’ಮತ್ತಾಯನು 9:27'ರಲ್ಲಿ ಯೇಸುವಿನ ಬಳಿಗೆ ಇಬ್ಬರು ಕುರುಡರು ಬಂದ ಸಂದರ್ಭದಲ್ಲಿ, ಆ ಕುರುಡರು ಯೇಸುವನ್ನು ಹಿಂಬಾಲಿಸುತ್ತಾ, "ನಮ್ಮನ್ನು ಕರುಣಿಸು," ಎಂದು ಕೂಗುತ್ತಿದ್ದಾಗ ಯೇಸುವು ಅವರಿಗೆ, "ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ?" ಎಂದು ಕೇಳಿದ್ದಾಗಿ ನಾವು ಓದುತ್ತೇವೆ (ಮತ್ತೊಂದು ಸುವಾರ್ತೆಯ ವಿವರಣೆಯಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ). ಅವರು, "ನಮ್ಮ ಕುರುಡು ಕಣ್ಣುಗಳು ತೆರೆಯಬೇಕು!" ಎಂದು ಕೇಳಿಕೊಂಡಾಗ, ಯೇಸುವು, "ನಾನು ನಿಮಗಾಗಿ ಇದನ್ನು ಮಾಡಬಲ್ಲೆನೆಂದು ನೀವು ನಂಬುತ್ತೀರಾ?" ಎಂದು ಅವರನ್ನು ಕೇಳುತ್ತಾರೆ (ಮತ್ತಾಯನು 9:28).
ಇದು ಬಹಳ ಪ್ರಮುಖವಾದ ಪ್ರಶ್ನೆಯಾಗಿದೆ. ನೀವು ದೇವರ ಬಳಿ, "ಕರ್ತರೇ, ನನ್ನ ಕುರುಡು ಕಣ್ಣುಗಳನ್ನು ಗುಣಪಡಿಸಿರಿ," ಅಥವಾ, "ನನ್ನ ಕಾಯಿಲೆಯನ್ನು ವಾಸಿಮಾಡಿರಿ," ಅಥವಾ, "ನನ್ನ ದುರಭ್ಯಾಸದಿಂದ ನನ್ನನ್ನು ಬಿಡಿಸಿರಿ," ಅಥವಾ, "ಕರ್ತರೇ, ನನಗೆ ಒಂದು ನೌಕರಿಯ ಅವಶ್ಯಕತೆಯಿದೆ," ಅಥವಾ, "ನನಗೆ ವಾಸಕ್ಕೆ ಒಂದು ಮನೆ ಬೇಕಾಗಿದೆ," ಎಂಬ ಹಲವಾರು ವಿಜ್ಞಾಪನೆಗಳನ್ನು ಮಾಡಿಕೊಂಡಾಗ, ನಮ್ಮ ಬೇಡಿಕೆಗಳ ಕುರಿತಾಗಿ ಕರ್ತರು ಕೇಳುವ ಪ್ರಮುಖ ಪ್ರಶ್ನೆ ಇದಾಗಿದೆ. ನಾವು ದೇವರ ಬಳಿಯಲ್ಲಿ ಬೇಡಿಕೊಳ್ಳಬಹುದಾದ ಅನೇಕ ವಿಷಯಗಳಿವೆ. ದೇವರು ನಮ್ಮ ಎಲ್ಲಾ ಶಾರೀರಿಕ ಮತ್ತು ಆತ್ಮಿಕ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಾರೆ, ಆದರೆ ನಾವು ನಮ್ಮ ನಿರ್ದಿಷ್ಟ ವಿಜ್ಞಾಪನೆಗಳನ್ನು ದೇವರ ಮುಂದೆ ಇರಿಸುವಾಗ, ಕರ್ತರು ನಮ್ಮನ್ನು ಕೇಳುವ ಪ್ರಶ್ನೆ ಇದು: "ನಾನು ಇದನ್ನು ಮಾಡಬಲ್ಲೆನೆಂದು ನೀವು ನಂಬುತ್ತೀರಾ?"ಯೇಸುವು ಇದನ್ನೇ ಕೇಳುತ್ತಾರೆ.
ಕರ್ತರು ನಮಗಾಗಿ ಮಾಡುವ ಕಾರ್ಯಗಳು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಇರುವುದಿಲ್ಲ, ಆದರೆ ನಮ್ಮ ನಂಬಿಕೆಗೆ ತಕ್ಕಂತೆ ಇರುತ್ತವೆ, ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮಲ್ಲಿ ಯಾವುದೋ ಒಂದು ವಿಷಯದ ಬಗ್ಗೆ ನಂಬಿಕೆ ಇಲ್ಲವಾದರೆ, ಅದಕ್ಕಿಂತ ಹೆಚ್ಚಿನ ಕಾರ್ಯವನ್ನು ಸಹ ಮಾಡಲು ಕರ್ತರು ಸಾಮರ್ಥ್ಯವನ್ನು ಹೊಂದಿದ್ದರೂ, ಕರ್ತರು ನಿಮಗಾಗಿ ಮಾಡಲು ಬಯಸಿದ್ದನ್ನೆಲ್ಲಾ ನೀವು ಅನುಭವಿಸುವುದಿಲ್ಲ. ನೀವು ಪಡೆಯುವ ಬಿಡುಗಡೆಯು ನಿಮ್ಮ ನಂಬಿಕೆಗೆ ಅನುಗುಣವಾಗಿ ಮಾತ್ರವೇ ಇರುತ್ತದೆ.
ಮೇಲಿನ ಸಂದರ್ಭದಲ್ಲಿ, ಮೊದಲನೆಯ ಕುರುಡನು ಈ ರೀತಿಯಾಗಿ ಕೇಳಿದನೆಂದು ಭಾವಿಸಿರಿ, "ಕರ್ತರೇ, ನೀವು ಒಂದೇ ಕಣ್ಣನ್ನು ತೆರೆದರೆ ನಾನು ಅಷ್ಟರಲ್ಲೇ ಸಂತೋಷಿಸುತ್ತೇನೆ. ನನಗೆ ಅಷ್ಟೇ ಸಾಕು. ನಾನು ಒಂದು ಕಣ್ಣಿನೊಂದಿಗೆ ಭೂಲೋಕದಲ್ಲಿ ಬದುಕಬಲ್ಲೆ, ಮತ್ತು ನೀವು ಇದನ್ನು ಮಾಡುತ್ತೀರೆಂದು ನಾನು ನಂಬಿದ್ದೇನೆ." ಕರ್ತರು ’ಮತ್ತಾಯನು 9:29'ರಲ್ಲಿ ಹೇಳಿದ ಮಾತನ್ನು ಅವನಿಗೂ ಹೇಳುತ್ತಾರೆ, "ನಿನ್ನ ನಂಬಿಕೆಯ ಪ್ರಕಾರ ನಿನಗೆ ಆಗಲಿ." ಕರ್ತರ ಮಾತಿನ ಅರ್ಥ, "ನನ್ನ ಸಾಮರ್ಥ್ಯದಂತೆ ಅಲ್ಲ, ಆದರೆ ನಿನ್ನ ನಂಬಿಕೆಗೆ ಅನುಗುಣವಾಗಿ ಆಗುತ್ತದೆ," ಆ ಕುರುಡನು ತನ್ನ ಒಂದು ಕಣ್ಣು ತೆರೆಯಲ್ಪಟ್ಟು ಮತ್ತೊಂದು ಕಣ್ಣು ಮೊದಲಿನಂತೆಯೇ ಕುರುಡಾಗಿದ್ದು ಅಲ್ಲಿಂದ ಹಿಂದಿರುಗುತ್ತಾನೆ. ಇದು ಉತ್ತಮ ಸಂಗತಿಯೆಂದು ಹೇಳಬಹುದು; ಕುರುಡನಾಗಿದ್ದ ವ್ಯಕ್ತಿಗೆ ಒಂದು ಕಣ್ಣು ವಾಸಿಯಾದದ್ದು ಒಂದು ಅದ್ಭುತವೇ ಆಗಿದೆ.
"ಕರ್ತರು ನಮಗಾಗಿ ಸಾಧಿಸುವ ಕಾರ್ಯಗಳು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಅಲ್ಲ, ಆದರೆ ನಮ್ಮ ನಂಬಿಕೆಗೆ ಅನುಸಾರವಾಗಿ ಇರುತ್ತವೆಂದು ನಿಮಗೆ ತಿಳಿದಿದೆಯೇ?"
ಇದರ ನಂತರ ಆ ಇನ್ನೊಬ್ಬ ಕುರುಡನು ಕರ್ತರ ಬಳಿಗೆ ಬರುತ್ತಾನೆಂದು ಅಂದುಕೊಳ್ಳಿರಿ, ಮತ್ತು ಕರ್ತರು ಅವನನ್ನು ಅದೇ ರೀತಿ ಪ್ರಶ್ನಿಸುತ್ತಾರೆ, "ನಾನು ನಿನಗಾಗಿ ಇದನ್ನು ಮಾಡಬಲ್ಲೆನೆಂದು ನೀವು ನಂಬುತ್ತೀಯಾ?" ಆಗ ಆತನು, "ಹೌದು ಕರ್ತರೇ! ನೀವು ನನ್ನ ಎರಡು ಕಣ್ಣುಗಳನ್ನು ತೆರೆಯಬಲ್ಲಿರೆಂದು ನಾನು ನಂಬುತ್ತೇನೆ! ನಿಮಗೆ ಅಸಾಧ್ಯವಾದದ್ದು ಯಾವುದಿದೆ?" ಎಂದಾಗ ಆತನ ಎರಡು ಕಣ್ಣುಗಳು ತೆರೆಯಲ್ಪಡುತ್ತವೆ. ಒಂದು ಕಣ್ಣನ್ನು ಪಡೆದುಕೊಂಡ ಇನ್ನೊಬ್ಬ ಕುರುಡನು ಆತನನ್ನು ಭೇಟಿಯಾದಾಗ, ಆತನು ಹೀಗೆ ಪ್ರಶ್ನಿಸಬಹುದು, "ನಿನ್ನ ಎರಡು ಕಣ್ಣುಗಳು ಹೇಗೆ ತೆರೆಯಲ್ಪಟ್ಟವು?! ನೀನು ಯಾವುದೋ ತಪ್ಪು ಬೋಧನೆಯನ್ನು ಕೇಳಿಸಿಕೊಂಡಿರಬೇಕು!" ಅದು ಸುಳ್ಳು ಬೋಧನೆಯಲ್ಲ; ಆತನ ನಂಬಿಕೆಯು ಮೊದಲನೆಯವನ ನಂಬಿಕೆಗಿಂತ ಹೆಚ್ಚಾಗಿತ್ತು, ಅಷ್ಟೇ.
ಈ ಎರಡು ಕಣ್ಣುಗಳನ್ನು ನಾವು ಈ ರೀತಿ ವಿವರಿಸಬಹುದು: ಒಂದು, ನಮ್ಮ ಪಾಪಗಳ ಕ್ಷಮೆ, ಮತ್ತೊಂದು, ಪಾಪಗಳಿಂದ ರಕ್ಷಣೆ. ಒಬ್ಬ ವ್ಯಕ್ತಿಗೆ ಎರಡೂ ಸಿಗುತ್ತವೆ; ಮತ್ತೊಬ್ಬನಿಗೆ ಮೊದಲನೆಯದು ಮಾತ್ರ ಸಿಗುತ್ತದೆ. ಹೀಗೇಕೆ? ಇಲ್ಲಿ ದೇವರು ಪಕ್ಷಪಾತ ಮಾಡಿದರೇ? ಅವರಲ್ಲಿ ಒಬ್ಬನು ಇನ್ನೊಬ್ಬನಿಗಿಂತ ಉತ್ತಮನಾಗಿದ್ದನೇ? ಇಲ್ಲ. ಅವನಲ್ಲಿ ಕ್ರಿಸ್ತನು ಸಂಪೂರ್ಣ ವಾಗ್ದಾನವನ್ನು ಪೂರೈಸುತ್ತಾನೆಂಬ ನಂಬಿಕೆಯಿತ್ತು. ಮತ್ತೊಬ್ಬನ ನಂಬಿಕೆ ಕ್ರಿಸ್ತನು ಪಾಪವನ್ನು ಮಾತ್ರ ಕ್ಷಮಿಸುತ್ತಾನೆ ಎಂಬುದಾಗಿತ್ತು, ಹಾಗಾಗಿ ಆತನಿಗೆ ಅದು ಮಾತ್ರ ಸಿಕ್ಕಿತು. ಮೂರನೆಯ ಇನ್ನೊಬ್ಬನು ಕ್ರಿಸ್ತನು ತನ್ನ ಪಾಪವನ್ನು ಕ್ಷಮಿಸುತ್ತಾನೆಂದು ಕೂಡ ನಂಬದೇ ಹೋದರೆ, ಅವನಿಗೆ ಪಾಪ ಕ್ಷಮಾಪಣೆಯೂ ಸಿಗುವುದಿಲ್ಲ.
ಲೋಕದಲ್ಲಿ ಅನೇಕ ರೀತಿಯ ಜನರಿದ್ದಾರೆ. ಕ್ರಿಸ್ತನು ತನ್ನ ಪಾಪವನ್ನು ಕ್ಷಮಿಸಬಲ್ಲನು ಎಂದು ಒಬ್ಬನು ನಂಬುತ್ತಾನೆ, ಮತ್ತು ಅವನು ಪಾಪ ಕ್ಷಮಾಪಣೆಯನ್ನು ಹೊಂದುತ್ತಾನೆ. ಇನ್ನೊಬ್ಬನಿಗೆ "ಎರಡು ಕಣ್ಣುಗಳ" ಹಾಗಿನ ನಂಬಿಕೆ, ಅಂದರೆ ಕ್ರಿಸ್ತನು ತನ್ನನ್ನು ಕ್ಷಮಿಸುವುದು ಮಾತ್ರವಲ್ಲದೆ, ಪಾಪ ಮಾಡುವ ತನ್ನ ಚಟದಿಂದ ತನ್ನನ್ನು ಬಿಡುಗಡೆ ಮಾಡುತ್ತಾನೆಂಬ ನಂಬಿಕೆ ಇದೆ. ಅವನು ಎರಡನ್ನೂ ಪಡೆಯುತ್ತಾನೆ. ಹಾಗಾಗಿ ಈತನು ಇದರ ಕುರಿತಾಗಿ, ಕ್ರಿಸ್ತನು ಪಾಪ ಕ್ಷಮಾಪಣೆ ನೀಡುವುದು ಮಾತ್ರವಲ್ಲದೆ, ಪಾಪದಿಂದ ಬಿಡುಗಡೆಯನ್ನು ಸಹ ನೀಡುತ್ತಾನೆ ಎಂಬುದಾಗಿ ಅರಿಕೆ ಮಾಡುವಾಗ, ಕ್ಷಮಾಪಣೆಯನ್ನು ಮಾತ್ರ ಹೊಂದಿರುವ ಜನರು ಈ ಮಹಾ ಬೋಧನೆಯನ್ನು ಸುಳ್ಳು ಬೋಧನೆ ಎಂದು ಕರೆಯುತ್ತಾರೆ. ಅವರಿಗೆ ಅಂತಹ ಅನುಭವ ಸಿಗದೇ ಇದ್ದುದಕ್ಕಾಗಿ, ಅದು ಅಸಾಧ್ಯವೆಂದು ಅವರು ವಾದಿಸುತ್ತಾರೆ. ಯಾವ ಮನುಷ್ಯನೂ ಪಾಪದಿಂದ ಬಿಡುಗಡೆ ಹೊಂದಲಾರನೆಂದು ಅವರು ಹೇಳುತ್ತಾರೆ. ಮಾನವರಿಗೆ ಸಾಧ್ಯವೋ, ಅಸಾಧ್ಯವೋ ಎಂಬ ಪ್ರಶ್ನೆ ಮುಖ್ಯವಲ್ಲ, ಇದು ದೇವರಿಗೆ ಅಸಾಧ್ಯವೋ ಎಂಬುದೇ ಮುಖ್ಯ ಪ್ರಶ್ನೆಯಾಗಿದೆ.
ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲವೆಂದು ಯೇಸುವು ಹೇಳಿದರು. ಅನೇಕ ಸಂಗತಿಗಳು ಮನುಷ್ಯನಿಗೆ ಅಸಾಧ್ಯವಾಗಿವೆ. ದೇವರ ಬಲವಿಲ್ಲದೆ ಪಾಪ ಕ್ಷಮಾಪಣೆಯನ್ನು ಪಡೆಯುವುದು ಕೂಡ ಮನುಷ್ಯರಿಗೆ ಅಸಾಧ್ಯವಾಗಿದೆ, ಆದರೆ ದೇವರಿಗೆ ಎಲ್ಲವೂ ಸಾಧ್ಯವೇ. ನೀವು ನೆನಪಿರಿಸಬೇಕಾದ ವಿಷಯ, ಇನ್ನೊಬ್ಬನ ಅನುಭವವನ್ನು ನೀವು ಪಡೆಯದಿದ್ದರೆ, ಆತನು ತಪ್ಪು ಬೋಧನೆ ಮಾಡುತ್ತಿದ್ದಾನೆಂದು ಹೇಳಲು ಬರುವುದಿಲ್ಲ; ನಿಮ್ಮ ನಂಬಿಕೆಯ ಪ್ರಮಾಣ ಅವನ ನಂಬಿಕೆಗಿಂತ ಕಡಿಮೆ ಇರಬಹುದು.
ಇನ್ನೊಂದು ವಿವರಣೆಯನ್ನು ಕೊಡುವುದಾದರೆ, ಒಂದು ಊರಿನಲ್ಲಿ ನೀರಿನ ಅಭಾವ ಇರುವಾಗ, ಮಳೆಯ ನೀರನ್ನು ಶೇಖರಿಸಲಿಕ್ಕಾಗಿ ಜನರು ಪಾತ್ರೆಗಳನ್ನು ಅಥವಾ ಪೀಪಾಯಿಗಳನ್ನು ಬಳಸುತ್ತಾರೆ, ಮತ್ತು ಎಲ್ಲರ ಮನೆಗಳ ಹೊರಗೆ ಸಮಾನವಾಗಿ ಮಳೆಯಾಗುತ್ತದೆಂದು ಅಂದುಕೊಳ್ಳೋಣ. ಒಬ್ಬ ವ್ಯಕ್ತಿಯು ನೀರನ್ನು ಹಿಡಿಯಲು ಒಂದು ಚಿಕ್ಕ ಪಾತ್ರೆಯನ್ನು ಬಳಸಿಕೊಂಡರೆ, ಆತನಿಗೆ ಎಷ್ಟು ನೀರು ಸಿಗುತ್ತದೆ? ಕೇವಲ ಒಂದು ಪಾತ್ರೆಯಷ್ಟು ನೀರು. ಇನ್ನೊಬ್ಬ ವ್ಯಕ್ತಿಯು ಒಂದು ದೊಡ್ಡ ಪೀಪಾಯಿಯಲ್ಲಿ ನೀರು ಶೇಖರಿಸಿದರೆ, ಆತನಿಗೆ ದೊಡ್ಡ ಪೀಪಾಯಿಯಷ್ಟು ನೀರು ಸಿಗುತ್ತದೆ! ಒಂದು ಪಾತ್ರೆ ಮತ್ತು ಒಂದು ಪೀಪಾಯಿಯ ನೀರಿನ ಪ್ರಮಾಣವನ್ನು ಹೋಲಿಸಿ ನೋಡಿರಿ, ಎರಡರಲ್ಲಿ ವ್ಯತ್ಯಾಸವಿದೆಯೇ? ನಿಶ್ಚಯವಾಗಿ ವ್ಯತ್ಯಾಸವಿದೆ! ಒಂದು ಪಾತ್ರೆ ನೀರು ಸಂಗ್ರಹಿಸಿದ ವ್ಯಕ್ತಿಯು ಆ ಇನ್ನೊಬ್ಬನನ್ನು ಪ್ರಶ್ನಿಸಬಹುದು, "ನಿನಗೆ ಒಂದು ಪೀಪಾಯಿ ನೀರು ಹೇಗೆ ಸಿಕ್ಕಿತು? ದೇವರು ನಮ್ಮ ನಡುವೆ ಭೇದಭಾವ ಮಾಡಿದ್ದಾರೆ, ಮತ್ತು ನಿನ್ನ ಮನೆಯ ಬಳಿ ಹೆಚ್ಚು ಮಳೆ ಸುರಿಸಿದ್ದಾರೆ!" ಆಗ ಆ ಇನ್ನೊಬ್ಬನು ಹೀಗೆ ಹೇಳಬಹುದು, "ಸಹೋದರನೇ, ಹಾಗಲ್ಲ; ನಿನ್ನ ಮನೆಯ ಬಳಿ ಅಷ್ಟೇ ಮಳೆ ಸುರಿದಿದೆ, ಆದರೆ ನೀನು ಒಂದು ಚಿಕ್ಕ ಪಾತ್ರೆಯನ್ನು ಮಾತ್ರ ಹೊರಗೆ ಇರಿಸಿದ್ದೆ! ನಿನ್ನ ನಂಬಿಕೆಯ ಮಟ್ಟ ಅಷ್ಟು ಮಾತ್ರವೇ ಆಗಿತ್ತು, ಹಾಗಾಗಿ ನಿನಗೆ ಅಷ್ಟೇ ಸಿಕ್ಕಿತು."
ನಾವು ನಮ್ಮ ನಂಬಿಕೆಗೆ ತಕ್ಕಂತೆ ದೇವರಿಂದ ಹೊಂದುತ್ತೇವೆ. ದೇವರ ಆಶೀರ್ವಾದವು ಅಪಾರವಾದದ್ದು. ’ಎಫೆಸದವರಿಗೆ 1:3'ರಲ್ಲಿ ಹೇಳಿರುವಂತೆ, ದೇವರು "ಪರಲೋಕದಲ್ಲಿನ ಸಕಲ ಆತ್ಮೀಯ ವರಗಳನ್ನು ನಮಗೆ ಅನುಗ್ರಹಿಸಿದ್ದಾರೆ," ಇವು ನಾವು ನಮ್ಮ ಪೂರ್ವಜ ಆದಾಮನಿಂದ ಗಳಿಸಿರುವ ಪ್ರತಿಯೊಂದು ದರಿದ್ರ ಪಾಪಕರ ದುರಾಭ್ಯಾಸದಿಂದ ಪವಿತ್ರಾತ್ಮನ ಮೂಲಕ ನಮ್ಮನ್ನು ಬಿಡುಗಡೆ ಗೊಳಿಸುವ ಆಶೀರ್ವಾದಗಳಾಗಿವೆ. ಆದರೆ ಕರ್ತರು ಇಂದು ನಮ್ಮನ್ನು ಹೀಗೆ ಪ್ರಶ್ನಿಸುತ್ತಾರೆ: "ನಾನು ನಿನಗಾಗಿ ಇದನ್ನು ಮಾಡಬಲ್ಲೆನೆಂದು ನೀನು ನಂಬುತ್ತೀಯಾ?"