WFTW Body: 

"ಸಮಸ್ತವೂ ಆತನಿಂದ ಉತ್ಪತ್ತಿಯಾಗುತ್ತದೆ" (ರೋಮಾ. 11:36 ಭಾವಾನುವಾದ). ಪರಲೋಕರಾಜ್ಯವು ಆತ್ಮದಲ್ಲಿ ಬಡವರಾಗಿರುವವರಿಗೆ ಸೇರಿದೆಯೆಂದು ಯೇಸು ಹೇಳಿದರು (ಮತ್ತಾ. 5:3). ಆತನ ತಂದೆಯ ಚಿತ್ತದಂತೆ ನಡೆಯುವವರು ಮಾತ್ರ ಆ ರಾಜ್ಯಕ್ಕೆ ಸೇರುವರು ಎಂದು ಸಹ ಆತನು ಹೇಳಿದನು (ಮತ್ತಾ. 7:21). ಪರಲೋಕರಾಜ್ಯವು ಆದಿಯೂ ಅಂತ್ಯವೂ ಇಲ್ಲದ್ದು ಮತ್ತು ಅದರಲ್ಲಿ ದೇವರ ಚಿತ್ತದಂತೆ ಮಾಡಿದ ಕಾರ್ಯಗಳು ಮಾತ್ರವೇ ಕಂಡುಬರುತ್ತವೆ. ಆತ್ಮದ ಬಡವರು ಯಾರೆಂದರೆ, ತಮ್ಮ ಸ್ವಂತ ಮಾನವ ಸ್ವಭಾವವು ಅಪ್ರಾಪ್ತ (ಕೊರತೆಯುಳ್ಳದ್ದು) ಎಂದು ತಿಳಿದುಕೊಂಡು, ದೇವರ ಚಿತ್ತಕ್ಕೆ ಸಂಪೂರ್ಣವಾಗಿ ವಿಧೇಯರಾಗುವಂತವರು. ಹೀಗೆ ನೋಡಿದಾಗ, ಯೇಸುವು ನಿರಂತರ ಆತ್ಮದ ಬಡತನವನ್ನು ಹೊಂದಿದ್ದನು.

ಮಾನವನು ಹೇಗೆ ಜೀವಿಸಬೇಕೆಂದು ದೇವರು ಸಂಕಲ್ಪಿಸಿದರೋ, ಯೇಸುವು ಅದೇ ರೀತಿ ಜೀವಿಸಿದನು - ಆತನು ದೇವರನ್ನು ಸದಾಕಾಲ ಆತುಕೊಂಡಿದ್ದನು ಮತ್ತು ದೇವರ ಹೊರತಾಗಿ ತನ್ನ ಮನೋಬಲವನ್ನು ಬಳಸಲು ನಿರಾಕರಿಸಿದನು. ಆತನು ಹೇಳಿದ ಮಾತುಗಳನ್ನು ಪರಿಗಣಿಸಿರಿ: "ಮಗನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು .... ನಾನು ನನ್ನಷ್ಟಕ್ಕೇ ಏನೂ ಮಾಡಲಾರೆನು, ತಂದೆಯ ಮಾತಿಗೆ ಅನುಸಾರವಾಗಿ ನ್ಯಾಯ ತೀರಿಸುತ್ತೇನೆ .... ನಾನು ನನ್ನಷ್ಟಕ್ಕೇ ಏನೂ ಮಾಡದೆ, ತಂದೆ ತೋರಿಸಿದ ಹಾಗೆ ಮಾತನಾಡುತ್ತೇನೆ .... ನಾನು ನನ್ನಷ್ಟಕ್ಕೇ ಬರಲಿಲ್ಲ, ಆತನೇ ನನ್ನನ್ನು ಕಳುಹಿಸಿದ್ದಾನೆ .... ನನ್ನಷ್ಟಕ್ಕೆ ನಾನೇ ಮಾತನಾಡುವುದಿಲ್ಲ; ನನ್ನನ್ನು ಕಳುಹಿಸಿಕೊಟ್ಟ ತಂದೆಯೇ ನೀನು ಇಂಥದ್ದನ್ನು ಹೇಳಬೇಕು, ಹೀಗೆ ಹೀಗೆ ಮಾತನಾಡಬೇಕು ಎಂಬುದಾಗಿ ಆಜ್ಞೆಮಾಡಿದ್ದಾನೆ .... ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುವುದಿಲ್ಲ; ತಂದೆಯು ನನ್ನಲ್ಲಿದ್ದುಕೊಂಡು ತನ್ನ ಕ್ರಿಯೆಗಳನ್ನು ನಡಿಸುತ್ತಾನೆ" (ಯೋಹಾ. 5:19,30,8:28,42,12:49,14:10).

ಯೇಸುವು ಎಂದಿಗೂ ಯಾವುದೇ ಅಗತ್ಯತೆಯನ್ನು ಕಂಡ ಮಾತ್ರಕ್ಕೆ ಏನೂ ಮಾಡಲಿಲ್ಲ. ಆತನು ಅಗತ್ಯತೆಯನ್ನು ಪರಿಗಣಿಸಿದನು, ಅದಕ್ಕಾಗಿ ಕಾಳಜಿ ಹೊಂದಿದ್ದನು, ಆದರೆ ಆತನ ತಂದೆ ಅದನ್ನು ಮಾಡಲು ಹೇಳಿದಾಗ ಮಾತ್ರ ಆ ಕಾರ್ಯವನ್ನು ಕೈಗೊಂಡನು. ಲೋಕವು ಒಬ್ಬ ರಕ್ಷಕನಿಗಾಗಿ ಅಸಹಾಯಕತೆಯಿಂದ ಕಾಯುತ್ತಿದ್ದಾಗ, ಆತನು ಪರಲೋಕದಲ್ಲಿ ಕಡಿಮೆ ಪಕ್ಷ 4,000 ವರ್ಷಗಳು ಕಾದು ನಿಂತಿದ್ದನು, ಮತ್ತು ಆತನ ತಂದೆ ಆತನನ್ನು ಕಳುಹಿಸಿದಾಗ ಭೂಮಿಗೆ ಬಂದನು (ಯೋಹಾ. 8:42). "ಕಾಲವು ಪರಿಪೂರ್ಣವಾದಾಗ, ದೇವರು ಸಂಕಲ್ಪಿಸಿದ ಸಮಯದಲ್ಲಿ ತನ್ನ ಮಗನನ್ನು ಕಳುಹಿಸಿದರು" (ಗಲಾತ್ಯದವರಿಗೆ 4:4, TLB). ದೇವರು ಪ್ರತಿಯೊಂದು ಕಾರ್ಯಕ್ಕೂ ಕ್ಲುಪ್ತ ಸಮಯವನ್ನು ನಿಯಮಿಸಿದ್ದಾರೆ (ಪ್ರಸಂಗಿ 3:1). ಆ ಸಮಯವು ದೇವರಿಗೆ ಒಬ್ಬರಿಗೇ ತಿಳಿದಿದೆ, ಮತ್ತು ಈ ಕಾರಣಕ್ಕಾಗಿ ಯೇಸುವು ಮಾಡಿದಂತೆ ಪ್ರತಿಯೊಂದು ಕಾರ್ಯದಲ್ಲಿ ನಾವು ತಂದೆಯ ಚಿತ್ತವನ್ನು ಹುಡುಕುವುದಾದರೆ ತಪ್ಪು ಮಾಡುವುದಿಲ್ಲ. ಅದಲ್ಲದೆ ಯೇಸು ಭೂಮಿಗೆ ಬಂದಾಗ, ಆತನು ತನಗೆ ಒಳ್ಳೆಯದೆಂದು ತೋಚಿದ ಸತ್ಕಾರ್ಯಗಳನ್ನು ಮಾಡುತ್ತಾ ಸಂಚರಿಸಲಿಲ್ಲ. ಆತನ ಮನಸ್ಸು ಸಂಪೂರ್ಣವಾಗಿ ಪರಿಶುದ್ಧವಾಗಿದ್ದರೂ, ಆತನು ತನ್ನ ಸ್ವಂತ ಮನಸ್ಸಿನ ಅದ್ಭುತ ಆಲೋಚನೆಗಳ ಪ್ರಕಾರ ನಡೆಯಲಿಲ್ಲ. ಇಲ್ಲ. ಆತನು ತನ್ನ ಮನಸ್ಸನ್ನು ಪವಿತ್ರಾತ್ಮನ ಸೇವಕನಾಗಿ ಇರಿಸಿದ್ದನು.

ಆತನು ತನ್ನ ಹನ್ನೆರಡನೇ ವಯಸ್ಸಿಗೆ ಧರ್ಮಶಾಸ್ತ್ರವನ್ನು ಸಂಪೂರ್ಣವಾಗಿ ತಿಳಕೊಂಡಿದ್ದನು, ಆದಾಗ್ಯೂ ಆತನು ಮುಂದಿನ ಹದಿನೆಂಟು ವರ್ಷಗಳು ತನ್ನ ತಾಯಿಯ ಜೊತೆಗೆ ಇದ್ದುಕೊಂಡು, ಬಡಗಿಯ ವೃತ್ತಿಯನ್ನು ಮಾಡುತ್ತಾ ಕಳೆದನು; ಕುರ್ಚಿ-ಮೇಜು, ಇತ್ಯಾದಿಗಳನ್ನು ತಯಾರಿಸಿದನು. ಆತನ ಸುತ್ತಮುತ್ತಲು ಸಾಯುತ್ತಿದ್ದ ಜನರಿಗೆ ಅವಶ್ಯವಾಗಿದ್ದ ಸಂದೇಶ ಆತನ ಬಳಿಯಿತ್ತು, ಆದರೂ ಆತನು ಸುವಾರ್ತೆಯನ್ನು ಸಾರುವ ಸೇವೆಗೆ ಹೊರಡಲಿಲ್ಲ. ಯಾಕೆ? ಯಾಕೆಂದರೆ ತಂದೆಯು ನಿರ್ಣಯಿಸಿದ ಸಮಯ ಇನ್ನೂ ಬಂದಿರಲಿಲ್ಲ.

ಯೇಸುವು ಕಾದುನಿಲ್ಲಲು ಹೆದರಲಿಲ್ಲ. "ಭರವಸವಿಡುವವನು ಆತುರಪಡನು"(ಯೆಶಾಯನು 28:16). ಮತ್ತು ತನ್ನ ತಂದೆಯ ಸಮಯ ಪ್ರಾಪ್ತವಾದಾಗ, ಆತನು ತನ್ನ ಬಡಗಿಯ ವೃತ್ತಿಯನ್ನು ತ್ಯಜಿಸಿ, ಬೋಧಿಸಲು ಆರಂಭಿಸಿದನು. ಇದರ ನಂತರ ಅನೇಕ ಸಾರಿ, ಯಾವುದನ್ನೋ ಮಾಡಲು "ಇನ್ನೂ ನನ್ನ ಸಮಯವು ಬಂದಿಲ್ಲ," ಎಂದು ಆತನು ಹೇಳುತ್ತಿದ್ದನು (ಯೋಹಾನನು 2:4,7:6). ಯೇಸುವಿನ ಜೀವಿತದ ಪ್ರತಿಯೊಂದು ಸಂಗತಿಯೂ ತಂದೆಯ ಚಿತ್ತಕ್ಕೆ ಮತ್ತು ಅವರ ಸಮಯಕ್ಕೆ ಅನುಸಾರವಾಗಿತ್ತು. ಯೇಸುವಿಗೆ ಕೇವಲ ಮಾನವ ಅಗತ್ಯತೆಯು ಕಾರ್ಯಕ್ಕೆ ಕರೆಯಾಗಿರಲಿಲ್ಲ, ಏಕೆಂದರೆ ಅದು ತನ್ನ ಸ್ವಂತ ಚಿತ್ತವನ್ನು - ತನ್ನ ಮನಸ್ಸಿನ ಆಲೋಚನೆಯನ್ನು ಮಾಡಿದಂತೆ ಆಗುತ್ತಿತ್ತು. ಮಾನವ ಅಗತ್ಯತೆಗಳು ಪರಿಗಣಿಸಲ್ಪಟ್ಟವು, ಆದರೆ ದೇವರ ಚಿತ್ತವು ನೆರವೇರಬೇಕಿತ್ತು. ಯೇಸುವು ಇದನ್ನು ಯೋಹಾನನು 4:34,35ರಲ್ಲಿ ಚೆನ್ನಾಗಿ ಸ್ಪಷ್ಟಪಡಿಸಿದನು. ಅಗತ್ಯತೆ (35ನೇ ವಚನ): "ನೀವು ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಹೊಲದಲ್ಲಿ ಕೊಯ್ಲಿಗೆ ಬಂದಿರುವ ಬೆಳೆಯಂತೆ ನಮ್ಮ ಸುತ್ತಲೂ ಹರಡಿರುವ ಪ್ರದೇಶಗಳಲ್ಲಿ ಮಾನವ ಆತ್ಮಗಳು ಕೊಯ್ಲಿಗಾಗಿ ಕಾದು ನಿಂತಿವೆ ..." ಕಾರ್ಯಾಚರಣೆಯ ಮೂಲತತ್ವ (34ನೇ ವಚನ): "ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಮಾಡಿ ಪೂರೈಸುವದೇ ನನ್ನ ಆಹಾರವು (TLB ಭಾಷಾಂತರ). ಯೇಸು ತನ್ನ ಸ್ನೇಹಿತರ ಸಲಹೆಗಳನ್ನು ಕೇಳಿ ಅನೇಕ ಸತ್ಕಾರ್ಯಗಳನ್ನು ಮಾಡಲಿಲ್ಲ, ಏಕೆಂದರೆ ಜನರಿಗೆ ಒಳ್ಳೆಯದೆಂದು ತೋಚುವ ಕಾರ್ಯಗಳನ್ನು ತಾನು ಮಾಡಲು ಹೊರಟರೆ, ತನ್ನ ತಂದೆ ತನಗಾಗಿ ಇರಿಸಿದ್ದ ಅತ್ಯುತ್ತಮ ಸಂಗತಿಯನ್ನು ಕಳಕೊಳ್ಳುತ್ತೇನೆಂದು ಆತನು ತಿಳಿದಿದ್ದನು.

ಒಂದು ಸಲ ಒಂದು ಊರಿನ ಜನರು ಇನ್ನೂ ಸ್ವಲ್ಪ ಸಮಯ ಇರಬೇಕೆಂದು ಆತನನ್ನು ಬೇಡಿಕೊಂಡಾಗ, ಆತನು ಇರಲಾರೆನೆಂದು ಹೇಳಿದನು, ಏಕೆಂದರೆ ತನ್ನ ತಂದೆಯ ಧ್ವನಿ ಆತನನ್ನು ಬೇರೆ ಕಡೆಗೆ ಕರೆಯುತ್ತಿದ್ದುದನ್ನು ಆತನು ಕೇಳಿಸಿಕೊಂಡಿದ್ದನು. ಮಾನವ ದೃಷ್ಟಿಯಲ್ಲಿ, ಆತನು ಇದ್ದ ಸ್ಥಳದಲ್ಲೇ ಉಳಕೊಳ್ಳಲು ಬಹಳ ಒಳ್ಳೆಯ ಕಾರಣಗಳಿದ್ದವು, ಏಕೆಂದರೆ ಅಲ್ಲಿನ ಜನರು ಆತನ ಸಂದೇಶಕ್ಕೆ ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸಿದ್ದರು. ಆದರೆ ದೇವರ ಆಲೋಚನೆಗಳು ಮಾನವನ ಆಲೋಚನೆಗಳಲ್ಲ ಮತ್ತು ದೇವರ ಮಾರ್ಗಗಳು ಮಾನವನ ಮಾರ್ಗಗಳಲ್ಲ (ಯೆಶಾಯನು 55:8). ಯೇಸುವು ದಿನದ ಮುಂಜಾನೆಯ ಮೊಬ್ಬಿನಲ್ಲಿ, ಪೇತ್ರ ಮತ್ತು ಆತನ ಜೊತೆಗಾರರು ತನಗೆ ನೀಡಲಿದ್ದ ಸಲಹೆಗಳನ್ನು ಕೇಳಿಸಿಕೊಳ್ಳುವುದಕ್ಕೆ ಮೊದಲು, ಎದ್ದು ಹೊರಟು ಏಕಾಂತ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸಿ, ತನ್ನ ತಂದೆಯ ಸ್ವರವನ್ನು ಕೇಳಿಸಿಕೊಂಡಿದ್ದನು (ಮಾರ್ಕ. 1:35-39). "ಸ್ವಬುದ್ಧಿಯನ್ನು ಆಧಾರ ಮಾಡಿಕೊಳ್ಳಬೇಡ; ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗು; ಮತ್ತು ಆತನೇ ನಿನ್ನ ಮಾರ್ಗಗಳನ್ನು ಸರಾಗ ಮಾಡುವನು" ಎಂಬ ವಾಕ್ಯವನ್ನು ಆತನು ಪಾಲಿಸಿದನು (ಜ್ಞಾನೋಕ್ತಿಗಳು 3:5,6). ಆತನು ಪ್ರತಿಯೊಂದು ವಿಷಯದಲ್ಲಿ ಮಾರ್ಗದರ್ಶನಕ್ಕಾಗಿ ತನ್ನ ತಂದೆಯನ್ನು ಅವಲಂಬಿಸಿದ್ದನು. ನಾವು ಯೆಶಾಯನು 50:4ರಲ್ಲಿ, ಕರ್ತ ಯೇಸುವಿನ ಕುರಿತಾದ ಒಂದು ಪ್ರವಾದನಾ ವಾಕ್ಯವನ್ನು ನೋಡುತ್ತೇವೆ, "ಆತನು (ತಂದೆಯು) ಪ್ರತಿದಿನ ಬೆಳಗ್ಗೆ ನನ್ನನ್ನು ಎಚ್ಚರಿಸಿ, ತನ್ನ ಚಿತ್ತವನ್ನು ಅರಿಯುವ ಜ್ಞಾನವನ್ನು ನನಗೆ ಕೊಡುತ್ತಾನೆ." ಇದು ಯೇಸುವಿನ ಅಭ್ಯಾಸವಾಗಿತ್ತು. ಆತನು ತನ್ನ ತಂದೆಯ ಸ್ವರವನ್ನು ಮುಂಜಾನೆಯಿಂದ ಹಿಡಿದು ದಿನವಿಡೀ ಕೇಳಿಸಿಕೊಳ್ಳುತ್ತಿದ್ದನು, ಮತ್ತು ನಿಖರವಾಗಿ ತನ್ನ ತಂದೆಯು ತನಗೆ ಹೇಳಿದ್ದನ್ನು ಮಾಡುತ್ತಿದ್ದನು. ಯಾವ ಕಾರ್ಯವನ್ನು ಮಾಡಬೇಕು ಎಂಬುದಾಗಿ ಆತನು ಜನರೊಂದಿಗೆ ಚರ್ಚಿಸುತ್ತಿರಲಿಲ್ಲ, ಆದರೆ ತನ್ನ ತಂದೆಯೊಂದಿಗೆ ಪ್ರಾರ್ಥನಾ ಕೂಟವನ್ನು ನಡೆಸುತ್ತಿದ್ದನು. ಸ್ವಬುದ್ಧಿಯಿಂದ (ಮನಸ್ಸಿನ ಆಲೋಚನೆಗಳ ಪ್ರಕಾರ) ಜೀವಿಸುವ ಕ್ರೈಸ್ತರು ಜನರೊಂದಿಗೆ ಚರ್ಚಿಸಿ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಆತ್ಮಿಕ ಕ್ರೈಸ್ತರು ದೇವರ ಸ್ವರಕ್ಕಾಗಿ ಕಾಯುತ್ತಾರೆ.

ಯೇಸುವು ತನ್ನ ತಂದೆಯ ಮೂಲಕ ಜೀವಿಸಿದನು (ಯೋಹಾ. 6:57). ಯೇಸುವಿಗೆ ದೇವರು ನುಡಿದ ಮಾತು ಆಹಾರಕ್ಕಿಂತಲೂ ಮುಖ್ಯವಾಗಿತ್ತು (ಮತ್ತಾ. 4:4). ತಂದೆಯಿಂದ ನೇರವಾಗಿ, ಒಂದು ದಿನದಲ್ಲಿ ಹಲವು ಬಾರಿ, ಆ ಮಾತು ಆತನಿಗೆ ಬೇಕಾಗಿತ್ತು. ಅದನ್ನು ಪಡೆದುಕೊಂಡ ನಂತರ ಆತನು ಅದನ್ನು ಪಾಲಿಸುತ್ತಿದ್ದನು. ಪಡೆದುಕೊಂಡ ವಾಕ್ಯದ ಪಾಲನೆಯೂ ಸಹ ಆತನಿಗೆ ದೈನಿಕ ಆಹಾರಕ್ಕಿಂತ ಹೆಚ್ಚು ಮುಖ್ಯವಾಗಿತ್ತು (ಯೋಹಾ. 4:34). ಯೇಸುವು ತಂದೆಯನ್ನು ಆತುಕೊಂಡು ಜೀವಿಸಿದನು. ದಿನವಿಡೀ ಆತನ ಮನೋಭಾವ, "ತಂದೆಯೇ, ಅಪ್ಪಣೆಯಾಗಲಿ, ನಾನು ಕಾದಿದ್ದೇನೆ," ಎಂಬುದಾಗಿತ್ತು. ದೇವಾಲಯದೊಳಗೆ ಕುಳಿತುಕೊಂಡು ಹಣದ ವ್ಯವಹಾರದಲ್ಲಿ ತೊಡಗಿದ್ದ ಚಿನಿವಾರರನ್ನು ಹೊರಕ್ಕೆ ಅಟ್ಟಿದ ಘಟನೆಯನ್ನು ನೋಡಿರಿ. ಯೇಸುವು ಅನೇಕ ಬಾರಿ ದೇವಾಲಯಕ್ಕೆ ಹೋದಾಗ ಅಲ್ಲಿ ಚಿನಿವಾರರು ಇದ್ದಿರಬೇಕು, ಆದರೆ ಆ ಸಂದರ್ಭಗಳಲ್ಲಿ ಆತನು ಅವರನ್ನು ಹೊರಕ್ಕೆ ಅಟ್ಟಲಿಲ್ಲ. ಹಾಗೆ ಮಾಡಲು ತನ್ನ ತಂದೆಯ ಪ್ರೇರೇಪಣೆ ಸಿಕ್ಕಿದಾಗ ಮಾತ್ರ ಆತನು ಹಾಗೆ ಮಾಡಿದನು. ಮನಸ್ಸಿನ ಆಲೋಚನೆಗಳಿಗೆ ತಕ್ಕಂತೆ ಜೀವಿಸುವ ಕ್ರೈಸ್ತರಾದರೋ, ನಿರಂತರವಾಗಿ ಚಿನಿವಾರರನ್ನು ಹೊರಕ್ಕೆ ಅಟ್ಟುವುದರಲ್ಲಿ ನಿರತರಾಗಿರುತ್ತಾರೆ ಅಥವಾ ಅವರ ಗೊಡವೆಗೆ ಹೋಗುವುದೇ ಇಲ್ಲ. ಯೇಸುವು ಮಾಡಬಹುದಾಗಿದ್ದ ಅನೇಕ ಸತ್ಕಾರ್ಯಗಳಿದ್ದವು, ಆದರೆ ಆತನು ಅವುಗಳನ್ನು ಮಾಡಲಿಲ್ಲ, ಏಕೆಂದರೆ ಅವು ಆತನ ತಂದೆಯು ಆತನಿಗಾಗಿ ಸಂಕಲ್ಪಿಸಿದ್ದ ಸಂಗತಿಗಳಿಂದ ಹೊರತಾಗಿದ್ದವು. ಆತನು ಯಾವಾಗಲೂ ಅತ್ಯುತ್ತಮ ಸಂಗತಿಗಳಲ್ಲಿ ತೊಡಗಿದ್ದನು. ಅವುಗಳಷ್ಟೇ ಸಾಕಾಗಿದ್ದವು. ಆತನು ಸತ್ಕಾರ್ಯಗಳನ್ನು ಮಾಡುವುದಕ್ಕಾಗಿ ಭೂಮಿಗೆ ಬರಲಿಲ್ಲ, ಆದರೆ ತನ್ನ ತಂದೆಯ ಚಿತ್ತವನ್ನು ನೆರವೇರಿಸುವುದಕ್ಕಾಗಿ ಬಂದನು.

ಆತನು ತನ್ನ ಹನ್ನೆರಡನೇ ವಯಸ್ಸಿನಲ್ಲಿ, ಯೋಸೇಫನು ಮತ್ತು ಮರಿಯಳನ್ನು, "ನಾನು ನನ್ನ ತಂದೆಯ ಮನೆಯ ವಿಚಾರಗಳಲ್ಲಿ ತೊಡಗಿರಬೇಕೆಂದು ನಿಮಗೆ ತಿಳಿದಿರಲಿಲ್ಲವೇ?" ಎಂದು ಪ್ರಶ್ನಿಸಿದನು (ಲೂಕನು 2:49 ಸ್ವ. ಅನುವಾದ). ಆತನ ಗಮನ ಅವುಗಳ ಮೇಲೆ ಮಾತ್ರವೇ ಇತ್ತು. ಆತನು 33 1/2 ವರ್ಷಗಳು ಭೂಮಿಯ ಮೇಲೆ ಜೀವಿಸಿದಾಗ, ಸಂಪೂರ್ಣ ತೃಪ್ತಿಯಿಂದ, "ತಂದೆಯೇ, ನಾನು ಮಾಡಬೇಕೆಂದು ನೀನು ಕೊಟ್ಟ ಆದೇಶದಂತೆ ಪ್ರತಿಯೊಂದನ್ನೂ ನೆರವೇರಿಸಿದ್ದೇನೆ," ಎಂದು ಹೇಳಲು ಸಾಧ್ಯವಾಯಿತು (ಯೋಹಾ. 17:4). ಆತನು ಲೋಕದ ಎಲ್ಲೆಡೆಗೆ ಹೋಗಲಿಲ್ಲ, ಆತನು ಒಂದೇ ಒಂದು ಪುಸ್ತಕವನ್ನೂ ಬರೆಯಲಿಲ್ಲ, ಕೆಲವೇ ಮಂದಿ ಆತನನ್ನು ಅನುಸರಿಸಿದರು, ಲೋಕದ ಅನೇಕ ಭಾಗಗಳಲ್ಲಿ ಅನೇಕ ಅವಶ್ಯಕತೆಗಳು ಪೂರೈಸದೇ ಉಳಿದುಕೊಂಡಿದ್ದವು, ಇಂತಹ ಅನೇಕ ಸಂಗತಿಗಳಿದ್ದವು. ಆದರೆ ತಂದೆಯು ಆತನಿಗಾಗಿ ನೇಮಿಸಿದ್ದ ಕಾರ್ಯವನ್ನು ಆತನು ಮುಗಿಸಿದ್ದನು. ಅಂತಿಮವಾಗಿ ಅದು, ಮತ್ತು ಅದು ಮಾತ್ರವೇ, ಅವಶ್ಯವಾದ ಸಂಗತಿಯಾಗಿದೆ.
(ಮುಂದುವರಿಯಲಿದೆ)