WFTW Body: 

ನಾವು ಯೇಸುವಿನ ಉಪದೇಶವನ್ನು ಹೇಗಿದೆಯೋ ನಿಖರವಾಗಿ ಹಾಗೆಯೇ ಸ್ವೀಕರಿಸುವುದನ್ನು ಕಲಿಯಬೇಕಾಗಿದೆ, ಏಕೆಂದರೆ ಅನೇಕರು ಆ ಉಪದೇಶದ ಗುಣಮಟ್ಟವನ್ನು ತಗ್ಗಿಸಿದ್ದಾರೆ ಅಥವಾ ಅದರ ಅರ್ಥವನ್ನು ಬದಲಾಯಿಸಿ, ಅದಕ್ಕೆ ತಪ್ಪಾದ ಅರ್ಥವನ್ನು ಕೊಟ್ಟಿದ್ದಾರೆ. ಅನೇಕ ಉಪದೇಶಕರಿಗೆ ದೇವರ ಗುಣಮಟ್ಟದ ಪ್ರಕಾರ ಜೀವಿಸಲು ಸಾಧ್ಯವಾಗದೇ ಇರುವುದರಿಂದ, ಅವರು ದೇವರ ಗುಣಮಟ್ಟವನ್ನು ತಮ್ಮ ಗುಣಮಟ್ಟಕ್ಕೆ ತಗ್ಗಿಸಿದ್ದಾರೆ. ದೇವರ ವಾಕ್ಯದಲ್ಲಿ ಹೇಳಿರುವಂತ ಯಾವುದೋ ಸಂಗತಿಯ ಮಟ್ಟಕ್ಕೆ ನೀವು ತಲುಪಿಲ್ಲವೆಂದು ಕಂಡುಕೊಂಡಾಗ, ಅಥವಾ ನಿಮ್ಮ ಜೀವಿತದ ಮಟ್ಟಕ್ಕಿಂತ ಅದು ಉನ್ನತವಾಗಿದ್ದರೆ, ನಿಮಗೆ ಎರಡು ಆಯ್ಕೆಗಳಿವೆ: ಒಂದು, "ನನಗೆ ತಿಳಿದಿದೆ, ದೇವರ ವಾಕ್ಯವು ನಿಜವಾಗಿ ಆ ಅರ್ಥವನ್ನು ಕೊಡುವುದಿಲ್ಲ. ಸಾಮಾನ್ಯವಾಗಿ ಈ ರೀತಿ ಇರಬೇಕೆಂದು ಅದರ ಅರ್ಥ, ಆದರೆ ಅಕ್ಷರಶಃ ಅದೇ ರೀತಿ ಇರಬೇಕಿಲ್ಲ," ಎನ್ನುವುದು.

ಒಂದು ದೃಷ್ಟಾಂತವನ್ನು ನೋಡಿರಿ, "ಫಿಲಿಪ್ಪಿಯವರಿಗೆ 4:4, ’ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ,’ ಎಂದು ಹೇಳುತ್ತದೆಂದು ನನಗೆ ಗೊತ್ತಿದೆ, ಆದರೆ ಅದರ ನಿಜವಾದ ಅರ್ಥ ’ಯಾವಾಗಲೂ’ ಎಂದಲ್ಲ. ಅದು ಹೇಳುವುದು ಏನೆಂದರೆ, ’ಸಾಮಾನ್ಯವಾಗಿ’ ಅಥವಾ ’ಬಹುತೇಕ ಸಂದರ್ಭಗಳಲ್ಲಿ’ ಎಂಬುದಾಗಿ", ಹೀಗೆ ವಾದಿಸುವುದರ ಮೂಲಕ ನೀವು ದೇವರ ವಾಕ್ಯದ ಮಟ್ಟವನ್ನು ನಿಮ್ಮ ಲೌಕಿಕತೆಗೆ (ಶರೀರಭಾವಕ್ಕೆ) ಅನುಸಾರವಾದ ಮಟ್ಟಕ್ಕೆ ಇಳಿಸುತ್ತೀರಿ, ಮತ್ತು ನೀವು ಅದಕ್ಕೆ ವಿಧೇಯರಾಗಿದ್ದೀರೆಂದು ಕಲ್ಪಿಸಿಕೊಂಡು ತೃಪ್ತಿಗೊಳ್ಳುತ್ತೀರಿ.

ಆದರೆ ಆತ್ಮಿಕನಾದ ಕ್ರೈಸ್ತ ವಿಶ್ವಾಸಿಯು ದೇವರ ಆ ವಾಕ್ಯವನ್ನು ಹೇಗಿದೆಯೋ ಹಾಗೆಯೇ ಇರಿಸುತ್ತಾನೆ ಮತ್ತು ಹೀಗೆ ಹೇಳುತ್ತಾನೆ, "ನಾನು ಪ್ರತಿದಿನದ 24 ತಾಸು ಕರ್ತನಲ್ಲಿ ಸಂತೋಷಿಸಬೇಕು," ಆದಾಗ್ಯೂ ಆತನು ದೀನಭಾವದಿಂದ ತನ್ನ ಪರಿಸ್ಥಿತಿಯನ್ನು ಅರಿಕೆಮಾಡುತ್ತಾನೆ, "ಕರ್ತನೇ, ನಾನು ಆ ಮಟ್ಟವನ್ನು ಇನ್ನೂ ತಲುಪಿಲ್ಲ. ನಾನು ಕೆಲವು ವೇಳೆ ಸಂತೋಷಿಸುತ್ತೇನೆ, ಬೇರೆ ಸಮಯದಲ್ಲಿ (ಹೆಚ್ಚಿನ ಸಮಯ) ಗುಣಗುಟ್ಟುತ್ತೇನೆ, ಮತ್ತು ಆಗಾಗ ಕೋಪಗೊಳ್ಳುತ್ತೇನೆ, ಹಾಗಾಗಿ ನಾನು ಎಲ್ಲಾ ಸಂದರ್ಭಗಳಲ್ಲಿ ಸಂತೋಷಿಸುತ್ತಿಲ್ಲ. ಹೌದು, ಸತ್ಯವೇದವು ಹೇಳುವಂತೆ ಎಲ್ಲದರಲ್ಲೂ ಕೃತಜ್ಞತಾಸ್ತುತಿ ಮಾಡಲು ನನಗೆ ಸಾಧ್ಯವಾಗಿಲ್ಲ. ದಯವಿಟ್ಟು ನನ್ನನ್ನು ಆ ಮಟ್ಟಕ್ಕೆ ನಡೆಸು."

ಅಂತಹ ವ್ಯಕ್ತಿಯು ದೇವರು ಒಪ್ಪುವ ಗುಣಮಟ್ಟವನ್ನು ತಲುಪುತ್ತಾನೆ. ದೇವರ ಗುಣಮಟ್ಟವನ್ನು ತನ್ನ ಮಟ್ಟಕ್ಕೆ ಇಳಿಸಿದ ಆ ಮತ್ತೊಬ್ಬ ವ್ಯಕ್ತಿ ಅದನ್ನು ಎಂದಿಗೂ ಸಾಧಿಸುವುದಿಲ್ಲ. ಒಂದು ದಿನ ಅವನು ನಿತ್ಯತ್ವದಲ್ಲಿ ಎಚ್ಚರಗೊಂಡಾಗ, ತಾನು ಜೀವನದುದ್ದಕ್ಕೂ ದೇವರಿಗೆ ಅವಿಧೇಯನಾಗಿದ್ದೆನು ಎಂಬುದನ್ನು ಕಂಡುಕೊಳ್ಳುತ್ತಾನೆ. ಆದ್ದರಿಂದ, ದೇವರ ವಾಕ್ಯವನ್ನು ಕೆಡಿಸದೆ, ನಾವು ಅದನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಅಥವಾ ನಾವು ಆ ಹಂತವನ್ನು ತಲುಪಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು ಒಳ್ಳೆಯದು. ಆಗ ಆ ಮಟ್ಟವನ್ನು ತಲುಪುವ ಸ್ವಲ್ಪ ನಿರೀಕ್ಷೆಯು ನಮ್ಮಲ್ಲಿ ಉಂಟಾಗುತ್ತದೆ.

ನಾವು "ಮತ್ತಾಯನು 5:20"ನ್ನು ಓದಿಕೊಳ್ಳುವಾಗ ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, "ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ/ ಉತ್ತಮವಾಗದಿದ್ದರೆ, ನೀವು ಪರಲೋಕರಾಜ್ಯದಲ್ಲಿ ಸೇರಲಾರಿರಿ, ಎಂದು ನಿಮಗೆ ಹೇಳುತ್ತೇನೆ."

ಫರಿಸಾಯರ ನೀತಿಯು ಸಾಕಷ್ಟು ಉನ್ನತ ಮಟ್ಟದ್ದಾಗಿತ್ತು. ಅವರು ದಶಾಜ್ಞೆಗಳನ್ನು ಪಾಲಿಸುತ್ತಿದ್ದರು. ಒಬ್ಬ ಶ್ರೀಮಂತ ಯೌವನಸ್ಥನು ಯೇಸುಸ್ವಾಮಿಯ ಬಳಿಗೆ ಬಂದು, "ನಾನು ಎಲ್ಲಾ ಆಜ್ಞೆಗಳಿಗೆ ಸರಿಯಾಗಿ ನಡಕೊಂಡು ಬಂದಿದ್ದೇನೆ" ಎಂದು ಹೇಳಿದನು, ಯೇಸುಸ್ವಾಮಿ ಅದನ್ನು ಪ್ರಶ್ನಿಸಲಿಲ್ಲ. (ಖಂಡಿತವಾಗಿ ಫರಿಸಾಯರು ಹತ್ತನೇ ಆಜ್ಞೆಯನ್ನು ಪಾಲಿಸುವುದು ಅಸಾಧ್ಯವಾಗಿತ್ತು, ಅದು ಆಂತರ್ಯಕ್ಕೆ ಸಂಬಂಧ ಪಟ್ಟದ್ದರಿಂದ ಯಾರೂ ಅದನ್ನು ಪಾಲಿಸಲು ಸಾಧ್ಯವಿರಲಿಲ್ಲ. ಆದರೆ ಅವರು ಇತರ ಒಂಬತ್ತು ಆಜ್ಞೆಗಳನ್ನು ಮತ್ತು 600 ಕ್ಕೂ ಹೆಚ್ಚು ಆಜ್ಞೆಗಳನ್ನು ಒಳಗೊಂಡ ಹಳೆಯ ಒಡಂಬಡಿಕೆಯ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದರು.) ಫರಿಸಾಯರು ತಾವು ನಿಯಮಿತವಾಗಿ (ಬಹುಶಃ ದಿನಕ್ಕೆ ಮೂರು ಬಾರಿ ಇದ್ದಿರಬಹುದು) ಪ್ರಾರ್ಥಿಸುತ್ತೇವೆ, ವಾರಕ್ಕೆ ಎರಡು ಬಾರಿ ಉಪವಾಸ ಮಾಡುತ್ತೇವೆ ಮತ್ತು ತಮ್ಮ ಎಲ್ಲಾ ಆದಾಯದ ಹತ್ತರಲ್ಲೊಂದು ಭಾಗವನ್ನು ಕಾಣಿಕೆ ನೀಡುತ್ತೇವೆ ಎಂದು ಹೆಮ್ಮೆಪಡುತ್ತಿದ್ದರು. ಹಾಗಾದರೆ ಈ ವಾಕ್ಯವು, ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗಬೇಕು ಎಂದು ಹೇಳುವುದರ ಅರ್ಥವೇನು?

ಇದರ ಅರ್ಥ ನಾವು ದಿನಾಲೂ ಮೂರಕ್ಕಿಂತ ಹೆಚ್ಚು ಸಲ ಪ್ರಾರ್ಥಿಸಬೇಕು, ವಾರದಲ್ಲಿ ಎರಡಕ್ಕಿಂತ ಹೆಚ್ಚು ಸಲ ಉಪವಾಸ ಮಾಡಬೇಕು, ಮತ್ತು ನಮ್ಮ ಆದಾಯದ 10 % ಭಾಗಕ್ಕಿಂತ ಹೆಚ್ಚಿನ ಭಾಗವನ್ನು ಕಾಣಿಕೆಯಾಗಿ ಕೊಡಬೇಕು ಎಂದಾಗಿದೆಯೇ? ಅದು ಇದರ ಅರ್ಥವಲ್ಲ. ನಮ್ಮಲ್ಲಿ ಲೌಕಿಕ ಮನಸ್ಸು ಇರುವುದರಿಂದ ನಾವು ಯಾವಾಗಲೂ ಪ್ರಮಾಣದ ಕುರಿತಾಗಿ ಯೋಚಿಸುತ್ತೇವೆ. ನಮ್ಮಲ್ಲಿ ಲೌಕಿಕತೆ ಹೆಚ್ಚಿದಷ್ಟು ನಾವು ಸಂಖ್ಯೆಗಳ ಬಗ್ಗೆ, ಅಂಕೆ-ಅಂಶಗಳ ಬಗ್ಗೆ ಮತ್ತು ಪ್ರಮಾಣದ ಕುರಿತಾಗಿ ಯೋಚಿಸುತ್ತೇವೆ. ಒಂದು ಸಭೆಯಲ್ಲಿ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಮೇಲೆ ಆ ಸಭೆಯ ಬಗ್ಗೆ ನಿರ್ಣಯಿಸುತ್ತೇವೆ, ಅವರ ಜೀವನದ ಗುಣಮಟ್ಟಕ್ಕೆ ತಕ್ಕಂತೆ ಅಲ್ಲ. "ನಿಮ್ಮ ಸಭೆಯ ಕೂಟದಲ್ಲಿ 30,000 ಸಾವಿರ ಮಂದಿ ಸೇರಿದ್ದನ್ನು ನೋಡುವುದರ ಮೂಲಕ, ಎಲ್ಲಾ ಜನರಿಗೆ ನೀವು ನನ್ನ ಶಿಷ್ಯರೆಂದು ತಿಳಿಯುತ್ತದೆ," ಎಂದು ಯೇಸುವು ಹೇಳಿದ್ದಾಗಿ ನಾವು ಅಂದುಕೊಳ್ಳುತ್ತೇವೆ. ಆದರೆ ಆತನು ಹಾಗೆ ನುಡಿಯಲಿಲ್ಲ. ಯೇಸುವು ತನ್ನ ಹನ್ನೊಂದು ಮಂದಿ ಶಿಷ್ಯರಿಗೆ, "ನೀವು ಹನ್ನೊಂದು ಮಂದಿ ಒಬ್ಬರನ್ನೊಬ್ಬರು ಪ್ರೀತಿಸಿದಾಗ ನೀವು ನನ್ನ ಶಿಷ್ಯರಾಗಿದ್ದೀರೆಂದು ಲೋಕದ ಜನರಿಗೆ ತಿಳಿದುಬರುವುದು," ಎಂದು ಹೇಳಿದರು. ಎಷ್ಟು ಮಂದಿ ಜನರು ಸೇರಿಬರುತ್ತಾರೆ ಎಂಬುದು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಯಥಾರ್ಥ ಸ್ಥಳೀಯ ಕ್ರೈಸ್ತಸಭೆಯ ಪ್ರಾಥಮಿಕ ಗುರುತು ಯಾವುದೆಂದರೆ, ಆ ಸಭೆಯ ಶಿಷ್ಯರು ಒಬ್ಬರನ್ನೊಬ್ಬರು ಪ್ರೀತಿಸುವುದು.

"ಯೇಸುವು ಯಾವಾಗಲೂ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿದರು"

ಯೇಸುವು ಯಾವಾಗಲೂ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿದರು. ಇಂದಿನ ಕ್ರೈಸ್ತತ್ವ, ಅಂದರೆ ಸುವಾರ್ತಾ ಪ್ರಚಾರಕ ಸಂಘಸಂಸ್ಥೆಗಳು ಮತ್ತು ಬೃಹತ್ ಗಾತ್ರದ ಸಭೆಗಳು, ಸದಸ್ಯರ ಸಂಖ್ಯೆಗೆ ಹೆಚ್ಚಿನ ಒತ್ತು ನೀಡುತ್ತವೆ. ನಮ್ಮ ಸಭೆಯಲ್ಲಿ ಎಷ್ಟು ಮಂದಿ ಸದಸ್ಯರಿದ್ದಾರೆ? ಒಂದು ವರ್ಷದಲ್ಲಿ ನಮ್ಮ ಸಭೆಗೆ ಎಷ್ಟು ಕಾಣಿಕೆ ಬಂದಿದೆ? ಇಂತಹ ಸಂಗತಿಗಳಿಗಾಗಿ ಅವರು ತಮ್ಮ ಮನಸ್ಸಿನೊಳಗೆ ಹೆಚ್ಚಳ ಪಡುತ್ತಾರೆ. ಅಥವಾ ಧರ್ಮೋಪದೇಶಕರು ಹೀಗೆ ಹೇಳುತ್ತಾರೆ: ನಾನು ಎಷ್ಟು ದೇಶಗಳಿಗೆ ಪ್ರಯಾಣಿಸಿದ್ದೇನೆ? ನಾನು ಎಷ್ಟು ಪ್ರಸಂಗಗಳನ್ನು ಮಾಡಿದ್ದೇನೆ? ನಾನು ಎಷ್ಟು ಪುಸ್ತಕಗಳನ್ನು ಬರೆದಿದ್ದೇನೆ? ನಾನು ಎಷ್ಟು ಟಿವಿ ಕಾರ್ಯಕ್ರಮಗಳಲ್ಲಿ ಸಂದೇಶ ನೀಡುತ್ತೇನೆ? ಶರೀರಭಾವವುಳ್ಳ ಜನರು ಈ ಸಂಗತಿಗಳಿಗಾಗಿ ಹೆಮ್ಮೆ ಪಡುತ್ತಾರೆ.

ಯೇಸುವು ಯಾವಾಗಲೂ ಗುಟಮಟ್ಟವನ್ನು ಒತ್ತಿಹೇಳುತ್ತಿದ್ದರು: ಉಪ್ಪಿನ ಗುಣಮಟ್ಟ ಮತ್ತು ಬೆಳಕಿನ ಗುಣಮಟ್ಟ. ಆತನ ಜೀವಿತದ ಅಂತ್ಯದಲ್ಲಿ ಆತನಿಗೆ ಕೇವಲ ಹನ್ನೊಂದು ಮಂದಿ ಶಿಷ್ಯರಿದ್ದರು. ಅದು ಒಂದು ದೊಡ್ಡ ಸಂಖ್ಯೆಯಲ್ಲ, ಆದರೆ ಆ ಶಿಷ್ಯರ ಜೀವಿತದ ಗುಣಮಟ್ಟವನ್ನು ಗಮನಿಸಿರಿ. ಆ ಹನ್ನೊಂದು ಮಂದಿ ಶಿಷ್ಯರು ಲೋಕವನ್ನು ತಲೆಕೆಳಗಾಗಿ ಮಾಡಿದರು. ಎಲ್ಲವನ್ನೂ ತ್ಯಜಿಸಿದ, ಹಣದಲ್ಲಿ ವ್ಯಾಮೋಹವಿಲ್ಲದ, ಇಂತಹ ಶಿಷ್ಯರು ಎಲ್ಲಿ ಸಿಗುತ್ತಾರೆ? ಇಂದಿನ ದಿನ ಈ ಲೋಕದಲ್ಲಿ ಇಂತಹ ಒಬ್ಬನೇ ಒಬ್ಬ ಬೋಧಕನನ್ನು ಕಂಡುಕೊಳ್ಳುವುದು ಬಹಳ ಅಪರೂಪವಾಗಿದೆ.

ಯೇಸುವು ಗುಣಮಟ್ಟಕ್ಕೆ ಒತ್ತು ನೀಡುವುದಕ್ಕಾಗಿ "ನಿಮ್ಮ ನೀತಿಯು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗಬೇಕು," ಎಂದು ಹೇಳಿದರು. ಗುಣಮಟ್ಟವು ಮುಖ್ಯವಾದದ್ದು, ನೀವು ಎಷ್ಟು ಚಟುವಟಿಕೆಗಳಲ್ಲಿ ತೊಡಗಿದ್ದೀರಿ, ಎಂಬುದು ಮುಖ್ಯವಲ್ಲ. ಗುಣಮಟ್ಟವು ಹಣಕ್ಕೆ ಸಂಬಂಧಿಸುವುದಿಲ್ಲ. ಅದಕ್ಕೂ ಪ್ರಾರ್ಥನೆಗೂ ಯಾವುದೇ ಸಂಬಂಧವಿಲ್ಲ. ಅದು ಉಪವಾಸಕ್ಕೆ ಸಂಬಂಧಿಸಿದ್ದಲ್ಲ. ಅದು ಕ್ರೈಸ್ತಜೀವಿತದ ಗುಣಮಟ್ಟಕ್ಕೆ ಸಂಬಂಧಿಸಿದೆ.

ಯೇಸುವು ಮೇಲೆ ಪ್ರಸ್ತಾಪಿಸಿದ ವಚನದ ನಂತರದ ವಚನಗಳಲ್ಲಿ (ವಾಸ್ತವವಾಗಿ, ಪರ್ವತ ಪ್ರಸಂಗದ ಕೊನೆಯ ವರೆಗೂ) ಈ ಒಂದು ವಚನವನ್ನು ವಿವರಿಸಿ ಹೇಳಿದ್ದಾರೆ. ಇಡೀ ಪರ್ವತ ಪ್ರಸಂಗದ ಹೆಚ್ಚಿನ ಭಾಗವು "ಮತ್ತಾಯನು 5:20"ರ ವಿವರಣೆಯೆಂದು ನಾವು ಹೇಳಬಹುದು. ನೀವು ಪರಲೋಕರಾಜ್ಯವನ್ನು ಪ್ರವೇಶಿಸಲು ಇಚ್ಛಿಸುತ್ತೀರಾ? ಹಾಗಿದ್ದರೆ ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತ ಹೆಚ್ಚಿನದ್ದಾಗಬೇಕು. ನಾವು ದೇವರ ನೀತಿಯ ಗುಣಮಟ್ಟವನ್ನು ತಗ್ಗಿಸಬಾರದು.