"ಮಕ್ಕಳಿರಾ, ನನ್ನ ಕಡೆಗೆ ಕಿವಿಗೊಡಿ, ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೇ ಸರಿ. ಉಪದೇಶವನ್ನು ಕೇಳಿರಿ, ಅದನ್ನು ಕಡೆಗಣಿಸದೆ ಜ್ಞಾನವಂತರಾಗಿರಿ. ಪ್ರತಿದಿನವೂ ನನ್ನ ದ್ವಾರಗಳ ಬಳಿಯಲ್ಲಿ ಕಾಯುತ್ತಾ ಬಾಗಿಲಿನ ನಿಲವುಗಳ ಹತ್ತಿರ ಜಾಗರೂಕನಾಗಿ ಕಿವಿಗೊಡುವವನು (ನಾನು ಹೇಳುವುದನ್ನು ಧ್ಯಾನವಿಟ್ಟು ಕೇಳಿಸಿಕೊಳ್ಳುವವನು) ಭಾಗ್ಯವಂತನು (ಸಂತೋಷಭರಿತನು) ..."
(ಜ್ಞಾನೋಕ್ತಿ. 8:32-34).
ದೇವರ ವಾಕ್ಯದಲ್ಲಿ "ಭಾಗ್ಯ" ಎಂಬ ಪದದ ಬಳಕೆ, ಯಾವಾಗಲೂ "ಸಂತೋಷ" ಎಂಬ ಅರ್ಥದಿಂದ ಮಾಡಲಾಗುತ್ತದೆ. ಜ್ಞಾನದ ಮಾರ್ಗದಲ್ಲಿ ಕೆಲವು ನಿಯಮಗಳಿವೆ ಮತ್ತು ನೀವು ಆ ನಿಯಮಗಳನ್ನು ಪಾಲಿಸಿದರೆ ಹೆಚ್ಚಿನ ಸಂತೋಷವನ್ನು ಹೊಂದುತ್ತೀರಿ. ಮೇಲಿನ ವಾಕ್ಯದಲ್ಲಿ "ಪ್ರತಿದಿನವೂ ಕಾದುನಿಲ್ಲಬೇಕು" ಎಂದು ಏಕೆ ಹೇಳಲಾಗಿದೆ? ಇದಕ್ಕೆ ಕಾರಣವೇನೆಂದರೆ, ನಾನು ದೇವರ ಸಕಲ ಜ್ಞಾನವನ್ನು ಒಂದೇ ಕಂತಿನಲ್ಲಿ ಪಡೆಯಲು ಸಾಧ್ಯವಿಲ್ಲ. ಯೇಸುವು ಮತ್ತಾ. 6:34ರಲ್ಲಿ, "ಒಂದು ದಿನಕ್ಕೆ ಆ ಒಂದು ದಿನದ ಕಾಟ ಸಾಕು" ಎಂದು ಹೇಳಿದರು. ನಾವು ಪ್ರತಿದಿನವೂ ಭೇಟಿಯಾಗುವ ಜನರಿಂದ, ನಮ್ಮ ಸುತ್ತಮುತ್ತಲಿನಿಂದ, ಸೈತಾನನಿಂದ, ಮತ್ತು ನಮ್ಮ ಶರೀರಭಾವದ ದುರಾಸೆಗಳ ಮೂಲಕ ಕಾಟ ಅಥವಾ ಕಿರುಕುಳಗಳ ಒಂದು ಕಂತನ್ನು ಪಡೆಯುತ್ತೇವೆ. ಈ ಪರಿಸ್ಥಿತಿಯಲ್ಲಿ ನಾನು ಜ್ಞಾನವನ್ನು ಹೊಂದಬೇಕಾದರೆ, ನಾನು ಪ್ರತಿದಿನವೂ ಶಿಲುಬೆಯನ್ನು ಹೊರಬೇಕು. "ಅವನು ಪ್ರತಿದಿನವೂ ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಳ್ಳಲಿ," ಎಂದು ಯೇಸುವು ಹೇಳಿದರು; ಈ ರೀತಿಯಾಗಿ ನನ್ನ ಪ್ರತಿದಿನದ ಕಾಟದ ಕಂತು (ಮಿಕ್ಕ ಮಾನವ ಜನಾಂಗವನ್ನು ಅಶುದ್ಧಗೊಳಿಸಿ ಕೆಡಿಸುವಂತೆ ಅದು ನನ್ನನ್ನು ಕೆಡಿಸುವುದಕ್ಕೆ ಬದಲಾಗಿ) ಜ್ಞಾನವಾಗಿ ಬದಲಾಗುತ್ತದೆ.
ಕೆಂಡದಿಂದ (ಇದ್ದಲಿನಿಂದ) ಅಮೂಲ್ಯವಾದ ವಜ್ರಗಳು ಉತ್ಪತ್ತಿಯಾಗುತ್ತವೆಂದು ನಿಮಗೆ ತಿಳಿದಿದೆಯೇ? ಇದ್ದಲಿನಲ್ಲಿ ಮತ್ತು ವಜ್ರದಲ್ಲಿ ಇರುವಂತ ಪದಾರ್ಥ ನಿಖರವಾಗಿ ಒಂದೇ ಆಗಿದೆ. ಅನೇಕ ಶತಮಾನಗಳ ಸಮಯ ಅಪಾರ ಒತ್ತಡಕ್ಕೆ ಒಳಪಟ್ಟ ಕಾರ್ಬನ್ ಅಥವಾ ಇಂಗಾಲ ಅದಾಗಿದೆ. ಇದ್ದಲು (ಕೆಂಡ) ಹಾಗೂ ವಜ್ರವು ಒಂದೇ ಪದಾರ್ಥದಿಂದ ಮಾಡಲ್ಪಟ್ಟಿವೆ. ಕಪ್ಪಾದ, ಒರಟಾಗಿ ಕಾಣಿಸುವಂತ ಇದ್ದಲನ್ನು ಅಮೂಲ್ಯವಾದ ಮತ್ತು ಬಹಳ ಬೆಲೆಬಾಳುವ ವಸ್ತುವಾಗಿ ಹೇಗೆ ಪರಿವರ್ತಿಸಬಹುದು? ಒಂದು ಸಾಮ್ಯದಂತೆ ಇದನ್ನು ವಿವರಿಸುವುದಾದರೆ, ನಾನು ಪ್ರತಿದಿನವೂ ಶಿಲುಬೆಯನ್ನು ಹೊರಲು ಸಿದ್ಧನಿದ್ದರೆ, ಆಗ ನಾನು ಪ್ರತಿದಿನ ಎದುರಿಸುವ ಕೆಟ್ಟ ಅನುಭವಗಳನ್ನು ದೇವರ ಜ್ಞಾನ ಮತ್ತು ಮಹಿಮೆಗೆ ಪರಿವರ್ತಿಸಲು ಸಾಧ್ಯವಿದೆ. ಜ್ಞಾನದ ಪ್ರವೇಶದ್ವಾರದ ಬಳಿ ದೇವರ ಮಾತಿಗಾಗಿ ಕಾಯುತ್ತಾ ನಿಲ್ಲುವ ವ್ಯಕ್ತಿಯು ಸಂತೋಷವನ್ನು ಹೊಂದುವನು, ಏಕೆಂದರೆ ನೀನು ಒಂದೇ ಕಂತಿನಲ್ಲಿ ಸಕಲ ಜ್ಞಾನವನ್ನು ಪಡೆಯಲಾರೆ. ಎಫೆಸ. 5:15-16ರಲ್ಲಿ ಜ್ಞಾನದ (ವಿವೇಕದ) ಕುರಿತಾಗಿ ಹೀಗೆ ಹೇಳಲಾಗಿದೆ: "ಆದಕಾರಣ, ನೀನು ನಡೆಯುವ ರೀತಿಯನ್ನು ನೋಡಿಕೋ, ಜ್ಞಾನವಿಲ್ಲದವನು ಆಗಿರದೆ ಜ್ಞಾನಿಯಂತೆ ನಡೆ; ಪ್ರತಿಯೊಂದು ದಿನವೂ ಕೆಟ್ಟದ್ದಾಗಿರುವಾಗ, ಮೂರ್ಖರಂತೆ ಕಾಲವನ್ನು ಸುಮ್ಮನೆ ಕಳೆಯದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೋ." ಇಲ್ಲಿ ಹೇಳಿರುವುದು ಏನೆಂದರೆ - ಪ್ರತಿ ದಿನವೂ ಕೆಟ್ಟದ್ದಾಗಿದೆ. ಹಾಗಾಗಿ, ಪ್ರತಿದಿನ ನಿನ್ನನ್ನು ಎದುರಿಸುವ ಕೆಟ್ಟತನದ ಕಂತನ್ನು ಪೂರ್ತಿಯಾಗಿ ಉಪಯೋಗಿಸಿಕೋ. ಸಾಯುವ ಒಂದು ಅವಕಾಶವನ್ನೂ ಕಳಕೊಳ್ಳಬೇಡ. ಒಂದು ಚಿಕ್ಕ ಅವಕಾಶವನ್ನು ಬಿಟ್ಟುಕೊಟ್ಟರೆ, ನೀನು ದೇವರ ಮಹಿಮೆಯ ಒಂದು ಅಂಶವನ್ನು ಬಿಟ್ಟುಕೊಟ್ಟಂತಾಗುತ್ತದೆ. ನಿನಗೆ ಬರುವ ಕಂತನ್ನು ದೇವರು ಸಂಕಲ್ಪಿಸಿದ್ದಾರೆ, ಆದ್ದರಿಂದ ಅದನ್ನು ಸ್ವೀಕರಿಸು. ಅವರು ಅದನ್ನು ಹಠಾತ್ತಾಗಿ ನಿರ್ಣಯಿಸಲಿಲ್ಲ. ಈ ದಿನ ನಿನ್ನನ್ನು ಎದುರಿಸಿದ ಕೆಟ್ಟತನ ನಿನ್ನನ್ನು ಆಶ್ಚರ್ಯಪಡಿಸಿದರೂ, ಅದು ದೇವರನ್ನು ಆಶ್ಚರ್ಯಪಡಿಸಲಿಲ್ಲ. ನಾವು ಜ್ಞಾನವನ್ನು ಪಡೆಯಬೇಕೆಂಬ ಉದ್ದೇಶದಿಂದ, ನಮ್ಮನ್ನು ಎದುರಿಸಿದ ಆ ಕೆಟ್ಟತನದ ಕಂತು ನಾವು ಜನಿಸುವುದಕ್ಕೆ ಮೊದಲೇ ನೇಮಿಸಲ್ಪಟ್ಟಿತ್ತು.
ಹೇಗೆ ಜ್ಞಾನವನ್ನು ಪಡೆಯಬೇಕೆಂದು ಕೆಲವೇ ಮಂದಿ ಅರಿತಿರುವುದಕ್ಕೆ ಕಾರಣವೇನೆಂದರೆ, ಅವರು ಶಿಲುಬೆಯ ಮಾರ್ಗವನ್ನು ಅರ್ಥಮಾಡಿಕೊಂಡಿಲ್ಲ. "ಯಾರು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಾನೋ, ಪ್ರತಿದಿನವೂ ನನ್ನ ದ್ವಾರದ ಬಳಿ ಕಾದಿರುತ್ತಾನೋ, ಮತ್ತು ನನ್ನನ್ನು ಅಪೇಕ್ಷಿಸುತ್ತಾನೋ ಅವನು ಸಂತೋಷಿಸುತ್ತಾನೆ." ಇದು ಒಬ್ಬ ತರಬೇತಿ ಪಡೆಯುತ್ತಿರುವ ನೌಕರನು ತನ್ನ ಸಂಸ್ಥೆಯ ಪ್ರಮುಖ ಆಡಳಿತಾಧಿಕಾರಿಯ ಬಾಗಿಲಿನ ಬಳಿ ಆತನ ಮಾತನ್ನು ಕೇಳಿಸಿಕೊಳ್ಳಲು ನಿಂತಿರುವ ಹಾಗಿದೆ. ಪ್ರತಿದಿನವೂ ಜ್ಞಾನಕ್ಕಾಗಿ ಇದೇ ರೀತಿ ಕಾದಿರು. ದಿನವಿಡೀ ಈ ಮನೋಭಾವ ನಮ್ಮಲ್ಲಿರಬೇಕು: "ಕರ್ತನೇ, ನನಗೆ ಈ ದಿನ ಜ್ಞಾನವನ್ನು ಕೊಡು. ಅಷ್ಟೇ ಸಾಕು. ನಾನು ಕಷ್ಟಗಳನ್ನು ತೆಗೆದುಹಾಕಲು ನಿನ್ನನ್ನು ಕೇಳುವುದಿಲ್ಲ. ನನ್ನ ಜೀವನದ ಮಾರ್ಗವನ್ನು ಸುಲಭಗೊಳಿಸಬೇಕೆಂದು ನಿನ್ನನ್ನು ಕೇಳುವುದಿಲ್ಲ. ಕರ್ತನೇ, ನನಗೆ ಜ್ಞಾನವನ್ನು ಕೊಡು. ನೀನು ಈ ದಿನ ನನಗಾಗಿ ಸಂಕಲ್ಪಿಸಿರುವ ಯೋಜನೆಯನ್ನು ಪೂರ್ಣಗೊಳಿಸಲು ನನಗೆ ಸಹಾಯಮಾಡು."
ದೇವರು ನಿನ್ನನ್ನು ಆಶೀರ್ವದಿಸಿದ್ದಾರೆಂದು ನೀನು ತಿಳಕೊಳ್ಳುವುದು ಹೇಗೆ? ಜ್ಞಾನೋಕ್ತಿ. 8:35ರ ಪ್ರಕಾರ, ನೀನು ಗಳಿಸಿರುವ ದೇವರ ಜ್ಞಾನವು ಅದರ ಸೂಚಕವಾಗಿದೆ. ನಿನಗೆ ಕೆಲಸದಲ್ಲಿ ಭಡ್ತಿ ಅಥವಾ ಇನ್ನೂ ಉತ್ತಮ ನೌಕರಿ ಅಥವಾ ಈ ಲೋಕದ ಯಾವುದೇ ಸಂಗತಿ ಪ್ರಾಪ್ತವಾದ್ದರಿಂದ ಅಲ್ಲ. ನೀನು ಜ್ಞಾನವನ್ನು ಗಳಿಸಿದ್ದು ಇದರ ಸೂಚನೆಯಾಗಿದೆ. ಆಗ ನೀನು ಕರ್ತನ ಅನುಗ್ರಹವನ್ನು, ಮೆಚ್ಚುಗೆಯನ್ನು ಪಡೆದಿದ್ದೀ. ನೀನು ದೇವರ ಜ್ಞಾನದ ಲಕ್ಷಣಗಳಾದ ತಾಳ್ಮೆ, ಪರಿಶುದ್ಧತೆ, ಸಮಾಧಾನ ಮತ್ತು ಸಂತೋಷವಾಗಿ ಹೊಂದಿಕೊಳ್ಳುವ ಗುಣವನ್ನು ಪಡೆಯುವುದು ಇದರ ಸೂಚನೆಯಾಗಿದೆ (ಯಾಕೋ. 3:17).
ಜ್ಞಾನೋಕ್ತಿ. 8:36ರ ಟಿಪ್ಪಣಿಯಲ್ಲಿ ಹೇಳಿರುವಂತೆ, "ಯಾರು ನನ್ನನ್ನು ಪಡೆಯುವುದಿಲ್ಲವೋ, ಅವನು ತನ್ನ ಆತ್ಮಕ್ಕೇ ಕೇಡು ಮಾಡುತ್ತಾನೆ." ಇದರ ಅರ್ಥವೇನೆಂದರೆ, ನೀವು ನಿಮ್ಮ ಜೀವನದಲ್ಲಿ ಜ್ಞಾನವನ್ನು ಸಂಪಾದಿಸದಿದ್ದರೆ, ಆಗ ನೀವು ಏನನ್ನು ಹೊಂದಿದ್ದರೂ - ಸತ್ಯವೇದದ ತಿಳುವಳಿಕೆಯೇ ಆಗಿರಬಹುದು - ಯಥಾರ್ಥವಾಗಿ ನಾವು ನಮ್ಮ ಜೀವನವನ್ನು ವ್ಯರ್ಥಗೊಳಿಸಿದ್ದೇವೆ. ನಾವು ದೊಡ್ಡ ಹುದ್ದೆಯನ್ನು ಪಡೆದಿರಬಹುದು ಅಥವಾ ಒಂದು ಕ್ರೈಸ್ತಸಭೆಯ ಗೌರವಾನ್ವಿತ ಸದಸ್ಯರು ಆಗಿರಬಹುದು, ಆದರೆ ನಾವು ನಮ್ಮ ಭೂಲೋಕ ಜೀವಿತದ ಅವಧಿಯಲ್ಲಿ ದೇವರ ಜ್ಞಾನದಲ್ಲಿ ಪಾಲ್ಗೊಳ್ಳದಿದ್ದರೆ, ನಾವು ಜೀವನದ ಪ್ರಮುಖ ಸಂಗತಿಯನ್ನು ಕಳಕೊಂಡಿದ್ದೇವೆ. ದೇವರು ನನಗಾಗಿ ನಿಯಮಿಸಿರುವ ಒಂದು ದಿನದ ಜ್ಞಾನದ ಅಂಶವನ್ನು ನಾನು ಪಡಕೊಳ್ಳದಿದ್ದರೆ, ನಾನು ಅದನ್ನು ನಿತ್ಯತ್ವಕ್ಕೂ ಕಳಕೊಂಡಂತೆ. ನಾನು ಅದನ್ನು ತಿರುಗಿ ಪಡೆಯಲಾರೆ. ನಿನ್ನೆಯ ದಿನ ನಾನು ಗಳಿಸಬೇಕೆಂದು ದೇವರು ಬಯಸಿದ್ದ ಜ್ಞಾನವನ್ನು, ನಾನು ಮತ್ತೆ ಪಡೆಯಲಾರೆ. ಅದು ಕಳೆದುಹೋಯಿತು. ದೇವರು ಪ್ರತಿದಿನಕ್ಕಾಗಿ ಜ್ಞಾನದ ಒಂದು ನಿರ್ದಿಷ್ಟ ಅಂಶವನ್ನು ನಿಯಮಿಸಿದ್ದಾರೆ, ಮತ್ತು ನಾನು ಅದನ್ನು ಪಡೆದುಕೊಳ್ಳದಿದ್ದರೆ, ನಾನು ಅದನ್ನು ಕಳೆದುಕೊಂಡಿದ್ದೇನೆ. ನಾನು ನಿತ್ಯತ್ವದ ಉದ್ದಕ್ಕೂ ಅದನ್ನು ಕಳೆದುಕೊಂಡಿದ್ದೇನೆ. ನಾನು ಈ ದಿನದ ಮತ್ತು ನಾಳೆಯ ದಿನದ ಜ್ಞಾನವನ್ನು ಪಡೆಯಬಹುದು, ಆದರೆ ನಿನ್ನೆಯ ಅಂಶವನ್ನು ಪಡೆಯಲಾರೆ. ಸ್ವತಃ ದೇವರೇ ಅದನ್ನು ನನಗೆ ತಿರುಗಿ ಕೊಡಲು ಆಗುವುದಿಲ್ಲ. ಇದೇ ಕಾರಣಕ್ಕಾಗಿ, ಪ್ರತಿಯೊಂದು ದಿನವೂ ಕೆಟ್ಟದ್ದಾಗಿರುವಾಗ, ಸಮಯ ಬೆಲೆಯುಳ್ಳದ್ದೆಂದು ನಾವು ಉಪಯೋಗಿಸಿಕೊಳ್ಳಬೇಕೆಂದು ದೇವರ ವಾಕ್ಯ ಹೇಳುತ್ತದೆ. ಒಂದೊಂದು ದಿನವೂ ಆ ಕೆಟ್ಟದ್ದನ್ನು ಜ್ಞಾನವಾಗಿ ಪರಿವರ್ತಿಸುವುದನ್ನು ಕಲಿಯಲು ನಾನು ಬಯಸುತ್ತೇನೆ.