ಕ್ರೈಸ್ತಸಭೆಯಲ್ಲಿ ಲೌಕಿಕತೆ ಮತ್ತು ಪಾಪದ ಕುರಿತಾದ ಅಸಡ್ಡೆತನದ ಮನೋಭಾವವನ್ನು ಉಂಟುಮಾಡುವ ಮೂಲತತ್ವಗಳನ್ನು ಜನರು ಕಲಿಸುವ ಅವಕಾಶ ನೀಡಿದ ಪೆರ್ಗಮ ಸಭೆಯ ಸಭಾಹಿರಿಯನು ಖಂಡನೆಗೆ ಒಳಗಾದನು (ಪ್ರಕಟನೆ 2:14,15). ಆತನು ಸ್ವತಃ ಒಳ್ಳೆಯ ಮನುಷ್ಯನು ಆಗಿದ್ದಿರಬಹುದು. ಆದರೆ ಆತನು ಬಿಳಾಮನ ದುರ್ಬೋಧನೆಯನ್ನು ಇತರರು ಕಲಿಸುವದನ್ನು ಸಮ್ಮತಿಸಿದನು. ಈ ಕಾರಣಕ್ಕಾಗಿ ಆತನು ತಪ್ಪಿತಸ್ಥನಾದನು.
ಜನರು ಪಾಪವನ್ನು ಹಗುರವಾಗಿ ಪರಿಗಣಿಸುವಂತೆ ಮಾಡುವ ಯಾವ ಬೋಧನೆಗೂ ಅನುಮತಿ ಸಿಗದಂತೆ ನಿಶ್ಚಯಪಡಿಸುವ ಜವಾಬ್ದಾರಿಯ ಸ್ಥಾನದಲ್ಲಿ ಕರ್ತರು ಸಭಾಹಿರಿಯರನ್ನು ಇರಿಸಿದ್ದಾರೆ. "ದೇವಭಕ್ತಿಯನ್ನು ಹೆಚ್ಚಿಸುವ ಒಂದು ಮೂಲತತ್ವವಿದೆ"(ದೇವಭಯಕ್ಕೂ, ಕ್ರಿಸ್ತನ ಸಾರೂಪ್ಯವುಳ್ಳ ಜೀವನಕ್ಕೂ ನಡೆಸುವಂಥದ್ದು), ಮತ್ತು ಅದು ಮಾತ್ರವೇ "ಸ್ವಸ್ಥಬೋಧನೆಯಾಗಿದೆ"(1 ತಿಮೊ. 6:3ದ ಟಿಪ್ಪಣಿ). ಇದಕ್ಕೆ ಹೊರತಾದ ಯಾವುದೇ ಬೊಧನೆಯೂ ಒಂದಲ್ಲ ಒಂದು ರೀತಿಯಲ್ಲಿ ಅಸ್ವಸ್ಥ ಬೋಧನೆಯಾಗಿದೆ.
ಆ ಸಭಾಹಿರಿಯನು ತನ್ನ ಸಭೆಯಲ್ಲಿ ಇಂತಹ ಸಡಿಲವಾದ ಬೋಧನೆಯನ್ನು ಏಕೆ ಅನುಮತಿಸಿದನು? ಬಹುಶಃ ಆತನು ಸಹೋದರರು ಮತ್ತು ಸಹೋದರಿಯರನ್ನು ಎಂದಿಗೂ ಯಾವುದೇ ವಿಷಯದಲ್ಲೂ ತಿದ್ದುಪಡಿ ಮಾಡಲಿಲ್ಲ, ಏಕೆಂದರೆ ಆತನಿಗೆ ’ದೀನಮನಸ್ಸಿನ ಸಾತ್ವಿಕ ಸಹೋದರ’ ಎಂಬ ಖ್ಯಾತಿಯನ್ನು ಗಳಿಸುವ ದುರಾಶೆಯಿತ್ತು. ಅದು ನಿಜವಾಗಿದ್ದರೆ, ಆತನಿಗೆ ದೇವಸಭೆಯ ಒಳಿತಿಗಿಂತ ಹೆಚ್ಚಾಗಿ ತನ್ನ ಸ್ವಗೌರವವು ಇಷ್ಟವಾಗಿತ್ತು.
"ದೀನತೆ" ಮತ್ತು "ಸಾತ್ವಿಕತೆ" ಎಂಬ ಸದ್ಗುಣಗಳನ್ನು ನಾವು ಯೇಸುವಿನ ಮಾದರಿಯನ್ನು ನೋಡಿ ಕಲಿತುಕೊಳ್ಳಬೇಕೆಂದು ಸ್ವತಃ ಕರ್ತನೇ ನಮಗೆ ತಿಳಿಸಿದರು (ಮತ್ತಾ. 11:29). ನಾವು ಹಾಗೆ ಮಾಡದಿದ್ದಲ್ಲಿ, ಈ ಸದ್ಗುಣಗಳ ಬಗ್ಗೆ ನಮ್ಮಲ್ಲಿ ತಪ್ಪಾದ ಗ್ರಹಿಕೆ ಉಂಟಾಗಬಹುದು.
ಯೇಸುವಿನಲ್ಲಿ ದೀನತೆ ಮತ್ತು ಸಾತ್ವಿಕತೆಗಳು ಇದ್ದರೂ ಸಹ, ದೇವಾಲಯದ ಆವರಣದಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿದ್ದ ಚಿನವಾರರನ್ನು ಹೊರಕ್ಕೆ ಅಟ್ಟುವುದಕ್ಕೆ, ಅಥವಾ ಪೇತ್ರನು ಯೇಸುವು ಶಿಲುಬೆಗೆ ಹೋಗಬಾರದು ಎಂಬ ದುರ್ಬೋಧನೆ ಮಾಡಿದಾಗ, "ಸೈತಾನನೇ, ನನ್ನ ಮುಂದೆ ನಿಲ್ಲಬೇಡ" ಎಂಬ ಬಿರುಸಾದ ಮಾತಿನಿಂದ ಪೇತ್ರನನ್ನು ಖಂಡಿಸುವುದಕ್ಕೆ, ಅದರಿಂದ ಯಾವುದೇ ಅಡ್ಡಿಯಾಗಲಿಲ್ಲ (ಮತ್ತಾ. 16:22,23).
ಸಭೆಯನ್ನು ಅಡ್ಡದಾರಿಗೆ ನಡೆಸಲು ಸೈತಾನನು ಪೇತ್ರನಂತ ಒಬ್ಬ ಒಳ್ಳೆಯ ಸಹೋದರನನ್ನೂ ಸಹ ಉಪಯೋಗಿಸಬಹುದು. ಸಭಾಕೂಟಗಳಲ್ಲಿ ಇಂತಹ ಒಬ್ಬ ಸಹೋದರನು ತನ್ನ ಬೋಧನೆಯ ಮೂಲಕ ಶಿಲುಬೆಗೆ ಸಂಬಂಧಿಸಿದ ಸತ್ಯಾಂಶದ ಪ್ರಾಮುಖ್ಯತೆಯನ್ನು ಕುಗ್ಗಿಸಬಹುದು. ಯಾವಾಗಲೂ ಇಂತಹ ಬೋಧನೆಯು ಸೈತಾನನ ಧ್ವನಿ ಎಂಬುದಾಗಿ ಗುರುತಿಸಲ್ಪಡಬೇಕು - ಏಕೆಂದರೆ ಸೈತಾನನು ಇಂತಹ ಕುತಂತ್ರಗಳಿಂದ ದೇವಸಭೆಯು ದೇವರ ಸಂಕಲ್ಪದಂತೆ ನಡೆಯುವುದನ್ನು ಬಿಟ್ಟು ಬೇರೊಂದು ದಿಕ್ಕಿಗೆ ತಿರುಗುವಂತೆ ಮಾಡಲು ಸಮರ್ಥನಾಗಿದ್ದಾನೆ.
ಸಭೆಯು ಯಾವ ದಿಕ್ಕಿನಲ್ಲಿ ಮುಂದುವರಿಯಬೇಕೆಂದು ನಿರ್ಧರಿಸುವುದು ಸಭಾಹಿರಿಯರಾಗಿರುವ ನಮ್ಮ ಅತ್ಯಂತ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ಸಭೆಯು ಪ್ರಾಪಂಚಿಕತೆ ಮತ್ತು ಲೋಕದೊಂದಿಗೆ ರಾಜಿ ಮಾಡಿಕೊಳ್ಳುವ ದಿಕ್ಕಿನಲ್ಲಿ ಚಲಿಸಬಾರದು. ಅದೇ ರೀತಿ ಫರಿಸಾಯಿತನ ಅಥವಾ ನಿಯಮ-ನಿಷ್ಠೆಗಳ ಅನುಸರಣೆಯನ್ನೂ ಮಾಡಬಾರದು. ಆದರೆ ಅದು ಶಿಲುಬೆಯ ಮಾರ್ಗದಲ್ಲಿ ಸಾಗಬೇಕು - ಅಂದರೆ ದೇವರ ಚಿತ್ತಕ್ಕೆ ಅನುಗುಣವಾಗಿ ಮುಂದುವರಿಯಬೇಕು.
ಬಿಳಾಮನ ಹಾಗಿನ ಬೋಧಕರಲ್ಲಿ ಸಾಮಾನ್ಯವಾಗಿ ಬಹಳ ಹೆಚ್ಚಿನ ಪ್ರಾಣ-ಬಲ(Soul Power) ಇರುತ್ತದೆ ಮತ್ತು ಅವರು ಸಭೆಯ ಜನರನ್ನು ಅನಾರೋಗ್ಯಕರ ಬಿಗಿಹಿಡಿತದಲ್ಲಿ ಇರಿಸಿಕೊಳ್ಳಬಹುದು. ಬಹಳ ಪ್ರಬಲ ಮಾನವ ವ್ಯಕ್ತಿತ್ವವುಳ್ಳ ಬೋಧಕರು ಇತರರ ಮೇಲೆ ತಾವು ಹೊಂದಿರುವ ಹಿಡಿತದ ಮೂಲಕ, ಆ ಸಭೆಯ ಜನರು ತಮ್ಮ ಶಿರಸ್ಸಾಗಿರುವ ಕ್ರಿಸ್ತನೊಂದಿಗೆ ಹೊಂದಿರಬೇಕಾದ ಸಂಬಂಧಕ್ಕೆ ತಡೆಯಾಗುತ್ತಾರೆ. ಅವರ ಪ್ರಭಾವದ ಫಲವಾಗಿ ಇತರರು ನಿಜವಾದ ಆತ್ಮಿಕತೆಯನ್ನು ಹೊಂದುವುದಿಲ್ಲ ಮತ್ತು ಕೇವಲ ಹೊರತೋರಿಕೆಯ ಮತ್ತು ಲೌಕಿಕ ಧಾರ್ಮಿಕತೆಯನ್ನು ಪಡೆಯುತ್ತಾರೆ.
ಒಬ್ಬ ಬೋಧಕನು ತನ್ನ ಪ್ರಾಣ-ಬಲವನ್ನು(Soul Power) ಹೇಗೆ ಸಾಯಿಸಬೇಕೆಂದು ಅರಿತುಕೊಳ್ಳದಿರುವಾಗ, ಆತನು ವಿಶ್ವಾಸಿಗಳನ್ನು ಸಭೆಯ ಶಿರಸ್ಸಾದ ಕ್ರಿಸ್ತನ ಕಡೆಗೆ ನಡೆಸುವುದರ ಬದಲಾಗಿ, ಅವರನ್ನು ತನ್ನ ಕಡೆಗೆ ಸೆಳೆಯುತ್ತಾನೆ. ವಿಶ್ವಾಸಿಗಳು ಆ ಬೋಧಕನನ್ನು ಮೆಚ್ಚಿಕೊಂಡು ಆತನನ್ನು ಹಿಂಬಾಲಿಸುತ್ತಾರೆ, ಆದರೆ ಅವರಿಗೆ ತಮ್ಮ ಜೀವನದಲ್ಲಿ ಪಾಪ ಅಥವಾ ಲೌಕಿಕ ಮನೋಭಾವದಿಂದ ಬಿಡುಗಡೆ ಪಡೆಯಲು ಎಂದಿಗೂ ಸಾಧ್ಯವಾಗುವುದಿಲ್ಲ.
"ಸಭೆಯು ಯಾವ ದಿಕ್ಕಿನಲ್ಲಿ ಮುಂದುವರಿಯಬೇಕೆಂದು ನಿರ್ಧರಿಸುವುದು ಸಭಾಹಿರಿಯರಾಗಿರುವ ನಮ್ಮ ಅತ್ಯಂತ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ"
ಆತ್ಮಿಕ ಬಲ ಮತ್ತು ಪ್ರಾಣ-ಬಲ(Soul Power) ಇವೆರಡರ ನಡುವೆ ಅಪಾರ ವ್ಯತ್ಯಾಸವಿದೆ, ಮತ್ತು ನಾವು ಇವೆರಡನ್ನು ವಿಂಗಡಿಸಿ ನೋಡುವ ವಿವೇಚನೆಯನ್ನು ಹೊಂದಬೇಕು. ಒಬ್ಬ ವ್ಯಕ್ತಿಯಲ್ಲಿ ಹೆಚ್ಚಿನ ಸತ್ಯವೇದದ ಜ್ಞಾನ ಇರಬಹುದು ಮತ್ತು ಆತನು ಬೋಧಿಸುವ ವರವನ್ನು ಹೊಂದಿರಬಹುದು. ಆತನಿಗೆ ಸಹೋದರರು ಮತ್ತು ಸಹೋದರಿಯರ ಅತಿಥಿ ಸತ್ಕಾರದಲ್ಲೂ ಶ್ರದ್ಧೆಯಿರಬಹುದು, ಅದಲ್ಲದೆ ಆತನು ಅವರಿಗೆ ಪ್ರಾಯೋಗಿಕ ರೀತಿಯಲ್ಲಿ ಸಹಾಯ ಮಾಡಬಹುದು. ಆದರೆ ಆತನು ಜನರ ಸಂಬಂಧವನ್ನು ಕ್ರಿಸ್ತನೊಂದಿಗೆ ಬೆಳೆಸುವುದಕ್ಕೆ ಬದಲಾಗಿ ತನ್ನೊಂದಿಗೆ ಬೆಳೆಸಿಕೊಂಡರೆ, ಆತನು ಕ್ರಿಸ್ತನ ದೇಹದ ಬೆಳವಣಿಗೆಗೆ ಅಡ್ಡಿಯಾಗುತ್ತಾನೆ.
ಬಿಳಾಮನ ಹಾಗಿನ ಬೋಧಕರು ಇತರರಿಂದ ಕಾಣಿಕೆಗಳನ್ನು ಸಂತೋಷದಿಂದ ಸ್ವೀಕರಿಸುತ್ತಾರೆ (ಅರಣ್ಯ. 22:15-17). ಒಂದು ಉಡುಗೊರೆ ಅಥವಾ ಕಾಣಿಕೆಯು ನಮ್ಮ ಕಣ್ಣುಗಳನ್ನು ಕುರುಡಾಗಿಸಬಹುದು (ಜ್ಞಾನೋಕ್ತಿಗಳು 17:8), ಮತ್ತು ನಾವು ಯಾರಿಂದ ಕಾಣಿಕೆಗಳನ್ನು ಪಡೆಯುತ್ತೇವೋ ಅವರಿಗೆ ಆಭಾರಿಗಳಾಗುತ್ತೇವೆ ಮತ್ತು ಈ ರೀತಿಯಾಗಿ ಅವರ ಗುಲಾಮರಾಗುತ್ತೇವೆ. ಇಂತಹ ಸ್ಥಿತಿಯು ನಾವು ದೇವರ ಸತ್ಯಾಂಶಗಳನ್ನು ನುಡಿಯುವುದಕ್ಕೆ ಮತ್ತು ನಮ್ಮ ಹಿತೈಷಿಗಳ ತಪ್ಪುಗಳನ್ನು ತಿದ್ದುವುದಕ್ಕೆ ತಡೆಯಾಗಬಹುದು.
ದೇವರ ಸೇವಕನು ಯಾವಾಗಲೂ ಸ್ವತಂತ್ರನಾಗಿರಬೇಕು. "ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು, ಮನುಷ್ಯರಿಗೆ ದಾಸರಾಗಬೇಡಿರಿ"(1ಕೊರಿಂಥದವರಿಗೆ 7:23).