ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

"ತೀರ್ಪು ಮಾಡಬೇಡಿರಿ, ಹಾಗೆ ನಿಮಗೂ ತೀರ್ಪಾಗುವುದಿಲ್ಲ. ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವುದು. ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯವರು. ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ನೋಡದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯಾಕೆ ನೋಡುತ್ತೀ? ನಿನ್ನ ಕಣ್ಣಿನಲ್ಲೇ ಒಂದು ತೊಲೆ ಇರುವಾಗ ನಿನ್ನ ಸಹೋದರನಿಗೆ, ನಿನ್ನ ಕಣ್ಣಿನಲ್ಲಿರುವ ರವೆಯನ್ನು ತೆಗೆಯುತ್ತೇನೆ, ಎಂದು ನೀನು ಹೇಳುವದು ಹೇಗೆ? ಕಪಟಿಯೇ, ಮೊದಲು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಹಾಕು; ಆಮೇಲೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ತೆಗೆಯುವದಕ್ಕೆ ನಿನಗೆ ಚೆನ್ನಾಗಿ ಕಾಣಿಸುವದು" (ಮತ್ತಾ. 7:1-5).

ದುರದೃಷ್ಟವಶಾತ್, ಜನರನ್ನು ತೀರ್ಪು ಮಾಡುವುದು, ಅವರನ್ನು ಕೀಳಾಗಿ ಕಾಣುವುದು ಮತ್ತು ತಿರಸ್ಕರಿಸುವುದು, ಕ್ರೈಸ್ತರಲ್ಲಿ, ಹೆಚ್ಚಾಗಿ ಕಂಡುಬರುವ ಒಂದು ಅಭ್ಯಾಸವಾಗಿದೆ. ಕ್ರೈಸ್ತರು ಎಷ್ಟೋ ಸಲ ಒಬ್ಬ ವ್ಯಕ್ತಿಯನ್ನು ಹೆಚ್ಚಾಗಿ ಅರಿಯದಿದ್ದರೂ, ಅವನ ಬಗ್ಗೆ ತಮಗೆ ಹೆಚ್ಚೇನೂ ತಿಳಿದಿಲ್ಲದಿದ್ದರೂ, ತಾವು ಅವನಿಗಿಂತ ಉತ್ತಮರೆಂದು ಅಂದುಕೊಳ್ಳುತ್ತಾರೆ. ಇಬ್ರಿ. 9:27ರ ವಚನ ಹೀಗಿದೆ. "ಮನುಷ್ಯರು ಒಂದೇ ಸಾರಿ ಸಾಯಬೇಕೆಂದೂ, ಆಮೇಲೆ ನ್ಯಾಯತೀರ್ಪು ಆಗಬೇಕೆಂದೂ ನೇಮಕವಾಗಿದೆ." ಹಾಗಾದರೆ, ಈ ವಿಶ್ವದ ಸೃಷ್ಟಿಕರ್ತನಾದ ಸರ್ವಶಕ್ತ ದೇವರು ಜನರಿಗೆ ಯಾವಾಗ ತೀರ್ಪು ನೀಡುತ್ತಾನೆ? ಈ ವಾಕ್ಯದ ಪ್ರಕಾರ, "ನ್ಯಾಯತೀರ್ಪು ಅಂತಿಮವಾಗಿ ಸತ್ತ ನಂತರ ಆಗಬೇಕೆಂದು ನೇಮಕವಾಗಿದೆ." ಆದ್ದರಿಂದ ದೇವರು ಜನರ ಮರಣದ ನಂತರ ಮಾತ್ರ ಅವರನ್ನು ತೀರ್ಪು ಮಾಡುತ್ತಾರೆ.

ನೀವು ಜನರನ್ನು ಯಾವಾಗ ತೀರ್ಪು ಮಾಡುತ್ತೀರಿ? ನೀವು ಜನರು ಸಾಯುವ ಮುಂಚೆಯೇ ಅವರನ್ನು ತೀರ್ಪು ಮಾಡುತ್ತೀರಿ. ದೇವರು ಒಬ್ಬ ವ್ಯಕ್ತಿ ಸಾಯುವವರೆಗೂ ಕಾದಿದ್ದು, ಅನಂತರ ತೀರ್ಪು ನೀಡುವುದು ಏಕೆ? ಆ ವ್ಯಕ್ತಿ ಒಬ್ಬ ದುಷ್ಟನಾಗಿರಬಹುದು. ಆದರೂ ದೇವರು, "ನನಗೆ ಅವನಲ್ಲಿ ಭರವಸೆ ಇದೆ. ಅವನು ಬದಲಾಗಬಹುದು, ಎಂದು, ಆ ನಿರೀಕ್ಷೆಯಿಂದ ಕಾಯುತ್ತಾರೆ. ಶಿಲುಬೆಯ ಮೇಲೆ ಮರಣ ಹೊಂದಿ ಪರಲೋಕವನ್ನು ತಲುಪಿದ ಕಳ್ಳನು ಸಾಯುವುದಕ್ಕೆ ಮೊದಲೇ ದೇವರು ಅವನನ್ನು ತೀರ್ಪು ಮಾಡಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿರಿ. ಅವನು ಸಾಯುವದಕ್ಕೆ ಕೆಲವು ನಿಮಿಷಗಳು ಇರುವಾಗ ಅಥವಾ ಕೆಲವು ಗಂಟೆಗಳ ಮೊದಲೇ ದೇವರು ತೀರ್ಪು ನೀಡಿದ್ದರೆ ಏನಾಗುತ್ತಿತ್ತು ಎಂಬುದನ್ನು ಪರಿಗಣಿಸಿರಿ. ಅದರ ಪರಿಣಾಮ ಬಹಳ ಭಯಾನಕವಾಗಿರುತ್ತಿತ್ತು. ಅವನಲ್ಲಿ ಅಂತಿಮವಾಗಿ ಪರಲೋಕಕ್ಕೆ ಹೋಗುವ ಅರ್ಹತೆಯಿತ್ತು. ಆದರೆ ಅವನು ಮೊದಲೇ ತೀರ್ಪು ಮಾಡಲ್ಪಟ್ಟಿದ್ದರೆ, ನರಕದ ಶಿಕ್ಷೆಯನ್ನು ಅನುಭವಿಸುತ್ತಿದ್ದನು. ದೇವರು ಅವನು ಸಾಯುವ ಕ್ಷಣದವರೆಗೆ ಕಾದಿದ್ದರು, ಮತ್ತು ನಂತರ ಅವನನ್ನು ಪರಲೋಕಕ್ಕೆ ಕರೆದೊಯ್ದರು.

ದೇವರು ಒಬ್ಬ ವ್ಯಕ್ತಿಗೆ ತೀರ್ಪು ನೀಡಲು ಅವನ ಮರಣದವರೆಗೂ ಕಾಯುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಸಹನೆಯಿಲ್ಲದ ಮನುಷ್ಯನಾದರೋ ಜನರು ಸಾಯುವ ಮುನ್ನವೇ ಅವರನ್ನು ತೀರ್ಪು ಮಾಡುತ್ತಾನೆ. ಇದು ಮನುಷ್ಯನ ಮೂರ್ಖತನವಾಗಿದೆ. ಅವನಿಗೆ ಎಲ್ಲಾ ವಾಸ್ತವಾಂಶಗಳು ತಿಳಿದಿರುವುದಿಲ್ಲ. ಅವನಿಗೆ ಆ ವ್ಯಕ್ತಿಯ ಹಿನ್ನೆಲೆ ಹಾಗೂ ಆತನ ಮನಸ್ಸಿನ ಆಲೋಚನೆಗಳ 99% ಅಂಶ ತಿಳಿದಿರುವುದಿಲ್ಲ. ಆತನು ಎಷ್ಟು ಹೋರಾಡಿದ್ದಾನೆ ಅಥವಾ ಎಷ್ಟು ಪ್ರಾರ್ಥನೆ ಮಾಡಿದ್ದಾನೆ ಎಂಬುದು ಇವನಿಗೆ ತಿಳಿದಿರದಿದ್ದರೂ, ಇವನು ಆತನನ್ನು ತೀರ್ಪು ಮಾಡುತ್ತಾನೆ. ಉಚ್ಛ ನ್ಯಾಯಾಲಯದ ಯಾವುದೇ ಯಥಾರ್ಥ ನ್ಯಾಯಾಧೀಶನು ಎಂದಿಗೂ ಸಾಕ್ಷಿ ಆಧಾರಗಳಿಲ್ಲದೆ ತೀರ್ಪು ನೀಡುವುದಿಲ್ಲ. ನ್ಯಾಯಾಧೀಶನಿಗೆ ಪ್ರಕರಣದ ಕೇವಲ 1% ಅಂಶ ಮಾತ್ರ ತಿಳಿದಿದ್ದರೆ, ಅವನು ಹೀಗೆ ನುಡಿಯುತ್ತಾನೆ, "ಕೇಳಿರಿ, ನಾನು ತೀರ್ಪು ನೀಡುವದಕ್ಕೆ ನನಗೆ ಹೆಚ್ಚಿನ ಸಾಕ್ಷಿ ಬೇಕಾಗಿದೆ. ಅಲ್ಲಿಯವರೆಗೆ ನಾನು ತೀರ್ಪನ್ನು ಕೊಡಲಾರೆನು." ಪ್ರತಿಯೊಬ್ಬ ಕ್ರೈಸ್ತನೂ ಸಹ ಹೀಗೆಯೇ ಮಾಡಬೇಕು.

ನಾವು ಒಬ್ಬ ವ್ಯಕ್ತಿಯನ್ನು ತೀರ್ಪು ಮಾಡುವಾಗ, ನಾವು ನಿಜವಾಗಿ ನಮ್ಮ ಸ್ವಂತ ಹೃದಯದ ಸ್ಥಿತಿಯನ್ನು ತೋರಿಸುತ್ತಿದ್ದೇವೆ. ಜ್ಞಾನೋ. 27:19ರಲ್ಲಿ ಹೇಳಿರುವಂತೆ, "ನೀರಿನಲ್ಲಿ ಮುಖವು ಮುಖವನ್ನು ಪ್ರತಿಬಿಂಬಿಸುವಂತೆ, ಮನುಷ್ಯನ ಹೃದಯವು ಮನುಷ್ಯನನ್ನು ತೋರ್ಪಡಿಸುತ್ತದೆ." ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕನ್ನಡಿಯಲ್ಲಿ ಮನುಷ್ಯನು ತನ್ನ ಸ್ವಂತ ಮುಖವನ್ನು ನೋಡುತ್ತಾನೆ. ಅಂದರೆ, ಆ ವ್ಯಕ್ತಿಯ ಹೃದಯದಲ್ಲಿ ಕೆಟ್ಟ ಉದ್ದೇಶವಿದೆ ಎಂದು ನೀವು ಊಹಿಸುವುದು, ನಿಮ್ಮ ಸ್ವಂತ ಹೃದಯದ ತಪ್ಪು ಮನೋಭಾವಗಳ ಸೂಚನೆ ಮಾತ್ರವಾಗಿದೆ. ಆ ಮನುಷ್ಯನು ಮಾಡಿದ ಯಾವುದೋ ಕೆಲಸ ಒಳ್ಳೆಯ ಉದ್ದೇಶದಿಂದ ಮಾಡಲು ಸಾಧ್ಯವಿಲ್ಲವೆಂದು ನೀನು ಊಹಿಸಿದೆ. ನಿನ್ನ ಯೋಚನೆ ಏನೆಂದರೆ, "ಅದು ಖಂಡಿತ ಕೆಟ್ಟ ಉದ್ದೇಶದಿಂದಲೇ ಕೂಡಿರಬೇಕು. ಏಕೆಂದರೆ ನಾನೇ ಆಗಿದ್ದರೆ ಅಂತಹ ಕೆಲಸವನ್ನು ಕೆಟ್ಟ ಉದ್ದೇಶದಿಂದ ಮಾತ್ರ ಮಾಡುತ್ತಿದ್ದೆ." ಹೀಗೆ ನೀವು ನಿಮ್ಮ ಸ್ವಂತ ಹೃದಯವನ್ನು ಬಹಿರಂಗಪಡಿಸುತ್ತಿರಿ. ಇತರರನ್ನು ತೀರ್ಪಿಗೆ ಒಳಪಡಿಸುವುದು ಅತ್ಯಂತ ಮೂರ್ಖತನವಾಗಿದೆ.

"ಮೊದಲು ಈ ಪ್ರೀತಿಯಿಲ್ಲದ ಮನೋಭಾವವನ್ನು ತೆಗೆದುಹಾಕು, ಆಗ ನಿನಗೆ ಚೆನ್ನಾಗಿ ಕಾಣಿಸುವುದು

ತಪ್ಪಿಹೋದ ಮಗನ ಕಥೆಯನ್ನು ಪರಿಗಣಿಸಿರಿ. ತಪ್ಪು ದಾರಿಗೆ ಹೋದ ಆ ಮಗನ ಕಥೆಯಲ್ಲಿ, ನಾವು ಹಿರಿಯ ಮಗನ ಬಗ್ಗೆ ಓದುತ್ತೇವೆ. ಅವನು ತಪ್ಪಿಹೋದ ಮಗನು ಹಿಂದಿರುಗಿ ಬಂದಾಗ ತನ್ನ ತಂದೆಯು ಸಂತೋಷ ಪಡುವುದನ್ನು ನೋಡಿ ಬಹಳ ಕೋಪಗೊಂಡನು. ತಂದೆಯು ಹೊರಗೆ ಬಂದು, ಆ ಹಿರಿಯ ಮಗನು ಏಕೆ ಒಳಗೆ ಬರಲಿಲ್ಲ ಎಂದು ಕೇಳಿದಾಗ, ಲೂಕ. 15:30ರಲ್ಲಿ ಅವನ ಮಾತಿನ ಧಾಟಿಯನ್ನು ಗಮನಿಸಿರಿ. "ನಿನ್ನ ಈ ಮಗನು..." ಅವನು ಆತನನ್ನು "ನನ್ನ ಈ ಸಹೋದರ" ಎಂದು ಸಹ ಉಲ್ಲೇಖಿಸುವುದಿಲ್ಲ. ಎಂತಹ ತಿರಸ್ಕಾರದ ಮಾತಿದು? "ಅವನು ಸೂಳೆಯರನ್ನು ಕಟ್ಟಿಕೊಂಡು ನಿನ್ನ ಆಸ್ತಿಯನ್ನು ನುಂಗಿಹಾಕಿದ್ದಾನೆ." ಅದು ಇವನಿಗೆ ಹೇಗೆ ತಿಳಿಯಿತು? ತನ್ನ ಕಿರಿಯ ಸಹೋದರ ವೇಶ್ಯೆಯರೊಂದಿಗೆ ತಿರುಗಾಡುತ್ತಿದ್ದನೆಂದು ಅವನು ಹೇಗೆ ಊಹಿಸಿದನು? ಯಾರಾದರೂ ಬಂದು ಅವನಿಗೆ ವರದಿ ನೀಡಿದರೇ? ಖಂಡಿತ ಇಲ್ಲ. ತನ್ನ ಕಿರಿಯ ಸಹೋದರ ವೇಶ್ಯೆಯರ ಮೇಲೆ ಹಣವನ್ನು ಖರ್ಚು ಮಾಡಿರುತ್ತಾನೆಂದು ಅವನು ತಾನಾಗಿಯೇ ಊಹಿಸಿಕೊಂಡನು. ಅದು ನಿಜವಲ್ಲದೇ ಇರಬಹುದು. ಅವನು ಕುಡಿತ ಹಾಗೂ ಮೂರ್ಖತನದಿಂದ ತನ್ನ ಹಣವನ್ನು ವ್ಯರ್ಥ ಮಾಡಿರಬಹುದು. ಆದರೆ ವೇಶ್ಯೆಯರ ಬಳಿಗೆ ಹೋಗದಿರಬಹುದು.

ಆದರೆ ಈ ಹಿರಿಯ ಸಹೋದರನಲ್ಲಿ ತನ್ನ ಕಿರಿಯ ಸಹೋದರನ ಬಗ್ಗೆ ಇದ್ದಂತ ತಪ್ಪು ಮನೋಭಾವ ನಿನ್ನಲ್ಲಿಯೂ ಇದ್ದರೆ, ನೀನು ಯಾವಾಗಲೂ ಇತರರ ಬಗ್ಗೆ ಕೆಟ್ಟದ್ದನ್ನೇ ಯೋಚಿಸಬಹುದು. ಅದಲ್ಲದೆ, ನೀನು ಬೇರೊಬ್ಬನ ಬಗ್ಗೆ ಬಹಳ ಕೆಟ್ಟದ್ದನ್ನು ಊಹಿಸುವ ಪ್ರತಿಯೊಂದು ಸಂದರ್ಭದಲ್ಲಿ, ಬೇರೆಯವರಿಗಿಂತ ಹೆಚ್ಚಾಗಿ ನಿನ್ನಲ್ಲೇ ಸಮಸ್ಯೆಯಿದೆ ಎಂಬುದನ್ನು ನೀನು ಗುರುತಿಸಿಕೊಳ್ಳಬೇಕು. ಇಲ್ಲವಾದರೆ, ಇನ್ನೊಬ್ಬ ವ್ಯಕ್ತಿ ತನ್ನ ತಂದೆಯೊಂದಿಗೆ ಊಟದ ಮೇಜಿನ ಬಳಿ ಕುಳಿತು ಕೊಬ್ಬಿದ ಕರುವಿನ ಭೋಜನವನ್ನು ಸವಿಯುತ್ತಿರಬಹುದು, ಮತ್ತು ನೀನು ಮನೆಯ ಹೊರಗೆಯೇ ಉಳಕೊಳ್ಳಬಹುದು.

ತಪ್ಪು ದಾರಿಗೆ ಹೋದ ಮಗನ ಕಥೆಯು ಹೇಗಿದೆ ಎಂದರೆ, ಕಥೆಯ ಆರಂಭದಲ್ಲಿ ಕಿರಿಯ ಮಗನು ಮನೆಯ ಹೊರಗಿರುತ್ತಾನೆ ಮತ್ತು ಹಿರಿಯ ಮಗನು ಮನೆಯ ಒಳಗಿರುತ್ತಾನೆ. ಕಥೆಯ ಅಂತ್ಯದಲ್ಲಿ, ಕಿರಿಯ ಮಗನು ಮನೆಯ ಒಳಗಿರುತ್ತಾನೆ ಮತ್ತು ಹಿರಿಯ ಮಗನು ಜನರನ್ನು ತೀರ್ಪಿಗೆ ಒಳಪಡಿಸುತ್ತಿರುವ ಕಾರಣಕ್ಕಾಗಿ ಮನೆಯ ಹೊರಗಿರುತ್ತಾನೆ. ಸಾಕಷ್ಟು ಮಾಹಿತಿಯಿಲ್ಲದೆ ಜನರನ್ನು ತೀರ್ಪಿಗೆ ಒಳಪಡಿಸುವುದರಿಂದ ನೀವು ತಂದೆಯ ಮನೆಯ ಹೊರಗೆ ಉಳಿಯದಂತೆ ಎಚ್ಚರವಾಗಿರಿ. ತೀರ್ಪು ಮಾಡದೇ ಇರುವುದೇ ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.

ತೀರ್ಪು ಮಾಡಬೇಡಿ. ಯೇಸುವು ಹೇಳಿದಂತೆ, ಒಂದು ವೇಳೆ ನೀವು ತೀರ್ಪು ಮಾಡುವುದಕ್ಕೆ ಇಳಿದರೆ, ನೀವು ಮಾಡುತ್ತಿರುವುದೇನು? ನಿಮ್ಮ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ಅಲ್ಲಿಯೇ ಉಳಿಸಿಕೊಂಡು, ನಿಮ್ಮ ಸಹೋದರನ ಕಣ್ಣಿನಲ್ಲಿರುವ ಸಣ್ಣ ರವೆಯನ್ನು ತೀರ್ಪು ಮಾಡಲು ಹೊರಟಿದ್ದೀರಾ? ಅದನ್ನೇ ಯೇಸುವು ಹೇಳಿದ್ದು. ಒಬ್ಬ ವ್ಯಕ್ತಿಯ ಕಣ್ಣಿನಲ್ಲಿರುವ ತೊಲೆ ಎಂದರೇನು? ಭೌತಿಕವಾದ ಒಂದು ಮರದ ತೊಲೆ ನಿಮ್ಮ ಕಣ್ಣಿನೊಳಗೆ ಇರಲು ಸಾಧ್ಯವಿಲ್ಲ. ಆದರೆ ಬೇರೊಬ್ಬನ ಪಾಪಕ್ಕೆ ಹೋಲಿಸಿದರೆ ನಿನ್ನ ಪಾಪ ಎಷ್ಟು ಗಂಭೀರವಾದದ್ದೆಂದು ತೋರಿಸುವುದಕ್ಕಾಗಿ ಯೇಸುವು ಇಲ್ಲಿ ಒಂದು ಅತಿಶಯೋಕ್ತಿಯ ಪ್ರಯೋಗ ಮಾಡಿದ್ದಾನೆ. ಬಹುಶಃ ಇನ್ನೊಬ್ಬನು ಯಾವುದೋ ದೊಡ್ಡ ತಪ್ಪನ್ನೇ ಮಾಡಿರಬಹುದು. ಆದರೆ ಅವನ ಪಾಪಕ್ಕೆ ಹೋಲಿಸಿದರೆ ಆತನ ಬಗ್ಗೆ ಪ್ರೀತಿಯಿಲ್ಲದ ನಿನ್ನ ಮನೋಭಾವವು ಒಂದು ತೊಲೆಯಾಗಿದೆ, ಮತ್ತು ಅವನ ಪಾಪವು ಕೇವಲ ಒಂದು ರವೆಯಂತಿದೆ.

ಬಹುಶಃ ಅವನು ಸೂಳೆಯರ ಬಳಿಗೆ ಹೋಗಿರಬಹುದು. ಹೌದು, ಅದೊಂದು ಪಾಪ. ಆದರೆ ಆತನ ಬಗ್ಗೆ ಪ್ರೀತಿಯಿಲ್ಲದ ನಿನ್ನ ಮನೋಭಾವಕ್ಕೆ ಹೋಲಿಸಿದರೆ, ಆ ಪಾಪವು ಕೇವಲ ಸಣ್ಣ ರವೆಯಂತಿದೆ. ನಿನ್ನ ಮನೋಭಾವವು ಒಂದು ದೊಡ್ಡ ತೊಲೆಯಂತಿದೆ. ಇತರರ ಬಗ್ಗೆ ಪ್ರೀತಿಯಿಲ್ಲದ ನಿನ್ನ ಮನೋಭಾವವನ್ನು ಮೊದಲು ಬಿಟ್ಟುಬಿಡು, ಎಂದು ಕರ್ತನು ಹೇಳುತ್ತಾನೆ. ಆ ಪ್ರೀತಿಯಿಲ್ಲದ ನಿನ್ನ ಮನೋಭಾವವು ಸದಾ ಇನ್ನೊಬ್ಬನ ತಪ್ಪುಗಳನ್ನೇ ಹುಡುಕಲು ಬಯಸುತ್ತದೆಂದು ಕರ್ತನು ಹೇಳುತ್ತಾನೆ. ಆತನು ಏನೇ ಮಾಡಿದರೂ, ನೀನು ಅದರಲ್ಲಿ ತಪ್ಪು ಉದ್ದೇಶವನ್ನೇ ಕಾಣುತ್ತೀ. ಆ ವ್ಯಕ್ತಿ ಯಾವುದೇ ಒಳ್ಳೆಯ ಕೆಲಸ ಮಾಡಲಾರನೆಂದು ನಿನ್ನ ಅಭಿಪ್ರಾಯವಾಗಿದೆ. ಆತನು ನಿನ್ನ ದೃಷ್ಟಿಯಲ್ಲಿ ಕೆಟ್ಟವನಾಗಿದ್ದಾನೆ, ಆದರೆ ಪ್ರೀತಿಯಿಲ್ಲದ ಈ ಮನೋಭಾವವನ್ನು ಇರಿಸಿಕೊಂಡಿರುವ ನಿನ್ನ ಕೆಟ್ಟತನವನ್ನು ನೀನು ಕಂಡುಕೊಂಡಿಲ್ಲ. ಹಾಗಾದರೆ ಕರ್ತನು ಏನು ಹೇಳುತ್ತಾನೆ? ಬಹಳ ಮಂದ ದೃಷ್ಟಿಯ ಒಬ್ಬ ವ್ಯಕ್ತಿಯ ಬಗ್ಗೆ ಯೊಚಿಸಿರಿ. ನೀನು ನಿನ್ನ ಕಣ್ಣಿನ ಕಸವನ್ನು ತೆಗೆಯಲು ಆ ವ್ಯಕ್ತಿಯ ಸಹಾಯವನ್ನು ಯಾಚಿಸುವೆಯಾ? ಒಬ್ಬ ಕಣ್ಣಿನ ವೈದ್ಯನು ಕಣ್ಣಿನ ಪೊರೆ ಮತ್ತು ಇತರ ಕಣ್ಣಿನ ಸಮಸ್ಯೆಗಳಿಂದ ಬಹುತೇಕ ಕುರುಡನಾಗಿದ್ದರೆ, ನೀನು ಆತನ ಬಳಿಗೆ ಹೋಗುತ್ತೀಯಾ? ಅವನು ನಿನ್ನ ಕಣ್ಣುಗಳನ್ನು ಪರೀಕ್ಷಿಸಿ ಅದರಲ್ಲಿರುವ ಆ ಸಣ್ಣ ರವೆಯನ್ನು ತೆಗೆಯಲು ಹೇಗೆ ತಾನೇ ಸಾಧ್ಯ? ನಾನಂತೂ ಅಂತಹ ವ್ಯಕ್ತಿಯ ಹತ್ತಿರವೂ ಸುಳಿಯುವುದಿಲ್ಲ.

ಕರ್ತನು ಇದನ್ನೇ ಹೇಳುತ್ತಾನೆ. ಒಂದು ದೊಡ್ಡ ತೊಲೆಯು ನಿನ್ನ ಕಣ್ಣನ್ನು ಕುರುಡಾಗಿಸಿದ್ದರೆ, ನೀನು ನಿನ್ನ ಸಹೋದರನಿಗೆ "ನಾನು ನಿನ್ನ ಕಣ್ಣಿನ ರವೆಯನ್ನು ತೆಗೆಯುತ್ತೇನೆ" ಎಂದು ಹೇಳಲು ಸಾಧ್ಯವಿದೆಯೇ? ನೀನು ಅವನ ಕಣ್ಣನ್ನೇ ಕೆಡಿಸಬಹುದು. ಆದರೆ ಕರ್ತನು ಹೇಳುವುದು ಏನೆಂದರೆ, "ಕಪಟಿಯೇ! ಪ್ರೀತಿಯಿಲ್ಲದ ನಿನ್ನ ಮನೋಭಾವವನ್ನು ಮೊದಲು ಸರಿಪಡಿಸಿಕೋ. ಮತ್ತಾ. 7:5 ಹೇಳುವುದು ಏನೆಂದರೆ, ಇತರರ ಬಗ್ಗೆ ಪ್ರೀತಿಯಿಲ್ಲದ ಮನೋಭಾವವನ್ನು ಇರಿಸಿಕೊಂಡು ಅವರನ್ನು ತೀರ್ಪು ಮಾಡುವ ಪ್ರತಿಯೊಬ್ಬನೂ ಒಬ್ಬ ಕಪಟಿಯಾಗಿದ್ದಾನೆ. ಈ ಪ್ರೀತಿಯಿಲ್ಲದ ಮನೋಭಾವವನ್ನು ಮೊದಲು ಬಿಟ್ಟುಬಿಡು. ಆಗ ನೀನು ಸ್ಪಷ್ಟವಾಗಿ ನೋಡುತ್ತೀ. ಆಗ ಆ ಸಹೋದರ ತಾನಾಗಿಯೇ ನಿನ್ನ ಬಳಿಗೆ ಬಂದು, "ಸಹೋದರನೇ, ದಯವಿಟ್ಟು ನನ್ನ ಕಣ್ಣಿನ ರವೆಯನ್ನು ತೆಗೆಯುವೆಯಾ?" ಎಂದು ಕೇಳಬಹುದು. ಅದು ಎಷ್ಟು ಅದ್ಭುತವಾದ ಬದಲಾವಣೆಯಲ್ಲವೇ?