ಈ ಕಿರು ಸಂಚಿಕೆಯಲ್ಲಿ "ಹೊಸದಾಗಿ ಹುಟ್ಟುವುದು" ಅಥವಾ "ರಕ್ಷಣೆ ಹೊಂದುವುದು" ಎಂಬುದರ ಅರ್ಥವೇನೆಂದು ವಿವರಿಸಲು ನಾನು ಬಯಸುತ್ತೇನೆ.
ಮಾನಸಾಂತರವು ಈ ಅನುಭವಕ್ಕೆ ಮೊದಲನೆಯ ಹೆಜ್ಜೆಯಾಗಿದೆ.ಆದರೆ, ಮಾನಸಾಂತರ (ಪಾಪದಿಂದ ತಿರುಗುವುದು) ಪಡಬೇಕಾದರೆ, ಮೊದಲು ನೀವು ಪಾಪ ಎಂದರೆ ಏನು ಎಂದು ತಿಳಿದಿರಬೇಕು. ಇಂದು ಕ್ರೈಸ್ತರಲ್ಲಿ ಮಾನಸಾಂತರದ ಬಗ್ಗೆ ಅನೇಕ ತಪ್ಪಾದ ತಿಳುವಳಿಕೆಗಳಿವೆ, ಇದಕ್ಕೆ ಕಾರಣ ಅಲ್ಲಿ ಪಾಪದ ಬಗ್ಗೆ ಬಹಳ ತಪ್ಪಾದ ತಿಳುವಳಿಕೆಯಿರುವುದೇ ಆಗಿದೆ.
ಈ ಕೆಲವು ದಶಕಗಳಲ್ಲಿ ಕ್ರೈಸ್ತತ್ವದ ಗುಣಮಟ್ಟವು ಬಹಳ ಕೆಳಗೆ ಇಳಿದಿದೆ. ಇಂದು ಬಹಳಷ್ಟು ಬೋಧಕರಿಂದ ಸಾರಲ್ಪಡುತ್ತಿರುವ”ಸುವಾರ್ತೆ”ಯು ಅತೀ ಕಲಬೆರಕೆ ಸತ್ಯವಾಗಿದೆ. ಜನರಿಗೆ ಯೇಸುವಿನಲ್ಲಿ ನಂಬಿಕೆಯಿಡಲು ಮಾತ್ರ ಹೇಳಲಾಗುತ್ತಿದೆ. ಆದರೆ, ಮಾನಸಾಂತರ ಪಡದೆ ಯೇಸುವಿನಲ್ಲಿ ನಂಬಿಕೆಯನ್ನು ಮಾತ್ರ ಇಟ್ಟರೆ ಅದು ಯಾರನ್ನೂ ರಕ್ಷಿಸಲಾರದು.
ಯೇಸುವು ಯೋಹಾನ 3:3 ರಲ್ಲಿ ‘ಹೊಸದಾಗಿ ಹುಟ್ಟಬೇಕು’ ಎಂಬ ಪದವನ್ನು ಒಬ್ಬ ಧಾರ್ಮಿಕ ನಾಯಕನೂ, ದೇವರಿಗೆ ಭಯಪಡುವವನೂ ಮತ್ತು ಪ್ರಾಮಾಣಿಕನೂ ಆಗಿದ್ದ ನಿಕೋದೇಮ ಎಂಬವನ ಜೊತೆ ಮಾತಾಡುವಾಗ ಬಳಸಿದನು. ಯೇಸು ಆತನಿಗೆ “ನೀನು ಹೊಸದಾಗಿ ಹುಟ್ಟದಿದ್ದರೆ ದೇವರ ರಾಜ್ಯವನ್ನು ಕಾಣುವುದೇ ಇಲ್ಲ” (ಯೋಹಾನ 3:3) ಎಂದು ಹೇಳಿದನು. ಇಲ್ಲಿ ನಾವು ನೋಡುವುದೇನೆಂದರೆ, ದೇವರ ರಾಜ್ಯಕ್ಕೆ ಪ್ರವೇಶಿಸಬೇಕಾದರೆ ನೀವು ಬಹು ಒಳ್ಳೆಯ ವ್ಯಕ್ತಿಯಾಗಿದ್ದರೂ ಸಹ ಆತ್ಮೀಕವಾಗಿ ಹೊಸದಾಗಿ ಹುಟ್ಟಿರುವುದು ಅವಶ್ಯವಾಗಿದೆ! ನಂತರ ಯೇಸು ಹೇಳಿದ್ದೇನೆಂದರೆ, ತಾನು(ಯೇಸು) ಶಿಲುಬೆಯ ಮೇಲೆ ಎತ್ತಲ್ಪಟ್ಟು ಸಾಯಬೇಕು; ಮತ್ತು ಯಾರೆಲ್ಲಾ ಆತನನ್ನು ನಂಬುವರೋ ಅವರು ನಿತ್ಯ ಜೀವವನ್ನು ಪಡೆಯುವರು (ಯೋಹಾನ 3:14,16). ಯೇಸು ಆತನಿಗೆ ಮತ್ತೂ ಹೇಳಿದ್ದೇನೆಂದರೆ,“ಮನುಷ್ಯರ ಕೃತ್ಯಗಳು ದುಷ್ಕೃತ್ಯಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನು ಹೆಚ್ಚಾಗಿ ಪ್ರೀತಿಸುವರು”(ಯೋಹಾನ 3:19).ಆದರೆ ಯಾರು ಪ್ರಾಮಾಣಿಕರಾಗಿರುವರೋ ಅವರು ಬೆಳಕಿಗೆ ಬಂದು ರಕ್ಷಣೆಯನ್ನು ಹೊಂದುತ್ತಾರೆ (ಯೋಹಾನ 3:21). ಹೊಸದಾಗಿ ಹುಟ್ಟುಬೇಕಾದರೆ ನೀವು ಬೆಳಕಿನೊಳಗೆ ಬರಲೇ ಬೇಕಾಗುತ್ತದೆ. ಅದರ ಅರ್ಥವೇನೆಂದರೆ,ದೇವರ ಮುಂದೆ ಪ್ರಾಮಾಣಿಕವಾಗಿ ನಿಮ್ಮ ಪಾಪಗಳನ್ನು ಆತನಿಗೆ ಅರಿಕೆ ಮಾಡುವುದು. ಇಲ್ಲಿ ನೀವು ಮಾಡಿರುವಂಥಹ ಎಲ್ಲಾ ಪಾಪಗಳು ನಿಮ್ಮ ನೆನಪಿಗೆ ಬರಲು ಸಾಧ್ಯವಿಲ್ಲ. ಆದರೆ ನೀವು ದೇವರ ಬಳಿಗೆ ಹೋಗಿ ನೀವು ಖಂಡಿತವಾಗಿ ಪಾಪಿಯೆಂದು ಒಪ್ಪಿಕೊಂಡು ನೆನಪಿರುವಂಥಹ ಎಲ್ಲಾ ಪಾಪಗಳನ್ನು ಹೇಳಿಕೊಳ್ಳಬೇಕು.
ಪಾಪವೆಂಬುದು ಬಹು ದೊಡ್ಡ ಸಂಗತಿಯಾಗಿದೆ. ಮೊದಲಿಗೆ ಅದರ ಸಣ್ಣ ಭಾಗವನ್ನು ಮಾತ್ರ ನಿಮ್ಮ ಜೀವಿತದಲ್ಲಿ ನೋಡಬಲ್ಲಿರಿ. ಇದು ಹೇಗೆಂದರೆ, ನೀವು ಅತೀ ದೊಡ್ಡ ದೇಶದಲ್ಲಿ ಜೀವಿಸುತ್ತಿದ್ದರೂ ಮೊದಲು ಬಹಳ ಚಿಕ್ಕ ಭಾಗವನ್ನು ಮಾತ್ರ ನೋಡಿರುವಂತೆ. ಆದರೆ ನೀವು ತಿಳಿದಿರುವ ಪಾಪಗಳಿಂದ ತಿರುಗಿಕೊಂಡರೆ, ಕ್ರಮೇಣವಾಗಿ ನಿಮ್ಮ ಜೀವಿತದಲ್ಲಿರುವ ಈ ‘ಪಾಪವೆಂಬ ದೇಶವನ್ನು’ ಹೆಚ್ಚೆಚ್ಚಾಗಿ ಕಾಣಬಹುದಾಗಿದೆ.ನೀವು ಬೆಳಕಿನಲ್ಲಿ ನಡೆಯುತ್ತಿದ್ದಂತೆ ನಿಮ್ಮ ಅನೇಕ ಪಾಪಗಳು ಗೋಚರವಾಗುವವು. ನಂತರ ನೀವೇ ಆ ಎಲ್ಲಾ ಪಾಪಗಳಿಂದ ಶುದ್ಧ ಮಾಡಿಕೊಳ್ಳಬಹುದು. ಆದ್ದರಿಂದ ಎಲ್ಲಾ ಸಮಯದಲ್ಲಿಯೂ ದೇವರ ಮುಂದೆ ಪ್ರಾಮಾಣಿಕತೆಯಲ್ಲಿ ನಡೆಯುವುದು ಮುಖ್ಯ.
ಮತ್ತೊಂದು ದೃಷ್ಟಾಂತವನ್ನು ಹೇಳಬೇಕಾದರೆ; ನೀವು ಅನೇಕ ಹೊಲಸಾದ ಕೋಣೆಗಳಿರುವ ಒಂದು ಮನೆಯಲ್ಲಿ ವಾಸಮಾಡುತ್ತಿರುವಿರಿ. ಕರ್ತನಾದ ಯೇಸುವು ನಿಮ್ಮ ಮನೆಯಲ್ಲಿ ಬಂದು ವಾಸಮಾಡುವುದು ನಿಮಗೆ ಇಷ್ಟ. ಆದರೆ ಆತನು ಹೊಲಸಾದ ಕೋಣೆಯಲ್ಲಿ ವಾಸಮಾಡಲು ಸಾಧ್ಯವಿಲ್ಲ. ಆದ್ದರಿಂದ ಆತನು ಒಂದೊಂದಾಗಿ ಎಲ್ಲಾ ಕೋಣೆಗಳನ್ನು ಸ್ವಚ್ಚಮಾಡಲು ನಿಮಗೆ ಸಹಾಯಮಾಡುತ್ತಾನೆ.ಸ್ವಲ್ಪ ಸ್ವಲ್ಪವಾಗಿ ಪೂರ್ತಿ ಮನೆ ಸ್ವಚ್ಛವಾಗುತ್ತದೆ. ಈ ರೀತಿಯಾಗಿಯೇ ನಾವು ಕ್ರಿಸ್ತೀಯ ಜೀವಿತದ ಪವಿತ್ರತೆಯಲ್ಲಿ ಬೆಳೆಯುತ್ತೇವೆ.
ಅಪೊಸ್ತಲನಾದ ಪೌಲನು ಒಮ್ಮೆ ಹೇಳಿದ್ದೇನೆಂದರೆ, ಆತನು ಹೋದ ಕಡೆಯೆಲ್ಲಾ ಒಂದೇ ಸಂದೇಶವನ್ನು ಎಲ್ಲರಿಗೂ ಸಾರಿದನಂತೆ. ಅದೇನೆಂದರೆ ದೇವರ ಕಡೆಗೆ ತಿರುಗಿ ಕೊಳ್ಳುವುದು(ಮಾನಸಾಂತರ ಪಡುವುದು) ಮತ್ತು ಕರ್ತನಾದ ಯೇಸುವಿನಲ್ಲಿ ನಂಬಿಕೆಯಿಡುವುದು (ಅ. ಕೃ. 20:20). ಒಳ್ಳೆಯ ಅಸ್ತಿವಾರವನ್ನು ನಿಮ್ಮ ಜೀವಿತದಲ್ಲಿ ಹಾಕಲು ಮತ್ತು ಹೊಸದಾಗಿ ಹುಟ್ಟಲು ಬೇಕಾದ ಅವಶ್ಯಕವಾದ ಅಂಶಗಳು ಇವೆರಡೇ ಆಗಿವೆ. ದೇವರು ಮಾನಸಾಂತರ ಮತ್ತು ನಂಬಿಕೆ ಇವೆರಡನ್ನೂ ಒಂದು ಮಾಡಿದ್ದಾರೆ. ಆದರೆ ಹೆಚ್ಚಿನಾಂಶ ಕ್ರೈಸ್ತ ಬೋಧಕರು ಇವನ್ನು ಬೇರ್ಪಡಿಸಿದ್ದಾರೆ. ಕೇವಲ ನಂಬಿಕೆ ಮಾತ್ರ ಹೆಚ್ಚಿನಾಂಶ ಬೋಧಕರಿಂದ ಬೋಧಿಸಲ್ಪಡುತ್ತಿದೆ.
ಆದರೆ ನಿಮಗೆ ನಂಬಿಕೆ ಮಾತ್ರ ಇದ್ದರೆ, ನೀವು ಹೊಸದಾಗಿ ಹುಟ್ಟಲು ಸಾಧ್ಯವಿಲ್ಲ. ಅದನ್ನು ಹೀಗೆ ಹೇಳಬಹುದು; ಒಬ್ಬ ಸ್ತ್ರೀಯು ಎಷ್ಟೇ ಕಠಿಣವಾಗಿ ಪ್ರಯತ್ನಿಸಿದರೂ ತಾನೊಬ್ಬಳೇ ಒಂದು ಮಗುವನ್ನು ಪಡೆಯಲು ಸಾಧ್ಯವಿಲ್ಲ.ಹಾಗೆಯೇ ಒಬ್ಬ ಪುರುಷನೂ ಸಹ ತಾನೊಬ್ಬನೇ ಒಂದು ಮಗುವನ್ನು ಪಡೆಯಲು ಸಾಧ್ಯವಿಲ್ಲ. ಒಬ್ಬ ಪುರುಷನು, ಓರ್ವ ಸ್ತ್ರೀ ಇಬ್ಬರೂ ಸೇರಿದಾಗ ಮಾತ್ರ ಒಂದು ಮಗು ಹುಟ್ಟಲು ಸಾಧ್ಯವಾಗುತ್ತದೆ. ಇದೇ ರೀತಿಯಾಗಿ, ಮಾನಸಾಂತರ ಮತ್ತು ನಂಬಿಕೆ ಇವೆರಡೂ ಒಂದಾಗಿ ಸೇರಿದಾಗ ಮಾತ್ರ ಆತ್ಮೀಕ ಮಗು ಹುಟ್ಟುತ್ತದೆ. ಅಂದರೆ ನಿಮ್ಮ ಆತ್ಮದಲ್ಲಿ ಹೊಸ ಜನ್ಮ ಪಡೆಯಲು ಸಾದ್ಯವಾಗುತ್ತದೆ. ಈ ಆತ್ಮೀಕ ಹುಟ್ಟು, ಶಾರೀರಿಕ ಹುಟ್ಟಿನಷ್ಟೇ ನಿಜವಾದದ್ದು ಇದು ಕ್ರಮೇಣವಾಗಿ ನಡೆಯುವಂತದಲ್ಲ; ಬದಲಿಗೆ ಒಂದೇ ಕ್ಷಣದಲ್ಲಿ ನಡೆಯುವಂಥದ್ದಾಗಿದೆ.
ಶಾರೀರಿಕ ಹುಟ್ಟಿಗೆ ಹೇಗೆ ಅನೇಕ ತಿಂಗಳುಗಳ ಸಿದ್ಧತೆ ಇದೆಯೋ, ಹಾಗೆಯೇ ಆತ್ಮೀಕ ಹುಟ್ಟಿಗೆ ಕೂಡ ಹಲವಾರು ಸಿದ್ಧತೆಗಳಿರಬಹುದು. ಆದರೆ ಹೊಸ ಹುಟ್ಟು ಮಾತ್ರ (ಶಾರೀರಿಕ ಹುಟ್ಟಿನಂತೆ) ಕ್ಷಣದಲ್ಲಿ ನಡೆಯುವಂಥಹದು. ಕೆಲವು ಕ್ರೈಸ್ತರಿಗೆ ತಾವು ಹೊಸದಾಗಿ ಹುಟ್ಟಿದ ದಿನಾಂಕ ತಿಳಿದಿಲ್ಲ. ನನಗೂ ನಾನು ಹೊಸದಾಗಿ ಹುಟ್ಟಿದ ದಿನಾಂಕ ಗೊತ್ತಿಲ್ಲ.ಅದು ಹೇಗೆಂದರೆ, ಒಬ್ಬ ವ್ಯಕ್ತಿಗೆ ತಾನು ಶಾರೀರಿಕವಾಗಿ ಹುಟ್ಟಿದ ದಿನಾಂಕ ಹೇಗೆ ತಿಳಿದಿರುವುದಿಲ್ಲವೋ ಹಾಗೆಯೇ. ಒಬ್ಬನು ಜೀವದಿಂದಿದ್ದರೆಸಾಕು. ಹುಟ್ಟಿದ ದಿನಾಂಕ ತಿಳಿಯದಿರುವುದು ಅಷ್ಟೇನೂ ಗಂಭೀರವಾದ ವಿಷಯವಲ್ಲ!! ಅದೇ ರೀತಿಯಲ್ಲಿ ನೀವು ನಿಮ್ಮ ಮರು ಹುಟ್ಟಿನ ದಿನಾಂಖ ಅರಿತಿರುವುದಕ್ಕಿಂತ ಇಂದು ಕ್ರಿಸ್ತನಲ್ಲಿ ಜೀವದಿಂದಿರುವುದನ್ನು ಖಂಡಿತವಾಗಿ ಅರಿತಿರುವುದು ಬಹಳ ಮುಖ್ಯ!
ದೇವರ ಬಳಿಗೆ ಹೋಗಲು ಯೇಸುವೊಂದೇ ಮಾರ್ಗವೆಂದು ಹೇಳುವಾಗ ನಾವು ಸಂಕುಚಿತ ಮನಸ್ಸಿನವರಾಗಿದ್ದೇವಾ? ಒಂದು ಸಾಮ್ಯದ ಮೂಲಕ ಇದನ್ನು ವಿವರಿಸಲು ಪ್ರಯತ್ನಿಸುತ್ತೇನೆ; ತನ್ನ ತಂದೆಯವರನ್ನು (ಅವರ ಭಾವ ಚಿತ್ರವನ್ನೂ ಸಹ) ಎಂದೂ ನೋಡದವರು, ತನ್ನ ತಂದೆಯವರು ಹೇಗೆ ಕಾಣುತ್ತಾರೆಂದು ಕೂಡ ತಿಳಿಯದವರಾಗಿರುತ್ತಾರೆ. ಹಾಗೆಯೇ, ದೇವರನ್ನು ಎಂದೂ ನೋಡದಂತಹ ನಾವು ಅವರ ಬಗ್ಗೆಯಾಗಲಿ ಹಾಗೂ ಅವರ ಬಳಿಗೆ ಹೋಗುವ ಮಾರ್ಗವಾಗಲಿ ತಿಳಿಯದವರಾಗಿರುತ್ತೇವೆ. ಆದರೆ ಯೇಸು ಕ್ರಿಸ್ತನು, ದೇವರ ಬಳಿಯಿಂದಲೇ ಬಂದವನಾಗಿದ್ದಾನೆ. ಆದ್ದರಿಂದ ಆತನೊಬ್ಬನೇ ದೇವರ ಬಳಿಗೆ ಹೋಗುವ ಮಾರ್ಗವನ್ನು ತೋರಿಸಲು ಶಕ್ತನಾಗಿದ್ದಾನೆ. “ನಾನೇ ಮಾರ್ಗವು, ನನ್ನ ಮೂಲಕ ಹೊರತು ಯಾರೂ ತಂದೆಯ ಬಳಿಗೆ ಬರಲು ಸಾಧ್ಯವಿಲ್ಲ”(ಯೋಹಾನ 14:6) ಎಂದು ಯೇಸು ಹೇಳಿದನು.
ತಂದೆಯಾದ ದೇವರ ಬಳಿಗೆ ಹೋಗಲು ತಾನೇ ಏಕೈಕ ಮಾರ್ಗ ಎಂದು ಯೇಸು ಹೇಳುವಾಗ, ಆತನು ಹೇಳುತ್ತಿರುವುದು ಸತ್ಯವಾಗಿರಬೇಕು, ಇಲ್ಲವೇ ಆತನೊಬ್ಬ ಸುಳ್ಳುಗಾರನು ಮತ್ತು ವಂಚಕನು ಎಂದು ಹೇಳಬಹುದು. ಯಾರಿಗೆ ಆತನು ಸುಳ್ಳುಗಾರನು ಮತ್ತು ವಂಚಕನು ಎಂದು ಹೇಳುವ ಧೈರ್ಯವಿದೆ? ಯೇಸು ಒಬ್ಬ ಒಳ್ಳೆಯ ಮನುಷ್ಯನು ಅಥವಾ ಒಬ್ಬ ಪ್ರವಾದಿಯು ಎಂದು ಹೇಳುವುದಷ್ಟೇ ಸಾಲದು, ಇಲ್ಲ. ಆತನು ಒಬ್ಬ ಒಳ್ಳೆಯ ಮನುಷ್ಯನು ಮಾತ್ರ ಅಲ್ಲದೆ ಆತನೊಬ್ಬನೇ ದೇವರಾಗಿದ್ದಾನೆ. ಆತನು ಸುಳ್ಳುಗಾರನು ಮತ್ತು ವಂಚಕನಾಗಿದ್ದರೆ, ಒಳ್ಳೆಯ ಮನುಷ್ಯನಾಗಿರಲು ಸಾದ್ಯವಿರುತ್ತಿರಲಿಲ್ಲ. ಆದ್ದರಿಂದ ಯೇಸುವು ಖಂಡಿತವಾಗಿ ಮನುಷ್ಯ ರೂಪದಲ್ಲಿದ್ದ ದೇವರೆಂದು ನಾವು ತೀರ್ಮಾನಿಸುತ್ತೇವೆ.
ಎಲ್ಲಾ ಸತ್ಯವೂ ಸಂಕುಚಿತ ಮನಸ್ಸಿನದೇ ಆಗಿರುತ್ತದೆ. ಗಣಿತದಲ್ಲಿ 2+2 ಯಾವಗಲೂ 4 ಆಗಿರುತ್ತದೆ. ನಾವು "ದೊಡ್ಡ ಮನಸ್ಸು" ಮಾಡಿ 3 ಅಥವಾ 5 ಇರಬಹುದೆಂದು ಒಪ್ಪಿಕೊಳ್ಳುವುದಿಲ್ಲ. ನಾವು 3.9999 ಕೂಡ ಸರಿಯುತ್ತರವೆಂದು ಒಪ್ಪಿಕೊಳ್ಳುವುದಿಲ್ಲ, ಹಾಗೊಂದು ಪಕ್ಷ ಸತ್ಯವಲ್ಲದವುಗಳನ್ನು ಒಪ್ಪಿಕೊಂಡರೆ ನಮ್ಮ ಎಲ್ಲಾ ಲೆಕ್ಕಾಚಾರಗಳೂ ತಪ್ಪಾಗಿ ಬಿಡುತ್ತವೆ. ಹಾಗೆಯೇ ಭೂಮಿಯು ಸೂರ್ಯನ ಸುತ್ತಾ ಸುತ್ತುತ್ತದೆಂದು ನಮಗೆ ತಿಳಿದಿದೆ. ಒಂದು ಪಕ್ಷ ನಾವು ಸ್ವಲ್ಪ "ದೊಡ್ಡ ಮನಸ್ಸು" ಮಾಡಿ ಭೂಮಿಯ ಸುತ್ತಾ ಸೂರ್ಯನು ಸುತ್ತುತ್ತಾನೆಂಬ ಸಿದ್ದಾಂಥವನ್ನು ಒಪ್ಪಿಕೊಳ್ಳೋಣವೆಂದು ನಿರ್ದರಿಸಿದರೆ ನಮ್ಮ ಖಗೋಳಶಾಸ್ತ್ರದ ಲೆಕ್ಕಾಚಾರಗಳೆಲ್ಲಾ ತಪ್ಪಾಗಿ ಹೋಗುತ್ತದೆ. ಹಾಗೆಯೇ ರಸಾಯನಶಾಸ್ತ್ರದಲ್ಲಿ ಹೆಚ್ 2 ಒ ಎಂದರೆ ನೀರು. ಅದು ಬಿಟ್ಟು ನಾವು ಸ್ವಲ್ಪ "ದೊಡ್ಡ ಮನಸ್ಸಿನವರಾಗಿ" ಹೆಚ್ 2 ಒ ಎಂದರೆ ಉಪ್ಪು ಎಂದು ಹೇಳಲು ಸಾಧ್ಯವಿಲ್ಲ!!! ಆದ್ದರಿಂದ ಸತ್ಯವೆಂಬುದು ಎಲ್ಲಾ ಕ್ಷೇತ್ರಗಳಲ್ಲಿಯೂ ನಿರ್ದಿಷ್ಟವಾದದ್ದು ಮತ್ತು ಬಹಳ ಸಂಕುಚಿತ ಮನಸ್ಸುಳ್ಳದ್ದೂ ಆಗಿರುತ್ತದೆ. ದೇವರ ವಿಷಯವಾಗಿ ಕೂಡ ಇದು ಹಾಗೆಯೇ ಆಗಿರುತ್ತದೆ. ದೊಡ್ಡ ಅಥವಾ ಧಾರಾಳ ಮನಸ್ಸಿರುವುದು ಗಣಿತದಲ್ಲಿ, ಖಗೋಳ ಶಾಸ್ತ್ರದಲ್ಲಿ ಮತ್ತು ರಾಸಾಯನ ಶಾಸ್ತ್ರದಲ್ಲಿ ಬಹಳ ಗಂಭೀರವಾದ ತಪ್ಪುಗಳನ್ನು ತರುತ್ತದೆ; ಮತ್ತು ಹಾಗೆಯೇ ದೇವರ ಬಗ್ಗೆ ಸತ್ಯವನ್ನು ಅರಿಯುವ ವಿಷಯದಲ್ಲಿ ಕೂಡ.
ಸತ್ಯವೇದವು ಹೇಳುತ್ತದೆ ಎಲ್ಲಾ ಮಾನವ ಜೀವಿಯೂ ಪಾಪಿಯೆಂದು; ಮತ್ತು ಯೇಸುವು ಪಾಪಿಗಳಿಗಾಗಿ ಸತ್ತನೆಂದು. ಆದ್ದರಿಂದ ನೀವು ‘ಕ್ರೈಸ್ತ’ನೆಂದು ಯೇಸುವಿನ ಬಳಿಗೆ ಬಂದರೆ ನಿಮ್ಮ ಪಾಪಗಳನ್ನು ಆತನು ಕ್ಷಮಿಸುವುದಿಲ್ಲ. ಏಕೆಂದರೆ ಆತನು ಕ್ರೈಸ್ತರಿಗಾಗಿ ಸಾಯಲಿಲ್ಲ! ಬದಲಿಗೆ ಪಾಪಿಗಳಿಗಾಗಿ ಸತ್ತನು. ಯಾರು ಯೇಸುವಿನ ಬಳಿಗೆ ಬಂದು “ಕರ್ತನೇ ನಾನು ಪಾಪಿ” ಎಂದು ಹೇಳುತ್ತಾನೋ ಆತನು ಮಾತ್ರವೇ ಕ್ಷಮಿಸಲ್ಪಡುತ್ತಾನೆ. ನೀನು ಯಾವುದೇ ಧರ್ಮದ ಸದಸ್ಯನಾಗಿ ಯೇಸುವಿನ ಬಳಿಗೆ ಬಂದರೆ ನೀನು ಕ್ಷಮಿಸಲ್ಪಡುವುದಿಲ್ಲ. ಯಾಕೆಂದರೆ ಆತನು ಪಾಪಿಗಳಿಗಾಗಿ ಮಾತ್ರ ಸತ್ತನು. ನೀನು ಪಾಪಿಯಾಗಿ ಆತನ ಬಳಿಗೆ ಬಂದ ಪಕ್ಷದಲ್ಲಿ, ನಿನ್ನ ಪಾಪಗಳು ಕೂಡಲೆ ಕ್ಷಮಿಸಲ್ಪಡುತ್ತವೆ.
ನಾವು ಪಾಪಿಗಳೆಂದು ಅರಿತುಕೊಳ್ಳುವುದು ನಮಗೆಲ್ಲಾ ಬಹಳ ಸುಲಭವಾದದ್ದಾಗಿದೆ. ಏಕೆಂದರೆ ದೇವರು ನಮಗೆಲ್ಲರಿಗೂ ಮನಸ್ಸಾಕ್ಷಿಯನ್ನು ಕೊಟ್ಟಿದ್ದಾರೆ. ಮಕ್ಕಳಲ್ಲಿ ಅದು ಸೂಕ್ಷ್ಮವಾಗಿರುತ್ತದೆ. ಅದು, ಅವರು ತಪ್ಪು ಮಾಡಿದ ಕೂಡಲೇ ಅದರ ಅರಿವು ಅವರಿಗೆ ಬರುವಂತೆ ಮಾಡುತ್ತದೆ. ಆದರೆ ಅವರು ಬೆಳೆದು ದೊಡ್ಡವರಾದಂತೆ, ಅದು ಗಡುಸಾಗಿ (ಕಠಿಣವಾಗಿ) ಸೂಕ್ಷ್ಮತೆಯನ್ನು ಕಳೆದುಕೊಳ್ಳಬಹುದು. 2 ಅಥವಾ 3 ವರ್ಷದ ಮಗು ಸುಳ್ಳು ಹೇಳಿದರೆ ಅದರ ಮುಖದಲ್ಲಿ ಅಪರಾಧ ಭಾವ ಕಾಣಿಸುತ್ತದೆ. ಏಕೆಂದರೆ ಅದರ ಮನಸ್ಸಾಕ್ಷಿಯಲ್ಲಿ ಅಪರಾಧ ಮನೋಭಾವವಿರುತ್ತದೆ. ಆದರೆ 15 ವರ್ಷಗಳ ಬಳಿಕ ಆತನೇ ದಿಟ್ಟಮುಖದಿಂದ ಸುಳ್ಳು ಹೇಳಬಹುದು, ಏಕೆಂದರೆ ಆತನು ಆಗಾಗ್ಗೆ ಮನಸ್ಸಾಕ್ಷಿಯ ಸ್ವರವನ್ನು ನಿರ್ಲಕ್ಷಿಸಿ ಅದನ್ನು ಸಾಯಿಸಿರುತ್ತಾನೆ. ಒಂದು ಮಗುವಿನ ಪಾದವು ಎಷ್ಟು ಮೃದುವಾಗಿರುತ್ತದೆಂದರೆ ಒಂದು ಹಕ್ಕಿಯ ಪುಕ್ಕದಿಂದ ಮುಟ್ಟಿದರೆ ಕೂಡ ಅದಕ್ಕೆ ಅದರ ಅರಿವಾಗುತ್ತದೆ. ಆದರೆ ಒಬ್ಬ ಬೆಳೆದ ಮನುಷ್ಯನ ಪಾದಕ್ಕೆ ಒಂದು ಸೂಜಿಯನ್ನು ಜೋರಾಗಿ ಚುಚ್ಚುವ ಹೊರತು ಅದರ ಅರಿವೇ ಅವನಿಗೆ ಇರುವುದಿಲ್ಲ. ಇದೇ ರೀತಿ ಅವರು ಬೆಳೆದಂತೆ ಅವರ ಮನಸ್ಸಾಕ್ಷಿಗೆ ಕೂಡ ಹಾಗೆಯೇ ಆಗುತ್ತದೆ.
ಮನಸ್ಸಾಕ್ಷಿ ಎಂಬುದು ದೇವರು ನಮ್ಮಲ್ಲಿಟ್ಟಿರುವ ಒಂದು ಸ್ವರವಾಗಿದ್ದು, ಅದು ನಾವು ನೈತಿಕ ಜೀವಿಗಳೆಂದು ನಮಗೆ ಹೇಳುವಂಥದ್ದಾಗಿದೆ. ಅದು ನಮಗೆ ಸರಿ ತಪ್ಪುಗಳ ಮೂಲ ತಿಳುವಳಿಕೆಯನ್ನು ಕೊಡುತ್ತದೆ. ಅದ್ದರಿಂದ ಇದೊಂದು ದೇವರು ನಮಗೆ ಅನುಗ್ರಹಿಸಿರುವ ಅಧ್ಬುತವಾದ ವರವಾಗಿದೆ. ಯೇಸುವು ಇದನ್ನು ‘ಹೃದಯದ ಕಣ್ಣು’ (ಲೂಕ 11:34) ಎಂದು ಕರೆದಿದ್ದಾರೆ. ಈ ‘ಕಣ್ಣನ್ನು’ ನಾವು ಜಾಗರೂಕತೆಯಿಂದ ಕಾಪಾಡದಿದ್ದರೆ, ಒಂದು ದಿನ ನಾವು ಆತ್ಮೀಕವಾಗಿ ಕುರುಡರಾಗುವುದು ಖಂಡಿತ. ಮನಸ್ಸಾಕ್ಷಿಯ ಕೂಗನ್ನು ನೀವು ಕಡೆಗಣಿಸುವುದು ಕಣ್ಣಿನೊಳಗೆ ಬೀಳುವ ಕಸವನ್ನು ಕಡೆಗಣಿಸುವಷ್ಟೇ ಅಪಾಯಕಾರಿಯಾಗಿದೆ. ನೀವು ಒಂದು ದಿನ ಪೂರ್ಣವಾಗಿ ಆತ್ಮೀಕ ಕುರುಡರಾಗಿಬಿಡುವಿರಿ.
ಮಕ್ಕಳು ಹುಟ್ಟಿದಾಗ ಅವರಲ್ಲಿ ಯಾರಿಗೂ ಯಾವ ಧರ್ಮವೂ ಇರುವುದಿಲ್ಲ. ಅವರೆಲ್ಲರೂ ಒಂದೇ ಆಗಿರುತ್ತಾರೆ. ಎರಡು ವರ್ಷಗಳ ನಂತರ ನೋಡಿದಾಗ ಜಗಳವಾಡುವುದರಲ್ಲಿ, ಸ್ವಾರ್ಥದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿರುತ್ತಾರೆ. ಸಮಯಕಳೆದಂತೆ ಅವರ ತಂದೆ ತಾಯಂದಿರು ಪ್ರತ್ಯೇಕ ಧರ್ಮಗಳ ಭೋಧನೆಗಳಿಗೆ ಅವರನ್ನು ಒಳಪಡಿಸುತ್ತಾರೆ. ಆದ್ದರಿಂದ ಅವರು ಪ್ರತ್ಯೇಕ ಧರ್ಮದವರಾಗಿಬಿಡುತ್ತಾರೆ. ಸುಮಾರು ಶೇಕಡಾ 90 ಕ್ಕಿಂಥಾ ಹೆಚ್ಚು ಜನರ ಧರ್ಮವು ಅವರ ತಂದೆ ತಾಯಿ ಆರಿಸಿದ್ದೇ ಆಗಿರುತ್ತದೆ.
ಆದರೆ ದೇವರು ನಮ್ಮನ್ನು ಬೇರೆ ಬೇರೆ ಧರ್ಮದ ಜನರೆಂದು ನೋಡುವುದಿಲ್ಲ. ಅವರು ನಮ್ಮನ್ನೆಲ್ಲಾ ಪಾಪಿಗಳೆಂದು ನೋಡುತ್ತಾರೆ. ಯೇಸು ಸ್ವಾಮಿ ಪರಲೋಕದಿಂದ ಈ ಭೂಲೋಕಕ್ಕೆ ಎಲ್ಲಾಜನರ ಪಾಪಗಳಿಗಾಗಿ ಸಾಯಲು ಬಂದನು. ಆತನು, ಯಾರು ತಾವು ದೇವರ ಸಾನ್ನಿಧ್ಯವನ್ನು ಪ್ರವೇಶಿಸಲು ಯೋಗ್ಯರು ಎಂದು ಭಾವಿಸಿಕೊಂಡಿದ್ದಾರೋ ಅವರಿಗಾಗಿ ಬಾರದೆ, ಯಾರು ತಾವು ಪಾಪಿಗಳೆಂದೂ, ದೇವರ ಸಾನ್ನಿಧ್ಯವನ್ನು ಪ್ರವೇಶಿಸಲು ತಾವು ಯೋಗ್ಯರಲ್ಲವೆಂದೂ ಒಪ್ಪಿಕೊಳ್ಳುತ್ತಾರೊ ಅವರಿಗಾಗಿ ಯೇಸು ಬಂದನು. ನಿಮ್ಮ ಮನಸ್ಸಾಕ್ಷಿಯು ನಿಮಗೆ ‘ನೀನು ಪಾಪಿ’ಯೆಂದು ಹೇಳುತ್ತದೆಯಾದರೆ, ನೀವು ಯೇಸುವಿನ ಬಳಿಗೆ ಬಂದು, “ಕರ್ತನೇ, ನಾನು ಪಾಪಿಯಾಗಿದ್ದೇನೆ, ನನ್ನ ಜೀವಿತದಲ್ಲಿ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ” ಎಂದು ಹೇಳುವುದು ಯಾಕೆ ನಿಮಗೆ ಕಷ್ಟವಾಗಬೇಕು?
ನಿಮ್ಮಲ್ಲಿ ಕೆಲವರು ಹೀಗೆ ಕೇಳಬಹುದು ‘ಒಳ್ಳೆಯವನಾದ ದೇವರು ಒಬ್ಬ ತಂದೆಯಂತೆ ನಮ್ಮೆಲ್ಲರ ಪಾಪವನ್ನು ಕಡೆಗಣಿಸಿ, ನಮ್ಮನ್ನು ಕ್ಷಮಿಸಿಬಿಡಲು ಆಗುವುದಿಲ್ಲವೋ’? ಎಂದು. ಒಂದು ವೇಳೆ ಒಬ್ಬ ಮಗನು ಬಹು ಬೆಲೆ ಬಾಳುವ ಒಂದು ವಸ್ತುವನ್ನು ಮುರಿದುಹಾಕಿ (ಕಳೆದು ಹಾಕಿ) ನಂತರ ಅದಕ್ಕಾಗಿ ದುಃಖಪಟ್ಟು, ತಂದೆಯಲ್ಲಿ ಕ್ಷಮೆ ಕೇಳಿದರೆ, ಆತನ ತಂದೆಯು ಅವನನ್ನು ಕ್ಷಮಿಸಬಲ್ಲನು. ಆದರೆ, ಈ ವಿಷಯಗಳು ನೈತಿಕ ಸಮಸ್ಯೆಗಳಲ್ಲ. ಒಂದು ವೇಳೆ, ನಮ್ಮೆಲ್ಲರ ಪಾಪಗಳು ಕೇವಲ ಈ ವಿಷಯಗಳಂತಿದ್ದಿದ್ದರೆ, ದೇವರು ನಮ್ಮೆಲ್ಲರನ್ನು ಕೂಡಲೇ ಕ್ಷಮಿಸಿಬಿಡುತ್ತಿದ್ದನು. ಆದರೆ, ಪಾಪವು ಈ ವಿಷಯಗಳಂಥಲ್ಲ. ಪಾಪವು ಬಹು ದೊಡ್ಡ ಅಪರಾಧವಾಗಿದೆ!
ಒಂದು ವೇಳೆ ಒಬ್ಬ ಮನುಷ್ಯನು ನ್ಯಾಯಸ್ಥಾನದಲ್ಲಿ ನ್ಯಾಯಾಧೀಶನಾಗಿದ್ದು, ಆತನ ಮಗನೇ ಅಪರಾಧಿಯಾಗಿ ಆತನ ಮುಂದೆ ನ್ಯಾಯಸ್ಥಾನದಲ್ಲಿ ನಿಂತಿದ್ದರೆ, ನ್ಯಾಯಾಧೀಶನು ತನ್ನ ಮಗನಿಗೆ “ಮಗನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ನಾನು ನಿನ್ನನ್ನು ಶಿಕ್ಷಿಸುವುದಿಲ್ಲ” ಎಂದು ಹೇಳುವನೋ? ಯಾವುದೇ ಲೌಕೀಕ ನ್ಯಾಯಾಧೀಶನಾಗಲಿ, ಸ್ವಲ್ಪವೇ ನ್ಯಾಯದ ಅರಿವಿದ್ದರೂ, ಅಂಥಹ ಕಾರ್ಯವನ್ನು ಎಂದಿಗೂ ಮಾಡಲಾರನು. ನಮ್ಮೆಲ್ಲರಲ್ಲಿರುವ ಆ ಸಣ್ಣ ನ್ಯಾಯದ ಅರಿವು, ಸರ್ವಶಕ್ತನಾದ, ನ್ಯಾಯಾಧಿಪತಿಯಾದ ದೇವರ ಪರಿಪೂರ್ಣತಿಳುವಳಿಕೆಯ ಒಂದು ಸಣ್ಣ ಭಾಗವಾಗಿದ್ದು, ನಾವೆಲ್ಲರೂ ಆತನ ಸಾರೂಪ್ಯದಲ್ಲಿಯೇ ಮಾಡಲ್ಪಟ್ಟಿದ್ದೇವೆ. ಆದ್ದರಿಂದ, ಯಾವಾಗ ನಾವು ಬಹಳ ಗಂಬೀರವಾದ ತಪ್ಪನ್ನು ಮಾಡಿರುತ್ತೇವೋ, ದೇವರು ನ್ಯಾಯಧೀಶನಾಗಿ ನಮಗೆ ಈ ರೀತಿಯಾಗಿ ಹೇಳಬೇಕಾಗುತ್ತದೆ. "ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ: ಆದರೆ ನೀನು ದೊಡ್ಡ ಅಪರಾಧವನ್ನು ಮಾಡಿರುತ್ತಿ ಆದ್ದರಿಂದ ನಾನು ನಿನ್ನನ್ನು ಶಿಕ್ಷಿಸಲೇ ಬೇಕಾಗಿದೆ". ನ್ಯಾಯಸಭೆಯಲ್ಲಿ ಮಗನು ತನ್ನ ತಪ್ಪಿನ (ಅಪರಾಧದ) ಬಗ್ಗೆ ಎಷ್ಟು ಪಶ್ಚಾತ್ತಾಪಪಟ್ಟು ಮನನೊಂದರೂ ಆತನ ತಂದೆಯು ನ್ಯಾಯಾಧೀಶನಾಗಿ ಆತನಿಗೆ ಶಿಕ್ಷೆಯನ್ನು ವಿಧಿಸಲೇ ಬೇಕು.
ಒಂದು ವೇಳೆ ಆ ಹುಡುಗನು ಒಂದು ದೊಡ್ಡ ಬ್ಯಾಂಕ್ ದರೋಡೆ ಮಾಡಿದ್ದನು ಎಂದು ಭಾವಿಸೋಣ. ಆತನ ತಂದೆಯು (ನ್ಯಾಯಾಧೀಶನು) ಅವನಿಗೆ ನಿಯಮದ ಪ್ರಕಾರ ಪೂರ್ತಿ ದಂಡವನ್ನು(ಸುಮಾರು ಹತ್ತು ಲಕ್ಷ ರೂಪಾಯಿಗಳು) ವಿಧಿಸುತ್ತಾನೆ. ಆದರೆ ಆ ಮಗನಲ್ಲಿ ದಂಡ ಕಟ್ಟಲು ಅಷ್ಟು ಹಣ ಇಲ್ಲದ ಕಾರಣ ಅವನು ಸೆರೆಮನೆಗೆ ಹೋಗಬೇಕಾಗುತ್ತದೆ! ನಂತರ ಆತನ ತಂದೆಯು ನ್ಯಾಯಾಧೀಶನ ಉಡುಪನ್ನು ತೆಗೆದು ಬಿಟ್ಟು ಕೆಳಗೆ ಬರುತ್ತಾನೆ: ನಂತರ ಆತನು ತನ್ನ ಸ್ವಂತ ಬ್ಯಾಂಕ್ ಚೆಕ್ ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ತಾನು ಜೀವನವಿಡೀ ಉಳಿತಾಯ ಮಾಡಿದ ಹಣವಾದ ಒಂದು ಮಿಲಿಯನ್ ಅಂದರೆ ಹತ್ತು ಲಕ್ಷ ರೂಪಾಯಿಗಳನ್ನು ಅದರಲ್ಲಿ ಬರೆದು, ಅದನ್ನು ತನ್ನ ಮಗನಿಗೆ ದಂಡ ಕಟ್ಟುವಂತೆ ಕೊಡುತ್ತಾನೆ. ಈಗ, ಆತನ ಮಗನು ತನ್ನನ್ನು ಪ್ರೀತಿಸುವುದಿಲ್ಲ ಎಂದು ತಂದೆಯನ್ನು ದೂರಲು ಸಾಧ್ಯವೇ? ಇಲ್ಲ! ಅದೇ ಸಮಯದಲ್ಲಿ ಬೇರೆ ಯಾರೂ ಆತನನ್ನು ಒಳ್ಳೆಯ ನ್ಯಾಯಾಧೀಶನಲ್ಲ ಎಂದು ಕೂಡ ದೂರಲು ಸಾಧ್ಯವಿಲ್ಲ: ಯಾಕೆಂದರೆ, ಆತನು ತನ್ನ ಮಗನಿಗೆ ನಿಯಮದ ಪ್ರಕಾರ ಪೂರ್ತಿ ಶಿಕ್ಷೆಯನ್ನು ವಿಧಿಸಿದ್ದಾನೆ. ನಿಜವಾಗಿಯೂ ಹೀಗೆಯೇ ದೇವರು ನಮಗೂ ಮಾಡಿದ್ದು. ನ್ಯಾಯಾಧೀಶನಾಗಿ ‘ನಾವೆಲ್ಲರೂ ನಮ್ಮ ಪಾಪಗಳಿಗಾಗಿ ಸಾಯಬೇಕು’ ಎಂದು ಧೃಡವಾಗಿ ಹೇಳಿದರು: ನಂತರ ಅವರು ಮನುಷ್ಯನಾಗಿ ಈ ಭೂಮಿಗೆ ಇಳಿದು ಬಂದು, ತಾನೇ ಆ ಶಿಕ್ಷೆಯನ್ನು ತೆಗೆದುಕೊಂಡರು.
‘ದೇವರು ಒಬ್ಬನೇ ಆಗಿದ್ದರೂ, ಆತನು ಮೂರು ವ್ಯಕ್ತಿಗಳಲ್ಲಿ ಜೀವಿಸುತ್ತಾನೆ. ಅದು ತಂದೆ, ಮಗ ಮತ್ತು ಪವಿತ್ರಾತ್ಮ’ ಎಂದು ಸತ್ಯವೇದವು ನಮಗೆ ಭೋಧಿಸುತ್ತದೆ. ಒಂದು ವೇಳೆ ದೇವರು ಒಬ್ಬನೇ ವ್ಯಕ್ತಿಯಾಗಿದ್ದರೆ, ಆತನು ಪರಲೋಕದಲ್ಲಿರುವ ತನ್ನ ಸಿಂಹಾಸನವನ್ನು ಬಿಟ್ಟು ಯೇಸುವಾಗಿ ಮನುಷ್ಯನ ರೂಪ ತಾಳಿ ಭೂಮಿಗೆ ಇಳಿದು ಬರಲು ಸಾಧ್ಯವಾಗುತ್ತಿರಲಿಲ್ಲ. ಹಾಗೆ ಬಂದಿದ್ದರೆ ವಿಶ್ವವನ್ನು ಯಾರು ನಡೆಸುತ್ತಿದ್ದರು? ಆದರೆ ದೇವರು ಮೂರು ವ್ಯಕ್ತಿಗಳಾಗಿರುವುದರಿಂದ ನ್ಯಾಯಾಧೀಶನಾದ ತಂದೆಯಾದ ದೇವರ ಮುಂದೆ ಮಗನು (ಯೇಸುವು) ಮನುಷ್ಯನ ರೂಪ ತಾಳಿ ಭೂಮಿಗೆ ಬಂದು ನಮ್ಮ ಪಾಪಕ್ಕಾಗಿ ಸಾಯಲು ಸಾಧ್ಯವಾಯಿತು. ಕೆಲವು ಕ್ರೈಸ್ತರು ಮುಖ್ಯ ದೇವರಾಗಿ ಯೇಸುವೊಬ್ಬನೇ ಇರುವನೆಂದು ಹೇಳಿಕೊಂಡು ‘ ಯೇಸುವಿನ ಹೆಸರಿನಲ್ಲಿ ಮಾತ್ರವೇ’ ದೀಕ್ಷಾಸ್ನಾನವನ್ನು ಜನರಿಗೆ ಕೊಡುತ್ತಾರೆ. ಇದು ಬಹಳ ಗಂಭೀರವಾದ ತಪ್ಪಾಗಿದೆ. ಯಾವನಾದರೂ ತಂದೆಯನ್ನು ಮತ್ತು ಮಗನನ್ನು ನಿರಾಕರಿಸುವವನಾಗಿದ್ದರೆ, ಅವನು ಕ್ರಿಸ್ತ ವಿರೋಧಿಯ ಆತ್ಮವನ್ನು ಹೊಂದಿದ್ದಾನೆಂದು 1ಯೋಹಾನ 2:22 ಹೇಳುತ್ತದೆ. ಏಕೆಂದರೆ ದೇವರ ಮಗನು ಯೇಸುವಿನ ರೂಪದಲ್ಲಿ ಮನುಷ್ಯನಾಗಿ ಬಂದು ತನ್ನ ಮಾನವೀಯ ಇಚ್ಛೆಗಳನ್ನು ನಿರಾಕರಿಸಿ, ತಂದೆಯ ಚಿತ್ತವನ್ನು ಮಾಡಿ, ತಂದೆಯಾದ ದೇವರ ಮುಂದೆ ನಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ಅನುಭವಿಸಿದನು’ ಎಂಬ ಸತ್ಯವನ್ನು ಅವನು ನಿರಾಕರಿಸುತ್ತಾನೆ (1ಯೋಹಾನ 4:2, 3).
ಯೇಸುವು ಭೂಮಿಗೆ ಬಂದಾಗ ಪೂರ್ಣ ದೇವರಾಗಿಯೂ ಮತ್ತು ಪೂರ್ಣ ಮಾನವನಾಗಿಯೂ ಇದ್ದನು. ಆತನು ಶಿಲುಬೆಯ ಮೇಲೆ ಸತ್ತಾಗ, ಮಾನವ ಜನಾಂಗದ ಎಲ್ಲಾ ಪಾಪಗಳ ಶಿಕ್ಷೆಯನ್ನು ತೆಗೆದುಕೊಂಡನು. ನಮ್ಮ ಪಾಪಗಳಿಗೆ ಶಿಕ್ಷೆಯೇನೆಂದರೆ ದೇವರಿಂದ ನಾವು ನಿತ್ಯತ್ವಕ್ಕೆ ಬೇರ್ಪಡುವುದು. ಆದ್ದರಿಂದ ಯೇಸುವು ನಮಗಾಗಿ ಶಿಲುಬೆಯ ಮೇಲೆ ತೂಗುತ್ತಿದ್ದಾಗ, ತನ್ನ ಪರಲೋಕದ ತಂದೆಯಿಂದ ಬೇರ್ಪಡಿಸಲ್ಪಟ್ಟನು.ಇಂಥಹ ಬೇರ್ಪಡಿಸುವಿಕೆಯು (ದೇವರಿಂದ) ಯಾವುದೇ ಮನುಷ್ಯನು ಎಂದೆಂದಿಗೂ ಪಡುವಂಥ ಕಷ್ಟಕ್ಕಿಂತ ಅತ್ಯಂತ ಭಯಾನಕ ಕಷ್ಟವಾಗಿದೆ!
ವಿಶ್ವದಲ್ಲೇ ದೇವರಿಂದ ತೊರೆದುಬಿಡಲ್ಪಟ್ಟ ಒಂದೇ ಸ್ಥಳವೆಂದರೆ ‘ನರಕ’ವಾಗಿದೆ. ಅಲ್ಲಿ ದೇವರು ಇಲ್ಲ. ಆದ್ದರಿಂದ ನರಕದಲ್ಲಿ ಸೈತಾನನ ಎಲ್ಲಾ ದುಷ್ಟತನಗಳು ತಾನಾಗಿಯೇ ಪೂರ್ಣವಾಗಿ ತೋರಲ್ಪಡುತ್ತದೆ. ಆ ದುಷ್ಟತ್ವವು, ಯಾರೆಲ್ಲಾ ನರಕಕ್ಕೆ ಹೋಗುತ್ತಾರೋ ಅವರಿಗೆ ಅಲ್ಲಿನ ವಿಷಯಗಳು ಬಹಳ ಕಷ್ಟಕರವಾಗುವಂತೆ ಮಾಡುತ್ತದೆ. ಯೇಸುವು ಶಿಲುಬೆಯ ಮೇಲೆ ತೂಗಾಡುವಾಗ ಆ ಶಿಕ್ಷೆಯನ್ನು ಅನುಭವಿಸಿದನು. ಆತನು ಶಿಲುಬೆಯ ಮೇಲೆ 6 ಗಂಟೆಗಳ ಕಾಲ ತೂಗಾಡಿದನು. ಆದರೆ ಕೊನೆಯ 3 ಗಂಟೆಗಳಲ್ಲಿ ಆತನು ದೇವರಿಂದ ತೊರೆಯಲ್ಪಟ್ಟನು. ಸೂರ್ಯನು ಕತ್ತಲಾದನು ಮತ್ತು ಭೂಮಿಯು ಕಂಪಿಸಿತು. ಪರಲೋಕದಲ್ಲಿ ತಂದೆಯೊಂದಿಗಿನ ಆತನ ಸಂಪರ್ಕವು ಕಡಿಯಲ್ಪಟ್ಟಿತು. ತಂದೆಯೇ ಕ್ರಿಸ್ತನ ಶಿರಸ್ಸಾಗಿದ್ದಾನೆ (1ಕೊರಿಂಥ 11:3). ಆದರೆ ಕ್ರಿಸ್ತನು ತೊರೆಯಲ್ಪಟ್ಟಾಗ, ಹೇಗಿತ್ತೆಂದರೆ ಆತನ ತಲೆಯನ್ನು ಆತನಿಂದ ಹಿಂಸಾತ್ಮಕವಾಗಿ ಸೆಳೆದುಕೊಂಡಂತಿತ್ತು. ಇದು ಆತನಿಗೆ ಎಂಥಹ ಸಂಕಟ(ಯಾತನೆ) ಯಾಗಿತ್ತೆಂದು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಆಗದು.
ಒಂದು ವೇಳೆ ಯೇಸುಕ್ರಿಸ್ತನು ದೇವರಾಗಿರದೆ ಇದ್ದು, ದೇವರಾದ ತಂದೆಯು ನಮ್ಮೆಲ್ಲರ ಪಾಪಗಳ ಶಿಕ್ಷೆಯನ್ನು ಯೇಸುವಿನ ಮೇಲೆ ಹಾಕಿದ್ದರೆ, ಅದು ಬಹಳ ದೊಡ್ಡ ಅನ್ಯಾಯವಾಗುತ್ತಿತ್ತು. ಒಬ್ಬ ಮನುಷ್ಯನು ಇಷ್ಟಪಟ್ಟು ಬೇರೆಯವನ ತಪ್ಪಿಗೆ ತಾನು ಶಿಕ್ಷೆ ಅನುಭವಿಸಲು ಸಿದ್ಧನಿದ್ದರೂ, ದೇವರು ಹಾಗೆ ಒಬ್ಬರ ತಪ್ಪಿಗೆ(ಪಾಪಕ್ಕೆ) ಇನ್ನೊಬ್ಬನನ್ನು ಶಿಕ್ಷಿಸಲು ಸಾಧ್ಯವಿಲ್ಲ. ನಿನ್ನ ಸ್ನೇಹಿತನು ನಿನ್ನ ಶಿಕ್ಷೆಯನ್ನು ತಾನು ತೆಗೆದುಕೊಂಡು ನಿನ್ನ ಸ್ಥಳದಲ್ಲಿ ತಾನು ನೇಣಿಗೇರಿಸಲ್ಪಡಲು ಸಾಧ್ಯವಿಲ್ಲ. ಅದು ಬಹಳ ಅನ್ಯಾಯವೆನಿಸುತ್ತದೆ. ಆದ್ದರಿಂದ, ಯೇಸು ಒಬ್ಬ ಸೃಷ್ಟಿಜೀವಿ ಮಾತ್ರವೇ ಆಗಿ, ನಮ್ಮ ಪಾಪಗಳಿಗಾಗಿ ಆತನು ಶಿಕ್ಷಿಸಲ್ಪಟ್ಟಿದ್ದರೆ, ಅದು ಬಹು ದೊಡ್ಡ ಅನ್ಯಾಯವಾಗುತ್ತಿತ್ತು.
ಯಾವ ಸೃಷ್ಟಿಜೀವಿಯೂ ನಮ್ಮ ಪಾಪದ ಶಿಕ್ಷೆಯನ್ನು ತಾನು ತೆಗೆದುಕೊಳ್ಳಲು ಎಂದಿಗೂ ಸಾಧ್ಯವಿಲ್ಲವೆಂಬುದು ಈಗ ಸ್ಪಷ್ಟವಾಯಿತು. ದೇವರು ಮಾತ್ರ ಆ ಶಿಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯ. ಯಾಕೆಂದರೆ, ಆತನು ವಿಶ್ವಕ್ಕೇ ನ್ಯಾಯಾಧೀಶನಾಗಿದ್ದಾನೆ. ಆತನಿಗೆ ಮಾತ್ರ ನಮ್ಮನ್ನು ಶಿಕ್ಷಿಸಲೂ ಹಕ್ಕಿದೆ. ಮತ್ತು ಆತನು ತಾನಾಗಿಯೇ ನಮ್ಮ ಶಿಕ್ಷೆಯನ್ನು ತೆಗೆದುಕೊಳ್ಳಲು ಸಹ ಆತನಿಗೆ ಪೂರ್ಣ ಹಕ್ಕಿದೆ, ಮತ್ತು ಆತನು ಯೇಸು ಕ್ರಿಸ್ತನೆಂಬ ವ್ಯಕ್ತಿಯ ರೂಪದಲ್ಲಿ ಭೂಮಿಗೆ ಬಂದಾಗ, ತಾನು ಮಾಡಿದ್ದೂ ಇದನ್ನೇ. ಕ್ರೈಸ್ತ ನಂಬಿಕೆಯ ಅಸ್ತಿವಾರವು ಎರಡು ಸತ್ಯಗಳಲ್ಲಿ ಅಡಗಿದೆ: ಮೊದಲನೆಯದು ಏನೆಂದರೆ ಕ್ರಿಸ್ತನು ಮಾನವ ಕುಲದ ಪಾಪಗಳಿಗಾಗಿ ಸತ್ತನು. ಎರಡನೆಯದು ಆತನು ಮೂರು ದಿನಗಳಾದ ಮೇಲೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನು.
ಆತನು ಸತ್ತವರೊಳಗಿಂದ ಎಬ್ಬಿಸಲ್ಪಡದೇ ಇದ್ದಿದ್ದರೆ, ಆತನು ‘ದೇವರು’ ಎಂಬುದಕ್ಕೆ ಯಾವ ಆಧಾರವೂ ಇರುತ್ತಿರಲಿಲ್ಲ. ಆತನು ಹೇಳಿದ್ದೆಲ್ಲವೂ ಸತ್ಯವಾಗಿದೆ ಎನ್ನುವುದಕ್ಕೆ ಆಧಾರವೇನೆಂದರೆ, ಆತನು ಸತ್ತವರೊಳಗಿಂದ ಎದ್ದಿರುವುದೇ ಆಗಿದೆ. ಯಾವ ಧಾರ್ಮಿಕ ನಾಯಕನೂ ಎಂದಿಗೂ ತಾನು ಲೋಕದ ಪಾಪಗಳಿಗಾಗಿ ಸಾಯುವೆನೆಂದು ಹಕ್ಕಿನಿಂದ ಹೇಳಿಲ್ಲ. ಮತ್ತು ಯಾವ ಧಾರ್ಮಿಕ ನಾಯಕನೂ ಎಂದಿಗೂ ಸತ್ತು ಎದ್ದು ಬಂದಿಲ್ಲ. ಈ ಎರಡೂ ಸತ್ಯಾಂಶಗಳು ‘ಯೇಸು ಕ್ರಿಸ್ತನನ್ನು’ ಸರಿಸಾಟಿಯಿಲ್ಲದವನನ್ನಾಗಿ ಮಾಡುತ್ತದೆ.
ಎಲ್ಲಾ ಧರ್ಮಗಳು ನಮಗೆ “ಇತರರಿಗೆ ಒಳ್ಳೆಯದನ್ನು ಮಾಡಬೇಕು ಮತ್ತು ಸಮಾಧಾನ(ಶಾಂತಿ)ದಿಂದ ಜೀವಿಸಬೇಕು” ಎಂದು ಭೋಧಿಸಬಹುದು. ಆದರೆ, ಕ್ರೈಸ್ತ ನಂಬಿಕೆಯು ಒಂದು ಸರಿಸಾಟಿಯಿಲ್ಲದ ಅಸ್ತಿವಾರವನ್ನು ಹೊಂದಿದೆ. ಅದೇನೆಂದರೆ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು ಮತ್ತು ಸತ್ತವರೊಳಗಿಂದ ಎದ್ದನು ಎಂಬುದೇ. ಒಂದು ವೇಳೆ ಇವೆರಡೂ ಸತ್ಯಾಂಶಗಳು ಕ್ರೈಸ್ತತ್ವದಿಂದ ತೆಗೆದುಹಾಕಲ್ಪಟ್ಟರೆ, ನಂತರ ಕ್ರೈಸ್ತತ್ವವು ಬೇರೆ ಯಾವುದೇ ಇತರ ಧರ್ಮದಂತೆ ಆಗಿಬಿಡುತ್ತದೆ. ಈ ಎರಡೂ ಸತ್ಯಗಳೇ ಕ್ರೈಸ್ತತ್ವವನ್ನು ಸರಿಸಾಟಿಯಿಲ್ಲದ್ದನ್ನಾಗಿ ಮಾಡಿರುವುದು!!
ನಾವೆಲ್ಲರೂ ದೇವರಿಗಾಗಿ ಜೀವಿಸಲೆಂದು ಆತನಿಂದ ಸೃಷ್ಟಿಸಲ್ಪಟ್ಟಿದ್ದೇವೆ. ಆದರೆ ನಾವೆಲ್ಲರೂ ನಮಗಾಗಿಯೇ ಜೀವಿಸಿದ್ದೇವೆ. ಆದ್ದರಿಂದ ನಾವು ದೇವರ ಬಳಿಗೆ ಬರುವಾಗ, ದೇವರಿಗೆ ಸೇರಬೇಕಾದವುಗಳನ್ನು ಅನೇಕ ವರ್ಷಗಳ ಕಾಲ ಕದ್ದುಕೊಂಡ ಕಳ್ಳರಂತೆ, ಪಶ್ಚಾತ್ತಾಪಪಟ್ಟು ಮಾನಸಾಂತರದಿಂದ ಬರಬೇಕು. ಮತ್ತು ನಾವು ‘ಕ್ರಿಸ್ತನು ನಮಗಾಗಿ ಸತ್ತನೆಂಬ ಕೃತಜ್ಞತೆಯಿಂದಲೂ, ಆತನು ಸತ್ತವರೊಳಗಿಂದ ಎದ್ದಿದ್ದಾನೆ ಮತ್ತು ಇಂದಿಗೂ ಜೀವಿಸುತ್ತಿದ್ದಾನೆ’ ಎಂಬ ನಂಬಿಕೆಯಿಂದಲೂ ದೇವರ ಬಳಿ ಬರಬೇಕು. ಯೇಸುವು ಒಂದು ವೇಳೆ ಇವತ್ತು ಜೀವಿತನಾಗಿರದ ಪಕ್ಷದಲ್ಲಿ ನಾವು ಆತನಲ್ಲಿ ಪ್ರಾರ್ಥಿಸಲು ಆಗುತ್ತಿರಲಿಲ್ಲ: ಯಾಕೆಂದರೆ ಯಾರೂ ಸತ್ತ ವ್ಯಕ್ತಿಯಲ್ಲಿ ಪ್ರಾರ್ಥಿಸಲಾಗದು. ಆದರೆ, ಯೇಸು ಮರಣದಿಂದ ಎದ್ದಿರುವ ಕಾರಣ ನಾವು ಆತನೊಂದಿಗೆ ಸಂಭಾಷಿಸಬಹುದಾಗಿದೆ.
ಯೇಸುಕ್ರಿಸ್ತನು ಮರಣದಿಂದ ಎದ್ದನಂತರ ಆತನು ಆರೋಹಣನಾಗಿ ಪರಲೋಕಕ್ಕೆ ಹಿಂತಿರುಗಿದನು. ನಂತರ ಸರ್ವಶಕ್ತ ದೇವರ ಮೂರನೇ ವ್ಯಕ್ತಿಯಾದ ‘ಪವಿತ್ರಾತ್ಮನು’ ಭೂಮಿಗೆ ಇಳಿದು ಬಂದನು. ಪವಿತ್ರಾತ್ಮನೂ ಕೂಡ ಯೇಸುವಿನಂತೆಯೇ ನಿಜವಾದ ವ್ಯಕ್ತಿಯಾಗಿದ್ದಾನೆ. ಆತನು ನಮ್ಮೆಲ್ಲರ ಜೀವಿತವನ್ನು ಆತನ ಸಾನ್ನಿಧ್ಯದಿಂದ ತುಂಬಿಸಲಿಕ್ಕಾಗಿ ಭೂಮಿಗೆ ಬಂದನು. ನಾವು ಪವಿತ್ರಾತ್ಮನಿಗೆ ನಮ್ಮನ್ನು ಒಪ್ಪಿಸಿಕೊಟ್ಟರೆ, ಆತನು ನಮ್ಮನ್ನು ಪವಿತ್ರರನ್ನಾಗಿ ಮಾಡಬಲ್ಲನು. ಪವಿತ್ರಾತ್ಮನು ನಿಮ್ಮಲ್ಲಿ ತುಂಬಿಸಲ್ಪಟ್ಟಾಗ, ನೀವು ಪಾಪದ ಮೇಲೆ ಜಯಹೊಂದಿದ ಜೀವಿತವನ್ನು ಜೀವಿಸಲು ಶಕ್ತರಾಗುವಿರಿ. ಪಂಚಾಶತ್ತಮ ದಿನದಲ್ಲಿ ಪವಿತ್ರಾತ್ಮನು ಬಂದು ಮನುಷ್ಯನಲ್ಲಿ ನೆಲೆಗೊಳ್ಳುವ ಮುಂಚೆ, ಯಾರೂ ಇಂಥಹ ಜಯ ಜೀವಿತವನ್ನು ಜೀವಿಸಲು ಸಾಧ್ಯವಾಗಿರಲಿಲ್ಲ. ಇದರ ಮುಂಚೆ ಕೇವಲ ಜನರ ಬಾಹ್ಯ ಜೀವಿತದಲ್ಲಿ ಮಾತ್ರ ಉತ್ತಮರಾಗಬಹುದಾಗಿತ್ತು. ಅವರ ಆಂತರಿಕ ಜೀವಿತವು ಪಾಪದಿಂದ ಸೋಲಲ್ಪಟ್ಟು ಬದಲಾಗದೆ ಹಾಗೇ ಇತ್ತು. ಆದರೆ ಯಾವಾಗ ಪವಿತ್ರಾತ್ಮನು ನಿಮ್ಮಲ್ಲಿ ತುಂಬುತ್ತಾನೋ, ಆಗ ದೇವರು ತಾನಾಗಿ ನಿಮ್ಮೊಳಗೆ ಜೀವಿಸುತ್ತಾನೆ ಮತ್ತು ಆತನು ನೀವು ಆಂತರ್ಯದಲ್ಲಿಯೂ ದೈವೀಕ ಜೀವಿತವನ್ನು ಜೀವಿಸಲು ಶಕ್ತರಾಗುವಂತೆ ಮಾಡುತ್ತಾನೆ.
ಸುವಾರ್ತೆಯ ಅತಿಶಯವಾದ ಸಂದೇಶ ಏನೆಂದರೆ ದೇವರು ನಿಮ್ಮನ್ನು ಕ್ಷಮಿಸುವಾಗ ನಿಮ್ಮ ಹೃದಯವು ಸಂಪೂರ್ಣವಾಗಿ ಶುದ್ಧವಾಗುತ್ತದೆ: ನಂತರ ಕ್ರಿಸ್ತನು ನಿಮ್ಮಲ್ಲಿ ತನ್ನ ಆತ್ಮನ ಮೂಲಕ ಜೀವಿಸುತ್ತಾನೆ. ಮತ್ತು ನಿಮ್ಮ ದೇಹವನ್ನು ದೇವರ ಮನೆಯನ್ನಾಗಿ ಮಾಡುತ್ತಾನೆ.
ಒಮ್ಮೆ ನಾನು, ಸಿಗರೇಟ್ ಸೇದುತ್ತಿದ್ದ ಒಬ್ಬ ಕ್ರೈಸ್ತನೊಡನೆ ಮಾತಾಡುತ್ತಿದ್ದೆ. ನಾನು ಆತನಿಗೆ, “ನೀನು ಎಂದಾದರೂ ಸಭೆಯ ಕಟ್ಟಡದೊಳಗೆ ಸಿಗರೇಟ್ ಸೇದಿದ್ದೀಯಾ?” ಎಂದು ಕೇಳಿದೆ. ಆತನು ನನಗೆ, ಸಭೆಯ ಕಟ್ಟಡವು ದೇವರ ಆಲಯವಾಗಿರುವುದರಿಂದ ಹಾಗೆ ಎಂದಿಗೂ ಮಾಡುವುದಿಲ್ಲವೆಂದು ಹೇಳಿದನು. ಅದಕ್ಕೆ ನಾನು, ನಿನ್ನ ದೇಹವೇ ದೇವರ ಆಲಯವಾಗಿದೆಯೆಂದೂ, ಯಾವ ಒಂದು ಸಭೆಯ ಕಟ್ಟಡವೂ ದೇವರ ಆಲಯವಲ್ಲವೆಂದೂ ಹೇಳಿದೆನು. ನೀವು ಒಂದು ಸಭೆಯ ಕಟ್ಟಡದೊಳಗೆ ವ್ಯಭಿಚಾರವನ್ನು ನಡೆಸುತ್ತೀರಾ? ಇಲ್ಲ. ಹಾಗೂ ಒಂದು ಕಂಪ್ಯೂಟರ್ ನಲ್ಲಿ ಬರುವ ಅಶ್ಲೀಲ ಚಿತ್ರಗಳನ್ನು ಕೂಡ ನೀವು ಸಭೆಯ ಕಟ್ಟಡದಲ್ಲಿ ನೋಡುವುದಿಲ್ಲ. ಕ್ರಿಸ್ತನು ನಿಮ್ಮ ದೇಹದಲ್ಲಿ ಜೀವಿಸುವಾಗ, ನಿಮ್ಮ ದೇಹವೇ ದೇವರ ಆಲಯವಾಗಿದೆ. ಆದ್ದರಿಂದ ನೀವು ನಿಮ್ಮ ದೇಹದ ಅಂಗಾಂಗಗಳಲ್ಲಿ ಏನೇನು ಮಾಡುವಿರೆಂಬುದರ ಬಗ್ಗೆ ಜಾಗರೂಕರಾಗಿರ್ರಿ: ಸಿಗರೇಟ್ ಸೇದುವುದು, ಕುಡಿಯುವುದು, ಮಾದಕ ವಸ್ತುಗಳನ್ನು ತೆಗೆದುಕೊಳ್ಳುವುದು, ಹಾಗೂ ಕೆಟ್ಟ ಅಶ್ಲೀಲ ಯೋಚನೆಗಳನ್ನು ಮನಸ್ಸಿನಲ್ಲಿ ಅನುಮತಿಸುವುದು ಮುಂತಾದುವು ಕ್ರಮೇಣ ನಿಮ್ಮ ದೇಹ ಮತ್ತು ಮನಸ್ಸನ್ನು ನಾಶಮಾಡುತ್ತವೆ.
ಕ್ರಿಸ್ತೀಯ ಜೀವಿತವು ಒಂದು ಓಟದ ಪಂದ್ಯದಂತೆ. ನಾವು ಪಾಪಕ್ಕೆ ವಿರುದ್ಧವಾಗಿ ತಿರುಗಿ, ಹೊಸದಾಗಿ ಹುಟ್ಟಿದಾಗ ಈ ಓಟದ ಪ್ರಾರಂಬಕ್ಕೆ ಬರುತ್ತೇವೆ. ನಂತರ ನಮ್ಮ ಈ ದೂರದ ಓಟದ ಪಂದ್ಯ ಪ್ರಾರಂಬವಾಗಿ ನಮ್ಮ ಜೀವಿತದ ಕೊನೆಯವರೆಗೂ ನಡೆಯುತ್ತದೆ. ನಾವು ಓಡಿ, ಓಡಿ ಪ್ರತಿದಿನ ಓಟದ ಮುಕ್ತಾಯದ ಗೆರೆಯ ಬಳಿಗೆ ಹೋಗುತ್ತಿರುತ್ತೇವೆ. ಆದರೆ ಎಂದೂ ಈ ಓಟವನ್ನು ನಿಲ್ಲಿಸಬಾರದು.
ಇದಕ್ಕೆ ಬೇರೊಂದು ದೃಷ್ಟಾಂತವನ್ನು ಉಪಯೋಗಿಸುವುದಾದರೆ, ನಾವು ಹೊಸದಾಗಿ ಹುಟ್ಟಿದಾಗ ನಮ್ಮ ಮನೆಗೆ ಅಸ್ತಿವಾರವನ್ನು ಹಾಕುತ್ತೇವೆ. ನಂತರ ಬಹು ಮಹಡಿಗಳಿರುವ ಈ ಎತ್ತರದ ಕಟ್ಟಡವನ್ನು ನಿಧಾನವಾಗಿ ಕಟ್ಟಲು ಪ್ರಾರಂಬ ಮಾಡುತ್ತೇವೆ.
ಇದೊಂದು ಅದ್ಭುತವಾದ ಜೀವಿತವಾಗಿದೆ. ಏಕೆಂದರೆ ಪ್ರತಿ ವರ್ಷ ಕಳೆದಂತೆ ಕ್ರಮೇಣವಾಗಿ ನಿಮ್ಮ ಜೀವಿತದಲ್ಲಿರುವ ಎಲ್ಲಾ ಕೆಟ್ಟದ್ದನ್ನು ತೊರೆದು ಹೆಚ್ಚೆಚ್ಚಾಗಿ ನೀವು ದೇವರಂತೆ ಮಾರ್ಪಡುತ್ತೀರಿ.
ಅಂದರೆ ಹೊಸದಾಗಿ ಹುಟ್ಟಲು ನೀವು ಏನು ಮಾಡಬೇಕು?
ಮೊಟ್ಟ ಮೊದಲನೆಯದಾಗಿ ನೀವು ‘ನಾನು ಪಾಪಿ’, ಎಂದು ಒಪ್ಪಿಕೂಳ್ಳಬೇಕು. ಎಂದಿಗೂ ನಿಮ್ಮನ್ನು ನೀವು ಬೇರೆಯವರೊಂದಿಗೆ ಹೋಲಿಸಿಕೊಂಡು, ನೀವು ಅವರಿಗಿಂತ ಉತ್ತಮರೆಂದು ಭಾವಿಸಿಕೊಂಡು ಸಮಾಧಾನಪಡಬಾರದು. ಪಾಪವು ಒಂದು ಭಯಾನಕ ವಿಷದಂತಿದೆ. ಅದನ್ನು ನೀವು ಒಂದು ತೊಟ್ಟು ಕುಡಿದರೂ ಅಥವಾ ನೂರು ತೊಟ್ಟು ಕುಡಿದರೂ ಸಾಯುವುದು ಖಂಡಿತ. ಆದ್ದರಿಂದ ನಿಮ್ಮ ಕ್ರಿಸ್ತೀಯ ಜೀವಿತವನ್ನು ಒಳ್ಳೆಯ ರೀತಿಯಲ್ಲಿ ಪ್ರಾರಂಬ ಮಾಡಲು ಈ ಪ್ರಪಂಚದಲ್ಲಿರುವ ಯಾವ ಕೀಳು ಪಾಪಿಗಿಂತ ನೀವು ಉತ್ತಮರಲ್ಲವೆಂಬುದನ್ನು ಒಪ್ಪಿಕೊಳ್ಳಿರಿ. ನಂತರ ನಿಮಗೆ ತಿಳಿದಿರುವ ಎಲ್ಲಾ ಪಾಪಗಳಿಂದ ತಿರುಗಿಕೊಳ್ಳಲು ನಿರ್ಧಾರ ಮಾಡಿ.
ನಂತರ ಕ್ರಿಸ್ತನಲ್ಲಿ ನಂಬಿಕೆ ಇಡಿ. ಅಂದರೆ ಆತನ ಬಗ್ಗೆ ಏನೋ ಸ್ವಲ್ಪ ಮನಸ್ಸಿನಲ್ಲಿ ನಂಬುವುದಲ್ಲ: ಬದಲಿಗೆ ನಿಮ್ಮನ್ನು ಪೂರ್ಣವಾಗಿ ಕ್ರಿಸ್ತನಿಗೆ ಒಪ್ಪಿಸಿಕೊಡುವುದು. ಒಂದು ಮದುವೆಯಲ್ಲಿ ವಧುವಿಗೆ, “ನೀನು ಪೂರ್ಣವಾಗಿ ಈ ಮನುಷ್ಯನಿಗೆ ನಿನ್ನನ್ನು ಒಪ್ಪಿಸಿಕೊಡುತ್ತೀಯಾ?” ಎಂದು ಕೇಳುತ್ತಾರೆ. ಒಂದು ಪಕ್ಷ ಆಕೆ, “ಹೌದು, ಈತನು ಒಳ್ಳೆಯವನೆಂದು ನಂಬುತ್ತೇನೆ: ಆದರೆ, ನನ್ನ ಭವಿಷ್ಯದ ಜೀವಿತವನ್ನು ಆತನಿಗೆ ಒಪ್ಪಿಸಿಕೊಡುವುದರಲ್ಲಿ ನನಗೆ ಸಮ್ಮತಿಯಿಲ್ಲ” ಎಂದು ಹೇಳಿದರೆ, ಆಕೆಯು ಆತನನ್ನು ಮದುವೆಯಾಗಲು ಸಾಧ್ಯವಿಲ್ಲ. ಏಕೆಂದರೆ ಆಕೆಗೆ ಆತನಲ್ಲಿ ನಂಬಿಕೆ ಇಲ್ಲವೆಂದಾಯಿತು. ಒಮ್ಮೆ ಒಂದು ಹೆಣ್ಣು ಮದುವೆಯಾದಾಗ, ಆಕೆಯ ಜೀವಿತದ ಪೂರ್ಣ ಮಾರ್ಗವೇ ಬದಲಾಗುತ್ತದೆ. ಆಕೆಯು ತನ್ನ ಹೆಸರಿನ ಒಂದು ಭಾಗವನ್ನು ತನ್ನ ಗಂಡನ ಹೆಸರನ್ನಾಗಿ ಬದಲಿಸುತ್ತಾಳೆ. ಮತ್ತು ತನ್ನ ತಂದೆ ತಾಯಿಯರ ಮನೆಯನ್ನು ತೊರೆದು, ಗಂಡನ ಮನೆಗೆ ಹೋಗಿ ವಾಸಿಸುತ್ತಾಳೆ. ಆತನು ಜೀವಿಸುವ ಸ್ಥಳ ಅರಿಯದಿದ್ದರೂ ಪರವಾಗಿಲ್ಲ: ತನ್ನ ಗಂಡನನ್ನು ನಂಬಿ ತನ್ನ ಪೂರ್ಣ ಜೀವಿತದ ಭವಿಷ್ಯವನ್ನು ಆತನಿಗೆ ಒಪ್ಪಿಸುತ್ತಾಳೆ. ಏಕೆಂದರೆ ಆತನಲ್ಲಿ ಅವಳಿಗೆ ನಂಬಿಕೆ ಇರುವುದೇ ಇದಕ್ಕೆ ಕಾರಣ! ಕ್ರಿಸ್ತನಲ್ಲಿ ನಮಗಿರುವ ನಂಬಿಕೆಯೇ ಈ ಚಿತ್ರವಾಗಿದೆ !!
“ಕ್ರೈಸ್ತ” ಎಂಬ ಪದದ ಅರ್ಥ (ಭಕ್ತಿ ಪೂರ್ವಕವಾಗಿ ಹೇಳುವುದಾದರೆ) “ಶ್ರೀಮತಿ ಕ್ರಿಸ್ತ” ಎಂದು! ನನ್ನ ಹೆಂಡತಿಯು ನನ್ನನ್ನು ಮದುವೆಯಾದ ನಂತರ ಮಾತ್ರ ನನ್ನ ಹೆಸರನ್ನು ಪಡೆಯಲು ಸಾಧ್ಯ. ಹಾಗೆಯೇ ನೀವು ಕೂಡ ಕ್ರಿಸ್ತನೊಂದಿಗೆ ಮದುವೆಯಾದ ನಂತರ ಮಾತ್ರ ಕ್ರಿಸ್ತನ ಹೆಸರನ್ನು ಉಪಯೋಗಿಸಬಹುದು, ಮತ್ತು ನಿಮ್ಮನ್ನು “ಕ್ರೈಸ್ತ”ನೆಂದು ಕರೆದುಕೊಳ್ಳಬಹುದು. ಯಾವುದೇ ಹೆಂಗಸು ನನ್ನನ್ನು ಮದುವೆಯಾಗದೆ, ತನ್ನನ್ನು “ಶ್ರೀಮತಿ ಝ್ಯಾಕ್ ಪೂನನ್” ಎಂದು ಕರೆದುಕೊಂಡರೆ ಅದು ಸುಳ್ಳಾಗಿರುತ್ತದೆ. ಹಾಗೆಯೇ ಯಾವನಾದರೂ ಕ್ರಿಸ್ತನೊಂದಿಗೆ ವಿವಾಹವಾಗದೇ ತಾನು ಕ್ರೈಸ್ತನೆಂದು ಹೇಳಿಕೊಂಡರೆ, ಅದು ಸುಳ್ಳು.
ಮದುವೆಯೆಂಬುದು ಕೇವಲ ಕೆಲವು ದಿನಗಳಿಗಾಗಿ ಮಾತ್ರವೇ ಅಲ್ಲ, ಎಂದಿಗೂ ಇರುವಂಥಹುದು. ಹಾಗೆಯೇ ಕ್ರೈಸ್ತನಾಗಿರುವುದು ಕೂಡ ಪೂರ್ಣ ಜೀವಿತಾವಧಿಯ ಸಮರ್ಪಣೆಯಾಗಿರುತ್ತದೆ. ಪೂರ್ಣವಾಗಿ ಕ್ರಿಸ್ತನಿಗೆ ಸಮರ್ಪಿಸುವುದೆಂದರೆ, ನಾವು ಪರಿಪೂರ್ಣರಾಗಿ ಬಿಟ್ಟಿದ್ದೇವೆಂದು ಅರ್ಥವಲ್ಲ. ಒಬ್ಬ ಹೆಂಗಸು ಮದುವೆಯಾದಾಗ, ತನ್ನ ಜೀವನದಲ್ಲಿ ತಾನೆಂದೂ ತಪ್ಪು ಮಾಡುವುದಿಲ್ಲವೆಂದು ಪ್ರಮಾಣ ಮಾಡುವುದಿಲ್ಲ. ಆಕೆ ಬಹಳ ತಪ್ಪುಗಳನ್ನು ಮಾಡಬಹುದು. ಆದರೂ ಆಕೆಯ ಗಂಡನು ಆಕೆಯನ್ನು ಕ್ಷಮಿಸುತ್ತಾನೆ. ಆದರೆ, ಆಕೆ ತಾನು ಎಂದಿಗೂ ತನ್ನ ಗಂಡನ ಜೊತೆ ಜೀವಿಸುವುದಾಗಿ ಪ್ರಮಾಣ ಮಾಡುತ್ತಾಳೆ. ಇದು ನಾವು ಕ್ರಿಸ್ತನ ಜೊತೆ ಒಂದಾಗಿ ಜೀವಿಸುವ ಚಿತ್ರಣವಾಗಿದೆ.
ಮುಂದಿನ ಹೆಜ್ಜೆಯು ನೀವು ನೀರಿನ ದೀಕ್ಷಾಸ್ನಾನ ತೆಗೆದುಕೊಳ್ಳುವುದಾಗಿದೆ. ದೀಕ್ಷಾಸ್ನಾನ ಪಡೆಯುವುದು ಒಂದು ರೀತಿಯಾಗಿ ಮದುವೆಯ ಪ್ರಮಾಣ ಪತ್ರ ಪಡೆದಂತೆ. ಮದುವೆಯ ಪ್ರಮಾಣ ಪತ್ರ ಪಡೆದರೆ ಮಾತ್ರ ನೀವು ಮದುವೆಯಾಗಿದ್ದೀರಿ ಎಂದು ಅರ್ಥವಲ್ಲ. ಹಾಗೆಯೇ ದೀಕ್ಷಾಸ್ನಾನ ಪಡೆದು ನೀವು ಕ್ರೈಸ್ತರಾಗಲು ಸಾಧ್ಯವಿಲ್ಲ. ಮದುವೆಯಾದ ನಂತರ ಮಾತ್ರ ನೀವು ಮದುವೆಯ ಪ್ರಮಾಣಪತ್ರ ಪಡೆಯಲು ಸಾಧ್ಯ. ಹಾಗೆಯೇ, ನೀವು ಕ್ರಿಸ್ತನಿಗೆ ನಿಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಟ್ಟರೆ ಮಾತ್ರ ನೀರಿನ ದೀಕ್ಷಾಸ್ನಾನ ಪಡೆಯಲು ಸಾಧ್ಯ. ದೀಕ್ಷಾಸ್ನಾನದಲ್ಲಿ ನೀವು ಯೇಸುಕ್ರಿಸ್ತನನ್ನು ನಿಮ್ಮ ಜೀವಿತದ ಒಡೆಯನನ್ನಾಗಿ ಮಾಡಿಕೊಂಡು, ನಿಮ್ಮ ಹಳೆಯ ಜೀವಿತವನ್ನು ಬಿಟ್ಟು ಬಿಟ್ಟಿದ್ದೀರೆಂದು ಸಾಕ್ಷಿ ಹೇಳುವಿರಿ.
ಒಳ್ಳೆಯ ಗಂಡ ಹೆಂಡತಿಯರು ಪರಸ್ಪರ ಬಹಳ ಮಾತನಾಡಿಕೊಳ್ಳುತ್ತಾರೆ. ಹಾಗೆಯೇ ಪ್ರತಿದಿನ ಯೇಸುವಿನ ಜೊತೆ ನೀವೂ ಕೂಡ ಮಾತನಾಡಬೇಕು ಮತ್ತು ಆತನು ದೇವರ ವಾಕ್ಯದ(ಬೈಬಲ್) ಮುಖಾಂತರ ಮಾತನಾಡುವುದನ್ನು ಕೇಳಿಸಿಕೊಳ್ಳಬೇಕು.
ಒಬ್ಬ ಒಳ್ಳೆಯ ಹೆಂಡತಿಯು ತನ್ನ ಗಂಡನಿಗೆ ಬೇಸರ ಪಡಿಸುವ ಯಾವುದನ್ನೂ ಮಾಡುವುದಿಲ್ಲ. ಆಕೆಯು ಎಲ್ಲವನ್ನೂ ಆತನ ಜೊತೆ ಅನ್ಯೊನ್ಯತೆಯಲ್ಲಿ ಮಾಡಬಯಸುತ್ತಾಳೆ. ಹಾಗೆಯೇ ನಿಜ ಕ್ರೈಸ್ತನೂ ಕೂಡ ಕ್ರಿಸ್ತನಿಗೆ ಬೇಸರವಾಗುವ ಯಾವುದನ್ನೂ ಮಾಡುವುದಿಲ್ಲ ಯೇಸುವು ನೋಡದಂಥಹ ಸಿನೆಮಾವನ್ನು ತಾನೂ ಕೂಡ ನೋಡುವುದಿಲ್ಲ. ಯೇಸುಕ್ರಿಸ್ತನ ಒಡಗೂಡಿ ಏನೆಲ್ಲಾ ಮಾಡಲು ಸಾದ್ಯವಿಲ್ಲವೋ ಅದನ್ನು ಮಾಡುವುದಿಲ್ಲ.
ನೀವು ಹೊಸದಾಗಿ ಹುಟ್ಟಿರುವಿರೆಂದು ಖಚಿತವಾಗಿ ತಿಳಿದಿರುವಿರಾ? ಹೌದು, ರೋಮ 8:16 ಹೀಗೆ ಹೇಳುತ್ತದೆ, "ದೇವರ ಪವಿತ್ರಾತ್ಮನು, ನೀವು ದೇವರ ಮಗುವೆಂದು ನಿಮ್ಮ ಆತ್ಮದೊಂದಿಗೆ ಸಾಕ್ಷಿ ಹೇಳುತ್ತಾನೆ" ಎಂದು.
ಯಾರೂ ಎಂದೂ ಪಡೆಯದಂಥ ಒಬ್ಬ ಅತ್ಯುತ್ತಮನಾದ ಸ್ನೇಹಿತನೊಂದಿಗೆ ನಾವು ಜೀವಿಸುತ್ತಿರುವದರಿಂದ ಇದು ಅದ್ಬುತವಾದ ಜೀವಿತವಾಗಿದೆ. ನಾವು ಎಂದೂ ಒಬ್ಬಂಟಿಗರಲ್ಲ. ಯಾಕಂದರೆ ಯೇಸುವು ಯಾವಾಗಲೂ, ಎಲ್ಲಾ ಕಡೆಯೂ ನಮ್ಮೊಂದಿಗಿರುವನು ನಾವು ನಮ್ಮ ಸಮಸ್ಯೆಗಳನ್ನು ಆತನೊಂದಿಗೆ ಹೇಳಿಕೊಳ್ಳಬಹುದು ಮತ್ತು ಅವುಗಳ ನಿವಾರಣೆಗೆ ಆತನಿಂದ ಸಹಾಯ ಕೇಳಿಕೂಳ್ಳಬಹುದು. ಇದೊಂದು ಸಂತೋಷಭರಿತ ಜೀವಿತವಾಗಿದ್ದು ಯಾರೊಬ್ಬನೇ ಆಗಲಿ ತನ್ನ ಭಯ ಚಿಂತೆಗಳಿಂದ ಬಿಡುಗಡೆ ಹೊಂದಿದವನಾಗಿರಬಹುದು: ಯಾಕಂದರೆ, ಯೇಸು ನಮ್ಮ ಭವಿಷ್ಯವನ್ನು ತನ್ನ ಕೈಯಲ್ಲಿ ಹಿಡಿದಿದ್ದಾನೆ.
ನೀವು ಹೊಸದಾಗಿ ಹುಟ್ಟಲು ಬಯಸುವಿರಾ? ಹಾಗಿದ್ದಲ್ಲಿ, ಈ ಕೂಡಲೆ ಯಥಾರ್ಥರಾಗಿ ನಿಮ್ಮ ಹೃದಯದಿಂದ ಕರ್ತನಿಗೆ ಈ ರೀತಿಯಾಗಿ ಹೇಳಿರಿ:
"ಕರ್ತನಾದ ಯೇಸುವೇ ನೀನು ದೇವರ ಮಗನೆಂದು ನಾನು ನಂಬುತ್ತೇನೆ. ನಾನು ಪಾಪಿಯಾಗಿದ್ದೇನೆ: ನರಕಕ್ಕೆ ಹೋಗಲು ಅರ್ಹನಾಗಿದ್ದೇನೆ. ನನ್ನನ್ನು ಪ್ರೀತಿಸಿ ನನ್ನ ಪಾಪಗಳಿಗಾಗಿ ಶಿಲುಬೆಯ ಮೇಲೆ ಸತ್ತದ್ದಕ್ಕಾಗಿ ನಾನು ನಿನಗೆ ಕೃತಜ್ಞತೆಯುಳ್ಳವನಾಗಿದ್ದೇನೆ. ನೀನು ಸತ್ತವರೊಳಗಿಂದ ಎದ್ದು ಇಂದಿಗೂ ಜೀವಿಸುತ್ತಿರುವೆ ಎಂದು ನಾನು ನಂಬುತ್ತೇನೆ. ನಾನು ನನ್ನ ಪಾಪಮಯವಾದ ಜೀವಿತದಿಂದ ಈ ಕೂಡಲೆ ತಿರುಗಿಕೊಳ್ಳಲು ಬಯಸುತ್ತೇನೆ. ದಯವಿಟ್ಟು ನನ್ನ ಎಲ್ಲಾ ಪಾಪಗಳಿಗಾಗಿ ನನ್ನನ್ನು ಕ್ಷಮಿಸು ಮತ್ತು ಪಾಪವನ್ನು ದ್ವೇಷಿಸುವಂತೆ ನನಗೆ ಸಹಾಯ ಮಾಡು. ಯಾರೆಲ್ಲಾ ನನಗೆ ಯಾವದೇ ರೀತಿಯಲ್ಲಿ ತೊಂದರೆ ಮಾಡಿದ್ದರೂ ಅವರನ್ನೆಲ್ಲಾ ನಾನು ಕ್ಷಮಿಸುತ್ತೇನೆ. ಕರ್ತನಾದ ಯೇಸುವೇ ನೀನು ನನ್ನ ಹೃದಯದೊಳಗೆ ಬಾ ಮತ್ತು ಇಂದಿನಿಂದ ನೀನು ನನ್ನ ಜೀವಿತದ ರಾಜನಾಗಿರು, ಈ ಕೂಡಲೆ ನನ್ನನ್ನು ದೇವರ ಮಗುವಾಗಿ ಮಾಡು".
ದೇವರ ವಾಕ್ಯವು ಹೇಳುತ್ತದೆ, "ಯಾರೆಲ್ಲಾ ಕ್ರಿಸ್ತನನ್ನು ಅಂಗೀಕರಿಸಿದರೋ ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು"(ಯೋಹಾನ 1:12). ಕರ್ತನಾದ ಯೇಸುವು ಹೇಳುವುದೇನೆಂದರೆ "ನನ್ನ ಬಳಿಗೆ ಬರುವ ಯಾರನ್ನೂ ನಾನು ಎಂದಿಗೂ ತಳ್ಳಿ ಬಿಡುವುದಿಲ್ಲ"(ಯೋಹಾನ 6:32).
ಆದ್ದರಿಂದ ಆತನು ನಿಮ್ಮನ್ನು ಅಂಗೀಕರಿಸಿದ್ದಾನೆಂದು ನೀವು ಖಚಿತವಾಗಿ ತಿಳಿಯಬಹುದಾಗಿದೆ.
ನಂತರ ನೀವು ಆತನಿಗೆ ಕೃತಜ್ಞತೆಯನ್ನು ಸಲ್ಲಿಸಿ ಹೀಗೆ ಹೇಳಬಹುದು, "ಕರ್ತನಾದ ಯೇಸುವೇ, ನನ್ನನ್ನು ಕ್ಷಮಿಸಿದ್ದಕ್ಕಾಗಿ ಮತ್ತು ನನ್ನನ್ನು ಸ್ವೀಕರಿಸಿದ್ದಕ್ಕಾಗಿ ನಿನಗೆ ವಂದಿಸುತ್ತೇನೆ. ದಯವಿಟ್ಟು ನನ್ನನ್ನು ನಿನ್ನ ಪವಿತ್ರಾತ್ಮನಿಂದ ತುಂಬಿಸು ಮತ್ತು ನಿನಗಾಗಿ ಜೀವಿಸಲು ನಿನ್ನ ಬಲವನ್ನು ನನಗೆ ಕೊಡು ಇಂದಿನಿಂದ ನಾನು ನಿನ್ನನ್ನು ಮಾತ್ರ ಮೆಚ್ಚಿಸಲು ಬಯಸುತ್ತೇನೆ".
ಈಗ ನೀವು ಪ್ರತಿದಿನ ದೇವರ ವಾಕ್ಯವನ್ನು ಓದಬೇಕು ಮತ್ತು ನಿಮ್ಮನ್ನು ಆತನ ಪವಿತ್ರಾತ್ಮನಿಂದ ದಿನನಿತ್ಯ ತುಂಬಿಸಲು ಕರ್ತನನ್ನು ಕೇಳಿಕೊಳ್ಳಬೇಕು. ನೀವು ಇತರ ಹೊಸದಾಗಿ ಹುಟ್ಟಿದ ಕ್ರೈಸ್ತ ವಿಶ್ವಾಸಿಗಳೊಂದಿಗೆ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುವುದು ಕೂಡ ಅಗತ್ಯವಾಗಿದೆ. ಈ ರೀತಿಯಾಗಿ ಮಾತ್ರವೇ ನೀವು ಕ್ರೈಸ್ತ ಜೀವಿತದಲ್ಲಿ ಬೆಳೆಯಲು ಸಾದ್ಯ: ಮತ್ತು ಕರ್ತನನ್ನು ಹಿಂಬಾಲಿಸಲು ಬಲವನ್ನು ಹೊಂದುವಿರಿ. ಆದಕಾರಣ ನಿಮ್ಮನ್ನು ಒಳ್ಳೆಯ ಸಭೆಗೆ ನಡೆಸುವಂತೆ ಕರ್ತನನ್ನು ಬೇಡಿಕೊಳ್ಳಿರಿ.
ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ.