ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

"ಸಾಲ ಕೇಳಲಿಕ್ಕಾಗಿ ಬಂದವನಿಂದ ನೀನು ಮುಖ ತಿರುಗಿಸಬೇಡ," ಎಂದು ನಾವು ಮತ್ತಾಯನು 5:42ರಲ್ಲಿ ಓದಿಕೊಳ್ಳುತ್ತೇವೆ. ನಾವು ಕೆಲವು ವೇಳೆ ಒಂದು ವಾಕ್ಯವನ್ನು ಮತ್ತೊಂದು ವಾಕ್ಯದೊಂದಿಗೆ ಹೋಲಿಸಿ ನೋಡುವುದರ ಮೂಲಕ ವಿಷಯಗಳನ್ನು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ, ಹಾಗಾಗಿ ಮೇಲಿನ ವಚನದ ಅರ್ಥವನ್ನು ಗ್ರಹಿಸಲಿಕ್ಕಾಗಿ ನಾವು ಅದಕ್ಕೆ ಹೋಲುವಂತ ಮತ್ತೊಂದು ವಚನವನ್ನು ನೋಡಿಕೊಳ್ಳುವುದು ಅವಶ್ಯವಾಗಿದೆ. ಯೇಸುವು ಲೂಕನು 6:35ರಲ್ಲಿ, "ತಿರಿಗಿ ಸಿಕ್ಕೀತೆಂಬ ನಿರೀಕ್ಷೆ ಇಟ್ಟುಕೊಂಡು ಸಾಲ ಕೊಡಬೇಡಿರಿ," ಎಂದರು.

ಒಂದು ಸಲ ಒಬ್ಬ ಸಹೋದರನು ನನ್ನ ಬಳಿಗೆ ಬಂದು, ಮತ್ತೊಬ್ಬ ಸಹೋದರನು ತನ್ನಿಂದ ಮೂರು ಸಾವಿರ ರೂಪಾಯಿಗಳ ಸಾಲ ಪಡೆದಿದ್ದನು ಮತ್ತು ಸಾಲವನ್ನು ಮರುಪಾವತಿ ಮಾಡುವ ಭರವಸೆ ಕೊಟ್ಟಿದ್ದನು, ಎಂದು ಹೇಳಿದ್ದು ನನಗೆ ನೆನಪಿಗೆ ಬರುತ್ತದೆ. ಬಹಳ ಸಮಯದ ನಂತರವೂ ಆ ಸಹೋದರನು ಸಾಲವನ್ನು ತೀರಿಸಲಿಲ್ಲ. ಸಾಲ ಕೊಟ್ಟಿದ್ದ ಆ ಸಹೋದರನಿಗೆ ನಾನು, ಈ ಸಂದರ್ಭದಲ್ಲಿ ನೀನೇ ದೇವರ ವಾಕ್ಯಕ್ಕೆ ಅವಿಧೇಯನಾಗಿ ನಡೆದುಕೊಂಡಿದ್ದೀ ಎಂದು ಹೇಳಿದೆ, ಏಕೆಂದರೆ ದೇವರ ವಾಕ್ಯವು "ತಿರಿಗಿ ಸಿಕ್ಕೀತೆಂಬ ನಿರೀಕ್ಷೆಯಿಲ್ಲದೆ ಕೊಡು," ಎನ್ನುತ್ತದೆ. ನೀನು ತಿರಿಗಿ ಸಿಕ್ಕೀತೆಂದು ಸಾಲವನ್ನು ಕೊಟ್ಟರೆ ನಿನಗೆ ಏನು ಹೊಗಳಿಕೆ ಬಂದೀತು, ಪಾಪಿಷ್ಠರು ಸಹ ಪಾಪಿಷ್ಠರಿಗೆ ತಿರಿಗಿ ಸಿಕ್ಕೀತೆಂದು ಸಾಲ ಕೊಡುತ್ತಾರಲ್ಲಾ (ಲೂಕ. 6:34). ಒಬ್ಬ ಕ್ರೈಸ್ತ ವಿಶ್ವಾಸಿಯಾಗಿರುವ ನೀನು ಹೀಗೆ ಕೊಡಬಾರದು - ತಿರಿಗಿ ಪಡೆಯುವ ನಿರೀಕ್ಷೆಯಿಲ್ಲದೆ ಕೊಡು.

ಯೇಸುವಿನ ಮಾತಿನ ಅರ್ಥ, ನೀನು ಎಷ್ಟನ್ನು ಹಿಂದೆ ಸಿಗುವ ನಿರೀಕ್ಷೆಯಿಲ್ಲದೆ ಕೊಡಬಲ್ಲೆಯೋ, ಅಷ್ಟನ್ನು ಮಾತ್ರ ಸಾಲವಾಗಿ ಕೊಡು. ಹಾಗಾಗಿ, ನಾನು ಈ ಸಹೋದರನಿಗೆ ಹೇಳಿದ್ದು ಏನೆಂದರೆ, ಆ ವ್ಯಕ್ತಿ ಸಾಲ ಕೇಳಿದಾಗ ಈತನು ಮೂರು ಸಾವಿರ ರೂಪಾಯಿ ಕೊಡಬಾರದಾಗಿತ್ತು. ಅವನು ಹೀಗೆ ಹೇಳಬೇಕಿತ್ತು, "ಕ್ಷಮಿಸು, ನಿನಗೆ 3,000 ರೂಪಾಯಿ ಕೊಡುವ ಶಕ್ತಿ ನನಗಿಲ್ಲ, ಆದರೆ ನಾನು ನಿನಗೆ 500 ರೂಪಾಯಿ ಕೊಡಬಲ್ಲೆ." ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಎಷ್ಟನ್ನು ಹಿಂದಕ್ಕೆ ಪಡೆಯುವ ನಿರೀಕ್ಷೆಯಿಲ್ಲದೆ ಕೊಡಬಹುದೋ, ಅಷ್ಟನ್ನು ಮಾತ್ರ ಕೊಡು. ಅದನ್ನು ಒಂದು ಉಡುಗೊರೆಯಾಗಿ ಕೊಡು, ಮತ್ತು ಹಿಂದೆ ಪಡೆಯದಿದ್ದರೆ ಬಿಟ್ಟುಬಿಡು. ನೀನು ಹೀಗೆ ಮಾಡದಿದ್ದರೆ, ಆಗ ನೀನು ದೇವರ ವಾಕ್ಯಕ್ಕೆ ಅವಿಧೇಯನಾಗಿದ್ದೀ. ನಾವು ಈ ವಿಷಯಗಳಲ್ಲಿ ಸೂಕ್ತ ಮನೋಭಾವ ಏನೆಂದು ಅರಿತುಕೊಳ್ಳಬೇಕು.

ಯೇಸುವು "ಸಾಲ ಕೇಳಲು ಬಂದವನಿಂದ ಮುಖ ತಿರುಗಿಸಬೇಡ," ಎಂದು ಹೇಳಿದ್ದರ ಅರ್ಥವೇನು? ನಾನು ಒಬ್ಬ ಯೌವನಸ್ಥ ಕ್ರೈಸ್ತ ವಿಶ್ವಾಸಿಯಾಗಿದ್ದಾಗ ಭಾರತೀಯ ಸೇನಾಪಡೆಯ ಒಬ್ಬ ಅಧಿಕಾರಿಯಾಗಿದ್ದೆ, ಮತ್ತು ಬಹಳ ಹೆಚ್ಚು ಸಂಬಳ ಪಡೆಯುತ್ತಿದ್ದೆ (ನನ್ನ ಅವಶ್ಯಕತೆಗಳಿಗಿಂತ ಬಹಳ ಹೆಚ್ಚು). ಹಾಗಾಗಿ ನನ್ನ ಬಳಿ ಧಾರಾಳವಾಗಿ ಹಣವಿರುತ್ತಿತ್ತು. ಆ ಕ್ರೈಸ್ತಸಭೆಯಲ್ಲಿ ನನಗಿಂತ ಬಡವನಾಗಿದ್ದ ಒಬ್ಬ ಸಹೋದರನು ಈ ವಿಷಯವನ್ನು ಅರಿತಿದ್ದನು ಮತ್ತು ನನ್ನ ಬಳಿ ಬಂದು ಸಾಲ ಕೇಳಿದನು. ಆತನಿಗೆ ಎಷ್ಟು ಬೇಕಿತ್ತೆಂದು ನಾನು ಕೇಳಿದೆ ಮತ್ತು ಆತನು ಒಂದು ತಿಂಗಳಲ್ಲಿ ಸಾಲ ತೀರಿಸುವುದಾಗಿ ಹೇಳಿದನು. ಒಂದು ತಿಂಗಳ ನಂತರ ಆತನು ನನ್ನ ಬಳಿ ಬಂದು ತನಗೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲವೆಂದು ಹೇಳಿ ಇನ್ನಷ್ಟು ಹಣವನ್ನು ಕೇಳಿದನು, ಹಾಗಾಗಿ ನಾನು ಆತನಿಗೆ ಮತ್ತಷ್ಟು ಹಣ ನೀಡಿದೆ. "ಸಾಲ ಕೇಳಲಿಕ್ಕಾಗಿ ಬಂದವನಿಂದ ನೀನು ಮುಖ ತಿರುಗಿಸಬೇಡ," ಎಂಬ ವಚನದ ಬಗ್ಗೆ ಯೋಚಿಸಿ ನಾನು ಹಾಗೆ ಮಾಡಿದೆ ಮತ್ತು ಅನೇಕ ತಿಂಗಳುಗಳ ವರೆಗೆ ನಾನು ಆತನಿಗೆ ಹಣ ಕೊಡುತ್ತಲೇ ಇದ್ದೆ. ನಾನು ದೇವರ ವಾಕ್ಯವನ್ನು ಪಾಲಿಸುತ್ತಿದ್ದೇನೆ ಎಂದುಕೊಂಡು ಸುಮ್ಮನಿದ್ದೆ. ನಾನು ವಯಸ್ಸಿನಲ್ಲಿ ಚಿಕ್ಕವನಾಗಿದ್ದೆ, ಹೊಸದಾಗಿ ದೀಕ್ಷಾಸ್ನಾನ ಪಡೆದಿದ್ದೆ ಮತ್ತು ನನಗೆ ತಿಳಿದ ಮಟ್ಟಿಗೆ ದೇವರ ವಾಕ್ಯವನ್ನು ಅನುಸರಿಸುತ್ತಿದ್ದೆ. ಆದರೆ ಸ್ವಲ್ಪ ಸಮಯದ ನಂತರ, ಸಾಲ ಪಡೆದಿದ್ದ ಈ ವ್ಯಕ್ತಿಯು ಹಿಂಜಾರಿದನು ಮತ್ತು ಕುಡಿತ ಹಾಗೂ ಇತರ ದುರಾಭ್ಯಾಸಗಳನ್ನು ಆರಂಭಿಸಿದನು. ನಾನು ಇದನ್ನು ಕೇಳಿದಾಗ, ಆತನಿಗೆ ಪತ್ರ ಬರೆದು ಆತನು ಮಧ್ಯಪಾನಕ್ಕಾಗಿ ಹಣವನ್ನು ಬಳಸುತ್ತಿದ್ದರೆ ಮತ್ತು ಸೈತಾನನ ರಾಜ್ಯಕ್ಕಾಗಿ ಖರ್ಚು ಮಾಡುತ್ತಿದ್ದರೆ, ನನಗೆ ಹಣವನ್ನು ಹಿಂತಿರುಗಿಸತಕ್ಕದ್ದು, ಏಕೆಂದರೆ ಈ ಹಣವು ದೇವರ ರಾಜ್ಯದ ಉಪಯೋಗಕ್ಕಾಗಿ ಇದೆಯೆಂದು ಹೇಳಿದೆ. ಆತನು ನನ್ನ ಮೇಲೆ ಬಹಳ ಸಿಟ್ಟಾದನು ಮತ್ತು ನಿರ್ಜೀವ ಕ್ರೈಸ್ತ ಪಂಗಡಗಳೂ ಸಹ ನಾನು ಮಾಡಿದ ಬೇಡಿಕೆಯನ್ನು ಮಾಡುವುದಿಲ್ಲವೆಂದು ಹೇಳಿದನು.

ನಂತರ ಕರ್ತನು ನನಗೆ ಇದನ್ನು ಮರೆತುಬಿಡಲು ಹೇಳಿದನು. ನಾನು ಆ ವ್ಯಕ್ತಿಗೆ ಉತ್ತರಿಸಲಿಲ್ಲ ಮತ್ತು ಹಣವನ್ನು ಹಿಂದೆ ಪಡೆಯಲೇ ಇಲ್ಲ. ನನ್ನ ಮನಸ್ಸಿನ ಆಲೋಚನೆ ಏನಾಗಿತ್ತೆಂದರೆ, "ಕರ್ತನೇ, ನಾನು ಏನು ತಪ್ಪು ಮಾಡಿದೆ? ನಿನ್ನ ವಾಕ್ಯದಲ್ಲಿ ’ಸಾಲ ಕೇಳಲಿಕ್ಕಾಗಿ ಬಂದವನಿಂದ ನೀನು ಮುಖ ತಿರುಗಿಸಬೇಡ,’ ಎಂದು ಹೇಳಿದ್ದಕ್ಕೆ ಅನುಸಾರವಾಗಿ ನಾನು ಮಾಡಿದೆ.’" ಇದರಿಂದ ಕರ್ತನು ನನಗೆ ಕಲಿಸಿದ ಸಂಗತಿ ಮುಂದಿನ ಈ 60ಕ್ಕೂ ಹೆಚ್ಚಿನ ವರ್ಷಗಳಲ್ಲಿ ನನಗೆ ಸಹಾಯ ನೀಡಿದೆ. ಅದೇನೆಂದರೆ, ದೇವರ ಒಂದು ವಾಕ್ಯವನ್ನು ದೇವರ ಮತ್ತೊಂದು ವಾಕ್ಯಕ್ಕೆ ಹೋಲಿಸಬೇಕು. ಕರ್ತನು ನನಗೆ ತೋರಿಸಿದ್ದು ಏನೆಂದರೆ, ನಾನು ನನ್ನ ಕೈಯಲ್ಲಿದ್ದ ಹಣವನ್ನು ನನ್ನ ಸ್ವಂತದ್ದೆಂದು ಅಂದುಕೊಂಡಿದ್ದೆ. ಒಂದು ವಚನ ಸಾಲ ಕೇಳುವವನಿಗೆ ಕೊಡು ಎಂದು ಹೇಳುತ್ತದೆ, ಆದರೆ ನನ್ನ ಬಳಿ ಇರುವಂತ ಯಾವುದೂ ನನ್ನ ಸ್ವಂತದ್ದಲ್ಲ - ಭೂಮಿಯ ಮೇಲಿನ ಸಮಸ್ತವೂ ಕರ್ತನದ್ದಾಗಿದೆಯೆಂದು ಇನ್ನೊಂದು ವಚನ ಹೇಳುತ್ತದೆ (1 ಕೊರಿ. 10:26). ಹಾಗಾಗಿ ನಾನು ಪಡೆದ ಸಂಬಳ ನನ್ನ ಸ್ವಂತದ್ದೆಂಬ ಯೋಚನೆ ಬಂದಾಗ, ಅದು ನನ್ನದಲ್ಲವೆಂದು ಅರಿತುಕೊಂಡು, ನಾನು ಅದನ್ನು ತ್ಯಜಿಸಬೇಕು. ನಾನು ಅದನ್ನು ಕರ್ತನಿಗೆ ಕೊಡಬೇಕು. ತಿಂಗಳ ಆರಂಭದಲ್ಲಿ ನಾನು ಸಂಬಳವನ್ನು ಪಡೆದರೂ ಮತ್ತು ಅದು ನನ್ನ ಬ್ಯಾಂಕ್ ಖಾತೆಗೆ ಜಮೆಯಾದರೂ, ಆ ಹಣ ನನ್ನದಲ್ಲವೆಂದು ನಾನು ಹೇಳಬೇಕು; ಅದು ದೇವರ ಹಣವಾಗಿದೆ.

ಆಗ ಒಂದು ಚಿತ್ರಣ ನನ್ನ ಮನಸ್ಸಿಗೆ ಬಂತು: ನನಗೆ ಯಾರಾದರೂ 5,000 ರೂಪಾಯಿ ಹಣವನ್ನು ಕೊಟ್ಟು, ಮುಂದೆ ತಾನು ಅದನ್ನು ಹಿಂದಕ್ಕೆ ಪಡೆಯುತ್ತೇನೆಂದು ಹೇಳಿದ್ದಾದರೆ, 5,000 ರೂಪಾಯಿ ನನಗೆ ಸಿಕ್ಕಿದ್ದರ ಬಗ್ಗೆ ಮತ್ತೊಬ್ಬನು ಕೇಳಿಸಿಕೊಂಡು, ತನಗೆ 3,000 ರೂಪಾಯಿ ಸಾಲ ಬೇಕೆಂದು ನನ್ನನ್ನು ಕೇಳಿದರೆ, ನಾನು ಹೇಗೆ ಉತ್ತರಿಸಬೇಕು? ನಾನು, "ಸಹೋದರನೇ, ಕ್ಷಮಿಸು; ಅದು ನನ್ನ ಹಣವಲ್ಲ, ಬೇರೆಯವರದ್ದು. ಅದನ್ನು ಅವರಿಗಾಗಿ ಇಟ್ಟುಕೊಳ್ಳುವುದಕ್ಕಾಗಿ ಮಾತ್ರ ಅವರು ನನಗೆ ಕೊಟ್ಟಿದ್ದಾರೆ. ಹಾಗಾಗಿ ನಾನು ಅವರನ್ನು ಕೇಳುತ್ತೇನೆ ಮತ್ತು ಅವರು ಅನುಮತಿಸಿದರೆ ಆಗ ನಾನು ಅದನ್ನು ನಿನಗೆ ಕೊಡುತ್ತೇನೆ," ಎಂದು ಹೇಳುತ್ತೇನೆ. ಈ ಪರಿಸ್ಥಿತಿಯಲ್ಲಿ ಈ ಹಣ ನನಗೆ ಸೇರಿದ್ದು ಅಲ್ಲವಾದ್ದರಿಂದ, ಇದನ್ನು ವಿಲೇವಾರಿ ಮಾಡಲು ಇದು ನೀತಿವಂತಿಕೆಗೆ ಅನುಗುಣವಾದ ವಿಧಾನವಲ್ಲವೇ? ನನ್ನ ಸಂಬಳ ದೇವರಿಗೆ ಸೇರಿದ್ದೆಂದು ನಾನು ಪರಿಗಣಿಸಿದ್ದರೆ, ಆಗ ಅದನ್ನು ನಾನು ಇತರರಿಗೆ ಸುಲಭವಾಗಿ ಕೊಡುತ್ತಿರಲಿಲ್ಲ. ಆ ಸಹೋದರನು ಹಣ ಕೇಳಲಿಕ್ಕಾಗಿ ನನ್ನ ಬಳಿಗೆ ಬಂದಾಗ, ನಾನು ಹೀಗೆ ಹೇಳುತ್ತಿದ್ದೆ, "ಹೌದು, ಕೇಳಿದವರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಕೊಡುವುದು ಸರಿ, ಆದರೆ ನಾನು ಈ ಹಣದ ಒಡೆಯನ ಬಳಿಗೆ ಹೋಗಿ (ಈ ಸನ್ನಿವೇಶದಲ್ಲಿ ಕರ್ತನನ್ನು) ಕೇಳುತ್ತೇನೆ". ನಾನು ಕರ್ತನನ್ನು, "ಕರ್ತನೇ, ನಾನು ಈ ವ್ಯಕ್ತಿಗೆ ಇದನ್ನು ಕೊಡಲು ಅನುಮತಿಸುತ್ತೀಯಾ?" ಎಂದು ಕೇಳುತ್ತಿದ್ದೆ. ಕರ್ತನು ಕೊಡು ಅಥವಾ ಕೊಡಬೇಡ ಎಂಬುದಾಗಿ ಉತ್ತರಿಸುತ್ತಿದ್ದನು.

ದೇವರು ಜವಾಬು ನೀಡುತ್ತಾರೆ; ಅವರು ಜೀವವುಳ್ಳ ದೇವರು. ಬಹುಶಃ ನಾನು ಮೊದಲನೆಯ ಸಲ ಅವರನ್ನು ಕೇಳಿದಾಗ, ಕೊಡು, ಎನ್ನುತ್ತಿದ್ದರು, ಮತ್ತು ಎರಡನೆಯ ಸಲ, ಕೊಡಬೇಡ, ಎನ್ನುತ್ತಿದ್ದರು, ಆದರೆ ನಾನು ಅವರನ್ನು ಕೇಳಲಿಕ್ಕೆ ಹೋಗಲಿಲ್ಲ. ನಾನು ಧರ್ಮಶಾಸ್ತ್ರದ ನಿಯಮವನ್ನು ಅಕ್ಷರಶಃ ಅನುಸರಿಸಿದೆ ಮತ್ತು ಆ ವಾಕ್ಯಕ್ಕೆ ಗುಲಾಮನಾದೆ, ಆದಾಗ್ಯೂ ನಾನು ನನ್ನ ಜೀವಿತದ ಆರಂಭದಲ್ಲಿ ದೇವರ ವಾಕ್ಯವನ್ನು ಹೇಗೆ ಅನುಸರಿಸಬೇಕೆಂಬ ಈ ಪಾಠವನ್ನು ಕಲಿತದ್ದಕ್ಕಾಗಿ ಬಹಳ ಸಂತೋಷಿಸುತ್ತೇನೆ - ದೇವರ ವಾಕ್ಯದಲ್ಲಿ "ಹೀಗೆ ಬರೆದದೆ" ಮತ್ತು "ಹೀಗೂ ಬರೆದದೆ" ಎಂದು ಹೇಳುವ ವಾಕ್ಯಗಳು ಇರುತ್ತವೆ. ನಾನು ದೇವರ ವಾಕ್ಯದ ಅರ್ಥವನ್ನು ಅರಿಯಲು ಸತ್ಯವೇದದ ಒಂದು ವಾಕ್ಯವನ್ನು ಮತ್ತೊಂದು ವಾಕ್ಯದೊಂದಿಗೆ ಸಮತೋಲನದಿಂದ ಓದಿಕೊಳ್ಳಬೇಕು. ಮೇಲೆ ಉಲ್ಲೇಖಿಸಿರುವ ವಾಕ್ಯದಲ್ಲಿ ಹೇಳಿರುವಂತೆ, ಇಂದು ನನ್ನಿಂದ ಸಾಲ ಕೇಳುವ ಪ್ರತಿಯೊಬ್ಬನಿಗೆ ನಾನು ಸಾಲ ಕೊಡಲು ಸಿದ್ಧನಿದ್ದೇನೆ. ಆದರೆ ನನ್ನಲ್ಲಿರುವ ಸಮಸ್ತವೂ ಕರ್ತನಿಗೆ ಸೇರಿದ್ದೆಂದು ನಾನು ಗಮನದಲ್ಲಿ ಇಟ್ಟುಕೊಳ್ಳಲು ಬಯಸುತ್ತೇನೆ, ಹಾಗಾಗಿ ಕರ್ತನನ್ನು ಕೇಳದೆ ನಾನು ಯಾರಿಗೂ ಕೊಡಲಾರೆ; ಈಗ ಜನರು ಬಂದು ನನ್ನ ಬಳಿ ಸಾಲ ಕೇಳಿದಾಗ ನಾನು ಈ ನಿಯಮವನ್ನು ಪಾಲಿಸುತ್ತೇನೆ. ನಾನು ಹೀಗೆ ಹೇಳುತ್ತೇನೆ, "ನಾನು ಕರ್ತನನ್ನು ಕೇಳುತ್ತೇನೆ; ನನ್ನ ಆತ್ಮದಲ್ಲಿ ಸ್ವಾತಂತ್ರ್ಯವಿದ್ದರೆ, ನಾನು ನಿನಗೆ ಕೊಡುತ್ತೇನೆ." ಕೆಲವು ವೇಳೆ ನಾನು ಕೊಟ್ಟ ಸಾಲ ಮರುಪಾವತಿ ಆಗಲಿಲ್ಲ, ಮತ್ತು ಇನ್ನೂ ಕೆಲವು ವೇಳೆ ನನಗೆ ಕೊಡುವದಕ್ಕೆ ಮನಸ್ಸಿತ್ತು, ಆದರೆ ಕರ್ತನು ನನಗೆ ಕೊಡುವ ಸ್ವಾತಂತ್ರ್ಯವನ್ನು ಕೊಡದೇ ಇದ್ದುದರಿಂದ ನಾನು ಕೊಡಲಿಲ್ಲ.

ಯೇಸುವು ನುಡಿದ ಎಲ್ಲಾ ಸಂಗತಿಗಳಲ್ಲಿ ಅಡಕವಾಗಿದ್ದ ಆತ್ಮವನ್ನು ನಾವು ಅರಿತುಕೊಳ್ಳುವುದು ಅವಶ್ಯ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಜನರು ನಮ್ಮನ್ನು ಕಾಲು ಒರೆಸುವ ಬಟ್ಟೆಯಂತೆ ಉಪಯೋಗಿಸಿಕೊಳ್ಳುವುದನ್ನು ನಾವು ಅನುಮತಿಸಬೇಕೆಂದು ಇದರ ಅರ್ಥವಲ್ಲ. ಇಲ್ಲಿರುವ ಮೂಲತತ್ವ ಏನೆಂದರೆ, ನಾವು ಯಾರ ಮೇಲೂ ಸೇಡು ತೀರಿಸಬಾರದು ಮತ್ತು ನಮ್ಮನ್ನು ನೋಯಿಸಿದಕ್ಕಾಗಿ ನಾವು ಯಾರಿಗೂ ಕೆಟ್ಟದ್ದನ್ನು ಮಾಡಲು ಬಯಸಬಾರದು.