ನೀವು ಮಾಡುತ್ತಿರುವುದು ಶಿಷ್ಯರನ್ನೋ ಅಥವಾ ಪರಿವರ್ತಕರನ್ನೋ?

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
Article Body: 

ಯೇಸು ಕೊಟ್ಟ ಶೇಷ್ಟ ಆಜ್ಞೆಗೆ ನಿಜವಾಗಿ ವಿಧೇಯರಾಗುವುದನ್ನು ರೂಢಿಸಿಕೊಳ್ಳುವುದು ಬಹು ಮುಖ್ಯ. ಆದರೆ ಸತ್ಯವೇದದಲ್ಲಿ ಒಂದು ವಿಷಯದ ಬಗ್ಗೆ ತಿಳಿಸಿರುವ ಬೇರೆ ಬೇರೆ ವಾಕ್ಯಗಳನ್ನು ಗಮನಿಸದೆ, ಅದನ್ನು ನಿರಾಕರಿಸಿ, ಅದೇ ವಿಷಯದ ಬಗ್ಗೆ ತಿಳಿಸಿರುವ ಕೇವಲ ಒಂದು ವಾಕ್ಯದ ಬಗ್ಗೆ ಮಾತ್ರ ಹೆಚ್ಚಿನ ಗಮನ ಕೊಡುವ ಸಾಮಾನ್ಯ ತಪ್ಪು ಅನೇಕ ವಿಶ್ವಾಸಿಗಳ ಮಧ್ಯದಲ್ಲಿ ಇದೆ.

ಯೇಸುವನ್ನು ಸೈತಾನನು ಶೋಧಿಸಿದ್ದು, "ಈ ರೀತಿ ಬರೆದಿದೆ..." (ಮತ್ತಾಯ. 4:6) ಎಂದು ಹೇಳುವುದರ ಮೂಲಕ. ಆದರೆ, ಆ ಶೋಧನೆಯನ್ನು ಯೇಸು ನಿರಾಕರಿಸಿದ್ದು "ಹೀಗೂ ಸಹ ಬರೆದಿದೆ..." (ಮತ್ತಾಯ 4:7) ಎಂದು ಹೇಳುವುದರ ಮೂಲಕ. ನಾವು ಒಂದು ವಚನವನ್ನು ಮತ್ತೊಂದು ವಚನದೊಂದಿಗೆ ಹೋಲಿಸಿದಾಗ, ಅಂದರೆ, "ಈ ರೀತಿ ಬರೆದಿದೆ" ಎಂಬುದನ್ನು "ಹೀಗೂ ಸಹ ಬರೆದಿದೆ" ಎಂಬುದರ ಜೊತೆ ಹೊಲಿಸಿದಾಗ ಮಾತ್ರ ದೇವರ ಸಂಪೂರ್ಣ ಉದ್ದೇಶವನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯ.

ಸುವಾರ್ತಾಪ್ರಚಾರದ ಬಗ್ಗೆ ತಿಳಿಸಿರುವ ’ಶ್ರೇಷ್ಟ ಆಜ್ಞೆಯನ್ನು’ ಪರಿಗಣಿಸಿರಿ.

ತನ್ನ ಶಿಷ್ಯರಿಗೆ ಯೇಸು ಆಜ್ಞಾಪಿಸಿದ್ದೇನೆಂದರೆ, "ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ" (ಮಾರ್ಕ 16:15). ಯೇಸು ಅವರಿಗೆ ಹೀಗೂ ಸಹ ಆಜ್ಞಾಪಿಸಿದ್ದಾನೆ, ಅದೇನೆಂದರೆ, "ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ" ಮತ್ತು ”ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವುದಕ್ಕೆ(ವಿಧಯರಾಗುವುದಕ್ಕೆ) ಅವರಿಗೆ ಉಪದೇಶ ಮಾಡಿರಿ” (ಮತ್ತಾಯ. 28:19, 20). ಈ ಎರಡೂ ಆಜ್ಞೆಗಳು ಒಂದೇ ಆಜ್ಞೆಯ ಎರಡು ಭಾಗಗಳು. ಈ ಆಜ್ಞೆಗಳ ಎರಡೂ ಭಾಗಗಳನ್ನು ಎಚ್ಚರಿಕೆಯಿಂದ ಪರಿಗಣಿಸುವಾಗ ಮತ್ತು ಆ ಎರಡು ಆಜ್ಞೆಗಳಿಗೆ ವಿಧೇಯರಾಗುವಾಗ ಮಾತ್ರ, ನಾವು ದೇವರ ಸಂಪೂರ್ಣ ಚಿತ್ತವನ್ನು ಕಂಡುಕೊಳ್ಳಬಹುದು ಮತ್ತು ಅದನ್ನು ನೆರವೇರಿಸಬಹುದು.

ಸುವಾರ್ತಾ ಪ್ರಚಾರ

ಬೇರೆ ಕಡೆಗೆ ಹೋಗಿ ಪ್ರತಿಯೊಬ್ಬರಿಗೂ ಸುವಾರ್ತೆಯನ್ನು ಸಾರುವುದು ನಿಜವಾಗಿಯೂ ಮೊದಲ ಹೆಜ್ಜೆ. (ಮಾರ್ಕ 16:15). ಈ ಆಜ್ಞೆಯು ಒಬ್ಬ ವಿಶ್ವಾಸಿಗೆ ಮಾತ್ರ ಕೊಡಲ್ಪಟ್ಟಿದ್ದಲ್ಲ. ಬದಲಾಗಿ ಕ್ರಿಸ್ತನ ಇಡೀ ದೇಹಕ್ಕೆ ಇದು ಕೊಡಲ್ಪಟ್ಟಿದೆ. ಜಗತ್ತಿನಲ್ಲಿನ ಪ್ರತಿಯೊಬ್ಬರಿಗೂ ಸುವಾರ್ತೆಯನ್ನು ಸಾರುವುದು ಕೇವಲ ಒಬ್ಬನಿಗೆ ಅಥವಾ ಒಂದು ಸ್ಥಳೀಯ ಸಭೆಗೆ ಅಸಾಧ್ಯವಾದ ಕೆಲಸ. ಈ ಸುವಾರ್ತೆ ಸಾರುವಂತಹ ಕೆಲಸದಲ್ಲಿ ನಾವೆಲ್ಲರೂ ನಮಗೆ ಸಾಧ್ಯವಾದದ್ದನ್ನು ಮಾಡಬಹುದು. ಆದರೆ ನಾವು ಮಾಡುವಂತದ್ದು, ಕೇವಲ ಸಣ್ಣ ಭಾಗ ಮಾತ್ರ.

ಆದರೆ ಅದು ಎಷ್ಟೇ ಸಣ್ಣ ಭಾಗವಾಗಿದ್ದರೂ ಸಹ, ನಾವೆಲ್ಲರು ಅದನ್ನು ನೆರವೇರಿಸಬೇಕು. ಇಲ್ಲಿ ನಾವು ಅ.ಕೃತ್ಯಗಳು:1:8 ರಲ್ಲಿನ ಚಿತ್ರಣ ನೆನಪಿಸಿಕೊಳ್ಳಬಹುದು. ಪ್ರತಿಯೊಬ್ಬ ವಿಶ್ವಾಸಿಯು ಕ್ರಿಸ್ತನಿಗೆ ಪರಿಣಾಮಕಾರಿಯಾದ ಸಾಕ್ಷಿಯಾಗಿರಬೇಕಾದರೆ, ಪವಿತ್ರಾತ್ಮನು ಆತನ ಮೇಲೆ ಇಳಿದು ಬಂದು ಆತನನ್ನು ಬಲದಿಂದ ತುಂಬಿಸಬೇಕು. ನಾವೆಲ್ಲರೂ ಸುವಾರ್ತಾಪ್ರಚಾರಕರಾಗಲು (ಸೌವಾರ್ತಿಕರಾಗಲು) ಕರೆಯಲ್ಪಟ್ಟಿಲ್ಲ ಎಂಬುದನ್ನು ಗಮನಿಸಿ; (ಯಾಕೆಂದರೆ, ಕೆಲವೇ ಸುವಾರ್ತಾಪ್ರಚಾರಕರನ್ನು ಮಾತ್ರ ಯೇಸುವು ಸಭೆಗೆ ಕೊಟ್ಟಿದ್ದಾನೆ. (ಎಫೆಸ. 4:11). ಆದರೆ ಎಲ್ಲರೂ ಆತನ ಸಾಕ್ಷಿಗಳಾಗಿರಲು ಕರೆಯಲ್ಪಟ್ಟಿದ್ದಾರೆ.

ಒಬ್ಬ ಸುವಾರ್ತಾಪ್ರಚಾರಕನಿಗೆ ಒಬ್ಬ ಸಾಕ್ಷಿಯಾಗಿರುವದಕ್ಕಿಂತಲೂ ವಿಸ್ತಾರವಾದ ಕಾರ್ಯಕ್ಷೇತ್ರವಿದೆ. ಒಬ್ಬ ಸಾಕ್ಷಿಯು ತಾನು ದಿನನಿತ್ಯ ಚಲಿಸುವ ಮತ್ತು ಕೆಲಸ ಮಾಡುವ ಕಛೇರಿಯಲ್ಲಿ - ತನ್ನ ಸಂಬಂಧಿಕರಿಗೆ, ನೆರೆಹೊರೆಯವರಿಗೆ, ತಾನು ಕಛೇರಿಯಲ್ಲಿ ನಿತ್ಯವೂ ಭೇಟಿ ಮಾಡುವ ತನ್ನ ಸಹ-ಕೆಲಸಗಾರರಿಗೆ, ತನ್ನ ಸಹ-ಪ್ರಯಾಣಿಕರಿಗೆ ಹೀಗೆ ಮೊದಲಾದವರಿಗೆ ಆತನು ಕ್ರಿಸ್ತನನ್ನು ಸಾರುವ ಮೂಲಕ ಸಾಕ್ಷಿಯಾಗಿ ಜೀವಿಸಬೇಕು. ನಮ್ಮ ಕೆಲಸ ಈ ಭೂಲೋಕದಲ್ಲಿ ಏನೇ ಆಗಿದ್ದರೂ, ನಾವೆಲ್ಲರೂ ಸಾಕ್ಷಿಗಳಾಗಿರಬಹುದು.

ಆದರೆ, ದಾರಿ ತಪ್ಪಿಹೋದವರನ್ನು, ಕೆಳೆದು ಹೋದವರನ್ನು ತಲುಪುವಂತೆ, ವಿಸ್ತಾರವಾದ ಸೇವೆಯನ್ನು ಹೊಂದಿರುವಂತ ಸುವಾರ್ತಾಪ್ರಚಾರಕರನ್ನು ಸಹ ಕ್ರಿಸ್ತನು ಸಭೆಗೆ ಕೊಟ್ಟಿದ್ದಾನೆ. ಆದರೆ ಸುವಾರ್ತಾಪ್ರಚಾರಕನ ಕೆಲಸ (ನಾವು ಸಾಮಾನ್ಯವಾಗಿ ಕೇಳುವಂತೆ) ಕೇವಲ ‘ಆತ್ಮಗಳನ್ನು ಜಯಿಸುವುದು’ ಅಥವಾ ‘ಕ್ರಿಸ್ತನೆಡೆಗೆ ಜನರನ್ನು ತರುವುದು’ ಮಾತ್ರವಲ್ಲ. ಬದಲಾಗಿ, (ಎಫೆಸ. 4:11,12 ಸ್ಪಷ್ಟಪಡಿಸುವಂತೆ) ‘ಕ್ರಿಸ್ತನ ದೇಹವನ್ನು ಕಟ್ಟುವುದು’. ಇಂದಿನ ಬಹುತೇಕ ಸುವಾರ್ತಾಪ್ರಚಾರದ ಕೆಲಸ ತಪ್ಪಾಗಿರುವುದು ಇಲ್ಲೇ. ಇಂದಿನ ಬಹುತೇಕ ಸುವಾರ್ತಾಪ್ರಚಾರವು ಕ್ರಿಸ್ತನ ದೇಹ ಕಟ್ಟುವುದಕ್ಕೆ ಸಂಬಂಧಿಸಿಲ್ಲ, ಆದರೆ ಕೇವಲ ವೈಯುಕ್ತಿಕ ಆತ್ಮಗಳನ್ನು ರಕ್ಷಿಸುವುದಕ್ಕೆ ಸಂಬಂಧಿಸಿದೆ. ಹೆಚ್ಚಾಗಿ, ಈ ಆತ್ಮಗಳು ಸತ್ತಂಥಹ ಸಭೆಗಳಿಗೆ ಕಳಿಸಲ್ಪಡುತ್ತವೆ ಮತ್ತು ಅಲ್ಲಿ ಸ್ವಲ್ಪ ಸಮಯದಲ್ಲೇ ಆ ಆತ್ಮಗಳು ಮತ್ತೆ ದಾರಿ ತಪ್ಪುತ್ತವೆ, ಇಲ್ಲವೇ ಅವು ಉಗುರು ಬೆಚ್ಚಗಾಗುತ್ತವೆ. ಒಂದು ದಿನ ಕರ್ತನು ತನ್ನ ಬಾಯಿಂದ ಉಗುಳಲು ಆ ಆತ್ಮಗಳು ಯೋಗ್ಯವೇನಿಸಿಕೊಳ್ಳುತ್ತವೆ (ಪ್ರಕಟಣೆ 3:16). ಹೀಗೆ ಎರಡೂ ರೀತಿಯಲ್ಲಿ ಆ ಆತ್ಮಗಳು ಕ್ರಿಸ್ತನ ದೇಹದೊಂದಿಗೆ ಕಟ್ಟಲ್ಪಡುವುದಿಲ್ಲ. ಈ ಮೂಲಕ ಕೇವಲ ಸೈತಾನನ ಉದ್ದೇಶಗಳು ಮಾತ್ರ ನೆರವೇರುತ್ತವೆ - ಇದರಿಂದ ಒಬ್ಬ ವ್ಯಕ್ತಿಯು ಎರಡರಷ್ಟು ನರಕದ ಮಗನಾಗುತ್ತಾನೆ. (ಮತ್ತಾಯ. 23:15)- ಮೊದಲನೆಯದಾಗಿ ಒಬ್ಬನು ಮೊದಲೇ ದಾರಿ ತಪ್ಪಿದವನಾಗಿದ್ದ ಹಾಗೂ ಎರಡನೆಯದಾಗಿ ಅವನಿನ್ನೂ ದಾರಿ ತಪ್ಪಿದವನಾಗಿದ್ದಾಗ್ಯೂ ಒಬ್ಬ ಸುವಾರ್ತಾಪ್ರಚಾರಕನ ಹೇಳಿಕೆಯಿಂದ ಧೃಢಿಕರಿಸಿಕೊಂಡು, ತಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನಂಬುತ್ತಾನೆ! ಈ ರೀತಿಯ ಸುವಾರ್ತಾಪ್ರಚಾರದಿಂದ ಕಟ್ಟಲ್ಪಡುವುದೇನೆಂದರೆ ಸುವಾರ್ತಾಪ್ರಚಾರಕನ ಖಾಸಗಿ ಸಾಮ್ರಾಜ್ಯ ಮಾತ್ರ ಹಾಗೂ ಈ ರೀತಿಯ ಸುವಾರ್ತಾಪ್ರಚಾರಕ್ಕೆ ಕಾರಣ ಒಂದೇ, ಅದು ಸುವಾರ್ತಾಪ್ರಚಾರಕನಿಗಿರುವ ಹಣದಾಸೆ ಅಥವಾ ಜನರ ಗೌರವದ ಆಸೆ ಅಥವಾ ಎರಡೂ ಇರಬಹುದು!!

ಸುವಾರ್ತಾಪ್ರಚಾರಕರನ್ನು ಯೇಸುವು ’ಮನುಷ್ಯರ ಮೀನುಗಾರರು’ ಎಂದು ಕರೆದನು. ಆದರೆ ಪರಿವರ್ತನೆ ಹೊಂದಿರದ ’ಕ್ರೈಸ್ತ’ ನಾಯಕರು ಮತ್ತು ಗುಂಪುಗಳ ಸಹಕಾರದಿಂದ ಅಥವಾ ಮತ-ಯಾಚಿಸುವ ರಾಜಕೀಯ ನಾಯಕರ ಪ್ರಾಯೋಜಕತ್ವದ ಮೂಲಕ ನಡೆಸುವ ಸುವಾರ್ತಾ ಪ್ರಚಾರವು ತೂತುಗಳಿರುವ ಬಲೆಯಲ್ಲಿ ಮೀನು ಹಿಡಿದಂತೆ. ಯೇಸು ಅನ್ನ ಅಥವಾ, ಕಾಯಿಫ ಅಥವಾ ಹೆರೋದ ಅಥವಾ ಪಿಲಾತನನ್ನು, ವೇದಿಕೆಯ ಮೇಲೆ ತನ್ನ ಜೊತೆ ಕುಳಿತುಕೊಳ್ಳಲು ಮತ್ತು ಸುವಾರ್ತಾ ಕೂಟವನ್ನು ಉಧ್ಘಾಟಿಸಲು ಅಹ್ವಾನಿಸುವುದನ್ನು ನಾವು ಊಹಿಸಲಾಗದು! ಆದರೆ ಇಂದಿನ ಅನೇಕ ಸುವಾರ್ತಾಪ್ರಚಾರಕರು ಇದನ್ನು ಮಾತ್ರ ಮಾಡುವುದಲ್ಲದೆ, ಮಾನಸಾಂತರ ಹೊಂದಿರದ ಈ ನಾಯಕರನ್ನು ವೇದಿಕೆಯ ಮೇಲಿಂದ ಹೊಗಳುತ್ತಾರೆ.

ಮುಂದುವರೆದು, ಅಂಥಹ ಬಲೆಗಳ ಮೂಲಕ ಹಿಡಿಯಲ್ಪಟ್ಟ ಮೀನುಗಳನ್ನು ಮತ್ತೆ ಸಮುದ್ರಕ್ಕೆ (ಸತ್ತ ’ಸಭೆಗಳಿಗೆ’) ಬಿಡಲಾಗುತ್ತದೆ. ಅದೇ ಜನಗಳು ಮತ್ತೆ ಇನ್ನೊಂದು ಸುವಾರ್ತಾಪ್ರಚಾರ ಸಭೆಯಲ್ಲಿ ಹಿಡಿಯಲ್ಪಡುತ್ತಾರೆ ಹಾಗೂ ಇನ್ನೊಮ್ಮೆ ಸಮುದ್ರಕ್ಕೆ (ಸತ್ತ ”ಸಭೆಗಳಿಗೆ'') ಹೋಗುತ್ತಾರೆ!! ಅನೇಕ ಸುವಾರ್ತಾಪ್ರಚಾರಕರು ಬಹು ದೊಡ್ಡ ಗುಂಪುಗಳನ್ನೊಳಗೊಂಡ ಕೂಟಗಳನ್ನು ಏರ್ಪಡಿಸಿ, ಅಲ್ಲಿ ಕೈಗಳನ್ನು ಅಥವಾ ನಿರ್ಧಾರ-ಪತ್ರಗಳನ್ನು ಎಣಿಸುವ ಮೂಲಕ ಈ ಪ್ರಕ್ರಿಯೆ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ. ಇಂಥಹ ಸುವಾರ್ತಾ ಪ್ರಚಾರ ಸೈತಾನನ ದೂತರಿಗೆ ಸಂತೋಷವನ್ನು ತರುತ್ತದೆಯೇ ಹೊರತು, ದೇವರ ದೂತರಿಗಲ್ಲ! ಎರಡು ಪಟ್ಟಾಗಿ ನರಕದ ಮಕ್ಕಳನ್ನಾಗಿಸಿದವರ ಮೇಲೆ ದೇವ-ದೂತರು ಆನಂದಿಸುವುದಾದರೂ ಹೇಗೆ? ಇಂದಿನ ಸುವಾರ್ತಾಪ್ರಚಾರದ ಅಂಕೆ-ಸಂಖ್ಯೆಗಳು ಸಂಪೂರ್ಣವಾಗಿ ಮೋಸದಾಯಕವಾಗಿದೆ.

ಯೇಸು ಪಾಪಗಳನ್ನು ಕ್ಷಮಿಸುತ್ತಾನೆ ಮತ್ತು ಕಾಯಿಲೆಗಳನ್ನು ಗುಣಪಡಿಸುತ್ತಾನೆ ಎಂಬ ಸಂದೇಶ ಸಾರುವಿಕೆಯು, ”ಚಿಹ್ನೆಗಳು ಮತ್ತು ಅದ್ಭುತಗಳ” ಜೊತೆಗೂಡಿದಾಗ, ಇನ್ನೂ ಉಳಿಯುವ ಪ್ರಶ್ನೆಯೇನೆಂದರೆ, ಅಂಥಹ ಸುವಾರ್ತಾಪ್ರಚಾರದ ಮೂಲಕ ಎಷ್ಟು ಮಂದಿ ಶಿಷ್ಯರಾಗಿದ್ದಾರೆ ಮತ್ತು ಕ್ರಿಸ್ತನ ದೇಹದೊಡನೆ ಕಟ್ಟಲ್ಪಟ್ಟಿದ್ದಾರೆ ಎಂಬುದು.

ನಮ್ಮ ಕರ್ತನ ಅಪೋಸ್ತಲರು ಈ ರೀತಿಯ ಸುವಾರ್ತಾ ಪ್ರಚಾರವನ್ನು ಕೈಗೊಳ್ಳಲಿಲ್ಲ. ಇದರ ಬದಲಾಗಿ, ತಮ್ಮ ಮೂಲಕ ಪರಿವರ್ತನೆ ಹೊಂದಿದವರು ಶಿಷ್ಯರಾಗುವಂತೆ ಮತ್ತು ಆತ್ಮಿಕವಾಗಿ ಬೆಳೆಯುವಂತೆ ಅವರನ್ನು ಸ್ಥಳೀಯ ಸಭೆಗಳಿಗೆ ಸೇರಿಸಿದರು.

ಎಫೆಸ 4:11ರಲ್ಲಿ ಉಲ್ಲೇಖಿಸಿದ ಐದು ಸೇವಾಕಾರ್ಯಗಳು (ಅಪೋಸ್ತಲರು, ಪ್ರವಾದಿಗಳು, ಸಭಾಪಾಲಕರು, ಸುವಾರ್ತಾಪ್ರಚಾರಕರು ಮತ್ತು ಶಿಕ್ಷಕರು) ಅವುಗಳ ಸರಿಯಾದ ಕ್ರಮದಲ್ಲಿ 1ಕೊರಿಂಥ 12:28ರಲ್ಲಿ ಪಟ್ಟಿ ಮಾಡಲ್ಪಟ್ಟಿವೆ. ಅಲ್ಲಿ ನಮಗೆ ಹೇಳಿರುವುದೇನೆಂದರೆ, "ದೇವರು ಕೆಲವರನ್ನು ಸಭೆಯಲ್ಲಿ- ಮೊದಲನೆಯದಾಗಿ ಅಪೋಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಉಪದೇಶಕರನ್ನು, ನಂತರ ಮಹತ್ಕಾರ್ಯಗಳನ್ನೂ ವಾಸಿಮಾಡುವ ವರಗಳನ್ನೂ (ಅದು ಸುವಾರ್ತಾಪ್ರಚಾರಕರಿಗೆ ಅನ್ವಯಿಸುತ್ತದೆ ಯಾಕೆಂದರೆ, ಹೊಸ ಒಡಂಬಡಿಕೆಯ ಕಾಲದಲ್ಲಿ ಗುಣಪಡಿಸುವ ವರವು ಎಲ್ಲಾ ಸುವಾರ್ತಾಪ್ರಚಾರಕರಿಗೆ ಇತ್ತು) ಹಾಗೂ ನಂತರದ ಕಾರ್ಯಗಳನ್ನು ನಿರ್ವಹಿಸುವವರನ್ನೂ (ಶಬ್ದಾನುವಾದದ ಪ್ರಕಾರ "ಹಡಗುಗಳನ್ನು ನಡೆಸುವವರು" ಅಂದರೆ, ಪಾಲಕರು/ಹಿರಿಯರು) ಇಟ್ಟಿದ್ದಾನೆ" .

ಇದು ಸ್ಪಷ್ಟಪಡಿಸುವುದೇನೆಂದರೆ, ದೇವರ ದೃಷ್ಟಿಯಲ್ಲಿ, ಕ್ರಿಸ್ತನ ದೇಹವನ್ನು ಕಟ್ಟುವುದಕ್ಕೆ- ಅಪೋಸ್ತಲ, ಪ್ರವಾದಿ ಮತ್ತು ಉಪದೇಶಕ ಇವೆಲ್ಲ ಸೇವಾಕಾರ್ಯಗಳು ಸುವಾರ್ತಾಪ್ರಚಾರದ ಸೇವಾಕಾರ್ಯಕ್ಕಿಂತ ಹೆಚ್ಚು ಪ್ರಮುಖವಾದವುಗಳು. ಸುವಾರ್ತಾಪ್ರಚಾರಕನು, ಅಪೋಸ್ತಲ, ಪ್ರವಾದಿ ಮತ್ತು ಉಪದೇಶಕ (ಶಿಕ್ಷಕ)ರ ಸೇವಾಕಾರ್ಯಗಳಿಗೆ ಅಧೀನನಾಗಿರುವ ಸ್ಥಾನವನ್ನು ತೆಗೆದುಕೊಂಡಾಗ ಮಾತ್ರ ಅವನು ತನ್ನ ಸೇವಾಕಾರ್ಯದ ಸೂಕ್ತ ಸ್ಥಾನವನ್ನು ಪಡೆಯಬಹುದು. ಆಗ ಮಾತ್ರ ಆತನ ಸೇವಾಕಾರ್ಯವು ಕ್ರಿಸ್ತನ ದೇಹವನ್ನು ಕಟ್ಟಲು ಉಪಯೋಗವಾಗುವುದು. ಇಲ್ಲಿಯೇ, ಇಪ್ಪತ್ತನೆಯ ಶತಮಾನದ ಸುವಾರ್ತಾಪ್ರಚಾರವು ದೇವರ ವಾಕ್ಯದಿಂದ ದೂರಹೋಗಿರುವುದು.

ಶಿಷ್ಯರನ್ನಾಗಿಸುವುದು

ಜಗತ್ತಿನ ಪ್ರತಿಯೊಂದು ರಾಷ್ಟ್ರದಲ್ಲಿ ಶಿಷ್ಯರನ್ನಾಗಿಸಬೇಕು (ಮತ್ತಾಯ. 28:19) ಎಂಬ ಶ್ರೇಷ್ಟ ಆಜ್ಞೆಯ ಈ ಎರಡನೆಯ ಭಾಗವನ್ನು ಸರಿಯಾಗಿ ನೋಡಿದಾಗ ಮಾತ್ರ ಸುವಾರ್ತಾಪ್ರಚಾರವನ್ನು ನಾವು ನಿಜವಾಗಿ ಅರ್ಥಮಾಡಿಕೊಳ್ಳಬಹುದು. ಪರಿವರ್ತನೆ ಹೊಂದದವರಿಗೆ ದೇವರ ಯೋಜನೆ ಈ ರೀತಿಯಾಗಿಯೇ ಪೂರ್ಣವಾಗುವುದು.

ಪರಿವರ್ತನೆ (ಮಾನಸಾಂತರ) ಹೊಂದಿದವನನ್ನು ಶಿಷ್ಯನನ್ನಾಗಿಸಲೇಬೇಕು.

ದುರದೃಷ್ಟವಶಾತ್, ಮಾನಸಾಂತರ ಹೊಂದಿದವರು ಎಂದು ಕರೆಸಿಕೊಳ್ಳುವ ಅನೇಕರು ಹಲವು ಪ್ರಕರಣಗಳಲ್ಲಿ ಸರಿಯಾಗಿ ಪರಿವರ್ತನೆ (ಮಾನಸಾಂತರ) ಹೊಂದಿರುವುದಿಲ್ಲ. ಬಹುಷ: ಯೇಸುವನ್ನು ಮಾತ್ರ ನಂಬು ಎಂದು ಸುವಾರ್ತಾಪ್ರಚಾರ ಕೂಟದಲ್ಲಿ ಅವರಿಗೆ ಹೇಳಲಾಗಿರುತ್ತದೆ. ಆದರೆ ಅನೇಕ ಸಲ, ಮಾನಸಾಂತರದ ಬಗ್ಗೆ ಅಥವಾ ಮೋಸದಿಂದ ತೆಗೆದುಕೊಂಡ ತನ್ನದಲ್ಲದನ್ನು ಹಿಂತಿರಿಗಿಸಬೇಕು, ಮತ್ತೊಬ್ಬರಿಗೆ ನಷ್ಟ ಮಾಡಿದ್ದನ್ನು ಕಟ್ಟಿಕೊಡಬೇಕು, ನೋವು ಮಾಡಿದವರಿಗೆ ಹೋಗಿ ಕ್ಷಮೆ ಕೇಳಬೇಕು ಎಂಬುದರ ಬಗ್ಗೆ ಅವರಿಗೆ ಯಾರೂ ಹೇಳಿರುವುದಿಲ್ಲ. ಅಂಥಹ ಪರಿವರ್ತಕರುಗಳು ಯೇಸುವಿನ ಬಳಿ ಬರುವುದು ಕೇವಲ ಆಶೀರ್ವಾದ ಪಡೆಯಲು ಮತ್ತು ಸ್ವಸ್ಥ ಹೊಂದುವುದಕ್ಕಾಗಿ ಮಾತ್ರ. ತಮ್ಮ ಪಾಪವನ್ನು ಬಿಡುವುದಕ್ಕಲ್ಲ. ಹೀಗಾಗಿ, ಇಂದು ಪರಿವರ್ತನೆ ಹೊಂದಿದವರಲ್ಲಿ ಅನೇಕರು- ಹುಟ್ಟಲು ತಯಾರಿಲ್ಲದ ಮಕ್ಕಳನ್ನು, ಸಮಯಕ್ಕೆ ಮೊದಲೇ - ತಾಳ್ಮೆಯಿರದ ಸೂಲಗಿತ್ತಿಯರು (ಸುವಾರ್ತಾಪ್ರಚಾರಕರು) ಹೊರಗೆಳೆದ (ಹುಟ್ಟಿದ) ಮಕ್ಕಳಂತೆ ಇರುತ್ತಾರೆ! ಯಾಕೆಂದರೆ ಅಂಥಹ ಸುವಾರ್ತಾಪ್ರಚಾರಕರಿಗೆ ಅಂಕೆ-ಸಂಖ್ಯೆಗಳು ಅತೀ ಪ್ರಮುಖವಾಗಿರುತ್ತವೆ. ಇವು ಸರಿಯಾದ ಸಮಯಕ್ಕೆ ಮೊದಲೇ ಹುಟ್ಟಿದ ಮಕ್ಕಳಂತೆ, ಸಾಮಾನ್ಯವಾಗಿ ಬೇಗ ಸಾಯುತ್ತವೆ ಅಥವಾ ಅವರು ಅನೇಕ ಸಮಸ್ಯೆಗಳಿಂದ ಕೂಡಿದ್ದು ತಮ್ಮ ಪಾಲಕರಿಗೆ (ಹಿರಿಯರಿಗೆ) ತಮ್ಮ ಜೀವನದುದ್ದಕ್ಕೂ ಜ್ವಲಂತ ಸಮಸ್ಯೆಗಳನ್ನು ಒಡ್ಡುತ್ತವೆ. ಅಂಥವರನ್ನು ಹಿಂಜಾರಿದವರು ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಅವರು ಪ್ರಾರಂಭದಲ್ಲಿಯೇ ಎಡವಿರುತ್ತಾರೆ!! ಯೇಸುವು ಹೇಳಿದ್ದೇನೆಂದರೆ, ಸ್ವರ್ಗದಲ್ಲಿರುವ ದೂತರು ಮಾನಸಾಂತರ ಹೊಂದಿದವರನ್ನು ನೋಡಿ ಆನಂದಿಸಿದರು ಎಂಬುದಾಗಿದೆಯೇ ಹೊರತು, ಮಾನಸಾಂತರ ಹೊಂದದೆ ಕೇವಲ ನಂಬಿದವರನ್ನು ನೋಡಿ ಆನಂದಿಸುತ್ತಾರೆ ಎಂದಲ್ಲ (ಲೂಕ 15:7,10).

ಯೇಸುವು ಹೇಳಿದ್ದೇನೆಂದರೆ, ಜಕ್ಕಾಯನ ಮನೆಗೆ ರಕ್ಷಣೆ ದೊರಕಿದ್ದು ಅವನು ತನ್ನ ಹಿಂದಿನ ಜೀವನದಲ್ಲಿ ಹಣದ ವಿಷಯದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸುತ್ತೇನೆ ಎಂದು ಹೇಳಿದಾಗ ಮಾತ್ರವೇ ಹೊರತು, ಅದರ ಮೊದಲಲ್ಲ (ಲೂಕ19:9). ದುರದೃಷ್ಟವಶಾತ್, ಮೋಸವಾಗಿ ತಗೆದುಕೊಂಡಿದ್ದನ್ನು ಹಿಂತಿರುಗಿಸುವ ಬಗ್ಗೆ ಹೇಳದೆಯೇ, ಕೇವಲ ರಕ್ಷಣೆ ಬಂದಿದೆ ಎಂದು ಇಂದಿನ ಅನೇಕ ಸುವಾರ್ತಾಪ್ರಚಾರಕರು ಹೇಳುತ್ತಾರೆ!

ಆದರೆ ಒಬ್ಬ ನಿಜವಾಗಿ ಮತ್ತು ಸರಿಯಾಗಿ ಮಾನಸಾಂತರ (ಪರಿವರ್ತನೆ) ಹೊಂದಿದಾಗಲೂ, ತನ್ನ ಜೀವನದಲ್ಲಿ ದೇವರ ಇಚ್ಚೆಯನ್ನು ನೆರವೇರಿಸಬೇಕಾದರೆ, ಅವನನ್ನು ಶಿಷ್ಯತ್ವಕ್ಕೆ ಮುನ್ನಡೆಸಬೇಕು. ಶಿಷ್ಯತ್ವದ ಕಡೆ ಮುನ್ನಡೆಸದ ಸುವಾರ್ತಾಪ್ರಚಾರ ಅಪರಿಪೂರ್ಣ ಕೆಲಸವಾಗಿದೆ.

ಅನೇಕ ಸಲ ಸುವಾರ್ತಾಪ್ರಚಾರಕನಿಗೆ, ತನ್ನದೇ ಸಾಮ್ರಾಜ್ಯವನ್ನು ಕಟ್ಟುವ ಆಸೆಯು- ಪರಿವರ್ತನೆ ಹೊಂದಿದವರನ್ನು ಶಿಷ್ಯರನ್ನಾಗಿಸುವ ಕೆಲಸ ಮಾಡುವವರ ಜೊತೆ ಕೈಜೋಡಿಸುವುದನ್ನು ತಡೆಯುತ್ತದೆ. ನಾವು ಅಂಥಹ ಸುವಾರ್ತಾಪ್ರಚಾರಕರ ಬಗ್ಗೆ ತೀರ್ಪು ನೀಡಬೇಕಾಗಿಲ್ಲ. ಯಾಕೆಂದರೆ ನಾವು ತೀರ್ಪು ಮಾಡಬಾರದೆಂದು ಹೇಳಲ್ಪಟ್ಟಿದ್ದೇವೆ. ಮಾನಸಾಂತರ ಹೊಂದಿದವರು ನಂತರ ಶಿಷ್ಯರಾಗುವಂತೆ ಅವರನ್ನು ತಡೆದುದಕ್ಕಾಗಿ ಅಂಥಹ ಸುವಾರ್ತಾಪ್ರಚಾರಕರು ಅಂತಿಮ ದಿನದಂದು ಕರ್ತನಿಗೆ ಉತ್ತರ ಕೊಡಬೇಕಾಗುತ್ತದೆ.

ಯೇಸುವು ಮಾರ್ಕ 16:6 ರಲ್ಲಿ ಸ್ಪಷ್ಟಪಡಿಸಿದಂತೆ, ಮತ್ತು ಪೇತ್ರನು ಪಂಚಾಶತ್ತಮದ ದಿನ ಬೋಧಿಸಿದಂತೆ (ಅ. ಕೃತ್ಯಗಳು. 2:38) ಜನರನ್ನು ಮಾನಸಾಂತರಕ್ಕೆ ಮತ್ತು ನಂಬಿಕೆಗೆ ಮುನ್ನಡೆಸುವ ಮೊದಲ ಹೆಜ್ಜೆಯು ನೀರಿನ ದೀಕ್ಷಾಸ್ನಾನ. ಮತ್ತಾಯ 28:19 ಕೂಡ ನೀರಿನ ದೀಕ್ಷಾಸ್ನಾನದ ಅಗತ್ಯತೆಯನ್ನು ಹೇಳುತ್ತದೆ. ಆದ್ದರಿಂದ ಹೊಸದಾಗಿ ಹುಟ್ಟಿದವರಿಗೆ ಇದು ಎರಡನೇ ಹೆಜ್ಜೆಯಾಗಿದೆ.

ಅದರ ನಂತರ, ತನ್ನ ದಿನನಿತ್ಯದ ಜೀವನದಲ್ಲಿ ಅವನು ಶಿಷ್ಯನಂತೆ ಯೇಸುವನ್ನು ಹಿಂಬಾಲಿಸಬೇಕು.

ಶಿಷ್ಯತ್ವದ ಷರತ್ತುಗಳು

ಲೂಕ 14:25-35 ರಲ್ಲಿನ ವಾಕ್ಯಗಳು ಈ ಷರತ್ತುಗಳನ್ನು ಬಹಳ ಸ್ಪಷ್ಟವಾಗಿ ತಿಳಿಯಪಡಿಸುತ್ತದೆ.

ಒಂದು ಗೋಪುರವನ್ನು ಕಟ್ಟಲು ಅಸ್ತಿವಾರ ಹಾಕಿ, ಅದನ್ನು ಕಟ್ಟಲು ತನ್ನಲ್ಲಿ ಹಣವಿಲ್ಲದಿದ್ದುದರಿಂದ ಅದನ್ನು ಪೂರ್ಣಗೊಳಿಸಲಾಗದ ವ್ಯಕ್ತಿಯೊಬ್ಬನ ಬಗ್ಗೆ ಯೇಸುವು ಅಲ್ಲಿ ನಮಗೆ ಹೇಳುತ್ತಾನೆ (ಲೂಕ 14:28-30). ಅದರಿಂದ ನಾವು ತಿಳಿಯುವುದೇನೆಂದರೆ, ಶಿಷ್ಯನಾಗಲು ನಾವು ಸ್ವಲ್ಪ ಬೆಲೆಯನ್ನು ತೆರಬೇಕು (ಶಿಷ್ಯನಾಗುವುದು ಅಷ್ಟೊಂದು ಸುಲಭದ ವಿಷಯವಲ್ಲ). ಕಟ್ಟಲು ಆರಂಭಿಸುವ ಮೊದಲು ನಾವು ಅದರ ಬೆಲೆಯನ್ನು ಲೆಕ್ಕ ಹಾಕಬೇಕೆಂದು ಯೇಸು ನಮಗೆ ಹೇಳಿದನು.

ಶಿಷ್ಯತ್ವದ ಬೆಲೆಯೇನೆಂಬುದನ್ನು ತಿಳಿಯಲು ನಾವು ಪಾಪಕ್ಷಮೆಯನ್ನು ಹೊಂದಿದ ಮೇಲೆ ತುಂಬಾ ವರ್ಷಗಳ ಕಾಲ ಕಾಯಬೇಕೆಂಬುದು ದೇವರು ಬಯಸುವುದಿಲ್ಲ. ತನ್ನಲ್ಲಿಗೆ ಬಂದ ಕೂಡಲೇ ಯೇಸುವು ಜನರಿಗೆ ಶಿಷ್ಯತ್ವದ ಬೆಲೆಯನ್ನು ಹೇಳಿದನು. ಶಿಷ್ಯನಾಗ ಬಯಸದ ವಿಶ್ವಾಸಿಯು ರುಚಿ ಕಳೆದುಕೊಂಡ ಉಪ್ಪಿನಷ್ಟು ದೇವರಿಗೆ ನಿಷ್ಪ್ರಯೋಜಕ ಎಂದು ಯೇಸು ಹೇಳಿದನು (ವ. 35).

ಮಾನಸಾಂತರ ಹೊಂದಿದವನೊಬ್ಬ ಶಿಷ್ಯನಾಗಬೇಕಾದರೆ, ಮೊದಲನೆಯದಾಗಿ, ತನ್ನ ಸಂಬಂಧಿಕರೊಡನೆ ತನಗಿರುವ ಸಂಬಂಧವನ್ನು ಅವನು ಕಡಿದುಹಾಕಬೇಕು (ವ. 26). ಎರಡನೆಯದಾಗಿ ತಾನು ತನ್ನನ್ನೇ ತಿರಸ್ಕರಿಸಲು ಸಿದ್ದನಾಗಿರಬೇಕು ಮತ್ತು ತನ್ನ ಸ್ವಾರ್ಥಕ್ಕೆ ಅವನು ಪ್ರತಿನಿತ್ಯ ಸಾಯಬೇಕು (ವ. 27). ಮೂರನೆಯದಾಗಿ, ಪ್ರಾಪಂಚಿಕ ವಸ್ತುಗಳ ಮೇಲಿನ ಪ್ರೀತಿಯನ್ನು (ಮೋಹವನ್ನು) ಅವನು ತ್ಯಜಿಸಬೇಕು (ವ. 33). ಶಿಷ್ಯನಾಗಬಯಸುವವನಿಗೆ ಕನಿಷ್ಟವಾಗಿ ಈ ಮೂರು ವಿಷಯಗಳು ಅವಶ್ಯಕವಾಗಿವೆ.

ಶಿಷ್ಯತ್ವದ ಮೊದಲನೇ ಷರತ್ತೇನೆಂದರೆ, ನಮ್ಮ ಸಂಬಂಧಿಕರೊಡನೆ ನಮಗಿರುವ ಸ್ವಾಭಾವಿಕವಾದ, ಪ್ರೀತಿಯನ್ನು ಕಡಿದುಹಾಕುವುದು.

ಯೇಸುವು ಹೇಳಿದ್ದೇನೆಂದರೆ, "ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆಯನ್ನಾಗಲೀ ತಾಯಿಯನ್ನಾಗಲೀ ಹೆಂಡತಿಯನ್ನಾಗಲೀ ಮಕ್ಕಳನ್ನಾಗಲೀ ಸಹೋದರರನ್ನಾಗಲೀ ಸಹೋದರಿಯರನ್ನಾಗಲೀ...ಹಗೆ ಮಾಡದಿದ್ದರೆ ಅವನು ನನ್ನ ಶಿಷ್ಯನಾಗಲಾರನು” (ವ. 26).

ಇವು ಬಹಳ ಕಠಿಣವಾದ ಮಾತುಗಳು. ’ಹಗೆಮಾಡು’ ಅಂದರೇನು? ಹಗೆಮಾಡುವುದಂದರೆ ಸಾಯಿಸುವುದು ಎಂದು ಅರ್ಥ (1 ಯೋಹಾ. 3:15). ನಮ್ಮ ಸಂಬಂಧಿಕರ ಬಗ್ಗೆ ನಮಗಿರುವ ಸ್ವಾಭಾವಿಕವಾದ ಪ್ರೀತಿಯನ್ನು ನಾವು ಸಾಯಿಸಬೇಕೆಂದು ನಮಗೆ ಹೇಳಲಾಗಿದೆ.

ನಾವು ಅವರನ್ನು ಪ್ರೀತಿಸಬಾರದೆಂಬುದು ಇದರರ್ಥವೇ? ಅಲ್ಲ. ನಿಜವಾಗಿಯೂ ಇದು ಅದರರ್ಥವಲ್ಲ. ನಮಗೆ ಅವರ ಮೇಲಿರುವ ಮಾನವೀಯ ಪ್ರೀತಿಯಿಂದ ಪೀತಿಸುವುದನ್ನು ನಾವು ನಿಲ್ಲಿಸಿದಾಗ, ಅದನ್ನು ದೈವಿಕ ಪ್ರೀತಿಯಿಂದ ದೇವರು ತುಂಬುತ್ತಾರೆ. ಆಗ ನಮ್ಮ ಸಂಬಂಧಿಕರನ್ನು ಪರಿಶುದ್ಧವಾಗಿರುವ ಪ್ರೀತಿಯಿಂದ ನಾವು ಪ್ರೀತಿಸುವೆವು. ಅಂದರೆ, ನಮ್ಮ ಸಂಬಂಧಿಕರಿಗಿಂತ ದೇವರನ್ನೇ ನಮ್ಮ ಜೀವಿತದಲ್ಲಿ ನಾವು ಮೊದಲು ಪ್ರೀತಿಸುವೆವು.

ತಾವು ತಮ್ಮ ತಂದೆ, ತಾಯಿ ಅಥವಾ ಹೆಂಡತಿಗೆ ಬೇಸರ ಮಾಡುತ್ತೇವೆಂದು ಅನೇಕರು ದೇವರಿಗೆ ವಿಧೇಯರಾಗುವುದಿಲ್ಲ. ನಮ್ಮ ಜೀವಿತದಲ್ಲಿ ದೇವರು ಮೊದಲನೆಯ ಸ್ಥಾನವನ್ನು ಬಯಸುತ್ತಾನೆ. ನಾವು ಅವನಿಗೆ ಆ ಸ್ಥಾನವನ್ನು ಕೊಡದಿದ್ದಲ್ಲಿ ನಾವು ಆತನ ಶಿಷ್ಯರಾಗಲಾರೆವು. ನಮ್ಮ ಜೀವನದಲ್ಲಿ ಯೇಸುವು ಕರ್ತನಾಗಿರಬೇಕು/ಒಡೆಯನಾಗಿರಬೇಕು. ಇಲ್ಲವಾದಲ್ಲಿ ಅವನು ಎಂದಿಗೂ ನಮ್ಮ ಒಡೆಯನಾಗಲಾರನು.

ಈ ಪ್ರಪಂಚದಲ್ಲಿದ್ದಾಗ, ಯೇಸುವಿನ ಉಧಾಹರಣೆಯನ್ನೇ ನೋಡಿ. ಅವನು ವಿಧವೆಯಾದ ತನ್ನ ತಾಯಿಯನ್ನು ಪ್ರೀತಿಸಿದರೂ, ಸಣ್ಣ ವಿಷಯಗಳಲ್ಲಿ ಕೂಡಾ ತಂದೆಯ ಪರಿಪೂರ್ಣ ಚಿತ್ತದಿಂದ ತನ್ನನ್ನು ದೂರ ಸೆಳೆಯುವಂತೆ ತನ್ನ ಮೇಲೆ ಪ್ರಭಾವ ಬೀರಲು ಅವನು ತನ್ನ ತಾಯಿಗೆ ಬಿಡಲಿಲ್ಲ. ಇದರ ಒಂದು ಉಧಾಹರಣೆಯನ್ನು ಕಾನಾದಲ್ಲಿನ ಮದುವೆಯ ಸಂದರ್ಭದಲ್ಲಿ ತನ್ನ ತಾಯಿಯ ಮಾತಿನ ಪ್ರಕಾರ ನಡೆಯಲು ಅವನು ಸಮ್ಮತಿಸದಿರುವುದನ್ನು ನಾವು ಕಾಣಬಹುದು. (ಯೋಹನ. 2:4).

ನಮ್ಮ ಸಹೋದರರನ್ನು ಹೇಗೆ ಹಗೆ ಮಾಡಬೇಕೆಂಬುದನ್ನು ಕೂಡ ಯೇಸು ನಮಗೆ ಹೇಳಿದ್ದಾರೆ. ತಾನು ಶಿಲುಬೆಗೆ ಹೋಗುವುದನ್ನು ತಡೆಯಲು ಪೇತ್ರನು ಪ್ರಯತ್ನಿಸಿದಾಗ ಕಠಿಣವಾದ ಮಾತುಗಳಿಂದ ಯೇಸು ಅವನನ್ನು ಗದರಿಸಿದನು. ಅವನು ಹೇಳಿದ್ದೇನೆಂದರೆ, "ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಜ್ಞವಾಗಿದ್ದೀ" (ಮತ್ತಾಯ 16:23). ಬಹಳಷ್ಟು ಮಾನವೀಯ ಪ್ರೀತಿಯಿಂದ ಪೇತ್ರನು ಈ ಸಲಹೆಯನ್ನು ನೀಡಿದ್ದನು. ಆದರೆ ಯೇಸುವು ಅವನನ್ನು ಗದರಿಸಿದನು. ಯಾಕೆಂದರೆ, ಪೇತ್ರನು ಸೂಚಿಸಿದ್ದು, ತಂದೆಯ ಚಿತ್ತಕ್ಕೆ ವಿರುದ್ಧವಾಗಿತ್ತು.

ಯೇಸುವು ತನ್ನ ಪ್ರೀತಿಯಲ್ಲಿ ದೇವರಿಗೆ ಶ್ರೇಷ್ಟ ಸ್ಥಾನವನ್ನು ಕೊಟ್ಟನು. ಯೇಸುವಿನ ಕಡೆಗೆ ನಮಗೂ ಅಂಥದೇ ಮನೋಭಾವವಿರಬೇಕೆಂದು ಆತನು ಬಯಸುತ್ತಾನೆ. ಯೇಸು ತನ್ನ ಪುನರುಥ್ಥಾನದ ನಂತರ, ಪೇತ್ರನನ್ನು ಸಭೆಯ ಪಾಲಕನನ್ನಾಗಿ ಮಾಡುವ ಮೊದಲು, ಆತನು ಎಲ್ಲಾ ವಸ್ತುಗಳಿಗಿಂತ ಹೆಚ್ಚಾಗಿ ತನ್ನನ್ನು ಪ್ರೀತಿಸುತ್ತೀಯಾ ಎಂದು ಯೇಸು ಪೇತ್ರನನ್ನು ಕೇಳಿದನು. (ಯೋಹಾನ 21:15-17). ಕರ್ತನನ್ನು ಶ್ರೇಷ್ಟವಾಗಿ ಪ್ರೀತಿಸುವವರಿಗೆ ಮಾತ್ರ ಸಭೆಯಲ್ಲಿ ಜವಾಬ್ದಾರಿಗಳನ್ನು ಕೊಡಲಾಗುತ್ತದೆ.

ಕರ್ತನಿಗಾಗಿ ತನ್ನ ಮೊದಲಿನ ಭಕ್ತಿಯನ್ನು ತಾನು ಕಳೆದುಕೊಂಡಿದ್ದರಿಂದ ಎಫೆಸದ ಸಭೆಯ ಹಿರಿಯನು ಕರ್ತನಿಂದ ತಿರಸ್ಕರಿಸಲ್ಪಡುವ ಅಪಾಯದಲ್ಲಿದ್ದನು (ಪ್ರಕಟಣೆ. 2:1-5).

"ಪರಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರು ಅವಶ್ಯ? ಇಹಲೋಕದಲ್ಲಿ ನಿನ್ನಲ್ಲದೆ ಇನ್ನಾರನ್ನೂ ಬಯಸುವುದಿಲ್ಲ" ಎಂದು ಕೀರ್ತನಗಾರನೊಂದಿಗೆ ನಾವೂ ಹೇಳಬಹುದಾದರೆ, ಆಗ ನಾವು ಶಿಷ್ಯತ್ವದ ಮೊದಲನೆಯ ಷರತ್ತನ್ನು ಪಾಲಿಸಿದ್ದೇವೆ (ಕೀರ್ತನೆಗಳು 73:25) ಎಂದು ಅರ್ಥ.

ನಮ್ಮಿಂದ ಯೇಸು ಬಯಸುವ ಪ್ರೀತಿ, ಹಾಡುಗಳನ್ನು ಹಾಡುವ ಮೂಲಕ ಆತನಲ್ಲಿ ನಮಗೆ ಉಂಟಾಗುವ ಭಾವನಾತ್ಮಕವಾದ ಮತ್ತು ಮಾನವೀಯ ರೀತಿಯಲ್ಲಿ ಬರುವುಂತದ್ದಲ್ಲ. ನಾವು ಆತನನ್ನು ಪ್ರೀತಿಸುವುದಾದರೆ, ಆತನಿಗೆ ವಿಧೇಯರಾಗುತ್ತೇವೆ (ಯೋಹಾನ. 14:21). ಯೇಸು ಬಯಸುವ ಪ್ರೀತಿ ಇದಾಗಿದೆ.

ಶಿಷ್ಯತ್ವದ ಎರಡನೇ ಷರತ್ತೇನೆಂದರೆ, ನಾವು ನಮ್ಮ ಸ್ವಾರ್ಥ ಜೀವಿತವನ್ನು ದ್ವೇಷಿಸಬೇಕು. ಯೇಸು ಹೇಳಿದ್ದೇನೆಂದರೆ, "ನನ್ನ ಬಳಿ ಬರುವವನು ತನ್ನ ಸ್ವಂತ ಪ್ರಾಣವನ್ನು ಹಗೆ ಮಾಡದಿದ್ದರೆ ನನ್ನ ಶಿಷ್ಯನಾಗಿರಲಾರನು" (ಲೂಕ 14:26).

ಅವನು ಇನ್ನೂ ವಿವರಿಸಿ ಹೇಳಿದ್ದೇನೆಂದರೆ, "ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬಂದ ಹೊರತು ಅವನು ನನ್ನ ಶಿಷ್ಯನಾಗಿರಲಾರನು" (ಲೂಕ 14:27). ಯೇಸುವಿನ ಎಲ್ಲಾ ಬೋಧನೆಗಳಲ್ಲಿ ಅತ್ಯಂತ ಕಡಿಮೆಯಾಗಿ ಅರ್ಥಮಾಡಿಕೊಂಡ ಬೋಧನೆಗಳಲ್ಲಿ ಇದೂ ಒಂದು.

ಯೇಸುವು ಹೇಳಿದ್ದೇನೆಂದರೆ, ಶಿಷ್ಯನು "ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ" (ಲೂಕ 9:23). ನಾವು ದಿನವೂ ಸತ್ಯವೇದವನ್ನು ಓದುವುದಕ್ಕಿಂತ, ಪ್ರಾರ್ಥನೆ ಮಾಡುವುದಕ್ಕಿಂತ, ನಾವು ನಮ್ಮನ್ನೇ ನಿರಾಕರಿಸಲು ಮತ್ತು ನಮ್ಮ ಶಿಲುಬೆಯನ್ನು ದಿನವೂ ಹೊರಲು ಕಲಿಯುವುದು ಹೆಚ್ಚು ಪ್ರಮುಖವಾದುದು. ನಾವು ನಮ್ಮನ್ನೇ ನಿರಾಕರಿಸುವುದೆಂದರೆ, ನಾವು ನಮ್ಮ ಪ್ರಾಣವನ್ನೇ ಹಗೆ ಮಾಡುವುದಾಗಿದೆ, ಅಂದರೆ ನಾವು ಆದಾಮನಿಂದ ವಂಶಪಾರಂಪರ್ಯವಾಗಿ ಪಡೆದ ಪ್ರಾಣವನ್ನು ಹಗೆಮಾಡುವುದು. ನಮ್ಮ ಶಿಲುಬೆಯನ್ನು ನಾವು ಹೊರುವುದೆಂದರೆ, ನಾವು ನಮ್ಮ ಸ್ವಾರ್ಥಕ್ಕೆ ಸಾಯುವುದು. ಅದಕ್ಕೆ ಸಾಯುವುದಕ್ಕೆ ಮೊದಲು, ನಾವು ಅದನ್ನು ಹಗೆಮಾಡಬೇಕು.

ನಮ್ಮ ಸ್ವಾರ್ಥ ಜೀವಿತ ಕ್ರಿಸ್ತ ಜೀವಿತದ ಪ್ರಮುಖ ಶತ್ರು. ಸತ್ಯವೇದವು ಅದನ್ನು ’ಮಾಂಸ’ ಎಂದು ಕರೆಯುತ್ತದೆ. ಮಾಂಸವು ನಮ್ಮಲ್ಲಿರುವ ಕೆಟ್ಟ ವ್ಯಾಮೋಹಗಳ ಉಗ್ರಾಣ. ಅದು ನಾವು ನಮ್ಮದೇ ಇಚ್ಚೆಯನ್ನು ಮಾಡುವಂತೆ ಹಾಗೂ ನಾವು ನಮ್ಮದೇ ಲಾಭ, ನಮ್ಮ ಗೌರವ, ನಮ್ಮ ಸಂತೋಷ ಮತ್ತು ನಮ್ಮದೇ ದಾರಿ ಇತ್ಯಾದಿಗಳನ್ನು ಕಂಡುಕೊಳ್ಳಲು, ಎಲ್ಲಾ ಕಾಲದಲ್ಲೂ ನಮ್ಮನ್ನು ಶೋಧನೆಗೆ ಒಳಪಡಿಸುತ್ತದೆ.

ನಾವು ಪ್ರಾಮಾಣಿಕರಾಗಿದ್ದಲ್ಲಿ, ನಮ್ಮ ಅತ್ಯುತ್ತಮವಾದ ಕಾರ್ಯಗಳು ಸಹ ಭ್ರಷ್ಟ ಮೋಹಗಳಿಂದ ಉಂಟಾಗುವ ಕೆಟ್ಟ ಉದ್ದೇಶಗಳಿಂದ ಭ್ರಷ್ಟಗೊಳ್ಳುತ್ತವೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ನಾವು ಈ ‘ಮಾಂಸ’ ವನ್ನು (ಶರೀರದ ಆಶೆಗಳು) ದ್ವೇಷಿಸದಿದ್ದಲ್ಲಿ, ನಾವೆಂದಿಗೂ ಕರ್ತನನ್ನು ಹಿಂಬಾಲಿಸಲು ಸಾಧ್ಯವಾಗುವುದಿಲ್ಲ.

ಇದಕ್ಕಾಗಿಯೇ, ಯೇಸು ನಾವು ನಮ್ಮ ಪ್ರಾಣವನ್ನು ಹಗೆ ಮಾಡುವುದರ (ಅಥವಾ ಕಳೆದುಕೊಳ್ಳುವುದರ) ಬಗ್ಗೆ ಅಷ್ಟೊಂದು ಮಾತಾಡಿದನು.

ನಿಜ ಹೇಳಬೇಕೆಂದರೆ, ಈ ಹೇಳಿಕೆಯು ಸುವಾರ್ತೆಗಳಲ್ಲಿ ಆರು ಬಾರಿ ಪುನರಾವರ್ತನೆಗೊಂಡಿದೆ (ಮತ್ತಾಯ 10:39; 16:25;; ಮಾರ್ಕ 8:35; ಲೂಕ 9:24; 14:26; ಯೋಹಾನ. 12:25). ನಮ್ಮ ಕರ್ತನ ಈ ಮಾತು ಸುವಾರ್ತೆಗಳಲ್ಲಿ ಪುನರಾವರ್ತನೆಗೊಂಡು ಹೇಳಲ್ಪಟ್ಟಿದೆ. ಆದಾಗ್ಯೂ, ಇದರ ಬಗೆಗಿನ ಬೋಧನೆ ಅತ್ಯಂತ ಕಡಿಮೆಯಾಗಿದ್ದು, ಇದು ಅತ್ಯಂತ ಕಡಿಮೆಯಾಗಿ ಅರ್ಥಮಾಡಿಕೊಂಡ ಸತ್ಯವಾಗಿದೆ.

ನಮ್ಮ ಪ್ರಾಣವನ್ನು ಹಗೆ ಮಾಡುವುದೆಂದರೆ, ನಾವು ನಮ್ಮ ಹಕ್ಕುಗಳನ್ನು ಮತ್ತು ಸೌಭಾಗ್ಯಗಳನ್ನು ಬಿಟ್ಟುಬಿಡುವುದಾಗಿದೆ, ನಮ್ಮ ಪ್ರಸಿದ್ದಿಯನ್ನು ಹುಡುಕದಿರುವುದಾಗಿದೆ. ನಮ್ಮ ಆಸಕ್ತಿಗಳನ್ನು ಮತ್ತು ನಮ್ಮ ಆಕಾಂಕ್ಷೆಗಳನ್ನು ತ್ಯಜಿಸುವುದಾಗಿದೆ. ನಮ್ಮದೇ ಮಾರ್ಗವನ್ನು ಬಿಟ್ಟು ಬಿಡುವುದಾಗಿದೆ, ಇತ್ಯಾದಿ. ಈ ರೀತಿಯಾಗಿ ಬಾಳಲು ಸಿದ್ಧವಿದ್ದರೆ ಮಾತ್ರ ನಾವು ಯೇಸುವಿನ ಶಿಷ್ಯರಾಗಬಹುದು.

ಶಿಷ್ಯತ್ವದ ಮೂರನೆಯ ಷರತ್ತೆಂದರೆ, ನಾವು ನಮಗಿರುವದನ್ನೆಲ್ಲಾ ಬಿಟ್ಟು ಬಿಡಬೇಕು.

ಯೇಸುವು ಹೇಳಿದ್ದೇನೆಂದರೆ, "ನಿಮ್ಮಲ್ಲಿ ಯಾವನಾದರೂ ತನಗಿರುವವುಗಳನ್ನೆಲ್ಲಾ ಬಿಟ್ಟು ಬಿಡದೆ ಹೋದರೆ ಅವನು ನನ್ನ ಶಿಷ್ಯನಾಗಲಾರನು" (ಲೂಕ 14:33).

ನಮಗಿರುವುದು ಎಂದರೆ, ನಮ್ಮ ಸ್ವಂತದ್ದು ಎಂದು ತಿಳಿದುಕೊಂಡಿರುವುದು. ಅದನ್ನು ಬಿಡುವುದೆಂದರೆ, ಅದ್ಯಾವುದೂ ನಮ್ಮವಲ್ಲವೆಂದು ನಾವು ಪರಿಗಣಿಸುವುದಾಗಿದೆ.

ಅಬ್ರಹಾಮನ ಜೀವನದಲ್ಲಿ ನಾವೊಂದು ಉದಾಹರಣೆಯನ್ನು ಕಾಣುತ್ತೇವೆ. ಇಸಾಕನು ಆತನ ಸ್ವಂತ ಮಗ ಮತ್ತು ಆತನ ಆಸ್ತಿಯಾಗಿದ್ದನು. ಒಂದು ದಿನ ಅವನ ಮಗನನ್ನು ಬಲಿಯಾಗಿ ಅರ್ಪಿಸಲು ದೇವರು ಅವನಿಗೆ ಹೇಳಿದರು. ಆಗ ಅಬ್ರಹಾಮನು ಅವನನ್ನು ಬಲಿಪೀಠದ ಮೇಲಿಟ್ಟು ಅವನನ್ನು ಕೊಲ್ಲಲು ಸಿದ್ದನಾದನು. ಅವನು ದೇವರಿಗೆ ವಿಧೇಯನಾಗಲು ಸಿದ್ದನಾಗಿದ್ದರಿಂದ, ಆತನ ಬಲಿಯ ಅವಶ್ಯಕತೆಯಿಲ್ಲವೆಂದು ದೇವರು ಅವನಿಗೆ ಹೇಳಿದರು (ಆದಿಕಾಂಡ.22). ಅದಾದನಂತರ, ಇಸಾಕನು ಮನೆಯಲ್ಲಿದ್ದರೂ, ಅಬ್ರಹಾಮನು ಅವನನ್ನು ತನ್ನ ಸ್ವಂತ ಆಸ್ತಿಯಲ್ಲ ಎಂದು ಪರಿಗಣಿಸಿಕೊಂಡಿದ್ದನು. ಇಸಾಕನು ಈಗ ದೇವರಿಗೆ ಸೇರಿದವನಾಗಿದ್ದನು.

ನಾವು ನಮ್ಮ ಆಸ್ತಿಯನ್ನು ತ್ಯಜಿಸಬೇಕೆಂಬುದರ ಅರ್ಥ ಇದೇ ಆಗಿದೆ. ನಮ್ಮಲ್ಲಿರುವುದೆಲ್ಲವನ್ನು ನಾವು ಬಲಿಪೀಠದ ಮೇಲಿಟ್ಟು ಅದನ್ನು ದೇವರಿಗೆ ಸಮರ್ಪಿಸಬೇಕು.

ಕೆಲವು ವಸ್ತುಗಳನ್ನು ನಾವು ಉಪಯೋಗಿಸಲು ದೇವರು ನಮಗೆ ಸಮ್ಮತಿಸಬಹುದು. ಆದರೆ ಅವು ನಮ್ಮವೆಂದು ನಾವು ಎಂದಿಗೂ ತಿಳಿಯುವಂತಿಲ್ಲ. ನಾವು ನಮ್ಮ ಸ್ವಂತ ಮನೆಯಲ್ಲೇ ಜೀವಿಸುತ್ತಿದ್ದರೂ ಅದು ದೇವರದ್ದೆಂದು ನಾವು ಪರಿಗಣಿಸಬೇಕು. ಅದಕ್ಕಾಗಿ ದೇವರು ಬಾಡಿಗೆಯಿಲ್ಲದೆ ಜೀವಿಸುವಂತೆ ನಮ್ಮನ್ನು ಬಿಟ್ಟಿರುತ್ತಾನೆ! ಇದೇ ನಿಜವಾದ ಶಿಷ್ಯತ್ವ.

ನಾವು ನಮ್ಮಲ್ಲಿರುವುದೆನ್ನೆಲ್ಲಾ ದೇವರಿಗೆ ಸಮರ್ಪಿಸಿದ್ದೇವೋ? ನಮಗಿರುವವಗಳು ಎಂದರೆ, ಬ್ಯಾಂಕ್ ಖಾತೆ, ಆಸ್ತಿ, ಕೆಲಸ, ಅರ್ಹತೆಗಳು, ಪ್ರತಿಭೆಗಳು, ಹೆಂಡತಿ, ಮಕ್ಕಳು ಮತ್ತೆ ಈ ಜಗತ್ತಿನಲ್ಲಿ ಬೆಲಬಾಳುವಂಥದ್ದೆಲ್ಲವೂ. ನಾವು ನಿಜವಾದ ಶಿಷ್ಯರಾಗಬೇಕಾದರೆ, ಅವೆಲ್ಲವನ್ನು ನಾವು ಬಲಿಪೀಠದ ಮೇಲೆ ಅರ್ಪಿಸಬೇಕು.

ಆಗ ಮಾತ್ರ ನಾವು ನಮ್ಮ ಪೂರ್ಣ ಹೃದಯದಿಂದ ದೇವರನ್ನು ಪ್ರೀತಿಸಬಹುದು. ಮತ್ತಾಯ. 5:8 ರಲ್ಲಿ ಯೇಸು ಹೇಳಿದ ‘ಪರಿಶುದ್ಧ ಹೃದಯ’ ಇದೇ. ಕೇವಲ ಶುದ್ಧ ಮನಸ್ಸಾಕ್ಷಿ ಇದ್ದರೆ ಸಾಲದು. ಶುದ್ಧ ಮನಸ್ಸಾಕ್ಷಿ ಎಂದರೆ, ನಾವು ನಮಗೆ ಅರಿವಿರುವ ಪಾಪವನ್ನು ಮಾತ್ರ ತ್ಯಜಿಸಿದ್ದೇವೆ ಎಂದರ್ಥ. ಶುದ್ಧ ಹೃದಯವೆಂದರೆ, ನಾವು ಎಲ್ಲವನ್ನೂ ತ್ಯಜಿಸಿದ್ದೇವೆ ಎಂದರ್ಥ.

ಆದ್ದರಿಂದ ನಾವು ನೋಡುವುದೇನೆಂದರೆ, ನಿಜವಾದ ಶಿಷ್ಯತ್ವವು ಒಳಗೊಂಡಿರುವುದು- ನಮ್ಮ ಮನೋಭಾವದಲ್ಲಿನ ಬದಲಾವಣೆಯನ್ನು. ಅದು 1)ನಮ್ಮ ಸಂಬಂಧಿಕರು, 2)ನಮ್ಮ ಸ್ವಾರ್ಥ ಜೀವಿತ ಮತ್ತು 3) ನಮ್ಮ ಆಸ್ತಿಯ ಬಗೆಗಿರುವ ನಮ್ಮ ಮನೋಭಾವನೆಯಲ್ಲಿ ಬದಲಾವಣೆ ಹೊಂದಬೇಕು. ನಾವು ಈ ವಿಷಯಗಳ ಬಗ್ಗೆ ನ್ಯಾಯವಾಗಿ ಮತ್ತು ಪ್ರಾಮಾಣಿಕರಾಗಿರದಿದ್ದರೆ, ನಮ್ಮ ಜೀವನದಲ್ಲಿ ದೇವರ ಸಂಪೂರ್ಣ ಉದ್ದೇಶವನ್ನು ನಾವು ಈಡೇರಿಸಲಾಗುವುದಿಲ್ಲ. ಬೋಧಕರು ಈ ಶಿಷ್ಯತ್ವದ ಸಂದೇಶವನ್ನು ಸತ್ಯವೇದದಲ್ಲಿ ಇದ್ದಂತೆಯೇ ಬೋಧಿಸದಿದ್ದರೆ, ಕ್ರಿಸ್ತನ ದೇಹವನ್ನು ಕಟ್ಟಲು ಅವರಿಗೆ ಅಸಾಧ್ಯವಾಗುವುದು.

ಶಿಷ್ಯತ್ವದ ದಾರಿ.

ಮತ್ತಾಯ. 5,6,7 ಹೇಳುವುದೇನೆಂದರೆ, ಕರ್ತನು ಕೊಟ್ಟ ಪ್ರತಿಯೊಂದು ಆಜ್ಞೆಗೆ ವಿಧೇಯರಾಗಲು ಮತ್ತು ಅವನ್ನು ಪಾಲಿಸಲು ಶಿಷ್ಯರಿಗೆ ಕಲಿಸಬೇಕು ಎಂಬುದಾಗಿ. ಇದೇ ಶಿಷ್ಯತ್ವದ ದಾರಿಯಾಗಿದೆ. ನಾವು ಮತ್ತಾಯ 5,6,7 ಅಧ್ಯಾಯಗಳನ್ನು ಓದಿದಾಗ, ಯೇಸು ಕೊಟ್ಟ ಕೆಲವೊಂದು ಅಜ್ಞೆಗಳು ನಮಗೆ ತಿಳಿಯುವುವು. ಆದರೆ ಅನೇಕ ವಿಶ್ವಾಸಿಗಳು ಈ ಆಜ್ಞೆಗಳಿಗೆ ವಿಧಯರಾಗಬೇಕೆಂಬುದು ತಿಳಿದಿಲ್ಲ.

ಒಬ್ಬ ಶಿಷ್ಯನು ಕಲಿಯುವಾತನು ಮತ್ತು ಹಿಂಬಾಲಕನು ಆಗಿದ್ದಾನೆ.

ಯೇಸು ಬೋಧಿಸಿದ ಪ್ರತಿಯೊಂದಕ್ಕೆ ತಾವೂ ವಿಧಯರಾಗಿ, ಅದನ್ನು ಇತರರಿಗೂ ವಿಧಯರಾಗುವಂತೆ ತಿಳಿಸಿ, ದೇವರು ಸಾರಿದಂತ ಪ್ರತಿಯೊಂದು ಉಪದೇಶಗಳನ್ನು ತನ್ನ ಹೃದಯದಲ್ಲಿ ಹಿಡಿದುಕೊಂಡು, ಕ್ರಿಸ್ತನ ದೇಹವನ್ನು ಕಟ್ಟುವುದಕ್ಕೆ ಬಯಕೆಯನ್ನು ಹೊಂದಿದವರು ಇಂದು ಈ ಜಗತ್ತಿಗೆ ಅವಶ್ಯಕವಾಗಿದ್ದಾರೆ.

ಒಬ್ಬರ ಮೇಲೊಬ್ಬರಿಗೆ ಪ್ರೀತಿಯನ್ನು ಇಟ್ಟುಕೊಂಡಿರುವವರು ತನ್ನ ಶಿಷ್ಯರೆಂಬುದಾಗಿ ಗುರುತಿಸಲ್ಪಡುವರು ಎಂದು ಯೇಸು ಹೇಳಿದ್ದಾರೆ (ಯೋಹಾನ 13:35).

ಇದನ್ನು ಗುರುತಿಸಿ! ಯೇಸುವಿನ ಶಿಷ್ಯರೆಂದು - ತಮ್ಮ ಬೋಧನೆಯ ಗುಣಮಟ್ಟದಿಂದಾಗಲಿ ಅಥವಾ ತಮ್ಮ ಸಂಗೀತ ಮತ್ತು ಬೋಧನೆಯಿಂದಾಗಲಿ ಅಥವಾ ತಮ್ಮ ’ಅನ್ಯ ಭಾಷಾ ವರಗಳಿಂದಾಗಲಿ’ ಅಥವಾ ಸತ್ಯವೇದಗಳನ್ನು ಕೂಟಗಳಿಗೆ ತೆಗೆದುಕೊಂಡು ಬರುವುದರಿಂದಾಗಲಿ ಅಥವಾ ಕೂಟಗಳಲ್ಲಿ ಮಾಡುವ ಶಬ್ದದಿಂದಾಗಲಿ ಗುರುತಿಸಲ್ಪಡುವುದಿಲ್ಲ !! ಇದರ ಹೊರತಾಗಿ, ಒಬ್ಬರ ಮೇಲೋಬ್ಬರು ಅವರು ತೋರುವ ಗಾಢವಾದ ಪ್ರೀತಿಯಿಂದ ಯೇಸುವಿನ ಶಿಷ್ಯರೆಂದು ಗುರುತಿಸಲ್ಪಡುವರು. ಸುವಾರ್ತಾಪ್ರಚಾರ ಕೂಟಗಳ ಮೂಲಕ ಕ್ರಿಸ್ತನೆಡೆಗೆ ತರಲ್ಪಡುವ ಜನರು, ಸ್ಥಳೀಯವಾಗಿ ಒಂದು ಸಭೆಯನ್ನು ಸ್ಥಾಪಿಸಿ, ಅಲ್ಲಿ ಶಿಷ್ಯರು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಮುನ್ನೆಡೆಸಬೇಕು. ಆದರೆ ಬೇಸರದ ಸಂಗತಿಯೆಂದರೆ, ವರ್ಷದಿಂದ ವರ್ಷಕ್ಕೆ ಸುವಾರ್ತಾಕೂಟಗಳು ಜರುಗುವ ಅನೇಕ ಸ್ಥಳಗಳಲ್ಲಿ ತಮ್ಮ ಸಭೆಯಲ್ಲಿನ ಜನರು ಪರಸ್ಪರ ಕಚ್ಚಾಡದೆ, ಹಿಂಜರಿ ಬೀಳದೆ, ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ ಎಂದು ಹೇಳುವ ಒಂದು ಸಭೆಯನ್ನಾದರೂ ನೋಡುವುದು ತುಂಬಾ ಕಷ್ಟ.

ಹೊಸದಾಗಿ ಪರಿವರ್ತನೆಗೊಂಡಂತವರು ಅಂಥಹ ಜಯಶಾಲಿಯಾದ ಜೀವನವನ್ನು ತಕ್ಷಣ ನಡೆಸುವುದು ಆಸಾಧ್ಯ ಎಂದು ಅರ್ಥಮಾಡಿಕೊಳ್ಳೋಣ. ಆದರೆ ನಮ್ಮ ದೇಶದಲ್ಲಿ ಸಭಾ ಹಿರಿಯರು ಮತ್ತು ಕ್ರೈಸ್ತ ನಾಯಕರು ಜಗಳ ಮಾಡಿಕೊಂಡು, ಪ್ರಬುದ್ಧತೆ ಇಲ್ಲದ ಗುಣಲಕ್ಷಣಗಳನ್ನು ಹೊಂದಿದ್ದಾರೆ, ಅದರ ಬಗ್ಗೆ ನಾವು ಏನು ಹೇಳೋಣ?

ಶೇಷ್ಟ ಆಜ್ಞೆಯ ಎರಡನೆಯ ಮತ್ತು ಬಹಳ ಪ್ರಮುಖವಾದ ಭಾಗವು ಕಡೆಗಾಣಿಸಲ್ಪಟ್ಟಿದೆ(ಮತ್ತಾಯ. 28:19,20 ರಲ್ಲಿ ತಿಳಿಸಿದಂತೆ) ಅಂದರೆ- ಶಿಷ್ಯತ್ವ ಮತ್ತು ಯೇಸುವಿನ ಆಜ್ಞೆಗಳಿಗೆ ವಿಧೇಯತೆಯನ್ನು ಸಂಪೂರ್ಣವಾಗಿ ಕಡೆಗಣಿಸಿದುದರ ಬಗ್ಗೆ ಸ್ಪಷ್ಟ ಪುರಾವೆ ಇದೇ ಆಗಿದೆ.

ಶ್ರೇಷ್ಟ ಆಜ್ಞೆಯ (ಮಾರ್ಕ 16:15) ಮೊದಲ ಭಾಗವನ್ನು ಮಾತ್ರ ಎಲ್ಲಾ ಕಡೆ ಒತ್ತಿ ಹೇಳಲಾಗಿದೆ. ಅಂದರೆ, ಕರ್ತನು ಮಾಡಿದ ಸೂಚಕ ಕಾರ್ಯ ಮತ್ತು ಅದ್ಭುತಗಳ ಮೂಲಕ ಯೇಸು ದೇವರು ಎಂದು ಧೃಢಿಪಡಿಸುವಂತ ಸಂದೇಶ ಮತ್ತು ಸುವಾರ್ತ ಪ್ರಚಾರಕ್ಕೇ ಹೆಚ್ಚು ಒತ್ತನ್ನು ಇಂದು ಎಲ್ಲಾ ಕಡೆ ನೀಡಲಾಗುತ್ತಿದೆ.

ಮತ್ತಾ. 28:19,20 ರಲ್ಲಿ ಒತ್ತು ಕೊಟ್ಟಿರುವುದು ಶಿಷ್ಯತ್ವಕ್ಕೆ. ಅಂದರೆ- ಶಿಷ್ಯರ ಜೀವನದಲ್ಲಿ ಯೇಸುವಿನ ಆಜ್ಞೆಗಳಿಗೆ ಸಂಪೂರ್ಣ ವಿಧೇಯತೆಯನ್ನು ತೋರ್ಪಡಿಸುವುದು. ಅನೇಕ ಕ್ರೈಸ್ತರು ಸುವಾರ್ತೆ ಸಾರಬೇಕು ಎಂಬ ಆಜ್ಞೆಗೆ ಮಾತ್ರ ಹೆಚ್ಚು ಆಸಕ್ತಿ ವಹಿಸುತ್ತಾರೆ. ಆದರೆ ಬಹಳ ಕೆಲವೇ ಮಂದಿ ಮಾತ್ರ ಯೇಸುವಿನ ಎಲ್ಲಾ ಆಜ್ಞೆಗಳಿಗೆ ವಿಧಯರಾಗುವುದಕ್ಕೆಆಸಕ್ತಿ ತೋರಿಸುತ್ತಾರೆ. ಆದಾಗ್ಯೂ ಮೊದಲಿನದ್ದು ಇಲ್ಲದೆ, ಎರಡನೆಯದ್ದು ಅರ್ಧ ದೇಹದಂತೆ ಅಸಂಪೂರ್ಣ ಮತ್ತು ನಿಷ್ಪ್ರಯೋಜಕ. ಆದರೆ ಎಷ್ಟು ಜನ ಇದನ್ನು ತಿಳಿದಿದ್ದಾರೆ?

ಯೇಸುವಿನ ಸೇವೆಯಲ್ಲಿ ನಾವು ಓದುವುದೇನೆಂದರೆ ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಯಾಕೆಂದರೆ, ಅವನ ಸುವಾರ್ತಾಪ್ರಚಾರ ಮತ್ತು ಸ್ವಸ್ಥಪಡಿಸುವಂತ ಸೇವಾಕಾರ್ಯಗಳಿಗಾಗಿ. ಅವನು ಯಾವಾಗಲೂ ಅವರ ಕಡೆಗೆ ತಿರುಗಿ ಹೇಳಿದ್ದೇನೆಂದರೆ, ಶಿಷ್ಯತ್ವದ ಬಗ್ಗೆ (ಲೂಕ 14:25-26 ನೋಡಿ). ಇಂದಿನ ಸುವಾರ್ತಾ ಪ್ರಚಾರಕರು ಅದನ್ನು ಇಂದು ಮಾಡುವರೇ? ತಾವಾಗಿ ಅಥವಾ ಅಪೋಸ್ತಲರ, ಪ್ರವಾದಿಗಳ, ಶಿಕ್ಷಕರ ಮತ್ತು ಪಾಲಕರ ಸಹಕಾರದಿಂದ ಸುವಾರ್ತಪ್ರಚಾರಕರು ಆರಂಭಿಸಿದ ಕೆಲಸವನ್ನು ಅವರು ಪೂರ್ಣಗೊಳಿಸುವರೋ?

ಶಿಷ್ಯತ್ವದ ಸಂದೇಶವನ್ನು ಬೋಧಿಸಲು ಬೋಧಕರು ಯಾಕೆ ಹಿಂಜರಿಯುತ್ತಾರೆ? ಯಾಕೆಂದರೆ ಅದು ಅವರ ಸಭೆಯಲ್ಲಿ ಜನರ ಸಂಖ್ಯೆಯನ್ನು ಇಳಿಸುತ್ತದೆ. ಆದರೆ ಅವರು ಗ್ರಹಿಸಿಕೊಳ್ಳದೆ ಇರುವುದೇನೆಂದರೆ, ಶಿಷ್ಯತ್ವದ ಬಗ್ಗೆ ಬೋಧಿಸಿದರೆ, ಅವರ ಸಭೆಗಳ ಗುಣಮಟ್ಟ ಎಷ್ಟೋ ಒಳ್ಳೆಯದಾಗುತ್ತದೆ ಎಂಬುದಾಗಿ!!

ಶಿಷ್ಯತ್ವದ ಬಗ್ಗೆ ಜನರ ಗುಂಪಿಗೆ ಯೇಸು ಬೋಧಿಸಿದಾಗ, ಅಲ್ಲಿ ಗುಂಪು ಗುಂಪಾಗಿ ಸೇರಿದ ಜನರು ಕಡಿಮೆಯಾಗುತ್ತಾ, ಬೇಗ ಅದು ಹನ್ನೊಂದು ಜನರಿಗೆ ಇಳಿಯಿತು. (ಯೋಹಾ.6:2 ಮತ್ತು 6:70 ನ್ನು ಹೋಲಿಸಿ). ಇತರರಿಗೆ ಅವನ ಸಂದೇಶ ಬಹಳ ಕಠಿಣವಾಗಿದ್ದರಿಂದ, ಅವರು ಅವನನ್ನು ಬಿಟ್ಟು ಹೋದರು. (ಯೋಹಾ.6:60, 66 ನ್ನು ನೋಡಿ). ಅಂತಿಮವಾಗಿ ಅವನ ಜೊತೆ ಉಳಿದುಕೊಂಡ ಆ ಹನ್ನೊಂದು ಶಿಷ್ಯರ ಜೊತೆಯಲ್ಲಿ ದೇವರು ತನ್ನ ಉದ್ದೇಶಗಳನ್ನು ನೆರವೇರಿಸಿದರು.

ಇಂದು ಈ ಜಗತ್ತಲ್ಲಿ ಕ್ರಿಸ್ತನ ದೇಹವಾಗಿ, ಮೊದಲ ಶತಮಾನದಲ್ಲಿ ಹನ್ನೊಂದು ಜನ ಅಪೋಸ್ತಲರು ಮಾಡಿದ ಸೇವಾಕಾರ್ಯವನ್ನೇ ನಾವೂ ಮಾಡಬೇಕು. ಜನರನ್ನು ಕ್ರಿಸ್ತನ ಬಳಿ ತಂದ ಮೇಲೆ, ಅವರನ್ನು ಶಿಷ್ಯತ್ವದ ಮತ್ತು ವಿಧೇಯತೆಯ ಕಡೆ ಮುನ್ನಡೆಸಬೇಕು. ಆ ರೀತಿಯಿಂದ ಮಾತ್ರ ಕ್ರಿಸ್ತನ ದೇಹವನ್ನು ಕಟ್ಟಲು ಸಾಧ್ಯ.

ಜೀವದ ಹಾದಿಯು ಕಿರಿದಾದುದು ಮತ್ತು ಕೆಲವರೇ ಅದನ್ನು ಕಂಡುಕೊಳ್ಳುವರು.

ಕಿವಿಯುಳ್ಳವನು ಕೇಳಿಸಿಕೊಳ್ಳಲಿ.