WFTW Body: 

ದೈವಿಕ ಮನುಷ್ಯನ ಜೀವಿತವು ಉಲ್ಲಾಸಭರಿತವಾದದ್ದು,ಎಂದು ಸತ್ಯವೇದವು ತಿಳಿಸುತ್ತದೆ,
(ಜ್ಞಾನೋಕ್ತಿಗಳು 14:14 - Living Bible).

ನಾನು ನನ್ನ ಸಾಕ್ಷಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅಪೇಕ್ಷಿಸುತ್ತೇನೆ. ನನಗೆ ಈಗ 85ರ ವಯಸ್ಸಾಗಿದೆ, ಮತ್ತು ನಾನು ದೇವರ ಮಗುವಾಗಿ ಹೊಸದಾಗಿ ಹುಟ್ಟಿ 65 ವರ್ಷಗಳಾಗಿವೆ. ನನ್ನ ಕ್ರೈಸ್ತ ಜೀವಿತವು ಉಲ್ಲಾಸಭರಿತವಾಗಿದೆ ಎಂದು ನಾನು ಯಥಾರ್ಥವಾಗಿ ಸಾಕ್ಷಿ ಕೊಡಬಲ್ಲೆ. ನಾನು ಅನೇಕ ಸಂಕಟಗಳನ್ನು ಅನುಭವಿಸಿದ್ದೇನೆ, ಆದರೆ ನಾನು ಅವೆಲ್ಲವುಗಳ ಮೂಲಕವೂ ರೋಮಾಂಚಕವಾದ ದೇವರ ಅನುಭವವನ್ನು ಪಡೆದಿದ್ದೇನೆ. ಇದಲ್ಲದೆ, ಮುಂದೆ ನನ್ನ ಜೀವನದ ಅತಿ ಶ್ರೇಷ್ಠ ಭಾಗವು ನನಗಾಗಿ ಕಾದಿದೆಯೆಂದು ನಾನು ನಂಬಿದ್ದೇನೆ. ನಾನು ದೇವರಿಗಾಗಿ ಜೀವಿಸಿ ಅವರ ಸೇವೆ ಮಾಡಲಿದ್ದೇನೆ ಎಂಬುದಕ್ಕಾಗಿ ನಾನು ಉಲ್ಲಾಸಗೊಳ್ಳುತ್ತೇನೆ. ಈ ಲೋಕದಲ್ಲಿ ಅವರ ಸೇವೆ ಮಾಡುವುದು ಯಾರಾದರೂ ಮಾಡಬಹುದಾದ ಅತಿ ಶ್ರೇಷ್ಠ ಕಾರ್ಯವಾಗಿದೆ.

"ನಾವು ನಿಮ್ಮೆಲ್ಲರಿಗೂ ಬಹಳ ಆಶೀರ್ವಾದಕರವಾದ ಹೊಸ ವರ್ಷವನ್ನು ಹಾರೈಸುತ್ತೇವೆ - ನೀವು ಇನ್ನೂ ಹೆಚ್ಚಿನ ಮುರಿಯಲ್ಪಡುವಿಕೆ ಮತ್ತು ಇನ್ನೂ ಹೆಚ್ಚಿನ ದೇವರ ಮೇಲಣ ನಂಬಿಕೆಯನ್ನು ಹೊಂದುವಂತಾಗಲಿ!"

ನನಗೆ ಈ ಲೋಕದಲ್ಲಿ ಯಾವುದೇ ವ್ಯಕ್ತಿಯ ವಿರುದ್ಧವಾಗಿ ಒಂದು ದೂರೂ ಸಹ ಇಲ್ಲ. ಇಲ್ಲಿಯವರೆಗೆ ನನಗೆ ಕೇಡು ಬಗೆಯಲು ಯಾರಿಗೂ ಸಾಧ್ಯವಾಗಿಲ್ಲ. ಅನೇಕರು ನನಗೆ ತೊಂದರೆ ಕೊಡಲು ಪ್ರಯತ್ನಿಸಿದ್ದಾರೆ, ಮತ್ತು ಸೇವೆಯಲ್ಲಿ ನನ್ನ ಸಹ-ಕೆಲಸಗಾರರು ನನಗೆ ದ್ರೋಹ ಬಗೆದಿದ್ದಾರೆ ಮತ್ತು ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕ್ರೈಸ್ತ ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಅನೇಕ "ಕ್ರೈಸ್ತರು" ನನ್ನ ಬಗ್ಗೆ ಕಟ್ಟುಕಥೆಗಳನ್ನು ಹರಡಿದ್ದಾರೆ, ಮತ್ತು ಅವರಲ್ಲಿ ಕೆಲವರು ನನ್ನನ್ನು ನ್ಯಾಯಾಲಯಕ್ಕೂ ಎಳೆದಿದ್ದಾರೆ. ಆದರೆ ಇವೆಲ್ಲವೂ ನನಗೆ "ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರನಾಗುವ" ಅವಕಾಶವನ್ನು ಒದಗಿಸಿವೆ, ಅಷ್ಟೇ; ಮತ್ತು ಪ್ರತಿಯೊಬ್ಬರು ಮಾಡಿದ ಒಂದೊಂದು ಕಾರ್ಯದಿಂದಲೂ - ರೋಮಾ. 8:28ರ ವಾಗ್ದಾನದಲ್ಲಿ ಹೇಳಿರುವಂತೆ - ನನಗೆ ಒಳ್ಳೆಯದೇ ಆಗಿದೆ. ಆದ ಕಾರಣ ಅವೆಲ್ಲವುಗಳಿಗಾಗಿ ನಾನು ದೇವರಿಗೆ ನಿಜವಾಗಿ ಕೃತಜ್ಞತೆ ಸಲ್ಲಿಸುತ್ತೇನೆ, ಯಾಕೆಂದರೆ ಇವರೆಲ್ಲರ ದುಷ್ಕೃತ್ಯಗಳನ್ನು ಉಪಯೋಗಿಸಿಕೊಂಡು ದೇವರು ನನ್ನನ್ನು ಮೊದಲಿಗಿಂತ ಉತ್ತಮ ಮನುಷ್ಯನಾಗಿ ಬದಲಾಯಿಸಿದ್ದಾರೆ - ನನ್ನ ಪ್ರತಿಕ್ರಿಯೆಗಳಲ್ಲಿ ನಾನು ಹೆಚ್ಚುಹೆಚ್ಚಾಗಿ ಕ್ರಿಸ್ತನಂತಾಗಿದ್ದೇನೆ. ಅವರೆಲ್ಲರ ದುಷ್ಟ ಕಾರ್ಯಗಳಿಂದ ಉಂಟಾದ ಮುಖ್ಯವಾದ ಒಳ್ಳೆಯ ಸಂಗತಿ ಇದೇ ಆಗಿದೆ.

ಮೊದಲನೆಯದಾಗಿ ನಾವು ಮುರಿಯಲ್ಪಡಬೇಕು, ಅದರ ನಂತರ ದೇವರು ನಮ್ಮನ್ನು ಬಳಸಿಕೊಳ್ಳುತ್ತಾರೆ

ದೇವರು ನಮ್ಮ ಗರ್ವ, ಸ್ವ-ಸಾಮರ್ಥ್ಯದ ಮೇಲಿನ ನಂಬಿಕೆ ಹಾಗೂ ಆತ್ಮವಿಶ್ವಾಸ ಅಥವಾ ದೊಡ್ಡಸ್ತಿಕೆಯನ್ನು ಮುರಿಯುವುದಕ್ಕೆ ಹಲವಾರು ಜನರನ್ನು ಮತ್ತು ಅನೇಕ ಘಟನೆಗಳನ್ನು ಬಳಸಿಕೊಳ್ಳುತ್ತಾರೆ.

ನನ್ನ ಯೌವ್ವನ ಪ್ರಾಯದಲ್ಲಿ ದೇವರು ನನ್ನನ್ನು ಬಹಳವಾಗಿ ಮುರಿದರು, ಮತ್ತು ಅವರು ಇಂದಿಗೂ ನನ್ನನ್ನು ಮುರಿಯುತ್ತಿದ್ದಾರೆ. ಇದು ಫಲಪ್ರದವಾದ ಜೀವನ ಮಾರ್ಗವಾಗಿದೆ. ನಾವು ಹೆಚ್ಚುಹೆಚ್ಚಾಗಿ ಮುರಿಯಲ್ಪಟ್ಟರೆ, ನಾವು ಇತರರಿಗೆ ಆಶೀರ್ವಾದಕರವಾಗುವಂತೆ ದೇವರು ನಮ್ಮನ್ನು ಹೆಚ್ಚುಹೆಚ್ಚಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ನಾವು ವಿಮೋಚನಕಾಂಡ 17ರಲ್ಲಿ ನೋಡುವ ಹಾಗೆ, ಬಂಡೆಯನ್ನು ಹೊಡೆದಾಗ ಮಾತ್ರ ಅದರಿಂದ ನೀರು ಹೊರಬಂತು. ಒಬ್ಬ ಹೆಂಗಸು ಯೇಸುವಿಗೆ ಹಚ್ಚಲಿಕ್ಕಾಗಿ ಸುಗಂಧ ತೈಲ ತುಂಬಿದ್ದ ಚಂದ್ರಕಾಂತದ ಭರಣಿಯನ್ನು ತಂದಳು; ಆಕೆ ಆ ಭರಣಿಯನ್ನು ಒಡೆದ ನಂತರವೇ ಮನೆ ತುಂಬಾ ತೈಲದ ಪರಿಮಳ ಹರಡಿತು (ಮಾರ್ಕ. 14:3). ಯೇಸುವು 5000 ಜನರಿಗೆ ಊಟ ಬಡಿಸುವುದಕ್ಕೆ ರೊಟ್ಟಿಯನ್ನು ತೆಗೆದುಕೊಂಡು ಆಶೀರ್ವದಿಸಿದರು. ಆದರೆ ಅವರು ರೊಟ್ಟಿಯನ್ನು ಮುರಿಯುವುದಕ್ಕೆ ಮೊದಲು ಯಾರಿಗೂ ಊಟ ಸಿಗಲಿಲ್ಲ.

ಇವೆಲ್ಲಾ ಉದಾಹರಣೆಗಳಲ್ಲಿ ಸಿಗುವ ಸಂದೇಶವೇನು? ಇಷ್ಟು ಮಾತ್ರ - ಮುರಿಯಲ್ಪಡುವಿಕೆಯು ಆಶೀರ್ವಾದದ ಮಾರ್ಗವಾಗಿದೆ. ಒಂದು ಪರಮಾಣುವು ವಿಭಜಿಸಲ್ಪಟ್ಟಾಗ, ಅದರಿಂದ ಒಂದು ಇಡೀ ಪಟ್ಟಣಕ್ಕೆ ಬೇಕಾದ ವಿದ್ಯುತ್ ಶಕ್ತಿ ಉತ್ಪತ್ತಿಯಾಗುತ್ತದೆ! ಒಂದು ಪರಮಾಣು ಎಷ್ಟು ಸೂಕ್ಶ್ಮವಾಗಿದೆಯೆಂದರೆ, ಅದು ಸೂಕ್ಶ್ಮದರ್ಶಕದ ಮೂಲಕವೂ ಕಾಣಿಸುವುದಿಲ್ಲ. ಆದರೆ ಅದು ಒಡೆಯಲ್ಪಟ್ಟಾಗ, ಎಂತಹ ಅಪಾರವಾದ ಶಕ್ತಿ ಬಿಡುಗಡೆಯಾಗುತ್ತದೆ. ಪ್ರಕೃತಿಯಲ್ಲಿ ಮತ್ತು ಸತ್ಯವೇದದಲ್ಲಿರುವ ಸಂದೇಶ ಕೇವಲ ಇದು: ಮುರಿಯಲ್ಪಡುವಿಕೆಯ ಮೂಲಕ ದೇವರ ಶಕ್ತಿಯು ಬಿಡುಗಡೆಯಾಗುತ್ತದೆ. ಈ ಸಂದೇಶವು ಈ ಹೊಸ ವರ್ಷದಲ್ಲಿ ನಮ್ಮೆಲ್ಲರ ಮನಸ್ಸಿನಲ್ಲಿ ಬಲವಾಗಿ ನೆಲೆಗೊಳ್ಳಲಿ.

1963ನೇ ಇಸವಿಯಲ್ಲಿ ನಾನು ಮೊದಲನೇ ಬಾರಿ ನನ್ನ ಜೀವಿತ ಹಾಗೂ ಸೇವೆಯಲ್ಲಿ ಬಲಕ್ಕಾಗಿ ಪ್ರಾರ್ಥಿಸಿದಾಗ, ದೇವರು ನನ್ನ ಮನಸ್ಸಿನಲ್ಲಿ ಈ ಸಂದೇಶ ನೆಲೆಗೊಳ್ಳುವಂತೆ ಮಾಡಿದರು. ಅದೇ ವೇಳೆಯಲ್ಲಿ, ಅಂದರೆ ನಾನು ನೌಕಾಪಡೆಗೆ ರಾಜೀನಾಮೆ ನೀಡುವದಕ್ಕೆ ಮೊದಲು, ದೇವರು ನನಗೆ ಮುರಿಯಲ್ಪಡುವಿಕೆಯ ಮಾರ್ಗವೇ ಬಲವನ್ನು ಹೊಂದುವ ಮಾರ್ಗ ಎಂಬುದನ್ನು ತೋರಿಸಿದರು. ಹಾಗಾಗಿ ಈ ಸತ್ಯಾಂಶವನ್ನು ನಾನು ನನ್ನ ಜೀವನದ ಅಂತ್ಯದವರೆಗೆ ಮರೆಯಲಾರೆ. ಈ ಪಾಠವನ್ನು ವಿಶೇಷವಾಗಿ ಯೌವನಸ್ಥರು ತಮ್ಮ ಯೌವನದಲ್ಲೇ ಕಲಿಯುವಂತೆ ನಾನು ಅವರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ.

ಎರಡನೆಯ ಅವಶ್ಯಕತೆ, ದೇವರ ವಾಗ್ದಾನಗಳಲ್ಲಿ ಜೀವವುಳ್ಳ ನಂಬಿಕೆ ಇರಬೇಕು

ಐಗುಪ್ತ ದೇಶದಲ್ಲಿ ದೇವರು ಇಸ್ರಾಯೇಲ್ಯರ ಹಿರಿಯರಿಗೆ ಎರಡು ವಾಗ್ದಾನಗಳನ್ನು ನೀಡಿದರು: "ನಾನು ನಿಮ್ಮನ್ನು (1) ಐಗುಪ್ತ ದೇಶದಿಂದ ಬಿಡಿಸಿ ಹೊರಕ್ಕೆ ತರುತ್ತೇನೆ ಮತ್ತು (2) ಕಾನಾನ್ ದೇಶಕ್ಕೆ ಬರಮಾಡುತ್ತೇನೆ" (ವಿಮೋ. 3:17). ಅಲ್ಲಿ ಎರಡು ವಾಗ್ದಾನಗಳು ಇವೆಯೆಂದು ನೀವು ನೋಡುತ್ತೀರಿ. ಆದರೆ ಮೊದಲನೆಯ ವಾಗ್ದಾನವು ಮಾತ್ರ ನೆರವೇರಿತು. ಎರಡನೆಯದು ನೆರವೇರಲಿಲ್ಲ. ಆ ಹಿರಿಯರಲ್ಲಿ ಒಬ್ಬರೂ ಕಾನಾನ್ ದೇಶವನ್ನು ಪ್ರವೇಶಿಸಲಿಲ್ಲ - ಏಕೆಂದರೆ ಕಾನಾನಿಗೆ ಪ್ರವೇಶಿಸುವ ಸಮಯ ಪ್ರಾಪ್ತವಾದಾಗ, ಅವರು ನಂಬಿಕೆಯಿಂದ ಮುನ್ನಡೆಯಲಿಲ್ಲ (ಅರಣ್ಯಕಾಂಡ 13). ನಾವು ನಂಬಿಕೆಯಿಂದ ನಡೆಯುವವರೆಗೂ ದೇವರ ವಾಗ್ದಾನಗಳು ನೆರವೇರುವುದಿಲ್ಲ. ದೇವರ ವಾಗ್ದಾನ ಮತ್ತು ನಮ್ಮ ನಂಬಿಕೆ ಇವುಗಳು ಎರಡು ವಿದ್ಯುತ್ ತಂತಿಗಳಂತಿವೆ. ಈ ತಂತಿಗಳು ಒಂದಕ್ಕೊಂದು ಸೇರಿಕೊಂಡಾಗ ಮಾತ್ರ (ಒಂದು ವಿದ್ಯುತ್ ಸ್ವಿಚ್‌ನಲ್ಲಿ ನಡೆಯುವಂತೆ) ತಂತಿಗಳ ಮೂಲಕ ವಿದ್ಯುತ್ ಶಕ್ತಿ ಹರಿಯಲು ಪ್ರಾರಂಭಿಸುತ್ತದೆ. ನೀವು ದೇವರ ವಾಗ್ದಾನಗಳ ಬಗ್ಗೆ ಕೇಳಿಸಿಕೊಳ್ಳಬಹುದು ಮತ್ತು ಅದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ನೀವು ದೃಢವಾದ ನಂಬಿಕೆಯಿಂದ, "ಹೌದು, ಅದು ನನ್ನ ಜೀವನದಲ್ಲಿ ನೆರವೇರುತ್ತದೆ ಎಂದು ನಾನು ನಂಬುತ್ತೇನೆ," ಎಂದು ಅರಿಕೆ ಮಾಡಿದಾಗ ಮಾತ್ರ ಆ ವಾಗ್ದಾನವು ನೆರವೇರುತ್ತದೆ. ಕಾನಾನ್ ದೇಶದ ಗಡಿಯಲ್ಲಿ, ಯೆಹೋಶುವನು ಮತ್ತು ಕಾಲೇಬನು ಮಾತ್ರ ದೇವರ ವಾಗ್ದಾನವನ್ನು ನಂಬಿದರು, ಆದ್ದರಿಂದ ಅವರು ಮಾತ್ರ ವಾಗ್ದಾನ ಮಾಡಲ್ಪಟ್ಟ ದೇಶವನ್ನು ಪ್ರವೇಶಿಸಿದರು. ಈ ಹೊಸ ವರ್ಷದಲ್ಲಿ ನಾವೂ ಸಹ ಅದೇ ನಂಬಿಕೆಯನ್ನು ಹೊಂದುವಂತಾಗಲಿ ಮತ್ತು ವಾಗ್ದಾನ ಮಾಡಲ್ಪಟ್ಟ ನಿರಂತರ ಜಯದ ದೇಶದಲ್ಲಿ ನೆಲೆಗೊಳ್ಳುವಂತಾಗಲಿ, ಎಂದು ನಾನು ಹಾರೈಸುತ್ತೇನೆ.

ನಾವು ನಿಮ್ಮೆಲ್ಲರಿಗೂ ಬಹಳ ಆಶೀರ್ವಾದಕರವಾದ ಹೊಸ ವರ್ಷವನ್ನು ಹಾರೈಸುತ್ತೇವೆ - ನೀವು ಇನ್ನೂ ಹೆಚ್ಚಿನ ಮುರಿಯಲ್ಪಡುವಿಕೆ ಮತ್ತು ಇನ್ನೂ ಹೆಚ್ಚಿನ ದೇವರ ಮೇಲಣ ನಂಬಿಕೆಯನ್ನು ಹೊಂದುವಂತಾಗಲಿ!