WFTW Body: 

ಮತ್ತಾಯನು 5:17'ರ ವಚನವು ಹೇಳುವಂತೆ, "ನಾನು ಮೋಶೆಯ ಧರ್ಮಶಾಸ್ತ್ರವನ್ನಾಗಲೀ, ಪ್ರವಾದಿಗಳ ವಚನವನ್ನಾಗಲೀ ತೆಗೆದುಹಾಕುವುದಕ್ಕೆ ಬಂದೆನೆಂದು ನೆನಸಬೇಡಿರಿ. ನಾನು ತೆಗೆದುಹಾಕುವುದಕ್ಕೆ ಬಂದಿಲ್ಲ, ನೆರವೇರಿಸುವುದಕ್ಕೆ ಬಂದಿದ್ದೇನೆ." ದೇವರ ಜೀವವೇ ದೇವರ ನಿಯಮದ ಮೂಲತತ್ವವಾಗಿದೆ. ಧರ್ಮಶಾಸ್ತ್ರದಲ್ಲಿ ದೇವರು ತನ್ನ ಗುಣಸ್ವಭಾವವನ್ನು ಚುಟುಕಾಗಿ ತೋರಿಸಿಕೊಟ್ಟರು. ವಿಗ್ರಹಾರಾಧನೆಯನ್ನು ಬಿಟ್ಟುಬಿಡುವುದು ಮತ್ತು ದೇವರಿಗೆ ಮೊದಲ ಸ್ಥಾನ ನೀಡುವುದು, ತಂದೆ-ತಾಯಿಯನ್ನು ಗೌರವಿಸುವುದು, ಕೊಲೆ, ವ್ಯಭಿಚಾರ ಅಥವಾ ಅಂತಹ ಯಾವುದೇ ಕಾರ್ಯದ ಮೂಲಕ ಎಂದಿಗೂ ಜನರನ್ನು ನೋಯಿಸದಿರುವುದು, ಇತ್ಯಾದಿಗಳು ದೇವರ ಜೀವಿತವನ್ನು ಮಾನವನಲ್ಲಿ ವ್ಯಕ್ತಪಡಿಸುವ ವಿಧಾನವಾಗಿತ್ತು, ಮತ್ತು ಯೇಸುವು ಆ ಜೀವಿತವನ್ನು ಸಾಕಾರಗೊಳಿಸಿದರು. "ನಾನು ಮೋಶೆಯ ಧರ್ಮಶಾಸ್ತ್ರವನ್ನು ತೆಗೆದುಹಾಕುವುದಕ್ಕೆ ಬಂದಿಲ್ಲ," ಎಂದು ಯೇಸುವು ನುಡಿದರು. ಧರ್ಮಶಾಸ್ತ್ರದ ಮೂಲತತ್ವವು ನಿಶ್ಚಯವಾಗಿ ತೆಗೆದುಹಾಕಲ್ಪಡಲಿಲ್ಲ. ಕೆಲವು ಜನರು ಈ ವಚನವನ್ನು ತಪ್ಪಾಗಿ ಗ್ರಹಿಸಿ, ನಾವು ಸಬ್ಬತ್ ದಿನವನ್ನೂ ಸಹ ಆಚರಿಸಬೇಕೆಂಬ ಅರ್ಥವನ್ನು ಅದಕ್ಕೆ ನೀಡಿದರು.

ಕೊಲೋಸ್ಸೆಯವರಿಗೆ 2:16-17'ರಲ್ಲಿ ಹೀಗೆ ಹೇಳಲಾಗಿದೆ, "ತಿನ್ನುವುದು ಮತ್ತು ಕುಡಿಯುವುದರ ವಿಷಯದಲ್ಲಿ, ಅಥವಾ ಹಬ್ಬ, ಅಮಾವಾಸ್ಯೆ ಅಥವಾ ಸಬ್ಬತ್ ದಿನದ ವಿಷಯದಲ್ಲಿ ಯಾರೂ ನಿಮನ್ನು ದೂಷಿಸದಂತೆ ನೋಡಿಕೊಳ್ಳಿರಿ, ಏಕೆಂದರೆ ಇವು ಮುಂದೆ ಬರುವ ಸಂಗತಿಗಳ ಛಾಯೆಗಳಾಗಿವೆ." ಇದರಲ್ಲಿ ದಶಾಜ್ಞೆಗಳಲ್ಲಿ ನಾಲ್ಕನೆಯದಾಗಿದ್ದ "ಸಬ್ಬತ್ ದಿನದ ಆಚರಣೆ"ಯನ್ನು ದೇವರು ಉಲ್ಲೇಖಿಸಿದ್ದನ್ನು ನೀವು ಗಮನಿಸಿದಿರಾ? ಅದು ಕೇವಲ ನೆರಳಿನಂತೆ ಇದೆಯೆಂದು ಅವರು ಹೇಳುತ್ತಾರೆ. ಕ್ರಿಸ್ತನು ಇದರ ನಿಜಸ್ವರೂಪನಾಗಿ ಬಂದನು. ಸರಳ ಪದಗಳಲ್ಲಿ ವಿವರಿಸುವುದಾದರೆ, ಅದೊಂದು ’ಛಾಯಾಚಿತ್ರ’ ಅಥವಾ ’ಪ್ರತಿರೂಪ’ ಆಗಿರುತ್ತದೆ. ಯೇಸುವು ಬರುವ ತನಕ, ನಿಮಗೆ ಒಂದು ಛಾಯಾಚಿತ್ರವು ಅಗತ್ಯವಿತ್ತು. ನಾನು ಒಬ್ಬನೇ ಪ್ರಯಾಣಿಸುತ್ತಿರುವಾಗ, ನಾನು ನನ್ನ ಹೆಂಡತಿಯ ಒಂದು ಭಾವಚಿತ್ರವನ್ನು ಇರಿಸಿಕೊಳ್ಳಬಹುದು, ಆದರೆ ನಾನು ನನ್ನ ಹೆಂಡತಿಯೊಂದಿಗೆ ಪ್ರಯಾಣಿಸುವಾಗ ನನಗೆ ಆಕೆಯ ಭಾವಚಿತ್ರ ಏಕೆ ಬೇಕು? ಒಬ್ಬ ಪುರುಷನು ಹೆಂಡತಿಯೊಂದಿಗೆ ಪ್ರಯಾಣಿಸುತ್ತಿದ್ದರೂ ಆಕೆಯ ಭಾವಚಿತ್ರವನ್ನೇ ನೋಡುತ್ತಿದ್ದರೆ, ಆತನಲ್ಲಿ ಏನೋ ತಪ್ಪಿದೆಯೆಂದು ಹೇಳಬಹುದು!

ಈಗ ಕ್ರಿಸ್ತನು ಬಂದಿರುವುದರಿಂದ ಧರ್ಮಶಾಸ್ತ್ರವು ಕೊನೆಗೊಂಡಿದೆ. ಅದು ಕೇವಲ ಒಂದು ಛಾಯೆ ಅಥವಾ ನೆರಳು ಮಾತ್ರವಾಗಿತ್ತೆಂದು ಈ ವಚನದಲ್ಲಿ ಹೇಳಲಾಗಿದೆ. ಅದರಲ್ಲಿ ಕ್ರಿಸ್ತನ ಒಂದು ನಿಖರವಾದ ಮತ್ತು ಸರಿಯಾದ ಚಿತ್ರಣವಿತ್ತು - ಹಳೆಯ ಒಡಂಬಡಿಕೆಯಲ್ಲಿ ಹಲವು ಅಂಶಗಳು ಕ್ರಿಸ್ತನನ್ನು ನಿಖರವಾಗಿ ಚಿತ್ರಿಸಿದ್ದವು - ಆದರೆ ಅದು ಒಂದು ಚಿತ್ರಣ ಮಾತ್ರವಾಗಿದೆ. ಧರ್ಮಶಾಸ್ತ್ರದ ನಿಜಸ್ವರೂಪವು ಕ್ರಿಸ್ತನಲ್ಲಿದೆ. ಯೇಸುವು ಧರ್ಮಶಾಸ್ತ್ರವನ್ನು ನೆರವೇರಿಸುವುದರ ಬಗ್ಗೆ ಮಾತನಾಡುವಾಗ, ನಾವು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕ್ರಿಸ್ತನಲ್ಲಿ ಸಬ್ಬತ್ ಆಚರಣೆಯು ನೆರವೇರಿತು, ಮತ್ತು ಇಂದು ಕರ್ತನು ನಮ್ಮ ಹೃದಯದ ಒಳಗೆ ಅಂತರಂಗದ ಸಬ್ಬತ್ತನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದಾನೆ. "ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು"(ಮತ್ತಾ. 11:28). ನಾವು ಯೇಸುವಿನ ನೊಗವನ್ನು ನಮ್ಮ ಮೇಲೆ ತೆಗೆದುಕೊಳ್ಳುವಾಗ ನಮಗೆ ಆ ಹೃದಯದ ವಿಶ್ರಾಂತಿಯು ಪ್ರಾಪ್ತವಾಗುತ್ತದೆ. ಕೆಲವು ಜನರು ಸಬ್ಬತ್ ಆಚರಣೆ ಎಂದಿಗೂ ತೆಗೆದುಹಾಕಬಾರದಾದ ಒಂದು ಆಜ್ಞೆ ಎಂದು ಯೋಚಿಸುತ್ತಾರೆ. ಇಲ್ಲ, ಈಗ ನಮ್ಮ ಹೃದಯಗಳ ಒಳಗೆ ಬರುವ ಪವಿತ್ರಾತ್ಮನ ಮೂಲಕ ಧರ್ಮಶಾಸ್ತ್ರವು ನೆರವೇರುತ್ತದೆ.

ಇದನ್ನು ’ರೋಮಾಪುರದವರಿಗೆ 8:4'ರಲ್ಲಿ ಹೀಗೆ ವಿವರಿಸಲಾಗಿದೆ: "ಹೀಗೆ ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮನಿಗೆ ಅನುಸಾರವಾಗಿ ನಡೆಯುವವರಾದ ನಮ್ಮಲ್ಲಿ, ಧರ್ಮಶಾಸ್ತ್ರದ ನಿಯಮವು ನೆರವೇರಿಸಲ್ಪಟ್ಟಿತು." ಧರ್ಮಶಾಸ್ತ್ರವು ಈ ರೀತಿಯಾಗಿ ನೆರವೇರುತ್ತದೆ. ನಾವು ಒಂದು ವಚನವನ್ನು ಮತ್ತೊಂದರ ಜೊತೆಗೆ ಹೋಲಿಸಿ ನೋಡಬೇಕು. ಧರ್ಮಶಾಸ್ತ್ರವು ಅಳಿದುಹೋಗುವುದಿಲ್ಲ. ಯೇಸುವು ಧರ್ಮಶಾಸ್ತ್ರವನ್ನು ತೆಗೆದುಹಾಕಲಿಕ್ಕೆ ಬರಲಿಲ್ಲ, ಆದರೆ ಅದನ್ನು ನೆರವೇರಿಸುವುದಕ್ಕೆ ಬಂದರು, ಮತ್ತು ನಮ್ಮಲ್ಲಿಯೂ ಕೂಡ ಧರ್ಮಶಾಸ್ತ್ರವು ನೆರವೇರಬೇಕು. ಅದು ನಮ್ಮಲ್ಲಿ ನೆರವೇರುವುದು ಹೇಗೆ ಸಾಧ್ಯ? ಧರ್ಮಶಾಸ್ತ್ರದ ನೀತಿಗೆ ಅನುಸಾರವಾದ ಷರತ್ತುಗಳು ಯಾವಾಗ ನಮ್ಮಲ್ಲಿ ನೆರವೇರುತ್ತವೆ ಎಂದರೆ, ನಾವು ಪ್ರತಿದಿನವೂ ಶರೀರಭಾವಕ್ಕೆ ಅನುಸಾರವಾಗಿ ನಡೆಯದೆ, ಪವಿತ್ರಾತ್ಮನಿಗೆ ಅನುಸಾರವಾಗಿ ನಡೆಯುವಾಗ (ರೋಮಾ. 8:4). ಇದು ಸಬ್ಬತ್ ಅಥವಾ ಇತರ ದಶಾಜ್ಞೆಗಳನ್ನು ಪಾಲಿಸುವುದರಿಂದ ಸಾಧ್ಯವಾಗುವುದಿಲ್ಲ.

ಮತ್ತಾಯನು 5:20'ರಲ್ಲಿ ನಾವು ಎಷ್ಟು ಸಂಪೂರ್ಣವಾಗಿ ಧರ್ಮಶಾಸ್ತ್ರವನ್ನು ನೆರವೇರಿಸಬೇಕು ಎಂಬುದನ್ನು ಯೇಸುವು ವಿವರಿಸಿದ್ದಾರೆ: "ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಯನ್ನು ಮೀರದಿದ್ದರೆ ನೀವು ಪರಲೋಕರಾಜ್ಯದಲ್ಲಿ ಸೇರಲಾರಿರಿ."ಯೇಸುವು ಧರ್ಮಶಾಸ್ತ್ರವನ್ನು ನೆರವೇರಿಸುವುದಕ್ಕಾಗಿ ಬಂದರು, ಮತ್ತು ನಮ್ಮ ಜೀವಿತದಲ್ಲೂ, ನಮ್ಮ ಹೃದಯಗಳಲ್ಲಿ ದೇವರ ನಿಯಮವು ನೆರವೇರಬೇಕು. ಹಳೆಯ ಒಡಂಬಡಿಕೆಯ ಅಡಿಯಲ್ಲಿ ಜನರು ಇದನ್ನು ಹಲವಾರು ಬಾಹ್ಯ ಆಚರಣೆಗಳ ಮೂಲಕ ನೆರವೇರಿಸಿದರು - ಅವರು "ಪಾತ್ರೆಗಳ ಹೊರಭಾಗವನ್ನು" ಶುಚಿಮಾಡುತ್ತಿದ್ದರು. ಆದರೆ ಈಗ ಪಾತ್ರೆಯ ಒಳಭಾಗದ ಬಗ್ಗೆ ದೇವರು ಆಸಕ್ತರಾಗಿದ್ದಾರೆ. ನಮ್ಮ ಜೀವಿತವು ಭೂಮಿಗೆ ಉಪ್ಪಾಗಿಯೂ, ಲೋಕಕ್ಕೆ ಬೆಳಕಾಗಿಯೂ ಇರಬೇಕು, ಮತ್ತು ಇಂತಹ ಜೀವಿತವು ಪವಿತ್ರಾತ್ಮನ ಮೂಲಕ ನಮ್ಮೊಳಗಿನಿಂದ ಬರಬೇಕು.

"ಈಗ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನು ನೆಲೆಸುವುದರ ಮೂಲಕ ಧರ್ಮಶಾಸ್ತ್ರವು ನೆರವೇರುತ್ತದೆ"

ಫಿಲಿಪ್ಪಿಯವರಿಗೆ 2:12,13'ಹೀಗೆ ಹೇಳುತ್ತದೆ, "ನೀವು ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. ಯಾಕೆಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಲಿಕ್ಕಾಗಿ ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡುವವರಾಗಿದ್ದಾರೆ."

ಈ ವಚನದ ಕುರಿತು ಎರಡು ಅಂಶಗಳನ್ನು ಇಲ್ಲಿ ಬಿಡಿಸಿ ಹೇಳಲು ಬಯಸುತ್ತೇನೆ:

(i) ’ರಕ್ಷಣೆ’ (ಭೂತಕಾಲಕ್ಕೆ ಸಂಬಂಧಿಸಿದಂತೆ) ಎಲ್ಲಕ್ಕೂ ಮೊದಲಿಗೆ, ದೇವರ ಕೋಪದಿಂದ ಮತ್ತು ದೇವರ ತೀರ್ಪಿನಿಂದ ರಕ್ಷಣೆಯಾಗಿದೆ. ಈ ರಕ್ಷಣೆಯು ದೇವರಿಂದ ಬರುವಂತ ಉಚಿತಾರ್ಥ ವರವಾಗಿದೆ ಮತ್ತು ನಾವು ಸ್ವಂತ ಶ್ರಮದಿಂದ ಅದನ್ನು ಪಡೆಯಲು ಎಂದಿಗೂ ಸಾಧ್ಯವಿಲ್ಲ. ಈ ಕೃಪಾವರವನ್ನು ಯೇಸುವು ಶಿಲುಬೆಯ ಮೇಲೆ ನಮಗಾಗಿ "ಮಾಡಿ ಮುಗಿಸಿದ್ದಾರೆ". ಆದರೆ (ವರ್ತಮಾನ ಕಾಲಕ್ಕೆ ಸಂಬಂಧಿಸಿದಂತೆ) ರಕ್ಷಣೆಯು ಈಗ ನಾವು ಆದಾಮನ ಸ್ವಭಾವದಿಂದ (ಅಂದರೆ ಶರೀರಾಧೀನ ಸ್ವಭಾವದಿಂದ) ಮತ್ತು ನಮ್ಮ ಪಾಪದಿಂದ ಕೂಡಿದ ಲೌಕಿಕ ನಡತೆಯಿಂದ (ಮಾತಿನ ರೀತಿ, ಸಿಡುಕುತನ, ಅಶುದ್ಧತೆ, ಲೌಕಿಕ ವ್ಯಾಮೋಹ, ಮೊದಲಾದವು) ಬಿಡುಗಡೆ ಹೊಂದುತ್ತಿರುವುದನ್ನೂ ಸಹ ಸೂಚಿಸುತ್ತದೆ. ಮೇಲೆ ಪ್ರಸ್ತಾಪಿಸಿದ ವಚನವು ಈ ರಕ್ಷಣೆಯ ಕುರಿತಾಗಿದೆ.

ನಮ್ಮ ರಕ್ಷಣೆಯ ಮೂರು ಕಾಲಗಳು (ಭೂತಕಾಲ, ವರ್ತಮಾನ ಕಾಲ, ಭವಿಷ್ಯತ್ ಕಾಲ) ಈ ರೀತಿ ಇವೆ:

  • - ನಾವು (ಕ್ರೈಸ್ತ ವಿಶ್ವಾಸಿಗಳು) ಈಗಾಗಲೇ ಪಾಪದ ದಂಡನೆಯಿಂದ ರಕ್ಷಿಸಲ್ಪಟ್ಟಿದ್ದೇವೆ.
  • - ನಾವು ಪಾಪದ ಬಲದಿಂದ ರಕ್ಷಣೆ ಹೊಂದುತ್ತಿದ್ದೇವೆ.
  • - ಮುಂದೆ ಒಂದು ದಿನದಲ್ಲಿ, ಯೇಸುವು ಹಿಂದಿರುಗಿ ಬರುವಾಗ, ನಾವು ಪಾಪದ ಸ್ವಭಾವದಿಂದ ರಕ್ಷಣೆ ಹೊಂದಲಿದ್ದೇವೆ,
  • (ii) ದೇವರ ವಾಕ್ಯದಲ್ಲಿ ಎಲ್ಲೆಲ್ಲಿ ದೇವರು ನಮ್ಮಲ್ಲಿ ’ಕಾರ್ಯ ಸಾಧಿಸುವ’ ಕುರಿತಾಗಿ ಮಾತನಾಡುತ್ತಾರೋ, ಅದು ಯಾವಾಗಲೂ ಪವಿತ್ರಾತ್ಮನು ಮಾಡುವ ಸೇವೆಯನ್ನು ಉಲ್ಲೇಖಿಸುತ್ತದೆ. ಹಾಗಾಗಿ ಪವಿತ್ರಾತ್ಮನ ಪ್ರಾಥಮಿಕ ಕಾರ್ಯ ನಮ್ಮನ್ನು ಪ್ರತ್ಯೇಕಿಸುವುದಾಗಿದೆ (ನಮ್ಮನ್ನು ಪಾಪ ಮತ್ತು ಲೌಕಿಕತೆಯಿಂದ ಪ್ರತ್ಯೇಕಿಸುವುದು) ಮತ್ತು ನಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದು. ಹಾಗಾಗಿ ದೇವರು ನಮ್ಮೊಳಗೆ "ಉಂಟುಮಾಡುವ" ಸ್ವಭಾವವನ್ನು, ನಾವು "ಬಲಪಡಿಸಬೇಕು". ನಮ್ಮ ಮನೋಭಾವದಲ್ಲಿ, ಅಥವಾ ಆಲೋಚನೆಯಲ್ಲಿ, ಅಥವಾ ನಡತೆಯಲ್ಲಿ ಯಾವುದೋ ಬದಲಾವಣೆಯ ಅವಶ್ಯಕತೆಯ ಕುರಿತಾಗಿ ದೇವರು ನಮ್ಮೊಂದಿಗೆ ಮಾತನಾಡಿ ತೋರಿಸಿಕೊಡುವಾಗ, ದೇವರು "ನಮ್ಮೊಂದಿಗೆ ಕಾರ್ಯ ಸಾಧಿಸುತ್ತಿದ್ದಾರೆ." ಆ ತಿದ್ದುವಿಕೆಯನ್ನು ನಾವು ಸ್ವೀಕರಿಸಿ, ಆ ದುರಾಭ್ಯಾಸದ ವಿಷಯದಲ್ಲಿ ನಮ್ಮ ಜೀವಿತದಲ್ಲಿ "ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿ ಮಾಡಿಕೊಳ್ಳುವಾಗ"(2 ಕೊರಿ. 7:1ನ್ನು ಓದಿಕೊಳ್ಳಿರಿ) - ನಾವು ನಮ್ಮ "ರಕ್ಷಣೆಯನ್ನು ಸಾಧಿಸಿಕೊಳ್ಳುತ್ತಿದ್ದೇವೆ."