WFTW Body: 

"ನಿಮ್ಮಲ್ಲೊಬ್ಬನಿಗೆ ಒಬ್ಬ ಸ್ನೇಹಿತನಿದ್ದಾನೆ ಎಂದು ಹೇಳೋಣ. ಅವನು ನಡುರಾತ್ರಿಯಲ್ಲಿ ನಿಮ್ಮ ಮನೆಗೆ ಬಂದಾಗ, ಊಟ ಮಾಡಿದ್ದೀಯಾ, ಎಂದು ನೀವು ಪ್ರೀತಿಯಿಂದ ಮತ್ತು ಆದರಣೆಯಿಂದ ಕೇಳಿದಾಗ, ಇಲ್ಲವೆಂದು ಆತನು ಉತ್ತರಿಸಿದರೆ, ಮತ್ತು ಆಗ ನಿಮ್ಮ ಮನೆಯಲ್ಲಿ ಊಟಕ್ಕೆ ಏನೂ ಇಲ್ಲದಿದ್ದರೆ, ನೀವು ಏನು ಮಾಡುತ್ತೀರಿ? ನೀವು ನಿಮ್ಮ ನೆರೆಯವನ ಮನೆಗೆ ಹೋಗಿ, ಏನಾದರೂ ಕೊಡು ಎಂದು ಆತನನ್ನು ಕೇಳುತ್ತೀರಿ"(ಲೂಕ. 11:5).

ಆದರೆ, ಇದು ಬಹಳ ಅಸಾಮಾನ್ಯವಾಗಿದೆ. ಸಾಮಾನ್ಯವಾಗಿ ಮಧ್ಯರಾತ್ರಿಯ ವೇಳೆ ಯಾರೂ ತನ್ನ ನೆರೆಯವನ ಮನೆಗೆ ಹೋಗಿ ಆತನನ್ನು ನಿದ್ರೆಯಿಂದ ಎಬ್ಬಿಸಿ, ತನ್ನ ಸ್ನೇಹಿತನಿಗಾಗಿ ಆಹಾರವನ್ನು ಕೊಡು, ಎಂದು ಕೇಳುವುದಿಲ್ಲ, ಆದರೆ ಈ ಸಾಮ್ಯದಲ್ಲಿ ಈತನು ಹಾಗೆ ಮಾಡುತ್ತಾನೆ. ಅವನು ನೆರೆಯವನ ಬಾಗಿಲನ್ನು ತಟ್ಟಿ, "ದಯವಿಟ್ಟು ನನಗೆ ಮೂರು ರೊಟ್ಟಿಗಳನ್ನು ಕೊಡು. ನೀನು ನನಗೆ ಕೊಡಲೇ ಬೇಕು, ಆದರೆ ನಾಳೆ ನಾನು ನಿನಗೆ ಹಿಂತಿರುಗಿಸುತ್ತೇನೆ. ಒಬ್ಬ ಸ್ನೇಹಿತ ನನ್ನ ಮನೆಗೆ ಬಂದಿದ್ದಾನೆ, ಆತನು ನನ್ನ ಆಪ್ತನು, ಮತ್ತು ಆತನಿಗೆ ಕೊಡಲು ನನ್ನ ಬಳಿ ಏನೂ ಇಲ್ಲ." ಆ ನೆರೆಯವನು ಇದಕ್ಕೆ ಉತ್ತರವಾಗಿ, "ಈ ಹೊತ್ತಿನಲ್ಲಿ ತೊಂದರೆ ಕೊಡಬೇಡ, ನನ್ನ ಮಕ್ಕಳು ಮಲಗಿದ್ದಾರೆ. ಜೋರಾಗಿ ಬಾಗಿಲು ತಟ್ಟಿ ನನ್ನ ಮಕ್ಕಳನ್ನು ಎಬ್ಬಿಸಬೇಡ," ಎನ್ನುತ್ತಾನೆ. ಆದರೆ ಈ ಮನುಷ್ಯ ಬಾಗಿಲನ್ನು ತಟ್ಟುತ್ತಲೇ ಇರುತ್ತಾನೆ ಮತ್ತು ನೆರೆಯವನು ತನಗೆ ಬೇಕಾದ್ದನ್ನು ಕೊಡುವ ತನಕ ಸುಮ್ಮನಾಗುವುದಿಲ್ಲ.

ಕರ್ತನು ಹೇಳುವುದು ಏನೆಂದರೆ, "ಆತನು ಸ್ನೇಹದ ನಿಮಿತ್ತವಾಗಿ ನಿನಗೆ ಕೊಡದಿದ್ದರೂ, ನಿನ್ನ ಕಾಟದ ದೆಸೆಯಿಂದ ಮತ್ತು ನೀನು ಒಂದೇ ಸಮನೆ ಬಾಗಿಲು ತಟ್ಟುತ್ತಿರುವುದರಿಂದ, ಎದ್ದು ಬಂದು ನಿನಗೆ ಎಷ್ಟೋ ಹೆಚ್ಚಾಗಿ ಕೊಡುವನು." ಇದು ಎಷ್ಟು ಅಂದವಾದ ಹೇಳಿಕೆಯಲ್ಲವೇ, "ಎಷ್ಟೋ ಹೆಚ್ಚಾಗಿ ಕೊಡುವನು."

ನಾನು ಪವಿತ್ರಾತ್ಮನ ಅಭಿಷೇಕಕ್ಕಾಗಿ ಬೇಡಿಕೊಂಡ ಸಂದರ್ಭ ಜ್ಞಾಪಕಕ್ಕೆ ಬರುತ್ತದೆ - ಪವಿತ್ರಾತ್ಮನ ಬಲವನ್ನು ಹೊಂದಿ ದೇವರ ವಾಕ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಬೋಧಿಸುವ ಉದ್ದೇಶ ನನ್ನಲ್ಲಿತ್ತು - ನಾನು ವಾಕ್ಯದ ವರವನ್ನು ಬೇಡಿಕೊಂಡೆ. ನಾನೊಬ್ಬ ಕ್ರೈಸ್ತ ವಿಶ್ವಾಸಿಯಾಗಿ ದೇವರ ವಾಕ್ಯವನ್ನು ಹಂಚಿಕೊಳ್ಳಲು ಆರಂಭಿಸಿದಾಗ ಬಹಳ ಸಂಕೋಚ ಸ್ವಭಾವದವನಾಗಿದ್ದೆ. ನನಗೆ ಪವಿತ್ರಾತ್ಮನ ಬಲ ಅವಶ್ಯವೆಂದು ನಾನು ಅರಿತಿದ್ದೆ, ಮತ್ತು ಆ ಬಲವನ್ನು ಹೊಂದಿದಾಗ ನಾನು ಬೇರೊಬ್ಬ ವ್ಯಕ್ತಿಯಾಗಿ ಪರಿವರ್ತನೆ ಹೊಂದುವೆನೆಂದು ನನಗೆ ತಿಳಿದಿತ್ತು. ಅದು ನಿಖರವಾಗಿ ಹಾಗೆಯೇ ಆಯಿತು. ನೀವು ಪರಲೋಕದಿಂದ ಕೊಡಲ್ಪಡುವ ಅಪಾರ ಬಲವುಳ್ಳ ಪವಿತ್ರಾತ್ಮನ ಅಭಿಷೇಕಕ್ಕಾಗಿ ದೇವರನ್ನು ಬೇಡುತ್ತಾ, ನಿಮ್ಮ ಸ್ವಂತಕ್ಕಾಗಿ ಅಲ್ಲ, ಆದರೆ ಇತರರಿಗಾಗಿ, "ಕರ್ತನೇ, ಈ ಜನರ ಆಹಾರಕ್ಕಾಗಿ ನನಗೆ ರೊಟ್ಟಿಯನ್ನು ಕೊಡು," ಎಂದು ಪಟ್ಟು ಹಿಡಿದು ಬಾಗಿಲನ್ನು ತಟ್ಟಿದರೆ (ಇವೇ ಪದಗಳು ಲೂಕ. 11:8ರಲ್ಲಿ ಬಳಸಲ್ಪಟ್ಟಿರುವುದನ್ನು ನೋಡುತ್ತೇವೆ), ಆಗ ದೇವರು ನಿಮಗೆ ಎಷ್ಟೋ ಹೆಚ್ಚಾಗಿ ಕೊಡುತ್ತಾರೆ (ಲೂಕ. 11:13). ಇಲ್ಲಿ ನಾನು ಪವಿತ್ರಾತ್ಮನ ವರದ ಕುರಿತಾಗಿ ಹೇಳುತ್ತಿದ್ದೇನೆ. ನಾವು ದೇವರನ್ನು ಏನು ಕೇಳಬೇಕು ಎಂಬುದನ್ನು ಯೇಸುವು ಸ್ಪಷ್ಟಪಡಿಸಿದನು. "ಇತರರ ಸೇವೆ ಮಾಡುವುದಕ್ಕಾಗಿ ನನಗೆ ಪವಿತ್ರಾತ್ಮನ ಬಲವನ್ನು ದಯಪಾಲಿಸು. ನನ್ನ ಅವಶ್ಯಕತೆಗಳು ಪೂರೈಸಲ್ಪಟ್ಟಿವೆ, ನಾನು ಲೂಕನು 18ನೇ ಅಧ್ಯಾಯದ ಸನ್ನಿವೇಶವನ್ನು ದಾಟಿ ಬಂದಿದ್ದೇನೆ, ಈಗ ನಾನು ಇತರರ ಅವಶ್ಯಕತೆಗಳ ಕುರಿತಾಗಿ ಯೋಚಿಸುತ್ತಿದ್ದೇನೆ." ಇವನೇ ಒಬ್ಬ ನಿಜವಾದ ಕ್ರೈಸ್ತನು.

ಬಹಳ ಸಾಮಾನ್ಯವಾಗಿ, ಜನರು ಯಾವುದೋ ಶಾರೀರಿಕ ರೋಮಾಂಚನಕ್ಕಾಗಿ, ವಿದ್ಯುತ್ ಹೊಡೆತದ ಹಾಗಿನ ಅಥವಾ ಬೇರೆ ಯಾವುದೋ ಜುಮ್ಮೆನ್ನುವ ಅನುಭವವನ್ನು ಪಡೆಯುವುದಕ್ಕಾಗಿ, ಅನ್ಯಭಾಷೆಯಲ್ಲಿ ಮಾತನಾಡುವುದಕ್ಕಾಗಿ, ಅಥವಾ ತಮ್ಮ ಸ್ವಂತ ಲಾಭಕ್ಕಾಗಿ ಪವಿತ್ರಾತ್ಮನ ಬಲವನ್ನು ಹಂಬಲಿಸುತ್ತಾರೆ. ನಾವು ಪವಿತ್ರಾತ್ಮನ ವರಗಳನ್ನು ಬೇಡಿಕೊಳ್ಳುವುದು ಇತರರನ್ನು ಆಶೀರ್ವದಿಸಲಿಕ್ಕಾಗಿ ಆಗಿರಬೇಕು. ನಾನು ಪವಿತ್ರಾತ್ಮನ ವರಗಳಿಗಾಗಿ ದೇವರನ್ನು ಬೇಡಿಕೊಂಡ ಸಂದರ್ಭ ನನಗೆ ನೆನಪಿದೆ. ಅದು ಇತರ ಜನರ ಸೇವೆಗಾಗಿ ಆಗಿತ್ತು, ಮತ್ತು ದೇವರು ನನಗೆ ಅನ್ಯಭಾಷೆಯ ವರವನ್ನು ಸಹ, ನನ್ನ ತಾಜಾತನ ಅಥವಾ ಹುರುಪನ್ನು ಕಾಪಾಡಿಕೊಳ್ಳುವ ಸಲುವಾಗಿ ನೀಡಿದರು, ಏಕೆಂದರೆ ವಾಣಿಯನ್ನು ಆಡುವವನು ತನ್ನನ್ನು ದೃಢಪಡಿಸಿಕೊಳ್ಳುತ್ತಾನೆಂದು ಸತ್ಯವೇದ ಹೇಳುತ್ತದೆ. ಯಾವಾಗಲೂ ತಾಜಾತನದಿಂದ ಅಥವಾ ಹುರುಪಿನಿಂದ ಇತರರ ಸೇವೆ ಮಾಡಲಿಕ್ಕಾಗಿ ನನ್ನ ಹೃದಯ ಬಲಗೊಳ್ಳಲಿ ಎಂದು ನಾನು ಬಯಸಿದೆ. ಹಾಗಾಗಿ ಅನ್ಯಭಾಷೆಗಳ ವರವೂ ಸಹ ಇತರರ ಲಾಭಕ್ಕಾಗಿಯೇ ಕೊಡಲ್ಪಟ್ಟಿತು, ಅದು ಸೇವೆಗಾಗಿ ನನ್ನನ್ನು ಪ್ರೋತ್ಸಾಹಿಸಿ ಬಲಪಡಿಸಿತು. ನನ್ನ ವೈಯಕ್ತಿಕ ಪ್ರೋತ್ಸಾಹಕ್ಕಾಗಿ ಪವಿತ್ರಾತ್ಮನ ಯಾವುದೇ ವರವು ಕೊಡಲ್ಪಡಲಿಲ್ಲ, ಆದರೆ ವೈಯಕ್ತಿಕ ಪ್ರೋತ್ಸಾಹದ ಮೂಲಕ ಇತರರಿಗೆ ಆಶೀರ್ವಾದ ಉಂಟಾಗುವುದಕ್ಕಾಗಿ ಕೊಡಲ್ಪಟ್ಟಿತು.

"ಪವಿತ್ರಾತ್ಮನ ಎಲ್ಲಾ ವರಗಳು ಇತರರ ಲಾಭಕ್ಕಾಗಿ ಕೊಡಲ್ಪಟ್ಟಿವೆ ಎಂಬುದನ್ನು ನಾವು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಪವಿತ್ರಾತ್ಮನ ಫಲದಿಂದ ನನಗೆ ಉಪಯೋಗವಾಗುತ್ತದೆ". ನನ್ನಲ್ಲಿ ಸಂತೋಷ ಅಥವಾ ಸಮಾಧಾನವಿದ್ದರೆ (ಇವು ಫಲಗಳಾಗಿವೆ), ಅದರಿಂದ ನನಗೆ ಲಾಭವಾಗುತ್ತದೆ, ನಿನಗಲ್ಲ. ಆದರೆ, ನನ್ನಲ್ಲಿ ಪವಿತ್ರಾತ್ಮನ ವರಗಳಿದ್ದರೆ, ಅದು ಪ್ರವಾದನೆ ಇರಬಹುದು ಅಥವಾ ರೋಗಗಳನ್ನು ಗುಣಪಡಿಸುವುದು ಆಗಿರಬಹುದು ಅಥವಾ ಬೇರೆ ಯಾವುದೋ ವರವಾಗಿರಬಹುದು, ಅವೆಲ್ಲವೂ ಇತರರಿಗೆ ಪ್ರಯೋಜನವಾಗುತ್ತವೆ. ಇವೆರಡೂ ನಮಗೆ (ಫಲ ಹಾಗೂ ವರ) ಬೇಕಾಗಿವೆ. ನೀವು ಇವುಗಳಿಗಾಗಿ ದೇವರನ್ನು ಕೇಳಿಕೊಳ್ಳಬೇಕು, ಮತ್ತು ನಂಬಿಕೆಯಿಂದ ಕೇಳಬೇಕು.

"ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಒಳ್ಳೆಯದನ್ನು (ಪ್ರಾಮುಖ್ಯವಾಗಿ ಪವಿತ್ರಾತ್ಮನನ್ನು ಮತ್ತು ಆತನ ಎಲ್ಲಾ ಒಳ್ಳೆಯ ವರಗಳನ್ನು) ಕೊಡಬಲ್ಲನಲ್ಲವೇ" (ಲೂಕ. 11:13)? ನಮ್ಮ ತಂದೆಯ ಬಳಿಗೆ ಬರುತ್ತಿದ್ದೇವೆ ಎಂಬ ನಂಬಿಕೆ ನಮ್ಮಲ್ಲಿ ಇರಬೇಕು. ನಾವು ಯಾವುದೋ ಸಂಸ್ಠೆಯ ಮುಖ್ಯಾಧ್ಯಕ್ಷನ ಮುಂದೆ ಬರುತ್ತಿಲ್ಲ, ಆತನೊಂದಿಗೆ ನಮಗೆ ಹತ್ತಿರದ ಸಂಬಂಧ ಇಲ್ಲವಾದ್ದರಿಂದ, ನಾವು ಆತನ ಕಾರ್ಯದರ್ಶಿಯ ಮೂಲಕ ಆತನನ್ನು ಸಂಪರ್ಕಿಸಬೇಕಿದೆ. ನಮ್ಮ ಪರಲೋಕದ ತಂದೆಯ ಬಳಿಗೆ ನಾವು ಬರುವಾಗ, ನಮ್ಮನ್ನು ಯಾರು ತಡೆಯುತ್ತಾರೆ? ಆತನು ನಮಗೆ ಒಂದೇ ಒಂದು ಒಳ್ಳೆಯ ಸಂಗತಿಯನ್ನು ಕೊಡುವುದನ್ನು ಸಹ ಎಂದಿಗೂ ನಿರಾಕರಿಸುವುದಿಲ್ಲ. ನಮಗೆ ಯಾವುದನ್ನಾದರೂ ಕೊಡುವುದು ಸೂಕ್ತವಲ್ಲವೆಂದು ದೇವರು ನಿಶ್ಚಯಿಸಿದರೆ, ಅದು ನಮಗೆ ಒಳ್ಳೆಯದಲ್ಲವೆಂದು ನಾವು ನೂರಕ್ಕೆ ನೂರರಷ್ಟು ಖಚಿತವಾಗಿ ಹೇಳಬಹುದು.

ಒಂದು ಸಲ ಅಪೊಸ್ತಲ ಪೌಲನ ದೇಹದಲ್ಲಿ ಒಂದು ರೋಗ ಅಥವಾ ಕಾಯಿಲೆಯಿತ್ತು ಮತ್ತು ಅವನು ಅದನ್ನು "ನನ್ನ ಶರೀರದಲ್ಲಿ ನಾಟಿದ ಶೂಲ"ವೆಂದು ಕರೆದನು. ಅದು ತನ್ನನ್ನು ಬಿಟ್ಟುಹೋಗಲಿ, ಎಂದು ಆತನು ಕರ್ತನನ್ನು ಮೂರು ಸಾರಿ ಬೇಡಿಕೊಂಡನು (2 ಕೊರಿಂಥದವರಿಗೆ 12). ದೇವರು ಅದನ್ನು ನಿವಾರಿಸದೇ ಇದ್ದುದನ್ನು ನೋಡಿದಾಗ, ಅದು ತನ್ನ ಒಳ್ಳೆಯದಕ್ಕಾಗಿ ಕೊಡಲ್ಪಟ್ಟಿದೆಯೆಂದು ಆತನಿಗೆ ಅರ್ಥವಾಯಿತು, ಏಕೆಂದರೆ ಅದು ಆತನನ್ನು ದೀನತೆಯಲ್ಲಿ ಮತ್ತು ಮುರಿಯಲ್ಪಟ್ಟ ಸ್ಥಿತಿಯಲ್ಲಿ ಇರಿಸಿತು. ಯಾವಾಗಲೂ ದೇವರು ನಮಗೆ ಒಳ್ಳೆಯದನ್ನೇ ಕೊಡುತ್ತಾರೆ, ಮತ್ತು ಹೀಗೆ ದೇವರು ನಮಗೆ ಒಳ್ಳೆಯವರಾಗಿರುವಾಗ, ನಮಗೆ ಅತ್ಯಂತ ಉತ್ತವಾದುದನ್ನು ಕೊಡುವಾಗ, ನಾವು ಮಾಡಬೇಕಾದದ್ದು ಏನು? ನಾವು ಇತರ ಜನರಿಗೆ ಒಳ್ಳೆಯದನ್ನು ಮಾಡಬೇಕು.

"ಕರ್ತನೇ, ನಾನು ಸೇವೆ ಮಾಡಬೇಕಾಗಿರುವ ಈ ಜನರ ಅವಶ್ಯಕತೆಯನ್ನು ಪೂರೈಸಲು ಬೇಕಾದದ್ದನ್ನು ನೀನು ನನಗೆ ಕೊಡಬೇಕೆಂದು ನಾನು ಬಯಸುತ್ತೇನೆ." ನಿಮ್ಮ ಸಭೆಯ ಜನರಿಗಾಗಿ ನಿಮ್ಮಲ್ಲಿ ಭಾರವಿದ್ದರೆ, ಅವರನ್ನು ದೈವಿಕ ಜೀವಿತಕ್ಕೆ ನಡೆಸುವ ಇಚ್ಛೆಯಿದ್ದರೆ, ಯೇಸುವಿನ ಎಲ್ಲಾ ಆಜ್ಞೆಗಳನ್ನು ಪೂರೈಸುವುದು ಹೇಗೆಂದು ಅವರಿಗೆ ತೋರಿಸುವುದಕ್ಕಾಗಿ, ಪರ್ವತ ಪ್ರಸಂಗದಲ್ಲಿ ತೋರಿಸಲ್ಪಟ್ಟಿರುವ ಉನ್ನತ ಆತ್ಮಿಕ ಮಟ್ಟಕ್ಕೆ ಅವರನ್ನು ನಡೆಸುವುದಕ್ಕಾಗಿ, ನೀವು ಪವಿತ್ರಾತ್ಮನ ಬಲಕ್ಕಾಗಿ ಬೇಡಿಕೊಳ್ಳಬೇಕು, ಈ ಜನರ ಅವಶ್ಯಕತೆಯನ್ನು ಪೂರೈಸಲು ಮತ್ತು ಅವರನ್ನು ಸೈತಾನನ ಬಿಗಿಹಿಡಿತದಿಂದ ಮುಕ್ತಗೊಳಿಸಿ ದೈವಿಕ ಜೀವನಕ್ಕೆ ನಡೆಸಲು ಬೇಕಾದ ಪರಲೋಕದ ಪ್ರವಾದನಾ ವಾಕ್ಯವನ್ನು ನೀವು ಬೇಡಿಕೊಳ್ಳಬೇಕು. ಅವರಿಗಾಗಿ ಆಳವಾದ ಪ್ರೀತಿ ನಿಮ್ಮಲ್ಲಿದ್ದರೆ, ನೀವು ಈ ಗುರಿಯನ್ನು ನಿರಂತರವಾಗಿ ನಿಮ್ಮ ಮುಂದೆ ಇರಿಸಿಕೊಳ್ಳುತ್ತೀರಿ.

ಮೇಲೆ ಉಲ್ಲೇಖಿಸಿದ ಸಾಮ್ಯದಲ್ಲಿ, ನೆರೆಯವನ ಮನೆಗೆ ಮಧ್ಯರಾತ್ರಿಯ ವೇಳೆಯಲ್ಲಿ ಹೋದ ಆ ವ್ಯಕ್ತಿಯು ತನ್ನ ಮನೆಗೆ ಬಂದಿದ್ದ ಸ್ನೇಹಿತನನ್ನು ಪ್ರೀತಿಸುತ್ತಿದ್ದನೆಂದು ನೀವು ನಂಬುತ್ತೀರಾ? ಅವನು ಆತನನ್ನು ಎಷ್ಟು ಪ್ರೀತಿಸಿರಬೇಕು ಎಂದರೆ, ಆ ರಾತ್ರಿಯ ವೇಳೆಯಲ್ಲಿ ಹೇಗಾದರೂ ಅವನಿಗೆ ಊಟ ಕೊಡಬೇಕೆಂದು ಅವನು ದೃಢವಾಗಿ ಮನಸ್ಸು ಮಾಡಿದ್ದನು. ನಮ್ಮಲ್ಲಿ ಹೆಚ್ಚಿನವರು ರಾತ್ರಿಯ ವೇಳೆ ಒಬ್ಬ ಅತಿಥಿ ನಮ್ಮ ಮನೆಗೆ ಬಂದಾಗ ಮನೆಯಲ್ಲಿ ಆಹಾರ ಇಲ್ಲವಾದರೆ, ಅವನಿಗೆ, "ಕ್ಷಮಿಸು ಗೆಳೆಯ, ನಮ್ಮ ಮನೆಯಲ್ಲಿ ಆಹಾರ ಖಾಲಿಯಾಗಿದೆ, ಈಗ ನಾವೆಲ್ಲರೂ ಮಲಗಿಕೊಳ್ಳೋಣ, ಬೆಳಗ್ಗೆ ನಾನು ನಿನಗೆ ಏನಾದರೂ ವ್ಯವಸ್ಥೆ ಮಾಡುತ್ತೇನೆ," ಎಂದು ಹೇಳಬಹುದು. ಆದರೆ ಈ ಮನುಷ್ಯ ತನ್ನ ಹಸಿದಿದ್ದ ಅತಿಥಿಯನ್ನು ಎಷ್ಟು ಹೆಚ್ಚಾಗಿ ಪ್ರೀತಿಸಿದನೆಂದರೆ, "ಈ ರಾತ್ರಿ ನಾನು ನಿನಗೆ ಏನನ್ನಾದರೂ ತಿನ್ನಲು ಕೊಡುತ್ತೇನೆ, ಇದಕ್ಕಾಗಿ ನಾನು ನನ್ನ ನೆರೆಯವನ ಮುಂದೆ ಸಂಕೋಚವಿಲ್ಲದೆ ಹೋಗಬೇಕಾದರೂ ಪರವಾಗಿಲ್ಲ," ಎಂದು ಹೇಳಿದನು. ದೇವರ ಬಳಿಗೆ ನಿರಂತರವಾಗಿ ಹೋಗಿ, "ಕರ್ತನೇ, ಈ ಜನರ ಸೇವೆಗಾಗಿ ನನಗೆ ಪವಿತ್ರಾತ್ಮನ ವರಗಳನ್ನು ಕೊಡು," ಎಂದು ಬೇಡಿಕೊಳ್ಳುವುದರ ಒಂದು ಅಂದವಾದ ಚಿತ್ರಣ ಇದಾಗಿದೆ.