ನಾವು ಅತಿ ಶ್ರೇಷ್ಠವಾದ ಸುವಾರ್ತೆಯನ್ನು ಮತ್ತು ಅಮೋಘವಾದ ದೇವರ ಕರುಣೆಯನ್ನು ಪಡೆದಿರುವಾಗ, ಇದಕ್ಕೆ ಪ್ರತಿಯಾಗಿ ನಾವು ಮಾಡಬೇಕಾದದ್ದೇನು ?
ಎಲ್ಲಕ್ಕೂ ಮೊದಲು, ನಾವು ಪ್ರತಿನಿತ್ಯವೂ ನಮ್ಮ ದೇಹಗಳನ್ನು ಒಂದು ಸಜೀವಯಜ್ಞವಾಗಿ ದೇವರಿಗೆ ಸಮರ್ಪಿಸಬೇಕು (ರೋಮಾ. 12:1). ದೇವರು ಬಯಸುವುದು ನಮ್ಮ ಸಂಪತ್ತನ್ನಲ್ಲ; ಅವರಿಗೆ ನಮ್ಮ ದೇಹವು ಬೇಕಾಗಿದೆ. ಹಳೆಯ ಒಡಂಬಡಿಕೆಯ ಸರ್ವಾಂಗಹೋಮದ ಹಾಗೆ, ನಾವು ನಮ್ಮ ದೇಹಗಳನ್ನು ಅವರಿಗೆ ಸಮರ್ಪಿಸುತ್ತಾ, "ಕರ್ತನೇ, ಇಲ್ಲಿ ಯಜ್ಞವೇದಿಯ ಮೇಲೆ ನಾನು ನನ್ನ ಕಣ್ಣುಗಳನ್ನು, ನನ್ನ ನಾಲಿಗೆಯನ್ನು, ನನ್ನ ಕೈಗಳನ್ನು, ನನ್ನ ಕಾಲುಗಳನ್ನು, ನನ್ನ ಕಿವಿಗಳನ್ನು, ನನ್ನ ಶರೀರದ ಕಾಮನೆಗಳನ್ನು - ಎಲ್ಲವನ್ನೂ ಸಮರ್ಪಿಸುತ್ತೇನೆ" ಎಂದು ಹೇಳಬೇಕು. ಇದರ ನಂತರ, ಎರಡನೆಯದಾಗಿ, ನಾವು ನಮ್ಮ ಮನಸ್ಸುಗಳನ್ನು ನವೀಕರಿಸುವುದಕ್ಕಾಗಿ ಅವರಿಗೆ ಒಪ್ಪಿಸಬೇಕು (ರೋಮಾ. 12:2). ಇದನ್ನು ಮಾಡುವುದು ಹೇಗೆಂದರೆ, ನಮ್ಮ ಮನಸ್ಸುಗಳನ್ನು ದೇವರ ವಾಕ್ಯದ ಮೂಲಕ ಸಂಪೂರ್ಣವಾಗಿ ತುಂಬಿಸಿಕೊಳ್ಳಬೇಕು. ನಮ್ಮಲ್ಲಿ ಅನೇಕರು ಹೊಲಸು ಆಲೋಚನೆಗಳ ಮೂಲಕ ಬಹಳ ದೊಡ್ಡ ಸಮಸ್ಯೆಗಳಿಗೆ ಗುರಿಯಾಗುತ್ತೇವೆ. ಇದೇಕೆ? ಇದಕ್ಕೆ ಕಾರಣವೇನೆಂದರೆ, ಹಿಂದಿನ ಕಾಲಮಾನದಲ್ಲಿ ನಾವು ನಮ್ಮ ಮನಸ್ಸುಗಳನ್ನು ಲೌಕಿಕವಾಗಿ ಉಪಯೋಗಿಸುತ್ತಿದ್ದೆವು. ಈಗ ನಮ್ಮ ಆಲೋಚನೆಗಳನ್ನು ದೇವರು ಬೇರೊಂದು ಮಾದರಿಯಲ್ಲಿ ಬದಲಾಯಿಸಲು ಬಯಸುತ್ತಾರೆ ಮತ್ತು ನಾವು ಅವರಂತೆ ಯೋಚಿಸಲು ಆರಂಭಿಸಬೇಕೆಂದು ಇಚ್ಛಿಸುತ್ತಾರೆ. ಈ ರೀತಿ ನಮ್ಮ ಮನಸ್ಸು ಕ್ರಮೇಣವಾಗಿ ನೂತನ ಮನಸ್ಸಾಗಿ ಬದಲಾಗುತ್ತದೆ.
ನಾವು ಹೊಸದಾಗಿ ಕ್ರೈಸ್ತರಾಗಿ ಹುಟ್ಟಿದ ಕ್ಷಣದಲ್ಲೇ ಎಲ್ಲಾ ವಿಷಯಗಳ ಬಗ್ಗೆ ದೇವರಂತೆ ಯೋಚಿಸಲು ಆರಂಭಿಸುವುದಿಲ್ಲ. ಆದರೆ ಆ ಕ್ಷಣದಿಂದ ನಾವು ನಮ್ಮ ಆಲೋಚನೆಯ ರೀತಿಯನ್ನು ಬದಲಾಯಿಸಬೇಕೆಂದು ಮತ್ತು ಕ್ರಮೇಣವಾಗಿ ನಾವು ಎಲ್ಲಾ ಸಂಗತಿಗಳನ್ನು ದೇವರ ದೃಷ್ಟಿಕೋನದಿಂದ ನೋಡಬೇಕೆಂದು ದೇವರು ಬಯಸುತ್ತಾರೆ. ನಾವು ಹಣವನ್ನು ದೇವರು ನೋಡುವಂತೆ ನೋಡಲು ಆರಂಭಿಸಿದ್ದೇವೆಯೇ? ನಾವು ಸ್ತ್ರೀಯರನ್ನು ದೇವರ ದೃಷ್ಟಿಯಿಂದ ನೋಡಲು ಶುರುಮಾಡಿದ್ದೇವೆಯೇ ಮತ್ತು ಲೌಕಿಕ ಪುರುಷರು ಅವರನ್ನು ನೋಡುವಂತೆ ನೋಡುವುದಿಲ್ಲವೇ? ಲೋಕವು ಸ್ತ್ರೀಯರನ್ನು ಒಂದೋ ಕೀಳಾಗಿ ಕಾಣುತ್ತದೆ, ಇಲ್ಲವೇ ಕಾಮುಕತೆಯಿಂದ ನೋಡುತ್ತದೆ. ದೇವರು ಇವೆರಡನ್ನೂ ಮಾಡುವುದಿಲ್ಲ. ನಾವು ನಮ್ಮ ಶತ್ರುಗಳನ್ನು ಯೇಸುವು ಅವರನ್ನು ನೋಡಿದ ರೀತಿಯಲ್ಲಿ ನೋಡಲು ಆರಂಭಿಸಿದ್ದೇವೆಯೇ? ಲೌಕಿಕ ಜನರು ತಮ್ಮ ಶತ್ರುಗಳನ್ನು ದ್ವೇಷಿಸುತ್ತಾರೆ, ಆದರೆ ಯೇಸುವು ಅವರನ್ನು ಪ್ರೀತಿಸಿದರು. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಮನಸ್ಸುಗಳು ನೂತನವಾಗಿ ಬದಲಾಗಬೇಕಿದೆ. ನಾವು ದೇವರ ವಾಕ್ಯವನ್ನು ಓದಿ ಅದಕ್ಕೆ ವಿಧೇಯರಾಗುತ್ತಿರುವಾಗ, ಪವಿತ್ರಾತ್ಮನು ನಮ್ಮ ಮನಸ್ಸುಗಳನ್ನು ನವೀಕರಿಸುವುದರ ಮೂಲಕ ನಮ್ಮನ್ನು ಯೇಸುವಿನ ಸಾರೂಪ್ಯಕ್ಕೆ ಪರಿವರ್ತಿಸುತ್ತಾನೆ.
"ನಾವು ಮೊದಲನೆಯದಾಗಿ ದೇವರಿಗೆ ವಿಧೇಯರಾಗಬೇಕೆಂದು ಸುವಾರ್ತೆಯು ಕಲಿಸಿಕೊಡುತ್ತದೆ"
ರೂಪಾಂತರವು ಮೊದಲು ಒಳಭಾಗದಲ್ಲಿ ಆಗುತ್ತದೆ. "ಇಹಲೋಕದ ನಡವಳಿಕೆಯನ್ನು ಅನುಸರಿಸಬೇಡಿರಿ" (ರೋಮಾ. 12:2) ಇದು ನಮಗೆ ಕಲಿಸುವುದು ಏನೆಂದರೆ, ಲೌಕಿಕತನವು ನಮ್ಮ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ ಎಂಬುದಾಗಿ. ಒಬ್ಬ ವ್ಯಕ್ತಿಯು ಯಾವ ರೀತಿ ಬಟ್ಟೆ ಧರಿಸುತ್ತಾನೆ ಎಂಬುವುದರಲ್ಲಿ ಲೌಕಿಕತನವು ಕಂಡುಬರುತ್ತದೆ ಎಂದು ಅನೇಕರು ಕಲ್ಪಿಸಿಕೊಳ್ಳುತ್ತಾರೆ. ಅದು ಹಾಗಲ್ಲ. ಇದು ಮೊದಲು ಮನಸ್ಸಿನಲ್ಲಿ ನೆಲೆಸುತ್ತದೆ. ನಾವು ಸರಳವಾದ ಬಟ್ಟೆಯನ್ನು ಧರಿಸಿ, ಹಣವನ್ನು ಹೆಚ್ಚಾಗಿ ಪ್ರೀತಿ ಮಾಡಬಹುದು. ಮನುಷ್ಯನು ಹೊರಭಾಗವನ್ನು ನೋಡುತ್ತಾನೆ, ಆದರೆ ದೇವರು ಹೃದಯವನ್ನು ನೋಡುತ್ತಾರೆ. ಒಬ್ಬ ನಿಜವಾದ ಯೇಸುವಿನ ಶಿಷ್ಯನು ದೇವರ ಮೆಚ್ಚುಗೆಯನ್ನು ಹುಡುಕುತ್ತಾನೆ. ನಾವು ನಮ್ಮ ದೇಹವನ್ನು ಮತ್ತು ನಮ್ಮ ಮನಸ್ಸನ್ನು ದೇವರಿಗೆ ಸಮರ್ಪಿಸಿದಾಗ ಮಾತ್ರ, ನಮ್ಮ ಜೀವಿತಕ್ಕಾಗಿ ಆತನ ಪರಿಪೂರ್ಣವಾದ ಚಿತ್ತವೇನೆಂದು ತಿಳಿದುಕೊಳ್ಳುತ್ತೇವೆ (ವಚನ 2).
ಪೌಲನು, ರೋಮಾ. 12 ರಲ್ಲಿ ಕ್ರಿಸ್ತನ ದೇಹವನ್ನು ಕಟ್ಟುವುದರ ಬಗ್ಗೆ ಮಾತನಾಡುತ್ತಾ ಹೋಗುತ್ತಾನೆ. ಸುವಾರ್ತೆಯ ಗುರಿಯು ವೈಯುಕ್ತಿಕ ರಕ್ಷಣೆಯಲ್ಲ, ಆದರೆ ಕ್ರಿಸ್ತನ ದೇಹದ ಭಾಗವಾಗುವುದಾಗಿದೆ - ಅಲ್ಲಿ ದೇವರು ನಮಗೆ ಕೊಡುವ ವರಗಳನ್ನು, ಅಂದರೆ ಪ್ರವಾದನೆ, ಸೇವೆ, ಇತರೆ ಸಂಗತಿಗಳನ್ನು ಅಭ್ಯಾಸಿಸಬೇಕು. 1 ಕೊರಿಂಥ 12 ರಲ್ಲಿ ಹೇಳಿರುವಂತದ್ದು ಮಾತ್ರವಲ್ಲ, ಆದರೆ ಇಲ್ಲಿಯೂ ಸಹ ಪಟ್ಟಿ ಮಾಡಿ ಹೇಳಿರುವಂತ ಪವಿತ್ರಾತ್ಮನ ವರಗಳನ್ನು ಅಭ್ಯಾಸಿಸಬೇಕು (ರೋಮ 12:6-8). ಯಾವ ಕ್ರೈಸ್ತನು ಹೆಚ್ಚಾಗಿ ಹುಡುಕದೇ ಇರುವಂತ ವರವನ್ನು ಇಲ್ಲಿ ನಮೂದಿಸಲಾಗಿದೆ - ಅದು ಉದಾರತೆಯ ವರ - ಅದು ಸಭೆಯಲ್ಲಿರುವ ಬಡವರಿಗೆ ಮತ್ತು ದೇವರ ಕೆಲಸಕ್ಕಾಗಿ ಹಣವನ್ನು ಕೊಡುವಂತ ವರ (ವಚನ 8) .
ನಾವು ಕ್ರಿಸ್ತನ ದೇಹದಲ್ಲಿ, ಬೇರೆಯವರೊಂದಿಗೆ ಹೇಗೆ ಸಂಬಂಧ ಕಲ್ಪಿಸಬೇಕೆಂದು 12ನೇ ಅಧ್ಯಾಯದ ಉಳಿದ ಭಾಗದಲ್ಲಿ ತಿಳಿಸಲಾಗಿದೆ (ರೋಮ. 12:16).“ನಿಮ್ಮ ಮನಸ್ಸಿನಲ್ಲಿ ಅಹಂಕಾರದಿಂದ ಇರಬೇಡಿರಿ, ಆದರೆ ದೀನ ಭಾವದವರೊಂದಿಗೆ ಸಹವಾಸ ಮಾಡಿರಿ”. ಕ್ರಿಸ್ತನ ದೇಹದಲ್ಲಿ ನಾವು ಎಲ್ಲರೊಂದಿಗೆ ಒಟ್ಟಿಗೆ ಸೇರಬೇಕು, ಆದರೆ ಪ್ರಮುಖವಾಗಿ ಬಡವರೊಂದಿಗೆ. ಏಕೆಂದರೆ ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯರಂತರಾಗಲು ಆರಿಸಿಕೊಂಡರು (ಯಾಕೋ.2:5). ಯಾರ ಮೇಲೂ ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ. ಪ್ರತೀಕಾರ ತೀರಿಸುವುದು ದೇವರಿಗೆ ಸೇರಿದ್ದು (ವಚನ 19). ಹೇಗೆ ಮಹಿಮೆ ಮತ್ತು ಆರಾಧನೆ ದೇವರಿಗೆ ಸೇರಿದ್ದೋ, ಹಾಗೆಯೇ, ಪ್ರತೀಕಾರ ಕೂಡ ದೇವರಿಗೆ ಸೇರಿದ್ದಾಗಿದೆ. ಹೇಗೆ ಮಹಿಮೆ ಮತ್ತು ಆರಾಧನೆಯನ್ನು ಇನ್ನೊಬ್ಬರಿಂದ ಸ್ವೀಕರಿಸಲು ನಮಗೆ ಹಕ್ಕಿಲ್ಲವೋ, ಅದೇ ರೀತಿ ಪ್ರತಿಕಾರವು ಸಹ.
ರೋಮಾ. 13ರಲ್ಲಿ ಅಧಿಕಾರಿಗಳಿಗೆ ಅಧೀನರಾಗಿರುವುದರ ಬಗ್ಗೆ ಹೇಳಲಾಗಿದೆ. ಮೊದಲನೆಯದಾಗಿ ದೇವರಿಗೆ ಅಧೀನರಾಗಿರಬೇಕು (ರೋಮ. 12:1,2); ಆನಂತರ ಕ್ರಿಸ್ತನ ದೇಹದಲ್ಲಿ ಒಬ್ಬರಿಗೊಬ್ಬರು ಅಧೀನರಾಗಿರಬೇಕೆಂದು ಸುವಾರ್ತೆ ಬೋಧಿಸುತದೆ (ರೋಮಾ. 12:3-21). ಮತ್ತು ಕೊನೆಯದಾಗಿ ಲೌಕಿಕ ಅಧಿಕಾರಿಗಳಿಗೆ. ಯಾಕೆಂದರೆ, ಅವರು 'ದೇವರ ಸೇವಕರು ' (ರೋಮಾ. 13:4,6). ಈ ಕಾರಣಕ್ಕಾಗಿಯೇ, ನಾವು ನಮ್ಮ ತೆರಿಗೆಗಳನ್ನು ಕಟ್ಟುತ್ತೇವೆ ಮತ್ತು ದೇಶದ ನಿಯಮಗಳಿಗೆ ವಿಧೇಯರಾಗುತ್ತೇವೆ.