ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಇಬ್ರಿಯ 10:19-25ರಲ್ಲಿನ ವಚನಗಳು ಇಬ್ರಿಯ ಪುಸ್ತಕದ ಮಧ್ಯ ಭಾಗವಾಗಿದೆ.
ಈ ವಾಕ್ಯದಲ್ಲಿ ಕರ್ತನಾದ ಯೇಸು ಉದ್ಘಾಟಿಸಿದ ನೂತನ ಮತ್ತು ಸಜೀವ (ಜೀವವುಳ್ಳ) ಮಾರ್ಗದ ಬಗ್ಗೆ ಹೇಳಲಾಗಿದೆ. ಈ ಮಾರ್ಗದ ಮುಖಾಂತರ ನಾವು ತಂದೆಯಾದ ದೇವರ ಸಾನಿಧ್ಯವನ್ನು ಪ್ರವೇಶಿಸಿ ಅಲ್ಲಿ ನಾವು ಸದಾ ಜೀವಿಸುವಂತೆ ಕರ್ತನು ಮಾಡಿದ್ದಾನೆ. ಇದು ಮನುಷ್ಯನಿಗೋಸ್ಕರ ದೇವರು ಮಾಡಿದ ಯೋಜನೆಯಾಗಿದೆ ಮತ್ತು ಹೊಸ ಒಡಂಬಡಿಕೆಯಲ್ಲಿ ಇದು ನಮಗಿರುವ ಹಕ್ಕಾಗಿದೆ.

"ಹೀಗಿರುವಲ್ಲಿ ಸಹೋದರರೇ, ಯೇಸು ನಮಗೋಸ್ಕರ ಪ್ರತಿಷ್ಟಿಸಿದ ಜೀವವುಳ್ಳ ಹೊಸ ದಾರಿಯಲ್ಲಿ (ಮೊದಲನೆಯದಾಗಿ) ಆತನ ರಕ್ತದ ಮೂಲಕ ಮತ್ತು (ಎರಡನೆಯದಾಗಿ) ಶರೀರವೆಂಬ ತೆರೆಯ ಮುಖಾಂತರ ದೇವರ ಸಮಕ್ಷಮದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು."

ದೇವಾಲಯದಲ್ಲಿರುವ ತೆರೆಯು (ಪರದೆಯು) ಯೇಸುವಿನ ಮರಣದ ನಂತರ ಹರಿಯಲ್ಪಟ್ಟಿತು. ಆ ತೆರೆಯು ಆತನ ಸ್ವಂತ ಚಿತ್ತವಾದ ಆತನ ಮಾಂಸವನ್ನು(ಶರೀರ-ಸ್ವಭಾವವನ್ನು) ಸಂಕೇತಿಸಲ್ಪಟ್ಟಿತ್ತು. ಆತನು ಎಲ್ಲಾ ಸಮಯದಲ್ಲಿ ತನ್ನ ತಂದೆಯ ಚಿತ್ತವನ್ನು (ಯೋಹಾ. 6:38) ಮಾತ್ರವೇ ಮಾಡುವಂತೆ, ಆತನ ಇಹಲೋಕದ ಪ್ರತಿ ದಿನದ ಜೀವಿತದಲ್ಲಿ ಈ ತೆರೆಯು ಹರಿದುಹಾಕಲ್ಪಡುತ್ತಾ ಬಂತು (ಶಿಲುಬೆಗೇರಿಸಲ್ಪಟ್ಟಿತು). ಈ ಮಾರ್ಗವು ನೂತನ ಮತ್ತು ಜೀವವುಳ್ಳ ಮಾರ್ಗ . "ನೂತನ" ಎಂದರೆ "ಯಾವಾಗಲೂ ಹೊಚ್ಚ ಹೊಸದಾಗಿರುವ" ಎಂದರ್ಥ. ಕಲ್ವಾರಿ ಶಿಲುಬೆಯ ಮೇಲೆ ಮರಣಹೊಂದಿದ ಯೇಸುವಿನ ಬಗ್ಗೆ ಅವರು ಹೊಸದಾದ ಹಾಡನ್ನು ಹಾಡಿದರೆಂದು ಪ್ರಕಟಣೆ 5:9 ರಲ್ಲಿ ಓದುತ್ತೇವೆ.

ಅದು ಹೊಸ ಹಾಡಾಗಿರಲು ಹೇಗೆ ಸಾಧ್ಯ? ಈ ಹಾಡನ್ನು ಹಾಡುವವರೆಲ್ಲರಿಗೂ ಇದು ಹೊಸದಾದ ಹಾಡು. ಅಂದರೆ, ಕ್ರಿಸ್ತ ಯೇಸುವಿನ ಮರಣದ ಬಗ್ಗೆ ಮೊಟ್ಟ ಮೊದಲನೆಯ ಸಾರಿ ಕೇಳಿದ್ದೇವೋ ಎಂಬಂತೆ. ಈ ರೀತಿಯಾಗಿ ಪವಿತ್ರಾತ್ಮನು ಕರ್ತನ ಮರಣವನ್ನು ನಾವು ಯಾವಾಗಲೂ ಹೊಚ್ಚ ಹೊಸತಾಗಿ ಮತ್ತು ಜೀವಂತವಾಗಿ ಕಾಣಲು ನಮಗೆ ಸಹಾಯ ಮಾಡುತ್ತಾನೆ. ಅದೇ ರೀತಿಯಲ್ಲಿ ಯೇಸುವನ್ನು ಹಿಂಬಾಲಿಸುವದು ಕೂಡ ಹೊಚ್ಚ ಹೊಸತಾದುದು ಮತ್ತು ಉಲ್ಲಾಸಭರಿತವಾಗಿದೆ. ದೇವರಿಗೆ ಪ್ರತೀ ದಿನ ನಮ್ಮ ಶರೀರಗಳನ್ನು ಸಜೀವ ಯಜ್ಞವಾಗಿ ಅರ್ಪಿಸುತ್ತಾ, ಸ್ವಾರ್ಥಕ್ಕೆ ಮತ್ತು ಸ್ವಚಿತ್ತಕ್ಕೆ ಸಾಯುತ್ತಾ ಹೋಗುವಂಥದ್ದು ನಿರಂತರವಾದ ಉಲ್ಲಾಸಭರಿತವಾದ ಶಿಲುಬೆಯ ಮಾರ್ಗವಾಗಿದೆ. ಕರ್ತನಾದ ಯೇಸು ತೆರೆಯನ್ನು ಹರಿದು ಮಾರ್ಗವನ್ನು ಸ್ಥಾಪಿಸಿದ್ದರಿಂದ ನಾವು ಈಗ ತೆರೆಯನ್ನು ಹರಿಯಬೇಕಿಲ್ಲ. ಆದರೆ ದೇವರ ಸಮ್ಮುಖದಲ್ಲಿ ನಿರಂತರವಾಗಿ ನೆಲೆಸಬೇಕೆಂದರೆ ನಾವು ಈ ಮಾರ್ಗದಲ್ಲಿ ನಡೆಯಬೇಕು.

ನಾವು ನಡೆಯಬೇಕೆಂದು ನಮಗೋಸ್ಕರವಾಗಿ ಯೇಸು ಹೊಸ ಮಾರ್ಗವನ್ನು ಉದ್ಘಾಟಿಸಿದ್ದಾನೆ. ಇದು ಆತನಿಗೆ ಸರಳವಾದ ದಾರಿಯಾಗಿದ್ದಿಲ್ಲ. ಈ ಮಾರ್ಗವನ್ನು ಉದ್ಘಾಟಿಸಲು ತನ್ನ 33 1/2 ವರ್ಷದ ಜೀವನದುದ್ದಕ್ಕೂ ಸ್ವಾರ್ಥಕ್ಕೆ ಸಾಯಬೇಕಿತ್ತು. ಇದು ಕರ್ತನಾದ ಯೇಸು ನಮಗೆ ನಡೆಯಲು ಆಹ್ವಾನಿಸುತ್ತಿರುವ ಹೆದ್ದಾರಿಯಾಗಿದೆ. (ಯೆಶಾ. 35:8). ಆದರೆ ಈ ಶಿಲುಬೆಯ ಮಾರ್ಗದಲ್ಲೇ ನಾವು ಅತಿಯಾದ ಆಸಕ್ತಿಯಿಂದಿರಬಾರದು. ನಮ್ಮ ಕಣ್ಣುಗಳು ಯಾವಾಗಲೂ ಗುರಿಯತ್ತ ನಾವು ಹಾಯಿಸಿರಬೇಕು. ಯೇಸು ತಂದೆಯ ಜೊತೆಗಿನ ಅನ್ಯೋನತೆಯ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿದನು. ಚೆನ್ನೈ ನಗರದಿಂದ ಬೆಂಗಳೂರಿಗೆ ಹೊಸದಾದ, ಅತ್ಯುತ್ತಮವಾದ ರಸ್ತೆಯಲ್ಲಿ ನೀವು ಪ್ರಯಾಣಿಸುವ ಸಂದರ್ಭದಲ್ಲಿ ಆ ರಸ್ತೆಯನ್ನು ಹೊಗಳುವದರಲ್ಲಿ ನೀವು ನಿಮ್ಮ ಸಮಯ ಕಳೆಯುವದಿಲ್ಲ. ಹಾಗೆ ಮಾಡಿದರೆ ನೀವು ಬೆಂಗಳೂರನ್ನು ತಲುಪುವದಿಲ್ಲ. ರಸ್ತೆಯು ನೀವು ನಿಮ್ಮ ಗುರಿಯನ್ನು ತಲುಪಲು ನೆರವಾಗುವ ಒಂದು ಸಾಧನವಾಗಿದೆ. ಅದೇ ರೀತಿ, ಪ್ರತಿ ದಿನ ತಂದೆಯಾದ ದೇವರ ಸಮ್ಮುಖದಲ್ಲಿ ಬಂದು ನೆಲಸಲು ಶಿಲುಬೆಯೂ ಕೂಡ ಒಂದು ಮಾರ್ಗವಾಗಿದೆ. ಅನೇಕ ವಿಶ್ವಾಸಿಗಳು ಶರೀರಭಾವಕ್ಕೆ ಸಾಯುವುದರ ಬಗ್ಗೆಯೇ ಮಾತಾಡುತ್ತಿರುತ್ತಾರೆ. ಆದರೆ ಅವರು ಸಪ್ಪುಮೋರೆ ಹಾಕಿಕೊಂಡು, ದು:ಖಿತರಾಗಿದ್ದು, ಇನ್ನೊಬ್ಬರ ವಿಷಯವಾಗಿ ತೀರ್ವವಾದ ತೀರ್ಪುಮಾಡುವವರಾಗಿರುತ್ತಾರೆ. ಇದು ಅವರಲ್ಲಿ ಶರೀರಭಾವವಿನ್ನೂ ಜೀವಂತವಾಗಿದೆಯೆಂದು ತೋರಿಸುತ್ತದೆ!! ಆದ್ದರಿಂದ ಅವರು ತಮ್ಮ ಜೀವಿತದಲ್ಲಿ ಯಾವುದೇ ಪ್ರಗತಿಯನ್ನು ಮಾಡಲಾಗುವದಿಲ್ಲ. ಇಪ್ಪತ್ತು ವರ್ಷವಾದರೂ ಆ ದಾರಿಯ ಬಗ್ಗೆನೇ ಮಾತಾಡುತ್ತಿರುತ್ತಾರೆಯೇ ಹೊರತು ಅವರು ಗುರಿಯತ್ತ ಸಾಗಿರುವುದಿಲ್ಲ. ಅವರು ಇನ್ನೂ ಕ್ರಿಸ್ತನಂತಾಗಿರುವುದಿಲ್ಲ. ನಮ್ಮ ಗುರಿಯು ಕ್ರಿಸ್ತನಂತಾಗುವದು ಮತ್ತು ದೇವರೊಡನೆ ಅನ್ಯೋನ್ಯತೆಯಿಂದಿರುವುದಾಗಿದೆ.

ನಾವು ಓಡುವಾಗ ದಾರಿಯನ್ನು ನೋಡಿ ಓಡುವುದಲ್ಲದೆ, ಯೇಸುವಿನ ಕಡೆ ದೃಷ್ಟಿಯಿಟ್ಟು ಓಡಬೇಕು (ಇಬ್ರಿ. 12:1). ಓಟಗಾರರು ತಾವು ಓಡುವ ರಸ್ತೆಯನ್ನು ನೋಡುತ್ತಾ ಓಡುವದಿಲ್ಲ. ಆದರೆ ಅವರ ಕಣ್ಣು ಗುರಿಯತ್ತ ಯಾವಾಗಲೂ ಕೇಂದ್ರೀಕೃತವಾಗಿರುತ್ತದೆ. ಯಾರು ಕೆಳಗೆ ನೋಡಿ ಓಡುತ್ತಿರುತ್ತಾರೋ, ಅಂಥವರು ಓಟದಲ್ಲಿ ಕೊನೆಯವರಾಗುತ್ತಾರೆ. ಕೇವಲ ಶಿಲುಬೆಯ ಸಂದೇಶವೇ ನಿಮ್ಮ ಗಮನ ಸೆಳೆದಿದ್ದರೆ ನೀವು ಪವಿತ್ರರಾಗಲು ಸಾಧ್ಯವಿಲ್ಲ, ಆದರೆ ಸ್ವತ: ಯೇಸು ಕ್ರಿಸ್ತನಿಂದ ನೀವು ಸೆಳೆಯಲ್ಪಟ್ಟಿದ್ದರೆ ನೀವು ಪವಿತ್ರರಾಗುತ್ತೀರಿ.

ನಾವು ನಡೆಯುವಂತೆ (ನಡೆಯಬೇಕೆಂದು) ಕರ್ತನು ನಮಗೆ ಶಿಲುಬೆಯ ಮಾರ್ಗವನ್ನು ತೆರೆದಿದ್ದಾನೆ ಹಾಗೂ ಆತನು ನಮ್ಮ ಮಹಾಯಾಜಕನೂ, ಮಾರ್ಗದರ್ಶಕನೂ ಆಗಿದ್ದಾನೆ. ಆದ್ದರಿಂದ "ನೀನಪರಾಧಿಯೆಂದು ನಮ್ಮ ಮನಸ್ಸು ನಮಗೆ ಸಾಕ್ಷಿಹೇಳದಂತೆ ನಾವು ಹೃದಯವನ್ನು ಪ್ರೋಕ್ಷಿಸಿಕೊಂಡು ದೇಹವನ್ನು ತಿಳಿನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಬಳಿಗೆ ಬರೋಣ" (ಇಬ್ರಿ. 10:22). ಕೊನೆಯ ವಚನದ ಅರ್ಥವೇನೆಂದರೆ- ನಮ್ಮ ದೇಹದಲ್ಲಿ ನಾವು ಮಾಡಿದ ಎಲ್ಲಾಪಾಪದಿಂದ ತೊಳೆಯಲ್ಪಟ್ಟು ಆತನ ಮುಂದೆ ಸರಿಯಾದವರಾಗಿದ್ದೇವೆ. ನಾವು ನೋವುಂಟು ಮಾಡಿದವರೊಡನೆ ಕ್ಷಮೆ ಕೇಳಿದ್ದೇವೆ, ಹಣದಲ್ಲಿ ಮೋಸ ಮಾಡಿದವರಿಗೆ ಹಣವನ್ನು ಹಿಂತಿರುಗಿಸಿದ್ದೇವೆ ಇತ್ಯಾದಿ. ಈ ರೀತಿಯಾಗಿ, ನಮ್ಮ ನಾಲಿಗೆ ಮತ್ತು ಕೈಗಳು ಆ ಅಶುದ್ಧತೆಯಿಂದ ಶುದ್ದೀಕರಿಸಲ್ಪಟ್ಟಿವೆ. ಆದ್ದರಿಂದ ನಾವೀಗ "ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು ನಿಶ್ಚಂಚಲವಾಗಿ ಪರಿಗ್ರಹಿಸೋಣ." ಇದಾದ ಮೇಲೆ ನಾವು ನಮ್ಮ ಜೊತೆಗಿರುವ ಸಹೋದರರ ಬಗ್ಗೆ ಯೋಚಿಸಿ "ಪ್ರೀತಿಸಬೇಕೆಂತಲೂ ಸತ್ಕಾರ್ಯ ಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸಿರುವವರಾಗಿದ್ದೇವೆ." ಇನ್ನು ಮುಂದೆ ನಮ್ಮ ಸ್ವಾರ್ಥಕ್ಕಾಗಿ ಜೀವಿಸುವದನ್ನು ಬಿಟ್ಟು, ನಮ್ಮ ಕರ್ತನ ಪ್ರತ್ಯಕ್ಷತೆಯ ದಿನವನ್ನು ಕಾತುರದಿಂದ ಎದುರು ನೋಡುತ್ತಾ "ಸಹೋದರರ ಅನ್ಯೋನ್ಯತೆಗೆಗಾಗಿ ಎಷ್ಟು ಸಾಧ್ಯವಿದೆಯೋ ಅಷ್ಟು ಅನ್ಯೋನ್ಯತೆಯಲ್ಲಿ ಕೂಡಿಬರಲು ಆಶಿಸುವವರಾಗಿದ್ದೇವೆ" (ಇಬ್ರಿ. 10:23-25).