WFTW Body: 

ನಾವು ಒಂದು ಹೊಸ ವರ್ಷವನ್ನು ಆರಂಭಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಆತ್ಮಿಕ ಜೀವನದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಗಂಭೀರವಾಗಿ ಯೋಚಿಸುವುದು ಒಳ್ಳೆಯದು. ಈ ಕೆಳಗೆ ಕೆಲವು ಸಲಹೆಗಳಿವೆ. ಅವುಗಳ ಕುರಿತು ಚೆನ್ನಾಗಿ ವಿಚಾರ ಮಾಡಿರಿ - ಮತ್ತು ನಿಮ್ಮ ಜೀವಿತದಲ್ಲಿ ಅವೆಲ್ಲವೂ ಕೈಗೂಡಲಿ ಎಂದು ಪ್ರಾರ್ಥಿಸಿರಿ. ಕರ್ತರು ನಿಮಗೆ ಸಹಾಯ ಮಾಡಲಿ.

1. ಒಂದು ಹೊಸ ಆರಂಭವನ್ನು ಮಾಡಿರಿ : ಲೂಕ 15ನೇ ಅಧ್ಯಾಯದ ದುಂದುಗಾರ ಮಗನ ಚಿತ್ರಣದಲ್ಲಿ ನಾವು ಓದುವುದು ಏನೆಂದರೆ, ಒಬ್ಬ ತಂದೆಯು ತನ್ನನ್ನು ಬಹಳ ನಿರಾಶೆಗೊಳಿಸಿದ್ದ ಮಗನಿಗೆ ಶ್ರೇಷ್ಠ ನಿಲುವಂಗಿಯನ್ನು ತೊಡಿಸುತ್ತಾನೆ. ಇದು ಸುವಾರ್ತೆಯ ಸಂದೇಶವಾಗಿದೆ: ದೇವರು ಸೋಲಿನ ಜೀವಿತವನ್ನು ಅನುಭವಿಸಿದ ಜನರಿಗೆ ತಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಾರೆ. ಆ ಜನರು ಒಂದು ಹೊಸ ಆರಂಭವನ್ನು ಮಾಡಬಹುದು, ಏಕೆಂದರೆ ದೇವರು ಯಾರನ್ನೂ ಕೈಬಿಡುವುದಿಲ್ಲ. ಹಿಂದಿನ ದಿನಗಳಲ್ಲಿ ಸೋಲನ್ನು ಕಂಡಿರುವವರಿಗೆ ಇದು ಅತ್ಯಂತ ಪ್ರೋತ್ಸಾಹದಾಯಕ ವಿಷಯವಾಗಿದೆ. ನೀವು ದೊಡ್ಡ ಪ್ರಮಾದಗಳನ್ನು ಅಥವಾ ತಪ್ಪು ಕೆಲಸಗಳನ್ನು ಮಾಡಿದ್ದರೂ, ಈಗ ನೀವು ದೇವರೊಂದಿಗೆ ಒಂದು ಹೊಸ ಆರಂಭವನ್ನು ಮಾಡಿ, ಹೊಸ ವರ್ಷಕ್ಕೆ ಕಾಲಿಡಬಹುದು.

2. ಶಿಸ್ತಿನ ನಡೆಯನ್ನು ನಡೆಯಿರಿ : 2 ತಿಮೊಥೆಯ 1:7ರಲ್ಲಿ, ಪೌಲನು "ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಶಿಕ್ಷಣಗಳ ಆತ್ಮವು," ಎಂದು ಹೇಳುತ್ತಾನೆ. ದೇವರ ಆತ್ಮವು ಬಲವನ್ನೂ, ಇತರರಿಗಾಗಿ ಪ್ರೀತಿಯನ್ನೂ ನಮಗೆ ಒದಗಿಸಿ, ನಾವು ಶಿಸ್ತಿಗೆ ಒಳಪಡುವಂತೆ ಮಾಡುತ್ತದೆ. ನೀವು ಹೊಂದಿರುವ ಪವಿತ್ರಾತ್ಮನ ಅನುಭವ ಎಂಥದ್ದೇ ಆಗಿದ್ದರೂ, ಪವಿತ್ರಾತ್ಮನು ನಿಮ್ಮನ್ನು ಶಿಸ್ತುಗೊಳಿಸಲು ನೀವು ಒಪ್ಪಿಕೊಳ್ಳದಿದ್ದಲ್ಲಿ - ಅಂದರೆ ನಿಮ್ಮ ಸಮಯ ಮತ್ತು ನಿಮ್ಮ ಹಣವನ್ನು ಶಿಸ್ತಿನಿಂದ ಉಪಯೋಗಿಸಿಕೊಳ್ಳುವದು ಮತ್ತು ನಿಮ್ಮ ಮಾತನ್ನು ಶಿಸ್ತು ಪಡಿಸುವದು, ಇವನ್ನು ಮಾಡಲು ನೀವು ಒಪ್ಪದೇ ಹೋದರೆ, ನೀವು ದೇವರು ಬಯಸುವಂತ ಜನರು ಆಗಲಾರಿರಿ. ಕ್ರೈಸ್ತ ಸಭೆಯ ಇತಿಹಾಸದಲ್ಲಿ ಯಾರು ದೇವರ ಅತಿ ಶ್ರೇಷ್ಠ ಸೇವಕರು ಆಗಿದ್ದರೆಂದರೆ, ಪವಿತ್ರಾತ್ಮನ ಶಿಸ್ತಿಗೆ ತಮ್ಮ ಜೀವಿತಗಳನ್ನು ಒಳಪಡಿಸಿದಂತ ಪುರುಷರು ಮತ್ತು ಸ್ತ್ರೀಯರು. ಇವರು ತಮ್ಮ ನಿದ್ರೆಯ ವಾಡಿಕೆಯಲ್ಲಿ, ಆಹಾರದ ಪದ್ಧತಿಯಲ್ಲಿ, ಪ್ರಾರ್ಥನೆ ಮತ್ತು ದೇವರ ವಾಕ್ಯದ ಅಧ್ಯಯನದಲ್ಲಿ ಶಿಸ್ತನ್ನು ಪಾಲಿಸುತ್ತಿದ್ದರು. ಅವರು ದೇವರಿಗೆ ತಮ್ಮ ಎಲ್ಲಾ ಪ್ರಾಪಂಚಿಕ ಹಂಬಲಗಳಿಗಿಂತ ಮೇಲಿನ ಸ್ಥಾನವನ್ನು ನೀಡುವಂತೆ ತಮ್ಮನ್ನು ಶಿಸ್ತಿಗೆ ಒಳಪಡಿಸಿಕೊಂಡಿದ್ದರು. ಅನೇಕ ಕ್ರೈಸ್ತರು ತಾವು ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಪಡೆದಕ್ಕಾಗಿ ತೃಪ್ತಿಗೊಳ್ಳುತ್ತಾರೆ ಮತ್ತು ಇದರ ನಂತರ ತಮ್ಮ ಜೀವಿತದಲ್ಲಿ ಎಲ್ಲವೂ ಸಲೀಸಾಗಿ ನಡೆಯುತ್ತದೆಂದು ಅಂದುಕೊಳ್ಳುತ್ತಾರೆ. ಆದರೆ ಈ ಹೊಸ ವರ್ಷದಲ್ಲಿ ನೀವು ನಿಮಗಾಗಿರುವ ದೇವರ ಚಿತ್ತವನ್ನು ಪೂರೈಸಲಿಕ್ಕೆ, ನೀವು ಶಿಸ್ತಿಗೆ ಒಳಪಡುವುದು ಸಹ ಅವಶ್ಯವಾಗಿದೆ.

3. ನಿಮ್ಮ ಬೆಂಕಿಯು ಉರಿಯುತ್ತಿರಲಿ: ತಿಮೊಥೆಯನಲ್ಲಿ ನಂಬಿಕೆ ಮತ್ತು ಆತ್ಮಿಕ ವರಗಳಿದ್ದವು, ಆದರೂ ಪೌಲನು ಅವನಿಗೆ ನೆನಪಿಸಿದ್ದು ಏನೆಂದರೆ, "ನಾನು ನಿನ್ನ ತಲೆಯ ಮೇಲೆ ಹಸ್ತವನ್ನು ಇಟ್ಟದ್ದರ ಮೂಲಕ ನಿನಗೆ ದೊರಕಿದ ಕೃಪಾವರಗಳನ್ನು ನಿನಗೆ ಜ್ಞಾಪಕ ಮಾಡುತ್ತೇನೆ." ಪವಿತ್ರಾತ್ಮನು ಹೇಡಿತನದ ಆತ್ಮನಲ್ಲ. ತಿಮೊಥೆಯನು ಆ ವರದಿಂದ ಪ್ರೇರಿಸಲ್ಪಟ್ಟು, ತನ್ನಲ್ಲಿ ಆತ್ಮಿಕ ಬೆಂಕಿ ಉರಿಯುತ್ತಿರುವಂತೆ ನೋಡಿಕೊಳ್ಳಬೇಕೆಂದು ಪೌಲನು ಪ್ರೋತ್ಸಾಹಿಸಿದನು. ಯೇಸುವು ನಮ್ಮನ್ನು ಪವಿತ್ರಾತ್ಮನಲ್ಲಿ ಮತ್ತು ಬೆಂಕಿಯಲ್ಲಿ ಸ್ನಾನ ಮಾಡಿಸಿದರೂ (ಮತ್ತಾ. 3:11), ಆ ಬೆಂಕಿ ನಿರಂತರವಾಗಿ ಉರಿಯುತ್ತಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವೆಂದು ಇದರಿಂದ ನಮಗೆ ತಿಳಿಯುತ್ತದೆ. ದೇವರು ಬೆಂಕಿಯನ್ನು ಹೊತ್ತಿಸುತ್ತಾರೆ. ನಾವು ಅದಕ್ಕೆ ಬೇಕಾದ ಇಂಧನವನ್ನು, ಅಂದರೆ ಸಂಪೂರ್ಣವಾಗಿ ದೇವರ ಚಿತ್ತಕ್ಕೆ ಒಪ್ಪಿಸಿಕೊಟ್ಟ ಒಂದು ಜೀವಿತವನ್ನು - ಒದಗಿಸಬೇಕು. ದೇವರು ಒಂದು ಸಲ ನಿಮ್ಮನ್ನು ಪವಿತ್ರಾತ್ಮನಲ್ಲಿ ಅಭಿಷೇಕಿಸಿದ್ದರೂ, "ಒಂದು ಸಲ ಅಭಿಷೇಕಿಸಲ್ಪಟ್ಟರೆ, ಅದು ಜೀವಿತವಿಡೀ ಕಾರ್ಯ ಮಾಡುತ್ತದೆ," ಎಂದು ಯೋಚಿಸ ಬೇಡಿರಿ ಮತ್ತು ನಿಮ್ಮ ಶಿಸ್ತನ್ನು ಸಡಿಲಿಸ ಬೇಡಿರಿ. ಈ ತಪ್ಪು ತಿಳುವಳಿಕೆಯು "ಒಂದು ಸಲ ರಕ್ಷಿಸಲ್ಪಟ್ಟರೆ, ಆ ರಕ್ಷಣೆ ಯಾವಾಗಲೂ ನಮ್ಮನ್ನು ಕಾಪಾಡುತ್ತದೆ," ಎಂಬ ದೊಡ್ಡ ತಪ್ಪು ತಿಳುವಳಿಕೆಗೆ ಸಮನಾಗಿದೆ. ಒಂದು ಸಲ ದೇವರಿಂದ ಯಥಾರ್ಥವಾಗಿ ಅಭಿಷೇಕಿಸಲ್ಪಟ್ಟ ಜನರು, ಒಂದು ವರ್ಷದ ನಂತರ ಆತ್ಮಿಕ ಮರಣ ಹೊಂದಿರುವುದನ್ನು ನಾನು ಕಂಡಿದ್ದೇನೆ. ಅವರಲ್ಲಿ ಬೆಂಕಿಯು ಆರಿ ಹೋಗಿರುತ್ತದೆ. ಲೌಕಿಕ ವ್ಯವಹಾರಗಳು ಹಾಗೂ ಜಂಬ ಒಳಹೊಕ್ಕಿರುತ್ತವೆ, ಇವು ಬೆಂಕಿಯನ್ನು ಆರಿಸುತ್ತವೆ. ಈಗ ಅವರು ಹಣದ ಹಿಂದೆ ಓಡುತ್ತಿದ್ದಾರೆ ಮತ್ತು ಸುಖ-ಸೌಕರ್ಯಕ್ಕಾಗಿ ತವಕಿಸುತ್ತಾರೆ - ಇದರಿಂದಾಗಿ ಅವರಲ್ಲಿದ್ದ ದೇವರ ಬೆಂಕಿಯು ಕಳೆದುಹೋಗಿದೆ. ಇದು ಬಹಳ ದುಃಖಕರ ಮತ್ತು ದೇವರ ರಾಜ್ಯಕ್ಕೆ ಒಂದು ದೊಡ್ಡ ನಷ್ಟವನ್ನು ಉಂಟುಮಾಡುವ ಸಂಗತಿಯಾಗಿದೆ. ಹಾಗಾಗಿ ಪೌಲನು ತಿಮೊಥೆಯನಿಗೆ, "ನಿನ್ನ ಮೇಲೆ ಬಂದಿರುವ ಬೆಂಕಿಯನ್ನು ಕಾಪಾಡಿಕೋ, ಅದು ಉರಿಯುತ್ತಿರಲಿ. ಈಗ ಈ ಜವಾಬ್ದಾರಿ ನಿನ್ನದಾಗಿದೆ. ನೀನು ಅದನ್ನು ಗಮನಿಸದಿದ್ದರೆ ಅದು ಆರಿ ಹೋಗುತ್ತದೆ. ಅದು ಆರಿ ಹೋಗದಂತೆ ಒಂದು ಉತ್ತಮ ಮನಸ್ಸಾಕ್ಷಿಯನ್ನು ಇರಿಸಿಕೋ, ದೇವರ ವಚನವನ್ನು ಅಧ್ಯಯನ ಮಾಡು, ಯಾವಾಗಲೂ ನಿನ್ನನ್ನು ತಗ್ಗಿಸಿಕೋ, ಪೂರ್ಣ ಹೃದಯದಿಂದ ದೇವರನ್ನು ಹುಡುಕುತ್ತಿರು, ಹಣದಾಸೆಯಿಂದ, ಇತರರೊಂದಿಗೆ ವಾಗ್ವಾದಗಳಿಂದ ಮತ್ತು ಈ ಬೆಂಕಿಯನ್ನು ಆರಿಸುವಂತ ಯಾವುದೇ ಸಂಗತಿಯಿಂದ ದೂರವಾಗಿರು," ಎಂದು ಹೇಳಿದನು.

4. ನಿರಂತರ ಆತ್ಮಿಕ ಮುನ್ನಡೆಯನ್ನು ಸಾಧಿಸಿರಿ : ಇಬ್ರಿಯರಿಗೆ 6:1-3ರಲ್ಲಿ, ನಾವು ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗಲು ಒತ್ತಾಯಿಸಲ್ಪಟ್ಟಿದ್ದೇವೆ. ಪೂರ್ಣ ತಿಳುವಳಿಕೆಯ ಕಡೆಗೆ ಸಾಗುವುದನ್ನು ಒಂದು ಪರ್ವತವನ್ನು ಏರುವದಕ್ಕೆ (10,000 ಮೀಟರ್ ಎತ್ತರ ಎಂದುಕೊಳ್ಳಿರಿ) ಹೋಲಿಸಿ ನೋಡಿರಿ. ಯೇಸುವು ಈಗಾಗಲೇ ಶಿಖರವನ್ನು ತಲುಪಿದ್ದಾರೆ. ನಾವು ಹೊಸದಾಗಿ ಹುಟ್ಟಿದಾಗ, ಈ ಬೆಟ್ಟದ ಬುಡಕ್ಕೆ ಬಂದು ಸೇರುತ್ತೇವೆ, ಮತ್ತು ಅಲ್ಲಿಂದ ಮೇಲೇರಲು ಆರಂಭಿಸುತ್ತೇವೆ. ಶಿಖರದ ತುದಿಗೆ ಏರಲು ಎಷ್ಟು ಸಮಯ ಹಿಡಿದರೂ ಅದರ ಕಡೆಗೆ ಸಾಗುತ್ತಾ ಹೋಗುವುದು ಮತ್ತು ಯೇಸುವನ್ನು ಅನುಸರಿಸುವುದು ನಮ್ಮ ಗುರಿಯಾಗಿದೆ. ಹಾಗೆ ಮಾಡಿದಾಗ, ನಾವು ಕೇವಲ 100 ಮೀಟರ್ ಮೇಲೇರಿದ್ದರೂ, ನಮ್ಮ ಕಿರಿಯ ಸಹೋದರರು ಮತ್ತು ಸಹೋದರಿಯರಿಗೆ, "ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ" (1ಕೊರಿ. 11:1), ಎಂದು ಹೇಳಬಹುದು. ಆತ್ಮಿಕತೆಯು ದೇವರನ್ನು ಕೇವಲ ಒಂದು ಸಲ ಸಂಧಿಸಿದಾಗ ಪ್ರಾಪ್ತವಾಗುವುದಿಲ್ಲ. ಅದು ಒಬ್ಬನು ದಿನಾಲೂ, ವಾರ ವಾರವೂ, ವರ್ಷ ವರ್ಷವೂ ತನ್ನನ್ನು ನಿರಾಕರಿಸಿ ದೇವರ ಚಿತ್ತವನ್ನು ಆರಿಸಿಕೊಳ್ಳುವ ಹಾದಿಯನ್ನು ಆರಿಸಿಕೊಳ್ಳುವುದರ ಫಲವಾಗಿದೆ. ಯೇಸುವು ಒಬ್ಬ ಆತ್ಮಿಕ ವ್ಯಕ್ತಿಯಾಗಲು ಕಾರಣವೇನೆಂದರೆ, ಅವರು ನಿರಂತರವಾಗಿ ತನ್ನ ಸ್ವಂತ ಚಿತ್ತವನ್ನು ನಿರಾಕರಿಸಿದಿರು. ಹಾಗೆಯೇ ನಾವೂ ಸಹ ನಮ್ಮ ಸ್ವಂತ ಚಿತ್ತವನ್ನು ಯಾವಾಗಲೂ ನಿರಾಕರಿಸಿದರೆ ನಾವು ಆತ್ಮಿಕರಾಗುತ್ತೇವೆ. 1ತಿಮೊಥೆಯನಿಗೆ 4:15ರಲ್ಲಿ, "ಈ ಕಾರ್ಯವನ್ನು ಸಾಧಿಸಿಕೊಳ್ಳುವುದರಲ್ಲಿ ಆಸಕ್ತನಾಗಿರು," ಎಂದು ತಿಮೊಥೆಯನನ್ನು ಒತ್ತಾಯಿಸುತ್ತಾನೆ. ಒಬ್ಬ ಉದ್ಯಮಿಯು ಹಣ ಸಂಪಾದಿಸಲು ಮತ್ತು ತನ್ನ ಉದ್ಯಮವನ್ನು ಭದ್ರವಾಗಿ ನೆಲೆಗೊಳಿಸಲು ಬಹಳ ಶ್ರಮೆ ವಹಿಸುತ್ತಾನೆ. ನೀವು ಕ್ರಿಸ್ತೀಯ ಜೀವಿತದಲ್ಲಿ ಪೂರ್ಣ ಆಸಕ್ತರಾಗಿದ್ದರೆ, ನೀವು ಸಹ ದೇವರ ವಾಕ್ಯದ ಅಧ್ಯಯನದಲ್ಲಿ, ಆತ್ಮಿಕ ವರಗಳಿಗಾಗಿ ತವಕಿಸುವುದರಲ್ಲಿ ಮತ್ತು ನಿಮ್ಮ ಜೀವನದ ಪ್ರತಿಯೊಂದು ಅಶುದ್ಧತೆಯನ್ನು ತೆಗೆದುಹಾಕುವುದರಲ್ಲಿ ಶ್ರಮೆ ವಹಿಸುತ್ತೀರಿ. ಮೇಲಿನ ವಚನದ ಮತ್ತೊಂದು ಅನುವಾದದಲ್ಲಿ, "ನೀನು ಇವುಗಳಲ್ಲಿ ಮಗ್ನನಾಗಿರು," ಎಂದು ಬರೆಯಲ್ಪಟ್ಟಿದೆ. ನೀವು ಈ ಸಂಗತಿಗಳಲ್ಲಿ ಮಗ್ನರಾಗಿರುವಾಗ, ನಿಮ್ಮ ಆತ್ಮಿಕ ಮುನ್ನಡೆಯು ಎಲ್ಲರ ದೃಷ್ಟಿಗೆ ಕಾಣಿಸಿಕೊಳ್ಳುತ್ತದೆ. ನೀವು ಯೇಸು ಕ್ರಿಸ್ತನಲ್ಲಿ ಮತ್ತು ಆತನ ವಾಕ್ಯದಲ್ಲಿ ಹೀಗೆ ಮಗ್ನರಾದಾಗ, ಈ ಲೋಕದ ಸೆಳೆತದ ಆಕರ್ಷಣೆ ಕುಗ್ಗುತ್ತದೆ. ಮತ್ತು ಲೌಕಿಕ ಜನರು ಬೆನ್ನಟ್ಟುವ ಹಲವಾರು ಸಂಗತಿಗಳನ್ನು ನಾವು ಬೆನ್ನಟ್ಟುವುದಿಲ್ಲ. ನೀವು ಇಂತಹ "ತಲ್ಲೀನ" ಜೀವಿತವನ್ನು ಜೀವಿಸಿದರೆ, ನೀವು ಎಡೆಬಿಡದೆ ಪ್ರಗತಿಯನ್ನು ಸಾಧಿಸುತ್ತೀರಿ. ನೀವು ವರ್ಷದಿಂದ ವರ್ಷಕ್ಕೆ ಮೊದಲಿಗಿಂತ ಉತ್ತಮ ಕ್ರೈಸ್ತರು ಮತ್ತು ಕರ್ತನ ಸೇವೆಯಲ್ಲಿ ಹೆಚ್ಚು ಫಲಕಾರಿಯಾದ ಒಬ್ಬ ಸೇವಕರು ಆಗುತ್ತೀರಿ.

5. ನೀವು ಒಬ್ಬ ಜಯಶಾಲಿಯಾಗಿರಿ : ಇಬ್ರಿಯರಿಗೆ 12:1-3ರಲ್ಲಿ, ನಮಗೆ ನೇಮಕವಾದ ಓಟವನ್ನು ನಾವು ಓಡುವಾಗ, ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವನ್ನು ದೃಷ್ಟಿಸಿ, ಸ್ಥಿರಚಿತ್ತದಿಂದ ಓಡುವಂತೆ ಉತ್ತೇಜಿಸಲ್ಪಟ್ಟಿದ್ದೇವೆ. ನಾವು ಆತನ ಮೇಲೆ ದೃಷ್ಟಿ ಇರಿಸುತ್ತೇವೆ ಮತ್ತು ಈ ಓಟವನ್ನು ಓಡುತ್ತೇವೆ. ನಾವು ನಿಂತಲ್ಲಿಯೇ ನಿಲ್ಲುವುದಿಲ್ಲ. ನಂಬಿಕೆಯ ಓಟ ಎಂಥದ್ದೆಂದರೆ, ಆ ಓಟದಲ್ಲಿ ನೀವು ಇದ್ದಲ್ಲೇ ನಿಲ್ಲಬಾರದು. ಸಮಯ ಕಡಿಮೆ ಇದೆ, ಹಾಗಾಗಿ ನೀವು ಓಡಬೇಕು. ಒಂದು ವೇಳೆ ಎಡವಿ ಬಿದ್ದರೆ, ಎದ್ದೇಳಿರಿ ಮತ್ತು ಓಡುತ್ತಾ ಮುಂದುವರಿಯಿರಿ. ಅನೇಕ ಓಟಗಾರರು ಓಟದ ಸ್ಪರ್ಧೆಯಲ್ಲಿ ಬಿದ್ದರೂ ಮೇಲೆದ್ದು ಓಡಿದ್ದಾರೆ ಮತ್ತು ಮೊದಲನೇ ಸ್ಥಾನವನ್ನು ಗಳಿಸಿದ್ದಾರೆ. ಹಾಗಾಗಿ ನೀವು ಕರ್ತನೊಂದಿಗೆ ನಡೆಯುವಾಗ ಕೆಲವು ಸಲ ಜಾರಿಬಿದ್ದರೆ, ನಿರಾಶರಾಗಬೇಡಿರಿ. ಬಿದ್ದಲ್ಲಿಯೇ ಇರಬೇಡಿರಿ. ಎದ್ದೇಳಿ, ನಿಮ್ಮ ಪಾಪವನ್ನು ಒಪ್ಪಿಕೊಂಡು ಅರಿಕೆಮಾಡಿರಿ ಮತ್ತು ಓಡುತ್ತಾ ಮುಂದುವರಿಯಿರಿ. ಯೇಸುವು ಶಿಲುಬೆಯ ಮರಣವನ್ನು ಸಹಿಸಿಕೊಂಡು ತನ್ನ ಜೀವಿತದ ಕೊನೆಯ ವರೆಗೆ ಓಡಿದ್ದನ್ನು ನೋಡಿರಿ. ನಿಮ್ಮನ್ನು ಹಲವು ವೈರಿಗಳು ಎದುರಿಸುವಾಗ, ಯೇಸುವು ಎಷ್ಟು ವಿರೋಧಿಗಳನ್ನು ಸಹಿಸಿಕೊಂಡರೆಂದು ಯೋಚಿಸಿರಿ (ಇಬ್ರಿ. 12:3). ಪಾಪದ ವಿರುದ್ಧ ಹೋರಾಡುವಾಗ, ಆತನು ರಕ್ತ ಸುರಿಸಿ ಹೋರಾಡಿದಂತೆ ನೀವು ಇನ್ನೂ ಹೋರಾಡಿಲ್ಲ (ಇಬ್ರಿ. 12:4). ಇಲ್ಲಿ ಯೇಸುವು ಪಾಪದ ವಿರುದ್ಧ ಹೋರಾಡುವುದನ್ನು ನಾವು ನೋಡುತ್ತೇವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಪಾಪದ ವಿರುದ್ಧ ಆತನ ಮನೋಭಾವ ಏನಾಗಿತ್ತೆಂದರೆ, "ನಾನು ರಕ್ತವನ್ನಾದರೂ ಸುರಿಸುತ್ತೇನೆ, ಆದರೆ ಪಾಪ ಮಾತ್ರ ಮಾಡುವುದಿಲ್ಲ." ನಿಮ್ಮಲ್ಲಿ ಇದೇ ಮನೋಭಾವವಿದ್ದರೆ - ನಾನು ಸಾಯಲು ಸಹ ಸಿದ್ಧನು, ಆದರೆ ಪಾಪ ಮಾಡುವುದಿಲ್ಲ ಎಂಬುದಾಗಿ - ಆಗ ನೀವು ಸಹ ಜಯಶಾಲಿಯಾಗುತ್ತೀರಿ. ಸುಳ್ಳಾಡುವ ಅವಕಾಶ ಎದುರಾದಾಗ, "ನಾನು ಸುಳ್ಳಾಡುವ ಬದಲಾಗಿ ಸಾಯಲು ಸಿದ್ಧನಿದ್ದೇನೆ" ಎಂದು ನೀವು ಹೇಳಿದರೆ, ನೀವು ಒಬ್ಬ ಜಯಶಾಲಿ ಆಗುತ್ತೀರಿ. ಹೆಚ್ಚು ಹಣ ಸಂಪಾದಿಸುವುದಕ್ಕಾಗಿ ಸ್ವಲ್ಪ ವಂಚಿಸುವಂತೆ ಶೋಧಿಸಲ್ಪಟ್ಟಾಗ, "ನಾನು ಚಿಕ್ಕ ಮೋಸ ಮಾಡುವುದರ ಬದಲು ಪ್ರಾಣವನ್ನು ಕೊಡುತ್ತೇನೆ" ಎಂದು ನೀವು ಹೇಳಿದರೆ, ಆಗ ನೀವು ಜಯಶಾಲಿಯಾಗುತ್ತೀರಿ. ಒಬ್ಬ ಸ್ತ್ರೀಯನ್ನು ನೋಡಿ ಮೋಹಿಸುವಂತೆ ಶೋಧಿಸಲ್ಪಟ್ಟಾಗ, "ನಾನು ಮೋಹಿಸುವ ಬದಲಾಗಿ ಸಾಯುತ್ತೇನೆ" ಎಂದು ನೀವು ಹೇಳಿದರೆ, ಆಗ ನೀವು ಜಯವನ್ನು ಹೊಂದುತ್ತೀರಿ. ಜಯದ ಜೀವಿತದ ರಹಸ್ಯ ಇದೇ ಆಗಿದೆ.

6. ದೇವರ ಪ್ರೀತಿಯಲ್ಲಿ ದೃಢವಾಗಿ ನಿಲ್ಲಿರಿ : ಚೆಫನ್ಯನು 3:17ರಲ್ಲಿ "ಆತನು ತನ್ನ ಪ್ರೀತಿಯಲ್ಲಿ ಮುಳುಗಿ ಮೌನವಾಗಿ ಇರುವನು" ಎಂದಿರುವ ವಾಕ್ಯವನ್ನು ಬೇರೊಂದು ಅನುವಾದದಲ್ಲಿ ಹೀಗೆ ಹೇಳಲಾಗಿದೆ: "ಆತನು ನಿನಗಾಗಿ ಪ್ರೀತಿಯಿಂದ ಮೌನವಾಗಿ ಯೋಜನೆಯನ್ನು ಸಿದ್ಧಪಡಿಸುತ್ತಾ ಇದ್ದಾನೆ." ದೇವರು ನಿಮ್ಮ ಜೀವಿತದಲ್ಲಿ ಅನುಮತಿಸುವ ಪ್ರತಿಯೊಂದು ಸಂಗತಿಯು, ದೇವರ ಹೃದಯವು ನಿಮ್ಮನ್ನು ಪ್ರೀತಿಸಿ ಯೋಜಿಸಿದ್ದಾಗಿದೆ ಎಂಬುದನ್ನು ನೀವು ತಿಳಿದಿದ್ದೀರಾ? ನೀವು ಜೀವನದಲ್ಲಿ ಎದುರಿಸುವ ಪ್ರತಿಯೊಂದು ತೊಂದರೆ ಹಾಗೂ ಸಮಸ್ಯೆಯು ನಿಮ್ಮ ಶ್ರೇಯಸ್ಸು ಅಥವಾ ಒಳಿತಿನ ಅಂತಿಮ ಉದ್ದೇಶಕ್ಕಾಗಿ ಯೋಜಿಸಲ್ಪಟ್ಟಿರುತ್ತದೆ. ನೀವು ರೋಮಾಪುರದವರಿಗೆ 8:28ನೇ ವಚನವನ್ನು ನಂಬುವುದಾದರೆ, ಇನ್ನು ಮೇಲೆ ನಿಮಗೆ ನಿಮ್ಮ ಮುಂದಿನ ಜೀವಿತದಲ್ಲಿ ಜನರ ಅಥವಾ ಸನ್ನಿವೇಶಗಳ ಕುರಿತಾದ ಯಾವುದೇ ಭಯ ಇರುವುದಿಲ್ಲ. ಯಾವುದೋ ಅನಾಹುತ ಸಂಭವಿಸುತ್ತದೆಂದು, ಅಥವಾ ಕ್ಯಾನ್ಸರ್ ರೋಗದಿಂದ ಸಾಯುತ್ತೀರೆಂದು, ಅಥವಾ ಕ್ರಿಸ್ತ-ವಿರೋಧಿ ಧರ್ಮಾಂಧರು ಮಾಡುವ ಹಾನಿಯ ಕುರಿತಾಗಿ, ಅಥವಾ ಇನ್ಯಾವುದೋ ಭೀತಿ - ಇಂತಹ ಯಾವ ಭಯವೂ ನಿಮ್ಮನ್ನು ಕಾಡಿಸುವುದಿಲ್ಲ - ಏಕೆಂದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಎಲ್ಲವನ್ನೂ ಮತ್ತು ಎಲ್ಲರನ್ನೂ ನಿಯಂತ್ರಿಸುತ್ತಾರೆ.

ಆತ್ಮಿಕ ಮುನ್ನಡೆಯ ನಿಜವಾದ ಸೌಭಾಗ್ಯಪೂರ್ಣ ವರ್ಷ ನಿಮ್ಮದಾಗಲಿ ಎಂದು ನಾವು ನಿಮಗಾಗಿ ಹಾರೈಸುತ್ತೇವೆ.