WFTW Body: 

ಪವಿತ್ರಾತ್ಮನ ಬಲ ಹಾಗೂ ನಮ್ಮ ಮಾನವ(ಪ್ರಾಣ)ಬಲಗಳು ಪರಸ್ಪರ ವಿಭಿನ್ನವಾದವುಗಳು.

 

ಒಂದು ದಿನ ಪೇತ್ರನು ಕರ್ತನಿಗೆ, "ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು," ಎಂದು ಹೇಳಿದನು. ಒಡನೆಯೇ ಯೇಸುವು ಅವನಿಗೆ, "ಈ ಗುಟ್ಟು ನಿನಗೆ ತಿಳಿಸಿದವನು ನರಮನುಷ್ಯನಲ್ಲ," ಎಂದರು. ಬೇರೆ ಮಾತುಗಳಲ್ಲಿ ಹೇಳುವದಾದರೆ, ಈ ಆತ್ಮಿಕ ಸತ್ಯವನ್ನು ಪೇತ್ರನು ತನ್ನ ಮನೋಬಲದ ಮೂಲಕ - ತನ್ನ ಮಾನವ ಬುದ್ಧಿವಂತಿಕೆ ಅಥವಾ ಸೂಕ್ಷ್ಮಬುದ್ಧಿಯ ಮೂಲಕ - ಕಂಡುಕೊಳ್ಳಲಿಲ್ಲ. ನಮ್ಮ ಮಾನವ(ಪ್ರಾಣ)ಬಲವು ನಮಗೆ ದೈವಿಕ ಪ್ರಕಟನೆಯನ್ನು ನೀಡಲಾರದು. ನಮ್ಮಲ್ಲಿ ಚುರುಕುತನವಿದ್ದರೆ, ನಾವು ಕುಶಲ ಆಲೋಚನೆಗಳನ್ನು ಸತ್ಯವೇದದಿಂದ ಪಡೆಯಬಹುದು. ಅದಲ್ಲದೆ, ಆ ಆಲೋಚನೆಗಳನ್ನು ನಾವು ಸಭೆಯಲ್ಲಿ ಇತರರೊಂದಿಗೆ ಹಂಚಿಕೊಳ್ಳಬಹುದು ಮತ್ತು ಆತ್ಮೀಕ ವಿವೇಚನೆ ಇಲ್ಲದೇ ಇರುವವರನ್ನು ಪ್ರಭಾವಿತಗೊಳಿಸಬಹುದು. ಆದರೆ ಭೂಲೋಕ ಹಾಗೂ ಆಕಾಶಮಂಡಲಗಳು ಹೇಗೆ ಒಂದರಿಂದೊಂದು ಬೇರೆ ಬೇರೆಯಾಗಿಯೂ ಬಹಳ ಅಂತರದಲ್ಲಿಯೂ ಇವೆಯೋ, ಅಷ್ಟೇ ವ್ಯತ್ಯಾಸ ಮಾನವನ ಚುರುಕು ಆಲೋಚನೆಗಳು ಹಾಗೂ ದೈವಿಕ ಪ್ರಕಟನೆಯ ನಡುವೆ ಇದೆ.

 

ಪೌಲನು ಭಯಭೀತಿಯಿಂದ ಮತ್ತು ಕಂಪಿಸುತ್ತಾ ಬೋಧಿಸಿದ್ದು ಏಕೆಂದರೆ, ತಾನು ದೇವರ ವಚನವನ್ನು ಒಂದು ವೇಳೆ ಸ್ವಂತ ಬುದ್ಧಿವಂತಿಕೆಯಿಂದ ಬೋಧಿಸುವೆನೇನೋ ಎನ್ನುವ ಭಯ ಅವನಲ್ಲಿತ್ತು - ಇತರರ ನಂಬಿಕೆಯು ತನ್ನ ಜ್ಞಾನದ ಮೇಲೆ ಆಧಾರಿತವಾಗಿರದೆ, ದೇವರ ಶಕ್ತಿಯ ಮೇಲೆ ಆಧಾರಿತವಾಗಿ ಇರಬೇಕು, ಎನ್ನುವ ಹಾರೈಕೆ ಅವನದಾಗಿತ್ತು (1 ಕೊರಿ. 2:1-5). ಮಾನವ ದೃಷ್ಟಿಯಿಂದ ನೋಡುವದಾದರೆ, ಯಹೂದ್ಯರ ನಡುವೆ ಕೆಲಸ ಮಾಡಲು ಪೌಲನು (ಅವನಲ್ಲಿ ಧರ್ಮಶಾಸ್ತ್ರದ ವಿಶೇಷ ಜ್ಞಾನವಿತ್ತು), ಹಾಗೂ ಅನ್ಯಜನರ ನಡುವೆ ಕೆಲಸ ಮಾಡಲು ಪೇತ್ರನು, ತಕ್ಕ ವ್ಯಕ್ತಿಗಳಾಗಿದ್ದರು. ದೇವರು ಅವರಿಗೆ ಇದಕ್ಕೆ ಸಂಪೂರ್ಣ ತದ್ವಿರುದ್ಧವಾದ ಸೇವೆಗಳನ್ನು ನೀಡಿದ್ದು ಏಕೆಂದರೆ, ಅವರು ಭರವಸೆಯನ್ನು ಪವಿತ್ರಾತ್ಮನಲ್ಲಿ ಇರಿಸಬೇಕೇ ಹೊರತು ತಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ಅಲ್ಲ, ಎನ್ನುವದಕ್ಕಾಗಿ (ಗಲಾ. 2:8).

 

ನಾವು ಸಾಮಾನ್ಯವಾಗಿ ಚುರುಕಾದ ಆಲೋಚನೆಗಳನ್ನು ಜನರಿಗೆ ಬೋಧಿಸುವದು ಅವರಿಂದ ಮಾನ್ಯತೆಯನ್ನು ಪಡೆಯಲಿಕ್ಕಾಗಿ. ಇನ್ನೊಂದೆಡೆ, ದೇವರ ಪ್ರಕಟನೆಯು ನಮ್ಮನ್ನು ದೇವರ ಮುಂದೆ ಬೋರಲು ಬೀಳುವಂತೆ ಮಾಡುವದು. ನಾವು ನಮ್ಮ ಬುದ್ಧಿವಂತಿಕೆಯಿಂದ ಜನರ ಮೇಲೆ ಪ್ರಭಾವ ಬೀರಬಹುದು. ಆದರೆ ನಾವು ದೈವಿಕ ಪ್ರಕಟನೆಯ ಮೂಲಕ ಅವರಿಗೆ ಸಹಾಯವನ್ನು ಒದಗಿಸಬಹುದು.

 

ಯೆಶಾಯನಿಗೆ ದೇವರ ಮಹಿಮೆ ಪ್ರಕಟವಾದಾಗ, ಆ ದೇವದರ್ಶನವನ್ನು ಅವನು ತನ್ನ ಮುಂದಿನ ಸಂದೇಶದ ಒಂದು ವಿಷಯವೆಂದು ಪರಿಗಣಿಸಲಿಲ್ಲ!! ಅವನು ಬೋರಲು ಬಿದ್ದು ದೇವರನ್ನು ಆರಾಧಿಸಿದನು. ಯೋಹಾನನಿಗೆ ಇದೇ ರೀತಿಯ ಅನುಭವ ಪತ್ಮೊಸ್ ದ್ವೀಪದಲ್ಲಿ ಆಯಿತು. ಅವರಿಬ್ಬರೂ ಕರ್ತನ ಮುಂದೆ ಬಿದ್ದ ನಂತರವೇ, ಕರ್ತನು ಅವರಿಗೆ ತನ್ನ ಸಂದೇಶವನ್ನು ಇತರರಿಗೆ ಕೊಂಡೊಯ್ಯಲು ತಿಳಿಸಿದರು. ನಾವು ದೇವರ ಸೇವೆಯನ್ನು ಮಾಡುವ ಮೊದಲು ಅವರನ್ನು ನಾವು ಆರಾಧಿಸುವದು ಅವಶ್ಯ.

 

ಮನೋಬಲದ ಪ್ರಯೋಗ ಕಂಡುಬರುವ ಇನ್ನೊಂದು ಸಂದರ್ಭ, ಕೆಲವು ಬೋಧಕರು ಸೇವೆಯಲ್ಲಿ ಜನರನ್ನು ವಶೀಕರಣ ಶಕ್ತಿಯ ಮೂಲಕ ನೆಲಕ್ಕೆ ಬೀಳಿಸಿ, ಹುಚ್ಚುಹುಚ್ಚಾಗಿ ನಗಿಸಿ, ಅವರು ಆ ಬೋಧಕರಿಗೆ ಕಾಣಿಕೆ ಕೊಡುವಂತೆ ಮಾಡುವ ಸನ್ನಿವೇಶ. ಅಂತಹ ಕೂಟಗಳಲ್ಲಿ ಅಸ್ಥಿರ ಮನೋಸ್ಥಿತಿಯಿಂದ ಬಳಲುವ (ಸರಿಯಲ್ಲದ ಯೋಚನೆಗಳ ಮೂಲಕ ಮನೋರೋಗಿಗಳಾಗಿರುವ) ರೋಗಿಗಳು ಸಹ "ಗುಣಹೊಂದುವರು". ಇವೆಲ್ಲಾ ಕೈಗೂಡುವದು ಮಾನವ ಮನೋಬಲದಿಂದ, ಆದರೆ ಜೊತೆಗೆ ಯೇಸುವಿನ ನಾಮವನ್ನೂ ಬಳಕೆ ಮಾಡಲಾಗುವದು - ಆ ಮೂಲಕ ವಿಶ್ವಾಸಿಗಳಲ್ಲೂ ಅನೇಕರು ಮೋಸಗೊಳ್ಳುವರು. ದೇವರ ಸೇವಕರಾದ ನಾವು ಇಂತಹ ನಕಲಿ ಕೃತ್ಯಗಳನ್ನು ಧೈರ್ಯವಾಗಿ ಬಯಲು ಮಾಡಬೇಕು. 

 

ಮಾನಸಿಕ ಶಕ್ತಿಯ ಇನ್ನೊಂದು ದೃಷ್ಟಾಂತ, ಅನೇಕ ಕ್ರೈಸ್ತ ನಾಯಕರು ತಮ್ಮ ಅನುಯಾಯಿಗಳನ್ನು ತಮ್ಮ ವ್ಯಕ್ತಿತ್ವದ ಮೂಲಕ ವಶಪಡಿಸಿಕೊಂಡು ಅಧೀನದಲ್ಲಿ ಇರಿಸುವದರಲ್ಲಿ ಕಂಡುಬರುವದು. ಜನರು ಅಂತಹ ಮುಂದಾಳುಗಳನ್ನು ಅವಾಕ್ಕಾಗಿ ನೋಡುತ್ತಾ, ಅವರನ್ನು "ಪವಿತ್ರ ದೈವಿಕ ಮನುಷ್ಯರು" ಎಂದು ಗೌರವಿಸುವರು. ಅದಕ್ಕೆ ಸರಿಯಾಗಿ ಈ ಮುಖಂಡರು ತಮ್ಮ ಅನುಯಾಯಿಗಳ ಅಂತಹ ಪ್ರಶಂಸೆಯನ್ನು ಬಹಳವಾಗಿ ಮೆಚ್ಚುವರು.

 

ಸಂಗೀತದಲ್ಲೂ ಅತೀ ಪ್ರಬಲವಾದ ಚಿತ್ತಾಕರ್ಷಣೆ ಇದೆ. ಅದು ನಮ್ಮ ಭಾವನೆಗಳನ್ನು ಜಾಗೃತಗೊಳಿಸಬಲ್ಲದು. ಆದರೆ ನಾವು ಮೋಸಹೋಗಿ ಅದು ಪವಿತ್ರಾತ್ಮನ ಪ್ರಭಾವವೆಂದು ತಿಳಿಯಬಾರದು. ನಾವು ಉತ್ತಮ ಸಂಗೀತದ ಮೂಲಕ ಅನೇಕ ಜನರನ್ನು ನಮ್ಮ ಸಭೆಗಳಿಗೆ ಆಕರ್ಷಿಸಬಹುದು. ಆದರೆ ನಾವು ಯಾರನ್ನು ಆಕರ್ಷಿಸುವೆವು? ದೈವಿಕ ಜೀವನ ಜೀವಿಸಲು ಸಹಾಯವನ್ನು ಹುಡುಕುತ್ತಿರುವ ಆತ್ಮದ ಬಡವರನ್ನು ಅಲ್ಲ, ಆದರೆ ಸೂಕ್ಷ್ಮಾಭಿರುಚಿ ಹೊಂದಿರುವವರೂ ಮತ್ತು ನಯ-ನಾಜೂಕು ಸ್ವಭಾವದವರೂ ಆಗಿದ್ದು, ತಮ್ಮ ತಿಳಿವಳಿಕೆ ಮತ್ತು ಸಂಗೀತ ಅಭಿರುಚಿಗಳ ಬಗ್ಗೆ ಹೆಚ್ಚಳಪಡುವ ಜನರನ್ನು.

 

ಒಂದು ಭಾನುವಾರ, ಸಂಗೀತದಲ್ಲಿ ಪ್ರತಿಭಾವಂತರಾದ ದಂಪತಿಗಳಿಬ್ಬರು ನಮ್ಮ ಬೆಂಗಳೂರಿನ ಕೂಟಕ್ಕೆ ಬಂದದ್ದು ನನಗೆ ನೆನಪಿದೆ. ಅವರಿಗೆ ಅಲ್ಲಿಯ ಸಂಗೀತವು ಕೆಳಮಟ್ಟದ್ದಾಗಿ ತೋರಿತು, ಹಾಗಾಗಿ ಅವರು ಮತ್ತೊಮ್ಮೆ ಬರಲೇ ಇಲ್ಲ. ಅವರು ಸಂಗೀತಭರಿತ ಸಭೆಯನ್ನು ಹುಡುಕುವ ಜನರು, ಆದರೆ ದೈವಿಕವಾದ ಸಭೆಯನ್ನಲ್ಲ, ನಾವು ಅಂಥವರಿಂದ ಸಂರಕ್ಷಿಸಲ್ಪಟ್ಟೆವೆಂದು ಕೃತಜ್ಞರಾಗಿದ್ದೆವು!! ನಮಗೆ ಸಭೆಯಲ್ಲಿ ಬೇಕಿರುವದು ಒಂದು ಉತ್ತಮ ವಾದ್ಯಮೇಳವಲ್ಲ, ಆದರೆ ಪವಿತ್ರಾತ್ಮನ ಬಲ. ಪಂಚಾಶತ್ತಮ ದಿನದಂದು ಪೇತ್ರನು ಜನರ ಗುಂಪನ್ನು ಆಕರ್ಷಿಸಿದ್ದು ಸ್ವರಮಂಡಲ, ಡೋಲು, ದಮ್ಮಡಿಗಳಿಂದ ಅಲ್ಲ, ಆದರೆ ಪವಿತ್ರಾತ್ಮನ ಅಭಿಷೇಕದ ಮೂಲಕ. ಅಭಿಷೇಕವು ಇಲ್ಲದಿದ್ದಾಗ ವಿಶ್ವಾಸಿಗಳು ಆ ಖಾಲಿ ಜಾಗವನ್ನು ಶ್ರೇಷ್ಠ ಸಂಗೀತ, ಹಾಸ್ಯಭರಿತ ಬೋಧನೆ ಮತ್ತು ಭವ್ಯವಾದ ಕಟ್ಟಡಗಳಿಂದ ಭರಿಸುವ ಪ್ರಯತ್ನ ಮಾಡುವರು.

 

ಎಲೆಕ್ಟ್ರಾನಿಕ್ ಸಾಧನಗಳೂ ಸಹ ನಮಗೆ ಉರುಳಾಗಬಹುದು. ದೇವರ ಅಭಿಷೇಕವಿರುವ ಸೇವಕರು ತಯಾರಿಸಿದ ಸತ್ಯವೇದ ಪಾಠಗಳ CD, DVD, ಇತ್ಯಾದಿಗಳು ನಮ್ಮ ಆತ್ಮಿಕ ಬೆಳವಣಿಗೆಗೆ ಸಹಾಯ ಮಾಡಬಹುದು, ನಿಜ. ಆದರೆ ನಾವು ದೇವರ ಸ್ವರವನ್ನು ಕೇಳಲು ಉತ್ಸುಕರಾಗಿ ಇರುವಾಗ, ಅಂತಹ ಸಾಧನಗಳನ್ನು ಪವಿತ್ರಾತ್ಮನಿಗಿಂತ ಹೆಚ್ಚಾಗಿ ಅವಲಂಬಿಸದೇ ಇರುವ ಎಚ್ಚರಿಕೆ ನಮ್ಮಲ್ಲಿ ಇರಬೇಕು. ನಮ್ಮ ಕೈಯಲ್ಲಿ ಅಪೊಸ್ತಲ ಪೌಲನ ಬೋಧನೆಯ CDಗಳೇ ಇದ್ದರೂ, ಅವುಗಳ ಮೂಲಕ ನಾವು ಕ್ರಿಸ್ತನ ದೇಹವನ್ನು ಕಟ್ಟುವದು ಅಸಾಧ್ಯ!

 

ಲೋಕದಲ್ಲಿ ಹಣವು ಅತ್ಯಂತ ಪ್ರಭಾವಶಾಲಿ ಆಗಿರುವ ಇನ್ನೊಂದು ವಸ್ತು. ಆದುದರಿಂದ ಅದನ್ನು ನಾವು ಸುಲಭವಾಗಿ ಆಧಾರವಾಗಿ ಮಾಡಿಕೊಳ್ಳಬಹುದು. ಇಂದು ಹೆಚ್ಚಿನ ಎಲ್ಲಾ ಕ್ರೈಸ್ತ ಸಂಸ್ಥೆಗಳು ಹಣದ ಅವಶ್ಯಕತೆಯ ಬಗ್ಗೆ ಮಾತಾಡುತ್ತಾ, ಪಾಶ್ಚಿಮಾತ್ಯ ದೇಶಗಳ ಸರಳ, ನಿಷ್ಕಪಟ (ಹಾಗೂ ಸುಲಭವಾಗಿ ಮೋಸಹೋಗುವ) ವಿಶ್ವಾಸಿಗಳಿಗೆ ವಾರ್ತಾಪತ್ರಗಳು ಹಾಗೂ ನಿಯತಕಾಲಿಕ ಪತ್ರಿಕೆಗಳನ್ನು ಕಳುಹಿಸಿ, ಜೋಳಿಗೆಯಲ್ಲಿ "ದುಡ್ಡೇ ದೊಡ್ಡಪ್ಪ" ಎನ್ನಲಾಗುವ ಡಾಲರ್‌ಅನ್ನು ತುಂಬಿಕೊಳ್ಳುವರು.

 

ಇನ್ನೊಂದೆಡೆ, ಅಪೊಸ್ತಲರು ತಮಗಾಗಿ, ಇಲ್ಲವೇ ತಮ್ಮ ಕೆಲಸಕ್ಕಾಗಿ ಒಂದೇ ಒಂದು ಸಲವಾದರೂ ವಿಶ್ವಾಸಿಗಳಿಂದ ಹಣವನ್ನು ಯಾಚಿಸಲೇ ಇಲ್ಲ. ಅವರು ವಿಶ್ವಾಸಿಗಳನ್ನು "ನಮ್ಮಲ್ಲಿರುವ ಬಡವರನ್ನು ಜ್ಞಾಪಕಮಾಡಿಕೊಳ್ಳಬೇಕು," ಎಂದು ಮಾತ್ರ ಬೇಡಿಕೊಂಡರು (ಗಲಾ. 2:10) ಮತ್ತು ಕೊರತೆಯಲ್ಲಿ ಇರುವವರಿಗೆ ಸಹಾಯ ಮಾಡಲು ತಿಳಿಸಿದರು (2 ಕೊರಿಂಥ. 8 ಮತ್ತು 9). ಆದರೆ ಬೇಸರದ ವಿಷಯವೆಂದರೆ, ಇಂದಿನ ಕ್ರೈಸ್ತ ಸೇವೆಯಲ್ಲಿ, ಅಪೊಸ್ತಲರು ಯಾವುದನ್ನು ಒಂದು ಸಲವೂ ಹೇಳಲಿಲ್ಲವೋ, ಅದನ್ನೇ ಮತ್ತೆ ಮತ್ತೆ ಹೇಳಲಾಗುತ್ತಿದೆ. "ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವದಿಲ್ಲ; ಲೋಕವೂ, ಅದರಲ್ಲಿ ಇರುವ ಎಲ್ಲವೂ ನನ್ನದಲ್ಲವೇ?" ಎಂದು ದೇವರು ನುಡಿಯುತ್ತಾರೆ (ಕೀರ್ತ. 50:12).

 

ದೇವರ ಸೇವಕರಾಗಿರುವ ನಮ್ಮ ಸಂಗತಿಯೇನು? ನಮಗೆ ಅವಶ್ಯಕತೆ ಎದುರಾದಾಗ - ಊಟ, ತಿಂಡಿಯದ್ದಾಗಲೀ ಅಥವಾ ದುಡ್ಡಿನದ್ದಾಗಲೀ - ನಾವು ಏನು ಮಾಡಬೇಕು? ನಾವು ಪರಲೋಕದಲ್ಲಿರುವ ತಂದೆಗೆ ತಿಳಿಸುವದೋ ಅಥವಾ ಜನರಿಗೆ ತಿಳಿಸುವದೋ? ನಾವು ನಿಜವಾಗಿ ದೇವರಿಂದ ಕರೆಯಲ್ಪಟ್ಟಿದ್ದರೆ, ನಮಗೆ ಲೌಕಿಕ ಅವಶ್ಯಕತೆಗಳ ಯಾವ ಕೊರತೆಯೂ ಇರುವದಿಲ್ಲ. ದೇವರಿಗೆ ಹಣಕಾಸಿನ ಕೊರತೆ ಇಲ್ಲ, ಅವರಿಗೆ ಕೊರತೆ ಇರುವದು ಮುರಿಯಲ್ಪಟ್ಟ, ದೀನತೆಯುಳ್ಳ, ನಂಬಿಗಸ್ಥರಾದ ಮತ್ತು ತನ್ನನ್ನು ಆತುಕೊಳ್ಳುವ ಸೇವಕರದ್ದು. ದೇವರು ಮುರಿಯಲ್ಪಟ್ಟ, ದೀನತೆಯುಳ್ಳ ಜನರಿಗಾಗಿ, ಪವಿತ್ರಾತ್ಮನ ಮೂಲಕ ಅವರನ್ನು ಬಲಪಡಿಸಲಿಕ್ಕಾಗಿ ಮತ್ತು ಕ್ರಿಸ್ತ ಸಭೆಯನ್ನು ಅವರ ಮೂಲಕ ನಿರ್ಮಿಸಲಿಕ್ಕಾಗಿ ಹುಡುಕುತ್ತಿರುವರು.

 

ದೇವರು ಅಸೂಯಾಪರ ದೇವರಾಗಿದ್ದಾರೆ. ಅವರು ತನ್ನ ಮಹಿಮೆಯನ್ನು ಬೇರೊಂದಕ್ಕೆ ಒಪ್ಪಿಸುವದಿಲ್ಲ. ಅವರು ಸಭೆಯನ್ನು ತನ್ನ ಪ್ರಭಾವದ ಮೂಲಕ ಕಟ್ಟುವರೇ ಹೊರತು ಇನ್ಯಾವುದೋ ಬಲದ ಮೂಲಕವಲ್ಲ. ದೇವರ ಕಾರ್ಯವು ಹಿಂದಿನ ಕಾಲದಂತೆಯೇ, ಈ ದಿನದಲ್ಲೂ ನೆರವೇರುವದು - ಮನೋಬಲ ಇಲ್ಲವೇ ಎಲೆಕ್ಟ್ರಾನಿಕ್ ಚಮತ್ಕಾರ ಅಥವಾ ಹಣಕಾಸಿನ ಸಾಮರ್ಥ್ಯದ ಮೂಲಕ ಅಲ್ಲ, ಆದರೆ ಪವಿತ್ರಾತ್ಮನ ಪ್ರಭಾವದ ಮೂಲಕ!