WFTW Body: 

"ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ" (ಮತ್ತಾ. 28:18). ನಾವು ಹೊರಟು ಹೋಗಿ ಯೇಸುವಿನ ಶ್ರೇಷ್ಠವಾದ ಆಜ್ಞೆಯನ್ನು ನೆರವೇರಿಸಬೇಕಾದರೆ ಈ ವಾಗ್ದಾನವನ್ನು ನಾವು ನಂಬಬೇಕು. ಯೇಸುವಿಗೆ ಎಲ್ಲಾ ಅಧಿಕಾರವು ಕೊಡಲ್ಪಟ್ಟಿದೆ ಎಂಬುದಾಗಿ ನಾನು ನಂಬದಿದ್ದರೆ, ಸ್ವಲ್ಪ ಸಮಯದ ನಂತರ ನಾನು ಸೇವೆಯಿಂದ ಹಿಂಜಾರುತ್ತೇನೆ. ಏಕೆಂದರೆ ಕೆಲವೊಮ್ಮೆ ಕ್ರೈಸ್ತ ಸೇವಾಕಾರ್ಯವು ಬಹಳಷ್ಟು ನಿರುತ್ಸಾಹವನ್ನು ತರಬಹುದು. ನೀವು ತಕ್ಷಣ ಫಲಿತಾಂಶಗಳನ್ನು ನೋಡುವುದಿಲ್ಲ. ಅಂತೆಯೇ  ಸೌವಾರ್ತಿಕರು, ಪ್ರವಾದಿಗಳು, ಅಪೊಸ್ತಲರು ಇವರಲ್ಲಿ
ಯಾರಿಗೂ ತಕ್ಷಣವೇ ಫಲಿತಾಂಶಗಳು ದೊರಕುವುದಿಲ್ಲ. ಇದನ್ನು ಒಂದು ಮಗುವನ್ನು ಬೆಳೆಸಿ ಪ್ರೌಢಾವಸ್ಥೆಗೆ ತರುವುದಕ್ಕೆ ಹೋಲಿಸಬಹುದು. ಸಭೆಗಳನ್ನು ಕಟ್ಟಿ, ವಿಶ್ವಾಸಿಗಳನ್ನು ದೃಢವಾಗಿ ನಿಲ್ಲಿಸಿ, ಅವರನ್ನು ದೇವಭಕ್ತಿಗೆ ನಡೆಸಲು ಪ್ರಯತ್ನಿಸಿದ ನನ್ನ ಹಲವಾರು ವರ್ಷಗಳ ಅನುಭವದ ಮೂಲಕ ನಾನು ಇದನ್ನು ದೃಢೀಕರಿಸಬಲ್ಲೆ. ಪರಲೋಕ ಮತ್ತು ಭೂಲೋಕಗಳಲ್ಲಿ ಎಲ್ಲಾ ಅಧಿಕಾರವನ್ನು ಹೊಂದಿರುವ ಯೇಸುವು ನನ್ನನ್ನು ಈ ಸೇವೆಗೆ ಕಳುಹಿಸುತ್ತಿದ್ದಾನೆಂದು ನಾನು ಅರಿತುಕೊಳ್ಳದೇ ಹೋದರೆ, ನಾನು ಬಹಳ ಸುಲಭವಾಗಿ ನಿರುತ್ಸಾಹಗೊಳ್ಳುತ್ತೇನೆ. ಯೇಸುವು ಆ ಅಧಿಕಾರದ ಮೂಲಕ ನನಗೆ ಸಹಾಯ ಮಾಡುತ್ತಿದ್ದಾರೆ.

ಆದ್ದರಿಂದ ನಾನು ಶ್ರೇಷ್ಠವಾದ ಆಜ್ಞೆಯ ಎರಡನೆಯ ಭಾಗವನ್ನು ಈ ರೀತಿ ನೋಡುತ್ತೇನೆ: ಯೇಸುವು ನುಡಿದ ಎರಡು ಅದ್ಭುತ ವಾಗ್ದಾನಗಳ ನಡುವೆ ಈ ಆಜ್ಞೆಯನ್ನು ಇರಿಸಲಾಗಿದೆ. ಮೊದಲನೆಯದು 18ನೆಯ ವಾಕ್ಯ. "ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ" ಮತ್ತು ಎರಡನೆಯದು 20ನೆಯ ವಾಕ್ಯ. "ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ." ಈ ಎರಡು ಸತ್ಯಗಳ ಬಗ್ಗೆ ನನಗೆ ಸಂದೇಹವಿದ್ದರೆ, ನಾನು ಶ್ರೇಷ್ಠವಾದ ಆಜ್ಞೆಯ  ಎರಡನೆಯ ಭಾಗವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ನಾನು ಐವತ್ತು ವರ್ಷಗಳ ಕ್ರೈಸ್ತ ಸೇವೆಯಲ್ಲಿ ಕಂಡುಕೊಂಡಿರುವುದು ಏನೆಂದರೆ, ಈ ಕೆಳಗಿನ ಎರಡು ಸಂಗತಿಗಳು ನಿಮಗೆ ಮನವರಿಕೆಯಾಗದಿದ್ದರೆ, ನೀವು ಬಹಳಷ್ಟು ನಿರುತ್ಸಾಹಗೊಳ್ಳುವಿರಿ:

 

  • ಪರಲೋಕದಲ್ಲಿ (ಅಂದರೆ, ದುರಾತ್ಮಗಳು ವಾಸಿಸುವ ಎರಡನೇ ಆಕಾಶದಲ್ಲಿ) ಮತ್ತು ಭೂಲೋಕದಲ್ಲಿ (ಭೂಮಿಯ ಸಮಸ್ತ ಜನಾಂಗಗಳ ಮೇಲೆ) ಸಕಲ ಅಧಿಕಾರವನ್ನು ಹೊಂದಿರುವಾತನು ಈ ಆಜ್ಞೆಯನ್ನು ನೀಡಿ ನಿಮ್ಮನ್ನು ಕಳುಹಿಸಿದ್ದಾನೆ. ಕ್ರಿಸ್ತನು ಈ ಅಧಿಕಾರವನ್ನು ಹೊಂದಿದ್ದಾನೆ.
  • ನಾನು ಶ್ರೇಷ್ಠವಾದ ಆಜ್ಞೆಯ ಈ ಭಾಗವನ್ನು (ಎರಡನೆಯ ಭಾಗ) ಪೂರೈಸಲು ಹೊರಟಾಗ, ಯೇಸುವು ಸದಾ ನನ್ನ ಜೊತೆಯಲ್ಲಿ ಇರುತ್ತಾರೆ, ಎಂಬ ನಿರ್ದಿಷ್ಟ ವಾಗ್ದಾನವನ್ನು ಹೊಂದಿದ್ದೇನೆ.
  • ಇವೆರಡು ಅದ್ಭುತ ವಾಗ್ದಾನಗಳಿಗೆ ಸಂಬಂಧಿಸಿದ ಒಂದು ದೊಡ್ಡ ಅಪಾಯವಿದೆ. ಷರತ್ತುಗಳನ್ನು ಪೂರೈಸದೆ ವಾಗ್ದಾನವನ್ನು ಪಡೆಯಲು ಪ್ರಯತ್ನಿಸುವ ಬಹಳ ದೊಡ್ಡ ದುರಭ್ಯಾಸ ಕ್ರೈಸ್ತರಲ್ಲಿದೆ. ಉದಾಹರಣೆಗೆ, "ಕರ್ತನಾದ ಯೇಸು ಕ್ರಿಸ್ತನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವೆ," ಎಂದು ನಿಮಗೆ ತೋರಿಸಿಕೊಟ್ಟಾಗ, ನೀವು "ಕರ್ತನಾದ ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡಬೇಕೆಂಬ ಷರತ್ತನ್ನು ಪೂರೈಸಲು ನಾನು ಸಿದ್ಧನಿಲ್ಲ. ಆದರೂ ನಾನು ರಕ್ಷಣೆ ಹೊಂದುತ್ತೇನೆ," ಎಂದು ಹೇಳಿದರೆ, ಅದು ಹುಚ್ಚುತನವೆಂದು ನಿಮಗೆ ತಿಳಿದಿದೆಯಲ್ಲವೇ? ಅಥವಾ, "ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸುವವನಾಗಿದ್ದಾನೆ." ನೀವು ನಿಮ್ಮ ಪಾಪವನ್ನು ಅರಿಕೆ ಮಾಡುವ ಷರತ್ತನ್ನು ಪೂರೈಸದಿದ್ದರೆ, ಆತನು ನಿಮ್ಮ ಪಾಪವನ್ನು ಕ್ಷಮಿಸುತ್ತಾನೆಂದು ನೀವು ನಂಬಲು ಸಾಧ್ಯವಿದೆಯೇ?

    ಮೊದಲು ಸ್ವತಃ ನೀವು ಯೇಸುವು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಂಡು, ಅನಂತರ ಇತರರಿಗೆ ಅವೆಲ್ಲವನ್ನು ಕಲಿಸಲು ಪ್ರಯತ್ನಿಸುವುದಾದರೆ, ಯೇಸುವಿನ ಅಧಿಕಾರವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ಆತನು ಸದಾ ನಿಮ್ಮ ಸಂಗಡ ಇರುತ್ತಾನೆ"

    ದೇವರ ವಾಗ್ದಾನಗಳಿಗೆ ಷರತ್ತುಗಳಿವೆ. ಕೆಲವು ಲೌಕಿಕ ವಾಗ್ದಾನಗಳನ್ನು ದೇವರು ಯಾವುದೇ ಷರತ್ತುಗಳಿಲ್ಲದೆ ಎಲ್ಲರಿಗೂ ನೀಡುತ್ತಾರೆ - ದೇವರು ಒಳ್ಳೆಯವರ ಮೇಲೆಯೂ ಕೆಟ್ಟವರ ಮೇಲೆಯೂ ಸೂರ್ಯನು ಉದಯಿಸುವಂತೆ ಮಾಡುತ್ತಾರೆ ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ದೇವರು ಮಳೆ ಸುರಿಸುತ್ತಾರೆ. ಆದರೆ ದೇವರ ಆತ್ಮಿಕ ವಾಗ್ದಾನಗಳ ಬಗ್ಗೆ ಹೇಳುವುದಾದರೆ, ಅವುಗಳನ್ನು ಪಡೆಯುವುದಕ್ಕೆ ಷರತ್ತುಗಳಿವೆ. ಇದು ಪಾಪಗಳ ಕ್ಷಮಾಪಣೆಯೊಂದಿಗೆ ಪ್ರಾರಂಭವಾಗುತ್ತದೆ. ಮಾನಸಾಂತರ ಹೊಂದದೆ ಮತ್ತು ಕ್ರಿಸ್ತನಲ್ಲಿ ನಂಬಿಕೆ ಇರಿಸದೆ, ಯಾರೂ ಪಾಪಗಳ ಕ್ಷಮಾಪಣೆಯನ್ನು ಪಡೆಯಲಾರರು. ನೀತಿವಂತನೆಂದು ನಿರ್ಣಯಿಸಲ್ಪಡುವುದು ನಂಬಿಕೆಯ ಮೂಲಕ, ಮತ್ತು ಪರಿಶುದ್ಧತೆಯು ನಂಬಿಕೆಯ ಮೂಲಕ ಪ್ರಾಪ್ತವಾಗುತ್ತದೆ. ಇದಲ್ಲದೆ, ದೇವರು ತಮ್ಮ ಕೃಪೆಯನ್ನು ಯಾವುದೇ ಷರತ್ತಿಲ್ಲದೆ ಎಲ್ಲರಿಗೂ ನೀಡುವುದಿಲ್ಲ. ಅವರು ದೀನರಿಗೆ ಮಾತ್ರ ತಮ್ಮ ಕೃಪೆಯನ್ನು ಅನುಗ್ರಹಿಸುತ್ತಾರೆ. ಪ್ರತಿಯೊಂದು ಆತ್ಮಿಕ ವಾಗ್ದಾನಕ್ಕೂ ಒಂದು ಷರತ್ತು ಇರುತ್ತದೆ.

    ಇಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲಾ (ಆತ್ಮಿಕ) ವಾಗ್ದಾನಗಳಿಗೆ ಸಂಬಂಧಿಸಿದಂತೆ ಷರತ್ತುಗಳನ್ನು ಪೂರೈಸುವುದು ಅವಶ್ಯವಾಗಿದೆ ಎಂಬುದನ್ನು ಹೆಚ್ಚಿನ ಕ್ರೈಸ್ತರು ಅರ್ಥ ಮಾಡಿಕೊಂಡಿದ್ದರೂ, ಮಹಾ ಆಜ್ಞೆಗೆ ಸಂಬಂಧಿಸಿದ ಈ ವಾಗ್ದಾನಕ್ಕೆ ಬರುವಾಗ, ಅಂದರೆ, "ಇಗೋ, ನಾನು ಯಾವಾಗಲೂ ಯುಗದ ಸಮಾಪ್ತಿಯವರೆಗೂ ನಿಮ್ಮ ಸಂಗಡ ಇರುತ್ತೇನೆ," ಎಂಬ ವಾಗ್ದಾನದ ವಿಷಯದಲ್ಲಿ, ಷರತ್ತನ್ನು ಪಾಲಿಸದೆ ವಾಗ್ದಾನವನ್ನು ಮಾತ್ರ ಬಾಧ್ಯತೆಯಾಗಿ ಪಡೆದುಕೊಳ್ಳಲು ಅವರು ಏಕೆ ಪ್ರಯತ್ನಿಸುತ್ತಾರೆ? ಇದು ನನ್ನನ್ನು ಬೆರಗುಗೊಳಿಸುತ್ತದೆ. ನಂಬಿಕೆಯಿಲ್ಲದೆ, ಮತ್ತು ಮಾನಸಾಂತರ ಹೊಂದದೆ ನಿಮಗೆ ಪಾಪ ಕ್ಷಮಾಪಣೆ ಸಿಗುತ್ತದೆ, ಎಂಬುದಾಗಿ ನಾನೇನಾದರೂ ಅವರಿಗೆ ಬೋಧಿಸಿದರೆ, ಅವರಿಗೆ ಖಂಡಿತವಾಗಿ ಆಶ್ಚರ್ಯವಾಗುತ್ತದೆ. ಒಂದು ವೇಳೆ ನಾನು, ನಿಮ್ಮ ಪಾಪವನ್ನು ಅರಿಕೆ ಮಾಡದೆ ನಿಮಗೆ ಪಾಪ ಕ್ಷಮಾಪಣೆ ಸಿಗುತ್ತದೆಯೆಂದು ಅವರಿಗೆ ಹೇಳಿದರೆ, ಅವರು ಅದು ಹಾಸ್ಯಾಸ್ಪದ ಎನ್ನುತ್ತಾರೆ. ಏಕೆಂದರೆ ನೀವು ನಿಮ್ಮ ಪಾಪಗಳನ್ನು ಅರಿಕೆ ಮಾಡಿದಲ್ಲಿ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಿಮ್ಮನ್ನು ಕ್ಷಮಿಸುವನು, ಎಂದು ದೇವರ ವಾಕ್ಯ ಹೇಳುತ್ತದೆ, ಅಲ್ಲವೇ? ಹಾಗಿದ್ದರೆ ಅದೇ ಸತ್ಯವೇದದಲ್ಲಿ, ಯುಗದ ಸಮಾಪ್ತಿಯವರೆಗೂ ಕರ್ತನು ಸದಾ ನಿಮ್ಮ ಸಂಗಡ ಇರುವನು ಎಂದು ಹೇಳುವುದಕ್ಕೆ ಮುನ್ನ, ನೀವು ಹೋಗಿ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ, ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ, ಮತ್ತು ನಾನು ಅಜ್ಞಾಪಿಸಿರುವುದನ್ನೆಲ್ಲ ಕೈಕೊಳ್ಳುವಂತೆ ನೀವು ಅವರಿಗೆ ಬೋಧಿಸಿರಿ, ಎಂದು ಹೇಳಲಾಗಿದೆ. ಇದು ಕರ್ತನ ಮಾತಾಗಿದೆ. ಅನಂತರ ಕರ್ತನು, "ಇಗೋ ನಾನು ಸದಾ ನಿಮ್ಮ ಸಂಗಡ ಇರುವೆನು," ಎಂದು ನುಡಿದನು.

    ಆದ್ದರಿಂದ ಯಾರು ಯೇಸು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಳ್ಳುವಂತೆ ಇತರರಿಗೆ ಕಲಿಸಲು ಹೊರಡುತ್ತಾರೋ, ಅವರಿಗೆ ಈ ನಿರ್ದಿಷ್ಟವಾದ ವಾಗ್ದಾನವು ಕೊಡಲ್ಪಟ್ಟಿದೆ. ನಾನು ಕಳೆದ 50 ವರ್ಷಗಳ ಕಾಲ ಈ ವಾಕ್ಯವನ್ನು ಪೂರೈಸಲು ಪ್ರಯತ್ನಿಸಿದ್ದೇನೆ, ಅಂದರೆ ಯೇಸು ಆಜ್ಞಾಪಿಸಿದ್ದನ್ನೆಲ್ಲಾ ಮಾಡುವಂತೆ ಜನರಿಗೆ ಬೋಧಿಸಿದ್ದೇನೆ; ಅದ CDಗಳ ಮೂಲಕವಾಗಲಿ, ಅಂತರ್ಜಾಲದ ಮೂಲಕವಾಗಲಿ ಮತ್ತು ಪುಸ್ತಕಗಳ ಮೂಲಕವಾಗಲಿ ಇರಬಹುದು. ಕರ್ತನ ಪ್ರಸನ್ನತೆ ಮತ್ತು ಅಧಿಕಾರವು ನನ್ನನ್ನು ನಿಜವಾಗಿಯೂ ಬೆಂಬಲಿಸಿದ ಅನುಭವದ ಸಾಕ್ಷಿಯನ್ನು ನಾನು ನೀಡಬಲ್ಲೆ. ಆದ್ದರಿಂದ ದೇವರ ವಾಗ್ದಾನಗಳು ಯಥಾರ್ಥವಾದವು ಎಂಬುದನ್ನು ನಂಬಿರಿ, ಎಂದು ನಿಮ್ಮನ್ನು ಪ್ರೋತ್ಸಾಹಿಸಲು ನಾನು ಬಯಸುತ್ತೇನೆ. ಮೊದಲು ಸ್ವತಃ ನೀವು ಯೇಸುವು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಂಡು, ಅನಂತರ ಇತರರಿಗೆ ಅವೆಲ್ಲವನ್ನು ಕಲಿಸಲು ಪ್ರಯತ್ನಿಸುವುದಾದರೆ, ಯೇಸುವಿನ ಅಧಿಕಾರವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ಆತನು ಸದಾ ನಿಮ್ಮ ಸಂಗಡ ಇರುತ್ತಾನೆ.

    ಆತನು ಯಾವಾಗಲೂ ನಮ್ಮ ಸಂಗಡ ಇರುವುದರ ಒಂದು ಫಲವೇನೆಂದರೆ, ಆತನು ನಿರಾಶೆ, ಅಂಧಕಾರ, ಕಳೆಗುಂದುವಿಕೆ ಮತ್ತು ಇಂತಹ ಅನೇಕ ಅನುಭವಗಳಿಂದ ನಮ್ಮನ್ನು ಬಿಡುಗಡೆಗೊಳಿಸುತ್ತಾನೆ. ಯೇಸುವು ಸದಾ ನನ್ನೊಡನೆ ಇರುವಾಗ ನಾನು ಕಳೆಗುಂದಲು ಸಾಧ್ಯವಿದೆಯೇ? ಯೇಸುವು ಸದಾ ನನ್ನೊಂದಿಗಿದ್ದರೆ ಈ ಲೋಕದಲ್ಲಿ ನಾನು ನಿರುತ್ಸಾಹಗೊಳ್ಳಲು ಅಥವಾ ಭಯಪಡಲು ಸಾಧ್ಯವಿದೆಯೇ? ಅನೇಕ ಜನರು ಯೇಸುವು ತಮ್ಮೊಂದಿಗೆ ಇಲ್ಲದಿದ್ದರೂ, ಆತನು ತಮ್ಮೊಂದಿಗೆ ಇದ್ದಾನೆಂದು ಊಹಿಸುತ್ತಾರೆ. ಅವರು ಯೇಸು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಳ್ಳಲು ತವಕಿಸುವುದಿಲ್ಲ; ಯೇಸು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಳ್ಳುವಂತೆ ಜನರಿಗೆ ಬೋಧಿಸಲು ಅವರು ಹಂಬಲಿಸುವುದಿಲ್ಲ. ಹಾಗಾದರೆ ಆ ವಾಗ್ದಾನವನ್ನು ಬಾಧ್ಯತೆಯಾಗಿ ಪಡೆಯುವ ಮೊದಲು ನಾವು ಒಂದು ಷರತ್ತನ್ನು ಪೂರೈಸಬೇಕಾಗಿದೆ, ಮತ್ತು ಇದನ್ನು ನೀವು ಸ್ಪಷ್ಟವಾಗಿ ನೋಡಬೇಕೆಂದು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ.