ಎಫೆಸ ( 4:3)ರಲ್ಲಿ "ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದ ಉಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ." ಎಂದು ಓದುತ್ತೇವೆ. ಪೌಲನು ಬರೆದ ಅನೇಕ ಪತ್ರಿಕೆಗಳಲ್ಲಿ ಐಕ್ಯತೆಯೆಂಬುದು ಬಹು ಮುಖ್ಯವಾದ ವಿಷಯವಾಗಿದೆ. ತನ್ನ ಸಭೆಗಾಗಿ ಕರ್ತನು ಇದೇ ಭಾರವನ್ನು ಹೊಂದಿದ್ದಾನೆ. ಮನುಷ್ಯನು ಸತ್ತ ಮೇಲೆ ಆತನ ದೇಹವು ಛಿದ್ರವಾಗಲಾರಂಭಿಸುತ್ತದೆ. ನಮ್ಮ ದೇಹವು ಮಣ್ಣಿನಿಂದ ಮಾಡಲ್ಪಟ್ಟಿದ್ದಾಗಿದೆ ಮತ್ತು ಈ ಮಣ್ಣಿನ ಕಣಗಳನ್ನು ಜೀವವೇ (ಪ್ರಾಣವೇ) ಒಂದಾಗಿ ಹಿಡಿದಿಟ್ಟುಕೊಂಡಿರುತ್ತದೆ. ಜೀವ ಹೋದ ತಕ್ಷಣವೇ ದೇಹವು ಛಿದ್ರವಾಗಲಾರಂಭಿಸುತ್ತದೆ; ಸ್ವಲ್ಪ ಸಮಯದ ನಂತರ ಎಲ್ಲವೂ ಮಣ್ಣಾಗಿ ಮಾರ್ಪಡುತ್ತದೆ. ವಿಶ್ವಾಸಿಗಳ ಮಧ್ಯೆಯಿರುವ ಸಂಬಂಧವೂ (ಅನ್ಯೋನ್ಯತೆಯೂ) ಕೂಡ ಇದೇ ರೀತಿಯಾಗಿರುತ್ತದೆ.
ಸಭೆಯಲ್ಲಿ ಸಹೋದರರ ಮಧ್ಯೆ ಐಕ್ಯತೆಯಿಲ್ಲದಿರುವಾಗ ಅವರ ಮಧ್ಯೆ ಮರಣವು ಬಂದಿರುವುದರ ಬಗ್ಗೆ ನಾವು ಖಚಿತವಾಗಬಹುದು. ಗಂಡ ಮತ್ತು ಹೆಂಡತಿಯರು ಐಕ್ಯತೆಯಿಂದ ಇಲ್ಲದಿರುವಾಗ, ಅವರು ವಿಚ್ಚೇದನ ಕೊಡದಿದ್ದಾಗ್ಯೂ, ಅವರ ನಡುವೆ ಮರಣ ಪ್ರವೇಶಿಸಿರುತ್ತದೆ. ಅಪಾರ್ಥ, ಜಗಳ ಇವೇ ಮುಂತಾದವುಗಳ ಮೂಲಕ, ಮದುವೆಯಾದ ಮರು ದಿನವೇ ಅವರ ನಡುವೆ ಒಡಕು (ಬಿರುಕು) ಪ್ರಾರಂಭವಾಗಲು ಸಾಧ್ಯ.
ಇದು ಸಭೆಯಲ್ಲಿಯೂ ಆಗಲು ಸಾಧ್ಯ. ಸಾಮಾನ್ಯವಾಗಿ ಕೆಲವು ಉತ್ಸಾಹಭರಿತ (ಹುರುಪಿರುವ) ಸಹೋದರರು ದೇವರಿಗಾಗಿ ಪರಿಶುದ್ಧವಾದ ಸೇವೆಯನ್ನು ಸಲ್ಲಿಸುವ ಉದ್ಧೇಶದಿಂದ ಒಟ್ಟುಗೂಡುವುದರ ಮೂಲಕ ಒಂದು ಸಭೆ ಆರಂಭವಾಗುತ್ತದೆ. ಆದರೆ ಅತೀ ಬೇಗನೆ ಐಕ್ಯತೆಯಲ್ಲಿ ಬಿರುಕು ಬರುವದರಿಂದ ಮರಣ ಪ್ರವೇಶಿಸುತ್ತದೆ. ನಮ್ಮ ಸಭೆಯಲ್ಲಿ ಮತ್ತು ನಮ್ಮ ಮದುವೆಗಳಲ್ಲಿ ಪವಿತ್ರಾತ್ಮನ ಐಕ್ಯತೆ ಉಳಿಸಿಕೊಳ್ಳುವುದಕ್ಕೋಸ್ಕರ ನಾವು ಎಡೆಬಿಡದೆ ಹೋರಾಡಬೇಕು.
ನಮ್ಮ ದೇಹವು ಮಣ್ಣಿನ ಕಣಗಳಿಂದ ಮಾಡಲ್ಪಟ್ಟಿದ್ದು, ಅವು ಎಷ್ಟು ನಿಕಟವಾಗಿ(ಹತ್ತಿರ) ಜೋಡಿಸಲ್ಪಟ್ಟಿವೆಯೆಂದರೆ ಅವು ಎಲ್ಲಿ ಜೋಡಿಸಲ್ಪಟ್ಟಿವೆಯೆಂಬುದು ನಮಗೆ ಕಾಣುವದಿಲ್ಲ. ದೇಹದ ಯಾವುದೇ ಭಾಗದಲ್ಲಿ ಗಾಯವಾದರೆ, ಕೂಡಲೇ ಕೆಲವು ಪ್ರಕ್ರಿಯೆಗಳು ಆರಂಭವಾಗಿ ಗಾಯವಾದ ಸ್ಥಳದಲ್ಲಿ ಚರ್ಮವನ್ನು ಮುಚ್ಚಲು ಪ್ರಯತ್ನಿಸುತ್ತವೆ. ದೇಹಕ್ಕೆ ತನ್ನ ಯಾವುದೇ ಚರ್ಮದ ಭಾಗವು ತೆರೆದಿರುವದು ಇಷ್ಟವಿಲ್ಲ. ಆದ್ದರಿಂದ ಪ್ರತ್ಯೇಕವಾದ ಚರ್ಮದ ಭಾಗಗಳನ್ನ್ನು ಜೋಡಿಸಲು ಕೂಡಲೇ ಅದು ಕಾರ್ಯನಿರತವಾಗುತ್ತದೆ. ಮೂಳೆ ಮುರಿದಾಗಲೂ ದೇಹವೂ, ಕೂಡಲೇ ಅದನ್ನು ಜೋಡಿಸುವ ಕ್ರಿಯೆಯಲ್ಲಿ ತೊಡಗುತ್ತದೆ. ಎರಡು ಮೂಳೆಗಳನ್ನು ಜೋಡಿಸಲು ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ. ವೈದ್ಯನು ಮುರಿದ ಮೂಳೆಯ ಎರಡೂ ಭಾಗಗಳನ್ನು ಅಕ್ಕ-ಪಕ್ಕ ಇಡಬಹುದು. ಆ ಎರಡು ಭಾಗಳನ್ನು ಜೋಡಿಸುವುದು ದೇಹವೇ. ಮನುಷ್ಯನ ದೇಹವು ಯಾವಾಗಲೂ ಐಕ್ಯತೆಯನ್ನು (ಜೋಡಣೆ) ಕಾಪಾಡಿಕೊಳ್ಳುವದಕ್ಕೋಸ್ಕರ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಅದೇ ಪ್ರಕಾರ ಕರ್ತನ ದೇಹವು ಕೂಡ ಕೆಲಸ ಮಾಡಬೇಕು. ಯಾವಾಗ ಸಭೆಯು ಈ ರೀತಿಯಾಗಿ ಕಾರ್ಯ ನಿರ್ವಹಿಸುವುದಿಲ್ಲವೋ ಆ ಸಮಯದಲ್ಲಿ ಅದು ಕರ್ತನ ದೇಹವನ್ನು ಪ್ರತಿನಿಧಿಸುವುದಿಲ್ಲ.
ದೇವರು ಕೆಲವು ದೈವಿಕ(ಪವಿತ್ರ)ರಾಗಿರುವ ವ್ಯಕ್ತಿಗಳ ಗುಂಪನ್ನು ಕಟ್ಟುತ್ತಿಲ್ಲ. ಆತನು ಒಂದು ದೇಹವನ್ನು ಕಟ್ಟುತ್ತಿದ್ದಾನೆ. ಇದನ್ನೇ ಪೌಲನು ಎಫೆಸದವರಿಗೆ ಬರೆದ ಪತ್ರಿಕೆಯ 4ನೆಯ ಅಧ್ಯಾಯಲ್ಲಿ ಹೇಳುತ್ತಿದ್ದಾನೆ. "ಒಂದೇ ದೇಹವಿರುವುದರಿಂದ, ಪವಿತ್ರಾತ್ಮನಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಲು" ಆತನು ನಮ್ಮನ್ನು ಒತ್ತಾಯಪಡಿಸುತ್ತಾನೆ.
ನಮ್ಮ ಸ್ಥಳೀಯ ಸಭೆಯಲ್ಲಿ ಐಕ್ಯತೆಯಿದೆಯೆಂದು ನಾವು ಯಾವಾಗ ಹೇಳಲು ಸಾಧ್ಯ? ಅದು ಎಫೆಸ 4:3ರಲ್ಲಿ ಹೇಳಿದ ಪ್ರಕಾರ ನಾವು "ಸಮಾಧಾನವೆಂಬ ಬಂಧನದಿಂದ" ಕಟ್ಟಲ್ಪಟ್ಟಾಗ. ಮತ್ತು ರೋಮ 8:6ರಲ್ಲಿ ಹೇಳಿರುವಂತೆ "ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು ಜೀವವೂ ಮನಶಾಂತಿಯೂ ಆಗಿದೆ." ಒಬ್ಬ ಸಹೋದರ ಅಥವಾ ಸಹೋದರಿಯನ್ನು ನೀನು ನೆನಪಿಸುವಾಗ ಅವರ ಬಗ್ಗೆ ನಿನ್ನ ಮನಸ್ಸಿನಲ್ಲಿ ಸಮಾಧಾನದ ಮತ್ತು ಶಾಂತತೆಯ ಯೋಚನೆಯಿದ್ದರೆ ನಿಮ್ಮ ಮಧ್ಯೆ ಐಕ್ಯತೆಯಿದೆ ಎಂದರ್ಥ. ಆದರೆ ಆ ವ್ಯಕ್ತಿಯ ಬಗ್ಗೆ ಯೋಚಿಸುವಾಗ ನಿನಗೆ ಸ್ವಲ್ಪವಾದರೂ ಅಸಮಾಧಾನವಾದರೆ, ನೀನು ಅಂತಹ ಸಹೋದರ/ಸಹೋದರಿಯ ಜೊತೆ ಶಾಂತಿ ಅಥವಾ ಐಕ್ಯತೆ ಹೊಂದಿಲ್ಲ ಎಂದರ್ಥವಾಗಿದೆ. ನೀನು ಬಹಳ ಉತ್ಸಾಹದಿಂದ "ಸ್ತೋತ್ರ" ಅಥವಾ "ಪ್ರೇಸ್ ದ ಲಾರ್ಡ್" ಎಂದು ಅವರನ್ನು ವಂದಿಸಬಹುದು. ಆದರೆ ಅದು ಕೇವಲ ಕಪಟತನವಾಗಿದೆ.
ಸಮಾಧಾನವೇ ಐಕ್ಯತೆಯ ಪರೀಕ್ಷೆಯಾಗಿದೆ. ಆದ್ದರಿಂದ ಪವಿತ್ರಾತ್ಮನ ಐಕ್ಯತೆಯನ್ನು ಸಮಾಧಾನವೆಂಬ ಬಂಧನದಲ್ಲಿಯೇ ಕಾಪಾಡಬೇಕು.
.