ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಕೊಲೊಸ್ಸೆ 1:24ರಲ್ಲಿ ಪೌಲನು ಹೇಳುವುದೇನೆಂದರೆ, "ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು. ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ಸಂತೋಷಪಟ್ಟು ಕ್ರಿಸ್ತನ ಸಂಕಟಗಳೊಳಗೆ ಇನ್ನೂ ಉಳಿದದ್ದನ್ನು ಸಭೆಯೆಂಬ ಆತನ ದೇಹಕ್ಕೋಸ್ಕರ ನನ್ನ ಶರೀರದಲ್ಲಿ ಅನುಭವಿಸಿ ತೀರಿಸುತ್ತೇನೆ."

ತಾವು ಕಷ್ಟಗಳನ್ನು ಅನುಭವಿಸುವಾಗ, ಕ್ರಿಸ್ತನ ಕಷ್ಟಗಳಲ್ಲಿ ಅನ್ಯೋನ್ಯತೆಯಿಂದಿರುತ್ತಾರೆ (ಸಹ-ಭಾಗಿಗಳಾಗುತ್ತಾರೆ) ಎಂಬುದನ್ನು ಅನೇಕ ಕ್ರೈಸ್ತರು ಅರ್ಥಮಾಡಿಕೊಳ್ಳುವುದಿಲ್ಲ.

ಕರ್ತನ ಬಾಧೆಗಳಲ್ಲಿ ಇನ್ನೂ ಉಳಿದಿರುವದೇನು? ಶಿಲುಬೆ ಮೇಲೆ ಎಲ್ಲವೂ ತೀರಿತು ಎಂದು ಆತನು ಹೇಳಲಿಲ್ಲವೆ? ಇಲ್ಲಿ ಒಂದು ವಿಶೇಷವಾದ ಸತ್ಯ ಅಡಗಿದೆ. ಯೇಸು ದೈಹಿಕವಾಗಿ ಅನುಭವಿಸಿದ ಸಂಕಟಗಳನ್ನು ಸುವಾರ್ತಾ ಭಾಗದಲ್ಲಿ ಓದುತ್ತೇವೆ. ಆದರೆ ಆತನು ತನ್ನ ಜೀವಾತ್ಮದಲ್ಲಿ ಕೂಡ ಅನುಭವಿಸಿದ ಸಂಕಷ್ಟಗಳ ಮಾಹಿತಿ ಸತ್ಯವೇದದಲ್ಲಿ ಬರೆದಿಲ್ಲ. ಕ್ರಿಸ್ತನು ಕ್ರೂಜೆಯ ಮೇಲೆ "ತೀರಿತು" ಎಂದು ಹೇಳಿದಾಗ, ಮನುಷ್ಯನ ಪಾಪದ ಬೆಲೆಯನ್ನು ಮತ್ತು ಮನುಷ್ಯನು ಎದುರಿಸಬೇಕಾದ ಪ್ರತಿಯೊಂದು ಪರೀಕ್ಷೆಗಳನ್ನು(ಶೋಧನೆಗಳನ್ನು) ತೀರಿಸಿರುವನು(ಜಯಿಸಿರುವನು). ಕರ್ತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು ಆದರೆ ಪಾಪ ಮಾತ್ರ ಮಾಡಲಿಲ್ಲ ಮತ್ತು ಅದರಲ್ಲಿ ಜಯಹೊಂದಿದನು (ಇಬ್ರಿಯ 4:15).

ಪ್ರತಿಯೊಂದು ಶೋಧನೆಯ ಸಮಯದಲ್ಲಿ ನಮ್ಮ ಬಳಿ ಎರಡು ಆಯ್ಕೆಗಳಿರುತ್ತವೆ, ಶೋಧನೆಗೆ ಒಳಪಟ್ಟು ಅದರಿಂದಾಗುವ ಆನಂದವನ್ನು ಆಯ್ಕೆ ಮಾಡುವದು ಅಥವಾ ಆ ಶೋಧನೆಯನ್ನು ವಿರೋಧಿಸಿ ಅದರಿಂದಾಗುವ ಬಾಧೆಯನ್ನು ಅನುಭವಿಸುವದು. ಕ್ರಿಸ್ತನು ಪ್ರತಿ ಸಾರಿಯೂ ಬಾಧೆಯ ಮಾರ್ಗವನ್ನು ಸ್ವೀಕರಿಸಿದನು ಮತ್ತು "ತನ್ನ ಶರೀರದಲ್ಲಿ ಬಾಧೆಯನ್ನು ಅನುಭವಿಸಿದನು" (1ಪೇತ್ರ. 4:1). ಈ ಮೂಲಕ ಕರ್ತನು ನಮಗೆ ಮಾರ್ಗದರ್ಶಿಯಾದನು. ಆದ್ದರಿಂದ ನಾವು ಕೂಡ ಆತನ ಮಾರ್ಗದರ್ಶನದಲ್ಲಿ ಮುಂದೆ ಸಾಗಬೇಕು ಮತ್ತು ಇನ್ನುಳಿದ ಜನರಿಗೆ ಕಿರಿಯ ಮಾರ್ಗದರ್ಶಿಗಳಾಗಬೇಕು. ನಾವು ಪಾಪ ಮಾಡಲು ಶೋಧಿಸಲ್ಪಟ್ಟಾಗ ಯೇಸು ಕ್ರಿಸ್ತನು ಅನುಭವಿಸಿದ ಬಾಧೆಯಂತೆ, ನಾವು ನಮ್ಮ ಜೀವನದಲ್ಲಿ ಬಾಧೆಯನ್ನು ಅನುಭವಿಸುವ ಮಾರ್ಗವನ್ನು ಆಯ್ಕೆಮಾಡಲಿಕ್ಕೆ ಪವಿತ್ರಾತ್ಮನು ನಮ್ಮನ್ನು ನಡಿಸುತ್ತಾನೆ. ಪೌಲನು ಕೊಲೊಸ್ಸೆ. 1:24ರಲ್ಲಿ ಹೇಳುವದೇನೆಂದರೆ, ಕ್ರಿಸ್ತನು ಅನುಭವಿಸಿದ ಬಾಧೆಯನ್ನು ತನ್ನ ಜೀವನದಲ್ಲಿ (ಶೋಧನೆಯ ಮೂಲಕ) ತಾನು ಇನ್ನೂ ಪರಿಪೂರ್ಣವಾಗಿ ಅನುಭವಿಸಿಲ್ಲ.

ಸತ್ಯಕ್ಕಾಗಿ ನಿಂತಿದ್ದರಿಂದ ಬಾಹ್ಯವಾಗಿ ಅನೇಕ ರೀತಿಗಳಲ್ಲಿ ಯೇಸು ಸಂಕಷ್ಟಗಳನ್ನು ಅನುಭವಿಸಿದನು. ಒಂದು ಗ್ಲಾಸ್ ಸಂಕಟವನ್ನು ಪ್ರತಿನಿಧಿಸುವುದಾದರೆ, ಕ್ರಿಸ್ತನು ಶೋಧನೆಯ ಜೀವಿತವನ್ನು ಆಯ್ಕೆ ಮಾಡಿ ಕಷ್ಟ, ಸಂಕಟಗಳನ್ನು ಅನುಭವಿಸಿರುವಂಥದ್ದು ಆ ಗ್ಲಾಸ್ ಪೂರ್ತಿಯಾಗಿ ತುಂಬಿದಂತೆ. ಕೊನೆಗೆ "ತೀರಿತು" ಎಂಬುದಾಗಿ ಆತನು ಕ್ರೂಜೆಯ ಮೇಲೆ ಹೇಳಿದನು. ಈಗ ನಾವೂ ಕೂಡ ಕರ್ತನ ಹಾಗೆ ಆತನ ಹಿಂಬಾಲಕರಾಗಿ ಆತನ ಹೆಜ್ಜೆಜಾಡಿನಲ್ಲಿ ನಡೆಯಬೇಕು ಏಕೆಂದರೆ ಆತನು ಹೊಂದಿದ್ದ ದೇಹದ ಹಾಗೆ ನಮಗೂ ಒಂದು ದೇಹ ಉಂಟು. ಪವಿತ್ರಾತ್ಮನು ನಮ್ಮಲ್ಲಿಯೂ ಕೂಡ ಅದೇ ಪ್ರಕಾರದ ಕೆಲಸವನ್ನು ಅಂದರೆ ಗ್ಲಾಸನ್ನು ತುಂಬುವ ಕಾರ್ಯ ಮಾಡಬೇಕು. ನಾವು ಹೊಸದಾಗಿ ಹುಟ್ಟಿದಾಗ ನಮ್ಮ ಗ್ಲಾಸ್ ಖಾಲಿಯಾಗಿರುತ್ತದೆ, ಅದರಲ್ಲಿ ಕ್ರಿಸ್ತನಿಗಾಗಿ ಅನುಭವಿಸಿರುವ ಬಾಧೆಗಳೇನೂ ಇರುವದಿಲ್ಲ. ಆದರೆ ಕ್ರಮೇಣವಾಗಿ ಕ್ರಿಸ್ತನಿಗಾಗಿ ಅನುಭವಿಸುವಂತಹ ಬಾಧೆಗಳಿಂದ ಈ ಗ್ಲಾಸ್ ತುಂಬುತ್ತಾ ಹೋಗುತ್ತದೆ. ಈ ಲೋಕದಲ್ಲಿ ಸಂಕಟ, ಬಾಧೆಗಳನ್ನು ಅನುಭವಿಸಿದ ಕ್ರಿಸ್ತನು ಈಗ ನಮ್ಮಲ್ಲಿ ಇದ್ದಾನೆ. ಮತ್ತು ನಾವೂ ಕೂಡ ಇಂತಹ ಬಾಧೆಗಳನ್ನು ಅನುಭವಿಸುವ ಹಾಗೆ ಆತನು ನಮ್ಮ ದೇಹದಲ್ಲಿ ಕಾರ್ಯ ಮಾಡುತ್ತಿದ್ದಾನೆ. ಒಬ್ಬ ಸೇವಕನು ತನ್ನ ಧಣಿಗಿಂತ ದೊಡ್ಡವನಲ್ಲ.

ಕರ್ತನ ಎಲ್ಲಾ ಬಾಧೆಗಳು ನಮ್ಮ ಶರೀರದಲ್ಲಿ ಪರಿಪೂರ್ಣವಾಗಬೇಕು. ಇದು ನಿಜವಾಗಿಯೂ ಶ್ರೇಷ್ಟವಾದ ಭಾಗ್ಯವಾಗಿದೆ. ಪೌಲನು ಇಲ್ಲಿ ತನ್ನ ಗ್ಲಾಸ್ ಭರ್ತಿಯಾಗಿಲ್ಲವೆಂದು ಹೇಳುತ್ತಿದ್ದಾನೆ. ಅನೇಕ ಕ್ರೈಸ್ತರು ಬಾಧೆಯನ್ನು ಅನುಭವಿಸುವಾಗ ತಾವೂ ಕೂಡ ಕರ್ತನ ಬಾಧೆಯಲ್ಲಿ ಪಾಲುಗಾರಗಾಗುತ್ತಾರೆ ಎಂಬುದನ್ನು ಅವರು ಗ್ರಹಿಸುವುದಿಲ್ಲ. ನಮ್ಮ ಮೂರ್ಖತನದಿಂದ ಅಥವಾ ನಮ್ಮ ಪಾಪಗಳಿಂದ ಆಗುವ ಸಂಕಟಗಳ ಬಗ್ಗೆ ನಾನು ಹೇಳುತ್ತಿಲ್ಲ. ಏಕೆಂದರೆ ಕ್ರಿಸ್ತನು ಎಂದಿಗೂ ಮೂರ್ಖತನದ/ಪಾಪದ ಕೆಲಸ ಮಾಡಲಿಲ್ಲ. ಕರ್ತನ ಜೀವನಕ್ರಮ ಲೋಕದ ಜೀವನಕ್ರಮಕ್ಕಿಂತ ವಿಭಿನ್ನವಾಗಿದ್ದರಿಂದ ಆತನು ಬಾಧೆಯನ್ನು ಅನುಭವಿಸಿದನು. ಆತನ ಇಡೀ ಸೇವೆಯು ಆ ಕಾಲದ ಸತ್ಯವೇದ ಪಂಡಿತರು ಮತ್ತು ದೈವಶಾಸ್ತ್ರಜ್ಞರ ಬೋಧನೆಗೆ ವಿರುದ್ಧವಾಗಿತ್ತು. ಈ ಕಾರಣದಿಂದ ಅವರು ಆತನನ್ನು ದ್ವೇಷಿಸಿದರು ಮತ್ತು ಕೊನೆಗೆ ಆತನನ್ನು ಕೊಂದರು.

ಇಂದೂ ಇದು ಹೀಗೆಯೇ. ನಾವು ಕ್ರಿಸ್ತನ ನಿಜವಾದ ಶಿಷ್ಯರಾಗಿದ್ದರೆ ಈ ಲೋಕದ ಎಲ್ಲಾ ಧರ್ಮಪದ್ದತಿಗಳ ಮತ್ತು ಕ್ರೈಸ್ತ ದೈವ ಶಾಸ್ತ್ರವೆಂದು ಹೇಳಲ್ಪಡುವಂತಹುಗಳ ವಿರುದ್ಧವಾಗಿ ನಾವು ಜೀವಿಸುತ್ತೇವೆ. ದೇವರನ್ನು ಅರಿಯದವವರು ಮತ್ತು ತಮ್ಮನ್ನು ಅತ್ಯಂತ ಧಾರ್ಮಿಕರೆಂದು ಕರೆದುಕೊಂಡವರ ಜೊತೆ ಯೇಸು ಸಂಘರ್ಷಕ್ಕೊಳಗಾದಂತೆ, ಯೇಸುವಿನ ಹಾಗೆ ನಾವೂ ಸಂಘರ್ಷಕ್ಕೊಳಬೇಕಾಗುತ್ತದೆ. ಯೇಸುವನ್ನು ಬೆಲ್ಜೆಬೂಲನು ಎಂದು ಕರೆದವರು ಯಾರು? ಇವರು ರೋಮ್ ಅಥವಾ ಗ್ರೀಕರಲ್ಲ. ಅವರಾರೆಂದರೆ, ತಮ್ಮ ಬಳಿಯಲ್ಲಿ ಸತ್ಯವೇದ (ಹಳೆಯ ಒಡಂಬಡಿಕೆ) ಇದ್ದವರು. ಯೇಸುವನ್ನು ಘೋರವಾಗಿ ಹಿಂಸಿಸಿ ಕೊಂದವರಾರು? ಅವರು ಧಾರ್ಮಿಕ ಜನರು ಮತ್ತು ಬೈಬಲ್ ಹೊಂದಿದ್ದವರು. ನಾವು ಕ್ರಿಸ್ತನ ಶ್ರಮೆ, ಬಾಧೆಗಳನ್ನು ನಮ್ಮ ಜೀವನದಲ್ಲಿ ಅನುಭವಿಸುವುದಾದರೆ ನಮ್ಮ ಜೀವಿತದಲ್ಲೂ ಬೈಬಲ್ ಜ್ಞಾನ ಹೊಂದಿದ ಧಾರ್ಮಿಕ ಜನರು ಕೊಡುವ ಬಾಧೆಗಳನ್ನು ನಾವು ಅನುಭವಿಸಬೇಕಾಗುತ್ತದೆ. ಏಕೆಂದರೆ ಅಂತಹ ಜನರು ದೇವರನ್ನು ಅರಿತಿರುವದಿಲ್ಲ. ಯೇಸು ಹೇಳಿದ್ದೇನೆಂದರೆ, ಅವರು ನನ್ನನ್ನು ದ್ವೇಷಿಸಿದರು ಮತ್ತು ಹಿಂಸಿಸಿದರು ಯಾಕೆಂದರೆ ಅವರು ನನ್ನ ತಂದೆಯನ್ನು ಅರಿಯದವರಾಗಿದ್ದರು. ಹಾಗಿರುವಾಗ ನಮಗೂ ಅವರು ಇದನ್ನೇ ಮಾಡುತ್ತಾರೆ.

ಪೌಲನು ಹೇಳುತ್ತಾನೆ, "ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳನ್ನು ಸಂತೋಷಪಟ್ಟು ಕ್ರಿಸ್ತನ ಸಂಕಟಗಳೊಳಗೆ ಇನ್ನೂ ಉಳಿದದ್ದನ್ನು ಸಭೆಯೆಂಬ ಆತನ ದೇಹಕ್ಕೋಸ್ಕರ ನನ್ನ ಶರೀರದಲ್ಲಿ ಅನುಭವಿಸಿ ತೀರಿಸುತ್ತೇನೆ." ಸಭೆಯೆಂಬ ಆತನ ದೇಹಕ್ಕಾಗಿ ಬಾಧೆ ಅನುಭವಿಸುವುದರಲ್ಲಿ ನಮ್ಮ ಪಾಲೂ ಇದೆ. ಮೊದಲು, ಕ್ರಿಸ್ತನು ತನ್ನ ಶರೀರದಲ್ಲಿ ಬಾಧೆಯನ್ನು ಅನುಭವಿಸಿದನು. ಈಗ ಆತನು ಆತ್ಮಿಕವಾಗಿ ಅಂದರೆ ಆತನ ದೇಹವಾದ ಸಭೆಯಲ್ಲಿ ಬಾಧೆಯನ್ನು ಅನುಭವಿಸಬೇಕು. ಈ ಬಾಧೆಗಳಲ್ಲಿ ನೀವು ನಿಮ್ಮ ಪಾಲನ್ನು ಹೊಂದಿದ್ದೀರಿ ಹಾಗೂ ನಾನು ನನ್ನ ಪಾಲನ್ನು ಹೊಂದಿದ್ದೇನೆ. ನೀವು ನನ್ನ ಪಾಲನ್ನು ತೀರಿಸಲಿಕ್ಕೆ ಸಾಧ್ಯವಿಲ್ಲ ಹಾಗೆಯೇ ನಾನು ನಿಮ್ಮ ಪಾಲನ್ನು ತೀರಿಸಲಿಕ್ಕಾಗದು. ನೀವು ಬಾಧೆಗಳನ್ನು ಅನುಭವಿಸುವಾಗ, ನಾನು ನಿಮ್ಮ ಪರವಾಗಿ ನಂಬಿಗಸ್ತನಾಗಲು ಸಾಧ್ಯವಿಲ್ಲ.

ಕರ್ತನನ್ನು ಹಿಂಬಾಲಿಸುವದಕ್ಕಾಗಿ ನಿಮ್ಮನ್ನು ಮನೆಯಿಂದ ಹೊರ ತಳ್ಳಿದಾಗ ಅಥವಾ ನಿನ್ನ ಸಂಬಧಿಕರಿಂದಾಗಲೀ, ಅಕ್ಕಪಕ್ಕದವರಿಂದಾಗಲೀ ಅಥವಾ ನಿಮ್ಮನ್ನು ಹಿಂಸಿಸುವದರಿಂದಾಗಲೀ ನೀವು ಕಷ್ಟ ಅನುಭವಿಸಬೇಕಾದಾಗ, ಅವನ್ನು ನೀವಾಗಿಯೇ ಅನುಭವಿಸಬೇಕು. ಇಂಥಹ ಸಮಯದಲ್ಲಿ, ಕರ್ತನಲ್ಲಿ ಸಂತೋಷಪಡಿರಿ ಮತ್ತು ಹೀಗೆ ಹೇಳಿರಿ. "ಕರ್ತನೇ, ಸಭೆಯೆಂಬ ನಿಮ್ಮ ದೇಹಕ್ಕೋಸ್ಕರವಾಗಿ ನಾನು ಅನುಭವಿಸುತ್ತಿರುವ ನಿಮ್ಮ ಬಾಧೆಗಳಲ್ಲಿ ಸ್ವಲ್ಪ ಮಟ್ಟವನ್ನು ನನಗೆ ಅನುಭವಿಸಲಿಕ್ಕೆ ಕೊಟ್ಟಿದ್ದಕ್ಕಾಗಿ ನಿಮಗೆ ವಂದನೆಗಳು." ಹೀಗಿದ್ದಾಗ ಮಾತ್ರ ನಾವು ಇನ್ನೊಬ್ಬರ ಪ್ರತಿಯಾಗಿ ಸೇವೆಯನ್ನು ಮಾಡುತ್ತೇವೆ ಮತ್ತು ಇದರಿಂದ ಸಭೆಯನ್ನು ಕಟ್ಟುತ್ತೇವೆ. ಆಗ ಇದನ್ನು "ಕರ್ತನ ಬಾಧೆಗಳಲ್ಲಿ ಅನ್ಯೋನ್ಯತೆ" ಎಂದು ಕರೆಯಲಾಗುತ್ತದೆ. ಕರ್ತನು ತಾನು ಅನುಭವಿಸಿದ ಹಿಂಸೆಗಳಿಂದ ತನಗೇನೂ ಲಾಭ ಪಡೆಯಲಿಲ್ಲ, ಆದರೆ ಇದರಿಂದ ನಾವು ಲಾಭ ಪಡೆದಿದ್ದೇವೆ. ಸಭೆಗಾಗಿ ನಾವು ಅನುಭವಿಸುವ ಬಾಧೆಗಳಿಂದ ಇನ್ನೊಬ್ಬರು ಪ್ರಯೋಜನ ಪಡೆಯುತ್ತಾರೆ. ನೀನು ಇದನ್ನು ಇಚ್ಚಿಸುತ್ತೀಯಾ? ನೀನು ಹೀಗೆ ಹೇಳುತ್ತಿಯೆಂದು ನಾನು ನಂಬುತ್ತೇನೆ -"ನಾನು ಸಿದ್ಧನಿದ್ದೇನೆ ಕರ್ತನೆ. ನಾನು ನಿನ್ನ ಮನಸ್ಸು, ನಿನ್ನ ಆತ್ಮ ಮತ್ತು ನಿನ್ನ ಮನೋಭಾವಗಳಲ್ಲಿ ಅನ್ಯೋನ್ಯತೆ ಹೊಂದಬಯಸುತ್ತೇನೆ. ನನ್ನ ಬಾಧೆಗಳಿಂದ ಇನ್ನೊಬ್ಬರು ಏನಾದರೂ ಪ್ರಯೋಜನ ಪಡೆಯುವಂತೆ ನಾನು ಬಾಧೆಯನ್ನು ಅನುಭವಿಸುತ್ತೇನೆ."

ಕಬ್ಬು ಗಾಣ(ಯಂತ್ರ)ದಲ್ಲಿ ಹೇಗೆ ಜಜ್ಜಲ್ಪಡುತ್ತದೆ ಎಂಬುದನ್ನು ಗಮನಿಸಿದ್ದೀರಾ? ಕಬ್ಬನ್ನು ಗಾಣದಲ್ಲಿ ಹಾಕಿ ಅದನ್ನು ಜಜ್ಜುವುವದರಿಂದ ಅದರಿಂದ ರಸ ಬರುತ್ತದೆ. ಇದನ್ನು ಸ್ವಲ್ಪ ಸಮಯದ ತನಕ ಮಾಡಿದರೆ ಆ ಕಬ್ಬಿನಿಂದ ಸಂಪೂರ್ಣವಾಗಿ ರಸ ಹೀರಿರಬಹುದು ಎಂದು ನಮಗನಿಸಬಹುದು. ಇಲ್ಲ! ತಿರುಗಿ ಅದೇ ಕಬ್ಬನ್ನು ಮತ್ತೆ ಯಂತ್ರಕ್ಕೆ ಹಾಕುತ್ತಾರೆ ಇದರಿಂದ ಮತ್ತೆ ರಸ ಬರುತ್ತದೆ. ಯಾರಿಗೋಸ್ಕರ ಈ ಕಬ್ಬು ಜಜ್ಜಲ್ಪಡುತ್ತಿದೆ? ಬೇರೊಬ್ಬರು ಆ ರಸವನ್ನು ಕುಡಿಯಲೆಂದು. ಇದೇ ಪ್ರಕಾರ ದೇವರು ನಮ್ಮನ್ನೂ ಕೂಡ ಇನ್ನೊಬ್ಬರಿಗಾಗಿ ನಾವು ಆಶೀರ್ವಾದವಾಗುವಂತೆ ಮಾಡುತ್ತಾನೆ. ನಾವು ನಮ್ಮ ಸಂಕಷ್ಟದ ಸಂದರ್ಭಗಳಿಂದ ಜಜ್ಜಲ್ಪಡುವಾಗ ನಮ್ಮನ್ನು ದೀನತೆಯಿಂದ ನಾವು ತಗ್ಗಿಸಿಕೊಂಡು ಸಂತೋಷದಿಂದ ಅವುಗಳನ್ನು ಸ್ವೀಕರಿಸುವದಾದರೆ, ಈ ಜಜ್ಜಲ್ಪಡುವಿಕೆಯಿಂದ ಕರ್ತನ ತೇಜಸ್ಸು(ಕಾಂತಿ), ಸುವಾಸನೆ, ಮತ್ತು ಸೌಂದರ್ಯ ನಮ್ಮಿಂದ ಹೊಮ್ಮುತ್ತದೆ. ಇಂತಹ ಜೀವಿತದಿಂದಲೇ ನಾವು ಇನ್ನೊಬ್ಬರಿಗೆ ಆಶೀರ್ವಾದವಾಗಬಹುದು.

.