ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

1 ಪೇತ್ರದಲ್ಲಿ ಅಪೊಸ್ತಲನಾದ ಪೇತ್ರನು ಹೀಗೆ ಹೇಳುತ್ತಾನೆ. ನಾವು ಈ ಲೋಕದಲ್ಲಿ ಎದುರಿಸುವ ಎಲ್ಲಾ ಸಂಕಟಗಳು "ಸ್ವಲ್ಪ ಕಾಲದ್ದಾಗಿವೆ" (1 ಪೇತ್ರ 1:6). ನಾವು ನಿತ್ಯಜೀವದ ದೃಷ್ಟಿಕೋನದಿಂದ ನೋಡುವುದಾದರೆ, 100 ವರ್ಷಗಳು ಸಹ ಕೇವಲ ಸ್ವಲ್ಪ ಸಮಯ ಎಂದನಿಸುತ್ತದೆ. ಹಾಗಾಗಿ ನಾವು ಈ ಲೋಕದಲ್ಲಿ ಎದುರಿಸುವ ಪ್ರತಿಯೊಂದು ಸಂಕಟ, ಕಷ್ಟಗಳನ್ನು ನಿತ್ಯಜೀವದ ದೃಷ್ಟಿಕೋನದಿಂದ ನೋಡುವವರಾಗಬೇಕು. ಎಲ್ಲಾ ಅಪೊಸ್ತಲರು ಈ ರೀತಿಯ ದೃಷ್ಟಿಕೋನವನ್ನು ಹೊಂದಿದ್ದರು. ಯಾಕೋಬನು ನಮ್ಮ ಜೀವಿತವನ್ನು ಹಬೆ (ಆವಿ) ಎಂದು ಉಲ್ಲೇಖಿಸಿದ್ದಾನೆ (ಯಾಕೋಬ 3:14). ಪೌಲನು ಕ್ಷಣಮಾತ್ರವಿರುವ ನಮ್ಮ "ಹಗುರವಾದ ಸಂಕಟ" (2ಕೊರಿಂಥ 4:17) ಎಂಬುದಾಗಿ ಹೇಳಿದ್ದಾನೆ. ಈ 1 ಪೇತ್ರ ಪತ್ರದ ವಿಷಯವು ದೇವರ ನಿಜವಾದ ಕೃಪೆ ಎಂಬುದನ್ನು ನೆನಪಿಟ್ಟುಕೊಳ್ಳಿರಿ. ಹಾಗಾಗಿ ನಾವಿಲ್ಲಿ ಅರ್ಥಮಾಡಿಕೊಳ್ಳುವ ಸಂಗತಿಗಳಲ್ಲಿ ಮೊದಲನೆಯದೇನೆಂದರೆ, ಯಾರು ದೇವರ ನಿಜವಾದ ಕೃಪೆಯನ್ನು ಸ್ವೀಕರಿಸಿದ್ದಾರೋ, ಅಂಥವರು ಅನೇಕ ಸಂಕಟಗಳಿಂದ ದುಖಿ:ತರಾಗುವುದು ಸಾಮಾನ್ಯವಾದುದು ಎಂಬುದಾಗಿ.

ಈ ಎಲ್ಲಾ ಸಂಕಟಗಳ ಉದ್ದೇಶವೇನೆಂದರೆ, "ಬಂಗಾರವು ಬೆಂಕಿಯಲ್ಲಿ ಪರೀಕ್ಷಿಸಲ್ಪಟ್ಟ ಹಾಗೆ" ನಿಮ್ಮ ನಂಬಿಕೆಯು ನಿಜವಾದುದೋ (ಅಪ್ಪಟವಾದುದೋ) ಎಂದು ಪರೀಕ್ಷಿಸಲ್ಪಡುವುದು. ಬಂಗಾರವನ್ನು ಭೂಮಿಯೊಳಗಿಂದ ಅಗೆದು ತೆಗೆದಾಗ ಅದು ಶುದ್ಧವಾಗಿರುವುದಿಲ್ಲ. ಅದನ್ನು ಶುದ್ಧೀಕರಿಸುವ ಒಂದು ಮಾರ್ಗವೆಂದರೆ, ಅದನ್ನು ಬೆಂಕಿಗೆ ಹಾಕುವುದು. ನೀವು ಬಂಗಾರವನ್ನು ಸೋಪು ಮತ್ತು ನೀರಿನಿಂದ ಉಜ್ಜಿ ಶುದ್ಧೀಕರಿಸಲಾಗದು. ಹೀಗೆ ಮಾಡಿದರೆ, ಕೇವಲ ಕೊಳೆಯನ್ನು ಮಾತ್ರ ತೆಗೆಯಬಹುದು. ಆದರೆ ಈ ಬಂಗಾರದಲ್ಲಿ ಸೇರಿರುವಂತಹ ಲೋಹವನ್ನು ತೆಗೆಯಬೇಕಾದರೆ, ನೀವು ಅದನ್ನು ಬೆಂಕಿಗೆ ಹಾಕಲೇಬೇಕು. ಆಗ ಅದರಲ್ಲಿ ಸೇರಿಕೊಂಡಿರುವ ಇತರ ಲೋಹಗಳು ಕರಗಿ, ಶುದ್ಧ ಬಂಗಾರ ಹೊರ ಬರುತ್ತದೆ. ನೀವು ಎದುರಿಸುವ ಸಂಕಟಗಳು ಬೆಂಕಿಯಾಗಿದೆ. ಇದು ನಿಮಗೆ ನೋವು ಕೊಡುತ್ತದೆ ಮತ್ತು ನೀವು ಬೆಂಕಿಯಲ್ಲಿ ಇದ್ದ ಹಾಗೆ ನಿಮಗೆ ಅನಿಸುತ್ತದೆ. ಈ ಸಂಕಟಗಳ ಮುಖ್ಯ ಉದ್ದೇಶವೇನೆಂದರೆ, ನಿಮ್ಮ ಜೀವಿತದ ಕೆಲವು ಅಶುದ್ಧವಾದ ಸಂಗತಿಗಳು ಹೊರಹಾಕಲ್ಪಡುವುದಾಗಿದೆ. ಉದಾಹರಣೆಗೆ, ಕೆಲವು ದೇಶಗಳಲ್ಲಿ, ಕ್ರೈಸ್ತರು ಹಿಂಸೆಗೊಳಗಾಗುತ್ತಿದ್ದಾರೆ ಮತ್ತು ಅವರ ಆಸ್ತಿಗಳನ್ನು ಕೊಳ್ಳೆ ಹೊಡೆಯಲಾಗುತ್ತದೆ. ಇದರ ಫಲಿತಾಂಶವೇನು? ಅವರು ಯಾತ್ರಾರ್ಥಿಗಳಾಗುತ್ತಾರೆ ಮತ್ತು ಅವರು ತಮ್ಮ ಆಸ್ತಿ-ಪಾಸ್ತಿಗೆ ಅಂಟಿಕೊಂಡಿರುವುದಿಲ್ಲ. ಏಕೆಂದರೆ ಅವರಿಗೆ ಈ ಸಂಕಟದ ಸಮಯದಲ್ಲಿ ಏನೂ ಇರುವುದಿಲ್ಲ. ಆದರೆ, ಎಲ್ಲಿ ಹಿಂಸೆ ಇರುವುದಿಲ್ಲವೋ, ಅಲ್ಲಿ ಕೆಲವು ಉತ್ತಮ ವಿಶ್ವಾಸಿಗಳು ಸಹ ತಮ್ಮ ಆಸ್ತಿ-ಪಾಸ್ತಿಗೆ ಮತ್ತು ವಸ್ತುಗಳಿಗೆ ಅತಿಯಾಗಿ ಅಂಟಿಕೊಂಡಿರುತ್ತಾರೆ. ನಾವು ಅವುಗಳಿಗೆ ಅಂಟಿಕೊಂಡಿಲ್ಲ ಎಂಬುದಾಗಿ ಕಲ್ಪಿಸಿಕೊಳ್ಳಬಹುದು, ಆದರೆ ಹಾಗೆಂದುಕೊಂಡರೆ ನಮಗೆ ನಾವೇ ಮೋಸ ಮಾಡುತ್ತೇವೆ. ಹಾಗಾಗಿ, ದೇವರು ನಾವಿರುವಂತಹ ಪ್ರದೇಶದಲ್ಲಿ ಹಿಂಸೆಯು ಬರುವಂತೆ ಅನುಮತಿಸುತ್ತಾರೆ ಮತ್ತು ಆಗ ಮಾತ್ರ ನಾವು ಶುದ್ಧರಾಗುತ್ತೇವೆ.

ಕಮ್ಯುನಿಸ್ಟರು ರಷ್ಯಾ ದೇಶವನ್ನು ಆಳುವಾಗ, ಅಲ್ಲಿನ ಕ್ರೈಸ್ತರಿಗೆ ಕಾಲೇಜು ವಿದ್ಯಾಭ್ಯಾಸ ಮತ್ತು ಒಳ್ಳೆಯ ಕೆಲಸ ಸಿಗುತ್ತಿರಲಿಲ್ಲ ಎಂಬುದಾಗಿ ನಾನು ಕೇಳಿದ್ದೇನೆ. ಬೀದಿಯ ಕಸಗುಡಿಸುವಂತಹ ಕೆಳಮಟ್ಟದ ಕೆಲಸ ಮಾತ್ರ ಅವರಿಗೆ ಸಿಗುತ್ತಿತ್ತು. ಇಂತಹ ಪರಿಸ್ಥಿತಿಗಳಲ್ಲಿ, ನಾವು ಸುಲಭವಾಗಿ ಗೌರವ ಮತ್ತು ನಮ್ಮ ದೊಡ್ಡ ಕೆಲಸದಿಂದ ನಮಗೆ ಬರುವ ನಾನು ದೊಡ್ಡವನು ಎಂಬ ಭಾವನೆಗೆ ನಾವು ಅಂಟಿಕೊಳ್ಳದವರಾಗಿರುತ್ತೇವೆ. ಬಂಗಾರದಿಂದ ಎಲ್ಲಾ ಕಲ್ಮಷಗಳು ಸುಡಲ್ಪಟ್ಟ ಹಾಗೇ, ನಾವೂ ನಿಜವಾಗಿ ಶುದ್ಧರಾಗುತ್ತೇವೆ. ಇದಕ್ಕಾಗಿ ಇಂದು ಹಿಂಸೆಯಿರುವ ಕೆಲವು ಸ್ಥಳಗಳಲ್ಲಿ, ಜಗತ್ತಿನ ಕೆಲವು ಅತ್ಯುತ್ತಮವಾದ ಕ್ರೈಸ್ತರಿದ್ದಾರೆ. ಅದಕ್ಕಾಗಿಯೇ ನಾನು ಕ್ರೈಸ್ತರಿಗೆ ಹಿಂಸೆ ಬರಬಾರದು ಎಂಬುದಾಗಿ ಪ್ರಾರ್ಥನೆ ಮಾಡುವುದಿಲ್ಲ. ಏಕೆಂದರೆ ಈ ರೀತಿಯಾಗಿ ನಾನು ಪ್ರಾರ್ಥಿಸಿದರೆ, ಸಭೆಯ ಶುದ್ಧೀಕರಣದ ವಿರುದ್ಧವಾಗಿ ನಾನು ಪ್ರಾರ್ಥನೆ ಮಾಡಿದಂತಾಗುತ್ತದೆ. ನಾನು ಹಿಂಸೆ ಬರಲಿ ಅಥವಾ ಅದು ಬರದಿರಲಿ ಎಂಬುದಾಗಿ ಪ್ರಾರ್ಥಿಸುವುದಿಲ್ಲ. ಯಾವ ಸಮಯದಲ್ಲಿ ಸಭೆಗೆ ಏನು ಉತ್ತಮ ಎಂಬುದಾಗಿ ದೇವರಿಗೆ ತಿಳಿದಿದೆ. ಹಾಗಾಗಿ ಕರ್ತನೇ ಇದನ್ನು ನಿರ್ಧರಿಸಲಿ ಎಂದು ಆತನಿಗೆ ಬಿಟ್ಟಿದ್ದೇನೆ. ಏನಿದ್ದರೂ ಅದು ನನಗೆ ಒಳ್ಳೆಯದು. ನಾವು ದೇವರ ನಿಜವಾದ ಕೃಪೆಯನ್ನು ಸ್ವೀಕರಿಸಿಕೊಂಡಾಗ, ನಮ್ಮ ಮನೋಭಾವವು ಇದಾಗಿರುತ್ತದೆ.

ಪೇತ್ರನು ಮುಂದೆ ಹೇಳುತ್ತಾ ಸಾಗುತ್ತಾನೆ - ಇವೆಲ್ಲೆದರ ಫಲಿತಾಂಶವೇನೆಂದರೆ, ಕ್ರಿಸ್ತನು ತಿರುಗಿ ಬರುವಾಗ ಇವೆಲ್ಲವು ಆತನಿಗೆ ಹೆಚ್ಚು ಸ್ತೋತ್ರ ಮತ್ತು ಮಹಿಮೆ ಮತ್ತು ಗೌರವಗಳನ್ನು ತರುತ್ತವೆ ಎಂಬುದಾಗಿ. ಈ ಎಲ್ಲಾ ಸಂಕಟಗಳ ಮಧ್ಯದಲ್ಲಿ, ನಾವು ಯೇಸುವನ್ನು ನೋಡಿಲ್ಲವಾದರೂ ಸಹ ಆತನನ್ನು ಪ್ರೀತಿಸುತ್ತೇವೆ. ಆತನಲ್ಲಿ ಭರವಸೆಯಿಡುತ್ತೇವೆ ಮತ್ತು ಬಹಳ ಸಂತೋಷದಿಂದ ಹರ್ಷಿಸುತ್ತೇವೆ. ಪೇತ್ರನು ಭೌತಿಕವಾಗಿ ಯೇಸುವನ್ನು ನೋಡಿದ್ದನು. ಆದರೆ ಯೇಸು ಹೀಗೆ ಹೇಳಿದ್ದಾನೆ. ನೀನು ನನ್ನನ್ನು ನೋಡಿದ್ದರಿಂದ ನಂಬಿದ್ದೀ; ನೋಡದೆ ನಂಬುವವರು ಧನ್ಯರು (ಯೋಹಾನ 20:29) ಎಂಬುದಾಗಿ. ನೀವು ಎಷ್ಟು ಜನ ಈ ವಾಕ್ಯವನ್ನು ನಂಬುತ್ತೀರೋ ನನಗೆ ಗೊತ್ತಿಲ್ಲ. ನಾವ್ಯಾರೂ ಯೇಸುವನ್ನು ಭೌತಿಕವಾಗಿ ನೋಡಿಲ್ಲವಾದ್ದರಿಂದ, ಯೇಸುವನ್ನು ಭೌತಿಕವಾಗಿ ನೋಡಿದ ಪೇತ್ರನಂತವರಿಗಿಂತ ಹೆಚ್ಚು ಧನ್ಯರು. ಯೇಸು ಹೇಳಿರುವ ಈ ವಾಕ್ಯವನ್ನು ನಾನು ಮನಪೂರ್ವಕವಾಗಿ ನಂಬುತ್ತೇನೆ. ಪೇತ್ರನು ಮುಂದೆ ಹೇಳುತ್ತಾ ಹೋಗುತ್ತಾನೆ - ನಂಬಿಗಸ್ಥರಾಗಿ ಈ ಸಂಕಟಗಳನ್ನು ಎದುರಿಸುವುದರ ಫಲಿತಾಂಶವೇನೆಂದರೆ, ಆತ್ಮ ರಕ್ಷಣೆಯನ್ನು ಹೊಂದುವರಾಗುತ್ತೇವೆ (1ಪೇತ್ರ 1:9) ಎಂಬುದಾಗಿ. ಅಪೊಸ್ತಲರು ನರಕದಿಂದ ರಕ್ಷಣೆಪಡುವುದಕ್ಕಿಂತ, ನಮ್ಮ ಆತ್ಮ ರಕ್ಷಣೆ ಬಗ್ಗೆ ಹೆಚ್ಚು ಮಾತನಾಡಿದ್ದಾರೆ.

ನಮ್ಮ ಆತ್ಮವು ಸ್ವಾರ್ಥತೆ, ಗರ್ವ ಹಾಗೂ ಇನ್ನಿತರ ಅನೇಕ ರೀತಿಯ ಕೆಟ್ಟತನವನ್ನು ಆದಾಮನಿಂದ ಪಡೆದುಕೊಂಡಿದೆ. ನಾವು ಆದಾಮನಿಂದ ಪಡೆದುಕೊಂಡ ಕೆಟ್ಟತನದಿಂದ ಅಂದರೆ ನಮ್ಮ ಭೌತಿಕ ಸಂಗತಿಗಳು, ಗೌರವದ ಮೇಲಿನ ಪ್ರೀತಿ ಮತ್ತು ನಮ್ಮ ಸ್ವ-ಕೇಂದ್ರಿಕೃತ ಜೀವಿತ ಇವುಗಳಿಂದ ನಮ್ಮ ಆತ್ಮವನ್ನು ನಾವು ರಕ್ಷಿಸಬೇಕಾಗಿದೆ. ಬೆಂಕಿಯಂತಹ ಸಂಕಟಗಳು ಮತ್ತು ಹಿಂಸೆಗಳು ನಮ್ಮನ್ನು ಈ ಕೇಡುಗಳಿಂದ ಬಿಡುಗಡೆಗೊಳಿಸುತ್ತವೆ.

ಮಾನಸಿಕವಾಗಿ ಅಸ್ವಸ್ಥವಾಗಿರುವ ಮಗುವನ್ನು ಹೊಂದಿರುವಂತಹ ಸಂಕಟದ ಬಗ್ಗೆ ಯೋಚಿಸಿ. ಕೆಲವರು ಇದೊಂದು ನತದೃಷ್ಟವೆಂಬುದಾಗಿ ಯೋಚಿಸುತ್ತಾರೆ. ಇಂತಹ ಮಕ್ಕಳನ್ನು ಪಡೆಯಲು ನಾವು ಯಾರು ಪ್ರಾರ್ಥಿಸುವುದಿಲ್ಲ. ಆದರೆ ದೇವರನ್ನು ಪ್ರೀತಿಸುವಂತಹ ಕುಟುಂಬಕ್ಕೆ ಇಂತಹ ಮಗುವನ್ನು ದೇವರು ಕೊಟ್ಟರೆ, ದೇವರು ಇದನ್ನು ಅವರ ಒಳ್ಳೆಯದಕ್ಕಾಗಿ ನಡೆಸುತ್ತಾನೆ ಎಂಬುದನ್ನು ನಾವು ನಂಬಬಹುದು. ಇಂತಹ ಮಕ್ಕಳನ್ನು ಹೊಂದಿರುವಂತಹ ಕುಟುಂಬಗಳಲ್ಲಿ ನಾನು ನೋಡಿದ್ದೇನೆಂದರೆ, ಅಲ್ಲಿನ ಮಕ್ಕಳಲ್ಲಿ ಬೇರೆ ಕುಟುಂಬಗಳಲ್ಲಿನ ಮಕ್ಕಳಿಗಿಂತ ಹೆಚ್ಚಾಗಿ ಕೋಮಲತೆ ಮತ್ತು ತ್ಯಾಗದ ಭಾವದಿಂದ ಸೇವೆ ಮಾಡುವ ಮನೋಭಾವವಿರುತ್ತದೆ. ಬುದ್ಧಿವಂತರಾಗಿರುವ ಮಕ್ಕಳ ಪೋಷಕರಿಗೆ ತಮಗೆ ಗೊತ್ತಿಲ್ಲದ ಹಾಗೆಯೇ, ಗರ್ವಭರಿತರಾಗಿರುತ್ತಾರೆ. ಗರ್ವವು ಪರಲೋಕಕ್ಕೆ ಸಂಬಂಧಿಸಿದ್ದಲ್ಲ. ಅದು ನರಕಕ್ಕೆ ಸಂಬಂಧಿಸಿದ್ದು. ಆದರೆ, ದೌರ್ಭಾಗ್ಯವೇನೆಂದರೆ, ಅನೇಕ ವಿಶ್ವಾಸಿಗಳ ಕುಟುಂಬಗಳಲ್ಲಿ ಗರ್ವ ಕಂಡುಬರುತ್ತದೆ.

ತನ್ನ ಮಕ್ಕಳು ಸಂಕಟಗಳನ್ನು ಅನುಭವಿಸುವುದನ್ನು ದೇವರು ಸಮ್ಮತಿಸುತ್ತಾರೆ. ಸಂಕಟಗಳನ್ನು ಯಾವಾಗ ಕಳುಹಿಸಬೇಕೆಂದು ತನ್ನ ಜ್ಞಾನದಲ್ಲಿ, ದೇವರಿಗೆ ಸರಿಯಾಗಿ ಗೊತ್ತು. ದೇವರು ನಮ್ಮ ಜೀವಿತದಲ್ಲಿ ಸಂಕಟಗಳನ್ನು ಕಳುಹಿಸಿ ಯಾವುದೇ ತಪ್ಪನ್ನು ಮಾಡಿಲ್ಲವೆಂಬುದನ್ನು ನಾವು ಕರ್ತನ ಮುಂದೆ ನಿಂತಾಗ ಕಂಡುಕೊಳ್ಳುವೆವು. ನಾವು ಬಂಗಾರದ ರೀತಿಯಲ್ಲಿ ಶುದ್ಧವಾಗುವುದಕ್ಕಾಗಿ ದೇವರು ಪ್ರತಿಯೊಂದು ಕಷ್ಟವನ್ನು ನಮ್ಮ ಜೀವಿತದಲ್ಲಿ ಅನುಮತಿಸಿದರು ಎಂಬುದಾಗಿ ಆ ದಿನದಲ್ಲಿ ನಾವು ತಿಳಿಯುವೆವು. ನೀವು ಇದನ್ನು ನಂಬಿದರೆ, ನೀವು ಎಲ್ಲಾ ಸಮಯದಲ್ಲಿ ದೇವರಿಗೆ ಸ್ತೋತ್ರ ಹೇಳುತ್ತೀರಿ. ನಿಮ್ಮ ಸಂಕಟಗಳ ಮಧ್ಯದಲ್ಲಿ ನೀವು ವರ್ಣಿಸಲಾಗದಂತಹ ಸಂತೋಷವನ್ನು ಹೊಂದುತ್ತೀರಿ ಮತ್ತು ಇದರ ಫಲಿತಾಂಶವಾಗಿ ನೀವು ನಿಮ್ಮ ಆತ್ಮದ ರಕ್ಷಣೆಯನ್ನು ಹೊಂದುತ್ತೀರಿ. ಪೂರ್ವಕಾಲದ ಪ್ರವಾದಿಗಳು ಇದೇ ರಕ್ಷಣೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದರು, ಆದರೆ ಅವರಿಗೆ ಅದು ಸಾಧ್ಯವಾಗಲಿಲ್ಲ. ದೇವದೂತರಿಗೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆ ಉಂಟು (1 ಪೇತ್ರ 1:12). ಆದರೆ ಈಗ ಸುವಾರ್ತೆಯನ್ನು ಸಾರುವ ಜನರನ್ನು ದೇವರು ಪರಲೋಕದಿಂದ ಕಳುಹಿಸಿದ ಪವಿತ್ರಾತ್ಮನಿಂದ ಅಭಿಷೇಕಿಸುತ್ತಾನೆ. ಹಾಗಾಗಿ, ಪೇತ್ರನು ಹೇಳುವುದೇನೆಂದರೆ, ನಾವು ಇನ್ನೂ ಇಂತಹ ಅದ್ಭುತವಾದ ಸುವಾರ್ತೆಯನ್ನು ಹೊಂದಿರುವಾಗ, ನಾವು ಅನುಭವಿಸುವ ಸಂಕಟಗಳು ಕೇವಲ ಸ್ವಲ್ಪ ಸಮಯದ್ದಾಗಿವೆ. ನಾವು ನಮ್ಮ ಬುದ್ದಿಯನ್ನು ಚುರುಕುಗೊಳಿಸಿ, ಬರುವಂತಹ ಕ್ರಿಸ್ತನನ್ನು ನೋಡುವವರಾಗಬೇಕು ಮತ್ತು ನಾವು ಎದುರಿಸುವಂತಹ ಸಂಕಟಗಳಿಂದ ವಿಚಲಿತರಾಗಬಾರದು (1ಪೇತ್ರ1:13).