WFTW Body: 

ಸಭೆಯು ಕ್ರಿಸ್ತನ ದೇಹವಾಗಿದೆಯೇ ಹೊರತು, ಕೇವಲ ವಾರವಾರವೂ ವಿಶ್ವಾಸಿಗಳು ಸೇರಿಬರುವ ಒಂದು ಕೂಟವಲ್ಲ. ಹಾಗಾಗಿ ನಾವು ಇಂತಹ ದೇಹವನ್ನು ಕಟ್ಟುತ್ತಿದ್ದೇವೆ, ಕೇವಲ "ಕ್ರೈಸ್ತರ ಧಾರ್ಮಿಕ ಕೂಟ"ವನ್ನಲ್ಲ, ಎಂಬುದಾಗಿ ನಾವು ಖಚಿತ ಪಡಿಸಿಕೊಳ್ಳುವದು ಅವಶ್ಯವಾಗಿದೆ. ಯಾವ ವ್ಯಕ್ತಿಯಾದರೂ ಒಂದು ಧಾರ್ಮಿಕ ಪಂಗಡವನ್ನು ಆರಂಭಿಸಬಹುದು. ಆದರೆ ಕ್ರಿಸ್ತನ ದೇಹವನ್ನು ಕಟ್ಟುವದಕ್ಕೆ ದೇವರಿಂದ ಕೃಪೆ ಮತ್ತು ಪವಿತ್ರಾತ್ಮನ ಅಭಿಷೇಕ ಇವೆರಡನ್ನು ಪಡೆಯಬೇಕಾಗುತ್ತದೆ - ಮತ್ತು ಇದಕ್ಕಾಗಿ ನಾವು "ಸ್ವೇಚ್ಛೆಯನ್ನು ಅಲ್ಲಗಳೆಯುವದು", "ನಿತ್ಯ ಮರಣವನ್ನು ಅನುಭವಿಸುವದು", ಜೊತೆಗೆ "ಪವಿತ್ರಾತ್ಮನಿಂದ ತುಂಬಿಸಲ್ಪಡುವದು", ಇವೆಲ್ಲವನ್ನು ಮಾಡಬೇಕಾಗುತ್ತದೆ.

ಇಸ್ರಾಯೇಲ್ಯರು ಹಳೆಯ ಒಡಂಬಡಿಕೆಯ ಕೆಳಗೆ ಒಂದು "ಸಮೂಹ"ವಾಗಿದ್ದರು ಮತ್ತು ಒಂದು "ದೇಹ"ವಾಗಿರಲಿಲ್ಲ. ಈ ದಿನದ ಅನೇಕ ದೊಡ್ಡ ಸಭೆಗಳು "ಸಮೂಹಗಳು" ಆಗಿವೆಯೇ ಹೊರತು, ಒಂದು ದೇಹವಾಗಿಲ್ಲ. ಮನೆಗಳಲ್ಲಿ ಸೇರಿಬರುವ ಚಿಕ್ಕ ಗಾತ್ರದ ಕೆಲವು ಸಭೆಗಳು ಇವುಗಳಿಗಿಂತ ಸ್ವಲ್ಪ ವಾಸಿ - ಅವುಗಳು "ಸಂಘಗಳು" ಆಗಿವೆ, ಆದರೆ ಒಂದು "ದೇಹ"ವಲ್ಲ. ಆದರೆ ಯೇಸುವು ಕಟ್ಟುತ್ತಿರುವದು ತನ್ನ ದೇಹವನ್ನು.

ಕ್ರಿಸ್ತನ ಮೊದಲ ದೇಹವು ಮನುಷ್ಯರಿಗೆ ಕಾಣಿಸಿದ್ದು ಒಂದು ಗೋದಲಿಯಲ್ಲಿ (ಅದು ಹಸುಗಳ ಆಹಾರದ ಬೋಗುಣಿಯಾಗಿತ್ತು). ಆ ಕುರುಬರು ಈ ಅವಮಾನಕರ ಜನನದ "ನಿಂದನೆಯ" ಸ್ಥಿತಿಯನ್ನು ಕ್ರಿಸ್ತನ ದೇಹದ ಚಿಹ್ನೆಯಾಗಿ "ಗುರುತಿಸಿದರು" (ಲೂಕ. 2:12). ಅದೇ ರೀತಿ ಅಂತಿಮವಾಗಿ ಕಲ್ವಾರಿಯಲ್ಲಿ, ಕ್ರಿಸ್ತನ ದೇಹವು ಒಬ್ಬ ದುಷ್ಕರ್ಮಿಯಂತೆ ನಿಂದೆಯ ಸ್ಥಿತಿಯಲ್ಲಿ ಶಿಲುಬೆಗೆ ಏರಿಸಲ್ಪಟ್ಟಿತು. ಹುಟ್ಟಿನಿಂದ ಸಾವಿನ ವರೆಗೂ, ಕ್ರಿಸ್ತನ ಮೊದಲ ದೇಹವು ಲೌಕಿಕ ಪ್ರಪಂಚ ಹಾಗೂ ಧಾರ್ಮಿಕ ಪ್ರಪಂಚದ ನಿಂದೆಗೆ ಗುರಿಯಾದದ್ದು ಅದರ ಗುಣಲಕ್ಷಣವಾಗಿತ್ತು.

ಇಂದು ಯಾವುದೇ ಸ್ಥಳದಲ್ಲಿ ಕ್ರಿಸ್ತನ ದೇಹವು ನಿಜವಾಗಿ ಪ್ರಕಟವಾದಾಗ, ಅದು ಲೋಕದಿಂದ ಮತ್ತು ಬಾಬೆಲ್ನ ಕ್ರೈಸ್ತತ್ವದಿಂದ ಇದೇ ರೀತಿಯ ನಿಂದೆಗೆ ಈಡಾಗುವದು. ನಮ್ಮ ಸ್ಥಳೀಯ ಸಭೆಯ ಮೇಲೆ ಇಂತಹ "ಕ್ರಿಸ್ತನ ನಿಂದೆ"ಯ ಹೊದಿಕೆ ಇಲ್ಲವಾದರೆ, ನಾವು ಲೋಕದೊಂದಿಗೆ ರಾಜಿ ಮಾಡಿಕೊಳ್ಳುವ ಕ್ರೈಸ್ತರು ಆಗಿರಬಹುದು, ಮತ್ತು "ಬಾಬೆಲ್ ಪಟ್ಟಣದ ಆಚೆಗೆ" ಹೋಗುವುದನ್ನು ತಪ್ಪಿಸಿಕೊಳ್ಳುತ್ತಿರಬಹುದು (ಇಬ್ರಿ. 13:13). ಆದರೆ "ಕ್ರಿಸ್ತನ ನಿಂದೆ" ಹಾಗೂ ಸ್ವಂತ ಪಾಪ ಅಥವಾ ಮೂರ್ಖತನ ಅಥವಾ ಅರೆಮನಸ್ಸಿನ ನಡೆತೆಯ ಫಲವಾಗಿ ಬರುವ "ನಿಂದೆ", ಇವುಗಳ ನಡುವೆ ಬಹು ದೊಡ್ಡ ಅಂತರವಿದೆ. ನಾವು ಇವೆರಡನ್ನು ಪರೀಕ್ಷಿಸಿ ವಿಂಗಡಿಸುವದನ್ನು ಕಲಿಯಬೇಕು.

ಯೇಸುವಿನ ಕುರಿತಾಗಿ ಸತ್ಯವೇದದಲ್ಲಿ ವಿವರಿಸಲ್ಪಟ್ಟಿರುವಂತೆ, "ಅವನಲ್ಲಿ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ ..... ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರಿಂದ ಗೌರವಿಸಲ್ಪಡಲಿಲ್ಲ" (ಯೆಶಾ. 53:2,3). ಆತನ ಒಳಗಿನ ಜೀವದಲ್ಲಿ ಆತನ ಮಹಿಮೆಯಿತ್ತು - ಅದು ಕೃಪೆಯಿಂದಲೂ ಸತ್ಯದಿಂದಲೂ ತುಂಬಿತ್ತು - ಹೊರಗಿನಿಂದ ಅದು ಬಹುತೇಕ ಜನರ ಕಣ್ಣಿಗೆ ಬೀಳಲಿಲ್ಲ (ಯೋಹಾ. 1:14). ನಮ್ಮ ಸ್ಥಳೀಯ ಸಭೆಗಳಲ್ಲೂ ಸಹ ಲೋಕಕ್ಕೆ ಅಥವಾ ಬಾಬೆಲಿನ ಕ್ರೈಸ್ತತ್ವಕ್ಕೆ ಕಾಣಿಸುವಂಥ ಯಾವ ಆಕರ್ಷಣೆಯೂ ಇರಬಾರದು! ಸಭೆಯು ದೈವಿಕ ಜೀವವನ್ನು ಹುಡುಕುತ್ತಾ ಒಳಕ್ಕೆ ಬರುವ ಜನರಿಗೆ ಮಾತ್ರ ಆಕರ್ಷಕವಾಗಿ ಕಾಣಿಸಬೇಕು. ದೇವರ ಗುಡಾರದ ಒಳಭಾಗದಲ್ಲಿ ಸುಂದರವಾದ ತೆರೆಗಳು (ಪರದೆ) ಇದ್ದವು. ಆದರೆ ಡೇರೆಯ ಮೇಲೆ ಹೊದಿಸಿದ್ದ ಆಡು ಕೂದಲಿನ ಕಂದು ಬಣ್ಣದ ಹೊರಕವಚವು ಧೂಳು ಹಾಗೂ ಕೊಳೆಯಿಂದ ತುಂಬಿತ್ತು. ಎಲ್ಲಾ ಸೌಂದರ್ಯವು ಗುಡಾರದ ಒಳಗಿನ ಪರದೆಗಳಲ್ಲಿ ಇತ್ತು. ಇದರಂತೆಯೇ ಕ್ರಿಸ್ತನ ಮದಲಗಿತ್ತಿಯ ಕುರಿತಾಗಿ, "ಆಕೆಯ ಒಳಜೀವವು ವೈಭವದಿಂದ ತುಂಬಿದೆ", ಎಂದು ಹೇಳಲಾಗಿದೆ (ಕೀರ್ತನೆ 45:13, ಸ್ವ. ಅನು.). ಮತ್ತು "ಆಕೆಯ ಒಳಗಿನ ಪ್ರಭಾವದ ಮೇಲೆಲ್ಲಾ ಒಂದು ಆವರಣ (ನಿಂದೆಯ ಹೊದಿಕೆ) ಇರುತ್ತದೆ" (ಯೆಶಾಯ 4:5).

ಇದೇ ವಿಷಯವು ಸಭಾನಾಯಕರ ಮೇಲಿನ ಒಂದು ದೊಡ್ಡ ಜವಾಬ್ದಾರಿ ಆಗಿರುತ್ತದೆ. ಯೇಸುವಿನಂತೆ ಸಭೆಯು ಮುಂದೆ ಸಾಗುತ್ತಾ ಮನುಷ್ಯರ ಮನ್ನಣೆಯಿಂದ ದೂರವಿರುತ್ತದೋ, ಅಥವಾ ಅದು ಲೋಕದ ಹೊಗಳಿಕೆ ಮತ್ತು ಮನ್ನಣೆಯನ್ನು ಪಡೆಯುತ್ತದೋ, ಎಂಬುದು ಅವರ ನಾಯಕತ್ವದ ಮೇಲೆ ಆಧಾರಿತವಾಗಿದೆ. ನಾವು ಲೋಕದ ಪ್ರಶಂಸೆಯನ್ನು ನಿರೀಕ್ಷಿಸಿದರೆ ಅಥವಾ ಲೌಕಿಕ ಕ್ರೈಸ್ತರ ಅಥವಾ ಶಾರೀರಿಕ ಅಭಿಲಾಷೆಯುಳ್ಳ ಕ್ರೈಸ್ತರ ಮೆಚ್ಚುಗೆಗಾಗಿ ತವಕಿಸಿದರೆ, ಕೊನೆಗೆ ನಾವು ಬಾಲೆಲನ್ನು ಕಟ್ಟುವದು ನಿಶ್ಚಯ. ನಾವು ಜನಪ್ರಿಯರಾದರೆ ಅಥವಾ ಸಾಮಾನ್ಯ ಕ್ರೈಸ್ತ ಪ್ರಪಂಚಕ್ಕೆ ಒಪ್ಪಿಗೆಯಾದರೆ, ನಾವು ಕ್ರಿಸ್ತನು ನಡೆದ ಹಾದಿಯಿಂದ ಸಂಪೂರ್ಣವಾಗಿ ದೂರ ಸರಿದಿದ್ದೇವೆ ಎಂಬುದು ಖಚಿತವಾಗುತ್ತದೆ.

ಯೇಸುವು ಹೀಗೆ ಹೇಳಿದ್ದಾರೆ, "ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ, ಹಿಂಸೆಪಡಿಸಿ, ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ" (ಮತ್ತಾ. 5:11,12). 20 ಶತಮಾನಗಳ ಹಿಂದೆ, ಹೆರೋದನು ಮತ್ತು ಆತನ ಸೈನಿಕರು ಕ್ರಿಸ್ತನ ಮೊದಲ ದೇಹವನ್ನು, ಅಂದರೆ ಕೂಸಾಗಿದ್ದ ಯೇಸುವನ್ನು, ಕೊಲ್ಲುವದಕ್ಕೆ ಬಹಳ ಪ್ರಯತ್ನಿಸಿದರು. ಹಾಗೆಯೇ ಇಂದು ಅನೇಕ ಸ್ಥಳಗಳಲ್ಲಿ ಹುಟ್ಟುತ್ತಿರುವ ಕ್ರಿಸ್ತನ ದೇಹವನ್ನು ನಾಶಪಡಿಸಲು ಹಾತೊರೆಯುವ ಬಹಳ ಮಂದಿ ಇದ್ದಾರೆ. ಯೋಸೇಫನು ದೇವರ ಸ್ವರವನ್ನು ಸೂಕ್ಷ್ಮವಾಗಿ ಕೇಳಿಸಿಕೊಂಡು, ಒಡನೆಯೇ ದೇವರ ಆದೇಶಕ್ಕೆ ವಿಧೇಯನಾಗಿ, ಆ ದೇಹವನ್ನು ರಕ್ಷಿಸಿದನು (ಮತ್ತಾ. 2:13,14,15). ಕ್ರಿಸ್ತನ ಸಭೆಯಲ್ಲಿ ಜವಾಬ್ದಾರಿಯನ್ನು ಹೊಂದಿರುವಂಥ ನಾವೂ ಸಹ ಯೋಸೇಫನಂತೆ ಆಗಿರಬೇಕು. ನಮಗೆ ಪವಿತ್ರಾತ್ಮನ ಧ್ವನಿಯು ತಿಳಿಸಿದ್ದನ್ನು ಕೇಳಿಸಿಕೊಂಡು, ವಿಳಂಬಿಸದೆ ಅದಕ್ಕೆ ವಿಧೇಯರಾಗುವುದರ ಮೂಲಕ, ನಾವು ’ಆಲಿಸುವವರು’ ಆಗಬೇಕು. ನಾವು ಆ ಮಾತನ್ನು ಕೇಳಿಸಿಕೊಂಡು ಪಾಲಿಸದಿದ್ದರೆ, ನಮ್ಮ ಸ್ಥಳೀಯ ಕ್ರಿಸ್ತನ ದೇಹವು ಒಂದಲ್ಲ ಒಂದು ರೀತಿಯಲ್ಲಿ ಹಾನಿಗೆ ಒಳಗಾಗುತ್ತದೆ - ಮತ್ತು ಕೊನೆಯ ದಿನದಲ್ಲಿ ಇದಕ್ಕೆ ನಾವು ಹೊಣೆಗಾರರಾಗಿ ಕಂಡುಬರಬಹುದು. ಈ ವಿಷಯದಲ್ಲಿ ನಾವು ನಮ್ಮ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಏಕೆಂದರೆ ನಮಗೆ ಒಪ್ಪಿಸಲಾದ ಪ್ರತಿಯೊಂದು ಆತ್ಮದ ಲೆಕ್ಕವನ್ನು ನಾವು ದೇವರಿಗೆ ಒಪ್ಪಿಸಬೇಕಾಗುತ್ತದೆ (ಇಬ್ರಿಯ 13:17).