗೊಳ್ಳಬೇಕು.

  • (1) ನಮ್ಮ ಕರ್ತನ ವಾಗ್ದಾನಗಳು ಸಂಪೂರ್ಣ ಭರವಸೆಗೆ ಯೋಗ್ಯವಾದವುಗಳು;
  • (2) ಮನುಷ್ಯನ ಅತಿ ದೊಡ್ಡ ವೈರಿಯನ್ನು (ಮರಣವನ್ನು) ಆತನು ಸೋಲಿಸಿರುವುದು;
  • (3) ಭೂಲೋಕ ಮತ್ತು ಪರಲೋಕಗಳಲ್ಲಿ ಎಲ್ಲವುಗಳ ಮೇಲೆ ಆತನ ಸಂಪೂರ್ಣ ಅಧಿಕಾರ;
  • (4) ನಮ್ಮ ಮೇಲಿನ ಆತನ ಬದಲಾಗದ, ನಿತ್ಯವಾದ ಪ್ರೀತಿ;
  • (5) ಪಾಪದ ಬಲದಿಂದ ಆತನು ನಮ್ಮನ್ನು ಬಿಡುಗಡೆ ಮಾಡಿದ್ದು;
  • 6) ಆತನ ತಂದೆ ಈಗ ನಮ್ಮ ತಂದೆಯೂ ಸಹ ಆಗಿರುವದು, ಮತ್ತು
  • (7) ಈ ಭೂಲೋಕದಲ್ಲಿ ತನ್ನ ರಾಜ್ಯವನ್ನು ಪುನಃ ಸ್ಥಾಪಿಸಲು ಆತನು ತಿರುಗಿ ಬರುವುದು.
  • ನಾವು ಮುಂಬರುವ ದಿನಗಳಲ್ಲಿ ಕದಲದೆ ಮತ್ತು ಸ್ಥಿರವಾಗಿ ನಿಲ್ಲಬೇಕಾದರೆ, ಈ ಸತ್ಯಾಂಶಗಳಲ್ಲಿ ನಾವು ಅವಶ್ಯವಾಗಿ ಬೇರೂರಿ ನೆಲೆಗೊಳ್ಳಬೇಕು.

    ಅಧ್ಯಾಯ 2
    ಸಂಕಟದ ಸಮಯದಲ್ಲಿ ಉತ್ತೇಜನ

    "ನಿಮ್ಮ ಸಹೋದರನೂ, ಯೇಸುವಿನ ನಿಮಿತ್ತ ಹಿಂಸೆಯಲ್ಲಿಯೂ, ರಾಜ್ಯದಲ್ಲಿಯೂ, ತಾಳ್ಮೆಯಲ್ಲಿಯೂ ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು, ದೇವರ ವಾಕ್ಯಕ್ಕೋಸ್ಕರವೂ, ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ ಪತ್ಮೊಸ್ ದ್ವೀಪದಲ್ಲಿದ್ದೆನು. "ನಾನು ಕರ್ತನ ದಿನದಲ್ಲಿ ದೇವರಾತ್ಮವಶನಾಗಿ, ನನ್ನ ಹಿಂದುಗಡೆ ತುತ್ತೂರಿಯ ಶಬ್ದದಂತಿರುವ ಮಹಾಶಬ್ದವನ್ನು ಕೇಳಿದೆನು" (ಪ್ರಕಟನೆ 1:9,10).

    ನಿಮ್ಮ ಸಹೋದರ ಯೋಹಾನನು

    ಇಲ್ಲಿ ಯೋಹಾನನು ತನ್ನನ್ನು "ನಿಮ್ಮ ಸಹೋದರ" ಎಂಬದಾಗಿ ಕರೆಯುವುದನ್ನು ಕಾಣುತ್ತೇವೆ. ಯೇಸು ಆರಿಸಿಕೊಂಡಿದ್ದ ಹನ್ನೆರಡು ಅಪೊಸ್ತಲರಲ್ಲಿ ಯೋಹಾನನೊಬ್ಬನೇ ಈ ಸಮಯದಲ್ಲಿ ಜೀವಂತವಾಗಿದ್ದನು. ಪತ್ಮೊಸ್ ದ್ವೀಪದಲ್ಲಿ ಕರ್ತನು ಆತನಿಗೆ ಪ್ರಕಟಣೆಯನ್ನು ನೀಡಿದಾಗ, ಆತನಿಗೆ ಸುಮಾರು 95 ವರ್ಷ ವಯಸ್ಸಾಗಿತ್ತು. ಆತನು ಈಗಾಗಲೇ ಸುಮಾರು 65 ವರ್ಷಗಳಷ್ಟು ಸಮಯ ದೇವರೊಂದಿಗೆ ನಡೆದಿದ್ದನು. ಆದರೆ ಅವನು ಇನ್ನೂ ಒಬ್ಬ ’ಸಹೋದರನು’ ಆಗಿದ್ದನು.

    ಅವನು ’ಪೋಪ್ ಯೋಹಾನ’ ಅಥವಾ ’ರೆವರೆಂಡ್ ಯೋಹಾನ’ ಆಗಿರಲಿಲ್ಲ. ಅವನು ’ಪಾಸ್ಟರ್ ಯೋಹಾನನೂ’ ಸಹ ಆಗಿರಲಿಲ್ಲ! ಅವನು ಕೇವಲ ಒಬ್ಬ ಸಾಧಾರಣ ಸಹೋದರನಾಗಿದ್ದನು. ಎಲ್ಲಾ ವಿಧವಾದ ಬಿರುದುಗಳಿಂದ ದೂರವಿರಬೇಕು ಮತ್ತು ತಮ್ಮ ಬಗ್ಗೆ ಯಾವಾಗಲೂ ಸಹೋದರರು ಎಂದು ಮಾತ್ರ ಉಲ್ಲೇಖಿಸಬೇಕು, ಎಂಬುದಾಗಿ ಯೇಸುವು ತನ್ನ ಶಿಷ್ಯರಿಗೆ ಕಲಿಸಿಕೊಟ್ಟಿದ್ದನು (ಮತ್ತಾ 23:8-11). ಇದನ್ನು ಅಪೊಸ್ತಲರು ಅಕ್ಷರಶಃ ಪಾಲಿಸಿದರು, ಇಂದಿನ ದಿನಗಳಲ್ಲಿ ಅನೇಕರು ಮಾಡುವಂತೆ ಅಲಕ್ಷಿಸಲಿಲ್ಲ.

    ನಮಗೆ ಶಿರಸ್ಸು ಒಂದೇ ಮತ್ತು ನಾಯಕನು ಒಬ್ಬನೇ - ಆತನು ಕ್ರಿಸ್ತನು. ಮಿಕ್ಕವರಾದ ನಾವೆಲ್ಲರೂ, ನಮ್ಮ ಸೇವೆ ಎಷ್ಟು ದೊಡ್ಡದಾದರೂ ಇರಬಹುದು ಅಥವಾ ನಮಗೆ ಸಭೆಯಲ್ಲಿ ಎಷ್ಟೇ ಅನುಭವ ಇರಬಹುದು, ’ಸಹೋದರರು’ ಆಗಿರುತ್ತೇವೆ.

    ಯೇಸುವಿನಲ್ಲಿ ಇರುವ ಸಂಕಟ

    ಇದೇ ವಚನದಲ್ಲಿ ಯೋಹಾನನು ತನ್ನನ್ನು, "ಯೇಸುವಿನ ನಿಮಿತ್ತ ಹಿಂಸೆಯಲ್ಲಿ ಪಾಲುಗಾರನು" ಎಂದೂ ಸಹ ಸಂಬೋಧಿಸುತ್ತಾನೆ (ಪ್ರಕ. 1:9). ಯೇಸುವಿನ ಪ್ರತಿಯೊಬ್ಬ ಪೂರ್ಣಮನಸ್ಸುಳ್ಳ ಶಿಷ್ಯನೂ, ತಾನು ಭೂಲೋಕದಲ್ಲಿ ಇರುವಷ್ಟು ದಿನ "ಯೇಸುವಿನ ಸಂಕಟದಲ್ಲಿ ಪಾಲ್ಗೊಳ್ಳಲು" ಸಿದ್ಧನಾಗಿರಬೇಕು.

    ಯೋಹಾನನಿಗೆ ಈ ಪ್ರಕಟನೆಯು ತೆರೆದು ತೋರಿಸಲ್ಪಟ್ಟಾಗ ಆತನು ಆರಾಮದ ಜೀವನ ನಡೆಸುತ್ತಿರಲಿಲ್ಲ. ಆತನು "ದೇವರ ವಾಕ್ಯಕ್ಕೂ, ಯೇಸುವಿನ ವಿಷಯವಾದ ಸಾಕ್ಷಿಗೂ" ನಂಬಿಗಸ್ತನಾಗಿ ನಡೆದ ಫಲವಾಗಿ, ಪತ್ಮೊಸ್ ದ್ವೀಪದಲ್ಲಿ ಸಂಕಟವನ್ನು ಅನುಭವಿಸುತ್ತಾ ಇದ್ದಾಗ ಇದನ್ನು ಪಡೆದನು (ಪ್ರಕ. 1:9). ಸ್ವತಃ ಯೋಹಾನನು ಸಂಕಟದ ಅನುಭವ ಪಡೆದಾಗ ಮಾತ್ರ, ಅದರ ಮೂಲಕ ಅವನು ಅಂತ್ಯಕಾಲದಲ್ಲಿ ದೇವಜನರು ಕ್ರಿಸ್ತವಿರೋಧಿಯಿಂದ ಅನುಭವಿಸಲಿರುವ ಮಹಾ ಸಂಕಟವನ್ನು ಸರಿಯಾಗಿ ವಿವರಿಸಲು ಸಾಧ್ಯವಾಯಿತು. ಸಂಕಟವನ್ನು ಅನುಭವಿಸುತ್ತಿರುವ ಜನರ ನಡುವೆ ನಮಗೆ ಸೇವೆಯ ಅವಕಾಶವನ್ನು ಕೊಡುವುದಕ್ಕೆ ಮುಂಚೆ, ದೇವರು ನಮ್ಮನ್ನು ಶೋಧನೆಗಳು ಮತ್ತು ಸಂಕಟಗಳ ಮೂಲಕ ನಡೆಸುತ್ತಾರೆ.

    "ದೇವರು ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಧೈರ್ಯಪಡಿಸುತ್ತಾರೆ; ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಧೈರ್ಯಪಡಿಸುವುದಕ್ಕೆ ಶಕ್ತರಾಗುತ್ತೇವೆ," ಎಂಬದಾಗಿ ಪೌಲನು ಹೇಳಿದನು (2 ಕೊರಿಂಥ 1:4 - Amplified Bible).

    19ನೇ ಶತಮಾನದ ಮಧ್ಯಭಾಗದಲ್ಲಿ ಇಂಗ್ಲೆಂಡ್ ದೇಶದ ಕ್ರೈಸ್ತರು ನಂಬಿಕೆಯ ನಿಮಿತ್ತವಾದ ಯಾವ ಶೋಧನೆಯೂ ಇಲ್ಲದೆ ನೆಮ್ಮದಿಯ ಜೀವನ ಜೀವಿಸುತ್ತಿದ್ದಾಗ, "ಮೇಲೆತ್ತುವಿಕೆ" ('secret rapture') ಎಂಬ ಹೆಸರಿನ ಒಂದು ಹೊಸ ಮೂಲಸಿದ್ಧಾಂತವು ಮೊದಲ ಬಾರಿ ತಲೆಯೆತ್ತಿದ್ದು ಏನೂ ಆಶ್ಚರ್ಯಕರವಲ್ಲ. ಈ ಭೋಧನೆಯು ಮಹಾ ಸಂಕಟ ಕಾಲಕ್ಕೆ ಮೊದಲು ಯೇಸುವು ರಹಸ್ಯವಾಗಿ ಭೂಲೋಕಕ್ಕೆ ಹಿಂದಿರುಗಿ, ತನ್ನ ಸಭೆಯನ್ನು ತನ್ನೊಂದಿಗೆ ಮೇಲಕ್ಕೆ ಒಯ್ಯುತ್ತಾನೆ ಎಂದು ಸಾರುತ್ತದೆ. ಈ ದಿನವೂ ಇದೇ ಬೋಧನೆಯು ಕ್ರೈಸ್ತರು ಯಾವುದೇ ಶೋಧನೆಗಳಿಲ್ಲದೆ ಸುಖಸೌಲಭ್ಯದಲ್ಲಿ ಜೀವಿಸುತ್ತಿರುವ ದೇಶಗಳಲ್ಲಿ ಮುಂದುವರಿಯುತ್ತಿದೆ ಮತ್ತು ನಂಬಲ್ಪಡುತ್ತಿದೆ.

    ಹೆಚ್ಚಿನ ಕ್ರೈಸ್ತರ ಪ್ರಾರ್ಥನೆಯ ಸಾರಾಂಶ, "ಕರ್ತನೇ, ಈ ಲೋಕದಲ್ಲಿ ನನ್ನ ಜೀವನವನ್ನು ಹೆಚ್ಚು ಸುಖಕರವಾಗಿ ಮಾಡು," ಎಂದು ಆಗಿರುವಾಗ, ಸಂಕಟಗಳು ಬರುವುದಕ್ಕೆ ಮೊದಲು ಸಭೆಯು ಎತ್ತಲ್ಪಡುತ್ತದೆ, ಎಂಬ ಭೋಧನೆಯನ್ನು ಇವರು ಸಂತೋಷದಿಂದ ಕೈಚಾಚಿ ಸ್ವೀಕರಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಹೀಗೆ ಸೈತಾನನು, ಈ ಸುಳ್ಳು ಆಶ್ವಾಸನೆಯ ನೆಮ್ಮದಿಯನ್ನು ನೀಡಿ, ಜನಸಮೂಹವನ್ನು ಸಂತೈಸುವುದರಲ್ಲಿ ಸಫಲನಾಗಿದ್ದಾನೆ. ಆದ್ದರಿಂದ ಅವರು ಮುಂದೆ ಆ ಮಹಾ ಸಂಕಟವು ಬರುವಾಗ, ಅದನ್ನು ಎದುರಿಸಲು ಸಿದ್ಧರಾಗಿರುವುದಿಲ್ಲ.

    ಯೇಸುವು ಸ್ಪಷ್ಟವಾಗಿ, "ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ," ಎಂದು ತಿಳಿಸಿದರು (ಯೋಹಾ. 16:33). ನಾವು ಸಂಕಟದಿಂದ ಪಾರಾಗುತ್ತೇವೆ ಎಂಬ ವಾಗ್ದಾನವನ್ನು - ಅದು ಚಿಕ್ಕ ಸಂಕಟವಿರಲಿ ಅಥವಾ ಮಹಾ ಸಂಕಟವೇ ಆಗಲಿ - ಅವರು ಯಾವತ್ತೂ ಮಾಡಲಿಲ್ಲ. ಅದರೆ ಅವರು ಸ್ಪಷ್ಟವಾಗಿ ತಿಳಿಸಿದ್ದು ಏನೆಂದರೆ, ಅವರು ಜಯಿಸಿದ ಹಾಗೆ ನಾವೂ ಜಯಿಸುತ್ತೇವೆ, ಎಂಬುದಾಗಿ. ಅವರ ಆಸಕ್ತಿ ನಮ್ಮನ್ನು ಸಂಕಟದಿಂದ ರಕ್ಷಿಸುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ಸಂಕಟದ ವಿರುದ್ಧ ಜಯಶಾಲಿಗಳನ್ನಾಗಿ ಮಾಡುವದು ಆಗಿದೆ, ಏಕೆಂದರೆ ಅವರ ದೃಷ್ಟಿಯಲ್ಲಿ ನಮ್ಮ ಸುಖ-ಸೌಲಭ್ಯಗಳಿಗಿಂತ ನಮ್ಮ ಆತ್ಮಿಕ ಗುಣ ಬಹಳ ಮುಖ್ಯವಾಗಿದೆ.

    ಮಹಾ ಸಂಕಟದಿಂದ ತಪ್ಪಿಸಿಕೊಳ್ಳುವುದು ನಂಬಿಗಸ್ತಿಕೆಯ ಪ್ರತಿಫಲವೆಂದು ಕೆಲವರು ಬೋಧಿಸುವ ಹಾಗೆ, ಯೇಸುವು ಯಾವತ್ತೂ ಬೋಧಿಸಲಿಲ್ಲ. ಇದಕ್ಕೆ ಪ್ರತಿಯಾಗಿ, ಅವರನ್ನು ಹಿಂಬಾಲಿಸದೇ ಇರುವವರಿಗಿಂತ, ಎಲ್ಲವನ್ನೂ ತ್ಯಜಿಸಿ ಅವರನ್ನು ಹಿಂಬಾಲಿಸುವವನಿಗೆ ಇನ್ನೂ ಹೆಚ್ಚಿನ ಸಂಕಟಗಳು ಬರುತ್ತವೆಂದು ಅವರು ತಿಳಿಸಿದರು (ಮಾರ್ಕ. 10:30). ಅವರು ತನ್ನ ಶಿಷ್ಯರಿಗಾಗಿ ತನ್ನ ತಂದೆಯ ಬಳಿ, "ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವುದಿಲ್ಲ; ಕೇಡಿನಿಂದ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ," ಎಂದು ಪ್ರಾರ್ಥಿಸಿದರು (ಯೋಹಾ. 17:15). ಶಿಷ್ಯರು ಮಹಾ ಸಂಕಟವನ್ನು ಎದುರಿಸ ಬೇಕಾಗುತ್ತದೆ ಎಂಬ ಒಂದು ಕಾರಣಕ್ಕಾಗಿ, ಆ ಸಮಯ ಬಂದಾಗ ಅವರು ಲೋಕದಿಂದ ಮೇಲಕ್ಕೆ ಎತ್ತಲ್ಪಡುವದು ಅವರ ಇಚ್ಛೆ ಆಗಿರಲಿಲ್ಲ.

    ಮೂರನೇ ಶತಮಾನದಲ್ಲಿ, ಕ್ರೈಸ್ತರು ರೋಮ್ ಸಾಮ್ರಾಜ್ಯದ ವಿವಿಧ ಪ್ರಾಂತ್ಯಗಳ ಮಹಾ ಕ್ರೀಡಾಂಗಣಗಳಲ್ಲಿ ಸಿಂಹಗಳ ಬಾಯಿಗೆ ಆಹುತಿಯಾಗಿ ಸಾವಿಗೆ ಈಡಾಗುತ್ತಿದ್ದಾಗ ಮತ್ತು ಕಂಭಗಳಿಗೆ ಕಟ್ಟಲ್ಪಟ್ಟು ಸುಟ್ಟು ಸಾಯುತ್ತಿದ್ದಾಗ, ಕರ್ತನು ಅವರನ್ನು ಆ ಸಂಕಟಗಳಿಂದ ರಕ್ಷಿಸಲಿಲ್ಲ. ದಾನಿಯೇಲನ ದಿನದಲ್ಲಿ ಸಿಂಹಗಳ ಬಾಯನ್ನು ಮುಚ್ಚಿಸಿದ ಮತ್ತು ಉರಿಯುವ ಆವಿಗೆಯ ಅಗ್ನಿ ಜ್ವಾಲೆಯನ್ನು ತಣ್ಣಗಾಗಿಸಿದ ದೇವರು, ಯೇಸುವಿನ ಈ ಶಿಷ್ಯರಿಗಾಗಿ ಅಂತಹ ಅದ್ಭುತಕಾರ್ಯಗಳನ್ನು ಮಾಡಲಿಲ್ಲ - ಏಕೆಂದರೆ ಇವರು ಮರಣದ ಮೂಲಕ ದೇವರನ್ನು ಮಹಿಮೆ ಪಡಿಸುವಂಥ ಹೊಸ ಒಡಂಬಡಿಕೆಯ ಕ್ರೈಸ್ತರಾಗಿದ್ದರು. ಅವರ ಒಡೆಯನಾದ ಯೇಸುವಿನಂತೆ, ಅವರೂ ಸಹ ವಿರೋಧಿಗಳಿಂದ ರಕ್ಷಣೆಗಾಗಿ ದೇವದೂತರ 12 ಗಣಗಳು ಬರುವಂತೆ ಪ್ರಾರ್ಥಿಸಲೂ ಇಲ್ಲ, ಅದನ್ನು ನಿರೀಕ್ಷಿಸಲೂ ಇಲ್ಲ.

    ದೇವರು ಪರಲೋಕದಿಂದ, ತನ್ನ ಮಗನನ್ನು ವಿವಾಹವಾಗುವ ಕನ್ಯೆಯು ಸಿಂಹಗಳ ಬಾಯಲ್ಲಿ ಸೀಳಲ್ಪಡುವದನ್ನು ಮತ್ತು ಸುಟ್ಟು ಬೂದಿಯಾಗುವುದನ್ನು ಕಂಡರು; ಇವರ ಸಾಕ್ಷಿಯು ದೇವರನ್ನು ಮಹಿಮೆ ಪಡಿಸಿತು - ಏಕೆಂದರೆ, "ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು," (ಪ್ರಕ. 14:4) ಎಂಬ ಮಾತನ್ನು, ಅವರು ಕ್ರೂರ ಮರಣದ ಮಾರ್ಗದಲ್ಲಿಯೂ ಋಜುವಾತುಪಡಿಸಿದರು. ಕರ್ತನು ಅವರಿಗೆ ಹೇಳಿದ ಒಂದೇ ಮಾತು, "ನೀನು ಸಾಯಬೇಕಾದರೂ ನಂಬಿಗಸ್ತನಾಗಿರು, ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು" (ಪ್ರಕ. 2:10).

    ಈ ದಿನವೂ, ಅನೇಕ ದೇಶಗಳಲ್ಲಿ ಯೇಸುವಿನ ಶಿಷ್ಯರು ಅವರ ಹೆಸರಿನ ಸಾಕ್ಷಿಗಾಗಿ ಯಾತನೆ ಮತ್ತು ಹಿಂಸೆಯನ್ನು ಅನುಭವಿಸುತ್ತಿರುವಾಗ, ಕರ್ತನು ಅವರನ್ನು ಲೋಕದಿಂದ ತೆಗೆದುಕೊಂಡು ಹೋಗುವುದಿಲ್ಲ. ಅದಲ್ಲದೆ, ನಮ್ಮನ್ನೂ ಸಹ ದೇವರು ಮಹಾ ಸಂಕಟಕಾಲಕ್ಕೆ ಮೊದಲು ಮೇಲಕ್ಕೆ ಎತ್ತುವುದಿಲ್ಲ. ಅವರು ಅದಕ್ಕಿಂತ ಎಷ್ಟೋ ಶ್ರೇಷ್ಠವಾದುದನ್ನು ಮಾಡುತ್ತಾರೆ. ಅವರು ನಮ್ಮನ್ನು ಮಹಾ ಸಂಕಟಕಾಲದ ಯಾತನೆಯ ನಡುವೆ ಜಯಶಾಲಿಗಳನ್ನಾಗಿ ಮಾಡುತ್ತಾರೆ.

    ಯೇಸುವಿಗೆ ನಮ್ಮನ್ನು ಸಂಕಟಗಳಿಂದ ಬಿಡಿಸುವುದಕ್ಕಿಂತ, ಕೆಟ್ಟತನದಿಂದ ಬಿಡಿಸುವುದರಲ್ಲಿ ಹೆಚ್ಚು ಆಸಕ್ತಿ ಇದೆ. ಅವರು ನಮಗೆ ಸಂಕಟಗಳ ಮೂಲಕ ಹಾದು ಹೋಗುವ ಅವಕಾಶವನ್ನು ನೀಡುತ್ತಾರೆ, ಏಕೆಂದರೆ ಇದು ನಮ್ಮನ್ನು ಆತ್ಮಿಕವಾಗಿ ಬಲ ಪಡಿಸುವ ಒಂದೇ ಮಾರ್ಗವಾಗಿದೆಯೆಂದು ಅವರಿಗೆ ಗೊತ್ತಿದೆ.

    ಈ ಸಂದೇಶವು ಸುಖವನ್ನೇ ಪ್ರೀತಿಸುವ ಕ್ರೈಸ್ತ ಪ್ರಪಂಚಕ್ಕೆ ನಿಜವಾಗಿ ವಿಚಿತ್ರ ಬೋಧನೆ ಎನಿಸುತ್ತದೆ, ಏಕೆಂದರೆ ಇವರು ಅನೇಕ ವರ್ಷಗಳಿಂದ ಪ್ರತಿ ಭಾನುವಾರವೂ ಸಭಾಕೂಟಗಳಲ್ಲಿ ಆಸನಗಳಲ್ಲಿ ಸಾಲಾಗಿ ಕೂರಿಸಲ್ಪಟ್ಟು, ಬೋಧಕರಿಂದ ಜೋಗುಳದಂತಹ ಸಂದೇಶಗಳ ಮೂಲಕ ಮುದ್ದು ಮಾಡಲ್ಪಟ್ಟಿದ್ದಾರೆ. ಆದರೆ ಅಪೊಸ್ತಲರು ಆದಿ ಸಭೆಗಳಲ್ಲಿ ಈ ಸಂದೇಶವನ್ನೇ ನೀಡಿದರು. ಅಪೊಸ್ತಲರಾದ ಪೌಲ-ಬಾರ್ನಬರು, "ಶಿಷ್ಯರ ಮನಸ್ಸನ್ನು ದೃಢಪಡಿಸುತ್ತಾ, ’ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕು,’ ಎಂಬುದಾಗಿ ಎಚ್ಚರಿಕೆಯ ಮಾತನ್ನು ಹೇಳಿ, ’ಕ್ರಿಸ್ತನಂಬಿಕೆಯಲ್ಲಿ ಸ್ಥಿರವಾಗಿರಿ,’ ಎಂದು ಅವರನ್ನು ಧೈರ್ಯಗೊಳಿಸಿದರು" (ಅ.ಕೃ. 14:21-22).

    ನಮ್ಮ ಮನೆಗಳಲ್ಲಿ ಮತ್ತು ಕೆಲಸದ ಸ್ಥಳಗಳಲ್ಲಿ ನಾವು ಎದುರಿಸುವ ಸಣ್ಣ ಶೋಧನೆಗಳು, ಮುಂದಿನ ದಿನಗಳಲ್ಲಿ ಬರಲಿರುವ ದೊಡ್ಡ ಶೋಧನೆಗಳಿಗೆ ಪೂರ್ವ ಸಿದ್ಧತೆಗಳೇ ಆಗಿವೆ. ಹಾಗಾಗಿ ಈಗ ನಾವು ನಂಬಿಗಸ್ತರಾಗಿರುವುದು ಅವಶ್ಯವಾಗಿದೆ. "ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ, ಕುದುರೆಗಳೊಂದಿಗೆ ಓಡಿ ಹೇಗೆ ಮುಂದಾಗುವೆ?" ಎಂದು ದೇವರು ಪಶ್ನಿಸುತ್ತಾರೆ (ಯೆರೆ. 12:5)!

    ಇಲ್ಲಿ ಯೋಹಾನನು "ಯೇಸುವಿನ ನಿಮಿತ್ತ ಹಿಂಸೆಯಲ್ಲಿಯೂ, ರಾಜ್ಯದಲ್ಲಿಯೂ, ತಾಳ್ಮೆಯಲ್ಲಿಯೂ ನಿಮ್ಮೊಂದಿಗೆ ಪಾಲುಗಾರನು" ಎಂದು ತನ್ನ ಬಗ್ಗೆ ಹೇಳಿದ್ದಾನೆ (ಪ್ರಕ. 1:9). ನಾವು ಯೇಸುವಿನ ರಾಜ್ಯದಲ್ಲಿ ಆತನೊಟ್ಟಿಗೆ ಸಿಂಹಾಸನದಲ್ಲಿ ಪಾಲುದಾರರು ಆಗುವುದಕ್ಕೆ ಮೊದಲು, ಯೇಸುವಿನೊಂದಿಗೆ ಸಂಕಟಗಳಲ್ಲಿ ಪಾಲ್ಗೊಳ್ಳಬೇಕು.

    ಹೊಸ ಒಡಂಬಡಿಕೆಯ ಉದ್ದಕ್ಕೂ, ಸೈರಣೆ ಅಥವಾ ಕೊನೆಯ ವರೆಗೆ ಶ್ರಮಿಸುವದು ('Perseverance') ಒಂದು ಶ್ರೇಷ್ಠವಾದ ಸದ್ಗುಣವೆಂದು ಬಹಳ ಒತ್ತು ನೀಡಿ ಹೇಳಲಾಗಿದೆ. "ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸುವರು ... ಆದರೆ ಕೊನೆಯ ವರೆಗೂ ತಾಳುವವನು ರಕ್ಷಣೆ ಹೊಂದುವನು," (ಮತ್ತಾ. 24:9,13) ಎಂದು ಸ್ವತಃ ಯೇಸುವೇ ಹೇಳಿದರು.

    "ಪವಿತ್ರಾತ್ಮನಲ್ಲಿ" ಜೀವಿಸುವುದು

    ಯೋಹಾನನು ಈ ಪ್ರಕಟಣೆಯನ್ನು ಕರ್ತನ ದಿನದಂದು ಹೊಂದಿದನು (ಪ್ರಕ. 1:10). ವಾರದ ಮೊದಲನೆಯ ದಿನವನ್ನು "ಕರ್ತನ ದಿನ" ಎಂದು ಕರೆಯಲಾಗುತ್ತದೆ, ಏಕೆಂದರೆ ಆ ದಿನದಂದು ಯೇಸುವು ಮರಣದಿಂದ ಜೀವಿತನಾಗಿ ಎದ್ದನು ಮತ್ತು ಪಾಪ, ಸೈತಾನ, ಮರಣ ಮತ್ತು ಸಮಾಧಿಗಳನ್ನು ಜಯಿಸಿದನು.

    ಆದಿ ಶಿಷ್ಯರು ವಾರದ ಮೊದಲನೆಯ ದಿನದಲ್ಲಿ, ಒಬ್ಬರನ್ನೊಬ್ಬರು ಬಲಗೊಳಿಸುವದಕ್ಕೆ ಮತ್ತು ರೊಟ್ಟಿ ಮುರಿಯುವದಕ್ಕೆ ಒಟ್ಟಾಗಿ ಸೇರುತ್ತಿದ್ದರು (ಅ.ಕೃ. 20:7; 1 ಕೊರಿ. 16:2). ವರ್ಷದಲ್ಲಿ ಅವರಿಗೆ ವಿಶೇಷ ದಿನಗಳು ಇರಲಿಲ್ಲ. ಅವರಿಗೆ "ಶುಭ ಶುಕ್ರವಾರ" ಅಥವಾ "ಈಸ್ಟರ್" ಅಥವಾ "ಕ್ರಿಸ್ಮಸ್" ಹಬ್ಬಗಳು ಇರಲಿಲ್ಲ. ದಿನ ಮತ್ತು ಕಾಲ ಮುಂತಾದವುಗಳನ್ನು ಆಚರಿಸುವ ಸಂಪ್ರದಾಯದಿಂದ ಅವರು ಬಿಡುಗಡೆ ಹೊಂದಿದ್ದರು, ಏಕೆಂದರೆ ಅವರು ಹೊಸ ಒಡಂಬಡಿಕೆಗೆ ಸೇರಿದವರು ಆಗಿದ್ದರು (ಕೊಲೊ. 2:16,17).

    ಯೋಹಾನನು "ಆತ್ಮನಲ್ಲಿ ಇದ್ದನು", ಹಾಗಾಗಿ ಅವನು ಕರ್ತನ ಸ್ವರವನ್ನು ಕೇಳಿಸಿಕೊಂಡನು. ನಾವು ಸಹ - ಪವಿತ್ರಾತ್ಮನಲ್ಲಿ ಇದ್ದರೆ - ಆತನ ಸ್ವರವನ್ನು ಕೇಳಿಸಿಕೊಳ್ಳಬಹುದು. ನಮ್ಮ ಮನಸ್ಸು ಯಾವುದರ ಮೇಲಿದೆ, ಎಂಬುದು ಇಲ್ಲಿ ಬಹಳ ಮುಖ್ಯವಾದ ಸಂಗತಿಯಾಗಿದೆ. ನಾವು ಮನಸ್ಸನ್ನು ಭೂಲೋಕದ ಸಂಗತಿಗಳ ಮೇಲೆ ಇಟ್ಟಿದ್ದರೆ, ಆಗ ನಾವು ಕೇಳಿಸಿಕೊಳ್ಳುವ ಧ್ವನಿಗಳು ಈ ಲೋಕದ ಸಂಗತಿಗಳ ಕುರಿತಾದವು ಆಗಿರುತ್ತವೆ.

    ಉದಾಹರಣೆಗೆ, ನಮ್ಮ ಸುತ್ತಲಿನ ಗಾಳಿಯಲ್ಲಿ ’ರೇಡಿಯೋ ಅಲೆ’ಯ ರೂಪದಲ್ಲಿ, ಅನೇಕ ವಿಧವಾದ ಧ್ವನಿ, ಚಿತ್ರ ಮತ್ತು ಮಾಹಿತಿಗಳು ಅಡಗಿವೆ ಎಂದು ನಮಗೆ ಗೊತ್ತಿದೆ. ನಾವು ರೇಡಿಯೋ, ಟಿವಿ ಅಥವಾ ಮೊಬೈಲ್ ಫೋನ್ ಮೂಲಕ ಕೇಳುವ ಅಥವಾ ನೋಡುವ ಧ್ವನಿ, ಚಿತ್ರ ಅಥವಾ ಮಾಹಿತಿಯು, ಆ ಸಾಧನದ ’ಟ್ಯೂನರ್’ ಯಾವ ರೇಡಿಯೋ ಅಲೆಯೊಂದಿಗೆ ಜೋಡಣೆಯಾಗಿದೆ, ಎಂಬುದರ ಮೇಲೆ ಆಧರಿಸಿದೆ. ನೀವು ’ಟಿವಿ’ ಅಥವಾ ’ಮೊಬೈಲ್’ನಲ್ಲಿ ದೇವರ ವಾಕ್ಯವನ್ನಾದರೂ ಕೇಳಿಸಿಕೊಳ್ಳಬಹುದು ಅಥವಾ ಸೈತಾನನ ’ರಾಕ್ ಮ್ಯೂಸಿಕ್’ ಆದರೂ ಕೇಳಿಸಿಕೊಳ್ಳಬಹುದು. ಆಯ್ಕೆಯು ನಿಮ್ಮದಾಗಿದೆ.

    ನಮ್ಮ ಮನಸ್ಸು ಸಹ ಇದೇ ತರಹ ಇದೆ. ನಾವು ಆತ್ಮನಲ್ಲಿ ಇದ್ದರೆ - ಅಂದರೆ ನಾವು ಪವಿತ್ರಾತ್ಮನಿಂದ ತುಂಬಿದ್ದು ಮತ್ತು ನಮ್ಮ ಮನಸ್ಸನ್ನು ಮೇಲಿನ ಸಂಗತಿಗಳಲ್ಲಿ ಇಟ್ಟರೆ (ಕೊಲೊ. 3:2) - ನಾವು ಕರ್ತನ ಸ್ವರವನ್ನು ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ.

    ಆದರೆ ನಮ್ಮ ಸುತ್ತಲಿನ ವಾತಾವರಣದಲ್ಲಿ, ನಮ್ಮ ಗಮನವನ್ನು ಸೆಳೆಯಲು ಹವಣಿಸುವ ಇತರ ಧ್ವನಿಗಳೂ ಇವೆ. ಅಲ್ಲಿ ನಿಮಗೆ ಹಲವು ವಿಧವಾದ ಸಲಹೆ, ಮಾಹಿತಿಗಳು ಸಿಗುತ್ತವೆ - ಹೇಗೆ ಹೆಚ್ಚು ಹಣವನ್ನು ಸಂಪಾದಿಸುವುದು, ಹೇಗೆ ಕುಟುಂಬದ ಆಸ್ತಿಯಲ್ಲಿ ನಿಮ್ಮ ಪಾಲನ್ನು ಪಡೆಯುವುದು, ನಿಮ್ಮನ್ನು ವಂಚಿಸಿದವರ ವಿರುದ್ಧ ಹೇಗೆ ಸೇಡು ತೀರಿಸುವುದು ಮತ್ತು ನಿಮ್ಮ ಕುರಿತಾಗಿ ಸುಳ್ಳು ಕಥೆ ಹರಡುವವರ ವಿರುದ್ಧ ಹೇಗೆ ಸಮರ್ಥಿಸಿಕೊಳ್ಳುವುದು ... ಇತ್ಯಾದಿ, ಇತ್ಯಾದಿ. ಸೈತಾನನ ’ರೇಡಿಯೋ ಕೇಂದ್ರಗಳು’ ಸುಳ್ಳು ಸಮಾಚಾರ, ಕಹಿಭಾವನೆ ಮತ್ತು ತಳಮಳದ ವಾರ್ತೆಯನ್ನು ಹರಡಿಸುವುದರಲ್ಲಿ (24 x 7 ತಾಸುಗಳು) ತೊಡಗಿವೆ. ನೀವು ’ಟ್ಯೂನ್’ ಮಾಡಿದರೆ ಸಾಕು, ಒಡನೆಯೇ ಆತನ ಪ್ರಚಾರವು ನಿಮ್ಮ ಬಳಿಗೆ ಬರುತ್ತದೆ!!

    ವಿಶ್ವಾಸಿಗಳು ದೇವರು ತಮ್ಮೊಂದಿಗೆ ಮಾತಾಡುವುದಿಲ್ಲ ಎಂದು ದೂರುವಾಗ, ಅದಕ್ಕೆ ಕಾರಣ ದೇವರ ಮೌನವಲ್ಲ. ದೇವರು ಎಡೆಬಿಡದೆ ಮಾತಾಡುತ್ತಿದ್ದಾರೆ. ಆದರೆ ವಿಶ್ವಾಸಿಗಳ ಮನಸ್ಸುಗಳು ಈ ಲೋಕ ಮತ್ತು ಅದರ ಚಟುವಟಿಕೆಗಳ ಕಡೆಗೆ ತಿರುಗಿವೆ. ನನಗೆ ಚೆನ್ನಾಗಿ ಗೊತ್ತಿದೆ, ಆತ್ಮನು ಈಗಾಗಲೇ ನಮ್ಮೊಂದಿಗೆ ಮಾತಾಡಲು ಬಹಳಷ್ಟು ಪ್ರಯತ್ನಿಸಿದ್ದಾನೆ, ಆದರೆ ನಾವು ’ಆತ್ಮನಲ್ಲಿ ಇರದಿದ್ದುದರಿಂದ’, ಆ ಮಾತುಗಳನ್ನು ಕೇಳಲಾರದೇ ಹೋದೆವು.

    ನೀವು ಒಂದು ಸಭಾಕೂಟದಲ್ಲಿ ಕುಳಿತುಕೊಂಡು ಬೋಧಕರ ಮಾತನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೂ, ಆತ್ಮನು ನಿಮಗೆ ಹೇಳುತ್ತಿರುವುದನ್ನು ಒಂದಿಷ್ಟೂ ಕೇಳಿಸಿಕೊಳ್ಳದೇ ಇರಬಹುದು. ನಿಮ್ಮ ಪಕ್ಕದ್ದಲ್ಲಿ ಕುಳಿತಿರುವ ಇನ್ನೊಬ್ಬನು "ಆತ್ಮನಲ್ಲಿದ್ದು," ಯೋಹಾನನು ಕೇಳಿಸಿಕೊಂಡ ಹಾಗೆ ಕರ್ತರ ಧ್ವನಿಯನ್ನು ಚೆನ್ನಾಗಿ ಕೇಳಿಸಿಕೊಳ್ಳಬಹುದು. ಯೋಹಾನನಿಗೆ ಕರ್ತರ ಧ್ವನಿಯು ಸ್ಪಷ್ಟವಾಗಿ, ತುತ್ತೂರಿಯ ಧ್ವನಿಯಂತೆ ಕೇಳಿಸಿತು! ದೇವರು ಅಷ್ಟು ಜೋರಾಗಿ ಮಾತನಾಡುತ್ತಾರೆ! ಆದರೆ ಕಿವುಡಾಗಿರುವವರಿಗೆ ತುತ್ತೂರಿಯ ಧ್ವನಿಯೂ ಕೇಳಿಸದು.

    ನೀವು ಪ್ರತಿದಿನವೂ - ಮುಖ್ಯವಾಗಿ ಈ ಯುಗದ ಕಡೇ ದಿನಗಳಲ್ಲಿ - ನಿಮ್ಮನ್ನು ’ಆತ್ಮನಲ್ಲಿ ಇರಿಸಿಕೊಳ್ಳುವಂತೆ’, ನಾನು ನಿಮ್ಮಲ್ಲಿ ಪ್ರತಿಯೊಬ್ಬರನ್ನು ಉತ್ತೇಜಿಸಿ, ಎಚ್ಚರಿಸುತ್ತೇನೆ. ಪಾಪದ ಕುರಿತಾಗಿ ಸೂಕ್ಷ್ಮತೆಯನ್ನು ಬೆಳೆಸಿಕೊಂಡು, ದೇವರ ಸನ್ನಿಧಿಯಲ್ಲಿ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆಗ ನಿಮ್ಮ ಕಿವಿಗಳು ತೆರೆದು, ಕರ್ತನು ಹೇಳುವ ಮಾತು ನಿಮಗೆ ಕೇಳಿಸುತ್ತದೆ.

    ಅಧ್ಯಾಯ 3
    ಪುನರುತ್ಥಾನನಾದ ಕರ್ತನು

    "ನೀನು ನೋಡುವದನ್ನು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯ ಎಂಬೀ ಏಳು ಪಟ್ಟಣಗಳ ಸಭೆಗಳಿಗೆ ಕಳುಹಿಸಬೇಕು, ಎಂದು ಅದು ನುಡಿಯಿತು. "ನನ್ನ ಸಂಗಡ ಮಾತಾಡುತ್ತಿದ್ದ ಶಬ್ದವು ಯಾರದೆಂದು ನೋಡುವದಕ್ಕೆ ಹಿಂದಕ್ಕೆ ತಿರುಗಿದೆನು. "ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ, ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನೂ ಕಂಡೆನು. ಆತನು ನಿಲುವಂಗಿಯನ್ನು ತೊಟ್ಟು, ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. "ಆತನ ತಲೆಯ ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. "ಆತನ ಕಣ್ಣುಗಳು ಬೆಂಕಿಯ ಉರಿಯಂತೆಯೂ, ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತೆಯೂ, ಆತನ ಧ್ವನಿಯು ಜಲ ಪ್ರವಾಹದ ಘೋಷದಂತೆಯೂ ಇದ್ದವು. "ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು; ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು. "ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು - ಹೆದರಬೇಡ, ನಾನು ಮೊದಲನೆಯವನೂ, ಕಡೆಯವನೂ, ಸದಾ ಜೀವಿಸುವವನೂ ಆಗಿದ್ದೇನೆ. "ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ; ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಅವೆ. "ಆದದರಿಂದ ನೀನು ಕಂಡವುಗಳನ್ನೂ, ಈಗ ನಡೆಯುತ್ತಿರುವವುಗಳನ್ನೂ, ಮುಂದೆ ಆಗಬೇಕಾದವುಗಳನ್ನೂ ಬರೆ. "ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ಗೂಡಾರ್ಥವನ್ನು ವಿವರಿಸುತ್ತೇನೆ - ಆ ಏಳು ನಕ್ಷತ್ರಗಳು ಅಂದರೆ ಆ ಏಳು ಸಭೆಗಳ ದೂತರು; ಆ ಏಳು ದೀಪಸ್ತಂಭಗಳು ಅಂದರೆ ಆ ಏಳು ಸಭೆಗಳು." (ಪ್ರಕಟನೆ 1:11-20)

    .

    ಏಳು ಸ್ಥಳೀಯ ಸಭೆಗಳು

    ದೇವರು ನಮಗೆ ಕೊಡುವ ಸಂದೇಶಗಳು ನಮ್ಮ ಸ್ವಂತ ಉಪಯೋಗಕ್ಕಾಗಿ ಮಾತ್ರವಲ್ಲದೆ, ಇತರರಿಗೂ ಸಹ ಉಪಯುಕ್ತವಾಗುತ್ತವೆ. ಇಲ್ಲಿ ಯೋಹಾನನಿಗೆ ಆದೇಶಿಸಲಾದಂತೆ (ಪ್ರಕ. 1:11), ದೇವರು ನಮ್ಮೊಂದಿಗೆ ಮಾತನಾಡುವಾಗ ಅದನ್ನು ಬರೆದಿಡುವುದು ಒಂದು ಒಳ್ಳೆಯ ಅಭ್ಯಾಸವಾಗಿದೆ - ಇಲ್ಲವಾದರೆ ದೇವರು ಯೋಹಾನನಿಗೆ ಹೇಳಿದ್ದನ್ನು ಅವನು ಮರೆತುಬಿಡುವ ಸಾಧ್ಯತೆಯಿತ್ತು.

    ಇಲ್ಲಿ ಕೊಡಲ್ಪಟ್ಟ ಸಂದೇಶವು ಆಸ್ಯ ಸೀಮೆಯ ಏಳು ಸಭೆಗಳಿಗಾಗಿ ಆಗಿತ್ತು. ಆ ಕಾಲದಲ್ಲಿ ’ಆಸ್ಯ’ ಎಂದು ಕರೆಲಾಗುತ್ತಿದ್ದ ಪ್ರದೇಶವು ಇಂದಿನ ತುರ್ಕಿ (Turkey) ದೇಶಕ್ಕೆ ಸೇರಿದ ಒಂದು ಸಣ್ಣ ಭಾಗವಾಗಿದೆ. ಈ ಏಳು ಸಭೆಗಳು 75 ಮೈಲು (ಸುಮಾರು 120 ಕಿ.ಮಿ.) ಪರಿಮಿತಿಯ ಪ್ರದೇಶದಲ್ಲಿದ್ದವು. ಅವು ಒಂದಕ್ಕೊಂದು ಇಷ್ಟು ಸಮೀಪವಾಗಿದ್ದರೂ, ಅವುಗಳನ್ನು ಒಟ್ಟಾಗಿ ’ಆಸ್ಯದ ಸಭೆ’ ಎಂದು ಕರೆಯಲಾಗಲಿಲ್ಲ ಎಂಬುದು ಗಮನಾರ್ಹವಾಗಿದೆ. ಅವುಗಳನ್ನು ’ಆಸ್ಯದ ಸಭೆಗಳು’ ಎಂದು ಕರೆಯಲಾಯಿತು.

    ಇದೊಂದು ಸಣ್ಣ ವಿಷಯವಾದರೂ ಬಹಳ ಮುಖ್ಯವಾದದ್ದಾಗಿದೆ. "ಆಸ್ಯದ ಸಭೆ" ಎಂಬ ಹೆಸರು, ಈ ಸಭೆಗಳು ಒಂದು ಕೇಂದ್ರ ಕಛೇರಿಯನ್ನು ಹೊಂದಿರುವ ಒಂದು ಕ್ರೈಸ್ತ ಪಂಗಡಕ್ಕೆ ('denomination') ಸೇರಿವೆ, ಎಂಬ ಅರ್ಥವನ್ನು ಕೊಡುತ್ತಿದ್ದವು. ಆದರೆ "ಆಸ್ಯದ ಸಭೆಗಳು" ಎಂಬ ಹೆಸರು, ಪ್ರತಿಯೊಂದು ಸಭೆ ನೇರವಾಗಿ ಕರ್ತನ ಒಡೆತನದಲ್ಲಿದ್ದ ಸ್ಥಳೀಯ ಸಭೆಯಾಗಿದೆ, ಎಂಬುದನ್ನು ಸೂಚಿಸುತ್ತದೆ.

    ಸಭೆಯು ಕ್ರಿಸ್ತನಿಂದ ಕಟ್ಟಲ್ಪಟ್ಟ ದೇವರ ಒಂದು ನಿರ್ಮಾಣವಾಗಿದೆ. ಆದರೆ ಕ್ರೈಸ್ತ ಪಂಗಡಗಳು ('denominations') ಮನುಷ್ಯರ ನಿರ್ಮಾಣಗಳಾಗಿವೆ. ದೇವರ ಚಿತ್ತ ಪ್ರತಿಯೊಂದು ಸಭೆಯು ನೇರವಾಗಿ ಕ್ರಿಸ್ತನ ಒಡೆತನದಲ್ಲಿ ಇರಬೇಕು ಮತ್ತು ಯಾವುದೋ ಕ್ರೈಸ್ತ ಪಂಗಡದ ಒಂದು ಅಂಗವಾಗಬಾರದು, ಎಂಬುದನ್ನು ಅಪೊಸ್ತಲರ ಎಲ್ಲಾ ಭೋಧನೆಗಳು ಮತ್ತು ಬರಹಗಳು ಸ್ಪಷ್ಟಪಡಿಸುತ್ತವೆ.

    ಈ ಪತ್ರಗಳನ್ನು ಏಳು ಸಭೆಗಳಿಗೆ ವಿತರಣೆಗಾಗಿ ಕಳುಹಿಸಲು ’ಬಿಷಪ್’ ('Bishop') ಅಥವಾ ’ಮೇಲ್ವಿಚಾರಕ’ ('Superintendent') ಅಧಿಕಾರಿ ಯಾರೂ ಇರಲಿಲ್ಲ. ಯೋಹಾನನು ಪ್ರತಿಯೊಂದು ಪತ್ರವನ್ನು ವೈಯಕ್ತಿಕವಾಗಿ ಆ ಸಭೆಯ ದೂತನಿಗೆ ಕಳುಹಿಸ ಬೇಕಾಗಿತ್ತು - ಏಕೆಂದರೆ ಪ್ರತಿಯೊಂದು ಸಭೆಯು ಒಂದು ಸ್ವತಂತ್ರ ಘಟಕವಾಗಿತ್ತು. ಕರ್ತನು ಅಪೊಸ್ತಲರನ್ನು ಸಭೆಗೆ ನೀಡಿದ್ದನು. ಸ್ವತಃ ಯೋಹಾನನು ಅವರಲ್ಲಿ ಒಬ್ಬನಾಗಿದ್ದನು. ಆದರೆ ಕರ್ತನು ಬಿಷಪರುಗಳು ಅಥವಾ ಮೇಲ್ವಿಚಾರಕರುಗಳಾಗಿ ಯಾರನ್ನೂ ನೇಮಿಸಿರಲಿಲ್ಲ.

    ಉದಾಹರಣೆಗೆ, "ಭಾರತ ದೇಶದ ಸಭೆ" ಎಂದು ಕರೆಯಲ್ಪಡುವ ಒಂದು ಸಭೆ ಇರುವುದಿಲ್ಲ. ಭಾರತದಲ್ಲಿ ಸಭೆಗಳು ಇವೆ ಮತ್ತು ಇವುಗಳು ಬೇರೆ ಬೇರೆ ಸ್ಥಳಗಳಲ್ಲಿ ಕರ್ತನಿಂದ ಕಟ್ಟಲ್ಪಟ್ಟು, ಪ್ರತಿಯೊಂದೂ ಕರ್ತನ ನೇರವಾದ ಒಡೆತನದಲ್ಲಿ ಇರುತ್ತದೆ.

    ಸೈತಾನನ ಅಂತಿಮ ಗುರಿ ತನ್ನ ವಿಶ್ವವ್ಯಾಪಿ ಕಪಟ "ಸಭೆ"ಯನ್ನು, ಅಂದರೆ ಬಾಬೆಲನ್ನು ಕಟ್ಟುವದಾಗಿದೆ. ಈ ಗುರಿಯನ್ನು ಸಾಧಿಸುವ ಮೊದಲ ಹೆಜ್ಜೆಯಾಗಿ, ಅವನು ಅನೇಕ ಶತಮಾನಗಳ ಹಿಂದೆಯೇ ಸಭೆಗಳನ್ನು ಪಂಗಡಗಳನ್ನಾಗಿ ವಿಭಜಿಸಿದನು. ಹೀಗೆ ಮಾಡದೆ ಬಾಬೆಲನ್ನು ಕಟ್ಟುವದು ಅಸಾಧ್ಯ ಕಾರ್ಯವೆಂದು ಆತನಿಗೆ ಗೊತ್ತಿತ್ತು. ನಾವು ಸೈತಾನನ ಕುತಂತ್ರಗಳನ್ನು ಅರಿಯದವರು ಆಗಿರಬಾರದು.

    ಏಳು ಚಿನ್ನದ ದೀಪಸ್ತಂಭಗಳು ಏಳು ಸಭೆಗಳನ್ನು ಸೂಚಿಸುತ್ತವೆ (ಪ್ರಕ. 1:20). ಹಳೆಯ ಒಡಂಬಡಿಕೆಯ ಕೆಳಗೆ, ದೇವಾಲಯದಲ್ಲಿ ಏಳು ಕೊಂಬೆಗಳ ಒಂದು ದೀಪಸ್ತಂಭ ಇತ್ತು. ಇದಕ್ಕೆ ಕಾರಣ, ಇಸ್ರಾಯೇಲಿನ ಎಲ್ಲಾ ಕುಲಗಳು ಒಂದೇ "ಪಂಗಡ"ದ ಕೊಂಬೆಗಳಾಗಿದ್ದು, ಯೆರೂಸಲೇಮಿನಲ್ಲಿ ಅದರ ಕೇಂದ್ರ ಸ್ಥಾನ ಮತ್ತು ಅದರ ನಾಯಕರುಗಳು ಇದ್ದರು.

    ಆದರೆ ಹೊಸ ಒಡಂಬಡಿಕೆಯ ಕೆಳಗೆ ಇದು ವಿಭಿನ್ನವಾಗಿದೆ. ಇಲ್ಲಿ ಏಳು ಬೇರೆ ಬೇರೆ ದೀಪಸ್ತಂಭಗಳಿದ್ದು, ಪ್ರತಿಯೊಂದೂ ಒಂದರಿಂದ ಇನ್ನೊಂದು ಪ್ರತ್ಯೇಕವಾಗಿದೆ. ಇದಕ್ಕೆ ಕಾರಣ, ನಾವು ಈಗಾಗಲೇ ನೋಡಿರುವಂತೆ, ಪ್ರತಿಯೊಂದು ಸಭೆಯು ಸ್ವತಂತ್ರವಾಗಿ ಕ್ರಿಸ್ತನ ಒಡೆತನದಲ್ಲಿ ಇರುತ್ತದೆ; ಆದಾಗ್ಯೂ ಶಿರಸ್ಸಿನ ಮೂಲಕ, ಇತರ ಸಭೆಗಳೊಂದಿಗೆ ಅನ್ಯೋನ್ಯ ಐಕ್ಯತೆಯನ್ನು ಹೊಂದಿರುತ್ತದೆ.

    ಸಭೆಯ ‘ದೀಪಸ್ತಂಭ’ವೆಂಬ ಹೆಸರು, ದೇವರ ದೃಷ್ಟಿಯಲ್ಲಿ ಅದರ ಮೂಲ ಉದ್ದೇಶ ಬೆಳಕು ಕೊಡುವದು, ಎಂಬುದನ್ನು ಸೂಚಿಸುತ್ತದೆ. ದೀಪಸ್ತಂಭಗಳು ಬಂಗಾರದಿಂದ ಮಾಡಲ್ಪಟ್ಟಿರುವದು, ಒಂದು ನಿಜವಾದ ಸಭೆಯ ದೈವಿಕ ಮೂಲವನ್ನು ಸೂಚಿಸುತ್ತದೆ. ಅದು ಕರ್ತನ ನಿರ್ಮಾಣ, ಮತ್ತು ಮನುಷ್ಯರದ್ದಲ್ಲ.

    ಒಂದು ದೀಪಸ್ತಂಬದ ಉದ್ದೇಶ ಕೇವಲ ಒಂದು ಅಲಂಕಾರದ ವಸ್ತುವಾಗಿ ಅಲ್ಲ. ಸಭೆಯೂ ಸಹ ಕೇವಲ ತೋರಿಕೆಗಾಗಿ ಇರುವುದಿಲ್ಲ! ಪ್ರತಿಯೊಂದು ಸಭೆಯೂ ದೇವರ ವಾಕ್ಯವೆಂಬ ’ಬೆಳಕ’ನ್ನು ಎತ್ತಿ ಹಿಡಿಯ ಬೇಕಾಗಿದೆ; ಅಂಧಕಾರದ ಈ ಪ್ರಪಂಚದಲ್ಲಿ ಅದು ಮಾತ್ರವೇ ನಮ್ಮ ದಾರಿಯ ಬೆಳಕಾಗಿದೆ (ಕೀರ್ತನೆ. 119: 105). ಆ ’ಬೆಳಕ’ನ್ನು ಎತ್ತಿ ಹಿಡಿಯುವ ಬದಲು, "ಸಭೆಗಳು" ಎಂದು ಕರೆಯಲ್ಪಟ್ಟವುಗಳು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುವದು ಮತ್ತು ಸಮಾಜ ಸೇವೆ ಮಾಡುವದಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲು ಆರಂಭಿಸಿದಾಗ, ಅವುಗಳು ದೇವರ ಪ್ರಾಥಮಿಕ ಉದ್ದೇಶದಿಂದ ದೂರ ಸರಿದಿವೆ ಎಂಬುದು ನಮಗೆ ಖಚಿತವಾಗುತ್ತದೆ.

    ಪುನರುತ್ಥಾನನಾದ ಕರ್ತನು

    ಯೋಹಾನನು ತನ್ನೊಂದಿಗೆ ಯಾರು ಮಾತಾಡುತ್ತಿದ್ದಾರೆ ಎಂದು ತಿರುಗಿ ನೋಡಿದಾಗ, ಆತನು ಯೇಸುವನ್ನು ಕಂಡನು (ಪ್ರಕ. 1:12,13). ಆದರೆ ಯೇಸುವು ಸಭೆಗಳ ನಡುವೆ ಇದ್ದುದನ್ನು ಆತನು ಕಂಡನು. ಕರ್ತನು ತನ್ನನ್ನು ಪ್ರಕಟಿಸಿಕೊಳ್ಳುವದು ಮತ್ತು ಇತರರ ಜೊತೆಗೆ ಮಾತನಾಡುವದು ಸ್ಥಳೀಯ ಸಭೆಯ ಮೂಲಕ ಆಗಿರಬೇಕೆಂದು ಆತನ ಬಯಕೆಯಾಗಿದೆ.

    ಸತ್ಯವೇದದಲ್ಲಿ ಉಲ್ಲೇಖಿಸಲಾದ ದೇವರ ಮೊದಲ ವಾಸಸ್ಥಳ ಮೋಶೆಯು ಅಡವಿಯಲ್ಲಿ ಕಂಡ ಉರಿಯುವ ಪೊದೆಯಾಗಿತ್ತು (ಧರ್ಮೋ. 33:16). ಪತ್ಮೊಸಿನಲ್ಲಿ ಯೋಹಾನನು ತಿರುಗಿ ನೋಡಿದಂತೆ, ಮೋಶೆಯು ಸಹ ಹೋಗುತ್ತಿದ್ದ ದಾರಿಯನ್ನು ಬಿಟ್ಟು ಆ ಕಡೆಗೆ ತಿರುಗಿದಾಗ, ಆ ಅದ್ಭುತವಾದ ದೃಶ್ಯವನ್ನು ನೋಡಿದನು. ಮತ್ತು ಆಗ ಕರ್ತನು ಅವನೊಂದಿಗೆ ಮಾತನಾಡಿದನು. (ವಿಮೋ. 3:3).

    ಈ ದಿನ ಕ್ರೈಸ್ತಸಭೆಯು ದೇವರ ವಾಸಸ್ಥಳವಾಗಿದೆ. ಪ್ರತಿಯೊಂದು ಸಭೆಯು ಸಹ ಆ ಉರಿಯುವ ಪೊದೆಯಂತೆ ಆತನ ಪವಿತ್ರಾತ್ಮನಿಂದ ಉರಿಯುತ್ತಿರಬೇಕು ಎಂದು ದೇವರು ಬಯಸುತ್ತಾರೆ. ಜನರು ಸ್ಥಳೀಯ ಸಭೆಯನ್ನು ನೋಡುವಾಗ, ಆ ಸಭೆಯ ಸದಸ್ಯರ ಮೂಲಕ ಅವರು ಕ್ರಿಸ್ತನ ಜೀವವು ಪ್ರಕಟವಾಗುವುದನ್ನು ನೋಡಲು ಸಾಧ್ಯವಾಗಬೇಕು. ಆಗ ದೇವರು ಸಭೆಯ ಮೂಲಕ ಜನರೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ.

    ಯೋಹಾನನು ಮುಂದೆ ತಾನು ನೋಡಿದ ಕರ್ತನಾದ ಯೇಸುವನ್ನು ವಿವರಿಸುತ್ತಾನೆ. ಕರ್ತನು ಜೀವಿತನಾಗಿ ಎದ್ದಿದ್ದರೂ, ಆತನು ತನ್ನನ್ನು ಶಾಶ್ವತವಾಗಿ ಮನುಷ್ಯಕುಲದೊಂದಿಗೆ ಗುರುತಿಸಿಕೊಂಡಿರುವ ಸಂಗತಿಯನ್ನು ಒತ್ತಿ ಹೇಳಲಿಕ್ಕಾಗಿ, ಆತನನ್ನು ಇನ್ನೂ "ಮನುಷ್ಯಕುಮಾರ"ನೆಂದು ಕರೆಯಲಾಗುತ್ತಿದೆ.

    ಪಾದಗಳ ವರೆಗೆ ಚಾಚಿದ್ದ ಆತನ ಉದ್ದನೆಯ ಉಡುಪು (ನಿಸ್ಸಂದೇಹವಾಗಿ ಬಿಳಿಯ ಬಣ್ಣದ್ದು), ನಮಗಾಗಿ ಮಧ್ಯಸ್ತಿಕೆ ವಹಿಸುವ ಆತನ ಮಹಾಯಾಜಕತ್ವ ಸೇವೆಯ ಸೂಚಕವಾಗಿದೆ - ಏಕೆಂದರೆ ಯೆಹೂದ್ಯರ ಮಹಾಯಾಜಕನು ಪ್ರತಿ ವರ್ಷವೂ ದೋಷಪರಿಹಾರಕ ದಿವಸದಂದು ('Day of Atonement'), ಇದೇ ರೀತಿಯ ಉಡುಪನ್ನು ಧರಿಸಿಕೊಂಡು ದೇವದರ್ಶನದ ಗುಡಾರದ ಮಹಾ ಪರಿಶುದ್ಧ ಸ್ಥಳವನ್ನು ಪ್ರವೇಶಿಸುತ್ತಿದ್ದನು (ಪ್ರಕ. 1:13)

    .

    ಕರ್ತನು ತನ್ನ ಎದೆಗೆ ಬಂಗಾರದ ಪಟ್ಟಿಯನ್ನು ಕಟ್ಟಿಕೊಂಡಿದ್ದನು (ಪ್ರಕ. 1:13). ಬಂಗಾರವು ದೈವಿಕ ಗುಣವನ್ನು ಸೂಚಿಸುತ್ತದೆ. ನಡುಕಟ್ಟು ಮತ್ತು ಸೊಂಟಪಟ್ಟಿಗಳು (ಯೆಶಾ. 11:5ರಲ್ಲಿ ಹೇಳಿರುವಂತೆ) ನೀತಿ ಮತ್ತು ಪ್ರಾಮಾಣಿಕತೆಯ ಸಂಕೇತಗಳಾಗಿವೆ. ಚಿನ್ನದ ಪಟ್ಟಿಯು ಯೇಸುವಿನ ಭೂಲೋಕದ ಜೀವಿತದಲ್ಲಿ ಕಂಡು ಬಂದ ದೇವರ ಪರಿಪೂರ್ಣ ನೀತಿಯನ್ನು ಮತ್ತು ಆತನು ನೀಡಿರುವ ವಾಗ್ದಾನಗಳನ್ನು ಪೂರೈಸುವುದರಲ್ಲಿ ಆತನ ಪರಿಪೂರ್ಣ ನಂಬಿಗಸ್ತಿಕೆಯನ್ನು ಎತ್ತಿ ತೋರಿಸುತ್ತದೆ.

    ಆತನ ತಲೆ ಮತ್ತು ಕೂದಲು ಬಿಳಿಯ ಉಣ್ಣೆಯಂತಿದ್ದವು (ಪ್ರಕ. 1:14). ಇದೇ ನಿದರ್ಶನದ ಮೂಲಕ, ದಾನಿ. 7:9ರಲ್ಲಿ ದೇವರ ನಿತ್ಯತ್ವವನ್ನು (ಅಂತ್ಯವಿಲ್ಲದ ಜೀವಿತವನ್ನು) ತೋರಿಸಲಾಗಿದೆ. ಬಿಳಿಯ ಕೂದಲು ಜ್ಞಾನದ ಸೂಚನೆಯೂ ಆಗಿದೆ. ಈ ರೀತಿಯಾಗಿ, ಯೇಸುವು ’ಮನುಷ್ಯಕುಮಾರ’ನಾಗಿದ್ದರೂ ಸಹ, ಆತನು ಆದಿ-ಅಂತ್ಯಗಳನ್ನು ಮೀರಿದ ನಿತ್ಯದೇವರು ಮತ್ತು ಪರಿಪೂರ್ಣ ಜ್ಞಾನಿಯೂ ಆಗಿದ್ದಾನೆ ಎಂಬ ಸತ್ಯವನ್ನು ಇದು ಒತ್ತಿ ಹೇಳುತ್ತದೆ.

    ಆತನ ಕಣ್ಣುಗಳು ಬೆಂಕಿಯ ಉರಿಯಂತಿದ್ದವು (ಪ್ರಕ. 1:15). ಅಂದರೆ,"ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆ ಇಲ್ಲದವೂ, ತೆರೆಯಲ್ಪಟ್ಟಂಥವೂ ಆಗಿವೆ" (ಇಬ್ರಿ. 4:13). ಆತನ ಕಣ್ಣುಗಳು ಎಲ್ಲಾ ಧಾರ್ಮಿಕ ಹೊರತೋರಿಕೆಯನ್ನು, ಎಲ್ಲಾ ಸವಿ ಮಾತುಗಳು, ಕಪಟ ಸಾಧುತ್ವದ ಮಾತುಗಳು ಮತ್ತು "ಭಕ್ತಿವೇಷ" ಇವೆಲ್ಲವನ್ನು ಹಾದು ಹೋಗಿ, ಒಳಸ್ಥಿತಿಯನ್ನು ನೋಡುತ್ತವೆ. ಅದೇ ರೀತಿ, ದೇವಭಯವುಳ್ಳ ವ್ಯಕ್ತಿಯ ಅಸ್ಪಷ್ಟ, ತೊದಲು ನುಡಿಗಳನ್ನು ದಾಟಿ, ಆತನ ಹೃದಯದ ಯಥಾರ್ಥತೆಯನ್ನು ಸಹ ಅರ್ಥಮಾಡಿಕೊಳ್ಳುತ್ತವೆ. ಇದರ ಪರಿಣಾಮವಾಗಿ, ಆತನು ಮಾಡುವ ಮೌಲ್ಯಮಾಪನವು ಮನುಷ್ಯನಿಗಿಂತ ಸಂಪೂರ್ಣವಾಗಿ ಬೇರೆಯಾಗಿರುತ್ತದೆ.

    ಆತನ ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು (ಪ್ರಕ. 1:15). ಯಜ್ಞವೇದಿಯ ನಿರ್ಮಾಣಕ್ಕೆ (ದೇವದರ್ಶನ ಗುಡಾರದ ಹೊರಗಿನ ಪ್ರಾಕಾರದಲ್ಲಿ) ತಾಮ್ರವನ್ನು ಉಪಯೋಗಿಸಲಾಯಿತು; ದೋಷಪರಿಹಾರಕ ಯಜ್ಞವನ್ನು ('sin offering') ಇದರ ಮೇಲೆ ಅರ್ಪಿಸುತ್ತಿದ್ದರು. ಆದ್ದರಿಂದ ತಾಮ್ರವು ಕಲ್ವಾರಿಯಲ್ಲಿ ದೇವರು ಮನುಷ್ಯನ ಪಾಪದ ನ್ಯಾಯತೀರ್ಪು ಮಾಡುವದನ್ನು ಸಂಕೇತಿಸುತ್ತದೆ. ಸರ್ಪದ ತಲೆಯು ಜಜ್ಜಲ್ಪಟ್ಟ ಸಮಯದಲ್ಲಿ, ಯೇಸುವಿನ ಪಾದಗಳು ಶಿಲುಬೆಯ ಮೇಲೆ ತಿವಿಯಲ್ಪಡ ಬೇಕಾಗಿತ್ತು (ಆದಿ. 3:15).

    ಆತನ ಧ್ವನಿಯು ಜಲಪ್ರವಾಹದ ಘೋಷದಂತೆ ಇತ್ತು (ಪ್ರಕ. 1:15). ಜೀವಕರವಾದ ನೀರಿನ ಹೊಳೆಗಳು ಪವಿತ್ರಾತ್ಮನ ಸಂಕೇತವಾಗಿವೆ (ಯೋಹಾ. 7:37-39). ಯೇಸುವಿನ ಮಾತು ಯಾವಾಗಲೂ ಪವಿತ್ರಾತ್ಮನ ಮೃದುತ್ವ ಮತ್ತು ಜ್ಞಾನದಿಂದ ತುಂಬಿತ್ತು.

    ಆತನು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿದ್ದನು (ಪ್ರಕ. 1:16). ಆ ಏಳು ನಕ್ಷತ್ರಗಳು ಏಳು ಸಭೆಗಳ ದೂತರಾಗಿದ್ದಾರೆ (ಪ್ರಕ. 1:20). ಹೊಸ ಒಡಂಬಡಿಕೆಯ ಸಭೆಯು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಹಿರಿಯರಿಂದ ನಡೆಸಲ್ಪಡಬೇಕು ಎಂಬುದು ದೇವರ ಸಂಕಲ್ಪವಾಗಿದೆ (ಅ.ಕೃ. 14:23; ತೀತ. 1:5; ಅ.ಕೃ. 20:17). ಆದರೆ ದೇವರು ಸಾಮಾನ್ಯವಾಗಿ ಅವರಲ್ಲಿ ಒಬ್ಬ ಹಿರಿಯನನ್ನು ವಾಕ್ಯವನ್ನು ಹಂಚುವ ವರದ ಮೂಲಕ, ಸಭೆಗೆ ತನ್ನ ಸಂದೇಶಕನಾಗಿ ಸಿದ್ಧಗೊಳಿಸುತ್ತಾರೆ. ಆತನನ್ನು ಇಲ್ಲಿ "ಸಭೆಯ ದೂತನು" ಎಂಬದಾಗಿ ಉಲ್ಲೇಖಿಸಲಾಗಿದೆ. ("ದೇವದೂತ" ಎಂದು ಭಾಷಾಂತರ ಮಾಡಿರುವ ಗ್ರೀಕ್ ಪದದ ಮೂಲಾರ್ಥ "ಸಂದೇಶಕ" ಅಥವಾ "ದೂತ" ಎಂದಾಗಿದೆ).

    ಈ ದೂತರು ಕ್ರಿಸ್ತನ ಕೈಯಲ್ಲಿ ಭದ್ರವಾಗಿ ಹಿಡಿದಿಡಲ್ಪಟ್ಟಿದ್ದಾರೆ. ಆದ ಕಾರಣವೇ "ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡುವ ಹಿರಿಯರನ್ನು" ನಾವು ಎರಡರಷ್ಟು ಗೌರವಿಸುವಂತೆ ನಮಗೆ ಆಜ್ಞಾಪಿಸಲಾಗಿದೆ (1 ತಿಮೊ. 5:17).

    ಆದಾಗ್ಯೂ ಎಲ್ಲರಿಗೂ ಅವಶ್ಯವಾಗಿ ತಿಳಿಸಬೇಕಾದ ಒಂದು ವಿಷಯ, ಇಂದಿನ ಸಭಾಹಿರಿಯರಲ್ಲಿ ಹಲವರು ಮತ್ತು ದೇವರ ವಾಕ್ಯವನ್ನು ಬೋಧಿಸುವ ಅನೇಕರು ಕ್ರಿಸ್ತನ ಕೈಯಲ್ಲಿ ಹಿಡಿದಿಡಲ್ಪಟ್ಟಿಲ್ಲ, ಏಕೆಂದರೆ ಅವರು ತಮ್ಮನ್ನೇ ನೇಮಿಸಿಕೊಂಡಿದ್ದಾರೆ ಮತ್ತು ಆತನಿಂದ ನೇಮಿಸಲ್ಪಟ್ಟಿಲ್ಲ.

    ಕರ್ತನಿಂದ ನೇಮಿಸಲ್ಪಟ್ಟ ಸಂದೇಶಕನು ಒಬ್ಬ ದೈವಿಕ ವ್ಯಕ್ತಿಯೂ, ನಿಮ್ಮ ವಿಶ್ವಾಸಾರ್ಹನೂ ಆಗಿರುತ್ತಾನೆ ಮತ್ತು ಆತನ ಜೀವನ ಮತ್ತು ಸೇವೆ ಇವೆರಡೂ ನಿಮ್ಮನ್ನು ಪೋಷಿಸಿ ನಡೆಸುತ್ತವೆ ಮತ್ತು ಅವುಗಳ ಮೂಲಕ ನೀವು ಆಶೀರ್ವದಿಸಲ್ಪಡುತ್ತೀರಿ. ಅಂತಹ ಮನುಷ್ಯನಿಗೆ ಗೌರವವು ಸಲ್ಲಬೇಕು - ಏಕೆಂದರೆ ಆತನು ಕರ್ತನ ಹಸ್ತದಲ್ಲಿ ಹಿಡಿದಿಡಲ್ಪಟ್ಟವನು. ಲೋಕದಲ್ಲಿ ಇಂದು ಇಂತಹ ಕೆಲವು ಪುರುಷರು ಮಾತ್ರ ಇದ್ದಾರೆ - ಈ ಕೆಲವರಿಗಾಗಿ ದೇವರಿಗೆ ಸ್ತೋತ್ರವಾಗಲಿ.

    ಸೈತಾನನು ದೇವರ ಸೇವಕರನ್ನು ವಿಶೇಷವಾಗಿ ತನ್ನ ಗುರಿಯಾಗಿಸುತ್ತಾನೆ. ಆದಕ್ಕಾಗಿಯೇ ಕರ್ತನು ಅವರನ್ನು ವಿಶೇಷವಾಗಿ ತನ್ನ ಹಸ್ತದಲ್ಲಿ ಹಿಡಿದು ಇಟ್ಟುಕೊಂಡಿದ್ದಾನೆ. ಅವರು ಅಲ್ಲಿ ದೀನತೆಯಿಂದ ಮುಂದುವರಿಯುವಷ್ಟು ಕಾಲ, ಸೈತಾನನು ಅವರನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಆದರೆ ಅವರು ಹೆಮ್ಮೆಯಿಂದ ಉಬ್ಬಿಕೊಂಡಾಗ, ಅಥವಾ ತಮ್ಮ ಪಾಪಕ್ಕೆ ಪಶ್ಚಾತ್ತಾಪ ಪಡದಿದ್ದಾಗ, ಅವರನ್ನು ಪಶ್ಚಾತ್ತಾಪಕ್ಕೆ ತರುವುದಕ್ಕಾಗಿ ಸೈತಾನನು ಅನೇಕ ರೀತಿಯಲ್ಲಿ ಅವರನ್ನು ಪೀಡಿಸುವುದನ್ನು ದೇವರು ಅನುಮತಿಸುತ್ತಾರೆ. ಕರ್ತನ ಸಂದೇಶಕನಾಗಿ ಆತನ ಕೈಯಲ್ಲಿ ಹಿಡಿದು ಇಟ್ಟುಕೊಳ್ಳಲ್ಪಡುವುದು ಒಂದು ಮಹತ್ತರವಾದ ಭಾಗ್ಯವಾಗಿದೆ. ಆದರೆ ಇದರ ಜೊತೆಯಲ್ಲಿ ಅತಿ ಹೆಚ್ಚಿನ ಜವಾಬ್ದಾರಿಯೂ ಇರುತ್ತದೆ.

    ಯೇಸುವಿನ ಬಾಯಿಯಿಂದ ಒಂದು ಹದವಾದ ಇಬ್ಬಾಯಿ ಕತ್ತಿಯು ಹೊರಟಿತು (ಪ್ರಕ. 1:16). ಇದು ಕರ್ತನು ನುಡಿಯುವ ’ದೇವರ ವಾಕ್ಯ’ದ ಉಲ್ಲೇಖವಾಗಿದೆ (ಇಬ್ರಿ. 4:12). ಆತನ ಧ್ವನಿಯು ಜಲಪ್ರವಾಹದ ಘೋಷದಂತೆ ಇದ್ದುದನ್ನು ನಾವು 15ನೇ ವಚನದಲ್ಲಿ ನೋಡಿದೆವು. ಇವೆರಡು ವಚನಗಳನ್ನು ಒಟ್ಟಾಗಿ ನೋಡಿದಾಗ, ಯೇಸುವು ಯಾವಾಗಲೂ ಪವಿತ್ರಾತ್ಮನ ಬಲದಿಂದ ದೇವರ ವಾಕ್ಯವನ್ನು ನುಡಿಯುವುದನ್ನು ಸೂಚಿಸುತ್ತದೆ. ಆತನು ಬಹಳ ಮೃದುವಾಗಿ ಮಾತನಾಡುತ್ತಾನೆ, ಆದರೆ ಅವಶ್ಯವಿದ್ದಾಗ, ಗಡುಸಿನ ಗದರಿಕೆಯೂ ಆತನಲ್ಲಿ ಇದೆ.

    ಆತನ ಮುಖವು ಸೂರ್ಯನ ಉಜ್ವಲ ಪ್ರಕಾಶದಂತಿತ್ತು (ಪ್ರಕ. 1:16). ಪೇತ್ರ, ಯಾಕೋಬ ಮತ್ತು ಯೋಹಾನರು ರೂಪಾಂತರದ ಬೆಟ್ಟದ ಮೇಲೆ ಹೀಗೆಯೇ ಇದ್ದ ಕರ್ತನನ್ನು ಕಂಡರು (ಮತ್ತಾ. 17:2). ಇದು ದೇವರು "ಅಗಮ್ಯವಾದ ಬೆಳಕಿನಲ್ಲಿ" ವಾಸಿಸುವುದನ್ನು ಸೂಚಿಸುತ್ತದೆ (1 ತಿಮೊ. 6:16). ಇಲ್ಲಿ ದೇವರ ಪರಿಶುದ್ಧತೆಯನ್ನು ನಾವು ನೇರವಾಗಿ ದೃಷ್ಟಿಸಲು ಅಸಾಧ್ಯವಾದ ಮಧ್ಯಾಹ್ನದ ಸೂರ್ಯನಿಗೆ ಹೋಲಿಸಲಾಗಿದೆ. ಸೂರ್ಯನು ಯಾವ ಜೀವಾಣು ಅಥವಾ ಕ್ರಿಮಿಗಳೂ ತಾಳಲಾರದ ಉರಿಯುವ ಗುಂಡು ಆಗಿದ್ದಾನೆ. ಅದರಂತೆಯೇ ದೇವರ ಸನ್ನಿಧಿಯಲ್ಲಿ ಯಾವ ವಿಧವಾದ ಪಾಪವೂ ನೆಲೆಸಲಾರದು (ಯೆಶಾ. 33:14).

    ಕರ್ತನ ಪಾದಗಳ ಮುಂದೆ

    ’ಕೊನೆಯ ಭೋಜನ’ದಲ್ಲಿ ಯೇಸುವಿನ ಎದೆಯ ಮೇಲೆ ಒರಗಿಕೊಂಡಿದ್ದ ಯೋಹಾನನು, ಈಗ ಆತನ ಪಾದಗಳ ಮುಂದೆ ಸತ್ತವನಂತೆ ಬೀಳುತ್ತಾನೆ (ಪ್ರಕ. 1:17). ಯೋಹಾನನು ದೇವರೊಂದಿಗೆ 65 ವರ್ಷಗಳ ಕಾಲ ನಡೆದಿದ್ದನು. ಈ ಸಮಯದಲ್ಲಿ ಆತನೇ ಲೋಕದಲ್ಲಿ ಅತೀ ಶ್ರೇಷ್ಠ ದೇವಭಕ್ತನು ಅಗಿದ್ದನು, ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೂ ಸಹ ಆತನಿಗೆ ಕರ್ತನ ಸಮ್ಮುಖದಲ್ಲಿ ತಲೆ ಎತ್ತಿ ನಿಲ್ಲಲು ಆಗಲಿಲ್ಲ. ಕರ್ತನನ್ನು ಬಹಳ ಹೆಚ್ಚಾಗಿ ಅರಿತಿರುವವರು, ಆತನನ್ನು ಅತೀ ಹೆಚ್ಚಾಗಿ ಗೌರವಿಸುತ್ತಾರೆ. ಕರ್ತನನ್ನು ಕೇವಲ ಸ್ವಲ್ಪ ಅರಿತಿರುವವರು, ಆತನೊಂದಿಗೆ ಕಳಪೆ ಸಲಿಗೆಯ ಸಂಬಂಧ ಇರುವಂತೆ ತೋರಿಸಿಕೊಳ್ಳುತ್ತಾರೆ.

    ಪರಲೋಕದಲ್ಲಿ ಕರ್ತನ ಮುಂದೆ ಸೆರಾಫಿಯರು ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ (ಯೆಶಾ. 6:2,3). ಯೋಬನು ಮತ್ತು ಯೆಶಾಯನು ದೇವರ ಮಹಿಮೆಯನ್ನು ನೋಡಿದಾಗ, ಅವರಿಗೆ ತಮ್ಮ ಪಾಪದ ಅರಿವು ಉಂಟಾಗಿ ದು:ಖಿಸಿದರು (ಯೋಬ. 42:5,6; ಯೆಶಾ. 6:5). ಆದರೆ "ದೇವದೂತರು ಹೋಗಲು ಹಿಂಜರಿಯುವ ಜಾಗಕ್ಕೆ ಮೂರ್ಖರು ನುಗ್ಗುತ್ತಾರೆ"!! ಲೌಕಿಕ ವಿಶ್ವಾಸಿಯ ಮೂರ್ಖತನವು ಅಂಥದ್ದಾಗಿದೆ.

    ನಾವು ಕರ್ತನನ್ನು ಹೆಚ್ಚು ಹೆಚ್ಚಾಗಿ ಅರಿತುಕೊಂಡಷ್ಟೂ, ಹೆಚ್ಚಿನ ವಿಸ್ಮಯದಿಂದ ನಾವು ಬೆರಗಾಗಿ ಆತನ ಪಾದಗಳಿಗೆ ಅಡ್ಡ ಬೀಳುತ್ತೇವೆ, ಮತ್ತು ನಮ್ಮ ಮುಖವನ್ನು ಧೂಳಿನಲ್ಲಿ ಇರಿಸುತ್ತೇವೆ. ನಾವು ನಿರಂತರವಾಗಿ ಕರ್ತನ ಮಹಿಮೆಯನ್ನು ನೋಡಿದಾಗ ಮಾತ್ರ, ನಮ್ಮಲ್ಲಿ ಕ್ರಿಸ್ತನ ಗುಣಕ್ಕೆ ಹೊರತಾದ ಸಂಗತಿಗಳನ್ನು ಕಾಣಲು ಸಾಧ್ಯವಾಗುತ್ತದೆ. ಆಗಲೇ ನಾವು ಇತರರನ್ನು ತೀರ್ಪುಮಾಡುವುದನ್ನು ನಿಲ್ಲಿಸಿ, ನಮ್ಮನ್ನೇ ಪರೀಕ್ಷಿಸಿಕೊಳ್ಳಲು ಆರಂಭಿಸುತ್ತೇವೆ. ಆಗ ಯೋಹಾನನು ಪತ್ಮೊಸಿನಲ್ಲಿ ಕರ್ತನ ಬಲವುಳ್ಳ ಸ್ಪರ್ಶದ ಅನುಭವವನ್ನು ಪಡೆದಂತೆ, ನಾವೂ ಸಹ ಅನುಭವಿಸಲು ಸಾಧ್ಯವಾಗುತ್ತದೆ.

    ಯೇಸುವು ತನ್ನ ಬಲಗೈಯನ್ನು ಯೋಹಾನನ ಮೇಲಿಟ್ಟನು (ಪ್ರಕ. 1:17). ಇದು ಬಲ ಮತ್ತು ಅಧಿಕಾರವನ್ನು ಬಳುವಳಿಯಾಗಿ ಕೊಡುವುದರ ಸಂಕೇತವಾಗಿದೆ. ಆತನು ಯೋಹಾನನಿಗೆ ಹೆದರದಿರುವಂತೆ ಹೇಳಿದನು.

    ನಾವು ಸುವಾರ್ತೆಗಳಲ್ಲಿ "ಹೆದರಬೇಡಿರಿ" ಮತ್ತು "ನನ್ನ ಹಿಂದೆ ಬನ್ನಿರಿ," ಎಂಬ ಯೇಸುವಿನ ಎರಡು ಹೇಳಿಕೆಗಳನ್ನು ಪದೇ ಪದೇ ಕಾಣುತ್ತೇವೆ. ಈ ದಿನವೂ ಸಹ ಆತನು ನಮಗೆ ಇದನ್ನೇ ಹೇಳುತ್ತಾನೆ.

    ಯೇಸುವು ಇನ್ನೂ ಮುಂದುವರಿಸಿ, ತಾನು ಮೊದಲನೆಯವನೂ ಮತ್ತು ಕಡೆಯವನೂ ಆಗಿರುವುದಾಗಿ ಯೋಹಾನನಿಗೆ ತಿಳಿಸಿದನು - ಇದೇ ಬಿರುದನ್ನು ಇದರ ಹಿಂದಿನ ಭಾಗದಲ್ಲಿ (ಪ್ರಕ. 1:8), ತಂದೆಯಾದ ದೇವರಿಗೆ ಉಪಯೋಗಿಸಲಾಗಿತ್ತು. ಮೊದಲಿನಿಂದ ಕಡೆಯವರೆಗೆ ಎಲ್ಲವೂ ಕರ್ತನಿಗೆ ತಿಳಿದಿದೆ ಮತ್ತು ಸ್ವತಃ ಆತನು ಆದಿಗಿಂತ ಮುಂಚೆ ಮತ್ತು ಅಂತ್ಯದ ನಂತರವೂ ಇದ್ದಾನೆ. ಆದುದರಿಂದಲೇ ನಾವು ಎಂದಿಗೂ ಭಯಪಡಬೇಕಿಲ್ಲ.

    ಮುಂದೆ ಯೇಸುವು ಯೋಹಾನನಿಗೆ ತಾನು ಮರಣ ಮತ್ತು ಸಮಾಧಿಯನ್ನು ಜಯಿಸಿರುವುದಾಗಿ ವಿವರಿಸುತ್ತಾನೆ; ಮತ್ತು ಈಗ ಮರಣ ಮತ್ತು ಪಾತಾಳದ (ಸತ್ತ ಆತ್ಮಗಳ ಜಾಗ) ಬೀಗದ ಕೈಗಳು ತನ್ನ ಅಧೀನವಾಗಿವೆಯೆಂದು ಹೇಳುತ್ತಾನೆ (ಪ್ರಕ. 1:18). ಬೀಗದ ಕೈಗಳು ಬಾಗಿಲುಗಳನ್ನು ಮುಚ್ಚುವ ಮತ್ತು ತೆರೆಯುವ ಅಧಿಕಾರವನ್ನು ಸೂಚಿಸುತ್ತವೆ. ಹಿಂದೆ ಮರಣಾಧಿಕಾರಿಯ ಅಧಿಕಾರವು ಸೈತಾನನ ಕೈಯಲ್ಲಿ ಇತ್ತು (ಇಬ್ರಿ. 2:14,15). ಆದರೆ ಯೇಸುವು ಸತ್ತು ಜೀವಿತನಾಗಿ ಎದ್ದಾಗ, ಆತನು ಆ ಬೀಗದ ಕೈಗಳನ್ನು ಸೈತಾನನಿಂದ ತೆಗೆದುಕೊಂಡನು.

    ಈಗ ಮರಣ ಮತ್ತು ಪಾತಾಳದ ಬೀಗದ ಕೈಗಳು ಯೇಸುವಿನ ಬಳಿ ಇವೆ. ಇದರ ಅರ್ಥ, ನೀವು ಯೇಸುವಿನ ಪೂರ್ಣಹೃದಯದ ಶಿಷ್ಯರಾಗಿದ್ದು, ನಿಮ್ಮ ಜೀವನದಲ್ಲಿ ದೇವರ ಚಿತ್ತವನ್ನೇ ಮಾಡಲು ಇಷ್ಟಪಡುತ್ತಿದ್ದರೆ, ದೇವರು ನಿರ್ಣಯಿಸಿರುವ ಸಮಯ ಬರುವ ತನಕ ನಿಮಗೆ ಮರಣ ಉಂಟಾಗುವುದಿಲ್ಲ. ಯೇಸುವು ತನ್ನ ಸನ್ನಿಧಿಗೆ ನೀವು ಬರಬೇಕಾದ ಸಮಯವನ್ನು ನಿರ್ಧರಿಸಿ, ಮರಣದ ಬಾಗಿಲನ್ನು ದಾಟಿ ಬರುವಂತೆ ನಿಮಗೆ ತೆರೆಯದ ಹೊರತು, ನಿಮ್ಮ ಪ್ರಾಣವನ್ನು ಯಾವ ಅಪಘಾತವಾಗಲೀ ಅಥವಾ ರೋಗವಾಗಲೀ ತೆಗೆಯಲು ಸಾಧ್ಯವಿಲ್ಲ. ಯೇಸುವಿನ ಎಲ್ಲಾ ಯಥಾರ್ಥರಾದ ಶಿಷ್ಯರಿಗೆ ಇದು ಒಂದು ಅದ್ಭುತವಾದ ಉತ್ತೇಜನವಾಗಿದೆ.

    ಯೋಹಾನನು ಪತ್ಮೊಸಿನ ಜನರಿಂದ ಹಿಂಸೆಗೆ ಒಳಗಾಗಬಹುದು. ಆದರೆ ದೇವರು ನೇಮಿಸಿದ ಸಮಯಕ್ಕೆ ಮೊದಲು ಅವರು ಆತನನ್ನು ಕೊಲ್ಲಲು ಸಾಧ್ಯವಾಗಲಿಲ್ಲ. ಮತ್ತು ಯೋಹಾನನು ಪೂರೈಸಲಿಕ್ಕಾಗಿ ಕರ್ತನು ಇನ್ನೂ ಒಂದು ಸೇವೆಯನ್ನು ಇರಿಸಿದ್ದನು.

    ಈಗ ಯೋಹಾನನು ಬಲವನ್ನು ಹೊಂದಿ, ಒಂದು ಹೊಸ ಕಾರ್ಯಕ್ಕಾಗಿ ಕರ್ತನಿಂದ ನೇಮಿಸಲ್ಪಡುತ್ತಾನೆ - ಈ ಅದ್ಭುತವಾದ ಪ್ರಕಟನೆಯ ಪುಸ್ತಕವನ್ನು ಬರೆಯುವ ಕೆಲಸ (ಪ್ರಕ. 1:19). ಕರ್ತನು ನಮಗಾಗಿ ಇರಿಸಿರುವ ಸೇವಾಕಾರ್ಯವನ್ನು ನಾವು ಸಫಲವಾಗಿ ಸಾಧಿಸ ಬೇಕಾದರೆ, ನಾವು ನಿರಂತರವಾಗಿ ಕರ್ತನ ಬಲವನ್ನು ಹೊಂದುವದು ಅವಶ್ಯವಾಗಿದೆ.

    "ಪ್ರಕಟನೆ" ಗ್ರಂಥದ ಮೂರು ವಿಭಾಗಗಳು:

    ಪ್ರಕಟನೆ 1:19ರಲ್ಲಿ, ಕರ್ತನು ಯೋಹಾನನಿಗೆ ಈ ಪುಸ್ತಕವನ್ನು ಮೂರು ಭಾಗಗಳಾಗಿ ವಿಭಜಿಸುವಂತೆ ಹೇಳುತ್ತಾನೆ.

  • (i) ಯೋಹಾನನು ಈಗಾಗಲೇ ಕಂಡದ್ದು (ಅಧ್ಯಾಯ 1) - ಜಯಶಾಲಿಯಾದ ಕರ್ತ ಯೇಸುವಿನ ದರ್ಶನ ಮತ್ತು ಆತನು "ಹೆದರಬೇಡ," ಎಂದು ಧೈರ್ಯ ಪಡಿಸುವಂಥದ್ದು. ಕರ್ತನ ಮಹಿಮೆಯನ್ನು ಕಂಡಿರುವ ಶಿಷ್ಯನ ಹೃದಯದಲ್ಲಿ ಒಂದು ಸಾಸಿವೆ ಕಾಳಷ್ಟೂ ಭಯಕ್ಕೆ ಜಾಗವಿರುವುದಿಲ್ಲ.
  • (ii) ಯೋಹಾನನ ಸಮಯದ ಪರಿಸ್ಥಿತಿ (ಅಧ್ಯಾಯ 2 ಮತ್ತು 3) - ಆಸ್ಯ ಸೀಮೆಯ ಏಳು ಸಭೆಗಳ ಪರಿಸ್ಥಿತಿಗೆ ಸಂಬಂಧಿಸಿದೆ. ಈ ಏಳು ಸಭೆಗಳಿಗೆ ಕರ್ತನು ಕೊಟ್ಟ ಸಂದೇಶಗಳು, ಎಲ್ಲಾ ಕಾಲಾವಧಿಯ ಎಲ್ಲಾ ಸಭೆಗಳಿಗೆ ಮತ್ತು ಅದರ "ದೂತರುಗಳಿಗೆ" (ಸಭಾ ಹಿರಿಯರಿಗೆ) ಒಂದು ಎಚ್ಚರಿಕೆ ಮತ್ತು ಒಂದು ಸವಾಲಾಗಿದೆ.
  • (iii) ಯೋಹಾನನ ನಂತರದ ಭವಿಷ್ಯಕಾಲದ ಸಂಗತಿಗಳು (ಅಧ್ಯಾಯ 4ರಿಂದ 22) - "ಮುಂದೆ ಆಗಬೇಕಾದವುಗಳು" ಎಂದು 19ನೇ ವಚನದಲ್ಲಿ ಬರೆಯಲ್ಪಟ್ಟಿದೆ, ಮತ್ತು ಅಧ್ಯಾಯ 4:1ರಲ್ಲಿ "ಇವುಗಳಾದ ಮೇಲೆ" ಎಂದು ಬರೆಯಲಾಗಿದೆ. ಹಾಗಾಗಿ ’ಪ್ರಕಟನೆ’ಯ ಪುಸ್ತಕದ ಮೂರನೆ ಭಾಗವು ಅಲ್ಲಿಂದ ಪ್ರಾರಂಭವಾಗುವುದನ್ನು ಇದು ಸೂಚಿಸುತ್ತದೆ.
  • ಮುಂದೆ ಕರ್ತನು ಯೋಹಾನನಿಗೆ ದೀಪಸ್ತಂಭ ಮತ್ತು ನಕ್ಷತ್ರಗಳ ಬಗ್ಗೆ ತಿಳಿಸುತ್ತಾನೆ (ಪ್ರಕ. 1:20). ಇದನ್ನು ನಾವು ಈಗಾಗಲೇ 12 ಮತ್ತು 16ನೇ ವಚನಗಳನ್ನು ಪರಿಶೀಲಿಸಿದಾಗ ನೋಡಿದೆವು.

    ನಮಗೆ ಸತ್ಯವೇದದ ರಹಸ್ಯಗಳನ್ನು ತೆರೆದು ಪ್ರಕಟಗೊಳಿಸಲು ಕರ್ತನೊಬ್ಬನಿಗೆ ಮಾತ್ರ ಸಾಧ್ಯವಾಗುತ್ತದೆ. ಆ ರೀತಿಯಾಗಿ ಅವುಗಳು ತೆರೆಯಲ್ಪಡುವದಕ್ಕೆ ನಮ್ಮಲ್ಲಿ ಎರಡು ಗುಣಗಳು ಅವಶ್ಯವಾಗಿ ಇರಬೇಕು - ದೇವರಲ್ಲಿ ಭಯಭಕ್ತಿ ಮತ್ತು ದೀನತೆ. "ಕರ್ತನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತೆ ಇರುತ್ತಾನೆ ಮತ್ತು ದೀನರಿಗೆ ತನ್ನ ಮಾರ್ಗವನ್ನು ತೋರಿಸುವನು" (ಕೀರ್ತ. 25:14,9).

    ಹಾಗಾದರೆ ನಾವು ಇಂತಹ ಆತ್ಮದೊಂದಿಗೆ ಏಳು ಸಭೆಗಳಿಗೆ ಬರೆಯಲಾದ ಈ ಸಂದೇಶಗಳನ್ನು ಪರಿಶೀಲಿಸೋಣ.

    ಅಧ್ಯಾಯ 4
    ಪ್ರೀತಿಯನ್ನು ಬಿಟ್ಟುಬಿಟ್ಟ ಸಭೆ

    "ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ - ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡಿದುಕೊಂಡು, ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಹೇಳುವುದೇನೆಂದರೆ - "ನಿನ್ನ ಕೃತ್ಯಗಳನ್ನೂ ಪ್ರಯಾಸವನ್ನೂ ತಾಳ್ಮೆಯನ್ನೂ ಬಲ್ಲೆನು; ನೀನು ದುಷ್ಟರನ್ನು ಸಹಿಸಲಾರಿ; ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ; "ನೀನು ತಾಳ್ಮೆಯುಳ್ಳವನಾಗಿ ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಸೈರಿಸಿಕೊಂಡು ಬೇಸರಗೊಳ್ಳಲಿಲ್ಲ; ಇದನ್ನೆಲ್ಲಾ ಬಲ್ಲೆನು. "ಆದರೆ ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪು ಹೊರಿಸಬೇಕಾಗುತ್ತದೆ. "ಆದದರಿಂದ ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ದೇವರ ಕಡೆಗೆ ತಿರುಗಿಕೋ. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು. ನೀನು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ, ನಾನು ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು. "ಆದರೆ ನಿನ್ನಲ್ಲಿ ಒಳ್ಳೇದು ಒಂದುಂಟು, ಅದೇನೆಂದರೆ - ನಾನು ದ್ವೇಷಿಸುವ ನಿಕೊಲಾಯಿತರ ಕೃತ್ಯಗಳನ್ನು ನೀನು ಸಹ ದ್ವೇಷಿಸುತ್ತಿ. "ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಯಾವನು ಜಯ ಹೊಂದುತ್ತಾನೋ, ಅವನಿಗೆ ದೇವರ ಪರದೈಸಿನಲ್ಲಿರುವ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವದಕ್ಕೆ ಕೊಡುವೆನು."(ಪ್ರಕಟನೆ 2:1-7).

    ಕರ್ತನು ಮಾಡುವ ಮೌಲ್ಯಮಾಪನ

    ಈ ಏಳು ಸಂದೇಶಗಳು (ಪ್ರಕಟನೆ 2,3) ಮುಖ್ಯವಾಗಿ ಸಭೆಗಳ ದೂತರಿಗೆ ಸಂಬಂಧಿಸಿದ್ದರೂ, ಪವಿತ್ರಾತ್ಮನು ಪ್ರತೀ ಸಂದೇಶದ ಕೊನೆಯ ಭಾಗದಲ್ಲಿ ಎಲ್ಲಾ ಸಭೆಗಳಿಗೆ, ’ಕಿವಿಯುಳ್ಳವನು ಕೇಳಲಿ’ ಎಂಬ ಆಹ್ವಾನವನ್ನು ನೀಡಿರುವದನ್ನು ನಾವು ಗಮನಿಸುತ್ತೇವೆ. ಆದ್ದರಿಂದ ಈ ಸಂದೇಶಗಳು ಎಲ್ಲಾ ಕಾಲದ, ಪ್ರತಿಯೊಂದು ಸಭೆಯ, ಪ್ರತಿಯೊಬ್ಬ ಶಿಷ್ಯನಿಗೆ ಅನ್ವಯಿಸುತ್ತವೆ.

    ನಾವು ಮೊದಲನೇ ಅಧ್ಯಾಯದಲ್ಲಿ, ನಮ್ಮ ಕರ್ತನು ’ವಿಶ್ವಾಸಾರ್ಹನಾದ ಸಾಕ್ಷಿ’ ಎಂಬ ವಿವರಣೆಯನ್ನು ನೋಡಿದೆವು. ಈ ಪತ್ರಿಕೆಗಳಲ್ಲಿ ಆತನು ಆ ಸೇವೆಯನ್ನು ಕೈಗೊಳ್ಳುವುದನ್ನು ನಾವು ಕಾಣುತ್ತೇವೆ. ಯೇಸುವು "ಇದ್ದುದನ್ನು ಇದ್ದಂತೆಯೇ ಹೇಳುತ್ತಾನೆ," ಎಂದು ಇಂದಿನ ಮಾತಿನ ರೀತಿಯಲ್ಲಿ ಹೇಳಬಹುದು. ಕ್ರಿಸ್ತನು ತೀರ್ಪುಗಾರನಾಗಿ ತನ್ನ ಸಭೆಯ ನಡುವೆ ಇದ್ದುಕೊಂಡು, ದೂತ ಮತ್ತು ಸಭೆ ಎರಡನ್ನೂ ತೀರ್ಪು ಮಾಡುತ್ತಾನೆ. ಆತನು ದೂತರಿಗೆ ಮತ್ತು ಸಭೆಗಳಿಗೆ ಅವರ ಬಗ್ಗೆ ತಾನು ಯೊಚಿಸುವದನ್ನು ನಿಖರವಾಗಿ ಹೇಳುತ್ತಾನೆ.

    ಕರ್ತನು ತನ್ನ ಮೌಲ್ಯಮಾಪನದಲ್ಲಿ, ಆಧುನಿಕ ’ಫೊಟೋಗ್ರಾಫರ್’ಗಳು ಒಂದು ’ಫೊಟೋ’ ಚೆನ್ನಾಗಿ ಕಾಣುವದಕ್ಕಾಗಿ ಅದನ್ನು ’ಎಡಿಟ್’ ಮಾಡುವಂತೆ ಮಾಡುವುದಿಲ್ಲ. ಆತನು ಹಾಗೆ ಮಾಡದೇ ಇರುವದಕ್ಕೆ ಕಾರಣ, ಆತನು ತನ್ನ ಜನರನ್ನು ಅತಿ ಹೆಚ್ಚಾಗಿ ಪ್ರೀತಿಸುತ್ತಾನೆ!! ನಮ್ಮ ಪಾಪ, ಲೌಕಿಕತೆ, ಉಗುರು-ಬೆಚ್ಚಗೆ ಮನೋಭಾವ ಮತ್ತು ಸ್ವಾರ್ಥತೆ, ಇವುಗಳ ತೀರ್ಪನ್ನು ಮುಂದೆ ಆತನ ನ್ಯಾಯಾಸನದ ಮುಂದೆ ಎದುರಿಸುವುದಕ್ಕಿಂತ, ಈಗಲೇ ಅವುಗಳನ್ನು ಬಗೆಹರಿಸುವದು ಉತ್ತಮವೆಂದು ಆತನಿಗೆ ತಿಳಿದಿದೆ. ಆ ದಿನದಲ್ಲಿ ಇವುಗಳ ಬಗ್ಗೆ ನ್ಯಾಯತೀರ್ಪಿಗೆ ಒಳಗಾಗುವುದು ನಮಗೆ ಹಿತಕರವಲ್ಲ; ಆತನು ನಮ್ಮ ನಿತ್ಯತ್ವದ ಹಿತವನ್ನು ಬಯಸುತ್ತಾನೆ. ಹಾಗಾಗಿ ಕರ್ತನು ಈ ಪತ್ರಿಕೆಗಳಲ್ಲಿ ಹೇಳುವದನ್ನು ಆದ್ಯತೆಯಿಂದ ಗಮನಿಸುವುದು ನಮಗೆ ಹಿತ.

    ಕರ್ತನು ಮೆಚ್ಚುಗೆಯು ಸೂಕ್ತವಿರುವಲ್ಲಿ, ಮೆಚ್ಚುಗೆಯನ್ನು ಯಥಾರ್ಥವಾಗಿ ವ್ಯಕ್ತಪಡಿಸುತ್ತಾನೆ. ಹಾಗೆಯೇ ಖಂಡಿಸಬೇಕಾದ ಸನ್ನಿವೇಶದಲ್ಲಿ, ನಿಷ್ಠುರವಾಗಿ ಖಂಡಿಸಲು ಆತನು ಹಿಂಜರಿಯುವುದಿಲ್ಲ. ಕ್ಯಾನ್ಸರ್ ರೋಗ ನಿವಾರಣೆಗೆ ಸಾಬೂನು ಮತ್ತು ನೀರಿನಿಂದ ತೊಳೆಯುವದು ವ್ಯರ್ಥ. ನಯವಾಗಿ ಸವರುತ್ತಾ ಅದನ್ನು ನಿವಾರಿಸಲು ಸಾಧ್ಯವಿಲ್ಲ. ಕ್ಯಾನ್ಸರನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದುಹಾಕಬೇಕು. ಪಾಪವೂ ಸಹ ಹಾಗೆಯೇ.

    ಗದರಿಕೆಗಿಂತ ಮೊದಲು ಮೆಚ್ಚುಗೆ

    ಎಫೆಸದ ದೂತನಿಗೆ ಬರೆದ ಸಂದೇಶದಲ್ಲಿ, ಕರ್ತನು ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡಿದುಕೊಂಡು, ಏಳು ಸಭೆಗಳ ಮಧ್ಯೆ ನಡೆದಾಡುವಾತನು, ಎಂದು ತನ್ನನ್ನು ವಿವರಿಸಿಕೊಳ್ಳುತ್ತಾನೆ (ಪ್ರಕ. 2:1).

    ಕರ್ತನು ಯಾವಾಗಲೂ ಸಭೆಗಳ ಮಧ್ಯೆ ನಡೆದಾಡುತ್ತಾ, ಅಲ್ಲಿ ಎಲ್ಲರ ಮಾತುಗಳನ್ನು ಮತ್ತು ಆಗು-ಹೋಗುಗಳನ್ನು, ಮುಖ್ಯವಾಗಿ ತಾನು ಕೈಯಲ್ಲಿ ಹಿಡಿದಿರುವ ದೂತರ ಮಾತು ಮತ್ತು ಕಾರ್ಯಗಳನ್ನು ಪರೀಕ್ಷಿಸುತ್ತಾನೆ. ಅದಲ್ಲದೆ ಆತನು ಎಲ್ಲವನ್ನೂ ಅಳೆಯುತ್ತಾನೆ - ಲೌಕಿಕ ಕ್ರೈಸ್ತರ ಕಳಪೆ ಅಳತೆಗೋಲಿನಿಂದ ಅಲ್ಲ, ಹತ್ತು ಕಟ್ಟಳೆಗಳ ಮಟ್ಟದಿಂದಲೂ ಅಲ್ಲ, ಆದರೆ ದೇವರ ನಿಖರವಾದ ನೈತಿಕ ಅಳತೆಗೋಲಿನಿಂದ.

    ಆತನು ತಪ್ಪುಗಳನ್ನು ಎತ್ತಿ ತೋರಿಸುವದಕ್ಕೆ ಮೊದಲು, ತನ್ನ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಾನೆ (ಪ್ರಕ. 2:2). ಅದು ದೈವಿಕ ಸ್ವಭಾವವಾಗಿದೆ. ಕರ್ತನು ಯಾವಾಗಲೂ ಒಳ್ಳೆಯ ಸಂಗತಿಯನ್ನು ಹುಡುಕುತ್ತಾನೆ, ಮತ್ತು ಅದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ, ಮತ್ತು ಅನಂತರ ಸರಿಪಡಿಸುಬೇಕಾದ ತಪ್ಪನ್ನು ತೋರಿಸುತ್ತಾನೆ.

    ಇದಕ್ಕೆ ವ್ಯತಿರಿಕ್ತವಾಗಿ, ಮನುಷ್ಯನ ಸ್ವಭಾವವು ಸಂಪೂರ್ಣವಾಗಿ ವಿಭಿನ್ನವಾಗಿದೆ. ಅವನು ಇತರರಲ್ಲಿ ಮೊದಲು ಒಳ್ಳೆಯದನ್ನು ನೋಡುವುದಿಲ್ಲ, ಅದಕ್ಕೆ ಬದಲಾಗಿ ಕೆಟ್ಟದ್ದನ್ನು ನೋಡುತ್ತಾನೆ. ಮನುಷ್ಯನು ಸ್ವಾಭಾವಿಕವಾಗಿ ಮೆಚ್ಚುಗೆಯನ್ನು ಸೂಚಿಸುವುದರಲ್ಲಿ ನಿಧಾನ, ಮತ್ತು ತಪ್ಪು ಹುಡುಕುವುದರಲ್ಲಿ ಅತಿ ಚುರುಕಾಗಿ ಇರುತ್ತಾನೆ. ಇದು "ದೂರು ಹೇಳುವ ದೂರುಗಾರನು" ಎಂದು ಕರೆಯಲ್ಪಟ್ಟಾತನ ವಿಷಪೂರಿತ ಸ್ವಭಾವ ನಮ್ಮೊಳಗೆ ಇರುವುದರ ಒಂದು ಗುರುತಾಗಿದೆ (ಪ್ರಕ. 12:10). ಹಾಗಿದ್ದರೂ, ನಾವು ಹೆಚ್ಚು ಹೆಚ್ಚಾಗಿ ದೈವಿಕ ಸ್ವಭಾವದಲ್ಲಿ ಪಾಲ್ಗೊಂಡರೆ, ಹೆಚ್ಚು ಹೆಚ್ಚಾಗಿ ನಾವು ನಮ್ಮ ಕರ್ತನಂತೆ ಬದಲಾಗುತ್ತೇವೆ - ಮೆಚ್ಚುಗೆ ತೋರಿಸುವುದರಲ್ಲಿ ಚುರುಕು ಮತ್ತು ತಪ್ಪು ಹುಡುಕುವುದರಲ್ಲಿ ನಿಧಾನ.

    ನಮ್ಮ ಜೀವನದ ಉದ್ದಕ್ಕೂ ಅನುಸರಿಸ ಬಹುದಾದ ಒಂದು ಒಳ್ಳೆಯ ತತ್ವ ಇಲ್ಲಿದೆ: "ನನಗೆ ಒಬ್ಬ ವ್ಯಕ್ತಿಯಲ್ಲಿ ಇದು ವರೆಗೆ ಮೆಚ್ಚುವಂತ ಯಾವ ಸಂಗತಿಯೂ ಕಾಣಿಸದಿದ್ದರೆ, ನಾನು ಅವನ ತಪ್ಪನ್ನು ಖಂಡಿತವಾಗಿ ಅವನಿಗೆ ಎತ್ತಿ ತೋರಿಸುವುದಿಲ್ಲ."

    ಈ ಸರಳ ನಿಯಮವು ನಮ್ಮನ್ನು ನಾವು ಊಹಿಸಲಾಗದಷ್ಟು ಉನ್ನತವಾದ ದೇವಭಕ್ತಿಗೆ ನಡೆಸಲು ಯೋಗ್ಯವಾಗಿದೆ. ಅದು ನಾವು ಇನ್ನು ಮೇಲೆ ಸಭೆಯಲ್ಲಿ ಬೇರೆಯವರಿಗೆ, ಮೊದಲಿಗಿಂತ ಬಹಳ ಹೆಚ್ಚು ಆಶೀರ್ವಾದ ಮತ್ತು ಬಹಳ ಕನಿಷ್ಟ ಕಿರುಕುಳ ತರುವಂತೆ ಮಾಡುತ್ತದೆ!

    ನಾವು ಇತರರನ್ನು ಮೆಚ್ಚಿಕೊಂಡಾಗ ಮಾತ್ರ, ಅವರನ್ನು ರಚನಾತ್ಮಕವಾಗಿ ತಿದ್ದುವ ತಳಪಾಯವನ್ನು ಹಾಕುತ್ತೇವೆ. ಇಲ್ಲವಾದರೆ ನಮ್ಮ ಮಾತುಗಳು ಕಲ್ಲಿನಂತೆ ಅವರನ್ನು ಹೊಡೆಯುತ್ತವೆ. ನೀವು ಒಂದು ಬಳಪದಿಂದ ಗಾಳಿಯಲ್ಲಿ ಬರೆದರೆ ಉಪಯೋಗವಿಲ್ಲ. ಒಂದು ಕರಿಹಲಗೆ ಇದ್ದಾಗ ಮಾತ್ರ ಇತರರು ನಿಮ್ಮ ಬರಹವನ್ನು ನೋಡಬಹುದು. ಅದರಂತೆಯೇ, ನಾವು ವ್ಯಕ್ತಪಡಿಸುವ ಮೆಚ್ಚುಗೆ ಒಂದು ಕರಿಹಲಗೆಯಂತಿದೆ, ಮತ್ತು ಅದರ ಮೇಲೆ ನಾವು "ಸತ್ಯವನ್ನು ಪ್ರೀತಿಯಿಂದ" ಬರೆದು, ಇತರರನ್ನು ಸಂಪರ್ಕಿಸ ಬಹುದು. ಆಗ ಅವರು ನಮ್ಮ ಮಾತನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ.

    ಮೆಚ್ಚುಗೆ ಮತ್ತು ಗದರಿಕೆ ಇವೆರಡೂ ಪ್ರೀತಿಯ ಗುರುತುಗಳಾಗಿವೆ. ಆದರೆ ಮೆಚ್ಚುಗೆ ಮೊದಲು ಬರಬೇಕು. ಅಪೊಸ್ತಲ ಪೌಲನು ಲೌಕಿಕ ಮನೋಭಾವದ ಕೊರಿಂಥದ ಕ್ರೈಸ್ತರಿಗೆ ಬರೆಯುವಾಗಲೂ ಈ ನಿಯಮವನ್ನು ಅನುಸರಿಸುವುದನ್ನು ಗಮನಿಸಿರಿ (1 ಕೊರಿ. 1: 4-10).

    ಹಾಗೆಯೇ ಕರ್ತನು, ಎಫೆಸದ ಸಭೆಯ ದೂತನ ತಾಳ್ಮೆ, ಪ್ರಯಾಸದ ದುಡಿಮೆ, ದುಷ್ಟರನ್ನು ಸಭೆಯಿಂದ ದೂರವಿರಿಸಿ ಅದನ್ನು ಶುದ್ಧವಾಗಿ ಕಾಪಾಡುವ ಪರಿಶ್ರಮ, ಇವನೆಲ್ಲಾ ಮೆಚ್ಚಿ ಅವನನ್ನು ಹೊಗಳುತ್ತಾನೆ. ದೂತನು ಲೌಕಿಕ ಆಕರ್ಷಣೆಗಳು ಸಭೆಯ ಒಳಕ್ಕೆ ಪ್ರವೇಶಿಸದಂತೆ ತಡೆದಿದ್ದನು, ಎಂಬುದು ಸ್ಪಷ್ಟವಾಗಿದೆ. ಅದಲ್ಲದೆ, ಸಭೆಯಲ್ಲಿ ಶುದ್ಧವಾದ ಬೋಧನೆಯನ್ನು ಉಳಿಸಿಕೊಳ್ಳಲು ಅವನು ಬಿಡುವಿಲ್ಲದೆ ಶ್ರಮಿಸಿದ್ದನು. ಅಪೊಸ್ತಲರಲ್ಲದ ಜನ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವದನ್ನು ಅವನು ಪರೀಕ್ಷಿಸಿ, ಅವರನ್ನು ಸುಳ್ಳುಗಾರರೆಂದು ಸಾಬೀತು ಪಡಿಸಿದ್ದನು.

    ಕರ್ತನು ಈ ವಚನದಲ್ಲಿ ಉಪಯೋಗಿಸಿರುವ ‘ಅಪೊಸ್ತಲರು’ ಎಂಬ ಪದವು (ಪ್ರಕ. 2:2), ಆತನು ಭೂಲೋಕದಲ್ಲಿ ಇದ್ದಾಗ ಆರಿಸಿಕೊಂಡ ಹನ್ನೊಂದು ಅಪೊಸ್ತಲರಲ್ಲದೆ, ಮೊದಲನೆಯ ಶತಮಾನದ ಸಭೆಯಲ್ಲಿ ಬೇರೆ ಅಪೊಸ್ತಲರು ಇದ್ದರು, ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಕ್ರಿಸ್ತನು ‘ಮೇಲೆ ಏರಿಹೋದ ನಂತರವೂ,’ ಆತನು ಸಭೆಗೆ ಅಪೊಸ್ತಲರುಗಳನ್ನು ಕೊಟ್ಟಿದ್ದಾನೆ (ಎಫೆಸ. 4:11), ಮತ್ತು ಈ ದಿನವೂ ಅಪೊಸ್ತಲರುಗಳು ಇದ್ದಾರೆ. ಆದರೆ ಅಪೊಸ್ತಲರಲ್ಲದ ಅನೇಕರು ಸಹ ತಮ್ಮನ್ನು ಅಪೊಸ್ತಲ ಎಂದು ಹೇಳಿಕೊಳ್ಳುತ್ತಾರೆ. ಆದ್ದರಿಂದ ನಾವು ಸುಳ್ಳು ಅಪೊಸ್ತಲರಿಂದ ವಂಚಿಸಲ್ಪಡಬಾರದು (ಪ್ರಕ. 2:2).

    ಎಫೆಸದ ಸಭೆಯ ದೂತನು ಕರ್ತನ ಹೆಸರಿನ ನಿಮಿತ್ತವಾದ ಬಾಧೆಯನ್ನು ಸಹ ಬೇಸರಿಸದೆ ’ಸೈರಿಸಿಕೊಂಡು’ ಕೆಲಸವನ್ನು ಮುಂದುವರಿಸಿದನು (ಪ್ರಕ. 2:3). ಈ ದೂತನು ಹೆಚ್ಚಿನ ವಿಶ್ವಾಸಿಗಳ ದೃಷ್ಟಿಯಲ್ಲಿ ಒಬ್ಬ ಅದ್ಭುತ ವ್ಯಕ್ತಿಯಾಗಿ ಕಂಡುಬರುತ್ತಾನೆ. ಅದೇ ರೀತಿಯಾಗಿ, ಎಫೆಸದ ಸಭೆಯೂ ಸಹ ಪ್ರಯಾಸ, ತಾಳ್ಮೆ, ದುಷ್ಟರನ್ನು ತಡೆಯುವುದು, ಸುಳ್ಳು ಧಾರ್ಮಿಕ ಬೋಧನೆಗಳನ್ನು ಅಲ್ಲಗಳೆಯುವುದು ಮತ್ತು ಕಪಟ ಬೋಧಕರನ್ನು ಬಯಲು ಮಾಡುವುದು, ಇವನ್ನು ಮಾಡಿದ - ಪರಿಶುದ್ಧ ಜೀವಿತ ಮತ್ತು ಪರಿಶುದ್ಧ ಉಪದೇಶಗಳನ್ನು ಒತ್ತಿ ಹೇಳುತ್ತಿದ್ದ - ಒಂದು ಅದ್ಭುತ ಸಭೆಯಂತೆ ಕಾಣಿಸುತ್ತದೆ.

    ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀ

    ಈ ಸಭೆಯಲ್ಲಿ ಕರ್ತನು ಒಂದು ಸಭೆಯಲ್ಲಿ ಕಾಣಬಯಸುವ ಎಲ್ಲಾ ಸಂಗತಿಗಳು ಇವೆ, ಎಂಬ ಅಭಿಪ್ರಾಯ ನಮ್ಮಲ್ಲಿ ಉಂಟಾಗಬಹುದು. ಅಯ್ಯೋ! ಆದರೆ ಅದು ಹಾಗೆ ಇರಲಿಲ್ಲ. ಅಲ್ಲಿ ಕರ್ತನು ಮುಖ್ಯವಾಗಿ ಕಾಣಬಯಸಿದ ಸಂಗತಿ ಇಲ್ಲವಾಗಿತ್ತು. ಆ ಸಭೆಯು ತನ್ನ ಮೊದಲಿನ ಪ್ರೀತಿಯನ್ನು ಬಿಟ್ಟುಬಿಟ್ಟಿತ್ತು - ಕರ್ತನಿಗಾಗಿ ಮತ್ತು ಇತರರಿಗಾಗಿ ಇದ್ದ ಪ್ರೀತಿ (ಪ್ರಕ. 2:4).

    ಕರ್ತನು ಆ ಸಭೆಗೆ ಹೇಳಿದ ಮಾತಿನ ಸಾರಾಂಶ ಇಷ್ಟೇ:

    "ನೀವು ಹಲವು ಉತ್ಸಾಹಭರಿತ ಚಟುವಟಿಕೆಗಳ ನಡುವೆ ನನ್ನನ್ನೇ ಮರೆತುಬಿಟ್ಟಿದ್ದೀರಿ. ಮೊದಲು ನಿಮಗೆ ನನ್ನಲ್ಲಿದ್ದ ನಿಷ್ಠಾಪೂರ್ಣ ಅನುರಾಗ ಈಗ ಕಳೆದುಹೋಗಿದೆ. ನೀವು ದುಷ್ಟತನ ಮತ್ತು ಅಶುದ್ಧ ಧಾರ್ಮಿಕ ತತ್ವಗಳನ್ನು ನಿಮ್ಮಿಂದ ದೂರವಿರಿಸಿದ್ದೀರಿ. ಆದರೆ ನಿಮ್ಮ ಮಾನಸಾಂತರದ ಹೊಸದರಲ್ಲಿ ನನ್ನನ್ನು ಮನಸಾರೆಯಾಗಿ ಪ್ರೀತಿಸಿದ್ದನ್ನು ಮತ್ತು ಆ ದಿನದಲ್ಲಿ ನೀವು ನನ್ನ ಪ್ರೀತಿಯ ಸಲುವಾಗಿ ಎಲ್ಲವನ್ನೂ ಮಾಡುತ್ತಿದ್ದುದನ್ನು ಜ್ಞಾಪಿಸಿಕೊಳ್ಳಿರಿ. ಈಗ ಆ ಪ್ರೀತಿಯು ಆರಿಹೋಗಿದೆ, ಮತ್ತು ನಿಮ್ಮ ಕಾರ್ಯಗಳೆಲ್ಲವೂ ಸಪ್ಪೆಯಾಗಿವೆ. ಈಗಲೂ ನೀವು ಕೂಟಗಳಿಗೆ ಬರುತ್ತೀರಿ, ಸತ್ಯವೇದವನ್ನು ಓದಿಕೊಳ್ಳುತ್ತೀರಿ ಮತ್ತು ಪ್ರಾರ್ಥಿಸುತ್ತೀರಿ. ಆದರೆ ಈಗ ಅವೆಲ್ಲವೂ ಧಾರ್ಮಿಕ ಸಂಪ್ರದಾಯಗಳಾಗಿವೆ."

    ಈ ಸಭೆಯನ್ನು ಮದುವೆಯಾದ ಹೊಸದರಲ್ಲಿ ತನ್ನ ಗಂಡನ ಸೇವೆಯನ್ನು ಸಂತೋಷದಿಂದ ಅವನ ಮೇಲಿನ ಪ್ರೀತಿಯ ನಿಮಿತ್ತವಾಗಿ ಮಾಡುತ್ತಿದ್ದು, ಈಗ ಅದೇ ಸೇವೆಯನ್ನು ಭಾರವಾದ ಹೊರೆಯಂತೆ ಕಾಣುತ್ತಿರುವ ಒಬ್ಬ ಪತ್ನಿಗೆ ಹೋಲಿಸಬಹುದು - ಏಕೆಂದರೆ ವೈವಾಹಿಕ ಜೀವನದ ಶುರುವಿನ ಪ್ರೀತಿಯ ಜ್ವಾಲೆಯು ಈಗ ಅವಳಲ್ಲಿ ಆರಿಹೋಗಿದೆ. ಹಿಂದಿನ ದಿನಗಳಲ್ಲಿ, ಪ್ರತಿ ಸಂಜೆ ಆಕೆ ತನ್ನ ಗಂಡನು ನೌಕರಿಯಿಂದ ಹಿಂದಿರುಗಿ ಬರುವುದನ್ನೇ ಕಾತುರದಿಂದ ಕಾಯುತ್ತಿದ್ದಳು. ಆದರೆ ಈಗ ಹಾಗಿಲ್ಲ. ಆಕೆ ಆತನಿಗೆ ಇನ್ನೂ ನಂಬಿಗಸ್ತೆಯಾಗಿದ್ದಾಳೆ, ಆದರೆ ಆಕೆ ತನ್ನ ಮೊದಲ ಪ್ರೀತಿಯನ್ನು ಕಳಕೊಂಡಿದ್ದಾಳೆ.

    ಒಬ್ಬ ಖರೆ ಗಂಡನು ತನ್ನ ಪತ್ನಿಯಿಂದ ಮುಖ್ಯವಾಗಿ ಏನನ್ನು ಬಯಸುತ್ತಾನೆ? ಆಕೆಯ ಪ್ರೀತಿಯನ್ನೋ ಅಥವಾ ಆಕೆಯ ಸೇವೆಯನ್ನೋ? ಖಂಡಿತವಾಗಿ ಆಕೆಯ ಪ್ರೀತಿಯನ್ನು. ಕರ್ತನೂ ಸಹ ಹಾಗೆಯೇ. ಆತನು ಮೊದಲನೆಯದಾಗಿ ಮತ್ತು ಮುಖ್ಯವಾಗಿ ನಮ್ಮ ಹೃದಯದ ಪ್ರೀತಿಯನ್ನು ಬಯಸುತ್ತಾನೆ. ಆ ಪ್ರೀತಿಯು ಕಾಣೆಯಾದಾಗ, ನಾವು ಮಾಡುವ ಎಲ್ಲಾ ಕಾರ್ಯಗಳು ನಿರ್ಜೀವಕರ್ಮಗಳು ಆಗುತ್ತವೆ.

    ದೇವರ ಪ್ರೀತಿಯಿಂದ ಸತ್ಕ್ರಿಯೆಗಳು ಪ್ರೇರಿತವಾಗದಿದ್ದರೆ, ಅವು ನಿರ್ಜೀವಕರ್ಮಗಳಾಗುತ್ತವೆ.

    ಈ ಸಭೆಯ ವಿಶ್ವಾಸಿಗಳು ತಮ್ಮ ಪರಸ್ಪರ ಹುರುಪಿನ ಪ್ರೀತಿಯನ್ನು ಸಹ ಕಳಕೊಂಡಿದ್ದರು. ಹಾಗಾಗಿ ಇತರರ ಬಲಹೀನತೆಗಳನ್ನು ಸಹಿಸಿಕೊಳ್ಳುವುದು ಅಥವಾ ಇತರರ ಪಾಪಗಳನ್ನು ಮನ್ನಿಸುವುದು ಈಗ ಅವರಿಗೆ ಅಸಾಧ್ಯವಾಗಿತ್ತು. ಅದಲ್ಲದೆ ಈಗ ಅವರ ನಡುವೆ ಮೊದಲಿದ್ದ ಪ್ರೀತಿಯೂ ಸಹ ಕಾಣಿಸುತ್ತಿರಲಿಲ್ಲ.

    ಸಭೆಯ ದೂತನು ತನ್ನ ಮೊದಲಿನ ಪ್ರೀತಿಯನ್ನು ಕಳೆದುಕೊಂಡಿದ್ದನು - ಮತ್ತು ಕ್ರಮೇಣವಾಗಿ ಆ ಸಭೆಯು ಸಹ ತನ್ನ ದೂತನಂತೆಯೇ ಆಗಿತ್ತು.

    ಇದು ಒಂದು ಚಿಕ್ಕ ತಪ್ಪು ಆಗಿರಲಿಲ್ಲ. ಇದು ದೊಡ್ಡ ಹಿಂಜಾರುವಿಕೆಯಾಗಿತ್ತು - ಆದ್ದರಿಂದ ಕರ್ತನು "ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನೆನೆಪಿಗೆ ತಂದುಕೋ," ಎಂದು ಹೇಳುತ್ತಾನೆ. ಸಾಮಾನ್ಯವಾಗಿ ನಮ್ಮ ಎಣಿಕೆಯಲ್ಲಿ, ಒಬ್ಬ ವಿಶ್ವಾಸಿ ಪಾಪಕ್ಕೆ ಬೀಳುವುದು ಎಂದರೆ ವ್ಯಬಿಚಾರ, ಕಳ್ಳತನ, ಧೂಮಪಾನ ಮಾಡುವುದು, ಇಂಥವುಗಳು ಮಾತ್ರ ಆಗಿರುತ್ತವೆ. ಆದರೆ ನಾವು ಪವಿತ್ರಾತ್ಮನ ಸ್ವರವನ್ನು ಕೇಳುವ ಸೂಕ್ಷ್ಮತೆಯನ್ನು ಬೆಳೆಸಿಕೊಂಡಾಗ, ಕರ್ತನ ಭಯಭಕ್ತಿಯಲ್ಲಿ ಸ್ವಲ್ಪ ಅಸಡ್ಡೆ ಉಂಟಾದರೂ ಮತ್ತು ಇತರರ ಕಡೆಗೆ ಪ್ರೀತಿಯು ಸ್ವಲ್ಪ ತಣ್ಣಗಾದರೂ, ನಾವು ಅದನ್ನು ಹಿಂಜಾರುವಿಕೆಯ ಲಕ್ಷಣವೆಂದು ಗುರುತಿಸುತ್ತೇವೆ.

    ಎಫೆಸದ ಸಭೆ ಎಲ್ಲಿಂದ ಬಿದ್ದಿತ್ತು?

    ಅಪೊಸ್ತಲ ಪೌಲನು ಸುಮಾರು 40 ವರ್ಷಗಳ ಹಿಂದೆಯೇ ಎಫೆಸ ಎಂಬ ಪಟ್ಟಣಕ್ಕೆ ಬಂದು ಒಂದು ಸಭೆಯನ್ನು ಸ್ಥಾಪಿಸಿದ್ದನು. ಆ ಸಂದರ್ಭದಲ್ಲಿ ಅಲ್ಲಿ ಎಂತಹ ಹೊಸ ಚೇತನ ಕಾಣಿಸಿತೆಂದರೆ, ಅದು ಇಡೀ ಪಟ್ಟಣಕ್ಕೆ ತಿಳಿದುಬಂತು (ಅ.ಕೃ. 19). ಪೌಲನು ಮೂರು ವರ್ಷಗಳ ಕಾಲ ಶ್ರಮಿಸಿ, ಪ್ರತಿ ದಿನವೂ ಕಣ್ಣೀರಿನೊಂದಿಗೆ ಬೋಧಿಸಿ ಈ ಸಭೆಯನ್ನು ಬೆಳೆಸಿದ್ದನು (ಅ.ಕೃ. 20:31). ಕೊನೆಯಲ್ಲಿ ಆತನು ಎಫೆಸವನ್ನು ಬಿಟ್ಟು ಹೊರಟಾಗ, ಸಭೆಯ ಹಿರಿಯರನ್ನು ಕರೆದು, ತಾನು ಹೋದ ಮೇಲೆ ಸಭೆಯು ಎದುರಿಸ ಬಹುದಾದ ಕೆಲವು ಅಪಾಯಗಳ ಬಗ್ಗೆ ಅವರನ್ನು ಎಚ್ಚರಿಸಿದನು (ಅ.ಕೃ. 20:17-35).

    ನಾಲ್ಕು ವರ್ಷಗಳು ಕಳೆದ ಮೇಲೆ, ಪೌಲನು ಅವರಿಗೆ ಒಂದು ಪತ್ರವನ್ನು ಬರೆದನು - ಇಡೀ ಸತ್ಯವೇದದಲ್ಲಿ ಕಂಡುಬರುವ ಗಾಢವಾದ ಹೊಸ ಒಡಂಬಡಿಕೆಯ ಸತ್ಯಾಂಶಗಳಲ್ಲಿ ಕೆಲವು ಅದರಲ್ಲಿ ಅಡಕವಾಗಿವೆ. ಇವುಗಳನ್ನು ಆತನು ಎಫೆಸದ ಸಭೆಗೆ ಏಕೆ ತಿಳಿಸಿದನೆಂದರೆ, ಈ ಸಭೆಯು ಆತನು ಸ್ಥಾಪಿಸಿದ ಎಲ್ಲಾ ಸಭೆಗಳಲ್ಲಿ ಹೆಚ್ಚು ಬೆಳವಣಿಗೆ ಹೊಂದಿದಂಥದ್ದು ಮತ್ತು ಹೆಚ್ಚು ಆತ್ಮಿಕವಾದದ್ದು ಎಂದು ಆತನು ಭಾವಿಸಿದ್ದನು. ನಾವು ಈ ಪತ್ರದಲ್ಲಿ ಗಮನಿಸಬಹುದಾದ ಇನ್ನೊಂದು ವಿಷಯ, ಪೌಲನಿಗೆ ಎಫೆಸದಲ್ಲಿ ಗದರಿಸುವಂತ ಮತ್ತು ತಿದ್ದುವಂತ ಯಾವ ಸಂಗತಿಯೂ ಕಂಡುಬರಲಿಲ್ಲ. ಒಂದು ಕಾಲದಲ್ಲಿ ಆ ಸಭೆಯು ಅಂತಹ ಉನ್ನತ ಸ್ಥಾನವನ್ನು ಹೊಂದಿತ್ತು.

    ಎಫೆಸದವರಿಗೆ ಪೌಲನು ಕಳುಹಿಸಿದ ಪತ್ರಿಕೆಯನ್ನು "ಎಫೆಸದ ಮೊದಲ ಪತ್ರಿಕೆ" ಎನ್ನಬಹುದು. ಇಲ್ಲಿ ಪ್ರಕಟನೆ 2ನೇ ಅಧ್ಯಾಯದಲ್ಲಿ, ನಾವು "ಎಫೆಸದ ಎರಡನೆಯ ಪತ್ರಿಕೆಯನ್ನು" ಕಾಣುತ್ತೇವೆ. ಈಗ ಪರಿಸ್ಥಿತಿಯು ಸಂಪೂರ್ಣವಾಗಿ ಬದಲಾಗಿತ್ತು. ಸಭೆಯಲ್ಲಿ ಈಗ ಒಂದು ಹೊಸ ಪೀಳಿಗೆಯು ಹುಟ್ಟಿತ್ತು ಮತ್ತು ಇವರಲ್ಲಿ ತಮ್ಮ ಹಿಂದಿನ ಪೀಳಿಗೆಯ ಸಮರ್ಪಣಾಭಾವ ಮತ್ತು ಆತ್ಮಿಕತೆ ಇವೆರಡೂ ಇಲ್ಲವಾಗಿದ್ದವು.

    ಇದೇ ದುರಂತ ಕಥೆಯು ಕ್ರೈಸ್ತತ್ವದ 20 ಶತಮಾನಗಳ ಇತಿಹಾಸದಲ್ಲಿ, ಹೆಚ್ಚು ಕಡಿಮೆ ಪ್ರತಿಯೊಂದು ಸಭೆ ಮತ್ತು ಆಂದೋಲನದಲ್ಲೂ ಮರುಕಳಿಸಿದೆ. ಎರಡನೆಯ ಪೀಳಿಗೆಯು ಅವೇ ಆತ್ಮಿಕ ಸಿದ್ಧಾಂತಗಳನ್ನು ಹೊಂದಿದ್ದರೂ, ಅವರು ತಮ್ಮ ಹಿರಿಯರಲ್ಲಿ ನೆಲೆಗೊಂಡಿದ್ದ ಜೀವವನ್ನು ಕಳಕೊಂಡಿದ್ದಾರೆ.

    ಈ ಕಾರಣಕ್ಕಾಗಿ ಕರ್ತನು ಎಫೆಸದ ಸಭೆಗೆ, "ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನೆನೆಪಿಸಿಕೋ," ಎನ್ನುತ್ತಾನೆ.

    ಪಶ್ಚಾತ್ತಾಪದ ಅವಶ್ಯಕತೆ

    ಈ ಸಮಸ್ಯೆಗೆ ಕೇವಲ ಒಂದು ಪರಿಹಾರವಿತ್ತು. "ದೇವರ ಕಡೆಗೆ ತಿರುಗಿಕೊಂಡು, ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು," ಎಂದು ಕರ್ತನು ನುಡಿಯುತ್ತಾನೆ (ಪ್ರಕ. 2:5).

    ನಾವು ಸಾಮಾನ್ಯವಾಗಿ ಅವಿಶ್ವಾಸಿಗಳಿಗೆ, "ದೇವರ ಕಡೆಗೆ ತಿರುಗಿಕೋ," ಎಂದು ಬೋಧಿಸುತ್ತೇವೆ - ಕರ್ತನು ಸಭೆಗೆ ಅದೇ ವಾಕ್ಯವನ್ನು ಬೋಧಿಸುತ್ತಾನೆ. ಆತನು ಅವರನ್ನು, "ಪಾಪಗಳಿಂದ ತಿರಿಗಿಕೊಳ್ಳುವಂತೆ ಇತರರಿಗೆ ಬೋಧಿಸುವುದಕ್ಕೆ ಮುನ್ನ, ಮೊದಲಿನ ಪ್ರೀತಿಯನ್ನು ಕೈಬಿಟ್ಟ ನಿನ್ನ ಸ್ವಂತ ಪಾಪಕ್ಕಾಗಿ ಮರುಗು," ಎಂದು ಎಚ್ಚರಿಸುತ್ತಾನೆ. ಅವರು ಮೊದಲಿನ ಪ್ರೀತಿಯನ್ನು ಕೈಬಿಟ್ಟದ್ದಕ್ಕಾಗಿ ದುಃಖಿಸುವುದು ಅವಶ್ಯವಾಗಿದೆ.

    "ನೀನು ಮೊದಲು ಮಾಡುತ್ತಿದ್ದ ಕಾರ್ಯಗಳನ್ನು ಮಾಡು," ಎಂದು ಕರ್ತನು ಹೇಳುತ್ತಾನೆ (ಪ್ರಕ. 2:5). ಅವರ ಕಾರ್ಯಗಳು ಪ್ರೀತಿಯಿಂದ ಶುರುವಾಗದಿದ್ದರೆ, ದೇವರ ಮುಂದೆ ಆ ಚಟುವಟಿಕೆಗಳಿಗೆ ಯಾವ ಬೆಲೆಯೂ ಇಲ್ಲ. ಈಗ ಅವು ಕಟ್ಟಿಗೆ, ಹುಲ್ಲು ಮತ್ತು ಕಸಕಡ್ಡಿಗಳಂತೆ ಬೆಂಕಿಯಲ್ಲಿ ಸುಡುವುದಕ್ಕೆ ಮಾತ್ರ ಯೋಗ್ಯವಾಗಿವೆ.

    ಪ್ರತಿಯೊಂದು ಕಾರ್ಯದ ಉದ್ದೇಶವನ್ನು ಹೊಂದಿಕೊಂಡು ಆ ಕಾರ್ಯದ ಯೋಗ್ಯತೆಯು ನಿರ್ಣಯಿಸಲ್ಪಡುತ್ತದೆ. ನಿಮ್ಮ ನಿರಂತರ ಪ್ರಯಾಸ, ನಿಮ್ಮ ಶ್ರಮೆ, ನಿಮ್ಮ ಪರಿಶುದ್ಧತೆ, ಇವೆಲ್ಲವುಗಳ ಹಿಂದಿನ ಉದ್ದೇಶ, ಕರ್ತನು ನಿಮ್ಮ ಆ ಸೇವೆಯನ್ನು ಸ್ವೀಕರಿಸುತ್ತಾನೋ ಇಲ್ಲವೋ ಎನ್ನುವುದನ್ನು ನಿರ್ಣಯಿಸುತ್ತದೆ. ನಾವು ಕರ್ತನ ಮುಂದೆ ನಿಲ್ಲುವ ದಿನದಲ್ಲಿ, "ಏಕೆ?" ಎಂಬ ಪ್ರಶ್ನೆ "ಏನು?" ಎಂಬ ಪ್ರಶ್ನೆಗಿಂತ ಬಹಳ ಹೆಚ್ಚು ಮುಖ್ಯವಾಗಿರುತ್ತದೆ. ಕರ್ತನು ನಾವು ಮಾಡಿದ ಕಾರ್ಯದ ಉದ್ದೇಶವೇನು ಎಂಬುದನ್ನು ಪರೀಕ್ಷಿಸಿ, ನಮ್ಮ ಸೇವೆಯ ಮೌಲ್ಯವನ್ನು ನಿರ್ಣಯಿಸುತ್ತಾನೆ. ಇದನ್ನು ನಾವು ಎಂದಿಗೂ ಮರೆಯಬಾರದು.

    ಯಾವುದೇ ಕಾರ್ಯವು ಕರ್ತನ ಪ್ರೀತಿಯ ಮೂಲಕ ಹುಟ್ಟದಿದ್ದಲ್ಲಿ, ಅದು ಒಂದು "ನಿರ್ಜೀವಕರ್ಮ"ವಾಗಿದೆ.

    ನಿರ್ಜೀವಕರ್ಮಗಳಿಗಾಗಿ ನಾವು ಪಶ್ಚಾತ್ತಾಪ ಪಡಬೇಕು ಎಂಬುದನ್ನು ನೆನಪಿಡಿರಿ. ಇಬ್ರಿಯ 6:1 ನಮಗೆ ತಿಳಿಸುವಂತೆ, ನಾವು ಪರಿಪೂರ್ಣ ಜೀವನದ ಕಡೆಗೆ ವೇಗವಾಗಿ ಮುನ್ನಡೆಯುವುದಕ್ಕೆ ಬೇಕಾದ ಅಸ್ತಿವಾರದ ಒಂದು ಭಾಗ ಇದಾಗಿದೆ.

    ದೂತನು ಮತ್ತು ಸಭೆಯು ಪಶ್ಚಾತ್ತಾಪ ಪಡದಿದ್ದಲ್ಲಿ, ಕರ್ತನು ಅಲ್ಲಿರುವ ದೀಪಸ್ತಂಭವನ್ನು ಅದರ ಸ್ಥಳದಿಂದ ತಾನು ತೆಗೆಯುವುದಾಗಿ ಹೇಳುತ್ತಾನೆ. ಅದರ ಅರ್ಥವೇನೆಂದರೆ, ಆ ಮೇಲೆ ಅವರನ್ನು ತನಗೆ ಸೇರಿದ ಒಂದು ಸಭೆಯೆಂದು ತಾನು ಪರಿಗಣಿಸುವುದಿಲ್ಲ, ಎಂಬುದಾಗಿ. ಅಲ್ಲಿ ಸಭಾಕೂಟಗಳು ಮತ್ತು ಸಮ್ಮೇಳನಗಳು ಮುಂದುವರಿಯಬಹುದು, ಮತ್ತು ಅಲ್ಲಿನ ಸದಸ್ಯರ ಸಂಖ್ಯೆ ಬೆಳೆಯುತ್ತಾ ಹೋಗಬಹುದು. ಆದರೆ, ಕರ್ತನ ದೃಷ್ಟಿಯಲ್ಲಿ, ಅವರು ಸತ್ತಿದ್ದಾರೆ ಮತ್ತು ಜೀವಿತರಾಗಿಲ್ಲ; ಅವರಲ್ಲಿ ಪವಿತ್ರಾತ್ಮನ ಅಭಿಷೇಕ ಮತ್ತು ಕರ್ತನ ಕೃಪೆ ಇರುವುದಿಲ್ಲ.

    ಮೊದಲ ಪ್ರೀತಿಯನ್ನು ಕಳೆದುಕೊಂಡ ಪರಿಣಾಮ ಅಷ್ಟು ಗಂಭೀರವಾಗಬಹುದು.

    ನಿಕೊಲಾಯಿತರ ದೊರೆತನ

    ಮುಂದೆ ಕರ್ತನು, ನಿಕೊಲಾಯಿತರ ಕೃತ್ಯಗಳನ್ನು ತಾನು ದ್ವೇಷಿಸುವಂತೆ ಸಭೆಯ ದೂತನೂ ಸಹ ದ್ವೇಷಿಸಿದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾನೆ (ಪ್ರಕ. 2:6).

    ದೇವರ ವಾಕ್ಯದಲ್ಲಿ ಎಲ್ಲಿಯೂ, ನಿಕೊಲಾಯಿತರು ಯಾರು ಅಥವಾ ಅವರು ಏನು ಮಾಡಿದರು ಎನ್ನುವದು ಉಲ್ಲೇಖವಾಗಿಲ್ಲ. ಹಾಗಾಗಿ ನಾವು ಕರ್ತನು ಯಾವ ಕೃತ್ಯಗಳ ಬಗ್ಗೆ ಹೇಳುತ್ತಿದ್ದಾನೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಿದ್ದರೂ, "ನಿಕೊಲಾಯಿತರು" ಎಂಬ ಗ್ರೀಕ್ ಭಾಷೆಯ ಪದದ ಅರ್ಥ, "ಜನರನ್ನು ಜಯಿಸಿದವರು" ಎಂದಾಗಿದೆ.

    ಕರ್ತನ ಮಾತಿನ ಅರ್ಥ ಇದೇ ಆಗಿದ್ದರೆ, ಅದು "ಕುರಿಮಂದೆಯ (ಸಭೆಯ) ಮೇಲೆ ದೊರೆತನ ಮಾಡಲು" ಪ್ರಯತ್ನಿಸುವ ಜನರನ್ನು ಪ್ರಸ್ತಾಪಿಸುತ್ತದೆ ಎನ್ನಬಹುದು (1 ಪೇತ್ರ. 5:3) - ಅಂದರೆ, ಸಭಾ ಹಿರಿಯರು ಸೇವಕರಂತಲ್ಲ, ರಾಜರಂತೆ ನಡೆಯುತ್ತಿದ್ದಾರೆ. ಇಂತಹ ಹಿರಿಯರು ತಮ್ಮನ್ನು ಯಾಜಕರ ವರ್ಗವೆಂದು (ಹಳೆಯ ಒಡಂಬಡಿಕೆಯಲ್ಲಿ ಲೇವಿಯರು ನೇಮಿಸಲ್ಪಟ್ಟಂತೆ) ಪ್ರತ್ಯೇಕಿಸಿಕೊಂಡು, ಇತರ ವಿಶ್ವಾಸಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಕರ್ತನು ನಿಕೊಲಾಯಿತರ ಕೃತ್ಯಗಳನ್ನು ತಾನು ದ್ವೇಷಿಸುತ್ತೇನೆಂದು ಹೇಳಿದನು.

    ಇಂದಿನ ಕ್ರೈಸ್ತ ಬೋಧಕರು "ಪೂಜ್ಯ" ಅಥವಾ "ರೆವರೆಂಡ್" (ಈ ಬಿರುದು ದೇವರ ವಾಕ್ಯದಲ್ಲಿ ಕೇವಲ ದೇವರಿಗೆ ಉಪಯೋಗಿಸಲಾಗಿದೆ - ಕೀರ್ತನೆ 111:9 - KJV) ಮತ್ತು "ಪಾಸ್ಟರ್" (ಎಫೆ. 4:11ರ ಪ್ರಕಾರ, ಇದು ದೇವರ ಒಂದು ವರವಾಗಿದೆ, ಆದರೆ ಒಂದು ಬಿರುದು ಅಥವಾ ಪದವಿಯಲ್ಲ), ಇತ್ಯಾದಿ ಬಿರುದುಗಳನ್ನು ಉಪಯೋಗಿಸಿಕೊಂಡು, ಸಭೆಯಲ್ಲಿ ತಾವು ಇತರರಿಗಿಂತ ಹೆಚ್ಚಿನವರೆಂದು ಮೆರೆಯುತ್ತಾರೆ.

    ಅಷ್ಟೇ ಅಲ್ಲದೆ, ಬೋಧಕರು ಇತರರ ಮೇಲೆ ಅಧಿಕಾರ ಚಲಾಯಿಸುವದು ಬಿರುದುಗಳ ಮೂಲಕ ಮಾತ್ರವಲ್ಲ. "ಸಹೋದರ" ಎಂದು ಮಾತ್ರ ತಮ್ಮನ್ನು ಕರೆದುಕೊಳ್ಳುವ ಅನೇಕರು, ತಮ್ಮ ಮನೋಪ್ರಭಾವ (ಪ್ರಬಲ ವ್ಯಕ್ತಿತ್ವ), ಆರ್ಥಿಕ ಸಾಮರ್ಥ್ಯ ಹಾಗೂ ಆತ್ಮಿಕ ವರಗಳ ಮೂಲಕ ತಮ್ಮ ಸಹ-ವಿಶ್ವಾಸಿಗಳನ್ನು ಶೋಷಿಸುತ್ತಾರೆ.

    ಇವುಗಳನ್ನು "ನಿಕೊಲಾಯಿತರ ಪದ್ಧತಿಗಳು" ಎನ್ನಬಹುದು ಮತ್ತು ಇದು ದೇವರಿಗೆ ಹೇಸಿಕೆಯಾಗಿದೆ.

    ನಾವು ಭಾರತದಲ್ಲಿ ಕಾಣುವ ಇನ್ನೊಂದು ವಿಷಾದಕರ ಪರಿಸ್ಥಿತಿ ಏನೆಂದರೆ, ಅಸಂಖ್ಯಾತ ಕ್ರೈಸ್ತ ಸಭೆಗಳು ಹಾಗೂ ಸಂಸ್ಥೆಗಳ ಮೇಲೆ ಹೊರದೇಶಗಳಲ್ಲಿ ಇರುವ ’ಒಡೆಯರು’ ತಮ್ಮ ಹಣದ ಪ್ರಭಾವದ ಮೂಲಕ ನಡೆಸುವ ದೊರೆತನ. ಅನೇಕ ಭಾರತೀಯ ವಿಶ್ವಾಸಿಗಳು "ಬಿಳಿ ವರ್ಣದ ಫಿರಂಗಿ" ಮನುಷ್ಯನಿಗೆ ಆರ್ಥಿಕ ಋಣಿಗಳು ಆಗಿದ್ದು, ಪಾಶ್ಚಾತ್ಯ ದೇಶಗಳಿಗೆ ಪ್ರಯಾಣಿಸುವ ಆಮಂತ್ರಣ ಪಡೆದ ಹಂಗಿನಿಂದ, ಅವರ ಗುಲಾಮರು ಆಗಿದ್ದಾರೆ. ಒಬ್ಬ ವಿಶ್ವಾಸಿಯು ಇನ್ನೊಬ್ಬ ವಿಶ್ವಾಸಿಗೆ ಜೀತದಾಳಿನಂತೆ ದಾಸತ್ವ ಮಾಡುವುದನ್ನು "ನಿಕೊಲಾಯಿತರ ಗುಲಾಮತನ" ಎನ್ನಬಹುದು - ಮತ್ತು ಇದು ದೇವರ ದೃಷ್ಟಿಯಲ್ಲಿ ಅಸಹ್ಯಕರವಾಗಿದೆ.

    ಹಾಗೆಯೇ ಇನ್ನೊಂದು ವಿಧವಾದ ’ನಿಕೊಲಾಯಿತರ ಪದ್ಧತಿ’ಯನ್ನು ಗಮನಿಸಿರಿ. ’ರೋಮನ್ ಕ್ಯಾಥೋಲಿಕ್ ಸಭೆ’ಯ ಬೋಧನೆಯಲ್ಲಿ, ಮರಿಯಳು ಕ್ರಿಸ್ತನು ಮತ್ತು ಮಾನವನ ನಡುವೆ ’ಮಧ್ಯಸ್ಥೆ’ ಆಗಿದ್ದಾಳೆ. ಇದರ ಜೊತೆಗೆ ಅವರ ’ಪಾದ್ರಿಗಳು,’ ಮರಿಯಳು ಮತ್ತು ರೋಮನ್ ಕ್ಯಾಥೋಲಿಕ್ ಜನರ ನಡುವಿನ ಹಂತದಲ್ಲಿ ಮಧ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಾರೆ!! ಆದರೆ ಒಬ್ಬ ’ಪ್ರೊಟೆಸ್ಟೆಂಟ್ ಪಾಸ್ಟರ್’ ಕೂಡ, ದೇವರ ವಾಕ್ಯಕ್ಕೆ ಹೊರತಾದ ಇಂತಹ "ಮಧ್ಯಸ್ಥಿಕೆ"ಯ ಮನೋಭಾವವನ್ನು ರೋಮನ್ ಕ್ಯಾಥೋಲಿಕ್ ಪಾದ್ರಿಯಂತೆಯೇ ಆಚರಿಸಬಹುದು!

    ಒಬ್ಬ ಪಾಸ್ಟರನು ತನ್ನ ಮಂದೆಯ ಒಬ್ಬ ಸದಸ್ಯನ ಪರವಾಗಿ ನೌಕರಿ ಅಥವಾ ಮದುವೆ ಅಥವಾ ಬೇರೇನೋ ಸಂಗತಿಗೆ ಸಂಬಂಧಿಸಿದಂತೆ "ದೇವರ ಚಿತ್ತವನ್ನು ಕಂಡುಕೊಳ್ಳುವಾಗ," ಆತನು ’ನಿಕೊಲಾಯಿತರ ಮಧ್ಯವರ್ತಿಯ’ ಸ್ಥಾನದಲ್ಲಿದ್ದಾನೆ. ಇಂತಹ ವಿಧಾನಗಳ ಮೂಲಕ, ಪಾದ್ರಿಗಳು ಮತ್ತು ಪಾಸ್ಟರ್‌ಗಳು ದೇವರಿಗೆ ಅಸಹ್ಯವಾಗುವ ರೀತಿಯಲ್ಲಿ ತಮ್ಮ ಮಂದೆಯ ಮನಸ್ಸಿನ ಮೇಲೆ ಹಿಡಿತವನ್ನು ಹೊಂದುತ್ತಾರೆ.

    ಆತ್ಮಿಕ ಸಲಹೆ ಹಾಗೂ ಬುದ್ಧಿವಾದವನ್ನು ಒದಗಿಸುವದು ಒಂದು ದೈವಿಕ ಕಾರ್ಯವಾಗಿದೆ. ಆದರೆ ಕ್ರಿಸ್ತನ ದೇಹದ ಇನ್ನೊಂದು ಅಂಗದ ಪರವಾಗಿ "ದೇವರ ಚಿತ್ತವನ್ನು ಕಂಡುಕೊಳ್ಳುವದು," ಆ ವ್ಯಕ್ತಿಯು ತನ್ನ ಶಿರಸ್ಸಾದ ಕ್ರಿಸ್ತನೊಂದಿಗೆ ಹೊಂದಿರುವ ಅನುಬಂಧವನ್ನು ಕಸಿದುಕೊಂಡಂತೆ ಆಗುತ್ತದೆ.

    ಹಳೆಯ ಒಡಂಬಡಿಕೆಯ ಕಾಲಾವಧಿಯಲ್ಲಿ, ಜನರಿಗೆ ವೈಯಕ್ತಿಕವಾಗಿ ಪವಿತ್ರಾತ್ಮನು ಕೊಡಲ್ಪಡದ್ದರಿಂದ, ಪ್ರವಾದಿಗಳು ಜನರಿಗಾಗಿ ದೇವರ ಚಿತ್ತವನ್ನು ಕಂಡುಕೊಳ್ಳುತ್ತಿದ್ದರು. ಆದರೆ ಈಗ ಹೊಸ ಒಡಂಬಡಿಕೆಯ ಕೆಳಗೆ, ವ್ಯವಸ್ಥೆಯು ವಿಭಿನ್ನವಾಗಿದೆ. ಎಲ್ಲರೂ ವೈಯಕ್ತಿಕವಾಗಿ ದೇವರ ಜ್ಞಾನವನ್ನು ಪಡೆಯಬಹುದು (ಇಬ್ರಿ. 8:8-12). ವಾಸ್ತವವಾಗಿ ಕರ್ತನು ತನ್ನ ಸಭೆಯ (ತನ್ನ ’ದೇಹದ’) ಪ್ರತೀ ಸದಸ್ಯನೊಂದಿಗೆ ನೇರ ಅನ್ಯೋನ್ಯ ಸಂಬಂಧವನ್ನು ಇರಿಸಿಕೊಳ್ಳಲು ಬಹಳ ಉತ್ಸುಕನಾಗಿದ್ದಾನೆ (ಕೊಲೊ. 2:18-19). ಆದರೆ ನಿಕೊಲಾಯಿತರು ಇದಕ್ಕೆ ಅಡ್ಡಿಯಾಗುತ್ತಾರೆ.

    ಎಫೆಸದ ಸಭೆಯು ನಿಕೊಲಾಯಿತ ಪದ್ಧತಿಯನ್ನು ದೂರ ಇರಿಸುವುದರಲ್ಲಿ ಸಫಲವಾಗಿತ್ತು. ಅವರು ಅದನ್ನು ದ್ವೇಷಿಸುತ್ತಿದ್ದರು, ಮತ್ತು ಕರ್ತನು ಇದಕ್ಕಾಗಿ ಅವರನ್ನು ಹೊಗಳಿದನು, ಏಕೆಂದರೆ ಆತನು ಸಹ ಅದನ್ನು ದ್ವೇಷಿಸುತ್ತಿದ್ದನು. ಆತನು ಮೊದಲನೆ ಶತಮಾನದಲ್ಲಿ ಅದನ್ನು ದ್ವೇಷಿಸಿದನು ಮತ್ತು ಈಗಲೂ ಸಹ ದ್ವೇಷಿಸುತ್ತಾನೆ.

    ನಿಮ್ಮ ಮನೋಭಾವ ಎಂಥದ್ದು? ನೀವು ಈ ದುಷ್ಟತನವನ್ನು ಕರ್ತನು ದ್ವೇಷಿಸುವಷ್ಟೇ ದ್ವೇಷಿಸುತ್ತೀರಾ? ಇಲ್ಲದಿದ್ದಲ್ಲಿ, ನೀವು ಕ್ರಿಸ್ತನಂತಿಲ್ಲ, ಮತ್ತು ನೀವು ಆತನ ಒಬ್ಬ ನಿಜವಾದ ದೂತನು ಆಗಲಾರಿರಿ. ಒಬ್ಬ ನಿಕೊಲಾಯಿತನು ಕ್ರಿಸ್ತನ ದೇಹವನ್ನು ಕಟ್ಟುವದು ಅಸಾಧ್ಯವಾದದ್ದು.

    ಜಯಶಾಲಿಗಳಿಗೆ ನೀಡಲಾದ ಕರೆ

    ಕೊನೆಯಲ್ಲಿ ಪವಿತ್ರಾತ್ಮನು, ಕಿವಿಯುಳ್ಳ ಪ್ರತಿಯೊಬ್ಬನೂ ಕೇಳಲಿ ಎಂದು ಉತ್ತೇಜಿಸುತ್ತಾನೆ, ಏಕೆಂದರೆ ಈ ಸಂದೇಶವು ’ಪ್ರತಿಯೊಂದು ಸಭೆಗೆ’ ಅನ್ವಯಿಸುತ್ತದೆ (ಪ್ರಕ. 2:7). ವಿಶ್ವಾಸಿಗಳಲ್ಲಿ ಪ್ರತಿಯೊಬ್ಬನೂ ಕರ್ತನ ಮಾತನ್ನು ಪಾಲಿಸಲು ಇಷ್ಟಪಡುವುದಿಲ್ಲ - ಏಕೆಂದರೆ, ಅವರಲ್ಲಿ ಹೆಚ್ಚಿನವರು ತಮ್ಮ ಇಷ್ಟದ ಪ್ರಕಾರ ನಡೆಯಲಿಕ್ಕೆ ಅಥವಾ ತಮ್ಮ ಸಹ-ವಿಶ್ವಾಸಿಗಳನ್ನು ಮೆಚ್ಚಿಸಲಿಕ್ಕೆ ಬಯಸುತ್ತಾರೆ. ಈ ಸತ್ಯಾಂಶವನ್ನು ಗ್ರಹಿಸಿರುವ ಪವಿತ್ರಾತ್ಮನು, ಸಭೆಯಲ್ಲಿರುವ ವಿಶ್ವಾಸಿಗಳಿಗೆ ವೈಯಕ್ತಿಕವಾಗಿ ಜಯಶಾಲಿ ಜೀವಿತವನ್ನು ಜೀವಿಸುವ ಸವಾಲನ್ನು ಹಾಕುತ್ತಾನೆ.

    ಇಲ್ಲಿ ಪವಿತ್ರಾತ್ಮನು ಒಂದು ಸಭೆಯ ನಡುವೆ ಪೂರ್ಣಹೃದಯದ ಯಥಾರ್ಥ ವಿಶ್ವಾಸಿಗಳ ಒಂದು ಗುಂಪನ್ನು ಗುರುತಿಸಿ, ಅವರನ್ನು "ಜಯಶಾಲಿಗಳು" ಎಂದು ಕರೆಯುತ್ತಾನೆ. ಇವರು ಪಾಪ ಮತ್ತು ಲೌಕಿಕ ಮನೋಭಾವದ ವಿರುದ್ಧ ಹೋರಾಡಿ ಜಯಿಸುವಂಥವರು ಮತ್ತು ಸಭೆಯಲ್ಲಿ ತಮ್ಮ ಸುತ್ತಲು ಕಾಣಿಸುವ ಆತ್ಮಿಕ ಅವನತಿಯ ನಡುವೆ ಕರ್ತನಿಗೆ ನಿಷ್ಠಾವಂತರಾಗಿ ನಿಲ್ಲುವಂಥವರು.

    ಪ್ರತಿಯೊಂದು ಪ್ರದೇಶದಲ್ಲಿ, ದೇವರು ತನ್ನ ದೈವಿಕ ಆದರ್ಶಗಳಿಗೆ ಯಥಾರ್ಥರಾಗಿ ನಿಲ್ಲುವಂಥವರು ಮತ್ತು ಆ ಗುಣಮಟ್ಟಕ್ಕಾಗಿ ಯಾವ ಬೆಲೆಯನ್ನಾದರೂ ತೆತ್ತು ಹೋರಾಡುವಂಥವರನ್ನು ಹುಡುಕುತ್ತಿದ್ದಾರೆ. ಏಳು ಸಭೆಗಳಿಗೆ ಬರೆದ ಪತ್ರಿಕೆಗಳಲ್ಲಿ, ನಾವು ಕಾಣುವುದು ಏನೆಂದರೆ ಕರ್ತನು ಮುಖ್ಯವಾಗಿ ಪಾಪದ ವಿರುದ್ಧ ಹೋರಾಡುವವರಲ್ಲಿ ಆಸಕ್ತನಾಗಿದ್ದಾನೆ. ಈ ದಿನವೂ ಸಹ, ಪ್ರತಿಯೊಂದು ಸ್ಥಳದಲ್ಲಿ ಆತನು ಜಯಶಾಲಿಗಳನ್ನು ಅರಸುತ್ತಿದ್ದಾನೆ. ಆತನು ಪ್ರತಿಯೊಂದು ಸಭೆಯಲ್ಲಿ ಅವರನ್ನು ಕಂಡುಕೊಳ್ಳದೇ ಇರಬಹುದು, ಆದರೆ ಪ್ರತಿಯೊಂದು ಪ್ರದೇಶದಲ್ಲಿ ಆತನು ಅವರಿಗಾಗಿ ಹುಡುಕುತ್ತಾನೆ.

    ಕರ್ತನು ಇಂತಹ ಜಯಶಾಲಿಗಳಿಗೆ ಒಂದು ಬಹುಮಾನವನ್ನು ವಾಗ್ದಾನ ಮಾಡಿದ್ದಾನೆ. ಈ ಸಭೆಯ ವಾಗ್ದಾನ, ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವ ಅವಕಾಶವಾಗಿದೆ (ಪ್ರಕ. 2:7) - ಅಂದರೆ, ಆದಾಮನು ಕಳಕೊಂಡ ಅವಕಾಶ. ಜೀವದಾಯಕ ವೃಕ್ಷವು ದೈವಿಕ ಜೀವನ ಮತ್ತು ದೈವಿಕ ಸ್ವಭಾವದ ಒಂದು ಚಿಹ್ನೆಯಾಗಿದೆ. ದೇವರ ಸ್ವಭಾವಕ್ಕೆ ಬಾಧ್ಯಸ್ಥನಾಗುವುದು ದೇವರು ಒಬ್ಬ ಮಾನವನಿಗೆ ಕೊಡಬಹುದಾದ ಅತಿ ದೊಡ್ಡ ಬಹುಮಾನವಾಗಿದೆ. ಈ ಲೋಕದಲ್ಲಿ, ವಿಶ್ವಾಸಿಗಳಲ್ಲೂ ಬಹುತೇಕ ಮಂದಿ ಇದೊಂದು ಅಮೂಲ್ಯ ಬಹುಮಾನವೆಂದು ತಿಳಿಯುವುದಿಲ್ಲ. ಆದರೆ ನಿತ್ಯತ್ವದ ಶುಭ್ರ ಬೆಳಕಿನಲ್ಲಿ, ನಿಜವಾಗಿಯೂ ದೇವರು ಒಬ್ಬ ಮಾನವನಿಗೆ ಕೊಡಬಹುದಾದ ಅತಿ ಶ್ರೇಷ್ಠ ಬಹುಮಾನ ಇದೇ ಆಗಿದೆಯೆಂದು ನಾವು ಮನಗಾಣುವೆವು.

    ಅಧ್ಯಾಯ 5
    ಬಾಧೆಗೆ ಒಳಗಾದ ಸಭೆ

    "ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಬರೆ - "ಸತ್ತವನಾಗಿದ್ದು ಜೀವಿತನಾಗಿ ಬಂದ ಆದ್ಯಂತನು ಹೇಳುವದೇನಂದರೆ - ನಾನು ನಿನ್ನ ಸಂಕಟವನ್ನೂ, ನಿನ್ನ ಬಡತನವನ್ನೂ ಬಲ್ಲೆನು (ಆದರೂ ನೀನು ಐಶ್ವರ್ಯವಂತನೇ). ಇದಲ್ಲದೆ ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುವುದನ್ನು ಬಲ್ಲೆನು; ಅವರು ಯೆಹೂದ್ಯರಲ್ಲ, ಸೈತಾನನ ಸಮಾಜದವರಾಗಿದ್ದಾರೆ. "ನಿನಗೆ ಸಂಭವಿಸುವದಕ್ಕಿರುವ ಬಾಧೆಗಳಿಗೆ ಹೆದರಬೇಡ. ಇಗೋ, ನೀವು ದುಷ್ಪ್ರೇರಣೆಗೆ ಒಳಗಾಗುವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವದಕ್ಕಿದ್ದಾನೆ; ಮತ್ತು ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವುದು. ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು."ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಜಯ ಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವದೇ ಇಲ್ಲ."(ಪ್ರಕಟನೆ 2:8-11).

    ಸಂಕಟ

    ಇಲ್ಲಿ ಕರ್ತನು ತನ್ನನ್ನು ’ಆದಿ ಮತ್ತು ಅಂತ್ಯ’, ಮತ್ತು ’ಮರಣವನ್ನು ಜಯಿಸಿದವನು’ ಎಂದು ನಿರೂಪಿಸಿಕೊಂಡಿದ್ದಾನೆ. ವಿರೋಧ ಮತ್ತು ಹಿಂಸೆಯನ್ನು ಎದುರಿಸುತ್ತಿರುವ ಒಂದು ಸಭೆಯು ಅವಶ್ಯವಾಗಿ ತಿಳಕೊಳ್ಳಬೇಕಾದದ್ದು ಏನೆಂದರೆ, ಕರ್ತನಾದ ಯೇಸುವು ಪ್ರತಿಯೊಂದು ಸಂಗತಿಯನ್ನು ಶುರುವಿನಿಂದ ಕೊನೆಯ ವರೆಗೆ ನಿಯಂತ್ರಿಸುವಾತನು ಮತ್ತು ಮಾನವನ ಅತಿ ದೊಡ್ಡ ವೈರಿಯನ್ನು - ಅಂದರೆ ಮರಣವನ್ನು - ಸೋಲಿಸಿರುವಾತನು ಆಗಿದ್ದಾನೆ, ಎಂಬುದನ್ನು.

    ಕರ್ತನು ಸ್ಮುರ್ನದ ಈ ಸಭೆಯ ವಿರುದ್ಧವಾಗಿ ಯಾವ ಆಪಾದನೆಯನ್ನೂ ಮಾಡಲಿಲ್ಲ.

    ಸಂಕಟ, ಬಡತನ ಮತ್ತು ದೂಷಣೆ, ಇವೆಲ್ಲವನ್ನು ಎದುರಿಸುತ್ತಿದ್ದ ಒಂದು ಸಭೆ ಇದಾಗಿತ್ತು.

    ’ಸಂಕಟವು’ ಪ್ರಕಟನೆಯ ಪುಸ್ತಕದಲ್ಲಿ ಮತ್ತೆ ಮತ್ತೆ ಕಂಡುಬರುವ ಒಂದು ವಿಷಯವಾಗಿದೆ - ಮತ್ತು ನೀವು ಗಮನಿಸಬೇಕಾದದ್ದು ಏನೆಂದರೆ, ದೇವರ ಮಕ್ಕಳಲ್ಲಿ ಬಹಳ ಹೆಚ್ಚು ನಂಬಿಗಸ್ತರಾದವರು ಸಂಕಟವನ್ನು ಎದುರಿಸುತ್ತಾರೆ, ಮತ್ತು ಲೋಕದೊಂದಿಗೆ ರಾಜಿ ಮಾಡಿಕೊಳ್ಳುವ ವಿಶ್ವಾಸಿಗಳು ಇದನ್ನು ಎದುರಿಸುವುದಿಲ್ಲ. ಪ್ರಕಟನೆ ಪುಸ್ತಕದ ಮೊದಲನೆ ಅಧ್ಯಾಯದಲ್ಲಿ, ಯೋಹಾನನು ಸಂಕಟಕ್ಕೆ ಗುರಿಯಾದುದನ್ನು ನಾವು ನೋಡಿದೆವು. ಇಲ್ಲಿ ನಾವು ಅಂಥದ್ದೇ ಸ್ಥಿತಿಯಲ್ಲಿರುವ ಒಂದು ನಂಬಿಗಸ್ತ ಸಭೆಯನ್ನು ನೋಡುತ್ತೇವೆ. ಇಲ್ಲಿ ಕರ್ತನು ಒಂದೇ ಒಂದು ಆಪಾದನೆಯನ್ನೂ ಹೊರಿಸದಿದ್ದ ಸಭೆಯು ಸಂಕಟಕ್ಕೆ ಗುರಿಯಾಗಿದೆ. ಲೌಕಿಕ ಸ್ವಭಾವದ, ಲೋಕದೊಂದಿಗೆ ರಾಜಿ ಮಾಡಿಕೊಳ್ಳುವ ಸಭೆಗಳು ಆರಾಮವಾಗಿ ಸಾಗುತ್ತವೆ.

    ಈ ವಚನಗಳೆಲ್ಲವೂ ನಮಗೆ ನೆನಪಿಸುವುದು ಏನೆಂದರೆ, ಸಂಕಟವು ದೇವರ ಪೂರ್ಣಹೃದಯದ ಮಕ್ಕಳಿಗಾಗಿ ದೇವರ ಪರಿಪೂರ್ಣ ಚಿತ್ತದ ಒಂದು ಅಂಶವಾಗಿದೆ. ಹಾಗಾಗಿ ಮುಂದೆ ಒಂದು ದಿನ ನಾವು ಸ್ವತಃ ಮಹಾಸಂಕಟ ಕಾಲವನ್ನು ಎದುರಿಸುವಾಗ, ನಮಗೆ ವಿಪರೀತ ಸಂಗತಿಯು ಸಂಭವಿಸಿತು ಎಂದು ನಾವು ಯೋಚಿಸಬೇಕಿಲ್ಲ. ನಾವು ದೇವರ ನಂಬಿಗಸ್ತ ಮಕ್ಕಳು ಅನೇಕ ಶತಮಾನಗಳಿಂದ ಹಾದು ಹೋಗಿರುವ ದಾರಿಯಲ್ಲೇ ನಡೆಯಲಿದ್ದೇವೆ.

    ದೇವರು ತನ್ನ ಮಕ್ಕಳಲ್ಲಿ ಬಹಳ ಉತ್ತಮರೂ ಸಹ ಸಂಕಟಕ್ಕೆ ಗುರಿಯಾಗುವುದನ್ನು ಅನುಮತಿಸುತ್ತಾರೆ. ಇದು ಮೊದಲನೆ ಶತಮಾನದಲ್ಲಿ ನಿಜವಾಗಿತ್ತು. ಕಳೆದ 20 ಶತಮಾನಗಳ ಸಭೆಯ ಇತಿಹಾಸದ ಉದ್ದಕ್ಕೂ ಹಾಗೆಯೇ ನಡೆಯುತ್ತಾ ಬಂದಿದೆ. ಮತ್ತು ಅಂತ್ಯಕಾಲದಲ್ಲೂ ಹಾಗೆಯೇ ಆಗಲಿದೆ.

    ಕ್ರಿಸ್ತವಿರೋಧಿಯ ದಿನದಲ್ಲಿ ದೇವರ ಸಾಕ್ಷಿಗಳಾಗಿ ನಿಲ್ಲುವುದಕ್ಕಾಗಿ, ದೇವರ ಮಕ್ಕಳಲ್ಲಿ ಅತ್ಯುತ್ತಮರು, ಅವರಲ್ಲಿ ಹೆಚ್ಚು ನಂಬಿಗಸ್ತರಾದವರು, ಅಂದರೆ, ಕರ್ತನ ಸೇನೆಯ ಆಕ್ರಮಣಕಾರಿ ಪಂಗಡದ ಉತ್ಕೃಷ್ಟ ಸಿಪಾಯಿಗಳೇ ಈ ಲೋಕದಲ್ಲಿ ಇರುತ್ತಾರೆ. ಪ್ರತಿಯೊಂದು ಸೇನೆಯ ಮಹಾ ದಂಡನಾಯಕನು ತನ್ನ ಅತ್ಯುತ್ತಮ ಸೇನಾದಳವನ್ನು ಕಾಳಗವು ಅತೀ ತೀಕ್ಷ್ಣವಾಗಿರುವ ಕ್ಷೇತ್ರಕ್ಕೆ ಕಳುಹಿಸುತ್ತಾನೆ. ಕರ್ತನೂ ಅದನ್ನೇ ಮಾಡುತ್ತಾನೆ. ಕರ್ತನ ಇಂತಹ ಸೈನಿಕರ ಪಂಗಡದ ಭಾಗವಾಗುವುದು ಒಂದು ಮಹಾ ಸೌಭಾಗ್ಯ ಮತ್ತು ವಿಶೇಷ ಗೌರವವಾಗಿರುತ್ತದೆ.

    ದೇವರಿಗೆ ಭೂಲೋಕದಲ್ಲಿ ಸಾಕ್ಷಿಯು ಬಹಳ ಅಗತ್ಯವಾಗಿ ಬೇಕಾಗುವ ಸಮಯದಲ್ಲಿ ಅವರು ಖಂಡಿತವಾಗಿ ಜಯಶಾಲಿಗಳನ್ನು ಪರಲೋಕಕ್ಕೆ ಕರೆದೊಯ್ಯುವುದಿಲ್ಲ. ಅವರು ಹಿಂದೆ ಯಾವಾಗಲೂ ಹೀಗೆ ಮಾಡಿಲ್ಲ ಮತ್ತು ಭವಿಷ್ಯದಲ್ಲೂ ಹಾಗೆ ಮಾಡುವುದಿಲ್ಲ.

    ಪ್ರಕಟನೆಯ ಪುಸ್ತಕದಲ್ಲಿ, ಮಹಾ ಸಂಕಟಕಾಲದಲ್ಲಿ ಕ್ರಿಸ್ತವಿರೋಧಿಯನ್ನು ಎದುರಿಸಿ ನಿಲ್ಲುವಂತ ಕರ್ತನ ವಿಶೇಷ ಪರಿಣತ ಸಿಪಾಯಿಗಳನ್ನು "ದೇವರ ಆಜ್ಞೆಗಳನ್ನು ಕೈಕೊಂಡು ನಡೆದು, ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವವರು," ಎಂದು ಉಲ್ಲೇಖಿಸಲಾಗಿದೆ (ಪ್ರಕ. 12:17). ಇವರು ಕ್ರಿಸ್ತವಿರೋಧಿಗೆ ತಲೆಬಾಗಿಸಲು ಅಥವಾ ತಮ್ಮ ದೇಹದ ಮೇಲೆ ಆತನ ಗುರುತನ್ನು ಹೊಂದಲು ನಿರಾಕರಿಸುತ್ತಾರೆ. ಈ ಕಾರಣಕ್ಕಾಗಿ ಅವರಲ್ಲಿ ಅನೇಕರು ತಮ್ಮ ನಂಬಿಕೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಬೇಕಾಗುತ್ತದೆ (ಪ್ರಕ. 13:7,8,15-17). ಹೀಗೆ ಅವರು "ಪ್ರಾಣದ ಮೇಲೆ ಪ್ರೀತಿಯನ್ನು ತೊರೆದು, ಮರಣಕ್ಕೆ ಹಿಂತೆಗೆಯದವರು" ಎಂದು ನಾಮಾಂಕಿತವಿರುವ ಎಲ್ಲಾ ಕಾಲದ ಹುತಾತ್ಮರ ತಂಡಕ್ಕೆ ಸೇರುತ್ತಾರೆ (ಪ್ರಕ. 12:11).

    ಸ್ವಾಭಾವಿಕವಾಗಿ ನಮ್ಮಲ್ಲಿ ಯಾರಿಗೂ ಕರ್ತನಿಗಾಗಿ ಮರಣವನ್ನು ಎದುರಿಸುವ ಧೈರ್ಯ ಇರುವುದಿಲ್ಲ. ಆದರೆ ನಮ್ಮ ನಿಲುವನ್ನು ರಕ್ತಸಾಕ್ಷಿಯ ಮೂಲಕ ದೃಢೀಕರಿಸುವ ಕರೆಯನ್ನು ದೇವರು ನಮಗೆ ಕೊಡುವುದಾದರೆ, ಆ ಸಮಯ ಬರುವಾಗ ಅವರು ನಮಗೆ ಅದಕ್ಕಾಗಿ ವಿಶೇಷ ಕೃಪೆಯನ್ನು ಅನುಗ್ರಹಿಸುವರು, ಎಂಬ ಭರವಸೆಯನ್ನು ನಾವು ನಿಶ್ಚಯವಾಗಿ ಇಟ್ಟುಕೊಳ್ಳಬಹುದು. ಹಿಂದಿನ ದಿನಗಳಲ್ಲಿ ಇಂತಹ ವಿಶೇಷ ಕೃಪೆಯ ಮೂಲಕವೇ ಪ್ರತಿಯೊಬ್ಬ ಕ್ರೈಸ್ತ ಹುತಾತ್ಮನೂ ಭಯವಿಲ್ಲದೆ ಮರಣವನ್ನು ಎದುರಿಸಿದನು. ದೇವರು ಅವರಿಗೆ ಮಾಡಿದ್ದನ್ನೇ ನಮಗೂ ಸಹ - ನಮ್ಮಲ್ಲಿ ಅತಿ ಬಲಹೀನ ಮತ್ತು ಅತಿ ಹೇಡಿಗೂ ಸಹ - ಮಾಡುತ್ತಾರೆ. ನಾವು ಮಾಡಬೇಕಾದದ್ದು ಇಷ್ಟೇ - ಎಂತಹ ಬೆಲೆ ತೆರಬೇಕಾದರೂ ನಾವು ಅವರಿಗೆ ನಂಬಿಗಸ್ತರಾಗಿ ಇರಲು ಬಯಸುತ್ತೇವೆ ಎಂದು ಅವರಿಗೆ ಅರಿಕೆ ಮಾಡುವುದು. ಮಾಡುವ ಛಲ ನಮ್ಮಲ್ಲಿದರೆ, ದೇವರು ನಮ್ಮಲ್ಲಿ ಧೈರ್ಯವನ್ನು ತುಂಬುವರು.

    ಬಡತನ

    ಸ್ಮರ್ನದ ಸಭೆಯ ದೇವಭಕ್ತರು ಬಡವರಾಗಿದ್ದರು. ಕ್ರೈಸ್ತಸಭೆಯ ಇತಿಹಾಸದ ಉದ್ದಕ್ಕೂ ಬಡತನವು ದೇವರ ಪ್ರಾಮಾಣಿಕ ಮಕ್ಕಳು ಅನುಭವಿಸಿರುವ ಇನ್ನೊಂದು ಪರಿಸ್ಥಿತಿಯಾಗಿದೆ.

    ಹಳೆಯ ಒಡಂಬಡಿಕೆಯ ಅನೇಕ ದೇವಭಕ್ತರು ಐಶ್ವರ್ಯವಂತರಾಗಿದ್ದರು. ಹಳೆಯ ಒಡಂಬಡಿಕೆಯ ಅವಧಿಯಲ್ಲಿ ಇಸ್ರಾಯೇಲ್ಯರಿಗೆ ನೀಡಲಾದ ಕರೆ ಒಂದು ಲೌಕಿಕ ರಾಜ್ಯದ ಅಧಿಪತ್ಯವಾಗಿತ್ತು, ಹಾಗಾಗಿ ವಿಧೇಯತೆಗೆ ಪ್ರತಿಫಲವಾಗಿ ಲೌಕಿಕ ಸಂಪತ್ತನ್ನು ದೇವರು ಅವರಿಗೆ ವಾಗ್ದಾನ ಮಾಡಿದ್ದರು.

    ಆದರೆ ಯೇಸುವು ಒಂದು ಹೊಸ ಒಡಂಬಡಿಕೆಯನ್ನು ಉದ್ಘಾಟಿಸಿ, ಈ ಲೋಕಕ್ಕೆ ಪರಲೋಕ ರಾಜ್ಯವನ್ನು ತಂದನು. ಈಗ ನಮಗೆ ವಾಗ್ದಾನ ಮಾಡಲಾಗಿರುವ ಸಂಪತ್ತು ಪರಲೋಕದ್ದಾಗಿದೆ, ಲೌಕಿಕವಾದದ್ದಲ್ಲ. ಆ ಕಾರಣಕ್ಕಾಗಿಯೇ, ಸ್ವತಃ ಯೇಸು ಮತ್ತು ಅಪೊಸ್ತಲರೆಲ್ಲರೂ ಬಡತನದಲ್ಲಿ ಜೀವಿಸಿದರು.

    ಈ ದಿನ, ಐಶ್ವರ್ಯವನ್ನು ಗಳಿಸುವದು ದೇವರು ತನ್ನ ಮಕ್ಕಳನ್ನು ಆಶೀರ್ವದಿಸುವ ಒಂದು ಗುರುತು, ಎಂದು ಅನೇಕರು ಬೋಧಿಸುತ್ತಾರೆ. ಈ ಧಾರ್ಮಿಕ ಸಿದ್ಧಾಂತವನ್ನು ಪಾಶ್ಚಿಮಾತ್ಯ ದೇಶಗಳ ಬೋಧಕರು ದೇವಜನರ ಕಾಣಿಕೆಗಳಿಂದ ಗಳಿಸಿದ ಐಶ್ವರ್ಯದ ಸಮರ್ಥನೆಗಾಗಿ ಮೊದಲು ಸೃಷ್ಟಿಸಿದರು! ಇದರ ನಂತರ ಕ್ರೈಸ್ತ ಉದ್ಯಮಿಗಳು, ತಾವು ಕೂಡಿಹಾಕಿದ ಸಂಪತ್ತನ್ನು ಸಮರ್ಥಿಸುವ ಉದ್ದೇಶದಿಂದ ಈ ಅನುಕೂಲಕರ ಸಿದ್ಧಾಂತವನ್ನು ಬಿಗಿಯಾಗಿ ಹಿಡಿದರು. ಎಲ್ಲೆಡೆ ದುರಾಸೆಯುಳ್ಳ ಬೋಧಕರು ಸಹ ಈ ಸಿದ್ಧಾಂತವು ತಮಗೆ ಅನುಕೂಲಕರವಾಗಿದೆ ಎಂದು ಕಂಡುಕೊಂಡಿದ್ದಾರೆ!!

    ಇಂತಹ ಎಲ್ಲಾ ಬೋಧಕರು ತಮ್ಮ ಸ್ವಂತ ದುರಾಸೆಯಿಂದ ಸಂಪೂರ್ಣವಾಗಿ ವಂಚಿಸಲ್ಪಟ್ಟಿದ್ದಾರೆಂದು ತೋರಿಸುವುದಕ್ಕೆ, ಯೇಸು ಮತ್ತು ಅಪೊಸ್ತಲರ ಬಡತನವೇ ಸಾಕು.

    ಸ್ಮುರ್ನದ ವಿಶ್ವಾಸಿಗಳು ಭಾರಿ ಸಂಕಟಗಳ ನಡುವೆ ಕರ್ತನಿಗೆ ನಂಬಿಗಸ್ತರಾಗಿದ್ದರು, ಮತ್ತು ಅವರು ಬಡತನವನ್ನು ಅನುಭವಿಸಿದರು. ಇನ್ನೊಂದು ಪಕ್ಕದಲ್ಲಿ, ಲವೊದಿಕೀಯದ ವಿಶ್ವಾಸಿಗಳು ಸಂಪೂರ್ಣವಾಗಿ ಸತ್ತವರಾಗಿದ್ದರು ಮತ್ತು ಅವರು ಐಹಿಕವಾಗಿ ಐಶ್ವರ್ಯವಂತರಾಗಿದ್ದರು. ಇದು ಏನನ್ನು ಸಾಬೀತು ಪಡಿಸುತ್ತದೆ? ಗಮನಿಸಿ ನೋಡಿದಾಗ, ಯಾರಿಗಾದರೂ ಉತ್ತರ ಸ್ಪಷ್ಟವಾಗಿ ಕಾಣಿಸುತ್ತದೆ.

    "ದೇವರು ಲೌಕಿಕ ವಿಷಯದಲ್ಲಿ ಬಡವರಾಗಿ ಇರುವವರನ್ನು ಆದುಕೊಂಡು, ಅವರು ನಂಬಿಕೆಯಲ್ಲಿ ಐಶ್ವರ್ಯವಂತರಾಗಿ ಇರಬೇಕೆಂದು ನೇಮಿಸಲಿಲ್ಲವೋ? ... ದೇವರು ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ.... ದೇವರು ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ.... ದೇವರು ಗಣನೆಗೆ ಬಾರದವರನ್ನು ಆರಿಸಿಕೊಂಡಿದ್ದಾನೆ .... ಹೀಗಿರಲು ದೇವರ ಮುಂದೆ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ." (ಯಾಕೋ. 2:5 ; 1 ಕೊರಿ. 1:27-29).

    ದೇವರು ತನ್ನ ಮಕ್ಕಳನ್ನು ಆರಿಸಿಕೊಳ್ಳುವುದರಲ್ಲಿ ಯಾವ ತಪ್ಪನ್ನೂ ಮಾಡಿಲ್ಲ.

    ನಾವು ದೇವರ ರಾಜ್ಯವನ್ನೂ, ನೀತಿಯನ್ನೂ ಸರ್ವೋಚ್ಛ ಆದ್ಯತೆಯಾಗಿ ಪರಿಗಣಿಸಿದಾಗ, ನಮ್ಮ ಪ್ರತಿಯೊಂದು ಲೌಕಿಕ ಅವಶ್ಯಕತೆಯನ್ನು ನೀಗಿಸುವ ವಾಗ್ದಾನವನ್ನು ದೇವರು ಮಾಡಿದ್ದಾರೆ (ಮತ್ತಾ. 6:33 ; ಫಿಲಿ. 4:19).

    ಭಾರತ ದೇಶದ ಕ್ರೈಸ್ತಸಭೆಗಳಲ್ಲಿ, ಕಡು ಬಡತನ ಮತ್ತು ಸಾಲದ ಹೊರೆಯಿಂದ ಬಳಲುತ್ತಿದ್ದ ವಿಶ್ವಾಸಿಗಳು, ತಮ್ಮ ಜೀವನದಲ್ಲಿ ಪರಲೋಕದ ತಂದೆಯನ್ನು ಸನ್ಮಾನಿಸಿದಾಗ, ಅವರು ಆತನಿಂದ ಈ ರೀತಿಯಾಗಿ ಆರ್ಥಿಕ ಆಶೀರ್ವಾದವನ್ನು ಹೊಂದಿದ ಹಲವಾರು ನಿದರ್ಶನಗಳನ್ನು ನಾವು ನೋಡಿದ್ದೇವೆ. ಸರಕಾರದ ಸಾಮಾಜಿಕ ಭದ್ರತಾ ವ್ಯವಸ್ಥೆ ಇಲ್ಲದಿರುವ ಭಾರತದಂತಹ ದೇಶದಲ್ಲಿ, ನಿರುದ್ಯೋಗವು ಎಲ್ಲೆಡೆ ಹರಡಿರುವಾಗ, ಅಧಿಕಾರಿಗಳು ಮಿತಿಮೀರಿದ ಭ್ರಷ್ಟಾಚಾರಿಗಳು ಆಗಿರುವಾಗ, ಇದೊಂದು ಅದ್ಭುತವೇ ಸರಿ. ಆದರೆ ನಾವು ಕಂಡಿರುವ ಇನ್ನೊಂದು ವಿಷಯ, ಈ ವಿಶ್ವಾಸಿಗಳು ಐಶ್ವರ್ಯವಂತರಾಗಿಲ್ಲ. ದೇವರು ಅವರ ಅವಶ್ಯಕತೆಗಳನ್ನು ಪೂರೈಸಿದ್ದಾರೆ. ಆದರೆ ಅವರು ಈ ವಿಶ್ವಾಸಿಗಳನ್ನು ಐಶ್ವರ್ಯವಂತರನ್ನಾಗಿ ಮಾಡಿಲ್ಲ.

    ನಾವು ಕಂಡಿರುವ ಇನ್ನೊಂದು ವಿಷಯವೇನೆಂದರೆ, ವಿಶ್ವಾಸಿಗಳು ಐಶ್ವರ್ಯವನ್ನು ಬೆನ್ನಟ್ಟಿದಾಗ ಅವರು ಆತ್ಮಿಕವಾಗಿ ತಮ್ಮನ್ನು ನಾಶ ಮಾಡಿಕೊಂಡಿದ್ದಾರೆ (1 ತಿಮೊ. 6:9,10).

    ಒಂದು ವೇಳೆ ಒಬ್ಬ ವಿಶ್ವಾಸಿಯು ಈಗಾಗಲೇ ಐಶ್ವರ್ಯವಂತನಾಗಿದ್ದರೆ - ಪಿತ್ರಾರ್ಜಿತ ಬಾಧ್ಯತೆಯಿಂದ ಪಡೆದ ಆಸ್ತಿಯ ಮೂಲಕವೋ ಅಥವಾ ಬೇರೆ ಯಾವುದೋ ಕಾರಣದಿಂದಲೋ - ಅವನು ಏನು ಮಾಡಬೇಕು? ಅವನು ದೇವರ ವಾಕ್ಯಕ್ಕೆ ವಿಧೇಯನಾಗಬೇಕು:

  • (i) ಮೊದಲನೆಯದಾಗಿ, ಆತನ ಸಕಲ ಸಂಪತ್ತು ಕರ್ತನಿಗೆ ಸೇರಿದ್ದು ಎಂಬುದನ್ನು ತಿಳಿದುಕೊಳ್ಳಲಿ (ಸತ್ಯವೇದದ ಈ ವಚನಗಳನ್ನು ಅಧ್ಯಯನ ಮಾಡಿರಿ: 1 ಕೊರಿ. 10:26; 1 ಕೊರಿ. 4:7; ಲೂಕ. 14:33; ಯೋಹಾ. 17:10);
  • (ii) ದೇವರ ಆಜ್ಞೆಗೆ ವಿಧೇಯನಾಗಿ, ಆತನ ಐಶ್ವರ್ಯವನ್ನು ಸುವಾರ್ತಾ ಪ್ರಸಾರಕ್ಕಾಗಿ ಉಪಯೋಗಿಸಲಿ; ಹೀಗೆ ಆತನ ಹಣದ ಮೂಲಕ ಮೊದಲು ದೇವರ ರಾಜ್ಯವನ್ನು ಹುಡುಕಲಿ ("ನಿನ್ನ ಹಣದ ಮೂಲಕ ನಿತ್ಯತ್ವಕ್ಕಾಗಿ ಸ್ನೇಹಿತರನ್ನು ಗಳಿಸಿಕೋ" - ಲೂಕ. 16:9, ಭಾವಾನುವಾದ).
  • (iii) ದೇವರ ಆಜ್ಞೆಗೆ ವಿಧೇಯನಾಗಿ, ಇತರ ಬಡ ವಿಶ್ವಾಸಿಗಳೊಂದಿಗೆ ಐಶ್ವರ್ಯವನ್ನು ಹಂಚಿಕೊಳ್ಳಲಿ (1 ತಿಮೊ. 6:17-19).
  • ಈ ಮೂರು ಹೆಜ್ಜೆಗಳನ್ನು ಅನುಸರಿಸಿದರೆ, ಅವನು ಬಹಳ ಸಮಯ ಐಶ್ವರ್ಯವಂತನಾಗಿ ಮುಂದುವರಿಯಲಾರನು. ಆದರೆ ಅವನು ಒಬ್ಬ ಆತ್ಮಿಕ ವ್ಯಕ್ತಿಯಾಗಿ ಬದಲಾಗುತ್ತಾನೆ, ಏಕೆಂದರೆ ದೇವರು ನಮಗೆ ನೀಡುವ ಆತ್ಮಿಕ ಆಶೀರ್ವಾದವು ನಿಖರವಾಗಿ, ಲೌಕಿಕ ಸಂಪತ್ತಿನ ವಿಷಯದಲ್ಲಿ ನಮ್ಮ ನಂಬಿಗಸ್ತಿಕೆಗೆ ತಕ್ಕಂತೆ ಇರುತ್ತದೆ (ಲೂಕ. 16:11). ಅನೇಕರು ಆತ್ಮಿಕವಾಗಿ ಬಡವರಾಗಿರುವದಕ್ಕೆ ಕಾರಣವೇನೆಂದರೆ, "ಅನೀತಿಗೆ ಒಳಪಡುವ ಐಶ್ವರ್ಯವನ್ನು" ದೇವರು ಅವರ ಕೈಯಲ್ಲಿ ಇರಿಸಿ ಅವರನ್ನು ಶೋಧಿಸಿದಾಗ, ಅವರು ಅಪನಂಬಿಗಸ್ತರಾಗಿ ನಡೆದುಕೊಂಡಿದ್ದಾರೆ.

    ದೇವರು ಹೊಸ ಒಡಂಬಡಿಕೆಯಲ್ಲಿ ನಮಗೆ ಐಹಿಕ ಸಂಪತ್ತಿನ ವಾಗ್ದಾನ ಮಾಡಿಲ್ಲ. ಆದರೆ ಅವರು ಸ್ಮರ್ನದ ಸಭೆಗೆ "....ಆದರೂ ನೀನು ಐಶ್ವರ್ಯವಂತನೇ" (ಪ್ರಕಟನೆ 2:9), ಎಂದು ಹೇಳಿದರು. ಅವರು ದೇವರ ದೃಷ್ಟಿಯಲ್ಲಿ ಐಶ್ವರ್ಯವಂತರೇ ಆಗಿದ್ದರು, ಏಕೆಂದರೆ ಅವರು ಸಂಕಟಗಳ ಮಧ್ಯೆ ನಂಬಿಗಸ್ತರಾಗಿದ್ದು, ದೇವರ ಸ್ವಭಾವದಲ್ಲಿ ಪಾಲುಗಾರರಾಗಿದ್ದರು. ಇದು ಹೊಸ ಒಡಂಬಡಿಕೆಯಲ್ಲಿ ದೇವರು ನಮಗೆ ಕೊಡುವಂತ ನಿಜವಾದ ನಿತ್ಯತ್ವದ ಐಶ್ವರ್ಯವಾಗಿದೆ.

    ಅಪನಿಂದೆ

    ಸ್ಮರ್ನದ ಸಭೆಯು ಎದುರಿಸಿದ ಪರಿಸ್ಥಿತಿ ಹೀಗಿತ್ತು: "ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವವರು ನಿನ್ನ ವಿಷಯವಾಗಿ ದೂಷಿಸುತ್ತಾರೆ" (ಪ್ರಕ. 2:9).

    ‘ದೂಷಣೆಯು’ ದೇವರ ಯಥಾರ್ಥರಾದ ಮಕ್ಕಳೆಲ್ಲರೂ ಎದುರಿಸಬೇಕಾದ ಇನ್ನೊಂದು ಸಂಗತಿಯಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ಸಭೆಯು ಎದುರಿಸುತ್ತಿದ್ದ ದೂಷಣೆ ಮತ್ತು ವಿರೋಧವು ದೇವಜನರೆಂದು ತಮ್ಮನ್ನು ಕರೆದುಕೊಳ್ಳುತ್ತಿದ್ದ ಜನರಿಂದ ಬಂದಿತ್ತು - "ಈ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುವರು, ಆದರೆ ಅವರು ಯೆಹೂದ್ಯರಲ್ಲ, ಸೈತಾನನ ಸಮಾಜದವರು ಆಗಿದ್ದಾರೆ" (ವಚನ 9).

    ಆ ಯೆಹೂದ್ಯರು ಧಾರ್ಮಿಕ ಜನರಾಗಿದ್ದರು, ಮತ್ತು ತಮ್ಮ ಸತ್ಯವೇದವನ್ನು (ಆದಿಕಾಂಡದಿಂದ ಮಲಾಕಿಯ ವರೆಗೆ) ಅಭ್ಯಸಿಸಿದ್ದರು. ಆದರೂ ಕರ್ತನು ಅವರನ್ನು "ಸೈತಾನನ ಸಮಾಜದವರು" ಎಂದು ಕರೆದನು, ಏಕೆಂದರೆ ಅವರು ಕಪಟಿಗಳಾಗಿದ್ದರು. ಇದೇ ಕಾರಣಕ್ಕಾಗಿ ಅವರು ಯೇಸುವಿನ ನಿಜವಾದ ಶಿಷ್ಯರನ್ನು ಹಿಂಸೆಗೆ ಒಳಪಡಿಸಿದರು.

    ದೇವಭಕ್ತ ಯೆಹೂದ್ಯರು ಆರಂಭಿಸಿದ್ದ ಹಲವು ಯೆಹೂದಿ ಸಭಾಮಂದಿರಗಳು, ಹಲವಾರು ವರ್ಷಗಳ ಅವನತಿಯಿಂದಾಗಿ ಸೈತಾನನ ಸಭಾಮಂದಿರಗಳು ಆಗಿದ್ದವು. ಹಾಗೆಯೇ ಈ ದಿನ, ದೇವಭಕ್ತ ವಿಶ್ವಾಸಿಗಳು ಆರಂಭಿಸಿದ ಅನೇಕ ಕ್ರೈಸ್ತಸಭೆಗಳೂ ಸಹ ಭ್ರಷ್ಟಗೊಂಡು, ದೇವರ ದೃಷ್ಟಿಯಲ್ಲಿ "ಸೈತಾನನ ಸಭೆಗಳು" ಆಗಿವೆ.

    ಇಂದು ಕ್ರಿಸ್ತನ ನಿಜವಾದ ಶಿಷ್ಯರಿಗೆ ಕೇವಲ ಅನ್ಯ ಧರ್ಮಗಳಿಂದ ವಿರೋಧ ಉಂಟಾಗುತ್ತಿಲ್ಲ (ಅದು ತಾರ್ಕಿಕವಾದದ್ದು), ಆದರೆ "ಕ್ರೈಸ್ತರೆಂದು ತಮ್ಮನ್ನು ಹೇಳಿಕೊಳ್ಳುವವರು, ಆದರೆ ಅವರು ಕ್ರೈಸ್ತರಲ್ಲ, ಸೈತಾನನ ಸಭೆ," ಎಂದು ಹೇಳಲ್ಪಟ್ಟವರು ಸಹ ಅವರ ವಿರೋಧಿಗಳಾಗಿದ್ದಾರೆ.

    ಇಂದು "ಕ್ರೈಸ್ತಸಭೆ"ಯೆಂದು ಹೇಳಲಾಗುವ ಒಂದು ಸಭೆಯು "ಸೈತಾನನ ಸಭೆ"ಯೆಂದು ನಾವು ಹೇಳಿದರೆ, ಅನೇಕರು ನಮ್ಮನ್ನು ಕ್ರಿಸ್ತನಿಗೆ ವ್ಯತಿರಿಕ್ತವಾದ ಸ್ವಭಾವದವರು ಎಂದು ದೂಷಿಸಬಹುದು. ಆದರೆ ಸ್ವತಃ ಯೇಸುವು ಪೇತ್ರನನ್ನು, "ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ," ಎಂದು ಗದರಿಸಿದ್ದನ್ನು (ಮತ್ತಾ. 16:23) ಮತ್ತು ಈ ಧಾರ್ಮಿಕ ಜನರ ಪಂಗಡವನ್ನು ಯೇಸುವೇ "ಸೈತಾನನ ಸಮಾಜ" ಎಂದು ಕರೆದದ್ದನ್ನು ಅವರು ಮರೆತಿದ್ದಾರೆ. ಇಂದು ಯೇಸುವಿನ ಕರೆಯಿಂದ ಹಿಂಜರಿದಿರುವ "ಸಭೆಗಳನ್ನು" ಅತನು ಅಷ್ಟೇ ಬಿರುಸಾದ ಶಬ್ದಗಳಿಂದ ಗದರಿಸುವನು.

    ಯೇಸುವು ತನ್ನ ಶಿಷ್ಯರಿಗೆ ನೀಡಿದ ಎಚ್ಚರಿಕೆ ಏನೆಂದರೆ, "ನಿಮಗೆ ಇದನ್ನೆಲ್ಲಾ ಹೇಳಿದ್ದೇನೆ. ನಿಮಗೆ ಬಹಿಷ್ಕಾರ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ. ಅವರು ತಂದೆಯನ್ನಾದರೂ, ನನ್ನನ್ನಾದರೂ ತಿಳಿಯದವರಾಗಿ ಇರುವದರಿಂದ ಇಂಥದನ್ನು ನಿಮಗೆ ಮಾಡುವರು" (ಯೋಹಾ. 16:2,3).

    ಯೆಹೂದಿ ಸಭಾಮಂದಿರಗಳ ಜನರು ತನ್ನ ಶಿಷ್ಯರಿಗೆ ಮಾಡಲಿದ್ದಾರೆಂದು ಆತನು ಹೇಳಿದ ಸಂಗತಿಯನ್ನೇ, ಮುಂದಿನ ಶತಮಾನಗಳ "ಸಭೆಗಳೂ" ಸಹ ಮಾಡಿದವು. ಮಧ್ಯಯುಗದಲ್ಲಿ, ದೇವಭಕ್ತರಾದ ಯೇಸುವಿನ ಶಿಷ್ಯರು ರೋಮನ್ ಕ್ಯಾಥೋಲಿಕ್ ಸಭೆಯ ಶೋಧಕರಿಂದ ಸಾಯಿಸಲ್ಪಟ್ಟರು.

    ಮುಂದೆ ಬರಲಿರುವ ಕ್ರಿಸ್ತವಿರೋಧಿ ಮತ್ತು ಬಾಬೆಲಿನ "ಜಾಗತಿಕ ಸಭೆ"ಯ ಅವಧಿಯಲ್ಲಿ, ಯೇಸುವಿನ ಶಿಷ್ಯರ ವಿರುದ್ಧವಾದ ದ್ವೇಷವು ಪರಮಾವಧಿಗೆ ಏರಲಿದೆ. ಅದು ಸಂಭವಿಸುವಾಗ ಅದನ್ನು ಎದುರಿಸಲು ನಾವು ಸಿದ್ಧರಾಗಿ ಇರಬೇಕು. ಹಾಗಾಗಿ ಈ ದಿನಗಳಲ್ಲಿ ಕ್ರೈಸ್ತರೆಂದು ಹೇಳಿಕೊಳ್ಳುವ ಜನರಿಂದ ಬರುವ ಸಣ್ಣ ಪುಟ್ಟ ಅಪನಿಂದೆ ಮತ್ತು ವಿರೋಧಗಳನ್ನು ಎದುರಿಸಲು ನಾವು ಹೆದರಬಾರದು.

    ನಾವು ಯಾವತ್ತೂ ಅಪನಿಂದೆಗೆ ಭಯಪಡಬಾರದು - ಏಕೆಂದರೆ ಸ್ವತಃ ಯೇಸುವು ದೂಷಣೆಗೆ ಒಳಗಾದನು. ಆತನಿಗೆ ಕೊಡಲಾದ ಹೆಸರುಗಳು ಇವು - ಹೊಟ್ಟೆಬಾಕ, ಸುಳ್ಳು ಬೋಧಕ, ದೇವ ದೂಷಕ, ಹುಚ್ಚ, ದೆವ್ವ ಹಿಡಿದವನು ಮತ್ತು ಸೈತಾನನಿಂದ ಬಲ ಹೊಂದಿದವನು (ಲೂಕ. 7:34; ಯೊಹಾ. 7:12; ಮತ್ತಾ. 26:65; ಮಾರ್ಕ. 3:21,22; ಯೊಹಾ. 8:48).

    ಆತನು ತನ್ನ ಶಿಷ್ಯರಿಗೆ ಹೀಗೆ ಹೇಳಿದನು: "ಗುರುವಿಗಿಂತ ಶಿಷ್ಯನು ಹೆಚ್ಚಿನವನಲ್ಲ; ಧಣಿಗಿಂತ ಆಳು ದೊಡ್ಡವನಲ್ಲ. ಗುರುವಿನಂತೆ ಆಗುವುದು ಶಿಷ್ಯನಿಗೆ ಸಾಕು, ಮತ್ತು ಧಣಿಯಂತೆ ಆಗುವುದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ‘ಬೆಲ್ಜೆಬೂಲನು’ ಎಂದು ಹೆಸರಿಟ್ಟ ಮೇಲೆ (ಯೆಹೂದ್ಯರು ಸೈತಾನನಿಗೆ ಕೊಟ್ಟ ಶಿರೋನಾಮೆ, ’ದೆವ್ವಗಳ ರಾಜ’ ಎಂಬ ಅರ್ಥ), ಆತನ ಮನೆಯವರನ್ನು ಏನೆಂದಾರು!" (ಮತ್ತಾ. 10:24,25).

    ಪೇತ್ರನು ನಮ್ಮನ್ನು ಪ್ರೋತ್ಸಾಹಿಸುತ್ತಾ, "ಅನ್ಯಜನರ ಮಧ್ಯದಲ್ಲಿ ನಿಮ್ಮ ನಡತೆಯು ಯೋಗ್ಯವಾಗಿರಲಿ. ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ, ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು," ಎಂದು ಹೇಳುತ್ತಾನೆ (1 ಪೇತ್ರ. 2:12)

    .

    ನಮಗೆ ದೇವರ ವಾಗ್ದಾನವೇನೆಂದರೆ, "ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯ ವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಇದೇ ನಾನು ಕರ್ತನ ಸೇವಕರಿಗೆ ದಯಪಾಲಿಸುವ ತೆಗಳಿಕೆಯಿಂದ ಬಿಡುಗಡೆಯೂ, ಅವರ ಸ್ವಾಸ್ತ್ಯವೂ ಆಗಿದೆ" (ಯೆಶಾ. 54:17). ಆದ್ದರಿಂದ ನಾವು ನಿಂದೆಗೆ ಭಯ ಪಡಬೇಕಿಲ್ಲ. ಸೂಕ್ತ ಸಮಯದಲ್ಲಿ ಸ್ವತಃ ಕರ್ತನೇ ನಮ್ಮ ತೆಗಳಿಕೆಯನ್ನು ದೂರಮಾಡುತ್ತಾನೆ. ಅದು ವರೆಗೆ ನಾವು ಸುಮ್ಮನಿದ್ದು, ದೇವಭಯವಿಲ್ಲದ ಜನರ ಅವಹೇಳನವನ್ನು ಅಲಕ್ಷಿಸುವದು ಉತ್ತಮವಾಗಿದೆ.

    ಭಯದಿಂದ ಬಿಡುಗಡೆ

    ಅನಂತರ ಕರ್ತನು ಸ್ಮರ್ನದ ಸಭೆಗೆ, ಹೆದರಬೇಡಿರಿ, ಎಂದು ಹೇಳುತ್ತಾನೆ (ಪ್ರಕ. 2:10). ಯೇಸುವಿನ ಈ ಲೋಕದ ಜೀವಿತದಲ್ಲಿ, "ಭಯ ಪಡಬೇಡಿರಿ" ಎಂಬ ಪದವು ಆತನ ತುಟಿಗಳಿಂದ ಪದೇ ಪದೇ ಹೊರಡುತ್ತಿತ್ತು. ಆತನು ಈ ಪದವನ್ನು ಈಗಲೂ ತನ್ನ ಹೆಸರಿನ ನಿಮಿತ್ತ ಬಾಧೆಗೆ ಈಡಾಗಿರುವ ಸಭೆಗೆ ನೀಡುತ್ತಾನೆ. ಈಗಿನ ದಿನಗಳಲ್ಲಿ ನಾವೆಲ್ಲರೂ ಕರ್ತನ ಬಾಯಿಯಿಂದ ಹೆಚ್ಚಾಗಿ ಕೇಳಬೇಕಾಗಿರುವ ಒಂದು ಪದ ಬಹುಶಃ ಇದೇ ಆಗಿದೆ.

    ಇಂದು ಪ್ರಪಂಚದಲ್ಲಿ ಎಲ್ಲೆಡೆ ಭಯದ ಆತ್ಮವು ಹರಡಿದ್ದು, ಜನರ ಮೇಲೆ ಅದರ ಹಿಡಿತ ಹೆಚ್ಚು ಬಿಗಿಯಾಗುತ್ತಿದೆ. ಕಡೆಯ ದಿನಗಳು ಹೀಗಿರುತ್ತವೆಂದು ಯೇಸುವು ನಮ್ಮನ್ನು ಎಚ್ಚರಿಸಿದನು (ಲೂಕ. 21:26). ಆದರೆ ಈ ಭಯದ ಆತ್ಮದಿಂದ ಆತನ ಶಿಷ್ಯರು ಪ್ರಭಾವಿತರಾಗದಂತೆಯೂ ಆತನು ಅವರನ್ನು ಎಚ್ಚರಿಸಿದನು. ದುಃಖಕರ ಸಂಗತಿ ಏನೆಂದರೆ, ಹೆಚ್ಚಿನ ವಿಶ್ವಾಸಿಗಳು ಈ ಆತ್ಮದಿಂದ ಬಿಡುಗಡೆ ಹೊಂದಿಲ್ಲ. ಅನೇಕ ವಿಶ್ವಾಸಿಗಳು ಭವಿಷ್ಯದಲ್ಲಿ ಏನಾಗುತ್ತದೋ ಎಂಬ ಭಯ, ಮನುಷ್ಯರ ಭಯ, ರೋಗದ ಭಯ, ಮರಣದ ಭಯ ಮತ್ತು ಇತರ ಹಲವು ಭಯಗಳಿಗೆ ದಾಸರಾಗಿದ್ದಾರೆ.

    ‘ಭಯವು’ ಸೈತಾನನ ಸರ್ವಶ್ರೇಷ್ಠ ಆಯುಧಗಳಲ್ಲಿ ಒಂದಾಗಿದೆ, ಮತ್ತು ಆತನು ಇದರ ಮೂಲಕ ಅನೇಕ ವಿಶ್ವಾಸಿಗಳನ್ನು ಗುಲಾಮರನ್ನಾಗಿ ಮಾಡಿದ್ದಾನೆ. ಈ ಭಯದ ಆತ್ಮವು ಅನೇಕ ವಿಶ್ವಾಸಿಗಳು ಸಭೆಯ ಕೂಟಗಳಲ್ಲಿ ಧೈರ್ಯವಾಗಿ ಕರ್ತನ ಸಾಕ್ಷಿ ನುಡಿಯದಂತೆ ಮತ್ತು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಕರ್ತನಿಗಾಗಿ ಉತ್ಸಾಹಭರಿತ ಸಾಕ್ಷಿಗಳಾಗದಂತೆ ತಡೆಯುತ್ತದೆ. ಅನೇಕ ವಿಶ್ವಾಸಿಗಳು ತಮ್ಮ ’ಹೇಡಿತನ’ವನ್ನು ’ದೀನತೆ’ ಎಂದು ತಪ್ಪಾಗಿ ತಿಳಕೊಂಡಿದ್ದಾರೆ ಮತ್ತು ಹೀಗೆ ಸೈತಾನನು ಅವರನ್ನು ವಂಚಿಸುತ್ತಾನೆ.

    ಮಹಾಯಾಜಕನ ಮಠದ ಅಂಗಳದಲ್ಲಿ, ಪೇತ್ರನನ್ನು ಒಬ್ಬ ದಾಸಿಯು ಪ್ರಶ್ನಿಸಿದಾಗ, ಆತನು ಕರ್ತನ ಬಗ್ಗೆ ಧೈರ್ಯವಾಗಿ ಸಾಕ್ಷಿ ನುಡಿಯದಂತೆ ಭಯವು ಆತನನ್ನು ತಡೆಯಿತು. ಆದರೆ ಪಂಚಾಶತ್ತಮ ದಿನದಂದು ಪೇತ್ರನು ಪವಿತ್ರಾತ್ಮನಿಂದ ದೀಕ್ಷಾಸ್ನಾನವನ್ನು ಪಡೆದಾಗ, ಆ ಭಯವು ಹೊರಹಾಕಲ್ಪಟ್ಟಿತು. ಆ ಮೇಲೆ ಅವನು ಯಾರ ಮುಂದೆಯೂ ಕರ್ತನ ಬಗ್ಗೆ ಧೈರ್ಯವಾಗಿ ಸಾಕ್ಷಿ ನುಡಿಯಲು ಹಿಂಜರಿಯಲಿಲ್ಲ.

    ಇದರ ನಂತರ ಆತನು ಮತ್ತು ಇತರ ಅಪೊಸ್ತಲರು ಇನ್ನೊಮ್ಮೆ ಭಯದ ಶೋಧನೆಗೆ ಒಳಗಾದಾಗ, ಅವರು ಪ್ರಾರ್ಥಿಸಿದರು ಮತ್ತು ಪವಿತ್ರಾತ್ಮಭರಿತರಾದರು, ಮತ್ತು ಮತ್ತೊಮ್ಮೆ ಭಯದ ಆತ್ಮವು ಅವರಿಂದ ದೂರ ತಳ್ಳಲ್ಪಟ್ಟಿತು (ಅ.ಕೃ. 4:31).

    ಹಾಗಾಗಿ ಈ ಸಮಸ್ಯೆಯ ಪರಿಹಾರ ಇದು: ನಾವು ಪದೇ ಪದೇ ಪವಿತ್ರಾತ್ಮನಿಂದ ತುಂಬಲ್ಪಡಬೇಕು.

    ನೀವು ನಿಮ್ಮ ಸ್ನೇಹಿತರ ನಡುವೆ, ನೆಂಟರ ನಡುವೆ ಮತ್ತು ನಿಮ್ಮ ಕೆಲಸದ ಜಾಗದಲ್ಲಿ ಕರ್ತನ ಸಾಕ್ಷಿ ಹೇಳದಂತೆ ನಿಮ್ಮನ್ನು ತಡೆಯುವ ಭಯದ ಆತ್ಮಕ್ಕೆ ದಾಸರಾಗುವುದು ದೇವರ ಚಿತ್ತವಲ್ಲ. ಅವರು ನಿಮ್ಮನ್ನು ಪವಿತ್ರಾತ್ಮನಿಂದ ತುಂಬಿಸಿ ಧೈರ್ಯ ಪಡಿಸಲು ಬಯಸುತ್ತಾರೆ. ನೀವು ಮಾಡಬೇಕಾದದ್ದು ಇಷ್ಟೇ - ನೀವು ಹೇಡಿಯೆಂದು ಒಪ್ಪಿಕೊಳ್ಳಬೇಕು ಮತ್ತು ಧೈರ್ಯವುಳ್ಳ ಸಾಕ್ಷಿಯಾಗಲು ನಿಮ್ಮನ್ನು ಪವಿತ್ರಾತ್ಮನಿಂದ ತುಂಬುವಂತೆ ದೇವರನ್ನು ಕೇಳಿಕೊಳ್ಳಬೇಕು. ಹಸಿದು ಬಾಯಾರಿದವರು ತುಂಬಲ್ಪಡುತ್ತಾರೆ.

    ನಾವು ಮುಂದಿನ ದಿನಗಳಲ್ಲಿ ಭಯದ ಶೋಧನೆಗೆ ಬಹಳ ಹೆಚ್ಚಾಗಿ ಗುರಿಯಾಗುವೆವು. ಹಾಗಾಗಿ ಈಗ ನಮ್ಮನ್ನು ಎದುರಿಸುವ ಪ್ರತಿಯೊಂದು ಅವಕಾಶವನ್ನು ನಾವು ಉಪಯೋಗಿಸಿಕೊಂಡು ಎಲ್ಲಾ ರೀತಿಯ ಭಯವನ್ನು ತೆಗೆದುಹಾಕೋಣ.

    ದೇವರ ಸಂಕಲ್ಪದಂತೆ ಬಾಧೆಗಳನ್ನು ಸಹಿಸುವುದು

    ದೇವರು ತನ್ನ ನಂಬಿಗಸ್ತ ಮಕ್ಕಳು ಬಾಧೆಗೆ ಒಳಗಾಗುವುದನ್ನು ತಡೆಯುವುದಿಲ್ಲ. ಬಾಧೆಯ ಅನುಭವವು ನಮ್ಮ ಆತ್ಮಿಕ ಬೆಳವಣಿಗೆಗೆ ಅವಶ್ಯವೆಂದು ಅವರಿಗೆ ತಿಳಿದಿದೆ. ಹಾಗಾಗಿ ಸ್ಮರ್ನದ ಸಭೆಯು ಕಷ್ಟದ ಅನುಭವಗಳಿಂದ ದೂರ ಇರಿಸಲ್ಪಡಲಿಲ್ಲ. ಆದರೆ ಕರ್ತನು ಅವರನ್ನು, "ನಿನಗೆ ಸಂಭವಿಸುವುದಕ್ಕಿರುವ ಬಾಧೆಗಳಿಗೆ ಹೆದರಬೇಡ," ಎಂದು ಉತ್ತೇಜಿಸಿದನು (ಪ್ರಕ. 2:10).

    ಸೈತಾನನು ಅವರಲ್ಲಿ ಕೆಲವರನ್ನು ಸೆರೆಮನೆಗೆ ಹಾಕಲಿದ್ದಾನೆ, ಎಂದು ಕರ್ತನು ಅವರನ್ನು ಮುನ್ನೆಚ್ಚರಿಸಿದನು. ವಿಶ್ವಾಸಿಗಳನ್ನು ಅನ್ಯಾಯವಾಗಿ ಸೆರೆಮನೆಗೆ ಹಾಕುವ ಅಧಿಕಾರವನ್ನು ಸೈತಾನನು ದೇವರಿಂದ ಪಡೆದಿದ್ದಾನೆ. ಆದರೆ ಸೈತಾನನು ಮೊದಲು ದೇವರ ಅನುಮತಿಯನ್ನು ಪಡೆಯದೆ ನಮಗೆ ಏನೂ ಮಾಡಲು ಸಾಧ್ಯವಿಲ್ಲ, ಎಂಬುದನ್ನು ನಾವು ನೆನೆಪಿರಿಸಿಕೊಳ್ಳಬೇಕು. ಮತ್ತು ನಾವು ಸೆರೆಗೆ ಹಾಕಲ್ಪಟ್ಟರೂ, ಅದು ಕೇವಲ ನಮ್ಮನ್ನು ಪರೀಕ್ಷಿಸುವುದಕ್ಕಾಗಿ ಆಗಿರುತ್ತದೆ (ವಚನ 10). ದೇವರು ತನ್ನ ಸಂಕಲ್ಪವನ್ನು ಪೂರೈಸಲು ಸೆರೆಮನೆ ವಾಸವನ್ನು ಸಹ ಉಪಯೋಗಿಸಿಕೊಳ್ಳುತ್ತಾರೆ.

    ಪೌಲನು ಫಿಲಿ. 1:12-14 ರಲ್ಲಿ, "ನನಗೆ ಸಂಭವಿಸಿದ ಸಂಗತಿಗಳು (ಸೆರೆಮನೆವಾಸ) ಸುವಾರ್ತೆಯ ಹೆಚ್ಚಿನ ಪ್ರಸಾರಣೆಗೆ ಸಹಾಯವಾಯಿತು," ಎಂದು ಹೇಳುತ್ತಾನೆ. ದೇವರು ಪೌಲನ ಸೆರೆಮನೆವಾಸವನ್ನು ಅನೇಕ ಉದ್ದೇಶಗಳನ್ನು ಪೂರೈಸುವುದಕ್ಕೆ ಉಪಯೋಗಿಸಿದರು:

  • 1) ಪೌಲನನ್ನು ಪವಿತ್ರ ಪಡಿಸಲು;
  • 2) ಪೌಲನ ಸೆರೆಮನೆಯ ಹಲವು ಅಧಿಕಾರಿಗಳ ಮಾನಸಾಂತರಕ್ಕಾಗಿ;
  • 3) ಪೌಲನಿಗೆ ತನ್ನ ಪತ್ರಿಕೆಗಳನ್ನು ಬರೆಯಲು ಅವಕಾಶ ದೊರಕಿಸಲು; ಮತ್ತು
  • 4) ದೇವರ ವಾಕ್ಯವನ್ನು ನಿರ್ಭಯವಾಗಿ ಬೋಧಿಸುವಂತೆ ಇತರ ವಿಶ್ವಾಸಿಗಳಲ್ಲಿ ಅನೇಕರನ್ನು ಧೈರ್ಯ ಪಡಿಸಲು.
  • ನಿಜವಾಗಿಯೂ ನಮ್ಮ ದೇವರು ಸೈತಾನನ ಯೋಜನೆಗಳನ್ನು ತಲೆ ಕೆಳಗಾಗಿಸಿ, ಪ್ರತಿಯೊಂದು ಸಂಗತಿಯು (ಸೆರೆಮನೆ ವಾಸವೂ ಸೇರಿದಂತೆ) ಕೇವಲ ದೈವಿಕ ಸಂಕಲ್ಪಗಳ ನೆರವೇರಿಕೆಗೆ ಉಪಯೋಗವಾಗುವಂತೆ ಮಾಡಲು ಶಕ್ತರಾಗಿದ್ದಾರೆ (ರೋಮಾ. 8:28; ಕೀರ್ತ. 76:10).

    ನಾವು ಸೆರೆಮನೆಯಲ್ಲಿ ಎಷ್ಟು ಸಮಯ ಇರುತ್ತೇವೆಂಬುದು ಸಹ ಕರ್ತನಿಂದ ತೀರ್ಮಾನಿಸಲ್ಪಡುತ್ತದೆ. "ನಿಮಗೆ ಹತ್ತು ದಿನಗಳ ತನಕ ಸಂಕಟವಿರುವುದು," ಎಂಬುದಾಗಿ ಕರ್ತನು ಅವರಿಗೆ ತಿಳಿಸುತ್ತಾನೆ (ವಚನ 10). ದೇವರ ಮಕ್ಕಳು ಸಂಕಟವನ್ನು ಅನುಭವಿಸುವ ಅವಧಿ ಎಷ್ಟೆಂದು ನಿರ್ಧರಿಸುವವರು ನಮ್ಮ ಪರಲೋಕದ ತಂದೆಯೇ ಆಗಿದ್ದಾರೆ.

    ಮಹಾಸಂಕಟ ಕಾಲದಲ್ಲೂ ಸಹ ತಂದೆಯು, "ತಾನು ಆದುಕೊಂಡವರ ಸಲುವಾಗಿ ಆ ದಿನಗಳನ್ನು ಕಡಿಮೆ ಮಾಡುವರು," ಎಂದು ಯೇಸುವು ಹೇಳಿದನು (ಮತ್ತಾ. 24:22). ಭೂಮಿಯ ಮೇಲೆ ಪ್ರಳಯದ ನೀರು ತುಂಬಿದ್ದಾಗ, "ದೇವರು ನೋಹನನ್ನು ನೆನಪಿಗೆ ತಂದುಕೊಂಡರು" (ಆದಿ. 8:1). ಹಾಗೆಯೇ ಮಹಾಸಂಕಟ ಕಾಲವು ಲೋಕದಲ್ಲಿ ದೇವರು ಆರಿಸಿಕೊಂಡವರನ್ನು ಸುತ್ತುವರಿಯುವಾಗ, ತಂದೆಯು ಅವರನ್ನು ಮರೆಯುವುದಿಲ್ಲ. "ನಾನು ನಿನ್ನನ್ನು ಮರೆಯೆನು... ಇಗೊ, ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿದ್ದೇನೆ," ಎಂಬುದು ಅವರ ಮಾತಾಗಿದೆ (ಯೆಶಾ. 49:15,16).

    ನಮಗೆ ಈ ಮಾತು ಮನವರಿಕೆಯಾದಾಗ, ಅದು ಬಹಳ ನೆಮ್ಮದಿಯನ್ನು ತರುತ್ತದೆ. ಮುಂದಿನ ದಿನಗಳಲ್ಲಿ ನಾವು ಕರ್ತನ ನಿಮಿತ್ತ ಬಾಧೆಯನ್ನು ಎದುರಿಸ ಬೇಕಾದಾಗ, ಇದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ದೇವರು ಎಂದಿಗೂ ನಮ್ಮನ್ನು ನಮ್ಮ ಶಕ್ತಿ ಮೀರಿದ ಶೋಧನೆಗೆ ಒಳಪಡಿಸುವುದಿಲ್ಲ. ಸನ್ನಿವೇಶಗಳನ್ನು ನಿಯಂತ್ರಿಸುವ ಸಾಧನೋಪಾಯ ಅವರ ಕೈಯಲ್ಲಿದೆ ಮತ್ತು ಅವರು ಒತ್ತಡವನ್ನು (ನಮ್ಮನ್ನು ಎದುರಿಸುವಂತದ್ದು) ಸೂಕ್ತ ಸಮಯದಲ್ಲಿ ತಗ್ಗಿಸುತ್ತಾರೆ.

    "ನೀನು ಸಾಯಬೇಕಾದರೂ ನಂಬಿಗಸ್ತನಾಗಿರು. ಮತ್ತು ನಾನು ನಿನಗೆ ಜೀವದ ಕಿರೀಟವನ್ನು ಕೊಡುವೆನು," ಎಂದು ಕರ್ತನು ಧೈರ್ಯಪಡಿಸುತ್ತಾನೆ (ವ. 10). ಕರ್ತನಿಗೆ ಯಥಾರ್ಥರಾಗಿ ನಿಲ್ಲುವುದಕ್ಕೆ, ಅವಶ್ಯವಿದ್ದಲ್ಲಿ ಸಾಯುವುದಕ್ಕೂ ಸಹ ನಾವು ಸಿದ್ಧರಾಗಿರಬೇಕು. ಕೇವಲ ಲೌಕಿಕ ಲಾಭಕ್ಕಾಗಿ - ಸ್ವಲ್ಪ ಗೌರವ, ಸ್ವಲ್ಪ ಹಣ ಅಥವಾ ನೌಕರಿಯಲ್ಲಿ ಭಡ್ತಿ, ಮುಂತಾದವುಗಳಿಗಾಗಿ - ತಮ್ಮ ಸಾಕ್ಷಿಯನ್ನು ಹೇಗೆ ಬೇಕಾದರೂ ಬದಲಾಯಿಸುವಂತ ವಿಶ್ವಾಸಿಗಳ ಉದಾಹರಣೆಯನ್ನು ಅನುಸರಿಸಬೇಡಿರಿ. ಇಂತಹ ವಿಶ್ವಾಸಿಗಳು ಮುಂದಿನ ದಿನಗಳಲ್ಲಿ ಕ್ರಿಸ್ತ ವಿರೋಧಿಯ ಗುರುತನ್ನು ಹಾಕಿಸಿಕೊಳ್ಳದಿದ್ದರೆ ನಾವು ಅವಶ್ಯಕ ವಸ್ತುಗಳನ್ನೂ ಸಹ ಖರೀದಿ ಅಥವಾ ಮಾರಾಟ ಮಾಡುವ ಅವಕಾಶ ನಿರಾಕರಿಸಲ್ಪಡುವಾಗ (ಪ್ರಕ. 13:16,17), ಕರ್ತನಿಗಾಗಿ ಯಥಾರ್ಥರಾಗಿ ಹೇಗೆ ನಿಲ್ಲುವರು? ಖಂಡಿತವಾಗಿ ಇಂತಹ "ವಿಶ್ವಾಸಿಗಳು" ಜೀವ ಉಳಿಸಿಕೊಳ್ಳುವುದಕ್ಕಾಗಿ ಆ "ಮೃಗದ ಗುರುತನ್ನು" ಹಾಕಿಸಿಕೊಳ್ಳುವರು.

    ಜೀವದ ಜಯಮಾಲೆಯೆಂಬ ಬಹುಮಾನವು ಯಾವುದೇ ಲೌಕಿಕ ಗೌರವಕ್ಕಿಂತ ಮತ್ತು ಈ ಶಾರೀರಿಕ ಪ್ರಾಣಕ್ಕಿಂತಲೂ ಸಹ ಬಹಳ ಶ್ರೇಷ್ಠವಾದದ್ದು, ಎಂಬುದನ್ನು ನೆನಪಿರಿಸಿಕೊಳ್ಳಿರಿ.

    ಇನ್ನೊಂದು ವಿಷಯ, ಇಂತಹ ಸಂದೇಶವನ್ನು ಕೇಳಿಸಿಕೊಳ್ಳುವಂತ ಕಿವಿ ಎಲ್ಲರಲ್ಲೂ ಇಲ್ಲವೆಂದು ಕರ್ತನು ಗುರುತಿಸಿದ್ದಾನೆ. ಹಾಗಾಗಿ ಆತನು "ಕಿವಿಯುಳ್ಳವನು ಕೇಳಲಿ," ಎಂಬ ಕರೆಯನ್ನು ನೀಡುತ್ತಾನೆ (ಪ್ರಕ. 2:11).

    ಜಯ ಹೊಂದುವವನಿಗೆ ಎರಡನೇ ಮರಣದಿಂದ ಕೇಡಾಗುವದೇ ಇಲ್ಲ (ವಚನ 11).

    ಎರಡನೇ ಮರಣವು ನಿತ್ಯಮರಣವಾಗಿದೆ - ಯುಗಯುಗಾಂತರಕ್ಕೂ ದೇವರ ಸನ್ನಿಧಿಗೆ ಪ್ರವೇಶಿಸದಂತೆ ಬೆಂಕಿಯ ಕೆರೆಗೆ ತಳ್ಳಲ್ಪಡುವುದು. ಇಲ್ಲಿ ಗಮನಾರ್ಹ ವಿಷಯವೆಂದರೆ, ಜಯಶಾಲಿಗಳಿಗೆ ಮಾತ್ರ ಎರಡನೆಯ ಮರಣದಿಂದ ಬಿಡುಗಡೆಯ ಈ ವಾಗ್ದಾನವು ಕೊಡಲ್ಪಟ್ಟಿದೆ. ಆದ್ದರಿಂದಲೇ ಪಾಪವನ್ನು ಜಯಿಸುವುದು ಬಹಳ ಅವಶ್ಯವಾದದ್ದು - ಏಕೆಂದರೆ, ಪಾಪದ ಅಂತ್ಯಫಲವು ಮರಣವಾಗಿದೆ (ಇದನ್ನು ಯಾಕೋ. 1:15 ಸ್ಪಷ್ಟಪಡಿಸುತ್ತದೆ).

    ಹೊಸ ಒಡಂಬಡಿಕೆಯ ಉದ್ದಕ್ಕೂ ಪವಿತ್ರಾತ್ಮನ ಮೂಲ ಸಂದೇಶ, ನಾವು ಎಲ್ಲಾ ವಿಧವಾದ ಪಾಪವನ್ನು ಜಯಿಸಬೇಕೆಂಬುದೇ ಆಗಿದೆ.

    ಅಧ್ಯಾಯ 6
    ಲೌಕಿಕ ಸಭೆ

    "ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಬರೆ - "ಹದವಾದ ಇಬ್ಬಾಯಿಕತ್ತಿಯನ್ನು ಹಿಡಿದಾತನು ಹೇಳುವುದೇನೆಂದರೆ - ನೀನು ವಾಸಮಾಡುವ ಸ್ಥಳವನ್ನು ಬಲ್ಲೆನು; ಅದು ಸೈತಾನನ ಸಿಂಹಾಸನವಿರುವ ಸ್ಥಳವಾಗಿದೆ. ನೀನು ನನ್ನ ಹೆಸರನ್ನು ಬಿಡದೇ ಹಿಡಿದುಕೊಂಡಿದ್ದೀ; ನೀನು ಇರುವ ಸೈತಾನನ ನಿವಾಸದಲ್ಲಿ ನನಗೆ ನಂಬಿಗಸ್ತನೂ, ಸಾಕ್ಷಿಯೂ ಆದ ಅಂತಿಪನು ಕೊಲ್ಲಲ್ಪಟ್ಟ ದಿನಗಳಲ್ಲಿಯಾದರೂ ನನ್ನಲ್ಲಿಟ್ಟಿರುವ ನಂಬಿಕೆಯನ್ನು ನೀನು ಮರೆಮಾಡಲಿಲ್ಲ. "ಆದರೂ ಕೆಲವು ವಿಷಯಗಳಲ್ಲಿ ನಿನ್ನ ಮೇಲೆ ತಪ್ಪು ಹೊರಿಸಬೇಕಾಗುತ್ತದೆ; ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವದರಲ್ಲಿಯೂ, ಜಾರತ್ವ ಮಾಡುವದರಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ ಬೀಳಬೇಕೆಂದು ಬಿಳಾಮನು ಬಾಲಾಕನಿಗೆ ಹೇಳಿದ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿದ್ದಾರೆ. "ಹಾಗೆಯೇ ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರೂ ನಿಮ್ಮಲ್ಲಿದ್ದಾರೆ. "ಆದದರಿಂದ ದೇವರ ಕಡೆಗೆ ತಿರುಗಿಕೋ, ತಿರುಗಿಕೊಳ್ಳದಿದ್ದರೆ ನಾನು ಬೇಗನೆ ನಿನ್ನ ಬಳಿಗೆ ಬಂದು ನನ್ನ ಬಾಯಕತ್ತಿಯಿಂದ ಅವರ ಮೇಲೆ ಯುದ್ಧಮಾಡುವೆನು."ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಯಾವನು ಜಯ ಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವೆಂಬ ಆಹಾರವನ್ನು ಕೊಡುವೆನು; ಇದಲ್ಲದೆ ಅವನಿಗೆ ಬಿಳೀ ಕಲ್ಲನ್ನೂ, ಆ ಕಲ್ಲಿನ ಮೇಲೆ ಕೆತ್ತಿದ ಹೊಸ ಹೆಸರನ್ನೂ ಕೊಡುವೆನು; ಆ ಹೆಸರನ್ನು ಹೊಂದಿದವನಿಗೇ ಹೊರತು ಅದು ಇನ್ನಾರಿಗೂ ತಿಳಿಯದು."(ಪ್ರಕಟನೆ 2:12-17).

    ದಟ್ಟವಾದ ಕತ್ತಲೆಯಲ್ಲಿ ಬೆಳಕು

    ಇಲ್ಲಿ ಕರ್ತನು ತನ್ನನ್ನು ’ಹದವಾದ ಇಬ್ಬಾಯಿಕತ್ತಿಯಂತಹ ಆತ್ಮನ ಖಡ್ಗವನ್ನು - ಶಕ್ತಿಶಾಲಿ ಮತ್ತು ಸಜೀವವಾದ ದೇವರ ವಾಕ್ಯವನ್ನು - ಹಿಡಿದವನು’, ಎಂಬುದಾಗಿ ವರ್ಣಿಸಿಕೊಂಡಿದ್ದಾನೆ (ಇಬ್ರಿ. 4:12; ಎಫೆ. 6:17) ಆತನು ಭೂಮಿಯ ಮೇಲೆ ಇದ್ದಾಗ, ಇದೇ ಖಡ್ಗದಿಂದ ಅಡವಿಯಲ್ಲಿ ಸೈತಾನನನ್ನು ಜಯಿಸಿದನು. ಈ ದಿನವೂ ಸಹ ಆತನ ಬಾಯಿಂದ ಈ ಖಡ್ಗವು ಹೊರಬರುತ್ತದೆ. ಈ ಆಯುಧವೇ ನಮಗೂ ಸಹ ಸೈತಾನನ ವಿರುದ್ಧ ಹೋರಾಡಲು ಅವಶ್ಯವಾದದ್ದು ಆಗಿದೆ.

    ಪೆರ್ಗಮ ಪಟ್ಟಣವು ಎಷ್ಟು ಕೆಟ್ಟದಾಗಿತ್ತು ಎಂದರೆ, ಸೈತಾನನ ಭೂಲೋಕದ ಕೇಂದ್ರಸ್ಥಾನವು ಅಲ್ಲಿತ್ತು, ಎಂಬುದಾಗಿ ಕರ್ತನು ಹೇಳುತ್ತಾನೆ. ಇದು ವಚನ 13ರಲ್ಲಿ ಎರಡು ಸಾರಿ ಹೇಳಲ್ಪಟ್ಟಿದೆ. ಈ ಪಟ್ಟಣದ ಮಧ್ಯೆ ಕರ್ತನು ತನ್ನ ಸಭೆಯನ್ನು ಇರಿಸಿದ್ದನು.

    "ನೀವು ಎಲ್ಲಿ ವಾಸವಾಗಿದ್ದೀರೆಂದು ನಾನು ಬಲ್ಲೆನು," ಎಂಬುದಾಗಿ ಕರ್ತನು ಹೇಳುತ್ತಾನೆ. ನಾವು ಎಲ್ಲಿ ವಾಸವಾಗಿದ್ದೇವೆ ಮತ್ತು ಎಂತಹ ಸನ್ನಿವೇಶದಲ್ಲಿ ಜೀವಿಸುತ್ತಿದ್ದೇವೆ ಎಂದು ಆತನಿಗೆ ನಿಖರವಾಗಿ ತಿಳಿದಿದೆ. ಸೈತಾನನ ಭೂಲೋಕದ ಸಿಂಹಾಸನವು ನಾವು ಇರುವಂಥ ಕಡೆಯಲ್ಲೇ ಇದ್ದರೂ ಸಹ, ನಮ್ಮನ್ನು ಶುದ್ಧವಾಗಿಯೂ ಮತ್ತು ಜಯಶಾಲಿಗಳನ್ನಾಗಿಯೂ ಆತನು ಇರಿಸಬಲ್ಲನು. ನಾವು ಸಹ ಆತ್ಮನ ಖಡ್ಗದಿಂದ ಜಯ ಗಳಿಸಬಹುದು.

    ಯಾವ ದೀಪಸ್ತಂಭವೂ ತಾನು ಬೆಳಕು ಬೀರುವುದಕ್ಕೆ ಸುತ್ತಮುತ್ತಲು ಹೆಚ್ಚು ಕತ್ತಲಾಗಿದೆ, ಎಂದು ಯಾವತ್ತೂ ಗೊಣಗುವುದಿಲ್ಲ. ದೀಪಸ್ತಂಭದ ಕಾಂತಿಗೂ ಅದರ ಪರಿಸರಕ್ಕೂ ಯಾವ ಸಂಬಂಧವೂ ಇಲ್ಲ. ಅದರ ಬೆಳಕು ಕೇವಲ ಅದರಲ್ಲಿರುವ ಎಣ್ಣೆಯ ಪ್ರಮಾಣದ ಮೇಲೆ ಅವಲಂಬಿಸಿದೆ.

    ಯಾವುದೇ ಸ್ಥಳೀಯ ಸಭೆಯೂ ಸಹ ಸರಿಯಾಗಿ ಹೀಗೆಯೇ ಇರುತ್ತದೆ. ಅದರ ಸುತ್ತಮುತ್ತಲಿನ ಜಾಗ ಕೆಟ್ಟದಾಗಿರಬಹುದು. ಆ ಪಟ್ಟಣದಲ್ಲಿ ಸೈತಾನನ ಸಿಂಹಾಸನ ಇರಬಹುದು. ಆದರೆ ಸಭೆಯಲ್ಲಿ ಪವಿತ್ರಾತ್ಮನ ಎಣ್ಣೆಯು ತುಂಬಿರುವುದಾದರೆ, ಅದರ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತದೆ. ನಿಜವಾಗಿ, ಪರಿಸರ ಹೆಚ್ಚು ಕತ್ತಲಾಗಿರುವಂತ ಜಾಗದಲ್ಲಿ ಯಾವುದೇ ಬೆಳಕು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ! ನಕ್ಷತ್ರಗಳು ರಾತ್ರಿಯ ಸಮಯದಲ್ಲಿ ಕಾಣಿಸುತ್ತವೆ - ಬೆಳಿಗ್ಗೆಯ ಸಮಯದಲ್ಲಿ ಅಲ್ಲ.

    ಈ ಸಭೆಯು ಸಂಕಟಗಳ ಸಮಯದಲ್ಲೂ ಕರ್ತನ ಹೆಸರನ್ನು ಬಲವಾಗಿ ಹಿಡಿದು, ನಂಬಿಕೆಯನ್ನು ಬಿಡದೆ ಇದ್ದುದಕ್ಕಾಗಿ ಕರ್ತನು ಸಭೆಯನ್ನು ಹೊಗಳುತ್ತಾನೆ. ಅಲ್ಲಿ ಅಂತಿಪನು ಒಬ್ಬ ನಂಬಿಗಸ್ತ ಸಾಕ್ಷಿಯಾಗಿದ್ದು, ತನ್ನ ನಂಬಿಕೆಗಾಗಿ ಜೀವವನ್ನೇ ತೊರೆದದ್ದನ್ನು ಕರ್ತನು ವಿಶೇಷವಾಗಿ ನಮೂದಿಸುತ್ತಾನೆ.

    ದೇವರ ಸತ್ಯಕ್ಕಾಗಿ ಒಬ್ಬಂಟಿಗನಾಗಿ ನಿಲ್ಲಬೇಕಾಗಿ ಬಂದರೂ ಸಹ, ಅಂತಿಪನು ಅದಕ್ಕೆ ಹಿಂಜರಿಯಲಿಲ್ಲ. ಈತನು ಮನುಷ್ಯರನ್ನು ಮೆಚ್ಚಿಸುವವನು ಆಗಿರದೆ, ತನ್ನ ನಂಬಿಕೆಯಲ್ಲಿ ದೃಢವಾಗಿದ್ದನು. ದೇವರನ್ನು ತಿಳಿದಂತವರು, ಇನ್ನೆಷ್ಟು ಜನ ತಮ್ಮಂತಹ ನಂಬಿಗಸ್ತರು ಇದ್ದಾರೆಂದು ನೋಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಅವಶ್ಯವಿದ್ದರೆ, ಅವರು ಕರ್ತನಿಗಾಗಿ ಇಡೀ ಪ್ರಪಂಚದ ಪ್ರತಿಯೊಬ್ಬರ ವಿರುದ್ಧವಾಗಿ ಒಬ್ಬಂಟಿಗರಾಗಿಯೂ ನಿಲ್ಲಲು ಮನಸ್ಸುಳ್ಳವರು ಆಗಿದ್ದಾರೆ. ಅಂತಿಪನು ಅಂತಹ ಒಬ್ಬ ಮನುಷ್ಯನಾಗಿದ್ದನು. ಇದರ ನಿಮಿತ್ತವಾಗಿ ಅವನು ಕೊಲ್ಲಲ್ಪಟ್ಟನು.

    ಒಂದು ವೇಳೆ ಅವನು ಮನುಷ್ಯರನ್ನು ಮೆಚ್ಚಿಸುವವನು ಆಗಿದ್ದರೆ, ಮರಣವನ್ನು ತಪ್ಪಿಸಿಕೊಳ್ಳಬಹುದಾಗಿತ್ತು. ಅವನು ದೇವರ ಪ್ರಕಟವಾದ ಸತ್ಯದ ವಿಷಯದಲ್ಲಿ ಸ್ವಲ್ಪವೂ ರಾಜಿಮಾಡದೆ ನಿಂತದ್ದಕ್ಕಾಗಿ ಕೊಲ್ಲಲ್ಪಟ್ಟನು. ಜನರು ಅವನನ್ನು ಸಂಕುಚಿತ ಮನೋಭಾವದವನು, ಹಟಮಾರಿ, ಹೊಂದಾಣಿಕೆಯಾಗದವನು ಮತ್ತು ಹುಚ್ಚು ಹಿಡಿದವನೆಂದು ಕರೆದಿರುತ್ತಾರೆ. ಆದರೆ ಅವನು ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಅವನು ತನ್ನ ಕರ್ತನಿಗೆ ಮಾತ್ರ ಸತ್ಯವಂತನಾಗಿ ನಿಂತನು, ಮತ್ತು ಎಲ್ಲಾ ಪಾಪ, ಲೌಕಿಕತನ, ಅನೀತಿಯೊಟ್ಟಿಗೆ ಸಂಧಾನ, ದೇವರ ವಾಕ್ಯದ ಅವಿಧೇಯತೆ, ಇವೆಲ್ಲವುಗಳನ್ನು ವಿರೋಧಿಸಿದನು ಮತ್ತು ಸೈತಾನನನ್ನು ವಿರೋಧಿಸಿದನು. ಸೈತಾನನ ಸಾಮ್ರಾಜ್ಯವನ್ನು ಬೆದರಿಕೆಯೊಡ್ಡುವ ಒಬ್ಬ ಮನುಷ್ಯನು ಇಲ್ಲಿದ್ದನು.

    ಬಹುಶಃ ಅಂತಿಪನು ಪೆರ್ಗಮದಲ್ಲಿ ಇದ್ದುದರಿಂದ, ಸೈತಾನನು ತನ್ನ ಸಿಂಹಾಸನವನ್ನು ಅಲ್ಲಿ ಇರಿಸಲು ತೀರ್ಮಾನಿಸಿದನು. ಸೈತಾನನು ಸಹ ಅಂತಿಪನಿಗೆ ಹೆದರಬೇಕಾದರೆ, ಅವನು ಎಂತಹ ಮನುಷ್ಯನಾಗಿದ್ದಿರಬೇಕು!

    ಇಂದು ದೇವರಿಗೆ ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಅಂತಿಪನಂತಹ ಜನರು ಅವಶ್ಯವಾಗಿ ಬೇಕಾಗಿದ್ದಾರೆ. ನಾವು ನಮ್ಮ ನಂಬಿಕೆಗಾಗಿ ಸೂಕ್ತ ಬೆಲೆಯನ್ನು ತೆರಬೇಕಾಗುವ ಸಮಯ ಬೇಗನೆ ಬರಲಿದೆ. ನಮ್ಮ ಸುತ್ತಲಿರುವ ಎಲ್ಲಾ ಬಾಬೆಲ್ ಕ್ರೈಸ್ತಪ್ರಪಂಚವು ಸತ್ಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳಲಿದೆ ಮತ್ತು ಕ್ರಿಸ್ತವಿರೋಧಿಗೆ ತಲೆಬಾಗಲಿದೆ. ಆ ದಿನದಲ್ಲಿ ನಾವು, ಅಂತಿಪನು ನಿಂತ ಹಾಗೆ ದೃಢವಾಗಿ ನಿಲ್ಲುತ್ತೇವೋ? ಅಥವಾ ನಮ್ಮ ಪ್ರಾಣವನ್ನು ಕಾಪಾಡಲಿಕ್ಕಾಗಿ ಸೈತಾನನಿಗೆ ಶರಣಾಗುತ್ತೇವೋ? ದೇವರ ಸತ್ಯಕ್ಕಾಗಿ ನಮ್ಮ ಪ್ರಾಣವನ್ನು ಕಳೆದುಕೊಳ್ಳುವುದು ಶ್ರೇಷ್ಠವಾದದ್ದೆಂದು ನಮಗೆ ಮನದಟ್ಟಾಗಿದೆಯೇ?

    ಈ ದಿನದಲ್ಲಿ, ದೇವರು ಸಣ್ಣ ಶೋಧನೆಗಳಿಂದ ನಮ್ಮನ್ನು ಪರೀಕ್ಷಿಸುತ್ತಿದ್ದಾರೆ. ನಾವು ಈ ಸಣ್ಣ ಶೋಧನೆಗಳಲ್ಲಿ ನಂಬಿಗಸ್ತರಾಗಿದ್ದರೆ ಮಾತ್ರ, ಮುಂದಿನ ಭವಿಷ್ಯದಲ್ಲಿ ಬರಲಿರುವ ದೊಡ್ಡ ಶೋಧನೆಗಳಲ್ಲಿ ನಂಬಿಗಸ್ತರಾಗಿ ಇರಲು ನಮಗೆ ಸಾಧ್ಯವಾಗುತ್ತದೆ. ಸೈತಾನನು ತನ್ನ ಸಾಮ್ರಾಜ್ಯಕ್ಕೆ ನೀವು ಎಂತಹ ದೊಡ್ಡ ಅಪಾಯವೆಂದು ಪರಿಗಣಿಸಬೇಕೆಂದರೆ, ಅವನು ತನ್ನ ಸಿಂಹಾಸನವನ್ನು ನೀವಿರುವ ಪಟ್ಟಣಕ್ಕೆ ವರ್ಗಾಯಿಸಬೇಕು.

    ಅಂತಿಪನ ಮರಣದ ನಂತರ ಅವನತಿ

    ದುಃಖಕರ ಸಂಗತಿಯೆಂದರೆ, ಅಂತಿಪನ ಮರಣದ ನಂತರ ಪೆರ್ಗಮದ ಸಭೆಯು ಆತ್ಮಿಕವಾಗಿ ಅವನತಿಹೊಂದಿತು. ಅಂತಿಪನು ಜೀವಂತವಾಗಿದ್ದಾಗ ಬಹುಶಃ ಅವನು ಆ ಸಭೆಯ ಸಂದೇಶಕನಾಗಿದ್ದನು. ಅವನು ಸತ್ತ ನಂತರ, ಬೇರೊಬ್ಬನು ಆ ಸ್ಥಾನಕ್ಕೆ ಬಂದನು ಮತ್ತು ಸಭೆಯು ಇಳಿಮುಖವಾಗಿ ಸಾಗಿತು. ಅನೇಕ ಸಭೆಗಳ ದುಃಖಕರ ಚರಿತ್ರೆ ಇದೇ ಆಗಿದೆ.

    ಪೌಲನು ಎಫೆಸ ಪಟ್ಟಣವನ್ನು ಬಿಟ್ಟು ಹೊರಡುತ್ತಿದ್ದಾಗ ಅಲ್ಲಿನ ಸಭಾ ಹಿರಿಯರಿಗೆ, ತಾನು ಹೋದ ಮೇಲೆ ಸಭೆಯು ತಪ್ಪಾದ ಬೋಧನೆಯೊಂದಿಗೆ ರಾಜಿ ಮಾಡಿಕೊಂಡು ಹಿಂಜಾರಲಿದೆಯೆಂದು ತನಗೆ ತಿಳಿದಿದೆಯೆಂದು ಹೇಳಿದನು (ಅ.ಕೃ. 20:28-31). ಪೌಲನು ಅಲ್ಲಿದ್ದ ವರೆಗೂ ಪ್ರಾಪಂಚಿಕತೆ ಮತ್ತು ಪಾಪದ ವಿರುದ್ಧ ಹೋರಾಡಿದನು ಮತ್ತು ಕ್ರಿಸ್ತವಿರೋಧಿಯ ಆತ್ಮವನ್ನು ದೂರವಿರಿಸಿದನು. ಆದರೆ ಪೌಲನು ಎಫೆಸವನ್ನು ಬಿಟ್ಟುಹೋದ ಮೇಲೆ, ಇದನ್ನು ಮಾಡುವಂತಹ ಬಲಶಾಲಿಗಳು ಯಾರೂ ಇರಲಿಲ್ಲ. ಹಾಗಾಗಿ ಸಭಾಹಿರಿಯರು ನಿಸ್ಸಹಾಯಕರಾಗಿ ನೋಡುತ್ತಿದ್ದಂತೆ, ಕ್ರೂರ ತೋಳಗಳು ಮಂದೆಯ ಮಧ್ಯೆ ಪ್ರವೇಶಿಸಿ, ಕುರಿಗಳನ್ನು ಕನಿಕರವಿಲ್ಲದೆ ನಾಶಗೊಳಿಸಿದವು!

    ಅಂತಿಪನ ಮರಣದ ನಂತರ, ಪೆರ್ಗಮದಲ್ಲಿ ಸೈತಾನನು ತನ್ನ ಕಾರ್ಯಯೋಜನೆಗಳನ್ನು ಬದಲಾಯಿಸಿದನು. ಒಂದು ಸ್ಥಳದಲ್ಲಿ ವಾಸ್ತವವಾಗಿ ಸೈತಾನನ ಸಿಂಹಾಸನ ಇದೆಯೆಂದರೆ, ಅಲ್ಲಿ ಅವನು ಯಾವಾಗಲೂ ಧಾಳಿ ಮಾಡಿ ಸಭೆಯನ್ನು ಹಿಂಸಿಸುತ್ತಾನೆಂದು ಅರ್ಥವಲ್ಲ.

    ಸತ್ಯವೇದದಲ್ಲಿ ಸೈತಾನನ್ನು ಗರ್ಜಿಸುವ ಸಿಂಹವೆಂದು ವಿವರಿಸಿರುವುದು ಮಾತ್ರವಲ್ಲದೆ (1 ಪೇತ್ರ. 5:8), ಪ್ರಕಾಶರೂಪದ ದೇವದೂತನಂತೆ ವೇಷವನ್ನು ಹಾಕಿಕೊಳ್ಳುವವನು, ಭೂಲೋಕದವರನ್ನೆಲ್ಲಾ ಮರುಳುಮಾಡುವ ಸರ್ಪ ಎಂದೂ ಸಹ ವರ್ಣಿಸಲಾಗಿದೆ (ಪ್ರಕ. 12:9; 2 ಕೊರಿ. 11:14). ಕ್ರೈಸ್ತಸಭೆಯನ್ನು ಹೊರಗಿನಿಂದ ಹಿಂಸೆಗೆ ಒಳಪಡಿಸುವುದಕ್ಕಿಂತ, ಅದನ್ನು ಒಳಗಿನಿಂದಲೇ ಲೌಕಿಕತೆಯ ಮೂಲಕ ಹಾಳು ಮಾಡಿದಾಗ, ತನ್ನ ಉದ್ದೇಶಗಳು ಬಹಳ ಚೆನ್ನಾಗಿ ನೆರವೇರುತ್ತವೆ, ಎಂಬುದಾಗಿ ಅವನು ಅನೇಕ ಶತಮಾನಗಳ ಅನುಭವದಿಂದ ಕಂಡುಕೊಂಡಿದ್ದಾನೆ.

    ಅವನು ಅಂತ್ಯದಲ್ಲಿ ಪೆರ್ಗಮದಲ್ಲಿ ಇದನ್ನೇ "ಬಿಳಾಮನ ದುರ್ಬೋಧನೆಯ" ಮೂಲಕ ಮಾಡಿದನು - ಮತ್ತು ಹಿಂಸೆಯ ಮೂಲಕ ಮಾಡಲು ಆಗದಿದ್ದುದನ್ನು ಈ ಮೂಲಕ ಯಶಸ್ವಿಯಾಗಿ ಮಾಡಿದನು!

    ಬಿಳಾಮನ ಬೋಧನೆ

    ಕರ್ತನು ಈ ಪೆರ್ಗಮದ ಸಭೆಗೆ, "ಬಿಳಾಮನ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿದ್ದಾರೆ," ಎಂಬುದಾಗಿ ಹೇಳುತ್ತಾನೆ (ವಚನ 14). ಬಿಳಾಮನು ಕಾಣಿಕೆಗಳನ್ನು ಪಡೆದು ಇಸ್ರಾಯೇಲ್ಯರನ್ನು ಶಪಿಸುವುದಕ್ಕಾಗಿ ಅರಸನಾದ ಬಾಲಾಕನಿಂದ ನೇಮಿಸಲ್ಪಟ್ಟಿದ್ದನು. ಸತ್ಯವೇದದಲ್ಲಿ "ಕಾಣಿಕೆಗಾಗಿ ಕೆಲಸ ಮಾಡಿದ ಬೋಧಕರಲ್ಲಿ" ಇವನೇ ಮೊದಲನೆಯವನು ಆಗಿದ್ದನೆಂದು ನಾವು ಓದುತ್ತೇವೆ.

    ಇಂದಿನ ದಿನ ಇಡೀ ಕ್ರೈಸ್ತಲೋಕದಲ್ಲಿ ಇಂತಹ "ದುಡ್ಡಿಗಾಗಿ ದುಡಿಯುವ" ಕಾರ್ಯಕರ್ತರು ಎಲ್ಲೆಲ್ಲೂ ತುಂಬಿಕೊಂಡಿದ್ದಾರೆ; ಬೋಧಿಸುವುದು ಅವರಿಗೆ ಜೀವನೋಪಾಯದ ಸಾಧನವಾಗಿದೆ. ದೇವರ ಮಂದೆಯ ಕುರುಬರಂತೆ ನಟನೆ ಮಾಡಿ, ಕೇವಲ ಕುರಿಗಳನ್ನು ಲೂಟಿ ಮಾಡುವ ಗುರಿಯನ್ನು ಹೊಂದಿರುವ ಈ ಬೋಧಕರನ್ನು ದೇವರು ವಿರೋಧಿಸುತ್ತಾರೆ.

    ಬಾಲಾಕನು ಬಿಳಾಮನನ್ನು ಕರೆದಾಗ, ಮೊದಲು ಅವನು ಹೋಗಲು ಒಪ್ಪಲಿಲ್ಲ, ಏಕೆಂದರೆ ದೇವರು ಅವನಿಗೆ ಹೋಗಬಾರದೆಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಬಾಲಾಕನು ಹೆಚ್ಚು ಹಣ ಮತ್ತು ಹೆಚ್ಚು ಗೌರವ ಕೊಡುವ ಭರವಸೆ ನೀಡಿದಾಗ, ಬಿಳಾಮನು "ಮತ್ತೊಮ್ಮೆ ದೇವರ ಚಿತ್ತವನ್ನು" ವಿಚಾರಿಸಲು ಮುಂದಾದನು - ಈ ದಿನಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ಅನೇಕರು ಹೀಗೆಯೇ ಮಾಡುತ್ತಾರೆ!! ಬಿಳಾಮನು ಹಣವನ್ನು ಹಿಂಬಾಲಿಸಿ ಹೋಗಲು ಮತ್ತು ಆ ರೀತಿಯಾಗಿ ತನ್ನನ್ನೇ ನಾಶ ಪಡಿಸಿಕೊಳ್ಳಲು ದೇವರು ಅನುಮತಿ ನೀಡಿದರು. ಈ ದಿನವೂ ಸಹ ಅನೇಕ ಕ್ರೈಸ್ತ ಬೋಧಕರು ಬಿಳಾಮನ ಹಾದಿಯನ್ನು ಹಿಂಬಾಲಿಸುವುದನ್ನು ದೇವರು ಅನುಮತಿಸುತ್ತಾರೆ ಮತ್ತು ಕೊನೆಗೆ ಅವರು ಬಿಳಾಮನ ಹಾಗೆ ನಾಶಕ್ಕೆ ಒಳಗಾಗುತ್ತಾರೆ.

    ಇಸ್ರಾಯೇಲ್ಯರನ್ನು ಶಪಿಸಲು ತನ್ನಿಂದ ಆಗುವುದಿಲ್ಲವೆಂದು ಬಿಳಾಮನು ಕಂಡುಕೊಂಡಾಗ, ಅವರನ್ನು ಜಾರತ್ವ ಮತ್ತು ವಿಗ್ರಹಾರಾಧನೆಯ ಕಡೆಗೆ ಸೆಳೆದು ಭ್ರಷ್ಟಗೊಳಿಸುವಂತೆ ಬಾಲಾಕನಿಗೆ ಸಲಹೆ ನೀಡಿದನು (ಅರಣ್ಯ. 24 ಮತ್ತು 25). ಹೀಗೆ ಸ್ವತಃ ದೇವರೇ ಇಸ್ರಾಯೇಲ್ಯರನ್ನು ಶಿಕ್ಷಿಸುವಂತೆ ಮಾಡುವುದರಲ್ಲಿ ಬಿಳಾಮನು ಸಫಲನಾದನು.

    ಪೆರ್ಗಮದಲ್ಲಿಯೂ ಸೈತಾನನು ಹೀಗೆಯೇ ಜಯಗಳಿಸಿದನು. ಸಭೆಯನ್ನು ಯಾವುದಾದರೊಂದು ರೀತಿಯಲ್ಲಿ ಲೌಕಿಕ ದುರಾಶೆಗಳಿಂದ ಕೆಡಿಸದ ಹೊರತು, ತಾನು ಸಭೆಯನ್ನು ಜಯಿಸಲು ಸಾಧ್ಯವಿಲ್ಲವೆಂಬುದು ಅವನಿಗೆ ತಿಳಿದಿತ್ತು. ಆದ್ದರಿಂದ ಅವನು ಸಭೆಯನ್ನು ಒಳಗಿನಿಂದಲೇ ಕೆಡಿಸಿದನು. ಹೀಗೆ ಸಭೆಯು ಕರ್ತನ ಸಾಕ್ಷಿ ಮತ್ತು ಸೈತಾನನ ವಿರುದ್ಧ ಹೋರಾಟ, ಇವೆರಡರಲ್ಲೂ ನಿಷ್ಫಲವಾಯಿತು.

    "ಅವರನ್ನು ಸೋಲಿಸಲು ಆಗದಿದ್ದರೆ, ಅವರ ಜೊತೆಗೆ ಸೇರಿಕೋ," ಎಂಬುದು ಸಭೆಗೆ ಸಂಬಂಧಪಟ್ಟಂತೆ ಸೈತಾನನ ಸೂತ್ರವಾಗಿದೆ. ಹಿಂದಿನ ಇಪ್ಪತ್ತು ಶತಮಾನಗಳಲ್ಲಿ, ಸೈತಾನನು ಹೀಗೆಯೇ ಅನೇಕ ಸಭೆಗಳ ಸಾಕ್ಷಿಯನ್ನು ನಾಶಗೊಳಿಸುವುದರಲ್ಲಿ ಸಫಲನಾಗಿದ್ದಾನೆ.

    ವಿಗ್ರಹಾರಾಧನೆ ಮತ್ತು ಜಾರತ್ವ ಇವೆರಡು, ಇಡೀ ಹಳೆಯ ಒಡಂಬಡಿಕೆಯಲ್ಲಿ ದೇವರು ಅತಿ ಹೆಚ್ಚಾಗಿ ಖಂಡಿಸಿದ ಪಾಪಗಳಾಗಿವೆ. ಈ ದಿನದಲ್ಲಿಯೂ ಸಹ ಅವರು ಇವೆರಡನ್ನು ಖಂಡಿಸುತ್ತಾರೆ. ಹೊಸ ಒಡಂಬಡಿಕೆಗೆ ಅನುಗುಣವಾಗಿ, ದುರಾಶೆ, ಅಥವಾ ಹಣದ ಆರಾಧನೆ, ಅಥವಾ ಒಬ್ಬನು ತನ್ನ ಉದ್ಯೋಗವನ್ನು, ಒಬ್ಬ ವ್ಯಕ್ತಿಯನ್ನು ಅಥವಾ ಲೋಕ ಸಂಬಂಧವಾದ ಯಾವುದನ್ನಾದರೂ ಆರಾಧಿಸುವುದು ವಿಗ್ರಹಾರಾಧನೆಯಾಗಿದೆ. ಮತ್ತು ಒಬ್ಬನು ತನ್ನ ಕಣ್ಣಿನಿಂದ ಒಬ್ಬ ಸ್ತ್ರೀಯನ್ನು ಮೋಹಿಸುವುದು ಜಾರತ್ವವಾಗಿದೆ. ನಿಮ್ಮ ಹೆಂಡತಿಯನ್ನು ಬೇರೆಯವರ ಹೆಂಡತಿಯೊಂದಿಗೆ ಯಾವುದೇ ಕ್ಷೇತ್ರದಲ್ಲಿ ಪ್ರತಿಕೂಲವಾಗಿ ಹೋಲಿಸಿ ನೋಡುವುದು, "ನಿನ್ನ ನೆರೆಯವನ ಹೆಂಡತಿಯನ್ನು ಅಪೇಕ್ಷಿಸಿದಂತೆ" ಆಗಿದೆ. ಇದು ಕೂಡ ಜಾರತ್ವವಾಗಿದೆ.

    ಈ ಹೊಸ ಒಡಂಬಡಿಕೆಯ ಮೌಲ್ಯಗಳು ಯಾವ ಸಭೆಯಲ್ಲಿ ಸತತವಾಗಿ ಬೋಧಿಸಲ್ಪಡುವುದಿಲ್ಲವೋ, ಅಲ್ಲಿ ವಿಗ್ರಹಾರಾಧನೆ ಮತ್ತು ಜಾರತ್ವಗಳು ಒಳಗೊಳಗೇ ಸದಸ್ಯರನ್ನು ಸೋಲಿಸುತ್ತವೆ ಮತ್ತು ಬೇಗನೆ ಆ ಸಭೆಯು ಪೆರ್ಗಮದ ಸಭೆಯಂತೆ ಆಗುತ್ತದೆ.

    ಲೌಕಿಕತನವು ಪೆರ್ಗಮದ ಸಭೆಯನ್ನು ಬಿಗಿಯಾಗಿ ಹಿಡಿದಾಗ ನಡೆದ ದುಃಖಕರ ಸಂಗತಿಯೆಂದರೆ, ಆ ಸಭೆಯ ಸಂದೇಶಕನು ನಡೆಯುತ್ತಿದ್ದುದನ್ನು ಗಮನಿಸಿಯೂ ಸುಮ್ಮನಿದ್ದನು. ಅದೇ ರೀತಿ ಈ ದಿನ ಅನೇಕ ಸಭೆಗಳಲ್ಲಿ, ಲೌಕಿಕತನವು ಪ್ರವಾಹದಂತೆ ಒಳಗೆ ಬಂದಾಗಲೂ, ಸಭಾ ಹಿರಿಯರು ಅದನ್ನು ತಡೆಯುವ ಶಕ್ತಿಯಿಲ್ಲದೆ ಸುಮ್ಮನಿರುತ್ತಾರೆ.

    ಪೆರ್ಗಮದ ಸಂದೇಶಕನು ಸ್ವತಃ ಬಿಳಾಮನ ಉಪದೇಶಕ್ಕೆ ಬಲಿಯಾಗಿರಲಿಲ್ಲ. ಪೆರ್ಗಮದಲ್ಲಿ "ಕೆಲವರು" ಮಾತ್ರ ಅದಕ್ಕೆ ಬಲಿಯಾಗಿದ್ದರು. ಆದರೆ ಅವನು ಸಭೆಯೊಳಗೆ ಸೇರಿದ್ದ ಲೌಕಿಕತನವನ್ನು ಗದರಿಸದೇ ಬಿಟ್ಟದ್ದರಿಂದ ತಪ್ಪುಗಾರನಾದನು. ಇದು ಅವನ ಸೋಲಾಗಿತ್ತು.

    ಈ ಸೋಲಿಗೆ ಕಾರಣವೇನೆಂದರೆ, ಸಭಾಹಿರಿಯನು ತನ್ನ ಸ್ವಂತ ಮನಸ್ಸಿನ ಅಲೋಚನೆಗಳಲ್ಲಿ ಇಂತಹ ಲೌಕಿಕತನವನ್ನು ಕಠಿಣವಾಗಿ ತೀರ್ಪು ಮಾಡದೇ ಬಿಟ್ಟಿರಬೇಕು. ನಮ್ಮ ಸ್ವಂತ ಶರೀರಭಾವದಲ್ಲಿ ನಾವು ಯಾವ ಸಂಗತಿಗಳನ್ನು ಶಿಲುಬೆಗೆ ಹಾಕಿದ್ದೇವೋ, ಸಭೆಯಲ್ಲಿಯೂ ಅಂಥವುಗಳ ಮೇಲೆ ಮಾತ್ರ ನಾವು ಅಧಿಕಾರವನ್ನು ಚಲಾಯಿಸಬಹುದು. ನಮ್ಮ ಸ್ವಂತ ಜೀವನದಲ್ಲಿ ನಾವು ಪಾಪ ಮತ್ತು ಲೌಕಿಕತನವನ್ನು ಹಗುರವಾಗಿ ತೆಗೆದುಕೊಂಡರೆ, ಸಭೆಯ ಇತರರಲ್ಲೂ ಅದನ್ನು ಸಹಿಸಿಕೊಂಡು ಸುಮ್ಮನಿರುತ್ತೇವೆ. ಸಾಮಾನ್ಯವಾಗಿ ಒಬ್ಬ ಸಭಾ ಹಿರಿಯನು ಸಭೆಯಲ್ಲಿ ಒಬ್ಬ ಲೌಕಿಕ ಮನುಷ್ಯನಿಗೆ "ಕರುಣೆಯುಳ್ಳ" ಮನೋಭಾವವನ್ನು ತೋರುವುದಕ್ಕೆ ಕಾರಣ, ಸ್ವತಃ ಆ ಹಿರಿಯನ ಹೃದಯದಲ್ಲಿ ತೀರ್ಪು ಮಾಡದಿರುವಂತ ಲೌಕಿಕತನ ಇದೆಯೆಂಬ ಸತ್ಯಾಂಶವೇ ಆಗಿದೆ.

    ಪೆರ್ಗಮದ ಸಂದೇಶಕನು ಸಭೆಯಲ್ಲಿ ಲೌಕಿಕ ಬೋಧನೆಗಳ ಬಗ್ಗೆ ಎಷ್ಟು ಅಲಕ್ಷ್ಯಭಾವ ಹೊಂದಿದ್ದನೆಂದರೆ, ಅವನು ಅಲ್ಲಿ ನಿಕೊಲಾಯಿತರ ಬೋಧನೆಗೆ ತಡೆಯಿಲ್ಲದ ಅವಕಾಶವನ್ನು ಕೊಟ್ಟನು (ಪ್ರಕ. 2:15). ಪೆರ್ಗಮದ ಸಭೆಯಲ್ಲಿ ಕೆಲವರು ಪಾದ್ರಿಗಳ ಧರ್ಮತತ್ವವನ್ನು ಕಲಿಸಿಕೊಡುತ್ತಿದ್ದರು! ಮತ್ತು ಸಂದೇಶಕನು ಅದನ್ನು ತಡೆಯದೇ ಸುಮ್ಮನಿದ್ದನು. ಇದು ಕರ್ತನು ಅವನ ವಿರುದ್ಧವಾಗಿ ತೋರಿಸಿದ ಇನ್ನೊಂದು ವಿಷಯವಾಗಿತ್ತು.

    ಕರ್ತನು ಅವನನ್ನು ಮತ್ತು ಸಭೆಯನ್ನು ಪಶ್ಚಾತ್ತಾಪ ಪಡುವಂತೆ ಎಚ್ಚರಿಸುತ್ತಾನೆ. ಒಂದು ವೇಳೆ ಅವರು ಹಾಗೆ ಮಾಡದೇ ಹೋದರೆ, ಅವರನ್ನು ತನ್ನ ಬಾಯ ಖಡ್ಗದಿಂದ ತೀರ್ಪು ಮಾಡುವುದಾಗಿ ಕರ್ತನು ಹೇಳುತ್ತಾನೆ (ಪ್ರಕ. 2:16). ದೇವರು ನಮ್ಮನ್ನು ವಾಕ್ಯದ ಮೂಲಕವಾಗಿ ತೀರ್ಪು ಮಾಡುತ್ತಾರೆ. ಯೋಹಾ. 12:48ರಲ್ಲಿ ಯೇಸುವು ಹೇಳಿರುವಂತೆ, ಆತನು ನಮಗೆ ಹೇಳಿರುವ ಮಾತು ನಮ್ಮೆಲ್ಲರನ್ನು ಕಡೆಯ ದಿನದಲ್ಲಿ ತೀರ್ಪು ಮಾಡುವಂಥದ್ದಾಗಿದೆ. ನಾವು ಕೇಳಿರುವ ದೇವರ ವಾಕ್ಯದೊಂದಿಗೆ ನಮ್ಮ ಜೀವಿತಗಳನ್ನು ಹೋಲಿಸಿ ನೋಡಲಾಗುತ್ತದೆ, ಮತ್ತು ಅದರ ಆಧಾರದ ಮೇಲೆ ನಾವು ತೀರ್ಪು ಮಾಡಲ್ಪಡುತ್ತೇವೆ.

    ಜಯಶಾಲಿಗಳಿಗೆ ಕರೆ

    "ಯಾವನು ಜಯ ಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವೆಂಬ ಆಹಾರವನ್ನು ಕೊಡುವೆನು; ಇದಲ್ಲದೆ ಅವನಿಗೆ ಬಿಳೀ ಕಲ್ಲನ್ನೂ, ಆ ಕಲ್ಲಿನ ಮೇಲೆ ಕೆತ್ತಿದ ಹೊಸ ಹೆಸರನ್ನೂ ಕೊಡುವೆನು," ಎಂಬುದಾಗಿ ಪ್ರತಿಫಲದ ವಾಗ್ದಾನವು ಜಯಶಾಲಿಗಳಿಗೆ ಕೊಡಲ್ಪಟ್ಟಿದೆ (ಪ್ರಕ. 2:17).

    ಹಳೆಯ ಒಡಂಬಡಿಕೆಯಲ್ಲಿ, ಆಕಾಶದಿಂದ ಬಿದ್ದಂತ "ಮನ್ನ"ದ ಒಂದು ಭಾಗವನ್ನು ಗುಡಾರದ ಮಹಾಪವಿತ್ರ ಸ್ಥಾನದಲ್ಲಿದ್ದ ಮಂಜೂಷದಲ್ಲಿ ಮರೆಯಾಗಿಡಲು ಮೋಶೆಗೆ ಆಜ್ಞಾಪಿಸಲಾಗಿತ್ತು (ವಿಮೋ. 16:33,34). ಇಸ್ರಾಯೇಲ್ಯರು ತಮ್ಮ ತಮ್ಮ ಗುಡಾರದೊಳಗೆ ಶೇಖರಿಸಿದ ಮನ್ನವು 24 ತಾಸುಗಳಲ್ಲಿ ಕೆಟ್ಟು ದುರ್ವಾಸನೆ ಕೊಡುತ್ತಿದ್ದರೂ (ವಿಮೋ. 16:19,20), ಮಂಜೂಷದಲ್ಲಿ "ಬಚ್ಚಿಟ್ಟ ಮನ್ನವು," ಇಸ್ರಾಯೇಲ್ಯರು ಅರಣ್ಯದಲ್ಲಿ 40 ವರ್ಷಗಳು ಅಲೆದಾಡಿದಾಗಲೂ ಕೆಡದೆ ತಾಜಾತನವನ್ನು ಉಳಿಸಿಕೊಂಡಿತ್ತು. ನಾವು ಯಾವಾಗಲೂ ದೇವರ ಮುಖದ ಮುಂದೆ ಜೀವಿಸಿದರೆ, ದೇವರ ಅತಿಪವಿತ್ರ ಸ್ಥಾನದ ಸಾನ್ನಿಧ್ಯದಲ್ಲಿ ನಮ್ಮನ್ನು ನೂತನವಾಗಿ ಇರಿಸುವಂತ ಇದೇ ಸಾಮರ್ಥ್ಯವಿದೆ.

    ಅತಿಪವಿತ್ರ ಸ್ಥಾನಕ್ಕೆ ಪ್ರವೇಶವು ಶರೀರವೆಂಬ ತೆರೆಯನ್ನು ಹರಿಯುವುದರ ಮೂಲಕ ಮಾತ್ರ ಸಾಧ್ಯವಾಗುತ್ತದೆ (ಇಬ್ರಿ. 10:20). ಯೇಸುವು ತನ್ನ ಶರೀರವೆಂಬ ತೆರೆಯ ಮೂಲಕ ಮುಂದಾಗಿ ಹೋಗಿ, ಈ ದಾರಿಯನ್ನು ನಮಗೋಸ್ಕರ ತೆರೆದನು. ನಾವು ಈ ಹೊಸದಾದ, ಜೀವವುಳ್ಳ ದಾರಿಯಲ್ಲಿ ನಡೆದರೆ, ದೇವರು ಕೊಡುವಂಥ ’ಬಚ್ಚಿಟ್ಟ ಮನ್ನ’ವನ್ನು - ದೇವರ ವಾಕ್ಯದ ಪ್ರಕಟನೆ ಮತ್ತು ಅವರೊಂದಿಗೆ ಅನ್ಯೋನ್ಯತೆ ಇವನ್ನು - ಪಡೆಯಬಹುದು. ಆಗ ನಮ್ಮ ಜೀವನದಲ್ಲಿ ಯಾವಾಗಲೂ ಕರ್ತನ ಸುವಾಸನೆಯ ತಾಜಾತನವು ಇರುತ್ತದೆ.

    ’ಜಯಶಾಲಿಯ ಹೆಸರು ಬರೆಯಲ್ಪಟ್ಟ ಗುಪ್ತವಾಗಿ ಇರಿಸಿದ ಅಮೂಲ್ಯ ಕಲ್ಲು’ ಎಂಬ ವಾಕ್ಯದಲ್ಲಿ (ವಚನ 17), ಒಬ್ಬ ಮದಲಗಿತ್ತಿಯು ತನ್ನ ಮದಲಿಂಗನೊಟ್ಟಿಗೆ ಹೊಂದುವ ಅನ್ಯೋನ್ಯತೆಗೆ ಹೋಲುವ ಸಂಬಂಧವನ್ನು ಕರ್ತನೊಂದಿಗೆ ಹೊಂದುವದನ್ನು ತೋರಿಸಲಾಗಿದೆ. ಲೋಕದಲ್ಲಿ ಪುರುಷರು ತಾವು ಮದುವೆ ಮಾಡಿಕೊಳ್ಳಲಿರುವ ಕನ್ಯೆಗೆ ಕೊಡುವಂತ (ಬಹು ಬೆಲೆಬಾಳುವ ಒಂದು ಅಮೂಲ್ಯ ಕಲ್ಲು ಮತ್ತು ಅದರ ಮೇಲೆ ಕೆತ್ತಲ್ಪಟ್ಟ ಒಂದು ಹೆಸರು) "ವಿವಾಹ ನಿಶ್ಚಿತಾರ್ಥದ ಉಂಗುರದ" ಆತ್ಮಿಕ ಪ್ರತಿರೂಪ ಇದಾಗಿದೆ.

    ಮದುವೆಯಾಗಲಿರುವ ವರನು, ಬೇರೆ ಯಾರಿಗೂ ತಿಳಿಯದಂತ ಒಂದು ಆತ್ಮೀಯ ಹೆಸರನ್ನು ತನ್ನ ವಧುವಿಗೆ ನೀಡುತ್ತಾನೆ (ವಚನ 17). ಕರ್ತನೊಟ್ಟಿಗೆ ’ವಧುವಿನ ಆತ್ಮೀಯತೆಯು’ ಎಲ್ಲಾ ಜಯಶಾಲಿಗಳಿಗೆ ವಾಗ್ದಾನ ಮಾಡಲ್ಪಟ್ಟ ಪ್ರತಿಫಲವಾಗಿದೆ.

    ಒಬ್ಬ ’ಸರಾಸರಿ ಕ್ರೈಸ್ತನು’ ಪಾಪ ಮತ್ತು ಲೌಕಿಕತೆಯನ್ನು ತೀವ್ರವಾಗಿ ದ್ವೇಷಿಸಿ ತಿರಸ್ಕರಿಸದೆ ಇರುವುದರಿಂದ, ಕ್ರಿಸ್ತನೊಂದಿಗೆ ಸಪ್ಪೆಯಾದ, ಒಣ ಸಂಬಂಧವನ್ನು ಹೊಂದಿರುತ್ತಾನೆ. ಆದರೆ ಒಬ್ಬ ಮದಲಗಿತ್ತಿಯು ಮದಲಿಂಗನನ್ನು ಆಳವಾಗಿ ಪ್ರೀತಿಸಿ ಪಡೆಯುವ ಸಂಬಂಧದಂತೆ, ಒಬ್ಬ ನಿಜವಾದ ಜಯಶಾಲಿಯು ತನ್ನ ಕರ್ತನೊಂದಿಗೆ ಹರ್ಷೋತ್ಸಾಹದ ಆತ್ಮಿಕ ಸಂಬಂಧಕ್ಕೆ ಸೇರಿಕೊಳ್ಳುತ್ತಾನೆ. ಇಂತಹ ಸಂಬಂಧವು "ಪರಮಗೀತೆ"ಯಲ್ಲಿ ವಿವರಿಸಲ್ಪಟ್ಟಿದೆ - ಮತ್ತು ಇದನ್ನು ಒಬ್ಬ ಜಯಶಾಲಿಯು ಮಾತ್ರ ಪೂರ್ತಿಯಾಗಿ ಅರ್ಥ ಮಾಡಿಕೊಂಡು, ಯಥಾರ್ಥವಾಗಿ ಅನುಭವಿಸಲು ಸಾಧ್ಯವಾಗುತ್ತದೆ.