"ನೀವು ಪ್ರಾರ್ಥನೆ ಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ ...." (ಮತ್ತಾ. 6:5). ನಾವು ಹೇಗೆ ಪ್ರಾರ್ಥಿಸಬೇಕು ಎಂಬುದಾಗಿ ಯೇಸುವು ನಮಗೆ ಕಲಿಸುವ ಮುನ್ನ, ಪ್ರಾರ್ಥನೆಯ ಕುರಿತು ಎಚ್ಚರಿಕೆಯಾಗಿ ಕೆಲವು ಸಂಗತಿಗಳನ್ನು ನಮಗೆ ಹೇಳುತ್ತಾರೆ.
ಮೊದಲನೆಯದಾಗಿ, ಕಪಟಿಗಳ ಪ್ರಾರ್ಥನೆ ಹೇಗಿರುತ್ತದೆಂದರೆ, "ಜನರು ನೋಡಬೇಕೆಂದು ಸಭಾಮಂದಿರಗಳಲ್ಲಿಯೂ, ಬೀದಿ ಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಅವರು ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಪೂರ್ತಿಯಾಗಿ ಹೊಂದುತ್ತಾರೆ". ಇಲ್ಲಿ ಅನ್ವಯಿಸುವ ಒಂದು ಸಾಮಾನ್ಯವಾದ ನಿಯಮವೇನೆಂದರೆ, ಒಂದು ವೇಳೆ ನೀವು ಬಹಿರಂಗವಾಗಿ ಪ್ರಾರ್ಥಿಸುವಾಗ, ಬೇರೆ ಜನರು ನಿಮ್ಮ ಪ್ರಾರ್ಥನೆಯನ್ನು ಕೇಳಿ ಮೆಚ್ಚಬೇಕೆಂಬ ಉದ್ದೇಶ ನಿಮ್ಮದಾಗಿದ್ದರೆ, ಅದು ಜನರ ಗೌರವವನ್ನು ಅಪೇಕ್ಷಿಸಿದಂತೆ ಆಗುತ್ತದೆ. ಬಹಳ ಮಟ್ಟಿಗೆ ಪ್ರತಿಯೊಬ್ಬರೂ ಬಹಿರಂಗವಾಗಿ ಪ್ರಾರ್ಥಿಸಲು ಪ್ರಾರಂಭಿಸುವಾಗ, ತಮ್ಮ ಪ್ರಾರ್ಥನೆಯ ಮೂಲಕ ಗೌರವವನ್ನು ಪಡೆಯಲು ಬಯಸುತ್ತಾರೆ, ಎಂಬುದಾಗಿ ಅವರು ಒಪ್ಪಿಕೊಳ್ಳಬೇಕಾಗುತ್ತದೆ.
ನಿಮ್ಮನ್ನೇ ನೀವು ಪ್ರಶ್ನೆ ಮಾಡಿಕೊಳ್ಳಿರಿ. ನೀವು ಬಹಿರಂಗವಾಗಿ ಮಾಡುವ ಪ್ರಾರ್ಥನೆ ಏಕಾಂತದಲ್ಲಿ ನೀವು ಪ್ರಾರ್ಥಿಸುವ ಪ್ರಾರ್ಥನೆಯಂತೆಯೇ ಇರುತ್ತದೆಯೇ? ನಿಮ್ಮ ಹಾಸಿಗೆಯ ಪಕ್ಕದಲ್ಲಿ ಮೊಣಕಾಲೂರಿ ಹೇಗೆ ಪ್ರಾರ್ಥಿಸುತ್ತೀರಿ? ದೇವರಿಗೆ ನೀವು ಏನು ಹೇಳುತ್ತೀರಿ? ನಿಮ್ಮ ಬಹಿರಂಗ ಪ್ರಾರ್ಥನೆಯಲ್ಲಿ ನೀವು ಅದನ್ನೇ ಹೇಳುತ್ತೀರಾ? ಅಥವಾ ಬಹಳ ಅಂದವಾದ ಭಾಷೆಯಲ್ಲಿ ಮತ್ತು ಕಂಠದಲ್ಲಿ ಸ್ವಲ್ಪ ಕಂಪನವನ್ನು ಕೂಡಿಸಿ ಒಬ್ಬ ನಟನಂತೆ ನೀವು ವರ್ತಿಸುತ್ತೀರಾ? ಬಹಳಷ್ಟು ಜನರು ಬಹಿರಂಗವಾಗಿ ಪ್ರಾರ್ಥಿಸುವಾಗ, ತಾವು ಬಹಳ ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇವೆ ಅಥವಾ ತಾವು ಭಾವನಾತ್ಮಕ ಗುಣವುಳ್ಳವರು ಎಂಬಂತೆ ಜನರ ಮುಂದೆ ನಟಿಸುತ್ತಾರೆ.
ಇವೆಲ್ಲವೂ ಕಪಟತನವಾಗಿದೆ. ದೇವರು ಇದನ್ನು ದ್ವೇಷಿಸುತ್ತಾರೆ. ಇಂತಹ ಬಹಿರಂಗ ಪ್ರಾರ್ಥನೆಯು ದೇವರ ಮುಂದೆ ಹೊಲಸಾಗಿದೆ, ಎಂಬುದನ್ನು ನಾವು ಗ್ರಹಿಸಬೇಕೆಂದು ನನ್ನ ಇಚ್ಛೆಯಾಗಿದೆ. ದೇವರು ಅದನ್ನು ಸಹಿಸುವುದಿಲ್ಲ ಮತ್ತು ಅದನ್ನು ಕೇಳಿಸಿಕೊಳ್ಳುವುದು ಸಹ ಇಲ್ಲ. ಅನೇಕ ಸಭೆಗಳಲ್ಲಿ ಬಹಿರಂಗ ಪ್ರಾರ್ಥನೆಗಳು ಹೇಗಿರುತ್ತವೆಂದರೆ, ಅವು ತಾವು ಚೆನ್ನಾಗಿ ಪ್ರಾರ್ಥಿಸುತ್ತೇವೆಂದು ಇತರರಿಗೆ ತೋರಿಸುವ ಪ್ರದರ್ಶನವಾಗಿರುತ್ತವೆ. ಇದು ಯೇಸುವಿನ ಬೋಧನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಮತ್ತು ಜನರು ಇದನ್ನು ಮಾಡುವುದಕ್ಕೆ ಕಾರಣವೇನೆಂದರೆ, ಅವರಿಗೆ ಯೇಸುವಿನ ಎಲ್ಲಾ ಆಜ್ಞೆಗಳನ್ನು ಕಲಿಸಲಾಗಿಲ್ಲ.
ಇದರಿಂದ ನಾವು ನಮ್ಮನ್ನು ಹೇಗೆ ಶುದ್ಧೀಕರಿಸಿಕೊಳ್ಳಬೇಕು? ನಾವು ಪ್ರತಿ ಬಾರಿ ಪ್ರಾರ್ಥಿಸುವಾಗಲೂ ನಮ್ಮನ್ನೇ ತೀರ್ಪು ಮಾಡಿಕೊಳ್ಳಬೇಕು. ನಾನು ಒಬ್ಬ ಕ್ರೈಸ್ತನಾಗಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರಾರ್ಥಿಸಿದ ಸಂದರ್ಭ ನನಗೆ ನೆನಪಿದೆ. ಸಾರ್ವಜನಿಕವಾಗಿ ಪ್ರಾರ್ಥನೆ ಮಾಡುವಾಗ ನಾನು ಜನರ ಗೌರವವನ್ನು ಬಯಸುತ್ತಿದ್ದೆನೆಂದು ನಾನು ಒಪ್ಪಿಕೊಳ್ಳುತ್ತೇನೆ. ನಾನು ಮನೆಗೆ ಹೋಗಿ ನನ್ನನ್ನು ನಾನೇ ತೀರ್ಪು ಮಾಡಿಕೊಂಡು ಹೀಗೆ ಹೇಳಿದೆ, "ಕರ್ತನೇ, ನಾನು ಪ್ರಾರ್ಥನೆ ಮಾಡಿದ ರೀತಿ ಸರಿಯಿಲ್ಲ". ನಾನು ಮತ್ತೊಮ್ಮೆ ಸಾರ್ವಜನಿಕ ಪ್ರಾರ್ಥನೆ ಮಾಡಲು ಎದ್ದು ನಿಂತಾಗ, ಮತ್ತೊಮ್ಮೆ ಜನರ ಗೌರವವನ್ನು ಬಯಸಿದೆ. ಹಾಗಾಗಿ ಮತ್ತೊಮ್ಮೆ ಮನೆಗೆ ಹಿಂತಿರುಗಿ, ನನ್ನನ್ನು ತೀರ್ಪು ಮಾಡಿಕೊಂಡೆ. ಸಾರ್ವಜನಿಕವಾಗಿ ಪ್ರಾರ್ಥಿಸುವಾಗ ಮನುಷ್ಯರ ಗೌರವನ್ನು ಬಯಸುವ ಈ ಬಯಕೆಯಿಂದ ನನ್ನನ್ನು ಶುದ್ಧೀಕರಿಸಿಕೊಳ್ಳಲು ನನಗೆ ಹಲವಾರು ವರ್ಷಗಳು ಬೇಕಾದವು, ಆದರೆ ಕೊನೆಗೆ ಹಲವು ವರ್ಷಗಳ ನಂತರ, ನಾನು ನನ್ನ ಪರಲೋಕದ ತಂದೆಯಾದ ಸರ್ವಶಕ್ತ ದೇವರಿಗೆ ಮಾತ್ರ ಪ್ರಾರ್ಥಿಸುವುದನ್ನು ಕಲಿತುಕೊಂಡೆ. ನೀವು ಅಲ್ಲಿಗೆ ತಲುಪಿದ್ದೀರಾ? ಇಲ್ಲವಾದರೆ, ಜನರ ಗೌರವಕ್ಕಾಗಿ ತವಕಿಸುವ ಅಭ್ಯಾಸದಿಂದ ನಿಮ್ಮ ಬಿಡುಗಡೆಯನ್ನು ಸಾಧಿಸಿಕೊಳ್ಳುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸಲು ಇಚ್ಛಿಸುತ್ತೇನೆ.
ಯೇಸು ಮುಂದುವರಿದು ಹೀಗೆ ಹೇಳಿದರು. "ನೀನು ಪ್ರಾರ್ಥನೆ ಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಿಲನ್ನು ಮುಚ್ಚಿಕೊಂಡು, ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ರಹಸ್ಯವಾಗಿ ಪ್ರಾರ್ಥಿಸು". ನಾವು ಇದನ್ನು ಸಾರ್ವಜನಿಕವಾಗಿ ಹೇಗೆ ಮಾಡಬಹುದು? ನಮ್ಮ ಮನಸ್ಸಿನಲ್ಲಿ ಒಂದು ಮುಚ್ಚಬಹುದಾದ ಬಾಗಿಲು ಇದ್ದರೆ, ನಾವು ಸಾರ್ವಜನಿಕವಾಗಿ ಈ ರೀತಿ ಪ್ರಾರ್ಥಿಸಲು ಸಾಧ್ಯವಾಗುತ್ತದೆ. ನಾನು 100 ಜನರ ಮಧ್ಯದಲ್ಲಿ ನಿಂತಿರುವಾಗಲೂ, ನನ್ನ ಮನಸ್ಸಿನಲ್ಲಿ ಒಂದು ಬಾಗಿಲು ಇದೆ. ಅದನ್ನು ನಾನು ಮುಚ್ಚುತ್ತೇನೆ, ಅನಂತರ ನಾನು ಮನಸ್ಸಿನಲ್ಲಿ ಹೀಗೆ ಹೇಳಿಕೊಳ್ಳುತ್ತೇನೆ, "ನಾನು ಈಗ ನನ್ನ ತಂದೆಯಾದ ಸರ್ವಶಕ್ತ ದೇವರ ಮುಂದೆ ಏಕಾಂತವಾಗಿ ನಿಂತಿದ್ದೇನೆ." ನನ್ನ ಸುತ್ತಲೂ ಜನರು ಇರಬಹುದು, ಆದರೆ ನಾನು ಅವರ ಕಡೆಗೆ ಗಮನ ಹರಿಸಲು ಬಯಸುವುದಿಲ್ಲ. ಅದಕ್ಕಾಗಿಯೇ ನಾವು ಪ್ರಾರ್ಥಿಸುವಾಗ ನಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತೇವೆ. ಪ್ರಾರ್ಥನೆ ಮಾಡುವಾಗ ಕಣ್ಣು ಮುಚ್ಚಿಕೊಂಡು ಪ್ರಾರ್ಥಿಸಬೇಕು ಎಂದು ಹೇಳುವ ಯಾವುದೇ ನಿಯಮವಿಲ್ಲ. ನೀವು ಕಣ್ಣನ್ನು ತೆರೆದು ಪ್ರಾರ್ಥಿಸಬಹುದು, ಏಕೆಂದರೆ ಯೇಸು ಕೂಡ ಕೆಲವೊಮ್ಮೆ ಹಾಗೆ ಮಾಡಿದರು.
ನಾವು ನಮ್ಮ ಸುತ್ತಮುತ್ತಲಿನ ಪರಿಸರದಿಂದ ವಿಚಲಿತರಾಗದಂತೆ ಕಣ್ಣು ಮುಚ್ಚಿಕೊಳ್ಳುತ್ತೇವೆ, ಮತ್ತು ಹಾಗೆ ಮಾಡುವುದರಿಂದ ನಾವು ನಮ್ಮ ಸುತ್ತಲಿನ ಜನರಿಂದ ಗೌರವ ಬಯಸುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಾವು ಕಣ್ಣು ಮುಚ್ಚುವುದರ ಮೂಲಕ ಜನರ ಕುರಿತಾದ ಆಲೋಚನೆಗಳನ್ನು ಹೊರಗೆ ಹಾಕುತ್ತಿದ್ದೇವೆ. ನಮ್ಮ ಮನಸ್ಸು (ಮನಸ್ಸಿನ ಗಮನ) ಸಹ ವಿಚಲಿತವಾಗದಂತೆ ನಾವು ಇರಿಸಿಕೊಳ್ಳಬೇಕು ಮತ್ತು ಹೀಗೆ ಹೇಳಬೇಕು, "ತಂದೆಯೇ, ನಾನು ಈಗ ಬಾಗಿಲು ಮುಚ್ಚಿದ್ದೇನೆ ಮತ್ತು ನಿಮಗೆ ಪ್ರಾರ್ಥಿಸುತ್ತಿದ್ದೇನೆ". ಅದು ಪ್ರಾರ್ಥನೆ ಮಾಡುವ ವಿಧಾನ ಮತ್ತು ನಾವು ಸಾರ್ವಜನಿಕವಾಗಿ ಪ್ರಾರ್ಥಿಸುವಾಗಲೂ ಸಹ ಹೀಗೆ ಮಾಡಬಹುದು. ನಾವು ರಹಸ್ಯವಾಗಿ ನಮ್ಮ ತಂದೆಗೆ ಪ್ರಾರ್ಥಿಸುತ್ತೇವೆ ಮತ್ತು ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಮ್ಮ ತಂದೆಯು ನಮಗೆ ಪ್ರತಿಫಲ ಕೊಡುತ್ತಾರೆ. ನೀವು ನಿಮ್ಮ ತಂದೆಯಾದ ದೇವರಿಗೆ ಪ್ರಾರ್ಥಿಸುವುದಾದರೆ ಮತ್ತು ಜನರ ಗೌರವವನ್ನು ಬಯಸದಿದ್ದರೆ, ಖಂಡಿತವಾಗಿ ಅವರು ನಿಮಗೆ ಪ್ರತಿಫಲ ನೀಡುತ್ತಾರೆ ಮತ್ತು ನಿಮ್ಮ ಆ ಪ್ರಾರ್ಥನೆಯನ್ನು ಉತ್ತರಿಸುತ್ತಾರೆಂದು ನೀವು ಸಂಪೂರ್ಣ ಖಚಿತರಾಗಬಹುದು.
ಯೇಸು ಮತ್ತಾ. 6:7'ರಲ್ಲಿ, ನಾವು ಹೇಗೆ ಪ್ರಾರ್ಥನೆ ಮಾಡಬಾರದೆಂದು ನಮಗೆ ಇನ್ನಷ್ಟು ಸಲಹೆ ನೀಡುತ್ತಾರೆ. "ಅನ್ಯಜನರಂತೆ ಅರ್ಥವಿಲ್ಲದೆ ಪದೇಪದೇ ಹೇಳಿದ ಮಾತನ್ನೇ ಸುಮ್ಮಸುಮ್ಮನೆ ಹೇಳಬೇಡಿರಿ. ಏಕೆಂದರೆ ಹಾಗೆ ಮಾಡುವುದರಿಂದ ತಮ್ಮ ಪ್ರಾರ್ಥನೆ ಕೇಳಲ್ಪಡುತ್ತದೆಂದು ಅವರು ಭಾವಿಸುತ್ತಾರೆ."ಅನ್ಯಜನರ ಅನೇಕ ತಪ್ಪುಗಳಲ್ಲಿ ಒಂದು ಏನೆಂದರೆ ಅವರು ಮಾಡುವ ಅರ್ಥಹೀನ ಪುನರಾವರ್ತನೆಯಾಗಿದೆ. ಕೆಲವು ಧರ್ಮದವರು ಏನನ್ನಾದರೂ ಜಪಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಅವರು ಕೆಲವು ಧಾರ್ಮಿಕ ನುಡಿಗಟ್ಟುಗಳನ್ನು ಪುನರಾವರ್ತಿಸುತ್ತಾರೆ ಮತ್ತು ಅದು ಅರ್ಥಹೀನ ವಿಷಯವಾಗಿದೆ.
"ಇದರಿಂದ ನಾವು ಶುದ್ಧರಾಗುವುದು ಹೇಗೆ? ನಾವು ಪ್ರತಿ ಬಾರಿ ಪ್ರಾರ್ಥಿಸುವಾಗ ನಮ್ಮನ್ನು ನಾವು ತೀರ್ಪು ಮಾಡಿಕೊಳ್ಳಬೇಕು"
ನಾವು ಆತ್ಮಿಕ ಭಾಷೆಯನ್ನು ಉಪಯೋಗಿಸಿಕೊಂಡು ಒಂದೇ ಮಾತನ್ನು ಮತ್ತೆ ಮತ್ತೆ ಹೇಳಬಹುದು. ನಾವು "ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ," ಎಂದು ಹೇಳುತ್ತಾ ಹೋಗಬಹುದು. ಆದರೆ ಸ್ವಲ್ಪ ಸಮಯದ ನಂತರ ಅದು ಅರ್ಥವಿಲ್ಲದ ಮಾತಾಗುತ್ತದೆ. ಅದೊಂದು ಧಾರ್ಮಿಕ ಕಟ್ಟಳೆಯಾಗುತ್ತದೆ. "ಕರ್ತನಿಗೆ ಸ್ತೋತ್ರ, ಕರ್ತನಿಗೆ ಸ್ತೋತ್ರ," ಎಂಬ ಪದಗಳನ್ನು ಪದೇ ಪದೇ ಹೇಳುವುದಕ್ಕೂ ಇದು ಅನ್ವಯಿಸುತ್ತದೆ. ಯೇಸುವು "ಅರ್ಥವಿಲ್ಲದ ಪದಗಳನ್ನು ಬಳಸಬೇಡಿ," ಎಂದು ಹೇಳಿದರು. ನೀವು ಹೊಸ ಒಡಂಬಡಿಕೆಯನ್ನು ಓದಿದರೆ, ಹಲ್ಲೆಲೂಯ ಎಂಬ ಪದವು ಕೇವಲ ಪ್ರಕಟನೆ 19'ನೇ ಅಧ್ಯಾಯದಲ್ಲಿ ಮಾತ್ರ ಬರುತ್ತದೆ. ಅಲ್ಲಿ ಈ ಕಾರಣಕ್ಕಾಗಿ ಹಲ್ಲೆಲೂಯ ಎಂದು ಹೇಳಲಾಗಿದೆ. ನಂತರ ಮತ್ತೊಮ್ಮೆ "ಈ ಕಾರಣದಿಂದ ಹಲ್ಲೆಲೂಯ" ಎಂದು ಹೇಳಲಾಗಿದೆ, ಮುಂದೆ ಇನ್ನೊಂದು ಕಡೆ, "ಇದಕ್ಕಾಗಿ ಕರ್ತನಿಗೆ ಸ್ತೋತ್ರವಾಗಲಿ," ಎನ್ನಲಾಗಿದೆ. ಅಂದರೆ, ನಾವು ಕರ್ತನನ್ನು ಸ್ತುತಿಸುವುದಕ್ಕೆ ಒಂದು ಕಾರಣ ಇರಬೇಕು ಮತ್ತು ನಾವು ಅರ್ಥವಿಲ್ಲದ ರೀತಿಯಲ್ಲಿ ಸುಮ್ಮನೆ "ಹಲ್ಲೆಲೂಯ" ಎನ್ನಬಾರದು. ಎಲ್ಲದರಲ್ಲಿಯೂ ನಾವು ಕೃತಜ್ಞತೆ ಸಲ್ಲಿಸಬೇಕು; ಆದರೆ ಅದು ಅರ್ಥವಿಲ್ಲದ ಪುನರಾವರ್ತನೆಯಾದರೆ, ಅದು ಮೂರ್ಖತನವಾಗಬಹುದು ಮತ್ತು ಅದು ದೇವರ ಮುಂದೆ ಗಣನೆಗೆ ಬರುವುದಿಲ್ಲ. "ಹಲ್ಲೆಲೂಯ" ಎಂಬ ಪದದ ಇಂತಹ ಪುರ್ನರಾವರ್ತನೆ ಕರ್ತನ ನಾಮವನ್ನು ಅಯೋಗ್ಯ ರೀತಿಯಲ್ಲಿ ಬಳಸಿದಂತೆ ಪರಿಗಣಿಸಲ್ಪಡುವ ಸಾಧ್ಯತೆಯೂ ಇದೆ, ಏಕೆಂದರೆ "ಹಲ್ಲೆಲೂಯ" ಎಂಬ ಪದದ ಕೊನೆಯ ಭಾಗವಾದ "ಯಾಹ್" ಎಂಬುದು "ಯೆಹೋವ" ಎಂಬ ಕರ್ತನ ಹೆಸರಿನ ಸಂಕ್ಷಿಪ್ತ ರೂಪವಾಗಿದ್ದು, ಯೆಹೂದ್ಯರು ಆ ಹೆಸರನ್ನು ವ್ಯರ್ಥವಾಗಿ ಉಚ್ಛರಿಸುವ ಭಯದಿಂದ, ಅದನ್ನು ಹೇಳುವುದಕ್ಕೂ ಹೆದರಿದ್ದರು. ಅನೇಕ ಕ್ರೈಸ್ತರು ಹಲ್ಲೆಲೂಯ ಎಂದು ಅರ್ಥವಿಲ್ಲದೆ ಹೇಳುವಾಗ ಕರ್ತನ ಹೆಸರನ್ನು ವ್ಯರ್ಥವಾಗಿ ಬಳಸುತ್ತಿದ್ದಾರೆಂದು ನಾನು ನಂಬುತ್ತೇನೆ. ನಾನು ಸ್ವತಃ ಕರ್ತನನ್ನು ಸ್ತುತಿಸುವಾಗ ಆ ಪದವನ್ನು ಬಳಸುತ್ತೇನೆ; ಆದರೆ ಪ್ರತಿಸಾರಿ ಅದನ್ನು ಅರ್ಥಪೂರ್ಣವಾಗಿ ಬಳಸಲು ಪ್ರಯತ್ನಿಸುತ್ತೇನೆ. ಆ ಪದವನ್ನು ಬಳಸುವುದನ್ನು ನಾನು ವಿರೋಧಿಸುವುದಿಲ್ಲ. ದೇವರು ಸಹ ಅದನ್ನು ವಿರೋಧಿಸುವುದಿಲ್ಲ. ಆದರೆ ಅದನ್ನು ಅರ್ಥಪೂರ್ಣವಾಗಿ ಬಳಸಬೇಕು ಮತ್ತು ಅದು ಅರ್ಥವಿಲ್ಲದ ಪುನರಾವರ್ತನೆ ಆಗಿರಬಾರದು.
ಇಂತಹ ಸರಳವಾದ ಹಾಗೂ ನೇರವಾದ ಆಜ್ಞೆಯನ್ನು ಹೇಗೆ ಕ್ರೈಸ್ತರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದನ್ನು ನೀವು ಗಮನಿಸಿದ್ದೀರಾ? ಯೇಸುಸ್ವಾಮಿ ಹೇಳಿದ್ದೇನೆಂದರೆ, ಅನ್ಯಜನರು ಅರ್ಥವಿಲ್ಲದೆ ಪದಗಳನ್ನು ಪಠಿಸುತ್ತಾ ಮತ್ತೆ ಮತ್ತೆ ಅದನ್ನೇ ಪುನರಾವರ್ತಿಸುವರು. ಆದರೆ ನಮ್ಮ ಜೀವಿತದಲ್ಲಿ ಇದು ಹಾಗಿರಬಾರದು. ನಾವು ದೇವರನ್ನು ಭಯಭಕ್ತಿಯಿಂದ ಗೌರವಿಸಿ, ಅರ್ಥಬದ್ಧವಾಗಿ ಹಾಗೂ ಯಥಾರ್ಥವಾಗಿ ಮಾತನಾಡಬೇಕು. ನೀವು ಒಬ್ಬ ರಾಜನ ಮುಂದೆ ಅಥವಾ ರಾಷ್ಟ್ರಪತಿಯ ಮುಂದೆ ಅಥವಾ ಭಾರತದ ಪ್ರಧಾನ ಮಂತ್ರಿಯ ಮುಂದೆ ಹೋಗಿ ಏನನ್ನೋ ಮಾತನಾಡಿ, ನಿಮಗೇ ಅರ್ಥವಾಗದ ಮಾತುಗಳನ್ನು ಪುನರಾವರ್ತಿಸುವುದಿಲ್ಲ. ನಾವು ದೇವರ ಮುಂದೆ ಪ್ರಾರ್ಥಿಸುವಾಗ ಇನ್ನೂ ಹೆಚ್ಚು ಭಯಭಕ್ತಿಯನ್ನು ಹೊಂದಿರಬೇಕು. ಅರ್ಥವಿಲ್ಲದ ಪುನರಾವರ್ತನೆಯನ್ನು ಬಿಟ್ಟುಬಿಡಬೇಕು.
ಯೇಸುಸ್ವಾಮಿ ಇನ್ನೂ ಹೇಳಿದ್ದೇನೆಂದರೆ, "ನೀವು ಬಹಳ ಮಾತುಗಳನ್ನಾಡುವಾಗ ದೇವರು ನಿಮ್ಮ ಪ್ರಾರ್ಥನೆಯನ್ನು ಕೇಳುತ್ತಾರೆಂದು ನೆನಸಬೇಡಿರಿ". ಹಲವರು ಪ್ರಾರ್ಥನೆಯಲ್ಲಿ ಮಾಡುವ ಮತ್ತೊಂದು ತಪ್ಪು ಇದಾಗಿದೆ. ಅವರು ಬಹಳ ಸಮಯ ಪ್ರಾರ್ಥಿಸಿದರೆ ದೇವರು ಖಂಡಿತವಾಗಿ ಕೇಳುತ್ತಾರೆಂದು ಭಾವಿಸುತ್ತಾರೆ. "ನಾನು 3 ಗಂಟೆ ಪ್ರಾರ್ಥಿಸಿದೆ. ಆದ್ದರಿಂದ ದೇವರು ಖಂಡಿತವಾಗಿ ನನ್ನ ಪ್ರಾರ್ಥನೆಯನ್ನು ಕೇಳುತ್ತಾರೆ" ಎಂದು. ಇದು ಸಂಪೂರ್ಣವಾಗಿ ಅಸಂಬದ್ಧವಾದ ಮಾತು. ಅನ್ಯಜನರು ಹೀಗೆಯೇ ಯೋಚಿಸುತ್ತಾರೆ - ತಾವು ಹೆಚ್ಚು ಸಮಯ ಪ್ರಾರ್ಥಿಸಿದರೆ ದೇವರು ಕೇಳುತ್ತಾರೆ ಎಂದು ಅವರು ಭಾವಿಸುತ್ತಾರೆ. ಆದರೆ ಅದು ಸತ್ಯವಲ್ಲ.
ಬಾಳನ ಪ್ರವಾದಿಗಳು ಕರ್ಮೆಲ್ ಬೆಟ್ಟದಲ್ಲಿ ಹಲವಾರು ಗಂಟೆಗಳ ಕಾಲ — ಬಹುಶಃ ಆರು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ — ಪ್ರಾರ್ಥಿಸಿದರು. ಆದರೆ ಏನೂ ಸಂಭವಿಸಲಿಲ್ಲ. ಎಲೀಯನು ಎದ್ದು ನಿಂತು ಅರ್ಧ ನಿಮಿಷ ಮಾತ್ರ ಪ್ರಾರ್ಥಿಸಿದನು. ತಕ್ಷಣವೇ ಅಗ್ನಿಯು ಇಳಿಯಿತು. ಪ್ರಾರ್ಥನೆಯ ಅವಧಿಯು ದೇವರು ಕೇಳುವಂತೆ ಮಾಡುವುದಿಲ್ಲ. ಇದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು.
ಬಹಳ ಜನರು ರಾತ್ರಿಯಿಡೀ ಪ್ರಾರ್ಥಿಸಿದರೆ ದೇವರು ತಮ್ಮ ಪ್ರಾರ್ಥನೆಯನ್ನು ಕೇಳುತ್ತಾರೆಂದು ತಿಳಿದು ಕೊಳ್ಳುತ್ತಾರೆ. "ನಾನು ಇಡೀ ರಾತ್ರಿ ಪ್ರಾರ್ಥಿಸಿದೆ. ಆದ್ದರಿಂದ ದೇವರು ನನ್ನ ಪ್ರಾರ್ಥನೆಗೆ ಉತ್ತರ ಕೊಟ್ಟೇ ಕೊಡುತ್ತಾರೆ, ಎಂದು ಭಾವಿಸುತ್ತಾರೆ. ಹೀಗೆಂದು ಯಾರು ಹೇಳಿದ್ದಾರೆ? ಪ್ರಾರ್ಥನೆಗೆ ಉತ್ತರ ತರುವಂತದ್ದು ನಂಬಿಕೆ ಮತ್ತು ಪಾಪದಿಂದ ಮುಕ್ತವಾದ ಹೃದಯ. ಇವು ಅತ್ಯಂತ ಮುಖ್ಯವಾದ ಸಂಗತಿಗಳು. ಕೀರ್ತನೆ. 66:18'ರಲ್ಲಿ ಹೇಳಿರುವಂತೆ, "ನಾನು ಕೆಟ್ಟತನದ ಮೇಲೆ ಮನಸ್ಸಿಟ್ಟಿದ್ದರೆ, ಸ್ವಾಮಿಯು ನನ್ನ ವಿಜ್ಞಾಪನೆಯನ್ನು ಕೇಳುತ್ತಿದ್ದಿಲ್ಲ".
ನೀವು ಇಡೀ ರಾತ್ರಿ ಪ್ರಾರ್ಥಿಸಿದರೂ ಪ್ರಯೋಜನವಿಲ್ಲ. ನಿಮ್ಮ ಪ್ರಾರ್ಥನೆ ಕೇಳಿಸಿಕೊಳ್ಳಲು ಎಷ್ಟೇ ಅದ್ಭುತವಾಗಿದ್ದರೂ ಪ್ರಯೋಜನವಿಲ್ಲ. ನಿಮ್ಮ ಜೀವಿತದಲ್ಲಿ ಪರಿಹರಿಸಲ್ಪಡದ ಪಾಪವಿದ್ದರೆ, ಹೃದಯದಲ್ಲಿ ಅರಿಕೆ ಮಾಡದ ಪಾಪವಿದ್ದರೆ, ನಿಮ್ಮ ಮತ್ತು ನಿಮ್ಮ ಸಹೋದರನ ನಡುವಣ ಸಂಬಂಧ ಕೆಟ್ಟುಹೋಗಿದ್ದರೆ, ನೀವು ಯಾರನ್ನಾದರೂ ನೋಯಿಸಿ ದೇವರ ಮುಂದೆ ಬಂದು ಪ್ರಾರ್ಥಿಸಿದರೆ, ದೇವರು ಅದನ್ನು ಕೇಳುವುದಿಲ್ಲ. ಮೊದಲು ನಿಮ್ಮ ಸಹೋದರನೊಂದಿಗೆ ಆ ವಿಷಯವನ್ನು ಸರಿಪಡಿಸಿಕೊಳ್ಳಿರಿ. ದೇವರು ಮತ್ತು ನಿಮ್ಮ ನಡುವೆ ಪಾಪವು ತಡೆಯಾಗಿ ನಿಂತಿದ್ದರೆ, ಅಥವಾ ನಿಮ್ಮ ಹಾಗೂ ನಿಮ್ಮ ಸಹೋದರನ ನಡುವೆ ಬಗೆಹರಿಸದ ಪಾಪವಿದ್ದರೆ, ಅದನ್ನು ಅರಿಕೆಮಾಡಿ ಸರಿಪಡಿಸಿಕೊಳ್ಳುವ ವರೆಗೆ, ನೀವು 1 ನಿಮಿಷ ಪ್ರಾರ್ಥಿಸಿದರೂ ಅಥವಾ 10 ಗಂಟೆ ಪ್ರಾರ್ಥಿಸಿದರೂ — ನಿಶ್ಚಯವಾಗಿ ನೀವು ನಿಮ್ಮ ಸಮಯವನ್ನು ವ್ಯರ್ಥಮಾಡುತ್ತಿದ್ದೀರಿ, ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳಿರಿ.