WFTW Body: 

ಸತ್ಯವೇದದಲ್ಲಿ ಅಧೀನತೆ ಅಥವಾ ಸಮರ್ಪಣೆಯು ಒಂದು ಸದ್ಗುಣವಾಗಿದೆ. ಆದರೆ ಇಂದಿನ ದಿನ ಅದು ಬಹಳ ಪ್ರಶಂಸಿಸಲ್ಪಡುವ ಗುಣವಾಗಿಲ್ಲ; ವಾಸ್ತವವಾಗಿ ಅದೊಂದು ಸದ್ಗುಣವೆಂದು ಪರಿಗಣಿಸಲ್ಪಡುವುದಿಲ್ಲ. ಯಾವುದೇ ಒಂದು ಸಂಸ್ಥೆಯ ಮುಖ್ಯಸ್ಥರು ಅಥವಾ ನಿರ್ದೇಶಕ ಮಂಡಳಿಯು ವಿಧೇಯತೆ ಒಂದು ಪ್ರಮುಖ ಮೌಲ್ಯವಾಗಿದೆಯೆಂದು ಘೋಷಿಸುವುದಿಲ್ಲ. ಅದು ಅಸಾಧ್ಯವೆಂದು ನೀವು ಹೇಳಬಹುದು. ನಮಗೆ ಇಂತಹ ಸಂಗತಿಯು ನಿಜವಾಗಿ ಹಾಸ್ಯಕರವೆನಿಸುತ್ತದೆ; ಇದು ನಿಜವಾದ ವಿಧೇಯತೆ ಅಥವಾ ಸಮರ್ಪಣಾ ಭಾವದ ಪ್ರಾಮುಖ್ಯತೆ ಎಷ್ಟು ಕುಗ್ಗಿಹೋಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಆದಾಗ್ಯೂ, ಸಮರ್ಪಣಾ ಅಥವಾ ಅಧೀನತೆಯ ಭಾವವನ್ನು ನಮ್ಮ ಸಮಾಜವು ಕಡೆಗಣಿಸಿದರೂ, ದೇವರ ವಾಕ್ಯದಲ್ಲಿ ಸಮರ್ಪಣಾ ಅಥವಾ ಅಧೀನತೆಯ ಭಾವವು ಒಂದು ಅತಿ ಅಮೂಲ್ಯ ಗುಣವಾಗಿ ಉಲ್ಲೇಖಿಸಲ್ಪಟ್ಟಿರುವುದನ್ನು ನಾವು ಕಾಣುತ್ತೇವೆ. ಎಲ್ಲಿ ಸಂಪೂರ್ಣ ಐಕ್ಯತೆಯಿದೆಯೋ, ಅಲ್ಲಿ ಅಧೀನತೆ ಇರುತ್ತದೆ: ಮನೆಯಲ್ಲಿ, ಕ್ರೈಸ್ತಸಭೆಯಲ್ಲಿ, ಮತ್ತು ತ್ರೈಯೈಕ ದೇವರಲ್ಲೂ ಸಹ .

ತ್ರೈಯೈಕ ದೇವರ ಮಧ್ಯೆ ಸಂಪೂರ್ಣ ವಿಧೇಯತೆಯ ಮೂಲಕ ಐಕ್ಯತೆಯು ಪರಿಪೂರ್ಣಗೊಂಡಿರುವ ನಿರ್ದಿಷ್ಟ ಉದಾಹರಣೆಯನ್ನು ತೆಗೆದುಕೊಳ್ಳೋಣ. ನಿತ್ಯತ್ವದಲ್ಲಿ, ಯೇಸು ಕ್ರಿಸ್ತನು ತನ್ನ ತಂದೆಯಾದ ದೇವರು ಮತ್ತು ಪವಿತ್ರಾತ್ಮನೊಂದಿಗೆ ಅವರ ಮಟ್ಟದಲ್ಲಿ ಮತ್ತು ಅವರಂತೆಯೇ ಆದಿಯೂ ಅಂತ್ಯವೂ ಇಲ್ಲದೇ, ಅನಾದಿ ಕಾಲದಿಂದ ಜೀವಿಸಿದ್ದರೂ, 33 1/2 ವರ್ಷಗಳ ಕಾಲ ತನ್ನ ತಂದೆಯಾದ ದೇವರಿಗೆ ತನ್ನನ್ನು ಸಮರ್ಪಿಸಿಕೊಂಡು ಅಧೀನನಾಗಿ ಜೀವಿಸಿದ್ದು ಮಾತ್ರವಲ್ಲದೆ (ಯೋಹಾ. 5:19,30,6:38,8:28,14:31), ಅದೇ ವೇಳೆ ತನ್ನನ್ನು ಪವಿತ್ರಾತ್ಮನ ನೇತೃತ್ವಕ್ಕೂ ಸಹ ಒಪ್ಪಿಸಿಕೊಟ್ಟನು (ಮತ್ತಾ. 4:1, ಲೂಕ. 4:1, ಮಾರ್ಕ. 1:12).

ನಾವು ಯೇಸು ಕ್ರಿಸ್ತನ ಜೀವಿತದಲ್ಲಿ ಕಂಡುಬರುವ ಅಧೀನತೆಯನ್ನು ಅಮೂಲ್ಯವೆಂದು ಪರಿಗಣಿಸಿದ್ದೇವೆಯೇ? ಇದು ನಾವು ಸಹ ಬೆಳೆಸಿಕೊಳ್ಳಬೇಕಾದ ಸದ್ಗುಣವೆಂದು ತಿಳಿದುಕೊಂಡು, ನಮ್ಮಲ್ಲಿ ಅಧೀನತೆಯ ಹೃದಯವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೇ?

ಇಂದಿನ ಕಾಲಮಾನದಲ್ಲಿ, ಲೌಕಿಕ ಮೌಲ್ಯಗಳು ನಮ್ಮನ್ನು ತಮ್ಮ ಕಡೆಗೆ ಸೆಳೆಯುತ್ತಿರುವಾಗ, ಅಧೀನತೆಯು ಒಂದು ವಿಶೇಷ ಗುಣವಾಗಿದೆಯೆಂದು ನಾವು ಒಪ್ಪಿಕೊಳ್ಳುವುದಿಲ್ಲ, ಅಥವಾ ಅದನ್ನು ಅಸಡ್ಡೆ ಮಾಡುತ್ತೇವೆ, ಎಂಬುದಾಗಿ ನಾನು ಭಯಪಡುತ್ತೇನೆ .

ನಮ್ಮ ಜೀವಿತದಲ್ಲಿ ವಿಧೇಯತೆಗೆ ಪ್ರಾಮುಖ್ಯತೆ ನೀಡಿದಾಗ ಹರ್ಷ ಇರುವುದಿಲ್ಲವೆಂಬ ಭಯವನ್ನು ನಾವು ನಿವಾರಿಸಬೇಕಾದರೆ, ಯೇಸು ಕ್ರಿಸ್ತನ ಜೀವಿತದಲ್ಲಿ ಹಾಗೆ ಆಯಿತೇ ಎಂದು ನಾವು ನೋಡಿದರೆ ಸಾಕು. ಲೋಕದ ಇತಿಹಾಸದಲ್ಲಿ ಆತನ ಜೀವಿತಕ್ಕಿಂತ ಹೆಚ್ಚು ಸೌಭಾಗ್ಯಕರ ಜೀವಿತ ಎಲ್ಲಾದರೂ ಸಿಗುತ್ತದೆಯೇ? ಇನ್ನೂ ಹೆಚ್ಚು ತೃಪ್ತಿಕರ ಜೀವಿತವಿತ್ತೇ? ಅದಕ್ಕೂ ಹೆಚ್ಚಿನ ಪ್ರಬಲ ಜೀವಿತವಿತ್ತೇ? ಅದಕ್ಕೂ ಹೆಚ್ಚು ಸಂತೋಷಕರ ಜೀವಿತವಿತ್ತೇ? ಅದಕ್ಕೂ ಹೆಚ್ಚಿನ ಲಾಭದಾಯಕ ಜೀವಿತವಿತ್ತೇ?

"ವಿಧೇಯತೆ ಅಥವಾ ಸಮರ್ಪಣೆಯ ಮಾರ್ಗವು ಆಶೀರ್ವಾದಗಳ ಮಾರ್ಗವಾಗಿದೆ, ಮತ್ತು ನಾವು ನಿಜವಾಗಿ ಬಯಸುವುದನ್ನು ಅಥವಾ ನಮಗೆ ನಿಜವಾಗಿ ಅವಶ್ಯವಾದುದನ್ನು ಪಡೆಯುವುದರ ಕೀಲಿಕೈಯು ಅಧೀನತೆಯಾಗಿದೆಯೆಂದು ನಾವು ಕಂಡುಕೊಳ್ಳುತ್ತೇವೆ

ಇಡೀ ಜಗತ್ತಿನ ಇತಿಹಾಸದಲ್ಲಿ ಯೇಸುವಿನ ಜೀವಿತಕ್ಕಿಂತ ಹೆಚ್ಚು ಉಲ್ಲಾಸಕರ ಜೀವಿತವನ್ನು ನಾನು ಕಲ್ಪನೆ ಮಾಡಲಾರೆ. ನಮ್ಮ ಜೀವನಕ್ಕೆ ಅವಶ್ಯವಾದ ಉಸಿರು ಮತ್ತು ವಿಶ್ರಾಂತಿ ಮತ್ತು ಸಂತೋಷ ಮತ್ತು ಸಮಾಧಾನ ಮತ್ತು ಬಲ ಮತ್ತು ಬೇರೆಲ್ಲವುಗಳಿಗಾಗಿ ನಮ್ಮ ಪರಲೋಕದ ತಂದೆಯನ್ನು ದೃಷ್ಟಿಸುವುದಕ್ಕಿಂತ ಹೆಚ್ಚಿನ ರೋಮಾಂಚಕ ಅನುಭವ ಬೇರೊಂದಿಲ್ಲ. ವಿಧೇಯತೆ ಅಥವಾ ಸಮರ್ಪಣೆಯ ಮಾರ್ಗವು ಆಶೀರ್ವಾದಗಳ ಮಾರ್ಗವಾಗಿದೆ, ಮತ್ತು ನಾವು ನಿಜವಾಗಿ ಬಯಸುವುದನ್ನು ಅಥವಾ ನಮಗೆ ನಿಜವಾಗಿ ಅವಶ್ಯವಾದುದನ್ನು ಪಡೆಯುವುದಕ್ಕೆ ಅಧೀನತೆಯೇ ಕೀಲಿಕೈಯಾಗಿದೆ, ಎಂಬುದಾಗಿ ನಾವು ಕಂಡುಕೊಳ್ಳುತ್ತೇವೆ.

ವಿಧೇಯತೆ ಎಷ್ಟು ಅಮೂಲ್ಯವೆಂಬುದನ್ನು ನಾವು ಅರಿತುಕೊಂಡಾಗ, ಒಂದು ಸೂಕ್ಷ್ಮವಾದ ವಂಚನೆ ಅಥವಾ ಭ್ರಮೆಯು ನಮ್ಮನ್ನು ಎದುರಿಸಬಹುದು: "ನಾನು ದೇವರಿಗೆ ಮಾತ್ರ ವಿಧೇಯನಾದರೆ ಸಾಕು." ನನಗೆ "ವಿಶ್ವಾಸಿಗಳ ಯಾಜಕತ್ವದಲ್ಲಿ" ಸಂಪೂರ್ಣ ನಂಬಿಕೆಯಿದ್ದರೂ ಮತ್ತು ನಮಗಾಗಿ ವಿಜ್ಞಾಪನೆ ಮಾಡುವ ಯೇಸು ಕ್ರಿಸ್ತನ ಹೊರತಾಗಿ ಇನ್ಯಾರೂ ನನಗೆ ಅವಶ್ಯವಿಲ್ಲವೆಂದು ನಾನು ನಂಬಿದರೂ (ಇಬ್ರಿಯರಿಗೆ 7:25), ಹೊಸ ಒಡಂಬಡಿಕೆಯ ಇಂದಿನ ದಿನಗಳಲ್ಲೂ, "ಕೋರಹನಂತೆ ಎದುರು ಮಾತಾಡುವುದರ ಬಗ್ಗೆ" ನಮ್ಮ ಹೃದಯಗಳನ್ನು ಕಾಪಾಡಿಕೊಳ್ಳುವಂತೆ ನಮಗೆ ಆಜ್ಞೆ ಕೊಡಲ್ಪಟ್ಟಿರುವುದನ್ನು ನಾವು ಗಮನದಲ್ಲಿ ಇಟ್ಟುಕೊಳ್ಳುವುದು ಸಹ ಅವಶ್ಯವಾಗಿದೆ (ಯೂದನು 1:11).

ಕೋರಹನು ದೇವರು ತನ್ನ ಮೇಲೆ ನಿಯಮಿಸಿದ್ದ ಮೇಲಧಿಕಾರದ ವಿರೋಧವಾಗಿ ತಿರುಗಿಬಿದ್ದನು. ಅವನ ಆಲೋಚನೆ ಏನಾಗಿತ್ತೆಂದರೆ, ತಾನೂ ಸಹ ಒಬ್ಬ ಲೇವಿಯನು, ದೇವರ ಗುಡಾರದ ಕಾರ್ಯಕ್ಕಾಗಿ ದೇವರಿಂದ ಪ್ರತ್ಯೇಕಿಸಲ್ಪಟ್ಟ ಕುಲಕ್ಕೆ ಸೇರಿದವನು, ಮತ್ತು ತಾನು ಇದಕ್ಕೆ ಹೊರತಾಗಿ ಬೇರೆ ಮನುಷ್ಯರ ಅಧೀನನಾಗಿ ಇರಬೇಕಾಗಿಲ್ಲ. ಇದೇ ಆಲೋಚನೆಯು ನಮ್ಮ ಹೃದಯದೊಳಗೂ ನುಸುಳಿ ಬರಬಹುದು: ಯೇಸು ಕ್ರಿಸ್ತನು ನನ್ನ ಪಕ್ಷದಲ್ಲಿದ್ದಾನೆ, ಮತ್ತು ಈ ಕಾರಣಕ್ಕಾಗಿ ನನ್ನ ಕ್ರೈಸ್ತಸಭೆಯಲ್ಲಿ ಅಥವಾ ಬೇರೆ ಕಡೆ ನಾನು ಯಾವ ನಾಯಕನ ಕೈಕೆಳಗೂ ಇರುವಂತ ಅವಶ್ಯಕತೆ ಅಥವಾ ಅಂತಹ ಆಜ್ಞೆ ಇರುವುದಿಲ್ಲ. ಆದರೆ ಈ ಮನೋಭಾವದ ಸಲುವಾಗಿ ಭೂಮಿಯು ಸೀಳಲ್ಪಟ್ಟು ಕೋರಹನು ಪಾತಾಳಕ್ಕೆ ಬಿದ್ದು ನಾಶವಾದನು, ಮತ್ತು ನಮಗೂ ಈ ದುಃಸ್ಥಿತಿ ಬಾರದಂತೆ ಯೂದನು ಎಚ್ಚರಿಕೆ ನೀಡುತ್ತಾನೆ. ದೇವರು ತನ್ನ ಸಭೆಯ ಮಂದೆಯ ಸುರಕ್ಷತೆಗಾಗಿ ನಾಯಕರನ್ನು ಇರಿಸಿದ್ದಾರೆ, ಮತ್ತು ಯೇಸು ಕ್ರಿಸ್ತನ ಹೊರತಾಗಿ ಬೇರೆ ಯಾರಿಗೂ ಅಧೀನನಾಗುವುದನ್ನು ತಿರಸ್ಕರಿಸುವುದು, ದೇವರು ಕ್ರಿಸ್ತನ ದೇಹಕ್ಕಾಗಿ ಕೊಟ್ಟಿರುವ ಮಾದರಿಯನ್ನು ತಿರಸ್ಕರಿಸುವುದಕ್ಕೆ ಸಮನಾಗಿದೆ.

ಈ ಕಾರಣಕ್ಕಾಗಿ ಪೇತ್ರನು, 2 ಪೇತ್ರನು 2:10ರಲ್ಲಿ, "ಪ್ರಭುತ್ವವನ್ನು ತಿರಸ್ಕರಿಸುವ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಹೇಗೆ ಶಿಕ್ಷಾನುಭವದಲ್ಲಿ ಇಡಬೇಕೆಂದು ಕರ್ತನು ಬಲ್ಲವನಾಗಿದ್ದಾನೆ," (ಸ್ವ. ಅನುವಾದ) ಎಂದು ಎಚ್ಚರಿಸಿದ್ದಾನೆ. ವಾಸ್ತವವಾಗಿ, "ಪ್ರಭುತ್ವದ ತಿರಸ್ಕಾರ" "ಶರೀರಭಾವಕ್ಕೆ ಅನುಸಾರವಾಗಿ ಬಂಡುತನವನ್ನು ಆಶಿಸುವುದಕ್ಕೆ" ಸಮಾನವೆಂದು ಪೇತ್ರನು ಹೇಳುತ್ತಾನೆ. ನಮ್ಮ ಮೇಲಿನ ಅಧಿಕಾರವನ್ನು ವಿರೋಧಿಸುವುದು, "ಶರೀರಭಾವಕ್ಕೆ ಅನುಸಾರವಾದ ಬಂಡುತನದಂತೆ" ನಮ್ಮನ್ನು ಭ್ರಷ್ಟಪಡಿಸುತ್ತದೆ, ಎಂದು ನೀವು ತಿಳಿದಿದ್ದೀರಾ?

ಸತ್ಯವೇದದಲ್ಲಿ ತಿಳಿಸಿರುವಂತೆ, ಕ್ರೈಸ್ತಸಭೆಯ ಒಳಗೂ ಸಹ ಕಾಣಿಸುವ ವಂಚನೆಯು ಕೊನೆಯ ದಿನಗಳ ಗುರುತಾಗಿದೆ (ಮತ್ತಾ. 24:21, ಲೂಕ. 21:7-9ನಾನು ಅಧಿಕಾರಕ್ಕೆ ಒಳಗಾಗಬೇಕಿಲ್ಲ" ಎಂಬ ಅಭಿಪ್ರಾಯವು ನಾವು ಬಹಳ ಎಚ್ಚರಿಕೆಯಿಂದ ವಿರೋಧಿಸಬೇಕಾದ ಒಂದು ಅಪಾಯಕರ ವಂಚನೆಯಾಗಿದೆ. ನಮ್ಮ ಜೀವಿತದಲ್ಲಿ ವಿಧೇಯತೆಯನ್ನು ಹೆಚ್ಚು ಹೆಚ್ಚಾಗಿ ಗೌರವಿಸತಕ್ಕ ಗುಣವೆಂದು ಪರಿಗಣಿಸಿ, ನಾವು ಅದಕ್ಕಾಗಿ ಹೋರಾಡಬೇಕು.

ಹಾಗಾದರೆ, ವಿಧೇಯತೆ ಅಥವಾ ಸಮರ್ಪಣೆಯ ವಿಚಾರದಲ್ಲಿ, ಅದನ್ನು ಖಂಡಿಸುವಂತ, ಅದರ ಬಗ್ಗೆ ಸಿಟ್ಟಾಗುವಂತ ಸ್ವಭಾವವನ್ನು ನಾವು ನ್ಯಾಯತೀರ್ಪು ಮಾಡೋಣ. ವಿಧೇಯತೆಯನ್ನು ಶ್ಲಾಘಿಸುವಂತ ವಚನಗಳನ್ನು ಚರ್ಚಿಸುವಾಗ (ಅಥವಾ ವಿಧೇಯತೆಯ ನೇರ ಆಜ್ಞೆಗಳನ್ನು ಚರ್ಚಿಸುವಾಗ), ನಾವು ಆ ವಚನಗಳನ್ನು ಸಂತೋಷಭರಿತ ಮತ್ತು ಸಮಾಧಾನಕರ ಜೀವಿತದ ಸೌಭಾಗ್ಯವನ್ನು ನಮಗೆ ತೆರೆದು ತೋರಿಸುವ ವಾಗ್ದಾನಗಳಾಗಿ ಪರಿಗಣಿಸೋಣ. ಅಂತಹ ಆಜ್ಞೆಗಳನ್ನು ವಿರೋಧಿಸುವದಕ್ಕೆ ಬದಲಾಗಿ, ಸಂಪೂರ್ಣ ವಿಧೇಯತೆಯು ನಮಗೆ ಕೊಡಲ್ಪಟ್ಟಿರುವ ಶ್ರೇಷ್ಠ ಅವಕಾಶವೆಂದು ಸಂತೋಷಿಸೋಣ.