ಒಂದು ಕ್ರೈಸ್ತಸಭೆಯಲ್ಲಿ ದೇವರು ಇನ್ನೂ ಕಾರ್ಯ ನಡೆಸುತ್ತಿದ್ದಾರೆ ಎಂಬುದಕ್ಕೆ ಎರಡು ಪ್ರಮಾಣಗಳು ಯಾವುವೆಂದರೆ, ಅವರು ಪೂರ್ಣಹೃದಯವುಳ್ಳ ಶಿಷ್ಯರನ್ನು ಅದಕ್ಕೆ ಸೇರಿಸುತ್ತಾರೆ ಮತ್ತು ಕರ್ತನನ್ನು ಹಿಂಬಾಲಿಸುವ ಆಸಕ್ತಿಯಿಲ್ಲದವರನ್ನು ಸಭೆಯಿಂದ ತೆಗೆದುಹಾಕುತ್ತಾರೆ. ನಾವು ಸತ್ಯವೇದದಲ್ಲಿ ಈ ರೀತಿಯಾಗಿ ಓದಿಕೊಳ್ಳುತ್ತೇವೆ:
"ಕರ್ತನು ರಕ್ಷಣೆಯ ಮಾರ್ಗದಲ್ಲಿ ಇರುವವರನ್ನು ಅವರೊಂದಿಗೆ ಸೇರಿಸುತ್ತಿದ್ದನು" (ಆ ಕಾಲಾವಧಿಯಲ್ಲಿ, ಶಿಷ್ಯತ್ವದ ಸಂದೇಶವನ್ನು ಸ್ವೀಕರಿಸಿದವರನ್ನು ಮಾತ್ರ "ರಕ್ಷಿಸಲ್ಪಟ್ಟವರು" ಎಂದು ಪರಿಗಣಿಸಲಾಗುತ್ತಿತ್ತು - ಅ.ಕೃ. 2:47
ಕರ್ತನು ಇಂತೆನ್ನುತ್ತಾನೆ, "ನಾನು ಅತಿಗರ್ವದಿಂದ ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು, ಮತ್ತು ದೀನ ದರಿದ್ರ ಜನವನ್ನು ನಿನ್ನಲ್ಲಿ ಉಳಿಸುವೆನು. (ಆಗ) ನಿನ್ನ ಮಧ್ಯದಲ್ಲಿ ನಿನ್ನ ದೇವರಾದ ಕರ್ತನು ಜಯಶೀಲನಾಗಿ ನಿನ್ನಲ್ಲಿ ಆನಂದಿಸಿ ಹರ್ಷಧ್ವನಿ ಗೈಯುವನು" (ಚೆಫನ್ಯನು 3:8-17).
ನಮ್ಮ ಸಭೆಯಲ್ಲಿ, ಆರಂಭದ ದಿನಗಳಿಂದಲೂ ನಮ್ಮ ಪರಲೋಕದ ತಂದೆಯು ಇವೆರಡು ರೀತಿಯಲ್ಲಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ.
ಭಾರತದಂತಹ ಒಂದು ದೇಶದಲ್ಲಿ, ನೂರು ಕೋಟಿಗೂ ಮೀರಿದ ಜನಸಂಖ್ಯೆ ಇರುವಾಗ, ಯೇಸುಕ್ರಿಸ್ತನ ಶಿಷ್ಯರಾಗಲು ಬಯಸುವವರನ್ನು ಹುಡುಕುವುದು ಸಾವಿರಾರು ಬೈಹುಲ್ಲಿನ ರಾಶಿಗಳ ನಡುವೆ ಹುದುಗಿರುವ ಕೆಲವು ಸೂಜಿಗಳನ್ನು ಹುಡುಕುವ ಹಾಗೆ ಆಗಿರುತ್ತದೆ!! ನಾವು ಇಡಿ ಜೀವಮಾನವನ್ನು ಈ ಬೈಹುಲ್ಲಿನ ರಾಶಿಗಳ ನಡುವೆ ಹುಡುಕುವುದರಲ್ಲಿ ಕಳೆದರೂ ಕೇವಲ ಒಂದೆರಡು ಸೂಜಿಗಳನ್ನು ಕಂಡುಕೊಳ್ಳಬಹುದು. ಇದಕ್ಕಿಂತ ಹೆಚ್ಚು ಫಲಕಾರಿಯಾದ ಇನ್ನೊಂದು ವಿಧಾನ ಯಾವುದೆಂದರೆ, ಈ ಹುಲ್ಲಿನ ರಾಶಿಗಳ ಹತ್ತಿರ ಅತ್ಯಂತ ಶಕ್ತಿಶಾಲಿ ಅಯಸ್ಕಾಂತಗಳನ್ನು (magnets) ತರುವುದು. ಆಗ ಆ ಸೂಜಿಗಳು ಅಯಸ್ಕಾಂತದ ಆಕರ್ಷಣಾ ಶಕ್ತಿಯ ಮೂಲಕ ಸೆಳೆಯಲ್ಪಡುವವು - ಇದಕ್ಕೆ ಬಹಳ ಕಡಿಮೆ ಶ್ರಮ ಸಾಕಾಗುತ್ತದೆ! ಪೂರ್ಣಹೃದಯದ ಜನರನ್ನು ಕಂಡುಹಿಡಿಯುವುದಕ್ಕೆ ಇದು ಅತ್ಯುತ್ತಮ ಮತ್ತು ಅತಿ ಫಲಕಾರಿ ವಿಧಾನವಾಗಿದೆ. ದೇವರು ಸಹ ಈ ರೀತಿಯಾಗಿಯೇ ಮಾಡಬೇಕೆಂದು ಬಯಸುತ್ತಾರೆ. ಯೇಸುವು ತನ್ನ ಶಿಷ್ಯರಿಗೆ ಕಲಿಸಿದ್ದು ಏನೆಂದರೆ, ಅವರಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ, ಅದನ್ನು ಕಂಡು ಇತರರು ನಮ್ಮನ್ನು ಶಿಷ್ಯರೆಂದು ತಿಳಕೊಳ್ಳುತ್ತಾರೆ (ಯೋಹಾನನು 13:33-35). ಒಂದು ಸಭೆಯಾಗಿ ನಮ್ಮೊಳಗೆ ಇರುವಂತ ಸಾಕ್ಷಿಯು ಇತರರನ್ನು ನಮ್ಮ ಬಳಿಗೆ ಬರುವಂತೆ ಸೆಳೆಯುತ್ತದೆ.
ಈ ಕಾರಣಕ್ಕಾಗಿ ನಮ್ಮ ಸಭೆಯು (ಮತ್ತು ಕರ್ತನು ನಮ್ಮ ಮೂಲಕ ನೆಟ್ಟಂತ ಎಲ್ಲಾ ಸಭೆಗಳು) ಭಾರತದಲ್ಲಿ - ಹಾಗೆಯೇ ಬೇರೆ ದೇಶಗಳಲ್ಲೂ ಸಹ - ಇರುವಂತ ಸಾವಿರಗಟ್ಟಳೆ ಬೈಹುಲ್ಲಿನ ರಾಶಿಗಳಿಂದ (ಬಣವೆಗಳಿಂದ) ಶಿಷ್ಯರುಗಳನ್ನು ಆಕರ್ಷಿಸುವಂತ ಇಂತಹ ಅಯಸ್ಕಾಂತಗಳು (magnets) ಆಗಿರಬೇಕೆಂದು ನಾವು ಬಯಸಿದೆವು.
ಕರ್ತನು ನಮಗೆ ಜನರನ್ನು ಶಿಷ್ಯರನ್ನಾಗಿ ಮಾಡುವ (ಆದರೆ ಪರಿವರ್ತನೆ ಹೊಂದಿದವರು ಅಲ್ಲ) ಆಜ್ಞೆಯನ್ನು ನೀಡಿರುವುದರಿಂದ (ಮತ್ತಾಯನು 28:18-20), ನಾವು ಆರಂಭದ ದಿನಗಳಿಂದಲೂ ಶಿಷ್ಯತ್ವದ ಮೂರು ಷರತ್ತುಗಳನ್ನು ಬೋಧಿಸಿದೆವು - ಯೇಸುವನ್ನು ಸರ್ವೋಚ್ಛವಾಗಿ ಪ್ರೀತಿಸುವುದು, ಪ್ರತಿದಿನ ನಮ್ಮ ಶರೀರಭಾವವನ್ನು ಸಾಯಿಸುವುದು ಮತ್ತು ನಮ್ಮ ಸ್ವಂತ ಲೌಕಿಕ ಸಂಪತ್ತಿನ ಆಕರ್ಷಣೆಯಿಂದ ಮುಕ್ತರಾಗುವುದು (ಇವು ’ಲೂಕನು 14:26-33' ರಲ್ಲಿ ಉಲ್ಲೇಖಿಸಲ್ಪಟ್ಟಿವೆ). ಈ ಮೇಲಿನ ಮೂರು ಷರತ್ತುಗಳನ್ನು ಪೂರೈಸುವ ಆಸಕ್ತಿಯನ್ನು ಹೊಂದಿದ್ದವರನ್ನು ಮಾತ್ರ ನಮ್ಮ ಸಭೆಗಳಲ್ಲಿ ಒಟ್ಟುಗೂಡಿಸಲು ನಾವು ಬಯಸಿದೆವು.
"ಕರ್ತನು ಆಶ್ಚರ್ಯಕರ ವಿಧಾನಗಳ ಮೂಲಕ ನಮ್ಮ ಸಭೆಗೆ ಶಿಷ್ಯರನ್ನು ಸೇರಿಸಿದನು"
ಹಾಗಾಗಿ ಇಂತಹ ಶಿಷ್ಯರಾಗಲು ಬಯಸುವವರನ್ನು ಕರ್ತನು ನಮ್ಮ ಸಭೆಗೆ ಸೇರಿಸಬೇಕೆಂದು ನಾವು ಪ್ರಾರ್ಥಿಸಿದೆವು. ನಾವು ಯಾರನ್ನೂ ಸಹ ನಮ್ಮ ಸಭೆಗಳಿಗೆ ಸೇರಿಕೊಳ್ಳುವಂತೆ ಎಂದಿಗೂ ಆಹ್ವಾನಿಸಲಿಲ್ಲ. ಜನರು ತಮ್ಮ ಸ್ವೇಚ್ಛೆಯಿಂದ ನಮ್ಮೊಂದಿಗೆ ಸೇರಿಕೊಳ್ಳಬೇಕೆಂದು ನಾವು ಬಯಸಿದೆವು. 1975ನೇ ಇಸವಿಯಿಂದ ಇಂದಿನ ವರೆಗೂ, ನಾನು ಒಬ್ಬ ವ್ಯಕ್ತಿಯನ್ನೂ ಸಹ ನಮ್ಮ ಸಭೆಗೆ ಸೇರಿಕೊಳ್ಳುವಂತೆ ಎಂದಿಗೂ ವಿನಂತಿಸಿಲ್ಲ. ಸಂಪೂರ್ಣವಾಗಿ ತಮ್ಮ ಸ್ವಂತ ನಿರ್ಣಯದಿಂದ ನಮ್ಮ ಬಳಿಗೆ ಬಂದವರನ್ನು ನಾವು ಬರಮಾಡಿಕೊಂಡಿದ್ದೇವೆ. ನಾವು ಯಾರನ್ನು ಕಾಯಲು ಮತ್ತು ಯಾರಿಗೆ ಸೇವೆ ಮಾಡಲು ಕರೆಯಲ್ಪಟ್ಟಿದ್ದೆವೋ, ಅಂಥವರನ್ನು ಕರ್ತನು ನಮ್ಮ ಬಳಿಗೆ ಕಳುಹಿಸುತ್ತಾನೆಂದು ನಾವು ನಂಬಿದ್ದೆವು. ಸ್ವತಃ ಕರ್ತನೇ ಜನರನ್ನು ತನ್ನ ಸಭೆಗೆ ಸೇರಿಸುತ್ತಾನೆ. ಯೇಸುವು ಹೇಳಿದ ಮಾತು, "ತಂದೆಯು ನನಗೆ ಕೊಡುವಂತ ಪ್ರತಿಯೊಬ್ಬನೂ ನನ್ನ ಬಳಿಗೆ ಬರುವನು, ಮತ್ತು ನನ್ನ ಬಳಿಗೆ ಬರುವವನನ್ನು ನಾನು ತಳ್ಳಿಬಿಡುವದೇ ಇಲ್ಲ (ಯೋಹಾನನು 6:37).
ಭೂಲೋಕದಲ್ಲಿ ಕ್ರಿಸ್ತನ ದೇಹವಾದ ನಮ್ಮ ವಿಷಯದಲ್ಲೂ ಈ ಮಾತು ನಿಜವಾಗುತ್ತದೆಂದು ನಾವು ನಂಬಿದೆವು.
ಕರ್ತನು ಆಶ್ಚರ್ಯಕರ ಮಾರ್ಗಗಳ ಮೂಲಕ ನಮ್ಮ ಸಭೆಗೆ ಶಿಷ್ಯರನ್ನು ನಡೆಸಿದನು. ಅದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.
ನಮ್ಮ ಸಮೀಪದ ಒಂದು ದೇಶದಲ್ಲಿ ನಡೆಯುತ್ತಿದ್ದ ಯುದ್ಧದಿಂದಾಗಿ ಅನೇಕ ಜನರು ತಮ್ಮ ಸಕಲ ಸೊತ್ತನ್ನು ಬಿಟ್ಟುಬಿಟ್ಟು, ತಮ್ಮ ಕುಟುಂಬಗಳೊಂದಿಗೆ ಸಣ್ಣ ಸಣ್ಣ ದೋಣಿಗಳಲ್ಲಿ ಪಲಾಯನ ಮಾಡಬೇಕಾಯಿತು. ಇವುಗಳಲ್ಲಿ ಕೆಲವು ದೋಣಿಗಳು ಸಮುದ್ರದ ಪಾಲಾದವು ಮತ್ತು ಅನೇಕರು ಸಮುದ್ರದ ನೀರಿನಲ್ಲಿ ಮುಳುಗಿ ಸತ್ತುಹೋದರು. ಆದರೆ ಕೆಲವರು ಬದುಕುಳಿದು ಭಾರತದ ಕಡಲ ತೀರವನ್ನು ತಲುಪಿದರು. ಭಾರತ ಸರ್ಕಾರವು ಈ ನಿರಾಶ್ರಿತರು ನೆಲೆಸುವುದಕ್ಕಾಗಿ ಒಂದು ಶಿಬಿರವನ್ನು ಸ್ಥಾಪಿಸಿತು. ಈ ಶಿಬಿರದ ಬಳಿ ನಮ್ಮ ಎರಡು ಸಭೆಗಳು ಇದ್ದವು. ಆ ಸಭೆಗಳಿಗೆ ಸೇರಿದ ನಮ್ಮ ಕೆಲವು ಸಹೋದರರು ಈ ಶಿಬಿರದ ನಿರಾಶ್ರಿತರನ್ನು (ಅವರು ಪರಿವರ್ತನೆ ಹೊಂದದೆ ಹೆಸರಿಗೆ ಮಾತ್ರ ಕ್ರೈಸ್ತರಾಗಿದ್ದರು) ಸಂಧಿಸಿ, ಅವರೊಂದಿಗೆ ಸುವಾರ್ತೆಯನ್ನು ಹಂಚಿಕೊಂಡರು. ಇದರ ಫಲವಾಗಿ, ಅವರಲ್ಲಿ ಹಲವರು ರಕ್ಷಣೆ ಹೊಂದಿದರು.
ನಮ್ಮ ಸಹೋದರರು ಅವರನ್ನು ಅವರ ಶಿಬಿರದಲ್ಲಿ ಕ್ರಮಬದ್ಧವಾಗಿ ಸಂಧಿಸುತ್ತಿದ್ದರು ಮತ್ತು ಅವರನ್ನು ಒಂದು ಸಭೆಯಾಗಿ ಸ್ಥಾಪಿಸಿದರು. ಅವರು ಸುಮಾರು ಎರಡು ವರ್ಷಗಳ ವರೆಗೆ, ಹಲವು ಬಾರಿ ಬೆಂಗಳೂರಿನಲ್ಲಿ ಮತ್ತು ಬೇರೆ ಊರುಗಳಲ್ಲಿ ನಡೆಯುತ್ತಿದ್ದ ನಮ್ಮ ಸಮ್ಮೇಳನಗಳಲ್ಲಿ ಪಾಲ್ಗೊಂಡರು. ಅವರಿಗೆ ತಮ್ಮ ಸಾಕ್ಷಿಯನ್ನು ಹಂಚಿಕೊಳ್ಳುವ ಹಂಬಲ ಎಷ್ಟು ಬಲವಾಗಿತ್ತೆಂದರೆ, ಅವರು ನಮ್ಮ ಸಮ್ಮೇಳನಗಳಲ್ಲಿ ಉತ್ಸಾಹದಿಂದ ವೇದಿಕೆಗೆ ಧಾವಿಸಿ ಧೈರ್ಯವಾಗಿ ಸಾಕ್ಷಿ ನೀಡುತ್ತಿದ್ದರು. ಅವರು ಹಾಜರಿದ್ದಾಗ ನಮ್ಮ ಸಭೆಯ ಇತರ ಸದಸ್ಯರಿಗೆ ಸಾಕ್ಷಿ ನೀಡುವ ಅವಕಾಶವೇ ಸಿಗುತ್ತಿರಲಿಲ್ಲ!! ಅವರ ಶ್ರದ್ಧೆ-ಉತ್ಸಾಹವು ನಮ್ಮೆಲ್ಲರಿಗೆ ಸವಾಲಾಗಿತ್ತು. ನಮ್ಮ ಒಂದು ಸಮ್ಮೇಳನದಲ್ಲಿ, ಕ್ರೈಸ್ತಸಭೆಯು ಹೇಗೆ ಕ್ರಿಸ್ತನಿಗೆ ಅಧೀನವಾಗಿದೆಯೋ, ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿ ಇರಬೇಕೆಂದು ಸತ್ಯವೇದದಲ್ಲಿ ಕಲಿಸಲ್ಪಟ್ಟಿರುವುದರ ಕುರಿತು ನಾನು ಮಾತನಾಡಿದ ನಂತರ, ಅವರಲ್ಲಿ ಇತ್ತೀಚೆಗೆ ವಿವಾಹವಾಗಿದ್ದ ಒಬ್ಬ ಸಹೋದರಿಯು, ಅಳುತ್ತಾ ಕರ್ತನನ್ನು ಪ್ರಾರ್ಥಿಸಿದಳು ಮತ್ತು ತನ್ನ ವಿವಾಹದ ಆರಂಭದಿಂದಲೇ ತಾನು ಒಬ್ಬ ವಿಧೇಯತೆಯ ಪತ್ನಿಯಾಗಿ ಜೀವಿಸುವ ಅನುಗ್ರಹಕ್ಕಾಗಿ (ಕೃಪೆಗಾಗಿ) ಕರ್ತನನ್ನು ಬೇಡಿಕೊಂಡಳು. ನಾನು ನನ್ನ ಜೀವಿತದಲ್ಲಿ ಯಾವತ್ತೂ ಈ ರೀತಿಯಾಗಿ ಒಬ್ಬ ಹೆಂಡತಿಯು ಅಷ್ಟೊಂದು ಅತ್ಯಾಸಕ್ತಿಯಿಂದ ಅಳುತ್ತಾ ಪ್ರಾರ್ಥಿಸಿದ್ದನ್ನು ಕೇಳಿರಲಿಲ್ಲ!!
ಸುಮಾರು ಎರಡು ವರ್ಷಗಳ ನಂತರ, ಭಾರತ ಸರ್ಕಾರವು ಈ ಶಿಬಿರವಾಸಿಗಳನ್ನು ಅವರ ತಾಯ್ನಾಡಿಗೆ ಕಳುಹಿಸಲು ನಿರ್ಧರಿಸಿತು. ಆದರೆ ಇಷ್ಟರಲ್ಲಿಯೇ ಈ ವಿಶ್ವಾಸಿಗಳು ತಮ್ಮ ನಂಬಿಕೆಯಲ್ಲಿ ಬಹಳ ದೃಢವಾಗಿದ್ದರು ಮತ್ತು ಅವರು ಹಿಂದಿರುಗಿ ಹೋಗುವುದಕ್ಕೆ ಮೊದಲು, ನಾವು ಅವರಲ್ಲಿ ಮೂವರನ್ನು ಸಭಾಹಿರಿಯರನ್ನಾಗಿ ನೇಮಿಸಿದೆವು. ಹಾಗಾಗಿ ದೇವರು ಅವರು ಭಾರತದಲ್ಲಿದ್ದ ಅವಧಿಯನ್ನು ಪರಿಪೂರ್ಣವಾಗಿ ನಿಗದಿ ಪಡಿಸಿದ್ದರು. ಅವರು ಹಿಂದಿರುಗಿ ಹೋದ ಸ್ವಲ್ಪ ಸಮಯದ ನಂತರ ಅವರ ಪ್ರದೇಶದಲ್ಲಿ ಮತ್ತೊಮ್ಮೆ ಯುದ್ಧವು ಪ್ರಾರಂಭವಾಯಿತು, ಮತ್ತು ಅವರು ಮೂರು ವಿಭಿನ್ನ ಪ್ರದೇಶಗಳಿಗೆ ಚದುರಿಹೋದರು. ಆದರೆ ಆಶ್ಚರ್ಯಕರ ವಿಷಯವೆಂದರೆ, ಈ ಮೂರು ಗುಂಪುಗಳಲ್ಲೂ ನಾವು ನೇಮಿಸಿದ್ದ ಒಬ್ಬ ಹಿರಿಯನಿದ್ದನು! ಹಾಗಾಗಿ ಅವರು ಈ ಹಿರಿಯನ ನೇತೃತ್ವದಲ್ಲಿ ಮೂರು ಸಭೆಗಳಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಅಲ್ಲಿ ಈ ಸಭೆಗಳ ಸಾಕ್ಷಿಯ ಮೂಲಕ ಅವರೊಂದಿಗೆ ಇನ್ನೂ ಅನೇಕರು ಸೇರಿಸಲ್ಪಟ್ಟರು. ಇಲ್ಲಿಂದ ನಮ್ಮ ಒಬ್ಬ ಸಹೋದರನು ಕೆಲವು ಸಲ ಅಲ್ಲಿಗೆ ಹೋಗಿ ಅವರನ್ನು ಭೇಟಿ ಮಾಡಿದನು ಮತ್ತು ಕೂಟಗಳನ್ನು ಏರ್ಪಡಿಸಿ ಅವರನ್ನು ಪ್ರೋತ್ಸಾಹಿಸಿದನು.
ನಮ್ಮ ಮತ್ತೊಬ್ಬ ಸಹೋದರನು ಒಂದು ಹೊಸ ಊರಿಗೆ ಹೋಗಿ ನೆಲೆಸಿ, ಅಲ್ಲಿ ಒಂದು ಚಿಕ್ಕ ವ್ಯಾಪಾರವನ್ನು ಪ್ರಾರಂಭಿಸಲು ತೀರ್ಮಾನಿಸಿದನು. ಅಲ್ಲಿಯೂ ಸಹ, ಕ್ರಿಸ್ತನ ಸಮಯದಿಂದ ಯಾವುದೇ ಕ್ರೈಸ್ತಸಭೆಯು ಇರಲಿಲ್ಲ. ಈ ಸಹೋದರನ ಸಾಕ್ಷಿಯ ಮೂಲಕ, ಆ ಊರಿನಲ್ಲಿ ಕೆಲವರು ಯೇಸುಕ್ರಿಸ್ತನ ಶಿಷ್ಯರಾದರು ಮತ್ತು - 2000 ವರ್ಷಗಳಲ್ಲಿ ಮೊದಲ ಬಾರಿಗೆ - ಅಲ್ಲಿ ಇಂದು ಒಂದು ಒಳ್ಳೆಯ ಸಭೆಯಿದೆ.
ಆದಾಗ್ಯೂ ಇವೆಲ್ಲಕ್ಕಿಂತ ಹೆಚ್ಚಿನ ಅದ್ಭುತವೇನೆಂದರೆ, ಕಳೆದ 50 ವರ್ಷಗಳಲ್ಲಿ ನಮ್ಮ ನಡುವೆ ದೇವರು ಮಾಡಿರುವ ಕಾರ್ಯ, 2000 ವರ್ಷಗಳಲ್ಲಿ ಕ್ರೈಸ್ತಸಭೆ ಇಲ್ಲದಿದ್ದಲ್ಲಿ ಮೊದಲ ಬಾರಿಗೆ ಸಭೆಗಳನ್ನು ಆರಂಭಿಸಿದ್ದು ಅಲ್ಲ, ಆದರೆ ಆ ಅನೇಕ ಸಭೆಗಳನ್ನು ನಡೆಸುವುದಕ್ಕಾಗಿ ದೇವಭಯವುಳ್ಳ ಸಭಾಹಿರಿಯರನ್ನು ಎಬ್ಬಿಸಿರುವಂಥದ್ದು. ಭಾರತದಂತ ಒಂದು ದೇಶದಲ್ಲಿ - ಇಲ್ಲಿ ಹೆಚ್ಚಿನ ಕ್ರೈಸ್ತ ಧಾರ್ಮಿಕ ಕೆಲಸಗಾರರು ಸಂಬಳಕ್ಕಾಗಿ ದುಡಿಯುತ್ತಾರೆ ಮತ್ತು ಅವರಿಗೆ ವಿದೇಶೀ ಮೂಲಗಳಿಂದ ಧನಸಹಾಯ ಬರುತ್ತದೆ - ಒಂದು ಆಶ್ಚರ್ಯಕರ ಪವಾಡವೆಂದರೆ, ದೇವರ ಸೇವೆಗಾಗಿ ಮತ್ತು ದೇವರ ಕುರಿಗಳನ್ನು ಮತ್ತು ಕುರಿಮರಿಗಳನ್ನು ಪೋಷಿಸುವುದಕ್ಕಾಗಿ, ಯಾವುದೇ ಸಂಬಳವಿಲ್ಲದೆ ಸೇವೆಯನ್ನು ಕೈಗೊಳ್ಳುವಂತ ಆತ್ಮಿಕ ಮನಸ್ಸುಳ್ಳ ನಾಯಕರುಗಳನ್ನು ಕರೆತಂದಿರುವುದು. ಇಂತಹ ವಾತಾವರಣದಲ್ಲಿ ದೇವರು ನಮ್ಮ ಬಳಿಗೆ ಕಳುಹಿಸಿರುವ ಪುರುಷರು ಯಾವುದೇ ಸಂಬಳವನ್ನು ಪಡೆಯದೆ ನಮ್ಮ ಸಭೆಗಳಲ್ಲಿ - ಈ ಹಲವು ದಶಕಗಳಲ್ಲಿ - ಸಭಾಹಿರಿಯರಾಗಿ ಮತ್ತು ಕುರುಬರಾಗಿ ಸೇವೆ ಮಾಡಿದ್ದಾರೆ. ನಾವು ಯಾವ ಸಭಾಹಿರಿಯನಿಗೂ ಸಂಬಳ ಕೊಡದಿರುವ ನಮ್ಮ ನಿಯಮವು, ಅನೇಕ "ಕ್ರೈಸ್ತ ಸುಲಿಗೆಗಾರರು" ಬಂದು ನಮ್ಮೊಂದಿಗೆ ಸೇರಿಕೊಳ್ಳುವುದನ್ನು ತಪ್ಪಿಸಿದೆ. ಇಂದು ಅನೇಕ ಕ್ರೈಸ್ತ ಸಭೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳಲ್ಲಿ ಈ ಸಮಸ್ಯೆಯು ಎದುರಾಗಿದೆ.
ದೇಶದಾದ್ಯಂತ ಹರಡಿರುವಂತ ನಮ್ಮ ಅಯಸ್ಕಾಂತಗಳು ಬೈಹುಲ್ಲಿನ ರಾಶಿಗಳಿಂದ ಅನೇಕ ಉತ್ತಮ ಮತ್ತು ಯಥಾರ್ಥ ಸೂಜಿಗಳನ್ನು ಹೊರತಂದಿವೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಯಥಾರ್ಥ ಶಿಷ್ಯರುಗಳನ್ನು ಕರೆತರುವ ಭರವಸೆ ನಮಗಿದೆ.
ಕರ್ತನಿಗೆ ಸ್ತೋತ್ರವಾಗಲಿ!