ಪೆರ್ಗಮದ ಕ್ರೈಸ್ತಸಭೆಯ ಸಭಾಪಾಲಕನು ಸಭೆಯ ಜನರ ದಾಸನಾಗಿದ್ದುದರಿಂದ, ಆ ಸಭೆಯಲ್ಲಿ ಬಿಳಾಮನ ಉಪದೇಶವು (ದುರ್ಬೋಧನೆಯು) ಪ್ರಬಲವಾಗಿ ಬೆಳೆಯಿತು.
ಯಾವಾಗಲೂ ದೇವರ ಸೇವಕನು ಸ್ವತಂತ್ರನಾಗಿರಬೇಕು. "ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು, ಮನುಷ್ಯರಿಗೆ ದಾಸರಾಗಬೇಡಿರಿ" (1 ಕೊರಿ. 7:23).
ಬಿಳಾಮನ ಉಪದೇಶವು ಎರಡು ಭಾಗಗಳನ್ನು ಹೊಂದಿದೆ. ಪೇತ್ರನು ಇವೆರಡನ್ನೂ "2 ಪೇತ್ರ 2:14,15"ರಲ್ಲಿ ಉಲ್ಲೇಖಿಸಿದ್ದಾನೆ - ಹಣದಾಸೆ ಮತ್ತು ಜಾರತ್ವ. ಯೇಸುವು ತಿಳಿಸಿದ್ದು ಏನೆಂದರೆ, ಧನವನ್ನು ಪ್ರೀತಿಸುವವನು ದೇವರನ್ನು ದ್ವೇಷಿಸುತ್ತಾನೆ, ಮತ್ತು ಹಣದ ಸೆಳೆತಕ್ಕೆ ಸಿಕ್ಕಿದವನು ದೇವರನ್ನು ತಾತ್ಸಾರ ಮಾಡುತ್ತಾನೆ (ಲೂಕ. 16:13ನ್ನು ಸೂಕ್ಷ್ಮವಾಗಿ ಓದಿಕೊಳ್ಳಿರಿ).
ನಾವು ಈ ವಿಷಯವನ್ನು ಸ್ಪಷ್ಟವಾಗಿ ಕಲಿಸದಿದ್ದಾಗ, ನಮ್ಮ ಸಭೆಯಲ್ಲಿ ಬಿಳಾಮನ ಬೋಧನೆಯು ಬಲಗೊಳ್ಳುತ್ತದೆ ಮತ್ತು ಸಹೋದರ-ಸಹೋದರಿಯರು ಹಣದಾಸೆಗೆ ಒಳಗಾಗುತ್ತಾರೆ.
ಆದರೆ ಯೇಸುಸ್ವಾಮಿ ಕಲಿಸಿದ್ದನ್ನು ನಾವು ಕಲಿಸುವುದಕ್ಕೆ ಮೊದಲು ಸ್ವತಃ ನಾವು ಹಣದ ಹಿಡಿತದಿಂದ ಬಿಡುಗಡೆಗೊಳ್ಳಬೇಕು. ಕೋಪ ಹಾಗೂ ಕಣ್ಣಿನ ವ್ಯಾಮೋಹದಿಂದ ಬಿಡುಗಡೆ ಹೊಂದುವುದು ಹಣದ ಹಿಡಿತದಿಂದ ಬಿಡುಗಡೆ ಹೊಂದುವುದಕ್ಕಿಂತ ಸುಲಭವಾಗಿದೆ. ನಾವು ನಿರಂತರ ಹೋರಾಟದ ಮೂಲಕವಾಗಿ ಮಾತ್ರ ಈ ದುಷ್ಟತನವನ್ನು ಜಯಿಸಬಹುದು.
ನಾವು ಹಣದಾಸೆಯನ್ನು "ಸಕಲ ದುಷ್ಟತನಕ್ಕೆ ಮೂಲ" ಎಂಬುದಾಗಿ ಕಂಡುಕೊಂಡಿದ್ದೇವೆಯೇ (1 ತಿಮೊ. 6:10)? ಕೋಪ ಹಾಗೂ ಕಣ್ಣಿನ ವ್ಯಾಮೋಹ ಇವುಗಳು ದುರ್ಗುಣಗಳೆಂದು ಗುರುತಿಸಲ್ಪಟ್ಟಿದ್ದರೂ, ಹಣದಾಸೆಯು ಆ ರೀತಿಯಾಗಿ ಗುರುತಿಸಲ್ಪಡುವುದಿಲ್ಲ. ಹಾಗಾಗಿ ಅನೇಕರು ಹಣದ ದಾಸರಾಗಿದ್ದಾರೆ, ಮತ್ತು ತಾವು ಇದರ ನಿಮಿತ್ತವಾಗಿ ದೇವರನ್ನು ದ್ವೇಷಿಸಿ ತಾತ್ಸಾರ ಮಾಡುತ್ತಿದ್ದೇವೆ ಎಂಬುದರ ಅರಿವು ಅವರಿಗೆ ಸ್ವಲ್ಪವೂ ಇಲ್ಲ.
"ಪೂರ್ಣಾವಧಿ ಸೇವಕರುಗಳು" ಎಂಬುದಾಗಿ ಕರೆಯಲ್ಪಡುವ ಬಹುಪಾಲು ಜನರು ಬಿಳಾಮನಂತೆಯೇ ಹಣದಾಸೆಯ ದಾಸರಾಗಿದ್ದಾರೆ. ಅವರು ಶ್ರೀಮಂತ ವಿಶ್ವಾಸಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ, ಏಕೆಂದರೆ ತಾವು ಅವರಿಂದ ಉಡುಗೊರೆಗಳನ್ನು ಪಡೆಯುತ್ತೇವೆಂದು ಅವರಿಗೆ ತಿಳಿದಿದೆ. ಈ ಕಾರಣಕ್ಕಾಗಿ ಆ ಶ್ರೀಮಂತರು ಮತ್ತು ಪ್ರಭಾವಿಗಳನ್ನು ಅವರ ಪಾಪಗಳಿಗಾಗಿ ಗದರಿಸಬೇಕಾಗಿ ಬಂದಾಗ, ಈ ಸೇವಕರ ಬಾಯಿಗಳು ಮುಚ್ಚಿಹೋಗುತ್ತವೆ. ಅವರು ಯಾವ ಸಭೆಗಳಲ್ಲಿ ಧಾರಾಳವಾದ ಕಾಣಿಕೆಗಳು ಸಿಗುತ್ತವೋ, ಅಂತಹ ಸಭೆಗಳಲ್ಲಿ ಉಪದೇಶ ಮಾಡಲು ಪ್ರಯಾಣಿಸುತ್ತಾರೆ. ಇಂತಹ ಬೋಧಕರು ದೇವರ ಸೇವೆಯನ್ನು ಮಾಡಲು ಸಾಧ್ಯವಿದೆಯೇ? ಅದು ಅಸಾಧ್ಯವಾದ ಮಾತಾಗಿದೆ. ಅವರು ಹಣವನ್ನು ಸೇವಿಸುತ್ತಿದ್ದಾರೆ. ಯಾವ ಸೇವಕನೂ ಇಬ್ಬರು ಯಜಮಾನರ ಸೇವೆ ಮಾಡಲಾರನೆಂದು ಯೇಸುವು ಹೇಳಿದರು.
ಹೊಸ ಒಡಂಬಡಿಕೆಯ ಅಡಿಯಲ್ಲಿ ದೇವರ ಸೇವಕನಾಗಲು ಬಯಸುವ ಪ್ರತಿಯೊಬ್ಬನೂ ಮೂರು ಗುಣಗಳನ್ನು ಅತ್ಯಾವಶ್ಯವಾಗಿ ಹೊಂದಿರಬೇಕು:
ಆತನು ತನ್ನ ವೈಯಕ್ತಿಕ ಜೀವನದಲ್ಲಿ ಪಾಪದಿಂದ ಬಿಡುಗಡೆ ಹೊಂದಿರಬೇಕು (ರೋಮಾ. 6:22). ಆತನು ಮನುಷ್ಯರನ್ನು ಒಲಿಸಿಕೊಳ್ಳುವವನು ಆಗಿರಬಾರದು (ಗಲಾ. 1:10). ಆತನು ಹಣವನ್ನು ದ್ವೇಷಿಸಿ, ಅದನ್ನು ತಾತ್ಸಾರವಾಗಿ ನೋಡುವವನು ಆಗಿರಬೇಕು (ಲೂಕ. 16:13).
ನಾವು ಹೊಸ ಒಡಂಬಡಿಕೆಯ ಸೇವಕರಾಗಲು ಅರ್ಹರಾಗಿದ್ದೇವೋ ಇಲ್ಲವೋ ಎಂಬುದಾಗಿ ಪರಿಶೀಲಿಸಲು ನಾವು ನಮ್ಮ ಜೀವಿತದ ಈ ಮೂರು ಕ್ಷೇತ್ರಗಳನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳಬೇಕು. ನಾವು ದೇವರಿಗಾಗಿ ಪರಿಣಾಮಕಾರಿಗಳಾಗಿ ಜೀವಿಸುವುದಾದರೆ, ಹಣ ಮತ್ತು ಲೌಕಿಕ ವಸ್ತುಗಳಿಗೆ ಸಂಬಂಧಿಸಿದ ಸಂಗತಿಗಳು ನಮ್ಮ ಜೀವಿತಗಳಲ್ಲಿ ಯಾವುದೇ ಹಿಡಿತವನ್ನು ಹೊಂದಿರಬಾರದು. ಉಡುಗೊರೆಗಳನ್ನು ಸ್ವೀಕರಿಸುವುದನ್ನು ಸಹ ನಾವು ದ್ವೇಷಿಸಬೇಕು, ಏಕೆಂದರೆ "ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಹೆಚ್ಚಿನ ಭಾಗ್ಯ," ಎಂದು ಯೇಸುವು ಹೇಳಿದರು (ಅ.ಕೃ. 20:35).
ನಾವು ನಮ್ಮ ಜೀವಿತದಲ್ಲಿ ಸಂಪತ್ತಿನ ಹಿಡಿತದಿಂದ ಮುಕ್ತರಾಗದೇ ಇದ್ದಲ್ಲಿ, ನಾವು ದೇವರನ್ನು ಹೇಗೆ ಪ್ರೀತಿಸಬೇಕೋ ಅಥವಾ ಅವರನ್ನು ಯಾವ ರೀತಿ ಸೇವಿಸಬೇಕೋ ಅದನ್ನು ಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ ನಾವು ಇತರರನ್ನು ದೇವರನ್ನು ಪ್ರೀತಿಸುವ ಮಾರ್ಗಕ್ಕೆ ನಡೆಸಲು ಸಾಧ್ಯವಾಗುವುದಿಲ್ಲ. ಅದಲ್ಲದೆ ನಾವು ಇತರರನ್ನು ಬಿಳಾಮನ ಉಪದೇಶದಿಂದ ಬಿಡುಗಡೆ ಮಾಡಲಿಕ್ಕೂ ಸಾಧ್ಯವಾಗುವುದಿಲ್ಲ.
ಬಿಳಾಮನ ಬೋಧನೆಯ ಎರಡನೆಯ ಅಂಶವು ಜಾರತ್ವವಾಗಿದೆ. ಈ ಉಪದೇಶವು ಸಹೋದರರು ಸಹೋದರಿಯರೊಂದಿಗೆ ಯಾವುದೇ ನಿರ್ಬಂಧವಿಲ್ಲದೆ, ಯಾವುದೇ ಆತ್ಮಸಂಯಮವಿಲ್ಲದೆ ಬೆರೆಯುವುದನ್ನು ಪ್ರೋತ್ಸಾಹಿಸುತ್ತದೆ. ಬಿಳಾಮನ ಕುರಿತಾಗಿ ನಾವು "ಪ್ರಕಟನೆ 2:14"ರಲ್ಲಿ ಓದಿಕೊಳ್ಳುವಂತೆ, ಆತನು ಮೋವಾಬ್ಯದ ಯುವತಿಯರನ್ನು ಇಸ್ರಾಯೇಲಿನ ಯೌವನಸ್ಥ ಪುರುಷರೊಂದಿಗೆ ಬೆರೆಯುವಂತೆ ಪ್ರೋತ್ಸಾಹಿಸಿದನು. ಇದು ಇಸ್ರಾಯೇಲ್ಯರನ್ನು ಎಂತಹ ಜಾರತ್ವಕ್ಕೆ ನಡೆಸಿತೆಂದರೆ, ಇದರ ನಿಮಿತ್ತವಾಗಿ ದೇವರು ಒಂದೇ ದಿನದಲ್ಲಿ 24,000 ಇಸ್ರಾಯೇಲ್ಯರನ್ನು ಸಾಯಿಸಿದರು (ಅರಣ್ಯ. 25:1-9).
"ನಾವು ಹೊಸ ಒಡಂಬಡಿಕೆಯ ಸೇವಕರಾಗುವ ಅರ್ಹತೆಯನ್ನು ಹೊಂದಿದ್ದೇವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ನಾವು ಈ ಕ್ಷೇತ್ರಗಳಲ್ಲಿ ನಮ್ಮ ಜೀವಿತವನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳಬೇಕು"
ಫೀನೆಹಾಸನು ಒಂದು ಈಟಿಯನ್ನು ಮೇಲೆತ್ತಿಕೊಂಡು ಇದನ್ನು ಕೊನೆಗೊಳಿಸಿದಾಗ ಮಾತ್ರ ಇಸ್ರಾಯೇಲ್ಯರ ಮೇಲೆ ದೇವರ ಕೋಪವು ಶಾಂತವಾಯಿತು. ಫೀನೆಹಾಸನು ಮಾಡಿದ ಕಾರ್ಯವನ್ನು ದೇವರು ಎಷ್ಟು ಮೆಚ್ಚಿಕೊಂಡರು ಎಂದರೆ, ಅವರು ಆತನಿಗೆ ಶಾಶ್ವತ ಯಾಜಕತ್ವವನ್ನು ದಯಪಾಲಿಸುವಂತ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು (ಅರಣ್ಯ. 25:11-13). ಕ್ರೈಸ್ತಸಭೆಯಲ್ಲಿ ಸಹೋದರರು ಮತ್ತು ಸಹೋದರಿಯರ ನಡುವೆ ಸಡಿಲವಾದ ಬೆರೆಯುವಿಕೆಯನ್ನು ತೀವ್ರವಾಗಿ ವಿರೋಧಿಸುವವರನ್ನು ದೇವರು ಯಾವಾಗಲೂ ಗೌರವಿಸುತ್ತಾರೆ.
ಸಭಾಹಿರಿಯರಾಗಿರುವ ನಾವು ಈ ವಿಷಯದಲ್ಲೂ ಸಹ ನಮ್ಮ ವೈಯಕ್ತಿಕ ಉದಾಹರಣೆಯ ಮೂಲಕ ಇತರರಿಗೆ ಮಾದರಿಗಳು ಆಗಿರಬೇಕು. ನಾವು ಸಹೋದರಿಯರೊಂದಿಗೆ ಗಂಭೀರವಾಗಿ ನಡೆದುಕೊಳ್ಳಬೇಕು ಮತ್ತು ಅವರೊಂದಿಗೆ ನಮ್ಮ ಸಂಭಾಷಣೆಯಲ್ಲಿ ಹುಡುಗಾಟವಾಗಲೀ, ಅನಾವಶ್ಯಕ ಮಾತುಗಳಾಗಲೀ ಇರಕೂಡದು. ಯಾವಾಗಲೂ ನಮ್ಮೊಂದಿಗೆ ಮಾತನಾಡಲು ಬಯಸುವ ಸಹೋದರಿಯರ ಬಗ್ಗೆ ನಾವು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ನಾವು ಸಹೋದರಿಯರೊಂದಿಗೆ ಮಾತನಾಡಲು ಇಷ್ಟಪಟ್ಟರೆ, ನಾವು ದೇವಸಭೆಯ ನಾಯಕತ್ವಕ್ಕೆ ಅನರ್ಹರಾಗಿದ್ದೇವೆ. ನಾವು ಮಹಿಳೆಯರೊಂದಿಗೆ ಎಂದಿಗೂ ಒಬ್ಬಂಟಿಗಳಾಗಿ ಒಂದು ಮುಚ್ಚಿದ ಕೊಠಡಿಯಲ್ಲಿ ಮಾತನಾಡಬಾರದು. ಸಹೋದರಿಯರಿಗೆ ಸಲಹೆ ನೀಡುವ ಸನ್ನಿವೇಶದಲ್ಲಿ, ನಮ್ಮ ಪತ್ನಿಯನ್ನು ಅಥವಾ ಮತ್ತೊಬ್ಬ ಸಭಾಹಿರಿಯನನ್ನು ನಮ್ಮ ಜೊತೆಗೆ ಕರೆದುಕೊಳ್ಳುವುದು ಯಾವಾಗಲೂ ಬಹಳ ಉತ್ತಮ.
ಒಂದು ಸಲ ಯೇಸುವು ಸಮಾರ್ಯಸೀಮೆಯ ಬಾವಿಯ ಬಳಿಯಲ್ಲಿ ಒಬ್ಬ ಹೆಂಗಸಿನ ಸಂಗಡ ಮಾತಾಡುತ್ತಿದ್ದುದನ್ನು ನೋಡಿದ ಶಿಷ್ಯರು, "ಆತನು ಒಬ್ಬ ಹೆಂಗಸಿನ ಸಂಗಡ ಮಾತನಾಡುತ್ತಿದ್ದುದನ್ನು ಕಂಡು ಆಶ್ಚರ್ಯಪಟ್ಟರು," ಎಂದು ಬರೆಯಲಾಗಿದೆ (ಯೋಹಾ. 4:27)- ಏಕೆಂದರೆ ಸಾಮಾನ್ಯವಾಗಿ ಯೇಸುವು ಎಂದಿಗೂ ಒಬ್ಬಂಟಿಗನಾಗಿ ಒಬ್ಬ ಹೆಂಗಸಿನೊಂದಿಗೆ ಮಾತನಾಡುತಿರಲಿಲ್ಲ. ಯಾವುದೇ ಕಾರ್ಯವು ತೋರಿಕೆಗೂ ಸಹ ಕೆಟ್ಟದಾಗಿ ಕಂಡುಬಂದರೆ, ಅದರ ಬಗ್ಗೆ ಆತನು ಎಚ್ಚರಿಕೆ ವಹಿಸುತ್ತಿದ್ದನು. ಇದು ನಾವೆಲ್ಲರೂ ಅನುಸರಿಸಬಹುದಾದ ಮಾದರಿಯಾಗಿದೆ.