"ಸ್ವಬುದ್ಧಿಯನ್ನೇ ಆಧಾರ ಮಾಡಿಕೊಳ್ಳದೆ ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗ ಮಾಡುವನು" (ಜ್ಞಾನೋಕ್ತಿಗಳು 3:5-6).
ಈ ವಚನವು ಹೃದಯಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಜ್ಞಾನೋಕ್ತಿಗಳ ಪುಸ್ತಕದಲ್ಲಿ ಅನೇಕ ವೇಳೆ ಈ ರೀತಿಯಾಗಿ ಹೃದಯಕ್ಕೆ ಒತ್ತು ನೀಡಿರುವುದನ್ನು ನೀವು ಕಾಣುತ್ತೀರಿ. ಹೀಗೆ ನಂಬಿಕೆಯು ಮನಸ್ಸಿಗೆ ಸಂಬಂಧಿಸಿದ ಸಂಗತಿಯಲ್ಲವೆಂದು ನಾವು ತಿಳಕೊಳ್ಳುತ್ತೇವೆ. ಇದನ್ನು ಹಳೆಯ ಒಡಂಬಡಿಕೆಯ ಸೊಲೊಮೋನನೂ ಸಹ ತಿಳಕೊಂಡದ್ದು ಆಶ್ಚರ್ಯಕರವಾಗಿದೆ, ಆದರೆ ಕೆಲವೊಮ್ಮೆ ನಾವು ಇದರಲ್ಲಿ ತಪ್ಪು ಮಾಡಬಹುದು. ನಾವು ಕೆಲವು ಸತ್ಯಾಂಶಗಳನ್ನು ಅರಿತಿದ್ದೇವೆ (ಯಾವುವೆಂದರೆ, ದೇವರು ಪ್ರೀತಿಯುಳ್ಳ ತಂದೆಯಾಗಿದ್ದಾನೆ ಅಥವಾ ದೇವರು ಯೇಸುವನ್ನು ಪ್ರೀತಿಸಿದಷ್ಟೇ ಯೇಸುವಿನ ಶಿಷ್ಯರನ್ನು ಸಹ ಪ್ರೀತಿಸುತ್ತಾರೆ - ವಾಸ್ತವವಾಗಿ, ಎಲ್ಲರನ್ನೂ ಅಲ್ಲ, ಎಲ್ಲಾ ವಿಶ್ವಾಸಿಗಳನ್ನೂ ಸಹ ಅಲ್ಲ, ಆದರೆ ಎಲ್ಲವನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸುವ ಶಿಷ್ಯರನ್ನು), ಆದಾಗ್ಯೂ ನಾನು ಇದನ್ನು ನನ್ನ ತಲೆಯಲ್ಲಿ ಮಾತ್ರವೇ ಅರಿತಿರಬಹುದು. ನಾನು ಈಗಲೂ ಶೋಧನೆಗೆ ಒಳಗಾದಾಗ ಕಳವಳಗೊಳ್ಳುತ್ತೇನೆ, ಏಕೆಂದರೆ ನನ್ನ ಹೃದಯದಲ್ಲಿ ಈ ಸತ್ಯಾಂಶಗಳ ಬಗ್ಗೆ ನಂಬಿಕೆಯಿಲ್ಲ. ನಂಬಿಕೆ ನನ್ನ ತಲೆಯಲ್ಲಿ ಮಾತ್ರ ಇರಬಹುದು, ಈ ರೀತಿಯ ನಂಬಿಕೆ ಪಿಶಾಚನಲ್ಲೂ ಇದೆ; ಆದರೆ ಕರ್ತನಲ್ಲಿ ಪೂರ್ಣ ಭರವಸವಿಟ್ಟು ಹೃದಯದಿಂದ ಯಾವುದನ್ನೋ ನಂಬುವುದು ಬೇರೊಂದು ಸಂಗತಿಯಾಗಿದೆ. ಹೃದಯದ ನಂಬಿಕೆಯನ್ನು ಪಡೆಯುವುದಕ್ಕೆ ನಮಗೆ ಪವಿತ್ರಾತ್ಮನ ಪ್ರಕಟನೆ ಸಿಗಬೇಕು.
ನೀವು ಯಾವುದನ್ನಾದರೂ ತಲೆಯಲ್ಲಿ (ಮನಸ್ಸಿನಲ್ಲಿ) ನಂಬುವುದಕ್ಕೆ, ಒಬ್ಬ ಉತ್ತಮ ಸತ್ಯವೇದ ಶಿಕ್ಷಕನು ನಿಮಗೆ ವಿಷಯವನ್ನು ಚೆನ್ನಾಗಿ ತಿಳಿಸಿ ಹೇಳಿದರೆ ಸಾಕು; ಆಗ ನೀವು ಆ ಬೋಧನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೀರಿ. ನಾವು ಇದನ್ನೇ ನಂಬಿಕೆಯೆಂದು ಭಾವಿಸುತ್ತೇವೆ, ಆದರೆ ಶೋಧನೆ ಕ್ಷಣದಲ್ಲಿ ಅದು ನಿಜವಾದ ನಂಬಿಕೆಯಲ್ಲವೆಂದು ನಮಗೆ ಅರ್ಥವಾಗುತ್ತದೆ. ನಾವು ನಮ್ಮ ಬಳಿ ಹಣವಿದೆಯೆಂದು ಅಂದುಕೊಳ್ಳುತ್ತೇವೆ, ಆದರೆ ನಾವು ಅಂಗಡಿಗೆ ಹೋದಾಗ, ಅದು ನಕಲಿ ಹಣವೆಂದು ಕಂಡುಕೊಳ್ಳುತ್ತೇವೆ. ಅದು ಅಸಲಿ ನೋಟಿನ "ಫೋಟೋ ಕಾಪಿ" ಆಗಿರುತ್ತದೆ. ಅದು ನಕಲಿ ನೋಟು. ನಮ್ಮ ನಂಬಿಕೆ ಹೃದಯದಿಂದ ಬಾರದೆ ಕೇವಲ ನಮ್ಮ ತಲೆಯ ಆಲೋಚನೆಯಾಗಿದ್ದರೆ, ಅದನ್ನು ಶೋಧನೆಯ ಕ್ಷಣವು ಬಯಲುಪಡಿಸುತ್ತದೆ. ಇದಕ್ಕಾಗಿಯೇ ನಾವು ನಮಗೆ ಪ್ರಕಟನೆಯನ್ನು ಕೊಡುವಂತೆ ದೇವರನ್ನು ಬಹಳವಾಗಿ ಪ್ರಾರ್ಥಿಸಬೇಕು. ಆಗ ನಮ್ಮ ನಂಬಿಕೆ ಕೇವಲ ನಮ್ಮ ತಲೆಯಲ್ಲಿ ಉಳಿಯದೆ, ನಮ್ಮ ಹೃದಯದ ಅಂತರ್ಯಕ್ಕೆ ಇಳಿದು ಬರುತ್ತದೆ. ಆಗ ನಾವು ಶೋಧನೆಯ ಕ್ಷಣದಲ್ಲಿ ಅಲುಗಾಡುವುದಿಲ್ಲ, ಮತ್ತು ನಂಬಿಕೆ ನಮ್ಮನ್ನು ದೃಢವಾಗಿ ನಿಲ್ಲಿಸುತ್ತದೆ. ಕರ್ತನಲ್ಲಿ ಪೂರ್ಣ ಹೃದಯದಿಂದ ಭರವಸವಿಡು!
"ನೀನು ಎಲ್ಲಾ ಕಾರ್ಯಗಳಲ್ಲಿ ದೇವರನ್ನು ಮಹಿಮೆ ಪಡಿಸುವುದಾದರೆ, ಮತ್ತು ಆತನನ್ನು ಪೂರ್ಣ ಹೃದಯದಿಂದ ನಂಬುವುದಾದರೆ, ಮತ್ತು ನಿನ್ನ ಸ್ವಂತ ತಿಳುವಳಿಕೆಯನ್ನು ಆಧರಿಸದಿದ್ದರೆ, ಆತನು ನಿನ್ನ ಹಾದಿಯನ್ನು ನೆಟ್ಟಗೆ ಮಾಡುವನು”
ಇದರ ನಂತರ ದೇವರು, "ಸ್ವಬುದ್ಧಿಯನ್ನೇ ಆಧಾರ ಮಾಡಿಕೊಳ್ಳಬೇಡ," ಎಂದು ಹೇಳುತ್ತಾರೆ. ನಮ್ಮ "ಸ್ವಬುದ್ಧಿ" ಎಂದರೆ ನಮ್ಮ ಮನಸ್ಸಿನ ಸ್ವಂತ ಆಲೋಚನಾಶಕ್ತಿ. ನಿನ್ನ ಮನಸ್ಸನ್ನು ನಂಬಬೇಡವೆಂದು ಆತನು ಹೇಳುತ್ತಾನೆ! ಅದಕ್ಕೆ ಬದಲಾಗಿ, ನಿನ್ನ ಸಂಪೂರ್ಣ ಹೃದಯದಿಂದ ಕರ್ತನಲ್ಲಿ ಭರವಸೆಯಿಡು. ಇಲ್ಲಿ ಆತನು ಮನಸ್ಸು ಮತ್ತು ಹೃದಯಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತಿದ್ದಾನೆ. ದೇವರು ಹೇಳುವುದು ಏನೆಂದರೆ, "ನಿನ್ನ ಮನಸ್ಸು ವಿಶ್ವಾಸಾರ್ಹವಲ್ಲ. ನೀನು ದೇವರನ್ನು ಪ್ರೀತಿಯುಳ್ಳ ತಂದೆಯಾಗಿ ಯಥಾರ್ಥವಾಗಿ ನಂಬಿದ್ದೀ, ಎಂದು ನಿನ್ನ ಮನಸ್ಸು ಹೇಳುತ್ತದೆ, ಆದಾಗ್ಯೂ ನೀನು ಶೋಧನೆಯ ಕ್ಷಣದಲ್ಲಿ ಕಳವಳಗೊಳ್ಳುತ್ತೀ. ನೀನು ನಿನ್ನ ಹೃದಯದಲ್ಲಿ ದೇವರು ಪ್ರೀತಿಯುಳ್ಳ ತಂದೆಯಾಗಿದ್ದಾರೆಂದು ನಂಬಿಲ್ಲ, ಎಂಬುದನ್ನು ಇದು ಸಾಬೀತುಪಡಿಸುತ್ತದೆ." ಇದರ ಕುರಿತಾಗಿ ನಾವು ನಮ್ಮ ಸಭೆಯಲ್ಲಿ ಅನೇಕ ಸಂದೇಶಗಳನ್ನು ನೀಡಿದ್ದೇವೆ: ಸ್ವಂತ ಆಲೋಚನಾಶಕ್ತಿ ನಮ್ಮ ನಂಬಿಕೆಯ ಮೊದಲನೇ ಶತ್ರುವಾಗಿದೆ. ಈ ಕಾರಣಕ್ಕಾಗಿ ಬುದ್ಧಿವಂತರು ನಂಬಿಕೆಗೆ ಬರುವುದು ಬಹಳ ಕಷ್ಟವಾಗುತ್ತದೆ. ಇದು ಅಸಾಧ್ಯವಲ್ಲ, ಆದರೆ ಕಷ್ಟಕರ, ಏಕೆಂದರೆ ಅವರು ಸಾಮಾನ್ಯವಾಗಿ ತಮ್ಮ ಜಾಣತನವನ್ನು ಆತುಕೊಳ್ಳುತ್ತಾರೆ. ಚುರುಕು ಬುದ್ಧಿಯ ಜನರು ದೇವರ ವಾಕ್ಯವನ್ನು ಚೆನ್ನಾಗಿ ಅರಿತಿದ್ದರೂ ಕಳವಳಗೊಳ್ಳುವುದನ್ನು ನೀವು ಕಾಣುತ್ತೀರಿ. ಅವರು ಪಾಪದ ಮೇಲೆ ಜಯ ಹೊಂದುವುದಿಲ್ಲ, ಏಕೆಂದರೆ ಅವರಲ್ಲಿ ನಂಬಿಕೆಯಿಲ್ಲ. ಅವರು ಬುದ್ಧಿವಂತರು ಮತ್ತು ತಮ್ಮ ಸ್ವಬುದ್ಧಿಯನ್ನು ಆತುಕೊಳ್ಳುತ್ತಾರೆ.
ಎಲ್ಲಾ ಸತ್ಯವೇದ ಶಾಲೆಗಳು ಮತ್ತು ಸತ್ಯವೇದ ಕಾಲೇಜುಗಳು ಮಾಡುವ ದೊಡ್ಡ ತಪ್ಪು ಇದಾಗಿದೆ. ದೇವರ ವಾಕ್ಯವು ಯಾವುದನ್ನು ಮಾಡಬಾರದೆಂದು ಹೇಳುತ್ತದೋ, ಅದನ್ನೇ ಮಾಡಬೇಕೆಂದು ಈ ಸಂಸ್ಥೆಗಳು ಜನರಿಗೆ ಕಲಿಸುತ್ತವೆ: ಅಂದರೆ, ದೇವರ ವಾಕ್ಯವನ್ನು ಅರ್ಥ ಮಾಡಿಕೊಳ್ಳಲು ಮತ್ತು ಬೋಧನೆ ಮಾಡಲು ತಮ್ಮ ಸ್ವಂತ ತಿಳುವಳಿಕೆಯನ್ನು ಆತುಕೊಳ್ಳುವುದು. ಪವಿತ್ರಾತ್ಮನ ಪ್ರಕಟನೆಗೆ ಯಾವುದೇ ಪ್ರಾಮುಖ್ಯತೆಯನ್ನು ಕೊಡಲಾಗುವುದಿಲ್ಲ, ಮತ್ತು ಇದರ ಫಲವಾಗಿ ಸತ್ಯವೇದ ಶಾಲೆಗಳು ಮತ್ತು ಸತ್ಯವೇದ ಕಾಲೇಜುಗಳಿಂದ ಬರುವ ಪದವೀಧರರು ಎಲ್ಲಾ ಕಡೆಗಳಲ್ಲಿ ದೇವರ ಕಾರ್ಯಕ್ಕೆ ಬಹು ದೊಡ್ಡ ಆತಂಕವಾಗಿರುತ್ತಾರೆ. ಇದಕ್ಕೆ ಕಾರಣವೆಂದರೆ, ಇವರು ಈ ಮೂಲತತ್ವವನ್ನು ಉಲ್ಲಂಘಿಸುತ್ತಾರೆ. ಒಂದು ಸತ್ಯವೇದ ಶಾಲೆಯಲ್ಲಿ ಕಲಿಯುವ ಮೂಲಕ ನಿಮ್ಮಲ್ಲಿ ನಂಬಿಕೆ ಉಂಟಾಗುವುದಿಲ್ಲ. ನಂಬಿಕೆಯು ಪವಿತ್ರಾತ್ಮನಿಂದ ಬರುವ ಪ್ರಕಟನೆಯ ಮೂಲಕ ಉಂಟಾಗುತ್ತದೆ. ಕ್ರೈಸ್ತಸಭೆಗೂ ಸಹ ಇದು ಅನ್ವಯಿಸುತ್ತದೆ. ನಾವು ಧಾರ್ಮಿಕ ಸಿದ್ಧಾಂತಗಳನ್ನು ನಮ್ಮ ಮನಸ್ಸಿನಲ್ಲಿ ಮಾತ್ರ ಅರ್ಥ ಮಾಡಿಕೊಂಡು, ಅವುಗಳನ್ನು ಇತರ ಜನರಿಗೆ ಹಂಚಲು ಪ್ರಯತ್ನಿಸಬಾರದು. ಅವು ನಮ್ಮ ಹೃದಯಗಳಲ್ಲಿ ನೆಲೆಗೊಳ್ಳಬೇಕು. ಪೂರ್ಣ ಹೃದಯದಿಂದ ಕರ್ತನನ್ನು ನಂಬು, ಮತ್ತು ಸ್ವಬುದ್ಧಿಯನ್ನು ಆಧಾರ ಮಾಡಿಕೊಳ್ಳಬೇಡ.
ಜ್ಞಾನೋಕ್ತಿಗಳು 3:6 ಹೀಗೆ ಹೇಳುತ್ತದೆ, "ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು". ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಿನ್ನ ಜೀವಿತದ ಎಲ್ಲಾ ಕ್ಷೇತ್ರಗಳನ್ನು ದೇವರಿಗೆ ಒಪ್ಪಿಸು. ಆತನು ನಿನ್ನ ಹಣಕಾಸಿನ ವ್ಯವಹಾರವನ್ನು ನಿಯಂತ್ರಿಸಲಿ, ನೀನು ಓದುವ ವಿಷಯಗಳನ್ನು ಆತನು ನಿಯಂತ್ರಿಸಲಿ, ನೀನು ಹೇಗೆ ಸಮಯವನ್ನು ಉಪಯೋಗಿಸಬೇಕೆಂದು ಆತನು ನಿಶ್ಚಯಿಸಲಿ, ಆತನು ನಿನ್ನ ಕುಟುಂಬ ಜೀವಿತದ ಎಲ್ಲಾ ಸಂಗತಿಗಳನ್ನು ನಡೆಸಲಿ, ನೀನು ನಿನ್ನ ಮಕ್ಕಳ ಭವಿಷ್ಯಕ್ಕಾಗಿ ಹಾಕುವ ಯೋಜನೆಗಳು ಆತನ ನಿಯಂತ್ರಣದಲ್ಲಿ ಇರಲಿ, ನಿನ್ನ ಕಸುಬು ಅಥವಾ ಉದ್ಯೋಗ ಆತನ ನಿಯಂತ್ರಣದಲ್ಲಿ ಇರಲಿ, ಪ್ರತಿಯೊಂದರಲ್ಲಿ ಆತನೇ ನಿನ್ನನ್ನು ನಿಯಂತ್ರಿಸಲಿ. ಒಂದೊಂದು ವಿಷಯವನ್ನೂ ಆತನಿಗೆ ಒಪ್ಪಿಸಿಕೊಡು! ಆಗ ಆತನು ನಿನಗಾಗಿ ನೇರವಾದ ಹಾದಿಯನ್ನು ಸಿದ್ಧಪಡಿಸುತ್ತಾನೆ, ನಿನಗೆ ದಾರಿ ತೋರಿಸುತ್ತಾನೆ, ಮತ್ತು ಮಾರ್ಗದರ್ಶನ ಮಾಡುತ್ತಾನೆ. ಅನೇಕ ಜನರು ತಮ್ಮ ಜೀವಿತದ ಯಾವುದೋ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ದೇವರ ಮಾರ್ಗದರ್ಶನವನ್ನು ಬಯಸುತ್ತಾರೆ, ಮತ್ತು ಹೀಗೆ ಹೇಳುತ್ತಾರೆ, "ಕರ್ತನೇ, ಈ ವಿಷಯದಲ್ಲಿ ನಾನು ಏನು ಮಾಡಬೇಕೆಂದು ನೀನು ಬಯಸುತ್ತೀಯೋ, ನಾನು ಅದನ್ನು ಮಾಡುವುದಕ್ಕೆ ಸಿದ್ಧನಾಗಿದ್ದೇನೆ. ಮಾರ್ಗವನ್ನು ತೋರಿಸು." ಆಗ ಕರ್ತನು ಹೇಳುವುದು ಏನೆಂದರೆ, "ನಾನು ನಿನಗೆ ಮಾರ್ಗದರ್ಶನ ಮಾಡಲಾರೆ, ಏಕೆಂದರೆ ನೀನು ಎಲ್ಲಾ ಕ್ಷೇತ್ರಗಳಲ್ಲಿ ನನ್ನ ಬಳಿಗೆ ಬರುತ್ತಿಲ್ಲ! ಕೇವಲ ಇದೊಂದು ಕ್ಷೇತ್ರದಲ್ಲಿ ನನ್ನ ಬಳಿಗೆ ಬರಬೇಡ, ಅದಕ್ಕೆ ಬದಲಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ನನ್ನ ಬಳಿಗೆ ಬಾ. ನೀನು ನಿನ್ನ ಸಂಪೂರ್ಣ ಜೀವಿತವನ್ನು ನನ್ನ ನಿಯಂತ್ರಣಕ್ಕೆ ಒಪ್ಪಿಸಲು ಸಿದ್ಧನಿದ್ದರೆ, ಆಗ ನಾನು ನಿನಗೆ ಮಾರ್ಗದರ್ಶನ ಮಾಡುತ್ತೇನೆ."
ನಿಮಗೆ ಕೇವಲ ಒಂದು ಕ್ಷೇತ್ರದಲ್ಲಿ ಮಾರ್ಗದರ್ಶನ ಬೇಕಾಗಿದ್ದರೆ, ಮತ್ತು ನೀವು ಒಂದು ಕ್ಷೇತ್ರವನ್ನು ಮಾತ್ರ ದೇವರ ನಿಯಂತ್ರಣಕ್ಕೆ ಒಪ್ಪಿಸುವುದಾದರೆ, ನಿಮಗೆ ಮಾರ್ಗದರ್ಶನ ಸಿಗುತ್ತದೆಂಬ ಯಾವುದೇ ವಾಗ್ದಾನ ಕೊಡಲ್ಪಟ್ಟಿಲ್ಲ. ಆದರೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ - ನಿಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲಿ - ಆತನು ನಿಮ್ಮ ಜೊತೆಯಲ್ಲಿದ್ದು ನಿಮ್ಮನ್ನು ನಡೆಸಬೇಕೆಂದು ನೀವು ಬಯಸುವುದಾದರೆ, ಆಗ ದೇವರು ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ಆತನು ನಿಮಗೆ ದಾರಿ ತೋರಿಸುವುದು ಮಾತ್ರವೇ ಅಲ್ಲ, ಅದರ ಜೊತೆಗೆ, "ಆತನು ನಿನ್ನ ಹಾದಿಯನ್ನು ನೆಟ್ಟಗೆ ಮಾಡುವನು,” ಎಂದು ಬರೆಯಲ್ಪಟ್ಟಿದೆ. ಅನೇಕ ಅಡೆತಡೆಗಳಿಂದ ತುಂಬಿರುವ ಆ ಮಾರ್ಗವನ್ನು ಆತನು ನಿಮಗಾಗಿ ಸರಾಗ ಗೊಳಿಸುವನು. ಸಹೋದರನೇ, ಸಹೋದರಿಯೇ, ನಿನ್ನ ಜೀವನದಲ್ಲಿ ಹಲವು ಅಡಚಣೆಗಳಿದ್ದರೆ, ಮತ್ತು ನೀನು ಸಾಗಬೇಕಾದ ದಾರಿಯಲ್ಲಿ ಎಲ್ಲಾ ವಿಧವಾದ ಆತಂಕಗಳು ನಿನ್ನನ್ನು ತಡೆಯುತ್ತಿದ್ದರೆ, ಈ ಒಂದು ವಾಕ್ಯವನ್ನು ಧ್ಯಾನಿಸಿಕೋ: ಸ್ವಬುದ್ಧಿಯನ್ನೇ ಆಧಾರ ಮಾಡಿಕೊಳ್ಳದೆ ಪೂರ್ಣಹೃದಯದಿಂದ ಕರ್ತನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗ ಮಾಡುವನು. ನೀನೇ ಮಾರ್ಗವನ್ನು ಸರಿಪಡಿಸಲಾರೆ; ಬಹಳ ಸಮಯದಿಂದ ನೀನು ಇದನ್ನು ಮಾಡಲು ಪ್ರಯತ್ನಿಸಿದ್ದೀ. ಆತನು ನಿನ್ನ ಮಾರ್ಗವನ್ನು ಸರಾಗ ಮಾಡುವನು! ನಿನ್ನ ಜೀವನ ಹೇಗೆ ಬದಲಾಗಲಿದೆ ಎಂದು ಯೋಚಿಸು, ಎಲ್ಲಾ ಅಡ್ಡಿ ಆತಂಕಗಳನ್ನು ಆತನು ಪಕ್ಕಕ್ಕೆ ತಳ್ಳುತ್ತಾನೆ ಮತ್ತು ಆ ದಾರಿಯಲ್ಲಿ ನೀನು ಮುಂದಕ್ಕೆ ಸಾಗುತ್ತೀ. ದೇವರಲ್ಲಿ ಪೂರ್ಣಹೃದಯದ ಭರವಸೆ ಇರಿಸುವ ಮನುಷ್ಯನ ಜೀವಿತ ಇದಾಗಿದೆ; ಆತನು ಸ್ವಬುದ್ಧಿಯನ್ನು ಆಧರಿಸುವುದಿಲ್ಲ, ಮತ್ತು ತನ್ನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ದೇವರಿಗೆ ಆದ್ಯತೆಯನ್ನು ನೀಡುತ್ತಾನೆ.