ಬರೆದಿರುವವರು :   Bobby McDonald ಭಾಗಗಳು :   ತಿಳಿಯುವುದು ಶಿಷ್ಯಂದಿರಿಗೆ
WFTW Body: 

ಯೇಸುವಿನ ಜೀವಿತದಲ್ಲಿ ಕೆಲವು ಕಠಿಣವಾದ ಜನರಿದ್ದರು. ಕೆಲವರು ಆತನನ್ನು ಹೀನೈಸಿದರು, ಕೆಲವರು ಆತನನ್ನು ಹಿಂಸಿಸಿದರು, ಕೆಲವರು ಆತನನ್ನು ಹೀಯಾಳಿಸಿದರು ಮತ್ತು ಕೆಲವರು ಆತನನ್ನು ನಿರ್ಲಕ್ಷಿಸಿದರು ಅಥವಾ ಕಡೆಗಣಿಸಿದರು. ಆತನೊಟ್ಟಿಗೆ ತನ್ನ ಮೇಲೆ ರೇಗುತ್ತಿದ್ದ, ತನ್ನ ಮೇಲೆ ಉಗುಳುತ್ತಿದ್ದ, ತನ್ನ ವಿರುದ್ಧ ವಾದಿಸುತ್ತಿದ್ದ, ತನ್ನನ್ನು ಹಿಡಿಯಲು ಸಂಚು ಮಾಡುತ್ತಿದ್ದ, ಮತ್ತು ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ಜನರಿದ್ದರು.

ನಮ್ಮ ಪ್ರತಿಯೊಬ್ಬರ ಜೀವಿತದಲ್ಲೂ ಕಠಿಣವಾದ ಜನರು ಇರುತ್ತಾರೆ. ಅವರು ಭಕ್ತಿಹೀನರೂ, ನೀಚರೂ, ಕ್ರೂರಿಗಳೂ, ಕಿರಿಕಿರಿ ಉಂಟುಮಾಡುವವರೂ ಮತ್ತು ದುಷ್ಟರೂ ಎಂಬಂತೆ ನಮಗೆ ತೋರಬಹುದು. ಈ ರೀತಿಯ ಕಠಿಣ ಜನರ ಬಗ್ಗೆ ಸತ್ಯವೇದವು ತೋರಿಸಿ ಕೊಡುವ ಕೆಲವು ತತ್ವಗಳು ನನಗೆ ಸಹಾಯ ಮಾಡಿವೆ.

ಯೋಹಾ. 8:7 "ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ"

ಕಠಿಣ ಜನರ ವಿಷಯದಲ್ಲಿ ನಾನು ಕಲಿತುಕೊಂಡ ಪ್ರಮುಖವಾದ ಅಂಶವೇನೆಂದರೆ ನಾನೂ ಕೂಡ ಅವರಲ್ಲಿ ಒಬ್ಬನು!

ಇತರ ಜನರು ನನ್ನ ಕಡೆಗೆ ಪಾಪಿಗಳೂ, ಕಠಿಣರೂ ಮತ್ತು ಸ್ವಾರ್ಥಿಗಳಾಗಿರಬಹುದು, ಆದರೆ ನಾನೂ ಕೂಡ ಅವರ ಹಾಗೆಯೇ ಒಂದೇ ರೀತಿಯ ಮಾಂಸವನ್ನು ಹೊಂದಿದ್ದೇನೆ ಮತ್ತು ನಾನು ಅವರಂತೆಯೇ ತಪ್ಪಿತಸ್ಥನಾಗಿದ್ದೇನೆ. ಪರಲೋಕದಲ್ಲಿರುವ ಪರಿಪೂರ್ಣನಾದ ನನ್ನ ತಂದೆಗೆ ನಾನು ಎಷ್ಟು ಕಠಿಣನೂ, ಸ್ವಾರ್ಥಿಯೂ, ಮತ್ತು ಪಾಪಿಯಾಗಿ ನಡೆದುಕೊಂಡಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ನಾನು ಕಾಣುವಾಗ, ನನಗೆ ವಿರುದ್ಧವಾಗಿ ಪಾಪ ಮಾಡುವ ಇತರ ಜನರ ಬಗ್ಗೆ ಕರುಣೆ ಮತ್ತು ತಾಳ್ಮೆಯನ್ನು ತೋರಿಸುವುದು ಸುಲಭವಾಗುತ್ತದೆ. ಫರಿಸಾಯನು ಎಂದರೆ ಹತಾಶೆಯಿಂದ ಇತರರನ್ನು ಕೀಳಾಗಿ ಕಾಣುವವನು, ಆದರೆ ಒಬ್ಬ ಕ್ರೈಸ್ತನು ತನ್ನ ಹಾಗೂ ತನ್ನ ಪಾಪದ ವಿಷಯದಲ್ಲಿ ಹತಾಶೆಗೊಂಡವನೂ ಮತ್ತು ಬೇಸತ್ತವನೂ ಆಗಿದ್ದಾನೆ (ಲೂಕ 18:9-13). ಪರಲೋಕ ರಾಜ್ಯವು ಕಠಿಣ ಸಹೋದ್ಯೋಗಿಗಳು, ಕೆಟ್ಟ ಸರ್ಕಾರ, ಸ್ವಾರ್ಥದಿಂದ ತುಂಬಿದ ಕುಟುಂಬ, ಕೆಟ್ಟ ಸಭೆಗಳು ಅಥವಾ ಉಗುರುಬೆಚ್ಚಗಿನ ಕ್ರೈಸ್ತರಿಂದ ಬೇಸತ್ತ ಜನರಿಗೆ ಸೇರಿಲ್ಲ. ಅದು ತಮ್ಮ ವಿಷಯದಲ್ಲಿ ಬೇಸತ್ತ ಜನರಿಗೆ ಸೇರಿದೆ! ಇಂತವರೇ ಆತ್ಮದಲ್ಲಿ "ಬಡವರಾಗಿ" ದೇವರ ಬಳಿಗೆ ಒಬ್ಬ ಬಡ ಭಿಕ್ಷುಕನಂತೆ ಬಂದು "ಕರ್ತನೇ, ನನಗೇ ಸ್ವತ: ಸಹಾಯದ ಅಗತ್ಯತೆಯಿದೆ, ನಾನೊಬ್ಬ ಬಡ ಪಾಪಿ ಭಿಕ್ಷುಕನಾಗಿದ್ದೇನೆ. ನನ್ನನ್ನು ಕ್ಷಮಿಸಿ ಸಹಾಯ ಮಾಡಿ!"ಎನ್ನುವವರು.

"ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕರಾಜ್ಯವು ಅವರದು." (ಮತ್ತಾಯ 5:3)

ನಾನು ನೋಡುವಂತೆ ಸತ್ಯವೇದವು ಬೋಧಿಸುವ ಮತ್ತೊಂದು ಬಹು ಪ್ರಾಮುಖ್ಯವಾದ ಅಂಶ ಏನೆಂದರೆ, ನಮಗೆ ಕಷ್ಟ ಕೊಡುವ ಜನರು ನಮ್ಮನ್ನು ಯಾವ ರೀತಿಯಲ್ಲಿ ನಡೆಸಿಕೊಂಡರೂ, ನಾವು ಅವರನ್ನು ಪ್ರೀತಿಸಬೇಕು ಎಂಬುದಾಗಿ.

ಮತ್ತಾಯ. 5:44"ನಿಮ್ಮ ವೈರಿಗಳನ್ನು ಪ್ರೀತಿಸಿರಿ ಮತ್ತು ನಿಮ್ಮನ್ನು ಹಿಂಸೆಪಡಿಸುವವರಿಗಾಗಿ ಪ್ರಾರ್ಥನೆ ಮಾಡಿರಿ" ಎಂದು ಹೇಳುತ್ತದೆ.

ರೋಮಾ. 2:4"ದೇವರ ಕರುಣೆಯು ನಿಮ್ಮನ್ನು ಮಾನಸಾಂತರಕ್ಕೆ ನಡೆಸುತ್ತದೆ" ಎಂದು ಹೇಳುತ್ತದೆ.

ಒಮ್ಮೆ ನಾನು ಒಂದು ಕಥೆಯನ್ನು ಓದಿದೆ. ಒಂದು ದಿನ ಮುಂಜಾನೆ, ಗಾಳಿಯು, ತನ್ನೊಡನೆ ಸ್ಪರ್ಧಿಸುವಂತೆ ಸೂರ್ಯನಿಗೆ ಸವಾಲೊಡ್ಡಿತು. ಒಬ್ಬ ಮನುಷ್ಯನು ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದನು. ಅವನು ಒಂದು ಕೋಟನ್ನು ಧರಿಸಿದ್ದನು. ಆಗ ಗಾಳಿಯು ಸೂರ್ಯನಿಗೆ ಹೀಗೆ ಹೇಳಿತು. "ನಾನು ನಿನಗಿಂತ ಮೊದಲು ಆ ಮನುಷ್ಯನು ತನ್ನ ಕೋಟನ್ನು ತೆಗೆದುಹಾಕುವಂತೆ ಮಾಡಬಲ್ಲೆನು". ಸೂರ್ಯನು ಆ ಸವಾಲನ್ನು ಒಪ್ಪಿಕೊಂಡನು. ಆಗ ಗಾಳಿಯು ತಾನು ಮೊದಲಾಗಿ ಪ್ರಯತ್ನಿಸುವೆನೆಂದು ಹೇಳಿತು. ಗಾಳಿಯು ತನಗೆ ಸಾಧ್ಯವಾದ ಮಟ್ಟಿಗೆ ಬಹಳ ವೇಗವಾಗಿ, ಬಲದಿಂದ ಒಂದೇ ಸಮನೆ ಬೀಸಲು ಪ್ರಾರಂಭಿಸಿತು. ಅದು ಎಷ್ಟು ಬಲವಾಗಿ ಬೀಸಿತೋ, ಅಷ್ಟೇ ಬಿಗಿಯಾಗಿ ಆ ಮನುಷ್ಯನು ತನ್ನ ಕೋಟನ್ನು ಒತ್ತಿ ಹಿಡಿದುಕೊಂಡನು. ನಂತರ ಸೂರ್ಯನು, ’ಸರಿ ನಾನು ಈಗ ಪ್ರಯತ್ನಿಸುತ್ತೇನೆ’ಎಂದು ಹೇಳಿದನು. ಹಾಗಾಗಿ ಸೂರ್ಯನು ಆಗಸದಲ್ಲಿ ಮೇಲೆ ಬಂದು ಸ್ವಲ್ಪ ಹೆಚ್ಚಾಗಿ ಪ್ರಕಾಶಿಸಲು ಪ್ರಾರಂಭಿಸಿದನು. ಕೊಂಚ ಹೊತ್ತಿನಲ್ಲೇ ಆ ಮನುಷ್ಯನು ನಿಧಾನವಾಗಿ ತನ್ನ ಕೋಟನ್ನು ತೆಗೆದುಹಾಕಿದನು. ಈ ಕಥೆಯ ಸಾರಾಂಶವೇನೆಂದರೆ, ಒಬ್ಬ ಮನುಷ್ಯನನ್ನು ಕಠಿಣವಾಗಿ ಗಾಳಿಯಂತೆ ಬೀಸಿ, ಅವನನ್ನು ಕೋಪದಿಂದ, ಬಲವಾಗಿ ಹಿಡಿತದಲ್ಲಿಟ್ಟುಕೊಳ್ಳುವುದಕ್ಕಿಂತ ಅವನನ್ನು ಪ್ರೀತಿಯಿಂದ ಬೆಚ್ಚಗೆ ಮಾಡುವುದು ಹೆಚ್ಚು ಒಳ್ಳೆಯದು ಎಂದು.

ಒಬ್ಬ ಮಗನು ತನ್ನ ತಂದೆಯಂತೆಯೇ ಇರುತಾನೆ. ನಮ್ಮ ಶತ್ರುಗಳನ್ನು ಪ್ರೀತಿಸಬೇಕೆಂದು ಯೇಸು ಹೇಳಿದ್ದಾರೆ, ಮತ್ತು ಹಾಗೆ ಮಾಡುವುದರಿಂದ ನಾವು ಸ್ವರ್ಗದಲ್ಲಿರುವ ನಮ್ಮ ತಂದೆಯ ಮಕ್ಕಳಾಗಬಹುದು.

ಪರಲೋಕದ ನಮ್ಮ ತಂದೆಯು ಗಾಳಿಯಂತಿದ್ದಾರೋ ಅಥವಾ ಸೂರ್ಯನಂತಿದ್ದಾರೋ? ಸತ್ಯವೇದವು, "ನಮ್ಮ ಮೇಲೆ ಇರುವ ದೇವರ ಪ್ರೀತಿಯು ನಮ್ಮನ್ನು ಆತನನ್ನು ಪ್ರೀತಿಸುವಂತೆ ಮಾಡುತ್ತದೆ" (1 ಯೋಹಾ. 4:19) ಮತ್ತು "ಆತನ ಕರುಣೆಯು ನಮ್ಮನ್ನು ಮಾನಸಾಂತರಕ್ಕೆ ನಡೆಸುತ್ತದೆ" (ರೋಮಾ 2:4) ಎಂದು ಹೇಳುತ್ತವೆ . ಈ ತತ್ವಗಳು ನಮ್ಮ ಜೀವಿತದಲ್ಲಿ ಮತ್ತು ನಾವು ಇತರರೊಡನೆ ವ್ಯವಹರಿಸುವಾಗ ನಮಗೆ ಸಹಾಯ ಮಾಡುತ್ತವೆ ಎಂದು ನಾನು ನಂಬುತ್ತೇನೆ. ಇತರರನ್ನು ಯಥಾರ್ಥವಾಗಿ, ಶ್ರದ್ಧೆಯಿಂದ ಮತ್ತು ನಿಸ್ವಾರ್ಥತೆಯಿಂದ ಪ್ರೀತಿಸುವುದು- ಇತರರೊಡನೆ ನಮ್ಮ ಸಂಬಂಧಗಳಲ್ಲಿ ಐಕ್ಯತೆಯನ್ನು ಮತ್ತು ಒಮ್ಮತವನ್ನು ತರುತ್ತವೆ. ಆದರೆ ಅವರೊಡನೆ ಹೋರಾಡುವುದರಿಂದ ಅಥವಾ ಜಗಳವಾಡುವುದರಿಂದ ಮತ್ತು ಅವರು ನಮ್ಮೊಡನೆ ಒಪ್ಪಿ ನಡೆಯುವಂತೆ ಅಥವಾ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳಬೇಕೆಂದು ಅವರನ್ನು ಬಲಾತ್ಕರಿಸುವುದರಿಂದ ಸಂಬಂಧಗಳು ಕಟ್ಟಲ್ಪಡುವುದಿಲ್ಲ.

ಅನೇಕ ಬಾರಿ ಪ್ರೀತಿಯು ಶತ್ರುಗಳ ಹೃದಯವನ್ನು ಅತಿ ಬೇಗನೆ ನಮ್ಮ ಕಡೆಗೆ ತಿರುಗಿಸಲು ಅಸಾಧ್ಯ (ಮತ್ತು ಎಂದಿಗೂ ಅಸಾಧ್ಯವಾಗಿರಬಹುದು). ಆದರೆ ಅದು ಇರಲಿ. ಒಂದು ವೇಳೆ ನಾವು ನಮ್ಮ ಶತ್ರುಗಳನ್ನು ಪ್ರೀತಿಸುವುದನ್ನು ಮುಂದುವರಿಸುತ್ತಾ ಹೋದರೆ ಮತ್ತು ನಮ್ಮ ವಿರುದ್ಧ ಪಾಪ ಮಾಡುತ್ತಾ ಪಶ್ಚಾತಾಪಪಡದಿರುವ ಜನರನ್ನು ಪ್ರೀತಿಸುತ್ತಿದ್ದರೆ, ನಾವು ನಮ್ಮ ಪರಲೋಕದಲ್ಲಿರುವ ತಂದೆಯಂತಾಗುವೆವು. ಯಾಕೆಂದರೆ ಅವರು ಅಂತಹ ತಂದೆಯಾಗಿದ್ದಾರೆ. ಅವರನ್ನು ತಮ್ಮ ಶತ್ರು ಎಂದು ಪರಿಗಣಿಸುವ ದುಷ್ಟ ಜನರ ಬಗ್ಗೆ ಅಪಾರ ತಾಳ್ಮೆ ಮತ್ತು ಪ್ರೀತಿಯನ್ನು ಹೊಂದಿದ್ದಾರೆ:

ಮತ್ತಾ. 5:44 -45"ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ, ಇದರಿಂದ ನೀವು ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ; ಯಾಕೆಂದರೆ ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಉದಯಿಸುವಂತೆ ಮಾಡುತ್ತಾನೆ; ಮತ್ತು ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ."

ಒಬ್ಬ ಮಗನು ತನ್ನ ತಂದೆಯಂತೆಯೇ ಇರುತ್ತಾನೆ. ನಮ್ಮ ಶತ್ರುಗಳನ್ನು ಪ್ರೀತಿಸಬೇಕೆಂದು ಯೇಸು ಹೇಳಿದ್ದಾರೆ, ಮತ್ತು ಹಾಗೆ ಮಾಡುವುದರಿಂದ ನಾವು ಸ್ವರ್ಗದಲ್ಲಿರುವ ನಮ್ಮ ತಂದೆಯ ಮಕ್ಕಳಾಗಬಹುದು.

ಜ್ಞಾನೋಕ್ತಿ.15:1"ಮೃದುವಾದ ಪ್ರತ್ಯುತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ."

ನಾಲಿಗೆಯು ಒಂದು ಶಕ್ತಿಯುತವಾದ ಅಂಗವಾಗಿದೆ. "ನಾಲಿಗೆಯು ದೇಹದ ಒಂದು ಚಿಕ್ಕ ಅಂಗವಾಗಿದೆ ಆದರೆ ಅದು ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ. ಇಗೋ ಎಷ್ಟು ಸಣ್ಣ ಕಿಚ್ಚು ಎಷ್ಟು ದೊಡ್ಡ ಕಾಡನ್ನು ಸುಡುತ್ತದೆ ನೋಡಿರಿ (ಯಾಕೋ. 3:5).

ಇದರಿಂದ ಯುದ್ಧಗಳು ಪ್ರಾರಂಭವಾಗುತ್ತವೆ ಮತ್ತು ಕೊನೆಗೊಳ್ಳುತ್ತವೆ. ಇನ್ನೂ ಉತ್ತಮವಾಗಿರುವುದೇನೆಂದರೆ, ಯುದ್ಧಗಳನ್ನು ತಡೆಯಲಾಗುತ್ತದೆ! ಸತ್ಯವೇದ ಹೇಳುವುದೇನೆಂದರೆ, ಕೋಪಕ್ಕೆ ಕೋಪದಿಂದ ಉತ್ತರಿಸುವ ಬದಲಾಗಿ, ಕ್ರೋಧಕ್ಕೆ ಕ್ರೋಧವನ್ನು ತೋರಿಸುವ ಬದಲಾಗಿ, ಕೋಪಗೊಂಡ ವ್ಯಕ್ತಿಗೆ ಪ್ರತಿಯಾಗಿ ಮೃದುವಾದ ಮಾತುಗಳು ಮತ್ತು ಮೃದುವಾದ ಉತ್ತರಗಳನ್ನು ನೀಡುವುದು ಉತ್ತಮ. ಇದು ಶಾಂತಿಯ ಅತ್ಯುತ್ತಮ ಮಾರ್ಗವಾಗಿದೆ. ದೇವರು ಜಗಳಗಂಟರನ್ನು ಬಯಸುವುದಿಲ್ಲ (ಕೆಟ್ಟ ಪದಗಳಿಗೆ ಕೆಟ್ಟ ಪದಗಳನ್ನು ಹಿಂದಿರುಗಿಸುವುದು), ಆದರೆ ಸಮಾಧಾನ ಮಾಡುವವರನ್ನು (ಮತ್ತಾ. 5:9). ಇತರರ ಕ್ರೋಧಕ್ಕೆ ಮೃದುವಾದ ಮಾತುಗಳಿಂದ ಪ್ರತಿಕ್ರಿಯಿಸುವ ಮೂಲಕ ನಾವು ಸಮಾಧಾನ ಮಾಡುವವರಾಗಿರುತ್ತೇವೆ.

ಜ್ಞಾನೋಕ್ತಿ.17:13-14 "ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆಯಿಂದ ಕೇಡು ತೊಲಗುವುದೇ ಇಲ್ಲ. ಒಬ್ಬನು ನೀರನ್ನು ಹೊರಬಿಡುವಂತೆ ಕಲಹದ ಪ್ರಾರಂಭವು ಇರುವುದು, ಆದಕಾರಣ ಆ ಕಲಹಕ್ಕೆ ಕೈ ಹಾಕುವುದಕ್ಕಿಂತ ಮೊದಲು ಅದನ್ನು ಬಿಟ್ಟು ಬಿಡು."