WFTW Body: 

ಯೇಸುವು ತೋರಿಸಿಕೊಟ್ಟ ಮೊಟ್ಟ ಮೊದಲ ತಪ್ಪಾದ ಮನೋಭಾವ ’ಕೋಪ’ವಾಗಿತ್ತು. ನಾವು ನಮ್ಮ ಜೀವಿತದಲ್ಲಿ ಕೋಪವನ್ನು ತೆಗೆದುಹಾಕುವುದು ಅತ್ಯಾವಶ್ಯಕವಾಗಿದೆ. ಎರಡನೆಯ ತಪ್ಪಾದ ಮನೋಭಾವ, ಎಲ್ಲಾ ಕ್ರೈಸ್ತರು ಎದುರಿಸುವಂತ ದೊಡ್ಡ ಸಮಸ್ಯೆ (ಎಲ್ಲಾ ಮಾನವರಲ್ಲೂ ಸಹ) ಯಾವುದೆಂದರೆ, ಅದು ಲೈಂಗಿಕ ಮೋಹದ ಆಲೋಚನೆಗಳು - ಒಬ್ಬ ಪುರುಷನು ಒಬ್ಬ ಸ್ತ್ರೀಯನ್ನು ನೋಡಿ ಮೋಹದ ಆಲೋಚನೆಯನ್ನು ಮಾಡುವುದು. ’ಮತ್ತಾಯನು 5:27-28'ರಲ್ಲಿ ಹೇಳಿರುವಂತೆ, ಹಳೆಯ ಒಡಂಬಡಿಕೆಯ ಗುಣಮಟ್ಟ ಹೀಗಿತ್ತು, "ವ್ಯಭಿಚಾರ ಮಾಡಬೇಡ." ಇದರ ಅರ್ಥ, ನೀನು ಪರಸ್ತ್ರೀಯನ್ನು ಮುಟ್ಟದಿದ್ದರೆ, ಮತ್ತು ಆಕೆಯೊಂದಿಗೆ ವ್ಯಭಿಚಾರ ಮಾಡದಿದ್ದರೆ, ನಿನ್ನಲ್ಲಿ ದೋಷವಿಲ್ಲ. ಇದು ಹಳೆಯ ಒಡಂಬಡಿಕೆಯ ಗುಣಮಟ್ಟವಾಗಿತ್ತು.

ಆದರೆ ಯೇಸುವು ಈ ಗುಣಮಟ್ಟವನ್ನು ಇನ್ನೂ ಹೆಚ್ಚಿಸಿದರು. ಮೋಶೆಯು ಪರ್ವತವನ್ನು ಏರಿ ದಶಾಜ್ಞೆಗಳೊಂದಿಗೆ ಹಿಂದಿರುಗಿ ಬಂದರೆ, ಯೇಸುವು ಪರ್ವತವನ್ನು ಏರಿ ಪರ್ವತ ಪ್ರಸಂಗವನ್ನು ಸಾರಿದರು. ಅವರು ದಶಾಜ್ಞೆಗಳ ಗುಣಮಟ್ಟವನ್ನು ಆ ಆಜ್ಞೆಗಳ ಆತ್ಮಿಕ ಮಟ್ಟಕ್ಕೆ ಅನುಸಾರವಾಗಿ ಹೆಚ್ಚಿಸಿದರು. ನರಹತ್ಯೆ ಅಥವಾ ಕೊಲೆ ಮಾಡುವುದು ಕೋಪದ ಇನ್ನೊಂದು ಮುಖವೆಂದು, ಮತ್ತು ನಿಮ್ಮ ಕಣ್ಣುಗಳಿಂದ ಮೋಹಿಸುವುದು ವ್ಯಭಿಚಾರ ಮಾಡುವುದಕ್ಕೆ ಸಮನಾಗಿದೆಯೆಂದು ಅವರು ತೋರಿಸಿದರು - ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ನಿಮ್ಮ ಮನಸ್ಸಿನಲ್ಲಿ ಆ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡುತ್ತಿದ್ದೀರಿ ಎಂದರ್ಥ. ಇದು ದೇವರ ದೃಷ್ಟಿಯಲ್ಲಿ ವ್ಯಭಿಚಾರವಾಗಿದೆಯೆಂದು ಯೇಸು ಹೇಳಿದರು, ಏಕೆಂದರೆ ನಿಮ್ಮ ಒಳಜೀವಿತವು ಅಶುದ್ಧವಾಗಿದೆ.

ಫರಿಸಾಯರ ಲಕ್ಷಣ ಏನಾಗಿತ್ತೆಂದರೆ, ಅವರು ತಮ್ಮ ಹೊರಜೀವಿತವನ್ನು ಶುದ್ಧವಾಗಿ ಇಟ್ಟುಕೊಂಡಿದ್ದರು - ಒಂದು ಪಾತ್ರೆಯ ಹೊರಭಾಗವನ್ನು ಸ್ವಚ್ಛಗೊಳಿಸಿದ ಹಾಗೆ. ಒಬ್ಬ ಕ್ರೈಸ್ತನು ತನ್ನ ಬಾಹ್ಯ ಜೀವಿತವನ್ನು ಸ್ವಚ್ಛವಾಗಿ ಇರಿಸಿಕೊಂಡು ತನ್ನ ಒಳಜೀವಿತದ ಆಲೋಚನೆಗಳನ್ನು ಅಶುದ್ಧವಾಗಿ ಇರಿಸಿಕೊಂಡರೆ, ಆತನು ಒಬ್ಬ ಫರಿಸಾಯನಾಗಿದ್ದಾನೆ, ಮತ್ತು ಆತನು ತನಗೆ ತಿಳಿದೋ ಅಥವಾ ತಿಳಿಯದೆಯೋ, ನರಕದ ಹಾದಿಯಲ್ಲಿ ನಡೆಯುತ್ತಿದ್ದಾನೆ. ನಮ್ಮಲ್ಲಿ ಅನೇಕರು ಇದು ಎಷ್ಟು ಗಂಭೀರವಾದ ವಿಷಯವೆಂದು ಅರಿತುಕೊಂಡಿಲ್ಲ.

ಕಳೆದ 50 ವರ್ಷಗಳಲ್ಲಿ ನಾನು ಹೆಚ್ಚಾಗಿ ಬೆರಳೆಣಿಕೆಯಷ್ಟು ಪಾಪಗಳ ವಿರುದ್ಧ ಬೋಧಿಸಿದ್ದೇನೆ, ಅದರಲ್ಲೂ ಎರಡಕ್ಕೆ ಹೆಚ್ಚಿನ ಒತ್ತನ್ನು ನೀಡಿದ್ದೇನೆ - ಕೋಪ ಹಾಗೂ ಲೈಂಗಿಕ ಮೋಹದ ಪಾಪಭರಿತ ಆಲೋಚನೆಗಳು. ಇವುಗಳ ವಿರುದ್ಧವಾಗಿ ನಾನು ಇಷ್ಟು ಹೆಚ್ಚಾಗಿ ಏಕೆ ಮಾತನಾಡುತ್ತೇನೆಂದು ಜನರು ನನ್ನನ್ನು ಪ್ರಶ್ನಿಸಿದ್ದಾರೆ. ನಾನು ಅವರಿಗೆ ಕೊಡುವ ಉತ್ತರ ಏನೆಂದರೆ, ಯೇಸುವು ನಮ್ಮ ನೀತಿಯು ಶಾಸ್ತ್ರಿಗಳು ಮತ್ತು ಫರಿಸಾಯರ ನೀತಿಗಿಂತ ಹೆಚ್ಚಿನದಾಗಬೇಕೆಂದು ಹೇಳಿದ ಮೊದಲ ಸಂದರ್ಭದಲ್ಲಿ, ಇವೆರಡು ಪಾಪಗಳನ್ನು ಅವರು ಉಲ್ಲೇಖಿಸಿದರು. ಅಲ್ಲಿದ್ದ ಎಲ್ಲಾ ಫರಿಸಾಯರ ನೀತಿಗಿಂತ (ಇವರಲ್ಲಿ ಹೆಚ್ಚಿನ ಧಾರ್ಮಿಕತೆಯು ಕಂಡುಬರುತ್ತಿತ್ತು) ನಿಮ್ಮ ನೀತಿಯು ಹೆಚ್ಚಿನದಾಗಬೇಕೆಂದು ಹೇಳಿದ ಕೂಡಲೇ, ಯೇಸುವು ಕೋಪ ಮತ್ತು ಲೈಂಗಿಕ ಮೋಹದ ಆಲೋಚನೆಗಳ ಕ್ಷೇತ್ರಗಳನ್ನು ಪ್ರಸ್ತಾಪಿಸಿದರು. ನಾನು ಇವೆರಡರ ವಿರುದ್ಧವಾಗಿ ಹೆಚ್ಚು ಬೋಧಿಸುವುದಕ್ಕೆ ಇದು ಮೊದಲನೆಯ ಕಾರಣವಾಗಿದೆ.

ಇವೆರಡು ಪಾಪಗಳ ವಿರುದ್ಧವಾಗಿ ನಾನು ಹೆಚ್ಚಾಗಿ ಬೋಧಿಸುವುದಕ್ಕೆ ಎರಡನೆಯ ಕಾರಣ, ಯೇಸುವು ಪರ್ವತ ಪ್ರಸಂಗದಲ್ಲಿ ನರಕಕ್ಕೆ ಬೀಳಿಸುವಂತ ಅಪಾಯವಿರುವ ಕೇವಲ ಎರಡು ಪಾಪಗಳೆಂದು ಇವೆರಡರ ವಿರುದ್ಧವಾಗಿ ಬೋಧಿಸಿದರು. ಇದನ್ನು ಹೆಚ್ಚಿನ ಜನರು ನಂಬುವುದಿಲ್ಲ. ಪರ್ವತ ಪ್ರಸಂಗದಲ್ಲಿ ನರಕದ ಕುರಿತಾಗಿ ಯೇಸುವು ಮಾತನಾಡಿದ್ದು ಇವೆರಡು ಪಾಪಗಳ ವಿಚಾರದಲ್ಲಿ (ಮತ್ತಾ. 5:22b,29-30) ಆಗಿರುವುದರಿಂದ, ಈ ಎರಡು ಪಾಪಗಳು ಬಹಳ ಗಂಭೀರವಾದವುಗಳೆಂದು ನಮಗೆ ತೋರಿಸಲಾಗಿದೆ.

"ಫರಿಸಾಯರ ಗುಣಲಕ್ಷಣವೆಂದರೆ - ಪಾತ್ರೆಯ ಹೊರಭಾಗವನ್ನು ಸ್ವಚ್ಛ ಮಾಡಿದಂತೆ - ಅವರು ತಮ್ಮ ಬಾಹ್ಯ ಜೀವಿತವನ್ನು ಶುದ್ಧವಾಗಿ ಇರಿಸಿಕೊಂಡಿದ್ದರು. ಒಬ್ಬ ಕ್ರೈಸ್ತನು ತನ್ನ ಹೊರಗಿನ ಜೀವಿತವನ್ನು ಶುದ್ಧವಾಗಿ ಇರಿಸಿಕೊಂಡರೂ, ತನ್ನ ಮನಸ್ಸಿನ ಆಲೋಚನೆಗಳ ಜೀವಿತದಲ್ಲಿ ಅಶುದ್ಧತೆ ಹೊಂದಿದ್ದಲ್ಲಿ, ಆತನು ಒಬ್ಬ ಫರಿಸಾಯನಾಗಿದ್ದಾನೆ."

ಪರ್ವತ ಪ್ರಸಂಗದ ಒಂದು ಬಹಳ ಗಮನಾರ್ಹ ವಿಷಯವೆಂದರೆ, ಅಲ್ಲಿ ಯೇಸುವು ಕೇವಲ ಎರಡು ಬಾರಿ ಮಾತ್ರ ನರಕದ ಬಗ್ಗೆ ಹೇಳಿರುವುದು, ಕೋಪದ ಕುರಿತಾಗಿ, ಮತ್ತು ಲೈಂಗಿಕ ಮೋಹದ ಆಲೋಚನೆಯ ವಿಚಾರವಾಗಿ. ಹಾಗಾಗಿ ದೇವರ ದೃಷ್ಟಿಯಲ್ಲಿ ಇವು ಬಹಳ ಗಂಭೀರ ಪಾಪಗಳಾಗಿರಬೇಕು, ಆದಾಗ್ಯೂ ಇಂದು ಇವುಗಳ ವಿರುದ್ಧವಾಗಿ ಸಾಕಷ್ಟು ಬೋಧನೆ ಮಾಡಲಾಗುತ್ತಿಲ್ಲ. ನೀನು ಕೋಪವನ್ನು ಜಯಿಸುವ ಕುರಿತಾದ ಒಂದು ಸಂದೇಶವನ್ನು ಇತ್ತೀಚಿಗೆ ಯಾವಾಗ ಕೇಳಿಸಿಕೊಂಡಿದ್ದೀ? ನಾನು ನನ್ನ ಇಡೀ ಜೀವಿತಕಾಲದಲ್ಲಿ ಅದರ ಬಗ್ಗೆ ಒಂದು ಬಾರಿಯೂ ಒಂದು ಸಂದೇಶವನ್ನಾದರೂ ಕೇಳಿಸಿಕೊಂಡಿಲ್ಲ. ಕಳೆದ 65ಕ್ಕಿಂತ ಹೆಚ್ಚು ವರ್ಷಗಳು ನಾನು ಕ್ರೈಸ್ತತ್ವದಲ್ಲಿ ಓಡಾಡುತ್ತಿದ್ದೇನೆ ಮತ್ತು TV, YouTube ಮೊದಲಾದ ಮಾಧ್ಯಮಗಳಲ್ಲಿ, ಹಾಗೂ ಅನೇಕ ಸಭಾಕೂಟಗಳಲ್ಲಿ ಬಹಳ ಮಂದಿ ಪ್ರಚಾರಕರನ್ನು ಕೇಳಿಸಿಕೊಂಡಿದ್ದೇನೆ. ಆದಾಗ್ಯೂ ನಾನು ಲೈಂಗಿಕ ಮೋಹದ ವಿಚಾರದ ಬಗ್ಗೆ ಕೇಳಿಸಿಕೊಂಡಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿದೆ. ಬೋಧಕರು ಇವೆರಡು ಕ್ಷೇತ್ರಗಳ ಬಗ್ಗೆ ಬೋಧಿಸುವುದನ್ನು ಸೈತಾನನು ಏಕೆ ತಡೆಯುತ್ತಾನೆ?

ಇದಕ್ಕೆ ಮೊಟ್ಟಮೊದಲ ಕಾರಣವೆಂದರೆ, ಈ ಬೋಧಕರು ಸ್ವತಃ ತಾವು ಜಯಗಳಿಸಿಲ್ಲ. ಅವರು ಸ್ವತಃ ಇದಕ್ಕೆ ಗುಲಾಮರಾಗಿರುವಾಗ ಇದರ ಬಗ್ಗೆ ಅವರು ಹೇಗೆ ಮಾತನಾಡಲು ಸಾಧ್ಯ? ಎರಡನೆಯದಾಗಿ, ಅನೇಕ ವೇಳೆ ಈ ಉಪದೇಶಕರು ತಮ್ಮ ಸಭೆಗಳಲ್ಲಿ ಜನರನ್ನು ಹೊರನೋಟಕ್ಕೆ ಉತ್ತಮರಾಗಿ ಕಾಣಿಸುವಂತೆ ಮಾಡಿ, ಅನಂತರ ಅವರಿಂದ ಹಣವನ್ನು ಪಡೆದುಕೊಳ್ಳಲು ಆಸಕ್ತರಾಗಿದ್ದಾರೆ. ಹೀಗಾಗಿ ಇವೆರಡು ಸಂಗತಿಗಳಿಗೆ ಹೆಚ್ಚು ಒತ್ತು ಕೊಡುವುದು ಅವಶ್ಯವಾಗಿದೆ, ಮತ್ತು ಯೇಸುವು ಇದರ ಬಗ್ಗೆ ಬಹಳಷ್ಟು ಮಾತನಾಡಿದರು. ಇವೆರಡು ಪಾಪಗಳು ಒಬ್ಬ ವ್ಯಕ್ತಿಯನ್ನು ಅಂತಿಮವಾಗಿ ನರಕಕ್ಕೆ ಕೊಂಡೊಯ್ಯುತ್ತವೆ ಎಂದು ಯೇಸುವು ಹೇಳಿದರು ಮತ್ತು ಇದು ಬಹಳ ಗಂಭೀರ ವಿಷಯವಾಗಿದೆ.

ಯೇಸುವು ದಶಾಜ್ಞೆಗಳನ್ನು ತೆಗೆದುಕೊಂಡು, ಅವುಗಳ ಉದ್ದೇಶವೇನೆಂದು ಜನರಿಗೆ ತೋರಿಸಿದರು.

ನಿನ್ನ ಹೆಂಡತಿಯಲ್ಲದ ಒಬ್ಬ ಸ್ತ್ರೀಯನ್ನು ಮೋಹಿಸುವುದು ಪಾಪವೆಂದು ತಿಳಿದುಕೊಳ್ಳಲು ನಿನಗೆ ’ಮತ್ತಾಯನು 5'ನೇ ಅಧ್ಯಾಯ ಅವಶ್ಯವಿಲ್ಲ. ಒಬ್ಬಾತನು ಒಬ್ಬ ಸ್ತ್ರೀಯನ್ನು ವ್ಯಾಮೋಹದ ದೃಷ್ಟಿಯಿಂದ ನೋಡಿದರೆ (ಆತ ವಿಶ್ವಾಸಿಯೋ ಅಥವಾ ಅವಿಶ್ವಾಸಿಯೋ ಎನ್ನುವುದು ಮುಖ್ಯವಲ್ಲ) ಆತನು ತನ್ನ ಹೃದಯದಲ್ಲಿ ಆಗಲೇ ಆಕೆಯೊಂದಿಗೆ ವ್ಯಭಿಚಾರ ಮಾಡಿದ್ದಾನೆಂದು ಯೇಸುವು ಹೇಳಿದರು. ಮೋಹವೆಂದರೆ ಒಂದು ಬಲವಾದ ಆಸೆ. ಈ ಪಾಪ ಎಷ್ಟು ಗಂಭೀರವಾದದ್ದೆಂದರೆ, ನಿನ್ನ ಬಲಗಣ್ಣು ನಿನ್ನನ್ನು ಈ ರೀತಿಯ ಪಾಪಕ್ಕೆ ನಡೆಸುವುದಾದರೆ, ನೀನು ಅದನ್ನು ಕಿತ್ತು ಬಿಸಾಡಬೇಕೆಂದು ಅವರು ಹೇಳಿದರು! ನಿನ್ನ ಕಣ್ಣುಗಳು ನಿನ್ನನ್ನು ಪಾಪಕ್ಕೆ ಸಿಕ್ಕಿಸುವ ಸಂದರ್ಭದಲ್ಲಿ ನೀನು ಕಠಿಣ ಕ್ರಮವನ್ನು ಕೈಗೊಳ್ಳಬೇಕು. ನೀನು ಒಬ್ಬ ಕುರುಡನಂತೆ ನಡೆದುಕೊಳ್ಳಬೇಕು. ಈ ಶೋಧನೆಯನ್ನು ಜಯಿಸುವುದಕ್ಕೆ ಇದೊಂದೇ ಮಾರ್ಗವಾಗಿದೆ. ಇದನ್ನು ಹಗುರವಾಗಿ ತೆಗೆದುಕೊಂಡು, "ದೇವರ ಸೃಷ್ಟಿಯ ಸೌಂದರ್ಯವನ್ನು ನಾನು ಸವಿಯುತ್ತಿದ್ದೇನೆ, ಅಷ್ಟೇ," ಎಂದು ಹೇಳಬಾರದು. ಈ ಪಾಪವನ್ನು ಪಾಪವಲ್ಲವೆಂದು ನಾವು ಸಮರ್ಥಿಸಿಕೊಳ್ಳುವ ಹಲವು ಮಾರ್ಗಗಳಿವೆ, ಮತ್ತು ಅನೇಕ ಜನರು ಹಾಗೆ ಮಾಡುತ್ತಾರೆ. ಒಬ್ಬ ವ್ಯಕ್ತಿಯು ಈ ಕ್ಷೇತ್ರದಲ್ಲಿ ಅಜಾಗರೂಕತೆಯಿಂದ ನಡೆಯುವ ಅಭ್ಯಾಸವನ್ನು ಬೆಳೆಸಿಕೊಂಡರೆ, ಸ್ವಲ್ಪ ಸಮಯದ ನಂತರ ಆತನು ವ್ಯಭಿಚಾರದಲ್ಲಿ ತೊಡಗುತ್ತಾನೆ, ಮತ್ತು ಪ್ರಪಂಚದಾದ್ಯಂತ ಅನೇಕ ಸಭಾಪಾಲಕರು ಇದನ್ನೇ ಮಾಡಿದ್ದಾರೆ.

’ಮತ್ತಾಯನು 5'ನೇ ಅಧ್ಯಾಯದಲ್ಲಿರುವ ಯೇಸುವಿನ ಬೋಧನೆಯು ದೇವಭಯವುಳ್ಳ ಮನುಷ್ಯರಿಗೆ ತಿಳಿಯದಿರುವ ಹೊಸ ವಿಷಯವೇನೂ ಅಲ್ಲ. ಯೇಸುವು ಇದರ ಬಗ್ಗೆ ಮಾತನಾಡುವುದಕ್ಕೆ ಮೊದಲೇ ಸ್ನಾನಿಕನಾದ ಯೋಹಾನನಿಗೆ ಇದು ತಿಳಿದಿತ್ತೆಂದು ನನಗೆ ಖಚಿತವಿದೆ. ಯೋಬನಿಗೆ ಇದು ತಿಳಿದಿತ್ತು (ಯೋಬ. 31:1,4,11). ಯಾರಲ್ಲಿ ಯೋಬನಂತೆ ದೇವಭಯವಿದೆಯೋ, ಆತನ ಬಳಿ ಧರ್ಮಶಾಸ್ತ್ರ (ಅಥವಾ ಸತ್ಯವೇದ) ಇಲ್ಲದಿದ್ದರೂ, ಆತನು ತನ್ನ ಹೆಂಡತಿಯಲ್ಲದ ಒಬ್ಬ ಕನ್ಯೆಯ ಮೇಲೆ ಕಣ್ಣಿಟ್ಟರೆ, ದೇವರ ಮುಂದೆ ಅದು ದುರಾಚಾರವೆಂದು ಪರಿಗಣಿಸಲ್ಪಡುತ್ತದೆ ಎಂದು ಆತನಿಗೆ ತಿಳಿಯುತ್ತದೆ. ನಮ್ಮೊಳಗೆ ಇರುವಂತ ಪ್ರಜ್ಞೆಯು ಅದು ತಪ್ಪೆಂದು ನಮಗೆ ತೋರಿಸುತ್ತದೆ. ಇದು ದೇವರು ನಮಗೆ ಕೊಡದೇ ಇರುವ ಒಂದು ವಸ್ತುವನ್ನು ಕದಿಯುವುದಕ್ಕೆ ಸಮನಾಗಿದೆ. ನೀವು ಬೇರೆಯವರಿಗೆ ಸೇರಿದ ಯಾವುದೋ ವಸ್ತುವನ್ನು ಕದಿಯುವಾಗ ನಿಮ್ಮ ಮನಸ್ಸಾಕ್ಷಿ ಅದು ಪಾಪವೆಂದು ನಿಮಗೆ ಹೇಳುವಂತೆ, ಈ ವಿಷಯವನ್ನು ಸತ್ಯವೇದವಿಲ್ಲದೆಯೂ ತಿಳಿದುಕೊಳ್ಳಬಹುದು. ಇದನ್ನು ಒಂದು ಆಜ್ಞೆಯ ಮೂಲಕ ನಿಮಗೆ ಹೇಳುವುದು ಅವಶ್ಯವಿಲ್ಲ. ದೇವಭಯವೇ ಇದನ್ನು ನಿಮಗೆ ತಿಳಿಸುತ್ತದೆ. ನಾವು ಯೇಸುವಿನ ಬೋಧನೆಯನ್ನು ಪರಿಗಣಿಸುವಾಗ ನೆನಪಿಟ್ಟುಕೊಳ್ಳಬೇಕಾದ ಒಂದು ಅದ್ಭುತ ಸಂಗತಿ ಇದಾಗಿದೆ.

ಇಂದಿನ ದಿನ ಬಹಳ ಮಂದಿ ವಿಶ್ವಾಸಿಗಳು ತಮ್ಮ ಕಣ್ಣುಗಳಿಂದ ಲೈಂಗಿಕ ವ್ಯಾಮೋಹದಲ್ಲಿ ತೊಡಗುವುದನ್ನು ಬಹಳ ಹಗುರವಾಗಿ ಪರಿಗಣಿಸುವುದಕ್ಕೆ ಏನು ಕಾರಣ? ಅವರಲ್ಲಿ ಯೋಬನಲ್ಲಿದ್ದ ದೇವಭಯವು ಇಲ್ಲದೇ ಇರುವುದು ಇದಕ್ಕೆ ಮೂಲಕಾರಣವಾಗಿದೆ. ಇಂದಿನ ಕ್ರೈಸ್ತರಲ್ಲಿ ಸತ್ಯವೇದ ಜ್ಞಾನವಿದೆ, ಆದರೆ ದೇವಭಯವಿಲ್ಲ. ಸತ್ಯವೇದ ಅಧ್ಯಯನ ಸಂಸ್ಥೆಗಳಲ್ಲಿ ಸತ್ಯವೇದ ಅಧ್ಯಯನ ಮಾಡಿ ಡಾಕ್ಟರೇಟ್ ಪದವಿಯನ್ನು ಗಳಿಸಿದರೂ, ಇನ್ನೂ ಸ್ತ್ರೀಯರನ್ನು ನೋಡಿ ಮೋಹಿಸುವ ಜನರು ಇದ್ದಾರೆ. ಇದು ನಮಗೆ ಏನನ್ನು ತೋರಿಸುತ್ತದೆ? ಇದು ನಮಗೆ ತೋರಿಸುವುದು ಏನೆಂದರೆ, ನೀವು ದೇವರ ವಾಕ್ಯದ ಜ್ಞಾನವು ತಲೆಯಲ್ಲಿ ತುಂಬಿಸಿಕೊಂಡು ಮತ್ತು ಸತ್ಯವೇದ ಸಂಸ್ಥೆಯಿಂದ "ಒಂದು ಪದವಿಯನ್ನು" ಗಳಿಸಿಕೊಂಡಿದ್ದರೆ, ಆ ಮೂಲಕ ನೀವು ಪರಿಶುದ್ಧತೆಯನ್ನು ಗಳಿಸುವುದಿಲ್ಲ. ಇಂದಿನ ದಿನ ಸತ್ಯವೇದದ ಹಲವಾರು ಭಾಷಾಂತರಗಳು ಲಭ್ಯವಾಗಿದ್ದು ಮತ್ತು ವಾಕ್ಯಾನುಕ್ರಮಣಿಕೆಗಳು ('concordances') ಸಹ ಸಿಗುವಾಗ, ಸತ್ಯವೇದ ಜ್ಞಾನವು ವಿಫುಲವಾಗಿದೆ. ಸತ್ಯವೇದವು ಮೊಬೈಲ್ ಫೋನಿನಲ್ಲಿ ಮತ್ತು ಇಂಟರ್‌ನೆಟ್ ಮೂಲಕವೂ ಸಿಗುವುದರಿಂದ, ಜನರು ವಾಹನಗಳನ್ನು ಚಲಾಯಿಸುವಾಗಲೂ ಅದನ್ನು ಕೇಳಿಸಿಕೊಳ್ಳಬಹುದು. ಸತ್ಯವೇದ ಜ್ಞಾನವು ಇಷ್ಟು ಧಾರಾಳವಾಗಿ ಹರಡಿದ್ದರೂ, ದೇವಭಯವು ಕಂಡುಬರುವುದು ಬಹಳ ಅಪರೂಪ.

ನಮ್ಮಲ್ಲಿ ದೇವಭಯವಿದ್ದರೆ, ಯೇಸುವು ಪರ್ವತ ಪ್ರಸಂಗದಲ್ಲಿ ಕಲಿಸಿದ ಅನೇಕ ಸಂಗತಿಗಳನ್ನು ನಾವು ಅದನ್ನು ಓದಿಕೊಳ್ಳದೆಯೂ ತಿಳಿದುಕೊಳ್ಳಬಹುದು. ಕೆಲವು ಸಂಗತಿಗಳು ನಮಗೆ ಬಹಳ ಸ್ಪಷ್ಟವಾಗಿವೆ: ಕೋಪವು ಪಾಪವಾಗಿದೆ, ಸ್ತ್ರೀಯರನ್ನು ಮೋಹಿಸುವುದು ಪಾಪವಾಗಿದೆ, ಹಾಗೆಯೇ ಇಲ್ಲಿ ಹೇಳಿರುವ ಇನ್ನೂ ಹಲವಾರು ಸಂಗತಿಗಳು ಪಾಪವಾಗಿವೆ. ಹಾಗಾಗಿ ನೀವು ಪಾಪದಲ್ಲಿ ಮುಂದುವರಿಯುವುದಕ್ಕೆ ಕಾರಣ ಜ್ಞಾನದ ಅಭಾವವಲ್ಲ; ಇದರ ಕಾರಣ ದೇವರ ಭಯದ ಅಭಾವ. ದೇವರ ಭಯವೇ ಜ್ಞಾನದ ಮೂಲವಾಗಿದೆ. ಇದು ಕ್ರೈಸ್ತ ಜೀವಿತದ ಅಕ್ಷರಮಾಲೆಯಾಗಿದೆ ಮತ್ತು ಇದು ನಮ್ಮಲ್ಲಿ ಇಲ್ಲವಾದರೆ, ಎಷ್ಟು ಸತ್ಯವೇದ ಅಧ್ಯಯನ ಮಾಡಿದರೂ ಅಥವಾ ಎಷ್ಟು ದೈವಿಕ ಸಂದೇಶಗಳನ್ನು ಕೇಳಿಸಿಕೊಂಡರೂ, ಅದು ನಮ್ಮನ್ನು ಪರಿಶುದ್ಧರನ್ನಾಗಿ ಮಾಡಲಾರದು.